ಕ್ಷಯರೋಗಕ್ಕೆ ಜಾಗ್ರತೆ ಮೂಡಿಸುವ ಕಾರ್ಯಕ್ರಮ ಅವಶ್ಯಕ ಎಂದು ತಾಲ್ಲೂಕು ಪಂಚಾಯಿತಿ ಇಓ ಎಂ.ವೆಂಕಟೇಶ್ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಶುಕ್ರವಾರ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ, ಮೇಲೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಮಳ್ಳೂರು ಗ್ರಾಮಪಂಚಾಯಿತಿ ಮತ್ತು ಮಂಚೇನಹಳ್ಳಿ ವಿಕಾಸ ಸೇವಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಕ್ಷಯರೋಗ ನಿಯಂತ್ರಣ ಕುರಿತು ಸಮುದಾಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದಾದ್ಯಂತ ಪ್ರತಿ ಐದು ನಿಮಿಷಕ್ಕೆ ಇಬ್ಬರು ಕ್ಷಯರೋಗದಿಂದ ಮೃತಪಡುತ್ತಿರುವುದು ಖೇದಕರ ಸಂಗತಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದಿರುವ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರದ ಇಲಾಖೆಗಳು ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸುವ ಕಾರ್ಯನಿರ್ವಹಿಸಬೇಕು, ಸಂಘ ಸಂಸ್ಥೆಗಳ ಕಾರ್ಯಕರ್ತರು ಅನುಷ್ಠಾನ ಕಾರ್ಯದಲ್ಲಿ ಹೆಚ್ಚಿನ ಮುತುವರ್ಜಿವಹಿಸಬೇಕು ಎಂದರು.
ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಡಿಆರ್ ಟಿಬಿ ಮೇಲ್ವಿಚಾರಕ ಬಿ.ಕೆ.ಮಂಜುನಾಥ ಮಾತನಾಡಿ, ಕ್ಷಯ ರೋಗದ ಬಗ್ಗೆ ಜನತೆಯಲ್ಲಿರುವ ತಿಳುವಳಿಕೆಯ ಕೊರತೆಯಿಂದ ಬಹಳಷ್ಟು ಮಂದಿ ಮೃತ ಪಡುತ್ತಿದ್ದಾರೆ. ಎರಡು ವಾರಕ್ಕಿಂತ ಹೆಚ್ಚಿಗೆ ಸತತವಾಗಿ ಕೆಮ್ಮು ಇರುವುದು, ತೂಕ ಕಡಿಮೆಯಾಗುವುದು, ಸಂಜೆ ಸಮಯದಲ್ಲಿ ಜ್ವರ ಬರುವುದು, ಆಯಾಸ, ಉಸಿರಾಟದಲ್ಲಿ ತೊಂದರೆ, ಹಸಿವಾಗದಿರುವುದು ಇತ್ಯಾದಿ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಬೇಕು.
ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಕಫ ಪರೀಕ್ಷೆ ಮಾಡಲಾಗುತ್ತದೆ, ಕ್ಷಯರೋಗವು ಪತ್ತೆಯಾದರೆ ಅವರಿಗೆ ೬ ರಿಂದ ೮ ತಿಂಗಳ ಚಿಕಿತ್ಸೆ ಡಾಟ್ಸ್ ನೀಡಲಾಗುತ್ತದೆ. ರೋಗಿ ಇರುವ ಕಡೆಗೆ ಆಶಾ ಕಾರ್ಯಕರ್ತೆಯರ ಮೂಲಕ ಚಿಕಿತ್ಸೆಯ ಸೇವೆ ನೀಡಲಾಗುತ್ತದೆ. ಡಾಟ್ಸ್‌ನಿಂದ ಕ್ಷಯ ಸಂಪೂರ್ಣ ವಾಸಿಯಾಗುತ್ತದೆ, ಪರೀಕ್ಷೆ ಮತ್ತು ಚಿಕಿತ್ಸೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿದ್ದು ಸೇವೆಯನ್ನು ಬಳಸಿಕೊಳ್ಳುವಂತೆ ತಿಳಿಸಿದರು.
ಜಿಲ್ಲಾಕ್ಷಯರೋಗ ನಿಯಂತ್ರಣ ಕೇಂದ್ರದ ಹಿರಿಯ ಆರೋಗ್ಯ ಮೇಲ್ವಿಚಾರಕ ವೆಂಕಟನರಸಪ್ಪ, ಶಿಡ್ಲಘಟ್ಟ ಕ್ಷಯರೋಗ ನಿಯಂತ್ರಣ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ನರಸಿಂಹಮೂರ್ತಿ, ವಿಕಾಸ ಸೇವಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಗೌರಿಶಂಕರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಶಿವಕುಮಾರ್, ಸದಸ್ಯ ನಾರಾಯಣಸ್ವಾಮಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ ಕುಮಾರ್, ಪಿಡಿಓ ರವಿಕುಮಾರ್, ವಿಕಾಸ ಸೇವಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಯೋಜಕಿ ಭಾಗ್ಯ, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಕ್ಷಯರೋಗ ನಿಯಂತ್ರಣ ಕುರಿತು ಸಮುದಾಯ ಸಭೆ
ಭಾವೀ ಬ್ಯಾಂಕ್ ಅಧಿಕಾರಿಗಳಿಗೆ ಕೃಷಿ ದರ್ಶನ
ತಾಲ್ಲೂಕಿನ ಹಿತ್ತಲಹಳ್ಳಿಯ ಎಚ್.ಜಿ.ಗೋಪಾಲಗೌಡರ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ತೋಟಕ್ಕೆ ಶುಕ್ರವಾರ ಬೆಂಗಳೂರಿನ ಐಸಿಐಸಿಐ ಮಣಿಪಾಲ್ ಅಕಾಡೆಮಿ ಸಿಬ್ಬಂದಿ ತರಬೇತಿ ಕಾಲೇಜಿನ ಸುಮಾರು ೧೦೦ ಮಂದಿ ವಿದ್ಯಾರ್ಥಿಗಳೊಂದಿಗೆ ಭೇಟಿ ನೀಡಿ ಐಸಿಐಸಿಐ ಮಣಿಪಾಲ್ ಅಕಾಡೆಮಿ ಸಿಬ್ಬಂದಿ ತರಬೇತಿ ಕಾಲೇಜಿನ ತರಬೇತುದಾರ ಶ್ರೀಕೃಷ್ಣ ಹೆಗಡೆ ಮಾತನಾಡಿದರು.
ರೈತರು ಕೃಷಿ ಮಾಡಲು ಅನುಸರಿಸುವ ವಿಶಿಷ್ಟ ಪದ್ದತಿಗಳೂ ಹಾಗೂ ಕೃಷಿ ಮಾಡಲು ಅವರು ಪಡುವ ಕಷ್ಟ ಸುಖಗಳನ್ನು ಖುದ್ದು ವೀಕ್ಷಿಸಿ ಅವರಿಗೆ ನಾವುಗಳು ಯಾವ ರೀತಿ ಸಹಕರಿಸಲು ಸಾಧ್ಯವಾಗುತ್ತದೆ ಎಂಬುದನ್ನು ಅರಿಯಲು ರೈತರ ತೋಟಗಳಿಗೆ ಭೇಟಿ ನೀಡಿ ಮುಂದಿನ ದಿನಗಳಲ್ಲಿ ಬ್ಯಾಂಕ್‌ಗಳಲ್ಲಿ ಅಧಿಕಾರಿಗಳಾಗಲಿರುವ ನಮ್ಮ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.
ಈಗಾಗಲೇ ವಿದ್ಯಾಭ್ಯಾಸ ಮುಗಿಸಿ ಇದೀಗ ತರಬೇತಿಯಲ್ಲಿರುವ ಸುಮಾರು ೧೦೦ ಮಂದಿ ಬ್ಯಾಂಕ್ ಅಧಿಕಾರಿಗಳು ಮುಂದಿನ ದಿನಗಳಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಕೃಷಿ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಬರೀ ಶಾಲೆ ಕಾಲೇಜಿನಲ್ಲಿ ಕುಳಿತು ಓದಿದರಷ್ಟೇ ಸಾಲದು, ಕೃಷಿ ಮಾಡಲು ರೈತ ಎಷ್ಟು ಕಷ್ಟ ಪಡುತ್ತಾರೆ, ರೈತರು ಯಾವ ರೀತಿಯ ಕೃಷಿ ಪದ್ದತಿ ಅನುಸರಿಸುತ್ತಿದ್ದಾರೆ. ಕೃಷಿಯಲ್ಲಿ ಆದಾಯ ಗಳಿಸುವುದು ಹೇಗೆ ಮುಂತಾದ ವಿಚಾರಗಳನ್ನು ತಿಳಿದುಕೊಳ್ಳಲು ವಿದ್ಯಾರ್ಥಿಗಳನ್ನು ಇಲ್ಲಿಗೆ ಕರೆತರಲಾಗಿದೆ ಎಂದರು.
ಕೃಷಿಯೊಂದೇ ಅಲ್ಲ ಈ ಭಾಗದ ಹೈನುಗಾರಿಕೆ, ಕುರಿ ಸಾಕಾಣಿಕೆ ಬಗ್ಗೆಯೂ ರೈತರಿಂದ ಮಾಹಿತಿ ಪಡೆದುಕೊಂಡು ಮುಂದಿನ ದಿನಗಳಲ್ಲಿ ಇವರೆಲ್ಲಾ ಅಧಿಕಾರಿಗಳಾಗಿ ಹೋದಾಗ ಕೃಷಿಕರಿಗೆ ಯಾವ ರೀತಿ ಸಹಕಾರ ನೀಡಬಹುದು ಎನ್ನುವುದನ್ನು ತಿಳಿದುಕೊಳ್ಳುವ ಉದ್ದೇಶ ನಮ್ಮದು..
ಹಿತ್ತಲಹಳ್ಳಿಯ ರೈತ ಎಚ್.ಜಿ.ಗೋಪಾಲಗೌಡ ಮಾತನಾಡಿ, ರೈತರು ಭೂಮಿ, ನೀರು, ಸಮಯ, ಕೂಲಿ ಕಾರ್ಮಿಕರ ಸದ್ಬಳಕೆ ಮಾಡಿಕೊಳ್ಳಬೇಕು. ಆಗ ಮಾತ್ರ ಕೃಷಿಯಲ್ಲಿ ಆದಾಯ ಹೆಚ್ಚಳ ಸಾಧ್ಯವಿದೆ. ಪ್ರತಿ ಹನಿ ನೀರು ಕೂಡ ಅಮೂಲ್ಯವಾದದ್ದು. ಸಮಗ್ರ ಕೃಷಿ ಪದ್ದತಿಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ತಮ್ಮ ತೋಟದಲ್ಲಿ ಹಿಪ್ಪುನೇರಳೆ ಸೊಪ್ಪು ಸೇರಿದಂತೆ ಟೊಮೆಟೊ, ಬದನೆ, ಬೆಂಡೆ, ಮೆಣಸಿನಕಾಯಿ, ಗೋರಿಕಾಯಿ, ಕಡಲೆಕಾಯಿ, ಸೊಪ್ಪುಗಳು, ವಿವಿಧ ಹಣ್ಣುಗಳು ಬೆಳೆದಿರುವುದನ್ನು ತೋರಿಸಿ ವಿವರಿಸಿದರು. ಕುರಿಗಳನ್ನು ಸಾಕಿದಲ್ಲಿ ಎಟಿಎಂ ಇದ್ದಂತೆ. ಕೋಳಿಸಾಕಾಣಿಕೆ, ಜೇನು ಸಾಕಾಣಿಕೆ, ಹಸುಗಳನ್ನು ಸಾಕುವುದು, ನಮ್ಮ ತರಕಾರಿ ನಾವೇ ಬೆಳೆದುಕೊಳ್ಳುವುದು ಎಲ್ಲವೂ ಇದ್ದಲ್ಲಿ ಮಾತ್ರ ರೈತ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ಐಸಿಐಸಿಐ ಮಣಿಪಾಲ್ ಅಕಾಡೆಮಿ ಸಿಬ್ಬಂದಿ ತರಬೇತಿ ಕಾಲೇಜಿನ ತರಬೇತುದಾರರಾದ ಶ್ರೀಧರ್, ಮಹೇಶ್ವರಪ್ಪ, ಅರುಣ್, ರೈತ ಎಚ್.ಕೆ.ಸುರೇಶ್ ಹಾಜರಿದ್ದರು.
