Home Blog Page 384

ಕರಾಟೆ ಬ್ಲಾಕ್ ಬೆಲ್ಟ್ ವಿತರಣಾ ಸಮಾರಂಭ

0

ಪ್ರಾಚೀನ ಸಮರ ಕಲೆಯಾದ ಕರಾಟೆ ಮಕ್ಕಳಲ್ಲಿ ಮಾನಸಿಕ ಸ್ಥೈರ್ಯ ಹೆಚ್ಚಿಸುತ್ತದೆ ಎಂದು ಜಿಕೋ ಬೋಯಿ ಕರಾಟೆ ಡೊ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಎಂ.ಡಿ.ಜಭೀವುಲ್ಲಾ ಹೇಳಿದರು.
ನಗರದ ಕ್ರೆಸೆಂಟ್ ಶಾಲಾ ಆವರಣದಲ್ಲಿ ಗುರುವಾರ ಜಿಕೋ ಬೋಯಿ ಕರಾಟೆ ಡೊ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಏರ್ಪಡಿಸಲಾಗಿದ್ದ ಕರಾಟೆ ಬ್ಲಾಕ್ ಬೆಲ್ಟ್ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ವಿದ್ಯೆಯಲ್ಲಿ ಮಾತ್ರ ಮುಂದುವರೆದಂರೆ ಸಾಲದು, ದೈಹಿಕವಾಗಿ ಹಾಗೂ ಆರೋಗ್ಯವಂತರಾಗಲು ಕ್ರೀಡೆ ಬಹು ಮುಖ್ಯ ಎಂದರು. ಆತ್ಮ ರಕ್ಷಣೆಯ ಕಲೆಯಾಗಿರುವ ಕರಾಟೆಯನ್ನು ಅತಿಸೂಕ್ಷ್ಮವಾಗಿ ಅಭ್ಯಾಸ ಮಾಡಬೇಕು. ಈಚೆಗೆ ಮುಂಬೈನಲ್ಲಿ ನಡೆದ ಕರಾಟೆ ಸ್ಪರ್ದೆಯಲ್ಲಿ ಜಿಲ್ಲೆಯಿಂದ ೫ ಮಂದಿ ವಿದ್ಯಾರ್ಥಿಗಳು ಮಾತ್ರಭಾಗವಹಿಸಿ ಬ್ಲಾಕ್ ಬೆಲ್ಟ್ ಪಡೆದಿದ್ದಾರೆ, ಅದರಲ್ಲಿ ಮುಖ್ಯವಾಗಿ ಅತಿ ಕಿರಿಯ ವಯಸ್ಸಿನ ಟಿ.ಎನ್.ಹೇಮಂತ್ ೧೦ ವರ್ಷದ ಅತಿ ಕಿರಿಯ ವಯಸ್ಸಿನಲ್ಲಿ ಬ್ಲಾಕ್ ಬೆಲ್ಟ್ ಪಡೆಯುವ ಮೂಲಕ ಜಿಲ್ಲೆ ಹಾಗೂ ಶಿಡ್ಲಘಟ್ಟ ತಾಲ್ಲೂಕಿನ ಪ್ರಥಮ ಕಿರಿಯ ಕ್ರೀಡಾ ಪಟು ಎಂಬ ಹಿರಿಮೆಗೆ ಪಾತ್ರನಾಗಿದ್ದಾನೆ ಎಂದರು.
ಕಾರ್ಯಕ್ರಮದಲ್ಲಿ ಟಿ.ಎನ್.ಹೇಮಂತ್, ಅಕಿತ್, ಓಂಕಾರ್, ವಿಶಾಲ್, ಸಮೀರ್ ಎಂಬ ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್ ವಿತರಣೆ ಮಾಡುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.
ದಿ ಕ್ರೆಸೆಂಟ್ ವಿದ್ಯಾ ಸಂಸ್ಥೆಯ ಸಿರಾಜ್ಉಲ್ಲಾ, ತಮೀಮ್ ಅನ್ಸಾರಿ, ನೆಹರು ಕ್ರೀಡಾಂಗಣ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಿರಂಜನ್, ಗೌರವಾಧ್ಯಕ್ಷ ಎಸ್.ವಿ.ನಾಗರಾಜ್ರಾವ್, ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ಜಯಂತಿ ಗ್ರಾಮದ ನಾರಾಯಣಸ್ವಾಮಿ, ಗೌರಿಬಿದನೂರು ಕರಾಟೆ ತರಬೇರುದಾರ ಚಂದ್ರಶೇಖರ್, ಟಿ.ಟಿ.ನರಸಿಂಹಪ್ಪ, ಶಿವಪ್ಪ,ಮುನಿರಾಜು, ವೇಣು ಹಾಜರಿದ್ದರು.

ವಕೀಲರು ಕಲಾಪದಿಂದ ಹೊರಗುಳಿದು ಬುಧವಾರ ಪ್ರತಿಭಟನೆ ನಡೆಸಿದರು

0

ಧಾರವಾಡದ ವಕೀಲರಾದ ಬಿ.ಐ.ದೊಡ್ಡಮನಿ ಅವರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಕೂಡಲೇ ಬಂದಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ವಕೀಲರ ಸಂಘದ ಪದಾಧಿಕಾರಿಗಳು ಕಲಾಪದಿಂದ ಹೊರಗುಳಿದು ಬುದವಾರ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ ಮಾತನಾಡಿ ಇತ್ತೀಚೆಗೆ ವಕೀಲರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದ್ದು ಪೊಲೀಸರು ವಕೀಲರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಕಳೆದ ಫೆ ೦೫ ರಂದು ದಾರವಾಡದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ವಕೀಲ ಬಿ.ಐ.ದೊಡ್ಡಮನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದರು.

ಧಾರವಾಡದ ವಕೀಲರಾದ ಬಿ.ಐ.ದೊಡ್ಡಮನಿ ಅವರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಕೂಡಲೇ ಬಂದಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಹಿರಿಯ ವಕೀಲರಾದ ಡಿ.ಎ.ಅಶ್ವತ್ಥನಾರಾಯಣರವರ ಅಧ್ಯಕ್ಷತೆಯಲ್ಲಿ ಮತ್ತೊಂದು ಗುಂಪಿನ ವಕೀಲರು ಕಲಾಪದಿಂದ ಹೊರಗುಳಿದು ಬುಧವಾರ ಪ್ರತಿಭಟನೆ ನಡೆಸಿದರು.

ವಕೀಲರ ಸಂಘದ ಕಾರ್ಯದರ್ಶಿ ಎಂ.ಬಿ.ಲೋಕೇಶ್, ಎಸ್.ಎನ್.ಚಂದ್ರಶೇಖರ್, ಕೆ.ಎಂ.ಮಂಜುನಾಥ, ಸಿ.ಎಲ್.ವೆಂಕಟರೆಡ್ಡಿ, ನಾಗೇಂದ್ರಬಾಬು, ರಾಮಕೃಷ್ಣ, ವಿಶ್ವನಾಥಪ್ಪ, ಎನ್.ಎಂ.ಮಂಜುನಾಥ್, ನಾಗಮಣಿ ಶ್ರೀನಿವಾಸ್, ಮತ್ತಿತರರು ಹಾಜರಿದ್ದರು.
ನಗರದ ನ್ಯಾಯಾಲಯ ಆವರಣದಲ್ಲಿ ಬುಧವಾರ ವಕೀಲರ ಎರಡು ಗುಂಪುಗಳ ಸದಸ್ಯರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸುವ ಮೂಲಕ ಬೂದಿ ಮುಚ್ಚಿದ ಕೆಂಡದಂತಿದ್ದ ತಾಲ್ಲೂಕಿನ ವಕೀಲರ ಸಂಘದಲ್ಲಿದ್ದ ಬಿನ್ನಮತ ಸ್ಪೋಟಗೊಂಡಿದೆ.
ಧಾರವಾಡದ ವಕೀಲ ಬಿ.ಐ.ದೊಡ್ಡಮನಿ ಅವರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಕೂಡಲೇ ಬಂದಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಹೊರಟ ನಂತರ ಹಿರಿಯ ವಕೀಲರಾದ ಡಿ.ಎ.ಅಶ್ವತ್ಥನಾರಾಯಣರವರ ಅಧ್ಯಕ್ಷತೆಯಲ್ಲಿ ಮತ್ತೊಂದು ಗುಂಪಿನ ಸದಸ್ಯರು ನ್ಯಾಯಾಲಯ ಆವರಣದಲ್ಲಿ ಪ್ರತಿಭಟನೆ ನಡೆಸಿ ಕಲಾಪಕ್ಕೆ ಗೈರು ಹಾಜರಾದರು.
ಹಿರಿಯ ವಕೀಲರಾದ ಈ.ನಾರಾಯಣಪ್ಪ, ವಿ.ಸುಬ್ರಮಣ್ಯಪ್ಪ, ಯೋಗಾನಂದ್, ಡಿ.ಎ.ಸತ್ಯನಾರಾಯಣ, ಎನ್.ವೆಂಕಟೇಶ್, ಅಶೋಕ್, ಲಕ್ಷ್ಮಮ್ಮ, ಅಂಬರೀಶ್, ವೀರಕುಮಾರ್, ಬಸವನಪರ್ತಿ ನಾಗರಾಜ್ ಹಾಜರಿದ್ದರು.

ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಸ್ವಚ್ಚತೆ ಕಾರ್ಯ

0

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪರಿಸರ ಮಾಲಿನ್ಯ ತಡೆಗಟ್ಟಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಯುವಜನರ ಪಾತ್ರ ಮಹತ್ತರವಾದದ್ದು ಎಂದು ಬೆಂಗಳೂರಿನ ಕೊಶಿಸ್ ವಿದ್ಯಾಸಂಸ್ಥೆಯ ಎನ್.ಎಸ್.ಎಸ್ ವ್ಯವಸ್ಥಾಪಕ ಮಧುಸೂದನ್ ಜೋಷಿ ತಿಳಿಸಿದರು.
ನಗರದ ಸಿದ್ದಾರ್ಥನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬೆಂಗಳೂರಿನ ಕೊಶಿಸ್ ಆಸ್ಪತ್ರೆ ಹಾಗೂ ಕೊಶಿಸ್ ವಿದ್ಯಾಸಂಸ್ಥೆಯ ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಏರ್ಪಡಿಸಲಾಗಿದ್ದ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ವರಿಗೂ ಉತ್ತಮ ಆರೋಗ್ಯ ಹಾಗು ಸ್ವಚ್ಚ ಪರಿಸರ ದೊರಕಬೇಕು ಎಂಬ ಸಾಮಾಜಿಕ ಕಳಕಳಿಯಿಂದ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಹೆಚ್ಚಾಗುತ್ತಿರುವ ಕೈಗಾರೀಕರಣ, ಮಾನವರಿಂದ ಪರಿಸರದ ಮೇಲೆ ಆಗುತ್ತಿರುವ ನಿರಂತರ ದಬ್ಬಾಳಿಕೆ ಸ್ವಚ್ಚತೆಯ ಕಡೆಗೆ ಜನರಲ್ಲಿರುವ ನಿರ್ಲಕ್ಷ್ಯ ಮನೋಭಾವನೆಯಿಂದಾಗಿ ಇಂದು ಪರಿಸರ ಸಂಪೂರ್ಣವಾಗಿ ನಾಶವಾಗುತ್ತಿದೆ. ವಾಯು ಮಾಲಿನ್ಯ, ಜಲಮಾಲಿನ್ಯದಿಂದ ದೇಶ ತತ್ತರಿಸುತ್ತಿದೆ. ನಾವು ಕುಡಿಯುವ ನೀರಿನಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗುತ್ತಿವೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ನಮ್ಮ ಸುತ್ತಮುತ್ತಲಿನ ಸ್ವಚ್ಚತೆ ಕಾಪಾಡುವ ಕೆಲಸವನ್ನು ಪ್ರತಿಯೊಬ್ಬರೂ ರೂಡಿಸಿಕೊಳ್ಳಬೇಕು ಎಂದರು.

