ಗ್ರಾಮ ಪಂಚಾಯಿತಿ ಸ್ಥಿರಾಸ್ತಿ ಹಾಗೂ ಚರಾಸ್ತಿಗಳನ್ನು ಕಾಪಾಡುವುದೂ ಹಾಗೂ ಗ್ರಾಮ ಪಂಚಾಯಿತಿಗೆ ಅಗತ್ಯವಿರುವ ಗೋದಾಮುಗಳ ನಿರ್ಮಾಣಕ್ಕೆ ಜನಪ್ರತಿನಿಧಿಗಳೂ ಸೇರಿದಂತೆ ಅಧಿಕಾರಿಗಳು ಮುಂದಾಗಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನರೇಗಾ ಯೋಜನೆಯಡಿ ಸುಮಾರು ೮ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಗೋದಾಮಿನ ಉದ್ಘಾಟನೆಯನ್ನು ಸೋಮವಾರ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿಗಳಲ್ಲಿ ಸ್ಥಳಾವಕಾಶದ ಕೊರತೆಯಿಂದ ನೀರು ಸರಬರಾಜು ಮಾಡುವ ಪೈಪುಗಳು, ಮೋಟರ್, ಪಂಪುಗಳು ದುರುಪಯೋಗವಾಗುತ್ತದೆ. ಇದನ್ನು ತಪ್ಪಿಸಲು ಪಂಚಾಯಿತಿಗೊಂದರಂತೆ ಗೋದಾಮು ನಿರ್ಮಾಣ ಮಾಡಿಕೊಂಡರೆ ಸಾಮಗ್ರಿಗಳನ್ನು ಸಂಗ್ರಹಿಸಿಡುವುದರ ಜೊತೆಗೆ ಪಂಚಾಯಿತಿಗೆ ಸೇರಿದ ಎಲ್ಲಾ ಸಾಮಾನು ಸರಂಜಾಮುಗಳ ಲೆಕ್ಕ ಸಿಗುತ್ತದೆ ಎಂದರು.
ಮುಂಬರುವ ದಿನಗಳಲ್ಲಿ ತಾಲ್ಲೂಕಿನ ಉಳಿದೆಲ್ಲಾ ಗ್ರಾಮ ಪಂಚಾಯಿತಿಗಳವರು ನರೇಗಾ ಯೋಜನೆಯನ್ನು ಬಳಸಿಕೊಂಡು ಇಂತಹ ಗೋದಾಮು ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಮುಂದಾಗಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಮ್ಮ ಕದಿರಪ್ಪ, ಉಪಾಧ್ಯಕ್ಷ ಸುರೇಂದ್ರ, ಸದಸ್ಯರಾದ ದೇವರಾಜ್, ಪದ್ಮಮ್ಮ, ಮುಖಂಡರಾದ ಮುನಿಯಪ್ಪ, ಪಿಡಿಓ ರಾಮಕೃಷ್ಣ ಹಾಜರಿದ್ದರು.
ಗೋದಾಮಿನ ಉದ್ಘಾಟನೆ
ಬಿಜೆಪಿ ಜಯದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ
ಶಿಡ್ಲಘಟ್ಟದ ಬಸ್ ನಿಲ್ದಾಣದ ಬಳಿ ಸಲ್ಲಾಪುರಮ್ಮ ದೇವಾಲಯದ ಮುಂದೆ ತಾಲ್ಲೂಕು ಬಿಜೆಪಿ ಘಟಕದ ಸದಸ್ಯರು ಸೋಮವಾರ ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ನಡೆಸಿದರು.
ಶ್ರೀ ಜಯೇಂದ್ರ ಸರಸ್ವತಿ ಭಾರತಿ ಶ್ರೀಗಳಿಗೆ ಶ್ರದ್ಧಾಂಜಲಿ
ಶಿಡ್ಲಘಟ್ಟ ತಾಲ್ಲೂಕು ಬ್ರಾಹ್ಮಣ ಸಂಘದ ವತಿಯಿಂದ ಭಾನುವಾರ ಈಚೆಗೆ ಸ್ವರ್ಗಸ್ಥರಾದ ಕಂಚಿ ಕಾಮಕೋಟಿ ಪೀಠದ ಪೂಜ್ಯ ಶ್ರೀ ಜಯೇಂದ್ರ ಸರಸ್ವತಿ ಭಾರತಿ ಶ್ರೀಗಳ ಭಾವಚಿತ್ರಕ್ಕೆ ಶಂಕರಮಠದಲ್ಲಿ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು
ಕಾಂಗ್ರೆಸ್ ಅಭ್ಯರ್ಥಿಯಾಗಿ ಆಂಜಿನಪ್ಪ ಉಮೇದುವಾರಿಕೆ ಸಲ್ಲಿಕೆ
ಫೆಬ್ರುವರಿ 28 ರ ಬುಧವಾರ ಕಾಂಗ್ರೆಸ್ ಪಕ್ಷದ ಉಮೇದುವಾರಿಕೆಯನ್ನು ಸ್ವೀಕರಿಸಲು ಕೆಪಿಸಿಸಿ ವೀಕ್ಷಕರು ನಗರಕ್ಕೆ ಆಗಮಿಸಿದ್ದರು. ಆಗ ತಮ್ಮ ಉಮೇದುವಾರಿಕೆಯ ಅರ್ಜಿಯನ್ನು ಸಲ್ಲಿಸಲು ಬೆಂಬಲಿಗರೊಂದಿಗೆ ನಿಂತಿದ್ದ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಅವರನ್ನು ಭೇಟಿ ಮಾಡದಂತೆ ವಿ.ಮುನಿಯಪ್ಪ ಅವರ ಬೆಂಬಲಿಗರು ಕೆಪಿಸಿಸಿ ವೀಕ್ಷಕರ ವಾಹನವನ್ನು ತಡೆಗಟ್ಟಿ ಸಾಗಹಾಕಿದ್ದರು.
ಈ ಹಿನ್ನೆಲೆಯಲ್ಲಿ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಸೋಮವಾರ ತಮ್ಮ ಬೆಂಬಲಿಗರೊಂದಿಗೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಇಚ್ಛೆಯಿಂದ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.
ಹಿತ್ತಲಹಳ್ಳಿ ಕೃಷ್ಣಪ್ಪ, ಆನೂರು ದೇವರಾಜ್, ಅಫ್ಸರ್‌ಪಾಷ, ಬಾಷಾಸಾಬ್, ಬೈರೇಗೌಡ, ನಟರಾಜ್, ವೆಂಕಟೇಶ್, ಜಮೀರ್, ದಡಂಘಟ್ಟ ಕೃಷ್ಣಪ್ಪ, ತಲಕಾಯಲಬೆಟ್ಟ ಅಶ್ವತ್ಥನಾರಾಯಣರೆಡ್ಡಿ, ಜಾವಿದ್ ಹಾಜರಿದ್ದರು.
ನೆನೆಗುದಿಗೆ ಬಿದ್ದಿದ್ದ ಕಂಬಾಲಹಳ್ಳಿ ರಸ್ತೆಗೆ ಡಾಂಬರೀಕರಣ
ಸುಮಾರು ಮುವ್ವತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಂಬಾಲಹಳ್ಳಿ ರಸ್ತೆಯನ್ನು 75 ಲಕ್ಷ ರೂಗಳ ವೆಚ್ಚದಲ್ಲಿ ಡಾಂಬರೀಕರಣ ಮಾಡಿಸಲಾಗುತ್ತಿದೆ. ಹಲವಾರು ವರ್ಷಗಳು ಬಾಳಿಕೆ ಬರುವಂತೆ ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಕಂಬಾಲಹಳ್ಳಿಯ ರಸ್ತೆ ಕಾಮಗಾರಿಗೆ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಇನ್ನೂ 100 ಕಿಮೀ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿವಡೆ. ವಿರೋಧ ಪಕ್ಷದಲ್ಲಿದ್ದರೂ ಸಾಕಷ್ಟು ಅನುದಾನಗಳನ್ನು ತಂದು ಕೆಲಸಗಳನ್ನು ಮಾಡಿಸಿದ್ದೇನೆ. ಕ್ಷೇತ್ರಕ್ಕೆ ಅತ್ಯಗತ್ಯವಿರುವ ಐಟಿಐ ಕಾಲೇಜು, ಅಗ್ನಿ ಶಾಮಕ ದಳ, ಬಸ್ ಡಿಪೋ ಕಾಮಗಾರಿಗಳು ನಡೆದಿವೆ ಎಂದು ವಿವರಿಸಿದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ಕೆ.ಮಂಜುನಾಥ್, ತಾದೂರು ರಮೇಶ್, ತಿಮ್ಮಣ್ಣ, ಎಇಇ ನಾರಾಯಣಸ್ವಾಮಿ, ದ್ಯಾವಪ್ಪ, ಬೈರರೆಡ್ಡಿ ಹಾಜರಿದ್ದರು.
ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ ಕಾರ್ಯಕ್ರಮ
‘ಹೂವಿನ ಹಾರ ಹಾಕಿಸಿಕೊಳ್ಳಲು ಸಮಯವಿದೆ, ಮಾಡುವ ಕೆಲಸ ಬಹಳಷ್ಟಿದೆ’ ಎಂಬ ಎಚ್ಚರಿಕೆ ಬರಹಗಾರನಿಗೆ ಸದಾ ಇರಬೇಕು. ಕುವೆಂಪು ಅವರು ಹೇಳಿದಂತೆ ‘ಕೀರ್ತಿ ಶನಿ’ಯಿಂದ ದೂರವಿರಬೇಕು ಎಂದು ಸಾಹಿತಿ ಹಾಗೂ ಶಿಕ್ಷಕ ಸದಾಶಿವ ಸೊರಟೂರು ತಿಳಿಸಿದರು.
ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ ಹಾಗೂ ಕೇಂದ್ರ ಗ್ರಂಥಾಲಯದ ಸಹಯೋಗದಲ್ಲಿ ನಡೆದ ‘ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ ಒಂಭತ್ತನೇ ತಿಂಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಷ್ಯಾ ಕಾಂತಿಗೆ ಕಾರಣವಾಗಿದ್ದು ಮ್ಯಾಕ್ಸಿಮ್ ಗಾರ್ಕಿ ಅವರ ‘ತಾಯಿ’ ಎಂಬ ಪುಸ್ತಕ. ಗಾಂಧೀಜಿ ಮಹಾತ್ಮನಾಗಲು ಪ್ರೇರಣೆ ನೀಡಿದ್ದು ಜಾನ್ ರಸ್ಕಿನ್ ಬರೆದ ‘ಅನ್ ಟು ದಿ ಲಾಸ್ಟ್’ ಎಂಬ ಕೃತಿ. ಪುಸ್ತಕ ಸಂಸ್ಕೃತಿಯು ಬದುಕಿನಲ್ಲಿ ಬಹು ಮಹತ್ವದ ಪಾತ್ರ ವಹಿಸುತ್ತದೆ. ಮಕ್ಕಳಿಗೆ ಎಳೆ ವಯಸ್ಸಿನಿಂದಲೇ ಪುಸ್ತಕ ಓದುವ ಅಭಿರುಚಿ ಬೆಳೆಸಿ, ಅವರ ವ್ಯಕ್ತಿತ್ವ ಬದಲಾಗುತ್ತದೆ, ಕಳೆಕಟ್ಟುತ್ತದೆ. ಮಕ್ಕಳ ಹುಟ್ಟುಹಬ್ಬಕ್ಕೆ ಪುಸ್ತಕವನ್ನು ಉಡುಗೊರೆಯಾಗಿ ನೀಡಿ ಎಂದು ಹೇಳಿದರು.
ಪ್ರಶಸ್ತಿಗೆ ಅರ್ಜಿ ಹಾಕುವುದು ಕೆಟ್ಟ ಪದ್ಧತಿ. ಓದುವುದು ಮತ್ತು ಅನುಭವಕ್ಕೆ ದಕ್ಕಿದ್ದನ್ನು ಬರೆಯುವುದು ನನ್ನ ಮನಸ್ಥಿತಿ. ಬದಲಾವಣೆ ಯಾರಿಂದಲೋ ಬಯಸುವ ಮುನ್ನ ನಮ್ಮಿಂದಲೇ ಪ್ರಾರಂಭವಾಗಲಿ. ಈ ಉದ್ದೇಶದಿಂದ ಕುವೆಂಪು ಅವರ ಮಂತ್ರಮಾಂಗಲ್ಯದ ತತ್ವದಂತೆ ಕುಪ್ಪಳ್ಳಿಯಲ್ಲಿಯೇ ಸರಳವಾಗಿ ವಿವಾಹವಾದೆ. ಮದುವೆಯಂದು ನನ್ನ ಎರಡು ಕೃತಿಗಳು ಲೋಕಾರ್ಪಣೆಯಾದವು. ಕವಿಗೋಷ್ಠಿ ನಡೆಸಿದೆವು. ನನ್ನ ಲೇಖನಗಳನ್ನು ಓದಿ ಎಲ್ಲೋ ಹಾವೇರಿಯಿಂದ ಒಬ್ಬ ಬಾಲಕಿ, ಗೋವಾದಿಂದ ಒಬ್ಬ ಕನ್ನಡಿಗರು ಕರೆ ಮಾಡಿದಾಗ ಸಿಗುವ ಸಂತಸ ಪ್ರಶಸ್ತಿ ಪುರಸ್ಕಾರಗಳಿಗೆ ಮೀರಿದ್ದು. ತುಮಕೂರಿನಲ್ಲಿ ಆಸ್ಪತ್ರೆಯೊಂದರ ಗೋಡೆಯ ಮೇಲೆ ಅಂಟಿಸಿದ್ದ ‘ಹೇಗೆ ಬರಲಮ್ಮಾ ಭೂಮಿಗೆ?’ ಎಂಬ ನನ್ನ ಲೇಖನ ಓದಿ ಒಬ್ಬ ಗರ್ಭಿಣಿ ಕರೆ ಮಾಡಿದ್ದು ಬರವಣಿಗೆಯ ಮಹತ್ವವನ್ನು ತಿಳಿಸಿಕೊಟ್ಟಿತು ಎಂದು ನುಡಿದರು.
ಈ ಸಂದರ್ಭದಲ್ಲಿ ಗ್ರಂಥಾಲಯಕ್ಕೆ ಸಾಹಿತಿ ಸದಾಶಿವ ಸೊರಟೂರು ತಮ್ಮ ‘ಕನಸುಗಳಿವೆ ಕೊಳ್ಳುವವರಿಲ್ಲ’, ‘ಹೆಸರಿಲ್ಲದ ಬಯಲು’, ‘ಹೊಸ್ತಿಲಾಚೆ ಬೆತ್ತಲೆ’, ‘ತೂತುಬಿದ್ದ ಚಂದಿರ’ ಕೃತಿಗಳನ್ನು ಕೊಡುಗೆಯಾಗಿ ನೀಡಿದರು.
ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಸಾಹಿತಿ ಸದಾಶಿವ ಸೊರಟೂರು ಅವರನ್ನು ಗೌರವಿಸಲಾಯಿತು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಗ್ರಂಥಪಾಲಕ ಶ್ರೀನಿವಾಸ್, ಸಹಾಯಕಿ ಬಾಂಧವ್ಯ, ನೃತ್ಯ ಕಲಾವಿದ ಸಿ.ಎನ್.ಮುನಿರಾಜು, ಚಾಂದ್ಪಾಷ, ವಿ.ವೆಂಕಟರಮಣ, ವೃಷಬೇಂದ್ರಪ್ಪ, ನೃತ್ಯ ನಿರ್ದೇಶಕ ರಾಹುಲ್, ಟಿ.ಟಿ.ನರಸಿಂಹಪ್ಪ ಹಾಜರಿದ್ದರು.
ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ
ತಾಲ್ಲೂಕಿನ ಸಾದಲಿಯಲ್ಲಿ ಕೃಷಿ ಇಲಾಖೆ ವತಿಯಿಂದ ಶುಕ್ರವಾರ ನಡೆದ ಸಾದಲಿ ಹೋಬಳಿಯ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸರ್ಕಾರ ಕೃಷಿಕರಿಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿದೆ. ಆ ಯೋಜನೆಗಳನ್ನು ಯಶಸ್ವಿಗೊಳಿಸುವ ಹೊಣೆ ಅಧಿಕಾರಿ ವರ್ಗದ ಮೇಲಿದ್ದು, ಅವುಗಳು ಯಶಸ್ವಿಯಾದಾಗ ಮಾತ್ರ ಕೃಷಿಕರಿಗೆ ಸರ್ಕಾರದ ಮೇಲೆ ವಿಶ್ವಾಸ ಮೂಡಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮುನಿರಾಜು ತಿಳಿಸಿದರು.
