Home Blog Page 372

ಶಾಸಕ ವಿ ಮುನಿಯಪ್ಪ ಅವರಿಗೆ ಜಿಲ್ಲಾ ಕಸಾಪದಿಂದ ಅಭಿನಂದನೆ

0

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಚುಣಾವಣೆಯಲ್ಲಿ ಗೆದ್ದ ಶಾಸಕ ವಿ ಮುನಿಯಪ್ಪ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಎನ್.ಶ್ರೀನಿವಾಸ್ ಮುಂದಿನ ದಿನಗಳಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಕಸಾಪ ಕಾರ್ಯಕ್ರಮಗಳಲ್ಲಿ ತಾವು ಭಾಗವಹಿಸಿ ಕನ್ನಡದ ಕಾರ್ಯಕ್ರಮಗಳಿಗೆ ಸಹಕಾರ ನೀಡುವಂತೆ ಕೋರಿದರು.
ರಾಜ್ಯ ಕಸಾಪ ಸಾಂಸ್ಕೃತಿಕ ಮತ್ತು ಮಾಧ್ಯಮ ಸಲಹಾ ಸಮಿತಿಯ ಸದಸ್ಯ ಗುಡಿಬಂಡೆ ಎನ್. ನಾರಾಯಣಸ್ವಾಮಿ, ಜಿಲ್ಲಾ ಕೋಶಾಧ್ಯಕ್ಷ ಎಂ. ನಂಜುಂಡಪ್ಪ, ಶಿಡ್ಲಘಟ್ಟ ತಾಲ್ಲೂಕು ಕಸಾಪ ಉಪಾಧ್ಯಕ್ಷ ಶಂಕರ್, ಗೌರಿಬಿದನೂರು ಕಸಾಪ ಪದಾಧಿಕಾರಿಗಳಾದ ಲಕ್ಷ್ಮೀ, ಮಂಜುಳ ಹಾಜರಿದ್ದರು

ಸಾವಯವ ಉತ್ಪನ್ನಗಳು ಹಾಗೂ ಸಿರಿಧಾನ್ಯಗಳ ಮಳಿಗೆ ಪ್ರಾರಂಭ

0

ಸಂಪೂರ್ಣ ಸಾವಯವ ಉತ್ಪನ್ನಗಳು ಹಾಗೂ ಸಿರಿಧಾನ್ಯಗಳನ್ನು ಗುಣಮಟ್ಟಕ್ಕೆ ರಾಜಿಯಾಗದೆ ಸ್ಪರ್ಧಾತ್ಮಕ ಬೆಲೆಗಳಲ್ಲಿ ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿ ವತಿಯಿಂದ ಮಾರಲಾಗುತ್ತಿದೆ ಎಂದು ರೇಷ್ಮೆ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿ ರೆಡ್ಡಿ ತಿಳಿಸಿದರು.
ನಗರದ ಬಸ್‌ ನಿಲ್ದಾಣ ಬಳಿ ಇರುವ ರೇಷ್ಮೆ ವಿಸ್ತರಣಾ ಕಚೇರಿ ಆವರಣದಲ್ಲಿ ಪ್ರಾರಂಭಿಸಿರುವ ಮಳಿಗೆಯಲ್ಲಿ ಅವರು ಮಾತನಾಡಿದರು.
ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಯನ್ನು ಒಂದು ಸಾವಿರ ಮಂದಿ ರೇಷ್ಮೆ ಬೆಳೆಗಾರರು ಸೇರಿಕೊಂಡು ರೈತರ ಹಿತದೃಷ್ಟಿ ಕಾಪಾಡಲು, ಅಭಿವೃದ್ಧಿಯ ಉದ್ದೇಶದಿಂದ ಪ್ರಾರಂಭಿಸಿದ್ದೇವೆ. ಹಲವಾರು ಕಾರ್ಯಯೋಜನೆಗಳು ನಮ್ಮ ಮುಂದಿವೆ. ಅವುಗಳಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಬಾರಿ ಉತ್ತಮ ಗುಣಮಟ್ಟದ ಸಿರಿಧಾನ್ಯ ಹಾಗೂ ಇತರೆ ಉತ್ಪನ್ನಗಳು, ರೇಷ್ಮೆ ಬೆಳೆಗಾರರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ಗುಣಮಟ್ಟ ಕಾಯ್ದುಕೊಂಡು ಮಾರಾಟ ಪ್ರಾರಂಭಿಸಿದ್ದೇವೆ. ರೈತರಿಗೆ, ರೈತರಿಂದ ಮತ್ತು ರೈತರಿಗೋಸ್ಕರ ನಡೆಸುತ್ತಿರುವ ಈ ಮಳಿಗೆಯಲ್ಲಿ ಲಾಭಕ್ಕಿಂತ ಸೇವೆಗೆ ಮಹತ್ವವನ್ನು ನೀಡಿದ್ದೇವೆ ಎಂದು ಹೇಳಿದರು.
ರಾಜಮುಡಿ ಅಕ್ಕಿ, ಅರ್ಕ, ಸಾಮೆ, ಊದಲು, ಬರುಗು, ಕೊರಲೆ, ನವಣೆ, ಜೋಳ, ಅಗಸೆ ಬೀಜ, ಸಾಂಬಾರ್‌ ಪುಡಿ, ಜೋನಿ ಬೆಲ್ಲ, ಪುಡಿ ಬೆಲ್ಲ, ಬಕೆಟ್‌ ಬೆಲ್ಲ, ಜೇನು ತುಪ್ಪ, ಆಮ್ಲ ತೊಕ್ಕು, ಆಮ್ಲ ಜಾಮ್‌, ಅಗಸೆ ಚಟ್ನಿ ಪುಡಿ, ಶೇಂಗಾ ಚಟ್ನಿ ಪುಡಿ ಮುಂತಾದವುಗಳು ಇವೆ. ರೇಷ್ಮೆ ಬೆಳೆಗಾರರಿಗೆ ಬೇಕಾದ ಪೇಪರ್‌ಗಳು, ಹದಿನೆಂಟು ವಿಧದ ಸೋಂಕು ನಿವಾರಕಗಳು, ಸಾವಯವ ಸಿಂಪಡಣೆಗಳು, ಶೇಡ್‌ ನೆಟ್‌ ಮುಂತಾದ ವಸ್ತುಗಳೂ ಸಹ ಲಭ್ಯವಿದೆ ಎಂದರು.
ರೇಷ್ಮೆ ರೈತ ಉತ್ಪಾದಕ ಕಂಪನಿಯ ಸಿಇಒ ಜನಾರ್ಧನಮೂರ್ತಿ ಮಾತನಾಡಿ, ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸ್ಥಳಾವಕಾಶವನ್ನು ಕೋರಿದ್ದೇವೆ. ಈಗಾಗಲೇ ಗೊಬ್ಬರ, ಔಷಧಿಗಳು, ಬೀಜಗಳ ಮಾರಾಟಕ್ಕೆ ಅನುಮತಿ ಪಡೆದುಕೊಂಡಿದ್ದು, ಸ್ಥಳ ಸಿಕ್ಕ ನಂತರ ‘ಅಗ್ರಿ ಮಾರ್ಟ್‌’ ಪ್ರಾರಂಭಿಸುವ ಯೋಜನೆಯಿದೆ. ಕಡಿಮೆ ಬೆಲೆಗೆ ಗುಣಮಟ್ಟದ ರೈತರ ಉತ್ಪನ್ನಗಳು ಹಾಗೂ ರೈತರಿಗೆ ಅಗತ್ಯವಿರುವ ವಸ್ತುಗಳನ್ನು ಮಾರಾಟ ಮಾಡುವ ಯೋಜನೆಯಿದೆ. ಇನ್ನು ಮುಂದಿನ ದಿನಗಳಲ್ಲಿ ಚಾಕಿ ಕೇಂದ್ರ ಮತ್ತು ಆಟೋಮ್ಯಾಟಿಕ್‌ ರೀಲಿಂಗ್‌ ಮೆಷಿನ್‌ ತರುವ ಉದ್ದೇಶವಿದೆ ಎಂದು ವಿವರಿಸಿದರು.

ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನಾಚರಣೆ

0

ಅಪ್ರಾಪ್ತ ವಯಸ್ಕರನ್ನು ಕಾರ್ಖಾನೆ ಮತ್ತಿತರೆ ಕಡೆ ದುಡಿಮೆ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಕೇವಲ ಕಾನೂನು ದೃಷ್ಟಿಯಿಂದ ಮಾತ್ರವಲ್ಲ, ಸಾಮಾಜಿಕವಾಗಿಯೂ ದುಷ್ಪರಿಣಾಮ ಬೀರಲಿದೆ ಎಂದು ಜೆಎಂಎಫ್ಸಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ‘ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನಾಚರಣೆ’ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹದಿನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಂಡರೆ ಅದು ಶಿಕ್ಷಾರ್ಹ ಅಪರಾಧ. ಅಂತಹ ಸಂದರ್ಭದಲ್ಲಿ ಕೆಲಸಕ್ಕೆ ತೆಗೆದುಕೊಂಡವರಿಗೆ ದಂಡದ ಜತೆಗೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಬಹುದು. ಬಾಲಕರನ್ನು ನೇಮಿಸಿಕೊಳ್ಳುವುದು ಎಷ್ಟು ತಪ್ಪೋ ದುಡಿಮೆಗೆ ದೂಡುವುದು ಕೂಡ ಅಷ್ಟೇ ಅಪರಾಧ. ನೇಮಕ ಮಾಡಿಕೊಳ್ಳುವ ಮಾಲೀಕರು ಹಾಗೂ ಅದಕ್ಕೆ ಅವಕಾಶ ಕೊಡುವ ಪೋಷಕರೂ ಸಹ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ ಎಂದರು.
ಬಾಲ ಕಾರ್ಮಿಕ ಪದ್ಧತಿಗೆ ಬಡತನ, ಅನಕ್ಷರತೆ, ಮೂಢನಂಬಿಕೆ ಇನ್ನಿತರೆ ಏನೇ ಕಾರಣಗಳಿರಬಹದು. ಅವೆಲ್ಲವನ್ನೂ ಮೀರಿ ನಾವು ನೀವೆಲ್ಲರೂ ಸೇರಿ ಈ ಅನಿಷ್ಟ ಪದ್ಧತಿಯನ್ನು ನಿರ್ನಾಮ ಮಾಡಲು ಮುಂದಾಗಬೇಕಿದೆ. ಈ ಪದ್ಧತಿಯನ್ನು ಕೇವಲ ಕಾನೂನಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಸಮಾಜದ ಎಲ್ಲರೂ ಕೈಜೋಡಿಸಿ ಅನಿಷ್ಟ ಪದ್ಧತಿಗೆ ತಿಲಾಂಜಲಿ ಇಡಬೇಕಿದೆ. ಈ ದೇಶದ ಭವಿಷ್ಯದ ಪ್ರಜೆಗಳನ್ನು ಉತ್ತಮವಾಗಿ ರೂಪಿಸಲು ಎಲ್ಲರೂ ಮುಂದಾಗಬೇಕಿದೆ ಎಂದು ಹೇಳಿದರು.
ಜೆಎಂಎಫ್ಸಿ ಮತ್ತು ಸಿವಿಲ್ ನ್ಯಾಯಾಧೀಶರಾದ ಟಿ.ಎಲ್.ಸಂದೀಶ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಸರ್ಕಾರಿ ವಕೀಲೆ ಎಸ್.ಕುಮುದಿನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಲಕ್ಷ್ಮೀದೇವಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಬಾಬು, ಕಾರ್ಮಿಕ ನಿರೀಕ್ಷಕ ಎಸ್.ವಿಶ್ವನಾಥ್, ಮುಖ್ಯ ಶಿಕ್ಷಕ ರವೀಂದ್ರ, ಶಿಕ್ಷಕರಾದ ಮಂಜುಳಾ, ಇಂದಿರಾ, ಕಮಲಮ್ಮ, ಸಯಿದಾ ಹಾಜರಿದ್ದರು.

