ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಅವರಿಗೆ ಮಡಿವಾಳ ಮಾಚಿದೇವ ಸಂಘದಿಂದ ಮನವಿ ಕೊಡುತ್ತಿದ್ದೇವೆ ಎಂದು ರಾಜ್ಯ ಘಟಕದ ಉಪಾಧ್ಯಕ್ಷ ರಾಜಣ್ಣ ಹೇಳಿದರು.
ನಗರದ ಪ್ರವಾಸಿಮಂದಿರದ ಆವರಣದಿಂದ ಗುರುವಾರ ಬೈಕ್ ರ್ಯಾಲಿಯ ಮೂಲಕ ತೆರಳಲು ಚಾಲನೆ ನೀಡಿ ಅವರು ಮಾತನಾಡಿದರು.
ಮಡಿವಾಳ ಜನಾಂಗವು ಶೈಕ್ಷಣಿಕ, ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಹಿಂದುಳಿದಿದೆ. ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಸುಮಾರು 13 ವರ್ಷಗಳಿಂದ ಒತ್ತಾಯಿಸುತ್ತಾ ಬಂದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.
ಹಿಂದಿನ ಸರ್ಕಾರವು ಏಕಸದಸ್ಯ ಆಯೋಗವನ್ನು ರಚಿಸಿ ಡಾ.ಅನ್ನಪೂರ್ಣಮ್ಮ ವರದಿ ತಯಾರಿಸಿದ್ದು, ಅದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿಲ್ಲ. ದೇಶದ 18 ರಾಜ್ಯದಲ್ಲಿ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಸಾಂವಿಧಾನಿಕ ಸ್ಥಾನಮಾನ ನೀಡಲಾಗಿದೆ. ಅದೇ ರೀತಿಯಲ್ಲಿ ನಮ್ಮ ರಾಜ್ಯದಲ್ಲಿಯೂ ಅವಕಾಶವನ್ನು ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸುವ ಅನುಮೋದನೆಯನ್ನು ಕೂಡಲೇ ಶಿಫಾರಸು ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಸಮುದಾಯದ 50 ಕ್ಕೂ ಹೆಚ್ಚು ಮಂದಿ ಬೈಕುಗಳ ಮೂಲಕ ಚಿಕ್ಕಬಳ್ಳಾಪುರಕ್ಕೆ ತೆರಳಿದರು
ಮಡಿವಾಳ ಮಾಚಿದೇವ ಸಂಘದಿಂದ ಬೈಕ್ ರ್ಯಾಲಿ
ಮರಕ್ಕೆ ಡಿಕ್ಕಿಹೊಡೆದ ಬಸ್
ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬೈಯಪ್ಪನಹಳ್ಳಿಯ ಬಳಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ಮರಗಳಿಗೆ ಡಿಕ್ಕಿಹೊಡೆದಿರುವ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡು, 15 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಾಲ್ಲೂಕಿನ ಬೈಯಪ್ಪನಹಳ್ಳಿಯ ಬಳಿ ಮಿಟ್ಟೆಮರಿಯಿಂದ ಬೆಂಗಳೂರಿನ ದೊಮ್ಮಸಂದ್ರಕ್ಕೆ ಮದುವೆಗೆ ಹೋಗಿ ಬರುತ್ತಿದ್ದ ಬಸ್ಸು ಬುಧವಾರ ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ರಸ್ತೆಯ ಬದಿಯಿದ್ದ ಮರಗಳಿಗೆ ಡಿಕ್ಕಿಹೊಡೆದಿದೆ.
