ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯಿತಿ ಪ್ರಶಸ್ತಿಗೆ ತಾಲ್ಲೂಕಿನ ಹತ್ತು ಗ್ರಾಮ ಪಂಚಾಯಿತಿಗಳು ಅರ್ಹತೆ ಪಡೆದಿರುವುದು ಹೆಮೆಮಯ ಸಂಗತಿ. ಉಳಿದ ಗ್ರಾಮ ಪಂಚಾಯಿತಿಗಳೂ ಶೀಘ್ರವಾಗಿ ಈ ಅರ್ಹತೆಯನ್ನು ಸಂಪಾದಿಸುವಂತಾಗಲಿ ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಬಳಿ ಬುಧವಾರ ಗದಗದಲ್ಲಿ ಗುರುವಾರ ನಡೆಯುವ ಪ್ರಶಸ್ತಿ ವಿತರಣಾ ಸಮಾಂಭಕ್ಕೆ ಹೊರಟ ಹತ್ತು ಗ್ರಾಮ ಪಂಚಾಯಿತಿ ಪ್ರತಿನಿಧಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು.
ಬಯಲು ಶೌಚದಿಂದ ಅನಾರೋಗ್ಯದ ಸಮಸ್ಯೆಗಳು ಉಂಟಾಗುತ್ತವೆ. ಗ್ರಾಮದಲ್ಲಿ ಪ್ರತಿ ಕುಟುಂಬಕ್ಕೂ ಶೌಚಾಲಯವಿದ್ದರೆ ಕಾಯಿಲೆಗಳು ಬರುವುದಿಲ್ಲ. ಈ ಬಗ್ಗೆ ಗ್ರಾಮೀಣರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ. ಕೆಲವೇ ದಿನಗಳಲ್ಲಿ ತಾಲ್ಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿಗಳೂ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯಿತಿಗಳಾಗುವ ಆಶಾಭಾವನೆಯಿದೆ ಎಂದು ಹೇಳಿದರು.
ದಿಬ್ಬೂರಹಳ್ಳಿ, ತಲಕಾಯಲಬೆಟ್ಟ, ಸಾದಲಿ, ಬಶೆಟ್ಟಹಳ್ಳಿ, ಈ ತಿಮ್ಮಸಂದ್ರ, ಕುಂದಲಗುರ್ಕಿ, ವೈ.ಹುಣಸೇನಹಳ್ಳಿ, ಕುಂಬಿಗಾನಹಳ್ಳಿ, ಅಬ್ಲೂಡು, ದಿಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿಗಳ ಪಿಡಿಒಗಳು, ಅಧ್ಯಕ್ಷರು, ಉಪಾಧ್ಯಕ್ಷರು ಗದಗಕ್ಕೆ ತೆರಳಿದರು.
ತಾಲ್ಲೂಕಿ ಪಂಚಾಯಿತಿ ಇಒ ವೆಂಕಟೇಶ್, ಅಧಿಕಾರಿ ಶ್ರೀನಾಥ್‌ಗೌಡ, ಪ್ರಸಾದ್ ಹಾಜರಿದ್ದರು.
ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯಿತಿ ಪ್ರಶಸ್ತಿಗೆ ಗದಗಕ್ಕೆ ತೆರಳಿದ ಪ್ರತಿನಿಧಿಗಳು
ರೇಣುಕಾ ಯಲ್ಲಮ್ಮದೇವಿಯ ಹೂವಿನ ಕರಗ ಮಹೋತ್ಸವ
ನಗರದಲ್ಲಿ ಶ್ರೀ ರೇಣುಕಾ ಯಲ್ಲಮ್ಮದೇವಿಯ ಹೂವಿನ ಕರಗವು ಮಂಗಳವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ಕರಗ ಮಹೋತ್ಸವದ ಅಂಗವಾಗಿ ಮಂಗಳವಾರ ಮಧ್ಯಾಹ್ನ ದೇವರಿಗೆ ಕಲ್ಯಾಣೋತ್ಸವ, ಸಂಜೆ ದಾಸಯ್ಯನವರ ಮಣಿಸೇವೆ. ನಂತರ ಕರಗ ಹೊರುವವರನ್ನು ಬಾವಿಯ ಬಳಿ ಕರೆದೊಯ್ದು ಗಂಗೆ ಪೂಜೆ ಮಾಡಿಸಿದ ನಂತರ ಮಧ್ಯರಾತ್ರಿ ಕರಗಕ್ಕೆ ಪೂಜೆ ಸಲ್ಲಿಸಿ ತಲೆಯ ಮೇಲೆ ಹೊರಿಸಲಾಯಿತು. ಆಗ ವೀರಕುಮಾರರು ಅಲಗು ಸೇವೆ ಮಾಡಿದರು. ಹಲಗೆ, ತಮಟೆ ವಾದ್ಯಗಳೊಂದಿಗೆ ಕರಗ ದೇವಾಲಯದ ಪ್ರದಕ್ಷಿಣೆ ಮಾಡಿ ನರ್ತಿಸಿತು. ಮುಂದೆ ಕತ್ತಿ ಹಿಡಿದ ವೀರಕುಮಾರರು, ಹಿಂದೆ ಕುಣಿಯುತ್ತಾ ಕರಗ ರಾತ್ರಿಯಿಡೀ ಊರೆಲ್ಲಾ ಸಂಚರಿಸಿತು. ಪ್ರತಿಯೊಬ್ಬರೂ ತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ ಅಲ್ಲಿಗೆ ಕರಗ ಬರುತ್ತಿದ್ದಂತೆ ಭಕ್ತಿಯಿಂದ ಆರತಿ ಬೆಳಗಿ ಮಲ್ಲಿಗೆ ಹೂಗಳನ್ನು ಸಮರ್ಪಿಸಿದರು.
ಊರಿನ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಪ್ರಮುಖ ಬೀದಿಗಳಲ್ಲೂ ವಿದ್ಯುತ್ ದೀಪಾಲಂಕಾರ ಹಾಗೂ ನಗರದ ಬಸ್ ನಿಲ್ದಾಣ ಹಾಗು ಅಶೋಕ ರಸ್ತೆ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಮುಂಬಾಗದಲ್ಲಿ ವಾದ್ಯಗೋಷ್ಠಿಯನ್ನೂ ಆಯೋಜಿಸಲಾಗಿತ್ತು.
ಜಾನಪದ ತಜ್ಞ ಡಾ.ಜಿ.ಶ್ರೀನಿವಾಸಯ್ಯ ನಿಧನ
ನಗರದ ಸಿ.ಆರ್.ಲೇಔಟ್ ನಿವಾಸಿ ಜಾನಪದ ತಜ್ಞ ಡಾ.ಜಿ.ಶ್ರೀನಿವಾಸಯ್ಯ(43) ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪತ್ನಿ, ಇಬ್ಬರು ಮಕ್ಕಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಚಿಕ್ಕಬಳ್ಳಾಪುರದ ಪಂಚಗಿರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ಡಾ.ಜಿ.ಶ್ರೀನಿವಾಸಯ್ಯ ಸಂಶೋಧನಾ ಲೇಖನಗಳ ಸಂಗ್ರಹ ಪುಸ್ತಕ ‘ತಣಿಗೆ’ ರಚಿಸಿದ್ದಾರೆ. ಹಲವು ಕೃತಿಗಳನ್ನು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿದ್ದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಯೋಜನೆ ಗ್ರಾಮ ಚರಿತ್ರೆ ಕೋಶದ ಜಿಲ್ಲಾ ಸಂಚಾಲಕರಾಗಿದ್ದರು. ಮೃತರ ಅಂತ್ಯಕ್ರಿಯೆಯನ್ನು ಸವರ ಸ್ವಗ್ರಾಮ ಶ್ರೀನಿವಾಸಪುರ ತಾಲ್ಲೂಕಿನ ದೇವುಲಪಲ್ಲಿಯಲ್ಲಿ ಬುಧವಾರ ನೆರವೇರಿಸಲಾಯಿತು.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಬಾಯಿಯ ಆರೋಗ್ಯ ದಿನಾಚರಣೆ
ಜಾಗತಿಕ ಮಟ್ಟದಲ್ಲಿ ಬಾಯಿಯ ಹಾಗೂ ಹಲ್ಲಿನ ಅನಾರೋಗ್ಯದ ತೊಂದರೆಗಳು ಮುಂಚೂಣಿಯಲ್ಲಿವೆ. ಸರಿಯಾದ ಸಮಯದಲ್ಲಿ ಸರಿಯಾದ ಗಮನ ಕೊಟ್ಟರೆ ಇವುಗಳನ್ನು ತಡೆಯಬಹುದು. ವಿಶ್ವ ಬಾಯಿಯ ಆರೋಗ್ಯ ದಿನದಂದು ಬಾಯಿ ಮತ್ತು ಹಲ್ಲಿನ ತಜ್ಞರಿಗೆ ಸಮುದಾಯದ ಸೇವೆ ಮಾಡಲು ಮತ್ತು ಸಾಮಾನ್ಯ ಜನರಿಗೆ ಬಾಯಿಯ ಆರೋಗ್ಯದ ಕುರಿತಾಗಿ ಮಾಹಿತಿ ನೀಡಲು ಸದವಕಾಶವಾಗಿದೆ ಎಂದು ಗಂತವೈದ್ಯೆ ಡಾ.ಪ್ರತಿಭಾ ತಿಳಿಸಿದರು.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ವಿಶ್ವ ಬಾಯಿಯ ಆರೋಗ್ಯ ದಿನದ ಪ್ರಯುಕ್ತ ಉಚಿತ ದಂತ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಬಾಯಿಯ ಆರೋಗ್ಯ ದೇಹಾರೋಗ್ಯದ ಕನ್ನಡಿ ಎಂದು ಹೇಳಲಾಗುತ್ತದೆ. ಹಲವು ರೋಗ ಲಕ್ಷಣಗಳು ಬಾಯಿಯಲ್ಲಿ ಮೊದಲಿಗೆ ಕಾಣಿಸಬಹುದು. ಅದಲ್ಲದೇ ಬಾಯಿಯ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದು ಕೂಡ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತಿ ಮುಖ್ಯ. ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ ಮುಂತಾದ ರೋಗದಿಂದ ಬಳಲುವವರು ತಮ್ಮ ಬಾಯಿಯ ಹಾಗೂ ಹಲ್ಲಿನ ಆರೋಗ್ಯವನ್ನು ಚೆನ್ನಾಗಿ ಕಾಪಾಡದಿದ್ದಲ್ಲಿ ಉಲ್ಬಣಗೊಳ್ಳಬಹುದು. ಗರ್ಭಿಣಿಯರ ಬಾಯಿಯ ಆರೋಗ್ಯದಲ್ಲಿ ಕೂಡ ಏರುಪೇರಾಗಬಹುದು. ಹೀಗೆ ಬಾಯಿಯ ಆರೋಗ್ಯವನ್ನು ಯಾವುದೇ ಕಾರಣಕ್ಕೆ ನಿರ್ಲಕ್ಷಿಸಿದಲ್ಲಿ ತೊಂದರೆ ಕಟ್ಟಿಟ್ಟ ಬುತ್ತಿ ಎಂದು ವಿವರಿಸಿದರು.
