Home Blog Page 395

ಓದುವ ಅಭ್ಯಾಸವನ್ನು ಹವ್ಯಾಸವನ್ನಾಗಿ ಪರಿವರ್ತಿಸಿ

0

ಗ್ರಂಥಾಲಯಗಳು ಜ್ಞಾಮವನ್ನು ನೀಡುವ ಅಕ್ಷಯ ಭಂಡಾರಗಳು. ಪ್ರತಿಯೊಬ್ಬ ವಿದ್ಯಾರ್ಥಿಯೂ ಗ್ರಂಥಾಲಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಶಾಲೆಯ ಗ್ರಂಥಾಲಯವನ್ನು ಉದ್ಘಾಟಿಸಿ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿ ಅವರು ಮಾತನಾಡಿದರು.
ಗ್ರಂಥಾಲಯಗಳು ಅರಿವಿನ ಜ್ಞಾನದೀವಿಗೆಗಳು. ನಾವು ಬೇಕಾದಾಗ ಗ್ರಂಥಾಲಯಕ್ಕೆ ಹೋಗಿ ಬೇಕಾದ ಗ್ರಂಥಗಳನ್ನು ಓದಿ ಜ್ಞಾನ ಪಡೆಯಬಹುದು. ಓದುವ ಅಭ್ಯಾಸವನ್ನು ಹವ್ಯಾಸವನ್ನಾಗಿ ಪರಿವರ್ತಿಸಿಕೊಳ್ಳಬೇಕು. ಡಾ.ಬಿ.ಆರ್.ಅಂಬೇಡ್ಕರ್ ಲಂಡನ್ ನಲ್ಲಿ ಪ್ರತಿದಿನ 18 ಗಂಟೆಗಳ ಕಾಲ ಗ್ರಂಥಾಲಯದಲ್ಲಿ ಓದುತ್ತಿದ್ದರು. ಮೈಸೂರು ಎಸ್ಪಿ ರವಿ.ಡಿ.ಚನ್ನಣ್ಣನವರ್ ಐಪಿಎಸ್ ಪಾಸು ಮಾಡಲು ಗ್ರಂಥಾಲಯದಲ್ಲಿ ಅವರು ಹೆಚ್ಚು ಕಾಲ ಓದ್ದಿದ್ದು ಕಾರಣವಾಗಿದೆ. ಸಾಧಕರು ಉತ್ತಮ ಓದುಗರೆಂಬುದನ್ನು ಮರೆಯಬಾರದು ಎಂದು ಹೇಳಿದರು.
ಶಾಲೆಯಲ್ಲಿ ಮಕ್ಕಳ ಹಕ್ಕು ದಿನಾಚರಣೆಯ ಪ್ರಯುಕ್ತ ಮಕ್ಕಳ ಗ್ರಾಮ ಸಭೆ ಏರ್ಪಡಿಸಲಾಗಿತ್ತು. ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಎಂ.ಜಿ ಗೋಪಾಲ್ ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸಿದರು. ವಕೀಲ ರಾಮೇಗೌಡ ಅವರು ಮಕ್ಕಳ ದೌರ್ಜನ್ಯ ಮತ್ತು ಲಭ್ಯವಿರುವ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು. ವೆಂಕಟಾಚಲಪತಿ ಅವರು ಮಕ್ಕಳ ಸಹಾಯ ವಾಣಿಯ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಶಿಕ್ಷಕ ಶಿವಶಂಕರ್, ಶಿಕ್ಷಕರಾದ ವಿಠ್ಠಲ್, ಸವಿತಾ, ವಿನೋದಾ, ದೊಡ್ಡನಾಯ್ಕ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಳಿನಾ ಮಂಜುನಾಥ್, ಉಪಾಧ್ಯಕ್ಷ ನಾರಾಯಣಸ್ವಾಮಿ ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.
 

ದಕ್ಷಿಣ ಪಿನಾಕಿನಿ ನದಿ ಪುನಃಶ್ಚೇತನ ಅಭಿಯಾನ

0

ನಂದಿ ಬೆಟ್ಟದ ತಪ್ಪಲಿನಲ್ಲಿ ಜನಿಸಿ ತಮಿಳುನಾಡಿನ ಸಮುದ್ರಕ್ಕೆ ಸೇರುತ್ತಿರುವ ದಕ್ಷಿಣ ಪಿನಾಕನಿ ನದಿ ಹಿಂದೆ ಈ ಭಾಗದ ಜನರ ಜೀವನದಿಯಂತಿತ್ತು. ಇದರ ಪುನಃಶ್ಚೇತನ ಮಾಡುವ ಕೆಲಸಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ದಕ್ಷಿಣ ಪಿನಾಕಿನಿ ನದಿ ಪುನಃಶ್ಚೇತನ ಟ್ರಸ್ಟ್ ಅಧ್ಯಕ್ಷ ಎನ್.ವಿಶ್ವನಾಥನ್ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಸಮುದಾಯ ಭವನದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ದಕ್ಷಿಣ ಪಿನಾಕಿನಿ ನದಿ ಪುನಃಶ್ಚೇತನ ಅಭಿಯಾನದ ಬಗ್ಗೆ ರೈತರೊಂದಿಗೆ ಮಾತುಕತೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ನಂದಿಬೆಟ್ಟದ ವಾಯುವ್ಯ ದಿಕ್ಕಿನಲ್ಲಿರುವ ಚನ್ನರಾಯಸ್ವಾಮಿಬೆಟ್ಟದಲ್ಲಿ ಹುಟ್ಟುವ ದಕ್ಷಿಣ ಪಿನಾಕಿನಿ ನದಿಯ ಜಲಾನಯನ ಪ್ರದೇಶಗಳಲ್ಲಿ ಬರುವ ೧೨ ತಾಲ್ಲೂಕುಗಳ ಪೈಕಿ ಗ್ರಾಮೀಣ ಭಾಗದ ೯ ತಾಲ್ಲೂಕುಗಳ ಒಟ್ಟು ೭೦೦ ಕಿರು ಜಲಾನಯನ ಪ್ರದೇಶಗಳ ಅಭಿವೃದ್ಧಿಯನ್ನು ಈ ಅಭಿಯಾನದಲ್ಲಿ ಕೈಗೊಳ್ಳುತ್ತಿದ್ದೇವೆ ಎಂದರು.
ಈ ಹಿಂದೆ ಈ ಭಾಗದ ಜನರ ಜೀವನಾಡಿಯಾಗಿದ್ದ ದಕ್ಷಿಣ ಪಿನಾಕಿನಿ ನದಿ ಪಾತ್ರ ಮುಚ್ಚಿ ಹೋಗಿರುವುದರಿಂದ ಈ ಭಾಗದಲ್ಲಿ ಬೀಳುವ ಮಳೆ ಶೇಖರಣೆಯಾಗದೇ ವ್ಯರ್ಥವಾಗಿ ಹರಿದುಹೋಗುತ್ತಿದೆ. ಹಾಗಾಗಿ ಹರಿದು ಹೋಗುವ ನೀರನ್ನು ನದಿ ಭಾಗದಲ್ಲಿ ಸಂರಕ್ಷಿಸಿ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ನದಿ ಪುನಃಶ್ಚೇತನ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.
ದಕ್ಷಿಣ ಪಿನಾಕಿನಿ ನದಿ ಪುನಃಶ್ಚೇತನ ಟ್ರಸ್ಟ್ನ ಸದಸ್ಯ ಸಾಹುಕಾರ್ ಮಾತನಾಡಿ, ಮುಂಬರುವ ಡಿಸೆಂಬರ್ ಕೊನೆಯ ವಾರ ಅಥವ ಜನವರಿ ಮೊದಲನೆ ವಾರ ನದಿ ಪುರ್ನಶ್ಚೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದ ಸ್ಥಳೀಯ ರೈತರು ಸೇರಿದಂತೆ ನಾಗರಿಕರು ನದಿ ಪುನಃಶ್ಚೇತನ ಕಾರ್ಯಕ್ಕೆ ಬೆಂಬಲ ನೀಡಬೇಕು ಎಂದರು. ಲಕ್ಷಾಂತರ ಜನರ ಜೀವನಾಡಿಯಾಗಿದ್ದ ದಕ್ಷಿಣ ಪಿನಾಕಿನಿ ನದಿ ಪುನಃಶ್ಚೇತನಗೊಳಿಸುವುದರಿಂದ ಮುಂದಿನ ತಲೆಮಾರಿಗೆ ಉತ್ತಮ ಪರಿಸರ ಮತ್ತು ಜಲಮೂಲಗಳನ್ನು ಉಳಿಸಿ ಕೊಡಬೇಕಾದ ಅಗತ್ಯತೆ ಪ್ರತಿಯೊಬ್ಬರ ಮೇಲಿದೆ ಎಂದರು.
ನಿವೃತ್ತ ಕೃಷಿ ವಿಜ್ಞಾನಿ ಪ್ರಭಾಕರಶೆಟ್ಟಿ ಮಾತನಾಡಿ, ಈ ಹಿಂದೆ ಪ್ರತಿ ನೂರು ಜನಗಳಿಗೆ ೫೦೦ ಮರಗಳಿದ್ದವು. ಆದರೆ ಇದೀಗ ಪ್ರತಿ ನೂರು ಜನರಿಗೆ ಕೇವಲ ೧೭ ಮರಗಳಿವೆ. ಇದರಿಂದ ಸಕಾಲದಲ್ಲಿ ಮಳೆಗಳಾಗುತ್ತಿಲ್ಲ. ಹಾಗಾಗಿ ಮೊದಲು ಅರಣ್ಯ ಪುನರುಜ್ಜೀವನಕ್ಕೆ ಮೊದಲ ಆಧ್ಯತೆ ನೀಡಲಾಗುತ್ತದೆ. ನಂತರ ನದಿ ಕಾಲುವೆಗಳ ಅಗಲೀಕರಣ ಸೇರಿದಂತೆ ಕೆರೆಗಳ ಒತ್ತುವರಿ ತೆರವು ಹಾಗು ಕೆರೆ ಪುನಃಶ್ಚೇತನಕ್ಕೆ ನಾಗರಿಕರ ಸಹಕಾರದೊಂದಿಗೆ ಮುಂದಾಗಲಿದ್ದೇವೆ ಎಂದರು.
ಟ್ರಸ್ಟ್ನ ಎಂ.ಎಸ್.ಸ್ವಾಮಿನಾಥನ್, ಶ್ಯಾಂ ಪ್ರಸಾದ್, ಸರ್ವೇಶ್, ತಂಗರಾಜು, ವೆಂಕಟರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಮುನಾ ಧರ್ಮೇಂದ್ರ, ಸದಸ್ಯ ಆರ್.ಎ.ಉಮೇಶ್, ರೂಪೇಶ್, ವಂದೇ ಭಾರತಂ ನ ಅಧ್ಯಕ್ಷ ಬಿ.ಎಚ್.ಲೋಕೇಶ್, ವಿ.ಎಸ್.ಪ್ರಕಾಶ್, ಪ್ರದೀಪ್, ಗಣಪತಿ, ಶೋಭಾ ಕಾರಂತ್, ಗಾಯಿತ್ರಿ, ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ಎನ್.ಮಂಜುಳ, ಕಾರ್ಯದರ್ಶಿ ಸಿದ್ದಣ್ಣ, ಮಳ್ಳೂರು ಹರೀಶ್ ಸಂವಾದ ಸಭೆಯಲ್ಲಿ ಹಾಜರಿದ್ದರು.
 

ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮಕ್ಕಳಿಂದ ಪದಕಗಳ ಬೇಟೆ

0

ನಗರದ ದಿವ್ಯಭಾರತ್ ಕರಾಟೆ ಡೋ ಅಸೋಸಿಯೇಷನ್ ವಿದ್ಯಾರ್ಥಿಗಳು ಗೌರಿಬಿದನೂರಿನ ಜ್ಞಾನಜ್ಯೋತಿ ಶಾಲೆಯಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಓಪನ್ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ 21 ಪದಕಗಳನ್ನು ಪಡೆದಿದ್ದಾರೆ.
300 ಮೀಟರ್, 500 ಮೀಟರ್, 800 ಮೀಟರ್ಗಳ ಎರಡು ವಿಭಾಗಗಳಲ್ಲಿ ವಿವಿಧ ವಯೋಮಾನಗಳ ಮಕ್ಕಳು ಭಾಗವಹಿಸಿ ಹೆಚ್ಚು ಪದಕಗಳನ್ನು ಪಡೆಯುವ ಮೂಲಕ ರೋಲಿಂಗ್ ಶೀಲ್ಡ್ ತಮ್ಮದಾಗಿಸಿಕೊಂಡಿದ್ದಾರೆ ಎಂದು ತರಬೇತುದಾರ ಅರುಣ್ ಕುಮಾರ್ ತಿಳಿಸಿದ್ದಾರೆ.
ತಿಲಕ್, ಸಿ.ಚೇತನ್, ಶ್ರೀಶಾಂತ್, ಪವನ್, ನಂದೀಶ್, ಹರ್ಷಿತ್, ಶಿವವಿಕ್ಯಾತ್, ಹೇಮಂತ್ ಮತ್ತಿತತರು ಪದಕಗಳನ್ನು ಗಳಿಸಿದ್ದಾರೆ.
 

ಯುವಕರು ಸರ್ಕಾರಿ ಶಾಲೆಗಳಿಗೆ ಬೆನ್ನೆಲುಬಾಗಿ

0

ಗ್ರಾಮಗಳಲ್ಲಿ ಯುವಕರು ಸರ್ಕಾರಿ ಶಾಲೆಗಳಿಗೆ ಬೆನ್ನೆಲುಬಾಗಿದ್ದು, ಅಗತ್ಯ ಸೌಕರ್ಯ ನೀಡುವ ಕೆಲಸವೂ ಕೂಡ ಕನ್ನಡ ಕಟ್ಟುವ ಕೆಲಸವೇ ಆಗಿದೆ ಎಂದು ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಯಣ್ಣಂಗೂರು ಗ್ರಾಮದಲ್ಲಿ ಭಾನುವಾರ ಶ್ರೀ ಜೈ ಭುವನೇಶ್ವರಿ ಯುವಕ ಸಂಘ ಸರ್ಕಾರಿ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳನ್ನು ಗಟ್ಟಿಗೊಳಿಸುವುದು, ಮಕ್ಕಳ ದಾಖಲಾತಿಗೆ ಸಹಕರಿಸುವುದು, ಕನ್ನಡ ಫಲಕಗಳನ್ನು ಹಾಕುವುದು, ಕನ್ನಡವನ್ನು ಶ್ರೀಮಂತಗೊಳಿಸಿದ ಸಾಧಕರ ಹೆಸರುಗಳನ್ನು ರಸ್ತೆ, ಬೀದಿ, ಓಣಿಗಳಿಗೆ ಇಡುವುದು, ಓದುವ ಹವ್ಯಾಸವನ್ನು ಬೆಳೆಸುವುದು, ಸಾಂಸ್ಕೃತಿಕ ಪರಿಸರವನ್ನು ಗ್ರಾಮಗಳಲ್ಲಿ ಮೂಡಿಸುವುದು ಎಲ್ಲವೂ ಕನ್ನಡವನ್ನು ಕಟ್ಟಿ ಬೆಳೆಸುವ ಕೆಲಸವೇ ಆಗಿದೆ. ಯಣ್ಣಂಗೂರು ಗ್ರಾಮದ ಯುವಕರು ಶಾಲಾ ವಿದ್ಯಾರ್ಥೀಗಳಿಗೆ ಪುಸ್ತಕ, ಲೇಖನಿ ಸಾಮಗ್ರಿಗಳನ್ನು ನೀಡುವ ಮೂಲಕ ಮಾದರಿ ಹೆಜ್ಜೆಯನ್ನಿಟ್ಟಿದ್ದಾರೆ. ಇದು ಮುಂದುವರೆಯಲಿ ಎಂದು ಹೇಳಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್ ಮಾತನಾಡಿ, ಕನ್ನಡ ನಾಡು, ನುಡಿಯನ್ನು ಉಳಿಸುವ ನಿಟ್ಟಿನಲ್ಲಿ ಯುವಜನತೆ ಒಗ್ಗಟ್ಟಾಗಬೇಕು. ನಮ್ಮ ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಉಳಿಸಿ ಬೆಳೆಸುವಂತಹ ಕಾರ್ಯಗಳಾಗಬೇಕು. ರಾಜ್ಯೋತ್ಸವ ಸಮಾರಂಭಗಳು ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗಬಾರದು. ವರ್ಷದುದ್ದಕ್ಕೂ ನಮ್ಮ ನಡವಳಿಕೆಯ ಮೂಲಕ ಕನ್ನಡತನವನ್ನು ಉಳಿಸಿಕೊಳ್ಳೋಣ ಎಂದರು.
ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ, ಲೇಖನಿ ಸಾಮಗ್ರಿಗಳನ್ನು ಶ್ರೀ ಜೈ ಭುವನೇಶ್ವರಿ ಯುವಕ ಸಂಘದ ವತಿಯಿಂದ ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮಣಮೂರ್ತಿ, ಈರಪ್ಪ, ಗ್ರಾಮಸ್ಥರಾದ ಚನ್ನೇಗೌಡ, ಗಣೇಶಪ್ಪ, ಶ್ರೀ ಜೈ ಭುವನೇಶ್ವರಿ ಯುವಕ ಸಂಘದ ಸದಸ್ಯರಾದ ಅಶೋಕ್, ರಘು, ಪ್ರಶಾಂತ, ಹರೀಶ್, ಗಿರೀಶ್, ರಾಘವೇಂದ್ರ, ಸುರೇಂದ್ರ, ಲೋಕೇಶ್, ಮಂಜೇಶ್, ಪ್ರದೀಪ್, ಕುಮಾರ್, ಶ್ರೀಧರ್, ಬಚ್ಚೇಗೌಡ, ಅನಿಲ್, ರವಿ, ಶಶಿ, ಆನಂದ, ನಿತಿನ್, ಪಿಳ್ಳೇಗೌಡ ಹಾಜರಿದ್ದರು.
 

ಮುಖಪುಟ ವಿನ್ಯಾಸ ಒಂದು ವಿಶಿಷ್ಟ ಕಲೆ

0

ಮುಖಪುಟ ವಿನ್ಯಾಸವೆಂಬುದನ್ನು ಒಂದು ವಿಶಿಷ್ಟ ಕಲೆ. ಚಿತ್ರಕಲೆಯಂತೆಯೇ ಇದೂ ಕೂಡ ಕಲಾಕೃತಿಯೆಂಬಂತೆ ಒಪ್ಪಬಹುದು. ಮುಖಪುಟ ಕಲೆಯಲ್ಲಿ ಹೇರಳವಾದ ಪ್ರಯೋಗಗಳು ನಡೆಯುತ್ತಿವೆ ಎಂದು ಮುಖಪುಟ ವಿನ್ಯಾಸಕ ಅಜಿತ್ ಕೌಂಡಿನ್ಯ ತಿಳಿಸಿದರು.
ನಗರದ ಕ್ರೆಸೆಂಟ್ ವಿದ್ಯಾಸಂಸ್ಥೆಯಲ್ಲಿ ಶನಿವಾರ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಆಯೋಜಿಸಿದ್ದ ದಿವಂಗತ ವಿಜ್ಞಾನಿ ಹರೀಶ್ ಆರ್ ಭಟ್ ಅವರ ಶ್ರದ್ಧಾಂಜಲಿ ಹಾಗೂ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮುಖಪುಟ ವಿನ್ಯಾಸಗಳನ್ನು ಪ್ರದರ್ಶಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ವಿವಿಧ ಪಕ್ಷಿಗಳ ಛಾಯಾಚಿತ್ರಗಳನ್ನು ವೀಕ್ಷಿಸಿದರು

