ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಮತ್ತು ಆರೋಪಿಗಳನ್ನು ಹಿಡಿದುಕೊಟ್ಟರೂ ಬಿಟ್ಟು ಕಳಿಸಿದ ಪೇದೆ ಜಯರಾಮ್ ರನ್ನು ಅಮಾನತ್ತುಗೊಳಿಸಬೇಕೆಂದು ಒಕ್ಕಲಿಗರ ಯುವ ಸೇನೆ ಸಂಘದ ಸದಸ್ಯರು ಡಿ.ವೈ.ಎಸ್.ಪಿ ನಾಗೇಶ್ ಅವರಿಗೆ ಮನವಿಪತ್ರವನ್ನು ಸೋಮವಾರ ಸಲ್ಲಿಸಿದರು.
ಇದ್ಲೂಡು ರಸ್ತೆಯ ಮಾರುತಿನಗರದ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸುನಿಲ್, ಕಲ್ಯಾಣ್, ಮಂಜು, ಶಶಿ ಎಂಬುವವರು ಗುಂಪುಗೂಡಿ ಬಂದು ಸಂದೀಪ್, ನಾಗೇಶ್ ಮತ್ತು ಮಹೇಶ್ ಅವರ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಗೊಳಗಾದವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಮಾರಕಾಸ್ತ್ರಗಳೊಂದಿಗೆ ಹಿಂದೆ ಹಲ್ಲೆ ನಡೆಸಿರುವವರು ಗುಂಪುಗೂಡಿ ಬಂದಿದ್ದರು. ಆ ಸಮಯದಲ್ಲಿ ಮೂವರನ್ನು ಹಿಡಿದು ಪೇದೆ ಜಯರಾಮ್ಗೆ ಒಪ್ಪಿಸಲಾಗಿತ್ತು. ಅವರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೇ ಆರೋಪಿಗಳನ್ನು ಬಿಟ್ಟು ಕಳಿಸಿದ್ದಾರೆ. ತಪ್ಪಿತಸ್ಥ ಆರೋಪಿಗಳನ್ನು ಬಂಧಿಸಬೇಕು. ಪೇದೆ ಜಯರಾಮ್ ರನ್ನು ಅಮಾನತ್ತುಗೊಳಿಸಬೇಕು ಎಂದು ಒತ್ತಾಯಿಸಿದರು.
ವಿನಾಕಾರಣ ಒಕ್ಕಲಿಗ ಸಮುದಾಯದವರ ಮೇಲೆ ಸುಳ್ಳು ದಾಖಲೆಗಳೊಂದಿಗೆ ಜಾತಿ ನಿಂದನೆಯ ದೂರು ದಾಖಲಿಸಬಾರದು. ಅದಕ್ಕೆ ಪ್ರೋತ್ಸಾಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದರು.
ಒಕ್ಕಲಿಗರ ಯುವ ಸೇನೆ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ಮುರಳಿ, ಶ್ರೀನಾಥ್, ರಾಜಣ್ಣ, ವಿಜಿ, ಸಂತೋಷ್, ರೆಡ್ಡಿ, ಮಂಜುನಾಥ್, ಮುದ್ದರಾಜ್ ಹಾಜರಿದ್ದರು
ಆರೋಪಿಗಳನ್ನು ಬಂಧಿಸಲು ಒಕ್ಕಲಿಗರ ಯುವ ಸೇನೆ ಸಂಘದ ಸದಸ್ಯರ ಮನವಿ
ದೇವರಮಳ್ಳೂರಿನ ಕೆರೆ ಪುನಶ್ಚೇತನಕ್ಕೆ ಸಮಿತಿ ರಚನೆ
ಆನಂದನ ಕೋಕೋಕೋಲಾ ಕಂಪೆನಿಯ ಆರ್ಥಿಕ ಸಹಾಯದೊಂದಿಗೆ ಮೈರಾಡ ಸಂಸ್ಥೆಯ ವತಿಯಿಂದ ಸಾಂಪ್ರದಾಯಿಕ ನೀರಿನ ಮೂಲಗಳನ್ನು ಪುನಶ್ಚೇತನಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ ತಿಳಿಸಿದರು.
ತಾಲ್ಲೂಕಿನ ದೇವರಮಳ್ಳೂರಿನಲ್ಲಿ ನಡೆದ ಕೆರೆ ಸಮಿತಿಯ ಪುನಶ್ಚೇತನ ಆಯ್ಕೆಯ ಸಭೆಯಲ್ಲಿ ಅವರು ಮಾತನಾಡಿದರು.
ದೇವರಮಳ್ಳೂರಿನ ಕೆರೆಯ ಹೂಳನ್ನು ತೆಗೆಯುವುದು, ಕಟ್ಟೆ, ಕೋಡಿಗಳನ್ನು ದುರಸ್ಥಿ ಮಾಡಿಸುವ ಮೂಲಕ ಮುಂದಿನ ಮಳೆಗಾಲದ ಹೊತ್ತಿಗೆ ಕೆರೆಯ ನೀರಿನ ಸಂಗ್ರಹಣೆಯ ಸಾಮರ್ಥ್ಯವನ್ನು ಹೆಚ್ಚಿಸು ಯೋಜನೆಯನ್ನು ರೂಪಿಸಲಾಗಿದೆ. ಸುಮಾರು ಒಂಭತ್ತೂವರೆ ಲಕ್ಷ ರೂಗಳ ಯೋಜನೆಯಿದು. ತಾಲ್ಲೂಕಿನಲ್ಲಿ ಪ್ರಪ್ರಥಮವಾಗಿ ಮೈರಾಡ ಸಹಕಾರದಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ರೇಷ್ಮೆ ರೈತ ಉತ್ಪಾದಕ ಕಂಪೆನಿಯ ನೇತೃತ್ವದಲ್ಲಿ ಗ್ರಾಮಸ್ಥರನ್ನೊಳಗೊಂಡ ಸಮಿತಿಯನ್ನು ರಚಿಸಿ ಲೋಪದೋಷಗಳಿರದಂತೆ ಈ ಯೋಜನೆಯನ್ನು ಅನುಷ್ಟಾನಗೊಳಿಸಲಾಗುವುದು ಎಂದು ಹೇಳಿದರು.
ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎನ್.ಜನಾರ್ಧನಮೂರ್ತಿ ಮಾತನಾಡಿ, ಕೆರೆಯು ಪಾತ್ರೆಯಿದ್ದಂತಿರಬೇಕು, ತಟ್ಟೆಯಂತಿರಬಾರದು. ಬಿದ್ದ ನೀರು ಸಂಗ್ರಹವಾಗುವಂತೆ ಮಾಡುವ ಮೂಲಕ ನಮ್ಮಲ್ಲಿ ಬಿದ್ದ ಮಳೆ ನೀರು ನಮಗೇ ಉಪಯೋಗವಾಗಲಿ. ಮೈರಾಡ ಸಂಸ್ಥೆದಿಂದ ಈ ರೀತಿಯ ಹಲವು ಸಾಮಾಜಿಕ ಒಳಿತಿನ ಯೋಜನೆಗಳಿದ್ದು, ಒಂದೊಂದಾಗಿ ಅನುಷ್ಟಾನಗೊಳಿಸಲಾಗುವುದು. ಗ್ರಾಮಸ್ಥರು ಸಹಕರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಯೋಜನೆಯ ಅನುಷ್ಟಾನಕ್ಕಾಗಿ 15 ಜನರ ಸಮಿತಿಯನ್ನು ರಚಿಸಲಾಯಿತು. ಸಮಿತಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ರೈತರು, ಸ್ತ್ರೀ ಶಕ್ತಿ ಗುಂಪಿನಿಂದ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು.
ಮೈರಾಡ ಸಂಸ್ಥೆಯ ಅಧಿಕಾರಿ ವೆಂಕಟೇಶ್, ಗ್ರಾಮ ಪಂಚಾಯಿತಿ ಅಧ್ಯಕಷೆ ವೆಂಕಟಲಕ್ಷ್ಮಮ್ಮ, ಪಿಡಿಒ ರಮಾಕಾಂತ್, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ್, ಪ್ರಕಾಶ್, ದೀಪಕ್, ಅನಿಲ್‌ಕುಮಾರ್, ರೇಷ್ಮೆ ಇಲಾಖೆಯ ಪ್ರಕಾಶ್, ಮುನಿರಾಜು, ಗ್ರಾಮಸ್ಥರಾದ ಕೆಂಪಣ್ಣ, ವೆಂಕೋಬರಾವ್ ಹಾಜರಿದ್ದರು.
ನನಗೆ ರಾಜಕೀಯ ಶಕ್ತಿ ಕೊಡಿ, ಜೀವ ಇರೋವರೆಗೂ ನಿಮ್ಮ ಸೇವೆ ಮಾಡುತ್ತೇನೆ : ಬಿ.ಎನ್.ರವಿಕುಮಾರ್
ನಾನೊಬ್ಬ ಸಾಮಾನ್ಯ ರೈತ, ನನ್ನ ಬಳಿ ಕೋಟಿಗಟ್ಟಲೇ ಹಣವಿಲ್ಲ, ನೂರಾರು ಎಕರೆ ಜಮೀನಿಲ್ಲ, ಆದರೂ ಸತತವಾಗಿ ಹತ್ತು ವರ್ಷಗಳಿಂದ ಹಲವು ಮುಖಂಡರೊಟ್ಟಿಗೆ ಪಕ್ಷ ಕಟ್ಟಿದ್ದೇನೆ. ನನಗೆ ರಾಜಕೀಯ ಶಕ್ತಿ ಕೊಡಿ ನಾನು ಜೀವ ಇರೋವರೆಗೂ ನಿಮ್ಮ ಸೇವೆ ಮಾಡುತ್ತೇನೆ ಎಂದು ಎಚ್.ಡಿ.ಡಿ ಮತ್ತು ಜೆ.ಪಿ.ಎಸ್ ಸೇವಾಭಿವೃದ್ಧಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮೇಲೂರು ಬಿ.ಎನ್.ರವಿಕುಮಾರ್ ತಿಳಿಸಿದರು.
ಜೆ.ಡಿ.ಎಸ್.ಪಕ್ಷ ಟಿಕೆಟ್ ಕೊಟ್ಟರೆ ಆ ಪಕ್ಷ ದಿಂದ ಸ್ಪರ್ದಿಸುವೆ ಇಲ್ಲವಾದರೆ, ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧಿಸುವೆ. ನಾನು ಮಾಡಿರುವ ಸೇವೆ ಗುರ್ತಿಸಿ ಆಶಿರ್ವದಿಸಿ. ಮಾಜಿ ಸಚಿವ ವಿ.ಮುನಿಯಪ್ಪ ಅವರನ್ನು ಎದುರು ಹಾಕಿಕೊಂಡು, ಚುನಾವಣೆ ಮಾಡಿದ್ದೇವೆ. ಹಾಲಿ ಶಾಸಕ ಎಂ.ರಾಜಣ್ಣ ಅವರನ್ನು ಗೆಲ್ಲಿಸಿಕೊಂಡಿದ್ದೇವೆ. ಇದನ್ನು ಅರ್ಥ ಮಾಡಿಕೊಳ್ಳದೆ ಶಾಸಕರು, ಪಕ್ಷಕ್ಕೆ ನಿಷ್ಠಾವಂತರಾಗಿ ದುಡಿದು ಪಕ್ಷ ಕಟ್ಟಿದ ಹಲವಾರು ಮುಖಂಡರನ್ನು ಕಡೆಗಣಿಸಿ, ಪಕ್ಷವನ್ನು ಹಾಳು ಮಾಡುತ್ತಿರುವುದು ಗಮನಕ್ಕೆ ಬಂದ ನಂತರ ಅವರ ವಿರುದ್ಧ ಸೆಟೆದು ನಿಲ್ಲಬೇಕಾಯಿತು.
