ಉಲ್ಲೂರುಪೇಟೆಯ ಶ್ರೀರಾಮ ಭಜನೆಮಂದಿರದ ಕಾರ್ಯದರ್ಶಿಗಳಾದ ಶ್ರೀ ವೈ.ವಿ. ರಾಮಚಂದ್ರಪ್ಪನವರು(64) ಬುಧವಾರ ಮುಂಜಾನೆ 6 ಘಂಟೆ ಸಮಯದಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಮ್ಮ ಉಲ್ಲೂರುಪೇಟೆಯ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಪತ್ನಿ, ಇಬ್ಬರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅವರು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ಚಿಂತಾಮಣಿ ರಸ್ತೆಯಲ್ಲಿರುವ ಅವರ ಜಮೀನಿನಲ್ಲಿ ಬುಧವಾರ ಮಧ್ಯಾಹ್ನ 1.30ಕ್ಕೆ ನಡೆಸಲಾಗುವುದು.
ನಿಧನ ವಾರ್ತೆ – ಶ್ರೀ ವೈ.ವಿ. ರಾಮಚಂದ್ರಪ್ಪನವರು
ಮತದಾನದ ಅರಿವು ಮೂಡಿಸುವ ‘ಆಧಾರ್’ ಕಿರುಚಿತ್ರ ಬಿಡುಗಡೆ
ಮತದಾನದ ಅರಿವು ಮೂಡಿಸುವ ‘ಆಧಾರ್’ ಎಂಬ ಕಿರುಚಿತ್ರವನ್ನು ಡಾ.ರಾಜ್‌ಕುಮಾರ್ ಅವರ ಜನ್ಮದಿನದಂದು ಬಿಡುಗಡೆ ಮಾಡಲು ಹರ್ಷವಾಗುತ್ತಿದೆ ಎಂದು ಕಿರಿಚಿತ್ರ ನಿರ್ದೇಶಕ ಮೇಲೂರು ರಂಗ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಹೊರವಲಯದ ಭಟ್ರೇನಹಳ್ಳಿ ಸಾಯಿನಾಥ ಜ್ಞಾನಮಂದಿರದಲ್ಲಿ ಮಂಗಳವಾರ ‘ಆಧಾರ್’ ಎಂಬ ಕಿರುಚಿತ್ರವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಮತದಾನದಲ್ಲಿ ಅಡ್ಡಮತದಾನ ನಡೆಯುವ ಪ್ರಯತ್ನದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಬೇಕು. ಹೆಬ್ಬೆಟ್ಟಿನ ಗುರುತನ್ನು ಬಳಸಿ ವ್ಯಕ್ತಿಯನ್ನು ಗುರುತಿಸಿ ಮತದಾನ ನಡೆಸುವ ಯಂತ್ರದ ಬಗ್ಗೆಯೂ ಈ ಚಿತ್ರದಲ್ಲಿ ಸಂದೇಶವಿದೆ. ಮತದಾನ ನಮ್ಮ ಕರ್ತವ್ಯ, ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ನಮ್ಮ ಹಕ್ಕನ್ನು ಸ್ಥಾಪಿಸಬೇಕು ಎಂಬ ವಿಚಾರವನ್ನು ತಿಳಿಸುವ ಹಿನ್ನೆಲೆಯಲ್ಲಿ ಮತದಾನ ಯಂತ್ರದ ತಾಂತ್ರಿಕತೆಯ ಬಗ್ಗೆಯೂ ಹೊಸ ಹೊಳಹುಗಳಿವೆ ಎಂದು ವಿವರಿಸಿದರು.
‘ಆಧಾರ್’ ಕಿರುಚಿತ್ರದ ನಿರ್ಮಾಪಕ ಚೇತನ್‌ಗೌಡ, ನೃತ್ಯ ಕಲಾವಿದ ಸಿ.ಎನ್.ಮುನಿರಾಜು, ನಟ ರವಿಕಿರಣ್, ನಟಿಯರಾದ ಸುಷ್ಮ, ಮಾಧವಿ, ಕಾರ್ತಿಕ್, ಮಂಜುನಾಥ್, ಮಹೇಶ್, ಮಂಜು, ನರೇಂದ್ರ ಹಾಜರಿದ್ದರು.
ಹೆಸರಿನ ಗೊಂದಲ ಮೂಡಿಸಲು ನಾಮಪತ್ರ ಸಲ್ಲಿಕೆ
ಒಂದೇ ಹೆಸರಿನ ಡಮ್ಮಿ ಅಭ್ಯರ್ಥಿಗಳನ್ನು ನಿಲ್ಲಿಸಿ ಮತದಾರರಲ್ಲಿ ಗೊಂದಲ ಮೂಡಿಸಿ ಅದರ ಲಾಭವನ್ನು ಪಡೆಯುವ ಪ್ರಯತ್ನಗಳು ಹಲವೆಡೆ ನಡೆಯುತ್ತವೆ.
ಎಸ್.ಎನ್.ರವಿಕುಮಾರ್ ಎಂಬ ಹೆಸರಿನ ಬೆಂಗಳೂರಿನಲ್ಲಿ ನೆಲೆಸಿರುವ ಶಿಡ್ಲಘಟ್ಟದ ಉಲ್ಲೂರುಪೇಟೆಯ ನಿವಾಸಿ ಪಕ್ಷೇತರನಾಗಿ ಮಂಗಳವಾರ ನಾಮಪತ್ರವನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಹೊರಗೆ ನಿಂತು ಎಸ್.ಎನ್.ರವಿಕುಮಾರ್ ಅವರನ್ನು ಒಳಗೆ ಕಳಿಸುತ್ತಿದ್ದುದು ಕಂಡು ಮೇಲೂರು ಬಿ.ಎನ್.ರವಿಕುಮಾರ್ ಅವರ ಹೆಸರಿನಲ್ಲಿ ಮತದಾರರಿಗೆ ಗೊಂದಲ ಸೃಷ್ಟಿಸಲು ಕಾಂಗ್ರೆಸಿಗರ ತಂತ್ರವಿದಿ ಎಂದು ಜನರು ಮಾತನಾಡಿಕೊಂಡರು. ಕಾಕತಾಳೀಯವೆಂದರೆ ಎಸ್.ಎನ್.ರವಿಕುಮಾರ್ ತಾಯಿ ಹಿಂದೆ ಪುರಸಭೆಯ ಸದಸ್ಯರಾಗಿದ್ದು, ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದರು.
ಬಿಜೆಪಿ ಪಕ್ಷದ ಅಭ್ಯರ್ಥಿ ಎಚ್.ಸುರೇಶ್ ನಾಮಪತ್ರ ಸಲ್ಲಿಕೆ
ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಮಂಗಳವಾರ ಬಿಜೆಪಿ ಪಕ್ಷದ ಬಿ ಫಾರಂ ಸಿಕ್ಕಿದ್ದರಿಂದ ಎಚ್.ಸುರೇಶ್ ಪಕ್ಷದ ಮುಖಂಡರು ಹಾಗೂ ಬೆಂಬಲಿಗರೊಂದಿಗೆ ಅರಳೇಪೇಟೆಯ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ತಮ್ಮ ನಾಮಪತ್ರ ಸಲ್ಲಿಸಿದರು.
ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮೇಲೂರು ಬಿ.ಎನ್.ರವಿಕುಮಾರ್
ಸೋಮವಾರ ಸಹಸ್ರಾರು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ಜೆಡಿಎಸ್ ವರಿಷ್ಠರ ಪತ್ರ ಹಾಗೂ ಪರಿಷ್ಕೃತ ಎ ಮತ್ತು ಬಿ ಫಾರಂ ನೊಂದಿಗೆ ನಾಮಪತ್ರ ಸಲ್ಲಿಸಿದ್ದ ಬಿ.ಎನ್.ರವಿಕುಮಾರ್ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಮಂಗಳವಾರ ಮತ್ತೊಮ್ಮೆ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ನಾಮ ಪತ್ರ ಸಲ್ಲಿಸಿದ ಅವರು ಮಾತನಾಡಿ, ‘ಪಕ್ಷದ ವರಿಷ್ಠರು ಬಿ ಫಾರಂ ಮತ್ತು ಸಿ ಫಾರಂ ಎರಡನ್ನೂ ಕೊಟ್ಟಿದ್ದರು. ಪುನಃ ನಡೆದ ನಾಟಕೀಯ ಬೆಳವಣಿಗೆಗಳಲ್ಲಿ ಹಾಲಿ ಶಾಸಕ ರಾಜಣ್ಣ ಅವರಿಗೆ ನೀಡಿದ್ದಾರೆ ಎಂಬ ಮಾತು ಕೇಳಿ ಬಂತು. ಇದರಿಂದ ನಾವೇನೂ ವಿಚಲಿತರಾಗಿಲ್ಲ, ಹಾಗಂತ ನಾನು ಅವರಂತೆ ಬಿಜೆಪಿಗೆ ಹೋಗುವ ಪ್ರಯತ್ನವೂ ಮಾಡಿಲ್ಲ. ಹೇಗಗಾದರಾಗಲಿ ಎಂದು ನಾಮಪತ್ರವನ್ನು ಈ ದಿನ ಸಲ್ಲಿಸುತ್ತಿದ್ದೇನೆ’ ಎಂದು ಹೇಳಿದರು.
ಭಾರತೀಯ ಜನತಾ ಪಾರ್ಟಿ (ಬಿ ಜೆ ಪಿ) ಸೇರಲಿರುವ ಜೆ ಡಿ ಎಸ್ ಶಾಸಕ ಎಂ ರಾಜಣ್ಣ
ಕಳೆದ ಬಾರಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರವನ್ನು ಜಾತ್ಯಾತೀತ ಜನತಾ ದಳದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ಎಂ ರಾಜಣ್ಣ, ಅಧಿಕೃತವಾಗಿ ಗುರುವಾರದಂದು ಬಿ ಜೆ ಪಿ ತಮ್ಮ ಬೆಂಬಲಿಗರೊಂದಿಗೆ ಸೇರಲಿದ್ದಾರೆ. ಕಳೆದ ರಾತ್ರಿ ಬಿ ಜೆ ಪಿ ಪಕ್ಷದೊಂದಿಗೆ ಮಾತುಕತೆ ಮುಗಿದಿದ್ದು ಇಂದು ಸ್ಪೀಕರ್ಗೆ ತಮ್ಮ ರಾಜೀನಾಮೆ ಸಲ್ಲಿಸಿ ಅಧಿಕೃತವಾಗಿ ಬಿ ಜೆ ಪಿ ಬಿ ಫಾರಂ ನೊಂದಿಗೆ ಸ್ಪರ್ಧಿಸಲಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ. ಕಳೆದ ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿ ಜಯಶೀಲರಾಗಿದ್ದ ಎಂ ರಾಜಣ್ಣ, ಈ ಬಾರಿ ಬದಲಾದ ರಾಜಕೀಯ ಹವಾಮಾನದಲ್ಲಿ ಮೇಲೂರು ಬಿ ಎನ್ ರವಿಕುಮಾರ್ ರವರನ್ನು ಜೆಡಿಎಸ್ ಅಭ್ಯರ್ಥಿ ಎಂದು ಕಡೆಯ ಸಮಯದಲ್ಲಿ ಪಕ್ಷ ಆಯ್ಕೆ ಮಾಡಲಾಗಿತ್ತು.
ಜಾತ್ಯಾತೀತ ಜನತಾದಳ ಅಧಿಕೃತ ಅಭ್ಯರ್ಥಿಯಾಗಿ ಬಿ. ಎನ್. ರವಿಕುಮಾರ್ ಘೋಷಣೆ
ಮೇ ೧೨ ರಂದು ನಡಿಯುವ ವಿಧಾನಸಭಾ ಚುನಾವಣೆಗೆ ಜಾತ್ಯಾತೀತ ಜನತಾದಳದ ಅಧಿಕೃತ ಅಭ್ಯರ್ಥಿಯನ್ನಾಗಿ ಮೇಲೂರು ಬಿ. ಎನ್. ರವಿಕುಮಾರ್ ಅವನ್ನು ಘೋಷಿಸಲಾಗಿದೆ. ಚುನಾವಣಾಧಿಕಾರಿಗೆ ಜೆಡಿಎಸ್ ನ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರವರು ದಿನಾಂಕ 23/04/2018ರಂದು ಬರೆದಿರುವ ಪತ್ರದಲ್ಲಿ
“ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ವತಿಯಿಂದ ನಮ್ಮ ಪಕ್ಷದ ಅಭ್ಯರ್ಥಿಯಾಗಿ ಶ್ರೀ ಎಂ.ರಾಜಣ್ಣ ರವರನ್ನು ಆಯ್ಕೆ ಮಾಡಿ ಅವರಿಗೆ ಪಕ್ಷದ ವತಿಯಿಂದ ಈ ಮೊದಲು ನಮೂನೆ “ಎ ” ಮತ್ತು “ಬಿ “ಯನ್ನು ನೀಡಲಾಗಿತ್ತು. ಸದರಿಯವರ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಶ್ರೀ ಬಿ.ಎನ್. ರವಿಕುಮಾರ್ ರವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿರುತ್ತದೆ. ಈ ಪತ್ರದೊಂದಿಗೆ ಪರಿಷ್ಕೃತ (Revised) “ಎ ” ಮತ್ತು “ಬಿ ” ನಮೂನೆಯನ್ನು ನೀಡಲಾಗುತ್ತಿದ್ದು, ದಯಮಾಡಿ ಇವರನ್ನು ಜನತಾದಳ (ಜಾತ್ಯಾತೀತ) ಪಕ್ಷದ ಅಧಿಕೃತ ಅಭ್ಯರ್ಥಿಯೆಂದು ಪರಿಗಣಿಸಲು ಕೋರಿದೆ.
ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ,
– (signed)ಹೆಚ್.ಡಿ.ದೇವೇಗೌಡ
ಎಂದು ತಿಳಿಸಲಾಗಿದೆ.


ಉಚಿತ ಬೇಸಿಗೆ ಕ್ರೀಡಾ ತರಬೇತಿ ಶಿಬಿರದ ಸಮಾರೋಪ
ನಗರದ ನೆಹರೂ ಕ್ರೀಡಾಂಗಣದಲ್ಲಿ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ನಡೆದ ಉಚಿತ ಬೇಸಿಗೆ ಕ್ರೀಡಾ ಶಿಬಿರ ಮತ್ತು ತಾಲ್ಲೂಕುಮಟ್ಟದ ಕ್ರೀಡಾಕೂಟ ಮುಕ್ತಾಯವಾಯಿತು.
