Home Blog Page 386

ಮೆರವಣಿಗೆಯಲ್ಲಿ ಪಾಲ್ಗೊಂಡ ಆಕರ್ಷಕ ಕಲಾ ತಂಡ

0

ಮೆರವಣಿಗೆಯಲ್ಲಿ ಪಾಲ್ಗೊಂಡ ಆಕರ್ಷಕ ಕಲಾ ತಂಡ

ರೈತರ ಮಳಿಗೆಗಳ ಮುಂದೆ ಬಣ್ಣಬಣ್ಣದ ರಂಗೋಲಿಗಳನ್ನು ಬಿಡಿಸಲಾಗಿತ್ತು

ಮಡಿವಾಳ ಜನಾಂಗದವರನ್ನು ಪರಿಶಿಷ್ಟ ಜನಾಂಗಕ್ಕೆ ಸೇರಿಸಿ

0

ಮಡಿವಾಳ ಜನಾಂಗದವರನ್ನು ಪರಿಶಿಷ್ಟ ಜನಾಂಗಕ್ಕೆ ಸೇರಿಸಬೇಕೆಂದು ಮಡಿವಾಳ ಜನಾಂಗದ ತಾಲ್ಲೂಕು ಅಧ್ಯಕ್ಷ ಮುರಳಿ ಒತ್ತಾಯಿಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಮಡಿವಾಳ ಮಾಚಿದೇವ ತಾಲ್ಲೂಕು ಘಟಕ ಕಚೇರಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಮಡಿವಾಳ ಜನಾಂಗದವರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಅಭಿವೃದ್ಧಿ ಪಥದೆಡೆಗೆ ಹೆಜ್ಜೆ ಹಾಕಬೇಕಾದ ಅನಿವಾರ್ಯತೆಯಿದೆ. ಚುನಾವಣೆ ಸಮಯದಲ್ಲಿ ಮಾತ್ರ ಜನಾಂಗದವರನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಇತರ ರಾಜ್ಯಗಳಲ್ಲಿ ಮಡಿವಾಳ ಜನಾಂಗದವರನ್ನು ಪರಿಶಿಷ್ಟ ಜಾತಿಗೆ ಸೇರಿಸಿದ್ದು, ಕರ್ನಾಟಕದಲ್ಲಿಯೂ ಸಹ ಮಡಿವಾಳ ಜನಾಂಗದವರನ್ನು ಪರಿಶಿಷ್ಟ ಜನಾಂಗಕ್ಕೆ ಸೇರಿಸಬೇಕು. ಮಡಿವಾಳ ಜನಾಂಗಕ್ಕೆ ಎಲ್ಲ ರಂಗಗಳಲ್ಲೂ ಸಹ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದರು.
ದೇವರಾಜ ಅರಸ್ ಹಿಂದುಳಿದ ನಿಗಮದಿಂದ ಮಡಿವಾಳ ಜನಾಂಗಕ್ಕೆ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ಮಡಿವಾಳ ಮಾಚಿದೇವ ಜಯಂತಿಯನ್ನು ಪ್ರಾರಂಭ ಮಾಡಿರುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ತಿಳಿಸಿದ ಅವರು ಫೆಬ್ರವರಿ ೧ ರಂದು ನಡೆಯುವ ಮಡಿವಾಳ ಮಾಚಿದೇವ ಜಯಂತಿಯನ್ನು ಕುಲಭಾಂದವರು ಒಗಟ್ಟಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಮಡಿವಾಳ ಮಾಚಿದೇವ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಪದ್ಮಾವತಮ್ಮ, ಗೌರವಾಧ್ಯಕ್ಷ ಓಬಣ್ಣ, ತಾಲ್ಲೂಕು ಗೌರವಾಧ್ಯಕ್ಷ ವೆಂಕಟಸ್ವಾಮಿ, ಗೋವಿಂದರಾಜು, ಎಂ.ಅಂಬರೀಶ್, ರಾಮಾಂಜಿನಪ್ಪ, ರಮೇಶ್, ಸುರೇಶ್, ಮಂಜುಳಮ್ಮ ಹಾಜರಿದ್ದರು.

ಅನುದಾನಗಳ ಬಳಕೆಯ ಕುರಿತು ಮಾಹಿತಿ ಒದಗಿಸಿ

0

ಸರ್ಕಾರದಿಂದ ಬಿಡುಗಡೆಯಾಗುತ್ತಿರುವ ಅನುದಾನಗಳ ಬಳಕೆಯ ಕುರಿತು ಕೈಗೊಂಡಿರುವ ಕ್ರಮದ ಸಂಪೂರ್ಣ ಮಾಹಿತಿಯನ್ನು ತ್ವರಿತವಾಗಿ ತಲುಪಿಸಿ ಎಂದು ಶಾಸಕ ಎಂ.ರಾಜಣ್ಣ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಕ್ಷೇತ್ರದಾದ್ಯಂತ ಜಿಲ್ಲಾ ಪಂಚಾಯಿತಿ ತಾಂತ್ರಿಕ ಉಪ ವಿಭಾಗದಿಂದ ತ್ವರಿತವಾಗಿ ಕಾಮಗಾರಿಗಳನ್ನು ಮುಗಿಸಬೇಕು. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಬ್ಯಾಕ್ ಲಾಗ್ ಹಾಗೂ ಹಾಲಿ ಕಾಮಗಾರಿಗಳ ಕ್ರಿಯಾಯೋಜನೆ ರೂಪಿಸುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಮುಂದಿನ ಫೆಬ್ರುವರಿ ೧೫ ರೊಳಗೆ ಈ ಎಲ್ಲಾ ಕಾಮಗಾರಿಗಳ ಟೆಂಡರ್ ಕರೆದು ಕಾಮಗಾರಿ ಶುರು ಮಾಡಿಸುವ ಜೊತೆಗೆ ಕಾಮಗಾರಿಯ ನಾಮಫಲಕಗಳನ್ನು ಅಳವಡಿಸಬೇಕು ಎಂದರು.
ಕ್ಷೇತ್ರದ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಸರ್ಕಾರಿ ಬಸ್ ಸಂಚರಿಸುತ್ತಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶದ ಜನತೆ ಹಾಗೂ ವಿದ್ಯಾರ್ಥಿಗಳು ಪರದಾಡುವ ಸ್ಥಿತಿಯಿದೆ. ಕೂಡಲೇ ಸಾರಿಗೆ ಇಲಾಖೆಯ ಅಧಿಕಾರಿಗಳು ನಾಗರಿಕರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಿ ಎಲ್ಲಿ ಸಮಸ್ಯೆ ಇದೆಯೋ ಎನ್ನುವುದನ್ನು ತಿಳಿದುಕೊಂಡು ಆ ಭಾಗಕ್ಕೆ ಬಸ್ ವ್ಯವಸ್ಥೆ ಮಾಡಲು ಮುಂದಾಗಬೇಕು.
ಮುಂಬರುವ ಬೇಸಿಗೆ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಈಗಲೇ ಅಧಿಕಾರಿಗಳು ಎಚ್ಚರವಹಿಸಬೇಕು. ನಗರದ ಹೊರವಲಯದ ಅರಣ್ಯ ಇಲಾಖೆಯ ಆವರಣದಲ್ಲಿ ಸುಮಾರು ೪೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಉದ್ಯಾನವನದ ಕಾಮಗಾರಿ ಬಹುತೇಕ ಮುಗಿದಿದ್ದು ಮುಂದಿನ ತಿಂಗಳಲ್ಲಿ ಉದ್ಘಾಟನೆ ಮಾಡಲಾಗುವುದು ಎಂದರು.
ತಾಲ್ಲೂಕು ಪಂಚಾಯಿತಿಯ ಶೇ. ೩ ರ ಅನುದಾನದಲ್ಲಿ ವಿಕಲಚೇತನರಿಗಾಗಿ ಅನುದಾನವಿದ್ದು ಕ್ರಿಯಾಯೋಜನೆ ರೂಪಿಸಿ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಪ್ರಗತಿಯ ಬಗ್ಗೆ ಸಭೆಯಲ್ಲಿ ಮಾಹಿತಿ ಪಡೆದುಕೊಂಡರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಕಾರ್ಯನಿರ್ವಹಣಾಧಿಕಾರಿ ಎಂ.ವೆಂಕಟೇಶ್, ಕೆಡಿಪಿ ಸದಸ್ಯ ಪಿ.ವಿ.ನಾಗರಾಜ್, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ವಿಧಾನಸಭಾ ಕ್ಷೇತ್ರದಲ್ಲಿ ದಲಿತ ಸಮುದಾಯಕ್ಕೆ ಪ್ರಾತಿನಿಧ್ಯ ಬೇಕು

0

ಸ್ವಾತಂತ್ರ್ಯ ಪೂರ್ವದಿಂದಲೂ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಮತ್ತು ರಾಜಕೀಯವಾಗಿ ಹಿಂದುಳಿದಿರುವ ದಲಿತ ಸಮುದಾಯಗಳಿಗೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾತಿನಿಧ್ಯ ನೀಡುವ ಮೂಲಕ ದಲಿತರ ಸಬಲೀಕರಣಕ್ಕೆ ಸಹಕಾರ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ಎಂ.ಮುನಿಯಪ್ಪ ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿವೆ. ಯಾವ ಕ್ಷೇತ್ರದಲ್ಲೂ ಮೀಸಲು ಪ್ರಾತಿನಿಧ್ಯ ನೀಡಿಲ್ಲ. ಅಧಿಕಾರಕ್ಕೆ ಬಂದಿರುವ ಎಲ್ಲರಿಂದಲೂ ದಲಿತ ಸಮುದಾಯ ವಂಚನೆಗೆ ಒಳಗಾಗಿದ್ದು, ದಲಿತರ ಕೇರಿಗಳಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳನ್ನು ಮೀಸಲು ಕ್ಷೇತ್ರವನ್ನಾಗಿ ಮಾಡಬೇಕು ಎಂದು ಚುನಾವಣಾ ಆಯೋಗಕ್ಕೆ ಒತ್ತಾಯ ಮಾಡುತ್ತೇವೆ ಎಂದರು.
ಮುಂದಿನ ಚುನಾವಣೆಯಲ್ಲಿ ಅಹಿಂದ ವರ್ಗದವರು ಯಾರೇ ಸ್ಪರ್ಧೆ ಮಾಡಿದರೂ, ದಲಿತ ಸಂಘರ್ಷ ಸಮಿತಿ ಸಂಪೂರ್ಣ ಬೆಂಬಲ ಕೊಡುವುದರ ಜೊತೆಗೆ, ಅವರ ಪರವಾಗಿ ಪ್ರಚಾರ ಕಾರ್ಯವನ್ನು ಮಾಡುತ್ತೇವೆ. ದಲಿತರಿಗೆ ಚುನಾವಣಾ ಪ್ರಾತಿನಿಧ್ಯವೆಂಬುದು ಸಿಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಅವಕಾಶ ವಂಚಿತರಾಗುವುದರ ಜೊತೆಗೆ ಅಭಿವೃದ್ಧಿಯಿಂದಲೂ ವಂಚಿತರಾಗಲಿದ್ದೇವೆ ಆದ್ದರಿಂದ ಎಲ್ಲಾ ಕಡೆಗಳಲ್ಲಿ ದಲಿತರನ್ನು ಸಂಘಟಿಸುತ್ತೇವೆ ಎಂದರು.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕರಾದ ರವಿ, ಹುಜುಗೂರು ವೆಂಕಟೇಶ್, ಲಕ್ಷ್ಮೀನಾರಾಯಣ, ದೊಡ್ಡತಿರುಮಳಯ್ಯ, ಲಕ್ಷ್ಮಣ್, ನರಸಿಂಹಮೂರ್ತಿ, ಮುನಿಕೃಷ್ಣ, ನರಸಿಂಹ, ಅನಿಲ್ಕುಮಾರ್ ಹಾಜರಿದ್ದರು.

