Home Blog Page 387

ಶಿವಣ್ಣ ಅವರ ೬೮ನೇ ಜಯಂತ್ಯುತ್ಸವ

0

ಶಿಡ್ಲಘಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ದಲಿತ ಸಂಘರ್ಷ ಸಮಿತಿಯಿಂದ ದಲಿತ ಮುಖಂಡ ಶಿವಣ್ಣ ಅವರ ೬೮ನೇ ಜಯಂತ್ಯುತ್ಸವದ ಅಂಗವಾಗಿ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಲಾಯಿತು. ಶಾಸಕ ಎಂ.ರಾಜಣ್ಣ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಅರುಣ್ಕುಮಾರ್, ತಾಲ್ಲೂಕು ಸಂಚಾಲಕ ಅಶೋಕ್, ಮುನಿವೆಂಕಟಪ್ಪ, ರಮೇಶ್, ವೇಣು, ನಾಗರಾಜ್, ಕಿರಣ್, ಗಂಗಾಧರ್ ಹಾಜರಿದ್ದರು.

ಕಾಯಕದ ಮಹತ್ವ ತಿಳಿಸಿದ ಯೋಗಿ

0

ಕಾಯಕದ ಮಹತ್ವವನ್ನು ತಿಳಿಸಿದ ಮಹಾನ್ ಯೋಗಿ ಸಿದ್ದರಾಮೇಶ್ವರರು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಐದನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
12ನೇ ಶತಮಾನದ ಖ್ಯಾತ ಪಂಚಶರಣರಲ್ಲಿ ಒಬ್ಬರಾದ ಶಿವಯೋಗಿ ಸಿದ್ದರಾಮೇಶ್ವರರು ವೈದಿಕ ಧರ್ಮದ ಮೌಡ್ಯತೆ, ಮೇಲುಕೀಳು, ವರ್ಣಧರ್ಮ ಶ್ರೇಣೀಕರಣ, ಸಂಪ್ರದಾಯಗಳಿಂದ ದೂರ ಉಳಿದು ಎಲ್ಲರೂ ಸಮಾನರು ಎಂಬ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಚಿಂತನೆಯನ್ನು ಆ ಕಾಲದಲ್ಲೇ ಹುಟ್ಟುಹಾಕಿದವರು ಎಂದರು.
ತಹಶೀಲ್ದಾರ್ ಅಜಿತ್ಕುಮಾರ್ ರೈ ಮಾತನಾಡಿ, ದಯೆಯೇ ಧರ್ಮದ ಮೂಲವೆಂದು ಸಾರಿದ ವಚನಕಾರರು ಮೌಡ್ಯದ ವಿರುದ್ಧ ಜನಜಾಗೃತಿ ಮೂಡಿಸಿದ್ದರು. ಕೆರೆ ಕಟ್ಟೆಗಳನ್ನು, ಅನ್ನದಾಸೋಹ ಕಟ್ಟಡಗಳನ್ನು ಕಟ್ಟುವ ಮೂಲಕ ಕಲ್ಲು ಮಣ್ಣಿನ ಕಸುಬಿನ ಮಹತ್ವ ಎತ್ತಿಹಿಡಿದವರು ಸಿದ್ದರಾಮೇಶ್ವರರು. ದೇವರ ಬಗ್ಗೆ ಅಪಾರ ಭಕ್ತಿಯುಳ್ಳ ಶಿವಭಕ್ತರಾಗಿ, ಕರ್ಮಯೋಗಿಯಾಗಿ ಅಕ್ಷರಜ್ಞಾನದಿಂದ ವಚನಗಳನ್ನು ರಚಿಸುವ ಮೂಲಕ ಜ್ಞಾನಯೋಗಿಗಳಾಗಿದ್ದಾರೆ ಎಂದು ಹೇಳಿದರು.
ಬೋವಿ ಜನಾಂಗದ ಹಿರಿಯರನ್ನು ಮತ್ತು ಹೆಚ್ಚು ಅಂಕ ಗಳಿಸಿರುವ ಎಂ.ರೂಪ ಅವರನ್ನು ಗೌರವಿಸಲಾಯಿತು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎಂ.ವೆಂಕಟೇಶ್, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್, ಆಯುಕ್ತ ಜಿ.ಎನ್.ಚಲಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಚಂದ್ರಶೇಖರ ಬಾಬು, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಆರ್.ಕೇಶವರೆಡ್ಡಿ, ತಾಲ್ಲೂಕು ಬೋವಿ ಸಂಘದ ಅಧ್ಯಕ್ಷ ಚಿಕ್ಕನರಸಿಂಹಪ್ಪ, ಶ್ರೀನಿವಾಸ್, ರಘು ಹಾಜರಿದ್ದರು.

ಎನ್ ಪಿ ಎಸ್ ನೌಕರರ ‘ಫ್ರೀಡಂ ಪಾರ್ಕ್ ಚಲೋ’

0

‘ಎನ್ಪಿಎಸ್ ರದ್ದಾಗಲಿ, ನಿಶ್ಚಿತ ಪಿಂಚಣಿ ಜಾರಿಯಾಗಲಿ’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎನ್ಪಿಎಸ್ ನೌಕರರು ಹೋರಾಟ ಮಾಡುತ್ತಿದ್ದೇವೆ. ಜನವರಿ 20 ರಂದು ‘ಫ್ರೀಡಂ ಪಾರ್ಕ್ ಚಲೋ’ ಎಂಬ ಒಂದು ದಿನದ ಉಪವಾಸ ಧರಣಿಯನ್ನು ಹಮ್ಮಿಕೊಂಡಿದ್ದು ತಾಲ್ಲೂಕಿನಿಂದ ನೂರಾರು ಮಂದಿ ಸರ್ಕಾರಿ ನೌಕರರು ಬೆಂಗಳೂರಿಗೆ ತೆರಳುತ್ತಿರುವುದಾಗಿ ಎನ್ಪಿಎಸ್ ನೌಕರರ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಎನ್.ಗಜೇಂದ್ರ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಏಪ್ರಿಲ್ 2006 ರ ನಂತರ ಸರ್ಕಾರಿ ಸೇವೆಗೆ ಸೇರಿರುವ ನೌಕರರಿಗೆ ಜಾರಿ ಮಾಡಿರುವ ಅವೈಜ್ಞಾನಿಕವಾದ ಹೊಸ ಪಿಂಚಣಿ ಯೋಜನೆ(ಎನ್ಪಿಎಸ್)ಯು ಗೊಂದಲ, ಅಭದ್ರತೆ ಹಾಗೂ ಅನಿಶ್ಚಿತತೆಯಿಂದ ಕೂಡಿದೆ. ಇದರಿಂದ ಪಿಂಚಣಿ ಅನಿಶ್ಚಿತವಾಗಿದೆ. ಜಿಪಿಎಫ್ ಸೌಲಭ್ಯವಿಲ್ಲ. ಕುಟುಂಬ ಪಿಂಚಣಿ, ಮರಣ ಹಾಗೂ ನಿವೃತ್ತಿ ಉಪದಾನವಿಲ್ಲ. ತುಟ್ಟಿಭತ್ಯೆ ಇಲ್ಲ, ಕನಿಷ್ಠ ಬರವಸೆಯೂ ಇಲ್ಲ. ಇದನ್ನು ರದ್ದುಗೊಳಿಸಿ ಹಳೆಯ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತಿದ್ದೇವೆ. ಈ ಬಗ್ಗೆ ತಾಲ್ಲೂಕಿನ ಸರ್ಕಾರಿ ನೌಕರರಿಗೆ ವಿಚಾರ ಸಂಕಿರಣ ನಡೆಸಿ ಅರಿವು ಮೂಡಿಸಲಾಗಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯಲಿರುವ ಒಂದು ದಿನದ ಉಪವಾಸ ಧರಣಿಗೆ ಕುಟುಂಬ ಸಮೇತರಾಗಿ ಭಾಗವಹಿಸಲು ತಾಲ್ಲೂಕಿನ ವಿವಿಧ ಇಲಾಖೆಗಳ ಸುಮಾರು 450 ಸರ್ಕಾರಿ ನೌಕರರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಎಲ್ಲ ಸರ್ಕಾರಿ ನೌಕರರು ಒಂದು ದಿನದ ಸಾಂದರ್ಭಿಕ ರಜೆಯನ್ನು ಹಾಕಿ ಪಾಲ್ಗೊಳ್ಳಬೇಕು. ಧರಣಿಯಲ್ಲಿ ಶಿಸ್ತನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎನ್ಪಿಎಸ್ ನೌಕರರ ತಾಲ್ಲೂಕು ಘಟಕದ ವತಿಯಿಂದ ಪ್ರತಿಯೊಬ್ಬರಿಗೂ ಟೀ ಶರ್ಟ್, ಗಾಂಧಿ ಟೋಪಿ ಮತ್ತು ಸಂಘದ ಬಾವುಟವನ್ನು ನೀಡಲಾಗುವುದು. ನಮ್ಮ ಹೋರಾಟ ಏನಿದ್ದರೂ ಎನ್ಪಿಎಸ್ ವಿರುದ್ಧವಷ್ಟೇ. ಸರ್ಕಾರ, ಯಾವುದೇ ಪಕ್ಷ ಅಥವಾ ಸಂಘ ಸಂಸ್ಥೆಗಳ ವಿರುದ್ಧವಲ್ಲ ಎಂದು ಹೇಳಿದರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಬಳಿಯಿಂದ ಫ್ರೀಡಂ ಪಾರ್ಕ್ ಹೋರಾಟಕ್ಕೆ ಬರುವವರಿಗೆಂದು ಬಸ್ ವ್ಯವಸ್ಥೆ ಮಾಡಲಾಗಿದೆ. ಬಸ್ಗಳು ಜನವರಿ 20 ರ ಬೆಳಿಗ್ಗೆ 7.30ಕ್ಕೆ ಹೊರಡುತ್ತವೆ. ನಮ್ಮ ಈ ಹೋರಾಟಕ್ಕೆ ನೈತಿಕ ಬೆಂಬಲದ ಅತ್ಯಗತ್ಯವಿದೆ ಎಂದು ನುಡಿದರು.
ಎನ್ಪಿಎಸ್ ನೌಕರರ ತಾಲ್ಲೂಕು ಘಟಕದ ಕಾರ್ಯದರ್ಶಿ ಎಸ್.ಎ.ನರಸಿಂಹರಾಜು, ಖಜಾಂಚಿ ಟಿ.ಟಿ.ನರಸಿಂಹಪ್ಪ, ಸಂಘಟನಾ ಕಾರ್ಯದರ್ಶಿ ಎಸ್.ಶಿವಶಂಕರ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೇಶವರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕೆ.ಎನ್.ಸುಬ್ಬಾರೆಡ್ಡಿ, ಶಿಕ್ಷಕರಾದ ಗೋವಿಂದರಾಜುಲು, ಷರ್ಬುದ್ದೀನ್ ಹಾಜರಿದ್ದರು.

ಹುಟ್ಟುಹಬ್ಬದ ಪ್ರಯುಕ್ತ ಹಣ್ಣು, ಬ್ರೆಡ್ ವಿತರಣೆ

0

ಶಿಡ್ಲಘಟ್ಟದಲ್ಲಿ ಸೋಮವಾರ ಬಿಎಸ್ಪಿ ನಾಯಕಿ ಮಾಯಾವತಿ ಹುಟ್ಟುಹಬ್ಬದ ಪ್ರಯುಕ್ತ ಬಿಎಸ್ಪಿ ಪಕ್ಷದ ಕಾರ್ಯಕರ್ತರು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿದರು. ಬಿಎಸ್ಪಿ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ವೆಂಕಟೇಶ್, ಯಾಮೇಗೌಡ, ಮೂರ್ತಿ, ನರೇಶ್, ಗಂಗಾಧರ್, ದ್ಯಾವಪ್ಪ, ಸುಂದರರಾಜ್, ರಾಮು, ರವಿ, ರಾಮಾಂಜಿ, ಶ್ರೀನಿವಾಸ್, ಅಂಜಯ್ ಹಾಜರಿದ್ದರು.

ದೇವರ ಭಜನೆಯೊಂದಿಗೆ ನಡೆದ ರಥೋತ್ಸವ

0

ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಸೋಮವಾರ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಶ್ರೀರಾಮ ಭಜನೆ ಮಂಡಳಿಯ ಭಕ್ತ ವೃಂದದಿಂದ ಶ್ರೀ ಸೀತಾ ರಾಮ ಲಕ್ಷ್ಮಣ ಆಂಜನೇಯ ರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾದಸ್ವರ ವಾದನದೊಂದಿಗೆ ಭಜನೆ ತಂಡದವರ ಹಾಡುಗಳೊಂದಿಗೆ ದೇವರನ್ನು ಮೆರವಣಿಗೆ ಮಾಡಲಾಯಿತು. ಸುತ್ತಮುತ್ತಲಿನ ಗ್ರಾಮಸ್ಥರು ಭಜನೆಯಲ್ಲಿ ಪಾಲ್ಗೊಂಡಿದ್ದರು.
ಭಜನೆ ಮಂಡಳಿಯ ನಾರಾಯಣಸ್ವಾಮಿ, ನಾಗಶೆಟ್ಟಿ, ದೊಡ್ಡರಂಗಯ್ಯ, ಎಂ.ಎಂ.ಸ್ವಾಮಿ, ರಾಮಾಂಜಿನಪ್ಪ, ಗೋಪಾಲ, ಕೇಶವ, ಸತೀಶ, ಆಂಜಿನಪ್ಪ ಹಾಜರಿದ್ದರು.

