ದೇವರಿಗೆ ಮಡಿಲು ತುಂಬಿದ ಊರು, ದೇವರುಗಳ ತವರೂರು ಎಂದು ಹೆಸರಾದ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಮೂರು ದಿನಗಳ ಕಾಲ ಅದ್ದೂರಿ, ಸಡಗರ ಸಂಭ್ರಮದಿಂದ ಶ್ರದ್ಧಾ ಭಕ್ತಿಯಿಂದ ಊರ ಜಾತ್ರೆಯನ್ನು ನೆರವೇರಿಸಲಾಯಿತು.
ಜಾತ್ರೆಗಾಗಿ ಇಡೀ ಗ್ರಾಮವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗ್ರಾಮದ ಎಲ್ಲ ಮನೆಗಳೂ ಬಣ್ಣದಿಂದ ಸಿಂಗಾರಗೊಂಡಿದ್ದವು.
ಗ್ರಾಮದ ಊರ ದೇವತೆ ಮಳ್ಳೂರಾಂಭದೇವಿ ಸೇರಿದಂತೆ ಇತರೆ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದ ವಿನಿಯೋಗಿಸಿ ನೈವೇಧ್ಯವನ್ನು ಅರ್ಪಿಸಿ ಜನರು ಭಕ್ತಿಭಾವ ಮೆರೆದರು.
ನಂತರ ಬಂಧು ಬಳಗ ಸ್ನೇಹಿತರು, ಪರಿಚಿತರು, ಅಕ್ಕ ಪಕ್ಕದ ಗ್ರಾಮಗಳ ಗ್ರಾಮಸ್ಥರನ್ನು ಕರೆದ ಭರ್ಜರಿ ಬಾಡೂಟ ಹಾಕಿಸಿ ತಾವೂ ಉಂಡು ಸಂತೃಪ್ತಗೊಂಡರು.
ಜಾತ್ರೆಯ ಅಂಗವಾಗಿ ಗ್ರಾಮ ದೇವತೆ ಶ್ರೀಮಳ್ಳೂರಾಂಭ ದೇವಿಯ ಗುಡಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಸೋಮೇಶ್ವರಸ್ವಾಮಿ, ಮಾರಮ್ಮದೇವಿ, ಗಂಗಮ್ಮದೇವಿ, ನೇರಳೆಮ್ಮದೇವಿ ಹಾಗೂ ಸಪ್ಲಮ್ಮ ದೇವಿ ದೇವಾಲಯಗಳಲ್ಲಿ ಲೋಕ ಕಲ್ಯಾಣಾರ್ಥವಾಗಿ ಪೂಜೆ ಸಲ್ಲಿಸಿ ಹೋಮ ಹವನ ಇನ್ನಿತರೆ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಜಾತ್ರೆಯ ೨ನೇ ದಿನ ಇಡೀ ಊರಿನ ಮನೆ ಮನೆಯಿಂದಲೂ ತಂಬಿಟ್ಟು ದೀಪದ ಆರತಿಯನ್ನು ಹೊತ್ತು ಗ್ರಾಮದಲ್ಲಿ ಪ್ರದಕ್ಷಿಣೆ ಹಾಕಿ ಗ್ರಾಮದ ಹೊರವಲಯದಲ್ಲಿನ ಮಳ್ಳೂರಾಂಭ ದೇವಿ ದೇವಾಲಯದಲ್ಲಿ ದೇವತೆಗೆ ಆರತಿಯನ್ನು ಬೆಳಗಲಾಯಿತು.
ಅಂತಿಮ ದಿನವಾದ ಬುಧವಾರ ಕುರಿ ಮೇಕೆ ಕೋಳಿಯನ್ನು ಕಡಿದು ಮಾಂಸದ ವಿವಿದ ಭಕ್ಷ್ಯ ಭೋಜನಗಳನ್ನು ತಯಾರಿಸಿ, ಮನೆಗಳ ಆವರಣದಲ್ಲಿ ಪೆಂಡಾಲ್ ನಿರ್ಮಿಸಿ ಭರ್ಜರಿ ಊಟ ಹಾಕಿದರು.
ದೇವರಮಳ್ಳೂರಲ್ಲಿ ಶ್ರೀಮಳ್ಳೂರಾಂಭದೇವಿಗೆ ತಂಬಿಟ್ಟು ದೀಪೋತ್ಸವ
ಅತ್ಯಾಚಾರಿಗೆ ಮರಣ ದಂಡನೆಗೆ ಆಗ್ರಹಿಸಿ ಹಿಂದೂಪರ ಸಂಘಟನೆಗಳಿಂದ ಪಂಜಿನ ಮೆರವಣಿಗೆ
ಮಧ್ಯಪ್ರದೇಶದಲ್ಲಿ ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕತ್ತು ಸೀಳಿ ಬೀಕರವಾಗಿ ಕೊಲೆಯ ಯತ್ನ ನಡೆಸಿದ ಇರ್ಫಾನ್‌ಗೆ ಮರಣ ದಂಢನೆ ವಿಧಿಸುವ ಮೂಲಕ ಎಲ್ಲ ಅತ್ಯಾಚಾರಿಗಳಿಗೂ ಎಚ್ಚರಿಕೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಆರೋಪಿಗೆ ಮರಣ ದಂಡನೆ ವಿಧಿಸಬೇಕೆಂದು ಆಗ್ರಹಿಸಿ ನಗರದಲ್ಲಿ ಮಂಗಳವಾರ ರಾತ್ರಿ ವಿವಿಧ ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳು ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟಿಸಿದರು.
ನಗರದ ಸಾರಿಗೆ ಬಸ್ ನಿಲ್ದಾಣದಿಂದ ಓಟಿ ವೃತ್ತದವರೆಗೂ ಪಂಜಿನ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಬಸ್ ನಿಲ್ದಾಣ, ಕೋಟೆ ವೃತ್ತ, ಓಟಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.
ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕತ್ತನ್ನು ಸೀಳಿ ಕೊಲೆಗೆ ಯತ್ನಿಸಿದ್ದಲ್ಲದೆ ನಮ್ಮ ಧರ್ಮದ ಬಾಲಕಿಯ ಮೇಲೆ ನಡೆದ ಅತ್ಯಾಚಾರಕ್ಕೆ ಪ್ರತೀಕವಾಗಿ ಈ ಅತ್ಯಾಚಾರವನ್ನು ನಡೆಸಿದ ಎಂದು ಸಮರ್ಥನೆ ಮಾಡಿಕೊಂಡ ಇರ್ಫಾನ್ ಎಂತಹ ಕ್ರೂರಿ ಎಂಬುದು ಇದರಿಂದ ಅರ್ಥವಾಗುತ್ತದೆ. ಅಂತಹ ಅಮಾನುಷ ಕೃತ್ಯ ಎಸಗಿದ ಪಾಪಿಗೆ ಈ ಭೂಮಿ ಮೇಲೆ ಬದುಕುವ ಹಕ್ಕು ಇಲ್ಲ ಬದುಕಲೂ ಬಿಡಬಾರದು, ಆದ್ದರಿಂದದ ಇವನನ್ನು ಮರಣ ದಂಡನೆಯಂತ ಘೋರ ಶಿಕ್ಷೆಗೆ ಒಳಪಡಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಬಿಜೆಪಿ, ಆರ್‌ಎಸ್‌ಎಸ್, ಎಬಿವಿಪಿ ಇನ್ನಿತರೆ ಸಂಘಟನೆಗಳ ಪದಾಧಿಕಾರಿಗಳು ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿ ಅತ್ಯಾಚಾರ ಘಟನೆಯನ್ನು ಖಂಡಿಸಿದರು.
ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆ.ಪುರುಷೋತ್ತಮ, ನಾಗರಾಜ್, ಅಶ್ವತ್ಥ, ನರೇಶ್, ಮಂಜುಳಮ್ಮ ಹಾಜರಿದ್ದರು.
ಅಖಿಲ ಕರ್ನಾಟಕ ಭೋವಿ ಯುವ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷರ ನೇಮಕ
ಶಿಡ್ಲಘಟ್ಟ ತಾಲ್ಲೂಕಿನ ಟಿ.ಪೆದ್ದನಹಳ್ಳಿಯ ಎಸ್.ಸುಜೀತ್‌ಕುಮಾರ್ ಅವರನ್ನು ಅಖಿಲ ಕರ್ನಾಟಕ ಭೋವಿ(ವಡ್ಡರ) ಯುವ ವೇದಿಕೆ(ಕ್ರಾಂತಿ)ಯ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ರಾಜ್ಯ ಘಟಕದ ಅಧ್ಯಕ್ಷ ವೈ.ಕಪಟ್ರೇಶಿ ನೇಮಕ ಮಾಡಿದ್ದಾರೆ
ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ
ಶಿಡ್ಲಘಟ್ಟ ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಜುಲೈ ೧೦ ರಂದು ಚುನಾವಣೆ ನಡೆಸಲು ಚುನಾವಣಾಧಿಕಾರಿಗಳೂ ಆದ ಉಪವಿಭಾಗಾಧಿಕಾರಿ ದಿನಾಂಕ ನಿಗದಿಪಡಿಸಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದರಿಂದ ತೆರವಾದ ಸ್ಥಾನಗಳಿಗೆ ಜುಲೈ ೧೦ ರಂದು ಚುನಾವಣೆ ನಡೆಯಲಿದೆ.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗು ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿಗೆ ಮೀಸಲಾಗಿದೆ.
ಜುಲೈ ೧೦ ರ ಬೆಳಗ್ಗೆ ೯ ರಿಂದ ೧೦ ಗಂಟೆವರೆಗೂ ನಾಮಪತ್ರಗಳನ್ನು ಸಸಲ್ಲಿಸಲು ಅವಕಾಶವಿದ್ದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ನಾಮಪತ್ರ ಸಲ್ಲಿಸಬಹುದು.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದ ಮೇಲೆ ೧೨ ಗಂಟೆಯ ನಂತರ ನಾಮಪತ್ರ ಪರಿಶೀಲನೆ, ವಾಪಸಾತಿ ಹಾಗೂ ಚುನಾವಣೆ ಅವಶ್ಯವಿದ್ದಲ್ಲಿ ಚುನಾವಣೆ ನಡೆಸಿ ನಂತರ ಫಲಿತಾಂಶ ಘೋಷಿಸಲಾಗುವುದು.
ಆಶಾ ಕಾರ್ಯಕರ್ತೆಯರ ತರಬೇತಿ ಕಾರ್ಯಾಗಾರ
ಸಮುದಾಯದ ಆರೋಗ್ಯ ರಕ್ಷಣೆಯಲ್ಲಿ ಆಶಾ ಕಾರ್ಯಕರ್ತೆಯ ಪಾತ್ರ ಪ್ರಮುಖವಾಗಿದ್ದು, ಸ್ಥಳೀಯವಾಗಿ ಆಶಾ ಕಾರ್ಯಕರ್ತೆಯರು ಆರೋಗ್ಯದ ರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯವನ್ನು ಮಾಡಬೇಕು ಎಂದು ರಾಜ್ಯ ಆರ್.ಓ.ಆರ್.ಸಿ.ಎಚ್ ಡಾ.ರಾಜ್ ಕುಮಾರ್ ಆಶಾ ಕಾರ್ಯಕರ್ತೆಯರಿಗೆ ತಿಳಿಸಿದರು.
ತಾಲ್ಲೂಕು ಪಂಚಾಯಿತಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆಶಾ ಕಾರ್ಯಕರ್ತೆಯರ ಕಾರ್ಯಚಟುವಟಿಕೆಗಳ ಕುರಿತು ಸೋಮವಾರ ತರಬೇತಿ ನೀಡಿದ ಅವರು, ಲಾರ್ವಾಗಳ ಸಮೀಕ್ಷೆ, ಸ್ವಚ್ಚತೆ, ಜನರ ಆರೋಗ್ಯ ರಕ್ಷಣೆ, ಗರ್ಭಿಣಿಯರ ಆರೈಕೆ, ಅವರಿಗೆ ನೀಡಬೇಕಾಗಿರುವ ಪೌಷ್ಠಿಕಾಂಶ ಆಹಾರ, ಬಾಣಂತಿಯರ ಆರೈಕೆ, ಸೇರಿದಂತೆ ಸ್ವಚ್ಚತೆಗೆ ಸಂಬಂಧಪಟ್ಟಂತೆ ಜನರಿಗೆ ಜಾಗೃತಿ ಮೂಡಿಸಬೇಕು.
ಗರ್ಭಿಣಿ ಮಹಿಳೆಯರಲ್ಲಿ ಉಂಟಾಗಬಹುದಾದ ರಕ್ತಹೀನತೆಯಂತಹ ಸಮಸ್ಯೆಗಳನ್ನು ನಿವಾರಣೆ ಮಾಡುವುದರ ಕುರಿತು ಜಾಗೃತರಾಗಬೇಕು. ಸಮುದಾಯದ ಆರೋಗ್ಯ ರಕ್ಷಣೆಗಾಗಿ ಸರ್ಕಾರದಿಂದ ಬರುವಂತಹ ಸೌಲಭ್ಯಗಳನ್ನು ಅವರಿಗೆ ತಲುಪಿಸುವಂತಹ ಕಾರ್ಯವನ್ನು ಮಾಡಬೇಕಾಗಿದೆ.
ಹಳ್ಳಿಗಳಲ್ಲಿ ನೈರ್ಮಲ್ಯ ಕಾಪಾಡುವುದು ಒಂದು ಸವಾಲಿನ ಕೆಲಸವಾಗಿದೆ. ಪ್ಲಾಸ್ಟಿಕ್ ಬಳಕೆ, ಎಲ್ಲೆಂದರಲ್ಲಿ ಬಿಸಾಡುವ ಕಸ, ಚರಂಡಿಗಳ ಸ್ವಚ್ಚತೆ, ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಿರಿ. ಪೌಷ್ಠಿಕ ಆಹಾರ ಸೇವನೆ, ಹಸಿರು ತರಕಾರಿಗಳ ಸೇವನೆಯ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯಡಿಯಲ್ಲಿ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಆರೋಗ್ಯ, ಶಿಶುಗಳ ಆರೋಗ್ಯ ಮತ್ತು ಆರೈಕೆ, ಮತ್ತು ಹದಿಹರೆಯದ ಮಕ್ಕಳ ಆರೋಗ್ಯಕ್ಕೆ ಪೂರಕವಾದಂತಹ ಯೋಜನೆ ಕರ್ನಾಟಕ ಸರ್ಕಾರವು ಅನುಷ್ಠಾನಿಸಿ ಪ್ರಸ್ತುತ ರಾಜ್ಯಾದ್ಯಾಂತ ಎಲ್ಲಾ ತಾಲ್ಲೂಕುಗಳಲ್ಲಿ ಅನುಷ್ಠಾನವಾಗುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕಾದರೆ ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಣೆ ಮಾಡಬೇಕು ಎಂದರು.
