Home Blog Page 390

ಪರಿಹಾರ ನಿಧಿಯ 70 ಸಾವಿರ ರೂಗಳ ಚೆಕ್ ಅನ್ನು ಶಾಸಕ ಎಂ.ರಾಜಣ್ಣ ನೀಡಿದರು

0

ಶಿಡ್ಲಘಟ್ಟದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕಿನ ಪಲಿಚೇರ್ಲು ಗ್ರಾಮ ಪಂಚಾಯಿತಿಯ ಸೋಮನಹಳ್ಳಿಯ ಶಂಕರ್ ರೆಡ್ಡಿ ಅವರಿಗೆ ಹೃದಯ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯ 70 ಸಾವಿರ ರೂಗಳ ಚೆಕ್ ಅನ್ನು ಶಾಸಕ ಎಂ.ರಾಜಣ್ಣ ನೀಡಿದರು. ಮುಖಂಡರಾದ ಕನಕಪ್ರಸಾದ್, ರಹಮತ್ತುಲ್ಲ, ಮಳ್ಳೂರಯ್ಯ ಹಾಜರಿದ್ದರು.

ಕೊತ್ತನೂರಿನಲ್ಲಿ ಜೋಡಿ ಆಮೆಗಳ ರಕ್ಷಣೆ

0

ತಾಲ್ಲೂಕಿನ ಕೊತ್ತನೂರಿನ ಹಾಳು ಬಾವಿಯಲ್ಲಿ ಬಿದ್ದಿದ್ದ ಎರಡು ಆಮೆಗಳನ್ನು ಮಂಗಳವಾರ ಸ್ನೇಕ್ ನಾಗರಾಜ್ ರಕ್ಷಿಸಿ ಕೆರೆಗೆ ಬಿಟ್ಟಿದ್ದಾರೆ.
ಕೊತ್ತನೂರಿನ ಶೆಟ್ಟಪ್ಪನವರ ವೆಂಕಟರೆಡ್ಡಿಯವರ ಹಾಳು ಬಾವಿಯಲ್ಲಿ ಕೊಳವೆ ಬಾವಿಯನ್ನು ಕೊರೆಸಿದ್ದಾರೆ. ಅದರ ಮೋಟರ್ ರಿಪೇರಿಗಾಗಿ ಬಾವಿಗೆ ಇಳಿದಿದ್ದ ಸ್ನೇಕ್ ನಾಗರಾಜ್ ಅವರಿಗೆ ಎರಡು ಆಮೆಗಳು ಕಂಡು ಬಂದಿವೆ. ಆಹಾರವನ್ನು ಹುಡುಕುತ್ತಾ ಬಂದು ಬಿದ್ದಿರಬಹುದಾದ ಆ ಎರಡು ಆಮೆಗಳನ್ನು ಅವರು ಅಲ್ಲಿಂದ ರಕ್ಷಿಸಿ ಹತ್ತಿರದ ಕೆರೆಗೆ ಬಿಟ್ಟಿದ್ದಾರೆ.

ಸ್ನೇಕ್ ನಾಗರಾಜ್ ರಕ್ಷಿಸಿದ ಆಮೆಗಳು

ಇಂಡಿಯನ್ ಬ್ಲಾಕ್ ಟರ್ಟಲ್ ಎಂದು ಇಂಗ್ಲಿಷ್ನಲ್ಲಿ ಕರೆಯುವ ಈ ಆಮೆಯು ಕೆರೆ, ಕುಂಟೆ, ನದಿ ಮುಂತಾದ ಸಿಹಿ ನೀರಿನ ಆಶ್ರಿತವಾಗಿ ಜೀವಿಸುತ್ತದೆ. ಭಾರತ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಬರ್ಮಾ ಮುಂತಾದ ದೇಶಗಳಲ್ಲಿಯೂ ಇವುಗಳು ಕಾಣಸಿಗುತ್ತವೆ. ಗಾಢ ಕಂದು ಅಥವಾ ಕಪ್ಪು ಬಣ್ಣದ ಚಿಪ್ಪಿನ ಮೇಲೆ ಸಣ್ಣ ಹಳದಿ ಗೆರೆಗಳಿರುತ್ತವೆ. ಮುಂಜಾನೆ ಮತ್ತು ಸಂಜೆ ವೇಳೆಯಲ್ಲಿ ಚುರುಕಾಗಿರುವ ಇವು ಬಿಸಿಲು ಕಾಯಿಸಿಕೊಳ್ಳಲು ಬಂಡೆಗಳನ್ನು ಆಶ್ರಯಿಸುತ್ತವೆ. ಸಾಮಾನ್ಯವಾಗಿ ಹಗಲಿನಲ್ಲಿ ತಾವೇ ತೋಡಿಕೊಂಡ ರಂಧ್ರಗಳಲ್ಲಿ ಸೇರಿಕೊಂಡಿರುತ್ತವೆ.
‘ಆಹಾರವನ್ನು ಅರಸಿ ಆಮೆಗಳು ಕತ್ತಲಾದಾಗ ಅಲ್ಲಲ್ಲಿ ಅಲೆಯುತ್ತವೆ. ಹಾಗೆಯೇ ಹಾಳು ಬಾವಿಯಲ್ಲಿ ಬಿದ್ದಿರಬೇಕು. ನೀರಿದ್ದರೆ ಅವುಗಳಿಗೆ ಆಹಾರ ಸಿಕ್ಕಿ ಅವು ಬದುಕುತ್ತವೆ, ಇಲ್ಲದಿದ್ದರೆ ಸಾಯುತ್ತವೆ. ಅದಕ್ಕಾಗಿ ಅವನ್ನು ರಕ್ಷಿಸಿ ಹತ್ತಿರದ ಕೆರೆಯಲ್ಲಿ ಬಿಟ್ಟೆ’ ಎಂದು ಸ್ನೇಕ್ ನಾಗರಾಜ್ ತಿಳಿಸಿದರು.

ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದ ಉದ್ಘಾಟನೆ

0

ಬಡವರಿಗೆ ಎಟುಕುವಂತಹ ಬೆಲೆಗಳಲ್ಲಿ ಓಷಧಿಗಳು ಲಭ್ಯವಿರಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿರುವುದು ಶ್ಲಾಘನೀಯ,ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬುಧವಾರ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಓಷಧಿ ಸಿಗಲಿಲ್ಲ ಅಥವ ಓಷಧಿ ಕೊರತೆಯಿಂದ ಯಾವುದೇ ಬಡವರು ಪ್ರಾಣ ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ದೇಶಾದ್ಯಂತ ಜನೌಷಧಿ ಕೇಂದ್ರಗಳನ್ನು ಸ್ಥಾಪನೆ ಮಾಡಿದ್ದು ಇಲ್ಲಿ ಎಲ್ಲಾ ಖಾಯಿಲೆಗಳಿಗೂ ಅನ್ವಯವಾಗುವಅತ್ಯಂತ ಗುಣಮಟ್ಟದ ಓಷಧಿಗಳು ಕಡಿಮೆ ಧರದಲ್ಲಿ ಸಿಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್, ಸದಸ್ಯರಾದ ಅಪ್ಸರ್ಪಾಷ, ಸಿಕಂದರ್, ಸಾರ್ವಜನಿಕ ಆಸ್ಪತ್ರೆಯ ವೈದ್ಯೆ ಡಾ.ಸುನೀತ, ತಾಲ್ಲೂಕು ಆಡಳಿತಾಧಿಕಾರಿ ಡಾ.ಅನಿಲ್ಕುಮಾರ್ ಹಾಜರಿದ್ದರು.

ಕುಡಿಯುವ ನೀರಿನ ಘಟಕದ ಉದ್ಘಾಟನೆ

0

ನಾಗರಿಕರ ಆರೋಗ್ಯ ದೃಷ್ಟಿಯಿಂದ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಶುದ್ದ ನೀರಿನ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಅಶೋಕ ರಸ್ತೆಯ ದ್ವಿಮುಖ ಗಣಪತಿ ದೇವಾಲಯದ ಪಕ್ಕದಲ್ಲಿ ಸುಮಾರು ೧೦ ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶುದ್ದ ಕುಡಿಯುವ ನೀರಿನ ಘಟಕದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕಲುಷಿತ ನೀರಿನ ಸೇವನೆಯಿಂದ ಸಾರ್ವಜನಿಕರು ವಿವಿಧ ಖಾಯಿಲೆಗಳಿಗೆ ತುತ್ತಾಗುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ಮಾಣಕ್ಕೆ ಮುಂದಾಗಿದ್ದು ತಾಲ್ಲೂಕಿನ ಬಹುತೇಕ ಗ್ರಾಮಪಂಚಾಯಿತಿ ಕೇಂದ್ರ ಸ್ಥಾನಗಳಲ್ಲಿ ಈಗಾಗಲೇ ಶುದ್ದ ಕುಡಿಯುವ ನೀರಿನ ಘಟಕಗಳ ಉದ್ಘಾಟನೆಯಾಗಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಸೇರಿದಂತೆ ನಗರದ ಎಲ್ಲಾ ವಾರ್ಡುಗಳಲ್ಲಿಯೂ ಶುದ್ದ ನೀರಿನ ಘಟಕಗಳನ್ನುಸ್ಥಾಪಿಸಲಾಗುವುದು ಎಂದರು.
ಶುದ್ದ ನೀರಿನ ಘಟಕ ಸಾರ್ವಜನಿಕರ ಸ್ವತ್ತಾಗಿದ್ದು ಇದರ ನಿರ್ವಹಣೆ ಹಾಗೂ ಘಟಕದ ಸುತ್ತಲೂ ನೈರ್ಮಲ್ಯ ಕಾಪಾಡಲು ನಗರಸಭೆ ಅಧಿಕಾರಿಗಳು ಮತ್ತು ನಾಗರೀಕರು ಸಹಕರಿಸಬೇಕು. ಪ್ರತಿಯೊಬ್ಬರೂ ಶುದ್ದ ನೀರಿನ ಸೇವನೆಮಾಡುವುದರಿಂದ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ನಗರದ ೨೧ ನೇ ವಾರ್ಡಿನ ಸದಸ್ಯೆ ಸುಗುಣಲಕ್ಷ್ಮಿನಾರಾಯಣ ರವರು ವಾರ್ಡಿನ ಜನತೆಗೆ ಉಚಿತವಾಗಿ ಸುಮಾರು ೨೦೦ ಕುಡಿಯುವ ನೀರಿನ ಕ್ಯಾನ್ಗಳನ್ನು ವಿತರಿಸಿದರು.
ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್, ಸದಸ್ಯೆ ಸುಗುಣ ಲಕ್ಷ್ಮಿನಾರಾಯಣ, ನಗರಸಭೆ ಆಯುಕ್ತ ಚಲಪತಿ, ಸದಸ್ಯರಾದ ಅಪ್ಸರ್ ಪಾಷ, ಎಸ್.ರಾಘವೇಂದ್ರ, ಕಿಷನ್, ಮುಖಂಡರಾದ ಲಕ್ಷ್ಮಿನಾರಾಯಣ (ಲಚ್ಚಿ), ಕೇಶವಣ್ಣ,ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಗುರುರಾಜ್ರಾವ್ ಹಾಜರಿದ್ದರು.

