ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಶ್ರೀ ಮಯೂರಿ ನಾಟ್ಯಕಲಾ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಟರಾಜೋತ್ಸವ ಮತ್ತು ಗಾನಾಂಜಲಿ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಜಿ ಯೋಧ ಎಸ್.ವಿ.ಅಯ್ಯರ್ ಮಾತನಾಡಿದರು.
ಸಂಗೀತ, ನೃತ್ಯ ಕಲೆಗಳು ಭಾರತೀಯ ಪರಂಪರೆಯನ್ನು ಉಳಿಸುವ ಕಲೆಗಳಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.
ಶಾಸ್ತ್ರೀಯ ಸಂಗೀತಕ್ಕೆ ಕಠಿಣ ಅಭ್ಯಾಸದ ಅಗತ್ಯವಿದೆ. ಗಾಯಕರಿಗಿಂತ ಗಾಯನದ ಶೈಲಿ ಮುಖ್ಯ. ಗುರು ಪರಂಪರೆಯ ಮೂಲಕ ಕಲಿಯಬೇಕಾದ ಸಂಗೀತ, ನೃತ್ಯ ಕಲೆಗಳನ್ನು ಮಕ್ಕಳಿಗೆ ಕಲಿಸಬೇಕಿದೆ. ಎಲ್ಲರೂ ಈ ಕ್ಷೇತ್ರದಲ್ಲಿ ಸಾಧಕರಾಗದಿದ್ದರೂ ಕಲೆಯನ್ನು ಆಸ್ವಾದಿಸುವ ಮತ್ತು ಸುಸಂಸ್ಕೃತ ಮನಸ್ಸುಳ್ಳವರಾಗುತ್ತಾರೆ. ಈ ಮನಸ್ಥಿತಿಯುಳ್ಳವರು ಯಾವುದೇ ಕ್ಷೇತ್ರದಲ್ಲಿ ಮುಂದೆ ತೊಡಗಿಸಿಕೊಂಡರೂ ಸಮಾಜಕ್ಕೆ ಉಪಯುಕ್ತರಾಗುತ್ತಾರೆ.
ಇಂದಿನ ಒತ್ತಡದ ಪ್ರಾಪಂಚಿಕ ಬದುಕಿನಲ್ಲಿ ಸಂಗೀತವೆಂಬುದೊಂದೇ ನಮಗೆ ಸುಲಭವಾಗಿ ದಕ್ಕುವ ವಿಶ್ರಾಂತ ತಾಣ. ನಮ್ಮ ಮತ್ತು ಮುಂದಿನ ತಲೆಮಾರುಗಳ ಬದುಕು ಸಂಗೀತವೆಂಬ ಶ್ರೇಷ್ಠತೆಯನ್ನು ಎಂದೆಂದೂ ಅನುಭಾವಿಸುವ ಅವಕಾಶವನ್ನು ಜೀವಂತವಾಗಿರಿಸುವ ಪ್ರಯತ್ನವನ್ನು ಮಾಡಬೇಕಿದೆ ಎಂದು ಹೇಳಿದರು.
ಗಾನಾಂಜಲಿ ಕಾರ್ಯಕ್ರಮದಲ್ಲಿ ಸಂಗೀತ ಕಾರ್ಯಕ್ರಮಗಳು, ವೀಣೆ, ಲಘು ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಶಿಡ್ಲಘಟ್ಟ, ವಿಜಯಪುರ, ಚಿಂತಾಮಣಿ, ಬೆಂಗಳೂರಿನ ಕಲಾವಿದರು ನಡೆಸಿಕೊಟ್ಟರು. ನಟರಾಜೋತ್ಸವದ ಅಂಗವಾಗಿ ಭರತನಾಟ್ಯ ಕಾರ್ಯಕ್ರಮಗಳು ನಡೆದವು.
ಶ್ರೀ ಮಯೂರಿ ನಾಟ್ಯಕಲಾ ಕೇಂದ್ರದ ವಿದುಷಿ ಎಸ್.ವಿ.ಭಾಗ್ಯಲಕ್ಷ್ಮಿ ಅಯ್ಯರ್, ಕಲಾವಿದ ಸೋಮಶೇಖರ್ ಹಾಜರಿದ್ದರು.
ನಟರಾಜೋತ್ಸವ ಮತ್ತು ಗಾನಾಂಜಲಿ ಸಂಗೀತ ಕಾರ್ಯಕ್ರಮ
ಕರಗದಮ್ಮ ದೇವಿಯ ಹೂವಿನ ಕರಗ ಮಹೋತ್ಸವ
ಶಿಡ್ಲಘಟ್ಟ ನಗರದ ಶ್ರೀ ಕರಗದಮ್ಮ ದೇವಿಯ ಹೂವಿನ ಕರಗವು ಶನಿವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ಕರಗ ಮಹೋತ್ಸವದ ಅಂಗವಾಗಿ ಶನಿವಾರ ಮದ್ಯಾಹ್ನ ದೇವರಿಗೆ ಕಲ್ಯಾಣೋತ್ಸವ, ಸಂಜೆ ದಾಸಯ್ಯನವರ ಮಣಿಸೇವೆ ನಡೆಯಿತು. ನಂತರ ಕರಗ ಹೊರುವವರನ್ನು ಬಾವಿಯ ಬಳಿ ಕರೆದೊಯ್ದು ಗಂಗೆ ಪೂಜೆ ಮಾಡಿಸಿದ ನಂತರ ಮಧ್ಯರಾತ್ರಿ ಕರಗಕ್ಕೆ ಪೂಜೆ ಸಲ್ಲಿಸಿ ತಲೆಯ ಮೇಲೆ ಹೊರಿಸಲಾಯಿತು. ಆಗ ವೀರಕುಮಾರರು ಅಲಗು ಸೇವೆ ಮಾಡಿದರು. ಹಲಗೆ, ತಮಟೆ ವಾದ್ಯಗಳೊಂದಿಗೆ ಕರಗ ದೇವಾಲಯದ ಪ್ರದಕ್ಷಿಣೆ ಮಾಡಿ ನರ್ತಿಸಿತು. ಮುಂದೆ ಕತ್ತಿ ಹಿಡಿದ ವೀರಕುಮಾರರು, ಹಿಂದೆ ಕುಣಿಯುತ್ತಾ ಕರಗ ರಾತ್ರಿಯಿಡೀ ಊರೆಲ್ಲಾ ಸಂಚರಿಸಿತು. ಪ್ರತಿಯೊಬ್ಬರೂ ತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ ಅಲ್ಲಿಗೆ ಕರಗ ಬರುತ್ತಿದ್ದಂತೆ ಭಕ್ತಿಯಿಂದ ಆರತಿ ಬೆಳಗಿ ಮಲ್ಲಿಗೆ ಹೂಗಳನ್ನು ಸಮರ್ಪಿಸಿದರು.
ಊರಿನ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ನಗರದ ಪ್ರಮುಖ ಬೀದಿಗಳಲ್ಲೂ ವಿದ್ಯುತ್ ದೀಪಾಲಂಕಾರ ಸೇರಿದಂತೆ ನಗರದ ಅಶೋಕರಸ್ತೆಯ ಹೂವಿನ ವೃತ್ತ ಸೇರಿದಂತೆ ಮಯೂರವೃತ್ತ ಹಾಗೂ ಶಾಮಣ್ಣಬಾವಿಯ ಬಳಿ ವಾದ್ಯಗೋಷ್ಠಿಯನ್ನೂ ಆಯೋಜಿಸಲಾಗಿತ್ತು.
ಕರಗದಮ್ಮದೇವಿಯ ಹಸಿ ಕರಗ ಮಹೋತ್ಸವ
ನಗರದ ಶ್ರೀ ಕರಗದಮ್ಮದೇವಿಯ ಹಸಿ ಕರಗವು ಗುರುವಾರ ರಾತ್ರಿ ನಡೆಯಿತು.
ನಗರದಲ್ಲಿ ನಡೆಯುವ ಶ್ರೀ ಕರಗದಮ್ಮದೇವಿಯ ಕರಗವು ಸ್ವಸ್ತಶ್ರೀ ವಿಳಂಬಿ ಸಂವತ್ಸರ ಚೈತ್ರ ಮಾಸ ಶುದ್ಧ ಬಹುಳ ತ್ರಯೋದಶಿ ಗುರುವಾರ ಧ್ವಜಾರೋಹಣದಿಂದ ಆರಂಭವಾಗಿ ಸೋಮವಾರದವರೆಗೆ ಅನೇಕ ಪೂಜಾ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ.
ಹಸಿಕರಗದ ರಚನೆ ಬಹು ಕಟ್ಟುನಿಟ್ಟಾದ ಹಾಗೂ ಸಂಪ್ರದಾಯಬದ್ಧವಾದ ಕಾರ್ಯ. ಶಾಸ್ತ್ರಬದ್ಧವಾಗಿ ಹಸಿ ಮಣ್ಣಿನಿಂದ ಕರಗವನ್ನು ರೂಪಿಸುವ ಹಕ್ಕು ನಿರ್ದಿಷ್ಟವಾದ ಮನೆತನದವರಿಗೆ ಮಾತ್ರ ಮೀಸಲು. ಸಂಜೆಯ ಸುಮಾರಿಗೆ ಕರಗ ಹೊತ್ತು ನಡೆಯುವ ವ್ಯಕ್ತಿಗೆ ವಪನ ಸಂಸ್ಕಾರ ಮಾಡಿ, ಕಂಕಣ ಕಟ್ಟಿ, ಕೈತುಂಬ ಕರಿ ಬಳೆ ತೊಡಿಸಿ, ಅಚ್ಚ ಮಲ್ಲಿಗೆಯ ಜಡೆಕುಚ್ಚುಗಳಿಂದ ಸಿಂಗರಿಸಿ, ಅರಿಶಿನದ ಸೀರೆ, ಕುಪ್ಪುಸ ಉಡಿಸಿ, ಆಭರಣಗಳಿಂದ ಅಲಂಕರಿಸುತ್ತಾರೆ. ಕರಗ ಹೊರುವ ವ್ಯಕ್ತಿ ನವವಧುವಿನಂತೆ ಶೋಭಿಸುತ್ತಾನೆ.
ಅನಂತರ ಶಕ್ತಿಸ್ವರೂಪನಾದ ಆ ವ್ಯಕ್ತಿಗೆ ಧೂಪ ದೀಪಗಳಿಂದ ಮಂಗಳವಾದ್ಯಗಳೊಂದಿಗೆ ಶಾಸ್ತ್ರೋಕ್ತವಾದ ಪೂಜೆ ನಡೆಯುತ್ತದೆ. ಅನಂತರ ಹಣೆಗೆ ನಾಮ, ನಡುಪಟ್ಟಿ ಧರಿಸಿ ಕೈಯಲ್ಲಿ ಕತ್ತಿ ಹಿಡಿದ ಅಂಗರಕ್ಷಕರ ತಂಡದ ವೀರಕುಮಾರರ ಕಾವಲಿನಲ್ಲಿ ಕರಗ ಹೊರುವ ವ್ಯಕ್ತಿಯನ್ನು ನಡೆಮಡಿಯೊಂದಿಗೆ ದೇವಸ್ಥಾನಕ್ಕೆ ಕರೆತರುತ್ತಾರೆ. ಅಷ್ಟರಲ್ಲಿ ಅರಿಶಿನ, ಕುಂಕುಮ ಮಲ್ಲಿಗೆ ಹೂವಿನಿಂದ ಅಲಂಕೃತವಾದ ಹಸಿಕರಗ ಸಿದ್ಧವಾಗಿರುತ್ತದೆ. ಕರಗದ ಮೇಲೆ ಗೋಪುರದಂತೆ ಮಲ್ಲಿಗೆ ಹೂವಿನ ಅಲಂಕಾರವಿದ್ದು ತುದಿಯಿಂದ ಇಳಿಬಿಟ್ಟ ಹೂ ಸರಗಳನ್ನು ಹೊರುವವರ ಭುಜದಿಂದ ಕೆಳಕ್ಕೆ ಮಾಲೆಯಂತೆ ಹರಡಿಕೊಳ್ಳುವ ರೀತಿಯಲ್ಲಿ ಕಟ್ಟಿರುತ್ತಾರೆ.