ಆಶಾ ಕಾರ್ಯಕರ್ತೆಯರ ತಾಲ್ಲೂಕು ಸಮನ್ವಯಾಧಿಕಾರಿ ಗೀತಾ ಮಾತನಾಡಿ, ತಾಲ್ಲೂಕಿನಲ್ಲಿ ಒಟ್ಟು ೧೬೨ ಮಂದಿ ಆಶಾ ಕಾರ್ಯಕರ್ತೆಯರಿದ್ದಾರೆ. ಅವರಲ್ಲಿ ೫೦ ಮಂದಿಯಂತೆ ಮೂರು ತಂಡಗಳಾಗಿ ವಿಭಾಗಿಸಿ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ವೈದ್ಯರುಗಳು, ನರ್ಸ್‌ಗಳು, ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ತಾಲ್ಲೂಕಿನಲ್ಲಿನ ಜನರಿಗೆ ಉತ್ತಮ ಆರೋಗ್ಯವನ್ನು ಒದಗಿಸುವುದು ನಮ್ಮ ಮೂಲ ಉದ್ದೇಶವಾಗಿದೆ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ ಕುಮಾರ್, ಆಶಾ ಕಾರ್ಯಕರ್ತೆರು ತರಬೇತಿಯಲ್ಲಿದ್ದರು.
ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ
ಕ್ಷಯರೋಗ ಒಂದು ಮಾರಾಣಾಂತಿಕ ಕಾಯಿಲೆಯಲ್ಲ, ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಉಚಿತ ಚಿಕಿತ್ಸೆ ಲಭ್ಯವಿದ್ದು ರೋಗದ ಲಕ್ಷಣಗಳು ಕಾಣಿಸಿಕೊಂಡವರು ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ನಗರಸಭಾ ಅಧ್ಯಕ್ಷ ಅಫ್ಸರ್‌ಪಾಷ ತಿಳಿಸಿದರು.
ನಗರದ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ವಿಶ್ವ ಕ್ಷಯರೋಗ ದಿನಾಚರಣೆಯ ಅಂಗವಾಗಿ ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಷಯ ರೋಗದ ಕುರಿತು ಜನರಿಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಸತತವಾಗಿ ಎರಡು ವಾರಗಳಿಗೂ ಮೇಲ್ಪಟ್ಟು ಕೆಮ್ಮು, ಕೆಮ್ಮುವಿನೊಂದಿಗೆ ಕಫ, ಸಂಜೆ ವೇಳೆ ಜ್ವರ, ರಾತ್ರಿಯಲ್ಲಿ ಬೆವರುವುದು, ಎದೆನೋವು, ಉಸಿರಾಟದ ತೊಂದರೆ, ಹಸಿವಾಗದಿರುವುದು, ದೇಹದ ತೂಕ ಕಡಿಮೆಯಾಗುವುದು ಇಂತಹ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಉಚಿತವಾಗಿ ಸಿಗುವ ಔಷಧಿಗಳನ್ನು ನಿಯಮಿತವಾಗಿ ನಿಗದಿತ ಸಮಯದವರೆಗೂ ತೆಗೆದುಕೊಂಡರೆ ಸಂಪೂರ್ಣವಾಗಿ ಗುಣಮುಖರಾಗಲು ಅವಕಾಶವಿದೆ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ ಕುಮಾರ್ ಮಾತನಾಡಿ, ಕ್ಷಯರೋಗ ಬಂದಿದೆ ಎನ್ನುವ ಕೀಳರಿಮೆಯನ್ನು ಬಿಟ್ಟು, ರೋಗವನ್ನು ನಿಯಂತ್ರಣ ಮಾಡಿಕೊಳ್ಳುವುದರ ಜೊತೆಗೆ, ರೋಗಗಳು ಹರಡದಂತೆ ಮುಂಜಾಗ್ರತೆ ವಹಿಸುವುದು ಸೂಕ್ತ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗ ಪತ್ತೆ ಮಾಡಲು ಪರೀಕ್ಷೆಗಳು ಹಾಗೂ ಚಿಕಿತ್ಸೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ವೈದ್ಯರೊಂದಿಗೆ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುವಾಗ ಮುಜುಗರ ಪಡೆದೆ ಹಂಚಿಕೊಂಡು ಈ ಎಲ್ಲಾ ಮಾಹಿತಿಗಳನ್ನು ಇತರರೊಂದಿಗೆ ಹಂಚಿಕೊಂಡು ರೋಗಗಳನ್ನು ನಿಯಂತ್ರಣ ಮಾಡಲು ಸಹಕಾರ ನೀಡಬೇಕು. ಜುಲೈ 2 ರಿಂದ ೧೩ ರವರೆಗೆ ರೋಗ ಪತ್ತೆ ಕಾರ್ಯವನ್ನು ಮಾಡಲಾಗುತ್ತದೆ ಎಂದರು.
ಮನೆ ಮನೆಗೂ ಭೇಟಿ ನೀಡಿ ಕ್ಷಯರೋಗ ತಡೆಗಟ್ಟುವ ಬಗ್ಗೆ ಮಾಹಿತಿ ಇರುವ ಸ್ಟಿಕ್ಕರ್ ಬಾಗಿಲುಗಳಿಗೆ ಅಂಟಿಸಿ ಜಾಗೃತಿ ಮೂಡಿಸಲಾಯಿತು.
ಸರ್ಕಾರಿ ವೈದ್ಯ ಡಾ.ವಿಜಯ್, ನಗರಸಭೆ ಆಯುಕ್ತ ಚಲಪತಿ, ಆರೋಗ್ಯ ಸಹಾಯಕಿ ಮುನಿರತ್ನ, ನಗರಸಭಾ ಸದಸ್ಯೆ ಶಬಾನಾ, ಚಾಂದ್ ಪಾಷ, ಅಕ್ಕಲರೆಡ್ಡಿ ಹಾಜರಿದ್ದರು.
ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ
‘ಹೊಗೆರಹಿತ ಗ್ರಾಮ ಮತ್ತು ನಗರ’ದ ಕನಸಿನೊಂದಿಗೆ ಕೇಂದ್ರ ಸರ್ಕಾರ ಆರಂಭಿಸಿರುವ ‘ಪ್ರಧಾನಮಂತ್ರಿ ಉಜ್ವಲ ಯೋಜನೆ’ಯಡಿ ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ೫೦ ಅರ್ಜಿಗಳು ಬಂದಿದ್ದು ಇದೀಗ ೮ ಮಂದಿ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯತಿ ಆವರಣದಲ್ಲಿ ಸೋಮವಾರ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ, ಸ್ಟೌ, ರೆಗ್ಯುಲೇಟರ್ ವಿತರಿಸಿ ಶ್ರೀ ವೆಂಕಟೇಶ್ವರ ಇಂಡೇನ್ ಗ್ಯಾಸ್ ವ್ಯವಸ್ಥಾಪಕ ಪ್ರಕಾಶ್ ಮಾತನಾಡಿದರು.
ಪರಿಸರ ಉಳಿಸುವುದಲ್ಲದೆ ಆರೋಗ್ಯದ ಸುರಕ್ಷತೆಗೂ ಬಹು ಅನುಕೂಲಕರವಾದ ಉಜ್ವಲ ಯೋಜನೆಯ ಸದುಪಯೋಗವನ್ನು ಪರಿಶಿಷ್ಠ ಜಾತಿ ಹಾಗು ಪಂಗಡದ ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಕುಟುಂಬದವರು ಪಡೆದುಕೊಳ್ಳಬೇಕು ಎಂದರು.
ಮಹಿಳೆಯರು ಸೌದೆ ಬಳಸಿಅಡುಗೆ ಮಾಡುವ ಪದ್ದತಿಗೆ ಮಂಗಳ ಹಾಡಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉಜ್ವಲಯೋಜನೆಯಿಂದ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ. ‘ಉಜ್ವಲ’ ಯೋಜನೆಯಡಿ ಗ್ಯಾಸ್ ಸಂಪರ್ಕ ಹೊಂದಿರದೆ ಇರುವ ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರುವ ಅದರಲ್ಲಿಯೂ ವಿಶೇಷವಾಗಿ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ ಪಡೆಯಲು ಅವಕಾಶವಿದೆ ಎಂದರು.
ಗ್ರಾಮ ಪಂಚಾಯತಿ ಕರವಸೂಲಿಗಾರ ಪಾಪಣ್ಣ, ಮಾಜಿ ಅಧ್ಯಕ್ಷ ಮುನಿರಾಜು, ಸದಸ್ಯ ಅಂಬರೀಶ್, ಮುಖಂಡರಾದ ಡಿ.ಟಿ.ನಾರಾಯಣಸ್ವಾಮಿ ಹಾಜರಿದ್ದರು.
ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತೋತ್ಸವ ಕಾರ್ಯಕ್ರಮ
ನಾಡಪ್ರಭು ಕೆಂಪೇಗೌಡರು ವಕ್ಕಲಿಗ ಸಮುದಾಯದ ಏಳಿಗೆಗಾಗಿ ಕಂಡಂತಹ ಕನಸುಗಳನ್ನು ನನಸು ಮಾಡುವ ಜವಾಬ್ದಾರಿ ಇಂದಿನ ಸಮುದಾಯದ ಮುಖಂಡರೂ ಸೇರಿದಂತೆ ಯುವಜನತೆಯ ಮೇಲಿದೆ ಎಂದು ಶಾಸಕ ವಿ.ಮುನಿಯಪ್ಪ ಹೇಳಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯ ನ್ಯಾಯಾಲಯದ ಸಮೀಪವಿರುವ ಮೈದಾನದಲ್ಲಿ ಬುದವಾರ ಶ್ರೀ ಕೆಂಪೇಗೌಡರ ಜಯಂತೋತ್ಸವ ಆಚರಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತರಿಗಾಗು ಬೆಂಗಳೂರು ನಗರ ವ್ಯಾಪ್ತಿಯೊಂದರಲ್ಲಿಯೇ ಸುಮಾರು ೧೫೦ ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಾಣ ಮಾಡಿದ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ. ಅವರು ದೂರದೃಷ್ಠಿಯಿಂದ ನಿರ್ಮಿಸಿದ ಕೆರೆಗಳಿಂದ ಸಾವಿರಾರು ಮಂದಿ ರೈತರು ವ್ಯವಸಾಯ ಮಾಡುವ ಮೂಲಕ ಜೀವನ ಕಟ್ಟಿಕೊಂಡಿದ್ದಾರೆ ಎಂದರು.
ವಕ್ಕಲಿಗ ಸಮುದಾಯಕ್ಕೆ ಅನ್ನದಾತ ಎಂಬ ವಿಶಿಷ್ಟವಾದ ಗೌರವವಿದೆ. ಇದನ್ನು ಉಳಿಸಿಕೊಂಡು ಹೋಗುವುದೂ ಸೇರಿದಂತೆ ಕೆಂಪೇಗೌಡರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಪ್ರತಿಯೊಬ್ಬರೂ ಉತ್ತಮ ಜೀವನ ನಡೆಸಬೇಕು ಎಂದರು.
ರಾಜ್ಯ ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಮಾತನಾಡಿ ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಇಂದು ವಿಶ್ವ ಖ್ಯಾತಿ ಪಡೆದಿದೆ. ಅವರು ದೂರದೃಷ್ಠಿಯಿಂದ ನಿರ್ಮಿಸಿದ ಕೆರೆಗಳು ಸೇರಿದಂತೆ ವಿವಿಧ ಸಮುದಾಂiiಗಳಿಗಾಗಿ ಪ್ರತ್ಯೇಕ ಪೇಟೆಗಳು ಸಮಾನತೆ ಹಾಗು ಸಹಬಾಳ್ವೆಗೆ ಹೆಸರಾಗಿದೆ ಎಂದರು.
ಮಾಜಿ ಶಾಸಕ ಎಂ.ರಾಜಣ್ಣ, ವಕ್ಕಲಿಗರ ಸಂಘದ ನಿರ್ದೇಶಕ ಯಲುವಹಳ್ಳಿ ರಮೇಶ್ ಮತ್ತಿತರರು ಮಾತನಾಡಿದರು. ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಹಾಗು ಚಂದ್ರಶೇಖರನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಜನಾಂಗದ ಸಾಧಕರನ್ನು ಹಾಗು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳನ್ನು ಸನ್ಮಾಣಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ವಕ್ಕಲಿಗರ ಸಂಘದ ನಿರ್ದೇಶಕರಾದ ವಕ್ಕಲೇರಿ ರಾಮಚಂದ್ರ, ಎಂ.ಎಲ್.ಸತೀಶ್, ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ(ಪುಟ್ಟು), ತಹಸೀಲ್ದಾರ್ ಎಸ್.ಅಜಿತ್‌ಕುಮಾರ್ ರೈ, ಮುಖಂಡರಾದ ಕೆ.ಗುಡಿಯಪ್ಪ, ಹಿರಿಯ ವಕೀಲ ಎಂ.ಪಾಪಿರೆಡ್ಡಿ, ಬಿ.ವಿ.ಮುನೇಗೌಡ, ಎಸ್.ಎಂ.ನಾರಾಯಣಸ್ವಾಮಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ಸುಬ್ಬಾರೆಡ್ಡಿ, ಮತ್ತಿತರರು ಹಾಜರಿದ್ದರು.
