ಚಿಕಿತ್ಸೆಗೆಂದು ಕರೆದುಕೊಂಡು ಹೋಗಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ ಎಂದು ಆರೋಪಿಸಿ, ಆಶಾ ಕಾರ್ಯಕರ್ತೆ ಬಿ.ವಿ.ಪದ್ಮಾವತಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ನೂರಾರು ಮಂದಿ ಆಶಾ ಕಾರ್ಯಕರ್ತೆಯರು, ಸಿ.ಐ.ಟಿ.ಯು.ನೇತೃತ್ವದಲ್ಲಿ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ಅವರು, ನಮ್ಮ ಕುಟುಂಬಗಳನ್ನು ನಿರ್ಲಕ್ಷಿಸಿ, ಸಮುದಾಯದ ಏಳಿಗೆಗಾಗಿ ನಿರಂತರವಾಗಿ ದುಡಿಯುತ್ತಿರುವ ನಮಗೆ ಭದ್ರತೆ ಇಲ್ಲದಂತಾಗಿದೆ ಎಂದು ದೂರಿದರು.
ತಾಲ್ಲೂಕಿನ ದೇವರ ಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಪ್ಪನಹಳ್ಳಿ ನಿವಾಸಿ ನರಸಿಂಹಮೂರ್ತಿ ಅವರು, ಸ್ವಯಂ ಪ್ರೇರಿತರಾಗಿ ಬಂದು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಅವರ ಪತ್ನಿ ಛಾಯಾ ಅವರಿಗೆ 2014 ರಲ್ಲಿ ಸಂತಾನ ಹರಣ ಶಸ್ತ್ರ ಚಿಕಿತ್ಸೆಯಾಗಿದೆ. ಸರ್ಕಾರದಿಂದ ನೀಡುವಂತಹ 1100 ರೂಪಾಯಿಗಳ ಅನುದಾನ ಪಡೆದುಕೊಂಡಿದ್ದಾರೆ. ಹೀಗಿದ್ದರೂ ವಿನಾಕಾರಣ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದ ಅವರು, ಕೂಡಲೇ ತಾಲ್ಲೂಕಿನಲ್ಲಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿರುವವರನ್ನು ಬಂಧಿಸಿ ಕಾನೂನು ಪ್ರಕಾರ ತನಿಖೆಗೆ ಒಳಪಡಿಸಬೇಕು. ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆದಿರುವ ಬಗ್ಗೆ ತನಿಖೆಯಾಗಲಿ, ಒಂದು ವೇಳೆ ಆಶಾ ಕಾರ್ತಯಕರ್ತೆ ಬಿ.ವಿ.ಪದ್ಮಾವತಿ ಅವರು, ನರಸಿಂಹಮೂರ್ತಿ ಅವರನ್ನು ಬಲವಂತವಾಗಿ ಕರೆದುಕೊಂಡು ಬಂದು ಮಾಡಿಸಿದ್ದರೆ, ಅವರ ಮೇಲೆ ಇಲಾಖೆಯವರು ಕ್ರಮ ಜರುಗಿಸಲಿ. ಅದನ್ನು ಬಿಟ್ಟು ಮಹಿಳೆಯೆಂಬುದನ್ನು ಗಮನಿಸಿದೆ ಏಕಾಏಕಿ ಹಲ್ಲೆ ನಡೆಸಿರುವ ಕ್ರಮವನ್ನು ನಾವು ಖಂಡಿಸುತ್ತೇವೆ ಎಂದು ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಂಚಾಲಕಿ ಲಕ್ಷ್ಮೀದೇವಮ್ಮ ಹೇಳಿದರು.
ಸಿ.ಐ.ಟಿ.ಯು.ಜಿಲ್ಲಾ ಮುಖಂಡ ಫಯಾಜ್ ಮಾತನಾಡಿ, ಕಾನೂನುನನ್ನು ಕೈಗೆತ್ತಿಕೊಳ್ಳುವವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ಆಶಾ ಕಾರ್ಯಕರ್ತೆಯರು ಮುಕ್ತವಾಗಿ, ನಿರ್ಭಿತಿಯಿಂದ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು, ಒಂದು ವೇಳೆ ಪೊಲೀಸ್ ಇಲಾಖೆ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲು ವಿಫಲವಾದರೆ ರಾಜ್ಯಾದ್ಯಂತ ಸಂಘಟನೆಯ ಮೂಲಕ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದರು.
ನೂರಾರು ಮಂದಿ ಆಶಾ ಕಾರ್ಯಕರ್ತೆಯರು ಪ್ರವಾಸಿಮಂದಿರದಿಂದ ಹೊರಟು ಕೋಟೆ ಸರ್ಕಲ್ ವರೆಗೂ ಮೆರವಣಿಗೆ ನಡೆಸಿ, ಪ್ರತಿಭಟನೆ ನಡೆಸಿದರು. ನಂತರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ
ರೈತರ ಬೆಳೆಗೆ ಹಫ್ತಾ ವಸೂಲಿ, ರೈತಸಂಘದಿಂದ ಬೆಂಗಳೂರು ಚಲೋ
ಗ್ರಾಮಾಂತರ ಪ್ರದೇಶಗಳಲ್ಲಿನ ರೈತರು ಕಷ್ಟಪಟ್ಟು ಬೆಳೆದು ಮಾರಾಟಕ್ಕಾಗಿ ಬೆಂಗಳೂರಿನ ಕೆ.ಆರ್.ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಅಲ್ಲಿ ಹಫ್ತಾ ವಸೂಲಿ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ ಆರೋಪಿಸಿದರು.
ನಗರದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ಸಮೀಪದಿಂದ ಬೆಂಗಳೂರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮಕ್ಕೆ ಸೋಮವಾರ ತೆರಳುವ ಮುನ್ನ ಅವರು ಮಾತನಾಡಿದರು.
ನಾವು 1,500 ಅಡಿಗಳಿಂದ ನೀರು ತೆಗೆದು ಬಹಳಷ್ಟು ಕಷ್ಟಪಟ್ಟು ತರಕಾರಿಯಂತಹ ಬೆಳೆಗಳನ್ನು ಬೆಳೆದು, ಮಹಾನಗರದ ಜನತೆ ಸೇರಿದಂತೆ ರಾಜ್ಯದ ಜನತೆಯ ಹಸಿವು ನೀಗಿಸುತ್ತಿದ್ದೇವೆ. ಯಾವುದೇ ಸರ್ಕಾರಗಳು ಬಂದರೂ ನಮ್ಮ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ಒದಗಿಸಲು ಸಾಧ್ಯವಾಗಿಲ್ಲ, ನಾವು ಬೆಳೆದ ಬೆಳೆಗಳಿಗೆ ವೈಜ್ಞಾನಿಕವಾದ ಬೆಲೆಗಳನ್ನು ನಿಗದಿ ಪಡಿಸಲು ಸಾಧ್ಯವಾಗಿಲ್ಲ, ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಕೂಡಾ ನಾವು ಕಷ್ಟಪಟ್ಟು ಬೆಳೆದಂತಹ ಬೆಳೆಯನ್ನು ಮಾರುಕಟ್ಟೆಗೆ ತಂದರೆ ನಮ್ಮಿಂದ ತೆರಿಗೆಯ ನೆಪದಲ್ಲಿ ಹಫ್ತಾ ವಸೂಲಿ ಮಾಡುವ ಕೆಲಸ ನಡೆಯುತ್ತಿದೆ.
ಹಫ್ತಾ ನೀಡಲು ನಿರಾಕರಿಸಿದ ರೈತರ ಮೇಲೆ ಗೂಂಡಾಗಳಂತೆ ವರ್ತಿಸುತ್ತಿರುವ ಕೆಲವು ಕಿಡಿಗೇಡಿಗಳು, ರೈತರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ.
ಮಾರುಕಟ್ಟೆಯ ಬಳಿ ರೈತರಿಗೆ ಮೀಸಲಾಗಿದ್ದ ಶೆಡ್ ಗಳನ್ನು ಕೋಟ್ಯಾಂತರ ರೂಪಾಯಿಗಳ ಲಾಭಕ್ಕಾಗಿ ಹರಾಜು ಮಾಡಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಅಲ್ಲಿನ ಬಿ.ಬಿ.ಎಂ.ಪಿ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ಆದ್ದರಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ಬಿ.ಬಿ.ಎಂ.ಪಿ.ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತೇವೆ.
ಸರ್ಕಾರ, ಮಾರುಕಟ್ಟೆಗೆ ಹೋಗುವಂತಹ ರೈತರಿಗೆ ಸೂಕ್ತ ಭದ್ರತೆ ನೀಡಬೇಕು, ತೆರಿಗೆ ರೂಪದಲ್ಲಿ ವಸೂಲಿ ಮಾಡುತ್ತಿರುವ ಹಫ್ತಾ ವಸೂಲಿ ನಿಲ್ಲಿಸಬೇಕು. ರೈತರು ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕವಾದ ಬೆಲೆ ನಿಗದಿ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಟಾಟಾ ಏಸ್, ಸುಮೋಗಳಲ್ಲಿ ರೈತರು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ರೈತ ಸಂಘದ ಮುಖಂಡರಾದ ಮುನಿನಂಜಪ್ಪ, ಚಂದ್ರಶೇಖರ ಸೇರಿದಂತೆ ನೂರಾರು ಮಂದಿ ರೈತರು ಇದ್ದರು.
ಅಂಗವೈಕಲ್ಯತೆಯನ್ನು ಮೀರಿದ್ದು ಬದುಕು
‘ನನಗೆ ಕಾಲಿಲ್ಲದಿದ್ದರೆ ಏನಂತೆ, ಕೈಗಳು ಮತ್ತು ಬುದ್ಧಿಯಿದೆಯಲ್ಲ. ಬದುಕು ಸಾಗಿಸುತ್ತೇನೆ’ ಎಂದು ಛಲದಿಂದ ಹೇಳುತ್ತಾರೆ ಅಪ್ಪೇಗೌಡನಹಳ್ಳಿಯ ಮುನಿರಾಜು.
ಅಂಗವೈಕಲ್ಯತೆಯಿದ್ದರೂ ಹಲವಾರು ಕೈಕಸುಬುಗಳನ್ನು ತಾವೇ ಸ್ವತಃ ಆಸಕ್ತಿಯಿಂದ ಕಲಿತು ಇವರು ಜೀವನ ನಡೆಸುತ್ತಿದ್ದಾರೆ.
ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಹಲವಾರು ಕಸುಬುಗಳನ್ನು ಮಾಡುತ್ತಾ ಇತರರಿಗೆ ಮಾದರಿಯಾಗಿದ್ದಾರೆ ಮುನಿರಾಜು. ಸೈಕಲ್ ರಿಪೇರಿ, ಬಡಗಿ ಕೆಲಸ, ವೆಲ್ಡಿಂಗ್, ಟೈರ್ ಪಂಚರ್ ಹಾಕುವುದು, ತರಕಾರಿ ಮಾರಾಟ, ಆಟೋ ಚಾಲನೆ, ನಾಟಿ ಕೋಳಿ ವ್ಯಾಪಾರ, ಕೋಳಿ ಮಾಂಸದ ವ್ಯಾಪಾರ, ಒರಾರಿಯ ತಯಾರಿಕೆ, ಚಿಲ್ಲರೆ ಅಂಗಡಿ, ಹೊಲ ಕುಯ್ಯುವುದು, ಹಾಲು ಕರೆಯುವುದು ಮುಂತಾದ ಕಸುಬುಗಳಲ್ಲಿ ಇವರು ನಿಷ್ಣಾತರು.
ಪಿಯುಸಿ ವರೆಗೂ ಓದಿರುವ ಮುನಿರಾಜು ಹತ್ತು ವರ್ಷ ವಯಸ್ಸಿನಲ್ಲಿ ಪೋಲಿಯೀ ಖಾಯಿಲೆಯಿಂದ ತನ್ನೆರಡು ಕಾಲುಗಳ ಸ್ವಾಧೀನ ಕಳೆದುಕೊಂಡರು. ಅಂದಿನಿಂದ ಪರಾವಲಂಬಿಯಾದ ಇವರು ಶಾಲೆಗೆ ಹೋಗುತ್ತಿದ್ದುದು ಸ್ನೇಹಿತರ ಸೈಕಲ್ ನಲ್ಲಿ. ಐದನೇ ತರಗತಿಯಿಂದ ಎಸ್.ಎಸ್.ಎಲ್.ಸಿ ವರೆಗೂ ಓದಿದ್ದು ಮೇಲೂರು ಪ್ರೌಢಶಾಲೆಯಲ್ಲಿ. ನಂತರ ಪಿಯುಸಿ ಓದು ಶಿಡ್ಲಘಟ್ಟದ ಪದವಿಪೂರ್ವ ಕಾಲೇಜಿನಲ್ಲಿ.
ಬದುಕು ಮುನ್ನಡೆಸಲು, ಇತರರ ಮೇಲೆ ಅವಲಂಬಿತರಾಗಬಾರದು ಎಂದು ನಿರ್ಧರಿಸಿದ ಮುನಿರಾಜು ಮನೆಯ ಬಳಿಯೇ ಸೈಕಲ್ ರಿಪೇರಿ ಕೆಲಸ ಪ್ರಾರಂಭಿಸಿದರು. ಸೋಮವಾರ ಶಿಡ್ಲಘಟ್ಟದ ಸಂತೆಯಲ್ಲಿ ನಾಟಿ ಕೋಳಿ ವ್ಯಾಪಾರವನ್ನೂ ಮಾಡುತ್ತಿದ್ದರು. ಸ್ವಂತಿಕೆಯಿಂದ ಮರಗೆಲಸವನ್ನು ರೂಢಿಸಿಕೊಂಡು ನೇಗಿಲು, ಒರಾರಿ ತಯಾರಿಯನ್ನೂ ಮಾಡುತ್ತಿದ್ದರು. ಕೋಳಿ ವ್ಯಾಪಾರಸ್ಥರೊಂದಿಗೆ ಮಾತನಾಡಿ ಕೋಳಿ ತರಿಸಿ ಕತ್ತರಿಸಿ ಮಾರಾಟ ಮಾಡುವ ವೃತ್ತಿಯನ್ನೂ ಕೈಗೊಂಡರು.
ಆಟೋ ಕೊಂಡ ಮುನಿರಾಜು ಕಾಲಿಲ್ಲದಿದ್ದರೂ ಒಂದೂವರೆ ವರ್ಷ ಬಾಡಿಗೆಗೆ ಆಟೋ ಚಾಲನೆ ಮಾಡುತ್ತಿದ್ದರು. ದೊಡ್ಡತೇಕಹಳ್ಳಿಯಲ್ಲಿ ಅಪಘಾತಕ್ಕೀಡಾಗಿ ಆಟೋ ನುಜ್ಜುಗುಜ್ಜಾದ ಮೇಲೆ ಅದನ್ನು ಬಿಟ್ಟರು. ಮನೆಯ ಬಳಿ ಚಿಲ್ಲರೆ ಅಂಗಡಿ ಹಾಕಿಕೊಂಡಿದ್ದ ಅವರು ತನ್ನ ತಂದೆ ಕಾಲು ಮುರಿದುಕೊಂಡಿದ್ದರಿಂದ ಅವರಿಗೆ ಅಂಗಡಿಯನ್ನು ಬಿಟ್ಟುಕೊಟ್ಟಿದ್ದಾರೆ.
ಕೆಲ ಕಾಲ ತರಕಾರಿ ಸೊಪ್ಪನ್ನೂ ಮಾರುತ್ತಿದ್ದ ಮುನಿರಾಜು, ಒಂದು ಹಸು ಮತ್ತು ಒಂದು ಎಮ್ಮೆಯನ್ನು ಸಾಕಿದ್ದು, ಹಾಲು ಕರೆಯುವುದು, ಹೊಲ ಕುಯ್ಯುವುದನ್ನೂ ಮಾಡುತ್ತಾರೆ. ಸ್ವಂತ ಪರಿಶ್ರಮದಿಂದ ವೆಲ್ಡಿಂಗ್ ಹಾಗೂ ಟ್ರಾಕ್ಟರ್ ರಿಪೇರಿಯ ಕೆಲಸವನ್ನು ಕಲಿತಿದ್ದಾರೆ. ತಿಂಗಳಿಗೊಮ್ಮೆ ದೊಡ್ಡಬಳ್ಳಾಪುರಕ್ಕೆ ಹೋಗಿ ಅಲ್ಲಿ ಟ್ರಾಕ್ಟರ್ ಗುಜರಿಯಲ್ಲಿ ಒಂದೆರಡು ದಿನ ಉಳಿದು ಕೆಲಸ ಮಾಡಿ ವಾಪಸಾಗುತ್ತಾರೆ.
ಪತ್ನಿ ಹಾಗೂ ಶಾಲೆಗೆ ಹೋಗುವ ಇಬ್ಬರು ಮಕ್ಕಳ ತಂದೆಯಾದ ಮುನಿರಾಜು ಅಂಗವೈಕಲ್ಯವನ್ನು ಮೆಟ್ಟಿ ನಿಂತಿದ್ದಾರೆ.
‘ಮುನಿರಾಜು ಮಾಡುವ ಕೆಲಸಗಳನ್ನು ಕಂಡರೆ ಅಚ್ಚರಿ ಎನಿಸುತ್ತದೆ. ಕೈಕಾಲು ಸರಿಯಾಗಿರುವವರೂ ಸಹ ಮಾಡಲು ಹಿಂದೇಟು ಹಾಕುವ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತಾರೆ. ನಮ್ಮ ಗ್ರಾಮ ಪಂಚಾಯಿತಿಯಿಂದ ಅನುದಾನ ಪಡೆದು ನಿರ್ಮಿಸುತ್ತಿರುವ ಶೌಚಾಲಯಗಳ ಬಾಗಿಲುಗಳನ್ನು ಅವರೇ ಸಿದ್ಧಪಡಿಸಿ ಕೊಡುತ್ತಿದ್ದಾರೆ. ನಮ್ಮ ಗ್ರಾಮ ಪಂಚಾಯಿತಿಯ ವತಿಯಿಂದ ಇವರಿಗೆ ಮನೆಯೊಂದನ್ನು ನಿರ್ಮಿಸಿಕೊಳ್ಳಲು ಅನುದಾನ ನೀಡಿದ್ದೇವೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ತಿಳಿಸಿದರು.
’ಈತ ವಾಹನಕ್ಕಾಗಿ ಅರ್ಜಿ ಸಲ್ಲಿಸಿ ಮೂರು ವರ್ಷಗಳಾಯಿತು. ನಾನೂ ಸಹ ಇವರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆದಿದ್ದೇನೆ. ಶಾಸಕರು ಮಂಜೂರು ಮಾಡಿದಲ್ಲಿ ವಾಹನ ಸಿಗುತ್ತದೆ. ಈ ರೀತಿ ಕಷ್ಟಪಡುವವರಿಗೆ ಸರ್ಕಾರದಿಂದ ವಾಹನ ನೀಡಬೇಕು’ ಎನ್ನುತ್ತಾರೆ ನೀರುಗಂಟಿ ಮುನಿರಾಜು.
ಶ್ರೀ ಮಳ್ಳೂರಾಂಭ ದೇವಿಯ ರಥೋತ್ಸವ
ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಭಾನುವಾರ ಶ್ರೀ ಮಳ್ಳೂರಾಂಭ ದೇವಿಯ ರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಅತ್ಯಂತ ಪುರಾತನ ದೇವಾಲಯವಾದ ಮಳ್ಳೂರಾಂಭ ದೇವಾಲಯದ ರಥೋತ್ಸವವು ಜಿಲ್ಲೆಯಾದ್ಯಂತ ಪ್ರಸಿದ್ಧವಾಗಿದ್ದು, ಧನುರ್ಮಾಸ ಹುಣ್ಣಿಮೆಯ ವಿಶೇಷವಾಗಿದೆ.
ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ಜನರು ದೇವಿಯ ದರ್ಶನ ಪಡೆದು ಪೂಜೆಯಲ್ಲಿ ಪಾಲ್ಗೊಂಡು ರಥವನ್ನು ಎಳೆದರು. ದೇವರನ್ನು ವಿಶೇಷವಾಗಿ ಅಲಕರಿಸಿದ್ದರು. ಬ್ರಹ್ಮರಥೋತ್ಸವಕ್ಕೆ ರಥವನ್ನು ವಿಶೇಷವಾಗಿ ಅಲಂಕರಿಸಿ ದಾರಿಯುದ್ದಕ್ಕೂ ತಳಿರು ತೋರಣಗಳಿಂದ ಸಿಂಗರಿಸಿದ್ದರು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ವಿವಿಧ ಕಲಾತಂಡಗಳೊಂದಿಗೆ ವೀರಗಾಸೆ, ತಮಟೆ ವಾದನ ಆಕರ್ಷಕವಾಗಿತ್ತು. ತಿಂಡಿ ತಿನಿಸುಗಳು, ಆಟಿಕೆಗಳು, ಅಚ್ಚೆ ಹಾಕುವವರು, ದಿನೋಪಯೋಗಿ ವಸ್ತುಗಳು ಸೇರಿದಂತೆ ಬಹುತೇಕ ಅಂಗಡಿಗಳು ತೆರೆದಿದ್ದು ಜನಾಕರ್ಷಕವಾಗಿದ್ದವು.
