ದೇಶದ ಇಡೀ ವ್ಯವಸ್ಥೆ ಸಂವಿಧಾನದಡಿ ನಡೆಯುತ್ತಿದ್ದು ಸಂವಿದಾನದ ಆಶಯದಂತೆ ಶಾಸಕಾಂಗ, ಕಾರ್ಯಾಂಗ ಹಾಗು ನ್ಯಾಯಾಂಗ ಕಾರ್ಯ ನಿರ್ವಹಿಸುತ್ತದೆ ಎಂದು ಜೆ.ಎಂ.ಎಫ್.ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ಹೇಳಿದರು.
ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗು ತಾಲೂಕು ವಕೀಲರ ಸಂಘ ಸಂಯುಕ್ತಾಶ್ರಯದಲ್ಲಿ ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಸಂವಿಧಾನ ದಿನಾಚರಣೆ ಮತ್ತು ಪ್ಯಾನಲ್ ವಕೀಲರು ಹಾಗು ಸ್ವಯಂ ಪ್ರೇರಿತ ಸಹಾಯಕರಿಗೆ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕೇಂದ್ರ ಹಾಗು ರಾಜ್ಯ ಸರ್ಕಾರಗಳು ರಾಷ್ಟ್ರಪತಿ ಹಾಗು ರಾಜ್ಯಪಾಲರ ಸೂಚನೆಯ ಮೇರೆಗೆ ಸಂವಿಧಾನದನ್ವಯ ಇರುವ ಕಾನೂನುಗಳನ್ನು ಜಾರಿಗೆ ತರುತ್ತಾರೆ. ಕೆಲವೊಮ್ಮೆ ತುರ್ತು ಕಾನೂನು ರೂಪಿಸಲು ಸರ್ಕಾರಗಳಿಗೆ ಅವಕಾಶವಿದೆಯಾದರೂ ನಂತರ ರಾಷ್ಟ್ರಪತಿ ಹಾಗು ರಾಜ್ಯಪಾಲರ ಅನುಮತಿ ಪಡೆಯಬೇಕಾಗುತ್ತದೆ ಎಂದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ ಮಾತನಾಡಿ, ನಾವು ಹುಟ್ಟುತ್ತಾ ಕಾನೂನಿನಡಿ ಹುಟ್ಟುತ್ತೇವೆ. ಹಾಗೆಯೇ ಸಾಯುತ್ತಾ ಕಾನೂನಿನಡಿ ಸಾಯುತ್ತೇವೆ. ಕಟ್ಟಕಡೆಯ ವ್ಯಕ್ತಿಗೂ ಕೂಡ ಎಲ್ಲಾ ಮೂಲಭೂತ ಸವಲತ್ತುಗಳು ಸಿಗಬೇಕು ಎನ್ನುವ ನಿಟ್ಟಿನಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ದ್ಯೇಯದೊಂದಿಗೆ ರಚಿಸಲಾಘಿರುವ ಸಂವಿದಾನವನ್ನು ಎಲ್ಲರೂ ಗೌರವಿಸಬೇಕು ಎಂದರು.
ಹಿರಿಯ ವಕೀಲ ವಿ.ಸುಬ್ರಮಣ್ಯಪ್ಪ ಸ್ವಯಂ ಪ್ರೇರಿತ ಸಹಾಯಕರ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಮಾತನಾಡಿದರು. ವಕೀಲರಾದ ಸಿ.ಲಕ್ಷ್ಮಮ್ಮ ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ ಬಗ್ಗೆ ಮಾತನಾಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಎನ್.ಎ.ಶ್ರೀಕಂಠ, ಸಿವಿಲ್ ನ್ಯಾಯಾಧೀಶ ಸಂದೀಶ್.ಟಿ.ಎಲ್. ಸಹಾಯಕ ಸರ್ಕಾರಿ ಅಭಿಯೋಜಕಿ ಎಸ್.ಕುಮುದಿನಿ, ವಕೀಲರಾದ ಬೈರಾರೆಡ್ಡಿ, ಯಣ್ಣಂಗೂರು ಕೆ.ಮಂಜುನಾಥ್, ಎಸ್.ಎನ್.ಚಂದ್ರಶೇಖರ್, ಆರ್.ವಿ.ವೀಣಾ, ನಾಗೇಂದ್ರಬಾಬು, ಮುನಿರಾಜು, ಗೀತ ಇದ್ದರು.
ವಕೀಲರ ತರಬೇತಿ ಕಾರ್ಯಾಗಾರ
ಗೌಡನಕೆರೆಯಲ್ಲಿ ನಿಷೇಧಿತ ಕ್ಯಾಟ್ ಫಿಶ್ ಸಾಕಾಣಿಕೆ
ನಗರಕ್ಕೆ ಹೊಂದಿಕೊಂಡಂತಿರುವ ಗೌಡನಕೆರೆಯಲ್ಲಿ ನಿಷೇಧಿತ ಕ್ಯಾಟ್ ಫಿಶ್ ಸಾಕಾಣಿಕೆ ಮಾಡುತ್ತಿದ್ದು ಕೂಡಲೇ ತೆರವು ಗೊಳಿಸುವಂತೆ ಬೂದಾಳ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಲೂಕಿನ ಆನೂರು ಗ್ರಾಮದ ನರಸಿಂಹಮೂರ್ತಿ ಎಂಬುವವರು ಮೀನುಗಳ ಸಾಕಾಣಿಕೆ ಮಾರಾಟಕ್ಕೆ ಮೀನುಗಾರಿಕೆ ಇಲಾಖೆ ಅನುಮತಿ ಪಡೆದಿದ್ದು ಹರಾಜು ಮೂಲಕ ಮಾರಾಟ ಮಾಡಲು ಮುಂದಾದಾಗ ಕಾವಲುಗಾರರ ಹಾಗು ಬೂದಾಳ ಗ್ರಾಮಸ್ಥರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದೆ.
ಕೆರೆಯಲ್ಲಿ ನಿಷೇಧಿತ ಕ್ಯಾಟ್‍ಫಿಷ್ ಮೀನನ್ನು ಸಾಕಾಣಿಕೆ ಮಾಡುತ್ತಿದ್ದು ಇದರಿಂದ ಕೆರೆಯ ನೀರು ಕಲುಷಿತಗೊಂಡಿದೆ. ಧನಕರುಗಳು ಹಾಗೂ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಈ ಕ್ಯಾಟ್‍ಫಿಷ್ ಮೀನುಗಳ ಹರಾಜನ್ನು ರದ್ದುಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೆರೆಯಲ್ಲಿ ಕೊರೆದ ಕೊಳವೆ ಬಾವಿಗಳಿಂದಲೆ ನಮ್ಮೂರಿಗೆ ಕುಡಿಯುವ ನೀರು ಪೂರೈಕೆ ಆಗುತ್ತಿದೆ. ಹಾಗಾಗಿ ಕೂಡಲೆ ಈ ಕೆರೆಯಲ್ಲಿನ ಕ್ಯಾಟ್‍ಫಿಷ್‍ಗಳನ್ನು ತೆರೆವುಗೊಳಿಸಬೇಕು. ಹರಾಜನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ವೇಳೆ ಮೀನುಗಳಿಗೆ ಕಾವಲು ಇದ್ದವರು ಹಾಗೂ ಗ್ರಾಮಸ್ಥರ ನಡುವೆ ಕೆಲ ಕಾಲ ಮಾತಿನ ಚಕಮುಕಿ ನಡೆದು ನಾವು ಇಲ್ಲಿ ಬರಿ ಕಾವಲು ಇದ್ದೇವೆ. ಮಾಲೀಕರನ್ನು ಹಾಗೂ ಅಧಿಕಾರಿಗಳನ್ನು ಕೇಳಿ ನಮ್ಮದೇನು ಇಲ್ಲ ಎಂದರು.
ಹಾಗಾಗಿ ಬೂದಾಳ ಗ್ರಾಮಸ್ಥರು ಮಂಗಳವಾರ ಈ ಬಗ್ಗೆ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೂ ದೂರು ನೀಡಿ ಕೆರೆಯಲ್ಲಿ ನಿಷೇಧಿತ ಕ್ಯಾಟ್‍ಫಿಷ್‍ಗಳನ್ನು ತೆರೆವುಗೊಳಿಸುವವರೆಗೂ ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ವೃತ್ತಿಪರರನ್ನು ಸೃಷ್ಠಿಸುವ ಕೆಲಸ ಹಿರಿಯರು ಮಾಡಬೇಕು
ವಿಶ್ವಕರ್ಮ ಸಮುದಾಯದವರು ಸರ್ಕಾರದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಅಭಿವೃದ್ದಿ ಹೊಂದಬೇಕು ಎಂದು ಮಾಜಿ ಶಾಸಕ ವಿ.ಮುನಿಯಪ್ಪ ಹೇಳಿದರು.
ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಗರದ ಶ್ರೀ ಕಾಳಿಕಾಂಬ ಕಮಠೇಶ್ವರ ಸಮುದಾಯಭವನದಲ್ಲಿ ಏರ್ಪಡಿಸಲಾಗಿದ್ದ ವಿಶ್ವಕರ್ಮ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
ವಿಶೇಷ ಕುಸುರಿ ಕೌಶಲ ಹೊಂದಿರುವ ವಿಶ್ವಕರ್ಮ ಜನಾಂಗವು ವಿಶ್ವ ಮಾನ್ಯತೆ ಪಡೆದಿದೆ. ವಿಶ್ವಕರ್ಮ ಸಮುದಾಯವು ಚಿನ್ನಬೆಳ್ಳಿ ಕೆಲಸ, ಮರಗೆಲಸ, ಕಬ್ಬಿಣದ ಕೆಲಸ, ಶಿಲ್ಪಕಲೆ ಸೇರಿದಂತೆ ಪಂಚ ಕಸುಬುಗಳನ್ನು ಮಾಡುವ ಮೂಲಕ ಸಮಾಜಕ್ಕೆ ಅಪಾರ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದರು.
ಆಧುನಿಕ ಯುಗದಲ್ಲಿ ತಾಂತ್ರಿಕತೆಯನ್ನು ಪರಿಚಯಿಸಿ ಯುವಕರಿಗೆ ವೃತ್ತಿ ಕೌಶಲ್ಯವನ್ನು ಕಲಿಸುವ ಮೂಲಕ ವೃತ್ತಿಪರರನ್ನು ಸೃಷ್ಠಿಸುವ ಕೆಲಸ ಹಿರಿಯರು ಮಾಡಬೇಕು ಎಂದರು.
ರಾಜಘಟ್ಟದ ವಿಶ್ವಕುಂಡಲಿ ಯೋಗಾಶ್ರಮದ ಕಾಳೀತನಯ ಶ್ರೀ ಉಮಾಮಹೇಶ್ವರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಜಯಂತೋತ್ಸವದ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ವಿಶ್ವಕರ್ಮ ಪ್ರತಿಮೆಯನ್ನು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಲಾಯಿತು.
ವಿಧ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಸೇರಿದಂತೆ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಲಾಯಿತು.
ವಿಶ್ವಕರ್ಮ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಅಮರನಾರಾಯಣಚಾರಿ, ಗೌರವಾಧ್ಯಕ್ಷ ಜನಾರ್ಧನಮೂರ್ತಿ, ಕಾಳಿಕಾಂಭ ಕಮ್ಮಠೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಬಿ.ಕೆ.ಮುನಿರತ್ನಾಚಾರ್, ನಗರಸಭೆ ಸದಸ್ಯ ಜೆ.ಎಂ.ಬಾಲಕೃಷ್ಣ, ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಶ್ರೀಧರ್, ಮತ್ತಿತರರು ಹಾಜರಿದ್ದರು.
ರಾಜ್ಯೋತ್ಸವ ಆಚರಿಸಿದ ಮಾತ್ರಕ್ಕೆ ಭಾಷೆ ಉಳಿಯುವುದಿಲ್ಲ
ಮಾತೃ ಭಾಷೆಯ ಬಗ್ಗೆ ಅಭಿಮಾನ ಶೂನ್ಯರಾಗಿ, ಅನ್ಯ ಭಾಷೆಗಳನ್ನು ಪ್ರೀತಿಸುವ ಧೋರಣೆಯನ್ನು ಬದಿಗಿರಿಸಿ. ಕನ್ನಡ ಭಾಷೆಗೆ ಗೌರವ ನೀಡುವುದನ್ನು ಪ್ರತಿಯೊಬ್ಬರೂ ರೂಡಿಸಿಕೊಂಡಾಗ ನಮ್ಮ ಮಾತೃಭಾಷೆ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಹೇಳಿದರು.
ತಾಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭಾನುವಾರ ಗ್ರಾಮದ ಕನ್ನಡ ಯುವ ಬಳಗದಿಂದ ಏರ್ಪಡಿಸಲಾಗಿದ್ದ 62 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಕನ್ನಡ ರಾಜ್ಯೋತ್ಸವದ ಹೆಸರಿನಲ್ಲಿ ಹಬ್ಬ ಆಚರಿಸಿದ ಮಾತ್ರಕ್ಕೆ ಭಾಷೆ ಉಳಿಯುವುದಿಲ್ಲ ಬದಲಿಗೆ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಮಾತನಾಡುವುದು ಸೇರಿದಂತೆ ಮಾತೃಭಾಷೆಯಲ್ಲಿ ವ್ಯವಹರಿಸಿದಾಗ ಭಾಷೆ ಉಳಿಯುತ್ತದೆ ಎಂದರು.
ಅಪ್ಪೇಗೌಡನಹಳ್ಳಿ ಗ್ರಾ.ಪಂ ಸದಸ್ಯ ಎ.ಎಂ.ತ್ಯಾಗರಾಜ್ ಮಾತನಾಡಿ ಕನ್ನಡ ಭಾಷೆಗೆ ಬಹಳ ಪುರಾತನವಾದ ಹಿನ್ನೆಲೆಯಿದೆ, ದೇಶಕ್ಕೆ ಅನೇಕ ಮಂದಿ ದಿಗ್ಗಜರನ್ನು ನೀಡಿರುವಂತಹ ನಾಡಿನಲ್ಲಿ ಕನ್ನಡ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ತಮ್ಮ ಮಾತೃಭಾಷೆಯನ್ನು ಗೌರವಿಸುವುದು ಸೇರಿದಂತೆ ಹೆತ್ತ ತಾಯಿಯನ್ನು ಪೂಜಿಸಿದಷ್ಟೇ ಭಾಷೆಯನ್ನು ಪೂಜಿಸಿ ಗೌರವಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ನಗರದ ನೃತ್ಯ ಕಲಾವಿದ ಸಿ.ಎನ್.ಮುನಿರಾಜು ವಿವಿಧ ಕನ್ನಡ ಗೀತೆಗಳಿಗೆ ನೃತ್ಯ ಮಾಡಿದರು. ಗ್ರಾಮದ ಸರ್ಕಾರಿ ಶಾಲಾ ಮಕ್ಕಳಿಂದ ವಿವಿಧ ನಾಟಕ ಹಾಗು ನೃತ್ಯಗಳನ್ನು ಆಯೋಜಿಸಲಾಗಿತ್ತು.
ಕೆಳದಿ ಚನ್ನಮ್ಮ ಪ್ರಶಸ್ತಿಗೆ ಪಾತ್ರರಾಗಿರುವ ತಾಲೂಕಿನ ವರದನಾಯಕನಹಳ್ಳಿ ಶಾಲೆಯ ವಿದ್ಯಾರ್ಥಿಗಳಾದ ಎಚ್.ಕೆ.ದೀಕ್ಷಿತಾ ಮತ್ತು ಎಚ್.ಕೆ.ಅಂಬಿಕಾ ಸೇರಿದಂತೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಪಾತ್ರರಾದ ಅಪ್ಪೇಗೌಡನಹಳ್ಳಿ ಶಾಲೆಯ ಮುಖ್ಯಶಿಕ್ಷಕಿ ವೆಂಕಟರತ್ನಮ್ಮ ಮತ್ತು ಬೆಂಗಳೂರಿನ ಚಿಗುರು ಕಲ್ಚರಲ್ ಟ್ರಸ್ಟ್ ವತಿಯಿಂದ 2017 ಸಾಲಿನ `ಕನಕದಾಸರ ಸದ್ಭಾವನ ಪ್ರಶಸ್ತಿ’ ಪಡೆದ ಅಪ್ಪೇಗೌಡನಹಳ್ಳಿಯ ಗ್ರಾ.ಪಂ ಸದಸ್ಯ ಎ.ಎಂ.ತ್ಯಾಗರಾಜ್, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಹಾಗು ನೃತ್ಯ ಕಲಾವಿದ ಸಿ.ಎನ್.ಮುನಿರಾಜುರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣ, ಗ್ರಾ.ಪಂ ಸದಸ್ಯರಾದ ಉಮಾ, ನೇತ್ರಾವತಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರವಿಪ್ರಕಾಶ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಪುಷ್ಪ, ಶಾಲೆಯ ಮುಖ್ಯ ಶಿಕ್ಷಕಿ ವೆಂಕಟರತ್ನಮ್ಮ ಶಿಕ್ಷಕರಾದ ಚಾಂದ್‍ಪಾಷ, ನರಸಿಂಹಮೂಇರ್ತಿ, ನಾಗೇಶ್, ಪ್ರಸಾದ್, ಮಧು, ಪ್ರದೀಪ್, ಮನೋಜ್, ನವೀನ್, ಮಂಜುನಾಥ್, ರಘು, ಶ್ರೀಕಾಂತ್ ಮತ್ತಿತರರು ಹಾಜರಿದ್ದರು.
ಪಸರಿಸಿದೆ ಅವರೆ ಘಮಲು
ತಾಲ್ಲೂಕಿನಲ್ಲಿ ಈ ಬಾರಿ ಸೊಗಡಿನ ಅವರೆಕಾಯಿಯ ಘಮಲು ಎಲ್ಲೆಡೆ ಹಬ್ಬಿದ್ದು, ಅವರೆ ಪ್ರಿಯರಿಗೆ ಈ ಬಾರಿ ಉತ್ತಮ ಅವರೆ ಕಾಯಿ ಸಿಗಲಿದೆ.
ಇನ್ನು ಎರಡು ವಾರಗಳಲ್ಲಿ ಮಾರುಕಟ್ಟೆಯ ತುಂಬಾ ಅವರೆಯು ಕಾಣಸಿಗಲಿದೆ. ಕಳೆದ ವರ್ಷಕ್ಕಿಂತಲೂ ಈ ಬಾರಿ ಫಸಲು ಉತ್ತಮವಾಗಿದ್ದು, ಕಡಿಮೆ ದರದಲ್ಲಿ ಸಿಗುವ ಅವಕಾಶವಿದೆ.
ಹಿಂದಿನ ವರ್ಷ ಅವರೆ ಬೆಳೆ ಕಡಿಮೆ ಇದ್ದುದರಿಂದ ಬೇಡಿಕೆ ಇತ್ತು, ಆದರೆ ಈ ಬಾರಿ ಬೇಡಿಕೆ ಕುಸಿಯಲಿದೆ ಎಂಬುದು ವ್ಯಾಪಾರಿಗಳ ಆಲೋಚನೆಯಾದರೆ, ಸೊಗಡಿನ ಅವರೆ ಪ್ರಿಯರಿಗೆ ಗುಣಮಟ್ಟದ ಅವರೆ ಸಿಗುವ ಸಂತಸವಿದೆ.
ತಾಲ್ಲೂಕಿನ ಕೆಲ ಭಾಗಗಳಲ್ಲಿ ಅವರೆಕಾಯಿ ಬಲಿಯುವ ಹಂತದಲ್ಲಿದ್ದರೆ, ಇನ್ನು ಕೆಲವೆಡೆ ಹೂ, ಕಾಯಿ ಕಟ್ಟಿಕೊಂಡು ಗಿಡಗಳು ಸಂಪುಷ್ಟಿಯಾಗಿವೆ. ಸೊಗಡಿನ ಮಣಿ ಅವರೆಗೆ ಬೇಡಿಕೆ ಹೆಚ್ಚು. ಅದರ ರುಚಿಯನ್ನು ಕಂಡುಕೊಂಡವರಿಗೆ ಅದುವೇ ಬೇಕು. ಆದ್ದರಿಂದಲೇ ಸೊಗಡಿನ ಅವರೆಗೆ ಬೇಡಿಕೆ ಹೆಚ್ಚು.
ಸಂಕ್ರಾಂತಿಯವರೆಗೂ ಇನ್ನು ಅವರೆ ಕಾಯಿಯದೇ ಸುಗ್ಗಿಯಿರುತ್ತದೆ. ಹಿರಿಯರ ಪ್ರಕಾರ ಇಬ್ಬನಿ ಬೀಳುವುದು, ಮಂಜಿನ ವಾತಾವರಣ ಅವರೆಯ ಸೊಗಡನ್ನು ಹೆಚ್ಚಿಸುತ್ತದೆ. ತಾಲ್ಲೂಕಿನ ಉತ್ತಮ ಸೊಗಡಿನ ಅವರೆಕಾಯಿ ಅವರೆ ಮೇಳದಲ್ಲೂ ಭಾಗವಹಿಸುತ್ತದೆ. ತಾಲ್ಲೂಕಿನ ಅವರೆಗೆ ಸುತ್ತಲಿನ ತಾಲ್ಲೂಕುಗಳು, ನೆರೆಯ ರಾಜ್ಯಗಳ ವ್ಯಾಪಾರಸ್ಥರು ಖರೀದಿಸುತ್ತಾರೆ.
‘ಅರ್ಧ ಎಕರೆಗೆ ನಾಟಿ ಅವರೆ ಬೆಳೆದಿದ್ದೇವೆ. ಉತ್ತಮ ಮಳೆಯಾದ ಕಾರಣ ಈ ಬಾರಿ ಒಳ್ಳೆಯ ಅವರೆ ಬೆಳೆಯಾಗಿದೆ. ಸುಮಾರು 600 ಕೆಜಿ ಸಿಗುವ ನಿರೀಕ್ಷೆಯಿದೆ. ಮುಂಜಾನೆಯ ವಾತಾವರಣ ಸಹ ಬೆಳೆಗೆ ಪೂರಕವಾಗಿದೆ. ಎಲ್ಲೆಡೆ ಬೆಳೆ ಬಂದು ಬೆಲೆ ಕುಸಿತ ಕಾಣಬಹುದಾದರೂ, ಗುಣಮಟ್ಟದ ಅವರೆಗೆ ಬೇಡಿಕೆ ಕುಸಿಯದು’ ಎನ್ನುತ್ತಾರೆ ಅಪ್ಪೇಗೌಡನಹಳ್ಳಿಯ ಎ.ಎಂ.ತ್ಯಾಗರಾಜ್.
ಜಿಕೆವಿಕೆಯ ವಿಜ್ಞಾನಿಗಳ ತಂಡ ಭೇಟಿ: ಕಳಪೆ ಬಿತ್ತನೆ ರಾಗಿ ಬೆಳೆ ಪರಿಶೀಲನೆ
ಬೆಂಗಳೂರಿನ ಜಿಕೆವಿಕೆಯ ವಿಜ್ಞಾನಿ ಹಾಗೂ ಅಧಿಕಾರಿಗಳ ತಂಡ ಶೂಕ್ರವಾರ ತಾಲ್ಲೂಕಿನ ವಿವಿದೆಡೆ ಭೇಟಿ ನೀಡಿ ಕಳಪೆ ಬಿತ್ತನೆ ರಾಗಿಯ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿ ರೈತರಿಂದ ಮಾಹಿತಿ ಪಡೆದು ರಾಗಿ ತೆನೆಯನ್ನು ಸಂಗ್ರಹಿಸಿ ತೆರಳಿದರು.
ಕೃಷಿ ಇಲಾಖೆಯಿಂದ ವಿತರಿಸಿದ್ದ ಬಿತ್ತನೆ ರಾಗಿಯನ್ನು ಬಿತ್ತಿದ ಹೊಲಗಳಲ್ಲಿ ರಾಗಿ ಬೆಳೆಯು ವಿಫಲವಾಗಿದೆ. ಸರಿಯಾಗಿ ತೆನೆ ಹೊಡೆಯದೆ ಬೆಳೆ ಕೈ ಕೊಟ್ಟಿದೆ.