ವಿಶ್ವ ತಂಬಾಕು ನಿಷೇಧ ದಿನಾಚರಣೆ
ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ, ಸಿಗರೇಟು ಸೇದುವವರು. ತಂಬಾಕು, ಗುಟಕಾ ಉಗಿಯುವವರ ವಿರುದ್ಧ ಗಟ್ಟಿಯಾದ ಧ್ವನಿ ಎತ್ತುವ ಮನೋಭಾವವನ್ನು ಶ್ರೀಸಾಮಾನ್ಯರು ಬೆಳೆಸಿಕೊಳ್ಳಬೇಕು. ಅಂತಹ ನ್ಯಾಯಯುತ ಬೇಡಿಕೆಗಳಿಗೆ ಕಾನೂನು ಬೆಂಗಾವಲಾಗಿರುತ್ತದೆ ಎಂದು ಜೆಎಂಎಫ್‌ಸಿ ಮತ್ತು ಸಿವಿಲ್ ನ್ಯಾಯಾಧಿಶರಾದ ಟಿ.ಎಲ್.ಸಂದೀಶ್ ತಿಳಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ‘ವಿಶ್ವ ತಂಬಾಕು ನಿಷೇಧ ದಿನಾಚರಣೆ’ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಂಬಾಕು ಸೇವನೆಯಿಂದ ಕ್ಯಾನ್ಸರ್, ಕ್ಷಯರೋಗ, ಎಚ್‌ಐವಿ. ಸೇರಿದಂತೆ ಮುಂತಾದ ಅಪಾಯಕಾರಿ ಕಾಯಿಲೆಗಳು ಬರುತ್ತವೆ. ತಂಬಾಕು ಮುಕ್ತ ದೇಶವನ್ನಾಗಿಸಲು ಪ್ರತಿಯೊಬ್ಬರು ಶ್ರಮಿಸಬೇಕು. ತಂಬಾಕು ಸೇವನೆಯಿಂದ ಜನರು ಭಯಾಕನ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮೇ 31 ಅನ್ನು ವಿಶ್ವ ತಂಬಾಕು ಸೇವನೆ ನಿಷೇಧ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕಾನೂನು ಬಾಹಿರವಾಗಿ ತಂಬಾಕು ಮಾರಾಟ ಮಾಡುವವರ ಮೇಲೆ ತಂಬಾಕು ನಿಯಂತ್ರಣ ಘಟಕವು ದಾಳಿ ನಡೆಸುವಂತಾಗಬೇಕು. ಸಾರ್ವಜನಿಕ ಸ್ಥಳದಲ್ಲಿ ಎಲ್ಲರಿಗೂ ಕಾಣುವ ಹಾಗೆ `ಧೂಮಪಾನ ನಿಷೇಧಿಸಲಾಗಿದೆ~ ಎನ್ನುವುದನ್ನು ಬರೆಯಬೇಕು. ತಂಬಾಕು ಸೇವನೆ ಮುಕ್ತ ಜಿಲ್ಲೆ, ತಾಲ್ಲೂಕು ನಿರ್ಮಿಸಲು ರಾಜ್ಯ ತಂಬಾಕು ನಿಯಂತ್ರಣ ಘಟಕವು ಕೆಲಸ ಮಾಡಬೇಕು ಎಂದು ಹೇಳಿದರು.
ತಾಲ್ಲೂಕು ವೈದ್ಯಾಧಿಕಾರಿ ಅನಿಲ್‌ಕುಮಾರ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಕಾರ್ಯದರ್ಶಿ ಎಂ.ಬಿ.ಲೋಕೇಶ್, ಆಡಳಿತ ವೈದ್ಯಾಧಿಕಾರಿ ಡಾ.ವಾಣಿ, ಡಾ.ವಿಜಯ್‌ಕುಮಾರ್, ಡಾ.ಸಮೀವುಲ್ಲ ಹಾಜರಿದ್ದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಹುಜನ ವಿದ್ಯಾರ್ಥಿ ಸಂಘ ಸಹಯೋಗದಲ್ಲಿ ರಕ್ತದಾನ ಶಿಬಿರ
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಬಹುಜನ ವಿದ್ಯಾರ್ಥಿ ಸಂಘ ಸಹಯೋಗದಲ್ಲಿ ನಡೆಸಿದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಬಹುಜನ ವಿದ್ಯಾರ್ಥಿ ಸಂಘದ ಅಧ್ಯಕ್ಷ ನರೇಂದ್ರಬಾಬು ಮಾತನಾಡಿದರು.
ಜಿಲ್ಲೆಯಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ರಕ್ತದ ಅವಶ್ಯಕತೆ ಹೆಚ್ಚಿದೆ. ಅದಕ್ಕಾಗಿ ರಕ್ತದಾನ ಶಿಬಿರವನ್ನು ಆಯೋಜಿಸಿರುವುದಾಗಿ ಅವರು ತಿಳಿಸಿದರು.
ಹೆಣ್ಣು ಮಕ್ಕಳಲ್ಲಿ ಬಹುತೇಕರು ರಕ್ತದಲ್ಲಿನ ಹೀಮೋಗ್ಲೋಬಿನ್ ಕೊರತೆಯಿಂದ ನರಳುತ್ತಾರೆ. ಗರ್ಭಿಣಿಯರು ಮತ್ತು ಬಾಣಂತಿಯರಿದ್ದಾಗ ತುರ್ತಾಗಿ ರಕ್ತವನ್ನು ನೀಡಬೇಕಾಗುತ್ತದೆ. ಅದಕ್ಕಾಗಿ ಶಿಬಿರವನ್ನು ಆಯೋಜಿಸಿದ್ದೇವೆ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ನಿಯಮಿತವಾಗಿ ರಕ್ತದಾನ ಮಾಡಿ ಸಮಾಜಕ್ಕೆ ಋಣ ತೀರಿಸುವ ಕೆಲಸ ಮಾಡಬೇಕು ಎಂದರು.
ಐಟಿಐ ಕಾಲೇಜಿನ ವಿದ್ಯಾರ್ಥಿಗಳು, ಬಹುಜನ ವಿದ್ಯಾರ್ಥಿ ಸಂಘದ ಸದಸ್ಯರು, ಸಾರ್ವಜನಿಕರು ಸೇರಿದಂತೆ ಒಟ್ಟು 51 ಮಂದಿ ರಕ್ತದಾನ ಮಾಡಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್, ಡಾ.ಕುಮುದಿನಿ, ಡಾ.ರವಿ ಲಂಬಾಣಿ, ಬಹುಜನ ವಿದ್ಯಾರ್ಥಿ ಸಂಘದ ರಾಮ್‌ದಾಸ್, ಗಂಗಾಧರ್ ಹಾಜರಿದ್ದರು.
ಶಾಲಾ ದಾಖಲಾತಿ ಆಂದೋಲನ ಕಾರ್ಯಕ್ರಮ
ತಾಲ್ಲೂಕಿನ ನಾಗಮಂಗಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ದಾಖಲಾತಿ ಆಂದೋಲನ ಕಾರ್ಯಕ್ರಮದಲ್ಲಿ ನಾಗಮಂಗಲದ ಪ್ರಾಥಮಿಕ ಶಾಲೆಯ ಶಿಕ್ಷಕ ಬೈಯಣ್ಣ ಮಾತನಾಡಿದರು.
ಪ್ರಸ್ತುತ ಸಾಲಿನ ಶಾಲಾ ದಾಖಲಾತಿಗಳು ಪ್ರಾರಂಭವಾಗಿದ್ದು, ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಿ ಎಂದು ಅವರು ತಿಳಿಸಿದರು.
‘ಮಕ್ಕಳ ರಕ್ಷಣೆ, ಶಿಕ್ಷಣ ಬಲವರ್ಧನೆ ನಮ್ಮೆಲ್ಲರ ಹೊಣೆ’, ‘ರಾಷ್ಟ್ರದ ಬುನಾದಿಗೆ ಪ್ರಾಥಮಿಕ ಶಿಕ್ಷಣ’ ಎಂಬ ನಾಮಪಲಕಗಳೊಂದಿಗೆ ಗ್ರಾಮದ ಮುಖ್ಯ ರಸ್ತೆಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಎಸ್.ಡಿ.ಎಂ,ಸಿ ಅದ್ಯಕ್ಷರು ಸದಸ್ಯರೊಂದಿಗೆ ಮೆರವಣಿಗೆ ಜಾಥಾ ನಡೆಸಿದರು.
ಸರ್ಕಾರಿ ಶಾಲೆಗಳು ಉತ್ತಮ ಗುಣಮಟ್ಟದ ಶಿಕ್ಷಕರನ್ನು ಹೊಂದಿದ್ದು, ಮಕ್ಕಳಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಒದಗಿಸುವುದರ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ. ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಪೋಷಕರ ಪಾತ್ರ ಬಹುಮುಖ್ಯವಾದದ್ದು. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ ಎಂಬ ರೀತಿಯಲ್ಲಿ ಶಿಕ್ಷಣ ಒದಗಿಸುವ ಜವಾಬ್ದಾರಿ ನಮ್ಮದು. ಆದ್ದರಿಂದ ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಎಂದು ಪೋಷಕರಲ್ಲಿ ಮನವಿ ಮಾಡಿದರು.
ನಾಗಮಂಗಲದ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಎನ್.ಆರ್.ವೆಂಕಟೇಶ್, ಶಿಕ್ಷಕಿಯರಾದ ವಿ.ಡಿ.ನಾಗವೇಣಿ, ಎನ್.ಎನ್.ನಾಗವೇಣಿ, ಅಂಗನವಾಡಿ ಕಾರ್ಯಕರ್ತೆಯರಾದ ಎಸ್.ಭವ್ಯ, ಕನಕರತ್ನಮ್ಮ, ಶಾಲಾ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಖಾಸಗಿ ಶಾಲೆಗಳಲ್ಲಿ ದುಬಾರಿ ಶುಲ್ಕ ವಸೂಲಿ – ಕ್ರಮ ಕೈಗೊಳ್ಳಲು ಆಗ್ರಹ
ಖಾಸಗಿ ಶಾಲೆಗಳಲ್ಲಿ ಸರ್ಕಾರ ನಿಗಧಿ ಪಡಿಸಿರುವ ಶುಲ್ಕಕಿಂತ ಹೆಚ್ಚಿನ ಶುಲ್ಕವನ್ನು ವಸೂಲಿ ಮಾಡುವ ಮೂಲಕ ರೈತಾಪಿ ವರ್ಗದವರಿಗೆ ಅನ್ಯಾಯ ಮಾಡಲಾಗುತ್ತಿದೆ.ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಘಟಕದ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಬಾಬು ಅವರಿಗೆ ಮನವಿ ಸಲ್ಲಿಸಿದರು.
ನಗರದ ಕೋಟೆ ವೃತ್ತದಲ್ಲಿರುವ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮನವಿ ಸಲ್ಲಿಸಿರುವ ಅವರು, ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡಿಸಲೆಂದು ರೈತಾಪಿ ವರ್ಗದವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲು ಮಾಡಲು ಹೋದರೆ, ಯಾವುದೇ ಖಾಸಗಿ ಶಾಲೆಗಳಲ್ಲಿ ಶಾಲಾ ಶುಲ್ಕದ ಕುರಿತು ಮಾಹಿತಿ ಫಲಕಗಳನ್ನು ಹಾಕಿಲ್ಲ. ಒಬ್ಬೊಬ್ಬ ವಿದ್ಯಾರ್ಥಿಯಿಂದ 25 ಸಾವಿರದಿಂದ 50 ಸಾವಿರದವರೆಗೂ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಕೆಲವು ಖಾಸಗಿ ಶಾಲೆಗಳಲ್ಲಿ ಮೂಲ ಸೌಕರ್ಯವಿಲ್ಲದಿದ್ದರೂ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು.
ತಾಲ್ಲೂಕಿನಾಧ್ಯಂತ ಇರುವ ಎಲ್ಲಾ ಖಾಸಗಿ ಕಾಲೇಜುಗಳಿಗೆ ಭೇಟಿ ನೀಡಿ, ಅಲ್ಲಿನ ಎಲ್ಲಾ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿ, ರೈತರ ಮಕ್ಕಳಿಗೆ ಅನ್ಯಾಯವಾಗದಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಕಾರ್ಯದರ್ಶಿ ಪ್ರತೀಶ್, ಕೋಟೆ ಚನ್ನೇಗೌಡ, ಶಂಕರನಾರಾಯಣ, ಸಿ.ಕೃಷ್ಣಪ್ಪ, ಎಸ್.ದೇವರಾಜ್, ಮಹಬೂಬ್, ವೆಂಕಟೇಶ್, ಭಕಾಷ್, ಎನ್.ನಾಗರಾಜ್, ಹಸೀನಾ ಹಾಜರಿದ್ದರು.