ಬಸ್ಸು ಡಿಕ್ಕಿ ಹೊಡೆದಿರುವ ರಭಸಕ್ಕೆ ಎರಡು ಮರಗಳು ಮುರಿದು ಬಿದ್ದಿದ್ದು, ಬಸ್ಸಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಬಸ್ಸಿನಲ್ಲಿದ್ದ ಜನರಲ್ಲಿ ಇಬ್ಬರಿಗೆ ಗಂಭೀರವಾಗಿ ಗಾಯಗಳಾಗಿವೆ. 15 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಕೆಲವರನ್ನು ಮಿಟ್ಟೆಮರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವರನ್ನು ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಾತ್ರಿಯಲ್ಲಿ ಚಾಲಕ ನಿದ್ರೆಗೆ ಜಾರಿದ್ದರಿಂದ ಈ ಅವಘಡ ಸಂಭವಿಸಿರಬಹುದೆಂದು ಸ್ಥಳೀಯ ನಾಗರಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಜೆಸಿಬಿ.ಮತ್ತು ಕ್ರೇನ್ ಗಳ ಸಹಾಯದಿಂದ ಬಸ್ಸನ್ನು ಮೇಲಕ್ಕೆತ್ತಲಾಗಿದೆ. ಸ್ಥಳಕ್ಕೆ ದಿಬ್ಬೂರಹಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರೈತರಿಂದ ಸಂಸದರಿಗೆ ಮನವಿ
ತಾಲ್ಲೂಕಿನ ಅಮರಾವತಿಯ ಬಳಿಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕಟ್ಟಡ ನಿರ್ಮಾಣವನ್ನು ಬೇರೆಡೆಗೆ ಸ್ಥಳಾಂತರ ಮಾಡಿ, ರೈತರ ಭೂಮಿಗಳನ್ನು ಉಳಿಸಬೇಕು ಎಂದು ಪುಟ್ಟಣ್ಣಯ್ಯ ಬಣದ ರೈತ ಮುಖಂಡರು ಸಂಸದ ಕೆ.ಎಚ್.ಮುನಿಯಪ್ಪ ಅವರಿಗೆ ಮನವಿ ಮಾಡಿದರು.
ಬೆಂಗಳೂರಿನ ಸಂಸದ ಕೆ.ಎಚ್.ಮುನಿಯಪ್ಪ ಅವರ ನಿವಾಸದಲ್ಲಿ ಸೋಮವಾರ ಮನವಿ ಮಾಡಿದ ರೈತ ಸಂಘದ ಮುಖಂಡರು, ಮೊದಲು ಸುಂಡ್ರಹಳ್ಳಿಯ ಸರ್ವೆ ನಂಬರ್ 1 ರಲ್ಲಿ 102 ಎಕರೆ, ಕಲ್ಯಾಪುರ ಗ್ರಾಮದ ಸರ್ವೆ ನಂಬರ್ 6 ರಲ್ಲಿ 70 ಎಕರೆ ಭೂ ಪರಿವರ್ತನೆ ಆಗಿತ್ತು. ಈ ಭಾಗದಲ್ಲಿ ಕೆಲವು ಮಂದಿ ರಿಯಲ್ ಎಸ್ಟೇಟ್ ಉದ್ಯಮಿಗಳು ಭೂಮಿಗಳು ಖರೀದಿ ಮಾಡಿಕೊಂಡಿರುವುದರಿಂದ ರಾಜಕೀಯ ಪ್ರಭಾವ ಬಳಸಿಕೊಂಡು ಇಲ್ಲಿಂದ ಅಮರಾವತಿ ಗ್ರಾಮದ ಸರ್ವೆ ನಂಬರ್ 47 ರಲ್ಲಿ ರೈತರು 40 ವರ್ಷಗಳಿಂದ ಉಳುಮೆ ಮಾಡಿಕೊಂಡು ಜೀವನ ಮಾಡುತ್ತಿರುವ 52 ಎಕರೆ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳಲು ಹುನ್ನಾರಗಳು ನಡೆದಿವೆ. ಇಲ್ಲಿರುವ ರೈತರಿಗೆ ತಲಾ ೨ ಎಕರೆ ಭೂಮಿಯಿದೆ. ಈ ಭೂಮಿಯನ್ನು ವಶಪಡಿಸಿಕೊಂಡರೆ ರೈತರು ಬೀದಿಗೆ ಬೀಳುತ್ತಾರೆ ಜೀವನ ಕಷ್ಟವಾಗಲಿದೆ. ಆದ್ದರಿಂದ ಬೈರಸಂದ್ರದ ಬಳಿ ಅರಣ್ಯ ಇಲಾಖೆಗೆ ಸೇರಿದ ಭೂಮಿಯನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಬಹುದೆಂದು ತಿಳಿದು ಬಂದಿದೆ. ಆದ್ದರಿಂದ ಅಮರಾವತಿ ಗ್ರಾಮದ ರೈತರ ಭೂಮಿಯನ್ನು ಬಿಟ್ಟು ಸರ್ಕಾರಿ ಭೂಮಿಗಳಲ್ಲಿ ಕಟ್ಟಡ ನಿರ್ಮಾಣ ಮಾಡಿಸಿ ಎಂದು ಒತ್ತಾಯಿಸಿದರು.