ಬಾಯಿ ಮತ್ತು ಹಲ್ಲಿನ ಆರೊಗ್ಯ ಪ್ರತಿಯೊಬ್ಬನಿಗೂ ಮುಖ್ಯ. ಸುಂದರ ಹಾಗೂ ಅನಂದದ ನಗು ಪ್ರತಿಯೊಬ್ಬನ ಆಸ್ತಿ. ಇಂದೇ ಬಾಯಿಯ ಆರೋಗ್ಯದ ಕಾಳಜಿವಹಿಸುತ್ತೇನೆಂದು ಪ್ರತಿಜ್ಞೆ ಕೈಗೊಂಡು, ನಿಮ್ಮ ದಂತ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಕ್ರೆಸೆಂಟ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಉಚಿತ ದಂತ ತಪಾಸಣೆಯನ್ನು ಮಾಡಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಉಚಿತವಾಗಿ ಪೇಸ್ಟು ಮತ್ತು ಬ್ರಶ್ ವಿತರಿಸಲಾಯಿತು.
ಡಾ.ತಿಮ್ಮೇಗೌಡ, ಡಾ.ಶೀಲಾ, ವಸಂತಕುಮಾರಿ, ಕ್ರೆಸೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ತಮೀಮ್ ಅನ್ಸಾರಿ, ಯೂನಿಟಿ ಸಿಲ್‌ಸಿಲಾ ಅಧ್ಯಕ್ಷ ಅಸದ್, ಶಬೀನಾ ಸುಲ್ತಾನ್, ವೀಣಾ, ಗುರುರಾಜರಾವ್ ಹಾಜರಿದ್ದರು.
ಬಿಜಿಎಸ್ ಪಬ್ಲಿಕ್ ಶಾಲೆಯಲ್ಲಿ ಸ್ವಸ್ತಿ ವಿಜಯ ಹಾಗೂ ಶಾರದಾ ಪೂಜೆ ಕಾರ್ಯಕ್ರಮ
ಶಿಕ್ಷಕರ ಮಾರ್ಗದರ್ಶನ, ಪೋಷಕರ ಕಾಳಜಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಮಂಗಳನಾಥ ಸ್ವಾಮೀಜಿ ತಿಳಿಸಿದರು.
ಹನುಮಂತಪುರ ಗೇಟ್ ಬಳಿಯಿರುವ ಬಿಜಿಎಸ್ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ನಡೆದ ಸ್ವಸ್ತಿ ವಿಜಯ ಹಾಗೂ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಶಾರದಾ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪೋಷಕರ, ಶಿಕ್ಷಕರ ಒತ್ತಾಯಕ್ಕೆ ಮಣಿದು ಓದಿದರೆ ಶಿಕ್ಷಣಕ್ಕೆ ಅರ್ಥವಿಲ್ಲ. ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ಕಲಿತು ಸಾಧನೆ ಮಾಡಬೇಕು. ಯಾವುದೇ ಕಾರಣಕ್ಕೂ ಮನಸ್ಸು ಚಂಚಲ ಮಾಡಿಕೊಳ್ಳಬಾರದು. ಕೆಟ್ಟ ಆಲೋಚನೆಗಳನ್ನು ಬಿಟ್ಟಾಗ ಜ್ಞಾನ ವೃದ್ಧಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಬಿಜಿಎಸ್ ಶಿಕ್ಷಣ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ ಮಾತನಾಡಿ, ‘ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದಿಂದ ಜಗತ್ತು ನಿಂತಿದೆ. ವಿದ್ಯೆ ಇಲ್ಲದೆ ಯಾರೊಬ್ಬರು ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯ ದಿದ್ದರೆ ಯಾವೊಂದು ಕೆಲಸಕ್ಕೆ ಹೋದರೂ ಪ್ರಯೋಜನವಿಲ್ಲ. ಪರೀಕ್ಷೆಯಲ್ಲಿ ಪಡೆಯುವ ಒಂದೊಂದು ಅಂಕವೂ ಮಹತ್ವವಾಗಿರುತ್ತದೆ. ಅಂಕಕ್ಕೆ ನಮ್ಮ ಜೀವನವನ್ನೇ ಬದಲಾಯಿಸಿ ಬಿಡುವ ಶಕ್ತಿ ಇದೆ’ ಎಂದು ತಿಳಿಸಿದರು.
ಪ್ರಾಂಶುಪಾಲ ಮಹದೇವಯ್ಯ ಮಾತನಾಡಿ, ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಹಕ್ಕು, ಅದನ್ನು ಮೊಟಕುಗೊಳಿಸಬೇಡಿ, ನಿರಂತರವಾಗಿ ಸಾಗಲಿ ಎಂದು ಹೇಳಿದರು.
ಹತ್ತನೇ ತರಗತಿಯ ಪುಷ್ಪ, ಸುಪ್ರಿಯ, ಜೋಷಿತ, ಅಂಜಲಿ, ಜೀವನ್ ಮಾತನಾಡಿ, ತಮ್ಮ ಭವಿಷ್ಯದ ಕನಸುಗಳ ಬಗ್ಗೆ, ತಾವು ಕಲಿತ ಶಾಲೆಯ ಪರಿಸರದ ಬಗ್ಗೆ, ಸಿಕ್ಕ ಮಾರ್ಗದರ್ಶನದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಮತ್ತು ಯುವಕರಿಗೆ ಕ್ರೀಡಾ ಸಲಕರಣೆಗಳ ವಿತರಣೆ
ತಾಲ್ಲೂಕಿನ ಜಯಂತಿ ಗ್ರಾಮದ ಭಗತ್ ಸಿಂಗ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಮತ್ತು ಜಯಂತಿಗ್ರಾಮ ಯುವಕರಿಗೆ ಸುಮಾರು 40 ಸಾವಿರ ಬೆಲೆಯ ಕ್ರೀಡಾ ಸಾಮಾಗ್ರಿಗಳನ್ನು ಮಂಗಳವಾರ ವಿತರಿಸಲಾಯಿತು.
ವಾಲಿಬಾಲ್, ಪೋಲ್ ಸೆಟ್, ನೆಟ್, ಫುಟ್ಬಾಲ್ ಸೀನಿಯರ್, ಕ್ರಿಕೆಟ್ ಸೆಟ್, ಥ್ರೋಬಾಲ್, ಸ್ಪೋರ್ಟ್ಸ್ ಕಿಟ್ ಬ್ಯಾಗ್, ಟೆನಿಕಾಟ್ ರಿಂಗ್, ಷಟಲ್ ರಾಕೆಟ್, ಷಟಲ್ ಕಾಕ್ ಬಾಕ್ಸ್ ಮುಂತಾದವುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಭಗತ್ ಸಿಂಗ್ ಅಸೋಸಿಯೇಷನ್‌ನ ಅಧ್ಯಕ್ಷ ಎಂ.ದೇವರಾಜ್, ಕಾರ್ಯದರ್ಶಿ ಜಯಂತಿಗ್ರಾಮ ನಾರಾಯಣಸ್ವಾಮಿ, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜೀವಿಂದರ್ ಕುಮಾರ್, ದೈಹಿಕ ಶಿಕ್ಷಕಿ ಮಂಜುಳ, ಶಿಕ್ಷಕರಾದ ರಾಧಾಕೃಷ್ಣ, ಶಿವಕುಮಾರ ಸ್ವಾಮಿ, ಮಾಲತೇಶ್ ಹಳ್ಳೇರ್, ಗಾಯಿತ್ರಿ, ಗ್ರಾಮಸ್ಥರಾದ ಮೈಲಾರಿ, ಕೋಟಹಳ್ಳಿ ಅರುಣ್ ಕುಮಾರ್ ಹಾಜರಿದ್ದರು.
