Home Blog Page 374

ಆರನೇ ಬಾರಿ ಶಾಸಕರಾದ ವಿ.ಮುನಿಯಪ್ಪ

0

ಮೇ 12 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿ.ಮುನಿಯಪ್ಪ 9,709 ಮತಗಳ ಅಂತರದಿಂದ ವಿಜೇತರಾಗಿ ಶಿಡ್ಲಘಟ್ಟ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಗೆಲುವೂ ಸೇರಿದಂತೆ ವಿ.ಮುನಿಯಪ್ಪ ಆರು ಬಾರಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್‌ನ ವಿ.ಮುನಿಯಪ್ಪ (76,240), ಜೆಡಿಎಸ್‌ನ ಬಿ.ಎನ್‌.ರವಿಕುಮಾರ್‌ (66,531), ಪಕ್ಷೇತರ ಅಭ್ಯರ್ಥಿ ಆಂಜಿನಪ್ಪ ಪುಟ್ಟು (10,986), ಪಕ್ಷೇತರ ಅಭ್ಯರ್ಥಿ ಎಂ.ರಾಜಣ್ಣ (8,593), ಬಿಜೆಪಿಯ ಎಚ್‌.ಸುರೇಶ್‌ (3,596) ಮತಗಳನ್ನು ಪಡೆದಿದ್ದಾರೆ.
ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಹಂಡಿಗನಾಳಕ್ಕೆ ತೆರಳಿ ವಿ.ಮುನಿಯಪ್ಪ ಅವರನ್ನು ಅಭಿನಂದಿಸಿದರು. ವಿಜೇತರಾದ ವಿ.ಮುನಿಯಪ್ಪ ಅವರನ್ನು ತೆರೆದ ಜೀಪಿನಲ್ಲಿ ಅವರ ಸ್ವಗ್ರಾಮ ಹಂಡಿಗನಾಳದಿಂದ ಮೆರವಣಿಗೆಯಲ್ಲಿ ಕಾರ್ಯಕರ್ತರು ಕರೆದುಕೊಂಡು ಬಂದರು.

ಮನೆಗಳಿಗೆ ನುಗ್ಗಿದ ಯುಜಿಡಿ ನೀರು, ಆಕ್ರೋಶಗೊಂಡ ಸಾರ್ವಜನಿಕರು

0

ನಗರದಲ್ಲಿ ಭಾನುವಾರ ರಾತ್ರಿ ಬಿದ್ದ ಮಳೆಯಿಂದ ನಗರದ ಮಯೂರ ವೃತ್ತದಲ್ಲಿ ಯು.ಜಿ.ಡಿ ನೀರು ಮನೆಗಳಿಗೆ ನುಗ್ಗಿದ ಕಾರಣ ಆಕ್ರೋಷಗೊಂಡ ಸಾರ್ವಜನಿಕರು ಸೋಮವಾರ ಬೆಳಿಗ್ಗೆ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ನಗರದಲ್ಲಿ ಎಲ್ಲಾ ವಾರ್ಡ್‌ಗಳಲ್ಲಿ ಯು.ಜಿ.ಡಿ ಅಳವಡಿಸಲಾಗಿದ್ದು, ತ್ಯಾಜ್ಯ ನೀರು ಕೆರೆಗಳಿಗೆ ಹರಿದು ಹೋಗಲು ಮಯೂರ ವೃತ್ತದ ಮೂಲಕ ಪೈಪ್ ಲೈನ್ ಹಾಕಲಾಗಿದೆ. ಹೆದ್ದಾರಿ ರಸ್ತೆ ನಿರ್ಮಾಣ ಕಾಮಗಾರಿಯಿಂದಾಗಿ ಯುಜಿಡಿ ಮುಚ್ಚಿಹೋಗಿದ್ದು ಹಾಗಾಗಿ ರಾತ್ರಿ ಬಿದ್ದ ಮಳೆಯಿಂದ ಯು.ಜಿ.ಡಿ ನೀರು ಮನೆಗಳಿಗೆ ನುಗ್ಗಿದೆ. ಜನರು ನಗರಸಭಾ ಅಧಿಕಾರಿಗಳ ಮೇಲೆ ಶಾಪ ಹಾಕಿದರು.
ಸುಮಾರು ೧೫ ದಿನಗಳ ಹಿಂದೆಯೇ ನಗರಸಭೆಗೆ ದೂರು ನೀಡಲಾಗಿದ್ದರೂ ಅಧಿಕಾರಿಗಳು ಚುನಾವಣೆಯ ನೆಪ ಹೇಳಿ ಯು.ಜಿ.ಡಿ ಸ್ವಚ್ಚ ಮಾಡದೇ ಇರುವುದರಿಂದ ಬಿದ್ದ ನೀರು ಹರಿದುಹೋಗಲು ಸ್ಥಳವಿಲ್ಲದೆ ಯು.ಜಿ.ಡಿ ನೀರು ಮನೆಗಳಿಗೆ ನುಗ್ಗಿ ದುರ್ನಾತ ಬೀರುತ್ತಿದೆ. ರಾತ್ರಿಯೆಲ್ಲಾ ಜನರು ಕಷ್ಟ ಪಡುವಂತಾಗಿದ್ದು, ಕೂಡಲೇ ಅಧಿಕಾರಿಗಳು ಯು.ಜಿ.ಡಿ ಸ್ಚಚ್ಚಗೊಳಿಸಬೇಕು ಎಂದು ಒತ್ತಾಯಿಸಿದರು.
‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರಸ್ತೆ ಹಾಕುವಾಗ ಆಗುವ ತೊಂದರೆಗಳನ್ನು ನಿವಾರಿಸಲು ಸುಮಾರು ೭೪ ಲಕ್ಷ ಹಣ ನೀಡಿದ್ದಾರೆ. ಅಧಿಕಾರಿಗಳು ಯಾವುದೇ ಕೆಲಸ ಮಾಡಿಲ್ಲ. ಕೂಡಲೇ ಕ್ರಮ ಕೈಕೊಳ್ಳಬೇಕು’ ಎಂದು ಸ್ಥಳೀಯ ರಾಜ್‌ಕುಮಾರ್‌ ಒತ್ತಾಯಿಸಿದರು.
ಸಾರ್ವಜನಿಕರು ಪ್ರತಿಭಟನೆ ಮುಂದುವರೆಸಿದಾಗ ಸ್ಥಳಕ್ಕೆ ಆಗಮಿಸಿದ ನಗರ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ನವೀನ್ ಸಾರ್ವಜನಿರೊಂದಿಗೆ ಮಾತನಾಡಿದರು. ನಂತರ ಅವರು ನಗರಸಭಾ ಆಯುಕ್ತ ಅವರೊಂದಿಗೆ ಮಾತನಾಡಿ ಯು.ಜಿ.ಡಿ ಸ್ವಚ್ಚಗೊಳಿಸುವಂತೆ ತಿಳಿಸಿ ಜನರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದರು.

ಅಸ್ವಸ್ಥಗೊಂಡ ಶಾಸಕ ಎಂ.ರಾಜಣ್ಣ

0

ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶಾಸಕ ಎಂ.ರಾಜಣ್ಣ ಚುನಾವಣೆಯ ಹಿಂದಿನ ರಾತ್ರಿ ಅಸ್ವಸ್ಥಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾದರು.
ಚುನಾವಣೆಯ ಮತಯಾಚನೆಗಾಗಿ ಬಿಸಿಲಲ್ಲಿ ಸುತ್ತಾಡಿದ್ದ ಆಯಾಸ, ಒತ್ತಡದಿಂದ ಬಳಲುತ್ತಿದ್ದ ಅವರು ರಕ್ತದೊತ್ತಡ ಹಾಗೂ ಮಧುಮೇಹದ ಖಾಯಿಲೆ ಉಲ್ಭಣಗೊಂಡ ಕಾರಣ ಮನೆಯಲ್ಲಿ ಅಸ್ವಸ್ಥರಾದರು. ತಕ್ಷಣ ಅವರನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರಾತ್ರಿ ಒಂದು ಗಂಟೆಯಲ್ಲಿ ಕರೆದೊಯ್ಯಲಾಯಿತು.
ಚಿಕಿತ್ಸೆ ನೀಡಿದ್ದ ಡಾ.ವಾಣಿ ಮಾತನಾಡಿ, ‘ಅವರಿಗೆ ಜ್ವರವಿತ್ತು. ಸಕ್ಕರೆ ಖಾಯಿಲೆ ಮತ್ತು ಬಿ.ಪಿ ಹೆಚ್ಚಾಗಿ ಸುಸ್ತಾಗಿದ್ದರು. ಅದಕ್ಕಾಗಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ತುರ್ತು ನಿಗಾ ಘಟಕದಲ್ಲಿ ಇರಿಸಿದ್ದೇವೆ. ಈಗ ಚೇತರಿಸಿಕೊಂಡಿದ್ದಾರೆ. ಮಧ್ಯಾಹ್ನದ ನಂತರ ಅಗತ್ಯವಿದ್ದಲ್ಲಿ ಮೇಲ್ದರ್ಜೆಯ ಆಸ್ಪತ್ರೆಗೆ ಕಳಿಸಲಾಗುವುದು. ಅವರಿಗೆ ವಿಶ್ರಾಂತಿಯ ಅವಶ್ಯಕತೆಯಿದೆ’ ಎಂದು ತಿಳಿಸಿದರು.
ಹಾಲಿ ಶಾಸಕ ಅಸ್ವಸ್ಥರಾಗಿರುವುದು ತಾಲ್ಲೂಕಿನಾದ್ಯಂತ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿತ್ತು. ಜೆಡಿಎಸ್‌ ಪಕ್ಷದಿಂದ ಬಿಫಾರಂ ಸಿಗದೆ ಪಕ್ಷೇತರರಾಗಿ ಆಟೋ ಗುರ್ತಿನೊಂದಿಗೆ ಸ್ಪರ್ಧಿಸಿದ್ದ ಎಂ.ರಾಜಣ್ಣ ಅವರ ಬೆಂಬಲಿಗರು ರಾತ್ರಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷದೊಡನೆ ಸೇರಿಕೊಂಡ ಹಿನ್ನೆಲೆಯಿಂದ ಅಸ್ವಸ್ಥರಾದರು ಎಂಬ ವದಂತಿಯು ಸಾರ್ವಜನಿಕರ ನಡುವೆ ಹರಿದಾಡುತ್ತಿತ್ತು.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಶೇ. 85.45 ಮತದಾನ ದಾಖಲು

