ಮಾನವರ ದುರಾಸೆಗೆ, ಅಪವಾದಕ್ಕೆ, ಅನುಮಾನಕ್ಕೆ, ನಿಂದನೆ ಹಾಗೂ ದುಷ್ಕೃತ್ಯಕ್ಕೆ ಬಲಿಯಾಗುವ ಜೀವಿಯೊಂದನ್ನು ರಕ್ಷಿಸಿ ಮಂಗಳವಾರ ಕಾಡಿಗೆ ಬಿಡಲಾಯಿತು. ಅಪರೂಪಕ್ಕೆ ಕಾಣಸಿಗುವ ಇಮ್ಮಂಡೆ ಹಾವು ಅಥವಾ ಎರಡು ತಲೆ ಹಾವನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ.
ಎರಡು ತಲೆ ಹಾವು ಎಂದು ಕರೆಯಲ್ಪಡುವ ಈ ಹಾವನ್ನು ತೆಲುಗಿನಲ್ಲಿ ‘ಪೂಡು ಪಾಮು’ ಎಂದು ಕರೆದರೆ ಇಂಗ್ಲೀಷ್ನಲ್ಲಿ ‘ರೆಡ್ ಸ್ಯಾಂಡ್ ಬೋವ’ ಎಂದು ಕರೆಯುತ್ತಾರೆ. ತಾಲ್ಲೂಕಿನ ಇದ್ಲೂಡು ಗ್ರಾಮದ ಬಿ.ಮಹದೇವ ಅವರ ಜಮೀನಿನಲ್ಲಿ ಮಂಗಳವಾರ ಉಳುಮೆ ಮಾಡುವಾಗ ಸಿಕ್ಕ ರೆಡ್ ಸ್ಯಾಂಡ್ ಬೋವಾ ಹಾವನ್ನು ಮಹದೇವ ಅವರ ಮಗ ಎಂ.ದಿಲೀಪ್ ಕುಮಾರ್ ಉಪ ವಲಯ ಅರಣ್ಯಾಧಿಕಾರಿ ಭಾಸ್ಕರ್ ಅವರಿಗೆ ಒಪ್ಪಿಸಿ, ಅವರ ಮೂಲಕ ಪಟ್ರಹಳ್ಳಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.
ರೆಡ್ ಸ್ಯಾಂಡ್ ಬೋವಾ ಎಂಬ ಈ ಹಾವಿಗೆ ಕನ್ನಡದಲ್ಲಿ ಮಣ್ಣುಮುಕ್ಕ ಎಂಬ ಹೆಸರೂ ಇದೆ. ಹಲವರಿಗೆ ಈ ಹಾವನ್ನು ಸಾಕುವುದು ಪ್ರತಿಷ್ಠೆಯ ವಿಷಯ. ಇದನ್ನು ಮನೆಯಲ್ಲಿ ಸಾಕಿದರೆ ಶ್ರೀಮಂತಿಕೆ ಬರುತ್ತದೆ ಎಂಬ ನಂಬಿಕೆಯೂ ಇದೆ.
‘ಇದು ವಿಷವಿಲ್ಲದ ಯಾರನ್ನೂ ಕಚ್ಚದ ಅತ್ಯಂತ ನಿರುಪದ್ರವಿ ಹಾವು. ಮಣ್ಣನ್ನು ತೋಡಿಕೊಂಡು ಹೋಗುವ ಇದರ ಗುಣದಿಂದ ಇದರ ತಲೆಯ ಮುಂಭಾಗ ಗುದ್ದಲಿಯ ತುದಿಂತೆ ಗಟ್ಟಿಯಾಗಿರುತ್ತದೆ. ಬಾಲ ಮೊಂಡಾಗಿದ್ದು ಥೇಟ್ ತಲೆಯಂತೆಯೇ ಕಾಣುತ್ತದೆ. ಹಾಗಾಗಿ ಇದನ್ನು ಇಮ್ಮಂಡೆ ಹಾವು ಅಥವಾ ಎರಡು ತಲೆ ಹಾವೆಂದು ಕರೆಯುತ್ತಾರೆ’ ಎಂದು ಈ ಹಾವಿನ ಬಗ್ಗೆ ಸ್ನೇಕ್ ನಾಗರಾಜ್ ತಿಳಿಸಿದರು.
‘ಅತ್ಯಂತ ಭಯ ಹಾಗೂ ನಾಚಿಕೆ ಸ್ವಭಾವದ ಈ ಹಾವು ಅಪಾಯದ ಸುಳಿವು ಸಿಕ್ಕ ತಕ್ಷಣ ಮೈಯನ್ನು ಸುರುಳಿಯಾಕಾರಕ್ಕೆ ಕುಗ್ಗಿಸಿ ತಲೆಯನ್ನು ಬಚ್ಚಿಟ್ಟುಕೊಂಡು ಬಾಲವನ್ನು ಮೇಲೆ ಬಿಟ್ಟು ಅಲ್ಲಾಡಿಸುತ್ತದೆ. ಇದೇ ಇದರ ತಲೆಯಿರಬೇಕೆಂದು ಬೇರೆ ಪ್ರಾಣಿಗಳು ಘಾತ ಮಾಡುತ್ತವೆ. ಹಾಗಾಗಿಯೇ ಬೆಳೆದಿರುವ ಹೂಳುಹಾವಿನ ಬಾಲ ಸಾಮಾನ್ಯವಾಗಿ ಗಾಯಗೊಂಡಿರುವ ಸ್ಥಿತಿಯಲ್ಲಿರುತ್ತದೆ’
‘ಇಂತಹ ಹಾವು ಮರಿಯಾಗಿದ್ದಾಗ ಅಲ್ಲಲ್ಲಿ ಕಿತ್ತಳೆ ಬಣ್ಣವಿದ್ದರೂ ಬೆಳೆದ ಮೇಲೆ ಗಾಢ ಕಂದು ಬಣ್ಣ ಹೊಂದುತ್ತದೆ. ೭೫ ಸೆಮೀ ಉದ್ದ ಬೆಳೆಯುತ್ತದೆ. ಮರಳು, ಮೆದು ಮಣ್ಣು ಇರುವೆಡೆ ಇವು ವಾಸಿಸುತ್ತವೆ. ರೈತರ ಬೆಳೆಗಳಿಗೆ ಹಾನಿ ಮಾಡುವ ಇಲಿ ಮೊದಲಾದ ದಂಶಕಗಳನ್ನು ತಿಂದು ರೈತ ಮಿತ್ರನಾಗಿದೆ. ಒಣ ಪ್ರದೇಶಗಳಲ್ಲಿ ಕಾಣಸಿಗುವ ಈ ಹಾವು ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ ಹಾಗೂ ವಾಯುವ್ಯ ಭಾರತದಲ್ಲಿ ಕಂಡುಬರುತ್ತದೆ. ಇದು ನಿಶಾಚರಿ. ಕತ್ತಲಲ್ಲೇ ತನ್ನ ಆಹಾರಾನ್ವೇಷಣೆ ಮಾಡುತ್ತದೆ. ಜೂನ್ ತಿಂಗಳು ಇವು ಮರಿ ಮಾಡುವ ಕಾಲ. ಈ ಹಾವುಗಳು ಮೊಟ್ಟೆಯಿಡುವುದಿಲ್ಲ. ಆರರಿಂದ ಎಂಟು ಮರಿಗಳಿಗೆ ಜನ್ಮ ನೀಡುತ್ತವೆ.
ಈ ಸಂದರ್ಭದಲ್ಲಿ ಅರಣ್ಯ ರಕ್ಷಕ ಸಂದೀಪ್ ಹಾಜರಿದ್ದರು.
ಇಮ್ಮಂಡೆ ಹಾವಿನ ರಕ್ಷಣೆ
ಮಕ್ಕಳ ದಿನಾಚರಣೆ ಕಾರ್ಯಕ್ರಮ
ಶಿಡ್ಲಘಟ್ಟದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ನಡೆದ ಮಾತೃ ಭೋಜನ, ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅಕ್ಷತಾರಾವ್ ನಡೆಸಿಕೊಟ್ಟ ಭರತನಾಟ್ಯ ನೃತ್ಯ ಆಕರ್ಷಕವಾಗಿತ್ತು
ಮಕ್ಕಳ ಪ್ರಗತಿಗೆ ಅವರೊಂದಿಗೆ ನಾವಿದ್ದು ಸಹಕರಿಸೋಣ
ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ, ಪ್ರಗತಿಗೆ ಅವರೊಂದಿಗೆ ನಾವಿದ್ದು ಸಹಕರಿಸೋಣ. ಮಕ್ಕಳೊಂದಿಗೆ ನಾವೂ ಸಕ್ರಿಯವಾಗಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸಿದ್ಧರಾಗೋಣ ಎಂದು ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್ ಅಭಿಪ್ರಾಯಪಟ್ಟರು.
ನಗರದ ಸ್ತ್ರೀಶಕ್ತಿ ಭವನದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಐನಾ ಟ್ರಸ್ಟ್ ಸಹಯೋಗದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಗುವಿನ ಸರ್ವಾಂಗೀಣ ಬೆಳವಣಿಗೆ ಎಂದರೆ ಶಾರೀರಿಕ, ಮಾನಸಿಕ, ಬೌದ್ಧಿಕ ಹಾಗು ಆತ್ಮಸ್ತೈರ್ಯದ ವಿಕಾಸವಾಗಿದೆ. ಅದಕ್ಕೆ ಅಂಗನವಾಡಿ ಕೇಂದ್ರವೇ ಅಡಿಪಾಯವಾಗಬೇಕು. ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಆರೋಗ್ಯ, ಶಿಶುಗಳ ಆರೋಗ್ಯ ಮತ್ತು ಆರೈಕೆ ಮತ್ತು ಹದಿಹರೆಯದ ಮಕ್ಕಳ ಆರೋಗ್ಯಕ್ಕೆ ಪೂರಕವಾದಂತಹ ಯೋಜನೆಯನ್ನು ಸರ್ಕಾರ ರೂಪಿಸಿರುವುದನ್ನು ಅಂಗನವಾಡಿ ಕಾರ್ಯಕರ್ತೆಯರು ಸಮರ್ಪಕವಾಗಿ ಜನರಿಗೆ ತಲುಪಿಸಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು ಮಾತನಾಡಿ, ಇಂದು ಮಕ್ಕಳಿಗೆ ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂದಲೂ ಎಲ್ಲ ರೀತಿಯ ಸೌಲಭ್ಯಗಳು ಸಿಗುತ್ತಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಜವಹರಲಾಲ್ ನೆಹರು ಅವರಿಗೆ ಮಕ್ಕಳ ಮೇಲಿದ್ದ ಇವರ ಅಕ್ಕರೆ, ಪ್ರೀತಿಯ ಸಂಕೇತವಾಗಿ ದೇಶದಾದ್ಯಂತ ಈ ದಿನದಂದು ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಕ್ಕಳಿಂದ ಛದ್ಮ ವೇಷ ಸ್ಪರ್ಧೆ, ನೃತ್ಯ, ಭಾಷಣ ಸ್ಪರ್ಧೆ ನಡೆಯಿತು. ವಿವಿಧ ವೇಷಭೂಷಣಗಳನ್ನು ಧರಿಸಿದ್ದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.