ನಗರದ ಸಿದ್ದಾರ್ಥನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬೆಂಗಳೂರಿನ ಕೊಶಿಸ್ ಆಸ್ಪತ್ರೆ ಹಾಗೂ ಕೊಶಿಸ್ ವಿದ್ಯಾಸಂಸ್ಥೆಯ ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಸ್ವಚ್ಚತೆ ಕಾರ್ಯ ನಡೆಸಲಾಯಿತು.

ಸ್ವಚ್ಚತೆಯಿದ್ದರೆ ಮಾತ್ರವೇ ಉತ್ತಮವಾದ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ, ಸ್ವಚ್ಚವಾದ ಪರಿಸರವನ್ನು ನಾವು ನಿರ್ಮಾಣ ಮಾಡಿದರೆ, ಸರ್ಕಾರಗಳಿಗೆ ಕೋಟ್ಯಾಂತರ ರೂಪಾಯಿಗಳ ಹಣ ಉಳಿಕೆಯಾಗಲಿದೆ. ಕೇಂದ್ರ ಸರ್ಕಾರ ಸ್ವಚ್ಚ ಭಾರತ ಅಭಿಯಾನ ಯೋಜನೆಯಡಿ ಈಗಾಗಲೇ ಶೌಚಾಲಯಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಚರಂಡಿಗಳ ಸ್ವಚ್ಚತೆ, ಬೀದಿಗಳ ಸ್ವಚ್ಚತೆ, ನೀರಿನ ಮಿತಬಳಕೆ, ಬಳಕೆ ಮಾಡಿದ ನೀರನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ನಾಗರೀಕರು ಮುಂದಾದಲ್ಲಿ ಪರಿಸರ ಉತ್ತಮವಾಗಿರುತ್ತದೆ ಎಂದರು.
ಕೊಶಿಸ್ ವಿದ್ಯಾಸಂಸ್ಥೆಯ ಉಪನ್ಯಾಸಕರಾದ ಎನ್.ವೆಂಕಟೇಶ್, ಯಾನ್ಸಿ, ಮೇರಿ, ವಿದ್ಯಾರ್ಥಿಗಳಾದ ಕಾರ್ತಿಕ್, ವರುಣ್, ಸಂತೋಷ್, ಪ್ರಶಾಂತ್, ಪ್ರಿಯಾಂಕ, ಜಾನವಿ, ಶಿರಿಷಾ, ಮೀನಾ ಹಾಜರಿದ್ದರು.

ವಸ್ತು ಪ್ರದರ್ಶನ ಹಾಗು ಮಕ್ಕಳ ಪೋಷಕರಿಗೆ ಕ್ರೀಡಾಕೂಟ ಕಾರ್ಯಕ್ರಮ

0

ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸುವ ಮೂಲಕ ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹವನ್ನು ಮಕ್ಕಳ ಪೋಷಕರು ಬಿಡಬೇಕು ಎಂದು ಸಾಹಿತಿ ಕೆ.ಜೆ.ಹಳ್ಳಿ ಸುರೇಶ್ ಹೇಳಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಸ್ತು ಪ್ರದರ್ಶನ ಹಾಗು ಮಕ್ಕಳ ಪೋಷಕರಿಗೆ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಖಾಸಗಿ ಶಾಲೆಗಳ ಮೇಲಿನ ಪೋಷಕರ ವ್ಯಾಮೋಹದಿಂದ ಬಹುತೇಕ ಕನ್ನಡ ಹಾಗು ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ಓದಿದ ಡಾ.ಅಬ್ದುಲ್ಕಲಾಂ, ಸರ್ ಎಂ.ವಿಶ್ವೇಶ್ವರಯ್ಯ ಸೇರಿದಂತೆ ಬಹುತೇಕರು ದೇಶದ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಆದರೆ ಖಾಸಗಿ ಶಾಲೆಗಳಲ್ಲಿ ಓದಿದ ಇಂದಿನಬಹುತೇಕ ಯುವಕರು ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿದರೆ ಬುದ್ದಿವಂತರಾಗುತ್ತಾರೆ ಎನ್ನುವ ಭಾವನೆ ಬಿಟ್ಟು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸಲು ಮುಂದಾಗಬೇಕು.

ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಸ್ತು ಪ್ರದರ್ಶನ ಹಾಗು ಮಕ್ಕಳ ಪೋಷಕರಿಗೆ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಪುಸ್ತಕ, ಪೆನ್ನುಹಾಗು ಪ್ರಶಸ್ತಿ ಪತ್ರ ವಿತರಿಸಲಾಯಿತು.

ಸರ್ಕಾರಿ ಶಾಲೆಗಳಲ್ಲಿ ಗಣಿತ ಹಾಗು ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳು ತೀರಾ ಹಿಂದುಳಿದಿರುವುದಕ್ಕೆ ಸರಿಯಾದ ವ್ಯವಸ್ಥೆಯಿಲ್ಲದಿರುವುದು ಕಾರಣವಿರಬಹುದು. ಹಾಗಾಗಿ ಸರ್ಕಾರಗಳು ಖಾಸಗಿ ಶಾಲೆಯಲ್ಲಿರುವಂತೆ ಸರ್ಕಾರಿ ಶಾಲೆಗಳಲ್ಲಿಯೂ ಸಮರ್ಪಕ ವ್ಯವಸ್ಥೆ ಕಲ್ಪಿಸಿದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಹಕಾರಿಯಾಗುತ್ತದೆಎಂದರು.
ಶಾಲಾ ಮಕ್ಕಳು ತಯಾರಿಸಿ ಪ್ರದರ್ಶಿಸಿದ್ದ ವಸ್ತು ಪ್ರದರ್ಶನ ವೀಕ್ಷಿಸಿ ಮಕ್ಕಳಿಂದ ವಿವರಣೆ ಪಡೆದುಕೊಂಡರು. ಮಕ್ಕಳು ತಯಾರಿಸಿದ್ದ ಸೌರವ್ಯೂಹ, ಪವನ ವಿದ್ಯುತ್ ತಯಾರಿಕೆ, ಜ್ವಾಲಾಮುಖಿ ಪರ್ವತ, ಅಧುನಿಕ ಸೋಲಾರ್ ಮನೆ, ಏತನೀರಾವರಿ ತಯಾರಿಸಿದ್ದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗು ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಪುಸ್ತಕ, ಪೆನ್ನು ಹಾಗು ಪ್ರಶಸ್ತಿ ಪತ್ರ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಮಕ್ಕಳ ಪೋಷಕರಿಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಗ್ರಾ.ಪಂ ಸದಸ್ಯರಾದ ಎ.ಎಂ.ತ್ಯಾಗರಾಜ್, ಉಮಾಚನ್ನೇಗೌಡ, ನೇತ್ರಾವತಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಪುಷ್ಪಾರಾಮಚಂದ್ರ, ಎಂಪಿಸಿಎಸ್ ಅಧ್ಯಕ್ಷ ರವಿಪ್ರಕಾಶ್, ಮುಖ್ಯ ಶಿಕ್ಷಕಿ ವೆಂಕಟರತ್ನಮ್ಮ, ಶಿಕ್ಷಕರಾದ ಚಾಂದ್ಪಾಷ, ಈಶ್ವರಮ್ಮ, ಎಂ.ಸೀನಪ್ಪ, ಕೆ.ಮುನಿಯಪ್ಪ, ಸಿಆರ್ಪಿ ನಾಗರಾಜ್, ಅಂಗನವಾಡಿ ಶಿಕ್ಷಕಿ ಮಂಜುಳಮ್ಮ, ನಳಿನ ಹಾಜರಿದ್ದರು.

ಕಾಲೇಜು ವಾರ್ಷಿಕೋತ್ಸವ ಸಮಾರಂಭ

0

ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಜೊತೆಯಲ್ಲಿಯೇ ಮುಂದಿನ ಜೀವನದ ಬಗ್ಗೆ ನಿರ್ದಿಷ್ಠ ಯೋಜನೆ ರೂಪಿಸಿಕೊಳ್ಳಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜನೆ ಮಾಡಲಾಗಿದ್ದ ೨೦೧೭-೧೮ ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ಶಿಕ್ಷಣ ಪಡೆದು ಪದವೀಧರನಾಗುವುದರೊಂದಿಗೆ ಪೋಷಕರಿಗೆ ಗೌರವ ತರುವ ರೀತಿಯಲ್ಲಿ ನಡೆದುಕೊಳ್ಳಬೇಕು. ದೇಶದ ಉತ್ತಮ ಪ್ರಜೆಯಾಗಿ ರೂಪಗೊಳ್ಳಬೇಕು. ಶಿಕ್ಷಣದ ಜೊತೆಗೆ ಸಮಾಜದ ಹಾಗು ತಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಚಿಂತನೆ ನಡೆಸುವಂತವರಾಗಬೇಕು ಎಂದರು.

ನಗರದ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ೨೦೧೭-೧೮ ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಈಚೆಗೆ ಇಲ್ಲಿಂದ ವರ್ಗಾವಣೆಯಾಗಿ ಬೇರೆಡೆಗೆ ಹೋಗಿರುವ ಉಪನ್ಯಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಿಕ್ಷಣ ಎಂಬುವುದು ಮನುಷ್ಯನಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತದೆಯಾದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಾಜದ ಮಾದರಿ ವ್ಯಕ್ತಿಯಾಗಿ ರೂಪುಗೊಂಡು ದೇಶದ ಬೆನ್ನೆಲುಬಾಗಬೇಕು ಎಂದರು.
ಮುಖ್ಯಭಾಷಣಕಾರರಾಗಿ ಬಿಜಿಎಸ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಆರ್.ಮಹದೇವ್ ಮಾತನಾಡಿ ವಿದ್ಯಾರ್ಥಿಗಳಿಗೆ ಯಾವುದೂ ಸುಲಭವಾಗಿ ಸಿಗುವುದಿಲ್ಲ. ಹಾಗಾಗಿ ಕಷ್ಟಪಟ್ಟು ಓದುವುದರ ಜೊತೆಗೆ ಓದಿದ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ. ಪರೀಕ್ಷೆಗಳು ಸಮೀಪಿಸಿದಾಗ ಮಾತ್ರ ಓದಿದರೆ ಸಾಲದು ವರ್ಷವಿಡೀ ಓದುವುದನ್ನುರೂಡಿಸಿಕೊಳ್ಳಬೇಕು. ಜ್ಞಾನದ ಜೊತೆಗೆ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು. ನಾಗರೀಕತೆ ಹಾಗು ಮನರಂಜನೆಯ ಹೆಸರಿನಲ್ಲಿ ತಪ್ಪು ದಾರಿ ಹಿಡಿಯಬಾರದು. ಸಭ್ಯ ನಾಗರೀಕ ಸಮಾಜವನ್ನು ನಿರ್ಮಿಸುವುದೇ ಶಿಕ್ಷಣದ ಗುರಿಯಾಗಿದ್ದು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವ ಜವಾಬ್ದಾರಿ ಹಾಗು ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ರೀಡಾ ಹಾಗು ಸಾಂಸ್ಕೃತಿಕ ಸ್ಪರ್ದೆಗಳಲ್ಲಿ ವಿಜೇತರಾದ ವಿದ್ಯಾಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎನ್.ಆನಂದ್, ತಹಸೀಲ್ದಾರ್ ಎಸ್.ಅಜಿತ್ಕುಮಾರ್ರೈ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಚಂದ್ರಶೇಖರ್ಬಾಬು, ಪೌರಾಯುಕ್ತ ಜಿ.ಎನ್.ಚಲಪತಿ, ಉಪನ್ಯಾಸಕರಾದ ಸಿ.ವೆಂಕಟೇಶರೆಡ್ಡಿ, ಹೆಚ್.ಸಿ.ಮುನಿರಾಜು ಹಾಜರಿದ್ದರು.