0

ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದಾದ್ಯಂತ ಶನಿವಾರ ಚುನಾವಣೆ ಭಾಗಶಃ ಶಾಂತವಾಗಿ ನಡೆದಿದೆ. ತಾಲ್ಲೂಕು ಸೇರಿದಂತೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಶೇ. 85.45 ಮತದಾನ ದಾಖಲಾಗಿದೆ.
ಮುಂಜಾನೆಯಿಂದಲೂ ನಗರದ ಮುಖ್ಯ ರಸ್ತೆಗಳಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಗ್ರಾಮೀಣ ಪ್ರದೇಶದ ಜನತೆ ನಗರಕ್ಕೆ ಬಾರದೇ ಇದ್ದುದರಿಂದ ನಗರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.
ಚುನಾವಣೆಯ ದಿನ ಬೆಳಿಗ್ಗೆ ಏಳು ಗಂಟೆಗೆ ಮತದಾನದ ಪ್ರಕ್ರಿಯೆ ಪ್ರಾರಂಭವಾಯಿತು. ಕ್ಷೇತ್ರದ ಒಂದೆರಡು ಕಡೆ ಮತಯಂತ್ರಗಳಲ್ಲಿ ದೋಷ ಕಂಡು ಬಂದಿತ್ತಾದರೂ ಅಧಿಕಾರಿಗಳು ಪರಿಶೀಲನೆ ನಡೆಸಿ ಬೇರೆ ಯಂತ್ರಗಳನ್ನು ಅಳವಡಿಸುವ ಮೂಲಕ ಗೊಂದಲ ನಿವಾರಿಸಿದರು.
ಕೆಲವೆಡೆ ಮತದಾನ ಪ್ರಕ್ರಿಯೆ ಶುರುವಾಗುತ್ತಿದ್ದಂತೆ ಜನರು ಬೆಳಿಗ್ಗೆಯೇ ಉತ್ಸಾಹ ಭರಿತರಾಗಿ ಬೇಗ ಬಂದು ಸರತಿಸಾಲುಗಳಲ್ಲಿ ನಿಂತು ಮತದಾನ ಮಾಡಿದರೆ, ಕೆಲವೆಡೆ ಮಧ್ಯಾಹ್ನದ ವರೆಗೂ ಜನರು ಬರುವುದು ಕಡಿಮೆಯಾಗಿತ್ತು.
ಕಾಂಗ್ರೆಸ್ ಅಭ್ಯರ್ಥಿ ವಿ.ಮುನಿಯಪ್ಪ ಸ್ವಗ್ರಾಮ ಹಂಡಿಗನಾಳ ಗ್ರಾಮದಲ್ಲಿ ಮತಚಲಾಯಿಸಿದರೆ, ಜೆಡಿಎಸ್ ಅಭ್ಯರ್ಥಿ ಬಿ.ಎನ್.ರವಿಕುಮಾರ್ ಸ್ವಗ್ರಾಮ ಮೇಲೂರಿನಲ್ಲಿ ಮತಚಲಾಯಿಸಿದರು. ಬಿಜೆಪಿ ಅಭ್ಯರ್ಥಿ ಎಚ್.ಸುರೇಶ್ ಜೆ ವೆಂಕಟಾಪುರದಲ್ಲಿ ತಮ್ಮ ಮತಚಲಾಯಿಸಿದರೆ, ಪಕ್ಷೇತರ ಅಭ್ಯರ್ಥಿ ಎಂ.ರಾಜಣ್ಣ ತಮ್ಮ ಸ್ವಗ್ರಾಮ ಎಲ್ ಮುತ್ತುಕದಹಳ್ಳಿಯಲ್ಲಿ ಮತ ಚಲಾಯಿಸಿದರು.
ತಾಲ್ಲೂಕಿನ ಗೆಜ್ಜಿಗಾನಹಳ್ಳಿ ಮತ್ತು ಬಚ್ಚಹಳ್ಳಿಯಲ್ಲಿ ಗುಂಪು ಘರ್ಷಣೆ ನಡೆದರೂ ಸಕಾಲದಲ್ಲಿ ಪೊಲೀಸರ ಮಧ್ಯಪ್ರವೇಶದಿಂದ ಎಲ್ಲವೂ ತಿಳಿಯಾಯಿತು.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 237 ಮತಗಟ್ಟೆಗಳು, 71 ಸೂಕ್ಷ್ಮ, 31 ಅತಿಸೂಕ್ಷ್ಮ

0

ಮೇ ೧೨ ರಂದು ನಡೆಯುವ ವಿಧಾನಸಭಾ ಚುನಾವಣೆಗೆ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿರುವುದಾಗಿ ಚುನಾವಣಾಧಿಕಾರಿ ಮಲ್ಲಿಕಾರ್ಜುನ್ ತಿಳಿಸಿದರು.
ನಗರದ ಜೂನಿಯರ್ ಕಾಲೇಜ್ ಆವರಣದಲ್ಲಿ ಶುಕ್ರವಾರ ಚುನಾವಣಾ ಮತಟ್ಟೆಗಳಿಗೆ ಚುನಾವಣಾ ಯಂತ್ರ ಸೇರಿದಂತೆ ಸಲಕರಣೆಗಳನ್ನು ಅಧಿಕಾರಿಗಳಿಗೆ ವಿತರಣೆ ಮಾಡಿ ಅವರು ಮಾತನಾಡಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೨೩೭ ಮತಗಟ್ಟೆಗಳು ಇದ್ದು, ಸೂಕ್ಷ್ಮ ೭೧, ೩೧ ಅತಿಸೂಕ್ಷ್ಮ, ಸಾಮಾನ್ಯ ೧೩೫, ಸಮಸ್ಯಾತ್ಮಕ ಮತಗಟ್ಟೆಗಳು ೮೫ ಎಂದು ವಿಂಗಡನೆ ಮಾಡಲಾಗಿದೆ. ಒಂದೊಂದು ಮತಗಟ್ಟೆಗೆ ೫ ಮಂದಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದ್ದು, ಸಿಬ್ಬಂದಿಗೆ ಅಗತ್ಯವಾಗಿರುವ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ತಾಲ್ಲೂಕಿನ ೨೩೭ ಮತಗಟ್ಟೆಗಳಿಗೆ ಇ.ವಿ.ಎಂ, ಸಲಕರಣೆಗಳ ಜೊತೆ ಚುನಾವಣಾ ಸಿಬ್ಬಂದಿಯನ್ನು ಚುನಾವಣಾ ಮತಗಟ್ಟೆಗಳಿಗೆ ಬಿಡುವುದು ಹಾಗೂ ಚುನಾವಣೆ ನಂತರ ಕರೆತರುವುದಕ್ಕೆ ೩೬ ಬಸ್ಸುಗಳು ಆಯೋಜನೆ ಮಾಡಲಾಗಿದ್ದು, ಚುನಾವಣಾ ಸಮಯದಲ್ಲಿ ಅದಿಕಾರಿಗಳು ಬೂತ್‌ಗಳಿಗೆ ಓಡಾಡಲು ೬ ಜೀಪುಗಳ ನೀಡಲಾಗಿದೆ ಎಂದು ತಿಳಿಸಿದರು.
ಒಟ್ಟು ೨೩೭ ಮತಗಟ್ಟೆಗಳಿಗೆ ೧೪೦೪ ಚುನಾವಣಾ ಸಿಬ್ಬಂದಿ, ೨೩೭ ಪೋಲಿಸ್ ಸಿಬ್ಬಂದಿ, ಹೋಮ್ ಗಾರ್ಡ್, ಪ್ಯಾರಾಮಿಲಿಟರಿ ಪಡೆಯನ್ನು ನೇಮಕ ಮಾಡಲಾಗಿದ್ದು, ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಸಿದ್ದ ಎಂದು ತಿಳಿಸಿದರು.
ಮತದಾನ ಬೆಳಗ್ಗೆ ೭ ಗಂಟೆಯಿಂದ ಸಂಜೆ ೬ ಗಂಟೆಯವರೆಗೂ ನಡೆಯಲಿದ್ದು, ಮತದಾನ ಮಾಡಲು ಮತದಾರರು ತಮ್ಮ ಬಳಿರುವ ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಸೇರಿದಂತೆ ೧೦ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಕೊಡಬಹುದು ಎಂದು ತಿಳಿಸಿದರು.
ಚುನಾವಣೆ ಮುಕ್ತಾಯವಾಗುವುದು ವಿಳಂಬವಾಗುವುದರಿಂದ ಚುನಾವಣಾ ಕಾರ್ಯಕ್ಕೆ ತೆರಳುವ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ವಸ್ಥಳಗಳಿಗೆ ತಲುಪಿಸಲು ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಬಹಿರಂಗ ಪ್ರಚಾರ ಮೇ 10 ರ ಸಂಜೆ 6 ಗಂಟೆಗೆ ಮುಕ್ತಾಯ