ಶಾಸಕ ಎಂ.ರಾಜಣ್ಣ ರಥೋತ್ಸವಕ್ಕೆ ಚಾಲನೆ ನೀಡಿದರು. ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್, ತಹಸೀಲ್ದಾರ್ ಎಸ್.ಅಜಿತ್ಕುಮಾರ್ರೈ, ರಾಜಸ್ವ ನಿರೀಕ್ಷಕ ಕೃಷ್ಣಾರೆಡ್ಡಿ, ದೇವಾಲಯ ಸೇವಾ ಸಮಿತಿ ಅಧ್ಯಕ್ಷ ಡಿ.ಎ.ಮಳ್ಳೂರಯ್ಯ, ಮುಖಂಡರಾದ ಆಂಜನೇಯರೆಡ್ಡಿ, ಎ.ವೆಂಕೋಬರಾವ್, ಕೆಂಪಣ್ಣ, ಜಯಚಂದ್ರ, ವಕೀಲರಾದ ತಿಮ್ಮೇಗೌಡ, ನಾರಾಯಣಸ್ವಾಮಿ ಪೂಜಾಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಮಾಜದಲ್ಲಿ ಸಮಾನ ಅವಕಾಶ ನೀಡಬೇಕಿದೆ
ಅಂಗವಿಕಲರನ್ನು ಅನುಕಂಪ, ಅಂತಃಕರಣದಿಂದ ನೋಡುವ ಬದಲು ಸಮಾಜದಲ್ಲಿ ಸಮಾನ ಅವಕಾಶ ನೀಡಬೇಕಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಚಿಂತಾಮಣಿ ರಸ್ತೆಯಲ್ಲಿರುವ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಎಸ್.ಎಸ್.ಎ ಹಾಗೂ ಆರ್.ಎಂ.ಎಸ್.ಎ ಸಹಯೋಗದೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಭಾನುವಾರ ನಡೆಸಿದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಗವಿಕಲರು ಅಶಕ್ತರಲ್ಲ. ಅವರನ್ನು ಅನುಕಂಪ, ಅಂತಃ ಕರಣದಿಂದ ನೋಡಬೇಕಿಲ್ಲ. ಅವರಿಗೆ ಇತರರಂತೆ ಸಮಾನ ಅವಕಾಶ ನೀಡಬೇಕು. ಅವರೂ ಸಹ ಎಲ್ಲರಂತೆ ಸುಗಮವಾಗಿ ಬದುಕುವ ಅವಕಾಶ ಕಲ್ಪಿಸಬೇಕಿದೆ ಎಂದರು.
ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್ ಮಾತನಾಡಿ, ಮೊದಲೆಲ್ಲಾ ಅಂಗವಿಕಲರನ್ನು ನಿಕೃಷ್ಟವಾಗಿ ಕಾಣಲಾಗುತ್ತಿತ್ತು. ಆದರೆ, ಇಂದು ಕಾಲ ಬದಲಾಗಿದೆ. ಇದೀಗ ಅವರನ್ನು ಸಮಾನವಾಗಿ ಕಾಣುತ್ತಿದ್ದಾರೆ. ಆದರೆ, ಸಮಾನ ಅವಕಾಶ ನೀಡಲಾಗುತ್ತಿಲ್ಲ. ಕೇವಲ ಅವರ ಸಹಾಯಕ್ಕೆ ಉಪಕರಣ ನೀಡಿದರೆ ಅವರು ಸಬಲರಾಗುವುದಿಲ್ಲ. ಬದಲಾಗಿ ಇತರರಂತೆ ಎಲ್ಲಾ ರಂಗಗಳಲ್ಲೂ ಅವರ ಪ್ರತಿಭೆ ಗುರುತಿಸಿ, ಅವಕಾಶ ನೀಡಬೇಕು. ಆಗಲೇ ಅವರು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಅಂಗವಿಕಲ ಮಕ್ಕಳಿಗೆ ಮತ್ತು ಮಕ್ಕಳ ಪೋಷಕರಿಗೆ ಕ್ರೀಡಾ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ನಗದು ಬಹುಮಾನವನ್ನು ನೀಡಲಾಯಿತು. ಮಡಿಕೆ ಒಡೆಯುವುದು, ಸಂಗೀತ ಕುರ್ಚಿ, ಚಮಚ ಮತ್ತು ನಿಂಬೆಹಣ್ಣಿನ ಓಟ, 100 ಮೀಟರ್ ಓಟ, ಕಪ್ಪೆ ಓಟ ಆಟಗಳು ಹಾಗೂ ಜನಪದ ಗೀತೆ, ಆಶುಭಾಷಣ ಸ್ಪರ್ಧೆ, ರಸಪ್ರಶ್ನೆ, ಚಿತ್ರಕಲೆ, ಛದ್ಮವೇಷ ಸ್ಪರ್ಧೆಗಳನ್ನು ನಡೆಸಲಾಯಿತು.
ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಸ, ಕಡ್ಡಿ, ತ್ಯಾಜ್ಯವನ್ನು ತೆರವುಗೊಳಿಸಿ ಶಾಲಾ ಪರಿಸರವನ್ನು ಸ್ವಚ್ಛಮಾಡಿಸಿಕೊಡಲು ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್ ಅವರಿಗೆ ಶಾಲೆಯ ವಿದ್ಯಾರ್ಥಿಗಳು ಮನವಿ ಪತ್ರ ಸಲ್ಲಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು, ಬಿ.ಐ.ಇ.ಆರ್.ಟಿ ಅಧಿಕಾರಿಗಳಾದ ಜಗದೀಶ್, ಸತ್ಯನಾರಾಯಣ್, ಸುಬ್ರಮಣ್ಯ, ಸಿ.ಆರ್.ಪಿ ಮತ್ತು ಬಿ.ಆರ್.ಪಿ ಗಳಾದ ಸುಂದರಾಚಾರಿ, ಮಂಜುನಾಥ್, ನರಸಿಂಹರಾಜು, ರಾಜು, ರಮೇಶ್, ನೇತ್ರಾ, ಪ್ರಸನ್ನಕುಮಾರ್ ಹಾಜರಿದ್ದರು.
ಈದ್-ಮಿಲಾದ್ ಹಬ್ಬ
ತಾಲ್ಲೂಕಿನಾದ್ಯಂತ ಈದ್-ಮಿಲಾದ್ ಹಬ್ಬವನ್ನು ಶನಿವಾರ ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.
ಮಹಮ್ಮದ್ ಪೈಗಂಬರ್ ಜನ್ಮದಿನದಂದು ಸಂಭ್ರಮದಿಂದ ಆಚರಿಸಲಾಗುವ ಈ ಹಬ್ಬದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಬೀದಿಗಳನ್ನು ಅಲಂಕರಿಸಲಾಗಿತ್ತು.
ಮಹಿಳೆಯರು ಸಿಹಿ ತಿಂಡಿಗಳನ್ನು ತಯಾರಿಸಿ ವಿತರಿಸಿದರು. ಕಿರಿಯರು ಮತ್ತು ಹಿರಿಯರು ಹೊಸ ಉಡುಪುಗಳನ್ನು ತೊಟ್ಟು ಸಂತಸಪಟ್ಟರು. ಮುಸ್ಲಿಂ ಭಾಂದವರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಪರಸ್ಪರ ಶುಭ ಹಾರೈಸಿದರು.
ವಿವಿಧ ಬಡಾವಣೆಗಳಲ್ಲಿರುವ ಮಸೀದಿಗಳಲ್ಲಿ ಗುಂಪುಗೂಡಿದ ಬಹುತೇಕ ಮಂದಿ ಮುಸ್ಲೀಮರು ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಕಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಾವುಟಗಳನ್ನು ಹಿಡಿದುಕೊಂಡು ಮಹಮ್ಮದ್ ಪೈಗಂಬರ್ ಅವರನ್ನು ಸ್ಮರಿಸಿದರು. ವಿವಿಧ ರೀತಿಯ ಪ್ರಾರ್ಥನಾ ಮಂದಿರಗಳ ಪ್ರತಿಕೃತಿಗಳನ್ನು ಮಾಡಿ ಮೆರವಣಿಗೆಯಲ್ಲಿ ಕೊಂಡೊಯ್ದರು. ಪ್ರಾರ್ಥನೆ ಸಲ್ಲಿಸಿದ ಬಳಿಕ ಮನೆಗಳಲ್ಲಿ ತಯಾರಿಸಲಾಗಿದ್ದ ಸಿಹಿ ತಿಂಡಿ ವಿತರಿಸಿದರು.
ಸಂಜೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ಧರ್ಮಗುರುಗಳು ಉಪದೇಶ ಬೋಧಿಸಿದರು. ಎಲ್ಲ ಮಸೀದಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ನಗರದ ಮುಸ್ಲಿಂ ಜನಾಂಗದ ಎಲ್ಲ ಹಿರಿಯರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಹಬ್ಬದ ದಿನ ಶಾಂತಿ ಸುವ್ಯವಸ್ಥೆಗಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಸ್ವಚ್ಚತೆ ಕಾಣದೇ ಅವ್ಯವಸ್ಥೆಯಿಂದ ಕೂಡಿರುವ ಚರಂಡಿಗಳು
ತಾಲ್ಲೂಕಿನ ಹೊಸಪೇಟೆ ಗ್ರಾಮದ ಮುಖ್ಯ ರಸ್ತೆಯಲ್ಲಿನ ಪಕ್ಕದಲ್ಲಿರುವ ಕಾಲೋನಿಯಲ್ಲಿ ಚರಂಡಿಯು ಸ್ವಚ್ಚತೆ ಕಾಣದೇ ಅವ್ಯವಸ್ಥೆಯಿಂದ ಕೂಡಿದೆ.
ಇದರಿಂದಾಗಿ ಸಾರ್ವಜನಿಕರಿಗೆ ಬಹಳ ತೊಂದರೆಯಾಗಿದೆ. ಸ್ವಚ್ಚತಾ ಅಭಿಯಾನ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರ ಹಣ ಮೀಸಲು ಇಟ್ಟಿದ್ದರೂ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ಗ್ರಾಮದಲ್ಲಿ ಮಳೆ ಬಂದರೆ ಕೆಲ ಚರಂಡಿಗಳಲ್ಲಿ ನೀರು ತುಂಬಿ ಮನೆಗಳಿಗೆ ನುಗ್ಗುತ್ತಿದ್ದು ಜನರು ವಾಸಿಸಲು ಸಾದ್ಯವಾಗುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ದೂರುತ್ತಾರೆ.
