ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನವೆಂಬರ್ 10 ರಂದು ಟಿಪ್ಪು ಜಯಂತಿ ನಡೆಸಲಿದ್ದು, ಎಲ್ಲ ಸಂಘ ಸಂಸ್ಥೆಗಳು, ಸಮುದಾಯದವರು ಜಯಂತಿಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ತಹಶೀಲ್ಧಾರ್ ಎಸ್.ಅಜಿತ್ ಕುಮಾರ್ ರೈ ಮನವಿ ಮಾಡಿದರು.
ತಾಲ್ಲೂಕು ಆಡಳಿತದಿಂದ ಟಿಪ್ಪು ಜಯಂತಿ ಆಚರಣೆಯ ಹಿನ್ನಲೆಯಲ್ಲಿ ಗ್ರಾಮಾಂತರ ಠಾಣೆಯಲ್ಲಿ ಮಂಗಳವಾರ ವಿವಿಧ ಸಂಘ ಸಂಸ್ಥೆ, ಮುಸ್ಲಿಂ ಸಮುದಾಯ ಹಾಗೂ ನಾಗರಿಕರ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರದ ಆದೇಶದಂತೆ ಟಿಪ್ಪು ಜಯಂದಿಯ ದಿನದಂದು ಯಾರೇ ಆಗಲಿ ಯಾವುದೆ ರೀತಿಯ ಮೆರವಣಿಗೆ ಮಾಡುವುದು, ಫ್ಲೆಕೆ್ಸ್, ಬ್ಯಾನರ್ಗಳನ್ನು ಕಟ್ಟುವಂತಿಲ್ಲ. ಬೆಳಗ್ಗೆ ೯.೩೦ಕ್ಕೆ ಕಾರ್ಯಕ್ರಮ ಆರಂಭಿಸಿ ನಿಗತ ಸಮಯದೊಳಗೆ ಮುಗಿಸಲು ಸಹಕರಿಸುವಂತೆ ಕೋರಿದರು.
ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಸ್ಲಿಂ ಸಮುದಾಯದ ಮುಖಂಡರು, ಅಂದು ಶುಕ್ರವಾರ, ಆದ್ದರಿಂದ ಪ್ರಾರ್ಥನೆ ಸಲ್ಲಿಸಬೇಕು. ಆದ್ದರಿಂದ ವೇದಿಕೆ ಕಾರ್ಯಕ್ರಮವನ್ನು ಮದ್ಯಾಹ್ನ ೨ ಗಂಟೆಗೆ ನಿಗದಿ ಮಾಡಿ, ವೇದಿಕೆಯಲ್ಲಿ ಮಿನಿವಿಧಾನಸೌಧದ ಎದುರು ಬೇಡ, ಅಗ್ನಿಶಾಮಕ ಠಾಣೆ ಆವರದಲ್ಲಿ ಮಾಡಿ ಎಂದು ಮನವಿ ಮಾಡಿದರು.
ಮೆರವಣಿಗೆ ಮಾಡುವುದು, ಫ್ಲೆಕ್ಸ್, ಬ್ಯಾನರ್ ಕಟ್ಟುವುದನ್ನು ನಿಷೇಸಿರುವುದು ಸೇರಿದಂತೆ ಎಲ್ಲ ನೀತಿ ನಿಯಮಗಳನ್ನು ಪಾಲಿಸುವುದಾಗಿ ಭರವಸೆ ನೀಡಿದರು.
ಸಭಿಕರ ಮನವಿಗೆ ಸ್ಪಂದಿಸಿದ ತಹಶೀಲ್ದಾರರು, ವೇದಿಕೆಯನ್ನು ಮಿನಿವಿಧಾನಸೌಧದ ಎದುರು ಬದಲಿಗೆ ಅಗ್ನಿಶಾಮಕ ಠಾಣೆ ಎದುರು ನಿರ್ಮಿಸಲು ಒಪ್ಪಿದರಾದರೂ ಸಮಯ ಬದಲಾವಣೆಗೆ ಒಪ್ಪಲಿಲ್ಲ. ಇದು ಒಂದು ತಾಲ್ಲೂಕಿನ ಪ್ರಶ್ನೆಯಲ್ಲ. ಇಡೀ ರಾಜ್ಯದ ಪ್ರಶ್ನೆ, ರಾಜ್ಯದ ಎಲ್ಲ ಕಡೆಯೂ ಇದೆ ನಿಯಮ ಇದೆ ಎಂದರು.
ವೇದಿಕೆ ಕಾರ್ಯಕ್ರಮದ ಸಮಯದಲ್ಲಿ ಬದಲಾವಣೆಗೆ ಒಪ್ಪದ ಅಧಿಕಾರಿಗಳ ಮಾತಿನಿಂದ ಬೇಸರಗೊಂಡ ಮುಸ್ಲಿಂ ಸಮುದಾಯದ ಕೆಲವರು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.
ಸಭೆಯಿಂದ ಹೊರ ನಡೆದವರನ್ನು ಸಮಾಧಾನಪಡಿಸಿದ ಅಧೀಕಾರಿಗಳು, ಪೊಲೀಸರು ಮತ್ತೆ ಅವರನ್ನು ಸಭಾಂಗಣಕ್ಕೆ ಕರೆದು ಸರ್ಕಾರದ ಸುತ್ತೋಲೆಯನ್ನು ಮೀರಿ ನಾವು ಏನೂ ಮಾಡಲು ಸಾಧ್ಯವಿಲ್ಲ. ಇದು ಕೇವಲ ಮುಸ್ಲಿಂ ಸಮುದಾಯಕ್ಕೆ ಸೇರಿದ ಜಯಂತಿಯೂ ಅಲ್ಲ. ಎಲ್ಲರೂ ಸೇರಿ ಮಾಡಬೇಕಿರುವ ಜಯಂತಿ ಆಗಿದ್ದು ಎಲ್ಲರೂ ಸರ್ಕಾರದ ನೀತಿ ನಿಯಮಗಳನ್ನು ಒಪ್ಪಲೇಬೇಕು, ಅನುಸರಿಸಲೇ ಬೇಕು ಎಂದು ಮನವಿ ಮಾಡಿದರು.
ಎಲ್ಲರೂ ಸಹಕರಿಸುವುದಾದರೆ ಬೃಹತ್ ವೇದಿಕೆ ನಿರ್ಮಿಸಿ ಅರ್ಥಪೂರ್ಣವಾಗಿ, ಅದ್ದೂರಿಯಾಗಿ ಕಾರ್ಯಕ್ರಮ ಮಾಡೋಣ, ಅದು ಬಿಟ್ಟು ಕಾರ್ಯಕ್ರಮಕ್ಕೆ ಯಾರೂ ಬರದೇ ಇರುವಂತಾದರೆ ಸಭಾಂಗಣದ ಒಳಗೆ ಸಾಂಕೇತಿಕವಾಗಿ ಮಾಡಿ ಮುಗಿಸುತ್ತೇವೆ ಎಂದು ತಹಶೀಲ್ದಾರ್ ಸ್ಪಷ್ಟಪಡಿಸಿದರು.
ಅಂತಿಮವಾಗಿ ಸರ್ಕಾರ ನಿಗಪಡಿಸಿದಂತೆಯೆ ಜಯಂತಿಯನ್ನು ಅದೇ ಸಮಯಕ್ಕೆ ಅದೇ ರೀತಿಯಲ್ಲಿ ಮಾಡಲು ಎಲ್ಲರೂ ಒಪ್ಪಿದರು. ಅದರಂತೆ ನವೆಂಬರ್ ೧೦ರ ಶುಕ್ರವಾರ ಬೆಳಗ್ಗೆ ೯.೩೦ಕ್ಕೆ ಕಾರ್ಯಕ್ರಮವನ್ನು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಡಿವೈಎಸ್ಪಿ ನಾಗೇಶ್, ಸರ್ಕಲ್ ಇನ್ಸ್ಪೆಕ್ಟರ್ ಬಿ.ಸಿದ್ದರಾಜು, ಗ್ರಾಮಾಂತರ ಠಾಣೆಯ ಕೆ.ಪ್ರದೀಪ್ ಪೂಜಾರಿ, ದಿಬ್ಬೂರಹಳ್ಳಿ ಠಾಣೆಯ ವಿಜಯ್ ರೆಡ್ಡಿ, ಬಿ.ಅಪ್ಸರ್ಪಾಷ, ಮೇಲೂರು ಅಜೀಜ್, ತಾಜ್ ಪಾಷ, ಅನ್ಸರ್ ಖಾನ್, ರೆಹಮಾನ್, ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ನಂದೀಶ್, ಬೈರಾರೆಡ್ಡಿ, ರೈತ ಸಂಘದ ರವಿಪ್ರಕಾಶ್ ಹಾಜರಿದ್ದರು.
ಟಿಪ್ಪು ಜಯಂತಿ ಕಾರ್ಯಕ್ರಮ ನಿಗದಿಯಂತೆ ನಡೆಸಲು ತೀರ್ಮಾನ
ಸಿಐಟಿಯು ಪದಾಧಿಕಾರಿಗಳ ಮನವಿ
ಸರ್ಕಾರಿ ಹಾಸ್ಟೆಲ್ ಗಳಲ್ಲಿ ದಿನಗೂಲಿ ಹಾಗು ಹೊರಗುತ್ತಿಗೆ ಆದಾರದ ಮೇಲೆ ಸುಮಾರು ೨೦-೨೫ ವರ್ಷದಿಂದ ದುಡಿಯುತ್ತಿರುವ ನೌಕರರಿಗೆ ಸೇವಾಭದ್ರತೆ ಹಾಗು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲು ಮುಂಬರುವ ಅಧಿವೇಶನದಲ್ಲಿ ಪ್ರಸ್ತಾಪಿಸಬೇಕು ಎಂದು ಒತ್ತಾಯಿಸಿ ಸಿಐಟಿಯು ಪದಾಧಿಕಾರಿಗಳು ಶಾಸಕ ಎಂ.ರಾಜಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ಶಾಸಕರ ಗೃಹಕಚೇರಿಯಲ್ಲಿ ಬುಧವಾರ ಶಾಸಕ ಎಂ.ರಾಜಣ್ಣರನ್ನು ಭೇಟಿ ಮಾಡಿದ ಸಿಐಟಿಯು ಪದಾಧಿಕಾರಿಗಳು ಸರ್ಕಾರ ಇದೀಗ ವಿದ್ಯಾರ್ಹತೆ ಮೇಲೆ ಕಾಯಂ ನೌಕರರನ್ನಾಗಿಸಲು ಮುಂದಾಗಿದೆ. ಅನಕ್ಷರಸ್ಥರಾದ ಬಹುತೇಕ ಅಡುಗೆ ನೌಕರರು ಬೀದಿಗೆ ಬೀಳಲಿದ್ದೇವೆ. ಹಾಗಾಗಿ ಅನುಭವದ ಆದಾರದ ಮೇಲೆ ನಮ್ಮನ್ನು ನೌಕರರನ್ನಾಗಿ ಪರಿಗಣಿಸಿ ನಮಗೆ ಸೇವಾ ಭದ್ರತೆ ಒದಗಿಸಿ ನಮಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಮ್ಮ ಸಮಸ್ಯೆಗಳನ್ನು ಮುಂಬರುವ ಅಧಿವೇಶನದಲ್ಲಿ ತಾವು ಪ್ರಸ್ತಾಪಿಸಿ ನಮಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.
