ಶಿಡ್ಲಘಟ್ಟ ಸುಗಟೂರು ಗ್ರಾಮದ ಹಾಲ್ಕುಂಟೆ ಬಳಿಯಿರುವ ಶ್ರೀ ಗಾಳೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮೋತ್ಥಾನ ಸಂಸ್ಥೆಯಿಂದ ದೇವಾಲಯದ ಜೀರ್ಣೋದ್ಧಾರಕ್ಕಾಗಿ ದ೧.೫ ಲಕ್ಷ ರೂ.ಗಳ ಚೆಕ್ನ್ನು ಯೋಜನಾಧಿಕಾರಿ ಮೋಹನ್ ದೇವಾಲಯ ಟ್ರಸ್ಟ್ ಸದಸ್ಯರಿಗೆ ನೀಡಿದರು. ಕೆ.ಗುಡಿಯಪ್ಪ, ನಾರ್ತ್ಈಸ್ಟ್ ಸುರೇಶ್, ರವಿಕುಮಾರ್, ಟ್ರಸ್ಟ್ನ ಅಧ್ಯಕ್ಷ ಎನ್.ಅಶ್ವತ್ಥಪ್ಪ, ಖಜಾಂಚಿ ದೊಡ್ಡಮುನಿವೆಂಕಟ ಶೆಟ್ಟಿ, ಉಪಾಧ್ಯಕ್ಷ ರಾಮಸ್ವಾಮಿ ಹಾಜರಿದ್ದರು
ಹಕ್ಕಿಯನ್ನು ರಕ್ಷಿಸಿದ ಯುವಕರು
ಶಿಡ್ಲಘಟ್ಟದ ವೇಣುಗೋಪಾಲಸ್ವಾಮಿ ಸಮೀಪ ವಾಹನವೊಂದರ ಬಾನೆಟ್ಗೆ ಸಿಲುಕಿ ಗಾಯಗೊಂಡಿದ್ದ ಕೆಂಬೂತ(ಕ್ರೋಪೆಸೆಂಟ್) ಹಕ್ಕಿಯನ್ನು ಯುವಕರಾದ ಸುನಿಲ್, ನಾಗ, ಮಂಜು ಮತ್ತು ಮಣಿ ರಕ್ಷಿಸಿ, ನೀರು ಕುಡಿಸಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟರು
ಗಾಂಧೀಜಿ ಪಾಲಿಸಿದ ಸತ್ಯ ಸಾರ್ವಕಾಲಿಕ
ಗಾಂಧೀಜಿ ಪಾಲಿಸಿದ ಸತ್ಯ, ಅಹಿಂಸೆ, ರಾಮರಾಜ್ಯ, ಗ್ರಾಮೀಣ ಉದ್ಯೋಗ, ಶ್ರಮ ಸಂಸ್ಕೃತಿಗಳೆಲ್ಲ ಸಾರ್ವಕಾಲಿಕ ಮಾರ್ಗದರ್ಶಿ ಸೂತ್ರಗಳು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎನ್.ಚಂದ್ರಾನಾಯಕ್ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್.ಎಸ್.ಯು.ಐ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ, ಮಹತ್ಮ ಗಾಂಧೀಜಿ ಅವರ ಪುಣ್ಯತಿಥಿಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇವತ್ತಿನ ಪೀಳಿಗೆಗೆ ಮಹಾತ್ಮ ಗಾಂಧಿಯ ವಿಚಾರಧಾರೆಗಳು ತತ್ತ್ವಗಳು ಬೆರಗುಗಣ್ಣುಗಳಿಂದ ಓದುವುದು ಕೇಳುವುದು ಆಗಿದೇ ಹೊರತು, ಪರಿಪಾಲನೆ ಇಲ್ಲದಾಗಿದೆ. ಗಾಂಧೀಜಿಯವರ ಅಧಿಕಾರ ವಿಕೇಂದ್ರೀಕರಣ ತತ್ತ್ವ, ರೈತರ ಸ್ವಾವಲಂಬಿ ಬದುಕು, ಗುಡಿಕೈಗಾರಿಕೆಗೆ ಒತ್ತು ನೀಡುವಿಕೆ, ಶ್ರಮ ಸಂಸ್ಕ್ರತಿ, ಸರಳ ಜೀವನ, ನೈತಿಕ ವ್ಯಾಪಾರ, ಅತಿಯಾದ ಯಂತ್ರಗಳ ಅವಲಂಭನೆ ಇಲ್ಲದಿರುವುದು ಇವೆಲ್ಲವೂ ಇಂದಿಗೂ ಭಾರತದ ಗ್ರಾಮಗಳಲ್ಲಿ ಅಲ್ಪ ಸ್ವಲ್ಪ ಉಳಿದುಕೊಂಡಿದೆ ಎಂದರು.
ಎನ್.ಎಸ್.ಯು.ಐ ರಾಜ್ಯ ಸಂಚಾಲಕ ಕುಂದಲಗುರ್ಕಿ ಮುನೀಂದ್ರ ಮಾತನಾಡಿ,ಕೃಷಿ ಮಾನವ ಶ್ರಮವನ್ನು ಬೇಡುತ್ತದೆ. ಗಾಂಧೀಜಿ ಹೇಳಿದ್ದು ಸಹ ಶ್ರಮ ಸಂಸ್ಕ್ರತಿ. ಇವತ್ತು ಸರ್ಕಾರಗಳು ಗ್ರಾಮಗಳಲ್ಲಿ ಜಾರಿಗೆ ತಂದಿರುವ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸಹ ಗಾಂಧೀಜಿ ತತ್ತ್ವಗಳ ಆಚರಣೆಯ ಮುಖ್ಯ ಭಾಗವಾಗಿದೆ. ಮಹಾತ್ಮ ಗಾಂಧಿಯ ಸರಳ ಜೀವನ ಎಲ್ಲರಿಗೂ ಮಾದರಿ ಎಂದು ಹೇಳಿದರು.
ಉಪನ್ಯಾಸಕರಾದ ರಾಮಚಂದ್ರಪ್ಪ, ವೆಂಕಟರೋಣಪ್ಪ, ಎನ್.ಎಸ್.ಯು.ಐನ ಲಕ್ಷ್ಮೀನರಸಿಂಹ, ಗೌರಿಶ್, ಗಜೇಂದ್ರ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಜನರ ಸಮಸ್ಯೆಗಳನ್ನು ನಿವಾರಿಸುವವರೇ ನಿಜವಾದ ಜನಪ್ರತಿನಿಧಿಗಳು
ಕೆಲಸ ಮಾಡುವವರಿಗೆ, ಪ್ರಗತಿ ಮತ್ತು ಅಭಿವೃದ್ಧಿಯತ್ತ ದುಡಿಯುವ ಕಾಳಜಿ ಇರುವವರಿಗೆ ನಿಮ್ಮ ಮತವನ್ನು ಮೀಸಲಿಡಿ ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆನೂರು ಆಂಜಿನಪ್ಪ ತಿಳಿಸಿದರು.
ನಗರದ ಬಸ್ ನಿಲ್ದಾಣದ ಬಳಿಯ ಎಸ್.ಎನ್.ಕ್ರಿಯಾ ಟ್ರಸ್ಟ್ನ ಕಚೇರಿಯಲ್ಲಿ ವಿಶೇಷ ಚೇತನ, ವೃದ್ಧಾಪ್ಯ ವೇತನ , ವಿಧವಾ ವೇತನದ ಆದೇಶ ಪತ್ರಗಳನ್ನು ಸುಮಾರು 200 ಮಂದಿ ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು.
ಶಿಡ್ಲಘಟ್ಟ ಕ್ಷೇತ್ರದಾದ್ಯಂತ ಕಳೆದ ಮೂರು ವರ್ಷಗಳಿಂದ ಸೇವಾ ಕಾರ್ಯಗಳನ್ನು ನಡೆಸುತ್ತಾ ಜನರ ಸಮಸ್ಯೆಗಳನ್ನು ಹತ್ತಿರದಿಂದ ಕಂಡಿದ್ದೇನೆ. ಕ್ಷೇತ್ರವು ಅಭಿವೃದ್ಧಿಯಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿದೆ. ನಗರದಲ್ಲಿ ಧೂಳು, ಕೆಟ್ಟ ರಸ್ತೆ, ಹದಗೆಟ್ಟ ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಬೇಕಿದೆ. ಗ್ರಾಮಗಳಲ್ಲಿ ಅನೇಕ ಬಡವರು, ಹಿಂದುಳಿದವರಿಗೆ ಸರ್ಕಾರದ ಯೋಜನೆಗಳು ತಲುಪುತ್ತಿಲ್ಲ. ಈ ನಿಟ್ಟಿನಲ್ಲಿ ಸ್ವಯಂಪ್ರೇರಣೆಯಿಂದ ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಜನರ ಪರವಾಗಿ ಅವರ ಎಲ್ಲಾ ದಾಖೆಗಳನ್ನೂ ಕ್ರೂಡೀಕರಿಸಿ ಅಧಿಕಾರಿಗಳಿಗೆ ನೀಡಿ ಅವರಿಗೆ ಸರ್ಕಾರದ ಸವಲತ್ತುಗಳನ್ನು ಸಿಗುವ ಹಾಗೆ ಮಾಡುತ್ತಿದ್ದೇವೆ.
ತಾಲ್ಲೂಕಿನಾದ್ಯಂತ ಈಗಾಗಲೇ ಸುಮಾರು ಎರಡು ಸಾವಿರ ಮಂದಿಗೆ ಈ ರೀತಿಯ ಸೌಲಭ್ಯಗಳನ್ನು ಸಿಗುವ ಹಾಗೆ ಮಾಡಿದ್ದೇವೆ. ಹಲವಾರು ಮಂದಿ ಬಡವರಿಗೆ ಉಚಿತ ವೈದ್ಯಕೀಯ ನೆರವು, ಶಸ್ತ್ರಚಿಕಿತ್ಸೆಗೆ ನೆರವು ಹಾಗೂ ಅಂಗವಿಕಲರಿಗೆ ಸೂಕ್ತ ನೆರವನ್ನು ನೀಡಿದ್ದೇವೆ. ಸೌಲಭ್ಯ ವಂಚಿತ ಜನರ ಸಮಸ್ಯೆಗಳನ್ನು ನಿವಾರಿಸುವವರೇ ನಿಜವಾದ ಜನಪ್ರತಿನಿಧಿಗಳು. ನಿಮ್ಮ ಕೆಲಸ ಮಾಡಿಕೊಡುವವರಿಗೆ ಮತ ನೀಡಿ ಗೆಲ್ಲಿಸಿ. ಕರುಣೆ, ಆಮಿಷಕ್ಕೆ ಬಲಿಯಾಗದಿರಿ. ಅಭಿವೃದ್ಧಿಯೇ ನಿಮ್ಮ ಆಯ್ಕೆಗೆ ಮಾನದಂಡವಾಗಲಿ ಎಂದು ಹೇಳಿದರು.
ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಯಾಗಿ ಸೇವಾ ಕಾರ್ಯಗಳನ್ನು ನಡೆಸುತ್ತಾ ಕ್ಷೇತ್ರದ ಜನರನ್ನು ಭೇಟಿಯಾಗುತ್ತಿದ್ದೇನೆ. ಜನರಿಂದ ಸಕಾರಾತ್ಮಕ ಅಭಿಪ್ರಾಯವಿದೆ ಎಂದರು.
ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ .ಮಾಜಿ ಅಧ್ಯಕ್ಷ ಅಶ್ವತ್ಥ್ನಾರಾಯಣ್, ಮುಖಂಡರಾದ ಅಫ್ಸರ್ಷಾಷ, ಆನೂರು ದೇವರಾಜ್, ನಟರಾಜ್, ಬೈರೆಗೌಡ, ಎಸ್.ವಿ.ಅಯ್ಯರ್, ವಿಶ್ವನಾಥ್, ಜಮೀರ್, ಪ್ರಕಾಶ್, ನರಸಿಂಹಪ್ಪ, ಬಾಷ ಹಾಜರಿದ್ದರು.