ಒಂದು ದಿನದ ಉಪವಾಸ ಸತ್ಯಾಗ್ರಹ

0

ಸಿ ಅಂಡ್ ಆರ್ ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಲಾಗಿರುವ ಒಂದು ದಿನದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ನಗರದ ಕೋಟೆ ವೃತ್ತದಿಂದ ಹೊರಟ ಬಸ್ಸುಗಳಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ ಚಾಲನೆ ನೀಡಿದರು.
ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಮುಜಾಫಿರ್, ಉಪಾಧ್ಯಕ್ಷ ಕೆ.ಸುಮಾ, ಗೌರವಾಧ್ಯಕ್ಷ ಮುನಿನಾರಾಯಣಪ್ಪ, ಕಾರ್ಯದರ್ಶಿ ಬಿ.ಸಿ.ಶಿವಪ್ಪ, ಎಸ್.ಬಾಬು, ವಿ.ಕೃಷ್ಣಪ್ಪ, ಜಿ.ವಿ.ರಾಮಮೂರ್ತಿ, ಬಿ.ವಿ.ಮಂಜುನಾಥ, ಸಿಆರ್ಪಿ ಸುಂದರಾಚಾರಿ ಹಾಜರಿದ್ದರು.

ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ

0

ತಾಲೂಕು ಆಡಳಿತ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನಿಂದ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಸಂಪ್ರದಾಯದಂತೆ ವೀಳ್ಯದ ಎಲೆ ನೀಡಿ ಸಮ್ಮೇಳನಾಧ್ಯಕ್ಷತೆಯನ್ನು ವಹಿಸಿಕೊಳ್ಳುವಂತೆ ಸೋಮವಾರ ಅಧಿಕೃತ ಆಹ್ವಾನವನ್ನು ನೀಡಲಾಯಿತು.
ಫೆ ೧೭ ರ ಶನಿವಾರ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆಯುವ ೭ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಎಸ್.ವಿ.ನಾಗರಾಜರಾವ್ ಅವರ ನಗರದ ನಿವಾಸಕ್ಕೆ ತೆರಳಿ ದಂಪತಿಗಳಿಗೆ ವೀಳ್ಯದ ಎಲೆ ನೀಡಿ ಆಹ್ವಾನ ನೀಡಲಾಯಿತು.
ಶಾಸಕ ಎಂ.ರಾಜಣ್ಣ ಮಾತನಾಡಿ ೭ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ನಿಮ್ಮನ್ನು ಸಭೆಯಲ್ಲಿ ಸರ್ವ ಸಮ್ಮತವಾಗಿ ಆಯ್ಕೆ ಮಾಡಲಾಗಿದ್ದು ಅದು ನಿಮ್ಮ ವಿದ್ವತ್ತಿಗೆ, ಕನ್ನಡ ನಾಡು ನುಡಿಗೆ ನೀವು ಸಲ್ಲಿಸಿದ ಸೇವೆಯನ್ನು ಗುರ್ತಿಸಿದಂತಾಗಿದೆ. ತಾವು ದಯಮಾಡಿ ಸಮ್ಮೇಳನಾಧ್ಯಕ್ಷತೆಯನ್ನು ವಹಿಸಿಕೊಂಡು ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಡುವಂತೆ ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ನ ತಾಲೂಕು ಅಧ್ಯಕ್ಷ ಕೆ.ಮಂಜುನಾಥ್, ಕಸಾಪ ಕಾರ್ಯದರ್ಶಿ ಸುಂದರಾಚಾರಿ, ಖಜಾಂಚಿ ವೆಂಕಟೇಶಪ್ಪ, ಸಾವಿತ್ರಮ್ಮ, ಮಾಜಿ ತಾಲೂಕು ಅಧ್ಯಕ್ಷ ವಿ.ಕೃಷ್ಣ, ಶಿಕ್ಷಕರಾದ ದೇವರಾಜ್, ವೇಣುಗೋಪಾಲ್, ಮುಖಂಡರಾದ ಎ.ನಾಗರಾಜ್, ಶ್ರೀನಿವಾಸ್ (ಚಿನ್ನಿ) ಟಿ.ಟಿ.ನರಸಿಂಹಪ್ಪ, ಮತ್ತಿತರರು ಹಾಜರಿದ್ದರು.

ಬರಹ ಚುಟುಕಾಗಿರಲಿ, ಮನಸ್ಸನ್ನು ಕುಟುಕುವಂತಿರಲಿ

0

ಬರಹವು ಸರಳ ಭಾಷೆಯಲ್ಲಿರಬೇಕು, ಚುಟುಕಾಗಿರಬೇಕು, ಜನರ ಮನಸ್ಸನ್ನು ಕುಟುಕುವಂತೆ ಚಿಂತನೆಗೆ ಹಚ್ಚವಂತಿರಬೇಕು ಎಂದು ಸಾಹಿತಿ ಕೆ.ಬಾಲಾಜಿ ತಿಳಿಸಿದರು.
ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ ಮತ್ತು ಕೇಂದ್ರ ಗ್ರಂಥಾಲಯದ ಸಹಯೋಗದೊಂದಿಗೆ ನಡೆದ ‘ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ 8 ನೇ ತಿಂಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯತ್ವವು ಬೆಳಗುವುದು ನಾವು ಭಾವನಾತ್ಮಕವಾಗಿ ನಮ್ಮ ಸಮಾಜಕ್ಕೆ ಸ್ಪಂದಿಸಿದಾಗ ಮಾತ್ರ. ಪ್ರತಿಯೊಂದು ಜೀವಿಯೆಡೆಗೂ ಭಾವನಾತ್ಮಕ ಬೆಸುಗೆಯನ್ನು ಹೊಂದಿದಾಗ, ಸಾಹಿತ್ಯದ ಹಿನ್ನೆಲೆಯ ಸಹಾಯದಿಂದ ಮನದಾಳದ ಚಿಂತನೆಗಳು ಪದಗಳಾಗಿ ಮೂಡುತ್ತವೆ. ಓದುವುದು ನಮ್ಮ ಹವ್ಯಾಸವಾಗಬೇಕು. ನಮ್ಮ ಅನುಭವಕ್ಕೆ ದಕ್ಕಿದ್ದು ಸಾಹಿತ್ಯವಾದಾಗ ಮೌಲಿಕವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಾಹಿತಿ ಕೆ.ಬಾಲಾಜಿ, ತಾವು ರಚಿಸಿರುವ ಕೃತಿಗಳಾದ ‘ಅಪ್ಪನಿಂದ ಕಲಿತ ಪಾಠಗಳು’, ‘ದಾರಿ ದೀಪ’ ಮತ್ತು ‘ಅನ್ನದಾತನ ಆಕ್ರಂದನ’ ಬಗ್ಗೆ ಮಾತನಾಡಿ, ಪುಸ್ತಕ ಬರೆಯಲು ಪ್ರೇರಣೆ, ರೂಪುಗೊಂಡ ಬಗೆಯನ್ನು ವಿವರಿಸಿದರು.
ಪರಿಸರದ ಮೇಲೆ ವಿಶೇಷ ಕಾಳಜಿ ಹೊಂದಿದ್ದು, ಮಣ್ಣಿನ ಸಂಬಂಧ ಹೊಂದಿದ್ದ ಕಾರಣ ರೈತನಿಗಾಗಿ ಸಮಾಜಕ್ಕೆ ಕೇಳಿರುವ ಹಲವು ಪ್ರಶ್ನೆಗಳು ‘ಅನ್ನದಾತನ ಆಕ್ರಂದನ’ ಕವನ ಸಂಕಲನವಾಗಿದೆ. ಅತ್ಯಂತ ಕಷ್ಟದಿಂದ ಬೆಳೆದು ಬಂದ ನನ್ನ ಅಪ್ಪನಿಂದ ಕಲಿತ ಜೀವನದ ಪಾಠಗಳು ‘ಅಪ್ಪನಿಂದ ಕಲಿತ ಪಾಠಗಳು’ ಕಥಾಸಂಕಲನವಾಗಿದೆ. ‘ದಾರಿ ದೀಪ’ವು 40 ಕವನಗಳ ಸಂಕಲನವಾಗಿದೆ ಎಂದು ನುಡಿದರು.
ಕನ್ನಡ ಸಾಹಿತ್ಯದಲ್ಲಿ ಕೃಷಿ ಮಾಡುತ್ತಿರುವ ಜಿಲ್ಲೆಯ ಹೊಸ ಪ್ರತಿಭೆಗಳನ್ನು ಓದುಗರಿಗೆ ಪರಿಚಯಿಸುವ ವಿನೂತನ ಕಾರ್ಯಕ್ರಮಗಳ ಮೂಲಕ ಕನ್ನಡ ಸಾರಸ್ವತ ಪರಿಚಾರಿಕೆ ಕನ್ನಡ ಸೇವೆ ಮಾಡುತ್ತಿರುವುದು ಇತರರಿಗೆ ಪ್ರೇರಣೆಯಾಗಿದೆ ಎಂದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಚಿಂತಾಮಣಿ ತಾಲ್ಲೂಕಿನ ಕೆ.ಬಾಲಾಜಿ ವೃತ್ತಿಯಲ್ಲಿ ಶಿಕ್ಷಕ ಹಾಗೂ ಪ್ರವೃತ್ತಿಯಲ್ಲಿ ಕವಿ, ಸಾಹಿತಿಯಾಗಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ದಿನಪತ್ರಿಕೆಗಳಲ್ಲಿ ಲೇಖನ ಬರೆಯುವುದರ ಜೊತೆಗೆ ತಾಲ್ಲೂಕು, ಜಿಲ್ಲಾ, ಹಾಗೂ ರಾಜ್ಯ ಮಟ್ಟದ ಕವನ ಸ್ಪರ್ಧೆ, ಪ್ರಬಂಧ ಸ್ಪರ್ಧೆಯಲ್ಲಿ ಮತ್ತು ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಕವನ ವಾಚನ ಮಾಡಿದ್ದಾರೆ. ಇವರಿಗೆ ಮಂಡ್ಯದ ಕನ್ನಂಬಾಡಿ ದಿನಪತ್ರಿಕೆಯವರು ರಾಜ್ಯ ಮಟ್ಟದ ‘ಕಾವ್ಯ ಶ್ರೀ’ ಪ್ರಶಸ್ತಿ ನೀಡಿದ್ದಾರೆ ಎಂದು ಪರಿಚಯ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಸಾಹಿತಿ ಕೆ.ಬಾಲಾಜಿ, ತಾವು ರಚಿಸಿರುವ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.
ನಿವೃತ್ತ ಶಿಕ್ಷಕ ಸುಂದರನ್, ಗ್ರಂಥಪಾಲಕ ಶ್ರೀನಿವಾಸ್, ಸತೀಶ್, ನೃತ್ಯ ಕಲಾವಿದ ಸಿ.ಎನ್. ಮುನಿರಾಜು, ಅಜಿತ್ ಕೌಂಡಿನ್ಯ, ಕರವೇ ದೇವನಹಳ್ಳಿ ತಾಲ್ಲೂಕು ಅಧ್ಯಕ್ಷ ರಾಮಮೂರ್ತಿ ಉದಯ್, ಚಿತ್ರ ನಿರ್ದೇಶಕ ಮೇಲೂರು ರಂಗ, ಬಾಂಧವ್ಯ, ಕಲಾವಿದೆ ಗಂಭೀರನಹಳ್ಳಿ ರೇಣುಕ, ಚೇತನ್ ಗೌಡ, ನಟ ನಾಗೇಂದ್ರಬಾಬು, ರಾಹುಲ್, ನೃತ್ಯ ನಿರ್ದೇಶಕ ಬಶೆಟ್ಟಹಳ್ಳಿ ದೇವು, ವೃಷಭೇಂದ್ರಪ್ಪ ಹಾಜರಿದ್ದರು.