ಸೇನಾದಿನದಂದು ಯೋಧನಿಗೆ ಸನ್ಮಾನ

0

ಭಾರತೀಯ ಸೇನಾಪಡೆ ಇಂದು ತನ್ನ 70ನೇ ಸೇನಾ ದಿನವನ್ನು ಆಚರಿಸುತ್ತಿದೆ. ದೇಶವನ್ನು ರಕ್ಷಿಸಲು ತಮ್ಮ ಜೀವವನ್ನು ತ್ಯಾಗ ಮಾಡಿದ ಭಾರತೀಯ ವೀರ ಯೋಧರಿಗೆ ಗೌರವ ಸಲ್ಲಿಸಲು ಪ್ರತಿ ವರ್ಷ ಜನವರಿ 15 ರಂದು ರಾಷ್ಟ್ರೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ ಎಂದು ಹಂಡಿಗನಾಳ ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ತಿಳಿಸಿದರು.
ತಾಲ್ಲೂಕಿನ ಯಣ್ಣಂಗೂರು ಗ್ರಾಮದಲ್ಲಿ ಸೋಮವಾರ ಬಿಎಸ್ಎಫ್ ಯೋಧ ವೈ.ಎಂ.ರವಿಕುಮಾರ್ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
1949ರ ಈ ದಿನ ಸೇನೆಯ ಮೊತ್ತ ಮೊದಲ ಕಮಾಂಡರ್ ಇನ್ ಚೀಫ್ ಆಗಿ ಜನರಲ್ ಕಾರಿಯಪ್ಪನವರು ಅಧಿಕಾರ ಸ್ವೀಕಾರ ಮಾಡಿದ ದಿನವಿದು. ಅಂದಿನಿಂದ ಜನವರಿ15ನ್ನು ಸೇನಾದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಭಾರತದ ಸೈನಿಕರು ಗಡಿಯಲ್ಲಿ ತಮ್ಮ ಪ್ರಾಣ ಒತ್ತೆ ಇಟ್ಟು ಯುದ್ದ, ನೈಸರ್ಗಿಕ ವಿಕೋಪಗಳಂಥ ಸನ್ನಿವೇಶಗಳೊಂದಿಗೆ ಹೋರಾಡುತ್ತಾರೆ. ಧೈರ್ಯದಿಂದ ಎಲ್ಲಾ ತೊಂದರೆ, ಸವಾಲುಗಳನ್ನು ಎದುರಿಸಿ ರಾಷ್ಟ್ರ ಹಾಗೂ ರಾಷ್ಟ್ರದ ಜನರನ್ನು ಉಳಿಸಲು ಸದಾ ಸಿದ್ಧರಾಗಿರುತ್ತಾರೆ. ನಮ್ಮ ತಾಲ್ಲೂಕಿನ ಯೋಧ ರವಿಕುಮಾರ್ ಅವರನ್ನು ಗೌರವಿಸುವ ಸೌಭಾಗ್ಯದೊಂದಿಗೆ ಸೇನಾದಿನವನ್ನು ಆಚರಿಸುವ ಮೂಲಕ ಸಂಕ್ರಾಂತಿ ಹಬ್ಬಕ್ಕೆ ಮೆರುಗನ್ನು ತಂದಂತಾಗಿದೆ ಎಂದರು.
ಯೋಧ ಮತ್ತು ರೈತ ಎರಡು ಕಣ್ಣುಗಳಿದ್ದಂತೆ. ಇಬ್ಬರ ಹಬ್ಬವೂ ಒಂದೇ ದಿನ ಬಂದಿರುವುದು ನಮ್ಮ ಅದೃಷ್ಟ. ಸಂಕ್ರಾಂತಿ ಮತ್ತು ಸೇನಾ ದಿನವನ್ನು ಒಂದೇ ದಿನ ಆಚರಿಸುವಂತಾಗಿದೆ ಎಂದು ಹೇಳಿದರು.
ಬಿಎಸ್ಎಫ್ ಯೋಧ ವೈ.ಎಂ.ರವಿಕುಮಾರ್ ಮಾತನಾಡಿ, ನಮ್ಮ ದೇಶದ ವಿವಿಧ ಧರ್ಮ, ಜಾತಿ ಪಂಥಗಳಿಗೆ ವಿವಿಧ ಹಬ್ಬಗಳಿದ್ದಂತೆ ಸೇನೆಗೆ ರಾಷ್ಟ್ರೀಯ ಸೇನಾ ದಿನ ವಿಶಿಷ್ಟವಾದ ಹಬ್ಬವಿದ್ದಂತೆ. ಸೈನ್ಯವು ನಿಜವಾದ ಸಮರ್ಪಣೆ ಮತ್ತು ಗೆಲ್ಲಲು ಹೋರಾಟ ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತದೆ. ನಮ್ಮ ತಾಲ್ಲೂಕು ಮತ್ತು ಜಿಲ್ಲೆಯಿಂದ ಯುವಕರು ಸೇನೆ ಸೇರಿ ದೇಶ ಸೇವೆ ಮಾಡುವಂತಾಗಲಿ ಎಂದು ನುಡಿದರು.
ಈ ಸಂದರ್ಭದಲ್ಲಿ ಸಂಕ್ರಾಂತಿ ಶುಭಾಶಯಗಳೊಂದಿಗೆ ಎಳ್ಳು ಬೆಲ್ಲವನ್ನು ಎಲ್ಲರಿಗೂ ಹಂಚಲಾಯಿತು.
ಅಪ್ಪೇಗೌಡನಹಳ್ಳಿ ನರಸಿಂಹಮೂರ್ತಿ, ಆಕಾಶ್, ಕಿಶೋರ್, ಭಾರ್ಗವ್, ಕೇಶವ, ಮುನಿಯಪ್ಪ, ಅಶೋಕ್, ನಾಗೇಶ್, ರಘು ಹಾಜರಿದ್ದರು.

ಇರುವುದೊಂದೇ ಜನ್ಮ. ಸಾರ್ಥಕ ಬದುಕು ನಮ್ಮದಾಗಲಿ

0

ನಮ್ಮ ಅನುಪಸ್ಥಿತಿಯಲ್ಲಿ ಜಗತ್ತು ನಮ್ಮನ್ನು ನೆನೆಯುವಂತೆ ಏನಾದರೂ ಸಾಧಿಸಿ ಹೋಗಬೇಕು. ಇರುವುದೊಂದೇ ಜನ್ಮ. ಸಾರ್ಥಕ ಬದುಕನ್ನು ಬದುಕೋಣ ಎಂದು ಸಾಹಿತಿ ಸುಂಡ್ರಹಳ್ಳಿ ಎನ್. ಶ್ರೀನಿವಾಸಮೂರ್ತಿ ತಿಳಿಸಿದರು.
ನಗರದ ಗ್ರಂಥಾಲಯದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಆಯೋಜಿಸಿದ್ದ ‘ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ – 7 ನೇ ತಿಂಗಳ ಕಾರ್ಯಕ್ರಮದಲ್ಲಿ ಅವರು ತಮ್ಮ ಕೃತಿಗಳಾದ ‘ಸೆಲ್ಪೀ ವಿಥ್ ವಿಕ್ಟರಿ’ ಮತ್ತು ‘ಕಡಲು ಕೂಡುವ ಹನಿಗಳು’ ಕುರಿತು ಮಾತನಾಡಿದರು.
ಸವಾಲುಗಳಿಗೆ ಎದೆಯೊಡ್ಡಿ ನಿಲ್ಲಬೇಕು. ಸೋಲುಗಳೇ ನಮ್ಮ ಗೆಲುವಿನ ಮೆಟ್ಟಿಲುಗಳಾಗಬೇಕು. ಗಳಿಸಿದ್ದರಲ್ಲಿ ಹಂಚಿ ತಿಂದಾಗ ಸಿಗುವ ಸಂತೋಷಕ್ಕೆ ಬೆಲೆ ಕಟ್ಟಲಾಗದು. ಆತ್ಮವಿಶ್ವಾಸದಿಂದ ಸನ್ಮಾರ್ಗದಲ್ಲಿ ನಡೆದಾಗ ಯಶಸ್ಸು ನಮ್ಮದಾಗುತ್ತದೆ. ವಿವೇಕ ಮತ್ತು ವಿವೇಚನೆ ಕಳೆದುಕೊಂಡರೆ ಸರ್ವನಾಶ ಖಚಿತ ಎಂದು ಸಮಯೋಚಿತ ಕಥೆಗಳೊಂದಿಗೆ ವಿವರಿಸಿದರು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದ ನಾನು ನಂತರ ಪಾಸು ಮಾಡಿ ಮುಂದೆ ಪಿಯುಸಿಯಲ್ಲಿ ಜಿಲ್ಲೆಗೇ ಮೊದಲಿಗನಾದೆ. ಮೊದಲ ಪುಸ್ತಕವನ್ನು ಪ್ರಕಟಿಸಲು ವಿಜಯಪುರದ ಕಸಾಪ ಮುಂದೆ ಬಂದು ಪ್ರೋತ್ಸಾಹಿಸಿದರು. ನಮ್ಮ ಶ್ರಮ, ಪ್ರಯತ್ನ ಅಚಲವಾದ ಗುರಿ ನಮಗೆ ದಾರಿ ತೋರಿಸುತ್ತದೆ. ಸೋತಾಗ ನಿರಾಶರಾಗದೇ ಪ್ರಯತ್ನ ಮುಂದುವರಿಸಿ ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿ, ಒತ್ತಡದ ಬದುಕಿನಲ್ಲಿ ಓದುಗರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಕನ್ನಡ ಸಾರಸ್ವತ ಪರಿಚಾರಿಕೆ ಗ್ರಂಥಾಲಯದಲ್ಲಿ ‘ಅನುಭವ ಮಂಟಪ’ವನ್ನು ಸೃಷ್ಟಿಸಿದೆ ಎಂದು ಹೇಳಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ವಿಜಯಪುರದ ಇನ್ಸ್ಪೈರ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಎನ್. ಶ್ರೀನಿವಾಸಮೂರ್ತಿ ಅವರು ವ್ಯಕ್ತಿತ್ವ ವಿಕಸನ ತರಭೇತಿ ತರಗತಿಗಳನ್ನು ನಡೆಸುತ್ತಾರೆ. ವಿವಿಧ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಾರೆ. ಹಂಬು, ಮುಗುಳು, ಕಡಲು ಕೂಡುವ ಹನಿಗಳು ಎಂಬ ಕವನಸಂಕಲನಗಳನ್ನು, ನಾಗರೀಕ ಪ್ರಜ್ಞೆ, ನಡತೆಗೊಂದು ಮುನ್ನುಡಿ, ಗೆಲುವಿನ ರಹಸ್ಯ, ಸೆಲ್ಪೀ ವಿಥ್ ವಿಕ್ಟರಿ, ವಿಧಿಯ ಬೆನ್ನೇರಿ ಎಂಬ ವ್ಯಕ್ತಿತ್ವ ವಿಕಸನ ಪುಸ್ತಕಗಳನ್ನು ಬರೆದಿದ್ದಾರೆ ಎಂದು ಲೇಖಕರ ಪರಿಚಯ ಮಾಡಿಕೊಟ್ಟರು.
ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಲಕ್ಷ್ಮೀನಾರಾಯಣ್, ವಿರೂಪಾಕ್ಷಪ್ಪ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಜೆ.ಸಂದೀಪ್, ಅಜಿತ್ ಕೌಂಡಿನ್ಯ, ನೃತ್ಯಕಲಾವಿದ ಸಿ.ಎನ್.ಮುನಿರಾಜು, ಕಿರುತೆರೆ ನಟಿ ಸುಷ್ಮಾ, ಟಿ.ಟಿ.ನರಸಿಂಹಪ್ಪ, ಎಸ್.ವಿ.ನಾಗರಾಜರಾವ್, ಕೆ.ವೀರಭದ್ರ, ವಿ.ವೆಂಕಟರಮಣ, ಮಕ್ಸೂದ್, ಚಾಂದ್ಪಾಷ, ವೈಶಾಕ್, ಮಂಜುನಾಥ್, ವೃಷಭೇಂದ್ರಪ್ಪ ಹಾಜರಿದ್ದರು.

ಕಿರಿಯ ವಯಸ್ಸಿಗೆ ನಗರದ ಪೋರನಿಗೆ ಬ್ಲಾಕ್ ಬೆಲ್ಟ್

0

ಅತ್ಯಂತ ಕಿರಿಯ ವಯಸ್ಸಿಗೆ ಕರಾಟೆ ಬ್ಲಾಕ್ ಬೆಲ್ಟ್ ಪಡೆದು ನಗರದ ಪೋರ ಟಿ.ಎನ್.ಹೇಮಂತ್ ತಾಲ್ಲೂಕಿಗೆ ಈ ಸಾಧನೆ ಮಾಡಿದ ಮೊದಲಿಗನಾಗಿದ್ದಾನೆ.
ನಗರದ ಕ್ರೆಸೆಂಟ್ ಶಾಲೆಯಲ್ಲಿ ಐದನೇ ತರಗತಿಯಲ್ಲಿರುವ ಹತ್ತು ವರ್ಷ ವಯಸ್ಸಿನ ಹೇಮಂತ್ ಗೋಜು ರಿಯು ಸೇವಾ ಕೈ ಕರಾಟೆ ಡೋ ಇಂಡಿಯಾ ಶೈಲಿಯ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಸಂಪಾದಿಸಿದ್ದಾನೆ. ವಿವಿಧ ಶಿಕ್ಷಕರಿಂದ ಸುಮಾರು ಎಂಟು ವರ್ಷಗಳಿಂದ ಅಭ್ಯಾಸ ಮಾಡುತ್ತಾ ಬಂದಿದ್ದು ಈಚೆಗೆ ಮುಂಬೈನಲ್ಲಿ ನಡೆದ ಕರಾಟೆ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ.
ನಗರದ ಟಿ.ಟಿ.ನರಸಿಂಹಪ್ಪ ಮತ್ತು ಲಕ್ಷ್ಮೀ ದಂಪತಿಗಳ ಮಗನಾದ ಹೇಮಂತ್ ತನ್ನ ನಾಲ್ಕನೇ ವಯಸ್ಸಿನಿಂದಲೇ ಕರಾಟೆ ಕಲಿಯಲು ಪ್ರಾರಂಭಿಸಿದ್ದ. ಸತತ ಪರಿಶ್ರಮದಿಂದ ವೈಟ್, ಎಲ್ಲೋ, ಗ್ರೀನ್, ಬ್ರೌನ್ ಬೆಲ್ಟ್ಗಳ ಒಂಭತ್ತು ಪರೀಕ್ಷೆಗಳಲ್ಲಿ ಹಂತಹಂತವಾಗಿ ಉತ್ತೀರ್ಣನಾಗುತ್ತಾ ಹತ್ತನೆಯ ಮೆಟ್ಟಿಲನ್ನು ಏರಿದ್ದಾನೆ.