ಕ್ರಿಸ್ಮಸ್ ಹಬ್ಬ ಕಾರ್ಯಕ್ರಮ

0

ಕ್ರಿಸ್ತನ ಉಪದೇಶವಾದ ಶಾಂತಿ, ಪ್ರೀತಿ, ಮಾನವೀಯತೆ ಪ್ರಸಕ್ತ ಸಮಾಜ ಹಾಗೂ ರಾಷ್ಟ್ರದ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಹುಜಗೂರು ರಾಮಯ್ಯ ಹೇಳಿದರು.
ತಾಲ್ಲೂಕಿನ ಹುಜಗೂರು ಗ್ರಾಮದಲ್ಲಿ ಬುದವಾರ ಇಮ್ಮಾನು ವೆಲ್ ಟ್ರಸ್ಟ್ ವತಿಯಿಂದ ಕ್ರಿಸ್ಮಸ್ ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿ ಅವರು ಮಾತನಾಡಿದರು.
ಕ್ರಿಸ್ ಮಸ್ ಹಬ್ಬ ಶಾಂತಿಯನ್ನು ಸಾರುತ್ತಿದೆ. ಶಾಂತಿಯ ಸಾಧನಗಳಾಗಲು, ಶಾಂತಿಯ ದೂತರಾಗಲು ನಮ್ಮನ್ನು ಆಹ್ವಾನಿಸುತ್ತಿದೆ. ಕ್ರಿಸ್ತ ಜಯಂತಿಯ ಪ್ರೀತಿಯ ಜ್ಯೋತಿ ನಮ್ಮ ತನು-ಮನಗಳಲ್ಲಿ, ಮನೆ-ಮಂದಿರಗಳಲ್ಲಿ ಪ್ರಜ್ವಲಿಸಲಿ.ಸ್ವಾರ್ಥ, ಹಗೆತನವನ್ನು ಬಿಟ್ಟು ತ್ಯಾಗ ತನ್ಮಯರಾಗಿ. ಸೇವಾಮನೋಭಾವದಿಂದ ಮುನ್ನೆಡೆಯಿರಿ ಎಂದರು.

ತಾಲ್ಲೂಕಿನ ಹುಜಗೂರು ಗ್ರಾಮದಲ್ಲಿ ಬುದವಾರ ಇಮ್ಮಾನು ವೆಲ್ ಟ್ರಸ್ಟ್ ವತಿಯಿಂದ ಆಚರಿಸಿದ ಕ್ರಿಸ್ಮಸ್ ಹಬ್ಬ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಟ್ರಸ್ಟ್ ವತಿಯಿಂದ ಸೀರೆಗಳನ್ನುವಿತರಿಸಲಾಯಿತು.

ಕ್ರೈಸ್ತ ಮುಖಂಡ ಮುನಿನಾರಾಯಣ ಮಾತನಾಡಿ, ಯೇಸು ಸ್ವಾಮಿ ನಿನ್ನೆಯಂತೆ ಇಂದು, ಇಂದಿನಂತೆ ನಾಳೆ ಹಾಗೂ ಚಿರಕಾಲ ನಮ್ಮೊಡನೆ ಇರುವರು. ಅವರ ಹೆಸರು ‘ಇಮ್ಮಾನು ವೆಲ್’ ಎಂದರೆ ‘ದೇವರು ನಮ್ಮೊಡನೆ’ ಎಂದು ಅರ್ಥ.ಈ ಕ್ರಿಸ್ಮಸ್ ಲೋಕದಲ್ಲಿ ಶಾಂತಿ, ಸಮಾಧಾನ ನೆಲೆಸುವಂತೆ ಮಾಡಲಿ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಬಡ ಮಹಿಳೆಯರಿಗೆ ಟ್ರಸ್ಟ್ ವತಿಯಿಂದ ಸೀರೆಗಳನ್ನು ವಿತರಿಸಲಾಯಿತು.
ತುಮ್ಮನಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸುರೇಂದ್ರ, ಸದಸ್ಯ ರಾಮಚಂದ್ರ, ದ್ಯಾವಪ್ಪ, ಪಿಡಿಓ ರಾಮಕೃಷ್ಣ, ಮುಖಂಡರಾದ ಕದಿರಪ್ಪ, ವೆಂಕಟೇಶ್, ಶಾಮಣ್ಣ, ನಾರಾಯಣಸ್ವಾಮಿ, ಹರೀಶ್, ಗೋವಿಂದಪ್ಪ,ಎಚ್.ಎನ್.ಮುನಿನಾರಾಯಣ, ಶಿವಕುಮಾರ್, ಮಂಜುನಾಥ್, ಚೌಡಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.

ಡಿ.ವಿ.ವೆಂಕಟೇಶಪ್ಪ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ

0

ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಎ.ಪಿ.ಎಂ.ಸಿ ನಿರ್ದೇಶಕ ದೊಗರನಾಯಕನಹಳ್ಳಿ ಡಿ.ವಿ.ವೆಂಕಟೇಶಪ್ಪ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲು ಆಕಾಂಕ್ಷಿಯಾಗಿರುವುದಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಕ್ಷೇತ್ರದಾದ್ಯಂತ ಹಲವಾರು ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತನಾಗಿ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದು, ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡಿದ್ದೇನೆ. ಅಸಂಘಟಿತ ಕಾರ್ಮಿಕರಿಗೆ, ಅಲ್ಪಸಂಖ್ಯಾತರಿಗೆ, ವಿದ್ಯಾರ್ಥಿಗಳಿಗೆ, ದಲಿತರಿಗೆ, ಸಾಮಾನ್ಯ ನಾಗರಿಕರಿಗೆ, ಎಲ್ಲಾ ವರ್ಗದ ಜನರಿಗೆ ಅವಶ್ಯವಿರುವ ಸೌಲಭ್ಯವನ್ನು ನೀಡಿರುತ್ತೇನೆ. ಆದುದರಿಂದ 2018 ರ ವಿಧಾನಸಭೆ ಚುನಾವಣೆಯಲ್ಲಿ ಶಿಡ್ಲಘಟ್ಟ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಕಾಂಕ್ಷಿಯಾಗಿರುತ್ತೇನೆ ಎಂದು ತಿಳಿಸಿದ್ದಾರೆ.

ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ

0

ನಗರಸಭೆ ವ್ಯಾಪ್ತಿಯಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳು ಉತ್ತಮವಾಗಿರಬೇಕಾದರೆ ಅದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಕಾರ್ಮಿಕ ನಗರದ ನಾಲೆ ಪ್ರದೇಶದಲ್ಲಿ ನಗರೋತ್ಥಾನ- ೨ ಯೋಜನೆಯಡಿ ಸುಮಾರು ೭೫ ಲಕ್ಷ ರೂ ವೆಚ್ಚದ ರಸ್ತೆ ಡಾಂಬರೀಕರಣ ಹಾಗು ಚರಂಡಿ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ನಗರೋತ್ಥಾನ-೨ ಯೋಜನೆಯ ಸುಮಾರು ೧ ಕೋಟಿ ೭೫ ಲಕ್ಷ ರೂ ಉಳಿಕೆ ಹಣವನ್ನು ಸರ್ಕಾರದಿಂದ ಮಂಜೂರು ಮಾಡಿಸಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಲಾಗುತ್ತಿದೆ. ಇದೇ ಅನುದಾನದಲ್ಲಿ ಸುಮಾರು ೭೫ ಲಕ್ಷ ರೂ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಹಾಗು ಚರಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದು ಚರಂಡಿ ಕಾಮಗಾರಿ ಬಹುತೇಕ ಮುಗಿದಿದೆ. ಇದೀಗ ರಸ್ತೆಗೆ ಡಾಂಬರೀಕರಣ ಹಾಕುವ ಕೆಲಸಕ್ಕೆ ಚಾಲನೆ ನೀಡಲಾಗಿದೆ.
ಕಾರ್ಮಿಕನಗರದ ನಾಳೆ ಪ್ರದೇಶದಲ್ಲಿ ವಾಸಿಸುವ ಅಲ್ಪಸಂಖ್ಯಾತ ಬಂಧುಗಳ ಬಹುದಿನಗಳ ಬೇಡಿಕೆಯಾಗಿದ್ದ ಸುಸಜ್ಜಿತ ಚರಂಡಿ ಹಾಗು ರಸ್ತೆ ಕಾಮಗಾರಿಗೆ ಈ ಭಾಗದ ನಾಗರಿಕರು ಪಕ್ಷಾತೀತವಾಗಿ ಸಹಕರಿಸಬೇಕು ಎಂದರು.
ಸಾರ್ವಜನಿಕರ ಸಹಭಾಗಿತ್ವ ಸಂಪೂರ್ಣವಾಗಿ ಇದ್ದಾಗ ಮಾತ್ರವೇ ಸರ್ಕಾರದ ಯಾವುದೆ ಯೋಜನೆ ಯಶಸ್ಸಾಗಲು ಸಾಧ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಇಲ್ಲದೆ ಯಾವುದೆ ಯೋಜನೆಯಾಗಲಿ ಯಶಸ್ಸು ಸಾಧ್ಯವಿಲ್ಲ. ಕಾಮಗಾರಿ ನಡೆಯುವಾಗ ಪಕ್ಷಾತೀತವಾಗಿ ಜನರು ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿ ನಗರದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಅಫ್ಸರ್ಪಾಷ, ಸಿಕಂದರ್, ಮುಖಂಡರಾದ ಲಕ್ಷ್ಮಿನಾರಾಯಣ, ಸುರೇಶ್, ರೆಹಮಾನ್, ಮುನಿರೆಡ್ಡಿ, ಮಕ್ತಿಯಾರ್, ಗುತ್ತಿಗೆದಾರ ಕೆ.ಬಿ.ಮಂಜುನಾಥ್ ಹಾಜರಿದ್ದರು.

ಮುಂಜಾನೆಯ ಮುತ್ತಿನ ಮಣಿಗಳು

0

ತಾಲ್ಲೂಕಿನ ಎಲ್ಲೆಡೆ ಮುಂಜಾನೆ ಮಂಜು ಆವರಿಸತೊಡಗಿದೆ. ಮುಂಜಾನೆಯ ಮಂಜು ಮುತ್ತಿನ ಮಣಿಗಳಾಗುತ್ತಿವೆ. ಚಳಿಗಾಲದಲ್ಲಿ ಮುತ್ತಿನ ಹಾರ ಸೃಷ್ಟಿಯಾಗುವುದು ಪ್ರಕೃತಿಯ ವೈಶಿಷ್ಟ್ಯ. ಆದರೆ ಇದು ನೀರ ಹನಿಯ ಮುತ್ತು. ಜೇಡರ ಬಲೆ ಇಬ್ಬನಿಯಲ್ಲಿ ಮಿಂದು ಮುತ್ತಿನ ಹಾರವಾಗುತ್ತದೆ.