ನಿಧನ ವಾರ್ತೆ – ಆನೂರು ಬಿ.ನಾರಾಯಣಪ್ಪ
ಶಿಡ್ಲಘಟ್ಟ ತಾಲ್ಲೂಕಿನ ಆನೂರು ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ಆನೂರು ಬಿ.ನಾರಾಯಣಪ್ಪ(75) ಮಂಗಳವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಅವರು ಬಳಲುತ್ತಿದ್ದು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪತ್ನಿ, ನಾಲ್ವರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಹಿರಿಯ ಕಾಂಗ್ರೆಸ್ ಮುಖಂಡ ಆನೂರು ಬಿ.ನಾರಾಯಣಪ್ಪ ಅವರು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮೃತರ ಅಂತ್ಯ ಸಂಸ್ಕಾರವನ್ನು ಅವರ ತೋಟದಲ್ಲಿ ಬುಧವಾರ ಬೆಳಿಗ್ಗೆ ನೆರವೇರಿಸುವುದಾಗಿ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ನೌಕರರಿಂದ ಪ್ರತಿಭಟನೆ
ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗ್ರಾಮ ಪಂಚಾಯಿತಿ ನೌಕರರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿ ಮಂದಿರದಿಂದ ಟಿ.ಬಿ.ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ತಾಲ್ಲೂಕು ಪಂಚಾಯಿತಿ ಕಚೇರಿಯ ಮುಂದೆ ಪತ್ರಿಭಟನೆ ನಡೆಸಿ ನಂತರ ಮನವಿ ಪತ್ರವನ್ನು ಸಲ್ಲಿಸಿದರು. ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಪ್ರತಿಭಟನೆಯಲ್ಲಿ ತೊಡಗಿದ ನೌಕರರಿಗೆ ಆವರಣದಲ್ಲೇ ಅಡುಗೆ ಮಾಡಿ ಬಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸುದರ್ಶನ್, ‘ಪಂಚತಂತ್ರಾಂಶದಲ್ಲಿ ಸಿಬ್ಬಂದಿಗಳನ್ನು ಸೇರಿಸಿ ಬೇಗ ವೇತನ ಸಿಗುವಂತೆ ಮಾಡಬೇಕು. ಅನುಮೋದನೆಯಾಗದೆ ಇರುವ ಸಿಬ್ಬಂದಿಯನ್ನು ಶೀಘ್ರವಾಗಿ ಅನುಮೋದನೆ ಮಾಡಬೇಕು. ನಿವೃತ್ತಿ ವೇತನ ನೀಡಬೇಕು. ಬಿಲ್ ಕಲೆಕ್ಟರ್ ಮತ್ತು ಕಂಪ್ಯೂಟರ್ ಆಪರೇಟರ್ ಸಿಬ್ಬಂದಿಗಳಿಗೆ ಬಡ್ತಿ ಹುದ್ದೆಗಳನ್ನು ನೀಡಬೇಕು. ಗ್ರಾಮ ಪಂಚಾಯಿತಿ ನೌಕರರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಕೆ.ಎನ್.ಪಾಪಣ್ಣ ಮಾತನಾಡಿ, ‘ವಿನಾಕಾರಣ ಕೆಲಸದಿಂದ ತೆಗೆದಿರುವ ಗ್ರಾಮ ಪಂಚಾಯಿತಿ ನೌಕರರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಂಡು ಪಂಚತಂತ್ರಾಶದಲ್ಲಿ ಅನುಮೋದನೆ ನೀಡಬೇಕು. ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಸುಮಾರು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ವೇತನವನ್ನು ಅವರವರ ಖಾತೆಗಳಿಗೆ ಜಮಾ ಮಾಡಬೇಕು’ ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ನೌಕರರ ಸಂಘದ ಉಪಾಧ್ಯಕ್ಷ ಶಂಕರಪ್ಪ, ಜನಾರ್ದನ್, ವೇಣುಗೋಪಾಲ್, ದೇವಪ್ಪ, ಶಿವಕುಮಾರ್, ಗಂಗಪ್ಪ, ಶ್ರೀನಿವಾಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ ಕಾರ್ಯಕ್ರಮ
ಕುವೆಂಪು ಅವರ ತತ್ವದ ಸಾರವಾದ ಆತ್ಮೀಯತೆ ಮತ್ತು ಮಾನವತಾವಾದದ ಅಂಶ ಬಿತ್ತುವುದು, ಗ್ರಾಮೀಣ ಜನರ ಜೀವನದ ಜೊತೆ ಮಾನವೀಯ ಸಂಬಂಧ ಚಿತ್ರಿಸುವ ಸಾಹಿತ್ಯ ಸೃಷ್ಟಿಸುವ ಪ್ರಯತ್ನದಲ್ಲಿದ್ದೇನೆ. ಪ್ರತಿಯೊಬ್ಬರಿಗೂ ಸ್ನೇಹ ಸಂಬಂಧ ವೃದ್ಧಿಸಲಿ, ಪುಸ್ತಕ ಓದುವ ಮೂಲಕ ಜ್ಞಾನ ಸಿಗುತ್ತದೆ, ಪುಸ್ತಕವೆಂಬ ಹೊಸ ಸ್ನೇಹಿತ ಸಿಗುತ್ತಾನೆ ಎಂಬ ಸಂದೇಶವನ್ನು ಸಾರುತ್ತೇನೆ ಎಂದು ಸಾಹಿತಿ ಚಿಕ್ಕರಾಮಯ್ಯ ತಿಳಿಸಿದರು.
ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ ಹಾಗೂ ಕೇಂದ್ರ ಗ್ರಂಥಾಲಯದ ಸಹಯೋಗದಲ್ಲಿ ನಡೆದ ‘ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ ಹತ್ತನೇ ತಿಂಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಜನರ ನಡುವೆ ಸಹಾಯ, ಸಹಕಾರ, ಹೊಂದಾಣಿಕೆ, ರಾಜಿ ಮನೋಭಾವದ ಮಾನವೀಯ ಗುಣಗಳು ಈಗಲೂ ಇವೆ. ಅವನ್ನು ಸಾಹಿತ್ಯದ ಮೂಲಕ ತೋರಿಸಲು ಪ್ರಯತ್ನಿಸಿದ್ದೇನೆ ಎಂದರು.
ಹಿರಿಯ ಸಾಹಿತಿ ಶಿವರಾಂ ಮಾತನಾಡಿ, ಕನ್ನಡ ಸಾರಸ್ವತ ಪರಿಚಾರಿಕೆ ಗ್ರಂಥಾಲಯದಲ್ಲಿ ಅತ್ಯುತ್ತಮ ಕಾರ್ಯಕ್ರಮವನ್ನು ನಡೆಸುತ್ತಿದೆ. ಈ ಕಾರ್ಯವನ್ನು ನಾಡಿನ ಎಲ್ಲಾ ಗ್ರಂಥಾಲಯಗಳಲ್ಲೂ ನಡೆದರೆ ಆ ಪ್ರಾಂತ್ಯದ ಜನರಿಗೆ ಸ್ಥಳೀಯ ಸಾಹಿತಿಗಳ ಪರಿಚಯವಾಗುತ್ತದೆ. ಸಾಹಿತ್ಯದ ಘಮಲು ಎಲ್ಲೆಡೆ ಪಸರಿಸುತ್ತದೆ ಎಂದು ಹೇಳಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಚಿಕ್ಕರಾಮಯ್ಯ ಅವರು ಚಿಕ್ಕಬಳ್ಳಾಪುರ ತಾಲ್ಲೂಕಿನ ಗಿಡ್ನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಚಿಕ್ಕಬಳ್ಳಾಪುರ ಚು.ಸಾ.ಪ. ಅಧ್ಯಕ್ಷರಾಗಿ, ಹಿರಿಯ ನಾಗರಿಕರ ವೇದಿಕೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ವಿಶ್ವವಿದ್ಯಾದೀಪ- ಸಣ್ಣ ಕತೆಗಳು, ಯುಗದರ್ಮ(ನಾಟಕ), ಕಿರಿಯ ರಾಜಕುಮಾರ- ಜಾನಪದಕಥೆ, ಜಯವಿಜಯ- ಜಾನಪದಕಥೆ, ಚೋರನು ಜಾರನೂ, ಊರಿಗೊಂದು ಮನೆಮಾಡು ಕೃತಿಗಳನ್ನು ರಚಿಸಿದ್ದಾರೆ ಎಂದು ಪರಿಚಯ ಮಾಡಿಕೊಟ್ಟರು.
ಸಾಹಿತಿ ಚಿಕ್ಕರಾಮಯ್ಯ ತಾವು ಬರೆದ ಕೃತಿಗಳನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.
ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಸಾಹಿತಿಗಳಾದ ಚಿಕ್ಕರಾಮಯ್ಯ ಮತ್ತು ಶಿವರಾಮ್ ಅವರನ್ನು ಗೌರವಿಸಲಾಯಿತು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಗ್ರಂಥಪಾಲಕ ಬಚ್ಚರೆಡ್ಡಿ, ಶ್ರೀನಿವಾಸ್, ಸಹಾಯಕಿ ಬಾಂಧವ್ಯ, ಸತೀಶ್, ಸುಂದರನ್, ಅಜಿತ್ ಕೌಂಡಿನ್ಯ, ನೃತ್ಯ ಕಲಾವಿದ ಸಿ.ಎನ್.ಮುನಿರಾಜು, ವೃಷಬೇಂದ್ರಪ್ಪ, ಮುನಿಯಪ್ಪ ಹಾಜರಿದ್ದರು.
ಜನರಿಗೆ ಮಕ್ಕಳ ಕಳ್ಳರ ಬಗ್ಗೆ ಜಾಗೃತಿ ಮೂಡಿಸಿದ ಪೊಲೀಸರು
ನಗರದಲ್ಲಿ ಜನದಟ್ಟಣೆ ಇರುವ ಕಡೆಗಳಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ, ಎಲ್ಲಡೆ ಮಕ್ಕಳ ಕಳ್ಳರು ಬಂದಿದ್ದಾರೆ ಎನ್ನುವ ಕುರಿತು ಹರಡಿರುವ ವದಂತಿಗಳಿಂದಾಗಿ ಜನರು ಭಯಭೀತರಾಗಿದ್ದಾರೆ. ಇಂತಹ ವದಂತಿಗಳಿಗೆ ಕಿವಿಗೊಡಬೇಡಿ, ಇದನ್ನೆ ನೆಪವಾಗಿ ಮಾಡಿಕೊಂಡು ಕೆಲವು ಅಮಾಯಕರ ಮೇಲೆ ನೇರವಾಗಿ ಹಲ್ಲೆ ನಡೆಸುವುದು, ಕಂಬಗಳಿಗೆ ಕಟ್ಟಿಹಾಕುವಂತಹ ಪ್ರಕರಣಗಳು ನಡೆಯುತ್ತಿವೆ. ಯಾರೇ ಅಪರಿಚಿತ ವ್ಯಕ್ತಿಗಳು ಕಂಡು ಬಂದಾಗ, ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದು ಕಂಡು ಬಂದರೆ ನೇರವಾಗಿ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿ. ನಿಮ್ಮ ವ್ಯಾಪ್ತಿಯ ಬೀಟ್ ಪೊಲೀಸರಿಗೆ ಮಾಹಿತಿ ಕೊಡಿ. ಒಂದು ವೇಳೆ ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜನರಲ್ಲಿ ಜಾಗೃತಿ ಮೂಡಿಸಿದರು ಮೂಡಿಸಿದರು.
ಪೊಲೀಸ್ ಇಲಾಖೆಯ ಅಧಿಕಾರಿಗಳಾದ ಎ.ಎಸ್.ಐ.ಕೃಷ್ಣಮೂರ್ತಿ, ಪೇದೆಗಳಾದ ರೆಡ್ಡಪ್ಪ, ವೆಂಕಟರೋಣಪ್ಪ ಹಾಜರಿದ್ದರು.
ಶುದ್ದ ಕುಡಿಯುವ ನೀರಿನ ಘಟಕಕ್ಕೆ ವಿದ್ಯುತ್ ಕಡಿತ – ಮಹಿಳೆಯರಿಂದ ಪ್ರತಿಭಟನೆ
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಶುದ್ದ ಕುಡಿಯುವ ನೀರಿನ ಘಟಕದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿರುವುದರಿಂದ ಕುಡಿಯುವ ನೀರಿಗೆ ಗ್ರಾಮಸ್ಥರು ಪರದಾಡುವಂತಾಗಿದ್ದು, ಗುರುವಾರ ಮಹಿಳೆಯರು ಖಾಲಿ ಕೊಡ ಮತ್ತು ಕ್ಯಾನ್‌ಗಳನ್ನು ಹಿಡಿದುಕೊಂಡು ಪ್ರತಿಭಟಿಸಿದರು.
ಸರ್ಕಾರದಿಂದ ಟೆಂಡರ್ ಮೂಲಕ ಅವಕಾಶ ಪಡೆದ ಫಾಂಟಸ್ ಕಂಪೆನಿಯು ಶುದ್ದ ನೀರಿನ ಘಟಕವನ್ನು ಅಪ್ಪೇಗೌಡನಹಳ್ಳಿಯಲ್ಲಿ ಒಂದು ವರ್ಷದ ಹಿಂದೆ ಸ್ಥಾಪಿಸಿತ್ತು. ಸರ್ಕಾರದ ನಿಯಮದಂತೆ ಐದು ವರ್ಷಗಳ ಕಾಲ ಕಂಪೆನಿಯೇ ಅದರ ನಿರ್ವಹಣೆ ಮಾಡಬೇಕು. ವಿದ್ಯುತ್ ಮೀಟರನ್ನು ಅಳವಡಿಸಬೇಕಿದೆ. ಆದರೆ ಒಂದು ವರ್ಷವಾದರೂ ವಿದ್ಯುತ್ ಮೀಟರ್ ಅಳವಡಿಸದ ಕಾರಣ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ.
