ನಗರದ ನೆಹರೂ ಕ್ರೀಡಾಂಗಣದಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಮಂಗಳವಾರ ‘ಕ್ರೀಡೆ ಆಡಿ ಮತದಾನ ಮಾಡಿ’ ಎಂಬ ತಾಲ್ಲೂಕು ಮಟ್ಟದ ಪುರುಷರ ಕಬಡ್ಡಿ ಹಾಗೂ ಮಹಿಳೆಯರ ಥ್ರೋ ಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರುದ್ರಪ್ಪ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರು ಮುಂದಿನ ಐದು ವರ್ಷಗಳು ಹೇಗಿರಬೇಕೆಂದು ನಿರ್ಧರಿಸುವಂತಹ ಅತ್ಯಂತ ಪ್ರಮುಖ ಜವಾಬ್ದಾರಿಯನ್ನು ಮತದಾನದ ಮೂಲಕ ನಿರ್ವಹಿಸುತ್ತಾರೆ. ಪ್ರತಿ ಮತ ಅತ್ಯಮೂಲ್ಯ. ಮತದಾರರಾದ ಕ್ರೀಡಾಪಟುಗಳು ಚುನಾವಣೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಅರಿತು, ತಮ್ಮ ಮನೆಯವರು, ಸುತ್ತಮುತ್ತಲಿನವರಲ್ಲಿ ಅರಿವು ಮೂಡಿಸಬೇಕು. ತಾಲ್ಲೂಕಿನಲ್ಲಿ ಕ್ರೀಡಾಭಿಮಾನಿಗಳು ಹಾಗೂ ಕ್ರೀಡಾಪಟುಗಳು ಹೆಚ್ಚಾಗಿದ್ದಾರೆ. ಮೇ 12 ರಂದು ನಡೆಯಲಿರುವ ವಿದಾನಸಭಾ ಚುನಾವಣೆಯಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲು ಎಲ್ಲರೂ ನೆರವಾಗಬೇಕು ಎಂದು ಹೇಳಿದರು.
ಮಹಿಳೆಯರ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಜಿಎಫ್‌ಜಿಸಿ ಮಹಿಳಾ ತಂಡಕ್ಕೆ ಪ್ರಥಮ ಬಹುಮಾನ ಹಾಗೂ ಧರಣಿ ಮಹಿಳಾ ತಂಡಕ್ಕೆ ದ್ವಿತೀಯ ಬಹುಮಾನ ಲಭಿಸಿತು. ಕನ್ನಪನ್ನಹಳ್ಳಿ ಸುಭಾಷ್ ಚಂದ್ರ ಬೋಸ್ ಕಬಡ್ಡಿ ತಂಡಕ್ಕೆ ಪ್ರಥಮ ಮತ್ತು ಮಾತೃ ಭೂಮಿ ಯುವಕರ ಸಂಘಕ್ಕೆ ದ್ವಿತೀಯ ಬಹುಮಾನ ವಿತರಣೆ ಮಾಡಲಾಯಿತು.
ಅಪ್ಪೇಗೌಡನಹಳ್ಳಿ ಶ್ರೀರಾಮ ಯುವಕರ ಸಂಘದ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಹಾಕಿ ತಂಡದ ತರಬೇತುದಾರ ಮುಷ್ಟಾಕ್ ಅಹಮ್ಮದ್, ರಂಗನಾಥ್, ತ್ಯಾಗರಾಜು, ಅಗಜಾನನಮೂರ್ತಿ, ಚಂದ್ರಕಲಾ, ದಾಕ್ಷಾಯಿಣಿ, ಶ್ರೀಹರಿ, ರಾಮಚಂದ್ರಪ್ಪ, ಶ್ರೀನಿವಾಸ್ ಹಾಜರಿದ್ದರು.
ಜಿಲ್ಲಾ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಮತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ
ಅಭಿವೃದ್ಧಿ ಹಾಗೂ ಮೂಲಭೂತ ಸಮಸ್ಯೆಗಳನ್ನು ನಿವಾರಿಸುವುದು ನಮ್ಮ ಗುರಿ – ಆಂಜಿನಪ್ಪ(ಪುಟ್ಟು)
ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯಾಗಿ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ. ಸ್ಥಳೀಯನಾಗಿ ಕ್ಷೇತ್ರದಲ್ಲಿ ಹಲವಾರು ಸೇವಾ ಕಾರ್ಯಗಳನ್ನು ನಡೆಸುವ ಮೂಲಕ ಹಳ್ಳಿ ಹಳ್ಳಿಯನ್ನೂ ಸುತ್ತಿದ್ದೇನೆ. ಜನರ ಕಷ್ಟಕ್ಕೆ ಸ್ಪಂದಿಸಿದ್ದೇನೆ. ಕ್ಷೇತ್ರದಲ್ಲಿ ಕುಡಿಯುವ ನೀರು, ಉತ್ತಮ ರಸ್ತೆ, ಆರೋಗ್ಯ, ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಯೋಜನೆಗಳನ್ನು ರೂಪಿಸುವ ಉದ್ದೇಶವಿದೆ ಪಕ್ಷೇತರ ಅಭ್ಯರ್ಥಿ ಆಂಜಿನಪ್ಪ(ಪುಟ್ಟು) ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ನಡಿಪಿನಾಯಕನಹಳ್ಳಿ, ತೊಟ್ಟಲಿಗಾನಹಳ್ಳಿ, ಮಳಮಾಚನಹಳ್ಳಿ, ಯಣ್ಣಂಗೂರು, ನಾಗಮಂಗಲ ಗ್ರಾಮಗಳಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಕೈಗೊಂಡಿದ್ದ ಅವರು ಮಾತನಾಡಿದರು.
ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯದ ಜನಪ್ರತಿನಿಧಿಗಳಿಗೆ ಪುನಃ ಮಾನ್ಯತೆ ನೀಡಬೇಡಿ. ಹೊಸಬರಿಗೆ ಆದ್ಯತೆ ನೀಡಿ. ಅಭಿವೃದ್ಧಿ ಹಾಗೂ ಮೂಲಭೂತ ಸಮಸ್ಯೆಗಳನ್ನು ನಿವಾರಿಸುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದರು.
ಈಗಾಗಲೇ ಸುಮಾರು 20ಕ್ಕೂ ಅದಿಕ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡಿದ್ದು, ಶಿಬಿರಗಳಲ್ಲಿ ಶಸ್ತ್ರಚಿಕಿತ್ಸೆ ಬೇಕಾಗಿರುವ ರೋಗಿಗಳಿಗೆ ಹೊಸಕೋಟೆಯ ಎಂವಿಜೆ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿದ್ದೇವೆ. ಬಡ ಕುಟುಂಬಳಿಗೆ ಜೀವನಾಧಾರ ಕಲ್ಪಿಸುವ ನಿಟ್ಟಿನಲ್ಲಿ ಉಚಿತ ಹೊಲಿಗೆ ಯಂತ್ರಗಳ ವಿತರಣೆ ಕೂಡ ಮಾಡಿದ್ದು, ಅಭಿವೃದ್ಧಿಯತ್ತ ಸಾಗಲು ಮತದಾನ ಮಾಡಿ. ಯಾರೋ ಗೆದ್ದು ಮಂತ್ರಿಯಾದರೆ ಕ್ಷೇತ್ರಕ್ಕೇನೂ ಬರದು, ಮೂಲಭೂತ ಸೌಕರ್ಯ ನಿರ್ಮಾಣವಾಗದು. ಕೇವಲ ಅವರ ಸಂಪತ್ತು ಬೆಳೆಯುತ್ತದೆ ಅಷ್ಟೆ.
ನನಗೆ ಚುನಾವಣಾ ಆಯೋಗ 9ನೇ ಕ್ರಮ ಸಂಖ್ಯೆಯಲ್ಲಿ ಟ್ರಾಕ್ಟರ್‌ನಲ್ಲಿ ಉಳುವ ರೈತನ ಚಿಹ್ನೆ ನೀಡಿದ್ದು, ಮತದಾನ ಮಾಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು,
ಈ ಸಂದರ್ಭದಲ್ಲಿ ಚಿಕ್ಕಣ್ಣ, ಅಶ್ವತ್ಥನಾರಾಯಣರೆಡ್ಡಿ, ಅಫ್ಸರ್ ಪಾಷ, ನವೀನ್ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬಿಜೆಪಿ ಬಾಗಿಲು ತಟ್ಟಿ ಬಂದು ಈಗ ಮಾಜಿ ಸಚಿವರೊಂದಿಗೆ ಹೊಂದಾಣಿಕೆ ಮಾಡಿಕೊಂಡ ಹಾಲಿ ಶಾಸಕ – ಬಿ.ಎನ್.ರವಿಕುಮಾರ್
ಮಾಜಿ ಸಚಿವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹಾಲಿ ಶಾಸಕ ಎಂ.ರಾಜಣ್ಣ ಸ್ಪರ್ಧಿಸಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಮೇಲೂರು ಬಿ.ಎನ್.ರವಿಕುಮಾರ್ ಆರೋಪಿಸಿದರು.
ನಗರದ ಎಸ್.ಎಲ್.ವಿ. ಪ್ಲಾಜಾದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಎಸ್‌ಪಿ ಮತ್ತು ಜೆಡಿಎಸ್ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಶಾಸಕ ಎಂ. ರಾಜಣ್ಣ ಕುಟುಂಬಕ್ಕಾಗಿ ಪಕ್ಷ ಹಾಳು ಮಾಡುತ್ತಿದ್ದಾರೆ. ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡುವ ನೈತಿಕತೆ ಇಲ್ಲ. ಮಾಜಿ ಶಾಸಕ ಎಸ್.ಮುನಿಶಾಮಪ್ಪ ಅವರ ಮಾತಿನ ಮೇಲೆ ೨೦೦೮ ರಲ್ಲಿ ಹಣವಿಲ್ಲದಿದ್ದರೂ ಪಕ್ಷದಿಂದ ದೇವೇಗೌಡರು ಟಿಕೆಟ್ ಕೊಟ್ಟಿದ್ದರು. ಗೆಲ್ಲಲು ಆಗದಿದ್ದಾಗ, ಪುನಃ ೨೦೧೩ ರ ಚುನಾವಣೆಯಲ್ಲಿಯೂ ಟಿಕೇಟ್ ನೀಡಿದ್ದರು. ಕಾರ್ಯಕರ್ತರು ೧೫ ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದರು. ಈಗ ಟಿಕೆಟ್ ಸಿಗಲಿಲ್ಲ ಎನ್ನುವ ಕಾರಣಕ್ಕೆ ಬಿಜೆಪಿ ಬಾಗಿಲು ತಟ್ಟಿ ಬಂದಿದ್ದಾರೆ. ಮಾಜಿ ಸಚಿವ ವಿ.ಮುನಿಯಪ್ಪ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಅವರಿಗೆ ಕ್ಷೇತ್ರದ ಜನತೆ ಸೂಕ್ತ ಪಾಠ ಕಲಿಸಲಿದ್ದಾರೆ. ಜೆಡಿಎಸ್ ವರಿಷ್ಟರ ಬಗ್ಗೆ ಲಘುವಾಗಿ ಮಾತನಾಡಿರುವ ಅವರು ಕ್ಷಮೆಯಾಚಿಸಬೇಕು ಎಂದರು.
ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಲಿದ್ದಾರೆ, ಪ್ರಣಾಳಿಕೆಯಲ್ಲಿನ ಎಲ್ಲಾ ಅಂಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪಕ್ಷ ಕೆಲಸ ಮಾಡುತ್ತಿದೆ. ಕ್ಷೇತ್ರದ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಿದೆ. ಮಹಿಳೆಯರು ಮತ್ತು ಯುವಕರಿಗೆ ಉದ್ಯೋಗ ಸೃಷ್ಟಿ, ದ್ರಾಕ್ಷಿ ಬೆಳೆಗಾರರಿಗೆ ಅನುಕೂಲವಾಗುವ ವೈನ್ ಯಾರ್ಡ್ ಸ್ಥಾಪನೆ, ರೇಷ್ಮೆಯ ವಿವಿಧ ಉತ್ಪನ್ನಗಳ ತಯಾರಿಕಾ ಕಾರ್ಖಾನೆ, ಹೈನೋದ್ಯಮ ಬಲವರ್ಧನೆ ಮಾಡುವ ಗುರಿಯನ್ನು ಹೊಂದಿದ್ದೇವೆ. ಕ್ಷೇತ್ರದ ಜನರ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ ಎಂದು ಜೆಡಿಎಸ್ ಅಭ್ಯರ್ಥಿ ಮೇಲೂರು ಬಿ.ಎನ್.ರವಿಕುಮಾರ್ ಹೇಳಿದರು.
೨೦೧೮ ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್, ಮತ್ತು ಬಿಎಸ್‌ಪಿ ಮೈತ್ರಿ ಮಾಡಿಕೊಂಡಿದ್ದು, ಶಿಡ್ಲಘಟ್ಟ ಕ್ಷೇತ್ರದಲ್ಲೂ ಜೆಡಿಎಸ್ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಲಿದ್ದೇವೆ ಎಂದು ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ವಿ.ನಾಗಪ್ಪ ತಿಳಿಸಿದರು.