ಯುವಕರಿಂದ ಯುಗಾದಿ ಸಂಭ್ರಮಾಚರಣೆ
ಪ್ರಜ್ಞಾವಂತ ಹಿಂದೂ ಯುವ ಸಮಾಜದ ಆಶ್ರಯದಲ್ಲಿ ಈ ಭಾರಿಯ ಯುಗಾದಿ ಹಬ್ಬವನ್ನು ನಗರದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ವಿನೂತನವಾಗಿ ಆಚರಿಸಲಾಯಿತು.
ಮುಂಜಾನೆ ಸೂರ್ಯೋದಯದ ಸಮಯದಲ್ಲಿ ಕ್ರೀಡಾಂಗಣಕ್ಕೆ ಆಗಮಿಸಿದ್ದ ವಾಯುವಿಹಾರಿಗಳೊಡನೆ ಯುವಕರು ಪರಸ್ವರ ಶುಭಾಶಯಗಳ ವಿನಿಮಯದೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಿದರು.
ರೂಪಸಿ ರಮೇಶ್ ಭಾರತಾಂಬೆಯ ಚಿತ್ರಪಟಕ್ಕೆ ದೀಪ ಬೆಳಗಿ ಮಾತನಾಡಿ, ಹೊಸ ವರ್ಷ ಆಚರಣೆಯ ರೀತಿ, ಹಿಂದೂ ಸಂಸ್ಕೃತಿಯಲ್ಲಿ ಪ್ರಕೃತಿಯೊಂದಿಗೆ ಸಮ್ಮಿಲಿತವಾಗಿ ವರ್ಷಾಚರಣೆಯನ್ನು ಮಾಡುವ ಬಗ್ಗೆ ವಿವರಿಸಿದರು.
ಯುಗಾದಿಯ ಹಬ್ಬದಂದು ಯುವಕರು ಯಾವುದಾದರೂ ಒಂದು ಸೇವಾ ಕಾರ್ಯವನ್ನು ಮಾಡುವ ನಿರ್ಧಾರ ಮಾಡಿ ಆಚರಣೆಗೆ ಮೆರುಗು ತರಬೇಕು. ವರ್ಷದ ಅಂತ್ಯದಲ್ಲಿ ತಮ್ಮ ಸೇವಾ ಕಾರ್ಯದ ಬಗ್ಗೆ ಅವಲೋಕನ ಮಾಡಬೇಕೆಂದರು.
ಈ ಸಂದರ್ಭದಲ್ಲಿ ಎಲ್ಲರಿಗೂ ಸಿಹಿ ಹಂಚಿ ಶುಭಾಶಯಗಳನ್ನು ಕೋರಲಾಯಿತು.
ಪ್ರಜ್ಞಾವಂತ ಹಿಂದೂ ಯುವಸಮೂಹದ ನಾಗೇಶ್, ಪರುಷೋತ್ತಮ್, ಮಂಜುನಾಥ್, ಬಿ.ಸಿ ನಂದೀಶ್, ಮಂಜುಳಮ್ಮ, ಟಿ.ಟಿ.ನರಸಿಂಪಹಪ್ಪ, ಎ.ಬಿ.ವಿ.ಪಿ ನರೇಶ್, ವಸಂತ್ ಕುಮಾರ್, ನವೀನ್ ಹಾಜರಿದ್ದರು.
ಯರಮರೆಡ್ಡಹಳ್ಳಿ ತಂಡಕ್ಕೆ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಟ್ರೋಫಿ
ತಾಲ್ಲೂಕಿನ ಬಯ್ಯಪ್ಪನಹಳ್ಳಿಯ ಸ್ವಾಮಿ ವಿವೇಕಾನಂದ ಕ್ರಿಕೆಟ್ ಕ್ಲಬ್ ವತಿಯಿಂದ ದಿ.ಡಾ.ಎಂ.ಶ್ರೀಧರ್ ಸ್ಮರಣಾರ್ಥ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಿಲಕಲನೇರ್ಪು ಹೋಬಳಿ ಯರಮರೆಡ್ಡಹಳ್ಳಿ ತಂಡ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ದಿಬ್ಬೂರಹಳ್ಳಿ ರಸ್ತೆಯ ಸೀತಹಳ್ಳಿ ಗೇಟ್ ಬಳಿ ಎರಡು ದಿನಗಳು ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ 30 ಸಾವಿರ ರೂ, ದ್ವಿತೀಯ ಬಹುಮಾನ 15 ಸಾವಿರ ರೂ ಹಾಗೂ ತೃತೀಯ ಬಹುಮಾನ 5 ಸಾವಿರ ರೂಗಳನ್ನು ನೀಡಲಾಯಿತು.
ಪ್ರಥಮ ಬಹುಮಾನವನ್ನು ಚಿಲಕಲನೇರ್ಪು ಹೋಬಳಿ ಯರಮರೆಡ್ಡಹಳ್ಳಿ ತಂಡ ಪಡೆದರೆ, ದ್ವಿತೀಯ ಬಹುಮಾನವನ್ನು ಬಯ್ಯಪ್ಪನಹಳ್ಳಿ ತಂಡ ಹಾಗೂ ಮೂರನೇ ಬಹುಮಾನವನ್ನು ದಿಬ್ಬೂರಹಳ್ಳಿ ತಂಡಗಳು ತಮ್ಮದಾಗಿಸಿಕೊಂಡವು.
ಬಹುಮಾನಗಳ ವಿತರಣೆಯನ್ನು ಕಾಂಗ್ರೆಸ್ ಮುಖಂಡ ವಿ.ಮುನಿಯಪ್ಪ ಮಾಡಿದರು. ಮುಖಂಡರಾದ ಕೆ.ಗುಡಿಯಪ್ಪ, ಬಿ.ವಿ.ಮುನೇಗೌಡ, ಸತೀಶ್, ಶ್ರೀನಿವಾಸ್, ಡಿ.ಎಸ್.ಎನ್.ರಾಜು, ಸಾದಲಿ ಗೋವಿಂದಪ್ಪ, ಅಶ್ವತ್ಥರೆಡ್ಡಿ ಹಾಜರಿದ್ದರು.
‘ಗೆಳತಿ’ ವಿಶೇಷ ಚಿಕಿತ್ಸಾ ಘಟಕದ ಉದ್ಘಾಟನೆ
ದೌರ್ಜನ್ಯಕ್ಕೊಳಗಾದ ಮಹಿಳೆ ಮತ್ತು ಹೆಣ್ಣು ಮಕ್ಕಳಿಗಾಗಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಗೆಳತಿ ವಿಶೇಷ ಚಿಕಿತ್ಸಾ ಘಟಕದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ಹಾಗು ಸೇವೆಗಳನ್ನು ಒದಗಿಸಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಗೆಳತಿ ವಿಶೇಷ ಚಿಕಿತ್ಸಾ ಘಟಕದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಈಗಾಗಲೇ ಜಿಲ್ಲಾಸ್ಪತ್ರೆಗಳಲ್ಲಿ ಗೆಳತಿ ಘಟಕ ಸ್ಥಾಪನೆಯಾಗಿದ್ದು ಸಂತ್ರಸ್ಥ ಮಹಿಳೆ ಜಿಲ್ಲಾ ಕೇಂದ್ರದ ಘಟಕಕ್ಕೆ ಬರುವುದು ಕಷ್ಟವಾಗುತ್ತದೆ ಎಂಬ ಉದ್ದೇಶದಿಂದ ಇದೀಗ ಪ್ರತಿ ತಾಲ್ಲೂಕಿನಲ್ಲಿಯೂ ಗೆಳತಿ ಘಟಕಗಳನ್ನು ಸ್ಥಾಪಿಸಲಾಗಿದೆ.
