ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಪರಿವರ್ತನಾ ಯಾತ್ರೆ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಜನವರಿ ೧೨ ರಂದು ಶಿಡ್ಲಘಟ್ಟಕ್ಕೆ ಪರಿವರ್ತನಾ ಯಾತ್ರೆ ಆಗಮಿಸಲಿದ್ದು ಬಹಿರಂಗ ಸಭೆಯನ್ನುದ್ದೇಶಿಸಿ ಯಡಿಯೂರಪ್ಪ ಅವರು ಮಾತನಾಡಲಿದ್ದಾರೆ ಎಂದು ಬಿಜೆಪಿ ಮುಖಂಡ ಡಿ.ಆರ್.ಶಿವಕುಮಾರಗೌಡ ತಿಳಿಸಿದರು.
ನಗರದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಮಾಡಿರುವ ಅಭಿವೃದ್ಧಿ ಯೋಜನೆಗಳು ಹಾಗೂ ಕೇಂದ್ರದ ಮೋದಿಯವರ ಜನಪರ ಯೋಜನೆಗಳಿಂದ ರಾಜ್ಯದಲ್ಲಿ ೧೫೦ ಕ್ಕೂ ಹೆಚ್ಚಿನ ಸ್ಥಾನಗಳನ್ನು ಗಳಿಸಿಕೊಳ್ಳುವ ಮೂಲಕ ಸರ್ಕಾರ ರಚನೆ ಮಾಡಲಿದೆ.
ಶಿಡ್ಲಘಟ್ಟದ ಕೋಟೆ ವೃತ್ತದಲ್ಲಿ ಶುಕ್ರವಾರ ಸಂಜೆ ಐದು ಗಂಟೆಗೆ ಬಹಿರಂಗ ಸಭೆ ನಡೆಯಲಿದ್ದು ಹತ್ತು ಸಾವಿರ ಮಂದಿ ಸೇರುವ ನಿರೀಕ್ಷೆಯಿದೆ. ಪ್ರತೀ ಪಂಚಾಯಿತಿಯ ಹಳ್ಳಿಗಳಿಗೂ ಹೋಗಿ ಮನೆಮನೆಯಲ್ಲೂ ಮೋದಿಯವರ ಯೋಜನೆಗಳು ಹಾಗೂ ಬಿಜೆಪಿ ಕಾರ್ಯೋದ್ದೇಶಗಳನ್ನು ಪ್ರಚಾರ ಮಾಡಿದ್ದೇವೆ. ಯುವಕರು ಹೆಚ್ಚಾಗಿ ಸ್ಪಂದಿಸುತ್ತಿದ್ದಾರೆ. ಯುವಜನರ ಬೆಂಬಲದಿಂದ ನಾವು ಉತ್ಸಾಹ ಪಡೆದಿದ್ದೇವೆ ಎಂದು ಹೇಳಿದರು.
ಬಿಜೆಪಿ ಮುಖಂಡ ನಾರ್ಥ್ ಈಸ್ಟ್ ಸುರೇಶ್ ಮಾತನಾಡಿ, ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್ ಷಾ ಅವರ ಮಾರ್ಗಸೂಚಿ ಪಾಲಿಸುತ್ತಿದ್ದೇವೆ. ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ಶಿಡ್ಲಘಟ್ಟ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವುದು ಖಚಿತ ಎಂದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಸಿ.ನಂದೀಶ್ ಮಾತನಾಡಿ, ಜನವರಿ ೧೨ ರಂದು ನಡೆಯಲಿರುವ ಬಿಜೆಪಿ ಪರಿವರ್ತನಾ ಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಭಾಗವಹಿಸಬೇಕು. ತಾಲ್ಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿಗಳಿಗೂ ತೆರಳಿ ಉತ್ತಮವಾಗಿ ಸಂಘಟನೆ ಮಾಡಲಾಗಿದೆ. ಬಹುತೇಕ ಯುವಜನರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಪರಿವರ್ತನಾ ಯಾತ್ರೆಯ ನಂತರ ಪಕ್ಷಕ್ಕೆ ಹೊಸ ಆಯಾಮ ಸಿಗಲಿದೆ ಎಂದರು.
ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ಆರ್.ಸುರೇಂದ್ರಗೌಡ, ದಾಮೋದರ್, ಮಂಜುಳಮ್ಮ, ಸುಜಾತಮ್ಮ, ರತ್ನಮ್ಮ, ರವಿಚಂದ್ರ, ಮುನಿರಾಜು ಕುಟ್ಟಿ, ಮಂಜುನಾಥ್, ಮಳ್ಳೂರು ಮಂಜು, ಕೃಷ್ಣಾರೆಡ್ಡಿ, ಬೈರಾರೆಡ್ಡಿ ಹಾಜರಿದ್ದರು.
ಜನವರಿ ೧೨ ರಂದು ಶಿಡ್ಲಘಟ್ಟಕ್ಕೆ ಆಗಮಿಸಲಿದೆ ಪರಿವರ್ತನಾ ಯಾತ್ರೆ
ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸಬೇಕು
ಕಲೆಯನ್ನು ಗುರುತಿಸುವ ಮತ್ತು ಪ್ರೋತ್ಸಾಹ ಮಾಡುವ ಮೂಲಕ ಸ್ಥಳೀಯ ಕಲಾವಿದರನ್ನು ಬೆಳೆಸುವಂತಹ ಕಾರ್ಯವಾಗಬೇಕು ಎಂದು ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ನಗರದ ಆಶಾಕಿರಣ ಅಂಧ ಮಕ್ಕಳ ವಸತಿ ಶಾಲೆಯಲ್ಲಿ ಬುಧವಾರ ಸ್ಥಳೀಯ ನೃತ್ಯ ಕಲಾವಿದ ಮುನಿರಾಜು ಅವರ ೪೨ ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮಲ್ಲಿ ಕಲಾವಿದರ ಕೊರತೆ ಇಲ್ಲ, ಆದರೆ ಇಲ್ಲಿ ಅವರಿಗೆ ಅವಕಾಶದ ಕೊರತೆ ಇದೆ, ಅವರನ್ನು ಗುರುತಿಸಿ ಕಲೆಗೆ ಪ್ರೋತ್ಸಾಹ ನೀಡುವ ಮನಸ್ಸುಗಳು ಹೆಚ್ಚಬೇಕು. ಕಲೆಯೆಂಬುದು ಒಬ್ಬರ ಸ್ವತ್ತಲ್ಲ, ಕಲೆಯು ಜಾತಿ, ಮತ, ಪ್ರಾದೇಶಿಕತೆ, ಗಡಿಯನ್ನು ಮೀರಿದಂತಹದ್ದು. ಕಲಾವಿದ ತನ್ನ ಆನಂದಕ್ಕಾಗಿ, ಬಾಳಿನ ಸಾರ್ಥಕತೆಗಾಗಿ ಕಲೆಯನ್ನು ಆರಾಧಿಸುತ್ತಾರೆ.
ಯಾವುದೇ ಕಲಾವಿದನಿಗೆ ಅವರ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಸನ್ಮಾನಿಸಿದರೆ, ಅವರಿಗೆ ಆಗುವ ಆನಂದ ಅಷ್ಟಿಷ್ಟಲ್ಲ. ಅಂತಹ ಆನಂದವನ್ನು ನಾವು ಕಾಣಬಹುದು. ಯಾವುದೇ ಕಲಾವಿದನಿಗೆ ಮನ್ನಣೆ ದೊರೆತರೆ ಅವನ ಬಾಳು ಸಾರ್ಥಕವಾಗುತ್ತದೆ. ಅದರಲ್ಲೂ ತನ್ನ ಸುತ್ತಲಿನವರು, ಊರವರು ಗುರುತಿಸಿ ಗೌರವಿಸಿದರೆ ಇನ್ನಷ್ಟು ಬೆಳೆಯಲು, ಸಾಧಿಸಲು ಪ್ರೇರಣೆಯಾಗುತ್ತದೆ.
ಸ್ಥಳೀಯ ನೃತ್ಯ ಕಲಾವಿದ ಮುನಿರಾಜು ಅವರು ತಂತ್ರಜ್ಞಾನವನ್ನು ಬಳಸಿ ಬೆಳೆದವರು. ಫೇಸ್ ಬುಕ್, ಯೂಟ್ಯೂಬ್ನಲ್ಲಿ ತನ್ನ ಕಲೆಯನ್ನು ಬಹುಜನಕ್ಕೆ ತೋರಿಸುವ ಮೂಲಕ ಪ್ರಸಿದ್ಧಿಗೆ ಬಂದರು. ಸ್ಥಳೀಯರ ಪ್ರೇರಣೆ, ಪ್ರೋತ್ಸಾಹದಿಂದ ಈಗ ಕಿರುಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಹೀಗೆಯೇ ಮುಂದುವರೆದು ಕಿರುತೆರೆ ಮತ್ತು ಚಲನಚಿತ್ರಗಳಲ್ಲೂ ನಟಿಸಿ ತಾಲ್ಲೂಕಿಗೆ ಕೀರ್ತಿ ತರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಅಂಧಮಕ್ಕಳಿಂದ ಕೇಕ್ ಕತ್ತರಿಸುವ ಮೂಲಕ ಮುನಿರಾಜು ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ನಟ ಚಿರಂಜೀವಿ ಅಭಿಮಾನಿ ಸಂಘದ ಸದಸ್ಯರು ಸಿ.ಎನ್.ಮುನಿರಾಜು ಅವರನ್ನು ಗೌರವಿಸಿದರು. ಅಂಧ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಚಲನಚಿತ್ರ ನಟಿ ರಾಜಶ್ರೀ, ಕಿರುತೆರೆ ನಿರ್ದೇಶಕರಾದ ದೇವನಹಳ್ಳಿ ಗಜೇಂದ್ರ, ಮೇಲೂರು ರಂಗ, ನಾರಾಯಣಸ್ವಾಮಿ, ಕಿರುಚಿತ್ರ ನಟಿಯರಾದ ಸುಷ್ಮಾ, ಅರ್ಚನಗೌಡ, ನಿವೃತ್ತ ಶಿಕ್ಷಕ ಸುಂದರನ್, ಚಿರಂಜೀವಿ ಅಭಿಮಾನಿಗಳ ಸಂಘದ ಅಧ್ಯಕ್ಷ ದಿನೇಶ್ಬಾಬು, ದೇವರಾಜು, ಎಚ್.ವೆಂಕಟರೆಡ್ಡಿ, ವಿ.ವೆಂಕಟರಮಣ, ತ್ಯಾಗರಾಜು, ಮಾಮಯ್ಯ, ಮುನಿಕೃಷ್ಣ, ರಾಧಾಕೃಷ್ಣ, ಮಂಜುನಾಥ್, ರಾಮದಾಸ್, ವೀರಪ್ಪ ಹಾಜರಿದ್ದರು.
ದಶಮಾನೋತ್ಸವ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಆಚರಿಸಲಾಗುವುದು
ಜಿಲ್ಲೆಯ ದಶಮಾನೋತ್ಸವ ಕಾರ್ಯಕ್ರಮ ಹಾಗೂ ವಿವಿಧ ಜಯಂತ್ಯುತ್ಸವ ಕಾರ್ಯಕ್ರಮಗಳಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಜರಿರಬೇಕೆಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ವೆಂಕಟೇಶ್ ತಿಳಿಸಿದರು.
ನಗರದ ತಾಲ್ಲೂಕು ಸಭಾಂಗಣದಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ, ಮಹಾಯೋಗಿ ವೇಮನ ಜಯಂತಿ, ನಿಜಶರಣ ಅಂಬಿಗರ ಚೌಡಯ್ಯ ಜಯಂತಿ, ತಾಲ್ಲೂಕಿನಲ್ಲಿ ನಡೆಯಲಿರುವ ಜಿಲ್ಲಾ ದಶಮಾನೋತ್ಸವ ಸಂಭ್ರಮ ಆಚರಣೆ ಹಾಗೂ ಗಣರಾಜೋತ್ಸವ ದಿನಾಚರಣೆಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ದಶಮಾನೋತ್ಸವ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಆಚರಣೆ ಮಾಡಲು ಜಿಲ್ಲಾಡಳಿತದಿಂದ ಆದೇಶ ಬಂದಿದ್ದು, ತಾಲ್ಲೂಕಿನ ಸಾದಲಿ ಹೋಬಳಿ, ಜಂಗಮಕೋಟೆ ಹೋಬಳಿ, ಬಶೆಟ್ಟಹಳ್ಳಿ ಹೋಬಳಿ ಮತ್ತು ನಗರದಲ್ಲಿ ಬೇರೆ ಬೇರೆಯಾಗಿ ದಶಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಗ್ರಾಮೀಣ ಕ್ರೀಡೆಗಳನ್ನು ಹಮ್ಮಿಕೊಂಡಿದ್ದು, ಗೆದ್ದವರಿಗೆ ಪ್ರಶಸ್ತಿ ಪುರಸ್ಕಾರ ಮಾಡಲಾಗುವುದು. ಇಲಾಖಾವಾರು ಅಧಿಕಾರಿಗಳು ತಾವು ವಹಿಸಿಕೊಂಡ ಜಬಾಬ್ದಾರಿಯನ್ನು ತಪ್ಪದೆ ನಿರ್ವಹಿಸಬೇಕೆಂದು ತಿಳಿಸಿದರು.
ದಶಮಾನೋತ್ಸವದ ಪ್ರಯುಕ್ತ ಜನವರಿ 22 ರಂದು ನೆಹರೂ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಸಲಾಗುವುದು. ವಸ್ತು ಪ್ರದರ್ಶನ, ಅನೇಕ ಸಾಂಸೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಜನವರಿ ೨೬ರಂದು ನಡೆಯುವ ಗಣರಾಜೋತ್ಸವ ದಿನಾಚರಣೆಗೆ ರೈತ ಸಂಘಟನೆಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳ ಸಲಹೆಗಳನ್ನು ತೆಗೆದುಕೊಂಡು ಕಾರ್ಯಕ್ರದಲ್ಲಿ ಅಳವಡಿಸಲು ಸೂಚಿಸಲಾಯಿತು.