ನಗರಸಭೆ ಸದಸ್ಯ ಅಫ್ಸರ್ಪಾಷ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಕೆ.ಲಕ್ಷ್ಮೀದೇವಮ್ಮ, ಸಾಂತ್ವಾನ ಕೇಂದದ್ರದ ಡಾ.ವಿಜಯಾ, ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ವಿಜಯ್, ಐನಾ ಟ್ರಸ್ಟ್ ನಿರ್ದೇಶಕಿ ವೆರೋನಿಕಾ ಡೇವಿಡ್, ಶಿಶು ಅಭಿವೃದ್ಧಿ ಇಲಾಖೆಯ ಸಂದೀಪ್, ಅಂಜದ್, ರಾಧಮ್ಮ, ಶಾಂತ ಜಿಂದಾಳೆ, ಕಿರಿಯ ಮಹಿಳಾ ಸಹಾಯಕಿಯರು, ಪೋಷಕರು ಹಾಜರಿದ್ದರು.
ಧರ್ಮ ಸಂಸ್ಕೃತಿಗಳ ರಕ್ಷಣೆಯಲ್ಲಿ ತಾಯಂದಿರ ಪಾತ್ರ ಮಹತ್ವದ್ದು
ಮಾತೃತ್ವದ ಪರಿಕಲ್ಪನೆ, ಭಾರತೀಯ ಸಂಸ್ಕೃತಿಯ ಆಹಾರ ಪದ್ಧತಿ, ಧರ್ಮ ಸಂಸ್ಕೃತಿಗಳ ರಕ್ಷಣೆಯಲ್ಲಿ ತಾಯಂದಿರ ಪಾತ್ರ ಮಹತ್ವದಾಗಿದೆ. ಮನೆಯೇ ಮೊದಲ ಪಾಠಶಾಲೆ ತಾಯೇ ಮೊದಲ ಗುರು, ಮಾತೃದೇವೋಭವ ಎಂದು ಹಿರಿಯರು ಹೇಳಿರುವುದು ಸಾರ್ವಕಾಲಿಕ ಸತ್ಯ ಎಂದು ಡಾಲ್ಫಿನ್ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ನಾಗರಾಜ್ ತಿಳಿಸಿದರು.
ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ನಡೆದ ಮಾತೃ ಭೋಜನ, ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಂದಿನ ಪೀಳಿಗೆಯು ಸಂಸ್ಕೃತಿ, ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಲು ಮಾತೃಭೋಜನ ಎಂಬ ಕಾರ್ಯಕ್ರಮ ಅವಶ್ಯವಾಗಿದೆ. ಈ ಮೂಲಕ ಉನ್ನತ ಆದರ್ಶಗಳನ್ನು ಸಂಸ್ಕಾರಗಳನ್ನು ಎಳೆಯ ವಯಸ್ಸಿನಿಂದಲೇ ಮಕ್ಕಳು ಮೈಗೊಡಿಸಿಕೊಳ್ಳುವಂತೆ ಮಾಡ¬ಬೇಕಿದೆ ಎಂದು ಹೇಳಿದರು.
ಡಾಲ್ಫಿನ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೃಷ್ಣಪ್ಪ ಮಾತನಾಡಿ, ಮಕ್ಕಳ ಹಕ್ಕು, ಹಿತರಕ್ಷಣೆ ಮತ್ತು ಯೋಗಕ್ಷೇಮದ ಉದ್ದೇಶದೊಂದಿಗೆ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತೇವೆ. ನಮ್ಮದೇ ನಿರೀಕ್ಷೆಗಳನ್ನು ಮಕ್ಕಳ ಮೇಲೆ ಒತ್ತಡ ಹೇರಬಾರದು. ಅವರ ನಿಜವಾದ ಬೇಡಿಕೆ ಏನು ಎಂದು ಗುರುತಿಸುವ ಪ್ರಯತ್ನವನ್ನೇ ನಡೆಸುತ್ತಿಲ್ಲ. ನಮ್ಮ ಮಕ್ಕಳೊಡನೆ ಕುಳಿತು, ಅವರ ಮನದಾಳದ ಮಾತುಗಳನ್ನು ಆಲಿಸುವ ವ್ಯವಧಾನವನ್ನು ನಾವು ತೋರಿಸುತ್ತಿಲ್ಲ ಎಂದು ಹೇಳಿದರು.
ವಿದ್ಯಾರ್ಥಿಗಳು ವಿವಿಧ ಕನ್ನಡ ಗೀತೆಗಳಿಗೆ ನೃತ್ಯವನ್ನು ಪ್ರದರ್ಶಿಸಿದರು. ಮಕ್ಕಳ ತಾಯಂದಿರು ಬುತ್ತಿಯನ್ನು ತಂದಿದ್ದು, ಮಕ್ಕಳಿಗೆ ತಿನ್ನಿಸಿದರು.
ಡಾಲ್ಫಿನ್ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್, ಚಂದನಾ ಅಶೋಕ್, ಪ್ರಾಂಶುಪಾಲ ಥಾಮಸ್ ಫಿಲಿಪ್, ಶ್ರೀನಿವಾಸರೆಡ್ಡಿ, ಲೋಕೇಶ್, ಗಣೇಶಪ್ಪ, ಮುನಿಶಾಮಪ್ಪ ಹಾಜರಿದ್ದರು.
ಡೇಟಾ ಎಂಟ್ರಿ ಆಪರೇಟರ್ ಸಂಘದ ಸದಸ್ಯರಿಂದ ಮನವಿ
ಗ್ರಾಮ ಪಂಚಾಯಿತಿಗಳಲ್ಲಿ ಹೊಸದಾಗಿ ಡೇಟಾ ಎಂಟ್ರಿ ಆಪರೇಟರ್ ಗಳನ್ನು ನೇಮಕಾತಿಗೆ ಸರ್ಕಾರ ನೀಡಿರುವ ಆದೇಶದಿಂದ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಡೇಟಾ ಎಂಟ್ರಿ ಆಪರೇಟರ್ ಗಳಿಗೆ ಅನ್ಯಾಯವಾಗುತ್ತದೆ. ಅದನ್ನು ಸರಿಪಡಿಸಿ ಎಂದು ಮಂಗಳವಾರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್ ಅವರಿಗೆ ತಾಲ್ಲೂಕಿನ ಡೇಟಾ ಎಂಟ್ರಿ ಆಪರೇಟರ್ ಸಂಘದ ಸದಸ್ಯರು ಮನವಿ ಸಲ್ಲಿಸಿದರು.
ಸರ್ಕಾರದ ಆದೇಶದಂತೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಹೊಸದಾಗಿ ಒಂದು ಡೇಟಾ ಎಂಟ್ರಿ ಆಪರೇಟರ್ ಹುದ್ದೆ ಸೃಜಿಸಿ ನೇಮಕಾತಿ ವಿಧಾನವನ್ನು ನಿರ್ದಿಷ್ಟಪಡಿಸಲಾಗಿದೆ. ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಈಗ ಕಾರ್ಯನಿರ್ವಹಿಸುತ್ತಿರುವ ಕ್ಲರ್ಕ್ ಹಾಗೂ ಡೇಟಾ ಎಂಟ್ರಿ ಆಪರೇಟರ್ ಗಳಿಗೆ ಆದ್ಯತೆ ನೀಡದೆ ಅವರು ಸಲ್ಲಿಸಿರುವ ಸೇವೆಗೆ ಪ್ರತಿ ವರ್ಷ ಹೆಚ್ಚುವರಿ 3 ಅಂಕ ನೀಡುವುದರಿಂದ ಈಗಿನ ಅಭ್ಯರ್ಥಿಗಳ ಜೊತೆ ಸ್ಪರ್ಧಿಸಲು ಸಾಧ್ಯವಾಗದಾಗಿದೆ. ಇದರಿಂದ ಇದನ್ನೇ ನಂಬಿದ ನಮಗೆ ಅನ್ಯಾಯವಾಗುತ್ತದೆ.
ಈಗ ಕಾರ್ಯನಿರ್ವಹಿಸುತ್ತಿರುವ ಡೇಟಾ ಎಂಟ್ರಿ ಆಪರೇಟರ್ ಗಳು ಕನಿಷ್ಠ ವೇತನವನ್ನೂ ಪಡೆಯದೆ ದೈನಂದಿನ ಕಚೇರಿ ಕೆಲಸಗಳಲ್ಲಿ ಮೇಲಧಿಕಾರಿಗಳ ಆದೇಶದಂತೆ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ಕೆಲಸದ ಅನುಭವ ಹೊಂದಿರುವ ಇವರಿಗೆ ಈ ನೇಮಕಾತಿಯಲ್ಲಿ ಪ್ರಥಮ ಆದ್ಯತೆ ನೀಡಿ ಡೇಟಾ ಎಂಟ್ರಿ ಆಪರೇಟರ್ ಗಳಿಗೆ ನ್ಯಾಯ ಒದಗಿಸಬೇಕೆಂದು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ಮನವಿಯನ್ನು ಮೇಲಧಿಕಾರಿಗಳಿಗೆ ಕಳುಹಿಸುವುದಾಗಿ ಹೇಳಿದರು.
ಡೇಟಾ ಎಂಟ್ರಿ ಆಪರೇಟರ್ ಗಳ ತಾಲ್ಲೂಕು ಸಂಘದ ಅಧ್ಯಕ್ಷ ಎಸ್.ಪ್ರಸನ್ನಕುಮಾರ್, ಉಪಾಧ್ಯಕ್ಷೆ ವಿ.ಸುಗುಣ, ಖಜಾಂಚಿ ಸಿ.ಮುರಳಿ, ಕಾರ್ಯದರ್ಶಿ ಎಚ್.ಸಿ.ದ್ಯಾವಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.
ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ
ಕಲುಷಿತ ನೀರಿನ ಸೇವನೆಯಿಂದ ಗ್ರಾಮೀಣ ಭಾಗದ ಬಹುತೇಕ ಜನ ವಿವಿಧ ಖಾಯಿಲೆಗಳಿಗೆ ತುತ್ತಾಗುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣಕ್ಕೆ ಮುಂದಾಗಿದೆ. ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕಾಂಗ್ರೆಸ್ ಮುಖಂಡ ವಿ.ಮುನಿಯಪ್ಪ ತಿಳಿಸಿದರು.