ಸ್ವಿಜರ್ಲೆಂಡ್ ದೇಶದಲ್ಲಿ ರೇಷ್ಮೆ ಉತ್ಪಾದನೆ ಮಾಡಲು ತಜ್ಞರ ಭೇಟಿ
ಸ್ವಿಜರ್ಲೆಂಡ್ ದೇಶದಲ್ಲಿ ರೇಷ್ಮೆ ಬೆಳೆಯನ್ನು ಬೆಳೆಯಲು ಉದ್ದೇಶಿಸಿ ಒಂದು ವರ್ಷದ ಹಿಂದೆ ಶಿಡ್ಲಘಟ್ಟಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದೆ. ಇನ್ನಷ್ಟು ಮಾಹಿತಿಯನ್ನು ಪಡೆಯಲು ವಿವಿಧ ಕ್ಷೇತ್ರಗಳ ತಜ್ಞರನ್ನು ಈ ಬಾರಿ ಕರೆದುಕೊಂಡು ಬಂದಿದ್ದೇನೆ. ಭಾರತದ ಕೇಂದ್ರೀಯ ರೇಷ್ಮೆ ಮಂಡಳಿಯ ಸಹಕಾರ ಪಡೆದು ರೇಷ್ಮೆಯ ವಿವಿಧ ಹಂತಗಳ ಅಧ್ಯಯನವನ್ನು ಕೈಗೊಂಡಿರುವುದಾಗಿ ಸ್ವಿಜರ್ಲೆಂಡ್ನ ಜಾನುವಾರುಗಳ ಅಭಿವೃದ್ಧಿ ಸಂಸ್ಥೆಯ ಸಲಹೆಗಾರ ಫ್ರಿಟ್ಜ್ ಶ್ನೀಡರ್ ತಿಳಿಸಿದರು.
ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಕೆ.ಸುರೇಶ್ ಅವರ ಚಾಕಿ ಕೇಂದ್ರಕ್ಕೆ ಮಂಗಳವಾರ ತಮ್ಮ ತಂಡದೊಡನೆ ಭೇಟಿ ನೀಡಿದ್ದ ಅವರು ಮಾತನಾಡಿದರು.
ಸ್ವಿಜರ್ಲೆಂಡ್ ದೇಶದಲ್ಲಿ ಈಗಾಗಲೇ ಸ್ವಲ್ಪಮಟ್ಟಿಗಿನ ರೇಷ್ಮೆ ಉತ್ಪಾದನೆಯಿದ್ದು, ಭಾರತದ ಸಹಕಾರದೊಂದಿಗೆ ಅದನ್ನು ಅಭಿವೃದ್ಧಿಗೊಳಿಸುವ ಯೋಜನೆಯಿದೆ. ಹೈನುಗಾರಿಕೆ, ನೀರಿನ ಸದ್ಭಳಕೆಯ ಬಗ್ಗೆಯೂ ಅಧ್ಯಯನ ನಡೆಸುತ್ತಿದ್ದೇವೆ. ಜಿಕೆವಿಕೆಯ ರೇಷ್ಮೆ ವಿಭಾಗದ ಪ್ರೊ.ಚಂದ್ರಶೇಖರ್ ಗೌಡ ಅವರೊಂದಿಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ರೇಷ್ಮೆಯ ಬೆಳೆಯುವ ಬಗ್ಗೆ ಕ್ಷೇತ್ರದರ್ಶನ ಮಾಡಿ ಮಾಹಿತಿಯನ್ನು ಪಡೆಯುತ್ತಿದ್ದೇವೆ. ಇಂಡೋ ಸ್ವಿಜ್ ಜಂಟಿಯಾಗಿ ರೇಷ್ಮೆ ಬೆಳೆಯುವ ಕೆಲಸವನ್ನು ಸ್ವಿಜರ್ಲೆಂಡ್ ದೇಶದಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳುವ ಉದ್ದೇಶವಿದೆ. ಸ್ವಿಜರ್ಲೆಂಡ್ನಲ್ಲಿ –10 ರಿಂದ 30 ಡಿಗ್ರಿಯವರೆಗೆ ತಾಪಮಾನ ವೈಪರೀತ್ಯವಿದೆ. ಆ ದೃಷ್ಟಿಯಿಂದಲೂ ಅಧ್ಯಯನ ಮಾಡುತ್ತಿದ್ದೇವೆ. ಭಾರತದ ತಮಿಳುನಾಡು, ಕೇರಳ , ಆಂದ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಕೇಂದ್ರೀಯ ರೇಷ್ಮೆ ಮಂಡಳಿಯ ಸಹಕಾರ ಪಡೆದು ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ವಿವರಿಸಿದರು.
ಜಿಕೆವಿಕೆಯ ರೇಷ್ಮೆ ವಿಭಾಗದ ಪ್ರೊ.ಚಂದ್ರಶೇಖರ್ ಗೌಡ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕು ರೇಷ್ಮೆ ಮತ್ತು ಹೈನುಗಾರಿಕೆಗೆ ಪ್ರಸಿದ್ಧಿ. ಹಾಗಾಗಿ ಅಧ್ಯಯನಶೀಲರಿಗೆ ಅನುಕೂಲಕರ. ರೇಷ್ಮೆಯ ವಿವಿಧ ಹಂತಗಳು, ಮಾರುಕಟ್ಟೆಯ ಸ್ಥಿತಿಗತಿ, ಅದರ ಉತ್ಪನ್ನಗಳು, ಬಳಕೆ ಎಲ್ಲವನ್ನೂ ಸ್ವಿಜರ್ಲೆಂಡ್ ದೇಶದಿಂದ ಬಂದ 18 ಮಂದಿ ತಜ್ಞರಿಗೆ ವಿವರುತ್ತಿದ್ದೇವೆ. ನೀರಿನ ಸದುಪಯೋಗ ಹಾಗೂ ಕಾಫಿಯ ಕುರಿತಂತೆಯೂ ಅವರು ಅಧ್ಯಯನ ನಡೆಸುತ್ತಿದ್ದಾರೆ ಎಂದರು.
ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಕೆ.ಸುರೇಶ್ ಅವರ ಚಾಕಿ ಕೇಂದ್ರ, ಹಿಪ್ಪುನೇರಳೆ ತೋಟ, ರೇಷ್ಮೆ ಹುಳು ಸಾಕಾಣಿಕಾ ಮನೆ, ಹಿತ್ತಲಹಳ್ಳಿ ಜಿ.ಗೋಪಾಲಕೃಷ್ಣ ಅವರ ರೇಷ್ಮೆ ಹುಳು ಸಾಕಾಣಿಕಾ ಮನೆ, ರೇಷ್ಮೆ ಗೂಡಿನ ಮಾರುಕಟ್ಟೆ, ದ್ಯಾವಪ್ಪನಗುಡಿ ಬಳಿಯ ಸಯದ್ ಆಜಮ್ ಅವರ ಸ್ವಯಂಚಾಲಿತ ರೀಲಿಂಗ್ ಕೇಂದ್ರವನ್ನು ವೀಕ್ಷಿಸಿ ವಿವರಗಳನ್ನು ಪಡೆದರು.
ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಬೋಜಣ್ಣ, ನಿವೃತ್ತ ಸಹಾಯಕ ನಿರ್ದೇಶಕ ಜನಾರ್ಧನಮೂರ್ತಿ, ಎಚ್.ಎಂ.ಕೃಷ್ಣಪ್ಪ, ಕಂಬದಹಳ್ಳಿ ನಾರಾಯಣರೆಡ್ಡಿ, ಜೆ.ಕೃಷ್ಣಪ್ಪ, ಬೋದಗೂರು ವೆಂಕಟಸ್ವಾಮಿರೆಡ್ಡಿ, ನ್ಯೂಗ್ರೀನ್ ಕಂಪೆನಿಯ ಅಜಯ್ಮೆಹ್ತ ಹಾಜರಿದ್ದರು.
ಹಿಸುಕಿದ ಅವರೆ ಬೇಳೆ ಸಾರಿಗೆ ಮನಸೋತರು: ಸ್ವಿಜರ್ಲೆಂಡ್ನ ಫ್ರಿಟ್ಜ್ ಶ್ನೀಡರ್ ತಂಡದ ಸದಸ್ಯರಿಗೆಂದು ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಕೆ.ಸುರೇಶ್ ದೇಶೀ ಶೈಲಿಯ ಖಾದ್ಯ ಮಾಡಿಸಿದ್ದರು. ಚಪಾತಿ, ಹಿಸುಕಿದ ಅವರೆ ಬೇಳೆ ಸಾರು, ಪಲಾವ್, ಅನ್ನ, ಮೊಸರುಬಜ್ಜಿ, ತಿಳಿಸಾರು, ಬೇಯಿಸಿದ ಮೊಟ್ಟೆಯನ್ನು ತಿಂದು ಅವುಗಳ ರುಚಿಗೆ ಮನಸೋತರು. ಅಡುಗೆ ಮಾಡಿದವರನ್ನು ಕರೆಸಿ ಎಂದು ಒತ್ತಾಯಿಸಿ ಕರೆಸಿ ಅವರನ್ನು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಹಿಸುಕಿದ ಅವರೆ ಬೇಳೆ ಸಾರಿನ ಬಗ್ಗೆ ಅದರ ತಯಾರಿಕೆಯ ಬಗ್ಗೆಯೂ ಮಾಹಿತಿ ಕೇಳಿ ಪಡೆದರು.
ರಾಷ್ಟ್ರೀಯ ಮತದಾರರ ದಿನಾಚರಣೆ
ಮತದಾನ ಎಂಬುದು ಅಖಂಡ ಪ್ರಜಾ ಸಮೂಹದ ದನಿ. ಮತದಾನದ ಪ್ರಾಮುಖ್ಯತೆ ಮತ್ತು ಪ್ರಜೆಗಳ ಮೇಲಿರುವ ಹೊಣೆಯ ಕುರಿತು ಜಾಗೃತಿ ಮೂಡಿಸುವುದಕ್ಕಾಗಿಯೇ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ ಎಂದು ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ತಿಳಿಸಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ಗುರುವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಆಯೋಜಿಸಿದ್ದ ‘ಮತದಾರರ ದಿನಾಚರಣೆ ಹಾಗೂ ಉತ್ತಮ ಗುಣಮಟ್ಟದ ಕಡ್ಡಾಯ ಹೆಲ್ಮೆಟ್ ಧರಿಸುವ ಬಗ್ಗೆ’ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ಪ್ರಜೆಯೂ ತನ್ನನ್ನು ಆಳುವ ಪ್ರತಿನಿಧಿಯನ್ನು ಆಯ್ಕೆಮಾಡಲು ಇರುವ ವ್ಯವಸ್ಥೆಯೇ ಮತದಾನ. ಪ್ರಜಾತಂತ್ರ ದೇಶದ ಪ್ರಜೆಗಳ ಪ್ರಮುಖ ಹಕ್ಕು ಇದು. ತಮ್ಮ ಒಳಿತನ್ನು ಬಯಸುವ ಜನಪರ ನಾಯಕನನ್ನು ತಾವೇ ಆಯ್ಕೆ ಮಾಡಿ ಕಳಿಸಲು ಮತದಾನ ಎಂಬ ಪ್ರಕ್ರಿಯೆ ಬೇಕು. ದೇಶಕ್ಕೆ ಒಳಿತುಮಾಡುವ ನಾಯಕನನ್ನು ಚುನಾಯಿಸುವುದು ಪ್ರಜೆಗಳ ಜವಾಬ್ದಾರಿ ಎಂದರು.
ಭಾರತೀಯ ಮೋಟಾರು ವಾಹನ ಕಾಯ್ದೆ-1988ರ ಸೆಕ್ಷನ್ 129ರ ಪ್ರಕಾರ, ದ್ವಿಚ್ರಕ ವಾಹನಗಳ ಸವಾರರು ಕಡ್ಡಾಯವಾಗಿ ಐಎಸ್‌ಐ ಗುರುತಿನ ಹೆಲ್ಮೆಟ್ ಧರಿಸಬೇಕಾಗಿದೆ. ಅಂತೆಯೇ ಹೊಸ ನಿಯಮದ ಪ್ರಕಾರ, ಸವಾರರಷ್ಟೆ ಅಲ್ಲದೆ, ಹಿಂಬದಿ ಸವಾರರು ಕೂಡ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಭಾರತೀಯ ಮಾನದಂಡ ಸಂಸ್ಥೆಯ (ಐಎಸ್‌ಐ) ಗುರುತಿರುವ ಹೆಲ್ಮೆಟ್‌ಗಳನ್ನೇ ಧರಿಸಬೇಕು. ಅಲ್ಲದೆ, ಹಿಂದೆ ಕುಳಿತು ಸವಾರಿ ಮಾಡುವ ಮಕ್ಕಳು ಸಹ ಇದಕ್ಕೆ ಹೊರತಲ್ಲ ಎಂಬುದು ನಿಯಮದಲ್ಲಿ ಸ್ಪಷ್ಟವಾಗಿದೆ. ಗುಣಮಟ್ಟದ ಹೆಲ್ಮೆಟ್ ಧರಿಸುವ ಮೂಲಕ ತಮ್ಮ ಪ್ರಾಣವನ್ನೂ ರಕ್ಷಿಸಿಕೊಳ್ಳಿ ಎಂದರು.
ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ, ಟಿ.ಎಲ್.ಸಂದೀಶ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಪ್ರಧಾನ ಕಾರ್ಯದರ್ಶಿ ಎಂ.ಬಿ.ಲೋಕೇಶ್, ವಕೀಲರಾದ ಕೆ.ಮಂಜುನಾಥ್, ವಿ.ಎಂ.ಬೈರಾರೆಡ್ಡಿ, ಬಿ.ಎಂ.ಮಂಜುನಾಥ್, ನಾಗೇಂದ್ರಬಾಬು, ಜಿ.ಎನ್.ನಾಗರಾಜ್, ಎಸ್.ಎನ್.ಚಂದ್ರಶೇಖರ್ ಹಾಜರಿದ್ದರು.
ಐಕ್ಯತೆ ಮತ್ತು ಸಾಮಾಜಿಕ ಪ್ರಜ್ಞೆ ಮೂಡಿಸಲು ‘ಕನಕಜ್ಯೋತಿ ಯಾತ್ರೆ’
ಕುರುಬ ಸಮಾಜದಲ್ಲಿ ಐಕ್ಯತೆ ಮತ್ತು ಸಾಮಾಜಿಕ ಪ್ರಜ್ಞೆ ಮೂಡಿಸುವುದು ಈ ಯಾತ್ರೆಯ ಉದ್ದೇಶ ಎಂದು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಹೊಸದುರ್ಗ ಕೆಲ್ಲೋಡು ಶಾಖಾಮಠದ ಮುಖ್ಯಸ್ಥ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ತಿಳಿಸಿದರು.
ಶ್ರೀ ಕಾಗಿನೆಲೆ ಕನಕ ಗುರುಪೀಠದ ರಜತ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ರಾಜ್ಯಾದ್ಯಂತ ಹೊರಟಿರುವ ಕನಕಜ್ಯೋತಿ ಯಾತ್ರೆಯು ಗುರುವಾರ ನಗರಕ್ಕೆ ಆಗಮಿಸಿದ್ದು, ಓಟಿ ವೃತ್ತದಲ್ಲಿರುವ ಕನಕ ಭಜನೆ ಮನೆಯಲ್ಲಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಕನಕ ಜ್ಯೋತಿ ಯಾತ್ರೆಯನ್ನು ರಾಜ್ಯದ ನಾಲ್ಕು ಕಂದಾಯ ವಿಭಾಗದ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಆರಂಭಿಸಲಾಗಿದೆ. ಹಾಲು ಮತಸ್ಥರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮುದಾಯಕ್ಕೆ ತಮ್ಮ ಕೈಲಾದಷ್ಟು ಶಕ್ತಿ ತುಂಬಿದ್ದಾರೆ. ಸರ್ಕಾರ ನೀಡುವ ಸಹಾಯ ಮತ್ತು ನಮ್ಮ ಸಮುದಾಯದ ಬೆಂಬಲದಿಂದ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಪೀಠವು ಸಮುದಾಯದವರಿಗೆ ಮಾತ್ರವಲ್ಲದೆ ಎಲ್ಲ ಶೋಷಿತ ವರ್ಗದ ಪ್ರತಿಭಾವಂತರಿಗೆ ಅನುಕೂಲವಾಗುವ ಯೋಜನೆ ಜಾರಿಗೆ ತರಲು ನಿರ್ಧರಿಸಿದೆ ಎಂದರು.
ಕನಕದಾಸರು ಕುರುಬರಿಗೆ ಮಾತ್ರ ಸೀಮಿತವಾದವರಲ್ಲ. ಎಲ್ಲ ಜಾತಿಯ ಬಡವರಿಗೆ ಸಾಮಾಜಿಕ ನ್ಯಾಯ ಸಿಗಬೇಕೆಂಬ ಹಂಬಲದಿಂದ ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿ ಪರಿವರ್ತನೆ ತರಲು ಹೋರಾಡಿದ್ದಾರೆ. ಇವರ ಉದ್ದೇಶ ಈಡೇರಿಸುವುದು ಮಠದ ಜವಾಬ್ದಾರಿ. ಹಾಲು ಮತಸ್ಥರು ಒಗ್ಗಟ್ಟಿನಿಂದ ಸಮಾಜ ಕಟ್ಟಿ ಕನಕದಾಸರ ಕನಸು ಈಡೇರಿಸಬೇಕು ಎಂದು ಹೇಳಿದರು.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿಯಲ್ಲಿ ಕೇವಲ 210 ದಿನಗಳಲ್ಲಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಖಾ ಮಠ ಸ್ಥಾಪಿಸಿ ಶ್ರೀಮಠದ ಆವರಣದಲ್ಲಿ ಜನಾಂಗದ ಪ್ರತಿಭಾವಂತ ಮಕ್ಕಳಿಗೆ ಐಎಎಸ್, ಕೆಎಎಸ್ ತರಬೇತಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ಈ ಕೇಂದ್ರವನ್ನು ಮುಖ್ಯಮಂತ್ರಿಗಳು ಫೆಬ್ರುವರಿ 9ರಂದು ಲೋಕಾರ್ಪಣೆ ಮಾಡಲಿದ್ದು, ಹಾಲು ಮತಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂಬ ಉದ್ದೇಶದಿಂದ ಕನಕಜ್ಯೋತಿ ಯಾತ್ರೆ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು.
ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಮಂಜುನಾಥ್, ಗೌರವಾಧ್ಯಕ್ಷ ಗಣೇಶಪ್ಪ, ಉಪಾಧ್ಯಕ್ಷರಾದ ಎಚ್.ಬಿ.ಎನ್.ರಾಮಾಂಜಿನಪ್ಪ, ವಿ.ರಾಮಣ್ಣ, ಮುಖಂಡರಾದ ಎಂ.ನಾರಾಯಣಸ್ವಾಮಿ, ಆನಂದ್, ಎ.ರಾಮಚಂದ್ರಪ್ಪ, ಕೆ.ಸಿ.ನಾರಾಯಣಸ್ವಾಮಿ, ಎಂ.ರಾಮಾಂಜಿ, ಆರ್.ಎಂ.ನವೀನ್, ಎನ್.ಅಶೋಕ್, ಮಂಜುಳಮ್ಮ ಹಾಜರಿದ್ದರು.
‘ಮನೆ ಮನೆ ಕುಮಾರಣ್ಣ’ ಮೂಲಕ ಜೆಡಿಎಸ್ ಪ್ರಚಾರ
ಫೆಬ್ರುವರಿ ೦೩ ರಂದು ಜೆಡಿಎಸ್ ಪ್ರಚಾರ ‘ಮನೆ ಮನೆ ಕುಮಾರಣ್ಣ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಎಚ್.ಡಿ.ದೇವೇಗೌಡ ಹಾಗೂ ಜಯಪ್ರಕಾಶ್ ನಾರಾಯಣ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎನ್.ರವಿಕುಮಾರ್ ಮನವಿ ಮಾಡಿದರು.
ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಶ್ರೀ ಬ್ಯಾಟರಾಯಸ್ವಾಮಿ ಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ ಜೆಡಿಎಸ್‌ನ ಹಿರಿಯ ಮುಖಂಡರು ಹಾಗೂ ಜಿಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನ ಪ್ರತಿಯೊಬ್ಬ ಕಾರ್ಯಕರ್ತರೂ ಹಗಲಿರುಳು ದುಡಿದು ಶಾಸಕರಾಗಿ ಆಯ್ಕೆ ಮಾಡಿದ ವ್ಯಕ್ತಿ ನಂತರ ಪ್ರಾಮಾಣಿಕ ಕಾರ್ಯಕರ್ತರು ಮತ್ತು ಪಕ್ಷದ ಆಧಾರ ಸ್ಥಂಬಗಳ ಹಾಗೆ ಇದ್ದ ಹಿರಿಯ ಮುಖಂಡರನ್ನು ಬದಿಗಿಟ್ಟು ರಾಜಕಾರಣ ಮಾಡಿದ್ದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನೋವಾಯಿತು. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕಾರ್ಯಕರ್ತರ ಒತ್ತಾಯದಂತೆ ಒಪ್ಪಿಕೊಂಡಿದ್ದೇನೆ ಎಂದರು.
ಮುಖಂಡರನ್ನೆಲ್ಲಾ ಒಗ್ಗೂಡಿಸಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿ ಟ್ರಸ್ಟ್ ರಚಿಸಿ ಟ್ರಸ್ಟ್ ಮೂಲಕ ಕ್ಷೇತ್ರದ ಜನರಿಗೆ ನಮ್ಮ ಕೈಲಾದ ಸಹಾಯ ಮಾಡುತ್ತಾ ಬಂದಿದ್ದೇವೆ. ಈಗಲೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಮತ್ತಷ್ಟು ಬಲ ಪಡಿಸಲು ಪ್ರಾಮಾಣಿಕವಾಗಿ ದುಡಿಯುತ್ತೇನೆ. ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡುವುದು ಬಿಡುವುದು ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಹಾಗೂ ಪಕ್ಷದ ವರಿಷ್ಠರಿಗೆ ಬಿಡಲಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿ.ಪಂ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ ಕಳೆದ ಚುನಾವಣೆಯ ವೇಳೆ ಕೃಷ್ಣಾರ್ಜುನರಂತಿದ್ದ ಬಿ.ಎನ್.ರವಿಕುಮಾರ್ ಹಾಗು ಶಾಸಕ ಎಂ.ರಾಜಣ್ಣ ಇದೀಗ ಬದ್ದ ಶತ್ರುಗಳಂತೆ ವರ್ತಿಸುವ ಮೂಲಕ ಕ್ಷೇತ್ರದಲ್ಲಿ ಜೆಡಿಎಸ್ ನಲ್ಲಿ ಎರಡು ಬಣಗಳಾಗಿ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ಇವರಿಬ್ಬರನ್ನೂ ಒಂದು ಮಾಡಬೇಕು ಎಂಬ ಕಾರಣದಿಂದ ಹಲವಾರು ಭಾರಿ ಕುಳಿತು ಚರ್ಚಿಸಿ ಭಿನ್ನಾಬಿಪ್ರಾಯ ಶಮನಮಾಡಲು ಪ್ರಯತ್ನಿಸುತ್ತಿದ್ದೇವೆ. ತಮಗಾಗಿ ನಿಷ್ಠೆಯಿಂದ ದುಡಿದು ತಮ್ಮನ್ನು ಶಾಸಕರನ್ನಾಗಿ ಮಾಡುವವರೆಗೂ ಪ್ರಾಮಾಣಿಕವಾಗಿ ದುಡಿದ ಬಿ.ಎನ್.ರವಿಕುಮಾರ್ ಅವರನ್ನು ಕಡೆಗಣಿಸಿ ರಾಜಕೀಯ ಮಾಡುವುದು ಶೋಭೆ ತರುವುದಿಲ್ಲ ಎಂದರು.
ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯ ಆಯ್ಕೆಯ ಬಗ್ಗೆ ಪಕ್ಷದ ಮುಖಂಡರ ಹಾಗು ಕಾರ್ಯಕರ್ತರ ಅಭಿಪ್ರಾಯ ಪಡೆದು ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗು ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳದೇ ಕ್ಷೇತ್ರದಲ್ಲಿ ಈ ಹಿಂದಿನಂತೆ ಜೆಡಿಎಸ್ ಪಕ್ಷದ ಅಭಿವೃದ್ದಿಯ ಬಗ್ಗೆ ಪ್ರತಿಯೊಬ್ಬರೂ ಯೋಚಿಸಿ ಕಾರ್ಯ ಪ್ರವೃತ್ತರಾಗಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾರಘು, ನಗರಸಭೆ ಪ್ರಭಾರ ಅಧ್ಯಕ್ಷೆ ಪ್ರಭಾವತಿಸುರೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ವಿ.ನಾಗರಾಜ್, ಪಿ.ಶಿವಾರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಸದಸ್ಯ ರಾಜಶೇಖರ್, ನಗರಸಭೆ ಸದಸ್ಯ ಪಿ.ಕೆ.ಕಿಷನ್, ಜಭೀ, ಲಕ್ಷ್ಮಯ್ಯ, ಕದಿರಿಯೂಸುಫ್, ಆದಿಲ್‌ಪಾಷ, ಸಮೀವುಲ್ಲಾ, ಸೈಯ್ಯದ್, ಚೀಮಂಗಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಸಾದಲಿ ತ್ಯಾಗರಾಜ್, ಎಸ್.ದೇವಗಾನಹಳ್ಳಿಯ ವೇಣು, ಮಂಜುನಾಥ್, ದಿಬ್ಬೂರಹಳ್ಳಿಯ ಗೋಪಿ, ಲಕ್ಕಹಳ್ಳಿಯ ಆಂಜನೇಯಲು, ಜೆ.ಎಂ.ವೆಂಕಟೇಶ್, ಮುಗಿಲಡಿಪಿ ನಂಜಪ್ಪ, ನಾಗಮಂಗಲ ಶ್ರೀನಿವಾಸಗೌಡ ಹಾಜರಿದ್ದರು.
ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರ ಸಭೆ: ಸಾರ್ವಜನಿಕರಿಂದ ಕುಂದುಕೊರತೆಗಳ ಅರ್ಜಿ ಸ್ವೀಕಾರ
ಯಾವುದೆ ಇಲಾಖೆಯಲ್ಲಿ ಅಧಿಕಾರಿಗಳು ಅಥವಾ ಸಿಬ್ಬಂದಿಯು ಯಾವುದೆ ಕೆಲಸ ಕಾರ್ಯವನ್ನು ಸಕಾಲಕ್ಕೆ ಮಾಡಿಕೊಡದೆ ಉದ್ದೇಶಪೂರ್ವಕವಾಗಿ ವಿಳಂಭ, ಲಂಚಕ್ಕಾಗಿ ಪೀಡನೆ ಮಾಡಿದರೆ ಅಂತಹಹವರ ವಿರುದ್ದ ನಮಗೆ ನೀವು ದೂರು ನೀಡಬಹುದು ಎಂದು ಎಸಿಬಿ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಭು ಮಾಚಯ್ಯ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರು ಸಾರ್ವಜನಿಕರಿಂದ ದೂರು ದುಮ್ಮಾನಗಳನ್ನು ಸ್ವೀಕರಿಸುವ ಸಭೆಯಲ್ಲಿ ಅವರು ಮಾತನಾಡಿದರು. ಲಂಚ ಕೊಡುವುದು ಎಷ್ಟು ತಪ್ಪೋ ತೆಗೆದುಕೊಳ್ಳುವುದು ಅಷ್ಟೆ ತಪ್ಪು. ಅಧಿಕಾರಿಗಳು ಲಂಚ ಕೇಳಿ ವಿನಾಕಾರಣ ಕೆಲಸ ಕಾರ್ಯಗಳನ್ನು ವಿಳಂಬ ಮಾಡಿದರೆ ನಮಗೆ ನೀವು ದೂರು ಕೊಡಬಹುದು. ನಿಮ್ಮ ಹೆಸರನ್ನು ಗೌಪ್ಯವಾಗಿ ಇಡಲಾಗುವುದು, ಮುಂದಿನ ಕಾರ್ಯಾಚರಣೆಯನ್ನು ನಾವು ನಿಮಗೆ ಹೇಳುತ್ತೇವೆ ಎಂದರು.
ಕೇವಲ ಇಲ್ಲಿ ಮಾತ್ರವೇ ನೀಡುವುದಲ್ಲ, ನಮ್ಮ ಕಚೇರಿಗೆ ಬಂದೂ ದೂರು ನೀಡಬಹುದು, ದೂರು ನೀಡುವವರು ಲಿಖಿತವಾಗಿ ಅರ್ಜಿ ಕೊಡಬೇಕು, ನಿರ್ಧಿಷ್ಟವಾದ ಪ್ರಕರಣದ ಬಗ್ಗೆ ದೂರು ನೀಡಿ ನಿಮ್ಮ ಹೆಸರು ವಿಳಾಸ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ಕೊಡಬೇಕೆಂದು ಮನವಿ ಮಾಡಿದರು.
ಕಂದಾಯ ಇಲಾಖೆ, ತಾಲ್ಲೂಕು ಪಂಚಾಯಿತಿ, ಶಿಕ್ಷಣ ಇಲಾಖೆ ಸೇರಿದಂತೆ ವಿವಿದ ಇಲಾಖೆಗಳಿಗೆ ಸಂಬಂಧಿಸಿದ ೯ ಅರ್ಜಿಗಳು ಸಲ್ಲಿಕೆ ಆದವು.
ಎಸಿಬಿ ಸರ್ಕಲ್ ಇನ್ಸ್‌ಪೆಕ್ಟರ್ ಲಕ್ಷ್ಮೀದೇವಮ್ಮ, ತಹಸೀಲ್ದಾರ್ ಅಜಿತ್ ಕುಮಾರ್, ಇಒ ವೆಂಕಟೇಶ್, ಆಯುಕ್ತ ಚಲಪತಿ ಹಾಜರಿದ್ದರು.
ಮಕ್ಕಳ ಗಣಿತ ಕಲಿಕಾ ಆಂದೋಲನ ಗಣಿತ ಸ್ಪರ್ಧೆ
ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಬುಧವಾರ ಗ್ರಾಮ ಪಂಚಾಯಿತಿ, ಅಕ್ಷರಫೌಂಡೇಶನ್, ಸಾರ್ವಜನಿಕ ಶಿಕ್ಷಣ ಇಲಾಖೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಪಂಚಾಯಿತಿ ಮಟ್ಟದ ಮಕ್ಕಳ ಗಣಿತ ಕಲಿಕಾ ಆಂದೋಲನ ಗಣಿತ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು
ಅಂಬಿಗರ ಚೌಡಯ್ಯ ನವರ ಸಾಧನೆ ಅವಿಸ್ಮರಣೀಯ
ಹನ್ನೆರಡನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಸಾಮಾಜಿಕ ಮೌಢ್ಯತೆಯನ್ನು ಹೊಡೆದು ಹಾಕುವಲ್ಲಿ ಶ್ರಮಿಸಿದ ನಿಜಶರಣ ಅಂಬಿಗರ ಚೌಡಯ್ಯ ನವರ ಸಾಧನೆ ಅವಿಸ್ಮರಣೀಯ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಬುಧವಾರ ಆಯೋಜಿಸಿದ್ದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶರಣರ ಮಹತ್ವಗಳನ್ನು ತತ್ವಗಳನ್ನು ಮತ್ತು ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಮಾತ್ರ ಶರಣರ ಜಯಂತ್ಯುತ್ಸವ ಆಚರಿಸುವುದು ಸಾರ್ಥಕ ವಾಗುತ್ತದೆ. ನೇರ ನಡೆ ನುಡಿಗೆ ಹೆಸರಾದ ಚೌಡಯ್ಯನವರು ನಿಜ ಶರಣ ಎಂದೇ ಖ್ಯಾತಿಯನ್ನು ಗಳಿಸಿದ್ದರು ಎಂದರು.
ನಗರದ ಅಕ್ಷರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬಿ.ವಿ.ಪ್ರಕಾಶ್ ಮುಖ್ಯ ಭಾಷಣಕಾರರಾಗಿ ಮಾತನಾಡಿ, ನಿಜಶರಣ ಅಂಬಿಗರ ಚೌಡಯ್ಯನವರು ತಮ್ಮ ಕಠೋರವಾದ ವಚನಗಳ ಮೂಲಕ ಸಮಾಜ ಪರಿವರ್ತನೆಗೆ ಶ್ರಮಿಸಿದ ಮಹಾನ್ ಶರಣರಾಗಿದ್ದಾರೆ. ಅವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಪಾಲಿಸಿದಾಗ ಒಳ್ಳೆಯ ಸುಸಂಸ್ಕೃತ ಸಮಾಜ ನಿರ್ಮಣ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಹಿರಿಯರಿಗೆ ಸನ್ಮಾನ ಮಾಡಲಾಯಿತು.
ಗ್ರೇಡ್ ೨ ತಹಸೀಲ್ದಾರ್ ಮುನಿಕೃಷ್ಣಪ್ಪ, ತಾಲ್ಲೂಕು ಪಂಚಾಯಿತಿ ಇಓ ಎಂ.ವೆಂಕಟೇಶ್, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಪೌರಾಯುಕ್ತ ಜಿ.ಎನ್.ಚಲಪತಿ, ನಗರಸಭಾ ಪ್ರಬಾರ ಅಧ್ಯಕ್ಷೆ ಪ್ರಭಾವತಿ ಸುರೇಶ್, ಸಮುದಾಯದ ಮುಖಂಡರಾದ ನ್ಯಾತಪ್ಪ, ಲಕ್ಷೀನಾರಾಯಣ, ಕೃಷ್ಣ, ಡಿ.ಎನ್.ಶಿವಣ್ಣ ಕಾರ್ಯಕ್ರಮದಲ್ಲಿ ಇದ್ದರು.
ಮಕ್ಕಳು ನಮ್ಮನ್ನು ನೋಡುವುದಕ್ಕಿಂತ ಹೆಚ್ಚು ಟಿವಿ ನೋಡುತ್ತವೆ
ಈಗಿನ ಮಕ್ಕಳು ಮನುಷ್ಯರಿಗಿಂತ ಮೊಬೈಲ್ ಜೊತೆಯೇ ಹೆಚ್ಚು ಕಾಲ ಕಳೆಯುತ್ತವೆ. ನಮ್ಮ ಮಕ್ಕಳು ನಮ್ಮನ್ನು ನೋಡುವುದಕ್ಕಿಂತ ಹೆಚ್ಚು ಟಿವಿ ನೋಡುತ್ತವೆ, ಪೋಷಕರ ಕೈಹಿಡಿಯುವ ಬದಲು ರಿಮೋಟ್ ಹಿಡಿಯುತ್ತವೆ ಎಂದು ಖ್ಯಾತ ಹಾಸ್ಯ ಕಲಾವಿದೆ ಸುಧಾ ಬರಗೂರ್ ಹಾಸ್ಯಮಿಶ್ರಿತವಾಗಿ ಬದುಕಿನ ವಾಸ್ತವತೆಯನ್ನು ತೆರೆದಿಟ್ಟರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ದಶಮಾನೋತ್ಸವ ಸಂಭ್ರಮದಲ್ಲಿ ನಡೆದ ‘ನಗೆ ಹಬ್ಬ’ದಲ್ಲಿ ಹಾಸ್ಯ ಚಟಾಕಿಗಳೊಂದಿಗೆ ಅವರು ಪ್ರೇಕ್ಷಕರನ್ನು ರಂಜಿಸಿದರು.
ಬಾಲ್ಯದ ನೆನಪುಗಳ ಸುರುಳಿ ಬಿಚ್ಚಿ ಹಾಸ್ಯ ಪ್ರಸಂಗಗಳನ್ನು ವಿವರಿಸಿದರು. ಅಂಕಪಟ್ಟಿಯಷ್ಟೇ ಮಕ್ಕಳನ್ನು ಅಳೆಯುವ ಮಾಪನವಲ್ಲ, ಅವರ ಬುದ್ಧಿ, ಐಕ್ಯೂ ನಾವು ಅರ್ಥಮಾಡಿಕೊಳ್ಳಬೇಕು. ಸಂಸ್ಕಾರ ಕಲಿತಾಗಷ್ಟೇ ಅವರು ದೇಶಕ್ಕೆ ಆಸ್ತಿಯಾಗುತ್ತಾರೆ ಎಂದು ಹೇಳಿ ಅವರು ಹಲವು ನಗೆ ಚಟಾಕಿಗಳಿಂದ ಕುಳಿತಿದ್ದ ಎಲ್ಲರಲ್ಲೂ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿ ಆನಂದದ ಕಡಲಲ್ಲಿ ತೇಲಿಸಿದರು.
