Home Blog Page 389

ಮಾತೃಪೂರ್ಣ ಯೋಜನೆ ಉದ್ದೇಶ ಈಡೇರಿಲ್ಲ

0

ಮಾತೃಪೂರ್ಣ ಯೋಜನೆಯ ಉದ್ದೇಶ ಫಲಕಾರಿಯಾಗುತ್ತಿಲ್ಲ. ಅದರ ಬದಲಿಗೆ ಇನ್ನೇನಾದರೂ ಸೌಲಭ್ಯವನ್ನು ಪಡೆದುಕೊಳ್ಳಲು ಸರ್ಕಾರಕ್ಕೆ ಮನವಿ ಮಾಡಿ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಮಾತೃ ಪೂರ್ಣ ಯೋಜನೆಯಡಿ ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲೆ ಅಡುಗೆ ಮಾಡಿ ಬಡಿಸುವ ಮೂಲಕ ಮಕ್ಕಳಲ್ಲಿ ಪೌಷ್ಟಿಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಯೋಜನೆಯಾಗಿದೆ. ಆದರೆ ಜನರು ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ, ಆದ್ದರಿಂದ ಯೋಜನೆಯ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದರು.
ತಾಲ್ಲೂಕಿನ ಅಭಿವೃದ್ಧಿಗಾಗಿ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು. ಸರ್ಕಾರದ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವಂತಹ ಕೆಲಸ ಮಾಡಬೇಕು. ಬರುತ್ತಿರುವ ಅನುದಾನಗಳನ್ನು ಎಲ್ಲೆಲ್ಲಿ ಬಳಕೆ ಮಾಡಲಾಗುತ್ತಿದೆ ಎನ್ನುವುದರ ಬಗ್ಗೆ ಸದಸ್ಯರುಗಳು ತಮ್ಮ ಕ್ಷೇತ್ರಗಳಲ್ಲಿ ಪರಿಶೀಲನೆ ಮಾಡಿಕೊಳ್ಳಬೇಕು. ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿನ ಸದಸ್ಯರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
೩೧ ಇಲಾಖೆಗಳ ಪೈಕಿ ೧೮ ಇಲಾಖೆಗಳ ಪ್ರತಿನಿಧಿಗಳು ಮಾತ್ರ ಭಾಗವಹಿಸಿದ್ದರು. ಉಳಿದ ೧೩ ಇಲಾಖೆಗಳು ಭಾಗವಹಿಸಿರಲಿಲ್ಲ, ನಗರಸಭೆ, ಪ್ರಾದೇಶಿಕ ಅರಣ್ಯ ಇಲಾಖೆ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕೆ.ಎಸ್.ಆರ್.ಟಿ.ಸಿ, ಅಬಕಾರಿ ಇಲಾಖೆ, ಕಾರ್ಮಿಕ ಇಲಾಖೆ, ನಿರ್ಮಿತಿ ಕೇಂದ್ರ, ಪೊಲೀಸ್ ಇಲಾಖೆ, ಸೇರಿದಂತೆ ಹಲವಾರು ಇಲಾಖೆಗಳ ಅಧಿಕಾರಿಗಳು ಭಾಗವಹಿಸಿರಲಿಲ್ಲ.
ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್, ವ್ಯವಸ್ಥಾಪಕ ಪ್ರಸಾದ್, ಸದಸ್ಯರು, ಅಧಿಕಾರಿಗಳು ಹಾಜರಿದ್ದರು.

ಸಭೆ ಬಹಿಷ್ಕರಿಸಿದ ಸದಸ್ಯರು

0

ಕೊಳಚೆ ನಿರ್ಮೂಲನಾ ಮಂಡಳಿಯಿಂದ ಬಂದಿದ್ದ ಆದೇಶದ ಅನ್ವಯ ನಗರಸಭೆ ಸಭಾಂಗಣದಲ್ಲಿ ಬುಧವಾರ ಕರೆಯಲಾಗಿದ್ದ ತುರ್ತು ಸಭೆಯನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ನ ಸುಮಾರು ೨೩ ಸದಸ್ಯರು ಬಹಿಷ್ಕರಿಸಿ ಹೊರನಡೆದ ಘಟನೆ ನಡೆದಿದೆ.
ಕೊಳಚೆ ನಿರ್ಮೂಲನೆ ಮಂಡಳಿಯಿಂದ ನಗರದ ಕೊಳಚೆ ಪ್ರದೇಶದಲ್ಲಿ ಆಗಿರುವ ನಿವೇಶನಗಳನ್ನು ತುರ್ತಾಗಿ ಖಾತೆಗಳನ್ನು ಮಾಡುವ ಮೂಲಕ ನಗರಸಭೆಗೆ ಬರಬೇಕಾಗಿರುವ ಆದಾಯದ ಮೂಲಗಳನ್ನು ಹೆಚ್ಚಿಸುವ ಉದ್ದೇಶದಿಂದ ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್ ಅಧ್ಯಕ್ಷತೆಯಲ್ಲಿ ಬುಧವಾರ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಕ್ಷೇತ್ರದ ಶಾಸಕ ಎಂ.ರಾಜಣ್ಣ ಅವರೂ ಭಾಗವಹಿಸಿದ್ದು ಅವರ ಎದುರಿನಲ್ಲೆ ಅವರದೇ ಜೆಡಿಎಸ್ ಪಕ್ಷದ ಸದಸ್ಯರು ಸೇರಿದಂತೆ ಕಾಂಗ್ರೆಸ್ನ ಸುಮಾರು ೨೩ ಮಂದಿ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.
ನಗರಸಭೆಯ ಬಹುತೇಕ ವಾರ್ಡುಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸುವಂತೆ ಅನೇಕ ಬಾರಿ ಸದಸ್ಯರಾದ ನಾವು ಮನವಿಗಳನ್ನು ಕೊಟ್ಟಿದ್ದರೂ ನಾಲ್ಕು ತಿಂಗಳಿನಿಂದ ನಗರಸಭೆಯಲ್ಲಿ ಸಾಮಾನ್ಯ ಸಭೆಯನ್ನು ಕರೆದು ಚರ್ಚೆ ಮಾಡಿಲ್ಲ. ನಗರಸಭೆಯಲ್ಲಿ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚು ಪ್ರಾದಾನ್ಯತೆ ನೀಡದೆ ಇದೀಗ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಬಂದಿರುವ ಪತ್ರವೊಂದಕ್ಕೆ ತುರ್ತು ಸಭೆ ಕರೆಯುವಂತಹ ಅಗತ್ಯವೇನಿದೆ ಎಂದು ಸದಸ್ಯರು ಪ್ರಶ್ನಿಸಿದ್ದಾರೆ.
ನಾವು ಅಭಿವೃದ್ಧಿ ಕೆಲಸಗಳಿಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ, ಸಮಸ್ಯೆಗಳನ್ನು ಹೇಳಿಕೊಂಡರೂ ಸ್ಪಂದಿಸದೆ, ಏಕಾಏಕಿ ತುರ್ತುಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ನಮ್ಮ ಸಮಸ್ಯೆಗಳನ್ನು ಕೇಳದಿದ್ದರೆ ನಾವ್ಯಾಕೆ ಸಭೆಯಲ್ಲಿರಬೇಕು, ನಾವು ಸಭೆಯಿಂದ ಹೊರಹೋಗುತ್ತೇವೆಂದು ತಿಳಿಸಿ ಸಭೆ ಬಹಿಷ್ಕರಿಸಿದ್ದೇವೆ ಎಂದು ಸದಸ್ಯರು ಆಕ್ರೋಶದಿಂದ ನುಡಿದರು.
‘ಸರ್ಕಾರದಿಂದ ಸುತ್ತೋಲೆ ಬಂದಿರುವುದರಿಂದ ತುರ್ತು ಸಭೆ ಕರೆಯಲಾಗಿತ್ತು. ಆದರೆ ನಗರಸಭೆ ಸದಸ್ಯರು ತುರ್ತು ಸಭೆಗೆ ಸ್ಪಂದಿಸದೇ ಸಭೆಯಿಂದ ಹೊರನಡೆದಿದ್ದಾರೆ. ಮುಂದಿನ ೧೦ ದಿನಗಳಲ್ಲಿ ನಗರಸಭೆ ಸಾಮಾನ್ಯ ಸಭೆ ನಡೆಸಿ ಎಲ್ಲಾ ಸಮಸ್ಯೆಗಳ ಕುರಿತು ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ನಗರಸಭೆ ಪ್ರಬಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್ ತಿಳಿಸಿದರು.
‘ನಗರಸಭೆ ಸದಸ್ಯರು ತುರ್ತುಸಭೆಯ ಹಿನ್ನೆಲೆ ಅರ್ಥ ಮಾಡಿಕೊಂಡಿಲ್ಲ, ಕೊಳಚೆ ನಿರ್ಮೂಲನೆ ಮಂಡಳಿಯಿಂದ ಈಗಾಗಲೇ ನಗರದ ಕೊಳಚೆ ಪ್ರದೇಶದಲ್ಲಿ ನಿವೇಶನಗಳನ್ನು ಮಾಡಿದ್ದು ಇವುಗಳ ಖಾತೆಗಳನ್ನು ಮಾಡಿಸುವುದರಿಂದ ನಗರಸಭೆಗೆ ಆದಾಯ ಬರುತ್ತದೆ. ಸಭೆಯಲ್ಲಿ ನಗರಸಭೆ ಸದಸ್ಯರು ರೇಜುಲೇಷನ್ ಮಾಡಿಕಳುಹಿಸಿದರೆ ಅನುಕೂಲವಾಗಲಿದೆ. ರಾಜಕೀಯ ದುರುದ್ದೇಶದಿಂದ ಕೆಲ ಸದಸ್ಯರು ಸಭೆಗೆ ಸಹಕಾರ ನೀಡಿಲ್ಲ’ ಎಂದು ಶಾಸಕ ಎಂ.ರಾಜಣ್ಣ ನುಡಿದರು.

ಹಳ್ಳಿಗಳಲ್ಲಿ ಸ್ವಚ್ಚತೆ ಕಾಪಾಡಬೇಕು

0

ಸರ್ಕಾರದಿಂದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಬಿಡುಗಡೆಯಾಗುವಂತಹ ಅನುದಾನಗಳನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಂಡು ಹಳ್ಳಿಗಳಲ್ಲಿ ಸ್ವಚ್ಚತೆ ಕಾಪಾಡಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಗಂಗನಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಡಿ ಎಸ್.ಸಿ.ಪಿ.ಯೋಜನೆಯಲ್ಲಿ ಮಂಗಳವಾರ ೬ ಲಕ್ಷ ವೆಚ್ಚದಲ್ಲಿ ಸಿ.ಸಿ. ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ಜನರು ವಾಸಮಾಡುತ್ತಿರುವ ಕಡೆಗಳಲ್ಲಿ ಸ್ವಚ್ಚತೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು. ಮೂಲ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪಗಳನ್ನು ಕೊಡುವುದು ಹಾಗೂ ಸ್ವಚ್ಚತೆಗೆ ಆದ್ಯತೆ ನೀಡಿ ಸಾಮಾನ್ಯ ಜನರ ಆರೋಗ್ಯ ರಕ್ಷಣೆಗೆ ಹೆಚ್ಚು ಒತ್ತು ನೀಡುವಂತಹ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಕಾಮಗಾರಿಗಳನ್ನು ಮಾಡುತ್ತಿರುವ ಗುತ್ತಿಗೆದಾರರು, ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿಗಳನ್ನು ಮಾಡುವ ಮೂಲಕ ಯೋಜನೆಯನ್ನು ಸಾಕಾರಗೊಳಿಸಬೇಕು. ನಾಗರಿಕರು ಸಹಕಾರ ನೀಡಬೇಕು ಎಂದರು.
ಮುಖಂಡರಾದ ಜಿ.ಎಂ.ರಾಮಾಂಜಿನಪ್ಪ, ರಾಮಣ್ಣ, ವಿ.ಕೆಂಪಯ್ಯ ಜಿ.ಎಂ.ನಾರಾಯಣಪ್ಪ, ನಾರಾಯಣಸ್ವಾಮಿ, ಗುತ್ತಿಗೆದಾರ ಡಿ.ಕೃಷ್ಣ, ಮುನಿಬಚ್ಚಪ್ಪ, ಸೊಣ್ಣೇನಹಳ್ಳಿ ಮುನಿರಾಜು, ದ್ಯಾವಪ್ಪ, ಮುತ್ತೂರು ರವಿ, ಮನೋಜ್ ಹಾಜರಿದ್ದರು.