ಟಿ.ಎನ್.ಹೇಮಂತ್

ಒಂದು ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿರುವ ಹೇಮಂತ್ ಹಲವು ರಾಜ್ಯ ಮತ್ತು ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾನೆ.
‘ನನಗೆ ಕ್ರೀಡೆಯಲ್ಲಿ ಮೊದಲಿನಿಂದಲೂ ಆಸಕ್ತಿ. ಪಾಠದಷ್ಟೇ ಕ್ರೀಡೆಗೂ ಮಹತ್ವವನ್ನು ನೀಡಬೇಕೆಂಬುದು ಬಯಸುತ್ತೇನೆ. ಅದರಿಂದಲೇ ಹೇಮಂತನಿಗೂ ಈ ಬಗ್ಗೆ ಆಸಕ್ತಿ ಕುದುರಿತು. ಅವನು ಚಿಕ್ಕ ವಯಸ್ಸಿನವನಿದ್ದಾಗ ಶ್ರೀನಿವಾಸ್ ಮೊದಲು ಒಂದು ತಿಂಗಳು ಕರಾಟೆ ಕಲಿಸಿದರು. ನಂತರ ಅವನ ಗುರುವಾದವರು ಅರುಣ್ ಕುಮಾರ್. ಈಗ ಹೇಮಂತ್ನಿಗೆ ಎಂ.ಡಿ.ಜಬೀವುಲ್ಲಾ ತರಬೇತಿ ನೀಡುತ್ತಿದ್ದಾರೆ. ಪ್ರತೀ ವರ್ಷ ಮುಂಬೈನಲ್ಲಿ ಚಿತ್ರನಟ ಅಕ್ಷಯ್ ಕುಮಾರ್ ಏರ್ಪಡಿಸುವ ಕರಾಟೆ ಶಿಬಿರಕ್ಕೆ ತಪ್ಪದೆ ಹೋಗುತ್ತಾನೆ. ಗೋಜು ರಿಯು ಸೇವಾ ಕೈ ಕರಾಟೆ ಡೋ ಇಂಡಿಯಾ ವತಿಯಿಂದ ನಡೆಯುವ ಸ್ಪರ್ಧೆಗಳು ಮತ್ತು ಪರೀಕ್ಷೆಗಳಲ್ಲಿ ಪಾಲ್ಗೊಳ್ಳುತ್ತಾನೆ. ಮೊದಮೊದಲು ಅವನು ತುಂಬಾ ಚಿಕ್ಕವನಿದ್ದಾಗ ಮುಂಬೈಗೆ ಎಂಟು ದಿನಗಳ ಕಾಲ ಕಳಿಸುವಾಗ ಆತಂಕವಾಗುತ್ತಿತ್ತು. ಆದರೆ ಅವನ ಕರಾಟೆ ಶಿಕ್ಷಕರು ಪ್ರೀತಿಯಿಂದ ಕರೆದೊಯ್ದು ಕರೆತರುತ್ತಿದ್ದರು. ಅಂಥಹ ಗುರುಗಳು ಸಿಕ್ಕಿದ್ದು ಅವನ ಅದೃಷ್ಟ’ ಎನ್ನುತ್ತಾರೆ ಹೇಮಂತ್ನ ತಂದೆ ಟಿ.ಟಿ.ನರಸಿಂಹಪ್ಪ.
‘ಕರಾಟೆಯಲ್ಲಿ ವರ್ಷಗಟ್ಟಲೆ ಸಾಧನೆ ಮಾಡುವವರು ಕಡಿಮೆ. ಚಿಕ್ಕ ವಯಸ್ಸಿನಲ್ಲಿಯೇ ಕಲಿಯಲು ಪ್ರಾರಂಭಿಸಿದರೆ ಸಾಧನೆ ಮಾಡಬಹುದು ಎಂಬುದಕ್ಕೆ ಹೇಮಂತ್ ಉದಾಹರಣೆಯಾಗಿದ್ದಾನೆ. ವೈಟ್ ಬೆಲ್ಟ್ ನಿಂದ ಪ್ರಾರಂಭಿಸಿ ಬ್ಲಾಕ್ ಬೆಲ್ಟ್ ತಲುಪುವುದು ಒಂದು ಸುದೀರ್ಘ ಹಾದಿ. ಹೇಮಂತ್ ಈ ವಯಸ್ಸಿಗೇ ಅದನ್ನು ಸಾಧಿಸಿರುವುದು ಹೆಮ್ಮೆಯ ವಿಷಯ’ ಎಂದು ಗೋಜು ರಿಯು ಸೇವಾ ಕೈ ಕರಾಟೆ ಡೋ ಇಂಡಿಯಾ ರಾಜ್ಯ ಘಟಕದ ಅಧ್ಯಕ್ಷ ಎಂ.ಡಿ.ಜಬೀವುಲ್ಲ ತಿಳಿಸಿದರು.

ಧರ್ಮ ಎಂದರೆ ಸಮಾಜದಲ್ಲಿ ಎಲ್ಲರೂ ಒಂದೇ ಎನ್ನುವುದಾಗಿದೆ

0

ಸಿದ್ಧಾಂತಕ್ಕಿಂತ ಆಚರಣೆಯೇ ಮುಖ್ಯ. ಸಮಾಜದ ಬಗ್ಗೆ ಚಿಂತನೆ ಅಗತ್ಯವಿದೆ. ಧರ್ಮ ಎಂದರೆ ಸಮಾಜದಲ್ಲಿ ಎಲ್ಲರೂ ಒಂದೇ ಎನ್ನುವುದಾಗಿದೆ ಎಂದು ಶ್ರೀಕ್ಷೇತ್ರ ಕೈವಾರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ತಿಳಿಸಿದರು.
ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಗ್ರಾಮದ ಸ್ನೇಹ ಯುವಕರ ಸಂಘದ ಸಹಕಾರದೊಂದಿಗೆ ನಡೆಸಲಾದ ‘ಕನ್ನಮಂಗಲ ಮಕ್ಕಳ ಹಬ್ಬ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮದ ಮಕ್ಕಳ ಪ್ರತಿಭೆಗೆ ನೀರೆರೆಯುತ್ತಾ ಶಿಸ್ತಿನಿಂದ ಸಂಘವನ್ನು ಸ್ನೇಹ ಯುವಕರ ಕಟ್ಟಿಕೊಂಡ ಯುವಕರನ್ನು ಕಂಡು ಖುಷಿಯಾಗಿದೆ. ಕೈವಾರ ತಾತಯ್ಯನವರು ಪ್ರಕೃತಿಯನ್ನು ರಕ್ಷಿಸುವಂತೆ ತಿಳಿಸಿದ್ದಾರೆ. ನೀವು ತಲಾ ಐದು ರೀತಿಯ ಮರಗಳನ್ನು ನೆಟ್ಟು ಪೋಷಿಸಿ. ಒಳ್ಳೆಯ ಗಾಳಿ, ಪಶು ಪಕ್ಷಿ ಕ್ರಿಮಿಗಳಿಗೂ ಆಹಾರ, ಹಂಚಿ ತಿನ್ನುವ ಗುಣ ರೂಢಿಸಿಕೊಳ್ಳಿ. ಇದರಿಂದ ಹೃದಯ ವೈಶಾಲ್ಯವಾಗುತ್ತದೆ. ನಿಮ್ಮ ತ್ಯಾಗದ ಗುಣದಿಂದ ಮುಂದಿನ ಪೀಳಿಗೆ ನೆಮ್ಮದಿ ಕಾಣುವಂತಾಗುತ್ತದೆ. ಯಾವುದೇ ಪರಿಶ್ರಮವೂ ಮರುದಿನವೇ ಫಲ ಕೊಡುವುದಿಲ್ಲ. ತಾಳ್ಮೆಯಿಂದ ಕಾಯಬೇಕು. ನಿಮ್ಮ ಕೊಡುಗೆಯಿಂದ ನಿಮ್ಮ ಮಕ್ಕಳು ಬೆಳಗುತ್ತಾರೆ ಎಂದು ಹೇಳಿದರು.
ಶಿಕ್ಷಣ ತಜ್ಞ ಕೋಡಿರಂಗಪ್ಪ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ರಚನೆಯ ಸಂಗ್ರಹ ‘ಶಾಮಂತಿ 7’ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿ, ಮಕ್ಕಳೆಲ್ಲ ಒಂದೇ. ಎಲ್ಲರಲ್ಲೂ ವಿಶೇಷ ಸಾಮರ್ಥ್ಯ ಹುದುಗಿರುತ್ತದೆ. ಅದಕ್ಕೆ ನೀರೆರೆದು, ಪ್ರೋತ್ಸಾಹಿಸಿ, ಹೊರಬರುವಂತೆ ಮಾಡುವ ಪ್ರತಿಭೆಯ ಅನಾವರಣದ ಕೆಲಸ ಮಾಡುವುದೇ ನಿಜವಾದ ಶಿಕ್ಷಣ. ಅಂಥಹ ಶಿಕ್ಷಣ ಪಡೆದಾಗ ಅಲ್ಲಿ ನಿಜವಾದ ಪ್ರಜಾರಾಜ್ಯ, ಮಾನವೀಯ ಸಮಾಜ ನಿರ್ಮಾಣವಾಗುತ್ತದೆ. ಸತತವಾಗಿ ಏಳನೆಯ ವರ್ಷ ಮಕ್ಕಳ ಬರಹಗಳ ಸಂಗ್ರಹ ಶಾಮಂತಿಯನ್ನು ಹೊರತರುತ್ತಿರುವ ಶಿಕ್ಷಕರು ಹಾಗೂ ಅವರ ಬೆಂಬಲವಾಗಿ ನಿಂತ ಗ್ರಾಮದ ಯುವಕರು ಅಭಿನಂದನಾರ್ಹರು.
ದೇವನೂರು ಮಹಾದೇವ ಹೇಳಿದಂತೆ ನೆಲಕ್ಕೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಎಂದಾದರೂ ಫಲ ಕೊಟ್ಟೇ ಕೊಡುತ್ತದೆ. ಕನ್ನಮಂಗಲದ ಶಾಲೆ ಅತ್ಯುತ್ತಮ ಶಿಕ್ಷಕರಿಂದ ರೂಪುಗೊಂಡ ಪ್ರಾಯೋಗಿಕ ಶಾಲೆ. ಇಲ್ಲಿ ಮಕ್ಕಳ ಮನಸ್ಸಿನ ಕಲ್ಪನೆ, ಕನಸು ಹೊರಹಾಕಲು ಶಾಮಂತಿಯಿದೆ. ಚಿತ್ರ, ಮಾತು, ಬರವಣಿಗೆ, ನಟನೆಯ ಮೂಲಕ ಮಕ್ಕಳು ಅಭಿವ್ಯಕ್ತಿಸುವಂತಾಗುವುದೇ ನಿಜವಾದ ಶಿಕ್ಷಣ. ದೊಡ್ಡ ಕನಸನ್ನು ಮಕ್ಕಳಲ್ಲಿ ತುಂಬುವ, ಪ್ರೀತಿಯೇ ಬೋಧನಾ ಮಾಧ್ಯಮವಾಗುವ ಶಿಕ್ಷಣ, ಮಕ್ಕಳ ರಚನೆಯ ‘ಶಾಮಂತಿ’ ಇತರ ಶಾಲೆಗಳಿಗೂ ಪ್ರೇರಣೆಯಾಗಲಿ ಎಂದರು.
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಬಾಬು, ಡಯಟ್ ಉಪನ್ಯಾಸಕಿ ಮಮತಾ, ಪ್ರವಚನಕಾರ ತಳಗವಾರ ಆನಂದ್, ಬಾಲಕೃಷ್ಣ ಭಾಗವತರ್, ಸಿಆರ್ಪಿ ಚಂದ್ರಶೇಖರ್, ಸ್ನೇಹ ಯುವಕ ಸಂಘದ ಅಧ್ಯಕ್ಷ ವಸಂತವಲ್ಲಭಕುಮಾರ್, ಡಿ.ಕೆ.ಶ್ರೀರಾಮ್, ಶಿಕ್ಷಕ ಸುಬ್ರಮಣಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುನಿಆಂಜಿನಪ್ಪ, ಎಂಪಿಸಿಎಸ್ ಅಧ್ಯಕ್ಷ ಮುನಿರಾಜು, ಮುಖ್ಯ ಶಿಕ್ಷಕ ಜೆ.ಶ್ರೀನಿವಾಸ್ ಹಾಜರಿದ್ದರು.

‘ಶಾಮಂತಿ’ಯಲ್ಲಿ ಪುಟ್ಟ ಪುಟ್ಟ ಮಕ್ಕಳ ಭಾವನಾ ಜಗತ್ತಿನ ಅನಾವರಣ

0

ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಶಾಲೆಯಲ್ಲಿ ಶನಿವಾರ ಪುಸ್ತಕವೊಂದು ಬಿಡುಗಡೆಯಾಯಿತು. ಅದರ ಹೆಸರು ‘ಶಾಮಂತಿ–7’. ಅದನ್ನು ಬರೆದವರು ಹೆಸರಾಂತ ಸಾಹಿತಿಯಲ್ಲ. ಆದರೆ ಪುಟ್ಟ ಪುಟ್ಟ ಸರ್ಕಾರಿ ಶಾಲೆಯ ಮಕ್ಕಳು ಎಂಬುದು ವಿಶೇಷ.
‘ಮಕ್ಕಳ ಗೀಚುಗಳಲ್ಲಿ ಗೋಚರಿಸಿದ ಬೆಳಕು!’ ಎಂದು ಅದರ ಸಂಪಾದಕ ಹಾಗೂ ಶಿಕ್ಷಕ ಎಸ್.ಕಲಾಧರ್ ಅದನ್ನು ಬಣ್ಣಿಸಿರುವುದು ಅನ್ವರ್ಥಕವಾಗಿದೆ. ‘ಪುಸ್ತಕ ಪರೀಕ್ಷೆಗಳಾಚೆ ಒಂದು ಮಕ್ಕಳ ಲೋಕವಿದೆ. ಅಲ್ಲಿಯೂ ಮಕ್ಕಳು ಕಲಿಯುತ್ತಾರೆ, ನಲಿಯುತ್ತಾರೆ. ಆ ಲೋಕವನ್ನು ತೆರೆದಿಡುವ ಪ್ರಯತ್ನ ಶಾಮಂತಿ’ ಎನ್ನುವ ಅವರು ಮಕ್ಕಳಿಂದ ಚಿತ್ರ, ಕಥೆ, ಕವನ ಬರೆಸಿ ಪುಟ್ಟ ಮಕ್ಕಳ ಜೀವನಾನುಭವಗಳನ್ನು ಒಂದೆಡೆ ಕ್ರೂಡೀಕರಿಸಿ ಪುಸ್ತಕವನ್ನಾಗಿಸಿದ್ದಾರೆ.
‘ಈ ಪುಸ್ತಕದಲ್ಲಿರುವ ಸಣ್ಣ ಸಣ್ಣ ಬರಹಗಳು ಮತ್ತು ಅವುಗಳಿಗೆ ಜೀವ ತುಂಬುವ ಬರಹಗಳು ಯಾವುದೇ ನೆರವಿಲ್ಲದೇ ಮಕ್ಕಳೇ ಬರೆದವುಗಳು. ದೊಡ್ಡ ಶಾಲೆಗಳು ಹಣ ಸುರಿದು ವಾರ್ಷಿಕ ಸಂಚಿಕೆಗಳನ್ನು ಹೊರತರುತ್ತವೆ. ಸಹಜವಾಗಿರದ ಜೀವವಿರದ ಎಲ್ಲೋ ಸಂಗ್ರಹಿಸಿದ ಬರಹಗಳು ಅವುಗಳಲ್ಲಿರುತ್ತವೆ. ಆದರೆ ಇಲ್ಲಿ ಜೀವವಿದೆ. ನಮಗೆ ಇದನ್ನು ರೂಪಿಸಿದ ಹೆಮ್ಮೆಯಿದೆ. ನಮಗೆ ಇದನ್ನು ಪ್ರಕಟಿಸಲು ನಮ್ಮೂರ ಸ್ನೇಹ ಯುವಕ ಸಂಘದ ಸಹಕಾರವಿದೆ. ಸಹ ಶಿಕ್ಷಕಕರ ಸಹಯೋಗವಿದೆ’ ಎನ್ನುತ್ತಾರೆ ಎಸ್.ಕಲಾಧರ್.
ಸತತವಾಗಿ ಏಳು ವರ್ಷಗಳಿಂದ ಮಕ್ಕಳ ಬರಹಗಳನ್ನು ಪುಸ್ತಕವನ್ನಾಗಿಸುತ್ತಾ ಬಂದ ಇವರ ಪ್ರಯತ್ನಕ್ಕೆ ರಾಜ್ಯಾದ್ಯಂತ ಪ್ರಶಂಸೆ ಪುರಸ್ಕಾರಗಳು ಲಭಿಸಿವೆ. ‘ಶಾಮಂತಿ–7’ ಪುಸ್ತಕದಲ್ಲಿ ತಮ್ಮ ಸೈಕಲ್, ಅಪ್ಪ, ಮನೆ, ಚಿಟ್ಟೆ, ಹಬ್ಬ, ದೇವಸ್ಥಾನ, ಮರ, ನಾಯಿ, ಬೆಕ್ಕು, ಹಂದಿ, ಎಮ್ಮೆ ಹೀಗೆ ತಾವು ಕಂಡದ್ದು ಅನುಭವಿಸಿದ್ದನ್ನೆಲ್ಲಾ ಬರೆದಿದ್ದಾರೆ.
ಬೇಜಾರು, ಒಯ್ದರು, ಜಾಸ್ತಿ, ಇಸ್ಕೊಂಡು, ಇಕ್ಕುತ್ತೇನೆ, ಇತ್ತ, ತೀಟ್ಲೆ, ತರಿಮಿಕೊಂಡು, ಕಿತ, ಕಲ್ದೀರ ಮುಂತಾದ ಪದಗಳನ್ನು ಬಳಸಿರುವ ಮಕ್ಕಳ ಮಾತುಗಳಲ್ಲಿ ಜಿಲ್ಲೆಯ ಸೊಗಡಿನ ಭಾಷೆಯು ಅನಾವರಣಗೊಂಡಿದೆ. ‘ಹಳ್ಳಿಯಲ್ಲಿ ಕಾಸಿರದಿದ್ರೂ ಬದುಕಬಹುದು, ಬೆಂಗಳೂರಿನಲ್ಲಿ ಬದುಕೋಕಾಗಲ್ಲ’, ‘ಬೋರ್ವೆಲ್ ಅವರಿಗೆ ನೀರು ಬಿದ್ದರೂ ಕಾಸು ಕೊಡಬೇಕು. ಬೀಳದಿದ್ರೂ ಕೊಡಬೇಕು’, ‘ಮರಿಯನ್ನು ಕಳೆದುಕೊಂಡ ಎಮ್ಮೆಯ ನೋವು’, ‘ಹಂದಿಮರಿಗೆ ಕಾಳು ಮುರಿದಾಗ ಆದ ನೋವು’, ‘ಕೋತಿಗಳ ವರ್ತನೆ’, ‘ಗಾಳಕ್ಕೆ ಬಿದ್ದ ಮೀನನ್ನು ಮೂರು ಸಲ ಉಗಿದು ನೀರಿಗೆ ಬಿಡುವುದು’, ‘ಮರದಲ್ಲಿ ದೇವರಿದ್ದಾನೆ’ ಮುಂತಾದವುಗಳಿಂದ ಮಕ್ಕಳ ಆಲೋಚನಾ ಕ್ರಮ, ಮುದ್ಧತೆ, ಮನೋಲೋಕ ಹಿರಿಯರಿಗೆ ಪಾಠದಂತಿದೆ. ಬರೆಯುವಾಗ ಮಕ್ಕಳು ಅನುಭವಿಸಿರುವ ಖುಷಿ ಓದುವಾಗ ಅನುಭವಕ್ಕೆ ಬರುತ್ತದೆ.
‘ಮಕ್ಕಳು ತಮ್ಮ ಕನಸು, ಕಲ್ಪನೆ, ಭಾವನೆಯನ್ನು ಅಭಿವ್ಯಕ್ತಿಸಲು ಸೂಕ್ತ ಪರಿಸರವನ್ನು ನಿರ್ಮಿಸುವುದೇ ಶಿಕ್ಷಣದ ಮೂಲ ಉದ್ದೇಶ. ಕನ್ನಮಂಗಲ ಸರ್ಕಾರಿ ಶಾಲೆ ಈ ನಿಟ್ಟಿನಲ್ಲಿ ಶಾಮಂತಿ ಹೊರತರುತ್ತಿರುವುದು ಇತರರಿಗೆ ಮಾದರಿಯಾಗಿದೆ’ ಎಂದು ಈ ಪುಸ್ತಕವನ್ನು ಬಿಡುಗಡೆ ಮಾಡಿದ ಶಿಕ್ಷಣ ತಜ್ಞ ಕೋಡಿರಂಗಪ್ಪ ತಿಳಿಸಿದ್ದಾರೆ.

