ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ಉದ್ಯೋಗಿಗಳು ವೇತನ ಪರಿಷ್ಕರಣೆಗೆ ಆಗ್ರಹಿಸಿ ಮಂಗಳವಾರ ಬಿ.ಎಸ್.ಎನ್.ಎಲ್ ಕಚೇರಿಯ ಮುಂದೆ ಮುಷ್ಕರ ನಡೆಸಿದರು.
ಎರಡು ದಿನಗಳ ಕಾಲ ಸಂಪೂರ್ಣ ಮುಷ್ಕರವನ್ನು ನಡೆಸುತ್ತಿದ್ದೇವೆ. ಮೂರನೇ ವೇತನ ಪರಿಷ್ಕರಣೆ, ಎಲ್ಲಾ ಭತ್ಯೆಗಳ ಪರಿಷ್ಕರಣೆಗೆ ಹಕ್ಕೊತ್ತಾಯ ಮಂಡಿಸುತ್ತಿದ್ದೇವೆ. ಎರಡನೇ ವೇತನ ಪರಿಷ್ಕರಣೆ ಸಮಯದಲ್ಲಿ ಪರಿಷ್ಕರಣೆ ಆಗದೇ ಉಳಿದ ಎಲ್ಲ ಭತ್ಯೆಗಳನ್ನೂ ಇತ್ಯರ್ಥಗೊಳಿಸಬೇಕು. ಪ್ರತ್ಯೇಕ ಸಹಾಯಕ ಟವರ್ ಕಂಪನಿಯನ್ನು ರಚಿಸುವ ಸರ್ಕಾರದ ಪ್ರಸ್ತಾಪವನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು.
ಬಿಎಸ್ಎನ್ಎಲ್ ಉದ್ಯೋಗಿಗಳಾದ ವಿರೂಪಾಕ್ಷಪ್ಪ, ವಾಸು, ಚಂದ್ರಶೇಖರ್, ಗೋವಿಂದಪ್ಪ, ಶೇಖರ್, ನರಸಿಂಹಪ್ಪ, ಶ್ರೀನಿವಾಸ್, ಲಕ್ಷ್ಮಮ್ಮ, ನಾರಾಯಣಸ್ವಾಮಿ, ನಾಗರಾಜ್, ಆನಂದ್, ಶಂಕರಪ್ಪ, ರಾಮಚಂದ್ರ, ಭರತ್, ನೂರುಲ್ಲ ಹಾಜರಿದ್ದರು.
ಬಿಎಸ್ಎನ್ಎಲ್ ಉದ್ಯೋಗಿಗಳ ಮುಷ್ಕರ
ಚಳಿಗಾಲದಲ್ಲಿ ಬೇಕಿದೆ ದ್ರಾಕ್ಷಿ ಬೆಳೆಗೆ ರೋಗ ನಿಯಂತ್ರಣ
ತಾಲ್ಲೂಕಿನಲ್ಲಿ ಚಳಿಗಾಲ ಪ್ರಾರಂಭವಾಗಿದೆ. ಮುಂಜಾನೆ ಮಂಜು ಮುಸುಕಿರುತ್ತದೆ. ಡಿಸೆಂಬರ್ ತಿಂಗಳಿನಲ್ಲಿ ಆರಂಭವಾಗಿ ಫೆಬ್ರವರಿ ತಿಂಗಳವರೆಗೂ ಮುಂದುವರೆಯುವಂತಹ ಚಳಿಗಾಲದಲ್ಲಿ ವಾಣಿಜ್ಯ ಬೆಳೆಯಾಗಿರುವ ದ್ರಾಕ್ಷಿಗೆ ಬರುವಂತಹ ರೋಗಗಳನ್ನು ನಿಯಂತ್ರಣ ಮಾಡಿಕೊಳ್ಳುವ ಕಡೆಗೆ ರೈತರು ಹೆಚ್ಚು ಗಮನಹರಿಸಬೇಕು ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮುನೇಗೌಡ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವಂತಹ ಬೆಂಗಳೂರು ಬ್ಲೂ ದ್ರಾಕ್ಷಿಗೆ ಚಳಿಗಾಲದಲ್ಲಿ ‘ಡೌನಿ ಮಿಲ್ಡ್’ ರೋಗ ಬೀಳುತ್ತದೆ, ಕೆಲ ಕಡೆಗಳಲ್ಲಿ ರೈತರು ಹೆಚ್ಚಿನ ಲಾಭ ಮಾಡಿಕೊಳ್ಳುವ ದೃಷ್ಠಿಯಿಂದ ಬೀಜರಹಿತ ದ್ರಾಕ್ಷಿಯನ್ನು ಬೆಳೆಯುತ್ತಿದ್ದಾರೆ. ಅಂತಹ ದ್ರಾಕ್ಷಿಗೆ ‘ಪೌಡರಿ ಮಿಲ್ಡ್’ (ದ್ರಾಕ್ಷಿ ಎಲೆಗಳ ಹಿಂಭಾಗದಲ್ಲಿ ಪೌಡರ್ ಮಾದರಿಯಲ್ಲಿ ಬೀಳುವ ರೋಗ) ರೋಗ ಕಾಣಿಸಿಕೊಳ್ಳುತ್ತದೆ, ಇದು ಕ್ಲೋರೋಫಿಲ್ ಫಾರ್ಮೇಷನ್ ಗೆ ಹೊಡೆತವಾಗುವುದರಿಂದ ಇಳುವರಿಯಲ್ಲಿ ಏರುಪೇರು ಆಗಲಿದೆ. ಇದು ಫಂಗಸ್ ರೋಗವಾಗಿದ್ದು, ಸುಲಭವಾಗಿ ಹತೋಟಿಗೆ ತರಬಹುದಾಗಿದೆ.
ಮೋಡಮುಸುಕಿದ ವಾತಾವರಣ ಇದ್ದಾಗ, ಮಳೆ ಬರುವ ವಾತಾವರಣದಲ್ಲಿ ಸಿಡ್ ಲೆಸ್ ದ್ರಾಕ್ಷಿಯಲ್ಲಿ ಹೆಚ್ಚು ರೋಗ ಕಾಣಿಸಿಕೊಳ್ಳಲಿದೆ, ಮುಂದಿನ ಬೆಳೆಗಳಾಗಿ ರೈತರು ಎಲೆಗಳನ್ನು ಉಳಿಸಿಕೊಳ್ಳಬೇಕಾಗಿದೆ. ಸಸ್ಯ ಸಂರಕ್ಷಣಾ ಔಷಧಿಗಳನ್ನು ಸಿಂಪಡಣೆ ಮಾಡಿಕೊಳ್ಳಬೇಕಾಗುತ್ತದೆ. ಈ ಕುರಿತು ರೈತರಿಗೆ ಮಾಹಿತಿಗಳನ್ನು ಆಗಿದ್ದಾಗ್ಗೆ ಕೊಡುತ್ತಿದ್ದೇವೆ.
ಚಳಿಗಾಲದಲ್ಲಿ ದ್ರಾಕ್ಷಿಯನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗಿರುತ್ತದೆ. ಬಿಸಿಲು ಹೆಚ್ಚಾಗಿದ್ದಷ್ಟು ದ್ರಾಕ್ಷಿಗೆ ಉತ್ತಮವಾದ ವಾತಾವರಣವಾಗಿದೆ. ಬೆಳಗಾಂ, ಅಥಣಿ, ಬಿಜಾಪುರ, ಸಾಂಗ್ಲಿ, ಮಹಾರಾಷ್ಟ್ರ ಕಡೆಗಳಲ್ಲಿ ಸಿಡ್ ಲೆಸ್ ದ್ರಾಕ್ಷಿ ಹೆಚ್ಚು ಬೆಳೆಯುತ್ತಾರೆ. ಇಳುವರಿ ಉತ್ತಮವಾಗಿರುತ್ತದೆ. ಈ ಕಡೆಗೆ ಭೇಟಿ ಕೊಡುವ ರೈತರು ಸಿಡ್ ಲೆಸ್ ದ್ರಾಕ್ಷಿಗಳು ಬೆಳೆಯಲು ಮುಂದಾಗಿದ್ದಾರೆ.
ಒಮ್ಮೆ ಬೆಳೆ ನಾಟಿ ಮಾಡಿದರೆ 30 ರಿಂದ 40 ವರ್ಷಗಳು ಇರುತ್ತದೆ. ತಾಲ್ಲೂಕಿನ ಮೇಲೂರು, ಮಳ್ಳೂರು, ಮುತ್ತೂರು, ಅಪ್ಪೇಗೌಡನಹಳ್ಳಿ, ಚೌಡಸಂದ್ರೆ, ಕನ್ನಮಂಗಲ, ಹುಜಗೂರು ಸೇರಿದಂತೆ ಹಲವಾರು ಕಡೆ ಬೆಳೆಯುತ್ತಿದ್ದಾರೆ.
2001 ರಿಂದ ಶೇ 70 ರಷ್ಟು ಮಂದಿ ದಿಲ್ ಕುಶ್, ಅನಾಫಿಶ್ ತಳಿಗಳನ್ನು ಬಿಟ್ಟು ಬೀಜರಹಿತ ದ್ರಾಕ್ಷಿಯನ್ನು ಬೆಳೆಯಲು ಮುಂದಾಗಿದ್ದಾರೆ. ನಮ್ಮ ಹವಾಮಾನಕ್ಕೆ ವಿರುದ್ಧವಾಗಿದ್ದರೂ ಬೆಳೆಯಲು ಮುಂದಾಗಿದ್ದಾರೆ.
ಬಿಜಾಪುರ ಜಿಲ್ಲೆಯಲ್ಲಿ ಬೆಳೆಯುವ ದ್ರಾಕ್ಷಿಗೆ ಹೋಲಿಕೆ ಮಾಡಿದರೆ ನಮ್ಮ ಸುತ್ತಮುತ್ತಲಿನಲ್ಲಿ ಬೆಳೆಯುವ ದ್ರಾಕ್ಷಿಯ ಇಳುವರಿ ಕಡಿಮೆ, ಸಕ್ಕರೆ ಅಂಶ ಕಡಿಮೆಯಾಗುತ್ತದೆ. ಆದ್ದರಿಂದ ಇಲ್ಲಿನ ದ್ರಾಕ್ಷಿಗೆ ಸಿಗುವ ಬೆಲೆ ಕಡಿಮೆಯಾಗುತ್ತದೆ. ಈ ಕಾರಣದಿಂದ ಕೆಲ ರೈತರು ದ್ರಾಕ್ಷಿ ಬೆಳೆಗಳಿಂದ ವಿಮುಖವಾಗಿ ತರಕಾರಿ ಬೆಳೆಗಳು ಬೆಳೆಯಲು ಮುಂದಾಗಿದ್ದಾರೆ.
ಸಿಡ್ ಲೆಸ್ ದ್ರಾಕ್ಷಿಗೆ ಬೀಳುವ ರೋಗಗಳನ್ನು ತಡೆಗಟ್ಟಲು ವಿಪರೀತವಾದ ರಾಸಾಯನಿಕಗಳನ್ನು ಬಳಕೆ ಮಾಡುತ್ತಾರೆ. ಈಗೀಗ ಬಹಳಷ್ಟು ಮಂದಿಗೆ ಜಾಗೃತಿ ಮೂಡಿದೆ. ದ್ರಾಕ್ಷಿಯಲ್ಲಿ ವಿಷಕಾರಕ ವಸ್ತುಗಳನ್ನು ತೆಗೆಯಲು ಸಾಧ್ಯವಾಗುವುದಿಲ್ಲ. ಇದು ಆರೋಗ್ಯದ ಕೆಟ್ಟ ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ. ಇದರಿಂದ ನಮ್ಮ ಸುತ್ತಮುತ್ತಲಿನಲ್ಲಿ ಬೆಳೆಯುವ ದ್ರಾಕ್ಷಿಗೆ ಬೇಡಿಕೆ ಕಡಿಮೆಯಾಗುತ್ತಿದೆ.