ಬೂದಾಳದ ಸಮೀಪ ಕಂಡುಬಂದ ಜೇಡರಬಲೆಗಳ ಮೇಲೆ ಮುತ್ತಿನಮಣಿಗಳು

ಮುಂಜಾನೆ ಚುಮು ಚುಮು ಚಳಿಯಲ್ಲಿ ಸೂರ್ಯ ಉದಯಿಸುವ ಸಮಯದಲ್ಲಿ ಊರ ಹೊರಗೆ ಹೋದರೆ ಇಂತಹ ಮುತ್ತುಗಳನ್ನು ನೋಡಬಹುದು. ಬಿಸಿಲಿನ ಕಾವು ಏರುತ್ತಿದ್ದಂತೆಯೇ ಮುತ್ತುಗಳು ಆವಿಯಾಗಿಬಿಡುತ್ತವೆ. ಅಷ್ಟರೊಳಗೆ ಕಣ್ತುಂಬಿಸಿಕೊಳ್ಳಬೇಕಷ್ಟೆ.
ಭೂಮಿಯ ಉಷ್ಣವನ್ನು ರಕ್ಷಿಸುವ ಮೋಡಗಳ ಮುಸುಕು ಇಲ್ಲವಾದಾಗ ಭೂಮಿಯಿಂದ ಹೊರಬಿದ್ದ ಶಾಖ ವಾತಾವರಣದಲ್ಲಿ ಸೇರಿ ಹೋಗುತ್ತದೆ. ಆಗ ಭೂಮಿ ಬೇಗ ತಂಪುಗೊಂಡು ತನಗೆ ಹತ್ತಿರದ ಗಾಳಿಯನ್ನೂ ತಂಪು ಮಾಡುತ್ತದೆ. ಆಗ ಮಂಜು ಆವರಿಸುತ್ತದೆ.
ಮುತ್ತು ಅಷ್ಟು ಸುಲಭದ ತುತ್ತಲ್ಲ. ಇದರ ಸೃಷ್ಟಿಯಾಗುವುದೇ ಬಲು ವಿಶಿಷ್ಟವಾಗಿ. ಒಣಹವೆಯ ರಾತ್ರಿಗಳಲ್ಲಿ ಮಣ್ಣು, ಬಂಡೆಗಳು ತಂಪುಗೊಳ್ಳಲಾರಂಭಿಸಿದಾಗ ನೆಲದ ಅತಿ ಸಮೀಪದ ಗಾಳಿಯೂ ತಂಪಾಗುತ್ತದೆ. ಅದರಲ್ಲಿನ ನೀರಾವಿ ತಣ್ಣನೆಯ ನೆಲ ಬಂಡೆಗಳ ಸಂಪರ್ಕ ಹೊಂದಿ ಸಾಂದ್ರೀಕರಿಸಿ ಸಸ್ಯಗಳ, ಜೇಡರಬಲೆಯ ಮೇಲೆ ಸೂಕ್ಷ್ಮ ಹನಿಗಳಂತೆ ಕೂರುತ್ತದೆ. ನೀರಾವಿ ಹೀಗೆ ಹನಿಗಳಾಗುವ ಉಷ್ಣತೆಗೆ ತುಷಾರಬಿಂದು(ಡಿವ್ ಪಾಯಿಂಟ್) ಎಂದು ಹೆಸರು.
ಬೂದಾಳದ ಸಮೀಪ ಕಂಡುಬಂದ ಜೇಡರಬಲೆಗಳ ಮೇಲೆ ಮುತ್ತಿನಮಣಿಗಳು

‘ಮುಂಜಾನೆಯ ಪ್ರಕೃತಿ ಆರಾಧಕರಿಗೆ, ವಾಯು ಸಂಚಾರಿಗರಿಗೆ ಮಂಜಿನ ಆಗಮನ ಆಹ್ಲಾದ ತಂದರೆ, ಮುಂಜಾನೆಯಲ್ಲಿ ಕಾಯಕದಲ್ಲಿ ನಿರತರಾದ ಹಾಲು, ಪೇಪರ್ ಹಂಚುವರು ಮತ್ತು ಮಳೆಗಾಗಿ ಕಾದ ರೈತರಿಗೆ ಬೇಸರ ಮೂಡಿಸುತ್ತದೆ. ನಿಸರ್ಗದ ವಿವಿಧ ಹವಾಮಾನವನ್ನು ಅನುಭವಿಸುತ್ತಾ ಸಣ್ಣ ಪುಟ್ಟ ರಮಣೀಯತೆಗಳನ್ನು ಆಸ್ವಾದಿಸುತ್ತಾ ಸಾಗಬೇಕು. ಗೊತ್ತೇ ಆಗದಂತೆ ಪೊದೆ, ಗಿಡಗಳಲ್ಲಿ ಕಟ್ಟಿದ ಜೇಡರಬಲೆಗಳು ಜೀವಬಂದಂತೆ ಮುತ್ತಿನ ಮಣಿಗಳನ್ನು ಹೊದ್ದು ನಿಲ್ಲುವ ಸೋಜಿಗವನ್ನು ಚಳಿಗಾಲದಲ್ಲಿ ಮಾತ್ರ ನೋಡಲು ಸಾಧ್ಯ’ ಎನ್ನುತ್ತಾರೆ ವಕೀಲ ಸತ್ಯನಾರಾಯಣಬಾಬು.

ವಾಜಪೇಯಿ ಹುಟ್ಟುಹಬ್ಬಕ್ಕೆ ಕಂಬಳಿ ವಿತರಣೆ

0

ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕವಿ, ಪತ್ರಕರ್ತ, ಶ್ರೇಷ್ಠ ವಾಗ್ಮಿ, ಚಿಂತಕ, ದಾರ್ಶನಿಕ, ನಿಸ್ವಾರ್ಥ ರಾಜಕಾರಣಿ ಹಾಗೂ ನುಡಿದಂತೆ ನಡೆಯುವ ಮಾನವತಾವಾದಿಯಾಗಿ ಭಾರತ ಹಾಗೂ ವಿಶ್ವದಲ್ಲಿ ಹೆಸರು ವಾಸಿಯಾಗಿದ್ದಾರೆ ಎಂದು ಬಿಜೆಪಿ ಮುಖಂಡ ಡಿ.ಆರ್.ಶಿವಕುಮಾರಗೌಡ ಹೇಳಿದರು.
ತಾಲ್ಲೂಕು ಬಿಜೆಪಿ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಿಪೇಯಿಯವರ ೯೪ ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ತಾಲ್ಲೂಕಿನ ಹಾರಡಿ ಗ್ರಾಮದಲ್ಲಿ ಸೋಮವಾರ ೯೪ ಬಡ ಜನರಿಗೆ ಕಂಬಳಿ ವಿತರಣೆ, ೯೪ ಜನರಿಗೆ ಪ್ರಧಾನಮಂತ್ರಿ ಫಸಲ್ಭೀಮಾ ಯೋಜನೆಯ ವಿಮೆ ಪತ್ರ ಹಾಗೂ ೯೪ ಸಸಿಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಪ್ರದಾನಿಯಾಗಿದ್ದಾಗ ಜಾರಿಗೆ ತಂದಿದ್ದ ಸರ್ವಶಿಕ್ಷಣ ಅಭಿಯಾನ ಯೋಜನೆ, ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳ ಮುಖಾಂತರ ದೇಶದ ಗ್ರಾಮಾಂತರ ಪ್ರದೇಶಗಳಲ್ಲಿನ ಜನರು, ತಮ್ಮ ಜೀವನಗಳನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದರು.
ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ದೇಶದ ರಕ್ಷಣೆಯ ವಿಚಾರದಲ್ಲಿ ತೆಗೆದುಕೊಂಡ ಕೆಲವು ನಿರ್ಣಯಗಳಿಂದಾಗಿ ಕಾರ್ಗಿಲ್ ಯುದ್ದವನ್ನು ಭಾರತೀಯ ಯೋಧರು ಗೆಲ್ಲಲು ಸಾಧ್ಯವಾಯಿತು. ವಾಜಿಪೇಯಿಯವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ವಿಶೇಷವಾಗಿ ಯುವಜನತೆ ಪಾಲಿಸಿದಾಗ ಮಾತ್ರ ಸುಭದ್ರವಾದ ದೇಶವನ್ನು ನಿರ್ಮಾಣ ಮಾಡಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಹಾರಡಿ ಗ್ರಾಮದ ಬಡವರಿಗೆ ಕಂಬಳಿ, ವಿಮಾ ಯೋಜನೆಯ ಪತ್ರ ಹಾಗೂ ಸಸಿಗಳನ್ನು ವಿತರಿಸಲಾಯಿತು.
ಬಿಜೆಪಿ ಮುಖಂಡರಾದ ಸುರೇಂದ್ರಗೌಡ, ಸುರೇಶ್, ಬೈರೇಗೌಡ, ರವಿಕುಮಾರ್, ಸುಜಾತಮ್ಮ, ಮಂಜುಳಮ್ಮ ಹಾಜರಿದ್ದರು.

ಕ್ರಿಸ್ ಮಸ್ ಹಬ್ಬ ಆಚರಣೆ

0

ಶಿಡ್ಲಘಟ್ಟದ ನೆಲ್ಲೀಮರದಹಳ್ಳಿಯ ಇಮ್ಮಾನುವೇಲ್ ಚರ್ಚ್ ನಲ್ಲಿ ಸೋಮವಾರ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಮಕ್ಕಳು ಮೇಣದಬತ್ತಿಯನ್ನು ಬೆಳಗಿದರು.

ಶಿಡ್ಲಘಟ್ಟ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಐತಿಹಾಸಿಕ ಸಮಾವೇಶ

0

ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ನೆಹರು ಕ್ರೀಡಾಂಗಣದಲ್ಲಿ ಡಿಸೆಂಬರ್ 29 ರ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಐತಿಹಾಸಿಕ ಬೃಹತ್ ಕಾರ್ಯಕರ್ತರ ಸಮಾವೇಶವನ್ನು ಆಯೋಜಿಸಿರುವುದಾಗಿ ಕಾಂಗ್ರೆಸ್ ಮುಖಂಡ ವಿ.ಮುನಿಯಪ್ಪ ತಿಳಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಗಳೇನು, ಜನಪರ ಕಾರ್ಯಕ್ರಮಗಳು ಏನೇನು ಎಂಬುದು ನಮ್ಮ ಕಾರ್ಯಕರ್ತರಿಗೆ ಸವಿಸ್ತಾರವಾಗಿ ತಿಳಿಸುವುದು. ಅವರ ಮೂಲಕ ಜನರಿಗೆ ಕಾಂಗ್ರೆಸ್ ಸರ್ಕಾರದ ವಿವಿಧ ಯೋಜನೆಗಳಿಂದ ಆಗಿರುವ ಅನುಕೂಲಗಳನ್ನು ಮನವರಿಕೆ ಮಾಡಿಕೊಡುವುದು ಈ ಸಮಾವೇಶದ ಮುಖ್ಯ ಉದ್ದೇಶವಾಗಿದೆ.
ಎಲ್ಲೆಡೆ ಚುನಾವಣೆಯ ಪ್ರಕ್ರಿಯೆಗಳು ಸಾಂಕೇತಿಕವಾಗಿ ಪ್ರಾರಂಭವಾಗಿವೆ. ಕಾಂಗ್ರೆಸ್ ಕಾರ್ಯಕರ್ತರನ್ನು ಎಚ್ಚರಿಸುವ, ಚುರುಕುಗೊಳಿಸುವ, ಮಾರ್ಗದರ್ಶನ ಮಾಡುವ, ಪಕ್ಷದ ಸಂದೇಶವಾಹಕರನ್ನಾಗಿಸುವ ಸಮಾವೇಶವಿದು. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಆಗಮಿಸಲಿದ್ದು ಕಾರ್ಯಕರ್ತರಿಗೆ ಮಾರ್ಗದರ್ಶನ, ಚುನಾವಣಾ ಪೂರ್ವಸಿದ್ಧತೆಗಳ ಬಗ್ಗೆ ತಿಳಿಸಿಕೊಡಲಿದ್ದಾರೆ.
ಇತರ ರಾಜ್ಯಗಳಲ್ಲಿ ಇರದ ನಮ್ಮ ರಾಜ್ಯ ಸರ್ಕಾರ ರೂಪಿಸಿರುವ ವಿವಿಧ ಜನಪರ ಯೋಜನೆಗಳಾದ ಸನ್ನ ಭಾಗ್ಯ, ಕ್ಷೀರ ಭಾಗ್ಯ, ಕೃಷಿ ಭಾಗ್ಯ, ಬಯಲು ಸೀಮೆಗಾಗಿ 21 ಸಾವಿರ ಕೋಟಿ ರೂಗಳ ಎತ್ತಿನಹೊಳೆ ನೀರಾವರಿ ಯೋಜನೆ, 49 ಸಾವಿರ ಕೋಟಿ ರೂಗಳ ವಿವಿಧ ನೀರಾವರಿ ಯೋಜನೆಗಳ ಬಗ್ಗೆ ಜನರಿಗೆ ಕಾರ್ಯಕರ್ತರು ತಿಳಿಸಬೇಕು. ಈ ಎಲ್ಲಾ ಯೋಜನೆಗಳ ಫಲಾನುಭವಿಗಳು ಪಕ್ಷದ ಜನಪರ ಚಿಂತನೆಯ ಬಗ್ಗೆ ಅರಿತು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತಾಗಲಿ ಎಂಬುದು ನಮ್ಮ ಆಶಯವಾಗಿದೆ ಎಂದು ಹೇಳಿದರು.
ಬೃಹತ್ ಕಾರ್ಯಕರ್ತರ ಸಮಾವೇಶವನ್ನು ಎ.ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಉದ್ಘಾಟಿಸಲಿದ್ದಾರೆ, ಕೆ.ಪಿ.ಸಿ.ಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್, ಎಸ್.ಆರ್.ಪಾಟೀಲ್, ಆಸ್ಕರ್ ಫರ್ನಾಂಡಿಸ್, ಡಾ.ಎಂ.ವೀರಪ್ಪ ಮೊಯ್ಲಿ, ಬಿ.ಕೆ.ಹರಿಪ್ರಸಾದ್, ರೆಹಮಾನ್ ಖಾನ್, ಕೆ.ಎಚ್.ಮುನಿಯಪ್ಪ, ರಾಮಲಿಂಗಾರೆಡ್ಡಿ, ಕೆ.ಆರ್.ರಮೇಶ್ ಕುಮಾರ್, ಕೃಷ್ಣ ಬೈರೇಗೌಡ, ಎಚ್.ಎಂ.ರೇವಣ್ಣ, ನಸೀರ್ ಅಹ್ಮದ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಮಹಿಳಾ ವಿಭಾಗದ ಅಧ್ಯಕ್ಷೆ ಯಾಸ್ಮೀನ್ ತಾಜ್, ಮುಖಂಡರಾದ ಎನ್.ಮುನಿಯಪ್ಪ, ಸುಬ್ರಮಣಿ ಹಾಜರಿದ್ದರು.