0

ಮೇ ೧೨ ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಸೇರಿದಂತೆ ಚುನಾವಣೆ ಬಹಿರಂಗ ಪ್ರಚಾರ ಮೇ ೧೦ ರ ಸಂಜೆ ೬ ಗಂಟೆಗೆ ಕೊನೆಗೊಳ್ಳಲಿದೆ ಎಂದು ಚುನಾವಣಾಧಿಕಾರಿ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ನಗರದ ತಾಲ್ಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.
ಹೊರಗಿನ ಕ್ಷೇತ್ರಗಳಿಂದ ಬಂದಿರುವ ಯಾರೂ ೬ ಗಂಟೆಯ ನಂತರ ಕ್ಷೇತ್ರದಲ್ಲಿ ಇರುವಂತಿಲ್ಲ. ಯಾರಿಗೆ ಮತ ಹಾಕಿದ್ದೇವೆ ಎನ್ನುವ ಕುರಿತು ಮಾದ್ಯಮಗಳ ಮೂಲಕ ಬಹಿರಂಗ ಪಡಿಸುವಂತಿಲ್ಲ.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೨೩೭ ಮತಗಟ್ಟೆಗಳು, ೩೧ ಅತಿಸೂಕ್ಷ್ಮ ಮತಗಟ್ಟೆಗಳು, ಸೂಕ್ಷ್ಮ ೭೧, ಸಾಮಾನ್ಯ ೧೩೫, ಸಮಸ್ಯಾತ್ಮಕ ಮತಗಟ್ಟೆಗಳು ೮೫ ಎಂದು ವಿಂಗಡಣೆ ಮಾಡಲಾಗಿದೆ. ಎಲ್ಲಾ ಮತಗಟ್ಟೆಗಳಿಗೆ ಅಗತ್ಯವಾಗಿರುವ ಮೂಲಸೌಕರ್ಯಗಳನ್ನು ಒದಗಿಸಲಾಗಿದ್ದು, ಒಂದೊಂದು ಮತಗಟ್ಟೆಗೆ ೫ ಮಂದಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.
ಅತಿಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಭದ್ರತೆಯ ಜೊತೆಗೆ, ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿಯೊಂದು ಮತಗಟ್ಟೆಯ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ.
ಬಹಿರಂಗ ಪ್ರಚಾರಕ್ಕೆ ತೆರೆಬಿದ್ದ ನಂತರ ೧೫ ಮಂದಿಯ ತಂಡದೊಂದಿಗೆ ತೆರಳಿ ಮನೆ ಮನೆಗೆ ಪ್ರಚಾರ ಮಾಡಬಹುದು, ಧ್ವನಿವರ್ಧಕ ಬಳಕೆ ಮಾಡುವಂತಿಲ್ಲ, ಯಾವುದೇ ಬಂಟಿಂಗ್ಸ್ ಬ್ಯಾನರ್, ಕರಪತ್ರಗಳನ್ನು ಹಿಡಿದುಕೊಂಡು ಹೋಗುವಂತಿಲ್ಲ, ೧೦೦ ಮೀಟರ್ ವರೆಗೂ ನಿಷೇಧಿತ ಪ್ರದೇಶವಾಗಿರುತ್ತದೆ. ಅಭ್ಯರ್ಥಿಗಳು ೨೦೦ ಮೀಟರ್ ಹೊರಗೆ ಇರಬೇಕಾಗುತ್ತದೆ. ನಿಷೇಧಿತ ಪ್ರದೇಶದಲ್ಲಿ ಮತಯಾಚನೆ ಮಾಡುವಂತಿಲ್ಲ, ಅಭ್ಯರ್ಥಿಯ ಭಾವಚಿತ್ರ ಪ್ರದರ್ಶನ ಮಾಡುವಂತಿಲ್ಲ. ಬಹಿರಂಗ ಪ್ರಚಾರಕ್ಕೆ ತೆರೆಬಿದ್ದ ನಂತರ ಒಬ್ಬ ಅಭ್ಯರ್ಥಿಗೆ ಸಂಬಂಧಿಸಿದಂತೆ ಮೂರು ವಾಹನಗಳಿಗೆ ಮಾತ್ರ ಅವಕಾಶವಿರುತ್ತದೆ. ಪಕ್ಷದ ಬ್ಯಾನರ್, ಬಾವುಟ, ಸ್ಟಿಕ್ಕರ್ ಕಟ್ಟುವಂತಿಲ್ಲ, ಹೆಚ್ಚಿನ ವಾಹನಗಳು ಸಂಚರಿಸುವಂತಿಲ್ಲ, ಒಂದು ವೇಳೆ ನಿಯಮ ಉಲ್ಲಂಘನೆಯಾದರೆ ಅಂತಹವರ ಮೇಲೆ ಪ್ರಕರಣ ದಾಖಲಾಗುತ್ತದೆ.
ದಿನಪತ್ರಿಕೆಗಳು, ಸುದ್ದಿವಾಹಿನಿಗಳಲ್ಲಿ ಪ್ರಚಾರ ಮಾಡಬೇಕಾದರೂ ಕಡ್ಡಾಯವಾಗಿ ಅನುಮತಿ ಪಡೆಯಬೇಕು, ಅದಕ್ಕೆ ತಗಲುವ ವೆಚ್ಚದ ಕುರಿತು ಲೆಕ್ಕ ನೀಡಬೇಕಾಗುತ್ತದೆ. ಮತದಾರರಿಗೆ ಆಮಿಷಗಳನ್ನೊಡ್ಡುವುದು, ಉಡುಗೊರೆಗಳನ್ನು ಕೊಡುವುದು ನಿಷೇಧ ಮಾಡಲಾಗಿದೆ. ಹಣ ಹಂಚಿಕೆ ಮಾಡುವುದು ಕಂಡು ಬಂದರೆ ಅಂತಹವರ ಮೇಲೆ ದೂರು ದಾಖಲಾಗುತ್ತದೆ.
ಕ್ಷೇತ್ರದಲ್ಲಿ ಚಿಲಕಲನೇರ್ಪು ಸೇರಿದಂತೆ ಒಟ್ಟು ೧,೯೮,೨೦೦ ಮತದಾರರಿದ್ದಾರೆ. ಪುರುಷರು ೯೯,೮೨೯, ಮಹಿಳಾ ಮತದಾರರು ೯೮,೩೬1, ಇತರೆ ೧೦ ಮಂದಿ ಇದ್ದಾರೆ.
ಕ್ಷೇತ್ರದ ಆರು ಕಡೆಗಳಲ್ಲಿ ಮಹಿಳೆಯರಿಗಾಗಿ ಪಿಂಕ್ ಬೂತ್‌ಗಳನ್ನು ತೆರೆಯಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಗರದ ಸರ್ಕಾರಿ ಶಾಲೆ ಎ.ಕೆ.ಕಾಲೋನಿಯಲ್ಲಿ ಎರಡು, ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪ್ರೌಢಶಾಲೆ ಉಲ್ಲೂರು ಪೇಟೆ, ವಾಸವಿ ಪ್ರೌಢಶಾಲೆ, ಹರಳಹಳ್ಳಿಯಲ್ಲಿ ಮತಗಟ್ಟೆ ಇರುತ್ತದೆ. ಎಲ್ಲರೂ ಮಹಿಳಾ ಸಿಬ್ಬಂದಿ ಇರುತ್ತಾರೆ.
ಮತದಾನ ಬೆಳಗ್ಗೆ ೭ ಗಂಟೆಯಿಂದ ಸಂಜೆ ೬ ಗಂಟೆಯವರೆಗೂ ನಡೆಯುತ್ತದೆ. ಮತದಾನ ಮಾಡಲು ಮತದಾರರು ತಮ್ಮ ಬಳಿರುವ ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಸೇರಿದಂತೆ ೧೦ ದಾಖಲೆಗಳಲ್ಲಿ ಒಂದನ್ನು ಕೊಡಬಹುದು ಎಂದರು.
ಚುನಾವಣೆ ಮುಕ್ತಾಯವಾಗುವುದು ವಿಳಂಬವಾಗುವುದರಿಂದ ಚುನಾವಣಾ ಕಾರ್ಯಕ್ಕೆ ತೆರಳುವ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ವಸ್ಥಳಗಳಿಗೆ ಹೊರಡುವಂತಹ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಯೋಗ್ಯನಿಗೆ ಬಿಫಾರಂ ನೀಡಿದ್ದೇನೆ, ಬೆಂಬಲಿಸಿ – ಎಚ್‌.ಡಿ.ದೇವೇಗೌಡ