ವಿಜಯಪುರ (ಬಿಜಾಪುರ) ದ ಕಡೆಗಳಲ್ಲಿ ಬೇಸಿಗೆಕಾಲದಲ್ಲಿ ಒಂದು ಪ್ರೂನಿಂಗ್, ಚಳಿಗಾಲದಲ್ಲಿ ಒಂದು ಪ್ರೂನಿಂಗ್ ಮಾಡ್ತಾರೆ, ಆದ್ದರಿಂದ ಉತ್ತಮ ಇಳುವರಿ ಪಡೆಯುತ್ತಾರೆ.
ನಮ್ಮ ರೈತರು ಚಳಿಗಾಲದ ಅಕ್ಟೋಬರ್ ಮೊದಲ ವಾರದ ಒಳಗೆ ಪ್ರೂನಿಂಗ್ ಮುಗಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದರೂ ರೈತರು ಮುಂದೂಡುತ್ತಾರೆ. ಬೆಂಗಳೂರು ಬ್ಲೂ, ದಿಲ್ ಕುಶ್ ಗೆ ಸಮಸ್ಯೆಯಾಗುವುದಿಲ್ಲ. ಕೆಲವು ರೈತರು ಈಗ ಪ್ರೂನಿಂಗ್ ಮಾಡುತ್ತಿದ್ದಾರೆ. ಫೆಬ್ರವರಿಯಲ್ಲಿ ಬೆಳೆ ತೆಗೆದರೆ ಉತ್ತಮ ಇಳುವರಿ ಮತ್ತು ಬೆಲೆ ಪಡೆಯಲು ಸಾಧ್ಯವಾಗುತ್ತದೆ. ಏಪ್ರೀಲ್, ಮೇ ತಿಂಗಳಿನಲ್ಲಿ ಬೆಳೆಗಳು ಬರುವಂತೆ ರೈತರು ನೋಡಿಕೊಳ್ಳುತ್ತಾರೆ ಈ ವೇಳೆ ಅಕಾಲಿಕ ಮಳೆಗಳಿಂದ ಲಕ್ಷಾಂತರ ರೂಗಳ ಬೆಳೆಗಳು ಹಾಳಾಗುತ್ತಿವೆ. ಬೆಳೆಗಳು ನಷ್ಟವಾದಾಗ ಪರಿಹಾರ ರೈತರಿಗೆ ಸಿಗುವುದಿಲ್ಲ, ವಿಮೆ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ಆದ್ದರಿಂದ ರೈತರು ಈ ಬಗ್ಗೆ ಜಾಗೃತರಾಗಬೇಕು. ಇಲಾಖೆಯಿಂದ ನೀಡುವಂತಹ ನಿರ್ದೇಶನಗಳನ್ನು ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.
ಶೋಷಣೆಗೆ ಪರಿಹಾರ ಮಾನವ ಹಕ್ಕುಗಳು
ಜಗತ್ತಿನ ಉದ್ದಗಲಕ್ಕೂ ಜಾತಿ, ಜನಾಂಗ, ಧರ್ಮ, ಲಿಂಗ, ವರ್ಣ, ಭಾಷೆ ಮತ್ತು ಭೂ ಪ್ರದೇಶಗಳ ಆಧಾರದ ಮೇಲೆ ನಿರಂತರವಾಗಿ ಮಾನವರ ಮೇಲೆ ದೌರ್ಜನ್ಯ ಹಿಂಸೆ, ಬಲತ್ಕಾರ, ಶೋಷಣೆ ನಡೆಯುತ್ತಲೇ ಬಂದಿದೆ. ಇವುಗಳ ವಿರುದ್ಧ ರಕ್ಷಣೆಯನ್ನು ಪಡೆದು ಸುಖಿಯಾಗಿ, ಸ್ವತಂತ್ರವಾಗಿ ಗೌರವಾನ್ವಿತ ಜೀವನವನ್ನು ಬದುಕಲು ಕಂಡುಕೊಂಡ ಪರಿಹಾರವೇ ಮಾನವ ಹಕ್ಕುಗಳು ಎಂದು ಜೆ.ಎಂ.ಎಫ್.ಸಿ.ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ತಿಳಿಸಿದರು.
ನಗರದ ನ್ಯಾಯಾಲಯದ ಸಂಕೀರ್ಣದಲ್ಲಿ ಸೋಮವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಶಿಡ್ಲಘಟ್ಟ, ವಕೀಲರ ಸಂಘ, ಪೊಲೀಸ್ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾನವ ಹಕ್ಕುಗಳು ದಮನವಾಗದಂತೆ ನೋಡಿಕೊಳ್ಳುವ ಮೂಲಕ ಮಾನವ ಹಕ್ಕುಗಳ ರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಬದುಕಲು ಅವಕಾಶ ಕಲ್ಪಿಸಬೇಕು. ಆತನ ಗೌರವ, ಪ್ರತಿಷ್ಠೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಮಾನವ ಹಕ್ಕುಗಳ ರಕ್ಷಣೆಯಲ್ಲಿ ನ್ಯಾಯಾಲಯ, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ಕಲ್ಪಿಸುವ ಉದ್ದೇಶದಿಂದ 1948ರಿಂದ ಮಾನವ ಹಕ್ಕುಗಳ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಮೂಲ ಸೌಕರ್ಯ ಕಲ್ಪಿಸುವುದು, ಸ್ವಾತಂತ್ರ್ಯ ನೀಡುವುದು ಹಾಗೂ ವ್ಯಕ್ತಿಯ ಬದುಕನ್ನು ಸುಂದರಗೊಳಿಸುವುದೂ ಮಾನವ ಹಕ್ಕುಗಳ ರಕ್ಷಣೆಯಾಗಿದೆ. ಹೆಣ್ಣು ಮಕ್ಕಳಿಗೂ ಸಮಾನವಾದ ಅವಕಾಶಗಳನ್ನು ನೀಡಬೇಕು ಎಂದರು.
ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ ಮಾತನಾಡಿ, ಯಾವುದೇ ವ್ಯಕ್ತಿಯನ್ನು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪೊಲೀಸರು ದಸ್ತಗೀರ್ ಮಾಡಬೇಕಾದಾಗ ಯಾವ ಉದ್ದೇಶದಿಂದ ಮಾಡಲಾಗುತ್ತಿದೆ ಎನ್ನುವ ಕುರಿತು ಮಾಹಿತಿ ನೀಡಬೇಕು. ಅವರ ಕುಟುಂಬದವರಿಗೂ ಮಾಹಿತಿ ನೀಡಬೇಕು ಒಂದು ವೇಳೆ ಮಾಹಿತಿ ನೀಡದೆ ದಸ್ತಗೀರ್ ಮಾಡಿದರೆ ಪ್ರಶ್ನೆ ಮಾಡುವ ಹಕ್ಕು ನಾಗರಿಕರಿಗಿದೆ ಎಂದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರ್ ಗೌಡ ಮಾತನಾಡಿ, ಕಾನೂನಿನಡಿಯಲ್ಲಿ ಸಿಗುವಂತಹ ಎಲ್ಲಾ ಸೌಲತ್ತುಗಳನ್ನು ನಾಗರಿಕರು ಸದುಪಯೋಗಪಡಿಸಿಕೊಳ್ಳಬೇಕು. ಭಾರತದ ಸಂವಿಧಾನ ಮೂಲಭೂತ ಹಕ್ಕುಗಳನ್ನು ಕೊಡುವುದಷ್ಟೇ ಅಲ್ಲದೆ ಮೂಲಭೂತ ಕರ್ತವ್ಯ ಗಳನ್ನೂ ವಿಧಿಸುತ್ತದೆ. ಸ್ವಸ್ಥ ಜೀವನಕ್ಕೆ ಮೂಲಭೂತ ಹಕ್ಕುಗಳ ಬಗ್ಗೆ ತಿಳಿದಿರುವುದು ಎಷ್ಟು ಅಗತ್ಯವೋ, ಮೂಲಭೂತ ಕರ್ತವ್ಯಗಳ ಬಗ್ಗೆ ತಿಳಿದಿರಬೇಕಾದುದೂ ಅಷ್ಟೇ ಅಗತ್ಯ.
ಮೂಲಭೂತ ಕರ್ತವ್ಯಗಳ ಉಲ್ಲಂಘನೆಗೆ ಶಿಕ್ಷೆಯನ್ನು ವಿಧಿಸುವ ಯಾವುದೇ ಉಪಬಂಧವನ್ನು ಸಂವಿಧಾನದಲ್ಲಿ ಸೇರಿಸಿಲ್ಲ. ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದರೆ ನ್ಯಾಯಾಲಯಕ್ಕೆ ಮೊರೆಹೋಗಿ ಉಲ್ಲಂಘಿಸದಂತೆ ತಡೆಯಬಹುದು. ಆದರೆ ಮೂಲಭೂತ ಕರ್ತವ್ಯಗಳನ್ನು ಪಾಲಿಸದಿದ್ದರೆ ನ್ಯಾಯಾಲಯಕ್ಕೆ ಮೊರೆ ಹೋಗಲು ಅವಕಾಶವಿಲ್ಲ. ಆದರೆ ‘ಕರ್ತವ್ಯ’ ಎಂಬ ಪದವೇ ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂಬುದನ್ನು ಸೂಚಿಸುತ್ತದೆ. ಹಕ್ಕುಗಳನ್ನು ಚಲಾಯಿಸುವ ವ್ಯಕ್ತಿ ಕರ್ತವ್ಯ ಪಾಲನೆಗೂ ಬದ್ಧನಾಗುತ್ತಾನೆ. ತನ್ನ ಕರ್ತವ್ಯಗಳನ್ನು ಪಾಲಿಸದ ವ್ಯಕ್ತಿ ಹಕ್ಕುಗಳನ್ನು ಚಲಾಯಿಸಲು ಯೋಗ್ಯನಾಗುವುದಿಲ್ಲ ಎಂದರು.
ಸಿವಿಲ್ ನ್ಯಾಯಾಧೀಶರಾದ ಸಂದೀಶ್ ಟಿ.ಎಲ್, ಸರ್ಕಾರಿ ಅಭಿಯೋಜಕಿ ಎಸ್.ಕುಮುದಿನಿ, ವಕೀಲ ಮಂಜುನಾಥ್, ಗೀತಾ ಹಾಜರಿದ್ದರು.
ಮಕ್ಕಳಿಗೆ ಗಣಿತ ಸ್ಪರ್ಧೆ
ತಾಲ್ಲೂಕಿನ ಗಾಂಡ್ಲಚಿಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಸೆಂಬರ್ ೧೩ ರ ಬುಧವಾರ ಅಕ್ಷರ ಫೌಂಡೇಷನ್ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ೪, ೫ ಮತ್ತು ೬ನೇ ತರಗತಿಯ ಮಕ್ಕಳಿಗೆ ಗಣಿತ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಗಣಿತ ಕಲಿಕಾ ಆಂದೋಲನದ ಅಂಗವಾಗಿ ಈ ಸ್ಪರ್ಧೆಯನ್ನು ಆಯೋಜಿಸಿದ್ದು, ತಲಕಾಯಲಬೆಟ್ಟ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಶಾಲೆಗಳ ಮಕ್ಕಳು ಪಾಲ್ಗೊಳ್ಳಲಿದ್ದಾರೆ ಎಂದು ಅಕ್ಷರ ಫೌಂಡೇಷನ್ ಕ್ಷೇತ್ರ ಸಂಯೋಜಕ ಕೆ.ವಿ.ಮಂಜುನಾಥ್ ತಿಳಿಸಿದ್ದಾರೆ.
ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ
ಶಿಡ್ಲಘಟ್ಟ ತಾಲ್ಲೂಕಿನ ಗಂಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಿ.ಕೆ.ಭೈರೇಗೌಡ ಅವರನ್ನು ನಿರ್ದೇಶಕರಾದ ಜಿ.ವಿ.ಸುರೇಶ್, ಜಿ.ಎಂ.ನಾರಾಯಣಸ್ವಾಮಿ, ಮುನಿಯಪ್ಪ, ಮುಖಂಡರಾದ ಜಿ.ಎಂ.ಶಿವಾನಂದ, ಜಿ.ಪಿ.ಚನ್ನೇಗೌಡ, ಜಿ.ಕೆ.ಶಿವಾನಂದ ಅಭಿನಂದಿಸಿದರು
ಪರಿಸರ ಪಾಠ ಕಲಿಸುತ್ತಿರುವ ರಾಮಯ್ಯ
ನಗರದ ಟಿ.ಬಿ.ರಸ್ತೆಯಲ್ಲಿ ಓಟಿ ವೃತ್ತದ ಸಮೀಪ ಪುಟ್ಟ ಕಬ್ಬಿಣದ ಚಪ್ಪಲಿ ಹೊಲೆಯುವ ರಾಮಯ್ಯನ ಪೆಟ್ಟಿ ಅಂಗಡಿಯಿದೆ. ಚಪ್ಪಲಿ ರಿಪೇರಿಗೆ ಬರುವವರಿಗೆ ಹಾಗೂ ಈ ಹಾದಿಯಲ್ಲಿ ಸಾಗುವವರಿಗೆ ಸದ್ದಿಲ್ಲದೆ ರಾಮಯ್ಯ ಪರಿಸರ ಪಾಠವನ್ನು ಮಾಡುತ್ತಿದ್ದಾರೆ.
ತನ್ನ ಪೆಟ್ಟಿ ಅಂಗಡಿಗೆಗೆ ಕುಂಬಳ ಬಳ್ಳಿಯನ್ನು ಹಬ್ಬಿಸಿರುವ ರಾಮಯ್ಯ, ಬಿಸಿಲಲ್ಲಿ ಬರುವ ಗ್ರಾಹಕರು ದಣಿವಾರಿಸಿಕೊಳ್ಳಬಹುದಾಗುವಂತೆ ಚಪ್ಪರ ಹಬ್ಬಿಸಿದ್ದಾರೆ. ಚಿಕ್ಕ ಕಲ್ಲುಬೆಂಚನ್ನು ಸಹ ಹಾಕಿರುವುದರಿಂದ ದಾರಿಯಲ್ಲಿ ಸಾಗುವವರು ಬಿಸಿಲಿಗೆ ದಣಿವಾದಲ್ಲಿ ಕುಳಿತು ಹಸಿರು ಚಪ್ಪರವನ್ನು ಬೆಳೆಸಿದ್ದಕ್ಕಾಗಿ ಕೃತಜ್ಞತಾ ಭಾವವನ್ನು ವ್ಯಕ್ತಪಡಿಸುತ್ತಾರೆ.
ಸುಮಾರು 50 ವರ್ಷಗಳಿಂದ ಚಮ್ಮಾರಿಕೆಯ ಕೆಲಸದಲ್ಲಿ ತೊಡಗಿರುವ 75 ವರ್ಷಗಳ ವೃದ್ಧ ರಾಮಯ್ಯ, ಈ ಹಿಂದೆ ನಗರದ ಹೂ ವೃತ್ತದಲ್ಲಿ ಅಂಗಡಿಯಿಟ್ಟಿದ್ದರು. ಕಳೆದ ಮೂರು ವರ್ಷಗಳಿಂದ ಟಿ.ಬಿ.ರಸ್ತೆಗೆ ಬಂದಿದ್ದಾರೆ. ಕೆಲವು ತಿಂಗಳ ಹಿಂದೆ ಬಿಸಿಲಿನ ಝಳ ಹೆಚ್ಚಾದಾಗ ಕುಂಬಳ ಬೀಜವನ್ನು ತಂದು ನೆಟ್ಟಿದ್ದಾರೆ. ಅದು ಹಬ್ಬಿ ಪೆಟ್ಟಿ ಅಂಗಡಿಯನ್ನು ಆವರಿಸಿ ತಂಪಾದ ನೆರಳನ್ನು ನೀಡುತ್ತಿದೆ.
‘ಹಸಿರು ನಮ್ಮನ್ನು ಸದಾ ಕಾಪಾಡುತ್ತದೆ’ ಎನ್ನುವ ರಾಮಯ್ಯ, ಬಿಸಿಲಿನಲ್ಲಿ ಕಬ್ಬಿಣದ ಡಬ್ಬ ಕಾವು ಏರಿ ಕುಳಿತುಕೊಳ್ಳಲು ಆಗುವುದಿಲ್ಲ. ಅದಕ್ಕಾಗಿ ಕುಂಬಳ ಬಳ್ಳಿ ಹಬ್ಬಿಸಿದೆ. ಈಗ ಎಷ್ಟೇ ಬಿಸಿಲಿದ್ದರೂ ತಂಪಾಗಿರುತ್ತದೆ. ಬಂದವರೆಲ್ಲ ಮೆಚ್ಚುತ್ತಾ ನೆರಳಿನಲ್ಲಿ ಆಯಾಸ ಪರಿಹರಿಸಿಕೊಂಡು ಹೋಗುತ್ತಾರೆ’ ಎಂದು ಹೇಳಿದರು.
‘ಹಿಂದೆ ಬಸವಣ್ಣನವರ ಕಾಲದಲ್ಲಿದ್ದ ಚಮ್ಮಾರ ಹರಳಯ್ಯ ಭಕ್ತಿಯ ಪಾಠವನ್ನು ಕಲಿಸಿದ್ದರೆ, ಪುಟ್ಟ ಗೂಡಂಗಡಿಯನ್ನಿಟ್ಟುಕೊಂಡು ಸ್ವಾಭಿಮಾನಿಯಾಗಿರುವ ರಾಮಯ್ಯ ನಮಗೆಲ್ಲಾ ಪರಿಸರ ಪಾಠವನ್ನು ಕಲಿಸುತ್ತಾ ಮಾದರಿಯಾಗಿದ್ದಾರೆ’ ಎನ್ನುತ್ತಾರೆ ಬಾಬು ಮೆಡಿಕಲ್ಸ್ ನ ಬಾಬು.
ಬಯಲುಸೀಮೆಯಲ್ಲಿ ಭತ್ತ ಬೆಳೆದ ಕೃಷಿಕ
‘ಉತ್ತಮ ಗುಣಮಟ್ಟದ ಆಹಾರ ಸೇವಿಸಿದರೆ ಔಷಧಿಯ ಅಗತ್ಯವೇ ಬೀಳುವುದಿಲ್ಲ’ ಎನ್ನುವ ಮಾತನ್ನು ಪದೇಪದೇ ಹೇಳುತ್ತಾರೆ ಸಾವಯವ ಕೃಷಿಕ ಬೋದಗೂರು ವೆಂಕಟಸ್ವಾಮಿರೆಡ್ಡಿ. ಇವರು ಹೇಳುವುದಷ್ಟೇ ಅಲ್ಲ, ಸಜ್ಜೆ, ಸಾಮೆ, ಊದಲು, ಬರಗು, ನವಣೆ, ಬಿಳಿ ಜೋಳ, ಹಾರಕ, ರಾಗಿ, ಉಚ್ಚೆಳ್ಳು ಮುಂತಾದ ತೃಣ ಧಾನ್ಯಗಳೊಂದಿಗೆ ಮಳೆಯಾಶ್ರಿತ ನಾಟಿ ತಳಿ ದೊಡ್ಡಬೈರನೆಲ್ಲು ಭತ್ತವನ್ನು ಬೆಳೆದಿದ್ದಾರೆ.
ನೀರಿನ ಅಭಾವವನ್ನು ಎದುರಿಸುತ್ತಿರುವ ಜಿಲ್ಲೆಯಲ್ಲಿ ಸಾಹಸಿಗರಂತೆ ಮಳೆಯಾಶ್ರಿತವಾಗಿ ದೊಡ್ಡಬೈರನೆಲ್ಲು ಭತ್ತ ಒಂದೂ ಮುಕ್ಕಾಲು ಎಕರೆಯಲ್ಲಿ ಬೆಳೆದಿರುವ ಇವರು, ಇದನ್ನು ಬಳಸಿದರೆ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿಡಬಹುದು ಎಂದು ಕಿವಿ ಮಾತು ಕೂಡ ಹೇಳುತ್ತಾರೆ. ಸುಮಾರು ಹದಿನೈದು ಕ್ವಿಂಟಾಲ್ ಭತ್ತದ ಇಳುವರಿಯ ಆಶಾಭಾವನೆಯಲ್ಲಿದ್ದಾರೆ.
ನೈಸರ್ಗಿಕ ಕೃಷಿಯಲ್ಲಿ ವಿಶ್ವಾಸವಿರಿಸಿರುವ ವೆಂಕಟಸ್ವಾಮಿರೆಡ್ಡಿ, ಗದ್ದೆಗಳಿಗೆ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸಿಲ್ಲ. ‘ಬೇಕಿದ್ದರೆ, ಸೆಗಣಿ, ಗಂಜಲ, ಮಜ್ಜಿಗೆ, ಜೀವಾಮೃತ, ಘನಾಮೃತವೇ ಬಳಸಬಹುದು. ಆದರೆ, ನಾನು ಅವನ್ನೂ ಈ ಬಾರಿ ಬಳಸಿಲ್ಲ’ ಎನ್ನುತ್ತಾರೆ. ಕೀಟ ಬಾಧೆ ಕಾಣಿಸಿಕೊಂಡಾಗ ಗಂಜಲಕ್ಕೆ ಹುಳಿಮಜ್ಜಿಗೆ ಬೆರೆಸಿ ಸಿಂಪಡಿಸಿ ಹತೋಟಿಗೆ ತರಬಹುದು ಎಂದು ಅವರು ಹೇಳುತ್ತಾರೆ.
‘ಆರೋಗ್ಯಕ್ಕಾಗಿ ಆಹಾರ, ಆಹಾರಕ್ಕಾಗಿ ಕೃಷಿ’ ಎಂಬ ಧ್ಯೇಯದಿಂದ ಕೃಷಿ ಮಾಡುವವರು ವಿರಳ. ಈ ಉದ್ದೇಶದಿಂದ ಕೃಷಿ ಮಾಡುತ್ತಿರುವ ವೆಂಕಟಸ್ವಾಮಿರೆಡ್ಡಿ, ಬೆಳೆದ ಭತ್ತವನ್ನು ಮಾರುವುದಿಲ್ಲ. ಸ್ವಂತಕ್ಕೆ ಬಳಸುತ್ತಾರೆ. ಹಲವಾರು ವರ್ಷಗಳಿಂದ ನಾಟಿ ತಳಿ ದೊಡ್ಡಬೈರನೆಲ್ಲು ಭತ್ತವನ್ನು ಬೆಳೆಯುತ್ತಿರುವ ಇವರು ತಮ್ಮ ಕುಟುಂಬಕ್ಕೆ ಬಳಸಿ ಉಳಿದಿದ್ದನ್ನು ಆಸಕ್ತ ರೈತರಿಗೆ ಬೀಜದ ರೂಪದಲ್ಲಿ ನೀಡುತ್ತಾರೆ.
ಈ ಭಾಗದಲ್ಲಿ ಹೊಸದ್ಯಾವರ ನಡೆದಾಗ, ಮದುವೆ ಮುಂತಾದ ಶುಭ ಕಾರ್ಯಕ್ಕೆ ಮತ್ತು ಯಾರಾದರೂ ಕೊಸೆಯುಸಿರೆಳೆದಾಗಲೂ ಇವರಿಂದ ಭತ್ತದ ಹುಲ್ಲನ್ನು, ತೆನೆಗಳನ್ನು ಪಡೆಯುತ್ತಾರೆ. ಕರ್ನಾಟಕ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆಯಿಂದ ಇವರಿಗೆ ಪ್ರಮಾಣ ಪತ್ರವೂ ಲಭಿಸಿದೆ.