ಹಾಸ್ಟೆಲ್ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀರಾಮಣ್ಣ, ಕಾರ್ಯದರ್ಶಿ ಪಾಪಣ್ಣ, ನರಸಿಂಹಮೂರ್ತಿ, ಸರಸ್ವತಮ್ಮ, ಮಂಜುಳಮ್ಮ, ಗಂಗಾದರಪ್ಪ, ಪಾರ್ವತಮ್ಮ, ವಿಜಯಮ್ಮ ಹಾಜರಿದ್ದರು.
ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾಗಿ ಕಾಳನಾಯಕನಹಳ್ಳಿಯ ಕೆ.ಎಂ. ಭೀಮೇಶ್ ಅವಿರೋಧ ಆಯ್ಕೆ
ಪಿ.ಎಲ್.ಡಿ. ಬ್ಯಾಂಕಿನ ಅಧ್ಯಕ್ಷರಾಗಿ ಕಾಳನಾಯಕನಹಳ್ಳಿಯ ಕೆ.ಎಂ. ಭೀಮೇಶ್ ಮತ್ತು ಉಪಾಧ್ಯಕ್ಷರಾಗಿ ರವಿ ಅವಿರೋಧವಾಗಿ ಗುರುವಾರ ಆಯ್ಕೆಯಾದರು.
ಈಗಾಗಲೇ ನಷ್ಟದಲ್ಲಿರುವ ಪಿ.ಎಲ್.ಡಿ.ಬ್ಯಾಂಕಿನ ಅಧ್ಯಕ್ಷರಾಗಿದ್ದ ಚೀಮನಹಳ್ಳಿ ಗೋಪಾಲ್ ರಾಜೀನಾಮೆ ನೀಡಿದ್ದು ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿಯಿತ್ತು.
ಒಟ್ಟು ೧೩ ಮಂದಿ ಆಡಳಿತ ಮಂಡಳಿ ನಿರ್ದೆಶಕರು ಇದ್ದು ಕಾಂಗ್ರೆಸ್ ಬೆಂಬಲಿತ ೮, ಜೆಡಿಎಸ್ ಬೆಂಬಲಿತ ೪ ಹಾಗೂ ನಾಮನಿರ್ದೆಶಿತ ೧ ನಿರ್ದೆಶಕರು ಇದ್ದಾರೆ. ಬಹುಮತ ಇರುವ ಕಾಂಗ್ರೆಸ್ ಹಿಡಿತದಲ್ಲಿ ಬ್ಯಾಂಕ್ ಆಡಳಿತ ಇದೆ.
ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಒಪ್ಪಂದದಂತೆ ಹಾಲಿ ಅಧ್ಯಕ್ಷ ಸಿ.ಎಂ.ಗೋಪಾಲ್ ೩೦ ತಿಂಗಳ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನುಳಿದ ೩೦ ತಿಂಗಳ ಅವಧಿಗೆ ನಡೆದ ಚುನಾವಣೆ ಅವಿರೋಧವಾಗಿ ನಡೆಯಿತು. ಎಂ.ವಿ.ವೆಂಕಟೇಶಮೂರ್ತಿ ಚುನಾವಣೆ ಅಧಿಕಾರಿ ಆಗಿ ನೇಮಕ ಆಗಿದ್ದರು.
ಆರು ದಶಕಗಳ ಇತಿಹಾಸ ಇರುವ ಇಲ್ಲಿನ ಪಿಎಲ್ಡಿ ಬ್ಯಾಂಕ್ ಲಾಭದಲ್ಲಿಯೆ ಕಾರ್ಯನಿರ್ವಹಿಸುತ್ತಿತ್ತಾದರೂ ಇತ್ತೀಚಿನ ವರ್ಷಗಳಲ್ಲಿ ನಷ್ಟದಲ್ಲಿಯೆ ನಡೆಯುತ್ತಿದೆ. ಕೃಷಿಕರಿಗೆ ಕೊಟ್ಟ ಸಾಲದ ಮರುಪಾವತಿ ಸರಿಯಾಗಿ ಆಗದ ಕಾರಣ ಬ್ಯಾಂಕ್ ಹೊಸದಾಗಿ ಸಾಲ ನೀಡುವ ಶಕ್ತಿಯನ್ನೂ ಕಳೆದುಕೊಂಡಿದೆ.
ಕಳೆದ ಸರ್ವ ಸದಸ್ಯರ ಸಭೆಗೆ ಎಲ್ಲ ಷೇರುದಾರರಿಗೂ ಸಭೆಯ ನೊಟೀಸ್ ನೀಡಲು ಸಹ ಹಣಕಾಸಿನ ಮುಗ್ಗಟ್ಟಿನಿಂದ ಎಲ್ಲರಿಗೂ ನೊಟೀಸ್ ನೀಡಲಾಗದೆ ಸರ್ವ ಸದಸ್ಯರ ಸಭೆಯಲ್ಲಿ ಸದಸ್ಯರ ಕೊರತೆಯಿಂದ ಕೋರಂ ಕೊರತೆಯೂ ಎದುರಾಗಿತ್ತು.
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ನಂತರ ಬೆಂಬಲಿಗರು ಪಟಾಕಿ ಸಿಡಿಸಿ ಗೆದ್ದವರಿಗೆ ಹಾರಗಳನ್ನು ಹಾಕಿ ಸಂಭ್ರಮಿಸಿದರು.
ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕರಾದ ಗೋಪಾಲ್, ಅಶ್ವತ್ಥಪ್ಪ, ಅಶ್ವತ್ಥನಾರಾಯಣರೆಡ್ಡಿ, ಬಂಕ್ ಮುನಿಯಪ್ಪ ಹಾಜರಿದ್ದರು.
ಮೈ ನವಿರೇಳಿಸಿದ ಗ್ರಾಮೀಣ ಕ್ರೀಡೋತ್ಸವ
ಸೀರೆಯನ್ನು ಕಚ್ಚೆಕಟ್ಟಿ, ದಾವಣಿಯನ್ನು ಸೊಂಟಕ್ಕೆ ಕಟ್ಟಿ ‘ಕಬಡ್ಡಿ, ಕಬಡ್ಡಿ’ ಎನ್ನುತ್ತಾ ಗ್ರಾಮೀಣ ಮಹಿಳೆಯರು ಆಡುತ್ತಿದ್ದರೆ, ಪ್ರೇಕ್ಷಕರ ಕೇಕೆ, ಶಿಳ್ಳೆಗಳು ಮೈ ನವಿರೇಳಿಸುವಂತಿತ್ತು.
ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ, ತಾಲ್ಲೂಕು ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಹಾಗೂ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಗುರುವಾರ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 2016–17ನೇ ಸಾಲಿನ ಗ್ರಾಮೀಣ ಕ್ರೀಡೋತ್ಸವದಲ್ಲಿ ಈ ಚಿತ್ರಣ ಕಂಡುಬಂದಿತು.
ಮಹಿಳೆಯರು ಪುರುಷರಿಗಿಂತ ಕಡಿಮೆ ಇಲ್ಲ ಎನ್ನುವಂತೆ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದು ಸಂತೋಷ ಪಟ್ಟರು.
ಪುರುಷರಿಗಾಗಿ ವಾಲಿಬಾಲ್, ಮೂರು ಕಾಲು ಓಟ, ಬ್ಯಾಕ್ ವರ್ಡ್ ರೇಸ್, ಗೋಣಿ ಚೀಲ ಓಟ, ಸ್ಲೋ ಸೈಕಲ್ ರೇಸ್, ಮಹಿಳೆಯರಿಗಾಗಿ ಕಬಡ್ಡಿ, ಮ್ಯೂಜಿಕಲ್ ಚೇರ್, ಬ್ಯಾಕ್ ವರ್ಡ್ ರೇಸ್, ಲೆಮೆನ್ ಸ್ಪೂನ್ ಸ್ಪರ್ಧೆ ಆಯೋಜಿಸಲಾಗಿತ್ತು.
ಗುಂಪು ಸ್ಪರ್ಧೆಗೆ ಮೊದಲ ಬಹುಮಾನವಾಗಿ ಎರಡು ಸಾವಿರ ರೂ ಬಹುಮಾನ, ಒಂದು ಸಾವಿರ ರೂಗಳ ಬಹುಮಾನ ನೀಡಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯರಾದ ಜಯರಾಮ್, ಎ.ಎಂ.ತ್ಯಾಗರಾಜ್, ಮೂರ್ತಿ, ಕಾರ್ಯದರ್ಶಿ ಶ್ರೀನಿವಾಸ್, ಯುವಜನ ಕ್ರೀಡಾ ಇಲಾಖೆಯ ಅಧಿಕಾರಿ ರುದ್ರಪ್ಪ, ಮುಷ್ಟಾಕ್, ಶ್ರೀನಿವಾಸ್, ಜನಾರ್ಧನ್, ಆನಂದ್, ರವಿಪ್ರಕಾಶ್, ಮುಖ್ಯ ಶಿಕ್ಷಕಿ ವೆಂಕಟರತ್ನಮ್ಮ, ಶಿಕ್ಷಕ ಚಾಂದ್ ಪಾಷ, ನರಸಿಂಹಮೂರ್ತಿ, ಚನ್ನಕೇಶವ ಹಾಜರಿದ್ದರು.
ಜನ ಕಾನೂನು ಸೌಲಭ್ಯದಿಂದ ವಂಚಿತರಾಗಬಾರದು
ಹಣದ ಕೊರತೆಯಿಂದ ಜನ ಕಾನೂನು ಸೌಲಭ್ಯದಿಂದ ವಂಚಿತರಾಗಬಾರದು ಮತ್ತು ಬಡ ವರ್ಗದವರಿಗೆ ಉಚಿತ ಕಾನೂನು ಸೇವೆಯನ್ನು ನೀಡುವ ಉದ್ದೇಶದಿಂದ ಉಚಿತ ಕಾನೂನು ಸೇವಾ ಕಾಯಿದೆ ಜಾರಿಗೆ ತರಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್.ಮಂಜುನಾಥ್ ತಿಳಿಸಿದರು.
ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಮತ್ತು ತಾಲ್ಲೂಕು ಆಡಳಿತ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ನ್ಯಾಯಾಲಯದ ಸಂಕೀರ್ಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾನೂನು ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ನಾಗರಿಕರಿಗೆ ಕಾನೂನು, ಮೂಲಭೂತ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವಲ್ಲಿ ಮಾದ್ಯಮಗಳು ಪ್ರಮುಖ ಪಾತ್ರ ವಹಿಸಬೇಕು. ಇಂದಿನ ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಬಹಳ ಮುಂದುವರೆದಿದ್ದು, ಕಾನೂನಿನ ಅರಿವು ಮೂಡಿಸುವಲ್ಲಿ ಮಾದ್ಯಮಗಳ ಪಾತ್ರ ಪ್ರಮುಖವಾದದ್ದು ಎಂದು ಹೇಳಿದರು.
ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ ಅವರು ಮಾತನಾಡಿ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ, ಶೋಷಿರ ವರ್ಗದವರಿಗೆ ಉಚಿತವಾಗಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಉಚಿತವಾಗಿ ಕಾನೂನು ಸೇವೆ ನೀಡುವ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರ ಸ್ಥಾಪನೆಯಾಗಿದ್ದು, ಮಹಿಳೆಯರು ಸಹ ಇದರ ಪ್ರಯೋಜನ ಪಡೆಯಬಹುದೆಂದು ತಿಳಿಸಿದರು.
ಸಿವಿಲ್ ನ್ಯಾಯಾಧೀಶರಾದ ಟಿ.ಎಲ್.ಸಂದೀಶ್ ಅವರು ಮಾತನಾಡಿ, ನ್ಯಾಯಾಲಯದಲ್ಲಿ ಸಾವಿರಾರು ಪ್ರಕರಣಗಳು ಬಾಕಿ ಉಳಿದಿದ್ದು, ಪ್ರಕರಣಗಳನ್ನು ಆದಷ್ಟು ಬೇತ ಇತ್ಯರ್ಥ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಂಡು ಆದಷ್ಟು ಬೇಗ ಹೆಚ್ಚಿನ ನ್ಯಾಯಾಧೀಶರನ್ನು ನೇಮಕ ಮಾಡಬೇಕೆಂದು ತಿಳಿಸಿದ ಅವರು, ಲೋಕ ಅದಾಲತ್ನಲ್ಲಿ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಬೇಕೆಂದು ತಿಳಿಸಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ್ ಗೌಡ, ಸಹಾಯಕ ಸರ್ಕಾರಿ ವಕೀಲೆ ಎಸ್.ಕುಮುದಿನಿ, ವಕೀಲರ ಸಂಘದ ಕಾರ್ಯದರ್ಶಿ ಎಂ,ಬಿ.ಲೋಕೇಶ್, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಚರಂಡಿ ನಿರ್ಮಿಸದೇ ರಸ್ತೆ ಕಾಮಗಾರಿ – ಸ್ಥಳೀಯರ ಅಡ್ಡಿ
ನಗರದ ಎರಡನೇ ಕಾರ್ಮಿಕ ನಗರದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಚರಂಡಿಯನ್ನು ನಿರ್ಮಾಣ ಮಾಡದೆ ರಸ್ತೆ ಕಾಮಗಾರಿ ಪ್ರಾರಂಭ ಮಾಡಬಾರದೆಂದು ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.
ನಗರದ ಎರಡನೇ ಕಾರ್ಮಿಕ ನಗರ 26 ನೇ ವಾರ್ಡ್ ಗೆ ಸೇರುತ್ತದೆ. ಇದು ತಗ್ಗು ಪ್ರದೇಶವಾಗಿದೆ. ಈಗಾಗಲೇ ಚರಂಡಿಗಳಲ್ಲಿ ಹೂಳು ತುಂಬಿರುವುದರಿಂದ ಮಳೆ ನೀರು ಹರಿದು ಹೋಗಲು ಸ್ಥಳವಿಲ್ಲದೆ ರಸ್ತೆ ಮೇಲೆ ಹರಿದು ಮನೆಗಳಿಗೆ ನುಗ್ಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಗರದ ೧೭ ರಿಂದ ೨೬ನೇ ವಾರ್ಡ್ ವರೆಗೂ ನಗರೋತ್ಥಾನದ ೨ನೇ ಹಂತದ ಯೋಜನೆಯಲ್ಲಿ ಸುಮಾರು ೫೦ ಲಕ್ಷರೂ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಮೊದಲು ಚರಂಡಿ ಕಾಮಗಾರಿ ಪೂರ್ಣಗೊಳಿಸದೆ, ಚರಂಡಿಯಲ್ಲಿ ತುಂಬಿದ ಹೂಳನ್ನು ಕೂಡ ತೆಗೆಸದೆ ರಸ್ತೆ ಕಾಮಗಾರಿ ಪ್ರಾರಂಭ ಮಾಡಿದ್ದಾರೆ. ಅವೈಜ್ಞಾನಿಕವಾಗಿ ನಿರ್ಮಾಣ ಮಾಡುತ್ತಿರುವ ರಸ್ತೆ ಕಾಮಗಾರಿಯನ್ನು ಸ್ಥಗಿತಗೊಳಿಸಿ ಮೊದಲು ಚರಂಡಿ ಕಾಮಗಾರಿ ಪೂರ್ಣಗೊಳಿಸಿದ ನಂತರ ರಸ್ತೆ ಕಾಮಗಾರಿ ಪ್ರಾರಂಭ ಮಾಡಬೇಕೆಂದು ೨ನೇ ಕಾರ್ಮಿಕ ನಗರದ ವಾಸಿಗಳಾದ ಗೌಸ್ ಖಾನ್, ಅಮೀರ್ ಖಾನ್, ಇಲಿಯಾಜ್, ಅಮೀರ್, ನೌಕತ್ ಖಾನ್. ಅಸದ್ ಒತ್ತಾಯಿಸಿದ್ದಾರೆ.
ಅವೈಜ್ಞಾನಿಕವಾಗಿ ನಿರ್ಮಿಸಿರುವ ರೈಲ್ವೆ ಅಂಡರ್ ಪಾಸ್
ಅವೈಜ್ಞಾನಿಕವಾಗಿ ನಿರ್ಮಿಸಿರುವ ರೈಲ್ವೆ ಅಂಡರ್ ಪಾಸ್ ನಿಂದಾಗಿ ಮಳೆ ನೀರು ಹರಿಯದಂತಾಗಿದೆ. ಇದರಿಂದಾಗಿ ಈ ಭಾಗದ ಜನರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ನಗರದ ಸುತ್ತ ಮುತ್ತ ಜನದಟ್ಟಣೆಯಿರುವೆಡೆ ಅನುಕೂಲವಾಗಲೆಂದು ನಿರ್ಮಿಸಿರುವ ಅಂಡರ್ ಪಾಸ್ ಗಳು ಈಗ ಜನರಿಗೆ ಶಾಪವಾಗಿ ಪರಿಣಮಿಸಿದೆ. ಮಳೆ ನೀರು ಹರಿದು ಹೋಗದೆ ನಿಲ್ಲುವುದರಿಂದಾಗಿ ಇಲ್ಲಿ ಡಾಂಬರು ಕಿತ್ತುಹೋಗಿ ತಳದಲ್ಲಿ ಕಂಬಿಗಳು, ಜಲ್ಲಿ ಕಲ್ಲುಗಳು, ಹಳ್ಳಗಳು ಮೃತ್ಯುಕೂಪಗಳಾಗಿವೆ.
‘ಅತ್ಯಂತ ಅವೈಜ್ಞಾನಿಕವಾಗಿ, ಆತುರದಿಂದ ನಿರ್ಮಿಸಿರುವ ಅಂಡರ್ ಪಾಸ್ ಗಳಲ್ಲಿ ಶೇಖರಣೆಯಾಗುವ ನೀರನ್ನು ಕೆಲವೆಡೆ ಸಾರ್ವಜನಿಕರೇ ಖಾಲಿ ಮಾಡಿದರೆ, ಕೆಲ ಬಾರಿ ನಗರಸಭೆಯವರು ಜನರ ಒತ್ತಾಯಕ್ಕೆ ಮಣಿದು ಖಾಲಿ ಮಾಡಿಸುವ ಸ್ಥಿತಿಯಿದೆ. ನೀರು ನಿಂತು ಇಲ್ಲಿ ರಸ್ತೆಯು ಹಾಳಾಗಿದ್ದು, ಅಪಘಾತಗಳಿಗೆ ಕಾರಣವಾಗಿದೆ’ ಎಂದು ಮಾಜಿ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ರಾಮಚಂದ್ರಪ್ಪ ದೂರಿದ್ದಾರೆ.
ಅಂಡರ್ ಪಾಸ್ ಗಳ ಮೂಲಕ ಹೋದರೆ ಹಲವಾರು ಹಳ್ಳಿಗಳಿಗೆ ಹಾದು ಹೋಗುವ ಮುಖ್ಯ ರಸ್ತೆಯಿದೆ, ವಾಹನ ಸಂಚಾರ ದಟ್ಟವಾಗಿರುತ್ತದೆ. ಈ ಭಾಗದಲ್ಲಿ ನೀರು ಶೇಖರಣೆಯಾಗುವುದರಿಂದ ಪಾದಚಾರಿಗಳು, ದ್ವಿಚಕ್ರವಾಹನ ಸವಾರರು ತುಂಬ ತೊಂದರೆ ಅನುಭವಿಸುತ್ತಿದ್ದಾರೆ. ಅನೇಕರು ಜಾರಿ ಬಿದ್ದು ಗಾಯಗೊಂಡಿರುವ ಪ್ರಕರಣಗಳು ಸಹ ನಡೆದಿದ್ದು, ಎಷ್ಟು ಬಾರಿ ಮನವಿ ಸಲ್ಲಿಸಿದರೂ ಸಹ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿಲ್ಲ ಎಂದು ಅವರು ಆಕ್ರೋಷ ವ್ಯಕ್ತಪಡಿಸಿದರು.