ಸಂಘಟನೆಯ ೮ ನೇ ವರ್ಷದ ವಾರ್ಷಿಕೋತ್ಸವ

0

ಶಿಡ್ಲಘಟ್ಟದ ದ್ವಿಮುಖ ಗಣಪತಿ ದೇವಾಲಯದ ಬಳಿಯಿಂದ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಸದಸ್ಯರು ಯಲಹಂಕದಲ್ಲಿ ನಡೆಯಲಿರುವ ಸಂಘಟನೆಯ ೮ ನೇ ವರ್ಷದ ವಾರ್ಷಿಕೋತ್ಸವ ಸಮಾರಂಭಕ್ಕೆ ತೆರಳಿದರು. ವೇದಿಕೆ ಸಂಚಾಲಕ ನರೇಶ್, ಸದಾನಂದ, ಮಧು, ನಾಗರಾಜು, ಮಂಜುನಾಥ್ ಹಾಜರಿದ್ದರು

ಮನೆಯೇ ಮೊದಲ ಪಾಠಶಾಲೆ

0

ಮನೆಯೇ ಮೊದಲ ಪಾಠಶಾಲೆ ಎಂಬ ಹಿರಿಯರ ಮಾತಿನಂತೆ ಮಗುವಿನ ಶಿಕ್ಷಣ ಮನೆಯಿಂದಲೇ ಆರಂಭವಾಗುತ್ತದೆ. ಮಕ್ಕಳಿಗೆ ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಿಕೊಡುವಲ್ಲಿ ಪೋಷಕರು ಹೆಚ್ಚಿನ ಗಮನಹರಿಸಬೇಕು ಎಂದು ಚಿಕ್ಕಬಳ್ಳಾಪುರ ಶಾಖಾಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಹೊರವಲಯದ ಹನುಮಂತಪುರ ಗೇಟ್ನಲ್ಲಿರುವ ಬಿಜಿಎಸ್ ಶಾಲೆಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಮಾತೃಭೋಜನ ಹಾಗು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ಪೋಷಕರು ತಮ್ಮ ಮಕ್ಕಳಿಗೆ ಉತ್ತಮವಾದ ವಾತಾವರಣ ಕಲ್ಪಿಸಿದಿದ್ದಲ್ಲಿ ಮಕ್ಕಳು ಪರಿಪಕ್ವವಾಗಿ ಬೆಳೆಯಲು ಸಾಧ್ಯವಿಲ್ಲ. ಮಕ್ಕಳಿಗೆ ಆದರ್ಶಮಯವಾದ ಶಿಕ್ಷಣದ ಜೊತೆ ಜೊತೆಗೆ ಉತ್ತಮ ಸಂಸ್ಕಾರವನ್ನು ಬೆಳೆಸುವ ಜವಾಬ್ದಾರಿ ತಾಯಿಯ ಮೇಲಿರುತ್ತದೆ. ಪ್ರತಿಯೊಬ್ಬ ಮಗುವೂ ದೇವರ ಪ್ರತಿರೂಪವಾದ ತಾಯಿಯನ್ನು ಗೌರವಿಸುವುದನ್ನು ರೂಡಿಸಿಕೊಳ್ಳಬೇಕು ಎಂದರು.
ಬಿಜಿಎಸ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಹಾಗು ಪೋಷಕರ ಪಾತ್ರ ಬಹಳಷ್ಟು ಮಹತ್ತರವಾದದ್ದು ಹಾಗಾಗಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿರುವ ಸಹಕಾರವನ್ನು ಪೋಷಕರು ಶಿಕ್ಷಕರಿಗೆ ನೀಡಬೇಕು ಎಂದರು.
ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವಂತಹ ಗುರಿಯನ್ನು ಬಿಜಿಎಸ್ ಶಿಕ್ಷಣ ಸಂಸ್ಥೆ ಹೊಂದಿದ್ದು ಇದಕ್ಕೆ ಪೂರಕವಾಗಿ ಪೋಷಕರು ಶಿಕ್ಷಕರಿಗೆ ಸಹಕಾರ ನೀಡಬೇಕು. ಮಕ್ಕಳಲ್ಲಿರುವ ಅಪಾರವಾದ ಶಕ್ತಿಯನ್ನು ಹೊರತರುವಂತಹ ಪ್ರಾಮಾಣಿಕ ಪ್ರಯತ್ನವನ್ನು ನಡೆಸಿ ದೇಶದ ಯಾವುದೇ ಮೂಲೆಯಲ್ಲಿಯಾದರೂ ಮಕ್ಕಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುವಂತಹ ಸಾಮರ್ಥ್ಯವುಳ್ಳವರನ್ನಾಗಿ ಮಾಡುವ ಧ್ಯೇಯವನ್ನು ಸಂಸ್ಥೆ ಹೊಂದಿದೆ ಎಂದರು.
ಕಾರ್ಯಕ್ರಮದಲ್ಲಿ ಪೋಷಕರು ಮಾತೃಭೋಜನ ಸಮಾರಂಭಕ್ಕಾಗಿ ತಯಾರಿಸಿ ತಂದಿದ್ದ ವಿವಿಧ ರೀತಿಯ ತಿಂಡಿಗಳನ್ನು ಮಕ್ಕಳು ಹಾಗು ಪೋಷಕರು ಸವಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು, ಬಿಜಿಎಸ್ ಶಾಲೆಯ ಪ್ರಾಂಶುಪಾಲ ಆರ್.ಮಹದೇವ್ ಮುಖಂಡರಾದ ಮಳ್ಳೂರು ಶಿವಣ್ಣ, ಕೆಂಪರೆಡ್ಡಿ, ಮುರಳಿ, ದೇವರಾಜ್, ಜೆ.ಎಸ್.ವೆಂಕಟಸ್ವಾಮಿ, ಪುರುಷೋತ್ತಮ್, ಪ್ರತಾಪ್, ಶ್ರೀನಿವಾಸ್ ಹಾಗು ಸಿಬ್ಬಂದಿ ವರ್ಗ ಹಾಜರಿದ್ದರು.

ಹಿಪ್ಪುನೇರಳೆ ಕತ್ತರಿಸಲು ರೀಪರ್ ಯಂತ್ರದ ಪ್ರಾಯೋಗಿಕ ಪರೀಕ್ಷೆ

0

ರೇಷ್ಮೆ ಕೃಷಿಯಲ್ಲಿ ಕೂಲಿಯಾಳುಗಳ ಸಮಸ್ಯೆಗೆ ಪರಿಹಾರವಾಗಿ ‘ರೀಪರ್’ ಯತ್ರವನ್ನು ತಾಲ್ಲೂಕಿನ ಭಕ್ತರಹಳ್ಳಿ ಮತ್ತು ಶೀಗೇಹಳ್ಳಿಗಳಲ್ಲಿನ ಹಿಪ್ಪುನೇರಳೆ ತೋಟಗಳಲ್ಲಿ ಪ್ರಾಯೋಗಿಕವಾಗಿ ಪರೀಕ್ಷಿಸಿದ್ದೇವೆ. ಇದರಿಂದ ರೇಷ್ಮೆ ಬೆಳೆಗಾರರಿಗೆ ಸಮಯ, ಹಣದ ಉಳಿಯತಾಯ ಮತ್ತು ಕೂಲಿ ಕಾರ್ಮಿಕರ ಸಮಸ್ಯೆ ಬಗೆಹರಿಯಲಿದೆ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.
ತಾಲ್ಲೂಕಿನ ಶೀಗೇಹಳ್ಳಿಯಲ್ಲಿ ಸೋಮವಾರ ಕೇರಳ ಸರ್ಕಾರದ ಕ್ಯಾಂಪ್ಕೋ ತಯಾರಿಕೆಯ ರೀಪರ್ ಯಂತ್ರವನ್ನು ವಿವಿಧ ರೇಷ್ಮೆ ಬೆಳೆಗಾರರು ಹಾಗೂ ಅಧಿಕಾರಿಗಳೊಂದಿಗೆ ಪ್ರಾಯೋಗಿಕ ಪರೀಕ್ಷೆ ನಡೆಸಿ ಅವರು ಮಾತನಾಡಿದರು.
ಈ ರೀಪರ್ ಯಂತ್ರವನ್ನು ಕೇರಳ ಸರ್ಕಾರಿ ಸಂಸ್ಥೆ ಅಭಿವೃದ್ಧಿಪಡಿಸಿದೆ. ಅಲ್ಲಿ ಈ ಯಂತ್ರವನ್ನು ಗೋದಿ, ರಾಗಿ, ಭತ್ತ, ಜೋಳ, ಸೋಯಾ ಬೆಳೆ ಕತ್ತರಿಸಲು ಬಳಕೆ ಮಾಡಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿಯೂ ಗೇರಳ್ಳಿಯಲ್ಲಿ ಭತ್ತ ಮತ್ತು ಸಾದಲಿ ಸುತ್ತಮುತ್ತ ರಾಗಿ ಕಟಾವಿಗೆ ಬಳಸುತ್ತಿದ್ದಾರೆ. ಇದನ್ನು ಕೊಂಚ ಮಾರ್ಪಾಟು ಮಾಡಿದಲ್ಲಿ ನಮ್ಮ ರೇಷ್ಮೆ ಬೆಳೆಗಾರರ ಬಹುತೇಕ ಶ್ರಮ ಕಡಿಮೆಯಾಗುತ್ತದೆ. ಇಪ್ಪತ್ತು ಮಂದಿ ಮಾಡಬೇಕಾದ ಕೆಲಸವನ್ನು ಒಬ್ಬ ವ್ಯಕ್ತಿ ಈ ಯಂತ್ರವನ್ನು ಬಳಸಿ ಮಾಡಬಹುದು. ನಾಲ್ಕನೇ ಜ್ವರದ ರೇಷ್ಮೆ ಹುಳುವಿಗೆ ಹಾಕಲು ಹಿಪ್ಪುನೇರಳೆ ಸೊಪ್ಪಿನ ದಪ್ಪಕಡ್ಡಿಗಳನ್ನು ಕತ್ತರಿಸಲು ಸಾಕಷ್ಟು ಶ್ರಮ ಬೇಕಾಗುತ್ತದೆ. ಅಲ್ಲದೆ ಕೂಲಿ ಕಾರ್ಮಿಕರ ಸಮಸ್ಯೆಯಿಂದ ತತ್ತರಿಸಿರುವ ತಾಲ್ಲೂಕಿನ ರೇಷ್ಮೆ ಬೆಳೆಗಾರರಿಗೆ ಇದು ವರದಾನವಾಗಲಿದೆ ಎಂದರು.
ಒಂದು ಲಕ್ಷ 22 ಸಾವಿರ ರೂಗಳ ಈ ಯಂತ್ರಕ್ಕೆ ಈಗ ಕೃಷಿ ಇಲಾಖೆಯಿಂದ 48,500 ರೂಗಳ ಸಹಾಯಧನ ಸಿಗುತ್ತಿದೆ. ರೇಷ್ಮೆ ಇಲಾಖೆಯ ಅಧಿಕಾರಿಗಳನ್ನು ಹಾಗೂ ಮಂತ್ರಿಗಳನ್ನು ಭೇಟಿಯಾಗಿದ್ದು ಶೇ.90 ರಷ್ಟು ಸಹಾಯಧನಕ್ಕಾಗಿ ಒತ್ತಾಯಿಸಿದ್ದೇವೆ. ಸಿಗುವ ಆಶಾಭಾವನೆಯಿದೆ ಎಂದು ಅವರು ಹೇಳಿದರು.
ರೀಪರ್ ಯಂತ್ರಗಳ ಜಿಲ್ಲಾ ವಿತರಕರಾದ ಪ್ರಭಾಕರ ರೆಡ್ಡಿ ಮತ್ತು ಅಜಯ್ ರೆಡ್ಡಿ ಮಾತನಾಡಿ, ‘ರೇಷ್ಮೆ ಬೆಳೆಗಾರರು ಈ ಯಂತ್ರದಲ್ಲಿ ಕೆಲವು ಮಾರ್ಪಾಡುಗಳ ಅಗತ್ಯತೆಯನ್ನು ತಿಳಿಸಿದ್ದಾರೆ. ಅದನ್ನು ಒಂದು ವಾರದೊಳಗೆ ಮಾಡಿಕೊಡಲಾಗುವುದು. ಸುಲಭವಾಗಿ ಬಳಸಬಹುದಾದ ಈ ಯಂತ್ರವನ್ನು ಹಿಪ್ಪುನೇರಳೆ ಕಟಾವಿಗಲ್ಲದೆ, ರಾಗಿ, ಜೋಳವನ್ನು ಕತ್ತರಿಸಲೂ ಬಳಕೆ ಮಾಡಿಕೊಳ್ಳಬಹುದು. ತಂತ್ರಜ್ಞಾನದ ಬಳಕೆ ಈಗಿನ ಅವಶ್ಯಕತೆಯಾಗಿದೆ ಎಂದರು.
ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಬೋಜಣ್ಣ, ಭಾಸ್ಕರ್, ರೈತಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ಮಳ್ಳೂರು ಹರೀಶ್, ಕಿಶೋರ್, ನಾರಾಯಣಸ್ವಾಮಿ, ಪುಟ್ಟಮೂರ್ತಿ, ಎಸ್.ಎಂ.ನಾರಾಯಣಸ್ವಾಮಿ ಹಾಜರಿದ್ದರು.

ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿನಿಯರು

0

ತಾಲ್ಲೂಕಿನ ಮಳ್ಳೂರು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಚಾಂದಿನಿ ಮತ್ತು ಪುಷ್ಪಲತಾ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.

ಟಿ.ಎನ್.ಪುಷ್ಪಲತಾ

ಬೆಂಗಳೂರಿನ ದಯಾನಂದಸಾಗರ್ ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಇಂಗ್ಲೀಷ್ ಚರ್ಚಾ ಸ್ಪರ್ಧೆಯಲ್ಲಿ ಚಾಂದಿನಿ ದ್ವಿತೀಯ ಸ್ಥಾನ ಮತ್ತು ಜಾನಪದ ಗೀತೆಗಾಯನ ಸ್ಪರ್ಧೆಯಲ್ಲಿ ಟಿ.ಎನ್.ಪುಷ್ಪಲತಾ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
‘ಗ್ರಾಮೀಣ ಮಕ್ಕಳು ಅಪ್ಪಟ ಪ್ರತಿಭಾವಂತರು ಎಂಬುದಕ್ಕೆ ನಿದರ್ಶನವಾಗಿ ನಮ್ಮ ವಿದ್ಯಾರ್ಥೀಗಳು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿ ಶಿಕ್ಷಣ ಸಂಸ್ಥೆಗೆ ಕೀರ್ತಿ ಮತ್ತು ಇತರ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ತುಂಬಿದ್ದಾರೆ’ ಎಂದು ಪ್ರಾಂಶುಪಾಲ ಚಂದ್ರಕುಮಾರ್ ತಿಳಿಸಿದರು.

ಮುಗ್ಧ ಮಕ್ಕಳ ರೈಲ್ವೆ ಪ್ರಯಾಣ

0

ಚುಕು ಬುಕು ಚುಕು ಬುಕು.. ಎಂದು ಮಕ್ಕಳು ಒಗ್ಗೂಡಿ ಕೂಗುತ್ತಿದ್ದ ದೃಶ್ಯ ನಗರದ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಚ್ಚರಿ, ಸಂತಸ ಒಟ್ಟೊಟ್ಟಿಗೆ ಉಂಟು ಮಾಡಿತ್ತು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 50 ವಿದ್ಯಾರ್ಥಿಗಳು ಸೋಮವಾರ ಒಂದು ದಿನದ ಪ್ರವಾಸಕ್ಕೆಂದು ನಗರದ ರೈಲ್ವೆ ನಿಲ್ದಾಣಕ್ಕೆ ಬಂದು ಜಮಾಯಿಸಿದ್ದರು.
ಶಾಲೆಯ ಶಿಕ್ಷಕರು ಒಂದು ದಿನದ ಮಕ್ಕಳ ಪ್ರವಾಸಕ್ಕೆ ಆಯ್ದುಕೊಂಡಿದ್ದುದು ರೈಲನ್ನು. ಶಿಡ್ಲಘಟ್ಟದ ಮೂಲಕ ಕೋಲಾರಕ್ಕೆ ಹೋಗುವ ರೈಲಿನಲ್ಲಿ ಬೆಳಿಗ್ಗೆ ಹೋಗಿ ಶ್ರೀನಿವಾಸಪುರದಲ್ಲಿ ಇಳಿದು, ನಂತರ ಮಧ್ಯಾಹ್ನ ಅದೇ ರೈಲಿನಲ್ಲಿ ಹಿಂದಿರುಗುವುದು ಅವರ ಉದ್ದೇಶವಾಗಿತ್ತು.
ರೈಲಿನಲ್ಲಿ ಎಂದೂ ಪ್ರಯಾಣಿಸದ ಮಕ್ಕಳಿಗೆ ಇದು ಹೊಸ ಅನುಭವವನ್ನು ತಂದಿತ್ತು. ರೈಲ್ವೆ ನಿಲ್ದಾಣವೂ ಅವರಿಗೆ ಹೊಸತು. ಸಾರಿಗೆ ವಾಹನಗಳು, ಲಾರಿ, ರೈಲು ಮುಂತಾದವುಗಳನ್ನು ಪಠ್ಯ ಪುಸ್ತಕದಲ್ಲಿ ಕಂಡಿದ್ದ ಮಕ್ಕಳು ರೈಲಿಗೆ ಟಿಕೇಟ್ ಕೊಳ್ಳುವ ರೀತಿ, ಪ್ಲಾಟ್ ಫಾರಂ, ಲಗೇಜ್ ರೂಂ, ರೈಲ್ವೆ ನಿಲ್ದಾಣದಲ್ಲಿನ ವಿವಿಧ ಭಾಗಗಳ ಬಗ್ಗೆ ಶಿಕ್ಷಕರು ವಿವರಿಸುತ್ತಿದ್ದರೆ ಕುತೂಹಲದಿಂದ ಆಲಿಸುತ್ತಿದ್ದರು. ರೈಲು ಬಂದಾಗಲಂತೂ ಅವರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.
ರೈಲ್ವೆ ಪ್ರಯಾಣದ ಅನುಕೂಲಗಳು, ಸಾಗಾಣಿಕೆ ವೆಚ್ಚ ಕಡಿಮೆಯಾಗುವುದು, ದೇಶದ ರೈಲ್ವೆ ಸಂಪರ್ಕಗಳು ಮುಂತಾದವುಗಳನ್ನು ಶಿಕ್ಷಕರಾದ ಚಾಂದ್ಪಾಷ, ಅಶೋಕ್ ಮಕ್ಕಳಿಗೆ ವಿವರಿಸುತ್ತಾ ಶ್ರೀನಿವಾಸಪುರ ತಲುಪಿದರು. ದಾರಿಯುದ್ದಕ್ಕೂ ಮಕ್ಕಳ ಪ್ರಶ್ನೆಗಳು, ಹಾಡು, ಆಟ, ನೃತ್ಯ ನಿಲ್ಲದೆ ಸಾಗಿತ್ತು.
ಶಾಲೆಯಿಂದಲೇ ಟೊಮೇಟೋ ಬಾತ್, ಶಾವಿಗೆ ಬಾತ್ ಬುತ್ತಿಯನ್ನು ಪ್ರತಿಯೊಬ್ಬ ಮಗುವೂ ಕಟ್ಟಿಕೊಂಡಿದ್ದರು. ಜೊತೆಗೆ ಹೊಸವರ್ಷಾಚರಣೆಗೆ ಮೂರು ಕೇಜಿ ಕೇಕ್, ಬಿಸ್ಕೇಟ್ಗಳು, ಚಾಕಲೇಟ್ಗಳು ಜೊತೆಗಿದ್ದವು.
ಶ್ರೀನಿವಾಸಪುರದಲ್ಲಿ ಸಾಯಿಬಾಬಾ, ಗಣೇಶನ ದೇವಸ್ಥಾನಗಳನ್ನು, ಬಸ್ ಡಿಪೋ ಮತ್ತು ತರಕಾರಿ ಮಂಡಿಯನ್ನು ಮಕ್ಕಳಿಗೆ ತೋರಿಸಿ ತಿಂಡಿ ತಿಂದು ಕೇಕ್ ಕತ್ತರಿಸಿ ಪುನಃ ಶಿಡ್ಲಘಟ್ಟಕ್ಕೆ ಮರುಪಯಣ. ವಾಪಸ್ಸಾಗುವಾಗಲೂ ಬತ್ತದ ಉತ್ಸಾಹ ಖುಷಿ, ಕುತೂಹಲದ ನೋಟ ಮಕ್ಕಳದ್ದಾಗಿತ್ತು.
‘ಮಕ್ಕಳೊಂದಿಗೆ ಪ್ರವಾಸ ಮಾಡುವುದರಿಂದ ನಾವೂ ಮಕ್ಕಳಾಗುತ್ತೇವೆ. ಅವರಂತೆಯೇ ಹೊರಪ್ರಂಚವನ್ನು ಮುಗ್ಧವಾಗಿ ಗಮನಿಸುತ್ತೇವೆ. ಅವರ ಎಷ್ಟೋ ಪ್ರಶ್ನೆಗಳಿಗೆ ಉತ್ತರಿಸಲು ತಡಕಾಡುವಂತಾಗುತ್ತದೆ. ಇದೊಂದು ಅಪರೂಪದ ರೈಲ್ವೆ ಪ್ರವಾಸ’ ಎಂದು ಮುಖ್ಯ ಶಿಕ್ಷಕಿ ವೆಂಕಟರತ್ನಮ್ಮ ತಿಳಿಸಿದರು.
‘ನಾನು ರೈಲನ್ನು ನೋಡಿಯೇ ಇರಲಿಲ್ಲ. ಇವತ್ತು ನನ್ನ ಅತ್ಯಂತ ಸಂತಸದ ದಿನವಾಗಿತ್ತು. ಇಂತಹ ಪ್ರವಾಸವನ್ನು ಮತ್ತೆಮತ್ತೆ ನಮ್ಮ ಶಾಲೆಯವರು ಮಾಡಿಸಲಿ’ ಎಂದು ಪದಗಳಲ್ಲಿ ಬಣ್ಣಿಸಲಾಗದ ತನ್ನ ಸಂತಸವನ್ನು ಏಳನೇ ತರಗತಿಯ ಲಕ್ಷ್ಮಿ.