ಶಾಸಕ ಎಂ.ರಾಜಣ್ಣ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಗೆಲ್ಲುವುದಿಲ್ಲ. ಜನರ, ಕಾರ್ಯಕರ್ತರ ವಿಶ್ವಾಸಗಳಿಸದವರು ಗೆಲುವು ಸಾಧಿಸುವುದಿಲ್ಲ. ಮಾಜಿ ಶಾಸಕ ವಿ.ಮುನಿಯಪ್ಪ ನವರು 35 ವರ್ಷಗಳ ಕಾಲದ ಅಧಿಕಾರವಧಿಯಲ್ಲಿ ಹಲವು ಮುಖಂಡರ ರಾಜಕೀಯ ಬದುಕನ್ನು ಹಾಳು ಮಾಡಿದರು ಎಂದು ಆರೋಪಿಸಿದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಬಿ.ಎನ್.ರವಿಕುಮಾರ್ ಅವರಿಗೆ ಪಕ್ಷದಿಂದ ಬಿ.ಫಾರಂ ನೀಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಅನಿವಾರ್ಯವಾಗಲಿದೆ. ಬಿ.ಎನ್.ರವಿಕುಮಾರ್ ಅವರಿಗೆ ಬಿ.ಫಾರಂ ನೀಡಬೇಕು ಎಂದು ವರಿಷ್ಟರಿಗೆ ಮನವಿ ಮಾಡಿಕೊಂಡಿದ್ದೆವು, ಪಕ್ಷದಿಂದ ಹಾಲಿ ಶಾಸಕರ ಹೆಸರು ಘೋಷಣೆ ಮಾಡಲಾಗಿದೆ. ಪಕ್ಷದಿಂದ ಟಿಕೆಟ್ ನೀಡದಿದ್ದರೂ ರವಿಕುಮಾರ್ ಸ್ಪರ್ಧಿಸುತ್ತಾರೆ. ಅವರಿಗೆ ಮತ ನೀಡಿ ಎಂದರು.
ಹುಜುಗೂರು ರಾಮಣ್ಣ ಮಾತನಾಡಿ, ನಮಗೆ ಚಿಹ್ನೆ ಮುಖ್ಯವಲ್ಲ, ಜನಶಕ್ತಿ ಮುಖ್ಯವಾಗಿದೆ. ಮುಂದಿನ ಚುನಾವಣೆಯಲ್ಲಿ ರವಿಕುಮಾರ್ ಅವರಿಗೆ ಯಾವುದೇ ಗುರ್ತು ನೀಡಿದರೂ ಅವರಿಗೆ ಮತ ಕೊಡಿ ಎಂದರು.
ರವಿಕುಮಾರ್ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಕರೆ ತರಲಾಯಿತು. ಶಿಡ್ಲಘಟ್ಟದಿಂದ ದಿಬ್ಬೂರಹಳ್ಳಿವರೆಗೂ ಹಳ್ಳಿಗಳ ಗೇಟ್ ನಲ್ಲಿ ಸ್ವಾಗತ ಕೋರಲು ನಿಂತಿದ್ದ ಕಾರ್ಯಕರ್ತರು. ಪಟಾಕಿಗಳನ್ನು ಸಿಡಿಸಿ, ಹಾರಗಳನ್ನು ಹಾಕಿ ಸ್ವಾಗತಿಸಿದರು.
ಚೀಮನಹಳ್ಳಿ ಗೋಪಾಲ್ ಸೇರಿದಂತೆ ಹಲವಾರು ಮಂದಿ ಕಾಂಗ್ರೆಸ್ ತೊರೆದು ಮೇಲೂರು ರವಿಕುಮಾರ್ ಅವರ ಜೊತೆಗೆ ಸೇರ್ಪಡೆಯಾದರು. ಸಹಸ್ರಾರು ಸಂಖ್ಯೆಯಲ್ಲಿ ರವಿಕುಮಾರ್ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಎಚ್.ಡಿ.ಡಿ ಮತ್ತು ಜೆ.ಪಿ.ಎಸ್ ಸೇವಾಭಿವೃದ್ಧಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಶಿಡ್ಲಘಟ್ಟ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯ 200 ಕೂಲಿ ಕಾರ್ಮಿಕರಿಗೆ ಸೈಕಲ್‌ಗಳು, ಕ್ಷೇತ್ರದ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ 250 ಹೊಲಿಗೆ ಯಂತ್ರಗಳು, ಅಂಗವಿಕಲರಿಗೆ 165 ವೀಲ್‌ಚೇರುಗಳು, 100 ಟ್ರೈಸೈಕಲ್‌ಗಳು, ಅಂಧರಿಗೆ ವಾಕಿಂಗ್ ಸ್ಟಿಕ್‌ಗಳು ಮತ್ತು ಸೆನ್ಸಾರ್‌ಕಿಟ್‌ಗಳು, ಕಾಲಿನ ತೊಂದರೆಯವರಿಗೆ 100 ಎಲ್ಬೋ ಕ್ಲಚಸ್ ಮತ್ತು 100 ಕ್ಲಚಸ್‌ಗಳು, ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ 50 ವಾಟರ್‌ಬೆಡ್‌ಗಳು, ಬುದ್ದಿ ಮಾಂದ್ಯರಿಗೆ ಎಂ.ಆರ್.ಕಿಟ್‌ಗಳನ್ನು ವಿತರಣೆ ಮಾಡಲಾಯಿತು.
ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕರಾದ ಶಿವಾರೆಡ್ಡಿ, ಪಿ.ವಿ.ನಾಗರಾಜ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾರಘು, ನಗರಸಭೆ ಸದಸ್ಯೆ ಸಂಧ್ಯಾಮಂಜುನಾಥ್, ಮುಖಂಡರಾದ ಕೇಶವಮೂರ್ತಿ, ರತ್ನಯ್ಯ, ರಾಜಣ್ಣ, ಕದಿರಿ ಯೂಸುಫ್, ಸಮೀಉಲ್ಲಾ, ಸೈಯ್ಯದ್, ಮುಗಿಲಡಿಪಿ ನಂಜಪ್ಪ, ಕೆ.ಎಸ್.ಮಂಜುನಾಥ್, ಯೋಗಾನಂದ್ ಹಾಜರಿದ್ದರು.
ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆ
ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ. ಖಾಲಿ ಮದ್ಯದ ಬಾಟಲ್ ಸಿಕ್ಕರೂ ದಂಡ ವಿಧಿಸಿ, ಎಚ್ಚರಿಕೆ ನೀಡಿ ಎಂದು ಸರ್ಕಲ್ ಇನ್ಸ್ಪೆಕ್ಟರ್ ಶಿವಮಲ್ಲಯ್ಯ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಭ್ರಷ್ಟಾಚಾರ ನಿಗ್ರಹ ಪೊಲೀಸರಿಂದ ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಅಂಗಡಿಗಳಲ್ಲಿ ಮದ್ಯವನ್ನು ಮಾರಾಟ ಮಾಡುತ್ತಿರುವ ಹಲವಾರು ದೂರುಗಳು ಬರುತ್ತಿರುವ ಹಿನ್ನೆಯಲ್ಲಿ ಅಬಕಾರಿ ಅಧಿಕಾರಿಗಳು ಕ್ರಮ ಜರುಗಿಸಲು ಹಿಂದೆ ಬೀಳಬಾರದು. ಮಕ್ಕಳು ವಿದಸ್ಯಾಭ್ಯಾಸ ಮಾಡುವ ಶಾಲಾ ಕಾಲೇಜುಗಳ ಹತ್ತಿರದ ಅಂಗಡಿಗಳ ಬಗ್ಗೆಯೂ ಕಣ್ಣಿಡಬೇಕು ಎಂದರು.
ಈ ಸಂದರ್ಭದಲ್ಲಿ ಬೈರಗಾನಹಳ್ಳಿಯಲ್ಲಿ ಶೌಚಾಲಯ ಕಟ್ಟಿದ್ದರೂ ಹಣ ನೀಡಿಲ್ಲವೆಂದು ನಾರಾಯಣಸ್ವಾಮಿ ದೂರು ನೀಡಿದರು. ದಲಿತ ಮುಖಂಡ ಮುನಯ್ಯ ಉಚಿತ ನಿವೇಶನಗಳು ಕಡುಬಡವರಿಗೆ ಸಿಗುತ್ತಿಲ್ಲ ಉಳಖ್ಳವರ ಪಾಲಾಗುತ್ತಿದೆ ಎಂದು ದೂರಿದರು. ಯಣ್ಣೂರು ಬಸವರಾಜ್ ಸಾರ್ವಜನಿಕ ಕಣದ ಸ್ಥಳವನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಮಾತನಾಡಿದ್ದಕ್ಕೆ ಹಲ್ಲೆ ನಡೆಸಿದ್ದಾರೆ, ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ದೂರನ್ನು ನೀಡಿದರು.
ಭ್ರಷ್ಟಾಚಾರ ನಿಗ್ರಹ ಪೊಲೀಸ್ ಅಧಿಕಾರಿ ಲಕ್ಷ್ಮೀದೇವಿ, ಗ್ರೇಡ್ 2 ತಹಶೀಲ್ದಾರ್ ಮುನಿಕೃಷ್ಣಪ್ಪ, ತಾಲ್ಲೂಕು ಪಂಚಾಯಿತಿ ಇಒ ವೆಂಕಟೇಶ್ ಹಾಜರಿದ್ದರು.
ಬೆನ್ನು ಹುರಿ ಅಪಘಾತಕ್ಕೆ ಒಳಗಾದ ವ್ಯಕ್ತಿಗಳ ತಪಾಸಣಾ ಶಿಬಿರ
ಮೆದುಳು ಮತ್ತು ಬೆನ್ನುಹುರಿ ಸೇರಿಕೊಂಡು ಕೇಂದ್ರೀಯ ನರವ್ಯವಸ್ಥೆಯನ್ನು ನಿರ್ಮಾಣ ಮಾಡಿರುತ್ತವೆ. ಬೆನ್ನುಹುರಿ ಅಪಘಾತಕ್ಕೆ ಒಳಗಾದವರು ದೇಹದ ಕೆಲವು ಭಾಗಗಳಲ್ಲಿ ಸಂವೇದನೆಯನ್ನು ಕಳೆದುಕೊಳ್ಳುತ್ತಾರೆ. ಇವರಿಗಾಗಿ ಶಿಬಿರವನ್ನು ಆಯೋಜಿಸಿರುವುದು ಉತ್ತಮ ಸಾಮಾಜಿಕ ಕಾರ್ಯವಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್ ತಿಳಿಸಿದರು.
ಹಿರಿಯ ನಾಗರಿಕರ ಮತ್ತು ಜಿಲ್ಲಾ ವಿಕಲ ಚೇತನರ ಕಲ್ಯಾಣ ಇಲಾಖೆ, ರಾಜ್ಯ ಬೆನ್ನು ಹುರಿ ಅಪಘಾತಕ್ಕೆ ಅಂಗವಿಕಲರ ಸಂಘ, ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಲಿಟಿ, ಸೆಂಟ್ ಜಾನ್ ಮೆಡಿಕಲ್ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಬೆನ್ನು ಹುರಿ ಅಪಘಾತಕ್ಕೆ ಒಳಗಾದ ವ್ಯಕ್ತಿಗಳ ಮೂರು ದಿನಗಳ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ಪುನರ್ ಚೇತನ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.
ಕೆಲವು ಮಧ್ಯಸ್ಥ ಪ್ರಕರಣಗಳಲ್ಲಿ ಅಪಘಾತಕ್ಕೊಳಗಾದವರು ಕೈ ಅಥವಾ ಕಾಲಿನ ಚಟುವಟಿಕೆಯನ್ನು ಕಳೆದುಕೊಳ್ಳುತ್ತಾರೆ. ಭೀಕರವಾಗಿ ಬೆನ್ನುಹುರಿ ಅಪಘಾತಕ್ಕೊಳಗಾದವರು ದೇಹದ ಕೆಳಭಾಗದ ಸಂಪೂರ್ಣ ಹಿಡಿತವನ್ನು ಕಳೆದುಕೊಳ್ಳಬಹುದು ಅಥವಾ ದೇಹದ ಮೇಲ್ಬಾಗದ ಚಲನಶೀಲತೆಯನ್ನು ಕಳೆದುಕೊಳ್ಳಬಹುದು. ಅಥವಾ ಸಂಪೂರ್ಣ ದೇಹವು ಪ್ಯಾರಲೈಸಿಸ್ಗೆ ಒಳಗಾಗಬಹುದು. ಚಿಕಿತ್ಸೆ ವೆಚ್ಚ ಹೆಚ್ಚಿರುವ ದಿನಗಳಲ್ಲಿ ಈ ರೀತಿಯ ತಾಲ್ಲೂಕಿನ ಹಾಗೂ ಸುತ್ತಮುತ್ತಲಿನ ತಾಲ್ಲೂಕಿನ ರೋಗಿಗಳಿಗೆ ನೆರವಾಗುವಂತೆ ಶಿಬಿರವನ್ನು ಆಯೋಜಿಸಿರುವುದು ಅನುಕೂಲಕರ ಎಂದು ಹೇಳಿದರು.