ರಾಜ್ಯದಲ್ಲಿ ೨೨೪ ಕ್ಷೇತ್ರಗಳ ಪೈಕಿ ಬಿಎಸ್‌ಪಿಗೆ ೨೦ ಸ್ಥಾನಗಳು, ಜೆಡಿಎಸ್‌ಗೆ ೨೦೪ ಸ್ಥಾನಗಳಲ್ಲಿ ಸ್ಪರ್ಧೆ ಮಾಡಲು ಪಕ್ಷದ ವರಿಷ್ಟರು ತೀರ್ಮಾನಿಸಿದ್ದಾರೆ. ಕುಮಾರಸ್ವಾಮಿ ಸಾರಾಯಿ ನಿಷೇಧ ಮಾಡಿದ್ದರಿಂದ ದಲಿತ ಕುಟುಂಬಗಳಿಗೆ ಅನುಕೂಲವಾಗಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಎನ್ನುವ ಉದ್ದೇಶದಿಂದ ಬಿಎಸ್‌ಪಿ ಪಕ್ಷ ಜೆಡಿಎಸ್ ಗೆಲುವಿಗೆ ಶ್ರಮಿಸಲಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ಕ್ಷೇತ್ರದ ಜನರು ಬಿ.ಎನ್.ರವಿಕುಮಾರ್ ಪರವಾಗಿದ್ದಾರೆ. ಬಿಸ್‌ಪಿ, ಜೆಡಿಎಸ್‌ನೊಂದಿಗೆ ಕೈ ಜೋಡಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಶಾಸಕ ರಾಜಣ್ಣ ಬಿ ಫಾರಂ ಸಿಗಲಿಲ್ಲವೆಂದು ಪಕ್ಷೇತರರಾಗಿದ್ದಾರೆ. ಪಕ್ಷ ನಿಷ್ಠೆ ಇದ್ದಿದ್ದರೆ ಜೆಡಿಎಸ್ ಬಿಡುತ್ತಿರಲಿಲ್ಲ, ಯಾರಿಗೆ ಟಿಕೇಟ್ ಕೊಡಲಿ ಕೆಲಸ ಮಾಡುವುದಾಗಿ ಹೇಳಿದ್ದರು. ಈಗ ಕಾಂಗ್ರೆಸ್ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ನಿಷ್ಠಾವಂತ ಕಾರ್ಯಕರ್ತರು ನಮ್ಮೊಂದಿಗೆ ಇದ್ದಾರೆ. ತಂದೆಯ ಸಾವನ್ನು ರಾಜಕೀಯವಾಗಿ ಬಳಕೆ ಮಾಡಿಕೊಂಡು ರಾಷ್ಟ್ರೀಯ ಅಧ್ಯಕ್ಷರನ್ನು ದೂರುತ್ತಿದ್ದಾರೆ. ಇದು ಸರಿಯಲ್ಲ ಎಂದರು.
ಬಿಎಸ್‌ಪಿ ಮುಖಂಡರಾದ ಡಾ.ದೇವಪ್ಪ, ಎಸ್. ನರೇಶ್ ಬಾಬು, ನಗರ ಘಟಕದ ಅಧ್ಯಕ್ಷ ರಾಮು, ಎನ್.ನಾಗೇಶ್, ಮೂರ್ತಿ, ಗಂಜಿಗುಂಟೆ ನರಸಿಂಹಮೂರ್ತಿ, ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯರೇಖಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ನಗರಸಭಾ ಸದಸ್ಯ ನಂದು ಕಿಶನ್, ಹಾಜರಿದ್ದರು.
ಸ್ಕೇಟಿಂಗ್ ವಿದ್ಯಾರ್ಥಿಗಳಿಂದ ಮತದಾನದ ಮಹತ್ವದ ಅರಿವು
ಜಿಲ್ಲಾ ಪಂಚಾಯಿತಿಯ ಸಹಕಾರದೊಂದಿಗೆ ನಡೆದ ಈ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಕರ್ನಾಟಕ ರೂರಲ್ ಸ್ಕೇಟಿಂಗ್ ಅಸೋಸಿಯೇಶನ್ ಶಿಡ್ಲಘಟ್ಟ ಶಾಖೆಯ 16 ವಿದ್ಯಾರ್ಥಿಗಳು ಶಿಡ್ಲಘಟ್ಟದಿಂದ ಚಿಕ್ಕಬಳ್ಳಾಪುರಕ್ಕೆ ಶನಿವಾರ ಸ್ಕೇಟಿಂಗ್ ಮಾಡುತ್ತಾ ಮತದಾನದ ಅರಿವು ಮೂಡಿಸುತ್ತಾ ಸಾಗಿದರು. ಮಕ್ಕಳ ಬೆಂಗಾವಲಾಗಿ ಆಂಬ್ಯುಲೆನ್ಸ್, ಪೊಲೀಸರು ಮತ್ತು ವಾರ್ತಾ ಇಲಾಖೆಯ ಬಸ್ ಸಾಗಿತ್ತು.
ಚಿಕ್ಕಬಳ್ಳಾಪುರದವರೆಗೂ ಸ್ಕೇಟಿಂಗ್ ಮಾಡಿ ಪ್ರಥಮ ಸ್ಥಾನ ಪಡೆದ ಟಿ.ಎನ್.ಹೇಮಂತ್, ದ್ವಿತೀಯ ಸ್ಥಾನ ಪಡೆದ ಎಚ್.ಗೋಕಲ್‌ಗೌಡ ಮತ್ತು ತೃತೀಯಸ್ಥಾನ ಪಡೆದ ಎಂ.ಎಂ.ಸ್ಕಂದನ್ ಅವರಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗುರುದತ್, ಆಯುಕ್ತ ಉಮಾಕಾಂತ್ ಮತ್ತು ಕ್ರೀಡಾ ಇಲಾಖೆಯ ರುದ್ರಪ್ಪ ಪ್ರಶಸ್ತಿ ಪತ್ರವನ್ನು ನೀಡಿದರು. ಭಾಗವಹಿಸಿದ ಎಲ್ಲರಿಗೂ ಸಮಾಧಾನಕರ ಪ್ರಮಾಣ ಪತ್ರವನ್ನು ನೀಡಿದರು.
ಸ್ಕೇಟಿಂಗ್ ವಿದ್ಯಾರ್ಥಿಗಳಾದ ಸುಮನೋಹರ್, ಧೃವಕುಮಾರ್, ಗೋಕುಲ್, ಚೈತ್ರ, ಗೌರವ್, ಮೊಯಿನ್, ಪ್ರಿಯತಮ್ ಯಾದವ್, ದ್ರೋಣ, ಭುವನ್, ಭೂಮಿಕ, ಮಾನಿಷ್, ಶಿವಚರಣ್, ಚಿನ್ಮಯಿ, ಪಾವನಿ, ಭೂವನ, ಪಾವನಿ ಭಾಗವಹಿಸಿದ್ದರು.
ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಟಿ.ಟಿ.ನರಸಿಂಹಪ್ಪ ಮಾತನಾಡಿ, ‘ಪೋಷಕರು ತಮ್ಮ ದ್ವಿಚಕ್ರ ವಾಹನಗಳಲ್ಲಿ ಸ್ಕೇಟಿಂಗ್ ಮಾಡಿಕೊಂಡು ಹೋಗುತ್ತಿದ್ದ ಮಕ್ಕಳ ಬೆಂಗಾವಲಾಗಿ ಹುರಿದುಂಬಿಸುತ್ತಾ ಸಾಗಿದರು. ಚಿಕ್ಕಬಳ್ಳಾಪುರದವರೆಗೂ ಮಕ್ಕಳು ದಾರಿಯುದ್ದಕ್ಕೂ ಸಿಗುವ ಹಳ್ಳಿಗಳಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದರು. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಮಕ್ಕಳು ಸ್ಕೇಟಿಂಗ್ ಮಾಡಿದರು’ ಎಂದು ಹೇಳಿದರು.
ಡಾ.ಡಿ.ಟಿ.ಸತ್ಯನಾರಾಯರಾವ್, ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಿರಂಜನ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಪಂಕಜಾ ನಿರಂಜನ್, ಮುರಳಿ, ಛಾಯಾ ರಮೇಶ್, ಹರೀಶ್, ಲಕ್ಷ್ಮಣ್, ಶ್ರೀನಿವಾಸ್, ಶಿವಪ್ಪ, ಲೋಕೇಶ್, ಮಂಜುನಾಥ್, ಜೆ.ವಿ.ಸುರೇಶ್ ಹಾಜರಿದ್ದರು.

ಶಾಶ್ವತ ನೀರಾವರಿ, ಕೈಗಾರಿಕೆಗಳ ಸ್ಥಾಪನೆ, ಮೂಲಸೌಕರ್ಯ ಕಲ್ಪಿಸುವುದು ನಮ್ಮ ಆದ್ಯತೆ – ಎಚ್.ಸುರೇಶ್
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯ, ಹಳ್ಳಿಗಳಲ್ಲಿ ರಸ್ತೆ, ಕುಡಿಯುವ ನೀರು, ಭ್ರಷ್ಟಾಚಾರ ರಹಿತ ಆಡಳಿತ, ಶಾಶ್ವತ ನೀರಿಗಾಗಿ ಪರಿಶ್ರಮ ಇವು ನಮ್ಮ ಯೋಜನೆಗಳು. ತಾಲ್ಲೂಕಿನಾದ್ಯಂತ ಹಲವಾರು ಸ್ಥಳೀಯ ಸಮಸ್ಯೆಗಳಿವೆ. ಇದುವರೆಗೂ ಆಡಳಿತವನ್ನು ನಡೆಸಿದವರ ಬಗ್ಗೆ ಜನರಲ್ಲಿ ನಿರಾಸೆಯಿದೆ. ಬಿಜೆಪಿ ಜನರಿಗೆ ಆಶಾಕಿರಣವಾಗಿದೆ. ಜನರ ಆಸೆಯನ್ನು ಹುಸಿ ಮಾಡುವುದಿಲ್ಲ. ಬೇರೆ ಪಕ್ಷಗಳವರು ಹಣದ ಪ್ರಭಾವದಿಂದ ಚುನಾವಣಾ ಆಯೋಗದ ಕಣ್ತಪ್ಪಿಸಿ ಅಡ್ಡದಾರಿ ಹಿಡಿಯುತ್ತಿದ್ದಾರೆ. ನಾವೇನಿದ್ದರೂ ಅಭಿವೃದ್ಧಿಯ ಮಂತ್ರದೊಂದಿಗೆ ಮತಯಾಚಿಸುತ್ತೇವೆ ಎಂದು ಬಿಜೆಪಿ ಪಕ್ಷದ ಅಭ್ಯರ್ಥಿ ಎಚ್.ಸುರೇಶ್ ಹೇಳಿದರು. ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಜಿಜೆಪಿ ಪಕ್ಷವನ್ನು ಕಳೆದ ಹಲವು ವರ್ಷಗಳಿಂದ ಶ್ರಮಪಟ್ಟು ಬೆಳೆಸಿದ್ದು ಈ ಬಾರಿ ಪ್ರತಿಯೊಂದು ಬೂತ್‌ನಲ್ಲೂ ಸಕ್ರಿಯ ಬಿಜೆಪಿ ಕಾರ್ಯಕರ್ತರು ಏಜೆಂಟರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಉತ್ತಮ ಆಜೆಂಡಾವನ್ನು ಇಟ್ಟುಕೊಂಡು ಚುನಾವಣೆಗೆ ಹೋಗುತ್ತಿದ್ದೇವೆ. ಕ್ಷೇತ್ರದಲ್ಲಿ ಉತ್ತಮ ಸಂಘಟನೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಯಡಿಯೂರಪ್ಪ, ನೇತೃತ್ವದ ಸರ್ಕಾರಗಳ ಯೋಜನೆಗಳು ನಮಗೆ ಶ್ರೀರಕ್ಷೆಯಾಗಲಿದೆ.
ಶಾಶ್ವತ ನೀರಾವರಿ ಯೋಜನೆ ತರಲಿಕ್ಕೆ ಪ್ರಾಮಾಣಿಕ ಪ್ರಯತ್ನ, ಕೈಗಾರಿಕೆಗಳ ಸ್ಥಾಪನೆ, ಹಳ್ಳಿಗಳಿಗೆ ಮೂಲಸೌಕರ್ಯ ಕಲ್ಪಿಸುವುದು ನಮ್ಮ ಆದ್ಯತೆಯಾಗಿದೆ. 20 ವರ್ಷಗಳಿಂದ ಕ್ಷೇತ್ರದಲ್ಲಿ ಇದ್ದೇನೆ.
ಸಮಸ್ಯೆಗಳನ್ನು ಪಟ್ಟಿ ಮಾಡಿದ್ದೇನೆ. ಸಂಘ, ಸಂಸ್ಥೆಗಳ ಹೋರಾಟಗಳಿಗೆ ಸಹಕಾರ ನೀಡಿದ್ದೇನೆ. ಎಲ್ಲರ 232 ಮತಗಟ್ಟೆಗಳಲ್ಲಿ ಏಜೆಂಟರನ್ನು ನೇಮಕ ಮಾಡಿದ್ದೇವೆ.
ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್ ಮಾತನಾಡಿ, ಸ್ಥಳೀಯರಾಗಿರುವ ಎಚ್. ಸುರೇಶ್ ಅವರು ಈ ಬಾರಿಯ ಚುನಾವಣೆಯಲ್ಲಿ ಜಯಗಳಿಸಲಿದ್ದಾರೆ. ತತ್ವ ಸಿದ್ಧಾಂತಗಳ ಆಧಾರದಲ್ಲಿರುವ ಬಿಜೆಪಿಯಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯವಾಗುತ್ತದೆ. ಬೂತ್ ಮಟ್ಟದಲ್ಲಿ ಪ್ರಚಾರ ಆರಂಭಿಸಿದ್ದೇವೆ. ಪ್ರಚಾರದ ವೇಳೆ, 60 ವರ್ಷ ಆಡಳಿತ ನಡೆಸಿರುವವರ ಬಗ್ಗೆ ಜನರು ನಿರಾಸೆಯಿಂದ ಇದ್ದಾರೆ. ಇದಕ್ಕೆ ಪರ್ಯಾಯವಾಗಿ ಬಿಜೆಪಿಯನ್ನು ಮೆಚ್ಚಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ವೈಖರಿ ನಮಗೆ ಉತ್ಸಾಹ ತಂದಿದೆ. ಕಾಂಗ್ರೆಸ್, ಜೆಡಿಎಸ್ ನಲ್ಲಿನ ಭಿನ್ನಮತ ಬಿಜೆಪಿಗೆ ಲಾಭವಾಗಲಿದೆ. ಎರಡೂ ಪಕ್ಷಗಳು ಕುಡಿಯುವ ನೀರಿಗೆ, ಕೃಷಿಗೆ ಆಧ್ಯತೆ ನೀಡಿಲ್ಲ, ಬಿಜೆಪಿಗೆ ಅಧಿಕಾರ ನೀಡಿದರೆ, ಶಾಶ್ವಾತ ಪರಿಹಾರವನ್ನು ಕೊಡಲಿದ್ದೇವೆ.
ಯಡಿಯೂರಪ್ಪನವರು ಒಂದು ಲಕ್ಷ ಕೋಟಿ ಹಣ ನೀರಾವರಿಗೆ ಮೀಸಲಿಡುವುದಾಗಿ ತಿಳಿಸಿದ್ದಾರೆ. ವಾಜಪೇಯಿ ಕನಸನ್ನು ನನಸು ಮಾಡುವ ಹಾದಿಯಲ್ಲಿ ಪ್ರಧಾನಿ ಸಾಗುತ್ತಿದ್ದಾರೆ. ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ.
ಬಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರಗೌಡ, ಸುಜಾತಮ್ಮ, ಬಳುವನಹಳ್ಳಿ ಶ್ರೀಧರ್, ಮಂಜುಳಮ್ಮ, ನಗರಸಭಾ ಸದಸ್ಯ ರಾಘವೇಂದ್ರ ಹಾಜರಿದ್ದರು.
ಬೆಟ್ಟಿಂಗು – ಬ್ರ್ಯಾಂಡು – ಬದುಕು
ಶಿಡ್ಲಘಟ್ಟದಲ್ಲಿ ಅದೊಂದು ಸಮಯವಿತ್ತು. ನೆತ್ತಿಗೆ ದ್ವನಿವರ್ಧಕಗಳನ್ನು ಕಟ್ಟಿಕೊಂಡು ರಸ್ತೆಗಳಲ್ಲಿ “30ನೇ ತಾರೀಖು ಡ್ರಾ .. ಪ್ರಥಮ ಬಹುಮಾನ 10 ಲಕ್ಷ ರೂಪಾಯಿ. ಇಂದೇ ಕೊಳ್ಳಿರಿ” ಎಂದು ಕೂಗಿಕೊಂಡು ನಿಧಾನವಾಗಿ ಚಲಿಸುತ್ತಿದ್ದ ಆಟೋ ರಿಕ್ಷಾದ ಬದಿಗಳಲ್ಲಿ ನಿಂತು ತಾವು ಗಳಿಸಿ ಉಳಿಸಿದ್ದ 5-10 ರೂಪಾಯಿಗಳಲ್ಲಿ ಒಂದು ಟಿಕೆಟ್ ಪಡೆದು ವಿಜೇತರನ್ನು ಯಾವ ಪತ್ರಿಕೆಯಲ್ಲಿ ಪ್ರಕಟಿಸುತ್ತಾರೆಂದು ತಿಳಿದು ಆ ದಿನ ದಿನಪತ್ರಿಕೆಯ ಕಡೆಯಿಂದೆರಡನೆಯ ಪುಟದಲ್ಲಿ ಪ್ರಕಟವಾಗಿರುತ್ತಿದ್ದ ವಿಜೇತ ಸಂಖ್ಯೆಗಳಲ್ಲಿ ತಮ್ಮ ಲಾಟರಿ ಟಿಕೇಟಿನ ಸಂಖ್ಯೆಯನ್ನು ಕಡೆಯಿಂದ ಮೊದಲಿನ ಸಂಖ್ಯೆಯವರೆಗೂ ತುಲನೆ ಮಾಡಿಕೊಳ್ಳುತ್ತ, ಎಲ್ಲಾ ಸಂಖ್ಯೆಗಳು ಹೋಲಿಕೆಯಾದರೆ ಸಿಗುವ 10 ಲಕ್ಷದಿಂದ ಕಡೆಯ ಸಂಖ್ಯೆ ಹೋಲಿಕೆಯಾದರೆ ಸಿಗುವ 10 ರೂಪಾಯಿವರೆಗೂ ಏನೂ ಬಾರದ್ದನ್ನು ದೃಢೀಕರಿಸಿಕೊಳ್ಳುತ್ತಾ ಟಿಕೆಟ್ಗಾಗಿ ವ್ಯರ್ಥವಾದ ಉಳಿತಾಯದ 10 ರೂಪಾಯಿಯ ಬಗ್ಗೆ ಜಗಲಿಯ ಮೇಲೆ ಕುಳಿತು ಹಲುಬುತ್ತಿದ್ದುದು ಗೋಚರಿಸುತ್ತಿತ್ತು.
ದಿನಕಳೆದಂತೆ ಲಾಟರಿ ಟಿಕೇಟಿನ ವ್ಯಾಪಾರ update ಆಗಿ “ಸಿಂಗಲ್ ನಂಬರ್” ಲಾಟರಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವು. ಪ್ರತಿ ಊರಿನ ಲಾಟರಿ ಅಂಗಡಿಗಳಲ್ಲಿ ಬೆಳಿಗ್ಗೆ , ಮಧ್ಯಾಹ್ನ, ಸಂಜೆಯ ಸಿನಿಮಾ ಶೋ ಗಳಂತೆ ಸಮಯದ ಅಂತರಗಳಲ್ಲಿ ಡ್ರಾ ನಡೆಯುತ್ತಿರಲು, ಜನರು ತಮ್ಮ ವೃತ್ತಿಗಳನ್ನು ಮರೆತು ಟಿಕೆಟ್ ಪಟ್ಟಿಯನ್ನು ಕೈಲಿ ಹಿಡಿದು ಅಂಗಡಿಯ ಮುಂದೆ ನಿಂತಿರುತ್ತಿದ್ದುದು ಸಾಮಾನ್ಯವಾಗತೊಡಗಿತು. ಜನರು ದಿನಕಳೆದಂತೆ ತಮ್ಮ ಶ್ರಮಾಧಾರಿತ ವೃತ್ತಿ, ವ್ಯವಹಾರಗಳನ್ನು ಬಿಟ್ಟು, ಗಂಟೆಗಳಲ್ಲಿ ಸುಲಭವಾಗಿ ಕುಳಿತಲ್ಲಿ ಸಂಪಾದಿಸಬಹುದಾದ ಹಣದ ಮಾರುಹೋಗತೊಡಗಿದ್ದರು. ಒಂದು ವಾರ ಲಾಟರಿಗಳಿಗೆ ದುಡ್ಡು ಸುರಿದು ಒಂದು ದಿನ ಲಾಟರಿ ಹೊಡೆದರೆ ಅದರಲ್ಲಿ ಅರ್ಧ ಹಣದಲ್ಲಿ ಸಂಭ್ರಮ ಆಚರಿಸಿ ಇನ್ನರ್ಧ ಹಣವನ್ನು ದುಪ್ಪಟ್ಟು ಮಾಡುವ ಹಂಬಲದಲ್ಲಿ ಮುಂದಿನ ದಿನ ಲಾಟರಿ ಕೊಳ್ಳುವಲ್ಲಿ ತೊಡಗಿಸುತ್ತಿದ್ದರು. ಇನ್ನು ಕೆಲವರು ಕಳೆದುಕೊಂಡ ಹಣವನ್ನು ಕಳೆದುಕೊಂಡಲ್ಲೇ ಮತ್ತೆ ಗಳಿಸುವ ದೃಢ ಸಂಕಲ್ಪದಿಂದ ಮನೆಯವರ, ಸ್ನೇಹಿತರ ಬಳಿ ಸಿಗದಿದ್ದರೆ ಅನ್ಯರಿಂದ ಸಾಲ ಪಡೆದಾದರೂ ಹಣವನ್ನು ಲಾಟರಿಗಾಗಿ ಹೂಡುವಲ್ಲಿ ಯಶಸ್ವಿಯಾಗುತ್ತಿದ್ದರು. ಮೂರು ಹೊತ್ತು ಮೂರು ದಿನ ಮೂರು ವಾರ ಕಳೆಯುವಷ್ಟರಲ್ಲಿ ಕಾಸು ಕರಗಿ ಸಾಲ ಎರಗಿ ದೈನಂದಿನ ಜೀವನಕ್ಕೆ ಕಷ್ಟವಾಗುತ್ತಿದ್ದ ಉದಾಹರಣೆಗಳು ಬಹಳಷ್ಟು ಸಿಗುತ್ತಿದ್ದವು.
ಬಣ್ಣದ ಕಾಗದಗಳ ಲಾಟರಿ ಟಿಕೆಟ್ ದಿನಕಳೆದಂತೆ ತಂತ್ರಜ್ಞಾನದ ಗಾಳಿಗೆ ಸಿಲುಕಿ ಕಾಲದೊಂದಿಗೆ ತಾನೂ ನವೀಕರಣಗೊಂಡಿತು. ಆಗ ಉದಯಿಸಿದ್ದು ಲೊಟ್ಟೊ , ಪ್ಲೇವಿನ್ ನಂತಹ ಹೆಸರುಗಳು. ಊರಿನಲ್ಲಿ ಅಲ್ಲಲ್ಲಿ ಅಂಗಡಿಗಳಲ್ಲಿ ಅಥವಾ ಪೆಂಡಾಲುಗಳ ಕೆಳಗೆ ಇರಿಸಿರುತ್ತಿದ್ದ ಬೆಳ್ಳನೆಯ ಪೆಟ್ಟಿಗೆಯೊಳಗಿಂದ ಬುಕ್ ಮಾಡಿದೊಡನೆ ಬರುತ್ತಿದ್ದ ಚೀಟಿಗಳನ್ನು ಅರಿದು ತಂದು, ರಾತ್ರಿ ಟಿವಿಯಲ್ಲಿ ಗೋಲಾಕಾರದ ಪಂಜರವನ್ನು ತಿರುಗಿಸಿ ಒಳಗಿನಿಂದ ಸಂಖ್ಯೆಗಳು ಬರೆದಿರುತ್ತಿದ್ದ ಚೆಂಡುಗಳನ್ನು ಒಂದೊಂದಾಗಿ ತೆಗೆದು ಹೇಳುವುದನ್ನು ನೋಡುವುದಕ್ಕಾಗಿ ಜನರು ಟಿವಿಯ ಮುಂದೆ ಜಮಾಯಿಸುತ್ತಿದ್ದರು. ತಂತ್ರಜ್ಞಾನದಿಂದ ಟಿಕೆಟ್ ನ ರೂಪ ಡ್ರಾ ಹೇಳುವ ಶೈಲಿ ಬದಲಾಯಿತೇ ಹೊರತು ಜನರ ಜೀವನವಲ್ಲ. ಅದೇ ಒಂದು ವಾರ ತೊಡಗಿಸು ಒಂದು ದಿನ ಗೆಲ್ಲು, ಅರ್ಧ ಖಾಲಿ ಮಾಡು ಇನ್ನರ್ಧ ತೊಡಗಿಸು ಪೂರ್ತಿ ಖಾಲಿ ಆಗುವ ಸಂಪ್ರದಾಯ ಮುಂದುವರೆದಿತ್ತು.
ತದನಂತ ಲಾಟರಿ ನಿಷೇಧಗೊಂಡಿದ್ದರಿಂದ ಬಹಳಷ್ಟು ಜನರು ಕಷ್ಟವಾದರೂ ಈ ವ್ಯಸನದಿಂದ ದೂರ ಉಳಿಯಬೇಕಾಯಿತು.