ವೀರಕುಮಾರರ ರಕ್ಷಣೆಯಲ್ಲಿ ಗುಡಿಯ ಅಂಗಳ ಬಿಟ್ಟ ಕರಗ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೆಳಗಿನ ಜಾವಕ್ಕೆ ಮತ್ತೆ ಗರ್ಭಗುಡಿ ಪ್ರವೇಶಿಸಿತು. ದಾರಿಯುದ್ದಕ್ಕೂ ಭಕ್ತಾದಿಗಳಿಂದ ಪೂಜೆ ಸೇವೆ ನಡೆಯಿತು. ನಗರದ ಹಲವಾರು ಬೀದಿಗಳಲ್ಲಿ ವಿದ್ಯುತ್ ಅಲಂಕಾರ ಮಾಡಿ ಉಚಿತ ಭೋಜನದ ವ್ಯವಸ್ಥೆಗಳನ್ನೂ ವಿವಿಧ ದಾನಿಗಳು ಮಾಡಿದ್ದರು.
ಮನೆ ಮನೆಗೆ ರವಿಯಣ್ಣ ಕಾರ್ಯಕ್ರಮಕ್ಕೆ ಚಾಲನೆ
ಕಳೆದ ಕೆಲವು ದಶಕಗಳಿಂದ ಕ್ಷೇತ್ರದಿಂದ ಆಯ್ಕೆಯಾಗಿ ಕ್ಷೇತ್ರದ ಅಭಿವೃದ್ಧಿ ಮರೆತು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡು ಗಳಿಸಿರುವ ಸಂಪತ್ತನ್ನು ರಕ್ಷಿಸಿಕೊಳ್ಳಲು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ನಡೆಸುತ್ತಿರುವ ಮಾಜಿ ಶಾಸಕರನ್ನು ಕ್ಷೇತ್ರದ ಜನರು ಈ ಭಾರಿಯ ಚುನಾವಣೆಯಲ್ಲಿ ಸೋಲಿಸುವ ಮೂಲಕ ಉತ್ತಮರನ್ನು ಆಯ್ಕೆ ಮಾಡಲಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾರಘು ತಿಳಿಸಿದರು.
ತಾಲ್ಲೂಕಿನ ಗೊರಮಡುಗು ಗ್ರಾಮದಲ್ಲಿ ಶುಕ್ರವಾರ ಮನೆ ಮನೆಗೆ ರವಿಯಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಜೆಡಿಎಸ್ ಬಂಡಾಯ ಅಭ್ಯರ್ಥಿ ಬಿ.ಎನ್.ರವಿಕುಮಾರ್ ಪರ ಅವರು ಮತ ಯಾಚಿಸಿದರು.
ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸುವಲ್ಲಿ ಶ್ರಮಿಸಿದ ಪಕ್ಷದ ಹಿರಿಯ ಮುಖಂಡರೂ ಹಾಗೂ ಕಾರ್ಯಕರ್ತರನ್ನು ಹಾಲಿ ಶಾಸಕ ಎಂ.ರಾಜಣ್ಣ ಕಡೆಗಣಿಸಿದ್ದಾರೆ. ಈ ಕಾರಣದಿಂದ ಬೇಸತ್ತಿರುವ ಪಕ್ಷದ ಬಹುತೇಕ ಮುಖಂಡರೂ ಮತ್ತು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಈ ಭಾರಿಯ ಚುನಾವಣೆಯಲ್ಲಿ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಬಿ.ಎನ್.ರವಿಕುಮಾರ್‌ರನ್ನು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮನವೊಲಿಸಿದ್ದು, ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದ ಜನರ ಆಸೆಯಂತೆ ಬಿ.ಎನ್.ರವಿಕುಮಾರ್ ಜಯಗಳಿಸುವರು. ಹಾಲಿ ಹಾಗೂ ಮಾಜಿ ಶಾಸಕರಿಬ್ಬರೂ ಸೋತು ಮನೆ ಸೇರಲಿದ್ದಾರೆ ಎಂದರು.
ಕಳೆದ ೧೨ ವರ್ಷಗಳಿಂದ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಹಾಗು ಜನರ ಅಭಿವೃದ್ಧಿಗಾಗಿ ವಿವಿಧ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಬಿ.ಎನ್.ರವಿಕುಮಾರ್ ಅವರನ್ನು ಈ ಭಾರಿಯ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಕ್ಷೇತ್ರದ ಅಮಗ್ರ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಸದಸ್ಯ ರಾಜಶೇಖರ್, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯೆ ನೇತ್ರಾಲಕ್ಷ್ಮೀಪತಿ, ಮುಖಂಡರಾದ ಗೊರಮಡುಗು ರಾಮಾಂಜಿನಪ್ಪ, ತಾದೂರು ರಘು, ಕೊತ್ತನೂರು ಲಕ್ಷ್ಮೀಪತಿ, ರಾಮರಾಜು, ಕನ್ನಮಂಗಲ ಅಶ್ವತ್ಥ್ ಹಾಜರಿದ್ದರು.
ಅಪ್ಪೇಗೌಡನಹಳ್ಳಿಯಲ್ಲಿ ಆಮೆಯ ರಕ್ಷಣೆ
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ನಾಗೇಂದ್ರಬಾಬು ಅವರು ಬುಧವಾರ ತಮ್ಮ ತೋಟದಲ್ಲಿ ಕಂಡುಬಂದ ಆಮೆಯೊಂದನ್ನು ಸ್ನೇಹಿತರ ನೆರವಿನಿಂದ ಗ್ರಾಮದ ಕುಂಟೆಗೆ ಬಿಟ್ಟಿದ್ದಾರೆ.
‘ತೋಟದಲ್ಲಿ ಕೆಲಸ ಮಾಡುವಾಗ ಆಮೆಯು ಕಂಡು ಬಂದಿತು. ಅದು ಹೇಗೆ ಅಲ್ಲಿಗೆ ಬಂದಿತೋ ಗೊತ್ತಿಲ್ಲ. ಬಿಸಿನ ಝಳಕ್ಕೆ ನಾವೇ ಕಂಗಾಲಾಗುವಾಗ ಅದರ ಪರಿಸ್ಥಿತಿ ಹೇಗಿರಬೇಕು. ತಕ್ಷಣವೇ ಸ್ನೇಹಿತರಿಗೆ ತಿಳಿಸಿದೆ. ಅವರ ನೆರವಿನಿಂದ ಕುಂಟೆಯಲ್ಲಿ ಬಿಡಲು ಹೋದೆವು. ಆಗ ನಮ್ಮೂರಿನ ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ಈ ಆಮೆಯನ್ನು ನಮ್ಮ ಶಾಲೆಯ ಮಕ್ಕಳಿಗೆ ತೋರಿಸಿ ನಂತರ ಬಿಡೋಣ. ಮಕ್ಕಳು ಎಂದೂ ಆಮೆಯನ್ನು ನೋಡಿರುವುದಿಲ್ಲ ಎಂದರು. ಅದಕ್ಕಾಗಿ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೋದೆವು. ಅಲ್ಲಿ ಶಿಕ್ಷಕ ಚಾಂದ್‌ಪಾಷ ಮಕ್ಕಳಿಗೆ ಆಮೆಯ ಕುರಿತಂತೆ ವಿವರಿಸಿದರು. ನಂತರ ಕುಂಟೆಯಲ್ಲಿ ಅದನ್ನು ಬಿಟ್ಟೆವು’ ಎಂದು ನಾಗೇಂದ್ರಬಾಬು ತಿಳಿಸಿದರು.
‘ಈ ಆಮೆಯನ್ನು ಇಂಡಿಯನ್ ಫ್ಲಾಪ್ ಶೆಲ್ ಟರ್ಟಲ್ ಎಂದು ಇಂಗ್ಲೀಷಿನಲ್ಲಿ ಕರೆಯುತ್ತಾರೆ. ಸಿಹಿನೀರಿನಲ್ಲಿ ವಾಸಿಸುವ ಈ ಆಮೆ ದಕ್ಷಿಣ ಏಷ್ಯಾ ದೇಶಗಳಲ್ಲಿ ಕಂಡುಬರುತ್ತವೆ. ಚಿಪ್ಪಿನ ಆಕಾರ ಹೊಂದಿರುವ ಆಮೆಗಳು ಸರೀಸೃಪ ಜಾತಿಗೆ ಸೇರಿದವು. ಅನೇಕ ಆಮೆಗಳು ತಮ್ಮ ಜೀವನದ ಬಹುದೊಡ್ಡ ಭಾಗವನ್ನು ನೀರಿನಲ್ಲಿಯೇ ಕಳೆದರೂ ಎಲ್ಲ ಆಮೆಗಳು, ಕಡಲಾಮೆಗಳು ಗಾಳಿಯನ್ನು ಉಸಿರಾಡುತ್ತವೆ. ಮತ್ತು ತಮ್ಮ ಪುಪ್ಪುಸವನ್ನು ತುಂಬಿಕೊಳ್ಳಲು ನಿಯಮಿತ ಆವೃತ್ತಿಯಲ್ಲಿ ನೀರಿನಿಂದ ಮೇಲೆ ಬರಲೇ ಬೇಕು’ ಎಂದು ಶಿಕ್ಷಕ ಚಾಂದ್ ಪಾಷ ಶಾಲಾ ವಿದ್ಯಾರ್ಥಿಗಳಿಗೆ ಆಮೆಯ ಕುರಿತಂತೆ ವಿವರಿಸಿದರು.
ಗ್ರಾಮದ ಆದರ್ಶ್‌ಗೌಡ, ಅಮೂಲ್ಯ, ನರಸಿಂಹಮೂರ್ತಿ, ಪ್ರದೀಪ್, ಮುನಿರಾಜು, ಹೇಮಂತ್ ಈ ಸಂದರ್ಭದಲ್ಲಿ ಇದ್ದರು.
