ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಹಲವು ಸಮಸ್ಯೆಗಳಿವೆ. ರೇಷ್ಮೆ ಬೆಳೆಗಾರ ಹಾಗೂ ನೂಲು ಬಿಚ್ಚುವವರನ್ನು ಭೇಟಿ ಮಾಡಿ ಅವರ ತೊಂದರೆಗಳನ್ನು ಕೇಳಿದ್ದೇನೆ. ಅದಕ್ಕೆ ಪರಿಹಾರ ಕಲ್ಪಿಸುವ ಪ್ರಯತ್ನ ಮಾಡುವುದಾಗಿ ರಾಜ್ಯ ಬಿಜೆಪಿ ರೇಷ್ಮೆ ಬೆಳೆಗಾರರ ಪ್ರಕೋಷ್ಟದ ಸಹ ಸಂಚಾಲಕ ಸಿ. ವಿ. ಲೋಕೇಶ್‌ಗೌಡ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಈಚೆಗೆ ಭೇಟಿ ನೀಡಿದ್ದ ಅವರು ಮಾತನಾಡಿದರು.
ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೈತರು ಮತ್ತು ರೀಲರುಗಳು ಅನೇಕ ಸಮಸ್ಯೆಗಳನ್ನು ಎಳೆ ಎಳೆಯಾಗಿ ವಿವರಿಸುತ್ತಾ ಅವರ ಕಷ್ಟಗಳನ್ನು ತೋಡಿಕೊಂಡರು. ಮುಖ್ಯವಾಗಿ ಸರ್ಕಾರಕ್ಕೆ ಕಟ್ಟುವ ಶುಲ್ಕದ ಮೊತ್ತ ಜಾಸ್ತಿಯಾಗಿದ್ದು ಅದನ್ನು ಕಡಿಮೆ ಮಾಡಿದರೆ ಅನುಕೂಲಕರ.
ಸರ್ಕಾರಿ ಗೂಡು ಮಾರುಕಟ್ಟೆಯಲ್ಲಿ ಸುಮಾರು ೭೦ ಜನ ಕೆಲಸಗಾರರು ಇರಬೇಕಿದ್ದರೂ ಕೇವಲ ೨೫ ಜನ ಮಾತ್ರ ಇರುತ್ತಾರೆ, ಸರ್ಕಾರ ಈ ಕೂಡಲೇ ಉಳಿದ ಕೆಲಸಗಾರರನ್ನು ತುಂಬಿ ಮಾರುಕಟ್ಟೆಯ ಕೆಲಸ ಸುಗಮವಾಗಿ ನಡೆಯಲು ಸಹಕಾರಿಯಾಗಬೇಕು.
ಇ ಹರಾಜು ನಡೆಯುತ್ತಿರುವ ಮಾರುಕಟ್ಟೆಯಲ್ಲಿ ಅದನ್ನು ನೋಡಿಕೊಳ್ಳುವ ನುರಿತ ಕಂಪ್ಯೂಟರ್ ವ್ಯಕ್ತಿಯೇ ಇಲ್ಲದೇ ಇರುವುದು ಸೋಜಿಗದ ಸಂಗತಿ. ಸುಮಾರು ೪ ತಿಂಗಳ ಹಿಂದೆ ಹೊಸಕೋಟೆ ತಾಲ್ಲೂಕಿನ ರೈತನಾದ ಭೈರೇಗೌಡ ಎಂಬುವರ ಗೂಡು ಮಾರುಕಟ್ಟೆಯಲ್ಲಿಯೇ ಕಳ್ಳತನವಾಗಿದ್ದು, ಆ ನಂತರ ಕಳ್ಳ ಸಿಕ್ಕಿದ್ದರೂ ಸಹ ಈವರೆಗೂ ರೈತನಿಗೆ ಗೂಡಿನ ಹಣ ಸೇರಿಲ್ಲ, ಹಣಕ್ಕಾಗಿ ದೂರದ ಹೋಸಕೊಟೆಯಿಂದ ದಿನವೂ ಶಿಡ್ಲಘಟ್ಟಕ್ಕೆ ವೃಥಾ ಬಂದು ಹೋಗುತ್ತಿದ್ದಾರೆ. ಸಂಬಂಧಪಟ್ಟವರು ಈ ಕೂಡಲೆ ರೈತನಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಸಿ.ಸಿ. ಕ್ಯಾಮೆರಾಗಳು ಸರಿಯಾಗಿ ಕೆಲಸ ಮಾಡದೇ ಸುಮಾರು ದಿನಗಳಾಗಿದ್ದು ಈ ಕೂಡಲೆ ಅವುಗಳನ್ನು ದುರಸ್ಥಿಗೊಳಿಸಬೇಕು. ಇಂದು ಭಾರತಾದ್ಯಂತ ಸರ್ಕಾರದ ಮುಖ್ಯ ಯೋಜನೆಯಾದ ಡಿಜಿಟಲ್ ಇಂಡಿಯಾ ಮುಖಾಂತರ ಕ್ಯಾಷ್‌ಲೆಸ್ ವ್ಯವಹಾರ ಮಾಡಬೇಕು ಎಂಬ ವ್ಯವಸ್ಥೆಯಿದ್ದರು ಸಹ ಸರ್ಕಾರಿ ಗೂಡು ಮಾರುಕಟ್ಟೆಯಲ್ಲಿ ನಗದು ವ್ಯವಹಾರ ಮಾತ್ರ ಎಂಬ ಬೊರ್ಡು ತೂಗುಹಾಕಿರುವುದು ಸರ್ಕಾರವನ್ನು ಅಣುಕಿಸುವಂತಿದೆ. ಸರ್ಕಾರವು ಬ್ಯಾಂಕ್‌ನ ಬೀಮ್ ಆಪ್ ಮುಖಾಂತರ ಇ ಹರಾಜಿನಲ್ಲಿ ತೊಡಗಿಸಿಕೊಂಡು ರೈತ ಹಾಗೂ ನೂಲು ಬಿಚ್ಚುವವರು ಹಣವನ್ನು ವರ್ಗಾಯಿಸಿಕೊಳ್ಳಬಹುದು. ಈ ಒಂದು ವ್ಯವಸ್ಥೆಯನ್ನು ಈ ಕೂಡಲೆ ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ಏಷ್ಯಾದಲ್ಲೆ ಅತಿ ದೊಡ್ಡ ಗೂಡು ಮಾರುಕಟ್ಟೆಯಾದ ಶಿಡ್ಲಘಟ್ಟಕ್ಕೆ ಮಾನ್ಯ ಮಂತ್ರಿಗಳು ಇದುವರೆಗೂ ಭೇಟಿ ಕೊಡದೆ ಇರುವುದು ಅವರ ನಿರ್ಲಕ್ಷ್ಯವನ್ನು ತೋರಿಸುತ್ತದೆ.
ಈ ಎಲ್ಲ ಸಮಸ್ಯೆಗಳನ್ನು ಮಾರುಕಟ್ಟೆಯ ಉಪನಿರ್ದೇಶಕ ಸುಭಾಷ್‌ಅವರಿಗೆ ತಿಳಿಸಿ ಈ ಕೂಡಲೆ ಮೇಲ್ಕಂಡ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕಿಸಿಕೊಡಬೇಕೆಂದು ಕೋರಿದ್ದೇನೆ. ಈ ಎಲ್ಲ ವಿಷಯಗಳನ್ನು ರೇಷ್ಮೆ ಇಲಾಖೆಯ ಮುಖ್ಯಸ್ಥರಿಗೂ ಹಾಗೂ ಸಂಬಂಧಪಟ್ಟ ಮಂತ್ರಿಗಳ ಗಮನಕ್ಕೆ ಖುದ್ದು ಭೇಟಿಯಾಗಿ ತರುವುದಾಗಿ ತಿಳಿಸಿದರು.
ಏಷ್ಯಾದಲ್ಲೆ ಅತಿ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಹಲವು ಸಮಸ್ಯೆಗಳು
ವಾಲ್ಮೀಕಿ ನಾಯಕ ಯುವ ಘಟಕದ ಉದ್ಘಾಟನೆ ಸಮಾರಂಭ
ಶಿಡ್ಲಘಟ್ಟ ನಗರದ ದಿಬ್ಬೂರಹಳ್ಳಿ ರಸ್ತೆಯ ಬಾಷುಬಾಬಾ ದರ್ಗಾ ಮುಂಭಾಗದಲ್ಲಿ ಸೋಮವಾರ ಆಯೋಜಿಸಲಾಗಿದ್ದ ವಾಲ್ಮೀಕಿ ನಾಯಕ ಯುವ ಘಟಕದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಮಾತನಾಡಿದರು.
ಪರಸ್ಪರ ಪ್ರೀತಿ, ಸೌಹಾರ್ಧತೆ ಹಾಗೂ ಗೌರವಿಸುವ ಭಾವನೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಂಡಾಗ ಮಾತ್ರ ಸಮುದಾಯದ ಏಳಿಗೆ ಸಾಧ್ಯ, ಎಲ್ಲರೂ ಒಗ್ಗಟ್ಟಿನಿಂದ ಜೀವಿಸುವುದನ್ನು ರೂಡಿಸಿಕೊಳ್ಳಬೇಕು ಹಾಗೂ ಸಮುದಾಯಕ್ಕೆ ಶಾಪದಂತಿರುವ ಮದ್ಯಪಾನವನ್ನು ಎಲ್ಲರೂ ಬಿಡಬೇಕು ಎಂದು ಅವರು ತಿಳಿಸಿದರು.
ವಾಲ್ಮೀಕಿ ಸಮುದಾಯದ ಮುಖಂಡ ಅಗ್ರಹಾರ ಮುರಳಿ ಮಾತನಾಡಿ, ವ್ಯಕ್ತಿಗಿಂತ ಸಮಾಜ ದೊಡ್ಡದು ಎಂದು ಎಲ್ಲರೂ ಯೋಚಿಸಿದಾಗಷ್ಟೇ ಸಮಾಜ ಏಳಿಗೆಯಾಗುತ್ತದೆ. ಸಮಾಜದಿಂದ ಯಾವುದೇ ವ್ಯಕ್ತಿ ನಾಯಕನಾಗಬಹುದು ಆದರೆ ಯಾವುದೇ ಒಬ್ಬ ವ್ಯಕ್ತಿಯಿಂದ ಸಮಾಜ ಬೆಳೆಯಲಾರದು. ರಾಜಕೀಯವಾಗಿ ನಾವು ಜಾಗೃತರಾಗದಿದ್ದಲ್ಲಿ ನಮ್ಮನ್ನು ಯಾವುದೇ ರಾಜಕೀಯ ಪಕ್ಷ ಗುರುತಿಸುವುದಿಲ್ಲ. ಹಾಗಾಗಿ ಸಮಾಜದ ಪ್ರತಿಯೊಬ್ಬರನ್ನೂ ಜಾಗೃತಗೊಳಿಸುವ ಕೆಲಸವನ್ನು ವಾಲ್ಮೀಕಿ ಸಮಾಜದ ಯುವಶಕ್ತಿ ಮಾಡಬೇಕು ಎಂದರು.