ಜನರಲ್ಲಿ ಸಾಮರಸ್ಯ, ಮಾನಸಿಕ ನೆಮ್ಮದಿ ಮೂಡಲಿ

0

ಎಲ್ಲಾ ವರ್ಗದ ಜನರಲ್ಲಿ ಸಾಮರಸ್ಯ, ಮಾನಸಿಕ ನೆಮ್ಮದಿಯು ಧಾರ್ಮಿಕ ಕಾರ್ಯಗಳಿಂದ ಮೂಡಲಿದೆ ಎಂದು ಜಯಪ್ರಕಾಶ್ ನಾರಾಯಣ್ ಹಾಗೂ ಎಚ್.ಡಿ.ದೇವೇಗೌಡ ಸೇವಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ ರಸ್ತೆಯ ಸೀತಹಳ್ಳಿ ಗೇಟ್ ನಿಂದ 72 ಬಸ್ಸುಗಳ ಮೂಲಕ ಮೇಲ್ ಮರವತ್ತೂರು ಓಂ ಶಕ್ತಿ ದೇವಾಲಯಕ್ಕೆ ತೆರಳಿದ 4000 ಕ್ಕೂ ಹೆಚ್ಚು ಭಕ್ತರಿಗೆ ಶುಭ ಹಾರೈಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅಭಿವೃದ್ಧಿಗಿಂತ ಸ್ವ ಪ್ರತಿಷ್ಠೆಗಳ ಮೇಲೆ ಸರ್ಕಾರ ನಡೆಯುತ್ತಿದೆ. ಬಯಲು ಸೀಮೆ ಭಾಗಗಳಲ್ಲಿನ ಜನರ ಅಭಿವೃದ್ಧಿಯ ಕುರಿತು, ರಾಜ್ಯ ಸರ್ಕಾರಕ್ಕೆ ಚಿಂತನೆ ಇಲ್ಲದಂತಾಗಿದೆ. ಈವರೆಗೂ ರಾಜ್ಯದಲ್ಲಿ ಆಡಳಿತ ನಡೆಸಿರುವ ಯಾವ ಸರ್ಕಾರಗಳು ಬಯಲುಸೀಮೆ ಭಾಗದ ಕುರಿತು ಚಿಂತನೆ ನಡೆಸಿಲ್ಲ, ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆನ್ನುವ ಉದ್ದೇಶದಿಂದ ದೇವರದಲ್ಲಿ ಹರಕೆ ಹೊತ್ತುಕೊಂಡು ಉಚಿತ ಪ್ರವಾಸ ಯಾತ್ರೆಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್ ಹೊರತು ಪಡಿಸಿದರೆ, ಉಳಿದ ಯಾವುದೇ ಪಕ್ಷಗಳಿಗೆ ಅಭಿವೃದ್ಧಿಯ ಕಡೆಗೆ ಬದ್ಧತೆಯಿಲ್ಲದಂತಾಗಿದೆ. ಕುಮಾರಸ್ವಾಮಿ ಅವರ 20 ತಿಂಗಳ ಅಧಿಕಾರಾವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳು, ದೇಶಕ್ಕೆ ಮಾದರಿಯಾಗಿವೆ. ಗ್ರಾಮವಾಸ್ತವ್ಯದಂತಹ ಕಾರ್ಯಕ್ರಮಗಳನ್ನು ಕಾಂಗ್ರೆಸ್, ಬಿಜೆಪಿ ನಾಯಕರು ಅಳವಡಿಸಿಕೊಳ್ಳುತ್ತಿದ್ದಾರೆ. ರೈತರು, ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರು ಹೀಗೆ ಎಲ್ಲಾ ವರ್ಗದ ಜನರ ಕಲ್ಯಾಣಕ್ಕಾಗಿ ಅವರು ತರಲು ಉದ್ದೇಶಿಸಿರುವ ಯೋಜನೆಗಳು ರಾಜ್ಯದ ಚಿತ್ರಣವನ್ನೆ ಬದಲಾಯಿಸಲಿವೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾರಘು, ಗಂಜಿಗುಂಟೆ ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹಮೂರ್ತಿ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕರಾದ ಪಿ.ಶಿವಾರೆಡ್ಡಿ, ಪಿ.ವಿ.ನಾಗರಾಜ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಸದಸ್ಯ ರಾಜಶೇಖರ್, ನಗರಸಭಾ ಸದಸ್ಯೆ ಸಂಧ್ಯಾ ಮಂಜುನಾಥ್, ಮುಖಂಡರಾದ ಕೆ.ಎಸ್.ಮಂಜುನಾಥ್, ಆರ್.ಎ.ಉಮೇಶ್, ಯರಬಚ್ಚಪ್ಪ, ಕದಿರಿ ಯೂಸೂಪ್, ಮಂಜುನಾಥ್, ವಿ.ಕೆಂಪಯ್ಯ, ಹುಜುಗೂರು ರಾಮಚಂದ್ರಪ್ಪ, ಚಂದ್ರೇಗೌಡ, ಮೇಲೂರು ಧರ್ಮೇಂದ್ರ, ರಾಮ್ ಬಾಬು, ಜೆ.ಎಂ.ವೆಂಕಟೇಶ್, ತಾದೂರು ರಘು, ಕನ್ನಮಂಗಲ ಚಿಕ್ಕಾಂಜಿನಪ್ಪ, ಮುಗಿಲಡಪಿ ನಂಜಪ್ಪ ಹಾಜರಿದ್ದರು.

ಎನ್ ಪಿ ಎಸ್ ನೌಕರರ ‘ಫ್ರೀಡಂ ಪಾರ್ಕ್ ಚಲೋ’

0

ಎನ್ ಪಿ ಎಸ್ ನೌಕರರ ಬೇಡಿಕೆಗಳು ನ್ಯಾಯಬದ್ಧವಾಗಿವೆ. ಅವರ ಹೋರಾಟಕ್ಕೆ ಸರ್ಕಾರ ಸ್ಪಂದಿಸಲಿ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಬಳಿಯಿಂದ ಫ್ರೀಡಂ ಪಾರ್ಕ್ ಹೋರಾಟಕ್ಕೆ ಟೀ ಶರ್ಟ್, ಗಾಂಧಿ ಟೋಪಿ ಮತ್ತು ಸಂಘದ ಬಾವುಟವನ್ನು ಹಿಡಿದು ಹೊರಟ ತಾಲ್ಲೂಕಿನ ಸರ್ಕಾರಿ ನೌಕರರಿಗೆ ಶುಭ ಕೋರಿ ಅವರು ಮಾತನಾಡಿದರು.
ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರಿಗೆ ನಿವೃತ್ತಿಯ ನಂತರ ಭದ್ರತೆ ಅವಶ್ಯಕ. ಜಿಪಿಎಫ್ ಸೌಲಭ್ಯವಿಲ್ಲ. ಕುಟುಂಬ ಪಿಂಚಣಿ, ಮರಣ ಹಾಗೂ ನಿವೃತ್ತಿ ಉಪದಾನವಿಲ್ಲ. ತುಟ್ಟಿಭತ್ಯೆ ಇಲ್ಲ, ಕನಿಷ್ಠ ಬರವಸೆಯೂ ಇಲ್ಲ. ಇದನ್ನು ರದ್ದುಗೊಳಿಸಿ ಹಳೆಯ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಕ್ಕೆ ಸರ್ಕಾರ ಸ್ಪಂದನೆ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಸರ್ಕಾರಿ ನೌಕರರು ‘ಎನ್ಪಿಎಸ್ ರದ್ದಾಗಲಿ, ನಿಶ್ಚಿತ ಪಿಂಚಣಿ ಜಾರಿಯಾಗಲಿ’ ಎಂದು ಘೋಷಣೆಗಳನ್ನು ಕೂಗಿದರು. ಬಸ್ಗಳಲ್ಲಿ ನೂರಾರು ಮಂದಿಸರ್ಕಾರಿ ನೌಕರರು ಬೆಂಗಳೂರಿನಲ್ಲಿ ನಡೆಸುವ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ತೆರಳಿದರು.
ಎನ್ಪಿಎಸ್ ನೌಕರರ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಎನ್.ಗಜೇಂದ್ರ, ಕಾರ್ಯದರ್ಶಿ ಎಸ್.ಎ.ನರಸಿಂಹರಾಜು, ಖಜಾಂಚಿ ಟಿ.ಟಿ.ನರಸಿಂಹಪ್ಪ, ಸಂಘಟನಾ ಕಾರ್ಯದರ್ಶಿ ಎಸ್.ಶಿವಶಂಕರ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೇಶವರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕೆ.ಎನ್.ಸುಬ್ಬಾರೆಡ್ಡಿ, ಶಿಕ್ಷಕರಾದ ಗೋವಿಂದರಾಜುಲು, ಷರ್ಬುದ್ದೀನ್ ಹಾಜರಿದ್ದರು.

