Home Blog Page 391

ರಾಷ್ಟ್ರೀಯ ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ಪದಕ ಪಡೆದ ಚಿಣ್ಣರು

0

ಬೆಳಗಾವಿಯಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ನಗರದ ದಿವ್ಯಭಾರತ್ ಕರಾಟೆ ಡೋ ಅಸೋಸಿಯೇಷನ್ ವಿದ್ಯಾರ್ಥಿಗಳು ವಿಜೇತರಾಗಿ ಪದಕಗಳನ್ನು ಪಡೆದಿದ್ದಾರೆ.
ರೂರಲ್ ಗೇಮ್ಸ್ ಆರ್ಗನೈಸೇಷನ್ ಆಫ್ ಇಂಡಿಯಾ ಸ್ಕೇಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾಗವಹಿಸಿದ್ದ ಸಿ.ಹೇಮಂತ್ 500 ಮೀಟರ್ ರೀಕ್ ರೇಸ್ ಇನ್ ಲೈನ್ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಪಡೆದಿದ್ದರೆ, ಹರ್ಷಿತ್ 1000 ಮೀಟರ್ ರೀಕ್ ರೇಸ್ ಇನ್ ಲೈನ್ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಚೇತನ್, ಪವನ್, ತಿಲಕ್ ಮತ್ತು ಶ್ರೀಕಾಂತ್ ಸಮಾಧಾನಕರ ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಪಡೆದಿದ್ದಾರೆ ಎಂದು ಸ್ಕೇಟಿಂಗ್ ಶಿಕ್ಷಕ ಅರುಣ್ ಕುಮಾರ್ ತಿಳಿಸಿದ್ದಾರೆ.

ನಮ್ಮೂರಿನ ಜುರಾಸಿಕ್ ಪಾರ್ಕ್

0

“ಇದಿ ಮುನಿಯಪ್ಪ ವಾಳ್ಳು ಇಲ್ಲು ಕಟ್ಟತಉಂಡೆದಂಟ್ರ… ” , “ಕಾದ್ರ ರೇಯ್, ಏಮೋ ಸ್ಮಶಾನಮು ಅನಿ ಅಂಟಾ ಉಂಡ್ರಿ…” ಬಗೆ ಬಗೆಯ ಮಾತುಗಳು ಶಿಡ್ಲಘಟ್ಟ – ಚಿಂತಾಮಣಿ ಮಾರ್ಗವಾಗಿ ಓಡಾಡುತ್ತಿದ್ದ ಜನರ ಬಾಯಲ್ಲಿ ಕೇಳಿಬರುತ್ತಿತ್ತು. ಸಮರೋಪಾದಿಯಲ್ಲಿ ರಾತ್ರಿಯ ಸೋಡಿಯಂ ವೇಪರ್ ಬೆಳಕಿನ ಅಡಿಯಲ್ಲಿ ಜೆ ಸಿ ಬಿ ಗಿಡಗಂಟಿಗಳನ್ನು, ಅರ್ಧ ಮೇಲೆ ಇನ್ನರ್ಧ ನೆಲದಡಿಯಲ್ಲಿ ಅವಿತಿದ್ದ ಬಂಡೆಗಳನ್ನು ಕಿತ್ತೊಗೆಯುವುದನ್ನು ಕಾಣುತ್ತಿದ್ದ ಜನರಿಗೆ ಇಷ್ಟು ಆತುರದಲ್ಲಿ ಏನು ಕಟ್ಟುತ್ತಿದ್ದಾರೆ ಎಂಬ ಕುತೂಹಲ, ಅದರ ಬಗ್ಗೆ ತಿಳಿಯುವ ಕಾತುರತೆ ಎರಡೂ ಸಾಮಾನ್ಯವಾಗಿತ್ತು. ಇವೆಲ್ಲದಕ್ಕೂ ಉತ್ತರವೆಂಬಂತೆ ಕೆಲವೇ ದಿನಗಳಲ್ಲಿ “ನಮ್ಮೂರಿನ ಪಾರ್ಕ್” ಪಂಪ್ ಹೌಸಿನ ಬದಿಯಲ್ಲಿ ಸಿದ್ಧವಾಗಿ ನಿಂತಿತ್ತು.
ಆಗ ತಾನೇ ಹದಗೊಂಡಿದ್ದ ಕೆಂಪು ನೆಲ, ಕಾಲು ದಾರಿಯ ಇಬ್ಬದಿಯಲ್ಲಿ ದಿನಗಳ ಹಿಂದ ನೆಟ್ಟಿದ್ದ ಚಿಗುರೆಲೆಯ ಗಿಡಗಳು, ಕಡಿಯದೆ ಹಾಗೆ ಉಳಿಸಿಕೊಂಡಿದ್ದ ಬಹು ವರ್ಷಗಳಿಂದ ಬಾವಲಿಗಳ ತಾಣವಾಗಿದ್ದ ಮರಗಳು, ಚಿಕ್ಕ ಚಿಕ್ಕ ತಿಳಿನೀರಿನ ಕೊಳಗಳು, ಕೂರಲು ಕಬ್ಬಿಣದ ಬೆಂಚು, ರಂಜನೆಗೆ ನೀರಿನ ಕಾರಂಜಿ, ಮಕ್ಕಳಿಗೆ ಜಾರು ಬಂಡೆ-ಉಯ್ಯಾಲೆಯಿದ್ದರೆ, ಭಕ್ತರಿಗೆ ನಾಗರ ಕಲ್ಲು ಗಣಪತಿ ವಿಗ್ರಹಗಳನೊಳಗೊಂಡು, ಕಬ್ಬಿಣದ ಬೇಲಿಯನ್ನು ಹೊದ್ದ “ನಮ್ಮೂರಿನ ಪಾರ್ಕ್” ಅನ್ನು ನೋಡಲು, ಮನ ತುಂಬಿಕೊಳ್ಳಲು ಜನರ ಆಗಮನ ಶುರುವಾಗಿತ್ತು.
ಬೆಳಗ್ಗಿನ ಚುಮು ಚುಮು ಚಳಿಯಲ್ಲಿ ಸ್ವೇಟರ್ ಮೇಲೆ ಶಾಲು ಹೊದ್ದು, ತಲೆಯನ್ನು ಮಂಕಿ-ಟೋಪಿ ಯಲ್ಲಿ ತೂರಿಸಿಕೊಂಡು, ಕೈಯಲ್ಲಿ ಕೋಲು ಹಿಡಿದು ಹಿರಿಯರು ಆರೋಗ್ಯ ವೃದ್ಧಿಸಿಕೊಳ್ಳಲು walking ಹೊರಟರೆ, ಮಧ್ಯಾಹ್ನದ ಊಟ ಮುಗಿಸಿ ಮಕ್ಕಳನ್ನು, ಮಡದಿಯನ್ನು ಕರೆದುಕೊಂಡು ಬರುತ್ತಿದ್ದವರು ಕೆಲವರು. ಊರಿನಿಂದ ಬರುತ್ತಿದ್ದ ತಮ್ಮ ನೆಂಟರಿಷ್ಟರನ್ನು ಕರೆತರಯುವ ಸಂಭ್ರಮ ಕೆಲವರದಾದರೆ, ಅಲ್ಲೇ ಕೂತು ಮಲಗಿ ದಣಿವಾರಿಸಿಕೊಳ್ಳುತ್ತಿದ್ದವರು ಹಲವರು. ಇನ್ನು ಯುವ ಪ್ರೇಮಿಗಳ ಕಥೆಯಂತೂ ಹೇಳುವುದೇ ಬೇಡ. ಯಾವುದೇ ಸಮಯದ ಎಗ್ಗಿಲ್ಲದೆ, ಎಲ್ಲ ಬೆಂಚುಗಳ ಮೇಲೂ ಮರಗಳ ಮೇಲೂ ತಮ್ಮ ಪ್ರೀತಿಯ ಕುರುಹನ್ನು ಕೆತ್ತುವುದರಲ್ಲಿ ಮಗ್ನರಾಗಿರುತ್ತಿದ್ದರು.
ಕೆಲವೇ ದಿನಗಳಲ್ಲಿ ಬಹುಜನರ ಇಚ್ಚೆಯ ತಾಣವಾಗಿ ನಮ್ಮೂರಿನ ಪಾರ್ಕ್ ಗುರುತಿಸಿಕೊಂಡಿತ್ತು. ಜನರೂ ಹೆಚ್ಚಿದ್ದರಿಂದ ತಳ್ಳು ಬಂಡಿಯಲ್ಲಿ ತಿಂಡಿ ತಿನಿಸುಗಳನ್ನು, ಕಾಫಿ ಟೀ ಮಾರುವವರು ಉದ್ಯಾನದ ಮುಂದೆ ತಮ್ಮ part time ವ್ಯಾಪಾರವನ್ನು ಶುರುವಿಟ್ಟುಕೊಂಡಿದ್ದರು. ಕೆಲವೇ ದಿನಗಳಲ್ಲಿ ಎಲ್ಲರನ್ನೂ ತನ್ನತ್ತ ಸೆಳೆಯುವಷ್ಟೇ ಅಲ್ಲದೆ ತನ್ನೊಳಗೆ ಹಿತವನ್ನೂ ನೀಡುವಲ್ಲಿ ನಮ್ಮೂರಿನ ಪಾರ್ಕ್ ಯಶಸ್ವಿಯಾಗಿತ್ತು. ಎಲ್ಲರ ದೈನಂದಿನ ಚಟುವಟಿಕೆಗಳಲ್ಲಿ ಯಾವುದಾದರೊಂದು ಸಮಯದ ಸಾಕ್ಷಿಯಾಗಿದ್ದ ನಮ್ಮೂರಿನ ಉದ್ಯಾನವನ ನಿಧಾನವಾಗಿ ತನ್ನ ಚೈತನ್ಯ ಕಳೆದುಕೊಳ್ಳತೊಡಗಿತು. ಅದರಲ್ಲಿ ಉದ್ಯಾನದ್ದೇನು ತಪ್ಪಿಲ್ಲವಾದರೂ ನಿರ್ವಾಹಕರ ನಿರ್ಲಕ್ಷ್ಯ ಪಾರ್ಕಿಗೆ ಅಕಾಲಿಕ ಮುಪ್ಪನ್ನು ತಂದೊಡ್ಡಿತ್ತು. ಶುಚಿಗೊಳಿಸದ ನೆಲ, ರಾಕ್ಷಸರಂತೆ ಬೆಳೆದಿದ್ದ ಗಿಡಗಳು, ಕೆಲ ಕಡೆ ಮುರಿದು ಇನ್ನು ಕೆಲ ಕಡೆ ತುಕ್ಕು ಹಿಡಿದಿದ್ದ ಕಬ್ಬಿಣದ ಬೆಂಚುಗಳು, ಸರಪಳಿಗಳು ತುಂಡಾಗಿ ಒಂದನ್ನೊಂದು ಸುತ್ತುಹಾಕಿಕೊಂಡಿದ್ದ ಜೋಕಾಲಿ, ಜಾರಿದವರು ಅಡಿ ಸೇರುವ ಮೊದಲೇ ನೆಲ ಸೇರುವಂತಿದ್ದ ಜಾರುವ ಬಂಡೆಯ ದೊಡ್ಡ ರಂದ್ರ, ಸೊಳ್ಳೆಗಳ ಸಂತಾನೋತ್ಪತ್ತಿ ಕೇಂದ್ರವಾಗಿದ್ದ ನೀರಿನ ಕೊಳಗಳು, ಯಾವುದೇ ರಂಧ್ರದಲ್ಲೂ ನೀರು ಬಾರದೆ ಕೆಟ್ಟು ಕೂತಿದ್ದ ಕಾರಂಜಿ, ಗಿಡಗಳ ಮಧ್ಯೆ ಕಳೆದು ಹೋಗಿದ್ದ ನಾಗಕಲ್ಲುಗಳು, ಇವೆಲ್ಲದಕ್ಕೂ ಸಾಕ್ಷಿಯಾಗಿ ಮರದ ಕೆಳಗೆ ಹಕ್ಕಿಯ ಹಿಕ್ಕೆಗಳನ್ನು ಹೊದ್ದು ಕೂತಿದ್ದ ಗಣಪನ ವಿಗ್ರಹ ಉದ್ಯಾನದ ಅವಸಾನವನ್ನು ಸಾರುವಂತಿತ್ತು. ಇದರ ಜೊತೆಯಲ್ಲೇ ಕೇಳಿಬಂದ ಕಳ್ಳತನ, ದರೋಡೆಯ ಸುದ್ದಿಗಳು, ಆಗಾಗ ಕಾಣಿಸುತ್ತಿದ್ದ ವಿವಿಧ ಬ್ರಾಂಡ್ನ ಖಾಲಿ ಬಾಟಲಿಗಳು ಜನರನ್ನು ಉದ್ಯಾನದಿಂದ ದೂರಮಾಡತೊಡಗಿತ್ತು. ಅದಕ್ಕೆ ಪೂರಕವಾಗಿ ನಮ್ಮೂರಿನ ಪಾರ್ಕ್ ಗೆ ಜೂರಸ್ಸಿಕ್ ಪಾರ್ಕ್ ಎಂಬ ಬಿರುದು ಜನರೇ ಕೊಟ್ಟು ಆಗಿತ್ತು.
ಈಗ ನಮ್ಮೊರಿನ ಪಾರ್ಕ್ ಪ್ರಾರಂಭವಾಗಿ ಹದಿನೈದು ವರ್ಷಗಳೇ ಕಳೆದಿದೆ. ಇತ್ತೀಚೆಗೆ ನಗರ ಸಭೆಯ ಸಿಬ್ಬಂದಿ ಉದ್ಯಾವನವನವನ್ನು ಪುನಶ್ಚೇತನಗೊಳಿಸಲು ಮುಂದಾಗಿದ್ದಾರೆ ಎಂಬ ಸುದ್ದಿ ತಿಳಿದು ಮತ್ತೆ ನೋಡಿ ಬರೋಣ ಎಂದು ಅದೇ ಶಿಡ್ಲಘಟ್ಟ – ಚಿಂತಾಮಣಿ ಮಾರ್ಗವಾಗಿ ಹೊರಟೆ. ಈಗ ರಸ್ತೆ ಅಗಲವಾಗಿ ತನ್ನ ಭುಜವನ್ನು ಪಾರ್ಕ್ ನ ಬಾಯಿಯ ಗೇಟಿಗೆ ತುರುಕಿದಂತಿದೆ. ಒಳ ನಡೆದರೆ ಗತ ಕಾಲದಂತೆ ಹಸನಾದ ನೆಲ, ಹಾದಿಯ ಬದಿಯ ಚಿಗುರೆಲೆಯ ಗಿಡಗಳು, ಹೊಸ ಹಸಿರು ಬಣ್ಣ ಬಳಿದುಕೊಂಡು ಹಸನಾಗಿರುವ ಬೆಂಚುಗಳು, ನೀರಿಲ್ಲದ ಆದರೂ ಶುಚಿಯಾದ ಕೊಳಗಳು, ಜಾರುವ ಬಂಡೆ – ಉಯ್ಯಾಲೆಯ ಜೊತೆಗೆ ಈಗ ಮಕ್ಕಳಿಗೆ ಮತ್ತಷ್ಟು ಆಡುವ ಸಲಕರಣೆಗಳು, ಹಳೆಯ ಪ್ರೇಮಿಗಳ ಕುರುಹಾಗಿ ನಿಂತಿರುವ ಮಾಗಿದ ಗಾಯಗಳ ಮರಗಳು, ಭಕ್ತರಿಗಾಗಿ ಕಾದಿರುವ ನಾಗರ ಕಲ್ಲುಗಳು, ಸುಣ್ಣ ಬಳಿದುಕೊಂಡು ಸಜ್ಜಾಗಿರುವ ಗುಡಿಗಳು, ಅದೇ ದೊಡ್ಡ ಮರದ ಅಡಿಯಲ್ಲಿ ಟಿಪ್ ಟಾಪ್ ಆಗಿ ಕುಳಿತಿರುವ ಗಣಪ.
ಹೇಳುವುದಕ್ಕೆ ಇನ್ನಿರುವುದೊಂದೇ…
ಜುರಾಸಿಕ್ ಪಾರ್ಕ ಭಾಗ ೨ ಬಿಡುಗಡೆಯಾಗಿದೆ… ಅನುಭವಿಸಿ… ಆನಂದಿಸಿ.
– ಸಂದೀಪ್ ಜಗದೀಶ್ವರ್