ಬೆಂಬಲ ಬೆಲೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ರೇಷ್ಮೆ ಬೆಳೆಗಾರರಿಂದ ಪ್ರತಿಭಟನೆ
ರೈತರು ಮತ್ತು ರೀಲರುಗಳು ಈದಿನ ಬೀದಿಗೆ ಇಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ತಿಂಗಳಿನಲ್ಲಿ ಒಂದು ಕೆಜಿ ರೇಷ್ಮೆ ಗೂಡಿಗೆ 500 ರೂ ಇದ್ದದ್ದು ಈದಿನ 200 ರೂಗೆ ಇಳಿದಿದೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಬೆಲೆಯ ಸ್ಥಿರತೆಗೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಒತ್ತಾಯಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಮಂಗಳವಾರ ರಾಜ್ಯ ರೈತ ಸಂಘ ಹಾಗೂ ರೇಷ್ಮೆ ಬೆಳೆಗಾರರು ಒಗ್ಗೂಡಿ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕಳೆದ ಮೂರ್ನಾಕು ವರ್ಷದ ಹಿಂದಿನ ಧಾರಣೆಯಷ್ಟು ರೇಷ್ಮೆ ಗೂಡಿನ ಬೆಲೆ ಈಗ ದಿಢೀರನೆ ಕುಸಿತ ಕಂಡಿದೆ. ಗೂಡಿನ ಬೆಲೆ ಹೆಚ್ಚಾಗಬೇಕು. ರೀಲರುಗಳಿಗೂ ರೇಷ್ಮೆ ಬೆಲೆ ಹೆಚ್ಚಾಗಬೇಕು. ರೈತ ಮತ್ತು ರೀಲರು ಇಬ್ಬರ ಬದುಕನ್ನೂ ಕಟ್ಟಿಕೊಡುವ ಕೆಲಸ ಸರ್ಕಾರದಿಂದ ಆಗಬೇಕು. ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ರೇಷ್ಮೆ ಗೂಡಿನ ಮಾರುಕಟ್ಟೆಯ ಮುಂದೆ ಸಾಂಕೇತಿಕವಾಗಿ ರಾಜ್ಯ ರೈತ ಸಂಘ ಹಾಗೂ ರೇಷ್ಮೆ ಬೆಳೆಗಾರರು ಸೇರಿ ಒಗ್ಗಟ್ಟಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ.
ಬಸವರಾಜ್ ಅವರ ವರದಿಯ ಪ್ರಕಾರ ರೇಷ್ಮೆ ಗೂಡಿನ ಬೆಲೆ ಒಂದು ಕೇಜಿಗೆ 280 ರೂಗಳಿಗಿಂತ ಒಳಗೆ ಬಂದಾಗ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದಿದೆ. ಆದರೆ ಇದುವರೆಗೂ ಆ ವರದಿಯು ಕಾರ್ಯಗತವಾಗಿಲ್ಲ. ರೈತರು ಮತ್ತು ರೀಲರುಗಳ ಹಿತದೃಷ್ಟಿಯಿಂದ ತಯಾರಾದ ವರದಿ ಇನ್ನೂ ವರದಿಯಾಗಿಯೇ ಉಳಿದಿರುವುದು ವಿಪರ್ಯಾಸವಾಗಿದೆ.
ರಾಜ್ಯದಲ್ಲಿ ಒಂದೂಕಾಲು ಕೋಟಿ ಮಂದಿ ರೇಷ್ಮೆಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹದಿನೈದೂವರೆ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆದಿದ್ದರೆ, ರಾಜ್ಯದಲ್ಲಿ ತೊಂಬತ್ತಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ನೂರು ವರ್ಷದ ಇತಿಹಾಸ ಇರುವ ರೇಷ್ಮೆ ಇಲಾಖೆ ಉಳಿಯಬೇಕಾದರೆ, ರೇಷ್ಮೆ ಬೆಳೆಗಾರ ಉಳಿಯಬೇಕಿದೆ. ಸರ್ಕಾರ ಒಂದೆಡೆ ರೇಷ್ಮೆ ಬೆಳೆಯಿರಿ ಎನ್ನುತ್ತದೆ ಆದರೆ ಅವರ ಬೆಂಬಲವಾಗಿ ಮಾತ್ರ ನಿಲ್ಲುತ್ತಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ರೇಷ್ಮೆ ಗೂಡಿನ ಮಾರುಕಟ್ಟೆ ಬೆಳೆಯಬೇಕು. ಅದಕ್ಕೆ ಸರ್ಕಾರ ರೇಷ್ಮೆ ಬೆಳೆಗಾರರ ಹಿತವನ್ನು ಕಾಪಾಡಲು ಕಟಿಬದ್ಧವಾಗಬೇಕು.
ನೇರವಾಗಿ ಸಂಬಂಧಪಟ್ಟ ಆಯುಕ್ತರು, ಮಂತ್ರಿಗಳು, ಮುಖ್ಯಮಂತ್ರಿಯವರು ಮಧ್ಯಪ್ರವೇಶಿಸಬೇಕು. ಏಸಿ ರೂಮಿಗೆ ರೇಷ್ಮೆ ಇಲಾಖೆಯ ಆಯುಕ್ತರು ಸೀಮಿತರಾಗಬಾರದು. ರೇಷ್ಮೆಯನ್ನು ನಂಬಿರುವ ರಾಜ್ಯದ ಒಂದೂಕಾಲು ಕೋಟಿ ಜನ ಬೀದಿಗೆ ಬಿದ್ದರೆ ರಾಜ್ಯದ ಪರಿಸ್ಥಿತಿ ಏನಾಗುತ್ತದೆ ಊಹಿಸಿ. ಈ ಉದ್ಯನಕ್ಕೆ ಜೀವ ತುಂಬುವ ಕೆಲಸ ಮಾಡದೇ ಪರಿಸ್ಥಿತಿ ಹೀಗೇ ಮುಂದುವರೆದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಗತಿಪರ ರೈತ ಹಿತ್ತಲಹಳ್ಳಿ ಗೋಪಾಲಗೌಡ ಮಾತನಾಡಿ, ರೇಷ್ಮೆ ಬೆಳೆಗಾರರ ಸಂಕಷ್ಟ ರಾಜ್ಯ ಸರ್ಕಾರಕ್ಕೆ ಮುಟ್ಟಬೇಕು. ರೇಷ್ಮೆ ಗೂಡಿನ ಬೆಲೆ ದಿಢೀರನೆ ಕುಸಿತ ಕಂಡಾಗ ರೈತರಿಗೆ ಆಗುವ ಪರಿಣಾಮಗಳನ್ನು ಗಮನಿಸುವವರು ಯಾರಿದ್ದಾರೆ. ಶಾಸಕರು, ಮಂತ್ರಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಎಲ್ಲರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ರೈತರು ಆರ್ಥಿಕವಾಗಿ ಸಾಲದ ಸುಳಿಗೆ ಸಿಲುಕುತ್ತಾರೆ. ಒಂದು ಕೇಜಿ ಗೂಡಿಗೆ 220 ರೂಗಳು ನಷ್ಟವಾದರೆ ರೈತ ವಿಷಕುಡಿಯದೇ ಅನ್ಯ ಮಾರ್ಗವಿಲ್ಲದಂತಾಗುತ್ತದೆ. ಬೆಂಬಲ ಬೆಲೆ ಐದು ನೂರು ರೂಗಳು ಸಿಗದಿದ್ದರೆ ರೈತರು ಹಿಪ್ಪುನೇರಳೆ ಕಡ್ಡಿಗಳನ್ನು ಕಿತ್ತುಹಾಕುತ್ತಾರೆ. ಇಚ್ಛಾಶಕ್ತಿಯಿರುವ ರಾಜಕಾರಣಿಗಳು ಮತ್ತು ಅಧಿಕಾರಿಗಳು ತಕ್ಷಣ ರೈತರ ಬೆಂಬಲಕ್ಕೆ ನಿಲ್ಲಲಿ ಎಂದು ಒತ್ತಾಯಿಸಿದರು.
ರೇಷ್ಮೆ ಗೂಡಿನ ಮಾರುಕಟ್ಟೆ ಉಪನಿರ್ದೇಶಕರ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿ ನಂತರ ಉಪನಿರ್ದೇಶಕ ಸುಭಾಷ್ ಸಂತೇನಹಳ್ಳಿ ಅವರಿಗೆ ಪ್ರತಿಭಟನಾಕಾರರು ಮನವಿಪತ್ರವನ್ನು ಸಲ್ಲಿಸಿದರು.
ರೇಷ್ಮೆ ಹಿತರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಯಲುವಳ್ಳಿ ಸೊಣ್ಣೇಗೌಡ, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ನಾರಾಯಣದಾಸರಹಳ್ಳಿ ಟಿ.ಕೃಷ್ಣಪ್ಪ, ಮಳ್ಳೂರು ಹರೀಶ್, ಎಚ್.ಸುರೇಶ್, ವೇಣುಗೋಪಾಲ್, ರಾಮಕೃಷ್ಣಪ್ಪ, ರಮೇಶ್, ಹರೀಶ್, ಬೋದಗೂರು ವೆಂಕಟಸ್ವಾಮಿರೆಡ್ಡಿ, ದೇವರಾಜ್, ಹೊಸಪೇಟೆ ಜಯಣ್ಣ ಹಾಜರಿದ್ದರು.
ಅಂಗವಿಕಲರಿಗೆ ಮೀಸಲಿಟ್ಟಿರುವ ಅನುದಾನ ಬಳಕೆ ಮಾಡಲು ಆಗ್ರಹ
ಅಂಗವಿಕಲರ ಬಗ್ಗೆ ಅನುಕಂಪ ತೋರುವ ಬದಲಿಗೆ ಅವರಿಗೆ ಸಿಗಬೇಕಾದ ಸರ್ಕಾರಿ ಸವಲತ್ತುಗಳನ್ನು ತ್ವರಿತವಾಗಿ ಸಿಗುವಂತೆ ಮಾಡಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ವಿಕಲಚೇತನ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಂತೋಷ್‌ಕುಮಾರ್ ಒತ್ತಾಯಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸೋಮವಾರ ವಿಕಲಚೇತನ ರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಶಿಡ್ಲಘಟ್ಟ ತಾಲ್ಲೂಕು ಪಂಚಾಯಿತಿಯಲ್ಲಿ ಕಳೆದ ೨01೪ ರಿಂದ ಈವರೆಗೂ ಬಂದಿರುವ ಅನುದಾನಗಳಲ್ಲಿ ವಿಕಲಚೇತನರಿಗಾಗಿ ಮೀಸಲಿಟ್ಟಿರುವ ಶೇ ೩ ಹಾಗು ಶೇ ೫ ರ ಅನುದಾನ ಸುಮಾರು ೨೦ ಲಕ್ಷ ರೂಗಳಿಷ್ಟಿದೆಯಾದರೂ ಅಧಿಕಾರಿಗಳ ಹಾಗು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಈ ಹಣ ವಿಕಲಚೇತನರಿಗಾಗಿ ಬಳಕೆಯಾಗಿಲ್ಲ. ಈ ಬಗ್ಗೆ ಸಾಕಷ್ಟು ಭಾರಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆಯಾದರೂ ಸಬೂಬು ಹೇಳಿಕೊಂಡು ಕಾಲ ಕಳೆಯುತ್ತಿದ್ದಾರೆ. ಕೂಡಲೇ ಈ ಹಣವನ್ನು ವಿಕಲಚೇತನರ ಶ್ರೇಮಾಭಿವೃದ್ಧಿಗಾಗಿ ಬಳಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿದೇಶಕ ಸಿ.ಎಸ್.ಶ್ರೀನಾಥಗೌಡರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸ್ವೀಕರಿಸಿದ ತಾಲ್ಲೂಕು ಪಂಚಾಯಿತಿ ಸಹಾಯಕ ನಿದೇಶಕ ಸಿ.ಎಸ್.ಶ್ರೀನಾಥಗೌಡ ಮಾತನಾಡಿ, ವಿಕಲಚೇತನರ ಅನುಮೋದನೆ ಪಟ್ಟಿ ತಯಾರಿಸಲಾಗಿದ್ದ ಈ ಹಿಂದೆ ವಿವಿಧ ಸಲಕರಣೆ ವಿತರಿಸಲು ದಿನಾಂಕವನ್ನು ನಿಗಧಿಪಡಿಸಲಾಗಿತ್ತು. ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಾದ್ದರಿಂದ ದಿನಾಂಕ ಮುಂದೂಡಬೇಕಾಯಿತು. ಆದಷ್ಟು ಬೇಗ ಅರ್ಹ ವಿಕಲಚೇತನರಿಗೆ ಸಿಗಬೇಕಾದ ಸವಲತ್ತುಗಳನ್ನು ನೀಡಲು ಕ್ರಮ ಜರುಗಿಸಲಾಗುವುದು ಎಂದರು.
ವಿಕಲಚೇತನ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ವೈ.ಎನ್.ಗಂಗಾಧರ್, ವಿಕಲಚೇತನ ಸಂಘಟನೆಯ ಕೆ.ವಿ.ಸುಬ್ರಮಣಿ, ಉಷಾಕಿರಣ್, ಕೃಷ್ಣಕುಮಾರ್ ಹಾಜರಿದ್ದರು.
ಜನಪದ ಗಾಯನ ನೃತ್ಯ ಕಲೆ ತರಬೇತಿ ಕೇಂದ್ರದ ಉದ್ಘಾಟನೆ
ಜನಪದ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕೇವಲ ಕಲಾವಿದರ ಮೇಲಷ್ಟೇ ಅಲ್ಲದೇ ಪ್ರತಿಯೊಬ್ಬ ನಾಗರಿಕರ ಮೇಲೂ ಇದೆ ಎಂದು ಜನಪದ ಹುಂಜ ಎಂಬ ಖ್ಯಾತಿಯ ಗಾಯಕ ಚಿಂತಾಮಣಿ ಮುನಿರೆಡ್ಡಿ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿಯ ಈಧರೆ ಕಲೆ ಮತ್ತು ಸಾಂಸ್ಕೃತಿಕ ಕೇಂದ್ರದ ವತಿಯಿಂದ ನಗರದ ಉಲ್ಲೂರುಪೇಟೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಜನಪದ ಗಾಯನ ನೃತ್ಯ ಕಲೆ ತರಬೇತಿ ಕೇಂದ್ರದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶೀಯ ಕಲೆ, ಸಂಸ್ಕೃತಿಗಳನ್ನು ಮರೆತರೆ ಬದುಕಿನ ಸತ್ವವನ್ನು ಕಳೆದುಕೊಂಡಂತೆ. ಜನಪದ ನಮ್ಮ ಸಂಸ್ಕೃತಿಯ ತಾಯಿಬೇರು. ಜಾಗತೀಕರಣ, ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ ಮತ್ತಿತರ ಕಾರಣಗಳಿಂದ ಜನಪದ ಕಲೆಗಳು ಮರೆಯಾಗುತ್ತಿವೆ. ನಮ್ಮ ಜನಪದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅದರ ಮೂಲಕವೇ ನಮ್ಮ ಹಿರಿಯರು ಬದುಕು ಕಟ್ಟಿಕೊಂಡು ಬೆಳೆದವರು. ಬದಲಾದ ಜೀವನ ಶೈಲಿ, ಮಾಧ್ಯಮಗಳ ಪ್ರಭಾವದಿಂದ ನಮ್ಮ ಕಲೆ ಸಂಸ್ಕೃತಿ ಉಳಿಸುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ.