ವಿಶೇಷ ಚಿಕಿತ್ಸಾ ಘಟಕದಲ್ಲಿ ಸಂತ್ರಸ್ಥ ಮಹಿಳೆಯ ಜೊತೆ ಸಮಾಲೋಚನೆ ನಡೆಸುವುದರ ಜೊತೆಗೆ ತಾತ್ಕಾಲಿಕ ಆಶ್ರಯ, ಪೊಲೀಸ್ ಹಾಗೂ ಕಾನೂನು ನೆರವು ಮತ್ತು ಅಗತ್ಯ ಚಿಕಿತ್ಸೆ ಇಲ್ಲಿ ಸಿಗಲಿದೆ. ನೋವಿನಲ್ಲಿರುವ ಪ್ರತಿ ಹೆಣ್ಣು ಮಗುವೂ ಸ್ನೇಹಭಾವದಿಂದ ಸಂತೈಸಬೇಕು ಎಂಬ ಉದ್ದೇಶದಿಂದ ಈ ಯೋಜನೆಗೆ ಗೆಳತಿ ಹೆಸರನ್ನಿಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಅನಿಲ್‌ಕುಮಾರ್, ಆಡಳಿತ ವೈದ್ಯಾಧಿಕಾರಿ ಡಾ.ವಾಣಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮೀದೇವಮ್ಮ, ಡಾ.ಪ್ರತಿಭಾ, ಬ್ಲಾಕ್ ಸೊಸೈಟಿ ಅಧ್ಯಕ್ಷೆ ಬಾರತಿ, ಮಹಿಳಾ ಸಾಂತ್ವಾನ ಕೇಂದ್ರದ ಡಾ.ವಿಜಯಾ ಹಾಜರಿದ್ದರು.
ನಗರೋತ್ಥಾನ ಯೋಜನೆಯಡಿ ನಗರದ ಸರ್ವತೋಮುಖ ಬೆಳವಣಿಗೆ
ನಗರೋತ್ಥಾನ ಮೂರನೇ ಹಂತದ ಯೋಜನೆಯಡಿ 25 ಕೋಟಿ ರೂಗಳಲ್ಲಿ ಶೇ.85 ರಷ್ಟು ಹಣ ಬಿಡುಗಡೆಯಾಗಿದ್ದು ನಗರದ ಸರ್ವತೋಮುಖ ಬೆಳವಣಿಗೆಗೆ ಬಳಕೆಯಾಗಲಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಹೆಲ್ತ್ ಕಾಲೋನಿ ರಸ್ತೆಯ ನಗರಸಭೆಯ ಖಾಲಿ ನಿವೇಶನದಲ್ಲಿ ಸೋಮವಾರ ನಗರಸಭೆಯ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
21 ಕೋಟಿ 25 ಲಕ್ಷ ರೂಗಳು ಬಿಡುಗಡೆಯಾಗಿದೆ, ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬವಣೆಯನ್ನು ನೀಗಿಸುವುದು, ನಗರವನ್ನು ಪ್ರವೇಶಿಸುವಾಗ ಮುಂಚೆ ಇದ್ದ ಕೆಟ್ಟ ಪರಿಸರವನ್ನು ಸರಿಪಡಿಸುವುದು ಹಾಗೂ ಎಲ್ಲಾ ರಸ್ತೆಗಳನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ನಗರೋತ್ಥಾನ ಮೂರನೇ ಹಂತದ ಯೋಜನೆಯನ್ನು ರೂಪಿಸಲಾಗಿದೆ ಎಂದು ಹೇಳಿದರು.
ನಗರಸಭಾ ಸದಸ್ಯ ಅಫ್ಸರ್‌ಪಾಷ ಮಾತನಾಡಿ, ಕುಡಿಯುವ ನೀರಿಗಾಗಿ 6 ಕೋಟಿ ರೂಗಳನ್ನು ಮೀಸಲಿಡಲಾಗಿದೆ. ಆಶ್ರಯ ಬಡಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನೀರಿನ ಟ್ಯಾಂಕ್, ಸಂಪ್ ನಿರ್ಮಿಸಲಾಗುವುದು ಹಾಗೂ ಕೊಳವೆಬಾವಿಗಳನ್ನು ಕೊರೆಸಲಾಗುವುದು. ನಗರದ ವ್ಯಾಪ್ತಿಯಲ್ಲಿ ನೀರಿಲ್ಲದ ಭಾಗದಲ್ಲಿ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು. ರಸ್ತೆಯ ನಿರ್ಮಾಣಕ್ಕೆ 11 ಕೋಟಿ ರೂಗಳನ್ನು ಮೀಸಲಿಡಲಾಗಿದೆ. 3.3 ಕಿ.ಮೀ ಕಾಂಕ್ರೀಟ್ ರಸ್ತೆ ಮತ್ತು 13.3 ಕಿ.ಮೀ ರಸ್ತೆ ಡಾಂಬರೀಕರಣ ಮಾಡಲಾಗುವುದು. ಪ್ರಮುಖ ರಸ್ತೆಗಳಾದ ಬಸ್ ನಿಲ್ದಾಣದಿಂದ ದಿಬ್ಬೂರಹಳ್ಳಿ ರಸ್ತೆ, ಸಲ್ಲಾಪುರಮ್ಮ ದೇವಾಲಯದ ಬಳಿಯಿಂದ ಬೈಪಾಸ್ ರಸ್ತೆ, ರೈಲ್ವೆ ನಿಲ್ದಾಣದ ಬಳಿಯಿಂದ ಇದ್ಲೂಡು ರಸ್ತೆ, ಈದ್‌ಗಾ ಮುಂಭಾಗದಿಂದ ಮಯೂರ ವೃತ್ತದವರೆಗೆ, ಓಟಿ ವೃತ್ತದಿಂದ ಉಲ್ಲೂರುಪೇಟೆವರೆಗೆ, ಶಾಮಣ್ಣ ಬಾವಿಯ ರಸ್ತೆ ಮುಂತಾದ ಹಲವು ಮುಖ್ಯ ರಸ್ತೆಗಳ ಡಾಂಬರೀಕರಣ ಕಾರ್ಯ ನಡೆಸಲಾಗುತ್ತದೆ. 4 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ನಗರಸಭೆಯ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ವಿವರಿಸಿದರು.
ನಗರಸಭೆ ಸದಸ್ಯರಾದ ಕಿಶನ್, ರಾಘವೇಂದ್ರ, ವೆಂಕಟಸ್ವಾಮಿ, ಮುಖಂಡರಾದ ಲಕ್ಷ್ಮೀನಾರಾಯಣ, ರಮೇಶ್, ರಾಮಕೃಷ್ಣಪ್ಪ, ಶಫಿ, ಸಿಕಂದರ್, ಸಲೀಂ, ಕನಕಪ್ರಸಾದ್, ಶ್ರೀನಾಥ್, ರವಿ, ಮಂಜುನಾಥ, ಅಶ್ವತ್ಥನಾರಾಯಣ, ಅಕ್ರಂಪಾಷ ಹಾಜರಿದ್ದರು.
ಮತಪ್ರಚಾರಕ್ಕೆ ವೇದಿಕೆ ಬಳಿ ಜೆಡಿಎಸ್ ವಾಹನ: ಸರ್ಕಾರಿ ಕಾರ್ಯಕ್ರಮ ಆಗಿದ್ದರೂ ವೇದಿಕೆಯ ಹತ್ತಿರದಲ್ಲೇ ಜೆಡಿಎಸ್ ಸಾಧನೆಗಳನ್ನು ಸಾರುವ ಪಕ್ಷದ ಎಲ್‌ಇಡಿ ವಾಹನವನ್ನು ನಿಲ್ಲಿಸಲಾಗಿತ್ತು. ನಗರಸಭೆಯ ಅಧ್ಯಕ್ಷೆ ಹಾಗೂ ಆಯುಕ್ತರ ಗೈರು ಎದ್ದು ಕಾಣುತ್ತಿತ್ತು.
ಜನಸೇವಕರಿಗೆ ಮಾತ್ರ ಮತ ನೀಡಿ
ಹಿಂದುಳಿದಿರುವ ಶಿಡ್ಲಘಟ್ಟದ ಅಭಿವೃದ್ಧಿ ಹಾಗೂ ಸರ್ಕಾರದ ಸೌಲತ್ತುಗಳನ್ನು ಸಾಮಾನ್ಯ ಜನರಿಗೂ ತಲುಪಿಸುವಂತಹ ಪ್ರಾಮಾಣಿಕರಿಗೆ ಮತ ನೀಡುವ ಮೂಲಕ ಸಮರ್ಥರನ್ನು ಆಯ್ಕೆ ಮಾಡಿ ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್‌ನ ಅಧ್ಯಕ್ಷ ಆಂಜಿನಪ್ಪ (ಪುಟ್ಟು) ತಿಳಿಸಿದರು.