ತಾಲ್ಲೂಕಿನ ಮಕ್ಕಳು ಕ್ರೀಡೆಯಲ್ಲಿ ಅಪಾರ ಪ್ರತಿಭಾವಂತರು. ಅವರಿಗೆ ಸೂಕ್ತ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಅಗತ್ಯವಿದೆ. ಸರ್ಕಾರದ ಪ್ರೋತ್ಸಾಹದೊಂದಿಗೆ ಕ್ರೀಡಾಸಕ್ತರು ಆಗಾಗ್ಗೆ ತರಬೇತಿ ಶಿಬಿರಗಳನ್ನು ನಡೆಸುವ ಮೂಲಕ ಮಕ್ಕಳು ಜಿಲ್ಲಾ ಮತ್ತು ರಾಜ್ಯಮಟ್ಟಕ್ಕೆ ಪ್ರತಿನಿಧಿಸುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ಉಚಿತ ಕ್ರೀಡಾ ತರಬೇತಿಯನ್ನು ಆಯೋಜಿಸುತ್ತೇವೆ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಮುನಿರಾಜು ತಿಳಿಸಿದರು.
ಹದಿನೈದು ದಿನಗಳ ಕಾಲ ನಡೆಸಿದ ಉಚಿತ ಬೇಸಿಗೆ ಶಿಬಿರಕ್ಕೆ, ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸದಸ್ಯರು, ವಿವಿಧ ಕ್ರೀಡಾಪಟುಗಳು ನಮ್ಮ ಪ್ರಯತ್ನ ಕಂಡು ಮಕ್ಕಳಿಗೆ ಗ್ಲೂಕೋಸ್, ಹಣ್ಣಿನ ರಸ, ಬಿಸ್ಕತ್, ಮೊಟ್ಟೆ ಮುಂತಾದವುಗಳನ್ನು ನೀಡಿ ಸಹಕರಿಸಿದ್ದಾರೆ. ಮಕ್ಕಳಿಗೆ ಕುಡಿಯುವ ನೀರಿನ ಬಾಟಲ್ ನೀಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಜೇತ ಮಕ್ಕಳಿಗೆ ಪದಕ, ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೂ ಪ್ರಮಾಣಪತ್ರ ಹಾಗೂ ನೀರಿನ ಬಾಟಲ್ ನೀಡಲಾಯಿತು.
ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಗೌರವ ಸಲಹೆಗಾರ ಸುರೇಶ್, ಅಧ್ಯಕ್ಷ ಲಕ್ಷ್ಮೀಪತಿ, ಉಪಾಧ್ಯಕ್ಷ ಶಿವಲಿಂಗ, ರಾಜಶೇಖರ್, ಪುರುಷೋತ್ತಮ್, ಶ್ರೀರಾಮ್, ಮುರಳಿ, ಮಂಜುಳಮ್ಮ, ಎಸ್.ಪದ್ಮನಾಭಪ್ರಭು, ನಾಗರಾಜ್, ಕೆ.ಮುನಿರಾಜು, ಆನಂದ್, ನಾಗೇಶ್, ರಾಧಾಕೃಷ್ಣ, ರಹಮತ್ತುಲ್ಲ, ನರಸಿಂಹಮೂರ್ತಿ, ಭಗವಾನ್‌ಸಿಂಗ್, ಶ್ರೀನಿವಾಸಮೂರ್ತಿ, ಯಾಸ್ಮೀನ್, ಭಾಸ್ಕರ್, ಅನಿತಾ, ಲಲಿತಾ, ಗೌರಮ್ಮ, ಭಾಗ್ಯಮ್ಮ ಹಾಜರಿದ್ದರು.
ಭಾವನಾ ಮಹರ್ಷಿ ಜಯಂತ್ಯುತ್ಸವ
ನಗರದ ಉಲ್ಲೂರುಪೇಟೆಯ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಭಾನುವಾರ ಭಾವನಾ ಮಹರ್ಷಿ ಜಯಂತ್ಯುತ್ಸವದ ಅಂಗವಾಗಿ ಗಂಗಾಪೂಜೆ, ಕಳಶಸ್ಥಾಪನೆ, ಭಾವನಾ ಮಹರ್ಷಿ ಮತ್ತು ಭದ್ರಾವತಿ ದೇವಿಯ ಕಲ್ಯಾಣೋತ್ಸವ, ಲಾಜಾ ಹೋಮ, ವಿಶೇಷ ಪೂಜೆಯನ್ನು ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿತ್ತು.
ಸಂಜೆಗೆ ವೀರಾಂಜನೇಯಸ್ವಾಮಿ, ಭದ್ರಾವತಿ ಹಾಗೂ ಭಾವನಾ ಮಹರ್ಷಿಗಳ ಉತ್ಸವ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಿದ್ದ ಹೂವಿನ ಪಲ್ಲಕ್ಕಿಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ತಮಟೆ ವಾದ್ಯ ವೃಂದದೊಂದಿಗೆ ಮೆರವಣಿಗೆ ಮಾಡಲಾಯಿತು.
ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಸಂಗೀತ ಕಚೇರಿಯನ್ನು ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು. ಹಾಡುಹಾರಿಕೆ – ವಿದ್ವಾನ್ ಎಸ್.ವಿ.ರಾಮಮೂರ್ತಿ, ಪಿಟೀಲು ವಿದ್ವಾನ್ ಆರ್.ಜಗದೀಶ್‌ಕುಮಾರ್, ಮೃದಂಗ ವಿದ್ವಾನ್ ಎಸ್.ಎನ್.ಲಕ್ಷ್ಮೀನಾರಾಯಣ, ಖಂಜಿರ ಕೆ.ವಿ.ಕೃಷ್ಣಮೂರ್ತಿ ನುಡಿಸಿದರು.
ತಾಲ್ಲೂಕು ಪದ್ಮಶಾಲಿ ಸಂಘ ಹಾಗೂ ಪದ್ಮಶಾಲಿ ಯುವಜನ ಸೇವಾ ಸಂಘದ ಸದಸ್ಯರು ಸಂಜೆ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಗೋಡಂಬಿ ಬೆಳೆ ಕ್ಷೇತ್ರೋತ್ಸವ ಮತ್ತು ಚರ್ಚಾ ಗೋಷ್ಠಿ
ಇತ್ತೀಚಿನ ವರ್ಷಗಳಲ್ಲಿ ಗೋಡಂಬಿ ಬೆಳೆಯು ಒಣ ತೋಟಗಾರಿಕಾ ಬೇಸಾಯಕ್ಕೆ ಒಂದು ಪ್ರಮುಖವಾದ ಬೆಳೆಯಾಗಿ ಹೊರಹೊಮ್ಮುತಿದೆ. ಇದರ ಉತ್ಪಾದನಾ ತಾಂತ್ರಿಕತೆಗಳನ್ನು ರೈತರಿಗೆ ಮನವರಿಕೆ ಮಾಡಿಕೊಳ್ಳಲು ಇದು ಸೂಕ್ತ ಸಮಯವಾಗಿರುವುದರಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೊಚ್ಚಿನ್‌ನ ಗೋಡಂಬಿ ಹಾಗೂ ಕೋಕೋ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ.ವೆಂಕಟೇಶ ಎನ್.ಹುಬ್ಬಳ್ಳಿ ತಿಳಿಸಿದರು.