ಕಲಾವಿದ ಬದ್ರಿನಾಥ್ ಮ್ಯಾಜಿಕ್ ಶೋ ಮೂಲಕ ಮಕ್ಕಳು, ಹಿರಿಯರನ್ನು ರಂಜಿಸಿದರು. ಮಿಮಿಕ್ರಿ ಕಲಾವಿದ ಮಹೇಶ್ ಹಲವು ರಾಜಕೀಯ ನಾಯಕರು ಮತ್ತು ನಟರ ಧ್ವನಿಯನ್ನು ಅನುಕರಣೆ ಮಾಡಿದರು.
ಶಶಿಕಲಾ, ಪೂರ್ಣಿಮಾ, ಸುಪ್ರೀತ್ ಫಲ್ಗುಣ ಅವರ ಚನ್ನಪಟ್ಟಣ ಸೋದರಿಯರ ತಂಡದಿಂದ ಜನಪದ, ವಚನ, ಶರೀಫರ ಹಾಗೂ ಹಳೆಯ ಕನ್ನಡ ಗೀತೆಗಳ ಗಾಯನ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ಸಿದ್ದರಾಮಯ್ಯ, ಯೋಜನಾ ನಿರ್ದೇಶಕ ಡಾ.ಎನ್.ಭಾಸ್ಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಲಿಕ್ಕಾಧಿಕಾರಿ ಡಾ.ನಾಗೇಶ್, ಜಿಲ್ಲಾ ಖಜಾನಾಧಿಕಾರಿ ಮುನಿರೆಡ್ಡಿ, ಗೌರಿಬಿದನೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ನಾರಾಯಣಸ್ವಾಮಿ ಅವರನ್ನು ತಹಶೀಲ್ದಾರ್ ಅಜಿತ್ಕುಮಾರ್ ರೈ, ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ನಗರಸಭೆ ಆಯುಕ್ತ ಚಲಪತಿ ತಾಲ್ಲೂಕು ಆಡಳಿತದ ಪರವಾಗಿ ಗೌರವಿಸಿದರು.
ಶಿಡ್ಲಘಟ್ಟದಲ್ಲಿ ಹೆಣ್ಣು ಮಕ್ಕಳ ಗ್ಯಾಂಗ್ ವಾರ್
‘ಇನ್ನೊಂದ್ ನಾಲ್ಕು ಇಕ್ಕಮ್ಮ ಅವನಿಗೆ’ ಎಂದು ಆವೇಷಭರಿತರಾಗಿ ಸಭಿಕರ ಮಧ್ಯೆ ಕುಳಿತಿದ್ದ ರೈತ ಗೋಪಾಲಗೌಡ ಕೂಗಿದರು. ಪ್ರೇಕ್ಷಕರ ಮನಸ್ಸಿನ ಭಾವನೆಯನ್ನು ಅವರು ಮಾತಿನ ಮೂಲಕ ಹೊರಹಾಕಿದ್ದರು.
ನಗರದ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ದಶಮಾನೋತ್ಸವ ಸಂಭ್ರಮದಲ್ಲಿ ರಂಗಪಯಣ ತಂಡದವರು ನಡೆಸಿಕೊಟ್ಟ ‘ಗುಲಾಬಿ ಗ್ಯಾಂಗ್’ ನಾಟಕದಲ್ಲಿ ಹೆಣ್ಣನ್ನು ಶೋಷಿಸುವ ಗಂಡಸಿಗೆ ಮಹಿಳೆಯರು ಕೋಲಿನ ರುಚಿ ತೋರಿಸುವ ದೃಶ್ಯ ಕಂಡು ಪ್ರೇಕ್ಷಕರ ಉದ್ಘಾರವದು.
‘ಗ್ಯಾಂಗ್ ಕಟ್ಬೇಕು ಅಂತ ಡಿಸೈಡ್ ಮಾಡಿದ್ ದಿನಾನೇ ಭಯಾ ಅನ್ನೋ ಪದಾನ ಅಟ್ಟದ್ ಮೇಲೆ ಬಿಸಾಕ್ ಬಂದಿದ್ದೀನಿ’ ಎಂದು ಗುಡುಗುವ ಸಂಪತ್ ದೇವಿ ಹೆಣ್ಣಿನ ಶೋಷಣೆ ವಿರುದ್ಧ ದಿಟ್ಟ ಹೋರಾಟ ನಡೆಸಿರುವ ಮಾದರಿ ಮಹಿಳೆ. ಹೆಣ್ಣಿನ ಮೇಲೆ ನಡೆಯುತ್ತಿರುವ ದೈಹಿಕ ಹಾಗೂ ಮಾನಸಿಕ ದೌರ್ಜನ್ಯ ಹಾಗೂ ಶೋಷಣೆಯ ವಿರುದ್ದ ಉತ್ತರಪ್ರದೇಶದ ಒಂದು ಪುಟ್ಟ ಹಳ್ಳಿಯಲ್ಲಿ ಮಹಿಳೆಯರು ಸೆಟೆದು ನಿಂತದ್ದೇ ಗುಲಾಬಿ ಗ್ಯಾಂಗ್. ‘ಅಸಹಾಯಕರೆಂದುಕೊಂಡಿದ್ದ ಹೆಣ್ಣು ಮಕ್ಕಳ ಗ್ಯಾಂಗ್ ವಾರು’ ಎಂದು ಬಿಂಬಿತವಾದ ಈ ನೈಜ ಘಟನೆಯನ್ನು ಆಧರಿಸಿ ಕನ್ನಡದಲ್ಲಿ ಪ್ರವೀಣ್ ಸೂಡ ರಂಗರೂಪವನ್ನು ನೀಡಿದ್ದರೆ, ನಾಟಕಕ್ಕೆ ಉತ್ತರ ಕರ್ನಾಟಕದ ಸೊಗಡು ಕೊಟ್ಟು ವಿನ್ಯಾಸ, ನಿರ್ದೇಶನ ಮತ್ತು ಸಂಗೀತವನ್ನು ರಾಜ್ಗುರು ಹೊಸಕೋಟೆ ಮಾಡಿದ್ದಾರೆ. ನಯನ ಜೆ.ಸೂಡ ಅವರ ನಿರ್ವಹಣೆಯಲ್ಲಿ ಮೂಡಿಬಂದ ಗುಲಾಬಿ ಗ್ಯಾಂಗ್ ನಾಟಕ ಮಧ್ಯರಾತ್ರಿಯಾದರೂ, ವಿಪರೀತ ಚಳಿಯಿದ್ದರೂ ಪ್ರೇಕ್ಷಕರು ಕುರ್ಚಿ ಬಿಟ್ಟು ಏಳದಂತೆ ಮನಸ್ಸೆಳೆಯಿತು.
ಉತ್ತರ ಪ್ರದೇಶದ ಬುಂದೇಲಖಂಡ್ ಜಿಲ್ಲೆ ಬಡೋಸಾ ಹಳ್ಳಿಯ ರೈತನೊಬ್ಬ ದಿನಾಲು ಕುಡಿದು ಬಂದು ಹೆಂಡತಿಯನ್ನು ಹಿಂಸಿಸುತ್ತಿದ್ದನಂತೆ. ಸಂಪತ್ ದೇವಿಗೆ ದಿನಾಲೂ ಅಮಾಯಕ ಹೆಣ್ಣಿನ ಮೇಲಾಗುವ ಈ ಅನ್ಯಾಯವನ್ನು ಸಹಿಸಲು ಆಗದೇ ಹೊಡೆಯುತ್ತಿರುವ ರೈತನನ್ನು ತಡೆದು ಬುದ್ದಿ ಹೇಳಿ ಬಂದಳಂತೆ. ಆದರೆ ರೈತ ಅದನ್ನು ಕೇಳೋಕೆ ನೀನ್ಯಾರು ಎಂದು ಆಕೆಯನ್ನು ಬಾಯಿಗೆ ಬಂದಂತೆ ಬಯ್ದನಂತೆ. ಈ ಅನ್ಯಾಯವನ್ನು ಕೊಣೆಗಾಣಿಸಬೇಕೆಂದು ನಿರ್ಧರಿಸಿದ ಸಂಪತ್ ದೇವಿ, ಊರಿನ ಕೆಲ ಹೆಂಗಸರನ್ನು ಸೇರಿಸಿಕೊಂಡು, ಮರುದಿನ ಅವನ ಮನೆಗೆ ನುಗ್ಗಿ ಆತನಿಗೆ ಹಿಗ್ಗಾ ಮುಗ್ಗಾ ದೊಣ್ಣೆ ಸೇವೆ ಮಾಡಿದ್ದರಂತೆ. ಆ ರೈತ ಇನ್ನೆಂದೂ ಹೆಂಡತಿಯನ್ನು ಹಿಂಸಿಸುವುದಿಲ್ಲ ಎಂದು ಸಂಪತ್ ದೇವಿಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದನಂತೆ. ಹೀಗೆ ಆರಂಭವಾದದ್ದೇ ಗುಲಾಬಿ ಗ್ಯಾಂಗ್. ಹೆಣ್ಣಿನ ವಿರುದ್ಧ ನಡೆಯುತ್ತಿರುವ ನಡೆಯುತ್ತಿರುವ ಮಾನಸಿಕ ಹಾಗೂ ದೈಹಿಕ ಶೋಷಣೆಯನ್ನು ಸಹಿಸಲಾಗದೆ ಆಕ್ರೋಶಿತಳಾದ ಸಂಪತ್ ದೇವಿ ಎಂಬ ದಿಟ್ಟ ಮಹಿಳೆಯಿಂದ ಆರಂಭವಾದ ಪುಟ್ಟ ಹೋರಾಟ ಇಂದು ಬಹುದೊಡ್ಡ ಗ್ಯಾಂಗ್ ಆಗಿ ಬೆಳೆದಿದೆ.
ನಾಟಕದಲ್ಲಿ ರಂಗದ ಮೇಲೆ ಪರಿಕರಗಳನ್ನು ಬದಲಿಸುವುದು, ಪಾತ್ರಧಾರಿಗಳು ಶೀಘ್ರವಾಗಿ ಒಂದು ಪಾತ್ರದಿಂದ ಮತ್ತೊಂದಕ್ಕೆ ಪರಕಾಯ ಪ್ರವೇಶ ಮಾಡುವುದು, ಹಾವ ಭಾವ, ಅಭಿನಯ, ಉತ್ತರ ಕನ್ನಡದ ಭಾಷೆಯ ಸೊಗಡನ್ನು ಕಂಡು ಜನರು ನೈಜ ಘಟನೆಯನ್ನು ಕಂಡಂತೆ ಪಾತ್ರಗಳೊಂದಿಗೆ ಒಂದಾದರು. ಚಪ್ಪಾಳೆ ಹರ್ಷೋದ್ಘಾರಗಳೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
‘ಗುಲಾಬಿ ಸೀರೆ, ಕೈಯಲ್ಲಿ ಒಂದು ದೊಣ್ಣೆ ಹಿಡಿದ ಗುಲಾಬಿ ಗ್ಯಾಂಗ್ ಸಮಾಜಮುಖಿಯಾದ ನಾಟಕ. ‘ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ’ ಎಂಬ ಕುವೆಂಪು ಮಾತಿನಂತೆ ಹೆಣ್ಣಿನ ಶೋಷಣೆ ವಿರುದ್ಧ ಹೋರಾಡುತ್ತಿರುವ ಸಂಪತ್ ದೇವಿ ನಮಗೆಲ್ಲರಿಗೂ ಮಾದರಿ. ರಂಗರೂಪಕ್ಕೆ ತಂದ ಕಲಾವಿದರು, ನಮ್ಮೂರಿಗೆ ಕರೆಸಿದ ತಾಲ್ಲೂಕು ಆಡಳಿತ ಇಬ್ಬರಿಗೂ ನಾವು ಆಭಾರಿಗಳು’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯೆ ಪಂಕಜಾ ನಿರಂಜನ್ ತಿಳಿಸಿದರು.