ಕೃಷಿಕರಿಗೆ ಮಾರುಕಟ್ಟೆ ಅಭಾವ, ಕೂಲಿ ಕಾರ್ಮಿಕರ ಕೊರತೆ ಹಾಗೂ ಕೃಷಿ ಲಾಭದಾಯಕವಾಗಿಲ್ಲದ ಕಾರಣದಿಂದಾಗಿ ಇಂದಿನ ಯುವ ಪೀಳಿಗೆ ಕೃಷಿಯಿಂದ ವಿಮುಖವಾಗುತ್ತಿದ್ದಾರೆ, ಇದನ್ನು ತಡೆಯುವ ಹಿನ್ನೆಲೆಯಲ್ಲಿ ಸರ್ಕಾರ ನೂತನ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಸಾದಲಿ ಗ್ರಾಮದಲ್ಲಿ ಸುಮಾರು 43 ಲಕ್ಷ ರೂಗಳ ವೆಚ್ಚದಲ್ಲಿ ರೈತ ಸಂಪರ್ಕ ಕೇಂದ್ರದ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಕೇಂದ್ರವು ಸಂಪೂರ್ಣ ಕೃಷಿ ಮಾಹಿತಿಯಿಂದ ಕೂಡಿದ ಮಾಹಿತಿ ಕಣಜವಾಗಿ ಮಾರ್ಪಾಡಾಗಬೇಕು. ಈಗ ತಂತ್ರಜ್ಞಾನದ ಬೆಳವಣಿಗೆಯ ನೆರವು ಪಡೆದುಕೊಂಡು ಕೃಷಿ ಇಲಾಖೆಯು ರೈತರಿಗೆ ಪೂರಕ ಮಾಹಿತಿ ನೀಡಲು ಪ್ರಯತ್ನಿಸಬೇಕು. ಈ ಕೇಂದ್ರಗಳು ಬೀಜ ಮತ್ತು ಗೊಬ್ಬರದ ಮಾರಾಟ ಕೇಂದ್ರಗಳಾಗದೆ, ಇಲ್ಲಿರುವ ಸಿಬ್ಬಂದಿಗೆ ಹಾಗೂ ರೈತರಿಗೆ ಹೊಸ ತಂತ್ರಜ್ಞಾನದ ಕುರಿತು ತಿಳಿವಳಿಕೆ ನೀಡುವತ್ತ ಗಮನಹರಿಸಬೇಕು ಎಂದರು.
ಜಂಟಿ ಕೃಷಿ ನಿರ್ದೇಶಕ ಡಾ.ಮಲ್ಲಿಕಾರ್ಜುನ, ಉಪ ಕೃಷಿ ನಿರ್ದೇಶಕಿ ಪಂಕಜಾ, ಸಹಾಯಕ ಕೃಷಿ ನಿರ್ದೇಶಕ ಮುರಳೀಧರ್, ಎಇಇ ನಾರಾಯಣಸ್ವಾಮಿ, ಸಾದಲಿ ಗ್ರಾಮ ಪಂಚಾಯಿತಿ ಅಧ್ಕಕ್ಷ ಗೋವಿಂದರಾಜು, ತಾಲ್ಲೂಕು ಪಂಚಾಯಿತಿ ಸದಸ್ಯ ನಾಗಮಣಿ ವೆಂಕಟೇಶ್, ಶಂಕರಮ್ಮ, ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ತಾದೂರು ಮಂಜುನಾಥ್, ರವಿಪ್ರಕಾಶ್, ರೈತ ನಾರಾಯಣಸ್ವಾಮಿ, ರವಿನಾರಾಯಣರೆಡ್ಡಿ ಹಾಜರಿದ್ದರು.
ಶ್ರೀ ಪೂಜಮ್ಮದೇವಿ ಹೂವಿನ ಕರಗ ಮಹೋತ್ಸವ
ನಗರದ ಬೈಪಾಸ್ ರಸ್ತೆಯಲ್ಲಿರುವ ಶ್ರೀ ಪೂಜಮ್ಮದೇವಿ ಹೂವಿನ ಕರಗ ಮಹೋತ್ಸವ ಗುರುವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.
ಕರಗದ ಪ್ರಯುಕ್ತ ನಗರದ ವಿವಿದೆಡೆ ವಿಶೇಷ ವಾದ್ಯಗೋಷ್ಠಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ದೀಪಾಲಂಕಾರಗಳ ಪೂಜಮ್ಮ ದೇವಿಯ ಮುತ್ತಿನ ಪಲ್ಲಕ್ಕಿ ಉತ್ಸವ ಸಹ ನಡೆಯಿತು.
ಕದಿರಿಹುಣ್ಣಿಮೆಯಂದು ಪ್ರತಿವರ್ಷವೂ ನಗರದ ಪೂಜಮ್ಮ ದೇವಿಯ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಕರಗವನ್ನು ನಡೆಸಲಾಗುತ್ತದೆ.
ಆಕರ್ಷಕ ತಮಟೆ ವಾದ್ಯ ಗಮನ ಸೆಳೆಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿತು. ಮನೆಗಳ ಮುಂದೆ ರಂಗೋಲಿ ಹಾಕಲಾಗಿತ್ತು. ಪ್ರತಿ ಮನೆಯವರು ಕರಗಕ್ಕೆ ಪೂಜೆ ಸಲ್ಲಿಸಿ ಹೂವನ್ನು ಅರ್ಪಿಸಿದರು.
ತಾಲ್ಲೂಕು ಮಟ್ಟದ ಮಹಿಳಾ ಕ್ರೀಡಾಕೂಟ
ನಗರದ ನೆಹರೂ ಕ್ರೀಡಾಂಗಣದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಐನಾ ಟ್ರಸ್ಟ್, ಸೌಂದರ್ಯ ಗ್ರಾಮೀಣ ಮತ್ತು ಪಟ್ಟಣ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ, ಸ್ತ್ರೀ ಶಕ್ತಿ ಮಹಿಳೆಯರಿಗೆ, ಚುನಾಯಿತ ಮಹಿಳಾ ಜನಪ್ರತಿನಿಧಿಗಳಿಗೆ ಹಾಗೂ ಮಹಿಳಾ ಸರ್ಕಾರಿ ನೌಕರರಿಗೆ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಮಹಿಳಾ ಕ್ರೀಡಾಕೂಟವನ್ನು ಉದ್ಘಾಟಿಸಿ,ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಅವರ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿ ಸಾಧಿಸಿ ತೋರಿಸಿದ್ದಾರೆ. ಕುಟುಂಬದ ಬೆನ್ನೆಲುಬಾಗಿದ್ದ ಮಹಿಳೆಯು ಇಂದು ಸಮಾಜದ ಬೆನ್ನೆಲುಬಿನಂತಾಗಿರುವುದು ಹರ್ಷದ ಸಂಗತಿ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ಮಹಿಳೆ ಸಾಮಾಜಿಕ, ಶೈಕ್ಷಣಿಕವಾಗಿ ಜಾಗೃತರಾಗಿದ್ದರೆ ಸುಭದ್ರ ಸಮಾಜ ನಿರ್ಮಿಸಬಹುದು. ಎಲ್ಲಾ ಪೋಷಕರು ಮೊದಲು ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಫಲಿತಾಂ ಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸುತ್ತಿದ್ದಾರೆ. ಮಹಿಳೆ ಯರು ಯಾರಿಗೂ ಕಡಿಮೆಯಿಲ್ಲ ಎನ್ನು ವುದು ಇದರಿಂದ ಸಾಬೀತಾಗುತ್ತಿದೆ. ಮದರ್ ಥೆರೆಸಾ ಸೇರಿದಂತೆ ಅನೇಕ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವುದನ್ನು ನಾವುಗಳು ಸ್ಮರಿಸಿಕೊಳ್ಳಬಹುದು ಎಂದು ಹೇಳಿದರು.
ಸಿಡಿಪಿಒ ಅಧಿಕಾರಿ ಲಕ್ಷ್ಮೀದೇವಮ್ಮ ಮಾತನಾಡಿ, ಮಹಿಳೆಯರಿಗೆ ನಡೆಸುವ ಕ್ರೀಡಾಕೂಟಕ್ಕೆ ಸರ್ಕಾರ ಕೇವಲ ಐದು ಸಾವಿರ ರೂ ಅನುದಾನ ನೀಡುತ್ತಿದೆ. ಅದು ಏನೇನೂ ಸಾಲದು. ಕ್ರೀಡಾಕೂಟಕ್ಕೆ ಆಗಮಿಸುವ ಮಹಿಳೆಯರಿಗೆ ನೀರು, ತಿಂಡಿ, ಬಹುಮಾನಗಳಿಗೆ ಇನ್ನಷ್ಟು ಅನುದಾನ ಬೇಕಿದೆ. ಈದಿನ ನಾವು ಮೂರು ವಯಸ್ಕ ಹಂತಗಳಲ್ಲಿ ಕ್ರೀಡೆಗಳನ್ನು ನಡೆಸುತ್ತಿದ್ದೇವೆ. ಓಟ, ಮ್ಯೂಸಿಕಲ್ ಚೇರ್, ಶಾಟ್ ಪುಟ್, ಲೆಮನ್ ಅಂಡ್ ಸ್ಪೂನ್ ಆಡಿಸುತ್ತಿದ್ದೇವೆ. ಭಾಗವಹಿಸುವ ಎಲ್ಲರಿಗೂ ಸಮಾಧಾನಕರ ಬಹುಮಾನವಾಗಿ ಸ್ಟೀಲ್ ಡಬ್ಬಿ, ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ನೀಡುತ್ತಿರುವುದಾಗಿ ಹೇಳಿದರು.
ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್, ಭಾರತಿ ಆಂಜನೇಯರೆಡ್ಡಿ, ರಂಗನಾಥ, ಡಾ.ವಿಜಯ್, ಡಾ.ಮಹೇಶ್, ಡಾ.ವಿಜಯ, ಚಂದ್ರಕಲಾ, ಅಗಜಾನನಮೂರ್ತಿ ಹಾಜರಿದ್ದರು.
ಸಾರ್ವಜನಿಕ ಶೌಚಾಲಯಗಳ ಉದ್ಘಾಟನೆ
ಗ್ರಾಮೀಣ ಪ್ರದೇಶಗಳನ್ನು ಬಯಲು ಶೌಚ ಮುಕ್ತ ಮಾಡುವ ನಿಟ್ಟಿನಲ್ಲಿ ಜನರಿಗೆ ಪ್ರತ್ಯೇಕವಾಗಿ ಗುಂಪು ಶೌಚಾಲಯಗಳನ್ನು ನಿರ್ಮಿಸಿರುವುದು ಹೆಮ್ಮೆಯ ವಿಷಯ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಶಿವಕುಮಾರ್ ಹೇಳಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಗಿರಿಜನ ಕಾಲೋನಿಯಲ್ಲಿ ನಿರ್ಮಿಸಲಾಗಿರುವ ಸಾರ್ವಜನಿಕ ಶೌಚಾಲಯಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಜನರು ಮನಸ್ಸು ಮಾಡಿದರೆ ಮಾತ್ರ ದೇಶದ ಭವಿಷ್ಯ ಬದಲಾಗುತ್ತದೆ. ಎಲ್ಲರೂ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಶೌಚಾಲಯಗಳನ್ನು ಕಟ್ಟಿಸಿಕೊಂಡು ಬಳಕೆ ಮಾಡುವುದರಿಂದ ರೋಗಗಳಿಂದ ದೂರ ಇರಬಹುದಾಗಿದೆ. ಇತರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೂಡಾ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಜನರನ್ನು ಪ್ರೇರೆಪಿಸಬೇಕು. ಶೌಚಾಲಯ ನಿರ್ಮಿಸಿಕೊಳ್ಳುವುದಕ್ಕೆ ಇರುವ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ಗ್ರಾಮಗಳನ್ನು ಬಯಲು ಶೌಚ ಮುಕ್ತಗೊಳಿಸುವುದಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ಎಂ.ಮುನಿಯಪ್ಪ ಮಾತನಾಡಿ, ಪ್ರತಿಯೊಬ್ಬರಿಗೂ ಉತ್ತಮ ಪರಿಸರ, ಆರೋಗ್ಯ ದೊರೆಯಬೇಕಾದರೆ ಶೌಚಾಲಯದ ಬಳಕೆ ಅಗತ್ಯ. ಇವುಗಳ ನಿರ್ವಹಣೆ ಮತ್ತು ಸ್ವಚ್ಛತೆ ಬಗೆಗೆ ಎಲ್ಲರೂ ಕಾಳಜಿ ವಹಿಸಬೇಕು. ಸ್ಥಳದ ಕೊರತೆಯಿಂದ ಮಹಿಳೆಯರು ಹೆಚ್ಚು ಶೌಚಾಲಯದ ತೊಂದರೆ ಎದುರಿಸುವಂತಾಗಿದೆ. ಹಳ್ಳಿಗಳನ್ನು ಬಯಲು ಬಹಿರ್ದೆಸೆ ಮುಕ್ತ ಹಳ್ಳಿಗಳನ್ನಾಗಿ ಮಾಡಲು ಜನರ ಸಹಕಾರ ಅಗತ್ಯವಾಗಿ ಬೇಕಾಗಿದೆ ಎಂದರು.
ತಾಲ್ಲೂಕು ಪಂಚಾಯಿತಿ ಇಓ ಎಂ.ವೆಂಕಟೇಶ್, ಸದಸ್ಯ ಮುನಿಯಪ್ದ, ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ್, ಮುಖಂಡರಾದ ಮುನಿಕೃಷ್ಣಪ್ಪ, ಮುನಿನಾಗಪ್ಪ, ಮುನಿರಾಜು, ದ್ಯಾವಪ್ಪ, ಎಂ.ರಾಮಪ್ಪ, ದಸಂಸ ತಾಲ್ಲೂಕು ಸಂಚಾಲಕ ಎನ್.ಎ.ವೆಂಕಟೇಶ್, ಲಕ್ಷ್ಮೀನಾರಾಯಣ ಹಾಜರಿದ್ದರು.
ಸರ್ಕಾರಿ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳು ವಿವಿಧ ವಿಜ್ಞಾನ ಪ್ರಯೋಗಗಳನ್ನು ಮಾಡುವ ಮೂಲಕ ಆಚರಿಸಿದರು. ವೈಜ್ಞಾನಿಕ ಪ್ರಯೋಗಗಳನ್ನು, ಪ್ರಾತ್ಯಕ್ಷಿಕೆಗಳನ್ನು ನೋಡಲು ಆರು ಗ್ರಾಮಗಳ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಆಗಮಿಸಿದ್ದು ವಿಶೇಷವಾಗಿತ್ತು.
ಜಲವಿದ್ಯುತ್ ಮಾದರಿ, ಕಣ್ಣು ಮತ್ತು ಮನಸ್ಸಿನ ಹೊಂದಾಣಿಕೆಯ ಪ್ರಯೋಗ, ನೀರಿನಲ್ಲಿ ಫ್ಲೋರೈಡ್ ಅಂಶವನ್ನು ಪರೀಕ್ಷಿಸುವ ವಿಧಾನ, ನೀರಿನ ಶುದ್ಧೀಕರಣ, ನೀರಿನ ಮೇಲೆ ದೀಪ ಉರಿಸುವುದು, ವಿದ್ಯುತ್ ಮಂಡಲಗಳ ಪ್ರಯೋಗಗಳು, ಮಳೆ ನೀರು ಕೊಯ್ಲಿನ ಮಾದರಿ, ಕಂಪ್ಯೂಟರ್ ಬಿಡಿ ಭಾಗಗಳು, ಐಸ್ ಕ್ರೀಂ ಕಡ್ಡಿಗಳ ರಿಮೋಟ್ ಕಾರು, ಕೋತಿಗಳನ್ನು ಓಡಿಸುವ ಬಂದೂಕು, ನೀರಿನ ಕಾರಂಜಿ, ಸೋಲಾರ್ ಕುಕ್ಕರ್, ಸೋಲಾರ್ ಪವರ್ ಬ್ಯಾಂಕ್, ಗೋಬರ್ ಗ್ಯಾಸ್, ನೀರಿನ ಸಂಪ್ ತುಂಬಿದಾಗ ತಿಳಿಸುವ ಸಿಗ್ನಲ್, ನೀರು ಪಂಪ್ ಮಾಡುವ ಸಾಧನ, ಆಟೋಮೆಟಿಕ್ ಮೋಟರ್, ರಾಕೆಟ್ ಉಡಾವಣೆ, ಗುಜರಾತಿ ಒಲೆ, ಅಗ್ನಿಪರ್ವತ ಮುಂತಾದ ಪ್ರಯೋಗಗಳನ್ನು ಮೂರು ಕೋಣೆಗಳಲ್ಲಿ ಮಕ್ಕಳು ಮಾಡಿಟ್ಟು ಆಗಮಿಸಿದ ವಿದ್ಯಾರ್ಥಿಗಳಿಗೆ ವಿವರಿಸಿದರು.
ಐದನೇ ತರಗತಿಯ ವಿದ್ಯಾರ್ಥಿಗಳಾದ ಚಾರುಲತಾ ಮತ್ತು ಶ್ರೇಯಸಿ ‘ಕಸದಿಂದ ರಸ’ ಎಂಬ ಬಿಸಾಡುವ ಪದಾರ್ಥಗಳನ್ನು ಬಳಸಿ ಹಲವಾರು ಅಲಂಕಾರದ ವಸ್ತುವನ್ನು ತಯಾರಿಸಿ ಪ್ರದರ್ಶಿಸಿದ್ದರು.
ತಾಲ್ಲೂಕಿನ ಅಬ್ಲೂಡು, ರಾಮಚಂದ್ರ ಹೊಸೂರು, ತಾತಹಳ್ಳಿ, ಹನುಮಂತಪುರ, ಹರಳಹಳ್ಳಿ, ಚೀಮನಹಳ್ಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಭೇಟಿ ನೀಡಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಡಿಯಮ್ ಉದುರಿಸಿದ್ದ ತೆಂಗಿನ ಜುಟ್ಟಿಗೆ ನೀರು ಹಾಕಿ ಬೆಂಕಿ ಹೊತ್ತಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಶಿಕ್ಷಕ ಗೋಪಾಲಕೃಷ್ಣಯ್ಯ, ವಿಜ್ಞಾನ ಶಿಕ್ಷಕ ಎಂ.ಎ.ರಾಮಕೃಷ್ಣಪ್ಪ, ಶಿಕ್ಷಕರಾದ ನಾಗಭೂಷಣ, ಗಂಗಶಿವಪ್ಪ, ಎಸ್ಡಿಎಂಸಿ ಸದಸ್ಯರಾದ ಕಲ್ಪನಾ, ಗೋಪಾಲಪ್ಪ ಹಾಜರಿದ್ದರು.