ನಗರದ ತಾಲ್ಲೂಕು ಸಭಾಂಗಣದಲ್ಲಿ ಜನವರಿ ೧೫ ರಂದು ಶಿವಯೋಗಿ ಸಿದ್ದರಾಮೇಶ್ವರ ಜಯಂತಿ, ಜನವರಿ ೧9 ರಂದು ಮಹಾಯೋಗಿ ವೇಮನ ಜಯಂತಿ, ಜನವರಿ ೨೧ ರಂದು ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಅಚರಣೆ ಮಾಡಲಾಗುತ್ತಿದ್ದು, ಆಯಾ ಜಯಂತಿಗೆ ಸಂಬಂಧಪಟ್ಟಂತೆ, ಅಯಾ ಜನಾಂಗದ ಮುಖಂಡರ ಸಲಹೆ ಸೂಚನೆಗಳನ್ನು ತೆಗೆದುಕೊಳ್ಳಲಾಯಿತು.
ನಗರಸಭಾ ಆಯುಕ್ತ ಚಲಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಬಾಬು, ಪ್ರಭಾರಿ ತಹಶೀಲ್ದಾರ್ ಮಮತಾಕುಮಾರಿ, ಗ್ರೇಡ್ ೨ ತಹಶೀಲ್ದಾರ್ ಮುನಿಕೃಷ್ಣಪ್ಪ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ರೈತ ಮುಖಂಡರು, ಸಂಘ ಸಂಸ್ಥೆಗಳ ಸದಸ್ಯರು ಮುಖಂಡರು, ಜನಾಂಗದ ಮುಖಂಡರು ಸಭೆಯಲ್ಲಿ ಹಾಜರಿದ್ದರು.
ಬುದ್ಧಿಮಾಂಧ್ಯ ಮಕ್ಕಳ ಉಚಿತ ವಸತಿ ಶಾಲೆಯಲ್ಲಿ ಅವ್ಯವಹಾರ, ಗ್ರಾಮಸ್ಥರ ಆರೋಪ
ತಾಲ್ಲೂಕಿನ ಆನೂರು ಗ್ರಾಮದ ಬಳಿಯಿರುವ ಆಶಾಕಿರಣ ಶಿಕ್ಷಣ ಮತ್ತು ಪುನಶ್ಚೇತನ ಸಂಸ್ಥೆಯ ಬುದ್ಧಿಮಾಂಧ್ಯ ಮಕ್ಕಳ ಉಚಿತ ವಸತಿ ಶಾಲೆಯಲ್ಲಿ ಮಕ್ಕಳಿಗೆ ಸರಿಯಾದ ಊಟ, ತಿಂಡಿ ನೀಡದೇ ವಿನಾಕಾರಣ ಮಕ್ಕಳ ಮೇಲೆ ದೈಹಿಕ ಹಲ್ಲೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ತಾಲ್ಲೂಕಿನ ಆನೂರು ಗ್ರಾಮದ ಕೈವಾರ ರಸ್ತೆಯಲ್ಲಿರುವ ಉಚಿತ ವಸತಿ ಶಾಲೆಯಲ್ಲಿರುವ ಬುದ್ಧಿಮಾಂಧ್ಯ ಮಕ್ಕಳಿಗೆ ಸಮಯಕ್ಕೆ ಊಟ, ತಿಂಡಿ ನೀಡುತ್ತಿಲ್ಲ. ಕಾಲ ಕಾಲಕ್ಕೆ ಮಕ್ಕಳಿಗೆ ಸ್ನಾನ ಮಾಡಿಸಲ್ಲ ವಿನಾಕಾರಣ ಹೊಡೆಯುತ್ತಾರೆ. ಸಾಲದೆಂಬಂತೆ ಇಲ್ಲಿ ಇಬ್ಬರು ಕೆಲಸ ಮಾಡುತ್ತಾರೆ ಆದರೆ ದಾಖಲೆಗಳಲ್ಲಿ ಐದು ಮಂದಿಯೆಂದು ನಮೂದಿಸಿದ್ದಾರೆ.
ಬುದ್ದಿ ಮಾಂಧ್ಯ ಮಕ್ಕಳಿಗೆ ಒಳ್ಳೆಯ ಆಹಾರ ನೀಡಲಿ ಎಂಬ ಉದ್ದೇಶದಿಂದ ಸುತ್ತಮುತ್ತಲಿನ ಗ್ರಾಮಸ್ಥರು, ದಾನಿಗಳು, ನಾಗರಿಕರು ಆಹಾರ ಧಾನ್ಯಗಳು, ತರಕಾರಿಗಳನ್ನು ಕೊಡುತ್ತಾರಾದರೂ ಇಲ್ಲಿನ ದಾಖಲೆಗಳಲ್ಲಿ ಎಲ್ಲವನ್ನು ಖರೀದಿ ಮಾಡುತ್ತಿರುವಂತೆ ಬರೆದಿಟ್ಟಿದ್ದಾರೆ.
ವಸತಿಶಾಲೆಯಲ್ಲಿ ೨೦ ಮಂದಿ ಮಕ್ಕಳು ಹಾಜರಿದ್ದರೆ ದಾಖಲೆಗಳಲ್ಲಿ ೪೫ ಮಂದಿ ಹಾಜರಾತಿ ಇರುವಂತೆ ನಮೂದಿಸಿದ್ದಾರೆ. ಈ ಬಗ್ಗೆ ವಸತಿ ಶಾಲೆಯ ಶಿಕ್ಷಕರಿಗೆ ಈ ಹಿಂದೆ ಎಚ್ಚರಿಕೆ ನೀಡಿದ್ದೆವಾದರೂ ಅದೇ ಚಾಳಿಯನ್ನು ಮುಂದುವರೆಸಿದ್ದಾರೆ. ಯಾವ ಇಲಾಖೆಯಡಿ ಸಂಸ್ಥೆ ನಡೆಸುತ್ತಿದ್ದೀರಿ ಎಂದು ಕೇಳಿದರೆ ಯಾವುದೋ ಎನ್.ಜಿ.ಓ ಸಂಸ್ಥೆಯವರಿಗೆ ದೂರವಾಣಿ ಕರೆ ಮಾಡಿಕೊಡುತ್ತಾರೆ. ಇದುವರೆಗೂ ಇಲಾಖೆಯ ಹೆಸರು ಹೇಳಿಲ್ಲ ಎನ್ನುತ್ತಾರೆ.
ಹಾಗಾಗಿ ಕೂಡಲೇ ಇಲ್ಲಿನ ವಸತಿಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಯನ್ನು ಬದಲಾವಣೆ ಮಾಡಬೇಕು ಎಂದು ಗ್ರಾಮಸ್ಥರಾದ ಎ.ಬಾಲಮುರಳಿಕೃಷ್ಣ, ಶಿವಕುಮಾರ್, ಕಿರಣ್, ಮೋಹನ್, ಶರತ್, ಶಶಿಕುಮಾರ್, ಅಂಬರೀಶ್, ಆನಂದ್, ಸತೀಶ್, ಚೇತನ್, ಪಿಳ್ಳಪ್ಪ, ಪ್ರಶಾಂತ್ ಒತ್ತಾಯಿಸಿದ್ದಾರೆ.
ಯಾದವ ಜನಾಂಗದವರು ಹಿಂದೆ ಉಳಿದಿದ್ದಾರೆ
ತಾಲ್ಲೂಕಿನಾದ್ಯಂತ ಯಾದವ ಜನಾಂಗದವರು ಆರ್ಥಿಕವಾಗಿ ಹಾಗು ರಾಜಕೀಯವಾಗಿ ತೀರಾ ಹಿಂದೆ ಉಳಿದಿದ್ದು ಸಮುದಾಯದವರ ಏಳಿಗೆಗಾಗಿ ಮುಖಂಡರು, ಜನಪ್ರತಿನಿಧಿಗಳು ಮುಂದಾಗಬೇಕು ಎಂದು ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ಕೇಶವಮೂರ್ತಿ ತಿಳಿಸಿದರು.
ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಶ್ರೀ ಬ್ಯಾಟರಾಯನಸ್ವಾಮಿ ದೇವಾಲಯದ ಆವರಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ತಾಲ್ಲೂಕು ಯಾದವ(ಗೊಲ್ಲರ) ಸಮಾವೇಶದಲ್ಲಿ ಅವರು ಮಾತನಾಡಿದರು.
ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಯಾದವ ಜನಾಂಗದವರನ್ನು ಓಟ್ ಬ್ಯಾಂಕಿನಂತೆ ರಾಜಕಾರಣಿಗಳು ಉಪಯೋಗಿಸಿಕೊಳ್ಳುತ್ತಿದ್ದಾರೆ. ಆದರೆ ಯಾದವ ಜನಾಂಗಕ್ಕೆ ಸಿಗಬೇಕಾದ ಸವಲತ್ತುಗಳನ್ನು ನೀಡುವುದರಲ್ಲಿ ಜನಪ್ರತಿನಿಧಿಗಳು ಸೇರಿದಂತೆ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.
ಎ.ಪಿ.ಎಂ.ಸಿ ಸದಸ್ಯ ಡಿ.ವಿ.ವೆಂಕಟೇಶ್ ಮಾತನಾಡಿ, ನಾನು ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದಿಂದ ಸ್ಪರ್ದಿಸಲು ಆಕಾಂಕ್ಷಿಯಾಗಿದ್ದೇನೆ. ಪಕ್ಷದಿಂದ ಟಿಕೆಟ್ ನೀಡಿದರೆ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತೇನೆ ಇಲ್ಲವಾದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ ಹಾಗಾಗಿ ಸಮುದಾಯದ ಮುಖಂಡರೂ ಸೇರಿದಂತೆ ಯುವಕರು ಬೆಂಬಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಮುದಾಯದ ವಿವಿಧ ಮುಖಂಡರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಪದ್ಮಾವತಿ, ತಾಲ್ಲೂಕು ಯಾದವ ಸಂಘದ ಗೌರವಾಧ್ಯಕ್ಷ ರಾಮಕೃಷ್ಣಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸುಬ್ರ್ಯಮಣಿ, ಎಸ್.ಎ.ನಾಗರಾಜ್, ನರಸಿಂಹಪ್ಪ, ಎಸ್.ಎ.ನಾರಾಯಣಸ್ವಾಮಿ ಹಾಜರಿದ್ದರು.
ಗಣಿತ ಕಲಿಕೆಯನ್ನು ಸರಳೀಕರಿಸಿ ಆಸಕ್ತಿದಾಯಕವಾಗಿಸಬೇಕು
ಗ್ರಾಮೀಣ ಭಾಗದ ಮಕ್ಕಳಿಗೆ ಗಣಿತವು ಕಲಿಯಲು ಕಷ್ಟದ ವಿಷಯವಾಗಿದ್ದು, ಗಣಿತ ಕಲಿಕೆಯನ್ನು ಸರಳೀಕರಿಸಿ ಮತ್ತಷ್ಟು ಆಸಕ್ತಿದಾಯಕವಾಗಿಸಬೇಕು ಎಂದು ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಘುನಾಥ್ ತಿಳಿಸಿದರು.
ತಾಲ್ಲೂಕಿನ ಜೆ.ವೆಂಕಟಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಗ್ರಾಮ ಪಂಚಾಯಿತಿ, ಅಕ್ಷರಫೌಂಡೇಶನ್, ಸಾರ್ವಜನಿಕ ಶಿಕ್ಷಣ ಇಲಾಖೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಪಂಚಾಯಿತಿ ಮಟ್ಟದ ಮಕ್ಕಳ ಗಣಿತ ಕಲಿಕಾ ಆಂದೋಲನ ಗಣಿತ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಮಗುವಿಗೆ ಅಗತ್ಯವಾದ ಶಿಕ್ಷಣವನ್ನು ಕೊಡುವಲ್ಲಿ ಪಂಚಾಯಿತಿ, ಶಿಕ್ಷಕ, ಪೋಷಕರ ಕರ್ತವ್ಯವಿದೆ. ಗಣಿತವನ್ನು ಸುಲಭವಾಗಿ ಬೋಧಿಸುವ, ಕಲಿಸುವ ವಿಧಾನಗಳನ್ನು ಆರಿಸಿಕೊಂಡು ಗಣಿತಕಲಿಕೆಯನ್ನು ಸರಳೀಕರಿಸಬೇಕಿದೆ ಎಂದು ಅವರು ತಿಳಿಸಿದರು.
ಎಸ್ಡಿಎಂಸಿ ಮಾಜಿ ಅಧ್ಯಕ್ಷ ಪಾಪರಾಜು ಮಾತನಾಡಿ, ಹಾಜರಾತಿಯಲ್ಲಿ ನಿರಂತರತೆಯ ಅಗತ್ಯವಿದೆ. ಪ್ರತಿಮಗುವು ಕಡ್ಡಾಯವಾಗಿ ಶಾಲೆಯಲ್ಲಿದ್ದು, ಉತ್ತಮವಾಗಿ ಕಲಿಯುತ್ತಿರಬೇಕು, ಶೈಕ್ಷಣಿಕ ಯೋಜನೆಗಳ ಅನುಷ್ಟಾನದಲ್ಲಿ ಸರ್ಕಾರದ ನಿಯಮಗಳಲ್ಲಿ ಅಮೂಲಾಗ್ರ ಬದಲಾವಣೆಗಳ ಅಗತ್ಯವಿದೆ ಎಂದರು.
ಅಕ್ಷರಫೌಂಡೇಶನ್ನ ಜಿಲ್ಲಾಸಂಯೋಜಕ ಸಿದ್ದರಾಮ್ ಎನ್ ಕೋಟೆ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇಂಗ್ಲೀಷ್, ಗಣಿತದ ವಿಷಯಗಳು ಕ್ಲಿಷ್ಟವಾಗಿದ್ದು, ನಗರಪ್ರದೇಶದ ಮಕ್ಕಳಿಗೆ ಸರಿಸಮಾನವಾಗಿ ಸ್ಪರ್ಧೆಯೊಡ್ಡಲು ಮಕ್ಕಳನ್ನು ಸಿದ್ಧಗೊಳಿಸಬೇಕಿದೆ ಎಂದು ಹೇಳಿದರು.