ಹೈನುಗಾರಿಕೆ ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ಅಗತ್ಯವಿದೆ
ಗ್ರಾಮೀಣ ಭಾಗದಲ್ಲಿನ ರೈತರ ಜೀವನಾಡಿಯಾಗಿರುವ ಹೈನುಗಾರಿಕೆ ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ಅಗತ್ಯವಿದೆ ಎಂದು ಧರ್ಮಸ್ಥಳ ಗ್ರಾಮಾಭೀವೃದ್ಧಿ ಯೋಜನೆಯ ಕ್ಷೇತ್ರಾಭಿವೃದ್ಧಿ ಅಧಿಕಾರಿ ಮೋಹನ್ ತಿಳಿಸಿದರು.
ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿತ್ತನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ₨ 60 ಸಾವಿರ ನೀಡಿ ಅವರು ಮಾತನಾಡಿದರು.
ಧರ್ಮಸ್ಥಳದ ದೇವಾಲಯಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಬರುತ್ತಿರುವ ಲಕ್ಷಾಂತರ ಮಂದಿ ಭಕ್ತರು ನೀಡುವಂತಹ ಕಾಣಿಕೆಗಳನ್ನು ಕ್ರೋಡೀಕರಿಸಿ ಗ್ರಾಮಾಂತರ ಪ್ರದೇಶಗಳಲ್ಲಿನ ರೈತರಿಗಾಗಿ ಉಪಯೋಗ ಮಾಡುವಂತಹ ಕಾರ್ಯವನ್ನು ಡಾ.ವಿರೇಂದ್ರಹೆಗಡೆಯವರು ಮಾಡುತ್ತಿದ್ದಾರೆ. ಮೊದಲ ಕಂತಾಗಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ₨ 60 ಸಾವಿರ ಬಿಡುಗಡೆ ಮಾಡಿದ್ದಾರೆ. ಎರಡನೇ ಕಂತು ₨ 40 ಸಾವಿರ ಬಿಡುಗಡೆಯಾಗಲಿದೆ. ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸಂಘಗಳ ಮೂಲಕ ದೇವಾಲಯಗಳು, ಮಸೀದಿಗಳು, ಚರ್ಚ್ ಗಳ ಸ್ವಚ್ಚತಾ ಕಾರ್ಯವನ್ನು ಮಾಡಲಾಗುತ್ತಿದ್ದು, ಶೈಕ್ಷಣಿಕ ಅಭಿವೃದ್ಧಿಗಾಗಿಯೂ ಸಹಕಾರ ನೀಡಲಾಗುತ್ತಿದೆ ಎಂದರು.
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುನಿಆಂಜಿನಪ್ಪ ಮಾತನಾಡಿ, ಸಹಕಾರಿ ಸಂಘಗಳು ಅಭಿವೃದ್ಧಿಯತ್ತ ಸಾಗಿದಾಗ ಹಳ್ಳಿಗಳಲ್ಲಿನ ಜನರು ಜೀವನ ಮಟ್ಟ ಸುಧಾರಣೆಯಾಗುತ್ತದೆ. ಪ್ರತಿಯೊಬ್ಬರು ಇಂತಹ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಮಾತನಾಡಿ, ಮಹಿಳೆಯರು ಸಬಲರಾಗಲು ಉತ್ತಮ ವೇದಿಕೆಗಳನ್ನು ಕಲ್ಪಿಸಿಕೊಟ್ಟಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಘವು ಸ್ವಚ್ಚತೆ, ಕೌಶಲ್ಯಾಭಿವೃದ್ಧಿಗೂ ಹೆಚ್ಚು ಒತ್ತು ನೀಡುತ್ತಿದ್ದು, ಜನರ ಸಹಕಾರ, ತೊಡಗಿಸಿಕೊಳ್ಳುವಿಕೆ ಅಗತ್ಯವಿದೆ ಎಂದರು.
ಮುಖಂಡರಾದ ನಿರ್ದೇಶಕರಾದ ಎಂ.ಡಿ.ನರಸಿಂಹಮೂರ್ತಿ, ನಾರಾಯಣಪ್ಪ, ಮಹೇಶ್ ಕುಮಾರ್, ದೇವರಾಜಪ್ಪ, ರೇವಣ್ಣಸಿದ್ದಯ್ಯ, ನಂಜಪ್ಪ, ದ್ಯಾವಮ್ಮ, ಭಾಗ್ಯಮ್ಮ, ರಾಮರೆಡ್ಡಿ, ಮರಿಯಪ್ಪ, ಕಾರ್ಯದರ್ಶಿ ಸುಭ್ರಮಣಿ, ಧರ್ಮಸ್ಥಳ ಸಂಸ್ಥೆಯ ಅಧಿಕಾರಿ ಲಕ್ಷ್ಮೀ ಹಾಜರಿದ್ದರು.
ಸಾದಲಿ ಯಶಸ್ವಿ ಬಂದ್ ; ಹೊಸ ತಾಲ್ಲೂಕು ಮಾಡಲು ಒತ್ತಾಯ
ತಾಲ್ಲೂಕಿನ ಸಾದಲಿ ಹೋಬಳಿ ಕೇಂದ್ರವನ್ನು ಹೊಸ 50 ತಾಲ್ಲೂಕುಗಳ ಪಟ್ಟಿಯಲ್ಲಿ ಸೇರಿಸಿ ಘೋಷಿಸಬೇಕೆಂದು ಒತ್ತಾಯಿಸಿ ಮಂಗಳವಾರ ಸಾದಲಿ ಹೋಬಳಿ, ಮಿಟ್ಟೇಮರಿ ಹೋಗಳಿ ಹಾಗೂ ಸುತ್ತಮುತ್ತ ಗ್ರಾಮಸ್ಥರು ಒಗ್ಗೂಡಿ ಸಂಪೂರ್ಣ ಬಂದ್ ಮಾಡಿ ಪ್ರತಿಭಟಿಸಿದರು.
ಸಂತೆ, ಬ್ಯಾಂಕುಗಳು, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಜನರು ಸ್ವಯಂಪ್ರೇರಿತರಾಗಿ ಬಂದ್ ಮಾಡುವ ಮೂಲಕ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಸಾದಲಿಯ ಅಂಬೇಡ್ಕರ್ ಪ್ರತಿಮೆಯ ಬಳಿ ಪೂಜೆ ಸಲ್ಲಿಸುವ ಮೂಲಕ ಪ್ರತಿಭಟನಾಕಾರರು ಮೆರವಣಿಗೆ ನಡೆಸಿದರು.
ಕಳೆದ ಮೂರ್ನಾಕು ದಶಕಗಳಿಂದಲೂ ಶ್ರೀ ಸತ್ಯಸಾಯಿ ಸಾದಲಿ ಹೊಸ ತಾಲ್ಲೂಕು ಸಮಿತಿಯ ಮುಖಾಂತರ ಅನೇಕ ಹೋರಾಟಗಳು, ರಸ್ತೆ ತಡೆ, ಉಪವಾಸ ಸತ್ಯಾಗ್ರಹ, ಅಂಚೆ ಚಳುವಳಿ ಮೂಲಕ ಎಲ್ಲಾ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ವತಿಯಿಂದ ಸರ್ಕಾರಕ್ಕೆ ಹಲವಾರು ಪತ್ರಗಳನ್ನು ನೀಡಿದ್ದೇವೆ. ಗದ್ದಿಗೌಡರ್ ಸಮಿತಿ, ಎಂ.ಬಿ.ಪ್ರಕಾಶ್ ವರದಿಗಳಲ್ಲಿಯೂ ಸಾದಲಿ ಕೇಂದ್ರವನ್ನು ತಾಲ್ಲೂಕು ಮಾಡಲು ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ. ಆದರೆ ಈಗ ರಾಜ್ಯ ಸರ್ಕಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಾವೊಂದು ಹೊಸ ತಾಲ್ಲೂಕು ಘೋಷಣೆ ಮಾಡಿಲ್ಲ.
ಸಾದಲಿಯು ಜಿಲ್ಲೆಯ ಮಧ್ಯಭಾಗದಲ್ಲಿದ್ದು, ತಾಲ್ಲೂಕಾಗಲು ಎಲ್ಲಾ ಅರ್ಹತೆಗಳನ್ನು ಹೊಂದಿದೆ. ಸಾದಲಿ ಸುತ್ತಮುತ್ತಲಿನ ಜನಸಂಖ್ಯೆ 1.50 ಲಕ್ಷ ಹಾಗೂ 126 ಗ್ರಾಮಗಳಿವೆ. ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದ ಕಾರಣ ಸಾದಲಿ ಕೇಂದ್ರವನ್ನು ಹೊಸ ತಾಲ್ಲೂಕು ಮಾಡಲು ಆಗ್ರಹಿಸಿ ಬಂದ್ ಆಚರಿಸುತ್ತಿದ್ದೇವೆ. ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆಯನ್ನು ಕಳಿಸುತ್ತಿರುವುದಾಗಿ ಶ್ರೀ ಸತ್ಯಸಾಯಿ ಸಾದಲಿ ಹೊಸ ತಾಲ್ಲೂಕು ಸಮಿತಿಯ ಗೌರವಾಧ್ಯಕ್ಷ ಜಿ.ವಿ.ತಿಮ್ಮರಾಜು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಗೋವಿಂದರಾಜು, ನಾರಾಯಣಸ್ವಾಮಿ, ವೈ.ಎನ್.ನಾಗರಾಜು, ಗಣೇಶ್, ರಾಮಕೃಷ್ಣಪ್ಪ, ಮಲ್ಲಿಕಾರ್ಜುನ, ಎಸ್.ಎನ್.ಸಾಯಿಪ್ರಶಾಂತ್, ಕುಮಾರ್, ಶ್ರೀನಿವಾಸ್, ಹನುಮಪ್ಪ, ತಿರುಮಳಪ್ಪ, ವಿಜಯಕುಮಾರ್, ನರಸಿಂಹಪ್ಪ, ಗಂಗಾಧರ, ಡಿ.ವಿ.ಪ್ರಸಾದ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸುಭಾಷ್ ಚಂದ್ರ ಬೋಸ್ ಜನ್ಮದಿನಾಚರಣೆ
ಶಿಡ್ಲಘಟ್ಟದ ಕೋಟೆ ವೃತ್ತದಲ್ಲಿ ಮಂಗಳವಾರ ಸುಭಾಷ್ ಚಂದ್ರ ಬೋಸ್ ಜನ್ಮದಿನಾಚರಣೆಯನ್ನು ಜೈಹಿಂದ್ ಆಟೋ ಚಾಲಕರ ಸಂಘ, ಜಯ ಕರ್ನಾಟಕ ಸಂಘ ಹಾಗೂ ಕೋಟೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಆಚರಿಸಿದರು. ಆಟೋ ಚಾಲಕರ ಸಂಘದ ಅಧ್ಯಕ್ಷ ಅಪ್ಪು, ಕ್ರೈಂ ಸಬ್ಇನ್ಸ್ಪೆಕ್ಟರ್ ನರಸಿಂಹನಾಯ್ಡು, ಕೆಂಪರೆಡ್ಡಿ, ಗೋಪಿ, ನಟರಾಜ್, ಲೋಕಿ, ನಾಗೇಂದ್ರ, ಮುನಿಕೃಷ್ಣ, ನಾಗರಾಜು, ಚಂದ್ರು, ಅಶೋಕ್, ಮುನಿಯಪ್ಪ, ವಸಂತ್ ಹಾಜರಿದ್ದರು
ಜನವರಿ 30 ರಂದು ‘ಸೌಹಾರ್ದತೆಗಾಗಿ ಮಾನವ ಸರಪಳಿ’
ಕೋಮುವಾದಕ್ಕೆ ಪ್ರತಿಯಾಗಿ ಸಾಮರಸ್ಯವನ್ನು, ದ್ವೇಷಕ್ಕೆ ಪ್ರತಿಯಾಗಿ ಸ್ನೇಹವನ್ನು, ಕುತಂತ್ರಕ್ಕೆ ಪ್ರತಿಯಾಗಿ ಪ್ರಾಮಾಣಿಕತೆಯನ್ನು ಎತ್ತಿ ಹಿಡಿಯಬೇಕಿದೆ. ಕೋಮುವಾದವನ್ನು ಹತ್ತಿಕ್ಕಲು ಜನವರಿ 30 ರಂದು ‘ಸೌಹಾರ್ದತೆಗಾಗಿ ಮಾನವ ಸರಪಳಿ’ ನಿರ್ಮಿಸುವುದಾಗಿ ಸಿ.ಐ.ಟಿ.ಯು ಜಿಲ್ಲಾಧ್ಯಕ್ಷೆ ಜಿ.ಎಂ.ಲಕ್ಷ್ಮೀದೇವಮ್ಮ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ವಿವಿಧ ಸಂಘಟನೆಗಳ ಸಭೆಯಲ್ಲಿ ಅವರು ಮಾತನಾಡಿದರು.
