ನೀತಿ ಸಂಹಿತೆ ಉಲ್ಲಂಘನೆ ಆರೋಪ ಎದುರಿಸುತ್ತಿದ್ದ ಬಿಜೆಪಿ ಮುಖಂಡ ಡಿ.ಆರ್.ಶಿವಕುಮಾರಗೌಡ ಅವರಿಗೆ ಸೋಮವಾರ ಸಿವಿಲ್ ನ್ಯಾಯಾಲಯ ಒಂದು ವರ್ಷ ಸಜೆ ಮತ್ತು ಹತ್ತು ಸಾವಿರ ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.
ನೀತಿ ಸಂಹಿತೆ ಉಲ್ಲಂಘಿಸಿ ಆರೂವರೆ ಲಕ್ಷ ರೂಪಾಯಿಗಳ ಮೌಲ್ಯದ ಬಟ್ಟೆಗಳನ್ನು 12 ಮೂಟೆಗಳನ್ನು ತಾಲ್ಲೂಕಿನ ಹಾರಡಿ ಗ್ರಾಮದ ಸಮೀಪವಿರುವ ಕರ್ಣಶ್ರೀ ಚಾರಿಟೆಬಲ್ ಟ್ರಸ್ಟ್ ಕಚೇರಿಯಲ್ಲಿ 2013 ರ ಏಪ್ರಿಲ್ 13 ರಂದು ಚುನಾವಣಾಧಿಕಾರಿಗಳು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿತ್ತು. 2013ರ ಮೇ 5 ರಂದು ನಡೆಯಲಿದ್ದ ವಿಧಾನಸಭಾ ಚುನಾವಣೆಯಲ್ಲಿ ಡಿ.ಆರ್.ಶಿವಕುಮಾರಗೌಡ ಅವರು ಕೆಜೆಪಿ ಅಭ್ಯರ್ಥಿಯಾಗಿದ್ದರು. ಅವರ ಕಚೇರಿಯಲ್ಲಿ 6,34,650 ರೂಗಳು ಬೆಲೆ ಬಾಳುವ 31 ಸೀರೆಗಳು, 150 ಖಾಕಿ ಪ್ಯಾಂಟ್ ಪೀಸ್‌ಗಳು, ‘ಡಿ.ಆರ್.ಶಿವಕುಮಾರಗೌಡ’ ಎಂದು ಹೆಸರು ಹಾಗೂ ಭಾವಚಿತ್ರ ಮುದ್ರಿಸಿದ್ದ 7,500 ಟೀ-ಶರ್ಟ್‌ಗಳನ್ನು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ದಾಸ್ತಾನು ಮಾಡಿರುವುದಾಗಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿತ್ತು.
ಈ ಪ್ರಕರಣದಲ್ಲಿ ಆರೋಪಗಳಿಗೆ ಡಿ.ಆರ್.ಶಿವಕುಮಾರಗೌಡ ಅವರನ್ನು ದೋಷಿ ಎಂದು ತೀರ್ಮಾನಿಸಿ ಈ ಆರೋಪಕ್ಕೆ ಒಂದು ವರ್ಷದ ಸಾದಾ ಕಾರಗೃಹದ ವಾಸ ಹಾಗೂ ಹತ್ತು ಸಾವಿರ ರೂ ದಂಡ ವಿಧಿಸಿದೆ. ದಂಡ ಪಾವತಿಸಲು ತಪ್ಪಿದಲ್ಲಿ ಆರೋಪಿಯು ಮೂರು ತಿಂಗಳ ಕಾಲ ಸಾದಾ ಕಾರಗೃಹದ ವಾಸದ ಶಿಕ್ಷೆ ಅನುಭವಿಸತಕ್ಕದ್ದು ಎಂದು ತೀರ್ಪನ್ನು ನೀಡಲಾಗಿದೆ. ಆರೋಪಿಯಿಂದ ವಶಪಡಿಸಿಕೊಂಡಿರುವ ಬೆಲೆ ಬಾಳುವ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡು ಬಹಿರಂಗ ಹರಾಜುಪಡಿಸಿ ಬರುವ ಹಣವನ್ನು ಸರ್ಕಾರದ ಲೆಕ್ಕಕ್ಕೆ ಜಮಾ ಮಾಡಲು ತೀರ್ಪಿನಲ್ಲಿ ಸೂಚಿಸಲಾಗಿದೆ.
ನೀತಿ ಸಂಹಿತೆ ಉಲ್ಲಂಘನೆ – ಬಿಜೆಪಿ ಮುಖಂಡ ಡಿ.ಆರ್.ಶಿವಕುಮಾರಗೌಡ ಅವರಿಗೆ ಶಿಕ್ಷೆ
ರಾಜ್ಯ ಮತ್ತು ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿರುವ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ಕಾರ್ಯಕ್ರಮ
ನಗರದ ನೆಹರೂ ಕ್ರೀಡಾಂಗಣದಲ್ಲಿ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ನಡೆಯುತ್ತಿರುವ ಉಚಿತ ಬೇಸಿಗೆ ಕ್ರೀಡಾ ಶಿಬಿರದಲ್ಲಿ ಭಾನುವಾರ ಬೆಳಿಗ್ಗೆ ರಾಷ್ಟ್ರಮಟ್ಟ ಹಾಗೂ ರಾಜ್ಯಮಟ್ಟವನ್ನು ಪ್ರತಿನಿಧಿಸಿರುವ ಕ್ರಿಡಾಪಟುಗಳನ್ನು ಗೌರವಿಸಿ ಅವರು ಮಾತನಾಡಿದರು.
ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿರುವ ಎಂ.ಮುನಿಕೃಷ್ಣ(ಬ್ಯಾಸ್ಕೆಟ್‌ಬಾಲ್), ಚೈತನ್ಯ(ಅಥ್ಲೆಟಿಕ್ಸ್) ಮತ್ತು ಭಗತ್‌ಕುಮಾರ್(ಅಥ್ಲೆಟಿಕ್ಸ್) ಅವರಿಗೆ ತಲಾ ನಾಲ್ಕು ಸಾವಿರ ರೂಗಳ ನಗದು ಹಣ ನೀಡಿ ಗೌರವಿಸಲಾಯಿತು.
ರಾಜ್ಯಮಟ್ಟವನ್ನು ಪ್ರತಿನಿಧಿಸಿರುವ ದಾಕ್ಷಾಯಿಣಿ, ದಿಲೀಪ್, ಮೋಹಿತ್‌ನಾಯಕ್, ತೋಸಿಬ್‌ಪಾಷ, ಕಿರಣ್, ಚಂದು, ಯಶವಂತ್, ಗಗನ್, ಈಶ್ವರ್, ಶ್ರೀಹರಿ, ರಂಜಿತ್‌ಕುಮಾರ್, ಕಾರ್ತಿಕ್ ಅವರಿಗೆ ಶೂಗಳನ್ನು ನೀಡಲಾಯಿತು. ಕರಾಟೆ ಶಿಕ್ಷಕ ಅರುಣ್‌ಕುಮಾರ್ ಅವರನ್ನು ಗೌರವಿಸಲಾಯಿತು.
ನಾರಾಯಣಸ್ವಾಮಿ, ಬಿ.ಸಿ.ನಂದೀಶ್, ಲಕ್ಷ್ಮೀಪತಿ, ಪುರುಷೋತ್ತಮ, ಜಗದೀಶ್, ಶ್ರೀರಾಮ, ಶಿವಲಿಂಗ, ಗಂಗಾಧರ, ಸಂದೀಪ್, ಬಾಬು, ಮಂಜು ಹಾಜರಿದ್ದರು.
ಶ್ರೀ ಸೀತಾರಾಮ ದೇವಾಲಯದಲ್ಲಿ ಶ್ರೀರಾಮನಾಮ ಜಪಯಜ್ಞ
ತಾಲ್ಲೂಕಿನ ಎಸ್.ದೇವಗಾನಹಳ್ಳಿ ಗ್ರಾಮ ಪಂಚಾಯಿತಿಯ ಎಸ್.ಗುಂಡ್ಲಹಳ್ಳಿ ಗ್ರಾಮದ ಶ್ರೀ ಸೀತಾರಾಮ ದೇವಾಲಯದಲ್ಲಿ ಶ್ರೀರಾಮನಾಮ ಜಪಯಜ್ಞವನ್ನು ಹಮ್ಮಿಕೊಂಡಿದ್ದು ಲೋಕ ಕಲ್ಯಾಣಾರ್ಥವಾಗಿ ಕಳೆದ ಏಳು ದಿನಗಳಿಂದಲೂ ನಿರಂತರವಾಗಿ ಶ್ರೀರಾಮನಾಮ (ರಾಮಕೋಟಿ) ಜಪ ಮಾಡಲಾಯಿತು.
ಲೋಕಲ್ಯಾಣಾರ್ಥ ಗ್ರಾಮಸ್ಥರು ಶ್ರೀರಾಮನಾಪ ಜಪ ಯಜ್ಞವನ್ನು ಹಮ್ಮಿಕೊಂಡಿದ್ದು ಕಳೆದ ವಾರದಿಂದಲೂ ನಿರಂತರವಾಗಿ ರಾತ್ರಿ ಹಗಲೆನ್ನದೆ ಶ್ರೀರಾಮನ ಭಜನೆ, ಕೀರ್ತನೆ, ನಾಮ ಸ್ಮರಣೆ ನಡೆಸಿ ಶನಿವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಸಲಾಯಿತು.
ಈ ಸಂಪ್ರದಾಯವನ್ನು ಹತ್ತಾರು ವರ್ಷಗಳಿಂದಲೂ ನಡೆಸಿಕೊಂಡು ಬಂದಿರುವ ಗ್ರಾಮಸ್ಥರು ಎಲ್ಲರೂ ಒಗ್ಗಟ್ಟಾಗಿ ಸೇರಿ ದೇವಾಲಯದ ಆವರಣದಲ್ಲಿ ಶ್ರೀರಾಮನಾಮ ಜಪ ಯಜ್ಞವನ್ನು ನಡೆಸಿದರು.
ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ನೆರವೇರಿಸಿ ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಪುರದ ಗಡ್ಡೆ ಕೃಷ್ಣಪ್ಪ, ನಾರಾಯಣಪ್ಪ, ಈಶ್ವರಾಚಾರಿ ಇನ್ನಿತರೆ ಅನೇಕರು ಶ್ರೀರಾಮನ ವಚನಗಳು, ಕೀರ್ತನೆ, ಭಜನೆ ಹಾಗೂ ಉಪನ್ಯಾಸದ ಮೂಲಕ ಶ್ರೀರಾಮನಾಮದ ಜಪದ ಶಕ್ತಿ ಕುರಿತು ವಿವರಿಸಿದರು.
ಗ್ರಾಮದ ಎಲ್ಲ ಮುಖಂಡರು ಹಾಗೂ ಸುತ್ತ ಮುತ್ತಲ ಗ್ರಾಮಗಳ ಭಕ್ತರು ಅಖಂಡ ಭಜನೆ ಶ್ರೀರಾಮ ನಾಮ ಜಪಯಜ್ಞ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.