ಸಮಾಜದ ಯಾರೂ ತಮ್ಮ ಸ್ವಾಭಿಮಾನ ಬಿಟ್ಟು ಬದುಕಬಾರದು. ನಾಯಕತ್ವದ ಗುಣಗಳು ಯಾವುದೇ ಅಂಗಡಿಯಲ್ಲಿ ಸಿಗುವ ಸರಕಲ್ಲ. ಬದಲಿಗೆ ಅದು ನಾವು ಹುಟ್ಟುತ್ತಲೇ ಬಂದಂತಹ ಗುಣ. ಹಾಗಾಗಿ ಪ್ರತಿಯೊಬ್ಬರೂ ಸ್ವಾಭಿಮಾನಿ ಜೀವನ ನಡೆಸುವ ಜೊತೆಗೆ ಸಮಾಜದ ಎಲ್ಲರನ್ನೂ ಜಾಗೃತರನ್ನಾಗಿಸಬೇಕು ಎಂದರು.
ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ಮಾಜಿ ಜಿಲ್ಲಾಧ್ಯಕ್ಷ ಅಶೋಕ್‌ಕುಮಾರ್ ಮಾತನಾಡಿ, ಸಮುದಾಯದ ಏಳಿಗೆಗೆ ಯುವಕರು ಸಂಘಟಿತರಾಗುವ ಮೂಲಕ ಜನರನ್ನು ಜಾಗೃತರನ್ನಾಗಿಸುವ ಕೆಲಸ ಮಾಡಬೇಕಿದೆ. ಸಮುದಾಯದ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸುವ ಮೊದಲು ಸಮುದಾಯದ ಹಿರಿಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡು ಎಲ್ಲರನ್ನು ಒಗ್ಗೂಡಿಸಿಕೊಂಡು ಮಾಡಿದರೆ ಜನಾಂಗದ ಎಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮಗಳು ಯಶಸ್ವಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ಮಹಾಸಭಾದ ಕಾರ್ಯದರ್ಶಿ ಅತ್ತಿಕೋಟೆ ವೀರೇಂದ್ರಸಿಂಹ, ಸಮುದಾಯದ ಮುಖಂಡ ಲಗುನಾಯಕನಹಳ್ಳಿ ಎನ್.ಮುನಿಯಪ್ಪ, ಮೇಲೂರು ಎಂ.ಎಂ.ಸ್ವಾಮಿ, ಹನುಮಂತಪುರ, ದ್ಯಾವಪ್ಪ, ಕೃಷ್ಣಪ್ಪ, ಚಲನಚಿತ್ರ ನಟ ಅಂಜನ್, ಯುವ ಘಟಕದ ಅಧ್ಯಕ್ಷ ಕೆ.ಎಸ್.ಗಿರೀಶ್‌ನಾಯಕ್, ಗೌರವಾಧ್ಯಕ್ಷ ದೇವರಾಜ್, ಅಣ್ಣೆಪ್ಪ ಹಾಜರಿದ್ದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ಸಂಚಾಲಕರ ನೇಮಕ
ಶಿಡ್ಲಘಟ್ಟ ತಾಲ್ಲೂಕು ಕೊತ್ತನೂರಿನ ಕೆ.ಸಿ.ಜ್ಞಾನೇಶ್ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ಇಲಾಖೆ ಅಧ್ಯಕ್ಷರ ಅನುಮೋದನೆಯಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ಸಂಚಾಲಕರೆಂದು ನೇಮಕ ಮಾಡಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಫ್.ಎಚ್.ಜಕ್ಕಪ್ಪ ಅದೇಶ ಹೊರಡಿಸಿದ್ದಾರೆ
ರೈತ ಸಂಘದಿಂದ ಪ್ರತಿಭಟನಾ ಕಾರ್ಯಕ್ರಮ
ಕೆ.ಎಸ್.ಪುಟ್ಟಣ್ಣಯ್ಯನವರ ಸ್ಮರಣಾರ್ಥವಾಗಿ ‘ತಿಥಿ ಬಿಡಿ, ಸಸಿ ನೆಡಿ’ ಕಾರ್ಯಕ್ರಮ ಹಾಗೂ ರೈತರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ತಾಲ್ಲೂಕು ಕಚೇರಿ ಮುಂದೆ ‘ಪ್ರತಿಭಟನಾ ಕಾರ್ಯಕ್ರಮ’ ವನ್ನು ಸೋಮವಾರ ರೈತ ಸಂಘದ ಸದಸ್ಯರು ಹಮ್ಮಿಕೊಂಡಿದ್ದರು.
ನಗರದ ಬಸ್ ನಿಲ್ದಾಣದ ಬಳಿಯ ರೇಷ್ಮೆ ಇಲಾಖೆಯ ಕಚೇರಿಯ ಆವರಣದಲ್ಲಿ ಗಿಡವನ್ನು ನೆಟ್ಟು ರೈತರ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಒತ್ತಾಯಿಸಿ ಪ್ರಮುಖ ರಸ್ತೆಯಲ್ಲಿ ಘೋಷಣೆಗಳೊಂಡಿಗೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ. ರವಿಪ್ರಕಾಶ್ ಮಾತನಾಡಿ, ‘ನಮ್ಮ ಹಲವು ಹಕ್ಕೊತ್ತಾಯಗಳಿವೆ. ತಾಲ್ಲೂಕಿನಾದ್ಯಂತ ಕೆರೆಗಳಲ್ಲಿನ ಜಾಲಿ ಮರಗಳನ್ನು ತೆಗೆಸಬೇಕು. ರಾಜಕಾಲುವೆಗಳನ್ನು ತೆರವುಗೊಳಿಸಬೇಕು. ಕೆರೆಗಳ ಹೂಳು ತೆಗೆಸಿ ಒತ್ತುವರಿಯನ್ನು ತೆರವುಗೊಳಿಸಬೇಕು. ರೈತರ ವಿಮೆಯ ಬಾಕಿ ಹಣವನ್ನು ತಕ್ಷಣ ನೀಡಬೇಕು. ಸಾಗುವಳಿ ಚೀಟಿಗಳನ್ನು ವಿತರಣೆ ಮಾಡಬೇಕು. ಶಿಡ್ಲಘಟ್ಟದಲ್ಲಿ ಎ.ಪಿ.ಎಂ.ಸಿ.ಮಾರುಕಟ್ಟೆಯನ್ನು ಸ್ಥಾಪಿಸಬೇಕು. ರೈತ ಭವನ ಮಂಜೂರು ಮಾಡಬೇಕು. ಸಮರ್ಪಕವಾಗಿ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಆಗಬೇಕು. ಜನ ಜಾನುವಾರುಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರನ್ನು ಒದಗಿಸಲು ಕ್ರಮವಹಿಸಬೇಕು. ರೇಷ್ಮೆ ಇಲಾಖೆಯಲ್ಲಿ ಹನಿನೀರಾವರಿ ಸಹಾಯಧನ ನೀಡಬೇಕು. ಪ್ಯೂಪದ ದುರ್ವಾಸನೆಯಿಂದ ಸಾಂಕ್ರಾಮಿಕ ರೋಗ ಹರಡುತ್ತಿದ್ದು ಕ್ರಮ ಕೈಗೊಳ್ಳಬೇಕು ಮುಂತಾದ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಲಾಗುತ್ತಿದೆ’ ಎಂದು ವಿವರಿಸಿದರು.
ಮನವಿ ಪತ್ರವನ್ನು ಗ್ರೇಡ್ 2 ತಹಶೀಲ್ದಾರ್ ಮುನಿಕೃಷ್ಣಪ್ಪ ಅವರಿಗೆ ಸಲ್ಲಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಮುನಿಕೆಂಪಣ್ಣ, ಶಂಕರಪ್ಪ, ಮಾರುತಿ, ಅರುಣ್ಕುಮಾರ್, ಭಕ್ತರಹಳ್ಳಿ ಪ್ರತೀಶ್, ಕೋಟೆ ಚನ್ನೇಗೌಡ, ಡಿ.ವಿ.ನಾರಾಯಣಸ್ವಾಮಿ, ಗೋವಿಂದಪ್ಪ, ರಮೇಶ್, ನಟರಾಜ್, ಶ್ರೀಧರ್, ಮುನಿರಾಜು, ಕದಿರೇಗೌಡ, ಹುಸೇನ್‌ಸಾಬ್ ಹಾಜರಿದ್ದರು.
ಪಂಚಾಯಿತಿ ಸಿಬ್ಬಂದಿಗಳಿಗೆ ವೇತನ ಪಾವತಿ ಆದೇಶ ನಮ್ಮ ಹೋರಾಟಕ್ಕೆ ಸಂದ ಜಯ
ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಸರ್ಕಾರದಿಂದ ವೇತನ ಪಾವತಿ ಮಾಡುವ ಆದೇಶವು ನಮ್ಮ ಇದುವರೆಗಿನ ಹೋರಾಟಕ್ಕೆ ಸಂದ ಜಯ ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಎ.ಸುದರ್ಶನ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಗ್ರಾಮ ಪಂಚಾಯಿತಿ ನೌಕರರೊಂದಿಗೆ ಸೋಮವಾರ ವಿಜಯೋತ್ಸವವನ್ನು ಆಚರಿಸಿ ಅವರು ಮಾತನಾಡಿದರು.
ನಮ್ಮ ಸಂಘಟನೆಯಿಂದ ಕನಿಷ್ಠ ವೇತನಕ್ಕಾಗಿ ಹೋರಾಟ ನಡೆಸಿದ್ದೇವೆ. ಹೋರಾಟದ ಸಮಯದಲ್ಲಿ ಸಂಘಟನೆಯ ಮುಖಂಡರು, ಹಲವಾರು ನೌಕರ ಬಂಧುಗಳು ಪೊಲೀಸ್ ಲಾಠಿ ಏಟು ತಿಂದು ಆಸ್ಪತ್ರೆ ಸೇರಿ, ಜೈಲುಪಾಲಾಗಿ, ನ್ಯಾಯಾಲಯಗಳಿಗೆ ಅಲೆದಿರುವುದನ್ನು ಸ್ಮರಿಸಿಕೊಳ್ಳಬೇಕಿದೆ. ಈ ಗೆಲುವು ಯಾರೂ ಕೂಡ ಸ್ವಯಂಪ್ರೇರಿತರಾಗಿ ದಯಪಾಲಿಸಿದ್ದಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗಟ್ಟಿತನದ ಚಳುವಳಿಯಿಂದಾಗಿ ಸಿಕ್ಕ ಗೆಲುವಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಉಪಾಧರ್ಯಕ್ಷ ದೇವಪ್ಪ, ಗಂಗಪ್ಪ, ಜನಾರ್ಧನ, ಚನ್ನಪ್ಪ, ರಾಮೇಗೌಡ, ರಾಮಕೃಷ್ಣಪ್ಪ, ಶಶಿಕುಮಾರ್, ಮುನಿಯಪ್ಪ ಹಾಜರಿದ್ದರು.