ಮುಖಪುಟ ವಿನ್ಯಾಸ ಮಾಡುವುದು ಕೂಡ ಅತ್ಯಂತ ಸೃಜನಶೀಲತೆಯಿಂದ ಕೂಡಿರುತ್ತದೆ. ಕಲೆಯ ಅಭಿವ್ಯಕ್ತಿಗೆ ತಂತ್ರಜ್ಞಾನವನ್ನು ಪೂರಕವಾಗಿ ಬಳಸಿಕೊಳ್ಳಬಹುದು. ಆದರೆ ತಂತ್ರಜ್ಞಾನಕ್ಕೂ ಮಿಗಿಲಾಗಿ ಕಲಾವಿದನ ಆಲೋಚನಾ ಕ್ರಮ, ಸೃಜನಶೀಲತೆ, ಚಿಂತನೆ, ಬಣ್ಣಗಳ ಆಯ್ಕೆ, ಅಭಿವ್ಯಕ್ತಿ ಎಲ್ಲವೂ ಬಹಳ ಮುಖ್ಯ. ಮುಖಪುಟ ರಚಿಸುವಾಗ ಹಲವಾರು ಸವಾಲುಗಳಿರುತ್ತವೆ. ಓದುಗ ಖರೀದಿಸಲು ಆಕರ್ಷಕವಾಗಿರುವಂತೆಯೇ ಪುಸ್ತಕದ ಆಶಯವನ್ನೂ ಅದು ಬಿಂಬಿಸಬೇಕು ಎಂದು ಹೇಳಿದರು.
ಮುಖಪುಟ ವಿನ್ಯಾಸ ಬೆಳೆದು ಬಂದ ಬಗೆ, ಕಲಾವಿದನಾಗಿ ತಮಗೆ ಆದ ಅನುಭವಗಳ ಬಗ್ಗೆ ಅವರು ವಿವರಿಸಿದರು.
ವಿದ್ಯಾರ್ಥಿಗಳು ವಿವಿಧ ಪಕ್ಷಿಗಳ ಛಾಯಾಚಿತ್ರಗಳನ್ನು ವೀಕ್ಷಿಸಿದರು

‘ಶಿಡ್ಲಘಟ್ಟ ತಾಲ್ಲೂಕಿನ ಜೀವವೈವಿಧ್ಯ’ ಎಂಬ ವಿಷಯವಾಗಿ ಮಾತನಾಡಿದ ವನ್ಯಜೀವಿ ಛಾಯಾಗ್ರಾಹಕ ಡಿ.ಜಿ.ಮಲ್ಲಿಕಾರ್ಜುನ, ಹಕ್ಕಿಗಳು, ಹಾವುಗಳು, ಕೀಟಗಳು ಮುಂತಾದ ಚಿತ್ರಗಳನ್ನು ಸ್ಲೈಡ್ ಶೋ ಮೂಲಕ ಪ್ರದರ್ಶಿಸಿ ವಿವರಿಸಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ದಿವಂಗತ ವಿಜ್ಞಾನಿ ಹರೀಶ್ ಆರ್ ಭಟ್ ಅವರ ಸಾಧನೆ, ಕೊಡುಗೆ, ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಅವರು ನೀಡಿರುವ ಪ್ರೇರಣೆ ಹಾಗೂ ಅವರ ಒಡನಾಟದ ಬಗ್ಗೆ ಹೇಳಿದರು.
ಕ್ರೆಸೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ತಮೀಮ್ ಅನ್ಸಾರಿ, ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಹೋಟೆಲ್ ವ್ಯವಸ್ಥಾಪಕ ವಿ.ವೆಂಕಟರಮಣ, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.
 

ಭಾಷೆ, ಸಂಸ್ಕೃತಿ ಉಳಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ

0

ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವಂತಹ ಹೊಣೆಗಾರಿಕೆ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ ಎಂದು ಎಎಸ್ಐ ನಾರಾಯಣಸ್ವಾಮಿ ಹೇಳಿದರು.
ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿತ್ತನಹಳ್ಳಿ ಗ್ರಾಮದ ಬಸವೇಶ್ವರ ದೇವಾಲಯದ ಆವರಣದ ಎಂ.ಬಿ.ನರಸಿಂಹಮೂರ್ತಿ ವೃತ್ತದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು.

ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವೀರಗಾಸೆ ಕಲಾವಿದರ ಕಲಾಪ್ರದರ್ಶನದ ಭಂಗಿ

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ಹಿರಿಮೆಯನ್ನು ಎಲ್ಲೆಡೆ ಸಾರಬೇಕಾಗಿದೆ. ದೇಶದಲ್ಲಿ ಹಲವಾರು ಭಾಷೆಗಳಿದ್ದರು 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಕನ್ನಡ ಭಾಷೆ, ಉತ್ತಮ ಲಿಪಿಯನ್ನು ಹೊಂದಿದೆ. ಇಂತಹ ಶ್ರೀಮಂತ ಭಾಷೆಯನ್ನು ಅಭಿವೃದ್ಧಿ ಪಡಿಸಿ, ಅನ್ಯಭಾಷಿಗರಿಗೂ ಕಲಿಸುವ ಮೂಲಕ ನಮ್ಮ ತನವನ್ನು ಉಳಿಸಿಕೊಳ್ಳಬೇಕಾಗಿದೆ. ಇತರೆ ಎಲ್ಲಾ ಭಾಷೆಗಳನ್ನು ಪ್ರೀತಿಸೊಣೆ ಕನ್ನಡ ಭಾಷೆಯನ್ನು ಬೆಳೆಸೊಣವೆಂದರು.
ಮುಖಂಡ ಎಂ.ಬಿ.ನರಸಿಂಹಮೂರ್ತಿ ಮಾತನಾಡಿ, ಪ್ರತಿಯೊಬ್ಬರೂ ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ಅನೇಕ ಮಂದಿ ಕನ್ನಡದ ಕೆಲಸವನ್ನು ಮಾಡಿದ್ದಾರೆ. ಆ ಕೆಲಸವನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ಕರ್ತವ್ಯವವಾಗಿದೆ. ಆಂಗ್ಲಭಾಷೆಯ ವ್ಯಾಮೋಹದಿಂದಾಗಿ ಯುವಜನರಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಕಡಿಮೆಯಾಗುತ್ತಿದೆ. ಅವರನ್ನು ಜಾಗೃತಗೊಳಿಸಬೇಕಾದಂತಹ ಅನಿವಾರ್ಯತೆ ಇದೆ. ಮಕ್ಕಳಿಗೆ ಭಾಷಾಭಿಮಾನ ಬೆಳೆಸಬೇಕು, ಕನ್ನಡ ನಾಡಿನ ಸಂಸ್ಕೃತಿಯನ್ನು ಉಳಿಸಲು ಅವರು, ಸಕ್ರೀಯವಾಗಿ ಭಾಗವಹಿಸುವಂತೆ ನೋಡಿಕೊಳ್ಳಿ ಎಂದರು.
ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ಅಲಂಕಾರವನ್ನು ಆಯೋಜನೆ ಮಾಡಲಾಗಿತ್ತು, ಹೆಂಗಸರು ತಲೆಯ ಮೇಲೆ ಕಲಶಗಳನ್ನು ಹೊತ್ತುಕೊಂಡು ಪೂರ್ಣಕುಂಭದೊಂದಿಗೆ ಗ್ರಾಮದಲ್ಲಿ ಪ್ರಮುಖ ಬೀದಿಗಳಲ್ಲಿ ವೀರಭದ್ರ ಕುಣಿತದೊಂದಿಗೆ ಮೆರವಣಿಗೆ ನಡೆಸಿದರು. ವೀರಗಾಸೆ ಕಲಾವಿದರು, ವೀರಭದ್ರನ ಜನ್ಮರಹಸ್ಯದ ಕುರಿತು ಸಾರಿದರು.
ಮುಖಂಡರಾದ ಹೊಸಪೇಟೆ ಶಶಿಕುಮಾರ್, ವಿರೂಪಾಕ್ಷಪ್ಪ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುನಿಆಂಜಿನಪ್ಪ, ಹೊಸಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಮಾರವಿಕುಮಾರ್, ಡಿ.ಮುನಿಕೃಷ್ಣಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಮಿತ್ತನಹಳ್ಳಿ ಹರೀಶ್, ಶ್ರೀಧರ್ ಗೌಡ, ಸುಗಟೂರು ದೇವರಾಜು, ನಾಗಮಂಗಲ ತಮ್ಮಣ್ಣ, ಪರಮೇಶ್, ವೆಂಕಟಾಪುರ ಗ್ರಾಮ ಪಂಚಾಯಿತಿ ಪಿ.ಡಿ.ಓ. ಕಾತ್ಯಾಯಿನಿ, ನಾಗೇಶ್, ಮಹೇಶ್ ಕುಮಾರ್, ರಾಮಕೃಷ್ಣ, ಸುರೇಶ್ ಕುಮಾರ್, ವಿಕ್ಟರ್ ರವಿ, ಅಶ್ವಥ್ ನಾರಾಯಣಗೌಡ ಹಾಜರಿದ್ದರು.
 

ಸೀತಾರಾಮಾಂಜನೇಯ ಬ್ರಹ್ಮರಥೋತ್ಸವ

0

ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್.ಕ್ರಾಸ್ನಲ್ಲಿರುವ ಪುರಾಣ ಪ್ರಸಿದ್ಧ ಸೀತಾರಾಮಾಂಜನೇಯ ದೇವಾಲಯದಲ್ಲಿ ಬ್ರಹ್ಮರಥೋತ್ಸವವನ್ನು ವಿಜೃಂಭಣೆಯಿಂದ ಶನಿವಾರ ನೆರವೇರಿಸಲಾಯಿತು.
ಬೆಳಗಿನಿಂದಲೇ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

ಶಿಡ್ಲಘಟ್ಟ ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್.ಕ್ರಾಸ್ನಲ್ಲಿರುವ ಪುರಾಣ ಪ್ರಸಿದ್ಧ ಸೀತಾರಾಮಾಂಜನೇಯ ದೇವಾಲಯದಲ್ಲಿ ಶನಿವಾರ ಬ್ರಹ್ಮರಥೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು,

ರಥೋತ್ಸವ ಅಂಗವಾಗಿ ಧ್ವಜಾರೋಹಣ, ಅಲಂಕಾರ ಸೇವೆ, ಪ್ರಾಕಾರೋತ್ಸವ, ವಾಸುದೇವ ಪುಣ್ಯಾಹ ಅಂಕುರಾರ್ಪಣೆ, ರಕ್ಷಾಬಂಧನ, ಹನುಮಂತೋತ್ಸವ, ಮಹಾಭಿಷೇಕ, ಪಲ್ಲಕ್ಕಿ ಉತ್ಸವ, ವಿದ್ಯುತ್ ದೀಪಾಲಂಕಾರ, ಶಯನೋತ್ಸವ, ದೇವರ ಪೂಜೆ, ಚಂದ್ರಪ್ರಭಾ, ಗರುಡೋತ್ಸವ, ಸೇರಿದಂತೆ ಹಲವು ಪೂಜಾ ವಿಧಾನಗಳನ್ನು ನೆರವೇರಿಸಲಾಯಿತು.
ದೇವರನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ವಿವಿಧ ತಿನಿಸುಗಳ, ಆಟಿಕೆಗಳ, ಗೃಹೋಪಯೋಗಿ ವಸ್ತುಗಳ ಸಾಲು ಸಾಲು ಅಂಗಡಿಗಳಿದ್ದು, ಜನರು ಬತ್ತಾಸು, ಬುರುಗು, ಕಡ್ಲೇಬೀಜವನ್ನು ಕೊಂಡು ತಿನ್ನುತ್ತಿದ್ದುದು ಸಹಜವಾಗಿತ್ತು.
ಶಾಸಕ ಎಂ.ರಾಜಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಮಿನಾರಾಯಣರೆಡ್ಡಿ, ಇಓ ವೆಂಕಟೇಶ್, ದೇವಾಲಯದ ಧರ್ಮದರ್ಶಿ ಕೆ.ಬಿ.ಅಯ್ಯಪ್ಪ, ಸಂಚಾಲಕ ಉದ್ದಂಡಚಾರಿ, ಚನ್ನರಾಯಪ್ಪ, ಸಂಗಪ್ಪ, ಅನಿಲ್ಕುಮಾರ್, ಸುಶೀಲಮ್ಮ, ಮುಖಂಡರಾದ ಆಂಜಿನಪ್ಪ, ಭಾಗ್ಯಮ್ಮ, ರವಿ ಹಾಜರಿದ್ದರು.
 