ಗುಣಮಟ್ಟದ ಹಾಲು ಉತ್ಪಾದನೆಗೆ ಆಧ್ಯತೆ ನೀಡಿ

0

ಗುಣಮಟ್ಟದ ಹಾಲಿಗೆ ಮಾತ್ರವೇ ಸರ್ಕಾರವು ಪ್ರೋತ್ಸಾಹ ಧನವನ್ನು ವಿತರಿಸಲಿದ್ದು ಕಳಪೆ ಗುಣಮಟ್ಟದ ಹಾಲಿಗೆ ಸಿಗುವುದಿಲ್ಲ. ಹಾಗಾಗಿ ಹೈನುಗಾರರು ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚಿನ ಆಧ್ಯತೆ ನೀಡುವಂತೆ ಸಹಕಾರ ಸಂಘದ ಅಧ್ಯಕ್ಷರೂ ಸೇರಿದಂತೆ ಕಾರ್ಯದರ್ಶಿಗಳು ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕಿದೆ ಎಂದು ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಹೇಳಿದರು.
ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಿಗಾಗಿ ಹಮ್ಮಿಕೊಂಡಿದ್ದ ಅಧ್ಯಯನ ಪ್ರವಾಸಕ್ಕೆ ನಗರದ ಬಸವೇಶ್ವರ ದೇವಾಲಯದ ಆವರಣದಲ್ಲಿ ಶನಿವಾರ ರಾತ್ರಿ ಚಾಲನೆ ನೀಡಿ ಮಾತನಾಡಿದರು.
ಗುಣಮಟ್ಟದ ಹಾಲು ಉತ್ಪಾದನೆ ಮಾಡದಿದ್ದಲ್ಲಿ ಹಾಲು ಉತ್ಪಾದಕರು, ಹಾಲು ಉತ್ಪಾದಕರ ಸಹಕಾರ ಸಂಘಗಳಿಗೂ ಭವಿಷ್ಯದಲ್ಲಿ ಸಂಕಷ್ಟದ ದಿನಗಳು ಎದುರಾಗಲಿವೆ. ಹಾಗಾಗಿಯೆ ಕಾಲ ಕಾಲಕ್ಕೆ ಹೈನುಗಾರರು ಸೇರಿದಂತೆ ಸಹಕಾರ ಸಂಘಗಳ ಕಾರ್ಯದರ್ಶಿಗಳನ್ನು ಬೇರೆ ಬೇರೆ ರಾಜ್ಯದ ಹಾಗೂ ನಮ್ಮದೇ ರಾಜ್ಯದ ಇತರೆ ಅಭಿವೃದ್ಧಿ ಶೀಲ ಡೇರಿಗಳಿಗೆ ಅಧ್ಯಯನ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ. ಅಲ್ಲಿ ಅಧ್ಯಯನ ನಡೆಸಿ ಅಲ್ಲಿನ ಒಳ್ಳೆಯ ಅಂಶಗಳನ್ನು ಇಲ್ಲಿ ಅನುಷ್ಟಾನಗೊಳಿಸಿಕೊಳ್ಳಬೇಕು. ಆದ್ದರಿಂದ ಎಲ್ಲ ಕಾರ್ಯದರ್ಶಿಗಳು ಪ್ರವಾಸ ಕಾಲದಲ್ಲಿ ಎಲ್ಲವನ್ನು ತಿಳಿದುಕೊಂಡು ಬರಬೇಕೆಂದು ಮನವಿ ಮಾಡಿದರು.
ಕೋಚಿಮುಲ್ನ ಶಿಡ್ಲಘಟ್ಟ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಬಿ.ಎಸ್.ಹನುಮಂತರಾವ್ ಮಾತನಾಡಿ ಹೈನುಗಾರಿಕೆಯಲ್ಲಿ ಪ್ರಗತಿ ಸಾಧಿಸಿರುವ ಗುಜರಾತಿನ ಆನಂದ್ ಡೈರಿಯಲ್ಲಿ ಹೈನುಗಾರಿಕೆಯ ವಿವಿಧ ಕ್ರಮಗಳನ್ನು ವೀಕ್ಷಿಸಿ ಅಲ್ಲಿ ಹೈನುಗಾರಿಕೆಯನ್ನು ಯಾವ ರೀತಿ ಮಾಡಲಾಗುತ್ತಿದೆ. ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಹೇಗೆ ಮಾಡಬೇಕು, ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭಗಳಿಸುವ ಹೈನುಗಾರಿಕೆ ಮಾಡುವುದು ಹೇಗೆಂಬುದು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ತಿಳಿಸಿಕೊಡಲಾಗುವುದು. ನಿಮ್ಮ ಜತೆ ನಮ್ಮ ಇಲಾಖೆಯ ಅಧಿಕಾರಿಗಳು ಆಗಮಿಸಲಿದ್ದು ಅವರೊಂದಿಗೆ ಅಲ್ಲಿನ ಡೇರಿಯ ಅಧಿಕಾರಿ, ಸಿಬ್ಬಂದಿಯೂ ನಿಮಗೆ ಅಗತ್ಯ ಮಾಹಿತಿ ಮಾರ್ಗದರ್ಶನ ನೀಡಲಿದ್ದಾರೆ. ಎಲ್ಲರೂ ಅಣ್ಣ ತಮ್ಮಂದಿರಂತೆ ಒಂದಾಗಿ ಅಧ್ಯಯನ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿಕೊಂಡು ಬನ್ನಿ ಎಂದರು.
ಕೋಚಿಮುಲ್ನ ಸ್ಥಳೀಯ ಶಿಬಿರ ಕಚೇರಿಯ ವಿಸ್ತರಣಾಧಿಕಾರಿಗಳಾದ ಎಚ್.ಎಸ್.ಉಮೇಶ್ರೆಡ್ಡಿ, ಎಂ.ಮಂಜುನಾಥ್, ಟಿ.ಶ್ರೀನಿವಾಸ್, ಟಿ.ಎಂ.ಮುನೇಗೌಡ, ಸಂತೋಷ್ಕುಮಾರ್, ಹಾಲು ಉತ್ಪಾಧಕರ ಸಹಕಾರ ಸಂಘಗಳ ನೌಕರರ ಅಧ್ಯಕ್ಷ ಬೋದಗೂರು ಚಂದ್ರೇಗೌಡ, ನಂದಿನಿ ವಿವಿದೋದ್ದೇಶ ಸಹಕಾರ ಸಂಘದ ಗೋವಿಂದರಾಜು ಹಾಜರಿದ್ದರು.

ದಶಮಾನೋತ್ಸವ ಸಂಭ್ರಮ

0

ನಗರದ ನೆಹರೂ ಕ್ರೀಡಾಂಗಣದಲ್ಲಿ ಇಂದು ಜಿಲ್ಲಾ ದಶಮಾನೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ತಾಲ್ಲೂಕು ಆಡಳಿತ ಹಮ್ಮಿಕೊಂಡಿದೆ. ದಶಮಾನೋತ್ಸವ ಸಂಭ್ರಮದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 6 ಗಂಟೆಗೆ ಕೋರ್ಟ್‌ ಮುಂಭಾಗದಿಂದ ಶಾಮಣ್ಣ ಬಾವಿಯವರೆಗೆ ‘ಆರೋಗ್ಯದೆಡೆಗೆ ನಮ್ಮ ನಡಿಗೆ’, ಬೆಳಿಗ್ಗೆ 7 ಗಂಟೆಗೆ ಶಾಮಣ್ಣ ಬಾವಿ ಸ್ವಚ್ಛತಾ ಕಾರ್ಯಕ್ರಮ, ಬಸ್‌ ನಿಲ್ದಾಣದಿಂದ ನೆಹರು ಕ್ರೀಡಾಂಗಣದವರೆಗೆ ವಿವಿಧ ಕಲಾತಂಡಗಳು ಮತ್ತು ಸ್ತಬ್ದ ಚಿತ್ರಗಳೊಂದಿಗೆ ದಶಮಾನೋತ್ಸವ ತೇರು ಚಾಲನೆ, ಬೆಳಿಗ್ಗೆ 9.30ಕ್ಕೆ ರೆಡ್‌ ಕ್ರಾಸ್‌ ಸಂಸ್ಥೆಯ ಶಾಖಾ ಘಟಕದ ಉದ್ಘಾಟನೆ, ಬೆಳಿಗ್ಗೆ 9.45ಕ್ಕೆ ಕಂದಾಯ ಭವನದಲ್ಲಿ ನೇತ್ರ ದಾನಿಗಳ ನೋಂದಣಿ ಕಾರ್ಯಕ್ರಮ, ಬೆಳಿಗ್ಗೆ 10 ಗಂಟೆಗೆ ರಕ್ತದಾನ ಕಾರ್ಯಕ್ರಮದ ಉದ್ಘಾಟನೆ, ಬೆಳಿಗ್ಗೆ 10.15ಕ್ಕೆ ನೆಹರು ಕ್ರೀಡಾಂಗಣದಲ್ಲಿ ವಸ್ತು ಪ್ರದರ್ಶನ ಮತ್ತು ಮಳಿಗೆಗಳ ಉದ್ಘಾಟನೆ, ಸಭಾ ಕಾರ್ಯಕ್ರಮ ಬೆಳಿಗ್ಗೆ 10.30ಕ್ಕೆ, ಕ್ರೀಡಾ ಚಟುವಟಿಕೆ ಬೆಳಿಗ್ಗೆ 11 ರಿಂದ ಸಂಜೆ 4 ರವರೆಗೆ. ಸಂಜೆ 4 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು. ಸುಧಾ ಬರಗೂರು ಅವರಿಂದ ನಗೆ ಹಬ್ಬ, ಸಂಗೀತ ರಸಸಂಜೆ, ಮ್ಯಾಜಿಕ್‌ ಕಾರ್ಯಕ್ರಮ, ರಂಗ ಪಯಣ ಕಲಾವಿದರಿಂದ ನಾಟಕ ‘ಗುಲಾಬಿ ಗ್ಯಾಂಗ್‌’ ನಡೆಯಲಿದೆ.