ಹಲ್ಲೆಯನ್ನು ಖಂಡಿಸಿ ಕಲಾಪದಿಂದ ಹೊರಗುಳಿದ ವಕೀಲರು
ನ್ಯಾಯಾಂಗ ಇಲಾಖೆಯಲ್ಲಿನ ನ್ಯಾಯಮೂರ್ತಿಗಳಿಗೆ ಸೂಕ್ತ ಭದ್ರತೆ ಇಲ್ಲದೆ ಕಾರ್ಯ ನಿರ್ವಹಿಸುವುದು ಇನ್ನು ಮುಂದೆ ದುಸ್ತರವಾಗುವ ಲಕ್ಷಣಗಳು ರಾಜ್ಯದಲ್ಲಿ ಗೋಚರಿಸುತ್ತಿದೆ ಎಂದು ತಾಲ್ಲೂಕು ವಕೀಲರ ಸಂಘದ ಗೌರವಾಧ್ಯಕ್ಷ ಪಾಪಿರೆಡ್ಡಿ ತಿಳಿಸಿದರು.
ನಗರದ ನ್ಯಾಯಾಲಯದಲ್ಲಿ ಗುರುವಾರ ನ್ಯಾಯಾಲಯದ ಕಲಾಪದಿಂದ ಹೊರಗುಳಿದು ಲೋಕಾಯುಕ್ತ ನ್ಯಾಯಮೂರ್ತಿಗಳ ಮೇಲೆ ಆದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಅವರು ಮಾತನಾಡಿದರು.
ಬೆಂಗಳೂರು ಬಹುಮಹಡಿಗಳ ಕಟ್ಟಡದಲ್ಲಿರುವ ಲೋಕಾಯುಕ್ತ ಕಚೇರಿಯಲ್ಲಿ ರಾಜ್ಯದ ಲೋಕಾಯುಕ್ತರಾದ ನ್ಯಾಯಮೂರ್ತಿ ಪಿ.ವಿಶ್ವನಾಥಶೆಟ್ಟಿ ಅವರ ಮೇಲೆ ಅವರ ಕಚೇರಿಯಲ್ಲಿಯೇ ಮಾರಣಾಂತಿಕ ಹಲ್ಲೆ ನಡೆದಿದೆ. ಲೋಕಾಯುಕ್ತ ಕಚೇರಿಗೆ ಸೂಕ್ತ ಭದ್ರತೆ ನೀಡಿದ್ದರೂ ಸಹ ಭದ್ರತೆಯ ವೈಫಲ್ಯದಿಂದಾಗಿ ನ್ಯಾಯಮೂರ್ತಿಗಳ ಮೇಲೆ ಹಲ್ಲೆ ನಡೆದಿರುವುದು ಇಡೀ ವಕೀಲ ಸಮುದಾಯಕ್ಕೆ ತೀರಾ ಆಕ್ರೋಶ ಮತ್ತು ದುಃಖವನ್ನು ತಂದಿದೆ. ರಾಜ್ಯದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ಸೂಕ್ತ ಭದ್ರತೇ ಇಲ್ಲದಿರುವುದು ಭದ್ರತೆಯ ಲೋಪ ಎತ್ತಿ ಕಾಣುತ್ತಿದೆ.
ಇನ್ನು ಮುಂದೆ ರಾಜ್ಯದಲ್ಲಿ ಕಾರ್ಯನಿರ್ವಹಿಸುವ ನ್ಯಾಯಮೂರ್ತಿಗಳ ಭದ್ರತೆಗೆ ರಾಜ್ಯ ಸರ್ಕಾರವು ಸೂಕ್ತ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಲೋಕಾಯುಕ್ತ ನ್ಯಾಯಮೂರ್ತಿಗಳ ಮೇಲೆ ಹಲ್ಲೆಯಾಗಿರುವುದಕ್ಕೆ ಭದ್ರತೆಯ ಲೋಪಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ತಾಲ್ಲೂಕು ವಕೀಲರ ಸಂಘದ ಉಪಾಧ್ಯಕ್ಷ ಎಸ್.ಎನ್.ಚಂದಸ್ರಶೇಖರ್, ಕಾರ್ಯದರ್ಶಿ ಎಂ.ಬಿ.ಲೋಕೇಶ್, ಜಿ.ಎನ್.ನಾಗರಾಜ್, ವಿ.ನಾಗೇಂದ್ರಬಾಬು, ಕೆ.ಮಂಜುನಾಥ್, ರಾಮಕೃಷ್ಣ, ಡಿ.ಸಿ.ಮಂಜುನಾಥ್, ಸಿ.ಎಲ್.ವೆಂಕಟರೆಡ್ಡಿ, ಮೋಹನ್‌ಕುಮಾರ್, ಕೆಂಪೇಗೌಡ, ಶಿವಕುಮಾರ್, ರಾಘವೇಂದ್ರ, ವೆಂಕಟೇಶ್‌ಬಾಬು ಹಾಜರಿದ್ದರು.
ಸ್ತ್ರೀಶಕ್ತಿ ಭವನದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ನಗರದ ಸ್ತ್ರೀಶಕ್ತಿ ಭವನದಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಎಂ.ರಾಜಣ್ಣ ಮಾತನಾಡಿ, ಇಂದು ದೇಶದ ಪ್ರಗತಿಯ ಪಥದೆಡೆಗೆ ಸಾಗಲು ಮಹಿಳೆಯರೂ ಕೂಡ ಪುರುಷರಿಗೆ ಸಮಾನವಾಗಿ ಸಾಗಬೇಕಾಗಿದೆ. ಮಹಿಳಾ ದಿನಾಚರಣೆಯು ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಇನ್ನಿತರ ಕ್ಷೇತ್ರಗಳ ಸಾಧನೆಯನ್ನು ಸಂಕೇತಿಸುವ ದಿನವಾಗಿದೆ ಎಂದು ತಿಳಿಸಿದರು.
ತಾಯಿಯ ಸ್ಥಾನವನ್ನು ತುಂಬುವ ಮಹಿಳೆಯ ಹೊಣೆಗಾರಿಕೆ ಮಹತ್ತರವಾದದ್ದು. ಸಾಮಾಜಿಕ ಬದಲಾವಣೆಗಳಲ್ಲಿ ಮಹಿಳೆಯ ಪಾತ್ರ ಗಮನಾರ್ಹವಾಗಿದೆ. ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಪ್ರಯತ್ನಿಸಿ ಸಫಲರಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು ಮಾತನಾಡಿ, ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು. ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ವಿದ್ಯೆ, ಸ್ವಶಸಕ್ತಿ, ಆರ್ಥಿಕ ಭದ್ರತೆಯಿದ್ದರೆ ಹೆಣ್ಣು ಕುಟುಂಬಕ್ಕೆ, ಸಮಾಜಕ್ಕೆ ಬೆಳಕನ್ನು ನೀಡಬಲ್ಲಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ಐನಾ ಟ್ರಸ್ಟ್ ವಿದ್ಯಾರ್ಥಿಗಳು ಪೂಜಾ ಕುಣಿತ ಹಾಗೂ ಇತರೆ ಜನಪದ ವೇಷಭೂಷಣಗಳೊಂದಿಗೆ ನೃತ್ಯ ಪ್ರದರ್ಶಿಸಿದರು. ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು.
ನಗರಸಭಾ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಚಂದ್ರಕಲಾ, ಸ್ವಿಟ್ಜರ್‌ಲೆಂಡ್‌ನ ರುಬೆಟಾ, ಐನಾ ಟ್ರಸ್ಟ್‌ನ ವೆರೋನಿಕಾ ಡೇವಿಡ್, ಮೇರಿ ಚಲ್ಲಾಬೆರೆ, ಡಾ.ವಿಜಯಾ ವೆಂಕಟರಾಮ್, ಭಾರತಿ ಆಂಜನೇಯರೆಡ್ಡಿ, ಸೌಮ್ಯ, ಗೌರಮ್ಮ ಹಾಜರಿದ್ದರು.
ಚಿಕ್ಕಪಾಪನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉದ್ಘಾಟನೆ
ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಪಾಪನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉದ್ಘಾಟನೆಯನ್ನು ಗುರುವಾರ ನೆರವೇರಿಸಿ ಶಾಸಕ ಎಂ.ರಾಜಣ್ಣ ಮಾತನಾಡಿದರು. ಹೈನುಗಾರಿಕೆ ಲಾಭದಾಯಕ ಉದ್ದಿಮೆಯಾಗಿದ್ದು, ರೈತರ ಆರ್ಥಿಕ ಬೆನ್ನೆಲುಬಾಗಿದೆ ಎಂದು ಅವರು ತಿಳಿಸಿದರು.
ಬಯಲುಸೀಮೆ ಭಾಗದಲ್ಲಿ ಕೃಷಿ ಮಾಡಲು ನೀರಿಲ್ಲದೇ ಇರುವುದರಿಂದ ಈ ಭಾಗದ ರೈತರು ಹೈನುಗಾರಿಕೆಯನ್ನು ಹೆಚ್ಚು ಅವಲಂಬಿಸುವುದು ಸೂಕ್ತ. ತಾಲ್ಲೂಕಿನಾದ್ಯಂತ ಇರುವ ಸುಮಾರು ೨೦೮ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ದಿನನಿತ್ಯ ೧ ಲಕ್ಷ ೨೫ ಸಾವಿರ ಲೀಟರ್ ಹಾಲು ಉತ್ಪಾದಿಸುವ ಮೂಲಕ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಕೋಚಿಮುಲ್‌ನಿಂದ ಹಾಗೂ ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆದು ಈ ಭಾಗದ ರೈತರು ಮತ್ತಷ್ಟು ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ಗ್ರಾಮೀಣ ಪ್ರದೇಶದ ಜನತೆಗೂ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ತಾಲ್ಲೂಕಿನಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದ್ದು ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಾಪುರ ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಚಿಕ್ಕಪಾಪನಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆಯನ್ನು ನೆರವೇರಿಸಲಾಯಿತು.