ಜಂಗಮಕೋಟೆ ಕ್ಲಸ್ಟರ್ನ ಸಂಪನ್ಮೂಲವ್ಯಕ್ತಿ ಆರ್.ಸುಂದರಾಚಾರಿ, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸಹಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ಮುಖ್ಯಶಿಕ್ಷಕಿ ಗೀತಾ, ನಿವೃತ್ತಶಿಕ್ಷಕಿ ಅಶ್ವತ್ಥಮ್ಮ, ಅಕ್ಷರ ಫೌಂಡೇಶನ್ನ ತಾಲ್ಲೂಕು ಸಂಯೋಜಕ ಕೆ.ವಿ. ಮಂಜುನಾಥ್, ಪಂಚಾಯಿತಿ ವ್ಯಾಪ್ತಿಯ ವಿವಿಧ ಶಾಲೆಗಳ ಬೋಧಕವರ್ಗದವರು ಹಾಜರಿದ್ದರು.
೪ ರಿಂದ ೬ ನೇ ತರಗತಿವರೆಗಿನ ಪಂಚಾಯಿತಿ ವ್ಯಾಪ್ತಿಯ ಸುಗಟೂರು, ಜೆ.ವೆಂಕಟಾಪುರ, ಮಿತ್ತನಹಳ್ಳಿ, ಬಳುವನಹಳ್ಳಿ, ಬೈರಸಂದ್ರ ಶಾಲೆಗಳ ಮಕ್ಕಳಿಗಾಗಿ ಪರೀಕ್ಷೆ ನಡೆಸಿ ಉತ್ತಮವಾಗಿ ಪ್ರತಿಭೆ ತೋರಿದವರಿಗೆ ಪ್ರಶಸ್ತಿಪತ್ರ, ನಗದುಬಹುಮಾನ ವಿತರಿಸಲಾಯಿತು. ಬಹುಮಾನ ವಿಜೇತ ಮಕ್ಕಳಿಗೆ ಸಸಿಗಳನ್ನು ವಿತರಿಸಲಾಯಿತು.
ಬಹುಮಾನ ವಿಜೇತರು: ೪ ನೇ ತರಗತಿ ವಿಭಾಗದಲ್ಲಿ ಜೆ.ವೆಂಕಟಾಪುರ ಶಾಲೆಯ ಆರ್.ಪುನೀತ್, ವಿ.ಚೈತ್ರಾ, ಎಂ.ಮಾಲಾ,, ೫ ನೇ ತರಗತಿ ವಿಭಾಗದಲ್ಲಿ ಬೈರಸಂದ್ರ ಶಾಲೆಯ ಡಿ.ಸ್ಫೂರ್ತಿ, ಸುಗಟೂರು ಸರ್ಕಾರಿ ಶಾಲೆಯ ಎಸ್.ಎನ್.ಚೇತನ್, ಎಸ್.ಎಸ್, ಅನುಷಾ, ಎಸ್.ಎಸ್.ಕಾವ್ಯಾ, ಮಿತ್ತನಹಳ್ಳಿ ಶಾಲೆಯ ಕಿರಣ್ಕುಮಾರ್, ೬ ನೇ ತರಗತಿ ವಿಭಾಗದಲ್ಲಿ ಜೆ.ವೆಂಕಟಾಪುರ ಶಾಲೆಯ ಎಲ್.ಚನ್ನಕೇಶವ, ಸುಗಟೂರು ಶಾಲೆಯ ಎಸ್.ಜೆ.ನಿಖಿಲ್, ಬೈರಸಂದ್ರಶಾಲೆಯ ಬಿ.ಎಂ.ಕಿರಣ್ಕುಮಾರ್ ಬಹುಮಾನಗಳನ್ನು ಪಡೆದರು.
‘ನಾವೆಲ್ಲಾ ಒಂದೇ’ ಎಂಬ ಸಂದೇಶ ಬಿಂಬಿಸುತ್ತಿರುವ ವಿವಿಧ ಪಕ್ಷಗಳ ಮುಖಂಡರು
ಶಿಡ್ಲಘಟ್ಟ ಕ್ಷೇತ್ರದಲ್ಲಿ ಚುನಾವಣೆಯ ಬಿಸಿಯಲ್ಲಿ ನಡೆಯುತ್ತಿವೆ ರಾಜಿ ಸಂಧಾನ ಸಭೆಗಳು
ಒಂದೆಡೆ ವಾತಾವರಣದಲ್ಲಿ ಚಳಿ ಮೂಡಿದ್ದರೆ, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ಗರಿಗೆದರಿದೆ. ಮಜ್ಜಿಗೆ ಕಡೆದಾಗ ಬೆಣ್ಣೆ ಒಂದೆಡೆ ಸೇರುವಂತೆ, ಚುನಾವಣೆ ಸಮೀಪಿಸುತ್ತಿದ್ದಂತೆ ಶತ್ರುವೂ ಮಿತ್ರನಾಗುತ್ತಾನೆ ಎಂಬುದು ನಿಜವಾಗತೊಡಗಿದೆ.
೨೦೧೮ ರ ವಿಧಾನಸಭೆ ಚುನಾವಣೆಗೆ ಕ್ಷೇತ್ರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಸಿದ್ಧತೆಗಳು ಆರಂಭಗೊಂಡಿವೆ. ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರು ಪಕ್ಷಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಏರಿಕೆಯಾಗಿತ್ತು. ಅದರ ಹಿನ್ನೆಲೆಯಲ್ಲಿ ಪಕ್ಷದ ಗೆಲುವು ಹಾಗೂ ಪ್ರತಿಷ್ಠೆ ಮುಖ್ಯ ಎಂದು ಬಣಗಳು ಹಾಗೂ ಆಕಾಂಕ್ಷಿಗಳ ನಡುವೆ ರಾಜಿ ಸಂಧಾನಗಳು ತೆರೆಮರೆಯಲ್ಲಿ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.
ಜೆಡಿಎಸ್ ಪಕ್ಷದಲ್ಲಿ ಉಂಟಾಗಿರುವ ಬಣ ರಾಜಕೀಯದಿಂದಾಗಿ ಚುನಾವಣೆಯಲ್ಲಿ ಟಿಕೆಟ್ ಗಾಗಿ ಮುಸುಕಿನ ಗುದ್ದಾಟ ಬಹಿರಂಗವಾಗಿತ್ತು. ಹಾಲಿ ಶಾಸಕ ಎಂ.ರಾಜಣ್ಣ ಮತ್ತು ಎಚ್.ಡಿ.ದೇವೇಗೌಡ, ಜಯಪ್ರಕಾಶನಾರಾಯಣ ಸೇವಾ ಟ್ರಸ್ಟ್ ನ ಮೂಲಕ ಸಮಾಜ ಸೇವೆ ಆರಂಭಿಸಿರುವ ಮೇಲೂರು ರವಿಕುಮಾರ್ ಜೆಡಿಎಸ್ ಪಕ್ಷದ ಬಿ ಫಾರಂ ಪಡೆಯಲು ಸರ್ವಪ್ರಯತ್ನಗಳನ್ನೂ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರ ನಡುವೆ ಗೊಂದಲ ಹಾಗೂ ಪಕ್ಷದ ಗೆಲುವಿಗೆ ತೊಂದರೆಯಾಗಬಹುದೆಂದು ಗ್ರಹಿಸಿ ಒಮ್ಮೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಮನೆಯಲ್ಲಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಧ್ಯಸ್ಥಿಕೆಯಲ್ಲಿ ಈಗಾಗಲೇ ಎರಡು ರಾಜಿ ಸಂಧಾನ ಸಭೆಗಳು ನಡೆದಿವೆ. ಯಾರಿಗೇ ಪಕ್ಷದ ನಾಯಕರು ಬಿಫಾರಂ ನೀಡಿದರೂ ಇಬ್ಬರೂ ಒಗ್ಗೂಡಿ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂಬ ಉದ್ದೇಶದಿಂದ ನಡೆಯುತ್ತಿರುವ ಸಂಧಾನ ಸಭೆಗಳೂ ಗೌಪ್ಯವಾಗಿ ಉಳಿದಿಲ್ಲ.
ಕಾಂಗ್ರೆಸ್ ನಿಂದ ಸ್ಪರ್ಧಿಸಿ ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದ ಮಾಜಿ ಸಚಿವ ವಿ.ಮುನಿಯಪ್ಪ ಅವರು, ಏಕೈಕ ಅಭ್ಯರ್ಥಿಯಾಗಿರುತ್ತಿದ್ದರು, ಆದರೆ ಈ ಬಾರಿ ಕಾಂಗ್ರೆಸ್ ಪಕ್ಷದಲ್ಲೂ ಟಿಕೆಟ್ ಗಾಗಿ ಪೈಪೋಟಿ ಶುರುವಾಗಿದೆ. ತಾಲ್ಲೂಕಿನಲ್ಲಿ ಈಗಾಗಲೇ ಎಸ್.ಎನ್.ಕ್ರಿಯಾ ಟ್ರಸ್ಟ್ ನ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಆಂಜಿನಪ್ಪ (ಪುಟ್ಟು) ಕೂಡಾ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕ್ಷೇತ್ರದ ಹಳ್ಳಿ ಹಳ್ಳಿಗೂ ಮನೆಮನೆಗೂ ಹೋಗಿ ತಮ್ಮನ್ನು ಬೆಂಬಲಿಸುವಂತೆ ಕೋರುತ್ತಿದ್ದಾರೆ.
ಎ.ಐ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ವಿವಿಧ ರಾಜ್ಯ ಮುಖಂಡರು ಕಾರ್ಯಕರ್ತರ ಸಭೆಯಲ್ಲಿ ವಿ.ಮುನಿಯಪ್ಪ ಅವರನ್ನು ಬೆಂಬಲಿಸುವಂತೆ ಕರೆ ನೀಡಿರುವುದು ಹಾಗೂ ಅವರ ನೇತೃತ್ವದಲ್ಲಿ ಕ್ಷೇತ್ರದ ಚುನಾವಣೆ ಎದುರಿಸುವುದು ಎಂಬ ಸಂದೇಶ ರವಾನಿಸಿದ್ದಾರೆ. ಇದರೊಂದಿಗೆ ಶೀಥಲ ಸಮರದಲ್ಲಿದ್ದ ಸಂಸದ ಕೆ.ಎಚ್.ಮುನಿಯಪ್ಪ ಮತ್ತು ವಿ.ಮುನಿಯಪ್ಪ ತಾವುಗಳು ಒಂದಾಗಿದ್ದೇವೆ, ಪಕ್ಷದ ಗೆಲುವು ಮಾತ್ರ ಮುಖ್ಯ ಎಂದು ಘೋಷಿಸಿದ್ದಾರೆ.
ಬಿಜೆಪಿ ಪಕ್ಷದಲ್ಲೂ ಆಕಾಂಕ್ಷಿಗಳ ಸಂಖ್ಯೆ ಆಂತರಿಕ ಗೊಂದಲಗಳು ಚುನಾವಣೆ ಸಮೀಪಿಸುತ್ತಿದ್ದಂತೆ ಕಡಿಮೆಯಾಗುತ್ತಿವೆ. ಕಳೆದ ಚುನಾವಣೆಯಲ್ಲಿ ಕೆಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಡಿ.ಆರ್.ಶಿವಕುಮಾರಗೌಡ ಅವರ ನೇತೃತ್ವದಲ್ಲಿ ಭಿನ್ನ ಮನಸ್ಸುಗಳೆಲ್ಲ ಒಂದಾಗಿ ಮನೆಮನೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಬಶೆಟ್ಟಹಳ್ಳಿ ಗ್ರಾಮದಲ್ಲಿ ಈಚೆಗೆ ಬಹುಜನ ಸಮಾಜ ಪಕ್ಷದ ಕಾರ್ಯಕ್ರಮ ನಡೆದಿದ್ದು, ನಾವೂ ಇದ್ದೇವೆ ನಮ್ಮನ್ನೂ ಕಡೆಗಣಿಸುವಂತಿಲ್ಲ ಎಂದು ಬಿಎಸ್ಪಿ ಸಾರಿದೆ.
ಕಾಂಗ್ರೆಸ್, ಬಿಜೆಪಿ ಮನೆಮನೆ ಭೇಟಿ ಪ್ರಾರಂಭಿಸಿವೆ. ಜೆಡಿಎಸ್ನ ಸಂಧಾನ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ಅವರೂ ಮನೆಮನೆ ಭೇಟಿ ಪ್ರಾರಂಭಿಸಲಿರುವ ಸೂಚನೆಯಿದೆ. ಕಾಂಗ್ರೆಸ್ ಪಕ್ಷದ ರಾಜ್ಯ ಮುಖಂಡರು ಬಂದು ಹೋಗಿದ್ದು, ಮುಖ್ಯಮಂತ್ರಿಗಳನ್ನು ಕರೆಸಿ ಶಕ್ತಿ ಪ್ರದರ್ಶನ ನಡೆಸುವ ಉದ್ದೇಶದಲ್ಲಿದ್ದಾರೆ. ಜೆಡಿಎಸ್ ಪಕ್ಷದ ಕಾರ್ಯಕ್ರಮಕ್ಕೆ ದೇವೇಗೌಡರು ಬಂದು ಹೋಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಜನವರಿ 12 ಕ್ಕೆ ಆಗಮಿಸಲಿದ್ದಾರೆ.
ಅಂತೂ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಪ್ರಯತ್ನ ಎಷ್ಟು ಸಫಲವಾಗುತ್ತದೆಯೋ ಕಾಲವೇ ಉತ್ತರಿಸಲಿದೆ.
ಚುನಾವಣೆ ಪ್ರಕ್ರಿಯೆ ಬಗ್ಗೆ ತಿಳಿಯುವುದು ಬಹು ಮುಖ್ಯ
ಜನಸಮೂಹ ಒಬ್ಬರನ್ನು ಸಾರ್ವಜನಿಕ ಕ್ಷೇತ್ರದ ಅಧಿಕಾರವನ್ನು ಹಿಡಿಯಲು ಮಾಡುವ ಆಯ್ಕೆಯ ಪ್ರಕ್ರಿಯೆಯನ್ನು ಚುನಾವಣೆ ಎನ್ನುವರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆಯುವ ಪ್ರಕ್ರಿಯೆಯ ಬಗ್ಗೆ ತಿಳಿಯುವುದು ಬಹು ಮುಖ್ಯ ಎಂದು ಮುಖ್ಯ ಶಿಕ್ಷಕಿ ಎ.ಎಂ.ಸಾವಿತ್ರಿ ದೇವಿ ತಿಳಿಸಿದರು.