ಶಾಂತಿ, ಸೌಹಾರ್ದ, ಸಹಬಾಳ್ವೆಗೆ ಕನ್ನಡನಾಡು ಶತಮಾನಗಳಿಂದಲೂ ಹೆಸರುವಾಸಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಕೋಮುಸೌಹಾರ್ದವನ್ನು ಕೆಡಿಸಿ ಕೋಮುಜ್ವಾಲೆ ಹಬ್ಬಿಸುವ ಪ್ರಯತ್ನ ನಡೆಯುತ್ತಿದೆ. ರಾಜಕೀಯ ಪ್ರೇರಿತವಾದ ಇಂತಹ ಪ್ರಯತ್ನಗಳು ‘ಸರ್ವ ಜನಾಂಗದ ಶಾಂತಿಯ ತೋಟ’ವಾಗಿದ್ದ ನಮ್ಮ ಪರಂಪರೆಗೆ ವಿರುದ್ಧವಾಗಿದೆ. ಕೋಮುದ್ವೇಷ ಬಿತ್ತಿ ಬೆಳೆಯುವವರು ಯಾವುದೇ ಜಾತಿಯವರಾಗಲಿ ನಮ್ಮವರಾಗಲು ಸಾಧ್ಯವಿಲ್ಲ. ಕನ್ನಡ ಪರಂಪರೆಯ ನಿಜ ವಾರಸುದಾರರು ಎಂದಿಗೂ ಕೋಮುವಾದಿಗಳಲ್ಲ. ಉಗ್ರವಾದಿಗಳೂ ಅಲ್ಲ. ಸ್ನೇಹದ ಸಾಮರಸ್ಯದ ಸಂದೇಶವನ್ನು ರಾಜ್ಯದ ಎಲ್ಲಾ ಭಾಗಗಳಲ್ಲಿ ಹರಡುವುದು ಶಾಂತಿಪ್ರಿಯರ ಕರ್ತವ್ಯವಾಗಬೇಕು. ಕೋಮುವಾದಿಯೊಬ್ಬನ ಗುಂಡಿಗೆ ಬಲಿಯಾಗಿ ಜನವರಿ 30 ರಂದೇ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಹುತಾತ್ಮರಾದರು. ಹಾಗಾಗಿ ಅದು ಮತ್ತೆ ಮರುಕಳಿಸದಂತೆ ಕೋಮುವಾದವನ್ನು ಹತ್ತಿಕ್ಕಲು ಒಗ್ಗೂಡೋಣ ಎಂದು ಹೇಳಿದರು.
ರಾಜ್ಯ ರೇಷ್ಮೆ ಹಿತರಕ್ಷಣಾ ಹೋರಾಟ ಸಮಿತಿಯ ರಾಜ್ಯ ಮುಖಂಡ ಮಳ್ಳೂರು ಶಿವಣ್ಣ, ಸಿ.ಐ.ಟಿ.ಯು ತಾಲ್ಲೂಕು ಸಂಘಟನಾ ಸಂಚಾಲಕ ಫಯಾಜ್, ಕೆ.ಎನ್.ಪಾಪಣ್ಣ, ಅಶ್ವತ್ಥಮ್ಮ, ಗುಲ್ಜಾರ್, ಶಂಕರಪ್ಪ, ವೆಂಕಟೇಶಮೂರ್ತಿ, ಡಿ.ವೈ.ಎಫ್.ಐ ತಾಲ್ಲೂಕು ಉಪಾಧ್ಯಕ್ಷ ಖಲೀಲ್, ವೆಂಕಟರೆಡ್ಡಿ, ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಸತ್ತಾರ್ ಸಾಬಿ ಹಾಜರಿದ್ದರು.
ಸುಭಾಷ್ ಚಂದ್ರಬೋಸ್ ಜನ್ಮದಿನಾಚರಣೆ
ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿಯಲ್ಲಿ ಮಂಗಳವಾರ ಸುಭಾಷ್ ಚಂದ್ರಬೋಸ್ ಜನ್ಮದಿನಾಚರಣೆಯನ್ನು ಸುಭಾಷ್ಚಂದ್ರ ಬೋಸ್ ಕ್ರೀಡಾ, ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಯುವಕರ ಸಂಘದ ವತಿಯಿಂದ ಆಚರಿಸಲಾಯಿತು. ಸಂಘದ ಅಧ್ಯಕ್ಷ ಟಿ.ಎನ್.ಮುನಿರಾಜು, ಉಪಾಧ್ಯಕ್ಷ ಜಿ.ಎಂ.ಶಿವರಾಜ್, ಖಜಾಂಚಿ ಟಿ.ಎನ್.ಲಕ್ಮೀಕಾಂತ್, ಸುರೇಶ್, ಸುಬ್ರಮಣಿ, ಶಿವರಾಜ್ಕುಮಾರ್ ಹಾಜರಿದ್ದರು
ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನಾಚರಣೆ
ಭಾರತ ಕಂಡ ಅಸಾಮಾನ್ಯ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಬಾಬು ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಆಜಾದ್ ಹಿಂದ್ ಫೌಜ’ ಎಂಬ ಸೇನೆಯನ್ನು ಕಟ್ಟಿ ‘ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ’ ಎಂದು ಬ್ರಿಟಿಷ್ ಸಾಮ್ರಾಜ್ಯಶಾಹಿ ಕನಸಿನಲ್ಲೂ ಬೆಚ್ಚಿಬೀಳುವಂತೆ ಮಾಡಿದ ಈ ಮಹಾನ್ ನಾಯಕ ನಮಗೆ ಎಂದೆಂದಿಗೂ ಸ್ಪೂರ್ತಿ. ಭಾರತೀಯರೆಲ್ಲರ ಪ್ರೀತಿಯ ‘ನೇತಾಜಿ’ ಸಣ್ಣ ವಯಸ್ಸಿನಲ್ಲಿಯೇ ಸ್ವಾಮಿ ವಿವೇಕಾನಂದ, ಮಹರ್ಷಿ ಅರವಿಂದರ ಸಾಹಿತ್ಯಗಳಿಂದ ಪ್ರಭಾವಿತರಾಗಿದ್ದರು. ವಿದೇಶದಲ್ಲಿ ಕೆಲಸ ಮಾಡಲು ಒಪ್ಪದ ಬೋಸ್ ತಾವು ಗಳಿಸಿದ್ದ ಐ.ಸಿ.ಎಸ್. ಪದವಿಯನ್ನೇ ತಿರಸ್ಕರಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಅವರನ್ನು ನೆನೆದರೇ ಸಾಕು ದೇಶಪ್ರೇಮ ಉಕ್ಕುತ್ತದೆ ಎಂದು ಹೇಳಿದರು.
ಶಿಕ್ಷಕ ಚಾಂದ್ ಪಾಷ ಮಾತನಾಡಿ, ಸುಭಾಷ್ ಚಂದ್ರ ಬೋಸ್ ಔರ ಜೀವನದ ವಿವಿಧ ಘಟನೆಗಳನ್ನು ಮಕ್ಕಳಿಗೆ ವಿವರಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ಮಾತನಾಡಿ, ಜಿಲ್ಲೆಯು ದಶಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವಿಭಾಜ್ಯ ಜಿಲ್ಲೆಯ ಬಗ್ಗೆ ಮತ್ತು ಜಿಲ್ಲೆಯ ವೈಶಿಷ್ಟ್ಯತೆಯ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಬಾಬು ಅವರನ್ನು ಗೌರವಿಸಲಾಯಿತು.
ಮುಖ್ಯಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ಎಸ್ಡಿಎಂಸಿ ಅಧ್ಯಕ್ಷೆ ಪುಷ್ಪ, ಸದಸ್ಯ ಆನಂದ್, ಹನುಮಂತರೆಡ್ಡಿ, ಎಂ.ಪಿ.ಸಿ.ಎಸ್ ಅಧ್ಯಕ್ಷ ರವಿಪ್ರಕಾಶ್, ಬಿ.ಆರ್.ಪಿ ನಾಗೇಶ್, ಸಿ.ಆರ್.ಪಿ ನಾಗರಾಜ್, ಪಿಡಿಒ ಅಂಜನ್ಕುಮಾರ್, ಕಾರ್ಯದರ್ಶಿ ಶ್ರೀನಿವಾಸ್, ನರಸಿಂಹಮೂರ್ತಿ, ಹರೀಶ್ಕುಮಾರ್, ವೆಂಕಟಮ್ಮ ಹಾಜರಿದ್ದರು.
ರೈತ ಹಬ್ಬದಂತೆ ಆಚರಿಸುತ್ತಿರುವ ದಶಮಾನೋತ್ಸವ ಸಂಭ್ರಮ
ಜಿಲ್ಲೆಯು ಹತ್ತು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಆಚರಿಸುತ್ತಿರುವ ದಶಮಾನೋತ್ಸವ ಸಂಭ್ರಮವನ್ನು ರೈತ ಹಬ್ಬದಂತೆ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ತಾಲ್ಲೂಕಿನ ಯುವಶಕ್ತಿ ವಲಸೆ ಹೋಗುವುದನ್ನು ತಪ್ಪಿಸಲು ಕೈಗಾರಿಕೆಯನ್ನು ಸ್ಥಾಪಿಸಲು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಳೆ ಹಾಗೂ ಅಂತರ್ಜಲವನ್ನಷ್ಟೇ ನಂಬಿದ್ದರೂ, ನೀರಿನ ಕೊರತೆಯಿದ್ದರೂ ನಮ್ಮ ರೈತರು ಹಾಲು ಮತ್ತು ರೇಷ್ಮೆಯಿಂದ ತಾಲ್ಲೂಕಿಗೆ ಖ್ಯಾತಿ ದೊರಕಿಸಿಕೊಟ್ಟಿದ್ದಾರೆ. ಹಣ್ಣು, ತರಕಾರಿ ನಗರಗಳಿಗೆ ಸರಬರಾಜು ಮಾಡುತ್ತಿದ್ದಾರೆ. ಆದರೂ ಕೃಷಿ ಲಾಭದಾಯಕವಾಗಿಲ್ಲ. ಕೆಲವೇ ಮಂದಿ ರೈತರು ಮಾತ್ರ ಆಧುನಿಕ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಶ್ರಮ ಜೀವಿಗಳಾದ ನಮ್ಮ ರೈತ ಬಂಧುಗಳಿಗೆ ನೀರಿನ ಅಗತ್ಯವಿದೆ. ರಾಜಕೀಯವಿಲ್ಲದೆ ಬಯಲುಸೀಮೆಗೆ ನೀರನ್ನು ಹರಿಸಬೇಕಾಗಿದೆ ಎಂದು ಹೇಳಿದರು.
ಹಾಪ್ಕಾಮ್ಸ್ ಅಧ್ಯಕ್ಷ ಎ.ಎಸ್.ಚಂದ್ರೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಅಂತರ್ಜಲ ಕುಸಿಯುತ್ತಿದೆ. ಎರಡು ವರ್ಷಗಳಲ್ಲಿ ನಮ್ಮ ಭಾಗದ ಕೆರೆಗಳನ್ನು ತುಂಬಿಸುತ್ತೇವೆಂದು ಹೇಳಿದ ಭರವಸೆಯ ಮಾತುಗಳು ಏನಾದವು. ಎಲ್ಲಿಂದಲಾದರೂ ನೀರು ತನ್ನಿ, ಆದರೆ ಕೃಷಿಯಾಧಾರಿತ ನೀರನ್ನು ತನ್ನಿ. ನೀರಿನ ವಿಚಾರದಲ್ಲಿ ರಾಜಕೀಯ ಬೇಡ. ನಾವು ಜಿಲ್ಲೆಯ ಅಭಿವೃದ್ಧಿಯ ಬಗ್ಗೆಯಷ್ಟೇ ಚಿಂತನೆ ಮಾಡಬೇಕಿದೆ. ಶುದ್ಧೀಕರಿಸಿದ ನೀರಿನಿಂದ ಯಾವುದೇ ರೀತಿಯ ಅಪಾಯವಿಲ್ಲ. ನೀರು ನಮ್ಮ ಕೆರೆ ತುಂಬಿ ನಮ್ಮ ರೈತರ ಬದುಕು ಹಸನಾಗಲಿ ಎಂದು ಹೇಳಿದರು.
ತಹಶೀಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿ, ಆಡಳಿತದ ಹಿತದೃಷ್ಟಿ, ಆಡಳಿತವನ್ನು ಜನರಿಗೆ ಸಮೀಪ ತರುವುದು, ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವುದು ಹಾಗೂ ಜನತೆಗೆ ಅಗತ್ಯಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಸರ್ಕಾರವು ಚಿಕ್ಕಬಳ್ಳಾಪುರ ಉಪವಿಭಾಗವನ್ನುಒಂದು ಸ್ವತಂತ್ರ ಜಿಲ್ಲೆಯಾಗಿ ರೂಪಿಸಿದೆ.
ಇದರಿಂದಾಗಿ ಆಡಳಿತ ಮತ್ತು ಅಭಿವೃದ್ಧಿಯು ಜನತೆಗೆ ಸಮೀಪವಾಗಿದ್ದು ಜನತೆಗೆ ಹಲವು ಅನುಕೂಲಗಳಾಗಿವೆ. ತಮ್ಮ ಕೆಲಸ ಕಾರ್ಯಗಳಿಗಾಗಿ ದೂರದ ಕೋಲಾರಕ್ಕೆ ಹೋಗಿ ಬರುವ ಶ್ರಮತಪ್ಪಿದೆ. ಜಿಲ್ಲಾಡಳಿತ ಭವನದ ಒಂದೇ ಸೂರಿನಡಿಯಲ್ಲಿ ಹಲವು ಇಲಾಖೆಗಳು ಲಭ್ಯವಾಗಿವೆ. ಜಿಲ್ಲೆಯ ಅಭಿವೃದ್ಧಿಗೆ ಅನುದಾನವು ಹೆಚ್ಚಿದೆ. ಕೃಷಿ, ಶಿಕ್ಷಣ, ಆರೋಗ್ಯ, ಸಾಮಾಜಿಕನ್ಯಾಯ, ಮೂಲಭೂತ ಸೌಲಭ್ಯಗಳು, ನಾಡು-ನುಡಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳುವೃದ್ಧಿಯಾಗಿವೆ. ಆಡಳಿತಾತ್ಮಕವಾಗಿ ಚಿಕ್ಕಬಳ್ಳಾಪುರವು ಕೋಲಾರದಿಂದ ಬೇರ್ಪಟ್ಟಿದ್ದರೂ ಸಹ ಸಾಮಾಜಿಕ,ಸಾಂಸ್ಕೃತಿಕ ಹಾಗೂ ಭಾವನಾತ್ಮಕವಾಗಿ ಸೋದರ ಬಾಂಧವ್ಯವು ಉಳಿದಿದ್ದು ಇದು ಭಾವೈಕ್ಯತೆಗೆ ನಾಂದಿಯಾಗಿದೆ ಎಂದರು.
ನಗರಸಭಾ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್ ಮಾತನಾಡಿ, ಜಿಲ್ಲೆಯಾದ ನಂತರ ಹಲವಾರು ಅನುಕೂಲಗಳಾಗಿವೆ. ಪ್ರಗತಿಗೆ ಹಲವು ದಾರಿಗಳಿವೆ. ಈ ಸಂದರ್ಭದಲ್ಲಿ ಹಿಂದಿನದನ್ನು ಮೆಲುಕು ಹಾಕುತ್ತಾ ಮುಂದೆ ಆಗಬೇಕಾದ ಯೋಜನೆಗಳು ಅತ್ಯಗತ್ಯತೆಗಳ ಬಗ್ಗೆ ಆಲೋಚಿಸಬೇಕಾಗಿದೆ ಎಂದು ನುಡಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಸದಸ್ಯರಾದ ರಾಜಶೇಖರ್, ಪಂಕಜಾ ನಿರಂಜನ್, ಶೋಭಾ ಶಶಿಕುಮಾರ್, ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಂಕ್ ಮುನಿಯಪ್ಪ, ಸತೀಶ್, ನಗರಸಭಾ ಆಯುಕ್ತ ಚಲಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಬಾಬು, ಸಿಡಿಪಿಒ ಲಕ್ಷ್ಮೀದೇವಮ್ಮ, ತಹಶೀಲ್ದಾರ್ ಟ್ರೇನಿ ಮಮತಾಕುಮಾರಿ, ಬೆಸ್ಕಾಂ ಅನ್ಸರ್ಬಾಷ, ಪಶು ಇಲಾಖೆಯ ಡಾ.ಮುನಿನಾರಾಯಣರೆಡ್ಡಿ, ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷರಾದ ರವಿಕುಮಾರ್, ತಾದೂರು ಮಂಜುನಾಥ್, ದ.ಸಂ.ಸ ಜಿಲ್ಲಾ ಸಂಘಟನಾ ಸಂಚಾಲಕ ಮುನಯ್ಯ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೇಶವರೆಡ್ಡಿ, ಎಚ್.ಜಿ.ಗೋಪಾಲಗೌಡ, ಜೆ.ಎಸ್.ವೆಂಕಟಸ್ವಾಮಿ, ನಾರಾಯಣಸ್ವಾಮಿ, ಸರ್ಕಲ್ ಇನ್ಸ್ಪೆಕ್ಟರ್ ಸಿದ್ದರಾಜು ಹಾಜರಿದ್ದರು.
ಆರೋಗ್ಯದೆಡೆಗೆ ನಮ್ಮ ನಡಿಗೆ: ಮುಂಜಾನೆ 6 ಗಂಟೆಗೆ ಕೋರ್ಟ್ ಮುಂಭಾಗದಿಂದ ಶಾಮಣ್ಣ ಬಾವಿಯವರೆಗೆ ‘ಆರೋಗ್ಯದೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನ್ಯಾಯಾಧೀಶರು, ವಕೀಲರು, ನಗರಸಭಾ ಸಿಬ್ಬಂದಿ, ಕ್ರೀಡಾಪಟುಗಳು, ಶಾಸಕರನ್ನೊಳಗೊಂಡಂತೆ ‘ಜಿಲ್ಲಾ ದಶಮಾನೋತ್ಸವ ಶಿಡ್ಲಘಟ್ಟ ತಾಲ್ಲೂಕು’ ಎಂಬ ಬರಹವಿರುವ ಬಿಳಿ ಟೀ ಶರ್ಟ್ ಧರಿಸಿ ಜಾಥಾ ನಡೆಸಲಾಯಿತು.
ಸ್ವಚ್ಛತೆ: ಬೆಳಿಗ್ಗೆ ಅಗ್ರಹಾರ ಬೀದಿಯ ಶಾಮಣ್ಣ ಬಾವಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಸುಮಾರು 400 ವರ್ಷಗಳಷ್ಟು ಹಳೆಯದಾದ ಶಾಮಣ್ಣ ಬಾವಿಯನ್ನು ಕಲ್ಲಿನ ಚಪ್ಪಡಿಗಳಿಂದ ಚತುಷ್ಕೋನಾಕಾರದಲ್ಲಿ ನಿರ್ಮಿಸಲಾಗಿದೆ. ಗೌಡನ ಕೆರೆಯಿಂದ ಹೆಚ್ಚಾದ ನೀರು ಕಲ್ಯಾಣಿಗೆ ಹರಿಯುವಂತೆ ತೂಬನ್ನು ನಿರ್ಮಿಸಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಕ್ರೀಡಾಪಟುಗಳು ನಗರಸಭೆ ಸಿಬ್ಬಂದಿ, ವಕೀಲರು ಒಗ್ಗೂಡಿ ಕಳೆಗಿಡಗಳು, ತ್ಯಾಜ್ಯದ ರಾಶಿಯನ್ನು ತೆರವುಗೊಳಿಸಿದರು.
ಕಲಾತಂಡಗಳೊಂದಿಗೆ ಮೆರವಣಿಗೆ: ಬಸ್ ನಿಲ್ದಾಣದಿಂದ ನೆಹರು ಕ್ರೀಡಾಂಗಣದವರೆಗೆ ವಿವಿಧ ಕಲಾತಂಡಗಳು ಮತ್ತು ಸ್ತಬ್ದ ಚಿತ್ರಗಳೊಂದಿಗೆ ದಶಮಾನೋತ್ಸವದ ತೇರಿಗೆ ಶಾಸಕ ಎಂ.ರಾಜಣ್ಣ ಚಾಲನೆಯನ್ನು ನೀಡಿದರು, ಬಂಡೂರು ಕುರಿಗಳು, ಎತ್ತಿನ ಬಂಡಿಗಳು, ಕರಡಿ ವೇಷಧಾರಿ, ಗಾರ್ಡಿ ಬೊಂಬೆಗಳು, ತಮಟೆ ವಾದನ, ನಾಸಿಕ್ ಡೋಲ್, ವಿವಿಧ ಶಾಲೆಗಳ ವಾದ್ಯ ತಂಡಗಳು, ಪೂರ್ಣಕುಂಭ ಹೊತ್ತ ಮಹಿಳೆಯರು, ಶಾಲಾ ವಿದ್ಯಾರ್ಥಿಗಳು ಮೆರವಣಿಗೆಯ ಆಕರ್ಷಣೆಯನ್ನು ಹೆಚ್ಚಿಸಿದ್ದರು.
ವಸ್ತು ಪ್ರದರ್ಶನದ ಮಳಿಗೆಗಳು: ಒಂದೂಕಾಲು ಲಕ್ಷ ರೂಗಳ ಜಮುನಾಪಾರಿ ಮೇಕೆಗಳು, ಅವಳಿ ಮರಿಗಳನ್ನು ನೀಡುವ ನಾರಿ ಸುವರ್ಣ ಟಗರು, ದಕ್ಷಿಣ ಆಫ್ರಿಕಾ ಮೂಲದ ಡಾರ್ಪರ್ ಟಗರು, ಬಂಡೂರು ಕುರಿಗಳು, ಕಡಿಮೆ ನೀರಿನಲ್ಲಿ ಹಸಿಮೇವನ್ನು ಬೆಳೆಯುವ ಹೈಡ್ರೋಫೋನಿಕ್ ಪದ್ಧತಿಯ ಪ್ರಾತ್ಯಕ್ಷಿಕೆಯನ್ನು ಪಶುಪಾಲನಾ ಮತ್ತು ಪಶುಸೇವಾ ಇಲಾಖೆಯ ಮಳಿಗೆಯಲ್ಲಿ ಕಂಡುಬಂದಿತು. ಕೋಚಿಮುಲ್ ಮಳಿಗೆಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಪ್ರದರ್ಶನ, ಆರೋಗ್ಯ ಇಲಾಖೆಯ ಮಳಿಗೆಗಳಲ್ಲಿ ಆರೋಗ್ಯ ಅರಿವು, ತೋಟಗಾರಿಕಾ ಮಳಿಗೆಯಲ್ಲಿ ತರಕಾರಿ, ಫಲ ಪುಷ್ಪಗಳ ಪ್ರದರ್ಶನ, ರೇಷ್ಮೆ ಇಲಾಖೆಯ ಮಳಿಗೆಯಲ್ಲಿ ರೇಷ್ಮೆ ಉತ್ಪನ್ನಗಳು, ರೈತ ಸಂಘದ ಮಳಿಗೆಯಲ್ಲಿ ವಿವಿಧ ಕೃಷಿ ಪರಿಕರಗಳ ಪ್ರದರ್ಶನ, ಬೋದಗೂರು ಸಿರಿ ಸಮೃದ್ಧಿ ರೈತ ಕೂಟದಿಂದ ಸಂಕ್ರಾಂತಿಯ ಆಚರಣೆಯನ್ನೇ ಮಾಡಲಾಗಿತ್ತು. ರೈತ ವೆಂಕಟಸ್ವಾಮಿರೆಡ್ಡಿ ಅವರ ಸಿರಿ ಧಾನ್ಯಗಳ ಪ್ರದರ್ಶನ, ಅರಣ್ಯ ಇಲಾಖೆ, ಬೆಸ್ಕಾಂ ಇಲಾಖೆಯ ಮಾಹಿತಿ ನೀಡುವ ಮಳಿಗೆಗಳೂ ಇದ್ದವು.