ನಗರದ ಬಸ್ ನಿಲ್ದಾಣದ ಸಮೀಪದ ಎಸ್.ಎನ್.ಕ್ರಿಯಾ ಟ್ರಸ್ಟ್‌ನ ಕಚೇರಿಯಲ್ಲಿ ಶನಿವಾರ ವೃದ್ಧರು, ಅಂಗವಿಕರು, ವಿಧವೆಯರಿಗೆ ಪಿಂಚಣಿ ಸೌಲಭ್ಯದ ಮಂಜೂರಾತಿ ಪತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅವಿಭಾಜ್ಯ ಕೋಲಾರ ಜಿಲ್ಲೆಯಲ್ಲಿದ್ದಾಗಿನಿಂದ ಶಿಡ್ಲಘಟ್ಟ ಹೇಗಿತ್ತೊ, ಈಗಲೂ ಹಾಗೇಯೆ ಇದೆ, ಏನೂ ಬದಲಾವಣೆಯಾಗಿಲ್ಲ, ತಳಮಟ್ಟದ ಸಮುದಾಯಕ್ಕೆ ಸಿಗಬೇಕಾದಂತಹ ಸೌಲತ್ತುಗಳು ಸಿಕ್ಕಿಲ್ಲ, ನಿಜವಾದ ಫಲಾನುಭವಿಗಳಿಗೆ ಸಿಗಬೇಕಾಗಿದ್ದ ಸೌಲತ್ತುಗಳು, ನಾಯಕರ ಹಿಂಬಾಲಕರ ಪಾಲಾಗಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ, ಗ್ರಾಮೀಣ ಭಾಗದಲ್ಲಿನ ಜನರು ಪಡುತ್ತಿರುವ ಕಷ್ಟಗಳು ಕಣ್ಣಿಗೆ ಕಟ್ಟುತ್ತಿವೆ. ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಸರ್ಕಾರದ ಯೋಜನೆಗಳ ಬಗ್ಗೆ ಅವರಿಗೆ ಅರಿವೇ ಇಲ್ಲ, ಸತತವಾಗಿ ನಾಲ್ಕು ವರ್ಷಗಳಿಂದ ಕ್ಷೇತ್ರದಲ್ಲಿ ಸುತ್ತಿದ್ದೇನೆ. ಇದೆಲ್ಲಾ ಸಮಸ್ಯೆಗಳು ಅರ್ಥವಾದ ನಂತರ ಹಳ್ಳಿ ಹಳ್ಳಿಗೂ ತೆರಳಿ ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದೇನೆ. ಅವರ ನೋವಿನಲ್ಲಿ ಭಾಗಿಯಾಗಿದ್ದೇನೆ.
ನಾನು ಚುನಾವಣೆಗಾಗಿ ನಾಟಕವಾಡಲಿಕ್ಕಾಗಿ ಬಂದಿಲ್ಲ, ನಿಜವಾಗಲೂ ಜನರ ಸೇವೆ ಮಾಡಲಿಕ್ಕೆ ಬಂದಿದ್ದೇನೆ, ರಾಷ್ಟ್ರೀಯ ನಾಯಕರುಗಳ ಭಾವಚಿತ್ರಗಳನ್ನು ನೋಡಿ ಮತ ನೀಡಬೇಡಿ, ಸ್ಥಳೀಯವಾಗಿ ಕೆಲಸ ಮಾಡುವಂತಹ ವ್ಯಕ್ತಿಗಳನ್ನು ನೋಡಿ ಮತ ನೀಡಿ, ಇಷ್ಟು ವರ್ಷಗಳಲ್ಲಿ ನಾಯಕರ ಮಾತುಗಳಿಗೆ ಮರುಳಾಗಿದ್ದೀರಿ, ಹಣವನ್ನೂ ಕೊಟ್ಟು ಮತ ನೀಡಿದ್ದೀರಿ, ಯಾವ ಬದಲಾವಣೆಯನ್ನೂ ಕಂಡಿಲ್ಲ, ಇದೊಂದು ಬಾರಿ ನನಗೆ ಅವಕಾಶ ಮಾಡಿಕೊಡಿ, ಕೆಲಸ ಮಾಡಿದ್ದಾರೆ ಎನಿಸಿದರೆ, ಪುನಃ ಅವಕಾಶ ಮಾಡಿಕೊಡಿ ಎಂದರು.
ಮುಖಂಡ ಆನೂರು ದೇವರಾಜ್ ಮಾತನಾಡಿ, ತಾಲ್ಲೂಕಿನ ಜನತೆ ಬದಲಾವಣೆ ಬಯಸಿದ್ದಾರೆ, ಕ್ಷೇತ್ರದಲ್ಲಿ ನಾಲ್ಕು ವರ್ಷಗಳಿಂದ ಆರೋಗ್ಯ ತಪಾಸಣಾ ಶಿಬಿರಗಳು, ನೇತ್ರ ತಪಾಸಣಾ ಶಿಬಿರಗಳು, ಸೇರಿದಂತೆ ಪ್ರತಿಯೊಂದು ಹಳ್ಳಿಗೂ ಸಂಚರಿಸಿ, ಜನರ ಸೇವೆ ಮಾಡುತ್ತಿರುವ ಆಂಜಿನಪ್ಪ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಕ್ಷೇತ್ರದ ಜನತೆ ಅವರನ್ನು ಆಯ್ಕೆ ಮಾಡುವ ಕೆಲಸ ಮಾಡಬೇಕು ಎಂದರು.
ನೂರಾರು ಮಂದಿ ಹಿರಿಯ ನಾಗರಿಕರು, ವಿಧವೆಯರು, ಅಂಗವಿಕಲರಿಗೆ ಸರ್ಕಾರದಿಂದ ನೀಡುವಂತಹ ಪಿಂಚಣಿ ಸೌಲಭ್ಯದ ಮಂಜೂರಾತಿ ಪತ್ರಗಳನ್ನು ವಿತರಣೆ ಮಾಡಿದರು. ಹಿತ್ತಲಹಳ್ಳಿ ಕೃಷ್ಣಪ್ಪ, ತಿಮ್ಮಸಂದ್ರ ನರಸಿಂಹಪ್ಪ, ಮಳಮಾಚನಹಳ್ಳಿ ಭೈರೇಗೌಡ, ತುಮ್ಮನಹಳ್ಳಿ ವೆಂಕಟೇಶ್, ಅಪ್ಸರ್, ಎಸ್.ಎನ್.ಕ್ರಿಯಾ ಟ್ರಸ್ಟ್ ನ ಪದಾಧಿಕಾರಿಗಳು ಹಾಜರಿದ್ದರು.
ತಾಲ್ಲೂಕು ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರ ಸಭೆ
ಶಿಡ್ಲಘಟ್ಟ ನಗರದ ಚಿಂತಾಮಣಿ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ತಾಲ್ಲೂಕು ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಸತೀಶ್ ಉಪಾಧ್ಯಾಯ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿವಿಧ ಜನಪರ ಯೋಜನೆಗಳನ್ನು ಕ್ಷೇತ್ರದ ಜನರಿಗೆ ತಲುಪಿಸುವ ಕೆಲಸವನ್ನು ಪಕ್ಷದ ಮುಖಂಡರೂ ಹಾಗೂ ಕಾರ್ಯಕರ್ತರು ಮಾಡಬೇಕು ಎಂದು ಅವರು ತಿಳಿಸಿದರು.