ಹಾಲಿನ ಡೈರಿ ಕಟ್ಟಡ ನಿರ್ಮಾಣಕ್ಕೆ ಸಹಾಯಧನ ವಿತರಣೆ
ಶಿಡ್ಲಘಟ್ಟ ತಾಲ್ಲೂಕಿನ ಬಸವಪಟ್ಟಣ ಗ್ರಾಮದಲ್ಲಿ ಹಾಲಿನ ಡೈರಿ ಕಟ್ಟಡ ನಿರ್ಮಾಣಕ್ಕೆ ಮೊದಲ ಕಂತಿನ ಸಹಾಯಧನ 60 ಸಾವಿರ ರೂಗಳ ಚೆಕ್ ಅನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಮೋಹನ್ ಎಂ.ಪಿ.ಸಿ.ಎಸ್ ಅಧ್ಯಕ್ಷ ಬೈರೇಗೌಡ ಅವರಿಗೆ ನೀಡಿದರು. ಉಪಾಧ್ಯಕ್ಷ ಪಾಪಣ್ಣ, ಕಾರ್ಯದರ್ಶಿ ರಾಮಣ್ಣ, ಸದಸ ಕೃಷ್ಣಪ್ಪ, ಮೆಲ್ವೀಚಾರಕಿ ಜ್ಯೋತಿ ಹಾಜರಿದ್ದರು
ಯೋಗಿದ್ಯಾವಪ್ಪತಾತನ ಆರಾಧನಾ ಮಹೋತ್ಸವ ಮತ್ತು ದನಗಳ ಜಾತ್ರೆ
ಗೋಕಷ್ಟ ನಿವಾರಕ ಎಂದೇ ಪ್ರಸಿದ್ಧಿ ಪಡೆದಿರುವ ಯೋಗಿದ್ಯಾವಪ್ಪತಾತನ ಆರಾಧನಾ ಮಹೋತ್ಸವ ಕಾರ್ಯಕ್ರಮ ಮತ್ತು ಭಾರಿ ದನಗಳ ಜಾತ್ರೆಯು ತಾಲ್ಲೂಕಿನ ದ್ಯಾವಪ್ಪನಗುಡಿಯಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಭಾನುವಾರದಿಂದ ಪ್ರಾರಂಭವಾದ ಆರಾಧನಾ ಮಹೋತ್ಸವವು ಏಳುದಿನಗಳ ಕಾಲ ನಡೆದು ಬರುವ ಶನಿವಾರ ಕೊನೆಗೊಳ್ಳಲಿದೆ.
ತಾಲ್ಲೂಕು ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸುವ ಸಾವಿರಾರು ಭಕ್ತರು ದ್ಯಾವಪ್ಪನ ತಾತನ ಸಮಾಧಿಗೆ ತೆಂಗಿನ ಕಾಯಿ ಅರ್ಪಿಸಿ, ಪೂಜೆ ಸಲ್ಲಿಸಿ, ತುಪ್ಪದ ದೀಪ ಬೆಳಗಿ, ಉಪ್ಪು ಹಾಗೂ ಕರಿ ಕಂಬಳ ದಾರವನ್ನು ಮಂತ್ರಿಸಿಕೊಂಡು ಮನೆಗೆ ಕೊಂಡೊಯ್ಯುವುದು ರೂಢಿ . ತಾತನ ಸಮಾಧಿಗೆ ಪೂಜೆ ಸಲ್ಲಿಸಿ ಅಲ್ಲಿಂದ ತಂದ ಕುಂಕುಮವನ್ನು ಖಾಯಿಲೆ ಬಿದ್ದ ದನಕರುಗಳ ಹಣೆಗೆ ಇಟ್ಟು ಮಂತ್ರಿಸಿದ ಉಪ್ಪನ್ನು ನೀರಿನಲ್ಲಿ ಬೆರೆಸಿ ದನದ ಹೊಟ್ಟೆಗೆ ಸೇರಿಸಿದರೆ ಸಾಕು ಅದೆಂತಹ ಕಾಯಿಲೆಯಾದರೂ ಸರಿಯೆ ವಾಸಿಯಾಗುತ್ತದೆ ಎಂಬ ನಂಬಿಕೆಯಿದೆ.
ದೇವಸ್ಥಾನದ ಆಸುಪಾಸಿನಲ್ಲಿರುವ ಹತ್ತಾರು ಅಂಗಡಿಗಳಲ್ಲಿ ಉಪ್ಪಿನ ಪ್ಯಾಕೆಟ್, ತೆಂಗಿನ ಕಾಯಿ, ಕರಿ ಕಂಬಳ ದಾರ, ದೃಷ್ಟಿ ಬೊಟ್ಟು ದಾರದ ಭರ್ಜರಿ ವ್ಯಾಪಾರವಹಿವಾಟು ನಡೆಯುತ್ತಿದೆ. ತಮ್ಮ ದನಕರು, ರಾಸುಗಳಿಗೆ ಏನಾದರೂ ತೊಂದರೆ ಕಾಣಿಸಿಕೊಂಡಾಗ ದ್ಯಾವಪ್ಪ ತಾತನಿಗೆ ಹರಕೆ ಮಾಡಿಕೊಂಡಿದ್ದ ರೈತರು ತಾವು ಬೆಳೆದ ರಾಗಿ, ಅಕ್ಕಿ, ಬೇಳೆ, ತರಕಾರಿಗಳನ್ನು ಇಂದು ದ್ಯಾವಪ್ಪತಾತನ ಸನ್ನಿಧಿಗೆ ಅರ್ಪಿಸಿದರು. ಹೀಗೆ ಭಕ್ತರು ಸಮರ್ಪಿಸಿದ ದವಸ ಧಾನ್ಯಗಳಿಂದಲೆ ರಾಗಿ ಮುದ್ದೆ, ಹುಳಿ ಸಾರು ತಯಾರಿಸಿ ಆರಾಧನಾ ಮಹೋತ್ಸವಕ್ಕೆ ಬಂದ ಸಾವಿರಾರು ಮಂದಿಗೆ ಬಡಿಸಲಾಗುತ್ತಿದೆ.
ಆರಾಧನಾ ಮಹೋತ್ಸವದ ಅಂಗವಾಗಿ ಹಾಲು ಉಟ್ಲು ಹಾಗೂ ಕಾಯಿ ಉಟ್ಲು, ಕೋಟಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಂದ ಪಾನಕ ಬಂಡಿ ಸೇವೆ ನಡೆಯಿತು. ದನಗಳ ಜಾತ್ರೆಯೂ ನೆರೆದಿದ್ದು ಜಿಲ್ಲೆ ಮಾತ್ರವಲ್ಲದೆ ನೆರೆಯ ಜಿಲ್ಲೆಗಳಿಂದಲೂ ನೂರಾರು ಎತ್ತುಗಳು ಬಂದಿದ್ದು, ದ್ಯಾವಪ್ಪ ತಾತನ ದೇವಾಲಯ ಸಮಿತಿಯಿಂದ ಕುಡಿಯುವ ನೀರು, ಒಣ ಮೇವು ಇನ್ನಿತರೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗಿತ್ತು. ರೈತರ ನಿತ್ಯ ಬಳಕೆಯ ವಸ್ತುಗಳಾದ ಕುಡುಗೋಲು, ಕೊಡಲಿ, ಮಚ್ಚು, ವರಾರಿ, ಜರಡಿ ಮುಂತಾದ ಹತ್ತು ಹಲವು ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿದ್ದು, ಅವನ್ನು ರೈತರು ಕೊಳ್ಳುತ್ತಿದ್ದರು.
‘ಈ ಬಾರಿ ನೂರಾರು ಜೊತೆ ರಾಸಿಗಳ ಆಗಮನವಾಗಿದೆ. ಈಗಾಗಲೇ 168 ಜೊತೆ ದನಗಳ ಮಾರಾಟ ನಡೆದಿದೆ. ಅಮೃತಮಹಲ್, ಹಳ್ಳಿಕೆರೆ. ಮಲೆನಾಡು ಗಿಡ್ಡ, ಒಂಗೋಲ್ ಗಿತ್ತ ಮೊದಲಾದ ದೇಶಿ ತಳಿಗಳು ಆಗಮಿಸಿದ್ದು ಭರ್ಜರಿ ವ್ಯಾಪಾರ ನಡೆದಿದೆ. ನಾವಿಲ್ಲಿ ಅವುಗಳಿಗೆ ನೀರು ಮೇವು ವ್ಯವಸ್ಥೆ ಮಾಡಿದ್ದೇವೆ’ ಎಂದು ಕೆ.ಎನ್.ಮುನಿಕೃಷ್ಣಪ್ಪ ತಿಳಿಸಿದರು.
ಕೆ.ಬಿ.ಕೃಷ್ಣಪ್ಪ, ರಾಜಪ್ಪ, ಆಂಜಿನಪ್ಪ, ಅಣ್ಣಪ್ಪ, ಹನುಮಂತರಾಯಪ್ಪ, ಮಾದಪ್ಪ, ಮುನಿಶಾಮಪ್ಪ, ಆಂಜಿನಪ್ಪ, ಮುನಿಯಪ್ಪ ಹಾಜರಿದ್ದರು.
ಮುತ್ತೂರಿನಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ
ವಿದ್ಯೆ, ಕ್ರೀಡೆ, ರಾಜಕೀಯ, ಕಲೆ ಹೀಗೆ ಬಹುತೇಕ ಕ್ಷೇತ್ರಗಳಲ್ಲಿ ಪುರುಷರಿಗೆ ಸರಿಸಮನಾಗಿ ನಿಂತು ಸ್ವತಂತ್ರರಾಗಿ, ಸ್ವಾವಲಂಬಿಗಳಾಗಿ ಬದುಕುತ್ತಿರುವ ಮಹಿಳೆಯರು ಮಾದರಿಯಾಗಿದ್ದಾರೆ. ಗ್ರಾಮೀಣ ಭಾಗದಲ್ಲಿಯೂ ದುಡಿಯುವ ಹೆಣ್ಣು ಆರ್ಥಿಕವಾಗಿ ಸಬಲಳಾಗಬೇಕು ಎಂದು ಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ಶಿವಕುಮಾರ್ ತಿಳಿಸಿದರು.
ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ಶ್ರೀ ಗಂಗಾದೇವಿ ಮಹಿಳಾ ಸ್ವಸಹಾಯ ಸಂಘ ಮತ್ತು ಶ್ರೀ ನೇತಾಜಿ ಗ್ರಾಮೀಣಾಭಿವೃದ್ಧಿ ಸಂಘದ ಸಹಯೋಗದಲ್ಲಿ ಈಚೆಗೆ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದುಡಿವ ಮಹಿಳೆಯರನ್ನು ಗೌರವಿಸಿ, ಪ್ರೋತ್ಸಾಹ ನೀಡುವುದಕ್ಕೆ “ಮಹಿಳಾ ದಿನ” ಆಚರಿಸಲಾಗುತ್ತದೆ. ಇದು ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆಯ ಸಂಕೇತ ದಿನ. ಮಹಿಳೆಯರಿಗೆ ಹಕ್ಕು, ಹಿತರಕ್ಷಣೆ, ಜಾಗತಿಕ ಮಟ್ಟದಲ್ಲಿ ತಿಳಿವಳಿಕೆ, ಶಿಕ್ಷಣ, ತರಬೇತಿ, ವಿಜ್ಞಾನ, ತಂತ್ರಜ್ಞಾನಕ್ಕೆ ನೆರವು ನೀಡಿ, ಸಮಾಜದಲ್ಲಿ ಸಮಾನತೆಯ ವೈಶಿಷ್ಟ್ಯಪೂರ್ಣ ಬದಲಾವಣೆಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳೆಯರಿಗೆ ಕುಂಕುಮ ಮತ್ತು ಬಳೆಗಳನ್ನು ವಿತರಿಸಲಾಯಿತು.