ತಾಲ್ಲೂಕಿನ ಮಳಮಾಚನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಯುವ ಚುನಾವಣೆ ಮತ್ತು ಚುನಾವಣಾ ಸಾಕ್ಷರತಾ ಕ್ಲಬ್ಗೆ ಮತದಾನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ಯುವಕರ ಪಾತ್ರ ಮಹತ್ವದ್ದು. ಚುನಾಯಿಸುವುದೆಂದರೆ,ಆಯ್ಕೆ ಮಾಡುವುದು ಅಥವಾ ನಿರ್ಧರಿಸುವುದು ಎಂದು ಅರ್ಥವಿದೆ. ನಮ್ಮ ಆಯ್ಕೆ ಯಾವ ರೀತಿಯಲ್ಲಿರಬೇಕು ಎಂದು ನಿರ್ಧರಿಸುವ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಹೇಳಿದರು.
ಚುನಾವಣಾ-ಪೂರ್ವದ ಪ್ರಕ್ರಿಯೆಗಳು, ಮತದಾನದ ದಿನ ಮತ್ತು ಚುನಾವಣಾ-ನಂತರದ ಪ್ರಕ್ರಿಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅವರು ವಿವರಿಸಿದರು.
ಚುನಾವಣಾ ಸಾಕ್ಷರತಾ ಕ್ಲಬ್ಗೆ ನಡೆದ ಚುನಾವಣೆಯಲ್ಲಿ ಸ್ಫರ್ಧಿಸಿದ್ದ ಸ್ಪರ್ಧಾಳುಗಳಿಗೆ ವಿವಿಧ ಚಿಹ್ನೆಗಳನ್ನು ನೀಡಲಾಗಿತ್ತು. ಅಭ್ಯರ್ಥಿಗಳು ಮತದಾರರಿಗೆ ತಮಗೆ ಏಕೆ ಮತದಾನ ಮಾಡಬೇಕೆಂದು ತಿಳಿಸಲು ಅವಕಾಶ ಕೊಡಲಾಗಿತ್ತು. ಶಿಕ್ಷಕರಾದ ಎಂ.ಜಿ.ವಿ. ಶಾಸ್ತ್ರಿ ನೋಡಲ್ ಅಧಿಕಾರಿಯಾಗಿ, ಮುಖ್ಯ ಶಿಕ್ಷಕಿ ಸಾವಿತ್ರಿದೇವಿ ಪ್ರಿಸೈಡಿಂಗ್ ಅಧಿಕಾರಿಯಾಗಿ, ಶಿಕ್ಷಕಿ ಸವಿತ ಗುರುರಾಜಜೋಷಿ ಒಂದನೇ ಮತಗಟ್ಟೆ ಅಧಿಕಾರಿಯಾಗಿ, ಶಿಕ್ಷಕಿ ಬಿ.ಆರ್.ಮಮತಾ ಎರಡನೇ ಮತಗಟ್ಟೆ ಅಧಿಕಾರಿಯಾಗಿ, ಶಿಕ್ಷಕ ಪಿಳ್ಳಪ್ಪ ಮೂರನೇ ಮತಗಟ್ಟೆ ಅಧಿಕಾರಿಯಾಗಿ ಚುನಾವಣಾ ಕರ್ತವ್ಯ ನಿರ್ವಹಿಸಿದರು.
ಐವತ್ತು ಮಂದಿ ವಿದ್ಯಾರ್ಥಿಗಳು ಮತದಾನದಲ್ಲಿ ಪಾಲ್ಗೊಂಡು ಗಿರಿಧರ್ ಅಧ್ಯಕ್ಷರಾಗಿ, ನಿಖಿಲ್ನಾಯಕ್ ಉಪಾಧ್ಯಕ್ಷರಾಗಿ, ವಿದ್ಯಾರ್ಥಿ ಪ್ರತಿನಿಧಿಗಳನ್ನಾಗಿ ಶ್ರಾವಣಿ, ತೇಜಸ್ವಿನಿ, ಪ್ರಕಾಶ, ಗಂಗೋತ್ರಿ, ನಯನ, ಪವನ್ ಅವರನ್ನು ಚುನಾಯಿಸಿದರು.
ಬೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ
ರೈತರ ಜಮೀನಿನಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸಲು ಹಣ ಸಂದಾಯ ಮಾಡಿ ಒಂಬತ್ತು ತಿಂಗಳಾದರೂ ಈವರೆಗೂ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಪರಿವರ್ತಕ ಅಳಿವಡಿಸಿಲ್ಲ ಎಂದು ಆರೋಪಿಸಿ ನಗರದ ಬೆಸ್ಕಾಂ ಕಚೇರಿಗೆ ರೈತರು ಹಾಗೂ ವಿವಿಧ ಮುಖಂಡರು ಸೋಮವಾರ ಬೀಗ ಜಡಿದು ಕೆಲಕಾಲ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಮಲ್ಲಶೆಟ್ಟಿಪುರ ಗ್ರಾಮದ ದೇವರಾಜು, ವೆಂಕಟೇಶಪ್ಪ ಮತ್ತು ಅಬ್ಲೂಡು ಗ್ರಾಮದ ಅನಸೂಯಮ್ಮ ಎಂಬ ರೈತರು ಕಳೆದ ಏಪ್ರಿಲ್ ತಿಂಗಳಿನಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸಲು ಬೆಸ್ಕಾಂ ಇಲಾಖೆಗೆ ಹಣ ಸಂದಾಯ ಮಾಡಿದ್ದಾರೆ. ಒಂಬತ್ತು ತಿಂಗಳು ಕಳೆದರೂ ಈವರೆಗೂ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಪರಿವರ್ತಕ ಅಳವಡಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಈ ಬಗ್ಗೆ ರೈತರು ಕಚೇರಿಗೆ ಪ್ರತಿನಿತ್ಯ ಅಲೆದು ಬೇಸತ್ತು ಹೋಗಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನಗರಸಭೆ ಸದಸ್ಯ ಎಸ್.ರಘವೇಂದ್ರ ಮಾತನಾಡಿ ಲಕ್ಷಾಂತರ ರೂಗಳು ಸಾಲ ಮಾಡಿ ಕೊಳವೆಬಾವಿ ಕೊರೆಯಿಸಿರುವ ರೈತರು ವಿದ್ಯುತ್ ಪರಿವರ್ತಕ ಅಳವಡಿಸದೇ ಇರುವುದರಿಂದ ಇರುವ ನೀರನ್ನು ಬಳಸಲಾಗುತ್ತಲ್ಲ. ಕೊಳವೆಬಾವಿ ಕೊರೆಸಲು ಹಾಗೂ ಜಮೀನಿನಲ್ಲಿ ಆಲೂಗಡ್ಡೆ ಬೆಳೆಯಿಡಲು ಬ್ಯಾಂಕ್ನಿಂದ ಪಡೆದಿರುವ ಸಾಲ ಮರು ಪಾವತಿ ಮಾಡಲಾಗದೇ ನರಳುವಂತಾಗಿದೆ ಎಂದರು.
ಕೂಡಲೇ ವಿದ್ಯುತ್ ಪರಿವರ್ತಕಗಳಿಗೆ ಹಣ ಸಂದಾಯ ಮಾಡಿರುವ ರೈತರ ಜಮೀನಿನಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸಬೇಕು ಎಂದು ಒತ್ತಾಯಿಸಿ ಇಲಾಖೆಯ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿದರು.
ಚಿಂತಾಮಣಿಯ ಉಪವಿಭಾಗದ ಸಭೆಯಲ್ಲಿ ಪಾಲ್ಗೊಂಡಿದ್ದ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸೈಯ್ಯದ್ ರೆಹಮಾನ್ ಪ್ರತಿಭಟನಾಕಾರರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಕೂಡಲೇ ಈ ಬಗ್ಗೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.
ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯ ಪಿ.ಕೆ.ಕಿಷನ್(ನಂದು), ಆಮ್ ಆದ್ಮಿ ಪಕ್ಷದ ತಾಲ್ಲೂಕು ಸಂಚಾಲಕ ಬಿ.ಆರ್.ರಾಮಚಂದ್ರ, ಮುಖಂಡರಾದ ಎನ್.ಮಹೇಶ್, ಆರ್.ರಾಘವೇಂದ್ರ, ರೈತರಾದ ದೇವರಾಜು, ವೆಂಕಟೇಶಪ್ಪ ಪಾಲ್ಗೊಂಡಿದ್ದರು.
ಶಿಕ್ಷಣದ ಗುರಿ ವ್ಯಕ್ತಿಯ ಸರ್ವಾಂಗೀಣ ವಿಕಾಸ
ಮಾನವನ ಸರ್ವತೋಮುಖ ಅಭಿವೃದ್ಧಿ ಶೈಕ್ಷ ಣಿಕ ಪ್ರಗತಿಯಿಂದ ಮಾತ್ರ ಸಾಧ್ಯ. ಶಿಕ್ಷಣದ ಗುರಿ ವ್ಯಕ್ತಿಯ ಸರ್ವಾಂಗೀಣ ವಿಕಾಸವನ್ನು ಮಾಡುವುದಾಗಿದೆ. ಕಲಿಯುವ ವ್ಯಕ್ತಿಗೆ ಕಲಿಕಾ ವಿಧಾನ ಮತ್ತು ಕಲಿಯಲು ಬೇಕಾಗುವ ಸನ್ನಿವೇಶ ನಿರ್ಮಿಸುವುದು ಹಿರಿಯರ ಕರ್ತವ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಶಿವಣ್ಣರೆಡ್ಡಿ ತಿಳಿಸಿದರು.
ನಗರದ ಡಾಲ್ಫಿನ್ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಸಂಜೆ ನಡೆದ ವಾರ್ಷಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವ್ಯಕ್ತಿಯ ಹುಟ್ಟಿನಿಂದ ಪ್ರಾರಂಭವಾಗುವ ಕಲಿಕೆಯು ಕಡೆಯ ಕಾಲದವರೆಗೂ ಇರಬೇಕು. ಕಲಿಯಬೇಕೆಂಬ ಅದಮ್ಯ ಆಸೆಯನ್ನು ಹಾಗೂ ಮನೋಭಾವವನ್ನು ಮಕ್ಕಳಲ್ಲಿ ಮೂಡಿಸುವುದು ಬಹು ಮುಖ್ಯ. ಇಂದಿನ ಶಿಕ್ಷಣ ಕ್ರಮ ಹಾಗೂ ಪದ್ಧತಿಗಳನ್ನು ಅವಲೋಕಿಸಿದರೆ ಶಿಕ್ಷಣ ಕಲಿಕೆಗೆ ಸಾಕಷ್ಟು ಅವಕಾಶವಿದ್ದರೂ ಕೂಡ ಪಠ್ಯೇತರ ಚಟುವಟಿಕೆಗೆ ಅವಕಾಶಗಳು ತೀರಾ ಕಡಿಮೆಯಾಗಿದೆ. ಆಟ, ನೃತ್ಯ, ಹಾಡು ಮುಂತಾದವುಗಳು ಮಕ್ಕಳಲ್ಲಿ ಇನ್ನಷ್ಟು ಚೈತನ್ಯವನ್ನು ತರಬಲ್ಲವು. ಶಾಲಾ ವಾರ್ಷಿಕೋತ್ಸವ ಸಮಾರಂಭಗಳು ಇದಕ್ಕೆ ಪೂರಕವಾಗಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಚಂದ್ರಶೇಖರಬಾಬು ಮಾತನಾಡಿ, ಆತ್ಮ ವಿಶ್ವಾಸ, ನಿರಂತರ ಪರಿಶ್ರಮ, ಪ್ರಾಮಾಣಿಕತೆ ಮೈಗೂಡಿಸಿಕೊಂಡಲ್ಲಿ ನಿಶ್ಚಿತ ಗುರಿತಲುಪಲು ಸಾಧ್ಯ. ಇವೆಲ್ಲದಕ್ಕೆ ಶಿಕ್ಷಣವೇ ಏಕೈಕ ಸಾಧನ. ಶಾಲೆಯು ತನ್ನ ವಿದ್ಯಾರ್ಥಿಗಳಲ್ಲಿ ಬೆಳೆಸುವ ಬೌದ್ಧಿಕ, ನೈತಿಕ, ಸಾಮಾಜಿಕ, ಸಾಂಸ್ಕೃತಿಕ, ವೈಜ್ಞಾನಿಕ ಹಾಗೂ ಸಾರ್ವತ್ರಿಕ ಮೌಲ್ಯಗಳು, ಅನುಭವಗಳು ಹಾಗೂ ಸಾಮರ್ಥ್ಯಗಳು ಶಿಕ್ಷಣದ ಗುಣಮಟ್ಟವನ್ನು ನಿರ್ಧರಿಸುತ್ತವೆ ಎಂದು ನುಡಿದರು.
ವಿದ್ಯಾರ್ಥಿಗಳು ಬುದ್ಧ, ಪರಿಸರ, ಮೊಬೈಲ್ನ ಸೆಲ್ಫೀ ಪರಿಣಾಮ, ಸಂಚಾರ ದಟ್ಟಣೆ ಮುಂತಾದ ವಿವಿಧ ವಿಷಯಾಧಾರಿತ ನೃತ್ಯ ರೂಪಕಗಳು, ಜಾನಪದ ನೃತ್ಯ, ಭರತನಾಟ್ಯ, ದೇಶಭಕ್ತಿಗೀತೆಗಳಿಗೆ ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ವಿವಿಧ ಸ್ಪರ್ಧೆ ಹಾಗೂ ಆಟೋಟಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಡಾಲ್ಫಿನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ನಾಗರಾಜ್, ಕಾರ್ಯದರ್ಶಿ ವಿ.ಕೃಷ್ಣಪ್ಪ, ವ್ಯವಸ್ಥಾಪಕ ನಿರ್ದೇಶಕ ಎನ್.ಅಶೋಕ್, ಆಡಳಿತಾಧಿಕಾರಿ ಚಂದನಾ ಅಶೋಕ್, ಪ್ರಾಂಶುಪಾಲರಾದ ಥಾಮಸ್ ಫಿಲಿಪ್, ಪಿ.ಲೋಕೇಶ್ನಾಥ್, ಶ್ರೀನಿವಾಸರೆಡ್ಡಿ, ಎನ್.ಮುನಿಶಾಮಪ್ಪ ಹಾಜರಿದ್ದರು.