0

ರವಿಯಂತಹ ಯೋಗ್ಯ ಹುಡುಗನನ್ನು ನಿಮ್ಮ ಕ್ಷೇತ್ರಕ್ಕೆ ಕೊಟ್ಟಿದ್ದೇನೆ. ಇವನು ನಿಮ್ಮ ಮಗ. ನೀವೇ ಮುಂದೆ ನಿಂತು ರವಿಯನ್ನು ಗೆಲ್ಲಿಸಬೇಕು ಎಂದು ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್‌.ಡಿ.ದೇವೇಗೌಡ ತಿಳಿಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯ ಬಾಷುಸಾಬ್‌ ದರ್ಗಾ ಬಳಿ ಮಂಗಳವಾರ ನಡೆಸಿದ ಜೆಡಿಎಸ್‌ ಸಮಾವೇಶದಲ್ಲಿ ಜನರನ್ನುದ್ದೇಶಿಸಿ ಅವರು ಮಾತನಾಡಿದರು.
ಈ ಬೃಹತ್‌ ಸಮಾವೇಶದಲ್ಲಿ ಇಷ್ಟೊಂದು ಜನರನ್ನು ನೋಡಿ ನನಗೆ ಸಂತೋಷವಾಗುತ್ತಿದೆ. ನನ್ನ ಮನಸ್ಸಿಗೆ ಸಮಾಧಾನವಿದೆ. ನಮ್ಮೆಲ್ಲಾ ಮುಖಂಡರಿಗೆ ಕೊಟ್ಟಿದ್ದ ಮಾತನ್ನು ನೆರವೇರಿಸಿದ್ದೇನೆ. ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸಿರುವ ರವಿಯನ್ನು ನೀವು ಗೆಲ್ಲಿಸಿಕೊಡಬೇಕು. ಎದುರಾಳಿಗಳು ಡಿಪಾಸಿಟ್‌ ಕಳೆದುಕೊಳ್ಳುವಂತೆ ನೀವು ರವಿಯನ್ನು ಬೆಂಬಲಿಸಿ ಎಂದು ಹೇಳಿದರು.
ಈ ಬೃಹತ್‌ ಸಮಾವೇಶದಲ್ಲಿ ಇಷ್ಟೊಂದು ಜನರನ್ನು ನೋಡಿ ನನಗೆ ಸಂತೋಷವಾಗುತ್ತಿದೆ. ನನ್ನ ಮನಸ್ಸಿಗೆ ಸಮಾಧಾನವಿದೆ. ನಮ್ಮೆಲ್ಲಾ ಮುಖಂಡರಿಗೆ ಕೊಟ್ಟಿದ್ದ ಮಾತನ್ನು ನೆರವೇರಿಸಿದ್ದೇನೆ. ರವಿಯಂತಹ ಯೋಗ್ಯ ಹುಡುಗನನ್ನು ನಿಮ್ಮ ಕ್ಷೇತ್ರಕ್ಕೆ ಕೊಟ್ಟಿದ್ದೇನೆ. ಇವನು ನಿಮ್ಮ ಮಗ. ನೀವೇ ಮುಂದೆ ನಿಂತು ರವಿಯನ್ನು ಗೆಲ್ಲಿಸಬೇಕು. ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸಿರುವ ರವಿಯನ್ನು ನೀವು ಗೆಲ್ಲಿಸಿಕೊಡಬೇಕು. ಎದುರಾಳಿಗಳು ಡಿಪಾಸಿಟ್‌ ಕಳೆದುಕೊಳ್ಳುವಂತೆ ನೀವು ರವಿಯನ್ನು ಬೆಂಬಲಿಸಿ ಎಂದರು.
ನನ್ನ ಜೀವಮಾನದಲ್ಲಿ ಯಾರಿಗೂ ಮೋಸ ಮಾಡಿಲ್ಲ. ಕಾಂಗ್ರೆಸ್ಸಿನ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಅವರು ಮುಸ್ಲಿಂ ಸಮುದಾಯದ ಮತಗಳನ್ನು ಗಳಿಸಲು ಕುತಂತ್ರ ರೂಪಿಸಿದ್ದಾರೆ. ಈಚೆಗೆ ನಗರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳುವರೆಂದು ತಿಳಿಸಿದ್ದಾರೆ. ಅದು ಸುಳ್ಳು. ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ, ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುತ್ತೇವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಕಾರಣರಾಗಿ ಎಂದು ನುಡಿದರು.
ರೈತಪರ ಚಿಂತನೆ, ಶಾಶ್ವತ ನೀರಾವರಿಗಾಗಿ ನಮ್ಮ ಪಕ್ಷದ ತುಡಿತವಿದೆ. ಅವಿಭಾಜ್ಯ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದಂತೆ ಬಯಲುಸೀಮೆಗೆ ನೀರಿನ ಬವಣೆಯ ಬಗ್ಗೆ ಸ್ಪಷ್ಟವಾದ ಅರಿವಿದೆ. ಶಾಶ್ವತ ನೀರು ತರುವುದೇ ನಮ್ಮ ಮೊದಲ ಆದ್ಯತೆ. ಲಿಂಗಾಯಿತರ ನಡುವೆ ಬಿರುಕನ್ನು ತಂದ ಸಿದ್ದರಾಮಯ್ಯನ ಕಾಂಗ್ರೆಸ್‌ ಹಾಗೂ ಒಳಜಗಳದ ಬಿಜೆಪಿಯಲ್ಲಿ ಹಲವಾರು ಗೊಂದಲಗಳಿವೆ ಎಂದರು
ಹಾಲಿ ಶಾಸಕ ಎಂ.ರಾಜಣ್ಣ ಅವರ ಹೆಸರನ್ನು ಹೇಳದೇ ಅವರ ಬಗ್ಗೆ ಮಾತನಾಡಿದ ಅವರು, ನಮ್ಮಲ್ಲೇ ಇದ್ದವರೂ ಈಗ ಚದುರಂಗದ ಆಟವನ್ನು ಆಡುತ್ತಿರುವುದನ್ನು ಆಟ ಗ್ರಹಿಸುವವರೆಲ್ಲ ಕಾಣಬಹುದಾಗಿದೆ. ಅವರ ಬಗ್ಗೆ ಮಾತನಾಡಲು ನಾನು ಇಷ್ಟಪಡುವುದಿಲ್ಲ. ಆ ನಾಲಾಯಕ್‌, ಅಯೋಗ್ಯನ ಹೆಸರು ಹೇಳಲು ಸಹ ನನಗೆ ಇಷ್ಟವಿಲ್ಲ ಎಂದರು.
ಜೆಡಿಎಸ್‌ ಅಭ್ಯರ್ಥಿ ಬಿ.ಎನ್‌.ರವಿಕುಮಾರ್‌ ಮಾತನಾಡಿ, ಮಹಿಳೆಯರು ಮತ್ತು ಯುವಕರಿಗೆ ಉದ್ಯೋಗ ಸೃಷ್ಟಿ, ದ್ರಾಕ್ಷಿ ಬೆಳೆಗಾರರಿಗೆ ಅನುಕೂಲವಾಗುವ ವೈನ್‌ ಯಾರ್ಡ್‌ ಸ್ಥಾಪನೆ, ರೇಷ್ಮೆಯ ವಿವಿಧ ಉತ್ಪನ್ನಗಳ ತಯಾರಿಕಾ ಕಾರ್ಖಾನೆ, ಹೈನೋದ್ಯಮ ಬಲವರ್ಧನೆ ಮಾಡುವ ಗುರಿಯನ್ನು ಹೊಂದಿದ್ದೇವೆ. ಅಭಿವೃದ್ಧಿಯೇ ನಮ್ಮ ಮಂತ್ರ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಂಕ್‌ ಮುನಿಯಪ್ಪ, ತನುಜ ರಘು, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಪಿ.ವಿ.ನಾಗರಾಜ್‌, ರಾಧಾಕೃಷ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಜೆಡಿಎಸ್‌ ತಾಲ್ಲೂಕು ಅಧ್ಯಕ್ಷ ಡಿ.ಬಿ.ವೆಂಕಟೇಶ್‌, ನಂದನವನಂ ಶ್ರೀರಾಮರೆಡ್ಡಿ, ಹುಜಗೂರು ರಾಮಣ್ಣ, ಕದಿರಿ ಯೂಸುಫ್‌, ಆದಿಲ್‌ಪಾಷ, ಜೆಡಿಎಸ್‌ ವಕ್ತಾರ ಶ್ರೀನಿವಾಸ್‌, ಪಾಪಿರೆಡ್ಡಿ, ಯೋಗಾನಂದ್‌, ನಗರಸಭಾ ಸದಸ್ಯರು ಹಾಜರಿದ್ದರು.

ಎಂ.ರಾಜಣ್ಣ ಬೆಜೆಪಿ ಜೊತೆಗೆ ಮತ್ತು ಕಾಂಗ್ರೆಸ್‌ ಜೊತೆ ಒಪ್ಪಂದ ಮಾಡಿಕೊಂಡು ಕುಮಾರಣ್ಣನ ಕತ್ತು ಕೊಯ್ಯುವ ಕೆಲಸ ಮಾಡಿದರು – ನಿಖಿಲ್ ಕುಮಾರಸ್ವಾಮಿ

0

ನಗರದಲ್ಲಿ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ಬಿ.ಎನ್.ರವಿಕುಮಾರ್ ಪರವಾಗಿ ಪ್ರಚಾರ ಮಾಡಲು ಶಿಡ್ಲಘಟ್ಟಕ್ಕೆ ಬಂದಿದ್ದ ಅವರು ರೋಡ್‌ ಶೋನಲ್ಲಿ ಭಾಗವಹಿಸಿ ಚಲನಚಿತ್ರ ನಟ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು.
ರಾಜಣ್ಣ ಅವರು ಶಾಸಕರಾಗಲು ಕಾರಣರಾದವರೇ ಬಿ.ಎನ್‌.ರವಿಕುಮಾರ್‌. ಕುಮಾರಣ್ಣ ಭಾವನಾತ್ಮಕ ಜೀವಿ. ಅವರು ಯಾರಿಗೂ ಮೋಸ ಮಾಡುವವರಲ್ಲ. ಹಾಲಿ ಶಾಸಕ ರಾಜಣ್ಣ ಅವರಿಗೇ ಟಿಕೇಟ್‌ ಕೊಡಬೇಕು ಎಂಬುದಾಗಿ ಕುಮಾರಣ್ಣ ಅಂದುಕೊಂಡಿದ್ದುದು ಸತ್ಯ. ಆ ಸಂದರ್ಭದಲ್ಲಿ ರವಿಯಣ್ಣನವರನ್ನೂ ನಾನು ಕರೆದು ಚರ್ಚಿಸಿದ್ದೆ. ಆಗ ಅವರು ನಾನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ನನ್ನ ಕಣಕಣದಲ್ಲೂ ಜೆಡಿಎಸ್‌ ಇರುತ್ತದೆ, ನನ್ನ ನಿಯತ್ತು ಎಂದೆಂದಿಗೂ ಜೆಡಿಎಸ್‌ಗೇ ಎಂದಿದ್ದರು. ಆದರೆ ಎಂ.ರಾಜಣ್ಣ ಬೆಜೆಪಿ ಜೊತೆಗೆ ಮತ್ತು ಕಾಂಗ್ರೆಸ್‌ ಜೊತೆ ಒಪ್ಪಂದ ಮಾಡಿಕೊಂಡು ಕುಮಾರಣ್ಣನ ಕತ್ತು ಕೊಯ್ಯುವ ಕೆಲಸ ಮಾಡಿದರು. ರಾಜಣ್ಣನವರು ಕುಮಾರಣ್ಣನವರು ಮಾತನಾಡಿರುವ ಆಡಿಯೋ ಕ್ಲಿಪ್ಪಿಂಗ್ ಬಿಟ್ಟಿದ್ದು, ಅದರ ಬಗ್ಗೆ ಯಾರೂ ಗೊಂದಲಕ್ಕೀಡಾಗುವ ಅಗತ್ಯವಿಲ್ಲ.
ರಾಜಣ್ಣ ಅವರ ಮೋಸದ ವ್ಯಕ್ತಿತ್ವ ಬಯಲುಗೊಳಿಸಲು ನಾನೇ ಕಾರ್ಯಕರ್ತರ ಮೂಲಕ ಅವರು ಬಚ್ಚೇಗೌಡರೊಂದಿಗೆ ಮಾತಾಡುವ ಚಿತ್ರ ತರಿಸಿದ್ದೆ. ಅವತ್ತೇ ಕುಮಾರಣ್ಣ ಅವರ ಹತ್ತಿರ ರಾಜಣ್ಣ ಬೆಲೆ ಕಳೆದುಕೊಂಡರು. ಆಗಲೇ ಕುಮಾರಣ್ಣ ಮತ್ತು ದೇವೇಗೌಡರು ರವಿಯಣ್ಣ ಅವರ ಬೆಂಬಲವಾಗಿ ನಿಂತು ಬಿಫಾರಂ ಕೊಟ್ಟರು. ತಾನು ಹಾಗೂ ಕುಮಾರಸ್ವಾಮಿಯವರು ಸ್ಪಷ್ಠವಾಗಿ ರವಿಯಣ್ಣ ಅವರನ್ನು ಬೆಂಬಲಿಸುತ್ತಿದ್ದು, ಅವರನ್ನು ಕುಮಾರಸ್ವಾಮಿಗಳೇ ಸಂತೋಷದಿಂದ ಜೆಡಿಎಸ್ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಅವರನ್ನು ಗೆಲ್ಲಿಸಿಕೊಡುವ ಜವಾಬ್ದಾರಿ ಶಿಡ್ಲಘಟದ ಜನತೆ ಮೇಲಿದೆ. ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ ನಾನು ಈ ವಿಷಯವನ್ನು ಶಿಡ್ಲಘಟದ ಜನತೆಗೆ ತಿಳಿಸಲು ಚನ್ನಪಟ್ಟಣದ ಕಾರ್ಯಕ್ರಮವನ್ನು ರದ್ದುಗೊಳಿಸಿ ಇಲ್ಲಿಗೆ ಬಂದಿರುವುದಾಗಿ ಹೇಳಿದರು.
ಕಾಂಗ್ರೆಸ್‌ ಸರ್ಕಾರದಲ್ಲಿ ನಾಲ್ಕು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಪೂರ್ಣ ಸಾಲ ಮನ್ನಾ ಮಾಡಿಲ್ಲ. ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಿಲ್ಲ. ಆದರೆ ತಮ್ಮ 20 ತಿಂಗಳ ಸರ್ಕಾರದ ಅವಧಿಯಲ್ಲಿ ಕುಮಾರಣ್ಣ ರೈತರಿಗಾಗಿಯೇ ಹಗಲೂ ಇರುಳೂ ದುಡಿದಿದ್ದಾರೆ. ರಾಷ್ಟ್ರೀಯ ಪಕ್ಷಗಳನ್ನು ನೋಡಿದ್ದೀರಿ. ಪ್ರಾದೇಶಿಕ ಪಕ್ಷಕ್ಕೆ ಅವಕಾಶ ಕೊಡಿ. ನಿಮ್ಮ ಮನೆಮಗನಂತಿರುವ ಕುಮಾರಣ್ಣನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ.
ನಗರದ ಬಸ್‌ನಿಲ್ದಾಣದಿಂದ ಚಲನಚಿತ್ರ ನಟ ನಿಖಿಲ್ ಕುಮಾರಸ್ವಾಮಿ ಅವರನ್ನು ರೋಡ್‌ ಶೋ ಮುಖಾಂತರ ಕರೆತರಲಾಯಿತು. ಬಸ್‌ ನಿಲ್ದಾಣದ ಬಳಿ, ಕೋಟೆ ವೃತ್ತದ ಬಳಿ ಹಾಗೂ ದಿಬ್ಬೂರಹಳ್ಳಿ ರಸ್ತೆಯ ಬಾಷುಸಾಬ್‌ ದರ್ಗಾ ಬಳಿ ನಿರ್ಮಿಸಿದ್ದ ವೇದಿಯಲ್ಲಿ ಜನರನ್ನುದ್ದೇಶಿಸಿ ಅವರು ಮಾತನಾಡಿದರು.
ಜೆಡಿಎಸ್‌ ಅಭ್ಯರ್ಥಿ ಬಿ.ಎನ್‌.ರವಿಕುಮಾರ್‌, ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್‌ ಮುನಿಯಪ್ಪ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಪಿ.ವಿ.ನಾಗರಾಜ್‌, ರಾಧಾಕೃಷ್ಣ ಹಾಜರಿದ್ದರು.