ನಗರದ ಹೊರವಲಯದ ನಲ್ಲಿಮರದಹಳ್ಳಿಯಲ್ಲಿ ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ವತಿಯಿಂದ ಸೋಮವಾರ ಸುಮಾರು ೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಸರ್ಕಾರದಿಂದ ಸ್ಥಾಪಿಸಲಾಗಿರುವ ಶುದ್ಧ ನೀರಿನ ಘಟಕ ಸಾರ್ವಜನಿಕರ ಸ್ವತ್ತಾಗಿದ್ದು ಇದರ ನಿರ್ವಹಣೆ ಸೇರಿದಂತೆ ಘಟಕದ ಸುತ್ತಲೂ ನೈರ್ಮಲ್ಯ ಕಾಪಾಡಲು ಸ್ಥಳೀಯರು ಸಹಕರಿಸಬೇಕು. ಪ್ರತಿಯೊಬ್ಬರೂ ಶುದ್ಧ ನೀರಿನ ಸೇವನೆ ಮಾಡುವುದರಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ನಲ್ಲಿಮರದಹಳ್ಳಿಯಲ್ಲಿರುವ ಶ್ರೀ ಲಕ್ಷ್ಮಿನರಸಿಂಹ ದೇವಾಲಯದ ಜೀರ್ಣೋದ್ದಾರಕ್ಕಾಗಿ ಆರ್ಥಿಕ ಸಹಾಯ ನೀಡುವಂತೆ ನಾಗರಿಕರು ಮನವಿ ಸಲ್ಲಿಸಿದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುನಿಕೃಷ್ಣಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುಬ್ರಮಣಿ, ಟೌನ್ ರೇಷ್ಮೆ ಬೆಳೆಗಾರರ ಹಾಗು ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ರಾಮಚಂದ್ರ, ನಿರ್ದೇಶಕ ನರಸಿಂಹಮೂರ್ತಿ, ಡಾಲ್ಫಿನ್ ವಿದ್ಯಾಸಂಸ್ಥೆಯ ಎ.ನಾಗರಾಜ್, ಮಡಿವಾಳ ಮಾಚಿದೇವ ಸಂಘದ ರಾಜ್ಯ ಉಪಾಧ್ಯಕ್ಷ ಆರ್.ವಿ.ರಾಜಣ್ಣ, ದೇವಾಲಯ ಟ್ರಸ್ಟ್ನ ಅಧ್ಯಕ್ಷ ವೆಂಕಟೇಶಪ್ಪ ಹಾಜರಿದ್ದರು.
ಕಾರ್ತಿಕ ವಿಶೇಷ ಪೂಜೆ
ಶಿಡ್ಲಘಟ್ಟ ತಾಲ್ಲೂಕಿನ ಬೂದಾಳ ಗ್ರಾಮದ ಮಲೆಮಲ್ಲೇಶ್ವರ ದೇವಸ್ಥಾನದಲ್ಲಿ ಕಡೆಯ ಕಾರ್ತಿಕ ಸೋಮವಾರದ ಪ್ರಯುಕ್ತ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು
ಕನಕದಾಸರ ಸದ್ಭಾವನ ಪ್ರಶಸ್ತಿ ಪ್ರದಾನ
ಶಿಡ್ಲಘಟ್ಟ ತಾಲ್ಲೂಕಿನ ಕನ್ನಡ ಸಾರಸ್ವತ ಪರಿಚಾರಿಕೆಯ ಕಾರ್ಯದರ್ಶಿ ಹಾಗೂ ಅಪ್ಪೇಗೌಡನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ. ತ್ಯಾಗರಾಜ್ ಅವರಿಗೆ 2017 ಸಾಲಿನ ‘ಕನಕದಾಸರ ಸದ್ಭಾವನ ಪ್ರಶಸ್ತಿ’ ಯನ್ನು ಭಾನುವಾರ ಬೆಂಗಳೂರಿನ ಚಿಗುರು ಕಲ್ಚರಲ್ ಟ್ರಸ್ಟ್ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನೀಡಿ ಗೌರವಿಸಿದ್ದಾರೆ. ಟ್ರಸ್ಟ್ ನ ವಿ.ಸಂತೋಷಿ, ಪ್ರಶಾಂತ್, ಅಂಜಲಿ, ರಾಘುರಾಮನ್, ಉಷಾರಾಮನ್ ಹಾಜರಿದ್ದರು
ಶ್ರೀ ಕಲ್ಲೇಶ್ವರ ಮತ್ತು ಶ್ರೀ ಸಿದ್ಧರಾಮೇಶ್ವರ ವಾರ್ಷಿಕೋತ್ಸವ
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಸುಗಟೂರು ಗ್ರಾಮದಲ್ಲಿ ಶ್ರೀ ಕಲ್ಲೇಶ್ವರ ಮತ್ತು ಶ್ರೀ ಸಿದ್ಧರಾಮೇಶ್ವರ ಸ್ವಾಮಿ ದೇವರುಗಳ ನಿತ್ಯ ಪೂಜಾ ಆರನೇ ವರ್ಷದ ವಾರ್ಷಿಕೋತ್ಸವವನ್ನು ಸೋಮವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಗುರುಗಳಾದ ಎಸ್.ಎನ್.ನಂಜುಡಾರಾಧ್ಯರು ಆಶೀರ್ವಚನವನ್ನು ನೀಡಿ, ‘ಕಾರ್ತಿಕ ಮಾಸ ಶ್ರೇಷ್ಠ ಮಾಸವಾಗಿದೆ. ಕಾರ್ತಿಕ ಮಾಸದ ಸೋಮವಾರಗಳನ್ನು ಅತ್ಯಂತ ಪವಿತ್ರ, ಮಂಗಳಕರ ದಿನವೆಂಬ ನಂಬಿಕೆ ಇದ್ದು ಶಿವನನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸಲಾಗುತ್ತದೆ.
ಕಾರ್ತಿಕ ಮಾಸ ವ್ರತಾಚರಣೆಯಿಂದ ಹಿಂದಿನ ಕರ್ಮಗಳನ್ನು ಕಳೆದುಕೊಳ್ಳಲು ಸಾಧ್ಯವಿದೆ. ಕಡೆಯ ಕಾರ್ತಿಕ ಸೋಮವಾರ ಪೂಜಾ ಮಹೋತ್ಸವವನ್ನು ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ’ ಎಂದು ಹೇಳಿದರು.
ದೇವಾಲಯದ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆಯನ್ನು ನಡೆಸಲಾಯಿತು. ದೇವಾಲಯವನ್ನು ಮತ್ತು ದೇವರನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಅಲಂಕರಿಸಿದ್ದ ಎತ್ತುಗಳನ್ನು ಭಕ್ತರು ಕರೆತಂದಿದ್ದುದು ಆಕರ್ಷಕವಾಗಿತ್ತು. ಸುತ್ತ ಮುತ್ತಲಿನ ಗ್ರಾಮ ಹಾಗೂ ತಾಲ್ಲೂಕುಗಳಿಂದ ಭಕ್ತರು ಆಗಮಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.
ಕಂದಾಯ ಭವನದಲ್ಲಿ ಆಧಾರ್ ಅದಾಲತ್
ಮುಂದಿನ ದಿನಗಳಲ್ಲಿ ಆಧಾರ್ ಪ್ರಮುಖ ದಾಖಲೆಯಾಗಿ ಎಲ್ಲರಿಗೂ ಅತ್ಯಗತ್ಯವಾಗಲಿದೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶೇ.79 ರಷ್ಟು ಮಾತ್ರ ಆಧಾರ್ ನೋಂದಣಿಯಾಗಿದೆ. ಹೀಗಾಗಿ ಜನರ ಅನುಕೂಲಕ್ಕಾಗಿ ನಗರದಲ್ಲಿ ಆಧಾರ್ ಅದಾಲತ್ ನಡೆಸುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಆಧಾರ್ ಜಿಲ್ಲಾ ಸಂಯೋಜಕ ಮಂಜುನಾಥ್ ತಿಳಿಸಿದ್ದಾರೆ.
ತಾಲ್ಲೂಕು ಕಚೇರಿಯ ಬಳಿಯ ಕಂದಾಯ ಭವನದಲ್ಲಿ ಸೋಮವಾರ ಇ – ಆಡಳಿತ ಬೆಂಗಳೂರು ಹಾಗೂ ಜಿಲ್ಲಾಡಳಿತದ ಸಹಯೋಗದೊಂದಿಗೆ ನಡೆಯುತ್ತಿರುವ ಆಧಾರ್ ಅದಾಲತ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರದಲ್ಲಿ ಐದು ದಿನಗಳ ಕಾಲ ಈ ಆಧಾರ್ ಅದಾಲತ್ ನಡೆಯಲಿದೆ. ಈ ಹಿಂದೆ ಆಧಾರ್ ನಲ್ಲಿ ಆಗಿರುವ ದೋಷಗಳನ್ನು ಸರಿಪಡಿಸುವುದು ಹಾಗೂ ವಿವಿಧ ಕಾರಣಗಳಿಂದ ಈವರೆಗೆ ಆಧಾರ್ ನೋಂದಣಿ ಮಾಡಿಸದಿದ್ದವರು ಈ ಆದಾಲತ್ ನಲ್ಲಿ ನೋಂದಣಿ ಮಾಡಿಸಲು ಸುವರ್ಣಾವಕಾಶ ಎಂದರು. ಈ ಹಿಂದೆ ಆಧಾರ್ ನೋಂದಣಿ ಮಾಡಿಸಿ, ತಾಂತ್ರಿಕ ಕಾರಣಗಳಿಂದ ಆಧಾರ್ ಸಿಗದಿದ್ದವರೂ ಮತ್ತೊಮ್ಮೆ ಆಧಾರ್ ನೋಂದಣಿ ಮಾಡಿಸಬೇಕು. ಅಲ್ಲದೆ, ಮೊಬೈಲ್ ಲಿಂಕ್, ವಿಳಾಸ ಬದಲಾವಣೆ, ಹೆಸರಿನಲ್ಲಿನ ದೋಷಗಳ ತಿದ್ದುಪಡಿ, ವಯಸ್ಸು ಮತ್ತು ಹುಟ್ಟಿದ ದಿನಾಂಕದ ತಿದ್ದುಪಡಿಗಳ ಅವಶ್ಯವಿದ್ದಲ್ಲೂ ಅದಾಲತ್ ಕೇಂದ್ರದಲ್ಲಿ ನೋಂದಣಿ ಮಾಡಿಸಬೇಕಿದೆ ಎಂದರು.