ಒಂದು ತೆನೆ ಕಟಾವಿಗೆ ಬಂದಿದ್ದರೆ ಇನ್ನೊಂದು ತೆನೆಯಲ್ಲಿ ಇದೀಗ ರಾಗಿ ಹಾಲು ಕಟ್ಟುತ್ತಿದೆ. ಮತ್ತೊಂದು ತೆನೆಯಲ್ಲಿ ರಾಗಿ ಕಾಳೇ ಮೂಡಿಲ್ಲ. ಹೀಗೆ ಏರು ಪೇರಾಗಿದೆ.
ಹೀಗಾಗಿ ಬಿತ್ತನೆ ಬೀಜ ಕಳಪೆ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಸೂಚನೆಯಂತೆ ಜಿಕೆವಿಕೆಯ ವಿಜ್ಞಾನಿಗಳು ಹಾಗೂ ಕೃಷಿ ವಿಭಾಗದ ಹಿರಿಯ ಅಧಿಕಾರಿಗಳ ತಂಡ ಶಿಡ್ಲಘಟ್ಟ ತಾಲ್ಲೂಕಿನ ಹಲವು ಹೊಲಗಳಿಗೆ ಭೇಟಿ ನೀಡಿದರು.
ಈ ವೇಳೆ ಅಧಿಕಾರಿಗಳು, ವಿಜ್ಞಾನಿಗಳ ತಂಡಕ್ಕೆ ಮಾಹಿತಿ ನೀಡಿದ ರೈತರು, ಕೃಷಿ ಇಲಾಖೆಯಿಂದ ವಿತರಿಸಿದ ಬಿತ್ತನೆ ರಾಗಿಯನ್ನು ಬಿತ್ತಿದ ಹೊಲಗಳಲ್ಲಿ ಮಾತ್ರ ಬೆಳೆ ಕೈ ಕೊಟ್ಟಿದೆ. ಆದರೆ ಮನೆಯಲ್ಲಿದ್ದ ಬಿತ್ತನೆ ರಾಗಿ ಬಿತ್ತಿದ ಹೊಲಗಳಲ್ಲಿ ರಾಗಿ ಪೈರು ಚನ್ನಾಗಿ ಬೆಳೆದಿದ್ದು ರಾಗಿಯೂ ಸಿಗಲಿದೆ ಎಂದು ವಿವರಿಸಿದರು.
ಬಿತ್ತನೆ ರಾಗಿ ಕಳಪೆ ಆಗಿರುವುದೆ ಇದಕ್ಕೆ ಕಾರಣವಾಗಿದ್ದು ಕಳಪೆ ರಾಗಿ ಪೂರೈಸಿದ ಕಂಪನಿಗಳ ವಿರುದ್ದ ಕ್ರಮ ತೆಗೆದುಕೊಳ್ಳಬೇಕು, ರೈತರಿಗೆ ಪರಿಹಾರ ನೀಡಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.
ರೈತರಿಂದ ಮಾಹಿತಿ ಪಡೆದ ತಂಡ, ಬಿತ್ತನೆ ರಾಗಿಯ ಪ್ಯಾಕೇಟ್, ಬಿಲ್ಲುಗಳು, ಬ್ಯಾಗುಗಳನ್ನು ಹಾಗೂ ವಿಫಲ ಆದ ರಾಗಿ ಪೈರನ್ನು ಸಂಗ್ರಹಿಸಿಕೊಂಡರು.
ಪ್ರಯೋಗಾಲಯಕ್ಕೆ ಕಳುಹಿಸಿ ಬಿತ್ತನೆ ರಾಗಿಯ ಕಳಪೆ ಬಗ್ಗೆ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವುದಾಗಿ ತಂಡದ ಅಧಿಕಾರಿಗಳು ತಿಳಿಸಿದರು.
ಜಿಕೆವಿಕೆಯ ಸಹ ವಿಸ್ತರಣಾ ನಿರ್ದೆಶಕ ಡಾ.ನಾರಾಯಣಗೌಡ, ರಾಗಿ ತಳಿ ತಜ್ಞ ಡಾ.ರವಿಶಂಕರ್, ಬೇಸಾಯ ಶಾಸ್ತ್ರಜ್ಞ ಡಾ.ಮುರಳಿ, ಜಂಟಿ ನಿರ್ದೇಶಕ ಮಲ್ಲಿಕಾರ್ಜುನ್, ಅಧಿಕಾರಿಗಳಾದ ಮುರಳೀಧರ್, ಪಂಕಜ, ಮಾಲತೇಶ್, ಗೋಪಾಲರಾವ್, ರೈತರಾದ ಶಿವಮೂರ್ತಿ, ಬೂದಾಳ ಮಂಜುನಾಥ್, ರಾಮಾಂಜಿ, ಕೃಷ್ಣಯ್ಯ, ಮೂರ್ತಿ, ವೆಂಕಟೇಶ್, ಮುನಿರೆಡ್ಡಿ ಹಾಜರಿದ್ದರು.
ಗ್ರಾಮಗಳ ಅಭಿವೃದ್ಧಿ ಆಗದ ಹೊರತು ದೇಶದ ಅಭಿವೃದ್ಧಿ ಆಗದು
ಗ್ರಾಮೀಣ ಭಾಗದ ಜನರ ಬದುಕು ಸುಧಾರಣೆ ಆಗದ ಹೊರತು ನಾಡಿನ ಅಭಿವೃದ್ಧಿ ಅಸಾಧ್ಯ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಪಲಿಚೇರ್ಲು ಗ್ರಾಮದ ನಿರ್ಮಾಣ ಹಂತದ ಪಾರ್ವತಿ ಸಮೇತ ಈಶ್ವರನ ದೇವಾಲಯದ ಆವರಣದಲ್ಲಿ ಬಗುರುವಾರ ನಡೆದ ಕಾರ್ಯಕ್ರಮದಲ್ಲಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಿಂದ ನೀಡಿದ ೨ ಲಕ್ಷ ರೂಪಾಯಿಗಳ ಡಿಡಿಯನ್ನು ದೇವಾಲಯದ ಸಮಿತಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ದೇಶದ ಆರ್ಥಿಕ, ಸಾಮಾಜಿಕ, ಆರೋಗ್ಯ ಅಭಿವೃದ್ಧಿಯು ಗ್ರಾಮೀಣ ಭಾಗದ ಅಭಿವೃದ್ಧಿಯ ಮೇಲೆ ಅವಲಂಬಿಸಿರುವುದನ್ನು ಅರಿತ ಧರ್ಮಸ್ಥಳ ಸಂಘವು ಗ್ರಾಮೀಣ ಭಾಗದ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿದೆ ಎಂದರು.
ಗ್ರಾಮೀಣ ಭಾಗದ ಜನರ ಆರ್ಥಿಕ, ಆರೋಗ್ಯ, ಸಾಮಾಜಿಕ ಜೀವನ ಮಟ್ಟ ಸುಧಾರಣೆಗೆ ಅನೇಕ ಯೋಜನೆಗಳನ್ನು ರೂಪಿಸಿದೆ, ಅದರಲ್ಲೂ ಮಹಿಳೆಯ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಆ ಎಲ್ಲ ಯೋಜನೆಗಳ ಉಪಯೋಗವನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ಸಂಘದ ತಾಲ್ಲೂಕು ಯೋಜನಾಕಾರಿ ಮೋಹನ್ ಮಾತನಾಡಿ, ಸಂಸ್ಥೆಯಿಂದ ಹಮ್ಮಿಕೊಂಡ ವೃದ್ದಾಪ್ಯ ವೇತನ, ದೇವಾಲಯಗಳ ನಿರ್ಮಾಣ, ಜೀರ್ಣೋದ್ಧಾರ, ಕೆರೆಗಳ ಅಭಿವೃದ್ಧಿ, ಡೇರಿ ಕಟ್ಟಡಗಳಿಗೆ ಹಣಕಾಸಿನ ನೆರವು, ಕುಡಿತದ ಚಟ ಬಿಡಿಸುವ ಕಾರ್ಯಾಗಾರ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮುಂತಾದ ಯೋಜನೆಗಳನ್ನು ಅನುಷ್ಠಾನ ಮಾಡಿರುವುದಾಗಿ ವಿವರ ನೀಡಿದರು.
ಲಕ್ಕಹಳ್ಳಿಯ ಪಿಳ್ಳವೆಂಕಟಪ್ಪ ಅವರು ವೈಯಕ್ತಿವಾಗಿ ೨ ಲಕ್ಷ ರೂಪಾಯಿಗಳ ದೇಣಿಗೆಯನ್ನು ಈಶ್ವರನ ದೇವಾಲಯದ ನಿರ್ಮಾಣಕ್ಕಾಗಿ ಈ ಸಂದರ್ಭದಲ್ಲಿ ದೇವಾಲಯದ ಸಮಿತಿಯ ಮುಖಂಡರಿಗೆ ನೀಡಿದರು.
ಶ್ರೀಧರ್ಮಸ್ಥಳದ ಜಿಲ್ಲಾ ಯೋಜನಾಕಾರಿ ವಸಂತ್, ಸೋಮಶೇಖರ್, ಸುರೇಶ್, ಪಾರ್ವತಿಈಶ್ವರ ದೇವಾಲಯ ಸಮಿತಿಯ ಜಯರಾಮರೆಡ್ಡಿ, ಕನ್ನಪ್ಪನಹಳ್ಳಿ ಲಕ್ಷ್ಮೀನಾರಾಯಣ್, ನವೀನ್, ಮಾದವ, ಟಿ.ಎಂ.ದೇವರಾಜ್, ಸತೀಶ್, ನರಸಿಂಹಮೂರ್ತಿ ಹಾಜರಿದ್ದರು.
‘ಅಗ್ನಿ ಸಖಿ’ಯೊಂದಿಗೆ ಸಖ್ಯ ಬೆಳೆಸುತ್ತಿರುವ ಶಿಡ್ಲಘಟ್ಟ ತಾಲ್ಲೂಕಿನ ಮಹಿಳೆಯರು
ಮಹಿಳೆಯರ ಶಕ್ತಿ ಕೇಂದ್ರವಾದ ಅಡುಗೆ ಮನೆಗೆ ‘ಅಗ್ನಿ ಸಖಿ’ಯ ಆಗಮನವಾಗಿದೆ. ಹೆಂಗೆಳೆಯರ ಸಖ್ಯ ಬೆಳೆಸಲು ಆಗಮಿಸಿರುವುದು ಹೊಸ ರೀತಿಯ ಒಲೆ, ಅದುವೇ ಭಾರತೀಯ ವಿಜ್ಞಾನ ಸಂಸ್ಥೆಯ ಅನ್ವೇಷಣೆಯ ನೂತನ ‘ಅಗ್ನಿ ಸಖಿ’ ಒಲೆ.
ಜೈವಿಕ ಅನಿಲ, ಉರುವಲು ಸೌದೆ ಬಳಸುತ್ತಿದ್ದ ತಾಲ್ಲೂಕಿನ ಸುಮಾರು 130 ಅಡುಗೆ ಮನೆಗಳಲ್ಲಿ ಈಗ ಅಗ್ನಿ ಸಖಿಯಿಂದ ಅಡುಗೆ ತಯಾರಾಗುತ್ತಿದೆ. ಎಲ್.ಪಿ.ಜಿ ಯಂತೆ ಅಡುಗೆ ಮಾಡಬಹುದಾದ, ಇಂಧನ ಉಳಿತಾಯ ಮತ್ತು ಸುರಕ್ಷೆಯುಳ್ಳ ಈ ಒಲೆ ತನ್ನೆಡೆಗೆ ಎಲ್ಲರನ್ನೂ ಆಕರ್ಷಿಸುತ್ತಿದೆ.