ದೇಶದ ಚಿಂತನೆಯಲ್ಲಿ ತೊಡಗಿರುವ ಬಿಜೆಪಿ ಪಕ್ಷಕ್ಕೆ ದೇಶದಾದ್ಯಂತ ಅಭೂತಪೂರ್ವ ಬೆಂಬಲ ದೊರಕಿದೆ. ದೇಶದ ಜನತೆಯನ್ನು ಸ್ವಾಭಿಮಾನಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಯುವಕರಿಗೆ ಮುದ್ರಾ ಯೋಜನೆಯಡಿ ಬ್ಯಾಂಕ್ ಗಳಿಂದ ಸಾಲಸೌಲಭ್ಯ, ಹೆಣ್ಣು ಮಕ್ಕಳಿಗಾಗು ಸುಕನ್ಯಾ ಸಮೃದ್ಧಿ ಯೋಜನೆ, ಬಡವರಿಗೆ ಉಚಿತ ಗ್ಯಾಸ್ ವಿತರಣೆಯಂತಹ ಕಾರ್ಯಕ್ರಮಗಳ ಬಗ್ಗೆ ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಬೇಕು. ಈ ಮೂಲಕ ಮುಂಬರುವ ವಿಧನಾಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ನಿರ್ವಹಿಸಬೇಕು ಎಂದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ಮಾತನಾಡಿ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಜನಪರ ಯೋಜನೆಗಳ ಮೂಲಕವೇ ಅಧಿಕಾರ ಹಿಡಿಯಲಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಮನೆ ಮನೆಗೂ ತೆರಳಿ ಕ್ಷೇತ್ರದಲ್ಲಿ ಮತ ಯಾಚಿಸಲು ಕಾರ್ಯಕರ್ತರು ಮುಂದಾಗಬೇಕು. ಈಗಾಗಲೇ ತಾಲ್ಲೂಕಿನ ಚಿಲಕಲನೇರ್ಪು ಭಾಗದಲ್ಲಿ ಬೂತ್ ಮಟ್ಟದ ಪದಾಧಿಕಾರಿಗಳ ಸಭೆಗಳನ್ನು ನಡೆಸಿದ್ದು, ಮುಂಬರುವ ದಿನಗಳಲ್ಲಿ ಕ್ಷೇತ್ರದಾದ್ಯಂತ ಎಲ್ಲಾ ಕಡೆ ಸಂಚರಿಸಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಎಲ್ಲರೂ ಮುಂದಾಗಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಚುನಾವಣೆ ಉಸ್ತುವಾರಿ ಮಧುಶ್ರೀ, ಕಿಸಾನ್ ಮೋರ್ಚಾ ಸದಸ್ಯ ಚಲಪಲ್ಲಿ ನರಸಿಂಹರೆಡ್ಡಿ, ಚುನಾವಣೆ ವಿಸ್ತಾರಕ್ ಫರೀದ್‌ಖಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರಗೌಡ, ಮುಖಂಡರಾದ ಡಿ.ಆರ್.ಶಿವಕುಮಾರಗೌಡ, ಸುರೇಶ್, ನಗರಸಭೆ ಸದಸ್ಯ ಎಸ್.ರಾಘವೇಂದ್ರ, ಶ್ರೀಧರ್, ಮಂಜುಳಮ್ಮ, ಸುಜಾತಮ್ಮ ಹಾಜರಿದ್ದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ಇಲಾಖೆಯ ರಾಜ್ಯ ಸಂಚಾಲಕರ ನೇಮಕ
ಶಿಡ್ಲಘಟ್ಟ ತಾಲ್ಲೂಕಿನ ಗುಡಿಹಳ್ಳಿಯ ಟಿ.ನಾರಾಯಣಸ್ವಾಮಿ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ಇಲಾಖೆಯ ರಾಜ್ಯ ಸಂಚಾಲಕರಾಗಿ ನೇಮಕ ಮಾಡಲಾಗಿದೆ
ಕಾನ್ಶಿರಾಮ್ 84 ನೇ ಹುಟ್ಟುಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ವಿತರಣೆ
ಶಿಡ್ಲಘಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಬಿಎಸ್‌ಪಿ ಪಕ್ಷದ ಸಂಸ್ಥಾಪಕ ಕಾನ್ಶಿರಾಮ್ 84 ನೇ ಹುಟ್ಟುಹಬ್ಬದ ಪ್ರಯುಕ್ತ ಬಿಎಸ್‌ಪಿ ಪಕ್ಷದ ಜಿಲ್ಲಾ ಸಂಚಾಲಕ ದೇವಪ್ಪ, ತಾಲ್ಲೂಕು ಅಧ್ಯಕ್ಷ ವೆಂಕಟೇಶ್ ಮತ್ತು ಸದಸ್ಯರು ರೋಗಿಗಳಿಗೆ ಹಣ್ಣುಗಳನ್ನು ವಿತರಿಸಿದರು
ದೇವರ ದಾಸಿಮಯ್ಯ ಜಯಂತಿಯಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ದೇವರ ದಾಸಿಮಯ್ಯ ಜಯಂತಿಯಂದು ನೇಕಾರ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ದೇವರ ದಾಸಿಮಯ್ಯ, ಭಗವಾನ್ ಮಹಾವೀರ ಮತ್ತು ಅಕ್ಕಮಹಾದೇವಿ ಜಯಂತಿಯನ್ನು ಆಚರಿಸುವ ಸಲುವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ನಾಡ ಹಬ್ಬಗಳ ಆಚರಣಾ ಸಮಿತಿಯಿಂದ ವಿವಿಧ ಜಯಂತ್ಯುತ್ಸವಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು. ಸಮುದಾಯದ ಸಹಕಾರವಿದ್ದಲ್ಲಿ ಚೆನ್ನಾಗಿ ಆಚರಿಸಬಹುದು. ನೇಕಾರ ಸಮುದಾಯದಲ್ಲಿ ಆಯ್ದ ಮೂವರು ಹಿರಿಯರನ್ನು ಸಹ ಸನ್ಮಾನಿಸಲಾಗುವುದು. ದೇವರ ದಾಸಿಮಯ್ಯ ಜಯಂತಿಯನ್ನು ಮಾರ್ಚ್ 22 ರಂದು ಭಗವಾನ್ ಮಹಾವೀರ ಮತ್ತು ಅಕ್ಕಮಹಾದೇವಿ ಜಯಂತಿಯನ್ನು ಮಾರ್ಚ್ 31 ರಂದು ಆಚರಣೆ ಮಾಡಲಾಗುವುದು ಎಂದು ಹೇಳಿದರು.
ಗ್ರೇಡ್ 2 ತಹಶೀಲ್ದಾರ್ ಮುನಿಕೃಷ್ಣಪ್ಪ, ನಗರಸಭೆ ಆಯುಕ್ತ ಚಲಪತಿ, ಸಿಡಿಪಿಒ ಅಧಿಕಾರಿ ಲಕ್ಷ್ಮೀದೇವಮ್ಮ, ನೇಕಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಕೆ.ನಾಗರಾಜ್, ತಾಲ್ಲೂಕು ಘಟಕದ ಅಧ್ಯಕ್ಷ ಸುಬ್ರಮಣಿ ಹಾಜರಿದ್ದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಉತ್ತಮ ಮತ್ತು ಉಚಿತ ಚಿಕಿತ್ಸೆ
ಪ್ರತಿಯೊಬ್ಬರಿಗೂ ಉತ್ತಮ ಮತ್ತು ಉಚಿತ ಚಿಕಿತ್ಸೆ ಸಿಗಬೇಕು ಎಂಬ ನಿಟ್ಟಿನಲ್ಲಿ ರಾಜ್ಯಾದ್ಯಂತ ಎಲ್ಲಾ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ೫೦ ರಿಂದ ೧೦೦ ಹಾಸಿಗೆಗಳಿಗೆ ಮೇಲ್ದರ್ಜೇಗೇರಿಸಿ ಸುಮಾರು ೩ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ರೇಷ್ಮೆಯನ್ನೇ ನಂಬಿ ಕೂಲಿ ಮಾಡಿ ಜೀವನ ನಡೆಸುತ್ತಿರುವ ಜನತೆಗೆ ಉತ್ತಮ ಆರೋಗ್ಯ ದೊರೆಯಬೇಕು ಎಂಬ ನಿಟ್ಟಿನಲ್ಲಿ ಸುಮಾರು ೩ ಕೋಟಿ ರೊ ವೆಚ್ಚದಲ್ಲಿ ಆಸ್ಪತ್ರೆ ಕಟ್ಟಡ ಉನ್ನತೀಕರಣ ಹಾಗೂ ಸುಮಾರು ೧೦ ಲಕ್ಷ ರೂ ವೆಚ್ಚದಲ್ಲಿ ಡಯಾಲಿಸಿಸ್ ಕೇಂದ್ರ ೮ ಲಕ್ಷ ರೂ ವೆಚ್ಚದಲ್ಲಿ ಡಿಜಿಟಲ್ ಎಕ್ಸರೇ ಕೇಂದ್ರ ಮತ್ತು ಆಸ್ಪತ್ರೆ ಆವರಣದಲ್ಲಿ ಸಾರ್ವಜನಿಕರಿಗಾಗಿ ಉಪಹಾರ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ.
ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ನೀಡುವ ದೃಷ್ಠಿಯಿಂದ ನಗರದ ಆಸ್ಪತ್ರೆಯ ಸಿಬ್ಬಂದಿ ಕೆಲಸ ಮಾಡುತ್ತಿದ್ದು ಖಾಸಗಿ ಆಸ್ಪತ್ರೆಗಳಿಗಿಂತ ಉತ್ತಮ ಚಿಕಿತ್ಸೆ ಇಲ್ಲಿ ದೊರೆಯಲಿದೆ. ಆಸ್ಪತ್ರೆಯಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿದ್ದು ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ಕ್ರಮ ಜರುಗಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಎಂ.ಜಯರಾಮರೆಡ್ಡಿ, ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್, ಸದಸ್ಯ ಅಪ್ಸರ್‌ಪಾಷ, ಪೌರಾಯುಕ್ತ ಜಿ.ಎನ್.ಚಲಪತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್‌ಕುಮಾರ್, ಆಡಳಿತ ವೈದ್ಯಾಧಿಕಾರಿ ಡಾ.ಸುನಿತಾ, ಲಕ್ಷ್ಮೀನಾರಾಯಣ, ಶ್ರೀನಿವಾಸ್, ಸಯ್ಯದ್‌ಬಾಬು, ಅಕ್ರಂಪಾಷ ಹಾಜರಿದ್ದರು.
ಮಾಹಿತಿಯ ಕೊರತೆಯಿಂದಾಗಿ ಗ್ರಾಹಕರು ಮೋಸ ಹೋಗುತ್ತಿದ್ದಾರೆ
ಹಕ್ಕು ಚಲಾಯಿಸುವ ಪ್ರತಿಯೊಬ್ಬ ಗ್ರಾಹಕನೂ ತಾನು ಖರೀದಿ ಮಾಡುವ ವಸ್ತುವಿನ ಗುಣಮಟ್ಟ, ಬೆಲೆ, ಮಾಹಿತಿ ಅರಿತು ತನ್ನ ಜವಾಬ್ದಾರಿ ನಿಭಾಯಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ ತಿಳಿಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ನ್ಯಾಯಾಲಯದ ಆವರಣದಲ್ಲಿ ಗುರುವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಗ್ರಾಹಕರ ಹಕ್ಕುಗಳ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಹಳಷ್ಟು ಕಡೆ ಅರಿವು, ಮಾಹಿತಿಯ ಕೊರತೆಯಿಂದಾಗಿ ಗ್ರಾಹಕರು ಮೋಸ ಹೋಗುತ್ತಿದ್ದಾರೆ. ಗ್ರಾಹಕನನ್ನು ಜಾಗೃತಗೊಳಿಸಿದಾಗ ಇಂಥ ಮೋಸ ಪ್ರವೃತ್ತಿಗೆ ತಡೆಯೊಡ್ಡಬಹುದು. ಎಚ್ಚೆತ್ತ ಗ್ರಾಹಕ ನಮ್ಮ ದೇಶದ ಆಸ್ತಿ ಇದ್ದಂತೆ ಎಂಬುದನ್ನು ಮರೆಯಬಾರದು ಎಂದರು.