ಆಶು – ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

0

ಶಿಡ್ಲಘಟ್ಟ ತಾಲ್ಲೂಕಿನ ಆನೆಮಡುಗು ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಡಿ.ಎಸ್. ಲಕ್ಷ್ಮೀಕಾಂತ ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರಾಢ ಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಆಶು – ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ

ಓಶೋ ರಜನೀಶ್ ಅಸಾಮಾನ್ಯ ವ್ಯಕ್ತಿ

0

ಓಶೋ ನೀಡಿರುವ ಪ್ರವಚನಗಳಲ್ಲಿ ವೇದಾಂತವಿದೆ, ಬದುಕಿನ ಸಾರವಿದೆ, ದಾರಿತಪ್ಪಿದವರಿಗೆ ಮಾರ್ಗದರ್ಶನವಿದೆ, ಜೀವನದರ್ಶನವೂ ಇದೆ. ಓಶೋಗೆ ಓಶೋನೇ ಸಾಟಿ ಎಂದು ಸಾಹಿತಿ ಬೆ.ಕಾ.ಮೂರ್ತೀಶ್ವರಯ್ಯ ತಿಳಿಸಿದರು.
ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ ಮತ್ತು ಕೇಂದ್ರ ಗ್ರಂಥಾಲಯದ ಸಹಯೋಗದಲ್ಲಿ ನಡೆದ ‘ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ 6 ನೇ ತಿಂಗಳ ಕಾರ್ಯಕ್ರಮದಲ್ಲಿ ತಾವು ಅನುವಾದಿಸಿರುವ ಓಶೋ ಕೃತಿಗಳಾದ ‘ಮುಂಜಾನೆಯ ಬೆಳಕಿನಲ್ಲಿ’ ಮತ್ತು ‘ಮೌನದ ಮಾತುಗಳು’ ಬಗ್ಗೆ ವಿವರಿಸಿ ಅವರು ಮಾತನಾಡಿದರು.
ಓಶೋ ರಜನೀಶ್ ಅಸಾಮಾನ್ಯ ವ್ಯಕ್ತಿ. ಈವರೆಗೆ ಎಲ್ಲ ವಿಷಯಗಳ ಬಗ್ಗೆ ಮಾತನಾಡಿರುವ ಓಶೋ, ಮಾತನಾಡದ ವಿಷಯವೇ ಬಹುಶಃ ಇಲ್ಲ. ಉಪನಿಷತ್, ಬೌದ್ಧ ಧರ್ಮ, ಯೋಗ, ಧ್ಯಾನ, ಝೆನ್, ಸೂಫಿ, ತಾವೋ, ಭಗವದ್ಗೀತೆ, ಭಾರತ, ಭಾರತೀಯ ಸಂತರು, ಪತಂಜಲಿ, ಶಿವಸೂತ್ರ, ಗಾಂಧಿ, ಆಧ್ಯಾತ್ಮ ಮುಂತಾದ ಎಲ್ಲಾ ವಿಚಾರಗಳ ಬಗ್ಗೆಯೂ ಮಾತನಾಡಿದ್ದಾರೆ. ನಿರಂತರವಾಗಿ ಮಾತನಾಡುತ್ತಲೇ ಇದ್ದ ಓಶೋ ವಿಚಾರಗಳು 600 ಪುಸ್ತಕಗಳಲ್ಲಿ ಬಂದಿವೆ ಎಂದರೆ ಅವರು ಎಷ್ಟು ಮಾತನಾಡಿದ್ದಾರೆ ಎಂದು ಊಹಿಸಬಹುದು.
ಓಶೋ ಒಬ್ಬ ವಿಸ್ಮಯ ವ್ಯಕ್ತಿ. ಅವರ ಚಿಂತನೆಗಳೂ ಕೂಡ ವಿಸ್ಮಯಕರವೇ. ಏಕೆಂದರೆ ಅವು ಕೊಡುವ ಒಳನೋಟಗಳು ನಮ್ಮನ್ನು ಬೆರಗುಗೊಳಿಸಬಲ್ಲವು, ಚಿಂತನೆಗೆ ಹಚ್ಚಬಲ್ಲವು. ಮನುಷ್ಯನ ಆತ್ಮ ಸಂತೋಷವೇ, ಧ್ಯಾನಸ್ಥ ಸ್ಥಿತಿಯನ್ನು ಮುಟ್ಟುವುದೇ ಅವರ ಪ್ರವಚನಗಳ ಗುರಿ. ದಾರಿದೀಪವಾಗಬಲ್ಲ ಅವರ ವಿಚಾರಗಳು ನಮ್ಮ ಜೀವನದಲ್ಲಿ ಸರಿದಾರಿಯನ್ನು ತೋರಬಲ್ಲುದು ಎಂದು ಹೇಳಿದರು.
ಬೆಂಗಳೂರು ಗ್ರಾಮಾಂತರ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿ, ಜ್ಆನವೆಂಬುದು ಸಾಗರದಂತಹುದು. ನಮ್ಮ ಬೊಗಸೆಯಲ್ಲಿ ಸಿಗುವಷ್ಟು ನಾವು ಹಿಡಿಯಬೇಕು. ಪುಸ್ತಕ ಪ್ರೀತಿಯನ್ನು ಬೆಳೆಸುವ, ಲೇಖಕರನ್ನು ಪರಿಚಯಿಸುವ ಈ ಕಾರ್ಯಕ್ರಮ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ದೇವನಹಳ್ಳಿ ತಾಲ್ಲೂಕು ಬೆಟ್ಟಕೋಟೆಯವರಾದ ಮೂರ್ತಿಶ್ವರಯ್ಯ,48 ಕೃತಿಗಳನ್ನು ರಚಿಸಿದ್ದಾರೆ. ದೇವನಹಳ್ಳಿ ತಾಲ್ಲೂಕು ಪರಿಚಯ, ಬಿ.ಆರ್.ಅಂಬೇಡ್ಕರ್, ಎ.ಪಿ.ಜೆ.ಅಬ್ದುಲ್ ಕಲಾಂ ರವರ ಚಿಂತನೆಗಳು, ಮಹಾತ್ಮ ಗಾಂಧಿ ನುಡಿಮುತ್ತುಗಳು, ತಮಿಳುನಾಡಿನ ಪಂಚಭೂತ ಸ್ಥಳಗಳು, ನ್ಯಾಯಾಲಯಗಳಲ್ಲಿ ಕನ್ನಡ, ಕನ್ನಡದಲ್ಲಿ ಕಾನೂನು ಸೂತ್ರಗಳು ಮುಂತಾದ ಕೃತಿಗಳನ್ನು ರಚಿಸಿರುವ ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ‘ಖಾದ್ರಿ ಶಾಮಣ್ಣ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಹೇಳಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಪಾ.ಮು.ಚಲಪತಿಗೌಡ, ಸಾಹಿತಿ ಕೃಷ್ಣಪ್ಪದಾಸರು ಹಾಜರಿದ್ದರು.

ಅಡುಗೆ ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ

0

ರಾಜ್ಯಾದ್ಯಂತ ಇರುವ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ತಯಾರಿಸಿ, ಬಿಸಿಯೂಟ ನೀಡುವ ಅಕ್ಷರ ದಾಸೋಹ ಕಾರ್ಯಕ್ರಮ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಾರ್ಥಕ ಕಾರ್ಯಕ್ರಮವಾಗಿದೆ ಎಂದು ಅಕ್ಷರದಾಸೋಹ ಸಹಾಯಕ ನಿರ್ದೇಶಕ ವೆಂಕಟೇಶ್ ಹೇಳಿದರು.
ನಗರದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾನುವಾರ ಅಕ್ಷರದಾಸೋಹ ಬಿಸಿಯೂಟ ಯೋಜನೆಯಡಿ ಅಡುಗೆ ಸಿಬ್ಬಂದಿಗಾಗಿ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳ ಮಕ್ಕಳಲ್ಲಿನ ಅಪೌಷ್ಠಿಕತೆಯನ್ನು ನಿವಾರಿಸುವುದು, ಮಕ್ಕಳ ಭೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ಬಿಸಿಯೂಟ ಯೋಜನೆ ಸಹಕಾರಿಯಾಗಿದೆ. ಇಂತಹ ಉತ್ತಮ ಯೋಜನೆ ಸದುಪಯೋಗವಾಗುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಸಿಬ್ಬಂದಿಯ ಆದ್ಯ ಕರ್ತವ್ಯವಾಗಿದೆ. ಇನ್ನು ಅಡುಗೆ ಸಿಬ್ಬಂದಿ ತಯಾರಿಸಿದ ಅಡುಗೆಯನ್ನು ಕಡ್ಡಾಯವಾಗಿ ಶಾಲಾ ಶಿಕ್ಷಕರು ಮೊದಲು ಸೇವಿಸಿ ನಂತರ ಮಕ್ಕಳಿಗೆ ನೀಡಬೇಕು. ಪ್ರಮುಖವಾಗಿ ಅಡುಗೆಯವರು ಅಡುಗೆ ಮನೆಯ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಅಡುಗೆ ಅನಿಲದ ಬಳಕೆಯ ಬಗ್ಗೆ ಬಿಸಿಯೂಟ ಅಡುಗೆ ಸಿಬ್ಬಂದಿ ಯಾವ ಯಾವ ಸುರಕ್ಷತೆ ಕ್ರಮಗಳನ್ನು ಅನುಸರಿಸಬೇಕು ಎನ್ನುವುದನ್ನು ನಗರದ ಇಂಡೇನ್ ಗ್ಯಾಸ್ ಏಜೆನ್ಸಿಯ ಅಣ್ಣಪ್ಪ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಸಿಆರ್ಪಿ ಗಳಾದ ಚಂದ್ರಶೇಖರ್, ರಮೇಶ್, ಉಲ್ಲೂರುಪೇಟೆ ಶಾಲೆಯ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ, ಇಂಡೇನ್ ಗ್ಯಾಸ್ ಏಜೆನ್ಸಿಯ ಮೇಲ್ವಿಚಾರಕ ಪ್ರಕಾಶ್, ಸಿಬ್ಬಂದಿ ಕುಮಾರ್, ಭರತ್, ರೂಪಸಿ ರಮೇಶ್ ಹಾಜರಿದ್ದರು.