ಅಂಧ ಮಕ್ಕಳ ಶಾಲೆಗೆ ಶೇ.100 ರಷ್ಟು ಫಲಿತಾಂಶ

0

ಸತತವಾಗಿ ಹತ್ತನೇ ವರ್ಷವೂ ನಗರದ ಆಶಾಕಿರಣ ಅಂಧ ಮಕ್ಕಳ ವಸತಿ ಶಾಲೆ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದಿದ್ದಾರೆ.
ಈ ಬಾರಿ ಐದು ಅಂಧ ವಿದ್ಯಾರ್ಥಿಗಳು ಬ್ರೈಲ್ ಲಿಪಿಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಬರೆದಿದ್ದರು.
ಜಿ.ಎಂ.ಮಧುಸೂದನ 467(ಶೇ 74.72),
ಗಮನಿಕ 437(ಶೇ 69.92), ನಾಗಮಣಿ 432(ಶೇ 69.12),
ನಳಿನ 430(ಶೇ 68.80),
ಟಿ.ಮಂಜುನಾಥಗೌಡ 405(ಶೇ 64.8) ಅಂಕಗಳನ್ನು ಪಡೆದಿದ್ದಾರೆ

ದಿ ಕ್ರೆಸೆಂಟ್ ಶಾಲೆ ಶೇ.100 ರಷ್ಟು ಫಲಿತಾಂಶ ದಾಖಲು

0

ನಗರದ ದಿ ಕ್ರೆಸೆಂಟ್ ಶಾಲೆ ಶೇ.100 ರಷ್ಟು ಎಸ್‌ಎಸ್‌ಎಲ್‌ಸಿ ಫಲಿತಾಂಶ ದಾಖಲಿಸಿದೆ. ಪರೀಕ್ಷೆ ಬರೆದಿದ್ದ ಎಲ್ಲಾ ಮಕ್ಕಳೂ ಪ್ರಥಮ ದರ್ಜೆಗೂ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಈ ಶಾಲೆಯ ತೂಬಾ ನುದ್ರತ್‌ 612(ಶೇ 97.92) ತಾಲ್ಲೂಕಿಗೆ ಪ್ರಥಮಳಾಗಿದ್ದಾಳೆ. 25 ವಿದ್ಯಾರ್ಥಿಗಳು ಶೇ 90 ಕ್ಕೂ ಅಧಿಕ ಅಂಕಗಳನ್ನು ಗಳಿಸಿದ್ದರೆ, 36 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ತೂಬಾ ನುದ್ರತ್‌ 612(ಶೇ 97.92)
ಎಂ.ಕಾರ್ತಿಕ್‌ 602(ಶೇ 96.32)
ಜಾನ್ಸಿರೆಡ್ಡಿ 598(ಶೇ 95.68)
ಐನಮ್‌ ಕೌಸರ್‌ 598(ಶೇ 95.68)
ಸಿ.ಸಂತೋಷ್‌ 592(ಶೇ 94.72)
ಜಿ.ಎಂ.ಅಚ್ಚುತ್‌ ದೇವ್‌ 590(ಶೇ 94.4)
ಪಿ. ಹೇಮಂತ್ 588(ಶೇ 94.08)
ಓಂ ದೇಶಮುದ್ರೆ 587(ಶೇ 93.92)

ಅಂಬೇಡ್ಕರ್ ಆಶಯಗಳನ್ನು ಈಡೇರಿಸಲು ಕರ್ನಾಟಕ ರಿಪಬ್ಲಿಕನ್ ಸೇನಾ ಅಭ್ಯರ್ಥಿಯನ್ನು ಬೆಂಬಲಿಸಿ – ಜಿಗಣಿ ಶಂಕರ್

0

ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಆಶಯಗಳನ್ನು ಈಡೇರಿಸಲು ಕರ್ನಾಟಕ ರಿಪಬ್ಲಿಕನ್ ಸೇನಾ ಅಭ್ಯರ್ಥಿ ವೆಂಕಟೇಶಪ್ಪರನ್ನು ಬೆಂಬಲಿಸಿ ಎಂದು ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಘೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ನಡೆಯುತ್ತಿರುವ ಚುನಾವಣೆಗಳಲ್ಲಿ ಹಣಬಲ ಹಾಗು ತೋಳ್ಬಲ ವಿದ್ದವರು ಮಾತ್ರ ಅಧಿಕಾರ ಹಿಡಿದು ವಿಧಾನಸೌಧಕ್ಕೆ ಹೋಗುತ್ತಿದ್ದಾರೆ. ಇಂತಹವರ ನಡುವೆ ಪ್ರಾಮಾಣಿಕರು ಚುನಾವಣೆಗಳಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಸಮ ಸಮಾಜ ನಿರ್ಮಾಣ ಗುರಿಯೊಂದಿಗೆ ಸಂವಿದಾನ ಶಿಲ್ಪಿ ಅಂಬೇಡ್ಕರ್‌ರವರ ಮೊಮ್ಮಗ ಆನಂದ್‌ರಾಜ್ ಅಂಬೇಡ್ಕರ್ ರಿಂದ ಸ್ಥಾಪಿತಗೊಂಡಿರುವ ರಿಪಬ್ಲಿಕನ್ ಪಕ್ಷದ ವತಿಯಿಂದ ಒಬ್ಬ ಸಾಮಾನ್ಯನೂ ಚುನಾವಣೆಯಲ್ಲಿ ನಿಲ್ಲಬಹುದು ಎನ್ನುವುದನ್ನು ಸಾಭೀತು ಪಡಿಸಿದ್ದೇವೆ.
ಇದೇ ಮೊದಲ ಭಾರಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ೨೨೪ ಕ್ಷೇತ್ರಗಳ ಪೈಕಿ ೩೫ ಅಭ್ಯರ್ಥಿಗಳನ್ನು ಪಕ್ಷದಿಂದ ಕಣಕ್ಕಿಳಿಸಿದ್ದು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಕೆಆರ್‌ಎಸ್ ಅಭ್ಯರ್ಥಿ ವೆಂಕಟೇಶಪ್ಪರನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ವೆಂಕಟೇಶಪ್ಪ ಮಾತನಾಡಿ ಮತದಾನ ಪ್ರತಿಯೊಬ್ಬರ ಹಕ್ಕು ಅದನ್ನು ಸೂಕ್ತ ವ್ಯಕ್ತಿಗೆ ಹಾಕುವ ಮೂಲಕ ಕ್ಷೇತ್ರವನ್ನು ಅಭಿವೃದ್ದಿಯತ್ತ ಕೊಂಡೊಯ್ಯುವ ಕೆಲಸಕ್ಕೆ ಎಲ್ಲರೂ ಮುಂದಾಗಬೇಕು. ಈ ಭಾರಿಯ ಚುನಾವಣೆಯಲ್ಲಿ ಕೆಆರ್‌ಎಸ್ ಪಕ್ಷದ ಅಭ್ಯರ್ಥಿಯಾದ ತನಗೆ ಮತ ಹಾಕಿ ಜಯಶೀಲರನ್ನಾಗಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ದೇವರಾಜ್, ಮುಖಂಡರಾದ ಬೊಮ್ಮಸಂದ್ರ ಮುನಿರಾಜು, ದ್ಯಾವಪ್ಪ ಮತ್ತಿತರರು ಹಾಜರಿದ್ದರು.

ಅಂತರ್ಜಾಲದಲ್ಲಿ ಹರಿದಾಡುತ್ತಿದೆ ಕುಮಾರಸ್ವಾಮಿ ಜೊತೆಗಿನ ಆಡಿಯೋ ಸಂಭಾಷಣೆ

0

ವ್ಯಕ್ತಿಯೊಬ್ಬರ ಕುಮಾರಸ್ವಾಮಿ ಜೊತೆಗಿನ ಸಂಭಾಷಣೆ ಎಂದು ಆಡಿಯೋ ಸಂಭಾಷಣೆಯೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು , ಸಂಭಾಷಣೆಯಲ್ಲಿ ಕುಮಾರಸ್ವಾಮಿಯು ವ್ಯಕ್ತಿಗೆ ರಾಜಣ್ಣನವರನ್ನು ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವಂತೆ, ಜನಗಳಿಗೆ ತಾನು ಕುಮಾರಣ್ಣನ ಅಭ್ಯರ್ಥಿ ಎಂದು ಹೇಳಿ ಮತ ಯಾಚಿಸುವಂತೆ ಸೂಚಿಸಲಾಗಿದೆ. ರಾಜಣ್ಣನಿಗೆ ಟಿಕೆಟ್ ತಪ್ಪಿರುವುದು ತನಗೆ ನೋವಾಗಿದೆ, ರವಿಯ ಮೇಲೆ ತನಗೆ ಕಿಂಚಿತ್ತೂ ಗೌರವವಿಲ್ಲ ಎಂದು ಆಡಿಯೋ ಟೇಪ್ ನಲ್ಲಿ ತಿಳಿಸಲಾಗಿದೆ. ನಾಮಪತ್ರ ಸಲ್ಲಿಕೆಯ ಪೂರ್ವದ ಸಂಭಾಷಣೆ ಈಗ ಶಿಡ್ಲಘಟ್ಟದ ಜನರನ್ನು ಅಂತರ್ಜಾಲ ತಾಣಗಳ ಮೂಲಕ ತಲುಪುತ್ತಿದ್ದು ಜನರನ್ನು ಗೊಂದಲಕ್ಕೀಡುಮಾಡಿದೆ.