‘ಆಹಾರ ಬೆಳೆಗಳನ್ನು ಬೆಳೆಯುವುದಕ್ಕೆ ಅತೀ ಹೆಚ್ಚು ಪ್ರೋತ್ಸಾಹ ನೀಡಬೇಕು. ಪಾರಂಪರಿಕ ನಾಟಿ ಭತ್ತಕ್ಕೆ ಅಧಿಕ ಬೆಲೆ ಮತ್ತು ಬೇಡಿಕೆ ಇದೆ. ಕೇರಳ ರಾಜ್ಯದಲ್ಲಿ ನಾಟಿ ಭತ್ತ ತಳಿ ಸಂರಕ್ಷಣೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿದೆ. ಕರ್ನಾಟಕದಲ್ಲಿ ಮಳೆ ಆಶ್ರಿತ ಭತ್ತ ಬೆಳೆ ಸಂರಕ್ಷಣೆಗೆ ಉಪಯುಕ್ತ ಯೋಜನೆ ರೂಪಿಸುವ ಅಗತ್ಯವಿದೆ’ ಎನ್ನುತ್ತಾರೆ ತಲಕಾಯಲಬೆಟ್ಟ ಸಾವಯವ ಕೃಷಿ ಪರಿವಾರ ಟ್ರಸ್ಟ್ ತಾಲ್ಲೂಕು ಸಂಚಾಲಕ ಬೂದಾಳ ರಾಮಾಂಜಿ.
ಪೊರಕೆ ಕಡ್ಡಿ ಸಂಗ್ರಹಿಸುವ ಕಾಯಕದಲ್ಲಿ ಉತ್ಸಾಹಿ ವೆಂಕಟಮ್ಮ
“ವಯಸ್ಸಾಯ್ತು ಅಂತ ಸುಮ್ನಿರೋಕಾಯ್ತದ, ಕಷ್ಟಪಟ್ಟು ದುಡಿದ್ರೇನೇ ಬದುಕು ಸಾಗೋದು’ ಎನ್ನುವ ಅಪ್ಪೇಗೌಡನಹಳ್ಳಿಯ ವೆಂಕಟಮ್ಮ ವಯಸ್ಸಾಗುವುದು ದೇಹಕ್ಕಷ್ಟೆ ಮನಸ್ಸಿಗಲ್ಲ ಎಂಬುದನ್ನು ತನ್ನ ಕಾಯಕ ಧರ್ಮದಿಂದ ತಿಳಿಸುತ್ತಾರೆ.
ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡುವ ಈ ವೃದ್ಧೆ ಭಾನುವಾರ ಗ್ರಾಮದ ಹೊರವಲಯದಲ್ಲಿ ಪೊರಕೆ ಕಡ್ಡಿಗಳನ್ನು ಕೀಳುವ ಕಾರ್ಯದಲ್ಲಿ ನಿರತರು.
‘ಹಿಂದೆ ಬೀಡುಬಿಟ್ಟ ಜಮೀನುಗಳು ಹೆಚ್ಚಾಗಿರುತ್ತಿದ್ದವು, ಪೊರಕೆ ಕಡ್ಡಿಗಳೂ ಹುಲುಸಾಗಿ ಬೆಳೆಯುತ್ತಿದ್ದವು. ಈಗ ಸಂಗ್ರಹಣೆಯೇ ಬಲು ಕಷ್ಟ. ಈ ಬಾರಿ ಮಳೆ ಸ್ವಲ್ಪ ಚೆನ್ನಾಗಿ ಆಗಿದ್ದರಿಂದ ಒಂದಷ್ಟು ಸಂಗ್ರಹಿಸುವಂತಾಗಿದೆ. ಮಳೆ ಚೆನ್ನಾಗಿ ಆದರೆ ಮಾತ್ರ ಗಟ್ಟಿ ಮತ್ತು ಉದ್ದ ಕಡ್ಡಿಗಳು ಸಿಗುತ್ತವೆ’ ಎಂಬುದು ವೆಂಕಟಮ್ಮನ ಅನುಭವದ ನುಡಿಗಳು.
‘ಒತ್ತೊತ್ತಾಗಿದ್ದರೆ ದಿನಕ್ಕೆ ೧೫ ಪೊರಕೆಗಳಿಗಾಗುವಷ್ಟು ಕಡ್ಡಿಗಳನ್ನು ಸಂಗ್ರಹಿಸುತ್ತೇನೆ, ಇಲ್ಲದಿದ್ದರೆ ಹತ್ತು ಪೊರಕೆಗಳಷ್ಟಾದರೂ ಸಂಗ್ರಹವಾಗುತ್ತದೆ. ಕಿತ್ತ ಕಡ್ಡಿಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ನಂತರ ಅವುಗಳ ಊಗನ್ನು ಉದುರಿಸಬೇಕು. ಇದು ಗಾಳಿಯಲ್ಲಿ ಪ್ರಸಾರಗೊಂಡು ತನ್ನ ಬಾಣದಂತಹ ಚೂಪುತುದಿಯಿಂದ ತೆಳುಚರ್ಮದ ಪ್ರಾಣಿಗಳಿಗೆ ಚುಚ್ಚಿ ನೋವನ್ನುಂಟುಮಾಡುತ್ತದೆ ಎಂದು ಮುಳ್ಳು, ಕಳ್ಳಿ, ಪೊದೆಗಳ ಮೇಲೆ ಅದನ್ನು ಉದುರಿಸಬೇಕು. ನಂತರ ಅದಕ್ಕೆ ಬೆಂಕಿ ಹಚ್ಚಿ ಸುಡಬೇಕು’ ಎಂದು ಅವರು ಹೇಳಿದರು.
‘ಹಿಂದೆ ಹೊಲಗಳ ಬದುಗಳು, ಕರಾಬು ಕಾಲುವೆ, ಕಲ್ಲುಗುಟ್ಟಗಳು ಪೊರಕೆ ಹುಲ್ಲಿಗೆ ನೆಲೆಯಾಗಿದ್ದವು. ಕಣಗಳಿದ್ದ ಕಾಲದಲ್ಲಿ ಕಣ ಆರಂಭದಿಂದ ಅಂತ್ಯದವರೆಗೆ ಪೊರಕೆಗೆ ನಿರಂತರ ಕೆಲಸ ಇರುತ್ತಿತ್ತು. ಇದರಿಂದಾಗಿ ಉಪಕಸುಬಾಗಿ ಕೂಲಿ ನಾಲಿಯ ನಡುವೆ ಕಡ್ಡಿ ಸಂಗ್ರಹಿಸಿ ಊಗು (ಹೂ) ಉದುರಿಸಿ ಒಂದಷ್ಟು ಕೈಕಾಸು ಸಂಪಾದಿಸುತ್ತಿದ್ದವರಿದ್ದರು. ಹಿಂದೆ ಒಂದೆರಡು ಗಂಟೆಗಳಲ್ಲಿ ಸಂಗ್ರಹಿಸಬಹುದಾಗಿದ್ದ ಕಡ್ಡಿ ಇಂದು ಹಿಡೀ ಹಗಲನ್ನೇ ತೆಗೆದುಕೊಳ್ಳುವಷ್ಟು ವಿರಳವಾಗಿ ಲಭ್ಯವಾಗುತ್ತಿದೆ. ಕಡ್ಡೀ ಕಿತ್ತು ಒಣಗಿಸಿ, ಊಬು ಉದುರಿಸಿ ಕಟ್ಟು ಕಟ್ಟಿ ಮಾರುವ ಕ್ಲಿಷ್ಟ ಕೆಲಸಕ್ಕೆ ತಕ್ಕ ಹಣ ಸಿಗುತ್ತಿಲ್ಲ. ಒಂದೆಡೆ ಕಷ್ಟ ಪಡುವವರೇ ವಿರಳವಾಗುತ್ತಿರುವ ದಿನಗಳಲ್ಲಿ ವೆಂಕಟಮ್ಮ ಅವರನ್ನು ಕಂಡಾಗ ಜೀವನೋತ್ಸಾಹ ಮೂಡುತ್ತದೆ” ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್.
ಪಕ್ಷವನ್ನು ಬಲಪಡಿಸುವ ಕಾರ್ಯದಲ್ಲಿ ನಿರತನಾಗಿದ್ದೇನೆ – ಬಿ.ಎನ್.ರವಿಕುಮಾರ್
ಜೆ ಡಿ ಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರ ಆದೇಶದಂತೆ ಕ್ಷೇತ್ರದಲ್ಲಿ ಪಕ್ಷವನ್ನು ಬಲಪಡಿಸುವ ಕಾರ್ಯದಲ್ಲಿ ನಿರತನಾಗಿದ್ದೇನೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಾಗಿ ಭರವಸೆ ಸಹ ಅವರು ನೀಡಿದ್ದಾರೆ ಎಂದು ಜೆ ಡಿ ಎಸ್ ಮುಖಂಡ ಬಿ.ಎನ್.ರವಿಕುಮಾರ್ ತಿಳಿಸಿದರು.
ಕರ್ನಾಟಕ ಪ್ರದೇಶ ಜಾತ್ಯತೀತ ಜನತಾದಳ ತುಮಕೂರಿನ ಶಾಲಾ ಮೈದಾನದಲ್ಲಿ ಆಯೋಜಿಸಿರುವ ಅಲ್ಪಸಂಖ್ಯಾತರ ಬೃಹತ್ ಸಮಾವೇಶಕ್ಕೆ ತಾಲ್ಲೂಕಿನ ತಾದೂರು ಗೇಟ್ ಬಳಿಯಿಂದ ತೆರಳಿದ ಮುವ್ವತ್ತು ಬಸ್ ಗಳಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ಮಂದಿ ಈ ದಿನ ಕ್ಷೇತ್ರದಿಂದ ಅಲ್ಪಸಂಖ್ಯಾತರ ಬೃಹತ್ ಸಮಾವೇಶಕ್ಕೆ ಹೊರಟಿದ್ದಾರೆ. ಎಲ್ಲೆಡೆ ಅಲ್ಪಸಂಖ್ಯಾತರ ಬೆಂಬಲ ಜೆ ಡಿ ಎಸ್ ಪಕ್ಷಕ್ಕೆ ಸಿಗುತ್ತಿದೆ. ನಮ್ಮ ಕ್ಷೇತ್ರದಲ್ಲೂ ಜೆ ಡಿ ಎಸ್ ಪಕ್ಷವನ್ನು ಬೆಂಬಲಿಸುವ ಅಲ್ಪಸಂಖ್ಯಾತರ ಆಶಯ ಮುಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವುದು ಆಗಿದೆ. ಜನರ ಬೆಂಬಲ ಮತ್ತು ಒತ್ತಾಯದಿಂದ ಹಾಗೂ ಪಕ್ಷದ ಹಿರಿಯರ ಮಾರ್ಗದರ್ಶನದಂತೆ ಪಕ್ಷವನ್ನು ಬಲಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಹೇಳಿದರು.
ರಾಜ್ಯದಲ್ಲಿ ಅಲ್ಪಸಂಖ್ಯಾತರನ್ನು ಕಡೆಗಣಿಸಿರುವ ಎರಡು ರಾಷ್ಟ್ರೀಯ ಪಕ್ಷಗಳ ವೈಫಲ್ಯ ಹಾಗೂ ಭ್ರಷ್ಟಾಚಾರಗಳನ್ನು ಜನತೆಯ ಮುಂದಿಡಲು ಹಾಗೂ ಪಕ್ಷದ ಬಲವರ್ಧನೆಗಾಗಿ ರಾಜ್ಯ ಜೆಡಿಎಸ್ ಅಲ್ಪಸಂಖ್ಯಾತರ ಘಟಕ ರಾಜ್ಯಮಟ್ಟದ ಅಲ್ಪಸಂಖ್ಯಾತರ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದು ಅದಕ್ಕಾಗಿ ಬೃಹತ್ ಸಂಖ್ಯೆಯಲ್ಲಿ ತೆರಳುತ್ತಿರುವುದಾಗಿ ನುಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಜೆ ಡಿ ಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಯುವ ಮುಖಂಡ ಬಿ.ಎನ್.ರವಿಕುಮಾರ್ ನೇತೃತ್ವದಲ್ಲಿ ಪಕ್ಷ ಬಲಗೊಳ್ಳುತ್ತಿದೆ. ಜಾತ್ಯತೀತ ಮನೋಭಾವನೆಯಿಂದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ನಮ್ಮ ಪಕ್ಷದ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ರೈತರ, ಅಲ್ಪಸಂಖ್ಯಾತರ, ಹಿಂದುಳಿದ, ದಲಿತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರತಿ ಕ್ಷೇತ್ರದಲ್ಲೂ ಮುಖಂಡರು ಕೆಲಸ ಮಾಡಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಮಾವೇಶಕ್ಕೆ ತೆರಳಿದ ಮುವ್ವತ್ತು ಬಸ್ ಗಳಿಗೆ ಮುಖಂಡರು ತಾದೂರು ಗೇಟ್ ಬಳಿ ಚಾಲನೆ ನೀಡಿದರು.