ವಿಜಿಪುರ – ದೇವ್ನಳ್ಳಿ – ಮಾರ್ಕೆಟ್… ಮಾರ್ಕೆಟ್… ಮಾರ್ಕೆಟ್

0

“ಬಲಗಾಲಿಟ್ಟು ಒಳಗೆ ನಡಿಯಣ್ಣಾ… ” ಬೆಳಗಿನ ಚುಚ್ಚುವ ಚಳಿಯಲ್ಲಿ ಚಾ ಹೀರುತ್ತಾ ಕಲ್ಲಿನ ಬೆಂಚಿನ ತುದಿಯಲ್ಲಿ ಕೂತು ನಾನು ಹತ್ತುವುದನ್ನು ಗಮನಿಸುತ್ತಿದ್ದ ಬಸ್ Loader ತನ್ನ ಶುದ್ಧ ಸೌಮ್ಯ ಕಂಠದಲ್ಲಿ ಕೂಗಿದ… ನವ ವಧುವನ್ನು ಗಂಡನ ಮನೆಗೆ ಬರಮಾಡಿಕೊಳ್ಳುವಾಗ ಮಾತ್ರ ಈ ಪದಗಳನ್ನು ಕೇಳಿದ್ದ ನನಗೆ ಆವ ಹೇಳಿದ್ದು ಹೊಸದಾಗಿ ಕಂಡರೂ ಏನು ಪ್ರತೀತಿಯೂ ಎಂದುಕೊಂಡು “ಅಕ್ಕಿಯನ್ನು ಒದಿಬೇಕಾ ಮಾರಾಯಾ?” ಎಂದೆ. ನನ್ನ ಮಾತುಗಳನ್ನು ಮನದಲ್ಲೇ ಅಳೆದ ಅವನು ಟೀ ಹೀರುವ ಮೊದಲು ಶುಚಿಕೊಳಿಸಿದ್ದ ತನ್ನ ಹಲ್ಲುಗಳನ್ನು ಆಚೆಗೆ ಚಾಚಿ, “ಇಲ್ಲಣ್ಣ… ನೀನೆ ಪಷ್ಟ್ ಹತ್ತತಾ ಇರೋದು ಬಸ್ ನ ಅದ್ಕೆ ಹೇಳ್ದೆ” ಎಂದ. ಆ ದಿನ ಅವನ ಕಂಠದಿಂದ ಹೊರಬಂದ ಮೊದಲ ಪದಗಳಿರಬೇಕು ಅವು. ಶಿಡ್ಲಘಟ್ಟ – ಬೆಂಗಳೂರು ಮಾರ್ಗದಲ್ಲಿ ದಿನಪೂರ್ತಿ ಈ ಆಂಚಿನಿಂದ ಆ ಅಂಚಿನವರೆಗೆ ಎಲ್ಲಾ ಸ್ಟಾಪ್ ಗಳ ಹೆಸರುಗಳನ್ನು, ಹೋಲ್ಡಾಯ್ನ್ … ರೈಟ್, ರೈಟ್, ರೈಟ್ಗಳನ್ನು … ಅರಚಿ ಅರಚಿ, ಮೆಲುದನಿಯಲ್ಲಿ ಮಾತನಾಡಿದರೂ ಬಸ್ ನ ತುದಿಯವರೆಗೂ ಕೇಳುವಂತಾಗಿರುತ್ತದೆ. ಅಂತೂ ಅವನು ಹೇಳಿದಂತೆ ಬಲಗಾಲಿಟ್ಟು ಖಾಲಿ ಇದ್ದ ಬಸ್ ಹತ್ತಿದೆ.
ಈ ಬೆಂಗಳೂರು ಮಾರ್ಗವಾಗಿ ಚಲಿಸುವ ಖಾಸಗೀ ಬಸ್ ಗಳ ಕಥೆಯೇ ವಿಶೇಷವಾದುದು. ಕಾಮನಬಿಲ್ಲಿನ ಎಲ್ಲಾ ಬಣ್ಣಗಳ ಬಗೆಬಗೆಯ ಶೇಡ್ ಗಳನ್ನು ಹೊರಮೈಗೆ ಬಳಿಸಿಕೊಂಡು, ಒಳಮೈಗೆ ಲಕ ಲಕ ಬೆಳಗುವ ಬಗೆಬಗೆಯ ಲೈಟುಗಳನ್ನು ತಗುಲಿಸಿಕೊಂಡು, ಎರಡು – ನಾಲ್ಕು ಟಿವಿ ಗಳು, ಒಂದು ಡಿವಿಡಿ ಪ್ಲೇಯರ್ ಅನ್ನು ತೂರಿಸಿಕೊಂಡು ಕೆರೆಯ ಪಕ್ಕದ ರಸ್ತೆಯಲ್ಲಿ ರೆಡಿಯಾಗಿ ನಿಂತರೆ ಸಾಕು, ಹೊಸ ಮದುವೆಯ ಒಡವೆಗಳನ್ನ ಧರಿಸಿ ಶಿಡ್ಲಘಟ್ಟ ಸಂತೆಗೆ ಹೊರಟ ಸೊಣ್ಣೇನಹಳ್ಳಿಯ ನವ ವಧುವಿನಂತೆ ಕಾಣುತ್ತದೆ.
ಬಸ್ ಹತ್ತಿದ ನಾನು ನನಗೆ ಸರಿ ಹೊಂದುವಂತ ಸೀಟ್ ಅನ್ನು ಹುಡುಕತೊಡಗಿದೆ. ಮೂವರು ಕೂರಬಹುದಾದ ಸೀಟ್ ನಲ್ಲಿ ಮೂವರು ತೂರದ ಇಬ್ಬರಿಗೆನ್ನುವ ಸೀಟ್ ನಲ್ಲಿ ಇಬ್ಬರು ಹಿಡಿಯದ ಕಥೆ ಖಾಸಗಿ ಬಸ್ಗಳಲ್ಲಿ ಮಾಮೂಲು. ಕಿಟಕಿಯ ಕಡೆ ಕೂತರೆ ಮೊಣಕಾಲು ಮುಂದಿನ ಸೀಟಿಗೆ ಅವುಚಿ ಪ್ರತಿ ಹಳ್ಳ ಇಳಿದತ್ತಿದಾಗಲೂ ಮೊಣಕಾಲು ಚಿಪ್ಪು ಪುಡಿಯಾಗುವುದೆಂಬ ಭಯ ಬರದೇ ಇರಲಾರದು, ಸೀಟಿನ ಇನ್ನೊಂದು ಬದಿ ಕೂತರೆ ನಿಂತ ಪ್ರಯಾಣಿಕರು ತಮ್ಮ ಬ್ಯಾಗು, ಮಗು ಕೆಲವೊಮ್ಮೆ ತಮ್ಮನ್ನೂ ಮೇಲೆ ಕೂಡಿಸಿಬಿಡುವ ಭೀತಿ, ಇನ್ನು ಅಪ್ಪಿ ತಪ್ಪಿ 3 ಸೀಟರ್ ನ ಮಧ್ಯದಲ್ಲಿ ಕೂತರೆ ಚಪಾತಿ ಹಿಟ್ಟಿನಂತೆ ಕಲಿಸಿ, ಲಟ್ಟಿಸಿ, ಬೆಂದು ಬಳಲಾಗುವುದು ಖಂಡಿತ. ಎಲ್ಲಕ್ಕೂ safe ಎಂಬಂತೆ 2 ಸೀಟರ್ ನ ಕಿಟಕಿಯ ಕಡೆ ಕುಳಿತೆ. ಹೋರಾಡಲು ಸಿಧ್ದವಾದ ರೇಸರ್ ಕಾರಿನಂತೆ ರೊಯ್ಯ್ಯ್ ರೊಯ್ಯ್ಯ್ ಎಂದು ಇಂಜಿನ್ನನ್ನು ಹುರಿದುಂಬಿಸತೊಡಗಿದ್ದ ಡ್ರೈವರ್. ಲೋಡರ್ ಹೀರಿದ್ದ ಟೀ ಯ ಶಕ್ತಿಯಷ್ಟನ್ನು ತನ್ನ ಕಂಠಕ್ಕೆ ತೂರಿಸಿ ವಿಜಿಪುರ – ದೇವ್ನಳ್ಳಿ – ಮಾರ್ಕೆಟ್… ಮಾರ್ಕೆಟ್… ಮಾರ್ಕೆಟ್ ಕೂಗಲಾರಂಭಿಸಿದ. ದೂರದ ಬೇಕರಿಯ ಕಡೆಯಿಂದ ನಡೆದು ಬರುತ್ತಿದ್ದ ಜನ ಲೋಡರ್ ನ ಕೂಗು ಕೇಳಿ ಲಘು- ಬಗೆಯಿಂದ ಹೆಜ್ಜೆ ಹಾಕಲಾರಂಭಿಸಿದ್ದರು. ಅವರಲ್ಲಿ ಓರ್ವ ಮಹಿಳೆಯೊಬ್ಬಳು ಆಗದಿದ್ದರೂ ಇನ್ನೇನು ಬಸ್ ಹೊರಟೇಬಿಡುವುದೆಂಬ ಭಯದಿಂದ ನೋವಲ್ಲಿ ಮಿಂದೆದ್ದೆದ್ದಿದ್ದ ಕಾಲನ್ನು ತನ್ನ ಆಯಾಸಗೊಂಡ ದೇಹದ ಜೊತೆಗೆ ಒಗ್ಗೂಡಿಸಿಕೊಂಡು ಎಂಜಿನ್ನಿಂದ ಹೋಗೆ ಬಂದಂತೆ ಏದುಸಿರು ಬಿಡುತ್ತ ಓಡಿಬರತೊಡಗಿದರು. ಅಂತೂ ಇಂತೂ ಬಂದು ಕಾಲು ಎತ್ತಲಾಗದೆ ಫುಟ್ ಬೋರ್ಡ್ ನ ಮೇಲಿಟ್ಟು ಆಸರೆಗೆಂದಿದ್ದ ರಾಡನ್ನು ಜಗ್ಗಿ ತನ್ನ ಮೈಯನ್ನು ತೂರಲು, ಜಗ್ಗಿದ ಬಲ, ತೂರಿದ ಶಕ್ತಿ ಎರಡು ಸಾಲದೇ ಮತ್ತೆ ನೆಲಕ್ಕೆ ವಾಪಸ್ಸಾದರು. “ಏನಪ್ಪಾ ಇದನ್ನು ಇನ್ನು ಕೆಳಕ್ಕೆ ಮಾಡ್ಸಬಾರ್ದ? ವಯಸ್ಸಾದವರು ಹೇಗೆ ಹತ್ತೋದು?” ಎಂದು ತನ್ನ ಅಸಹಾಯಕತೆಯನ್ನು ಲೋಡರ್ನ ಮುಖಕ್ಕೆ ಎರಚಿದರು. “ಆದಂಗೆ ಬರೋದು ಅಕ್ಕೋವ್… ನಾವೇನ್ ಮಾಡಾಂಗಿಲ್ಲ… ಆಗಾಲ್ಲಾಂದ್ರೆ ಗವರ್ನಮೆಂಟ್ ಬಸ್ ಬರತೈತೆ ಅದ್ರಾಗ್ ಬನ್ನಿ ” ಮೊದಲೇ ಗೊತ್ತಿದ್ದ ಪ್ರಶ್ನೆಗೆ ಸಿದ್ಧನಾಗಿ ಬಂದು ಪ್ರಶ್ನೆಯನ್ನು ಓದದೇ ಉತ್ತರ ಬರೆಯತೊಡಗಿದ ಎಂಜಿನಿಯರಿಂಗ್ ವಿದ್ಯಾರ್ಥಿಯಂತೆ ಬಸ್ ನ ಲೋಡರ್ ಠಕ್ ಎಂದು ಉತ್ತರ ಕೊಟ್ಟ. ಇನ್ನೂ ಬಾರದ, ಬಂದರೂ ಸಮಯಕ್ಕೆ ಸರಿಯಾಗಿ ತಲುಪದ ಸರ್ಕಾರೀ ಬಸ್ ಗೆ ಕಾಯುವುದು ಥರವಲ್ಲವೆಂದು