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆ

0

ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಹಿತರಕ್ಷಣೆ ನಿಟ್ಟಿನಲ್ಲಿ ಸರ್ಕಾರ ಹಲವಾರು ಕ್ರಮಗಳನ್ನು ವಿವಿಧ ಇಲಾಖೆಗಳ ಮೂಲಕ ಕೈಗೊಂಡಿದೆ. ತಾಲ್ಲೂಕಿನ ವಿವಿಧ ಕುಂದುಕೊರತೆಗಳು ಮತ್ತು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಭೆಯನ್ನು ಆಯೋಜಿಸಿರುವುದಾಗಿ ತಹಶೀಲ್ದಾರ್ ಅಜಿತ್ ಕುಮಾರ್ ರೈ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲ್ಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದುಕೊರತೆ ಮತ್ತು ಬೇಡಿಕೆಗಳ ಸಭೆಯಲ್ಲಿ ಅವರು ಮಾತನಾಡಿದರು.
ಸಭೆಯನ್ನು ಕಾಟಾಚಾರಕ್ಕೆ ನಡೆಸುವುದಿಲ್ಲ. ಪ್ರತಿಯೊಂದು ಸಮಸ್ಯೆ ಹಾಗೂ ತೊಂದರೆಗಳನ್ನು ದಾಖಲು ಮಾಡಿಕೊಂಡು ಅವುಗಳನ್ನು ಪ್ರಾಮಾಣಿಕವಾಗಿ ಬಗೆಹರಿಸುತ್ತೇವೆ. ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದಾರೆ. ಅವರವರ ವ್ಯಾಪ್ತಿಯಲ್ಲಿ ಬರುವ ಕೆಲಸಗಳನ್ನು ಮಾಡುತ್ತಾರೆ ಎಂದು ತಿಳಿಸಿದರು.
ಸಭೆಯಲ್ಲಿ ಅಂಬೇಡ್ಕರ್ ಭವನಕ್ಕೆ ಬೇಕಿರುವ ಸ್ಥಳ, ಗುಣಮಟ್ಟವಿಲ್ಲದ ರಸ್ತೆ ಕಾಮಗಾರಿಗಳು, ಗ್ರಾಮಗಳಲ್ಲಿ ನಿಲ್ಲದ ಮದ್ಯ ಮಾರಾಟ, ಅಡುಗೆಯವರನ್ನು ನೇಮಕ ಮಾಡಿಕೊಂಡಿಲ್ಲದ ಶಾಲೆಗಳ ವಿರುದ್ಫ ಕ್ರಮ, ಸರ್ಕಾರಿ ಶಾಲೆಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳು, ಸದ್ಭಳಕೆಯಾಗದ ಸರ್ಕಾರದ ಅನುದಾನಗಳು, ದಲಿತ ಕಾಲೋನಿಗಳಲ್ಲಿನ ಸಮಸ್ಯೆಗಳು, ನಿವೇಶನ ರಹಿತರಿಗೆ ನಿವೇಶನ ಮುಂತಾದ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಭಾಗವಹಿಸಿದ್ದ ದಲಿತ ಮುಖಂಡರು ವಿವರಿಸಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅಕ್ಷ್ಮೀನಾರಾಯಣರೆಡ್ಡಿ, ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆಯ ಅನುಸೂಯಾದೇವಿ, ಸಿಡಿಪಿಒ ಲಕ್ಷ್ಮೀದೇವಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಬಾಬು, ಸರ್ಕಲ್ ಇನ್ಸ್ ಪೆಕ್ಟರ್ ಸಿದ್ದರಾಜು, ಸಬ್ ಇನ್ಸ್ ಪೆಕ್ಟರ್ ಗಳಾದ ನವೀನ್ ರೆಡ್ಡಿ, ಪ್ರದೀಪ್ ಪೂಜಾರಿ, ವಿಜಯ್ ರೆಡ್ಡಿ, ಮುಖಂಡರಾದ ವೆಂಕಟೇಶ್, ಅರುಣ್ ಕುಮಾರ್, ಕೃಷ್ಣಪ್ಪ, ಮುನಿರಾಜು, ಮುನೀಂದ್ರ, ದ್ಯಾವಪ್ಪ, ಪ್ರಕಾಶ್, ದ್ಯಾವಕೃಷ್ಣಪ್ಪ ಹಾಜರಿದ್ದರು.

ಸಾರ್ಥಕ ನೇಗಿಲ ಯೋಗಿ ಪ್ರಶಸ್ತಿ

0

ಶಿಡ್ಲಘಟ್ಟ ತಾಲ್ಲೂಕಿನ ಪ್ರಗತಿಪರ ರೈತರಾದ ಹಿತ್ತಲಹಳ್ಳಿ ಎಚ್.ಜಿ.ಗೋಪಾಲಗೌಡ, ಮೇಲೂರು ಸಿ.ಎಸ್.ನಾಗೇಂದ್ರಪ್ರಸಾದ್ ಮತ್ತು ಮುತ್ತೂರಿನ ತಮ್ಮೇಗೌಡ ಅವರಿಗೆ ಬೆಂಗಳೂರಿನ ವಿ ರೆಸ್ಪೆಕ್ಟ್ ಫಾರ್ಮರ್ಸ್ ಟ್ರಸ್ಟ್ ವತಿಯಿಂದ ಸಾರ್ಥಕ ನೇಗಿಲ ಯೋಗಿ ಪ್ರಶಸ್ತಿ ಹಾಗೂ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ೧೦ ಸಾವಿರ ರೂ ನೀಡಿ ಗೌರವಿಸಿದೆ. ನಟ ಸುದೀಪ್, ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಹಾಜರಿದ್ದರು

ಸರ್ದಾರ್ ವಲ್ಲಭಬಾಯಿ ಪಟೇಲ್ ಸದ್ಭಾವನಾ ಪ್ರಶಸ್ತಿಯ ಗೌರವ

0

ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಕನ್ನಡ ಸಾರಸ್ವಾತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್ ಅವರನ್ನು ಬೆಂಗಳೂರಿನ ಚಿಗುರು ಕಲ್ಚರಲ್ ಟ್ರಸ್ಟ್ ವತಿಯಿಂದ ಸರ್ದಾರ್ ವಲ್ಲಭಬಾಯಿ ಪಟೇಲ್ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಿದೆ.

ಕೊತ್ತನೂರು ಗ್ರಾಮದಲ್ಲಿ ಜಾತ್ರೆ

0

ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಗ್ರಾಮ ದೇವರುಗಳಾದ ಕರಗದಮ್ಮ, ಮುನೇಶ್ವರ, ನಲ್ಲಪ್ಪ, ಗಂಗಮ್ಮ, ಎಲ್ಲಮ್ಮದೇವಿಯ ಜಾತ್ರಾ ಮಹೋತ್ಸವವನ್ನು ಸೋಮವಾರ ನಡೆಸಲಾಯಿತು.
ಪುರಾತನ ಮುನೇಶ್ವರ ಸ್ವಾಮಿ ದೇವಸ್ಥಾನದಿಂದ ಮಹಿಳೆಯರಿಂದ ದೀಪಗಳ ಮೆರವಣಿಗೆಯನ್ನು ನಡೆಸಲಾಯಿತು. ಹಲಗೆ ವಾದ್ಯದ ವಾದನದೊಂದಿಗೆ ದೇವರ ಉತ್ಸವ ಮೂರ್ತಿಗಳ ಜೊತೆಯಲ್ಲಿ ಕರಗವೂ ಕೂಡ ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು.
ಸಂಪತ್ ಕುಮಾರ್, ನಾಗರೆಡ್ಡಿ, ಶ್ರೀಧರ್, ಸುಬ್ಬಣ್ಣ, ಮುನಿರೆಡ್ಡಿ, ಬಚ್ಚಪ್ಪ ಹಾಜರಿದ್ದರು.