ಬೆಂಕಿ ರಹಿತ ಆರೋಗ್ಯಕರ ಆಹಾರ ತಯಾರಿಕಾ ಸ್ಪರ್ಧೆ

0

ಪ್ರಸ್ತುತ ದಿನಗಳಲ್ಲಿ ಮಕ್ಕಳು ಕುರುಕಲು ತಿಂಡಿ ಹಾಗೂ ತ್ವರಿತ ಆಹಾರ (ಫಾಸ್ಟ್ಫುಡ್) ಹೆಚ್ಚಾಗಿ ಸೇವನೆ ಮಾಡುತ್ತಿದ್ದು, ಇದರಿಂದ ಮಕ್ಕಳು ಹಲವು ಕಾಯಿಲೆಗಳಿಗೆ ತುತ್ತಾಗುವ ಸಂಭವಗಳು ಹೆಚ್ಚಾಗುತ್ತಿದೆ ಎಂದು ಶ್ರೀ ಸಾಯಿ ಇಂಟರ್ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಎಂ. ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಬಶೆಟ್ಟಹಳ್ಳಿ ಗೇಟ್ ಬಳಿಯಿರುವ ಶ್ರೀ ಸಾಯಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ಶನಿವಾರ ಆಯೋಜಿದ್ದ ಬೆಂಕಿ ರಹಿತ ಆರೋಗ್ಯಕರ ಆಹಾರ ತಯಾರಿಕಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿಯಲ್ಲಿನ ಶ್ರೀ ಸಾಯಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ಶನಿವಾರ ಬೆಂಕಿ ರಹಿತ ಆರೋಗ್ಯಕರ ಆಹಾರ ತಯಾರಿಕಾ ಸ್ಪರ್ಧೆಯನ್ನು ಆಯೋಜಿಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು

ಮಕ್ಕಳು ಕುರುಕಲು ತಿಂಡಿ, ಫಾಸ್ಟ್ಫುಡ್ ಮೊರೆ ಹೋಗೇ, ಮನೆಯಲ್ಲಿ ತಯಾರಿಸುವ ಆಹಾವರನ್ನು ಮಿತ ಸೇವನೆ ಮಾಡುವ ಮೂಲಕ ಆರೋಗ್ಯವಂತರಾಗಿ ಬೆಳೆಯಬೇಕು. ಪಾಠ ಪ್ರವಚನದೊಂದಿಗೆ ಮಕ್ಕಳ ಆಹಾರ ಸೇವನೆ, ಕ್ರೀಡೆ ಸೇರಿದಂತೆ ಹಲವು ಸಾಂಸ್ಕೃತಿಕ ಚಟುವಟಿಕೆಗಳನ್ನು ಶಾಲೆಯಲ್ಲಿಆಯೋಜಿಸುವ ಮೂಲಕ ಅವರಲ್ಲಿ ಆರೋಗ್ಯ ಕಾಳಜಿಯನ್ನು ಮೂಡಿಸುತ್ತಿರುವುದಾಗಿ ತಿಳಿಸಿದರು.
ಮಕ್ಕಳಿಗಾಗಿ ಆಯೋಜಿಸಿದ್ದ ಆಹಾರ ತಯಾರಿಕಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕೆಲ ಮಕ್ಕಳು ಪೋಷಕರಿಂದ ಬೆಂಕಿ ರಹಿತ ಆಹಾರ ಉತ್ಪನ್ನಗಳ ತಯಾರಿಸುವ ವಿಧಾನಗಳನ್ನು ಕಲಿತು ಶಾಲೆಯಲ್ಲಿ ಪ್ರಯೋಗ ಮಾಡಿದರೆ, ಉಳಿದ ಮಕ್ಕಳಿಗೆ ಶಾಲಾ ಸಿಬ್ಬಂದಿಯೇ ಆಹಾರ ಉತ್ಪನ್ನಗಳ ತಯಾರಿಸುವ ವಿಧಾನಗಳ ಕುರಿತು ಬೋಧಿಸಿದರು. ವಿಜೇತರಾದ ಮಕ್ಕಳಿಗೆ ಶಾಲಾವತಿಯಿಂದ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಶಿವಕುಮಾರ್, ಮುಖ್ಯ ಸಹ ಶಿಕ್ಷಕಿ ಚಂದನ, ಶಿಕ್ಷಕರಾದ ಮಾಲಶ್ರೀ, ಮೀನಾಕ್ಷಿ, ಸುಮ, ದೀಪಿಕ, ಶ್ರೀನಾಥ್, ಶ್ರೀನಿವಾಸ್, ಚಂದ್ರಕಲಾ, ಮುಖಂಡರಾದ ನರಸರೆಡ್ಡಿ, ಸತ್ಯನಾರಾಯಣ ಶೆಟ್ಟಿ ಹಾಜರಿದ್ದರು.
 

ನುಡಿ ನೆಲ ಜಲದ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ

0

ಕನ್ನಡ ನಾಡು ನುಡಿ ನೆಲ ಜಲದ ರಕ್ಷಣೆ ಈ ನೆಲದಲ್ಲಿ ಮಣ್ಣಿನ ಋಣಹೊತ್ತ ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ರಾಜ್ಯಾಧ್ಯಕ್ಷ ನಾಗೇನಹಳ್ಳಿ ಕೃಷ್ಣಮೂರ್ತಿ ಹೇಳಿದರು.
ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ತಾಲ್ಲೂಕು ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ದಿಬ್ಬೂರಹಳ್ಳಿಯ ಶಾಖೆಯ ಉದ್ಘಾಟನೆ, ನಾಮಫಲಕ ಅನಾವರಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕನ್ನಡಿಗರು ವಿಶಾಲ ಹೃದಯವರು. ಎಲ್ಲ ಭಾಷೆ ಭಾಷಿಗರನ್ನೂ ಪ್ರೀತಿಸುತ್ತಾರೆ, ಬರ ಮಾಡಿಕೊಳ್ಳುತ್ತಾರೆ ವಿಶ್ವಾಸದಿಂದ ನೋಡುತ್ತಾರೆ. ಹಾಗಂತ ನಿರಭಿಮಾನಿಗಳಲ್ಲ, ಅಶಕ್ತರೂ ಅಲ್ಲ, ಕನ್ನಡ ನಾಡು ನುಡಿ ನೆಲ ಜಲಕ್ಕೆ ದಕ್ಕೆ ಬರುವುದಾದರೆ ಸೆಟೆದು ನಿಂತು ಯಾರನ್ನಾದರೂ ಎಂತಹ ಶಕ್ತಿಯನ್ನಾದರೂ ತಡೆದು ನಿಲ್ಲಿಸಬಲ್ಲ ನಿಜವಾದ ಶೂರರು ಎಂದರು.
ನಮ್ಮ ಸಂಘಟನೆ ಸೇರಿದಂತೆ ಇತರೆ ಸಂಘಟನೆಗಳ ಕೇವಲ ನಾಡು ನುಡಿ ನೆಲ ಜಲದ ರಕ್ಷಣೆಯ ಬಗ್ಗೆ ಮಾತ್ರ ಹೋರಾಟ ಮಾಡುತ್ತಿಲ್ಲ. ಬದಲಿಗೆ ಶಾಶ್ವತ ನೀರಾವರಿ ಸಮಸ್ಯೆ, ರೈತರ ಉತ್ಪಾದನೆಗಳಿಗೆ ಬೆಲೆ ಕುಸಿತ, ನಿರುದ್ಯೋಗ ಸಮಸ್ಯೆ ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಚಿತ್ರ ನಟರಾದ ಸಾಯಿಕುಮಾರ್, ಅಭಿರಾಮ್ ಸಿನಿಮಾದ ವಾಕ್ಯಗಳನ್ನು ಹೇಳಿ ಸಭಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.
ಕಾರ್ಯಕ್ರಮಕ್ಕೂ ಮುನ್ನ ಹಂಡಿಗನಾಳದಿಂದ, ಕೆ.ಮುತ್ತುಕದಹಳ್ಳಿ ಮೂಲಕ ದಿಬ್ಬೂರಹಳ್ಳಿವರೆಗೂ ಕನ್ನಡ ಧ್ವಜ ಹೊತ್ತ ನೂರಾರು ಬೈಕ್, ಕಾರು, ಆಟೋಗಳ ಮೆರವಣಿಗೆ ನಡೆಯಿತು. ಮೆರವಣಿಗೆಯ ಉದ್ದಗಲಕ್ಕೂ ಕನ್ನಡ ತಾಯಿಗೆ ಜೈಕಾರಗಳು ಮೊಳಗಿದವು.
ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ರಾಜ್ಯ ಉಪಾಧ್ಯಕ್ಷ ಪುಟ್ಟೇಗೌಡ, ಸಂಘಟನಾ ಕಾರ್ಯದರ್ಶಿ ನವೀನ್ ರೆಡ್ಡಿ, ತಾಲೂಕು ಅಧ್ಯಕ್ಷ ಬೈರಾರೆಡ್ಡಿ, ಜಿಲ್ಲಾಧ್ಯಕ್ಷ ಶಿವಪ್ರಕಾಶ್, ನಗರಘಟಕದ ಅಧ್ಯಕ್ಷ ಮಧುಕುಮಾರ್, ಸುರೇಶ್ ಹಾಜರಿದ್ದರು.
 