ದೇಶದ ಸಂಸ್ಕೃತಿಯ ಪ್ರತೀಕವಾಗಿರುವ ಜನಪದ ಕಲೆಗಳನ್ನು ಉಳಿಸಿ ಬೆಳೆಸುವುದು ಇಂದಿನ ಪೀಳಿಗೆಯ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ನಮ್ಮ ಹಿರಿಯರು ಅನಕ್ಷರಸ್ಥರಾದರೂ ಅವರು ಉಳಿಸಿಹೋಗಿರುವ ಗ್ರಾಮೀಣ ಸೊಗಡಿನ ಜನಪದ ಕಲೆಯನ್ನು ಮುಂದಿನ ತಲೆಮಾರಿಗೂ ತಲುಪಿಸುವ ಕೆಲಸಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಈಧರೆ ಕಲಾ ತಂಡದ ಪ್ರಕಾಶ್, ಸಂಗೀತ ಶಿಕ್ಷಕಿ ಮಂಜುಳಾ ಜಗದೀಶ್, ಕಲಾವಿದರಾದ ದೇವರಮಳ್ಳೂರು ದೇವಪ್ಪ, ನಂಜುಂಡಿ, ನಾಯಕ ಅಮಾಸ, ಶಿಕ್ಷಕರಾದ ಶ್ರೀನಿವಾಸರೆಡ್ಡಿ, ರಾಮಕೃಷ್ಣ ಹಾಜರಿದ್ದರು.
ವಿಶ್ವ ಪರಿಸರ ದಿನಾಚರಣೆ ಮತ್ತು ರೈತ ಆಸಕ್ತ ಗುಂಪುಗಳ ಪ್ರಾರಂಭೋತ್ಸವ
ರೈತ ಆಸಕ್ತ ಗುಂಪುಗಳು ಗ್ರಾಮಗಳನ್ನು ಮಾದರಿಯನ್ನಾಗಿ ಮಾಡಬಹುದು. ತಮ್ಮ ಅಭಿವೃದ್ಧಿಗಾಗಿ ತಾವುಗಳೇ ಒಗ್ಗೂಡುವ ಈ ಯೋಜನೆಯಲ್ಲಿ ರೈತರು ಒಗ್ಗಟ್ಟಿನಿಂದ ಅಭಿವೃದ್ಧಿಯತ್ತ ಸಾಗಬೇಕು ಎಂದು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಬೋಜಣ್ಣ ತಿಳಿಸಿದರು.
ತಾಲ್ಲೂಕಿನ ಬಸವಾಪಟ್ಟಣದಲ್ಲಿ ಸೋಮವಾರ ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಯ ವತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಮತ್ತು ಹೊಸದಾಗಿ ಪ್ರಾರಂಭಿಸಿದ ರೈತ ಆಸಕ್ತ ಗುಂಪುಗಳ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾರದೋ ನೆರವು ನಮ್ಮೆಡೆಗೆ ಬರುತ್ತದೆ ಎಂದು ಕಾಯುವುದರ ಬದಲು ನಮ್ಮ ಶಕ್ತಿ, ಸಾಮರ್ಥ್ಯ, ನಮ್ಮ ಉತ್ಪನ್ನಕ್ಕೆ ಉತ್ತಮ ಬೆಲೆಯನ್ನು ಕಂಡುಕೊಂಡು ಅಭಿವೃದ್ಧಿಯತ್ತ ಮುನ್ನಡೆಯೋಣ. ಈ ನಿಟ್ಟಿನಲ್ಲಿ ಪ್ರತಿಯೊಂದು ರೈತ ಆಸಕ್ತ ಗುಂಪುಗಳು ಇತರರಿಗೆ ಮಾದರಿಯಾಗಲಿ ಎಂದು ಹೇಳಿದರು.
ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ ಮಾತನಾಡಿ, ನಮ್ಮ ಪೂರ್ವಜರು ರೂಢಿಸಿಕೊಂಡಿದ್ದ ಪದ್ಧತಿಗಳನ್ನು ಕೈ ಬಿಟ್ಟು ಪರಿಸರ ಹಾಳಾಗಲು ಕಾರಣರಾಗಿದ್ದೇವೆ. ಪ್ರತಿಯೊಬ್ಬರೂ ಗಿಡನೆಡುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಕೆರೆ, ಕುಂಟೆ, ರಸ್ತೆ ಬದಿಯಲ್ಲಿ ಮರಗಳನ್ನು ಬೆಳೆಸಬೇಕು. ಅರಳಿ ಮರವೊಂದು ಹಳ್ಳಿಯಲ್ಲಿದ್ದರೆ ಆಮ್ಲಜನಕದ ಕಾರ್ಖಾನೆಯಿದ್ದಂತೆ. ಅರಳಿ ಮರವೊಂದು ಗಂಟೆಗೆ 2,252 ಕಿಲೋ ಇಂಗಾಲದ ಡಯಾಕ್ಸೈಡ್ ಹೀರಿಕೊಂಡು 1,712 ಕಿಲೋ ಆಮ್ಲಜನಕ ಬಿಡುಗಡೆ ಮಾಡುತ್ತದೆ ಎಂದು ಹೇಳಿದರು.
ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಯು ರೈತರಿಂದ ರೈತರಿಗಾಗಿ ರೈತರೇ ಸ್ಥಾಪಿಸಿರುವ ಸಂಸ್ಥೆ. ರೈತರ ಅನುಕೂಲಕ್ಕಾಗಿ ಕಂಪನಿಯು ತೆರೆದಿರುವ ಮಾರಾಟ ಮಳಿಗೆಯಿಂದ ತಮಗೆ ಬೇಕಾದ ಪೇಪರ್, ಫಾರ್ಮಲಿನ್ ಮುಂತಾದ ವಸ್ತುಗಳನ್ನು ಖರೀದಿಸಿ ಪ್ರೋತ್ಸಾಹಿಸಬೇಕು ಎಂದರು.
ಮೈರಾಡ ಸಂಸ್ಥೆಯು ರೇಷ್ಮೆ ರೈತ ಆಸಕ್ತ ಗುಂಪುಗಳ ಮೂಲಕ ರೇಷ್ಮೆ ಬೆಳೆಗಾರರನ್ನು ಒಗ್ಗೂಡಿಸಿ ತಮ್ಮ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳುವ ಶಕ್ತಿ ಪಡೆಯುವಂತೆ ಮಾಡಲು ಶ್ರಮಿಸುತ್ತಿದೆ. ಇದರ ಸದುಪಯೋಗ ಮಾಡಿಕೊಳ್ಳಿ ಎಂದರು.
ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಯ ಸಿ.ಇ.ಒ ಕೆ.ಎನ್.ಜನಾರ್ಧನ ಮೂರ್ತಿ ಮಾತನಾಡಿ, ಈ ದಿನ ನಾವು ವಿತರಿಸುತ್ತಿರುವ ಗಿಡಗಳ ಸದ್ಭಳಕೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಪರಿಸರ ಸುಂದರಗೊಳಿಸಲು ತಮ್ಮ ಹಸಿರು ಕಾಣಿಕೆಯನ್ನು ಗಿಡಗಳನ್ನು ಬೆಳೆಸುವ ಮೂಲಕ ನೀಡಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕರಿಬೇವು, ಬಾದಾಮಿ, ಸಿಲ್ವರ್ ಓಕ್, ಹೊಂಗೆ, ಗುಲ್‌ಮೊಹರ್, ಬೆಟ್ಟದ ನೆಲ್ಲಿ ಮುಂತಾದ ಜಾತಿಗಳ 100 ಗಿಡಗಳನ್ನು ರೈತರಿಗೆ ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಮುನಿಯಪ್ಪ ಅವರ ಸಹಕಾರದಿಂದ ಉಚಿತವಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ದೇವರಮಳ್ಳೂರು ಕೆರೆಯಲ್ಲಿ ಆನಂದನ್ ಕೋಕಾಕೋಲ ಫೌಂಡೇಶನ್ ಆರ್ಥಿಕ ನೆರವಿನೊಂದಿಗೆ ಮೈರಾಡಾ ಸಂಸ್ಥೆ ನೇತೃತ್ವದಲ್ಲಿ ಹೂಳೆತ್ತುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಯ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ್, ಪ್ರಕಾಶ್, ಎಂಜಿನಿಯರ್ ವೆಂಕಟೇಶ್ ಹಾಜರಿದ್ದರು.
ಕೃಷಿ ಅಧ್ಯಯನ ಪ್ರವಾಸಕ್ಕೆ ತೆಲಂಗಾಣಕ್ಕೆ ಹೊರಟ ತಾಲ್ಲೂಕಿನ ರೈತಮಹಿಳೆಯರು
ಸುಮಾರು ಇಪ್ಪತ್ತೈದು ಮಂದಿ ರೈತ ಮಹಿಳೆಯರು ತೆಲಂಗಾಣ ರಾಜ್ಯಕ್ಕೆ ಕೃಷಿ ಅಧ್ಯಯನ ಪ್ರವಾಸವನ್ನು ಕೈಗೊಳ್ಳಲಿದ್ದು, ನೀರಿನ ಸದ್ಭಳಕೆ, ಒಣಬೇಸಾಯದಲ್ಲಿ ಕೃಷಿಯನ್ನು ನಡೆಸುವ ಬಗ್ಗೆ ಜ್ಞಾನವನ್ನು ವೃದ್ಧಿಸಿಕೊಳ್ಳಲಿದ್ದಾರೆ ಎಂದು ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಹಿತ್ತಲಹಳ್ಳಿ ಎಚ್.ಜಿ.ಗೋಪಾಲಗೌಡ ತಿಳಿಸಿದ್ದಾರೆ.
ಮಳ್ಳೂರಿನ ಭಾರತಾಂಬೆ ಮಹಿಳಾ ರೈತಕೂಟದ ಸಭೆಯಲ್ಲಿ ಅವರು ಮಾತನಾಡಿದರು.
ರೈತರು ಅದರಲ್ಲೂ ಮುಖ್ಯವಾಗಿ ರೈತ ಮಹಿಳೆಯರು ಪ್ರಗತಿಪರ ರೈತರ ಬೇಸಾಯ ಕ್ರಮಗಳನ್ನು, ಕೃಷಿ ವಿಶ್ವವಿದ್ಯಾಲಯಗಳನ್ನು, ಸಮಗ್ರ ಕೃಷಿ ಪದ್ಧತಿಗಳನ್ನು, ಪ್ರಗತಿ ಕಂಡಿರುವ ರೈತ ಆಸಕ್ತ ಗುಂಪುಗಳನ್ನು ವೀಕ್ಷಣೆ ಮಾಡಿ ಬರಬೇಕು. ಇದರಿಂದ ಆರ್ಥಿಕ ಮಟ್ಟ ಸುಧಾರಣೆಯ ಜೊತೆಗೆ ಪೂರ್ಣ ಪ್ರಮಾಣದಲ್ಲಿ ವ್ಯವಸಾಯದಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುತ್ತದೆ. ಈ ಉದ್ದೇಶದಿಂದಲೇ ಕೃಷಿ ಅಧ್ಯಯನ ಪ್ರವಾಸವನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ನಬಾರ್ಡ್ ಬ್ಯಾಂಕಿನ ಮತ್ತು ಪ್ರಗತಿ ಕೃಷ್ಣ ಬ್ಯಾಂಕಿನ ಸಹಕಾರವಿದೆ ಎಂದರು.
ಸಿರಿ ರೈತರ ಕೂಟ, ಮಳ್ಳೂರು ಭಾರತಾಂಬೆ ಮಹಿಳಾ ರೈತ ಕೂಟ ಮತ್ತು ಯುವಕ ರೈತ ಸಮಾಜದ ಒಟ್ಟು 49 ಮಂದಿ ನಾಲ್ಕು ದಿನಗಳ ಕೃಷಿ ಪ್ರವಾಸವನ್ನು ಜೂನ್ 28 ರಂದು ಕೈಗೊಂಡಿದ್ದೇವೆ. ತೆಲಂಗಾಣ ರಾಜ್ಯದ ನೂತನ ರಾಜಧಾನಿ ಅಮರಾವತಿಯ ಹತ್ತಿರದ ಕೃಷಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುತ್ತಿದ್ದು, ನೀರಿನ ಸದ್ಭಳಕೆಗಾಗಿ ತೆಲಂಗಾಣ ರಾಜ್ಯ ಕೈಗೊಂಡಿರುವ ಕ್ರಮಗಳನ್ನು ಅಧ್ಯಯನ ಮಾಡಲಿದ್ದೇವೆ. ವಿವಿಧ ರೀತಿಯ ಚೆಕ್ ಡ್ಯಾಂಗಳನ್ನು ಸಹ ವೀಕ್ಷಿಸಿ, ಮಂತ್ರಾಲಯ, ಶ್ರೀಶೈಲ ಮತ್ತು ಮಹಾನಂದಿಗೆ ಭೇಟಿ ನೀಡಿ ವಾಪಸಾಗಲಿದ್ದೇವೆ.
ವ್ಯವಸಾಯದಲ್ಲಿ ಮುಂದುವರೆಯಲು ರೈತರು ಮತ್ತು ರೈತ ಮಹಿಳೆಯರಲ್ಲಿ ಜೀವನೋತ್ಸಾಹ ತುಂಬಲು ಇಂಥಹ ಅಧ್ಯಯನ ಪ್ರವಾಸಗಳನ್ನು ಸೃಷ್ಟಿಸುವ ಅಗತ್ಯವಿದೆ. ಆಗ ರೈತ ಬಾಂಧವರು ಹೆಚ್ಚಿನ ಪ್ರಗತಿಯನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಎಸ್.ಎಂ.ನಾರಾಯಣಸ್ವಾಮಿ, ಕೆಂಪರೆಡ್ಡಿ, ಸೀಗಳ್ಳಿ ವೀರಣ್ಣ, ಮಳಮಾಚನಹಳ್ಳಿ ಎಂ.ಸಿ.ಜಗದೀಶ್, ಬೂದಾಳ ರಾಮಾಂಜಿ, ಮಳ್ಳೂರು ಭಾರತಾಂಬೆ ಮಹಿಳಾ ರೈತ ಕೂಟದ ಅಧ್ಯಕ್ಷೆ ಕಾಚಹಳ್ಳಿ ರತ್ನಮ್ಮ, ಮಳ್ಳೂರು ವನಿತಾ, ಕೆ.ಎಸ್.ಲಲಿತಾ, ಸರೋಜಮ್ಮ ಹಾಜರಿದ್ದರು.