ಈಗ ಕಾಲ ಬದಲಾಗಿದೆ, ಜನರ ಕೈಗೆ ಮೊಬೈಲ್ ಫೋನುಗಳು ಬಂದಿವೆ. ಇಂದಿನ ಜನರೇಶನ್ ಗೆ ತಕ್ಕಂತೆ ಈ ಖಾಯಿಲೆ ಅನ್ಯ ಸ್ವರೂಪವೇ ಪಡೆದುಕೊಂಡಿದೆ, ಬೆಟ್ಟಿಂಗ್ ಅರಿವಿಲ್ಲದೆ ಬಹಳಷ್ಟು ಮಂದಿಯ ದಿನಶೈಲಿಯಾಗಿದೆ. ವಿಪರ್ಯಾಸವೆಂದರೆ ಹಿಂದೆ ಸಂಕ್ರಾಂತಿಯ ಸಮಯದಲ್ಲಿ ಕೆಲವು ಹಳ್ಳಿಗಳಲ್ಲಿ ಹಿರಿಯರು ಆಡಿಸುತ್ತಿದ್ದ ಕೋಳಿ ಪಂದ್ಯಗಳ ಜೊತೆಗೆ ಮಾತ್ರ ಅಂಟಿರುತ್ತಿದ್ದ ಈ ಬೆಟ್ಟಿಂಗ್ ಹೆಸರು ಈಗ ದೇಶವೇ ಕಾತುರದಿಂದ ನೋಡುವ ಕ್ರಿಕೆಟ್ ಪಂದ್ಯಾವಳಿಗಳಿಗೆ ಹರಡಿದೆ. ಆಘಾತಕಾರಿ ವಿಷಯವೆಂದರೆ ಈ ಚಟುವಟಿಕೆಯಲ್ಲಿ ತೊಡಗಿರುವವರು ಬಹುತೇಕ ಮಂದಿ ಯುವಕರು. ಕೈಯಲ್ಲೊಂದು ಮೊಬೈಲು, ಅದರಲ್ಲೊಂದೆರಡು App, ಇಂಟರ್ನೆಟ್ ಇದ್ದರೆ ಸಾಕು ತಮ್ಮ ಎದುರಾಗಿ ಹಣ ತೊಡಗಿಸುವವರನ್ನು ಹುಡುಕಿಕೊಂಡು ತಮ್ಮ ಆಯ್ಕೆಯ ಟೀಮು, ಆಟಗಾರ, ಅವನು ಹೊಡೆಯುವ 4, 6, ಅಥವಾ ಬೀಳಬಹುದಾದ ವಿಕೆಟ್ ಹೀಗೆ ಪ್ರತಿಯೊಂದು ಬಾಲುಗಳ ಮೇಲೆ ತಮ್ಮ ದುಡ್ಡನ್ನು ತೊಡಗಿಸಿಕೊಳ್ಳುತ್ತಾರೆ. ಈ ಪ್ರಕ್ರಿಯೆಯನ್ನು ನೋಡಿಕೊಳ್ಳುವುದಕ್ಕೆ ಕೆಲವೊಮ್ಮೆ ಮಧ್ಯವರ್ತಿಗಳು, ಅವರಿಗಿಷ್ಟು ಕಮಿಷನ್ ಕೂಡ ನಿಗದಿಯಾಗುತ್ತದೆ. ಫೋನ್ ಕರೆಗಳ ಮೂಲಕವೇ ಇಡೀ ಪ್ರಕ್ರಿಯೆಯನ್ನೇ ನಡೆಸಿಬಿಡುತ್ತಾರೆ.
ಕಾಲ ಬದಲಾದರೂ ಅದರ ಫಲಿತಾಂಶಗಳು ಹಾಗೂ ಅದರಿಂದಾಗುವ ಪರಿಣಾಮಗಳೇನು ಬದಲಾಗಿಲ್ಲ. ಆದರೆ ಈಗಿನ ಬೆಟ್ಟಿಂಗ್ ಸಂಸ್ಕೃತಿಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕೆನ್ನುವುದು ಏಕೆಂದರೆ ಈ ಜಾಲದಲ್ಲಿ ಇರುವವರು ಬಹುತೇಕ ಮಂದಿ ಯುವಕರು, ಹಲವರು ಇನ್ನೂ ಓದುತ್ತಿರುವವರು. ಅಪ್ಪ ಅಮ್ಮಂದಿರು ತಮ್ಮ ಜೀವನವನ್ನು ತೇಯ್ದು ಗಳಿಸಿದ ಹಣದಲ್ಲಿ ಕಾಲೇಜಿನ ಶುಲ್ಕವನ್ನು ತುಂಬಿ, ಖರ್ಚಿಗೆಂದು ಮತ್ತೊಂದಷ್ಟನ್ನು ಪ್ರತಿ ವಾರ ಜೇಬಿಗೆ ತುರುಕಿ, ಎರಡು ವರ್ಷ ಮುಗಿಯುವುದರೊಳಗೆ ಸಾಲದಲ್ಲೊಂದು ಬೈಕನ್ನು ಕೊಡಿಸಿ ಇಂಜಿನಿಯರ್, ಡಿಗ್ರಿ ಮುಗಿಸಿ ಬರುವ ಮಕ್ಕಳನ್ನು ನೋಡಲು ಕಾಯುತ್ತಿದ್ದರೆ, ಮಕ್ಕಳು ತಮ್ಮ show off lifestyleಗೆ ಜಾರಿ ಎಲ್ಲರಿಗಿನ್ನು ತಾನು ಹೆಚ್ಚು ಎಂದು ತೋರಿಸುವ ಭರದಲ್ಲಿ, ಸುಲಭವಾಗಿ ಹಣ ಗಳಿಸಬಹುದೆಂಬ ಭ್ರಮೆಗೆ ಬಿದ್ದು ಬೆಟ್ಟಿಂಗ್ ನಲ್ಲಿ ಹಣ ತಡಗಿಸುವುದು ಸಾಮಾನ್ಯವಾಗತೊಡಗಿದೆ. ಹಣ ಬೇಗ ಗಳಿಸಬಹುದೋ ಇಲ್ಲವೋ ಆದರೆ 3-4 ವರ್ಷದ ಡಿಗ್ರಿ 5-6 ವರ್ಷಗಳಾಗುವುದಂತೂ ಖಚಿತ.
ಇದು ವಿದ್ಯಾರ್ಥಿಗಳ ಉದಾಹರಣೆಯಾದರೆ ಇನ್ನು ಕಾಲೇಜು ಮುಗಿಸಿ ಹೊರಬರುವವರ ಕಥೆ ಇನ್ನೂ ವಿಷಾದಕರವಾಗಿದೆ. ಈಗಾಗಲೇ 5-6 ವರ್ಷಗಳಲ್ಲಿ ಡಿಗ್ರಿ ಮುಗಿಸಿ ಅಥವಾ ವಿದ್ಯೆಯನ್ನು ಪೂರ್ತಿಗೊಳಿಸದೆ ಉಳಿಯುವ ಯುವಕರು ಕೆಲಸ ಸಿಗದೇ ಉಳಿಯುವುದು ಸಾಮಾನ್ಯವಾಗುತ್ತದೆ. ಆಗ ಮತೊಮ್ಮೆ ತಂದೆ ತಾಯಿಯರನ್ನು ಕಾಡಿ ಬೇಡಿ ತಮ್ಮಲ್ಲಿರುವ ಅಥವಾ ಸಾಲ ಮಾಡಿಯಾದರೂ ಹಣವನ್ನು ತೊಡಗಿಸಿ ಯಾವುದೊ ವ್ಯಾಪಾರದ ಕಾರ್ಯಕ್ಕೆ ಮುಂದಾಗುತ್ತಾರೆ. ಅದರಲ್ಲಿ ನಿಧಾನವಾಗಿ ಹಲವು ದಿನಗಳಲ್ಲಿ ಬರುವ ದುಡ್ಡನ್ನು ಮತ್ತೆ ಶ್ರೀಘ್ರವಾಗಿ ಬೆಟ್ಟಿಂಗ್ನಲ್ಲಿ ಹೆಚ್ಚಿನ ಹಣ ಸಂಪಾದಿಸಲು ತೊಡಗಿಸುತ್ತಾರೆ. ಹಣ ಕಡಿಮೆಯಾದಲ್ಲಿ ಸ್ನೇಹಿತರ ಬಳಿ ವ್ಯಾಪಾರದ ಕಥೆಗಳನ್ನು ಹೇಳಿ ಎರವಲು ಪಡೆಯುತ್ತಾರೆ. ಅದೂ ಕಳೆದು ಹೋದರೆ ಸ್ನೇಹಿತನ ಸ್ನೇಹ ಕಡಿದು ಹೋಗುತ್ತದೆ ಮತ್ತೊಬ್ಬ ವ್ಯಥೆಯ ಕಥೆ ಕೇಳಿ ಹಣ ಕೊಡುವ ಸ್ನೇಹಿತನ ಹುಡುಕಾಟ ಶುರುವಾಗುತ್ತದೆ.
ಈ ಜಾಲದಲ್ಲಿ ಹಲವರು ತಮ್ಮನ್ನು ತಾವು expertಗಳಂತೆ ಬಿಂಬಿಸಿಕೊಳ್ಳತೊಡಗುತ್ತಾರೆ. ಬ್ರಾಂಡೆಡ್ ಬಟ್ಟೆಗಳು, costly ಮೊಬೈಲು, ಬಣ್ಣ ಬಣ್ಣದ ಮಾತುಗಳು ಯುವಕರನ್ನು ಆಕರ್ಷಿಸಲು ಅವರ ಬಂಡವಾಳವಾಗಿಬಿಡುತ್ತದೆ. ಹೊಸದಾಗಿ ಹಣ ತೊಡಗಿಸಲು ಬರುವ ಕುರಿಯನ್ನು ಹುಡುಕಿ ಅವರಿಗೆ ಗೊತ್ತಿರದ ಸಾಮಾನ್ಯ ವಿಷಯಗಳನ್ನು googleನಲ್ಲಿ ಹುಡುಕಿ ಹೇಳಿ ತಾನೇನೋ ಬೆಟ್ಟಿಂಗ್ ತಜ್ಞ ಎಂಬಂತೆ ತೋರಿಸಿಕೊಳ್ಳುತ್ತಾರೆ. ಒಂದೆರಡು ಬಾರಿ ಈ ಮ್ಯಾಚು ಯಾರು ಗೆಲ್ಲುತ್ತಾರೆ, ಮುಂದಿನ ಮ್ಯಾಚು ಯಾರು ಸೋಲುತ್ತಾರೆ, ಈ ದಿನ ಇವರು ಗೆಲ್ಲೋದು fix, cup ಅವರಿಗೆ fix ಎಂದು ಗಾಳಿಯಲ್ಲಿ ಗುಂಡನ್ನು ಹಾರಿಸಿದಂತೆ ಸಲಹೆಗಳನ್ನು ಕೊಟ್ಟು ಅದು ನಡೆದರೆ “ನೋಡ್ದಾ ನಾನು ಹೇಳ್ದೆ ” ಎಂದು , ಉಲ್ಟಾ ಆದರೆ “ಇವರು ಕಡೆಯ ಸಮಯದಲ್ಲಿ ಅವರೊಂದಿಗೆ deal ಮಾಡಿಕೊಂಡುಬಿಟ್ಟಿದಾರೆ, ನಮಗೆ last ಸೆಕೆಂಡ್ ಅಲ್ಲಿ ಗೊತ್ತಾಯ್ತು” ಎಂದು ದಾರಿ ತಪ್ಪಿಸುತ್ತಾರೆ, ಇತರರ ದುಡ್ಡಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಹೀಗೆ ಕುರಿಗಳ ಸಂತೆ ಮುಂದುವರೆಯುತ್ತದೆ.
ಹಳೆ ಕುರಿ ಹೊಸ ಕುರಿಗಳನ್ನು ಕರೆತರುತ್ತದೆ, ಎಷ್ಟು ಕುರಿಗಳು ಬಂದರೂ ನರಿಗೆ ಲಾಭವೇ…
ಶಿಡ್ಲಘಟ್ಟದ ಗಲ್ಲಿಗಳಲ್ಲಿ ಬೆಟ್ಟಿಂಗ್ ನ ಕಥೆ ಸಾಮಾನ್ಯವಾಗಿದೆ, ಈಗ ಬಹಳಷ್ಟು ಯುವಕರ ಜೀವನ ಶೈಲಿಯಾಗಿ ಬೆಟ್ಟಿಂಗ್ ಮುಂದುವರೆಯುತ್ತಿದೆ. ಇಂದಿನ ಯುವಕರನ್ನು ಮುಂದಿನ ಜವಾಬ್ದಾರಿಯುತ ಪ್ರಜೆಗಳಾಗಿ, ನಾಡಿನ ಭವಿಷ್ಯವನ್ನಾಗಿ ಕಾಣುವ ಈ ಸಮಯದಲ್ಲಿ ಮತ್ತೊಮ್ಮ ಎಲ್ಲರೂ ಗಂಭೀರವಾಗಿ ತಮ್ಮನ್ನು ತಾವು ಒಂದು ಪ್ರಶ್ನೆ ಕೇಳಿಕೊಳ್ಳುವ ಅವಶ್ಯಕತೆ ಖಂಡಿತ ಇದೆ.
ನಾವೆಲ್ಲರೂ ಎತ್ತ ಸಾಗುತ್ತಿದ್ದೇವೆ?
– ಸಂದೀಪ್ ಜಗದೀಶ್ವರ
ಮತದಾನದ ಅರಿವು ಮೂಡಿಸುವ ಕಾರ್ಯಕ್ರಮ
ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಸೋಮವಾರ ಚುನಾವಣಾ ಸ್ವೀಪ್ ಸಮಿತಿಯ ನೇತೃತ್ವದಲ್ಲಿ ಬೈಕ್ ರ್‍ಯಾಲಿ ಮೂಲಕ ಮತದಾನದ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಚುನಾವಣಾಧಿಕಾರಿ ಮಲ್ಲಿಕಾರ್ಜುನ್ ಮಾತನಾಡಿದರು.
