Home Blog Page 383

ಕರಾಟೆ ಕಲಿಕೆಯಿಂದ ಆತ್ಮಸ್ಥೈರ್ಯ ಬೆಳೆಯುತ್ತದೆ

0

ಸದೃಢ ವ್ಯಕ್ತಿತ್ವಕ್ಕೆ ಕರಾಟೆ ಪೂರಕ. ಕರಾಟೆ ಕಲಿಕೆಯಿಂದ ನಮ್ಮಲ್ಲಿ ಆತ್ಮಸ್ಥೈರ್ಯ ಬೆಳೆಯುವ ಜತೆಗೆ ಹೋರಾಟ ಮನೋಭಾವ ವೃದ್ಧಿಯಾಗುತ್ತದೆ ಎಂದು ಗೌರಿಬಿದನೂರಿನ ಆರನೇ ಬ್ಲಾಕ್ ಬೆಲ್ಟ್ ಚಂದ್ರಶೇಖರ್ ತಿಳಿಸಿದರು.
ನಗರದ ಅರಳೇಪೇಟೆಯ ಬಸವೇಶ್ವರ ದೇವಾಲಯದ ಆವರಣದಲ್ಲಿ ದಿವ್ಯಭಾರತ್ ಕರಾಟೆ ಡೋ ಅಸೋಸಿಯೇಷನ್ ವತಿಯಿಂದ ಭಾನುವಾರ ನಡೆದ ಕರಾಟೆ ವಿದ್ಯಾರ್ಥಿಗಳಿಗೆ ಬೆಲ್ಟ್ ಪರೀಕ್ಷಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರಾಟೆ ಅಭ್ಯಾಸದಿಂದ ಆರೋಗ್ಯದಲ್ಲಿ ಸ್ಥಿರತೆ ಕಂಡುಕೊಳ್ಳಬಹುದು. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಹಾಗಾಗಿ, ಪ್ರತಿಯೊಬ್ಬರೂ ಕರಾಟೆ ಕಲಿತು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರಾಟೆ ಕಲಿಕೆ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ತನ್ನದೇ ಪಾತ್ರ ನಿರ್ವಹಿಸುತ್ತದೆ. ಪ್ರತಿಯೊಬ್ಬರೂ ಕರಾಟೆ ಕಲಿಕೆಗೆ ಆಸಕ್ತಿ ವಹಿಸಬೇಕು. ಶಿಡ್ಲಘಟ್ಟದಲ್ಲಿ ಕರಾಟೆ ಕಲಿಕೆಗೆ ಉತ್ತೇಜನ ಸಿಗುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಕರಾಟೆ ಪಟುಗಳು ಕರಾಟೆ ಪ್ರದರ್ಶನ ನೀಡಿದರು. ಕರಾಟೆ ಪಿರಮಿಡ್, ಕೈಗಳ ಮೇಲೆ ದ್ವಿಚಕ್ರ ವಾಹನ ಚಾಲನೆ, ಮುಂತಾದ ಪ್ರದರ್ಶನಗಳನ್ನು ವಿದ್ಯಾರ್ಥಿಗಳು ನೀಡಿದರು. ನಂತರ ತರಬೇತಿ ಪಡೆದ ಕರಾಟೆಪಟುಗಳಿಗೆ ಎಲ್ಲೋ, ಬ್ಲೂ, ಗ್ರೀನ್, ಆರೆಂಜ್, ಪರ್ಪಲ್ ಬೆಲ್ಟ್ ಮತ್ತು ಪ್ರಮಾಣ ಪತ್ರ ವಿತರಿಸಿಲಾಯಿತು.
ದಿವ್ಯಭಾರತ್ ಕರಾಟೆ ಡೋ ಅಸೋಸಿಯೇಷನ್ ಕರಟೆ ಶಿಕ್ಷಕ ವಿ.ಅರುಣ್ ಕುಮಾರ್, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ನೃತ್ಯ ಕಲಾವಿದ ಸಿ.ಎನ್.ಮುನಿರಾಜು, ಲಯನ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮುನಿರಾಜು, ಜಗದೀಶ್ ಹಾಜರಿದ್ದರು.

ವಿಕಾಸಪರ್ವಕ್ಕೆ ತಾಲ್ಲೂಕಿನಿಂದ ಸಾವಿರಾರು ಮಂದಿ

0

ಜೆಡಿಎಸ್ ಪಕ್ಷದ ವತಿಯಿಂದ ಫೆಬ್ರುವರಿ ೧೭ ರ ಶನಿವಾರ ಬೆಂಗಳೂರಿನ ಹೊರವಲಯದಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ವಿಕಾಸಪರ್ವ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ತಾಲ್ಲೂಕಿನಿಂದ ಸುಮಾರು ೧೫೦ ಬಸ್ಸುಗಳಲ್ಲಿ ಕಾರ್ಯಕರ್ತರೊಂದಿಗೆ ತೆರಳುವುದಾಗಿ ಎಚ್.ಡಿ.ದೇವೇಗೌಡ ಹಾಗೂ ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ಬಸ್ ನಿಲ್ದಾಣದ ಬಳಿಯಿರುವ ಅಂಜನಾದ್ರಿ ಪಾರ್ಟಿ ಹಾಲ್ ನಲ್ಲಿ ಶುಕ್ರವಾರ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಿ ಅವರು ಮಾತನಾಡಿದರು.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರೂ ಆದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿರ್ದೇಶನದ ಪ್ರಕಾರ ಕ್ಷೇತ್ರದಿಂದ ಸುಮಾರು ೧೫೦ ಬಸ್‌ಗಳ ಮೂಲಕ ಕಾರ್ಯಕರ್ತರನ್ನು ಸಮಾವೇಶಕ್ಕೆ ಕರೆದೊಯ್ಯಲಾಗುವುದು ಎಂದರು.
ಕ್ಷೇತ್ರದಾದ್ಯಂತ ಇರುವ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಬಸ್‌ಗಳನ್ನು ಕಳುಹಿಸಿಕೊಡಲಿದ್ದು ಅಲ್ಲಿನ ಸ್ಥಳೀಯ ಮುಖಂಡರು ಸ್ಥಳೀಯ ಕಾರ್ಯಕರ್ತರನ್ನು ತಾಲ್ಲೂಕಿನ ತಾದೂರು ಗ್ರಾಮದ ಬಳಿ ಗುರುತಿಸಿರುವ ಜಾಗಕ್ಕೆ ಕರೆತಂದು ಉಪಹಾರ ಸೇವಿಸಿ ಒಟ್ಟಾಗಿ ಅಲ್ಲಿಂದ ೧೨ ಗಂಟೆಯೊಳಗೆ ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲು ಹೊರಡಿಸಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಜಾತ್ಯಾತೀತ ಜನತಾದಳದ ಪರ ಜನಬೆಂಬಲವಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ನಾಯಕತ್ವದ ಬಗ್ಗೆ ಅಚಲವಾದ ನಂಬಿಕೆಯಿದೆ. ರೈತರ ಉಳಿವಿಗಾಗಿ ಸಾಲ ಮನ್ನಾ ಮತ್ತು ಶಾಶ್ವತ ನೀರು ಯೋಜನೆ ಮಾಡುವ ಇಚ್ಛಾಶಕ್ತಿಯನ್ನು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಾತ್ರ ಇರುವುದರಿಂದ ಅವರು ರಾಜ್ಯದ ಜನರಿಗೆ ಭರವಸೆಯಾಗಿದ್ದಾರೆ. ಕುಮಾರಣ್ಣನವರನ್ನು ಮುಂದಿನ ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ವಿ.ನಾಗರಾಜ್, ಪಿ.ಶಿವಾರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಮಿನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಮುಖಂಡರಾದ ಗೊರಮಡುಗು ರಾಮಾಂಜಿನಪ್ಪ, ದೊಣ್ಣಹಳ್ಳಿ ರಾಮಣ್ಣ, ಕೇಶವಮೂರ್ತಿ, ಕದಿರಿಯೂಸುಫ್, ಬಾಂಬ್ ಶಮಿ, ಸೈಯ್ಯದ್, ಆದಿಲ್‌ಪಾಷ, ಗೋಪಾಲಪ್ಪ, ಅಮ್ಜದ್‌, ನಗರಸಭೆಯ ಸದಸ್ಯರಾದ ಲಕ್ಷ್ಮಣ್‌, ವೆಂಕಟಸ್ವಾಮಿ, ನಂದಕಿಶನ್‌, ಮಡಿವಾಳ ಸಂಘದ ರಾಜಣ್ಣ, ಹೈದರಾಲಿ ಹಾಜರಿದ್ದರು.

ಶಿವರಾತ್ರಿ ಹಬ್ಬದ ಪ್ರಯುಕ್ತ ರಂಗೋಲಿ ಸ್ಪರ್ಧೆ

0

ನಗರದದಲ್ಲಿ ಮಂಗಳವಾರ ರಾತ್ರಿ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀರಾಮ ಯುವಕರ ಸಂಘ ಮತ್ತು ಶ್ರೀಆಂಜನೇಯ ಯುವಕರ ಬಳಗದ ವತಿಯಿಂದ ಶ್ರೀರಾಮ ಹಾಗೂ ಮಾರಿಕಾಂಬ ದೇವಾಲಯದ ಮುಂಭಾಗ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ರಸ್ತೆಯಲ್ಲಿ 28 ಮಂದಿ ಮಹಿಳೆಯರು ರಂಗೋಲಿಯನ್ನು ಹಾಕಿದ್ದು ಇಡೀ ರಸ್ತೆಯನ್ನೇ ಹಬ್ಬದ ಪ್ರಯುಕ್ತ ಬಣ್ಣದಿಂದ ಸಿಂಗರಿಸಿದಂತೆ ಭಾಸವಾಗುತ್ತಿತ್ತು.
ರಂಗೋಲಿ ಸ್ಪರ್ಧೆಯ ತೀರ್ಪುಗಾರರಾಗಿ ಚಿಕ್ಕಬಳ್ಳಾಪುರದ ಉಷಾ ಶ್ರೀನಿವಾಸ್ ಮತ್ತು ನಿರ್ಮಲ ಆಗಮಿಸಿದ್ದರು. ಪ್ರಥಮ ಸ್ಥಾನ ಪಡೆದ ದಿವ್ಯ, ದ್ವಿತೀಯರಾದ ಪದ್ಮ ಮತ್ತು ತೃತೀಯರಾದ ಸುಕನ್ಯ ಅವರಿಗೆ ಕುಕ್ಕರ್ಗಳನ್ನು ಬಹುಮಾನವಾಗಿ ನೀಡಲಾಯಿತು. ಎಲ್ಲಾ ಸ್ಪರ್ಧಿಗಳಿಗೂ ಸಮಾಧಾನಕರ ಬಹುಮಾನ ವಿತರಿಸಲಾಯಿತು.
ಶ್ರೀರಾಮ ಯುವಕರ ಸಂಘದ ಅಧ್ಯಕ್ಷ ನಾಗರಾಜು, ನೃತ್ಯ ಕಲಾವಿದ ಸಿ.ಎನ್.ಮುನಿರಾಜು, ವಿ.ದೇವರಾಜು, ನರಸಿಂಹಮೂರ್ತಿ, ಶಿವಮೂರ್ತಿ, ದೀಪು ಹಾಜರಿದ್ದರು.