ಅಂಧಮಕ್ಕಳಿಗೆ ಸ್ವೆಟರ್ ವಿತರಣೆ

0

ಹೊಸವರ್ಷವನ್ನು ಸಮಾಜಸೇವೆಯೊಂದಿಗೆ ಪ್ರಾರಂಭಿಸುವ ಉದ್ದೇಶದಿಂದ ಅಂಧಮಕ್ಕಳ ಶಾಲೆಯಲ್ಲಿ ಮಕ್ಕಳೊಂದಿಗೆ ಆಚರಿಸುತ್ತಿರುವುದಾಗಿ ಮುತ್ತುಟ್ ಫೈನಾನ್ಸ್ ಗುಚ್ಛ ವ್ಯವಸ್ಥಾಪಕ ವೆಂಕಟೇಶ್ ತಿಳಿಸಿದರು.
ನಗರದ ಆಶಾಕಿರಣ ಅಂಧಮಕ್ಕಳ ಶಾಲೆಯಲ್ಲಿ ಸೋಮವಾರ ಮಕ್ಕಳೊಂದಿಗೆ ಕೇಕ್ ಕತ್ತರಿಸಿ, ಮಕ್ಕಳಿಗೆ ಸ್ವೆಟರ್ಗಳನ್ನು ವಿತರಿಸಿ ಅವರು ಮಾತನಾಡಿದರು.
ನಗರದಲ್ಲಿ ಈ ಬಾರಿ ಚಳಿಯು ಹೆಚ್ಚಾಗಿದೆ. ಸಮಾನ ಮನಸ್ಕರು ಸೇರಿಕೊಂಡು ಅಂಧ ಮಕ್ಕಳಿಗೆ ಸ್ವೆಟರ್ಗಳನ್ನು ನೀಡುವ ಮೂಲಕ ಹೊಸ ವರ್ಷಾರಂಭವನ್ನು ಮಾಡುತ್ತಿದ್ದೇವೆ. ಹಂಚಿ ತಿನ್ನುವ ಮನೋಭಾವ ನಮ್ಮೆಲ್ಲರದ್ದಾಗಲಿ. ಪ್ರತಿಯೊಬ್ಬ ಜೀವಿಯೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದ್ದು, ಪರಸ್ಪರರನ್ನು ಗೌರವಿಸುತ್ತಾ, ಸೌಹಾರ್ಧದಿಂದ, ಸಹಾಯ ಮನೋಭಾವದಿಂದ ಇದ್ದಾಗ ಸಮಾಜ ಶಾಂತಿಯುತವಾಗಿರುತ್ತದೆ ಎಂದರು.
ನಗರಸಭೆ ಆಯುಕ್ತ ಚಲಪತಿ ಮಾತನಾಡಿ, ಹೊಸವರ್ಷಾಚರಣೆಯನ್ನು ದುಂದುವೆಚ್ಚ ಮಾಡಿ ಆಚರಿಸುವುದಕ್ಕಿಂತ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಎಲ್ಲರೂ ಆಚರಿಸುವಂತಾಗಬೇಕು ಎಂದು ನುಡಿದರು.
ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಹಕ್ಕುಗಳ ಸಂರಕ್ಷಣಾ ಸೇವಾ ಸಮಿತಿಯ ನಾರಾಯಣಸ್ವಾಮಿ, ಮುತ್ತುಟ್ ಫೈನಾನ್ಸ್ನ ವಲಯ ವ್ಯವಸ್ಥಾಪಕ ಅರುಣ್ ಪವಿತ್ರನ್, ಶ್ರೀನಿವಾಸ್, ಮಂಜುನಾಥ್, ರಾಮಕೃಷ್ಣಪ್ಪ, ರಾಮು, ವಿನೋದ್, ಕುಮಾರ್, ಸುಮನ್, ರಾಮಕೃಷ್ಣ, ಮನೀಶ್, ದೇವರಾಜು, ವೆಂಕಟೇಶ್ ಹಾಜರಿದ್ದರು.

ವಿಶ್ವಭ್ರಾತೃತ್ವಕ್ಕೆ ವಿಶ್ವಮಾನವ ಸಂದೇಶ ಅನುಕರಣೀಯ

0

ಜಾಗತಿಕ ಮಟ್ಟದಲ್ಲಿ ಅಶಾಂತಿ, ಶೀತಲಸಮರಗಳು ಹೆಚ್ಚುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಕುವೆಂಪು ಅವರ ವಿಶ್ವಮಾನವಸಂದೇಶ ಅನುಕರಣೀಯವಾದುದು ಎಂದು ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸಹಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಮತ್ತು ಗಾನಗಾರುಡಿಗ ಸಿ.ಅಶ್ಪಥ್ ಅವರ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಸಾರಸ್ವತಲೋಕಕ್ಕೆ ರಾಷ್ಟ್ರಕವಿ ಕುವೆಂಪು, ಮತ್ತು ಸಂಗೀತಕ್ಷೇತ್ರಕ್ಕೆ ಸಿ.ಅಶ್ವಥ್ ಅವರ ಕೊಡುಗೆ ಅಪಾರವಾದುದು ಎಂದು ಅವರು ತಿಳಿಸಿದರು.
ಕರವೇ ಜಿಲ್ಲಾ ಉಪಾಧ್ಯಕ್ಷ ಅಶೋಕ್ಕುಮಾರ್ ಮಾತನಾಡಿ, ಕನ್ನಡಪರವಾದ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದರೆ ಕನ್ನಡ ಭಾಷೆಯ ಹಿರಿಮೆಯು ಹೆಚ್ಚುತ್ತದೆ. ಕನ್ನಡದ ಕಾರ್ಯಕ್ರಮಗಳು ವ್ಯಾಪಕವಾಗಿ, ಪರಿಣಾಮಕಾರಿಯಾಗಿ ನಡೆಯಬೇಕು. ಕನ್ನಡ ಭಾಷೆಯ ಹಿರಿಮೆಯನ್ನು ಸಾರುವ ಫಲಕಗಳನ್ನು ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಹಾಕಬೇಕು. ಆಧುನಿಕ ವಿದ್ವಾಂಸರ, ಕವಿಗಳ, ಭಾವಚಿತ್ರಗಳನ್ನು ಪ್ರದರ್ಶಿಸುವುದು ಅಗತ್ಯವಾಗಿದೆ. ಕನ್ನಡವನ್ನು ಪ್ರಾಥಮಿಕ ಹಂತದಲ್ಲಿಯೇ, ೫ ನೇ ತರಗತಿಯವರೆಗೆ, ಬಳಸಿ ಮಾನಸಿಕ ಬೆಳವಣಿಗೆಗೆ ಮೊದಲು ಕಾರಣವಾಗಬೇಕು. ಆ ನಂತರ ಇಂಗ್ಲೀಷ್ ಭಾಷಾ ಕಲಿಕೆಯಿಂದ ಬೌದ್ದಿಕ ಬೆಳವಣಿಗೆಗೆ ಮುಂದಾಗಬೇಕು ಎಂದರು.
ಶಿಕ್ಷಕಿ ಅನಿತಾ ಮಾತನಾಡಿ, ತಮ್ಮ ಬಾಲ್ಯದಿಂದಲೇ ಸಾಹಿತ್ಯ ಕ್ಷೇತ್ರದಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿ ಸುಮಾರು ೧೫ ಪ್ರಕಾರಗಳಲ್ಲಿ ೭೦ಕ್ಕಿಂತ ಹೆಚ್ಚು ಕೃತಿಗಳನ್ನು ರಚಿಸಿದ ಕನ್ನಡದ ಅಗ್ರಮಾನ್ಯ ಕವಿ ಕುವೆಂಪು ಎಂದರು.
ಮಕ್ಕಳಿಂದ ಬುದ್ದಿಜೀವಿಗಳವರೆಗೆ ಎಲ್ಲರ ಮನಸ್ಸನ್ನು ಮುಟ್ಟಬಲ್ಲ ಸಾಹಿತ್ಯವನ್ನು ಅವರು ರಚಿಸಿದ್ದಾರೆ. ಸಾಹಿತ್ಯದಲ್ಲಿ ಸಮಾನತೆಯನ್ನು ಸಾರಿದವರಲ್ಲಿ ಕುವೆಂಪು ಅಗ್ರಗಣ್ಯರು ಎಂದು ಶಿಕ್ಷಕ ಎ.ಬಿ.ನಾಗರಾಜ ವಿವರಿಸಿದರು.
ಮಕ್ಕಳಿಗಾಗಿ ಕುವೆಂಪು ವಿರಚಿತ ಕವನಗಳ ಗಾಯನ, ಸಿ.ಅಶ್ವತ್ ಅವರ ಗೀತಗಾಯನ ಸ್ಪರ್ಧೆ, ಕುವೆಂಪು ಅವರ ಜೀವನಚರಿತ್ರೆ ಕುರಿತ ಭಾಷಣ ಸ್ಪರ್ಧೆಗಳನ್ನು ನಡೆಸಿ ಹಿರಿಯರ ಮತ್ತು ಕಿರಿಯರ ವಿಭಾಗದಲ್ಲಿ ಪ್ರತ್ಯೇಕ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮಕ್ಕಳಿಂದ ಗೀತಗಾಯನ ನಡೆಯಿತು.
ಶಿಕ್ಷಕ ಬಿ.ನಾಗರಾಜು, ಎಂ.ವೈ.ಲಕ್ಷ್ಮಯ್ಯ, ಶಿಕ್ಷಕಿ ಎಚ್.ತಾಜೂನ್, ಗ್ರಾಮಸ್ಥ ಮುನಿಕೃಷ್ಣಪ್ಪ, ಎಸ್ಡಿಎಂಸಿ ಪದಾಧಿಕಾರಿಗಳು ಹಾಜರಿದ್ದರು.