ಸ್ಥಳೀಯವಾಗಿ ಸಿಗುವ ಕೃಷಿ ತ್ಯಾಜ್ಯ, ಅತ್ಯಂತ ಕಡಿಮೆ ಉರುವಲು ಬಳಸಿಕೊಂಡು ಅಡುಗೆ ಮಾಡಬಹುದಾಗಿದೆ. ಹಾಗಾಗಿ ಇಂಧನ ವೆಚ್ಚ ಶೂನ್ಯ. ಹೊಗೆ ಇಲ್ಲದೆ ಅಡುಗೆ ಮಾಡಬಹುದು. ಜಾಗದ ಉಳಿತಾಯ, ಸುರಕ್ಷಿತ, ಸುಲಭ ನಿರ್ವಹಣೆ ಸಾಧ್ಯವಿದೆ. ಒಲೆಯನ್ನು ಗುಣಮಟ್ಟದ ಇನ್ಸುಲೇಟ್ ವಸ್ತುಗಳಿಂದ ತಯಾರಿಸಿರುವುದರಿಂದ ಅಡುಗೆ ಮಾಡುವವರಿಗೆ ಶಾಖದ ಅನುಭವವಾಗದು.
ಈ ಒಲೆಯನ್ನು ಮೊಟ್ಟ ಮೊದಲು ಅಭಿವೃದ್ಧಿಪಡಿಸಿದ್ದು, ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ.ಎಚ್.ಎಸ್.ಮುಕುಂದ. ಆ ಒಲೆಯು ಪರಿಷ್ಕರಿಸಲ್ಪಟ್ಟು ಈಗ ಮೂರನೆಯ ಆವೃತ್ತಿಯ ಒಲೆಯು ಮನೆಮನೆಗಳಲ್ಲಿ ಪರಿಚಿತವಾಗುತ್ತಿದೆ.
ಇಷ್ಟೆಲ್ಲ ಅನುಕೂಲಕರವಾದ ‘ಅಗ್ನಿ ಸಖಿ’ ಯನ್ನು ತಾಲ್ಲೂಕಿನ ಗ್ರಾಮೀಣ ಭಾಗಕ್ಕೆ ಪರಿಚಯಿಸುತ್ತಿರುವವರು ಬೆಂಗಳೂರಿನ ಟೆಕ್ನಾಲಜಿ ಇನ್ಫರ್ಮಾಟಿಕ್ ಡಿಸೈನ್ ಎಂಡಿವರ್(ಟಿಐಡಿಇ) ಸಂಸ್ಥೆ. ಬೆಂಗಳೂರಿನ ಸಸ್ಟೈನ್ ಟೆಕ್ ತಯಾರಿಸುವ ಈ ಒಲೆಯನ್ನು ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪೆನಿಯ ಜತೆಗೂಡಿ ತಾಲ್ಲೂಕಿನ 30ಕ್ಕೂ ಹೆಚ್ಚು ಹಳ್ಳಿಗಳ 130 ಅಡುಗೆಮನೆಗಳಲ್ಲಿ ಅಳವಡಿಸಿದ್ದಾರೆ.
‘ನೆರೆಹೊರೆಯಲ್ಲಿ ಸುಲಭವಾಗಿ ಸಿಗುವ ಒಣಗಿದ ಕಟ್ಟಿಗೆ, ಜೈವಿಕ ಇಂಧನದಲ್ಲಿ ಒಲೆಯನ್ನು ಉರಿಸಬಹುದಾಗಿದೆ. ಹೊಗೆಯಿಲ್ಲದೆ ಹೊತ್ತಿಸಿ, ಉರಿಸಬಹುದು, ಮಸಿಯೂ ಆಗದು. ಶಾಖ ಹಾಗೂ ಗಾಳಿ ನಿಯಂತ್ರಣ ಸಾಧ್ಯವಿರುವುದರಿಂದ ಬಹಳ ಬೇಗ ಅಡುಗೆ ಮಾಡಬಹುದು’ ಎನ್ನುತ್ತಾರೆ ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜನಾರ್ಧನಮೂರ್ತಿ.
‘ತಾಲ್ಲೂಕಿನ ಅಬ್ಲೂಡು, ಮಳಮಾಚನಹಳ್ಳಿ, ಎಸ್.ದೇವಗಾನಹಳ್ಳಿ, ಸಾದಹಳ್ಳಿ, ಯಣ್ಣಂಗೂರು, ಬೆಳ್ಳೂಟಿ, ಹಿತ್ತಲಹಳ್ಳಿ, ಆನೂರು, ಕೆ.ಮುತ್ತುಗದಹಳ್ಳಿ, ಕುತ್ತಾಂಡಹಳ್ಳಿ, ಬೋದಗೂರು, ತಲದುಮ್ಮನಹಳ್ಳಿ, ವರದನಾಯಕನಹಳ್ಳಿ, ಮೇಲೂರು, ಕುತ್ತಾಂಡಹಳ್ಳಿ ಮುಂತಾದ ಹಳ್ಳಿಗಳಲ್ಲಿ ಈ ಒಲೆಯ ಅನುಕೂಲಗಳನ್ನು ವಿವರಿಸಿ ಪರಿಚಯಿಸಿದ್ದೇವೆ. 4,500 ರೂ ಬೆಲೆಯ ಈ ಒಲೆಯನ್ನು ರಯಾಯಿತಿ ದರಕ್ಕೆ ನೀಡುತ್ತಿದ್ದೇವೆ’ ಎಂದು ಅವರು ವಿವರಿಸಿದರು.
ಟೈಡ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸ್ವಾತಿ ಭೋಗ್ಲೆ, ‘ಗ್ರಾಮೀಣ ಭಾಗಗಳಲ್ಲಿ ಅದರಲ್ಲೂ ರೇಷ್ಮೆಯ ಅವಲಂಬಿತ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ತ್ಯಾಜ್ಯ ಉರುವಲು ಸಿಗುವುದರಿಂದ ಎಲ್.ಪಿ.ಜಿ ಗಿಂತಲೂ ಈ ಒಲೆ ಹಣ ಉಳಿಸುತ್ತದೆ. ನೀರನ್ನು ಕಾಯಿಸಲು, ಅಡುಗೆ ಮಾಡಲು ಅಷ್ಟೇ ಅಲ್ಲದೆ, ಸಾಗಾಣಿಕೆ ಸುಲಭವಾದ್ದರಿಂದ ಹುಳು ಸಾಕಾಣಿಕಾ ಮನೆಯನ್ನು ಶಾಖವಾಗಿರಿಸಲು ಸಹ ಈ ಒಲೆ ಬಳಸಬಹುದು’ ಎನ್ನುತ್ತಾರೆ.
ಟೈಡ್ ಸಂಸ್ಥೆಯ ಹಿರಿಯ ಯೋಜನಾಧಿಕಾರಿ ಆಶಿಕ್ ಅಹಮದ್ ಅವರ ಪ್ರಕಾರ ಇನ್ನೂ ಈ ಒಲೆಯನ್ನು ಮನೆಮನೆಗೆ ತಲುಪಿಸುವ ಕೆಲಸ ಬಹಳಷ್ಟಿದೆ. ಒಟ್ಟಾರೆ ಆರೋಗ್ಯಪೂರ್ಣ, ಹಣ ಉಳಿತಾಯದ, ಪರಿಸರ ಸಂರಕ್ಷಿತ ಹಾಗೂ ಸುರಕ್ಷಿತ ಅಡುಗೆ ಒಲೆ ನಮ್ಮ ಹೆಣ್ಣುಮಕ್ಕಳಿಗೆ ಸಿಗಬೇಕು ಎಂಬ ನಿಟ್ಟಿನಲ್ಲಿ ಕೆಲಸ ಸಾಗಿದೆ.
‘ಅಗ್ನಿ ಸಖಿ ಒಲೆಯನ್ನು ಮೂರು ತಿಂಗಳಿನಿಂದ ಬಳಸುತ್ತಿದ್ದೇನೆ. ಮನೆಯಲ್ಲಿ ಏಳು ಮಂದಿಗೆ ಅಡುಗೆ ಮಾಡಬೇಕು. ಈಗಂತೂ ನನ್ನ ಕೆಲಸ ಬಹಳಷ್ಟು ಸುಲಭವಾಗಿದೆ. ಅನ್ನ, ಸಾರು, ಮುದ್ದೆ, ಕಾಫಿ, ಟೀ, ಬೇಗ ಮಾಡಬಹುದು. ತೋಟದ ಹಾಗೂ ಇತರ ಕೆಲಸಗಳಿಗೆ ಹೆಚ್ಚು ಸಮಯ ಸಿಗುತ್ತಿದೆ. ಹಿಂದೆ ಪಾತ್ರಗಳೆಲ್ಲ ಮಸಿಯಿಂದ ಕಪ್ಪಾಗಿ ತೊಳೆಯುವುದೇ ಒಂದು ಕೆಲಸವಾಗಿತ್ತು. ಈಗ ಈ ಒಲೆಯಿಂದ ಹೊಗೆಯೂ ಇಲ್ಲ ಮಸಿಯೂ ಇಲ್ಲ’ ಎಂದು ತಮ್ಮ ಅನುಭವವನ್ನು ಅಬ್ಲೂಡಿನ ಶಿವಮ್ಮ ವಿವರಿಸಿದರು.
ಕಸದ ತೊಟ್ಟಿಗೆ ಸೇರಿದ ಮಕ್ಕಳ ಆರೋಗ್ಯ ಸುಧಾರಿಸುವ ಯೋಜನೆ
ಮಕ್ಕಳಲ್ಲಿ ಕಬ್ಬಿಣಾಂಶದ ಕೊರತೆಯನ್ನು ನಿವಾರಿಸುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಬ್ಬಿಣಾಂಶದ ಮತ್ತು ವಿಟಮಿನ್ ಎ ಮಾತ್ರೆಗಳನ್ನು ಸರ್ಕಾರಿ ಶಾಲೆಗಳಲ್ಲಿ ನೀಡಲಾಗುತ್ತಿದೆ. ಆದರೆ, ಶಿಡ್ಲಘಟ್ಟದ ಬಿ.ಆರ್.ಸಿ ಕೇಂದ್ರದ ಹಿಂಭಾಗದಲ್ಲಿರುವ ಕಸದ ಗುಂಡಿಯಲ್ಲಿ ರಾಶಿಯಾಗಿ ಬಿದ್ದಿರುವ ಈ ಮಾತ್ರೆಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳ ಅಸಮರ್ಪಕ ವಿತರಣೆಗೆ ಸಾಕ್ಷಿಯಾಗಿವೆ.
ಸ್ಥಳೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರದ ಯೋಜನೆ ಮತ್ತು ಲಕ್ಷಾಂತರ ರೂ ಹಣ ವ್ಯರ್ಥವಾಗಿವೆ. ಸರಬರಾಜು ಮಾಡಿರುವ ಮಾತ್ರೆಗಳು ಬೀದಿಗೆ ಬಿದ್ದಿವೆ.
ತಾಲ್ಲೂಕಿನಾದ್ಯಂತ ಸುಮಾರು ೨೭೦ ಸರ್ಕಾರಿ ಹಾಗು ೭೪ ಅನುದಾನಿತ ಶಾಲೆಗಳಿದ್ದು ಅಂದಾಜು ೩೦ ಸಾವಿರ ವಿದ್ಯಾರ್ಥಿಗಳು ಪ್ರಾಥಮಿಕ ಹಾಗು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಸರ್ಕಾರ ವಾರಕ್ಕೆ ಮೂರು ಬಾರಿಯಂತೆ ೩೬ ವಾರಗಳ ಕಾಲ ಕಬ್ಬಿಣಾಂಶದ ಮಾತ್ರೆ ಹಾಗೂ ವರ್ಷಕ್ಕೆರಡು ಭಾರಿ ವಿಟಮಿನ್ ಎ ಮತ್ತು ವರ್ಷಕ್ಕೆ ಎರಡು ಭಾರಿ ಆಲ್ಬೆಂಡಾಜೋಲ್ ಮಾತ್ರೆ ವಿತರಿಸಲು ಅಕ್ಷರದಾಸೋಹದ ಮೂಲಕ ಶಿಕ್ಷಣ ಇಲಾಖೆಗೆ ರವಾನಿಸಲಾಗಿದೆ.