ತಾಲ್ಲೂಕಿನ 20 ಮಂದಿ ಸೇರಿದಂತೆ ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿಯಿಂದ ಬಂದಿದ್ದ ರೋಗಿಗಳೂ ಸೇರಿ ಒಟ್ಟು 40 ಮಂದಿ ಬೆನ್ನುಹುರಿ ಅಪಘಾತಕ್ಕೆ ಒಳಗಾದವರು ಪರೀಕ್ಷೆಗೆ ಒಳಪಟ್ಟು ಚಿಕಿತ್ಸೆ ಪಡೆದರು. ಈ ಸಂದರ್ಭದಲ್ಲಿ ರಾಜ್ಯ ಬೆನ್ನು ಹುರಿ ಅಪಘಾತಕ್ಕೆ ಅಂಗವಿಕಲರ ಸಂಘದ ಜಿಲ್ಲಾ ಘಟಕದಿಂದ ಮೂವರಿಗೆ ವೀಲ್ ಚೇರ್ ವಿತರಿಸಲಾಯಿತು.
ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಚಾರಿಟೆಬಲ್ ಟ್ರಸ್ಟ್ ಕಾರ್ಯದರ್ಶಿ ಆರ್.ಎ.ಉಮೇಶ್, ಸೆಂಟ್ ಜಾನ್ ಮೆಡಿಕಲ್ ಆಸ್ಪತ್ರೆಯ ಡಾ.ರಾಜಲಕ್ಷ್ಮಿ ಹರಿಹರನ್, ಡಾ.ಸುನೀತ, ನಾಗೇಂದ್ರಕುಮಾರ್, ರಾಮಚಂದ್ರಪ್ಪ, ಮುನಿರಾಜು, ಮಂಜುನಾಥ ಹಾಜರಿದ್ದರು
ಭಾಷೆ ಅಂದರೆ ಅಕ್ಷರಗಳಲ್ಲ. ಆಕಾರಗಳಲ್ಲ, ಉಸಿರು
ಭಾಷೆ ಒಂದು ಸಂಪರ್ಕಸಾಧನ ಅಷ್ಟೇ ಅಲ್ಲ, ಅದು ಬದುಕಿನ ಅವಿಭಾಜ್ಯ ಅಂಗ. ಭಾಷೆ ಅಂದರೆ ಅಕ್ಷರಗಳಲ್ಲ. ಆಕಾರಗಳಲ್ಲ. ಉಸಿರು. ಪ್ರಪಂಚದ ಯಾವುದೇ ಮೂಲೆಯ ಭಾಷೆ ಅದಾಗಿರಲಿ ಆ ಭಾಷೆಯನ್ನು ಗೌರವಿಸಬೇಕು ಹಾಗೇ ತಮ್ಮ ಭಾಷೆಯನ್ನು ಉಳಿಸಿ ಬೆಳಸಬೇಕು ಎಂದು ಸಿಡಿಪಿಒ ಅಧಿಕಾರಿ ಲಕ್ಷ್ಮೀದೇವಮ್ಮ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ವಿಶ್ವ ಮಾತೃಭಾಷೆಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವ ತಾಯ್ನುಡಿ ದಿನಾಚರಣೆ ಅಂಗವಾಗಿ ನಾವು ಇಂದಿನಿಂದಲೆ ಪಣತೊಡೋಣ. ಎಲ್ಲಾ ಭಾಷೆಯನ್ನು ಗೌರವಿಸಿಸುತ್ತಲೇ ನಮ್ಮ ಮಾತೃಭಾಷೆಯನ್ನು ಉಳಿಸಿ ಬೆಳೆಸೋಣ. ೧೯೯೯ ರಲ್ಲಿ ಯುನೆಸ್ಕೋ ಫೆಬ್ರುವರಿ ೨೧ ರ ದಿನವನ್ನು ವಿಶ್ವ ತಾಯ್ನುಡಿ ದಿನವೆಂದು ಘೋಷಣೆ ಮಾಡಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ಮಾತನಾಡಿ, ತನ್ನ ಭಾಷೆಯ ಮೇಲೆ ಹಿಡಿತ ಸಾಧಿಸಿದವನಿಗೆ ಇತರ ಭಾಷೆಗಳ ಕಲಿಕೆ ಸುಲಭವಾಗುತ್ತದೆ. ಬಹುಭಾಷಾವಲ್ಲಭನಾಗಲು ಮಾತೃಭಾಷೆಯಲ್ಲಿ ಪರಿಣಿತನಾಗುವುದು ಅನಿವಾರ್ಯ. ಹೆತ್ತ ತಾಯಿಯನ್ನು ಪ್ರೀತಿಸದವನು ಬೇರೆಯವರನ್ನು ಹೇಗೆ ಪ್ರೀತಿಸಬಲ್ಲ ಎಂದು ಹೇಳಿದರು.
ಶಿಕ್ಷಕ ಚಾಂದ್ಪಾಷ ನಮ್ಮ ಭಾಷೆಯ ವಿವಿಧ ಆಯಾಮಗಳು, ಕನ್ನಡ ಭಾಷೆಯ ಹಿರಿಮೆ, ಗರಿಮೆ ಹಾಗೂ ಪ್ರಾಚೀನತೆಯನ್ನು ಮಕ್ಕಳಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಹಿರಿಯ ನಾಗರಿಕರ ಕಾರ್ಡ್ಗಳನ್ನು ಗ್ರಾಮದ ಹಿರಿಯರಿಗೆ ವಿತರಿಸಲಾಯಿತು.
ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ಶಿಕ್ಷಕರಾದ ಭಾರತಿ, ಅಶೋಕ್, ಸಿಬ್ಬಂದಿ ವೆಂಕಟಮ್ಮ, ಗ್ರಾಮಸ್ಥರಾದ ವೆಂಕಟಪ್ಪ, ತಿಮ್ಮಕ್ಕ ಹಾಜರಿದ್ದರು.
ವದಂತಿಗಳಿಗೆ ಕಿವಿಗೊಡಬೇಡಿ, ನಾನೇ ಜೆಡಿಎಸ್ ಅಧಿಕೃತ ಅಭ್ಯರ್ಥಿ:ಶಾಸಕ ಎಂ.ರಾಜಣ್ಣ
ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬದಲಾಗುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುವದಂತಿಗಳನ್ನು ಹರಡಲಾಗುತ್ತಿದೆ. ಜೆಡಿಎಸ್ ಪಕ್ಷದ ವರಿಷ್ಠರು ಹಾಗೂ ರಾಜ್ಯಾಧ್ಯಕ್ಷರು ಪಟ್ಟಿಯಲ್ಲಿ ನನ್ನ ಹೆಸರನ್ನು ಘೋಷಣೆ ಮಾಡಿದ್ದಾರೆ. ಕಾರ್ಯಕರ್ತರು ಗೊಂದಲಕ್ಕೆ ಒಳಗಾಗದೆ ವದಂತಿಗಳನ್ನು ಕಡೆಗಣಿಸಬೇಕು ಎಂದು ಶಾಸಕ ಎಂ.ರಾಜಣ್ಣ ಮನವಿ ಮಾಡಿದರು.
ನಗರದ ಪ್ರವಾಸಿಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮತದಾರರ ಮತ ಅವರವರ ಹಕ್ಕು ಮತ್ತು ಆಸ್ತಿ. ಅವರ ಒಲವಿದ್ದೆಡೆ ಅವರ ಆಯ್ಕೆ ಇರುತ್ತದೆ. ಆದರೆ ಮತದಾರರನ್ನು ತಪ್ಪುದಾರಿಗೆಳೆಯುವ, ಅನಾರೋಗ್ಯಕರ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಬಾರದು. ಜನಪ್ರತಿನಿಧಿಗಳನ್ನು ಕೀಳು ಅಭಿರುಚಿಯಲ್ಲಿ ಚಿತ್ರಿಸುವುದನ್ನು ನಾನು ಖಂಡಿಸುತ್ತೇನೆ. ಯಾವುದೂ ಶಾಶ್ವತವಲ್ಲ, ಸತ್ಯವನ್ನು ಹೇಳಲಿ. ‘ಪ್ರೀತಿ ಅಕಾರಣವಾಗಿರಲಿ ದ್ವೇಷ ಸಕಾರಣವಾಗಿರಲಿ’ ಎಂದು ಹೇಳಿದರು.
ಯಾವುದೇ ಪಕ್ಷದಲ್ಲಿ ಆಕಾಂಕ್ಷಿಗಳಿರುವುದು ತಪ್ಪಲ್ಲ, ಆದರೆ ಎಲ್ಲರೂ ಪಕ್ಷದ ಸಿದ್ಧಾಂತಗಳಿಗೆ, ವ್ಯವಸ್ಥೆಗೆ ಕಟಿಬದ್ಧರಾಗಿರಬೇಕು. ಐದು ವರ್ಷದಲ್ಲಿ ಜನರ ಮಧ್ಯೆ ಇದ್ದು ಕೆಲಸ ಮಾಡಿದ್ದೇನೆ. ನಮ್ಮ ಪಕ್ಷದ ಇನ್ನೊಂದು ಬಣ ಸಭೆ ನಡೆಸಿದ್ದಾರೆ. ಸಂತೋಷ. ಎಲ್ಲರನ್ನೂ ಭೇಟಿ ಮಾಡುತ್ತೇನೆ. ಕ್ಷೇತ್ರವೆಲ್ಲಾ ಸುತ್ತಾಡಿ ಜನರನ್ನು ಒಗ್ಗೂಡಿಸುತ್ತೇನೆ ಎಂದರು.
ಬುಧವಾರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಸಭೆ ಮಾಡಿ, ಘೋಷಣೆ ಮಾಡಿರುವ ಪ್ರತಿಯೊಬ್ಬ ಅಭ್ಯರ್ಥಿಗಳನ್ನು ಕರೆಯಿಸಿ ಕ್ಷೇತ್ರಗಳ ಕುರಿತು ಚರ್ಚೆ ನಡೆಸಿ, ಮಾರ್ಗದರ್ಶನ ಮಾಡಿದ್ದಾರೆ. ಅದರೂ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ.
ಪಕ್ಷದ ನಿಯಮಗಳ ಅನುಸಾರವಾಗಿ ಹೋಗಬೇಕು. ಅಧಿಕಾರ ಯಾರಿಗೂ ಶಾಶ್ವತವಲ್ಲ, ಜನರು ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದ ಅವರು, ಕ್ಷೇತ್ರದಲ್ಲಿ ಅಸಮಾಧಾನಗೊಂಡಿರುವ ಮುಖಂಡರನ್ನು ಭೇಟಿ ಮಾಡಿ, ಪಕ್ಷ ಸಂಘಟನೆಗೆ ಭಾನುವಾರದಿಂದ ಚಾಲನೆ ನೀಡಲಿದ್ದೇವೆ. ಪೊಲೀಸರಿಗೆ ಮನವಿ ಮಾಡುತ್ತೇವೆ. ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಪಡಿಸಿಕೊಳ್ಳುವವರ ಮೇಲೆ ಸೂಕ್ತ ಕ್ರಮಕ್ಕೆ ಒತ್ತಾಯ ಮಾಡುತ್ತೇವೆ. ಶಾಸಕರನ್ನು ಆಯ್ಕೆ ಮಾಡುವುದು ಮತದಾರರು, ಇದನ್ನು ಮರೆತು ಕೀಳು ಮಾತಾಡುವುದು, ಪರಿಹಾಸ್ಯ ಮಾಡುವುದು ಸರಿಯಲ್ಲ, ಆರೋಗ್ಯಕರವಾದ ಚರ್ಚೆಗೆ ಬರಲಿ, ಬದಲಾವಣೆಯ ಪ್ರಶ್ನೆಯೆ ಇಲ್ಲ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಎಂದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಡಾ.ಧನಂಜಯರೆಡ್ಡಿ ಮಾತನಾಡಿ, ಯಲಹಂಕದ ನಿಟ್ಟೆ ಕಾಲೇಜಿನ ಸಮೀಪದಲ್ಲಿ ಇದೇ ೧೭ ರಂದು ನಡೆದ ವಿಕಾಸ ಪರ್ವ ಸಮಾವೇಶದಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಅದರಲ್ಲಿ ಕ್ರಮ ಸಂಖ್ಯೆ ೭೭ ರಲ್ಲಿ ಶಾಸಕ ಎಂ.ರಾಜಣ್ಣ ಅವರ ಹೆಸರು ನಮೂದು ಮಾಡಿದ್ದಾರೆ.
