Home News ಸೈಬರ್ ಅಪರಾಧಗಳಿಗೆ ಯುವಜನರೆ ಹೆಚ್ಚು ಬಲಿಯಾಗುತ್ತಿದ್ದಾರೆ

ಸೈಬರ್ ಅಪರಾಧಗಳಿಗೆ ಯುವಜನರೆ ಹೆಚ್ಚು ಬಲಿಯಾಗುತ್ತಿದ್ದಾರೆ

0
Sidlaghatta H Cross Sri Sai Vidyanidhi College Event

H Cross, Sidlaghatta : ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳಿಗೆ ವಿದ್ಯಾರ್ಥಿಗಳು ಸೇರಿದಂತೆ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ ಮತ್ತು ಸೈಬರ್ ಅಪರಾಧಗಳಿಂದ ಎದುರಾಗುವ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಶ್ರೀನಿವಾಸ್ ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನ ಎಚ್.ಕ್ರಾಸ್‌ ನ ಶ್ರೀಸಾಯಿ ವಿದ್ಯಾ ನಿಧಿ ನ್ಯಾಷನಲ್ ಪಿಯು ಹಾಗೂ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ನೂತನವಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ವಿನಾಕಾರಣ ಮೊಬೈಲ್ ಕೊಡುವುದನ್ನು ಪೋಷಕರೆ ನಿಲ್ಲಿಸಬೇಕು. ಸೈಬರ್ ಅಪರಾಧಗಳು ಹೆಚ್ಚಲು ವಿದ್ಯಾರ್ಥಿಗಳ ಮೊಬೈಲ್ ಗೀಳು ಕಾರಣವಾಗುತ್ತಿದೆ. ಅತಿಯಾದ ಮೊಬೈಲ್ ಬಳಕೆ ಗೀಳು ಪ್ರಾಣಕ್ಕೆ ಕುತ್ತು ತರುವಷ್ಟು ಹೆಚ್ಚಿರುವುದು ಆತಂಕ ತಂದಿದೆ ಎಂದರು.

ವಿದ್ಯಾರ್ಥಿ ಜೀವನವೇ ಭವಿಷ್ಯದ ಭದ್ರ ಬುನಾದಿ ಎಂಬ ಅಂಶವನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಮನಗಾಣಬೇಕು. ಈ ಹಂತದಲ್ಲಿ ಓದುವುದು, ಜ್ಞಾನ ಬೆಳೆಸಿಕೊಳ್ಳುವುದು, ಶಿಸ್ತು, ನೈತಿಕತೆ, ಸಂಸ್ಕಾರವನ್ನು ಮೈಗೂಡಿಸಿಕೊಳ್ಳುವುದಷ್ಟೆ ವಿದ್ಯಾರ್ಥಿಗಳು ಗುರಿ ಆಗಿರಬೇಕು ಎಂದು ಬಯಸಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರ ಗೌಡ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಶ್ರದ್ದೆಯಿಂದ ಓದಿ ಗುರಿ ಮುಟ್ಟುವಂತಾಗಬೇಕು. ಶಿಕ್ಷಣಕ್ಕೆ ನಮ್ಮೆಲ್ಲರ ಜೀವನವನ್ನು ರೂಪಿಸುವ ಶಕ್ತಿ ಇದೆ, ವಿದ್ಯಾರ್ಥಿಗಳು ಸಮಾಜದಲ್ಲಿ ಸಜ್ಜನ ನಾಗರಿಕರಾಗಿ ಬೆಳೆವ ಹಾದಿಯಲ್ಲಿ ತಮ್ಮ ಜವಾಬ್ದಾರಿಗಳನ್ನು ಅರಿತು ನಡೆದುಕೊಳ್ಳಬೇಕು ಎಂದು ತಿಳಿಸಿದರು.

2024-25 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶಿಡ್ಲಘಟ್ಟ ತಾಲ್ಲೂಕು ಮಟ್ಟದಲ್ಲಿ ಉನ್ನತ ಅಂಕ ಗಳಿಸಿದ ಹಂಸವೇಣಿ ಹಾಗೂ ಮಾನಸ ರವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ವಿದ್ಯಾರ್ಥಿಗಳಿಂದ ನೃತ್ಯ, ನಾಟಕ, ಗಾಯನದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪ್ರಿನ್ಸಿಪಾಲ್ ಪುನೀತ್ ಕುಮಾರ್, ಶಿಡ್ಲಘಟ್ಟ ಸರ್ಕಾರಿ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಸಿ.ವೆಂಕಟರೆಡ್ಡಿ, ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ.ಬಿ.ಎನ್.ಮೂರ್ತಿ, ಉಪಾಧ್ಯಕ್ಷ ಡಾ.ಶಿವರಾಮರೆಡ್ಡಿ, ಕಾರ್ಯದರ್ಶಿ ಸಿ.ಎಂ.ನಾರಾಯಣಸ್ವಾಮಿ, ಖಜಾಂಚಿ ಪೂರ್ಣಚಂದ್ರ, ಉಪನ್ಯಾಸಕ ಇಮ್ರಾನ್, ವಿಜಯ್ ಕುಮಾರ್, ರಮೇಶ್, ಮಂಜುನಾಥ್, ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version