ಎಲ್ಲರಿಗೂ ಆಧಾರ್ ಸೌಲಭ್ಯ ಒದಗಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ತಾಲ್ಲೂಕಿನ ವ್ಯಾಪ್ತಿಯಲ್ಲಿ ವೃದ್ಧರು, ಅಂಗವಿಕಲತೆಯಿಂದ ಆಧಾರ್ ನೋಂದಣಿಗೆ ಆಗಮಿಸದೆ ಬಿಟ್ಟು ಹೋಗಿರುವವರು ಹಾಗೂ ಹಾಸಿಗೆ ಹಿಡಿದಿರುವವರಿಗಾಗಿ ಸಹ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಅವರ ಮನೆಗೇ ತೆರಳಿ ಆಧಾರ್ ನೋಂದಣಿ ಮಾಡಿಸಲಾಗುವುದು ಎಂದು ವಿವರಿಸಿದರು.
ಟಿಪ್ಪು ಭವನಕ್ಕಾಗಿ ಸ್ಥಳ ಮಂಜೂರಾತಿ
ಟಿಪ್ಪು ಭವನಕ್ಕಾಗಿ ಸ್ಥಳ ಮಂಜೂರಾತಿಗಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಅತ್ಯಂತ ಶೀಘ್ರವಾಗಿ ಸ್ಥಳ ಮಂಜೂರಾತಿ ಆಗಲಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಾಡಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ನಗರದ ತಾಲ್ಲೂಕು ಕಚೇರಿಯ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಟಿಪ್ಪು ಸುಲ್ತಾನ್ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಟಿಪ್ಪು ಸುಲ್ತಾನ್ ದೂರದರ್ಶಿತ್ವದಿಂದ ಜಿಲ್ಲೆಗೆ ರೇಷ್ಮೆ ಬಂದಿತು. ಟಿಪ್ಪು ತನ್ನ ಆಡಳಿತಾವಧಿಯಲ್ಲಿ ಚೀನಾ ದೇಶದಿಂದ ತರಿಸಿದ ರೇಷ್ಮೆ ಬೆಳೆಯಿಂದಾಗಿ ಇಂದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರ ಜೀವನ ಹಸನಾಗಿದೆ. ರೇಷ್ಮೆಯಿಂದಲೇ ಖ್ಯಾತಿ ಪಡೆದಿರುವ ತಾಲ್ಲೂಕಿನ ಜನರು ಈ ಕಾರಣದಿಂದ ಟಿಪ್ಪುವಿನ ಬಗ್ಗೆ ಗೌರವ ಭಾವನೆಯನ್ನು ಹೊಂದಿರುವರು ಎಂದು ಹೇಳಿದರು.
ಸರ್ಕಾರದ ನಿರ್ದೇಶನದಂತೆ ಅತ್ಯಂತ ಸರಳವಾಗಿ ಟಿಪ್ಪು ಸುಲ್ತಾನ್ ಜಯಂತ್ಯುತ್ಸವವನ್ನು ಈ ಬಾರಿ ನಡೆಸಲಾಗುತ್ತಿದೆ. ಮುಂದಿನ ವರ್ಷ ಅದ್ದೂರಿಯಾಗಿ ಎಲ್ಲರೂ ಒಗ್ಗೂಡಿ ಆಚರಿಸೋಣ ಎಂದು ನುಡಿದರು.
ನಗರಸಭಾ ಸದಸ್ಯ ಅಫ್ಸರ್ ಪಾಷ ಮಾತನಾಡಿ, ಹಿರಿಯರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿತ್ತು. ಆದರೆ ಕಡಿಮೆ ಸಮಯದಲ್ಲಿ ಸರಳವಾಗಿ ಕಾರ್ಯಕ್ರಮ ನಡೆಸಬೇಕಿದ್ದರಿಂದ ಇದೆಲ್ಲ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಮುಖ್ಯ ಭಾಷಣಕಾರ ಉಪನ್ಯಾಸಕ ಮುನಿರೆಡ್ಡಿ ಟಿಪ್ಪು ಸುಲ್ತಾನ್ ಜೀವನ ಸಾಧನೆಯನ್ನು ವಿವರಿಸಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ಗ್ರೇಡ್ 2 ತಹಶೀಲ್ದಾರ್ ಮುನಿಕೃಷ್ಣಪ್ಪ, ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್, ಆಯುಕ್ತ ಚಲಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಬಾಬು, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ಸರ್ಕಲ್ ಇನ್ಸ್ ಪೆಕ್ಟರ್ ಸಿದ್ದರಾಜು, ಸಿಕಂದರ್, ರೆಹಮಾನ್, ತಾಜ್ ಪಾಷ, ಮಹಮ್ಮದ್ ಅಲಿ, ಹೈದರಾಲಿ, ನವಾಜ್ ಖಾನ್, ಮುಸ್ಟಾಕ್ ಅಹಮದ್, ಮನ್ಸೂರ್ ಅಹಮದ್, ಅಮೀರ್ ಜಾನ್, ಮೌಲಾ, ಅಬ್ದುಲ್ ಅಹಮದ್, ನವಾಜ್ ಖಾನ್, ಬಾಬಾ, ಮಹಮ್ಮದ್ ಅಮೀರ್ ಹಾಜರಿದ್ದರು.
ನಗರದ ಹೊರವಲಯದ ಪ್ಯೂಪಾ ಸಂಸ್ಕರಣೆಯಿಂದ ಹರಡುತ್ತಿದೆ ರೋಗ ರುಜಿನ ದೂರಕ್ಕೆ ಸ್ಥಳಾಂತರಿಸಲು ಸ್ಥಳೀಯರ ಒತ್ತಾಯ
ಮುಖ್ಯಾಂಶಗಳು…
– ಪ್ಯೂಪ ಘಟಕಗಳ ದುರ್ವಾಸನೆ ಹಾಗೂ ಮಾಲಿನ್ಯದಿಂದ ತರಕಾರಿ ಮತ್ತು ವಾಣಿಜ್ಯ ಬೆಳೆಗಳಿಗೆ ತೊಂದರೆ
– ಶಾಲಾ ಕಾಲೇಜು, ನ್ಯಾಯಾಲಯ, ದೇವಾಲಯಗಳು ಸಮೀಪವಿದ್ದು ಜನರಿಗೆ ಕೆಟ್ಟ ವಾಸನೆಯಿಂದ ತೊಂದರೆ
– ಸುತ್ತ ಮುತ್ತ ವಾಸಿಸುವವರಿಗೆ ಶ್ವಾಸ ಕೋಶ, ಉಸಿರಾಟ ಸಂಬಂಧಿತ ರೋಗಗಳು
– ನಗರದಿಂದ ದೂರ ಸ್ಥಳಾಂತರಿಸಲು ಸ್ಥಳೀಯರ ಕೂಗು
ತಾಲ್ಲೂಕಿನ ಎಲ್ಲೆಡೆ ಮಳೆ ಬಿದ್ದರೆ ಸಂಭ್ರಮಿಸುತ್ತಾರೆ ಹಾಗೂ ಮಳೆ ಬರಲಿ ಎಂದು ಆಶಿಸುತ್ತಾರೆ. ಆದರೆ ನಗರದ ಹೊರವಲಯದ ರಾಜೀವ್ ಗಾಂಧಿ ಬಡಾವಣೆ, ಇದ್ಲೂಡು, ಹನುಮಂತಪುರ, ನೆಲ್ಲೀಮರ¬ದ¬ಹಳ್ಳಿ ನಿವಾಸಿಗಳು ಮಳೆ ಬಂದರೆ ಆತಂಕಕ್ಕೊಳಗಾಗುತ್ತಾರೆ. ಅವರಿಗೆ ಊಟ ಸರಿಯಾಗಿ ಸೇರದಾಗುತ್ತದೆ, ಹೊಟ್ಟೆ ತೊಳಸಲು ಪ್ರಾರಂಭವಾಗುತ್ತದೆ.
ಇದಕ್ಕೆ ಕಾರಣ ರಾಜೀವ್ಗಾಂಧಿ ಬಡಾವಣೆ ಹಾಗೂ ಇದ್ಲೂಡು ಸಮೀಪವಿರುವ ಸತ್ತ ರೇಷ್ಮೆ ಹುಳು ಸಂಸ್ಕರಣಾ ಘಟಕಗಳು. ಇದರಿಂದ ಹೊರ ಸೂಸುವ ದುರ್ನಾತ, ಕ್ರಿಮಿ ಕೀಟಗಳ ಕಾಟದಿಂದ ಸುತ್ತ ಮುತ್ತಲಿನ ಜನರಿಗೆ ಶ್ವಾಸ ಕೋಶ, ಉಸಿರಾಟ ಸಂಬಂಧಿತ ರೋಗಗಳು ಹೆಚ್ಚುತ್ತಿವೆ.
‘ಪುರಸಭೆಯಿಂದ ನಗರಸಭೆಯಾದ ನಂತರ ನಗರದ ವ್ಯಾಪ್ತಿ ಹೆಚ್ಚಾಯಿತು. ನಗರ ಬೆಳೆದು ಹೊರವಲಯದ ಕೆಲ ಗ್ರಾಮಗಳು ಸೇರಿಕೊಂಡಿರುವುದರಿಂದ ಅವುಗಳೂ ನಗರಸಭೆಗೆ ಸೇರಿವೆ. ಹೀಗಾಗಿ ನಗರದ ವ್ಯಾಪ್ತಿಯಲ್ಲಿ ಪರಿಸರ ಇಲಾಖೆಯ ಅನುಮತಿಯನ್ನು ಪಡೆಯದೇ ಅನಧಿಕೃತವಾಗಿ ನಡೆಸುತ್ತಿರುವ ಅಕ್ರಮ ಸಂಸ್ಕರಣ ಘಟಕಗಳಿಂದ ಈ ಭಾಗದ ಜನ ಸಾಮಾನ್ಯರ ಆರೋಗ್ಯ ಹದಗೆಡುತ್ತಿದೆ. ಇವನ್ನು ಬೇರೆಡೆಗೆ ಸ್ಥಳಾಂತರಿಸಿ ಎಂದು ಎರಡು ವರ್ಷಗಳ ಹಿಂದೆಯೇ ನಾವು ಜಿಲ್ಲಾಧಿಕಾರಿಗಳಿಗೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ, ರೇಷ್ಮೆ ಉಪನಿರ್ದೇಶಕರು ಮಾಲಿನ್ಯ ನಿಯಂತ್ರಣ ಮತ್ತು ಪರಿಸರ ಇಲಾಖೆ, ತಹಶೀಲ್ದಾರ್, ರೇಷ್ಮೆ ಸಹಾಯಕ ನಿರ್ದೇಶಕರು ಹಾಗೂ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದೆವು. ಆದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ’ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ ತಿಳಿಸಿದರು.
‘ರಾಮನಗರದಲ್ಲೂ ಇದೇ ಸಮಸ್ಯೆಯಿತ್ತು. ಅಲ್ಲಿನ ನಗರಸಭೆಯವರು ನಗರಕ್ಕೆ ಬಹು ದೂರದಲ್ಲಿ ಒಂದು ಎಕರೆ ಜಮೀನನ್ನು ಖರೀದಿಸಿ ಪ್ಯೂಪಾ ಸಂಸ್ಕರಣ ಘಟಕಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ರೀತಿಯ ಪರಿಹಾರೋಪಾಯವನ್ನು ಕೂಡ ಆಲೋಚಿಸಬಹುದಾಗಿದೆ’ ಎಂದು ಅವರು ಹೇಳಿದರು.