ನಲವತ್ತು ವರ್ಷಗಳ ನಂತರ ಆನೆಮಡಗುವಿನಲ್ಲಿ ರಥೋತ್ಸವ
ಶಿಡ್ಲಘಟ್ಟ ತಾಲ್ಲೂಕಿನ ಆನೆಮಡಗು ಗ್ರಾಮದ ಅಗ್ರಹಾರ ಆಂಜನೇಯಸ್ವಾಮಿ ದೇವಾಲಯದ ರಥೋತ್ಸವ ಹಾಗೂ ಉಟ್ಲು ಮಹೋತ್ಸವ ಈಚೆಗೆ ವಿಜೃಂಭಣೆಯಿಂದ ನೆರವೇರಿತು.
ತಾಲ್ಲೂಕಿನ ಉತ್ತರ ದಿಕ್ಕಿನಲ್ಲಿ ಪಾಪಾಗ್ನಿ ನದಿ ತಟ್ಟದಲ್ಲಿ ನೆಲೆಸಿರುವ ಈ ಅಗ್ರಹಾರ ಆಂಜನೇಯಸ್ವಾಮಿ ದೇವಾಲಯದ ರಥೋತ್ಸವವು ೪೦ ವರ್ಷಗಳ ನಂತರ ನಡೆಯುತ್ತಿದ್ದು ನೆರೆಯ ಹಲವು ಗ್ರಾಮಗಳ ನೂರಾರು ಭಕ್ತರು ಸ್ವಾಮಿಯ ಪೂಜಾ ಕಾರ್ಯಕ್ಕೆ ಸಾಕ್ಷಿಯಾದರು.
ಈ ಹಿಂದೆ ರಥೋತ್ಸವ ನಡೆಯುತ್ತಿತ್ತಾದರೂ ಮರದ ತೇರು ಗೆದ್ದಲು ಹಿಡಿದು ಶಿಥಿಲಗೊಂಡಿದ್ದ ಕಾರಣ ೪೦ ವರ್ಷಗಳಿಂದಲೂ ರಥೋತ್ಸವ ನಡೆದಿರಲಿಲ್ಲ. ಇದೀಗ ಭಕ್ತರು ಹಾಗೂ ದಾನಿಗಳ ನೆರವಿನಿಂದ ನೂತನ ತೇರನ್ನು ನಿರ್ಮಿಸಿದ್ದು ಅದರಲ್ಲೆ ರಥೋತ್ಸವ ನಡೆಯಿತು.
ಹೂಗಳಿಂದ ಅಲಂಕೃತವಾದ ತೇರಿನಲ್ಲಿ ಶ್ರೀಕೋದಂಡರಾಮ, ಸೀತೆ, ಲಕ್ಷ್ಮಣ ಸಮೇತ ಆಂಜನೇಯಸ್ವಾಮಿಯ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ನೆರೆದ ಭಕ್ತರೆಲ್ಲರೂ ತೇರಿನ ಹಗ್ಗವನ್ನು ಹಿಡಿದೆಳೆದು ಸ್ವಾಮಿಗೆ ಉಘೆ ಉಘೇ ಎಂದು ದೇವರ ನಾಮ ಸ್ಮರಣೆಯೊಂದಿಗೆ ತೇರನ್ನು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿಸಿದರು.
ತೇರಿನ ನಂತರ ದೇವಾಲಯದ ಆವರಣದಲ್ಲಿ ಮನ ರಂಜನಾ ಉಟ್ಲು ಮಹೋತ್ಸವ ನಡೆಯಿತು, ದೇವಸ್ಥಾನದ ಸಂಚಾಲಕ ರಾಮಲಿಂಗಾರೆಡ್ಡಿ,
ತಿಮ್ಮನಾಯಕನಹಳ್ಳಿ ರಮೇಶ್, ರಾಮಚಂದ್ರರಾವ್, ದಡಂಘಟ್ಟ ಮಂಜುನಾಥ್, ದಿಬ್ಬೂರಹಳ್ಳಿ ರಾಜಣ್ಣ, ಪಲಿಚೇರ್ಲು ಪ್ರಕಾಶ್, ವೇದ ಬಹ್ಮಶ್ರೀ ಕೇಶವ ಭಟಾಚಾರ್ಯ ಭಾಗವಹಿಸಿದ್ದರು.
ಮಳ್ಳೂರಿನ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ ಹಾಗೂ ಬೆಳ್ಳಿ ಹಬ್ಬದ ಸಂಭ್ರಮ
ಇಪ್ಪತ್ತೈದು ವರ್ಷಗಳು ಎಂಬುದು ಯಾರದೇ ಬದುಕಿನಲ್ಲಿ ಒಂದು ಮೈಲಿಗಲ್ಲು. ‘ಬೆಳ್ಳಿ ವರ್ಷ‘ ಪೂರೈಸಿದ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪುನಃ ಶಾಲೆಗೆ ಬಂದು ಗುರುಗಳನ್ನು ಸಿಬ್ಬಂದಿಯನ್ನು ಗೌರವಿಸುವ ಮೂಲಕ ಪಾಠ ಹೇಳಿಕೊಟ್ಟ ನಮಗೆ ಮರೆಯಲಾಗದ ಉಡುಗೊರೆ ನೀಡಿದ್ದಾರೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಎಂ.ಎ.ಆನಂದ್ ಭಾವುಕವಾಗಿ ನುಡಿದರು.
ತಾಲ್ಲೂಕಿನ ಮಳ್ಳೂರಿನ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಭಾನುವಾರ 1992 – 93ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಹಾಗೂ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜೀವನ ಎಂಬುದು ಒಂದು ಬೃಹತ್ ಮರದಂತೆ. ಮರದ ಮುಖ್ಯ ಕಾಂಡವು ಎಸ್‌ಎಸ್‌ಎಲ್‌ಸಿ ಎಂಬ ಘಟ್ಟದ ನಂತರ ಟಿಸಿಲೊಡೆದು, ಕವಲು ಕವಲಾಗಿ ಬೆಳೆಯುತ್ತಾ ಹೋಗುತ್ತದೆ. ತಮ್ಮ ಬದುಕಿನಲ್ಲಿ ಗಟ್ಟಿತನಕ್ಕೆ ಕಾರಣರಾದವರನ್ನು ಸ್ಮರಿಸಲು ಯಾರಿಗೂ ವ್ಯವಧಾನ ಇರುವುದಿಲ್ಲ. ಅಷ್ಟೊಂದು ವೇಗವಾಗಿದೆ ಮತ್ತು ಜಟಿಲಗೊಂಡಿದೆ ಬದುಕು. ಎಸ್‌ಎಸ್‌ಎಲ್‌ಸಿ ಓದಿ ಮುಗಿಸಿದ 25 ವರ್ಷಗಳ ನಂತರ ಶಾಲೆಯಲ್ಲಿ ಒಂದುಗೂಡಿರುವ ಶಿಷ್ಯರನ್ನು ಕಂಡು ಸಾರ್ಥಕತೆಯ ಭಾವ ಮೂಡಿದೆ. ಎಲ್ಲರೂ ತಮ್ಮ ತಮ್ಮ ಜೀವನದಲ್ಲಿ ಒಂದಲ್ಲಾ ಒಂದು ರೀತಿಯ ಸಾಧನೆ ಮಾಡಿದ್ದಾರೆ. ಗುರುವಾದ ನಮಗೆ ಇದಕ್ಕಿಂತ ಮಿಗಿಲಾದ ಗೌರವ, ಸಮಾಧಾನ, ಹೆಮ್ಮೆ, ಪ್ರಶಸ್ತಿ ಯಾವುದೂ ಇಲ್ಲ ಎಂದು ಅಭಿಮಾನದಿಂದ ಹೇಳಿದರು.
ಈ ಸಂದರ್ಭದಲ್ಲಿ 1992 – 93ನೇ ಸಾಲಿನ 65 ಮಂದಿ ವಿದ್ಯಾರ್ಥಿಗಳು, ಶಿಕ್ಷಕರಾದ ಎಂ.ಎನ್.ನರಸಿಂಹಮೂರ್ತಿ, ಎಂ.ವೀರಭದ್ರಪ್ಪ, ಬೈರಾರೆಡ್ಡಿ, ಎನ್.ನಾರಾಯಣಸ್ವಾಮಿ, ರೆಡ್ಡಪ್ಪರೆಡ್ಡಿ, ಯು.ಪಿ.ನರಸಿಂಹಮೂರ್ತಿರಾವ್ ಹಾಗೂ ಸಿಬ್ಬಂದಿಯನ್ನು ಗೌರವಿಸಲಾಯಿತು.
ತಹಶೀಲ್ದಾರ್ ಅಜಿತ್‌ಕುಮಾರ್ ರೈ ಅವರ ನೇತೃತ್ವದಲ್ಲಿ ಮತದಾರರ ಮಿಂಚಿನ ನೋಂದಣಿ ಅಭಿಯಾನ
‘ಮತದಾರರ ಮಿಂಚಿನ ನೋಂದಣಿ ಅಭಿಯಾನ’ದ ಪ್ರಯುಕ್ತ ಭಾನುವಾರ ತಹಶೀಲ್ದಾರ್ ಅಜಿತ್‌ಕುಮಾರ್ ರೈ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ನಗರದಲ್ಲಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಹಾಗೂ ಮತದಾರರ ಪಟ್ಟಿಗೆ ಹೆಸರು ಸೇರಿಸುವ ಬಗ್ಗೆ ಅರಿವು ಮೂಡಿಸಿದರು.
‘ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು. ಏಪ್ರಿಲ್ 14 ಮತದಾರರ ಪಟ್ಟಿಗೆ ಹೆಸರು ಸೇರಿಸಲು ಕೊನೆಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಅಂಗವಿಕಲರು, ಮಹಿಳೆಯರು, ದುರ್ಬಲ ವರ್ಗದವರು ಸೇರಿದಂತೆ ಎಲ್ಲ ಮತದಾರರ ಅನುಕೂಲಕ್ಕಾಗಿ ಮತದಾರರ ಮಿಂಚಿನ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ನೋಂದಣಿ ಅಭಿಯಾನವು ಎಲ್ಲಾ ಮತಗಟ್ಟೆಗಳಲ್ಲಿ ನಡೆಯಲಿದ್ದು ಇದರ ಸದುಪಯೋಗವನ್ನು ಪಡೆದುಕೊಂಡು ಶೇಕಡಾ 100 ರಷ್ಟು ಮತದಾನ ನಡೆಯಲು ಸಹಕರಿಸಬೇಕು’ ಎಂದು ತಹಶೀಲ್ದಾರ್ ಅಜಿತ್‌ಕುಮಾರ್ ರೈ ತಿಳಿಸಿದರು.
ಜಾಥಾ ನಡೆಸಿ ಅಂಗಡಿ ಮುಂಗಟ್ಟುಗಳ ಬಳಿ ತೆರಳಿ, ಕೂಲಿ ಕಾರ್ಮಿಕರು, ಮಹಿಳೆಯರು, ಯುವಕರು ಮುಂತಾದವರಿಗೆ ಕರಪತ್ರವನ್ನು ನೀಡಿ ಮತದಾನದ ಮಹತ್ವ, ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅಗತ್ಯವಿರುವ ದಾಖಲೆಗಳು ಮುಂತಾದವುಗಳ ಬಗ್ಗೆ ವಿವರಿಸಿದರು.
ಚುನಾವಣಾಧಿಕಾರಿ ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ನಗರಸಭೆ ಆಯುಕ್ತ ಚಲಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಬಾಬು ಹಾಜರಿದ್ದರು.