ಬ್ಯಾಟರಾಯಸ್ವಾಮಿ ರಥೋತ್ಸವ
ಚಿಕ್ಕದಾಸರಹಳ್ಳಿಯ ಸಮೀಪದ ಬ್ಯಾಟರಾಯಸ್ವಾಮಿ ಬ್ರಹ್ಮ ರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಾಂಗೋಪವಾಗಿ ನಡೆಯಿತು. ಸುತ್ತಮುತ್ತಲ ಗ್ರಾಮಗಳಿಂದ ಹಾಗೂ ಪಟ್ಟಣದಿಂದ ಆಗಮಿಸಿದ್ದ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು.
ರಥೋತ್ಸವ ಅಂಗವಾಗಿ ದೇಗುಲದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಬತ್ತಾಸು, ಸಿಹಿ ಖಾರದ ತಿಂಡಿಗಳು, ವಿವಿಧ ಹಣ್ಣುಗಳು, ತಂಪು ಪಾನೀಯ, ಕರಿದ ತಿಂಡಿ ತಿನಿಸು, ಮಕ್ಕಳಿಗೆ ಆಟಿಕೆ, ಅಚ್ಚೆ ಹಾಕುವವರು, ಬಳೆಗಾರರು ಉತ್ಸವಕ್ಕೆ ರಂಗು ತುಂಬಿದರು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತರಿಗೆ ಪಾನಕ, ಮಜ್ಜಿಗೆ ಹಾಗೂ ಹೆಸರು ಬೇಳೆ ವಿತರಿಸಲಾಯಿತು. ವಿವಿಧ ಗ್ರಾಮಸ್ಥರು ಹೆಸರುಬೇಳೆ ಪಾನಕ ವಿತರಿಸಿದರು.
ವಿಜಯನಗರ ಕಾಲದ ಬ್ಯಾಟರಾಯಸ್ವಾಮಿ ದೇವಾಲಯವು ಎತ್ತರವಾದ ಗುಡ್ಡದ ಮೇಲಿರುವುದರಿಂದ ಕಂಗೊಳಿಸುತ್ತಿತ್ತು. ‘ಶಿಲ್ಪಕಲಾ ದೃಷ್ಟಿಯಿಂದ ಅತ್ಯಂತ ಆಕರ್ಷಕ ಕಲಾನೈಪುಣ್ಯತೆ ಹೊಂದಿದೆ. ಬ್ಯಾಟರಾಯನ ಉತ್ಸವಮೂರ್ತಿ ಜತೆಗೆ ಶ್ರೀದೇವಿ ಭೂದೇವಿ ಅವರ ಸುಂದರ ಶಿಲ್ಪಗಳಿವೆ’ ಎಂದು ಕನ್ವೀನರ್ ಬ್ಯಾಟರಾಯಶೆಟ್ಟಿ ತಿಳಿಸಿದರು.
‘ಪ್ರತಿ ವರ್ಷ ಕಾಮನ ಹುಣ್ಣಿಮೆಯಂದು ಇಲ್ಲಿ ರಥೋತ್ಸವ ನಡೆಯುತ್ತದೆ. ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಭಕ್ತರು ಈ ದೇವಾಲಯದಲ್ಲಿ ಪ್ರಸಾದ ಕೇಳುವುದು ರೂಢಿ. ಮನೆಗೆ ಹೆಣ್ಣು ತರಲು, ಹೆಣ್ಣು ಕೊಡಲು, ಬಾವಿ ತೋಡಲು, ಕೊಳವೆ ಬಾವಿ ಕೊರೆಸಲು, ಭೂಮಿ ಕೊಳ್ಳಲು, ಮನೆ ಕಟ್ಟಲು ಮುಂತಾದ ಶುಭ ಕಾರ್ಯಗಳಿಗೆ ಬ್ಯಾಟರಾಯಸ್ವಾಮಿಯ ಪ್ರಸಾದ ಕೇಳುತ್ತಾರೆ’ ಎಂದು ಬ್ಯಾಟರಾಯಸ್ವಾಮಿ ದೇವಾಲಯ ಧರ್ಮದರ್ಶಿ ಎಚ್.ಎನ್.ಬಚ್ಚೇಗೌಡ ಹೇಳಿದರು.
ಸುತ್ತಮುತ್ತಲಿನ ಗ್ರಾಮಗಳು ಹಾಗೂ ತಾಲ್ಲೂಕಿನ ವಿವಿಧ ಭಾಗಗಳಿಂದ ನೂರಾರು ಭಕ್ತರು ಆಗಮಿಸಿ ದೇವರ ಪೂಜೆಯಲ್ಲಿ ಪಾಲ್ಗೊಂಡರು.
ರಥೋತ್ಸವಕ್ಕೆ ಶಾಸಕ ಎಂ.ರಾಜಣ್ಣ ಚಾಲನೆ ನೀಡಿದರು. ಸೇವಾಕರ್ತರಾದ ನಾರ್ಥ್ ಈಸ್ಸ್ಟ್ ಸುರೇಶ್, ದಾಮೋಧರ್, ಡಿ.ಎಂ.ಮುನಿಯಪ್ಪ, ಎಂ.ಸಿ.ಜಗದೀಶ್, ಎಸ್.ಶ್ರೀನಿವಾಸ್, ಎನ್.ದೇವರಾಜ್, ವಿ.ಹರೀಶ್, ಎಚ್.ಎನ್.ಬಚ್ಚೇಗೌಡ, ಸಿದ್ದಬಸವಾರಾದ್ಯ, ರಾಮಾಂಜಿನಪ್ಪ ಹಾಜರಿದ್ದರು.
ಹಿತ್ತಲಹಳ್ಳಿ ಬಳಿಯ ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಚೌಡಸಂದ್ರದ ಬಳಿಯ ರೇಷ್ಮೆ ಫಾರಂ ಗಳಲ್ಲಿ ಬೆಂಕಿ
ತಾಲ್ಲೂಕಿನ ಹಿತ್ತಲಹಳ್ಳಿ ಬಳಿಯ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಚೌಡಸಂದ್ರದ ಬಳಿಯ ರೇಷ್ಮೆ ಫಾರಂ ಗಳಲ್ಲಿ ಗುರುವಾರ ಬೆಂಕಿ ಹೊತ್ತಿಕೊಂಡು ಕೆನ್ನಾಲಿಗೆ ಚಾಚುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.
ಹಿತ್ತಲಹಳ್ಳಿ ಗ್ರಾಮಸ್ಥರ ಆಕ್ರೋಶ : ‘ಹಿತ್ತಲಹಳ್ಳಿಯು ರೇಷ್ಮೆ ಗ್ರಾಮವೆಂದೇ ಪ್ರಸಿದ್ಧಿಯಾಗಿದೆ. ನಾವಿಲ್ಲಿ ಉಸಿರಾಡುವ ಜೀವಿಗಳನ್ನು ಸಾಕುತ್ತಿದ್ದೇವೆ. ಆದರೆ ಇದಕ್ಕೆ ಪ್ರತಿಕೂಲವಾಗುವಂತೆ ಶಿಡ್ಲಘಟ್ಟ ನಗರಸಭೆಯವರು ಊರಿನ ತ್ಯಾಜ್ಯವನ್ನೆಲ್ಲಾ ಇಲ್ಲಿ ಸುರಿಯುತ್ತಾರೆ. ಇದರಿಂದಾಗಿ ನಮ್ಮ ಬೆಳೆಗಳಿಗೆ ಕಂಟಕವಾಗಿದೆ’ ಎಂದು ಗ್ರಾಮಸ್ಥರು ದೂರಿದ್ದಾರೆ.