ವಿಶ್ವ ಪರಿಸರ ದಿನಾಚರಣೆ ಮತ್ತು ರೈತ ಆಸಕ್ತ ಗುಂಪುಗಳ ಪ್ರಾರಂಭೋತ್ಸವ

0

ರೈತ ಆಸಕ್ತ ಗುಂಪುಗಳು ಗ್ರಾಮಗಳಲ್ಲಿ ಮಾಡುತ್ತಿರುವುದು ಸಂತೋಷದಾಯಕ ಸಂಗತಿ. ತಮ್ಮ ಅಭಿವೃದ್ಧಿಗಾಗಿ ತಾವುಗಳೇ ಒಗ್ಗೂಡುವ ಈ ಯೋಜನೆಯಲ್ಲಿ ರೈತರು ಸಾಂಘಿಕವಾಗಿ ಅಭಿವೃದ್ಧಿಯತ್ತ ದಾಪುಗಾಲಿಡಬೇಕು ಎಂದು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಮೈರಾಡ ಕಾರ್ಯಕ್ರಮದ ಅಧಿಕಾರಿ ಶಿವಶಂಕರ್ ತಿಳಿಸಿದರು.
ತಾಲ್ಲೂಕಿನ ಲಗಿನಾಯಕನಹಳ್ಳಿಯಲ್ಲಿ ಸೋಮವಾರ ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಯ ವತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಮತ್ತು ಹೊಸದಾಗಿ ಪ್ರಾರಂಭಿಸಿದ ರೈತ ಆಸಕ್ತ ಗುಂಪುಗಳ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾರದೋ ನೆರವು ನಮ್ಮೆಡೆಗೆ ಬರುತ್ತದೆ ಎಂದು ಕಾಯುವುದರ ಬದಲು ನಮ್ಮ ಶಕ್ತಿ, ಸಾಮರ್ಥ್ಯ, ನಮ್ಮ ಉತ್ಪನ್ನಕ್ಕೆ ಉತ್ತಮ ಬೆಲೆಯನ್ನು ಕಂಡುಕೊಂಡು ಅಭಿವೃದ್ಧಿಯತ್ತ ಮುನ್ನಡೆಯೋಣ. ಈ ನಿಟ್ಟಿನಲ್ಲಿ ಪ್ರತಿಯೊಂದು ರೈತ ಆಸಕ್ತ ಗುಂಪುಗಳು ಇತರರಿಗೆ ಮಾದರಿಯಾಗಲಿ ಎಂದು ಹೇಳಿದರು.
ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ ಮಾತನಾಡಿ, ನಮ್ಮ ಪೂರ್ವಜರು ರೂಢಿಸಿಕೊಂಡಿದ್ದ ಪದ್ಧತಿಗಳನ್ನು ಕೈ ಬಿಟ್ಟು ಪರಿಸರ ಹಾಳಾಗಲು ಕಾರಣರಾಗಿದ್ದೇವೆ. ಪ್ರತಿಯೊಬ್ಬರೂ ಗಿಡನೆಡುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಕೆರೆ, ಕುಂಟೆ, ರಸ್ತೆ ಬದಿಯಲ್ಲಿ ಮರಗಳನ್ನು ಬೆಳೆಸಬೇಕು. ಅರಳಿ ಮರವೊಂದು ಹಳ್ಳಿಯಲ್ಲಿದ್ದರೆ ಆಮ್ಲಜನಕದ ಕಾರ್ಖಾನೆಯಿದ್ದಂತೆ. ಅರಳಿ ಮರವೊಂದು ಗಂಟೆಗೆ 2,252 ಕಿಲೋ ಇಂಗಾಲದ ಡಯಾಕ್ಸೈಡ್ ಹೀರಿಕೊಂಡು 1,712 ಕಿಲೋ ಆಮ್ಲಜನಕ ಬಿಡುಗಡೆ ಮಾಡುತ್ತದೆ ಎಂದು ಹೇಳಿದರು.
ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಯು ರೈತರಿಂದ ರೈತರಿಗಾಗಿ ರೈತರೇ ಸ್ಥಾಪಿಸಿರುವ ಸಂಸ್ಥೆ. ರೈತರ ಅನುಕೂಲಕ್ಕಾಗಿ ಕಂಪನಿಯು ತೆರೆದಿರುವ ಮಾರಾಟ ಮಳಿಗೆಯಿಂದ ತಮಗೆ ಬೇಕಾದ ಪೇಪರ್, ಫಾರ್ಮಲಿನ್ ಮುಂತಾದ ವಸ್ತುಗಳನ್ನು ಖರೀದಿಸಿ ಪ್ರೋತ್ಸಾಹಿಸಬೇಕು ಎಂದರು.
ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಬೋಜಣ್ಣ ಮಾತನಾಡಿ, ರೇಷ್ಮೆ ಇಲಾಖೆಯು ರೈತರಲ್ಲಿ ಜಾಗೃತಿ ಮೂಡಿಸುತ್ತಾ ಸಹಾಯಧನಗಳನ್ನು ನೀಡಿ ತಾಂತ್ರಿಕತೆಯನ್ನು ಒದಗಿಸುತ್ತಿದೆ. ಈಗ ಮೈರಾಡ ಸಂಸ್ಥೆಯ ಸಹಕಾರದಿಂದ ರೇಷ್ಮೆ ರೈತ ಆಸಕ್ತ ಗುಂಪುಗಳ ಮೂಲಕ ರೇಷ್ಮೆ ಬೆಳೆಗಾರರನ್ನು ಒಗ್ಗೂಡಿಸಿ ತಮ್ಮ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳುವ ಶಕ್ತಿ ಪಡೆಯುವಂತೆ ಮಾಡಲು ಶ್ರಮಿಸುತ್ತಿದೆ. ಇದು ಶ್ಲಾಘನೀಯ ಎಂದರು.
ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಯ ಸಿ.ಇ.ಒ ಕೆ.ಎನ್.ಜನಾರ್ಧನ ಮೂರ್ತಿ ಮಾತನಾಡಿ, ಈ ದಿನ ನಾವು ವಿತರಿಸುತ್ತಿರುವ ಗಿಡಗಳ ಸದ್ಭಳಕೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಪರಿಸರ ಸುಂದರಗೊಳಿಸಲು ತಮ್ಮ ಹಸಿರು ಕಾಣಿಕೆಯನ್ನು ಗಿಡಗಳನ್ನು ಬೆಳೆಸುವ ಮೂಲಕ ನೀಡಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಹೆಬ್ಬೇವು, ಬಾದಾಮಿ, ಸಿಲ್ವರ್ ಓಕ್, ಹುಣಸೆ, ಗುಲ್ಮೊಹರ್, ಬೆಟ್ಟದ ನೆಲ್ಲಿ ಮುಂತಾದ ಜಾತಿಗಳ 150 ಗಿಡಗಳನ್ನು ರೈತರಿಗೆ ಅರಣ್ಯ ಇಲಾಖೆಯ ಸಹಕಾರದಿಂದ ಉಚಿತವಾಗಿ ನೀಡಲಾಯಿತು.
ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಯ ಖಜಾಂಸಿ ಆರ್.ದೇವರಾಜ್, ರೇಷ್ಮೆ ನಿರೀಕ್ಷಕ ಜಗದೇವಪ್ಪ ಗುಗ್ಗರಿ, ಮುನಿರಾಜು, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ್, ಪ್ರಕಾಶ್, ನಿರ್ದೇಶಕ ನರಸಿಂಹಮೂರ್ತಿ ಹಾಜರಿದ್ದರು.

ಅಹಂ ತ್ಯಜಿಸಿದಾಗ ಸಂಬಂಧಗಳು ವೃದ್ಧಿಸುತ್ತವೆ

0

ಮಾನವೀಯತೆ ಎಂಬ ಗುಣ ಮಾನವನ ಸರ್ವತೋಮುಖ ಬೆಳವಣಿಗೆಯ ಅವಿಭಾಜ್ಯ ಅಂಗ. ಮನುಷ್ಯ ಸ್ವಾರ್ಥಭಾವನೆ ತ್ಯಜಿಸಿದಾಗ ಮಾತ್ರ ಸಂಪೂರ್ಣ ಮಾನವನಾಗುತ್ತಾನೆ. ಇಲ್ಲವಾದಲ್ಲಿ ನಾನು, ನನ್ನದೆಂಬ ನಿರಂಕುಶ ಭಾವನೆಗಳು ಅವನ ವಿನಾಶದ ಅಂಚಾಗುತ್ತವೆ. ಒಮ್ಮೆ ಮನುಷ್ಯನಲ್ಲಿ ಅಹಂ ಭಾವನೆ ಬಂತೆಂದರೆ ಮುಗಿಯಿತು ಅವನು ಲಗಾಮು ಇಲ್ಲದ ಕುದುರೆಯಂತಾಗುತ್ತಾನೆ ಎಂದು ಸಾಹಿತಿ ರಾಘವೇಂದ್ರ ಈ ಹೊರಬೈಲು ತಿಳಿಸಿದರು.
ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ ಹಾಗೂ ಕೇಂದ್ರ ಗ್ರಂಥಾಲಯದ ಸಹಯೋಗದಲ್ಲಿ ನಡೆದ ‘ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ ಹನ್ನೊಂದನೇ ತಿಂಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಾನವೀಯತೆಯೇ ನಿತ್ಯ ಬದುಕಿನ ಜೀವಾಳ. ಪ್ರಪಂಚದ ಎಲ್ಲಾ ಧರ್ಮಗಳು ಬೋಧಿಸುವುದು ಇದನ್ನೆ. ಎಲ್ಲಾ ಸಂತರು, ಪ್ರವಾದಿಗಳು ಸಾರುವುದು ಇದನ್ನೇ. ಬೈಬಲ್, ಖುರಾನ್, ಭಗವದ್ಗೀತೆಗಳಲ್ಲಿ ಪ್ರತಿಧ್ವನಿಸುವುದು ಇದೇ ಮಾನವೀಯತೆ ಎಂದು ಹೇಳಿದರು.
ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನನಗೆ ಅಲ್ಲಿನ ಪರಿಸರ, ಓದು, ಶಿಕ್ಷಕರ ಪ್ರೋತ್ಸಾಹ ಬರಹಗಾರನಾಗಲು ಪ್ರೇರೇಪಿಸಿತು. ನಮ್ಮ ಗುರುಗಳು ಹೇಳುತ್ತಿದ್ದರು, ‘ಪ್ರತಿಯೊಬ್ಬರಲ್ಲೂ ಕವಿ ಮನಸ್ಸು ಇರುತ್ತದೆ. ಯಾರು ಅದನ್ನು ಜಾಗೃತಗೊಳಿಸುತ್ತಾರೋ ಅವರು ಕವಿಯಾಗುತ್ತಾರೆ’ ಎಂಬ ಮಾತು ಅಕ್ಷಶಃ ಸತ್ಯ. ಮಗುವಿನ ಮನಸ್ಸು, ಕುತೂಹಲ, ಪರಿಸರ ಪ್ರೇಮ, ಕರುಣೆ, ಮಾನವೀಯ ಮೌಲ್ಯ ಮತ್ತು ನಿರಂತರ ಓದುವಿಕೆ ಬರಹಗಾರನಿಗೆ ಅತ್ಯಗತ್ಯ ಎಂದರು.
ಚಿಂತಾಮಣಿ ತಾಲ್ಲೂಕು ಬಟ್ಲಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಬಂದ ನಂತರ ನನ್ನ ಬಹರ ಹೆಚ್ಚಾಯಿತು. ಎರಡು ಪುಸ್ತಕಗಳನ್ನು ಹೊರತಂದೆ. ನನ್ನ ಮದುವೆಯ ದಿನದಂದು ದ್ವಿತೀಯಾಕ್ಷರ ಪ್ರಾಸವನ್ನಿಟ್ಟುಕೊಂಡು ಬರೆದಿರುವ ಎರಡನೆಯ ಚುಟುಕು ಕವನ ಸಂಕಲನ ‘ಚೊಂಬೇಶ ಮುಕ್ತಕ’ ಹೊರತಂದೆ. ಜಿಲ್ಲೆಯ ಬರಹಗಾರರನ್ನು ಪ್ರೋತ್ಸಾಹಿಸುವ, ಓದುಗರೊಂದಿಗೆ ಒಡನಾಡುವ ಈ ರೀತಿಯ ಕಾರ್ಯಕ್ರಮಗಳು ಅನುಕರಣೀಯ ಎಂದು ನುಡಿದರು.
ಕವಿ ರಾಜಹಂಸ ಮಾತನಾಡಿ, ಇತರ ಜಿಲ್ಲೆಗೆ ಹೋಲಿಸಿದರೆ ಕನ್ನಡದ ಕೆಲಸ ಜಿಲ್ಲೆಯಲ್ಲಿ ಕಡಿಮೆಯಾಗಿದೆ. ಅಂತಹುದರಲ್ಲಿ ಕನ್ನಡ ಸಾರಸ್ವತ ಪರಿಚಾರಿಕೆ ಗ್ರಂಥಾಲಯದಲ್ಲಿ ಅತ್ಯುತ್ತಮ ಕಾರ್ಯಕ್ರಮವನ್ನು ನಡೆಸುತ್ತಿದೆ. ಈ ಕಾರ್ಯವನ್ನು ನಾಡಿನ ಎಲ್ಲಾ ಗ್ರಂಥಾಲಯಗಳಲ್ಲೂ ನಡೆದರೆ ಆ ಪ್ರಾಂತ್ಯದ ಜನರಿಗೆ ಸ್ಥಳೀಯ ಸಾಹಿತಿಗಳ ಪರಿಚಯವಾಗುತ್ತದೆ ಎಂದು ಹೇಳಿ ಅವರು ಕವನವನ್ನು ವಾಚಿಸಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ರಾಘವೇಂದ್ರ ಈ ಹೊರಬೈಲು ಅವರು ಮೂಲತಃ ಶಿವಮೊಗ್ಗದ ಹೊರಬೈಲು ನವರಾಗಿದ್ದು ಪ್ರಸ್ತುತ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರಹ, ನಟನೆ, ಗಾಯನ ಮತ್ತು ಓದು ಇವರ ಹವ್ಯಾಸ. ಅಂತರಂಗದುಲಿ (ಕವನ ಸಂಕಲನ), ಚೊಂಬೇಶ ಮುಕ್ತಕ (ಚುಟುಕು ಕವನ ಸಂಕಲನ) ಇವರ ಕೃತಿಗಳು. ಸುಮಾರು ನೂರಕ್ಕೂ ಹೆಚ್ಚು ಲೇಖನಗಳು ಕನ್ನಡದ ಜನಪ್ರಿಯ ದಿನಪತ್ರಿಕೆಗಳು ಹಾಗೂ ಮಾಸಿಕಗಳಲ್ಲಿ ಪ್ರಕಟವಾಗಿವೆ. ಇವರಿಗೆ ರಾಜ್ಯ ಮಟ್ಟದ ‘ಗುರು ಶ್ರೀ ಪುರಸ್ಕಾರ’ ದೊರೆತಿದೆ. ಎಂದು ಪರಿಚಯ ಮಾಡಿಕೊಟ್ಟರು.
ಸಾಹಿತಿ ರಾಘವೇಂದ್ರ ಈ ಹೊರಬೈಲು ತಾವು ಬರೆದ ಕೃತಿಗಳನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.
ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಸಾಹಿತಿ ರಾಘವೇಂದ್ರ ಈ ಹೊರಬೈಲು ಅವರನ್ನು ಗೌರವಿಸಲಾಯಿತು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಗ್ರಂಥಪಾಲಕ ಬಚ್ಚರೆಡ್ಡಿ, ಸತೀಶ್, ಸುಂದರನ್, ಚಲನಚಿತ್ರ ಸಹನಟ ಸಿ.ಎನ್.ಮುನಿರಾಜು, ವೃಷಬೇಂದ್ರಪ್ಪ, ಮಕ್ಸೂದ್, ಚಾಂದ್ಪಾಷ, ಟಿ.ಟಿ.ನರಸಿಂಹಪ್ಪ, ಅಬ್ದುಲ್, ಲಕ್ಷ್ಮೀನಾರಾಯಣ್, ಲಕ್ಷ್ಮೀಕಾಂತ್, ಸುದರ್ಶನ್, ರಾಮಚಂದ್ರ ಹಾಜರಿದ್ದರು.