ಅಧಿಕಾರಿಗಳು ಸಮರ್ಪಕ ಮಾಹಿತಿಯನ್ನು ತರಬೇಕು

0

ಚುನಾವಣೆ ಹತ್ತಿರವಾಗುತ್ತಿದೆ ಅಬಕಾರಿ ಇಲಾಖೆ ಅಧಿಕಾರಿಗಳು ಹೆಚ್ಚು ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕೆಂದು ಲೋಕಾಯುಕ್ತ ಡಿ.ವೈ.ಎಸ್.ಪಿ ಕೃಷ್ಣಮೂರ್ತಿ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಲೋಕಾಯುಕ್ತರಿಂದ ನಡೆದ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕರಣಾ ಸಭೆಯಲ್ಲಿ ಅವರು ಮಾತನಾಡಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು ಮುಂದಿನ ಸಭೆಗೆ ಬರುವಾಗ ಸಮರ್ಪಕ ಮಾಹಿತಿಯನ್ನು ತರಬೇಕು. ಕೇಂದ್ರ ಮತ್ತು ಸರ್ಕಾರಿ ಯೋಜನೆಗಳು ಸಮರ್ಪಕವಾಗಿ ಅನುಷ್ಟಾನಗೊಳ್ಳುತ್ತಿದೆಯೇ, ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪುತ್ತಿದೆಯೇ ಎಂಬುದನ್ನು ಪರಿಶೀಲನೆ ನಡೆಸುತ್ತೇವೆ. ವಿದ್ಯಾರ್ಥಿಗಳಿಗೆ ತಲುಪಬೇಕಾದ ವಿದ್ಯಾರ್ಥಿವೇತನ, ಸರ್ಕಾರಿ ವಿದ್ಯಾರ್ಥಿನಿಲಯಗಳಲ್ಲಿ ಮೂಲಭೂತ ಸೌಕರ್ಯಗಳು, ನರೇಗಾ ಕೆಲಸಗಳು ಎಲ್ಲ ಮಾಹಿತಿಯನ್ನು ಅಧಿಕಾರಿಗಳು ತರಬೇಕು ಎಂದರು.
ತಹಶೀಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿ, ಲೋಕಾಯುಕ್ತ ಅಧಿಕಾರಿಗಳು ಬರುವರೆಂದರೆ ಒಒಂದು ರೀತಿಯ ಆತಂಕದ ವಾತಾವರಣವಿರುತ್ತದೆ. ನಾನೂ ಸೇರಿದಂತೆ ಅಧಿಕಾರಿಗಳು ತಮ್ಮ ಕೆಲಸಗಳನ್ನು ಸಮರ್ಪಕವಾಗಿ ಮಾಡಿ ದಾಖಲೆಗಳನ್ನು ಇಟ್ಟುಕೊಂಡಲ್ಲಿ ಯಾರೂ ಪ್ರಶ್ನಿಸುವುದಿಲ್ಲ. ಅವರ ಉದ್ದೇಶ ಸಾರ್ವಜನಿಕರಿಗೆ ಕೆಲಸಗಳನ್ನು ಮುಂದೂಡದೆ ಶೀಘ್ರವಾಗಿ ಅಧಿಕಾರಿಗಳು ಮಾಡಿಕೊಡಬೇಕು. ಸರ್ಕಾರಿ ಕಚೇರಿಗಳು ಜನಸ್ನೇಹಿ ವಾತಾವರಣದಿಂದ ಇರಬೇಕು ಎಂಬುದಾಗಿದೆ ಎಂದು ಹೇಳಿದರು.
ಲೋಕಾಯುಕ್ತ ಅಧಿಕಾರಿಗಳು ಹನುಮಂತಪುರ ಬಳಿಯ ಬಿಸಿಎಂ ಹಾಸ್ಟೆಲ್ ಪರಿಶೀಲನೆ ನಡೆಸಿದರು.
ಲೋಕಾಯುಕ್ತ ಇನ್ಸ್ಪೆಕ್ಟರ್ ಅಜೇರೇಶ್, ಸರ್ಕಲ್ ಇನ್ಸ್ಪೆಕ್ಟರ್ ಸಿದ್ಧರಾಜು, ಪ್ರಭಾರಿ ತಹಶೀಲ್ದಾರ್ ಮಮತಾ ಕುಮಾರಿ ಹಾಜರಿದ್ದರು.

ಪ್ರಜಾಪ್ರಭುತ್ವ ಉಳಿಸುವ ಕಡೆಗೆ – ಆನೆಯ ನಡಿಗೆ

0

ದೇಶದಲ್ಲಿ ಸರ್ವರಿಗೂ ಸಮಾನ ಅವಕಾಶ ನೀಡಬಲ್ಲ ಪವಿತ್ರ ಪ್ರಜಾಪ್ರಭುತ್ವ ಜಾರಿಗೆ ತರಲು ಬಿಎಸ್ಪಿ ಪಕ್ಷದಿಂದ ಮಾತ್ರ ಸಾಧ್ಯ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಸಂಯೋಜಕ ಪ್ರೊ.ಹರಿರಾಮ್ ತಿಳಿಸಿದರು.
ಬಹುಜನ ಸಮಾಜ ಪಕ್ಷ ತಾಲ್ಲೂಕು ಘಟಕದಿಂದ ಶುಕ್ರವಾರ ಆಯೋಜಿಸಲಾಗಿದ್ದ ಪ್ರಜಾಪ್ರಭುತ್ವ ಉಳಿಸುವ ಕಡೆಗೆ – ಆನೆಯ ನಡಿಗೆ ಜನಾಂದೋಲನ ಬೈಕ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸುಮಾರು ೫೦ ವರ್ಷಗಳಿಗೂ ಹೆಚ್ಚುಕಾಲ ಈ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ಜನರಿಗೆ ಉತ್ತಮ ಶಿಕ್ಷಣ, ಉದ್ಯೋಗ, ಭೂಮಿ ಹಾಗೂ ಬಂಡವಾಳಗಳನ್ನು ಒದಗಿಸುವ ಯೋಜನೆ ಬಿಟ್ಟು ಅನ್ನಭಾಗ್ಯ, ಕ್ಷೀರಭಾಗ್ಯ, ತಾಳಿಭಾಗ್ಯದಂತಹ ಯೋಜನೆಗಳನ್ನು ಜಾರಿ ಮಾಡುವ ಮೂಲಕ ದೇಶದಲ್ಲಿ ಬಹುಸಂಖ್ಯಾತರನ್ನು ದೈನೇಸಿಗಳನ್ನಾಗಿ ಮಾಡುತ್ತಿದೆ. ಇನ್ನು ಬಿಜೆಪಿ ಸರ್ಕಾರ ಬಡತನ, ನಿರುದ್ಯೋಗ, ಅಪೌಷ್ಟಿಕತೆಯಂತಹ ಜ್ವಲಂತ ಸಮಸ್ಯೆಗಳನ್ನು ನಿರ್ಲಕ್ಷಿಸಿ ಜಾತಿ-ಜಾತಿಗಳ ಮಧ್ಯೆ ಜಗಳ ಹಚ್ಚಿ ಕೋಮುಗಲಭೆಗಳನ್ನು ಸೃಷ್ಟಿಸುತ್ತಿದೆ ಎಂದರು.
ಸರ್ವರಿಗೂ ಸಮಾನ ಅವಕಾಶಗಳು ದೊರಕಲು ಬಿಎಸ್ಪಿ ಪಕ್ಷದಿಂದ ಮಾತ್ರ ಸಾಧ್ಯ. ಹಾಗಾಗಿ ಇದೇ ಜನವರಿ ೨೮ ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯಲಿರುವ ಬೃಹತ್ ರಾಜ್ಯ ಸಮಾವೇಶದಲ್ಲಿ ತಾಲ್ಲೂಕಿನಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಭಾಗವಹಿಸಬೇಕು. ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಎಸ್ಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯದ ಅಭಿವೃದ್ಧಿಗೆ ಸಹಕರಿಸುವಂತೆ ನಾಗರಿಕರಲ್ಲಿ ಮನವಿ ಮಾಡಿದರು.
ಬಿಎಸ್ಪಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಾಗಪ್ಪ, ಕಚೇರಿ ಕಾರ್ಯದರ್ಶಿ ಲಕ್ಷ್ಮಕ್ಕ, ಜಿಲ್ಲಾಧ್ಯಕ್ಷ ಗುರ್ರಪ್ಪ, ತಾಲ್ಲೂಕು ಸಂಚಾಲಕ ಕೆ.ಮೂರ್ತಿ, ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಯಾಮೇಗೌಡ, ದೇವರಾಜ್, ನರೇಶ್, ಶ್ರೀನಿವಾಸ್, ಮಂಜುನಾಥ್ ಹಾಜರಿದ್ದರು.

ತಾಲ್ಲೂಕು ವಕೀಲರ ಸಂಘದಿಂದ ಪ್ರತಿಭಟನೆ

0

ಕಕ್ಷಿದಾರರ ಹಿತ ಕಾಪಾಡಲು ಮುಂದಾದ ವಕೀಲರ ಮೇಲೆ ವಿನಾಕಾರಣ ಕೇಸು ದಾಖಲಿಸಿರುವ ಪಿಎಸ್ಸೈ ವಿಕಾಸ್ ರನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡಬೇಕು. ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳು ಕಲಾಪದಿಂದ ಹೊರಗುಳಿದು ಶುಕ್ರವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ ಮಾತನಾಡಿ, ನೆರೆಯ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣವೊಂದರ ಆರೋಪಿಗಳು ನ್ಯಾಯಾಲಯದಿಂದ ಜಾಮೀನು ಪಡೆದುಕೊಳ್ಳಲು ನ್ಯಾಯಾಲಯದ ಆವರಣದೊಳಗೆ ಆಗಮಿಸಿದ್ದರು. ಆಗ ಗೌನಿಪಲ್ಲಿ ಠಾಣೆಯ ಪಿಎಸ್ಸೈ ವಿಕಾಸ್ ನ್ಯಾಯಾಲಯದಿಂದ ಯಾವುದೇ ಅನುಮತಿ ಪಡೆಯದೇ ಆರೋಪಿಗಳನ್ನು ಬಂಧಿಸಿ ಕರೆದೊಯ್ದಿದ್ದನ್ನು ಪ್ರಶ್ನಿಸಿದ ವಕೀಲರ ವಿರುದ್ಧ ಕಾನೂನು ಬಾಹಿರವಾಗಿ ಕೇಸು ದಾಖಲಿಸಿರುವ ಕ್ರಮವನ್ನು ತಾಲ್ಲೂಕು ವಕೀಲರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದರು.
ಕಕ್ಷಿದಾರರ ಹಿತ ಕಾಪಾಡುವುದು ವಕೀಲರ ಕರ್ತವ್ಯವಾಗಿದ್ದು ತಮ್ಮ ಕರ್ತವ್ಯದಂತೆ ಪ್ರಶ್ನಿಸಿದ ವಕೀಲರ ವಿರುದ್ದ ದುರುದ್ದೇಶದಿಂದ ಪ್ರಕರಣ ದಾಖಲಿಸಿರುವ ಗೌನಿಪಲ್ಲಿ ಪಿಎಸ್ಸೈ ವಿಕಾಸ್ ಅವರನ್ನು ಸೇವೆಯಿಂದ ಅಮಾನತ್ತು ಮಾಡುವ ಮೂಲಕ ಕಾನೂನು ಕ್ರಮ ಜರುಗಿಸಬೇಕು ಎಂದರು.
ಇಂತಹ ವರ್ತನೆಗಳು ತಮ್ಮ ಇಲಾಖೆಯಲ್ಲಿ ಮತ್ತೆ ನಡೆಯದಂತೆ ಜಾಗ್ರತೆ ವಹಿಸಬೇಕು ಎಂದು ತಾಲ್ಲೂಕು ವಕೀಲರ ಸಂಘದಿಂದ ಅಂಚೆ ಮೂಲಕ ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಮಾಡಿದ್ದಾರೆ.
ವಕೀಲರ ಸಂಘದ ಕಾರ್ಯದರ್ಶಿ ಎಂ.ಬಿ.ಲೋಕೇಶ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಎಂ.ಪಾಪಿರೆಡ್ಡಿ, ವಕೀಲರಾದ ಬೈರಾರೆಡ್ಡಿ, ಎಂ.ಮಂಜುನಾಥ್ ಹಾಜರಿದ್ದರು.