ಬಿಜೆಪಿ ಸದಸ್ಯರ ಸಂಭ್ರಮಾಚರಣೆ

0

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತ ಮೆಚ್ಚಿದ ಜನರು ಗುಜರಾತ್ ಹಾಗು ಹಿಮಾಚಲಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಆಶೀರ್ವದಿಸಿದ್ದಾರೆ ಎಂದು ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್ ಹೇಳಿದರು.
ಗುಜರಾತ್ ಹಾಗು ಹಿಮಾಚಲಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸಂತಸದಲ್ಲಿ ನಗರದ ಕೋಟೆ ವೃತ್ತ ಮತ್ತು ಬಸ್ ನಿಲ್ದಾಣದ ಬಳಿ ಸೋಮವಾರ ಬಿಜೆಪಿ ತಾಲ್ಲೂಕು ಘಟಕದ ಸದಸ್ಯರೊಂದಿಗೆ ಪಟಾಕಿ ಸಿಡಿಸಿ, ಸಿಹಿಹಂಚಿ ಅವರು ಮಾತನಾಡಿದರು.
ದೇಶವನ್ನು ಅಭಿವೃದ್ಧಿ ಪತದಲ್ಲಿ ಮುನ್ನಡೆಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ, ಕಪ್ಪುಹಣ, ನಕಲಿ ನೋಟುಗಳ ಚಲಾವಣೆ ತಡೆಗೆ ನೋಟು ಅಮಾನ್ಯೀಕರಣ ಸೇರಿದಂತೆ ಹಲವಾರು ಒಳ್ಳೊಳ್ಳೆ ಯೋಜನೆಗಳೊಂದಿಗೆ ಉತ್ತಮ ಆಡಳಿತ ನಡೆಸುತ್ತಿದ್ದಾರೆ.
ನಗದು ರಹಿತ ಸಮಾಜ ನಿರ್ಮಾಣ ಮಾಡುವುದು ನಮ್ಮ ಕನಸು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದಕ್ಕೆ ವಿಶ್ವವೇ ಮೆಚ್ಚುಗೆ ಸೂಚಿಸಿದೆ. ದೇಶದಲ್ಲಿ ಈ ಹಿಂದೆ ನಡೆದ ಭ್ರಷ್ಟತೆಯ ವಿರುದ್ಧ ರೋಸಿ ಹೋಗಿರುವ ಜನರು ಇದೀಗ ಬಿಜೆಪಿ ಪಕ್ಷದ ಕಡೆ ಹೆಚ್ಚು ಒಲವು ಹೊಂದಿದ್ದಾರೆ ಎಂದರು.
ನಗರದ ಸಲ್ಲಾಪುರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಗರದ ಮುಖ್ಯರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬಿಜೆಪಿ ಮುಖಂಡರಾದ ಡಿ.ಆರ್.ಶಿವಕುಮಾರಗೌಡ, ಸುರೇಂದ್ರಗೌಡ, ನಾರ್ತ್ಈಸ್ಟ್ ಸುರೇಶ್, ದಾಮೋದರ್, ಮಂಜುಳಮ್ಮ, ಪುರುಶೋತ್ತಮ್, ಬೈರಾರೆಡ್ಡಿ ಹಾಜರಿದ್ದರು.

ಪ್ರೊ.ಎಂ.ಡಿ.ನಂಜುಂಡಸ್ವಾಮಿ ಬಣದ ತಾಲ್ಲೂಕು ಘಟಕ ಸ್ಥಾಪನೆ

0

ಪ್ರೊ.ಎಂ.ಡಿ.ನಂಜುಂಡಸ್ವಾಮಿ ಬಣದ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ನೂತನ ತಾಲ್ಲೂಕು ಸಮಿತಿಯ ಆಯ್ಕೆಯನ್ನು ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಮಾಡಲಾಯಿತು.
ಅಧ್ಯಕ್ಷ ಟಿ.ಎನ್.ಮಂಜುನಾಥ, ಉಪಾಧ್ಯಕ್ಷರಾಗಿ ಶಾರದಮ್ಮ, ಬಿ.ದೇವರಾಜ, ಡಿ.ಎಂ.ಗಂಗಾಧರ, ಕಾರ್ಯಾಧ್ಯಕ್ಷ ಡಿ.ಎಂ.ವೆಂಕಟರೆಡ್ಡಿ, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಕಾಂತರೆಡ್ಡಿ, ಸಂಘಟನಾ ಸಂಚಾಲಕ ಮಂಜುನಾಥರೆರೆಡ್ಡಿ, ಸಂಘಟನಾ ಕಾರ್ಯದರ್ಶಿಗಳಾಗಿ ನಾರಾಯಣಪ್ಪ, ಸಿ.ವಿನೋದ್, ಕಾರ್ಯದರ್ಶಿ ಡಿ.ಶ್ರೀನಿವಾಸ್, ಖಜಾಂಚಿ ಸಿ.ನಾರಾಯಣಸ್ವಾಮಿ, ಸದಸ್ಯರಾಗಿ ವೆಂಕಟರೆಡ್ಡಿ, ಎ.ಎನ್.ಮೂರ್ತಿ, ಕೆ.ಸಿ.ನರಸಿಂಹಮೂರ್ತಿ, ವೆಂಕಟೇಶ, ಎಸ್.ಎ.ಹರೀಶ್, ಆವಲರೆಡ್ಡಿ ಆಯ್ಕೆಯಾಗಿದ್ದಾರೆ.
ರಾಜ್ಯ ಮುಖಂಡ ನಾರಾಯಣಸ್ವಾಮಿ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಸುಷ್ಮಾ ಶ್ರೀನಿವಾಸ್, ಜಿಲ್ಲಾ ಪದಾಧಿಕಾರಿಗಳಾದ ನಂಜಪ್ಪ, ಶಿವಣ್ಣ, ಹರೀಶ, ನಾರಾಯಣಸ್ವಾಮಿ ಹಾಜರಿದ್ದರು.

ಮಹಿಳಾಪರ ಕಾನೂನು ತಿಳುವಳಿಕೆ ನೀಡುವ ಕೆಲಸ ಆಗಬೇಕಿದೆ

0

ನಮ್ಮಲ್ಲಿ ಮಹಿಳೆಯರಿಗಾಗಿ ವಿವಿಧ ಯೋಜನೆಗಳಿವೆ, ಅವಕಾಶಗಳಿವೆ, ಮಹಿಳಾಪರ ಕಾನೂನುಗಳೂ ಇವೆ. ಆದರೆ ಇದನ್ನು ತಳಮಟ್ಟಕ್ಕೆ ತಲುಪಿಸುವಂತಹ ಮಾಹಿತಿ, ತಿಳುವಳಿಕೆ ನೀಡುವ ಕೆಲಸ ಆಗಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ತಿಳಿಸಿದರು.
ನಗರದ ಬಸ್ ನಿಲ್ದಾಣದ ಬಳಿಯಿರುವ ಬಿ.ವಿ.ಮುನೇಗೌಡ ಕಟ್ಟಡದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಆಯೋಜಿಸಿದ್ದ “ನಿರ್ಗತಿಕ ಮಹಿಳೆಯರಿಗೆ, ವಿಧವೆಯರಿಗೆ ಹಾಗೂ ಅಬಲೆಯರ ಹಕ್ಕುಗಳ ಬಗ್ಗೆ” ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜಕ್ಕೆ ಅಂಟಿರುವ ಅನಿಷ್ಟ ಪದ್ಧತಿಗಳಾದ ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ, ವರದಕ್ಷಿಣೆ, ದೇವದಾಸಿ ಪದ್ಧತಿಗಳು ನಾಶವಾಗಬೇಕಾದರೆ ಶೋಷಿತರು, ಬಡವರು, ನಿರ್ಗತಿಕ, ಸಂಕಷ್ಟಕ್ಕೊಳಗಾದ ಮಹಿಳೆಯರಿಗೆ ಹೆಚ್ಚಾಗಿ ಕಾನೂನಿನ ತಿಳಿವಳಿಕೆ ಮೂಡಿಸುವ ಅವಶ್ಯ ಇದೆ. ಸರ್ಕಾರ ನೀಡಿರುವ ಸೌಲಭ್ಯಗಳನ್ನು ಸದ್ಭಳಿಕೆ ಮಾಡಿಕೊಂಡು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು. ಮಹಿಳಾ ದೌರ್ಜನ್ಯದಂತಹ ಅಪರಾಧ ಕೃತ್ಯಗಳು ಹೆಚ್ಚುತ್ತಿದ್ದು, ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯು ಕಾನೂನಿನ ಅರಿವನ್ನು ಪಡೆದು ಸಹಬಾಳ್ವೆ ನಡೆಸಬೇಕು ಎಂದರು.
ಸಾಂತ್ವನ ಕೇಂದ್ರದ ಡಾ.ವಿಜಯ ವೆಂಕಟರಾಮ್ ಮಾತನಾಡಿ, ಇಂದು ಮಹಿಳೆಯರು ಪಡೆದಿರುವ ಹಕ್ಕುಗಳು ಮತ್ತು ಆರ್ಥಿಕ ಸ್ವಾವಲಂಬನೆಯ ಹಿಂದೆ ಒಂದು ದೀರ್ಘವಾದ ಹೋರಾಟದ ಇತಿಹಾಸವೇ ಇದೆ. ಸಮಾಜದಲ್ಲಿ ಎರಡನೆಯ ಪ್ರಜೆಯನ್ನಾಗಿಯೇ ಗುರುತಿಸಲಾಗಿದ್ದ ಮಹಿಳೆಗೆ ಪುರುಷರೊಡನೆ ಸಮಾನ ಸ್ಥಾನಮಾನವನ್ನು ಮತ್ತು ಸಮಾನ ಹಕ್ಕುಗಳನ್ನು ನೀಡಿದ್ದು ಭಾರತದ ಸಂವಿಧಾನ. ಶೋಷಣೆಯ ವಿರುದ್ಧ ವ್ಯಕ್ತಿಗೆ ರಕ್ಷಣೆಯಿಲ್ಲದಿದ್ದರೆ ಸಂವಿಧಾನ ಕೊಡಮಾಡಿರುವ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅರ್ಥವೇ ಇರುವುದಿಲ್ಲ.
ಮಾನವ ಕಳ್ಳ ಸಾಗಾಣಿಕೆಯನ್ನು ತಡೆಯಲು, ಅದರಲ್ಲೂ ಮಹಿಳೆಯರನ್ನು ಮತ್ತು ಹೆಣ್ಣು ಮಕ್ಕಳನ್ನು ಅನೈತಿಕ ವ್ಯವಹಾರಗಳಿಗೆ ಬಳಸಿಕೊಳ್ಳುವುದಕ್ಕಾಗಿ ಅಪಹರಿಸುವುದನ್ನು, ಮಾರಾಟಮಾಡುವುದನ್ನು ಹಾಗೂ ಕಳ್ಳತನದಿಂದ ಅವರನ್ನು ಸಾಗಿಸುವುದನ್ನು ತಡೆಯುವುದಕ್ಕಾಗಿ ಅನೈತಿಕ ವ್ಯವಹಾರಗಳಿಗಾಗಿ ಕಳ್ಳಸಾಗಾಣಿಕೆ(ತಡೆಗಟ್ಟುವಿಕೆ) ಅಧಿನಿಯಮವನ್ನು ಸರ್ಕಾರ ಜಾರಿಗೊಳಿಸಿದೆ. ಅಲ್ಲದೆ, ಅದಕ್ಕೆ ಕಾರಣಗಳು, ಇಂಥ ಶೋಷಣೆಗೆ ಸುಲಭವಾಗಿ ಗುರಿಯಾಗುವವರು, ಅನೈತಿಕ ವ್ಯವಹಾರಗಳಲ್ಲಿ ತೊಡಗಿರುವವರನ್ನು ರಕ್ಷಿಸುವುದು ಮತ್ತು ಅವರಿಗೆ ಪುನರ್ವಸತಿ ಕಲ್ಪಿಸುವುದು ಮುಂತಾದ ಎಲ್ಲ ವಿಷಯಗಳನ್ನೊಳಗೊಂಡ ಒಂದು ಸಮಗ್ರ ಕ್ರಿಯಾ ಯೋಜನೆಯನ್ನು ಸಹ ಸರ್ಕಾರ ರೂಪಿಸಿದೆ ಎಂದು ವಿವರಿಸಿದರು.
ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ, ಟಿ.ಎಲ್.ಸಂದೀಶ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಕಾರ್ಯದರ್ಶಿ ಎಂ.ಬಿ.ಲೋಕೇಶ್, ಸರ್ಕಾರಿ ವಕೀಲೆ ಎಸ್.ಕುಮುದಿನಿ ಹಾಜರಿದ್ದರು.