ತಾಲ್ಲೂಕಿನ ಎಚ್.ಕ್ರಾಸ್ ಬಳಿಯ ಕುಂಬಿಗಾನಹಳ್ಳಿಯ ಸಮೀಪದ ನಾಗರಾಜ್‌ರವರ ಗೋಡಂಬಿ ತೋಟದಲ್ಲಿ ಗುರುವಾರ ಕೇಂದ್ರ ಸರ್ಕಾರದ ಗೋಡಂಬಿ ಹಾಗೂ ಕೊಕೋ ಅಭಿವೃದ್ಧಿ ನಿದೆರ್ಶನಾಲಯದಿಂದ ಅನುದಾನಿತವಾದ, ಪ್ರಾದೇಶಿಕ ತೋಟಗಾರಿಕಾ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ತೋಟಗಾರಿಕಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಗೋಡಂಬಿ ಬೆಳೆ ಕ್ಷೇತ್ರೋತ್ಸವ ಮತ್ತು ಚರ್ಚಾ ಗೋಷ್ಠಿಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬರಡು ಭೂಮಿಯಲ್ಲೂ ಬೆಳೆಸಬಹುದಾದ ಬೆಳೆ ಇದಾಗಿದೆ. ವಿಭಿನ್ನ ಬೆಳೆಯಾಗಿರುವ ಗೋಡಂಬಿ ಬೆಲೆ ಎಂದಿಗೂ ಕಡಿಮೆಯಾಗಿಲ್ಲ. ನಮ್ಮ ದೇಶದಿಂದ 28 ದೇಶಗಳಿಗೆ ಗೋಡಂಬಿ ರಫ್ತಾಗುತ್ತಿದೆ. ಇದರಿಂದ ವಾರ್ಷಿಕ ಸಾವಿರಾರು ಕೋಟಿ ರೂಗಳ ವರಮಾನ ಬರುತ್ತಿದೆ. ಗೋಡಂಬಿ ಬೆಳೆಯಲ್ಲಿ ವರಮಾನ, ಇಳವರಿಯಿದ್ದರೂ ಬೆಳೆ ಬೆಳೆಯಲು ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಗೋಡಂಬಿ ಬೆಳೆಯುವಲ್ಲಿ ಪ್ರಬಲವಾಗಬೇಕಿದ್ದು, ಅವಕಾಶವನ್ನು ಉಪಯೋಗಿಸಬೇಕಿದೆ. ಸುಲಭವಾದ ಬೆಳೆಯನ್ನು ನಿರ್ಲಕ್ಷ್ಸಿಸಿದರೆ ತೊಂದರೆಗೀಡಾಗಲಿದ್ದೇವೆ ಎಂದ ಅವರು ಟೀ ಸೊಳ್ಳೆ, ಕಾಂಡಾ ಕೊರೆಯುವ ಹುಳು ತೊಂದರೆಯಿದ್ದರೂ ದೊಡ್ಡ ಪ್ರಮಾಣದಲ್ಲಿ ರೋಗಗಳಿಲ್ಲ. ಹೂವು ಬಿಟ್ಟಾಗ ಮಾತ್ರ ಕೆಲಸವಿರುತ್ತವೆ, ಮಳೆಗಾಲ ಆರಂಭವಾದಾಗ ಹನಿ ನೀರಾವರಿ ಅಳವಡಿಸಿದಲ್ಲಿ ಅನುಕೂಲದ ಜತೆಗೆ ಇಳುವರಿಯೂ ಜಾಸ್ತಿಯಾಗುವುದು ಎಂದರು.
‘ಗೋಡಂಬಿಯ ಸುಧಾರಿತ ಬೇಸಾಯ ಕ್ರಮಗಳು ಹಾಗೂ ತಂತ್ರಜ್ಞಾನ’ ಕುರಿತಂತೆ ವಿಜ್ಞಾನಿ ಡಾ.ವಿಷ್ಣುವರ್ಧನ ಮಾತನಾಡಿದರು. ‘ಮಣ್ಣು ಮತ್ತು ನೀರಿನ ಸಂರಕ್ಷಣೆ’ ಕುರಿತಂತೆ ಡಾ.ಎಸ್.ವಿ.ಪಾಟೀಲ್, ಡಾ.ಅನಿಲ್‌ಕುಮಾರ್ ಹಾಗೂ ಡಾ.ನಾಗರಾಜ ವಿವರಿಸಿದರು. ‘ಸಸ್ಯ ಸಂರಕ್ಷಣೆ’ ಬಗ್ಗೆ ಡಾ.ಜಿ.ಕೆ.ರಾಮೇಗೌಡ, ‘ಗೋಡಂಬಿಯಲ್ಲಿ ಕೊಯ್ಲೋತ್ತರ ತಾಂತ್ರಿಕತೆ ಮತ್ತು ಮೌಲ್ಯವರ್ಧನೆ’ ಕುರಿತು ಸುರೇಶ್, ‘ಸಂಸ್ಕರಣೆ ಹಾಗೂ ಮಾರುಕಟ್ಟೆ’ ಕುರಿತು ವೈ.ಪಿ.ಅಮರನಾಥ್, ‘ಮಾರುಕಟ್ಟೆ ಹಾಗೂ ವಿಸ್ತರಣೆ’ ಬಗ್ಗೆ ಡಾ.ಜಿ.ಬಸವರಾಜ್, ಡಾ.ಮಮತಾಲಕ್ಷ್ಮಿ, ಡಾ.ಬಿ.ಎಸ್.ಶ್ವೇತಾ ಮಾತನಾಡಿದರು.
ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯದ ನಿವೃತ್ತ ಶಿಕ್ಷಣ ನಿರ್ದೇಶಕ ಡಾ.ಜೆ.ವೆಂಕಟೇಶ್, ಪುತ್ತೂರಿನ ಗೋಡಂಬಿ ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಗಂಗಾಧರ ನಾಯಕ್, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಗೋಡಂಬಿ ಬೆಳೆಗಾರರು ಹಾಜರಿದ್ದರು.
ಎಂ.ಇ.ಪಿ ಪಕ್ಷದ ಅಭ್ಯರ್ಥಿ ಕನ್ನಪ್ಪನಹಳ್ಳಿ ಯಾಮೇಗೌಡ ನಾಮಪತ್ರ ಸಲ್ಲಿಕೆ
ಮೇ ೧೨ ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಶನಿವಾರ ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದ ಎಂ.ಇ.ಪಿ ಪಕ್ಷದ ಅಭ್ಯರ್ಥಿಯಾಗಿ ಕನ್ನಪ್ಪನಹಳ್ಳಿ ಯಾಮೇಗೌಡ ನಾಮಪತ್ರವನ್ನು ಚುನಾವಣಾಧಿಕಾರಿ ಮಲ್ಲಿಕಾರ್ಜುನ್‌ರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,‘ನಾನು ರೈತ ಕುಟುಂಬದ ಹಿನ್ನೆಲೆಯವನು. ಸುಮಾರು 65 ವರ್ಷಗಳಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣದೇ ಬೇಸತ್ತು ಏನಾದರೂ ಬದಲಾವಣೆ ಮಾಡಬೇಕೆಂಬ ಉದ್ದೇಶದಿಂದ ಕಳೆದ ಎಂಟು ತಿಂಗಳಿನಿಂದ ಕೆಲಸ ಮಾಡುತ್ತಿದ್ದೇನೆ. ಅಹಿಂದ ವರ್ಗದವರನ್ನು ನಮ್ಮ ಕ್ಷೇತ್ರದಲ್ಲಿ ಬೆಳೆಯಬಾರದು ಎಂಬ ಅಜೆಂಡಾ ಇಟ್ಟುಕೊಂಡು ಕಲವಾರು ಪಕ್ಷಗಳು ನಮಗೆ ಟಿಕೇಟ್ ಕೊಟ್ಟಿಲ್ಲ. ಆದರೆ ಎಂ.ಇ.ಪಿ ಪಕ್ಷ ನಮ್ಮನ್ನು ಗುರುತಿಸಿ ಟಿಕೇಟ್ ನೀಡಿದೆ. ಸೋಲು ಗೆಲುವು ಯಾವುದೇ ಬಂದರೂ ಸ್ವೀಕರಿಸುತ್ತೇವೆ. ಆದರೆ ಜನರ ನಡುವೆ ಹೋಗಿ ನಮ್ಮ ಅಭಿವೃದ್ಧಿ ಕಾರ್ಯಗಳನ್ನು ತಿಳಿಸಿ ಪಕ್ಷವನ್ನು ಮುಂದಿನ ದಿನಗಳಲ್ಲಿ ಸದೃಢಗೊಳಿಸುತ್ತೇವೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರ್.ಪ್ಯಾರೇಜಾನ್, ನವೀನ್, ಸುಜಿತ್, ಜಯಚಂದ್ರ, ಸೋಮಣ್ಣ, ರಾಮಣ್ಣ, ಕುಮಾರ್, ರವಿಚಂದ್ರ ಹಾಜರಿದ್ದರು.