ವಿಶ್ವ ವಿವೇಕ ಯುವಕರ ಬಳಗದಿಂದ ‘ಸ್ವಚ್ಛ ಬಡಾವಣೆ’ ಕಾರ್ಯಕ್ರಮ

0

‘ನಮ್ಮ ಮನೆಯಷ್ಟೇ ನಮ್ಮ ಬಡಾವಣೆಯೂ ಸ್ವಚ್ಛವಾಗಿರಬೇಕು‘ ಎಂಬ ಭಾವನೆ ಎಲ್ಲರಲ್ಲೂ ಮೂಡಿದರೆ ಊರು ಸ್ವಚ್ಛವಾಗಿರುತ್ತದೆ ಎಂದು ಗಾಂಧಿನಗರದ ಅಶ್ವತ್ಥ್ ತಿಳಿಸಿದರು.
ನಗರದ ಮಾರುತಿ ನಗರದಲ್ಲಿ ಭಾನುವಾರ ‘ವಿಶ್ವ ವಿವೇಕ ಯುವಕರ ಬಳಗ’ದ ವತಿಯಿಂದ ಹಮ್ಮಿಕೊಂಡಿದ್ದ ಮಾರುತಿ ನಗರ ಮತ್ತು ಗಾಂಧಿನಗರದ ಬೀದಿ ಮತ್ತು ಚರಂಡಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ವಿಶ್ವ ವಿವೇಕ ಯುವಕರ ಬಳಗ’ದ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಕ್ಕಳು, ಸಾರ್ವಜನಿಕರು ಕೈಜೋಡಿಸಿದರು

ಈ ತಿಂಗಳ ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ನಾವು ನಮ್ಮ ಬಳಗದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಚರಂಡಿ ಸ್ವಚ್ಛತೆ, ಬೀದಿಗಳ ಸ್ವಚ್ಛತೆ, ಗಿಡ ನೆಡುವುದು, ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸುವುದು ಹಾಗೂ ಸರ್ಕಾರಿ ಆಸ್ಪತ್ರೆಯ ಬಳಿ ಸೊಳ್ಳೆಗಳನ್ನು ನಾಶ ಪಡಿಸುವ ಫಾಗಿಂಗ್ ಮಾಡಿ, ಆಸ್ಪತ್ರೆಗೆ ಕಸದ ಬುಟ್ಟಿಗಳನ್ನು ನೀಡಲಿದ್ದೇವೆ ಎಂದು ವಿವರಿಸಿದರು.
‘ವಿಶ್ವ ವಿವೇಕ ಯುವಕರ ಬಳಗ’ದ ಸದಸ್ಯರೊಂದಿಗೆ ಸ್ವಚ್ಛತೆಯ ಕಾರ್ಯಕ್ಕೆ, ಗಿಡ ನೆಡುವುದಕ್ಕೆ ಮಕ್ಕಳು, ಸಾರ್ವಜನಿಕರು ಕೈಜೋಡಿಸಿದರು.
ಅರುಣ್, ಮನೋಹರ್, ಮುರಳಿಕುಮಾರ್, ರವಿಕುಮಾರ್, ನವೀನ್, ಗಂಗಾಧರ್, ಶ್ರೀನಿವಾಸ್ ಹಾಜರಿದ್ದರು.

ಅಂಗನವಾಡಿ ಮಕ್ಕಳಿಂದ ಜಾಥಾ

0

ಶಿಡ್ಲಘಟ್ಟದ ಮಾರುತಿ ನಗರದಲ್ಲಿ ಅಂಗನವಾಡಿ ಮಕ್ಕಳು ಭಿತ್ತಪತ್ರಗಳನ್ನು ಹಿಡಿದು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಜಾಥಾ ನಡೆಸಿದರು. ಅಂಗನವಾಡಿ ಶಿಕ್ಷಕಿ ಗಾಯಿತ್ರಿ, ಸಹಾಯಕಿ ನಾಗರತ್ನಮ್ಮ, ಭಾಗ್ಯಮ್ಮ, ಪೂರ್ಣಿಮ ಹಾಜರಿದ್ದರು.

ಕ್ಯಾಂಟರ್‌ ಅಪಹರಿಸಿದ್ದ ಕಳ್ಳರ ಬಂಧನ

0

ತಾಲ್ಲೂಕಿನ ಎಚ್.ಕ್ರಾಸ್ ಬಳಿ ಟಾಟಾ ಏಸ್ ಮತ್ತು ಆ ವಾಹನದಲ್ಲಿ ಸಾಗಿಸುತ್ತಿದ್ದ ದ್ವಿಚಕ್ರವಾಹದ ಬಿಡಿಬಾಗಗಳು ಕಳ್ಳತನವಾಗಿದ್ದ ಪ್ರಕರಣವನ್ನು ಬೇಧಿಸಿರುವ ಗ್ರಾಮಾಂತರ ಪೋಲಿಸರು ಕಳ್ಳರನ್ನು ವಶಕ್ಕೆ ಪಡೆದಿದ್ದಾರೆ.
ಮಾರ್ಚ್‌ 2 ರಂದು ಬೆಂಗಳೂರಿನಿಂದ ಚಿಂತಾಮಣಿಗೆ ತಾಲ್ಲೂಕಿನ ಎಚ್ ಕ್ರಾಸ್ ಮಾರ್ಗದಿಂದ ಟಾಟಾ ಏಸ್ ವಾಹನದಲ್ಲಿ ದ್ವಿಚಕ್ರವಾಹನದ ಬಿಡಿಬಾಗಗಳನ್ನು ತೆಗೆದುಕೊಂಡು ಬರಲಾಗುತ್ತಿತ್ತು, ಎಚ್. ಕ್ರಾಸ್ ಬಳಿ ಚಾಲಕ ವಾಹನ ನಿಲ್ಲಿಸಿ ಮೂತ್ರ ವಿಸರ್ಜನೆಗೆಂದು ಹೋಗಿ ಬರುವಷ್ಟರಲ್ಲಿ ವಾಹನದಲ್ಲಿದ್ದ ಬಿಡಿ ಭಾಗಗಳ ಸಮೇತ ವಾಹನವನ್ನು ಕಳ್ಳತನ ಮಾಡಿದ್ದು, ೩.೮೦.೦೦೦ ರೂ ಬೆಲೆ ಬಾಳುತ್ತಿದ್ದವೆಂದು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖಚಿತ ಮಾಹಿತಿಯ ಮೇರೆಗೆ ಸರ್ಕಲ್‌ ಇನ್ಸ್‌ಪೆಕ್ಟರ್‌ ಸಿದ್ದರಾಜು ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಬೆಂಗಳೂರು ನಿವಾಸಿಯಾದ ರಘುನಾಥ್ ಬಿನ್ ಗುರುಜರ್ ಬಿನ್ ಗಿರಿಧಾರಿ(೨೬), ಪಹದ್ ಖಾನ್ ಬಿನ್ ನಾಸೀರ್(೨೩) ಇವರುಗಳನ್ನು ಬೈಲನರಸಾಪುರದ ಬಳಿ ವಶಕ್ಕೆ ಪಡೆದು, ಅವರಿಂದ ೭೩.೮೩೦ ರೂ ಬೆಲೆ ಬಾಳುವ ದ್ವಿಚಕ್ರವಾಹನಗಳ ಬಿಡಿಬಾಗಗಳನ್ನು ವಶಕ್ಕೆ ಪಡೆಯಲಾಗಿದೆ.
ಡಿ.ವೈ.ಎಸ್.ಪಿ ನಾಗೇಶ್, ಸರ್ಕಲ್‌ ಇನ್ಸ್‌ಪೆಕ್ಟರ್‌ ಸಿದ್ದರಾಜು, ನಗರ ಠಾಣೆ ಪಿಎಸ್‌ಐ ನವೀನ್ ರೆಡ್ಡಿ, ಕ್ರೈಮ್ ಪಿಎಸ್‌ಐ ನಾರಾಯಣಪ್ಪ ಹಾಗೂ ಪೋಲಿಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಅಸಮತೋಲನ ನಿವಾರಣೆಗೆ ಪರಿಸರ ರಕ್ಷಣೆ ಅನಿವಾರ್ಯ