ಮಿನಿ ಓಲಂಪಿಕ್ ಕ್ರೀಡಾಕೂಟ

0

ನಗರದ ಸ್ವಚ್ಚತೆ ಸೇರಿದಂತೆ ಸಾರ್ವಜನಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ದುಡಿಯುವ ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಹೇಳಿದರು.
ನಗರದ ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ಮಿನಿ ಓಲಂಪಿಕ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಪೌರ ಕಾರ್ಮಿಕರು ತಾವು ಮಾಡುವ ಕೆಲಸದಿಂದ ಇತರರಿಗಿಂತ ಬೇಗ ಅನಾರೋಗ್ಯಕ್ಕೆ ತುತ್ತಾಗುವ ಸಾದ್ಯತೆಗಳಿವೆ. ಹಾಗಾಗಿ ಪೌರಕಾರ್ಮಿಕರಿಗೆ ಬೇಕಾಗಿರುವ ಅಧುನಿಕ ಪರಿಕರಗಳು ಸೇರಿದಂತೆ ವೈದ್ಯಕೀಯ ಸೌಲಭ್ಯ ಹಾಗು ಸೂಕ್ತ ವೇತನ ಒದಗಿಸಲು ಸರ್ಕಾರಗಳು ಮುಂದಾಗಬೇಕು.
ಸ್ವಚ್ಚತೆ ವಿಚಾರ ಬಂದಾಗ ಅದು ಪ್ರತಿಯೊಬ್ಬರ ಜವಾಬ್ದಾರಿಯಾಗಿರುತ್ತದೆ. ಪ್ರತಿಯೊಬ್ಬರೂ ಸ್ವಚ್ಚತೆಯಲ್ಲಿ ಕೈಜೋಡಿಸಿ ತಮ್ಮ ಮನೆಯ ತ್ಯಾಜ್ಯವನ್ನು ರಸ್ತೆಗೆ ಎಸೆಯುವುದನ್ನು ಬಿಟ್ಟು ಅದನ್ನು ವಿಂಗಡಿಸಿ ಸಂಸ್ಕರಿಸುವ ಕೆಲಸಕ್ಕೆ ಮುಂದಾಗಬೇಕು. ಪೌರ ಕಾರ್ಮಿಕರ ಶ್ರಮ ಹಾಗು ವೃತ್ತಿಯನ್ನು ಪ್ರತಿಯೊಬ್ಬ ನಾಗರೀಕರು ಗೌರವಿಸುವಂತಹಕೆಲಸವಾಗಬೇಕು ಎಂದರು.
ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ವೆಂಕೋಬರಾವ್ ಮಾತನಾಡಿ ಜನಸೇವೆಯೇ ಜನಾರ್ಧನ ಸೇವೆ ಎಂಬ ಮಾತಿನಂತೆ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ, ಕ್ಷೇತ್ರದಾಧ್ಯಂತ ಉಚಿತ ಆರೋಗ್ಯ ಶಿಬಿರಗಳು ಸೇರಿದಂತೆ ಉಚಿತ ಸಾಮೂಹಿಕ ವಿವಾಹಗಳನ್ನುನೆರವೇರಿಸುವ ಮೂಲಕ ಕ್ಷೇತ್ರದ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದಾರೆ. ಇಂತಹ ಮತ್ತಷ್ಟು ಸಮಾಜಸೇವಕರು ಕ್ಷೇತ್ರಕ್ಕೆ ಅಗತ್ಯವಾಗಿದ್ದರೆ ಎಂದರು.
ಇದೇ ಸಂದರ್ಭದಲ್ಲಿ ನಗರದ ಪೌರಕಾರ್ಮಿಕರಿಗಾಗಿ ಏರ್ಪಡಿಸಲಾಗಿದ್ದ ಕ್ರೀಡಾಕೂಟದಲ್ಲಿ ಸುಮಾರು ೩೦ ಕ್ಕೂ ಹೆಚ್ಚು ಪೌರಕಾರ್ಮಿಕರು ಭಾಗವಹಿಸಿ ಸಂತಸಪಟ್ಟರು.
ಶ್ರೀ ವಾಸವಿ ವಿದ್ಯಾ ಸಂಸ್ಥೆಯ ಸತ್ಯನಾರಾಯಣಶೆಟ್ಟಿ, ಮುಖಂಡರಾದ ಎಸ್.ವಿ.ಅಯ್ಯರ್, ಹಿತ್ತಲಹಳ್ಳಿ ಕೃಷ್ಣಪ್ಪ, ಅಶ್ವತ್ಥಪ್ಪ, ನರಸಿಂಹಪ್ಪ, ಅಪ್ಸರ್ಪಾಷ, ಆನೂರು ದೇವರಾಜ್, ವಿಶ್ವನಾಥ್ ಹಾಜರಿದ್ದರು.

ಪರಿವರ್ತನಾ ರ್ಯಾಲಿ

0

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ಪರಿವರ್ತನಾ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಹೊರಟ ಬಿಜೆಪಿ ಕಾರ್ಯಕರ್ತರ ಬಸ್ಸುಗಳಿಗೆ ನಗರದ ಕೋಟೆ ವೃತ್ತದಲ್ಲಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ಚಾಲನೆ ನೀಡಿದರು. ಮುಖಂಡರಾದ ಡಿ.ಆರ್.ಶಿವಕುಮಾರಗೌಡ, ನಾರ್ತ್ ಈಸ್ಟ್ ಸುರೇಶ್ ಹಾಜರಿದ್ದರು.

ಪೌರಕಾರ್ಮಿಕರ ಮಿನಿ ಓಲಂಪಿಕ್

0

ನಗರದ ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ಮಿನಿ ಓಲಂಪಿಕ್ ಕ್ರೀಡಾಕೂಟ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಟ್ರಸ್ಟ್ ವತಿಯಿಂದ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಎಸ್‌.ವಿ.ನಾಗರಾಜರಾವ್‌ ಆಯ್ಕೆ

0

ತಾಲ್ಲೂಕು ಕಸಾಪ ವತಿಯಿಂದ ಆಚರಿಸಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷರನ್ನಾಗಿ ಎಸ್‌.ವಿ.ನಾಗರಾಜರಾವ್‌ ಅವರನ್ನು ಕಸಾಪ ತಾಲ್ಲೂಕು ಘಟಕದ ಕಾರ್ಯಕಾರಿ ಸಮಿತಿ ಆಯ್ಕೆ ಮಾಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ‘ಮನೆಮನೆ ಕುಮಾರಣ್ಣ’ ಕಾರ್ಯಕ್ರಮ

0

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಯುವಕರಿಗೆ ಉದ್ಯೋಗ, ಉನ್ನತ ಶಿಕ್ಷಣ, ಉತ್ತಮ ಮೂಲಭೂತ ಸೌಕರ್ಯ ಒದಗಿಸುವುದೇ ಜೆಡಿಎಸ್‌ ಪಕ್ಷದ ಪ್ರಣಾಳಿಕೆಯ ಪ್ರಮುಖ ಅಂಶವಾಗಿದೆ ಎಂದು ಶ್ರೀ ಎಚ್‌.ಡಿ.ದೇವೇಗೌಡರವರ ಮತ್ತು ಜಯಪ್ರಕಾಶ್‌ ನಾರಾಯಣ್‌ರವರ ಸೇವಾಭಿವೃದ್ಧಿ ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ ಮೇಲೂರು ಬಿ.ಎನ್‌.ರವಿಕುಮಾರ್‌ ತಿಳಿಸಿದರು.
ತಾಲ್ಲೂಕಿನ ಚಿಕ್ಕದಾಸರಹಳ್ಳಿ ಬಳಿಯ ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ಶನಿವಾರದಂದು ‘ಮನೆಮನೆ ಕುಮಾರಣ್ಣ’ ಕಾರ್ಯಕ್ರಮದ ಸಮಾವೇಶ ಹಾಗೂ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರ ರಾಜಕೀಯ ಜೀವನದ ಕುರಿತ ‘ಸಾಧನೆಯ ಶಿಖರಾರೋಹಣ : ಪ್ರಧಾನ ಮಂತ್ರಿಯಾಗಿ ಎಚ್ ಡಿ ದೇವೇಗೌಡ ಅವರ ಸಾಧನೆಗಳು’ ಗ್ರಂಥವನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್‌ ಪಕ್ಷದ ವಿ.ಮುನಿಯಪ್ಪನವರು ‘ಇದು ನನ್ನ ಕಡೆಯ ಚುನಾವಣೆ’ ಎನ್ನುತ್ತಿದ್ದಾರೆ. ಆದರೆ ಜೆಡಿಎಸ್‌ ಪಕ್ಷದವರು ಅಭಿವೃದ್ಧಿಯೇ ನಮ್ಮ ಗುರಿ ಎನ್ನುತ್ತಿದ್ದೇವೆ. ಕ್ಷೇತ್ರದಲ್ಲಿ ಯುವಕರಿಗಾಗಿ ಎಂಜಿನಿಯರಿಂಗ್‌ ಕಾಲೇಜು, ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸಿ ಯುವಕರಿಗೆ ಉದ್ಯೋಗ, ಪ್ರಸ್ತುತ 5,600 ಮಂದಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾರೆ, ಅವರಿಗಾಗಿ ಸರ್ಕಾರಿ ಡಯಾಲಿಸಿಸ್‌ ಕೇಂದ್ರ, 92 ಹಳ್ಳಿಗಳಿಗೆ ಡಾಂಬರು ರಸ್ತೆಯೇ ಇಲ್ಲ, ಅವುಗಳ ನಿರ್ಮಾಣ, ಕುಡಿಯುವ ನೀರು, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದೇ ನಮ್ಮ ಪಕ್ಷದ ಆಶಯವಾಗಿದೆ ಎಂದರು.
ಇದುವರೆಗೂ ಹಲವು ಬಾರಿ ಕಾಂಗ್ರೆಸ್‌ ಪಕ್ಷದಿಂದ ಶಾಸಕರಾಗಿ ಸಚಿವರಾಗಿದ್ದವರು ಕ್ಷೇತ್ರಕ್ಕೆ ಏನೂ ಮಾಡಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದರೂ ಅದರ ಉಪಯೋಗ ಪಡೆದಿಲ್ಲ. ಕೇವಲ ಅಧಿಕಾರವನ್ನು ಸರ್ಕಾರಿ ಅಧಿಕಾರಿಗಳ ವರ್ಗಾವಣೆಗೆ ಬಳಸಿಕೊಂಡಿದ್ದಾರೆ. ಜನರು ಈಗ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರಬೇಕು. ಮುಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಆಗಬೇಕು. ಆಗ ರಾಜ್ಯದ ರೈತರ, ನೇಕಾರರ, ಕಾರ್ಮಿಕರ, ಕುಶಲಕರ್ಮಿಗಳ ಸಾಲ ಮನ್ನಾ ಆಗುತ್ತದೆ. ಗರ್ಭಿಣಿಯರಿಗೆ ಭತ್ಯೆ, ಆಶಾ ಕಾರ್ಯಕರ್ತೆಯರಿಗೆ 10 ಸಾವಿರ ರೂ ಮಾಸಿಕ ವೇತನ, 24 ಗಂಟೆ ವಿದ್ಯುತ್‌ ಪೂರೈಕೆ, ನೀರಿನ ಸಮಸ್ಯೆ ಬಗೆಹರಿಸಲಾಗುತ್ತದೆ. ರಾಜ್ಯದ ಜನರ, ಶ್ರೇಯೋಭಿವೃದ್ಧಿಗಾಗಿ ಸದಾ ಚಿಂತಿಸುವ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರ ಬದುಕಿನ ಚಿತ್ರಣ ನೀಡುವ ಗ್ರಂಥವನ್ನು ಬಿಡುಗಡೆ ಮಾಡುವ ಸೌಭಾಗ್ಯ ನಮ್ಮದಾಗಿದೆ ಎಂದರು.