ಪಕ್ಷದಿಂದ ಬೆಳೆದು ಪಕ್ಷದ ಅಧಿಕೃತ ಅಭ್ಯರ್ಥಿಯ ಮೇಲೆ ಆರೋಪ ತರವಲ್ಲ – ಎಂ.ರಾಜಣ್ಣ
ಜೆಡಿಎಸ್ ಬಂಡಾಯ ಅಭ್ಯರ್ಥಿ ಬಿ.ಎನ್.ರವಿಕುಮಾರ್ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದನ್ನು ದಾಖಲೆ ಸಮೇತ ರುಜುಪಡಿಸಲಿ, ಬಹಿರಂಗ ಚರ್ಚೆಗೆ ಬರಲಿ. ನನ್ನ ತಪ್ಪುಗಳಿದ್ದಲ್ಲಿ ಶಿಕ್ಷೆಗೆ ಗುರಿಯಾಗಲು ಸಿದ್ಧವಿದ್ದೇನೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದಲ್ಲಿ ತಮ್ಮ ಸ್ವಗೃಹದಲ್ಲಿ ಶುಕ್ರವಾರ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಜೆಡಿಎಸ್ ಪಕ್ಷದ ವರ್ಚಸ್ಸಿನಿಂದ ಅವರೂ ಸೇರಿದಂತೆ ನಾವೆಲ್ಲಾ ಬೆಳೆದಿದ್ದೇವೆ. ಪಕ್ಷದಿಂದ ಬೆಳೆದು ಪಕ್ಷದ ಅಧಿಕೃತ ಅಭ್ಯರ್ಥಿಯ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದು ಆರೋಗ್ಯಕರ ಬೆಳವಣಿಗೆಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಸ್ಪರ್ಧಿಸಿ ಜನರ ಮುಂದೆ ಹೋಗಬಹುದು. ದಾಖಲೆಗಳಿಲ್ಲದೆ ವೃಥಾ ಆರೋಪ ಮಾಡುವುದು ತರವಲ್ಲ ಎಂದು ಹೇಳಿದರು.
ನಿಷ್ಠಾವಂತರ ಬಳಗ ಎಂದು ಹೇಳಿಕೊಳ್ಳುವ ಬಿ.ಎನ್.ರವಿಕುಮಾರ್ ಅವರು ತಮ್ಮ ಸುತ್ತಮುತ್ತ ಇರುವವರ ರಾಜಕೀಯ ಇತಿಹಾಸವನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಂಡು ನೋಡಲಿ. ಪಕ್ಷಾಂತರಿಗಳು, ಹಣದ ಆಮಿಷಕ್ಕೆ ಒಳಗಾದವರು ಇವರ ಸುತ್ತ ಇದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಇವರು ಟ್ರಸ್ಟ್ ರಚಿಸಿಕೊಂಡು ಸಮಾಜಸೇವೆ ನೆಪದಲ್ಲಿ ಹಣ ಖರ್ಚು ಮಾಡಿದ್ದಾರೆ. ಜೆಡಿಎಸ್ ಎಂಬ ಕುಟುಂಬದ ಸದಸ್ಯರಾಗಿ ದೋಷಾರೋಪಣೆ ಮಾಡಬಾರದು. ಬಿ.ಎನ್.ರವಿಕುಮಾರ್ ಸೇರಿದಂತೆ ಜೆಡಿಎಸ್ ಪಕ್ಷದ ಎಲ್ಲರ ಶ್ರಮದಿಂದ ನಾನು ಶಾಸಕನಾದೆ ಅದಕ್ಕೆ ಕಾರ್ಯಕರ್ತರಿಗೆ ಋಣಿಯಾಗಿದ್ದೇನೆ. ನಾನೂ ಯಾವುದೇ ಸ್ವಜನ ಪಕ್ಷಪಾರ, ಭ್ರಷ್ಟಾಚಾರ ಎಸಗಿಲ್ಲ. ಸುಳ್ಳು ಆರೋಪ ಮಾಡುವವರು ದಾಖಲೆ ಒದಗಿಸಿ ಎಂದು ಹೇಳಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಧನಂಜಯರೆಡ್ಡಿ ಮಾತನಾಡಿ, ಜೆಡಿಎಸ್ ಬಂಡಾಯ ಅಭ್ಯರ್ಥಿ ಬಿ.ಎನ್.ರವಿಕುಮಾರ್, ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಿದ್ದು ನಾನೇ ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ. ಅವರು ಪಕ್ಷಕ್ಕೆ ಬಂದದ್ದೇ 2002 ರಲ್ಲಿ. ಪಕ್ಷಕ್ಕೆ ಭದ್ರ ಅಡಿಪಾಯ ಹಾಕಿದ್ದು ದಿ.ಮುನಿಶಾಮಪ್ಪನವರು. ರವಿಕುಮಾರ್ ಸುತ್ತ ಇರುವವರು ಪಕ್ಷಾಂತರಿಗಳು. ಅವರು ಯಾರೂ ಪಕ್ಷವನ್ನು ಕಷ್ಟಕಾಲದಲ್ಲಿ ಸಂಘಟಿಸಿದವರಲ್ಲ. ಹೋರಾಟಗಳಲ್ಲಿ, ಧರಣಿಗಳಲ್ಲಿ, ಕಾರ್ಯಕರ್ತರ ಕಷ್ಟಗಳಿಗೆ ಸ್ಪಂದಿಸಿದವರಲ್ಲ. ಕುಮಾರಣ್ಣನವರ ಕಾರ್ಯಕ್ರಮಕ್ಕೆ ಹದಿನೈದು ದಿನಗಳ ಕಾಲ ನಿದ್ದೆಗೆಟ್ಟು ಜನರನ್ನು ಸಂಘಟಿಸಿದ್ದೇವೆ. ಬೇರೆಡೆಯಿಂದ ಜನರನ್ನು ಕರೆತಂದಿದ್ದಾರೆ, ವಿ.ಮುನಿಯಪ್ಪ ಜನರನ್ನು ಕಳಿಸಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಐದು ವರ್ಷದ ಜನರ ಸೇವೆ, ಪ್ರಾಮಾಣಿಕತೆ, ಜೆಡಿಎಸ್ ಪಕ್ಷದೆಡೆಗಿನ ನಿಷ್ಠೆ ಜನರನ್ನು ಕರೆತರುವಲ್ಲಿ ಯಶಸ್ವಿಯಾಗಿದೆ. ವಾಮ ಮಾರ್ಗದ ಮೂಲಕ ತಪ್ಪು ಮಾಹಿತಿಯನ್ನು ಜನರಿಗೆ ಕೊಡಬೇಡಿ. ತಪ್ಪಿದ್ದರೆ ತಲೆ ಬಗ್ಗಿಸುತ್ತೇವೆ. ಎಲ್ಲಾ ತಿಳಿದಿರುವ ಜನರೇ ತೀರ್ಮಾನ ಕೊಡುತ್ತಾರೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಅಫ್ಸರ್‌ಪಾಷ, ರಾಜ್ಯ ಮುಖಂಡ ಕೋನಪ್ಪರೆಡ್ಡಿ, ಲಕ್ಷ್ಮೀನಾರಾಯಣ, ರಹಮತ್ತುಲ್ಲ, ಕನಕಪ್ರಸಾದ್, ಕೆ.ಮಂಜುನಾಥ್, ಪ್ರಭಾಕರರೆಡ್ಡಿ ಹಾಜರಿದ್ದರು.
ಜೆಡಿಎಸ್ ಪಕ್ಷ ತೊರೆದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ
ಶಿಡ್ಲಘಟ್ಟದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಜೆಡಿಎಸ್ ಪಕ್ಷ ತೊರೆದು ಮಾಜಿ ಶಾಸಕ ವಿ.ಮುನಿಯಪ್ಪ ಅವರ ಸಮ್ಮುಖದಲ್ಲಿ ಮುಖಂಡರಾದ ಸಾದಿಕ್ ಪಾಷ, ಎಂ. ಪಿ. ಮುಷ್ತಾಕ್, ಬಾಬು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾದರು
ಪ್ರಗತಿಪರ ರೈತ ಆನೂರು ಜಿ.ಬಚ್ಚಪ್ಪ ನಿಧನ
ಪ್ರಗತಿಪರ ರೈತ, ಸರ್.ಎಂ.ವಿಶ್ವೇಶ್ವರಯ್ಯ ರೈತಕೂಟದ ಅಧ್ಯಕ್ಷ ಆನೂರು ಜಿ.ಬಚ್ಚಪ್ಪ(74) ಬುಧವಾರ ರಾತ್ರಿ ನಿಧನರಾಗಿದ್ದಾರೆ. ಈಚೆಗೆ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಪತ್ನಿ, ಒಬ್ಬ ಮಗ ನಾಲ್ವರು ಹೆಣ್ಣುಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅವರು ಅಗಲಿದ್ದಾರೆ.
ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಅವರು, ಹನಿನೀರಾವರಿ ಮತ್ತು ಸಾವಯವ ಪದ್ಧತಿಯಲ್ಲಿ ಅತಿ ಹೆಚ್ಚು ರಾಗಿ ಬೆಳೆದು ಹಾಗೂ ಸಮಗ್ರ ಕೃಷಿ ಅಳವಡಿಸಿಕೊಂಡಿರುವುದಕ್ಕೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದರು.
ಮೃತರ ಅಂತ್ಯಕ್ರಿಯೆಯನ್ನು ಆನೂರು ಗ್ರಾಮದಲ್ಲಿ ಗುರುವಾರ ನಡೆಸಲಾಯಿತು. ರಾಜಕೀಯ ಮುಖಂಡರು, ರೈತ ಸಂಘದ ಸದಸ್ಯರು, ರೈತಕೂಟಗಳ ಸದಸ್ಯರು, ಸಾವಯವ ಕೃಷಿಕರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಯುವಜನತೆ ಚುನಾವಣೆಯ ಘನತೆ ಕಾಪಾಡಬೇಕು – ಅಜಿತ್ ಕುಮಾರ್ ರೈ
ಯುವಜನತೆ ಚುನಾವಣೆಯ ಘನತೆ ಕಾಪಾಡಲು ಮುಂದಾಗಬೇಕು. ಮತದಾನದ ವೇಳೆ ಆಮೀಷಕ್ಕೆ ಬಲಿಯಾಗದೆ ನಿರ್ಭೀತಿಯಿಂದ, ನ್ಯಾಯಸಮ್ಮತ ರೀತಿಯಲ್ಲಿ ಮತದಾನ ಮಾಡುವ ಮೂಲಕ ಮತದಾನದ ಪಾವಿತ್ರ್ಯಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಅಜಿತ್ ಕುಮಾರ್ ರೈ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಗುರುವಾರ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸಹಯೋಗದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರ,ಕಣ್ಣಿನ ತಪಾಸಣಾ ಶಿಬಿರ, ಮತದಾನದ ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮತದಾರರು ತಮ್ಮ ಹಕ್ಕು ಮತ್ತು ಕರ್ತವ್ಯಗಳ ಅರಿವು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆ, ಮತದಾನ ಮತ್ತು ಮತದಾರರು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾರೆ ಎನ್ನುವ ತಿಳಿವಳಿಕೆಯನ್ನು ಯುವಜನತೆ ಹೊಂದಿರಬೇಕು. ಮತದಾನದಲ್ಲಿ ಅಕ್ರಮ ಕಂಡುಬಂದಲ್ಲಿ ತಕ್ಷಣವೇ ಅದನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಅಕ್ರಮ ತಡೆಯಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದರು.