ಗ್ರಾಹಕರು ಖರೀದಿಸಿದ ವಸ್ತು ಹಾಗೂ ಪಡೆದ ಸೇವೆಯಲ್ಲಿ ಲೋಪವಿದ್ದಲ್ಲಿ ಅಂಥ ಕಂಪೆನಿಗಳ ವಿರುದ್ಧ ಗ್ರಾಹಕರು ಗ್ರಾಹಕ ವ್ಯಾಜ್ಯಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಪರಿಹಾರ ಪಡೆಯಬಹುದು. ಖರೀದಿಸಿದ ಬಿಲ್ ಕಡ್ಡಾಯವಾಗಿ ಹೊಂದಿರಬೇಕು ಎಂದರು.
ಸಿವಿಲ್ ನ್ಯಾಯಾಧೀಶರಾದ ಟಿ.ಎಲ್.ಸಂದೀಶ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರ ಗೌಡ, ವಕೀಲ ಮಂಜುನಾಥ್
ಶಾಲೆಯ ಅಭಿವೃದ್ಧಿಯತ್ತ ಪೋಷಕರೂ ಸಹಕರಿಸಬೇಕು
ಮಕ್ಕಳನ್ನು ಶಾಲೆಗೆ ಕಳಿಸಿದರಷ್ಟೇ ಸಾಲದು. ಶಾಲೆಯ ಅಭಿವೃದ್ಧಿಯತ್ತ ಪೋಷಕರೂ ಸಹಕರಿಸಬೇಕು. ಆಗ ಮಾತ್ರ ಸರ್ಕಾರಿ ಶಾಲೆಗಳು ಗಟ್ಟಿಗೊಳ್ಳುತ್ತವೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ತಿಳಿಸಿದರು.
ತಾಲ್ಲೂಕಿನ ಚೀಮಂಗಲದ ಕುವೆಂಪು ಶತಮಾನೋತ್ಸವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ತಾಯಂದಿರ ಸಂಭ್ರಮದ ಆಟ ಹಾಗೂ ಶ್ರೀ ಶಾರದಾ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೋಷಕರು ಶಾಲೆಯ ಚಟುವಟಿಕೆಗಳಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ತಾಯಂದಿರ ಸಂಭ್ರಮದ ಆಟವನ್ನು ಆಯೋಜಿರುವುದು ಸಮಂಜಸವಾಗಿದೆ. ಮಕ್ಕಳಂತೆ ಹಿರಿಯರು ಆಡಿ ನಲಿದು ತಮ್ಮ ಬಾಲ್ಯಕ್ಕೆ ಮರಳುವುದಲ್ಲದೆ ತಮ್ಮ ಮಕ್ಕಳು ಓದುವ ಶಾಲೆಯ ಬಗ್ಗೆಯೂ ಆಸಕ್ತಿ ವಹಿಸುವಂತಾಗಲಿ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಚಂದ್ರಶೇಖರಬಾಬು ಮಾತನಾಡಿ, ಬಹುತೇಕ ತಾಯಂದಿರು ಅಡುಗೆಮನೆ ಹಾಗೂ ರೈತ ಕಸುಬುಗಳಲ್ಲಿ ತೊಡಗಿರುವವರು ಆಗಿರುತ್ತಾರೆ. ಅವರಿಗೆ ಆಟಗಳನ್ನು ಆಡಿಸುವ ಮೂಲಕ ಅವರಲ್ಲಿ ಉತ್ಸಾಹ, ಹುಮ್ಮಸ್ಸು, ಚೈತನ್ಯ ತುಂಬಲಾಗುತ್ತಿದೆ. ದೈನಂದಿನ ಚಟುವಟಿಕೆಗಳಿಗೆ ಹೊರತಾಗಿ ಈ ರೀತಿ ಶಾಲೆಯ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಮಕ್ಕಳು ಮತ್ತು ಪೋಷಕರ ಬಾಂಧವ್ಯವೂ ಹೆಚ್ಚಾಗುತ್ತದೆ. ಪರೀಕ್ಷೆಗೆ ಮುನ್ನ ಶಾರದೆಯ ಪೂಜೆ ಮಾಡುವ ಜೊತೆಯಲ್ಲಿ ಮಕ್ಕಳ ಪಾಲಿಗೆ ದೇವರಾದ ತಾಯಂದಿರಿಗೂ ಶಾಲೆಗೆ ಕರೆಸಿರುವುದು ಸೂಕ್ತವಾಗಿದೆ ಎಂದು ಹೇಳಿದರು.
ತಾಯಂದಿರಿಗೆ ಮ್ಯೂಸಿಕಲ್ ಚೇರ್, ಪಾಸಿಂಗ್ ದಿ ಬಾಲ್, ಗುಂಡು ಎಸೆತ, ಬೆಲೂನ್ ಹೊಡೆಯುವುದು, ಲೆಮೆನ್ ಅಂಡ್ ಸ್ಪೂನ್, ಮಡಿಕೆ ಹೊಡೆಯುವುದು, ಬಕೇಟ್ ಬಾಲ್, ಹಗ್ಗ ಜಗ್ಗಾಟ ಆಟಗಳನ್ನು ಆಡಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಳಿನಾ ಮಂಜುನಾಥ್, ಉಪಾಧ್ಯಕ್ಷ ಸಿ.ಎಂ.ನಾರಾಯಣಸ್ವಾಮಿ, ಸದಸ್ಯರಾದ ಸೌಮ್ಯ ಮಂಜುನಾಥ್, ಸುಮ ಮಂಜುನಾಥ್, ಎಸ್‌ಡಿಎಂಸಿ ಉಪಾಧ್ಯಕ್ಷೆ ಮಾದವಮ್ಮ, ಸದಸ್ಯ ಮೋಹನ್, ಉಮೇಶ್, ಮುನಿಕೃಷ್ಣ, ನಾಗರಾಜ್, ಮಂಜುನಾಥ್, ಕೃಷ್ಣಮೂರ್ತಿ, ಆಂಜನೇಯರೆಡ್ಡಿ, ಶಶಿಕಲಾ, ಅರುಣಾ, ನಾರಾಯಣಸ್ವಾಮಿ, ಮುಖ್ಯ ಶಿಕ್ಷಕ ಸಿ.ಎಂ.ಮುನಿರಾಜು, ಶಿಕ್ಷಕರಾದ ವಿಠಲ್, ಮಂಜುನಾಥ, ಲೋಕೇಶ್, ಪಿಡಿಒ ಹರೀಶ್ ಕುಮಾರ್ ಹಾಜರಿದ್ದರು.
ಇರಗಪ್ಪನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ವಸ್ತುಪ್ರದರ್ಶನ
ಕಣ್ಣಿನಿಂದ ನೋಡಿದ್ದಷ್ಟೇ ಸತ್ಯವಲ್ಲ. ಪ್ರತಿಯೊಂದನ್ನೂ ವೈಜ್ಞಾನಿಕವಾಗಿ ಪ್ರಮಾಣಿಸಿ ನೋಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ವಿಜ್ಞಾನ ಶಿಕ್ಷಕ ಎಂ.ಎ.ರಾಮಕೃಷ್ಣ ತಿಳಿಸಿದರು.