ಬ್ಯಾಗ್ ರಹಿತ ದಿನ – ವಿವಿಧ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು
ಮಕ್ಕಳಿಗೆ ಪಠ್ಯಪುಸ್ತಕದ ಹೊರೆ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಬ್ಯಾಗ್ ರಹಿತ ದಿನ ಎಂಬ ವಿನೂತನ ಕಾರ್ಯಕ್ರಮಕ್ಕೆ ತಾಲ್ಲೂಕಿನ ಎಲ್ಲಾ ಸರ್ಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶನಿವಾರ ಚಾಲನೆ ನೀಡಲಾಯಿತು. ಸರ್ಕಾರಿ ಶಾಲೆಗಳಲ್ಲಿ ವಿವಿಧ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.
‘ಪ್ರತಿ ತಿಂಗಳು ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಗ್ ತರದೇ ಮಕ್ಕಳು ಶಾಲೆಗೆ ಬರುವಂತೆ ಸೂಚನೆ ನೀಡಲಾಗಿದೆ. ಮಕ್ಕಳಿಗೆ ಆ ದಿನ ಪಾಠದ ಬದಲಿಗೆ ಸೃಜನಶೀಲ ಚಟುವಟಿಕೆಗಳನ್ನು ಹಮ್ಮಿಕೊಂಡು ಕಲಿಕೆಯನ್ನು ಜೀವನ್ಮುಖಿಯಾಗಿರಿಸಲು ಉದ್ದೇಶಿಸಲಾಗಿದೆ. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರತರಲು ಮತ್ತು ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಕಲ್ಪಿಸುವುದು ಇದರ ಮೂಲ ಉದ್ದೇಶ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಬಾಬು ತಿಳಿಸಿದ್ದಾರೆ.
ಕಥೆ ಹೇಳಿದ ಮಕ್ಕಳು
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಕಥೆಗಳನ್ನು ಹೇಳಿಸಲಾಯಿತು. ಯೋಗ ಮಾಡಿಸಲಾಯಿತು. ತಮ್ಮ ಮಾತುಗಳಲ್ಲಿ ಹೇಳಿದ ಕಥೆಗಳನ್ನು ಬರೆಯುವ ವಿಧಾನವನ್ನು ಶಿಕ್ಷಕರು ಕಲಿಸಿದರು. ಬಣ್ಣದ ಪೇಪರನ್ನು ಬಳಸಿ ವಿವಿಧ ಕರಕುಶಲ ವಸ್ತುಗಳನ್ನು ರೂಪಿಸುವ ವಿಧಾನಗಳನ್ನು ಮಕ್ಕಳಿಗೆ ಕಲಿಸಲಾಯಿತು.
‘ಮಕ್ಕಳ ಕಲ್ಪನೆ ವಿಸ್ತರಿಸುವಂತೆ ಅವರಿಂದ ಕಥೆಗಳನ್ನು ಹೇಳಿಸಿದೆವು. ಕಥೆಗಳೆಂದರೆ ಮಕ್ಕಳಿಗೆ ಅಚ್ಚುಮೆಚ್ಚು. ಒಂದೊಂದು ಮಗುವಿನ ಆಲೋಚನೆಯೂ ವಿಭಿನ್ನ. ಪ್ರೋತ್ಸಾಹಿಸಿದಾಗ ಅವರು ಹೇಳುವ ಕಥೆಗಳು ಅಚ್ಚರಿಯನ್ನುಂಟು ಮಾಡಿತು. ಎಲ್ಲಾ ಮಕ್ಕಳೂ ಕಥೆ ಹೇಳುವುದರಲ್ಲಿ ನಾ ಮುಂದು ತಾ ಮುಂದು ಎಂದು ಭಾಗವಹಿಸಿದರು’ ಎಂದು ಶಿಕ್ಷಕ ಚಾಂದ್‌ಪಾಷ ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್, ಪಿಡಿಒ ಅಂಜನ್‌ಕುಮಾರ್, ಅಧಿಕಾರಿ ಮೋಹನ್, ಶಿಕ್ಷಕರಾದ ಭಾರತಿ, ಅಶೋಕ್ ಸಿಬ್ಬಂಧಿ ವೆಂಕಟಮ್ಮ ಹಾಜರಿದ್ದರು.
ಕಥೆ ಪುಸ್ತಕ ಓದಿದ ಮಕ್ಕಳು
ತಾಲ್ಲೂಕಿನ ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಗ್ರಂಥಾಲಯದಲ್ಲಿರುವ ಕಥೆ ಪುಸ್ತಕಗಳನ್ನು ಮಕ್ಕಳಿಗೆ ನೀಡಿ ಓದಿಸಲಾಯಿತು. ಯೋಗ, ಧ್ಯಾನ, ಆಟಗಳಲ್ಲಿ ಮಕ್ಕಳು ತೊಡಗಿಸಿಕೊಂಡರು.
ಶಾಲೆಗೆ ಭೇಟಿ ನೀಡಿದ್ದ ತಾಲ್ಲೂಕು ಪಂಚಾಯಿತಿ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಶ್ರೀನಾಥಗೌಡ ಮಾತನಾಡಿ, ‘ಮಕ್ಕಳಿಗೆ ಉತ್ತಮ ಆಲೋಚನೆ, ಚಿಂತನೆಗೆ ಹಚ್ಚುವ ಚಲನಚಿತ್ರಗಳನ್ನು ತೋರಿಸಿ. ಪ್ರೊಜೆಕ್ಟರ್ ವ್ಯವಸ್ಥೆ ಮಾಡಿಸುವೆ. ಮಕ್ಕಳು ಸರ್ವಾಂಗೀಣ ಬೆಳವಣಿಗೆಗೆ ವಿವಿಧ ಸದಭಿರುಚಿಯ ಹವ್ಯಾಸಗಳನ್ನು ರೂಢಿಸುವ ಅಗತ್ಯವಿದೆ’ ಎಂದು ಹೇಳಿದರು.
ಅಬ್ಲೂಡು ಗ್ರಾಮ ಪಂಚಾಯಿತಿ ಪಿಡಿಒ ಜಯಶ್ರೀ, ಮುಖ್ಯ ಶಿಕ್ಷಕಿ ಸರಸ್ವತನ್ನ, ಶಿಕ್ಷಕರಾದ ಎಂ.ದೇವರಾಜ್, ಡಿ.ಎಸ್.ಶ್ರೀಕಾಂತ್, ಎಚ್.ಆರ್.ಮಂಜುನಾಥ್, ಕೆ.ಶ್ರೀನಿವಾಸ ಯಾದವ್, ಕೆ.ನಾಗರಾಜ್, ಎ.ತ್ರಿವೇಣಿ ಹಾಜರಿದ್ದರು.
ಭಾಷಣ ಮಾಡಿದ ಮಕ್ಕಳು
ತಾಲ್ಲೂಕಿನ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಮಗೆ ಸಿಕ್ಕ ವಿಷಯದ ಬಗ್ಗೆ ತಮ್ಮ ಅಭಿಪ್ರಾಯ, ಅನಿಸಿಕೆ, ಆಲೋಚನೆಗಳನ್ನು ವ್ಯಕ್ತಪಡಿಸಿದರು. ಡಬ್ಬಿಯಲ್ಲಿ ವಿವಿಧ ವಿಷಯಗಳನ್ನು ಚೀಟಿಯಲ್ಲಿ ಬರೆದು ಹಾಕಲಾಗಿದ್ದು, ವಿದ್ಯಾರ್ಥಿಗಳು ತಮಗೆ ಸಿಕ್ಕ ಚೀಟಿಯಲ್ಲಿನ ವಿಷಯದ ಬಗ್ಗೆ ಆ ಕ್ಷಣದಲ್ಲಿ ಮಾತನಾಡಬೇಕಿತ್ತು. ಮಕ್ಕಳು ಮಾತನಾಡಿದ ಮೇಲೆ ಶಿಕ್ಷಕರು ಅವರಿಗೆ ಸುಧಾರಣೆಗೆ ಬೇಕಾದ ಅಂಶಗಳನ್ನು ತಿಳಿಸಿಕೊಟ್ಟರು. ಮಕ್ಕಳು ಯೋಗ, ಧ್ಯಾನ, ಕ್ರೀಡೆಯಲ್ಲಿ ತೊಡಗಿಸಿಕೊಂಡರು.
ಸಿಆರ್‌ಪಿ ಶ್ರೀನಿವಾಸರೆಡ್ಡಿ, ಎಸ್‌ಡಿಎಂಸಿ ಅಧ್ಯಕ್ಷ ಜಯರಾಮ್, ಸದಸ್ಯ ಗಂಗಾಧರ್, ಮುಖ್ಯ ಶಿಕ್ಷಕ ಗೋಪಾಲಕೃಷ್ಣಯ್ಯ, ಶಿಕ್ಷಕರಾದ ಎಲ್.ನಾಗಭೂಷಣ್, ಎಂ.ಎ.ರಾಮಕೃಷ್ಣಪ್ಪ, ಗಂಗಶಿವಪ್ಪ ಹಾಜರಿದ್ದರು.
ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ
ಯೋಗ ಯಾವುದೇ ಧರ್ಮ, ಪಂಥ ಅಥವಾ ಮತಕ್ಕೆ ಸೀಮಿತವಲ್ಲ. ಅದೊಂದು ಜೀವನ ಪದ್ಧತಿ. ದೇಹ ಮತ್ತು ಮನಸ್ಸು ಆರೋಗ್ಯವಾಗಿರಿಸಿಕೊಳ್ಳಲು ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕು ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ನಗರದ ಕೋಟೆ ವೃತ್ತದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಯೋಗಾಸನ, ಪ್ರಾಣಾಯಾಮ ಮತ್ತು ಶೋಭಾಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೋಗ ಕೇವಲ ದೈಹಿಕ ವ್ಯಾಯಾಮ ಮಾತ್ರವಲ್ಲ, ಶರೀರ, ಬುದ್ಧಿ, ಮನಸ್ಸು ಸಮತೋಲನ ಸಾಧಿಸುವ ಜೀವನ ವಿಧಾನವಾಗಿದೆ. ನಮ್ಮಲ್ಲಿನ ಶಕ್ತಿಯನ್ನು ಕಂಡುಕೊಳ್ಳುವುದೇ ಯೋಗ. ನಿಜಾರ್ಥದಲ್ಲಿ ಯೋಗವೆಂದರೆ ಜೀವನ ಪದ್ಧತಿ. ಒಂದು ಗಂಟೆ ಅಭ್ಯಾಸ ಮಾಡಿ ಇಪ್ಪತ್ಮೂರು ಗಂಟೆ ವ್ಯವಹಾರದಲ್ಲಿ ಯೋಗ ಆಧಾರಿತ ಜೀವನ ನಡೆಸಬೇಕು. ಪರಸ್ಪರ ಹೊಂದಿಕೊಂಡು ಬದುಕುವ ರೀತಿಯನ್ನು ಯೋಗದಿಂದ ಕಲಿಯಬಹುದು. ಪುರಾತನ ಯೋಗ ಪದ್ಧತಿ ನಮ್ಮ ದೇಶದ ಹೆಮ್ಮೆಯಾಗಿದೆ. ದೇಹ ದೇವಾಲಯವಿದ್ದಂತೆ ಅದನ್ನು ಶುದ್ಧಿಯಾಗಿಟ್ಟುಕೊಳ್ಳುವುದೇ ಯೋಗ ಎಂದರು.
ಈ ಸಂದರ್ಭದಲ್ಲಿ ಸೂರ್ಯ ನಮಸ್ಕಾರ ಸೇರಿದಂತೆ ವಿವಿಧ ಆಸನಗಳನ್ನು ಯೋಗಪಟುಗಳು ಮಾಡಿದರು. ಪ್ರಾಣಾಯಾಮ ಸಹ ಯೋಗಾಸನದ ನಂತರ ಮಾಡಲಾಯಿತು. ಮುಖ್ಯ ರಸ್ತೆಯಲ್ಲಿ ಯೋಗ ಪಟುಗಳಿಂದ ಶೋಭಾಯಾತ್ರೆಯನ್ನು ಆಯೋಜಿಸಲಾಗಿತ್ತು. ನಂತರ ಪ್ರಸಾದವನ್ನು ವಿತರಿಸಲಾಯಿತು.
ಸರ್ಕಲ್ ಇನ್ಸ್‌ಪೆಕ್ಟರ್ ಸಿದ್ದರಾಜು, ಸಬ್‌ಇನ್ಸ್‌ಪೆಕ್ಟರ್ ಪ್ರದೀಪ್ ಪೂಜಾರಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಎಸ್.ಶಂಕರ್, ಜಿಲ್ಲಾ ಸಂಚಾಲಕ ಸುಂದರಾಚಾರಿ ಹಾಜರಿದ್ದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಯೋಗ
‘ಯೋಗ ಪ್ರತಿಯೊಬ್ಬರನ್ನು ರೋಗ ಮುಕ್ತಿಯತ್ತ ಕೊಂಡೊಯ್ಯುತ್ತದೆ. ಪ್ರತಿಯೊಬ್ಬರೂ ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕು’ ಎಂದು ಯೋಗ ಶಿಕ್ಷಕ ರಾಮ್ ಮೋಹನ್ ಜೀ ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನೆಹರು ಯುವ ಕೇಂದ್ರ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನ ಮತ್ತು ನೆರೆ ಹೊರೆಯ ಯುವ ಸಂಸತ್ತು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜಕ್ಕೆ ಕೊಡುಗೆಯಾಗಿ ನಾವು ಏನನ್ನಾದರೂ ನೀಡಬೇಕು. ಆ ಮೂಲಕ ಸಮಾಜಿಕ ಸೇವೆಯ ಹೊಣೆಗಾರಿಕೆ ನಿಭಾಯಿಸಬೇಕು. ಸಾತ್ವಿಕ ಆಹಾರ ಸೇವನೆ ಹಾಗೂ ನಿಯಮಿತ ಯೋಗ ಕಲಿಕೆ ಮನುಷ್ಯನ ಆರೋಗ್ಯದಲ್ಲಿ ಪ್ರಗತಿ ಮೂಡಿಸುತ್ತದೆ. ಇಂತಹ ಆರೋಗ್ಯವಾಹಕ ಯೋಗವನ್ನು ಪ್ರತಿನಿತ್ಯ ೧೫ ರಿಂದ ೨೦ ನಿಮಿಷ ಪಾಲಿಸುವುದರೊಂದಿಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು.