ಆದರೆ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಬಿ ಆರ್ ಸಿ, ಸಿ ಆರ್ ಪಿ ಹಾಗು ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು ಸರ್ಕಾರದಿಂದ ಸರಬರಾಜಾಗಿರುವ ಕಬ್ಬಿಣಾಂಶದ ಮಾತ್ರೆಗಳು ಮತ್ತು ವಿಟಮಿನ್ ಎ ಮಾತ್ರೆಗಳನ್ನು ಯಾವುದೇ ಶಾಲೆಗೆ ನೀಡದೇ ಇಟ್ಟ ಸ್ಥಳದಲ್ಲಿಯೇ ಮಾತ್ರೆಗಳ ಅವಧಿ ಮುಗಿದಿದೆ. ಇದೀಗ ಅವಧಿ ಮುಗಿದ ಮಾತ್ರೆಗಳನ್ನು ನಗರದ ಬಿಆರ್ಸಿ ಕೇಂದ್ರದ ಹಿಂಭಾಗದಲ್ಲಿರುವ ಕಸದ ಗುಂಡಿಯಲ್ಲಿ ಬಿಸಾಕುವ ಮೂಲಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳ ಆರೋಗ್ಯ ಮತ್ತು ಸರ್ಕಾರದ ಮಹತ್ತರ ಯೋಜನೆಯೊಂದನ್ನು ಹಾಳುಮಾಡಿದ್ದಾರೆ.
‘ಮಕ್ಕಳಲ್ಲಿ ರಕ್ತಹೀನತೆ ಕಾಡಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಆರೋಗ್ಯ ಇಲಾಖೆಯ ಎನ್ಆರ್ಎಚ್ಎಂ ಯೋಜನೆಯಿಂದ ಮಕ್ಕಳಿಗೆ ಉಚಿತವಾಗಿ ಮಾತ್ರೆಗಳನ್ನು ವಿತರಿಸುತ್ತಿದೆ. ಆದರೆ ಸ್ಥಳೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಯಾವುದೇ ಶಾಲೆಗೂ ಮಾತ್ರೆಗಳನ್ನು ವಿತರಿಸದೇ ಕಸದ ಗುಂಡಿಗೆ ಹಾಕಿರುವ ಕ್ರಮದ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಕ್ರಮ ಜರುಗಿಸಬೇಕು’ ಎನ್ನುತ್ತಾರೆ ಸಾರ್ವಜನಿಕರು.
ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ವಿಚಾರಿಸಿದಾಗ, ‘ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಕೇವಲ ಎರಡೂವರೆ ತಿಂಗಳಾಗಿದೆ. ಅವಧಿ ಮುಗಿದ ಮಾತ್ರೆ ಕಸದ ತೊಟ್ಟಿಗೆ ಹಾಕಿರುವ ಸ್ಥಳಕ್ಕೆ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಬಿಸಾಕಿರುವ ಮಾತ್ರೆಗಳೆಲ್ಲವೂ ತುಂಬಾ ಹಳೆಯದ್ದಾಗಿದ್ದು ಈ ಹಿಂದಿನ ಅಧಿಕಾರಿಗಳು ಈ ಮಾತ್ರೆಗಳನ್ನು ಸಮರ್ಪಕವಾಗಿ ಉಪಯೋಗಿಸಲು ಅಧಿಕಾರಿಗಳಿಗೆ ಸೂಚಿಸಬೇಕಿತ್ತು. ಆದರೆ ಸಾಕಷ್ಟು ಮಾತ್ರೆಗಳು ಅವಧಿ ಮುಗಿಯುವವರೆಗೂ ಕಚೇರಿಯಲ್ಲಿಟ್ಟುಕೊಂಡು ಇದೀಗ ರಸ್ತೆಗೆ ಹಾಕಿರುವ ಕ್ರಮ ಸರಿಯಲ್ಲ’ ಎಂದು ಹೇಳಿದರು.
ಪಾಳು ಬಿದ್ದಿದ್ದ ಉದ್ಯಾನವನಕ್ಕೆ ಜೀವಕಳೆ– ಅಧಿಕಾರಿಗಳ ಸ್ವಂತ ಖರ್ಚಿನಲ್ಲಿ ಉದ್ಯಾನವನ ಅಭಿವೃದ್ಧಿ
ನಗರದ ಹೊರವಲಯದಲ್ಲಿದ್ದ ಏಕೈಕ ಉದ್ಯಾನವನ ನಿರ್ವಹಣೆ ಇಲ್ಲದೆ ಪಾಳು ಬಿದ್ದಿತ್ತು. ಹದಿನೈದು ವರ್ಷಗಳ ಹಿಂದೆ ನಿರ್ಮಿಸಿದ್ದ ಉದ್ಯಾನವನವನ್ನು ಇದೀಗ ನಗರಸಭೆಯ ಅಧಿಕಾರಿ, ಸಿಬ್ಬಂದಿ ಸ್ವಂತ ಖರ್ಚಿನಲ್ಲಿ ಅಭಿವೃದ್ಧಿ ಪಡಿಸಿ ಜೀವಕಳೆ ತುಂಬುತ್ತಿದ್ದು ಇದೀಗ ಸಾರ್ವಜನಿಕರನ್ನು ಉದ್ಯಾನವನ ಕೈ ಬೀಸಿ ಕರೆಯುತ್ತಿದೆ.
ನಗರದ ಹೊರವಲಯದ ಚಿಂತಾಮಣಿ ರಸ್ತೆಯಲ್ಲಿ ೨೦೦೨ರಲ್ಲಿ ಆಗಿನ ಪುರಸಭೆಯ ಆಡಳಿತಾಧಿಕಾರಿಯೂ ಆಗಿದ್ದ ಉಪವಿಭಾಗಾಧಿಕಾರಿ ಜಿ.ಎಸ್.ನಾಯಕ್ ಅವರ ಅವಧಿಯಲ್ಲಿ ಉದ್ಯಾನವನ್ನು ನಿರ್ಮಿಸಲಾಗಿತ್ತು.
ನಗರದ ವಾಸಿಗಳಷ್ಟೆ ಅಲ್ಲ ಸುತ್ತ ಮುತ್ತಲ ಗ್ರಾಮಸ್ಥರು, ವಾಯು ವಿಹಾರಿಗಳು ದಿನ ನಿತ್ಯವೂ ಉದ್ಯಾನವನಕ್ಕೆ ಭೇಟಿ ಕೊಡುತ್ತಿದ್ದರು. ಶನಿವಾರ ಭಾನುವಾರ ಸೇರಿದಂತೆ ರಜೆ ದಿನಗಳಂದು ಶಾಲಾ ಕಾಲೇಜು ಮಕ್ಕಳು ಈ ಉದ್ಯಾನವನದಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಿದ್ದರು.
ಆದರೆ ನಂತರದ ದಿನಗಳಲ್ಲಿ ನಗರಸಭೆ ಆಡಳಿತದ ನಿರ್ಲಕ್ಷ್ಯ, ನೀರಿನ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಉದ್ಯಾನವನ ನಿರ್ವಹಣೆ ಇಲ್ಲದೆ ಬೀಗ ಜಡಿಯಲಾಗಿತ್ತು.
ಆದರೆ ಇತ್ತೀಚೆಗಷ್ಟೆ ನಗರಸಭೆ ಆಯುಕ್ತರಾಗಿ ಅಧಿಕಾರವಹಿಸಿಕೊಂಡ ಜಿ.ಎನ್.ಚಲಪತಿ ಹಾಗೂ ಕೆಲ ಸಿಬ್ಬಂದಿ ಸ್ವಂತ ಖರ್ಚಿನಲ್ಲಿ ಪೌರನೌಕರರ ಸಹಾಯದಿಂದ ಇಡೀ ಉದ್ಯಾನವನ್ನು ಸ್ವಚ್ಚಗೊಳಿಸಿದ್ದಾರೆ. ಮಕ್ಕಳು ಆಡುವ ಆಟಿಕೆಗಳನ್ನು ಅಳವಡಿಸಿದ್ದಾರೆ.
ಹನಿ ನೀರಾವರಿ ವ್ಯವಸ್ಥೆ, ವಿದ್ಯುತ್ ಸಂಪರ್ಕವನ್ನು ನೀಡಿದ್ದು ಬೆಂಚುಗಳಿಗೆ ಸುಣ್ಣ ಬಣ್ಣ ಬಳಿದು ಕೆಟ್ಟು ನಿಂತಿದ್ದ ನೀರಿನ ಕಾರಂಜಿಯನ್ನು ದುರಸ್ತಿಪಡಿಸಿದ್ದಾರೆ.
ಇದೆಲ್ಲವನ್ನೂ ಅಧಿಕಾರಿಗಳೆ ಸ್ವಂತ ಖರ್ಚಿನಲ್ಲಿ ಮಾಡಿದ್ದಾರೆ, ಇನ್ನು ಶೌಚಾಲಯವನ್ನು ನಿರ್ಮಿಸಿ ಸಿಸಿ ಟಿವಿಗಳನ್ನು ಅಳವಡಿಸುವ ಕಾರ್ಯವನ್ನು ನಗರಸಭೆಯ ನಿಧಿ ಬಳಸಿಕೊಂಡು ಮಾಡಲು ನಿರ್ಧರಿಸಿದ್ದಾರೆ.
ಉದ್ಯಾನವನದ ನಿರ್ವಹಣೆ, ಕಾವಲುಗಾಗಿ ಪಾಳಿ ಲೆಕ್ಕದಲ್ಲಿ ಇಬ್ಬರು ಪೌರ ನೌಕರರನ್ನು ನೇಮಿಸಿ ಪ್ರತಿ ದಿನ ಬೆಳಗ್ಗೆ ೭.೩೦ ರಿಂದ ಸಂಜೆ ೬ ಗಂಟೆಯವರೆಗೂ ಸಾರ್ವಜನಿಕರಿಗೆ ಪ್ರವೇಶ ನೀಡಲು ಎಲ್ಲವೂ ಸಿದ್ದಗೊಂಡಿದೆ.
ಹತ್ತಾರು ವರ್ಷಗಳಿಂದಲೂ ಪಾಳು ಬಿದ್ದು ಬೀಗ ಜಡಿದಿದ್ದ ಉದ್ಯಾನವನವೀಗ ಸಾರ್ವಜನಿಕರು, ಪರಿಸರ ಪ್ರೇಮಿಗಳನ್ನು ಕೈ ಬೀಸಿ ಕರೆಯಲು ನವ ವಧುವಿನಂತೆ ಸಿಂಗಾರಗೊಂಡಿದೆ.
ನಗರಸಭೆ ಅಧಿಕಾರಿಗಳ, ಸಿಬ್ಬಂದಿಯ ಈ ಶ್ರಮ, ಪ್ರಯತ್ನದ ಬಗ್ಗೆ ಸಾರ್ವಜನಿಕರಲ್ಲಿ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.
ಹುಜುಗೂರು ಗ್ರಾಮದ ಸದಸ್ಯ ಸ್ಥಾನಕ್ಕೆ ಚುನಾವಣೆ
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಹುಜುಗೂರು ಗ್ರಾಮದ ಸದಸ್ಯ ಎಚ್.ಎಂ.ರಾಮಚಂದ್ರ ಎಂಬುವವರ ರಾಜೀನಾಮೆಯಿಂದ ತೆರವಾಗಿದ್ದ ಗಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿದೆ.
ಈ ಸಂಬಂಧವಾಗಿ ಜಿಲ್ಲಾಧಿಕಾರಿಗಳು ಚುನಾವಣಾಧಿಕಾರಿಯನ್ನಾಗಿ ತಾಲ್ಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕ ಶ್ರೀನಾಥ್ಗೌಡ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ದಿನೇಶ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ನಾಮಪತ್ರ ಸಲ್ಲಿಸಲು ನವೆಂಬರ್ ೩೦ ಕೊನೆಯ ದಿನವಾಗಿದ್ದು ಡಿಸೆಂಬರ್ ೧ ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಡಿಸೆಂಬರ್ ೪ ಕೊನೆಯ ದಿನವಾಗಿದ್ದು ಡಿಸೆಂಬರ್ ೧೭ ರಂದು ಮತದಾನ ಪ್ರಕ್ರಿಯೆ ನಡೆಯಲಿದೆ.