ಇದ್ಲೂಡಿನ ರಸ್ತೆಯ ಅಂಡರ್ ಪಾಸ್ ನಲ್ಲಿ ಮಳೆಯಿಂದ ಬಿದ್ದ ನೀರು ಸಂಗ್ರಹಗೊಂಡಿರುವುದನ್ನು ಮಂಗಳವಾರ ನಗರಸಭೆಯಿಂದ ಸಕ್ಕಿಂಗ್ ಯಂತ್ರದ ಮೂಲಕ ನೀರನ್ನು ಹೀರಿ ಸಾರ್ವಜನಿಕರಿಗೆ ಓಡಾಡಲು ಅನುಕೂಲ ಮಾಡಿಕೊಟ್ಟರು.
‘ರೈಲ್ವೆ ಅಂಡರ್ಪಾಸ್ ಸೇತುವೆ ನಿರ್ಮಾಣ ಹಂತದಲ್ಲಿ ದೂರದೃಷ್ಟಿಯಿಂದ ಯೋಜನೆಯನ್ನು ರೂಪಿಸಬೇಕಾಗಿತ್ತು. ಈ ರೈಲ್ವೆ ಅಂಡರ್ಪಾಸ್ ಕಾಮಗಾರಿ ನಡೆಯುವ ಸಮಯದಲ್ಲಿ ಸ್ಥಳಕ್ಕೆ ಭೇಟಿ ಸಂಸದರು ಪರಿಶೀಲನೆ ನಡೆಸಿದ್ದರೂ ಸಹ ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಈ ಸೇತುವೆಗಳಿಂದ ಇಂದು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ರೈಲ್ವೆ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಹಿಡಿ ಶಾಪ ಹಾಕುವಂತಾಗಿದೆ’ ಎಂದು ಇದ್ಲೂಡು ವೆಂಕಟೇಶಪ್ಪ, ಆನಂದ್, ಗಾಂಧಿನಗರ ಹರೀಶ್ ದೂರಿದರು.
ಕನಕದಾಸರಭವನ ನಿರ್ಮಿಸಲು ಜಮೀನು ಮಂಜೂರು
ಕುರುಬ ಸಮಾಜದವರಿಗೆ ಕನಕದಾಸರಭವನ ನಿರ್ಮಿಸಲು ಹಿತ್ತಲಹಳ್ಳಿ ಬಳಿ ಎರಡು ಎಕರೆ ಜಮೀನು ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಮುಂದೆ ನಾಡಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಸೋಮವಾರ ದಾಸಶ್ರೇಷ್ಟ ಶ್ರೀ ಕನಕದಾಸರ 530ನೇ ಜಯಂತಿ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನಕದಾಸರ ಜೀವನ ಚರಿತ್ರೆ ಕುರಿತು ತಿಳಿದುಕೊಂಡರಷ್ಟೆ ಸಾಲದು. ಅವರ ತತ್ವ, ಸಿದ್ದಾಂತ, ಆದರ್ಶಗಳನ್ನು ಸಾಧ್ಯವಾದಷ್ಟು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಮಾನವತಾವಾದಿಯಾಗಿದ್ದ ಕನಕದಾಸರ ಆದರ್ಶಗಳನ್ನು ಈ ಸಮಾಜದ ಎಲ್ಲರೂ ಅದರಲ್ಲೂ ಯುವ ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಉತ್ತಮ ಸಮಾಜ ನಿರ್ಮಿಸಬೇಕೆಂದು ಮನವಿ ಮಾಡಿದರು.
ಕುಲ ಕುಲವೆಂದು ಹೊಡೆದಾಡಬೇಡಿ, ಕುಲಗಳು ಹುಟ್ಟಿದ್ದು ಎಲ್ಲಿ ಎಂಬುದನ್ನು ಅರ್ಥಮಾಡಿಕೊಂಡಿದ್ದಾದರೆ ಜಾತಿ ಸಂಘರ್ಷಗಳಿಗೆ ಅವಕಾಶವಿರುವುದಿಲ್ಲವೆಂದು ಸಾರಿದ ಕನಕದಾಸರು ಸುಮಾರು ಐದು ಶತಮಾನಗಳಿಂದ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ನೆಲೆಸಿದ್ದಾರೆ ಎಂದರು.
ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದ ಸಿಟಿಜನ್ ಡಿ.ಇಡಿ ಕಾಲೇಜಿನ ಪ್ರಾಂಶುಪಾಲ ಎನ್.ಶಿವಣ್ಣ ಮಾತನಾಡಿ, ಯಾವುದೇ ಜಾತಿ, ಕುಲ, ಮತ ಧರ್ಮವೆನ್ನದೆ ಪ್ರಪಂಚದಲ್ಲಿರುವ ಎಲ್ಲಾ ಮನುಕುಲವೂ ಉದ್ದಾರವಾಗಬೇಕು ಎಂದು ಸಾರಿದ ಕನಕದಾಸರು ಸರ್ವ ಸಮಾನತೆಯ ಸಾಮಾಜಿಕ ಕ್ರಾಂತಿ ಪುರುಷರಾಗಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದು ಅಭಿಪ್ರಾಯಪಟ್ಟರು.
ಕನಕದಾಸರು ಕೇವಲ ದಾಸಶ್ರೇಷ್ಠರು ಮಾತ್ರವಲ್ಲದೇ ಅತ್ಯುತ್ತಮ ಸಾಹಿತಿ, ಕವಿ, ಗಾಯಕರಾಗಿದ್ದು ಜಾತಿ ನಿರ್ಮೂಲನೆ ಮಾಡುವಲ್ಲಿ ಶ್ರಮಿಸಿದಂತಹ ಮಹಾಪುರುಷನನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸದೇ ಕನಕದಾಸರ ಜಯಂತಿಯನ್ನು ಎಲ್ಲಾ ವರ್ಗದವರೂ ಸೇರಿ ಆಚರಿಸಬೇಕೆಂದರು.
ಎಸ್.ಎಸ್.ಎಲ್.ಸಿ ಮತ್ತು ಪಿ,ಯು,ಸಿಯಲ್ಲಿ ಹೆಚ್ಚು ಅಂಕ ತೆಗೆದ ಕುರುಬ ಜನಾಂಗದ ವಿದ್ಯಾರ್ಥಿಗಳಿಗೆ ಹಾಗೂ ಸಮಾಜದ ಗಣ್ಯರಿಗೆ ಸನ್ಮಾನ ಮಾಡಲಾಯಿತು. ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಕನಕದಾಸರ ಭಾವಚಿತ್ರವನ್ನು ಹೊಂದಿರುವ ಮುತ್ತಿನ ಪಲಕ್ಕಿಗಳನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು, ಗಾರುಡಿ ಬೊಂಬೆಗಳು, ಡೊಳ್ಳು ಕುಣಿತ, ಮಹಿಳೆಯರ ವೀರಗಾಸೆ, ವಾದ್ಯಗಳು ಭಾಗವಹಿಸಿದ್ದವು. ತಲೆ ಮೇಲೆ ತೆಂಗಿನಕಾಯಿ ಹೊಡೆಯುವ ‘ತೆಂಗಿನ ಕಾಯಿ ಪವಾಡ’ ಕಾರ್ಯಕ್ರಮ ಜನಾಕರ್ಷಕವಾಗಿತ್ತು.
ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲ ಮುನಿರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ರಾಜ್ಯ ಕುರುಬರ ಸಂಘದ ಉಪಾಧ್ಯಕ್ಷ ಎ.ನಾಗರಾಜು, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಕೆ.ಮಂಜುನಾಥ್, ಗೌರವಾಧ್ಯಕ್ಷ ಎಂ.ಗಣೇಶಪ್ಪ, ಗ್ರೇಡ್ 2 ತಹಶೀಲ್ದಾರ್ ಕೃಷ್ಣಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎಂ.ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಚಂದ್ರಶೇಖರಬಾಬು, ಸರ್ಕಲ್ ಇನ್ಸ್ಪೆಕ್ಟರ್ ಬಿ.ಸಿದ್ದರಾಜು, ನಗರಸಭೆ ಆಯುಕ್ತ ಜಿ.ಎನ್.ಚಲಪತಿ ಹಾಜರಿದ್ದರು.
ಎಲ್.ಮುತ್ತುಕದಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ: ೨೦೦ ಅಡಿ ಕನ್ನಡ ಭಾವುಟದ ಪಥ ಸಂಚಲನ
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಕೇವಲ ನವೆಂಬರ್ ತಿಂಗಳಿಗೆ ಸೀಮಿತ ಆಗದೆ ವರ್ಷದ ಎಲ್ಲ ದಿನವೂ ಕನ್ನಡ ತಾಯಿ ಆರಾಧನೆ ಆಗಬೇಕು. ಆಗಲೆ ಕನ್ನಡ ನಾಡು, ನೆಲ, ಜಲ, ಕನ್ನಡಿಗನ ಬದುಕು ಹಸನಾಗುತ್ತದೆ ಎಂದು ಶಾಸಕ ಎಂ.ರಾಜಣ್ಣ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಎಲ್.ಮುತ್ತುಕದಹಳ್ಳಿಯಲ್ಲಿ ಭಾನುವಾರ ಯುವ ಕ್ರಾಂತಿ ಸಂಘದಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡದ ಕಾರ್ಯಕ್ರಮಗಳು ವರ್ಷದ ಉದ್ದಕ್ಕೂ ಜರುಗಬೇಕು, ಆಗಲೆ ಕನ್ನಡ ನಾಡು ನುಡಿ ಭಾಷೆ ಬೆಳೆಯಲು ಸಾಧ್ಯ. ಆ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು, ಅದರಲ್ಲು ಯುವ ಜನಾಂಗ ಈ ನಿಟ್ಟಿನಲ್ಲಿ ಸಕ್ರೀಯವಾಗಬೇಕೆಂದರು.
ಉಪನ್ಯಾಸಕ ಪ್ರದೀಪ್ ಮಾತನಾಡಿ, ಯುವಕರು ಎಂತಹ ಸಮಯ, ಪರಿಸ್ಥಿತಿಯಲ್ಲೂ ನಿರಾಶವಾದಿಗಳಾಗಬೇಡಿ, ಆಶಾವಾದಿಗಳಾಗಿ ಎಂದರು.