ಗುಡಿಹಳ್ಳಿಯ ಪಾರ್ವತಾಂಬ ಸಮೇತ ಶ್ರೀ ಸೋಮೇಶ್ವರಸ್ವಾಮಿ ಬ್ರಹ್ಮರಥೋತ್ಸವ

0

ತಾಲ್ಲೂಕಿನ ಗುಡಿಹಳ್ಳಿಯ ಪಾರ್ವತಾಂಬ ಸಮೇತ ಶ್ರೀ ಸೋಮೇಶ್ವರಸ್ವಾಮಿ ಬ್ರಹ್ಮರಥೋತ್ಸವವನ್ನು ಬುಧವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಹೇವಿಳಂಬಿನಾಮ ಸಂವತ್ಸರ ಮಾಘ ಮಾಸ ಬಹುಳ ಬುಧವಾರದ ವೃಷಭ ಮಹೂರ್ತದಲ್ಲಿ ನಡೆದ ಬ್ರಹ್ಮರಥೋತ್ಸವಕ್ಕೆ ಶಾಸಕ ಎಂ.ರಾಜಣ್ಣ ಮತ್ತು ಗ್ರೇಡ್ 2 ತಹಶೀಲ್ದಾರ್ ಮುನಿಕೃಷ್ಣಪ್ಪ ಚಾಲನೆ ನೀಡಿದರು.
ಸುತ್ತ ಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಬ್ರಹ್ಮರಥೋತ್ಸವಕ್ಕೆ ಸಾಕ್ಷಿಯಾದರು.
ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡಿಹಳ್ಳಿ ಗ್ರಾಮದ ಶ್ರೀಪಾರ್ವತಾಂಬ ಸಮೇತ ಶ್ರೀಸೋಮೇಶ್ವರಸ್ವಾಮಿ ದೇವಾಲಯದ ೧೦ ನೇ ವರ್ಷದ ಬ್ರಹ್ಮ ರಥೋತ್ಸವದ ಅಂಗವಾಗಿ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಸಿಂಗರಿಸಿ ವಿಶೇಷ ಪೂಜೆ, ಹೋಮ, ಹವನ, ಕಳಶ ಪೂಜೆ, ಗಣಪತಿ ಪೂಜೆ ನಡೆಸಿ ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಉತ್ಸವ ಮೂರ್ತಿಯನ್ನು ಅಲಂಕೃತ ಹೂವಿನ ತೇರಿನಲ್ಲಿ ಪ್ರತಿಷ್ಠಾಪಿಸಿ ಊರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ಮಾಡಲಾಯಿತು. ಕರಡಿ ವೇಷ, ಗಾರುಡಿ ಗೊಂಬೆ, ತಮಟೆ, ನಾದಸ್ವರ, ವೀರಗಾಸೆ ಇನ್ನಿತರೆ ಜನಪದ ಕಲಾತಂಡಗಳು ರಥೋತ್ಸವಕ್ಕೆ ಕಳೆ ತಂದಿದ್ದವು. ದವನ ಸಿಕ್ಕಿಸಿರುವ ಬಾಳೆಹಣ್ಣನ್ನು ರಥದೆಡೆಗೆ ಎಸೆದು ಜನರು ಭಕ್ತಿಯಿಂದ ಪ್ರಾರ್ಥಿಸಿದರು.
ಪೋಟಿ ವೇಷ, ತಮಟೆ, ಡೋಲು ಮೆರವಣಿಗೆಯಲ್ಲಿದ್ದು, ಆಕರ್ಷಣೀಯವಾಗಿತ್ತು. ಭಕ್ತರಿಗೆ ಅನ್ನಸಂತರ್ಪಣೆಯನ್ನೂ ನಡೆಸಲಾಯಿತು.
ಬುರಗು ಬತಾಸಿನ ಅಂಗಡಿ, ಮಕ್ಕಳ ಆಟದ ಸಾಮಾನು, ಐಸ್ಕ್ರೀಂ, ಕೈ ಮೇಲೆ ಹಚ್ಚೆ ಹಾಕುವ, ಬಣ್ಣ ಬಣ್ಣದ ವಿವಿದ ಆಕಾರದ ಊಸರ ಬುಡ್ಡೆ(ಬಲೂನ್), ಜಡೆಕುಚ್ಚೆ, ಜಡೆ ಬಿಲ್ಲೆಯ ಅಂಗಡಿ, ಕಬ್ಬಿನ ರಸ, ಜಿಲೇಬಿ ಬಿಸಿ ಬಿಸಿ ಬೋಂಡ ಮುಂತಾದ ಅಂಗಡಿಗಳು ದೇವಾಲಯದ ಆಸು ಪಾಸಿನಲ್ಲಿ ತಲೆ ಎತ್ತಿದ್ದವು.
ರಾಜಸ್ವ ನಿರೀಕ್ಷಕ ವಿಶ್ವನಾಥ್, ಮುಖಂಡರಾದ ಚನ್ನಕೃಷ್ಣಪ್ಪ, ಮುನಿವೆಂಕಟಸ್ವಾಮಿ, ಶ್ರೀರಾಮಪ್ಪ, ಬಚ್ಚರಾಯಪ್ಪ, ದ್ಯಾವಪ್ಪ, ನರಸಿಂಹಮೂರ್ತಿ, ಆಗಮಿಕರಾದ ಗಣೇಶ್ ದೀಕ್ಷಿತ್, ಅರ್ಚಕರಾದ ನಂಜುಂಡಯ್ಯ, ನಾಗೇಂದ್ರ ಹಾಜರಿದ್ದರು.

ಮಾನವ ಹಕ್ಕುಗಳ ಸೇವಾ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕ

0

ತಾಲ್ಲೂಕಿನ ಜೆ.ಎಂ.ಹರೀಶ್ ನಾಯಕ್ ಮತ್ತು ಎಂ.ಕೃಷ್ಣಾನಂದ ಅವರನ್ನು ಮಾನವ ಹಕ್ಕುಗಳ ಸೇವಾ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನಾಗಿ ನೇಮಿಸಿ ರಾಜ್ಯ ಘಟಕದ ಅಧ್ಯಕ್ಷ ಕಲ್ಲಹಳ್ಳಿ ವೆಂಕಟೇಶ್ ಮತ್ತು ರಾಜ್ಯ ಕಾರ್ಯಾಧ್ಯಕ್ಷ ಮಂಜುನಾಥ ಆದೇಶ ಪತ್ರವನ್ನು ನೀಡಿದ್ದಾರೆ.

ಏಳನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

0

ನಿವೃತ್ತ ಶಿಕ್ಷಕ ಎಸ್.ವಿ.ನಾಗರಾಜರಾವ್ ಸಮ್ಮೇಳನಾಧ್ಯಕ್ಷತೆಯಲ್ಲಿ ನಗರದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಫೆಬ್ರುವರಿ ೧೭ ರ ಶನಿವಾರ ಏಳನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಬೆಳಿಗ್ಗೆ ೮ ಗಂಟೆಗೆ ಧ್ವಜಾರೋಹಣದ ಮೂಲಕ ಕಾರ್ಯಕ್ರಮ ಶುರುವಾಗಲಿದೆ.
ರಾಷ್ಟ್ರಧ್ವಜವನ್ನು ತಹಸೀಲ್ದಾರ್ ಎಸ್.ಅಜಿತ್ಕುಮಾರ್ ರೈ, ನಾಡಧ್ವಜವನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎಂ.ವೆಂಕಟೇಶ್, ಪರಿಷತ್ತಿನ ಧ್ವಜವನ್ನು ಕಸಾಪ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಆರೋಹಣ ಮಾಡಲಿದ್ದಾರೆ.
ತಾಯಿ ಭುವನೇಶ್ವರಿ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಬೆಳಿಗ್ಗೆ ೯.೩೦ ಗಂಟೆಗೆ ನಗರದ ಬಸ್ ನಿಲ್ದಾಣದಿಂದ ಆಯೋಜಿಸಲಾಗಿದೆ.
ಉದ್ಘಾಟನಾ ಸಮಾರಂಭವನ್ನು ಬೆಳಿಗ್ಗೆ ೧೧ ಗಂಟೆಗೆ ವಾಸವಿ ಕಲ್ಯಾಣ ಮಂಟಪದಲ್ಲಿ ‘ಸರ್.ಎಂ.ವಿಶ್ವೇಶ್ವರಯ್ಯ ವೇದಿಕೆ’ಯಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಂ.ರಾಜಣ್ಣ ವಹಿಸಲಿದ್ದು ಸಮ್ಮೇಳನದ ಉದ್ಘಾಟನೆಯನ್ನು ಸಂಸದ ಕೆ.ಎಚ್.ಮುನಿಯಪ್ಪ ನೆರವೇರಿಸಲಿದ್ದಾರೆ.
ಭುವನೇಶ್ವರಿ ಭಾವಚಿತ್ರ ಅನಾವರಣವನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು ನೆರವೇರಿಸುವರು.
ಮಧ್ಯಾಹ್ನ ೨ ಗಂಟೆಗೆ ವಿಚಾರಗೋಷ್ಠಿ ನಡೆಯಲಿದೆ. ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಬಾಗೇಪಲ್ಲಿಯ ನ್ಯಾಷನಲ್ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಕೆ.ರಾಮಯ್ಯ ವಹಿಸಲಿದ್ದಾರೆ.
ಮಧ್ಯಾಹ್ನ ೩ ಗಂಟೆಗೆ ಕವಿಗೋಷ್ಠಿ ನಡೆಯಲಿದ್ದು ಹಿರಿಯ ಸಾಹಿತಿ ಕಾಗತಿ ವೆಂಕಟರತ್ನಂ ಅಧ್ಯಕ್ಷತೆಯನ್ನು ವಹಿಸುವರು. ಸುಮಾರು ೧೫ ಮಂದಿ ಕವಿಗಳು ವಿವಿಧ ಕವನಗಳನ್ನು ವಾಚಿಸುವರು.
ಸಂಜೆ ೪.೩೦ ಗಂಟೆಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮವಿದ್ದು, ಅಧ್ಯಕ್ಷತೆಯನ್ನು ತಹಸೀಲ್ದಾರ್ ಎಸ್.ಅಜಿತ್ಕುಮಾರ್ ರೈ ವಹಿಸುವರು.
ಸಮಾರೋಪ ಸಮಾರಂಭವನ್ನು ಸಂಜೆ ೫.೩೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಭಾಗವಹಿಸಲಿದ್ದಾರೆ.
ಸಂಜೆ ೬.೩೦ ಗಂಟೆ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಶ್ರೀ ಕೃಷ್ಣ ಕಲಾಕುಂಜ ಹಾಗು ಮಯೂರಿ ನಾಟ್ಯ ಕಲಾಕೇಂದ್ರದ ಮಕ್ಕಳಿಂದ ಭರತನಾಟ್ಯ ಹಾಗು ಚಿಂತಾಮಣಿಯ ನಾಗನಾಥೇಶ್ವರಿ ಸಂಗೀತ ಪಾಠಶಾಲೆಯ ಹಿರಣ್ಯಪಲ್ಲಿ ಅಶೋಕ್ ತಂಡದವರಿಂದ ಸುಗಮ ಸಂಗೀತ ಏರ್ಪಡಿಸಲಾಗಿದೆ.
ಸಮ್ಮೇಳನಾಧ್ಯಕ್ಷ ಎಸ್.ವಿ.ನಾಗರಾಜರಾವ್: ಶಿಡ್ಲಘಟ್ಟದಲ್ಲಿ ಎಂ.ಎಸ್.ವೆಂಕಣ್ಣ ಹಾಗೂ ಲಕ್ಮಮ್ಮ ಪುತ್ರನಾಗಿ ೧೯೫೪ ರ ಜೂನ್ ೩ ರಂದು ಜನನ. ನಗರದ ಉಲ್ಲೂರುಪೇಟೆ ಹಾಗು ಕೋಟೆ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಆರಂಭಿಸಿದ ಇವರು, ಪ್ರೌಢಶಾಲೆಯನ್ನು ನಗರದ ವಿರುಪಾಕ್ಷಪ್ಪ ಸರ್ಕಾರಿ ಪ್ರೌಡಶಾಲೆಯಲ್ಲಿ, ಪಿಯುಸಿ ಚಿಕ್ಕಬಳ್ಳಾಪುರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ, ಬಿ.ಎ ಪದವಿಯವನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಹಾಗೂ ಬಿ,ಎಡ್ ನ್ನು ರೀಜನಲ್ ಕಾಲೇಜು ಮೈಸೂರಿನಲ್ಲಿ ಮುಗಿಸಿ ೧೯೭೬ ರಲ್ಲಿ ಶಿಕ್ಷಕರಾಗಿ ಸೇವೆ ಆರಂಬಿಸಿ ಕೋಳ್ಳೇಗಾಲ ಸೇರಿದಂತೆ ತಾಲ್ಲೂಕಿನ ದೇವರಮಳ್ಳೂರು, ನಗರದ ಉಲ್ಲೂರುಪೇಟೆ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಜೂನಿಯರ್ ಕಾಲೇಜಿನಲ್ಲಿ ಸುಮಾರು ೨೮ ವರ್ಷಗಳ ಕಾಲ ಶಿಕ್ಷಕರಾಗಿ ಮತ್ತು ೫ ವರ್ಷಗಳ ಕಾಲ ಅಕ್ಷರದಾಸೋಹದ ಸಹಾಯಕ ನಿರ್ದೇಶಕನಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ.
ಶೈಕ್ಷಣಿಕ ಸೇವೆಗೆ ಸಂದ ಗೌರವ: ಇವರ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ೨೦೦೦ ಇಸವಿಯಲ್ಲಿ ಕೋಲಾರ ಜಿಲ್ಲೆಯ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ೨೦೦೩ ರಲ್ಲಿ ಏರ್ ಇಂಡಿಯಾ ಹಾಗೂ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ವತಿಯಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಜೊತೆಗೆ ಇದರ ಮೂಲಕ ಸಿಂಗಪೂರ್ಗೆ ಶೈಕ್ಷಣಿಕ ಪ್ರವಾಸಕ್ಕೆ ಹೋಗುವ ಸದವಕಾಶ, ಜೊತೆಗೆ ವಿವಿಧ ಸಂಘ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿಗಳು, ಪುರಸ್ಕಾರಗಳು, ಸನ್ಮಾನಗಳು ಸಂದಿವೆ.
ಕಲೆ ಹಾಗು ಸಂಘ ಸಂಸ್ಥೆಗಳೊಂದಿಗೆ ಒಡನಾಟ: ಜೇಸಿಸ್ ನಲ್ಲಿ ಮಾಜಿ ಅಧ್ಯಕ್ಷರಾಗಿ, ಹವ್ಯಾಸಿ ಕಲಾ ವೃಂದದ ಅಧ್ಯಕ್ಷ, ನೆಹರೂ ಕ್ರೀಡಾಂಗಣದ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ, ತಾಲ್ಲೂಕು ಹಾಗೂ ಜಿಲ್ಲಾ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ತಾಲ್ಲೂಕಿನ ವಿವಿಧ ಶಾಲಾ ಮಕ್ಕಳಿಗೆ ನಾಟಕ ನಿರ್ದೇಶಕರಾಗಿ, ಮೋಡ ಸರಿಯಿತು, ತ್ರಿಮೂರ್ತಿ, ಕೈಗಾರಿಕೆ ಸಂಚಿಕೆ ಯಂತಹ ದೂರದರ್ಶನ ದಾರಾವಾಹಿ ಸೇರಿದಂತೆ ಬಿಳಿ ಗುಲಾಬಿ, ತಿಮ್ಮರಾಯ, ಬದ್ರಿ ಹಾಗೂ ಬಿಡುಗಡೆಗೆ ಸಿದ್ದಗೊಂಡಿರುವ ಮಿಸ್ಟರ್ ಎಲ್.ಎಲ್.ಬಿ ಯಂತಹ ಚಲನಚಿತ್ರದಲ್ಲಿ ಅತಿಥಿ ನಟರಾಗಿ ಅಭಿನಯಿಸಿದ್ದಾರೆ.
ಇತ್ತೀಚೆಗೆ ತಮ್ಮ ಜೀವನದಲ್ಲಿ ನಡೆದ ಹಾಸ್ಯ ಘಟನೆಗಳ ಬಗ್ಗೆ ಘಟನಾಮೃತ ಎಂಬ ಪುಸ್ತಕ ರಚಿಸಿ ಬಿಡುಗಡೆ ಮಾಡಿದ್ದಾರೆ.

ಕಾಯಕದ ಮೂಲಕವೇ ಸಂತ ಪದವಿಗೇರಿದವರು ವಚನಕಾರರು

0

ಕಾಯಕದ ಮೂಲಕವೇ ಸಂತ ಪದವಿಗೇರಿದವರು ಹಾಗೂ ದೇವರನ್ನು ಸಾಕ್ಷೀಕರಿಸಿಕೊಂಡವರು ವಚನಕಾರರು. ತಮ್ಮ ವಚನಗಳ ಮೂಲಕ ಸಮಾಜದ ಜಾಡ್ಯ ದೂರ ಮಾಡಿದವರು ಅವರು ಎಂದು ಶಾಸಕ ರಾಜಣ್ಣ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ದಲಿತ ವಚನಕಾರರ ಜಯಂತ್ಯುತ್ಸವ ಹಾಗೂ ಸಂತ ಶ್ರೀ ಸೇವಾಲಾಲ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅನೇಕ ದಲಿತ ವಚನಕಾರರು ವಚನಗಳನ್ನು ತಮ್ಮ ಅನುಭವ ಮತ್ತು ಕಾಯಕದ ಹಿನ್ನೆಲೆಯಲ್ಲಿ ರಚಿಸಿದರು. ೧೨ ನೇ ಶತಮಾನದಲ್ಲಿ ಮೇಲು ಕೀಳು ಎಂಬ ಭಾವನೆಗಳಡಿಯಲ್ಲಿ ಜಾತಿ ವ್ಯವಸ್ಥೆ ತುಂಬಿ ತುಳುಕಾಡುತ್ತಿದ್ದ ಸಮಯದಲ್ಲಿ ಸಮ ಸಮಾಜ ನಿರ್ಮಿಸುವಲ್ಲಿ ದಲಿತ ವಚನಕಾರರ ಶ್ರಮ ಶ್ಲಾಘನೀಯ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಸಮಕಾಲೀನರಾದ ದಲಿತ ವಚನಕಾರ ಮಾದರ ಚೆನ್ನಯ್ಯ, ಡೋಹರ ಕಕ್ಕಯ್ಯ, ಹರಳಯ್ಯ ರಂತಹವರು ರಚಿಸಿದ ವಚನಗಳು ಇಂದಿಗೂ ಪ್ರಸ್ತುತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಾಡೋಜ ಪ್ರಶಸ್ತಿ ಪುರಸ್ಕೃತ ಮುನಿವೆಂಕಟಪ್ಪ, ಈಧರೆ ಕಲಾ ತಂಡದ ಪ್ರಕಾಶ್, ಉಪನ್ಯಾಸಕ ಅರಿಕೆರೆ ಮುನಿರಾಜು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ತಹಸೀಲ್ದಾರ್ ಅಜಿತ್ಕುಮಾರ್ ರೈ, ತಾಲ್ಲೂಕು ಪಂಚಾಯಿತಿ ಇಓ ಎಂ.ವೆಂಕಟೇಶ್, ಪ್ರಭಾರಿ ನಗರಸಭಾ ಅದ್ಯಕ್ಷೆ ಪ್ರಭಾವತಿ ಸುರೇಶ್, ಗ್ರೇಡ್೨ ತಹಸೀಲ್ದಾರ್ ಮುನಿಕೃಷ್ಣಪ್ಪ, ಕ್ಷೇತ್ರಶಿಕ್ಷಣಾಧಿಕಾರಿ ಎ.ಚಂದ್ರಶೇಖರ್ಬಾಬು, ದಸಂಸ ಸಂಚಾಲಕ ಎನ್.ವೆಂಕಟೇಶ್ ಹಾಜರಿದ್ದರು.

ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ

0

ಗ್ರಾಮೀಣ ಭಾಗದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳ ಗುಣಮಟ್ಟದಲ್ಲಿ ಸ್ಥಳೀಯ ಗ್ರಾಮಸ್ಥರು ರಾಜಿಯಾಗಬಾರದು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಕತಟ್ಟಿ ಗ್ರಾಮದಲ್ಲಿ ಸ್ಥಳೀಯ ಶಾಸಕರ ಅನುದಾನ ಹಾಗೂ ಎಸ್ಸಿಪಿ ಹಾಗು ಟಿಎಸ್ಪಿ ಯೋಜನೆಯಡಿ ಸಿಸಿ ರಸ್ತೆ ಕಾಮಗಾರಿಗಳಿಗೆ ಗುರುವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಯಾವುದೆ ಅಭಿವೃದ್ಧಿ ಕಾಮಗಾರಿಗಳನ್ನು ಉಪೇಕ್ಷಿಸದೆ ಸಾರ್ವಜನಿಕ ಆಸ್ತಿ ಎನ್ನುವ ಮನೋಭಾವ ಎಲ್ಲಾ ಗ್ರಾಮಸ್ಥರು ಬೆಳೆಸಿಕೊಳ್ಳುವ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೆ ಸಹಕರಿಸಬೇಕು ಎಂದರು.
ಜೆಡಿಎಸ್ ಮುಖಂಡ ಕೆ.ಮಂಜುನಾಥ್ ಮಾತನಾಡಿ, ಈ ಭಾಗದ ಮುಖಂಡರ ಹಾಗೂ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲು ಶಾಸಕರ ಅನುಧಾನದಲ್ಲಿ ಚಾಲನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಕಾಮಗಾರಿಯ ಗುಣಮಟ್ಟದಲ್ಲಿ ರಾಜೀಯಾಗದೇ ಕಾಮಗಾರಿಯ ಗುಣಮಟ್ಟದ ಬಗ್ಗೆ ಎಚ್ಚರ ವಹಿಸಿ ಎಂದರು.
ಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಶಿವಕುಮಾರ್, ಮುಖಂಡರಾದ ಶಿವಕುಮಾರ್, ದೇವರಾಜ್, ಮುನಿಯಪ್ಪ, ಎಂಪಿಸಿಎಸ್ ಅಧ್ಯಕ್ಷ ವಿ.ನಾರಾಯಣಸ್ವಾಮಿ, ವೆಂಕಟಪ್ಪ, ಗುತ್ತಿಗೆದಾರ ಎಂ.ಜೆ.ಶ್ರೀನಿವಾಸ್ ಹಾಜರಿದ್ದರು.