ಬುಧವಾರ ಖಾಸಗಿ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿರುವ ಸುದ್ದಿಗಳಲ್ಲಿ ಶಿಡ್ಲಘಟ್ಟದ ಪ್ರಸ್ತಾಪವೇ ಆಗಿಲ್ಲ, ಸುದ್ದಿಗಳ ವಿಡಿಯೋಗಳನ್ನು ಬಳಕೆ ಮಾಡಿಕೊಂಡು, ಮೊಬೈಲ್ ಗಳಲ್ಲಿ ತಪ್ಪು ಮಾಹಿತಿ ಟೈಪ್ ಮಾಡಿ, ಹರಿಯಬಿಟ್ಟು, ವಿನಾಕಾರಣ ಕ್ಷೇತ್ರದ ನಿಷ್ಠಾವಂತ ಕಾರ್ಯಕರ್ತರಲ್ಲಿ ಗೊಂದಲಮೂಡಿಸಲಾಗುತ್ತಿದೆ ಎಂದರು.
ಮುಖಂಡರಾದ ಕನಕಪ್ರಸಾದ್, ರಹಮತ್ತುಲ್ಲಾ, ಸುರೇಂದ್ರಗೌಡ, ಗುಮ್ಮರೆಡ್ಡಿ, ಲಕ್ಷ್ಮೀನಾರಾಯಣ(ಲಚ್ಚಿ), ಮುರಳಿ, ಆಂಜಿನಪ್ಪ, ದೇವು ಹಾಜರಿದ್ದರು.
ಶಿಡ್ಲಘಟ್ಟ ತಾಲ್ಲೂಕಿಗೆ ವಲಸೆ ಕುರಿಗಳ ಆಗಮನ
ಬೇಸಿಗೆಯ ಬಿಸಿ ನಮಗೆ ಈಗೀಗ ಪ್ರಾರಂಭವಾಗುತ್ತಿದೆ. ಆದರೆ ರಾಜ್ಯದ ವಿವಿಧ ಭಾಗಗಳಲ್ಲಿ ನೀರು, ಮೇವಿನ ಕೊರತೆಯಿಂದ ಕಡೆಗಳಿಂದ ಕುರಿಗಾರರು ಕುರಿಮರಿಗಳೊಂದಿಗೆ ಸಂಸಾರ ಸಮೇತರಾಗಿ ಊರೂರು ತಿರುಗುತ್ತಾರೆ. ಹೀಗೆ ಅಲೆಮಾರಿಗಳಾಗಿ ಬದುಕುವ ಈ ಕುರಿಗಾರರು ತಾಲ್ಲೂಕಿನ ಕಾಚಹಳ್ಳಿ ಸಮೀಪದ ಹೊಲದಲ್ಲಿ ಬಂದು ಬೀಡುಬಿಟ್ಟಿದ್ದಾರೆ.
ಮಧುಗಿರಿ ಮೂಲದಿಂದ ಆಗಮಿಸಿರುವ ಕುರಿಗಾರರಿಗೆ ಒಂದು ದಿನ ಒಂದು ಊರಾದರೆ, ಇನ್ನೊಂದು ದಿನ ಇನ್ನೊಂದು ಊರು. ಸುಮಾರು ಎರಡುವರೆ ಸಾವಿರ ಕುರಿಗಳೊಂದಿಗೆ ತಂಡ ತಂಡಗಳಾಗಿ ವಿಂಗಡಣೆ ಮಾಡಿಕೊಂಡು ಪ್ರತಿವರ್ಷ ಬೇಸಿಗೆಯ ಕಾಲದಲ್ಲಿ ವಲಸೆ ಹೋಗುವ ಪರಿಪಾಠವನ್ನು ಇವರು ರೂಢಿಸಿಕೊಂಡಿದ್ದಾರೆ. ಜನವರಿ ತಿಂಗಳಿನಲ್ಲಿ ಊರನ್ನು ಬಿಡುತ್ತಾರೆ. ನಾಲ್ಕಾರು ತಿಂಗಳು ಊರೂರು ಸುತ್ತಿ ಕುರಿಗಳನ್ನು ಮೇಯಿಸಿಕೊಂಡು ಮಳೆಗಾಲ ಆರಂಭವಾಗುತ್ತಿದ್ದಂತೆ ಮತ್ತೆ ಸ್ವಗ್ರಾಮಗಳತ್ತ ಹೆಜ್ಜೆ ಹಾಕುತ್ತಾರೆ.
ಈ ರೀತಿ ವಲಸೆ ಹೋಗುವ ಕುರಿಗಾರರಿಗೆ ವಲಸೆ ಹೋಗಲು ಆಗದವರು ತಮ್ಮ ಕುರಿಗಳನ್ನು ಒಪ್ಪಿಸುತ್ತಾರೆ. ದಾರಿಗೆ ಬೇಕಾದ ಆಹಾರ ಧಾನ್ಯಗಳನ್ನು ಒದಗಿಸಿಕೊಡುತ್ತಾರೆ. ವಲಸೆ ಮುಗಿದು ವಾಪಸ್ಸು ಬಂದ ಮೇಲೆ ಎರಡು ಕುರಿಗಳು, ಎರಡು ಮರಿಗಳನ್ನು ಉಚಿತವಾಗಿ ಅವರು ಇವರಿಗೆ ಕೊಡುತ್ತಾರೆ.
‘ಕುರಿ ಸಾಕಿ ಕುಬೇರರಾಗಿ’ ಎನ್ನುವ ಮಾತೊಂದಿದೆ. ಆದರೆ ಹೀಗೆ ಕುಬೇರರಾಗಲು ಕುರಿಗಳ ಪಾಲನೆ ಪೋಷಣೆಗಾಗಿ ಪಡುವ ಕಷ್ಟನಷ್ಟ, ನೋವು ಕುರುಬರ ಕುಟುಂಬಗಳನ್ನು ಕಂಡಾಗ ಸ್ಪಷ್ಟವಾಗುತ್ತದೆ. ಕುರಿಗಳನ್ನು ತಮ್ಮ ಪಾಲಿನ ‘ಲಕ್ಷ್ಮೀ’ಎಂದೇ ಪರಿಗಣಿಸುವ ಹಾಲುಮತ ಜನಾಂಗ ವರ್ಷದ ನಾಲ್ಕಾರು ತಿಂಗಳು ಅಲೆಮಾರಿಗಳಂತೆ ತಮ್ಮ ಕುರಿಗಳ ಜತೆ ವಲಸೆ ಹೋಗುತ್ತಾರೆ.
ಇತ್ತೀಚಿನ ದಿನದಲ್ಲಿ ದೂರಸಂಪರ್ಕ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಯಿಂದ ಕುರಿಗಾರರು ತಮ್ಮವರೊಂದಿಗೆ ಸತತ ದೂರವಾಣಿ ಸಂಪರ್ಕದಲ್ಲಿರುತ್ತಾರೆ. ಆದರೂ ವಲಸಿಗ ಕುರಿಗಾರರು ವಿವಿಧ ಸ್ಥಳಗಳಲ್ಲಿ ನಾನಾ ತೊಂದರೆಗಳನ್ನು ಅನುಭವಿಸುತ್ತಾರೆ. ಅಲ್ಲೆಲ್ಲಾ ದಿನವಿಡೀ ಕುರಿಗಳೊಂದಿಗೆ ಸುತ್ತಾಡಿ, ರಾತ್ರಿಯೂ ನಿಶ್ಚಿಂತೆಯಿಂದ ನಿದ್ರೆ ಮಾಡದೇ ಕಣ್ಣಲ್ಲಿ ಕಣ್ಣಿಟ್ಟು ಕುರಿಗಳನ್ನು ಇವರು ಸಾಕುತ್ತಾರೆ. ಕುರಿಗಳೊಂದಿಗೆ ಕತ್ತೆಗಳು, ನಾಯಿಗಳೂ ಸಹ ಇವರೊಂದಿಗಿರುತ್ತವೆ.
ರೈತರ ಹೊಲಗಳಲ್ಲಿ ರಾತ್ರಿಯ ವೇಳೆ ಕುರಿಗಳನ್ನು ಮಂದೆ ಹಾಕುತ್ತಾರೆ. ಕುರಿಗಳಿಂದ ಗೊಬ್ಬರವಾಗುತ್ತದೆ ಎಂಬ ಕಾರಣಕ್ಕಾಗಿ ಒಂದು ರಾತ್ರಿಗೆ ರೈತರಿಗೆ 50 ರೂ ಹಣ, 35 ಸೇರು ರಾಗಿ ಮತ್ತು 5 ಸೇರು ಅಕ್ಕಿ ಕೊಡುತ್ತಾರೆ.
‘ಕೆರೆ, ಕುಂಟೆಗಳಲ್ಲಿ ನೀರು ಇರುವ ಕಡೆಗಳಲ್ಲಿ ಕುರಿಗಳಿಗೆ ನೀರು ಕುಡಿಸುತ್ತಾರೆ, ನೀರು ಸಿಗದೆ ಇರುವ ಕಡೆಗಳಲ್ಲಿ ತೋಟಗಳಿಗೆ ಅಳವಡಿಸಿರುವ ಹನಿನೀರಾವರಿಯ ಪೈಪ್ ಗಳ ಸಹಾಯದಿಂದ ಪಾತ್ರೆಗಳನ್ನು ತುಂಬಿಸಿ ಕುರಿಗಳಿಗೆ ನೀರು ಕುಡಿಸುತ್ತಾರೆ. ಕೆಲವೊಮ್ಮೆ ತೋಟಗಳ ಮಾಲೀಕರಿಂದ ಬೈಗುಳಗಳನ್ನೂ ಕೇಳಿಬೇಕಾಗುತ್ತದೆ. ನಾವೇ ಅಡುಗೆ ಸಿದ್ದಪಡಿಸಿಕೊಳ್ಳುತ್ತೇವೆ. ರಾತ್ರಿಯ ವೇಳೆ ಕೆಲವರು ಮಲಗುತ್ತೇವೆ. ಕೆಲವರು ಕಾವಲು ಕಾಯುತ್ತೇವೆ. ಹೀಗೆ ಊರೂರು ಸುತ್ತುತ್ತಾ ಕುರಿಗಳ ಹೊಟ್ಟೆ ತುಂಬಿಸುತ್ತಾ ಜೀವನ ಕಳೆಯುತ್ತಿದ್ದೇವೆ’ ಎನ್ನುತ್ತಾರೆ ಕುರಿಗಾಹಿಗಳಾದ ನಾಗರಾಜು, ಚಿಕ್ಕಣ್ಣ, ಸಿದ್ದಪ್ಪ, ಕರಿಯಪ್ಪ.
ಭೂಮಿ ಕೊಡಿ, ಇಲ್ಲವೇ ವಿಷ ಕೊಡಿ
‘ಭೂಮಿ ಕೊಡಿ, ಇಲ್ಲವೇ ವಿಷ ಕೊಡಿ’, ಆತಂಕ, ಭಯದಿಂದ ಸಾಗುವಳಿ ಚೀಟಿಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ವಿಳಂಬ ಮಾಡದೆ ಅತ್ಯಂತ ಶೀಘ್ರವಾಗಿ ಸಾಗುವಳಿ ಚೀಟಿ ವಿತರಿಸುವಂತೆ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ತಾಲ್ಲೂಕು ಸಂಯೋಜಕ ಹರಿಪ್ರಸಾದ್ ಒತ್ತಾಯಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಎಲ್ಲಾ ಶಾಸಕರು ಭೂರಹಿತ ರೈತರ ಬಗ್ಗೆ ಕಾಳಜಿ ವಹಿಸಿ, ಬಗರ್ ಹುಕುಂ ಸಮಿತಿ ಸಭೆಗಳನ್ನು ನಡೆಸಿ ಭೂ ಮಂಜೂರಾತಿ ನೀಡಿರುವರು. ಆದರೆ ಆಯಾ ತಾಲ್ಲೂಕು ಕಚೇರಿಗಳಲ್ಲಿ ಭೂಮಿಯನ್ನು ಅಳತೆ ಮಾಡಿ, ನಕ್ಷೆಯನ್ನು ತಯಾರಿಸಲು ಸಿಬ್ಬಂದಿಯ ಕೊರತೆಯೆಂದು ದಾಖಲೆಗಳು ಸಿದ್ದಗೊಳ್ಳದೆ ಬಹಳಷ್ಟು ಅರ್ಜಿಗಳು ಬಾಕಿ ಉಳಿದಿವೆ.