ಮತದಾನ ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕರ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಅವರು ತಿಳಿಸಿದರು.
ಮತದಾನ ಮತದಾರರ ಅಭಿಪ್ರಾಯಕ್ಕೊಂದು ಅಮೂಲ್ಯ ಅವಕಾಶವಾಗಿದ್ದು ಪ್ರತಿಯೊಬ್ಬರೂ ಮತದಾನ ಮಾಡಬೇಕು, ನಾಗರಿಕರೂ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲು ಚುನಾವಣೆ ಸಹಕಾರಿಯಾಗಿರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಮತಗಟ್ಟೆಗೆ ತಮ್ಮ ಗುರುತಿನ ಚೀಟಿಯೊಂದಿಗೆ ಬಂದು ಉತ್ತಮ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ನಗರದ ಪ್ರಮುಖ ಬೀದಿಗಳಲ್ಲಿ ‘ಮತ ಹಾಕಿದವನೇ ಹೀರೋ’, ‘ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ’ ಎಂಬ ಘೋಷಣೆಗಳೊಂದಿಗೆ ಬೈಕ್ ರ್‍ಯಾಲಿ ಮೂಲಕ ಅಧಿಕಾರಿಗಳು ನಾಗರಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಿದರು.
ಸಹಾಯಕ ಚುನಾವಣಾಧಿಕಾರಿ ಅಜಿತ್‌ಕುಮಾರ್ ರೈ, ತಾಲ್ಲೂಕು ಪಂಚಾಯಿತಿ ಇಓ ಎಂ.ವೆಂಕಟೇಶ್, ಚುನಾವಣಾ ಶಾಖೆಯ ಸಂಪರ್ಕಾಧಿಕಾರಿ ಶ್ರೀನಾಥ್‌ಗೌಡ, ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಚಂದ್ರಶೇಖರಬಾಬು ಹಾಜರಿದ್ದರು.
PUC ಪರೀಕ್ಷೆಯಲ್ಲಿ ಎಚ್.ಎಂ.ತೃಪ್ತಿ, ಕೆ.ಎನ್.ಅಮಿತ್ ತಾಲ್ಲೂಕಿಗೆ ಪ್ರಥಮ
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಕೃಷಿಕರ ಕುಟುಂಬದ ಬಾಲಕಿ ತಾಲ್ಲೂಕಿಗೆ ಪ್ರಥಮಳಾಗಿ ಮಾದರಿಯಾಗಿದ್ದಾಳೆ. ಮೇಲೂರು ಗ್ರಾಮದ ಎಚ್.ಎಂ.ತೃಪ್ತಿ 586(ಶೇ 97.67) ಈ ಸಾಧನೆ ಮಾಡಿದ್ದು, ತಾಲ್ಲೂಕಿನ ಅಂಕತಟ್ಟಿ ಗೇಟ್‌ನ ವಿದ್ಯಾದ್ರಿ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಳೆ. ಇದೇ ಕಾಲೇಜಿನ ಕೆ.ಎನ್.ಅಮಿತ್ 586(ಶೇ 97.67) ಅಂಕಗಳನ್ನು ಪಡೆದು ತಾಲ್ಲೂಕಿನ ಪ್ರಥಮ ಸ್ಥಾನವನ್ನು ಹಂಚಿಕೊಂಡಿದ್ದಾನೆ. ವಿದ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳಾದ ಎಸ್.ಮೌನಿಷ 583(ಶೇ 97.16) ಮತ್ತು ಆರ್.ರುಚಿತಾ 583(ಶೇ 97.16) ತಾಲ್ಲೂಕಿಗೇ ದ್ವಿತೀಯರಾಗಿದ್ದಾರೆ.
ಎಚ್.ಎಂ.ತೃಪ್ತಿ ಗಣಿತ ಮತ್ತು ರಸಾಯನ ಶಾಸ್ತ್ರ ವಿಷಯಗಳಲ್ಲಿ ಶೇ 100 ರಷ್ಟು, ಕೆ.ಎನ್.ಅಮಿತ್ ಜೀವಶಾಸ್ತ್ರ, ಗಣಿತ ಮತ್ತು ರಸಾಯನ ಶಾಸ್ತ್ರವಿಷಯಗಳಲ್ಲಿ ಶೇ 100 ರಷ್ಟು, ಎಸ್.ಮೌನಿಷ ಗಣಿತ ಮತ್ತು ರಸಾಯನ ಶಾಸ್ತ್ರವಿಷಯಗಳಲ್ಲಿ ಶೇ 100 ರಷ್ಟು ಮತ್ತು ಆರ್.ರುಚಿತಾ ಗಣಿತ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಶೇ 100 ರಷ್ಟು ಅಂಕ ಗಳಿಸಿದ್ದಾರೆ.
ತಾಯಿ ಮತ್ತು ಚಿಕ್ಕಪ್ಪ ಅವರ ಆರೈಕೆಯಲ್ಲಿ ಬೆಳೆದ ಮೇಲೂರಿನ ಎಚ್.ಎಂ.ತೃಪ್ತಿ, ಕೆಎಸ್‌ಆರ್‌ಟಿಸಿಯಲ್ಲಿ ಟಿಸಿ ಉದ್ಯೋಗಿಯ ಮಗ ಕೆ.ಎನ್.ಅಮಿತ್, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಮಗಳು ಎಸ್.ಮೌನಿಷ, ಕೃಷಿಕ ಕುಟುಂಬದ ಆರ್.ರುಚಿತಾ ಈ ಸಾಧನೆ ಮಾಡುವ ಮೂಲಕ ಗ್ರಾಮೀಣ ಮಕ್ಕಳಿಗೆ ಸ್ಫೂರ್ತಿಯನ್ನು ತುಂಬಿದ್ದಾರೆ.
ವಾಣಿಜ್ಯ ವಿಭಾಗ ದಲ್ಲಿ ಮಳ್ಳೂರು ಸ್ವಾಮಿ ವಿವೇಕಾನಂದ ಕಾಲೇಜಿನ ತೇಜಶ್ರೀ 578 (ಶೇ 96.33) ತಾಲ್ಲೂಕಿಗೆ ಪ್ರಥಮ ; ಬಿಜಿಎಸ್ ವಿದ್ಯಾಸಂಸ್ಥೆಯ ಎನ್.ಎಸ್.ಭಾವನಾ 563(ಶೇ 93.83) ದ್ವಿತೀಯ ಮತ್ತು ಕೆ.ಎಸ್.ನವ್ಯಶ್ರೀ 562(ಶೇ 93.67) ತೃತೀಯ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗ:
ಎಚ್.ಎಂ.ತೃಪ್ತಿ 586(ಶೇ 97.67);
ಕೆ.ಎನ್.ಅಮಿತ್ 586(ಶೇ 97.67);
ಎಸ್.ಮೌನಿಷ 583(ಶೇ 97.16);
ಆರ್.ರುಚಿತಾ 583(ಶೇ 97.16);
ಆರ್,ಶಿರೀಷ 579(ಶೇ 96.5);
ಚಾಂದಿನಿ 579(ಶೇ 96.5);
ಆರ್.ಸುಕನ್ಯ 578(ಶೇ 96.33);
ಜಿ.ವಿ.ವರ್ಷಿಣಿ 577(ಶೇ 96.17);
ಎನ್.ಎಂ.ಹರ್ಷಿತ 574(ಶೇ 95.67);
ಬಿ.ಎನ್.ಪ್ರಗತಿ 573(ಶೇ 95.5);
ಸಂಪದ 573(ಶೇ 95.5);
ಸಿ.ಸುಹಾನಾ 572(ಶೇ 95.33);
ಎನ್.ಎಸ್.ಶರತ್‌ರಾಜ್ 571(ಶೇ 95.16);
ವಿ.ಸಿ.ದೀಪ್ತಿ 569(ಶೇ 94.83);
ಬಿ.ಎಂ.ಗೌತಮಿ 568(ಶೇ 94.67);
ಎ.ಎಂ.ಸೌಂದರ್ಯ 568(ಶೇ 94.67);
ವಿ.ಪೃಥ್ವಿ 567(ಶೇ 94.5);
ಜಿ.ಕಾವ್ಯಶ್ರೀ 567(ಶೇ 94.5);
ಎಂ.ದೀಕ್ಷಿತಾ 567(ಶೇ 94.5);
ವಿ.ಹಂಸಲೇಖ 566(ಶೇ 94.33);
ಬಿ.ಪ್ರವೀಣ್‌ಗೌಡ 566(ಶೇ 94.33);
ಪಿ.ಚಿನ್ಮಯ ಸ್ವರೂಪ್ 565(ಶೇ 94.17);
ಕೌಶಿಕ್ ಭರದ್ವಾಜ್ 565(ಶೇ 94.17);
ಸಿ.ಎಸ್.ವರ್ಷ 565(ಶೇ 94.17);
ಬಿ.ಎಂ.ಶರಣ್ಯ 565(ಶೇ 94.17);
ಆರ್.ಮೋನಿಕಾ 564(ಶೇ 94);
ಎನ್.ಲೇಖನ 563(ಶೇ 93.83);
ಬಿ.ಪವನ್ 562(ಶೇ 93.67);
ಬಿ.ರಾಗಿಣಿ 561(ಶೇ 93.5);
ಆರ್.ಶಮಂತ್ 560(ಶೇ 93.33);
ಕಾರ್ತಿಕ್ ಕುಮಾರ್ 560(ಶೇ 93.33);
ಸಿ.ಮೇಘನಾ 559(ಶೇ 93.17);
ವೈ.ಎಂ.ಪುಷ್ಪಾ 557(ಶೇ 92.83);
ವಿ.ಚಂದ್ರಲೇಖ 557(ಶೇ 92.83);
ಟಿ.ಎಂ.ತೇಜಸ್‌ಗೌಡ 555(ಶೇ 92.5);
ಎಂ.ಮಧು 555(ಶೇ 92.5);
ಎ.ಅಶ್ವಿನಿ 555(ಶೇ 92.5);
ವಿ.ಮಧು 554(ಶೇ 92.33);
ರಮ್ಯ 554(ಶೇ 92.33);
ವಿ.ಕೆ.ಸೌಜನ್ಯ 553(ಶೇ 92.17);
ಎನ್.ಸಚಿನ್ 553(ಶೇ 92.17);
ಉಮ್ಮೆ ಐಮನ್ 550(ಶೇ 91.67);
ಜಿ.ವಿನಯ್ 550(ಶೇ 91.67);
ಸಿ.ಸಂಕೇತ್ 550(ಶೇ 91.67);
ಜಿ.ಎಸ್.ದಿವ್ಯಶ್ರೀ 549(ಶೇ 91.5);
ಆರ್.ನವ್ಯ 549(ಶೇ 91.5)
ವಾಣಿಜ್ಯ ವಿಭಾಗ:
ತೇಜಶ್ರೀ 578 (ಶೇ 96.33);
ಎನ್.ಎಸ್.ಭಾವನಾ 563(ಶೇ 93.83);
ಕೆ.ಎಸ್.ನವ್ಯಶ್ರೀ 562(ಶೇ 93.67);
ಲಕ್ಷ್ಮೀ 561(ಶೇ 93.5);
ಎನ್.ಸಿಂಧು 558(ಶೇ 93);
ದೀಪುಶ್ರೀ 558(ಶೇ 93);
ಬಿ.ಎಸ್.ಸಾಗರ್ 557(ಶೇ 92.83);
ಪ್ರವಲ್ಲಿಕಾ 552(ಶೇ 92);
ಜೆ.ಯು.ಚಿತ್ರಾ 544(ಶೇ 90.67)
ಕಲಾ ವಿಭಾಗ:
ಎಲ್.ಜಿ.ಅಭಿಲಾಷ್ 565(ಶೇ 94.17)
ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮತ್ತು ಬೆಂಬಲಿಗರು
ತಾಲ್ಲೂಕಿನ ಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಚುನಾವಣೆ ಪ್ರಚಾರ ನಡೆಸುವಾಗ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧ ಶಿವಕುಮಾರ್, ಸದಸ್ಯ ವಿ.ರವಿಕುಮಾರ್ ಹಾಗೂ ಬೆಂಬಲಿಗರನ್ನು ಪಕ್ಷಕ್ಕೆ ಜೆಡಿಎಸ್ ಅಭ್ಯರ್ಥಿ ಬಿ.ಎನ್. ರವಿಕುಮಾರ್ ಬರಮಾಡಿಕೊಂಡರು.
ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವುದು, ಮೂಲ ಭೂತ ಸೌಕರ್ಯ, ಉದ್ಯೋಗ ಹಾಗೂ ಅಭಿವೃದ್ಧಿ ನಮ್ಮ ಮುಖ್ಯ ಗುರಿಯಾಗಿದೆ ಎಂದು ಈ ಸಮಯದಲ್ಲಿ ಅವರು ತಿಳಿಸಿದರು.
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ರಾಜ್ಯದ ಅಭಿವೃದ್ಧಿ ಅಸಾಧ್ಯ ಎಂದು ಅರಿತಿರುವ ರಾಜ್ಯದ ಜನತೆ ಈ ಭಾರಿಯ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸಲಿದ್ದು ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುವುದು ಶತಸಿದ್ದ.