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರ ರಾಜಕೀಯ ಜೀವನದ ಕುರಿತ ‘ಸಾಧನೆಯ ಶಿಖರಾರೋಹಣ : ಪ್ರಧಾನ ಮಂತ್ರಿಯಾಗಿ ಎಚ್ ಡಿ ದೇವೇಗೌಡ ಅವರ ಸಾಧನೆಗಳು’ ಗ್ರಂಥವನ್ನು ಬಿಡುಗಡೆ ಮಾಡಲಾಯಿತು
ಈ ಸಂದರ್ಭದಲ್ಲಿ ‘ಮನೆಮನೆಗೆ ಕುಮಾರಣ್ಣ’ ಜೆಡಿಎಸ್‌ ಪಕ್ಷದ ಸಾಧನೆ ಮತ್ತು ಭರವಸೆಗಳ ಕರಪತ್ರ ಮತ್ತು ‘ಸಾಧನೆಯ ಶಿಖರಾರೋಹಣ : ಪ್ರಧಾನ ಮಂತ್ರಿಯಾಗಿ ಎಚ್ ಡಿ ದೇವೇಗೌಡ ಅವರ ಸಾಧನೆಗಳು’ ಗ್ರಂಥವನ್ನು ಬಿಡುಗಡೆ ಮಾಡಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾ ರಘು ಮಾತನಾಡಿ, ಟ್ರಸ್ಟ್ ಮೂಲಕ ಕ್ಷೇತ್ರದ ಮಹಿಳೆಯರನ್ನು ಓಂ ಶಕ್ತಿ ದೇವಾಲಯಕ್ಕೆ ಕಳುಹಿಸಿದ ಬಗ್ಗೆ ಮಾಜಿ ಶಾಸಕರೂ ಹಿರಿಯರೂ ಆದ ವಿ.ಮುನಿಯಪ್ಪ ಲಘುವಾಗಿ ಮಾತಾಡಿದ್ದಾರೆ. ‘ಐವತ್ತು ಅರವತ್ತು ರೂಗಳ ಸೀರೆಗೆ ಮಾರುಹೋಗಿ ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ’ ಎಂದು ಅವಹೇಳನವಾಗಿ ಮಾತನಾಡಿದ್ದಾರೆ. ನಮ್ಮ ಕ್ಷೇತ್ರದ ಹೆಣ್ಣುಮಕ್ಕಳು ಸ್ವಾಭಿಮಾನದಿಂದ ಜೀವನ ಮಾಡುವವರು. ಅಭಿಮಾನದಿಂದ, ದೈವ ಭಕ್ತಿಯಿಂದ ಅವರು ದೇವಸ್ಥಾನಕ್ಕೆ ಹೋಗಿದ್ದಾರೆ. ಹೆಣ್ಣುಮಕ್ಕಳನ್ನು ಕೇವಲವಾಗಿ ಮಾತನಾಡುವವರು ಆತ್ಮಸಾಕ್ಷಿಯಿದ್ದಲ್ಲಿ ಕ್ಷೇತ್ರದ ಜನರಿಗೆ ತಮ್ಮ ಕೊಡುಗೆಯೇನು ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್‌ ಮುನಿಯಪ್ಪ ಮಾತನಾಡಿ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಬೇಕು, ಮೇಲೂರು ಬಿ.ಎನ್‌.ರವಿಕುಮಾರ್‌ ಶಾಸಕರಾಗಬೇಕು. ಅದಕ್ಕಾಗಿ ಜೆಡಿಎಸ್‌ ಕಾರ್ಯಕರ್ತರು ಒಗ್ಗೂಡಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಪಿ.ವಿ.ನಾಗರಾಜ್‌, ಶಿವಾರೆಡ್ಡಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್‌.ನರಸಿಂಹಪ್ಪ, ನಗರಸಭಾ ಅಧ್ಯಕ್ಷೆ ಪ್ರಭಾವತಿ ಸುರೇಶ್‌, ಸದಸ್ಯರಾದ ಸಂಧ್ಯಾ ಮಂಜುನಾಥ್‌, ಸರಳಾ ಶ್ರೀಧರ್‌, ನಂದಕಿಶನ್‌, ವೆಂಕಟಸ್ವಾಮಿ, ಯಾದವ ಸಂಘದ ಅಧ್ಯಕ್ಷ ಕೇಶವಮೂರ್ತಿ, ರಾಮಕೃಷ್ಣಪ್ಪ, ಕಿಟ್ಟಿ, ಕೆ.ರತ್ನಯ್ಯ, ಸುರೇಶ್‌, ಗೊಲ್ಲಹಳ್ಳಿ ಶಿವಪ್ರಸಾದ್‌, ಶ್ರೀನಿವಾಸರೆಡ್ಡಿ, ದೊಣ್ಣಹಳ್ಳಿ ರಾಮಣ್ಣ, ಕದಿರಿ ಯೂಸುಫ್‌, ಸೆಮಿ, ಷಫಿ, ರಮೇಶ್‌, ರಾಜಶೇಖರ್‌, ತಾದೂರು ರಘು, ಆರ್‌.ಎ.ಉಮೇಶ್‌, ಕೆ.ಎಸ್‌.ಮಂಜುನಾಥ್‌, ಅಮ್ಜದ್‌, ಚಾಂದ್‌ಪಾಷ, ಮಡಿವಾಳ ಸಂಘದ ರಾಜ್ಯ ಉಪಾಧ್ಯಕ್ಷ ಆರ್‌.ವಿ.ರಾಜಣ್ಣ, ತುಳವನೂರು ರವಿ, ಚಂದ್ರಕಲಾ ಬೈರೇಗೌಡ, ಮುನಿಕೃಷ್ಣ, ದ್ವಾವಪ್ಪ, ಮುಗಿಲಡಿಪಿ ನಂಜಪ್ಪ, ಕೆ.ಮುನೇಗೌಡ, ರಾಜಾಕಾಂತ್‌ ಹಾಜರಿದ್ದರು.

ಎಚ್.ಡಿ.ಕುಮಾರಸ್ವಾಮಿಯವರನ್ನು ಮುಂದಿನ ಮುಖ್ಯಮಂತ್ರಿಗಳನ್ನಾಗಿ ಮಾಡುವುದೇ ಗುರಿ

0

ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಮುಂದಿನ ಮುಖ್ಯಮಂತ್ರಿಗಳನ್ನಾಗಿ ಮಾಡಲು ಕ್ಷೇತ್ರದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಮನೆ ಮನೆಗೂ ತೆರಳಿ ಎಚ್.ಡಿ.ಕುಮಾರಸ್ವಾಮಿ ಅವರಿಂದಾದ ಅಭಿವೃದ್ದಿ ಕೆಲಸಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆಯಲ್ಲಿ ಶುಕ್ರವಾರ ಕಸಬಾಹೋಬಳಿ ಹಾಗೂ ಜಂಗಮಕೋಟೆ ಹೋಬಳಿಯ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ ಹಾಗು ಮನೆ ಮನೆ ಕುಮಾರಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಡವರ, ದೀನದಲಿತರ ಆಶಾಕಿರಣವಾಗಿದ್ದ ಎಚ್.ಡಿ.ಕುಮಾರಸ್ವಾ,ಮಿಯವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಮಾಡಿದ ಜನಪರ ಕಾರ್ಯಕ್ರಮಗಳು ಮತ್ತು ತಾವು ಶಾಸಕರಾಗಿ ಕಳೆದ ನಾಲ್ಕೂವರೆ ವರ್ಷದಲ್ಲಿ ಕ್ಷೇತ್ರದಲ್ಲಿ ಮಾಡಿರುವಂತಹ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮುಂದಿನ ಚುನಾವಣೆ ಎದುರಿಸೋಣ. ಮತ್ತೊಮ್ಮೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.
ಕಳೆದ ೨೦೧೩ ರ ಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದು. ಕ್ಷೇತ್ರದ ಜನರಿಗೆ ನೀಡಿದ್ದ ಆಶ್ವಾಸನೆಯಂತೆ ನಗರದಲ್ಲಿಯೇ ವಾಸ್ತವ್ಯ ಹೂಡಿದ್ದೇನೆ. ಪ್ರತಿನಿತ್ಯ ಸಾಮಾನ್ಯ ವ್ಯಕ್ತಿಯ ಜೊತೆಯೊಲ್ಲಿಯೂ ಸಂಪರ್ಕದಲ್ಲಿರುವ ಮೂಲಕ ಕ್ಷೇತ್ರದ ಮನೆ ಮಗನಾಗಿ ಸೇವೆ ಸಲ್ಲಿಸಿದ್ದೇನೆ ಎಂದರು.

ಜಂಗಮಕೋಟೆಯಲ್ಲಿ ಶುಕ್ರವಾರ ಕಸಬಾಹೋಬಳಿ ಹಾಗೂ ಜಂಗಮಕೋಟೆ ಹೋಬಳಿಯ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ ಮತ್ತು ಮನೆ ಮನೆ ಕುಮಾರಣ್ಣ ಕಾರ್ಯಕ್ರಮದಲ್ಲಿ ಮನೆ ಮನೆ ಕುಮಾರಣ್ಣ ಕರಪತ್ರವನ್ನು ಗಣ್ಯರು ಬಿಡುಗಡೆಗೊಳಿಸಿದರು

ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ ಮಾತನಾಡಿ, ಸರಳ, ಸಜ್ಜನ ವ್ಯಕ್ತಿತ್ವದಿಂದ ಹೆಸರಾಗಿರುವ ಶಾಸಕ ಎಂ.ರಾಜಣ್ಣ ನುಡಿದಂತೆ ನಡೆದಿದ್ದು ಪ್ರತಿಯೊಬ್ಬ ಸಾಮಾನ್ಯನಿಗೂ ಹತ್ತಿರವಾಗಿದ್ದಾರೆ. ಕಳೆದ ನಾಲ್ಕೂವರೆ ವರ್ಷದಲ್ಲಿ ಕ್ಷೇತ್ರದಾಧ್ಯಂತ ಇರುವ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಕೆಎಸ್‌ಆರ್‌ಟಿಸಿ ಡಿಪೋ, ಅಗ್ನಿಶಾಮಕದಳ, ಐಟಿಐ ಕಾಲೇಜು ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ.
ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಯಾರಿಗೆ ಸಿಗಬಹುದು ಎಂಬ ಆತಂಕ ಬಹುತೇಕ ಜೆಡಿಎಸ್ ಕಾರ್ಯಕರ್ತರಲ್ಲಿರಬಹುದು. ಪಕ್ಷದಲ್ಲಿರುವ ಆಂತರಿಕ ಭಿನ್ನಮತವನ್ನು ವರಿಷ್ಠರು ಬಗೆಹರಿಸಲಿದ್ದು ಯಾವುದೇ ಕಾರಣಕ್ಕೂ ಕಾರ್ಯಕರ್ತರು ಗೊಂದಲ ಪಡುವುದು ಬೇಡ. ಮುಂಬರುವ ಚುನಾವಣೆಯಲ್ಲಿಯೂ ರಾಜಣ್ಣನವರೇ ಕ್ಷೇತ್ರದ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಲಿದ್ದಾರೆ. ಹಾಗಾಗಿ ಇಂದಿನಿಂದಲೇ ಜೆಡಿಎಸ್ ಕಾರ್ಯಕರ್ತರೂ ಸೇರಿದಂತೆ ಮುಖಂಡರು ಕ್ಷೇತ್ರದ ಮನೆ ಮನೆಗೂ ತೆರಳಿ ಪ್ರಾದೇಶಿಕ ಪಕ್ಷದ ಅಗತ್ಯತೆ ಹಾಗು ಅನಿವಾರ್ಯದ ಬಗ್ಗೆ ಜನರಿಗೆ ಮಾಹಿತಿ ಮುಟ್ಟಿಸುವ ಕೆಲಸಕ್ಕೆ ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಎಂ.ಜಯರಾಮರೆಡ್ಡಿ, ನಗರಸಭಾ ಸದಸ್ಯ ಅಫ್ಸರ್‌ಪಾಷ, ಮುಖಂಡರಾದ ನಜೀರ್‌ಸಾಬ್, ಮಳಮಾಚನಹಳ್ಳಿ ಬೈರೇಗೌಡ, ಎಚ್‌ಕ್ರಾಸ್ ರವಿ, ಕೆ.ಮಂಜುನಾಥ್, ಕೆ.ಎಸ್.ಕನಕಪ್ರಸಾದ್, ರೆಹಮತ್ತುಲ್ಲಾ, ಲಕ್ಷ್ಮಿನಾರಾಯಣ, ಮಳಮಾಚನಹಳ್ಳಿ ರವಿ ಹಾಜರಿದ್ದರು.