ಸಮುದಾಯ ಭವನದ ಉದ್ಘಾಟನೆ
ಮುಂಬರುವ ಐದು ವರ್ಷಗಳಲ್ಲಿ ಬಯಲು ಸೀಮೆಯ ಕೋಲಾರ ಹಾಗು ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಈಗಾಗಲೇ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಿಂದ ಚಾಲನೆ ನೀಡಲಾಗಿದೆ ಎಂದು ಸಂಸದ ಕೆ.ಹೆಚ್.ಮುನಿಯಪ್ಪ ಹೇಳಿದರು.
ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಯಪ್ಪನಹಳ್ಳಿ ಗ್ರಾಮದಲ್ಲಿ ಸುಮಾರು ಎರಡು ಕೋಟಿ ರೂ ವೆಚ್ಚದ ಅಜ್ಜಕದಿರೇನಹಳ್ಳಿ-ತಿಮ್ಮನಾಯಕನಹಳ್ಳಿ ರಸ್ತೆ ಅಗಲೀಕರಣ ಹಾಗು ಡಾಂಬರೀಕರಣ ಕಾಮಗಾರಿ ಮತ್ತು ರಾಯಪ್ಪನಹಳ್ಳಿಯಲ್ಲಿ ಸುಮಾರು ೧೦ ಲಕ್ಷ ರೂವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಂಬೇಡ್ಕರ್ ಸಮುದಾಯ ಭವನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಈಗಾಗಲೇ ರಾಜ್ಯ ಸರ್ಕಾರದಿಂದ ಕೆಸಿ ವ್ಯಾಲಿ ಹಾಗು ಹೆಚ್.ಎನ್ ವ್ಯಾಲಿ ಕಾಮಗಾರಿಗೆ ಚಾಲನೆ ನೀಡಿದ್ದು ಕೋಲಾರ ಜಿಲ್ಲೆಯ ಬಹುತೇಕ ಕೆರೆಗಳಿಗೆ ಮುಂದಿನ ಎರಡು ತಿಂಗಳೊಳಗೆ ನೀರು ಬರಲಿದೆ. ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ನೀರು ತರುವ ಕಾಮಗಾರಿ ಆರಂಭಗೊಂಡಿದ್ದುಮುಂದಿನ ಐದು ವರ್ಷಗಳೊಳಗೆ ಬಯಲುಸೀಮೆ ಭಾಗದ ಎಲ್ಲಾ ಕೆರೆಗಳು ತುಂಬಿ ಈ ಭಾಗದ ರೈತರ ಕಷ್ಟ ನಿವಾರಣೆಯಾಗಲಿದೆ ಎಂದರು.
ಅಭಿವೃದ್ದಿಯ ವಿಚಾರದಲ್ಲಿ ಯಾವುದೇ ರಾಜಕೀಯ ಬೆರಸದೇ ಎಲ್ಲರೂ ಒಗ್ಗಟ್ಟಾಗಿ ಗ್ರಾಮಗಳ ಅಭಿವೃದ್ದಿಗೆ ಸಹಕರಿಸಬೇಕು. ಚುನಾವಣೆ ಸಮಯದಲ್ಲಿ ಮಾತ್ರ ನಾನು ಆ ಪಕ್ಷ ನೀನು ಈ ಪಕ್ಷ ಎಂಬುದು ಇರಲಿ ಚುನಾವಣೆ ನಂತರ ಆಯ್ಕೆಯಾದ ಜನಪ್ರತಿನಿಧಿಗಳು ಕ್ಷೇತ್ರದ ಸಮಸ್ತ ಜನರಏಳಿಗೆಗಾಗಿ ದುಡಿಯಬೇಕು ಎಂದರು.
ಇನ್ನು ತಾಲ್ಲೂಕಿನ ಸಾದಲಿ ಬಳಿ ಪಶು ಆಹಾರ ಘಟಕ ನಿರ್ಮಿಸಲು ಈಗಾಗಲೇ ಸ್ಥಳ ಗುರುತಿಸಿ ಸರ್ಕಾರಕ್ಕೆ ನೀಡಿದ್ದು ತಾಲೂಕಿನಲ್ಲಿ ನಿರ್ಮಾಣವಾದರೆ ಒಂದಷ್ಟು ನಿರುದ್ಯೋಗಿ ಯುವಕರಿಗೆ ಕೆಲಸ ನೀಡಿದಂತಾಗುತ್ತದೆ ಎಂಬ ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾಡಿದ ಮನವಿಗೆಸ್ಪಂದಿಸಿ ಮಾತನಾಡಿ ಈಗಾಗಲೇ ತಾಲೂಕಿನ ಎಸ್.ಗೊಲ್ಲಹಳ್ಳಿ ಗ್ರಾಮದ ಬಳಿ ಸುಮಾರು ೨೬ ಎಕರೆ ಜಾಗ ಸರ್ಕಾರಕ್ಕೆ ನೀಡಿದ್ದು ಪಶು ಆಹಾರ ಸಾಗಾಣಿಕೆ ಮಾಡಲು ಅನುಕೂಲವಾಗಿದೆ. ಈ ಬಗ್ಗೆ ಸರ್ಕಾರ ಹಾಗು ಕೆಎಂಎಫ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ ಸಾರ್ವಜನಿಕರ ಸಹಭಾಗಿತ್ವ ಸಂಪೂರ್ಣವಾಗಿ ಇದ್ದಾಗ ಮಾತ್ರವೇ ಸರಕಾರದ ಯಾವುದೆ ಯೋಜನೆ ಯಶಸ್ಸಾಗಲು ಸಾಧ್ಯ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಇಲ್ಲದೆ ಯಾವುದೆ ಯೋಜನೆಯಾಗಲಿ ಯಶಸ್ಸು ಸಾಧ್ಯವಿಲ್ಲ. ಕಾಮಗಾರಿನಡೆಯುವಾಗ ಪಕ್ಷಾತೀತವಾಗಿ ಜನರು ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿ ಗ್ರಾಮದ ಅಭಿವೃದ್ದಿಗೆ ಸಹಕರಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಂಕ್ಮುನಿಯಪ್ಪ, ಕೆ.ಎಂ.ಸತೀಶ್ ಮುಖಂಡರಾದ ರಾಯಪ್ಪನಹಳ್ಳಿ ಅಶ್ವತ್ಥನಾರಾಯಣರೆಡ್ಡಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಯರಬಚ್ಚಪ್ಪ, ಡಿ.ಪಿ.ನಾಗರಾಜ್, ಶ್ರೀನಿವಾಸರೆಡ್ಡಿ, ಲಕ್ಮಿನಾರಾಯಣ, ಮಂಜುನಾಥ್, ರಾಷ್ಟ್ರೀಯ ಹೆದ್ದಾರಿ ಇಲಾಖೆಯಎಸ್.ಶಶಿಧರ್, ವೆಂಕಟರೋಣಪ್ಪ, ಜಿಲ್ಲಾ ಸಮಾಜ ಕಲ್ಯಾಣಾದಿಕಾರಿ ಶೇಷಾಧ್ರಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಅನಸೂಯಮ್ಮ ಮತ್ತಿತರರು ಹಾಜರಿದ್ದರು.
ಅಧ್ಯಯನ ಪ್ರವಾಸ
ಗುಣಮಟ್ಟದ ಹಾಲು ಉತ್ಪಾದನೆ ಮಾಡದಿದ್ದಲ್ಲಿ ಹಾಲು ಉತ್ಪಾದಕರು, ಹಾಲು ಉತ್ಪಾದಕರ ಸಹಕಾರ ಸಂಘಗಳಿಗೂ ಭವಿಷ್ಯದಲ್ಲಿ ಸಂಕಷ್ಟದ ದಿನಗಳು ಎದುರಾಗಲಿವೆ ಎಂದು ಕೋಚಿಮುಲ್ ನಿರ್ದೇಶಕ ಬಂಕ್ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳಿಗೆ ಹಮ್ಮಿಕೊಂಡಿದ್ದ ಅಧ್ಯಯನ ಪ್ರವಾಸಕ್ಕೆ ನಗರದ ಬಸವೇಶ್ವರ ದೇವಾಲಯದ ಆವರಣದಲ್ಲಿ ಶನಿವಾರ ರಾತ್ರಿ ಚಾಲನೆ ನೀಡಿ ಮಾತನಾಡಿದರು.
ಗುಣಮಟ್ಟದ ಹಾಲಿಗೆ ಮಾತ್ರವೇ ಸರ್ಕಾರವು ಪ್ರೋತ್ಸಾಹ ಧನವನ್ನು ವಿತರಿಸಲಿದ್ದು ಕಳಪೆ ಗುಣಮಟ್ಟದ ಹಾಲಿಗೆ ಸಿಗುವುದಿಲ್ಲ. ಹಾಗಾಗಿ ಹೈನುಗಾರರು ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚಿನ ಆಧ್ಯತೆ ನೀಡಲು ಸಹಕಾರ ಸಂಘದ ಕಾರ್ಯದರ್ಶಿಗಳು ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕಿದೆಎಂದರು.
ಹಾಗಾಗಿಯೆ ಕಾಲ ಕಾಲಕ್ಕೆ ಹೈನುಗಾರರು ಸೇರಿದಂತೆ ಸಹಕಾರ ಸಂಘಗಳ ಕಾರ್ಯದರ್ಶಿಗಳನ್ನು ಬೇರೆ ಬೇರೆ ರಾಜ್ಯದ ಹಾಗೂ ನಮ್ಮದೇ ರಾಜ್ಯದ ಇತರೆ ಅಭಿವೃದ್ದಿ ಶೀಲ ಡೇರಿಗಳಿಗೆ ಅಧ್ಯಯನ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ. ಅಲ್ಲಿ ಅಧ್ಯಯನ ನಡೆಸಿ ಅಲ್ಲಿನ ಒಳ್ಳೆಯ ಅಂಶಗಳನ್ನು ಇಲ್ಲಿಅನುಷ್ಟಾನಗೊಳಿಸಿಕೊಳ್ಳಬೇಕು. ಆದ್ದರಿಂದ ಎಲ್ಲ ಕಾರ್ಯದರ್ಶಿಗಳು ಪ್ರವಾಸ ಕಾಲದಲ್ಲಿ ಎಲ್ಲವನ್ನು ತಿಳಿದುಕೊಂಡು ಬರಬೇಕೆಂದು ಮನವಿ ಮಾಡಿದರು.
ಕೋಚಿಮುಲ್ ಶಿಡ್ಲಘಟ್ಟ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಬಿ.ಎಸ್.ಹನುಮಂತರಾವ್ ಮಾತನಾಡಿ, ೫೦ ಮಂದಿ ಕಾರ್ಯದರ್ಶಿಗಳನ್ನು ೭ ದಿನಗಳ ಕಾಲ ನೆರೆಯ ಆಂದ್ರಪ್ರದೇಶದ ವಿಶಾಖ ಡೈರಿ ಸೇರಿದಂತೆ ವಿವಿಧ ಡೈರಿಗಳಿಗೆ ಅಧ್ಯಯನ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ.
ಅಲ್ಲಿ ಹೈನುಗಾರಿಕೆಯನ್ನು ಯಾವ ರೀತಿ ಮಾಡಲಾಗುತ್ತಿದೆ. ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಹೇಗೆ ಮಾಡಬೇಕು, ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭಗಳಿಸುವ ಹೈನುಗಾರಿಕೆ ಮಾಡುವುದು ಹೇಗೆಂಬುದು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ತಿಳಿಸಿಕೊಡಲಾಗುವುದು. ನಿಮ್ಮ ಜತೆ ನಮ್ಮ ಇಲಾಖೆಯಅಧಿಕಾರಿಗಳು ಆಗಮಿಸಲಿದ್ದು ಅವರೊಂದಿಗೆ ಅಲ್ಲಿನ ಡೇರಿಯ ಅಧಿಕಾರಿ, ಸಿಬ್ಬಂದಿಯೂ ನಿಮಗೆ ಅಗತ್ಯ ಮಾಹಿತಿ ಮಾರ್ಗದರ್ಶನ ನೀಡಲಿದ್ದಾರೆ. ಎಲ್ಲರೂ ಅಣ್ಣ ತಮ್ಮಂದಿರಂತೆ ಒಂದಾಗಿ ಅಧ್ಯಯನ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿಕೊಂಡು ಬನ್ನಿ ಎಂದರು.
ಕೋಚಿಮುಲ್ನ ಸ್ಥಳೀಯ ಶಿಬಿರ ಕಚೇರಿಯ ವಿಸ್ತರಣಾಧಿಕಾರಿಗಳಾದ ಹೆಚ್.ಎಸ್.ಉಮೇಶ್ರೆಡ್ಡಿ, ಎಂ.ಮಂಜುನಾಥ್, ಟಿ.ಶ್ರೀನಿವಾಸ್, ಟಿ.ಎಂ.ಮುನೇಗೌಡ, ಸಂತೋಷ್ಕುಮಾರ್, ಹಾಲು ಉತ್ಪಾಧಕರ ಸಹಕಾರ ಸಂಘಗಳ ನೌಕರರ ಅಧ್ಯಕ್ಷ ಬೋದಗೂರು ಚಂದ್ರೇಗೌಡ ಮತ್ತಿತರರು ಹಾಜರಿದ್ದರು.
ಕಾಲೇಜು ಘಟಕದ ಪದಾಧಿಕಾರಿಗಳ ಆಯ್ಕೆ
ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರವಾಗಿದೆ ಎಂದು ಎನ್ಎಸ್ಯುಐ ರಾಜ್ಯ ಸಂಚಾಲಕ ಕೆ.ಎನ್.ಮುನೀಂದ್ರ ತಿಳಿಸಿದರು.
ನಗರದ ಹೊರವಲಯದ ಐಟಿಐ ಕಾಲೇಜಿನಲ್ಲಿ ಶುಕ್ರವಾರ ಕಾಲೇಜು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸೇರಿದಂತೆ ಸ್ವಾಮಿ ವಿವೇಕಾನಂದ, ಭಗತ್ಸಿಂಗ್ ರಂತಹ ಮಹಾನ್ ವ್ಯಕ್ತಿಗಳ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತೊಲಗಿಸಬೇಕಾದರೆ ಯುವಜನತೆ ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಶಿಕ್ಷಣ ಹಕ್ಕುಗಳಿಗಾಗಿ ಹೋರಾಟಗಳನ್ನು ರೂಪಿಸುವ ಮೂಲಕ ಯುವಜನತೆ ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಕಾಲೇಜು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಕಾಲೇಜು ಘಟಕದ ನೂತನ ಅಧ್ಯಕ್ಷರಾಗಿ ಎಂ.ಶ್ರೀಹರಿ, ಉಪಾಧ್ಯಕ್ಷರಾಗಿ ಎನ್.ಶ್ರೀನಾಥ್, ಕೀರ್ತನ್, ಅಂಬರೀಶ್, ಕಾರ್ಯದರ್ಶಿಯಾಗಿ ಕಿರಣ್, ಸಹ ಕಾರ್ಯದರ್ಶಿಗಳಾಗಿ ರಾಹುಲ್, ಚಂದನ್, ಕಾಂಚನ, ಸುಮಂತ್ ಅವರನ್ನು ಆಯ್ಕೆ ಮಾಡಲಾಯಿತು.