ಜೆ.ವಿ.ಎಸ್ ಮುಖಂಡರಾದ ಶಿವಾರೆಡ್ಡಿ, ರಾಜಶೇಖರ್, ತಾದೂರು ರಘು, ಕೆ.ಎಸ್.ಮಂಜುನಾಥ್, ಆರ್.ಎ.ಉಮೇಶ್, ವೆಂಕಟಸ್ವಾಮಿ, ಎಲ್.ಮಂಜುನಾಥ್, ಮುಗಿಲಡಿಪಿ ನಂಜಪ್ಪ, ಆದಿಲ್ ಪಾಷ, ಅಲಿ, ಷಫೀ, ಜಬೀವುಲ್ಲ, ಸಾದಿಕ್, ಚಾಂದ್ ಪಾಷ, ಸಿರಾಜ್, ಇನಾಯತ್, ಮೌಲಾ, ಜಬೀ, ನಯಾಜ್, ಸೊಹೇಲ್, ಅಮ್ಜದ್, ಕದಿರಿ ಯೂಸುಫ್, ಬಾಂಬ್ ಸೆಮಿ, ಎಂ.ಪಿ.ಮುಷ್ಟಾಕ್, ಫಾರುಕ್, ಮುನೀರ್, ಬಾಬು, ಹೈದರಾಲಿ, ಅಮೀರ್ ಜಾನ್, ಮುನವರ್, ಸಯ್ಯದ್ ಪಾಷ, ಫಯಾಜ್, ಬಾಂಬೆ ಇನಾಯತ್ ಹಾಜರಿದ್ದರು.
ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ‘ಚದುರಂಗ’
ಪ್ರಚಲಿತ ವಿದ್ಯಮಾನ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ‘ಚದುರಂಗ’ ಎಂಬ ಕಿರುಚಿತ್ರದ ಮೂಲಕ ಮಾಡುತ್ತಿರುವುದಾಗಿ ನಿರ್ದೇಶಕ ಮೇಲೂರು ರಂಗ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಹೊರವಲಯದ ಸಾಯಿನಾಥ ಜ್ಞಾನ ಮಂದಿರದಲ್ಲಿ ಗುರುವಾರ ಸಂಜೆ ‘ಚದುರಂಗ’ ಕಿರುಚಿತ್ರದ ಟ್ರೇಲರ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉತ್ತಮ ಭವಿಷ್ಯವುಳ್ಳ ಯುವಜನರು ದಾರಿದಪ್ಪದಂತೆ ಎಚ್ಚರಿಕೆ ನೀಡುವ ಸಂದೇಶವಿದೆ. ಮಾದಕ ವ್ಯಸನ ಹೇಗೆ ದಾರಿ ತಪ್ಪಿಸಬಲ್ಲದು ಎಂಬ ವಿಷಯವೂ ಈ ಚಿತ್ರದಲ್ಲಿದೆ. ಶಿಡ್ಲಘಟ್ಟ, ಮೇಲೂರು, ಮಳ್ಳೂರು, ವಿಜಯಪುರದ ಗ್ರಾಮೀಣ ಪ್ರತಿಭೆಗಳು ಒಗ್ಗೂಡಿ ಕಿರುಚಿತ್ರ ತಯಾರಿಕೆಯ ಹೊಸ ಪ್ರಯತ್ನವನ್ನು ಮಾಡಿದ್ದೇವೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಸುಂದರ ಪರಿಸರಗಳಲ್ಲಿ ಚಿತ್ರೀಕರಣವನ್ನು ಮಾಡಿದ್ದೇವೆ.
ನಿರ್ಮಾಪಕರು ಮೇಲೂರಿನ ಚೇತನ್ ಗೌಡ. ನಾಯಕ ನಟರಾಗಿ ಮೇಲೂರಿನ ರವಿ ಕಿರಣ್ ಮತ್ತು ನಾಗೇಂದ್ರಬಾಬು, ನಟಿಯರಾಗಿ ಶಿಡ್ಲಘಟ್ಟದ ಸುಷ್ಮ ಮತ್ತು ಮೇಲೂರು ಪಲ್ಲವಿ ನಟಿಸಿದ್ದಾರೆ. ಪತ್ರಿಕೆ ಮತ್ತು ಮಾದ್ಯಮಗಳಲ್ಲಿ ಸ್ಥಳೀಯ ಕಲಾವಿದ ಎಟಿಎಂ ಕಾವಲುಗಾರ ಮುನಿರಾಜು ಅವರ ಬಗ್ಗೆ ತಿಳಿದು ಅವರಿಗೆ ಪೋಷಕ ಪಾತ್ರದಲ್ಲಿ ನೀಡಿದ್ದು, ಉತ್ತಮವಾಗಿ ನಟಿಸಿದ್ದಾರೆ ಎಂದು ವಿವರಿಸಿದರು.
ಸಾಯಿನಾಥ ಜ್ಞಾನ ಮಂದಿರದ ಧರ್ಮದರ್ಶಿ ನಾರಾಯಣಸ್ವಾಮಿ, ಸೀತಾರಾಮರೆಡ್ಡಿ, ಛಾಯಾಗ್ರಾಹಕರಾದ ಕಂಬದಹಳ್ಳಿ ಪ್ರದೀಪ್, ಮಂಡೂರು ಅಂಬರೀಷ್, ಮನೋಹರ್. ಶಿಡ್ಲಘಟ್ಟ ಕೆ.ಎನ್.ಮುನಿರಾಜು, ಸುಷ್ಮ, ಪಲ್ಲವಿ, ಆಕರ್ಷ್, ಮಂಜುನಾಥಗೌಡ, ವಿನೋದ್, ಭರತ್, ಮನೋಹರ್, ಪವನ್, ಚಂದನ್, ರಾಕೇಶ್ ಹಾಜರಿದ್ದರು.
ಸ್ಥಿರ ಸರ್ಕಾರ ನೀಡಿರುವ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ
ಒಂದೆಡೆ ಬಿಜೆಪಿ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ. ಮತ್ತೊಂದೆಡೆ ಜೆಡಿಎಸ್ ನವರಿಗೆ ಕಾರ್ಯಕ್ರಮಗಳೇ ಇಲ್ಲ. ಅವರು ಅವಕಾಶವಾದಿಗಳು. ಸಿದ್ಧಾಂತ, ತತ್ವ ಹಾಗೂ ನಾಯಕತ್ವವಿಲ್ಲದವರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಾಪ್ರಹಾರ ನಡೆಸಿದರು.
ನಗರದಲ್ಲಿ ಶುಕ್ರವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ನವೀಕೃತ ಕಾಂಗ್ರೆಸ್ ಭವನದ ಉದ್ಘಾಟನೆ, ಇಂದಿರಾ ನಮನ ಮತ್ತು ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ಜೆಡಿಎಸ್ ನವರಿಗೆ 30 ಸೀಟುಗಳೂ ಬರುವುದಿಲ್ಲ. ಅತಂತ್ರ ಸ್ಥಿತಿಯ ಅವಕಾಶಕ್ಕೆ ಕಾಯುತ್ತಿದ್ದಾರೆ. ಅವರದ್ದೇನಿದ್ದರೂ ಸೂಟ್ ಕೇಸ್ ಸಿದ್ಧಾಂತವಷ್ಟೇ ಎಂದು ಲೇವಡಿ ಮಾಡಿದರು.
ಬಂಡವಾಳ ಹೂಡಿಕೆಯಲ್ಲಿ ಹನ್ನೊಂದನೇ ಸ್ಥಾನದಲ್ಲಿದ್ದ ನಮ್ಮ ರಾಜ್ಯ ಈಗಿನ ಸ್ಥಿರ ಸರ್ಕಾರದಿಂದಾಗಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ನೀರಾವರಿ ಯೋಜನೆಗಳಿಗಾಗಿ ಸುಮಾರು 65 ಸಾವಿರ ಕೋಟಿ ರೂಗಳಷ್ಟು ಖರ್ಚು ಮಾಡಿದ್ದೇವೆ. 2013 ರಲ್ಲಿ ನೀಡಿದ್ದ 165 ಭರವಸೆಗಳಲ್ಲಿ 155 ಕ್ಕೂ ಹೆಚ್ಚು ಈಗಾಗಲೇ ಈಡೇರಿಸಿದ್ದೇವೆ ಎಂದು ಹೇಳಿದರು.
ದೇಶದಲ್ಲಿ ಹಿಂಸೆಗೆ ಪ್ರಚೋದನೆ ನೀಡಲಾಗುತ್ತಿದೆ. ಕೋಮುವಾದಿ ತತ್ವದಿಂದ ದೇಶವನ್ನು ಜನರನ್ನು ವಿಭಜಿಸುವ ವಾತಾವರಣ ಸೃಷ್ಟಿಯಾಗುತ್ತಿದೆ. ದೇಶಕ್ಕೆ ಗಂಡಾತರ ತರುವ ಈ ವಿಷಯವಾಗಿ ಜನರನ್ನು ಎಚ್ಚರಗೊಳಿಸುವ ಕೆಲಸ ಮಾಡಬೇಕಾಗಿದೆ ಎಂದು ನುಡಿದರು.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕ್ಷಣದಿಂದ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ನಾವು ಮಾಡಿರುವ ಕೆಲಸಕ್ಕೆ ಕೂಲಿ ಕೊಡಿ ಎಂದು ಕೇಳಲು ಬಂದಿದ್ದೇವೆ. ಯಾವ ತಪ್ಪನ್ನೂ ಮಾಡದೆ, ದಕ್ಷ, ಪ್ರಾಮಾಣಿಕ ಹಾಗೂ ಸ್ಥಿರ ಸರ್ಕಾರವನ್ನು ನೀಡಿದ್ದೇವೆ. ರಾಹುಲ್ ಪದಗ್ರಹಣದ ನಂತರ ರಾಜ್ಯದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಿದ್ದೇವೆ. ಬಿಜೆಪಿ 150 ಮಿಷನ್ ನಿಂದ 50ಕ್ಕೆ ಇಳಿದಿದೆ ಎಂದು ವ್ಯಂಗ್ಯವಾಡಿದರು.
ನವೀಕೃತ ಕಾಂಗ್ರೆಸ್ ಭವನವನ್ನು ಉದ್ಘಾಟಿಸಿದ್ದೇವೆ. ಅದು ದೇಗುಲದಂತೆ. ಕಷ್ಟದಲ್ಲಿರುವವರಿಗೆ, ದೀನ ದುರ್ಭಲರಿಗೆ, ಕ್ಷೇತ್ರದ ಜನರಿಗೆ ಸಹಾಯವಾಣಿಯಂತೆ ಈ ಭವನವು ಕಾರ್ಯನಿರ್ವಹಿಸಲಿ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ಕೆ.ಎಚ್.ಮುನಿಯಪ್ಪ, ಕಾಂಗ್ರೆಸ್ ಮುಖಂಡ ವಿ.ಮುನಿಯಪ್ಪ, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಸೀರ್ ಅಹ್ಮದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಚಲವಾದಿ ನಾರಾಯಣಸ್ವಾಮಿ, ವೆಂಕಟೇಶ್ವರ, ಜಿ.ಎಸ್.ಕಾರ್ತೀಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮುನಿಕೃಷ್ಣಪ್ಪ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು ಹಾಜರಿದ್ದರು.