0

ಪ್ರಕೃತಿಯಲ್ಲಿ ಹೆಚ್ಚುತ್ತಿರುವ ಅಸಮತೋಲನ ಮತ್ತು ಅಕಾಲಿಕ ಘಟನೆಗಳ ನಿವಾರಣೆಗೆ ಕಡ್ಡಾಯವಾಗಿ ಮರಗಿಡಗಳನ್ನು ಬೆಳೆಸಿ ಪರಿಸರ ಉಳಿಸುವುದೊಂದೇ ಅನಿವಾರ್ಯವಾದ ಮಾರ್ಗವಾಗಿದೆ. ಗ್ರಾಮಗಳಲ್ಲಿ ಕಡ್ಡಾಯವಾಗಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕು. ಬಯಲುಬಹಿರ್ದೆಸೆಮುಕ್ತ ಗ್ರಾಮವಾಗಿಯೇ ಉಳಿಯಲು ಸಾರ್ವಜನಿಕರು ಸಹಕರಿಸಬೇಕು ಎಂದು ಜೆ.ವೆಂಕಟಾಪುರ ಗ್ರಾಮಪಂಚಾಯಿತಿ ಅಧ್ಯಕ್ಷ ಬಿ.ಎಂ.ರಘುನಾಥ್ ತಿಳಿಸಿದರು.
ತಾಲ್ಲೂಕಿನ ಸುಗಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಪಂಚಾಯಿತಿ, ಜೆ.ವೆಂಕಟಾಪುರ ಗ್ರಾಮಪಂಚಾಯಿತಿ, ಸುಗಟೂರು ಕೆಂಪೇಗೌಡ ಯುವಕರ ಬಳಗದ ಆಶ್ರಯದಲ್ಲಿ ಶುಕ್ರವಾರ ಸ್ವಚ್ಚಭಾರತ್ಮಿಶನ್ ಅಡಿಯಲ್ಲಿ ಬಯಲು ಬಹಿದೆಸೆಮುಕ್ತ ಗ್ರಾಮಗಳಲ್ಲಿ ಸ್ವಚ್ಚತೆ ಹಾಗೂ ನೈರ್ಮಲ್ಯದ ಸುಸ್ಥಿರತೆ ಆಂದೋಲನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಿನೇ ದಿನೇ ಹೆಚ್ಚುತ್ತಿರುವ ಅರಣ್ಯನಾಶದಿಂದಾಗಿ ವಾತಾವರಣದಲ್ಲಿ ತಾಪಮಾನ ಹೆಚ್ಚುತ್ತಿದೆ. ಪ್ರಕೃತಿಯ ವೈಪರಿತ್ಯದಿಂದಾಗಿ ಆಗುತ್ತಿರುವ ವಿಕೋಪಗಳಿಗೆ ಮುಗ್ದ ಜನರು, ಅನೇಕ ಪ್ರಾಣಿಗಳು ಬಲಿಯಾಗುತ್ತಿವೆ.
ಆಮ್ಲಜನಕ, ನೀರನ್ನು ಕೊಂಡು ಬಳಸುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ, ಸಂಘ ಸಂಸ್ಥೆಗಳು, ಸಾರ್ವಜನಿಕರು ಪರಿಸರ ಸಂರಕ್ಷಣೆಗೆ ಗಂಭೀರವಾದ ಯೋಜನೆಗಳನ್ನು ಕಡ್ಡಾಯಗೊಳಿಸಬೇಕಿದೆ ಎಂದು ಅವರು ತಿಳಿಸಿದರು.
ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸಹಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ಅವರು ಮಾತನಾಡಿ, ಮಕ್ಕಳದಿಸೆಯಿಂದಲೇ ಪರಿಸರ ಹಾಗೂ ನೀರಿನ ಮಹತ್ವದ ಜಾಗೃತಿ ಮೂಡಬೇಕು. ಪರಿಸರ ಸಂರಕ್ಷಣೆಯು ದಿನನಿತ್ಯದ ಚಟುವಟಿಕೆಯಂತಾಗಿ ಎಲ್ಲರಲ್ಲಿಯೂ ಪರಿಸರದ ಕಾಳಜಿ ಪ್ರತಿ ಮನೆಯಿಂದಲೂ ಆರಂಭವಾಗಬೇಕು ಎಂದರು.
ಕೆಂಪೇಗೌಡ ಯುವಕ ಬಳಗದ ನಿರ್ದೇಶಕ ಎಸ್.ಎನ್.ಮಂಜುನಾಥ್ ಮಾತನಾಡಿ, ಹಸಿರು ಪರಿಸರದ ಉಳಿವಿನ ಬಗ್ಗೆ ಜಾಗೃತರಾಗಬೇಕು. ಮನುಷ್ಯ ಜಾಗೃತವಾಗಿ ಪರಿಸರ ಸಂರಕ್ಷಣೆಗಾಗಿ ಕ್ರಮಗಳನ್ನು ಕೈಗೊಂಡು ಗಿಡಮರಗಳ ಕ್ರಾಂತಿಯಾಗಬೇಕಿದೆ. ಕೇವಲ ಪರಿಸರ ದಿನಾಚರಣೆಯು ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ನಿತ್ಯ ನಿರಂತರ ಜವಾಬ್ದಾರಿಯಾಗಬೇಕು ಎಂದು ತಿಳಿಸಿದರು.
ಶಿಕ್ಷಕ ಎ.ಬಿ.ನಾಗರಾಜು, ಗ್ರಾಮಪಂಚಾಯಿತಿ ಸದಸ್ಯ ಎನ್.ಅಶ್ವತ್ಥಪ್ಪ ಅವರು ಮಾತನಾಡಿದರು. ಆಂದೋಲನದ ಅಂಗವಾಗಿ ಶಾಲಾಮಕ್ಕಳಿಗೆ ವೈಯಕ್ತಿಕ ಸ್ವಚ್ಚತೆ ಬಗ್ಗೆ ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಯಿತು. ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಗ್ರಾಮದ ಪ್ರಮುಖಬೀದಿಗಳಲ್ಲಿ ಶಾಲಾಮಕ್ಕಳ ಪ್ರಭಾತ್ಭೇರಿಯೊಂದಿಗೆ ಘೋಷಣೆಗಳೊಂದಿಗೆ ಗ್ರಾಮನೈರ್ಮಲ್ಯ ಕುರಿತ ಜಾಗೃತಿ ಜಾಥಾ ನಡೆಯಿತು. ಶಾಲಾಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಎನ್.ಪಿ.ನಾಗರಾಜಪ್ಪ, ಎಸ್.ಆರ್.ನಾಗೇಶ್, ಗ್ರಾಮಪಂಚಾಯಿತಿ ಸದಸ್ಯೆ ಭಾಗ್ಯಮ್ಮಅರುಣ್ಕುಮಾರ್, ಕೆಂಪೇಗೌಡ ಯುವಕ ಬಳಗದ ಮೋಹನ್ರಜು, ನಾಗರಾಜು, ನಿತಿನ್ಕುಮಾರ್, ಲಕ್ಷ್ಮಿಪತಿ, ನಂದನ್ಕುಮಾರ್, ಶಶಿಕುಮಾರ್, ಶಿಕ್ಷಕ ಬಿ.ನಾಗರಾಜು, ಎಂ.ವೈ.ಲಕ್ಷ್ಮಯ್ಯ, ಶಿಕ್ಷಕಿ ತಾಜೂನ್, ಅನಿತಾ, ಗ್ರಾಮಪಂಚಾಯಿತಿ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮಸ್ಥರು ಹಾಜರಿದ್ದರು.

ಹಳ್ಳಿಗಳಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಿ

0

ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸ್ವಚ್ಚತೆ ಕಾಪಾಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಸ್ವಚ್ಚ ಭಾರತ್ ಯೋಜನೆಯಡಿ ಜಿಲ್ಲೆಯಾದ್ಯಂತ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಗ್ರಾಮ ಸ್ವಚ್ಚತಾ ಕಾರ್ಯಕ್ರಮದ ವೀಕ್ಷಣೆಗಾಗಿ ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲದುಮ್ಮನಹಳ್ಳಿ ಮತ್ತು ವೈ ಹುಣಸೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕದಿರಿನಾಯಕನಹಳ್ಳಿ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ಗ್ರಾಮದ ಪರಿಸರ ಸ್ವಚ್ಚತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಈ ಬಗ್ಗೆ ಅಧಿಕಾರಿಗಳು ಮನವರಿಕೆ ಮಾಡಿಕೊಡುವ ಕೆಲಸವನ್ನು ಮಾಡಬೇಕು. ಮಕ್ಕಳಿಗೆ ಶೌಚಾಲಯದ ಪ್ರಾಮುಖ್ಯತೆಯನ್ನು ತಿಳಿಸುವ ಜೊತೆಗೆ ಆರೋಗ್ಯ ಕಾಪಾಡಲು ಸ್ವಚ್ಚತೆ ಅತ್ಯವಶ್ಯಕ ಎಂಬುದನ್ನು ಮನದಟ್ಟು ಮಾಡಿಕೊಡಬೇಕು ಎಂದರು.
ಗ್ರಾಮೀಣ ಪ್ರದೇಶದ ಜನತೆಗೆ ಶುದ್ದ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದು ಘಟಕಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿದೆಯೇ ಇಲ್ಲವೇ ಎಂಬುದರ ಬಗ್ಗೆ ಅಧಿಕಾರಿಗಳು ಕಾಲ ಕಾಲಕ್ಕೆ ಪರಿಶೀಲನೆ ನಡೆಸಬೇಕು. ಶುದ್ದ ಕುಡಿಯುವ ನೀರಿನ ಘಟಕಗಳ ಸುತ್ತಲೂ ಸ್ವಚ್ಚತೆ ಕಾಪಾಡುವಲ್ಲಿ ಗ್ರಾಮಸ್ಥರು ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಇಓ ಎಂ.ವೆಂಕಟೇಶ್, ಸಹಾಯಕ ನಿರ್ದೇಶಕ ಶ್ರೀನಾಥಗೌಡ ಹಾಜರಿದ್ದರು.