ಕನ್ನಡ ರಾಜ್ಯೋತ್ಸವ ಅಂಗವಾಗಿ ಗ್ರಾಮದ ಮನೆ ಮನೆಗೂ ತಲಾ ಎರಡು ಸಸಿಗಳನ್ನು ವಿತರಿಸಲಾಯಿತು. ೨೦೦ ಅಡಿ ಉದ್ದದ ಕನ್ನಡ ಧ್ವಜವನ್ನು ಯುವ ಕ್ರಾಂತಿ ಸಂಘದ ಸದಸ್ಯರು ಗ್ರಾಮದಲ್ಲಿ ಮಾತ್ರವಲ್ಲ ಶಿಡ್ಲಘಟ್ಟ ನಗರದಲ್ಲೂ ಪ್ರದರ್ಶಿಸಿ ಕನ್ನಡಿಗರ ಗಮನವನ್ನು ಸೆಳೆದರು.
ವೈದ್ಯ ಡಾ.ಸತ್ಯನಾರಾಯಣರಾವ್, ಯುವ ಕ್ರಾಂತಿ ಸಂಘದ ಎಲ್ಲ ಸದಸ್ಯರು ಹಾಜರಿದ್ದರು.
ಹಿಪ್ಪುನೇರಳೆಗೆ ಕ್ರಿಮಿನಾಶಕ ಸಿಂಪಡಣೆ: ರೇಷ್ಮೆ ಹುಳು ನಾಶ
ಕ್ರಿಮಿ ನಾಶಕ ಸಿಂಪಡಣೆ ಆದ ಹಿಪ್ಪುನೇರಳೆ ಸೊಪ್ಪು ಸೇವಿಸಿದ ರೇಷ್ಮೆ ಹುಳುಗಳು ನಾಶ ಆಗಿದ್ದು ರೈತನಿಗೆ ಸಾವಿರಾರು ರೂಪಾಯಿ ನಷ್ಟ ಆಗಿದೆ.
ತಾಲ್ಲೂಕಿನ ವೀರಾಪುರ ಗ್ರಾಮದ ರೈತ ಅಯ್ಯಪ್ಪಸ್ವಾಮಿ ಅವರ ೩೦೦ ಮೊಟ್ಟೆಯಷ್ಟು ರೇಷ್ಮೆ ಹುಳುಗಳು ಕ್ರಿಮಿ ನಾಶಕ ಸಿಂಪಡಣೆ ಆದ ಹಿಪ್ಪು ನೇರಳೆ ಸೊಪ್ಪು ಸೇವಿಸಿ ಸಾವನ್ನಪ್ಪಿವೆ.
ಪಕ್ಕದ ತಲದುಮ್ಮನಹಳ್ಳಿಯಲ್ಲಿ ರಮೇಶ್ಬಾಬು ಎಂಬುವವರಿಗೆ ಸೇರಿದ ಹಿಪ್ಪುನೇರಳೆ ತೋಟದಲ್ಲಿ ಅಯ್ಯಪ್ಪಸ್ವಾಮಿ ಸುಮಾರು ೮೦ ಮೂಟೆಯಷ್ಟು ಸೊಪ್ಪನ್ನು ಖರೀಸಿದ್ದರು.
೪ನೇ ಜ್ವರ ಎದ್ದು ೪ನೇ ದಿನದಲ್ಲಿದ್ದ ಹುಳುಗಳಿಗೆ ಎಂದಿನಂತೆ ಶುಕ್ರವಾರ ರಾತ್ರಿ ಸೊಪ್ಪು ಹಾಕಿ ಮಲಗಿದ್ದು ಬೆಳಗ್ಗೆ ಮತ್ತೆ ಸೊಪ್ಪು ಹಾಕಲು ಎದ್ದು ನೋಡಿದಾಗ ಹುಳುಗಳು ಬಾಯಲ್ಲಿ ನೀರು ವಾಂತಿ ಮಾಡಿಕೊಂಡು ಸತ್ತಿದ್ದು ಕಂಡಿದೆ.
ಕೂಡಲೆ ಬೇರೊಂದು ತೋಟದಲ್ಲಿ ಸೊಪ್ಪನ್ನು ತಂದು ಹುಳುಗಳಿಗೆ ಹಾಕಿದ್ದಾರೆ. ಇದರಿಂದ ಕೆಲವಷ್ಟು ಹುಳುಗಳು ಚೇತರಿಸಿಕೊಂಡಿವೆ. ಬಹಳಷ್ಟು ಹುಳುಗಳು ಸತ್ತಿವೆ. ಇನ್ನು ನಾಲ್ಕೈದು ದಿನ ಕಳೆದಿದ್ದರೆ ಹುಳುಗಳು ಹಣ್ಣಾಗಿ ಗೂಡು ಕಟ್ಟಿ ಒಂದಷ್ಟು ಹಣ ಸಿಗುತ್ತಿತ್ತು.
ಆದರೆ ಯಾರೋ ದುಷ್ಕರ್ಮಿಗಳು ಹಿಪ್ಪುನೇರಳೆ ಸೊಪ್ಪು ತೋಟಕ್ಕೆ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದರಿಂದ ಈ ಕಡೆ ಹಿಪ್ಪುನೇರಳೆ ಸೊಪ್ಪು ನಷ್ಟ, ಮತ್ತೊಂದು ಕಡೆ ರೇಷ್ಮೆ ಹುಳುಗಳೂ ನಾಶ ಆಗಿ ನಷ್ಟ ರೈತನ ಮೇಲೆ ಬಿದ್ದಿದೆ.
ಇದುವರೆಗೂ ೬೦ ಮೂಟೆಯಷ್ಟು ಹಿಪ್ಪುನೇರಳೆ ಸೊಪ್ಪನ್ನು ತಿಂದಿದ್ದು, ಸೊಪ್ಪು, ಮೊಟ್ಟೆ, ಕೂಲಿ ಎಲ್ಲವೂ ಸೇರಿ ೩೫-೪೦ ಸಾವಿರ ರೂಪಾಯಿಯಷ್ಟು ನಷ್ಟ ಆಗಿದೆ.
ಭ್ರಷ್ಟಾಚಾರವೆಂಬ ಸಾಮಾಜಿಕ ಪಿಡುಗನ್ನು ತೊಲಗಿಸಬೇಕು
ಭ್ರಷ್ಟಾಚಾರವೆಂಬ ಸಾಮಾಜಿಕ ಪಿಡುಗನ್ನು ಬೇರು ಸಹಿತ ನಿರ್ಮೂಲನೆ ಮಾಡಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ ಅಭಿಪ್ರಾಯಪಟ್ಟರು.
ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಭ್ರಷ್ಟಾಚಾರ ವಿರುದ್ದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಯಲು ವಿದ್ಯಾರ್ಥಿಗಳು ಅದರಲ್ಲಿಯೂ ಮುಖ್ಯವಾಗಿ ಯುವಕರು ಮುಂದಾಗಬೇಕು. ಪ್ರತಿಯೊಬ್ಬರೂ ಲಂಚ ನೀಡುವುದನ್ನು ಹಾಗೂ ಪಡೆಯುವುದನ್ನು ಬಿಟ್ಟಾಗ ಮುಂದಿನ ಪೀಳಿಗೆಗೆ ಉತ್ತಮ ಸಮಾಜ ನಿರ್ಮಿಸಲು ಸಹಕಾರಿಯಾಗುತ್ತದೆ. ಹಣದ ಮೇಲಿರುವ ವ್ಯಾಮೋಹವನ್ನು ಪ್ರತಿಯೊಬ್ಬರೂ ಕಡಿಮೆ ಮಾಡಿಕೊಂಡಾಗ ಭ್ರಷ್ಟಾಚಾರ ತಾನಾಗಿಯೇ ದೂರವಾಗುತ್ತದೆ ಎಂದರು.
ಕಾಲೇಜು ಪ್ರಾಂಶುಪಾಲ ಚಂದ್ರಾನಾಯಕ್ ಮಾತನಾಡಿ, ಮನುಷ್ಯ ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಎಡುವುತ್ತಿರುವುದೇ ಭ್ರಷ್ಟಾಚಾರ ಬೆಳೆಯಲು ಕಾರಣವಾಗಿದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ನೈತಿಕತೆ ರೂಡಿಸಿಕೊಳ್ಳುವ ಮೂಲಕ ಭ್ರಷ್ಟಾಚಾರ ನಿರ್ಮೂಲನೆಗೆ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಭ್ರಷ್ಟಾಚಾರ ತೊಲಗಿಸುವ ಮತ್ತು ಪ್ರಾಮಾಣಿಕತೆಯನ್ನು ಮೆರೆಯುವ ಪ್ರತಿಜ್ಞಾವಿಧಿ ಭೋದಿಸಲಾಯಿತು. ಭ್ರಷ್ಟಾಚಾರದ ಕುರಿತು ಆಯೋಜಿಸಲಾಗಿದ್ದ ಚರ್ಚಾಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಸಂದೀಶ್, ಸರ್ಕಾರಿ ಅಭಿಯೋಜಕಿ ಕುಮುದಿನಿ, ಭ್ರಷ್ಟಾಚಾರ ನಿಗ್ರಹ ದಳದ ಲಕ್ಮಿದೇವಿ, ಉಪನ್ಯಾಸಕರಾದ ಡಾ.ವೆಂಕಟೇಶ್, ರಾಮಚಂದ್ರಪ್ಪ, ರೋಶನ್ ಹಾಜರಿದ್ದರು.
ಅನಧಿಕೃತ ನಿರ್ಮಾಣವನ್ನು ತೆರವುಗೊಳಿಸಿದ ಅಧಿಕಾರಿಗಳು
ನಗರದಲ್ಲಿ ಅನಧಿಕೃತವಾಗಿ ಕಟ್ಟಿರುವ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ನಗರಸಭಾ ಪೌರಾಯುಕ್ತ ಛಲಪತಿ ತಿಳಿಸಿದರು.
ನಗರದಲ್ಲಿ ಶನಿವಾರ ಮುಂಜಾನೆ ಎಂಟನೇ ವಾರ್ಡಿನಲ್ಲಿ ಚರಂಡಿಯ ಮೇಲೆ ಅನಧಿಕೃತವಾಗಿ ನಿರ್ಮಿಸಿರುವ ಶೌಚಾಲಯದ ನಿರ್ಮಾಣವನ್ನು ತೆರವುಗೊಳಿಸಿ ಅವರು ಮಾತನಾಡಿದರು.