ಗ್ರಾಮ ಸೇವೆಯೇ ಕನ್ನಡದ ಸೇವೆ
ಗ್ರಾಮೀಣ ಯುವಕರಲ್ಲಿ ಕನ್ನಡ ನಾಡು ನುಡಿಯ ಪ್ರೇಮ ಹಾಗೂ ಸಾಮಾಜಿಕ ಕಳಕಳಿಯಿರುವುದು ಶುಭ ಸೂಚಕ ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಬೈರೇಗೌಡ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ನೇತಾಜಿ ಕನ್ನಡ ಕಲಾ ಯುವಕರ ಸಂಘ ಹಾಗೂ ಕನ್ನಡ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಈಚೆಗೆ ನಡೆದ ಆರನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣೆ ನೆರವೇರಿಸಿ ಅವರು ಮಾತನಾಡಿದರು.
ಹಳ್ಳಿಗಳಲ್ಲಿ ಹಲವು ಅನುಕೂಲಗಳಿವೆ, ಹಾಗೆಯೇ ತೊಂದರೆ ಮತ್ತು ನ್ಯೂನತೆಗಳೂ ಇವೆ. ಯುವಜನರು ಒಗ್ಗೂಡಿ ಸಮಸ್ಯೆಗಳನ್ನು ಬಗೆಹರಿಸಿ ಸವಾಲುಗಳನ್ನು ಎದುರಿಸುವಂತಾಗಲಿ. ಇದು ಕೂಡ ಕನ್ನಡದ ಸೇವೆಯೇ ಎಂದು ಹೇಳಿದರು.
ಗ್ರಾಮದ ದಿ. ಶೇಕರಣ್ಣ ಮತ್ತು ದಿ. ಶಂಕರಣ್ಣನವರ ಜ್ಞಾಪಕಾರರ್ಥವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು .65 ಯೂನಿಟ್ ರಕ್ತ ಸಂಗ್ರಹಣೆಯಾಯಿತು.
ರಸ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿ ವಿಜೇತರಾದ ಎಚ್.ಕೆ.ದೀಕ್ಷಿತಾ ಮತ್ತು ಎಚ್.ಕೆ.ಅಂಬಿಕಾ ಅವರನ್ನು ಪುರಸ್ಕರಿಸಲಾಯಿತು.
ಯುವ ಶಕ್ತಿ ರಾಜ್ಯ ಘಟಕದ ಉಪಾಧ್ಯಕ್ಷ ವಿಜಯಬಾವರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾ ರಘು, ತಾಲೂಕು ಪಂಚಾಯಿತಿ ಸದಸ್ಯ ಎಂ.ಕೆ. ರಾಜಶೇಖರ್, ಬಿ ಬೈರೇಗೌಡ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಮುನಿರಾಜು, ನವೀನ್ ಕುಮಾರ್, ಅಭಿರಾಮ್ ಗೌಡ, ಶಿವು, ರಮೇಶ್, ಸಂತೋಷ ಹಾಜರಿದ್ದರು.
ರೈಲಿಗೆ ಸಿಲುಕಿ ಯುವಕ ಸಾವು
ರೈಲಿಗೆ ಯುವಕನೋರ್ವ ಸಿಲುಕಿ ಬುಧವಾರ ಮುಂಜಾನೆ ಮೃತಪಟ್ಟಿದ್ದಾನೆ.
ನಗರದ ಕದಿರಿಪಾಳ್ಯದ ನಿವಾಸಿ ಜಗದೀಶ್ ಅಲಿಯಾಸ್ ಪಾಳ್ಯಮು(೩೦) ಮೃತಪಟ್ಟ ಯುವಕನಾಗಿದ್ದು, ಆತ್ಮಹತ್ಯೆಯಿರಬಹುದೆಂದು ಶಂಕಿಸಲಾಗಿದೆ.
ಕೋಲಾರದಿಂದ ಚನ್ನಪಟ್ಟಣಕ್ಕೆ ತೆರಳುವ ರೈಲು ಶಿಡ್ಲಘಟ್ಟ ರೈಲು ನಿಲ್ದಾಣ ಪ್ರವೇಶಿಸುವ ಮುನ್ನ ಗಾಂಧಿನಗರದ ಸೇತುವೆ ಮೇಲೆ ಈ ದುರ್ಘಟನೆ ನಡೆದಿದ್ದು, ಹಳಿಯ ಮೇಲೆ ನಿಂತಿದ್ದ ಯುವಕ ರೈಲಿಗೆ ತಾಕಿ ಕೆಳಗುರುಳಿಬಿದ್ದು ಸಾವನ್ನಪ್ಪಿದ್ದಾನೆ.
ನಂದಿನಿಯಿಂದ ಪ್ರತಿಭಾನ್ವೇಷಣೆ ಕಾರ್ಯಕ್ರಮ
ವಿದ್ಯಾರ್ಥಿಗಳು ನಂದಿನಿ ಉತ್ಪನ್ನಗಳ ರಾಯಭಾರಿಗಳಾಗುವ ಮೂಲಕ ನಮ್ಮ ರೈತರಿಗೆ ಪರೋಕ್ಷವಾಗಿ ನೆರವಾಗುವಂತೆ ಶಾಸಕ ರಾಜಣ್ಣ ತಿಳಿಸಿದರು.
ನಗರದ ಡಾಲ್ಪಿನ್ ವಿದ್ಯಾಸಂಸ್ಥೆಯಲ್ಲಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಬುಧವಾರ ನಡೆದ ಪ್ರೌಢಶಾಲೆಯ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಖರೀದಿಸಿದಲ್ಲಿ ಶೇಕಡಾ 90 ರಷ್ಟು ಹಣ ನಮ್ಮ ಭಾಗದ ರೈತರಿಗೆ ತಲುಪುತ್ತದೆ. ಇದರಿಂದ ನಮ್ಮ ರೈತರನ್ನು ಬಲಪಡಿಸಿದಂತಾಗುತ್ತದೆ. ಗ್ರಾಮೀಣ ಜನರ ಜೀವನಮಟ್ಟ ಸುಧಾರಣೆಯಾಗುತ್ತದೆ. ನಂದಿನಿ ೬೫ ವಿವಿಧ ಶ್ರೇಣಿಯ ಶ್ರೇಷ್ಠ ಮಟ್ಟದ ಉತ್ಪನ್ನಗಳನ್ನು ತಯಾರಿಸುತ್ತಿದೆ. ನಮ್ಮ ದೇಶದ ಗಡಿ ಕಯುತ್ತಿರುವ ಸೈನಿಕರಿಗೂ ನಂದಿನಿ ಹಾಲಿನ ಉತ್ಪನ್ನಗಳೆ ಸರಬರಾಜಾಗುತ್ತಿವೆ ಎಂದು ಹೇಳಿದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ತಾಲ್ಲೂಕಿನ ೪೮ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ, ರಸ ಪ್ರಶ್ನೆ, ಸಂಗೀತ ಸ್ಪರ್ದೆ ಹಮ್ಮಿಕೊಳ್ಳಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕೋಲಾರದಲ್ಲಿ ಸ್ಪರ್ಧೆಯನ್ನು ನಡೆಸಲಾಗುವುದು. ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನಕ್ಕೆ ಐದು ಸಾವಿರ ರೂ, ದ್ವಿತೀಯ ಸ್ಥಾನಕ್ಕೆ ಮೂರು ಸಾವಿರ ರೂ, ತೃತೀಯ ಸ್ಥಾನಕ್ಕೆ ಎರಡು ಸಾವಿರ ರೂಗಳನ್ನು ಹಾಗೂ ಹತ್ತು ಮಂದಿಗೆ ಸಮಾಧಾನಕರ ಬಹುಮಾನಗಳನ್ನು ವೈಯಕ್ತಕವಾಗಿ ನೀಡುವುದಾಗಿ ಹೇಳಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾ ರಘು, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಬಾಬು, ಡಾಲ್ಫಿನ್ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್, ನಂದಿನಿ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಲಕ್ಷೀ ಪ್ರಸಾದ್ ಯಾದವ್, ಕೋಚಿಮುಲ್ ಉಪವ್ಯವಸ್ಥಾಪಕರಾದ ಬಿ.ಎಸ್.ಹನುಮಂತರಾವ್, ಲಕ್ಷೀನಾರಾಯಣ್, ಶಿಕ್ಷಣ ಸಂಯೋಜಕ ಲಕ್ಷ್ಮೀನರಸಿಂಹಗೌಡ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ
ರೈತರ ಜಮೀನುಗಳಲ್ಲಿನ ಮಣ್ಣಿನ ಫಲವತ್ತತೆ, ಪೋಷಕಾಂಶ, ಸಾರ ಮುಂತಾದ ಅಂಶಗಳನ್ನು ಪತ್ತೆ ಹಚ್ಚಿ ಮಣ್ಣಿನ ಆರೋಗ್ಯದ ಸ್ಥಿತಿಗತಿಗಳ ಕುರಿತು ವಿಶ್ಲೇಷಣೆ ಮಾಡಿ ತಿಳಿದುಕೊಳ್ಳುವುದು ಅತ್ಯವಶ್ಯಕ ಎಂದು ಪ್ರಗತಿಪರ ರೈತ ಹಿತ್ತಲಹಳ್ಳಿ ಗೋಪಾಲಗೌಡ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ವಿಶ್ವ ಮಣ್ಣಿನ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಣ್ಣಿನ ಫಲವತ್ತತೆಯನ್ನು ಆಧರಿಸಿ ರಸಗೊಬ್ಬರಗಳನ್ನು ಬಳಸುವುದರಿಂದ ಅಧಿಕ ಇಳುವರಿ ಪಡೆಯಬಹುದು. ರೈತರು ಕೃಷಿ ಮಾಡುವುದು ಬಹಳಷ್ಟು ದುಬಾರಿಯಾಗಿರುವ ಇಂದಿನ ದಿನಗಳಲ್ಲಿ ಸರ್ಕಾರ ಚಿಂತನೆ ಮಾಡಿ ರೈತರು ಕಡಿಮೆ ವೆಚ್ಚದಲ್ಲಿ ಕೃಷಿ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯಬೇಕು. ಉತ್ತಮ ಹಾಗು ಗುಣಮಟ್ಟದ ಕೃಷಿ ಮಾಡಿದಾಗ ಮಾತ್ರ ಕೃಷಿ ಕ್ಷೇತ್ರ ಲಾಭದಾಯಕವಾಗುತ್ತದೆ ಎಂಬ ಉದ್ದೇಶದಿಂದ ಮಣ್ಣು ಪರೀಕ್ಷೆಯ ಅಗತ್ಯತೆಯನ್ನು ತಿಳಿಸಲಾಗುತ್ತಿದೆ ಎಂದರು.
ಕೃಷಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಮುರಳೀಧರ್ ಮಾತನಾಡಿ, ಪ್ರತಿಯೊಬ್ಬ ರೈತರೂ ಮಣ್ಣಿನ ಪರೀಕ್ಷೆಯನ್ನು ಖಡ್ಡಾಯವಾಗಿ ಮಾಡಿಸಬೇಕು. ಮಣ್ಣಿನ ಪರೀಕ್ಷೆಯ ಅಂಕಿ ಅಂಶಗಳನ್ನು ಗಣಕೀಕೃತಗೊಳಿಸಲಾಗುತ್ತದೆ. ಇದರಿಂದ ರೈತರು ಯಾವ ಬೆಳೆ ಬೆಳೆಯಬಹುದು, ಅದಕ್ಕೆ ಬೇಕಾಗುವ ಪೌಷ್ಠಿಕಾಂಶಗಳೇನು ಮತ್ತು ಕಾಲಾನುಕ್ರಮದಲ್ಲಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ರೈತರು ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಇದೀಗ ದಿನೇ ದಿನೇ ಮಣ್ಣು ವಿವಿಧ ಮಾಲಿನ್ಯದಿಂದ ಕಲುಷಿತಗೊಳ್ಳುತ್ತಿದೆ. ಮಣ್ಣಿನ ಸವಕಳಿ ಹೆಚ್ಚಾದಂತೆ ಮಣ್ಣಿನಲ್ಲಿರಬೇಕಾದ ಪೋಷಕಾಂಶ ಮಟ್ಟ ಕಡಿಮೆಯಾಗುತ್ತದೆ. ಮಣ್ಣಿನ ಗುಣಮಟ್ಟದಲ್ಲಿ ವ್ಯತ್ಯಾಸವುಂಟಾದರೆ ಅದು ನಾವು ಸೇವಿಸುವ ಆಹಾರ, ನೀರು, ಗಾಳಿಯ ಮೇಲೆ ಪರಿಣಾಮ ಬೀರಿ ಪರಿಸರ ಹಾಳಾಗುತ್ತದೆ. ಆದ್ದರಿಂದ ಕಾಲ ಕಾಲಕ್ಕೆ ಮಣ್ಣಿನ ಪರೀಕ್ಷೆ ಮಾಡಿಸುವ ಮೂಲಕ ಗುಣಮಟ್ಟದ ಬೆಳೆ ಬೆಳೆದು ರೈತರು ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಹಲವು ರೈತರ ಜಮೀನಿನ ಮಣ್ಣಿನ ಪರೀಕ್ಷೆ ಮಾಡಿಸಿರುವ ಮಣ್ಣು ಆರೋಗ್ಯ ಚೀಟಿ ವಿತರಿಸಲಾಯಿತು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ರೈತ ಮುಖಂಡರಾದ ಬೆಳ್ಳೂಟಿ ಕೆಂಪಣ್ಣ, ತಾದೂರು ಮಂಜುನಾಥ್, ಪ್ರದೀಪ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಾರ್ಮಿಕರು ಸಂಘಟಿತರಾಗಿ ಸಮಸ್ಯೆ ಬಗೆಹರಿಸಿಕೊಳ್ಳಿ
ಪರಸ್ಪರ ಪ್ರೀತಿ ವಿಶ್ವಾಸ ಬೆಳೆಸಿಕೊಳ್ಳುವ ಮೂಲಕ ಎಲ್ಲಾ ಕಾರ್ಮಿಕರು ಒಗ್ಗಟ್ಟಾಗಿ ಸೇರಿ ಸಂಘಟಿತರಾಗಿರಬೇಕು ಎಂದು ಶ್ರೀ ಶರಾವತಿ ವಿದ್ಯುತ್ ವೈರ್ಮನ್ ಮತ್ತು ಪ್ಲಂಬಿಂಗ್ ಕಾರ್ಮಿಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಆನಂದ ತಿಳಿಸಿದರು.
ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ವಿದ್ಯುತ್ ವೈರ್ಮನ್ ಮತ್ತು ಪ್ಲಂಬಿಂಗ್ ಕಾರ್ಮಿಕರ ಸಂಘದ ಜಿಲ್ಲಾ ಮತ್ತು ತಾಲ್ಲೂಕು ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾರ್ಮಿಕರ ನಡುವೆ ಕೆಲವೊಮ್ಮೆ ಉಂಟಾಗುವ ಗೊಂದಲಗಳನ್ನು ಸಂಘದ ಗಮನಕ್ಕೆ ತಂದು ಪರಿಹರಿಸಿಕೊಳ್ಳುವ ಮೂಲಕ ಸಂಘದ ಯಶಸ್ಸಿಗೆ ಪ್ರತಿಯೊಬ್ಬರೂ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದರು.
ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ಮುನಿಸ್ವಾಮಿ ಮಾತನಾಡಿ, ಸಂಘಗಳನ್ನು ಕಟ್ಟಿಕೊಂಡ ಮಾತ್ರಕ್ಕೆ ಕಾರ್ಮಿಕರಿಗೆ ಯಾವುದೇ ಉಪಯೋಗವಿಲ್ಲ ಬದಲಿಗೆ ಸಂಘದ ದ್ಯೇಯೋದ್ದೇಶಗಳನ್ನು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಂಡು ಸಂಘದ ಸಭೆಗಳಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಂಡಾಗ ಮಾತ್ರ ಸಂಘಗಳನ್ನು ಕಟ್ಟಿದ್ದಕ್ಕೆ ಸಾರ್ಥಕವಾಗುತ್ತದೆ ಎಂದರು.
ನಮ್ಮದೇ ಸಂಘದ ಒಬ್ಬ ಕಾರ್ಮಿಕ ಯಾವುದೋ ಕೆಲಸ ಒಪ್ಪಿಕೊಂಡು ಮಾಡುವಾಗ ಬೇರೊಬ್ಬ ಕಾರ್ಮಿಕ ಅಲ್ಲಿ ಹೋಗಿ ಕಡಿಮೆ ದರದಲ್ಲಿ ಕೆಲಸ ಮುಗಿಸಲು ಮುಂದಾಗುವುದು ಬೇಡ. ಅಂತಹ ಸಂದರ್ಭಗಳು ಎದುರಾದಾಗ ಸಂಘದ ಗಮನಕ್ಕೆ ತಂದು ಪರಸ್ಪರ ಕುಳಿತು ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಎನ್.ಗಂಗಾಧರ್, ಉಪಾಧ್ಯಕ್ಷರಾದ ಮಂಜುನಾಥ್, ಅಲ್ತಾಫ್ಖಾನ್, ಎಂ.ದೇವರಾಜ್, ಶ್ರೀನಿವಾಸಮೂರ್ತಿ, ತಾಲ್ಲೂಕು ಘಟಕದ ಗೌರವಾಧ್ಯಕ್ಷ ಎಸ್.ಗುಂಡೂರಾವ್, ಅಲ್ಲಾಬಕಾಷ್, ಶ್ರೀನಿವಾಸ್ ಹಾಜರಿದ್ದರು.
ಸಮಗ್ರ ಕೃಷಿ ಲಾಭದಾಯಕ
ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಮಿಶ್ರ ಬೆಳೆ ಬೆಳೆಯುವುದರ ಜೊತೆಗೆ ಹೈನುಗಾರಿಕೆ, ಕೋಳಿ, ಕುರಿ ಸಾಕಣೆ ಮಾಡಿ ವೈಜ್ಞಾನಿಕ ಬೇಸಾಯ ಪದ್ಧತಿ ಅಳವಡಿಸಿಕೊಂಡರೆ ಕೃಷಿ ಲಾಭದಾಯಕವಾಗುತ್ತದೆ ಎಂದು ರೈ ವಿಶ್ವವಿದ್ಯಾಲಯದ ವಿದ್ಯಾರ್ಥಿ ಶ್ರವಣ್ ತಿಳಿಸಿದರು.
ತಾಲ್ಲೂಕಿನ ಆನೂರು ಗ್ರಾಮದಲ್ಲಿ ರೈ ಟೆಕ್ನಾಲಜಿ ವಿಶ್ವವಿದ್ಯಾಲಯದಿಂದ ಆಯೋಜಿಸಿದ್ದ ಬಿ.ಎಸ್.ಸಿ ಎ.ಜಿ ನಾಲ್ಕನೆಯ ವರ್ಷದ ವಿದ್ಯಾರ್ಥಿಗಳ ಕಾರ್ಯಾನುಭವದ ಗ್ರಾಮೀಣ ಅಭಿವೃದ್ಧಿ ಉದ್ಯಮಶೀಲ ಜಾಗೃತಿ ಯೋಜನಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಹೆಚ್ಚಾಗಿ ರೇಷ್ಮೆ ಬೆಳೆ ಬೆಳೆಯುವುದರಿಂದ ರೇಷ್ಮೆ ಹುಳು ಸಾಕಾಣಿಕೆಯಿಂದ ಬರುವ ತ್ಯಾಜ್ಯದಿಂದ ಗೊಬ್ಬರ ತಯಾರಿಸಬಹುದು. ಈ ಗೊಬ್ಬರದ ಬಳಕೆಯಿಂದ ಮಣ್ಣಿನ ಫಲವತ್ತತೆ ಹೆಚ್ಚಿ ಸೂಕ್ಷ್ಮ ಜೀವಿಗಳ ಕ್ರಿಯೆ ಹೆಚ್ಚಾಗುತ್ತದೆ. ರೇಷ್ಮೆ ಹುಳುವಿನ ಲಾರ್ವಾ ಹೈನುಗಾರಿಕೆಯಲ್ಲಿ ಬಳಸಬಹುದು, ಹೈನುಗಾರಿಕೆಯ ತ್ಯಾಜ್ಯ ಕೋಳಿ ಸಾಕಾಣಿಕೆಯಲ್ಲಿ ಉಪಯುಕ್ತ ಎಂದು ಹೇಳಿದರು.
ಮಣ್ಣಿನ ಪರೀಕ್ಷೆಯ ಅಗತ್ಯತೆಯ ಬಗ್ಗೆ ಗ್ರಾಮಸ್ಥರಿಗೆ ವಿದ್ಯಾರ್ಥಿನಿ ಲತಾಶ್ರೀ ತಿಳಿಸಿಕೊಟ್ಟು ಮಣ್ಣಿನ ಮಾದರಿ ತೆಗೆಯುವ ವಿಧಾನ ಮತ್ತು ಮಣ್ಣಿನ ಪರೀಕ್ಷೆಯ ಉಪಯುಕ್ತತೆಗಳನ್ನು ಪ್ರಾತ್ಯಕ್ಷಿಕವಾಗಿ ತಿಳಿಸಿಕೊಟ್ಟರು.
ವಿದ್ಯಾರ್ಥಿಗಳಾದ ಹರ್ಷಿತಾ ಮತ್ತು ಲತಾಶ್ರೀ ಬೀಜೋಪಚಾರ ಬಗ್ಗೆ, ವಿಷ್ಣು ಬೀಜಾನೃತದ ಕುರಿತು, ಸೂರ್ಯ ಚಿಲ್ಲಿ ಗಾರ್ಲಿಕ್ ಪೇಸ್ಟ್ ಗಳನ್ನು ಬಳಸಿ ಜೈವಿಕ ನಿರೋಧ ಬಳಸುವ ರೀತಿ, ಹರ್ಷಿತಾ ಅಜೋಲಾ ಬೆಳೆಸುವ ವಿಧಾನ ಮತ್ತು ಅದರ ಉಪಯೋಗ, ಭೂಪಾಲೆ ಪಂಚಗವ್ಯ ತಯಾರಿಕೆಯನ್ನು ತೋರಿಸಿಕೊಟ್ಟರು.
ವಿದ್ಯಾರ್ಥೀಗಳಾದ ಶ್ರವಣ್, ಮಾಧವಿ, ವೆನ್ನೆಲ, ಶಿಲ್ಪ, ಕಾರ್ತಿಕ ಹಾಗೂ ಗ್ರಾಮಸ್ಥರು ಹಾಜರಿದ್ದರು.
ನಗರದ ರಸ್ತೆ, ಮೋರಿಗಳ ಹೊಂಡಗಳನ್ನು ಮುಚ್ಚಲು ಪ್ರತಿಭಟನೆ
ನಗರದ ರಸ್ತೆಗಳಲ್ಲಿ ಬಿದ್ದ ಹೊಂಡಗಳನ್ನು ಮುಚ್ಚುವಂತೆ ಆಗ್ರಹಿಸಿ ಆಪ್ ಪಾರ್ಟಿ ಕಾರ್ಯಕರ್ತರು ಹೊಂಡದ ಬಳಿ ಬಾಯಿ ಬಡಿದುಕೊಳ್ಳುವ ವಿನೂತನವಾಗಿ ಪ್ರತಿಭಟನೆ ನಡೆಸಿ ನಗರಸಭೆಯ ಗಮನ ಸೆಳೆದರು.