ಚುನಾವಣೆಯು ಸಮೀಪಿಸುತ್ತಿರುವುದರಿಂದ ಚುನಾವಣೆ ನೀತಿಸಂಹಿತೆ ಜಾರಿಯಾಗುವ ಮುನ್ನ ಆದಷ್ಟು ಬೇಗ ಬಗರ್ ಹುಕುಂ ಸಮಿತಿ ಸಭೆಗಳನ್ನು ನಡೆಸಿ ಬಾಕಿ ಇರುವ ಅರ್ಜಿಗಳನ್ನು ಪರಿಶೀಲಿಸಿ ಅತಿ ಜರೂರಾಗಿ ಭೂ ಮಂಜೂರಾತಿ ನೀಡಿ ಸಾಗುವಳಿ ಚೀಟಿಗಳನ್ನು ವಿತರಿಸುವಂತೆ ಒತ್ತಾಯಿಸಿದರು.
ತಾಲ್ಲೂಕಿನಲ್ಲಿ ಒಟ್ಟು 9375 ಅರ್ಜಿಗಳು ಸಲ್ಲಿಕೆಯಾಗಿದ್ದು, 2319 ಅರ್ಜಿಗಳು ಸಕ್ರಮಗೊಂಡಿವೆ. 6875 ಅರ್ಜಿಗಳು ತಿರಸ್ಕೃತಗೊಂಡಿದ್ದು 381 ಅರ್ಜಿಗಳು ಬಾಕಿ ಇರುತ್ತವೆ.
ರೈತ ಪೂಲಕುಂಟ್ಲಹಳ್ಳಿ ಮಂಜುನಾಥರೆಡ್ಡಿ ಮಾತನಾಡಿ, ನಾನು ನಾಲ್ಕು ಎಕರೆ ಭೂಮಿಯನ್ನು 1985 ರಿಂದ ಉಳುಮೆಮಾಡುತ್ತಿದ್ದೇನೆ. 1989 ರಲ್ಲಿ ಸರ್ಜಿ ಸಲ್ಲಿಸಿದ್ದರೂ ಇದುವರೆಗೂ ಸಾಗುವಳಿ ಚೀಟಿ ನೀಡಿಲ್ಲ ಎಂದರು.
ರೈತ ಬೈರಗಾನಹಳ್ಳಿ ಜಿ.ಎಂ.ದ್ಯಾವಪ್ಪ ಮಾತನಾಡಿ, 20 ವರ್ಷಗಳಿಂದ ನಮಗೆ ಸಾಗುವಳಿ ಚೀಟಿ ಸಿಕ್ಕಿಲ್ಲವೆಂದು ದೂರಿದರು. ರೈತ ಬೈರಗಾನಹಳ್ಳಿ ಕೃಷ್ಣಪ್ಪ 1998 ರಲ್ಲಿ ಅರ್ಜಿ ಸಲ್ಲಿಸಿದ್ದರೂ ಇನ್ನೂ ಸಾಗುವಳಿ ಚೀಟಿ ಸಿಗದೆ ಭಯದಿಂದ ಬದುಕುವಂತಾಗಿದೆ ಎಂದು ತಿಳಿಸಿದರು.
ಕ್ಷಯ ರೋಗ ವಿರೋಧಿ ಸಪ್ತಾಹದ ಅಂಗವಾಗಿ ಜಾಥಾ
ಶಿಡ್ಲಘಟ್ಟದಲ್ಲಿ ಮಂಗಳವಾರ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಹಾಗೂ ಶಾರದಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕ್ಷಯ ರೋಗ ವಿರೋಧಿ ಸಪ್ತಾಹದ ಅಂಗವಾಗಿ ಜಾಥಾ ನಡೆಸಿ ಜನರಲ್ಲಿ ಅರಿವು ಮೂಡಿಸಿದರು
ರಸ್ತೆ ಡಾಂಬರೀಕರಣಕ್ಕೆ ಚಾಲನೆ
ತಾಲ್ಲೂಕಿನ ಗಡಿ ಭಾಗದಲ್ಲಿ ರಸ್ತೆಗಳು ಹದಗೆಟ್ಟಿರುವ ಕಾರಣ ರಸ್ತೆ ಡಾಂಬರೀಕರಣ ಮಾಡುವ ಮೂಲಕ ಉತ್ತಮ ರಸ್ತೆ ನಿರ್ಮಾಣ ಕಾರ್ಯ ನಡೆಸುತ್ತಿರುವುದಾಗಿ ಶಾಸಕ ಎಂ.ರಾಜಣ್ಣ ತಿಳಿಸಿದರು.
ಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತೂರು ಗ್ರಾಮದ ಡೈರಿ ಸ್ಥಳದಿಂದ ತಾಲ್ಲೂಕಿನ ಗಡಿಭಾಗದವರೆಗೂ ಲೋಕೋಪಯೋಗಿ ಇಲಾಖೆಯಿಂದ 40 ಲಕ್ಷ ರೂಪಾಯಿ ವೆಚ್ಚದಲ್ಲಿ 1.8 ಕಿ.ಮೀ ಡಾಂಬರೀಕರಣ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಎರಡು ಹಂತಗಳಲ್ಲಿ ಈ ಕಾಮಗಾರಿ ನಡೆಸುತ್ತಿದ್ದು, 50 ಮಿಮೀ ಮತ್ತು 25 ಮಿಮೀ ಪದರಗಳಲ್ಲಿ ಡಾಂಬರೀಕರಣ ಮಾಡಲಾಗುತ್ತಿದೆ. ಈ ಭಾಗದ ಮುಖಂಡರ ಹಾಗೂ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಈ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಸರ್ಕಾರದ ವಿಶೇಷ ಅನುದಾನದಲ್ಲಿ ಚಾಲನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಕಾಮಗಾರಿಯ ಗುಣಮಟ್ಟದಲ್ಲಿ ರಾಜೀಯಾಗದೇ ಕಾಮಗಾರಿಯ ಗುಣಮಟ್ಟದ ಬಗ್ಗೆ ಎಚ್ಚರ ವಹಿಸಿ ಎಂದರು.
ಹಾಪ್ಕಾಮ್ಸ್ ಅಧ್ಯಕ್ಷ ಮುತ್ತೂರು ಚಂದ್ರೇಗೌಡ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಶಿವಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ದೇವರಾಜ್, ರವಿ, ಗಂಗಾಧರ್, ಮಂಜುನಾಥ್, ಎಂ.ಆರ್.ರವಿಕುಮಾರ್, ವಿಜಯಕುಮಾರ್, ನಾಗರಾಜು, ವಿಶ್ವನಾಥ್ ಹಾಜರಿದ್ದರು.
ಸಿಸಿ ರಸ್ತೆ ಕಾಮಗಾರಿಗೆ ಚಾಲನೆ
ಶಿಡ್ಲಘಟ್ಟ ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ಮಾಜಿ ಶಾಸಕ ವಿ.ಮುನಿಯಪ್ಪ ಅವರ ಅನುದಾನದಲ್ಲಿ ರಾಜ್ಯ ಸರ್ಕಾರದಲ್ಲಿ ಉಳಿದಿದ್ದ ಅನುದಾನದ ಹಣದಲ್ಲಿ ಡೈರಿಯಿಂದ ಮಾರಮ್ಮನ ಗುಡಿಯವರೆಗೂ 4.95 ಲಕ್ಷ ರೂಗಳ ಸಿಸಿ ರಸ್ತೆ ಕಾಮಗಾರಿಗೆ ಹಾಪ್ಕಾಮ್ಸ್ ಅಧ್ಯಕ್ಷ ಮುತ್ತೂರು ಚಂದ್ರೇಗೌಡ ಚಾಲನೆ ನೀಡಿದರು. ಎಂಪಿಸಿಎಸ್ ಅಧ್ಯಕ್ಷ ಗಂಗಾಧರ್, ನಟರಾಜೇಗೌಡ, ವೆಂಕಟೇಶ್, ವೀರೇಗೌಡ, ಎಂ.ಕೆ.ರೆಡ್ಡಿ, ಮೂರ್ತಿ ಹಾಜರಿದ್ದರು.
ಛತ್ರಪತಿ ಶಿವಾಜಿ ಹಾಗೂ ಸಂತಕವಿ ಸರ್ವಜ್ಞ ಜಯಂತ್ಯುತ್ಸವ
ಛತ್ರಪತಿ ಶಿವಾಜಿ ಮತ್ತು ಸಂತ ಕವಿ ಸರ್ವಜ್ಞ ಇಬ್ಬರಲ್ಲೂ ಇರುವ ಸಾಮ್ಯತೆ ದೇಶಭಕ್ತಿ, ಮಾನವೀಯ ಮೌಲ್ಯಗಳು ಹಾಗೂ ನಿಸ್ವಾರ್ಥ ಬದುಕು ಎಂದು ತಹಶೀಲ್ದಾರ್ ಅಜಿತ್ ಕುಮಾರ್ ರೈ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಆಡಳಿತದ ವತಿಯಿಂದ ನಡೆದ ಛತ್ರಪತಿ ಶಿವಾಜಿ ಹಾಗೂ ಸಂತಕವಿ ಸರ್ವಜ್ಞ ಅವರುಗಳ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿವಾಜಿಯು ಅಪ್ರತಿಮ ದೇಶಭಕ್ತರಾಗಿದ್ದು ಅವರ ಧೈರ್ಯ, ಸಾಹಸಕ್ಕೆ ಪ್ರತೀಕವಾದ ಜೀವನ ನಮ್ಮೆಲ್ಲರಿಗೂ ಮಾದರಿಯಾಗಬೇಕಿದೆ. ಸಹನೆ, ಸಹಿಷ್ಣುತೆ ಮತ್ತು ಜಾತ್ಯಾತೀತೆಯ ಅವರ ಮನೋಭಾವದಿಂದ ಆಗಿನ ಕಾಲದ ಭರತ ಖಂಡದಲ್ಲಿ ಶಿವಾಜಿ ಪ್ರಸಿದ್ದರಾಗಿದ್ದು, ಅದೆಷ್ಟೊ ಮಂದಿ ರಾಜರು ಇವರ ಆಡಳಿತ ಕಾರ್ಯವೈಖರಿಯನ್ನು ಅನುಸರಿಸಿದ್ದರು. ಅಷ್ಟರ ಮಟ್ಟಿಗೆ ಶಿವಾಜಿಯವರು ರಾಜತಾಂತ್ರಿಕರಾಗಿದ್ದರು ಎಂದರು.
ತನ್ನ ಸಾಮ್ರಾಜ್ಯ ವಿಸ್ತರಣೆ, ಪರಿಣಾಮಕಾರಿ ದೂರದೃಷ್ಟಿಯ ನಾಯಕತ್ವ ಗುಣಗಳಿಂದಾಗಿ ಶಿವಾಜಿ ಮಹರಾಜರು ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಸಾಮ್ರಾಟರೆಂದು ಪ್ರಸಿದ್ದಿ ಪಡೆದು ಕೀರ್ತಿಗೆ ಪಾತ್ರರಾಗಿದ್ದರು ಎಂದು ಶಿವಾಜಿಯ ಗುಣಗಾನ ಮಾಡಿದರು.
‘ಜಾತಿಹೀನನ ಮನೆಯ ಜ್ಯೋತಿ ತಾ ಹೀನವೆ ಜಾತಿ ವಿಜಾತಿ ಎನಬೇಡ ಶಿವನೊಲಿದಾತನೆ ಜಾತ ಸರ್ವಜ್ಞ’, ಜನರ ಆಡುಭಾಷೆಯಲ್ಲಿ ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ಚಿಕಿತ್ಸಕ ನೋಟದೊಂದಿಗೆ ತಿದ್ದಿದ ಸಮಾಜ ಸುಧಾರಕ ಸರ್ವಜ್ಞ.
ಸರ್ವಜ್ಞನ ತ್ರಿಪದಿಗಳು ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆಯಾಗಿದೆ. ತ್ರಿಪದಿಗಳು ಸಾರುವ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ. ಇವುಗಳು ಹಲವು ಭಾಷೆಗಳಿಗೆ ಭಾಷಾಂತರಗೊಂಡಿದ್ದು, ಭಾಷೆ ಮತ್ತು ಗಡಿಗಳ ಎಲ್ಲೆ ಮೀರಿ ಕರ್ನಾಟಕದ ಕೀರ್ತಿಯನ್ನು ಬೆಳಗಿಸಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಛತ್ರಪತಿ ಶಿವಾಜಿ ಮತ್ತು ಸಂತ ಕವಿ ಸರ್ವಜ್ಞರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಲಾಯಿತು.
ಪ್ರಭಾರಿ ತಹಶೀಲ್ದಾರ್ ಮಮತಾಕುಮಾರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು, ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್, ಆಯುಕ್ತ ಚಲಪತಿ, ಮರಾಠಿ ಜನಾಂಗದ ಪ್ರಸಾದ್ ಹಾಜರಿದ್ದರು.