ವಿವಿಧ ವಾರ್ಡ್ಗಳಲ್ಲಿ ನಗರಸಭಾ ಅಧಿಕಾರಿಗಳೊಂದಿಗೆ ಸರ್ವೆ ಕಾರ್ಯ ನಡೆಸಿ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಲಾಗುವುದು. ನಗರದ ೮ನೇ ವಾರ್ಡ್ನಲ್ಲಿ ಚರಂಡಿಯ ಮೇಲೆ ಶೌಚಾಲಯ ನಿರ್ಮಾಣ ಮಾಡಿದ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿ ಬಂದಿದ್ದು, ತೆರವುಗೊಳಿಸಿದ್ದೇವೆ. ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ನಗರದ ಅಬಿವೃದ್ಧಿಯ ಕಡೆ ಹೆಚ್ಚಿನ ಗಮನ ಹರಿಸುವ ಕಾರ್ಯದಲ್ಲಿ ತೊಡಗಿದ್ದು, ನಾಗರಿಕರು ಸಹಕಾರ ನೀಡಬೇಕು. ಅನಧಿಕೃತವಾಗಿ ಯಾವುದೇ ರೀತಿಯ ಕಟ್ಟಡಗಳನ್ನು ಕಟ್ಟಬಾರದು ಎಂದು ಹೇಳಿದರು. ಈ ಸಂದರ್ಭದಲ್ಲಿ ನಗರಸಭಾ ಅಧಿಕಾರಿಗಳು ಹಾಜರಿದ್ದರು.
ದಿನಗೂಲಿ ನೌಕರರಿಗೆ ಸೇವಾಭದ್ರತೆ ಕಲ್ಪಿಸಲು ಒತ್ತಾಯ
ದಿನಗೂಲಿ ಹಾಗು ಹೊರಗುತ್ತಿಗೆ ಆದಾರದ ಮೇಲೆ ದುಡಿಯುತ್ತಿರುವ ನೌಕರರಿಗೆ ಸೇವಾಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಸಿಐಟಿಯು ಪದಾಧಿಕಾರಿಗಳು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಹಾಗು ಬಿಸಿಎಂ ಇಲಾಖೆಯ ವಿಸ್ತರಣಾಧಿಕಾರಿ ಶಂಕರ್ ಅವರಿಗೆ ಶನಿವಾರ ಮನವಿ ಪತ್ರ ಸಲ್ಲಿಸಿದ್ದಾರೆ.
ಕಳೆದ ಸುಮಾರು ೨೦-–೨೫ ವರ್ಷದಿಂದ ತಮ್ಮ ಇಲಾಖೆಯಡಿ ಇರುವ ವಸತಿನಿಲಯಗಳಲ್ಲಿ ದಿನಗೂಲಿ ಆಧಾರದ ಮೇಲೆ ಅಡುಗೆ ಕೆಲಸ ಹಾಗು ಅಡುಗೆ ಸಹಾಯಕಿಯರಾಗಿ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ಇತ್ತೀಚೆಗೆ ಹೊರಗುತ್ತಿಗೆಗೆ ಪರಿವರ್ತಿಸಿರುತ್ತಾರೆ. ಆದರೆ ಸರ್ಕಾರ ಇದೀಗ ವಿದ್ಯಾರ್ಹತೆ ಮೇಲೆ ಕಾಯಂ ನೌಕರರನ್ನಾಗಿಸಲು ಮುಂದಾಗಿದ್ದು ಅನಕ್ಷರಸ್ಥರಾದ ಬಹುತೇಕ ನೌಕರರು ಬೀದಿಗೆ ಬೀಳಲಿದ್ದೇವೆ. ಹಾಗಾಗಿ ಅನುಭವದ ಆದಾರದ ಮೇಲೆ ನಮ್ಮನ್ನು ನೌಕರರನ್ನಾಗಿ ಪರಿಗಣಿಸಿ ನಮಗೆ ಸೇವಾ ಭದ್ರತೆ ಒದಗಿಸಿ ನಮಗೆ ನ್ಯಾಯ ಒದಗಿಸಿ ಎಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷೆ ಲಕ್ಷ್ಮಿದೇವಮ್ಮ, ತಾಲ್ಲೂಕು ಕಾರ್ಯದರ್ಶಿ ಗುಲ್ಜಾರ್, ಡಿವೈಎಫ್ಐ ಜಿಲ್ಲಾ ಉಪಾಧ್ಯಕ್ಷ ಫಯಾಜ್, ಹಾಸ್ಟೆಲ್ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀರಾಮಣ್ಣ, ಕಾರ್ಯದರ್ಶಿ ಪಾಪಣ್ಣ, ಸುಶೀಲಮ್ಮ ಹಾಜರಿದ್ದರು.
ಜಿಲ್ಲಾ ಪಂಚಾಯಿತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಅಗತ್ಯ ನೆರವು
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಅಗತ್ಯವಾದ ಮೂಲಭೂತ ಸವಲತ್ತುಗಳನ್ನು ಒದಗಿಸಲು ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಚರ್ಚಿಸಿ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶನಿವಾರ ಧಿಡೀರ್ ಭೇಟಿ ನೀಡಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಿಬ್ಬಂದಿಯಿಂದ ಕಾಲೇಜಿನಲ್ಲಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಅವರು ಮಾತನಾಡಿದರು.
ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಶಿಡ್ಲಘಟ್ಟ ಉಪ ವಿಭಾಗದ ವತಿಯಿಂದ ಸುಮಾರು ೬೨ ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸಿರುವ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ನೂತನ ಕಟ್ಟಡದಲ್ಲಿ ಸುಮಾರು ೪೦೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬಹುತೇಕ ಗ್ರಾಮೀಣ ಪ್ರದೇಶದಿಂದಲೇ ಬರುವ ಅರ್ಧಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಶೌಚಾಲಯಕ್ಕೆ ಪರದಾಡುವ ಪರಿಸ್ಥಿತಿಯಿದೆ. ಬಾಲಕರಿಗೆ ಕಾಲೇಜಿನ ಕಾಂಪೊಂಡ್ನ ಗೋಡೆಯೆ ಶೌಚಾಲಯವಾಗಿ ಪರಿಣಮಿಸಿದೆ.
ಕಾಲೇಜು ಕಟ್ಟಡ ನಿರ್ಮಾಣದೊಂದಿಗೆ ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ಶೌಚಾಲಯಗಳನ್ನು ನಿರ್ಮಿಸಲಾಗಿತ್ತಾದರೂ ಶೌಚಾಲಯಕ್ಕೆ ಸೂಕ್ತ ನೀರಿನ ಸಂಪರ್ಕ ಇಲ್ಲದಿರುವುದರಿಂದ ಶೌಚಾಲಯಗಳನ್ನು ಬಳಕೆಗೆ ಬಿಡದೆ ಶೌಚಾಲಯಗಳಿಗೆ ಬೀಗ ಜಡಿಯಲಾಗಿದೆ.
೨೦೦ ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ವಿದ್ಯಾರ್ಥಿನಿಯರ ಪಾಡು ಮಾತ್ರ ಹೇಳತೀರದು. ಕೆಲ ವಿದ್ಯಾರ್ಥಿನಿಯರು ಕಾಲೇಜಿನ ಸಮೀಪವಿರುವ ಸರ್ಕಾರಿ ಪ್ರೌಢಶಾಲೆಯಲ್ಲಿನ ಶೌಚಾಲಯದಲ್ಲೂ ನೀರಿನ ಸಮಸ್ಯೆಯೇ. ಅಲ್ಲಿಯೂ ಶೌಚಾಲಯಕ್ಕೆ ಬೀಗ ಜಡಿಯಲಾಗಿರುತ್ತದೆ. ಇದರಿಂದಾಗಿ ಸಂಜೆ ಕಾಲೇಜು ಮುಗಿಸಿಕೊಂಡು ತಮ್ಮ ತಮ್ಮ ಗ್ರಾಮಗಳಿಗೆ ಹೋಗುವ ತನಕ ಉಸಿರು ಬಿಗಿಹಿಡಿದುಕೊಳ್ಳುವ ಅನಿವಾರ್ಯ ಪರಿಸ್ಥಿತಿಯಲ್ಲಿ ಇಲ್ಲಿನ ವಿದ್ಯಾರ್ಥಿನಿಯರಿದ್ದಾರೆ.
ಕಾಲೇಜು ಮುಗಿದ ಮೇಲೆ ಸಂಜೆಯ ವೇಳೆ ಕಿಡಿಗೇಡಿಗಳು ಕಾಲೇಜು ಆವರಣದೊಳಕ್ಕೆ ಬಂದು ಇಲ್ಲಿ ಬೀಡಿ, ಸಿಗರೇಟ್, ಮದ್ಯ ಸೇವನೆಯಂತಹವನ್ನು ಮಾಡಿ ಬಾಟಲ್ಗಳನ್ನು ಅಲ್ಲೇ ಎಸೆದುಹೋಗಿರುತ್ತಾರೆ. ಪ್ರತಿನಿತ್ಯ ಬೆಳಗ್ಗೆ ಕಾಲೇಜಿಗೆ ಬರುವ ನಮಗೆ ಇವನ್ನೆಲ್ಲಾ ನೋಡಿ ಕಿರಿ ಕಿರಿಯಾಗುತ್ತದೆ.
ಕಾಲೇಜು ಕಟ್ಟಡಕ್ಕೆ ರಾತ್ರಿ ಪಾಳಿಯ ಕಾವಲುಗಾರನನ್ನು ನೇಮಿಸುವ ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗು ನಗರಸಭೆಯಿಂದ ಕಾಲೇಜಿನಲ್ಲಿರುವ ಸಂಪಿಗೆ ನೀರಿನ ಸಂಪರ್ಕ ಕೊಡಿಸಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪದ್ಮರಾಜ್, ಕಾಲೇಜು ಉಪನ್ಯಾಸಕರಾದ ಲಕ್ಷ್ಮಣ್, ಮುನಿರಾಜು, ಎಬಿವಿಪಿ ನರೇಶ್ ಹಾಜರಿದ್ದರು.
ಓದುವ ಮೂಲಕ ಜ್ಞಾನಭಂಡಾರವನ್ನು ಹೆಚ್ಚಿಸಿಕೊಳ್ಳಿ
ಗ್ರಾಮೀಣ ಮಕ್ಕಳು ಹಿಂಜರಿಕೆಯ ಮನೋಭಾವವನ್ನು ಬಿಡಬೇಕು. ಪಠ್ಯದೊಂದಿಗೆ ಗ್ರಂಥಾಲಯದಲ್ಲಿನ ವಿವಿಧ ಪುಸ್ತಕಗಳು ಹಾಗೂ ಪತ್ರಿಕೆಗಳನ್ನು ಓದುವ ಮೂಲಕ ಜ್ಞಾನಭಂಡಾರವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಬಿ.ಎಂ.ವಿ ಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ ಸಂಸ್ಥೆಯಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಈಚೆಗೆ ಸ್ಮೈಲ್ ಫೌಂಡೇಷನ್ ಮತ್ತು ಇಂಟೆಲ್ ಕಂಪೆನಿ ವತಿಯಿಂದ ಮಕ್ಕಳಿಗೆ ಸೈಕಲ್, ನೀರಿನ ಬಾಟಲ್, ಟೀ ಶರ್ಟ್, ಲೇಖನ ಸಾಮಗ್ರಿ ಮತ್ತು ನೋಟ್ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.