ಕುಂದಲಗುರ್ಕಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆಂಜಿನಪ್ಪ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಾರಪ್ಪ, ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಘುನಾಥ್, ಮುಖಂಡರಾದ ಕೆ.ಮಂಜುನಾಥ್, ಹರಿಬಾಬು, ರವಿಕುಮಾರ್, ಅಶ್ವತ್ಥಪ್ಪ, ಜಿ.ಟಿ.ನಾರಾಯಣಸ್ವಾಮಿ, ಶಿಡ್ಲಘಟ್ಟ ಶಿಬಿರ ಘಟಕದ ಉಪ ವ್ಯವಸ್ಥಾಪಕ ಹನುಮಂತರಾವ್ ಹಾಜರಿದ್ದರು.
ಕಾಂಗ್ರೆಸ್ ಪಕ್ಷದಿಂದ 'ನಮ್ಮ ವಾರ್ಡ್ ನಮ್ಮ ಜವಾಬ್ದಾರಿ' ಕಾರ್ಯಕ್ರಮಕ್ಕೆ ಚಾಲನೆ
ಶಿಡ್ಲಘಟ್ಟ ನಗರದ 20ನೇ ವಾರ್ಡಿನಲ್ಲಿ ‘ನಮ್ಮ ವಾರ್ಡ್ ನಮ್ಮ ಜವಾಬ್ದಾರಿ’ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕಾಂಗ್ರೆಸ್ ಕಾರ್ಯಕರ್ತರು ತಮ್ಮ ವಾರ್ಡ್‌ಗಳಲ್ಲಿನ ಜನರಿಗೆ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಚಿಲಕಲನೇರ್ಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಶಶಿಧರ್ ಕಾರ್ಯಕರ್ತರಿಗೆ ತಿಳಿಸಿದರು.
ಪ್ರತಿಯೊಬ್ಬರೂ ಮತ ಚಲಾಯಿಸಬೇಕು ಎಂಬ ಅರಿವನ್ನು ಮೂಡಿಸುತ್ತಾ ಜನರಲ್ಲಿ ಕಾಂಗ್ರೆಸ್ ಸರ್ಕಾರದ ಕಾರ್ಯ ಯೋಜನೆಗಳ ಬಗ್ಗೆ ಅರಿವು ಮೂಡಿಸಬೇಕು. ನಮ್ಮ ಕ್ಷೇತ್ರಕಕೆ, ಅವರವರ ವಾರ್ಡ್‌ಗಳಿಗೆ ಅಗತ್ಯತೆಗಳನ್ನು ಪೂರೈಸಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿರುವ ಸಂಗತಿಯನ್ನು ಮನವರಿಕೆ ಮಾಡಿಕೊಡಬೇಕು. ಜನರ ಬಳಿ ಹೋಗಿ ಕಾರ್ಯಕರ್ತರು ಮಾತನಾಡಿದಾಗ ಮಾತ್ರ ವಿಶ್ವಾಸ ಮೂಡುತ್ತದೆ. ನಗರದ ಕಾಂಗ್ರೆಸ್ ಕಾರ್ಯಕರ್ತರು ಅವರವರ ವಾರ್ಡ್‌ಗಳಲ್ಲಿ ‘ನಮ್ಮ ವಾರ್ಡ್ ನಮ್ಮ ಜವಾಬ್ದಾರಿ’ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಎಸ್.ಯಾಸ್ಮೀನ್ ತಾಜ್, ಮಹಬೂಬ್ ಪಾಷ, ಅಮ್ಜದ್‌ನವಾಜ್, ಹಫೀಜುಲ್ಲಾ, ಗುಡಿಹಳ್ಳಿ ಚಂದ್ರು, ರಾಜ್‌ಕುಮಾರ್, ಗಫೂರ್ ಹಾಜರಿದ್ದರು.
ಕೇಶವಾರದ ಕೆ.ಎಸ್.ನವೀನ್ ಕುಮಾರ್ ಅವರಿಗೆ ಉತ್ತಮ ಸ್ವಯಂ ಸೇವಕರ ರಾಜ್ಯ ಪ್ರಶಸ್ತಿ
ಶಿಡ್ಲಘಟ್ಟ ತಾಲ್ಲೂಕಿನ ಕೇಶವಾರದ ಕೆ.ಎಸ್.ನವೀನ್ ಕುಮಾರ್ ಅವರಿಗೆ ೨೦೧೬-–೨೦೧೭ನೇ ಸಾಲಿನ ಉತ್ತಮ ಸ್ವಯಂ ಸೇವಕರ ರಾಜ್ಯ ಪ್ರಶಸ್ತಿಯನ್ನು ಯುವಸಬಲೀಕರಣ ಇಲಾಖೆ ಸಚಿವ ಪ್ರಮೋದ್ ಮಧ್ವರಾಜ್ ಅವರು ಬೆಂಗಳೂರಿನ ಗುರುನಾನಕ್ ಭವನದಲ್ಲಿ ನೀಡಿ ಗೌರವಿಸಿದರು.
ಕಂದಾಯ ಇಲಾಖೆ ಹಾಗು ಭೂ ಸಕ್ರಮೀಕರಣ ಸಮಿತಿಯಿಂದ ಸಾಗುವಳಿ ಚೀಟಿ ವಿತರಣಾ ಕಾರ್ಯಕ್ರಮ
ಕಳೆದ ಕೆಲ ದಶಕಗಳಿಂದ ಸರ್ಕಾರಿ ಭೂಮಿಯಲ್ಲಿ ಶ್ರಮವಹಿಸಿ ಉಳುಮೆ ಮಾಡಿಕೊಂಡು ಬರುತ್ತಿದ್ದ ರೈತರ ಜೀವನೋಪಾಯಕ್ಕಾಗಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸಾಗುವಳಿ ಚೀಟಿ ವಿತರಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಸರ್ಕಾರದಿಂದ ಮಂಜೂರಾದಂತಹ ಭೂಮಿಯನ್ನು ರೈತರು ಮಾರಾಟ ಮಾಡಬಾರದು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಕಂದಾಯ ಇಲಾಖೆ ಹಾಗು ಭೂ ಸಕ್ರಮೀಕರಣ ಸಮಿತಿಯಿಂದ ಆಯೋಜಿಸಲಾಗಿದ್ದ ಸಾಗುವಳಿ ಚೀಟಿ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಗರ್‌ಹುಕುಂ ಫಲಾನುಭವಿಗಳು ಹಿಂದಿನಿಂದಲೂ ಭೂಮಿಯನ್ನೇ ನಂಬಿ ಜೀವನ ನಡೆಸುತ್ತಿದ್ದು ಇವರ ಕಲ್ಯಾಣಕ್ಕಾಗಿ ಸರ್ಕಾರ ಅವರಿಗೆ ಭೂಮಿ ಮಂಜೂರು ಮಾಡಿ ಸಾಗುವಳಿ ಚೀಟಿ ನೀಡುವ ಮೂಲಕ ಬಲವರ್ಧನೆ ಮಾಡುತ್ತಿದೆ. ಸರ್ಕಾರದಿಂದ ಮಂಜೂರಾದಂತಹ ಜಮೀನಿನಲ್ಲಿ ಉತ್ತಮ ಕೃಷಿ ಮಾಡುವ ಮೂಲಕ ಸರ್ಕಾರದ ಮತ್ತಷ್ಟು ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ತಹಸೀಲ್ದಾರ್ ಎಸ್.ಅಜಿತ್‌ಕುಮಾರ್ ರೈ ಮಾತನಾಡಿ, ಸರ್ಕಾರದಿಂದ ಮಂಜೂರಾದಂತಹ ಜಮೀನಿನಲ್ಲಿ ಸರ್ಕಾರ ನಿಷೇಧಿಸಿರುವ ಬೆಳೆಗಳಾದ ಗಾಂಜಾ, ಅಫೀಮು ಸೇರಿದಂತೆ ನೀಲಗಿರಿಯಂತಹ ಬೆಳೆ ಬೆಳೆಯಬಾರದು. ರೈತರಿಗೆ ಸರ್ಕಾರಿ ಭೂಮಿ ಮಂಜೂರು ಮಾಡುವ ಅಧಿಕಾರ ಇರುವ ಹಾಗೆಯೇ ನಿಷೇಧಿತ ಬೆಳೆ ಬೆಳೆದರೆ ಜಮೀನನ್ನು ವಾಪಸ್ಸು ಪಡೆಯುವ ಅಧಿಕಾರವೂ ಸರ್ಕಾರಕ್ಕೆ ಇರುತ್ತದೆ. ಹಾಗಾಗಿ ಸರ್ಕಾರದಿಂದ ಮಂಜೂರಾಗಿರುವ ಜಮೀನಿನಲ್ಲಿ ಉತ್ತಮ ಕೃಷಿ ಮಾಡಿ ಎಲ್ಲರೂ ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ಈ ಸಂದರ್ಭದಲ್ಲಿ ಪರಿಶಿಷ್ಠ ಜಾತಿ ಹಾಗೂ ಪಂಗಡದ ೮೧ ಮಂದಿ ಹಾಗು ಸಾಮಾನ್ಯ ೫೬ ಮಂದಿ ಸೇರಿದಂತೆ ಒಟ್ಟು ೧೩೭ ಜನರಿಗೆ ಸುಮಾರು ೨೪೬.೩೮ ಎಕರೆ ಜಮೀನು ಮಂಜೂರು ಮಾಡಿದ ಸಾಗುವಳಿ ಚೀಟಿಗಳನ್ನು ವಿತರಿಸಲಾಯಿತು.
ಪ್ರಭಾರಿ ತಹಸೀಲ್ದಾರ್ ಮಮತಾಕುಮಾರಿ, ಗ್ರೇಡ್ ೨ ತಹಸೀಲ್ದಾರ್ ಮುನಿಕೃಷ್ಣಪ್ಪ, ಭೂ ಸಕ್ರಮೀಕರಣ ಸಮಿತಿಯ ಸದಸ್ಯರಾದ ಅಶ್ವತ್ಥನಾರಾಯಣರೆಡ್ಡಿ, ಪ್ರಮೀಳ ವೆಂಕಟೇಶ್, ಕೃಷ್ಣಪ್ಪ ಹಾಜರಿದ್ದರು.
ಪ್ರಗತಿಪರ ನೂಲು ಬಿಚ್ಚುವವರ ಕೈಗಾರಿಕಾ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರ ಚುನಾವಣೆ ಮುಂದೂಡಿದೆ
ಮಾರ್ಚ್ ೧೧ ರಂದು ನಡೆಯಬೇಕಿದ್ದ ನಗರದ ಪ್ರಗತಿಪರ ನೂಲು ಬಿಚ್ಚುವವರ ಕೈಗಾರಿಕಾ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರ ಚುನಾವಣೆ ಕಾರಣಾಂತರದಿಂದ ಮುಂದೂಡಲಾಗಿದೆ.