ಮನದಲ್ಲೇ ಅಳೆದ ಆ ಹೆಂಗಸು ತನ್ನ ಮೈಯಲ್ಲಿ ಉಳಿದಿದ್ದ ಚೈತನ್ಯವನ್ನೆಲ್ಲಾ ತೂರಿ, ಬಾಯಿಂದ “ರಾಮ.. ರಾಮಾ” ನಾಮವ ಉಸಿರಿ ಕಡೆಗೂ ಪುಟಿದೆದ್ದು ಬಸ್ ನ ಫುಟ್ಬೋರ್ಡಿಗೆ ತನ್ನ ಎರಡನೇ ಕಾಲನ್ನು ತಂದು ನಿಲ್ಲಿಸುವುದರಷ್ಟಟಲ್ಲಿ ಇನ್ನೊಂದು ಬಾರಿ ನೀರಲ್ಲಿ ಮಿಂದೆದ್ದ ಹಾಗಾಗಿತ್ತು. ಅಂತೂ ಇಂತೂ ತನ್ನೆಲ್ಲ ಸಾಮರ್ಥ್ಯದಿಂದ ಸಮರವನ್ನು ಜಯಿಸಿ ಬಂದ ಆ ಹೆಂಗಸು ತನ್ನ ಸೀರೆಯ ಸೆರಗಿನಿಂದ ಬೆವರನ್ನು ಒರೆಸಿಕೊಂಡು “ಉಸ್ಸಾಪ್ಪಾ…. ” ಎಂದು ಉದ್ಘಾರಿಸಿ ತಲೆಎತ್ತಿ ನೋಡಲು ಅವರ ಮುಖದ ಮೇಲಿದ್ದ ವಿಜಯದ ನಗು ಸಣ್ಣಗೆ ಮಾಸಿತು. ಇನ್ನೊಂದು ಬಾಗಿಲಿನಿಂದ ಹತ್ತಿದ್ದ ಜನ ಆಗಲೇ ಎಲ್ಲಾ ಸೀಟುಗಳ ಮೇಲೆ ಆಸೀನರಾಗಿದ್ದರು. ವಿಧಿ ಎಷ್ಟು ಕ್ರೂರ ಎಂದುಕೊಂಡರೋ ಏನೋ, “ಏನಪ್ಪಾ ಸೀಟಿಲ್ವಾ?” ಕೇಳಿದರು. ಆ ಪ್ರಶ್ನೆಗೂ ಸಿದ್ಧವಿದ್ದವನಂತೆ “ಬಾರಾಕ್ಕೋವ್ ಕೊಡಸ್ತೀನಿ, ಮಾರ್ಕೆಟ್ ನಾಗೆ ಎಲ್ಲಾ ಖಾಲಿ ಆಗೊತಾರೆ… ” loader ಹೇಳಿದ. “ಮಾರ್ಕೆಟ್ಟಲ್ಲಿ ನೀನೇನ್ ಕೊಡ್ಸೋದು? ನಾನು ದೇವನಹಳ್ಳೀಲೇ ಇಳಿದುಬಿಡ್ತೀನಿ” ಹತಾಶೆಯ ಜೊತೆಯಲ್ಲಿ ಸಿಟ್ಟು ಬೆರೆತಿದ್ದು ಧ್ವನಿಯಲ್ಲಿ ಕೇಳುತ್ತಿತ್ತು. ಇವರ ಸಂಭಾಷಣೆಯನ್ನು ಕೇಳುತ್ತಿದ್ದ ನನಗೆ ನಗು ಬಂದರೂ ತಡೆ ಹಿಡಿದೆ. ಅಷ್ಟರಲ್ಲಿ ಯಾರಿಗೋ ಕಾಯುತ್ತಿದ್ದ ವ್ಯಕ್ತಿ ತನ್ನ ಸಂಗಾತಿ ಸಮಯಕ್ಕೆ ಬಾರದ ಕಾರಣ ಮುಂದಿನ ಬಸ್ ನಲ್ಲಿ ಬರುವುದಾಗಿ ಇಳಿದ.. ಆಂಟಿಗೆ ಅಂತೂ ಇಂತೂ ಸೀಟ್ ಗ್ಯಾರಂಟಿ.
ಈ ಬಸ್ ಗಳ ಸಂಗತಿಯೇ ಸ್ವಾರಸ್ಯಕರ. ಪ್ರತಿ ಬಸ್ ಗಳಿಗೂ ಕೆಲವರು ಪರ್ಮನೆಂಟ್ ಗಿರಾಕಿಗಳಿರುತ್ತಾರೆ ಅವರಿಗೆ ಬೇರೆ ಪ್ರಯಾಣಿಕರಿಗೆ ಹೋಲಿಸಿದರೆ ಟಿಕೆಟ್ ದರ ೫-೧೦ ರೂ ಕಡಿಮೆ. ಬಹಳಷ್ಟು ಸಾರಿ ಅವರನ್ನು ಹೇರಿಕೊಳ್ಳದೆ ಬಸ್ ಬಿಡುವುದೂ ಇಲ್ಲ. ಇನ್ನು ೧-೨ ನಿಮಿಷ ತಡವಾದರೂ ಮುಂದಿನ ಬಸ್ ನ ಡ್ರೈವರ್ ಹಾಗೂ ಲೋಡರ್ ತನ್ನ ಆಸ್ತಿ ಕಿತ್ತುಕೊಂಡಂತೆ ಬಸ್ ನ ಹಾರ್ನ್ ಜೊತೆ ಅವರ ಗಂಟಲನ್ನು ಹೊಯ್ದುಕೊಳ್ಳುವುದೂ ಮಾಮೂಲು. ಜನರನ್ನು ಹತ್ತಿಸಿಕೊಂಡು ಹೊರಟು ಹಂಡಿಗನಾಳ ತಲುಪುವಷ್ಟರಲ್ಲಿ ಮೊದಲೇ ಬಾಯೊಳಗೆ ತುರುಕಿಕೊಂಡ DVD Player ಅನ್ನು ಚಾಲು ಮಾಡಿದರೆ ಅಂದಿನ ಮಾರ್ನಿಂಗ್ ಶೋ ಶುರು. ಶಿಡ್ಲಘಟ್ಟದಿಂದ ಮಾರ್ಕೆಟ್ ತಲುಪುವಷ್ಟರಲ್ಲಿ ಅರ್ಧ ಸಿನಿಮಾ ಮುಗಿದರೆ ಇನ್ನು ಅಲ್ಲಿಂದ ಹೊರಟು ಬರುವಾಗ ಇನ್ನರ್ಧ ಶೋ. ಮುಂಜಾನೆ ಹೋರಾಟ ಜನ ಸಂಜೆ ಕೆಲಸ ಮುಗಿಸಿ ಬರುವಾಗ ಅಪ್ಪಿ ತಪ್ಪಿ ಅದೇ ಬಸ್ ತನ್ನ ಕಡೆಯ ಟ್ರಿಪ್ ಹೊಡೆಯುತ್ತಿದ್ದರೆ ಅವರಿಗೆ ಪೂರ್ತಿ ಸಿನಿಮಾ ನೋಡುವ ಭಾಗ್ಯ. ಇನ್ನು ಆ ಸಿನಿಮಾಗಳು ಬಹಳಷ್ಟು ಸಾರಿ ಲೋಡರ್ ಅಥವಾ ಕಂಡಕ್ಟರ್ ನ ಮೆಚ್ಚಿನ ನಟನದ್ದಾಗಿರುವುದರಿಂದ ಆ ನಟನ ಮುಂದಿನ ಸಿನಿಮಾ ಬರುವ ವರೆಗೂ ಆದೆ ಸಿನಿಮಾ ನೋಡುವ ದೌರ್ಭಾಗ್ಯ ನಿತ್ಯದ ಪ್ರಯಾಣಿಕರಿಗೆ. ಹೀಗೆ ನಾನು Aarya 2 ಸಿನಿಮಾವನ್ನು 19 ಬಾರಿ ನೋಡಿ ರೋಸಿಹೋಗಿ ಕಡೆಗೂ ಕೇಳಿಯೇ ಬಿಟ್ಟಿದ್ದೆ “ಬೇರೆ ಯಾವುದು ಇಲ್ವಾ ಮಾರಾಯ? ನಾನು ೧೯ ಸರಿ ಇದನ್ನೇ ನೋಡಿದ್ದೇನೆ” ಎಂದರೆ.. “ಇನ್ನೊಂದು 6 ಸರಿ ನೋಡಿಬಿಡಣ್ಣ.. ಸಿಲ್ವರ ಜೂಬಿಲಿ ಆಗ್ಬಿಡ್ತೈತೆ ನಮ್ ಹೀರೊ ದು” ಎನ್ನುವ ಉತ್ತರ ಕಾದಿತ್ತು. ಇದು ನನ್ನ ಪಾಡಾದರೆ, ಹೊಸ ಪ್ರಯಾಣಿಕರು “ನಿಮ್ಮ ತಲೆ ಸ್ವಲ್ಪ ಪಕ್ಕಕ್ಕೆ ಇಟ್ಕೊಳಿ, ಕೈ ತಗಿರಿ, ಸ್ವಲ್ಪ ಸೌಂಡು ಜಾಸ್ತಿ ಮಾಡಿ” ಎಂದು ನವ ಹುರುಪಿನಲ್ಲಿ ಸಿನಿಮಾ ನೋಡುತ್ತಿದ್ದರು. ಇನ್ನು ಕಂಬಗಳಿಗೆ ಒರಗಿ ನಿಂತು, ಹ್ಯಾಂಡಲ್ ಗಳಿಗೆ ಜೋತು ಬಿದ್ದು ಸಿನಿಮಾ ನೋಡುವವರ ಮತಿ ಯಾವ ಮಟ್ಟಿಗೆ ಕಳೆದಿರುತ್ತಿತ್ತೆಂದರೆ ಇತರರಿಗೆ ಅಡ್ಡಲಾಗಿ, ಸ್ಟಾಪುಗಳು ಬಂದಾಗ ಕೆಲವೊಮ್ಮೆ ಇಳಿದು ಹತ್ತುವುದಕ್ಕೂ ಪ್ರಯಾಣಿಕರಿಗೆ ಘಾಸಿಯಾಗುತ್ತಿತ್ತು. ಬರಬರುತ್ತಾ ಇದರ ತೀವ್ರತೆ ಕಂಡಕ್ಟರ್, ಲೋಡರ್ ಗಳಿಗೆ ತಗುಲಿ ಸಿನಿಮಾ ಬದಲಾಗಿ ಹಾಡುಗಳ ಮೊರೆಹೋಗುವ ನಿರ್ಧಾರಕ್ಕೆ ಬಂದರು. ತಮ್ಮ ನೆಚ್ಚಿನ ನಟನನ್ನು ದಿನಪೂರ್ತಿ ನೋಡಲಾಗದ ಲೋಡರ್ ಸಪ್ಪಗೆ ಕಂಡರೂ, ಬಸ್ಸನ್ನು ತುಂಬಿಸುವ ಹುರುಪಿನಲ್ಲಿ ಅದನ್ನು ನಿಧಾನವಾಗಿ ಮರೆಯಲಾರಂಭಿಸಿದ್ದ.