ಆಧುನಿಕ ಯುಗದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಹೆಚ್ಚುತ್ತಿದ್ದು ಗ್ರಾಮೀಣ ಮಕ್ಕಳು ಹಿಂಜರಿಕೆ ಬಿಟ್ಟು ಮುಂದೆ ನುಗ್ಗಬೇಕು. ಯಶಸ್ಸಿಗೆ ಕಠಿಣ ಪರಿಶ್ರಮ ಅಗತ್ಯ. ಪ್ರತಿಭೆ ಎನ್ನುವುದು ಯಾರೊಬ್ಬರ ಸ್ವತ್ತೂ ಅಲ್ಲ. ನಿಮ್ಮಲ್ಲಿ ಪ್ರತಿಭೆ ಇದೆ ಎಂದರೆ ಜಗತ್ತು ನಿಮ್ಮನ್ನು ಗುರುತಿಸಿ ಸೆಳೆದುಕೊಳ್ಳುತ್ತದೆ ಎಂದು ಹೇಳಿದರು.
ಬಿ.ಎಂ.ವಿ ಸಂಸ್ಥೆಯ ಅಧ್ಯಕ್ಷ ಬಿ.ವಿ.ಮುನೇಗೌಡ, ಸಂಸ್ಥಾಪಕ ಟ್ರಸ್ಟಿ ಸಂತೆ ನಾರಾಯಣಸ್ವಾಮಿ, ಕೃಷಿ ತಜ್ಞ ಬಿ.ಎನ್.ಅಂಬರೀಷ್, ಎಂ.ವೆಂಕಟಮೂರ್ತಿ, ಪುಟ್ಟಮೂರ್ತಿ, ಮಕ್ಕಳ ಸುರಕ್ಷಾ ಸಮಿತಿ ಸದಸ್ಯ ಎ.ಎನ್.ದೇವರಾಜು, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬೈರೇಗೌಡ, ತ್ಯಾಗರಾಜು, ಮುಖ್ಯ ಶಿಕ್ಷಕ ಎನ್.ಪಂಚಮೂರ್ತಿ, ಶಿಕ್ಷಕ ಯಾಮ ನಾರಾಯಣಸ್ವಾಮಿ ಹಾಜರಿದ್ದರು.
ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಕಲಾಶ್ರೀ ಶಿಬಿರ
ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದ ಕಲಾಶ್ರೀ ಶಿಬಿರವನ್ನು ಆಯೋಜಿಸಲಾಗಿದ್ದು ಗ್ರಾಮೀಣ ಮಕ್ಕಳ ಪ್ರತಿಭೆಗಳ ವಿಕಸನಕ್ಕೆ ಶಿಬಿರ ಸಹಕಾರಿಯಾಗಲಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಂ.ಜಿ.ಗೋಪಾಲ್ ತಿಳಿಸಿದರು.
ನಗರದ ಸ್ತ್ರೀ ಶಕ್ತಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಗುರುವಾರ ಆಯೋಜಿಸಿದ್ದ ೯ ರಿಂದ ೧೬ ವರ್ಷದೊಳಗಿನ ಮಕ್ಕಳಿಗೆ ತಾಲ್ಲೂಕು ಮಟ್ಟದ ಕಲಾಶ್ರೀ ಆಯ್ಕೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿಶಿಷ್ಟ ಪ್ರತಿಭೆ ಅಡಗಿರುತ್ತದೆ. ಇದನ್ನು ಗುರುತಿಸುವ ಕೆಲಸವಾಗಬೇಕು. ಶಾಲೆಗಳಲ್ಲಿ ಪಠ್ಯದ ಜತೆ ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡುವ ಅಗತ್ಯವಿದೆ. ಯಾವುದೇ ಸ್ಪರ್ಧೆಯಲ್ಲಿ ಗೆಲುವಿಗಿಂತ ಭಾಗವಹಿಸುವುದು ಮುಖ್ಯ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು ಮಾತನಾಡಿ, ಗ್ರಾಮೀಣ ಮಕ್ಕಳಲ್ಲಿ ಹಿಂಜರಿಕೆ ಹೆಚ್ಚಿರುತ್ತದೆ. ಆದರೆ ಕ್ರಿಯಾಶೀಲತೆ ಹೆಚ್ಚಿರುತ್ತದೆ. ಆತ್ಮವಿಶ್ವಾಸದಿಂದ ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಹಿಂಜರಿಕೆ ಬಿಟ್ಟು ಪ್ರದರ್ಶಿಸಿ. ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದು ನುಡಿದರು.
ಸೃಜನಾತ್ಮಕ ಕಲೆಯಲ್ಲಿ ಚಿತ್ರಕಲೆ, ಕರಕುಶಲ ಕಲೆ, ಜೇಡಿಮಣ್ಣಿನ ಕಲೆ, ಸೃಜನಾತ್ಮಕ ಬರವಣಿಗೆಯಲ್ಲಿ ಕಥೆ, ಕವನ, ಪ್ರಬಂಧ, ಸುಗಮ ಸಂಗೀತ, ವಿಜ್ಞಾನದಲ್ಲಿ ನೂತನ ಆವಿಷ್ಕಾರದಲ್ಲಿ ನಡೆದ ಮಾದರಿ ಪ್ರದರ್ಶನದಲ್ಲಿ ತಾಲ್ಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ಗಮನ ಸೆಳೆದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಧಮ್ಮ, ಶಿಕ್ಷಕರಾದ ರವಿಕುಮಾರ್, ದೇವರಾಜ್, ನಾಗರಾಜ್, ಐನಾ ಟ್ರಸ್ಟ್ನ ಮೇಲ್ವಿಚಾರಕಿ ವೆರೋನಿಕ ಡೇವಿಡ್, ಸುನಂದ, ಸೌರಾನ್ ಹಾಜರಿದ್ದರು.
ನಾಡು, ನುಡಿಯ ರಕ್ಷಣೆ ನಮ್ಮೆಲ್ಲರ ಕರ್ತವ್ಯ
ಕನ್ನಡ ನಾಡು, ನುಡಿಯ ರಕ್ಷಣೆ ಹಾಗೂ ಗಡಿಭಾಗಗಳ ರಕ್ಷಣೆ ಪ್ರತಿಯೊಬ್ಬ ಯುವಕರ ಆದ್ಯ ಕರ್ತವ್ಯವಾಗಿದ್ದು ಕರ್ನಾಟಕದ ಗತಕಾಲದ ವೈಭವವನ್ನು ಸ್ಮರಿಸುವುದರೊಂದಿಗೆ ಮಾತೃ ಭಾಷೆಯ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಾಡ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ಬಸ್ ನಿಲ್ದಾಣದ ವೃತ್ತದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ೬೨ ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಧ್ವಜಾರೋಹಣ ಹಾಗು ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕನ್ನಡ ಭಾಷೆಗೆ ಬಹಳ ಪುರಾತನವಾದ ಹಿನ್ನೆಲೆಯಿದೆ, ದೇಶಕ್ಕೆ ಅನೇಕ ಮಂದಿ ದಿಗ್ಗಜರನ್ನು ಕೊಡುಗೆಯಾಗಿ ನೀಡಿರುವಂತಹ ನಾಡಿನಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿ ಎಂದು ಹೇಳುವ ನಾವೇ ನಮ್ಮ ಮಾತೃಭಾಷೆಯಾದ ಕನ್ನಡವನ್ನು ಕಡೆಗಣಿಸುತ್ತಿದ್ದೇವೆ.
ನೆರೆ ರಾಜ್ಯಗಳಿಗೆ ಹೋದರೆ ಅಲ್ಲಿನ ಸ್ಥಳೀಯ ಭಾಷೆಯಲ್ಲಿಯೆ ವ್ಯವಹರಿಸಬೇಕಾಗುತ್ತದೆ ಎಂದ ಅವರು ಅತ್ಯಂತ ಪ್ರಾಚೀನ ಭಾಷೆಯಾದ ಕನ್ನಡವನ್ನು ನಮ್ಮ ರಾಜ್ಯದಲ್ಲಿ ಉಳಿಸಿಕೊಳ್ಳಲು ಹೋರಾಟದ ಹಾದಿ ಹಿಡಿದಿರುವುದು ಶೋಚನೀಯ ಸಂಗತಿಯಾಗಿದೆ ಎಂದರು.
ನಾವು ವರ್ಷಕ್ಕೊಮ್ಮೆ ರಾಜ್ಯೋತ್ಸವದ ಹೆಸರಿನಲ್ಲಿ ಹಬ್ಬ ಆಚರಿಸಿದ ಮಾತ್ರಕ್ಕೆ ಭಾಷೆ ಉಳಿಯುವುದಿಲ್ಲ ಬದಲಿಗೆ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಮಾತನಾಡುವುದು ಸೇರಿದಂತೆ ಮಾತೃಭಾಷೆಯಲ್ಲಿ ವ್ಯವಹರಿಸಿದಾಗ ಮಾತ್ರ ಭಾಷೆ ಉಳಿಯುತ್ತದೆ ಎಂದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ನಾಡಿನ ಹಿರಿಮೆ ಗರಿಮೆಗಳನ್ನು ಸಾರುವ ಸ್ತಬ್ದ ಚಿತ್ರಗಳು ಸೇರಿದಂತೆ ವೇಷಭೂಷಣಗಳು, ಜಾನಪದ ಕಲಾ ಪ್ರದರ್ಶನ, ಮಂಗಳ ವಾದ್ಯಗಳೊಡನೆ ಭುವನೇಶ್ವರಿಯ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.
ತಾಲ್ಲೂಕಿನ ವಿವಿದೆಡೆಯಿಂದ ಬಂದಿದ್ದ ಅಲಂಕೃತವಾದ ಟ್ರಾಕ್ಟರ್ಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ವೀರಗಾಸೆ, ಗಾರುಡಿಗೊಂಬೆ ಮುಂತಾದ ಕಲಾತಂಡಗಳು ತಮಟೆ ನಾದದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದುದು ವಿಶೇಷವಾಗಿತ್ತು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾಮುನಿರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕೆ.ಲಕ್ಷ್ಮಿನಾರಾಯಣ, ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್, ತಹಸೀಲ್ದಾರ್ ಎಸ್.ಅಜಿತ್ಕುಮಾರ್ ರೈ, ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.