ಕಳೆದ ಕೆಲ ವರ್ಷಗಳಿಂದ ಸ್ಥಗಿತಗೊಂಡಿದ್ದ ಸಹಕಾರ ಸಂಘವನ್ನು ಮತ್ತೇ ಸ್ಥಾಪಿಸುವ ಉದ್ದೇಶದಿಂದ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಅಧಿಕಾರಿಗಳೂ ಸೇರಿದಂತೆ ಸಹಕಾರ ಸಂಘದ ಕೆಲ ಷೇರುದಾರರು ನೂತನ ಆಡಳಿತ ಮಂಡಳಿ ಸದಸ್ಯರ ಆಯ್ಕೆ ಮಾಡಲು ಚುನಾವಣೆ ನಡೆಸಲು ತೀರ್ಮಾನಿಸಿದ್ದರು. ಇದಕ್ಕೆ ಸಂಬಂದಿಸಿದಂತೆ ಚುನಾವಣಾ ವೇಳಾಪಟ್ಟಿ ರಚಿಸಿ ಅದರಂತೆ ಮಾರ್ಚ್ ೫ ರಂದು ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ದಿನಾಂಕ ನಿಗದಿಪಡಿಸಲಾಗಿತ್ತು.
ಅದರಂತೆ ಕೆಲವರು ನಾಮಪತ್ರ ಸಲ್ಲಿಸಲು ಮುಂದಾದಾಗ ಕೆಲವರು ಕಚೇರಿಗೆ ನುಗ್ಗಿ ಚುನಾವಣೆ ನಡೆಯುವ ಬಗ್ಗೆ ಬಹುತೇಕ ಷೇರುದಾರರಿಗೆ ಮಾಹಿತಿಯಿಲ್ಲ ಹಾಗಾಗಿ ಚುನಾವಣೆ ದಿನಾಂಕವನ್ನು ಮುಂದೂಡಿ ಎಂದು ಒತ್ತಾಯಿಸಿದರು. ನಿಯಮದಂತೆ ಮಾರ್ಚ್ ೫ ಒಂದು ದಿನ ಮಾತ್ರ ನಾಮಪತ್ರ ಸಲ್ಲಿಸಲು ಅವಕಾಶವಿದ್ದು ನಾಮಪತ್ರ ಪರಿಶೀಲನೆ ಹಾಗೂ ನಾಮಪತ್ರ ಹಿಂಪಡೆಯಲು ಮಾರ್ಚ್ ೭ ರವರೆಗೂ ಅವಕಾಶವಿದ್ದು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವವರೆಗೂ ನಾಮಪತ್ರ ಸಲ್ಲಿಸಲು ಅವಕಾಶ ಮಾಡಿಕೊಡುವುದಾಗಿ ಅಧಿಕಾರಿಗಳು ಹೇಳಿದ್ದರು. ಮಾರ್ಚ್ ೬ ರಂದು ಸಹ ಕೆಲವರು ನಾಮಪತ್ರ ಸಲ್ಲಿಸಿದ್ದರು.
ಅರ್ಹ ಅಭ್ಯರ್ಥಿಗಳ ಅಂತಮ ಪಟ್ಟಿ ಪ್ರಕಟಣೆ ಸೇರಿದಂತೆ ಅಭ್ಯರ್ಥಿಗಳಿಗೆ ಚುನಾವಣೆ ಚಿಹ್ನೆಗಳನ್ನು ನೀಡಲು ಬುಧವಾರ ಸಹಕಾರ ಸಂಘದ ಕಚೇರಿಯಲ್ಲಿ ಅಧಿಕಾರಿಗಳು ಸೇರಿದಾಗ ಒಂದು ಗುಂಪಿನವರು ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ತಯಾರಿಸುವ ಮುನ್ನ ಷೇರುದಾರರ ಲೆಡ್ಜರ್ ಪುಸ್ತಕದಲ್ಲಿ ನಾಲ್ಕು ನಕಲಿ ಷೇರುದಾರರ ಹೆಸರಿರುವ ಅನುಮಾನವಿದೆ. ಹಾಗಾಗಿ ಲೆಡ್ಜರ್ ಪುಸ್ತಕದಲ್ಲಿರುವ ಹೆಸರುಗಳನ್ನು ಪರಿಶೀಲಿಸಿ ನಂತರ ಅಭ್ಯರ್ಥಿ ಆಯ್ಕೆ ಮಾಡಬೇಕು ಎಂದು ಪಟ್ಟುಹಿಡಿದರು.
ಮತ್ತೊಂದು ಗುಂಪಿನ ಸದಸ್ಯರು ಹಾಲಿ ಇರುವ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸಿ ಇಲ್ಲವಾದಲ್ಲಿ ಚುನಾವಣೆ ಮುಂದೂಡಿ ಎಂದು ಪಟ್ಟು ಹಿಡಿಯುವ ಮೂಲಕ ಪರಸ್ಪರ ಮಾತಿಗೆ ಮಾತು ಬೆಳೆಸಿಕೊಂಡಾಗ ಅಧಿಕಾರಿಗಳು ಕೆಲ ಕಾಲ ಸುಮ್ಮನೆ ಕೂರುವಂತಾಯಿತು. ನಂತರ ಎರಡೂ ಗುಂಪಿನ ಮುಖಂಡರೊಂದಿಗೆ ಚರ್ಚಿಸಿ ಸದ್ಯಕ್ಕೆ ಚುನಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಇಂದಿನ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ ನಂತರ ಏನು ಮಾಡಬೇಕು ಎನ್ನುವುದನ್ನು ನಿರ್ಧರಿಸಲಾಗುವುದು ಎಂದು ಹೇಳಿ ಅಧಿಕಾರಿಗಳು ಅಲ್ಲಿಂದ ಹೊರಟರು.
ಚುನಾವಣಾಧಿಕಾರಿ ಎಚ್.ಓಬಳೇಶ್, ನಗರಸಭೆ ಮಾಜಿ ಅಧ್ಯಕ್ಷ ಅಪ್ಸರ್ಪಾಷ, ಮುಖಂಡರಾದ ಕದಿರಿಯೂಸುಫ್, ಬಾಂಬ್ ಸಮೀ, ಸೈಯ್ಯದ್, ಆದಿಲ್ಪಾಷ, ಲಕ್ಷ್ಮಿನಾರಾಯಣ ಹಾಜರಿದ್ದರು.
ಭಕ್ತರಹಳ್ಳಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಗ್ರಾಮಸ್ಥರ ಆರೋಗ್ಯದ ದೃಷ್ಟಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ರೂಪಿಸುತ್ತಿರುವುದು ಸ್ವಾಗತಾರ್ಹ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಂ.ಗೋಪಾಲಗೌಡ ತಿಳಿಸಿದರು.
ಭಕ್ತರಹಳ್ಳಿ ಗ್ರಾಮ ಪಂಚಾಯಿತಿ, ವಿಜಯಪುರ ಪ್ರಗತಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಎಚ್.ಡಿ.ಡಿ ಹಾಗೂ ಜೆ.ಪಿ.ಎನ್ ಟ್ರಸ್ಟ್ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ, ನೇತ್ರ ತಪಾಸಣಾ ಶಿಬಿರ ಮತ್ತು ರೆಡ್ ಕ್ರಾಸ್ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ಗ್ರಾಮಸ್ಥರು ಮನೆಯ ಒಳಾಂಗಣ ಹೊರಾಂಗಣದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಂಡು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲವಾದಲ್ಲಿ ಅನೇಕ ರೋಗ ರುಜಿನಗಳಿಂದ ಬಳಲಬೇಕಾಗುತ್ತದೆ. ಆದ್ದರಿಂದ ಸ್ವಚ್ಛತೆ ಆರೋಗ್ಯ ಎರಡೂ ಮುಖ್ಯ. ಗ್ರಾಮಸ್ಥರು ಶಿಬಿರದ ಸದುಪಯೋಗ ಪಡೆದುಕೊಂಡು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದರು.
ಕಣ್ಣಿನ ತಪಾಸಣೆಗೊಳಗಾದವರಿಗೆ ಉಚಿತವಾಗಿ ಕನ್ನಡಕಗಳನ್ನು ಎಚ್.ಡಿ.ಡಿ ಹಾಗೂ ಜೆ.ಪಿ.ಎನ್ ಟ್ರಸ್ಟ್ ವತಿಯಿಂದ ನೀಡಲಾಯಿತು. 52 ಯೂನಿಟ್ ರಕ್ತ ಸಂಗ್ರಹಣೆ ಮಾಡಲಾಯಿತು.
ಮುನಿರಾಜು, ಬಿ.ಎನ್.ಶಿವಮೂರ್ತಿ, ಕೇಶವಮೂರ್ತಿ, ರಘುರಾಜ್, ಚನ್ನೇಗೌಡ, ಬಿ.ಆರ್.ಮಂಜುನಾಥ್, ಮಿಥುನ್, ಆನಂದ್ಕುಮಾರ್, ಶಿಬಿರಾಧಿಕಾರಿ ಆರ್.ಶೆಟ್ಟಿನಾಯಕ್ ಹಾಜರಿದ್ದರು.