‘ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆ ಮಾಡಿ ಮುಂದಿನ ತಿಂಗಳಿಗೆ ಒಂದು ವರ್ಷವಾಗುತ್ತದೆ. ಕಂಪೆನಿಯವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಯಂತ್ರದಲ್ಲಿ ಎಟಿಡಬ್ಲೂ ಎಂಬ ಉಪಕರಣ ಕೆಲಸ ಮಾಡುತ್ತಿಲ್ಲ. ಫಿಲ್ಟರ್ ಎರಡು ಅಥವಾ ಮೂರು ತಿಂಗಳಿಗೊಮ್ಮೆ ಬದಲಿಸಬೇಕು. ಆದರೆ ಅದನ್ನು ಬದಲಿಸಿಲ್ಲ. ಯುಬಿ ಫಿಲ್ಟರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ನೀರಿನ ಟ್ಯಾಂಕ್‌ಗೆ ಮುಚ್ಚಳವೇ ಇಲ್ಲ. ಫಿಲ್ಟರ್ ಒಳಗೆ ಪಾಚಿಕಟ್ಟಿದೆ, ಶುಚಿಗೊಳಿಸಿಲ್ಲ. ವಿದ್ಯುತ್ ಮೀಟರ್ ಅಳವಡಿಸದ ಕಾರಣ ಇದುವರೆಗೂ ಮೂರು ಬಾರಿ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಬಂದಿದ್ದರು. ನಮ್ಮ ವಿನಂತಿಯನ್ನು ಮನ್ನಿಸಿ ಸುಮ್ಮನಾಗಿದ್ದರು. ಆದರೆ ಎಷ್ಟುಕಾಲ ಅವರು ತಾನೆ ಉಚಿತ ವಿದ್ಯುತ್ ನೀಡುತ್ತಾರೆ. ಈಗ ಕಡಿತಗೊಳಿಸಿದ್ದಾರೆ’ ಎಂದು ಸಮಸ್ಯೆಯ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ತಿಳಿಸಿದರು.
‘ಗ್ರಾಮ ಪಂಚಾಯಿತಿಯಿಂದ ನಾವು ಶುದ್ದ ನೀರಿನ ಘಟಕಕ್ಕೆ ಸ್ಥಳ ನೀಡಿದ್ದೇವೆ. ವಿದ್ಯುತ್ ಮೀಟರ್ ಅಳವಡಿಸಲು ಎನ್.ಒ.ಸಿ ಪಂಚಾಯಿತಿ ವತಿಯಿಂದ ಕೊಟ್ಟು ಒಂಭತ್ತು ತಿಂಗಳಾಯಿತು. ಆದರೆ ಅದರ ಬಗ್ಗೆ ಯಾವ ಪ್ರಯತ್ನವನ್ನೂ ಅವರು ಮಾಡಿಲ್ಲ. ಫಾಂಟಸ್ ಕಂಪೆನಿಯ ಜಿಲ್ಲಾ ಉಸ್ತುವಾರಿ ವ್ಯವಸ್ಥಾಪಕ ಮೋಹನ್ ಅವರನ್ನು ಈ ಬಗ್ಗೆ ಕೇಳಿದರೆ ಅವರು ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಕೇಶವಮೂರ್ತಿ ಅವರಿಗೆ ಒಪ್ಪಿಸಿದ್ದೇವೆ ಎನ್ನುವರು. ಕೇಶವಮೂರ್ತಿ ಅವರನ್ನು ಕೇಳಿದಾಗಲೆಲ್ಲಾ ಮಾಡಿಸುತ್ತೇನೆ ಎನ್ನುತ್ತಿರುತ್ತಾರೆ, ಆದರೆ ಏನೂ ಮಾಡಿಲ್ಲ. ಫಾಂಟಸ್ ಕಂಪೆನಿಯ ಬೆಂಗಳೂರು ಕಚೇರಿಯ ಅಧಿಕಾರಿಗಳಿಗೆ ಹಲವು ಬಾರಿ ಸಮಸ್ಯೆಯ ಬಗ್ಗೆ ತಿಳಿಸಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಯಾರ ಬಳಿ ನಾವು ದೂರು ಹೇಳುವುದು’ ಎಂದು ಅವರು ಸಮಸ್ಯೆಯ ಬಗ್ಗೆ ವಿವರಿಸಿದರು.
ಶುದ್ದ ಕುಡಿಯುವ ನೀರಿನ ಘಟಕದ ಮೇಲ್ವಿಚಾರಕರನ್ನಾಗಿ ಗ್ರಾಮದ ವೇಣುಗೋಪಾಲ್ ಅವರನ್ನು ಕಂಪೆನಿಯವರು ನೇಮಿಸಿದ್ದಾರೆ. ಅವರನ್ನು ಕೇಳಿದಾಗ, ‘ನನಗೆ ಮೊದಲು ತಿಂಗಳಿಗೆ 2,200 ರೂ ನೀಡುವುದಾಗಿ ಹೇಳಿದ್ದರು. ಆದರೆ ಈಗ ಕೇವಲ 500 ರೂ ಕೊಡುತ್ತಾರೆ ಅಷ್ಟೆ. ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ, ಖರ್ಚಿದ್ದರೆ ನಮ್ಮ ಹಳ್ಳಿಯ ಮೂರ್ತಿ ಎಂಬುವವರಿಗೆ ಇದರ ಅನುಭವವಿರುವುದರಿಂದ ಅವರ ಸಹಾಯ ಪಡೆದು ಸರಿಪಡಿಸಿಕೊಳ್ಳುತ್ತೇವೆ. ಕಂಪೆನಿಯ ಮೇಲ್ವಿಚಾರಕ ಮೋಹನ್ ಹದಿನೈದು ದಿನಕ್ಕೊಮ್ಮೆ ಬಂದು ಸಂಗ್ರಹವಾದ ಹಣವನ್ನು ತೆಗೆದುಕೊಂಡು ಹೋಗುತ್ತಾರೆ ಅಷ್ಟೇ’ ಎಂದು ಹೇಳುತ್ತಾರೆ.
ಸ್ಮಾರ್ಟ್ ಕಾರ್ಡ್ ಅಳವಡಿಸುವ ಅವಕಾಶವಿದ್ದರೂ ಇಲ್ಲಿ ಅದನ್ನು ಬಳಕೆ ಮಾಡುತ್ತಿಲ್ಲ. ಸಾಧಾರಣ ಕಾರ್ಡುಗಳನ್ನು ಮುದ್ರಿಸಿ ನೀರು ಪಡೆಯಲು ಬರುವವರಿಂದ ಕಾರ್ಡಿಗೆ 60 ರೂ ಪಡೆದು, ನಂತರ ಪ್ರತಿ 20 ಲೀಟರ್ ನೀರಿಗೆ 2 ರೂ ಪಡೆಯಲಾಗುತ್ತಿದೆ.
ಅಪ್ಪೇಗೌಡನಹಳ್ಳಿಯ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಸ್ಥಳೀಯರಲ್ಲದೆ, ಕಂಬದಹಳ್ಳಿ, ಗಂಗನಹಳ್ಳಿ, ಚೌಡಸಂದ್ರ, ಮೇಲೂರಿನಿಂದಲೂ ಬಂದು, ಕೆಲವರಂತೂ ಆಟೋದಲ್ಲಿ ಕ್ಯಾನುಗಳನ್ನು ತಂದು ನೀರು ತುಂಬಿಸಿಕೊಂಡು ಹೋಗುತ್ತಿದ್ದರು. ಆದರೆ ಈಗ ಇವರೇ ಕುಡಿಯುವ ನೀರಿಗಾಗಿ ಬೇರೆ ಕಡೆ ಹೋಗಬೇಕಾಗಿದೆ.
‘ಕಳೆದ ನಾಲ್ಕು ದಿನಗಳಿಂದ ಶುದ್ದ ಕುಡಿಯುವ ನೀರಿನ ಘಟಕ ಇಲ್ಲದಿರುವುದರಿಂದ ಕೊಳವೆ ಬಾವಿಯ ನೀರನ್ನು ಹಾಗೆಯೇ ಬಳಸುತ್ತಿದ್ದೇವೆ. ಆಗಲೇ ಮೈ ಕೈ ಎಲ್ಲಾ ದದ್ದುಗಳು, ಕೆರೆತ ಉಂಟಾಗಿ ಅಲರ್ಜಿ ಆಗಿದೆ. ಮಕ್ಕಳಿಗೆ ಖಾಯಿಲೆಗಳು ಬರುತ್ತಿದ್ದು ಆಸ್ಪತ್ರೆಗೆ ಹೋಗುವಂತಾಗಿದೆ. ಇನ್ನು ನಾವು ಶುದ್ದ ನೀರು ಬೇಕೆಂದರೆ ಹಂಡಿಗನಾಳ, ಕೇಶವಾರ, ಕಡಿಶೀಗೇನಹಳ್ಳಿಗೆ ಹೋಗಿ ಐದು ರೂ ನಾಣ್ಯ ಹಾಕಿ ತರಬೇಕು. ಸರಿಯಾಗಿ ನಿರ್ವಹಣೆ ಮಾಡದೆ ತೊಂದರೆ ಮಾಡಿರುವ ಕಂಪೆನಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದೇ ಕಂಪೆನಿಯವರು ಶುದ್ದ ನೀರಿನ ಘಟಕಗಳನ್ನು ತಾಲ್ಲೂಕಿನ ಸೊಣ್ಣಗಾನಹಳ್ಳಿ, ಬಳುವನಹಳ್ಳಿ, ಕೆ.ಜಿ. ಪುರ, ಬೈಯಪ್ಪನಹಳ್ಳಿಯಲ್ಲೂ ಸ್ಥಾಪಿಸಿದ್ದು, ಅಲ್ಲೂ ಹಲವು ಸಮಸ್ಯೆಗಳಿವೆ. ಇದು ಹೀಗೆ ಮುಂದುವರಿದರೆ ಸ್ತ್ರೀ ಶಕ್ತಿ ಸದಸ್ಯರೆಲ್ಲಾ ತಾಲ್ಲೂಕು ಆಡಳಿತದ ಮುಂದೆ ಪ್ರತಿಭಟಿಸುತ್ತೇವೆ’ ಎಂದು ಗ್ರಾಮದ ರತ್ನಮ್ಮ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಕಮಲಮ್ಮ, ಭಾರತಮ್ಮ, ರಾಧಾ, ಶೋಭಾ, ಸೌಮ್ಯ, ಶೈಲಜ ಹಾಜರಿದ್ದರು.
ತಲಕಾಯಲಬೆಟ್ಟದಲ್ಲಿ ಕಂಡುಬಂದ ಚಿರತೆ
ತಲಕಾಯಲಬೆಟ್ಟ ಮೀಸಲು ಅರಣ್ಯದ ವ್ಯಾಪ್ತಿಗೆ ಬರುವ ಈ ಪ್ರದೇಶದಲ್ಲಿ ಕಳೆದ ಹತ್ತು ದಿನಗಳ ಹಿಂದೆ ಬೆಟ್ಟದ ಬಂಡೆಯ ಮೇಲೆ ಕಂಡ ಚಿರತೆಯ ಛಾಯಾಚಿತ್ರವನ್ನು ರಾಜು ಎಂಬ ಛಾಯಾಗ್ರಾಹಕ ತೆಗೆದಿದ್ದು, ಅದು ಮುಸುಕಾಗಿದ್ದರೂ, ಚಿರತೆಯು ಅಲ್ಲಿ ಕಂಡು ಬಂದುದಕ್ಕೆ ಸಾಕ್ಷಿಯಾಗಿದೆ.
ತಾಲ್ಲೂಕಿನ ಪುರಾಣ ಪ್ರಸಿದ್ಧ ತಲಕಾಯಲಬೆಟ್ಟದ ವೆಂಕಟರಮಣಸ್ವಾಮಿ ದೇವಾಲಯದ ಬಳಿಯ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯವರು ಅದನ್ನು ಹಿಡಿಯಲು ಬೋನನ್ನು ಇರಿಸಿದ್ದಾರೆ.
ಚಿರತೆ ಕಾಣಿಸಿಕೊಂಡ ಮಾಹಿತಿ ಸಿಕ್ಕೊಡನೆಯೇ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಮತ್ತು ವಲಯ ಅರಣ್ಯ ಅಧಿಕಾರಿ ಶ್ರೀಲಕ್ಷ್ಮಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಚಿರತೆ ಹಿಡಿಯುವ ಬೋನನ್ನು ಇರಿಸಿದ್ದಾರೆ. ನಾಯಿಯನ್ನು ಬೋನಿನಲ್ಲಿ ಇರಿಸಿದ್ದು, ಅದನ್ನು ತಿನ್ನಲು ಬಂದಾಗ ಚಿರತೆಯು ಬೋನಿನೊಳಗೆ ಬೀಳುವ ವ್ಯವಸ್ಥೆಯನ್ನು ಮಾಡಿದ್ದಾರೆ. ಉಪವಲಯ ಅರಣ್ಯಾಧಿಕಾರಿ ರಾಮಾಂಜನೇಯುಲು, ಅರಣ್ಯ ರಕ್ಷಕ ಶ್ರೀರಾಮಪ್ಪ ಸ್ಥಳದಲ್ಲಿಯೇ ಬೀಡುಬಿಟ್ಟಿದ್ದಾರೆ. ಅರಣ್ಯ ಸಿಬ್ಬಂದಿಯ ಎರಡು ತಂಡಗಳನ್ನು ರಚನೆ ಮಾಡಿದ್ದು ಹಗಲೂ ರಾತ್ರಿ ಪಾಳಿಯಲ್ಲಿ ಚಿರತೆಯ ಓಡಾಟದ ಮೇಲೆ ಕಣ್ಣಿಟ್ಟಿದ್ದಾರೆ.