ಮಕ್ಕಳಿಗೆ ಬಾಲ್ಯದಿಂದಲೇ ಕ್ರೀಡೆಯಲ್ಲಿ ಆಸಕ್ತಿ ಮೂಡಿಸಿ

0

ಮಕ್ಕಳನ್ನು ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಬಾಲ್ಯದಿಂದಲೇ ಪ್ರೇರೇಪಿಸುವ ಕೆಲಸವನ್ನು ಪೋಷಕರು ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ವಿ.ಮುನಿಯಪ್ಪ ತಿಳಿಸಿದರು.
ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಶಿಯೇಷನ್ ವತಿಯಿಂದ ನಗರದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸ್ಕೇಟಿಂಗ್ ಚಾಂಪಿಯನ್ಶಿಪ್ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬಾಲ್ಯದಿಂದ ಮಕ್ಕಳಿಗೆ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಆಸಕ್ತಿ ಬೆಳೆಸುವುದರಿಂದ ದೊಡ್ಡವರಾದ ಮೇಲೆ ಒಳ್ಳೆಯ ಕ್ರೀಡಾಪಟುಗಳಾಗಿ ಬೆಳೆಯುವುರದಲ್ಲಿ ಯಾವುದೇ ಸಂದೇಹವಿಲ್ಲ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೇಹಕ್ಕೆ ಉತ್ತಮ ವ್ಯಾಯಾಮ ದೊರೆಯುವುದರ ಜೊತೆಗೆ ದೇಶಕ್ಕೆ ಗೌರವ ತರುವ ಕ್ರೀಡಾಪಟುಗಳಾಗಿ ರೂಪುಗೊಳ್ಳುತ್ತಾರೆ ಎಂದರು.
ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಜಬೀವುಲ್ಲಾ ಮಾತನಾಡಿ, ಜಿಲ್ಲಾ ಮಟ್ಟದ ಸ್ಕೇಟಿಂಗ್ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ೬ ರಿಂದ ೧೪ ವರ್ಷದೊಳಗಿನ ಮಕ್ಕಳಿಗೆ ೩೦೦-೫೦೦ ಮೀಟರ್ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಸುಮಾರು ೯೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳನ್ನು ಮಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಕಳುಹಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸ್ಕೇಟಿಂಗ್ ಸ್ಪರ್ಧೆಯಲ್ಲಿ ವಿವಿಧ ರೀತಿಯ ಭಂಗಿಗಳನ್ನು ಪ್ರದರ್ಶಿಸಿದ್ದು, ನೋಡುಗರ ಮೆಚ್ಚುಗೆ ಗಳಿಸಿತ್ತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಕ್ರೀಡಾಪಟುಗಳಾದ ಜಯಚಂದ್ರ ಹಾಗು ಜಯಂತಿ ಗ್ರಾಮದ ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲ ಮುನಿರಾಜು, ತಾಲ್ಲೂಕು ಪಂಚಾಯಿತಿ ಸದಸ್ಯೆ ಪಂಕಜಾ ನಿರಂಜನ್, ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಜಿಲ್ಲಾ ಉಪಾಧ್ಯಕ್ಷ ಟಿ.ಟಿ.ನರಸಿಂಹಪ್ಪ, ತಾಲ್ಲೂಕು ಅಧ್ಯಕ್ಷ ಜೆ.ವಿ.ಸುರೇಶ್, ವಸಂತ್ಕುಮಾರ್, ಡಾ. ವೆಂಕಟೇಶ್ಮೂರ್ತಿ, ಮಮತ ಮೂರ್ತಿ, ಹಾಜರಿದ್ದರು.
 

ಭಾಷೆಯನ್ನು ಪ್ರೀತಿಸಬೇಕು

0

ಯಾವುದೇ ಒಂದು ಭಾಷೆ ಉಳಿಯಬೇಕು ಹಾಗು ಬೆಳೆಯಬೇಕು ಎಂದರೆ ಆ ಭಾಷೆಯನ್ನು ಸದಾ ಕಾಲ ಬಳಸಬೇಕು. ಮನದಾಳದಿಂದ ಪ್ರೀತಿಸಬೇಕು ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಪಾ.ಮು.ಚಲಪತಿಗೌಡ ತಿಳಿಸಿದರು.
ನಗರದ ಅರಳೇಪೇಟೆಯಲ್ಲಿರುವ ಶಿಕ್ಷಕ ವೇಣುಗೋಪಾಲ್ರ ಮನೆಯಲ್ಲಿ ಶನಿವಾರ ಸಂಜೆ ತಾಲ್ಲೂಕು ವಚನ ಸಾಹಿತ್ಯ ಪರಿಷತ್ತು ಹಾಗು ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮನೆಯಂಗಳದಲ್ಲಿ ವಚನ ಸಾಹಿತ್ಯ ಸಿಂಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗಡಿನಾಡು ಪ್ರದೇಶದಲ್ಲಿರುವ ನಮಗೆ ತೆಲುಗು ಭಾಷೆಯು ಪ್ರಭಾವಿಸುವಂತೆ, ಕನ್ನಡ ಭಾಷೆಯು ತೆಲುಗರನ್ನು ಪ್ರಭಾವಿಸುವ ರೀತಿಯಲ್ಲಿ ನಾವು ಕನ್ನಡವನ್ನು ಪ್ರೀತಿಯಿಂದ, ಅಭಿಮಾನಪೂರ್ವಕವಾಗಿ ಬಳಸಬೇಕು. ಭಾಷೆಯನ್ನು ಹೆಚ್ಚು ಹೆಚ್ಚು ಬಳಸುವುದರಿಂದ ಮಾತ್ರವೇ ಉಳಿಯಬಲ್ಲದು ಎಂದರು.
ಕನ್ನಡ ಭಾಷೆಗೆ ಬಹಳ ಪುರಾತನವಾದ ಹಿನ್ನೆಲೆಯಿದೆ, ದೇಶಕ್ಕೆ ಅನೇಕ ಮಂದಿ ದಿಗ್ಗಜರನ್ನು ಕೊಡುಗೆಯಾಗಿ ನೀಡಿರುವಂತಹ ನಾಡಿನಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿ ಎಂದು ಹೇಳುವ ನಾವೇ ನಮ್ಮ ಮಾತೃಭಾಷೆಯಾದ ಕನ್ನಡವನ್ನು ಕಡೆಗಣಿಸುತ್ತಿದ್ದೇವೆ. ಮಕ್ಕಳು ಅನ್ಯ ಭಾಷೆಗಳನ್ನು ಕಲಿಯಲಿ ಆದರೆ ಮಾತೃಭಾಷೆಯನ್ನು ಹೆಚ್ಚು ಮಾತಾಡುವ ಆಸಕ್ತಿಯನ್ನು ಪೋಷಕರೂ ಸೇರಿದಂತೆ ಶಿಕ್ಷಕರು ಮೂಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಪಾ.ಮು.ಚಲಪತಿಗೌಡ ಚುಟುಕುಗಳನ್ನು ವಾಚಿಸಿದರೆ ಕವಿತ, ಸುಂದರಾಚಾರಿ, ಶ್ಯಾಮಸುಂದರ್ ಹಾಗೂ ಹಲವಾರು ಮಕ್ಕಳು ಕವಿತೆಗಳನ್ನು ವಾಚಿಸಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ವಚನ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಕಾರ್ಯದರ್ಶಿ ಸಿ.ಎ.ದೇವರಾಜ್, ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಚುಸಪ ತಾಲ್ಲೂಕು ಘಟಕದ ಅಧ್ಯಕ್ಷ ಈಧರೆ ಪ್ರಕಾಶ್, ಲಕ್ಮಿನಾರಾಯಣ(ಲಚ್ಚಿ), ಸುಂದರಾಚಾರಿ, ಶಿಕ್ಷಕರಾದ ವೇಣುಗೋಪಾಲ್ ಹಾಜರಿದ್ದರು.
 

ನೋಟುಗಳಿಂದ ವಿಶೇಷ ಅಲಂಕಾರ

0

ಶಿಡ್ಲಘಟ್ಟದ ಗಂಗಮ್ಮ ದೇವಸ್ಥಾನದಲ್ಲಿ ಶುಕ್ರವಾರ ಭಕ್ತರಿಂದ ಸಂಗ್ರಹಿಸಿದ್ದ ಒಂದೂ ಮುಕ್ಕಾಲು ಲಕ್ಷರೂಗಳ ನೋಟುಗಳಿಂದ ದೇವರನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.