ತಾಲ್ಲೂಕಿನ ಇರಗಪ್ಪನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ರಾಷ್ಟ್ರೀಯ ಆವಿಷ್ಕಾರ ಅಭಿಯಾನದ ಅಂಗವಾಗಿ ನಡೆದ ವಿಜ್ಞಾನ ಮತ್ತು ಗಣಿತ ವಸ್ತುಪ್ರದರ್ಶನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಮಾಯಕತೆಯಿರುವವರನ್ನು ಮೋಸಗೊಳಿಸಬಲ್ಲರು. ವಿಜ್ಞಾನ ತಿಳಿದವರನ್ನು ಯಾರೂ ಮೋಸಗೊಳಿಸಲಾರರು. ಚಿಕ್ಕ ಚಿಕ್ಕ ವಿಜ್ಞಾನದ ಪ್ರಯೋಗಗಳನ್ನು ಮಾಡುತ್ತಾ ಹೋದಂತೆ ವಿಜ್ಞಾದ ವಿಷಯದ ಬಗ್ಗೆ ಆಸಕ್ತಿ, ಪ್ರೀತಿ ಹುಟ್ಟುತ್ತದೆ. ದಿನನಿತ್ಯದಲ್ಲಿ ಕಂಡುಬರುವ ಪ್ರತಿಯೊಂದು ಸಂಗತಿಗಳನ್ನೂ ವಿಜ್ಞಾನದ ಹಿನ್ನೆಲೆಯಿಂದ ನೋಡುತ್ತಾ ಬಂದರೆ ನಮ್ಮ ಸುತ್ತಲಿನ ಜಗತ್ತು ನಮಗೆ ಇನ್ನಷ್ಟು ಸುಂದರವಾಗಿ ಕಾಣುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಏಳನೇ ತರಗತಿಯ ಪಠ್ಯದಲ್ಲಿರುವ ಪ್ರತಿಫಲನ, ಬೆಳಕು, ಗಾಳಿಗೆ ಸಂಬಂಧಿಸಿದ ಪ್ರಯೋಗಗಳು, ಅಗ್ನಿಪರ್ವತ ಮತ್ತು ಜ್ವಾಲಾಮುಖಿಗಳ ಪ್ರಾತ್ಯಕ್ಷಿಕೆಯನ್ನು ಮಾಡುವ ಬಗ್ಗೆ, ಪವಾಡಗಳ ಹಿಂದಿನ ವೈಜ್ಞಾನಿಕ ಸತ್ಯಗಳು, ಕೈಚಳಕಗಳ ಬಗ್ಗೆ ವಿದ್ಯಾರ್ಥಿಗಳಿಗೆ ತೋರಿಸಿ ವಿವರಿಸಿದರು.
ಶಾಲೆಯ ವಿದ್ಯಾರ್ಥಿಗಳು ವಿವಿಧ ವಿಜ್ಞಾನದ ಮಾದರಿಗಳಾದ ಹೃದಯ, ನೀರು ಶುದ್ಧೀಕರಣ, ಮೂತ್ರ ವಿಸರ್ಜನಾಂಗ, ಎಲೆ ಮತ್ತು ಗಣಿತ ಮಾದರಿಗಳಾದ ನೇಪಿಯರ್ ಗುಣಾಕಾರ, ಹಣ, ತೂಕ, ದ್ರವದ ಅಳತೆ, ಕೋನಗಳು, ಸ್ಥಾನಬೆಲೆ ಮುಂತಾದವುಗಳನ್ನು ಪ್ರದರ್ಶಿಸಿದ್ದರು. ಸುತ್ತಮುತ್ತಲಿನ ಶಾಲೆಗಳಿಂದ ವಿದ್ಯಾರ್ಥಿಗಳು ಬಂದು ವೀಕ್ಷಿಸಿ ಮಾಹಿತಿ ಪಡೆದರು.
ಸಮೂಹ ಸಂಪನ್ಮೂಲ ವ್ಯಕ್ತಿ ಎನ್.ವೆಂಕಟೇಶಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಗರಿಗರೆಡ್ಡಿ, ಉಪಾಧ್ಯಕ್ಷೆ ನಾಗಮ್ಮ ದ್ಯಾವಪ್ಪ, ತಾಲ್ಲೂಕು ಭೂ ಮಂಜೂರಾತಿ ಸಮಿತಿ ಸದಸ್ಯ ಅಶ್ವತ್ಥನಾರಾಯಣರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ಗಾಯಿತ್ರಿ ನರಸಿಂಹಮೂರ್ತಿ, ಮುನಿರತ್ನಮ್ಮ, ಮುಖ್ಯ ಶಿಕ್ಷಕ ಎಸ್.ರವಿ, ಶಿಕ್ಷಕರಾದ ವಿ.ವಿಜಯಮಣಿ, ವೈ.ವನಿತ, ಸಾದಿಕ್‌ಪಾಷ, ಸಾದಲಿ ಹಾಗೂ ಇರಗಪ್ಪನಹಳ್ಳಿ ಸಮೂಹ ಸಂಪನ್ಮೂಲ ಕೇಂದ್ರದ ಶಿಕ್ಷಕರು ಹಾಜರಿದ್ದರು.
ನರೇಗಾ ಯೋಜನೆಯಡಿ ಕಳಪೆ ಕಾಮಗಾರಿ, ಕ್ರಮಕ್ಕೆ ಆಗ್ರಹ
ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳು ಕಳಪೆಯಿಂದ ಕೂಡಿದೆ. ಮೇಲಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಕಳಪೆ ಕಾಮಗಾರಿ ಮಾಡಿದವರ ವಿರುದ್ಧ ಕ್ರಮ ಜರುಗಿಸುವಂತೆ ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಂ.ವೆಂಕಟರೆಡ್ಡಿ ಆಗ್ರಹಿಸಿದ್ದಾರೆ.
ತಾಲ್ಲೂಕಿನ ಬಶೆಟ್ಟಹಳ್ಳಿ -ಧನಮಿಟ್ಟೇನಹಳ್ಳಿ ಕೆರೆಯಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಗ್ರಾಮದ ಮುನಿರಾಜು ಎಂಬುವವರು ಮೋರಿ ನಿರ್ಮಿಸಲು ಮುಂದಾಗಿದ್ದಾರೆ. ಆದರೆ ಮೋರಿ ಕಾಮಗಾರಿಗೆ ಹೊಸ ಕಲ್ಲು ಹಾಕುವ ಬದಲಿಗೆ ಸಮೀಪದಲ್ಲಿರುವ ಗ್ರಾಮದ ಹಳೆಯ ಬಾವಿಯ ಕಲ್ಲು ಕಟ್ಟಡ ಕೆಡವಿ ಅದರ ಹಳೇ ಕಲ್ಲುಗಳನ್ನು ಬಳಸಿ ಮೋರಿ ನಿರ್ಮಿಸಲು ಮುಂದಾಗಿದ್ದಾರೆ.
ಸಾರ್ವಜನಿಕ ಸ್ವತ್ತಾದ ಪುರಾತನ ಕಲ್ಲುಕಟ್ಟಡದ ಬಾವಿಯನ್ನು ಕೆಡವಿರುವುದಲ್ಲದೆ, ಮೋರಿ ಕಾಮಗಾರಿಗೆ ಬೇಕಾದ ಮರಳು, ಸಿಮೆಂಟ್ ಸಹ ಸಮರ್ಪಕವಾಗಿ ಬಳಸದೇ ಕಳಪೆ ಕಾಮಗಾರಿ ಮಾಡಿ ಸರ್ಕಾರದ ಹಣ ಲಪಟಾಯಿಸಲು ಯತ್ನಿಸಿರುವ ವ್ಯಕ್ತಿಗೆ ನರೇಗಾ ಯೋಜನೆಯಡಿ ಯಾವುದೇ ಬಿಲ್ ಮಾಡಬಾರದು. ಸರ್ಕಾರಿ ಹಣ ದುರುಪಯೋಗ ಮಾಡಿಕೊಳ್ಳಲು ಯತ್ನಿಸಿರುವ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಈಗಾಗಲೇ ಗ್ರಾಮ ಪಂಚಾಯಿತಿ ಪಿಡಿಒ ಅವರಿಗೆ ಮನವಿ ಸಲ್ಲಿಸಿದ್ದು ತಾಲ್ಲೂಕು ಪಂಚಾಯಿತಿ ಇಓ ಹಾಗೂ ನರೇಗಾ ಯೋಜನೆಯ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
‘ಗ್ರಾಮದ ಕೆರೆಯಲ್ಲಿ ನಡೆದಿರುವ ಮೋರಿ ಕಾಮಗಾರಿಯ ಅವ್ಯವಹಾರದ ಬಗ್ಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಈ ಕಾಮಗಾರಿಯ ಪೈಕಿ ಕೇವಲ ೩೦ ಸಾವಿರ ಹಣ ಮಾತ್ರ ಸಂದಾಯವಾಗಿದೆ. ಉಳಿದ ಸುಮಾರು ೧ ಲಕ್ಷ ೭೦ ಸಾವಿರದಷ್ಟು ಹಣ ಈವರೆಗೂ ಡ್ರಾ ಮಾಡಿಲ್ಲ. ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿಗಳಿಗೆ ಪ್ರೋತ್ಸಾಹ ನೀಡಲಾಗುವುದಿಲ್ಲ. ಮೇಲಧಿಕಾರಿಗಳ ಸೂಚನೆಯಂತೆ ಕ್ರಮ ಜರುಗಿಸಲಾಗುವುದು’ ಎಂದು ಗ್ರಾಮ ಪಂಚಾಯಿತಿ ಪಿಡಿಒ ಅಶೋಕ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕೆ.ಆರ್.ನಾರಾಯಣಸ್ವಾಮಿ, ಮುನಿವೆಂಕಟರಾಯಪ್ಪ, ಎಂ.ಎನ್.ಬೈರಪ್ಪ, ಡಿ.ಸಿ.ಸುರೇಶ್, ಜಯರಾಮರೆಡ್ಡಿ, ದೊಡ್ಡಲಕ್ಷ್ಮಯ್ಯ, ಬೈರಾರೆಡ್ಡಿ ಹಾಜರಿದ್ದರು.