ಪುಣ್ಯಪುರುಷರು ಬರೆದಂತೆ ಬದುಕಿದರು

0

ಪುಣ್ಯಪುರುಷರು ನಮ್ಮ ನಾಡಿನಲ್ಲಿ ಜನಿಸಿ ನಮಗೆ ಜೀವನದರ್ಶನವನ್ನು ಕೊಟ್ಟು ಹೋಗಿದ್ದಾರೆ. ಬರೆದಂತೆ ಬದುಕಿದ ಅವರು ತಮ್ಮ ಆದರ್ಶ, ಸಾಹಿತ್ಯ, ಸನ್ಮಾರ್ಗ, ಮಾನವೀಯತೆಗಳಿಂದ ನಮಗೆ ದಾರಿದೀಪವಾಗಿದ್ದಾರೆ ಎಂದು ರಾಮಕೃಷ್ಣ ಮಠದ ಪೂರ್ಣಾನಂದ ಮಹಾಸ್ವಾಮಿಗಳು ತಿಳಿಸಿದರು.
ನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿ ಕರ್ನಾಟಕ ವಚನ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ದಾಸಶ್ರೇಷ್ಠ ಪುರಂದರ ಪುಣ್ಯದಿನ, ವಿವೇಕಾನಂದರ ಹಾಗೂ ಕುವೆಂಪು ಅವರ ಜನ್ಮದಿನಾಚರಣೆ ಮತ್ತು ಸಂಕ್ರಾಂತಿ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕವಿಪುಂಗವರಿಗೆ, ಸಮಾಜಸುಧಾರಕರಿಗೆ, ಶಾಸ್ತ್ರಕೋವಿದರಿಗೆ ನೆಲೆ ಕೊಟ್ಟ ಪುಣ್ಯಭೂಮಿಯಲ್ಲಿ ನಾವು ಜನಿಸಿರುವುದು ನಮ್ಮೆಲ್ಲರ ಪೂರ್ವಜನ್ಮದ ಸುಕೃತ. ಅಂತಹ ನಾಡಿನ ಕೀರ್ತಿ ಬೆಳಗುವುದು ನಮ್ಮ ಕರ್ತವ್ಯ ಎಂದರು.
ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಅಕ್ಷರದಾಸೋಹ ಸಹಾಯಕ ನಿರ್ದೇಶಕ ವೆಂಕಟೇಶ್ ಮಾತನಾಡಿದರು. ಪುರಂದರ ದಾಸರ ಬಗ್ಗೆ ಸಂಗೀತ ವಿದ್ವಾನ್ ಜಿ.ಎನ್.ಶಾಮಸುಂದರ್ ಮಾತನಾಡಿದರು.
ವಿವಿಧ ಪ್ರೌಢಶಾಲೆಗಳ ಮಕ್ಕಳು ಗೀತಗಾಯನವನ್ನು ನಡೆಸಿಕೊಟ್ಟರು. ವಿವಿಧ ಕವಿಗಳು ಕವನಗಳನ್ನು ವಾಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು, ವಸಾಪ ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿ ಯೋಗಾನಂದ, ಅಧ್ಯಕ್ಷ ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಾಜ್, ವಾಸವಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಸತ್ಯನಾರಾಯಣಶೆಟ್ಟಿ, ಕೃಷಿಕ ಸಮಾಜದ ನಿರ್ದೇಶಕ ಎ.ಎಂ.ದೇವರಾಜ, ಮುಖ್ಯಶಿಕ್ಷಕ ಗೋಪಿನಾಥ, ಒಕ್ಕಲಿಗರ ಸಂಘದ ನಾರಾಯಣಸ್ವಾಮಿ ಹಾಜರಿದ್ದರು.

ತಾಲ್ಲೂಕು ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದ ವಿಜೇತರು

0

ತಾಲ್ಲೂಕು ಸರ್ಕಾರಿ ನೌಕರರ ತಾಲ್ಲೂಕು ಮಟ್ಟದ ಕ್ರೀಡಾಕೂಟ ಬುಧವಾರ ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆಯಿತು.
ವಿಜೇತರಾದ ಪುರುಷ ಕ್ರೀಡಾಪಟುಗಳು :
100 ಮೀಟರ್ ಓಟ (45 ವರ್ಷದೊಳಗಿನ): ಅನಂತರಾಜು(ಪ್ರಥಮ), ಸಂದೀಪ್(ದ್ವಿತೀಯ);
100 ಮೀಟರ್ ಓಟ (45 ವರ್ಷ ಮೇಲ್ಪಟ್ಟು): ಬಿ.ಎಂ.ಕೃಷ್ಣಪ್ಪ(ಪ್ರಥಮ), ಎಂ.ಶಿವಪ್ಪ(ದ್ವಿತೀಯ);
200 ಮೀಟರ್ ಓಟ (45 ವರ್ಷದೊಳಗಿನ): ಟಿ.ಡಿ.ಸಂದೀಪ್(ಪ್ರಥಮ), ರಾಜು(ದ್ವಿತೀಯ);
400 ಮೀಟರ್ ಓಟ (45 ವರ್ಷದೊಳಗಿನ): ಅನಂತರಾಜು(ಪ್ರಥಮ), ಜಗದೀಶ್ ಬಸವನಗೌಡ(ದ್ವಿತೀಯ);
400 ಮೀಟರ್ ಓಟ (45 ವರ್ಷ ಮೇಲ್ಪಟ್ಟು): ಕೃಷ್ಣಪ್ಪ(ಪ್ರಥಮ), ನಾರಾಯಣಸ್ವಾಮಿ(ದ್ವಿತೀಯ);
800 ಮೀಟರ್ ಓಟ (45 ವರ್ಷದೊಳಗಿನ): ಸಿ.ಕೆ.ಗಂಗಾಧರಪ್ಪ(ಪ್ರಥಮ), ಜಯಸಿಂಹ(ದ್ವಿತೀಯ);
800 ಮೀಟರ್ ಓಟ (45 ವರ್ಷ ಮೇಲ್ಪಟ್ಟು): ಕೃಷ್ಣಪ್ಪ(ಪ್ರಥಮ), ನಾರಾಯಣಸ್ವಾಮಿ(ದ್ವಿತೀಯ);
1500 ಮೀಟರ್ ಓಟ (45 ವರ್ಷದೊಳಗಿನ): ಸಿ.ಕೆ.ಗಂಗಾಧರಪ್ಪ(ಪ್ರಥಮ), ಸಂಗಪ್ಪ ಮೇಟಿ(ದ್ವಿತೀಯ);
5000 ಮೀಟರ್ ಓಟ (45 ವರ್ಷದೊಳಗಿನ): ಸಿ.ಕೆ.ಗಂಗಾಧರಪ್ಪ(ಪ್ರಥಮ), ವಿದ್ಯಾಸಾಗರ್(ದ್ವಿತೀಯ);
ರಿಲೇ : ಅನಂತರಾಜು ಮತ್ತು ತಂಡ(ಪ್ರಥಮ), ಗಂಗಾಧರಪ್ಪ ಮತ್ತು ತಂಡ(ದ್ವಿತೀಯ);
ಉದ್ದ ಜಿಗಿತ: ಬಿ.ಎನ್.ಅನಂತರಾಜು(ಪ್ರಥಮ), ವಿ.ರಾಜು(ದ್ವಿತೀಯ);
ಗುಂಡು ಎಸೆತ(45 ವರ್ಷದೊಳಗಿನ): ಶ್ರೀನಿವಾಸ ಯಾದವ್(ಪ್ರಥಮ), ಶಿವಕುಮಾರಸ್ವಾಮಿ (ದ್ವಿತೀಯ);
ಗುಂಡು ಎಸೆತ (45 ವರ್ಷ ಮೇಲ್ಪಟ್ಟು): ಎನ್.ಸುಬ್ಬರಾಮ್(ಪ್ರಥಮ), ಎಸ್.ಎ.ಚಂದ್ರಶೇಖರ್(ದ್ವಿತೀಯ);
ಡಿಸ್ಕಸ್ ಥ್ರೋ(45 ವರ್ಷದೊಳಗಿನ): ಜಯಸಿಂಹ(ಪ್ರಥಮ), ವಿ.ರಾಜು(ದ್ವಿತೀಯ);
ಡಿಸ್ಕಸ್ ಥ್ರೋ(45 ವರ್ಷ ಮೇಲ್ಪಟ್ಟು): ರಾಮಚಂದ್ರಪ್ಪ(ಪ್ರಥಮ), ಕೃಷ್ಣಪ್ಪ(ದ್ವಿತೀಯ);
ಜಾವಲಿನ್ ಥ್ರೋ(45 ವರ್ಷದೊಳಗಿನ): ಜಯಸಿಂಹ(ಪ್ರಥಮ), ಅಶ್ವತ್ಥಪ್ಪ(ದ್ವಿತೀಯ);
ಬ್ಯಾಟ್ಮಿಂಟನ್ ಡಬಲ್ಸ್ : ಟಿ.ಟಿ.ನರಸಿಂಹಪ್ಪ(ಪ್ರಥಮ), ಶಂಕರಪ್ಪ(ದ್ವಿತೀಯ);
ಕೇರಮ್(ಸಿಂಗಲ್ಸ್): ಸುಂದರಾಚಾರಿ(ಪ್ರಥಮ), ಟಿ.ಟಿ.ನರಸಿಂಹಪ್ಪ(ದ್ವಿತೀಯ);
ಕೇರಮ್ (ಡಬಲ್ಸ್): ಟಿ.ಟಿ.ನರಸಿಂಹಪ್ಪ ಮತ್ತು ಸುಂದರಾಚಾರಿ;
ಚೆಸ್: ಗಂಗಾಧರ್(ಪ್ರಥಮ), ಸುಂದರಾಚಾರಿ(ದ್ವಿತೀಯ);
ವಾಲೀಬಾಲ್: ಜಯಸಿಂಹ ಮತ್ತು ತಂಡ;
ಕಬಡ್ಡಿ: ರಾಮಚಂದ್ರಪ್ಪ ಮತ್ತು ತಂಡ; ಕ್ರಿಕೆಟ್: ರಾಜು ಮತ್ತು ತಂಡ;
ಬ್ಯಾಸ್ಕೆಟ್ಬಾಲ್: ರಾಜು ಮತ್ತು ತಂಡ.
ವಿಜೇತರಾದ ಮಹಿಳಾ ಕ್ರೀಡಾಪಟುಗಳು :
100 ಮೀಟರ್ ಓಟ (40 ವರ್ಷದೊಳಗಿನ): ಎಂ.ದೀಪ(ಪ್ರಥಮ), ಕೆ.ಎನ್.ಅನೀತ(ದ್ವಿತೀಯ);
100 ಮೀಟರ್ ಓಟ (40 ವರ್ಷ ಮೇಲ್ಪಟ್ಟು): ದ್ರಾಕ್ಷಾಯಿಣಿ(ಪ್ರಥಮ), ಕಲ್ಪನ(ದ್ವಿತೀಯ);
200 ಮೀಟರ್ ಓಟ (40 ವರ್ಷದೊಳಗಿನ): ಎಂ.ದೀಪ(ಪ್ರಥಮ), ಎಂ.ಶೋಭ(ದ್ವಿತೀಯ);
200 ಮೀಟರ್ ಓಟ (40 ವರ್ಷ ಮೇಲ್ಪಟ್ಟು): ದ್ರಾಕ್ಷಾಯಿಣಿ(ಪ್ರಥಮ), ಕಲ್ಪನ(ದ್ವಿತೀಯ);
400 ಮೀಟರ್ ಓಟ (40 ವರ್ಷದೊಳಗಿನ): ಎಂ.ದೀಪ(ಪ್ರಥಮ), ಕೆ.ಎನ್.ಅನೀತ(ದ್ವಿತೀಯ);
800 ಮೀಟರ್ ಓಟ (40 ವರ್ಷದೊಳಗಿನ): ಕೆ.ಎನ್.ಅನೀತ(ಪ್ರಥಮ), ವರಲಕ್ಷ್ಮಿ(ದ್ವಿತೀಯ);
800 ಮೀಟರ್ ಓಟ (40 ವರ್ಷ ಮೇಲ್ಪಟ್ಟು): ದ್ರಾಕ್ಷಾಯಿಣಿ(ಪ್ರಥಮ), ಶೋಭ(ದ್ವಿತೀಯ);
ರಿಲೇ: ದೀಪಾ ಮತ್ತು ತಂಡ; ಗುಂಡು ಎಸೆತ: ಶೋಭಾ(ಪ್ರಥಮ), ಪೂರ್ಣಿಮಾ(ದ್ವಿತೀಯ);
ಉದ್ದ ಜಿಗಿತ: ಅನಿತ(ಪ್ರಥಮ), ಶೋಭಾ(ದ್ವಿತೀಯ);
ಡಿಸ್ಕಸ್ ಥ್ರೋ(40 ವರ್ಷದೊಳಗಿನ): ಜ್ಯೋತಿಲಕ್ಷ್ಮಿ(ಪ್ರಥಮ), ವಿನುತಾ(ದ್ವಿತೀಯ);
ಡಿಸ್ಕಸ್ ಥ್ರೋ(40 ವರ್ಷ ಮೇಲ್ಪಟ್ಟು): ಗಿರಿಜಮ್ಮ(ಪ್ರಥಮ), ನಾಗವೇಣಿ(ದ್ವಿತೀಯ),
ಜಾವಲೀನ್ ಥ್ರೋ: ಜ್ಯೋತಿಲಕ್ಷ್ಮಿ(ಪ್ರಥಮ), ವಿನುತಾ(ದ್ವಿತೀಯ);
ಬ್ಯಾಟ್ಮಿಂಟನ್(ಸಿಂಗಲ್ಸ್ 40 ವರ್ಷದೊಳಗಿನ): ನೈನಾನಿಖತ್(ಪ್ರಥಮ), ಅನಿತ(ದ್ವಿತೀಯ);
ಬ್ಯಾಟ್ಮಿಂಟನ್(ಸಿಂಗಲ್ಸ್ 40 ವರ್ಷ ಮೇಲ್ಪಟ್ಟು): ಬಿ.ಜಿ.ಲತಾ(ಪ್ರಥಮ), ಕಲ್ಪನಾ(ದ್ವಿತೀಯ);
ಬ್ಯಾಟ್ಮಿಂಟನ್(ಡಬಲ್ಸ್): ಜ್ಯೋತಿಲಕ್ಷ್ಮಿ(ಪ್ರಥಮ), ಅನಿತಾ(ದ್ವಿತೀಯ).
ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರು:
ಕರ್ನಾಟಕ ಸಂಗೀತ(ಲಘು ಶಾಸ್ತ್ರೀಯ): ಸಿ.ಬಿ.ಪ್ರಕಾಶ್(ಪ್ರಥಮ);
ಜಾನಪದ ನೃತ್ಯ: ಚಂದ್ರಕಳಾ ಮತ್ತು ಸಿ,ಬಿ.ಪ್ರಕಾಶ್ ತಂಡ(ಪ್ರಥಮ);
ಕರಕುಶಲ ವಸ್ತುಗಳ ಪ್ರದರ್ಶನ: ಸಿ.ಬಿ.ಪ್ರಕಾಶ್(ಪ್ರಥಮ);
ಕಿರುನಾಟಕ : ಪ್ರಕಾಶ್ ಮತ್ತು ತಂಡ.