ಬೇಜವಾಬ್ದಾರಿ ಹೇಳಿಕೆಗಳು ಜನನಾಯಕರಿಗೆ ತರವಲ್ಲ

0

ಜವಾಬ್ದಾರಿತ ಜನಪ್ರತಿನಿಧಿಗಳು ಬೇಜವಾಬ್ದಾರಿಯಿಂದ ವೇದಿಕೆಗಳಲ್ಲಿ ಇಲ್ಲಸಲ್ಲದ ಆರೋಪಗಳನ್ನು ಮಾಡುವುದು, ಜನರಿಗೆ ತಪ್ಪು ಸಂದೇಶ ಕೊಡುವ ಹೇಳಿಕೆ ನೀಡುವುದು ತರವಲ್ಲ. ಬಾಯಿಗೆ ಬಂದಂತೆ ಮಾತಾಡುವುದು ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರಿಗೆ ಶೋಭೆ ತರುವುದಿಲ್ಲ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಬೃಹತ್ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮತ್ತು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕ್ಷೇತ್ರದ ಶಾಸಕರ ಬಗ್ಗೆ ಹಗುರವಾಗಿ ಮಾತನಾಡಿದ್ದನ್ನು ಖಂಡಿಸಿ ಶನಿವಾರ ಸುದ್ದಿಘೋಷ್ಠಿ ನಡೆಸಿ ಅವರು ಮಾತನಾಡಿದರು.
‘ಕ್ಷೇತ್ರದಲ್ಲಿ ಕಳೆದ ಭಾರಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದರೆ ವಿಧಾನಸೌಧದ ಮೂರನೇ ಅಂತಸ್ತಿನಲ್ಲಿ ಸಚಿವರಾಗಿ ಅಧಿಕಾರ ನಡೆಸುತ್ತಿದ್ದರು. ಕ್ಷೇತ್ರದ ಅಭಿವೃದ್ಧಿಯಾಗುತ್ತಿತ್ತು. ಕ್ಷೇತ್ರದ ಅಭಿವೃದ್ಧಿಯನ್ನು ನೀವೇ ನಿಮ್ಮ ಕೈಯ್ಯಾರೆ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕಳೆದುಕೊಂಡಿದ್ದೀರಿ’ ಎಂಬ ಜಿ.ಪರಮೇಶ್ವರ್ ಮಾತಿಗೆ ಉತ್ತರಿಸಿ, ಕಳೆದ ಮೂವತ್ತು ವರ್ಷಗಳಿಂದ ಕ್ಷೇತ್ರವನ್ನು ಪ್ರತಿನಿಧಿಸಿ ೫ ಭಾರಿ ಶಾಸಕರಾಗಿ ೩ ಭಾರಿ ಸಚಿವರಾಗಿ ಅಧಿಕಾರ ಅನುಭವಿಸಿದ ತಮ್ಮ ಪಕ್ಷದ ಅಭ್ಯರ್ಥಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಯಾಕೆ ಆಲೋಚನೆ ಮಾಡಲಿಲ್ಲ. ತಮ್ಮ ಪಕ್ಷದ ಅಭ್ಯರ್ಥಿ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯಲಿಲ್ಲ ಎಂಬ ಕಾರಣಕ್ಕೆ ಕ್ಷೇತ್ರದ ಜನರು ನನ್ನನ್ನು ಸುಮಾರು ೧೬ ಸಾವಿರ ಮತಗಳ ಅಂತರದಿಂದ ಆಯ್ಕೆ ಮಾಡಿದ್ದಾರೆ.
ನಾನು ಪ್ರತಿನಿತ್ಯ ನನ್ನ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಚಿಂತಿಸುವ ಜೊತೆಗೆ ಶಾಸಕನಾಗಿ ಆಯ್ಕೆ ಆದ ನಂತರ ಕ್ಷೇತ್ರದಲ್ಲಿ ನಾನು ಸುಸಜ್ಜಿತ ನ್ಯಾಯಾಲಯ ಸಂಕೀರ್ಣ, ಕೆಎಸ್ಆರ್ಟಿಸಿ ಡಿಪೋ, ಅಗ್ನಿಶಾಮಕ ದಳ, ತಾಲ್ಲೂಕಿನಾಧ್ಯಂತ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಐಟಿಐ ಕಾಲೇಜು, ಕ್ಷೇತ್ರದಾದ್ಯಂತ ಉತ್ತಮ ರಸ್ತೆ, ಕುಡಿಯುವ ನೀರಿನ ಘಟಕಗಳ ನಿರ್ಮಾಣ ಮಾಡಲು ಶ್ರಮಿಸಿದ್ದೇನೆ.
‘ಇನ್ನು ಕ್ಷೇತ್ರದ ಜೆಡಿಎಸ್ ಶಾಸಕ ಕಳೆದ ನಾಲ್ಕೂವರೆ ವರ್ಷದ ಅವಧಿಯಲ್ಲಿ ಸದನದಲ್ಲಿ ಯಾವುದೇ ಪ್ರಶ್ನೆ ಕೇಳಿಲ್ಲ ಬದಲಿಗೆ ಟಿಎ, ಡಿಎ ಗಾಗಿ ಹೋಗುತ್ತಾರೆ’ ಎಂದು ಆರೋಪಿಸಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತಿಗೆ ಉತ್ತರಿಸಿ, ವಿಧಾನಸೌಧ ಕಲಿಕಾ ಕೇಂದ್ರವಾಗಿದೆ. ನಾನು ವಿಧಾನಸೌಧಕ್ಕೆ ಕೇವಲ ಟಿಎ ಡಿಎ ಗಾಗಿ ಹೋಗುವುದಿಲ್ಲ ಸ್ವಾಮಿ, ಬದಲಿಗೆ ನಾನು ನನ್ನ ಕ್ಷೇತ್ರಕ್ಕೆ ಏನಾದರೂ ಮಾಡಬೇಕು ಎಂಬ ಉದ್ದೇಶದಿಂದ ಹೋಗುತ್ತೇನೆ. ಸ್ವಾಮಿ ತಾವು ಹಿರಿಯರು, ಬಲಾಢ್ಯರೂ ಇರಬಹುದು ಆದರೆ ತಾವು ಸಹ ನನ್ನಂತೆಯೇ ಓರ್ವ ಶಾಸಕನಾಗಿ ಆಯ್ಕೆಯಾಗಿರುವವರು. ಹಾಗಾಗಿ ಮತ್ತೊಬ್ಬ ಶಾಸಕರ ಬಗ್ಗೆ ಹಗುರವಾಗಿ ಮಾತಾಡುವುದು ನಿಮಗೂ ನಿಮ್ಮ ಪಕ್ಷಕ್ಕೂ ಶೋಭೆ ತರುವುದಿಲ್ಲ ಎಂದರು.
ಕ್ಷೇತ್ರದ ಶಾಸಕನಾಗಿ ನಾನು ಆಯ್ಕೆಯಾದ ಕಳೆದ ನಾಲ್ಕೂವರೆ ವರ್ಷದ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ದಾಖಲೆ ಸಮೇತ ನೀಡುತ್ತೇನೆ. ನಿಮ್ಮ ಪಕ್ಷದ ಅಭ್ಯರ್ಥಿ ಕಳೆದ ಮೂವತ್ತು ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದರು.
ಕಳೆದ ಮೂವತ್ತು ವರ್ಷಗಳಿಂದ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿ ೫ ಭಾರಿ ಶಾಸಕರಾಗಿ ೩ ಭಾರಿ ಸಚಿವರಾಗಿ ಅಧಿಕಾರ ಅನುಭವಿಸಿದಾಗ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಏಕೆ ಆಲೋಚನೆ ಮಾಡಲಿಲ್ಲ. ಕ್ಷೇತ್ರದಲ್ಲಿ ಅಗ್ನಿಶಾಮಕ ದಳ, ಕೆಎಸ್ಆರ್ಟಿಸಿ ಡಿಪೋ ನಿರ್ಮಾಣ ಮಾಡಲು ಇದೇ ಎಂ.ರಾಜಣ್ಣ ಶಾಸಕನಾಗಿ ಬರಬೇಕಾಗಿತ್ತಾ, ನಿಮ್ಮ ಪಕ್ಷದ ಅಭ್ಯರ್ಥಿಯ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಕೆಲಸ ಮಾಡಲಿಲ್ಲ ಎಂಬ ಕಾರಣಕ್ಕೆ ಕಳೆದ ಚುನಾವಣೆಯಲ್ಲಿ ತಮ್ಮನ್ನು ಸೋಲಿಸುವ ಮೂಲಕ ಕ್ಷೇತ್ರದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಿದ್ದಾರೆ.
ಐದು ವರ್ಷಕ್ಕೊಮ್ಮೆ ರಾಜ್ಯ ನಾಯಕರು ಸೇರಿದಂತೆ ವಿವಿಧ ಮುಖಂಡರನ್ನು ಕರೆಯಿಸಿ ಇಲ್ಲ ಸಲ್ಲದ್ದನ್ನು ವೇದಿಕೆಗಳಲ್ಲಿ ಮಾತಾಡಿಸಿದ ಮಾತ್ರಕ್ಕೆ ಕ್ಷೇತ್ರದ ಜನತೆ ತಮ್ಮನ್ನು ಆಶೀರ್ವದಿಸುವುದಿಲ್ಲ. ಕ್ಷೇತ್ರದ ಜನತೆಗೆ ಪ್ರತಿಯೊಬ್ಬರ ಬಗ್ಗೆಯೂ ಗೊತ್ತಿದೆ ಯಾರನ್ನು ಆಯ್ಕೆ ಮಾಡಬೇಕು ಅಥವ ಬೇಡ ಎನ್ನುವುದನ್ನು ಅವರೇ ನಿರ್ಧರಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಅಫ್ಸರ್ಪಾಷ, ಮುಖಂಡರಾದ ಕೆ.ಎಸ್.ಕನಕಪ್ರಸಾದ್, ಲಕ್ಮಿನಾರಾಯಣ(ಲಚ್ಚಿ) ಹಾಜರಿದ್ದರು.

ಕೃಷಿ ಪದವೀದರರು ರೈತರ ಬದುಕನ್ನು ಬಲ್ಲವರಾಗಬೇಕು

0

ಕೃಷಿ ವಿಶ್ವವಿದ್ಯಾಲಯಗಳಿಂದ ಹೊರಬರುವವರು ಕೇವಲ ಪದವಿ ಪಡೆದು ಹೊರಬಂದರೆ ಸಾಲದು ಮಣ್ಣಿನ ಸೊಗಡನ್ನು ಅರಿತವರಾಗಬೇಕು, ರೈತರ ಬದುಕನ್ನು ಬಲ್ಲವರಾಗಬೇಕು ಎಂದು ಸ್ಥಳೀಯ ಸಂಘ ಸಂಸ್ಥೆಯ ನಿವೃತ್ತ ಯೋಜನಾ ಆಯುಕ್ತ ಎನ್.ಸಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಆನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ರೈ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗ್ರಾಮೀಣ ಅಭಿವೃದ್ಧಿ ಶೀಲ ಜಾಗೃತಿ ಯೋಜನೆ ಕಾರ್ಯಾಗಾರ ಮತ್ತು ಕೃಷಿ ವಸ್ತು ಪ್ರದರ್ಶನ ಮತ್ತು ವಿಚಾರ ಸಂಕೀರಣ ‘ಕೃಷಿ ವೈಭವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಂತ್ರಿಕತೆ, ಸಂಶೋಧನೆ, ಅನ್ವೇಷಣೆ ಮುಂತಾದವುಗಳು ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿರುತ್ತವೆ. ರೈತರಿಗೆ ಇವು ತಲುಪಲು ಕೃಷಿ ವಿಶ್ವವಿದ್ಯಾಲಯ ಕೊಂಡಿಯಾಗಬೇಕು. ಅಲ್ಲಿನ ಕಲಿಕೆ ರೈತರ ಬದುಕನ್ನು ಹಸನು ಮಾಡಲು ಉಪಯೋಗವಾಗಬೇಕು. ರೈತರ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಗಳಾಗಬೇಕು. ವಲಸೆ ತಪ್ಪಿಸಿ ಗ್ರಾಮೀಣಾಭಿವೃದ್ಧಿಗೆ ಪೂರಕ ಚಟುವಟಿಕೆಗಳು ನಡೆಯಬೇಕು ಎಂದು ಹೇಳಿದರು.

ರೈ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕೃಷಿ, ಮಣ್ಣುಪರೀಕ್ಷೆ, ಹೈನುಗಾರಿಕೆ, ರೇಷ್ಮೆ ಮುಂತಾದವುಗಳಿಗೆ ಸಂಬಂಧಿಸಿದಂತೆ ಪ್ರದರ್ಶನವನ್ನು ಏರ್ಪಡಿಸಿದ್ದರು

ಪ್ರೊ.ಚಿತ್ತಿರಾಯ್ ಚಲವನ್ ಮಾತನಾಡಿ, ವಿದ್ಯಾರ್ಥಿಗಳು ಮೂರು ತಿಂಗಳ ಕಾಲ ಹಳ್ಳಿಗಳಲ್ಲಿಯೇ ವಾಸ್ತವ್ಯ ಹೂಡಿ ಕಲಿಸುವುದು ಮತ್ತು ಕಲಿಯುವುದೂ ಎರಡನ್ನೂ ಮಾಡುವ ಮೂಲಕ ಮಣ್ಣಿನ ಮಕ್ಕಳಾಗುವಂತೆ ಪಠ್ಯವನ್ನು ರೂಪಿಸಲಾಗಿದೆ. ನಮ್ಮ ದೇಶದಲ್ಲಿ ಜನಸಂಖ್ಯೆಗೆ ಅಗತ್ಯ ಆಹಾರೋತ್ಪನ್ನಗಳನ್ನು ಹೇಗೆ ಉತ್ಪಾದಿಸಬಹುದು, ರೈತರ ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿರುವುದಾಗಿ ನುಡಿದರು.
ಈ ಸಂದರ್ಭದಲ್ಲಿ ಮೂರು ತಿಂಗಳಿನಿಂದ ಆನೂರು ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ವಿದ್ಯಾರ್ಥಿಗಳು ಕೃಷಿ, ಮಣ್ಣುಪರೀಕ್ಷೆ, ಹೈನುಗಾರಿಕೆ, ರೇಷ್ಮೆ ಮುಂತಾದವುಗಳಿಗೆ ಸಂಬಂಧಿಸಿದಂತೆ ಪ್ರದರ್ಶನವನ್ನು ಏರ್ಪಡಿಸಿದ್ದರು. ಬೀಜಗಳ ರಂಗೋಲಿ, ಕೃಷಿ ಉಪಕರಣಗಳ ಪ್ರದರ್ಶನ, ನೀರಿನ ಸದ್ಭಳಕೆಯ ಪ್ರಾತ್ಯಕ್ಷಿಕೆ ಗಮನ ಸೆಳೆದವು.
ರೇಷ್ಮೆ ಇಲಾಖೆಯ ಬೋಜಣ್ಣ, ನಾರಾಯಣಸ್ವಾಮಿ, ರಾಮಕೃಷ್ಣ, ಡಾ.ಜಿ.ಎಸ್.ಕೃಷ್ಣಾರೆಡ್ಡಿ, ಪಿಡಿಓ ಅರುಣಾಕುಮಾರಿ, ಮುಖ್ಯ ಶಿಕ್ಷಕಿ ಪ್ರಭಾವತಿ, ರೈತ ಮುಖಂಡರಾದ ಪಿ.ವಿ.ನಾಗರಾಜ್, ಎಚ್.ಜಿ.ಗೋಪಾಲಗೌಡ, ವಿದ್ಯಾರ್ಥಿಗಳಾದ ಕಾರ್ತಿಕ್, ಸೂರ್ಯ, ವಿಷ್ಣು, ಶ್ರಾವಣ್, ಗೋಪಾಲ್, ಹರ್ಷಿತಾ, ಮಾಧವಿ, ಲತಾ, ವೆನ್ನೆಲ ಹಾಜರಿದ್ದರು.