ಪ್ರಾಂಶುಪಾಲ ಚಂದ್ರಾನಾಯಕ್ ಮಾತನಾಡಿ, ಬೆಲೆ ಕಟ್ಟಲಾಗದ ಅಮೂಲ್ಯ ರಕ್ತವು ಹತ್ತು ಹಲವು ಸಂದರ್ಭಗಳಲ್ಲಿ ತನ್ನದೇ ಆದ ಪ್ರಮುಖ ಪಾತ್ರ ವಹಿಸುವ ಮೂಲಕ ಅಮೂಲ್ಯ ಜೀವ ರಕ್ಷಣೆಗೆ ಸಂಜೀವಿನಿಯಾಗಿದೆ. ಇಂದಿನ ಯುವಜನತೆ ರಕ್ತದಾನ ಮಾಡುವ ಮನೋಭವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ರಕ್ತದಾನ ಶಿಬಿರದಲ್ಲಿ 45 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ರಕ್ತದಾನಿಗಳಿಗೆ ಹಣ್ಣು, ಹಣ್ಣಿನ ರಸ, ಪ್ರಮಾಣ ಪತ್ರ ನೀಡಲಾಯಿತು.
ವಿದ್ಯುನ್ಮಾನ ಮತಯಂತ್ರ ಮತ್ತು ಈ ಚುನಾವಣೆಯಲ್ಲಿ ವಿಶೇಷವಾಗಿ ಬಳಸುತ್ತಿರುವ ಮತದಾನ ಖಾತ್ರಿ ಪಡಿಸುವ ವಿವಿಪಿಎಟಿ(ವೆರಿಫೈಯೆಬಲ್ ಪೇಪರ್ ಆಡಿಟ್ ಟ್ರಯಲ್) ರ ಬಳಕೆ ಮತ್ತು ಮತದಾನದ ಮಹತ್ವದ ಕುರಿತಾಗಿ ಅರಿವು ಮೂಡಿಸಲಾಯಿತು.
ಉಪನ್ಯಾಸಕರಾದ ವೆಂಕಟೇಶ್, ರಮೇಶ್, ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಗುರುರಾಜರಾವ್ ಹಾಜರಿದ್ದರು.
ಇರಗಪ್ಪನಹಳ್ಳಿಯ ಗ್ರಾಮಸ್ಥರು ಪತ್ತೆಹಚ್ಚಿದ ಅಪರೂಪದ ಶಾಸನ
ತಾಲ್ಲೂಕಿನ ಇರಗಪ್ಪನಹಳ್ಳಿಯಲ್ಲಿ ಗುರುವಾರ ವಿಶಿಷ್ಟ ಕೆತ್ತನೆಯ ಸೋಪಾನದ ಸಾಲಿನಿಂದ ಕೂಡಿದ ನೀರಿನ ಕೊಳದ ಬಳಿ ಗ್ರಾಮಸ್ಥರು ಪುರಾತನ ಸಂಸ್ಕೃತ ಭಾಷೆಯ ಶಾಸನವನ್ನು ಪತ್ತೆ ಹಚ್ಚಿದ್ದಾರೆ.
ಗ್ರಾಮದ ಪಟೇಲ್ ಬೈರಾರೆಡ್ಡಿ ನೇತೃತ್ವದಲ್ಲಿ ಫಣಿಕುಮಾರ್, ಗೆರಿಗಪ್ಪ, ರಾಜಪ್ಪ, ಮುನಿರಾಜು, ಎಸ್.ವೆಂಕಟೇಶ್ ಮತ್ತಿತರರು ಬಸವನ ಮಂಟಪದ ಸ್ವಲ್ಪ ದೂರದಲ್ಲಿ ವಿಶಾಲವಾದ ಹೊಲದಲ್ಲಿ ಇರುವ ಕೊಳದ ಬಳಿ ಮಣ್ಣಿನಲ್ಲಿ ಹೂತುಹೋಗಿದ್ದ ಶಾಸನವನ್ನು ಹುಡುಕಿ ತೆಗೆದು, ಕಲ್ಲನ್ನು ತೊಳೆದಿಟ್ಟಿದ್ದಾರೆ.
‘ಈಚೆಗೆ ನಮ್ಮ ಗ್ರಾಮಕ್ಕೆ ಶಾಸನತಜ್ಞ ಪ್ರೊ.ಕೆ.ಆರ್.ನರಸಿಂಹನ್ ಬಂದಿದ್ದರು. ಅವರು ನಂದಿಮಂಟಪದ ಬಳಿಯಿರುವ ಸಂಸ್ಕೃತ ಭಾಷೆಯ ಶಾಸನವನ್ನು ಕಂಡು ಕ್ರಿ.ಶ. 1359ನೇ ಕಾಲದ ಶಾಸನದ ಬಗ್ಗೆ ವಿವರ ನೀಡಿ ಅದನ್ನು ಸಂರಕ್ಷಿಸಲು ಹೇಳಿದ್ದರು. ಆ ಸಂದರ್ಭದಲ್ಲಿ ನಿಮ್ಮ ಗ್ರಾಮದ ಕೊಳದ ಬಳಿಯೂ ಇನ್ನೊಂದು ಶಾಸನ ಇರಬೇಕು. ಬಿ.ಎಲ್.ರೈಸ್ ಅವರ ಎಪಿಗ್ರಾಫಿಕಾ ಕರ್ನಾಟಕಾ ದಲ್ಲಿ ಅದರ ಬಗ್ಗೆ ಮಾಹಿತಿ ಇದೆ. ಅದೂ ಕೂಡ ಸಂಸ್ಕೃತದ ಶಾಸನ. ಕ್ರಿ.ಶ. 1360 ರ ಆ ಶಾಸನವನ್ನು ಹುಡುಕಿ ಎಂದು ಹೇಳಿದ್ದರು. ಬಹಳ ವರ್ಷಗಳ ಹಿಂದೆ ನಾವೂ ಅದನ್ನು ನೋಡಿದ್ದೆವು. ಆದರೆ ಜಮೀನುಗಳ ಬದುವಿನ ಮಣ್ಣು ಬಿದ್ದು ಅದು ಮುಚ್ಚಿ ಹೋಗಿತ್ತು. ಈ ದಿನ ಗ್ರಾಮಸ್ಥರ ಸಹಕಾರದಿಂದ ಹಾಗೂ ಶ್ರಮದಾನದಿಂದ ಅಪರೂಪದ ಇತಿಹಾಸದ ಕಲ್ಲನ್ನು ಹುಡುಕಿಟ್ಟೆವು’ ಎಂದು ಪಟೇಲ್ ಬೈರಾರೆಡ್ಡಿ ತಿಳಿಸಿದರು.
‘ಈ ಶಾಸನವು ರಾಮಾಂಬನ ಮಗನು ತನ್ನ ಸ್ನೇಹಿತರಾದ ಸದೇಶ್ವರ ಶಿವಾಚಾರ್ಯ ಸ್ವಾಮಿಗಳಿಗೆ ಶಂಭುವಿನ ಅಭಿಷೇಕ ಕೈಂಕರ್ಯಕ್ಕೆ ಬಿಟ್ಟ ದತ್ತಿಯನ್ನು ದಾಖಲಿಸುತ್ತದೆ. ಗ್ರಾಮಸ್ಥರ ಆಸಕ್ತಿಯಿಂದ ಇದು ಪತ್ತೆಯಾಗಿದೆ. ಇಲ್ಲಿನ ಎರಡೂ ಶಾಸನಗಳನ್ನು ಸ್ಮಾರಕಗಳ ರೀತಿ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಇಲ್ಲಿನ ಇತಿಹಾಸವನ್ನು ಸಾರಬೇಕು’ ಎಂದು ಶಾಸನತಜ್ಞ ಪ್ರೊ.ಕೆ.ಆರ್.ನರಸಿಂಹನ್ ಹೇಳಿದರು.
ದಾಖಲೆಯಿಲ್ಲದ ೨ ಲಕ್ಷ ೮೦ ಸಾವಿರ ರೂ ಹಣ ವಶ
ವಾಹನ ತಪಾಸಣೆ ವೇಳೆ ದಾಖಲೆಯಿಲ್ಲದ ಸುಮಾರು ೨ ಲಕ್ಷ ೮೦ ಸಾವಿರ ರೂ ಹಣ ಚೆಕ್‌ಪೋಸ್ಟ್ ನಲ್ಲಿ ಚುನಾವಣಾಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ.
ಚುನಾವಣೆ ನೀತಿಸಂಹಿತೆ ಹಿನ್ನಲೆಯಲ್ಲಿ ನಗರದ ಹೊರವಲಯದ ಹಂಡಿಗನಾಳ ಬಳಿಯಿರುವ ಚೆಕ್ ಪೋಸ್ಟ್ ಬಳಿ ಚುನಾವಣಾಧಿಕಾರಿಗಳು ಕಾರುಗಳ ತಪಾಸಣೆ ನಡೆಸುವ ವೇಳೆ ನಗರದ ಮುಜಾಮಿಲ್ ಎಂಬುವವರ ಕ್ವಾಲಿಸ್ ವಾಹನ (ಕೆಎ ೦೨ ಎಂಜೆ ೪೫೬)ದಲ್ಲಿ ದಾಖಲೆಯಿಲ್ಲದ ೨ ಲಕ್ಷ ರೂ ಹಣ ಪತ್ತೆಯಾದರೆ, ದೊಡ್ಡಮರಳಿ ಗ್ರಾಮದ ವೆಂಕಟೇಶ್ ಎಂಬುವವರ ಸ್ಯಾಂಟ್ರೋ ( ಕೆಎ ೦೩ ಎಂಎಚ್ ೩೪೮೧) ಕಾರಿನಲ್ಲಿ ಸುಮಾರು ೮೦ ಸಾವಿರ ಹಣ ಪತ್ತೆಯಾಗಿದೆ.
ಒಂದು ಕಾರಿನಲ್ಲಿದ್ದ ಹಣ ರೇಷ್ಮೆ ಮಾರಿ ತಂದಿರುವ ಹಣ ಎಂದು ಮತ್ತೊಂದು ಕಾರಿನಲ್ಲಿದ್ದ ಹಣ ದ್ರಾಕ್ಷಿ ಮಾರಿ ಬಂದಿರುವ ಹಣ ಎಂದು ಹೇಳಲಾಗುತ್ತಿದೆಯಾದರೂ ಸೂಕ್ತ ದಾಖಲೆಗಳಿಲ್ಲದ ಕಾರಣ ಹಣ ವಶಪಡಿಸಿಕೊಂಡು ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ದೇವೇಗೌಡರ ಭಾವಚಿತ್ರವಿಟ್ಟುಕೊಂಡು ಜನರ ಬಳಿ ಹೋಗುವೆ – ಬಿ.ಎನ್.ರವಿಕುಮಾರ್
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸುವುದಕ್ಕಾಗಿ ಅಪಾರವಾಗಿ ಶ್ರಮಿಸಿದ್ದೇನೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ಸೂಚನೆಯ ಮೇರೆಗೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಜೆಡಿಎಸ್ ಬಂಡಾಯ ಅಭ್ಯರ್ಥಿ ಬಿ.ಎನ್.ರವಿಕುಮಾರ್ ಹೇಳಿದರು.