ಬಿಜೆಪಿ ಏಕ ನಾಯಕತ್ವದ ಪಕ್ಷವಲ್ಲ. ಸಾಮೂಹಿಕ ನಾಯಕತ್ವದ ಪಕ್ಷ
ಬಿಜೆಪಿ ಏಕ ನಾಯಕತ್ವದ ಪಕ್ಷವಲ್ಲ. ಸಾಮೂಹಿಕ ನಾಯಕತ್ವದ ಪಕ್ಷ. ಪ್ರತಿಯೊಬ್ಬ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ತಾವೇ ಪಕ್ಷದ ಅಭ್ಯರ್ಥಿಯೆಂಬಂತೆ ತಮ್ಮ ತಮ್ಮ ಬೂತ್ಗಳನ್ನು ಸದೃಢಗೊಳಿಸಬೇಕೆಂದು ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ತಾಲ್ಲೂಕಿನ ಗಂಜಿಗುಂಟೆ ಪಂಚಾಯಿತಿಯ ಯರ್ರಬಚ್ಚಹಳ್ಳಿಯಲ್ಲಿ ಬೂತ್ ಸಶಕ್ತಿಕರಣ ಮತ್ತು ಪರಿವರ್ತನಾ ಯಾತ್ರೆ ಪ್ರಚಾರ ನಡೆಸಿ ಅವರು ಮಾತನಾಡಿದರು.
ಜನವರಿ 12 ರಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ನಗರಕ್ಕೆ ಆಗಮಿಸಲಿದ್ದು ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಚುನಾವಣೆಗೆ ಕೆಲವೇ ತಿಂಗಳಿದ್ದು ಕಾರ್ಯಕರ್ತರು ಮಂಡಲದ ಪ್ರತಿಯೊಂದು ಬೂತ್ಗಳಿಗೆ ತೆರಳಿ ಕೇಂದ್ರ ಸರ್ಕಾರ ತಂದಿರುವ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡಬೇಕಿದೆ. ಇದರೊಂದಿಗೆ ಸಶಕ್ತ ಮತಗಟ್ಟೆ ತಂಡಗಳನ್ನು ರಚಿಸುವ ಕೆಲಸವೂ ನಡೆದಿದೆ. ಪ್ರತಿ ಬೂತ್ ಉಸ್ತುವಾರಿಗಳು ನಿತ್ಯ 2 ಗಂಟೆ ಸಮಯನೀಡಿ ಸಂಘಟನೆಗೆ ಒತ್ತು ನೀಡಿ, ನಿಮ್ಮ ಬೂತ್ಗಳಲ್ಲಿ ಬಿಜೆಪಿ ಅಭ್ಯರ್ಥಿಯತ್ತ ಹೆಚ್ಚು ಮತಗಳನ್ನು ಸೆಳೆಯಬೇಕೆಂದು ಹೇಳಿದರು.
ಬಿಜೆಪಿ ಮುಖಂಡ ಶಿವಕುಮಾರಗೌಡ ಮಾತನಾಡಿ, ಈಗಾಗಲೇ ತುಮ್ಮನಹಳ್ಳಿ ಮತ್ತು ಚೀಮಂಗಲ ಪಂಚಾಯಿತಿಗಳ ಗ್ರಾಮಗಳಲ್ಲಿ ಬೂತ್ ಸಶಕ್ತಿಕರಣ ಮತ್ತು ಪರಿವರ್ತನಾ ಯಾತ್ರೆ ಪ್ರಚಾರ ಕೈಗೊಂಡಿದ್ದೇವೆ. ಹೊಸಮತದಾರರು, ಯುವ ಜನತೆ ಬಿಜೆಪಿ ಪರ ಒಲವಿದ್ದು ತಾಲ್ಲೂಕಿನ ಜನತೆ ಬದಲಾವಣೆ ಬಯಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಜನಬೆಂಬಲ ಗಳಿಸಲಿದೆ ಎಂದು ತಿಳಿಸಿದರು.
ಬಿಜೆಪಿ ಮುಖಂಡರಾದ ಸುರೇಂದ್ರಗೌಡ, ಶ್ರೀರಾಮರೆಡ್ಡಿ, ಗಂಜಿಗುಂಟೆ ಶಕ್ತಿ ಕೇಂದ್ರದ ಅಧ್ಯಕ್ಷ ವೈ.ಎಂ.ವೆಂಕಟೇಶ್, ಮಂಜುಳಮ್ಮ, ಸುಜಾತಮ್ಮ, ದಾಮೋದರ್ ಹಾಜರಿದ್ದರು.
ಮತಗಳನ್ನು ಮಾರಿಕೊಳ್ಳಬೇಡಿ, ಯೋಗ್ಯರನ್ನು ಆರಿಸಿ
ಕೇವಲ ಐದು ನೂರು ಹಾಗೂ ಒಂದು ಸಾವಿರ ರೂಗಳಿಗೆ ಮತಗಳನ್ನು ಮಾರಿಕೊಳ್ಳುವ ಮೂಲಕ ಭ್ರಷ್ಟರಿಗೆ ಅಧಿಕಾರ ನೀಡಬೇಡಿ. ಹಣ ನೀಡಿ ಗೆದ್ದು ಬಂದವರು ಹಣ ಮಾಡುವುದನ್ನೇ ಕೆಲಸ ಮಾಡಿಕೊಳ್ಳುತ್ತಾರೆ. ಕ್ಷೇತ್ರ ಅಭಿವೃದ್ಧಿ ಕಾಣದಾಗುತ್ತದೆ ಎಂದು ಬಿಎಸ್ಪಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರೊ.ಹರಿರಾಮ್ ತಿಳಿಸಿದರು.
ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ಬಹುಜನ ಸಮಾಜ ಪಕ್ಷದ ಪದಾಧಿಕಾರಿಗಳ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಐದು ವರ್ಷಕ್ಕೊಮ್ಮೆ ಮಾಡುವ ಆಯ್ಕೆಯ ಬಗ್ಗೆ ಮತದಾರರು ಜಾಗೃತರಾಗಬೇಕು. ನಮಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದ ಜನಪ್ರತಿನಿಧಿ ಅಥವಾ ಸರ್ಕಾರವನ್ನು ಆಯ್ಕೆ ಮಾಡಬಾರದು. ಕಪ್ಪು ಹಣ ತರುವುದಾಗಿ ಚುನಾವಣೆಯ ಸಂದರ್ಭದಲ್ಲಿ ಹೇಳಿದ್ದ ಬಿಜೆಪಿ ನೋಟು ರದ್ದತಿ ಬರೆ ಎಳೆಯಿತು, ಉದ್ಯೋಗ ಸೃಷ್ಟಿ ಭರವಸೆ ಮೂಲೆಗುಂಪಾಗಿದೆ. ರೈತರ ಆತ್ಮಹತ್ಯೆ ಹೆಚ್ಚುತ್ತಿದೆ. ಶ್ರಮಿಕರ ಬೆವರಿನ ಹಣ ಬೃಹತ್ ಕಂಪೆನಿ ಮಾಲೀಕರಿಗೆ ಸಾಲ ನೀಡಿ ಮನ್ನಾ ಮಾಡುವುದರಲ್ಲೇ ಮುಗಿಯುತ್ತಿದೆ. ಸರ್ಕಾರ ರೈತರಿಗೆ ಯಾವುದೇ ಉತ್ತಮ ಯೋಜನೆಗಳನ್ನು ನೀಡುತ್ತಿಲ್ಲ ಎಂದು ಟೀಕಿಸಿದರು.
ಬಿಎಸ್ಪಿ ಪಕ್ಷದ ಮುಖಂಡ ಡಾ.ಶ್ರೀನಿವಾಸ್ ಮಾತನಾಡಿ, ಬಿಎಸ್ಪಿ ಪಕ್ಷ ದಲಿತರ ಪಕ್ಷವಲ್ಲ, ಎಲ್ಲಾ ಸಮುದಾಯದಲ್ಲಿರುವ ಶೋಷಿತರ ಪಕ್ಷ. ಮುಂದಿನ ಚುನಾವಣೆಯಲ್ಲಿ ಪಕ್ಷದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳಬೇಕು. ಪಕ್ಷದಲ್ಲಿ ಮತ ಜಾಗೃತಿಯಾಗಬೇಕು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಜಾತಿಗಳನ್ನು ಒಡೆದು ಆಡಳಿತ ನಡೆಸುತ್ತದೆ. ಬಿಜೆಪಿ ಧರ್ಮಗಳನ್ನು ಇಬ್ಭಾಗ ಮಾಡಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಈ ಎರಡು ಪಕ್ಷಗಳಿಂದರೂ ಹಿಂದುಳಿದವರ ಅಭಿವೃದ್ಧಿ ಆಗುತ್ತಿಲ್ಲ. ಪ್ರತಿ ಯುವಕರು ಪ್ರತಿ ಹಳ್ಳಿ ಹಳ್ಳಿಗಳಿಗೆ ತೆರಳಿ ಪ್ರಜಾಪ್ರಭುತ್ವ ವ್ಯವಸ್ಥೆ, ಮತವನ್ನು ಹಣಕ್ಕೆ ಮಾರಿಕೊಳ್ಳದಂತೆ ಜಾಗೃತಿ ಮೂಡಿಸಬೇಕು. ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಸಹ ಪ್ರತಿ ವರ್ಷವೂ ಕೇವಲ ಶೇ.1 ರಷ್ಟು ಸಹ ಅಭಿವೃದ್ಧಿಯಾಗಿಲ್ಲ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಚಲಪತಿ ಬಣದ ತಾಲ್ಲೂಕು ಘಟಕದ ಅಧ್ಯಕ್ಷ ಯಾಮೇಗೌಡ ನೇತೃತ್ವದಲ್ಲಿ ಹಲವು ಮಂದಿ ಹಾಗೂ ಬಶೆಟ್ಟಹಳ್ಳಿ ಹೋಬಳಿ ಮತ್ತು ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಯುವಕರು, ಮಹಿಳೆಯರು ಬಿಎಸ್ಪಿ ಪಕ್ಷಕ್ಕೆ ಸೇರ್ಪಡೆಯಾದರು.
ಬಿಎಸ್ಪಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗಪ್ಪ, ಲಕ್ಷ್ಮಿ, ಜನಾರ್ಧನ್, ಮೂರ್ತಿ, ಭಾಗ್ಯ, ಬಾಬು, ವೆಂಕಟರಾಯಪ್ಪ, ಪ್ಯಾರೇಜಾನ್, ಸೋಮಣ್ಣ, ಮಂಜುನಾಥ್ ಹಾಜರಿದ್ದರು.
ಇಸ್ಲಾಂ ಮತ ಪ್ರಚಾರ ಮಾಡುವ ಪ್ರಾಧ್ಯಾಪಕ; ಪೋಷಕರ ದೂರು
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ಅಬ್ದುಲ್ ಅಲೀಂ ಇಸ್ಲಾಂ ಮತ ಪ್ರಚಾರ ಮಾಡುವ ಮೂಲಕ ನಗರದಲ್ಲಿ ಹಿಂದೂ ಮುಸ್ಲಿಂ ನಡುವೆ ದ್ವೇಷ ಹುಟ್ಟುಹಾಕುತ್ತಿದ್ದಾನೆ. ಈತನನ್ನು ಕೂಡಲೇ ಕೆಲಸದಿಂದ ಅಮಾನತ್ತುಗೊಳಿಸಬೇಕು ಎಂದು ಪೋಷಕರು ಮತ್ತು ಬಿಜೆಪಿ ಮುಖಂಡರು ಒತ್ತಾಯಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾದ್ಯಾಪಕ ಅಬ್ದುಲ್ ಅಲೀಂ ಉರ್ದು ಭಾಷೆಯ ಪ್ರಾದ್ಯಾಪಕರಾಗಿ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಎಲ್ಲಾ ಧರ್ಮಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಇಸ್ಲಾಂ ಧರ್ಮದ ಬಗ್ಗೆ ಪರೀಕ್ಷೆ ಬರೆಯುವಂತೆ ಒತ್ತಾಯಿಸುತ್ತಿರುವ ಹಿನ್ನಲೆಯಲ್ಲಿ ಪೋಷಕರೂ ಮತ್ತು ನಗರದ ವಿವಿಧ ಮುಖಂಡರು ಕಾಲೇಜಿಗೆ ಭೇಟಿ ನೀಡಿ ಪ್ರಾಂಶುಪಾಲ ಆನಂದ್ರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದರು.
ಪ್ರೌಢಶಾಲೆ ವಿದ್ಯಾರ್ಥಿಗಳು ಬಲವಂತವಾಗಿ ಇಸ್ಲಾಂ ಧರ್ಮದ ಬಗ್ಗೆ ಪರೀಕ್ಷೆ ಬರೆಯುವಂತೆ ಅಬ್ದುಲ್ ಅಲೀಂ ಎಂಬ ಪ್ರಾಧ್ಯಾಪಕ ಒತ್ತಾಯಿಸುತ್ತಿರುವ ಬಗ್ಗೆ ಪೋಷಕರಿಗೆ ವಿಷಯ ತಿಳಿಸಿದ್ದರು, ಪೋಷಕರು ಬುಧವಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆನಂದ್ ರನ್ನು ಭೇಟಿಯಾಗಿ ವಿಚಾರಿಸಲಾಗಿ ಇದು ತನ್ನ ಗಮನಕ್ಕೆ ಬಾರದ ವಿಚಾರ ಹಾಗೂ ಪಠ್ಯಕ್ಕೆ ಸಂಬಂಧಪಡದ ವಿಷಯವಾಗಿದ್ದು ಈ ಬಗ್ಗೆ ಪಿಯು ಉಪನಿರೀಕ್ಷಕರ ಗಮನಕ್ಕೆ ತಂದು ಕ್ರಮ ಜರುಗಿಸಲಾಗುವುದು ಎಂದರು.