ಕೆಂಪೇಗೌಡರ ಜಯಂತ್ಯುತ್ಸವ ಅದ್ಧೂರಿಯಾಗಿ ಆಚರಣೆ

0

ತಾಲ್ಲೂಕಿನಲ್ಲಿ ಕೆಂಪೇಗೌಡರ ಜಯಂತ್ಯುತ್ಸವವನ್ನು ಅದ್ಧೂರಿಯಾಗಿ ಆಚರಿಸಬೇಕೆಂದು ಒಕ್ಕಲಿಗ ಸಮುದಾಯದ ಮುಖಂಡರು ಒಕ್ಕೊರಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್ನ ಶ್ರೀ ಬಾಲಾಜಿ ಕಲ್ಯಾಣಮಂಟಪದಲ್ಲಿ ಕೆಂಪೇಗೌಡ ಆಚರಣಾ ಸಮಿತಿಯಿಂದ ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಪಕ್ಷಾತೀತವಾಗಿ ಒಕ್ಕಲಿಗ ಜನಾಂಗದ ಮುಖಂಡರು ಭಾಗವಹಿಸಿದ್ದರು.
ಶಾಸಕ ವಿ.ಮುನಿಯಪ್ಪ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಕಾರ್ಯಕ್ರಮ ಶಿಸ್ತುಬದ್ಧವಾಗಿ, ಅದ್ದೂರಿಯಾಗಿ ಹಾಗೂ ಚೆನ್ನಾಗಿ ಮೂಡಿಬರಲು ತಾವು ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ತಾಲ್ಲೂಕಿನಾದ್ಯಂತ ಒಕ್ಕಲಿಗ ಜನರು ಒಗ್ಗೂಡಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಹೇಳಿದರು.
ಕೆಂಪೇಗೌಡರ ಜಯಂತ್ಯುತ್ಸವವನ್ನು ಕಳೆದ ಬಾರಿಯಂತೆ ಬೈಕ್ ರ್ಯಾಲಿ, ಪ್ರತಿ ಹಳ್ಳಿಯಿಂದಲೂ ಪಲ್ಲಕ್ಕಿಗಳ ಮೆರವಣಿಗೆ, ಕಲಾತಂಡಗಳನ್ನೊಳಗೊಂಡ ಮೆರವಣಿಗೆ ನಡೆಯಬೇಕು. ಎಸ್ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಜನಾಂಗದ ಹಿರಿಯ ಸಾಧಕರಿಗೆ ಸನ್ಮಾನ, ಗಿಡಗಳನ್ನು ನೆಡುವುದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮುಖಂಡ ಮೇಲೂರು ರವಿಕುಮಾರ್, ಗೋಪಾಲ್, ಭಕ್ತರಹಳ್ಳಿ ಮುನೇಗೌಡ, ಎಸ್.ಎಂ.ನಾರಾಯಣಸ್ವಾಮಿ, ಜೆ.ಎಸ್.ವೆಂಕಟಸ್ವಾಮಿ, ನಾರಾಯಣಸ್ವಾಮಿ, ವೆಂಕಟರೆಡ್ಡಿ, ಚಂದ್ರೇಗೌಡ, ಎ.ಎಂ.ತ್ಯಾಗರಾಜ್, ತಾದೂರು ರಘು, ಮುರಳಿ, ಕೆಂಪರೆಡ್ಡಿ, ಚಂದ್ರಶೇಖರಗೌಡ, ಎಚ್.ಜಿ.ಗೋಪಾಲಗೌಡ, ಅಶ್ವತ್ಥನಾರಾಯಣರೆಡ್ಡಿ, ರಾಜಶೇಖರ್, ದೇವರಾಜ್, ಪ್ರಭಾಕರ್, ಹುಜಗೂರು ಬಚ್ಚೇಗೌಡ, ಮಂಜುನಾಥ್, ತಾದೂರು ಮಂಜುನಾಥ್, ಸುರೇಶ್, ಶ್ರೀರಾಮಯ್ಯ, ಲೋಕೇಶ್, ಶ್ರೀನಿವಾಸ್, ಭೀಮೇಶ್, ಕೃಷ್ಣಪ್ಪ ಹಾಜರಿದ್ದರು.

‘ಗ್ರಾಮ ಸ್ವಚ್ಛತಾ ದಿನ’ ಆಚರಣೆ

0

ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ‘ಗ್ರಾಮ ಸ್ವಚ್ಛತಾ ದಿನ’ವನ್ನು ಆಚರಿಸುತ್ತಿದ್ದು, ನಮ್ಮ ಹಂಡಿಗನಾಳ ಪಂಚಾಯಿತಿಯ ಎಲ್ಲಾ ಹನ್ನೊಂದು ಗ್ರಾಮಗಳಲ್ಲಿ ಇಂದು ಚರಂಡಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಂಜನ್‌ಕುಮಾರ್‌ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಗುರುವಾರ ಚರಂಡಿ ಸ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಕಾರ್ಯಕ್ರಮವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಸೋಪು ಹಾಕಿ ಕೈ ತೊಳೆಯುವ ಮೂಲಕ ಸ್ವಚ್ಛತೆಯ ಪಾಠ ಹೇಳಿ ಪ್ರಾರಂಭಿಸಿದೆವು. ಶಾಲೆಯ ಶಿಕ್ಷಕರು ಮತ್ತು ಮಕ್ಕಳೊಂದಿಗೆ ಗ್ರಾಮದಲ್ಲಿ ಜಾಥಾ ನಡೆಸಿ ಗ್ರಾಮ ಸ್ವಚ್ಛತೆ ಬಗ್ಗೆ ಹಾಗೂ ಪ್ಲಾಸ್ಟಿಕ್‌ ಬಳಸದಿರುವ ಬಗ್ಗೆ ಜಾಗೃತಿಯನ್ನು ಮೂಡಿಸಿದೆವು.
ನಮ್ಮ ಪಂಚಾಯಿತಿಯಲ್ಲಿ ವಿವಿದೆಡೆ ಇರುವ ಓವರ್‌ ಹೆಡ್‌ ಟ್ಯಾಂಕ್‌ ಹಾಗೂ ಸಿಸ್ಟನ್‌ಗಳ ಸ್ಚಚ್ಛತೆ ಕಾರ್ಯವನ್ನೂ ನಡೆಸಿದ್ದೇವೆ. ಚರಂಡಿಗಳನ್ನು ಸ್ವಚ್ಛಗೊಳಿಸಿ ಫೆನಾಯಿಲ್‌ ಮತ್ತು ಬ್ಲೀಚಿಂಗ್‌ ಪೌಡರ್‌ ಸಿಂಪಡಿಸುತ್ತಿದ್ದೇವೆ. ಕುಡಿಯುವ ನೀರಿನ ಘಟಕಗಳನ್ನು ಸ್ವಚ್ಛಗೊಳಿಸುತ್ತಿದ್ದೇವೆ ಎಂದು ವಿವರಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್‌ ಮಾತನಾಡಿ, ಸ್ವಚ್ಛ ಭಾರತ ಅಭಿಯಾನವನ್ನು ದೇಶದ ಉದ್ದಗಲಕ್ಕೂ ರಾಷ್ಟ್ರೀಯ ಚಳವಳಿ ರೂಪದಲ್ಲಿ ಜಾರಿಗೆ ತರಲಾಗುತ್ತಿದೆ. ಸ್ಬಚ್ಛ ಭಾರತ ಅಭಿಯಾನವು, ಜನಾಂದೋಲನವಾಗಿ ಮಾರ್ಪಟ್ಟಿದೆ. ಜನಸಾಮಾನ್ಯರು ದೊಡ್ಡ ಪ್ರಮಾಣದಲ್ಲಿ, ತಮ್ಮ ಊರು, ಗ್ರಾಮವನ್ನು ಸ್ವಚ್ಛಗೊಳಿಸುವ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದು ಶುಭ ಸೂಚಕವಾಗಿದೆ. ನಮ್ಮ ಗ್ರಾಮ ಪಂಚಾಯಿತಿಯೂ ಇದಕ್ಕೆ ಹೊರತಲ್ಲ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಕರ ವಸೂಲಿಗಾರ ಶ್ರೀನಿವಾಸ್‌, ಸಂಪತ್‌, ಮುಖ್ಯಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ಶಿಕ್ಷಕರಾದ ಚಾಂದ್‌ಪಾಷ, ಅಶೋಕ್‌, ಭಾರತಿ, ಹಾಜರಿದ್ದರು.

ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಡಾ.ಎಚ್‌.ನರಸಿಂಹಯ್ಯ ಅವರ ಜನ್ಮದಿನಾಚರಣೆ

0

ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬುಧವಾರ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಡಾ.ಎಚ್‌.ನರಸಿಂಹಯ್ಯ ಅವರ ಜನ್ಮದಿನದ ಪ್ರಯುಕ್ತ ಮಕ್ಕಳೊಂದಿಗೆ ಸೇರಿ ಗಸಗಸೆ ಮತ್ತು ನೇರಳೆ ಗಿಡಗಳನ್ನು ನೆಟ್ಟು ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್‌ ಮಾತನಾಡಿದರು.
ಅವಿಭಾಜ್ಯ ಕೋಲಾರ ಜಿಲ್ಲೆಯ ಎರಡು ರತ್ನಗಳಾದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಡಾ.ಎಚ್‌.ನರಸಿಂಹಯ್ಯ ಅವರ ಜನ್ಮದಿನವನ್ನು ಗಿಡಗಳನ್ನು ನೆಟ್ಟು, ಅವರ ನೆನಪುಗಳನ್ನು ಹೃದಯದಲ್ಲಿ ಬಿತ್ತುವ ಮೂಲಕ ಆಚರಿಸೋಣ ಎಂದು ಎಂದು ಅವರು ತಿಳಿಸಿದರು.
ಕನ್ನಡಕ್ಕೆ ಸಣ್ಣಕಥೆಗಳು ಎಂಬ ಮಹತ್ವದ ಪ್ರಕಾರವನ್ನು ಪರಿಚಯಿಸಿದವರು ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್. ಮಾಸ್ತಿ, ಕನ್ನಡದ ಆಸ್ತಿ ಎಂದೇ ಅವರನ್ನು ಹೆಮ್ಮೆಯಿಂದ ಸ್ಮರಿಸುವುದು ಕರ್ನಾಟಕದಲ್ಲಿ ಒಂದು ಪರಂಪರೆಯೇ ಆಗಿದೆ. ಕನ್ನಡ ಸಾಹಿತ್ಯ ಪರಂಪರೆಯ ಶ್ರೇಷ್ಠ ನಿರ್ಮಾಪಕರುಗಳಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಮುಖರು. ‘ಶ್ರೀನಿವಾಸ’ ಎಂಬುದು ಅವರ ಕಾವ್ಯನಾಮ. ಅವರ ಹೆಸರಿನ ಜೊತೆ ಇರುವ ಅವರ ಹುಟ್ಟೂರಿನ ಹೆಸರು ‘ಮಾಸ್ತಿ’ ಅವರ ಕಾವ್ಯನಾಮದಂತೆಯೇ ಪ್ರಸಿದ್ಧಿ ಪಡೆದಿದೆ ಎಂದು ಹೇಳಿದರು.
ಪ್ರೀತಿಯ ಮೇಷ್ಟ್ರು ಎಂದು ಇಡೀ ಕನ್ನಡನಾಡಿನಿಂದ ಕರೆಸಿಕೊಂಡಿದ್ದ ಕನ್ನಡ ನಾಡು ಕಂಡ ಶ್ರೇಷ್ಠ ಮಾನವರಲ್ಲೊಬ್ಬರಾದ ಡಾ.ಎಚ್.ನರಸಿಂಹಯ್ಯನವರ ಜನ್ಮದಿನವಿಂದು. ತಮ್ಮ ವಿದ್ಯಾರ್ಥಿಗಳ ಪ್ರೀತಿಯ ‘ಎಚ್. ಎನ್’ ಪವಾಡಗಳನ್ನು ನಂಬಿರಲಿಲ್ಲ. ಆದರೆ ಅವರ ಬದುಕೇ ಒಂದು ಪವಾಡ. ಅವರ ಬದುಕು ಪ್ರತಿಭೆ, ಪರಿಶ್ರಮ ಮತ್ತು ಶ್ರದ್ಧೆಗಳ ತಳಹದಿಯ ಮೇಲೆ ಮೂಡಿತ್ತು. ಕರ್ನಾಟಕದ ಪ್ರಮುಖ ಶಿಕ್ಷಣವೇತ್ತರೂ, ಗಾಂಧೀವಾದಿಗಳೂ, ಮಾನವೀಯ ಸಮಾಜ ಸುಧಾಕರೂ ಆಗಿ ಎಚ್. ಎನ್ ಮಾಡಿರುವ ಕೆಲಸ ಅಪಾರವಾದದ್ದು. ಅವರದು ನುಡಿದಂತೆ ನಡೆದ, ನಡೆದಂತೆ ನುಡಿದ ಜೀವನ ಎಂದು ಹೇಳಿದರು.
ಮುಖ್ಯಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ ಮಾತನಾಡಿ, ನಮ್ಮ ಜಿಲ್ಲೆಯ ಶ್ರೇಷ್ಠ ವ್ಯಕ್ತಿಗಳಾದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಡಾ.ಎಚ್‌.ನರಸಿಂಹಯ್ಯ ಅವರ ಬದುಕನ್ನು ಮಕ್ಕಳೆಲ್ಲಾ ಅರಿಯಬೇಕು. ಅವರ ಬರಹಗಳನ್ನು ಪ್ರತಿಯೊಬ್ಬರೂ ಓದಬೇಕು. ಬರೆದಂತೆಯೇ ಬದುಕಿದ ಅವರು ಜನಿಸಿದ ಪುಣ್ಯಭೂಮಿ ನಮ್ಮದು ಎಂದು ಹೇಳಿದರು.
ಶಿಕ್ಷಕರಾದ ಚಾಂದ್‌ಪಾಷ, ಅಶೋಕ್‌, ಅಂಗನವಾಡಿ ಶಿಕ್ಷಕಿ ನಳಿನಮ್ಮ, ಸಹಾಯಕಿ ನೀಲಮ್ಮ, ವೆಂಕಟಮ್ಮ ಹಾಜರಿದ್ದರು.