ದುಡಿಮೆ ಪದಗಳೇ ಚುಟುಕು ಸಾಹಿತ್ಯಕ್ಕೆ ಮೂಲ

0

ಹಳ್ಳಿಗರು ದುಡಿಯುವಾಗ ಹಲವು ಹಾಡುಗಳನ್ನು ಹಾಡುತ್ತಾರೆ. ತಮ್ಮ ಕ್ರಿಯಾಶೀಲತೆಯೊಂದಿಗೆ ಹಾಡುಕಟ್ಟಿ ಹಾಡುವ ಅವರ ದುಡಿಮೆ ಪದಗಳೇ ಬಹುಷಃ ಚುಟುಕು ಸಾಹಿತ್ಯಕ್ಕೆ ಮೂಲವಿರಬಹುದು ಎಂದು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಎಚ್.ಜಿ.ಗೋಪಾಲಗೌಡ ಅಭಿಪ್ರಾಯಪಟ್ಟರು.
ನಗರದ ಕಾಳಿಕಾಂಬ ಕಮಠೇಶ್ವರ ದೇವಾಲಯದ ಸಭಾಂಗಣದಲ್ಲಿ ಶನಿವಾರ ಚುಟುಕು ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಕವಿಗದ್ದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನಿಂದಲೂ ಹಳ್ಳಿಗಳಲ್ಲಿ ವಿದ್ಯಾಭ್ಯಾಸ ಇರದಿದ್ದರೂ ಬಾಯಿಂದ ಬಾಯಿಗೆ ಹರಡುತ್ತಿದ್ದ ಜಾನಪದ ಹಾಡುಗಳಿದ್ದವು. ಕಾಲಕ್ಕೊದ್ದಿ ಅವುಗಳು ಕಡಿಮೆಯಾಗಿವೆ. ತಮ್ಮ ಬುದ್ಧಿ, ಅನುಭವ, ಪರಿಶ್ರಮದ ಸಾರದಿಂದ ಹಲವಾರು ನುಡಿಗಳು ಜನಿಸುತ್ತಿದ್ದವು. ಈಗಲೂ ರೈತ ಪ್ರವಾಸಗಳಲ್ಲಿ ಎಲ್ಲರನ್ನು ಒಗ್ಗೂಡಿಸಿ ಲವಲವಿಕೆಯಿಂದಿರಲು ಚುಟುಕು ಸಾಹಿತ್ಯ ನೆರವಾಗುತ್ತವೆ ಎಂದು ಹೇಳಿದರು.
ಸಂಕ್ರಾಂತಿ ಹಬ್ಬವು ರೈತರ ಹಬ್ಬವಾಗಿದೆ. ರೈತರನ್ನು ಜತೆಗೂಡಿಸಿಕೊಂಡು ಕವಿಗದ್ದಿಗೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಿನಂದನೀಯ. ರೈತರನ್ನು ಬಿಟ್ಟ ಸಾಹಿತ್ಯ ಸಾಹಿತ್ಯವಲ್ಲ ಎಂದು ನುಡಿದರು.
ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಚಲಪತಿಗೌಡ ಮಾತನಾಡಿ, ಯಾವುದೇ ಒಂದು ಭಾಷೆ ಉಳಿಯಬೇಕು ಹಾಗು ಬೆಳೆಯಬೇಕು ಎಂದರೆ ಆ ಭಾಷೆಯನ್ನು ಸದಾ ಕಾಲ ಬಳಸಬೇಕು. ಮನದಾಳದಿಂದ ಪ್ರೀತಿಸಬೇಕು. ನಮ್ಮ ಜನಪದರಲ್ಲಿದ್ದ ಭಾಷೆ, ಕೋಲಾರ ಚಿಕ್ಕಬಳ್ಳಾಪುರದ ಭಾಷಾ ಸೊಗಡನ್ನು ಕವನದಲ್ಲಿಯೂ ಬಳಸಬೇಕು ಎಂದು ಹೇಳಿದರು.
ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಮಳ್ಳೂರು ಶಾಂತಮ್ಮ ಜಾನಪದ ಗೀತೆಗಳನ್ನು ಹಾಡಿದರು.
ವಿವಿಧ ಕವಿಗಳು ಚುಟುಕು ಕವನವನ್ನು ವಾಚಿಸಿದರು.
ರೈತರಾದ ಶಿವಮೂರ್ತಿ, ರವಿ, ಚುಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಈಧರೆ ಪ್ರಕಾಶ್, ಕಾಳಿಕಾಂಬ ಕಮಠೇಶ್ವರ ದೇವಾಲಯ ಸಮಿತಿ ಅಧರ್ಯಕ್ಷ ಮುನಿರತ್ನಮಾಚಾರ್ ಹಾಜರಿದ್ದರು.

ಎಚ್.ಡಿ.ಕುಮಾರಸ್ವಾಮಿ ಪುನಃ ರಾಜ್ಯದ ಮುಖ್ಯಮಂತ್ರಿಯಾಗಲಿ

0

ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪುನಃ ರಾಜ್ಯ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡರೆ ಮಾತ್ರ ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ಬಯಲುಸೀಮೆಯ ತಾಲ್ಲೂಕುಗಳಿಗೆ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೊಳಿಸಲು ಸಾಧ್ಯವೆಂದು ಜೆ.ಡಿ.ಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಪಿಂಡಿಪಾಪನಹಳ್ಳಿ ಬಳಿ ಶನಿವಾರ ಎಚ್.ಡಿ.ದೇವೇಗೌಡ ಹಾಗು ಜಯಪ್ರಕಾಶ್ ನಾರಾಯಣ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಪ್ರವಾಸಕ್ಕೆ 76 ಬಸ್ಸುಗಳ ಮೂಲಕ ತೆರಳಿದ ಓಂ ಶಕ್ತಿ ದೇವರ ಭಕ್ತರಿಗೆ ಶುಭ ಹಾರೈಸಿ ಅವರು ಮಾತನಾಡಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣನವರ ಹುಟ್ಟು ಹಬ್ಬದ ಅಂಗವಾಗಿ ತಾಲ್ಲೂಕಿನಾದ್ಯಂತ ಮೇಲ್ಮರವತ್ತೂರು ದೇವಾಲಯದ ಆದಿಪರಾಶಕ್ತಿಯ ದರ್ಶನಕ್ಕೆ ಭಕ್ತರ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಅಮ್ಮನವರ ಆಶೀರ್ವಾದ ಪಡೆಯಲು ಪ್ರವಾಸ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು ದೇವಿಯ ಕೃಪೆಯಿಂದ ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪುನಃ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್ ಮಾತನಾಡಿ, ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಮಂದಿ ಭಕ್ತರು ಓಂ ಶಕ್ತಿ ಅಮ್ಮನವರ ದೇವಸ್ಥಾನಕ್ಕೆ ಜೆಡಿಎಸ್ ಪಕ್ಷದ ವತಿಯಿಂದ ಕಳುಹಿಸಲಾಗುತ್ತಿದೆ. ಅಮ್ಮನವರು ನಮ್ಮ ಭಾಗದ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿ. ಮಳೆ, ಬೆಳೆ, ಸುಖ, ಶಾಂತಿಯನ್ನು ನೀಡಿ ಆಶೀರ್ವದಿಸಲಿ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಂಕ್ ಮುನಿಯಪ್ಪ, ತನುಜಾ ರಘು, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾದ ಪಿ.ವಿ.ನಾಗರಾಜ್, ಪಿ.ಶಿವಾರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜಶೇಖರ್, ಮುಖಂಡರಾದ ಮುಗಿಲಡಿಪಿ ನಂಜಪ್ಪ, ಕೆ.ಎಸ್.ಮಂಜುನಾಥ್, ಆರ್.ಎ.ಉಮೇಶ್, ಕದಿರಿ ಯೂಸುಫ್, ಆದಿಲ್ಪಾಷ, ಸಮೀವುಲ್ಲಾ, ಸೈಯ್ಯದ್ ಹಾಜರಿದ್ದರು.

ಎಸ್ಎಸ್ಎಲ್ಸಿ ಫಲಿತಾಂಶ ಉತ್ತಮಗೊಳಿಸಲು ‘ಪರೀಕ್ಷಾ ಸಂಜೀವಿನಿ’

0

ಎಸ್ಎಸ್ಎಲ್ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಸಮರ್ಥವಾಗಿ ಎದುರಿಸುವಂತೆ ವಿಷಯಾವಾರು ನುರಿತ ಶಿಕ್ಷಕರು ‘ಪರೀಕ್ಷಾ ಸಂಜೀವಿನಿ’ ಎಂಬ ಪುಸ್ತಿಕೆಗಳನ್ನು ಹೊರತರುತ್ತಿರುವುದು ಸ್ವಾಗತಾರ್ಹ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಚಂದ್ರಶೇಖರ ಬಾಬು ತಿಳಿಸಿದರು.
ತಾಲ್ಲೂಕಿನ ಮಳ್ಳೂರಿನ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ವಿಷಯಾವಾರು ಶಿಕ್ಷಕರ ಕಾರ್ಯಾಗಾರದಲ್ಲಿ ಗಣಿತ, ವಿಜ್ಞಾನ, ಸಮಾಜ ವಿಷಯಗಳ ‘ಪರೀಕ್ಷಾ ಸಂಜೀವಿನಿ’ ಎಂಬ ಪುಸ್ತಿಕೆಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ವಿಷಯಾವಾರು ಶಿಕ್ಷಕರು ಚರ್ಚಿಸಿ, ಸರಳೀಕರಿಸಿದ ನಂತರ ಕಲಿಕೆಯಲ್ಲಿ ಹಿಂದುಳಿದ ಮತ್ತು ಸಾಧಾರಣ ಮಕ್ಕಳಿಗೆ ಬೋಧಿಸಿದರೆ ಮುಂದಿನ ದಿನಗಳಲ್ಲಿ ಎಸ್ಎಸ್ಎಲ್ಸಿಯಲ್ಲಿ ತಾಲ್ಲೂಕಿನಲ್ಲಿ ಉತ್ತಮ ಫಲಿತಾಂಶ ಪಡೆಯ ಬಹುದಾಗಿದೆ. ‘ಪರೀಕ್ಷಾ ಸಂಜೀವಿನಿ’ ಎಂಬ ಪುಸ್ತಿಕೆಗಳನ್ನು ವಿಷಯಾವಾರು ತಜ್ಞರು ಸಿದ್ಧಪಡಿಸಿದ್ದಾರೆ. ಇದನ್ನು ಎಲ್ಲಾ ಪ್ರೌಢಶಾಲೆಗಳ ಶಿಕ್ಷಕರು ಪಡೆದು ಮಕ್ಕಳಿಗೆ ತಲುಪಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಎಲ್ಲಾ ವಿಷಯಗಳಲ್ಲಿ ಸಮಾಲೋಚನೆ ನಡೆಸಿ ತಾಲ್ಲೂಕಿನಾದ್ಯಂತ ಮಕ್ಕಳಿಗೆ ಅನುಕೂಲವಾಗುವಂತೆ ಹಾಗೂ ಶಿಕ್ಷಕರಿಗೆ ಹೊರೆಯಾಗದಂತೆ ಕ್ರಮ ವಹಿಸುವ ದೃಷ್ಟಿಯಿಂದ ಈ ಕಾರ್ಯಾಗಾರ ಉಪಯುಕ್ತವಾಗಿದೆ ಎಂದರು.
ಅನುದಾನಿತ ಶಾಲೆಗಳ ರಾಜ್ಯ ಘಟಕದ ಅಧ್ಯಕ್ಷ ಡಿ.ಸಿ.ಗೋಪಿನಾಥ್, ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಗೋಪಿನಾಥ್, ಸಹಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ, ಕಾರ್ಯದರ್ಶಿ ಎಲ್.ವಿ.ವೆಂಕಟರೆಡ್ಡಿ, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ರಾಮಾಂಜಿನಪ್ಪ, ಮುಖ್ಯ ಶಿಕ್ಷಕ ನರಸಿಂಹಮೂರ್ತಿ, ಶಿಕ್ಷಣ ಸಂಯೋಜಕ ಲಕ್ಷ್ಮೀನರಸಿಂಹಗೌಡ ಹಾಜರಿದ್ದರು.