ಚರಂಡಿ ತುಂಬಾ ತ್ಯಾಜ್ಯ ತುಂಬಿದೆ ಮತ್ತು ಗಿಡಗಳುಬೆಳೆದಿವೆ. ಸೊಳ್ಳೆ ಕಾಟದಿಂದ ಡೆಂಗ್ಯೂ ಜ್ವರ ಕೆಲವರಿಗೆ ಕಂಡುಬಂದಿದ್ದು ಆಸ್ವತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿಯನ್ನು ಸಲ್ಲಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಅಧಿಕಾರಿಗಳನ್ನು ವಿಚಾರಿಸಿದರೆ ಚರಂಡಿಗಳನ್ನು ಸ್ವಚ್ಚತೆ ಮಾಡಲು ಗ್ರಾಮ ಪಂಚಾಯಿತಿಯಲ್ಲಿ ಹಣ ಇಲ್ಲ ಎಂದು ಹಾರಿಕೆಯ ಉತ್ತರ ನೀಡುತ್ತಾರೆ ಎಂದು ಮುನಿರೆಡ್ಡಿ ಬೇಸರ ವ್ಯಕ್ತಪಡಿಸಿದರು.
ಅಧಿಕಾರಿಗಳ ವರ್ತನೆಯಿಂದ ಬೇಸತ್ತ ಜನರು, ಚರಂಡಿಯ ಸ್ವಚ್ಛತೆಯ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಮುಂದೆ ಆಗುವ ಸಮಸ್ಯೆಗಳಿಗೆ ಅಧಿಕಾರಿಗಳೇ ನೇರ ಜವಾಬ್ದಾರಿಯಾಗಿರುತ್ತಾರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯೂನಿಟಿ ಸಿಲ್ಸಿಲಾ ವತಿಯಿಂದ ರಕ್ತದಾನ ಶಿಬಿರ
ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪ್ರತಿ ವರ್ಷವೂ ಯೂನಿಟಿ ಸಿಲ್ಸಿಲಾ ಫೌಂಡೇಷನ್ ರಕ್ತದಾನ ಶಿಬಿರವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಸ್ವಯಂ ಪ್ರೇರಿತ ರಕ್ತದಾನ ಮಾಡುವುದರಿಂದ ಅಪಾಯದಲ್ಲಿರುವ ಜೀವಗಳನ್ನು ರಕ್ಷಣೆ ಮಾಡಲು ಸಾಧ್ಯವಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ವಿ. ಮುನಿಯಪ್ಪ ತಿಳಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಭಾನುವಾರ ಯೂನಿಟಿ ಸಿಲ್ಸಿಲಾ ಫೌಂಡೇಷನ್ ಹಾಗೂ ಭಾರತೀಯ ರೆಡ್ಕ್ರಾಸ್ ಸೊಸೈಟಿಯ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ನಾಲ್ಕನೇ ವರ್ಷದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದಾಗಬೇಕು ಇದರಿಂದ ಅಪಘಾತಗಳು, ಹೆರಿಗೆ ಮುಂತಾದ ಸನ್ನಿವೇಶಗಳಲ್ಲಿ ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ಅನುಕೂಲವಾಗಲಿದೆ ಎಂದರು.
ಸಾರ್ವಜನಿಕ ಆಸ್ಪತ್ರೆಯ ಡಾ. ವಿಜಯ್ ಅವರು ಮಾತನಾಡಿ, ರಕ್ತದ ಬಗ್ಗೆ, ರಕ್ತದಾನ ಮಾಡುವುದರಿಂದ ಅಗುವ ಉಪಯೋಗಗಳ ಬಗ್ಗೆ ವಿವರವಾಗಿ ತಿಳಿಸಿದರು. ಕಳೆದ ವರ್ಷ ಯೋನಿಟಿ ಸಿಲ್ಸಿಲಾ ವತಿಯಿಂದ ಅತಿ ಹೆಚ್ಚು ಯೂನಿಟಿ ರಕ್ತದಾನ ಮಾಡಲಾಗಿದ್ದು ಈ ವರ್ಷವೂ ಸಹ ಹೆಚ್ಚಿನ ರಕ್ತ ಶೇಖರಣೆಯಾಗಿ ರೋಗಿಗಳಿಗೆ ಉಪಯೋಗವಾಗಲಿ ಎಂದು ಹಾರೈಸಿದರು.
ಯೂನಿಟಿ ಸಿಲ್ಸಿಲಾ ಫೌಂಡೇಷನ್ ಅಧ್ಯಕ್ಷ ಮೊಹಮ್ಮದ್ ಅಸದ್ ಮಾತನಾಡಿ, ಜಾತಿ, ಮತ, ಧರ್ಮಗಳನ್ನು ಮೀರಿ ರಕ್ತದಾನ ಮಾಡುವುದರಿಂದ ಅನೇಕ ಮಂದಿಯನ್ನು ಪ್ರಾಣಾಪಾಯದಿಂದ ಪಾರು ಮಾಡಲು ಸಹಕಾರಿಯಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರ ಮೆದುಳು, ಹೃದಯ, ಹಾಗೂ ಎಲ್ಲಾ ಅಂಗಾಂಗಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತವೆ. ಈ ಬಾರಿ ರಕ್ತದಾನ ಶಿಬಿರದೊಡನೆ ರಕ್ತದಾನದ ಕುರಿತು ಜನಜಾಗೃತಿಯನ್ನು ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ವೀಕೇರ್ ಫೌಂಡೇಶನ್, ಇಲವೆನ್ ಸ್ಟಾರ್ ಫೌಂಡೇಶನ್, ಟಿಪ್ಪು ಸೆಕ್ಯುಲಾರ್ ಸೇನಾ ಯುವಕರು ರಕದತದಾನ ಶಿಬಿರದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಿದರು. ಶಿಬಿರದಲ್ಲಿ ರಕ್ತದಾನ ಮಾಡಿದ ನಾಗರಿಕರಿಗೆ ಹಣ್ಣು, ಹಣ್ಣಿನ ರಸ್ ಮತ್ತು ಪ್ರಮಾಣಪತ್ರಗಳನ್ನು ವಿತರಣೆ ಮಾಡಲಾಯಿತು.
ಜಾಮಿಯಾ ಮಸೀದಿ ಅಧ್ಯಕ್ಷ ತಾಜ್ ಪಾಷ, ಮದೀನಾ ಮಸೀದಿಯ ಎಚ್.ಎಸ್.ಫಯಾಜ್, ಸುಬ್ರ್ಯಮಣಿ, ಗೋವಿಂದರಾಜು, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಗುರುರಾಜರಾವ್, ರವಿ, ಯೂನಿಟಿ ಸಿಲ್ಸಿಲಾ ಪೌಂಡೇಶನ್ನ ಗೌರವಾಧ್ಯಕ್ಷ ಮೊಹಮ್ಮದ್ ಖಾಸಿಂ, ಅಧ್ಯಕ್ಷ ಅಸದ್, ಉಪಾಧ್ಯಕ್ಷ ಅಕ್ರಂಪಾಷ, ಕಾರ್ಯದರ್ಶಿ ಇಂತಿಯಾಜ್ ಪಾಷ, ಅಕ್ರಮ್, ರಹಮತ್, ತೋಫಿಕ್, ವಸೀಮ್, ಮುದಸ್ಸಿರ್, ಜಬಿ, ಅಮೀರ್ ಈ ಸಂದರ್ಭದಲ್ಲಿ ಹಾಜದ್ದರು.
ತೋಟಗಾರಿಕೆಯ ಕೃಷಿ ಭಾಗ್ಯ ಯೋಜನೆ, ಲಾಟರಿಮೂಲಕ ಫಲಾನುಭವಿಗಳ ಆಯ್ಕೆ
ಈ ವರ್ಷ ಕೇವಲ ಒಂದು ಎಕರೆಯಷ್ಟು ಪಾಲಿ ಹೌಸ್ ನಿರ್ಮಾಣಕ್ಕೆ ಮಾತ್ರ ಪ್ರೋತ್ಸಾಹ ಧನದ ಅನುದಾನ ಬಂದಿದೆ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೆಶಕ ಮುನೇಗೌಡ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತೋಟಗಾರಿಕೆ ಇಲಾಖೆಯ ಕೃಷಿ ಭಾಗ್ಯ ಯೋಜನೆಯಡಿ ಪಾಲಿ ಹೌಸ್ಗಳಿಗೆ ಸಬ್ಸಿಡಿ ವಿತರಣೆಗಾಗಿ ಫಲಾನುಭವಿಗಳ ಆಯ್ಕೆಗಾಗಿ ಲಾಟರಿ ಪ್ರಕ್ರಿಯೆಯನ್ನು ನಡೆಸಿ ಅವರು ಮಾತನಾಡಿದರು.
ಇಬ್ಬರು ರೈತರಿಗೆ ಮಾತ್ರ ತಲಾ ಅರ್ಧ ಎಕರೆಯಂತೆ ಆಯ್ಕೆ ಮಾಡಿದೆ. ಮುಂದಿನ ದಿನಗಳಲ್ಲಿ ಅನುದಾನ ಬಂದಾಗ ಉಳಿದ ರೈತರಿಗೆ ಕ್ರಮ ಸಂಖ್ಯೆ ಆಧಾರದಲ್ಲಿ ಆಧ್ಯತೆ ಮೇರೆಗೆ ಅನುದಾನ ನೀಡಲಾಗುವುದು ಎಂದರು.
ಕೇವಲ ಒಂದು ಎಕರೆಯಷ್ಟು ಪಾಲಿ ಹೌಸ್ಗೆ ಮಾತ್ರವೇ ಅನುದಾನ ಬಿಡುಗಡೆ ಆಗಿದ್ದರಿಂದ ಇಬ್ಬರು ರೈತರನ್ನು ಮಾತ್ರವೇ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು. ಇದರಿಂದಾಗಿ ಲಾಟರಿಗೆ ಆಗಮಿಸಿದ್ದ ಇನ್ನುಳಿದ ೯೭ ಮಂದಿ ರೈತರು ನಿರಾಶೆಯಿಂದ ವಾಪಸ್ಸಾಗುವಂತಾಯಿತು.
೧೧೬ ಮಂದಿ ರೈತರು ಅರ್ಜಿ ಸಲ್ಲಿಸಿದ್ದು ಈ ಪೈಕಿ ೧೭ ಅರ್ಜಿಗಳು ನಾನಾ ಕಾರಣಗಳಿಗೆ ವಜಾ ಗೊಂಡಿದ್ದು ಉಳಿದ ೯೯ ಮಂದಿ ರೈತರ ಅರ್ಜಿಗಳನ್ನು ಲಾಟರಿಗೆ ಹಾಕಲಾಗಿತ್ತು.
ಮುಂದಿನ ವರ್ಷಗಳಲ್ಲಾದರೂ ಪಾಲಿಹೌಸ್ ನಿರ್ಮಾಣಕ್ಕೆ ಹೆಚ್ಚು ಅನುದಾನವನ್ನು ನೀಡುವಂತೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು, ಶಾಸಕರನ್ನು ಒತ್ತಾಯಿಸಿ ಎಂದು ರೈತರು ಮನವಿ ಮಾಡಿ ನಿರಾಶೆಯಿಂದ ಹೊರ ನಡೆದರು.