ಕೆ.ಎಸ್.ಪುಟ್ಟಣ್ಣಯ್ಯನವರ ಸ್ಮರಣಾರ್ಥವಾಗಿ ‘ತಿಥಿ ಬಿಡಿ, ಸಸಿ ನಡಿ’ ಕಾರ್ಯಕ್ರಮ
ಕೆ.ಎಸ್.ಪುಟ್ಟಣ್ಣಯ್ಯನವರ ಸ್ಮರಣಾರ್ಥವಾಗಿ ‘ತಿಥಿ ಬಿಡಿ, ಸಸಿ ನಡಿ’ ಕಾರ್ಯಕ್ರಮ ಹಾಗೂ ರೈತರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ತಾಲ್ಲೂಕು ಕಚೇರಿ ಮುಂದೆ ‘ಪ್ರತಿಭಟನಾ ಕಾರ್ಯಕ್ರಮ’ ವನ್ನು ಮಾರ್ಚ್ 12 ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಂಡಿರುವುದಾಗಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ. ರವಿಪ್ರಕಾಶ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ರೈತ ಸಂಘದ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ಹಲವು ಹಕ್ಕೊತ್ತಾಯಗಳಿವೆ. ತಾಲ್ಲೂಕಿನಾದ್ಯಂತ ಕೆರೆಗಳಲ್ಲಿನ ಜಾಲಿ ಮರಗಳನ್ನು ತೆಗೆಸಬೇಕು. ರಾಜಕಾಲುವೆಗಳನ್ನು ತೆರವುಗೊಳಿಸಬೇಕು. ಕೆರೆಗಳ ಹೂಳು ತೆಗೆಸಿ ಒತ್ತುವರಿಯನ್ನು ತೆರವುಗೊಳಿಸಬೇಕು. ರೈತರ ವಿಮೆಯ ಬಾಕಿ ಹಣವನ್ನು ತಕ್ಷಣ ನೀಡಬೇಕು. ಸಾಗುವಳಿ ಚೀಟಿಗಳನ್ನು ವಿತರಣೆ ಮಾಡಬೇಕು. ಶಿಡ್ಲಘಟ್ಟದಲ್ಲಿ ಎ.ಪಿ.ಎಂ.ಸಿ.ಮಾರುಕಟ್ಟೆಯನ್ನು ಸ್ಥಾಪಿಸಬೇಕು. ರೈತ ಭವನ ಮಂಜೂರು ಮಾಡಬೇಕು. ಸಮರ್ಪಕವಾಗಿ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಆಗಬೇಕು. ಜನ ಜಾನುವಾರುಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರನ್ನು ಒದಗಿಸಲು ಕ್ರಮವಹಿಸಬೇಕು. ರೇಷ್ಮೆ ಇಲಾಖೆಯಲ್ಲಿ ಹನಿನೀರಾವರಿ ಸಹಾಯಧನ ನೀಡಬೇಕು. ಪ್ಯೂಪದ ದುರ್ವಾಸನೆಯಿಂದ ಸಾಂಕ್ರಾಮಿಕ ರೋಗ ಹರಡುತ್ತಿದ್ದು ಕ್ರಮ ಕೈಗೊಳ್ಳಬೇಕು ಮುಂತಾದ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಲಾಗುತ್ತದೆ ಎಂದು ವಿವರಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಮುನಿಕೆಂಪಣ್ಣ, ಶಂಕರಪ್ಪ, ಮಾರುತಿ, ಅರುಣ್ಕುಮಾರ್, ಭಕ್ತರಹಳ್ಳಿ ಪ್ರತೀಶ್, ಕೋಟೆ ಚನ್ನೇಗೌಡ, ಡಿ.ವಿ.ನಾರಾಯಣಸ್ವಾಮಿ, ಗೋವಿಂದಪ್ಪ, ರಮೇಶ್, ನಟರಾಜ್, ಶ್ರೀಧರ್, ಮುನಿರಾಜು ಹಾಜರಿದ್ದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವೇಕಾನಂದ ರೋವರ್ಸ್ ಘಟಕದ ಉದ್ಘಾಟನೆ
ಸ್ಕೌಟ್ಸ್ ಮತ್ತು ಗೈಡ್ಸ್ ಪಕ್ಷಾತೀತ ಸಂಸ್ಥೆಯಾಗಿದ್ದು, ಜಾತಿ, ಧರ್ಮಗಳನ್ನು ಮೀರಿದ ವೈಚಾರಿಕ ಪ್ರಜ್ಞೆ ಮೂಡಿಸುವ ಸಂಸ್ಥೆಯಾಗಿದೆ. ಇಲ್ಲಿನ ಚಟುವಟಿಕೆಗಳು ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿವೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಚಂದ್ರಾನಾಯಕ್ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಸ್ವಾಮಿ ವಿವೇಕಾನಂದ ರೋವರ್ಸ್ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಸ್ತು ಹಾಗೂ ಸಹನೆ ರೂಢಿಸಿಕೊಳ್ಳಲು ಸ್ಕೌಟ್ಸ್ ಮತ್ತು ಗೈಡ್ಸ್ ಅತ್ಯುತ್ತಮ ವೇದಿಕೆ. ವಿದ್ಯಾರ್ಥಿಗಳನ್ನು ವಿಶ್ವ ಮಾನವರನ್ನಾಗಿ ಸಜ್ಜುಗೊಳಿಸುತ್ತದೆ, ಅವರಲ್ಲಿ ಸೇವಾ ಮನೋಭಾವ ಜಾಗೃತಿಗೊಳಿಸುತ್ತದೆ. ಪ್ರಕೃತಿಯ ಪರಿಸರದಲ್ಲಿ ನಿಂತ ಬೆಟ್ಟ, ಹರಿಯುವ ನದಿ, ಹಾರಾಡುವ ಹಕ್ಕಿ, ಅಡ್ಡಾಡುವ ಪ್ರಾಣಿಗಳು, ಸುಳಿಯುವ ಗಾಳಿ, ಇತ್ಯಾದಿಗಳನ್ನು ನೋಡಿ ಕಲಿಯುವ, ಅವುಗಳೊಡನೆ ಆಡಿ ನಲಿಯುವ ಅವಕಾಶಗಳನ್ನು ಕಲ್ಪಿಸಿಕೊಂಡು ಸ್ಕೌಟ್ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.
ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಡಿ.ಎಸ್.ಮನೋಹರ್ ಮಾತನಾಡಿ, ಯುವಕರು ದೈಹಿಕ, ಬೌದ್ಧಿಕ, ಸಾಮಾಜಿಕ, ದೈವಿಕವಾಗಿ ಪೂರ್ಣ ಪ್ರಮಾಣದ ಉನ್ನತಿಯನ್ನು ಸಾಧಿಸುವುದು, ಅಲ್ಲದೆ ಪ್ರಾದೇಶಿಕ, ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮಟ್ಟದ ಹೊಣೆಗಾರಿಕೆಯುಳ್ಳ ವ್ಯಕ್ತಿಗಳಾಗಿ ರೂಪುಗೊಳ್ಳುವಂತೆ ಮಾಡುವ ಉದ್ದೇಶದಿಂದ ಶಾಲಾ ಕಾಲೇಜುಗಳಲ್ಲಿ ಘಟಕಗಳನ್ನು ಪ್ರಾರಂಭಿಸಲಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಪ್ರಾದೇಶಿಕ ಹಿತದ ಜೊತೆಗೆ, ದೇಶದ ಅಭಿವೃದ್ಧಿಗೆ, ಮತ್ತು ಅಂತರರಾಷ್ಟ್ರೀಯ ಶಾಂತಿ -ಸೌಹಾರ್ದತೆ, ಸಹಬಾಳ್ವೆಗೆ, ಸಹೋದ್ಯೋಗಿಗಳೊಂದಿಗೆ ಗೌರವಯುತ ನಡತೆಗೆ ಮತ್ತು ಜಗತ್ತಿನ ಪ್ರಾಕೃತಿಕ ಪರಿಸರಕ್ಕೆ ಹೊಂದಿಕೊಳ್ಳುವ, ಪರಸ್ಪರ ಸಹಕರಿಸುವ ಬದ್ಧತೆಯನ್ನು ಹೊಂದಿರಬೇಕು ಎಂದು ಹೇಳಿದರು.
ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಎ.ಎಸ್.ಓ.ಸಿ ಎ.ಎಮ್.ಶಂಕರ್, ಜಿಲ್ಲಾ ತರಬೇತಿ ಆಯುಕ್ತ ಸಿ.ಬಿ.ಪ್ರಕಾಶ್, ಹೇಮಾಕುಮಾರಿ, ರೋವರ್ಸ್ ಘಟಕಾಧಿಕಾರಿ ಡಾ.ಮುರಳಿ ಆನಂದ್, ವೆಂಕಟೇಶ್, ರಮೇಶ್, ವೆಂಕಟರಮಣಪ್ಪ, ಶಿವಕುಮಾರ್, ಛಾಯಣ್ಣ ಹಾಜರಿದ್ದರು.
ಭಕ್ತರಹಳ್ಳಿಯ ಬಿ.ಎಂ.ವಿ ವಿದ್ಯಾಸಂಸ್ಥೆಯಲ್ಲಿ ರೋಟರಿ ಇಂಟರಾಕ್ಟ್ ಕ್ಲಬ್‌ನ ಕಾರ್ಯಕ್ರಮ
ಶಾಲೆಯಲ್ಲಿ ರೋಟರಿ ಇಂಟರಾಕ್ಟ್ ಕ್ಲಬ್ ಪ್ರಾರಂಭಿಸುವ ಮೂಲಕ ಮಕ್ಕಳಲ್ಲಿ ಸೇವಾ ಮನೋಭಾವ, ದೇಶಪ್ರೇಮ, ಪರಿಸರ ಕಾಳಜಿ ಮತ್ತು ಇತರರಿಗೆ ಕೊಡುವ ಮನೋಭಾವವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಶ್ಲಾಘನೀಯ ಎಂದು ರೋಟರಿ ಬೆಂಗಳೂರು ಸೆಂಟಿನಿಯಲ್ ಕ್ಲಬ್ ಅಧ್ಯಕ್ಷ ರಮಣನ್ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ ವಿದ್ಯಾಸಂಸ್ಥೆಯಲ್ಲಿ ಈಚೆಗೆ ರೋಟರಿ ಇಂಟರಾಕ್ಟ್ ಕ್ಲಬ್‌ನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೋಟರಿ ಚಟುವಟಿಕೆಗಳಲ್ಲಿ ಎಳೆಯ ವಯಸ್ಸಿನಿಂದಲೇ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಸಾಮರ್ಥ್ಯ ವೃದ್ಧಿ ಹಾಗೂ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ ಎಂದು ಹೇಳಿದರು.
ಬಿ.ಎಂ.ವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ ಮಾತನಾಡಿ, ಬಿ.ಎಂ.ವಿ ವಿದ್ಯಾಸಂಸ್ಥೆಯ ವಿದ್ಯಾರ್ಥೀಗಳು ರೋಟರಿ ಇಂಟರಾಕ್ಟ್ ಕ್ಲಬ್‌ನ ಅಡಿಯಲ್ಲಿ ಕಳೆದ 3 ವರ್ಷಗಳಿಂದ ಪಲ್ಸ್ ಪೋಲಿಯೋ, ಸ್ವಚ್ಛ ಗ್ರಾಮ, ಮುಷ್ಠಿ ತುಂಬಾ ಅಕ್ಕಿ ಮತ್ತು ರಾಗಿ ಯೋಜನೆ, ಕ್ಷಯ, ಕ್ಯಾನ್ಸರ್ ರೋಗಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ವೃದ್ಧಶ್ರಮಗಳಿಗೆ ಬಟ್ಟೆ ವಿತರಿಸುತ್ತಿದ್ದಾರೆ ಎಂದು ಹೇಳಿದರು.