ದಲಿತ ಸಂಘರ್ಷ ಸಮಿತಿ ಸದಸ್ಯರಿಂದ ಪಂಜಿನ ಮೆರವಣಿಗೆ

0

ಸಂವಿಧಾನವನ್ನು ಅವಮಾನಿಸಿರುವ ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆ ಅವರನ್ನು ದೇಶದ್ರೋಹ ಆರೋಪದಡಿ ಗಡೀಪಾರು ಮಾಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಗುರುವಾರ ಸಂಜೆ ಪಂಜಿನ ಮೆರವಣಿಗೆ ನಡೆಸಿ ಕಸಬಾ ರಜಸ್ವ ನಿರೀಕ್ಷಕ ವಿಶ್ವನಾಥ್ ಅವರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ಸಂಸದ ಹಾಗೂ ಕೇಂದ್ರ ಕೌಶಲ್ಯಾಭಿವೃದ್ಧಿ ಮಂತ್ರಿ ಅನಂತ್ಕುಮಾರ್ ಹೆಗಡೆ ತಮ್ಮ ಭಾಷಣದಲ್ಲಿ ದೇಶದ ಪರಮೋಚ್ಛ ಗ್ರಂಥವಾದ ಸಂವಿಧಾನವನ್ನು ಅವಮಾನಿಸಿದ್ದಾರೆ. ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವಿರೋಧಿಸಿ ಗುಲಾಮಗಿರಿ ಹೇರುವಂತಹ ಮನುಧರ್ಮಶಾಸ್ತ್ರವನ್ನು ಜನರ ಮೇಲೆ ಹೇರಲು ಹೊರಟಿರುವುದು ಮಹಾದ್ರೋಹವಾಗಿದೆ. ದೇಶದ್ರೋಹದ ಮಾತುಗಳನ್ನು ಆಡಿ ಅಶಾಂತಿ ಸೃಷ್ಟಿ ಮಾಡುತ್ತಾ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಅನಂತ್ಕುಮಾರ್ ಹೆಗಡೆ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ವಜಾಗೊಳಿಸಿ ಗಡೀಪಾರು ಮಾಡಬೇಕೆಂದು ಒತ್ತಾಯಿಸಿದರು. ಬಿಜೆಪಿ ಪರಿವರ್ತನಾ ರ್ಯಾಲಿಗೆ ಅವರನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಸಿ.ಎಂ.ಮುನಯ್ಯ, ತಾಲ್ಲೂಕು ಸಂಚಾಲಕ ಎನ್.ಎ.ವೆಂಕಟೇಶ್, ಸಂಘಟನಾ ಸಂಚಾಲಕ ಎಂ.ವೆಂಕಟೇಶ್, ಎಂ.ಲಕ್ಷ್ಮೀನಾರಾಯಣ, ಎನ್.ರವಿಕುಮಾರ್, ಟಿ.ಎ.ಚಲಪತಿ, ದೊಡ್ಡ ತಿರುಮಳಯ್ಯ, ಮುನಿಕೃಷ್ಣಪ್ಪ, ಲಕ್ಷ್ಮಣ್, ಮಟ್ಟಿ ನಾರಾಯಣಸ್ವಾಮಿ, ಶಶಿಕಲ ಹಾಜರಿದ್ದರು.

ರೇಷ್ಮೆಗೆ ಬೆಂಬಲ ಬೆಲೆ ಸಿಗಲು ಪ್ರಾಮಾಣಿಕ ಪ್ರಯತ್ನ ಮಾಡುವೆ

0

ರೇಷ್ಮೆಯನ್ನು ನಂಬಿರುವ ಈ ಭಾಗದ ರೇಷ್ಮೆ ಬೆಳೆಗಾರರಿಗೆ ಬೆಂಬಲ ಬೆಲೆಯನ್ನು ಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ. ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ನಗರದ ಕೋಟೆ ವೃತ್ತದಲ್ಲಿ ಶುಕ್ರವಾರ ಸಂಜೆ ಬಿಜೆಪಿ ಪಕ್ಷದಿಂದ ಆಯೋಜಿಸಿದ್ದ ಪರಿವರ್ತನಾ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಗಾಗಲೇ ಈ ಭಾಗದ ಜನರು ಫ್ಲೋರೈಡ್ ಖಾಯಿಲೆಯಿಂದ ನರಳುತ್ತಿದ್ದಾರೆ. ಅವೈಜ್ಞಾನಿಕವಾಗಿ ಈಗ ಕೊಳಚೆ ನೀರನ್ನು ಶುದ್ಧೀಕರಿಸಿ ತರಲು ಹೊರಟಿದ್ದಾರೆ. ಅದನ್ನು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಜನರಿಗೆ ತೊಂದರೆಯನ್ನುಂಟು ಮಾಡುವ ಕೆಟ್ಟ ನೀರನ್ನು ತರಲು ಬಿಡುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಾಗವಾರ–ಹೆಬ್ಬಾಳ ಕೆರೆ ನೀರು ಹರಿಸುವ ಯೋಜನೆಯನ್ನು ನಿಲ್ಲಿಸುತ್ತೇವೆ. ಪ್ರಧಾನಿಯವರ ಕಾಲನ್ನು ಹಿಡಿದಾದರೂ ಹಣ ಮಂಜೂರು ಮಾಡಿಸಿಕೊಂಡು ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೊಳಿಸುತ್ತೇನೆ ಎಂದು ಹೇಳಿದರು.
ಚುನಾವಣೆ ಹತ್ತಿರ ಬಂತೆಂದು ಹಣವಿಲ್ಲದಿದ್ದರೂ ನೂರಾರು ಶಂಕುಸ್ಥಾಪನೆಗಳನ್ನು ಮಾಡುತ್ತಿರುವ ಸಿದ್ಧರಾಮಯ್ಯನವರು ಬಡವರ ಮೂಗಿಗೆ ತುಪ್ಪ ಸವರುತ್ತಿದ್ದಾರೆ. ನಾನು ಪರಿವರ್ತನಾ ಯಾತ್ರೆ ಹೊರಟ ಕೂಡಲೇ, ನೀವು ಯಾತ್ರೆ ಹೊರಟು 12 ರಿಂದ 13 ಸಾವಿರ ಕೋಟಿ ಯೋಜನೆಗಳನ್ನು ಘೋಷಿಸುತ್ತಿದ್ದೀರಿ. ಇದಕ್ಕೆ ಬಜೆಟ್ನಲ್ಲಿ ಹಣ ತೆಗೆದಿಟ್ಟೀದ್ದೀರಾ, ನಾಲ್ಕೂವರೆ ವರ್ಷಗಳಲ್ಲಿ ಸರ್ಕಾರದ ಖಜಾನೆ ಖಾಲಿ ಮಾಡಿ, ಎಂಎಲ್ಎ, ಎಂಎಲ್ಸಿ ಆಪ್ತ ಸಹಾಯಕರಿಗೆ ಸಂಬಳ ನೀಡಲು ಹಣವಿಲ್ಲದಂತೆ ಮಾಡಿರುವ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಜನರಿಗೆ ನ್ಯಾಯ ಒದಗಿಸಲು ಸಾಧ್ಯವೇ. ಒಬ್ಬ ಹಣಕಾಸು ಸಚಿವರಾಗಿ ರಾಜ್ಯದ ಆರ್ಥಿಕ ಸ್ಥಿತಿ ನೋಡದೇ ವಿವೇಚನಾ ರಹಿತವಾಗಿ ಹೀಗೆ ಯೋಜನೆ ಘೋಷಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಶಿಡ್ಲಘಟ್ಟದಲ್ಲಿ ನಡೆದ ಪರಿವರ್ತನಾ ಯಾತ್ರೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು

ಅಚ್ಚೇ ದಿನ್ ಕಬ್ ಆಯೇಗಾ ಎನ್ನುವ ಸಿದ್ಧರಾಮಯ್ಯನವರಿಗೆ ಜನರು ಮನೆಗೆ ಕಳಿಸಿದಾಗ ತಿಳಿಯುತ್ತದೆ. ನಮ್ಮ ಸರ್ಕಾರವಿದ್ದಾಗ ಎತ್ತಿನಹೊಳೆ ಯೋಜನೆಗೆ ಮಂಜೂರಾತಿ ನೀಡಿದ್ದೆವು. ಅದನ್ನು ಏಕೆ ಪೂರ್ಣಗೊಳಿಸಿಲ್ಲ. ಆಮೆಗತಿಯಲ್ಲಿ ಕಾಮಗಾರಿ ನಡೆಯಲು ಕಾರಣವೇನು. ಎಲ್ಲಿ ಹೋಯ್ತು ದುಡ್ಡು ಎಂದರು.
ಬಿಜೆಪಿ ಮುಖಂಡ ಆರ್.ಅಶೋಕ್ ಮಾತನಾಡಿ, ದೇಶದ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಧೂಳೀಪಟವಾಗಿದೆ. ಇನ್ನೂ ಕರ್ನಾಟಕದಲ್ಲಿ ಅದು ಉಳಿದರೆ, ಕಾಂಗ್ರೆಸ್ ಹೈಕಮ್ಯಾಂಡ್ಗೆ ಎ.ಟಿ.ಎಂ.ರೀತಿ ಕೆಲಸ ಮಾಡುತ್ತದೆ. ನಮ್ಮ ದುಡ್ಡು ನಮ್ಮ ಅಭಿವೃದ್ಧಿಗೆ ಮಾತ್ರ ಇರಲಿ. ಬಿಜೆಪಿ ಸರ್ಕಾರದಿಂದ ರಾಜ್ಯ ಸುಭಿಕ್ಷವಾಗುತ್ತದೆ.
ಅನ್ನಭಾಗ್ಯಕ್ಕೆ ಕೇಂದ್ರದ 28 ರೂ ಬಂದರೆ ರಾಜ್ಯ ಸರ್ಕಾರ ನೀಡುವುದು 3 ರೂ. ಆದರೆ ತಮ್ಮದೇ ಎಂಬಂತೆ ಪ್ರಚಾರ ಪಡೆಯುತ್ತಾರೆ. ಕೇಂದ್ರ ಕೇಂದ್ರದ ವಿದ್ಯುತ್ ಮಂತ್ರಿ ಯೋಜನೆಯನ್ನು ಡಿ.ಕೆ.ಶಿವಕುಮಾರ್ ರಮ್ಯ ಕೈಗೆ ಕೊಟ್ಟು ‘ಹೊಸ ಬೆಳಕು’ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಡೂಪ್ಲಿಕೇಟ್ ಸರ್ಕಾರ, ಚೀನಾ ಮಾಡೆಲ್ ಇದ್ದಂತೆ ಸಿದ್ಧರಾಮಯ್ಯ. 80 ಲಕ್ಷ ರೂಗಳ ವಾಚ್ ಕಟ್ಟುವ, 2 ಲಕ್ಷ ರೂಗಳ ಕನ್ನಡಕ ಹಾಕುವ ಸಿದ್ದರಾಮಯ್ಯನವರು ತಾವು ಸಮಾಜವಾದಿ ಅನ್ನುತ್ತಾರೆ ಎಂದು ಲೇವಡಿ ಮಾಡಿದರು.
ಅರ್ಕಾವತಿ ಡಿ.ನೋಟಿಫಿಕೇಷನ್ ಹಗರಣದಲ್ಲಿ ಸಿದ್ದರಾಮಯ್ಯ ಅವರು ನೂರಾರು ಕೋಟಿಗಳ ಹಣ ಮಾಡಿದ್ದು ಬಿಟ್ಟರೆ, ಬೇರೆನೂ ಸಾಧನೆ ಮಾಡಿಲ್ಲ, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದಲೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕಳುಹಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್, ಮುಖಂಡರಾದ ಡಿ.ಆರ್.ಶಿವಕುಮಾರಗೌಡ, ಎಚ್.ಸುರೇಶ್, ವಿಶ್ವನಾಥ್, ಡಿ.ಎಸ್.ವೀರಯ್ಯ, ಸುರೇಂದ್ರಗೌಡ, ಮುರಳೀಧರ್, ರವಿಕುಮಾರ್, ಲೋಕೇಶ್ಗೌಡ, ಕೃಷ್ಣಾರೆಡ್ಡಿ, ರವಿನಾರಾಯಣರೆಡ್ಡಿ, ರಾಘವೇಂದ್ರ, ಮಂಜುಳಮ್ಮ, ಸುಜಾತಮ್ಮ, ರತ್ನಮ್ಮ, ಕೆಂಪರೆಡ್ಡಿ ಹಾಜರಿದ್ದರು.
ಮಸೀದಿಯ ಪ್ರಾರ್ಥನೆಗೆ ಭಾಷಣ ನಿಲ್ಲಿಸಿದ ಯಡಿಯೂರಪ್ಪ : ಯಡಿಯೂರಪ್ಪ ಭಾಷಣ ಮಾಡುವಾಗ ಮಸೀದಿಯ ಪ್ರಾರ್ಥನೆ ಧ್ವನಿ ಮೈಕಿನಲ್ಲಿ ಕೇಳಿಸಿದ ತಕ್ಷಣ ಭಾಷಣವನ್ನು ನಿಲ್ಲಿಸಿದರು. ಪ್ರಾರ್ಥನೆ ಮುಗಿದ ನಂತರ ತಮ್ಮ ಭಾಷಣವನ್ನು ಮುಂದುವರೆಸಿದರು.
ಎನ್ಪಿಎಸ್ ರದ್ದುಗೊಳಿಸಲು ಮನವಿ : ಶಿಡ್ಲಘಟ್ಟ ಎನ್ಪಿಎಸ್ ನೌಕರರ ಸಂಘದ ವತಿಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಎನ್.ಪಿ.ಎಸ್ ರದ್ದುಪಡಿಸಿ ನಿಶ್ಚಿತ ಪಿಂಚಣಿ ಜಾರಿಗೊಳಿಸಲು ಮನವಿ ಸಲ್ಲಿಸಲಾಯಿತು. ಎಲ್ಲಾ ತಾಲ್ಲೂಕುಗಳಲ್ಲಿ ಈ ಬಗ್ಗೆ ಮನವಿಗಳು ಬಂದಿದ್ದು ನಮ್ಮ ಗಮನದಲ್ಲಿದೆ. ಖಂಡಿತವಾಗಿ ನಿಮ್ಮ ಬೇಡಿಕೆ ಈಡೇರಿಸುತ್ತೇವೆಂಬ ಭರವಸೆ ನೀಡಿದರು.