ಪ್ರತಿ ದಿನವೂ ಅದೇ ಬಸ್ನಲ್ಲಿ ಅದೇ ಸಮಯದಲ್ಲಿ ಪ್ರಯಾಣ ಮಾಡುತ್ತಿದ್ದುದರಿಂದ ನನಗೆ ಕಂಡಕ್ಟರ್, ಲೋಡರ್ ಗಳ ಸಖ್ಯ ಬೆಳೆದಿತ್ತು. ಕಂಡಕ್ಟರ್ ಹಾಲವು ಬಾರಿ ಬಂದು “ನೀವೇ ಪರಷ್ಟು ಟಿಕೀಟು ತಗೋಳಿ ಸಾರ್, ಬೋಣಿ ಚೆನ್ನಾಗಿ ಆಗತೈತೆ” ಎಂದು ಹೇಳಿದಾಗಲೆಲ್ಲಾ, “ನಿಮಗಾ? ಅಥವಾ ಓನರ್ ಗಾ?” ಎಂದು ರೇಗಿಸಿ ಕಳುಹಿಸಿದ್ದೆ. ಡೀಸಲ್ ಬೆಲೆ ಏರಿದಾಗಲೆಲ್ಲಾ ಟಿಕೆಟ್ ಬೆಲೆಯನ್ನು ಜಾಸ್ತಿ ಮಾಡಿ, ಡೀಸೆಲ್ ಬೆಲೆ ಕಡಿಮೆ ಆದಾಗ ಅದರ ಸೂಕ್ಷ್ಮವೂ ತಿಳಿಯದ ಹಾಗೆ ಇದ್ದುಬಿಡುತ್ತಿದ್ದ ಅವರನ್ನು “ಯಾಕ್ರೀ, ಕಡಿಮೆ ಆದಾಗ ಕಡಿಮೆ ಮಾಡಲ್ವಾ?” ಎಂದು ಕೇಳಿದರೆ, “ಸುಮ್ನೆ ಇರಿ ಸಾರ್, ಬೇರೆ ಅವರು ಕೇಳಿದರೆ ಗಲಾಟೆ ಮಾಡ್ತಾರೆ, ಅವರ್ಗೆ ಏನೂ ಹೇಳಕ್ಕೆ ಆಗಲ್ಲ… ಅದೇನೋ ನಮ್ ದೂ ಯೂನಿಯನ್ ಅಂತೇ… ಅಲ್ಲಿ ಹೆಳ್ದ್ರೆ ಕಡಿಮೆ ಮಾಡ್ಬೇಕಂತೆ, ನಾಮ್ಕೆನೂ ಗೊತ್ತಾಗಲ್ಲ ಸಾರ್ ಅದೆಲ್ಲ” ಎಂದು ಸಮಜಾಯಿಷಿ ನೀಡುತ್ತಿದ್ದರು. ಹಲವು ಸಾರಿ ಅವರಿಗೆ ಮನೆಯಿಂದ ಕಳುಸಿರುತ್ತಿದ್ದ ಹಣ್ಣು, ತಿಂಡಿಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದಿದೆ. ಹೀಗೆ ಸಾಗಿದ್ದ ನಮ್ಮ ನಿತ್ಯ ಪ್ರಯಾಣದ ಸುಂದರ ಸಿನಿಮಾಕ್ಕೆ ಒಂದು ದಿನ ವಿಲನ್ ನ ಆಗಮನವಾಗಿತ್ತು. ಅಚಾನಕ್ಕಾಗಿ ಇನ್ನೊಂದು ಬಸ್ಸಿನ ಕಂಡಕ್ಟರಿನಿಂದ ಬಂದ ಮೊಬೈಲ್ ಕರೆಯನ್ನು ಕಿವಿಗೆ ಹಿಡಿದು, ” ಯಾಡುಂಡಾಡು?… ಯಾಡ ಪೋವೆಲ್ರಾ? … ” ವಿಷಯ ತಿಳಿದ ಕೂಡಲೇ ಅದನ್ನು ನಂತರದ ಬಸ್ಸಿನ ಕಂಡಕ್ಟರಿಗೆ ಇನ್ನೊಂದು ಕರೆ ಮಾಡಿ ಮುಟ್ಟಿಸಿ, ಡ್ರೈವರಿನ ಸೀಟಿನ ಬಳಿಗೆ ನಡೆದು ಅವರಿಗೆ ಹೇಗೆ ಹೋಗಬೇಕಂದು ತಿಳಿಸಿ ಗಾಬರಿಯಿಂದ ಮುಂದಿನ ರಸ್ತೆಯನ್ನು ನೋಡುತ್ತಾ ಕುಳಿತ. “ಏನಾಯ್ತ್ರಿ?” ನನ್ನ ಪ್ರಶ್ನೆಗೆ “RTO ಅಂತೇ ಸಾರ್, ಮುಂದೆ ಹೋಗಿದ್ ಬಸ್ ನ ರೇಡ್ ಮಾಡವ್ರೆ… ನಾವು ದಾರಿ ಬದಲಾಯ್ಸಿ ಹೋಗ್ತಿವಿ” ಎಂದು ಮಧ್ಯದ ಎರಡು ಸ್ಟಾಪುಗಳ ಜನರನ್ನು ಅಲ್ಲೇ ಇಳಿಸಿ ಬೇರೊಂದು ಮಾರ್ಗವಾಗಿ, ನೋಡಿರದ ಹಳ್ಳಿಗಳ ಹೊಕ್ಕಳೊಳಗೆ ಹೊಕ್ಕಿ ಅದೇ ಮಾರ್ಗಕ್ಕೆ ಬಂದು ಸೇರಲು ಒಂದು ತಾಸೆ ಕಳೆದು ಹೋಗಿತ್ತು. “ಯಾಕೆ ಪರ್ಮಿಟ್ ಇಲ್ವಾ?” ತನಗೆ ಬೇಡದ ಪ್ರಶ್ನೆಯನ್ನು ಕೇಳಿದ ನನ್ನನ್ನು ನೋಡಿ ಕಂಡಕ್ಟರ್ “ಅಯ್ಯೋ ಸಾರ್, ಅವ್ರ್ ಪರ್ಮಿಟ್ ಕಥೆ ಕಟ್ಕೊಂಡ್ರೆ ನಾವ್ ಬಸ್ ಓಡ್ಸಕ್ಕೆ ಆಗ್ತದ?… ಒಂದು ಮಾಡುದ್ರೆ ನೂರು ಹೊಸ ರೂಲ್ಸ್ ತರ್ತಾರೆ ” ಎಂದು ಹೇಳಿ, ಕಡೆಯ ಸ್ಟಾಪಿನಲ್ಲಿ ಬಸ್ಸನ್ನು ನಿಲ್ಲಿಸಿ ನಡೆದರು. ನಾನೂ ನನ್ನ ಇಂದಿನ ಕೆಲ್ಸದ ಹಾದಿಯಲ್ಲಿ ಮುನ್ನಡೆದೆ. ಸಂಜೆ ಹೇಗೆ ಊರಿಗೆ ವಾಪಸ್ ಬರುವುದು?… ಗವರ್ನಮೆಂಟ್ ಬಸ್ ಗೆ ಹೋಗೋಣ್ವಾ ಅಥವಾ ಇಲ್ಲೇ ಉಲಿಯೋಣವಾ? ಎಂದು ಮನಸ್ಸಿನಲ್ಲಿಯೇ ನನ್ನ ಆಯ್ಕೆಗಳನ್ನು ಗುರುತಿಸಿಕೊಳ್ಳಲಾರಂಭಿಸಿದೆ. ಸಂಜೆಯ ಕಥೆ ಸಂಜೆ ನೋಡಿಕೊಳ್ಳೋಣವೆಂದು ಆಫೀಸಿನ ಕಡೆಗೆ ನಡೆದೆ.
ಇನ್ನು ಸಂಜೆ ಕೆಲಸ ಮುಗಿಸಿ ಬರುವಾಗ ಮೆಜೆಸ್ಟಿಕ್ ಗೆ ಹೋಗುವುದು ಒಳಿತೆಂದು ಅನಿಸಿದರೂ ಒಂದು ಸಾರಿ ಮಾರ್ಕೆಟ್ ಸ್ಟಾಪಿನಲ್ಲಿ ನೋಡಿ ಹೋಗೋಣವೆಂದು ಭಾವಿಸಿ, ಎಂದಿನಂತೆ ಮಸೀದಿಯ ರಸ್ತೆಯ ತುದಿ ತಲುಪುವಷ್ಟರಲ್ಲಿ ನಮ್ಮ ಪ್ರತಿನಿತ್ಯದ ಬಸ್ ಇಣುಕಿ ನೋಡುತ್ತಿದ್ದುದು ಕಾಣಿಸಿತು. ನನ್ನನ್ನು ಕಂಡ ತಕ್ಷಣ ಲೋಡರ್ “ಬಾರಣ್ಣ ಬೇಗ, ಇವತ್ತು ಬೇಗ ಬಿಡ್ಬೇಕು, ಮಧ್ಯ ಸ್ಟಾಪು ಇಲ್ಲ” ಎಂದು ಕೈಬೀಸಿ ಕೂಗಿದ. ಖುಷಿಯಿಂದ ಏರುವಾಗ ಬಸ್ ನ ಬೋರ್ಡು ಗಮನಿಸಿದೆ. ಮಾಮೂಲಿನಂತೆ ಶಿಡ್ಲಘಟ್ಟ – ಬೆಂಗಳೂರು ಕಾಣಲಿಲ್ಲ. ಅದರ ಜಾಗದಲ್ಲಿ ” ರೀನಾ ವೆಡ್ಸ್ ಜಯರಾಮ್” ಬೋರ್ಡು ಕಾಣಿಸಿತು. ನಾನು ನೋಡಿದ್ದನ್ನು ಗಮನಿಸಿದ ಲೋಡರ್ “RTO ಗೆ ನಮ್ ಪ್ಲ್ಯಾನು ಅಣ್ಣೋ ” ಎಂದ. ಬಾಗಿಲ ಪಕ್ಕದಲ್ಲಿಯೇ ಸೀಟಿನಲ್ಲಿ ಕೂತ ನಾನು ಬಾಗಿಲಲ್ಲಿ ನೇತಾಡಿಕೊಂಡು ನಿಂತಿದ್ದ ಲೋಡರ್ಅನ್ನು ಕೇಳಿದೆ “ಈ ರೀನಾ, ಜಯರಾಮ್ ಯಾರಪ್ಪಾ? “… “ರೀನಾ ನಮ್ಮ್ಹುಡುಗಿ ಅಣ್ಣಾ, 1 ವರ್ಷ ದಿನಾ ಮನೆ ಮುಂದೆ ಹೋಗಿ ನೋಡ್ತಾ ಇರ್ತಿದ್ದೆ …” ಅವನ ಭೂತ ಕಾಲದ ಪ್ರಯೋಗದಿಂದ ಎಚ್ಚರವಾದ ನಾನು ಮುಂದೇನಾಯಿತೆಂದರೆ.. “ಯಾರೋ ಅಲ್ಲಾ ಬಕಾಷ್ ಅನ್ನೋವನ್ ಜೊತೆ ಅವ್ಳ ಮದ್ವೆ ಆಯ್ತಣ್ಣೊ… ಈಗ ಚಿಕ್ಕ ಮಗು ನೂ ಇದೆ ” ಎಂದ. “ಹಾಗಾದ್ರೆ ಈ ಜಯರಾಮ್ ಯಾರು?” ಹಿಂದೆಯೇ ನನ್ನ ಪ್ರಶ್ನೆ ಸಿದ್ಧವಾಗಿತ್ತು. “ನನ್ನ ಹೆಸರು ಜಯರಾಮ್ ಅಣ್ಣಾ, ಈ ಬೋರ್ಡ್ನ ಮಾಡ್ಸೋವಾಗ ಏನ್ ಹೆಸರು ಹಾಕ್ಬೇಕು ಗೊತ್ತಾಗ್ಲಿಲ್ಲ ಅದ್ಕೆ ನಮ್ಮಿಬ್ರುದು ಹಾಕ್ಸ್ದೆ” ಎಂದ.
ಪ್ರಶ್ನೆಗಳು ಮತ್ತಷ್ಟಿತ್ತು ಆದರೂ ಬಹಳಷ್ಟಕ್ಕೆ ಈಗಾಗಲೇ ಉತ್ತರ ಸಿಕ್ಕಿಯಾಗಿತ್ತು. ನಾನು ಸಣ್ಣ ನಗುವಿನೊಂದಿಗೆ ಮಾತು ಮುಗಿಸಿದ್ದೆ.
ಜಯರಾಮ ತನ್ನ ಕಾರ್ಯ ಮುಂದುವರೆಸಿದ್ದ…. “ಯಲಹಂಕ, ದೇವನಳ್ಳಿ, ವಿಜಿಪುರ… ಸಿಲ್ಗಟ್ಟ … ಸಿಲ್ಗಟ್ಟ… ಸಿಲ್ಗಟ್ಟ”
– ಸಂದೀಪ್ ಜಗದೀಶ್ವರ್