ತಾಲ್ಲೂಕಿನ ಮಕ್ಕಳ ಭವಿಷ್ಯದ ದೃಷ್ಠಿಯಿಂದ ಬಹಳಷ್ಟು ಸಭೆಗಳನ್ನು ನಡೆಸಿ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ. ಅದನ್ನು ಸ್ಥಾಪನೆ ಮಾಡುವುದರಿಂದ ರೈತರ ಮಕ್ಕಳು ಸೇರಿದಂತೆ ಲಕ್ಷಾಂತರ ಜನರ ಭವಿಷ್ಯ ರೂಪುಗೊಳ್ಳಲಿದೆ. ರೈತರಿಗೆ ಪರ್ಯಾಯ ಭೂಮಿ ಕೊಡಬೇಕಾ ಅಥವಾ ಭೂಮಿಯನ್ನು ಕೊಟ್ಟ ರೈತರ ಕುಟುಂಬಗಳಲ್ಲಿನ ಒಬ್ಬರಿಗೆ ಉದ್ಯೋಗ ಕೊಡಬೇಕಾ ಎನ್ನುವ ಕುರಿತು ಆಲೋಚನೆ ಮಾಡುತ್ತಿದ್ದೇವೆ. ರೈತರು ಸಂಯಮದಿಂದ ಸಹಕಾರ ನೀಡಿ ಎಂದರು.
ದೂರವಾಣಿಯ ಮೂಲಕ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ಅವರೊಂದಿಗೆ ಮಾತನಾಡಿದ ಸಂಸದ ಕೆ.ಎಚ್.ಮುನಿಯಪ್ಪ, ರೈತರ ಭೂಮಿಗಳನ್ನು ಕೈ ಬಿಡುವಂತೆ ಬಂದು ಮನವಿ ಮಾಡುತ್ತಿದ್ದಾರೆ. ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ತರಿಸಿಕೊಂಡು ಮತ್ತೊಮ್ಮೆ ಪರಿಶೀಲನೆ ನಡೆಸಿ, ರೈತರು, ತಹಶೀಲ್ದಾರ್, ಭೂಮಾಪನ ಇಲಾಖೆ ಅಧಿಕಾರಿಗಳು ಸಭೆ ಆಯೋಜನೆ ಮಾಡಿ ಚರ್ಚೆ ನಡೆಸುವಂತೆ ಸಲಹೆ ನೀಡಿದರು.
ರೈತ ಸಂಘದ ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಪ್ರತೀಶ್, ಮುನಿಕೆಂಪಣ್ಣ ಹಾಜರಿದ್ದರು.