ತಲಕಾಯಲಬೆಟ್ಟದ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಪೂಜೆಗೆಂದು ಬರುವ ಭಕ್ತರು ಬೆಟ್ಟವನ್ನೇರುವುದು ರೂಢಿಯಾಗಿತ್ತು. ಆದರೆ ಚಿರತೆ ಕಂಡು ಬಂದ ಹಿನ್ನೆಲೆಯಲ್ಲಿ ಜನರು ಒಬ್ಬೊಬ್ಬರೇ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಈ ಪ್ರದೇಶದಲ್ಲಿ ತಿರುಗಾಡಬಾರದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ನಿಫಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ – ನಗರಸಭೆಯ ಉದ್ಯಾನವನಕ್ಕೆ ಬೀಗ
ನಗರದ ಹೊರವಲಯದ ಚಿಂತಾಮಣಿ ರಸ್ತೆಯಲ್ಲಿ ಪುರಸಭೆ ಪಂಪ್‌ಹೌಸ್ ಬಳಿ ಇರುವ ನಗರಸಭೆಯ ಉದ್ಯಾನವನವನ್ನು ಮುಚ್ಚಿಸಿ ನಗರಸಭೆ ಆಯುಕ್ತ ಛಲಪತಿ ಮಾತನಾಡಿದರು.
ಮದ್ದಿಲ್ಲದ ರೋಗವೆಂದೇ ಕುಖ್ಯಾತಿ ಪಡೆದಿರುವ ಅಪರೂಪದ ನಿಫಾ ವೈರಾಣು ಸೋಂಕು ಹರಡದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ತಾಲ್ಲೂಕು ವೈದ್ಯಾಧಿಕಾರಿಗಳ ಸೂಚನೆಯ ಮೇರೆಗೆ ನಗರದ ಉದ್ಯಾನವನವನ್ನು ತಾತ್ಕಾಲಿಕವಾಗಿ ಮುಚ್ಚುತ್ತಿರುವುದಾಗಿ ಅವರು ತಿಳಿಸಿದರು.
ನೂರಾರು ಬಾವಲಿಗಳು, ಗೊರವಂಕ, ಗಿಳಿ, ಕೋಗಿಲೆ, ಅಳಿಲುಗಳು, ಗುಟುರಗಳು ಮುಂತಾದ ಹಲವು ಹಕ್ಕಿಗಳು, ಮಂಗಗಳು ಇಲ್ಲಿರುವ ಬೃಹದಾಕಾರದ ಆಲದ ಮರಗಳು, ತಂಪನ್ನು ನೀಡುವ ಹೊಂಗೆ ಮರಗಳನ್ನು ಆಶ್ರಯಿಸಿವೆ.
ನಿಫಾ ವೈರಾಣು ಸೋಂಕಿಗೆ ಕೇರಳದಲ್ಲಿ ಕೆಲವು ಮಂದಿ ಬಲಿಯಾಗಿದ್ದಾರೆ. ಇನ್ನೂ ಹಲವರು ಈ ಸೋಂಕಿಗೆ ತುತ್ತಾಗಿದ್ದಾರೆ ಎಂದು ಶಂಕಿಸಲಾಗಿದೆ. ಬಾವಲಿ, ಹಂದಿ ಹಾಗೂ ಇತರೆ ಪ್ರಾಣಿಗಳಿಂದ ಹರಡುವ ಈ ಸೋಂಕಿಗೆ ಇದುವರೆಗೂ ಯಾವುದೇ ಸಿದ್ಧ ಔಷಧ ಅಥವಾ ಲಸಿಕೆ ಲಭ್ಯವಿಲ್ಲ. ಸೋಂಕು ಹರಡುವುದನ್ನು ತಡೆಗಟ್ಟುವುದೇ ನಾವೀಗ ಕೈಗೊಳ್ಳಬೇಕಾದ ಕ್ರಮವಾಗಿದೆ. ಈ ನಿಟ್ಟಿನಲ್ಲಿ ನೂರಾರು ಬಾವಲಿಗಳು ವಾಸಿಸುವ ಮರಗಳಿರುವ ಉದ್ಯಾನವನವನ್ನು ತಾತ್ಕಾಲಿಕವಾಗಿ ಮುಚ್ಚುತ್ತಿದ್ದೇವೆ. ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಾಣಿ ಮಾತನಾಡಿ, ‘ಬಾವಲಿ ಮೂಲಕ ಮೊದಲಿಗೆ ಮಲೇಷ್ಯಾದ ಗದ್ದೆಗಳಲ್ಲಿರುವ ಹಂದಿಗಳಲ್ಲಿ ಹಾಗೂ ನಂತರದಲ್ಲಿ ಸಾಕುಪ್ರಾಣಿಗಳಾದ ನಾಯಿ, ಬೆಕ್ಕು, ಆಡು, ಕುದುರೆಗಳಲ್ಲಿಯೂ ಸೋಂಕು ಪತ್ತೆಯಾಯಿತು. ಬಳಿಕ ಮನುಷ್ಯರಿಗೂ ಹರಡಿರುವುದು ವರದಿಯಾಗಿತ್ತು. ಬಾವಲಿಯ ಮೂತ್ರ, ಹಿಕ್ಕೆ ಹಾಗೂ ಜೊಲ್ಲು ಈ ವೈರಾಣು ಸೋಂಕಿನ ಮೂಲವಾಗಿದೆ. ಬಾವಲಿಗಳು ತಿಂದಿರುವ ಹಣ್ಣು ಸೇವನೆ, ಸೋಂಕಿರುವ ಬಾವುಲಿ, ಹಂದಿಗಳ ಜತೆಗಿನ ಸಂಪರ್ಕ, ಸೋಂಕು ಹೊಂದಿರುವ ಇತರೆ ವ್ಯಕ್ತಿಗಳೊಂದಿಗೆ ಸಂಪರ್ಕ, ಒಡನಾಟ ಸೋಂಕು ಹರಡಲು ಕಾರಣ. ಜ್ವರ, ತಲೆನೋವು, ನಿದ್ದೆ ಮಂಪರು, ಭ್ರಮೆ, ಗೊಂದಲಕಾರಿ ಮನಸ್ಥಿತಿ, ಉಸಿರಾಟದ ಸಮಸ್ಯೆ, ಕೋಮಾ, ಮಿದುಳು ಸೋಂಕು ಈ ರೋಗದ ಲಕ್ಷಣಗಳು. ಆದಷ್ಟೂ ಬಾವಲಿಗಳಿರುವ ಪ್ರದೇಶದಿಂದ ದೂರವಿರಿ. ವೈಯಕ್ತಿಕ ಶುಚಿತ್ವಕ್ಕೆ ಮಹತ್ವ ಕೊಡಿ’ ಎಂದು ತಿಳಿಸಿದರು.
ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಸಲಹಾ ಸಮಿತಿಯನ್ನು ರಚನೆ ಮಾಡಲು ಕೋರಿಕೆ
ಹೊಸದಾಗಿ ಆಯ್ಕೆಯಾದ ಶಾಸಕರೊಂದಿಗೆ ಸಮಾಲೋಚಿಸಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಸಲಹಾ ಸಮಿತಿಯನ್ನು ರಚನೆ ಮಾಡಿ. ಏಷ್ಯಾ ಖಂಡದಲ್ಲಿಯೇ ಅತ್ಯಂತ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಅಭಿವೃದ್ಧಿಗೊಳಿಸಿ ಎಂದು ರೇಷ್ಮೆ ಕೃಷಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಯಲುವಳ್ಳಿ ಸೊಣ್ಣೇಗೌಡ ಸಲಹೆ ನೀಡಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಮಂಗಳವಾರ ರೇಷ್ಮೆ ಕೃಷಿ ಹಿತರಕ್ಷಣಾ ಸಮಿತಿ ಸದಸ್ಯರು ಮತ್ತು ರೈತ ಸಂಘದ ಸದಸ್ಯರ ನಿಯೋಗ ರೇಷ್ಮೆ ಗೂಡಿನ ಮಾರುಕಟ್ಟೆಯ ಉಪ ನಿರ್ದೇಶಕರನ್ನು ಭೇಟಿ ಮಾಡಿ ಸಮಸ್ಯೆಗಳ ನಿವಾರಣೆಗೆ ಸಲಹೆಗಳನ್ನು ನೀಡಿದರು.
ಶಿಡ್ಲಘಟ್ಟದ ಶಾಸಕರು ರೇಷ್ಮೆ ಖಾತೆಯ ಸಚಿವರಾಗಿದ್ದ ಅನುಭವವಿದೆ. ಆರನೆಯ ಬಾರಿ ಶಾಸಕರಾಗಿದ್ದಾರೆ. ಸ್ಥಳೀಯ ರೇಷ್ಮೆ ಗೂಡಿನ ಮಾರುಕಟ್ಟೆಯ ಸಮಸ್ಯೆಗಳು ಅವರಿಗೆ ತಿಳಿದಿದೆ. ಹಾಗಾಗಿ ಅವರ ನೇತೃತ್ವದಲ್ಲಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ರೈತರು ರೀಲರುಗಳನ್ನೊಳಗೊಂಡ ಸಲಹಾ ಸಮಿತಿಯನ್ನು ರಚನೆ ಮಾಡಿ.
ಸ್ವಚ್ಛತೆಗೆ ಆದ್ಯತೆಯನ್ನು ನೀಡಿ, ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಉತ್ತಮ ಶುದ್ಧನೀರಿನ ಘಟಕವನ್ನು ಅಳವಡಿಸಿ, ರೇಷ್ಮೆ ಗೂಡನ್ನು ಸಾಗಿಸುವ ಬುಟ್ಟಿಗಳನ್ನು ತರಿಸಿ, ಶೌಚಾಯ ಸರಿಪಡಿಸಿ ಎಂದು ಹೇಳಿದರು.
ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ರೈತರಿಗೆ ವಿಶ್ರಾಂತಿ ಗೃಹ ಬೇಕಿದೆ, ಮಾರುಕಟ್ಟೆಗೆ ಬರುವ ರಸ್ತೆ ಸಮರ್ಪಕವಾಗಿಲ್ಲ, ಮಾರುಕಟ್ಟೆಯಲ್ಲಿ ಬ್ಯಾಂಕ್ ಬೇಕಿದೆ. ಹಣವನ್ನು ರೈತರ ಖಾತೆಗೆ ವರ್ಗಾಯಿಸುವ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೇಷ್ಮೆ ಗೂಡಿನ ಮಾರುಕಟ್ಟೆಯ ಉಪ ನಿರ್ದೇಶಕ ಸುಭಾಷ್ ಬಿ ಸಾತೇನಹಳ್ಳಿ ಮಾತನಾಡಿ, ಚುನಾವಣೆಯ ಕಾರ್ಯಭಾರದಿಂದ ಸ್ವಚ್ಛತೆಗೆ ಗಮನ ಹರಿಸಲಾಗಿರಲಿಲ್ಲ. ಈಗ ಮಾರುಕಟ್ಟೆಯ ಸ್ವಚ್ಛತೆಗೆ ಆದ್ಯತೆ ನೀಡಿದ್ದೇವೆ. ಕೆಲ ದಿನಗಳಲ್ಲಿ ದೊಡ್ಡ ಶುದ್ಧ ನೀರಿನ ಘಟಕವನ್ನು ಸ್ಥಾಪಿಸಲಾಗುತ್ತದೆ. ನಾಳೆಯಿಂದಲೇ ಹೊಸ ಬುಟ್ಟಿಗಳನ್ನು ನೀಡಲಾಗುತ್ತಿದೆ. ರೇಷ್ಮೆ ಇಲಾಖೆಯ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳನ್ನು ಕರೆಸಿ ಶೌಚಾಲಯ ನಿರ್ಮಿಸಲಾಗುವುದು. ಇರುವ ಕಟ್ಟಡದಲ್ಲಿಯೇ ರೈತರ ವಿಶ್ರಾಂತಿ ಗೃಹಕ್ಕೆ ಸ್ಥಳವನ್ನು ಮಾಡಿ ಅದರಲ್ಲಿ ಶೌಚಾಲಯ ವ್ಯವಸ್ಥೆ ಮಾಡಿಕೊಡುತ್ತೇವೆ. ಮಾರುಕಟ್ಟೆಗೆ ಬರಲು ಪರ್ಯಾಯ ದಾರಿಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸುತ್ತೇವೆ. ಬ್ಯಾಂಕ್ ಹಾಗೂ ಕ್ಯಾಶ್ ಲೆಸ್ ವ್ಯವಹಾರ ಅನುಷ್ಠಾನದ ಹಂತದಲ್ಲಿದೆ ಎಂದು ಹೇಳಿದರು.
ರೈತಸಂಘದ ಕೆಂಪಣ್ಣ, ಮುನಿನಂಜಪ್ಪ, ಕೃಷ್ಣಪ್ಪ, ನಾರಾಯಣಸ್ವಾಮಿ, ಗೋಪಾಲ್, ಗೋವಿಂದ್, ಪುಟ್ಟಮೂರ್ತಿ, ಮೂರ್ತಿ, ಅಧಿಕಾರಿಗಳಾದ ಶಶಿಧರ್, ಬೈರಪ್ಪ, ಕುಮಾರಸ್ವಾಮಿ ಹಾಜರಿದ್ದರು.