‘ಈ ದಿನ ಬೆಂಕಿ ಹೊತ್ತಿಕೊಂಡು ಹೊಗೆ ಮತ್ತು ಧೂಳು ಆವರಿಸಿ ಸುತ್ತ ಮುತ್ತಲಿನ ಹಿಪ್ಪುನೇರಳೆ ತೋಟಗಳು ಹಾಳಾಗಿದೆ, ಹುಳುಮನೆಗಳಿಗೆ ಈ ಹೊಗೆಯಿಂದಾಗಿ ಬೆಳೆ ಕೈಗೆ ಹತ್ತದಂತಾಗಿದೆ. ಈ ಘಟಕದ ಪಕ್ಕದಲ್ಲೇ ಇರುವ ರೈತ ಜಿ.ಗೋಪಾಲಕೃಷ್ಣ ವಿಷಕುಡಿಯುವುದೊಂದೇ ದಾರಿ ಎಂದು ರೋಧಿಸುತ್ತಿದ್ದಾರೆ. ವಿಶ್ರಾಂತಿಧಾಮ ಮಾಡುತ್ತೇವೆ, ವನ್ಯಧಾಮ ಹಾಗೂ ಉದ್ಯಾನವನ ಮಾಡುತ್ತೇವೆ ಎಂದು ನಂಬಿಸಿ ಈಗ ನಗರಸಭೆಯವರು ಕಸ ಸುರಿಯುವ ತಾಣ ಮಾಡಿದ್ದಾರೆ. ಕಸವನ್ನು ವೈಜ್ಞಾನಿಕವಾಗಿ ಯಾರಿಗೂ ತೊಂದರೆಯಾಗದಂತೆ ಪರಿಷ್ಕರಣೆ ಮಾಡಬೇಕು. ಕೋಟ್ಯಾಂತರ ಹಣವನ್ನು ದುರುಪಯೋಗ ಮಾಡಿಕೊಂಡು ನಮ್ಮ ಗ್ರಾಮಕ್ಕೆ ಸೇರಿದ್ದ ಸ್ಥಳವನ್ನು ನಮಗೆ ಕಂಟಕವನ್ನಾಗಿ ಮಾಡಿದ್ದಾರೆ. ಇದನ್ನು ಮುಚ್ಚದಿದ್ದಲ್ಲಿ ಮುಂದಿನ ದಿನಗಳಲ್ಲಿ ಇದರ ಬೀಗ ಜಡಿದು ಪ್ರತಿಭಟಿಸುತ್ತೇವೆ’ ಎಂದು ಗ್ರಾಮಸ್ಥರು ಎಚ್ಚರಿಸಿದರು.
ಸ್ಥಳಕ್ಕೆ ನಗರಸಭೆ ಆಯುಕ್ತ ಚಲಪತಿ ಆಗಮಿಸಿ ಬೆಂಕಿ ನಂದಿಸಲು ಬೇಕಾದ ನೀರಿನ ಟ್ಯಾಂಕರುಗಳನ್ನು ತರಿಸಿ ಅಗ್ನಿಶಾಮಕ ಸಿಬ್ಬಂದಿಗೆ ನೆರವು ನೀಡಿದರು.
ಕೊತ್ತನೂರು ಗ್ರಾಮದಲ್ಲಿ ಮಡಿವಾಳ ಮಾಚಿದೇವರ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ
ಮಡಿವಾಳ ಸಮಾಜದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ರಾಜ್ಯ ಸಹಕಾರಿ ಮಹಾ ಮಂಡಳಿಯ ಉಪಾಧ್ಯಕ್ಷ ಎಚ್.ವಿ.ನಾಗರಾಜ್ ಹೇಳಿದರು.
ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಮಡಿವಾಳ ಮಾಚಿದೇವರ ವಿಗ್ರಹ ಪ್ರತಿಷ್ಠಾಪನೆ ಹಾಗೂ ಸಮುದಾಯದ ಮಹಿಳೆಯರಿಗಾಗಿ ರಚಿಸಲಾಗಿರುವ ಮಡಿವಾಳ ಮಾಚಿದೇವ ಮಹಿಳಾ ಸ್ವ ಸಹಾಯ ಸಂಘಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಈಗಾಗಲೇ ರಾಜ್ಯಾದ್ಯಂತ ಇರುವ ಮಡಿವಾಳ ಸಮುದಾಯವನ್ನು ಎಸ್ ಸಿ ಗೆ ಸೇರಿಸಬೇಕು ಎಂಬ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಹೋರಾಟಗಳು ನಡೆಯುತ್ತಿದ್ದು ಸಮುದಾಯದವರೆಲ್ಲಾ ಒಗ್ಗಟ್ಟಾಗಿ ಹೋರಾಟಗಳಲ್ಲಿ ಪಾಲ್ಗೊಂಡಾಗ ಮಾತ್ರ ಸಮುದಾಯದ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಈಗಾಗಲೇ ಸಮುದಾಯದ ಮಹಿಳೆಯರು ರಚಿಸಿಕೊಂಡಿರುವ ಸ್ತ್ರೀ ಶಕ್ತಿ ಸಂಘಗಳ ಮೂಲಕ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯ ಪಡೆದುಕೊಂಡು ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ಮಡಿವಾಳ ಮಾಚಿದೇವ ಸಂಘದ ರಾಜ್ಯಾಧ್ಯಕ್ಷ ಸಿ.ನಂಜಪ್ಪ ಮಾತನಾಡಿ, ಯಾವುದೇ ಗ್ರಾಮದಲ್ಲಿ ಮೂವತ್ತಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದಲ್ಲಿ ಆ ಗ್ರಾಮದಲ್ಲಿ ಸರ್ಕಾರದಿಂದ ಸಮುದಾಯ ಭವನ ನಿರ್ಮಾಣ ಮಾಡಲು ಅವಕಾಶವಿರುತ್ತದೆ. ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಈ ಬಗ್ಗೆ ಮಾತನಾಡಿ ಎಲ್ಲಿ ಅಗತ್ಯವಿದೆಯೋ ಅಲ್ಲಿ ಸಮುದಾಯ ಭವನ ನಿರ್ಮಿಸಲು ಕ್ರಮ ಜರುಗಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ. ಗ್ರಾಮದ ಹಿರಿಯ ಮುಖಂಡ ದೇವರಾಜ ಅರಸ್, ಮಡಿವಾಳ ಮಾಚಿದೇವ ಸಂಘದ ರಾಜ್ಯ ಉಪಾಧ್ಯಕ್ಷ ಆರ್.ವಿ.ರಾಜಣ್ಣ, ಜಿಲ್ಲಾ ಕಾರ್ಯದರ್ಶಿ ವೆಂಕಟರಾಮಯ್ಯ, ಚೀಮಂಗಲ ಗ್ರಾಮ ಪಂಚಾಯಿತಿ ಸದಸ್ಯ ಟಿ.ಪಿ.ರಾಜಪ್ಪ, ಡಿ.ಕೃಷ್ಣಪ್ಪ, ಮುನಿರಾಜು, ದೇವರಾಜು ಹಾಜರಿದ್ದರು.
ಶಿಡ್ಲಘಟ್ಟದ ‘ಊರದೇವರು’, ಪುರಾತನ ಪ್ರಸಿದ್ಧ ವೇಣುಗೋಪಾಲಸ್ವಾಮಿಯ ಬ್ರಹ್ಮರಥೋತ್ಸವ
ನಗರದ ಪುರಾತನ ಪ್ರಸಿದ್ಧ ವೇಣುಗೋಪಾಲಸ್ವಾಮಿಯ ಬ್ರಹ್ಮರಥೋತ್ಸವ ಕಾರ್ಯಕ್ರಮ ಗುರುವಾರ ವಿಜೃಂಭಣೆಯಿಂದ ನಡೆಯಿತು. ‘ಊರದೇವರು’ ಎಂದೇ ಪ್ರಸಿದ್ಧವಾದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಬ್ರಹ್ಮರಥೋತ್ಸವ ಸಹಿತ ಎಲ್ಲ ಕೈಂಕರ್ಯಗಳು ಪಾಂಚರಾತ್ರಾಗಮ ಪದ್ಧತಿಯಲ್ಲಿ ಕೈಗೊಳ್ಳಲಾಯಿತು.
ದೇಗುಲದಲ್ಲಿ ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಶಾಸಕ ಎಂ.ರಾಜಣ್ಣ ಮತ್ತು ಗ್ರೇಡ್ 2 ತಹಶೀಲ್ದಾರ್ ಮುನಿಕೃಷ್ಣಪ್ಪ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು. ತಮಟೆ ವಾದನ, ಮಂಗಳ ವಾದ್ಯಗಳ ಮಧ್ಯೆ ರಥವನ್ನು ಅಶೋಕ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು. ಮಹಿಳೆಯರು ತೆಂಗಿನಕಾಯಿ ಒಡೆದು, ಪೂಜೆ ಸಲ್ಲಿಸಿ, ಆರತಿ ಮಾಡಿದರು. ಮಯೂರ ವೃತ್ತದಲ್ಲಿ ಪಾನಕ ಮತ್ತು ಹೆಸರುಬೇಳೆ ಕೋಸಂಬರಿ ಹಂಚಲಾಯಿತು.