2018 ರ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿಯವರ ಕೈ ಬಲಪಡಿಸುವ ನಿಟ್ಟಿನಲ್ಲಿ ಕ್ಷೇತ್ರದಾದ್ಯಂತ ಈಗಾಗಲೇ ಬಿರುಸಿನ ಚುನಾವಣೆ ಪ್ರಚಾರ ಕೈಗೊಂಡಿದ್ದು, ಕಳೆದ ಅವರ 20 ತಿಂಗಳ ಮುಖ್ಯಮಂತ್ರಿಯ ಅವಧಿಯಲ್ಲಿ ಜಾರಿ ಮಾಡಿದ ವಿವಿಧ ಜನಪರ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಮೂಲಕ ಪಕ್ಷ ಸಂಘಟನೆಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ ಎಂದರು.
ಕ್ಷೇತ್ರದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಈ ಭಾರಿಯೂ ಕ್ಷೇತ್ರದಲ್ಲಿ ಜೆಡಿಎಸ್ ಅಧಿಕಾರ ಹಿಡಿಯಲಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಿವಕುಮಾರ್, ಎಂ.ಕೆ.ಗಿರೀಶ್, ಸಿ.ಎಂ.ಸೊಣ್ಣಪ್ಪ, ಅಮರೇಂದ್ರ, ಸುರೇಂದ್ರಬಾಬು, ಹರೀಶ್, ಮನೋಹರ ಸೇರಿದಂತೆ ಐವತ್ತಕ್ಕೂ ಹೆಚ್ಚು ಮಂದಿ ಯುವಕರು ಜೆಡಿಎಸ್ ಸೇರ್ಪಡೆಗೊಂಡರು.
ಕ್ಷೇತ್ರದ ಮತದಾರರು ಕ್ಷೇತ್ರದ ಅಭಿವೃದ್ದಿಗಾಗಿ ದುಡಿಯಲು ಅವಕಾಶ ಕಲ್ಪಿಸಿಕೊಡಬೇಕು – ಎಂ ರಾಜಣ್ಣ
ಜೆಡಿಎಸ್ ಪಕ್ಷದ ಹಾಲಿ ಶಾಸಕರೊಂದಿಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನಡೆದುಕೊಂಡ ರೀತಿ ಸರಿಯಿಲ್ಲ, ನನಗೆ ಬಿ ಫಾರಂ ನೀಡಿ ನನಗೆ ಗೊತ್ತಿಲ್ಲದಂತೆ ಮತ್ತೊಬ್ಬರಿಗೆ ಬಿ ಫಾರಂ ನೀಡುವ ಮೂಲಕ ಹಾಲಿ ಶಾಸಕರ ಕತ್ತು ಕುಯ್ಯುವ ಕೆಲಸ ಮಾಡಿದ್ದಾರೆ ಎಂದು ಎಂ.ರಾಜಣ್ಣ ಆರೋಪಿಸಿದರು.
ನಗರದ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಘೋಷ್ಠಿ ನಡೆಸಿ ಮಾತನಾಡಿದರು.
ಕ್ಷೇತ್ರದಲ್ಲಿ ಪಕ್ಷ ವಿರೋಧಿ ಚಟುವಟಿಕೆ, ಅಥವ ತಮ್ಮ ಕುಟುಂಬದ ವಿರುದ್ದ ಏನಾದರೂ ಕೆಟ್ಟದ್ದಾಗಿ ನಡೆದುಕೊಂಡಿದ್ದರೆ ಸಾಭೀತುಪಡಿಸಲಿ. ಅದು ಬಿಟ್ಟು ಪಕ್ಷದ ಕೋರ್ ಕಮಿಟಿ ಸಭೆ, ಫೆ ೧೭ ರಂದು ಯಲಹಂಕದಲ್ಲಿ ನಡೆದ ಕುಮಾರಪರ್ವ ಕಾರ್ಯಕ್ರಮದಲ್ಲಿ ಲಕ್ಷಾಂತರ ಕಾರ್ಯಕರ್ತರ ಮುಂದೆ ತಮ್ಮ ಹೆಸರು ಘೋಷಿಸಿ ಕೊನೆ ಗಳಿಗೆಯಲ್ಲಿ ತಮ್ಮ ವಿರೋಧಿಗಳಿಗೆ ೪ ನೇ ಬಿ ಫಾರಂ ನೀಡಿ ಕಣಕ್ಕಿಳಿಸುವ ಮೂಲಕ ನೀಚ ರಾಜಕಾರಣಕ್ಕೆ ಮುಂದಾಗಿರುವ ಬಗ್ಗೆ ಕ್ಷೇತ್ರದ ನಿಷ್ಟಾವಂತ ಜೆಡಿಎಸ್ ಕಾರ್ಯಕರ್ತರಿಗೆ ಉತ್ತರ ನೀಡಬೇಕು ಎಂದರು.
ಇವರ ಇಂತಹುದೇ ವರ್ತನೆಯಿಂದ ಬೇಸತ್ತ ಬಹುತೇಕ ಜೆಡಿಎಸ್ ಶಾಸಕರು ಈ ಹಿಂದೆಯೇ ಪಕ್ಷ ತೊರೆದು ಹೋದರು. ಆದರೆ ನಾನು ಕ್ಷೇತ್ರದ ಜನತೆ ನೀಡಿರುವ ಮತಗಳಿಗೆ ಗೌರವ ನೀಡಿ ಕಳೆದ ಐದು ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗಾಗಿ ದುಡಿದಿದ್ದೇನೆ. ಪ್ರತಿನಿತ್ಯ ಕ್ಷೇತ್ರದ ಒಬ್ಬ ಸಾಮಾನ್ಯ ವ್ಯಕ್ತಿಗೂ ಸಿಗಬೇಕು ಎಂಬ ಉದ್ದೇಶದಿಂದ ನಗರದಲ್ಲಿಯೇ ಉಳಿದುಕೊಂಡೆ. ಇಷ್ಟು ಪ್ರಾಮಾಣಿಕವಾಗಿ ದುಡಿದ ನನ್ನಂತಹ ನಿಷ್ಠಾವಂತನಿಗೆ ಮೋಸ ಮಾಡಲು ಮನಸಾದರೂ ಹೇಗೆ ಬಂತು.
ಒಂದು ವೇಳೆ ಮೋಸ ಮಾಡಲೇ ಬೇಕೆಂದಿದ್ದವರು ಮೊದಲೇ ಹೇಳಬೇಕಿತ್ತು. ಇಲ್ಲವೇ ಇಬ್ಬರನ್ನೂ ಕೂಡಿಸಿ ಮಾತನಾಡಬಹುದಿತ್ತು. ಆದರೆ ಬಿ ಫಾರಂ ನೀಡಿ ಸಿಹಿ ಊಟ ಬಡಿಸಿ ಊಟದಲ್ಲಿ ವಿಷ ಹಾಕುವ ಕೆಲಸ ಯಾಕೆ ಮಾಡಬೇಕಿತ್ತು ಎಂದರು.
ಕ್ಷೇತ್ರದ ನಿಷ್ಠಾವಂತ ಕಾರ್ಯಕರ್ತರೂ ಹಾಗು ತಮ್ಮ ಅಭಿಮಾನಿಗಳ ಒತ್ತಾಯದ ಮೇರೆಗೆ ಈ ಭಾರಿಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು ಕ್ಷೇತ್ರದ ಮತದಾರರು ಆಟೋ ಗುರುತಿಗೆ ಮತ ಹಾಕುವ ಮೂಲಕ ಮುಂದಿನ ಐದು ವರ್ಷಗಳ ಕಾಲ ಕ್ಷೇತ್ರದ ಅಭಿವೃದ್ದಿಗಾಗಿ ದುಡಿಯಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ ಮಾತನಾಡಿ ಕ್ಷೇತ್ರದ ಶಾಸಕ ಎಂ.ರಾಜಣ್ಣ ಹಾಗು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಮೋಸ ಮಾಡಿರುವ ವರಿಷ್ಠರ ಕ್ರಮ ವಿರೋಧಿಸಿ ಈ ಭಾರಿಯ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಫರ್ಧೆ ಮಾಡುತ್ತಿದ್ದು ಈ ಭಾರಿಯ ಚುನಾವಣೆ ಧರ್ಮ ಹಾಗು ಅಧರ್ಮಗಳ ನಡುವೆ ನಡೆಯುವಂತಾಗಿದೆ. ಕ್ಷೇತ್ರದ ಮತದಾರ ರಾಜಣ್ಣರನ್ನು ಜಯಶೀಲರನ್ನಾಗಿಸುವ ಮೂಲಕ ಧರ್ಮಕ್ಕೆ ಜಯ ನೀಡಲಿದ್ದಾರೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷಗಿರಿಗೆ ರಾಜೀನಾಮೆ ಸಲ್ಲಿಸಿದ್ದೀರಾ ಅಥವ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಾವೆಲ್ಲಾ ಎಚ್.ಡಿ.ಕುಮಾರಸ್ವಾಮಿಗೆ ನಿಷ್ಠೆಯಾಗಿರುವವರು. ಅವರು ಕೇಳಿದರೆ ಈ ಕ್ಷಣವೇ ರಾಜೀನಾಮೆ ಸಲ್ಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಡಾ.ಎ.ಎಂ.ಜಯರಾಮರೆಡ್ಡಿ, ನಗರಸಭೆ ಅಧ್ಯಕ್ಷ ಅಪ್ಸರ್‌ಪಾಷ, ಮುಖಂಡರಾದ ರೆಹಮತ್ತುಲ್ಲಾ, ಕೆ.ಮಂಜುನಾಥ್, ಕೆ.ಎಸ್.ಕನಕಪ್ರಸಾದ್ ಮತ್ತಿತರರು ಹಾಜರಿದ್ದರು.
ಪಕ್ಷೇತರ ಅಭ್ಯರ್ಥಿ ಎಂ ರಾಜಣ್ಣನವರ ಬದಲಾದ ಚುನಾವಣಾ ಚಿಹ್ನೆ
ಟಿಕೆಟ್ ಸಿಗದೇ ಅಂತಿಮ ಕ್ಷಣಗಳಲ್ಲಿ ಪಕ್ಷೇತರರಾಗಿ ಚುನಾವಣಾ ಕಣದಲ್ಲಿ ಉಳಿದಿರುವ ಎಂ.ರಾಜಣ್ಣರಿಗೆ ಒಂದರ ಹಿಂದೊಂದು ಆಘಾತಗಳು ಕಾಡುತ್ತಿವೆ.
ಶಿಡ್ಲಘಟ್ಟ ವಿದಾನಸಭೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಾರೀ ಹೆಣಗಾಟ ನಡೆಸಿದರಾದರೂ ಅಂತಮ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತ್ತು. ಆದರೆ ಶನಿವಾರ ಬೆಳಗ್ಗೆ ಚಿಹ್ನೆ ಬದಲಾವಣೆಯ ಮತ್ತೊಂದು ಆಘಾತ ಎದುರಾಗಿದೆ.
ನಾಮಪತ್ರ ವಾಪಸ್ಸು ಪಡೆಯುವ ಕೊನೆಯ ದಿನವಾದ ಏ 27 ರ ಶುಕ್ರವಾರ ಸಂಜೆ ರಾಜಣ್ಣರಿಗೆ ಚುನಾವಣಾಧಿಕಾರಿಗಳು ಉದಯಿಸುತ್ತಿರುವ ಸೂರ್ಯನ ಚಿಹ್ನೆ ಹಾಗು ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಬೈರೇಗೌಡರಿಗೆ ಕಾರು ಚಿಹ್ನೆ ನೀಡಿತ್ತು. ಆದರೆ ಕೇಂದ್ರ ಹಾಗು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು ಶುಕ್ರವಾರ ಸಂಜೆ ಏರ್ಪಡಿಸಲಾಗಿದ್ದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ದೇಶದ ಬೇರಾವುದೇ ರಾಜ್ಯದ ಪ್ರಾದೇಶಿಕ ಪಕ್ಷಗಳ ಚಿಹ್ನೆಗಳು ಪಕ್ಷೇತರ ಅಭ್ಯರ್ಥಿಗಳಿಗೆ ನೀಡಬಾರದು ಎಂಬ ಸೂಚನೆಯ ಮೇರೆಗೆ ಪುದುಚೇರಿಯ ದ್ರಾವಿಡ ಮುನ್ನೇತ್ರ ಕಜಗಮ್ ಪಕ್ಷದ ಚಿಹ್ನೆಯಾಗಿರುವ ಉದಯಿಸುತ್ತಿರುವ ಸೂರ್ಯ ಹಾಗು ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಚಿಹ್ನೆಯಾಗಿರುವ ಕಾರು ಚಿಹ್ನೆಯನ್ನು ಬದಲಾಯಿಸಿ ಇದೀಗ ಪಕ್ಷೇತರ ಅಭ್ಯರ್ಥಿಗಳಾದ ಎಂ.ರಾಜಣ್ಣ ರಿಗೆ ಆಟೋ ಹಾಗು ಬೈರೇಗೌಡರಿಗೆ ಗ್ಯಾಸ್ ಸಿಲಿಂಡರ್ ಚಿಹ್ನೆ ಯನ್ನು ಚುನಾವಣಾಧಿಕಾರಿಗಳು ನೀಡಿದ್ದಾರೆ.