ಆಸಿಫಾಳ ಅತ್ಯಾಚಾರ, ಕೊಲೆ ಆರೋಪಿಗಳ ಶಿಕ್ಷೆಗೆ ಒತ್ತಾಯಿಸಿ ಪಂಜಿನ, ಮೇಣದ ಬತ್ತಿಯ ಮೆರವಣಿಗೆ
‘ಜಸ್ಟಿಸ್ ಫಾರ್ ಆಸೀಫಾ’, ‘ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆ ವಿಧಿಸಿ’ ಎಂಬ ಭಿತ್ತಿಚಿತ್ರಗಳೊಂದಿಗೆ, ಕಥುವಾದ 8 ವರ್ಷದ ಬಾಲಕಿ ಆಸಿಫಾಳನ್ನು ನಿರಂತರ ಅತ್ಯಾಚಾರಗೈದು ಕೊಲೆ ಮಾಡಿರುವುದನ್ನು ಖಂಡಿಸಿ, ನಗರದಲ್ಲಿ ವಿವಿಧ ಸಂಘಟನೆಗಳು ಪಂಜಿನ, ಮೇಣದ ಬತ್ತಿಯ ಹಾಗೂ ಮೊಬೈಲ್ ಟಾರ್ಚ್‌ನ ಬೆಳಕಿನೊಂದಿಗೆ ಪ್ರತಿಭಟನೆ ನಡೆಸಿದರು.
ಕೊಹಿನೂರ್ ಟಿಪ್ಪು ತಾಲಿಮ್ ಮೈನಾರಿಟಿ ವೆಲ್‌ಫೇರ್ ಟ್ರಸ್ಟ್, ಯೂನಿಟಿ ಸಿಲ್‌ಸಿಲಾ ಫೌಂಡೇಷನ್, ವಿ ಕೇರ್ ಫೌಂಡೇಷನ್, ಸಲಿತ ಸಂಘರ್ಷ ಸೇನೆ, ಜಾಮಿಯಾ ಮತ್ತು ಮದೀನಾ ಮಸೀದಿ ಕಮಿಟಿ ಸದಸ್ಯರು ಮುಂತಾದ ಸಂಘಟನೆಗಳ ಸದಸ್ಯರು ಮೆರವಣಿಯಲ್ಲಿ ಪಾಲ್ಗೊಂಡರು.
ನಗರದ ಅಮೀರ್‌ಬಾಬಾ ದರ್ಗಾದಿಂದ ಮೆರವಣಿಗೆಯನ್ನು ಪ್ರಾರಂಭಿಸಿ, ಕೋಟೆ ವೃತ್ತದವರೆಗೂ ತೆರಳಿ ನಂತರ ತಾಲ್ಲೂಕು ಕಚೇರಿಗೆ ವಾಪಸಾಗಿ ಮನವಿಯನ್ನು ಸಲ್ಲಿಸಿದರು.
ನಾಮಪತ್ರ ಸಲ್ಲಿಸಿದ ಮೇಲೂರು ಬಿ.ಎನ್.ರವಿಕುಮಾರ್
ಮೇ ೧೨ ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಶುಕ್ರವಾರ ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಮೇಲೂರು ಬಿ.ಎನ್.ರವಿಕುಮಾರ್ ನಾಮಪತ್ರವನ್ನು ಚುನಾವಣಾಧಿಕಾರಿ ಮಲ್ಲಿಕಾರ್ಜುನ್‌ರಿಗೆ ಸಲ್ಲಿಸಿದ್ದಾರೆ.
ಜೆಡಿಎಸ್ ಪಕ್ಷದಿಂದ ಹಾಲಿ ಶಾಸಕ ಎಂ.ರಾಜಣ್ಣ ಅವರಿಗೆ ಟಿಕೇಟ್ ಘೋಷಣೆಯಾದ್ದರಿಂದ ಬಂಡಾಯವೆದ್ದ ಮೇಲೂರು ಬಿ.ಎನ್.ರವಿಕುಮಾರ್ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಎಲ್ಲಾ ನಿಷ್ಠಾವಂತ ಕಾರ್ಯಕರ್ತೆಉ, ಮುಖಂಡರು, ಯುವಕರು, ಮಾತೆಯರ ಒತ್ತಾಯ ಹಾಗೂ ಸೂಚನೆಯ ಮೇರೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದ್ದೇನೆ. ಚುನಾವಣೆಯಲ್ಲಿ ಕ್ಷೇತ್ರದ ಜನತೆ ಆಶೀರ್ವಾದ ಮಾಡಿ ಗೆಲ್ಲಿಸುವರೆಂಬ ನಂಬಿಕೆಯಿಂದ ಚುನಾವಣೆಯಲ್ಲಿ ಅಭ್ಯರ್ಥಿಯಾಗುತ್ತಿದ್ದೇನೆ’ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ವಿ.ನಾಗರಾಜ್, ಶಿವಾರೆಡ್ಡಿ, ಹುಜಗೂರು ರಾಮಣ್ಣ ಹಾಜರಿದ್ದರು.
ಎರಡನೇ ಬಾರಿ ನಾಮಪತ್ರ ಸಲ್ಲಿಸಿದ ಆಂಜಿನಪ್ಪ
ಕಾಂಗ್ರೆಸ್ ಪಕ್ಷದಿಂದ ಬಂಡಾಯವೆದ್ದ ಆಂಜಿನಪ್ಪ(ಪುಟ್ಟು) ಮೇ ೧೨ ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಶುಕ್ರವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ ನಗರದಲ್ಲಿ ಮೆರವಣಿಗೆಯ ಮೂಲಕ ತೆರಳಿ ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಎರಡನೇ ಬಾರಿ ನಾಮಪತ್ರ ಸಲ್ಲಿಸಿದರು.
ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿಯಿರುವ ಎಸ್.ಎನ್.ಕ್ರಿಯಾ ಟ್ರಸ್ಟ್ ಕಚೇರಿಯಿಂದ ಬೆಂಬಲಿಗರೊಂದಿಗೆ ತನ್ನ ಪತ್ನಿಯೊಂದಿಗೆ ಹೊರಟ ಆಂಜಿನಪ್ಪ ಸಲ್ಲಾಪುರಮ್ಮ ದೇವಾಲಯ, ದರ್ಗಾ, ಕೃಷ್ಣಸ್ವಾಮಿ ದೇವಾಲಯ, ಎಲ್ಲಮ್ಮ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ನಂತರ ಚುನಾವಣಾಧಿಕಾರಿ ಮಲ್ಲಿಕಾರ್ಜುನ್‌ರಿಗೆ ನಾಮಪತ್ರ ಸಲ್ಲಿಸಿದರು.