ರೊಟೇರಿಯನ್ ಎನ್.ಟಿ.ಸಾಗರ್ ಮತ್ತು ಎಂ.ಎಸ್.ಮಂಜುನಾಥ್ ಬಿ.ಎಂ.ವಿ.ಪ್ರೌಢಶಾಲೆಗೆ 35 ಕಂಪ್ಯೂಟರ್‌ಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದರು.
ಕಳೆದ ವರ್ಷದ ರೋಟರಿ ಇಂಟರಾಕ್ಟ್ ಕ್ಲಬ್‌ನ ಅಧ್ಯಕ್ಷೆಯಾಗಿದ್ದ 10 ನೇ ತರಗತಿಯ ಕಲ್ಯಾಣಿ ನೂತನವಾಗಿ ಅಧ್ಯಕ್ಷೆಯಾಗಿ ಪದಗ್ರಹಣ ಮಾಡಿದ 9ನೇ ತರಗತಿಯ ಹರ್ಷಿಣಿಗೆ ಕ್ಲಬ್‌ನ ಅಧಿಕಾರವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳು ಮುಷ್ಠಿ ತುಂಬಾ ಅಕ್ಕಿ ಮತ್ತು ರಾಗಿ ಯೋಜನೆಯಲ್ಲಿ ಸಂಗ್ರಹಿಸಿದ್ದ 2 ಕ್ವಿಂಟಾಲ್ ಅಕ್ಕಿ ಮತ್ತು 2 ಕ್ವಿಂಟಾಲ್ ರಾಗಿಯನ್ನು ವಿಜಯಪುರದ ಬಳಿಯ ಸರ್ವೋದಯ ಸೇವಾ ಸಂಸ್ಥೆಯ ವೃದ್ಧಾಶ್ರಮಕ್ಕೆ ನೀಡಿದರು.
ಬಿ.ಎಂ.ವಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಟ್ರಸ್ಟಿ ಎಸ್.ನಾರಾಯಣಸ್ವಾಮಿ, ರೊಟೇರಿಯನ್ ಬಸವರಾಜು, ಮುಖ್ಯಶಿಕ್ಷಕ ಎನ್.ವೆಂಕಟಮೂರ್ತಿ, ಶಿಕ್ಷಕರಅದ ಟಿ.ಜಿ.ವೆಂಕಟೇಶ್, ಉಷಾರಾಣಿ, ಎನ್.ಪಂಚಮೂರ್ತಿ ಹಾಜರಿದ್ದರು.
ಹಾಲು ಉತ್ಪಾದಕರ ಸಹಕಾರ ಸಂಘದ ಮೊದಲನೇ ಅಂತಸ್ತಿನ ಕಟ್ಟಡದ ಉದ್ಘಾಟನೆ
ಬಯಲುಸೀಮೆಯ ರೈತರ ಜೀವನಮಟ್ಟ ಸುಧಾರಣೆಗೆ ಹೈನುಗಾರಿಕೆ ಕಾರಣವಾಗಿದೆ ಎಂದು ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಂತಡಪಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಮೊದಲನೇ ಅಂತಸ್ತಿನ ಕಟ್ಟಡದ ಉದ್ಘಾಟನೆಯನ್ನು ಮಂಗಳವಾರ ನೆರವೇರಿಸಿ ಅವರು ಮಾತನಾಡಿದರು.
ಕಳೆದ ಮೂರು ದಶಕಗಳ ಹಿಂದೆ ಈ ಭಾಗದ ರೈತರ ಉಪಕಸುಬಾಗಿದ್ದ ಹೈನುಗಾರಿಕೆ ಇದೀಗ ಮುಖ್ಯ ಕಸುಬಾಗಿದೆ. ಅವಿಭಜಿತ ಜಿಲ್ಲೆಯಲ್ಲಿ ಇಂದು ಕುಡಿಯುವ ನೀರಿಗೂ ಪರಿತಪಿಸುವ ವಾತಾವರಣ ನಿರ್ಮಾಣವಾಗಿದ್ದು ರೈತರು ಕೃಷಿ ಮಾಡಲಾಗುತ್ತಿಲ್ಲ. ಬಹುತೇಕ ರೈತರು ಮನೆಯಲ್ಲಿ ಒಂದೆರಡು ಹಸುಗಳನ್ನು ಸಾಕಿ ಜೀವನ ನಡೆಸುವಂತಾಗಿದೆ ಎಂದರು.
ಕುಡಿಯುವ ನೀರಿಗೂ ಪರದಾಡುವ ಸ್ಥಿತಿಯಿದ್ದರೂ ಈ ಭಾಗದ ರೈತರು ಅದರಲ್ಲಿಯೂ ಮಾತೆಯರು ಹಾಲಿನ ಉತ್ಪಾದನೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದು ಹಾಲು ಉತ್ಪಾದನೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಕರೆ ನೀಡಿದರು.
ಎಚ್.ಡಿ.ದೇವೇಗೌಡ ಹಾಗೂ ಜಯಪ್ರಕಾಶ್ ನಾರಾಯಣ್ ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ಬಿ.ಎನ್.ರವಿಕುಮಾರ್ ಮಾತನಾಡಿ, ಯಾವುದೇ ಒಂದು ಸಂಘ ಅಭಿವೃದ್ಧಿಯಾಗಬೇಕಾದರೆ ಅದಕ್ಕೆ ಸಂಘದ ಎಲ್ಲಾ ಸದಸ್ಯರೂ ಮತ್ತು ಹಾಲು ಉತ್ಪಾದಕರ ಸಹಕಾರ ಅತ್ಯಗತ್ಯ ಎಂದರು. ಸಹಕಾರ ಸಂಘಗಳಲ್ಲಿ ಯಾವುದೇ ರೀತಿಯ ರಾಜಕೀಯ ಬೆರೆಸದೇ ಸಂಘದ ಏಳಿಗೆಗಾಗಿ ಎಲ್ಲರೂ ಶ್ರಮಿಸಬೇಕು. ಹಾಲು ಉತ್ಪಾದಕರು ಗುಣಮಟ್ಟದ ಹಾಲು ಪೂರೈಸುವುದರೊಂದಿಗೆ ಒಕ್ಕೂಟದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಶಿಡ್ಲಘಟ್ಟ ಕೋಚಿಮುಲ್ ಶಿಬಿರ ಘಟಕದ ಉಪವ್ಯವಸ್ಥಾಪಕ ಹನುಮಂತರಾವ್ ಮಾತನಾಡಿ, ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸುವಂತೆ ಹಾಲು ಉತ್ಪಾದಕರಲ್ಲಿ ಮನವಿ ಮಾಡಿದರು. ಕಾಲ ಕಾಲಕ್ಕೆ ರಾಸುಗಳಿಗೆ ಲಸಿಕೆ ಹಾಕಿಸಬೇಕೆಂದು ಹೇಳಿದರು.
ಮುಖಂಡ ದೊಣ್ಣಹಳ್ಳಿ ರಾಮಣ್ಣ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚೀಮನಹಳ್ಳಿ ಸಿ.ಎಂ.ಗೋಪಾಲ್ ಮತ್ತಿತರರು ಮಾತನಾಡಿದರು.
ಈ ಸಂದರ್ಭದಲ್ಲಿ ಎಚ್.ಡಿ.ಡಿ ಹಾಗೂ ಜೆ.ಪಿ.ಎನ್ ಟ್ರಸ್ಟ್ ವತಿಯಿಂದ ವಿಕಲಚೇತನರಿಗೆ ಸಾಧನಾ ಸಲಕರಣೆ ವಿತರಿಸಲಾಯಿತು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿ.ನಾಗರಾಜ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಸದಸ್ಯ ರಾಜಶೇಖರ್, ಮುಖಂಡರಾದ ತುಮ್ಮನಹಳ್ಳಿ ರಾಮಕೃಷ್ಣಪ್ಪ, ಗೊರಮಡುಗು ರಾಮಾಂಜಿನಪ್ಪ, ತಾದೂರುರಘು, ಶ್ರೀನಿವಾಸಗೌಡ, ಜೆ.ಎಂ.ವೆಂಕಟೇಶ್, ಸಂಘದ ಅಧ್ಯಕ್ಷ ಸಿ.ಎಂ.ಮಾರೇಗೌಡ, ವಿಸ್ತರಣಾಧಿಕಾರಿ ಎಂ.ಬಿ.ಮಂಜುನಾಥ್ ಹಾಜರಿದ್ದರು.
ವಿಸ್ಡಂ ವಿದ್ಯಾ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಸಮಾರಂಭ
ರೇಷ್ಮೆ ಕೆಲಸ ಮಾಡುವ ಕಾರ್ಮಿಕರೇ ಹೆಚ್ಚಾಗಿರುವ ಪ್ರದೇಶದಲ್ಲಿ ಶಾಲೆಯನ್ನು ನಡೆಸುತ್ತಾ ಮಕ್ಕಳಿಗೆ ಉತ್ತಮ ವಿದ್ಯೆ, ಸಂಸ್ಕಾರ, ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯ ಎಂದು ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್ ತಿಳಿಸಿದರು.
ನಗರದ ಹೊರವಲಯದ ಗಾಂಧಿನಗರದಲ್ಲಿನ ವಿಸ್ಡಂ ವಿದ್ಯಾ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಸಮಾರಂಭ ಹಾಗೂ ಚಿಣ್ಣರ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಲ್ಲಿ ಆಗಾದವಾದ ಶಕ್ತಿ ಅಡಗಿದ್ದು ಶಾಲಾ ವಾರ್ಷಿಕೋತ್ಸವ ಮಕ್ಕಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದೆ. ಬಾಲ್ಯದಲ್ಲೆ ಮಕ್ಕಳ ಪ್ರತಿಭೆಗೆ ತಕ್ಕಂತೆ ಪ್ರೋತ್ಸಾಹ ನೀಡಿ ದೇಶದ ಉತ್ತಮ ಸಾಧಕರಾಗಿ ಬೆಳೆಯುವಂತೆ ಮಾಡಬೇಕು. ಜಗತ್ತಿನ ಎಲ್ಲ ಮಕ್ಕಳ ಬುದ್ಧಿಶಕ್ತಿ ಸಮಾನವಾಗಿರುತ್ತದೆ. ಶಿಕ್ಷಕರು, -ಪಾಲಕರು ಅವರ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ಒದಗಿಸಿ ಉತ್ತಮ ಪ್ರಜೆಯನ್ನಾಗಿ ಮಾಡಬೇಕು. ಮನೆಯಲ್ಲಿ ಪಾಲಕರು ಟಿವಿಯಿಂದ ಹೊರ ಬಂದು ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಿಕೊಡಬೇಕು. ಮಕ್ಕಳಿಗೆ ಎಲ್ಲವನ್ನು ಕೊಟ್ಟು ಕಲಿಕೆಗೆ ಉತ್ತಮ ವಾತಾವರಣ ಇರದಿದ್ದಲ್ಲಿ ಮಕ್ಕಳು ವಿದ್ಯಾವಂತರಾಗುವುದಿಲ್ಲ ಎಂದು ಹೇಳಿದರು.