ಕೃಷಿ ಸಹಾಯಕ ನಿರ್ದೆಶಕ ಮುರಳಿ, ನರೇಗಾ ಸಹಾಯಕ ನಿರ್ದೆಶಕ ಶ್ರೀನಾಥ್ಗೌಡ, ರೈತ ಸಂಘದ ಅಧ್ಯಕ್ಷ ತಾದೂರು ಮಂಜುನಾಥ್, ಗೋಣಿಮರದಹಳ್ಳಿ ಪ್ರಸನ್ನಕುಮಾರ್ ಹಾಜರಿದ್ದರು.
ಅಂಬೇಡ್ಕರ್ ನಿವಾಸ್ ಯೋಜನೆ ಫಲಾನುಭವಿಗಳಿಗೆ ಆದೇಶ ಪತ್ರ
ನಾಗರಿಕರ ಸಹಕಾರವಿದ್ದಾಗ ಮಾತ್ರ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಸದುಪಯೋಗವಾಗುತ್ತವೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ೨೦೧೬-೧೭ ನೇ ಸಾಲಿನ ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ಅರ್ಜಿ ಸಲ್ಲಿಸಿದ್ದಂತಹ ಸುಮಾರು ೩೮ ಮಂದಿ ಫಲಾನುಭವಿಗಳಿಗೆ ಕಾಮಗಾರಿ ಆದೇಶ ವಿತರಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಉತ್ತಮ ಮನೆ ನಿರ್ಮಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು ನಗರವ್ಯಾಪ್ತಿಯಲ್ಲಿರುವ ಎಸ್ಸಿ/ಎಸ್ಟಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಮನೆ ನಿರ್ಮಿಸಿಕೊಳ್ಳಲು ೩ ಲಕ್ಷ ೩೦ ಸಾವಿರ ರೂ ಹಣ ನೀಡುತ್ತಿದೆ. ಅರ್ಹ ಫಲಾನುಭವಿಗಳು ನಗರಸಭೆ ಅಧಿಕಾರಿಗಳು ಮತ್ತು ಸದಸ್ಯರ ಜೊತೆ ಚರ್ಚಿಸಿ ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮುಖಾಂತರ ವ್ಯವಹಾರ ಮಾಡಬೇಡಿ ಎಂದರು.
ನಗರಸಭೆ ವ್ಯಾಪ್ತಿಗೆ ಬರುವ ಸುಮಾರು ೧೧೩ ಮಂದಿ ಪರಿಶಿಷ್ಠ ಜಾತಿ ಹಾಗೂ ಪಂಗಡದ ಫಲಾನುಭವಿಗಳು ಈ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು, ಈಗಾಗಲೇ ಮೊದಲನೇ ಹಂತದಲ್ಲಿ ೪೫ ಮಂದಿ ಕಾಮಗಾರಿ ಆದೇಶ ವಿತರಿಸಲಾಗಿದೆ. ಇದೀಗ ೩೮ ಮಂದಿಗೆ ಕಾಮಗಾರಿ ಆದೇಶ ಪತ್ರ ವಿತರಿಸಲಾಗುತ್ತಿದೆ. ಇನ್ನುಳಿದ ೩೦ ಮಂದಿ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರವನ್ನು ಮುಂದಿನ ವಾರ ವಿತರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿಸುರೇಶ್, ಪೌರಾಯುಕ್ತ ಜಿ.ಎನ್.ಚಲಪತಿ, ನಗರಸಭೆ ಸದಸ್ಯ ಶಫೀ, ನಗರಸಭೆ ವ್ಯವಸ್ಥಾಪಕ ಮಂಜುನಾಥ್, ಸುಧಾಕರ್ ಹಾಜರಿದ್ದರು.
ಮಲಗಿದ ರಾಗಿ ತೆನೆ, ರೈತರಿಗೆ ಅಪಾರ ನಷ್ಟ ತಂದ ಜಡಿಮಳೆ
ನಗರ ಮತ್ತು ತಾಲ್ಲೂಕಿನಾದ್ಯಂತ ‘ಒಕಿ’ ಚಂಡಮಾರುತ ಆರಂಭವಾದ ಜಡಿ ಮಳೆ ಇನ್ನೂ ಮುಂದುವರಿದಿದ್ದರಿಂದ ಲಕ್ಷಾಂತರ ರೂಪಾಯಿ ಬೆಳೆ ಹಾಳಾಗಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.
ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಸಂತಸದಿಂದಿದ್ದರು. ತಾಲ್ಲೂಕಿನಲ್ಲಿ ರಾಗಿ ಹೊಲ ನಳನಳಿಸುತ್ತಿದ್ದವು. ಈ ವರ್ಷ ಉತ್ತಮ ಮೇವು ಹಾಗೂ ಫಸಲು ಕೈಸೇರುತ್ತದೆ ಎಂದು ರೈತರು ನಿರೀಕ್ಷೆಯಲ್ಲಿದ್ದರು.
ಈಗ ಮೊದಲ ಹಂತದ ರಾಗಿ ಬೆಳೆ ಕೊಯ್ಲಿಗೆ ಹಾಗೂ ಎರಡನೇ ಹಂತದ ಬೆಳೆ ತೆನೆ ಬಂದಿದ್ದು ಕಾಳು ಕಟ್ಟುತ್ತಿತ್ತು. ಜಡಿ ಮಳೆಯಿಂದ ಬೆಳೆ ಸಂಪೂರ್ಣ ನೆಲ ಕಚ್ಚಿದ್ದು, ರೈತರ ನಿರೀಕ್ಷೆ ಹುಸಿಯಾಗಿಸಿದೆ. ನಿತ್ಯ ಮಳೆಯಾಗುತ್ತಿದ್ದರಿಂದ ಕೊಯ್ಲು ಮಾಡಲು ಆಗುತ್ತಿಲ್ಲ. ಕೊಯ್ಲು ಮಾಡದಿದ್ದರೆ ರಾಗಿ ನೆಲಕ್ಕೆ ಉದುರಿ ಮೊಳಕೆ ಬರುತ್ತದೆ ಎಂಬ ಆಂತಕ ರೈತರನ್ನು ಕಾಡುತ್ತಿದೆ. ಸದಾ ಮಳೆಗಾಗಿ ಎದುರು ನೋಡುತ್ತಿದ್ದ ರೈತರು ಮಳೆ ಯಾವಾಗ ನಿಲ್ಲುತ್ತದೆ ಎಂದು ಕಾಯುವಂತಾಗಿದೆ.
ಗ್ರಾಮೀಣ ಭಾಗಗಳಲ್ಲಿ ದನಕರುಗಳಿಗೆ ಮೇವು ತರುವುದು, ರೇಷ್ಮೆ ಹುಳಗಳಿಗೆ ಸೊಪ್ಪು ತರುವುದು, ಹಣ್ಣಾಗುವ ಹುಳುಗಳಿರುವ ರೈತರಿಗೆ ತುಂಬಾ ತೊಂದರೆಯಾಗಿದೆ. ಒಂದು ವಾರದಿಂದ ಹಣ್ಣಾದ ರೇಷ್ಮೆ ಹುಳುಗಳ ರೈತರು ಪಾತಾಳಕ್ಕೆ ಇಳಿದಿದ್ದಾರೆ. ರೇಷ್ಮೆ ಬೆಳೆಗೂ ಈ ವಾತಾವರಣದಿಂದ ತೊಂದರೆಯಾಗಿದೆ ಎನ್ನುತ್ತಾರೆ ಅಪ್ಪೇಗೌಡನಹಳ್ಳಿಯ ಮುನಿಯಪ್ಪ.
ಕಾರ್ಮಿಕರ ಕೊರತೆಯ ಹಿನ್ನೆಲೆಯಲ್ಲಿ ಕಾರ್ಮಿಕರ ಕೂಲಿಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಒಂದು ಎಕರೆ ಪ್ರದೇಶದಲ್ಲಿ ಬೆಳೆದಿರುವ ರಾಗಿಯ ಬೆಳೆಯನ್ನು ಕಟಾವು ಮಾಡಲು ಕಾರ್ಮಿಕರೆಲ್ಲರು ಒಟ್ಟುಗೂಡು ಒಪ್ಪಂದ ಮಾಡಿಕೊಳ್ಳುತ್ತಾರೆ. ಅದಕ್ಕೆ ಸುಮಾರು ₨ 6000 ದವರೆಗೂ ನಿಗದಿ ಪಡಿಸಿದ್ದಾರೆ. ದಿನಗೂಲಿ ಲೆಕ್ಕದಲ್ಲಿ ಕಟಾವು ಮಾಡಿಕೊಡಬೇಕಾದರೆ ಒಬ್ಬ ಕಾರ್ಮಿಕರಿಗೆ ಪುರುಷರಿಗೆ ₨300, ಸ್ತ್ರೀಯರಿಗೆ ₨250 ಗಳನ್ನು ನಿಗದಿ ಪಡಿಸಿಕೊಂಡಿದ್ದಾರೆ. ಕಾರ್ಮಿಕರಿಗೆ ಊಟವನ್ನು ರೈತರೇ ಕೊಡಬೇಕು. ಅವರನ್ನು ಕರೆದುಕೊಂಡು ಬಂದು ಕೆಲಸ ಪೂರ್ಣವಾದ ನಂತರ ಹಳ್ಳಿಗಳಿಗೆ ಬಿಟ್ಟು ಬರಬೇಕು. ಯಂತ್ರಗಳನ್ನು ಬಳಸಿ ಕಟಾವು ಮಾಡುವ ಮೂಲಕ ಹಣ ಉಳಿಸಬಹುದೆಂದುಕೊಂಡಿದ್ದೆವು. ಆದರೆ ಈಗ ಜಡಿಮಳೆಯಿಂದ ನೆಲ ಕಚ್ಚಿರುವ ಬೆಳೆಯನ್ನು ಯಂತ್ರದ ಮೂಲಕ ಕಟಾವು ಮಾಡಲಾಗದು ಎಂದು ತಮ್ಮ ಸಂಕಷ್ಟವನ್ನು ರೈತರಾದ ರಾಮಣ್ಣ, ಗೋಪಾಲಪ್ಪ ಹಾಗೂ ಕೃಷ್ಣಪ್ಪ ವಿವರಿಸಿದರು.