ರೈತರಿಗೆ ತಜ್ಞರಿಂದ ಮಾಹಿತಿ

0

ಹಾಲಿನ ಗುಣಮಟ್ಟ, ಡಿಗ್ರಿಯ ನಿರ್ವಹಣೆ ಮತ್ತು ಹಾಲಿನ ಪೌಷ್ಟಿಕಾಂಶದ ಬಗ್ಗೆ ರೈತರು ತಿಳಿದಿರಲೇ ಬೇಕು ಎಂದು ರೈ ತಾಂತ್ರಿಕ ವಿಶ್ವವಿದ್ಯಾಲಯದ ವಿಷಯ ತಜ್ಞ ಡಾ.ಹೆಗಡೆ ತಿಳಿಸಿದರು.
ತಾಲ್ಲೂಕಿನ ಆನೂರು ಗ್ರಾಮದಲ್ಲಿ ರೈ ಟೆಕ್ನಾಲಜಿ ವಿಶ್ವವಿದ್ಯಾಲಯದಿಂದ ಆಯೋಜಿಸಿದ್ದ ಬಿ.ಎಸ್.ಸಿ ಎ.ಜಿ ನಾಲ್ಕನೆಯ ವರ್ಷದ ವಿದ್ಯಾರ್ಥಿಗಳ ಕಾರ್ಯಾನುಭವದ ಗ್ರಾಮೀಣ ಅಭಿವೃದ್ಧಿ ಉದ್ಯಮಶೀಲ ಜಾಗೃತಿ ಯೋಜನಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡವರು ಗುಣಮಟ್ಟದ ಹಾಲಿಗೆ ಬೆಲೆ ಸಿಗುವುದರಿಂದ ಮತ್ತು ಹಸುಗಳಿಗೆ ನೀಡುವ ಆಹಾರ ಕ್ರಮದ ಬಗ್ಗೆ, ಶುಚಿತ್ವದ ಕುರಿತಂತೆ ತಿಳಿದುಕೊಂಡಿರಬೇಕು ಎಂದು ಹೇಳಿ ತಾಂತ್ರಿಕ ವಿವರಗಳನ್ನು ಸರಳೀಕರಿಸಿ ವಿವರಿಸಿದರು.
ಮಣ್ಣು ಶಾಸ್ತ್ರ ವಿಭಾಗದ ಡಾ.ಚಿಕ್ಕರಾಜ, ಕೀಟ ಶಾಸ್ತ್ರ ವಿಭಾಗದ ಡಾ.ಶಿವರಾಮು, ಸಯ್ಯದ್ ರೆಹಮಾನ್, ರೇಷ್ಮೆ ಕೃಷಿಯ ಡಾ.ಬಿ.ಎಂ.ಪ್ರಕಾಶ್, ರೈತರಿಗೆ ಆಯಾ ಕ್ಷೇತ್ರದ ಕುರಿತಂತೆ ಮಾಹಿತಿಯನ್ನು ನೀಡಿದರು. ರೇಷ್ಮೆ, ಜೇನು ಕೃಷಿ, ಮಣ್ಣಿನ ಫಲವತ್ತತೆ ಮತ್ತು ನಿರ್ವಹಣೆ ಕುರಿತಂತೆ ರೈತರು ತಮ್ಮ ಸಂದೇಹಗಳನ್ನು ಪರಿಹರಿಸಿಕೊಂಡರು.
ಪ್ರಗತಿಪರ ರೈತ ಶ್ರೀನಿವಾಸ್, ಮಂಜುನಾಥ, ರಾಜಣ್ಣ, ವಿದ್ಯಾರ್ಥಿಗಳಾದ ವಿಷ್ಣು, ಭೂಪಾಲಗೌಡ, ಕಾರ್ತಿಕ್, ಸೂರ್ಯ, ಹರ್ಷಿತ, ಮಾಧವಿ, ಲತಾ, ಶೀಲ, ಶ್ರವಣ ಹಾಜರಿದ್ದರು.

ಹಿಪ್ಪುನೇರಳೆಗೆ ಕ್ರಿಮಿನಾಶಕ ಸಿಂಪಡಣೆ: ರೇಷ್ಮೆ ಹುಳು ನಾಶ

0

ಕ್ರಿಮಿ ನಾಶಕ ಸಿಂಪಡಣೆ ಆದ ಹಿಪ್ಪುನೇರಳೆ ಸೊಪ್ಪು ಸೇವಿಸಿದ ರೇಷ್ಮೆ ಹುಳುಗಳು ನಾಶ ಆಗಿದ್ದು ರೈತನಿಗೆ ಸಾವಿರಾರು ರೂಪಾಯಿ ನಷ್ಟ ಆಗಿದೆ. ತಾಲ್ಲೂಕಿನ ಅಬ್ಲೂಡು ಗ್ರಾಮದ ರೈತ ಹುಚ್ಚಪ್ಪನವರ ವಿ.ವೆಂಕಟರೆಡ್ಡಿ ಅವರ ೫೫೦ ಮೊಟ್ಟೆಯಷ್ಟು ರೇಷ್ಮೆ ಹುಳುಗಳು ಕ್ರಿಮಿ ನಾಶಕ ಸಿಂಪಡಣೆ ಆದ ಹಿಪ್ಪು ನೇರಳೆ ಸೊಪ್ಪು ಸೇವಿಸಿ ಸಾವನ್ನಪ್ಪಿವೆ. ಅದೇ ಗ್ರಾಮದ ಚಂದ್ರು ಎಂಬುವವರಿಗೆ ಸೇರಿದ ಹಿಪ್ಪುನೇರಳೆ ತೋಟದಲ್ಲಿ ವೆಂಕಟರೆಡ್ಡಿ ಸೊಪ್ಪು ಖರೀದಿಸಿದ್ದರು. ನಿನ್ನೆ ಸಂಜೆ ತಂದ ಸೊಪ್ಪಿಗೆ ಯಾರೋ ಕಿಡಿಗೇಡಿಗಳು ಔಷಧಿ ಸಿಂಪಡನೆ ಮಾಡಿದ್ದರಿಂದಾಗಿ ಮೂರನೇ ಜ್ವರಕ್ಕೆ ಕಾಲಿಟ್ಟಿದ್ದ ಹುಳುಗಳು ಸತ್ತಿವೆ.
’ಬೆಳೆ ಕೈಗೆ ಬಂದಿದ್ದರೆ ೩ ಲಕ್ಷ ಬರುತ್ತಿತ್ತು. ಹೊಸದಾಗಿ ಹುಳುಮನೆಯನ್ನು ಕಟ್ಟಿದ್ದು ಅದಕ್ಕಾಗಿ ದೇನಾ ಬ್ಯಾಂಕಿನಲ್ಲಿ ೧೨ ಲಕ್ಷ ರೂಗಳು ಸಾಲ ಮಾಡಿದ್ದೇನೆ’ ಎಂದು ರೈತ ವೆಂಕಟರೆಡ್ಡಿ ತಿಳಿಸಿದ್ದಾರೆ.

ಯುವಜನಾಂಗ ಸಮಾಜಮುಖಿಗಳಾಗಬೇಕು

0

ನಾಡು ಮತ್ತು ನುಡಿಯ ಬಗ್ಗೆ ಜಾಗೃತಿ ಮೂಡಿಸುವುದು, ಯುವಜನಾಂಗವನ್ನು ಸಮಾಜ ಮುಖಿಯಾಗಿ ಕೆಲಸಮಾಡಲು ಸಂಘಟನೆ ರೂಪಿಸುವುದು, ವಿದ್ಯಾವಂತ ತಂಡದೊಂದಿಗೆ ಅನೇಕ ಚಿಂತನ ಸಭೆಗಳನ್ನು ಮಾಡಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕೆಂದು ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ನಾಗೇನಹಳ್ಳಿ ಕೃಷ್ಣಮೂರ್ತಿ ತಿಳಿಸಿದರು.
ತಾಲ್ಲೂಕಿನ ಅಬ್ಲೂಡು ಗ್ರಾಮದಲ್ಲಿ ಭಾನುವಾರ ನಾಮ ಫಲಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಕೆಲವು ರಾಜಕೀಯ ವ್ಯಕ್ತಿಗಳಿಂದ ಹಿಡಿದು ಕೆಲವು ಅಧಿಕಾಗಳು ಮತ್ತು ಸಾಮಾನ್ಯ ಜನರವರೆಗೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇಂತಹ ಸಂದರ್ಭದಲ್ಲಿ, ಭ್ರಷ್ಟರ ವಿರುದ್ದ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ. ಸಮಾಜಸೇವೆ ಕೆಲಸಗಳು, ಕನ್ನಡಪರ ಹೋರಾಟಗಳು, ರಕ್ತದಾನ ಶಿಬಿರಗಳು, ನೇತ್ರದಾನ ಶಿಬಿರಗಳು, ಗ್ರಾಮೀಣ ಭಾಗದ ಜನರ ಆರೋಗ್ಯ ಚಿಕಿತ್ಸಾ ಶಿಬಿರಗಳು ಕೂಡ ಸಂಘಟನೆಯಿಂದ ನಡೆಸಬೇಕು. ಇವೂ ಕೂಡ ಕನ್ನಡದ ಕೆಲಸಗಳೇ ಆಗಿವೆ ಎಂದು ಹೇಳಿದರು.
ಬಿಜೆಪಿ ಮುಖಂಡ ಶಿವಕುಮಾರಗೌಡ ಮಾತನಾಡಿ, ಸಂಘಟನೆಗಳು ನಾಡು ನುಡಿ ನೆಲ ಜಲದ ರಕ್ಷಣೆಯ ಬಗ್ಗೆ ಮಾತ್ರ ಹೋರಾಟ ಮಾಡಿದರೆ ಸಾಲದು, ಬದಲಿಗೆ ಶಾಶ್ವತ ನೀರಾವರಿ ಸಮಸ್ಯೆ, ರೈತರ ಉತ್ಪಾದನೆಗಳಿಗೆ ಬೆಲೆ ಕುಸಿತ, ನಿರುದ್ಯೋಗ ಸಮಸ್ಯೆ ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಕೂಡ ಹೋರಾಟ ಮಾಡಬೇಕು ಎಂದು ನುಡಿದರು.
ತಾಲ್ಲೂಕಿನ ಹಂಡಿಗನಾಳ ಬೈಪಾಸ್ ನಿಂದ ಶೆಟ್ಟಿಕೆರೆ ಗ್ರಾಮದವರೆಗೆ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಸದಸ್ಯರು ಬೈಕ್ ರ್ಯಾಲಿ ನಡೆಸಿದರು. ಅಬ್ಲೂಡು, ಕೆಂಪನಹಳ್ಳಿ, ಮಲ್ಲಹಳ್ಳಿ, ಕೋಟಹಳ್ಳಿ, ದ್ಯಾವಪ್ಪನಗುಡಿ, ಬಶೇಟ್ಟಿಹಳ್ಳಿ, ಬೈಯಪ್ಪನಹಳ್ಳಿ, ಆಮೂರು ತಿಮ್ಮನಹಳ್ಳಿ, ತಿಮ್ಮನಾಯಕನಹಳ್ಳಿ, ಕುದುಪಕುಂಟೆ, ತಲಕಾಯಲಬೆಟ್ಟ, ಟಿ.ವೆಂಕಟಾಪುರ, ಈ ತಿಮ್ಮಸಂದ್ರ, ಶೆಟ್ಟಿಕೆರೆ ಸೇರಿದಂತೆ ೧೪ ಹಳ್ಳಿಗಳಲ್ಲಿ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ನಾಮ ಫಲಕ ಉದ್ಘಾಟನೆಯನ್ನು ನೆರವೇರಿಸಲಾಯಿತು. ಶೆಟ್ಟಿಕೆರೆ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.
ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಶಿವಪ್ರಕಾಶ್, ತಾಲ್ಲೂಕು ಘಟಕದ ಅಧ್ಯಕ್ಷ ಬೈರಾರೆಡ್ಡಿ, ಗೌರವಾಧ್ಯಕ್ಷ ಸಂಜೀವಪ್ಪ, ರೈತ ಘಟಕದ ಅಧ್ಯಕ್ಷ ಮಂಜುನಾಥ್, ನಾಗರಾಜ್, ಗಾಯಿತ್ರಮ್ಮ, ಹನುಮಂತರೆಡ್ಡಿ, ನರೇಶ್ ಹಾಜರಿದ್ದರು.