ಶೌರ್ಯ ಪ್ರಶಸ್ತಿ ವಿಜೇತ ಬಾಲೆಯರಿಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಿಂದ ಪ್ರೋತ್ಸಾಹಧನ

0

ಸಮಯಸ್ಫೂರ್ತಿಯಿಂದ ಸಹಪಾಠಿಯನ್ನು ರಕ್ಷಿಸಿರುವ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ಹೆಣ್ಣು ಮಕ್ಕಳು ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿಯನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿ ಪುರಸ್ಕೃತರಾದ ದೀಕ್ಷಿತಾ ಮತ್ತು ಅಂಬಿಕಾ ಅವರಿಗೆ ತಲಾ ಐದು ಸಾವಿರ ರೂ ಪ್ರೋತ್ಸಾಹ ಧನವನ್ನು ನೀಡಿ ಅವರು ಮಾತನಾಡಿದರು.
ಇತರರು ತೊಂದರೆಯಲ್ಲಿದ್ದಾಗ ಸ್ಪಂದಿಸುವ ಗುಣ, ಪರೋಪಕಾರ ಮನೋಭಾವ ಮಕ್ಕಳಿಗೆ ಕಲಿಸಿರುವ ಪೋಷಕರು ಹಾಗೂ ಶಿಕ್ಷಕರು ಅಭಿನಂದನಾರ್ಹರು. ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಅವರು ಮಕ್ಕಳಿಗೆ ಕಲಿಸಿದ್ದರಿಂದಾಗಿ ಈ ದಿನ ನಾವೆಲ್ಲಾ ಹೆಮ್ಮೆ ಪಡುವಂತಾಗಿದೆ ಎಂದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್. ನರಸಿಂಹಯ್ಯ ಮಾತನಾಡಿ, ಇಂದು ಹಲವೆಡೆ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿದೆ. ಅಂಥಹ ಸಂದರ್ಭದಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ದೀಕ್ಷಿತಾ ಮತ್ತು ಅಂಬಿಕಾ ಅವರ ಸಾಹಸ ಶ್ಲಾಘನೀಯ, ಮಕ್ಕಳ ಸಾಹಸ ಅಭಿನಂದನೀಯ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷೀನಾರಾಯಣರೆಡ್ಡಿ ಅವರು ಶೌರ್ಯ ಪ್ರಶಸ್ತಿಗೆ ಪಾತ್ರರಾದ ದೀಕ್ಷಿತಾ ಮತ್ತು ಅಂಬಿಕಾ ಅವರನ್ನು ಸನ್ಮಾನಿಸಿ ತಲಾ ೫,೦೦೦ ರೂಗಳನ್ನು ಪ್ರೋತ್ಸಾಹದಾಯಕವಾಗಿ ನೀಡಿದರು.
ಕ್ಷೇತ್ರ ಶಿಕ್ಷಣಾದಿಕಾರಿ ಚಂದ್ರಶೇಖರ್ ಬಾಬು, ಸಿ.ಡಿ.ಪಿ.ಓ ಲಕ್ಷೀದೇವಮ್ಮ, ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಗೋಪಾಲಕೃಷ್ಣಯ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷ ಜಯರಾಮ್, ಗ್ರಾಮ ಪಂಚಾಯಿತಿ ಸದಸ್ಯರಾದ ಜಯರಾಮ್, ತ್ಯಾಗರಾಜ್, ದೇವಣ್ಣ, ಶಿಕ್ಷಕರಾದ ನಾಗಭೂಷಣ, ರಾಮಕೃಷ್ಣ, ಗಂಗಶಿವಪ್ಪ, ಬಿ.ಆರ್.ಪಿ.ಎಚ್.ವೆಂಕಟರೆಡ್ಡಿ, ಗ್ರಾಮಸ್ಥರಾದ ನಾಗರಾಜು, ಕೃಷ್ಣಮೂರ್ತಿ, ಮುನಿರೆಡ್ಡಿ, ಕೆಂಪರೆಡ್ಡಿ ಹಾಜರಿದ್ದರು.
 

ನಗರಕ್ಕೆ ಉತ್ತಮ ಸುಸಜ್ಜಿತ ಗ್ರಂಥಾಲಯದ ಕಟ್ಟಡ ಅಗತ್ಯವಿದೆ

0

ನಗರ ಕೇಂದ್ರ ಗ್ರಂಥಾಲಯಕ್ಕೆ ನಿವೇಶನವನ್ನು ಕೋರಿದ್ದು,ಈಗಿರುವ ಸ್ಥಳವನ್ನು ಜಿಲ್ಲಾಧಿಕಾರಿಗಳ ಅನುಮೋದನೆಯ ಮೇರೆಗೆ ನೀಡಲಾಗುವುದು ಎಂದು ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್ ತಿಳಿಸಿದರು.
ನಗರ ಕೇಂದ್ರ ಗ್ರಂಥಾಲಯದಲ್ಲಿ ಶುಕ್ರವಾರ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಗರಕ್ಕೆ ಉತ್ತಮ ಸುಸಜ್ಜಿತ ಗ್ರಂಥಾಲಯದ ಕಟ್ಟಡ ಅಗತ್ಯವಿದೆ. ಗ್ರಂಥಾಲಯಕ್ಕೆ ನಿವೇಶನ ನೀಡುವ ಬಗ್ಗೆ ಈಗಾಗಲೇ ನಗರಸಭೆಯಲ್ಲಿ ಚರ್ಚೆ ನಡೆದಿದೆ. ಜನಸಂಚಾರ ಹೆಚ್ಚಿರದ, ವಾಹನ ಹಾಗೂ ಇತರ ಶಬ್ದ ಮಾಲಿನ್ಯವಿರದ ಈಗಿರುವ ಸ್ಥಳ ಪ್ರಶಸ್ತವಾಗಿದೆ ಎಂದು ಹೇಳಿದರು.
ನಗರಸಭೆಯ ಆಯುಕ್ತ ಚಲಪತಿ ಮಾತನಾಡಿ, ಗ್ರಂಥಾಲಯಕ್ಕೆ ಕೇವಲ ಹಿರಿಯರು ಬಂದರೆ ಸಾಲದು, ಮಕ್ಕಳನ್ನು ಕರೆತರಬೇಕು. ಎಳೆಯ ವಯಸ್ಸಿನಲ್ಲಿಯೇ ಗ್ರಂಥಾಲಯಕ್ಕೆ ಬಂದು ಓದುವ ಹವ್ಯಾಸ ರೂಢಿಸಬೇಕು. ಓದುಗರನ್ನು ಆಕರ್ಷಿಸಲು, ಹೊಸ ಓದುಗರನ್ನು ಹುಟ್ಟುಹಾಕಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಶಂಕರ್ ಮಾತನಾಡಿ, ಜನಸಾಮಾನ್ಯರಲ್ಲಿ ಪುಸ್ತಕ ಓದುವ ಅಭಿರುಚಿಯನ್ನು ಬೆಳೆಸುವುದು ಹಾಗೂ ಗ್ರಂಥಾಲಯದ ಸದಸ್ಯತ್ವವನ್ನು ಹೆಚ್ಚಿಸುವುದು ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ತಿಂಗಳಿಗೊಮ್ಮೆ ಗ್ರಂಥಾಲಯದಲ್ಲಿ ‘ಓದಿನರಮನೆಯಲ್ಲಿ ಪುಸ್ತಕ ಪರಿಚಯ’ ಎಂಬ ಕಾರ್ಯಕ್ರಮದ ಮೂಲಕ ಸ್ಥಳೀಯ ಲೇಖಕರ ಪರಿಚಯ ಮತ್ತು ಪುಸ್ತಕಗಳನ್ನು ಪರಿಚಯಿಸುತ್ತಿದ್ದೇವೆ ಎಂದು ಹೇಳಿ, ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥ್ ಕುರಿತು ವಿವರಿಸಿದರು.
ನಗರಸಭಾ ಸದಸ್ಯ ಅಫ್ಸರ್ ಪಾಷ, ಗ್ರಂಥಾಲಯ ಸಹಾಯಕ ಶ್ರೀನಿವಾಸಯ್ಯ, ಸಿಬ್ಬಂದಿ ಬಾಂಧವ್ಯ, ಮಂಜುನಾಥಗೌಡ, ಕೆ.ಬಿ.ಮಂಜುನಾಥ್ ಹಾಜರಿದ್ದರು.
 

ಗ್ರಾಮೀಣ ಮಹಿಳೆಯರು ಸ್ವಾವಲಂಬಿಗಳಾಗಿ

0

ಗ್ರಾಮೀಣ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ವೃತ್ತಿ ಕೌಶಲ್ಯ ತರಬೇತಿಯನ್ನು ಪಡೆದಿರಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಶಿವಕುಮಾರ್ ತಿಳಿಸಿದರು.
ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ ಬಾಬು ಜಗಜೀವನ್ ರಾಮ್ ನೇಕಾರ ಸಹಕಾರ ಸಂಘದ ವತಿಯಿಂದ ಶುಕ್ರವಾರ ಟೈಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಪ್ರೋತ್ಸಾಹಧನ ಹಾಗೂ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
ಸ್ವಉದ್ಯೋಗದಿಂದ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಬಾಬು ಜಗಜೀವನ್ ರಾಮ್ ನೇಕಾರ ಸಹಕಾರ ಸಂಘದ ವತಿಯಿಂದ ಉಚಿತವಾದ ಮೂರು ತಿಂಗಳ ಟೈಲರಿಂಗ್ ತರಬೇತಿ ನೀಡಿದ್ದು, ಅದರಲ್ಲಿ ಕಲಿತ ಮಹಿಳೆಯರು ಇತರರಿಗೂ ಮಾರ್ಗದರ್ಶಕರಾಗಬೇಕು ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎನ್.ಡಿ.ನಾರಾಯಣಪ್ಪ ಮಾತನಾಡಿ, ಕಳೆದ ನಾಲ್ಕೈದು ವರ್ಷಗಳಿಂದ ನಮ್ಮ ಗ್ರಾಮದ ಸುತ್ತಮುತ್ತಲಿನ ಮಹಿಳೆಯರಿಗೆ ಟೈಲರಿಂಗ್ ತರಬೇತಿ ನೀಡಲಾಗುತ್ತಿದೆ. ಬಹಳಷ್ಟು ಮಹಿಳೆಯರು ಈ ತರಬೇತಿಯ ಸಹಾಯದಿಂದ ಉದ್ಯೋಗ ಪಡೆದುಕೊಂಡು ಸ್ವಾವಲಂಬಿ ಬದುಕನ್ನು ಸಾಗಿಸುತ್ತಿದ್ದಾರೆ. ಇದರಿಂದ ಅವರ ಕೌಟುಂಬಿಕ ಆರ್ಥಿಕ ಪರಿಸ್ಥಿತಿಯೂ ಉತ್ತಮಗೊಂಡಿದೆ. ಮಹಿಳೆಯು ಸಶಕ್ತಳಾದರೆ ಕುಟುಂಬ ಚೆನ್ನಾಗಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಟೈಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಒಂದು ಸಾವಿರದ ಐನೂರು ರೂಗಳ ಪ್ರೋತ್ಸಾಹ ಧನ ಹಾಗೂ ಪ್ರಮಾಣ ಪತ್ರವನ್ನು ನೀಡಲಾಯಿತು.
ಬಾಬು ಜಗಜೀವನ್ ರಾಮ್ ನೇಕಾರ ಸಹಕಾರ ಸಂಘದ ಅಧ್ಯಕ್ಷ ಎನ್.ಆರ್.ವೆಂಕಟೇಶ್, ತರಬೇತಿದಾರರಾದ ಭಾರತಮ್ಮ, ಶ್ವೇತ, ಮುಖಂಡರಾದ ಶಿವಕುಮಾರ್, ರಮೇಶ್, ರಾಜ್, ಸುಭ್ರಮಣಿ ಹಾಜರಿದ್ದರು.
 

ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಿಂದ ವಿದ್ಯಾರ್ಥಿನಿಲಯದ ಪರಿಶೀಲನೆ

0

ವಿದ್ಯಾರ್ಥಿನಿಲಯಗಳು ದೇವಾಲಯಗಳಿದ್ದಂತೆ ಅದನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವ ಕೆಲಸವನ್ನು ಸಿಬ್ಬಂದಿ ಮಾಡಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ ತಿಳಿಸಿದರು.
ನಗರದ ಹೊರವಲಯದ ಹನುಮಂತಪುರದ ಬಳಿಯಿರುವ ಸರ್ಕಾರಿ ಮೆಟ್ರಿಕ್ ನಂತರದ ಕಾಲೇಜು ಬಾಲಕರ ವಿದ್ಯಾರ್ಥಿನಿಲಯಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ವಿದ್ಯಾರ್ಥಿನಿಲಯದ ಕಟ್ಟಡ ಉದ್ಘಾಟನೆಯಾಗಿ ಕೇವಲ ಎರಡು ವರ್ಷಗಳಾಗಿದ್ದು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಹಾಸ್ಟೆಲ್ ಕೊಠಡಿಗಳೆಲ್ಲಾ ಧೂಳುಮಯವಾಗಿದೆ. ಎಲ್ಲೆಂದಿರಲ್ಲಿ ಎಲೆ ಅಡಿಗೆ ಅಗಿದು ಉಗಿದಿರುವ ಗುರುತುಗಳು, ಹೊಡೆದು ಹಾಕಿರುವ ಕಿಟಿಕಿಗಾಜುಗಳನ್ನು ಕಂಡು ಸಿಬ್ಬಂದಿಯ ವಿರುದ್ದ ಅವರು ಕಿಡಿಕಾರಿದರು.
ಹಾಸ್ಟೆಲ್ ಅಡುಗೆ ಮನೆ ಮತ್ತು ಶೌಚಾಲಯಗಳ ಸ್ವಚ್ಚತೆ ಇಲ್ಲದಿರುವ ಬಗ್ಗೆ ಮತ್ತೊಮ್ಮೆ ದೂರು ಬಂದಲ್ಲಿ ಸಿಬ್ಬಂದಿಯ ವಿರುದ್ದ ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದರು.
ವಿದ್ಯಾರ್ಥಿನಿಲಯದಲ್ಲಿರುವ ವಿದ್ಯಾರ್ಥಿಗಳ ಹಾಜರಾತಿ, ನಿಲಯದಲ್ಲಿರುವ ನಾಮಫಲಕದಲ್ಲಿ ಯಾವುದೇ ಅಧಿಕಾರಿಯ ಹೆಸರು ನಮೂದಿಸದೇ ಇರುವುದನ್ನು ಕಂಡು ಅಧಿಕಾರಿಯ ಹೆಸರು ಮತ್ತು ದೂರವಾಣಿ ಸಂಖ್ಯೆ ನಮೂದಿಸುವಂತೆ ಸೂಚಿಸಿದರು.
ಮಳೆ ಬಂದಾಗ ಮಳೆ ನೀರು ವಿದ್ಯಾರ್ಥಿನಿಲಯಕ್ಕೆ ನುಗ್ಗಿ ತೊಂದರೆ ಉಂಟಾಗುತ್ತಿದ್ದು ಶಾಸಕರಿಗೂ ಸಹ ಈ ಬಗ್ಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದಾಗ ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ ಹಾಸ್ಟೆಲ್ ಮುಂಭಾಗದಲ್ಲಿ ಚರಂಡಿ ನಿರ್ಮಾಣ ಮಾಡಲು ಅನುದಾನ ಬಿಡುಗಡೆ ಮಾಡಲು ಕ್ರಮ ಜರುಗಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ನಡೆಸುತ್ತಿರುವ ಮಹಿಳಾ ಪೂರಕ ಪೌಷ್ಟಿಕ ಆಹಾರ ತರಬೇತಿ ಹಾಗೂ ತಯಾರಿಕಾ ಕೇಂದ್ರಕ್ಕೆ ಭೇಟಿ ನೀಡಿದಾಗ ಅಲ್ಲಿಯೂ ಸ್ವಚ್ಚತೆ ಇಲ್ಲದಿರುವುದು ಕಂಡು ಸರ್ಕಾರ ಮಕ್ಕಳ ಪೌಷ್ಟಿಕ ಆಹಾರ ತಯಾರಿಕೆಗೆ ಕೋಟ್ಯಾಂತರ ರೂ ಖರ್ಚು ಮಾಡುತ್ತಿದ್ದು, ತಯಾರು ಮಾಡುವ ಘಟಕದ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ವಿದ್ಯಾರ್ಥಿನಿಲಯದ ಸಿಬ್ಬಂದಿ ಗಂಗಾಧರ್ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
 

‘ಮೈ ಲವ್’ ಚಲನಚಿತ್ರದ ಪೋಸ್ಟರ್ ಬಿಡುಗಡೆ

0

ಹಳೆಯ ಬೇರು ಹೊಸ ಚಿಗುರು ಎಂಬ ಮಾತಿನಂತೆ ಹೊಸ ಪ್ರತಿಭೆಗಳ ಬೆಳವಣಿಗೆಗೆ ಪ್ರೋತ್ಸಾಹ ಅಗತ್ಯ. ಯುವ ಪ್ರತಿಭೆಗಳು ತಮ್ಮ ಚಿಂತನೆಗಳು, ಆಲೋಚನೆಗಳ ಮೂಲಕ ಹೊಸತನವನ್ನು ತರುತ್ತಾರೆ ಎಂದು ರೈತ ಮುಖಂಡ ಎಸ್.ಎಂ.ನಾರಾಯಣಸ್ವಾಮಿ ತಿಳಿಸಿದರು.
ನಗರದ ಬಸ್ ನಿಲ್ದಾಣದ ಬಳಿಯ ವೆಂಕಟರಾಯಪ್ಪನವರ ಮಳಿಗೆಯಲ್ಲಿ ಬುಧವಾರ ‘ಮೈ ಲವ್’ ಚಲನಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ತಾಲ್ಲೂಕಿನಲ್ಲಿ ಹಾಗೂ ಜಿಲ್ಲೆಯ ಸುತ್ತಮುತ್ತ ಚಿತ್ರೀಕರಣ ಮಾಡುವ ಮೂಲಕ ಸ್ಥಳೀಯ ಪ್ರತಿಭೆಗಳು ಹಾಗೂ ಇಲ್ಲಿನ ಸ್ಥಳ ಸೌಂದರ್ಯವನ್ನು ಚಲನಚಿತ್ರದಲ್ಲಿ ತೋರಿಸಲಿದ್ದಾರೆ. ಗ್ರಾಮದ ಚಿತ್ರಣವನ್ನು ಮತ್ತು ಕೌಟುಂಬಿಕ ಬಾಂಧವ್ಯ, ಪ್ರೀತಿ, ವಿಶ್ವಾಸವನ್ನು ಎಳೆಎಳೆಯಾಗಿ ತೋರಿಸುವ ಕಥಾವಸ್ತುವನ್ನು ಹೊಂದಿರುವ ಚಲನಚಿತ್ರಕ್ಕೆ ಪ್ರೋತ್ಸಾಹಿಸೋಣ ಎಂದು ಹೇಳಿದರು.
ಚಲನಚಿತ್ರದ ನಿರ್ದೇಶಕ ಎಂ.ಎಸ್.ರವೀಂದ್ರ ಮಾತನಾಡಿ,‘ಮೈ ಲವ್’ ಚಲನಚಿತ್ರದಲ್ಲಿ 150 ಮಂದಿ ಹೊಸ ಕಲಾವಿದರಿಗೆ ಅವಕಾಶ ನೀಡುತ್ತಿದ್ದೇವೆ. ಹೊಸ ಪ್ರತಿಭೆಗಳನ್ನು ಪರಿಚಯಿಸುವ ಈ ಚಿತ್ರದಲ್ಲಿ ಮೂವರು ನಾಯಕ ಮತ್ತು ನಾಯಕಿಯರಿದ್ದಾರೆ. ಕಾಲೇಜ್, ಗ್ರಾಮ ಹಾಗೂ ಸ್ಲಂನ ಜೀವನ ತೋರಿಸಲಿದ್ದೇವೆ. ಶಿಡ್ಲಘಟ್ಟದಲ್ಲಿ ಈ ತಿಂಗಳ ಕೊನೆಯಿಂದ ಚಿತ್ರೀಕರಣ ಪ್ರಾರಂಭಿಸುತ್ತೇವೆ. ಅವರವರ ಪ್ರೀತಿ ಅವರವರಿಗೆ ಹೆಚ್ಚು. ತಂದೆ ತಾಯಿಯರ ನಂಬಿಕೆ, ಪ್ರೀತಿಯನ್ನು ತೋರಿಸುವ ಕೌಟುಂಬಿಕ ಚಿತ್ರವನ್ನು 35 ಲಕ್ಷ ರೂಗಳ ಬಜೆಟ್ ನಲ್ಲಿ ನಿರ್ಮಿಸುತ್ತಿರುವುದಾಗಿ ಹೇಳಿದರು.
‘ಮೈ ಲವ್’ ಚಲನಚಿತ್ರದ ನಾಯಕ ನಟ ಸುಭಾಷ್, ನಾಯಕ ನಟಿ ಸುಷ್ಮಿತಾ, ಖಳನಟ ಮೈಸೂರು ಸತ್ಯ, ಸ್ಥಳೀಯ ಕಲಾವಿದ ಗುರುಪ್ರಸಾದ್ ಈ ಸಂದರ್ಭದಲ್ಲಿ ಹಾಜರಿದ್ದರು.