ಮಳ್ಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ವಿ.ಗೋಪಾಲಪ್ಪ, ಸದಸ್ಯರಾದ ಬೈರೇಗೌಡ, ಶಾಮಲಾ ದೇವರಾಜ್, ಕೆಂಪಮ್ಮ ಸೂರಪ್ಪ, ಸಾಕಮ್ಮ, ಶ್ರೀ ನೇತಾಜಿ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಮಂಜುನಾಥ್, ನಿರ್ದೇಶಕಿ ಜಿ.ಅಶ್ವಿನಿ, ಶಿವಮ್ಮ ಹಾಜರಿದ್ದರು.
ಬಿಜೆಪಿ ಪಕ್ಷದ ವತಿಯಿಂದ ನವಶಕ್ತಿ ಸಮಾವೇಶ
ಈ ಭಾರಿಯ ವಿಧಾನಸಭೆ ಚುನಾವಣೆಯಲ್ಲಿ ಮುಖಂಡರೂ ಸೇರಿದಂತೆ ಕಾರ್ಯಕರ್ತರು ಸಮರ್ಥವಾಗಿ ದುಡಿದಾಗ ಮಾತ್ರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಗೆಲ್ಲಲು ಸಾಧ್ಯವಾಗುತ್ತದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಬಿ.ಸಿ.ನಂದೀಶ್ ಹೇಳಿದರು.
ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್ ಬಳಿಯಿರುವ ಶ್ರೀ ಬಾಲಾಜಿ ಕಲ್ಯಾಣ ಮಂಟಪದಲ್ಲಿ ತಾಲೂಕು ಬಿಜೆಪಿ ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದ ನವಶಕ್ತಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಚುನಾವಣಾ ಆಯೋಗ ಈಗಾಗಲೇ ಚುನಾವಣೆ ದಿನಾಂಕ ಘೋಷಿಸಿದ್ದು ಮುಂದಿನ ಒಂದು ತಿಂಗಳ ಕಾಲ ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರು ಮನೆಮನೆಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಹಾಗು ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು ಎಂದರು.
ಬಿಜೆಪಿ ಜಿಲ್ಲಾ ಉಸ್ತುವಾರಿ ಕೃಷ್ಣಾರೆಡ್ಡಿ, ಕಿಸಾನ್ ಮೋರ್ಚಾ ಸದಸ್ಯ ಚಲ್ಲಪಲ್ಲಿ ನರಸಿಂಹರೆಡ್ಡಿ, ಡಿ.ಆರ್.ಶಿವಕುಮಾರಗೌಡ, ನಾರ್ತ್ ಈಸ್ಟ್ ಸುರೇಶ್, ಸುರೇಂದ್ರಗೌಡ, ನಗರ ಸಭೆ ಸದಸ್ಯ ರಾಘವೇಂದ್ರ, ದಾಮೋಧರ್, ಸುಜಾತಮ್ಮ, ಮಂಜುಳಮ್ಮ, ರತ್ನಮ್ಮ, ಸುಶೀಲಮ್ಮ ಹಾಜರಿದ್ದರು.
ಶ್ರೀ ಪಟಾಲಮ್ಮದೇವಿ ಮತ್ತು ಶ್ರೀ ವೀರಸೊಣ್ಣಮ್ಮದೇವಿಯವರ ರಥೋತ್ಸವ
ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ ಶ್ರೀ ಪಟಾಲಮ್ಮದೇವಿ ಮತ್ತು ಶ್ರೀ ವೀರಸೊಣ್ಣಮ್ಮದೇವಿಯವರ ೨೨ನೇ ವರ್ಷದ ರಥೋತ್ಸವ ಮತ್ತು ಉಟ್ಲು ಮಹೋತ್ಸವ ಮಂಗಳವಾರ ನಡೆಯಿತು.
ಮಂಗಳ ವಾದ್ಯಗಳು, ವಿವಿಧ ವೇಷಧಾರಿಗಳು, ವೀರಗಾಸೆ ನೃತ್ಯದೊಂದಿಗೆ ರಥವನ್ನು ಗ್ರಾಮಸ್ಥರು ಹೆಂಗಸರು, ಮಕ್ಕಳು, ಹಿರಿಯರು, ಕಿರಿಯರು ಎಂಬ ಬೇಧವಿಲ್ಲದೆ ಎಳೆದರು. ಗ್ರಾಮದ ಮುಖ್ಯ ರಸ್ತೆಯಲ್ಲಿ ಸಾಗಿ ರಥವು ದೇವಾಲಯದ ಬಳಿಗೆ ಸಾಗಿತು. ದೇವಾಲಯದ ಬಳಿ ಬತ್ತಾಸು, ಬುರುಗು, ಖಾರ, ಬಳೆ, ಪಾತ್ರೆ, ಆಟದ ಸಾಮಾನುಗಳು, ತಿಂಡಿ ತಿನಿಸುಗಳು, ಎಳೆನೀರು, ಹಣ್ಣಿನ ಅಂಗಡಿಗಳು, ಪಾನೀಯಗಳು ಇತ್ಯಾದಿ ಮಾರುವ ವಿವಿಧ ಅಂಗಡಿಗಳು ಜನರನ್ನು ಆಕರ್ಷಿಸುತ್ತಿದ್ದವು. ದೇವಾಲಯದಲ್ಲಿ ಪ್ರಸಾದ ವಿನಿಯೋಗ ಹಾಗೂ ದೇವಾಲಯದ ಆವರಣದಲ್ಲಿ ಉಚಿತ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದ್ದರು. ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಜನರು ಆಗಮಿಸಿದ್ದರು. ಸುತ್ತಲಿನ ಗ್ರಾಮಸ್ಥರು ಪಾನಕ ಬಂಡಿಗಳನ್ನು ತಂದು ಬಿಸಿಲಲ್ಲಿ ಸುಸ್ತಾದವರಿಗೆಲ್ಲ ಪಾನಕ ಮತ್ತು ಹೆಸರುಬೇಳೆ ಉಚಿತವಾಗಿ ವಿತರಿಸುತ್ತಿದ್ದರು.
ಸಂಜೆ ಅಮ್ಮನವರ ಕ್ಷೀರ ಉಟ್ಲು ಮತ್ತು ಕಾಯಿ ಉಟ್ಲು ಮಹೋತ್ಸವ ನಡೆಯಿತು. ವಿವಿಧ ನೃತ್ಯ ಮತ್ತು ಇತರೆ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ನೋಡಲು ಸುತ್ತ ಮುತ್ತಲಿನ ಗ್ರಾಮಗಳಿಂದ ಜನರು ಆಗಮಿಸಿದ್ದರು.
ಶ್ರೀ ಪಟಾಲಮ್ಮದೇವಿ ಮತ್ತು ಶ್ರೀ ವೀರಸೊಣ್ಣಮ್ಮದೇವಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಸದಸ್ಯರು, ವಿವಿಧ ಗ್ರಾಮಗಳ ಮುಖಂಡರು ಹಾಜರಿದ್ದರು.
ಶನಿಮಹಾತ್ಮ ದೇವಾಲಯದಲ್ಲಿ ಶ್ರೀರಾಮನವಮಿ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರ
ತಾಲ್ಲೂಕಿನಾದ್ಯಂತ ಶ್ರೀರಾಮನವಮಿಯನ್ನು ವಿವಿಧ ರಾಮ ದೇವಾಲಯಗಳಲ್ಲಿ ವಿಶೇಷ ಪೂಜೆಸಲ್ಲಿಸಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗೇಟ್, ಚೌಡಸಂದ್ರ, ಸಾದಲಿ, ದಿಬ್ಬೂರಹಳ್ಳಿ, ಮೇಲೂರು, ಹುಣಸೇನಹಳ್ಳಿ ಸ್ಟೇಷನ್, ಎಚ್.ಕ್ರಾಸ್, ಮಳಮಾಚನಹಳ್ಳಿ ಸೇರಿದಂತೆ ನಗರದ ಕೋಟೆ ವೃತ್ತದ ಶ್ರೀರಾಮ ದೇವಾಲಯ, ಉಲ್ಲೂರುಪೇಟೆ ಶ್ರೀರಾಮ ಭಜನೆ ಮಂದಿರ, ಮಯೂರ ವೃತ್ತದ ಅಶ್ವತ್ಥಕಟ್ಟೆಯ ದೇವಾಲಯ, ಚಿಂತಾಮಣಿ ರಸ್ತೆಯಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯ, ಇದ್ಲೂಡು ರಸ್ತೆಯ ಶನಿಮಹಾತ್ಮ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಿ ಭಕ್ತರಿಗೆ ಹೆಸರುಬೇಳೆ ಮತ್ತು ಪಾನಕವನ್ನು ವಿತರಿಸಲಾಯಿತು.
ಚಿಂತಾಮಣಿ ರಸ್ತೆಯಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಸೀತಾ ರಾಮ ಲಕ್ಷ್ಮಣ ಮತ್ತು ವೀರಾಂಜನೇಯಸ್ವಾಮಿ ಉತ್ಸವ ವಿಗ್ರಹಗಳಿಗೆ ಅಭಿಷೇಕವನ್ನು ನಡೆಸಲಾಯಿತು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗೇಟ್ ಬಳಿಯಿರುವ ಬಯಲಾಂಜನೇಯಸ್ವಾಮಿ ದೇವಾಲಯದಲ್ಲಿ ದೇವರಿಗೆ ಅಭಿಷೇಕ, ಪೂಜೆ, ವಿಶೇಷ ಅಲಂಕಾರ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು.
ಉಟ್ಲು ಕಂಬದ ಪೂಜೆ, ಕ್ಷೀರ ಉಟ್ಲು ಮಹೋತ್ಸವ ಹಾಗೂ ಮನರಂಜನಾ ಉಟ್ಲೋತ್ಸವವನ್ನು ನಡೆಸಿದರು.
ಶ್ರೀವೀರಾಂಜನೇಯ ದೇವಾಲಯದಲ್ಲಿ ೯೧ ನೇ ವರ್ಷದ ಉಟ್ಲು ಪರಿಷೆ
ಶ್ರೀ ರಾಮನವಮಿಯ ಪ್ರಯುಕ್ತ ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಶ್ರೀವೀರಾಂಜನೇಯ ದೇವಾಲಯದಲ್ಲಿ 91ನೇ ವರ್ಷದ ಉಟ್ಲು ಪರಿಷೆ ನಡೆಯಿತು. ಕ್ಷೀರ ಉಟ್ಲು ಮತ್ತು ಮನರಂಜನಾ ಉಟ್ಲುಗಳನ್ನು ವೀರಾಂಜನೇಯಸ್ವಾಮಿ ಬಲಿಜ ಸೇವಾ ಟ್ರಸ್ಟ್ ಮತ್ತು ಮಹಿಳಾ ಮಂಡಳಿಯವರು ಆಯೋಜಿಸಿದ್ದರು. ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಜನರು ಮನರಂಜನಾ ಉಟ್ಲು ವೀಕ್ಷಿಸಿ ಆನಂದಿಸಿದರು.