ವಿದ್ಯಾರ್ಥಿಗಳು ವಿವಿಧ ನೃತ್ಯ, ಸಂಗೀತ ಪ್ರದರ್ಶಿಸಿ ಪೋಷಕರು ಮತ್ತು ಪ್ರೇಕ್ಷಕರು ಮೆಚ್ಚುವಂತೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಾಲೆಯ ನಿವೇಶನಕ್ಕೆ ಸಹಕಾರ ನೀಡಿರುವ ಗುಲಾಬ್ ಜಾನ್ ಅವರನ್ನು ಸನ್ಮಾನಿಸಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಶ್ರೀನಿವಾಸರೆಡ್ಡಿ, ತನ್ವೀರ್ ಪಾಷ, ರೇಷ್ಮೆ ಇಲಾಖೆಯ ಧರಣಯ್ಯ, ವಿಸ್ಡಂ ವಿದ್ಯಾ ಸಂಸ್ಥೆಯ ಅಧ್ಯಕ್ಷ ವಿ.ನಾಗರಾಜ್, ಕಾರ್ಯದರ್ಶಿ ಟಿ.ಎ.ಮಾಲಾನಾಗರಾಜ್ ಹಾಜರಿದ್ದರು.
ಅಧ್ಯಯನ ಪ್ರವಾಸಕ್ಕೆ ಮಹಾರಾಷ್ಟ್ರ ಹೊರಟ ಮಾವು ಬೆಳೆಗಾರರು
ಮಾವು ಮತ್ತು ತೋಟಗಾರಿಕಾ ಬೆಳೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮಾವು ಅಭಿವೃದ್ಧಿ ನಿಗಮದಿಂದ ಮಾವು ಬೆಳೆಗಾರರನ್ನು ಮಹಾರಾಷ್ಟ್ರಕ್ಕೆ ಅಧ್ಯಯನ ಪ್ರವಾಸಕ್ಕೆ ಕಳುಹಿಸಿಕೊಡಲಾಗುತ್ತಿದೆ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.
ನಗರದ ಹೊರವಲಯದ ರೇಷ್ಮೆ ಇಲಾಖೆಯ ಕಚೇರಿಯ ಬಳಿ ಮಂಗಳವಾರ ಅಧ್ಯಯನ ಪ್ರವಾಸಕ್ಕೆ ಹೊರಟ ರೈತರನ್ನು ಬೀಳ್ಕೊಡುತ್ತಾ ಅವರು ಮಾತನಾಡಿದರು.
ಶಿಡ್ಲಘಟ್ಟ ತಾಲ್ಲೂಕಿನಿಂದ 23 ಮಂದಿ ಮಾವು ಬೆಳೆಗಾರರು ಹೊರಟಿದ್ದಾರೆ. ಜಿಲ್ಲೆಯಾಧ್ಯಂತ ಒಟ್ಟು 40 ಮಂದಿ ಹೊರ ರಾಜ್ಯಕ್ಕೆ ಹೊರಟಿದ್ದು, ಅಲ್ಲಿನವರು ಕಂಡುಕೊಂಡ ಹೊಸ ವಿಷಯಗಳನ್ನು ತಿಳಿದುಕೊಂಡು ಬಂದು ನಮ್ಮಲ್ಲಿ ಅಳವಡಿಸಿಕೊಳ್ಳಬೇಕಿದೆ. ಪ್ರವಾಸದ ಉದ್ದೇಶ ನಮ್ಮಲ್ಲಿ ಮಾವು ಬೆಳೆಗಾರರು ಆರ್ಥಿಕವಾಗಿ ಸಬಲರಾಗಬೇಕು ಎಂಬುದಾಗಿದೆ ಎಂದು ಹೇಳಿದರು.
ಮಾವು ಅಭಿವೃದ್ಧಿ ಕೇಂದ್ರದ ಅಧಿಕಾರಿ ಗಾಯಿತ್ರಿ ಮಾತನಾಡಿ, ಮಹಾರಾಷ್ಟ್ರದ ಪ್ರಮುಖ ನಾಲ್ಕು ಮಾವು ಸಂಶೋಧನಾ ಕೇಂದ್ರಗಳಿಗೆ ರೈತರನ್ನು ಕರೆದುಕೊಂಡು ಹೋಗಲಾಗುತ್ತಿದೆ. ಅಲ್ಲಿ ತಳಿಯ ಉತ್ಪಾದನೆಯಿಂದ ಹಿಡಿದು ಹಣ್ಣಿನ ವಿವಿಧ ಉತ್ಪನ್ನಗಳವರೆಗೂ ತಂತ್ರಜ್ಞಾನದ ತಿಳುವಳಿಗೆ ಪಡೆಯಬಹುದು. ಈ ಕಲಿಕೆಯಿಂದ ಮಾವು ಬೆಳೆಗಾರರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.
ತೋಟಗಾರಿಕಾ ಸಹಾಯಕ ನಿರ್ದೇಶಕ ಮುನೇಗೌಡ, ಅಧಿಕಾರಿಗಳಾದ ಆನಂದ್, ಗೀತಾ, ರೈತಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಮುನಿನಂಜಪ್ಪ, ಎಸ್.ಎಂ.ನಾರಾಯಣಸ್ವಾಮಿ, ಟಿ.ಕೃಷ್ಣಪ್ಪ, ಅಂಬರೀಷ್, ಮೂರ್ತಿ, ನಾರಾಯಣಸ್ವಾಮಿ ಹಾಜರಿದ್ದರು.
ಭೂಮಿ ಒತ್ತುವರಿಯೂ ಮಾನವ ಹಕ್ಕುಗಳ ಉಲ್ಲಂಘನೆ
ಕೆರೆಯ ಅಂಗಳ, ಸ್ಮಶಾನ ಭೂಮಿ, ಅರಣ್ಯ ಭೂಮಿಗಳ ಒತ್ತುವರಿಯೂ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ದಬ್ಬಾಳಿಕೆ, ಬಾಲ್ಯವಿವಾಹದಂತಹ ಪಿಡುಗುಗಳನ್ನು ತೊಲಗಿಸಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕಾದಂತಹ ಹೊಣೆಗಾರಿಕೆ ಪ್ರತಿಯೊಬ್ಬ ನಾಗರೀಕರ ಮೇಲಿದೆ ಎಂದು ಮಾನವ ಹಕ್ಕುಗಳ ಜಾಗೃತಿ ಸಮಿತಿಯ ರಾಜ್ಯಾಧ್ಯಕ್ಷ ಡಾ.ಸಮೇತನಹಳ್ಳಿ ಲಕ್ಷ್ಮಣ್ಸಿಂಗ್ ಹೇಳಿದರು.
ನಗರದ ಕೋಟೆ ವೃತ್ತದಲ್ಲಿ ಮಾನವ ಹಕ್ಕುಗಳ ಜಾಗೃತಿ ಸಮಿತಿಯ ದ್ವಿತೀಯ ವರ್ಷದ ತಾಲ್ಲೂಕು ಸಮಾವೇಶದ ಅಂಗವಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು ವಿಚಾರಣ ಸಂಕಿರಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮಾನವ ಹಕ್ಕುಗಳ ಬಗ್ಗೆ ನಾಗರಿಕರಿಗೆ ನಿಖರವಾದ ಮಾಹಿತಿಯಿಲ್ಲದ ಕಾರಣ ಮಕ್ಕಳು, ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದೆ. ಮಾನವೀಯತೆ ಕಣ್ಮರೆಯಾಗುತ್ತಿದೆ. ಪ್ರತಿಯೊಬ್ಬ ಹೆಣ್ಣು ಮಗುವೂ ಶಿಕ್ಷಣ ಪಡೆಯಬೇಕು. ಆಗ ಮಾತ್ರ ಸಮಾಜದಲ್ಲಿ ಪರಿವರ್ತನೆ ಕಾಣಲು ಸಾಧ್ಯವಾಗುತ್ತದೆ ಎಂದರು.
ತಾಲ್ಲೂಕು ಮಾನವ ಹಕ್ಕುಗಳ ಜಾಗೃತಿ ಸಮಿತಿಯ ಸಂಘಟನೆ ಜನಪರವಾಗಿ ಕೆಲಸ ಮಾಡಬೇಕು. ಯಾವುದೇ ಆಸೆ ಆಮಿಷಗಳಿಗೆ ಒಳಗಾಗಿ ಯಾರ ಮೇಲೂ ಒತ್ತಡಗಳನ್ನು ಹೇರದಂತೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ತಾಲ್ಲೂಕಿನಲ್ಲಿ ಯಾವುದೇ ಮಾನವ ಹಕ್ಕುಗಳ ಉಲ್ಲಂಘನೆಯಾದಾಗ ಅವರಿಗೆ ಬೆನ್ನೆಲುಬಾಗಿ ನಿಲ್ಲುವ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.
ನಗರಸಭೆ ಆಯುಕ್ತ ಚಲಪತಿ, ಸದಸ್ಯ ಕೇಶವಮೂರ್ತಿ, ಮಾನವ ಹಕ್ಕುಗಳ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ ಜಾತವಾರ ರಾಮಕೃಷ್ಣಪ್ಪ, ತಾಲ್ಲೂಕು ಅಧ್ಯಕ್ಷ ಎನ್.ವಿಜಯ್, ಗೌರವಾಧ್ಯಕ್ಷ ರಾಮಕೃಷ್ಣಪ್ಪ, ಉಪಾಧ್ಯಕ್ಷರಾದ ಕೆ.ಎಂ.ಮೂರ್ತಿ, ವಿ.ದೇವರಾಜ್, ಕಾರ್ಯದರ್ಶಿ ಸುರೇಶ್, ಮಹಿಳಾ ಘಟಕದ ಅಧ್ಯಕ್ಷೆ ಸವಿತಾ, ಪ್ರದೀಪ್, ದೀಪು, ಕೆ.ಆರ್.ಪುರಂ ಕಾರ್ಮಿಕ ಸಮಿತಿ ಅಧ್ಯಕ್ಷ ಜಗದೀಶ್, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಮಡಿವಾಳ ಸಂಘದ ಅಧ್ಯಕ್ಷ ಮುರಳೀಧರ್, ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಎಸ್.ಯಾಸ್ಮೀನ್ ತಾಜ್, ಸುಧಾಕರ್, ಶಿವಕುಮಾರಗೌಡ, ಮೌಲಾ ಹಾಜರಿದ್ದರು.