ಪರಿಸರ ದಿನಾಚರಣೆಯ ಪ್ರಯುಕ್ತ ಇಪ್ಪತ್ತು ಶಾಲೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮ

0

ಪರಿಸರ ದಿನಾಚರಣೆಯ ಪ್ರಯುಕ್ತ ತಾಲ್ಲೂಕಿನ ಇಪ್ಪತ್ತು ಸರ್ಕಾರಿ ಶಾಲೆಗಳ ಆವರಣದಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ಮಕ್ಕಳೇ ನೀರೆರೆದು ಪೋಷಿಸುವಂತೆ ಅರಿವು ಮೂಡಿಸಿದೆವು ಎಂದು ಹಸಿರಿಗಾಗಿ ಉಸಿರು ಸಂಸ್ಥೆಯ ನಿರ್ದೇಶಕ ಗಂಗಾಧರ್‌ ತಿಳಿಸಿದರು.
ತಾಲ್ಲೂಕಿನ ಗುಡಿಹಳ್ಳಿಯ ಸರ್ಕಾರಿ ಶಾಲೆಯ ಆವರಣದಲ್ಲಿ ಆರ್‌.ಟಿ.ಇ ಕಾರ್ಯಪಡೆ ಮತ್ತು ಹಸಿರಿಗಾಗಿ ಉಸಿರು ಸಂಸ್ಥೆ ವತಿಯಿಂದ ಗಿಡಗಳನ್ನು ನೆಟ್ಟು ಅವರು ಮಾತನಾಡಿದರು.
ಈ ದಿನ ಒಟ್ಟು 778 ಗಿಡಗಳನ್ನು ನೆಟ್ಟೆವು. ಮಕ್ಕಳಲ್ಲಿ ಗಿಡಮರಗಳ ಅಗತ್ಯವನ್ನು ವಿವರಿಸಿದೆವು. ಪ್ರತಿಯೊಬ್ಬರೂ ಗಿಡಗಳ ಆರೈಕೆ ಮಾಡುವಂತೆ ವಿನಂತಿಸಿದೆವು ಎಂದು ಹೇಳಿದರು.
ಆರ್‌.ಟಿ.ಇ ಕಾರ್ಯಪಡೆ ಜಿಲ್ಲಾ ಸಂಚಾಲಕ ಜೆ.ಸತೀಶ್‌, ಕಾಂತರಾಜು, ಎಂ.ಎಸ್‌.ಡಬ್ಲೂ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಅಂಗಡಿಗಳ ಮೇಲೆ ದಾಳಿ – ಪ್ಲಾಸ್ಟಿಕ್ ವಶಪಡಿಸಿಕೊಂಡ ಅಧಿಕಾರಿಗಳು

0

ಸಾರ್ವಜನಿಕರು ಪ್ಲಾಸ್ಟಿಕ್ ಬಳಸುವುದನ್ನು ಸಂಪೂರ್ಣ ನಿಲ್ಲಿಸಿದಾಗ ಮಾತ್ರ ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ವರ್ತಕರು ನಮ್ಮೊಂದಿಗೆ ಕೈ ಜೋಡಿಸಿದ್ದು ನಾಗರಿಕರೂ ಸಹ ಪ್ಲಾಸ್ಟಿಕ್ ಬಳಸದೇ ಇರಲು ಸಂಕಲ್ಪ ಮಾಡಬೇಕು ಎಂದು ನಗರಸಭೆ ಆಯುಕ್ತ ಜಿ.ಎನ್.ಚಲಪತಿ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಂಗಳವಾರ ನಗರದ ಮಾಂಸದ ಅಂಗಡಿಗಳು, ತರಕಾರಿ ಅಂಗಡಿಗಳ ಮೇಲೆ ದಾಳಿ ನಡೆಸಿ ಸುಮಾರು ೪ ಟನ್ ನಷ್ಟು ಪ್ಲಾಸ್ಟಿಕ್ ವಶಪಡಿಸಿಕೊಂಡು ಅವರು ಮಾತನಾಡಿದರು.
ತಾಲ್ಲೂಕು ಆಡಳಿತ ಹಾಗೂ ನಗರಸಭೆ ವತಿಯಿಂದ ಸುಮಾರು ಒಂದು ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೆ ಮಂಗಳವಾರ ಬೆಳಗ್ಗೆ ಚಾಲನೆ ನೀಡಲಾಗಿದೆ. ಜೊತೆಗೆ ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಮೂರು ತಂಡಗಳನ್ನು ರಚಿಸಿ ನಗರದ ಪ್ರತಿಯೊಂದು ಅಂಗಡಿಗೂ ಭೇಟಿ ನೀಡಿ ಅಲ್ಲಿರುವ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗುತ್ತಿದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿದ್ದು, ಈಗಾಗಲೇ ಸಾಕಷ್ಟು ಬಾರಿ ಪ್ಲಾಸ್ಟಿಕ್ ಬಳಸದಂತೆ ಸೂಚನೆ ನೀಡಲಾಗಿದ್ದರೂ ಲೆಕ್ಕಿಸದೇ ಬಳಸುತ್ತಿರುವ ಅಂಗಡಿ ಮಾಲೀಕರಿಗೆ ದಂಡ ವಿಧಿಸುವ ಜೊತೆಗೆ ಅಂತಹವರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ನಗರದ ಸಾರ್ವಜನಿಕರೂ ಸಹ ಈ ಕಾರ್ಯಕ್ಕೆ ಕೈ ಜೋಡಿಸುವ ಮೂಲಕ ಪ್ಲಾಸ್ಟಿಕ್ ಬಳಸುವುದಿಲ್ಲ ಎಂಬ ಸಂಕಲ್ಪ ಮಾಡಿದಾಗ ಮಾತ್ರ ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರ ಎಂದು ಘೋಷಿಸಲು ಸಾಧ್ಯವಾಗುತ್ತದೆ ಎಂದರು.
ದಾಳಿಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾದ ಆಂಜಿನಪ್ಪ, ಸಯೀದಾ, ಪರಿಸರ ಅಭಿಯಂತರ ದಿಲೀಪ್ ಭಾಗವಹಿಸಿದ್ದರು.

ಶಿಡ್ಲಘಟ್ಟವನ್ನು ಮಾಲಿನ್ಯ ಮುಕ್ತಗೊಳಿಸಲು ಗಿಡ ನೆಡುವ ಕಾರ್ಯಕ್ರಮ

0

ನಗರ ಪ್ರದೇಶವನ್ನು ಮಾಲಿನ್ಯ ಮುಕ್ತಮಾಡುವ ಉದ್ದೇಶದಿಂದ ನಗರದ ವಿವಿಧ ವಾರ್ಡುಗಳಲ್ಲಿ, ಶಾಲೆಗಳ ಆವರಣ, ಸ್ಮಶಾನದ ಬಳಿ ಹಾಗೂ ರಸ್ತೆ ಬದಿಗಳಲ್ಲಿ ಒಟ್ಟಾರೆ ಎಂಟು ಸಾವಿರ ವಿವಿಧ ಜಾತಿಯ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಚಿಲಕಲನೇರ್ಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಶಶಿಧರ್‌ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು, ಅರಣ್ಯ ಇಲಾಖೆ, ತಾಲ್ಲೂಕು ಆಡಳಿತ ಹಾಗೂ ನಗರಸಭೆ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಅವರು ಗಿಡವನ್ನು ನೆಟ್ಟು ಮಾತನಾಡಿದರು.
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪ್ಲಾಸ್ಟಿಕ್‌ ಮಾಲಿನ್ಯದ ವಿರುದ್ಧ ಹೋರಾಡುವ ಸಂಕಲ್ಪವನ್ನು ಈ ಬಾರಿ ಎಲ್ಲಾ ರಾಷ್ಟ್ರಗಳೂ ಮಾಡಲಿವೆ. ಹನಿಹನಿಗೂಡಿದರೆ ಹಳ್ಳ ಎಂಬಂತೆ, ನಮ್ಮದೂ ಇದರಲ್ಲಿ ಅಳಿಲಿನ ಪಾತ್ರವಿರಲಿ. ಪ್ಲಾಸ್ಟಿಕ್‌ ಬಳಕೆ ಮಾಡದಿರೋಣ. ಗಿಡವನ್ನು ನೆಟ್ಟು ಪೋಷಿಸಿ ಹಸಿರನ್ನು ಬೆಳೆಸುವುದನ್ನು ಹವ್ಯಾಸ ಮಾಡಿಕೊಳ್ಳೋಣ ಎಂದರು.
ನಗರದ ಪ್ರತಿಯೊಂದು ವಾರ್ಡಿಗೂ ಗಿಡಗಳನ್ನು ನೀಡುತ್ತಿದ್ದೇವೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಗಿಡ ಬೆಳೆಸುವುದೂ ಜವಾಬ್ದಾರಿಯಾಗಿದೆ. ಮುಂದಿನ ವರ್ಷಕ್ಕೆ ಗಿಡವನ್ನು ಚೆನ್ನಾಗಿ ಬೆಳೆಸಿ ಹೆಚ್ಚು ಪ್ರಗತಿಯನ್ನು ಕಂಡವರಿಗೆ ಪ್ರೋತ್ಸಾಹಕರವಾಗಿ ಗೌರವಿಸಲಾಗುವುದು. ಹಸಿರು ಅಭಿಯಾನವನ್ನು ಬೆಳೆಸಲು, ಪ್ರತಿಯೊಬ್ಬರಲ್ಲೂ ಗಿಡ ಮರ ಬೆಳೆಸಲು ಮನಸ್ಸಾಗುವಂತೆ ಪ್ರೋತ್ಸಾಹಿಸಲು ಈ ರೀತಿ ಮಾಡುತ್ತಿದ್ದೇವೆ. ಗಿಡ ನೆಡುವುದು ಕೇವಲ ಈ ದಿನಕ್ಕೆ ಸೀಮಿತಬಾಗಬಾರದು, ಅದು ನಿರಂತರ ಪ್ರಕ್ರಿಯೆ ಎಂದು ಹೇಳಿದರು.
ಬಹಳಷ್ಟು ಹಣ್ಣು ಬಿಡುವ ಗಿಡಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇವು ಕೇವಲ ಮನುಷ್ಯರಿಗಷ್ಟೇ ಉಪಯುಕ್ತವಲ್ಲ. ಪಕ್ಷಿ, ಕೀಟ, ಚಿಟ್ಟೆ ಮುಂತಾದ ಜೀವಿಗಳೂ ಇದ್ದರಷ್ಟೇ ನಮ್ಮ ಪರಿಸರ ಸುಂದರ ಮತ್ತು ನಮ್ಮ ಅಸ್ಥಿತ್ವಕ್ಕೆ ಅರ್ಥ ಬರುವುದು ಎಂದರು.
ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ, ವಲಯ ಅರಣ್ಯ ಅಧಿಕಾರಿ ಶ್ರೀಲಕ್ಷ್ಮಿ, ನಗರಸಭೆ ಆಯುಕ್ತ ಚಲಪತಿ, ಅಮ್ಜದ್‌, ಆರ್‌.ಶ್ರೀನಿವಾಸ್‌, ಇಲ್ಲು, ಬಾಬು, ಹಫೀಜುಲ್ಲ, ಶ್ರೀನಿವಾಸ್‌, ಮಹಬೂಬ್‌ ಪಾಷ, ಅಕ್ರಂ, ವೆಂಕಟೇಶ್‌, ಸಂತೋಷ್‌ ಹಾಜರಿದ್ದರು.