ಶಿಡ್ಲಘಟ್ಟಕ್ಕೆ ರಾಜಣ್ಣ, ಮುಖ್ಯಮಂತ್ರಿಯಾಗಿ ಕುಮಾರಣ್ಣ

0

ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತು ಬೃಹತ್ ಸಮಾವೇಶವನ್ನು ಫೆಬ್ರುವರಿ 17 ರ ಶನಿವಾರ ಬೆಂಗಳೂರಿನ ಹೊರವಲಯದಲ್ಲಿ ಹಮ್ಮಿಕೊಂಡಿದ್ದು ಅದಕ್ಕಾಗಿ ತಾಲ್ಲೂಕಿನಿಂದ 120 ಬಸ್ಸುಗಳಲ್ಲಿ ಸುಮಾರು 7000 ಮಂದಿ ಕಾರ್ಯಕರ್ತರು ತೆರಳುವುದಾಗಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ತಾಲ್ಲೂಕಿನಲ್ಲಿ ಜಾತ್ಯಾತೀತ ಜನತಾದಳದ ಪರ ಜನಬೆಂಬಲವಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ನಾಯಕತ್ವದ ಬಗ್ಗೆ ಅಚಲವಾದ ನಂಬಿಕೆಯಿದೆ. ರೈತರ ಉಳಿವಿಗಾಗಿ ಸಾಲ ಮನ್ನಾ ಮತ್ತು ಶಾಶ್ವತ ನೀರು ಯೋಜನೆ ಮಾಡುವ ಇಚ್ಛಾಶಕ್ತಿಯನ್ನು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಾತ್ರ ಇರುವುದರಿಂದ ಅವರು ರಾಜ್ಯದ ಜನರಿಗೆ ಆಶಾಜ್ಯೋತಿಯಾಗಿದ್ದಾರೆ. ನಮ್ಮ ಗುರಿ ಏನಿದ್ದರೂ ‘ಕ್ಷೇತ್ರದಲ್ಲಿ ಶಾಸಕರಾಗಿ ಎಂ.ರಾಜಣ್ಣ ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿ ಕುಮಾರಣ್ಣ’ ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಹಾಲಿ ಶಾಸಕರಿಗೆ ಟಿಕೇಟ್ ನೀಡುವುದಾಗಿ ಪಕ್ಷದ ಮುಖಂಡರು ಭರವಸೆ ನೀಡಿದ್ದಾರೆ. ಹೀಗಾಗಿ ಪಕ್ಷದ ಗೊಂದಲಗಳಿಗೆ ತೆರೆಬಿದ್ದಿದೆ. ಫೆಬ್ರುವರಿ 17 ರ ಶನಿವಾರ ಕ್ಷೇತ್ರದಿಂದ ಹೆಚ್ಚು ಮಂದಿ ಕಾರ್ಯಕರ್ತರು ತೆರಳುವ ಮೂಲಕ ಶಕ್ತಿ ಪ್ರದರ್ಶನ ಮಾಡಬೇಕಿದೆ. ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಭೇಟಿ ನೀಡಿ ನಿಷ್ಠಾವಂತ ಕಾರ್ಯಕರ್ತರೊಂದಿಗೆ ಸಮಾಲೋಚಿಸಿ ಎಲ್ಲರನ್ನೂ ಒಗ್ಗೂಡಿಸುತ್ತೇವೆ. ಕುಮಾರಣ್ಣನವರನ್ನು ಮುಂದಿನ ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದು ಹೇಳಿದರು.
ಪಕ್ಷಕ್ಕೆ ಸೇರ್ಪಡೆ: ಕೊತ್ತನೂರು ಪಂಚಾಕ್ಷರಿರೆಡ್ಡಿ ಅವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ನಂತರ ಮಾತನಾಡಿ, ಹಲವು ವೈಯಕ್ತಿಕ ಕಾರಣಗಳಿಂದ ಪಕ್ಷದಿಂದ ದೂರವುಳಿದಿದ್ದೆ. ಕುಮಾರಣ್ಣ ಅಭಿಮಾನಿಗಳ ಸಂಘದ ಅಧ್ಯಕ್ಷನಾಗಿ ಹಿಂದೆ ಪಕ್ಷಕ್ಕೆ ದುಡಿದಿದ್ದೇನೆ. ಈಗ ಸಾಂಕೇತಿಕವಾಗಿ ಸೇರ್ಪಡೆಯಾಗಿದ್ದು, ಮುಂದಿನ ದಿನಗಳಲ್ಲಿ ನಡೆಯುವ ‘ಕುಮಾರ ಪರ್ವ’ ಎಂಬ ಬೃಹತ್ ಕಾರ್ಯಕ್ರಮದಲ್ಲಿ ಅಪಾರ ಬೆಂಬಲಿಗರೊಂದಿಗೆ ಸೇರ್ಪಡೆಗೆ ಅಧಿಕೃತತೆ ದೊರಕಿಸಲಾಗುತ್ತದೆ. ‘ಶಿಡ್ಲಘಟ್ಟಕ್ಕೆ ರಾಜಣ್ಣ, ಮುಖ್ಯಮಂತ್ರಿಯಾಗಿ ಕುಮಾರಣ್ಣ’ ನಮ್ಮ ಸಂಕಲ್ಪವಾಗಿದೆ ಎಂದರು.
ಜೆಡಿಎಸ್ ಮುಖಂಡರಾದ ಅಫ್ಸರ್ಪಾಷ, ಮೇಲೂರು ಕೆ.ಮಂಜುನಾಥ್, ಕನಕಪ್ರಸಾದ್, ರಹಮತ್ತುಲ್ಲ, ಸುರೇಂದ್ರ, ಮುರಳಿ, ಆಂಜಿನಪ್ಪ ಹಾಜರಿದ್ದರು.

ಹಿಪ್ಪುನೇರಳೆ ಸೊಪ್ಪಿಗೆ ಈಗ ಬಂಗಾರದ ಬೆಲೆ

0

ವಾತಾವರಣದ ಏರುಪೇರಿನಿಂದಾಗಿ ತೋಟಗಳಲ್ಲಿ ಹಿಪ್ಪುನೇರಳೆ ಸರಿಯಾಗಿ ಬೆಳವಣಿಗೆಯಾಗದ ಕಾರಣ ಹಿಪ್ಪುನೇರಳೆ ಸೊಪ್ಪಿನ ಬೆಲೆ ಗಗನಮುಖಿಯಾಗಿದೆ.
ವಾತಾವರಣದಲ್ಲಿ ಹೆಚ್ಚಾಗಿರುವ ತೇವಾಂಶದಿಂದಾಗಿ ಹಿಪ್ಪುನೇರಳೆ ತೋಟಗಳಲ್ಲಿ ನಿಧಾನಗತಿಯಲ್ಲಿ ಬೆಳೆಯುತ್ತಿರುವ ಹಿಪ್ಪುನೇರಳೆ ಸೊಪ್ಪಿಗೆ ಬೇಡಿಕೆ ಹೆಚ್ಚಾಗಿದ್ದು, ಬಂಗಾರದ ಬೆಲೆ ಬಂದಿದೆ.
ಡಿಸೆಂಬರ್ ಆರಂಭದಿಂದ ಬೆಳಗಿನ ಜಾವ ಮಂಜಿನ ಹನಿಗಳು ದಟ್ಟವಾಗಿ ಬೀಳುತ್ತಿದ್ದವು. ಜನವರಿ ಕಳೆಯುವಷ್ಟರಲ್ಲಿ ಚಳಿ ಕಡಿಮೆಯಾಗಿ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗುವುದರಿಂದ ಸೊಪ್ಪು ಹುಲುಸಾಗಿ ಬೆಳೆಯುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತರ ಪಾಲಿಗೆ ವಾತಾವರಣ ವಿಭಿನ್ನವಾಗಿದೆ.
ಫೆಬ್ರುವರಿ ತಿಂಗಳಲ್ಲಿ ಅರ್ಧ ತಿಂಗಳು ಕಳೆಯುತ್ತಿದ್ದರೂ ಚಳಿ ಕಡಿಮೆಯಾಗಲಿಲ್ಲ ಇದರಿಂದ ಹಲವಾರು ತೋಟಗಳಿಗೆ ಬೂದುರೋಗ ಬಿದ್ದು ಬೆಳೆ ಕುಂಠಿತವಾಗಿದೆ. ಹಿಪ್ಪುನೇರಳೆ ಬೆಳೆ ಒಂದು ಬಾರಿ ಕಟಾವಾದ ನಂತರ 50 ದಿನಗಳಿಗೆ ಮತ್ತೊಂದು ಕಟಾವು ಮಾಡಬಹುದಾಗಿದೆ. ಚಳಿ ಹೆಚ್ಚಾಗಿರುವ ಕಾರಣ, ಕುಡಿ ಒಡೆಯದೆ 70 ದಿನಗಳಾದರು ಸೊಪ್ಪು ಬೆಳೆಯುತ್ತಿಲ್ಲ, ಚಳಿಗಾಲದಲ್ಲಿ ರೇಷ್ಮೆಹುಳು ಬೆಳೆ ಚೆನ್ನಾಗಿ ಆಗುತ್ತದೆ. ಹುಳುಸಾಕಾಣಿಕೆ ಮನೆಗಳಲ್ಲಿ ಉಷ್ಣಾಂಶವನ್ನು ಕಾಪಾಡಿಕೊಂಡರೆ, ಉತ್ತಮ ಇಳುವರಿ ಬರುತ್ತದೆ. ಸೊಪ್ಪಿನ ಕೊರತೆಯಿಂದಾಗಿ ಇಳುವರಿಯು ಕಡಿಮೆಯಾಗುವ ಆತಂಕ ಕಾಡುತ್ತಿದೆ.
2017 ಅಕ್ಟೋಬರ್, ನವೆಂಬರ್ ತಿಂಗಳಿನಲ್ಲಿ ಎಲ್ಲೆಡೆ ಹಿಪ್ಪುನೇರಳೆ ತೋಟಗಳಿಗೆ ಕಾಡಿದ ಎಲೆಸುರುಳಿ ರೋಗದಿಂದಾಗಿ ಬಹಳಷ್ಟು ತೋಟಗಳಲ್ಲಿನ ಸೊಪ್ಪನ್ನು ಕಟಾವು ಮಾಡಿ ದನಕರುಗಳಿಗೆ ಹಾಕಿದ್ದರು. ರೇಷ್ಮೆ ಬೆಳೆಗಾರರು ಸೊಪ್ಪಿನ ಕೊರತೆಯಿಂದಾಗಿ ಉದ್ಯಮದಿಂದ ಹಿಂದೆ ಸರಿದಿದ್ದರು. ಇತ್ತಿಚೆಗೆ ಬೆಳೆದಿರುವ ಸೊಪ್ಪುಗಳನ್ನು ನಂಬಿಕೊಂಡು ಪುನಃ ಹುಳು ಸಾಕಾಣಿಕೆಯ ಕಡೆಗೆ ಗಮನಹರಿಸಿರುವ ರೈತರ ಪಾಲಿಗೆ ಸೊಪ್ಪಿನ ಬೆಲೆಗಳು ನಿರಾಸೆಯನ್ನುಂಟು ಮಾಡುತ್ತಿದೆ ಎಂದು ರೈತ ರಾಮಣ್ಣ ಹೇಳಿದರು.
₨400 ರಿಂದ 450 ಇದ್ದ ಒಂದು ಮೂಟೆ ಸೊಪ್ಪಿನ ಬೆಲೆ ಈಗ ತೋಟಗಳಲ್ಲಿ ₨ 650 ರಿಂದ 700 ವರೆಗೂ ಏರಿಕೆಯಾಗಿದೆ. ಹುಳು ಸಾಕಾಣಿಕೆ ಮನೆಗಳಿಗೆ ಸೊಪ್ಪುತರುವಷ್ಟರಲ್ಲಿ ಒಂದು ಮೂಟೆ ಸೊಪ್ಪಿನ ಬೆಲೆ ₨ 1000 ಆಗುತ್ತಿದೆ. ದಿನಕ್ಕೆ ಹುಳುಗಳಿಗೆ ಮೂರು ಬಾರಿ ಬೆಳಿಗ್ಗೆ 4 ಗಂಟೆ, ಮಧ್ಯಾಹ್ನ 12 ಗಂಟೆ ಸಂಜೆ 6 ಗಂಟೆಗೆ ಸೊಪ್ಪು ನೀಡುತ್ತಾರೆ. 100 ಮೊಟ್ಟೆ ಹುಳು ಆರಂಭದಿಂದ ಹಣ್ಣಾಗುವ ತನಕ ಸುಮಾರು 40 ಮೂಟೆಗಳಷ್ಟು ಸೊಪ್ಪು ಬೇಕಾಗುತ್ತದೆ. ₨ 40,000 ದಷ್ಟು ಹಣವನ್ನು ಸೊಪ್ಪಿಗೆ ರೈತರು ಖರ್ಚು ಮಾಡಬೇಕಾಗಿದೆ.
ತೋಟಗಳಲ್ಲಿ ಸೊಪ್ಪು ಕಟಾವು ಮಾಡಿದ ನಂತರ ಎಷ್ಟು ಮೂಟೆ ಕಟಾವು ಮಾಡಿಕೊಂಡಿದ್ದರೆ, ಅಷ್ಟು ಹಣವನ್ನು ಸ್ಥಳದಲ್ಲೆ ಕೊಟ್ಟು ಬರಬೇಕಾದಂತಹ ಅನಿವಾರ್ಯತೆ ರೈತರದ್ದಾಗಿದೆ. ಪರಿಚಯವಿರುವ ರೈತರಷ್ಟೆ ಸಾಲವಾಗಿ ಸೊಪ್ಪು ಕೊಡುತ್ತಾರೆ. ಗೂಡು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ನಂತರ ಹಣ ಕೊಡುತ್ತಾರೆ. ಸೊಪ್ಪು ಸಿಗದ ಕಾರಣ ಬೆಳೆಗಾರರಲ್ಲಿ ಪೈಪೋಟಿ ಶುರುವಾಗಿದೆ.
ತೀವ್ರ ನೀರಿನ ಕೊರತೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಹಿಪ್ಪುನೇರಳೆ ಸೊಪ್ಪಿನ ಬೆಲೆಗಳು ಗಗನಕ್ಕೇರಿವೆ. ರೈತ ಉತ್ತಮ ರೇಷ್ಮೆ ಬೆಳೆ ಬೆಳೆದರೂ ಲಾಭವಾಗುತ್ತಿಲ್ಲ