ದಾನಮ್ಮಗೆ ಶ್ರದ್ಧಾಂಜಲಿ

0

ಶಿಡ್ಲಘಟ್ಟದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್.ಎಸ್.ಯು.ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಅತ್ಯಾಚಾರಕ್ಕೆ ಒಳಗಾಗಿ ಕೊನೆಯುಸಿರೆಳೆದ ಬಾಲಕಿ ದಾನಮ್ಮಗೆ ಶ್ರದ್ಧಾಂಜಲಿ ಅರ್ಪಿಸಿದರು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು

ಪುತ್ಥಳಿ ಅನಾವರಣ ಕಾರ್ಯಕ್ರಮ

0

ಶಿಡ್ಲಘಟ್ಟದ ಬಸ್ ನಿಲ್ದಾಣದ ಬಳಿ ಗುರುವಾರ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಹೊರಟ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸದಸ್ಯರಿಗೆ ಸರ್ಕಲ್ ಇನ್ಸ್ ಪೆಕ್ಟರ್ ಸಿದ್ದರಾಜು ಕನ್ನಡ ಬಾವುಟ ಬೀಸಿ ಶುಭಕೋರಿದರು. ಅಕ್ಷ್ಮೀಕಾಂತರೆಡ್ಡಿ, ಅರುಣ್ ಸಿಂಗ್, ಹರೀಶ್, ಮುರಳಿ, ಶಾಬಾಜ್ ಪಾಷ, ಶಯೀದ್ ಸಿಬ್ಬು ಹಾಜರಿದ್ದರು

ಅರ್ಥಪೂರ್ಣವಾಗಿ ಕುವೆಂಪು ಜನ್ಮದಿನಾಚರಣೆ

0

ಕನ್ನಡಕ್ಕೆ ಮೊಟ್ಟಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದೆಂದು ತಹಶೀಲ್ದಾರ್ ಅಜಿತ್ ಕುಮಾರ್ ರೈ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ ಹಾಗೂ ತಾಲ್ಲೂಕಿನಲ್ಲಿ ನಡೆಸುವ ಜಿಲ್ಲೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಆಚರಿಸುವ ಸಲುವಾಗಿ ನಡೆದ ಪೂರ್ವಬಾವಿ ಸಭೆಯಲ್ಲಿ ಅವರು ಮಾತನಾಡಿದರು.
ಡಿಸೆಂಬರ್ 29 ರಂದು ಆಚರಿಸುವ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆಗೆ ಸರ್ಕಾರದ ಆದೇಶದಂತೆ ಎಲ್ಲಾ ಸರ್ಕಾರಿ ಕಚೇರಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಬೇಕು. ಕುವೆಂಪು ಅವರ ಭಾವಚಿತ್ರವನ್ನು ಹೊತ್ತ ಮುತ್ತಿನ ಪಲ್ಲಕ್ಕಿಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವುದರ ಜೊತೆಗೆ ಕಲಾತಂಡಗಳನ್ನು ಕರೆಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಒಕ್ಕಲಿಗರ ಯುವಸೇನೆ ತಾಲ್ಲೂಕು ಸಂಘದ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ ಮಾತನಾಡಿ, ಈ ಪೂರ್ವಭಾವಿ ಸಭೆಗೆ ಗೈರು ಹಾಜರಾದ ಸರ್ಕಾರಿ ಅಧಿಕಾರಿಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಯಿಸಿದ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರು ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದರು.
ನಗರದ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಫ್ರೌಡ ಶಾಲೆಗಳಲ್ಲಿ ಕುವೆಂಪು ಅವರ ಬಗ್ಗೆ ಪ್ರಬಂಧ ಹಾಗೂ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಣೆ ಮಾಡಬೇಕೆಂದು ಕಾರ್ಯಕ್ರಮದಲ್ಲಿ ತೀರ್ಮಾನಿಸಲಾಯಿತು.
ತಾಲ್ಲೂಕಿನಲ್ಲಿ ನಡೆಸುವ ಜಿಲ್ಲೆಯ ದಶಮಾನೋತ್ಸವ ಕಾರ್ಯಕ್ರಮವನ್ನು ನೆಹರೂ ಕ್ರೀಡಾಂಗಣದಲ್ಲಿ ಜನವರಿ 22 ರಂದು ನಡೆಸಲಾಗುವುದು ಎಂದು ತಿಳಿಸಿದ ತಹಶೀಲ್ದಾರ್ ಅಜಿತ್ ಕುಮಾರ್ ರೈ, ವಿವಿಧ ಸರ್ಕಾರಿ ಇಲಾಖೆಗಳ ಮಾಹಿತಿ ನೀಡುವ ಮಳಿಗೆಗಳಿರುತ್ತವೆ, ಸಾವಯವ ಕೃಷಿಕರು ಹಾಗೂ ವಿವಿಧ ಪ್ರದರ್ಶಕರಿಗೂ ಅವಕಾಶ ಕಲ್ಪಿಸಲಾಗುವುದು ಎಂದರು. ಜಾನಪದ ಹಾಗೂ ಸಾಂಸ್ಕೃತಿಕ ಕಲಾ ಪ್ರದರ್ಶನಕ್ಕೂ ವೇದಿಕೆಯಿರುತ್ತದೆ ಎಂದು ತಿಳಿಸಿದರು.
ಗ್ರೇಡ್ ೨ ತಹಶೀಲ್ದಾರ್ ಮುನಿಕೃಷ್ಣಪ್ಪ, ನಗರಸಭಾ ಆಯುಕ್ತ ಛಲಪತಿ, ಬಿ.ಸಿ.ಎಂ ಅಧಿಕಾರಿ ಶಂಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಬಾಬು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ಸರ್ಕಲ್ ಇನ್ಸ್ ಪೆಕ್ಟರ್ ಸಿದ್ದರಾಜು. ಎಚ್.ಜಿ.ಗೋಪಾಲಗೌಡ, ನಾರಾಯಣಸ್ವಾಮಿ, ಮೌಲಾ, ತ್ಯಾಗರಾಜ್, ಪ್ರತೀಶ್, ದೇವರಾಜ್ ಹಾಜರಿದ್ದರು.

ಜೆಡಿಎಸ್ ಬೆಂಬಲಿತ ಎಚ್.ಎಂ.ರಾಮಚಂದ್ರ ಜಯ

0

ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಜಗೂರು ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಎಚ್.ಎಂ.ರಾಮಚಂದ್ರ ಜಯಗಳಿಸಿದ್ದಾರೆ.
ನಗರದ ತಾಲ್ಲೂಕು ಕಚೇರಿಯಲ್ಲಿ ಬುಧವಾರ ನಡೆದ ಮತ ಎಣಿಕೆ ಕಾರ್ಯದಲ್ಲಿ ಒಟ್ಟು ೪೪೭ ಮತಗಳ ಪೈಕಿ ೦೪ ಮತಗಳು ತಿರಸ್ಕೃತಗೊಂಡಿದ್ದು, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಚ್.ಎಂ.ರಾಮಚಂದ್ರ ೨೫೮ ಮತಗಳು ಪಡೆದು ವಿಜೇತರಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ೧೮೫ ಮತಗಳು ಪಡೆಯುವುದರೊಂದಿಗೆ ೭೩ ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.
ವಿಜೇತ ಅಭ್ಯರ್ಥಿ ಎಚ್.ಎಂ.ರಾಮಚಂದ್ರರಿಗೆ ಚುನಾವಣಾಧಿಕಾರಿ ಹಾಗು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶ್ರೀನಾಥ್ಗೌಡ ಪ್ರಮಾಣ ಪತ್ರ ವಿತರಿಸಿದರು.
ಸಹಾಯಕ ಚುನಾವಣಾಧಿಕಾರಿ ದಿನೇಶ್, ಮತಗಟ್ಟೆ ಅಧಿಕಾರಿ ಎಲ್.ವಿ.ವೆಂಕಟರೆಡ್ಡಿ, ಚುನಾವಣೆ ಶಾಖೆಯ ಸಿದ್ದೇಶ್ವರ, ಮುಖಂಡರಾದ ಹುಜಗೂರು ರಾಮಣ್ಣ ಹಾಜರಿದ್ದರು.

ಸ್ಯಾಟಲೈಟ್ ತರಬೇತಿ ಕಾರ್ಯಾಗಾರ

0

ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡವುಂತಹ ಮಹಿಳಾ ಆರೋಗ್ಯ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರು ಯಾವ ಯಾವ ಹಂತದಲ್ಲಿ ಯಾವ ಕೆಲಸ ನಿರ್ವಹಿಸಬೇಕು ಎನ್ನುವುದನ್ನು ತಿಳಿಸಿಕೊಡಲು ಸರ್ಕಾರ ಉಪಗ್ರಹ (ಸ್ಯಾಟಲೈಟ್) ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಮಹಿಳಾ ಆರೋಗ್ಯ ಮೇಲ್ವಿಚಾರಕಿ ಸಿ.ಮುನಿರತ್ನಮ್ಮ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆರೋಗ್ಯ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರಿಗಾಗಿ ಏರ್ಪಡಿಸಲಾಗಿದ್ದ ಸ್ಯಾಟಲೈಟ್ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಆರೋಗ್ಯ ಸಹಾಯಕಿಯರೂ ಹಾಗೂ ಆಶಾ ಕಾರ್ಯಕರ್ತೆಯರು ಸಮುದಾಯದ ಆರೋಗ್ಯದ ಕುರಿತು ಮಾಹಿತಿ ನೀಡುವ ಕೆಲಸ ಮಾಡುತ್ತಾರೆ. ವಿಶೇಷವಾಗಿ ಮಹಿಳೆಯರು, ಮಕ್ಕಳು, ಗರ್ಭಿಣಿಯರಿಗೆ ಕಾಲ ಕಾಲಕ್ಕೆ ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುವುದು, ಆರೋಗ್ಯ ಸಂಬಂಧಿ ಸಲಹೆಗಳು, ಗ್ರಾಮೀಣ ಭಾಗದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವಂತೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಾಗುತ್ತದೆ.
ಗರ್ಭಿಣಿಯರ ಆರೈಕೆ ಹಾಗೂ ಬಾಣಂತಿಯರ ಆರೈಕೆಯಲ್ಲಿ ಆರೋಗ್ಯ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರು ಯಾವ ರೀತಿ ಪಾಲನೆ ಮಾಡಬೇಕು ಎನ್ನುವುದನ್ನು ಈ ಸ್ಯಾಟಲೈಟ್ ತರಬೇತಿ ಕಾರ್ಯಾಗಾರದಲ್ಲಿ ತಿಳಿಸಿಕೊಡಲಾಗುತ್ತಿದೆ ಎಂದರು.
ಕಾರ್ಯಾಗಾರದಲ್ಲಿ ಆರೋಗ್ಯ ಮೇಲ್ವಿಚಾರಕಿ ಎನ್.ಗೀತಾ, ಎಸ್ಬಿಎಂ ತಾಲ್ಲೂಕು ಸಾಕ್ಷರತಾ ಸಲಹೆಗಾರ ನಾರಾಯಣಸ್ವಾಮಿ ಹಾಜರಿದ್ದರು.