ತಾಲ್ಲೂಕು ಆಡಳಿತದಿಂದ ಒಂದು ಲಕ್ಷ ಗಿಡ ನೆಡುವ ಅಭಿಯಾನ

0

ವಿವಿಧ ಇಲಾಖೆಗಳ ಸಹಯೋಗವನ್ನು ಪಡೆದುಕೊಂಡು ತಾಲ್ಲೂಕಿನಾದ್ಯಂತ ಒಂದು ಲಕ್ಷ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ತಾಲ್ಲೂಕು ಆಡಳಿತ ಕೈಗೊಂಡಿದೆ. ಅದಕ್ಕೆ ನಾವೂ ಕೈಜೋಡಿಸಲಿದ್ದೇವೆ ಎಂದು ಜೆಎಂಎಫ್‌ಸಿ ಮತ್ತು ಸಿವಿಲ್‌ ನ್ಯಾಯಾಧಿಶರಾದ ಟಿ.ಎಲ್‌.ಸಂದೀಶ್‌ ತಿಳಿಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ತಾಲ್ಲೂಕು ಆಡಳಿತ, ಅರಣ್ಯ ಇಲಾಖೆ, ನಗರಸಭೆ ಹಾಗೂ ಪೊಲೀಸ್‌ ಇಲಾಖೆಯ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಗಿಡವನ್ನು ನೆಟ್ಟು ಅವರು ಮಾತನಾಡಿದರು.
ಗಿಡವನ್ನು ನೆಟ್ಟಾಗ ಅಲ್ಲಿ ಹತ್ತಿರ ಇರುವವರಿಗೆ ಅದನ್ನು ಕೆಲ ಕಾಲ ಪೋಷಿಸಲು ತಿಳಿಹೇಳಬೇಕು. ಸ್ವಲ್ಪ ಆರೈಕೆ ಮಾಡಿದರೆ ಸಾಕು ಗಿಡ ಬೆಳೆದು ಮರವಾಗಿ ಮುಂದಿನ ಪೀಳಿಗೆಗೆ ಒಳ್ಳೆಯ ಗಾಳಿ, ನೆರಳು ನೀಡುತ್ತದೆ. ಪಕ್ಷಿಗಳಿಗೆ ಆಸರೆಯಾಗುತ್ತದೆ. ಮಳೆ ಬರಲು ಕಾರಣವಾಗುತ್ತದೆ ಎಂದು ಹೇಳಿದರು.
ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ಮಾತನಾಡಿ, ತಾಲ್ಲೂಕಿನ ವಿವಿದೆಡೆ ಶಾಲೆಗಳು ಮತ್ತು ಅಂಗನವಾಡಿ ಜಾಗದಲ್ಲಿ ಒಟ್ಟಾರೆಯಾಗಿ 22 ಸಾವಿರ ಗಿಡಗಳನ್ನು ಈ ದಿನ ನೆಡಲಿದ್ದೇವೆ. ತಾತಹಳ್ಳಿ ಅರಣ್ಯ ಪ್ರದೇಶದಲ್ಲಿದ್ದ ನೀಲಗಿರಿ ಮರಗಳನ್ನು ತೆಗೆಸಿದ್ದು ಅಲ್ಲಿನ ನೂರು ಎಕರೆ ಪ್ರದೇಶದಲ್ಲಿ ಮತ್ತು ತಾಲ್ಲೂಕಿನ ವಿವಿದೆಡೆ ಇರುವ ಗುಂಡು ತೋಪುಗಳನ್ನು ಆಯ್ಕೆ ಮಾಡಿಕೊಂಡಿದ್ದು 150 ಎಕರೆ ಗುಂಡು ತೋಪುಗಳಲ್ಲಿ ಗಿಡಗಳನ್ನು ನೆಡುತ್ತೇವೆ. ಒಟ್ಟಾರೆ ಒಂದು ಲಕ್ಷ ಗಿಡಗಳನ್ನು ನೆಡುತ್ತೇವೆ. ಸಾರ್ವಜನಿಕರು ಕೂಡ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.
ವಿವಿಧ ಶಾಲಾ ವಿದ್ಯಾರ್ಥಿಗಳೊಂದಿಗೆ ಅಧಿಕಾರಿಗಳ ತಂಡ ಹಾಗೂ ಸಾರ್ವಜನಿಕರು ನ್ಯಾಯಾಲಯದ ಆವರಣದಿಂದ ಜಾಥಾ ನಡೆಸಿದರು. ಅಶೋಕ ರಸ್ತೆಯ ದ್ವಿಮುಖ ಗಣಪತಿ ದೇವಸ್ಥಾನದ ಬಳಿ ಹಾಗೂ ನಗರದ ವಿವಿದೆಡೆ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟರು. ನ್ಯಾಯಾಧೀಶರ ಮುಖಾಂತರ ನಗರ ಸಭೆಯ ವತಿಯಿಂದ ರಸ್ತೆ ಬದಿಯ ತಳ್ಳುವ ಗಾಡಿ ಹಾಗೂ ಅಂಗಡಿಗಳನ್ನು ಇಟ್ಟುಕೊಂಡಿರುವವರಿಗೆ ಗುರುತಿನ ಚೀಟಿಯನ್ನು ವಿತರಿಸಲಾಯಿತು.
ವಲಯ ಅರಣ್ಯ ಅಧಿಕಾರಿ ಶ್ರೀಲಕ್ಷ್ಮಿ, ಅರಣ್ಯ ರಕ್ಷಕ ರಾಮಾಂಜನೇಯುಲು, ನಗರಸಭೆ ಆಯುಕ್ತ ಚಲಪತಿ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಗೌರವಾಧ್ಯಕ್ಷ ಎಂ.ಪಾಪಿರೆಡ್ಡಿ, ಕಾರ್ಯದರ್ಶಿ ಲೋಕೇಶ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಸಿದ್ದರಾಜು, ಸಬ್‌ಇನ್ಸ್‌ಪೆಕ್ಟರ್‌ಗಳಾದ ನವೀನ್‌, ಪ್ರದೀಪ್‌ ಪೂಜಾರಿ, ನಗರಸಭಾ ಅಧ್ಯಕ್ಷ ಅಫ್ಸರ್‌ಪಾಷ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು, ಸಿಡಿಪಿಒ ಲಕ್ಷ್ಮೀದೇವಮ್ಮ ಹಾಜರಿದ್ದರು.

‘ರಾಜ ಋಷಿ’ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಜನ್ಮದಿನಾಚರಣೆ

0

ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್‌ ಮಾತನಾಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಆಳ್ವಿಕೆಯ ೧೮೮೧ ರಿಂದ ೧೯೪೦ರ ಅವಧಿಯ ವರ್ಷಗಳು ಮೈಸೂರಿನ ಸುವರ್ಣ ಯುಗ ಎಂದು ಡಿವಿಜಿ ಅವರು ಕರೆದರೆ, ಮಹಾತ್ಮಾ ಗಾಂಧೀಜಿಯವರು ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರನ್ನು ‘ರಾಜ ಋಷಿ’ ಎಂದು ಕರೆದು ಅವರ ಆಳ್ವಿಕೆಯ ಮೈಸೂರು ರಾಜ್ಯವನ್ನು ‘ರಾಮ ರಾಜ್ಯ’ ಎಂದು ಕರೆದಿದ್ದರು ಎಂದು ಅವರು ತಿಳಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದಲ್ಲಿ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಬೀದಿ ದೀಪಗಳ ಅಳವಡಿಕೆ (ಬೆಂಗಳೂರಿನಲ್ಲಿ), ಶಿವನ ಸಮುದ್ರ ಜಲವಿದ್ಯುತ್ ಕೇಂದ್ರ, ಕರ್ನಾಟಕದ ಪ್ರಪ್ರಥಮ ಆಣೆಕಟ್ಟು ‘ವಾಣಿ ವಿಲಾಸ ಸಾಗರ’, ಭಾರತೀಯ ವಿಜ್ಞಾನ ಸಂಸ್ಥೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ವಿಶ್ವವಿದ್ಯಾಲಯ, ಕೃಷ್ಣ ರಾಜೇಂದ್ರ ಮಾರುಕಟ್ಟೆ, ಕೃಷ್ಣರಾಜ ಸಾಗರ ಆಣೆಕಟ್ಟು ಮುಂತಾದವುಗಳು ರೂಪಗೊಂಡವು ಎಂದು ಹೇಳಿದರು.
ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದರಲ್ಲದೆ ಕನ್ನಡದ ಬೆಳವಣಿಗೆಯಲ್ಲಿ ಇವರ ಕೊಡುಗೆ ಅಪಾರ. ಹಿಂದೂ ಸಮಾಜದಲ್ಲಿನ ಅಸಮಾನತೆಯನ್ನು ಮನಗಂಡು ಮಾನವೀಯ ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡಿ ದಲಿತರಿಗೆ ಶಿಕ್ಷಣ ಕಲ್ಪಿಸಿ ಕ್ರಾಂತಿ ಮೂಡಿಸಿದರು. ಇವರ ಕಾಲದಲ್ಲಿ ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿ, ಉಚಿತ ಶಿಕ್ಷಣ, ವಿದ್ಯಾರ್ಥಿ ವೇತನ ಮುಂತಾದ ಕೊಡುಗೆಗಳನ್ನು ನೀಡಿದರು. ಭಾರತದಲ್ಲಿಯೇ ಕೃಷ್ಣರಾಜಸಾಗರ ಅಣೆಕಟ್ಟಿನ ಮೂಲಕ ಬೃಹತ್‌ ಜಲಾಶಯ ನಿರ್ಮಾಣಕ್ಕೆ ಕಾರಣೀಭೂತರಾದರು ಎಂದರು.
ಶಿಕ್ಷಕ ಚಾಂದ್‌ಪಾಷ ಮಾತನಾಡಿ, ಒಡೆಯರ ವಂಶದ 34ನೇ ದೊರೆಯಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ 1884 ರ ಜೂನ್‌ 4ರಂದು ಜನಿಸಿ 1895ರಿಂದ 1940 ರವರೆಗೆ ಆಳ್ವಿಕೆ ನೀಡಿ ಮೈಸೂರು ಸಂಸ್ಥಾನವನ್ನು ದೇಶದಲ್ಲಿಯೇ ಮಾದರಿ ಸಂಸ್ಥಾನವಾಗಿ ರೂಪಿಸಿದರು ಎಂದು ಹೇಳಿದರು.
ಆಧುನಿಕ ಇತಿಹಾಸದಲ್ಲಿ ಅಮರವಾಗಿ ಉಳಿಯುವಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೊದಲ ಬಾರಿಗೆ ಭಾರತದಲ್ಲಿ ಕೊಡುಗೆಯಾಗಿ ನೀಡಿದರು. ಪ್ರಜಾಪ್ರತಿನಿಧಿಗಳನ್ನು ಚುನಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ತಂದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ೩೮ ವರ್ಷಗಳ ಕಾಲ ದಕ್ಷ ಆಡಳಿತ ನಡೆಸಿ ಪ್ರಜೆಗಳಿಂದ ‘ರಾಜರ್ಷಿ’ ಬಿರುದು ಪಡೆದರು. ತಮ್ಮ ಸಂಸ್ಥಾನದ ಐಳಿಗೆಗಾಗಿ, ತಮ್ಮ ಪ್ರಜೆಗಳ ನೆಮ್ಮದಿ ಬದುಕಿಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟರು. ಸಾಮಾಜಿಕ ಪರಿವರ್ತನೆಯ ರೂವಾರಿಯಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಗಸ್ಟ್ ೩, ೧೯೪೦ರಲ್ಲಿ ತಮ್ಮ ಇಹಲೋಕದ ಯಾತ್ರೆ ಮುಗಿಸಿದರು ಎಂದು ವಿವರಿಸಿದರು.
ಮುಖ್ಯಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ಶಿಕ್ಷಕ ಅಶೋಕ್‌, ಸಿಬ್ಬಂದಿ ವೆಂಕಟಮ್ಮ ಹಾಜರಿದ್ದರು.