ನಗರಸಭೆಯ ಸಾಮಾನ್ಯ ಸಭೆ
ಯುಜಿಡಿ ನೀರನ್ನು ಹರಾಜಿನಲ್ಲಿ ಪಡೆದಿದ್ದ ಹಿತ್ತಲಹಳ್ಳಿ ರಮೇಶ್ ಎರಡು ಲಕ್ಷ 10 ಸಾವಿರ ಬಾಕಿಯಿದ್ದು, ಅವರು ನೀಡಿದ್ದ ಚೆಕ್ ಬೌನ್ಸ್ ಆದ ಕಾರಣ ಪ್ರಕರಣವನ್ನು ದಾಖಲಿಸುವುದಾಗಿ ನಗರಸಭೆ ಆಯುಕ್ತ ಚಲಪತಿ ತಿಳಿಸಿದರು.
ನಗರಸಭೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಫೆಬ್ರುವರಿ 26 ರಂದು ಖಾಸಗಿ ಬಸ್ ನಿಲ್ದಾಣ, ದಿನವಹಿ ಮಾರುಕಟ್ಟೆಗಳ ಶುಲ್ಕ, ನಿರುಪಯುಕ್ತ ವಸ್ತುಗಳು ಹಾಗೂ ಯುಜಿಡಿ ನೀರನ್ನು ಹರಾಜು ಹಾಕುವುದಾಗಿ ಅವರು ಸಭೆಗೆ ಮಾಹಿತಿ ನೀಡಿದರು.
ನಗರಸಭೆಯಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯುಟೀವ್ ಎಂಜಿನಿಯರ್ ಇದ್ದು ಅವರ ಬಗ್ಗೆ ಯಾರಿಗೂ ಮಾಹಿತಿಯಿಲ್ಲ. ಅವರು ಬರುವುದು ಹೋಗುವುದು ನಗರಸಭೆಯ ಸದಸ್ಯರಿಗೆ ತಿಳಿಯದಾಗಿದೆ. ಕೇವಲ ಸಂಬಳ ತೆಗೆದುಕೊಂಡು ಹೋಗಲು ಬರುವ ಅಧಿಕಾರಿಗಳು ನಮಗೆ ಬೇಕಿಲ್ಲ ಎಂದು ನಗರಸಭೆ ಸದಸ್ಯ ರಾಘವೇಂದ್ರ ಅಧಿಕಾರಿಗಳು ಕೆಲಸ ಮಾಡದ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದರು.
ಸದಸ್ಯ ನಂದಕಿಶನ್ ಮಾತನಾಡಿ, ನಗರದಲ್ಲಿ ಬಿಪಿಎಲ್ ಕುಟುಂಬಗಳು ಹೆಚ್ಚಾಗಿದ್ದಾವೆ. ಸೀಮೆ ಎಣ್ಣೆ ಸ್ಥಗಿತಗೊಂಡಿರುವುದರಿಂದ ವಿವಿಧ ಅನುದಾನಗಳಲ್ಲಿ ಉಳಿಕೆ ಹಣದಲ್ಲಿ ಉಚಿತ ಅಡುಗೆ ಅನಿಲ ಸಂಪರ್ಕವನ್ನು ಒದಗಿಸಿ. ಇದರಿಂದ ಹೊಗೆಮುಕ್ತ ನಗರವಾಗುತ್ತದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ನಗರ ವ್ಯಾಪ್ತಿಯಲ್ಲಿ ಹಾಳಾದ ರಸ್ತೆ ದುರಸ್ತಿ, ರಸ್ತೆ ನಿರ್ಮಾಣದಲ್ಲಿ ಮುಚ್ಚಿಹೋದ ಯುಜಿಡಿ ಚೇಂಬರುಗಳ ತೆರವೀಕರಣ ಹಾಗೂ ಮುಂದೆ ನಡೆಸುವ ಯೋಜನೆಗಳ ಬಗ್ಗೆ ಸದಸ್ಯರು ಚರ್ಚಿಸಿದರು.
ಅಗಲಿದ ನಾಯಕನಿಗೆ ಶ್ರದ್ಧಾಂಜಲಿ
ರೈತಪರ ಹೋರಾಟಗಾರ, ಚಿಂತಕ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರ ನಿಧನದಿಂದಾಗಿ ರಾಜ್ಯದ ರೈತರಿಗೆ ತುಂಬಲಾದರ ನಷ್ಟವಾಗಿದೆ ಎಂದು ಪುಟ್ಟಣ್ಣಯ್ಯ ಬಣದ ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್ ತಿಳಿಸಿದರು.
ನಗರದ ಕೋಟೆ ವೃತ್ತದಲ್ಲಿ ಕೆ.ಎಸ್.ಪುಟ್ಟಣ್ಣಯ್ಯರವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಹೃದಯಾಘಾತದಿಂದ ನಿನ್ನೆ ನಿಧನರಾದ ರೈತ ನಾಯಕ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯರವರು ರೈತರಿಗೆ ಮಾಡಿರುವ ಸೇವೆ ಅಪಾರವಾದದ್ದು. ರೈತರ ಪರ ಅನೇಕ ಹೋರಾಟಗಳು ನಡೆಸಿದ್ದ ಅವರು ನಮಗೆಲ್ಲಾ ಆದರ್ಶ. ಅವರ ಜೀವನವೇ ನಮಗೆ ಮಾರ್ಗದರ್ಶನ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುನಿಕೆಂಪಣ್ಣ, ಪ್ರತೀಶ್, ಎಸ್.ಎಂ.ಗೋವಿಂದಪ್ಪ, ಅಫ್ಜಲ್, ಎಸ್.ಎನ್.ಮಾರಪ್ಪ, ಅರುಣ್ ಕುಮಾರ್, ಜಯಂತಿ ಗ್ರಾಮದ ನಾರಾಯಣಸ್ವಾಮಿ, ರಮೇಶ್, ಅಶ್ವತನಾರಾಯಣ, ಗಜೇಂದ್ರ, ನಾಗರಾಜು, ವೆಂಕಟನಾರಾಯಣ, ಚಂದ್ರಪ್ಪ, ನಾಗೇಶ್, ರಮೇಶ್, ಬಿ.ವಿ.ನಾರಾಯಣಸ್ವಾಮಿ, ದೇವರಾಜು ಹಾಜರಿದ್ದರು.
ಶ್ರದ್ಧಾಂಜಲಿ: ನಗರದ ಬಸ್ ನಿಲ್ದಾಣದ ಬಳಿಯ ರೈತ ಸಂಘದ ಕಚೇರಿಯ ಬಳಿ ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತ ಸಂಘದ ಸದಸ್ಯರು ಕೆ.ಎಸ್.ಪುಟ್ಟಣ್ಣಯ್ಯ ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಅರ್ಪಿಸಿದರು. ಎಸ್.ಎಂ.ನಾರಾಯಣಸ್ವಾಮಿ, ರಾಮಚಂದ್ರಪ್ಪ, ದೇವರಾಜ್, ರಾಮಾಂಜಿನಪ್ಪ, ನಂಜಪ್ಪ, ಸುರೇಶ್ ಹಾಜರಿದ್ದರು.
ಜೆಡಿಎಸ್ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆ
ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿ ನಾಮಪತ್ರ ಹಿಂಪಡೆಯುವ ದಿನದವರೆಗೂ ಅಧಿಕೃತ ಅಭ್ಯರ್ಥಿಗಳು ಯಾರೂ ಎನ್ನುವುದು ಗೊತ್ತಾಗುವುದಿಲ್ಲ ಅಂತಹುದರಲ್ಲಿ ಈಚೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿ ಹಾಲಿ ಶಾಸಕರ ಹೆಸರಿದೆ ಎಂದ ಮಾತ್ರಕ್ಕೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಬಿ.ಎನ್.ರವಿಕುಮಾರ್ ಅವರ ಅಭಿಮಾನಿಗಳು ಧೃತಿಗೆಡಬೇಕಾಗಿಲ್ಲ ಎಂದು ಜೆಡಿಎಸ್ ಹಿರಿಯ ಮುಖಂಡ ದೊಣ್ಣಹಳ್ಳಿ ರಾಮಣ್ಣ ಹೇಳಿದರು.
ಈಚೆಗೆ ಜೆಡಿಎಸ್ ಪಕ್ಷದಿಂದ ಪ್ರಕಟಿಸಲಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಿ.ಎನ್.ರವಿಕುಮಾರ್ ಬದಲಿಗೆ ಹಾಲಿ ಶಾಸಕ ಎಂ.ರಾಜಣ್ಣ ಹೆಸರು ಘೋಷಿಸಿರುವ ಹಿನ್ನಲೆಯಲ್ಲಿ ಅಸಂತೃಪ್ತಿ ವ್ಯಕ್ತಪಡಿಸಿ ತಾಲ್ಲೂಕಿನ ಚಿಕ್ಕದಾಸರಹಳ್ಳಿ ಬಳಿಯ ಶ್ರೀ ಬ್ಯಾಟರಾಯಸ್ವಾಮಿ ದೇವಾಲಯದ ಆವರಣದಲ್ಲಿ ಸೋಮವಾರ ಜೆಡಿಎಸ್ ಮುಖಂಡರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆ ಸಭೆಯಲ್ಲಿ ಅವರು ಮಾತನಾಡಿದರು.
ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಬಿ.ಎನ್.ರವಿಕುಮಾರ್ರಿಗೆ ಟಿಕೆಟ್ ನೀಡುವಂತೆ ವರಿಷ್ಠರಿಗೆ ಮನವಿ ಮಾಡಲಾಗಿತ್ತು. ಈ ಬಗ್ಗೆ ವರಿಷ್ಠರೂ ಸಹ ಸಹಮತ ವ್ಯಕ್ತಪಡಿಸಿದ್ದರು. ಆದರೆ ಫೆ ೧೭ ರ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಶಿಡ್ಲಘಟ್ಟದ ಅಭ್ಯರ್ಥಿಯಾಗಿ ಹಾಲಿ ಶಾಸಕ ಎಂ.ರಾಜಣ್ಣರ ಹೆಸರನ್ನು ಪ್ರಕಟಿಸಿರುವುದು ಕ್ಷೇತ್ರದ ಬಹಳಷ್ಟು ಕಾರ್ಯಕರ್ತರಿಗೆ ಬೇಸರವಾಗಿದೆ.
ಯಾವುದೇ ಕಾರಣಕ್ಕೂ ನಾವೇ ಬೆಳೆಸಿದ ಪಕ್ಷ ಹಾಗು ಪಕ್ಷದ ವರಿಷ್ಠರ ವಿರುದ್ದ ಮಾತನಾಡುವುದು ಸರಿಯಲ್ಲ. ಬದಲಿಗೆ ಬಿ.ಎನ್.ರವಿಕುಮಾರ್ ರವರು ಈ ಹಿಂದಿನಂತೆಯೇ ಕ್ಷೇತ್ರದಾದ್ಯಂತ ಸಮಾಜಸೇವಾ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುಬೇಕು ಎಂದರು.
ಸಭೆಯಲ್ಲಿ ಸೇರಿದ್ದ ಹಲವಾರು ಮಂದಿ ಅಭಿಮಾನಿಗಳು ಪಕ್ಷೇತರವಾಗಿ ಕಣಕ್ಕೆ ಇಳಿಯಬೇಕು ಎಂದು ಒತ್ತಾಯಿಸಿದರೆ, ಹಿರಿಯರು ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ, ಫೆಬ್ರುವರಿ ೨೫ ರ ಭಾನುವಾರ ಕ್ಷೇತ್ರದ ದಿಬ್ಬೂರಹಳ್ಳಿಯಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ಆಯೋಜಿಸಿದ್ದು, ಕಾರ್ಯಕರ್ತರ ಒಮ್ಮತದ ಅಭಿಪ್ರಾಯದಂತೆ ಬಿ.ಎನ್.ರವಿಕುಮಾರ್ ಮುಂದಿನ ಹೆಜ್ಜೆ ಇಡಲಿ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.