ಈ ಹಿಂದೆ ಅಶೋಕ ರಸ್ತೆಯು ಕಿರಿದಾಗಿತ್ತು. ಆ ಕಾರಣಕ್ಕೆ ದೊಡ್ಡದಾದ ಬ್ರಹ್ಮ ರಥವನ್ನು ರಸ್ತೆ ಕೊನೆಯಲ್ಲಿ ತಿರುಗಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ದೇವರನ್ನೇ ತಿರುಗಿಸಿ ರಥವನ್ನು ಹಿಂಬದಿಯಿಂದ ಎಳೆದು ತರಲಾಗುತ್ತಿತ್ತು. ಹೀಗಾಗಿ ‘ಶಿಡ್ಲಘಟ್ಟ ದೇವರು ಹಿಂದುಮುಂದು’ ಎಂಬ ಮಾತು ಚಾಲ್ತಿಗೆ ಬಂದಿತು ಎಂದು ಭಕ್ತರೊಬ್ಬರು ನೆನಪಿಸಿಕೊಂಡರು.
ವೇಣುಗೋಪಾಲಸ್ವಾಮಿ ದೇಗುಲದಲ್ಲಿ ಸೋಮವಾರದಿಂದ ಪ್ರಾರಂಭವಾದ ಪೂಜಾ ಕಾರ್ಯಕ್ರಮಗಳು ವಾರದ ಕಾಲ ನಡೆಯಲಿದ್ದು, ನಗರದ ಎಲ್ಲ ಜಾತಿಯವರೂ ವಿವಿಧ ಕೈಂಕರ್ಯಗಳಲ್ಲಿ ಭಾಗಿಯಾಗುವುದು ವಿಶೇಷವಾಗಿದೆ.
ನಗರಸಭೆ ಆಯುಕ್ತ ಚಲಪತಿ, ದೇಗುಲ ಸಮಿತಿ ಸಂಚಾಲಕ ರೂಪಸಿ ರಮೇಶ್, ಅರ್ಚಕ ವೈ.ಎನ್.ದಾಶರಥಿಭಟ್ಟಾಚಾರ್ಯ, ಶ್ರೀ ವೇಣುಗೋಪಾಲಸ್ವಾಮಿ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಬಿ.ಪಿ.ರಾಘವೇಂದ್ರ, ಬಾಲಕೃಷ್ಣ, ಬಂಗಾರು ಶ್ರೀನಿವಾಸ್ ಹಾಜರಿದ್ದರು.
ಕಾಂಗ್ರೆಸ್ ಪಕ್ಷದ ಉಮೇದುವಾರಿಕೆ ಸ್ವೀಕಾರಕ್ಕೆ ಆಗಮಿಸಿದ ಕೆಪಿಸಿಸಿ ವೀಕ್ಷಕರು
ದಿನದ ಇಪ್ಪತ್ತನಾಲ್ಕು ಗಂಟೆಯಲ್ಲಿ ಕಷ್ಟ ಬಂದಾಗ ಬಾಗಿಲು ಬಡಿದೊಡನೇ ಸ್ಪಂದಿಸುವ ಜನಪ್ರತಿನಿಧಿಯನ್ನು ಆಯ್ಕೆ ಮಾಡಿ. ಅಧಿಕಾರ ಸ್ವಹಿತಕ್ಕೆ ಅಲ್ಲ, ಸ್ವಜನ ಹಿತಕ್ಕಾಗಿರಬೇಕು ಎಂದು ಕೆಪಿಸಿಸಿಯಿಂದ ವೀಕ್ಷಕರಾಗಿ ಆಗಮಿಸಿದ್ದ ಮಾಜಿ ಸಂಸದ ಪ್ರೊ.ಐ.ಜಿ.ಸನದಿ ತಿಳಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ಉಮೇದುವಾರಿಕೆಯನ್ನು ಪಡೆಯಲು ಆಗಮಿಸಿದ್ದ ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷವು ಸೇವೆ, ತ್ಯಾಗ ಮತ್ತು ಸಮರ್ಪಣೆಯ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. ಬಡವರ ಕಣ್ಣಿರನ್ನು ಒರೆಸದಿದ್ದರೆ ಅದು ನಮ್ಮನ್ನು ಬೆಂಕಿಯಂತೆ ಸುಡುತ್ತದೆ ಎಂಬ ನಮ್ಮ ಹಿರಿಯ ಮುಖಂಡರ ನುಡಿಯಿಂದ ಪ್ರೇರೇಪಿತಗೊಂಡು ಪಕ್ಷವು ಮುನ್ನಡೆಯುತ್ತಿದೆ. ಅಲ್ಪ ಸಂಖ್ಯಾತರ, ಹಿಂದುಳಿದ ವರ್ಗದವರ, ಬಡವರ, ನಿರ್ಗತಿಕರ ಪರವಾಗಿ ನಿಲ್ಲುವುದು ಕಾಂಗ್ರೆಸ್ ಪಕ್ಷವೊಂದೇ. ಬಿಜೆಪಿಯು ಸಂವಿಧಾನವನ್ನು ತಿರುಚುವ ಹುನ್ನಾರದಿಂದ ಹಿಂದುಳಿದ ವರ್ಗದವರನ್ನು ತುಳಿಯಲು ಪ್ರಯತ್ನಿಸುತ್ತಿದೆ ಮತ್ತು ಮುಸ್ಲೀಮರ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಹೇಳಿದರು.
ಕೆಪಿಸಿಸಿಯ ವೀಕ್ಷಕ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಮಾತನಾಡಿ, ಯಾರು ಬೇಕಾದರೂ ತಮ್ಮ ಉಮೇದುವಾರಿಕೆಯ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯ ಆಯ್ಕೆಯನ್ನು ಪಕ್ಷದ ವರಿಷ್ಟರು ನಿರ್ಧರಿಸುವರು. ಧ್ವೇಷ ಭಾವನೆ ಮರೆತು ಪಕ್ಷ ಸೂಚಿಸಿ ಅಭ್ಯರ್ಥಿಯನ್ನು ಎಲ್ಲರೂ ಒಗ್ಗೂಡಿ ಬೆಂಬಲಿಸಿ ಪಕ್ಷದ ಅಭ್ಯರ್ಥಿಯ ಜಯಕ್ಕೆ ಶ್ರಮಿಸಬೇಕು. ಈಗಿನ ಯುವ ಮತದಾರರು ಪ್ರಜ್ಞಾವಂತರು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಾಗ ಮಾತ್ರ ಜಯ ಸಿಗುತ್ತದೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಎಸ್.ಯಾಸ್ಮೀನ್ ತಾಜ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಮಾಜಿ ಶಾಸಕ ವಿ.ಮುನಿಯಪ್ಪ ಅವರನ್ನು ಕ್ಷೇತ್ರದ ಅಭ್ಯರ್ಥಿ ಮಾಡುವಂತೆ ಕೋರಿ ಕೆಪಿಸಿಸಿಯ ವೀಕ್ಷಕರಿಗೆ ಮನವಿ ಸಲ್ಲಿಸಿದರು. ಮಾಜಿ ಶಾಸಕ ವಿ.ಮುನಿಯಪ್ಪ ಸಹ ತಮ್ಮ ಉಮೇದುವಾರಿಕೆಯ ಅರ್ಜಿಯನ್ನು ವೀಕ್ಷಕರಿಗೆ ಸಲ್ಲಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ನಿರ್ಮಲಾ ಮುನಿರಾಜು, ಸತೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಶಶಿಧರ್, ಹಾಪ್‌ಕಾಮ್ಸ್ ಅಧ್ಯಕ್ಷ ಚಂದ್ರೇಗೌಡ, ಕೆ.ಗುಡಿಯಪ್ಪ, ಸುಬ್ರಮಣಿ, ಎಸ್.ಎಂ.ನಾರಾಯಣಸ್ವಾಮಿ, ಬಿ.ವಿ.ಮುನೇಗೌಡ, ಎಚ್.ಎಂ.ಮುನಿಯಪ್ಪ, ಕೆ.ಪಿ.ಸಿ.ಸಿ ಕಾರ್ಯದರ್ಶಿ ಉದಯಶಂಕರ್, ಕಾರ್ತಿಕ್, ಡಿ.ವಿ.ವೆಂಕಟೇಶ್, ರಘುನಾಥರೆಡ್ಡಿ ಹಾಜರಿದ್ದರು.