‘ನೀತಿ ಸಂಹಿತೆಯನ್ನು ಗೌರವಿಸಲು ಮಂಗಳವಾರ ಕೆಲವೇ ಮಂದಿಯೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದೆವು. ಬೆಂಬಲಿಗರ ಒತ್ತಾಯದ ಮೇರೆಗೆ ಈ ದಿನ ಪುನಃ ನಾಮಪತ್ರವನ್ನು ಸಲ್ಲಿಸಿದೆವು. ಜನಪರ ಆಲೋಚನೆ, ಸೇವಾ ಕಾರ್ಯದಿಂದಾಗಿ ಸ್ವಇಚ್ಛೆಯಿಂದ ಅಪಾರ ಮಂದಿ ಆಗಮಿಸಿ ಬೆಂಬಲಿಸಿದ್ದಾರೆ. ಕ್ಷೇತ್ರದ ಜನರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜನರ ಬಳಿ ಹೋಗಿ ಪ್ರಾಮಾಣಿಕವಾಗಿ ಮತಯಾಚಿಸುತ್ತೇನೆ’ ಎಂದು ಈ ಸಂದರ್ಭದಲ್ಲಿ ಆಂಜಿನಪ್ಪ ತಿಳಿಸಿದರು.
‘ನಾನು ಈಗಾಗಲೇ ಕ್ಷೇತ್ರದಾದ್ಯಂತ ವಿವಿಧ ಸಾಮಾಜಿಕ ಕಾರ್ಯಗಳ ಮೂಲಕ ಜನತೆಯ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ. ಮುಂದಿನ ದಿನಗಳಲ್ಲಿಯೂ ಕೂಡಾ ಉತ್ತಮಸೇವೆಯನ್ನು ಮಾಡುವುದರ ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕಡೆಗೆ ಗಮನವನ್ನು ನೀಡುತ್ತೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡುವಂತಹವರನ್ನು ಈ ಬಾರಿ ಕ್ಷೇತ್ರದ ಜನತೆ ಆಯ್ಕೆ ಮಾಡಲಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ’ ಎಂದರು.
ಈ ಸಂದರ್ಭದಲ್ಲಿ ಅರುಣಾ ಆಂಜಿನಪ್ಪ, ಅಫ್ಸರ್‌ಪಾಷ, ಎ.ದೇವರಾಜು, ಅಶ್ವತ್ಥನಾರಾಯಣರೆಡ್ಡಿ, ನವೀನ್‌ಕುಮಾರ್, ನಟರಾಜ್, ಬೈರೇಗೌಡ, ಕೃಷ್ಣಪ್ಪ, ವಿಶ್ವನಾಥ್ ಹಾಜರಿದ್ದರು.
ಕಾಂಗ್ರೆಸ್ ಪಕ್ಷದಿಂದ ಮಾಜಿ ಶಾಸಕ ವಿ.ಮುನಿಯಪ್ಪ ನಾಮಪತ್ರ ಸಲ್ಲಿಕೆ
ಮೇ ೧೨ ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಮಾಜಿ ಶಾಸಕ ವಿ.ಮುನಿಯಪ್ಪ ಬುಧವಾರ ನಾಮಪತ್ರ ಸಲ್ಲಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ಬೆಳಿಗ್ಗೆ ಬೆಂಬಲಿಗರೊಂದಿಗೆ ಸಭೆ ನಡೆಸಿದ ನಂತರ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಚುನಾವಣಾಧಿಕಾರಿ ಮಲ್ಲಿಕಾರ್ಜುನ್ ಅವರಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಂ.ಸತೀಶ್, ವಿ.ಮುನಿಯಪ್ಪ ಪುತ್ರ ಶಶಿಧರ್, ಎಚ್.ಎಂ.ಮುನಿಯಪ್ಪ, ಮೌಲಾ, ಪಂಪ್ ನಾಗರಾಜ್ ಹಾಜರಿದ್ದರು.
ಒಂದು ವರ್ಷದಲ್ಲಿ 37 ಕೋಟಿ ರೂ ವಹಿವಾಟು ಮಾಡಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳು
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಚಿಸಲಾಗಿರುವ ಸ್ವಸಹಾಯ ಸಂಘಗಳು ಬಡವರ ದುರ್ಬಲರ ಪ್ರಮುಖ ಸಂಘಟನೆ. ತಮ್ಮ ಸಂಘಟನಾ ಶಕ್ತಿಯಿಂದ ಬಡಕುಟುಂಬಗಳು ಸಬಲೀಕೃತರಾಗಬೇಕೆಂಬ ಆಶಯದಿಂದ ಮೂರೂವರೆ ವರ್ಷಗಳ ಹಿಂದೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಪ್ರಾರಂಭಿಸಲಾಯಿತು. ಕಳೆದ ಒಂದು ವರ್ಷದಲ್ಲಿ 37 ಕೋಟಿ ರೂ ವಹಿವಾಟು ಸಂಘಗಳಿಂದ ನಡೆದಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಿ.ವಸಂತ್ ತಿಳಿಸಿದರು.
ನಗರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿಯಲ್ಲಿ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಬುಧವಾರ ಮಾತನಾಡಿದರು.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಆರು ವಲಯಗಳನ್ನು ಮಾಡಿದ್ದುಒಟ್ಟು 2051 ಸಂಘಗಳಿಂದ 19,883 ಸದಸ್ಯರನ್ನು ಒಳಗೊಂಡಿದೆ. 618 ಮಂದಿಗೆ ಕೃಷಿ ಚಟುವಟಿಕೆ, 514 ಮಂದಿಗೆ ಸ್ವದ್ಯೋಗ, 17,500 ಶೌಚಾಲಯಗಳು, 467 ಸೌರವಿದ್ಯುತ್ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗಿದೆ. ಮಾಸಿಕ ಶಿಷ್ಯವೇತನವನ್ನು ಸಂಘದ ಸದಸ್ಯರ ಮಕ್ಕಳಿಗೆ ನೀಡಲಾಗುತ್ತಿದೆ. ತಾಲ್ಲೂಕಿನ 82 ಮಂದಿಗೆ ಮಾಸಿಕ ಮಾಸಾಶನವಾಗಿ 59 ಸಾವಿರಿ ರೂಗಳನ್ನು ನೀಡಲಾಗುತ್ತಿದೆ. ಈಗಾಗಲೇ 4500 ಮಂದಿಗೆ ಬ್ಯಾಂಕ್ ಖಾತೆ ಮಾಡಿಸಿದ್ದು ನಗದು ರಹಿತ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸದಸ್ಯರು ರೂಢಿಸಿಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ನಿರ್ದೇಶಕ ಮೋಹನ್ ಮಾತನಾಡಿ, ಗ್ರಾಮೀಣ ಜನರ ಸಹಭಾಗಿತ್ವದಲ್ಲಿ ಕೆರೆಯ ಹೂಳೆತ್ತುವ ಕಾರ್ಯಕ್ರಮ, ಮದ್ಯವರ್ಜನಾ ಶಿಬಿರ, ದೇವಸ್ಥಾನಗಳಿಗೆ, ಹಾಲು ಉತ್ಪಾದಕ ಸಂಘಗಳಿಗೆ ಅನುದಾನಗಳನ್ನು ನೀಡಿದೆ. ಕೆಲವು ಕಾಲೋನಿಗಳಲ್ಲಿ ಸ್ವಚ್ಛತಾ ಶಿಬಿರಗಳ ಮೂಲಕ ಆರೋಗ್ಯದ ಅರಿವು ಮೂಡಿಸಲಾಗಿದೆ. ಸರಳ ಬಡ್ಡಿಯನ್ನು ಪಡೆದು ನಂತರ ಲಾಭಾಂಶವನ್ನು ಸಂಘಗಳಿಗೆ ವಿತರಿಸಲಾಗಿದೆ. ತಾಲ್ಲೂಕಿನ 1,238 ಸಂಘಗಳಿಗೆ 28,33,556 ರೂ ಲಾಭಾಂಶ ಸಿಕ್ಕಿದೆ. ಔಐಯಕ್ತಿಕ ಉಳಿತಾಯ, ಬ್ಯಾಂಕ್‌ಗಳಿಂದ ಪ್ರಗತಿನಿಧಿ, ಆರ್ಥಿಕ ಸೇರ್ಪಡೆ ಮತ್ತು ಸ್ವಉದ್ಯೋಗಿಗಳಿಗಾಗಿ ಅಗತ್ಯವಿರುವ ತರಬೇತಿ ಇವೇ ಮುಂತಾದ ಪ್ರಕ್ರಿಯೆಗಳಿಂದ ಸಂಘದ ಸದಸ್ಯರಲ್ಲಿ ಅಭಿವೃದ್ಧಿಯ ಕನಸುಗಳನ್ನು ಮೂಡಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಪ್ರಶಾಂತ್, ಜನಾರ್ಧನ್, ರಮೇಶ್, ಲಕ್ಷ್ಮೀ, ಮಮತ, ಗೋಪಿನಾಥ್ ಹಾಜರಿದ್ದರು.