ಬೆಟ್ಟ – ಸೀಮೆಯ ದಾಟಿ, ಭವ್ಯ ಸಾಗರದೆಡೆಗೆ

0

ಊರಿನುದ್ದಕ್ಕೂ ಒಂದು ಕಂಬದಿಂದಿನ್ನೊಂದು ಕಂಬಕ್ಕೆ ಕಟ್ಟಿರುತ್ತಿದ್ದ ಬಣ್ಣದ ಕಾಗದದ ತೋರಣಗಳು, ಕೆಲ ಸಮಯದ ಹಿಂದೆಯಷ್ಟೇ ನೀರು ಹಾಯ್ದು ಶುಚಿಗೊಂಡ ರಸ್ತೆಗಳು, ಪ್ರತಿ ಮನೆಯ ಮುಂಬಾಗಿಲಿನ ಮುಂದೆಯ ರಸ್ತೆಯಮೇಲೆ ಬಣ್ಣ ಬಣ್ಣದ ರಂಗೋಲೆಯಿಡುತ್ತಿದ್ದ ತಾಯಂದಿರು, ಹಿಂದಿನ ದಿನ ಪ್ರತಿ ಗಲ್ಲಿಗಳಲ್ಲಿ ತಮಟೆ ಹೊಡೆಯುವವ ಎಚ್ಚರಿಸಿದ್ದ ಸಮಯ ಇನ್ನೇನು ಹತ್ತಿರವಾಗಿ ಲಘು ಬಗೆಯಿಂದ ಹಣ್ಣು ಕಾಯಿ ಬಾಳೆಹಣ್ಣುಗಳೊಂದಿಗೆ ಮಂಗಳಾರತಿಯ ತಟ್ಟೆಯನ್ನು ಸಿದ್ಧಗೊಳಿಸುತ್ತಿದ್ದ ಹೆಣ್ಣು ಮಕ್ಕಳು. ದೂರದ ಮಂಗಳವಾದ್ಯ ಹತ್ತಿರವಾಗತೊಡಗುತ್ತಿದ್ದಂತೆ ವಿದ್ಯುತ್ ತಂತಿಗಳನ್ನು ಹಿಡಿದೆತ್ತಿದ ಕೋಲುಗಳಡಿಯಿಂದ ಸಾಗಿಬರುತ್ತಿದ್ದ ಭವ್ಯವಾಗಿ ಅಲಂಕೃತಗೊಂಡ ಬೃಹದಾಕಾರದ ರಥ. ರಥದ ಮುಂಬಾಗದ ಎರಡು ತುದಿಗಳಿಗೆ ಕಟ್ಟಿರುತ್ತಿದ್ದ ಹಗ್ಗಗಳನ್ನು ರಸ್ತೆಯ ಉದ್ದಕ್ಕೂ ಹಿಡಿದೆಳೆದು ಜಗ್ಗಿ, ಹಿರಿ-ಕಿರಿಯರೆನ್ನದೆ ಊರ ದೇವರಾದ ವೇಣುಗೋಪಾಲಸ್ವಾಮಿಯನ್ನು ಮುನ್ನೆಡೆಸಿಕೊಂಡು ಬರುತ್ತಿದ್ದ ಊರಿನ ಜನರನ್ನು ನೋಡುವುದೇ ಒಂದು ಸುಗ್ಗಿ. ಪ್ರತಿ ಮನೆಯ ಮುಂದೆ ರಥದ ಆಳೆತ್ತರದ ಚಕ್ರಗಳಿಗೆ ಅಡ್ಡ ಕೊಟ್ಟು ನಿಲಿಸಿ, ಕಾಯಿ ಹಡೆದು, ಹೂ ಸುರಿದು, ಮಂಗಳಾರತಿ ಬೆಳಗಿ, ಬಾಳೆಯ ಹಣ್ಣನ್ನು ರಥದ ಕಳಸಕ್ಕೆ ಗುರಿ ಮಾಡಿ ಎಸೆದು ತನ್ನ ಮನದ ಕಾಮನೆಯನ್ನು ದೇವರಲ್ಲಿ ಕೋರಿಕೊಂಡು ಪ್ರಸಾದ ಪಡೆಯುವುದು ಪ್ರತೀತಿ. ಪ್ರತಿ ದೇವಾಲಯಗಳಲ್ಲಿ, ಮನೆಗಳಲ್ಲಿ ವಿಶೇಷ ಪೂಜೆ, ನೆಂಟರಿಷ್ಟರಿಗೆ, ಸ್ನೇಹಿತರಿಗೆ, ನೆರೆ-ಹೊರೆಯವರಿಗೆ ಪ್ರಸಾದವನ್ನು ಹಂಚುವುದು ಆಚರಣೆ.
ಇದೇ ಊರಿನಲ್ಲಿ ಹುಟ್ಟಿ ಬೆಳೆದು, ಕಣ್ಣ ಮುಂದೆಯೇ ಬದಲಾಗುವ ಊರಿನ ಪ್ರತಿಯೊಂದು ಹಂತವನ್ನು ಗಮನಿದ್ದ ನಮಗೆ ಬಾಲ್ಯದ ನೆನಪುಗಳು ಸದಾ ಹಸಿರು. ಡಿಸೇಂಬರ್ 31 ರ ರಾತ್ರಿ ಊರಿನ ಎರಡು ಪ್ರಮುಖ ಬೀದಿಗಳಲ್ಲಿ 7 ಬಾರಿ ನಡೆದು ಕಡೆಗೊಂದು ಕಡೆ ಕುಳಿತು ನಮ್ಮ ಹಿಂದಿನ ದಿನಗಳನ್ನು, ಆ ದಿನ ರಾತ್ರಿ ಮುಂದಿನ ಹೊಸವರ್ಷದ ಮೊದಲ ದಿನಕ್ಕೆ ಅಣಿಯಾಗುತ್ತಿದ್ದ ಊರಿನ ಜನರ ಹುರುಪನ್ನು ನಮ್ಮ ಸಂಭಾಷಣೆಯಲ್ಲಿ ಸವಿಯತೊಡಗಿದ್ದೆವು.
“ನ್ಯೂ ಇಯರ್ ಸಂಭ್ರಮ ಎಷ್ಟು ಗ್ರಾಂಡ್ ಆಗಿ ಇದೆ ಅಲ್ವ ಈಗ. ನಾವು ಓದುವಾಗ ಇಷ್ಟು ಗ್ರಾಂಡ್ ಆಗಿ ಸೆಲೆಬ್ರೇಟ್ ಆಗ್ತಿರ್ಲಿಲ್ಲ ಆಲ್ವಾ ?” ನಾವು ಕುಳಿತಲ್ಲಿನಿಂದ ನಮ್ಮ ಕಣ್ಣಿಗೆ ಎಟುಕುವ ದೂರದಲ್ಲಿ ಬಣ್ಣ ಬಣ್ಣದ ಲೈಟುಗಳನ್ನು ಬೆಳಗಿಸಿಕೊಂಡು ನಿಂತಿದ್ದ ದೊಡ್ಡ ಬೇಕರಿಯಲ್ಲಿ ಸರಾಸರಿ 6 ನಿಮಿಷಕ್ಕೊಂದರಂತೆ ಖಾಲಿಯಾಗುತ್ತಿದ್ದ ಕೇಕನ್ನು ಎಣಿಸುತ್ತಿದ್ದ ನಮ್ಮ ಸ್ನೇಹಿತರ ದಂಡಿನಲ್ಲೊಬ್ಬ ಕರೆಂಟು ಬಂದೊಡನೆ ಒಮ್ಮೆಲೇ ಪುಳಕ್ಕನೆ ಹತ್ತಿದ ಬಲ್ಬಿನ ಹಾಗೆ ಕೇಳಿದ.
ಹೌದು.. ವಾರದ ಹಿಂದೆಯಿಂದಲೇ ಸ್ನೇಹಿತರೆಲ್ಲರಿಗೂ ಕೊಡಬಹುದಾದ Greeting Cardಗಳನ್ನ ಅಂಗಡಿಗಳಲ್ಲಿ ಹುಡುಕಿ, ಯಾರಿಗೆ ಯಾವುದು ಕೊಡಬೇಕೆಂದು ತೀರ್ಮಾನಿಸಿ, to, from ಜೊತೆಗೆ “Wish You Happy New Year” ಬರೆದು ಸಿದ್ಧಮಾಡಿಟ್ಟುಕೊಂಡು, 1 ನೇ ತಾರೀಖಿನ ದಿನ ಬೆಳಗೆದ್ದು, ಅಮ್ಮ ಒಗೆದು ಚೊಕ್ಕವಾಗಿಟ್ಟಿರುತ್ತಿದ್ದ ಬಟ್ಟೆಗಳನ್ನು ಧರಿಸಿ, ಶಾಲೆಗೆ ಹೋಗಿ ಕಾರ್ಡು ಕೈಗಿತ್ತು ಶುಭಾಶಯಗಳನ್ನು ತಿಳಿಸಿ, ಮೇಷ್ಟ್ರು ಪಾಠ ಮಾಡದಂತೆ ಬೋರ್ಡಿನ ತುದಿಯಿಂದ ತುದಿಯವರೆಗೂ ಚಿತ್ರಗಳನ್ನು ಬಗೆ ಬಗೆಯ ಬಣ್ಣಗಳೊಂದಿಗೆ ಗೀಚಿ, ಶಾಲೆ ಮುಗಿಯುವ ವರೆಗೂ ಪಾಠ ಒಂದನ್ನು ಬಿಟ್ಟು ಮತ್ತೆಲ್ಲವನ್ನು ಚರ್ಚಿಸಿ ಮನೆಗೆ ಹಿಂದಿರುಗಿದರೆ ಹೊಸ ವರ್ಷದ programme ಮುಗಿದಂತೆ. ಹೈ ಸ್ಕೂಲು ಮುಗಿಯುವ ಹೊತ್ತಿಗೆ ಒಂದು ಬಾರಿ ಸ್ನೇಹಿತರೆಲ್ಲರೂ ದುಡ್ಡು ಹಾಕಿ ಬೇಕರಿಯಲ್ಲಿ ಹೇಳಿ ಮಾಡಿಸಿ ಒಂದು ಕೇಕು ತಂದು ಕತ್ತರಿಸಿ ತಿಂದದ್ದು ನೆನಪಿದೆಯಾದರೂ, ಇಷ್ಟು ವೈಭವವಾಗಿ ನಾವೆಂದೂ ಆಚರಿಸಿಯೇ ಇರಲಿಲ್ಲ.
ನಾವೆಲ್ಲಾ ಒಟ್ಟಿಗೆ ಸೇರಿ ಆಚರಿಸುತ್ತಿದುದೆಂದರೆ ಊರ ದೇವರಾದ ವೇಣುಗೋಪಾಲ ಸ್ವಾಮಿಯ ರಥೋತ್ಸವ ಮತ್ತು ಶ್ರೀ ರಾಮ ನವಮಿಯ ಉಟ್ಲು ಪರಿಷೆ. ಶ್ರೀರಾಮನವಮಿಯಂದು ಎಲ್ಲರೂ ತಮ್ಮ ಮನೆಗಳಲ್ಲಿ ಪೂಜೆ ಮಾಡಿ ಹೆಸರುಬೇಳೆ, ಪಾನಕವನ್ನು ತಮ್ಮ ಬಂದುಗಳು, ಸ್ನೇಹಿತರೊಡನೆ ಹಂಚಿಕೊಳ್ಳುವುದು ವಾಡಿಕೆ. ಇದು ಮನೆಗಳಿಗೆ ಮಾತ್ರ ಸೀಮಿತವಾಗದೆ ಪ್ರತಿ ಕಚೇರಿ, ದೇವಸ್ಥಾನ, ಸಾರ್ವಜನಿಕ ಸ್ಥಳಗಳಲ್ಲಿಯೂ ಹೆಸರುಬೇಳೆ ಪಾನಕದ ಸೇವೆ ಸಂಜೆಯವರೆಗೂ ಸಾಗುತ್ತಿತ್ತು. ಇನ್ನು ಸಂಜೆಗೆ ಚಿಂತಾಮಣಿ ರಸ್ತೆಯ ಶ್ರೀ ರಾಮನ ದೇವಸ್ಥಾನದ ಮುಂದಿನ ಗರಡಿ ಮನೆಯ ಮುಂಬಾಗದಲ್ಲಿ ನೆಟ್ಟಿದ್ದ ಉಟ್ಲು ಕಂಬವ ಹತ್ತಿ ರಾಟೆಯ ಒಳಹೊಕ್ಕ ಜನರು ಅದನ್ನು ತಿರುಗಿಸಿದರೆ, ಕೆಳಗೆ ಉದ್ದನೆಯ ಕೋಲು ಹಿಡಿದು ನಿಂತವರು ತಮ್ಮೆಡೆಗೆ ತೂರಿಬರುತ್ತಿದ್ದ ನೀರನ್ನು ತಪ್ಪಿಸಿಕೊಂಡು ರಾಟೆಯ ಸಹಾಯದಿಂದ ತಿರುಗುವ ತೆಂಗಿನಕಾಯಿಗಳನ್ನು ಒಡೆಯುವುದನ್ನು ಬಹಳಷ್ಟು ಬಾರಿ ಜನರ ಸಂದಣಿಯ ಮಧ್ಯೆ ನೋಡಲಾಗದೆ ನನ್ನ ಅಪ್ಪನ ಭುಜದ ಮೇಲೆ ಕೂತು ಕಂಡದ್ದಿದೆ.
ಊರ ಜನರೆಲ್ಲರೂ ಒಂದು ಕಡೆ ಸೇರಿ ಸಂಭ್ರಮಿಸುತ್ತಿದ್ದ ಆಚರಣೆಗಳೇ ಸೊಗಸು. ಬ್ಯಾಟರಾಯನ ಗುಡಿಯ ಜಾತ್ರೆಯ ಬತಾಸು, ಕಡಲೆಪುರಿಯ ಸವಿ ಒಂದು ಕಡೆಯಾದರೆ, ಸಂಕ್ರಾಂತಿಯ ದಿನದಂದು ಎಲ್ಲರ ಮನೆಯ ಮುಂದಿನ ವಿಧವಿಧವಾದ ರಂಗೋಲಿಗಳನ್ನು ಕಂಡು, ಎತ್ತುಗಳಿಗೆ ಪೂಜೆ ಮಾಡಿ ಬೆಲ್ಲ, ಕಡಲೆಯನ್ನು ತಿನ್ನಿಸಿ, ರಾತ್ರಿಗೆ ಉಲ್ಲೂರುಪೇಟೆಯ ಭಜನೆ ಮನೆಯಿಂದ ಹೊರಡುವ ಅಲಂಕಾರಗೊಂಡ ರಾಸುಗಳ ಮೆರವಣಿಗೆಯನ್ನು ನೋಡುವ ಸಂಭ್ರಮ ಇನ್ನೊಂದು ಕಡೆ.
“Where are those days? ಎಷ್ಟು ಬದಲಾಗಿದೆ ಅಲ್ವ?” ಸ್ನೇಹಿತನೊಬ್ಬ ಸಣ್ಣ ದನಿಯಲ್ಲಿ ಆಲೋಚನೆಯನ್ನು ಪದಗಳಲ್ಲಿ ಹೊರಗೆಳೆದ. ಮೊದಲಿಗೆ ಒಬ್ಬ “ಏನು ಬದಲಾಗಿದೆ? ಇವೆಲ್ಲಾ ಈಗಲೂ ಮಾಡ್ತಾ ಇದೀವಲ್ವಾ?” ಎಂದು ತರ್ಕಕ್ಕೆ ಹೊಂದುವ ಅನಿಸಿಕೆಯನ್ನು ಹೊರಹಾಕಿದನಾದರೂ, ಇನ್ನೊಂದೇ ನಿಮಿಷದಲ್ಲಿ ಅವನಿಗೆ ಆ ಪ್ರಶ್ನೆಯ ಆಳ ಮನ ಮುಟ್ಟಿತು… “ಹೌದಲ್ವಾ. ಆಚರಣೆಗಳಿವೆ ಆದರೆ ಸಂಭ್ರವಿಲ್ಲ”.
ನಿಧಾನವಾಗಿ ನಮ್ಮ ಪ್ರಶ್ನೆ ನಾವು ಒಟ್ಟಾಗಿ ಆಚರಿಸುತ್ತಿದ್ದ ಹಬ್ಬಗಳಲ್ಲಿ ಈಗೇಕೆ ಸಂಭ್ರಮ ಕಡಿಮೆಯಾಗಿದೆ ಎನ್ನುವ ಕಡೆ ಹರಿದಿತ್ತು. ಕಾಲ ಘಟ್ಟಗಳು, ಅದರಲ್ಲಾದ ಬದಲಾವಣೆಗಳು ನಮ್ಮ ಮಾತುಕತೆಯ ತಿರುಳಾಗತೊಡಗಿತ್ತು.