ಯೋಗ ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಹುಟ್ಟಿ ಬೆಳೆದದ್ದು ಇದೀಗ ಇಡೀ ವಿಶ್ವವೆಲ್ಲಾ ಅದನ್ನೊಪ್ಪಿಕೊಂಡು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುತ್ತಿದೆ. ಹಾಗಾಗಿ ಯುವಪೀಳಿಗೆ ಮುಂದಿನ ದಿನಗಳಲ್ಲಿ ಆರೋಗ್ಯವಂತ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಯೋಗವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ತಹಶೀಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿ, ಯೋಗವನ್ನು ಮಾಡುವುದರಿಂದ ದೈಹಿಕವಾಗಿ ಸಮತೋಲನ ಕಾಪಾಡಿಕೊಳ್ಳುವುದರ ಜೊತೆಗೆ, ಮಾನಸಿಕವಾಗಿ ನೆಮ್ಮದಿಯನ್ನು ಕಾಣಲು ಸಾಧ್ಯವಾಗುತ್ತದೆ, ಕ್ರೀಯಾಶೀಲತೆ, ಹಾಗೂ ದಿನನಿತ್ಯ ಚಟುವಟಿಕೆಯಿಂದ ಇರಲು ಯೋಗ ಸಹಕಾರಿಯಾಗಿರುತ್ತದೆ, ಹಾಗಾಗಿ ವಿದ್ಯಾರ್ಥಿಗಳು ಪ್ರಮುಖವಾಗಿ ಯುವಜನತೆ ತಮ್ಮ ಜೀವನದುದ್ದಕ್ಕೂ ಯೋಗವನ್ನು ಒಂದು ಹವ್ಯಾಸವನ್ನಾಗಿ ಮಾಡಿಕೊಳ್ಳುವ ಮೂಲಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ತಾಡಾಸನ, ಅರ್ಧಚಂದ್ರಾಸನ, ಪದ್ಮಾಸನ, ಅರ್ಧಕಟ್ಟಿ ಚಕ್ರಾಸನ, ವೃಕ್ಷಾಸನ, ಸೇರಿದಂತೆ ವಿವಿಧ ಆಸನಗಳ ಬಗ್ಗೆ ಮಾಹಿತಿ ನೀಡಿದರು. ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ನಗರಸಭೆ ಆಯುಕ್ತ ಚಲಪತಿ, ಪ್ರಾಂಶುಪಾಲ ಎನ್. ಆನಂದ್, ಎನ್.ಎಸ್.ಎಸ್.ಕಾರ್ಯದರ್ಶಿ ಮುನಿರಾಜು, ವಕೀಲ ರವೀಂದ್ರನಾಥ ಹಾಜರಿದ್ದರು.
ಬಿಜೆಪಿ ಕಾರ್ಯಕರ್ತರಿಂದ ಯೋಗ
ನಗರದ ಅರಳೇಪೇಟೆಯ ಶ್ರೀ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಮಕ್ಕಳೊಂದಿಗೆ ಯೋಗಾಸನ ಮಾಡುವ ಮೂಲಕ ಆಚರಿಸಲಾಯಿತು.
‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ’ ಎಂಬ ಹಿರಿಯ ಮಾತಿನಂತೆ ಎಳೆಯ ವಯಸ್ಸಿನಿಂದಲೇ ನಮ್ಮ ಪರಂಪರೆ, ಯೋಗ ಪದ್ಧತಿ ಮತ್ತು ಸಂಸ್ಕಾರವನ್ನು ಕಲಿಸುವ ನಿಟ್ಟಿನಲ್ಲಿ ಮಕ್ಕಳೊಂದಿಗೆ ಯೋಗಾಸನ ಮಾಡುತ್ತಿದ್ದೇವೆ’ ಎಂದು ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ಬಿಜೆಪಿ ಸಾಮಾಜಿಕ ಜಾಲತಾಣಗಳ ಉಸ್ತುವಾರಿ ಕೆ.ಪುರುಷೋತ್ತಮ, ಕರಾಟೆ ಶಿಕ್ಷಕ ಅರುಣ್‌ಕುಮಾರ್ ಹಾಜರಿದ್ದರು.
ಅಧಿಕಾರಿಗಳ ಬದ್ಧತೆಯಿಂದಲೇ ಕ್ಷೇತ್ರದ ಅಭಿವೃದ್ಧಿ ಸಾಧ್ಯ – ಶಾಸಕ ವಿ.ಮುನಿಯಪ್ಪ
ಶುದ್ದ ಕುಡಿಯುವ ನೀರು ಪೂರೈಕೆ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಕ್ಷೇತ್ರದ ಜನತೆಗೆ ತಲುಪಿಸುವಂತಹ ಮಹತ್ತರವಾದ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಅಧಿಕಾರಿಗಳ ಬದ್ಧತೆಯಿಂದಲೇ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಶಾಸಕ ವಿ.ಮುನಿಯಪ್ಪ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ತಾಲ್ಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಮೂರು ತಿಂಗಳಲ್ಲಿ ಇಲಾಖೆಗಳಲ್ಲಿ ವಿಲೇವಾರಿಯಾಗದೆ ಬಾಕಿ ಉಳಿದುಕೊಂಡಿರುವ ಕಡತಗಳನ್ನು ವಿಲೇವಾರಿ ಮಾಡಬೇಕು. ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬರುತ್ತಿದ್ದು, ಅದನ್ನು ಸರಿಪಡಿಸಿಕೊಂಡು ಕೆಲಸ ಮಾಡಿ, ಸಮಸ್ಯೆಗಳನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಖುದ್ದು ಪರಿಶೀಲನೆ ನಡೆಸುತ್ತೇನೆ.
ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳಲ್ಲಿ ಆಗಿರುವ ಪ್ರಗತಿಯ ಕುರಿತು ಮಾಹಿತಿ ಪಡೆದುಕೊಂಡ ಅವರು, ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಪ್ರತಿ ಹಳ್ಳಿ ಹಳ್ಳಿಗೂ ಶುದ್ದ ಕುಡಿಯುವ ನೀರು ಪೂರೈಕೆ ಮಾಡುವುದರ ಜೊತೆಗೆ ಮಳೆಗಾಲವಾಗಿರುವುದರಿಂದ ರೈತರಿಗೆ ವಿತರಣೆಯಾಗಬೇಕಾದ ಗುಣಮಟ್ಟದ ಬಿತ್ತನೆ ಬೀಜಗಳನ್ನು ಪೂರೈಕೆ ಮಾಡಲು ಕ್ರಮವಹಿಸಿ, ರಸಗೊಬ್ಬರ ವಿತರಣೆಗೂ ರೈತರಿಂದ ಅಗತ್ಯ ದಾಖಲೆಗಳನ್ನು ಪಡೆದುಕೊಂಡು ವಿತರಣೆ ಮಾಡಬೇಕು.
ಯಾವುದೇ ಕಾಮಗಾರಿಗಳು ಒಂದು ಬಾರಿ ಟೆಂಡರ್ ಮುಗಿದು ಕಾಮಗಾರಿ ಆರಂಭವಾದ ನಂತರ ಗುತ್ತಿಗೆದಾರರು ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಬಗ್ಗೆ ಅಧಿಕಾರಿಗಳು ಮೇಲುಸ್ತುವಾರಿ ವಹಿಸಿ ಕೆಲಸ ಮಾಡಬೇಕು. 2017 – 18 ನೇ ಸಾಲಿನಲ್ಲಿ ಆರಂಭವಾಗಿರುವ ಬಹಳಷ್ಟು ಕಾಮಗಾರಿಗಳು ಪೂರ್ಣಗೊಂಡಿಲ್ಲ. ಅನುದಾನ ಬಿಡುಗಡೆಯಾಗುವದಷ್ಟೆ ಮುಖ್ಯವಲ್ಲ. ಅಧಿಕಾರಿಗಳು ನೇರ ಹೊಣೆಗಾರರಾಗುತ್ತಾರೆ. ಸಾರ್ವಜನಿಕರಿಂದ ಹೆಚ್ಚು ದೂರುಗಳು ಬಾರದ ಹಾಗೆ ಕಾರ್ಯನಿರ್ವಹಣೆ ಮಾಡಿಕೊಂಡು ಹೋಗಿ, ಜನರಿಗೆ ಸಮಸ್ಯೆಯಾಗುವ ರೀತಿಯಲ್ಲಿ ನಡೆದುಕೊಳ್ಳಬೇಡಿ, ಸಮ್ಮಿಶ್ರ ಸರ್ಕಾರದ ಲಾಭ ಪಡೆದುಕೊಳ್ಳಲು ಹೋಗಬೇಡಿ.
ಜಿದ್ದಾಜಿದ್ದಿಗೆ ಬಿದ್ದಿದ್ದ ಪಕ್ಷಗಳು ಒಟ್ಟುಗೂಡಿ ಸರ್ಕಾರ ನಡೆಸಬೇಕಾಗಿರುವ ಅನಿವಾರ್ಯತೆ ಇದೆ. ಹೊಂದಾಣಿಕೆ ಆಗಲೇಬೇಕಾಗಿದೆ. ಒಂದು ವೇಳೆ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಕೋಮುವಾದಿ ಪಕ್ಷದ ಅಧಿಕಾರಕ್ಕೆ ಬರುತ್ತೆ ಎನ್ನುವ ಕಾರಣಕ್ಕೋಸ್ಕರ ಮಾಡಿಕೊಂಡಿದ್ದೇವೆ. ಹಾಗಂತ ಹೊಂದಾಣಿಕೆಯನ್ನು ದುರುಪಯೋಗ ಮಾಡಿಕೊಳ್ಳಲು ಯಾರೂ ಪ್ರಯತ್ನ ಮಾಡಬಾರದು ಎಂದರು.
ತಹಶೀಲ್ದಾರ್ ಅಜಿತ್ ಕುಮಾರ್ ರೈ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್, ನಗರಸಭೆ ಆಯುಕ್ತ ಚಲಪತಿ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಭೀಮೇಶ್, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಮೇಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ
ಮಾನವ ಹಕ್ಕುಗಳ ಹಿತರಕ್ಷಣಾ ಸಮಿತಿ, ಭಾರತೀಯ ರೆಡ್‌ಕ್ರಾಸ್ ಸೊಸೈಟಿ, ಮೇಲೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಮೇಲೂರು ಮತ್ತು ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿ, ಮೇಲೂರು ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ, ಮೇಲೂರು ಡಾ.ಬಿ.ಆರ್.ಅಂಬೇಡ್ಕರ್ ಸಂಘ, ಶ್ರೀ ಮಹರ್ಷಿ ವಾಲ್ಮೀಕಿ ನಾಯಕರ ಯುವ ಘಟಕದ ಸಹಯೋಗದೊಂದಿಗೆ ಬುಧವಾರ ಮೇಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾನವ ಹಕ್ಕುಗಳ ಹಿತರಕ್ಷಣಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಎಂ.ಹನುಮಯ್ಯ ಮಾತನಾಡಿದರು.
ಆರೋಗ್ಯವಾಗಿರುವವರು ನಿಯಮಿತವಾಗಿ ರಕ್ತದಾನ ಮಾಡುತ್ತಿರಬೇಕು. ಇದರಿಂದ ಸಾಕಷ್ಟು ಜನರ ಪ್ರಾರವನ್ನು ಉಳಿಸಬಹುದಾಗಿದೆ. ತಜ್ಞ ವೈದ್ಯರು ಗ್ರಾಮಕ್ಕೆ ಬಂದಿರುವಾಗ ಕಣ್ಣನ್ನು ತಪಾಸಣೆ ಮಾಡಿಸಿಕೊಳ್ಳಬೇಕೆಂದು ಅವರು ತಿಳಿಸಿದರು.
ಮಾನವನ ರಕ್ತ ಅಮೂಲ್ಯವಾದುದು. ಇದು ಮನುಷ್ಯನ ಜೀವ ಉಳಿಸುತ್ತದೆ, ರಕ್ತದಾನಕ್ಕೆ ಪರ್ಯಾಯ ವಸ್ತುವೆಂದರೆ ರಕ್ತ ಒಂದೇ. ಸಾಮಾನ್ಯವಾಗಿ ರಸ್ತೆ ಅಪಘಾತದಲ್ಲಿ ರಕ್ತಸ್ರಾವಗೊಂಡ ರೋಗಿಗಳು ಮತ್ತು ಹೆರಿಗೆ ಸಂದರ್ಭದಲ್ಲಿ ಗರ್ಭಿಣಿಯರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಇಂಥ ಸಂದರ್ಭದಲ್ಲಿ ರಕ್ತದಾನಿಗಳು ನೀಡುವ ರಕ್ತ ಮಹತ್ವ ಪಡೆಯುತ್ತದೆ. ವೈದ್ಯಕೀಯ ತಜ್ಞರ ಪ್ರಕಾರ ಒಬ್ಬರ ರಕ್ತದಾನದಿಂದ ಮೂರು ಜನರ ಪ್ರಾಣ ಉಳಿಸಬಹುದಾಗಿದೆ ಎಂದು ಹೇಳಿ ರಕ್ತದಾನದ ಮಹತ್ವವನ್ನು ವಿವರಿಸಿದರು.
ಮೇಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ರಮೇಶ್ ಮಾತನಾಡಿ, ‘ದೇಶದಲ್ಲಿ ಲಕ್ಷಾಂತರ ಜನರು ಕಣ್ಣಗಳಿಲ್ಲದೇ ಬದುಕು ಸಾಗಿಸುತ್ತಿದ್ದಾರೆ. ಅಂಥವರ ಪಾಲಿಗೆ ನೇತ್ರ ದಾನದ ಮೂಲಕ ಬೆಳಕು ನೀಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಾವಿನ ಬಳಿಕ ಕಣ್ಣು ದಾನ ಮಾಡಲು ಮುಂದಾಗಬೇಕು. ತಜ್ಞ ವೈದ್ಯರು ಬಂದಿದ್ದಾರೆ. ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಿ ಎಂದು ಕರೆ ನೀಡಿದರು.
ಸುಮಾರು ಐವತ್ತು ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಸುಮಾರು ಎಂಬತ್ತು ಮಂದಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರು.