ಬಲಿಜ ಸಮಾವೇಶ

0

ಶಿಡ್ಲಘಟ್ಟದಿಂದ ಭಾನುವಾರ ಬಾಗೇಪಲ್ಲಿಯ ಬಲಿಜ ಸಮಾವೇಶಕ್ಕೆ ಬಲಿಜ ಸಂಘದ ಸದಸ್ಯರು ತೆರಳಿದರು. ನಗರಸಭೆ ಸದಸ್ಯ ರಾಘವೇಂದ್ರ, ನಂದಕಿಶನ್, ವೇಣುಗೋಪಾಲ್, ಬಳೆ ರಘು, ಬಾಬು, ಮೂರ್ತಿ, ಮಧು, ಮಹೇಶ್, ಶ್ರೀನಾಥ್ ಹಾಜರಿದ್ದರು.

ತಾಲ್ಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ

0

ನಗರದ ಕೋಟೆ ವೃತ್ತದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಭಾನುವಾರ ಕರ್ನಾಟಕ ಚಿತ್ರಕಲಾ ಅಕಾಡೆಮಿ ಜಿಲ್ಲಾ ಘಟಕದಿಂದ ತಾಲ್ಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ನಡೆಸಲಾಯಿತು.
8, 9 ಮತ್ತು 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಿದ್ದು, 8ನೇ ತರಗತಿಯವರಿಗೆ ‘ಪರಿಸರ’, 9ನೇ ತರಗತಿಯವರಿಗೆ ‘ಪರಿಸರ ಮಾಲಿನ್ಯ’ ಮತ್ತು 10ನೇ ತರಗತಿಯವರಿಗೆ ‘ಸ್ವಚ್ಛ ಭಾರತ ಅಭಿಯಾನ’ ವಿಷಯವನ್ನು ನೀಡಲಾಗಿತ್ತು.
ವಿಜೇತರು:
8ನೇ ತರಗತಿ: ಎಂ.ನೇಹಲಾ, ಬಿಜಿಎಸ್ ವಿದ್ಯಾಸಂಸ್ಥೆ(ಪ್ರಥಮ), ಆರ್.ಬಿ.ಅಭಿಲಾಷ್, ಸರ್ಕಾರಿ ಪ್ರೌಢಶಾಲೆ ಪಲಿಚೇರ್ಲು(ದ್ವಿತೀಯ), ಎಂ.ಬಿಂದು, ಶ್ರೀ ಶಾರದಾ ಬಾಲಕಿಯರ ಪ್ರೌಢಶಾಲೆ(ತೃತೀಯ).
9ನೇ ತರಗತಿ: ಟಿ.ಕೆ.ದರ್ಶನ್, ಗರುಡಾದ್ರಿ ವಿದ್ಯಾಸಂಸ್ಥೆ(ಪ್ರಥಮ), ಆರ್.ವಿವೇಕ್, ಬಿಜಿಎಸ್ ವಿದ್ಯಾಸಂಸ್ಥೆ(ದ್ವಿತೀಯ), ಎಂ.ಶಮಿತಾ, ಡಾಲ್ಫಿನ್ ವಿದ್ಯಾಸಂಸ್ಥೆ(ತೃತೀಯ).
10ನೇ ತರಗತಿ: ಎಂ.ಜೀವನ್, ಬಿಜಿಎಸ್ ವಿದ್ಯಾಸಂಸ್ಥೆ(ಪ್ರಥಮ), ಎಚ್.ಪಿ.ತನುಶ್ರೀ, ಡಾಲ್ಫಿನ್ ವಿದ್ಯಾಸಂಸ್ಥೆ(ದ್ವಿತೀಯ), ಸಯ್ಯದ್ ಸುಖೀಬ್, ಡಾಲ್ಫಿನ್ ವಿದ್ಯಾಸಂಸ್ಥೆ(ತೃತೀಯ).

ಪಕ್ಷದ ಸಾಧನೆಯನ್ನು ಜನರಿಗೆ ಮುಟ್ಟಿಸಿ

0

ಕಾಂಗ್ರೆಸ್ ಪಕ್ಷದ ಸಾಧನೆಯನ್ನು ಜನರಿಗೆ ಮುಟ್ಟಿಸಿ, ಪಕ್ಷವನ್ನು ಸದೃಢವಾಗಿ ಕಟ್ಟುವಂತಹ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದು ಕೆ.ಪಿ.ಸಿ.ಸಿ.ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.
ನಗರದ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ಶಿಡ್ಲಘಟ್ಟ ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ನಾಲ್ಕೂವರೆ ವರ್ಷದ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಈ ಸಮಾವೇಶದ ಉದ್ದೇಶವಾಗಿದೆ. ಈ ಬಾರಿ ಕಾಂಗ್ರೆಸ್ ಗೆಲ್ಲಿಸುವ ಕೆಲಸ ಮಾಡಬೇಕು. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಮರ್ಥ ನಾಯಕತ್ವ, ಸ್ವಚ್ಚವಾದ ಆಡಳಿತ, ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಬಡವರ ಹಸಿವು ನೀಗಿಸುವ ಕಾರ್ಯಕ್ರಮವಾಗಿದೆ. 1 ಕೋಟಿ 10 ಲಕ್ಷ ಕುಟುಂಬಗಳು ಯೋಜನೆಯ ಪ್ರಯೋಜನವಾಗಿದೆ. ಬಿಸಿಯೂಟ, ಕ್ಷೀರಭಾಗ್ಯ, ಶುದ್ಧಕುಡಿಯುವ ನೀರಾವರಿಗಾಗಿ 8 ಸಾವಿರ ಕಿರು ನೀರು ಯೋಜನೆಗಳನ್ನು, 3 ಲಕ್ಷ ಕೃಷಿ ಹೊಂಡಗಳನ್ನು ಮಾಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬಿಜೆಪಿ ಸಂಸದರೊಟ್ಟಿಗೆ ಪ್ರಧಾನಿ ನರೇಂದ್ರಮೋದಿ ಅವರ ಬಳಿಗೆ ನಿಯೋಗ ಹೋಗಿ ಸಾಲ ಮನ್ನಾ ಮಾಡುವಂತೆ ಮನವಿ ಮಾಡಿದರು ಬರಿಗೈಲಿ ಹಿಂದಿರುಗಬೇಕಾಯಿತು ಎಂದರು.
ಬಿಜೆಪಿ ಸರ್ಕಾರ ಒಂದು ರೂಪಾಯಿಯು ಕೊಡಲಿಲ್ಲ. ಬಿಜೆಪಿ ಆಡಳಿತದಲ್ಲಿ ಜೈಲಿಗೆ ಪರೇಡ್ ಮಾಡಿದರು. ಅಭಿವೃದ್ಧಿ ಮಾಡಲಿಲ್ಲ, ಹೊರದೇಶಗಳಿಂದ ಬಂಡವಾಳ ತರಲಿಲ್ಲ. ನಮ್ಮ ಸರ್ಕಾರ ಭ್ರಷ್ಟವಾಗಿದ್ದರೆ ಸಾಬೀತು ಮಾಡಲಿ. ಅಲ್ಪಸಂಖ್ಯಾತರ ರಕ್ಷಣೆಯಾಗಬೇಕು. ಬಿಜೆಪಿ ಆಡಳಿತದಲ್ಲಿ ಮಸೀದಿ, ಚರ್ಚ್ ಗಳು ಹೊಡೆದರು. ಜೆಡಿಎಸ್ ನವರು ಅವಕಾಶವಾದಿಗಳು, ಅಧಿಕಾರ ನಡೆಸಲಿಕ್ಕೆ ಸಾಧ್ಯವಿಲ್ಲ, ಅಂತಹವರಿಗೆ ಮತ ನೀಡಬೇಡಿ, 2018 ಕ್ಕೆ ಅಧಿಕಾರಕ್ಕೆ ಬಂದೇ ಬರ್ತಿವಿ ಎಂದರು.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ನಿಮ್ಮ ಅಭ್ಯರ್ಥಿಯನ್ನು ಕಳೆದುಕೊಂಡಿದ್ದೀರಿ, ಶಾಸಕ ಎಂ.ರಾಜಣ್ಣ ಒಂದು ದಿನವೂ ಸರ್ಕಾರದ ವಿರುದ್ಧ ವಿಧಾನಸೌಧದಲ್ಲಿ ಮಾತನಾಡಲಿಲ್ಲ. ಎತ್ತಿನಹೊಳೆ ಯೋಜನೆಗೆ 12 ಸಾವಿರ ಕೋಟಿ, ಕೆ.ಸಿ.ವ್ಯಾಲಿ ಯೋಜನೆ, ಹೆಬ್ಬಾಳ ನಾಗವಾರ ಕೆರೆಗಳ ನೀರಿನಿಂದ ಕೆರೆಗಳನ್ನು ತುಂಬಿಸುವುದು, 8165 ಕೋಟಿ ಸಾಲ ಮನ್ನಾ ಮಾಡಿದ್ದೇವೆ. ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿ ಒತ್ತು ನೀಡಿದ್ದೇವೆ ಎಂದರು.
ಎ.ಐ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾತನಾಡಿ, ಪ್ರಧಾನಿ ನರೇಂದ್ರಮೋದಿ ಅವರ ಸ್ವಂತ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸಿರುವುದನ್ನು ನೋಡಿದರೆ ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತ ಅವರ ಕನಸಾಗಿದೆ. ರಾಜ್ಯ ಸರ್ಕಾರ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಶೇ. 80 ರಷ್ಟು ಈಡೇರಿಸಿದೆ. ಮೋದಿಯವರ ಭಾಷಣ ತುಂಬಾ ಚೆನ್ನಾಗಿದೆ. ಕೆಲಸ ಇಲ್ಲ, ಜೆಡಿಎಸ್ ನಮಗೆ ಲೆಕ್ಕಕ್ಕಿಲ್ಲ. ಏಪ್ರಿಲ್ ನಂತರ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಮನೆ ಮನೆಗೆ ಹೋಗಿ, ಜನರಿಗೆ ಸರ್ಕಾರದ ಯೋಜನೆಗಳನ್ನು ತಿಳಿಸಿ ಎಂದರು.
ಕಾಂಗ್ರೆಸ್ ಮುಖಂಡರಾದ ದಿನೇಶ್ ಗುಂಡೂರಾವ್, ಕೆ.ಎಚ್.ಮುನಿಯಪ್ಪ, ವಿ.ಮುನಿಯಪ್ಪ, ಕೆ.ಎನ್.ಕೇಶವರೆಡ್ಡಿ ಹಾಜರಿದ್ದರು.

ಸಾಹಿತ್ಯ ಕ್ಷೇತ್ರದ ಮೇರು ಪರ್ವತ ಕುವೆಂಪು

0

ಕುವೆಂಪು ಅವರು ಕನ್ನಡ ಸಾಹಿತ್ಯ ಮಾತ್ರವಲ್ಲದೆ ಭಾರತೀಯ ಸಾಹಿತ್ಯ ಕ್ಷೇತ್ರದ ಮೇರು ಪರ್ವತವಾಗಿದ್ದರು. ‘ಮನುಜ ಮತ ವಿಶ್ವಪಥ’ ಸಂದೇಶ ಸಾರಿದ ಶ್ರೇಷ್ಠ ವಿಶ್ವಮಾನವ ಕುವೆಂಪು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಾಡಹಬ್ಬಗಳ ಆಚರಣಾ ಸಮಿತಿಯಿಂದ ಆಚರಿಸಿದ ರಾಷ್ಟ್ರಕವಿ ಕುವೆಂಪುರವರ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.
ಕುವೆಂಪು ಅವರು ಮಾನವ ಕುಲಕ್ಕೆ ನೀಡಿದ ಆದರ್ಶಗಳು ಸಾರ್ವಕಾಲಿಕ. ಕನ್ನಡಕ್ಕೆ ಹೊಸ ನುಡಿಗಟ್ಟು ಹಾಗೂ ಹೊಸ ಕಲ್ಪನೆಗಳನ್ನು ನೀಡಿ ಹೊಸಗನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಧೀಮಂತ ಸಾಹಿತಿ. ಕುವೆಂಪು ಅವರ ಬಹುತೇಕ ಕೃತಿಗಳಲ್ಲಿ ಮಾನವೀಯತೆಯ ಸಂದೇಶ ಅಡಗಿದೆ. ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವಾದ ಡಿಸೆಂಬರ್ 29 ಅನ್ನು ಪ್ರತಿ ವರ್ಷ ‘ವಿಶ್ವ ಮಾನವ ದಿನಾಚರಣೆ’ಯನ್ನಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಸೂಕ್ತವಾಗಿದೆ ಎಂದರು.