ರೋಗಗಳು ಬಾರದಂತೆ ಮಕ್ಕಳು ಜಾಗೃತೆ ವಹಿಸಬೇಕು

0

ಜಂತುಹುಳುವಿನಿಂದ ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಟಿಕತೆ, ಹಸಿವು ಅಗದಿರುವುದು. ನಿಶ್ಯಕ್ತಿ, ಹೊಟ್ಟೆ ನೋವು, ವಾಂತಿ ಭೇದಿ, ಮಲದಲ್ಲಿ ರಕ್ತ ಕಾಣಿಸಿಕೊಳ್ಳುವ ಸಮಸ್ಯೆಗಳು ಕಂಡು ಬರುತ್ತವೆ. ಮಾತ್ರೆಯನ್ನು ನುಂಗುವುದರಿಂದ ಈ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ‘ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ’ದ ಅಂಗವಾಗಿ ಜಂತು ಹುಳು ನಿವಾರಣೆಯ ಅಲ್ಬಂಡಜೋಲ್ ಮಾತ್ರೆಗಳನ್ನು ಮಕ್ಕಳಿಗೆ ನುಂಗಿಸಿ ಅವರು ಮಾತನಾಡಿದರು.
ಜಂತುಹುಳು, ಕೊಕ್ಕೆಹುಳು, ಲಾಡಿಹುಳು, ಮುಂತಾದವುಗಳು ಮಕ್ಕಳ ಹೊಟ್ಟೆ ಸೇರಿದಾಗ ರಕ್ತಹೀನತೆ, ಅಪೌಷ್ಠಿಕತೆ ಮುಂತಾದ ರೋಗಕ್ಕೆ ಮಕ್ಕಳು ಸುಲಭವಾಗಿ ತುತ್ತಾಗುತ್ತಾರೆ ಇದರಿಂದಾಗಿ ಮಕ್ಕಳ ಕಲಿಕಾ ಸಾಮರ್ಥ್ಯ ಕಡಿಮೆ ಆಗುತ್ತದೆ. ಇಂತಹ ರೋಗಗಳು ಬಾರದಂತೆ ಮಕ್ಕಳು ಜಾಗೃತೆ ವಹಿಸಬೇಕು. ಜಂತುಹುಳು ಆಗದಂತೆ ಪ್ರತಿಯೊಬ್ಬರು ಶುಚಿತ್ವ ವಹಿಸಬೇಕು, ಉತ್ತಮ ಆಹಾರ ಮತ್ತು ಶುದ್ಧವಾದ ನೀರನ್ನು ಸೇವಿಸಬೇಕು ಹಾಗೂ ಆರೋಗ್ಯ ಇಲಾಖೆ ನೀಡಿದ ಮಾತ್ರೆಗಳನ್ನು ಸೇವಿಸಬೇಕು ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ಶಿಕ್ಷಕ ಚಾಂದ್ಪಾಷ, ಸಿಬ್ಬಂದಿ ವೆಂಕಟಮ್ಮ ಹಾಜರಿದ್ದರು.

ಸರ್ಕಾರಿ ಶಾಲೆ ಗಟ್ಟಿಗೊಳಿಸೋಣ

0

ಕನ್ನಡದ ಹೋರಾಟಗಾರರು ಹಾಗೂ ಕನ್ನಡ ಭಾಷೆಯ ಬೆಳವಣಿಗೆಗಾಗಿ ಹೋರಾಡುವ ವಿವಿಧ ಸಂಘಸಂಸ್ಥೆಗಳು ಸರ್ಕಾರಿ ಶಾಲೆಗಳ ಉಳಿವಿಗಾಗಿ ಶ್ರಮಿಸಬೇಕು ಎಂದು ವಚನ ಸಾಹಿತ್ಯ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎ.ದೇವರಾಜ್ ತಿಳಿಸಿದರು.
ತಾಲ್ಲೂಕಿನ ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಗ್ರಾಮದ ಜೈ ಭಾರತ್ ಯುವಕರ ಸಂಘದ ಸಹಯೋಗದಲ್ಲಿ ಶಾಲೆಯಲ್ಲಿ ನಡೆದ ‘ಚಿಣ್ಣರ ಸಂಭ್ರಮ 2018’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆಯಿಲ್ಲದಂತೆ ಅಭಿವೃದ್ಧಿಪಡಿಸಬಹುದು. ಅದಕ್ಕೆ ಸಮುದಾಯದ ಪಾಲ್ಗೊಳ್ಳುವಿಕೆ ಅಗತ್ಯವಿದೆ. ಕನ್ನಡದ ಕಾರ್ಯಕ್ರಮಗಳೆಂದರೆ ಕೇವಲ ಉತ್ಸವ ಮೆರವಣಿಗೆಗಳಲ್ಲ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಗಟ್ಟಿಗೊಳಿಸುವುದೂ ಸಹ ಕನ್ನಡದ ಕೆಲಸವಾಗಿದೆ. ಗ್ರಾಮದ ಯುವಕರು ಒಗ್ಗೂಡಿ ಶಾಲೆಯಲ್ಲಿ ಕಾರ್ಯಕ್ರಮಗಳು ನಡೆಯಲು, ಶಾಲೆಯು ಅಭಿವೃದ್ಧಿ ಹೊಂದಲು ಪಣ ತೊಟ್ಟಿರುವುದು ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಶಾಲಾ ವಿದ್ಯಾರ್ಥಿಗಳು ವಿವಿಧ ನೃತ್ಯಗಳು, ಸಕ್ಕೂಬಾಯಿ ಮತ್ತು ಹುಚ್ಚಾಸ್ಪತ್ರೆ ಎಂಬ ನಾಟಕಗಳನ್ನು ಪ್ರದರ್ಶಿಸಿ ಪೋಷಕರು ಮತ್ತು ಪ್ರೇಕ್ಷಕರ ಮನಗೆದ್ದರು.
ಈ ಸಂದರ್ಭದಲ್ಲಿ ವಚನ ಸಾಹಿತ್ಯ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎ.ದೇವರಾಜ್, ಕನ್ನಮಂಗಲ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಜೆ.ಶ್ರೀನಿವಾಸ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಟಿ.ಸಿ.ಕೃಷ್ಣಪ್ಪ, ಸಿಆರ್ಪಿ ನರಸಿಂಹರಾಜು ಅವರನ್ನು ಸನ್ಮಾನಿಸಲಾಯಿತು.
ಜೈ ಭಾರತ್ ಯುವಕರ ಸಂಘದ ಪದಾಧಿಕಾರಿಗಳು, ಮುಖ್ಯ ಶಿಕ್ಷಕಿ ಸರಸ್ವತಮ್ಮ, ಶಿಕ್ಷಕರಾದ ಎಂ.ದೇವರಾಜ್, ಡಿ.ಎಸ್.ಶ್ರೀಕಾಂತ್, ಎಚ್.ಆರ್.ಮಂಜುನಾಥ್, ಟಿ.ತ್ರಿವೇಣಿ, ಕೆ.ಎ.ನಾಗರಾಜ್, ಶ್ರೀನಿವಾಸ್ ಯಾದವ್ ಹಾಜರಿದ್ದರು.

ಸಂಭ್ರಮದ ಶಿವರಾತ್ರಿ

0

ತಾಲ್ಲೂಕಿನಾದ್ಯಂತ ಮಹಾ ಶಿವರಾತ್ರಿಯನ್ನು ಜನರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಮಂಗಳವಾರ ಬೆಳಿಗ್ಗೆಯಿಂದಲೇ ಶಿವನ ದೇವಾಲಯಗಳಲ್ಲಿ ಭಕ್ತರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಎಲ್ಲೆಡೆ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಜನೆ ಮತ್ತು ಪ್ರಸಾದ ವಿನಿಯೋಗ ನಡೆಯಿತು. ನಗರದ ಅಶೋಕ ರಸ್ತೆಯಲ್ಲಿರುವ ಕೋಟೆ ಸೋಮೇಶ್ವರ ಮತ್ತು ಪೇಟೆ ನಗರೇಶ್ವರ, ಕಾಶಿ ವಿಶ್ವನಾಥೇಶ್ವರ, ಅಗ್ರಹಾರ ಬೀದಿಯ ಜಲಕಂಠೇಶ್ವರ, ಏಕಾಂಬರೇಶ್ವರ, ಮಯೂರ ವೃತ್ತದ ಬಳಿಯ ಚಂದ್ರಶೇಖರ, ಬೂದಾಳದ ಮಲೆಮಲ್ಲೇಶ್ವರ, ವೀರಾಪುರದ ಗವಿಗಂಗಾಧರೇಶ್ವರ, ಬಟ್ರೇನಹಳ್ಳಿಯ ಸಾಯಿಬಾಬ ಮಂದಿರದಲ್ಲಿರುವ ಜಲಕಂಠೇಶ್ವರ ಮುಂತಾದ ಪ್ರಮುಖ ದೇವಾಲಯಗಳಲ್ಲಿ ಶಿವರಾತ್ರಿಯ ಪ್ರಯುಕ್ತ ವಿಶೇಷ ಪೂಜೆ ಆಯೋಜಿಸಲಾಗಿತ್ತು.