ದಿ ಕ್ರೆಸೆಂಟ್‌ ಶಾಲೆಯ ತೂಬಾ ನುದ್ರತ್‌, ಜ್ಞಾನಜ್ಯೋತಿ ಶಾಲೆಯ ಆರ್‌.ಚಂದುಶ್ರೀ ತಾಲ್ಲೂಕಿಗೆ ಪ್ರಥಮ

0

ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊರಬಂದಿದ್ದು ತಾಲ್ಲೂಕಿಗೆ ಹೆಣ್ಣು ಮಕ್ಕಳು ಮೊದಲಿಗರಾಗಿದ್ದಾರೆ. ವಿಶೇಷವೆಂದರೆ ತಾಲ್ಲೂಕಿಗೆ ಮೊದಲಿಗರಾದ ಹೆಣ್ಣುಮಕ್ಕಳಲ್ಲಿ ಮಸೀದಿಯ ಮೌಲ್ವಿಯ ಮಗಳೊಬ್ಬಳಾದರೆ ಮತ್ತೊಬ್ಬಳು ರೈತರ ಮಗಳು.
ದಿ ಕ್ರೆಸೆಂಟ್‌ ಶಾಲೆಯ ತೂಬಾ ನುದ್ರತ್‌ 612(ಶೇ 97.92) ಮತ್ತು ಜಂಗಮಕೋಟೆಯ ಜ್ಞಾನಜ್ಯೋತಿ ಶಾಲೆಯ ಆರ್‌.ಚಂದುಶ್ರೀ 612(ಶೇ 97.92) ತಾಲ್ಲೂಕಿಗೆ ಹೆಚ್ಚು ಅಂಕಗಳಿಸಿದ್ದರೆ, ಬಿಜಿಎಸ್‌ ಶಾಲೆಯ ಪುಷ್ಪ 611(ಶೇ 97.76) ಮತ್ತು ಸಾದತ್‌ ಹುಸೇನ್‌(ಶೇ 97.76) ದ್ವಿತೀಯ ಸ್ಥಾನ ಪಡೆದಿದ್ದಾರೆ.
ದಿ ಕ್ರೆಸೆಂಟ್‌ ಶಾಲೆಯ ತೂಬಾ ನುದ್ರತ್‌ ಮಸೀದಿಯ ಮೌಲ್ವಿ ಅಫ್ಜಲ್‌ ಇಮಾಮ್‌ರ ಮಗಳು. ಇವರ ಮೂಲ ಪಶ್ಚಿಮ ಬಂಗಾಲ. ಮನೆ ಭಾಷೆ ಉರ್ದು. ವಿದ್ಯಾವಂತರ ಹಿನ್ನೆಯಿಲ್ಲದೆಯೂ ಸಾಧನೆ ಮಾಡಿ ಮಾದರಿಯಾಗಿದ್ದಾಳೆ. ಜಂಗಮಕೋಟೆಯ ಜ್ಞಾನಜ್ಯೋತಿ ಶಾಲೆಯ ಆರ್‌.ಚಂದುಶ್ರೀ ಅತ್ತಿಗಾನಹಳ್ಳಿಯ ಕೃಷಿಕ ರಾಮಾಂಜಿನಪ್ಪನ ಮಗಳು. ಬಿಜಿಎಸ್‌ ಶಾಲೆಯ ಪುಷ್ಪ ಸಹ ಪ್ರಾಧ್ಯಾಪಕ ನಾರಾಯಣಸ್ವಾಮಿಯ ಮಗಳು ಮತ್ತು ಸಾದತ್‌ ಹುಸೇನ್‌ ರೇಷ್ಮೆ ವ್ಯಾಪಾರಿ ಮೌಲಾ ಮಗ. ವಾಸವಿ ಶಾಲೆಯ ಎಸ್‌.ವಿ.ಮೇಘನಾ 598(ಶೇ 95.68) ತಂದೆ ವಿಜಯಕುಮಾರ್‌ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಚೇರಿಯಲ್ಲಿ ಜವಾನ ಆಗಿದ್ದಾರೆ.
ಬಡತನವಿದ್ದರೂ, ವಿದ್ಯೆಯ ಹಿನ್ನೆಲೆಯಿಲ್ಲದಿದ್ದರೂ, ಸಾಧನೆಗೆ ಪರಿಶ್ರಮಕ್ಕೆ ಯಾವುದೂ ಅಡ್ಡಿಯಲ್ಲ ಎಂಬುದನ್ನು ತೋರಿಸಿಇತರರಿಗೆ ಮಾದರಿಯಾಗುವಂತೆ ಅಂಕಗಳನ್ನು ಗಳಿಸಿದ್ದಾರೆ ತಾಲ್ಲೂಕಿನ ವಿದ್ಯಾರ್ಥಿಗಳು.

ಶಿಡ್ಲಘಟ್ಟ ರೇಷ್ಮೆ ಗೂಡಿನ ಮಾರುಕಟ್ಟೆಗೆ ಆಯುಕ್ತರ ಭೇಟಿ

0

ಹಣದ ವಹಿವಾಟಿನ ಸಮಸ್ಯೆಗಳ ಬಗ್ಗೆ ರೀಲರುಗಳು ದೂರಿದ್ದು ಚುನಾವಣೆಯ ನಂತರ ಸರಿಹೋಗಲಿದೆ ಎಂದು ರಾಜ್ಯ ರೇಷ್ಮೆ ಅಭಿವೃದ್ಧಿ ಆಯುಕ್ತ ಮಂಜುನಾಥ್‌ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಶನಿವಾರ ಭೇಟಿ ನೀಡಿ ಮಾರುಕಟ್ಟೆಯ ಕುಂದುಕೊರತೆಗಳನ್ನು ಪರಿಶೀಲಿಸಿ, ರೀಲರುಗಳು ಹಾಗೂ ರೈತರ ಸಮಸ್ಯೆಗಳನ್ನು ಕೇಳಿ ಅವರು ಮಾತನಾಡಿದರು.
ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಬ್ಯಾಂಕ್‌ ಅಗತ್ಯತೆಯನ್ನು ತಿಳಿಸಿದ್ದಾರೆ. ಈಗಾಗಲೇ ತಾಂತ್ರಿಕತೆಯನ್ನು ಬಳಸಿಕೊಂಡು ಇ ಹರಾಜು ಪದ್ಧತಿಯನ್ನು ಜಾರಿಗೊಳಿಸಿದ್ದೇವೆ. ಹೊಸ ಪದ್ಧತಿಗೆ ಹೊಂದಿಕೊಳ್ಳಲು ಕಷ್ಟವಾದರೂ ಪಾರದರ್ಶಕ ಹಾಗೂ ಹಣ ಪೋಲಾಗದಂತೆ ಕಾರ್ಯ ನಿರ್ವಹಿಸಲು ಇ ಹರಾಜು ಅವಶ್ಯವಾಗಿದೆ. ಮುಂದೆ ನಗದು ರಹಿತ ವಹಿವಾಟನ್ನು ಮಾಡುವ ಅವಶ್ಯಕತೆಯಿದೆ. ಆಗ ಹಣ ನೇರವಾಗಿ ರೈತರ ಖಾತೆಗೆ ಜಮೆಯಾಗುತ್ತದೆ. ಮಾರುಕಟ್ಟೆಯಲ್ಲಿ ಸಿಬ್ಬಂದಿಯ ಕೊರತೆಯನ್ನು ತಿಳಿಸಿದ್ದಾರೆ. ಶೌಚಾಲಯದ ಸಮಸ್ಯೆಯಿದೆ. ಎಲ್ಲಾ ಸಮಸ್ಯೆಗಳ ಬಗ್ಗೆಯೂ ಚರ್ಚಿಸಿದ್ದು ಹಂತಹಂತವಾಗಿ ಎಲ್ಲಾ ಅವಶ್ಯಕತೆಗಳನ್ನೂ ಪೂರೈಸಲಾಗುವುದು ಎಂದು ಹೇಳಿದರು.
ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಎಸ್‌.ವಿ.ಕುಮಾರ್‌, ಉಪ ನಿರ್ದೇಶಕ ಸುಭಾಷ್‌ ಸಂತೇನಹಳ್ಳಿ, ಸಹಾಯಕ ನಿರ್ದೇಶಕ ಬೋಜಣ್ಣ, ರೀಲರುಗಳಾದ ನಾಗನರಸಿಂಹ, ನರಸಿಂಹಮೂರ್ತಿ, ಮಂಜುನಾಥ್‌, ಅನ್ಸರ್‌, ರಾಮಕೃಷ್ಣಪ್ಪ, ಸಾಧಿಕ್‌, ರೆಹಮಾನ್‌, ರವಿಕುಮಾರ್‌ ಹಾಜರಿದ್ದರು.