ಕುವೆಂಪು ಭಾವಚಿತ್ರವಿರುವ ಪಲ್ಲಕ್ಕಿಯನ್ನು ನಗರದ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿಯವರೆಗೂ ಮೆರವಣಿಗೆ ಮಾಡಲಾಯಿತು

ಇಂದಿನ ವಿದ್ಯಾರ್ಥಿಗಳಲ್ಲಿ ಪುಸ್ತಕಗಳನ್ನು ಓದುವ ಅಭಿರುಚಿ ಕಡಿಮೆಯಾಗುತ್ತಿದೆ. ಕುವೆಂಪು ಅವರ ಕೃತಿಗಳನ್ನು ಓದಿದಾಗ, ಕನ್ನಡ ಭಾಷೆಯ ಶ್ರೀಮಂತಿಕೆಯ ಅರಿವು ನಮಗಾಗುತ್ತದೆ. ಆಧುನಿಕ ಯುಗದಲ್ಲಿ ಮೊಬೈಲ್, ಸಾಮಾಜಿಕ ತಾಣಗಳ ವೀಕ್ಷಣೆಯಲ್ಲೇ ಮಗ್ನರಾಗಿರುವ ಮಕ್ಕಳು ಪುಸ್ತಕಗಳತ್ತ ಆಸಕ್ತಿ ವಹಿಸಬೇಕು ಎಂದು ಹೇಳಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವೆಂಕಟೇಶ್ ಕುವೆಂಪು ಅವರ ಬಾಲ್ಯ, ಶಿಕ್ಷಣ, ವೃತ್ತಿ ಜೀವನ, ಸಾಹಿತ್ಯ ಕೃಷಿ, ಕೃತಿಗಳು, ಗೌರವ ಪುರಸ್ಕಾರಗಳ ಬಗ್ಗೆ ವಿವರಿಸಿದರು.
ತಾಲ್ಲೂಕು ಮಟ್ಟದ ಕುವೆಂಪು ಕುರಿತಾದ ಪ್ರಬಂಧ ಸ್ಪರ್ಧೆ ಹಾಗೂ ಚಿತ್ರ ರಚನಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕುವೆಂಪು ಭಾವಚಿತ್ರವಿರುವ ಪಲ್ಲಕ್ಕಿಯನ್ನು ನಗರದ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿಯವರೆಗೂ ಮೆರವಣಿಗೆ ಮಾಡಲಾಯಿತು.
ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎಂ.ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಚಂದ್ರಶೇಖರಬಾಬು, ಸಿಡಿಪಿಒ ಲಕ್ಷ್ಮೀದೇವಮ್ಮ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಕೇಶವರೆಡ್ಡಿ, ಗ್ರೇಡ್ 2 ತಹಶೀಲ್ದಾರ್ ಮುನಿಕೃಷ್ಣಪ್ಪ, ಜೆ.ಎಸ್.ವೆಂಕಟಸ್ವಾಮಿ, ಗುರುರಾಜರಾವ್, ನಾರಾಯಣಸ್ವಾಮಿ ಹಾಜರಿದ್ದರು.

ರಾಷ್ಟ್ರಗೀತೆ ರಚನಾ ಸಂಭ್ರಮಾಚರಣೆ

0

ರಾಷ್ಟ್ರಗೀತೆಯನ್ನು ಹಾಡಲು ಆರಂಭಿಸಿ ನೂರು ವರ್ಷಗಳಾದವು ಎಂದು ಮುಖ್ಯ ಶಿಕ್ಷಕಿ ವೆಂಕಟರತ್ನಮ್ಮ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ರಾಷ್ಟ್ರಗೀತೆ ರಚನಾ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1911ರ ಡಿಸೆಂಬರ್ 27 ರಂದು ಭಾರತದ ರಾಷ್ಟ್ರಗೀತೆಯನ್ನು ಮೊಟ್ಟ ಮೊದಲ ಬಾರಿಗೆ ಕೊಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಅಧಿವೇಶನದಲ್ಲಿ ಹಾಡಲಾಯಿತು. ಈ ಗೀತೆಯನ್ನು 1950ರ ಜನವರಿ 24ರಂದು ಸಂವಿಧಾನಾತ್ಮಕವಾಗಿ ರಾಷ್ಟ್ರಗೀತೆಯನ್ನಾಗಿ ಅಂಗೀಕರಿಸಲಾಯಿತು. ಕವಿ ರವೀಂದ್ರನಾಥ್ ಟಾಗೂರ್ ಅವರ ಸಂಸ್ಕೃತ ಬಂಗಾಲಿಗಳ ಮೂಲ ರಚನೆಯನ್ನು ಅಬಿದ್ ಅಲಿ ಹಿಂದಿಗೆ ಅನುವಾದಿಸಿದ್ದಾರೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ಮಾತನಾಡಿ, ನಾವೆಲ್ಲ ಒಂದೇ, ಭಾರತೀಯರು ಎಂಬ ಭಾವನೆ ಮೂಡಬೇಕು. ಅ ಕಾರಣಕ್ಕೆ ರಾಷ್ಟ್ರಗೀತೆಯನ್ನು ಹಾಡುತ್ತೇವೆ. ಈ ಗೀತೆಯನ್ನು ಜನವರಿ 14, 1950ರಲ್ಲಿ ಭಾರತ ಸರಕಾರವು ರಾಷ್ಟ್ರಗೀತೆ ಎಂದು ಘೋಷಿಸಿತು, ಇದಕ್ಕೆ ಸಂಗೀತ ಅಳವಡಿಸಿದ್ದು ರಾಮ್ ಸಿಂಗ್ ರಾಕೂರ್. ರಾಷ್ಟ್ರಗೀತೆಯನ್ನು ರಾಷ್ಟ್ರ ಧ್ವಜ ವನ್ನು ಹಾರಿಸಿದ ನಂತರ 52 ಸೆಕೆಂಡುಗಳಿಗೆ ಮೀರದಂತೆ ಹಾಡಿ ಮುಗಿಸಬೇಕು. ರಾಷ್ಟ್ರಗೀತೆ ಹಾಡುವಾಗ ಎಲ್ಲರೂ ಎದ್ದು ನಿಂತು ಭಾರತ ಮಾತೆಗೆ ವಂದಿಸಬೇಕು, ರಾಷ್ಟ್ರಗೀತೆ ಹಾಡುವುದನ್ನು ಅಡ್ಡಿಪಡಿಸಿದರೆ ನಮ್ಮ ಕಾನೂನಿನಲ್ಲಿ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲ್ಪಡುತ್ತದೆ ಎಂದು ವಿವರಿಸಿದರು.
ಶಿಕ್ಷಕ ಚಾಂದ್ ಪಾಷ ರಾಷ್ಟ್ರಗೀತೆ ಹಾಡುವುದರ ನಿಯಮ, ಗೌರವ ಸಲ್ಲಿಸುವ ವಿಧಾನ ಮುಂತಾದವುಗಳ ಬಗ್ಗೆ ಮಕ್ಕಳಿಗೆ ತಿಳಿಸಿದರು. ಸಿಬ್ಬಂದಿ ವೆಂಕಟಮ್ಮ ಹಾಜರಿದ್ದರು.

ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ನೂತನ ಕಾರ್ಯಕಾರಿ ಮಂಡಳಿ

0

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಶಿಡ್ಲಘಟ್ಟ ಔಷಧಿ ವ್ಯಾಪಾರಿಗಳ ಸಂಘದ ಆಶ್ರಯದಲ್ಲಿ ನಡೆದ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ನೂತನ ಕಾರ್ಯಕಾರಿ ಮಂಡಳಿಯ ಆಯ್ಕೆ ನಡೆಯಿತು.
ಬಾಗೇಪಲ್ಲಿಯ ಬಿ.ಎಸ್.ಸತೀಶ್ ಬಾಬು ಅಧ್ಯಕ್ಷರಾಗಿ, ಗೌರಿಬಿದನೂರು ವಿ.ಅಶ್ವತ್ಥಪ್ಪ ಗೌರವ ಕಾರ್ಯದರ್ಶಿಯಾಗಿ, ಚಿಕ್ಕಬಳ್ಳಾಪುರ ವೆಂಕಟರಾಮಯ್ಯಶೆಟ್ಟಿ ಅವರನ್ನು ಖಜಾಂಚಿಯನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಶಿಡ್ಲಘಟ್ಟ ಪಿ.ಎಸ್.ಮಂಜುನಾಥ ಮತ್ತು ಎಸ್.ಸುರೇಶ್ಬಾಬು, ಜಂಟಿ ಕಾರ್ಯದರ್ಶಿಗಳಾಗಿ ಶೇಷಾದ್ರಿ ಮತ್ತು ಕೃಷ್ಣಾ, ಸಂಘಟನಾ ಕಾರ್ಯದರ್ಶಿಯಾಗಿ ಅಶ್ವತ್ಥನಾರಾಯಣ, ಕಾರ್ಯಕಾರಿ ಮಂಡಳಿಯ ಕಾರ್ಯಾಧ್ಯಕ್ಷರಾಗಿ ಟಿ.ಕೆ.ಮಧುಸೂದನ್, ರಾಜ್ಯಸಂಘದ ಪ್ರತಿನಿಧಿಯಾಗಿ ಸುರೇಶ್ಬಾಬು ಅವರನ್ನು ಆಯ್ಕೆ ಮಾಡಲಾಯಿತು.
ಶಿಡ್ಲಘಟ್ಟ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ವಿ.ಎಸ್.ವಿ ಗುಪ್ತ, ಕಾರ್ಯದರ್ಶಿ ರಮೇಶ್ ಬಾಬು, ಖಜಾಂಚಿ ಮಂಜುನಾಥ್, ಜಂಟಿ ಕಾರ್ಯದರ್ಶಿ ಎಲ್.ಸುರೇಶ್, ಲಕ್ಷ್ಮೀನಾರಾಯಣ್ ಬಾಬು ಈ ಸಂದರ್ಭದಲ್ಲಿ ಹಾಜರಿದ್ದರು.