ರಾಜೀವ್ ಗಾಂಧಿ ಬಡಾವಣೆಯ ನಿವಾಸಿಗಳು ಹಲವು ಬಾರಿ ಸತ್ತ ರೇಷ್ಮೆ ಹುಳು ಸಂಸ್ಕರಣಾ ಘಟಕಗಳನ್ನು ತೆರವುಗೊಳಿಸಬೇಕು ಎಂದು ನಗರಸಭೆಯ ಆರೋಗ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಹಿಂದೆ ಪುರಸಭೆಯ ಆರೋಗ್ಯಾಧಿಕಾರಿ ಬಾಲಚಂದ್ರ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ ಮನವಿ ಸ್ವೀಕರಿಸಿದ್ದರು.
‘ಹತ್ತಿರದಲ್ಲೇ ನ್ಯಾಯಾಧೀಶರ ಮನೆ¬ಯಿದ್ದು, ಅವರಿಂದಲೂ ದೂರು ಬಂದಿದೆ. ಹನುಮಂತಪುರ, ನೆಲ್ಲೀಮರ¬ದ¬ಹಳ್ಳಿ ನಿವಾಸಿಗಳೂ ಕೂಡ ದೂರು ನೀಡಿದ್ದಾರೆ. ಈ ವಾಸನೆಯಿಂದ ರೇಷ್ಮೆ ಬೆಳೆಗೂ ತೊಂದರೆ¬ಯಾಗುತ್ತಿರುವು¬ದಾಗಿ ರೈತರು ದೂರಿದ್ದಾರೆ. ಇಲ್ಲಿ ಸುತ್ತಮುತ್ತಲಿನ ಹಲವು ಶಾಲಾ ಕಾಲೇಜುಗಳ ಮುಖ್ಯಸ್ಥರೂ ಕೆಟ್ಟ ವಾಸನೆಯ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಇಲ್ಲಿನ ಪರಿ-ಸ್ಥಿತಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ’ ಎಂದು ಆಗ ಹೆಲ್ತ್ ಇನ್ಸ್ಪೆಕ್ಟರ್ ಬಾಲಚಂದ್ರ ತಿಳಿಸಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಇಲ್ಲಿನ ನಿವಾಸಿಗಳು ಬೇಸರಿಸುತ್ತಾರೆ.
ರೇಷ್ಮೆ ಗೂಡು ಮಾರುಕಟ್ಟೆಯಿಂದ ಗೂಡನ್ನು ಖರೀದಿ ಮಾಡಿದ ಮೇಲೆ ಗೂಡಿ¬ನಿಂದ ಕಚ್ಚಾ ರೇಷ್ಮೆ ತೆಗೆದ ನಂತರ ಉಳಿಯುವ ಸತ್ತ ಹುಳುಗಳು (ಪ್ಯೂಪಾ) ಮತ್ತು ತೆಳು ಪರದೆ¬ಯಂತಹ ರೇಷ್ಮೆಯನ್ನು ಈ ಪ್ಯೂಪಾ ಘಟಕ¬ದವರು ಕೊಂಡು ತರುತ್ತಾರೆ. ಕೆಟ್ಟ ವಾಸನೆ ಬೀರುವ ಈ ಕೆಲಸದಿಂದ ರೇಷ್ಮೆ ಹಾಗೂ ಹುಳು¬ಗಳನ್ನು ಬೇರ್ಪಡಿಸಿ ಒಣಗಿಸಿ ಮಾರುತ್ತಾರೆ.
ಪ್ಯೂಪಾ ಘಟಕದಿಂದ ಹೊರ ಸೂಸುವ ದುರ್ನಾತ, ಹಾಗೂ ಕೆಟ್ಟ ಪರಿಸರದಿಂದ ಸೊಳ್ಳೆಗಳ ಉತ್ಪತ್ತಿಯೂ ಹೆಚ್ಚಾಗಿದೆ. ಡೆಂಗ್ಯೂ, ಚಿಕನ್ ಗುನ್ಯಾ ಖಾಯಿಲೆಗಳು ಈ ಭಾಗದಲ್ಲಿ ಹೆಚ್ಚಾಗಿವೆ. ಈ ಭಾಗದ ಜನರಿಗೆ ಶ್ವಾಸ ಕೋಶ, ಉಸಿರಾಟ ಸಂಬಂಧಿತ ರೋಗಗಳು ಹೆಚ್ಚುತ್ತಿವೆ. ದಿನವೂ ೧೨೦-–೧೫೦ ರೂಪಾಯಿಗೆ ರೇಷ್ಮೆನೂಲು ತೆಗೆಯುವ ಕೂಲಿ ಕೆಲಸ ಮಾಡುವ ಇಲ್ಲಿನ ಜನರು ರೋಗ ರುಜುನಗಳಿಗೆ ತುತ್ತಾಗಿ ಸಾವಿರಾರು ರೂಪಾಯಿ ಹಣವನ್ನು ಆಸ್ಪತ್ರೆಗಳಿಗೆ ಖರ್ಚು ಮಾಡುವ ದುಸ್ಥಿತಿ ಉಂಟಾಗಿದೆ. ಹಾಗಾಗಿ ಕೂಡಲೆ ಈ ಹುಳು ಸಂಸ್ಕರಣಾ ಘಟಕಗಳನ್ನು ವಸತಿ ಪ್ರದೇಶದಿಂದ ಹೊರಗೆ ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ಬಗ್ಗೆ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರನ್ನು ಕೇಳಿದಾಗ, ‘ಶಿಡ್ಲಘಟ್ಟ ತಾಲ್ಲೂಕು ರೇಷ್ಮೆಗೆ ಪ್ರಸಿದ್ಧಿ. ರೇಷ್ಮೆ ಕಸುಬಿನ ಒಂದು ಭಾಘ ಪ್ಯೂಪಾ ಸಂಸ್ಕರಣೆ. ಆದರೆ ಇದರಿಂದ ಜನರಿಗೆ ಅನಾನುಕೂಲ ಆಗಬಾರದು. ನಾನು ಖುದ್ದಾಗಿ ಸ್ಥಳ ಪರಿಶೀಲನೆ ಮಾಡುತ್ತೇನೆ. ರಾಮನಗರದಲ್ಲಿ ಈ ಸಮಸ್ಯೆಯನ್ನು ಬಗೆ ಹರಿಸಿಕೊಂಡಿರುವುದರ ಬಗ್ಗೆ ಮಾಹಿತಿ ಪಡೆದು ಸಾಧ್ಯವಾದರೆ ಅದೇ ರೀತಿ ನಾವೂ ಇಲ್ಲಿ ಕ್ರಮ ಕೈಗೊಳ್ಳುತ್ತೇವೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
ಕೃಷಿ ಇಲಾಖೆಯಿಂದ ವಿತರಿಸಿದ ಕಳಪೆ ರಾಗಿ ಬಿತ್ತನೆ ಬೀಜದಿಂದ ಅಪಾರ ನಷ್ಟ
ಕೃಷಿ ಇಲಾಖೆಯಿಂದ ವಿತರಿಸಲಾಗಿರುವ ರಾಗಿ ಬಿತ್ತನೆ ಬೀಜ ಅತ್ಯಂತ ಕಳಪೆಯಾಗಿದ್ದು, ತಾಲ್ಲೂಕಿನಾದ್ಯಂತ 100 ಹೆಕ್ಟೇರ್ ಗೂ ಹೆಚ್ಚು ರಾಗಿ ಬೆಳೆ ನಷ್ಟವಾಗುತ್ತಿದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಬೂದಾಳ ರಾಮಾಂಜಿ ಆರೋಪಿಸಿದ್ದಾರೆ.
ಬೀಜ ನಿಗಮದಿಂದ ಪಡೆದಿರುವ ರಾಗಿ ಬಿತ್ತನೆ ಬೀಜ ‘ಜಿಪಿ 28’ ವನ್ನು ಕೃಷಿ ಇಲಾಖೆಯು ರೈತರಿಗೆ ಒಂದು ಕೆಜಿಗೆ 35 ರೂಗಳಂತೆ ವಿತರಿಸಿತ್ತು. ಆದರೆ ಹೊಲದಲ್ಲಿ ತೆನೆ ಹಂತಕ್ಕೆ ಬಂದಿದ್ದು, ಶೇ.40 ರಷ್ಟು ಕಳಪೆ ಹಾಗೂ ಮಿಶ್ರ ತೆನೆ ಕಂಡು ಬಂದಿದೆ. ಇಳುವರಿ ಕಡಿಮೆಯಾಗಿ ರೈತರಿಗೆ ಅಪಾರ ನಷ್ಟವನ್ನು ತಂದಿದೆ. ಕೆಲವು ಕಾಳು ಕಟ್ಟಿದ್ದರೆ, ಕೆಲವು ತೆನೆ ಬಂದಿವೆ, ಇನ್ನು ಕೆಲವು ಹಣ್ಣಾಗಿವೆ, ಕೆಲವಂತೂ ಬೂದಿ ಬಣ್ಣ ಪಡೆದಿವೆ. ಇದರಿಂದಾಗಿ ಕಟಾವಿಗೆ ತೊಂದರೆಯಾಗಿದೆ. ಒಂದೇ ಬಾರಿಗೆ ಬೆಳೆ ಬರದಿರುವುದರಿಂದ ಕಟಾವು ತಡ ಮಾಡಿರುವುದರಿಂದ ಇಲಿಗಳ ಕಾಟ ಪ್ರಾರಂಭವಾಗಿದ್ದು, ನಷ್ಟ ಆಗುತ್ತಿದೆ.
ಗುಣಮಟ್ಟ ಇಲ್ಲದಿರುವುದು, ಇಳುವರಿಯ ಕುಂಠಿತ, ಕಟಾವಿಗೆ ತೊಂದರೆ, ರೋಗ ಹೆಚ್ಚಾಗಿರುವುದು ಎಲ್ಲವೂ ಸೇರಿಕೊಂಡು ರೈತರಿಗೆ ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಗಿದೆ.
ಕಳೆದ ವರ್ಷ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದರು. ಆದರೆ ಈ ಬಾರಿ ಮಳೆ ಉತ್ತಮವಾಗಿದ್ದರೂ ಕಳಪೆ ಬಿತ್ತನೆ ಬೀಜದಿಂದ ಬೆಳೆ ನಷ್ಟವನ್ನು ಹೊಂದುವಂತಾಗಿದೆ. ತಾಲ್ಲೂಕಿನಲ್ಲಿ ಈ ನಷ್ಟದ ಪ್ರಮಾಣ ಸುಮಾರು 100 ಹೆಕ್ಟೇರ್ ಎಂದು ಅಂದಾಜಿಸಿದ್ದು, ಜಿಲ್ಲೆಯಾದ್ಯಂತ ಸಾಕಷ್ಟು ಪ್ರಮಾಣದಲ್ಲಿ ರೈತರು ನಷ್ಟ ಹೊಂದಿದ್ದಾರೆ.