ನಿವೇಶನ ರಹಿತರಿಗೆ ನಿವೇಶನ ಹಂಚಿಕೆ

0

ತಾಲ್ಲೂಕಿನಾದ್ಯಂತ ಆಶ್ರಯ ಯೋಜನೆಯಡಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಜಿಲ್ಲಾಧಿಕಾರಿಗಳಿಂದ ಅನುಮೋದನೆಯಾಗಿರುವಂತಹ ಜಮೀನಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬೇಲಿ ನಿರ್ಮಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಆಶ್ರಯ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿವೇಶನ ರಹಿತರಿಗೆ ನಿವೇಶನ ಮಂಜೂರು ಮಾಡುವುದು ಮತ್ತು ವಸತಿ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಪಿಡಿಓ ಗಳು ಹಾಗೂ ಅಧಿಕಾರಿಗಳು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎಂ.ವೆಂಕಟೇಶ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಗೋಮಾಳಗಳಲ್ಲಿ ಈಗಾಗಲೇ ಮನೆಗಳನ್ನು ನಿರ್ಮಿಸಿಕೊಂಡಿರುವವರಿಗಾಗಿ ಸರ್ಕಾರ ಅಕ್ರಮ ಸಕ್ರಮದಲ್ಲಿ ಖಾತೆ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಹಾಗಾಗಿ ಆಯಾ ಗ್ರಾಮ ಪಂಚಾಯಿತಿ ಪಿಡಿಓಗಳು ಮತ್ತು ಕಾರ್ಯದರ್ಶಿಗಳು ಅಂತಹವರಿಂದ ಅರ್ಜಿ ಸಲ್ಲಿಸಲು ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕಿದೆ ಎಂದರು. ಆದ್ಯತೆ ಮೇರೆಗೆ ಪಿಡಿಓಗಳು ಕರ್ತವ್ಯ ನಿರ್ವಹಿಸಬೇಕು ಎಂದರು.
ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೧೮೯ ಫಲಾನುಭವಿಗಳು, ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೫೨ ಫಲಾನುಭವಿಗಳು, ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿಯ ೯೬ ಫಲಾನುಭವಿಗಳು, ವೈ ಹುಣಸೇನಹಳ್ಳಿ ಗ್ರಾಮ ಪಂಚಾಯಿತಿಯ ೮೦ ಫಲಾನುಭವಿಗಳು, ಹಂಡಿಗನಾಳ ಗ್ರಾಮ ಪಂಚಾಯಿತಿಯ ೪೨೦ ಫಲಾನುಭವಿಗಳ ಪಟ್ಟಿಯನ್ನು ಈ ಸಂದರ್ಭದಲ್ಲಿ ಅನುಮೋದಿಸಲಾಯಿತು.
ಈ ಪೈಕಿ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ತಿಪ್ಪೇನಹಳ್ಳಿ ೧೧೪ ಮಂದಿ ಫಲಾನುಭವಿಗಳ ಪಟ್ಟಿ ಅನುಮೋದನೆ ನೀಡಿದೆ. ಗುಡ್ಲನರಸಿಂಹನಹಳ್ಳಿಯ ೮೩ ಮಂದಿ ಫಲಾನುಭವಿಗಳಿಗೆ ನಿವೇಶನ ಹಂಚಲು ಗ್ರಾಮದಿಂದ ಸುಮಾರು ಎರಡು ಕಿ.ಮೀ ದೂರವಿರುವ ಸರ್ವೇ ನಂ ೧೯ ರಲ್ಲಿ ಭೂಮಿ ಮಂಜೂರಾಗಿದೆ. ಆದರೆ ಫಲಾನುಭವಿಗಳು ಗ್ರಾಮದ ಬಳಿಯಿರುವ ಸರ್ವೇ ನಂ ೩೯ ರಲ್ಲಿ ನಮಗೆ ನಿವೇಶನ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಅನುಮೋದನೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫಲಾನುಭವಿಗಳಿಗೆ ಸರ್ಕಾರದಿಂದ ಮಂಜೂರಾಗಿರುವ ಮುಚ್ಚಾಟಲದಿನ್ನೇ ಗ್ರಾಮದ ಭೂಮಿ ಇದೀಗ ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿಗೆ ಸೇರಿದ್ದು ಎರಡೂ ಪಂಚಾಯಿತಿಗಳ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪತ್ರ ಮುಖೇನ ಚರ್ಚೆ ನಡೆಸಿ ನಿವೇಶನ ರಹಿತ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಲು ಮುಂದಾಗಬೇಕು ಎಂದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಅನುಸೂಯಮ್ಮ, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಮೋಹನ್ಕುಮಾರ್, ವಿವಿಧ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.