ನ್ಯಾಯಾಲಯಕ್ಕೆ ವಿದ್ಯಾರ್ಥಿಗಳ ಭೇಟಿ

0

ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ‘ಸಿಎಂಸಿಎ ಪ್ರಗತಿ ಕ್ಲಬ್’ ನ 56 ವಿದ್ಯಾರ್ಥಿ ಸದಸ್ಯರು ಕ್ಷೇತ್ರಭೇಟಿಯ ಅಂಗವಾಗಿ ನಗರದ ನ್ಯಾಯಾಲಯ ಸಮುಚ್ಛಯಕ್ಕೆ ಗುರುವಾರ ಭೇಟಿ ನೀಡಿದ್ದರು.
ಪ್ರಕರಣಗಳು ಹೇಗೆ ನಡೆಯುತ್ತವೆ ಮತ್ತು ನ್ಯಾಯಾಲಯದಲ್ಲಿ ಹೇಗೆ ವಕೀಲರು ವಾದಗಳನ್ನು ಮಂಡಿಸುತ್ತಾರೆ, ನ್ಯಾಯಾಧೀಶರನ್ನು ವೀಕ್ಷಿಸಿದರು.
ಮುಖ್ಯ ಶಿಕ್ಷಕಿ ಮಂಗಳಗೌರಮ್ಮ ಮಾತನಾಡಿ, ‘ಹಿರಿಯ ವಕೀಲರಾದ ಡಿ.ವಿ.ಸತ್ಯನಾರಾಯಣ್‌ ಮತ್ತು ಶಿರಸ್ತೆದಾರರ ಸಹಕಾರದಿಂದ ಮಕ್ಕಳು ಇದುವರೆಗೂ ಪಠ್ಯದಲ್ಲಿ ಓದಿ ತಿಳಿದಿದ್ದ ನ್ಯಾಯಾಲಯವನ್ನು ಹಾಗೂ ಅಲ್ಲಿನ ವ್ಯವಸ್ಥೆಯನ್ನು ಸ್ವತಃ ಕಣ್ಣಾರೆ ಕಂಡು ಪುಳಕಿತರಾದರು. ಎರಡು ತಂಡಗಳಲ್ಲಿ ಜೆ.ಎಂ.ಎಫ್‌.ಸಿ ಮತ್ತು ಸಿವಿಲ್‌ ನ್ಯಾಯಾಲಯಗಳಲ್ಲಿ ಕಲಾಪವನ್ನು ವಿದ್ಯಾರ್ಥಿಗಳು ವೀಕ್ಷಿಸಿದರು. ವಕೀಲರ ವಾದ ಮಂಡಣೆ, ಪಾಟಿ ಸವಾಲು ಕೇಳಿದ್ದಲ್ಲದೆ ನ್ಯಾಯಾಧೀಶರನ್ನು ಹತ್ತಿರದಿಂದ ನೋಡಿದ್ದಾಗಿ ಸಂತಸವನ್ನು ವ್ಯಕ್ತಪಡಿಸಿದರು.
ಇಡೀ ನ್ಯಾಯಾಲಯ ಸಂಕೀರ್ಣವನ್ನು ಓಡಾಡಿದ ವಿದ್ಯಾರ್ಥಿಗಳು ಅದರ ಭವ್ಯತೆ, ಗಾಢ ಕೆಂಬಣ್ಣ ಕಂಡು ಬೆರಗಾದರು. ವಕೀಲ ಕೃಷ್ಣ ಅವರು ವಿದ್ಯಾರ್ಥಿಗಳ ಹಲವಾರು ಅನುಮಾನಗಳಿಗೆ ಉತ್ತರಿಸಿ, ನ್ಯಾಯ ವ್ಯವಸ್ಥೆ, ನ್ಯಾಯದಾನದ ವಿಧಾನ, ನಮ್ಮ ಹಕ್ಕು ಜವಾಬ್ದಾರಿಗಳ ಬಗ್ಗೆ ವಿವರಿಸಿದರು. ಮಕ್ಕಳು ನೈಜ ಅನುಭವದ ಬುತ್ತಿಯನ್ನು ಹೊತ್ತು ತಂದರು’ ಎಂದು ಹೇಳಿದರು.
ಸಿಎಂಸಿಎ ಸಂಸ್ಥೆಯ ಮಂಜುನಾಥ್ ಅಮಲಗೊಂದಿ, ಸಿಎಂಸಿಎ ಸ್ವಯಂಸೇವಕರಾದ ಅನಂತಲಕ್ಷ್ಮೀ, ಶಾಲೆಯ ಶಿಕ್ಷಕರಾದ ಶಿವಕುಮಾರ್, ಪ್ರಸಾದ್ ಈ ಸಂದರ್ಭದಲ್ಲಿ ಹಾಜರಿದ್ದರು.

ಸಾಧಕರನ್ನು ಕಡೆಗಣಿಸಿದರೆ ದ.ಸಂ.ಸ ವತಿಯಿಂದ ತಮಟೆ ಚಳುವಳಿ

0

ತಾಲ್ಲೂಕು ಕಸಾಪ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡುವಲ್ಲಿ ರಾಜ್ಯಮಟ್ಟದ ಸಾಧಕರನ್ನು ಗುರುತಿಸಿ ಆಯ್ಕೆ ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಶಾಖೆಯ ಸಂಘಟನಾ ಸಂಚಾಲಕ ಟಿ.ಎ.ಚಲಪತಿ ಮತ್ತು ಜಿಲ್ಲಾ ಸಂಚಾಲಕ ಸಿ.ಎಂ.ಮುನಯ್ಯ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ದಲಿತ ಸಂಘರ್ಷ ಸಮಿತಿ ಸದಸ್ಯರು, ಈ ಬಾರಿ ನಡೆಯಲಿರುವ ತಾಲ್ಲೂಕು ಕಸಾಪ ಸಮ್ಮೇಳದ ಅಧ್ಯಕ್ಷರನ್ನು ಆಯ್ಕೆ ಮಾಡುವ ವಿಚಾರದಲ್ಲಿ ಸಾಧಕರನ್ನು ಗುರುತಿಸಬೇಕು. ತಾಲ್ಲೂಕಿಗಲ್ಲದೆ ರಾಜ್ಯಕ್ಕೇ ಕೀರ್ತಿ ತಂದ ಪಿಂಡಿಪಾಪನಗಳ್ಳಿ ಗ್ರಾಮದ ನಾಡೋಜ ಮುನಿವೆಂಕಟಪ್ಪ, ಹಿತ್ತಲಹಳ್ಳಿಯ ಕೃಷಿ ಪಂಡಿತ ಗೋಪಾಲಗೌಡ, ಐಎಎಸ್ ಅಧಿಕಾರಿ ನಾಗಮಂಗಲದ ಎನ್.ಸಿ.ಮುನಿಯಪ್ಪ, ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಒಂಭತ್ತು ಪುಸ್ತಕಗಳನ್ನು ಬರೆದಿರುವ ಸುಂಡ್ರಹಳ್ಳಿ ಶ್ರೀನಿವಾಸಮೂರ್ತಿ, ದೇವರಮಳ್ಳೂರಿನ ರಂಗಭೂಮಿ ಕಲಾವಿದೆ ಯಶೋಧಮ್ಮ, ನಿವೃತ್ತ ಪ್ರಾಂಶುಪಾಲ ಮಿಹಮ್ಮದ್ ಖಾಸಿಂ ಅವರಲ್ಲೊಬ್ಬರನ್ನು ಅವರ ಸಾಧನೆ ಗುರುತಿಸಿ ಸಮ್ಮೇಳನಾಧ್ಯಕ್ಷರನ್ನಾಗಿ ಕಸಾಪ ತಾಲ್ಲೂಕು ಅಧ್ಯಕ್ಷರು ಮತ್ತು ಪಸಾಧಿಕಾರಿಗಳು ಆಯ್ಕೆ ಮಾಡಬೇಕು.
ತಾಲ್ಲೂಕಿನ ಸಾಧಕರನ್ನು ಕಡೆಗಣಿಸಿದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ತಮಟೆ ಚಳುವಳಿಯನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸತ್ತು ಬದುಕಿದ ಮಹಾಪುರುಷರು ನಮಗೆ ಮಾದರಿ

0

ದೇಹವು ಅಳಿದರೂ ತಮ್ಮ ಬದುಕು, ನಡೆ, ನುಡಿ, ಆದರ್ಶ, ಬರಹ ಮಾರ್ಗದರ್ಶನವಾಗುವಂತೆ ಜೀವಿಸಿದ ಮಹಾಪುರುಷರ ಜಯಂತ್ಯುತ್ಸವಗಳನ್ನು ಆಚರಣೆ ಮಾಡುತ್ತಿದ್ದೇವೆ. ವಿವಿಧ ಸಮುದಾಯಗಳೊಂದಿಗೆ ತಾಲ್ಲೂಕು ಆಡಳಿತವು ಈ ಜಯಂತ್ಯುತ್ಸವಗಳಲ್ಲಿ ಕೊಂಡಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ತಹಶೀಲ್ದಾರ್ ಅಜಿತ್ಕುಮಾರ್ ರೈ ತಿಳಿಸಿದರು.
ನಗರದ ಅಗ್ನಿಶಾಮಕ ಠಾಣೆ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಶ್ರೀ ಮಡಿವಾಳ ಮಾಚಿದೇವರ ಪ್ರಥಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿತ್ತಲಹಳ್ಳಿ ಗ್ರಾಮದಲ್ಲಿ ಶ್ರೀ ಮಡಿವಾಳ ಮಾಚಿದೇವರ ಸ್ತ್ರೀಶಕ್ತಿ ಮಹಿಳಾ ಸ್ವ-ಸಹಾಯ ಸಂಘವನ್ನು ರಾಜ್ಯ ಮಡಿವಾಳ ಸಂಘದ ಉಪಾಧ್ಯಕ್ಷ ಹಾಗೂ ತಾಲ್ಲೂಕು ಅಧ್ಯಕ್ಷ ಆರ್.ವಿ.ರಾಜಣ್ಣ ಉದ್ಘಾಟಿಸಿದರು