ತಾಲ್ಲೂಕಿನ ತಾದೂರು ಗ್ರಾಮದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಕಳೆದ ಸೋಮವಾರ ಶಿಡ್ಲಘಟ್ಟದಲ್ಲಿ ನಡೆದಿರುವ ವಿಕಾಸಪರ್ವ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ನಮ್ಮ ಬಗ್ಗೆ ತುಂಬಾ ಹಗುರವಾಗಿ ಮಾತನಾಡಿ, ದೇವೇಗೌಡರ ಫೋಟೊ ಇಟ್ಟುಕೊಂಡು ಬರುವವರನ್ನು ನಂಬಬೇಡಿ ಎಂದು ಹೇಳಿದ್ದಾರೆ.
ನಾವು ದೇವೇಗೌಡರ ಅನುಮತಿ ಪಡೆದು ಅವರ ಫೋಟೊ ಹಾಕಿದ್ದೇವೆ. ಹಾಲಿ ಶಾಸಕ ಎಂ.ರಾಜಣ್ಣ, ಮಾಜಿ ಶಾಸಕ ವಿ.ಮುನಿಯಪ್ಪ ಇಬ್ಬರ ಹೊಂದಾಣಿಕೆಯಾಗಿದೆ. ವಿಕಾಸಪರ್ವ ಸಮಾವೇಶಕ್ಕೆ ವಿ.ಮುನಿಯಪ್ಪ ಜನರನ್ನು ಕಳುಹಿಸಿ, ಹಣಕೊಟ್ಟಿದ್ದಾರೆ. ಸೋಲುವ ಭಯದಿಂದ ವಿ.ಮುನಿಯಪ್ಪ, ಶಾಸಕ ಎಂ.ರಾಜಣ್ಣ ಅವರಿಗೆ ಟಿಕೆಟ್ ಸಿಗುವಂತೆ ನೋಡಿಕೊಂಡಿದ್ದಾರೆ. ಆದ್ದರಿಂದ ನಾವು ಸ್ಪರ್ಧೆ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮತ್ತು ಕಾಂಗ್ರೆಸ್‌ನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರುವ ಎಂ.ರಾಜಣ್ಣ ಅವರನ್ನು ಸೋಲಿಸಲು. ಒಂದು ವೇಳೆ ದೇವೇಗೌಡರು ನೀವು ಚುನಾವಣೆಯಿಂದ ಹಿಂದೆ ಸರಿಯಿರಿ ಎಂದು ಹೇಳಿದರೆ, ಖಂಡಿತ ಸ್ಪರ್ಧಿಸುವುದಿಲ್ಲ.
ಕ್ಷೇತ್ರದಲ್ಲಿ ಶಾಸಕರಾದಾಗಿನಿಂದ ಮಾಡಿರುವ ಭ್ರಷ್ಟಚಾರದ ಹಣದಲ್ಲಿ ಚುನಾವಣೆ ಮಾಡಲಿಕ್ಕೆ ಹೊರಟಿದ್ದಾರೆ. ಕಳೆದ ಚುನಾವಣೆಯಲ್ಲಿ ಜನರೇ ಹಣ ಕೊಟ್ಟು ಎಂ.ರಾಜಣ್ಣ ಅವರನ್ನು ಗೆಲ್ಲಿಸಿದರು. ಈ ಬಾರಿ ಎಲ್ಲಿಂದ ಇಷ್ಟೊಂದು ಹಣ ಅವರಿಗೆ ಬಂದಿದೆ ಎಂದು ಪ್ರಶ್ನಿಸಿದ ಅವರು, ನಾವು ದೇವೇಗೌಡರ ಭಾವಚಿತ್ರವನ್ನು ಇಟ್ಟುಕೊಂಡೇ ಚುನಾವಣೆಗೆ ಹೋಗ್ತೇವೆ, ನಾವು ಮೊದಲಿನಿಂದಲೂ ಜೆಡಿಎಸ್, ಗೆದ್ದರೂ ನಾವು ಜೆಡಿಎಸ್ ಹೊರತು ಬೇರೆಯಲ್ಲ.
ಕುಮಾರಸ್ವಾಮಿ ಸಮಾವೇಶಕ್ಕೆ ಕ್ಷೇತ್ರದ ಜೆಡಿಎಸ್ ಪಕ್ಷದ ಕಾರ್ಯಕರ್ತರು ಬಂದಿದ್ದು ಶೇಕಡಾ 10 ರಷ್ಟು. ಮಾಲೂರು, ಚಿಕ್ಕಬಳ್ಳಾಪುರ, ದೇವನಹಳ್ಳಿ, ಚಿಂತಾಮಣಿ ಸೇರಿದಂತೆ ಹಲವಾರು ಕಡೆಗಳಿಂದ ಜನರು ಬಂದಿದ್ದರೇ ಹೊರತು, ನಿಜವಾದ ಕಾರ್ಯಕರ್ತರು ನಮ್ಮಲ್ಲಿದ್ದಾರೆ ಎಂದರು.
ಟ್ರಸ್ಟ್ ಹೆಸರಿನಲ್ಲಿ ಯಾರಿಗೂ ನಾನು ಆಮಿಷ ಒಡ್ಡಿಲ್ಲ. ಕುಮಾರಸ್ವಾಮಿ ಅವರು ಮುಂದಿನ ಮುಖ್ಯಮಂತ್ರಿ ಆಗಬೇಕು. ಆಗ ಬಡವರ, ದೀನದಲಿತರ, ದುರ್ಬಲರ ಏಳಿಗೆ ಆಗುತ್ತದೆ ಎಂಬ ಉದ್ದೇಶದಿಂದ ಅವರ ಜನ್ಮ ದಿನದ ಪ್ರಯುಕ್ತ ಸಾಮಾಜಿಕ ಕಾರ್ಯಗಳನ್ನು ನಡೆಸಿರುವೆ. ಈಗಲೂ ಅದೇ ಸಿದ್ಧಾಂತಕ್ಕೆ ಬದ್ಧನಾಗಿದ್ದೇನೆ. ಕಾಂಗ್ರೆಸ್‌ನೊಂದಿಗೆ ಶಾಮೀಲಾದ ರಾಜಣ್ಣನನ್ನು ಸೋಲಿಸಿ ಜೆಡಿಎಸ್ ಪಕ್ಷವನ್ನು ಪುನಃ ಗಟ್ಟಿಗೊಳಿಸುತ್ತೇನೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ನಾನು ಶಾಸಕ ರಾಜಣ್ಣ ಅವರನ್ನು ಬೆಂಬಲಿಸುತ್ತೇನೆ ಎನ್ನುವ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿದೆ. ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಜೆಡಿಎಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಬಿ.ಎನ್.ರವಿಕುಮಾರ್ ಅವರನ್ನು ಶಾಸಕರನ್ನಾಗಿ ಮಾಡಬೇಕೆಂದು ಸಾಮೂಹಿಕವಾಗಿ ಸಂಘಟನೆ ಮಾಡುತ್ತಿದ್ದಾರೆ. ಯಾವ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬಾರದು ಎಂದರು.
ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ಪಿ.ವಿ.ನಾಗರಾಜ್, ಕದಿರಿಯೂಸುಫ್, ದೊಣ್ಣಹಳ್ಳಿ ರಾಮಣ್ಣ, ಕೇಶವಮೂರ್ತಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಸದಸ್ಯ ಮಳ್ಳೂರು ಮುನಿಯಪ್ಪ, ತಿಮ್ಮನಾಯಕನಹಳ್ಳಿ ರಮೇಶ್, ಬಚ್ಚನಹಳ್ಳಿ ನಾರಾಯಣಸ್ವಾಮಿ, ಚೀಮನಹಳ್ಳಿ ಗೋಪಾಲ್, ಜೆ.ಎಂ.ವೆಂಕಟೇಶ್, ಚಿಲಕಲನೇರ್ಪು ಹೋಬಳಿ ಮುಖಂಡರು ಹಾಜರಿದ್ದರು.
ಕೆ.ಎಚ್. ಮುನಿಯಪ್ಪ ವಿ.ಮುನಿಯಪ್ಪ ಅವರಂತೆ ಕಾಂಗ್ರೆಸ್‌ಗೆ ದ್ರೋಹ ಬಗೆಯುವುದಿಲ್ಲ
ಕೆ.ಎಚ್.ಮುನಿಯಪ್ಪ ಅವರ ಬೆಂಬಲ ನಿಮಗೆ ಇದೆಯಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರವಿಕುಮಾರ್ ಅವರು, ದೇವೇಗೌಡರು, ಜೆಡಿಎಸ್ ಪಕ್ಷಕ್ಕೆ ಎಷ್ಟು ನಿಷ್ಟರೋ ಕೆ.ಎಚ್.ಮುನಿಯಪ್ಪ ಅವರು, ಕಾಂಗ್ರೆಸ್‌ಗೆ ಅಷ್ಟೇ ನಿಷ್ಟರು, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವವರು ವಿ.ಮುನಿಯಪ್ಪ. ಎಂ.ಎಲ್.ಸಿ.ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ ಅವರ ವಿರುದ್ಧವಾಗಿ ಸದಸ್ಯರಿಂದ ಮತದಾನ ಮಾಡಿಸಿದ್ದರು. ಶಾಸಕ ಎಂ.ರಾಜಣ್ಣ ಅವರು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚುನಾವಣೆಯಲ್ಲಿ ಪಕ್ಷ ವಿರೋಧವಾಗಿ ಮತಚಲಾಯಿಸಿದ್ದರು. ಕೆ.ಎಚ್.ಮುನಿಯಪ್ಪ ಅವರು, ನಮಗೆ ಬೆಂಬಲ ನೀಡುವುದಾಗಿ ಎಲ್ಲಿಯೂ ಹೇಳಿಲ್ಲ. ಅದು ಸುಳ್ಳು ಎಂದರು.
ಮತ ಖಾತರಿ ಪಡಿಸಿಕೊಳ್ಳುವ ಸಾಧನ ವಿವಿಪಿಎಟಿ ಬಳಕೆಯ ಕುರಿತು ಅರಿವು ಕಾರ್ಯಾಗಾರ
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಮೇ 12 ರಂದು ನಡೆಯುವ ಮತದಾನದಲ್ಲಿ ಬಳಸಲಾಗುವ ವಿದ್ಯುನ್ಮಾನ ಮತಯಂತ್ರ ಮತ್ತು ಈ ಚುನಾವಣೆಯಲ್ಲಿ ವಿಶೇಷವಾಗಿ ಬಳಸುತ್ತಿರುವ ಮತದಾನ ಖಾತ್ರಿ ಪಡಿಸುವ ವಿವಿಪಿಎಟಿ(ವೆರಿಫೈಯೆಬಲ್ ಪೇಪರ್ ಆಡಿಟ್ ಟ್ರಯಲ್) ರ ಬಳಕೆ ಮತ್ತು ಮತದಾನದ ಮಹತ್ವದ ಕುರಿತಾಗಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ವಿವಿಪಿಎಟಿ ತರಬೇತಿ ತಂಡದ ಮುಖ್ಯಸ್ಥ ಸಿ.ಎಸ್.ಶ್ರೀನಾಥಗೌಡ ಮಾತನಾಡಿದರು.