ಹಿಂದೆ ಮುಂಜಾನೆ 4.30ಕ್ಕೆ ” ಗಜಮುಖನೆ ಗಣಪತಿಯೇ ನಿನಗೆ ವಂದನೆ…” ಎಂದು ಪ್ರಾರಂಭವಾಗುತ್ತಿದ್ದ ದೇವಸ್ಥಾನಗಳ ಸ್ಪೀಕರ್ಗಳು ಈಗ ಕಡಿಮೆಯಾಗಿವೆ. ಇನ್ನು ಈ ಹಾಡು ಈಗ ಗಣೇಶನ ಹಬ್ಬಕ್ಕೆ ಮಾತ್ರ ಸೀಮಿತವಾಗಿದೆ. ಮೊದಲಿನಂತೆ ಸೋಮವಾರದಿಂದ – ಭಾನುವಾರವವೆರೆಗೆ ದಿನಕ್ಕೊಂದು ದೇವರ ಸ್ಥಾನಗಳಿಗೆ ಪೂಜೆ ಸಲ್ಲಿಸುತ್ತಿದ್ದ ಜನರೂ ಕಡಿಮೆಯಾಗಿದ್ದಾರೆ. ಮುಂಜಾನೆ ಹೊತ್ತಿನಲ್ಲಿ ಒಂದು ಸ್ಪೀಕರ್ನಲ್ಲಿ ಕೇಳಿಬರುತ್ತಿದ್ದ ಅಜಾನ್ ಈಗ ಎಲ್ಲಾ ದಿಕ್ಕುಗಳಿಂದ ಕೇಳಿಬರತೊಡಗಿವೆ. ಊರಿನ ಎರಡು ತುದಿಗಳಲ್ಲಿ ಎರಡು ಚರ್ಚುಗಳಾಗಿವೆ.
ನಮಗೆಲ್ಲಾ ಓದುವ ಸಮಯದಲ್ಲಿ ನಮ್ಮ ಜಾತಿಗಳ ವೈಭವೀಕರಣದ ಅವಶ್ಯಕತೆ ಇರಲಿಲ್ಲ. ಈಗಲೂ ಯಾರು ಯಾವ ಜಾತಿಗೆ ಸೇರಿದವೆರೆಂಬ ಯೋಚನೆಯೂ ನಮ್ಮಲ್ಲಿಲ್ಲ. ನಮ್ಮ ಬಾಲ್ಯದಲ್ಲಿ ಹಿರಿಯರು ಸೋಮವಾರ ನಗರೇಶ್ವರನಿಂದ ಶನಿವಾರ ಆಂಜನೇಯಸ್ವಾಮಿಯವರೆಗೂ ದಿನಂಪ್ರತಿ ಒಬ್ಬ ದೇವರನ್ನು ಪೂಜಿಸಿ ಬರುತ್ತಿದ್ದುದರಿಂದ ನಮಗೆ ದೇವರುಗಳು ದಿನಗಳಿಗೆ ಸೀಮಿತಗೊಂಡಿದ್ದು ಅರಿವಾಗುತ್ತಿತ್ತಾದರೂ… ಜಾತಿ, ಮತ, ಕುಲದ ವಿಭಜನೆಗಳೊಂದಿಗೆ ದೇವರುಗಳು, ದೇವಸ್ಥಾನಗಳು ಹಾಗೂ ಆಚರಣೆಗಳು ಗುರುತಿಸಲ್ಪಡತೊಡಗಿದ ಅರಿವಾಗತೊಡಗಿದ್ದು ಇತ್ತೀಚೆಗಷ್ಟೇ.
ನಮ್ಮೆಲ್ಲಾ ಆಚರಣೆಗಳ ಮೂಲ ಎಲ್ಲರೊಂದಿಗೆ ಒಗ್ಗೂಡಿ, ಹಂಚಿಕೊಂಡು ಆಚರಿಸುವುದಾದರೂ ಕಾಲ ಬದಲಾದಂತೆ ಈಗ ದೇವಸ್ಥಾನಗಳ ಪರಿಚಯವೂ ಜಾತಿಗಳ ಬಣ್ಣಗಳಲ್ಲಿ ತೇಲತೊಡಗಿವೆ. ಲಿಂಗಾಯಿತರ ಬಸವಣ್ಣ ದೇವಸ್ಥಾನ, ನಗರ್ತರ ನಗರೇಶ್ವರ, ಯಾದವರ ಶ್ರೀಕೃಷ್ಣ ದೇವಸ್ಥಾನ, ಬ್ರಾಹ್ಮಣರ ರಾಯರ ಮಠ, ಬಲಿಜರು ಚಿಂತಾಮಣಿ ರಸ್ತೆಯ ಶ್ರೀರಾಮನ ಪೂಜಿಸಿದರೆ, ಶ್ರೀರಾಮನ ಭಕ್ತ ವೀರಾಂಜನೇಯ ಉಲ್ಲೂರುಪೇಟೆಯಲ್ಲಿ ಪದ್ಮಶಾಲಿಗರಿಗೆ ಸೀಮಿತ. ಇವೆಲ್ಲವುದರ ಜೊತೆಗೆ ದೇವಸ್ಥಾನಗಳಿಗೆ ರಾಜಕೀಯ ಬಣ್ಣಗಳೂ ಸೇರಿಕೊಳ್ಳುತ್ತಿರುವುದು ಇತ್ತೀಚಿನ ದಿನಗಳ ಬೆಳವಣಿಗೆ.
ಇವು ದೇವಾಲಾಯಗಳ ಕೆಲವು ಉದಾಹರಣೆಗಳಾದರೆ, ಉತ್ಸವಗಳ ಸ್ವಾರಸ್ಯವೇ ಬೇರೆ.
ವಾಸವಿ ಜಯಂತಿ ಆರ್ಯವೈಶ್ಯರು ಆಚರಿಸಿದರೆ, ಭಾವನಾ ಮಹರ್ಷಿ ಜಯಂತಿ ಪದ್ಮಶಾಲಿಗರು, ಕನಕದಾಸ ಜಯಂತಿ ಕುರುಬ ಸಮುದಾಯ, ಕೆಂಪೇಗೌಡ ಜಯಂತಿ ಒಕ್ಕಲಿಗರು, ಶಂಕರ ಜಯಂತಿ ಬ್ರಾಹ್ಮಣರು, ಬಸವ ಜಯಂತಿ ಲಿಂಗಾಯಿತರು-ನಗರ್ತರು ಆಚರಿಸುತ್ತಾರೆ. ಮೊದಲಿಗೆ ನಗರ್ತರು, ಲಿಂಗಾಯಿತರು ಕೂಡಿ ಆಚರಿಸುತ್ತಿದ್ದರಾದರೂ ಈಗ ಬಸವಣ್ಣನ ದೇವಸ್ಥಾನದಲ್ಲಿ ಲಿಂಗಾಯಿತರು, ನಗರೇಶ್ವರನ ದೇವಾಲಯದಲ್ಲಿ ನಗರ್ತರು ಒಂದೇ ಉತ್ಸವವನ್ನು ಬೇರೆ ಬೇರೆಯಾಗಿ ಆಚರಿಸುತ್ತಾರೆ. ಹೀಗೆ ಮಾನವ ಕುಲವೊಂದೇ ಎಂದು ಸಾರಿದ ಮಾಹಾನುಭಾವರನ್ನು ಜಾತಿಗೊಬ್ಬರಂತೆ ಗುರುತಿಸಿಕೊಂಡು, ಅವರ ಜಯಂತಿಯ ಆಚರಣೆಯಂದು ತಮ್ಮ ಜಾತಿಯೊಂದಿಗೆ ಗುರುತಿಸಿಕೊಂಡ ದೇವಸ್ಥಾನದ ಲೌಡ್ ಸ್ಪೀಕರ್ಗಳಲ್ಲಿ ಆ ಕುಲದ ಭಕ್ತ ಮಹಾಶಯರಲ್ಲಿ ಮಾತ್ರ ವಿನಂತಿಸಿಕೊಂಡು ಆಹ್ವಾನಿಸಿ, ಅಲ್ಲಿಗೆ ಮುಖ್ಯ ಅತಿಥಿಯಾಗಿ ಬಂದ ಪ್ರತಿಯೊಬ್ಬ ಗಣ್ಯವ್ಯಕ್ತಿಯು ತನ್ನ ಭಾಷಣದಲ್ಲಿ ” ಇವರು ಯಾವುದೇ ಒಂದು ಜನಾಂಗಕ್ಕೆ ಸಂಬಂಧಪಟ್ಟವರಲ್ಲ. ಇಂತಹ ಮಹಾನ್ ಪುರುಷರ ಜಯಂತಿಯನ್ನು ಎಲ್ಲಾ ಸಮುದಾಯದವರು ಆಚರಿಸುವಂತಾಗಬೇಕು” ಎಂದು ಉಲಿಯುತ್ತಿದ್ದರೆ, ಬದುಕು ಧನ್ಯ.
ಹೀಗಿದ್ದರೂ ಕೆಲ ಆಚರಣೆಗಳು ತಮ್ಮ ಸತ್ವವನ್ನು ಹಾಗೆಯೇ ಉಳಿಸಿಕೊಂಡು ಮುನ್ನಡೆಯುತ್ತಿವೆ. ಶ್ರೀ ರಾಮ ನವಮಿಯಂದು ಊರಿನ ಪ್ರತಿ ದಿಕ್ಕಿನಲ್ಲೂ ಪ್ರತಿ ಗುಡಿ, ಕಚೇರಿಗಳ ಜೊತೆಗೆ ಅಲ್ಲಲ್ಲಿ ಪೆಂಡಾಲುಗಳ ಅಡಿಯಲ್ಲಿ ಹೆಸರುಬೇಳೆ, ಪಾನಕದ ವಿತರಣೆಯಾಗಿ ಅದರ ಸವಿ ಪ್ರತಿಯೊಬ್ಬನ ನ್ಯಾಲಿಗೆ, ಮನಸ್ಸಿಗೂ ತಲುಪುತ್ತದೆ. ವೇಣುಗೋಪಾಲ ಸ್ವಾಮಿಯ ರಥೋತ್ಸವ, ಬ್ಯಾಟರಾಯನಗುಡಿಯ ರಥೋತ್ಸವಗಳು ಪ್ರತಿವರ್ಷ ನಡೆಯುತ್ತಿವೆಯಾದರೂ ಸಂಭ್ರಮ ಕಡಿಮೆಯಾಗಿದೆ, ಉಲ್ಲೂರುಪೇಟೆಯ ಭಜನೆಮನೆಯ ಸಂಕ್ರಾಂತಿ ಮೆರವಣಿಗೆಯಲ್ಲಿ ವರ್ಷ ಕಳೆದಂತೆ ರಾಸುಗಳ ಸಂಖ್ಯೆ ಕಡಿಮೆಯಾದರೂ ಪ್ರತೀತಿ ಮುಂದುವರೆದಿದೆ. ಪೂಜಮ್ಮ, ಕರಾಗದಮ್ಮ ದೇವರುಗಳು ಕಾಲೋಚಿತವಾಗಿ ವರ್ಷಕ್ಕೊಮ್ಮೆ ಕರಗದ ಸಮಯದಲ್ಲಿ ನೆನೆಸಿಕೊಳ್ಳಲ್ಪಡುತ್ತರಾದರೂ, ಎಲ್ಲಮ್ಮ ದೇವಿ ಕರಗದ ಜೊತೆಗೆ ವಿವಿಧ ಹಬ್ಬಗಳಿಗೆ ತಕ್ಕಂತೆ ವಿಧವಿಧವಾಗಿ ಅಲಂಕೃತಗೊಂಡು ಎಲ್ಲರಿಗೂ ದರ್ಶನ ನೀಡುತ್ತಾಳೆ. ಮುಖ್ಯ ರಸ್ತೆಯ ದ್ವಿಮುಖ ಗಣಪ ಸಂಕಷ್ಟ ಚತುರ್ಥಿಯಂದು ಎಲ್ಲರ ಸಂಕಷ್ಟವನ್ನು ಹರಸುತ್ತಾನೆ, ಕೋಟೆಯ ಆಂಜನೇಯ ನಿತ್ಯ ಸಂಜೆಯ ಪೂಜೆಯ ಜೊತೆಗೆ ಎಲ್ಲ ಹೊಸ ವಾಹನಗಳನ್ನು ಆಶೀರ್ವದಿಸುತ್ತಾನೆ, ಕಾಶಿ ವಿಶ್ವನಾಥ ಡಿಸೇಂಬರ್ – ಜನವರಿಯಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರ ಭಜನೆಗಳಲ್ಲಿ ಮಿಂದಿರುತ್ತಾನೆ. ಗಂಗಮ್ಮ ತಾಯಿಯು ಜನರ ಎಲ್ಲಾ ಖಾಯಿಲೆಗಳನ್ನು ಕಾಲ ಕಾಲಕ್ಕೆ ಹೋಗಲಾಡಿಸುತ್ತಳಾದರೂ, ಜನರು ವರ್ಷಕ್ಕೊಂದು ಬಾರಿ ಬೇಸಿಗೆ ಮುಗಿಯುವ ವೇಳೆಗೆ ಮಳೆಯ ಆಗಮನಕ್ಕಾಗಿ ಆಗಲೇ ಮೇವಿಲ್ಲದೆ ಸೊರಗಿರುತ್ತಿದ್ದ ಪ್ರಾಣಿಗಳನ್ನು ಕಡಿದು ನೆಂಟರಿಗೆ – ಇಷ್ಟರಿಗೆ ಬಡಿಸಿ, ಜಾತ್ರೆ ಮಾಡಿ ದೇವಿಯನ್ನು ಪೂಜಿಸುತ್ತಾರೆ.
ಇನ್ನು ಜಾನುವಾರುಗಳಿಗೆ ಈ ಜಾತಿ, ಕುಲಗಳ ಭಯವಿಲ್ಲ. ದ್ಯಾವಪ್ಪನ ಗುಡಿಯ ದ್ಯಾವಪ್ಪ ತಾತ ಇಲ್ಲಿಯವರೆಗೂ ಎಲ್ಲಾ ಕುರಿ, ಮೇಕೆ, ಎತ್ತು, ಹೋರಿಗಳನ್ನು, ದೇಸಿ ಹಾಗೂ ಜೆರ್ಸಿ ತಳಿಗಳ ರಾಸುಗಳನ್ನು ಒಟ್ಟಿಗೆ ಸಲಹಿದ್ದಾನೆ.
ಹೊಸ ವರ್ಷಾಚರಣೆಗೆ ಏಕಿಷ್ಟು ಸಂಭ್ರಮ ಎಂದು ಹುಡುಕ ಹೊರಟಿದ್ದ ನಮ್ಮ ಆಲೋಚನೆಗಳು ಮಾತುಗಳಲ್ಲಿ ಬಹಳ ದೂರ ಮುಟ್ತಿತ್ತು. ಮೊದಲಿಗೆ ಇದೊಂದು ಪಾಶ್ಟಾತ್ಯ ಸಂಪ್ರದಾಯದ ಅನುಕರಣೆ ಎಂದೆನಿಸಿದರೂ.. ಅದರ ಕಾರಣವಾದರೂ ಏನು? ಇಷ್ಟೆಲ್ಲಾ ವೈಶಿಷ್ಟ್ಯಗಳು ನಮ್ಮಲ್ಲಿಯೇ ಇರಬೇಕಾದರೆ ಅನುಕರಣೆಯ ಅಥವಾ ಅದರ ಆಚರಣೆಯ ಪ್ರಮೇಯವಾದರೂ ಏನಿದ್ದೀತು? ಪ್ರಶ್ನೆಗಳ ಭಾರ ಹೆಚ್ಚು ಎನಿಸಿದರೂ, ಉತ್ತರ ಸರಳವೆನಿಸತೊಡಗಿತ್ತು.
ಮನುಷ್ಯ ಸಂಘ ಜೀವಿ. ಎಷ್ಟೋ ಕಾರಣಗಳು ಅವನನ್ನು ಸೀಮಿತಗೊಳಿಸಿದರೂ ಅವನ ಚೇತನ ಜಾತಿ, ಕುಲ, ಮತ, ಧರ್ಮ ಎಲ್ಲವುಗಳನ್ನು ದಾಟಿ ಅನ್ಯರೊಡನೆ ಬೆರೆಯುವ ಸರಳ ದಾರಿಯನ್ನು ಹುಡುಕಿಯೇಬಿಡುತ್ತದೆ.
ಚೇತನ ಹರಿವ ಜಲದಂತೆ.
ಅಡ್ಡಿಯಾದೊಡೆ ಬದಲಿ ಹರಿವುದು,
ಹೊಳ್ಳವಾದರೆ ತುಂಬಿ ಹರಿವುದು.
ಬೆಟ್ಟ – ಸೀಮೆಯ ದಾಟಿ,
ಕೊಳ – ಕೆರೆಗಳ ತುಂಬಿ,
ಝರಿಯಾಗಿ, ನದಿಯಾಗಿ ಸೇರಿಬಿಡುವುದೆನ್ನ ಗಮ್ಯವ,
ಭುವಿಯಾಚೆ ಭವ್ಯ ಸಾಗರವ.