ಮಾಜಿ ಸಿ.ಎಂ.ಕುಮಾರಸ್ವಾಮಿ ಹುಟ್ಟು ಹಬ್ಬ: ಜೆಡಿಎಸ್ ಘಟಕದಿಂದ ಹಣ್ಣು ಹಂಪಲು ವಿತರಣೆ

0

ರೈತರು ಹಾಗೂ ಈ ನಾಡಿನ ಜನ ಸಾಮನ್ಯರ ಬಗ್ಗೆ ಅಪಾರ ಕಾಳಜಿಯುಳ್ಳ ಮಾಜಿ ಸಿ.ಎಂ.ಕುಮಾರಸ್ವಾಮಿಯು ಮುಂದಿನ ಸಿಎಂ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಶಾಸಕ ಎಂ.ರಾಜಣ್ಣ ಅಭಿಪ್ರಾಯಪಟ್ಟರು.
ಜೆಡಿಎಸ್ನ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ೫೯ನೇ ವರ್ಷದ ಹುಟ್ಟು ಹಬ್ಬವನ್ನು ಶನಿವಾರ ಜೆಡಿಎಸ್ ಕಾರ್ಯಕರ್ತರು ಆಚರಿಸಿದರು.
ಶಾಸಕ ಎಂ.ರಾಜಣ್ಣ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ ನೇತೃತ್ವದಲ್ಲಿ ಹಲವಾರು ಜೆಡಿಎಸ್ನ ಕಾರ್ಯಕರ್ತರು ಶಿಡ್ಲಘಟ್ಟ ನಗರದ ಕೋಟೆ ಆಂಜನೇಯಸ್ವಾಮಿ, ದಿಬ್ಬೂರಹಳ್ಳಿ ಮಾರ್ಗದ ಅಮೀರ್ ಬಾಬಾ ದರ್ಗಾ ಹಾಗೂ ಚರ್ಚ್ನಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗಲಿ ಎಂದು ಪ್ರಾರ್ಥಿಸಿದರು.
ನಂತರ ಸಾರ್ವಜನಿಕ ಆಸ್ಪತ್ರೆಯಲ್ಲಿನ ಹೊರ ಹಾಗೂ ಒಳರೋಗಿಗಳು, ಆಶಾ ಕಿರಣ ಅಂಧ ಮಕ್ಕಳ ಶಾಲೆಯ ಮಕ್ಕಳಿಗೆ ಹಣ್ಣು ಹಂಪಲು ಬ್ರೆಡ್ ವಿತರಿಸಲಾಯಿತು.
ಶಾಸಕ ಎಂ.ರಾಜಣ್ಣ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ನಗರಸಭೆ ಸದಸ್ಯ ಅಪ್ಸರ್ಪಾಷ, ಮುಖಂಡರಾದ ಎಸ್.ರಹಮತ್ತುಲ್ಲ, ಮಳ್ಳೂರಯ್ಯ, ರಮೇಶ್ ಹಾಜರಿದ್ದರು.

"ಕುಮಾರಪರ್ವ" ಪ್ರಾರಂಭವಾಗಲಿ ಮತ್ತು ರಾಜ್ಯ ಸರ್ವತೋಮುಖ ಬೆಳವಣಿಗೆ ಕಾಣಲಿ

0

ರಾಜ್ಯದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷದ ಅವಶ್ಯಕತೆಯಿದೆ. “ಕುಮಾರಪರ್ವ” ಪ್ರಾರಂಭವಾಗಲಿ ಮತ್ತು ರಾಜ್ಯ ಸರ್ವತೋಮುಖ ಬೆಳವಣಿಗೆ ಕಾಣಲಿ ಎಂಬ ಉದ್ದೇಶದಿಂದ ಗರ್ಭಿಣಿಯರಿಗೆ ಸಹಾಯಧನ ನೀಡುವ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದು ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ಧಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎನ್.ರವಿಕುಮಾರ್ ತಿಳಿಸಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಚಿಲಕಲನೇರ್ಪು ಹೋಬಳಿಯ ಬುರುಡುಗಂಟೆ ಗ್ರಾಮದಲ್ಲಿ ಶನಿವಾರ ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ಧಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ.ರೇವಣ್ಣ ಅವರ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ೩೩೦ ಮಂದಿ ಗರ್ಭಿಣಿ ಸ್ತ್ರೀಯರಿಗೆ ತಲಾ ೧೦ ಸಾವಿರ ರೂಗಳ ಸಹಾಯ ಧನ ವಿತರಣೆ ಹಾಗೂ ಉಚಿತ ಆಂಬುಲನ್ಸ್ ಸೇವೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಿಲಕಲನೇರ್ಪು ಹೋಬಳಿಯ ಮುಖಂಡರ ನೆರವಿನಿಂದ ಅತ್ಯಲ್ಪ ಕಾಲದಲ್ಲಿಯೇ ಉತ್ತಮ ಕಾರ್ಯಕ್ರಮವನ್ನು ಪಕ್ಷಾತೀತವಾಗಿ ಆಯೋಜಿಸಲು ಸಾಧ್ಯವಾಯಿತು. ಸರ್ಕಾರ ನೀಡುವ ಸಹಾಯ ತಾಯಂದಿರಿಗೆ ಸಾಲದು ಹಾಗಾಗಿ ಟ್ರಸ್ಟ್ ವತಿಯಿಂದ ತಲಾ ಹತ್ತು ಸಾವಿರ ರೂಗಳನ್ನು ನೀಡುತ್ತಿದ್ದೇವೆ. ನಾಲ್ಕೂ ಹೋಬಳಿಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. “ಮನೆಮನೆಗೆ ಕುಮಾರಣ್ಣ” ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ದೇವೇಗೌಡರ ಮತ್ತು ಕುಮಾರಣ್ಣನವರ ಜನಸೇವೆ ಹಾಗೂ ಜನಪರ ಚಿಂತನೆಗಳನ್ನು ಜನರಿಗೆ ತಲುಪಿಸುವ ಆಶಯದೊಂದಿಗೆ ಕರಪತ್ರವನ್ನು ಉದ್ಘಾಟಿಸುತ್ತಿದ್ದೇವೆ. ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ೨೪ ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು. ಗರ್ಭಿಣಿ ಹಾಗೂ ಮಗುವಿನ ಆರೈಕೆಗಾಗಿ ೬ ತಿಂಗಳ ಕಾಲ ಪ್ರತಿ ತಿಂಗಳಿಗೆ ೬,೦೦೦ ದಂತೆ ಒಟ್ಟು ೩೬,೦೦೦ ಸಾವಿರ ಆರೋಗ್ಯ ಭತ್ಯೆ ನೀಡಲಾಗುವುದು. ಹಿರಿಯ ನಾಗರಿಕರಿಗೆ ಐದು ಸಾವಿರ ರೂಗಳ ಸಹಾಯ ಧನ, ರೈತರಿಗಾಗಿ ರಸಗೊಬ್ಬರ, ಬಿತ್ತನೆ ಬೀಜ, ಕೃಷಿ ಸಲಕರಣೆಗಳಿಗಾಗಿ ಶೇ.೫೦ ರಷ್ಟು ಸಹಾಯಧನ, ಅಂಗನವಾಡಿ ಆಶಾ ಕಾರ್ಯಕರ್ತೆಯರ ವೇತನ ೧೦ ಸಾವಿರ ರೂಗಳು ಸೇರಿದಂತೆ ಇನ್ನೂ ಅನೇಕ ಜನಪ್ರಿಯ ಕಾರ್ಯಕ್ರಮಗಳನ್ನು ನೀಡಲು ಪ್ರಣಾಳಿಕೆ ಸಿದ್ದಪಡಿಸಲಾಗಿದೆ ಎಂದು ತಿಳಿಸಿದರು.

ಗರ್ಭಿಣಿ ಸ್ತ್ರೀಯರಿಗೆ ತಲಾ ೧೦ ಸಾವಿರ ರೂಗಳ ಸಹಾಯ ಧನ ವಿತರಣೆ ಮಾಡಲಾಯಿತು

ರೈತಪರ, ಜನಪರ, ಬಡವರಪರ ಚಿಂತನೆಯುಳ್ಳವರು ನಾಯಕರಾದರೆ ರಾಜ್ಯ ಮುಂದುವರೆಯುತ್ತದೆ. ತಮ್ಮ ೨೦ ತಿಂಗಳ ಕಾಲಾವಧಿಯಲ್ಲಿ ಅನೇಕ ರೈತಪರ, ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ರೈತಾಪಿ ವರ್ಗದವರ ಹಾಗೂ ಜೀವಪರ ಚಿಂತಕರಾದ ಕುಮಾರಣ್ಣನವರನ್ನು ಬಲಪಡಿಸಿ ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡುವ ಈ ನಮ್ಮ ಜೀವಪರ ನಡಿಗೆಯಲ್ಲಿ ಎಲ್ಲರೂ ಕೈಜೋಡಿಸಿ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ಕುಮಾರಣ್ಣನವರ ಜನ್ಮದಿನದ ಅಂಗವಾಗಿ ಈ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪಕ್ಷದಲ್ಲಿ ಬಿನ್ನಾಬಿಪ್ರಾಯಗಳಿರಬಹುದು ಆದರೆ ಗುಂಪುಗಳಿಲ್ಲ. ಪಕ್ಷದ ಏಳಿಗೆಗಾಗಿ ಸಂಘಟನೆಯ ದೃಷ್ಟಿಯಿಂದ ಕುಮಾರಣ್ಣನವರನ್ನು ಬಲಪಡಿಸುವ ಮುಖ್ಯ ಗುರಿಯಿಂದ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಬಿ.ಎನ್.ರವಿಕುಮಾರ್ ಅವರ ಬೆನ್ನೆಲುಬಾಗಿ ನಿಂತು ಒಳ್ಳೆಯ ಕೆಲಸಗಳಿಗೆ ಸಹಕಾರ ನೀಡುವುದು ನಮ್ಮ ಕರ್ತವ್ಯ. ಪಕ್ಷದ ಮುಖಂಡರ ತೀರ್ಮಾನದಂತೆ ನಡೆದುಕೊಳ್ಳಲು ಎಲ್ಲರೂ ಬದ್ದವಾಗಿದ್ದೇವೆ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರಿಗೆ ಬೆಂಬಲವಾಗಿ ನಿಂತು ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಶಾಸಕ ರಾಜಣ್ಣ ಅವರ ಜೊತೆಗೊಡಿ ಒಂದೇ ವೇದಿಕೆಯಲ್ಲಿ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮವನ್ನು ಮುಂದುವರೆಸುವುದಾಗಿ ತಿಳಿಸಿದರು.
ಜೆ.ಡಿ.ಎಸ್ ವಕ್ತಾರ ಎಸ್.ಬಿ. ಶ್ರೀನಿವಾಸ್ ಮಾತನಾಡಿ, ಬಹಳ ಹಿಂದುಳಿದ ತಾಲ್ಲೂಕು ಕೇಂದ್ರದಿಂದ ದೂರವಾಗಿರುವ ಚಿಲಕಲನೇರ್ಪು ಹೋಬಳಿಗೆ ಶುಕ್ರದೆಸೆ ಬಂದಿದೆ. ಇಲ್ಲಿ ಸಮಸ್ಯಗಳು ಸಾಕಷ್ಟಿವೆ. ಪಕ್ಷವನ್ನು ಸಂಘಟನೆ ಮಾಡುತ್ತಾ ಈ ಭಾಗದ ಜನರಿಗೆ ನೆರವಾಗುತ್ತಿರುವ ಬಿ.ಎನ್.ರವಿಕುಮಾರ್ ಅವರ ಜನಪರ ಆಲೋಚನೆ ಶ್ಲಾಘನೀಯ. ಕೈಹಿಡಿದವರನ್ನು ಇಲ್ಲಿನ ಜನರು ಕೈಬಿಡುವುದಿಲ್ಲ. ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವವರನ್ನು ಬೆಂಬಲಿಸೋಣ ಎಂದು ನುಡಿದರು.
“ಮನೆಮನೆಗೆ ಕುಮಾರಣ್ಣ” ಎಂಬ ಕರಪತ್ರದ ಅನಾವರಣ

ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಈ ಭಾಗದ ಗರ್ಭಿಣಿಯರಿಗೆ ನೆರವು ನೀಡಿ ತಾಯಿತನವನ್ನು ಮೆರೆಯುವ ಮೂಲಕ ಬಿ.ಎನ್.ರವಿಕುಮಾರ್ ಈ ಭಾಗ್ದ ಹೆಣ್ಣುಮಕ್ಕಳಿಗೆ ತವರುಮನೆಯಂತಾಗಿದ್ದಾರೆ. ನೆಲದ ವಾಸನೆಯ ಅರಿವಿರುವ ಇಂಥಹವರು ಜನನಾಯಕರಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ೩೩೦ ಗರ್ಭಿಣಿಯರಿಗೆ ತಲಾ ೧೦ ಸಾವಿರ ರೂಗಳ ಸಹಾಯ ಧನ ವಿತರಣೆ ಮಾಡಲಾಯಿತು. ಉಚಿತ ಆಂಬುಲನ್ಸ್ ಸೇವೆಗೆ ಚಾಲನೆ ನೀಡಲಾಯಿತು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷೀನಾರಾಯಣರೆಡ್ಡಿ, ಡಿ.ಸಿ.ಸಿ ನಿರ್ದೇಶಕರಾದ ಪಿ.ವಿ.ನಾಗರಾಜ್, ಶಿವಾರೆಡ್ಡಿ, ಮುಖಂಡರಾದ ಯರ್ರಬಚ್ಚಪ್ಪ, ತಾದೂರು ರಘು, ಆದಿಲ್ ಪಾಷ, ತುಳುವನೂರು ರವಿ, ಆರ್.ಎ.ಉಮೇಶ್, ಕೆ.ಎಸ್.ಮಂಜುನಾಥ್, ಧರ್ಮೇಂದ್ರ, ಕದಿರಿ ಯೂಸುಫ್, ಸೆಮಿ, ಸೆಮೀವುಲ್ಲ, ಸಯ್ಯದ್ ಮಹಮ್ಮದ್, ಶ್ರೀನಿವಾಸಗೌಡ, ಗೊರಮಡುಗು ನಂಜಪ್ಪ, ರಾಜಶೇಖರ್, ಆಂಜನೇಯ, ಪಾರ್ಥಸಾರಥಿ, ಬುರುಡುಗುಂಟೆ ಬಷೀರ್, ಚಿನ್ನಪ್ಪ, ಭಾರತ್, ಮಲ್ಲಯ್ಯ, ವೆಂಕಟರೆಡ್ಡಿ, ಸೀನಪ್ಪ, ನರಸಿಂಹಪ್ಪ, ನಾಗರಾಜ್, ಜಯರಾಮರೆಡ್ಡಿ, ಓಬಣ್ಣ, ವೆಂಕಟರೋಣಪ್ಪ, ಬೈರಾರೆಡ್ಡಿ, ಮಂಜುನಾಥ್, ರಮೇಶ್, ಕೊಂಡಪ್ಪ, ಅಶೋಕ್, ರಾಜೇಶ್, ಪೆದ್ದಪ್ಪಯ್ಯ, ಅಕ್ರಂ, ಮೂರ್ತಿ, ನರಸಿಂಹಪ್ಪ, ಲೋಕೇಶ್, ಆಂಜಿ, ಖಲೀಂ, ಗೋಪಣ್ಣ, ಕೇಶವರೆಡ್ಡಿ, ವೆಂಕಟಸ್ವಾಮಿ, ಕಿಶನ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಫಲಾನುಭವಿಗಳಿಗೆ ಅಡುಗೆ ಅನಿಲದ ಸಿಲಿಂಡರ್, ಸ್ಟೌ ಹಾಗೂ ರೆಗ್ಯೂಲೇಟರ್ ವಿತರಣೆ

0

ಅರಣ್ಯದ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಲು, ಪರಿಸರ ಕಾಳಜಿಯಿಂದ ಅರಣ್ಯ ಇಲಾಖೆ ಅಡುಗೆ ಅನಿಲ ವಿತರಿಸುತ್ತಿದೆ. ಅರಣ್ಯ ಇಲಾಖೆಯ ಹಲವಾರು ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಕಾಡನ್ನು ಬೆಳೆಸುವ ಕೆಲಸ ಮಾಡಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ವರದನಾಯಕನಹಳ್ಳಿ ಗೇಟ್ ಬಳಿಯ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಶುಕ್ರವಾರ ೨೦೧೭-೧೮ ನೇ ಸಾಲಿನ ವಿಶೇಷ ಘಟಕ, ಗಿರಿಜನ ಉಪಯೋಜನೆಯಡಿಯಲ್ಲಿ ಉಚಿತ ಅನಿಲ ಸಂಪರ್ಕ ವಿತರಿಸುವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಕುಟುಂಬಗಳು ಅಡುಗೆ ಮಾಡಲು ಅರಣ್ಯದೊಳಗಿನ ಉರುವಲುಗಳನ್ನು ಸಂಗ್ರಹಿಸುತ್ತಾರೆ. ಇದನ್ನು ತಡೆಗಟ್ಟಲು ಉಚಿತವಾಗಿ ಅನಿಲ ಸಿಲಿಂಡರ್ ಮತ್ತು ಸ್ಟೌ ವಿತರಿಸಲಾಗಿದೆ. ಅಡುಗೆ ಅನಿಲವನ್ನು ಬಳಸುವಾಗ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಿದರು.
ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಮಾತನಾಡಿ, ಎಸ್ಸಿಪಿ ಹಾಗು ಎಸ್ಟಿಪಿ ಯೋಜನೆಯಡಿ ತಾಲ್ಲೂಕಿನ ಸುಮಾರು ೬೦೦ ಫಲಾನುಭವಿಗಳಿಗೆ ಅಡುಗೆ ಅನಿಲ ವಿತರಿಸಲಿದ್ದು ಈದಿನ ಸಾಂಕೇತಿಕವಾಗು ಸುಮಾರು ೧೪೭ ಮಂದಿಗೆ ವಿತರಿಸಲಾಗುತ್ತಿದೆ ಎಂದರು.
ಫಲಾನುಭವಿಗಳಿಗೆ ಅಡುಗೆ ಅನಿಲದ ಸಿಲಿಂಡರ್, ಸ್ಟೌ ಹಾಗೂ ರೆಗ್ಯೂಲೇಟರ್ ವಿತರಿಸಲಾಗುವುದು. ಅರಣ್ಯದಲ್ಲಿ ನಡೆಯುವ ಕಳ್ಳತನದ ಬಗ್ಗೆ ಇಲಾಖೆಗೆ ಮಾಹಿತಿ ನೀಡಬೇಕು ಮತ್ತು ಬೆಂಕಿ ಬಿದ್ದಂತಹ ಸಂದರ್ಭದಲ್ಲಿ ಗ್ರಾಮಸ್ಥರು ಅರಣ್ಯ ಸಿಬ್ಬಂದಿಯೊಂದಿಗೆ ಸಹಕಾರ ನೀಡಬೇಕು. ಅರಣ್ಯ ಇಲಾಖೆಯಿಂದ ನೀಡುವ ಗಿಡಗಳನ್ನು ಜನರು ಬೆಳೆಸುವ ಮೂಲಕ ಪರಿಸರವನ್ನು ಹಸಿರುಮಯಗೊಳಿಸಬೇಕು ಎಂದು ತಿಳಿಸಿದರು.
ನಗರಸಭೆ ಸದಸ್ಯ ಅಫ್ಸರ್ಪಾಷ, ಚಿಂತಾಮಣಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಚಂದ್ರಶೇಖರಯ್ಯ, ತಾಲೂಕು ಪ್ರಭಾರಿ ಉಪವಲಯ ಅರಣಾಧಿಕಾರಿ ಟಿ.ಅಶ್ವತ್ಥಪ್ಪ, ಮುಖಂಡರಾದ ಲಕ್ಷ್ಮಿನಾರಾಯಣ, ಇಂಡೇನ್ ಗ್ಯಾಸ್ ಏಜೆನ್ಸಿ ಮಾಲೀಕ ನಾಗರಾಜ್, ವ್ಯವಸ್ಥಾಪಕ ಪ್ರಕಾಶ್ ಮತ್ತಿತರರು ಹಾಜರಿದ್ದರು.

ದ್ವೇಷ ರಾಜಕಾರಣ ಮಾಡುವುದು ಎಷ್ಟು ಸರಿ?

0

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ರಾಜಾಕಾಂತ್ ಅವರು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಆರೋಪ ಮಾಡಿರುವುದರ ಜೊತೆಗೆ ಅವರ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಿರುವ ಕೆ.ಪಿ.ಸಿ.ಸಿ,ಸದಸ್ಯ ಎಸ್.ಪಿ. ಶ್ರೀನಿವಾಸ್ ಅವರು ದಾಖಲೆಗಳನ್ನು ಬಿಡುಗಡೆ ಮಾಡದಿದ್ದರೆ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಚಾಲ ಎಸ್.ಜಿ.ನಾರಾಯಣಸ್ವಾಮಿ ಮಾತನಾಡಿ, ಕೆ.ಪಿ.ಸಿ.ಸಿ.ಸದಸ್ಯರಾಗಿರುವ ಎಸ್.ಪಿ.ಶ್ರೀನಿವಾಸ್ ಅವರು, ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದಾರೆ. ಶಾಸಕರ ಹೆಸರೇಳಿಕೊಂಡು ಎಲ್ಲಾ ಕಚೇರಿಗಳಲ್ಲಿ ಮಾಮೂಲಿ ವಸೂಲಿ ಮಾಡುತ್ತಿದ್ದಾರೆ.
ಹಾಲಿ ಶಾಸಕ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಅವರ ಕೈ ಗೊಂಬೆಯಾಗಿ ಕೆಲಸ ಮಾಡುತ್ತಿದ್ದು, 20 ವರ್ಷಗಳಿಂದ ನಿರಂತರವಾಗಿ ಬಡವರ ಪರವಾಗಿ ಹೋರಾಟಗಳನ್ನು ಮಾಡಿಕೊಂಡು ಬರುತ್ತಿರುವ ರಾಜಾಕಾಂತ್ ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ.
ಒಬ್ಬ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಕಾಂಗ್ರೆಸ್ ಸದಸ್ಯರೇ ಸಾಮಾನ್ಯ ಸಭೆಗಳಲ್ಲಿ ಭಾಗವಹಿಸುತ್ತಿಲ್ಲ, ಈ ಕುರಿತು ನೀವೇನು ಕ್ರಮ ಕೈಗೊಂಡಿದ್ದೀರಿ ಎಂದು ಅಧ್ಯಕ್ಷರನ್ನು ಕೇಳಿದ ಮಾತ್ರಕ್ಕೆ ಈ ರೀತಿಯಾಗಿ ದ್ವೇಷ ರಾಜಕಾರಣ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಜಿಲ್ಲಾ ಸಂಚಾಲಕ ಸಿ.ಎಂ.ಮುನಿಯಪ್ಪ ಮಾತನಾಡಿ, ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ದಲಿತರ ದ್ವನಿಯಡಿಗಿಸುವಂತಹ ಹುನ್ನಾರಗಳು ನಡೆಯುತ್ತಿವೆ. ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ನಡೆದಿರುವ ಪ್ರಕರಣದ ಕುರಿತು ರಾಜ್ಯ ಸರ್ಕಾರವೇ ಸಾಕ್ಷ್ಯಾಧಾರ ಇಲ್ಲದ ಕಾರಣ, ಪ್ರಕರಣವನ್ನು ವಜಾಗೊಳಿಸಿದೆ. ಈ ಕುರಿತು ಪುನಃ ಪ್ರಸ್ತಾಪಿಸಿರುವ ಅವರಿಗೆ ಕನಿಷ್ಟ ಜ್ಞಾನವಿಲ್ಲ. ದಲಿತ ಮುಖಂಡನೆಂಬ ಕಾರಣಕ್ಕಾಗಿ ಅವರ ತೇಜೋವಧೆಗೆ ಇಳಿದಿರುವ ಶಾಸಕ ಸುಧಾಕರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಹಾಗೂ ಕೆ.ಪಿ.ಸಿ.ಸಿ.ಸದಸ್ಯ ಎಸ್.ಪಿ.ಶ್ರೀನಿವಾಸ್ ಅವರು ದಾಖಲೆಗಳ ಸಮೇತವಾಗಿ ಬಹಿರಂಗ ಚರ್ಚೆಗೆ ಬರಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ಸಂಚಾಲಕ ಎನ್.ಎ.ವೆಂಕಟೇಶ್ ಮಾತನಾಡಿ, ಸ್ವಪಕ್ಷೀಯ ಸದಸ್ಯರಿಂದ ಬೆಂಬಲ ಪಡೆಯಲು ವಿಫಲವಾಗಿ ಹತಾಶರಾಗಿರುವ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೇಶವರೆಡ್ಡಿ ಅವರು, ತಮ್ಮ ಹಿಂಬಾಲಕ ಶ್ರೀನಿವಾಸ್ ಅವರ ಮೂಲಕ ಹೇಳಿಕೆ ಕೊಡುತ್ತಿದ್ದಾರೆ. ಇದು ಖಂಡನೀಯ ಅವರು, ಈ ಕೆಲಸ ಮಾಡುವುದನ್ನು ಬಿಟ್ಟು, ಕ್ಷೇತ್ರದ ಅಭಿವೃದ್ಧಿಯ ಕಡೆಗೆ ಗಮನಹರಿಸಲಿ, ನಾವು ರಾಜ್ಯಾಧ್ಯಂತ ಉಗ್ರವಾದ ಹೋರಾಟ ಮಾಡುವ ಮೂಲಕ ತಾಲ್ಲೂಕು, ಜಿಲ್ಲೆ, ರಾಜ್ಯದಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ತಾಲ್ಲೂಕು ಸಂಚಾಲಕ ಟಿ.ಎ.ಚಲಪತಿ, ಜಿಲ್ಲಾ ಸಂಚಾಲಕ ಆನಂದ್, ತಿರುಮಳಪ್ಪ, ಲಕ್ಷ್ಮಣ್, ಇದ್ದರು