ಪೋಷಕರೊಂದಿಗೆ ಹೋಗಿದ್ದ ಕೆಲ ಬಿಜೆಪಿ ಮುಖಂಡರು ನಗರದ ಪೋಲಿಸ್ ಠಾಣೆಗೆ ಭೇಟಿ ನೀಡಿ ಸರ್ಕಲ್ ಇನ್ಸ್ಪೆಕ್ಟರ್ ನಿರೀಕ್ಷಕ ಸಿದ್ದರಾಜು ಅವರ ಸಮಕ್ಷಮದಲ್ಲಿ ಇಸ್ಲಾಂ ದರ್ಮದ ಬಗ್ಗೆ ಪರೀಕ್ಷೆ ಬರೆಯಲು ಸಿದ್ದ ಮಾಡಿದ ದಾಖಲೆ, ಪಠ್ಯಪುಸ್ತಕಗಳನ್ನು, ಅವರ ಪೆನ್ ಡ್ರೈವ್ ಅನ್ನು ಅವರ ವಶಕ್ಕೆ ಒಪ್ಪಿಸಿದ್ದಾರೆ.
ಸರ್ಕಲ್ ಇನ್ಸ್ಪೆಕ್ಟರ್ ಸಿದ್ದರಾಜು ಮಾತನಾಡಿ, ಈ ಘಟನೆಯ ಬಗ್ಗೆ ಕಾಲೇಜು ಪ್ರಾಂಶುಪಾಲರು ಹಾಗೂ ಪಿಯು ಉಪನಿರ್ದೇಶಕರನ್ನು ಸಂಪರ್ಕಿಸಿ ಅವರು ಪಾಠ ಮಾಡಲು ತಂದಿರುವ ಪಠ್ಯ ಪುಸ್ತಕ ದಾಖಲೆಗಳನ್ನು ಪರಿಶೀಲನೆ ಮಾಡಿ ತಪ್ಪಿದ್ದಲ್ಲಿ ದೂರು ದಾಖಲೆ ಮಾಡಿಕೊಂಡು ವಿಚಾರಣೆ ಮಾಡುವುದಾಗಿ ಪೋಷಕರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿ.ಸಿ.ನಂದೀಶ್, ನಗರಸಭೆ ಸದಸ್ಯ ಎಸ್.ರಾಘವೇಂದ್ರ, ಬಿಜೆಪಿ ಮುಖಂಡ ದಾಮೋಧರ್, ನಗರಾಧ್ಯಕ್ಷ ಪುರುಷೋತ್ತಮ್, ಹಿಂದೂ ಜಾಗರಣ ವೇದಿಕೆಯ ಶ್ರೀನಿವಾಸ್, ಅಲ್ಪಸಂಖ್ಯಾತ ಮುಖಂಡ ಅಂಜದ್ಪಾಷ ಹಾಜರಿದ್ದರು.
ಕುವೆಂಪು ಅವರು ಜಗತ್ತಿನ ಶ್ರೇಷ್ಠ ಕವಿಗಳಲ್ಲೊಬ್ಬರು
ಕುವೆಂಪುರವರು ಕಾವ್ಯ, ಕವನ, ಕಥೆ, ಕಾದಂಬರಿ, ವಿಮರ್ಶೆ, ಅನುವಾದ, ನಾಟಕ ಹೀಗೆ ಎಲ್ಲಾ ಬಗೆಯ ಸಾಹಿತ್ಯ ರೂಪಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಕುವೆಂಪು ಅವರು ಜಗತ್ತಿನ ಶ್ರೇಷ್ಠ ಕವಿಗಳಲ್ಲೊಬ್ಬರು ಎಂದು ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ರಸಋಷಿ ಕುವೆಂಪು ಅವರ ಜನ್ಮ ದಿನಾಚರಣೆ ಅಂಗವಾಗಿ ನಡೆಸಿದ ಕುವೆಂಪು ರಚನೆಗಳ ಗೀತಗಾಯನ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಹುಟ್ಟುವ ಎಲ್ಲರೂ ವಿಶ್ವ ಮಾನವರಾಗಿ ಹುಟ್ಟುತ್ತಾರೆ. ಆದರೆ ಬೆಳೆದಂತೆಲ್ಲ ಅಲ್ಪ ಮಾನವರಾಗುತ್ತಾರೆ. ಅಂತಹವರನ್ನು ವಿಶ್ವ ಮಾನವರನ್ನಾಗಿ ಮಾಡುವುದೇ ಸಾಹಿತ್ಯದ ಕರ್ತವ್ಯವಾಗಬೇಕು ಎಂಬುದು ಕುವೆಂಪು ಅವರ ಆಶಯವಾಗಿತ್ತು. ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಮಾತೃ ಭಾಷೆ ಬಗ್ಗೆ ಸದಾ ಹೇಳುತ್ತಿದ್ದರು, ಅವರ ಅನೇಕ ಕೃತಿಗಳಲ್ಲಿ ಕನ್ನಡ ನಾಡು, ನುಡಿಯ ವರ್ಣನೆಯನ್ನು ಗಮನಿಸಿದರೆ ಸಾಕು ಅವರಲ್ಲಿನ ಭಾಷಾ ಪ್ರೇಮ ತಿಳಿಯುತ್ತದೆ. ಕನ್ನಡದ ಹಿರಿಮೆಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ತರಗಳಲ್ಲಿ ಎತ್ತಿ ಹಿಡಿದ ಮಹಾನ್ ಚೇತನ ಕುವೆಂಪು ಎಂದು ಹೇಳಿದರು.
ಏಳನೇ ತರಗತಿಯ ಡಿ.ಲಕ್ಷ್ಮೀ(ಪ್ರಥಮ), ಆರನೇ ತರಗತಿಯ ಎಂ.ರಂಜನ್(ದ್ವಿತೀಯ), ಆರನೇ ತರಗತಿಯ ಎಂ.ತಿಲಕ್(ತೃತೀಯ) ರಾಗಿದ್ದು, ವಿಜೇತರಿಗೆ ಕುವೆಂಪು ಪುಸ್ತಕ ಮತ್ತು ಪ್ರಮಾಣಪತ್ರವನ್ನು ನೀಡಲಾಯಿತು. ಶಾಲಾ ಗ್ರಂಥಾಲಯಕ್ಕೆ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಕುವೆಂಪು ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.
ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ.ತ್ಯಾಗರಾಜು, ಲಕ್ಷ್ಮೀನಾರಾಯಣ, ಗ್ರಾಮ ಪಂಚಾಯಿತಿ ಸದಸ್ಯೆ ಉಮಾ, ನೇತ್ರಾವತಿ, ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಪುಷ್ಪಾ ರಾಮಚಂದ್ರ, ಮುಖ್ಯಶಿಕ್ಷಕಿ ವೆಂಕಟರತ್ನಮ್ಮ, ಮುನಿವೆಂಕಟಸ್ವಾಮಿ, ಬಾಬು, ನರಸಿಂಹಮೂರ್ತಿ, ಜಗದೀಶ್, ಶಿಕ್ಷಕರಾದ ಚಾಂದ್ಪಾಷ, ಭಾರತಿ, ಅಶೋಕ್, ನೃತ್ಯಕಲಾವಿದ ಸಿ.ಎನ್.ಮುನಿರಾಜು, ಕೆಂಪೇಗೌಡ, ವೇಣುಗೋಪಾಲ್ ಹಾಜರಿದ್ದರು.
ಸಾವಿತ್ರಿ ಬಾಪುಲೆ ಹೆಣ್ಣುಮಕ್ಕಳ ಶಾಲೆ ಆರಂಭಿಸಿ ದಾರಿ ದೀಪವಾಗಿದ್ದಾರೆ
ಹಲವು ವಿರೋಧದ ನಡುವೆಯೂ ಸಾವಿತ್ರಿ ಬಾಪುಲೆ ದೇಶದಲ್ಲಿ ಮೊಟ್ಟ ಮೊದಲು ಪ್ರತ್ಯೇಕ ಹೆಣ್ಣುಮಕ್ಕಳ ಶಾಲೆ ಆರಂಭಿಸಿ ದಾರಿ ದೀಪವಾಗಿದ್ದಾರೆ ಎಂದು ಕನ್ನಡ ಸಾರಸ್ವತ ಪರಿಚಾರಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಹೇಳಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಂಗಳವಾರ ನಡೆದ ಸಾವಿತ್ರಿ ಬಾಪುಲೆ ಅವರ ೧೮೬ ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ, ಶೋಷಿತರಿಗೆ ನಿಷೇಧಿಸಿದ ಶಿಕ್ಷಣ ಹಕ್ಕನ್ನು ಜ್ಯೋತಿ ಬಾಪುಲೆ ಪತ್ನಿ ಸಾವಿತ್ರಿ ಬಾಪುಲೆ ಪುಣೆಯಲ್ಲಿ ಪ್ರತ್ಯೇಕ ಹೆಣ್ಣು ಮಕ್ಕಳ ಶಾಲೆಯನ್ನು ಆರಂಭಿಸಿ, ವಿದ್ಯೆ ಕಲಿಯುವಂತೆ ಮಾಡಿದ್ದಾರೆ. ಅಂದು ಅವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಹೇಳಿಕೊಡದೆ ಹೋಗಿದ್ದರೆ ನಮ್ಮ ಸ್ಥಿತಿ ಯಾವ ಮಟ್ಟದಲ್ಲಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದರು.
ಚಲನಚಿತ್ರ ನಟ ಆರ್.ಜನಾರ್ಧನ್ ಮಾತನಾಡಿ, ಸಾವಿತ್ರಿ ಬಾಪುಲೆ ಭಾರತದ ಪ್ರಥಮ ಶಿಕ್ಷಕಿ ಮಾತ್ರವಲ್ಲ. ವಿಶ್ವದ ಮಾತೆ ಆಗಿದ್ದಾರೆ. ಮಹಿಳೆಯರ ಉದ್ಧಾರಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮಹಿಳೆ ವಿರುದ್ಧವಿರುವ ಅನಿಷ್ಟ ಪದ್ಧತಿ ವಿರುದ್ಧ ಹೋರಾಟ ನಡೆಸಿದರು. ಇಡೀ ಶೋಷಿತ ಸಮುದಾಯ ದಿನನಿತ್ಯ ಸಾವಿತ್ರಿಬಾಪುಲೆ ಅವರನ್ನು ಸ್ಮರಿಸಿಕೊಳ್ಳಬೇಕಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜು ಮಾತನಾಡಿ, ಬ್ರಿಟೀಷರ ವಿರೋಧದ ನಡುವೆಯೂ ಸ್ವಂತ ಶಾಲೆ ತೆರೆದು ಮಹಿಳೆಯರಿಗೆ ಶಿಕ್ಷಣ ನೀಡಲಾರಂಭಿಸಿದ ದಿಟ್ಟ ಹಾಗು ದೇಶದ ಮೊದಲ ಶಿಕ್ಷಕಿ ಸಾವಿತ್ರ ಬಾಪುಲೆ. ಜಾತಿಧರ್ಮವರ್ಗ ಭೇದ ಮಾಡದೆ ಎಲ್ಲರಿಗೂ ಅಕ್ಷರದೂಟ ಉಣಬಡಿಸಿದ ಸಾವಿತ್ರಿಬಾಯಿ ಪುಲೆ ಅವರ ಜನ್ಮದಿನ. ಈ ದಿನವನ್ನು ಶಿಕ್ಷಕಿಯರ ದಿನಾಚರಣೆ ಎಂದು ಸರ್ಕಾರ ಘೋಷಣೆ ಮಾಡಬೇಕು.
ಬಾಲ್ಯ ವಿವಾಹ, ಮಹಿಳೆಯರ ಮೇಲಿನ ದೌರ್ಜನ್ಯದಂತಹವುಗಳನ್ನು ತೊಲಗಿಸಲು ಮೊದಲು ಮಹಿಳೆ ಶಿಕ್ಷಣವಂತಳಾಗಬೇಕು. ಸಾವಿತ್ರಿ ಭಾಪುಲೆಯಂತಹವರ ಜೀವನ ಸಾಧನೆಗಳ ಬಗ್ಗೆ ತಿಳಿದುಕೊಂಡು ಅವರಲ್ಲಿನ ಒಳ್ಳೆಯ ಗುಣ, ತತ್ವ ಆದರ್ಶಗಳನ್ನು ನಾವೂ ಸಹ ಮೈಗೂಡಿಸಿಕೊಳ್ಳುವ ಅವಶ್ಯಕತೆ ಇದೆ. ಜಾತಿ ಮತ ಧರ್ಮ ಬಡವ ಶ್ರೀಮಂತ ಎನ್ನುವ ತಾರತಮ್ಯ ಇಲ್ಲದೆ ಎಲ್ಲರೂ ಈ ನಾಡಿನ ಶ್ರೇಯಸ್ಸಿಗೆ ಶ್ರಮಿಸಬೇಕು ಎಂದು ಹೇಳಿದರು.
ಸಾವಿತ್ರಿ ಬಾಪುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು. ‘ನೀನಿಲ್ಲದ ಮಳೆ’ ಚಲನಚಿತ್ರ ತಂಡದವರು ಜನ ಗಣ ಮನ ಅರ್ಥಸಹಿತ ಪುಸ್ತಕಗಳನ್ನು ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಣೆ ಮಾಡಿದರು.
ಚಿತ್ರ ನಿರ್ಮಾಪಕ ದೇವರಾಜು, ಚಿತ್ರನಟಿ ವ್ಯಾಲರಿ, ಭವ್ಯ, ಮುಖಂಡರಾದ ಲಕ್ಷ್ಮೀನಾರಾಯಣ, ಗ್ರಾಮ ಪಂಚಾಯಿತಿ ಸದಸ್ಯೆ ಉಮಾ, ನೇತ್ರಾವತಿ, ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಪುಷ್ಪಾ ರಾಮಚಂದ್ರ, ಮುಖ್ಯಶಿಕ್ಷಕಿ ವೆಂಕಟರತ್ನಮ್ಮ, ಮುನಿವೆಂಕಟಸ್ವಾಮಿ, ಬಾಬು, ನರಸಿಂಹಮೂರ್ತಿ, ಜಗದೀಶ್, ಶಿಕ್ಷಕರಾದ ಚಾಂದ್ಪಾಷ, ಭಾರತಿ, ಅಶೋಕ್, ನೃತ್ಯಕಲಾವಿದ ಸಿ.ಎನ್.ಮುನಿರಾಜು, ಕೆಂಪೇಗೌಡ, ವೇಣುಗೋಪಾಲ್, ಕಿರುಚಿತ್ರ ನಿರ್ದೇಶಕ ರಂಗ ಹಾಜರಿದ್ದರು.