ರಸ್ತೆ ಕಾಮಗಾರಿ ತ್ವರಿತಗೊಳಿಸಲು ಕರವೇ ಒತ್ತಾಯ

0

ಶಿಡ್ಲಘಟ್ಟ ಮೂಲಕ ಚಿಂತಾಮಣಿ ಹಾಗೂ ಮುಳಬಾಗಲು ಸಂಪರ್ಕಿಸುವ ಹೆದ್ದಾರಿ ಕಾಮಗಾರಿ ಸ್ಥಗಿತಗೊಂಡಿದೆ. ಇದರಿಂದ ರಸ್ತೆಯಲ್ಲಿ ವಾಹನಗಳು ಓಡಾಡಲು ಆಗದೆ ಅಪಘಾತಗಳು ಸಂಭವಿಸಿದ್ದು, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಚಲಪತಿ ಬಣದ ಜಿಲ್ಲಾಧ್ಯಕ್ಷ ಸೋಮಶೇಖರ್ ತಿಳಿಸಿದರು.
ನಗರದ ಚಿಂತಾಮಣಿ ರಸ್ತೆಯಲ್ಲಿರುವ ಉಲ್ಲೂರಪೇಟೆ ಸರ್ಕಾರಿ ಶಾಲೆಯ ಮುಂದೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಸ್ಥಗಿತಗೊಂಡಿದೆ. ಕಾಮಗಾರಿಯನ್ನು ತ್ವರಿಗತಿಯಲ್ಲಿ ಪೂರ್ಣಗೊಳಿಸದಿದ್ದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸುವುದಾಗಿ ಹೇಳಿದರು.
ನಗರದ ಚಿಂತಾಮಣಿ ರಸ್ತೆಯಲ್ಲಿ ಸುಮಾರು ೨ ವರ್ಷಗಳಿಂದ ರಸ್ತೆ ರಸ್ತೆ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯಿಂದಾಗಿ ರಸ್ತೆ ಕಿರಿದಾಗಿ ದ್ವಿಚಕ್ರವಾಹನಗಳು, ಹಾಗೂ ಸಾರಿಗೆ ಬಸ್ಸಗಳು ಸೇರಿದಂತೆ ಎಲ್ಲಾ ವಾಹನಗಳಿಗೂ ತೊಂದರೆಯಾಗಿದೆ. ಅಪಘಾತಗಳು ಸಹ ನಡೆಯುತ್ತಿವೆ. ಮಳೆ ಬಂದಾಗ ನೀರು ಹರಿದು ಹೋಗಲು ಜಾಗವಿಲ್ಲದೆ ಅಕ್ಕ ಪಕ್ಕದ ಮನೆಗಳಿಗೆ ನುಗ್ಗಿ ತೊಂದರೆ ಉಂಟಾಗಿತ್ತು. ಮನೆಗಳೆಲ್ಲಾ ಧೂಳುಮಯವಾಗಿವೆ. ರಸ್ತೆ ಪಕ್ಕದಲ್ಲಿ ಸರ್ಕಾರಿ ಶಾಲೆ ಇದ್ದು, ಶಾಲಾ ಕೊಠಡಿಗಳಲ್ಲಿ ಧೂಳು ತುಂಬಿದ್ದು, ವಿದ್ಯಾರ್ಥಿಗಳು ಊಟ ಮಾಡಲು ಹಾಗೂ ಪಾಠ ಪ್ರವಚನಗಳಿಗೂ ತೊಂದರೆಯಾಗಿದೆ. ಸುಮಾರು ೧೦ ದಿನಗಳಿಂದ ರಸ್ತೆ ಕಾಮಗಾರಿ ಸ್ಥಗಿತಗೊಂಡಿದ್ದು, ಕೂಡಲೇ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದ ಅವರು ಇಲ್ಲದಿದ್ದ ಪಕ್ಷದಲ್ಲಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ಯಾಮೇಗೌಡ, ಸದಸ್ಯರಾದ ಗಂಗಾಧರ್, ಮೂರ್ತಿ, ಸುಜಿತ್, ಸುತ್ತಮುತ್ತಲಿನ ನಿವಾಸಿಗಳಾದ ಮುನಿಯಪ್ಪ, ಕೃಷ್ಣ, ಮುನಿಯಪ್ಪ, ನಾರಾಯಣಪ್ಪ, ಪಾರ್ವತಮ್ಮ, ಸರಸ್ವತಮ್ಮ, ಸುಬ್ಬು, ಅಪ್ಪಿ ಹಾಜರಿದ್ದರು.

ಎಸ್. ಗೊಲ್ಲಹಳ್ಳಿ ಜಮೀನಿನಲ್ಲಿ ಪಶು ಆಹಾರ ಮಿಶ್ರಣ ಘಟಕ ಸ್ಥಾಪಿಸಲು ಒತ್ತಾಯ

0

ತಾಲ್ಲೂಕಿನ ಎಸ್.ಗೊಲ್ಲಹಳ್ಳಿ ಜಮೀನಿನಲ್ಲಿ ಪಶು ಆಹಾರ ಮಿಶ್ರಣ ಘಟಕ ಸ್ಥಾಪನೆ ಮಾಡಿದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳ ಹಾಲು ಉತ್ಪಾದಕರಿಗೆ ಸಾಕಷ್ಟು ಅನುಕೂಲವಿದೆ ಎಂದು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರೇಗೌಡ ತಿಳಿಸಿದರು.
ನಗರದಲ್ಲಿ ಗುರುವಾರ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಈ ನಡುವೆ ರಾಜಕೀಯ ಒತ್ತಡಗಳಿಂದಾಗಿ ಗೌರಿಬಿದನೂರಿನ ವೇದಲವೇಣಿ ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ಕರ್ನಾಟಕ ಹಾಲು ಮಹಾ ಮಂಡಳಿಗೆ ಹಸ್ತಾಂತರಿಸಲು ತೀರ್ಮಾನಿಸಲಾಗುತ್ತಿದೆ. ಬೆಲೆಬಾಳುವ ಮರಗಳಿರುವ, ಹೈಟೆನ್ಷನ್ ವೈರ್ ಹಾದು ಹೋದ, ಸಾಗಾಣಿಕೆಗೆ ಅನಾನುಕೂಲವಾದ ಆ ಸ್ಥಳ ಪಶು ಆಹಾರ ಮಿಶ್ರಣ ಘಟಕ ಸ್ಥಾಪನೆಗೆ ಸೂಕ್ತವಲ್ಲ.
ತಾಲ್ಲೂಕಿನ ಎಸ್.ಗೊಲ್ಲಹಳ್ಳಿಯ 26 ಎಕರೆ ಜಮೀನನ್ನು ಪಶು ಆಹಾರ ಮಿಶ್ರಣ ಘಟಕ ಸ್ಥಾಪಿಸಲೆಂದು ಪಶುಪಾಲನಾ ಇಲಾಖೆ ಮತ್ತು ಹಾಲು ಮಹಾ ಮಂಡಳಿಯ ಶಿಫಾರಸ್ಸಿನ ಮೇರೆಗೆ ಸರ್ಕಾರ ಮಂಜೂರಾತಿ ನೀಡಿದೆ. ಈ ಸಂಬಂಧವಾಗಿ ಮಾರುಕಟ್ಟೆಯ ಬೆಲೆಯ ಶೇ.10 ರಷ್ಟನ್ನು ಅಂದರೆ 8,55,067 ರೂಗಳನ್ನು ಈಗಾಗಲೇ ಒಕ್ಕೂಟವು ಸರ್ಕಾರಕ್ಕೆ ಪಾವತಿ ಮಾಡಿದೆ. ಎಸ್.ಗೊಲ್ಲಹಳ್ಳಿಯು ಭೌಗೋಳಿಕವಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರದ ನಡುವೆ ಇದೆ. ಈ ಜಮೀನು ಚಿಂತಾಮಣಿ, ಬಾಗೇಪಲ್ಲಿ ರಸ್ತೆಗೆ ಹೊಂದಿಕೊಂಡಿದ್ದು ಸಾಗಾಣಿಕೆಗೆ ತುಂಬಾ ಸಲೀಸಾಗಿದೆ. ಆದರೆ ಮೇದಲವೇಣಿ ತಲುಪಲು ಶಿಡ್ಲಘಟ್ಟ ತಾಲ್ಲೂಕಿನಿಂದ 80 ಕಿ.ಮೀ ಕ್ರಮಿಸಬೇಕು. ಇದರಿಂದ 20 ಟನ್ ಸಾಮರ್ಥ್ಯದ ವಾಹನ ಒಂದು ಕಿ.ಮೀ ಗೆ 25 ರೂ ನಂತೆ 2000 ರೂಗಳು ಹೆಚ್ಚುವರಿಯಾಗಿ ವೆಚ್ಚ ಮಾಡಬೇಕು. ಈ ಲೆಕ್ಕದಲ್ಲಿ ಒಕ್ಕೂಟವು 1.4 ಕೋಟಿ ರೂ ಒಂದು ವರ್ಷಕ್ಕೆ ಹೆಚ್ಚುವರಿಯಾಗಿ ಸಾಗಾಣಿಕಾ ವೆಚ್ಚ ಭರಿಸಬೇಕಾಗುತ್ತದೆ. ಇದು ಹಾಲು ಉತ್ಪಾದಕ ಬಡ ರೈತನ ಮೇಲೆ ಆಗುವ ಪ್ರಹಾರವಾಗಿದೆ.
ಮೇದಲವೇಣಿಯ ಜಮೀನು ಕೇವಲ 8 ಎಕರೆ ಮತ್ತು ಗುತ್ತಿಗೆ ಆಧಾರವಾದ್ದರಿಂದ ಕೆಎಂಎಫ್ ಸ್ವತ್ತಾಗದು. ಅದೇ ಎಸ್.ಗೊಲ್ಲಹಳ್ಳಿಯ ಜಮೀನು 26 ಎಕರೆ ಇದ್ದು, ಸರ್ಕಾರದಿಂದ ಒಕ್ಕೂಟಕ್ಕೆ ಹಸ್ತಾಂತರಿಸಲಾಗಿದೆ. ಇದರಿಂದಾಗಿ ಘಟಕ ವಿಸ್ತರಣೆಗೆ ಸಾಕಷ್ಟು ಸ್ಥಳಾವಕಾಶವಿದೆ.
ಸಾದಲಿ ಹೋಬಳಿ ಅತೀ ಹಿಂದುಳಿದ ಪ್ರದೇಶವಾಗಿದ್ದು, ಅತೀ ಸಣ್ಣ ರೈತರು ಮತ್ತು ಕೃಷಿ ಕಾರ್ಮಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸುಮಾರು ವರ್ಷಗಳಿಂದ ಸತತ ಬರಗಾಲದಿಂದ ರೈತರು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಪಶು ಆಹಾರ ಮಿಶ್ರಣ ಘಟಕ ಸ್ಥಾಪಿಸುವುದರಿಂದ ವಲಸೆ ಹೋಗುವಿಕೆಯನ್ನು ತಪ್ಪಿಸಬಹುದು, ನೂರಾರು ಮಂದಿಗೆ ಉದ್ಯೋಗ ನೀಡಬಹುದು. ಈಗಾಗಲೇ ಗೌರಿಬಿದನೂರು ತಾಲ್ಲೂಕಿನ ರಾಜಾನುಕುಂಟೆಯಲ್ಲಿ ಫೀಡ್ ಫ್ಯಾಕ್ಟರಿಯಿದೆ. ಶಿಡ್ಲಘಟ್ಟ ತಾಲ್ಲೂಕಿನ ಸಾದಲಿಯಲ್ಲಿನ 26 ಎಕರೆಯಲ್ಲಿ ಪಶು ಆಹಾರ ಮಿಶ್ರಣ ಘಟಕ ಸ್ಥಾಪಿಸುವುದರಿಂದ ಪ್ರಾದೇಶಿಕ ಅಸಮತೋಲನೆಯನ್ನು ತಪ್ಪಿಸಬಹುದಾಗಿದೆ.
ಸಂಬಂಧಪಟ್ಟವರು ಕೂಲಂಕುಶವಾಗಿ ಪರಿಶೀಲಿಸಿ ಸಾದಲಿ ಹೋಬಳಿ ಎಸ್.ಗೊಲ್ಲಹಳ್ಳಿ ಗ್ರಾಮದಲ್ಲಿ ಪಶು ಆಹಾರ ಮಿಶ್ರಣ ಘಟಕ ಸ್ಥಾಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರು ಹಾಗೂ ತಾಲ್ಲೂಕಿನ ಹಾಲು ಉತ್ಪಾದಕರು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಹಾಲು ಉತ್ಪಾದಕರ ನೌಕರರ ಸಂಘದ ತಾಲ್ಲೂಕು ಉಪಾಧ್ಯಕ್ಷ ಎಸ್.ಗುಂಡ್ಲಹಳ್ಳಿ ರಾಮದಾಸ್, ಸಾದಲಿ ಎಂ.ಪಿ.ಸಿ.ಎಸ್ ಕಾರ್ಯದರ್ಶಿ ಎಸ್.ಪಿ.ವಿಜಯಕುಮಾರ್, ಗೊರಮಡುಗು ಎಂ.ಪಿ.ಸಿ.ಎಸ್ ಕಾರ್ಯದರ್ಶಿ ದೇವರಾಜ್, ಎಲ್.ಮುತ್ತುಗದಹಳ್ಳಿ ಎಂ.ಪಿ.ಸಿ.ಎಸ್ ಕಾರ್ಯದರ್ಶಿ ಎಂ.ಮುನಿರೆಡ್ಡಿ, ದೊಡ್ಡದಾಸೇನಹಳ್ಳಿ ವಿ.ಕೃಷ್ಣಪ್ಪ, ಬೆಳ್ಳೂಟಿ ಶ್ರೀನಾಥ್, ವೀರಾಪುರ ಎನ್.ನಾಗರಾಜ್, ಕಾಳದಾನಕುಂಟೆ ನಾಗೇಶ್ ಹಾಜರಿದ್ದರು.