ಅಧಿಕಾರ ಎನ್ನುವುದು ಶಾಶ್ವತವಲ್ಲ. ಹತ್ತಿದ ಏಣಿಯನ್ನು ಒದೆಯಬಾರದು – ಮುಗಿಲಡಿಪಿ ನಂಜಪ್ಪ

0

ಅಧಿಕಾರ ಎನ್ನುವುದು ಶಾಶ್ವತವಲ್ಲ. ಹತ್ತಿದ ಏಣಿಯನ್ನು ಒದೆಯಬಾರದು. ಜೆಡಿಎಸ್‌ನಿಂದ ಬೆಳೆದು ತಮಗೆ ಟಿಕೇಟ್‌ ನೀಡಿಲ್ಲ ಎಂದು ಪಕ್ಷದ ವರಿಷ್ಠರ ಬಗ್ಗೆ ಶಾಸಕ ಎಂ.ರಾಜಣ್ಣ ಇಲ್ಲಸಲ್ಲದ ಆರೋಪ ಮಾಡುವುದು ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿದಂತೆ ಎಂದು ಜೆಡಿಎಸ್‌ ಮುಖಂಡ ಮುಗಿಲಡಿಪಿ ನಂಜಪ್ಪ ತಿಳಿಸಿದರು.
ನಗರದ ಎಸ್.ಎಲ್.ವಿ. ಪ್ಲಾಜಾದಲ್ಲಿ ಶನಿವಾರ ಆಯೋಜಿಸಿದ್ದ ಬಿಎಸ್‌ಪಿ ಮತ್ತು ಜೆಡಿಎಸ್‌ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಳೆದ ಎರಡು ಚುನಾವಣೆಗಳಲ್ಲಿ ತಮ್ಮನ್ನು ಬೆಂಬಲಿಸಿ ಗೆಲುವಿಗೆ ಕಾರಣರಾದ ಬಿ.ಎನ್‌.ರವಿಕುಮಾರ್‌ ಮತ್ತು ಇತರ ಕಾರ್ಯರ್ತರ ಬಗ್ಗೆ ರಾಜಣ್ಣನವರು ಈಗ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ತಮಗೆ ಅಧಿಕಾರ ಇದ್ದಾಗ ಅವರೆಲ್ಲ ಒಳ್ಳೆಯವರು, ಟಿಕೇಟ್‌ ಸಿಗದೇ ಇದ್ದಾಗ ಅವರೆಲ್ಲ ದೋಷಿಗಳು. ಇದು ಅವರ ದ್ವಂದ್ವ ಮನಸ್ಥಿತಿಯಾಗಿದೆ. ಸೋಲಿನ ಹತಾಶೆಯಿಂದ ಜೆಡಿಎಸ್‌ ವರಿಷ್ಠರು ಹಾಗೂ ಪಕ್ಷದ ಅಭ್ಯರ್ಥಿಯ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಾ ಜನರನ್ನು ಓಲೈಸಲು ಪ್ರಯತ್ನಿಸುತ್ತಿದ್ದಾರೆ. ಪಕ್ಷಕ್ಕೆ ನಿಷ್ಠೆಯಿರದೆ, ಸಿದ್ಧಾಂತಗಳನ್ನು ಗಾಳಿಗೆ ತೂರಿ ಬಿಜೆಪಿ ಬಾಗಿಲು ಬಡಿದು ಬಂದು ನಿಂತವರನ್ನು ಜನರು ನಂಬುವುದಿಲ್ಲ ಎಂದು ಹೇಳಿದರು.
ಪಕ್ಷೇತರರನ್ನು ಬೆಂಬಲಿಸಿ ಪಕ್ಷಕ್ಕೆ ದ್ರೋಹ ಬಗೆದ ಕಾರಣ ಡಾ.ಧನಂಜಯರೆಡ್ಡಿಯವರನ್ನು ಜೆಡಿಎಸ್‌ ತಾಲ್ಲೂಕು ಅಧ್ಯಕ್ಷರ ಸ್ಥಾನದಿಂದ ಕೆಳಗಿಳಿಸಿ ಡಿ.ಬಿ.ವೆಂಕಟೇಶ್‌ ಅವರನ್ನು ಜೆಡಿಎಸ್‌ ತಾಲ್ಲೂಕು ಅಧ್ಯಕ್ಷರನ್ನಾಗಿ ಮಾಡಿ ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು ಆದೇಶ ಹೊರಡಿಸಿದ್ದಾರೆ ಎಂದು ಹೇಳಿದರು.
ಜೆಡಿಎಸ್‌ ತಾಲ್ಲೂಕು ಅಧ್ಯಕ್ಷ ಡಿ.ಬಿ.ವೆಂಕಟೇಶ್‌ ಮಾತನಾಡಿ, ನಿಷ್ಠೆಯಿಂದ ಪಕ್ಷಕ್ಕೆ ದುಡಿಯುತ್ತೇನೆ. ಹಿರಿಯರು ನಿರ್ವಹಿಸಿದ ಜವಾಬ್ದಾರಿಯನ್ನು ಪಕ್ಷವನ್ನು ಸಂಘಟಿಸುವ ಮೂಲಕ ನಿರ್ವಹಿಸುತ್ತೇನೆ ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯ ನಾರಾಯಣಸ್ವಾಮಿ, ಆನೆಮಡುಗು ರಾಮಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ಬಶೆಟ್ಟಹಳ್ಳಿ ದ್ಯಾವಪ್ಪ, ತಿಮ್ಮಣ್ಣ ಹಾಜರಿದ್ದರು.

ಧರ್ಮದ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿರುವುದು ದೌರ್ಭಾಗ್ಯದ ಸಂಗತಿ – ಗುಲಾಂ ನಬಿ ಆಜಾದ್

0

ಹಿಂದು ಮುಸ್ಲಿಂ ನಡುವೆ ಕಂದಕವನ್ನು ಸೃಷ್ಟಿಸಿ ಮಾಡುವ ರಾಜಕಾರಣ ಸರ್ವನಾಶಕ್ಕೆ ಕಾರಣವಾಗುತ್ತದೆ. ಈ ರೀತಿ ರಾಜಕೀಯಕ್ಕೆ ಗುರಿಯಾಗಿ ಇಂದು ಉತ್ತರ ಭಾರತದ ರಾಜ್ಯಗಳು ಹಿಂದುಳಿದಿವೆ. ಕರ್ನಾಟಕದ ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ತಿಳಿಸಿದರು.
ನಗರದ ಕಾಂಗ್ರೆಸ್‌ ಭವನದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು.
ಮತ ಕೇಳುವವರಲ್ಲಿ ನೀವು ಎರಡೇ ಪ್ರಶ್ನೆಗಳನ್ನು ಕೇಳಬೇಕು. ನೀನು ನಮಗೆ ಏನು ಮಾಡುತ್ತೀಯ? ಮತ್ತು ನಿನಗೆ ಅವಕಾಶ ಸಿಕ್ಕಿದ್ದಾಗ ಏನು ಮಾಡಿದೆ? ಧರ್ಮದ ನಡುವೆ, ಧರ್ಮಗಳ ನಡುವೆ ಒಡೆದು ರಾಜಕಾರಣ ಮಾಡುವವರನ್ನು ದೂರವಿಡಿ.
ಕೇಂದ್ರದಲ್ಲಿ ಕೆ.ಎಚ್‌.ಮುನಿಯಪ್ಪ ರಾಜ್ಯದಲ್ಲಿ ವಿ.ಮುನಿಯಪ್ಪ ಇದ್ದರೆ ನಿಮ್ಮ ಕ್ಷೇತ್ರ ಸುಭಿಕ್ಷವಾಗಿರುತ್ತದೆ. ಮುನಿ ಎಂದರೆ ಸಾತ್ವಿಕರು, ತಪೋನಿರತರು, ಮಾನವತ್ವದ ಪ್ರತಿರೂಪ. ಅಂಥಹವರ ಆಯ್ಕೆ ನಿಮ್ಮದಾಗಲಿ. ಸರ್ವಧರ್ಮ ಸಮನ್ವಯದ, ಹಿಂದುಳಿದವರ ಏಳಿಗೆಯ ಸರ್ಕಾರವಿದ್ದರೆ ಅದು ಕಾಂಗ್ರೆಸ್‌ ಸರ್ಕಾರ ಮಾತ್ರ.
ನರೇಂದ್ರ ಮೋದಿ ಕೇವಲ ಭಾಷಣದಿಂದ ಮರುಳು ಮಾಡುತ್ತಾರೆ. ಸುಳ್ಳು ಹೇಳುತ್ತಾರೆ. ಲಕ್ಷಾಂತರ ನಿರುದ್ಯೋಗಿಗಳಿಗೆ ಉದ್ಯೋಗ ಕೊಡುತ್ತೇವೆಂದು ಸುಳ್ಳು ಹೇಳಿದ್ದರು. ವಿದೇಶದಿಂದ ಸಾವಿರಾರು ಕೋಟಿ ಕಪ್ಪು ಹಣ ತಂದು ಬಡವರ ಖಾತೆಗೆ ತಲಾ ಹದಿನೈದು ಲಕ್ಷ ರೂಗನ್ನು ಹಾಕುವುದಾಗಿ ಸುಳ್ಳು ಹೇಳಿದ್ದರು. ಬದಲಿಗೆ ಇನ್ನೊಬ್ಬ ಮೋದಿ ಸಾವಿರಾರು ಕೋಟಿ ಬಡವರ ಹಣ ದೋಚುವಂತೆ ಮಾಡಿದ್ದಾರೆ. ಬೇಟಿ ಬಜಾವೋ ಎಂಬುದು ಕೇವಲ ಘೋಷಣೆಯಷ್ಟೇ. ಬಾಲಕಿಯರ ಮೇಲೆ ಅತ್ಯಾಚಾರ ಎಸಗುವ ಪಾತಕಿಗಳಿಗೆ ಬಿಜೆಪಿ ಸರ್ಕಾರ ರಕ್ಷಣೆ ನೀಡುತ್ತಿದೆ. ವಿದೇಶದಲ್ಲಿಯೇ ಹೆಚ್ಚು ಸಮಯ ಕಳೆಯುವ ನರೇಂದ್ರ ಮೋದಿಯವರು ದೇಶಕ್ಕೆ ಬರುವುದು ಚುನಾವಣಾ ಭಾಷಣ ಮಾಡಲು ಮಾತ್ರ ಎಂದು ಹೇಳಿದರು.
ವಿಧಾನ ಪರಿಷತ್‌ ಸದಸ್ಯ ನಜೀರ್‌ ಅಹಮದ್‌ ಮಾತನಾಡಿ, ವಿ.ಮುನಿಯಪ್ಪ ಅವರನ್ನು ಗೆಲ್ಲಿಸಿ ರಾಜ್ಯದಲ್ಲಿ ಮುಂದೆ ಬರುವ ಕಾಂಗ್ರೆಸ್‌ ಸರ್ಕಾರದಲ್ಲಿ ಮಂತ್ರಿಯಾಗುತ್ತಾರೆ. ನಿಮ್ಮ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ರಿಯಲ್‌ ಎಸ್ಟೇಟ್‌ನಲ್ಲಿ ಹಣ ಸಂಪಾದಿಸಿರುವವರ ಮಂಕುಬೂದಿಗೆ ಮರುಳಾಗಬೇಡಿ ಎಂದರು.
ಕೆ.ಎಚ್‌.ಮುನಿಯಪ್ಪ ಮಾತನಾಡಿ, ಸಿದ್ಧರಾಮಯ್ಯನವರು ನುಡಿದಂತೆ ನಡೆದಿದ್ದಾರೆ. ತಾವು ನೀಡಿದ್ದ ಭರವಸೆಗಳನ್ನೆಲ್ಲಾ ಈಡೇರಿಸಿದ್ದಾರೆ. ಜನರಿಗೆ ಕಾಂಗ್ರೆಸ್‌ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.
ಕಾಂಗ್ರೆಸ್‌ ಭವನಕ್ಕೆ ಬರುವ ಮುನ್ನ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಗಾರ್ಡನ್‌ ರಸ್ತೆಯ ಪುರಾತನ ಸಯ್ಯದ್ ಸರ್ಮಸ್ತ್ ಹುಸೇನಿ ಷಾವಾಲಿ ದರ್ಗಾದಲ್ಲಿ ಪೂಜೆ ಸಲ್ಲಿಸಿದರು.
ಕಾಂಗ್ರೆಸ್‌ ವೀಕ್ಷಕರಾದ ಕಾರ್ತಿಕ್‌, ಶ್ರೀಧರ್‌ಬಾಬು, ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೇಶವರೆಡ್ಡಿ, ಗುಡಿಯಪ್ಪ, ಆರ್‌.ಶ್ರೀನಿವಾಸ್‌ ಹಾಜರಿದ್ದರು.