ಶಿಸ್ತು ನಮ್ಮ ಜೀವನದ ಅವಿಭಾಜ್ಯ ಅಂಗವಾಗಲಿ
ಶಿಸ್ತನ್ನು ರೂಢಿಸಿಕೊಂಡಲ್ಲಿ ಜೀವನದಲ್ಲಿ ಯಾವುದೇ ಕ್ಷೇತ್ರಕ್ಕೆ ಕಾಲಿಟ್ಟರೂ ಯಶಸ್ಸನ್ನು ಕಾಣುತ್ತೀರಿ ಎಂದು ಏರ್ ವೈಸ್ ಮಾರ್ಷಲ್ ಡಾ.ಟಿ.ನಾಗರಾಜ್ ವಿದ್ಯಾರ್ಥಿಗಳಿಗೆ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ಮಂಗಳವಾರ ನಡೆದ ಬಿ.ಎಂ.ವಿ ಎಜುಕೇಷನ್ ಟ್ರಸ್ಟ್ನ 30ನೇ ಶಾಲಾ ವಾರ್ಷಿಕ ಸಮಾರಂಭದಲ್ಲಿ ಅವರು ಮಾತನಾಡಿದರು.
ಆಹಾರ ಸೇವನೆ, ವೈಯಕ್ತಿಕ ಸ್ವಚ್ಛತೆ, ವ್ಯಾಯಾಮ, ಉತ್ತಮ ಹವ್ಯಾಸಗಳು, ನಡೆ ನುಡಿ ಎಲ್ಲದರಲ್ಲೂ ಶಿಸ್ತು ಇರಬೇಕು. ಬಲವಂತವಾಗಿ ಯಾರಿಗೋ ಹೆದರಿ ಶಿಸ್ತನ್ನು ಪಾಲಿಸಬಾರದು. ಅದು ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಬೇಕು. ಶಿಸ್ತಿನ ಅಭ್ಯಾಸದಿಂದ ಸಿಗುವ ಫಲಗಳನ್ನು ಕಾಣುತ್ತಾ ಹೋದಂತೆ ಅದನ್ನು ಸಂತಸದಿಂದ ಪಾಲಿಸುತ್ತೀರಿ ಎಂದು ಹೇಳಿದರು.
ದೇಶವನ್ನು ರಕ್ಷಿಸುವ ವಾಯುಸೇನೆ, ಭೂಸೇನೆ ಮತ್ತು ನೌಕಾಸೇನೆ ಕಾರ್ಯನಿರ್ವಹಣೆ, ಅವುಗಳ ಸೇವೆಗಳು ಹಾಗೂ ಅದರಲ್ಲಿ ಸೇರಲು ಬೇಕಾದ ಮಾನದಂಡಗಳ ಬಗ್ಗೆ ವಿವರಿಸಿ, ಮಕ್ಕಳಿಗೆ ಅವುಗಳನ್ನು ಸೇರಲು ಬೇಕಿರುವ ಅಗತ್ಯತೆಗಳನ್ನು ತಿಳಿಸಿದರು.
ಅಮೆರಿಕೆಯಿಂದ ಹಿಂದಿರುಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಸುಜಾತ ನಾಯ್ಡು ಕದಂ ಮತ್ತು ಮಂಜುನಾಥ ಕದಂ ದಂಪತಿಗಳನ್ನು ಶಿಕ್ಷಣ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಶಿಕ್ಷಕಿ ಚೇತನ ಶಾಲೆ ಬೆಳೆದು ಬಂದ ಹಾದಿ ಹಾಗೂ ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ವರದಿಯನ್ನು ನೀಡಿದರು.
ಬಿ.ಎಂ.ವಿ ಎಜುಕೇಷನ್ ಟ್ರಸ್ಟ್ನ ಅಧ್ಯಕ್ಷ ಬಿ.ವಿ.ಮುನೇಗೌಡ, ಕಾರ್ಯದರ್ಶಿ ಎಲ್.ಕಾಳಪ್ಪ, ದತ್ತಿ ಎಸ್.ನಾರಾಯಣಸ್ವಾಮಿ, ನಿವೃತ್ತ ಪ್ರಾಂಶುಪಾಲ ನಾರಾಯಣಸ್ವಾಮಿ, ಸಮಾಜವಾದಿ ಚಿಂತಕರಾದ ಬಾಪು ಹೆದ್ದೂರು ಶೆಟ್ಟಿ, ಪ್ರೊ.ಹನುಮಂತ, ಟ್ರಸ್ಟಿಗಳಾದ ವೆಂಕಟಮೂರ್ತಿ, ಬಿ.ಕೆ.ರಾಮಚಂದ್ರ, ದೇವರಾಜು, ಮುನಿರಾಜು, ಶಿಕ್ಷಕ ನಾರಾಯಣಸ್ವಾಮಿ ಹಾಜರಿದ್ದರು.
ಕೋರೇಂಗಾವ್ ವಿಜಯೋತ್ಸವ
ಶೋಷಿತರು ಸಂಘಟಿತರಾಗುವವರೆಗೆ ತುಳಿತಕ್ಕೆ ಒಳಗಾದವರ ಮೇಲಿನ ದೌರ್ಜನ್ಯ ನಿಲ್ಲುವುದಿಲ್ಲ. ಕನಿಷ್ಠ ಕೂಲಿ, ಉತ್ತಮ ಬದುಕು ಪಡೆಯುವುದು ಸಾಧ್ಯವಾಗುವುದಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ಎಂ.ಮುನಿಯಪ್ಪ ಹೇಳಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಮಂಗಳವಾರ ದಲಿತ ಯುವಜನರು ಆಯೋಜಿಸಿದ್ದ ಕೋರೇಂಗಾವ್ ವಿಜಯೋತ್ಸವದಲ್ಲಿ ಅವರು ಮಾತನಾಡಿದರು.
ದೇಶದ ಆರ್ಥಿಕ ವ್ಯವಸ್ಥೆ ಬಂಡವಾಳಶಾಹಿಗಳ ಕಪಿಮುಷ್ಠಿಯಲ್ಲಿ ಸಿಲುಕಿದ್ದು, ಕನಿಷ್ಠ ಕೂಲಿ ನಿಗದಿಗೊಳಿಸದ ಕಾರಣ ಕಾರ್ಮಿಕರು ಬದುಕು ನಡೆಸವುದೇ ಕಷ್ಟವಾಗಿದೆ ಜನವರಿ ೧ ಜಗತ್ತಿಗೆ ಹೊಸ ವರ್ಷದ ಸಂಭ್ರಮದ ದಿನ. ಈ ದಿನ ಶೋಷಿತರ ಪಾಲಿಗೆ ‘ಹೊಸ ಅಧ್ಯಾಯ’ವೊಂದನ್ನು ತೆರೆದ ದಿನವೂ ಹೌದು. ಅಸ್ಪೃಶ್ಯತೆಯ ವಿರುದ್ಧ ಬಂಡೆದ್ದ ಗುಂಪೊಂದು ಮಹಾರಾಷ್ಟ್ರದ ಪೇಶ್ವೆಗಳ ವಿರುದ್ಧ ಜಯ ಸಾಧಿಸಿದ ಈ ದಿನ, ಶೋಷಿತರ ಆತ್ಮಗೌರವ ತಲೆಯೆತ್ತಿದ ದಿನವೆಂದೇ ಪ್ರಸಿದ್ಧ. ಈ ಘಟನೆ ಅಂಬೇಡ್ಕರ್ ಅವರ ಹೋರಾಟದ ಬದುಕಿನ ಪ್ರೇರಣೆಗಳಲ್ಲಿ ಒಂದಾಗಿದೆ ಎಂದರು.
ದಲಿತ ಯುವ ಮುಖಂಡ ಅಶೋಕ್ ಮಾತನಾಡಿ, ಪ್ರತಿ ವರ್ಷದ ಕ್ಯಾಲೆಂಡರ್ನಲ್ಲಿ ಡಿಸೆಂಬರ್ ತಿಂಗಳ ಪುಟವನ್ನು ಮಗುಚುವಾಗ ಜಗತ್ತು ‘ಹೊಸ ವರ್ಷ’ದ ನೆಪದಲ್ಲಿ ಸಂಭ್ರಮಿಸುತ್ತದೆ. ಹಳತರ ಪೊರೆಯನ್ನು ಕಳಚಿಕೊಂಡು ಹೊಸ ಬೆಳಕಿಗೆ ಮೈಯೊಡ್ಡುವುದು ಸಡಗರದ ಸಂದರ್ಭವೇ ನಿಜ. ಆದರೆ, ಈ ಸಂಕ್ರಮಣ ಕಾಲದ ಚರಿತ್ರೆಯಲ್ಲಿ ಹಲವು ಸಂಘರ್ಷಗಳೂ ತವಕತಲ್ಲಣಗಳೂ ಹುದುಗಿಕೊಂಡಿರುತ್ತವೆ. ಈ ತಲ್ಲಣಗಳ ನೆನಪು ಕೂಡ ಹಾದಿ ಬದಲಿಸುವ ಸಂದರ್ಭದಲ್ಲಿ ಜೊತೆಯಾಗುವುದು ಅರ್ಥಪೂರ್ಣವಾಗಿದೆ ಎಂದರು.
ಯುವ ಮುಖಂಡ ವೇಣುಗೋಪಾಲ್ ಮಾತನಾಡಿ, ಚರಿತ್ರೆಯಲ್ಲಿ ಹೂತು ಹೋಗಿದ್ದ ಕೋರೆಗಾಂವ್ ಕದನದ ಅಪೂರ್ವ ಪ್ರಸಂಗವನ್ನು ಇತಿಹಾಸದ ಪುಟಗಳಿಂದ ಹೆಕ್ಕಿ ತೆಗೆದು ಜಗತ್ತಿಗೆ ತೋರಿಸಿದವರು ಬಿ.ಆರ್. ಅಂಬೇಡ್ಕರ್ ಹಾಗಾಗಿಯೇ ಜನವರಿ ೧ ಅಸ್ಪೃಶ್ಯತೆಯ ವಿರುದ್ಧ ಈ ದೇಶದ ಶೋಷಿತ ಜನಾಂಗಗಳ ಅಸಹನೆಯ ಕಟ್ಟೆಯೊಡೆದ ದಿನವಾಗಿಯೂ, ಅವರು ತಮ್ಮ ಅಸ್ಮಿತೆಯ ಉಳಿವಿಗಾಗಿ ಹೋರಾಡಿ ಜಯಿಸಿದ ಉತ್ಸವದ ದಿನವೂ ಆಗಿದೆ.
ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಎರಡನೇ ಬಾಜೀರಾಯನ ಆಡಳಿತ ನಡೆಯುತ್ತಿದ್ದ ದಿನಗಳವು. ಅಸ್ಪೃಶ್ಯತೆ ಎನ್ನುವುದು ಮನುಷ್ಯ ಮನುಷ್ಯರ ನಡುವೆ ಕಂದಕ ಉಂಟುಮಾಡಿದ್ದ ಸಂದರ್ಭವದು. ಅಂಬೇಡ್ಕರ್ ದಾಖಲಿಸಿರುವಂತೆ, ಮರಾಠರ ರಾಜ್ಯದಲ್ಲಿ, ಅದರಲ್ಲೂ ಪೇಶ್ವೆಗಳ ಆಡಳಿತಾವಧಿಯಲ್ಲಿ ಅಸ್ಪೃಶ್ಯರ ನೆರಳು ಹಿಂದೂವೊಬ್ಬನ ಮೇಲೆ ಬಿದ್ದು, ಆತ ಮೈಲಿಗೆಯಾಗುವುದನ್ನು ತಪ್ಪಿಸಲು, ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶವನ್ನೇ ನಿಷೇಧಿಸಲಾಗಿತ್ತು. ಅಸ್ಪೃಶ್ಯರು ತಮ್ಮ ಗುರುತು ಪತ್ತೆಗಾಗಿ ತಮ್ಮ ಕುತ್ತಿಗೆ ಮತ್ತು ಮುಂಗೈಗೆ ಕಪ್ಪು ದಾರವೊಂದನ್ನು ಕಟ್ಟಿಕೊಳ್ಳುವುದು ಆ ದಿನಗಳಲ್ಲಿ ಕಡ್ಡಾಯವಾಗಿತ್ತು. ಇಂತಹ ಪದ್ಧತಿಗಳನ್ನು ತೊಲಗಿಸಬೇಕಾಗಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ರವಿ, ಪ್ರದೀಪ್, ದೇವರಾಜ್, ಸುಖೇಶ್, ಕಾಂತರಾಜ್, ದ್ಯಾವಪ್ಪ, ಶ್ರೀನಿವಾಸ, ಪವನ್, ಶಿವಶಂಕರ್, ಚಂದ್ರು, ಶ್ರೀರಾಮ್, ಶಿವೇಂದ್ರ, ಅನಿಲ್, ಪ್ರಕಾಶ್, ಗಜೇಂದ್ರ, ಮನೋಜ್, ಮಂಜುನಾಥ್, ನರಸಿಂಹಮೂರ್ತಿ, ಕಿರಣ್, ಸತ್ಯಾನಾರಾಯಣಪ್ಪ, ವೆಂಕಟರವಣಪ್ಪ, ಸಿ.ಎಂ.ಮುನಿಯಪ್ಪ, ಮುರಳಿನಾಯಕ್, ಶ್ರೀನಿವಾಶ ನಾಯಕ್, ಮಧು, ಎಲ್.ಎಂ, ನರಸಿಂಹಮೂರ್ತಿ, ಗಗನ್ ಕುಮಾರ್, ಪೃಥ್ವಿ, ಸುಮಂತ್, ಅಜೇಯ್, ಶ್ರೀನಿವಾಸ್, ಅಕ್ಷಯ್ ಹಾಜರಿದ್ದರು.