ಬಿ.ಎನ್.ರವಿಕುಮಾರ್ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದು ಪಕ್ಷದ ವರಿಷ್ಠರ ಸೂಚನೆಯ ಮೇರೆಗೆ ಕ್ಷೇತ್ರದಾದ್ಯಂತ ಉತ್ತಮ ಸಮಾಜ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೇನೆ. ಈಗಲೂ ಕ್ಷೇತ್ರದ ಜನತೆ ನೀವು ಮನೆಯಲ್ಲಿರಿ ಎಂದರೆ ಮನೆಯಲ್ಲಿರುತ್ತೇನೆ. ಜನತೆ ಬಯಸಿದಲ್ಲಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಯಾವುದೇ ಕಾರಣಕ್ಕೂ ಪಕ್ಷ ಹಾಗೂ ಪಕ್ಷದ ವರಿಷ್ಠರ ಬಗ್ಗೆ ಯಾರೂ ಕೆಟ್ಟದ್ದಾಗಿ ಮಾತಾಡುವುದು ಬೇಡ ಎಂದು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಂಕ್ ಮುನಿಯಪ್ಪ, ತನುಜಾರಘು, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ವಿ.ನಾಗರಾಜ್, ಪಿ.ಶಿವಾರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಮಿನಾರಾಯಣ, ಸದಸ್ಯರಾದ ರಾಜಶೇಖರ್, ಮುನಿಯಪ್ಪ, ಮುಖಂಡರಾದ ಕದಿರಿಯೂಸುಫ್, ಆದಿಲ್ಪಾಷ, ಸೈಯ್ಯದ್, ತುಳುವನೂರು ರವಿ, ಬುರುಡುಗುಂಟೆ ಸೀನಪ್ಪ, ರಾಜೇಶ್ ಹಾಜರಿದ್ದರು.
ಕನ್ನಡ ಸಾಹಿತ್ಯ ಸಮ್ಮೇಳನ ಮೆರವಣಿಗೆಯಲ್ಲಿ ಪ್ರತಿಭಟನೆ
‘ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ ತಾಲ್ಲೂಕು ಕಸಾಪ ಅಧ್ಯಕ್ಷ ಮಂಜುನಾಥ್‌ಗೆ ಧಿಕ್ಕಾರ’ ಎಂದು ಕಪ್ಪು ಬಾವುಟವನ್ನು ಹಿಡಿದು ಘೋಷಣೆಯ ಫಲಕದೊಂದಿಗೆ ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿ ಈಧರೆ ಪ್ರಕಾಶ್ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಪ್ರತಿಭಟಿಸಿದರು. ‘ನನ್ನ ಪ್ರತಿಭಟನೆ ಕಸಾಪ ವಿರುದ್ಧ ಅಲ್ಲ, ಸ್ವಜನ ಪಕ್ಷಪಾತಿ, ಸರ್ವಾಧಿಕಾರಿ ಧೋರಣೆಯ ದಲಿತ ವಿರೋಧಿ ಅಧ್ಯಕ್ಷ ಮಂಜುನಾಥ್ ವಿರುದ್ಧವಾಗಿದೆ. ಸಾಮಾಜಿಕ ನ್ಯಾಯವಿರೋಧಿ ತಾಲ್ಲೂಕು ಕಸಾಪ ಅಧ್ಯಕ್ಷರಿಗೆ ಧಿಕ್ಕಾರ’ ಎಂದು ಘೋಷಣೆ ಕೂಗಿದರು. ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನವೀನ್ ಸ್ಥಳಕ್ಕೆ ಆಗಮಿಸಿ ಈಧರೆ ಪ್ರಕಾಶ್ ಅವರನ್ನು ಠಾಣೆಗೆ ಕರೆದೊಯ್ದರು.
‘ನಾನು ತಾಲ್ಲೂಕು ಕಸಾಪ ಕಾರ್ಯದರ್ಶಿಯಾಗಿದ್ದರೂ ಕಸಾಪ ಚಟುವಟಿಕೆಗಳಿಂದ ನನ್ನನ್ನು ಉದ್ದೇಶಪೂರ್ವಕವಾಗಿ ದೂರವಿಟ್ಟಿದ್ದಾರೆ. ಸಭೆಯನ್ನು ಕರೆದು ನಿರ್ಣಯ ಮಾಡದೇ ಕಸಾಪ ನಡಾವಳಿಗಳಿಗೆ ತಿಲಾಂಜಿಯಿಟ್ಟಿದ್ದಾರೆ. ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡು ಸ್ವಜನಪಕ್ಷಪಾತದಿಂದ ಸಮ್ಮೇಳನವನ್ನು ನಡೆಸಿದ್ದಾರೆ’ ಎಂದು ಈಧರೆ ಪ್ರಕಾಶ್ ಆರೋಪಿಸಿದರು.
ವಾಸವಿ ಕಲ್ಯಾಣಮಂಟಪದಲ್ಲಿ ಏಳನೇ ಸಾಹಿತ್ಯ ಸಮ್ಮೇಳನ
ತಾಲ್ಲೂಕಿನಲ್ಲಿ ಸಾಧಕರು ಅನೇಕ ಮಂದಿಯಿದ್ದರೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬೇಕಾದ ರಂಗಮಂದಿರ ಇಲ್ಲದಿರುವುದು ಹಾಗೂ ಅಂತರರಾಷ್ಟ್ರೀಯ ಕ್ರೀಡಾಪಟುಗಳು ಇದ್ದರೂ ಒಳಾಂಗಣ ಕ್ರೀಡಾಂಗಣ ಇಲ್ಲದಿರುವುದು ನಮ್ಮ ತಾಲ್ಲೂಕಿಗೇ ಕಪ್ಪುಚುಕ್ಕೆಯಾಗಿದೆ. ಇದನ್ನು ಮನಗಂಡು ರಾಜಕೀಯ ನಾಯಕರು ಹಾಗೂ ಇಲಾಖೆಯವರು ಗಮನ ಹರಿಸಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಂದು ಏಳನೇ ಕಸಾಪ ಸಮ್ಮೇಳನಾಧ್ಯಕ್ಷ ಎಸ್.ವಿ.ನಾಗರಾಜರಾವ್ ಒತ್ತಾಯಿಸಿದರು.
ನಗರದ ವಾಸವಿ ಕಲ್ಯಾಣಮಂಟಪದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನ ಏಳನೇ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಸಾಹಿತ್ಯ ಸಮ್ಮೇಳನಗಳು ಜಾತ್ರೆಗಳಲ್ಲ. ಭಿನ್ನಾಭಿಪ್ರಾಯಗಳನ್ನು ಮರೆತು ನಾವೆಲ್ಲ ಒಂದೆ ಎಂಬ ಮನೋಭಾವನೆ ಬೆಳೆಸುವ ವೇದಿಕೆಯಿದು. ಕನ್ನಡಕ್ಕೆ ಒತ್ತನ್ನು ಕೊಟ್ಟು ‘ಕನ್ನಡ ಸಾಹಿತ್ಯ ಸಮ್ಮೇಳನ’ ಎನ್ನುವ ಬದಲು, ’ಕನ್ನಡ ಸಮ್ಮೇಳನ’ ಎಂದು ಕರೆಯಬೇಕು.
ದಕ್ಷ ಶಿಕ್ಷಕರ ಕೊರತೆ ದೊಡ್ಡ ಸಮಸ್ಯೆ ಆಗಿದೆ. ಸಮರ್ಥ ಶಿಕ್ಷಕರನ್ನು ಸೃಷ್ಟಿಸಬೇಕಾಗಿದೆ. ಕನ್ನಡ ಬೋಧನೆಯಲ್ಲಿ ಸರಿಯಾದ ಮಾರ್ಗವನ್ನು ಕಲಿಸುವ ಶಿಬಿರಗಳನ್ನು ನಡೆಸಿ, ಕನ್ನಡದ ಬಗ್ಗೆ ಶಿಕ್ಷಕರಲ್ಲಿ ಪ್ರೀತಿ ಹೆಚ್ಚಿಸಬೇಕು.
ಕನ್ನಡಿಗರಲ್ಲಿ ಒಗ್ಗಟ್ಟಿಲ್ಲ ಎನ್ನುವುದೊಂದು ಮೂಲಭೂತ ಸಮಸ್ಯೆ. ಕಾಲೆಳೆಯುವ ಪ್ರವೃತ್ತಿಯು ಇತ್ತೀಚೆಗೆ ಹೆಚ್ಚಾಗುತ್ತಿದೆ. ನಿದ್ರಿಸುವಂತೆ ನಟಿಸುವವರು ಹೆಚ್ಚಾಗಿದ್ದಾರೆ. ಅನ್ಯಭಾಷೆಗೆ ಮಾರು ಹೋಗಿದ್ದಾರೆ. ಇವೆಲ್ಲವುಗಳಿಂದ ಹೊರಬರಲು ಕಾರ್ಯೋನ್ಮುಖರಾಗಬೇಕಾಗಿದೆ.
ಇತ್ತೀಚಿನ ಶಿಕ್ಷಣ ವ್ಯವಸ್ಥೆಯಿಂದ ಕನ್ನಡವೂ ಸರಿಯಾಗಿ ಬಾರದ ಸರಿಯಾಗಿ ಆಂಗ್ಲ ಭಾಷೆಯೂ ಬಾರದ ಸ್ಥಿತಿಯಲ್ಲಿದ್ದಾರೆ. ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಮುಂದೆ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳು ಮಂಕಾಗಿ ತಲೆತಗ್ಗಿಸಿ ನಿಂತಿವೆ. ಇದರಿಂದ ಮೇಲು-ಕೀಳು ಎಂಬ ಭಾವನೆ ಬೆಳೆಯಲು ಸಹಾಯವಾಗುತ್ತಿದೆ. ಇವೆಲ್ಲದುದರಿಂದ ಹೊರಗೆ ಬಂದು ’ಸಮಾನ ಶಿಕ್ಷಣ’ ಸಿದ್ದಿಸುವಂತಾಗಬೇಕಾಗಿದೆ.
ಈಗ ಅನೇಕ ಹಳ್ಳಿಗಳಲ್ಲಿ ಕನ್ನಡದ ಬೇರು ಸಡಿಲವಾಗುತ್ತಿದೆ. ಸರ್ಕಾರಗಳು ವಿದ್ಯಾರ್ಥಿಗಳ ಸಂಖ್ಯೆಯನ್ನು ಮುಂದಿಟ್ಟುಕೊಂಡು ಕನ್ನಡ ಶಾಲೆಗಳನ್ನು ಮುಚ್ಚುವುದು ಬಿಟ್ಟು ಆ ಶಾಲೆಗಳಿಗೆ ಬೇಕಾದ ಅನುಕೂಲಗಳನ್ನು ಹೆಚ್ಚಿಸಿ ಮಕ್ಕಳನ್ನು ಹಾಗೂ ಪಾಲಕರನ್ನು ಆಕರ್ಷಿಸುವ ಗುರಿ ಹೆಚ್ಚಿಸಿಕೊಳ್ಳಬೇಕಾಗಿದೆ.
ಕೆಲವು ವಾಹಿನಿಗಳಲ್ಲಿ ಯುವಕ ಯುವತಿಯರನ್ನು ಅಡ್ಡದಾರಿಗೆ ದೂಡುವ ಕಾರ್ಯಕ್ರಮಗಳು ಹೆಚ್ಚಾಗುತ್ತಿವೆ. ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿರುವ ಅನೇಕ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆ ಮಸಾಲೆ ಭಾಷೆಯಾಗಿ ರೂಪುಗೊಳ್ಳುತ್ತಿದೆ. ಇದರಿಂದ ಅಚ್ಚ ಕನ್ನಡ ಮಾಯವಾಗುತ್ತಿರುವುದು ದುಃಖಕರ ಸಂಗತಿಯಾಗಿದೆ. ಕನ್ನಡ ನಾಟಕಗಳನ್ನಾಡುವ ತಂಡಗಳೇ ಇಲ್ಲವಾಗಿದೆ. ಗ್ರಂಥಾಲಯಗಳಿಗೆ ಭೇಟಿ ಕೊಡುವ ಪ್ರವೃತ್ತಿ ಅಭ್ಯಾಸ ಮಾಡಿಕೊಳ್ಳಬೇಕಾಗಿದೆ. ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಆಸ್ಪತ್ರೆ ಮುಂತಾದ ಸ್ಥಳಗಳಲ್ಲಿ ಪತ್ರಿಕೆಗಳ ಹಾಗೂ ಪುಸ್ತಕಗಳ ಭಂಡಾರವನ್ನು ತೆರೆದು, ರೋಗಿಗಳು ಹಾಗೂ ಅವರಿಗೆ ಸಹಕಾರ ನೀಡಲು ಬಂದವರಿಗೆ ಓದಲು ಅವಕಾಶ ಮಾಡಿದರೆ ಒಂದು ಹೆಜ್ಜೆ ಮುಂದೆ ಇಟ್ಟಂತಾಗುತ್ತದೆ ಎಂದು ಹೇಳಿದರು.