ಎನ್ ಪಿ ಎಸ್ ನೌಕರರ ಜಾಗೃತಿ ಸಮಾವೇಶ
ನಗರದ ಒಂದನೇ ನಗರ್ತಪೇಟೆಯ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ನವೆಂಬರ್ ೨೫ರ ಶನಿವಾರ ತಾಲ್ಲೂಕು ಸರ್ಕಾರಿ ಎನ್ಪಿಎಸ್ ನೌಕರರ ಜಾಗೃತಿ ಸಮಾವೇಶ ಹಾಗೂ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ ೧೧ ಗಂಟೆಗೆ ವಿಚಾರ ಸಂಕಿರಣ, ಸಮಾವೇಶವನ್ನು ಶಾಸಕ ಎಂ.ರಾಜಣ್ಣ ಉದ್ಘಾಟಿಸಲಿದ್ದು ಸರ್ಕಾರಿ ಎನ್ಪಿಎಸ್ ನೌಕರರ ತಾಲ್ಲೂಕು ಅಧ್ಯಕ್ಷ ವಿ.ಎನ್.ಗಜೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾಮುನಿರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ನಗರಸಭೆಯ ಪ್ರಭಾರ ಅಧ್ಯಕ್ಷೆ ಪ್ರಭಾವತಿ ಸುರೇಶ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಂಕ್ ಮುನಿಯಪ್ಪ, ಸತೀಶ್, ಡಾ.ಜಯರಾಮರೆಡ್ಡಿ, ತನುಜರಘು, ಎನ್ಪಿಎಸ್ ನೌಕರರ ರಾಜ್ಯಾಧ್ಯಕ್ಷ ಶಾಂತರಾಮ, ಗೌರವ ಸಲಹೆಗಾರರಾದ ನಾಗನಗೌಡ, ಉಪಾಧ್ಯಕ್ಷ ಸಿದ್ದಪ್ಪಸಂಗಪ್ಪನವರ ಭಾಗವಹಿಸಲಿದ್ದಾರೆ.
ಸವಲತ್ತುಗಳು ಅರ್ಹ ಫಲಾನುಭವಿಗೆ ಸಿಗುತ್ತಿಲ್ಲ
ಸರ್ಕಾರದಿಂದ ಬರುವ ಯಾವುದೇ ಸವಲತ್ತುಗಳು ಅರ್ಹ ಫಲಾನುಭವಿಗೆ ಸಿಗುತ್ತಿಲ್ಲ. ನಗರಸಭೆ ಕಾರ್ಯಾಲಯದಲ್ಲಿ ಮಧ್ಯವರ್ತಿಗಳ ಸಹಕಾರವಿಲ್ಲದೇ ಯಾವುದೇ ಕೆಲಸ ಕಾರ್ಯಗಳಾಗುತ್ತಿಲ್ಲ ಎಂದು ನಗರದ ಒಂದನೇ ವಾರ್ಡಿನ ಸದಸ್ಯ ಲಕ್ಷಯ್ಯ ಆರೋಪಿಸಿದರು.
ನಗರದ ನಗರಸಭಾ ಸಭಾಂಗಣದಲ್ಲಿ ಗುರುವಾರ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ತುರ್ತು ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಅವರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಒಂದನೇ ವಾರ್ಡಿನಲ್ಲಿ ರಾಷ್ಟೀಯ ಹೆದ್ದಾರಿ ಪ್ರಾಧಿಕಾರದಿಂದ ನಡೆಸುತ್ತಿರುವ ಕಾಮಗಾರಿಯ ವೇಳೆ ಕುಡಿಯುವ ನೀರಿನ ಪೈಪ್ ಲೈನ್ ಕಿತ್ತುಹಾಕಲಾಗಿ ಈ ಬಗ್ಗೆ ಸದಸ್ಯನಾದ ನಾನು ಪ್ರಶ್ನಿಸಿದರೆ ಬದಲಿ ಪೈಪು ಅಳವಡಿಸಲು ನಗರಸಭೆಗೆ ೫೦ ಲಕ್ಷ ಹಣ ನೀಡಿದ್ದೇವೆ ಎನ್ನುತ್ತಾರೆ ಈ ಬಗ್ಗೆ ಅಧಿಕಾರಿಗಳು ಸಭೆಗೆ ತಿಳಿಸಬೇಕು ಎಂದು ಒತ್ತಾಯಿಸಿದರು.
ನಗರಸಭೆ ವ್ಯಾಪ್ತಿಯಲ್ಲಿರುವ ನಿವೇಶನ ಹಾಗೂ ಮನೆಗಳಿಗೆ ಖಾತೆ ಮಾಡಿಕೊಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದು, ಈ ಬಗ್ಗೆ ಆಯುಕ್ತರು ತ್ವರಿತ ಕ್ರಮ ಜರುಗಿಸಬೇಕು ಎಂದು ನಗರಸಭೆ ಕೆಲ ಸದಸ್ಯರು ಒತ್ತಾಯಿಸಿದರು.
ನಗರಸಭೆಯಾಗಿ ಮೇಲ್ದರ್ಜೆಗೇರಿದಾಗ ನಗರಕ್ಕೆ ಹೊಂದಿಕೊಂಡಂತಿರುವ ಹಂಡಿಗನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕೆಲ ನಿವೇಶನ ಹಾಗೂ ಮನೆಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಲು ಈ ಹಿಂದೆ ಇದ್ದ ಆಯುಕ್ತರು ಖಾತೆ ಮಾಡಿಕೊಡುತ್ತಿದ್ದರು. ಆದರೆ ಇದೀಗ ಬಂದಿರುವ ಆಯುಕ್ತರು ಖಾತೆ ಮಾಡಲು ಅನುಮತಿ ನೀಡುತ್ತಿಲ್ಲ. ಈ ಬಗ್ಗೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ನಗರಸಭೆ ಪೌರಾಯುಕ್ತ ಚಲಪತಿ ಈ ಬಗ್ಗೆ ಪ್ರತಿಕ್ರಿಯಿಸಿ ಈ ಹಿಂದೆ ನಗರಸಭೆಯಲ್ಲಿ ಖಾತೆ ಮಾಡಿಕೊಡಲು ಅಧಿಕಾರಿಗಳು ಕೈ ಬರವಣಿಗೆಯಲ್ಲಿ ಕೊಡುತ್ತಿದ್ದರು. ಆದರೆ ಇದೀಗ ಸರ್ಕಾರದ ಆದೇಶದಂತೆ ಖಾತೆಗಳನ್ನು ಆನ್ಲೈನ್ ಮೂಲಕ ಮಾಡಲಾಗುತ್ತಿದ್ದು ಸರ್ಕಾರದ ನಿರ್ದೇಶನದಂತೆ ಅಗತ್ಯ ದಾಖಲಾತಿಗಳನ್ನು ಕಚೇರಿಗೆ ಸಲ್ಲಿಸಿದಲ್ಲಿ ಮಾತ್ರ ಖಾತೆ ಮಾಡಲಾಗುವುದು ಎಂದರು.
ಅಗತ್ಯ ದಾಖಲಾತಿಗಳಲ್ಲಿ ಒಂದಾದ ಭೂ ಪರಿವರ್ತನೆ ದಾಖಲೆ ಹಳೆಯ ನಗರದ ಯಾರ ಬಳಿಯೂ ಇಲ್ಲ ಹಾಗಾಗಿ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳು ಮುಂದಾಗಬೇಕು. ಈ ಬಗ್ಗೆ ಪೌರಾಯುಕ್ತರು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಜರುಗಿಸಲು ಮುಂದಾಗಬೇಕು ಎಂದು ಸದಸ್ಯರು ತಿಳಿಸಿದರು.
ಸಭೆಯಲ್ಲಿ ೨೦೧೫-೧೬ ಹಾಗು ೨೦೧೬-೧೭ ನೇ ಸಾಲಿನ ೧೪ ನೇ ಹಣಕಾಸು ಸಾಮಾನ್ಯ ಮೂಲ ಅನುಧಾನದಲ್ಲಿದಡಿ ಉಳಿಕೆಯಾಗಿರುವ ೨೯ ಲಕ್ಷ ರೂಗಳಿಗೆ ಕ್ರಿಯಾ ಯೋಜನೆ, ೧೩ ನೇ ಹಣಕಾಸು ಯೋಜನೆಯ ಸಾಮಾನ್ಯ ಮೂಲ ಅನುದಾನ ರಸ್ತೆ ಮತ್ತು ಸೇತುವೆ ನಿರ್ವಹಣೆ, ಸಾಮಾನ್ಯ ಕಾರ್ಯಾದಾರಿತ ಅನುದಾನದಡಿ ಉಳಿಕೆಯಾಗಿರುವ ೧೦ ಲಕ್ಷ ರೂಗಳಿಗೆ ಕ್ರಿಯಾಯೋಜನೆ, ಪೌರ ಕಾರ್ಮಿಕರ ಬೆಳಗಿನ ಉಪಹಾರ ಖಾಯಂ ಮತ್ತು ಹೊರಗುತ್ತಿಗೆ ನೌಕರರಿಗೂ ನೀಡುವ ಕುರಿತು ಹಾಗು ಶೇ. ೨೪.೧೦ ಮತ್ತು ಶೇ. ೭.೨೫, ಶೇ.೩ ರ ಅನುದಾನದಲ್ಲಿ ವಿವಿಧ ಕಲ್ಯಾಣ ಯೋಜನೆಗಳಿಗೆ ಫಲಾನುಭನವಿಗಳನ್ನು ಆಯ್ಕೆ ಮಾಡಿ ಸವಲತ್ತು ವಿತರಿಸಲು ಸಭೆಯಲ್ಲಿ ಸದಸ್ಯರ ಅನುಮೋದನೆ ಪಡೆಯಲಾಯಿತು.
ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ, ನಗರಸಭೆ ಸದಸ್ಯರು, ಸಿಬ್ಬಂದಿ ಹಾಜರಿದ್ದರು.
ಕನ್ನಡ ಭಾಷೆಯನ್ನು ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ
ಕನ್ನಡ ಭಾಷೆಯನ್ನು ಪ್ರೀತಿಸುತ್ತಾ ಅದನ್ನು ಇನ್ನಷ್ಟು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಜೆ.ವಿ.ವೆಂಕಟಸ್ವಾಮಿ ಹೇಳಿದರು.
ತಾಲ್ಲೂಕಿನ ಹೊಸಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ 4 ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ನಾಡು, ನುಡಿಯ ರಕ್ಷಣೆ ಹಾಗೂ ಗಡಿಭಾಗಗಳ ರಕ್ಷಣೆ ಪ್ರತಿಯೊಬ್ಬ ಯುವಕರ ಆದ್ಯ ಕರ್ತವ್ಯವಾಗಿದ್ದು ಕರ್ನಾಟಕದ ಗತಕಾಲದ ವೈಭವವನ್ನು ಸ್ಮರಿಸುವುದರೊಂದಿಗೆ ಮಾತೃ ಭಾಷೆಯ ಅಭಿವೃಧ್ದಿಗಾಗಿ ಎಲ್ಲರೂ ಶ್ರಮಿಸಬೇಕು ಎಂದರು. ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರುಗಳ ಚರಿತ್ರೆಗಳನ್ನು ತಿಳಿದುಕೊಳ್ಳುವಂತಹ ಪ್ರಯತ್ನ ಮಕ್ಕಳು ಮಾಡಬೇಕು ಎಂದರು.
ಜಿಲ್ಲಾ ಘಟಕದ ಉಪಾಧ್ಯಕ್ಷ ಎನ್.ಇ.ಜಗದೀಶ್ಬಾಬು ಮಾತನಾಡಿ, ಸದೃಢ ಹಾಗೂ ಸಮೃದ್ಧ ನಾಡನ್ನು ಕಟ್ಟಲು ಶ್ರಮಿಸಿದ ನಾಡಿನ ಕವಿಗಳು, ಕಲಾವಿದರು, ಸಾಹಿತಿಗಳು, ಸಂತರು ಹಾಗೂ ಕರ್ನಾಟಕದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದ ಎಲ್ಲಾ ಗಣ್ಯಮಾನ್ಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕನ್ನಡ ಸಂಸ್ಕೃತಿ ಉಳಿದು ಬೆಳೆಯಲು ಕೇವಲ ಹಬ್ಬಗಳನ್ನು ಆಚರಿಸುವುದರಿಂದ ಸಾಧ್ಯವಿಲ್ಲ. ಬದಲಿಗೆ ನಿರಂತರವಾಗಿ ಭಾಷೆಯನ್ನು ಬಳಸುವುದರಿಂದ ಭಾಷೆಯನ್ನು ಬೆಳೆಸಲು ಮುಂದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ನೃತ್ಯಗಳನ್ನು ಏರ್ಪಡಿಸಲಾಗಿತ್ತು.
ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಮಾರುತಿ, ಸಮಾಜ ಸೇವಕ ಎಚ್.ಸುರೇಶ್, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಪಿ.ಈ.ಕರಗಪ್ಪ, ಮುಖಂಡರಾದ ಲಕ್ಷ್ಮೀನಾರಾಯಣಪ್ಪ, ಪಾಪಣ್ಣ, ಕರುನಾಡ ಜಾಗೃತಿ ಸಮಿತಿ ರಾಜ್ಯ ಘಟಕದ ಆರ್.ವಿ.ಮಹೇಶ್ಕುಮಾರ್, ಮಹಮದ್ ಇಸ್ಮಾಯಿಲ್, ಮಂಜುನಾಥ್, ಮುನಿರಾಜು(ಕುಟ್ಟಿ), ಡಿ.ಸಿ.ಮುನಿರಾಜು, ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಎಚ್.ಎಂ. ಮುರಳಿ ಹಾಜರಿದ್ದರು.
ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳ ಪ್ರತಿಭಟನೆ
ನಗರದಲ್ಲಿ ಸ್ವಚ್ಚತೆ ಕಾಪಾಡುವಲ್ಲಿ ವಿಫಲವಾಗಿರುವ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳು ನಗರಸಭೆ ಕಾರ್ಯಾಲಯದ ಮುಂದೆ ಮಂಗಳವಾರ ಕೆಲ ಕಾಲ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಬಿ.ಆರ್.ರಾಮಚಂದ್ರ ಮಾತನಾಡಿ, ನಗರದ ೨೦ ನೇ ವಾರ್ಡಿನಲ್ಲಿ ಮುಚ್ಚಿಹೋಗಿರುವ ಚರಂಡಿ ತೆರವುಗೊಳಿಸುವಂತೆ ನಗರಸಭೆಗೆ ಮನವಿ ಸಲ್ಲಿಸಿದ್ದರೂ ಈವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಮಳೆ ಬಂದರೆ ಮನೆಗಳೊಳಗೆ ಮಳೆ ನೀರು ಸೇರಿದಂತೆ ರಸ್ತೆಯಲ್ಲಿರುವ ಕಸ ಕಡ್ಡಿ ಎಲ್ಲಾ ತುಂಬುತ್ತದೆ. ಸಾಲದೆಂಬಂತೆ ಮನೆಗಳ ಸುತ್ತಮುತ್ತಲೂ ಕಸದ ರಾಶಿಗಳಿದ್ದು ಇದರಿಂದ ಬೀರುವ ದುರ್ವಾಸನೆಯಿಂದ ಮನೆಯಲ್ಲಿ ಊಟ ಮಾಡಲು ಆಗುವುದಿಲ್ಲ. ಈ ಬಗ್ಗೆ ಪ್ರತಿನಿತ್ಯ ನಗರಸಭೆ ಕಾರ್ಯಾಲಯಕ್ಕೆ ಅಲೆಯುತ್ತಿದ್ದೇವಾದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದರು.
ಪ್ರತಿಭಟನಾಕಾರರು ನಗರಸಭೆ ಕಾರ್ಯಾಲಯಕ್ಕೆ ಬೀಗ ಜಡಿಯಲು ಮುಂದಾದಾಗ ನಗರಸಭೆ ಪೌರಾಯುಕ್ತ ಚಲಪತಿ ಹಾಗು ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
‘ತಮ್ಮ ಸಮಸ್ಯೆ ಏನಾದರೂ ಇದ್ದಲ್ಲಿ ನಮ್ಮ ಬಳಿ ಬಂದು ಚರ್ಚಿಸಿ, ಅದು ಬಿಟ್ಟು ಸರ್ಕಾರಿ ಕಚೇರಿಗಳಿಗೆ ಬೀಗ ಹಾಕಲು ಮುಂದಾಗುವುದು ಸರಿಯಲ್ಲ ಎಂದ ಆಯುಕ್ತರು, ಅಧ್ಯಕ್ಷರೂ ಸೇರಿದಂತೆ ಅಧಿಕಾರಿಗಳು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದು ಮುಚ್ಚಿಹೋಗಿರುವ ಚರಂಡಿಗಳನ್ನು ತೆರವುಗೊಳಿಸಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದರು.
ಆಮ್ ಆದ್ಮಿ ಪಕ್ಷದ ನಗರ ಘಟಕದ ಅಧ್ಯಕ್ಷ ಅಪ್ಸರ್ಪಾಷ, ಆಸೀಫ್, ಷಫೀ, ಪರಮೇಶ್, ಸುಹೇಲ್, ಸಾದಿಕ್ ಮತ್ತಿತರರು ಹಾಜರಿದ್ದರು.
ವಿಶ್ವಕರ್ಮ ಜಯಂತ್ಯುತ್ಸವ ನವೆಂಬರ್ 26 ರಂದು
ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶಿಡ್ಲಘಟ್ಟದಲ್ಲಿ ವಿಶ್ವಕರ್ಮ ಜಯಂತ್ಯುತ್ಸವವನ್ನು ನವೆಂಬರ್ 26 ರ ಭಾನುವಾರ ಶ್ರೀ ಕಾಳಿಕಾಂಬ ಕಮಠೇಶ್ವರ ಸಮುದಾಯಭವನದಲ್ಲಿ ಆಚರಿಸಲಾಗುತ್ತಿದೆ.
ರಾಜಘಟ್ಟದ ವಿಶ್ವಕುಂಡಲಿ ಯೋಗಾಶ್ರಮದ ಕಾಳೀತನಯ ಶ್ರೀ ಉಮಾಮಹೇಶ್ವರ ತೀರ್ಥ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಲಿದ್ದು, ಉದ್ಘಾಟನೆಯನ್ನು ಮಾಜಿ ಸಚಿವ ವಿ.ಮುನಿಯಪ್ಪ ಮಾಡಲಿದ್ದಾರೆ. ದೇವರ ಮೆರವಣಿಗೆ, ಧಾರ್ಮಿಕ ಸಭೆ, ಪ್ರತಿಭಾ ಪುರಸ್ಕಾರ, ಗಣ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಸಂಘದ ವತಿಯಿಂದ ತಿಳಿಸಿದ್ದಾರೆ.
ಬಿಜೆಪಿ ಸೇರುವಂತೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ – ಶಾಸಕ ಎಂ.ರಾಜಣ್ಣ ಸ್ಪಷ್ಟನೆ
ಬಿಜೆಪಿಗೆ ಸೇರುವಂತೆ ಬಿಜೆಪಿ ಮುಖಂಡರು ನನ್ನನ್ನು ಸಂಪರ್ಕಿಸಿರುವುದಾಗಿ ಮಾದ್ಯಮಗಳಲ್ಲಿ, ವ್ಯಾಟ್ಸಾಪ್ಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರ. ಅದರಲ್ಲಿ ಎಳ್ಳಷ್ಟು ಸತ್ಯವೂ ಇಲ್ಲ ಎಂದು ಶಾಸಕ ಎಂ.ರಾಜಣ್ಣ ಸ್ಪಷ್ಟಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಶಾಸಕ ಎಂ.ರಾಜಣ್ಣ ಪತ್ರಿಕಾಗೋಷ್ಟಿ ನಡೆಸಿ, ನನ್ನನ್ನು ಬಿಜೆಪಿ ಸೇರುವಂತೆ ಬಿಜೆಪಿ ಮುಖಂಡರು ನನಗೆ ಗಾಳ ಹಾಕಿರುವುದಾಗಿ ಮಾದ್ಯಮಗಳು, ವ್ಯಾಟ್ಸಾಪ್ಗಳಲ್ಲಿ ಹರಿದಾಡುತ್ತಿರುವುದು ಕೇವಲ ವದಂತಿಯಷ್ಟೆ ಎಂದು ಸ್ಪಷ್ಟಪಡಿಸಿದರು.
ನಾನು ರಾಜಕೀಯ ಆರಂಭಿಸಿದ್ದೇ ಜೆಡಿಎಸ್ನಿಂದ, ನನ್ನ ಬೆಳವಣಿಗೆಯೂ ಜೆಡಿಎಸ್ನಿಂದಲೆ ಆಗಿದೆ. ಹಾಗಾಗಿ ನಾನು ಜೆಡಿಎಸ್ ಬಿಟ್ಟು ಬೇರೆ ಪಕ್ಷಕ್ಕೆ ಸೇರುವುದು ಕನಸಿನಲ್ಲಿಯೂ ನಡೆಯದ ಮಾತು ಎಂದರು.
ನನ್ನನ್ನು ಬಿಜೆಪಿ ಅಥವಾ ಇನ್ನಾವುದೆ ಪಕ್ಷದ ಮುಖಂಡರು ರಾಜಕೀಯ ಕಾರಣಕ್ಕಾಗಿ ಭೇಟಿ ಮಾಡಿಲ್ಲ. ನನ್ನ ಮಗಳ ಮದುವೆ ಇರುವ ಕಾರಣ ಅಧಿವೇಶನದಲ್ಲಿ ಭಾಗವಹಿಸಲು ಆಗದ ಬಗ್ಗೆ ಪಕ್ಷದ ವರಿಷ್ಠರಿಗೂ ವಿಚಾರ ತಿಳಿಸಿದ್ದೇನೆ. ಮದುವೆ ಆಹ್ವಾನ ಪತ್ರಿಕೆ ನೀಡುವುದಕ್ಕಾಗಿ ಎಲ್ಲ ಪಕ್ಷದಲ್ಲಿನ ನನ್ನ ಸ್ನೇಹಿತರಿಗೂ, ನಮ್ಮ ಪಕ್ಷದ ಎಲ್ಲರಿಗೂ ಆಹ್ವಾನ ಪತ್ರಿಕೆ ನೀಡುತ್ತಿದ್ದೇನೆ. ಕೆಲ ಮಾದ್ಯಮಗಳಲ್ಲಿ ಹಾಗೂ ವ್ಯಾಟ್ಸಾಪ್, ಫೇಸ್ಬುಕ್ಗಳಲ್ಲಿ ನನ್ನನ್ನು ಬಿಜೆಪಿ ಪಕ್ಷಕ್ಕೆ ಸೆಳೆಯಲು ಕಸರತ್ತುಗಳು ನಡೆದಿವೆ ಎಂಬ ವದಂತಿಯನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ನಗರಸಭೆ ಹಿರಿಯ ಸದಸ್ಯ ಬಿ.ಅಫ್ಸರ್ ಪಾಷ, ಮುಖಂಡರಾದ ಎಸ್.ರಹಮತ್ತುಲ್ಲ, ಕನಕಪ್ರಸಾದ್, ಸೋಮಶೇಖರ್, ಸುರೇಂದ್ರ ಈ ಸಂದರ್ಭದಲ್ಲಿ ಹಾಜರಿದ್ದರು.
ಅಂಚೆ ಇಲಾಖೆಯ ಸಿಬ್ಬಂದಿಯಿಂದ ಜಾಥಾ
ಹೆಣ್ಣು ಮಕ್ಕಳ ಉನ್ನತ ಶಿಕ್ಷಣ ಹಾಗೂ ಮದುವೆಗಾಗಿ ‘ಹೆಣ್ಣು ಮಗು ಉಳಿಸಿ-ಹೆಣ್ಣು ಮಗು ಓದಿಸಿ’ ಎಂಬ ಘೋಷ ವಾಕ್ಯದೊಂದಿಗೆ ಸುಕನ್ಯಾ ಸಮೃದ್ಧಿ ಯೋಜನೆ ಕುರಿತು ಜಾಗೃತಿ ಮೂಡಿಸಲು ಅಂಚೆ ಇಲಾಖೆ ಪಣ ತೊಟ್ಟಿದೆ ಎಂದು ಚಿಕ್ಕಬಳ್ಳಾಪುರ ವಿಭಾಗೀಯ ಅಂಚೆ ನಿರೀಕ್ಷಕ ವೆಂಕಟರೋಣಪ್ಪ ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗೆ ಸುಕನ್ಯಾ ಸಮೃದ್ಧಿ ಯೋಜನೆ ಕುರಿತಂತೆ ವಿವರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ಜನರಿಗೆ ಮಾಹಿತಿ ನೀಡಿ ಅವರು ಮಾತನಾಡಿದರು.