‘ಕತ್ತಲೆಯೊಳಗೆ ಬೆಳಕು ಹೊಕ್ಕಂತಾಯಿತು ಶರಣ ಮಡಿವಾಳ ಮಾಚಿದೇವ ತಂದೆ ಕೃಪೆಯಿಂದ…’ ಎಂದು ಅಲ್ಲಮಪ್ರಭುಗಳು ಹೇಳಿರುವುದು ಮಾಚಿದೇವರ ಘನಜ್ಞಾನಕ್ಕೆ ಹಿಡಿದ ಕನ್ನಡಿ. ಕಲ್ಯಾಣದ ಕ್ರಾಂತಿಯ ಸಂದರ್ಭದಲ್ಲಿ ಶರಣರ ವಚನಸಾಹಿತ್ಯವನ್ನು ನಾಶಪಡಿಸುವ ಪ್ರಯತ್ನ ತಡೆದ ಮಾಚಿದೇವ ವಚನಸಾಹಿತ್ಯವನ್ನು ಬೆನ್ನ ಮೇಲೆ, ತಲೆಯ ಮೇಲೆಯೇ ಹೊತ್ತು ಹೋರಾಡಿದರು. ಶರಣರ ವಚನಸಾಹಿತ್ಯದ ರಕ್ಷಣೆಗಾಗಿ ಹೋರಾಡಿದ ಮಾಚಿದೇವರು ಅಮರರಾದರು. ಇಂದು ಅವರ ಜಯಂತಿಯನ್ನು ನಾಡಿನ ಎಲ್ಲೆಡೆ ಶ್ರದ್ಧೆಯಿಂದ ಆಚರಿಸಲಾಗುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ನಗರಸಭಾ ಪ್ರಭಾರ ಅಧ್ಯಕ್ಷೆ ಪ್ರಭಾವತಿ ಸುರೇಶ್ ಮಾತನಾಡಿ, ಸರ್ವರಿಗೂ ಸಮಪಾಲು -ಸಮಬಾಳು ಒದಗಿಸಲು ಬಸವ- ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ಶರಣರ ಅಗ್ರಗಣ್ಯ ಬಳಗದಲ್ಲಿ ‘ಮಡಿವಾಳ ಮಾಚಿದೇವ’ ಪ್ರಮುಖರು ಎಂದು ಹೇಳಿದರು.
ಮುಖ್ಯ ಭಾಷಣಕಾರ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಂ.ದೇವರಾಜ್ ಮಾತನಾಡಿ, ಶರಣರ ಬಟ್ಟೆಗಳನ್ನು ಶುಚಿ ಮಾಡುವುದು ಮಾಚಿದೇವರ ಕಾಯಕ. ವೀರನಿಷ್ಠೆಯ ಶರಣನೀತ. ವಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ‘ದೇವರ ಹಿಪ್ಪರಗಿಯಲ್ಲಿ’ ಪರುವತಯ್ಯ -ಸುಜ್ನಾನವ್ವ ದಂಪತಿಗಳ ಪುತ್ರ. ಇವರ ಕಾರ್ಯಕ್ಷೇತ್ರ ಕಲ್ಯಾಣ. ಆರಾಧ್ಯದೈವ ಕಲ್ಲಿನಾಥ. ಕಾವ್ಯ ಪುರಾಣಗಳಲ್ಲಿ ಇವರನ್ನು ವೀರಭದ್ರನ ಅವತಾರವೆಂದು ಬಣ್ಣಿಸಲಾಗಿದೆ. ಶಾಸನ ಶಿಲ್ಪಗಳಲ್ಲಿಯೂ ಇವರ ಕುರಿತಾಗಿ ಮಾಹಿತಿಯಿದೆ. ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಅತಿ ಮಹತ್ವದ್ದು ಎಂದು ಮಾಚಿದೇವರ ಜೀವನದ ಘಟನೆಗಳನ್ನು, ವಚನಸಾಹಿತ್ಯವನ್ನು ವಿವರಿಸಿದರು.
ಮಡಿವಾಳ ಮಾಚಿದೇವರ ವೇಷಧಾರಿ

ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಮುತ್ತಿನ ಪಲ್ಲಕ್ಕಿಗಳು, ಮಡಿವಾಳ ಮಾಚಿದೇವರ ವೇಷಧಾರಿಗಳು, ವೀರಗಾಸೆ, ನಾಸಿಕ್ ಡೋಲು, ತಮಟೆ, ಪೂರ್ಣಕುಂಭ ಹೊತ್ತ ಮಹಿಳೆಯರು ನಗರದ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿಯವರೆಗೂ ಮೆರವಣಿಗೆ ನಡೆಸಿದರು.
ಮಡಿವಾಳ ಸಮುದಾಯದ ಹಿರಿಯರಾದ ಓಬಣ್ಣ, ಯಣ್ಣೂರು ಮುನಿಯಪ್ಪ, ದೇವರಮಳ್ಳೂರು ಚನ್ನಕೃಷ್ಣ, ಚಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎಂ.ವೆಂಕಟೇಶ್, ರಾಜ್ಯ ಮಡಿವಾಳ ಸಂಘದ ಉಪಾಧ್ಯಕ್ಷ ಎಂ.ರಾಜಣ್ಣ, ಮಡಿವಾಳ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಮುರಳೀಧರ, ಸರ್ಕಲ್ ಇನ್ಸ್ಪೆಕ್ಟರ್ ಸಿದ್ದರಾಜು, ನಾರ್ಥ್ ಈಸ್ಟ್ ಸುರೇಶ್, ದೈಹಿಕ ಶಿಕ್ಷಣ ಸಂಯೋಜಕ ರಂಗನಾಥ್, ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಟಪರ್ತಿ ರಾಜಪ್ಪ, ಕೊರಿಯರ್ ರಾಜು, ಮುತ್ತೂರು ರಾಜಣ್ಣ, ಸಮಾಜ ಕಲ್ಯಾಣ ಇಲಾಖೆಯ ಶಂಕರ್, ವೆಂಕಟಸ್ವಾಮಿ, ಕೃಷ್ಣಪ್ಪ, ಮುನಿಶಾಮಣ್ಣ, ನರಸಪ್ಪ, ಅಬ್ಲೂಡು ದೇವರಾಜ್, ರಾಮಾಂಜಿನಪ್ಪ, ರಾಜಣ್ಣ, ನಂಜಪ್ಪ, ಚಲಪತಿ ಹಾಜರಿದ್ದರು.
ಪಂಜನ್ನು ಉರಿಸಿ ಉದ್ಘಾಟನೆ: ವೇದಿಕೆಯ ಮೇಲಿನ ಗಣ್ಯರು ಮಡಿವಾಳ ಜನಾಂಗದ ಸಂಕೇತವಾದ ಪಂಜನ್ನು ಉರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು ವಿಶೇಷವಾಗಿತ್ತು.
ಸ್ತ್ರೀಶಕ್ತಿ ಸಂಘ: ತಾಲ್ಲೂಕಿನ ಹಿತ್ತಲಹಳ್ಳಿ ಗ್ರಾಮದಲ್ಲಿ ಶ್ರೀ ಮಡಿವಾಳ ಮಾಚಿದೇವರ ಸ್ತ್ರೀಶಕ್ತಿ ಮಹಿಳಾ ಸ್ವ-ಸಹಾಯ ಸಂಘವನ್ನು ರಾಜ್ಯ ಮಡಿವಾಳ ಸಂಘದ ಉಪಾಧ್ಯಕ್ಷ ಹಾಗೂ ತಾಲ್ಲೂಕು ಅಧ್ಯಕ್ಷ ಆರ್.ವಿ.ರಾಜಣ್ಣ ಉದ್ಘಾಟಿಸಿದರು. ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಾದ ಕವಿತಾ, ನಾರಾಯಣಮ್ಮ, ಪದ್ಮಮ್ಮ, ಮಮತಾ, ಅಂಬಿಕಾ, ಕವನ, ನವನೀತಾ, ನಾಗರತ್ನಮ್ಮ, ಭಾಗ್ಯಮ್ಮ ಹಾಜರಿದ್ದರು.

ಭೂನೀಳಾ ಸಮೇತ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ

0

ತಾಲ್ಲೂಕಿನ ಪುರಾಣ ಪ್ರಸಿದ್ಧ ತಲಕಾಯಲಬೆಟ್ಟದಲ್ಲಿ ಬುಧವಾರ ಮಾಘ ಮಾಸದ ಹುಣ್ಣಿಮೆಯ ದಿನ ಭೂನೀಳಾ ಸಮೇತ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ವಿಜೃಂಬಣೆಯಿಂದ ನಡೆಯಿತು.
ಗ್ರೇಡ್ 2 ತಹಶೀಲ್ದಾರ್ ಮುನಿಕೃಷ್ಣಪ್ಪ ಮತ್ತು ಶಾಸಕ ಎಂ.ರಾಜಣ್ಣ ರಥೋತ್ಸವಕ್ಕೆ ಚಾಲನೆ ನೀಡಿದರು. ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.
ಶಿಡ್ಲಘಟ್ಟ ನಗರದ ಉತ್ತರ ದಿಕ್ಕಿನಲ್ಲಿ ನೆಲೆಸಿರುವ ತಲಕಾಯಲಬೆಟ್ಟದ ವೆಂಕಟರಮಣಸ್ವಾಮಿಗೆ ಬ್ರಹ್ಮರಥೋತ್ಸವ ಅಂಗವಾಗಿ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ನೆರವೇರಿಸಿ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು.
ಸಪ್ತ ಬೆಟ್ಟಗಳ ಸಾಲಿನಲ್ಲಿ, ಸಸ್ಯ ಸಂಪತ್ತಿನ ರಾಶಿ ನಡುವೆ ನೆಲೆನಿಂತ, ಇತಿಹಾಸದ ಪುಟಗಳಲ್ಲಿ ಅಚ್ಚಳಿಯದಂತ ಛಾಪು ಮೂಡಿಸಿದ ವೆಂಕಟರಮಣಸ್ವಾಮಿಯ ದೇವಾಲಯದಲ್ಲಿ ರಥೋತ್ಸವದ ಅಂಗವಾಗಿ ಕಳೆದ ಒಂದು ವಾರದಿಂದಲೂ ನಾನಾ ಹೋಮ, ಹವನ, ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಒಂದೊಂದು ದಿನವೂ ಒಂದೊಂದು ರೀತಿಯಲ್ಲಿ ದೇವರನ್ನು ಅಲಂಕರಿಸಿ ಪೂಜಿಸಲಾಗಿತ್ತು.
ಬ್ರಹ್ಮರಥೋತ್ಸವದ ಅಂಗವಾಗಿ ಹೂವುಗಳಿಂದ ಅಲಂಕರಿಸಿದ್ದ ರಥದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ವಿವಿಧ ಕಲಾ ತಂಡಗಳು ಮತ್ತು ವಿವಿಧ ಅಂಗಡಿಗಳ ಸಾಲು ಎಲ್ಲರ ಆಕರ್ಷಣೆಯಾಗಿತ್ತು. ವಿಶೇಷ ಹೂವಿನ ಅಲಂಕಾರ ಮಾಡಿದ್ದ ಬ್ರಹ್ಮರಥೋತ್ಸವದ ತೇರನ್ನು ದೇವಸ್ಥಾನದ ಸುತ್ತಲೂ ಎಳೆದ ಭಕ್ತರು ಬಾಳೆಹಣ್ಣು, ದವನವನ್ನು ತೇರಿನ ಕಳಶಕ್ಕೆ ಎಸೆದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಭಗವಂತನನ್ನು ಕೋರಿಕೊಂಡರು.
ದೇವಾಲಯದ ಸಮಿತಿ ವತಿಯಿಂದ ಭಕ್ತರಿಗೆಲ್ಲ ಭೋಜನ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಮಹರ್ಷಿ ವಾಲ್ಮೀಕಿಯು ತನ್ನ ಪೂರ್ವಾಶ್ರಮದಲ್ಲಿ ವಾಸಿಸುತ್ತಿದ್ದ ಸ್ಥಳಪುರಾಣವಿದ್ದು, ಅದಕ್ಕೆ ತಳುಕು ಹಾಕಿಕೊಂಡಂತೆ ದೇವಾಲಯದ ಮುಂದೆ ತೆಂಗಿನಕಾಯಿಗಳನ್ನು ಬೆಂಕಿಗೆ ಆಹುತಿ ನೀಡುವ ಸಂಪ್ರದಾಯವಿದೆ. ಆ ಹೊಗೆಯು ದೇವಾಲಯದ ಎತ್ತರಕ್ಕೂ ಆವರಿಸಿತ್ತು.
ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ರಥೋತ್ಸವ ಕಾರ್ಯಕ್ರಮದಲ್ಲಿ ದೇವಾಲಯದ ವ್ಯವಸ್ಥಾಪನ ಸಮಿತಿ, ದೇವಾಲಯದ ಅಭಿವೃದ್ಧಿ ಸಮಿತಿ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳ ಗ್ರಾಮಸ್ಥರು ದೇವರ ಕಾರ್ಯಗಳಲ್ಲಿ ಕೈ ಜೋಡಿಸಿದ್ದರು.
ಪ್ರಧಾನ ಅರ್ಚಕ ವಿ.ಎಸ್.ರಾಮಾನುಜ ಭಟ್ಟಾಚಾರ್ಯ, ಕಾಂಗ್ರೆಸ್ ಮುಖಂಡ ವಿ.ಮುನಿಯಪ್ಪ, ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆನೂರು ಆಂಜಿನಪ್ಪ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಜಯರಾಮರೆಡ್ಡಿ, ಡಿ.ವಿ.ವೆಂಕಟೇಶ್, ಅಶ್ವತ್ಥನಾರಾಯಣರೆಡ್ಡಿ, ರಘುನಾಥರೆಡ್ಡಿ, ಶಿವಣ್ಣ, ವೆಂಕಟರೆಡ್ಡಿ, ಲಕ್ಷ್ಮೀನಾರಾಯಣಪ್ಪ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಾಡೋಜ ಮುನಿವೆಂಕಟ್ಟಪ್ಪ ಅವರನ್ನು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಲು ಒತ್ತಾಯ