ಕೃಷಿ ಇಲಾಖೆಯಿಂದ ಪಡೆದಿರುವ ರಸೀದಿ, ರಾಗಿ ಬ್ಯಾಗ್ ಮೇಲಿರುವ ತಂಡದ ಸಂಖ್ಯೆ ಹಾಗೂ ದಿನಾಂಕದ ಪ್ರತಿಯನ್ನು ವಿವಿಧ ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರು, ಜಂಟಿ ಕೃಷಿ ನಿರ್ದೇಶಕರು ಮತ್ತು ಉಪ ಕೃಷಿ ನಿರ್ದೇಶಕರಿಗೆ ನೀಡಿದ್ದೇವೆ. ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇವೆ.
ಬೀಜ ನಿಗಮದಿಂದ ಬಂದ ಬಿತ್ತನೆ ರಾಗಿಯ ಮೂಲದ ಬಗ್ಗೆ ತನಿಖೆಯಾಗಬೇಕು. ರೈತರಿಗೆ ನಷ್ಟ ಪರಿಹಾರವನ್ನು ಕೊಡಬೇಕು. ಈ ರೀತಿ ಮುಂದೆಂದೂ ಆಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಶಿಕ್ಷಕರಲ್ಲಿ ನಿರಂತರ ಅಧ್ಯಯನಶೀಲತೆ ಅಗತ್ಯವಿದೆ
ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಮಕ್ಕಳಲ್ಲಿ ಕಲಿಕೆಯ ಆಸಕ್ತಿಯನ್ನು ಕೆರಳಿಸಿ ಯಶಸ್ವಿ ಬೋಧನೆ ಕೈಗೊಳ್ಳಲು ಶಿಕ್ಷಕರಲ್ಲಿ ನಿರಂತರ ಅಧ್ಯಯನಶೀಲತೆಯನ್ನು ರೂಢಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಈಚೆಗೆ ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ವತಿಯಿಂದ ಆಯೋಜಿಸಿದ್ದ ಗಣಿತ ಮತ್ತು ಕನ್ನಡ ಬೋಧಿಸುವ ಶಿಕ್ಷಕರಿಗಾಗಿ ಒಂದು ದಿನದ ಪುನಶ್ಚೇತನ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳಲ್ಲಿಯೂ ಕಲಿಕಾಸಕ್ತಿಯನ್ನು ವೃದ್ಧಿಸಲು ಪೂರಕವಾಗಿ ಶಿಕ್ಷಕರು ವಿನೂತನ ಕ್ರಮಗಳನ್ನು ಅನುಸರಿಸಬೇಕು. ಎಸ್ಎಸ್ಎಲ್ಸಿ ಮಕ್ಕಳಲ್ಲಿ ಕನಿಷ್ಟ ಕಲಿಕಾಮಟ್ಟವನ್ನು ತಲುಪಿಸಿ ಕನಿಷ್ಟ ಅಂಕಗಳನ್ನು ಆದರೂ ಗಳಿಸುವ ಮಾರ್ಗೋಪಾಯಗಳನ್ನು ತಿಳಿಸಬೇಕು. ತಾಲ್ಲೂಕಿನಲ್ಲಿ ಉತ್ತಮ ಫಲಿತಾಂಶ ಪಡೆಯಲು ಪೂರಕವಾಗಿ ಶಿಕ್ಷಕರು ಶ್ರಮವಹಿಸುವ ಅಗತ್ಯವಿದೆ ಎಂದು ತಿಳಿಸಿದರು.
ತಾಲ್ಲೂಕಿನ ಸುಮಾರು ೪೦ ಕ್ಕೂ ಹೆಚ್ಚು ಪ್ರೌಢಶಾಲೆಗಳ ಗಣಿತ ಮತ್ತು ಕನ್ನಡ ಬೋಧಿಸುವ ೮೦ ಕ್ಕೂ ಹೆಚ್ಚು ಶಿಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಜಂಗಮಕೋಟೆ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ಎಂ.ಎಸ್.ಈರಯ್ಯ, ತಾಲ್ಲೂಕು ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಗೋಪಿನಾಥ್, ಕಾರ್ಯದರ್ಶಿ ಶ್ರೀಕಂಠ, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎಲ್.ವಿ.ವೆಂಕಟರೆಡ್ಡಿ, ಸಹಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ಗೋವಿಂದರಾಜುಲು, ಖಜಾಂಚಿ ಇಂದಿರಾ, ಎಂ.ಶಿವಕುಮಾರ್ ಹಾಜರಿದ್ದರು.
ರಸ್ತೆಯ ಗುಂಡಿಗಳನ್ನು ಮುಚ್ಚಿದ ವಕೀಲರು
ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ನಗರಸಭೆ ಅಧಿಕಾರಿಗಳಿಗೆ ಸಾಕಷ್ಟು ಭಾರಿ ಹೇಳಿದರೂ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಬೇಸತ್ತು ನಾವೇ ಸ್ವತಃ ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ ಹೇಳಿದರು.
ತಾಲ್ಲೂಕು ವಕೀಲರ ಸಂಘದ ವತಿಯಿಂದ ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ನ್ಯಾಯಾಲಯಕ್ಕೆ ಹೋಗುವ ಮಾರ್ಗದಲ್ಲಿ ರಸ್ತೆಯಲ್ಲಿನ ಬೃಹತ್ ಗುಂಡಿಗಳಿಗೆ ಮಣ್ಣು ಹಾಕಿಸಿ ಮುಚ್ಚುವ ಕೆಲಸದಲ್ಲಿ ಪಾಲ್ಗೊಂಡು ಮಾತನಾಡಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ನ್ಯಾಯಾಲಯಕ್ಕೆ ಹೋಗುವ ಮಾರ್ಗ ಮದ್ಯೆ ರಸ್ತೆಯಲ್ಲಿ ಬಹಳಷ್ಟು ಗುಂಡಿಗಳು ಬಿದ್ದಿದ್ದು ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ಕಳೆದ ಆರು ತಿಂಗಳುಗಳಿಂದ ಬಿದ್ದಿದ್ದ ಗುಂಡಿಗಳನ್ನು ಮುಚ್ಚುವಂತೆ ಸಾಕಷ್ಟು ಭಾರಿ ನಗರಸಭೆ ಆಯುಕ್ತರಿಗೆ ಮನವಿ ಮಾಡಲಾಗಿತ್ತು. ಆದರೆ ನಗರಸಭೆ ಅಧಿಕಾರಿಗಳು ಈ ಬಗ್ಗೆ ಕ್ರಮ ಜರುಗಿಸದೇ ಇದ್ದುದರಿಂದ ಬೇಸತ್ತು ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳು ಇಂದು ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳಿಗೆ ಮಣ್ಣು ತುಂಬಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಎಂ.ಬಿ.ಲೋಕೇಶ್, ವಕೀಲರಾದ ಬೈರರೆಡ್ಡಿ, ಮಂಜುನಾಥ್ ಹಾಜರಿದ್ದರು.
ಬಾಲಕನನ್ನು ರಕ್ಷಿಸಿದ್ದ ಬಾಲೆಯರಿಗೆ ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿ
ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಾದ ಎಚ್.ಕೆ.ದೀಕ್ಷಿತಾ ಮತ್ತು ಎಚ್.ಕೆ.ಅಂಬಿಕಾ ಅವರು ಈ ಬಾರಿಯ ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದೀಕ್ಷಿತಾ ಆರನೇ ತರಗತಿಯಲ್ಲಿ ಮತ್ತು ಅಂಬಿಕಾ ಏಳನೆಯ ತರಗತಿಯಲ್ಲಿ ಓದುತ್ತಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ರಂಜಾನ್ ಹಬ್ಬದ ರಜಾ ದಿನದಂದು ತಾಲ್ಲೂಕಿನ ಹನುಮಂತಪುರ ಗ್ರಾಮದಲ್ಲಿ ಗೋಬರ್ ಗ್ಯಾಸ್ನ ಸ್ಲರ್ರಿಗೆ ಬಿದ್ದು ಪ್ರಾಣಾಪಾಯದಲ್ಲಿದ್ದ ಮನೋಜ ಎಂಬ ಬಾಲಕನನ್ನು ಈ ಇಬ್ಬರು ಬಾಲಕಿಯರು ರಕ್ಷಿಸಿದ್ದರು. ಈ ಬಗ್ಗೆ ಜುಲೈ 4 ರಂದು ‘ಪ್ರಜಾವಾಣಿ’ಯಲ್ಲಿ ‘ಬಾಲಕನನ್ನು ರಕ್ಷಿಸಿದ ಬಾಲೆಯರು’ ಎಂದು ವರದಿ ಪ್ರಕಟವಾಗಿತ್ತು.
ನವೆಂಬರ್ 14 ರಂದು ಬೆಂಗಳೂರಿನ ಕಬ್ಬನ್ ಉದ್ಯಾನವನದ ಜವಾಹರ ಬಾಲ ಭವನದಲ್ಲಿ ನಡೆಯುವ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಪಾಲರಿಂದ ಈ ಮಕ್ಕಳು ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿಯನ್ನು ಹಾಗೂ 10 ಸಾವಿರ ರೂ ನಗದು ಬಹುಮಾನವನ್ನು ಸ್ವೀಕರಿಸಲಿದ್ದಾರೆ.
ಶಾಲೆಗೆ ರಜೆ ಇದ್ದ ಕಾರಣ ಮನೋಜ ಆಟವಾಡುತ್ತಾ ಗೋಬರ್ ಗ್ಯಾಸ್ ಸ್ಲರ್ರಿಯ ಬಳಿ ಚಿಟ್ಟೆ ಹಿಡಿಯಲು ಹೋಗಿ ಕಾಲು ಜಾರಿ ಮುಗ್ಗರಿಸಿ ಬಿದ್ದಿದ್ದಾನೆ. ಅದೇ ಸಮಯದಲ್ಲಿ ಹತ್ತಿರದಲ್ಲೇ ಆಟವಾಡುತ್ತಿದ್ದ ದೀಕ್ಷಿತಾ ಮತ್ತು ಅಂಬಿಕಾ ಮನೋಜ ಬಿದ್ದದ್ದನ್ನು ಕಂಡಿದ್ದಾರೆ. ಅವರು ಹತ್ತಿರ ಹೋಗುವಷ್ಟರಲ್ಲಿ ಬೋರಲಾಗಿ ಬಿದ್ದು ಸಗಣಿಯ ಕೆಸರಿನಲ್ಲಿ ಮುಳುಗಿದ್ದ ಮನೋಜನ ಒಂದು ಕಾಲು ಮಾತ್ರ ಮೇಲೆ ಕಂಡಿದೆ. ಇಬ್ಬರು ಹುಡುಗಿಯರೂ ಬಲವಾಗಿ ಕಾಲನ್ನು ಹಿಡಿದು ಮನೋಜನನ್ನು ಹೊರಕ್ಕೆ ಎಳೆದು ಹಾಕಿ ಅವನನ್ನು ರಕ್ಷಿಸಿದ್ದರು. ಈ ಮೂವರೂ ಮಕ್ಕಳು ಹನುಮಂತಪುರ ವಾಸಿಗಳಾದರೂ ಓದುತ್ತಿರುವುದು ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ.