ಸಂಪೂರ್ಣ ಕನ್ನಡ ವ್ಯಾಕರಣ ಕಲಿಕಾ ಕ್ಯಾಲೆಂಡರ್

0

ಭಾಷಾಜ್ಞಾನ ವಿದ್ಯಾರ್ಥಿಗಳಿಗೆ ಬಹುಮುಖ್ಯ. ಅದರಲ್ಲೂ ವ್ಯಾಕರಣದ ಕಲಿಕೆ ನಮ್ಮ ಭಾಷಾ ಬಳಕೆಯನ್ನು ಉತ್ತಮಗೊಳಿಸುತ್ತದೆ ಎಂದು ಬಿಜೆಪಿ ಮುಖಂಡ ಡಿ.ಆರ್.ಶಿವಕುಮಾರ್ಗೌಡ ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ‘ಸಂಪೂರ್ಣ ಕನ್ನಡ ವ್ಯಾಕರಣ ಕಲಿಕಾ ಕ್ಯಾಲೆಂಡರ್’ ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅನುಕೂಲವಾಗುವ ರೀತಿ ಮತ್ತು ಅವರ ಭಾಷಾ ಜ್ಞಾನವನ್ನು ವೃದ್ಧಿಸಲು ನೆರವಾಗುವ ರೀತಿಯಲ್ಲಿ ಸೋಮಶೇಖರ್ ಎಂಬ ಶಿಕ್ಷಣ ತಜ್ಞರು ವ್ಯಾಕರಣವನ್ನು ಸರಳವಾಗಿ ರಚಿಸಿದ್ದಾರೆ. ಅವರ ಈ ರಚನೆಯು ನಮ್ಮ ಕ್ಷೇತ್ರದ ವಿದ್ಯಾರ್ಥಿಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ಕ್ಯಾಲೆಂಡರ್ ರೂಪದಲ್ಲಿ ಮುದ್ರಿಸಲಾಗಿದೆ. ಸುಮಾರು 10 ಸಾವಿರ ಈ ವ್ಯಾಕರಣದ ಕ್ಯಾಲೆಂಡರ್ಗಳನ್ನು ಮುದ್ರಿಸಿದ್ದು ತಾಲ್ಲೂಕಿನಾದ್ಯಂತ ವಿದ್ಯಾರ್ಥಿಗಳಿಗೆ ತಲುಪಿಸಲಾಗುವುದು ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಸುರೇಂದ್ರಗೌಡ, ರವಿಕುಮಾರ್, ನರೇಶ್, ಚಲಪತಿ, ಮುನಿಕೃಷ್ಣಪ್ಪ, ಕಾಲೇಜಿನ ಉಪನ್ಯಾಕರಾದ ಮುರಳಿ, ಮುನಿರಾಜು, ಮಂಜುಳ ಹಾಜರಿದ್ದರು.

ಹಣ ಬಾಕಿ ಉಳಿಸಿಕೊಂಡ ಕಸಾಪ ಜಿಲ್ಲಾಧ್ಯಕ್ಷರ ಬಗ್ಗೆ ಶಾಸಕ ಎಂ.ರಾಜಣ್ಣ ಅಸಮಧಾನ

0

‘ಕನ್ನಡ ನಾಡು ನುಡಿಯನ್ನು ಕಟ್ಟುವ ಕಸಾಪದ ಹಣಕಾಸಿನ ವಿಚಾರದಲ್ಲಿ ಪರಿಶುದ್ಧವಾಗಿರಬೇಕು. ಅತ್ಯುತ್ತಮವಾಗಿ ಕಸಾಪ ಕಾರ್ಯಕ್ರಮಗಳನ್ನು ಮಾಡಿರುವ ನಿಕಟ ಪೂರ್ವ ಅಧ್ಯಕ್ಷರಿಗೆ ಒಂಭತ್ತು ತಿಂಗಳುಗಳಾದರೂ ಹಣ ಬಾಕಿ ಉಳಿಸಿಕೊಂಡಿರುವುದು ಸರಿಯಲ್ಲ. ತಕ್ಷಣವೇ ಹಣ ಸಂದಾಯಮಾಡಿ’ ಎಂದು ಶಾಸಕ ಎಂ.ರಾಜಣ್ಣ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ಗೆ ಸೂಚಿಸಿದರು.
ನಗರದಲ್ಲಿ ಬುಧವಾರ ಜಿಲ್ಲಾ ಕಸಾಪ ಸಮ್ಮೇಳನಕ್ಕೆ ಪತ್ರಮುಖೇನ ಶಾಸಕ ಎಂ.ರಾಜಣ್ಣ ಅವರನ್ನು ಆಹ್ವಾನಿಸಲು ಬಂದಿದ್ದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ಅವರ ಕಾರ್ಯವೈಖರಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ಅವರು ಮಾತನಾಡಿದರು.
ಕನ್ನಡದ ಕೆಲಸದಲ್ಲಿ ತೊಡಗಿರುವವರೆಲ್ಲ ಹೊಂದಾಣಿಕೆಯಿಂದ ಇರಬೇಕು. ಕಸಾಪ ನಿಕಟಪೂರ್ವ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಅತ್ಯುತ್ತಮವಾಗಿ ಕೆಲಸ ಮಾಡಿದ್ದು ನಮ್ಮ ಗಮನಕ್ಕೂ ಬಂದಿದೆ. ಅವರಿಗೆ ಕೊಡಬೇಕಾದ ಕೇಂದ್ರ ಕಸಾಪ ಅನುದಾನ 30,600 ರೂ ಹಣವನ್ನು ಏಕೆ ತಡೆಹಿಡಿದಿದ್ದೀರ. ತಕ್ಷಣವೇ ಹಣವನ್ನು ಚುಕ್ತಾ ಮಾಡಿ ಎಂದು ಹೇಳಿದರು.
ತನಗೆ ಕಸಾಪ ಅನುದಾನದ ಹಣವೇ ಬಂದಿಲ್ಲ ಎಂದ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್, ನಿಕಟಪೂರ್ವ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಅವರು ಕೇಂದ್ರ ಕಸಾಪ ಗೌರವಾಧ್ಯಕ್ಷರಿಂದ ಹಣ ನೀಡಿರುವ ಬಗ್ಗೆ ಪತ್ರವನ್ನು ತೋರಿಸಿದ ನಂತರ ಒಪ್ಪಿಕೊಂಡರು.
ಕಸಾಪ ನಿಕಟಪೂರ್ವ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಕಸಾಪ ತಾಲ್ಲೂಕು ಅಧ್ಯಕ್ಷನಾಗಿ ಸುಮಾರು ಮುನ್ನೂರು ಕಾರ್ಯಕ್ರಮವನ್ನು ಮಾಡಿದ್ದೇನೆ. ಆರು ದತ್ತಿ ಕಾರ್ಯಕ್ರಮಗಳ ಹಣ 8,100 ರೂಗಳು, ಕಚೇರಿ ನಿರ್ವಹಣೆ ಎರಡನೇ ಕಂತು 7,500 ರೂಗಳು, 102ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ 5,000 ರೂಗಳು ಮತ್ತು ಕರ್ನಾಟಕ ಏಕೀಕರಣ ವಜ್ರಮಹೋತ್ಸವ ಕಾರ್ಯಕ್ರಮದ್ದು 10 ಸಾವಿರ ರೂಗಳು ಸೇರಿದಂತೆ ಒಟ್ಟಾರೆ 30,600 ರೂಗಳು ಬರಬೇಕು. ಈ ಎಲ್ಲಾ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆ, ಪತ್ರಿಕಾ ವರದಿ, ಛಾಯಾಚಿತ್ರಗಳು, ಕಾರ್ಯಕ್ರಮಗಳ ಖರ್ಚು ವೆಚ್ಚದ ರಸೀದಿಗಳನ್ನು ಲಗತ್ತಿಸಿ ಆಗಿನ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಬೈಯಣ್ಣ ಅವರಿಗೆ ನೀಡಿ ಹಿಂಬರಹ ಪಡೆದಿದ್ದೇನೆ. ಕೊಟ್ಟು ವರ್ಷವಾಗುತ್ತಾ ಬಂದರೂ ಹಣ ನೀಡದೇ ಸತಾಯಿಸುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಕಸಾಪದ ವಿವಿಧ ಪದಾಧಿಕಾರಿಗಳಿಗೆ ನಾನು ಪತ್ರ ಬರೆದಿದ್ದು, ಅವರಿಂದ ಜಿಲ್ಲಾಧ್ಯಕ್ಷರಿಗೆ ಹಣ ನೀಡಿರುವುದಾಗಿ ಮಾಹಿತಿ ಬಂದಿದೆ.
ವೈವಿಧ್ಯಮಯವಾಗಿ ಕಾರ್ಯಕ್ರಮವನ್ನು ಮಾಡಿ ಕಸಾಪವನ್ನು ತಾಲ್ಲೂಕಿನ ಮೂಲೆಮೂಲೆಗೂ ಮುಟ್ಟಿಸಲು ಸಫಲರಾದರೂ ಒಂದೇ ವರ್ಷಕ್ಕೆ ಅವಧಿಯನ್ನು ಮೊಟಕುಗೊಳಿಸಿ ಬೇರೊಬ್ಬರನ್ನು ಅಧ್ಯಕ್ಷರನ್ನಾಗಿ ನಿಯೋಜಿಸಿದರು. ಅಂದಿನಿಂದ ಕಸಾಪ ಕಾರ್ಯಕ್ರಮಗಳು ಸ್ಥಗಿತಗೊಂಡವು. ದತ್ತಿ ಕಾರ್ಯಕ್ರಮಗಳು ನಡೆದಿಲ್ಲ. ಶಾಲೆಗೊಂದು ಕನ್ನಡ ಕಾರ್ಯಕ್ರಮ ಉದ್ಘಾಟನೆ ದಿನವೇ ಸಮಾರೋಪ ಮಾಡಿದ ಕೀರ್ತಿ ಇವರದ್ದು, ಶಾಲೆಗಳಲ್ಲಿ ಕನ್ನಡದ ಕಾರ್ಯಕ್ರಮ ಮಾಡದೆ ತಾಲ್ಲೂಕು ಕಸಾಪ ನಿಷ್ಕ್ರಿಯವಾಗಿದೆ. ತನ್ನ ಏಕಮುಖ ನಿರ್ಣಯ ಮತ್ತು ಸರ್ವಾಧಿಕಾರಿ ಧೋರಣೆಯಿಂದ ಜಿಲ್ಲಾಧ್ಯಕ್ಷರು ಕಸಾಪಗೆ ಕಪ್ಪುಚುಕ್ಕೆಯಂತಾಗಿದ್ದಾರೆ ಎಂದು ಆರೋಪಿಸಿದರು.
ಶಾಸಕರ ಸೂಚನೆಯ ಮೇರೆಗೆ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ಶನಿವಾರದಂದು ಹಣವನ್ನು ಪೂರ್ತಿಯಾಗಿ ಸಂದಾಯ ಮಾಡುವುದಾಗಿ ಒಪ್ಪಿಕೊಂಡರು.
ಕಸಾಪ ಗುಡಿಬಂಡೆ ತಾಲ್ಲೂಕು ಘಟಕದ ಅಧ್ಯಕ್ಷೆ ಅನುರಾಧಾ ಆನಂದ್, ಜಿಲ್ಲಾ ಘಟಕದ ಉಪಾಧ್ಯಕ್ಷ ಎಸ್.ಶಂಕರ್, ಗುಡಿಬಂಡೆ ಆನಂದ್, ಮಾಜಿ ಪುರಸಭಾ ಸದಸ್ಯ ಲಕ್ಷ್ಮಿನಾರಾಯಣ್ ಹಾಜರಿದ್ದರು.