ದೇವೇಗೌಡರವರ ಎಂಭತ್ತಾರನೆ ಹುಟ್ಟುಹಬ್ಬ ಆಚರಣೆ
ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಅವರ ಎಂಭತ್ತಾರನೆ ಹುಟ್ಟು ಹಬ್ಬವನ್ನು ನಗರದ ಜೆಡಿಎಸ್ ಕಾರ್ಯಕರ್ತರೊಂದಿಗೆ ಆಶಾಕಿರಣ ಅಂಧಮಕ್ಕಳ ಶಾಲೆಯ ಮಕ್ಕಳಿಂದ ಕೇಕ್ ಕತ್ತರಿಸುವ ಮೂಲಕ ಆಚರಿಸಿ ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ಮಾತನಾಡಿದರು.
ದೇಶದ 11ನೇ ಪ್ರಧಾನಿಯಾಗಿ ಎಚ್.ಡಿ.ದೇವೇಗೌಡ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ನಾವು ನೆನಪಿಡಬೇಕಾಗುತ್ತದೆ. ಮಹಿಳಾ ಮೀಸಲಾತಿ. ಕಾಶ್ಮೀರ ಸಮಸ್ಯೆ. ರೈತರಿಗೆ ರಸಗೋಬ್ಬರ ಸಬ್ಸಿಡಿ, ಹುಬ್ಬಳ್ಳಿ ಈದ್ಗ ಸಮಸ್ಯೆ. ಕಾವೇರಿ ನೀರಿನ ಸಮಸ್ಯೆ. ಮಹಾದಾಯಿ ಸಮಸ್ಯೆಯ ಹೋರಾಟ ಅವರ ರೈತರ ಮೇಲೆ ಇರುವ ಕಾಳಜಿ ಇಂದಿನ ರಾಜಕಾರಣಿಗಳಿಗೆ ಹಾಗೂ ಯುವಕರಿಗೆ ಮಾರ್ಗದರ್ಶನವಾಗಿದೆ. ಈ ನಿಟ್ಟಿನಲ್ಲಿ ಈ ದಿನ ಅಂಧ ಮಕ್ಕಳೊಂದಿಗೆ ಅವರ ಜನ್ಮದಿನಾಚರಣೆ ನಡೆಸುತ್ತಿರುವುದಾಗಿ ಅವರು ತಿಳಿಸಿದರು.
ಎಚ್.ಡಿ.ದೇವೇಗೌಡ ಅವರು ಮುತ್ಸದ್ಧಿ ರಾಜಕಾರಣಿ. ರಾಜಕಾರಣದಲ್ಲಿ ಅವರದ್ದು ಅಪರೂಪದ ವ್ಯಕ್ತಿತ್ವ. ಬಡವರ ಏಳಿಗೆಯೇ ಅವರ ಗುರಿ. ಅವರ ಮಾರ್ಗದರ್ಶನದಲ್ಲಿ ನಾವು ನಡೆಯುತ್ತೇವೆ. ಜನಪರ ಚಿಂತನೆ ಹಾಗೂ ರೈತರ ಬಗ್ಗೆ ಕಾಳಜಿಯೊಂದಿಗೆ ಸದಾ ತುಡಿಯುವ ಅವರ ಮಾನವೀಯ ಗುಣ ನಮಗೆಲ್ಲಾ ಪ್ರೇರಣೆ ಎಂದು ಹೇಳಿದರು.
ಕಾಂಗ್ರೇಸ್ ಅವರೊಂದಿಗೆ ಸೇರಿ ಎಂ.ರಾಜಣ್ಣ ಅವರು ತಂತ್ರ ರೂಪಿಸಿ ಚುನಾವಣೆಯಲ್ಲಿ ಜೆಡಿಎಸ್ ಸೋಲಿಗೆ ಕಾರಣರಾಗಿದ್ದಾರೆ, ಆದರೆ ಜನರು ತನಗೆ ಆಶೀರ್ವದಿಸಿದ್ದು, ತಾಲ್ಲೂಕಿನ ಮತದಾರರಿಗೆ ಯಾವುದೇ ಸಮಯದಲ್ಲಿ ಎನೇ ತೊಂದರೆ ಬಂದರೂ ಸಹ ಅವರ ಬೆನ್ನಿಗೆ ನಿಂತು ಸಹಾಯ ಮಾಡುತ್ತೇನೆ. ಎಂದಿನಂತೆ ಪಕ್ಷದ ಸಂಘಟನೆ ಹಾಗೂ ಮುಂದಿನ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸದಾ ಸಿದ್ದರಾಗಿರುವುದಾಗಿ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ಪಕ್ಷವು ತಾಯಿ ಇದ್ದಂತೆ, ಪಕ್ಷದಿಂದ ಸವಲತ್ತುಗಳನ್ನು ಪಡೆದು ಪಕ್ಷಕ್ಕೆ ಮೋಸ ಮಾಡಿದ ಕೀರ್ತಿ ಮಾಜಿ ಶಾಸಕರಿಗೆ ಸಲ್ಲುತ್ತದೆ. ಸಾರ್ವಜನಿಕರೊಂದಿಗೆ ಸದಾ ಸಂಪರ್ಕ ಹೊಂದಿದ್ದು, ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಪಕ್ಷದ ಸಂಘಟನೆ ಮಾಡುವುದಾಗಿ ತಿಳಿಸಿದರು.
ಜೆಡಿಎಸ್ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಸಾರ್ವಜನಿಕರ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಮತ್ತು ಬಾಣಂತಿಯರಿಗೆ ಹಣ್ಣು, ಹಾಲು ಮತ್ತು ಬ್ರೆಡ್ ವಿತರಿಸಿದರು. ಆಶಾಕಿರಣ ಅಂಧ ಮಕ್ಕಳ ಶಾಲೆಯ ಮಕ್ಕಳಿಗೆ ಊಟದ ವ್ಯವಸ್ಥೆಯನ್ನು ಮಾಡಿದ್ದರು.
ತಾಲ್ಲೂಕು ಪಂಚಾಯತಿ ಅದ್ಯಕ್ಷ ಕೆ.ಲಕ್ಷ್ಮೀನಾರಾಯಣ ರೆಡ್ಡಿ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಶಿವಾರೆಡ್ಡಿ, ನಗರಸಭೆ ಸದಸ್ಯರಾದ ವೆಂಕಟಸ್ವಾಮಿ , ಸಿಕಂದರ್, ಲಕ್ಷ್ಮಣ್, ಮುಖಂಡರಾದ ಚೀಮನಹಳ್ಳಿ ಗೋಪಾಲ್, ಹುಜುಗೂರು ರಾಮಣ್ಣ, ಲಕ್ಷ್ಮೀನಾರಾಯಣ್, ರಾಮಕೃಷ್ಣಪ್ಪ, ಆದಿಲ್ ಪಾಷ ,ಗಂಜಿಗುಂಟೆ ಮೂರ್ತಿ, ರಾಜೇಶ್, ಶ್ರೀನಿವಾಸಗೌಡ ,ಗಿರೀಶ್ ಹಾಜರಿದ್ದರು.
ಕಾಂಗ್ರೆಸ್ ಅಪಪ್ರಚಾರದಿಂದ ಜನರ ಪ್ರೀತಿ ಮತವಾಗಲಿಲ್ಲ – ಆಂಜಿನಪ್ಪ (ಪುಟ್ಟು)
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ (ಪುಟ್ಟು) ಮಾತನಾಡಿದರು. ಚುನಾವಣೆಯಲ್ಲಿ ಸೋತರೂ ಜನರ ಆಶೀರ್ವಾದವಿದೆ. ಕ್ಷೇತ್ರದಲ್ಲಿ ಸಮಾಜಸೇವೆಯನ್ನು ಮುಂದುವರೆಸುತ್ತೇನೆ. ಯಾವುದೇ ಸರ್ಕಾರವಿರಲಿ, ಜನರ ಕಷ್ಟಕ್ಕೆ ಸ್ಪಂದಿಸುವುದು ಬಹು ಮುಖ್ಯ. ಆ ಕೆಲಸವನ್ನು ನಿರಂತರವಾಗಿ ಮಾಡುತ್ತೇನೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಪಕ್ಷದಿಂದ ಟಿಕೇಟ್‌ಗಾಗಿ ಪ್ರಯತ್ನಿಸಿದೆ. ಸಿಗಲಿಲ್ಲ. ಪಕ್ಷೇತರನಾಗಿ ಸ್ಪರ್ಧಿಸಿದೆ. 10,986 ಮತಗಳನ್ನು ಕ್ಷೇತ್ರದ ತಂದೆತಾಯಂದಿರು ನೀಡಿ ಆಶೀರ್ವದಿಸಿದ್ದಾರೆ. ನನ್ನ ಪ್ರಾಮಾಣಿಕ ಜನಸೇವೆಗೆ ನೀಡಿರುವ ಮತಗಳು ಕಡಿಮೆಯೇನೂ ಅಲ್ಲ. ಯಾವುದೇ ಮುಖಂಡರ, ಗುಂಪಿನ ಬಲವಿಲ್ಲದ ನನ್ನನ್ನು ನಂಬಿ ಮತ ನೀಡಿದವರಿಗೆ ಋಣಿಯಾಗಿರುತ್ತೇನೆ. ನನ್ನ ವ್ಯಕ್ತಿತ್ವ, ಆಲೋಚನೆ ಬದಲಾಗದು. ಮುಂದಿನ ದಿನಗಳಲ್ಲಿ ಇನ್ನಷ್ಟು ಜನಸೇವೆ ಮಾಡುವ ಮೂಲಕ ಕ್ಷೇತ್ರದ ಎಲ್ಲ ಜನರ ವಿಶ್ವಾಸ ಗಳಿಸುತ್ತೇನೆ. ಸೋಲೇ ಗೆಲುವಿನ ಮೆಟ್ಟಿಲು ಎಂಬುದನ್ನು ನಂಬಿದ್ದೇನೆ ಎಂದು ಹೇಳಿದರು.
ಇನ್ನಷ್ಟು ಜನಬೆಂಬಲ ಸಿಗಬಹುದೆಂದು ನಾವು ಆಶಿಸಿದ್ದೆವು. ಆದರೆ, ಚುನಾವಣೆ ಎರಡು ದಿನಗಳಿದ್ದಾಗ ಕಾಂಗ್ರೆಸ್ ಪಕ್ಷದವರು ‘ಆಂಜಿನಪ್ಪ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದಾರೆ’ ಎಂದು ಮಾಡಿದ ಅಪಪ್ರಚಾರದಿಂದ ನಮ್ಮ ಆಲೋಚನೆ ತಲೆಕೆಳಗಾಯಿತು. ಜನರ ಪ್ರೀತಿ ಮತವಾಗದೇ ಇರಲು ಮುಖ್ಯ ಕಾರಣ ಅಪಪ್ರಚಾರ. ಯಾರು ಎಷ್ಟೇ ತೇಜೋವಧೆ ಮಾಡಿದರೂ ನಮ್ಮ ಕೆಲಸ ಮಾಡುವ ಉತ್ಸಾಹ ಕಡಿಮೆಯಾಗುವುದಿಲ್ಲ. ಇಂದಲ್ಲ ನಾಳೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ನನಗೆ ನ್ಯಾಯ ಸಿಗುತ್ತದೆ ಎಂಬ ದೃಢ ವಿಶ್ವಾಸವಿದೆ.
ಯಾವುದೇ ಅಹಿತಕರ ಘಟನೆಗೆ ಆಸ್ಪದ ಕೊಡದೇ ಶಾಂತಿಯುತವಾಗಿ ಮತದಾನ ನಡೆದದ್ದು ಒಂದು ಸಾಧನೆಯಾಗಿದೆ. ನಾಗರಿಕರಲ್ಲಿ ನಮ್ಮ ಹಕ್ಕನ್ನು ಚಲಾಯಿಸುವ ಬಗ್ಗೆ ಅರಿವು ಮೂಡಿರುವುದು ಉತ್ತಮ ಬೆಳವಣಿಗೆಯಾಗಿದೆ.
ಎಸ್.ಎನ್.ಕ್ರಿಯಾ ಟ್ರಸ್ಟ್ ಮೂಲಕ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಉಚಿತ ಶಸ್ತ್ರ ಚಿಕಿತ್ಸೆಗಳು, ಸರ್ಕಾರದ ಸವಲತ್ತುಗಳನ್ನು ತಲುಪಿಸುವ ಕಾರ್ಯ, ಕೌಶಲ್ಯ ತರಬೇತಿ, ಮಹಿಳೆಯರಿಗೆ ಹೊಲಿಗೆ ಯಂತ್ರ ಹೀಗೆ ಹಲವಾರು ಸಾಮಾಜಿಕ ಕಾರ್ಯಗಳನ್ನು ನಡೆಸಿದ್ದು, ಅದನ್ನು ಮುಂದುವರೆಸಿಕೊಂಡು ಜನಸೇವೆ ಮಾಡುತ್ತೇನೆಂದು ಹೇಳಿದರು.