ಶ್ರೀ ಶಂಕರಮಠದಲ್ಲಿ ಶ್ರೀ ಶಂಕರಾಚಾರ್ಯರಿಗೆ ವಿಶೇಷ ಪೂಜೆ
ನಗರದ ಶ್ರೀ ಶಂಕರಮಠದಲ್ಲಿ ಶುಕ್ರವಾರ ದ್ವಾದಶಿಯಂದು ಶ್ರೀ ಶಂಕರಾಚಾರ್ಯರಿಗೆ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು.
ವಿಶೇಷ ಪೂಜೆಯ ಪ್ರಯುಕ್ತ ಆದಿಗುರು ಶ್ರೀ ಶಂಕರಾಚಾರ್ಯರು ಮತ್ತು ಶ್ರೀ ಭಾರತಿ ತೀರ್ಥ ಸ್ವಾಮಿಗಳು ರಚಿಸಿದ ವಿವಿಧ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ಶೃಂಗೇರಿ ಸಹೋದರಿಯರಾದ ಮೀನಾಕ್ಷಿ ಮತ್ತು ಭಾರತಿ ರವರಿಂದ ನಡೆಯಿತು. ಪಿಟೀಲು ಜಿ.ಎನ್. ಶ್ಯಾಮ್ ಸುಂದರ್ ಮತ್ತು ಮೃದಂಗ ಕೈವಾರ ರಾಮ್ ಪ್ರಸಾದ್ ನುಡಿಸಿದರು.
ಪೂಜಾ ಕಾರ್ಯಕ್ರಮದ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶ್ರೀ ಶಂಕರ ಸೇವಾ ಟ್ರಸ್ಟ್ ಸದಸ್ಯರು, ತಾಲ್ಲೂಕು ಬ್ರಾಹ್ಮಣ ಸಂಘದ ಪದಾಧಿಕಾರಿಗಳು, ಗಾಯತ್ರಿ ಮಹಿಳಾ ಮಂಡಳಿ ಸದಸ್ಯರು ಮತ್ತು ವಿಪ್ರ ಪ್ರತಿಭಾ ಪುರಸ್ಕಾರ ಸೇವಾ ಟ್ರಸ್ಟ್‌ನ ಸದಸ್ಯರು ಭಾಗವಹಿಸಿದ್ದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ 15 ಮಂದಿ ಅಭ್ಯರ್ಥಿಗಳ ಪಟ್ಟಿ ಹಾಗೂ ಚಿಹ್ನೆಗಳು ಪ್ರಕಟ
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಯಲ್ಲಿ ಉಳಿದ 15 ಮಂದಿ ಅಭ್ಯರ್ಥಿಗಳ ಪಟ್ಟಿ ಹಾಗೂ ಅವರಿಗೆ ನೀಡಿರುವ ಚಿಹ್ನೆಗಳನ್ನು ಚುನಾವಣಾಧಿಕಾರಿಗಳು ಶುಕ್ರವಾರ ಸಂಜೆ ಪ್ರಕಟಿಸಿದರು.
ಸ್ಪರ್ಧೆಯಲ್ಲಿ ಉಳಿದ ಹದಿನೈದು ಅಭ್ಯರ್ಥಿಗಳು, ಪಕ್ಷ ಹಾಗೂ ಚಿಹ್ನೆಯ ವಿವರ :
ವಿ.ಮುನಿಯಪ್ಪ(ಕಾಂಗ್ರೆಸ್– ಕೈ), ಬಿ.ಎನ್.ರವಿಕುಮಾರ್(ಜೆಡಿಎಸ್– ತಲೆ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ), ಎಚ್.ಸುರೇಶ್(ಬಿಜೆಪಿ– ಕಮಲ), ಎಂ.ನಾರಾಯಣಸ್ವಾಮಿ(ಜೈ ಭಾರತ್ ಜನಸೇನಾ ಪಾರ್ಟಿ– ಗ್ಯಾಸ್ ಒಲೆ), ಮಹಮ್ಮದ್ ಇಸ್ಮಾಯಿಲ್(ಸಮಾಜವಾದಿ ಪಾರ್ಟಿ– ಬೈಸಿಕಲ್), ಬಿ.ಎಸ್.ಮೌಲಾಜಾನ್(ಅಂಬೇಡ್ಕರ್ ನ್ಯಾಷನಲ್ ಕಾಂಗ್ರೆಸ್– ಟ್ರಕ್), ಯಾಮೇಗೌಡ(ಎಂ.ಇ.ಪಿ– ವಜ್ರ), ವೆಂಕಟೇಶಪ್ಪ(ರಿಪಬ್ಲಿಕನ್ ಸೇನಾ– ಕ್ರೇನ್), ಆಂಜಿನಪ್ಪ ಪುಟ್ಟು(ಪಕ್ಷೇತರ– ಟ್ರಾಕ್ಟರ್ ಓಡಿಸುತ್ತಿರುವ ರೈತ), ವೈ.ಎನ್.ಗಂಗಾಧರ(ಪಕ್ಷೇತರ – ಬ್ಯಾಟ್), ವಿಸ್ಡಂ ನಾಗರಾಜು(ಪಕ್ಷೇತರ – ಕೊಳಲು), ಬೈರೇಗೌಡ ವೆಂಕಟಶಾಮಿ(ಪಕ್ಷೇತರ – ಕಾರು), ಆರ್.ಮೋಹನ್(ಪಕ್ಷೇತರ– ಬಳೆಗಳು), ಎಸ್.ಎನ್.ರವಿಕುಮಾರ್(ಪಕ್ಷೇತರ– ಬ್ಯಾಟ್ಸ್ಮ್‌ನ್), ಎಂ.ರಾಜಣ್ಣ(ಪಕ್ಷೇತರ – ಉದಯಿಸುತತಿರುವ ಸೂರ್ಯ)


ನಾಮಪತ್ರವನ್ನು ವಾಪಸ್ ಪಡೆದ ನಾಲ್ವರು :
ಹರಿಕೃಷ್ಣ, ಬಿ.ಅಮ್ಜದ್‌ಪಾಷ, ಎನ್.ವೆಂಕಟೇಶ್ ಮತ್ತು ಡಿ.ಮುನಿರಾಜು(ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ)
ನಿಧನ ವಾರ್ತೆ – ಶಾಸಕ ಎಂ.ರಾಜಣ್ಣ ಅವರಿಗೆ ಪಿತೃ ವಿಯೋಗ
ಶಾಸಕ ಎಂ.ರಾಜಣ್ಣ ಅವರ ತಂದೆ ಎಂ.ಬಿ.ಮುನಿಯಪ್ಪ (79) ಶುಕ್ರವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶುಕ್ರವಾರ ಬೆಳಿಗ್ಗೆ ಹೃದಯಾಘಾತಕ್ಕೆ ಒಳಗಾಗಿ ಇಹಲೋಕವನ್ನು ತ್ಯಜಿಸಿದ್ದಾರೆ. ಅವರು ಪತ್ನಿ, ಮಕ್ಕಳಾದ ಶಾಸಕ ಎಂ.ರಾಜಣ್ಣ ಮತ್ತು ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ಶುಕ್ರವಾರ ಸಂಜೆ ನೆರವೇರಿಸಲಾಯಿತು. ಮುಖಂಡರಾದ ವಿ.ಮುನಿಯಪ್ಪ, ಮೇಲೂರು ಬಿ.ಎನ್.ರವಿಕುಮಾರ್, ಆಂಜಿನಪ್ಪ ಪುಟ್ಟು, ಎಚ್.ಸುರೇಶ್, ಡಾ.ಧನಂಜಯರೆಡ್ಡಿ, ಅಫ್ಸರ್ ಪಾಷ, ತಾದೂರು ರಘು, ದೊಣ್ಣಹಳ್ಳಿ ರಾಮಣ್ಣ ಮತ್ತಿತರರು ಭೇಟಿ ನೀಡಿ ಮೃತರ ಆತ್ಮಕ್ಕೆ ಶಾಂತಿಯನ್ನು ಕೋರಿ ಶಾಸಕರಿಗೆ ಸಾಂತ್ವನ ಹೇಳಿದ್ದಾರೆ.
ವಿರಾಟ್ ವೀರಬ್ರಹ್ಮೇಂದ್ರ ಸ್ವಾಮಿಯವರ ಆರಾಧನೆ
ನಗರದ ಒಂದನೇ ನಗರ್ತಪೇಟೆಯ ಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲಿ ಬುಧವಾರ ಕಾಳಿಕಾಂಬ ಕಮಠೇಶ್ವರಸ್ವಾಮಿ ಸೇವಾ ಸಮಿತಿ, ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ, ಕಾಳಿಕಾಂಬ ಮಹಿಳಾ ಮಂಡಲಿ, ಕಾಳಿಕಾಂಬ ಕಮಠೇಶ್ವರ ಯುವಕ ಮಂಡಲಿ ವತಿಯಿಂದ ಶ್ರೀಮತ್ ವಿರಾಟ್ ವೀರಬ್ರಹ್ಮೇಂದ್ರ ಸ್ವಾಮಿಯವರ ಆರಾಧನೆ ಮತ್ತು ಸಾಮೂಹಿಕ ಉಪನಯನಗಳ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ರಾಜಘಟ್ಟದ ಶ್ರೀ ಸದ್ಗುರು ವೀರಾನಂದ ಅಮರಜ್ಯೋತಿ ವಿಶ್ವಕುಂಡಲಿ ಯೋಗಾಶ್ರಮದ ಕಾಳೀಸುತ ಶ್ರೀ ಉಮಾ ಮಹೇಶ್ವರ ಸ್ವಾಮೀಜಿ ಮಾತನಾಡಿದರು.
ಗುಡಿ, ಗೋಪುರಗಳಲ್ಲಿರುವ ವಿಗ್ರಹ ಸಹಿತ ವಿವಿಧ ಬಗೆಯ ಕುಸುರಿ ಕೆಲಸಗಳಿಂದ ಪ್ರಖ್ಯಾತಿಗೊಂಡ ವಿಶೇಷವಾದ ಧರ್ಮವೊಂದಿದ್ದರೆ ಅದು ವಿಶ್ವಕರ್ಮ ಧರ್ಮ. ಸೂರ್ಯದೇವ ಹಾಗೂ ಯಮ ಧರ್ಮರಾಯನ ಬಂಧು ಬಳಗದವರಾದ ವಿಶ್ವಕರ್ಮ ಜನಾಂಗ ಚಿನ್ನ, ವಜ್ರ, ಸಿಂಹಾಸನ, ಮಂಚ, ಕುರ್ಚಿ, ಮನೆ ಮಹಡಿ, ದೇವರ ವಿಗ್ರಹ, ಕುಸುರಿ ವಸ್ತುಗಳನ್ನು ನಿರ್ಮಿಸಿ ಸಮಾಜಕ್ಕೆ ಅಗಾಧವಾದ ಕೊಡುಗೆ ನೀಡಿದೆ. ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಅವರು ಹೇಳಿದರು.
ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮರನಾರಾಯಣಾಚಾರ್ಯ ಮಾತನಾಡಿ,‘ಚಿನ್ನ, ಬೆಳ್ಳಿ, ಮರಗೆಲಸ, ಕಮ್ಮಾರಿಕೆ, ಶಿಲ್ಪಕಲೆ ಮತ್ತಿತರ ಕುಶಲಕರ್ಮಿ ಸಮುದಾಯಗಳ ಅಭಿವೃದ್ಧಿಗಾಗಿ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ಅದರಿಂದ ಸಿಗುವ ಸೌಲಭ್ಯಗಳನ್ನು ಬಡ ಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ’ ಎಂದು ತಿಳಿಸಿದರು.
ದೇವಾಲಯದಲ್ಲಿ ಮೂಲ ವಿಗ್ರಹಳಿಗೆ ಅಭಿಷೇಕ, ಸಾಮೂಹಿಕ ಉಪನಯನಗಳು, ವಿರಾಟ್ ವೀರಬ್ರಹ್ಮೇಂದ್ರಸ್ವಾಮಿ ಯಜ್ಞ, ಹೋಮ, ವಿಶ್ವಕರ್ಮ ಯಜ್ಞ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದಗಳ ವಿನಿಯೋಗ ನಡೆಯಿತು.
ಕಾಳಿಕಾಂಬ ಕಮಠೇಶ್ವರಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಮುನಿರತ್ನಮಾಚಾರಿ, ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಕೆ.ಎನ್.ಜನಾರ್ಧನಮೂರ್ತಿ, ಈಶ್ವರಾಚಾರಿ, ಕೃಷ್ಣಾಚಾರಿ, ಆರ್.ಜಗದೀಶ್‌ಕುಮಾರ್, ಪ್ರಧಾನ ಅರ್ಚಕ ಮುನೀಶ್ವರಾಚಾರಿ, ಗೋಪಿನಾಥ್, ಮಂಜುಳಾ ಜಗದೀಶ್, ಲಕ್ಷ್ಮೀನಾರಾಯಣಮ್ಮ ಹಾಜರಿದ್ದರು.