0

ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಈ ಹಿಂದೆ ನಡೆದಿರುವ 6 ಕನ್ನಡ ಸಾಹಿತ್ಯ ಸಮ್ಮೇಳದ ಸಮ್ಮೇಳನಾದ್ಯಕ್ಷರು ಮೇಲ್ವರ್ಗದ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಆದರೆ ಇತರೆ ಸಮುದಾಯಗಳಲ್ಲಿ ಹಲವಾರು ಸಾಧನೆಗಳನ್ನು ಮಾಡಿರುವ ಅರ್ಹ ಸಾಧಕರು ಎಲೆಮೆರೆ ಕಾಯಿಯಂತಿದ್ದಾರೆ.
ಅಂಥವರಲ್ಲಿ ಒಬ್ಬರಾದ ಪಿಂಡಿಪಾಪನಹಳ್ಳಿ ಗ್ರಾಮದ ನಾಡೋಜ ಮುನಿವೆಂಕಟ್ಟಪ್ಪ ಅವರನ್ನು ಈ ಬಾರಿ ಶಿಡ್ಲಘಟ್ಟ ತಾಲ್ಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ದೇವರಮಳ್ಳೂರು ವಿ. ಕೃಷ್ಣಪ್ಪ ಒತ್ತಾಯಿಸಿದ್ದಾರೆ.
ನಾಡೋಜ ಮುನಿವೆಂಕಟ್ಟಪ್ಪ ಅವರು ನಾಡೋಜ ಪ್ರಶಸ್ತಿ ಪಡೆಯುವ ಮೂಲಕ ಇಡೀ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. 1992 ರಲ್ಲಿ ಕರ್ನಾಟಕ ಸರ್ಕಾರವು ಅವರಿಗೆ ರಾಜ್ಯೋತ್ಸವ ಪ್ರಶ್ತಿಯನ್ನೂ ಸಹ ನೀಡಿ ಗೌರವಿಸಿದೆ.
1992 ರಲ್ಲಿ ಜಪಾನಿನಲ್ಲಿ ನಡೆದ ತಮಟೆಯ ಸಿಡಿಲು ಸದ್ದು ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿರುವುದು ತಾಲ್ಲೂಕಿನ ಹೆಮ್ಮೆಯ ವಿಚಾರವಾಗಿದೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕಲಾ ಪ್ರತಿಭೋತ್ಸವ ಪ್ರಶಸ್ತಿ, ಮೈಸೂರು ದಸರಾ ಪ್ರಶಸ್ತಿ ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳನ್ನು ಪಡೆದು ನಮ್ಮ ತಾಲ್ಲೂಕಿನ ಕೀರ್ತಿಯನ್ನು ದೇಶ ವಿದೇಶಗಳಲ್ಲಿ ಪಸರಿಸಿರುತ್ತಾರೆ.
ಮೂಡುಬಿದರೆಯಲ್ಲಿ ನಡೆದ 71 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿತರಾಗಿದ್ದಾರೆ. ನಮ್ಮ ರಾಜ್ಯಕ್ಕೆ ಕೀರ್ತಿಯನ್ನು ತಂದಿರುವ ಪಿಂಡಿಪಾಪನಹಳ್ಳಿ ನಾಡೋಜ ಮುನಿವೆಂಕಟಪ್ಪನವರನ್ನು ಈ ಭಾರಿ ನಡೆಯುವ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೆಳದ ಸಮ್ಮೇಳನಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಬೇಕೆಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಮತ್ತು ಪಧಾದಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಇವರ ಆಯ್ಕೆ ವಿಚಾರದಲ್ಲಿ ಹಲವಾರು ವಿವಿಧ ಸಂಘ ಸಂಸ್ಥೆಗಳು ಸಹಮತ ಸೂಚಿಸಿರುತ್ತಾರೆ. ಆದ್ದರಿಂದ ಇಂತಹ ಸಾಧಕರನ್ನು ಕಡೆಗಣಿಸಿದ ಪಕ್ಷದಲ್ಲಿ ಮುಂದಿನ ಆಗುಹೋಗುಳಿಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇರ ಹೊಣೆಯಾಗಿರುತ್ತದೆ ಎಂದು ಸಂಘದ ವತಿಯಿಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಸೌಹಾರ್ದತೆಗಾಗಿ ಮಾನವ ಸರಪಳಿ’

0

ಕೋಮುವಾದಕ್ಕೆ ಪ್ರತಿಯಾಗಿ ಸಾಮರಸ್ಯವನ್ನು, ದ್ವೇಷಕ್ಕೆ ಪ್ರತಿಯಾಗಿ ಸ್ನೇಹವನ್ನು, ಕುತಂತ್ರಕ್ಕೆ ಪ್ರತಿಯಾಗಿ ಪ್ರಾಮಾಣಿಕತೆಯನ್ನು ಎತ್ತಿ ಹಿಡಿಯಬೇಕಿದೆ. ಕೋಮುವಾದವನ್ನು ಹತ್ತಿಕ್ಕಲು ಗಾಂಧೀಜಿ ಹುತಾತ್ಮರಾದ ಈ ದಿನ ‘ಸೌಹಾರ್ದತೆಗಾಗಿ ಮಾನವ ಸರಪಳಿ’ ನಿರ್ಮಿಸುತ್ತಿದ್ದೇವೆ ಎಂದು ಸಿ.ಐ.ಟಿ.ಯು ಜಿಲ್ಲಾಧ್ಯಕ್ಷೆ ಜಿ.ಎಂ.ಲಕ್ಷ್ಮೀದೇವಮ್ಮ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಮಂಗಳವಾರ ವಿವಿಧ ಸಂಘಟನೆಗಳ ಜತೆಗೂಡಿ ಮಾನವ ಸರಪಳಿ ನಿರ್ಮಿಸಿ ಅವರು ಮಾತನಾಡಿದರು.
ಶಾಂತಿ, ಸೌಹಾರ್ದ, ಸಹಬಾಳ್ವೆಗೆ ಕನ್ನಡನಾಡು ಶತಮಾನಗಳಿಂದಲೂ ಹೆಸರುವಾಸಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಕೋಮುಸೌಹಾರ್ದವನ್ನು ಕೆಡಿಸಿ ಕೋಮುಜ್ವಾಲೆ ಹಬ್ಬಿಸುವ ಪ್ರಯತ್ನ ನಡೆಯುತ್ತಿದೆ. ರಾಜಕೀಯ ಪ್ರೇರಿತವಾದ ಇಂತಹ ಪ್ರಯತ್ನಗಳು ‘ಸರ್ವ ಜನಾಂಗದ ಶಾಂತಿಯ ತೋಟ’ವಾಗಿದ್ದ ನಮ್ಮ ಪರಂಪರೆಗೆ ವಿರುದ್ಧವಾಗಿದೆ. ಕೋಮುದ್ವೇಷ ಬಿತ್ತಿ ಬೆಳೆಯುವವರು ಯಾವುದೇ ಜಾತಿಯವರಾಗಲಿ ನಮ್ಮವರಾಗಲು ಸಾಧ್ಯವಿಲ್ಲ. ಕನ್ನಡ ಪರಂಪರೆಯ ನಿಜ ವಾರಸುದಾರರು ಎಂದಿಗೂ ಕೋಮುವಾದಿಗಳಲ್ಲ. ಉಗ್ರವಾದಿಗಳೂ ಅಲ್ಲ. ಸ್ನೇಹದ ಸಾಮರಸ್ಯದ ಸಂದೇಶವನ್ನು ರಾಜ್ಯದ ಎಲ್ಲಾ ಭಾಗಗಳಲ್ಲಿ ಹರಡುವುದು ಶಾಂತಿಪ್ರಿಯರ ಕರ್ತವ್ಯವಾಗಬೇಕು. ಕೋಮುವಾದಿಯೊಬ್ಬನ ಗುಂಡಿಗೆ ಬಲಿಯಾಗಿ ಜನವರಿ 30 ರಂದೇ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಹುತಾತ್ಮರಾದರು. ಹಾಗಾಗಿ ಅದು ಮತ್ತೆ ಮರುಕಳಿಸದಂತೆ ಕೋಮುವಾದವನ್ನು ಹತ್ತಿಕ್ಕಲು ಒಗ್ಗೂಡೋಣ ಎಂದು ಹೇಳಿದರು.
ರಾಜ್ಯ ರೇಷ್ಮೆ ಹಿತರಕ್ಷಣಾ ಹೋರಾಟ ಸಮಿತಿಯ ರಾಜ್ಯ ಮುಖಂಡ ಮಳ್ಳೂರು ಶಿವಣ್ಣ ಮಾತನಾಡಿ, ಕೋಮು ಸಾಮರಸ್ಯವನ್ನು ಹರಡೋಣ, ಶಾಂತಿ ಸಂದೇಶ ಸಾರೋಣ ಎಂದರು.
ಸಿ.ಐ.ಟಿ.ಯು ತಾಲ್ಲೂಕು ಸಂಘಟನಾ ಸಂಚಾಲಕ ಫಯಾಜ್, ಕೆ.ಎನ್.ಪಾಪಣ್ಣ, ಅಶ್ವತ್ಥಮ್ಮ, ಗುಲ್ಜಾರ್, ರೈತ ಸಂಘದ ಹುಸೇನ್ಸಾಬ್, ರವಿಪ್ರಕಾಶ್, ಪ್ರತೀಶ್, ನಹೀಂಪಾಷ, ಗೋವಿಂದಪ್ಪ, ಮೊಹಮ್ಮದ್, ಅಶ್ವತ್ಥನಾರಾಯಣ ಹಾಜರಿದ್ದರು.