ಕ್ಷೇತ್ರದ ಜೆಡಿಎಸ್ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುವುದು – ಬಿ.ಎನ್.ರವಿಕುಮಾರ್

0

ತಾಲೂಕಿನ ಚಿಕ್ಕದಾಸರಹಳ್ಳಿ ಬಳಿಯ ಬ್ಯಾಟರಾಯಸ್ವಾಮಿ ದೇವಾಲಯದ ಆವರಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಜೆಡಿಎಸ್ ಪಕ್ಷದ ಮುಖಂಡರ ಹಾಗು ಕಾರ್ಯಕರ್ತರ ಆತ್ಮಾವಲೋಕನ ಸಭೆಯಲ್ಲಿ ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್ ಮಾತನಾಡಿದರು.
ಕ್ಷೇತ್ರದ ಶಾಸಕನಾಗಬೇಕು ಎಂದು ನಾನು ಯೋಚಿಸಿರಲಿಲ್ಲ. ಬದಲಿಗೆ ಕ್ಷೇತ್ರದಲ್ಲಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎನ್ನುವ ದೃಷ್ಠಿಯಿಂದ ಸಾಮಾನ್ಯ ಕಾರ್ಯಕರ್ತನಂತೆ ಕಳೆದ ಹನ್ನೆರಡು ವರ್ಷಗಳ ಕಾಲ ದುಡಿದಿದ್ದೇನೆ. ಪಕ್ಷದ ಎಲ್ಲಾ ಅಧಿಕಾರಗಳು ಬಳಸಿಕೊಂಡು ಕ್ಷೇತ್ರದ ಮುಖಂಡರೂ ಸೇರಿದಂತೆ ಕಾರ್ಯಕರ್ತರನ್ನು ಬದಿಗಿಟ್ಟು ಕೇವಲ ತಮ್ಮ ಸ್ವಾರ್ಥಕ್ಕಾಗಿ ಅಧಿಕಾರ ಬಳಸಿಕೊಂಡ ಮಾಜಿ ಸಾಸಕ ಎಂ.ರಾಜಣ್ಣರನ್ನು ಪಕ್ಷದಿಂದ ಹೊರ ಹಾಕಬೇಕು ಎನ್ನುವ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದೆ. ಓರ್ವ ಸಾಮಾನ್ಯ ಕಾರ್ಯಕರ್ತನಾದ ನನಗೆ ಸುಮಾರು ೬೬೫೩೧ ಮತಗಳನ್ನು ನೀಡುವ ಮೂಲಕ ಕ್ಷೇತ್ರದ ಜನತೆ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜೆಡಿಎಸ್ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು.
ರಾಜ್ಯಾದ್ಯಂತ ಈ ಭಾರಿ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಭಿ ಆಜಾದ್ ಹಾಗು ಜಮೀರ್ ಅಹಮ್ಮದ್ ಅವರು ಅಲ್ಪಸಂಖ್ಯಾತರಿಗೆ ಇಲ್ಲ ಸಲ್ಲದ ವದಂತಿಗಳನ್ನು ಹಬ್ಬಿಸುವ ಮೂಲಕ ಅಲ್ಪ ಸಂಖ್ಯಾತ ಬಂಧುಗಳು ಗೊಂದಲಕ್ಕೀಡಾಗಿ ಕ್ಷೇತ್ರ ಸೇರಿದಂತೆ ರಾಜ್ಯದ ಸುಮಾರು ೨೧ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷ ಸೋಲನುಭವಿಸಬೇಕಾಯಿತು. ಫಲಿತಾಂಶದ ನಂತರ ಇದೀಗ ಅಲ್ಪಸಂಖ್ಯಾತ ಬಂಧುಗಳಿಗೆ ತಮ್ಮ ತಪ್ಪಿನ ಅರಿವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಹಾಗು ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿದ್ದು ಮುಂದಿನ ಐದು ವರ್ಷಗಳ ಕಾಲ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲಿದ್ದಾರೆ ಎಂದರು.
ಈಗಾಗಲೇ ದೇಶಾಧ್ಯಂತ ಎಲ್ಲಾ ರಾಜ್ಯಗಳಲ್ಲಿಯೂ ಸೋಲನುಭವಿಸಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಮುಂಬರುವ 2019 ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರಮೋದಿ ವಿರುದ್ದ ರಾಜಕಾರಣ ಮಾಡುವುದು ಕಷ್ಟವಾಗಬಹುದು ಎಂಬುದನ್ನರಿತು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ನಾಯಕತ್ವದಲ್ಲಿ ಮುಂದಿನ ಲೋಕಸಭೆ ಚುನಾವಣೆ ಎದುರಿಸುವ ಉದ್ದೇಶದಿಂದ ಜೆಡಿಎಸ್ ಗೆ ಬೆಂಬಲಿಸಿದ್ದಾರೆ, ದೇಶಾದ್ಯಂತ ಇರುವ ಪ್ರದೇಶಿಕ ಪಕ್ಷಗಳ ನಾಯಕರೂ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ವಿವಿಧ ರಾಜ್ಯಗಳ ಹಾಲಿ ಹಾಗು ಮಾಜಿ ಮುಖ್ಯಮಂತ್ರಿಗಳೆಲ್ಲಾ ಸೇರಿ ಹೆಚ್.ಡಿ.ಕುಮಾರಸ್ವಾಮಿ ಯವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ನಾವೆಲ್ಲರೂ ಕೋಮುವಾದಿ ಪಕ್ಷದ ವಿರೋಧಿಗಳು ಎಂಬುದನ್ನು ಸಾರಿದ್ದಾರೆ ಎಂದು ಹೇಳಿದರು.
ಜಿ.ಪಂ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೋಲಬೇಕಾದರೆ ಚುನಾವಣೆ ಪೂರ್ವ ಬಿ.ಫಾರಂ ಹಂಚಿಕೆಯಲ್ಲಿ ಉಂಟಾದ ಗೊಂದಲ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ಅಪಪ್ರಚಾರದಿಂದ ಅಲ್ಪಸಂಖ್ಯಾತರು ಕಾಂಗ್ರೆಸ್ ಬೆಂಬಲಿಸಿದ್ದರಿಂದ ಸೋಲನುಭವಿಸಬೇಕಾಯಿತು. ಮುಂಬರುವ ದಿನಗಳಲ್ಲಿಕ್ಷದ ಮುಖಂಡರೂ ಸೇರಿದಂತೆ ಕಾರ್ಯಕರ್ತರು ರವಿಕುಮಾರ್‌ರಿಗೆ ಬೆನ್ನೆಲುಬಾಗಿ ನಿಂತು ಪಕ್ಷವನ್ನು ಬಲಪಡಿಸಬೇಕು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಶಿವಾರೆಡ್ಡಿ ಮಾತನಾಡಿ ಜೆಡಿಎಸ್ ಪರಾಜಿತ ಅಭ್ಯರ್ಥಿ ಬಿ.ಎನ್.ರವಿಕುಮಾರ್ ಮೂಲತ: ಕೃಷಿಕರಾಗಿದ್ದು ಅವರ ತೋಟದಲ್ಲಿ ಎತ್ತು, ಹಸು, ಎಮ್ಮೆ, ಕುರಿ ಮೇಕೆ ಇತ್ಯಾದಿ ಸಾಕುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಇದರ ಜೊತೆಗೆ ನಾಲ್ಕು ನಾಯಿಗಳೂ ಇರಲಿ ಎಂಬ ಉದ್ದೇಶದಿಂದ ನಾಯಗಳನ್ನು ಸಾಕಿದರು. ಆದರೆ ಆ ನಾಯಿಗಳು ಚುನಾವಣೆ ಸಮಯದಲ್ಲಿ ಮೋಸ ಮಾಡಿದ್ದರಿಂದ ರವಿಕುಮಾರ್ ಸೋಲನುಭವಿಸಬೇಕಾಯಿತು ಎಂದು ಹೇಳಿದರು.
ವಿವಿಧ ಮುಖಂಡರು ಈ ಹಿಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣವಾದ ಅಂಶಗಳು ಹಾಗು ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಗೆ ಏನೆಲ್ಲಾ ಕ್ರಮ ಜರುಗಿಸಬೇಕು ಎಂಬುದನ್ನು ಕಾರ್ಯಕ್ರಮದಲ್ಲಿ ಚರ್ಚಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಡಿ.ಬಿ.ವೆಂಕಟೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿ.ನಾಗರಾಜ್, ಮಾಜಿ ಜಿ.ಪಂ ಸದಸ್ಯ ನಂದನವನಂ ಶ್ರೀರಾಮರೆಡ್ಡಿ, ಮುಖಂಡರಾದ ಹುಜಗೂರು ರಾಮಣ್ಣ, ಮುನಿವೆಂಕಟಸ್ವಾಮಿ, ಪೂಲಕುಂಟ್ಲಹಳ್ಳಿ ರಘುನಾಥರೆಡ್ಡಿ, ದೊಣ್ಣಹಳ್ಳಿ ರಾಮಣ್ಣ, ಮುಗಿಲಡಿಪಿ ನಂಜಪ್ಪ ಮತ್ತಿತರರು ಹಾಜರಿದ್ದರು.

ಒಂದು ಲಕ್ಷ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಣೆ

0

ವಿಶ್ವ ಪರಿಸರ ದಿನದ ಅಂಗವಾಗಿ ನಗರದಾದ್ಯಂತ ಸುಮಾರು ಒಂದು ಲಕ್ಷ ವಿವಿಧ ಸಸಿಗಳನ್ನು ನೆಡುವ ಯೋಜನೆಗೆ ತಾಲ್ಲೂಕು ಆಡಳಿತ ಜೂನ್ 5 ರ ಮಂಗಳವಾರ ಚಾಲನೆ ನೀಡಲಿದೆ ಎಂದು ತಹಸೀಲ್ದಾರ್ ಎಸ್.ಅಜಿತ್‌ಕುಮಾರ್ ರೈ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ನಗರದ ರಸ್ತೆಯ ಇಕ್ಕೆಲಗಳೂ, ಸ್ಮಶಾನ, ಉದ್ಯಾನವನ, ಶಾಲಾ ಆವರಣ ಸೇರಿದಂತೆ ಸರ್ಕಾರಿ ಜಾಗಗಳಲ್ಲಿ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದ್ದು ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು.
ಶಾಲಾ, ಕಾಲೇಜು ಆವರಣಗಳಲ್ಲಿ ಕಡ್ಡಾಯವಾಗಿ ಸಸಿ ನೆಡಲು ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಚಿಸಿದ್ದು ಶಾಲಾ ಕಾಲೇಜುಗಳ ಎನ್‌ಎಸ್‌ಎಸ್ ಹಾಗೂ ಎನ್‌ಸಿಸಿ ವಿದ್ಯಾರ್ಥಿಗಳನ್ನು ಈ ಕಾರ್ಯದಲ್ಲಿ ಹೆಚ್ಚಾಗಿ ಬಳಸಿಕೊಂಡು ನಗರದಲ್ಲಿ ಲಕ್ಷ ಸಸಿ ನೆಡುವ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದರು.
ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ ಮಾತನಾಡಿ, ನಗರವನ್ನು ಧೂಳು ಮುಕ್ತವನ್ನಾಗಿಸುವ ಉದ್ದೇಶದಿಂದ ಭಾನುವಾರದಿಂದಲೇ ನಗರದಾದ್ಯಂತ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಇನ್ನು ವಿಶ್ವ ಪರಿಸರ ದಿನದ ಅಂಗವಾಗಿ ಅರಣ್ಯ ಇಲಾಖೆ ಹಾಗೂ ನಗರಸಭೆ ವತಿಯಿಂದ ಲಕ್ಷ ಗಿಡ ನೆಡುವ ಅಭಿಯಾನದಲ್ಲಿ ವಿವಿಧ ಸಂಘ ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ. ಈಗಾಗಲೇ ಒಂದು ಲಕ್ಷ ಸಸಿಗಳ ಲಭ್ಯತೆಯಿದ್ದು ಸಸಿಗಳನ್ನು ನೆಡುವುದೂ, ಅದನ್ನು ಸಂರಕ್ಷಿಸಲು ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ನಗರಸಭೆ ಹಾಗೂ ಅರಣ್ಯ ಇಲಾಖೆ ಮಾಡಲಿದೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಚಂದ್ರಶೇಖರಬಾಬು, ಸಿಡಿಪಿಓ ಲಕ್ಮಿದೇವಮ್ಮ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಎನ್.ಅನಸೂಯದೇವಿ ಹಾಜರಿದ್ದರು.