ವಿಷಯ ತಿಳಿದ ನಂತರ ಶಿಕ್ಷಕರು ಈ ಇಬ್ಬರು ಹೆಣ್ಣುಮಕ್ಕಳ ಸಮಸ್ಫೂರ್ತಿ ಮತ್ತು ಧೈರ್ಯ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಶೌರ್ಯ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಹಾಗೂ ಪರಿವೀಕ್ಷಣಾ ಅಧಿಕಾರಿ ರಾಮೇಗೌಡರ ನೆರವಿನಿಂದ ಅಗತ್ಯ ದಾಖಲಾತಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಉಪನಿರ್ದೇಶಕರ ಅನುಮೋದನೆಯೊಂದಿಗೆ ಮಕ್ಕಳ ರಕ್ಷಣಾ ಇಲಾಖೆಗೆ ನೀಡಿದ್ದಾರೆ.
‘ನಮ್ಮ ಶಾಲೆಯ ಹೆಣ್ಣು ಮಕ್ಕಳಿಗೆ ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿ ಬಂದಿರುವುದು ನಮಗೆಲ್ಲಾ ಹೆಮ್ಮೆ ತಂದಿದೆ. ಇದು ಸರ್ಕಾರಿ ಶಾಲೆಯ ಮಕ್ಕಳಿಗೆ ಧೈರ್ಯ, ಸ್ಫೂರ್ತಿ, ಉತ್ಸಾಹ, ಪ್ರೋತ್ಸಾಹ ನೀಡಲಿದೆ. ಮಕ್ಕಳ ಭವಿಷ್ಯಕ್ಕೆ ಈ ಪ್ರಶಸ್ತಿ ನಬೆರವಾಗಲಿದೆ’ ಎಂದು ಶಿಕ್ಷಕರು ತಿಳಿಸಿದರು.
‘‘ನಮಗೆ ಖುಷಿಯಾಗಿದೆ. ಆ ದಿನ ಗೋಬರ್ ಗ್ಯಾಸ್ ಸ್ಲರ್ರಿಯಲ್ಲಿ ಮನೋಜನ ಒಂದು ಕಾಲನ್ನು ಕಂಡು, ಅದನ್ನು ಹಿಡಿದು ಇಬ್ಬರೂ ಎಳೆದೆವು. ಅವನ ಮೈಯೆಲ್ಲಾ ಸಗಣಿಯಾಗಿತ್ತು. ಅದನ್ನು ಶಿಕ್ಷಕರಿಗೆ ತಡವಾಗಿ ತಿಳಿಸಿದೆವು. ಅವರು ಮೆಚ್ಚಿ ನಮ್ಮೆಲ್ಲಾ ದಾಖಲಾತಿಗಳನ್ನು ಪಡೆದು ಇಲಾಖೆಗೆ, ಪತ್ರಿಕೆಗೆ ತಿಳಿಸಿ ಪ್ರಶಸ್ತಿ ಕೊಡಿಸಿದ್ದಾರೆ. ಅವರಿಗೆ ಕೃತಜ್ಞತೆಗಳು’ ಎನ್ನುತ್ತಾರೆ ಎಚ್.ಕೆ.ದೀಕ್ಷಿತಾ ಮತ್ತು ಎಚ್.ಕೆ.ಅಂಬಿಕಾ.
ಮಕ್ಕಳ ಜ್ಞಾನ ವೃದ್ಧಿಗಾಗಿ ಗಣಿತ ಆಂದೋಲನ
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಜ್ಞಾನ ವೃದ್ಧಿಗಾಗಿ ವಿವಿಧ ಚಟುವಟಿಕೆಗಳನ್ನು ಆಗಾಗ ಹಮ್ಮಿಕೊಳ್ಳುತ್ತಿರಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಜಯರಾಮ್ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಅಕ್ಷರಾ ಫೌಂಡೇಶನ್ ಹಾಗೂ ಹಂಡಿಗನಾಳ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮದಲ್ಲಿ ವಿಜೇತ ಮಕ್ಕಳಿಗೆ ಬಹುಮಾನವನ್ನು ವಿತರಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಕ್ಲಿಷ್ಟವೆನಿಸುವ ವಿಷಯಗಳನ್ನು ಸರಳವಾಗಿ ಇಷ್ಟವಾಗುವಂತೆ ಕಲಿಸುವ ಹಲವಾರು ವಿಧಾನಗಳಿವೆ. ಅವುಗಳನ್ನು ಅರಿತವರಿಂದ ಮಕ್ಕಳಿಗೆ ಆಡುತ್ತಾ ಕಲಿಯುವಂತೆ ಕಲಿಸಬಹುದಾಗಿದೆ. ಗ್ರಾಮ ಪಂಚಾಯಿತಿಯ ವಿವಿಧ ಸರ್ಕಾರಿ ಶಾಲೆಗಳ ಮಕ್ಕಳನ್ನು ಒಗ್ಗೂಡಿಸಿ ಕಲಿಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ಮಾತನಾಡಿ, ಈ ದಿನ ಮೌಲಾನಾ ಅಬ್ದುಲ್ ಕಲಂ ಆಜಾದ್ ಅವರ ದಿನವಾಗಿದೆ ಎಂದು ಹೇಳಿ ಅವರ ಜೀವನ ಸಾಧನೆ, ಹೋರಾಟ, ಆದರ್ಶಗಳನ್ನು ಮಕ್ಕಳಿಗೆ ವಿವರಿಸಿದರು.
ಗಣಿತ ಸ್ಪರ್ಧೆಯಲ್ಲಿ ವಿಜೇತರಾದ ನಾಲ್ಕು, ಐದು ಮತ್ತು ಆರನೇ ತರಗತಿಯ ತಲಾ ಮೂವರು ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯಿತಿ ಸದಸ್ಯ ಜಯರಾಂ ಪ್ರೋತ್ಸಾಹಕರವಾಗಿ ನಗದು ಬಹುಮಾನ ವಿತರಿಸಿದರು. ಅಕ್ಷರಾ ಫೌಂಡೇಶನ್ ವತಿಯಿಂದ ಪ್ರಮಾಣ ಪತ್ರವನ್ನು ನೀಡಲಾಯಿತು. ಮಂಜುನಾಥ್, ಸಿದ್ದರಾಮ ಎನ್.ಕೋಟೆ, ಶಾಲಾ ಶಿಕ್ಷಕರು ಹಾಜರಿದ್ದರು.
ಅಭಿವೃದ್ಧಿ ಕೆಲಸಗಳಲ್ಲಿ ರಾಜಕೀಯಕ್ಕೆ ಅವಕಾಶ ನೀಡಬಾರದು
ಮಹರ್ಷಿ ವಾಲ್ಮೀಕಿಯವರ ಕಲ್ಪನೆಯಂತೆ ಸಮಾಜದಲ್ಲಿನ ಬಡವರು, ಶೋಷಿತವರ್ಗದವರು, ಅಲ್ಪಸಂಖ್ಯಾತರು ಒಟ್ಟಾರೆ ಎಲ್ಲರೂ ಕೂಡಾ ಒಗ್ಗಟ್ಟಿನಿಂದ ಜೀವಿಸುವಂತಾಗಬೇಕು ಎಂದು ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು.
ತಾಲ್ಲೂಕಿನ ತಲಕಾಯಲಬೆಟ್ಟದಲ್ಲಿ ಶನಿವಾರ ಸುಮಾರು ೫೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಮಹರ್ಷಿ ವಾಲ್ಮೀಕಿ ಭವನದ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ನಡೆಯುವ ಅಭಿವೃದ್ಧಿ ಕೆಲಸಗಳಲ್ಲಿ ಯಾವುದೇ ರಾಜಕೀಯಕ್ಕೆ ಅವಕಾಶ ನೀಡದೆ ಎಲ್ಲರೂ ಒಟ್ಟಾಗಿ ಸೇರಿ ದುಡಿಯಬೇಕು. ಇದೀಗ ನೂತನವಾಗಿ ನಿರ್ಮಾಣವಾಗಿರುವ ಮಹರ್ಷಿ ವಾಲ್ಮೀಕಿ ಭವನವನ್ನು ಎಲ್ಲಾ ವರ್ಗದ ಜನರಿಗೆ ಬಳಕೆಯಾಗಬೇಕು. ವಾಲ್ಮೀಕಿ ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಮೂಲಕ ಸಮಾಜದಲ್ಲಿ ಅತ್ಯತ್ತಮ ವ್ಯಕ್ತಿಗಳನ್ನಾಗಿ ರೂಪುಗೊಳಿಸುವಂತಹ ಕೆಲಸವನ್ನು ಮಾಡಬೇಕು ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಭಿವೃದ್ಧಿಗಾಗಿ ಹೆಚ್ಚು ಅನುದಾನಗಳನ್ನು ನೀಡುತ್ತಿದೆ ಈಗಾಗಲೇ ನಗರದಲ್ಲಿ ಸುಮಾರು ೧ ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಭವನ, ನಿರ್ಮಾಣ ಕಾರ್ಯ ಸೇರಿದಂತೆ ೧.೫ ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ, ಹೋಬಳಿ ಕೇಂದ್ರಗಳಲ್ಲಿ ತಲಾ ೫೦ ಲಕ್ಷಗಳ ವೆಚ್ಚದಲ್ಲಿ ಅಂಬೇಡ್ಕರ್ ಹಾಗೂ ವಾಲ್ಮೀಕಿ ಭವನಗಳನ್ನು ನಿರ್ಮಾಣ ಮಾಡಲು ಸರ್ಕಾರದಿಂದ ಅನುದಾನಗಳು ಮಂಜೂರಾಗಿವೆ. ತಾಲ್ಲೂಕಿನಾಧ್ಯಂತ ೧೯ ಜಗಜೀವನರಾಂ ಭವನಗಳಿಗೆ ಮಂಜೂರಾತಿ ದೊರೆತಿದ್ದು ಕಾಮಗಾರಿ ಶುರುಮಾಡಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ವಾಲ್ಮೀಕಿ ಜನಾಂಗದ ಏಳಿಗೆಗಾಗಿ ಈಗಾಗಲೇ ತಾಲ್ಲೂಕಿನ ಸುಂಡ್ರಹಳ್ಳಿಯಲ್ಲಿ ಸುಮಾರು ೧೫ ಕೋಟಿ ರೂಪಾಯಿಗಳ ವೆಚ್ಚದಲ್ಲಿ ವಾಲ್ಮೀಕಿ ಆಶ್ರಮಶಾಲೆ ನಿರ್ಮಾಣವಾಗುತ್ತಿದ್ದು ಸಮುದಾಯದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು ಎಂದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಮುನಿರಾಜು, ಸದಸ್ಯ ಕೆ.ಎಂ.ಸತೀಶ್, ತಹಸೀಲ್ದಾರ್ ಅಜಿತ್ಕುಮಾರ್ರೈ, ತಾಲ್ಲೂಕು ಪಂಚಾಯಿತಿ ಇಓ ಎಂ.ವೆಂಕಟೇಶ್, ಸದಸ್ಯೆ ಶಂಕರಮ್ಮ, ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಶ್ರೀನಿವಾಸ, ಉಪಾಧ್ಯಕ್ಷೆ ಗಾಯಿತ್ರಿನಾರಾಯಣಸ್ವಾಮಿ, ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಜಿ.ಕೃಷ್ಣೇಗೌಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಅನಸೂಯದೇವಿ, ಮುಖಂಡರಾದ ಶೇಷಗಿರಿರಾವ್, ಜಗದೀಶ್, ಶ್ರೀರಾಮರೆಡ್ಡಿ, ಮುನಿಯಮ್ಮ, ಯರಬಚ್ಚಪ್ಪ, ಧನಂಜಯರೆಡ್ಡಿ, ಅಶ್ವಥ್ಥಪ್ಪ, ನಾಗರಾಜ್ ಹಾಜರಿದ್ದರು.