ಮಾನವ ಹಕ್ಕುಗಳ ಹಿತರಕ್ಷಣಾ ಸಮಿತಿ ರಾಜ್ಯ ಘಟಕದ ಉಪಾಧ್ಯಕ್ಷ ರಾಮಾಂಜಿನಪ್ಪ, ವಿಜಯಕುಮಾರ್, ಗೋವಿಂದಪ್ಪ, ಮಂಜುನಾಥ, ಪಿ.ನರಸಿಂಹಮೂರ್ತಿ, ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಕಾರ್ಯದರ್ಶಿ ಗುರುರಾಜರಾವ್, ಬಿ.ಕೆ.ನರಸಿಂಹಮೂರ್ತಿ, ಎಂ.ಪಿ.ಆಂಜಿನಪ್ಪ, ನಾರಾಯಣಸ್ವಾಮಿ ಹಾಜರಿದ್ದರು.
ಯೋಧನ ಕುಟುಂಬದೆಡೆಗೆ ಕಣ್ತೆರೆಯದ ಜನಪ್ರತಿನಿಧಿಗಳು
ತಾಲ್ಲೂಕಿನ ಯಣ್ಣಂಗೂರಿನಲ್ಲಿ ಹುತಾತ್ಮ ಯೋಧ ಗಂಗಾಧರ್ ಮೃತಪಟ್ಟು ಆಗಲೇ ಒಂದು ವರ್ಷವಾಯಿತು. ಬುಧವಾರ ಯಣ್ಣಂಗೂರಿನಲ್ಲಿ ಒಂದು ವರ್ಷದ ಪೂಜಾ ಕಾರ್ಯವನ್ನು ಕುಟುಂಬದವರು ಆಯೋಜಿಸಿದ್ದಾರೆ.
ಗಂಗಾಧರ್ ಓದಿದ್ದ ಜ್ಞಾನಜ್ಯೋತಿ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಜೊತೆಯಲ್ಲಿ ನವೋದಯ ಕಾಲೇಜಿನ ಹಾಗೂ ಯಣ್ಣಂಗೂರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಸಹ ಆಹ್ವಾನಿಸಿದ್ದಾರೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧನ ಸಮಾಧಿ ಸ್ಥಳವನ್ನು ಕುಟುಂಬದವರು ಅಚ್ಚುಕಟ್ಟಾಗಿ ಸುಂದರವಾಗಿ ನಿರ್ಮಾಣ ಮಾಡಿಸಿದ್ದಾರೆ.
ಹುತಾತ್ಮ ಯೋಧ ಗಂಗಾಧರ್ ಅವರ ತಮ್ಮ ರವಿಕುಮಾರ್ ಕೂಡ ಪ್ರಸ್ತುತ ಬಿಎಸ್‌ಎಫ್‌ನಲ್ಲಿ ಯೋಧನಾಗಿದ್ದು ಕಾಶ್ಮೀರದ ದೇಶದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಣ್ಣಮ ಕಾರ್ಯದ ನಿಮಿತ್ತ ರಜೆ ಪಡೆದು ಅವರು ಗ್ರಾಮಕ್ಕೆ ಬಂದಿದ್ದಾರೆ.
ಬರದೇಹೋದ ಸರ್ಕಾರಿ ಸವಲತ್ತುಗಳು
ಒಂದು ವರ್ಷದ ಹಿಂದೆ ಹುತಾತ್ಮ ಯೋಧನ ಅಂತಿಮ ದರ್ಶನಕ್ಕೆ ಆಗಮಿಸಿದ್ದ ಆಗಿನ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ವೀರಪ್ಪ ಮೊಯ್ಲಿ ಅವರನ್ನು ಪ್ರಶ್ನಿಸಿದ್ದ ಯೋಧನ ಪತ್ನಿ ಮತ್ತು ಸಂಬಂಧಿಗಳು ಮೃತ ದೇಹ ಬರಲು ಮೂರು ದಿನಗಳಾಗಿದ್ದಕ್ಕೆ ಆಕ್ರೋಷ ವ್ಯಕ್ತಪಡಿಸಿದ್ದರು.
ಲೋಕಸಭೆ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಶ್ನೆ ಮಾಡುವುದಾಗಿ ವೀರಪ್ಪ ಮೊಯ್ಲಿ ಹೇಳಿದ್ದರೆ, ಮುಖ್ಯ ಮಂತ್ರಿಗಳಿಗೆ ವಿಷಯವನ್ನು ತಿಳಿಸಿ ಕೇಂದ್ರಕ್ಕೆ ಪತ್ರ ಬರೆಸುವುದಾಗಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದರು. ಸರ್ಕಾರದಿಂದ ಎಷ್ಟು ಸಾಧ್ಯವೋ ಅಷ್ಟು ಯೋಧನ ಕುಟುಂಬಕ್ಕೆ ಸವಲತ್ತುಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದರು.
‘ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ನಾವು ಏನನ್ನೂ ಬಯಸಿರಲಿಲ್ಲ. ಅವರೇ ಬಂದು ಭರವಸೆ ನೀಡಿದರು. ಆದರೆ ಭರವಸೆಗಳನ್ನು ಈಡೇರಿಸುವುದಿರಲಿ ಕನಿಷ್ಠ ಸೌಜನ್ಯಕ್ಕೂ ಪುನಃ ಬಂದು ಯಾರೂ ನಮ್ಮ ಸ್ಥಿತಿಗತಿ ವಿಚಾರಿಸಲಿಲ್ಲ’ ಎಂದು ಗಂಗಾಧರ್ ಅವರ ಮಾವ ಜಯಚಂದ್ರಪ್ಪ ತನ್ನ ನೋವನ್ನು ವ್ಯಕ್ತಪಡಿಸಿದರು.
ಗಂಗಾಧರ್ ನೆನಪಿನಲ್ಲಿ ಕುಟುಂಬ
‘ಗಂಗಾಧರ್ ಮೃತನಾದ ಮೇಲೆ ಇದ್ದೊಂದು ಕೊಳವೆ ಬಾವಿಯೂ ಬತ್ತಿಹೋಯಿತು. ಮೊದಲು ಹಿಪ್ಪುನೇರಳೆ ಸೊಪ್ಪನ್ನು ಬೆಳೆದು ರೇಷ್ಮೆ ಹುಳು ಸಾಕಣೆ ಮಾಡುತ್ತಿದ್ದೆವು. ಅದೂ ನಿಂತು ಹೋಯಿತು. ಮಗ ಹೋದ ನೋವು, ಸೊಸೆ ಮತ್ತು ಮೊಮ್ಮಗ ಮಾಮೂಲಿ ಜೀವನಕ್ಕೆ ಹಿಂದಿರುಗಲು ಆರು ತಿಂಗಳು ಬೇಕಾಯಿತು. ಸೊಸೆ ವೈದ್ಯೆಯಾಗಿ ವಿಜಯಪುರದಲ್ಲಿ ಕ್ಲಿನಕ್ ನಡೆಸುತ್ತಿದ್ದಾರೆ. ಮೊಮ್ಮಗ ಪವನ್‌ಗೌಡ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಎರಡನೆಯ ಮಗ ರವಿಕುಮಾರ್ ಕೂಡ ಸೇನೆಯಲ್ಲಿದ್ದಾನೆ. ನಮ್ಮದು ಆತಂಕದ ಬದುಕು’ ಎನ್ನುತ್ತಾರೆ ಗಂಗಾಧರ್ ತಂದೆ ಮುನಿಯಪ್ಪ.
‘ಸೇನೆಯಿಂದ ಬರುವ ಎಲ್ಲಾ ಸವಲತ್ತುಗಳು ತಪ್ಪದೇ ಬರುತ್ತದೆ. ಆದರೂ ಕುಟುಂಬಕ್ಕೆ ಇರುವವನು ನಾನೊಬ್ಬನೇ ಆಸರೆ. ಅಕಸ್ಮಾತ್ ನನಗೇನಾದರೂ ಆದರೆ ಕುಟುಂಬದ ಗತಿಯೇನು ಎಂದು ಸದಾ ಅಂದುಕೊಳ್ಳುತ್ತಿರುತ್ತೇನೆ. ಆದರೆ ದೇಶಸೇವೆಗೆ ಹೋದ ನಾನು ಹೇಡಿಯಂತೆ ಹಿಂದಿರುಗಲಾರೆ. ಕುಟುಂಬದವರು ಅಣ್ಣನನ್ನು ಕಳೆದುಕೊಂಡಾಗ ನನ್ನನ್ನು ಕಳುಹಿಸಲು ಸಿದ್ದರಿರಲಿಲ್ಲ. ಅತ್ತಿಗೆಗೆ, ಅಪ್ಪ ಅಮ್ಮರಿಗೆ ಧೈರ್ಯ ಹೇಳಿ ಹೋಗಬೇಕಾಯಿತು. ಒಂದು ವರ್ಷ ಕಳೆದಿದೆ. ದೇಶದ ಗಡಿಯಲ್ಲಿನ ಈಗಿನ ಪರಿಸ್ಥಿತಿಯಲ್ಲಿ ನನಗೆ ರಜೆಯೇ ನೀಡಬಾರದು. ಆದರೂ ಕಳಿಸಿದ್ದಾರೆ. ಅಣ್ಣನ ನೆನಪಿನಲ್ಲಿ ಶಾಲಾ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ನೀಡಲಾಗುವುದು. ಸಾಕಷ್ಟು ಜನ ಅಣ್ಣ ಸತ್ತಾಗ ಬಂದು ಸಾಂತ್ವನ ಹೇಳಿದ್ದರು. ಆತನ ಒಂದು ವರ್ಷದ ಪೂಜೆಗೂ ಎಲ್ಲರೂ ಬನ್ನಿ’ ಎಂದು ಗಂಗಾಧರ್ ಸಹೋದರ ರವಿಕುಮಾರ್ ಹೇಳಿದರು.
ಗಂಗಾಧರ್ ಸಮಾಧಿ
‘ಮಗ ನಮ್ಮ ಮುಂದೆಯೇ ಇರಲಿ’ ಎಂಬ ತಂದೆತಾಯಿರ ಬಯಕೆಯಿಂದ ಮನೆಯ ಮುಂದಿನ ತೋಟದಲ್ಲಿ ಗಂಗಾಧರ್ ಅವರ ಅಂತಿಮ ಸಂಸ್ಕಾರವನ್ನು ಮಾಡಲಾಗಿತ್ತು. ಆ ಸ್ಥಳದಲ್ಲಿ ಈಗ ಸುಂದರವಾಗಿ ಸಮಾಧಿಯನ್ನು ನಿರ್ಮಿಸಲಾಗಿದೆ. ದೇಶಕ್ಕಾಗಿ ಜೀವನವನ್ನು ಮುಡಿಪಿಟ್ಟ ವೀರ ಯೋಧನ ಕುರುಹಾಗಿ ಎಳೆಯರಿಗೆ ಸ್ಫೂರ್ತಿ ನೀಡುವಂತೆ ಅದನ್ನು ಹೆಚ್ಚು ಹಣ ಖರ್ಚಾದರೂ ನಿರ್ಮಿಸಿರುವುದಾಗಿ ಕುಟುಂಬದವರು ತಿಳಿಸಿದರು.
ಗಂಗಾಧರ್ ಕುರಿತ ಮಾಹಿತಿ:
ಎಂ.ಗಂಗಾಧರ್ (೩೯), ಬೆಟಾಲಿಯನ್-೬೬, ಬ್ಯಾಡ್ಜ್ ನಂ ೪೯೧.ರೋಲ್ ನಂ ೯೮೦೦೯೩೧೨, ಸಿ ಕಂಪೆನಿ.
ಜನ್ಮ ದಿನಾಂಕ : 1978ರ ಜೂನ್ 10, ಸೇವೆಗೆ ಸೆರಿದ ದಿನಾಂಕ : 1998ರ ಆಗಸ್ಟ್ 20
ರಾಜಾಸ್ಥಾನದ ಜೋಧ್‌ಪುರದ ಫ್ರಂಟ್ ಏರ್‌ನಲ್ಲಿ ತರಬೇತಿ ಮುಗಿಸಿ ಜಮ್ಮುವಿನ ಪಲೋಡ, ಅಕ್ಕನೂರು, ಪಂಥಾಚೌಕ್, ಗುಲ್, ಪಂಜಾಬ್, ಕಾಶ್ಮೀರದ ಲೇ, ಪಶ್ಚಿಮಬಂಗಾಲದ ಸಿಲ್ಲಿಗುರಿ ಸೇರಿದಂತೆ ಡಾರ್ಜಲಿಂಗ್‌ನ ಗಡಿಯಲ್ಲಿ ಸೇವೆ ಸಲ್ಲಿಸಿದ್ದರು.
ಮುಂದಿನ ೨೦೧೮ ನೇ ಸಾಲಿನ ಆಗಸ್ಟ್ ೨೦ ಕ್ಕೆ ತಮ್ಮ ೨೦ ವರ್ಷದ ಸೇವೆ ಪೂರ್ಣಗೊಳಿಸಿ ಊರಿಗೆ ಬಂದು ವ್ಯವಸಾಯ ನೋಡಿಕೊಳ್ಳುತ್ತಾ ತಮ್ಮ ಪತ್ನಿ ನಡೆಸುತ್ತಿರುವ ಖಾಸಗಿ ಕ್ಲಿನಿಕ್ ಬಳಿ ಮೆಡಿಕಲ್ ಸ್ಟೋರ್ ತೆಗೆಯಬೇಕು ಎಂಬ ಆಸೆ ಹೊಂದಿದ್ದರು ಎನ್ನಲಾಗಿದೆ. ಆದರೆ ಗಡಿಯಲ್ಲಿ ದೇಶಕ್ಕಾಗಿ 2017 ರ ಜೂನ್ 20 ರಂದು ಹುತಾತ್ಮರಾದರು.
ಹಳ್ಳಿಯನ್ನು ಹಸಿರಾಗಿರಿಸಲು ಯುವಕರ ದಿಟ್ಟ ಪ್ರಯತ್ನ
ಹಳ್ಳಿಗಳು ಅಭಿವೃದ್ಧಿಯಾಗಬೇಕು ಎಂದು ಮಾತು ಹಲವೆಡೆ ಕೇಳಿಬರುವುದು ಸಹಜ. ಆದರೆ ಭಾಷಣ ಮಾಡುವವರು ಯಾರೂ ಅಬಿವೃದ್ಧಿ ಮಾಡರು. ನಮ್ಮ ಅಭಿವೃದ್ಧಿ ನಾವೇ ಮಾಡಿಕೊಳ್ಳಬೇಕೆಂದು ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿಯ ಯುವಕರು ಠೊಂಕಕಟ್ಟಿ ನಿಂತಿದ್ದಾರೆ. ಅವರಿಗೆ ಹಿರಿಯರು ಬೆಂಬಲ ನೀಡುತ್ತಿದ್ದಾರೆ.