ತಾಲ್ಲೂಕಿನ ಬೂದಾಳದ ಮಲ್ಲೆಮಲ್ಲೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಶಿವ ಅಂದರೆ ಕಲ್ಯಾಣ. ಲೋಕಕಲ್ಯಾಣಕ್ಕಾಗಿ ಇಡೀ ದಿನ ಉಪವಾಸ, ಜಾಗರಣೆಗಳನ್ನು ಮಾಡಿ ನಾಲ್ಕು ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡಲಾಗುತ್ತದೆ ಎಂದು ದೇಗುಲದ ಅರ್ಚಕರು ತಿಳಿಸಿದರು.
‘ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುವ ಈ ಹಬ್ಬದಲ್ಲಿ ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುತ್ತದೆ. ಈ ಕೃಷ್ಣ ಪಕ್ಷದ ಕೊನೆಯ ದಿನದಂದು ಸೂರ್ಯನ ಶಾಖ ಕಡಿಮೆಯಾಗಿರುತ್ತದೆ ಮತ್ತು ಚಂದ್ರನ ಪ್ರಕಾಶವೂ ಕ್ಷೀಣಿಸಿರುತ್ತದೆ. ಇಂತಹ ಹವಾಮಾನ ವ್ಯತ್ಯಯದ ದಿನಗಳಲ್ಲಿ ನಮ್ಮ ದೇಹ ಪ್ರಕೃತಿಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಈ ದಿನ ನಾವು ಮಾಡುವ ಶಿವಪೂಜೆ ಮತ್ತು ಉಪವಾಸ ದೇಹಕ್ಕೆ ತುಂಬಾ ಉಪಯುಕ್ತ ಎಂದು ಅರ್ಚಕ ರಾಮಮೋಹನಶಾಸ್ತ್ರಿ ತಿಳಿಸಿದರು.

ದಿನಪೂರ್ತಿ ನಡೆದ ವಾಗ್ಗೇಯಕಾರರ ಆರಾಧನಾ ಮಹೋತ್ಸವ

0

ದಾಸರು ಯಾವುದೇ ಜಾತಿ, ಕುಲ, ಮತ, ಪಂಥಗಳಿಗೆ ಸೇರಿದವರಲ್ಲ. ಅದನ್ನು ಮೀರಿ ಭಗವಂತನಿಗೆ ಶರಣಾಗತಿಯಾದವರು. ದಾಸರು ಹುಟ್ಟು ಸಾವುಗಳನ್ನು ಗೆದ್ದಿರುವವರು. ಈ ವಾಗ್ಗೇಯಕಾರರ ಆರಾಧನೆಯನ್ನು ವ್ರತದಂತೆ, ಪರಂಪರೆಯಂತೆ, ಪೂಜೆಯಂತೆ ತಾಲ್ಲೂಕಿನಲ್ಲಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಮಾರುತಿ ಸಂಗೀತ ಅಕಾಡೆಮಿಯ ಮಂಜುಳಾ ಜಗದೀಶ್ ತಿಳಿಸಿದರು.
ನಗರದ ಕಾಳಿಕಾಂಭ ಕಮಠೇಶ್ವರಸ್ವಾಮಿ ದೇವಾಲಯದ ಸಮುದಾಯ ಭವನದಲ್ಲಿ ಭಾನುವಾರ ಮಾರುತಿ ಸಂಗೀತ ಅಕಾಡೆಮಿ ವತಿಯಿಂದ ಪುರಂದರದಾಸರು, ಸದ್ಗುರು ತ್ಯಾಗರಾಜಸ್ವಾಮಿ, ಕನಕದಾಸರು, ಯೋಗಿ ನಾರೇಯಣ ಯತೀಂದ್ರರು ಹಾಗೂ ವಾಗ್ಗೇಯಕಾರರ ಆರಾಧನಾ ಮಹೋತ್ಸವದಲ್ಲಿ ಅವರು ಮಾತನಾಡಿದರು.
ದಾಸ ಸಾಹಿತ್ಯ ಎಂಬುದು ಎಂದಿಗೂ ಆರದ ನಂದಾದೀಪವಿದ್ದಂತೆ. ಸಂಗೀತ ಬೆರೆತಾಗ ಅದು ಇನ್ನಷ್ಟು ಪ್ರಜ್ವಲವಾಗಿ ಬೆಳಗುತ್ತದೆ. ಸ್ಥಳೀಯ ಕಲಾವಿದರಲ್ಲದೆ, ವಿವಿದಡೆಗಳಿಂದ ಆಹ್ವಾನಿತ ಕಲಾವಿದರ ಕಾರ್ಯಕ್ರಮವಿರುತ್ತದೆ. ಎಳೆಯರಿಗೆ ಇದು ಕಲಿಕೆಯಾದರೆ, ಕಲಾಭಿಮಾನಿಗಳಿಗೆ ರಸದೌತಣ ಎಂದು ವಿವರಿಸಿದರು.
ವಿದ್ವಾನ್ ಜಗದೀಶ್ ಕುಮಾರ್ ಮಾತನಾಡಿ, ಪುರಾತನ ಕಾಲದಿಂದಲೂ ನಮ್ಮ ಸಮಾಜದಲ್ಲಿ ಸಂಗೀತಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟಿದ್ದಾರೆ. ಯುವ ಪೀಳಿಗೆಗೆ ಸಂಗೀತವನ್ನು ಕಲಿಸುತ್ತಾ ನಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ಮಾರುತಿ ಸಂಗೀತ ಅಕಾಡೆಮಿಯು ಶ್ರಮಿಸುತ್ತಿದ್ದು, ಈ ಕಾರ್ಯಕ್ರಮದ ಮೂಲಕ ಮಕ್ಕಳ ಪ್ರತಿಭೆಯನ್ನು ಪರಿಚಯಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಚಿಕ್ಕಮಕ್ಕಳು ಮತ್ತು ಹಿರಿಯರು ತ್ಯಾಗರಾಜರ ಮತ್ತು ಯೋಗಿನಾರಾಯಣ ಯತೀಂದ್ರರ ಕೀರ್ತನೆಗಳನ್ನು ಹಾಡುತ್ತಾರೆ. ವಿವಿಧ ಸಂಗೀತ ವಿಧುಶಿಗಳ ಕಲಾ ಪ್ರದರ್ಶನವೂ ಇರುತ್ತದೆ ಎಂದು ಹೇಳಿದರು.
ನಾದಸ್ವರ ವಿದ್ವಾನ್ ಮುನಿನಾರಾಯಣಪ್ಪ ಸಂಗಡಿಗರಿಂದ ನಾದಸ್ವರ ಕಚೇರಿ, ಮಾರುತಿ ಸಂಗೀತ ಅಕಾಡೆಮಿಯ ವಿದ್ಯಾರ್ಥಿಗಳಿಂದ ಗಾಯನ, ಮಂಜುಳಾ ಜಗದೀಶ್ ನೇತೃತ್ವದಲ್ಲಿ ಆಹ್ವಾನಿತ ಕಲಾವಿದರಿಂದ ಪಂಚರತ್ನ ಕೀರ್ತನೆಗಳ ಗೋಷ್ಠಿ ಗಾಯನ, ಬೆಂಗಳೂರು ನಳಿನಾಕ್ಷಿ ಅವರ ವೀಣಾ ವಾದನ, ಸಂಗೀತ ವಿದುಶಿ ಡಿ.ಶಶಿಕಲಾ ಅವರ ಸಂಗೀತ ಕಚೇರಿ, ಚಿಂತಾಮಣಿ ಎ.ವಿ.ವಿಶ್ವನಾಥ್ ಅವರ ಹಾರ್ಮೋನಿಯಂ ಸೋಲೋವಾದನ ಮುಂತಾದ ಕಾರ್ಯಕ್ರಮಗಳು ದಿನಪೂರ್ತಿ ನಡೆದವು.
ಜನಾರ್ಧನಮೂರ್ತಿ, ಬಿ.ಕೆ.ಮುನಿರತ್ನಮಾಚಾರ್, ಸೋಮಶೇಖರ್ ಹಾಜರಿದ್ದರು.

‘ನಿಮ್ಮ ಸಲಹೆ – ನಮ್ಮ ಭರವಸೆ’

0

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲ್ಲುವುದು ಖಚಿತ. ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವುದು ಶತಸಿದ್ದ ಎಂದು ಬಿಜೆಪಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಜ್ಯೋತಿರೆಡ್ಡಿ ತಿಳಿಸಿದರು.
ನಗರದ ಚಿಂತಾಮಣಿ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಭಾನುವಾರ ನವಭಾರತಕ್ಕಾಗಿ ನವಕರ್ನಾಟಕ ಜನಪರ ಶಕ್ತಿ ಅಡಿಯಲ್ಲಿ ಆಯೋಜಿಸಲಾಗಿದ್ದ ‘ನಿಮ್ಮ ಸಲಹೆ – ನಮ್ಮ ಭರವಸೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷ ರಾಜ್ಯದಲ್ಲಿ ೧೫೦ ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿ ಅಧಿಕಾರ ಹಿಡಿಯಲು ಈಗಿಂದಲೇ ಕಾರ್ಯಕರ್ತರು ಮತ್ತು ಮುಖಂಡರು ಕಾರ್ಯಪ್ರವೃತ್ತರಾಗಬೇಕು. ಕಳೆದ ಮೂರೂವರೆ ವರ್ಷದ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಜನರ ಬಳಿ ತೆರಳಬೇಕು ಎಂದರು.
ಕ್ಷೇತ್ರದ ಸ್ಥಳೀಯ ಸಮಸ್ಯೆಗಳು ಹಾಗೂ ಸಲಹೆಗಳನ್ನು ಸಂಗ್ರಹಿಸಿ ಪ್ರಣಾಳಿಕೆ ರಚಿಸಲು ನವಭಾರತಕ್ಕಾಗಿ ನವಕರ್ನಾಟಕ ಜನಪರ ಶಕ್ತಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಇಲ್ಲಿನ ಸ್ಥಳೀಯ ಕಸಬುಗಳಾದ ರೇಷ್ಮೆ ಹಾಗು ಹೈನುಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ನಾಗರಿಕರೂ, ಕಾರ್ಯಕರ್ತರು, ಮುಖಂಡರಿಂದ ಸಲಹೆ ಸೂಚನೆಗಳನ್ನು ಸಂಗ್ರಹಿಸಿ ರಾಜ್ಯ ಹಾಗೂ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದರು.
ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್ ಮಾತನಾಡಿ, ಕಳೆದ ಎಪ್ಪತ್ತು ವರ್ಷಗಳ ಕಾಲ ದೇಶವನ್ನಾಳಿದ ವಿವಿಧ ರಾಜಕೀಯ ಪಕ್ಷಗಳು ದೇಶದ ಸಾಮಾನ್ಯ ಜನರ ಪರ ಆಡಳಿತ ನಡೆಸಲಿಲ್ಲ. ಹಾಗಾಗಿ ಇಂದಿಗೂ ದೇಶದ ಬಹುತೇಕ ಭಾಗಗಳಲ್ಲಿ ಮೂಲಭೂತ ಸವಲತ್ತುಗಳಿಲ್ಲದೇ ಪರದಾಡುವಂತಾಗಿದೆ. ಕಳೆದ ಮೂರೂವರೆ ವರ್ಷದ ನರೇಂದ್ರಮೋದಿ ಸಾಧನೆ ದೇಶಾದ್ಯಂತ ಜನರ ಮನಸ್ಸಿನಲ್ಲಿದ್ದು ಮುಂಬರುವ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದರು.
ಇದೇ ಸಂದರ್ಭದಲ್ಲಿ ಸಭೆಯಲ್ಲಿ ಸೇರಿದ್ದ ಕಾರ್ಯಕರ್ತರೂ ಸೇರಿದಂತೆ ನಾಗರಿಕರು ಸ್ಥಳೀಯ ಸಮಸ್ಯೆಗಳು ಹಾಗೂ ಸಲಹೆಗಳನ್ನು ಬರೆದು ಕಚೇರಿಯಲ್ಲಿಟ್ಟಿದ್ದ ಪೆಟ್ಟಿಗೆಯೊಳಕ್ಕೆ ಹಾಕಿದರು.
ಬಿಜೆಪಿ ಮುಖಂಡರಾದ ಡಿ.ಆರ್.ಶಿವಕುಮಾರಗೌಡ, ನಾರ್ತ್ ಈಸ್ಟ್ ಪ್ರಾಪರ್ಟೀಸ್ನ ಸುರೇಶ್, ಸುರೇಂದ್ರಗೌಡ, ನಗರಸಭೆ ಸದಸ್ಯ ಎಸ್.ರಾಘವೇಂದ್ರ, ದಾಮೋಧರ್ ಹಾಜರಿದ್ದರು.

