
Sugaturu, Sidlaghatta : ಕೆಂಪೇಗೌಡರು ಕೇವಲ ಒಂದು ನಗರವನ್ನು ಕಟ್ಟಿದ ರಾಜನಾಗಿರದೇ, ಐನೂರು ವರ್ಷಗಳ ಹಿಂದೆಯೇ ಆಧುನಿಕ ನಗರಾಭಿವೃದ್ಧಿಗೆ ಮುನ್ನುಡಿ ಬರೆದ ಮಹಾನ್ ದ್ರಷ್ಟಾರ. ಅವರ ಶೌರ್ಯ, ಸಾಹಸ ಹಾಗೂ ಪ್ರಜಾವತ್ಸಲತೆ ಇಂದಿನ ಪೀಳಿಗೆಗೆ ಮತ್ತು ಆಡಳಿತಗಾರರಿಗೆ ದಾರಿದೀಪವಾಗಿದೆ ಎಂದು ಕೆಂಪೇಗೌಡ ಯುವಕಸಂಘದ ನಿರ್ದೇಶಕ ಎನ್.ಮಂಜುನಾಥ್ ಗೌಡ ಪ್ರಶಂಸಿಸಿದರು.
ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ಕೆಂಪೇಗೌಡ ಯುವಕಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಿಕ್ಷಕ ಎಚ್.ಎಸ್. ರುದ್ರೇಶಮೂರ್ತಿ ಮಾತನಾಡಿ, ಅವರು ಬೆಂಗಳೂರನ್ನು ವೈಜ್ಞಾನಿಕವಾಗಿ ನಿರ್ಮಿಸಿದವರು. ಕೆರೆ-ಕಟ್ಟೆಗಳ ನಿರ್ಮಾಣ, ಕುಡಿಯುವ ನೀರಿನ ಸೂಕ್ತ ವ್ಯವಸ್ಥೆ ಮತ್ತು ಪರಿಸರ ಸಮತೋಲನಕ್ಕೆ ಅವರು ನೀಡಿದ ಆದ್ಯತೆಯು ಕೆಂಪೇಗೌಡರಿಗಿದ್ದ ಪರಿಸರ ಪ್ರೇಮಕ್ಕೆ ಸಾಕ್ಷಿಯಾಗಿದೆ. ಅಂದು ಅವರು ದೂರದೃಷ್ಟಿಯಿಂದ ನಿರ್ಮಿಸಿದ ರಸ್ತೆಗಳು, ಕೋಟೆ-ಕೊತ್ತಲಗಳು ಹಾಗೂ ಮಾರುಕಟ್ಟೆಗಳು ಇಂದಿಗೂ ಬೆಂಗಳೂರಿನ ಆರ್ಥಿಕತೆಯ ಬೆನ್ನೆಲುಬಾಗಿ ನಿಂತಿವೆ ಎಂದರು.
ಇತಿಹಾಸ ಪ್ರಸಿದ್ಧ ಶ್ರೀ ಸತ್ಯಮ್ಮದೇವಿ ದೇವಾಲಯದಲ್ಲಿ ವಿಶೇಷ ಪೂಜೆಸಲ್ಲಿಸಿದ ನಂತರ ಕೆಂಪೇಗೌಡರ ಭಾವಚಿತ್ರವನ್ನು ಹೊತ್ತ ಪಲ್ಲಕ್ಕಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು.
ಕೆಂಪೇಗೌಡ ಯುವಕ ಸಂಘದ ವಿಜಯಕುಮಾರ್, ಅಶೋಕ್ ಕುಮಾರ್, ಗಣೇಶ್, ಪೋಟೋ ರವಿಕುಮಾರ್, ಗ್ರಾಮಪಂಚಾಯಿತಿ ಮಾಜಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ವಿಶ್ವನಾಥ್, ಚೇತನ್, ಮಂಜುನಾಥ್, ಮಹೇಶ್, ಹಿರಿಯರಾದ ಕೃಷ್ಣಪ್ಪ, ಮರೇಗೌಡ, ಮುನೇಗೌಡ, ಮುನಿರಾಜು, ಆಂಜನೇಯರೆಡ್ಡಿ, ಹರೀಶ್ ಹಾಜರಿದ್ದರು.