ಮೊದಲು ಕ್ಷೀರ ಉಟ್ಲು ಕಾರ್ಯಕ್ರಮದಲ್ಲಿ ಹಾಲನ್ನು ಮಡಿಕೆಯಲ್ಲಿ ಕಟ್ಟಿ ಪೂಜಿಸಿ ಒಡೆದರು. ನಂತರ ನಡೆಯುವ ಮನರಂಜನಾ ಉಟ್ಲು ಜನಾಕರ್ಷಣೆಯ ಕೇಂದ್ರ ಬಿಂದು. ಎತ್ತರದ ಕಂಬದ ಮೇಲೆ ಕಬ್ಬಿಣದಲ್ಲಿ ಮಾಡಿರುವ ತಿರುಗುಮಣೆ ಇರುತ್ತದೆ. ಅದಕ್ಕೆ ನಾಲ್ಕು ಹಗ್ಗಗಳನ್ನು ಕಟ್ಟಿರುತ್ತಾರೆ. ಹಗ್ಗದ ತುದಿಯಲ್ಲಿ ತೆಂಗಿನಕಾಯಿ ಕಟ್ಟಿರುತ್ತಾರೆ. ತಿರುಗುಮಣೆಯಲ್ಲಿ ಇಬ್ಬರು ಕುಳಿತು ತಿರುಗಿಸುತ್ತಿದ್ದಂತೆಯೇ ತೆಂಗಿನಕಾಯಿ ಕಟ್ಟಿರುವ ಹಗ್ಗವೂ ಸುತ್ತತೊಡಗುತ್ತವೆ. ಉದ್ದುದ್ದದ ಕೋಲು ಹಿಡಿದು ಈ ತೆಂಗಿನಕಾಯಿಯನ್ನು ಹೊಡೆಯಲು ಇಬ್ಬರು ನಿಂತಿರುತ್ತಾರೆ. ಅವರು ತೆಂಗಿನಕಾಯಿಗೆ ಹೊಡೆಯದಂತೆ ಅವರೆಡೆಗೆ ಸುತ್ತಲಿಂದ ನೀರನ್ನು ಎರಚುತ್ತಿರುತ್ತಾರೆ. ಈ ಆಟ ನೋಡುವ ಜನ ಹೊಡೆಯಲು ಕೂಗುತ್ತಾ ಹುರಿದುಂಬಿಸುತ್ತಾರೆ. ತೆಂಗಿನ ಕಾಯಿ ಹೊಡೆದ ವೀರನಿಗೆ ಹಾರಹಾಕಿ ದೇವಾಲಯದಲ್ಲಿ ಗೌರವಿಸಿದರು.
ಜಿದ್ದಾಜಿದ್ದಿ ಕುಸ್ತಿ ಪಂದ್ಯಾವಳಿ
ಶಿಡ್ಲಘಟ್ಟ ತಾಲ್ಲೂಕು ಹಿಂದೆ ಪೈಲ್ವಾನರಿಗೆ ಹೆಸರಾಗಿತ್ತು. ಹಲವಾರು ಹೆಸರುವಾಸಿ ಗರಡಿ ಮನೆಗಳಿದ್ದವು. ಹಲವಾರು ಕುಸ್ತಿ ಪಂದ್ಯಾವಳಿಗಳು ನಡೆಯುತ್ತಿದ್ದವು. ಹಿರಿಯ ಪೈಲ್ವಾನರ ಮಾರ್ಗದರ್ಶನದಲ್ಲಿ ಯುವಕರು ತರಬೇತಿ ಪಡೆದು ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಎಚ್.ಡಿ.ಡಿ ಹಾಗೂ ಜೆ.ಪಿ.ಎನ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮೇಲೂರು ಬಿ.ಎನ್.ರವಿಕುಮಾರ್ ತಿಳಿಸಿದರು.
ಎಚ್.ಡಿ.ಡಿ ಹಾಗೂ ಜೆ.ಪಿ.ಎನ್ ಚಾರಿಟೆಬಲ್ ಟ್ರಸ್ಟ್ ಮತ್ತು ಕುರುಬರ ಪೇಟೆಯ ಶ್ರೀರಾಮ ಗರಡಿ ಮನೆ ಸಹಯೋಗದಲ್ಲಿ ಹೆಲ್ತ್ ಕಾಲೋನಿ ರಸ್ತೆಯಲ್ಲಿ ನಗರಸಭೆಯ ನಿವೇಶನದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಜಿಮ್ ತಲೆ ಎತ್ತಿ ನಿಂತಿವೆ. ಆಧುನಿಕ ಉಪಕರಣಗಳನ್ನು ಬಳಸಲಾಗುತ್ತಿದೆ. ಆದರೆ ಗರಡಿ ಗುರುಗಳು ಆರೋಗ್ಯದ ಜತೆಗೆ ಯುವಕರಿಗೆ ಶ್ರದ್ಧೆ, ಶಿಸ್ತು, ಭಕ್ತಿಯನ್ನು ಕಲಿಸುತ್ತಾರೆ. ಶಕ್ತಿಯ ಪ್ರತೀಕವಾಗಿದ್ದ ದೇಸಿ ಪರಂಪರೆಯ ಕುಸ್ತಿ ಕಲೆ ಮತ್ತು ಗರಡಿ ಮನೆಗಳನ್ನು ಉಳಿಸಿಕೊಳ್ಳಬೇಕು. ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಶ್ರೀರಾಮ ಭಕ್ತ ಆಂಜನೇಯನ ದೇಹಧಾಡ್ಯ, ಶ್ರದ್ಧಾ ಭಕ್ತಿ ಶಿಸ್ತು ನಮಗೆ ಮಾರ್ಗದರ್ಶನವಾಗಲಿ ಎಂದು ಹೇಳಿದರು.
ಕುಸ್ತಿ ಪಂದ್ಯಾವಳಿಗಾಗಿಯೇ ತುಮಕೂರು, ಮೈಸೂರು, ಹುಬ್ಬಳ್ಳಿ, ಕನಕಪುರ, ಚನ್ನಪಟ್ಟಣ, ಬೆಂಗಳೂರು ಮತ್ತಿತರೆಡೆಯಿಂದ ಪೈಲ್ವಾನರು ಬಂದಿದ್ದರು ಕುಸ್ತಿ ಪಂದ್ಯಾವಳಿ ರೋಚಕ ಕ್ಷಣಗಳಿಗೆ ನೂರಾರು ಮಂದಿ ಪ್ರೇಕ್ಷಕರು ಸಾಕ್ಷಿಯಾದರು.
ಮರಿ ಪೈಲ್ವಾನರು ಸೆಣೆಸಿ ಜನರಿಂದ ಮೆಚ್ಚುಗೆ ಪಡೆದದ್ದು ಒಂದೆಡೆಯಾದರೆ, ಮದಗಜಗಳಂತಿದ್ದ ಹಿರಿಯ ಪೈಲ್ವಾನರು ಮಾರ್ ಪೀಟ್ ನಡೆಸಿ ಜನರು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದರು.
ಕುಸ್ತಿ ನಡೆಯುವ ಸ್ಥಳದಲ್ಲಿ ಜನರು ಕಿಕ್ಕಿರಿದು ನಿಂತಿದ್ದರು. ಸುತ್ತಮುತ್ತಲ ಎತ್ತರದ ಕಟ್ಟಡಗಳು ಹಾಗೂ ಮರದ ಮೇಲೆ ಹತ್ತಿ ಕುಸ್ತಿ ಪಂದ್ಯಾವಳಿಗಳನ್ನು ಆಸ್ವಾದಿಸಿದರು. ಚಪ್ಪಾಳೆ, ಶಿಳ್ಳೆ ಹೊಡೆದು ಹುರಿದುಂಬಿಸಿದರು. ಗೆದ್ದವರನ್ನು ಅಭಿನಂದಿಸಿದರು.
ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ ಕುಸ್ತಿ ಪಟುಗಳು ವಿವಿಧ ಕಸರತ್ತು ಹಾಗೂ ಕೈ ಚಳಕದೊಂದಿಗೆ ಸ್ಥಳೀಯ ಪಟುಗಳೊಂದಿಗೆ ಕುಸ್ತಿ ನಡೆಸಿದರು. ಪರಸ್ಪರರು ಬಗ್ಗಿಸಲು ಮತ್ತು ಹಣಿಯಲು ನಡೆಸಿದ ತಂತ್ರ ಹಾಗೂ ಪ್ರತಿತಂತ್ರ ನೋಡುಗರ ಮೈನವಿರೇಳಿಸಿದವು. ಸೂಕ್ಷ್ಮ ಹೋರಾಟದ ಕ್ಷಣಗಳಲ್ಲಿ ಉತ್ತೇಜಿಸುವ ಜೈಕಾರ ಕೇಳಿಬಂದಿತು. ವಿಜೇತರ ಅಭಿಮಾನಿಗಳಾದವರು ಕೇಕೆ ಹಾಕಿ, ಕೂಗಿ ಕುಣಿದ ದೃಶ್ಯ ಸಹ ಕಂಡುಬಂತು.
ಕೆಮ್ಮಣ್ಣಿನಿಂದ ನಿರ್ಮಿಸಿದ್ದ ಎತ್ತರದ ಕುಸ್ತಿ ಅಖಾಡದ ಸುತ್ತಲೂ ನೆರೆದಿದ್ದ ನೂರಾರು ಜನರು ಕುಸ್ತಿ ಪಟುಗಳ ಪ್ರತಿಯೊಂದು ಪಟ್ಟನ್ನೂ ಕಣ್ಣು ಮಿಟುಕಿಸದೆ ಕಣ್ತುಂಬಿಕೊಂಡು, ರೋಮಾಂಚನಗೊಂಡರು. ಆಹ್ವಾನಿತರಿಗಿಂತ ತಾವೇನೂ ಕಡಿಮೆಯಿಲ್ಲ ಎಂಬಂತೆ ಸ್ಥಳೀಯ ಪೈಲ್ವಾನರು ಕೂಡ ಸೆಣಸಿ ಸೈ ಎನಿಸಿಕೊಂಡರು.
ಎಲ್ಲ ಪೈಲ್ವಾನರಿಗೂ ಟ್ರೋಫಿ, ಪ್ರಮಾಣ ಪತ್ರ ಹಾಗೂ ಹೂವಿನ ಹಾರವನ್ನು ಹಾಕಿ ಅಭಿನಂದಿಸಲಾಯಿತು. ವಿಶೇಷ ಮಾರ್ ಪೀಟ್‌ನಲ್ಲಿ ಗೆದ್ದವರಿಗೆ ನಗದು ಮತ್ತು ಟ್ರೋಫಿ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜಶೇಖರ್, ನಗರಸಭಾ ಸದಸ್ಯರಾದ ಲಕ್ಷ್ಮಣ, ವೆಂಕಟಸ್ವಾಮಿ, ತಾದೂರು ರಘು, ಚೀಮನಹಳ್ಳಿ ಗೋಪಾಲ್ ಹಾಜರಿದ್ದರು.
ಕರವೇ ತಾಲ್ಲೂಕು ಘಟಕದ ವತಿಯಿಂದ ಕನ್ನಡ ನುಡಿ ಹಬ್ಬ ಕಾರ್ಯಕ್ರಮ
ನಗರದ ಶ್ರೀ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಕರವೇ ತಾಲ್ಲೂಕು ಘಟಕದ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಕನ್ನಡ ನುಡಿ ಹಬ್ಬ ಕಾರ್ಯಕ್ರಮದಲ್ಲಿ ಕರವೇ ರಾಜ್ಯಾಧ್ಯಕ್ಷ ಪ್ರವೀಣ್‌ಕುಮಾರ್ ಶೆಟ್ಟಿ ಮಾತನಾಡಿದರು.