ಪ್ರಸ್ತುತ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚಿನ ಬಡ್ಡಿ ದರ ಇದಾಗಿದ್ದು, ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರ ‘ಸುಕನ್ಯಾ ಸಮೃದ್ಧಿ ಖಾತೆ’ ಯೋಜನೆ ಆರಂಭಿಸಿದೆ. ಎಲ್ಲಾ ಅಂಚೆ ಕಚೇರಿಗಳಲ್ಲೂ ಖಾತೆ ತೆರೆಯಬಹುದಾಗಿದೆ.
10 ವರ್ಷದೊಳಗಿನ ಹೆಣ್ಣು ಮಗುವಿನ ಹೆಸರಲ್ಲಿ ಖಾತೆ ತೆರೆದು 21 ವರ್ಷಗಳ ಬಳಿಕ ಹಣ ಪಡೆಯುವ ಮಹತ್ವದ ಯೋಜನೆ ಇದಾಗಿದ್ದು, ಖಾತೆ ತೆರೆದ 14 ವರ್ಷಗಳವರೆಗೆ ಮಾತ್ರ ಹಣ ಜಮಾ ಮಾಡಬೇಕು. ಠೇವಣಿಯಲ್ಲಿ ಅರ್ಧದಷ್ಟು ಮೊತ್ತವನ್ನು ಹೆಣ್ಣು ಮಗುವಿನ ಉನ್ನತ ಶಿಕ್ಷಣ ಮತ್ತು ಮದುವೆಗೆ ಬಳಕೆ ಮಾಡಿಕೊಳ್ಳಬಹುದು. ಹಾಗಾಗಿ ಎಲ್ಲ ಅಂಚೆ ಕಚೇರಿಗಳಲ್ಲಿ ಫ್ಲೆಕ್ಸ್, ನಾಮಫಲಕಗಳನ್ನು ಹಾಕುವ ಮೂಲಕ ಗ್ರಾಹಕರನ್ನು ಯೋಜನೆಯತ್ತ ಸೆಳೆಯಲು ಅಂಚೆ ಇಲಾಖೆ ಮುಂದಾಗಿದೆ ಎಂದರು.
ದೇಶದೆಲ್ಲೆಡೆ ಅಂಚೆ ಕಚೇರಿ ಮತ್ತು ಬ್ಯಾಂಕ್ಗಳಲ್ಲಿ ಯೋಜನೆ ಆರಂಭಗೊಂಡಿದ್ದರೂ ರಾಜ್ಯದಲ್ಲಿ ಇದೆ ಮೊದಲು ಅಂಚೆ ಕಚೇರಿಗಳಲ್ಲಿ ಖಾತೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಒಂದು ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳ ಹೆಸರಲ್ಲಿ ಖಾತೆ ತೆರೆಯಬಹುದಾಗಿದ್ದು, ಖಾತೆ ಆರಂಭಕ್ಕೆ ಜನನ ಪ್ರಮಾಣ ಪತ್ರ ಹಾಗೂ ಪೋಷಕರ ವಿಳಾಸ ಮತ್ತು ಗುರುತಿನ ಚೀಟಿ ಪ್ರತಿ ಸಲ್ಲಿಸಬೇಕಿದೆ ಎಂದು ವಿವರಿಸಿದರು.
ಗೌರಿಬಿದನೂರು ವಿಭಾಗೀಯ ಅಂಚೆ ನಿರೀಕ್ಷಕ ಹನುಮಂತರಾಜು, ಶಿಡ್ಲಘಟ್ಟ ಪೋಸ್ಟ್ ಮಾಸ್ಟರ್ ಸಿ.ವಿ.ವೆಂಕಟಾಚಲಪತಿ, ಆಶಾ, ಪ್ರಸನ್ನಕುಮಾರ್, ಅಶ್ವತ್ಥನಾರಾಯಣ, ಗಜೇಂದ್ರ, ಮಂಜಪ್ಪ, ಪ್ರಸಾದ್, ರಾಮಾಂಜಿನಪ್ಪ, ಆಶಾಕುಮಾರ್, ರಾಮಪ್ಪ, ಗೋವಿಂದಪ್ಪ, ವೆಂಕಟೇಶಮೂರ್ತಿ, ಶ್ರೀನಿವಾಸ್, ಚಂದ್ರೇಗೌಡ ಹಾಜರಿದ್ದರು.
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಯಾರೂ ಅಡ್ಡಿಪಡಿಸಬಾರದು
ನಮ್ಮ ದೇಶದಲ್ಲೀಗ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕುತ್ತು ಬರುತ್ತಿದೆ ಎಂದು ಅಖಿಲ ಭಾರತ ರಾಷ್ಟ್ರ ಸೇವಾದಳ ಅಧ್ಯಕ್ಷ ಡಾ.ಸುರೇಶ್ ಖೈರ್ನಾರ್ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ. ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಬಿಎಂವಿ ಪ್ರೌಢಶಾಲೆಯ ರಾಷ್ಟ್ರ ಸೇವಾದಳ ಸೇನಾನಿಗಳ ಸಮಾವೇಶ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಸುವಿನ ಹೆಸರಿನಲ್ಲಿ ತಲೆಯ ಮೇಲಿನ ಟೋಪಿ ವಿಚಾರದಲ್ಲಿ, ಗಡ್ಡದ ಕುರಿತಾಗಿ, ಮನೆಯಲ್ಲಿ ತಯಾರಾಗುವ ಅಡುಗೆಯ ಬಗ್ಗೆ, ಕೊನೆಗೆ ಬಾಲಿವುಡ್ ನಲ್ಲಿ ತಯಾರಾದ ಚಲನಚಿತ್ರ ಪದ್ಮಾವತಿ ಕುರಿತಾಗಿಯೂ ಅನಗತ್ಯ ವಿವಾದ ಸೃಷ್ಟಿಸಲಾಗುತ್ತಿದೆ. ನನಗೆ ವೈಯಕ್ತಿಕವಾಗಿ ಬಾಲಿವುಡ್ ಚಲನಚಿತ್ರಗಳ ಬಗ್ಗೆ ಆಸಕ್ತಿಯಿಲ್ಲ. ಆದರೆ, ಪದ್ಮಾವತಿ ಚಲನಚಿತ್ರದ ವಿರುದ್ಧ ನಡೆದಿರುವ ವಿವಾದಕ್ಕೆ ಪ್ರತಿಕ್ರಿಯೆಯಾಗಿ, ಗೋವಾದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಬಾಲಿವುಡ್ ಒಗ್ಗಟ್ಟಿನಿಂದ ಬಹಿಷ್ಕರಿಸಿರುವುದನ್ನು ಅಭಿನಂದಿಸುತ್ತೇನೆ ಎಂದರು.
ಪ್ರಜಾಪ್ರಭುತ್ವದಲ್ಲಿ ಮಾಧ್ಯಮದ ಪಾತ್ರ ಬಹುದೊಡ್ಡದು. ರಾಣಾ ಅಯ್ಯುಬ್ ಎಂಬಾಕೆ ರಚಿಸಿರುವ ‘ಗುಜರಾತ್ ಫೈಲ್ಸ್’ ಕೃತಿಯನ್ನು ನಾನು ಸದಾ ಜೊತೆಗಿರಿಸಿಕೊಂಡಿರುತ್ತೇನೆ. ತನಿಖಾ ಪತ್ರಿಕೋದ್ಯಮದ ಮಾಸ್ಟರ್ ಪೀಸ್ ಈ ಕೃತಿ. ಮುಚ್ಚಿಟ್ಟ ಸತ್ಯಗಳನ್ನು ಇದರಲ್ಲಿ ತೆರೆದಿಡಲಾಗಿದೆ ಎಂದರು.
ಬಿ.ಎಂ.ವಿ. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಲ್.ಕಾಳಪ್ಪ ಮಾತನಾಡಿ, ಗ್ರಾಮೋದ್ಧಾರವು ಗಾಂಧೀಜಿಯ ಕನಸಾಗಿತ್ತು. ಗ್ರಾಮಗಳನ್ನು ಸಶಕ್ತಗೊಳಿಸುವುದು ನಮ್ಮ ಸಂವಿಧಾನದ ಮೂಲ ಆಶವಾಗಿದೆ. ಅದೇ ಆಶಯಗಳನ್ನು ರಾಷ್ಟ್ರ ಸೇವಾದಳ ಅಳವಡಿಸಿಕೊಂಡಿದೆ. ಪ್ರತಿವರ್ಷವೂ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರ ಸೇವಾದಳದ ಶಿಬಿರವನ್ನು ನಡೆಸುತ್ತೇವೆ. ದೈಹಿಕ ಕಸರತ್ತು, ಯೋಗ, ಪ್ರಾರ್ಥನೆ, ಆಟಪಾಠಗಳು, ಹಾಡುಗಳು, ನೃತ್ಯ, ಕಥೆ ಹೇಳುವುದು, ಉಪನ್ಯಾಸ, ಸಂವಾದ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ದೇಶ ಪ್ರೇಮ ಮೂಡಿಸಿ, ವ್ಯಕ್ತಿತ್ವ ರೂಪಿಸುತ್ತಿರುವುದಾಗಿ ಹೇಳಿದರು.
ವಿದ್ಯಾರ್ಥಿಗಳು ರಾಷ್ಟ್ರ ಸೇವಾದಳದ ಶಿಬಿರದಲ್ಲಿ ಕಲಿತಿದ್ದ ವ್ಯಾಯಾಮಗಳನ್ನು ಪ್ರದರ್ಶಿಸಿ, ಗೀತೆಗಳನ್ನು ಒಗ್ಗೂಡಿ ಹಾಡಿದರು.
ಬಿ.ಎಂ.ವಿ. ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ವಿ.ಮುನೇಗೌಡ, ರಾಷ್ಟ್ರ ಸೇವಾದಳದ ಪ್ರಧಾನ ಕಾರ್ಯದರ್ಶಿ ಬಾಬಾ ಸಾಹೇಬ್ ನಡಾಫ್, ಸಮಾಜವಾದಿ ಅಧರ್ಯಯನ ಕೇಂದ್ರದ ಬಾಬು ಹೆದ್ದೂರು ಶೆಟ್ಟಿ, ಪ್ರೊ.ಹನುಮಂತ, ಜಿ.ಎಸ್.ಸುಂದರ್, ಪ್ರೊ.ನಾಗರಾಜ್, ಆಶಾ ಮಲಾಟ್ಕರ್, ನಾಗರಾಜ್ ಬೇಲೂರು, ಅಪ್ಪಾಸಾಬ್ ಯರ್ನಾಳ್, ಡಾ.ಎಸ್.ಬಿ.ರವಿಕಲಾ ಕಾಳಪ್ಪ, ಅಂಬಿಕಾ, ದೇವರಾಜ್, ಚಿದಾನಂದ ಹಾಜರಿದ್ದರು.
ವಿದ್ಯುತ್ ವ್ಯತ್ಯಯ
ತಾಲ್ಲೂಕಿನ ಮೇಲೂರು ಉಪವಿದ್ಯುತ್ ವ್ಯಾಪ್ತಿಯಲ್ಲಿ ನವೆಂಬರ್ 21 ರ ಮಂಗಳವಾರ ದಿಂದ ನವೆಂಬರ್ 25 ರ ಶನಿವಾರದವರೆಗೂ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅನ್ಸರ್ ಬಾಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇಲೂರು ಉಪವಿದ್ಯುತ್ ವ್ಯಾಪ್ತಿಯಲ್ಲಿ ಬರುವ ಮೇಲೂರು, ಮಳ್ಳೂರು, ಕಂಬದಹಳ್ಳಿ, ಗಂಗನಹಳ್ಳಿ, ಅಂಕತಟ್ಟಿ, ಕಾಕಚೊಕ್ಕಂಡಹಳ್ಳಿ, ಭಕ್ತರಹಳ್ಳಿ, ಮುತ್ತೂರು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗುವುದರಿಂದ ಗ್ರಾಹಕರು ಸಹಕರಿಸಲು ಕೋರಿದ್ದಾರೆ.