ಸಾಂಪ್ರದಾಯಿಕ ಹಾಡುಗಾರ್ತಿ ಶಾಂತಮ್ಮಳಿಗೆ ಸಂದ ಜನಪದ ಪ್ರಶಸ್ತಿ

0

ತಾಲ್ಲೂಕಿನ ಮಳ್ಳೂರು ಗ್ರಾಮದ ಜಿ.ಶಾಂತಮ್ಮ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿಯ ೨೦೧೭-೧೮ನೇ ಸಾಲಿನ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಹೆಣ್ಮಕ್ಕಳು ಮೈ ನೆರೆದಾಗ ಹಾಕುವ ವಸಗೆ, ಮಧುವಣಗಿತ್ತಿಗೆ ಅರಿಶಿಣ ಹಚ್ಚುವ ಸಂಭ್ರಮದಲ್ಲಿ, ನವ ವಧು ವರರು ಮನೆಗೆ ಮೊದಲ ಸಲ ಬಂದಾಗ ಹಾಡುವ ಸೋಬಾನೆ ಪದಗಳ ಕಣಜ ಜಿ.ಶಾಂತಮ್ಮಳಿಗೆ ಈ ಪ್ರಶಸ್ತಿ ದೊರೆತಿರುವುದಕ್ಕೆ ಮಳ್ಳೂರು ಗ್ರಾಮ ಸೇರಿದಂತೆ ತಾಲೂಕಿನಾಧ್ಯಂತ ಸಂಭ್ರಮ ಮನೆ ಮಾಡಿದೆ.
೭ನೇ ತರಗತಿಯಷ್ಟೆ ಓದಿದ ೬೦ ವರ್ಷದ ಶಾಂತಮ್ಮ ೫ನೇ ತರಗತಿ ಓದುತ್ತಿರುವಾಗಲೆ ತಮ್ಮ ತಾಯಿಯಿಂದಲೆ ಸೋಬಾನೆ ಪದಗಳನ್ನು ಕಲಿತು ಹಾಡಲು ಮುಂದಾಗಿದ್ದು ಇದುವರೆಗಿನ ಐದು ದಶಕಗಳ ಸುಧೀರ್ಘ ಪಯಣದಲ್ಲಿ ಸಾವಿರಾರು ಕಾರ್ಯಕ್ರಮಗಳಲ್ಲಿ ತಮ್ಮ ಸೋಬಾನೆ ಪದಗಳ ಕಂಪನ್ನು ಹರಿಸಿದ್ದಾರೆ.
ಮಳ್ಳೂರಿನಲ್ಲಿ ಯಾರೇ ಹೆಣ್ಮಕ್ಕಳು ಮೈ ನೆರೆದಾಗ ಹಾಕುವ ವಸಗೆ, ಮಧುವಣಗಿತ್ತಿಗೆ ಅರಿಶಿಣ ಹಚ್ಚುವ ಸಂಭ್ರಮ, ನವ ವಧು ವರರು ಮನೆಗೆ ಮೊದಲ ಸಲ ಬಂದಾಗ ಸೋಬಾನೆ ಪದಗಳನ್ನು ಹಾಡಲು ಈ ಶಾಂತಮ್ಮನೇ ಬೇಕು.
ಮಳ್ಳೂರಿನಲ್ಲಷ್ಟೆ ಅಲ್ಲ ಆ ಊರಿನ ಬಂಧು ಬಳಗದವರ ಮನೆಗಳಲ್ಲಿ ನಡೆಯುವ ವಸಗೆ, ಮದುವೆ, ಚಪ್ಪರ, ಅರಿಶಿಣ ಹಚ್ಚುವ ಕಾರ್ಯ ನಡೆದರೆ ಅಲ್ಲಿ ಶಾಂತಮ್ಮ ಇರಲೇಬೇಕು ಆಕೆಯ ಸೋಬಾನೆ ಸಾಂಪ್ರದಾಯಿಕ ಹಾಡು ಹಾಡಲೇಬೇಕು.
ಅಷ್ಟರ ಮಟ್ಟಿಗೆ ಶಾಂತಮ್ಮ ನಮ್ಮ ಈ ನೆಲದ ಸೊಗಡಿನ ಜನಪದ, ಸೋಬಾನೆ, ಸಾಂಪ್ರದಾಯಿಕ ಪದಗಳು, ಹಾಡುಗಳನ್ನು ಹಾಡುತ್ತಾ ಉಳಿಸಿ ಬೆಳೆಸುತ್ತಾ ಬಂದಿದ್ದಾರೆ.
ಮನೆಯಲ್ಲಿ ಕಸ ಗುಡಿಸಲಿ, ಧನಕರುಗಳಿಗೆ ಮೇವು ಹಾಕಲಿ, ಕೋಳಿಗಳಿಗೆ ರಾಗಿ ಕಾಳು ಹಾಕುತ್ತಿರಲಿ, ಗಿಡಗಳಿಗೆ ನೀರು ಹಾಯಿಸುತ್ತಿರಲಿ ಶಾಂತಮ್ಮಳ ಬಾಯಲ್ಲಿ ಸೋಬಾನೆ ಪದಗಳ ಸರಿಗಮಪದಗಳು ಸರಾಗವಾಗಿ ನುಲಿಯುತ್ತಲೆ ಇರುತ್ತವೆ.
ಅಂತಹ ಅಪ್ಪಟ ಹಳ್ಳಿ ಹೈದೆ ಗ್ರಾಮೀಣ ಸೊಗಡಿನ ಪ್ರತಿಭಾವಂತೆ ಶಾಂತಮ್ಮಳಿಗೆ ಜಾನಪದ ಅಕಾಡೆಮಿಯ ಪ್ರಶಸ್ತಿ ಸಂಧಿರುವುದು ಶಿಡ್ಲಘಟ್ಟ ತಾಲೂಕಿಗೆ ಹೆಮ್ಮೆ ಎನಿಸುತ್ತದೆ.

ಮಕ್ಕಳ ಗಣಿತ ಸ್ಪರ್ಧೆ ಕಾರ್ಯಕ್ರಮ

0

ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮಕ್ಕಳ ಜ್ಞಾನ ವೃದ್ಧಿಗಾಗಿ ವಿವಿಧ ಚಟುವಟಿಕೆಗಳನ್ನು ಅಕ್ಷರ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಾಲ್ಲೂಕು ಸಂಯೋಜಕ ಕೆ.ವಿ.ಮಂಜುನಾಥ್ ಹೇಳಿದರು.
ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಂಡ್ಲಚಿಂತ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುದವಾರ ಅಕ್ಷರಾ ಫೌಂಡೇಶನ್ ಹಾಗೂ ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ಗಣಿತ ಸ್ಪರ್ಧೆ ಕಾರ್ಯಕ್ರಮದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ಹಾಗು ಅಭಿನಂದನಾ ಪತ್ರ ವಿತರಿಸಿ ಮಾತನಾಡಿದರು.
ಗಣಿತದಲ್ಲಿ ಯಶಸ್ವಿಯಾದರೆ ಜೀವನದಲ್ಲಿ ಯಶಸ್ವಿಯಾದಂತೆ, ನಿತ್ಯ ಜೀವನ ಆರಂಭವಾಗುವುದೇ ಲೆಕ್ಕಾಚಾರದ ಮೂಲಕ ಹಾಗಾಗಿ ಗಣಿತ ಕಬ್ಬಿಣದ ಕಡಲೆಕಾಯಿ ಎಂಬ ಭಯ ಹೋಗಲಾಡಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ ಸಾಲೆಗಳ ೪ ಮತ್ತು ೫, ೬ ನೇ ತರಗತಿ ಮಕ್ಕಳಿಗೆ ಸ್ಪರ್ಧೆ ಏರ್ಪಡಿಸುವ ಮೂಲಕ ಮಕ್ಕಳಲ್ಲಿ ಗಣಿತದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಇದಾಗಿದೆ ಎಂದರು.
ಮಕ್ಕಳಿಗೆ ಕ್ಲಿಷ್ಟವೆನಿಸುವ ವಿಷಯಗಳನ್ನು ಸರಳವಾಗಿ ಇಷ್ಟವಾಗುವಂತೆ ಕಲಿಸುವ ಹಲವಾರು ವಿಧಾನಗಳಿವೆ. ಅವುಗಳನ್ನು ಅರಿತವರಿಂದ ಮಕ್ಕಳಿಗೆ ಆಡುತ್ತಾ ಕಲಿಯುವಂತೆ ಕಲಿಸಬಹುದಾಗಿದೆ. ಗ್ರಾಮ ಪಂಚಾಯಿತಿಯ ವಿವಿಧ ಸರ್ಕಾರಿ ಶಾಲೆಗಳ ಮಕ್ಕಳನ್ನು ಒಗ್ಗೂಡಿಸಿ ಕಲಿಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ಗಣಿತ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯಿತಿಯಿಂದ ಬಹುಮಾನ ವಿತರಿಸಿದರು. ಅಕ್ಷರಾ ಫೌಂಡೇಶನ್ ವತಿಯಿಂದ ಪ್ರಮಾಣ ಪತ್ರವನ್ನು ನೀಡಲಾಯಿತು.
ಗ್ರಾ.ಪಂ ಅಧ್ಯಕ್ಷ ಟಿ.ಶ್ರೀನಿವಾಸ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಗೌಸ್ಪೀರ್, ಮುಖ್ಯಶಿಕ್ಷಕ ಆದಿನಾರಾಯಣಪ್ಪ, ಶಿಕ್ಷಕ ಬಿ,ಆರ್.ನಾರಾಯಣಸ್ವಾಮಿ, ಕರವಸೂಲಿಗಾರ ಈಶ್ವರರೆಡ್ಡಿ, ಮತ್ತಿತರರು ಹಾಜರಿದ್ದರು.