ಮಾತೃ ಭಾಷೆಯಾದ ಕನ್ನಡದ ಬಗ್ಗೆ ಅಭಿಮಾನ ಶೂನ್ಯರಾಗಿ, ಅನ್ಯ ಭಾಷೆಗಳನ್ನು ಪ್ರೀತಿಸುವ ಧೋರಣೆಯನ್ನು ಬದಿಗಿರಿಸಿ. ಕನ್ನಡ ಭಾಷೆಗೆ ನೀಡಬೇಕಾದ ಗೌರವ ನೀಡುವುದನ್ನು ಎಲ್ಲಿಯವರೆಗೆ ನಾವು ಕೊಡುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಭಾಷೆ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ದೇಶಕ್ಕೆ ಅನೇಕ ಮಂದಿ ದಿಗ್ಗಜರನ್ನು ನೀಡಿರುವಂತಹ ನಾಡಿನಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿ ಎಂದು ಹೇಳುವ ನಾವೇ ನಮ್ಮ ಮಾತೃಭಾಷೆಯಾದ ಕನ್ನಡವನ್ನು ಕಡೆಗಣಿಸುತ್ತಿದ್ದೇವೆ. ಆಂಗ್ಲ ಭಾಷೆಯನ್ನು ಕಲಿಯಿರಿ, ಆದರೆ ಮಾತೃಭಾಷೆಯಾದ ಕನ್ನಡವನ್ನು ಗೌರವಿಸಿ ಎಂದರು.
ರಾಜ್ಯದಲ್ಲಿ ಭ್ರಷ್ಟಾಚಾರ ಮಾಡುವವರ ವಿರುದ್ದ ಐಟಿ ಅಧಿಕಾರಿಗಳು ದಾಳಿ ನಡೆಸಿದರೆ ಅವರ ವಿರುದ್ದವಾಗಿ ಐಟಿ ಇಲಾಖೆಗೆ ಮುತ್ತಿಗೆ ಹಾಕಿ ಹೋರಾಟ ನಡೆಸುತ್ತಾರೆ. ಭ್ರಷ್ಟರನ್ನು ಹಿಡಿಯಲು ಲೋಕಾಯುಕ್ತ ಅಥವಾ ಎಸಿಬಿ ಅಧಿಕಾರಿಗಳು ಮುಂದಾದರೆ ಅವರ ವಿರುದ್ಧ ಸರ್ಕಾರ ಪಿತೂರಿ ನಡೆಸುವುದು ಎಷ್ಟು ಸರಿ. ಒಟ್ಟಾರೆ ಎಲ್ಲಾ ರಾಜಕೀಯ ಪಕ್ಷಗಳು ಸಹ ಜನತೆಯನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಕೋಟೆ ವೃತ್ತದಲ್ಲಿರುವ ಶಾಲಾ ಆವರಣದಲ್ಲಿ ಮೇಲೂರಿನ ಕೆ.ಮಂಜುನಾಥ್ ಅವರಿಂದ ಸಸಿ ನೆಡಿಸಲಾಯಿತು.
ಕಾರ್ಯಕ್ರಮದಲ್ಲಿ ಕರವೇ ಉಪಾಧ್ಯಕ್ಷ ಶಿವರಾಜ್‌ಗೌಡ್ರು, ಜಿಲ್ಲಾಧ್ಯಕ್ಷ ಶ್ರೀಧರ್‌ಬಾಬು, ಜಿಲ್ಲಾ ಸಂಚಾಲಕ ಆರ್.ಎಂ.ಶ್ರೀಧರ್, ತಾಲ್ಲೂಕು ಘಟಕದ ಅಧ್ಯಕ್ಷ ವಸಂತ್‌ಕುಮಾರ್, ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ, ತಾಲ್ಲೂಕು ಅಧ್ಯಕ್ಷರಾದ ಎಸ್.ಎಂ.ರವಿಪ್ರಕಾಶ್, ತಾದೂರು ಮಂಜುನಾಥ್, ಬಿಜೆಪಿ ಮುಖಂಡರಾದ ಡಿ.ಆರ್.ಶಿವಕುಮಾರಗೌಡ, ಸುರೇಶ್, ಸುರೇಂದ್ರಗೌಡ ಹಾಜರಿದ್ದರು.
ಕಾಗೆಗಳಿಂದ ಆಕ್ರಮಣಕ್ಕೊಳಗಾದ ಕೋಗಿಲೆಯ ರಕ್ಷಣೆ
ತಾಲ್ಲೂಕಿನ ತಾದೂರು ಗ್ರಾಮದಲ್ಲಿ ಕಾಗೆಗಳಿಂದ ಆಕ್ರಮಣಕ್ಕೊಳಗಾದ ಹೆಣ್ಣು ಕೋಗಿಲೆ ಹಕ್ಕಿಯನ್ನು ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್ ರಕ್ಷಿಸಿದ್ದಾರೆ.
ವಸಂತದ ಗಾಯನಕ್ಕೆ ಹೆಸರಾದ ಕೋಗಿಲೆಯು ಸಾಮಾನ್ಯವಾಗಿ ಕಾಗೆಯ ಗೂಡಲ್ಲಿ ಮೊಟ್ಟೆ ಇಡುತ್ತದೆ. ಅದು ಬೆಳೆದಂತೆ ತನ್ನ ಕಂಠದಿಂದ ಹಾಡಲು ಶುರು ಮಾಡಿದಾಗ ಅದರ ನಿಜ ಸ್ವರೂಪ ಕಾಗೆಗೆ ತಿಳಿದು ಅದನ್ನು ತನ್ನ ಗೂಡಿನಿಂದ ಹೊರ ತಳ್ಳುತ್ತದೆ. ಹೀಗಾಗಿ ಕಾಗೆಗಳು ಕೋಗಿಲೆಯನ್ನು ದ್ವೇಷಿಸುತ್ತವೆ.
ಒಬ್ಬಂಟಿ ಸಿಕ್ಕ ಕೋಗಿಲೆಯನ್ನು ಕಾಗೆಗಳು ಆಕ್ರಮಣ ಮಾಡಿದ್ದು ಕಂಡು ಬಿಡಿಸಿದ ಮಂಜುನಾಥ್ ಅವರು ಅದಕ್ಕೆ ನೀರು ಕುಡಿಸಿ ಆರೈಕೆ ಮಾಡಿ ನಂತರ ಅದು ಗೆಲುವಾದದ್ದನ್ನು ಕಂಡು ಸುರಕ್ಷಿತ ಪ್ರದೇಶದಲ್ಲಿ ಬಿಟ್ಟಿದ್ದಾರೆ.
ಅಂತರರಾಷ್ಟ್ರೀಯ ಜಲ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ
ನಿಸರ್ಗದತ್ತ ಸಂಪನ್ಮೂಲವಾದ ನೀರನ್ನು ಮಿತವಾಗಿ ಬಳಸಬೇಕು. ಮಳೆ ತುಂಬಾ ಕೊರತೆಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆ. ಇದರಿಂದ ಅಂತರ್ಜಲ ಕೂಡ ಬತ್ತಿಹೋಗುತ್ತಿದೆ. ಮಳೆ ನೀರನ್ನು ಹಿಡಿದಿಡುವ ಕಾರ್ಯಕ್ಕೆ ಎಲ್ಲರೂ ಮುಂದಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ತಿಳಿಸಿದರು.
ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಗುರುವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ‘ಅಂತರರಾಷ್ಟ್ರೀಯ ಜಲ ದಿನಾಚರಣೆ’ಯ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಂದಿನ ಪೀಳಿಗೆಗೆ ನೀರಿನ ಅಭಾವ ಉಂಟಾಗದಂತೆ ತಡೆಯಬೇಕಿದ್ದರೆ ಗಿಡಗಳನ್ನು ಹೆಚ್ಚು ಹೆಚ್ಚು ಬೆಳೆಸಬೇಕು, ನೀರಿನ ಮೂಲಗಳನ್ನು ಸಂರಕ್ಷಣೆ ಮಾಡಬೇಕು. ಪ್ರತಿಯೊಂದು ಮನೆಗಳಲ್ಲೂ ಮಳೆ ನೀರು ಕೊಯ್ಲನ್ನು ಅಳವಡಿಸಿಕೊಳ್ಳಬೇಕು. ಗ್ರಾಮಗಳಲ್ಲಿ ಇಂದಿಗೂ ನೀರಿನ ಕೊರತೆಯ ತೀವ್ರ ಸಮಸ್ಯೆ ಇದೆ. ನೀರನ್ನು ಅನವಶ್ಯಕವಾಗಿ ಪೋಲುಮಾಡದೆ ಹನಿ ಹನಿ ನೀರನ್ನು ಸಂರಕ್ಷಿಸುವುದು, ಮುಂದಿನ ಪೀಳಿಗೆಗೆ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ ಮಾತನಾಡಿ, ಸಮಾಜ ಎಷ್ಟೇ ಪ್ರಗತಿಪಥದಲ್ಲಿ ಸಾಗಿದರೂ ನೀರನ್ನು ಎಟಿಎಂನಿಂದ ಪಡೆಯಲು ಸಾಧ್ಯವಿಲ್ಲ. ಹೀಗಾಗಿ, ಜಲಮೂಲಗಳ ರಕ್ಷಣೆಗೆ ವಿಶೇಷ ಒತ್ತು ನೀಡಬೇಕು. ಪ್ರಗತಿಯೊಂದಿಗೆ ಸಾಮಾಜಿಕ ಕಳಕಳಿಗೂ ಆದ್ಯತೆ ನೀಡಬೇಕು ಎಂದು ನುಡಿದರು.
ಸಿವಿಲ್ ನ್ಯಾಯಾಧೀಶರಾದ ಟಿ.ಎಲ್.ಸಂದೀಶ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಕಾರ್ಯದರ್ಶಿ ಎಂ.ಬಿ.ಲೋಕೇಶ್, ನಗರಸಭೆಯ ಎಇಇ ರಾಜೇಂದ್ರ ಕುಮಾರ ಹಾಜರಿದ್ದರು.