ನೀರಿನ ಹೋರಾಟವೂ ಕೂಡ ಕನ್ನಡದ ಹೋರಾಟವೇ

0

ಜನಜಾನುವಾರುಗಳಿಗೆ ಅಗತ್ಯವಾದ ನೀರಿನ ಹೋರಾಟವೂ ಕೂಡ ಕನ್ನಡದ ಹೋರಾಟ ಆಗಿದೆ. ಬಯಲು ಸೀಮೆಗೆ ಬೇಕಾದ ಶಾಶ್ವತ ನೀರಿಗಾಗಿ ಕನ್ನಡದ ಮನಸ್ಸುಗಳು ದನಿ ಎತ್ತಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಕನ್ನಡಪರ ಸಂಘಟನೆಗಳ ಒಕ್ಕೂಟ) ರಾಜ್ಯ ಘಟಕದ ಅಧ್ಯಕ್ಷ ಶಿವರಾಮೇಗೌಡ ತಿಳಿಸಿದರು.
ನಗರದ ಕೋಟೆ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಕನ್ನಡಪರ ಸಂಘಟನೆಗಳ ಒಕ್ಕೂಟ) ಆಯೋಜಿಸಿದ್ದ ತಾಲ್ಲೂಕು ಕನ್ನಡಿಗರ ಸಮಾವೇಶದಲ್ಲಿ ಅವರು ಮಾತನಾಡಿದರು.
ಸ್ಥಳೀಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದು, ಜನಪರ ಚಿಂತನೆಯ ಜನಪ್ರತಿನಿಧಿಯನ್ನು ಆರಿಸುವುದು, ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಎಲ್ಲವೂ ಕನ್ನಡದ ಕೆಲಸವೇ. ಭಾಷೆಯೆಂದರೆ ಕೇವಲ ಮಾತು ಮತ್ತು ಬರವಣಿಗೆಯಲ್ಲ. ನಮ್ಮ ಸಮಾಜ, ವ್ಯವಸ್ಥೆ, ಬದುಕು, ಸಂಸ್ಕೃತಿ ಭಾಷೆಯಲ್ಲಿ ಸೇರಿಕೊಂಡಿರುತ್ತದೆ. ಕನ್ನಡದ ಹೋರಾಟವೆಂದರೆ ಭಾಷೆಯನ್ನು ಉಳಿಸಿ ಬೆಳೆಸುವುದರೊಂದಿಗೆ ನಮ್ಮ ಜನರ ಜೀವನವನ್ನು ಸರಿಪಡಿಸುವ ಕೆಲಸವೂ ಒಳಗೊಳ್ಳುತ್ತವೆ ಎಂದು ಹೇಳಿದರು.
ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎ.ಮಂಜುನಾಥ್ ಮಾತನಾಡಿ, ಯುವಕರು ಒಗ್ಗೂಡಬೇಕು. ಸಮಾಜದ ವಿವಿಧ ತಾರತಮ್ಯಗಳನ್ನು ಬದಿಗೊತ್ತಿ, ಭಾಷೆಯ ಮಂತ್ರದಂಡದೊಂದಿಗೆ ನಾವೆಲ್ಲಾ ಸಮಾಜದ ಸುಧಾರಣೆಗೆ ಪಣತೊಡೋಣ. ಕನ್ನಡದ ಮಣ್ಣಿನ ಮಹತ್ವವನ್ನು ಹೆಚ್ಚಿಸೋಣ ಎಂದರು.
ಕರವೇ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ತಾಲ್ಲೂಕು ಅಧ್ಯಕ್ಷ ಶ್ರೀಧರ್, ಚಂದ್ರು, ಧನುಷ್, ಅಪ್ಪು, ರವಿ, ಮೂರ್ತಿ, ವಿಜಿಕುಮಾರ್, ರೈತ ಸಂಘದ ಜಿಲ್ಲಾ ಘಟಕದ ಅಧರ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ರವಿಕುಮಾರ್ ಹಾಜರಿದ್ದರು.

ಡಾಲ್ಫಿನ್‌ ಪಬ್ಲಿಕ್ ಶಾಲೆಯ ಮಕ್ಕಳ ಅಜ್ಜಿ-ತಾತಂದಿರ ದಿನ ಆಚರಣೆ

0

ನಗರಸಭೆಯ ಉದ್ಯಾನವನದಲ್ಲಿ ಶನಿವಾರ ಎರಡು ತಲೆಮಾರಿನ ವಿಶೇಷ ಸಂಗಮ, ನಗು, ಸಂತೋಷ, ಉಲ್ಲಾಸ, ಉತ್ಸಾಹ, ಸಂಭ್ರಮ, ಕೇಕೆ ತುಂಬಿಕೊಂಡಿತ್ತು. ನಳನಳಿಸುವ ಹಸುರಿನ ಗಿಡಮರಗಳ ನಡುವೆ ಪುಟ್ಟ ಮಕ್ಕಳ ರಚನೆಯ ವರ್ಣರಂಜಿತ ಚಿತ್ತಾರಗಳ ತೋರಣ ಸ್ವಾಗತಿಸುತ್ತಿತ್ತು.
ವಿನೂತನ ‘ಅಜ್ಜಿ ತಾತಂದಿರ ದಿನ’ವನ್ನು ನಗರದ ಚಿಂತಾಮಣಿ ರಸ್ತೆಯಲ್ಲಿರುವ ನಗರಸಭೆ ಉದ್ಯಾನವನದಲ್ಲಿ ಡಾಲ್ಫಿನ್‌ ಪಬ್ಲಿಕ್ ಶಾಲೆಯ ಎಲ್.ಕೆ.ಜಿ. ಹಾಗೂ ಯು.ಕೆ.ಜಿ ಮಕ್ಕಳು ಆಚರಿಸಿದರು.
ಮೊಮ್ಮಕ್ಕಳೊಂದಿಗೆ ಬಂದಿದ್ದ ಅಜ್ಜಅಜ್ಜಿಯರಿಗೆ ಈ ಸಂದರ್ಭದಲ್ಲಿ ಹಲವಾರು ವಿನೋದಮಯ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಮೊಮ್ಮಕ್ಕಳ ಹಾಡು, ನೃತ್ಯ, ಆಟಗಳನ್ನು ಕಂಡು, ಅವರೊಂದಿಗೆ ಉದ್ಯಾನದಲ್ಲಿ ಆಡಿ ನಲಿಯುವ ಮೂಲಕ ಅಜ್ಜಅಜ್ಜಿಯರು ಭಾವುಕರಾದರು. ಸ್ಪರ್ಧೆಗಳಲ್ಲಿ ಗೆದ್ದವರಿಗೆ ಕಥೆ ಪುಸ್ತಕಗಳನ್ನು ಬಹುಮಾನವಾಗಿ ನೀಡಿ ಮಕ್ಕಳಿಗೆ ಕಥೆ ಹೇಳುವಂತೆ ಕೋರಲಾಯಿತು.
ಡಾಲ್ಫಿನ್‌ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್‌ ಮಾತನಾಡಿ, ‘ಅಜ್ಜಿ-ತಾತಂದಿರ ಜೊತೆ ಮೊಮ್ಮಕ್ಕಳ ಸಂಬಂಧ ವಿಶೇಷವಾಗಿರುತ್ತೆ. ಪ್ರೀತಿ, ಅಕ್ಕರೆ ಜೊತೆ ಚಿಕ್ಕ ಚಿಕ್ಕ ಪಾಠಗಳನ್ನ ಕಥೆಗಳ ರೂಪದಲ್ಲಿ ಹೇಳಿಕೊಡುತ್ತಾರೆ. ಅಜ್ಜಿ-ತಾತ ಈ ವಯಸ್ಸಿನ ಕಷ್ಟಪಟ್ಟು ಕೆಲಸ ಮಾಡುವುದನ್ನು ಕಂಡು ಮಕ್ಕಳು ಶ್ರಮ ಮತ್ತು ಶಿಸ್ತು ಎಷ್ಟು ಮುಖ್ಯ ಅಂತ ಅರ್ಥ ಮಾಡಿಕೊಳ್ಳುತ್ತಾರೆ. ಹಣ್ಣೆಲೆ ಮತ್ತು ಹೊಸ ಚಿಗುರು ಒಂದೆಡೆ ಸೇರಿದಾಗ ಮಾತ್ರ ಬದುಕಿಗೆ ಪೂರ್ಣ ಅರ್ಥ ಸಿಗುತ್ತದೆ’ ಎಂದು ಹೇಳಿದರು.
ಈ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದ್ದ ಶಾಲೆಯವರಿಗೆ ಅಭಿನಂದನೆ ಸಲ್ಲಿಸಿದ ಹಿರಿಯರು,‘ಮೊಮ್ಮಕ್ಕಳ ಖುಷಿಯನ್ನು ನೋಡಿ ಆನಂದಿಸುವುದೇ ನಮ್ಮ ಜೀವನದ ಸಂಧ್ಯಾಕಾಲದ ಸುಂದರ ಘಳಿಗೆಗಳು. ಇಂತಹ ಕಾರ್ಯಕ್ರಮವನ್ನು ನಡೆಸುವ ಆಲೋಚನೆಯೇ ನಮಗೆ ಖುಷಿ ತಂದಿದೆ’ ಎಂದರು.
ಡಾಲ್ಫಿನ್‌ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಚಂದನಾ ಅಶೋಕ್‌, ಪ್ರಾಂಶುಪಾಲ ಥಾಮಸ್‌ ಫಿಲಿಪ್‌, ರತ್ನಮ್ಮ, ಶಿಕ್ಷಕರು ಹಾಜರಿದ್ದರು.