ಸ್ವಾತಂತ್ರ್ಯಾನಂತರ ಅಭಿವೃದ್ಧಿಯಲ್ಲಿ ನೆಹರೂ ಕೊಡುಗೆ ಅಪಾರ

0

ಸ್ವಾತಂತ್ರ್ಯಾ ನಂತರದಲ್ಲಿ ದೇಶದ ಅಭಿವೃದ್ಧಿಗೆ ಪೂರಕವಾದ ಆರ್ಥಿಕಯೋಜನೆ, ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದು ನೆಹರೂ ನೀಡಿದ ಕೊಡುಗೆ ಅಪಾರವಾದುದು ಎಂದು ವಿದ್ಯಾರ್ಥಿ ಎಸ್.ಪ್ರಜ್ವಲ್ ತಿಳಿಸಿದರು.
ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಾಲಾ ಎಸ್ಡಿಎಂಸಿ ವತಿಯಿಂದ ಮಕ್ಕಳಿಗಾಗಿ ಮಕ್ಕಳಿಂದಲೇ ರೂಪಿಸಿದ್ದ, ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಮಹಾತ್ವಾಕಾಂಕ್ಷೆಯನ್ನು ಇಟ್ಟುಕೊಂಡು ಆತ್ಮಸ್ಥೈರ್ಯದಿಂದ ಗುರಿಯನ್ನು ತಲುಪಬೇಕು. ಶಾಲಾಶಿಕ್ಷಣವ್ಯವಸ್ಥೆಯಲ್ಲಿ ಮಾನವೀಯ ಮೌಲ್ಯಗಳನ್ನು ಕಲಿಸುವ ಪಠ್ಯಕ್ರಮ ಬರಬೇಕು ಎಂದು ಅವರು ತಿಳಿಸಿದರು.
ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಗುಣಾತ್ಮಕ ಶಿಕ್ಷಣ ಸಾಧಿಸಲು ಸರ್ಕಾರಗಳು ಒದಗಿಸುವ ಯೋಜನೆ, ಸವಲತ್ತುಗಳನ್ನು ಸದ್ಭಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಉತ್ತಮಶಿಕ್ಷಣ ಪಡೆಯಬೇಕು. ಸ್ವಾಭಿಮಾನದ ಬದುಕು ಸಾಗಿಸಲು ಮುಂದಾಗಬೇಕು. ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಪೂರಕವಾಗಿ ಶಿಕ್ಷಕರು ಮತ್ತು ಪೋಷಕರು ಶ್ರಮಿಸಬೇಕು. ಪ್ರಥಮ ಪ್ರಧಾನಿಯಾಗಿ ನೆಹರೂ ಅವರು ವ್ಯವಸಾಯ, ನೀರಾವರಿ, ಶಿಕ್ಷಣ, ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಯಲ್ಲಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವಿದ್ಯಾರ್ಥಿಗಳಾದ ಎಸ್.ಆರ್.ಲಿಖಿತ್ಗೌಡ, ಎಸ್.ಆರ್.ಮೊನಿಷಾ, ಎಂ.ಮಾರುತೇಶ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಸ್ಡಿಎಂಸಿ ಅಧ್ಯಕ್ಷ ಎನ್.ಪಿ.ನಾಗರಾಜಪ್ಪ, ಶಿಕ್ಷಕ ಎ.ಬಿ.ನಾಗರಾಜ, ಬಿ.ನಾಗರಾಜು, ಎಂ.ವೈ.ಲಕ್ಷ್ಮಯ್ಯ, ಶಿಕ್ಷಕಿ ಕೆ.ಎಲ್.ಅನಿತಾ ಹಾಜರಿದ್ದರು.
 

ಮಕ್ಕಳ ದಿನಾಚರಣೆ ಕಾರ್ಯಕ್ರಮ

0

ಶಿಡ್ಲಘಟ್ಟ ತಾಲ್ಲೂಕಿನ ನಾಗಮಂಗಲ ಗ್ರಾಮದ ಒಂದನೇ ಅಂಗನವಾಡಿ ಕೇಂದ್ರದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳು ವಿವಿಧ ವೇಷಭೂಷಣಗಳನ್ನು ಧರಿಸಿ ಸಂಭ್ರಮಿಸಿದರು. ಅಂಗನವಾಡಿ ಕಾರ್ಯಕರ್ತೆ ಭವ್ಯ ಸೇರಿದಂತೆ ಮಕ್ಕಳ ಪೋಷಕರು ಭಾಗವಹಿಸಿದ್ದರು.

ಸಹಕಾರಿ ಸಂಘಗಳನ್ನು ಬಲಪಡಿಸಿ

0

ಸಹಕಾರಿ ಸಂಘಗಳಿಂದ ಪಡೆಯುವಂತಹ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡುವ ಮೂಲಕ ಸಂಘಗಳನ್ನು ಉಳಿಸಿ ಬೆಳಸಬೇಕು ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ತಿಳಿಸಿದರು.
ತಾಲ್ಲೂಕಿನ ಎಸ್ ದೇವಗಾನಹಳ್ಳಿ ಗ್ರಾಮದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ೬೪ ನೇ ಅಖಿಲ ಭಾರತ ಸಹಕಾರ ಸಪ್ತಾಹ -೨೦೧೭ ಮತ್ತು ಸಾದಲಿ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಸಾಲ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಸಹಕಾರ ಸಂಸ್ಥೆಗಳನ್ನು ಗಣಕೀಕರಣಗೊಳಿಸುವ ಮೂಲಕ ಜನರ ಸಬಲೀಕರಣ’ ಎಂಬ ಘೋಷ ವಾಕ್ಯದೊಂದಿಗೆ ಈ ಬಾರಿ ೬೪ ನೇ ಅಖಿಲ ಭಾರತ ಸಹಕಾರ ಸಪ್ತಾಹ ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ. ಸಹಕಾರಿ ಸಂಘಗಳ ಮೂಲಕ ಸಹಕಾರಿ ಬೇಸಾಯ, ಸಹಕಾರಿ ಉದ್ದಿಮೆ, ಸಹಕಾರಿ ಮಾರಾಟ ಮತ್ತು ವ್ಯಾಪಾರ, ಸಹಕಾರಿ ಪತ್ತು ಮತ್ತು ಹಣಕಾಸಿನ ನಿರ್ವಹಣೆ, ಶಿಕ್ಷಣ, ಕೌಶಲ್ಯಾಧಾರಿತ ತರಬೇತಿ, ಪ್ರಚಾರ, ಮಾನವನ ಇತರೇ ಸಹಕಾರಿ ಚಟುವಟಿಕೆಗಳು ಹಾಗೂ ಆರೋಗ್ಯದ ಉದ್ದೇಶಗಳಿಗಾಗಿ ಉತ್ತೇಜನ ನೀಡುವಂತಹ ಕೆಲಸವಾಗಬೇಕು ಎಂದರು.
ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ.ನಾಗರಾಜ್ ಮಾತನಾಡಿ, ಕಳೆದ ೧೧೩ ವರ್ಷಗಳಿಂದ ದೇಶದ ಆರ್ಥಿಕ, ಸಾಮಾಜಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಭಾರತದ ಸಹಕಾರ ಚಳುವಳಿ ವಿಶ್ವದಲ್ಲಿಯೇ ಮಹತ್ವವೆನಿಸಿಕೊಂಡಿದೆ. ಇಂತಹ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ ಷೇರುದಾರರು ಸೇರಿದಂತೆ ಸಾಲ ಪಡೆಯುವವರು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಕೋಚಿಮುಲ್ ನಿರ್ದೇಶಕ, ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ಮುನಿಯಪ್ಪ ಮಾತನಾಡಿ, ರೈತರು ಸೇರಿದಂತೆ ಸ್ತ್ರೀಶಕ್ತಿ ಸಂಘಗಳ ಪದಾಧಿಕಾರಿಗಳು ಯಾವ ಉದ್ದೇಶಕ್ಕಾಗಿ ಸಾಲ ಪಡೆಯುತ್ತಾರೊ ಅದೇ ಉದ್ದೇಶಕ್ಕೆ ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ರೈತರು ಕೇವಲ ಕೃಷಿಯನ್ನು ಮಾತ್ರ ಅವಲಂಬಿಸದೆ ಹೈನುಗಾರಿಕೆ, ಮಿನಿಅರಣ್ಯ, ಗುಡಿಕೈಗಾರಿಕೆಗಳ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.
ತೀವ್ರ ನೀರಿನ ಅಭಾವದಿಂದಾಗಿ ಬಯಲುಸೀಮೆ ಭಾಗದ ಜನರು ರೇಷ್ಮೆಯೊಂದರಿಂದಲೇ ಸುಧಾರಣೆ ಕಾಣಲು ಸಾಧ್ಯವಾಗುವುದಿಲ್ಲ. ಹಾಗಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತಹ ಚಟುವಟಿಕೆಗಳ ಕಡೆಗೆ ಹೆಚ್ಚು ಒಲವು ತೋರಿಸಬೇಕು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಶಿವಾರೆಡ್ಡಿ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕೆ.ಗುಡಿಯಪ್ಪ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಾದಲಿ ಪತ್ತಿನ ವ್ಯವಸಾಯ ಸೇವಾ ಸಹಕಾರ ಸಂಘದ ಸುಮಾರು ೧೩೯ ಅರ್ಹ ರೈತರಿಗೆ ಕೆಸಿಸಿ ಸಾಲ ಸೇರಿದಂತೆ ೧೩ ಮಹಿಳಾ ಸ್ವಸಹಾಯ ಸಂಘಗಳಿಗೆ ಒಟ್ಟು ೨ ಕೋಟಿ ೪೩ ಲಕ್ಷದ ೨೦ ಸಾವಿರ ರೂಗಳ ಸಾಲದ ಚೆಕ್ಗಳನ್ನು ವಿತರಿಸಲಾಯಿತು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಜೆ.ವಿ.ಹನುಮೇಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಹಾಪ್ಕಾಮ್ಸ್ ಅಧ್ಯಕ್ಷ ಎಂ.ಎಸ್.ಚಂದ್ರೇಗೌಡ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಆರೀಫ್ಉಲ್ಲಾ, ಡಿಸಿಸಿ ಬ್ಯಾಂಕ್ ಶಿಡ್ಲಘಟ್ಟ ಶಾಖೆಯ ವ್ಯವಸ್ಥಾಪಕ ಆನಂದ್, ತಾಲ್ಲೂಕು ಹಾಲು ಉತ್ಪಾದಕರ ನೌಕರರ ಸಂಘದ ಅಧ್ಯಕ್ಷ ಚಂದ್ರೇಗೌಡ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಟಿ.ಎ.ರಮೇಶ್, ಸಾದಲಿ ವಿಎಸ್ಎಸ್ಎನ್ ಅಧ್ಯಕ್ಷ ಲಕ್ಷ್ಮೀಪತಿ ಹಾಜರಿದ್ದರು.