ದೇವರ ದಾಸಿಮಯ್ಯ ಜಯಂತ್ಯುತ್ಸವ
ಮಹಾನ್ ವ್ಯಕ್ತಿಗಳ ಆಚರಣೆಗಳು ಕೇವಲ ಸಾಂಪ್ರದಾಯಿಕವಾಗಿರದೇ ಅವರ ತತ್ವ ಆದರ್ಶ ಮತ್ತು ಜೀವನ ಶೈಲಿಗಳನ್ನು ಅಳವಡಿಸಿಕೊಂಡು ಪಾಲಿಸುವ ಜೊತೆಗೆ ಇತರರಿಗೂ ಅಳವಡಿಸಿಕೊಳ್ಳುವಲ್ಲಿ ನೆರವಾದರೆ ಮಾತ್ರ ಆಚರಣೆಗಳಿಗೊಂದು ಅರ್ಥ ಬರುತ್ತದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ನಾಡಹಬ್ಬಗಳ ಆಚರಣಾ ಸಮಿತಿ ಬುಧವಾರ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಚನಕಾರರ ಯುಗದಲ್ಲಿ ಸಮಾನತೆ ಕಂಡುಕೊಳ್ಳುವ ನಿಟ್ಟಿನಲ್ಲಿ ಹಲವು ಸಾಹಿತ್ಯಗಳನ್ನು ರಚಿಸಿ ಜಾತಿ ಪದ್ಧತಿ ನಿವಾರಣೆಗೆ ಯತ್ನಿಸಿದ್ದ ದೇವರ ದಾಸಿಮಯ್ಯನವರ ಸಾಮಾಜಿಕ ಚಿಂತನೆ ಅಮೋಘವಾದದ್ದು.ದೇವರ ದಾಸಿಮಯ್ಯನವರು ತಮ್ಮ ನೇಕಾರಿಕೆ ಕಾಯಕ ಜೊತೆಗೆ ವಚನ ಸಾಹಿತ್ಯ ರಚಿಸುವ ಮೂಲಕ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಶ್ರಮಿಸಿದ್ದರು. ಅಂಥವರ ಸಾಮಾಜಿಕ ಕಳಕಳಿ ಇರುವ ವಚನ ಸಾಹಿತ್ಯಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಿ ಯುವ ಪೀಳಿಗೆಯಲ್ಲಿ ಸಾಮಾಜಿಕ ಚಿಂತನೆ ಮೂಡಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.
ಈ ಸಂದರ್ಭದಲ್ಲಿ ನೇಕಾರ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಹಿರಿಯ ಸಾಧಕರನ್ನು ಗೌರವಿಸಲಾಯಿತು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ನಿವೃತ್ತ ಪ್ರಾಂಶುಪಾಲ ಮೊಹಮದ್ ಖಾಸಿಂ ಹಾಗೂ ವಸಾಪ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ದೇವರ ದಾಸಿಮಯ್ಯ ಅವರ ಜೀವನ ಸಾಧನೆಗಳ ಬಗ್ಗೆ ಮಾತನಾಡಿದರು.
ಗ್ರೇಡ್ 2 ತಹಶೀಲ್ದಾರ್ ಮುನಿಕೃಷ್ಣಪ್ಪ, ನೇಕಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಕೆ.ನಾಗರಾಜ್, ತಾಲ್ಲೂಕು ಘಟಕದ ಅಧ್ಯಕ್ಷ ಸುಬ್ರಮಣಿ ಹಾಜರಿದ್ದರು.
ಚುನಾವಣೆಯು ಜನಸೇವಕರು ಹಾಗೂ ಭ್ರಷ್ಟರ ನಡುವೆ ನಡೆಯುವ ಸಮರ
ಕ್ಷೇತ್ರದಲ್ಲಿ ೨೦೧೮ ರ ವಿಧಾನಸಭೆ ಚುನಾವಣೆಯು ವಿವಿಧ ಪಕ್ಷಗಳ ನಡುವೆ ನಡೆಯುವುದಿಲ್ಲ, ಬದಲಿಗೆ ಜನಸೇವಕರು ಹಾಗೂ ಭ್ರಷ್ಟರ ನಡುವೆ ನಡೆಯುವ ಸಮರವಾಗಿದೆ ಎಂದು ಎಚ್.ಡಿ.ದೇವೇಗೌಡ ಹಾಗು ಜಯಪ್ರಕಾಶ್ ನಾರಾಯಣ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಸಾದಲಿ ಹೋಬಳಿಯ ಎಸ್.ಗೊಲ್ಲಹಳ್ಳಿ ಗ್ರಾಮದಲ್ಲಿ ಗುರುವಾರ ಆಯೋಜಿಸಲಾಗಿದ್ದ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರ ಸಭೆ ಹಾಗೂ ವಿವಿಧ ಪಕ್ಷಗಳನ್ನು ತೊರೆದು ಬಂದ ಮುಖಂಡರ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾವು ಕಳೆದ ೧೨ ವರ್ಷಗಳಿಂದ ಜೆಡಿಎಸ್ ವರಿಷ್ಟ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಭಿಮಾನದಿಂದ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಕಟ್ಟುವ ಕೆಲಸ ಮಾಡಿದ್ದೇನೆ. ಎಚ್.ಡಿ.ಕುಮಾರಸ್ವಾಮಿಯವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ನೋಡುವ ಆಸೆಯಿಂದ ಕ್ಷೇತ್ರದಾದ್ಯಂತ ಕೈಲಾದ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇನೆ. ಇದೀಗ ಕ್ಷೇತ್ರದ ಯುವಜನತೆ ಹಾಗೂ ಪಕ್ಷದ ಕಾರ್ಯಕರ್ತರು ಬಿ.ಎನ್.ರವಿಕುಮಾರ್ ಅಭಿಮಾನಿಗಳ ಬಣ ಎಂದು ಕರೆಯುವುದನ್ನು ಬಿಟ್ಟು ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರ ಬಣ ಎಂದು ಗುರುತಿಸಿಕೊಳ್ಳಬೇಕು ಎಂದರು.
ಜೆಡಿಎಸ್ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದ ಬಹುತೇಕ ಮುಖಂಡರೂ ಹಾಗೂ ಕಾರ್ಯಕರ್ತರನ್ನು ಕಡೆಗಣಿಸಿ ತಮ್ಮ ಕುಟುಂಬದ ಏಳಿಗೆಗಾಗಿ ಕಳೆದ ಐದು ವರ್ಷಗಳನ್ನು ಬಳಸಿಕೊಂಡ ಹಾಲಿ ಶಾಸಕರ ವರ್ತನೆಯನ್ನು ಪ್ರಶ್ನಿಸಿದ ತಪ್ಪಿಗೆ ಜೆಡಿಎಸ್ನ ಬಹುತೇಕ ಮುಖಂಡರು ಮೂಲೆಗುಂಪಾದರು. ಇಂತಹ ಮೂಲೆಗುಂಪಾದ ಪಕ್ಷದ ನಿಷ್ಠಾವಂತ ಮುಖಂಡರು ಹಾಗೂ ಕಾರ್ಯಕರ್ತರನ್ನೆಲ್ಲಾ ಒಂದೆಡೆ ಸೇರಿಸಿ ಅವರೊಂದಿಗೆ ನಾನಿದ್ದೇನೆ ಎಂದು ಧೈರ್ಯ ತುಂಬುವ ಜೊತೆಗೆ ಪಕ್ಷ ಉಳಿಸುವ ಜೊತೆಗೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ಕ್ಷೇತ್ರದಲ್ಲಿ ಏನಾದರೂ ಅಲ್ಪ ಸ್ವಲ್ಪ ಅಭಿವೃದ್ಧಿ ಕೆಲಸಗಳಾಗಿದೆ ಎಂದರೆ ಅದು ಮಾಜಿ ಶಾಸಕ ದಿ.ಎಸ್.ಮುನಿಶಾಮಪ್ಪನವರ ಕಾಲದಲ್ಲಿ ಮಾತ್ರ. ಕ್ಷೇತ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿನಿಲಯ, ೧೧ ನೇ ಮೈಲಿಯಲ್ಲಿರುವ ಮೊರಾರ್ಜಿ ವಸತಿನಿಲಯ, ಸಾದಲಿ ಬಳಿ ಹಾಲು ಶೀಥಲೀಕರಣ ಕೇಂದ್ರ, ರೇಷ್ಮೆ ಗೂಡು ಮಾರುಕಟ್ಟೆ ಯಂತಹ ಶಾಶ್ವತ ಕಾರ್ಯಗಳನ್ನು ಮಾಡಿರುವ ಅವರು ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ಹೆಸರು ಕ್ಷೇತ್ರದಲ್ಲಿ ರಾರಾಜಿಸುತ್ತಿದೆ ಎಂದರು.
ಕಳೆದ ಮೂವತ್ತು ವರ್ಷಗಳಿಂದ ಕ್ಷೇತ್ರದಿಂದ ಸ್ಪರ್ಧಿಸಿ ಐದು ಭಾರಿ ಶಾಸಕರಾಗಿ, ಸಚಿವರಾಗಿ ಅಧಿಕಾರ ಅನುಭವಿಸಿದ ವಿ.ಮುನಿಯಪ್ಪ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯಾದರೂ ಏನು ಎಂಬುದನ್ನು ಜನತೆ ಪ್ರಶ್ನಿಸಬೇಕು. ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವ ಯೋಜನೆಗಳನ್ನು ಇಟ್ಟುಕೊಂಡು ಕ್ಷೇತ್ರದಲ್ಲಿ ಮತಯಾಚಿಸುವ ವಿ.ಮುನಿಯಪ್ಪ ಕ್ಷೇತ್ರಕ್ಕೆ ಕಳೆದ ಮೂವತ್ತು ವರ್ಷಗಳಲ್ಲಿ ತಾನು ಏನು ಮಾಡಿದ್ದೇನೆ ಎಂಬುದನ್ನು ಮುಂದಿಟ್ಟುಕೊಂಡು ಜನತೆಯ ಬಳಿಗೆ ಬರಲಿ ಎಂದರು.
ಜೆಡಿಎಸ್ ಹಿರಿಯ ಮುಖಂಡ ದೊಣ್ಣಹಳ್ಳಿ ರಾಮಣ್ಣ ಮಾತನಾಡಿ, ೧೯೮೩ ರಲ್ಲಿ ಮಾಜಿ ಶಾಸಕ ಎಸ್. ಮುನಿಶಾಮಪ್ಪನವರಿಗೆ ಬಿ ಫಾರಂ ತಪ್ಪಿದಾಗ ಯಾವ ಸ್ಥಿತಿಯಿತ್ತೋ ಇದೀಗ ಅಂತಹುದ್ದೇ ಸ್ಥಿತಿ ನಿರ್ಮಾಣವಾಗಿದೆ. ಕ್ಷೇತ್ರದಾದ್ಯಂತ ಬಹುತೇಕ ಮತದಾರರು ಬಿ.ಎನ್.ರವಿಕುಮಾರ್ರನ್ನು ಶಾಸಕರನ್ನಾಗಿ ನೋಡಲು ಬಯಸುತ್ತಿದ್ದಾರೆ. ಜನತೆಯ ಬೆಂಬಲವೇ ಬಿ ಫಾರಂ ಆಗಿದೆ. ಬಿ.ಎನ್.ರವಿಕುಮಾರ್ ಪರ ಜನ ಬೆಂಬಲ ಸಾಕಷ್ಟಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಶಕ್ತಿ ಕೇವಲ ರವಿಕುಮಾರ್ಗೆ ಮಾತ್ರ ಇದೆ. ದಯವಿಟ್ಟು ಕ್ಷೇತ್ರದ ಜನತೆ ಈ ಭಾರಿಯ ಚುನಾವಣೆಯಲ್ಲಿ ಜನರಿಗಾಗಿ ದುಡಿಯುವಂತಹವರನ್ನು ಆಯ್ಕೆ ಮಾಡಿ ಎಂದರು.