ಮಳೆಗೆ ನೆಲಕಚ್ಚಿರುವ ರಾಗಿಯು ಕೆಂಪು ಬಣ್ಣದಿಂದ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಅದರ ಬೆಲೆ ಮತ್ತು ಗುಣಮಟ್ಟ ಕುಸಿಯುತ್ತದೆ. ಹಾಗೇ ಬಿಟ್ಟರೆ ಮೊಳಕೆ ಬಂದು ಎಲ್ಲವೂ ಹಾಳಾಗುತ್ತದೆ. ದನಗಳಿಗೆ ಉತ್ತಮ ಮೇವು ಸಿಗುವ ಆಶಾಭಾವನೆಯಿಂದ ಇದ್ದೆವು. ಆದರೆ ನೀರಿನ ಅಂಶದಿಂದ ಹುಲ್ಲು ಕೊಳೆಯುತ್ತದೆ. ದನಗಳು ತಿನ್ನಲ್ಲ. ಬೆಳೆ ಬೆಳೆದರೂ ಬೆತ್ತಲಾದ ಪರಿಸ್ಥಿತಿ ನಮ್ಮದಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಗಾದೆ ಮಾತು ನಮಗೆ ಅನ್ವಯಿಸುತ್ತದೆ ಎಂದು ರೈತರಾದ ಕೆಂಪಣ್ಣ ಮತ್ತು ಮುನಿಯಪ್ಪ ಬೇಸರದಿಂದ ನುಡಿದರು.
ಮಾನಸಿಕ ಸ್ಥೈರ್ಯ ತುಂಬುವ, ಜಾಗೃತಿ ಮೂಡಿಸುವ ದಿನ
ವಿಶ್ವಾದ್ಯಂತ ಎಚ್ಐವಿ ಪೀಡಿತರಿಗಾಗಿ, ಸೋಂಕಿನಿಂದ ಪ್ರಾಣ ತ್ಯಜಿಸಿಸಿದವರಿಗಾಗಿ ಆಚರಿಸಲ್ಪಡುವ ದಿನ ‘ಏಡ್ಸ್ ದಿನಾಚರಣೆ’. ಇದೊಂದು ಮಾನಸಿಕ ಸ್ಥೈರ್ಯ ತುಂಬುವ ದಿನ, ಜಾಗೃತಿ ಮೂಡಿಸುವ ದಿನ, ಜನರ ಮೌಢ್ಯತೆಯನ್ನು ಮಟ್ಟ ಹಾಕುವ ದಿನ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ತಿಳಿಸಿದರು.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ‘ವಿಶ್ವ ಏಡ್ಸ್ ದಿನಾಚರಣೆ’ ಯ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೇರೆ ರೋಗದಂತೆ ಏಡ್ಸ್ ಸಹ ಒಂದು ರೋಗ, ನಮ್ಮಂತೆ ಅವರೂ ಮನುಷ್ಯರು, ನಮ್ಮೊಂದಿಗೆ ಅವರಿಗೂ ಬದುಕುವ ಅರ್ಹತೆ ಇದೆ ಎಂಬುದನ್ನು ಮನಗಾಣಬೇಕು. ಎಚ್ಐವಿ ಸೋಂಕಿತರನ್ನು ಅಸೃಶ್ಯರಂತೆ ಕಾಣದೆ, ಅವರಿಗೆ ಏಡ್ಸ್ ಬಗ್ಗೆ ವೈಜ್ಞಾನಿಕ, ವೈದ್ಯಕೀಯ ಮಾಹಿತಿ ನೀಡಬೇಕು. ಭಾರತದಲ್ಲಿ ಲೈಂಗಿಕ ಸೋಂಕಿಗಿಂತ ಹೆಚ್ಚಾಗಿ ಅಜ್ಞಾನದಿಂದ ಅಮಾಯಕರು ಏಡ್ಸ್ ಗೆ ಬಲಿಯಾಗುತ್ತಿದ್ದಾರೆ. ಮಕ್ಕಳು ಸಹ ಇದರಿಂದ ಹೊರತಾಗಿಲ್ಲ. ಏಡ್ಸ್ ಬಂದರೆ ಸಾವೇ ಗತಿ ಎಂಬ ಪೂರ್ವಾಗ್ರಹ ತಲೆಯಿಂದ ತೆಗೆಯಬೇಕು. ಮೊದಲ ಹಂತದಲ್ಲಿಯೇ ಎಚ್ಐವಿ ನಿಯಂತ್ರಿಸಬಹುದು ಎಂಬುದನ್ನು ತಿಳಿಸಬೇಕು ಎಂದು ಹೇಳಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರ ಗೌಡ ಮಾತನಾಡಿ, ಎಚ್ಐವಿ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಆಗ ಬೇಕು. ಬದುಕಿನ ಬಗ್ಗೆ ವಿಶ್ವಾಸ ಮೂಡಿಸಿ ಜೀವನೋತ್ಸಾಹ ತುಂಬಬೇಕು ಎಂದು ಹೇಳಿದರು.
ವಿಶ್ವ ಏಡ್ಸ್ ದಿನದ ಅಂಗವಾಗಿ ಆಶಾ ಕಾರ್ಯಕರ್ತೆಯರು, ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಗರದ ವಿವಿಧ ರಸ್ತೆಗಳಲ್ಲಿ ಕಾಲ್ನಡಿಗೆ ಜಾಥಾ ನಡೆಸುವ ಮೂಲಕ ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ, ತಾಲ್ಲೂಕು ವೈದ್ಯಾಧಿಕಾರಿ ಅನಿಲ್ ಕುಮಾರ್, ಆಡಳಿತಾ ವೈದ್ಯಾಧಿಕಾರಿ ಸುನೀತಾ ದೇವೇಂದ್ರ, ಡಾ.ವಿಜಯ ಕುಮಾರ್, ವಕೀಲರಾದ ಮಂಜುನಾಥ್, ಆರ್.ವಿ.ವೀಣಾ, ಆಪ್ತ ಸಮಾಲೋಚಕ ಎನ್.ಗಂಗಾಧರಯ್ಯ, ಮಂಜುನಾಥಸ್ವಾಮಿ, ಕುಮಾರಸ್ವಾಮಿ, ಮುನಿರತ್ನಮ್ಮ, ನಂದಿನಿ, ಮುನಿರಾಜು ಹಾಜರಿದ್ದರು.
ಶ್ರದ್ಧಾಭಕ್ತಿಯಿಂದ ಹನುಮಜಯಂತಿ ಆಚರಣೆ
ತಾಲ್ಲೂಕಿನ ಚೌಡಸಂದ್ರ ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಹನುಮಜಯಂತಿಯನ್ನು ಶ್ರದ್ಧಾಭಕ್ತಿಯಿಂದ ವಿಶೇಷವಾಗಿ ಆಚರಿಸಲಾಯಿತು.
ಸೀತಾರಾಮ ಲಕ್ಷ್ಮಣ ಸಮೇತ ಆಂಜನೇಯಸ್ವಾಮಿಯ ಉತ್ಸವ ಮೂರ್ತಿಯ ಕಲ್ಯಾಣೋತ್ಸವ ಹಾಗೂ 29 ನೇ ವಾರ್ಷಿಕೋತ್ಸವದ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜಾ ಮಹೋತ್ಸವದೊಂದಿಗೆ ಭಕ್ತಿಗೀತೆ, ಭಾವಗೀತೆ, ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.
ಗುರುವಾರ ರಾತ್ರಿ ಗ್ರಾಮದಲ್ಲಿ ಉತ್ಸವ ಮೂರ್ತಿಯ ಮೆರವಣಿಗೆಯನ್ನು ಮಾಡಲಾಯಿತು. ಹೂವಿನ ಪಲ್ಲಕ್ಕಿಯ ಉತ್ಸವಕ್ಕೆ ನೂರಾರು ಮಂದಿ ಸಾಕ್ಷಿಯಾದರು. ದೇವಾಲಯವನ್ನು ಹಾಗೂ ಗ್ರಾಮದ ಪ್ರಮುಖ ರಸ್ತೆಗಳನ್ನೆಲ್ಲಾ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ದೇವರನ್ನು ಮತ್ತು ದೇವಾಲಯವನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಹನುಮಜಯಂತಿಯ ಪ್ರಯುಕ್ತ ಗ್ರಾಮದಲ್ಲಿ ಜಾತ್ರೆಯ ವಾತಾವರಣ ಮೂಡಿದ್ದು, ಸಾವಿರಾರು ಭಕ್ತರು ವಿವಿಧ ತಾಲ್ಲೂಕು ಜಿಲ್ಲೆಗಳಿಂದ ಆಗಮಿಸಿ ದೇವರ ಪೂಜೆಯಲ್ಲಿ ಪಾಲ್ಗೊಂಡರು. ತಿಂಡಿ ತಿನಿಸುಗಳು, ಆಟಿಕೆಗಳು, ಮುಂತಾದ ವಿವಿಧ ರೀತಿಯ ಅಂಗಡಿಗಳು ತರೆಯಲಾಗಿತ್ತು. ಆಗಮಿಸಿದ ಭಕ್ತರಿಗೆಲ್ಲಾ ದೇವಾಲಯದ ಸಮಿತಿ ವತಿಯಿಂದ ಭೋಜನ ವ್ಯವಸ್ಥೆಯನ್ನು ಮಾಡಿದ್ದರು.
ಶಾಸಕ ಎಂ.ರಾಜಣ್ಣ, ಕಾಂಗ್ರೆಸ್ ಮುಖಂಡ ವಿ.ಮುನಿಯಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಆಂಜನೇಯಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಎಂ.ಅಪ್ಪಯ್ಯಣ್ಣ(ವೆಂಕಟಸ್ವಾಮಿ), ಕಾರ್ಯದರ್ಶಿ ಬೆಳ್ಳೂಟಿ ಎನ್.ನಾಗಪ್ಪ, ಖಜಾಂಚಿ ಎಚ್.ಎನ್.ಆಂಜಿನಪ್ಪ, ಅರ್ಚಕ ಸಿ.ಪಿ.ಮುರಳೀಧರ್, ನಿವೃತ್ತ ತಹಶೀಲ್ದಾರ್ ರಾಜರತ್ನಂ, ಹುಜಗೂರು ರಾಮಯ್ಯ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತಾಲ್ಲೂಕಿನ ವಿವಿದೆಡೆ ಹನುಮಜಯಂತಿ: ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಾಲಯ, ಅಪ್ಪೇಗೌಡನಹಳ್ಳಿ ಗೇಟ್ ನ ಬಯಲಾಂಜನೇಯಸ್ವಾಮಿ ದೇವಾಲಯ, ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯ, ಚಿಂತಾಮಣಿ ರಸ್ತೆಯಲ್ಲಿರುವ ಆಂಜನೇಯಸ್ವಾಮಿ ದೇಗುಲ, ಮುತ್ತೂರು ಗ್ರಾಮ, ಎಚ್.ಕ್ರಾಸ್, ನಾಗಮಂಗಲ ದ ಶ್ರೀ ಅಭಯ ಆಂಜನೇಯಸ್ವಾಮಿ, ಚೊಕ್ಕಂಡಹಳ್ಳಿ, ಎದ್ದಲತಿಪ್ಪೇನಹಳ್ಳಿ ಮುಂತಾದೆಡೆ ಶ್ರದ್ಧಾ ಭಕ್ತಿಯಿಂದ ಹನುಮಜಯಂತಿಯನ್ನು ಆಚರಿಸಲಾಯಿತು.
ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿಯೇ ಓದಿಸಬೇಕು
ಸರ್ಕಾರಿ ಶಾಲೆಗಳಲ್ಲಿ ನರ್ಸರಿ ಪ್ರಾರಂಭಿಸಿ. ಒಂದನೇ ತರಗತಿಯಿಂದ ಇಂಗ್ಲೀಷ್ ಭಾಷೆಯಾಗಿ ಕಲಿಸಿ. ಕಂಪ್ಯೂಟರ್ ಶಿಕ್ಷಣವನ್ನು ಮಕ್ಕಳಿಗೆ ನೀಡಿ ಎಂದು ಹಂಡಿಗನಾಳ ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರಿನ ವಿಕಾಸ ಸೌಧದಲ್ಲಿ ಮಂಗಳವಾರ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕಾಗಿ ‘ಹಳೆ ವಿದ್ಯಾರ್ಥಿಗಳ ಸಂಘದ ಸಾಧಕರ ಸಮಾಲೋಚನ ಸಭೆ’ಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಪ್ರತಿನಿಧಿಸಿ ಅವರು ಮಾತನಾಡಿದರು.
ಕ್ರೀಡಾ ತರಬೇತುದರರ ಅಗತ್ಯ ಸರ್ಕಾರಿ ಶಾಲೆಗಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಗತ್ಯ ಕೌಶಲ್ಯ, ತರಬೇತಿ ಸಿಗಬೇಕು. ಸರ್ಕಾರಿ ಶಾಲೆಗಳಲ್ಲಿ ಓದಿದವರಿಗೆ ಉದ್ಯೋಗದಲ್ಲಿ ಮೀಸಲಾತಿ ಸಿಗಲಿ. ಸರ್ಕಾರಿ ಉದ್ಯೋಗಸ್ಥರು ಹಾಗೂ ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿಯೇ ಓದಿಸಬೇಕು ಎಂಬ ಕಾನೂನು ರೂಪಿಸಿ. ಶಾಲಾಭಿವೃದ್ಧಿ ಸಮಿತಿ ಮತ್ತು ಹಿರಿಯ ವಿದ್ಯಾರ್ಥಿಗಳ ಸಮಿತಿಯನ್ನು ಒಗ್ಗೂಡಿಸಿ ಸಮಾನ ಸ್ಥಾನಮಾನಗಳನ್ನು ನೀಡಿದಲ್ಲಿ ಅಭಿವೃದ್ಧಿಗೆ ಪೂರಕ ಎಂದು ಹೇಳಿದರು.
ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಿರಿಯ ವಿದ್ಯಾರ್ಥಿಗಳು ಡೆಸ್ಕು, ಟೇಬಲ್, ಚೇರು, ಪುಸ್ತಕಗಳು, ಲೇಖನ ಸಾಮಗ್ರಿ ನೀಡಿದರೆ, ಗ್ರಾಮ ಪಂಚಾಯಿತಿ ವತಿಯಿಂದ ವೇದಿಕೆ, ವಾಲಿಬಾಲ್ ಕೋರ್ಟ್, ಕಬಡ್ಡಿ, ಕೊಕ್ಕೊ, ಶೆಟಲ್ ಕಾಕ್ ಕೋರ್ಟ್, ಶಾಲೆಯ ಆವರಣದಲ್ಲಿ ಸುಮಾರು ಎರಡು ಸಾವಿರ ಗಿಡ ನೆಡಲಾಗಿದೆ. ಶಾಲೆಗೆ ಗೇಟು ಮತ್ತು ಸ್ವಾಗತ ಕಮಾನು, ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ವರದಿಯನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ.ಕೃಪಾ ಅಮರ್ ಆಳ್ವ ಅವರಿಗೆ ನೀಡಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ.ಕೃಪಾ ಅಮರ್ ಆಳ್ವ, ಸದಸ್ಯರಾದ ಅಪರ್ಣಾ ಕೊಳ್ಳಾ, ವನಿತಾ ಎನ್ ತೊರವಿ, ಆನಂದ ಬಿ ಲೋಬೋ, ಮರಿಸ್ವಾಮಿ, ಚಂದ್ರಶೇಖರ್ ಅಲ್ಲಿಪೂರ, ಕೆ.ಬಿ.ರೂಪಾ ನಾಯ್ಕ ಹಾಜರಿದ್ದರು.
ಕನ್ನಡ ಭಾಷೆಯನ್ನು ಹೃದಯದಿಂದ ಪ್ರೀತಿಸಿ
ಕನ್ನಡ ಭಾಷೆಯನ್ನು ಹೃದಯದಿಂದ ಪ್ರೀತಿಸಿ. ಕನ್ನಡ ನಾಡಿನಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರು ಕನ್ನಡವನ್ನು ಪ್ರೀತಿಸಿ, ಗೌರವಿಸುವ ಅಗತ್ಯ ಇದೆ ಎಂದು ಜಂಗಮಕೋಟೆ ಪೋಲಿಸ್ ಠಾಣೆಯ ಎಎಸ್ಐ ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಕ್ರಾಸ್ ಮತ್ತು ಜಂಗಮಕೋಟೆ ವೃತ್ತದಲ್ಲಿ ಜೈ ಭಾರತ ಮಾತೇ ಆಟೋ ಚಾಲಕರ ಹಾಗೂ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗುರುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳು ತಾಯಿ, ತಂದೆ, ಗುರುಗಳನ್ನು ನೆನೆಯುವಂತಹ ಕೆಲಸ ಮಾಡಬೇಕು. ಜೀವನದಲ್ಲಿ ಉತ್ತಮವಾದ ಗುರಿಯನ್ನು ಇಟ್ಟುಕೊಂಡು ಬದುಕು ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಜೀವನದಲ್ಲಿ ಉತ್ತಮ ಗುಣಗಳನ್ನು ರೂಪಿಸಿಕೊಳ್ಳಲಾಗದೆ ಹೋದರೆ ಜೀವನದಲ್ಲಿ ಎಂದಿಗೂ ಉತ್ತಮ ವ್ಯಕ್ತಿಗಳಾಗಲು ಸಾಧ್ಯವಿಲ್ಲ. ಶಿಕ್ಷಣ ಸಂಸ್ಥೆಗಳು ಮಕ್ಕಳು ಸಂಸ್ಕಾರವಂತರನ್ನಾಗಿ, ಪ್ರಜ್ಞಾವಂತರನ್ನಾಗಿ ಮಾಡಬೇಕಾಗಿದೆ. ತಂದೆ, ತಾಯಿಗಳಿಗೆ ನೀಡುವಂತಹ ಗೌರವವನ್ನು ನಮ್ಮ ಭಾಷೆಗೂ ನೀಡಬೇಕು. ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರುಗಳ ಚರಿತ್ರೆಗಳನ್ನು ತಿಳಿದುಕೊಳ್ಳುವಂತಹ ಪ್ರಯತ್ನ ಮಕ್ಕಳು ಮಾಡಬೇಕು ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುನಿರಾಜು(ಕುಟ್ಟಿ) ಮಾತನಾಡಿ, ಸಮೃದ್ಧ ನಾಡನ್ನು ಕಟ್ಟಲು ಶ್ರಮಿಸಿದ ನಾಡಿನ ಕವಿಗಳು, ಕಲಾವಿದರು, ಸಾಹಿತಿಗಳು, ಸಂತರು ಹಾಗೂ ಕರ್ನಾಟಕದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದ ಎಲ್ಲಾ ಗಣ್ಯಮಾನ್ಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪಿ.ಡಿ.ಓ ವಜ್ರೇಶ್, ಗ್ರಾಮ ಪಂಚಾಯಿತಿ ಸದಸ್ಯ ಜೆ.ಎಂ.ವೆಂಕಟೇಶ್, ಗ್ರಾಮಸ್ಥರಾದ ಮುನಿರಾಜು, ಮುನ್ಸಿರ್, ಮಂಜುನಾಥ್, ಜೈ ಭಾರತ ಮಾತೇ ಆಟೋ ಚಾಲಕರ ಹಾಗೂ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಕೃಪಾನಂದ, ಅಫ್ಸರ್, ದಾದಾಪೀರ್, ನಾಗರಾಜು, ರಾಮು, ವೆಂಕಟೇಶ್ ಹಾಜರಿದ್ದರು.
ವಿಶ್ವ ಅಂಗವಿಕಲರ ದಿನಾಚರಣೆಯ ಪ್ರಯುಕ್ತ ವಿವಿಧ ಸ್ಪರ್ಧೆಗಳು
ವಿಶ್ವ ಅಂಗವಿಕಲರ ದಿನಾಚರಣೆಯನ್ನು ಎಸ್.ಎಸ್.ಎ ಹಾಗೂ ಆರ್.ಎಂ.ಎಸ್.ಎ ಸಹಯೋಗದೊಂದಿಗೆ ಡಿಸೆಂಬರ್ 3 ರ ಭಾನುವಾರ ನಗರದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಅಂಗವಿಕಲ ಮಕ್ಕಳಿಗೆ ಮತ್ತು ಮಕ್ಕಳ ಪೋಷಕರಿಗೆ ಕ್ರೀಡಾ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿದ್ದು ನಗದು ಬಹುಮಾನವನ್ನು ನೀಡಲಾಗುತ್ತದೆ. ಮಡಿಕೆ ಒಡೆಯುವುದು, ಸಂಗೀತ ಕುರ್ಚಿ, ಚಮಚ ಮತ್ತು ನಿಂಬೆಹಣ್ಣಿನ ಓಟ, 100 ಮೀಟರ್ ಓಟ, ಕಪ್ಪೆ ಓಟ ಆಟಗಳು ಹಾಗೂ ಜನಪದ ಗೀತೆ, ಆಶುಭಾಷಣ ಸ್ಪರ್ಧೆ, ರಸಪ್ರಶ್ನೆ, ಚಿತ್ರಕಲೆ, ಛದ್ಮವೇಷ ಸ್ಪರ್ಧೆಗಳನ್ನು ನಡೆಸಲಾಗುವುದು.
ಈದ್ ಮಿಲಾದ್ ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ
ಯೂನಿಟಿ ಸಿಲ್ ಸಿಲಾ ಫೌಂಡೇಶನ್ ವತಿಯಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಈದ್ ಮಿಲಾದ್ ಹಬ್ಬದ ಪ್ರಯುಕ್ತ 4ನೇ ವಾರ್ಷಿಕ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಜನಜಾಗೃತಿ ಕಾರ್ಯಕ್ರಮವನ್ನು ಡಿಸೆಂಬರ್ 3 ರ ಭಾನುವಾರ ಆಯೋಜಿಸಲಾಗಿದೆ.
ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ರಕ್ತದಾನ ಶಿಬಿರವನ್ನು ನಡೆಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಭಾಗವಹಿಸಿ ಜೀವ ಉಳಿಸುವ ಕಾರ್ಯದಲ್ಲಿ ಕೈ ಜೋಡಿಸಬೇಕೆಂದು ಆಯೋಜಕರು ಕೋರಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಕಣಕ್ಕೆ
ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಜಯಗಳಿಸಿ ತಮ್ಮ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ಸಲ್ಲಿಸಿದ್ದ ಸದಸ್ಯರ ವರ್ತನೆಯಿಂದ ಇದೀಗ ಮತ್ತೆ ಚುನಾವಣೆ ಎದಿರಿಸುವಂತಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಜಗೂರು ಗ್ರಾಮದ ಸದಸ್ಯ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯ ಸಾಮಾನ್ಯ ಮೀಸಲು ಸ್ಥಾನದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಹುಜಗೂರು ಗ್ರಾಮದ ಎಚ್.ಕೆ.ದೇವರಾಜು ಮತ್ತು ಮುನಿಶಾಮಯ್ಯ ಗುರುವಾರ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಜಯಗಳಿಸಿದ್ದ ಈ ಹಿಂದಿನ ಸದಸ್ಯರು ತಾವು ಮಾಡುವ ಅಭಿವೃದ್ಧಿ ಕೆಲಸಗಳಿಗೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅಡ್ಡಿ ಪಡಿಸಿದ್ದರು ಎಂದು ಹೇಳಿರುವ ಮಾತು ಸತ್ಯಕ್ಕೆ ದೂರ. ಅವರ ವೈಯಕ್ತಿಕ ಸಮಸ್ಯೆಗಳಿಂದ ರಾಜೀನಾಮೆ ಸಲ್ಲಿಸಿ ಇದೀಗೆ ಬೇರೆ ಪಕ್ಷದ ಬೆಂಬಲದಿಂದ ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಎಂ.ಆಂಜಿನಪ್ಪ, ಮುಖಂಡರಾದ ಮುನಿನಾರಾಯಣಪ್ಪ, ಎಚ್.ಆರ್.ರಾಮಚಂದ್ರ, ಎಚ್.ವಿ.ನಾರಾಯಣಸ್ವಾಮಿ, ಎಹೆಚ್.ಕೆ.ಆಂಜಿನಪ್ಪ, ಎಂ.ದೇವರಾಜು, ಸಿದ್ದಪ್ಪ ಹಾಜರಿದ್ದರು.
ಅಂಗನವಾಡಿ ನೌಕರರ ಪ್ರತಿಭಟನಾ ಮೆರವಣಿಗೆ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಸಮಿತಿಯ ಸದಸ್ಯರು ಗುರುವಾರ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು.
ಜುಲೈ ತಿಂಗಳಿನಿಂದ ಮೊಟ್ಟೆ ಹಣ ನೀಡಿಲ್ಲ. ಹಣವನ್ನು ಕೂಡಲೇ ಬಿಡುಗಡೆ ಮಾಡಿ. ಕಚೇರಿಯಿಂದಲೇ ಮೊಟ್ಟೆಯನ್ನು ವಿತರಿಸಿ ಮತ್ತು ಧರ ಹೆಚ್ಚು ಮಾಡಿ. ಗರ್ಭಿಣಿ ಬಾಣಂತಿಯರಿಗೆ ನೀಡುವ ತರಕಾತಿ ಮೊಟ್ಟೆ ಹಣ ಕೂಡಲೇ ಬಿಡುಗಡೆ ಮಾಡಿ. ಇತರ ಜಿಲ್ಲೆಗಳಲ್ಲಿ ನೀಡುವಂತೆ ಮಕ್ಕಳು ಮತ್ತು ಗರ್ಭಿಣಿ ಬಾಣಂತಿಯರಿಗೆ ತರಕಾರಿ ಹಣ 2.60 ಪೈಸೆಯಂತೆ ನಮಗೂ ನೀಡಿ. ಎಲ್ಲಾ ಕೇಂದ್ರಗಳಿಗೆ ಕಚೇರಿಯಿಂದ ಗ್ಯಾಸ್ ವಿತರಣೆ ಮಾಡಿ. ಇದುವರೆಗೂ ತೆಗೆದುಕೊಂಡಿರುವ ಗ್ಯಾಸ್ ಗೆ ಸಬ್ಸಿಡಿ ಹಣ ಮತ್ತು ಸಾರಿಗೆ ವೆಚ್ಚ ನೀಡಿ.
ಖಾಲಿ ಇರುವ ಸಹಾಯಕಿ ಹುದ್ದೆಯನ್ನು ಕೂಡಲೇ ಭರ್ತಿ ಮಾಡಬೇಕು ಮತ್ತು ಅರ್ಹತೆ ಇರುವ ಸಹಾಯಕಿಯರಿಗೆ ಖಾಲಿ ಇರುವ ಕೇಂದ್ರಗಳಿಗೆ ಮುಂಬಡ್ತಿ ನೀಡಬೇಕು. ಅವಶ್ಯಕ ಪಾತ್ರೆಗಳನ್ನು ಸರಬರಾಜು ಮಾಡಬೇಕು. ಅಂಗನವಾಡಿ ಕೇಂದ್ರಗಳಿಗೆ ಶುದ್ಧ ಕುಡಿಯುವ ನೀರನ್ನು ವ್ಯವಸ್ಥೆ ಮಾಡಬೇಕು. ಬಾಕಿ ಇರುವ ಜನಶ್ರೀ ಬೀಮಾ ಯೋಜನೆಯ 2 ವರ್ಷ 6 ತಿಂಗಳ ಸ್ಕಾಲರ್ ಶಿಪ್ ಕೊಡಬೇಕು.
ನಿವೃತ್ತರಾದ ಕಾರ್ಯಕರ್ತೆ ಹಾಗೂ ಸಹಾಯಕಿಯರ ಇಡಿಗಂಟು 2 ವರ್ಷವಾದರೂ ಕೊಟ್ಟಿಲ್ಲ. ಅದನ್ನು ಶೀಘ್ರವಾಗಿ ನೀಡಿ. ಮಿನಿ ಕೇಂದ್ರಗಳಲ್ಲಿ ಅಡುಗೆ ಮಾಡಿಕೊಡುವವರಿಗೆ ಕನಿಷ್ಠ ಮೂರು ಸಾವಿರ ರೂ ಗೌರವ ಧನ ನೀಡಬೇಕು. ಜನಗಣತಿ ಹಣ, ಶೌಚಾಲಯ ಸರ್ವೆ ಹಣವನ್ನು ಕೂಡಲೇ ಕೊಡಬೇಕು. ಕಟ್ಟಡಗಳು ಹಾಗೂ ಶೌಚಾಲಯಗಳನ್ನು ನಿರ್ಮಿಸಿಕೊಡಬೇಕು. ಗುಣಮಟ್ಟದ ಆಹಾರ ಪದಾರ್ಥ ನೀಡಬೇಕು ಎಂಬೆಲ್ಲಾ ಬೇಡಿಕೆಗಳ ಪಟ್ಟಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ನೀಡಿದರು.
ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಸಮಿತಿಯ ಅಧ್ಯಕ್ಷೆ ಅಶ್ವತ್ಥಮ್ಮ, ಖಜಾಂಚಿ ಗುಲ್ಜಾರ್, ಕಾರ್ಯದರ್ಶಿ ಟಿ.ಮಂಜುಳಮ್ಮ, ಜಿಲ್ಲಾ ಘಟಕದ ಲಕ್ಷ್ಮೀದೇವಮ್ಮ, ಫಯಾಜ್ ಹಾಜರಿದ್ದರು.
ಕನ್ನಡ ಭಾಷೆಯನ್ನು ಗೌರವಿಸಿ, ಪ್ರೀತಿಸಿ
ಮಾತೃ ಭಾಷೆಯ ಬಗ್ಗೆ ಅಭಿಮಾನ ಶೂನ್ಯರಾಗಿ, ಅನ್ಯ ಭಾಷೆಗಳನ್ನು ಪ್ರೀತಿಸುವ ಧೋರಣೆಯನ್ನು ಬದಿಗಿರಿಸಿ. ಕನ್ನಡ ಭಾಷೆಗೆ ಗೌರವ ನೀಡುವುದನ್ನು ಪ್ರತಿಯೊಬ್ಬರೂ ರೂಡಿಸಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ಕಮಲಾಕಾಂತ್ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಗ್ರಾಮದ ಗ್ರಾಮಸ್ಥರಿಂದ ಬುಧವಾರ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾವು ಮಾತೃಭಾಷೆಯಲ್ಲಿ ತಿಳಿಯುವಷ್ಟು, ಕಲಿಯುವಷ್ಟು ಬೇರೆ ಯಾವ ಭಾಷೆಯಲ್ಲೂ ತಿಳಿಯಲು ಸಾಧ್ಯವಿಲ್ಲ. ನಮ್ಮ ಭಾಷೆ, ಸಂಸ್ಕೃತಿಯನ್ನು ನಾವು ಬಳಸಿ ಬೆಳೆಸದೆ ಬೇರೆ ಯಾರು ತಾನೆ ಉಳಿಸಲು ಸಾಧ್ಯ ಹಾಗಾಗಿ ಪ್ರತಿಯೊಬ್ಬರು ಭಾಷೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಕಾರ್ಯಕ್ರಮದ ಅಂಗವಾಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ, ಕುವೆಂಪು ಶಾಲೆ, ಗ್ರಾಮದ ಅಂಗನವಾಡಿ ಮಕ್ಕಳು ಗ್ರಾಮದಲ್ಲಿ ಮೆರವಣಿಗೆ ನಡೆಸಿ ಧ್ವಜಾರೋಹಣದಲ್ಲಿ ಪಾಲ್ಗೊಂಡರು.
ಶಾಲಾ ಮಕ್ಕಳಿಂದ ಜನಪದ ಗೀತೆಗಳು, ಕನ್ನಡ ನಾಡಿನ ಚಲನಚಿತ್ರದ ಹಾಡುಗಳಿಗೆ ನೃತ್ಯ ಆಯೋಜಿಸಲಾಗಿತ್ತು. ಕೋಲಾಟ, ವಿವಿಧ ವೇಶಭೂಷಣಗಳ ಉಡುಪಿನಲ್ಲಿ ಮಕ್ಕಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮೆರಗು ತುಂಬಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಕಮಲಾಕಾಂತ್, ಧಾರ್ಮಿಕ ಮುಖಂಡ ಶಂಕರ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿನಾರಾಯಣಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಚೀಮಂಗಲ ಹಾಗು ಸುತ್ತಮುತ್ತಲ ಗ್ರಾಮಗಳ ಮುಖಂಡರೂ ಸೇರಿದಂತೆ ನಾಗರಿಕರು ಪಾಲ್ಗೊಂಡಿದ್ದರು.