ಆರೋಗ್ಯ, ಶಿಕ್ಷಣ, ನಿರುದ್ಯೋಗ ನಿವಾರಣೆ ಕಾಂಗ್ರೆಸ್‌ ಪಕ್ಷದ ಮುಖ್ಯ ಉದ್ದೇಶ – ವಿ.ಮುನಿಯಪ್ಪ

0

ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿ ಶಿಡ್ಲಘಟ್ಟದಲ್ಲಿ ಹಾರ್ಡ್‌ವೇರ್‌ ಪಾರ್ಕ್‌ ಸ್ಥಾಪಿಸುವ ಯೋಜನೆಯನ್ನು ಘೋಷಿಸಿದ್ದು, ಇದರ ಮೂಲಕ ಸಾವಿರಾರು ವಿದ್ಯಾವಂತ ಯುವಕರಿಗೆ ಉದ್ಯೋಗ ಸಿಗಲಿದೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಗಂಜಿಗುಂಟೆ ಮತ್ತು ಬಶೆಟ್ಟಹಳ್ಳಿ ಪಂಚಾಯಿತಿಗಳಲ್ಲಿ ಮತಯಾಚನೆ ಮಾಡಿ ಅವರು ಮಾತನಾಡಿದರು.
ತಾಲ್ಲೂಕಿನ ಹೇಮಾರ್ಲಹಳ್ಳಿ, ವೈ.ಹುಣಸೇನಹಳ್ಳಿ, ಕೆ.ಮುತ್ತುಗದಹಳ್ಳಿ, ದಿಬ್ಬೂರಹಳ್ಳಿ, ಈ ತಿಮ್ಮಸಂದ್ರ, ಕೆಂಚಾರ್ಲಹಳ್ಳಿಯಲ್ಲಿ ನಮ್ಮ ಅವಧಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿದ್ದೆವು. ಕುಡಿಯುವ ನೀರಿಗೆ ಹೆಚ್ಚು ಒತ್ತು ನೀಡಿದ್ದೆವು. ಕೆರೆಗಳ ಹೂಳೆತ್ತುವಿಕೆ, ಬಡವರಿಗೆ ನಿವೇಶನ ಹಾಗೂ ಮನೆಗಳನ್ನು ನೀಡಲು ಸಾಕಷ್ಟು ಶ್ರಮಿಸಿದ್ದೇನೆ. ಆರೋಗ್ಯ, ಶಿಕ್ಷಣ, ನಿರುದ್ಯೋಗ ನಿವಾರಣೆ ಕಾಂಗ್ರೆಸ್‌ ಪಕ್ಷದ ಮುಖ್ಯ ಉದ್ದೇಶ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್‌ ಮಾತನಾಡಿ, ರಾಜ್ಯದಲ್ಲೂ ಕಾಂಗ್ರೆಸ್‌ ಸರ್ಕಾರವೇ ಬರಲಿದೆ. ಇಲ್ಲಿಯೂ ಕಾಂಗ್ರೆಸ್‌ ಅಭ್ಯರ್ಥಿಯನ್ನೇ ಗೆಲ್ಲಿಸಿದರೆ ಅಭಿವೃದ್ಧಿಗೆ ವೇಗ ಸಿಗುತ್ತದೆ, ಕ್ಷೇತ್ರದ ಜನರಿಗೆ ಅನುಕೂಲವಾಗುತ್ತದೆ ಎಂದರು.

ಮತದಾನದ ಅರಿವು ಮೂಡಿಸಲು ರಂಗೋಲಿ ಸ್ಪರ್ಧೆ

0

ನಗರದಲ್ಲಿ ನಗರಸಭೆಯ ಬಳಿ ಗುರುವಾರ ಜಿಲ್ಲಾ ಸ್ವೀಪ್‌ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕರ್ನಾಟಕ ವಿಧಾನಸಭಾ ಚುನಾವಣೆ 2018 ರ ಸ್ವೀಪ್‌ ಕಾರ್ಯಕ್ರಮದ ಸಂಬಂಧ ಮತದಾನದ ಅರಿವು ಮೂಡಿಸಲು ಆಯೋಜಿಸಿದ್ದ ತಾಲ್ಲೂಕು ಮಟ್ಟದ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿ ಚುನಾವಣಾಧಿಕಾರಿ ಮಲ್ಲಿಕಾರ್ಜುನ್ ಮಾತನಾಡಿದರು.
ಮತದಾರರು ಕಡ್ಡಾಯವಾಗಿ ತಪ್ಪದೇ ಮತದಾನ ಮಾಡುವ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಡೆದ ಮತದಾನ ಪ್ರಮಾಣಕ್ಕಿಂತ ಈ ಬಾರಿ ಹೆಚ್ಚಾಗಬೇಕು. ನಿಮ್ಮ ಮತ ನಿಮ್ಮ ಹಕ್ಕು ತಪ್ಪದೇ ನಿಮ್ಮ ಮತ ಚಲಾಯಿಸಿ, ಆಸೆ ಆಮಿಷಗಳಿಗೆ ಒಳಗಾಗದೇ ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡಿ ಎಂದು ತಿಳಿಸುತ್ತಿದ್ದೇವೆ. ಮತದಾನದ ಶೇಕಡಾ ಪ್ರಮಾಣ ಹೆಚ್ಚಿಸಲು, ನೈತಿಕ ಮತ್ತು ಕಡ್ಡಾಯ ಮತದಾನಕ್ಕೆ ಉತ್ತೇಜಿಸುವ ದೃಷ್ಟಿಯಿಂದ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದರು.
ಮತದಾನ ಮತದಾರರ ಅಭಿಪ್ರಾಯಕ್ಕೊಂದು ಅಮೂಲ್ಯ ಅವಕಾಶವಾಗಿದ್ದು ಪ್ರತಿಯೊಬ್ಬರೂ ಮತದಾನ ಮಾಡಬೇಕು, ನಾಗರಿಕರೂ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲು ಚುನಾವಣೆ ಸಹಕಾರಿಯಾಗಿರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಮತಗಟ್ಟೆಗೆ ತಮ್ಮ ಗುರುತಿನ ಚೀಟಿಯೊಂದಿಗೆ ಬಂದು ಉತ್ತಮ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು.
ಸಹಾಯಕ ಚುನಾವಣಾಧಿಕಾರಿ ಅಜಿತ್‌ಕುಮಾರ್ ರೈ, ಚುನಾವಣಾ ಶಾಖೆಯ ಸಂಪರ್ಕಾಧಿಕಾರಿ ಶ್ರೀನಾಥ್‌ಗೌಡ, ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ, ಸಿಡಿಪಿಒ ಅಧಿಕಾರಿ ಲಕ್ಷ್ಮೀದೇವಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಚಂದ್ರಶೇಖರಬಾಬು ಹಾಜರಿದ್ದರು.

ಜನರು ಮತ್ತೊಂದು ಅವಕಾಶವನ್ನು ನೀಡಿ ಆಶೀರ್ವದಿಸಬೇಕು – ಎಂ.ರಾಜಣ್ಣ

0

ತಾಲ್ಲೂಕಿನ ಮಳಮಾಚನಹಳ್ಳಿ ಸೇರಿದಂತೆ ಚೀಮಂಗಲ, ತುಮ್ಮನಹಳ್ಳಿ ಗ್ರಾಮಗಳಲ್ಲಿ ಬುಧವಾರ ಚುನಾವಣೆ ಪ್ರಚಾರ ನಡೆಸಿ ಪಕ್ಷೇತರ ಅಭ್ಯರ್ಥಿ ಎಂ.ರಾಜಣ್ಣ ಮಾತನಾಡಿದರು.
ಕಳೆದ ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿ ಶಾಸಕನಾದ ನಂತರ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಇಷ್ಟಾದರೂ ಪಕ್ಷದ ವರಿಷ್ಠರು ನಮಗೆ ಅನ್ಯಾಯ ಮಾಡಿ ಬೇರೊಬ್ಬರಿಗೆ ಟಿಕೆಟ್ ನೀಡಿದ್ದಾರೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಜನರು ಮತ್ತೊಂದು ಅವಕಾಶವನ್ನು ನೀಡಿ ಆಶೀರ್ವದಿಸಬೇಕು ಎಂದು ಅವರು ಹೇಳಿದರು.
ಕಳೆದ ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಶಾಸಕನಾಗಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಈ ಬಾರಿಯ ಚುನಾವಣೆಯಲ್ಲಿ ಮತ್ತೊಂದು ಅವಕಾಶ ನೀಡುವಂತೆ ಜನರ ಬಳಿ ಬಂದಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಡಾ.ಎ.ಎನ್.ಜಯರಾಮರೆಡ್ಡಿ, ಚೀಮಂಗಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಕೆ.ಮಂಜುನಾಥ್, ಪ್ರಭಾಕರ್, ಮೋಹನ್, ಬಸವರಾಜ್, ಶಣ್ಮುಗಪ್ಪ ಹಾಜರಿದ್ದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆ

0

ನಗರದ ಜಿ.ಎನ್.ವೆಂಕಟಲಕ್ಮಯ್ಯ ಅವರನ್ನು ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ಜಿಲ್ಲಾದ್ಯಕ್ಷೆ ಸಿ.ಎನ್.ಸುಷ್ಮಶ್ರೀನಿವಾಸ್ ಆಯ್ಕೆ ಮಾಡಿ ಆದೇಶ ಪತ್ರವನ್ನು ನೀಡಿದ್ದಾರೆ.