ಈ ಸಂದರ್ಭದಲ್ಲಿ ಎಸ್.ಗೊಲ್ಲಹಳ್ಳಿ ಸೇರಿದಂತೆ ಪೂಸಗಾನದೊಡ್ಡಿ, ನೇರಳೆಮರದಹಳ್ಳಿ, ಎಸ್.ವೆಂಕಟಾಪುರ ಗ್ರಾಮದ ನೂರಾರು ಮಂದಿ ಯುವಕರು ಕಾಂಗ್ರೆಸ್ ತೊರೆದು ಬಿ.ಎನ್.ರವಿಕುಮಾರ್ ನೇತೃತ್ವದ ಜೆಡಿಎಸ್ ಬಣಕ್ಕೆ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಶಿವಾರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಸದಸ್ಯ ರಾಜಶೇಖರ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಎಂ.ಗೋಪಾಲ್, ಮುಖಂಡರಾದ ಬಚ್ಚನಹಳ್ಳಿ ನಾರಾಯಣಸ್ವಾಮಿ, ಯರ್ರಬಚ್ಚಪ್ಪ, ನರಸಿಂಹರೆಡ್ಡಿ, ತಾದೂರು ರಘು, ನಾಗಮಂಗಲ ಶ್ರೀನಿವಾಸಗೌಡ, ಮುಗಿಲಡಿಪಿ ನಂಜಪ್ಪ, ಕೆ.ಎಸ್.ಮಂಜುನಾಥ್ ಹಾಜರಿದ್ದರು.
ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ವಶ
ನಗರದ ವಾಸವಿ ರಸ್ತೆಯಲ್ಲಿರುವ ವಾಯುಪುತ್ರ ಪ್ರಾವಿಷನ್ ಸ್ಟೋರ್ಸ್ ಅಂಗಡಿಯ ಮೇಲೆ ಗುರುವಾರ ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಅಂಗಡಿಯಲ್ಲಿದ್ದ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡರು.
ಈ ಬಗ್ಗೆ ನಗರಸಭೆ ಪೌರಾಯುಕ್ತ ಜಿ.ಎನ್ ಚಲಪತಿ ಮಾತನಾಡಿ, ಸರ್ಕಾರ ಈಗಾಗಲೇ ಪ್ಲಾಸ್ಟಿಕ್ ನಿಷೇಧಿಸಿರುವುದರಿಂದ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಸುವುದು ಕಾನೂನು ಬಾಹಿರವಾಗುತ್ತದೆ. ಈ ಬಗ್ಗೆ ನಗರದ ವರ್ತಕರನ್ನು ನಗರಸಭೆ ಕಾರ್ಯಾಲಯಕ್ಕೆ ಕರೆಸಿ ಸಭೆ ನಡೆಸಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಕವರ್ ಸೇರಿದಂತೆ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡದಂತೆ ಸೂಚಿಸಲಾಗಿತ್ತು. ಆದರೆ ನಗರದ ವಾಸವಿ ರಸ್ತೆಯಲ್ಲಿರುವ ವಾಯುಪುತ್ರ ಪ್ರಾವಿಷನ್ ಸ್ಟೋರ್ಸ್ನ ಮಾಲೀಕರು ಸಾಕಷ್ಟು ಪ್ರಮಾಣದ ಪ್ಲಾಸ್ಟಿಕ್ ವಸ್ತುಗಳನ್ನು ತಮ್ಮ ಅಂಗಡಿ ಹಾಗೂ ಗೋದಾಮಿನಲ್ಲಿ ಸಂಗ್ರಹಿಸಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಕಾರಣ ಇಂದು ನಮ್ಮ ಸಿಬ್ಬಂದಿಯೊಂದಿಗೆ ಅಂಗಡಿ ಮೇಲೆ ದಾಳಿ ನಡೆಸಿ ಅಂಗಡಿಯಲ್ಲಿದ್ದ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಘಟನೆಯ ಬಗ್ಗೆ ತಹಸೀಲ್ದಾರ್ರಿಗೂ ಮಾಹಿತಿ ನೀಡಿದ್ದು ಅಂಗಡಿಯ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕ ಆಂಜಿನಪ್ಪ, ಸಿಬ್ಬಂದಿ ಮಧು, ಮುರಳಿ, ನಾರಾಯಣಸ್ವಾಮಿ ಹಾಜರಿದ್ದರು.
ಕೆಎಸ್ ಆರ್ ಟಿಸಿ ಡಿಪೋ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ
ನೂತನ ಬಸ್ ಘಟಕ ನಿರ್ಮಾಣವಾಗುವುದರಿಂದ ನಗರ ಉನ್ನತೀಕರಣಗೊಳ್ಳುತ್ತದೆ. ಕ್ಷೇತ್ರದ ಗ್ರಾಮೀಣ ಪ್ರದೇಶದ ಜನತೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಹೊರವಲಯದ ಹಿತ್ತಲಹಳ್ಳಿ ಬಳಿ ಬುಧವಾರ ಕೆಎಸ್‌ಆರ್‌ಟಿಸಿ ಡಿಪೋ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಸುಮಾರು ೫ ಎಕರೆ ೧೫ ಗುಂಟೆ ಜಮೀನಿನಲ್ಲಿ ಬಸ್ ಘಟಕದ ಕಾಮಗಾರಿ ಆರಂಭವಾಗುತ್ತಿದ್ದು ಸರ್ಕಾರದಿಂದ ಈಗಾಗಲೇ ಅನುಮೋದನೆ ಸಹ ಸಿಕ್ಕಿದೆ. ನೂತನ ಬಸ್ ಘಟಕ ನಿರ್ಮಾಣವಾಗುವುದರಿಂದ ತಾಲ್ಲೂಕಿನ ಸುಮಾರು ೧೬೨ ಗ್ರಾಮಗಳಿಗೆ ಸಾರಿಗೆ ಸೌಲಭ್ಯ ಸಿಗಲಿದೆ. ಪ್ರತಿನಿತ್ಯ ಸುಮಾರು ೭,೦೦೦ ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲಾ ಕಾಲೇಜು ಗಳಿಗೆ ಹೋಗಲು ಸಹಕಾರಿಯಾಗಲಿದೆ ಎಂದರು.
ಶಿಡ್ಲಘಟ್ಟ ನಗರ ಇತ್ತೀಚೆಗಷ್ಟೇ ನಗರಸಭೆಯಾಗಿ ಉನ್ನತೀಕರಣಗೊಂಡಿದ್ದು ನಗರದ ಜನತೆಗೆ ಆಧುನಿಕ ಮೂಲಭೂತ ಸವಲತ್ತುಗಳ ಅಗತ್ಯವಿದೆ. ಪ್ರತಿನಿತ್ಯ ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ವಲಸೆ ಬರುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಸಾಲದೆಂಬಂತೆ ಗ್ರಾಮೀಣ ಪ್ರದೇಶದ ಮಕ್ಕಳು ಅದರಲ್ಲಿಯೂ ಮುಖ್ಯವಾಗಿ ಹೆಣ್ಣು ಮಕ್ಕಳು ವಿದ್ಯಾಭ್ಯಾಸಕ್ಕಾಗಿ ನಗರಗಳಿಗೆ ಬರಬೇಕಾಗಿರುವುದರಿಂದ ಕ್ಷೇತ್ರದಾದ್ಯಂತ ಇರುವ ಎಲ್ಲಾ ಗ್ರಾಮಗಳಿಗೂ ಬಸ್ ವ್ಯವಸ್ಥೆ ಕಲ್ಪಿಸಬೇಕು. ಉತ್ತಮ ಸಾರಿಗೆ ವ್ಯವಸ್ಥೆಯಿದ್ದಾಗ ಮಾತ್ರ ಗ್ರಾಮೀಣ ಪ್ರದೇಶದ ಜನತೆ ಸೇರಿದಂತೆ ವಿದ್ಯಾರ್ಥಿಗಳು ಸಕಾಲದಲ್ಲಿ ಶಾಲಾ ಕಾಲೇಜುಗಳಿಗೆ ಹೋಗಲು ಸಹಕಾರಿಯಾಗುತ್ತದೆ ಎಂದರು.
ಇನ್ನು ಇಡೀ ವಿಶ್ವದಲ್ಲಿಯೇ ಹೆಸರುವಾಸಿಯಾಗಿರುವ ಇಲ್ಲಿನ ರೇಷ್ಮೆ ಗೂಡು ಮಾರುಕಟ್ಟೆಗೆ ಬರುವ ರೈತರು, ಕೂಲಿ ಕಾರ್ಮಿಕರೂ ಗ್ರಾಮೀಣ ಪ್ರದೇಶಗಳಿಂದ ಬರುವವರಾಗಿದ್ದು ಅವರಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಮತ್ತು ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿ ನಡೆಸಬೇಕು. ನಿಗಧಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ೧೫ ಜನ ವಾಹನ ಚಾಲಕರಿಗೆ ಬೆಳ್ಳಿ ಪದಕ ಹಾಗೂ ೨,೦೦೦ ರೂ ನಗದು ವಿತರಿಸಲಾಯಿತು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕ ಶ್ರೀನಿವಾಸ್, ಮುಖ್ಯ ಕಾರ್ಯಪಾಲಕ ಜಗದೀಶ್ ಚಂದ್ರ, ಆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ನಗರಸಭೆ ಸದಸ್ಯ ಅಫ್ಸರ್‌ಪಾಷ, ಪಂಚಾಕ್ಷರಿರೆಡ್ಡಿ, ಲಕ್ಷೀನಾರಾಯಣ(ಲಚ್ಚಿ), ಕೆ.ಮಂಜುನಾಥ್, ಎಚ್ ಕ್ರಾಸ್ ರವಿ ಹಾಜರಿದ್ದರು.
ಸ್ಥಳೀಯರ ಪ್ರತಿಭಟನೆ: ನೂತನ ಬಸ್ ಘಟಕದ ಭೂಮಿಪೂಜೆ ಕಾರ್ಯಕ್ರಮಕ್ಕೆ ಶಾಸಕ ಎಂ.ರಾಜಣ್ಣ ಸ್ಥಳಕ್ಕೆ ಬರುತ್ತಿದ್ದಂತೆ ಸ್ಥಳೀಯರು ಪ್ರತಿಭಟನೆ ನಡೆಸಿ ಬಸ್ ಘಟಕಕ್ಕೆ ಈಗ ಗುರ್ತಿಸಿರುವ ಜಾಗದಲ್ಲಿ ಕಳೆದ ೪೦ ವರ್ಷಗಳಿಂದ ಬಡವರು ಉಳುಮೆ ಮಾಡಿ ಜೀವನ ನಡೆಸುತ್ತಿದ್ದಾರೆ. ಇದೀಗ ಶಾಸಕರು ಏಕಾ ಏಕಿ ಬಂದು ಅದೇ ಸ್ಥಳದಲ್ಲಿ ಬಸ್ ಘಟಕ ನಿರ್ಮಿಸಲು ಮುಂದಾಗಿದ್ದಾರೆ. ಇದರಿಂದ ಕಳೆದ ೪೦ ವರ್ಷಗಳಿಂದ ಉಳುಮೆ ಮಾಡಿ ಜೀವನ ನಡೆಸುತ್ತಿದ್ದ ಬಡವರು ಬೀದಿಗೆ ಬೀಳುವಂತಾಗಿದೆ. ಕೂಡಲೇ ಅವರಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಶಾಸಕ ಎಂ.ರಾಜಣ್ಣ ತೊಂದರೆಯಾಗಿರುವ ರೈತರಿಗೆ ಬೇರೆಡೆ ಜಮೀನು ನೀಡುವ ಆಶ್ವಾಸನೆ ನೀಡಿದ ಮೇಲೆ ಪ್ರತಿಭಟನೆ ಕೈ ಬಿಡಲಾಯಿತು.