– ಸಂದೀಪ್ ಜಗದೀಶ್ವರ್

ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ

0

ಕನ್ನಡ ಸಾರಸ್ವತ ಪರಿಚಾರಿಕೆ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ ಸಹಯೋಗದೊಂದಿಗೆ ನಗರ ಗ್ರಂಥಾಲಯದಲ್ಲಿ ಜನವರಿ 14 ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ‘ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ – 7 ನೇ ತಿಂಗಳ ಕಾರ್ಯಕ್ರಮ ಆಯೋಜಿಸಲಾಗಿದೆ.
ತಾಲ್ಲೂಕಿನ ಸುಂಡ್ರಹಳ್ಳಿಯ ಎನ್. ಶ್ರೀನಿವಾಸಮೂರ್ತಿ ಅವರು ತಮ್ಮ ಕೃತಿಗಳಾದ ‘ಕಡಲು ಕೂಡುವ ಹನಿಗಳು’ ಎಂಬ ಕವನ ಸಂಕಲನ ಮತ್ತು ‘ಸೆಲ್ಪೀ ವಿಥ್ ವಿಕ್ಟರಿ’ ಪುಸ್ತಕದ ಬಗ್ಗೆ ಮಾತಾಡಿ ತಮ್ಮ ಸಾಹಿತ್ಯದ ಅನುಭವಗಳನ್ನು ಪುಸ್ತಕ ಪ್ರೇಮಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ.
ವಿಜಯಪುರದ ಇನ್ಸ್ಪೈರ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಎನ್. ಶ್ರೀನಿವಾಸಮೂರ್ತಿ ಅವರು ವ್ಯಕ್ತಿತ್ವ ವಿಕಸನ ತರಭೇತಿ ತರಗತಿಗಳನ್ನು ನಡೆಸುತ್ತಾರೆ. ವಿವಿಧ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಾರೆ. ಹಂಬು, ಮುಗುಳು, ಕಡಲು ಕೂಡುವ ಹನಿಗಳು ಎಂಬ ಕವನಸಂಕಲನಗಳನ್ನು, ನಾಗರೀಕ ಪ್ರಜ್ಞೆ, ನಡತೆಗೊಂದು ಮುನ್ನುಡಿ, ಗೆಲುವಿನ ರಹಸ್ಯ, ಸೆಲ್ಪೀ ವಿಥ್ ವಿಕ್ಟರಿ, ವಿಧಿಯ ಬೆನ್ನೇರಿ ಎಂಬ ವ್ಯಕ್ತಿತ್ವ ವಿಕಸನ ಪುಸ್ತಕಗಳನ್ನು ಬರೆದಿದ್ದಾರೆ ಎಂದು ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದ್ದಾರೆ.

ಕನ್ನಮಂಗಲ ಮಕ್ಕಳ ಹಬ್ಬ

0

ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಕನ್ನಮಂಗಲ ಮಕ್ಕಳ ಹಬ್ಬ’ ವನ್ನು ಜನವರಿ 13 ರ ಶನಿವಾರ ಮಧ್ಯಾಹ್ನ 3 ಗಂಟೆಗೆ ಆಯೋಜಿಸಲಾಗಿದೆ. ಗ್ರಾಮದ ಸ್ನೇಹ ಯುವಕರ ಸಂಘದ ಸಹಕಾರದಿಂದ ನಡೆಯುವ ಈ ಮಕ್ಕಳ ಹಬ್ಬದಲ್ಲಿ ಮಕ್ಕಳ ರಚನೆಗಳ ಸಂಗ್ರಹ ‘ಶಾಮಂತಿ 7’ ಪುಸ್ತಕ ಬಿಡುಗಡೆಯಾಗಲಿದೆ.
ಶ್ರೀಕ್ಷೇತ್ರ ಕೈವಾರ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ, ಶಿಕ್ಷಣತಜ್ಞ ಕೋಡಿರಂಗಪ್ಪ, ಪ್ರವಚನಕಾರ ತಳಗವಾರ ಆನಂದ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಬಾಬು ಭಾಗವಹಿಸುವರು. ಮಕ್ಕಳಿಂದ ಸಾಂಸ್ಕೃತಿಕ ರಸಸಂಜೆ ನಡೆಯಲಿದೆ.

ಸರ್ಕಾರಿ ನೌಕರರ ಕ್ರೀಡಾಕೂಟ ಜನವರಿ 17 ರಂದು

0

ತಾಲ್ಲೂಕು ಸರ್ಕಾರಿ ನೌಕರರ ಕ್ರೀಡಾಕೂಟ ಜನವರಿ 17 ರ ಬುಧವಾರ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ವಿವಿಧ ಕ್ರೀಡೆಗಳನ್ನು ನಡೆಸಲಾಗುತ್ತಿದ್ದು, ತಾಲ್ಲೂಕಿನ ಸರ್ಕಾರಿ ನೌಕರರು ಉತ್ಸಾಹದಿಂದ ಪಾಲ್ಗೊಂಡು ವಿಜೇತರಾಗಿ ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ತಾಲ್ಲೂಕಿಗೆ ಕೀರ್ತಿ ತರಬೇಕು. ಕ್ರೀಡಾಕೂಟದ ಉದ್ಘಾಟನೆಯನ್ನು ಶಾಸಕ ಎಂ.ರಾಜಣ್ಣ ಉದ್ಘಾಟಿಸಲಿದ್ದಾರೆ. ಹೆಚ್ಚಿನ ಮಹಿತಿಗಾಗಿ ದೈಹಿಕ ಶಿಕ್ಷಣ ಪರಿವೀಕ್ಷಕ ಎಚ್.ಎಂ.ರಂಗನಾಥ(9980680327) ಅವರನ್ನು ಸಂಪರ್ಕಿಸುವಂತೆ ಕೋರಿದರು.
40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ 100 ಮೀಟರ್, 200 ಮೀಟರ್, 800 ಮೀಟರ್ ಓಟ, ಡಿಸ್ಕಸ್ ಥ್ರೋ ಮತ್ತು ಗುಂಪು ಆಟಗಳಾದ ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್, ಟೆನ್ನಿಕಾಯ್ಟ್, 45 ವರ್ಷ ಮೇಲ್ಪಟ್ಟ ಪುರುಷರಿಗೆ 100 ಮೀಟರ್, 400 ಮೀಟರ್, 800 ಮೀಟರ್ ಓಟ, ಷಾಟ್ ಪುಟ್, ಡಿಸ್ಕಸ್ ಥ್ರೋ ಮತ್ತು ಗುಂಪು ಆಟಗಳಾದ ಬ್ಯಾಡ್ಮಿಂಟನ್(ಷಟಲ್), ಟೇಬಲ್ ಟೆನ್ನಿಸ್, ಟೆನ್ನಿಸ್ ಹಾಗೂ ಇನ್ನಿತರೆ ಆಟಗಳ ಸ್ಪರ್ಧೆಗಳಿರುತ್ತವೆ. ಎಲ್ಲರೂ ಭಾಗವಹಿಸಿ ಸ್ಪರ್ಧಿಗಳನ್ನು ಪ್ರೋತ್ಸಾಹಿಸಿ ಎಂದು ಕೋರಿದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಶ್ರೀರಾಮಯ್ಯ, ಗುರುರಾಜರಾವ್, ಅಕ್ಕಲರೆಡ್ಡಿ, ಜಯಣ್ಣ, ಸುಬ್ಬಾರೆಡ್ಡಿ ಹಾಜರಿದ್ದರು.

ಸ್ವಾಮಿ ವಿವೇಕಾನಂದರ 155ನೇ ಜಯಂತ್ಯುತ್ಸವ

0

ರಾಮಕೃಷ್ಣರಿಂದ ಸ್ವಾಮಿ ವಿವೇಕಾನಂದರು ಪಡೆದ ಮುಖ್ಯ ಬೋಧನೆಗಳಲ್ಲಿ ಒಂದೆಂದರೆ ಎಲ್ಲರಲ್ಲಿಯೂ ದೇವರಿದ್ದಾನೆ ಎಂಬುದು. ‘ದರಿದ್ರ ನಾರಾಯಣ ಸೇವೆ’ ಎಂಬ ತತ್ತ್ವದಂತೆ ಬಡ ಜನರ ಸೇವೆಯಲ್ಲಿಯೇ ದೇವರ ಸೇವೆಯನ್ನು ಮಾಡುವ ದಾರಿಯನ್ನು ಅವರು ಪಾಲಿಸಿದರು ಎಂದು ರಾಮಕೃಷ್ಣಾಶ್ರಮದ ಪೂರ್ಣಾನಂದ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿವೇಶನದ ಆವರಣದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದರ 155ನೇ ಜಯಂತ್ಯುತ್ಸವದ ಆಚರಣೆಯಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ದೇಶವನ್ನು ಮುನ್ನಡೆಸಲು ಸಶಕ್ತವಾದ ಯುವಪಡೆಯನ್ನು ನಿರ್ಮಿಸುವುದೇ ನನ್ನ ಗುರಿ ಎನ್ನುತ್ತಿದ್ದರು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಮಾನಸಿಕ, ದೈಹಿಕ, ಅಧ್ಯಾತ್ಮಿಕ, ನೈತಿಕ, ಸಾಮಾಜಿಕವಾಗಿ ಎಂದೂ ಶಕ್ತಿ ಕಳೆದುಕೊಳ್ಳಬಾರದು ಎಂದು ಯುವಕರಿಗೆ ಕರೆ ನೀಡಿದ್ದರು. ಇಂದು ವಿವೇಕವಾಣಿಯ ಒಂದಿಷ್ಟು ಅಂಶ ನಮ್ಮ ಯುವ ಪೀಳಿಗೆಗೆ ಅರ್ಥವಾದರೆ ಭಾರತೀಯ ಸಂಸ್ಕೃತಿಯ ಉಳಿಸಿ, ಬೆಳಸಲು ಸಾಧ್ಯವಾಗುತ್ತದೆ. ಸ್ವಾಮಿ ವಿವೇಕಾನಂದರು ತಮ್ಮ ವ್ಯಕ್ತಿತ್ವ, ವಿಚಾರಧಾರೆ ಮೂಲಕ ಸ್ವತಂತ್ರ ನವ ಭಾರತ ನಿರ್ಮಾಣಕ್ಕೆ ಬುನಾದಿಯನ್ನು ಹಾಕಿದರು ಎಂದು ಹೇಳಿದರು.
ಸ್ವಾಮಿ ವಿವೇಕಾನಂದರನ್ನು ಇಡೀ ದೇಶ ಮಾತ್ರವಲ್ಲ, ಇಡೀ ಜಗತ್ತು ಬಹಳ ಗೌರವದಿಂದ ನೆನಪಿಸಿಕೊಳ್ಳುತ್ತದೆ. ವಿವೇಕಾನಂದರ ಜೀವನ ಮೌಲ್ಯಗಳು ಹಾಗೂ ಸಂದೇಶಗಳು ಅನುಕರಣೀಯ ಎಂದರು.
ಮಳ್ಳೂರು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಿಂದ ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕೊಂಡೊಯ್ದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ರಾಮಾಂಜಿನಪ್ಪ, ಪ್ರಾಂಶುಪಾಲ ಚಂದ್ರಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ಶಿವಕುಮಾರ್, ಪ್ರೌಢಶಾಲೆ ಮುಖ್ಯಶಿಕ್ಷಕ ನರಸಿಂಹಮೂರ್ತಿ, ಮಳ್ಳೂರು ಹರೀಶ್, ಆನೂರು ದೇವರಾಜ್, ನಂಜೇಗೌಡ ಹಾಜರಿದ್ದರು.