ಹಸಿರು ಪ್ರೇಮದಿಂದ ಬೆರಳೆಣಿಕೆಯಷ್ಟು ಯುವಕರು ಒಗ್ಗೂಡಿ ಕಳೆದ ವರ್ಷ ತಾವೇ ಕೈಯಾರೆ ಹಣ ಖರ್ಚು ಮಾಡಿ ಸುಮಾರು ಇನ್ನೂರು ಗಿಡಗಳನ್ನು ನೆಟ್ಟರು. ಹಳ್ಳಿಯ ಸ್ಮಶಾನದ ಸುತ್ತ, ಸ್ಮಶಾನದಿಂದ ಮುಖ್ಯ ರಸ್ತೆಯವರೆಗೂ ದಾರಿ ಬದಿ ಹಾಗೂ ಮುಖ್ಯ ರಸ್ತೆಯಿಂದ ಸರ್ಕಾರಿ ಶಾಲೆಯವರೆಗೂ ದಾರಿ ಬದಿಯಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟರು.
ಗಿಡಗಳನ್ನು ನೆಟ್ಟ ಯುವಕರು ನಂತರ ಟ್ಯಾಂಕರ್‌ಗಳಲ್ಲಿ ನೀರು ಹಾಕುತ್ತಾ ವರ್ಷ ಪೂರಾ ಗಿಡಗಳನ್ನು ಆರೈಕೆ ಮಾಡಿ ಬೆಳೆಸಿದರು. ಅವರ ಆರೈಕೆಯು ಹೇಗಿತ್ತೆಂದರೆ ಸುಮಾರು ಇನ್ನೂರು ಗಿಡಗಳಲ್ಲಿ ಎಂಟರಿಂದ ಹತ್ತು ಬಿಟ್ಟು ಮಿಕ್ಕೆಲ್ಲಾ ಗಿಡಗಳು ನಳನಳಿಸುತ್ತಿದೆ.
ಅವರ ಇಚ್ಛಾಶಕ್ತಿಗೆ ಮಾರು ಹೋದ ಇತರ ಗ್ರಾಮಸ್ಥರು ಪ್ರೋತ್ಸಾಹಿಸಿ ಬೆಂಬಲಿಸಿದರು. ಈ ವರ್ಷವೂ ಸಸ್ಯಯಜ್ಞ ಪ್ರಾರಂಭಿಸಿರುವ ಯುವಕರು 200 ಗಿಡಗಳನ್ನು ನೆಟ್ಟಿದ್ದಾರೆ. ಅಷ್ಟೇ ಅಲ್ಲದೆ ಸ್ಮಶಾನದಿಂದ ಕೆರೆಯವರೆಗಿನ ದಾರಿ ಬದಿಯಲ್ಲಿ ಬೆಳೆದಿದ್ದ ಕಳ್ಳಿ ಹಾಗೂ ಜಾಲಿಗಿಡಗಳನ್ನು ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡಿ ದಾರಿ ಬದಿಯೆಲ್ಲಾ ಗಿಡಗಳನ್ನು ನೆಟ್ಟಿದ್ದಾರೆ. ಗ್ರಾಮದ ರಸ್ತೆಗಳ ಬದಿಯಲ್ಲಿ ಸ್ವಚ್ಛತಾ ಕಾರ್ಯ ಮಾಡಿರುವ ಇವರು ಸರ್ಕಾರಿ ಶಾಲೆಯ ಹಿಂಬದಿಯಲ್ಲಿರುವ ವೀರಗಲ್ಲುಗಳ ಸಮೀಪ ಬೆಳೆದಿದ್ದ ಕಳ್ಳಿಗಿಡಗಳನ್ನೆಲ್ಲಾ ತೆರವುಗೊಳಿಸಿ ಈಗ ಅದನ್ನು ಸಂರಕ್ಷಿಸುವ ಉದ್ದೇಶದಲ್ಲಿದ್ದಾರೆ.
‘ನಮ್ಮ ಹಳ್ಳಿಯ ಸ್ಮಶಾನವನ್ನು ನರೇಗಾ ಯೋಜನೆಯಡಿ ಅಭಿವೃದ್ಧಿ ಮಾಡಲಾಯಿತು. ಕಾಂಪೋಂಡ್ ನಿರ್ಮಾಣ, ನೀರಿನ ತೊಟ್ಟಿ ಮತ್ತು ಬರುವ ಜನರಿಗೆ ನೆರಳಿಗಾಗಿ ಶೆಡ್ ಕಟ್ಟಿಸಲಾಗಿತ್ತು. ನಾವುಗಳು ಸೇರಿಕೊಂಡು ಅದು ತಗ್ಗಿನಲ್ಲಿರುವುದರಿಂದ ಮಳೆ ನೀರು ಬಂದು ಸೇರುವಂತಹ ಕಲ್ಯಾಣಿಯೊಂದನ್ನು ಸಿಮೆಂಟ್ ಬಳಸಿ ನಿರ್ಮಿಸಿದೆವು. ಹೂವು ಹಣ್ಣು ಸೇರಿದಂತೆ ಸುಮಾರು 70 ಜಾತಿಯ ಗಿಡಗಳನ್ನು ಅಲ್ಲಿ ನಾವು ನೆಟ್ಟಿದ್ದೇವೆ. ಗಿಡಗಳಿಗೆ ಪಾತಿಯಂತೆ ಟೈರ್‌ಗಳನ್ನು ಹಾಕಿ ನೀರು ಹರಿದು ಹೋಗದಂತೆ ಮಾಡಿಟ್ಟಿದ್ದೇವೆ. ನಾವು ನಿರ್ಮಿಸಿರುವ ಕಲ್ಯಾಣಿಯಲ್ಲಿ ಬೇಸಿಗೆಯಲ್ಲೂ ಸಹ ನೀರಿರುತ್ತದೆ. ಬೆಳಗಿನ ಜಾವದಲ್ಲಿ ಮೊಲಗಳು ಹಾಗೂ ಜಿಂಕೆಗಳು ನೀರು ಕುಡಿಯಲು ಬರುತ್ತವೆ. ಗ್ರಾಮದ ಆಸುಪಾಸಿನಲ್ಲಿ ಎರಡು ವರ್ಷಗಳಿಂದ 400 ಗಿಡಗಳನ್ನು ನಿಟ್ಟಿದ್ದೇವೆ. ಯುವಕರು ಕೈಜೋಡಿಸಿದರೆ, ಹಿರಿಯರು ಸಹಕಾರ ನೀಡುತ್ತಾರೆ. ವರ್ಷಪೂರಾ ಗಿಡಗಳನ್ನು ಕಾಪಾಡುತ್ತೇವೆ. ಇನ್ನಷ್ಟು ಅಭಿವೃದ್ಧಿ ಯೋಜನೆಗಳು ನಮ್ಮ ಮನಸ್ಸಿನಲ್ಲಿದೆ’ ಎನ್ನುತ್ತಾರೆ ಹಿತ್ತಲಹಳ್ಳಿ ಎಚ್.ಎಂ.ಮುನಿರಾಜು.
ಶ್ರದ್ಧಾಭಕ್ತಿಯಿಂದ ರಂಜಾನ್ ಹಬ್ಬದಾಚರಣೆ
ನಗರದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಶನಿವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಮುಸ್ಲಿಂ ಬಾಂಧವರನ್ನು ಉದ್ದೇಶಿಸಿ ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿದರು.
ಈದ್ಗಾ ಮೈದಾನದ ಕಾಂಪೌಂಡ್ ನಿರ್ಮಾಣಕ್ಕೆ ಸಂಸದರ ನಿಧಿಯಿಂದ ಹತ್ತು ಲಕ್ಷ ರೂಗಳನ್ನು ನೀಡುತ್ತಿದ್ದು, ಒಂದು ವಾರದೊಳಗೆ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಅವರು ತಿಳಿಸಿದರು.
ಅರಣ್ಯ ಇಲಾಖೆಯ ವತಿಯಿಂದ ಪ್ರತಿಯೊಬ್ಬರಿಗೂ ಉಚಿತವಾಗಿ ಶ್ರೀಗಂಧದ ಸಸಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಗಿಡಗಳನ್ನು ಬೆಳೆಸಿ ಶ್ರೀಗಂಧದ ರೀತಿಯಲ್ಲಿ ಸುವಾಸನೆಯನ್ನು ಬೀರುವ ಸಂಬಂಧ ಸಮಾಜದಲ್ಲಿ ಬೆಳೆಯಲಿ. ಸೌಹಾರ್ಧಯುತ ಸಮಾಜ ನಮ್ಮದಾಗಲಿ ಎಂದು ಹೇಳಿದರು.
ಶಾಸಕ ವಿ.ಮುನಿಯಪ್ಪ ಶ್ರೀಗಂಧದ ಸಸಿಗಳನ್ನು ವಿತರಿಸಿ ಮಾತನಾಡಿ, ‘ಪವಿತ್ರ ಗ್ರಂಥ ಕುರ್ಆನ್ ರಚನೆ ಆರಂಭಗೊಂಡಿದ್ದು ರಂಜಾನ್ ತಿಂಗಳಿನಲ್ಲಿ. ರಂಜಾನ್ ತಿಂಗಳಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆಯಿದೆ. ತಾವು ದುಡಿದಿದ್ದರಲ್ಲಿ ಸ್ವಲ್ಪ ಭಾಗವನ್ನು ಸಮಾಜದ ಬಡವರಿಗೆ ದಾನ ಮಾಡುವ ಉದಾತ್ತ ಹಬ್ಬವಿದು. ಸಮಾಜದಲ್ಲಿ ಸೌಹಾರ್ಧತೆಗೆ ಪ್ರತೀಕವಾದ ಈ ಹಬ್ಬ ಐಕ್ಯತೆ ಹಾಗೂ ಅಭಿವೃದ್ಧಿಗೆ ಪೂರಕವಾಗಲಿ’ ಎಂದು ಮುಸ್ಲೀಂ ಬಾಂಧವರಿಗೆ ಶುಭಾಶಯ ಕೋರಿದರು.
ಸಂಪ್ರದಾಯದಂತೆ ಮೆರವಣಿಗೆಯಲ್ಲಿ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೀಲಾದ್ ಬಾಗ್ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಧರ್ಮಗುರುಗಳು ಬೋಧನೆ ಮಾಡಿದರು.
ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ನಿಧನ ಹೊಂದಿರುವ ಪೂರ್ವಜರ ಸಮಾಧಿಗಳ ಬಳಿ ಪ್ರಾರ್ಥನೆ ಸಲ್ಲಿಸಿದರು.
ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ಪೂರ್ವಜರ ಸಮಾಧಿಗಳಿಗೆ ಪೂಜೆ ಸಲ್ಲಿಸಿದ ನಂತರ ಜಾತಿ ಬೇಧವಿಲ್ಲದೆ ಬಡವರಿಗೆ ದಾನ ನೀಡಿದರು.
ಹಿಂದು ಸ್ವಾಮಿಯಿಂದ ಬಡವರಿಗೆ ದಾನ
ರಂಜಾನ್ ಹಬ್ಬದಂದು ಮುಸ್ಲೀಮರು ದಾನ ಮಾಡುವುದು ಸಹಜ. ಆದರೆ ನಗರದ ಈದ್ಗಾ ಮೈದಾನಕ್ಕೆ ಹಳದಿ ಕಚ್ಚೆ ಪಂಚೆ, ಮೇಲು ದೋತರ, ನಾಮವನ್ನಿಟ್ಟುಕೊಂಡಿದ್ದ ಹಿಂದು ಸ್ವಾಮಿಯೊಬ್ಬರು ಆಗಮಿಸಿ ವಸ್ತ್ರ, ಹಣ, ಬಿಸ್ಕತ್ ಮುಂತಾದ ತಿನಿಸುಗಳನ್ನು ದಾನ ಮಾಡುತ್ತಿದ್ದುದು ವಿಶೇಷವೆನಿಸಿತು. ಅವರನ್ನು ಮಾತನಾಡಿಸಿದಾಗ, ‘ನನ್ನ ಹೆಸರು ಮುರಳೀಧರ. ವೃತ್ತಿಯಲ್ಲಿ ನಾನೊಬ್ಬ ವಕೀಲ ನನ್ನ ಮೂಲಸ್ಥಳ ದಾವಣಗೆರೆ. ಶಿಡ್ಲಘಟ್ಟದ ರಾಮರ ದೇವಸ್ಥಾನದ ಅರ್ಚಕರ ಮಗಳನ್ನು ವಿವಾಹವಾಗಿದ್ದೇನೆ. ನನ್ನ ಅಜ್ಜನ ಕಾಲದಿಂದಲೂ ನಮ್ಮೂರಿನಲ್ಲಿ ರಂಜಾನ್ ಹಬ್ಬದಂದು ಮಸೀದಿಗೆ ಅಕ್ಕಿಯನ್ನು ನೀಡುವುದು, ಅವರ ಪ್ರಾರ್ಥನೆಯ ನಂತರ ದಾನ ನೀಡುವ ಅಭ್ಯಾಸವನ್ನು ರೂಢಿಸಿಕೊಂಡಿದ್ದೇವೆ. ಬಡವರಿಗೆ ಮತ್ತು ಸಂಕಷ್ಟದಲ್ಲಿದ್ದವರಿಗೆ ನೆರವು ನೀಡುತ್ತಾ ನಮ್ಮ ಪಾಪಗಳನ್ನು ತೊಳೆದುಕೊಳ್ಳುವ ಕೆಲಸವಿದು. ಈ ಬಾರಿ ಇಲ್ಲಿ ಸೇವೆಯನ್ನು ಮಾಡಿದ್ದೇನೆ’ ಎಂದು ವಿವರಿಸಿದರು.
ವಲಯ ಅರಣ್ಯ ಅಧಿಕಾರಿ ಶ್ರೀಲಕ್ಷ್ಮಿ, ನಗರಸಭೆ ಆಯುಕ್ತ ಚಲಪತಿ, ಸುಬ್ರಮಣಿ, ಸಯ್ಯದ್, ತಾಜ್‌ಪಾಷ, ರಾಜ್‌ಕುಮಾರ್, ಬಾಲಕೃಷ್ಣ, ಮಧು, ಸರ್ಕಲ್ ಇನ್ಸ್‌ಪೆಕ್ಟರ್ ಸಿದ್ದರಾಜು, ಸಬ್‌ಇನ್ಸ್‌ಪೆಕ್ಟರ್‌ಗಳಾದ ನವೀನ್, ಪ್ರದೀಪ್‌ಪೂಜಾರಿ ಹಾಜರಿದ್ದರು