ಉಜ್ವಲ ಯೋಜನೆಯ ಅಡುಗೆ ಅನಿಲ ಸಂಪರ್ಕ ವಿತರಣೆ
ಸೌದೆಗಾಗಿ ಮರ ಕಡಿಯುವುದನ್ನು ತಪ್ಪಿಸಿ, ಪರಿಸರ ಉಳಿಸುವುದಲ್ಲದೆ ಆರೋಗ್ಯದ ಸುರಕ್ಷತೆಗೂ ಬಹು ಅನುಕೂಲಕರವಾದ ಉಜ್ವಲ ಯೋಜನೆಯ ಅಡುಗೆ ಅನಿಲ ಸಂಪರ್ಕವನ್ನು ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಸೋಮವಾರ ಆರು ಮಂದಿ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಅನಿಲ ಸಂಪರ್ಕ ವಿತರಿಸಿ ಅವರು ಮಾತನಾಡಿದರು.ಹೊಗೆರಹಿತ ಗ್ರಾಮ ನಿರ್ಮಾಣದ ಕನಸಿನೊಂದಿಗೆ ಕೇಂದ್ರ ಸರ್ಕಾರ ಆರಂಭಿಸಿರುವ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಈಗಾಗಲೇ ಗ್ರಾಮದಲ್ಲಿ ಸುಮಾರು ೨೦ ಮಂದಿ ಫಲಾನುಭವಿಗಳಿಗೆ ಅಡುಗೆ ಅನಿಲ ಸಂಪರ್ಕ ವಿತರಿಸಲಾಗಿದೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಫಲಾನುಭವಿಗಳಿಗೆ ಅಡುಗೆ ಅನಿಲ ಸಂಪರ್ಕ ನೀಡಲು ಈಗಾಗಲೇ ಅರ್ಜಿಗಳು ಸಲ್ಲಿಸಿದ್ದು ಹಂತ ಹಂತವಾಗಿ ಎಲ್ಲರಿಗೂ ಸಂಪರ್ಕ ಕೊಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ನೇತ್ರಾವತಿ, ಉಮಾ ಹಾಜರಿದ್ದರು.
ಸಿರಿಧಾನ್ಯ ಬೆಳೆಯಿಂದ ರೈತರ ಮುಖದಲ್ಲಿ ಮಂದಹಾಸ
ಹಲವು ದಶಕಗಳ ಬಳಿಕ ಮರೆತದ್ದು ನೆನಪಿಸಿಕೊಳ್ಳುವಂತೆ ರೈತರು ಸಿರಿಧಾನ್ಯಗಳನ್ನು ಬಿತ್ತನೆ ಮಾಡಿದ್ದು, ಇತ್ತಿಚೆಗೆ ಬಿದ್ದ ಮಳೆಯಿಂದ ಬೆಳೆಗಳು ಉತ್ತಮವಾಗಿ ಬೆಳೆದು ನಿಂತಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಹಲವು ವರ್ಷಗಳಿಂದ ಸಿರಿಧಾನ್ಯಗಳನ್ನು ಬೆಳೆಯುವ ಪದ್ಧತಿಯನ್ನು ರೈತರು ಬಿಟ್ಟಿದ್ದರು. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರ ತಮ್ಮ ಆಸಕ್ತಿಯಿಂದ ಬೆಳೆದುಕೊಳ್ಳುತ್ತಿದ್ದರು. ಬಯಲು ಭಾಗದಲ್ಲಿನ ರೈತರು ರಾಗಿ, ಮುಸುಕಿನಜೋಳ, ಮುಂತಾದ ಬೆಳೆಗಳಿಗೆ ಮಾತ್ರ ಸೀಮಿತವಾಗಿದ್ದರು. ಕೃಷಿ ಕ್ಷೇತ್ರೋತ್ಸವದಂತಹ ಕಾರ್ಯಕ್ರಮಗಳ ಮೂಲಕ ರೈತರಿಗೆ ಸಿರಿಧಾನ್ಯಗಳಾದ ಸಾಮೆ, ಸಜ್ಜೆ, ಆರ್ಕ, ನವಣೆ, ಮುಂತಾದ ಬೆಳೆಗಳ ಕುರಿತು ಮೂಡಿಸಿದ್ದ ಜಾಗೃತಿಯ ಫಲವಾಗಿ ರೈತರು ತಮ್ಮ ಹೊಲಗಳಲ್ಲಿ ಸಿರಿಧಾನ್ಯಗಳನ್ನು ಬಿತ್ತನೆ ಮಾಡಿದ್ದು, ಬೆಳೆಗಳು ಈಗ ಕಾಳುಕಚ್ಚುತ್ತಿವೆ.