ನಗರದ ಸಂತೆ ಮೈದಾನದ ಬಳಿ ಇರುವ ಮುನೇಶ್ವರಸ್ವಾಮಿ ದೇವಾಲಯದ ಬಳಿ ರಸ್ತೆಯ ಮೋರಿ ಮುರಿದು ಬಿದ್ದಿದೆ. ಅಲ್ಲಿ ಯಾರೋ ಸಾರ್ವಜನಿಕರು ಗಿಡದ ರೆಂಬೆಯನ್ನು ನೆಟ್ಟು ಮೋರಿ ಮುರಿದು ಬಿದ್ದಿದ್ದು ಎಚ್ಚರಿಕೆಯಿಂದ ಸಾಗಿ ಎಂದು ಸೂಚನೆ ನೀಡಿದ್ದಾರೆ.
ಈ ಹೊಂಡ ಬಳಿ ಸೋಮವಾರ ಜಮಾಯಿಸಿದ ಆಪ್ನ ಕಾರ್ಯಕರ್ತರು ಬಾಯಿ ಬಡಿದುಕೊಂಡು ನಗರಸಭೆಯ ಆಡಳಿತ ವೈಖರಿಯನ್ನು ಖಂಡಿಸಿದರು.
ನಗರದ ಅನೇಕ ಕಡೆ ರಸ್ತೆಗಳಲ್ಲಿ ಮೊಣಕಾಲುದ್ದದ ಹೊಂಡಗಳು ನಿರ್ಮಾಣ ಆಗಿವೆ, ಹಾಗೆಯೆ ಸಾಕಷ್ಟು ಮೋರಿಗಳ ಬಳಿಯೂ ಮೋರಿ ಕುಸಿದು ಬದ್ದಿದ್ದು ಸಂಚರಿಸಲು ಆಗದಂತಾಗಿದೆ. ಕಳಪೆ ಕಾಮಗಾರಿಯಿಂದ ಈ ರೀತಿಯಲ್ಲಿ ಹೊಂಡಗಳ ನಿರ್ಮಾಣ, ಮೋರಿ ಕುಸಿದಿರುವುದು ಆಗಿದೆ.
ಆದ್ದರಿಂದ ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರ ವಿರುದ್ದ ಕ್ರಮ ತೆಗೆದುಕೊಂಡು ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು, ಕೂಡಲೆ ನಗರದಲ್ಲಿ ಬಿದ್ದಿರುವ ಹೊಂಡಗಳನ್ನು ಕೂಡಲೆ ಮುಚ್ಚಿ ಸರಿಪಡಿಸಬೇಕೆಂದು ಆಗ್ರಹಿಸಿದರು. ಅದುವರೆಗೂ ನಮ್ಮ ಪಕ್ಷದಿಂದ ನಿರಂತರವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಆಪ್ನ ತಾಲ್ಲೂಕು ಸಂಚಾಲಕ ಬಿ.ಆರ್.ರಾಮಚಂದ್ರ, ನಗರ ಘಟಕದ ಅಧ್ಯಕ್ಷ ಅಪ್ಸರ್ಪಾಷ, ಜಮೀರ್, ಆಸೀಪ್, ಅನಿಲ್, ರವಿ, ಸುಬ್ಬು, ಪೈರೋಜ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕ್ಷಯ ರೋಗ ನಿಯಂತ್ರಣಕ್ಕೆ ಮನೆ ಮನೆ ಭೇಟಿ ಕಾರ್ಯಕ್ರಮ
ರೇಷ್ಮೆ ನಮ್ಮ ತಾಲ್ಲೂಕಿಗೆ ಒಂದು ರೀತಿಯಲ್ಲಿ ವರದಾನವಾದರೆ ಅದರಿಂದ ಬರುವ ಖಾಯಿಲೆಗಳಾದ ಆಸ್ತಮಾ ಮತ್ತು ಕ್ಷಯ ರೋಗ ಶಾಪವಾಗಿದೆ ಎಂದು ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್ ತಿಳಿಸಿದರು.
ನಗರದ ಸಿದ್ಧಾರ್ಥನಗರದ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆಯಿಂದ ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮವಾದ ‘ಸಕ್ರಿಯ ಟಿ ಬಿ ಪ್ರಕರಣಗಳನ್ನು ಪತ್ತೆ ಹಚ್ಚಲು ಮನೆ ಮನೆ ಭೇಟಿ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
ಈ ಹಿಂದೆ ಕ್ಷಯ ರೋಗಕ್ಕೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ರೋಗ ಹೆಚ್ಚಿರುವ ಸ್ಥಳಗಳನ್ನು ಗುರುತಿಸಿ ರೋಗಿಗಳ ಮನೆಗೆ ಹೋಗಿ ಸೂಕ್ತ ಔಷಧಿ ನೀಡುವ ಕಾರ್ಯ ಪ್ರಾರಂಭವಾಗಿದೆ. ರೋಗವನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿ, ರೋಗಿಗೆ ಸೂಕ್ತ ಮಾರ್ಗದರ್ಶನ ಮತ್ತು ಚಿಕಿತ್ಸೆ ನೀಡುವ ಮೂಲಕ ಕ್ಷಯರೋಗವನ್ನು ನಿಯಂತ್ರಿಸುವ ಉದ್ದೇಶದಿಂದ ಆರಂಭಿಸಿರುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೇಳಿದರು.
ಸಾರ್ವಜನಿಕ ಆಸ್ಪತ್ರೆಯ ಕ್ಷಯ ರೋಗ ಚಿಕಿತ್ಸಾ ಘಟಕದ ಹಿರಿಯ ಮೇಲ್ವಿಚಾರಕ ಎನ್. ನರಸಿಂಹಮೂರ್ತಿ ಮಾತನಾಡಿ, ತಾಲ್ಲೂಕಿನಲ್ಲಿ ಸುಮಾರು 45 ಸ್ಥಳಗಳನ್ನು ಈಗಾಗಲೇ ಗುರುತಿಸಿದ್ದೇವೆ. ಸುಮಾರು 27,774 ಮಂದಿಯನ್ನು ನಾವು ಪರೀಕ್ಷೆ ಮಾಡಿ ಅವರಲ್ಲಿ ಕ್ಷಯ ರೋಗವಿರುವವರಿಗೆ ಸೂಕ್ತ ಚಿಕಿತ್ಸೆ ನೀಡುತ್ತೇವೆ. ರೋಗವು ಉಲ್ಭಣವಾಗದಂತೆ ಕೊನೆಗೆ ನಿರ್ಮೂಲನೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ ಕುಮಾರ್ ಮಾತನಾಡಿ, ಪ್ರಾರಂಭಿಕ ಹಂತದಲ್ಲಿಯೇ ಸೂಕ್ತ ಔಷಧಿ ಸೇವನೆಯಿಂದ ಕ್ಷಯ ರೋಗದ ಲಕ್ಷಣಗಳೆಲ್ಲ ಮಂಗಮಾಯವಾಗಿ ಬಿಡುತ್ತವೆ. ಆದರೆ ಈ ಹಂತದಲ್ಲಿ ಔಷಧಿಯನ್ನು ನಿಲ್ಲಿಸಬಾರದು. ಹೀಗೆ ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸಿ, ಔಷಧಿಯನ್ನು ಉಪೇಕ್ಷಿಸುವ ರೋಗಿಗಳಲ್ಲಿ ರೋಗ ಬಲಿಯುತ್ತಾ ಹೋಗುತ್ತದೆ. ಅದರಿಂದ ರೋಗಾಣುಗಳು ಔಷಧಿಗೆ ಹೊಂದಿಕೊಂಡು ಬದುಕುವ ಸಾಮರ್ಥ್ಯ ಗಳಿಸುತ್ತವೆ. ಸಾಮಾನ್ಯ ಕ್ಷಯವು ಬಹುವಿಧ ಔಷಧ ನಿರೋಧಕ ಕ್ಷಯವಾಗಿ ಮಾರ್ಪಟ್ಟು ಗಂಡಾಂತರ ಸ್ಥಿತಿಗೆ ತಲುಪಬಹುದು. ಪ್ರತಿಯೊಬ್ಬ ಕ್ಷಯ ರೋಗಿಯು ಪಕ್ಕಾ ಚಿಕಿತ್ಸೆಯನ್ನು ಸೂಕ್ತ ಸಮಯದಲ್ಲಿ ಪಡೆದರೆ ರೋಗ ಅಷ್ಟೇ ಪಕ್ಕಾ ವಾಸಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ನುಡಿದರು.
ನಗರಸಭೆ ಆಯುಕ್ತ ಚಲಪತಿ, ಸದಸ್ಯೆ ಸುಮಿತ್ರಾ ರಮೇಶ್, ಡಾ.ವಿಜಯ್, ಸಿ.ಮುನಿರತ್ನಮ್ಮ, ಎನ್. ಗಂಗಾಧರಯ್ಯ ಹಾಜರಿದ್ದರು.
ನಮ್ಮ ಕರ್ನಾಟಕ ಜನಸೈನ್ಯ ತಾಲ್ಲೂಕು ಘಟಕ ಸ್ಥಾಪನೆ
ಕನ್ನಡ ನಾಡು, ನುಡಿಯ ರಕ್ಷಣೆ ಹಾಗೂ ಗಡಿಭಾಗಗಳ ರಕ್ಷಣೆ ಪ್ರತಿಯೊಬ್ಬ ಯುವಕರ ಆದ್ಯ ಕರ್ತವ್ಯವಾಗಿದೆ ಎಂದು ನಮ್ಮ ಕರ್ನಾಟಕ ಜನಸೈನ್ಯ ರಾಜ್ಯ ಘಟಕದ ಅಧ್ಯಕ್ಷ ನರಸಿಂಹಯ್ಯ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅವರು ಮಾತನಾಡಿದರು.
ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇಲ್ಲಿನ ಅಮೂಲ್ಯ ನೆಲ, ಜಲ, ಸಂಸ್ಕೃತಿ ಹಾಗೂ ಗಡಿಗೆ ಧಕ್ಕೆ ತರುವ ಕೆಲಸ ಮಾಡುತ್ತಿವೆ. ಇದರ ವಿರುದ್ಧ ಹೋರಾಟ ನಡೆಸಬೇಕು. ನಾಡಿನ ಪ್ರತಿಯೊಂದು ಸಮಸ್ಯೆಗೆ ಮುಂಚೂಣಿಯಾಗಿ ಹೋರಾಟಕ್ಕೆ ನಿಲ್ಲುವ ಕೆಲಸ ನಮ್ಮ ಸಂಘಟನೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ತಾಲ್ಲೂಕು ಸಂಘಟನೆಗಳ ಜವಾಬ್ದಾರಿ ಹೆಚ್ಚಿನದ್ದು. ಸಂಘಟನೆಗೆ ಕಳಂಕ ತರದೆ ನಾಡು, ನುಡಿ ಮತ್ತು ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು. ಜನಪರ ಕೆಲಸ ಮಾಡುತ್ತಾ ಜನರ ಹೃದಯವನ್ನು ಗೆಲ್ಲಿ ಎಂದು ಅವರು ಕಿವಿ ಮಾತು ಹೇಳಿದರು.
ನಮ್ಮ ಕರ್ನಾಟಕ ಜನಸೈನ್ಯ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ಬಾಲಕೃಷ್ಣ, ಉಪಾಧರ್ಯಕ್ಷರನ್ನಾಗಿ ಗೋಪಿನಾಥ್, ಪ್ರಧಾನ ಕಾರ್ಯದರ್ಶೀಯಾಗಿ ಸದಾಶಿವರೆಡ್ಡಿ ಅವರನ್ನು ಆಯ್ಕೆ ಮಾಡಿ ಆದೇಶ ಪತ್ರವನ್ನು ನೀಡಿದರು.
ನಮ್ಮ ಕರ್ನಾಟಕ ಜನಸೈನ್ಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ್, ಖಜಾಂಚಿ ಗೋಪಿನಾಥ್, ಮಂಜುನಾಥ್, ನವೀನ್ ಕುಮಾರ್, ಶಿವಕುಮಾರ್, ಶಂಕರ್ ಹಾಜರಿದ್ದರು.