ವೀಕ್ಷಕರು ಬೇರಯವರಿಂದ ಅರ್ಜಿ ಪಡೆಯದಂತೆ ವಿ.ಮುನಿಯಪ್ಪ ಬೆಂಬಲಿಗರಿಂದ ತಡೆ
ತಾಲ್ಲೂಕಿನ ರಾಜಕೀಯ ಇತಿಹಾಸದಲ್ಲಿ ವಿ.ಮುನಿಯಪ್ಪ ಅವರ ವಿರುದ್ಧ ಪಕ್ಷದಲ್ಲಿ ಈವರೆಗೂ ಬಂಡಾಯ ಅಭ್ಯರ್ಥಿಯಾಗಿ ಯಾರೂ ನಿಂತಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ(ಪುಟ್ಟು) ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಬಯಸಿ ವೀಕ್ಷಕರಿಗೆ ನೀಡಲು ಬಂದಿದ್ದರು. ಪೊಲೀಸರು ಘರ್ಷಣೆ ನಡೆಯಬಹುದೆಂದು ಅವರನ್ನು ಕಾಂಗ್ರೆಸ್ ಭವನಕ್ಕೆ ಹೋಗಲು ಬಿಡದೆ ನಗರಸಭೆಯ ನಿವೇಶನದಲ್ಲಿ ಇರುವಂತೆ ತಿಳಿಸಿದ್ದರು. ಯಾವುದೇ ಕಾರಣಕ್ಕೂ ವೀಕ್ಷಕರಿಗೆ ಆಂಜಿನಪ್ಪ ತಮ್ಮ ಉಮೇದುವಾರಿಕೆ ಸಲ್ಲಿಸಲು ಅವಕಾಶ ನೀಡಬಾರದು ಎಂದು ವಿ.ಮುನಿಯಪ್ಪ ಬೆಂಬಲಿಗರು ಕಾದಿದ್ದರು. ಕಾಂಗ್ರೆಸ್ ಭವನದಿಂದ ಹೊರಟು ಆಂಜಿನಪ್ಪ ಇರುವ ಸ್ಥಳಕ್ಕೆ ಬರಲು ವೀಕ್ಷಕರ ವಾಹನ ಪ್ರಯತ್ನಿಸಿದಾಗ ವಾಹನವನ್ನು ಅಡ್ಡಗಟ್ಟಿ ವೀಕ್ಷಕರು ಇಳಿಯಲು ಬಿಡದೆ ಸಾಗಹಾಕಿದರು.
ಉಚಿತ ಆರೋಗ್ಯ ತಪಾಸಣಾ ಶಿಬಿರ
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಜಿಲ್ಲೆಯ ಐದು ತಾಲ್ಲೂಕು ಕೇಂದ್ರಗಳಲ್ಲಿ ಸಾಮಾಜಿಕ, ಆರ್ಥಿಕ ಚಟುವಟಿಕೆಗಳನ್ನು ನಡೆಸುತ್ತಿರುವುದಾಗಿ ರಿವಾರ್ಡ್ಸ್ ಸಾಮಾಜಿಕ ಸೇವಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಹರಿಪ್ರಸಾದ್ ತಿಳಿಸಿದರು.
ನಗರದ ಸಿದ್ಧಾರ್ಥನಗರದ ಅಂಗನವಾಡಿ ಕೇಂದ್ರದಲ್ಲಿ ಕೊಳಚೆ ಸುಧಾರಣೆ ಯೋಜನೆಯಲ್ಲಿ ಆರ್.ಎಲ್.ಜಾಲಪ್ಪ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆರೋಗ್ಯ ಸ್ಥಿತಿಗತಿಯಿಂದ ವಂಚಿತರಾದ ಜನರಿಗೆ ಅನುಕೂಲವಾಗಲೆಂದು ತಜ್ಞ ವೈದ್ಯರ ಸಹಕಾರದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸುತ್ತಿದ್ದೇವೆ. ಹೆಚ್ಚಿನ ಚಿಕಿತ್ಸೆಯ ಅಥವಾ ಶಸ್ತ್ರಚಿಕಿತ್ಸೆಯ ಅಗತ್ಯವಿರುವವರಿಗೆ ರಿವಾರ್ಡ್ಸ್ ಸಾಮಾಜಿಕ ಸೇವಾ ಸಂಸ್ಥೆಯ ವತಿಯಿಂದ ಉಚಿತವಾಗಿ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುವುದು. ಸ್ವಸ್ಥ, ಸಮಾನ, ಆರೋಗ್ಯಕರ ಸಮಾಜ ನಮ್ಮದಾಗಬೇಕು. ಬಡವರಿಗೂ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗಬೇಕೆಂಬುದು ನಮ್ಮ ಉದ್ದೇಶ ಎಂದು ಹೇಳಿದರು.
ವಿವಿಧ ತಜ್ಷ ವೈದ್ಯರು ಆಗಮಿಸಿ ರೋಗಿಗಳನ್ನು ಪರೀಕ್ಷಿಸಿದರು. ಈ ಸಂದರ್ಭದಲ್ಲಿ ಉಚಿತವಾಗಿ ಔಷಧಿ ವಿತರಿಸಲಾಯಿತು ಹಾಗೂ ಮೂತ್ರ, ರಕ್ತ, ಇಸಿಜಿ, ಬಿಪಿ ಮತ್ತು ಹೃದಯ ಪರೀಕ್ಷೆಯನ್ನು ನಡೆಸಲಾಯಿತು.
ಡಾ.ಸುನಿಲ್, ಡಾ.ಸ್ವಾತಿ, ಡಾ.ಕಿರಣ್, ಡಾ.ಆರ್ಯ, ಡಾ.ರಮ್ಯಾ, ಸಾರ್ವಜನಿಕ ಸಂಪರ್ಕಾಧಿಕಾರಿ ವಿಷ್ಣು, ರಿವಾರ್ಡ್ಸ್ ಸಂಸ್ಥೆಯ ಆಂಜಪ್ಪ, ಸುನೀತಾ, ಸಾವಿತ್ರಿ, ದೀಪಾ ಹಾಜರಿದ್ದರು.
‘ಸುವರ್ಣಶ್ರೀ ರಾಜ್ಯ ಪ್ರಶಸ್ತಿ’ಯ ಗೌರವ
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್ ಅವರ ಸಾಂಸ್ಕೃತಿಕ ಸೇವೆಯನ್ನು ಪರಿಗಣಿಸಿ ‘ಸುವರ್ಣಶ್ರೀ ರಾಜ್ಯ ಪ್ರಶಸ್ತಿ’ಯನ್ನು ಕರ್ನಾಟಕ ಪ್ರದೇಶ ಹಿಂದುಳಿದ ವರ್ಗಗಳ ಮಹಾ ಒಕ್ಕೂಟ, ಸುವರ್ಣ ಚಾರಿಟಬಲ್ ಟ್ರಸ್ಟ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನೀಡಿ ಗೌರವಿಸಲಾಯಿತು
ಕರವೇ ತಾಲ್ಲೂಕು ಘಟಕದ ಪದಾಧಿಕಾರಿಗಳ ನೇಮಕ
ಶಿಡ್ಲಘಟ್ಟದ ಪ್ರವಾಸಿ ಮಂದಿರದಲ್ಲಿ ಕರವೇ ತಾಲ್ಲೂಕು ಘಟಕದ (ಪ್ರವೀಣ್ ಶೆಟ್ಟಿ ಬಣ) ಯುವಕರ ಹಾಗೂ ಕಾರ್ಮಿಕ ಘಟಕಗಳ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ತಾಲ್ಲೂಕು ಯುವಕರ ಘಟ್ಟಕದ ಅಧ್ಯಕ್ಷರಾಗಿ ಗಜೇಂದ್ರ, ಉಪಾಧ್ಯಕ್ಷ ನವೀನ್ ಹಾಗೂ ಕಾರ್ಮಿಕ ಘಟಕದ ಅಧ್ಯಕ್ಷರನ್ನಾಗಿ ತೊಸಿಫ್, ತಾಲ್ಲೂಕು ಉಪಾಧ್ಯಕ್ಷರಾಗಿ ಸತೀಶ್, ಖಜಾಂಚಿಯಾಗಿ ಶ್ರೀನಿವಾಸ್, ಕಾನೂನು ಸಲಹೆಗಾರರಾಗಿ ಜಯರಾಮ್ ರೆಡ್ಡಿ ಅವರನ್ನು ಅಧ್ಯಕ್ಷ ವಸಂತಕುಮಾರ್ ನೇಮಕ ಮಾಡಿದರು.
ಆಲ್ ಇಂಡಿಯಾ ಆಂಟಿ ಕರೆಪ್ಶನ್ ಕಮಿಷನ್ ಉಪಾಧ್ಯಕ್ಷ
ಶಿಡ್ಲಘಟ್ಟದ ಕಲ್ಯಾಣ್ ಸುಂದರ್ ಅವರನ್ನು ಆಲ್ ಇಂಡಿಯಾ ಆಂಟಿ ಕರೆಪ್ಶನ್ ಕಮಿಷನ್ ಉಪಾಧ್ಯಕ್ಷರನ್ನಾಗಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಪ್ರಮೋದ್ ಕುಮಾರ್ ಮತ್ತು ರಾಜ್ಯ ಘಟಕದ ಅಧ್ಯಕ್ಷ ವಿನೋದ್ ಚಂದರ್ ಪ್ರಮಾಣ ಪತ್ರವನ್ನು ನೀಡಿದರು