ಈ ಕುರಿತು ಮಾತನಾಡಿದ ಸಾವಯವ ಕೃಷಿಕ ಬೋದಗೂರು ವೆಂಕಟಸ್ವಾಮಿರೆಡ್ಡಿ, ನಮ್ಮಲ್ಲಿ ಹಿಂದೆ ಹೊಲಗಳಲ್ಲಿ ಸಾಮೆ, ನವಣೆ, ಸಜ್ಜೆ, ಜವಾರಿ ಜೋಳ, ಎಲ್ಲಾ ಬೆಳೆಯುತ್ತಿದ್ವಿ, ಬರ್ತಾ ಬರ್ತಾ ಅವನ್ನೆಲ್ಲಾ ಬಿಟ್ಟು ಬರೀ ರಾಗಿ, ಅವರೆ, ಅಲಸಂಧಿ, ಹುರುಳಿ ಮಾತ್ರ ಬೆಳೆಯುತ್ತಿದ್ದಾರೆ, ಸಾಮೆ, ಸಜ್ಜೆ, ಇವೆಲ್ಲವುಗಳಿಂದ ನಾವು ಅನ್ನ ಮಾಡಿಕೊಂಡು ತಿನ್ನುತ್ತಿದ್ದೆವು, ತುಂಬಾ ಶಕ್ತಿ ಇರುತ್ತಿತ್ತು, ನಾವು ಬೇಸಾಯಗಳನ್ನು ಬಳಕೆ ಮಾಡುತ್ತಿರಲಿಲ್ಲ, ಕೊಟ್ಟಿಗೆ ಗೊಬ್ಬರ ಹಾಕಿ ಬೆಳೆಗಳು ಬೆಳೆಯುತ್ತಿದ್ವಿ, ಈಗ ಯಾರು ಬೆಳೆಯೊಲ್ಲ, ಈ ವರ್ಷ ಹೊಲಗಳಲ್ಲಿ ಸಜ್ಜೆ, ಸಾಮೆ, ಕೆಲವೆಡೆ ಕಾಣಿಸ್ತಿವೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲೂ ಆಹಾರದ ಪದ್ಧತಿಯಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಸಿರಿಧಾನ್ಯಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದವು. ಮಳೆಯ ಕೊರತೆಯು ಇದಕ್ಕೆ ಒಂದು ಕಾರಣವಾಗಿದೆ. ಮಳೆಯಾಶ್ರಿತ ಬೇಸಾಯ ಲಾಭದಾಯಿಕವಾಗಿ ಉಳಿಯಲಿಲ್ಲ. ಇದರಿಂದ ರೈತರು ರಾಗಿ ಹೊರತುಪಡಿಸಿ ಇತರ ಸಿರಿ ಧಾನ್ಯ ಬೆಳೆಯುವುದನ್ನು ಕೈಬಿಟ್ಟಿದ್ದರು.
ಇತ್ತಿಚಿನ ದಿನಗಳಲ್ಲಿ ಮತ್ತೆ ಸಿರಿಧಾನ್ಯಗಳನ್ನು ಹೆಚ್ಚು ಬೆಳೆಯುತ್ತಿದ್ದಾರೆ. ಉತ್ತಮ ಆರೋಗ್ಯವನ್ನು ನೀಡುತ್ತದೆ ಎನ್ನುವುದು ಒಂದು ಕಾರಣವಾದರೆ ಕಡಿಮೆ ಖರ್ಚಿನ ಬೆಳೆ ಎಂದು ಸಿರಿಧಾನ್ಯಗಳನ್ನು ಬೆಳೆಯಲು ರೈತರು ಮನಸ್ಸು ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಇವುಗಳಿಗೆ ಉತ್ತಮ ಬೆಳೆಯು ಸಿಗಲಿದೆ.