ಶಾಲಾ ವಾರ್ಷಿಕೋತ್ಸವ ಸಮಾರಂಭ

0

ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಿದರಷ್ಟೇ ಸಾಲದು ಆಗಾಗ್ಗೆ ಶಾಲೆಗೆ ಭೇಟಿ ನೀಡಿ ಮಕ್ಕಳ ಶಿಕ್ಷಕರೂ ಸೇರಿದಂತೆ ಶಾಲೆಯ ಮುಖ್ಯ ಶಿಕ್ಷಕರೊಂದಿಗೆ ಮಾತುಕತೆ ನಡೆಸುವ ಮೂಲಕ ಮಕ್ಕಳು ಯಾವ ವಿಷಯದಲ್ಲಿ ಹಿಂದುಳಿದಿದ್ದಾರೆ ಅವರನ್ನು ಯಾವ ರೀತಿ ತಿದ್ದಬೇಕು ಎಂಬುದರ ಬಗ್ಗೆ ಚರ್ಚಿಸಬೇಕು ಎಂದು ಮೇಲೂರು ಸಿಆರ್ಪಿ ನಾಗರಾಜ್ ಹೇಳಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ತಾಲ್ಲೂಕಿನ ಮಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ನೃತ್ಯಗಳನ್ನು ಆಯೋಜಿಸಲಾಗಿತ್ತು.

ಪೋಷಕರು ಖಾಸಗಿ ಶಾಲೆಗಳ ಮೇಲಿರುವ ವ್ಯಾಮೋಹ ಬಿಡಬೇಕು. ಸರ್ಕಾರಿ ಶಾಲೆಗಳಲ್ಲಿಯೂ ಉತ್ತಮ ಶಿಕ್ಷಕರಿದ್ದು ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತದೆ. ಇದನ್ನು ಪ್ರತಿಯೊಬ್ಬರೂ ಅರಿತುಕೊಳ್ಲೂವ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಶ್ರಮಿಸಬೇಕು ಎಂದರು.
ಇತ್ತೀಚೆಗೆ ಮಕ್ಕಳು ಮೊಬೈಲ್ ಹಾಗು ಟಿವಿ ವೀಕ್ಷಣೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿರುವುದರಿಂದ ಉತ್ತಮ ಶಿಕ್ಷಣ ಪಡೆಯಲು ಆಗುವುದಿಲ್ಲ. ಹಾಗಾಗಿ ಮಕ್ಕಳ ಪೋಷಕರು ಮಕ್ಕಳ ಕೈಗೆ ಮೊಬೈಲ್ ಕೊಡುವುದು ಸೇರಿದಂತೆ ಟ.ವಿ ವೀಕ್ಷಣೆ ಮಾಡದಂತೆ ಎಚ್ಚರವಹಿಸಬೇಕು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಲ್ಲಿಯೂ ಉತ್ತಮ ಪ್ರತಿಭೆಗಳಿದ್ದು ಸರ್ಕಾರಿ ಶಾಲೆಗಳಲ್ಲಿಯೂ ಖಾಸಗಿ ಶಾಲೆಗಳಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತರುವ ಕೆಲಸವನ್ನು ಸರ್ಕಾರಿ ಶಾಲಾ ಶಿಕ್ಷಕರು ಮಾಡಬೇಕು ಎಂದರು.
ತಾಲ್ಲೂಕಿನ ಮಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ನೃತ್ಯಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಕ್ಕಳಿಂದ ಏರ್ಪಡಿಸಲಾಗಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನಸೆಳೆಯುವಂತಿತ್ತು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ನಂದಕುಮಾರ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮುನಿಶಾಮಿರೆಡ್ಡಿ, ಶಿಕ್ಷಕರಾದ ಎಇ.ಎಂ.ಮುನಿರಾಜು, ಮುಖ್ಯಶಿಕ್ಷಕಿ ಶಕುಂತಲಮ್ಮ, ಶಾಲಾಭಿವೃದ್ದಿ ಸಮಿತಿ ಸದಸ್ಯ ನಾರಾಯಣಸ್ವಾಮಿ, ಶಿಕ್ಷಕರಾದ ಕೆ.ಬಿ.ಅರುಣ, ಲೀಲಾವತಿ, ಅಶ್ವತ್ಥನಾರಾಯಣ, ಸೀನಪ್ಪ ಹಾಜರಿದ್ದರು.

ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

0

ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಂದ ರಾಜ್ಯದ ಅಭಿವೃದ್ದಿ ಅಸಾಧ್ಯ ಎಂದು ರಾಜ್ಯದ ಜನತೆ ಅರಿತಿದ್ದು ಈ ಬಾರಿ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುವುದು ಶತಸಿದ್ದ ಹಾಗಾಗಿ ಕ್ಷೇತ್ರದಾದ್ಯಂತ ಜೆಡಿಎಸ್ ಮುಖಂಡರೂ ಹಾಗೂ ಕಾರ್ಯಕರ್ತರು ಪಕ್ಷ ಬಲಪಡಿಸಲು ಮತ್ತಷ್ಟು ಶ್ರಮಿಸಬೇಕುಎಂದು ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ಬಿ.ಎನ್. ರವಿಕುಮಾರ್ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮದ ತಮ್ಮ ಸ್ವಗೃಹದಲ್ಲಿ ಗುರುವಾರ ರಾತ್ರಿ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಯುವಕರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.
೨೦೧೮ ರ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿಯವರ ಕೈ ಬಲಪಡಿಸುವ ನಿಟ್ಟಿನಲ್ಲಿ ಕ್ಷೇತ್ರದಾದ್ಯಂತ ಈಗಾಗಲೇ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮ ಶುರುಮಾಡಿದ್ದು ಕಳೆದ ಅವರ ೨೦ ತಿಂಗಳ ಮುಖ್ಯಮಂತ್ರಿಯ ಅವಧಿಯಲ್ಲಿ ಜಾರಿ ಮಾಡಿದ ವಿವಿಧ ಜನಪರ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಮೂಲಕ ಪಕ್ಷಸಂಘಟನೆಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ ಎಂದರು.
ಮುಂದಿನ ಚುನಾವಣೆಯಲ್ಲಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಯವರಿಗೆ ಮತ್ತಷ್ಟು ಶಕ್ತಿ ತುಂಬಬೇಕು ಎಂದರು.

ತಾಲ್ಲೂಕಿನ ಮೇಲೂರು ಗ್ರಾಮದ ತಮ್ಮ ಸ್ವಗೃಹದಲ್ಲಿ ಗುರುವಾರ ರಾತ್ರಿ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಯುವಕರನ್ನು ಪಕ್ಷಕ್ಕೆ ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್ ಬರಮಾಡಿಕೊಂಡರು.

ಜೆಡಿಎಸ್ ಮುಖಂಡ ನಾಗಮಂಗಲ ಶ್ರೀನಿವಾಸಗೌಡ ಮಾತನಾಡಿ ಮೇಲೂರು ರವಿಕುಮಾರ್ ತಾಲ್ಲೂಕಿನಲ್ಲಿ ಅನೇಕ ಜನಪರ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಜೊತೆಗೆ ಜೆಡಿಎಸ್ ಪಕ್ಷವನ್ನು ಬಲಪಡಿಸುತ್ತಿದ್ದಾರೆ. ಇವರ ಕಾರ್ಯವೈಖರಿ ಕಂಡು ಕ್ಷೇತ್ರದ ಯುವಜನತೆ ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಸೇರ್ಪಡೆಯಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮುಖಂಡರೂ ಸೇರಿದಂತೆ ಯುವಕರು ಜೆಡಿಎಸ್ ಸೇರಲಿದ್ದು ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಬಿ.ಎನ್.ರವಿಕುಮಾರ್ ರಿಗೆ ಪಕ್ಷದ ಬಿ.ಫಾರಂ ನೀಡುವಂತೆ ವರಿಷ್ಠರನ್ನು ಒತ್ತಾಯಿಸಿದರು.
ಜಂಗಮಕೋಟೆ ಹೋಬಳಿಯ ಹೊಸಪೇಟೆ ಗ್ರಾಮದ ಕನ್ನಡ ಸೇನೆ ಅದ್ಯಕ್ಷ ಮಂಜುನಾಥ, ಶ್ರೀನಿವಾಸ್, ಫಲಿಚೇರ್ಲು ಗ್ರಾಮ ಪಂಚಾಯಿತಿಯ ಬಿನ್ನಿಮಂಗಲ ಗ್ರಾಮದ ಸಂತೋಷ್, ನಾಗರಾಜ, ಸುಬ್ರಮಣಿ, ಸಂತೋಷ್, ವಿಜಯೇಂದ್ರ, ಅಶೋಕ್ ಮತ್ತಿತರ ಯುವಕರು ಜೆಡಿಎಸ್ ಗೆ ಸೇರ್ಪಡೆಗೊಂಡರು.
ಈ ಸಂಧರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ರಾಜಶೇಖರ್, ನಗರಸಭೆ ಸದಸ್ಯರಾದ ವೆಂಕಟಸ್ವಾಮಿ, ಶಫಿ, ಮುಖಂಡರಾದ ತಾದೂರು ರಘು, ಕೆ.ಎಸ್.ಮಂಜುನಾಥ್, ಜಂಗಮಕೋಟೆ ಗ್ರಾಮ ಪಂಚಾಯಿತಿ ಸದಸ್ಯರಾದ ಜೆ.ಎಂ.ವೆಂಕಟೇಶ್, ರಮೇಶ್, ಮುಖಂಡರಾದ ಬೈರಪ್ಪ. ಮಾರೇಗೌಡ, ಕೆಂಪಣ್ಣ, ಮುನಿಕೃಷ್ಣ, ಚಂದ್ರು, ನಾರಾಯಣಸ್ವಾಮಿ ಹಾಜರಿದ್ದರು.

ಮಡಿವಾಳ ಸಮುದಾಯದ ಜನಜಾಗೃತಿ ಸಮಾವೇಶ

0

ಮಂಡ್ಯ ನಗರದ ಸರ್.ಎಂ.ವಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಡಿವಾಳ ಸಮುದಾಯದ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳಲು ನಗರದಿಂದ ಹೊರಟ ಬಸ್ಸುಗಳಿಗೆ ಮಡಿವಾಳ ಮಾಚಿದೇವ ಸಂಘದ ರಾಜ್ಯ ಉಪಾಧ್ಯಕ್ಷ ಆರ್.ವಿ.ರಾಜಣ್ಣ ಚಾಲನೆ ನೀಡಿದರು.
ಮುಖಂಡರಾದ ಎನ್.ರಾಜು, ಎ.ಎಂ.ನಾಗರಾಜಪ್ಪ, ಡಿ.ವಿ.ಕೃಷ್ಣಪ್ಪ, ನರಸಿಂಹಪ್ಪ, ಎಂ.ದೇವರಾಜು, ಆಂಜಿನಪ್ಪ, ಮುನಿರಾಜು, ಮೋಹನ್, ದೇವರಾಜು ಹಾಜರಿದ್ದರು.