ಮತ ಖಾತರಿ ಪಡಿಸಿಕೊಳ್ಳಲು ಮತದಾರನಿಗೆ ಅವಕಾಶ ಕಲ್ಪಿಸಲಾಗಿರುವ ನೂತನ ವಿವಿಪಿಎಟಿ ಬಳಕೆಯ ಬಗ್ಗೆ ಸಾರ್ವಜನಿಕರು, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಈ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಹಮ್ಮಿಕೊಳ್ಳಲಾಗಿದೆ. ಈ ದಿನ ಮೊದಲ ಹಂತವಾಗಿ ಹಂಡಿಗನಾಳ, ಮೇಲೂರು, ಚೀಮಂಗಲ ಪಂಚಾಯಿತಿಗಳಲ್ಲಿ ಮಾಹಿತಿ ಕಾರ್ಯಾಗಾರವನ್ನು ನಡೆಸುತ್ತಿದ್ದೇವೆ.
ಸದೃಢ ಪ್ರಜಾಪ್ರಭುತ್ವಕ್ಕಾಗಿ ಎಲ್ಲಾ ಮತದಾರರು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸುವುದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರಿಗೆ ನೀಡಿರುವ ಅಧಿಕಾರವನ್ನು ಬಳಸಬೇಕು. ಈ ಚುನಾವಣೆಯಲ್ಲಿ ಹೊಸದಾಗಿ ಬಳಕೆ ಮಾಡುತ್ತಿರುವ ವಿವಿಪಿಎಟಿ(ವೆರಿಫೈಯೆಬಲ್ ಪೇಪರ್ ಆಡಿಟ್ ಟ್ರಯಲ್)ರ ಮೂಲಕ ಮತ ಚಲಾಯಿಸಿದ ನಂತರ ಈ ಯಂತ್ರದ ಮೂಲಕ ಮತದಾರ ತಾನು ಯಾರಿಗೆ ಮತದಾನ ಮಾಡಿದ್ದೇನೆ ಎಂಬುದರ ಬಗ್ಗೆ ಏಳು ಸೆಕೆಂಡ್‌ಗಳ ಕಾಲ ವೀಕ್ಷಿಸಲು ಅವಕಾಶ ಕಲ್ಪಿಸಿದೆ. ಇದರ ಕುರಿತು ಎಲ್ಲಾ ಜನಪ್ರತಿನಿಧಿಗಳು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿವಿಪಿಎಟಿ ತರಬೇತಿ ತಂಡದ ರಾಜು, ಶಾಂತಮ್ಮ, ಕುಮಾರ್, ಪಿಡಿಒ ಬಿ.ಇ.ಅಂಜನ್‌ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಎಂ.ಜಯರಾಮ್, ಎ.ಎಂ.ತ್ಯಾಗರಾಜ್, ಉಮಾ, ಅಶ್ವತ್ಥಮ್ಮ, ಮುನಿಯಪ್ಪ, ಬೈರೇಗೌಡ, ಚಂದ್ರು, ಮುನೇಗೌಡ, ಶ್ರೀನಿವಾಸ್, ನಾರಾಯಣಸ್ವಾಮಿ ಹಾಜರಿದ್ದರು.
ಸಾರ್ವಜನಿಕರ ಅನುಕೂಲಕ್ಕೆ ತಾಲ್ಲೂಕು ಕಚೇರಿ ಆವರಣದಲ್ಲಿ ಮತದಾರರ ಸಹಾಯ ಕೇಂದ್ರ
ಮೇ ೧೨ ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮೊದಲಬಾರಿಗೆ ಮತಚಲಾವಣೆ ಮಾಡಲಿರುವ ಯುವಕರು ಮತ್ತು ಇರತ ನಾಗರಿಕರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಮಾಹಿತಿ ನೀಡಲು ಮತದಾರರ ಸಹಾಯ ಕೇಂದ್ರವನ್ನು ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ತೆರೆಯಲಾಗಿದೆ.
೧೮ ವರ್ಷ ತುಂಬಿರುವ ಪ್ರತಿಯೊಬ್ಬ ನಾಗರಿಕರು ಖಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನಮೂದಿಸಿಕೊಳ್ಳಬೇಕು. ಮತದಾನ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ನಿರ್ಭಯವಾಗಿ ಮತದಾನ ಮಾಡಲು ಅವಶ್ಯವಾಗಿರುವ ಮಾಹಿತಿಯನ್ನು ಮತದಾರರ ಸಹಾಯ ಕೇಂದ್ರದಲ್ಲಿ ಪಡೆದುಕೊಳ್ಳಬಹುದು ಎಂದು ಸಹಾಯ ಕೇಂದ್ರದ ನಿಯೋಜಿತ ಅಧಿಕಾರಿ ಮಹಮದ್‌ಹಸನ್. ಕೆ. ಮುಲ್ಲಾ ತಿಳಿಸಿದ್ದಾರೆ.
ತಾಲ್ಲೂಕಿನ ವಿವಿದೆಡೆಯಿಂದ ನಗರದ ತಾಲ್ಲೂಕು ಕಚೇರಿಗೆ ಬರುವಂತಹ ನಾಗರಿಕರು, ಮತದಾರರ ಸಹಾಯ ಕೇಂದ್ರದಲ್ಲಿ ಅವರಿಗೆ ಅಗತ್ಯವಿರುವ ಮತದಾರರ ಪಟ್ಟಿಯ ಸಂಖ್ಯೆ, ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆ ಮಾಡುವುದು, ಮೃತ ಪಟ್ಟರುವ ಮತದಾರರ ಹೆಸರನ್ನು ಪಟ್ಟಿಯಂದ ತೆಗೆಯುವುದು ಹಾಗೂ ಲೋಪದೋಷಗಳಿದ್ದಲ್ಲಿ ತಿದ್ದುಪಡಿ ಮಾಡಲು ಸಹಾಯ ಕೇಂದ್ರದ ನಿಯೋಜಿತ ಅಧಿಕಾರಿಯಿಂದ ಮಾಹಿತಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯ ಕೇಂದ್ರದ ದೂರವಾಣಿ ಸಂಖ್ಯೆಗೆ ೦೮೧೫೮-೨೫೬೭೬೩ ಕರೆಮಾಡಿ ಸಂಪರ್ಕಿಸಲು ಕೋರಿದ್ದಾರೆ.
ಮೇಲೂರಿನ ಶ್ರೀ ಧರ್ಮರಾಯಸ್ವಾಮಿ ದ್ರೌಪತಮ್ಮನವರ ಹೂವಿನ ಕರಗ ಮಹೋತ್ಸವ
ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಶ್ರೀ ಧರ್ಮರಾಯಸ್ವಾಮಿ ದ್ರೌಪತಮ್ಮನವರ 30ನೇ ವರ್ಷದ ಹೂವಿನ ಕರಗ ಸೋಮವಾರ ರಾತ್ರಿ ನಡೆಯಿತು. ಮೇಲೂರು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಕರಗ ಮಹೋತ್ಸವವನ್ನು ಕಣ್ತುಂಬಿಕೊಂಡರು.
ಗ್ರಾಮದಲ್ಲಿ ಶ್ರೀ ಧರ್ಮರಾಯಸ್ವಾಮಿ ದ್ರೌಪತಮ್ಮ ದೇವಿಯ ಕರಗ ಮಹೋತ್ಸವದ ಅಂಗವಾಗಿ ದೇವಾಲಯವನ್ನು ಸುಣ್ಣ ಬಣ್ಣ, ಹೂವುಗಳಿಂದ ಅಲಂಕರಿಸಲಾಗಿತ್ತು. ವಿಶೇಷ ಪೂಜೆ ನೆರವೇರಿಸಲಾಯಿತು. ವಿವಿಧ ಹೂಗಳಿಂದ ದೇವರ ಮೂರ್ತಿಗಳನ್ನು ಸಿಂಗರಿಸಲಾಗಿತ್ತು. ಝಗಮಗಿಸುತ್ತಿದ್ದ ವಿದ್ಯುತ್ ದೀಪಗಳು ಬೆಳದಿಂಗಳ ವಾತಾವರಣವನ್ನು ಸೃಷ್ಟಿಸಿದ್ದವು.
ಕರಗದ ಅಂಗವಾಗಿ ಗ್ರಾಮದಲ್ಲಿ ರಸಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಾಲಗ, ತಮಟೆ ಮತ್ತು ವಾದ್ಯವೃಂದದ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
ನಾನಾ ಪೂಜೆ ಪುನಸ್ಕಾರಗಳನ್ನು ನಡೆಸಿ ಮಲ್ಲಿಗೆ ಹೂವುಗಳಿಂದ ಅಲಂಕರಿಸಿದ ಕರಗವನ್ನು ತಲೆ ಮೇಲೆ ಹೊತ್ತ ಲಕ್ಕೂರು ಉಮೇಶ್ ಊರ ಪ್ರಮುಖ ಬೀದಿಗಳಲ್ಲಿ ನಡೆದರು. ತಮಟೆಯ ತಂಡ, ಕೈಯ್ಯಲ್ಲಿ ಕತ್ತಿ ಹಿಡಿದು ಝಳಪಿಸುತ್ತಿದ್ದ ವೀರಕುಮಾರರ ತಂಡವೂ ಅವರನ್ನು ಹಿಂಬಾಲಿಸಿತ್ತು.
ತಮಟೆಯ ಏಟಿಗೆ ತಕ್ಕಂತೆ ಕರಗ ಹೊತ್ತ ಲಕ್ಕೂರು ಉಮೇಶ್ ಹೆಜ್ಜೆ ಹಾಕಿದ್ದೇ ಅಲ್ಲದೆ ನೆಲದವರೆಗೂ ಬಾಗಿ ಎದ್ದು ನೋಡುಗರನ್ನು ಉಸಿರು ಬಿಗಿ ಹಿಡಿದು ನಿಲ್ಲುವಂತೆ ಮಾಡಿದರು. ಊರಿನ ಜನ ತಮ್ಮ ಮನೆ ಮುಂದೆ ಸಾರಿಸಿ, ಸಿಂಗರಿಸಿ ರಂಗೋಲೆ ಹಾಕಿ ಕರಗವನ್ನು ಸ್ವಾಗತಿಸಿ ಪೂಜಿಸಿದರು.
ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಾದ ದೊಡ್ಡತೇಕಹಳ್ಳಿ ತಂಡಕ್ಕೆ ‘ಟಗರು’ ಬಹುಮಾನ
ನಗರದ ಗಾಂಧಿನಗರದ ಇದ್ಲೂಡು ರಸ್ತೆಯಲ್ಲಿ ಈಚೆಗೆ ಫ್ರೆಂಡ್ಸ್ ಕಬಡ್ಡಿ ಕ್ಲಬ್ ವತಿಯಿಂದ ದಿ.ಡಾ.ಎಂ.ಶ್ರೀಧರ್ ಸ್ಮರಣಾರ್ಥ ನಡೆಸಿದ ತಾಲ್ಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ದೊಡ್ಡತೇಕಹಳ್ಳಿ ಗ್ರಾಮದ ತಂಡ ವಿಜೇತರಾಗಿ ‘ಟಗರು’ ಬಹುಮಾನವಾಗಿ ಪಡೆಯಿತು.
ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಸುಮಾರು 21 ತಂಡಗಳು ಭಾಗವಹಿಸಿದ್ದವು. ಮೊದಲನೇ ಬಹುಮಾನವಾಗಿ ಟಗರು, ಪ್ರಮಾಣಪತ್ರ ಮತ್ತು ಪದಕವನ್ನು ವಿಜೇತ ದೊಡ್ಡತೇಕಹಳ್ಳಿ ಗ್ರಾಮದ ತಂಡಕ್ಕೆ ನೀಡಲಾಯಿತು. ಎರಡನೇ ಬಹುಮಾನ 10 ಸಾವಿರ ರೂ ನಗದು ಮತ್ತು ಪದಕವನ್ನು ವರದನಾಯಕನಹಳ್ಳಿ ಗ್ರಾಮದ ತಂಡ ಪಡೆದರೆ, ಮೂರನೇ ಬಹುಮಾನ 5 ಸಾವಿರ ರೂ ನಗದು ಮತ್ತು ಪದಕವನ್ನು ದೇವರಮಳ್ಳೂರು ತಂಡ ಪಡೆಯಿತು. ಸಮಾಧಾನಕರ ಬಹುಮಾನ 2 ಸಾವಿರ ರೂ ನಗದು ಮತ್ತು ಪದಕ ವೆಂಕಟಾಪುರ ತಂಡಕ್ಕೆ ಹಾಗೂ ಭಾಗವಹಿಸಿದ ಪ್ರತಿ ತಂಡಗಳಿಗೂ ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹದಿನೈದು ಮಂದಿ ಹಿರಿಯ ಕಬಡ್ಡಿ ಆಟಗಾರರನ್ನು ಸನ್ಮಾನಿಸಲಾಯಿತು. ದಿ.ಡಾ.ಎಂ.ಶ್ರೀಧರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಫ್ರೆಂಡ್ಸ್ ಕಬಡ್ಡಿ ಕ್ಲಬ್ ಸದಸ್ಯರು ಹಾಜರಿದ್ದರು.
ವಿಶ್ವ ರಂಗಭೂಮಿ ದಿನ ಮತ್ತು ಮಕ್ಕಳ ಪುಸ್ತಕ ದಿನದ ಕಾರ್ಯಕ್ರಮ
ಈಗಿನ ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ರಂಗ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸಬೇಕು. ಇದರಿಂದ ಅವರಲ್ಲಿ ಹೊಸ ಚಿಂತನೆಗಳ ಹುಟ್ಟುವ ಮೂಲಕ ಮುಂದೆ ಅವರು ಉತ್ತಮ ಸಮಾಜವನ್ನು ನಿರ್ಮಿಸುವುದಕ್ಕೆ ಪೂರಕರಾಗುತ್ತಾರೆ ಎಂದು ಹಿರಿಯ ರಂಗಭೂಮಿ ಕಲಾವಿದೆ ದೇವರಮಳ್ಳೂರು ಯಶೋದಮ್ಮ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ವಿಶ್ವ ರಂಗಭೂಮಿ ದಿನ ಮತ್ತು ಮಕ್ಕಳ ಪುಸ್ತಕ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಂಗಭೂಮಿ ಎಂದರೆ ಪ್ರತಿಕ್ಷಣ ಬದುಕುವ, ಕಲಾತ್ಮಕವಾಗಿ ಅಭಿವ್ಯಕ್ತಿಸುವ, ಸೌಂದರ್ಯಪ್ರಜ್ಞೆಯನ್ನು ಮೂಡಿಸುವ ಮಾಧ್ಯಮ. ಕನ್ನಡದ ಅಸ್ತಿತ್ವ ಹಾಗೂ ಅಸ್ಮಿತೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಾಧ್ಯಮದಲ್ಲಿ ರಂಗಭೂಮಿಯ ಪಾತ್ರ ಬಹಳ ದೊಡ್ಡದು. ಮಕ್ಕಳಿಗೆ ರಂಗಭೂಮಿ ತರಬೇತಿ ನೀಡುವುದರಿಂದ ಅವರ ವ್ಯಕ್ತಿತ್ವವು ಅರಳುತ್ತದೆ. ಪ್ರತಿಯೊಂದು ಶಾಲೆಯಲ್ಲೂ ಮಕ್ಕಳ ನಾಟಕ, ಅಭಿನಯಕ್ಕೆ ಪೂರಕ ವಾತಾವರಣವನ್ನು ಕಲ್ಪಿಸಬೇಕು ಎಂದು ಹೇಳಿದರು.
ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ ಮಾತನಾಡಿ, ಮಕ್ಕಳಲ್ಲಿ ಓದಿನ ಅಭಿರುಚಿಯನ್ನು ಬೆಳೆಸಿದ ಡ್ಯಾನಿಷ್ ಬರಹಗಾರ ಹ್ಯಾನ್ಸ್ ಕಿಶ್ಚಿಯನ್ ಅಂಡರ್‌ಸನ್‌ನ ಜನ್ಮದಿನವನ್ನು 1962ರಲ್ಲಿ ವಿಶ್ವ ಮಕ್ಕಳ ಪುಸ್ತಕ ದಿನವನ್ನಾಗಿ ಘೋಷಿಸಲಾಯಿತು. ನಮ್ಮ ಶಾಲೆಯ ಗ್ರಂಥಾಲಯದ ಪುಸ್ತಕಗಳನ್ನು ಮಕ್ಕಳು ಓದುವ ಮೂಲಕ ಮಕ್ಕಳ ಪುಸ್ತಕ ದಿನದ ಅರ್ಥ ಹೆಚ್ಚಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ವತಿಯಿಂದ ಹಿರಿಯ ರಂಗಭೂಮಿ ಕಲಾವಿದೆ ದೇವರಮಳ್ಳೂರು ಯಶೋದಮ್ಮ ಅವರನ್ನು ಗೌರವಿಸಲಾಯಿತು.
ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಶಿಕ್ಷಕರಾದ ಚಾಂದ್‌ಪಾಷ, ಅಶೋಕ್, ಭಾರತಿ, ಸಿಬ್ಬಂದಿ ವೆಂಕಟಮ್ಮ, ಮಮತಾ, ದೇವರಮಳ್ಳೂರು ರಾಮಣ್ಣ, ಪಾಪಣ್ಣ ಹಾಜರಿದ್ದರು.
ಕನಕ ಯುವಸೇನೆ ಸಂಘಟನೆಯ ಉದ್ಘಾಟನಾ ಸಮಾರಂಭ
ಕುರುಬ ಜನಾಂಗದವರಿಗೆ ರಾಜಕೀಯ ಪ್ರಾತಿನಿಧ್ಯವನ್ನು ಒಗ್ಗೂಡಿ ಗಳಿಸಿಕೊಳ್ಳಬೇಕು ಎಂದು ಚಲನಚಿತ್ರ ನಿರ್ದೇಶಕ ಕೇಶವಾರ ಆರ್.ಚಂದ್ರು ತಿಳಿಸಿದರು.
ನಗರದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಕನಕ ಯುವಸೇನೆ ಸಂಘಟನೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿಯಷ್ಟೇ ಅಲ್ಲ ರಾಜಕೀಯವಾಗಿಯೂ ಸಮುದಾಯದ ಪ್ರಾತಿನಿಧ್ಯವನ್ನು ಪಡೆಯಬೇಕು. ಯುವಕರು ಈ ಬಗ್ಗೆ ಸಾಂಘಿಕವಾಗಿ ಒಗ್ಗೂಡಿ ಶ್ರಮಿಸಬೇಕು. ಜನಾಂಗದ ದುರ್ಭಲರಿಗೆ ಆಸರೆಯಾಗಬೇಕು. ಪ್ರತಿಯೊಬ್ಬ ಮಗುವೂ ವಿದ್ಯಾವಂತನಾಗುವಂತೆ ಪ್ರೇರೇಪಿಸಬೇಕು. ಮಹಿಳೆಯರನ್ನು ಆರ್ಥಿಕವಾಗಿ ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಕರ್ನಾಟಕ ಪ್ರಾದೇಶಿಕ ಕುರುಬ ಸಮಾಜದ ಉಪಾಧ್ಯಕ್ಷ ನಾಗರಾಜು ಮಾತನಾಡಿ, ಸಂಘಟನೆಯಲ್ಲಿ ರಾಜಕೀಯವನ್ನು ಬೆರೆಸದೇ ಅಭಿವೃದ್ಧಿ ಕಾರ್ಯಗಳತ್ತ ಗಮನಕೊಡಿ. ಎಲ್ಲಾ ಪಕ್ಷಗಳ ಬೆಂಬಲಿತರೂ ಜನಾಂಗದಲ್ಲಿರುತ್ತಾರೆ ಆದರೆ ಸಂಘಟನೆಯ ವಿಚಾರದಲ್ಲಿ ಒಗ್ಗೂಡಿ ಜನಾಂಗದ ಬೆಂಬಲಕ್ಕೆ ನಿಲ್ಲಬೇಕು. ಕನಕ ಯುವ ಸೇನೆ ಸಂಘಟನೆಯ ಪ್ರಾರಂಭವಾಗಿದೆ. ಅದು ನಿರಂತರವಾಗಿ ಕಾರ್ಯಯೋಜನೆಗಳನ್ನು ಹಮ್ಮಿಕೊಂಡು ಮಾದರಿಯಾಗಬೇಕು. ಹಿರಿಯರಾದ ನಾವು ಸದಾ ಬೆಂಬಲವಾಗಿರುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುರುಬ ಜನಾಂಗದ ಸಾಧಕರನ್ನು, ಹಿರಿಯರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಕುರುಬ ಸಂಘದ ಗೌರವಾಧ್ಯಕ್ಷ ಗಣೇಶಪ್ಪ, ಅಧ್ಯಕ್ಷ ಮಂಜುನಾಥ್, ಕನಕ ಯುವಸೇನೆ ಸಂಘಟನೆಯ ಅಧ್ಯಕ್ಷ ಎಂ.ಮುರಳಿ, ಉಪಾಧ್ಯಕ್ಷ ವಿ.ಎಲ್.ಗಣೇಶ್, ಕಾರ್ಯದರ್ಶಿ ಮುನಿರಾಜು, ಆರ್.ರವಿಕುಮಾರ್, ರಾಮಾಂಜಿ, ನಾರಾಯಣಸ್ವಾಮಿ, ದೇವರಾಜು, ಕಳಾವತಿ, ಮಂಜುಳಮ್ಮ ಹಾಜರಿದ್ದರು.