ಆನೂರು ದೇವರಾಜ್, ಅಫ್ಸರ್‌ಪಾಷ, ಹಿತ್ತಲಹಳ್ಳಿ ಕೃಷ್ಣಪ್ಪ, ಅಶ್ವತ್ಥನಾರಾಯಣರೆಡ್ಡಿ, ತುಮ್ಮನಹಳ್ಳಿ ವೆಂಕಟೇಶ್, ದಡಂಘಟ್ಟ ಕೃಷ್ಣಪ್ಪ, ಜಮೀರ್, ಮಳಮಾಚನಹಳ್ಳಿ ಬೈರೇಗೌಡ, ಗೋವಿಂದಪ್ಪ ಹಾಜರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬಾಲಭವನ ಸೊಸೈಟಿ ವತಿಯಿಂದ ಬೇಸಿಗೆ ಶಿಬಿರ
ನಗರದ ಸ್ತ್ರೀಶಕ್ತಿ ಭವನದಲ್ಲಿ ಗುರುವಾರ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬಾಲಭವನ ಸೊಸೈಟಿ ವತಿಯಿಂದ ಆಯೋಜಿಸಿದ್ದ 5 ರಿಂದ 16 ವರ್ಷದೊಳಗಿನ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಸಿಡಿಪಿಒ ಅಧಿಕಾರಿ ಲಕ್ಷ್ಮೀದೇವಮ್ಮ ಮಾತನಾಡಿದರು.
ವರ್ಷವಿಡೀ ಪಠ್ಯ, ಪುಸ್ತಕ, ಹಾಜರಾತಿ, ತರಗತಿ, ಓದು, ಮನೆಪಾಠ, ಪರೀಕ್ಷೆ, ಫಲಿತಾಂಶ… ಈ ಸರಣಿ ಪ್ರಕ್ರಿಯೆಯಲ್ಲಿ ನಲುಗಿದ ವಿದ್ಯಾರ್ಥಿಗಳಿಗೆ ಮನರಂಜನೆಯ ಜತೆ ಜೀವನಾವಶ್ಯಕ ಕೌಶಲಗಳನ್ನು, ಸೃಜನಶೀಲತೆಯನ್ನು ರೂಢಿಸುವ ನಿಟ್ಟಿನಲ್ಲಿ ‘ಬೇಸಿಗೆ ಶಿಬಿರ’ಗಳಿಗೆ ಸೇರಿಸುವುದು ಉತ್ತಮ ವಿಚಾರ ಎಂದು ಅವರು ತಿಳಿಸಿದರು.
ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳುವುದರಿಂದ ಪೋಷಕರ ಅವಲಂಬನೆ, ನಿರ್ಬಂಧಗಳಿಲ್ಲದೆ ಸ್ವಾವಲಂಬನೆ, ಸ್ವಾತಂತ್ರ್ಯದ ಬದುಕನ್ನು ಅನುಭವಿಸುತ್ತಾರೆ. ಸ್ವಯಂ, ಸ್ವಗೌರವ, ಘನತೆಯ ಪರಿಕಲ್ಪನೆಯನ್ನು ಅರಿತುಕೊಳ್ಳುತ್ತಾರೆ. ಸೃಜನಶೀಲ ಚಟುವಟಿಕೆಗಳಿಗೆ ವೇದಿಕೆ ಸಿಗುತ್ತದೆ. ಇದರಿಂದ ಅಭಿವ್ಯಕ್ತಿ ಸಾಮರ್ಥ್ಯ ವೃದ್ಧಿಸುತ್ತದೆ. ವಿವಿಧ ಚಟುವಟಿಕೆಗಳು ದೇಹದ ಉತ್ಸಾಹ, ಆರೋಗ್ಯವನ್ನು ಇಮ್ಮಡಿಸುತ್ತವೆ. ಬೇಸಿಗೆಯ ಧಗೆಯನ್ನು ಮರೆಸಿ, ಮಾನಸಿಕ ಉಲ್ಲಾಸ ನೀಡುತ್ತವೆ.ಹಲವು ಕೌಶಲಗಳ ಕಲಿಕೆಯಿಂದ ಸಾಹಸ ಪ್ರವೃತ್ತಿ ಹಾಗೂ ಮಾನಸಿಕ ಸಂತೃಪ್ತಿ ಹೆಚ್ಚುತ್ತದೆ. ಇದು ಆಸಕ್ತಿ– ಅಭಿರುಚಿಗಳ ವಿಕಾಸಕ್ಕೂ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.
ಹತ್ತು ದಿನಗಳ ಕಾಲ ನಡೆಯುವ ಈ ಬೇಸಿಗೆ ಶಿಬಿರದಲ್ಲಿ ಚಿತ್ರಕಲೆ, ಕರಕುಶಲಕಲೆ, ಜೇಡಿಮಣ್ಣಿನ ಕಲೆ, ಸಮೂಹನೃತ್ಯ, ಸಮೂಹ ಗೀತೆ, ಕರಾಟೆ, ಯೋಗ, ಕಸದಿಂದ ರಸ ಮುಂತಾದವುಗಳನ್ನು ಮಕ್ಕಳಿಗೆ ಕಲಿಸಲಾಗುವುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು ಮಾತನಾಡಿ, ಶಿಬಿರಗಳಲ್ಲಿ ಆಯೋಜಿಸುವ ಬಹುತೇಕ ಚಟುವಟಿಕೆಗಳಲ್ಲಿ ಶಿಬಿರಾರ್ಥಿಗಳಿಗೆ ಯಶಸ್ಸಿನ ಅನುಭವ ದೊರಕುತ್ತದೆ. ಇದರಿಂದ ಅವರಲ್ಲಿ ಆತ್ಮವಿಶ್ವಾಸ ವೃದ್ಧಿಸುತ್ತದೆ. ಗುಂಪಿನಲ್ಲಿ ಕೆಲಸ ಮಾಡುವುದು, ಆಟವಾಡುವುದರಿಂದ ಮಕ್ಕಳಲ್ಲಿ ಸಹಕಾರ, ಸಹಬಾಳ್ವೆ, ಸಹಯೋಗ, ಸಂಯೋಜನೆ, ಸಂಘಟನೆ, ಸಾಮುದಾಯಿಕ ಬದ್ಧತೆ, ಭಾವೈಕ್ಯ, ಸಾಮರಸ್ಯ, ನಾಯಕತ್ವ… ಇತ್ಯಾದಿ ಸಾಮಾಜಿಕ ಕೌಶಲಗಳು ವೃದ್ಧಿಸುತ್ತವೆ ಎಂದು ಹೇಳಿದರು.
ಸಿಡಿಪಿಒ ಅಧಿಕಾರಿಗಳಾದ ಸಂದೀಪ್, ಶಾಂತಾ ಜಿಂದಾಳೆ, ಗಿರಿಜಾಂಬಿಕೆ, ಅಂಬುಜಾ, ಕರಾಟೆ ಶಿಕ್ಷಕ ಅರುಣ್‌ಕುಮಾರ್, ನೃತ್ಯ ಶಿಕ್ಷಕಿ ನವ್ಯ, ಚಿತ್ರಕಲೆ ಶಿಕ್ಷಕಿ ನಳಿನ, ಸಂಗೀತ ಶಿಕ್ಷಕ ಲಕ್ಷ್ಮೀನಾರಾಯಣ, ರಾಮಮೂರ್ತಿ ಹಾಜರಿದ್ದರು.
ನಿಧನ ವಾರ್ತೆ – ಶ್ರೀ ಎನ್. ವೆಂಕಟರಮಣಪ್ಪನವರು
ಮಯೂರ ಚಿತ್ರಮಂದಿರದ ಮಾಲೀಕರಾದ ಶ್ರೀ ಎನ್. ವೆಂಕಟರಮಣಪ್ಪ (90) ಗುರುವಾರ ಮುಂಜಾನೆ 9 ಘಂಟೆ ಸಮಯದಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಓರ್ವ ಮಗ ಇಬ್ಬರು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅವರು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ಚಿಂತಾಮಣಿ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಗುರುವಾರ ಸಂಜೆ 5 ಗಂಟೆಗೆ ನಡೆಸಲಾಗುವುದು.
ಪ್ರಾಣ ಇರುವ ತನಕ ಕ್ಷೇತ್ರದ ಜನರ ಹಿಂದೆ ಇರುತ್ತೇನೆ – ಬಿ.ಎನ್.ರವಿಕುಮಾರ್
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ಮಾತನಾಡಿ ವಿಧಾನಸಭೆ ಚುನಾವಣೆಯಲ್ಲಿ ಸೋತಿರಬಹುದು, ಆದರೆ ಜೆಡಿಎಸ್ ಸೋತಿಲ್ಲ, ಜನರ ಮನಸ್ಸಿನಲ್ಲಿ ಗೆದ್ದಿದೆ. ಪಕ್ಷವನ್ನು ಸಂಘಟಿಸುವುದರಲ್ಲಿ ಮುಂದೆ ಎರಡು ಪಟ್ಟು ಶ್ರಮ ಹಾಕುತ್ತೇನೆ. ಕ್ಷೇತ್ರದಲ್ಲಿ ಎಲ್ಲಿ ಸಮಸ್ಯೆ ಕಂಡುಬಂದರೂ ಶ್ರಮಿಸುತ್ತೇನೆ. ಶಕ್ತಿ ಮೀರಿ ಜನರ ಕಷ್ಟಕ್ಕೆ ಸ್ಪಂದಿಸುತ್ತೇನೆ ಎಂದು ತಿಳಿಸಿದರು.
ಹಾಲಿ ಶಾಸಕ ಹಾಗೂ ಮಾಜಿ ಸಚಿವರನ್ನು ಎದುರಿಸಿ ನಡೆಸಿದ ಚುನಾವಣೆಯಲ್ಲಿ ಒಬ್ಬ ಸಾಮಾನ್ಯ ಜೆಡಿಎಸ್ ಕಾರ್ಯಕರ್ತನಾದ ನನಗೆ ಮತದಾರ ತಂದೆತಾಯಿಯರು 66,531 ಮತಗಳನ್ನು ನೀಡಿ ಆಶೀರ್ವದಿಸಿದ್ದಾರೆ. ಜನರ ಋಣ ದೊಡ್ಡದು. ಅವರಿಗೆ ಮಾತಿನಲ್ಲಿ ಕೃತಜ್ಞತೆಯನ್ನು ಹೇಳಿದರೆ ಸಾಲದು. ನನ್ನ ಜೀವನ ಪೂರ್ತಿ ಜನರ ಸೇವೆ ಮಾಡುತ್ತೇನೆ. ಪ್ರಾಣ ಇರುವ ತನಕ ಕ್ಷೇತ್ರದ ಜನರ ಹಿಂದೆ ಇರುತ್ತೇನೆ. ಮುಂದೆ ಬರುವ ಎಲ್ಲಾ ಚುನಾವಣೆಗಳಲ್ಲೂ ಜೆಡಿಎಸ್ ಗೆಲ್ಲಲು ಶ್ರಮಿಸುತ್ತೇನೆ ಎಂದು ಹೇಳಿದರು.
ಅಧಿಕಾರಕ್ಕಾಗಿ, ದುಡ್ಡು ಮಾಡಲಿಕ್ಕಾಗಿ ನಾನು ಚುನಾವಣೆಗೆ ನಿಲ್ಲಲಿಲ್ಲ. ಜನರಿಗೆ ಮೋಸ ತೊಂದರೆ ಆಗುವುದನ್ನು ತಪ್ಪಿಸಲು, ಕ್ಷೇತ್ರದ ಅಭಿವೃದ್ಧಿ ಮಾಡಲು, ನಿಷ್ಠಾವಂತ ಕಾರ್ಯಕರ್ತರ ಬೆನ್ನೆಲುಬಾಗಿ ನಿಲ್ಲಲು ಹಾಗೂ ಜೆಡಿಎಸ್ ಬಲಿಷ್ಠಗೊಳಿಸಲು ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಕುಮಾರಣ್ಣನ ಕೈ ಬಲಪಡಿಸಬೇಕು ಹಾಗೂ ಕುಮಾರಣ್ಣ ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮ ಆಶಯವಾಗಿತ್ತು. ಈಗಲೂ ಕುಮಾರಣ್ಣ ಮುಖ್ಯಮಂತ್ರಿ ಆಗುವ ಎಲ್ಲ ಲಕ್ಷಣಗಳೂ ಕಂಡುಬಂದಿದ್ದು ನಮಗೆಲ್ಲ ಸಂತೋಷ ತಂದಿದೆ ಎಂದರು.