ಜಿಲ್ಲಾ ಮಟ್ಟದ ಸ್ಕೇಟಿಂಗ್ ಪಂದ್ಯಾವಳಿ
ಶಿಡ್ಲಘಟ್ಟದಲ್ಲಿ ಪ್ರಪ್ರಥಮವಾಗಿ ಜಿಲ್ಲಾ ಮಟ್ಟದ ಸ್ಕೇಟಿಂಗ್ ಪಂದ್ಯಾವಳಿಯನ್ನು ಆಯೋಜಿಸಿದ್ದು, ಮುಂದಿನ ದಿನಗಳಲ್ಲಿ ತಾಲ್ಲೂಕಿನ ಹಲವಾರು ಸ್ಕೇಟಿಂಗ್ ಪ್ರತಿಭೆಗಳು ರಾಜ್ಯಮಟ್ಟದಲ್ಲಿ ಭಾಗವಹಿಸುವರು ಎಂದು ದಿವ್ಯ ಭಾರತ್ ಕರಾಟೆ ಡೋ ಅಸೋಶಿಯೇಷನ್ ನ ಅರುಣ್ ಕುಮಾರ್ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ದಿವ್ಯ ಭಾರತ್ ಕರಾಟೆ ಡೋ ಅಸೋಶಿಯೇಷನ್ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸ್ಕೇಟಿಂಗ್ ಚಾಂಪಿಯನ್ಶಿಪ್ ಸ್ವರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬಾಲ್ಯದಿಂದ ಮಕ್ಕಳಿಗೆ ಕ್ರೀಡಾಕೂಟಗಳಲ್ಲಿ ಆಸಕ್ತಿ ಬೆಳೆಸುವುದರಿಂದ ದೊಡ್ಡವರಾದ ಮೇಲೆ ಉತ್ತಮ ಕ್ರೀಡಾಪಟುಗಳಾಗಿ ರಾಜ್ಯ ಮತ್ತು ರಾಷ್ಟ್ರಕ್ಕೆ ಕೀರ್ತಿ ತರುವುದರಲ್ಲಿ ಯಾವುದೇ ಸಂದೇಹವಿಲ್ಲ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೇಹಕ್ಕೆ ವ್ಯಾಯಾಮ ದೊರೆಯುವುದರ ಜೊತೆಗೆ ಆರೋಗ್ಯವಂತರಾಗಿ ಮನಸ್ಸು ಉಲ್ಲಸಿತವಾಗಿರುತ್ತದೆ.
೫ ರಿಂದ ೧೩ ವರ್ಷಗಳ ಮಕ್ಕಳಿಗೆ ೫೦೦,೧೦೦೦,೧೫೦೦ ಮೀಟರ್ ಸ್ಕೇಟಿಂಗ್ ಸ್ಪರ್ಧೆಯನ್ನು ಎರ್ಪಡಿಸಲಾಗಿದ್ದು, ಸ್ಪರ್ಧೆಯಲ್ಲಿ ಗೌರಿಬಿದನೂರು, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಮೂರು ತಾಲ್ಲೂಕಿನಿಂದ ಸುಮಾರು ೪೦ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದಾರೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮೊದಲನೆ, ದ್ವಿತೀಯ, ತೃತೀಯ ಬಹುಮಾನ ವಿತರಣೆ ಮಾಡಲಾಯಿತು.
ಸ್ಪರ್ಧೆಯಲ್ಲಿ ಗೆದ್ದ ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದೆಂದು ಈ ಸಂದರ್ಭದಲ್ಲಿ ಅರುಣ್ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸ್ಕೇಟಿಂಗ್ ಸ್ಪರ್ಧೆಯಲ್ಲಿ ವಿವಿಧ ಚಾಕಚಕ್ಯತೆಯನ್ನು ಪ್ರದರ್ಶಿಸಿದ್ದು, ನೋಡುಗರ ಮೆಚ್ಚುಗೆ ಗಳಿಸಿತ್ತು.
ಈ ಸಂದರ್ಭದಲ್ಲಿ ಮುನಾವರ್, ಮುನಿರಾಜು, ನಿರಂಜನ್, ಜನಾರ್ದನ್, ಅನ್ಸರ್ ಖಾನ್, ಅರವಿಂದ್, ಚೆನ್ನಕೃಷ್ಣಪ್ಪ, ರಾಜಕುಮಾರ್, ಅಬ್ದುಲ್ ಗಫೂರ್, ಅಮ್ಜದ್ ಖಾನ್ ಹಾಜರಿದ್ದರು.
ನೋಟು ಅಮಾನ್ಯೀಕರಣ ಖಂಡಿಸಿ ಕಾಂಗ್ರೆಸ್ ನಿಂದ ಕರಾಳ ದಿನಾಚರಣೆ
ಪ್ರಧಾನಿ ನರೇಂದ್ರ ಮೋದಿ 500ರೂ, ಹಾಗೂ 1000 ರೂ. ನೋಟ್ ರದ್ದತಿಗೊಳಿಸಿ ಒಂದು ವರ್ಷದ ಹಿನ್ನೆಲೆಯಲ್ಲಿ ಈ ನಿರ್ಧಾರದ ಬಗ್ಗೆ ವಿರೋಧ ವ್ಯಕ್ತಪಡಿಸಿ ಬುಧವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಮುಖಂಡ ವಿ.ಮುನಿಯಪ್ಪ ನೇತೃತ್ವದಲ್ಲಿ ತಾಲ್ಲೂಕು ಕಚೇರಿಯ ಮುಂದೆ ಕೇಂದ್ರ ಸರ್ಕಾರದ ವಿರುದ್ದ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ವಿ.ಮುನಿಯಪ್ಪ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೋಟ್ ಬ್ಯಾನ್ ಮಾಡಿದ್ದು, ಅವರ ವೈಫಲ್ಯತೆಯಾಗಿದೆ, ಇದರಿಂದಾಗಿ ಬಡ ಜನತೆಗೆ ತುಂಬಾ ತೊಂದರೆಗೊಳಗಾಗಿದ್ದಾರೆ. ಇದರಿಂದ ಹಣ ಉಳ್ಳವರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ, ಜೊತೆಗೆ ಯಾವುದೇ ಶ್ರೀಮಂತನೂ ಕೂಡ ಹಣ ಬದಲಾವಣೆ ಮಾಡಿಕೊಳ್ಳಲು ಬ್ಯಾಂಕುಗಳ ಮುಂದೆ ನಿಂತಿರುವುದು ಕಂಡು ಬಂದಿಲ್ಲ, ವಾರಗಟ್ಟಲೆ ಬ್ಯಾಂಕುಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಬಡ ಜನರು ತೊಂದರೆಗೀಡಾಗಿದ್ದಾರೆ. ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಬಡ ಜನರಿಗೆ ಶೂನ್ಯ ಖಾತೆಯನ್ನು ತೆರೆದು ಅವರ ಖಾತೆಗೆ ಹಣ ಹಾಕುತ್ತೇವೆಂದು ಭರವಸೆ ನೀಡಿದ್ದರು, ಅದೂ ಇಂದು ಹುಸಿಯಾಗಿದೆ. ರಾಜ್ಯ ಸರ್ಕಾರ ರೈತರ 50 ಸಾವಿರ ರೂ. ಸಾಲ ಮನ್ನಾ ಮಾಡಿದೆ ಕೇಂದ್ರ ಸರ್ಕಾರ ಉಳಿದ ರೈತರ ಸಾಲವನ್ನು ಸಾಲ ಮನ್ನಾ ಮಾಡಲು ಮೀನ-ಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಜಿ.ಎಸ್.ಟಿ ಮಾಡಿರುವುದರಿಂದ ಶೇ 90 ರಷ್ಟು ಬಡ ಜನರಿಗೆ ತೊಂದರೆಯಾಗಿದೆ. ಮೋದಿ ಎಂದರೆ ಒಂದು ದುರಂತವಿದ್ದಹಾಗೆ. ಆದರೆ ಅವರು ಭಕ್ತರು ಮಾತ್ರವೇ ಅಪನಗದೀಕರಣದಿಂದ ಒಳಿತಾಗಿದೆ ಎಂದು ಕುಣಿಯುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತರು ನಗರದ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ಕರಾಳ ದಿನವಿದು ಎನ್ನುತ್ತಾ ಕೇಂದ್ರ ಸರ್ಕಾರದ ವಿರುದ್ದ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟಿಸಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಯಾಸ್ಮೀನ್ ತಾಜ್, ಆರ್.ಶ್ರೀನಿವಾಸ್, ಗುಡಿಯಪ್ಪ, ಸತೀಶ್, ತನ್ವೀರ್, ಮುನಿಕೃಷ್ಣಪ್ಪ, ಎಚ್.ಎಂ.ಮುನಿಯಪ್ಪ, ಮೌಲಾ, ಸುಬ್ರಮಣಿ ಹಾಜರಿದ್ದರು.