ದೇವೆಗೌಡರ ಹೆಸರೇಳಿಕೊಂಡು ಪಕ್ಷೇತರರಾಗಿ ನಿಲ್ಲುತ್ತಿರುವವರ ಮಾತನ್ನು ನಂಬದೆ ಶಾಸಕ ರಾಜಣ್ಣ ಅವರನ್ನು ಬೆಂಬಲಿಸಿ – ಎಚ್.ಡಿ.ಕುಮಾರಸ್ವಾಮಿ
ದೇವೇಗೌಡರ ಫೋಟೋ ಹಿಡಿದು ಬರುವವರನ್ನು ನಂಬಬೇಡಿ. ಹಣವನ್ನು ಚೆಲ್ಲಿ ಜನರನ್ನು ಗೆಲ್ಲಲು ಸಾಧ್ಯವಿಲ್ಲ. ಕ್ಷೇತ್ರದಲ್ಲಿನ ಬಂಡಾಯಕ್ಕೆ ಲಕ್ಷ್ಯ ಕೊಡಬೇಡಿ. ಈ ಕಾರ್ಯಕ್ರಮಕ್ಕೆ ಜನರು ಬರದಂತೆ ಕೆಲವರು ಪ್ರಯತ್ನ ನಡೆಸಿದ್ದು ತಿಳಿದಿದೆ. ಟ್ರಸ್ಟ್ ಹೆಸರಿನಲ್ಲಿ ದೇವಸ್ಥಾನಗಳಿಗೆ ಕಳುಹಿಸುವುದು, ಉಡುಗೊರೆ ಹಂಚುವುದು ಮುಂತಾದ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ದೇವೆಗೌಡರ ಹೆಸರೇಳಿಕೊಂಡು ಪಕ್ಷೇತರರಾಗಿ ಚುನಾವಣೆಯಲ್ಲಿ ನಿಲ್ಲುತ್ತಿರುವವರ ಮಾತನ್ನು ನಂಬದೆ ಶಾಸಕ ರಾಜಣ್ಣ ಅವರನ್ನು ಬೆಂಬಲಿಸಿ. ವಿರೋಧ ಪಕ್ಷದಲ್ಲಿದ್ದರೂ ತನ್ನ ಶಕ್ತಿ ಮೀರಿ ರಾಜಣ್ಣ ನಿಯತ್ತಾಗಿ ತಾಲ್ಲೂಕಿನ ಏಳಿಗೆಗಾಗಿ ದುಡಿದಿದ್ದಾರೆ. ಅವರನ್ನು ಆಶೀರ್ವದಿಸಿ. ಮುನಿಶಾಮಪ್ಪನವರು ನನಗೆ ತಂದೆ ಸಮಾನರು. ಒಂದು ಕಾಲದಲ್ಲಿ ಅವರನ್ನು ದಾರಿ ತಪ್ಪಿಸಿದ್ದವರೇ ಈಗ ಬಂಡಾಯವೆದ್ದು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ನನಗೆ ಶಕ್ತಿ ತುಂಬಲು ರಾಜಣ್ಣನನ್ನು ಬೆಂಬಲಿಸಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ವಿಕಾಸಪರ್ವ ಸಮಾವೇಶದಲ್ಲಿ ಅವರು ಮಾತನಾಡಿದರು.
ಅಭಿವೃದ್ಧಿ ಮತ್ತು ಲಂಚಮುಕ್ತ ರಾಜ್ಯವನ್ನು ನಿರ್ಮಿಸುವುದೇ ನನ್ನ ಗುರಿ. ರಾಜ್ಯದಾದ್ಯಂತ ನಿರಂತರವಾಗಿ ಓಡಾಡುತ್ತಿದ್ದೇನೆ. ಜನತಾ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದೇನೆ. ಕಾಂಗ್ರೆಸ್ ಅಥವಾ ಬಿಜೆಪಿ ಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾರೆ ಎಂದು ಕೆಲವರು ಆಡಿಕೊಳ್ಳಬಹುದು. ಆದರೆ ನಾವು ಈ ಎರಡೂ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ನಮ್ಮ ಗುರಿ ಏನಿದ್ದರೂ 113 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು.
ಥೈಲೆಂಡ್ ದೇಶದಲ್ಲಿ ರೇಷ್ಮೆಯಿಂದ 30 ಬಗೆಯ ಉತ್ಪನ್ನಗಳನ್ನು ತಯಾರಿಸುತ್ತಾರೆ. ನಮ್ಮಲ್ಲೂ ಅದನ್ನು ಪ್ರಾರಂಭಿಸುವ ಮೂಲಕ ರೇಷ್ಮೆಯನ್ನು ನಂಬಿದ ರೈತರ ಆರ್ಥಿಕ ಮಟ್ಟವನ್ನು ಸುಧಾರಣೆ ಮಾಡುತ್ತೇನೆ. ರೈತರ ಆತ್ಮಹತ್ಯೆಯು ನಿಲ್ಲಬೇಕು. ರೈತರು ಇತರರಿಗೆ ಕೈ ಎತ್ತಿ ನೀಡುವಂತೆ ಅವರನ್ನು ಸಶಕ್ತರನ್ನಾಗಿ ಮಾಡುವ ಹಲವು ಯೋಜನೆಗಳು ರೂಪಿಸುತ್ತೇನೆ ಎಂದು ಅವರು ತಿಳಿಸಿದರು.
ಜನರು ಆಶೀರ್ವದಿಸಿ ನಾವು ಅಧಿಕಾರಕ್ಕೆ ಬಂದರೆ ಜನರ ಸಮಸ್ಯೆಗಳನ್ನು ನಿವಾರಿಸಲು ಹಲವು ಯೋಜನೆಗಳನ್ನು ರೂಪಿಸಲಿದ್ದೇನೆ. ಸಿದ್ದರಾಮಯ್ಯನವರು ರೈತರ ೫೦,೦೦೦ ರೂ ಸಾಲ ಮನ್ನಾ ಮಾಡಿದ್ದು, ಇದುವರೆವಿಗೊ ಹಣ ಬಿಡುಗಡೆ ಮಾಡಿಲ್ಲ, ಜೆ.ಡಿ.ಎಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ರೈತರ ಎಲ್ಲಾ ಬ್ಯಾಂಕುಗಳ ಸಂಪೂರ್ಣ ಸಾಲ ಸುಮಾರು ೫೧,೦೦೦ ಸಾವಿರ ಕೋಟಿ, ಹಾಗೂ ಸ್ತ್ರೀ ಶಕ್ತಿ ಗುಂಪುಗಳ ೪,೩೦೦ ಕೋಟಿ ರೂ ಹಣವನ್ನು ಸಂಪೂರ್ಣ ಮನ್ನಾ ಮಾಡುತ್ತೇವೆ. ರೈತರು ಮತ್ತೆ ಸಾಲಗಾರರಾಗದಂತೆ ಆಗದೆ ಇರಲು ಹೊಸ ಕೃಷಿ ನೀತಿ ಜಾರಿ ಮಾಡಲಾಗುವುದು. ಇತ್ತಿಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿದ್ದ ಆಲಿಕಲ್ಲು ಮಳೆಯಿಂದ ಸುಮಾರು ಕೋಟಿ ಹಣ ದ್ರಾಕ್ಷಿ ಬೆಳೆ ಹಾನಿಯಿಂದ ನಷ್ಟ ಉಂಟಾಗಿದ್ದು, ಯಾವುದೇ ಪಕ್ಷ ಇದರ ಬಗ್ಗೆ ಪ್ರಸ್ತಾವನೆ ಮಾಡಿಲ್ಲ.
ಕಾಂಗ್ರೇಸ್ ಮತ್ತು ಬಿ.ಜೆ.ಪಿ ಪಕ್ಷಗಳು ರೈತರಿಗೆ ಶಾಶ್ವತ ನೀರಾವರಿ ಜಾರಿ ಮಾಡುವುದಾಗಿ ತಿಳಿಸಿದ್ದರೂ ಈಗ ಕೊಳಚೆ ನೀರನ್ನು ಶುದ್ದೀಕರಣ ಮಾಡಿ ಕೊಡುವುದಾಗಿ ಹೇಳುತ್ತಿದ್ದಾರೆ. ವಿಷಯುಕ್ತ ನೀರು ಕುಡಿಯುವುದರಿಂದ, ಬೆಳೆಯುವ ಬೆಳೆಗೆ ವಿಷಯುಕ್ತ ನೀರು ಹರಿಸುವುದರಿಂದ ಸಾರ್ವಜನಿಕರು, ರೋಗ ಪೀಡಿತರಾಗುವುದರಲ್ಲಿ ಸಂದೇಹವಿಲ್ಲ. ಎಲ್ಲೆಂದರಲ್ಲಿ ಮದ್ಯ ಸಿಗುವಂತೆ ಮಾಡಿ ನಿಮ್ಮ ಹಣವನ್ನು ದೋಚಿ ಅನ್ನ ಭಾಗ್ಯ ಎಂದು ಹೇಳಿ ಕೊಡುತ್ತಾರೆ. ಈ ಬಗ್ಗೆ ಜನರು ತಿಳಿಯಬೇಕು.
ಒಂದು ಬಾರಿ ಜೆ.ಡಿ.ಎಸ್ ಪಕ್ಷವನ್ನು ಅಧಿಕಾರಕ್ಕೆ ತಂದಲ್ಲಿ ಸಾರ್ವಜನಿಕರು ಕಟ್ಟುವ ತೆರಿಗೆಯನ್ನು ಒಂದು ನಯಾಪೈಸೆ ದುರುಪಯೋಗವಾಗದಂತೆ ನೋಡಿಕೊಳ್ಳುತ್ತೇವೆ. ಕೆರೆಗಳಿಗೆ ನೀರು ಹರಿಸುತ್ತೇವೆ. ಗರ್ಭಿಣಿಯರಿಗೆ ೬ ತಿಂಗಳು ಕಾಲ ೬,೦೦೦ ದಂತೆ ೩೬,೦೦೦ ಹಣ ನೀಡಲಾಗುವುದು. ಹಿರಿಯ ನಾಗರಿಕರಿಗೆ ನೆಮ್ಮದಿಯ ಸಂತೋಷ ಜೀವನ ಮಾಡಲು ಜೀವನ ಪರ್ಯಂತ ೫,೦೦೦ ಪೆನ್ಷನ್ ನೀಡುತ್ತೇವೆ, ಅವಿದ್ಯಾವಂತ ಹೆಣ್ಣು ಮಕ್ಕಳು, ಹಾಗೊ ನಿರುದ್ಯೋಗಿಗಳಿಗೆ ಸಸಿ ನೆಟ್ಟು ಬೆಳೆಸುವ ಕೆಲಸ ನೀಡಿ, ೫,೦೦೦ ಸಂಬಳ ನೀಡುವುದಾಗಿ ಅವರು ಹೇಳಿದರು.
ಹೆಲಿಕಾಪ್ಟರ್‌ನಲ್ಲಿ ಕೇಶವಾಪುರ ಗ್ರಾಮಕ್ಕೆ ಬಂದಿಳಿದ ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು. ಬೈಕ್‌ಗಳಲ್ಲಿ ಪಕ್ಷದ ಕಾರ್ಯಕರ್ತರು ರ್‍ಯಾಲಿ ನಡೆಸಿದರೆ, ಮಹಿಳೆಯರು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು. ದಾರಿಯುದ್ದಕ್ಕೂ ಹೂವನ್ನು ಎರಚುತ್ತಾ ಅವರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.
ಶಾಸಕ ಎಂ.ರಾಜಣ್ಣ, ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು, ಚಿಕ್ಕಬಳ್ಳಾಪುರ ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ, ತಾಲ್ಲೂಕು ಜೆ.ಡಿ.ಎಸ್ ಅದ್ಯಕ್ಷ ಡಾ.ಧನುಂಜಯರೆಡ್ಡಿ, ನಗರಸಭಾ ಅಧ್ಯಕ್ಷ ಅಫ್ಸರ್ ಪಾಷ, ಜಿಲ್ಲಾ ಪಂಚಾಯಿತಿ ಸದಸ್ಯ ಡಾ.ಜಯರಾಮರೆಡ್ಡಿ, ಜೆ.ಡಿ.ಎಸ್ ರಾಜ್ಯ ಮುಖಂಡ ಕೊಟ್ಟಿಗೆರೆ ಮಂಜುನಾಥ್ ಹಾಜರಿದ್ದರು.