ಸಿರಿಧಾನ್ಯಗಳ ಕ್ಷೇತ್ರೋತ್ಸವ ಕಾರ್ಯಕ್ರಮ

0

ಸಿರಿಧಾನ್ಯಗಳಿಂದ ತಯಾರಿಸಿದ ಆಹಾರವನ್ನು ಹೆಚ್ಚು ಸೇವಿಸುವುದರಿಂದ ಉತ್ತಮವಾದ ಆರೋಗ್ಯವನ್ನು ವೃದ್ಧಿ ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ಎನ್ ಆರ್ ಡಿ ಎಸ್ ಸಂಸ್ಥೆಯ ಕಾರ್ಯದರ್ಶಿ ಎಂ.ವೆಂಕಟರಮಣಸ್ವಾಮಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಪ್ಪೇನಹಳ್ಳಿ ಗ್ರಾಮದಲ್ಲಿ ನಬಾರ್ಡ್ ಹಾಗು ಎನ್ ಆರ್ ಡಿಎಸ್ ಸಂಸ್ಥೆಯ ಸಹಯೋಗದಲ್ಲಿ ಸುಸ್ಥಿರ ಅಭಿವೃದ್ದಿ ಯೋಜನೆಯಡಿ ಏರ್ಪಡಿಸಲಾಗಿದ್ದ ಸಿರಿಧಾನ್ಯಗಳ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹಲವು ವರ್ಷಗಳಿಂದ ಸಿರಿಧಾನ್ಯಗಳನ್ನು ಬೆಳೆಯುವ ಪದ್ಧತಿಯನ್ನು ರೈತರು ಬಿಟ್ಟಿದ್ದರು. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರ ತಮ್ಮ ಆಸಕ್ತಿಯಿಂದ ಬೆಳೆದುಕೊಳ್ಳುತ್ತಿದ್ದರು. ಬಯಲು ಭಾಗದಲ್ಲಿನ ರೈತರು ರಾಗಿ, ಮುಸುಕಿನಜೋಳ, ಮುಂತಾದ ಬೆಳೆಗಳಿಗೆ ಮಾತ್ರ ಸೀಮಿತವಾಗಿದ್ದರು. ಕೃಷಿ ಕ್ಷೇತ್ರೋತ್ಸವದಂತಹ ಕಾರ್ಯಕ್ರಮಗಳ ಮೂಲಕ ರೈತರಿಗೆ ಸಿರಿಧಾನ್ಯಗಳಾದ ಸಾಮೆ, ಸಜ್ಜೆ, ಆರ್ಕ, ನವಣೆ, ಮುಂತಾದ ಬೆಳೆಗಳ ಕುರಿತು ಮೂಡಿಸಿದ್ದ ಜಾಗೃತಿಯ ಫಲವಾಗಿ ರೈತರು ತಮ್ಮ ಹೊಲಗಳಲ್ಲಿ ಸಿರಿಧಾನ್ಯಗಳನ್ನು ಬಿತ್ತನೆ ಮಾಡಲು ಮುದಾಗುತ್ತಿರುವುದು ಸಂತಸದ ವಿಷಯ ಎಂದರು.
ಕುರಬೂರಿನ ಕೃಷಿ ವಿಜ್ಞಾನ ಕೇಂದ್ರದ ಡಾ.ಆನಂದ್ ಮಾತನಾಡಿ ಸಿರಿದಾನ್ಯಗಳಿಂದ ಉತ್ತಮ ಆರೋಗ್ಯ ಸಿಗುತ್ತದೆ ಎನ್ನುವುದು ಒಂದು ಕಾರಣವಾದರೆ ಕಡಿಮೆ ಖರ್ಚಿನ ಬೆಳೆ ಇದಾಗಿದ್ದು ಪ್ರತಿಯೊಬ್ಬರೂ ಸಿರಿಧಾನ್ಯಗಳನ್ನು ಬೆಳೆಯಲು ಮುದಾಗಬೇಕು ಎಂದರು. ಸಿರಿಧಾನ್ಯಗಳಿಗೆ ಮಾರುಕಟ್ಟೆಯಲ್ಲಿ ಇದೀಗ ಉತ್ತಮ ಬೇಡಿಕೆಯಿದ್ದು ರಕ್ತದ ಒತ್ತಡ, ಸಕ್ಕರೆ ಕಾಯಿಲೆಗೆ ತುತ್ತಾದವರು ಸಿರಿಧಾನ್ಯಗಳಿಂದ ತಯಾರಿಸಿದ ಆಹಾರವನ್ನು ಹೆಚ್ಚು ಸೇವಿಸುವುದರಿಂದ ಉತ್ತಮವಾದ ಆರೋಗ್ಯವನ್ನು ವೃದ್ಧಿ ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಸುರೇಂದ್ರ, ಸದಸ್ಯರಾದ ಟಿ.ಕೆ.ನಾಗರಾಜು, ಎಂ.ಪಿ.ಸಿ.ಎಸ್ ಅಧ್ಯಕ್ಷ ಮುನಿರಾಜು, ವಿಶ್ವನಾಥರೆಡ್ಡಿ, ಕೃಷಿ ಇಲಾಖೆಯ ಅಶ್ವತ್ಥನಾರಾಯಣ, ಯೋಜನಾಧಿಕಾರಿ ಎ.ಮುನಿರಾಜು, ರೈತರಾದ ಟಿ.ಪಿ.ವಿಜಯ್ಕುಮಾರ್ ಮತ್ತಿತರರು ಹಾಜರಿದ್ದರು.

ಸೇವೆ ಸಲ್ಲಿಸುವಲ್ಲಿ ಗೃಹರಕ್ಷಕ ದಳ ಯಶಸ್ವಿಯಾಗಿದೆ

0

ಗೃಹರಕ್ಷಕ ದಳದ ಸೇವೆ ಅಮೂಲ್ಯವಾದ ಸೇವೆಯಾಗಿದೆ. ಪೊಲೀಸರಿಗೆ ಬೆನ್ನೆಲುಬಾಗಿ ಸೇವೆ ಸಲ್ಲಿಸುವಲ್ಲಿ ದಳ ಯಶಸ್ವಿಯಾಗಿದೆ ಎಂದು ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಆರ್.ವೆಂಕಟೇಶ್ ತಿಳಿಸಿದರು.
ನಗರದ ಶ್ರೀ ವೇಣುಗೋಪಾಲಸ್ವಾಮಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗೃಹರಕ್ಷಕ ದಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೀವರಕ್ಷಣೆ, ಆಸ್ತಿ ರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆ ಪಾಲಿಸಲು ಗೃಹರಕ್ಷಕದಳದ ಕೊಡುಗೆ ಮಹತ್ತರವಾದುದು. ಗೃಹರಕ್ಷಕ ದಳದ ಸಿಬ್ಬಂದಿ ಪೊಲೀಸ್ ಇಲಾಖೆಯ ನೆರಳಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದು, ಸಮಾಜ ಮತ್ತು ನಾಗರಿಕರ ರಕ್ಷಣೆಗೆ ಬದ್ಧವಾಗಿದೆ ಎಂದು ಹೇಳಿದರು.
ಕರ್ಣಶ್ರೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿ.ಆರ್.ಶಿವಕುಮಾರಗೌಡ ಮಾತನಾಡಿ, ಗೃಹರಕ್ಷಕ ದಳದಲ್ಲಿ ಸೇವೆ ನೀಡುತ್ತಿರುವ ಹೋಮ್ ಗಾರ್ಡ್ಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಮಂತ್ರಿಗಳೊಂದಿಗೆ ಮಾತನಾಡುವುದಾಗಿ ನುಡಿದರು.

ಗೃಹರಕ್ಷಕ ದಳ ದಿನಾಚರಣೆ ಕಾರ್ಯಕ್ರಮದಲ್ಲಿ ಗೃಹರಕ್ಷಕ ದಳ ಮಾಜಿ ಘಟಕಾಧಿಕಾರಿ ರೂಪಸಿ ರಮೇಶ್ ಅವರನ್ನು ಸನ್ಮಾನಿಸಲಾಯಿತು

ಗೃಹರಕ್ಷಕ ದಳ ಮಾಜಿ ಘಟಕಾಧಿಕಾರಿ ರೂಪಸಿ ರಮೇಶ್ ಮಾತನಾಡಿ, ಸರ್ಕಾರಿ ಅಧೀನದಲ್ಲಿರುವ ಸ್ವತಂತ್ರ, ಶಿಸ್ತುಬದ್ಧ ಸಮವಸ್ತ್ರಧಾರಿ ಸ್ವಯಂ ಸೇವಕರನ್ನೊಳಗೊಂಡ ಸ್ವಯಂ ಸೇವಾ ಸಂಸ್ಥೆಯೇ ಗೃಹರಕ್ಷಕದಳ. 1946ರಲ್ಲಿ ಬಾಂಬೆಯಲ್ಲಿ ಗೃಹ ರಕ್ಷಕದಳ ಅಸ್ತಿತ್ವಕ್ಕೆ ಬಂತು. ದೇಶದ ಆಂತರಿಕ ಭದ್ರತೆಯನ್ನು ಕಾಪಾಡಲು ಪೊಲೀಸ್ ವ್ಯವಸ್ಥೆಯೊಂದಿಗೆ ಕೈಜೋಡಿಸುವುದು, ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗುವುದು, ಜಾತ್ರೆ, ಉತ್ಸವ, ರಾಷ್ಟ್ರೀಯ ಹಬ್ಬಗಳ ಆಚರಣೆ, ಮುಷ್ಕರ ಪ್ರತಿಭಟನೆ ಮುಂತಾದ ಸಂದರ್ಭದಲ್ಲಿ ಬಂದೋಬಸ್ತ್, ಚುನಾವಣೆ ಸಂದರ್ಭ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಪಡೆಯ ಜೊತೆಗೆ ಗೃಹ ರಕ್ಷಕರನ್ನು ಬಳಸಿಕೊಳ್ಳಲಾಗುತ್ತದೆ. ಸ್ವಯಂ ಮನೋಭಾವವುಳ್ಳ ಯಾರೂ ಬೇಕಾದರೂ (20ರಿಂದ 50 ವರ್ಷದೊಳಗಿನವರು) ಗೃಹರಕ್ಷಕದಳಕ್ಕೆ ಸೇರಬಹುದು. ಕನಿಷ್ಠ ವಿದ್ಯಾರ್ಹತೆ ನಾಲ್ಕನೆ ತರಗತಿ ಓದಿರುವ( ಯಾವುದೇ ಭಾಷಾ ಮಾಧ್ಯಮದಲ್ಲಿ) ಅಭ್ಯರ್ಥಿಗಳು ಸರ್ಕಾರವೇ ನಿಗದಿಪಡಿಸಿದ ಅರ್ಜಿ ನಮೂನೆಗಳನ್ನು ಜಿಲ್ಲಾ ಕಚೇರಿಗಳಿಂದ ಪಡೆದು ವಯಸ್ಸಿನ ದಾಖಲೆ, ವಿದ್ಯಾರ್ಹತೆ, ವಾಸ ಸ್ಥಳಕ್ಕೆ ಸಂಬಂಧಿಸಿದ ದಾಖಲೆ ನಕಲು ಪತ್ರಿ ಲಗತ್ತಿಸಿ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ವ್ಯಕ್ತಿಗಳಿಗೆ ಆರು ತಿಂಗಳ ತರಬೇತಿ ನೀಡಲಾಗುವುದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಗೃಹರಕ್ಷಕದಳದಲ್ಲಿ ಸೇವೆ ಸಲ್ಲಿಸಿರುವ ಹಿರಿಯರಾದ ನರಸಿಂಹಯ್ಯ, ರೂಪಸಿ ರಮೇಶ್ ಹಾಗೂ ಮುಖ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಎಸ್.ಡಿ.ಅಶೋಕ್ ಬಾಬು, ಪ್ರಭಾರಿ ಘಟಕಾಧಿಕಾರಿ ವೆಂಕಟರಮಣ, ಚಂದ್ರು, ಆನೆಪ್ಪ, ವಿ.ವೆಂಕಟೇಶ್, ನಾಗೇಂಗ್ರ, ಗೀತಾ, ಮಹಬೂಬ್ ಪಾಷ ಹಾಜರಿದ್ದರು.