ಬೆಳಿಗ್ಗೆ ಶಾಸಕ ಎಂ.ರಾಜಣ್ಣ ರಾಷ್ಟ್ರ ಧ್ವಜಾರೋಹಣವನ್ನು, ಸಮ್ಮೇಳನಾಧ್ಯಕ್ಷ ಎಸ್.ವಿ.ನಾಗರಾಜರಾವ್ ನಾಡಧ್ವಜಾರೋಹಣ ಮತ್ತು ಕಸಾಪ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಪರಿಷತ್ತಿನ ಧ್ವಜಾರೋಹಣ ಮಾಡುವುದರೊಂದಿಗೆ ಸಮ್ಮೇಳನ ಪ್ರಾರಂಭವಾಯಿತು.
ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ನಗರದ ಬಸ್‌ನಿಲ್ದಾಣದಿಂದ ವಾಸವಿ ಕಲ್ಯಾಣಮಂಟಪದವರೆಗೂ ಆಯೋಜಿಸಲಾಗಿತ್ತು. ಶಾಲೆಗಳ ವಾದ್ಯವೃಂದ, ಕಳಶ ಹೊತ್ತ ಮಹಿಳೆಯರು, ವೀರಗಾಸೆ, ಗಾರುಡಿ ಗೊಂಬೆ ಮೆರವಣಿಗೆಯಲ್ಲಿದ್ದವು.
ಸಮ್ಮೇಳನಾಧ್ಯಕ್ಷ ಎಸ್.ವಿ.ನಾಗರಾಜರಾವ್ ರಚಿಸಿರುವ ಕವನ ಸಂಕಲನ ಹೃದಯಾಮೃತ ಮತ್ತು ಸಮ್ಮೇಳನಾಧ್ಯಕ್ಷರ ಭಾಷಣದ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಅಮೃತಕುಮಾರ್, ಹನುಮಂತರಾವ್, ಸಿಡಿಪಿಒ ಲಕ್ಷ್ಮೀದೇವಮ್ಮ, ಎನ್.ಶಿವಣ್ಣ, ಸಿ.ಪಿ.ಈ.ಕರಗಪ್ಪ ಹಾಜರಿದ್ದರು.
ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು
ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು. ತಮ್ಮ ಕೌಶಲ್ಯದ ಮೂಲಕ ಮನೆಯಲ್ಲಿದ್ದರೂ ಹಣ ಸಂಪಾದಿಸುವಂತಾಗಬೇಕು. ಆಗ ಪ್ರತಿಯೊಂದು ಕುಟುಂಬವೂ ಸಶಕ್ತವಾಗುತ್ತದೆ ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ತಿಳಿಸಿದರು.
ನಗರದ ವಾಸವಿ ಶಾಲೆಯ ಆವರಣದಲ್ಲಿ ಭಾನುವಾರ ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಇಂದಿರಾಗಾಂಧಿ ಸವಿನೆನಪಿನಲ್ಲಿ ತಾಲ್ಲೂಕಿನ 600 ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ವಿತರಿಸಿ ಅವರು ಮಾತನಾಡಿದರು.
ಸರ್ಕಾರದಿಂದ ತಾಲ್ಲೂಕಿನ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ಬಳಸುವ ಕೌಶಲ್ಯ ತರಬೇತಿಯನ್ನು ನೀಡಲಾಗಿದೆ. ಆದರೆ ಹೊಲಿಗೆ ಯಂತ್ರವನ್ನು ಕೊಳ್ಳುವ ಸ್ಥಿತಿಯಲ್ಲಿ ಬಹುತೇಕ ಹೆಣ್ಣುಮಕ್ಕಳು ಇಲ್ಲದಿರುವುದು ಮನೆಮನೆ ಭೇಟಿ ಕೊಟ್ಟಾಗ ತಿಳಿದುಬಂದಿತು. ಈ ನ್ಯೂನತೆಯನ್ನು ಸರಿಪಡಿಸಿ ಹೆಣ್ಣುಮಕ್ಕಳು ತಮ್ಮ ಕಾಲ ಮೇಲೆ ನಿಂತು ಆತ್ಮವಿಶ್ವಾಸ ಹೊಂದುವಂತೆ ಮಾಡುವ ನಿಟ್ಟಿನಲ್ಲಿ ಈಗ 600 ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ವಿತರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ನೀಡುವುದಾಗಿ ಹೇಳಿದರು.
ಚುನಾವಣೆ ಸಮೀಪಿಸುತ್ತಿದೆ. ನಿಮ್ಮ ಮತ ನಿಮ್ಮ ಹಕ್ಕು. ಆದರೂ ಜನರ ಸೇವಕನಾಗುವವರನ್ನು, ಕ್ಷೇತ್ರದ ಅಭಿವೃದ್ಧಿ ಮಾಡುವವರನ್ನು ಆಯ್ಕೆ ಮಾಡಿ. ಎಲ್ಲೋ ಬೆಂಗಳೂರಿನಲ್ಲಿ ನೆಲೆಸಿರುವವರನ್ನು ಅಥವಾ ಕರುಣೆಯಿಂದ ಮತಹಾಕದಿರಿ. ಜನಪ್ರತಿನಿಧಿಯಾದವರು ಮನೆಮನೆಗೂ ಭೇಟಿ ನೀಡಬೇಕು. ಜನರ ಕಷ್ಟ ಸುಖಕ್ಕೆ ಸ್ಪಂದಿಸಬೇಕು. ಅನಕ್ಷರಸ್ಥರು, ಬಡವರು, ಮಹಿಳೆಯರಿಗೆ ಸರ್ಕಾರದ ಯೋಜನೆಯು ತಲುಪಿಸುವವರಾಗಬೇಕು. ನಗರದಿಂದ ದೂರವಿರುವ ಹಳ್ಳಿಗಳ ಜನರಿಗೆ ವೈದ್ಯಕೀಯ ನೆರವು, ಮೂಲ ಭೂತ ಸವಲತ್ತುಗಳನ್ನು ಒದಗಿಸುವವರಾಗಬೇಕು. ನನ್ನನ್ನೂ ಸೇರಿದಂತೆ ಎಲ್ಲಾ ಅಭ್ಯರ್ಥಿಗಳನ್ನೂ ಪರಿಶೀಲಿಸಿ ನಿಮ್ಮ ಅಭಿವೃದ್ಧಿಗೆ ಶ್ರಮಿಸುವವರನ್ನು ನಿರ್ವಂಚನೆಯಿಂದ ಮತ ನೀಡಿ ಎಂದರು.
ಶೈಕ್ಷಣಿಕ ಅಭಿವೃದ್ಧಿಯ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಬಸ್ ಪಾಸ್, ನೋಟ್ ಪುಸ್ತಕಗಳು, ಕುಡಿಯುವ ನೀರಿನ ಬಾಟಲ್‌ಗಳು, ತರಬೇತಿ ಶಿಬಿರಗಳು, ಯುವಜನರಿಗೆ ಕೌಶಲ್ಯಾಭಿವೃದ್ಧಿ ಶಿಬಿರಗಳು, ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು, ಉಚಿತ ಶಸ್ತ್ರಚಿಕಿತ್ಸೆಗಳು, ಅಂಗವಿಕಲರಿಗೆ ವೀಲ್ ಚೇರ್, 2000 ಮಂದಿಗೆ ಸರ್ಕಾರದ ಸೌಲಭ್ಯಗಳಾದ ವಿಧವಾ ವೇತನ, ಅಂಗವಿಕಲ ವೇತನ ಮತ್ತು ವೃದ್ಧಾಪ್ಯವೇತನಗಳನ್ನು ಮಾಡಿಸಿಕೊಟ್ಟು ಟ್ರಸ್ಟ್ ಮೂಲಕ ಜನರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಪ್ರತಿಯೊಂದು ಗ್ರಾಮಕ್ಕೂ ಮನೆಮನೆಗೂ ಭೇಟಿ ನೀಡಿ ಅವರ ನೋವು, ಕಷ್ಟ, ತೊಂದರೆಗಳನ್ನು ಆಲಿಸುವ ಕೆಲಸ ಮಾಡುತ್ತಿದ್ದೇನೆ. ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಮಹಿಳಾ ಆರ್ಥಿಕ ಸಬಲೀಕರಣ, ರಸ್ತೆ, ನೀರಿನ ಸಮಸ್ಯೆ ನಿವಾರಣೆಯ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ದುಡಿಯುವುದೇ ಗುರಿಯಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ 40 ಮಂದಿ ವೃದ್ಧರಿಗೆ ಶ್ರವಣಯಂತ್ರಗಳನ್ನು, 200 ಮಂದಿಗೆ ವೃದ್ಧಾಪ್ಯವೇತನದ ಪತ್ರಗಳನ್ನು ವಿತರಿಸಿ, ಚಿತ್ರಕಲಾ ಶಿಕ್ಷಕ ಶಿವರಾಜ್‌ಗೆ ಸನ್ಮಾನವನ್ನು ಮಾಡಲಾಯಿತು.
ಎಸ್.ಎನ್.ಕ್ರಿಯಾ ಟ್ರಸ್ಟ್ ಗೌರವಾಧ್ಯಕ್ಷ ಆನೂರು ದೇವರಾಜ್, ತಾಲ್ಲೂಕು ಪಂಚಾಯಿತಿ ಸದಸ್ಯ ಆನೂರು ದೇವರಾಜ್, ನರಸಿಂಹಪ್ಪ, ಕೃಷ್ಣಪ್ಪ, ಎಸ್.ವಿ.ಐಯ್ಯರ್. ಅಶ್ವತ್ಥನಾರಾಯಣ ಹಾಜರಿದ್ದರು.
ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ
ಜೆಡಿಎಸ್ ಪಕ್ಷದ ವರಿಷ್ಠರು ವಿಧಾನಸಭಾ ಚುನಾವಣೆಯ ಅಭ್ಯರ್ಥಿಯಾಗಿ ನನ್ನನ್ನು ಘೋಷಿಸಿ, ಕ್ಷೇತ್ರದಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷವನ್ನು ಸಂಘಟಿಸಲು ಸೂಚಿಸಿದ್ದಾರೆ. ಪಕ್ಷದ ಮುಖಂಡರ ಸಲಹೆ ಸೂಚನೆಯಂತೆ ಒಗ್ಗೂಡಿ ಚುನಾವಣೆಯನ್ನು ಎದುರಿಸುವುದಾಗಿ ಶಾಸಕ ಎಂ.ರಾಜಣ್ಣ ತಿಳಿಸಿದರು.
ಕೋಟೆ ವೃತ್ತದ ಬಳಿ ಸೇವ ಸಿಂಧು ಕಚೇರಿ ಸಭಾಂಗಣದಲ್ಲಿ ಹಲವಾರು ಮಂದಿ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡವರನ್ನು ಸ್ವಾಗತಿಸಿ ಅವರು ಮಾತನಾಡಿದರು.
ಪಕ್ಷದ ಮುಖಂಡತ್ವದಲ್ಲಿ ಈಗ ಗೊಂದಲಕ್ಕೆ ತೆರೆಬಿದ್ದಿದೆ. ಜೆಡಿಎಸ್ ಪಕ್ಷಕ್ಕೆ ಅಪಾರ ಜನಬೆಂಬಲವಿದೆ. ಆಂತರಿಕ ಭಿನ್ನಾಭಿಪ್ರಾಯಗಳು ಎಲ್ಲೆಡೆ ಇರುತ್ತವೆ. ಅವನ್ನು ಪಕ್ಷದ ಮುಖಂಡರು ಹಾಗೂ ವರಿಷ್ಠರ ಮಾರ್ಗದರ್ಶನ ನೀಡುವ ಮೂಲಕ ಸರಿಹೋಗಲಿದೆ. ಮುಂದೆ ಕುಮಾರಣ್ಣ ಅವರು ಮುಖ್ಯಮಂತ್ರಿ ಆಗುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಮುನಿಕೃಷ್ಣ, ಶ್ರೀನಿವಾಸ್, ರಾಜಣ್ಣ, ಬಾಲರಾಜು, ಆನಂದ್, ಮುರಳಿ, ವೆಂಕಟೇಶ್, ಗಂಗ, ಮೂರ್ತಿ, ಸುದರ್ಶನ್, ವೆಂಕಟೇಶ್, ಚಿನ್ನಿ, ಮಂಜುನಾಥ್, ನಂದೀಶ್, ಶಿವಕುಮಾರ್ ಮುಂತಾದವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ನಗರಸಭೆ ಸದಸ್ಯ ಅಫ್ಸರ್ಪಾಷ, ಮುರಳಿ, ರಹಮತ್ತುಲ್ಲ, ತಾದೂರು ರಮೇಶ್, ಮುನಿರೆಡ್ಡಿ ಹಾಜರಿದ್ದರು.