ಸಂಸ್ಕಾರ ಮರೆಯದಿರಿ, ಪರಸ್ಪರ ಪ್ರೀತಿ, ಗೌರವ ಇರಲಿ

0

ಆಧುನಿಕ ಜಮಾನದ ಹೆಸರಿನಲ್ಲಿ ಸಂಸ್ಕಾರ ಮರೆಯುವುದು ಒಳಿತಲ್ಲ. ಪರಸ್ಪರ ಪ್ರೀತಿ, ಗೌರವ ಭಾವನೆಗಳನ್ನು ಉಳಿಸಿಕೊಳ್ಳಬೇಕು. ಗುರು-ಶಿಷ್ಯರ ನಡುವಿನ ಬಾಂಧವ್ಯ ಕುಸಿಯಬಾರದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎ-.ಹುಣಸೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭಾರತೀಯ ಮಾನವ ಹಕ್ಕುಗಳ ಜಾಗೃತಿ ವೇದಿಕೆ ಮತ್ತು ಗ್ರಾಮದ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಿಸರ ಕಾಳಜಿ, ಹಿರಿಯರ ಆದರ್ಶ, ರಾಷ್ಟ್ರಪ್ರೇಮ, ಪರಂಪರೆಯ ಅರಿವು, ಸಾಮಾಜಿಕ ಬದ್ಧತೆ, ಶಿಸ್ತು, ಸಾಮಾಜಿಕ ಕಳಕಳಿ, ಸಾರ್ವಜನಿಕ ಆಸ್ತಿಯ ಬಗ್ಗೆ ಗೌರವ ಮುಂತಾದ ಅಂಶಗಳನ್ನು ಮೈಗೂಡಿಸಿಕೊಂಡಲ್ಲಿ ಯಾವುದೇ ಉದ್ಯೋಗ, ವ್ಯಾಪಾರ, ವಹಿವಾಟನ್ನು ನಡೆಸಿದರೂ ಮಾದರಿಯಾಗುತ್ತೀರಿ. ಶಿಷ್ಯರು ಉತ್ತಮ ನಾಗರಿಕರಾಗುವುದೇ ಗುರುವಿಗೆ ನೀಡುವ ಉನ್ನತ ಕಾಣಿಕೆ ಎಂದು ಹೇಳಿದರು.
ಶಾಲಾ ವಾರ್ಷಿಕೋತ್ಸವಗಳೂ ಮತ್ತು ಇಂತಹ ಗುರುವಂದನಾ ಕಾರ್ಯಕ್ರಮಗಳು ಕೇವಲ ಖಾಸಗಿ ಶಾಲೆಗಳಿಗೆ ಮಾತ್ರ ಸೀಮತವಾಗದಂತೆ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ರಚಿಸಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗಾಗಿ ಯುವಕರು ಮುಂದಾಗಿರುವುದು ಶ್ಲಾಘನೀಯ ಎಂದರು.
ಗುರುವಂದನಾ ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ರಂಗೋಲಿ ಸ್ಪರ್ಧೆ ಹಾಗೂ ಭಾರತೀಯ ಮಾನವ ಹಕ್ಕುಗಳ ಜಾಗೃತಿ ವೇದಿಕೆ ವತಿಯಿಂದ ಯುವಕರಿಗೆ ವಾಲೀಬಾಲ್ ಪಂದ್ಯಾವಳಿ ಮತ್ತು ಶಾಲಾ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ವಿ.ಶಿವಣ್ಣ, ಮಾನವ ಹಕ್ಕುಗಳ ಜಾಗೃತಿ ವೇದಿಕೆ ಅಧ್ಯಕ್ಷ ಮಲ್ಲೇಶ್, ಉಪಾಧ್ಯಕ್ಷ ಅನಂತಪದ್ಮಯ್ಯ, ಸಿಆರ್ಪಿ ಬಿ.ವಿ.ಮಂಜುನಾಥ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಅನಸೂಯಮ್ಮ, ಆನಂದ್, ಮುಖಂಡರಾದ ಮುನಿಕೃಷ್ಣ, ರಾಮಾಂಜಿ ಹಾಜರಿದ್ದರು.

ವಿಶ್ವ ವಿವೇಕ ಯುವಕರ ಬಳಗದಿಂದ ಸ್ವಾಮಿ ವಿವೇಕಾನಂದ ಜಯಂತಿ

0

ಶಿಡ್ಲಘಟ್ಟದ ಹೊರವಲಯದ ಮಾರುತಿನಗರದ ವಿಶ್ವ ವಿವೇಕ ಯುವಕರ ಬಳಗದಿಂದ ಸೋಮವಾರ ೫ ನೇ ವರ್ಷದ ಸ್ವಾಮಿ ವಿವೇಕಾನಂದ ಜಯಂತಿಯನ್ನು ಆಚರಿಸಲಾಯಿತು. ಅಶ್ವತ್ಥ್, ಸುಬ್ರಮಣಿ, ವೆಂಕಟೇಶಪ್ಪ, ಸಿ.ಶ್ರೀನಿವಾಸ್ ಹಾಜರಿದ್ದರು.

ಮಕ್ಕಳ ಗಣಿತ ಕಲಿಕಾ ಆಂದೋಲನ

0

ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಂಗಳವಾರ ಅಕ್ಷರಾ ಫೌಂಡೇಶನ್ ಹಾಗೂ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮದಲ್ಲಿ ಪರೀಕ್ಷಾವಿಜೇತ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ, ಸದಸ್ಯ ಶ್ರೀರಂಗಪ್ಪ, ಅಕ್ಷರ ಫೌಂಡೇಷನ್ ಕ್ಷೇತ್ರ ಸಂಯೋಜಕ ಕೆ.ವಿ.ಮಂಜುನಾಥ್, ಮುಖ್ಯಶಿಕ್ಷಕಿ ಉಮಾ ಹಾಜರಿದ್ದರು.

ಸಮಾನತೆಯ ಸಮಾಜ ನಿರ್ಮಾಣವಾಗಲಿ

0

ಸಮಾಜದ ಎಲ್ಲಾ ವರ್ಗದ ಜನತೆಯು ಸಮಾನತೆಯಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಬೇಕು ಎಂದು ಶೂದ್ರಶಕ್ತಿ ಸಮಿತಿಯ ಅಧ್ಯಕ್ಷ ಬಿ.ಆರ್.ರಾಮೇಗೌಡ ತಿಳಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮದಲ್ಲಿ ಸೋಮವಾರ ಶೂದ್ರಶಕ್ತಿ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಸಂಕ್ರಾಂತಿ ರೈತ ಹಬ್ಬದ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಪ್ರತಿನಿತ್ಯ ಶೋಷಣೆಗೊಳಪಡುತ್ತಿರುವ ಶೂದ್ರಶಕ್ತಿಗಳು ಒಂದಾಗುವುದರೊಂದಿಗೆ ಮನುಸಂಸ್ಕೃತಿಯ ಅಂಶಗಳ ವಿರುಧ್ದ ಹೋರಾಟ ಮಾಡಬೇಕಾಗಿದೆ ಎಂದರು.
ಭಾರತ ದೇಶದಲ್ಲಿ ಹುಟ್ಟಿಬೆಳೆದಿರುವ ನಮಗೆ ವೇದಗಳನ್ನು ಕಲಿಯುವಂತಹ ಸ್ವಾತಂತ್ರ್ಯವಿಲ್ಲವೆ ಎಂದ ಅವರು ಒಕ್ಕಲಿಗ, ಲಿಂಗಾಯಿತ, ಕುರುಬ, ಕುಂಬಾರ, ಬಣಜಿಗ, ಗೊಲ್ಲ, ಬೇಡ, ಬೆಸ್ತ, ಅಗಸ, ನಾಯಿಂದ, ಇಡಿಗ, ತಿಗಳ, ದಲಿತ, ಗಿರಿಜನ, ಕೊರಚ, ಬೋವಿ, ಉಪ್ಪಾರ, ನೇಕಾರ, ಕೊರಮ, ವಡ್ಡ, ಬಂಜಾರ ಮರಾಠ ಮುಂತಾದವರೆಲ್ಲರೂ ಶೂದ್ರರೇ ಆಗಿದ್ದು, ಅವರವರ ಕಸುಬುಗಳಿಗೆ ಅನುಗುಣವಾಗಿ ಜಾತಿಗಳನ್ನು ವಿಭಜಿಸಲಾಗಿದೆ ಹಾಗಾಗಿ ಈ ಸತ್ಯವನ್ನು ಅರ್ಥಮಾಡಿಕೊಂಡು ಪ್ರತಿಯೊಬ್ಬ ನಾಗರಿಕರು ಸಮಾನತೆಯ ಜೀವನ ನಡೆಸುವಂತಾಗಬೇಕು ಎಂದರು.
ಪಶುಸಂಗೋಪನಾ ಇಲಾಖೆಯ ಅಡಿಷನಲ್ ಡೈರೆಕ್ಟರ್ ಡಾ.ಚಲುವಯ್ಯ ಮಾತನಾಡಿ ಸತತ ಬರಗಾಲದಿಂದಾಗಿ ರೈತರ ಸುಗ್ಗಿಯ ಹಬ್ಬವಾದ ಸಂಕ್ರಾಂತಿ ಹಬ್ಬ ಇತ್ತೀಚೆಗೆ ಕಳೆಗಟ್ಟುತ್ತಿದೆ. ಈ ಭಾಗದ ರೈತರು ನೀರಿನ ಕೊರತೆಯಿಂದಾಗಿ ವ್ಯವಸಾಯ ಮಾಡಲಾಗದೇ ಅತ್ತ ನಗರಗಳ ಕಡೆ ವಲಸೆ ಹೋಗಲಾಗದ ಅತಂತ್ರ ಸ್ಥಿತಿಯಲ್ಲಿದ್ದು ರೈತರ ಉಳಿವಿಗಾಗಿ ಪಶುಸಂಗೋಪನೆ ಸಹಕಾರಿಯಾಗಿದೆ. ಪಶುಸಂಗೋಪನೆಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಮಿನಾರಾಯಣರೆಡ್ಡಿ, ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಕಾರ್ಯದರ್ಶಿ ಪ್ರತೀಶ್, ಶೂದ್ರಶಕ್ತಿ ಸಮಿತಿಯ ಗೋವಿಂದರಾಜು, ಸ್ಥಳೀಯ ಮುಖಂಡರಾದ ಶಂಕರನಾರಾಯಣ್, ಅರುಣ್ಬಾಭು, ಮಾರಪ್ಪ ಹಾಜರಿದ್ದರು.