ನೆಲ, ಜಲ, ಭಾಷೆ, ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಿ
ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿದ್ದರೂ ಕೂಡಾ ಇಂದಿಗೂ ಭಾಷೆಯ ಉಳಿವಿಗಾಗಿ ಹೋರಾಟ ನಡೆಸಬೇಕಾದಂತಹ ದುಸ್ಥಿತಿ ಒದಗಿ ಬಂದಿರುವುದು ಶೋಚನೀಯ ಸಂಗತಿಯಾಗಿದೆ ಎಂದು ಕನ್ನಡಪರ ಹೋರಾಟಗಾರ ಖ.ರಾ.ಖಂಡೇರಾವ್ ಹೇಳಿದರು.
ನಗರದ ಹಳೆ ಅಂಚೆ ಕಚೇರಿ ರಸ್ತೆಯ ಸ್ನೇಹ ಯುವಕ ಸಂಘ ಬುಧವಾರ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕನ್ನಡ ನಾಡು, ನುಡಿಯ ರಕ್ಷಣೆ ಹಾಗೂ ಗಡಿಭಾಗಗಳ ರಕ್ಷಣೆ ಪ್ರತಿಯೊಬ್ಬ ಯುವಕರ ಆದ್ಯ ಕರ್ತವ್ಯ ಎಂದ ಅವರು ರಾಜ್ಯದ ಗಡಿ, ನೆಲ, ಜಲ, ಭಾಷೆ, ಸಂಸ್ಕೃತಿ, ಪರಂಪರೆಯನ್ನು ಉಳಿಸಿಬೆಳೆಸುವಂತಹ ಹೊಣೆಗಾರಿಕೆ ಪ್ರತಿಯೊಬ್ಬ ನಾಗರೀಕರ ಮೇಲಿದೆ. ಅದರಲ್ಲೂ ವಿಶೇಷವಾಗಿ ಯುವಜನತೆ ನಾಡಿನ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಕೆಲಸ ಮಾಡಬೇಕಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ರಾಜ್ಯದಲ್ಲಿ ಕನ್ನಡ ಭಾಷೆ ಉಳಿದಿದೆಯೆಂದರೆ ಅದು ಕೇವಲ ಗ್ರಾಮೀಣ ಪ್ರದೇಶಗಳಿಂದ ಮಾತ್ರ, ಇಂದು ಬದಲಾಗುತ್ತಿರುವ ಜನರ ಜೀವನಶೈಲಿಯಿಂದಾಗಿ ನಗರ ಪ್ರದೇಶಗಳಲ್ಲಿ ಕನ್ನಡ ಭಾಷೆಯನ್ನು ಹುಡುಕಾಡಬೇಕಾದಂತಹ ದುಸ್ಥಿತಿ ಒದಗಿ ಬಂದಿದೆ. ಎಲ್ಲಾ ರಾಜ್ಯಗಳ ಜನತೆಗೆ ಆಸರೆಯನ್ನು ನೀಡುತ್ತಾ ಸಹೃದಯತೆಯಿಂದ ಎಲ್ಲರನ್ನೂ ಸ್ವಾಗತಿಸುವಂತಹ ರಾಜ್ಯದಲ್ಲಿ ಅನ್ಯ ಬಾಷಿಕರಿಂದ ಕನ್ನಡಿಗರ ಮೇಲೆ ನಿರಂತರವಾಗಿ ದೌರ್ಜನ್ಯಗಳು, ದಬ್ಬಾಳಿಕೆಗಳು ನಡೆಯುತ್ತಲೇ ಇವೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುವ ಮೂಲಕ ರಾಜ್ಯದಲ್ಲಿನ ಎಲ್ಲಾ ಸರ್ಕಾರಿ ಆದೇಶಗಳನ್ನು ಕನ್ನಡ ಭಾಷೆಯಲ್ಲಿಯೆ ಹೊರಡಿಸಬೇಕು ಎಂದರು.
ಎನ್.ಭರತ್, ಡಿ.ವಿ.ವೆಂಕಟೇಶ್, ಮುನಿರಾಜು, ಬಿ.ಸಿ.ನಂದೀಶ್, ನವೀನ್. ಶ್ರೀನಿವಾಸ್, ಸಂಜೀವಪ್ಪ, ಉದಯ್, ಮಂಜುನಾಥ್, ಸುನಿಲ್ ಹಾಜರಿದ್ದರು.
೬೨ ನೇ ಕನ್ನಡ ರಾಜ್ಯೋತ್ಸವ
ಶಿಡ್ಲಘಟ್ಟದ ರೈಲ್ವೇ ನಿಲ್ದಾಣದ ರಸ್ತೆಯಲ್ಲಿರುವ ಪ್ಯಾರೇಗಾನ್ ಶಾಲೆಯ ಮುಂಭಾಗದ ಭುವನೇಶ್ವರಿ ವೃತ್ತದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ೬೨ ನೇ ಕನ್ನಡ ರಾಜ್ಯೋತ್ಸವವನ್ನು ಧ್ವಜಾರೋಹಣ, ಭುವನೇಶ್ವರಿ ಪಟಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ತಹಶೀಲ್ದಾರ್ ಅಜಿತ್ ಕುಮಾರ್ ರೈ, ನಗರಸಭೆ ಆಯುಕ್ತ ಛಲಪತಿ, ಜೆ.ಎಸ್.ವೆಂಕಟಸ್ವಾಮಿ, ಎ.ಎಂ.ತ್ಯಾಗರಾಜ್ ಇದ್ದರು
ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಗೆ ನೂರಾರು ಬೈಕುಗಳಲ್ಲಿ ಹೊರಟ ಕಾರ್ಯಕರ್ತರು
ವಿಧಾನಸಭಾ ಚುನಾವಣೆಗೆ ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಬಿಜೆಪಿ ಹಮ್ಮಿಕೊಂಡಿರುವ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಗೆ ಶಿಡ್ಲಘಟ್ಟದಿಂದ ನೂರಾರು ಬೈಕ್ ಗಳಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ಹೊರಟರು.
ಶಿಡ್ಲಘಟ್ಟ ಚಿಂತಾಮಣಿ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯ ಮುಂಭಾಗದಿಂದ ಹೊರಟ ನೂರಾರು ಬೈಕ್ ಸವಾರರು, ತಮ್ಮ ವಾಹನಗಳಿಗೆ ಬಿಜೆಪಿ ಬಾವುಟಗಳನ್ನು ಕಟ್ಟಿಕೊಂಡು ನಗರದ ಮಯೂರ ವೃತ್ತದ ಮೂಲಕ ಕೋಟೆ ಸರ್ಕಲ್, ಬಸ್ ನಿಲ್ದಾಣದ ಮುಖಾಂತರ ನೆಲಮಂಗಲಕ್ಕೆ ತೆರಳಿದರು.
ಬಿಜೆಪಿ ಪಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಆಮಿತ್ ಷಾ ಅವರ ಪರವಾಗಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು.ಬೈಕ್ ರ್ಯಾಲಿಯಲ್ಲಿ ಮಾತನಾಡಿದ ತಾಲ್ಲೂಕು ಮಂಡಲದ ಅಧ್ಯಕ್ಷ ಬಿ.ಸಿ.ನಂದೀಶ್, ನವೆಂಬರ್ 2ರಿಂದ ನವಕರ್ನಾಟಕ ಪರಿವರ್ತನಾ ಯಾತ್ರೆ ನಡೆಯಲಿದೆ. ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬೃಹತ್ ಶಕ್ತಿ ಪ್ರದರ್ಶನಕ್ಕೆ ಈ ಯಾತ್ರೆ ಏರ್ಪಡಿಸಿರುವ ಬಿಜೆಪಿ ನಾಯಕರು ಮೂರು ಲಕ್ಷ ಜನರನ್ನು ಸೇರಿಸಲು ಸಿದ್ಧತೆ ನಡೆಸಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ರಣಕಹಳೆ ಮೊಳಗಿಸಲಿರುವ ಅಮಿತ್ ಷಾ, ಚುನಾವಣಾ ಪ್ರಚಾರ ಇಲ್ಲಿಂದಲೇ ಆರಂಭಿಸಲಿದ್ದಾರೆ ಎಂದರು.
ಬಿಜೆಪಿ ಮುಖಂಡರಾದ ಡಿ.ಆರ್. ಶಿವಕುಮಾರ ಗೌಡ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಮಾಡಿದ ಸಾಧನೆಗಳು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ-ಭ್ರಷ್ಟಾಚಾರ ಆರೋಪಗಳ ಪಟ್ಟಿ ಸಿದ್ಧಗೊಂಡಿದೆ. ಜತೆಗೆ ‘ಕಮಲವು ಅರಳಲಿ, ಕೇಸರಿ ಮರಳಲಿ, ಕರ್ನಾಟಕದಲ್ಲಿ ಕಮಲ ರಂಗೇರಲಿ, ಒಂದೇ ಮಾತರಂ, ಜೈ ಬಿಜೆಪಿ’ ಥೀಮ್ಸಾಂಗ್ ಸೀಡಿ ಸಹ ಸಿದ್ಧಗೊಳಿಸಲಾಗಿದ್ದು, ಬಿಜೆಪಿ ಸಾಧನೆ, ಕಾಂಗ್ರೆಸ್ನ ವೈಫಲ್ಯಗಳ ಕರಪತ್ರಗಳನ್ನು ರಾಜ್ಯದ ಎಲ್ಲ ವಿಧಾನಸಭೆ ಕ್ಷೇತ್ರದ ಬೂತ್ ಮಟ್ಟಕ್ಕೆ ರವಾನಿಸುವ ಕಾರ್ಯ ಭರದಿಂದ ಸಾಗಿದೆ ಎಂದರು.
ಸುರೇಂದ್ರಗೌಡ, ಶ್ರೀರಾಮರೆಡ್ಡಿ, ಮಳ್ಳೂರು ಮಂಜುನಾಥ್, ದಾಮೋದರ್, ಖ.ರಾ.ಖಂಡೇರಾವ್, ನರೇಶ್, ಶಿವಮ್ಮ, ಸುಶೀಲಮ್ಮ, ಮಹೇಶ್ ಕುಮಾರ್, ಸಿ.ಕೆ.ಪ್ರತಾಪ್ ಈ ಸಂದರ್ಭದಲ್ಲಿ ಹಾಜರಿದ್ದರು.