ಜೆಡಿಎಸ್‌ನಿಂದ ಅಧಿಕಾರವನ್ನು ಅನುಭವಿಸಿದ್ದ ಎಂ.ರಾಜಣ್ಣನವರು ಪಕ್ಷಕ್ಕೆ, ಪಕ್ಷದ ಕಾರ್ಯಕರ್ತರಿಗೆ ಮೋಸ ಮಾಡಿ, ಕಾಂಗ್ರೆಸ್‌ನವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು ಕ್ಷೇತ್ರದಲ್ಲಿ ಜೆಡಿಎಸ್ ಸೋಲಲು ಕಾರಣವಾಯಿತು. ತಾಯಿಯಂತಹ ಪಕ್ಷಕ್ಕೆ ದ್ರೋಹ ಮಾಡಿ ಆತ್ಮಾಘಾತುಕ ಕೆಲಸ ಮಾಡಿದ್ದಕ್ಕೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಕ್ಷೇತ್ರವನ್ನು ತಮ್ಮ ಸ್ವಾರ್ಥಕ್ಕಾಗಿ ಬಲಿಕೊಟ್ಟ ಈ ಮಹಾನುಭಾವರು ಇಡೀ ರಾಜ್ಯದಲ್ಲಿ ಠೇವಣಿ ಕಳೆದುಕೊಂಡ ಹಾಲಿ ಶಾಸಕ ಎಂಬ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಎಂ.ರಾಜಣ್ಣ ಕಳೆದ ಚುನಾವಣೆಯಲ್ಲಿ ತಮ್ಮ ಮಾವ ದಿವಂಗತ ಎಸ್.ಮುನಿಶಾಮಪ್ಪರ ಫೋಟೊ ಹಿಡಿದು ಮತ ಯಾಚಿಸಿದರು. ಕಳೆದ ಹದಿನೈದು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಅವರ ತಂದೆ ತೀರಿಕೊಂಡರೆ, ಅದನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲು ಮುಂದಾದರು. ಅದು ಫಲಿಸದಿದ್ದಾಗ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಮತದಾನದ ಹಿಂದಿನ ರಾತ್ರಿ ಹೃದಯಾಘಾತ ಆಗಿದೆ ಎಂದು ಸುಳ್ಳು ವದಂತಿ ಹಬ್ಬಿಸಿ, ತಮ್ಮನ್ನು ನಂಬಿದ್ದ ಅನೇಕ ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಸಂದೇಶ ರವಾನಿಸಿದ್ದರಿಂದ ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಸೋಲು ಅನುಭವಿಸಬೇಕಾಯಿತು ಎಂದರು.
ಚುನಾವಣೆಯಲ್ಲಿ ಸೋಲು, ಗೆಲುವು ಸಹಜ, ಸೋಲನುಭವಿಸಿದಾಗ ಅಳುವುದು, ನಾಟಕ ಆಡುವುದು ಕೇವಲ ರಾಜಣ್ಣನಿಗೆ ಮಾತ್ರ ಬರುತ್ತದೆ. ಆದರೆ ನಾವು ಅಳುವುದು ನಮ್ಮ ಕಾರ್ಯಕರ್ತರು ತೊಂದರೆಯಲ್ಲಿದ್ದಾಗ ಮಾತ್ರ, ಇದೀಗ ಚುನಾವಣೆಯಲ್ಲಿ ಸೋಲನುಭವಿಸಿದ್ದೇವಾದರೂ ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷವನ್ನು ಕ್ಷೇತ್ರದಲ್ಲಿ ಮತ್ತಷ್ಟು ಸಂಘಟಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುತ್ತೇವೆ ಎಂದರು.
ಕಾಂಗ್ರೆಸ್ ಹಿರಿಯ ಮುಖಂಡ ಗುಲಾಮ್ ನಬಿ ಆಜಾದ್ ಶಿಡ್ಲಘಟ್ಟಕ್ಕೆ ಬಂದು ಜೆಡಿಎಸ್‌ಗೆ ಮತ ನೀಡಿದರೆ ಬಿಜೆಪಿಗೆ ಕೊಟ್ಟಂತೆ ಎಂದು ಅಪಪ್ರಚಾರ ಮಾಡಿ ಜನರಿಗೆ ದಿಕ್ಕುತಪ್ಪಿಸುವ ಕೆಲಸ ಮಾಡಿದ್ದರು. ಜನರಿಗೆ ತಪ್ಪು ಸಂದೇಶ ನೀಡಿದ್ದ ಅವರೇ ಈ ದಿನ ನಮ್ಮ ವರಿಷ್ಠರ ಮನೆ ಬಾಗಿಲಿನಲ್ಲಿ ನಿಂತಿರುವುದು ವಿಪರ್ಯಾಸ. ಇವರ ದ್ವಂದ್ವ ನೀತಿಯನ್ನು ಜನರು ಗಮನಿಸಬೇಕು. ಸುಳ್ಳು ಹೇಳಿ ರಾಜಕಾರಣ ಮಾಡುವರನ್ನು ನಂಬಬಾರದು, ಅವರ ಮಾತಿಗೆ ಕಿವಿಗೊಡಬಾರದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ ಬಿ.ಎನ್.ರವಿಕುಮಾರ್ ಶಾಸಕರಾಗುವುದನ್ನು ತಪ್ಪಿಸುವಲ್ಲಿ ಮಾಜಿ ಶಾಸಕ ಎಂ.ರಾಜಣ್ಣ ಗೆದ್ದಿರಬಹುದು. ಆದರೆ ಕ್ಷೇತ್ರದ ಸುಮಾರು ೬೬,೫೩೧ ಮತದಾರರ ಪ್ರೀತಿ, ವಿಶ್ವಾಸ ಗಳಿಸಿಕೊಂಡಿರುವುದನ್ನು ತಪ್ಪಿಸಲಾಗಿಲ್ಲ. ಈ ಚುನಾವಣೆಯಲ್ಲಿ ತಾವು ನಡೆದುಕೊಂಡ ರೀತಿ ನೀತಿಗಳ ಬಗ್ಗೆ ಎಂ.ರಾಜಣ್ಣ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಅಧಿಕಾರ ನೀಡಿದ ಪಕ್ಷಕ್ಕೆ ಮೋಸ ಮಾಡಿದ ನಿಮ್ಮನ್ನು ಈ ಹಿಂದೆ ಇದೇ ಮುಖಂಡರೂ, ಕಾರ್ಯಕರ್ತರು ಶಾಸಕರನ್ನಾಗಿ ಆಯ್ಕೆ ಮಾಡಿದ್ದರು. ಆದರೆ ತಮ್ಮ ನಿಷ್ಠೆ ತಮ್ಮ ವಿರೋಧಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪರ ತೋರಿಸಿದ್ದೀರಿ. ಈ ಬಗ್ಗೆ ಕ್ಷೇತ್ರದ ಜನತೆ ಮುಂದೆ ಉತ್ತರಿಸಬೇಕಾಗುತ್ತದೆ ಎಂದರು. ಇಡೀ ರಾಜ್ಯದಲ್ಲಿ ಹಾಲಿ ಶಾಸಕರೊಬ್ಬರು ಕೇವಲ ೮,೪೭೧ ಮತಗಳನ್ನು ಪಡೆಯುವ ಮೂಲಕ ನಾಲ್ಕನೇ ಸ್ಥಾನಕ್ಕಿಳಿದಿರುವುದು ನಿಮ್ಮ ವೈಯಕ್ತಿಕ ವರ್ಚಸ್ಸು ಏನು ಎಂಬುದನ್ನು ತಿಳಿಸುತ್ತದೆ ಎಂದರು.
ಕಾಂಗ್ರೆಸ್ ತಮ್ಮ ಕುತಂತ್ರದಿಂದ ಗೆದ್ದಿರಬಹುದು. ಜೆಡಿಎಸ್ ಕಾರ್ಯಕರ್ತರು ಎದೆಗುಂದಬಾರದು. ಪಕ್ಷವು ತನ್ನ ಕಾರ್ಯಕರ್ತರ ಬೆನ್ನೆಲುಬಾಗಿರುತ್ತದೆ. ಹೆಚ್ಚು ಒತ್ತು ಕೊಟ್ಟು ಪಕ್ಷವನ್ನು ಬಲಿಷ್ಠಗೊಳಿಸೋಣ. ರವಿಯಣ್ಣ ಜಾತ್ಯತೀತ ವ್ಯಕ್ತಿ. ಜೆಡಿಎಸ್ ಜಾತ್ಯತೀತ ಪಕ್ಷ. ಎಲ್ಲರನ್ನೂ ಸಮಾನವಾಗಿ ಕಾಣುವ ಪಕ್ಷದ ಹಿನ್ನೆಲೆ ನಮ್ಮದು.
ರಾಜಣ್ಣ ಅವರ ಕುತಂತ್ರದಿಂದ ಜೆಡಿಎಸ್‌ಗೆ ಸೋಲಾಯಿತು. ಜೆಡಿಎಸ್ ಕಾರ್ಯಕರ್ತರಿಗೆ ಮೋಸ ಮಾಡಿದ ಅವರು ಹೆಣ್ಣು ಕೊಟ್ಟ ಮಾವನಿಗೂ ಮೋಸ ಮಾಡಿದರು, ಅಧಿಕಾರ ಕೊಟ್ಟ ಪಕ್ಷಕ್ಕೂ ಮೋಸ ಮಾಡಿದರು ಮತ್ತು ಪಕ್ಷದ ವರಿಷ್ಠರಿಗೂ ಮೋಸ ಮಾಡಿದರು. ಅವರ ಮೋಸ ಅವರನ್ನು ತಿನ್ನದೇ ಬಿಡದು ಎಂದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಡಿ.ಬಿ.ವೆಂಕಟೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿ.ನಾಗರಾಜ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಮುಖಂಡರಾದ ತಿಮ್ಮನಾಯಕನಹಳ್ಳಿ ರಮೇಶ್, ಮುಗಲಡಿಪಿ ನಂಜಪ್ಪ, ಗಂಜಿಗುಂಟೆ ಮೂರ್ತಿ ಹಾಜರಿದ್ದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ ಸಮಾರಂಭ
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಚಲನಚಿತ್ರ ನಟ ಸೋಹನ್ ಅಭಿರಾಮ್ ಮಾತನಾಡಿದರು.
ವಿದ್ಯೆ ಎಂಬುದಕ್ಕೆ ಪರಿಮಿತಿಯಿಲ್ಲ. ಸಾಗರದ ಆಳ, ಮುಗಿಲಿನ ವಿಸ್ತಾರವನ್ನು ಸರಿಗಟ್ಟಲಾಗದು. ವಿದ್ಯೆಗೆ ವಿನಯವೇ ಭೂಷಣ. ಕಲಿಕೆಯಿಂದ ಮಾನವನ ಸರ್ವಾಂಗೀಣ ಅಭಿವೃದ್ಧಿಯಾಗುತ್ತದೆ. ಕಲಿಯುವುದು ಎಂದರೆ ಸುಮ್ಮನೆ ಓದುವುದಲ್ಲ, ಬರೆಯುವುದಲ್ಲ. ಆದರೆ ಕಾರ್ಯರೂಪದಲ್ಲಿ ಅದನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ವಿದ್ಯಾರ್ಥಿಯೊಬ್ಬ ತಾನು ಕಲಿತ ವಿದ್ಯೆಯ ಬೆಳಕಿನಲ್ಲಿ ತನ್ನ ಜೀವನವನ್ನು ಎಷ್ಟರ ಮಟ್ಟಿಗೆ ಎದ್ದುನಿಲ್ಲಿಸಿಕೊಂಡಿದ್ದಾನೆಂಬುದೇ ಆ ವಿದ್ಯೆಯ ನಿಜವಾದ ಬಾಳಿಕೆಗೆ ಮಾನದಂಡವಾಗುವಂಥದ್ದು. ಅನ್ನದ ವೈಜ ಅರ್ಥ ಇರುವುದು ಅದರ ರೂಪದಲ್ಲಿ ಅಲ್ಲ, ಅದು ನಮ್ಮಲ್ಲಿ ರಕ್ತವಾಗಿ ಎಷ್ಟು ಶಕ್ತಿಯನ್ನು ಒದಗಿಸಬಹುದು ಎಂಬುದರಲ್ಲಿಯೇ ಅದರ ಸಾರ್ಥಕತೆ ಸಿದ್ಧವಾಗುವುದು. ಅಂತೆಯೇ ವಿದ್ಯೆಯ ಬೆಳಕು ನಮ್ಮ ಅಂತರಂಗದ ಕತ್ತಲೆಯನ್ನು ಕಳೆಯಬೇಕು, ಜೀವನಯಾನಕ್ಕೆ ಕಸುವನ್ನೂ ಕಣ್ಣೋಟವನ್ನೂ ನೀಡಬೇಕು.
ಪ್ರತಿಯೊಬ್ಬರೂ ಸಮಾಜಕ್ಕೆ ಋಣಿಗಳಾಗಿರುತ್ತೇವೆ. ನಮ್ಮನ್ನು ಬೆಳೆಸಿದ ಸಮಾಜಕ್ಕೆ ನಮ್ಮ ಕೊಡೆಗೆಯೇನು ಎಂಬುದನ್ನು ಪ್ರತಿಯೊಬ್ಬರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಹುಟ್ಟಿದ ಊರಿಗೆ, ವಿದ್ಯೆ ಕಲಿಸಿದ ಶಾಲಾ ಕಾಲೇಜಿಗೆ ನಾವು ಕಿಂಚಿತ್ತಾದರೂ ಕೊಡುಗೆಯನ್ನು ಕೊಡುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಚಂದ್ರಾನಾಯಕ್, ಚಲನಚಿತ್ರ ನಟಿ ರೂಪಿಕಾ, ಚಿತ್ರ ನಿರ್ಮಾಪಕ ನಾರಾಯಣಸ್ವಾಮಿ, ನಿವೃತ್ತ ಪ್ರಾಂಶುಪಾಲ ಎಂ.ನಾರಾಯಣಸ್ವಾಮಿ, ಪ್ರಾಧ್ಯಾಪಕ ಡಾ.ವಿ.ವೆಂಕಟೇಶ್ ಹಾಜರಿದ್ದರು.