ಬಸವೇಶ್ವರ ಜಯಂತ್ಯುತ್ಸವದ ಕಾರ್ಯಕ್ರಮ
ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಬಸವೇಶ್ವರ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಜಯಪುರ ಬಸವ ಕಲ್ಯಾಣ ಮಠದ ಶ್ರೀ ಮಹದೇವಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿದರು.
ಮನುಜ ಜಾತಿ ಒಂದೇ ಎಂಬುವದನ್ನು ಸಾರುವುದರ ಮೂಲಕ ಹೊಸ ಬೆಳಕು ನೀಡಿದ ಬಸವಣ್ಣನವರ ಆದರ್ಶ ಸಮಾಜದ ಕಲ್ಪನೆ ಅದ್ಭುತವಾಗಿದೆ. ಸರ್ವರು ಸಮಾನರು ಎಂಬ ಧ್ಯೇಯದೊಂದಿಗೆ ಅಸಮಾನತೆ ವಿರುದ್ಧ ಜಾಗೃತಿ ಮೂಡಿಸುವುದರ ಜೊತೆಯಲ್ಲಿ ಹೊಸ ಬುದಕಿನ ಕಲ್ಪನೆಯನ್ನು ಮಾನವತಾವದಿ ಬಸವಣ್ಣನವರು ನೀಡಿದ್ದಾರೆ ಎಂದು ಅವರು ತಿಳಿಸಿದರು.
ಬಸವಣ್ಣನವರ ಆದರ್ಶ ವಿಚಾರಧಾರೆಗಳ ಪಾಲನೆಯೊಂದಿಗೆ ಪ್ರತಿಯೊಬ್ಬರು ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಶೋಷಿತರ ಧ್ವನಿಯಾಗುವುದರ ಮೂಲಕ ಸಮಾಜದಲ್ಲಿ ಹೊಸ ಶಕೆಯನ್ನು ಆರಂಭಿಸಿದರು.ಅನುಭವ ಮಂಟಪದ ಮೂಲಕ ಹೊಸ ದಿಕ್ಕನ್ನು ನಾಗರಿಕ ಸಮಾಜಕ್ಕೆ ನೀಡಿದ ದಾರ್ಶನಿಕ ಬಸವಣ್ಣನವರು ಎಂದರು.
ಶ್ರೀ ಬಸವೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಸಿ.ನಂದೀಶ್ ಮಾತನಾಡಿ, ಜಾತಿಯ ಸಂಕೋಲೆಯನ್ನು ಬಿಡುಗಡೆಗೊಳಿಸಿ ಸಾಮಾಜಿಕ ಬದಲಾವಣೆ ಹಾಗೂ ಶೋಷಿತರ ಧ್ವನಿಯಾಗಿ ಬಸವಣ್ಣನವರು ಅವತರಿಸಿದ್ದರು. ಬಸವಣ್ಣವರ ಆದರ್ಶ ಬದುಕು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಸವಣ್ಣನವರ ವಚನಗಳು ಸಾರ್ವಕಾಲಿಕವಾಗಿದ್ದು, ಅವರ ಸಂದೇಶಗಳು ಮತ್ತು ತತ್ತ್ವಾದರ್ಶಗಳನ್ನು ಪ್ರತಿ ಯೊಬ್ಬರೂ ಮೆಗೂಡಿಸಿಕೊಳ್ಳಬೇಕು. ಸಾಮಾಜಿಕ ಪರಿವರ್ತನೆಯ ಹರಿಕಾರ ಬಸವಣ್ಣ ಅವರ ವಚನ ಗಳನ್ನು ಮಕ್ಕಳಿಗೆ ತಲುಪಿಸುವ ಮೂಲಕ ಉತ್ತಮ ಪ್ರಜೆಗಳಾಗಿ ರೂಪು ಗೊಳ್ಳುವಂತಾಗಲು ಎಲ್ಲರೂ ಶ್ರಮಿಸಬೇಕಿದೆ. ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನತೆಯಿಂದ ಬದುಕು ನಡೆಸಲು ಅವರ ವಚನಗಳು ಸಹಕಾರಿ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಾದ ಅರ್ಚನ, ದೀಪ್ತಿ ಹಿತೈಷಿ ಹಾಗೂ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿರುವ ಚೈತನ್ಯ(ಅಥ್ಲೆಟಿಕ್ಸ್) ಅವರನ್ನು ಗೌರವಿಸಲಾಯಿತು.
ಶ್ರೀ ಬಸವೇಶ್ವರ ಸೇವಾ ಟ್ರಸ್ಟ್‌ನ ಕೆ.ಜೆ.ಗಿರಿಧರ್, ಶ್ರೇಯಸ್, ನವೀನ್, ಸಿದ್ದಲಿಂಗ ಹಾಜರಿದ್ದರು.
ಆಂಜಿನಪ್ಪ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ
ಕಾಂಗ್ರೆಸ್ ಪಕ್ಷದಿಂದ ಟಿಕೇಟ್‌ಗಾಗಿ ತಮ್ಮ ಉಮ್ಮೇದುವಾರಿಕೆಯ ಅರ್ಜಿಯನ್ನು ಆಂಜಿನಪ್ಪ ಕೆಪಿಸಿಸಿ ವೀಕ್ಷಕರಿಗೆ ಸಲ್ಲಿಸಿದ್ದರು. ಆದರೆ ಕಾಂಗ್ರೆಸ್ ಪಕ್ಷದಿಂದ ವಿ.ಮುನಿಯಪ್ಪ ಅವರಿಗೆ ಟಿಕೆಟ್ ಘೋಷಣೆಯಾದ್ದರಿಂದ ಬಂಡಾಯವೆದ್ದ ಆಂಜಿನಪ್ಪ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಮೇ ೧೨ ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೊದಲ ದಿನವಾದ ಮಂಗಳವಾರ ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಆಂಜಿನಪ್ಪ (ಪುಟ್ಟು) ನಾಮಪತ್ರ ಸಲ್ಲಿಸಿದ್ದಾರೆ.
ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿಯಿರುವ ಎಸ್.ಎನ್.ಕ್ರಿಯಾ ಟ್ರಸ್ಟ್ ಕಚೇರಿಯಿಂದ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ಆಂಜಿನಪ್ಪ ಚುನಾವಣಾಧಿಕಾರಿ ಮಲ್ಲಿಕಾರ್ಜುನ್‌ರಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರವನ್ನು ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಈಗಾಗಲೇ ಕ್ಷೇತ್ರದಾದ್ಯಂತ ವಿವಿಧ ಸಾಮಾಜಿಕ ಕಾರ್ಯಗಳ ಮೂಲಕ ಜನತೆಯ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ. ಮುಂದಿನ ದಿನಗಳಲ್ಲಿಯೂ ಕೂಡಾ ಉತ್ತಮಸೇವೆಯನ್ನು ಮಾಡುವುದರ ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕಡೆಗೆ ಗಮನವನ್ನು ನೀಡುತ್ತೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡುವಂತಹವರನ್ನು ಈ ಬಾರಿ ಕ್ಷೇತ್ರದ ಜನತೆ ಆಯ್ಕೆ ಮಾಡಲಿದ್ದಾರೆ. ಆ ನಿಟ್ಟಿನಲ್ಲಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ’ ಎಂದರು.
ನಾಮಪತ್ರ ಸಲ್ಲಿಸಿದ ವೇಳೆ ಮುಖಂಡರಾದ ಹಿತ್ತಲಹಳ್ಳಿ ಕೃಷ್ಣಪ್ಪ, ಎಸ್.ವಿ.ಅಯ್ಯರ್, ಅಫ್ಸರ್‌ಪಾಷ, ಎ.ದೇವರಾಜು ಹಾಜರಿದ್ದರು.
ಬೂದಾಳ ಗ್ರಾಮದಲ್ಲಿ ಸಿಲಿಂಡರ್ ಸ್ಪೋಟ, ಮನೆಯ ಗೋಡೆ ಬಿರುಕು
ತಾಲ್ಲೂಕಿನ ಬೂದಾಳ ಗ್ರಾಮದಲ್ಲಿ ಸೋಮವಾರ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಮನೆ ಜಖಂ ಆಗಿದೆ.
ತಾಲ್ಲೂಕಿನ ಬೂದಾಳ ಗ್ರಾಮದಲ್ಲಿರುವ ಗರುಡಾದ್ರಿ ಶಾಲೆಯ ಪಕ್ಕದಲ್ಲಿ ಸೀನಪ್ಪ ಎಂಬುವವರು ವಾಸವಾಗಿರುವ ಮನೆಯಲ್ಲಿ ೫ ಕೆ.ಜಿ ಸಿಲಿಂಡರ್‌ನ್ನು ಅಡಿಗೆ ಮಾಡಲು ಉಪಯೋಗಿಸುತ್ತಿದ್ದರು. ಸಿಲಿಂಡರ್ ಮೊದಲಿನಿಂದಲೂ ಲಿಕೇಜ್ ಆಗುತ್ತಿದ್ದು, ನಿರ್ಲಕ್ಷ್ಯದಿಂದಾಗಿ ಇಂದು ಬೆಳ್ಳಿಗೆ ಸುಮಾರು ೮ ಗಂಟೆ ಸಮಯದಲ್ಲಿ ಸಿಲಿಂಡರ್ ಲಿಕೇಜ್‌ನಿಂದ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವುದನ್ನು ಕಂಡ ಅವರು ಮನೆ ಕಿಟಕಿ ಬಾಕಿಲುಗಳನ್ನ ತೆಗೆದು ಆರಿಸಲು ಪ್ರಯತ್ನಪಟ್ಟಿದ್ದಾರೆ. ಆಗದೆ ಇದ್ದಾಗ ಮನೆಯಿಂದ ಆಚೆ ಬಂದ ನಂತರ ಸಿಲಿಂಡರ್ ಸ್ಪೋಟಗೊಂಡು ಮನೆಯಲ್ಲಿರುವ ವಸ್ತುಗಳು ಛಿದ್ರವಾಗಿದೆ. ಮನೆ ಗೋಡೆ ಬಿರುಕು ಬಿಟ್ಟು, ಗೋಡೆಯ ಸ್ವಲ್ಪ ಭಾಗ ಮುರಿದು ಬಿದ್ದಿದೆ.
ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ನಡೆದಿಲ್ಲ, ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾರಿಗೂ ಅಪಾಯ ಸಂಭವಿಸಿಲ್ಲ.
ಹತ್ತು ದಿನಗಳ ಉಚಿತ ಕರಾಟೆ ಮತ್ತು ಜಿಮ್ನಾಸ್ಟಿಕ್ ಬೇಸಿಗೆ ಶಿಬಿರದ ಸಮಾರೋಪ
ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಸೋಮವಾರ ಹತ್ತು ದಿನಗಳ ಉಚಿತ ಉಚಿತ ಕರಾಟೆ ಮತ್ತು ಜಿಮ್ನಾಸ್ಟಿಕ್ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಪ್ರಮಾಣಪತ್ರವನ್ನು ನೀಡಿ ದಿವ್ಯ ಭಾರತ್ ಕರಾಟೆ ಡೋ ಅಸೋಸಿಯೇಷನ್ ಶಿಕ್ಷಕ ಅರುಣ್ ಕುಮಾರ್ ಮಾತನಾಡಿದರು.
ಕಲಿಕೆ ನಿರಂತರವಾದದ್ದು. ನಾವು ಕಲಿತದ್ದನ್ನು ಇತರರಿಗೆ ಕಲಿಸಿದರೆ ನಮ್ಮಲ್ಲಿನ ವಿದ್ಯೆ ಇನ್ನೂ ಹೆಚ್ಚುತ್ತದೆ ಎಂದು ಅವರು ತಿಳಿಸಿದರು.
ಬೇಸಿಗೆ ರಜೆಯಲ್ಲಿ ಮಕ್ಕಳು ಕೇವಲ ಟೀವಿ ನೋಡುತ್ತಾ ಕಾಲಕಳೆಯಬಾರದು. ದೈಹಿಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯಪೂರ್ಣ ಮನಸ್ಸು ಮತ್ತು ಶರೀರ ಹೊಂದಬೇಕು ಎಂಬ ಉದ್ದೇಶದಿಂದ ಉಚಿತವಾಗಿ ಹತ್ತು ದಿನಗಳ ಕಾಲ ಕರಾಟೆ ಮತ್ತು ಜಿಮ್ನಾಸ್ಟಿಕ್ ಶಿಬಿರವನ್ನು ಆಯೋಜಿಸಿದ್ದೆವು. ನೂರಕ್ಕೂ ಹೆಚ್ಚು ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು. ಪ್ರತಿಯೊಬ್ಬ ಮಗುವೂ ತಾವು ಕಲಿತದ್ದನ್ನು ಅಭ್ಯಾಸ ಮಾಡುತ್ತಾ ತಮ್ಮ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಿಬಿರದಲ್ಲಿ ಪಾಲ್ಗೊಂಡಿದ್ದ 120 ಮಕ್ಕಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ಕಲಾವಿದ ಮುನಿರಾಜು, ಬಸವರಾಜು, ಮುರಳಿ, ಮಣಿ ಹಾಜರಿದ್ದರು.