ನಾಮಪತ್ರ ಪರಿಶೀಲನೆ – ಎಂ.ರಾಜಣ್ಣ ಟಿಕೇಟ್‌ನ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರ ಕಾತರ
ಬದ್ಧ ಎದುರಾಳಿಯಂತೆ ಇಲ್ಲಿಯವರೆಗೂ ಜೆಡಿಎಸ್ ಪಕ್ಷವನ್ನು ಚುನಾವಣೆಗಳಲ್ಲಿ ಎದುರಿಸಿಕೊಂಡು ಬರುತ್ತಿದ್ದ ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರು ಕಡೆಯ ಕ್ಷಣದಲ್ಲಿ ನಾಮಪತ್ರ ಸಲ್ಲಿಸಿದ್ದ ಬಿ.ಎನ್.ರವಿಕುಮಾರ್ ಅವರೇ ಜೆಡಿಎಸ್ ಅಭ್ಯರ್ಥಿಯೆಂದು ಘೋಷಣೆಯಾಗುತ್ತಿದ್ದಂತೆಯೇ ಪಕ್ಷ ಬೇಧ ಮರೆತು ಎಂ.ರಾಜಣ್ಣ ಅವರಿಗೆ ಸಲಹೆ ಸೂಚನೆ ನೀಡುತ್ತಿದ್ದ ನಡೆ ನೋಡುಗರಿಗೆ ಹಸ್ಯಾಸ್ಪದವಾಗಿ ಕಂಡು ಬಂದಿತ್ತು.
ಜೆಡಿಎಸ್ ಪಕ್ಷದಲ್ಲಿನ ಬೆಳವಣಿಗೆಗಳು ಮತ್ತು ಆಗುಹೋಗುಗಳ ಮೇಲೆ ಕಣ್ಣಿಟ್ಟಿದ್ದ ಕೆಲವು ಕಾಂಗ್ರೆಸ್ ಮುಖಂಡರು ನಾಮಪತ್ರ ಪರಿಶೀಲನೆಯ ಸಮಯದಲ್ಲಿ ತಾಲ್ಲೂಕು ಕಚೇರಿಯ ಬಳಿಯೇ ಬೀಡುಬಿಟ್ಟಿದ್ದರು. ಎಂ.ರಾಜಣ್ಣ ನಾಮಪತ್ರ ಪರಿಶೀಲನೆಯ ಕೊಠಡಿಯಿಂದ ಹೊರ ಬಂದರೂ ‘ನೀವು ಬಿಡಬೇಡಿ, ಕಾನೂನು ಹೋರಾಟ ಮಾಡಿ. ಚುನಾವಣಾಧಿಕಾರಿಗಳನ್ನು ಪ್ರಶ್ನಿಸಿ’ ಎಂದು ಪುನಃ ಕೊಠಡಿಯ ಒಳಕ್ಕೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ಕಳುಹಿಸಿದರು.
ಪ್ಯಾರೆಗಾನ್ ಶಾಲೆ ಬಳಿಯ ಭುವನೇಶ್ವರಿ ವೃತ್ತದಲ್ಲಿ ಡಾ.ರಾಜ್‌ಕುಮಾರ್ ಅವರ ಹುಟ್ಟುಹಬ್ಬ ಆಚರಣೆ
ಡಾ. ರಾಜ್‌ಕುಮಾರ್ ಅವರು ಅಣ್ಣಾವ್ರು ಎಂದೇ ಎಲ್ಲರಿಗೂ ಪರಿಚಿತನಾಗಿ ಮನೆಯ ಹಿರಿಯ ಮಾರ್ಗದರ್ಶಕರಿದ್ದಂತೆ. ಅವರ ಸರಳ ಮತ್ತು ಸಜ್ಜನಿಕೆಯ ಸ್ವಭಾವ ಎಲ್ಲರಿಗೂ ಸ್ಫೂರ್ತಿ. ನೆಲ, ಭಾಷೆ, ಸಂಸ್ಕೃತಿ ಬಗ್ಗೆ ಅಪಾರ ಕಾಳಜಿ ಹಾಗೂ ಗೌರವವನ್ನು ಅವರು ಹೊಂದಿದ್ದರು. ಅವರ ಬದುಕು, ನಡೆ, ನುಡಿ, ಜೀವನ ಪ್ರತಿಯೊಬ್ಬ ಕನ್ನಡಿಗನಿಗೂ ಆದರ್ಶವಾಗಿದೆ ಎಂದು ಕೊರಿಯರ್ ರಾಜು ತಿಳಿಸಿದರು.
ನಗರದ ಪ್ಯಾರೆಗಾನ್ ಶಾಲೆ ಬಳಿಯ ಭುವನೇಶ್ವರಿ ವೃತ್ತದಲ್ಲಿ ಮಂಗಳವಾರ ಡಾ.ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಕೇಕ್ ಕತ್ತರಿಸಿ, ಮಜ್ಜಿಗೆ, ಪಾನಕ, ಹೆಸರುಬೇಳೆಯನ್ನು ಎಲ್ಲರಿಗೂ ಹಂಚಲಾಯಿತು. ಶ್ರೀಧರ್, ಸೋಮು, ಮಂಜು, ಚಂದ್ರ, ಟಿ.ಟಿ.ನರಸಿಂಹಪ್ಪ ಹಾಜರಿದ್ದರು.
ಶೇಡ್‌ನೆಟ್ ಹೌಸ್ ಹಾಗೂ ಕೃಷಿ ಹೊಂಡ ಪೇಪರ್‌ಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮ
ತಾಲ್ಲೂಕಿನ ಆನೂರು ಗ್ರಾಮದ ವೀರಕೆಂಪಣ್ಣ ಅವರ ತೋಟದಲ್ಲಿ ಬುಧವಾರ ಸಿರಿಸಮೃದ್ಧ ರೈತಕೂಟ ಹಾಗೂ ಗರವಾರೆ ವಾಲ್‌ರೂಫ್ಸ್ ಕಂಪನಿ ವತಿಯಿಂದ ಶೇಡ್‌ನೆಟ್ ಹೌಸ್ ಹಾಗೂ ಕೃಷಿ ಹೊಂಡ ಪೇಪರ್‌ಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ರೈತ ಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್.ಜಿ.ಗೋಪಾಲಗೌಡ ಮಾತನಾಡಿ, ಪಾಲಿ ಹೌಸ್ ನಿರ್ಮಾಣಕ್ಕೆ ತಗುಲುವ ವೆಚ್ಚದಲ್ಲಿ ಶೇ.20 ರಷ್ಟು ವೆಚ್ಚಕ್ಕೆ ಶೇಡ್‌ನೆಟ್ ಹೌಸ್ ನಿರ್ಮಿಸಿಕೊಳ್ಳಬಹುದು. ಇದರಿಂದ ರೈತರು ಸಹಾಯಧನಕ್ಕಾಗಿ ಇಲಾಖೆಗಳನ್ನು ಸುತ್ತುವುದು ಹಾಗೂ ಬ್ಯಾಂಕ್‌ನಲ್ಲಿ ಸಾಲ ತೀರಿಸಲಾಗದೆ ಕಂಗಾಲಾಗುವುದು ತಪ್ಪುತ್ತದೆ ಎಂದು ತಿಳಿಸಿದರು.
ಪಾಲಿ ಹೌಸ್ ನಿಂದ ಆಗುವಷ್ಟೇ ಪ್ರಯೋಜನ, ಬೆಳೆ ಬೆಳೆಯುವುದು ಹಾಗೂ ಆದಾಯವನ್ನು ಕಡಿಮೆ ಬಂಡವಾಳದಲ್ಲಿ ಶೇಡ್‌ನೆಟ್ ಹೌಸ್ ನಿರ್ಮಾಣ ಮಾಡಿಕೊಳ್ಳುವ ಮೂಲಕ ಮಾಡಿಕೊಳ್ಳಬಹುದು. ಈಗಾಗಲೇ ಅದನ್ನು ನಿರ್ಮಿಸಿರವ ಪ್ರಗತಿಪರ ರೈತ ಆನೂರು ವೀರಕೆಂಪಣ್ಣ ಅವರ ತೋಟದಲ್ಲಿ ರೈತರು ನೋಡಿ ಅದರ ಉಪಯುಕ್ತತೆಗಳನ್ನು ಕಂಡುಕೊಳ್ಳಬಹುದು ಎಂದರು.
ಗರವಾರೆ ವಾಲ್‌ರೂಫ್ಸ್ ಕಂಪನಿಯ ಶ್ಯಾಮ್‌ಶೆಟ್ಟಿ ಮತ್ತು ಶ್ರೀಕಾಂತ್ ಮಾತನಾಡಿ, ಶೇಡ್‌ನೆಟ್ ನಿಂದಾಗುವ ಪ್ರಯೋಜನಗಳು, ಪಾಲಿ ಹೌಸ್ ಕೃಷಿ ಹೊಂಡಕ್ಕೆ ಹಾಕುವ ವಸ್ತುಗಳ ಗುಣಮಟ್ಟ ಮುಂತಾದ ವಿಷಯಗಳನ್ನು ಸವಿಸ್ತಾರವಾಗಿ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.
ಸಿರಿಸಮೃದ್ಧ ರೈತಕೂಟದ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ, ಕೃಷಿ ಪಂಡಿತ ಆನೂರು ವೀರಕೆಂಪಣ್ಣ, ರೈತರಾದ ರಾಮಮೂರ್ತಿ, ಚಂದ್ರಪ್ಪ, ನಾಗೇಶ, ಸತೀಶ, ವೆಂಕಟೇಶಪ್ಪ, ಪ್ರಕಾಶ್, ನಾಗೇಂದ್ರ, ಶ್ರೀನಿವಾಸ್, ಬೂದಾಳ ರಾಮಾಂಜಿ, ದಿವಾಕರ್, ಗರ್‌ವಾರೆ ವಾಲ್‌ರೂಫ್ಸ್ ಕಂಪನಿಯ ಅತಿನ್ ಗೋಯಲ್, ವಿಕಾಸ್‌ಕುಮಾರ್, ಶ್ರೀಕಾಂತ್ ವೇಮುಲ, ಅಯೂಬ್ ಹಾಜರಿದ್ದರು.
ಬಿ. ಎನ್. ರವಿಕುಮಾರ ಜೆಡಿಎಸ್ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಅಂಗೀಕಾರ
ಜಾತ್ಯಾತೀತ ಜನತಾದಳದ ಅಭ್ಯರ್ಥಿಯಾಗಿ ಬಿ. ಎನ್. ರವಿಕುಮಾರ ಅವರನ್ನು ನಾಮಪತ್ರ ಪರಿಶೀಲನೆಯ ನಂತರ ಅಧಿಕೃತವಾಗಿ ಚುನಾವಣಾ ಆಯೋಗ ಅಂಗೀಕರಿಸಿದ್ದಾರೆ. ಇಲ್ಲಿಗೆ ಇಷ್ಟು ದಿನ ನಡೆಯುತ್ತಿದ್ದ ಜೆಡಿಎಸ್ ಅಭ್ಯರ್ಥಿ ಆಯ್ಕೆಯ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಂತಾಗಿದೆ. ಎಂ ರಾಜಣ್ಣ ರವರು ಜೆಡಿಎಸ್ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರ ಅನೂರ್ಜಿತಗೊಂಡಿದ್ದು, ಜೆಡಿಎಸ್ ನಿಂದ ಅಧಿಕೃತ ಅಭ್ಯರ್ಥಿಯಾರು ಆಗುತ್ತಾರೆ ಎನ್ನುವ ಕುರಿತು ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಈ ಗೊಂದಲಕ್ಕೆ ತೆರೆಬಿದ್ದಿದೆ.
ಮೇಲೂರು ಬಿ.ಎನ್.ರವಿಕುಮಾರ್ ಮಂಗಳವಾರ ನಾಮಪತ್ರ ಸಲ್ಲಿಸಲು ಅವಕಾಶವಿದ್ದ ಕಡೆಯ ನಿಮಿಷಗಳಲ್ಲಿ ಆಗಮಿಸಿ ಜೆಡಿಎಸ್ ವರಿಷ್ಠರ ಪತ್ರ ಹಾಗೂ ಪರಿಷ್ಕೃತ ಎ ಮತ್ತು ಬಿ ಫಾರಂ ನೊಂದಿಗೆ ನಾಮಪತ್ರ ಸಲ್ಲಿಸಿದ್ದರು.
ಪಕ್ಷದ ವರಿಷ್ಠರ ಪತ್ರ ಮತ್ತು ಪರಿಷ್ಕೃತ ಎ ಮತ್ತು ಬಿ ಫಾರಂ ಯಾರು ಕಡೆಯದಾಗಿ ಸಲ್ಲಿಸಿರುತ್ತಾರೋ ಅವರದ್ದೇ ನಾಮಪತ್ರ ಊರ್ಜಿತವಾಗುತ್ತದೆ ಎಂಬ ಆಧಾರದ ಮೇಲೆ ಮಧ್ಯಾಹ್ನ 2.15 ರಲ್ಲಿ ನಾಮಪತ್ರ ಸಲ್ಲಿಸಿದ್ದ ಎಂ.ರಾಜಣ್ಣ ಅವರ ನಾಮಪತ್ರ ಅನೂರ್ಜಿತಗೊಂಡು 2.45 ರಲ್ಲಿ ನಾಮಪತ್ರ ಸಲ್ಲಿಸಿದ್ದ ಮೇಲೂರು ಬಿ.ಎನ್.ರವಿಕುಮಾರ್ ಅವರ ನಾಮಪತ್ರ ಊರ್ಜಿತವಾಗಿದೆ.