ಬೋದಗೂರು ವೆಂಕಟಸ್ವಾಮಿರೆಡ್ಡಿ ಅವರು ತಮ್ಮ ಹೊಲದಲ್ಲಿ ಸಿರಿಧಾನ್ಯಗಳಾದ ಅರ್ಕ, ಸಾಮೆ, ನವಣೆ, ಊದಲು, ಬರುಗು, ಸಜ್ಜೆ, ಕೂರಲೆ, ಜೋಳ ಬೆಳೆದಿದ್ದಾರೆ. ಪ್ರತಿ ವರ್ಷ ಸಿರಿಧಾನ್ಯಗಳನ್ನು ಬೆಳೆಯುವ ಅವರಿಗೆ ಈ ಬಾರಿ ಉತ್ತಮ ಬೆಳೆಯ ನಿರೀಕ್ಷೆಯಿದೆ. ಅವರಿಂದ ಬೀಜ ಪಡೆದಿರುವ ಇತರ ರೈತರು ಸುಮಾರು 6 ಎಕರೆಯಷ್ಟು ಸಿರಿಧಾನ್ಯಗಳನ್ನು ಬೆಳೆದಿದ್ದಾರೆ.
ರಕ್ತದ ಒತ್ತಡ, ಸಕ್ಕರೆ ಕಾಯಿಲೆಗೆ ತುತ್ತಾದವರು ಸಿರಿಧಾನ್ಯಗಳಿಂದ ತಯಾರಿಸಿದ ಆಹಾರವನ್ನು ಹೆಚ್ಚು ಸೇವಿಸುತ್ತಾರೆ. ಈ ಧಾನ್ಯಗಳಿಂದ ಉತ್ತಮವಾದ ಆರೋಗ್ಯವನ್ನು ವೃದ್ಧಿ ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ವೈದ್ಯರು ಹೇಳುತ್ತಾರೆ.
ಹಳ್ಳಿಗಳಲ್ಲಿ ಹೆಚ್ಚು ಬಳಕೆ: ಹಳ್ಳಿಗಳಲ್ಲಿ ಅರೆಸಾಮೆ ಬೇಯಿಸಿ ಒಣಗಿಸಿ ಕುಟ್ಟಿ ಅಕ್ಕಿ ಮಾಡುತ್ತಿದ್ದರು. ಮುದ್ದೆ ತಯಾರಿಕೆಯಲ್ಲಿ ನುಚ್ಚಿನಂತೆ ಬಳಸುತ್ತಿದ್ದರು. ಇನ್ನು ಹಾಲು ಸಾಮೆ, ಕರಿಸಾಮೆ ಅಕ್ಕಿಯಿಂದ ತಯಾರಿಸಿದ ಅನ್ನವನ್ನು ಗೊಜ್ಜು ಅಥವಾ ಮಜ್ಜಿಗೆ ಜೊತೆ ಸವಿಯುವುದು ಎಂದರೆ ಗ್ರಾಮೀಣ ಭಾಗದಲ್ಲಿನ ಜನರಿಗೆ ಎಲ್ಲಿಲ್ಲದ ಪ್ರೀತಿ. ನವಣೆ ಬಳಸಿ ತಯಾರಿಸುವ ಗಿಣ್ಣಿನ ರುಚಿ ನಾಲಗೆಯಲ್ಲಿ ನೀರು ಜಿನುಗಿಸುತ್ತದೆ. ಹಿಂದೆ ಸಜ್ಜೆಯನ್ನು ಕುಟ್ಟಿ ರಾಗಿ ಮುದ್ದೆ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತಿತ್ತು.
ಸಾದಲಿ ಹೋಬಳಿಯಲ್ಲಿ ಪಶು ಆಹಾರ ಘಟಕ ಸ್ಥಾಪಿಸಲಾಗುವುದು
ತಾಲ್ಲೂಕಿನ ಸಾದಲಿ ಹೋಬಳಿಯಲ್ಲಿ ಪಶು ಆಹಾರ ಘಟಕ ಸ್ಥಾಪಿಸಲು ಈಗಾಗಲೇ ೨೬ ಎಕರೆಯಷ್ಟು ಸ್ಥಳ ಮಂಜೂರಾಗಿದೆ. ಇಲ್ಲಿ ಪಶು ಆಹಾರ ಘಟಕ ಸ್ಥಾಪಿಸಿದ್ದೇ ಆದಲ್ಲಿ ಜನತೆಗೆ ಉದ್ಯೋಗ ಕಲ್ಪಿಸುವ ಜೊತೆಗೆ ಈ ಬಾಗದ ಹೈನುಗಾರಿಕೆಗೆ ಅನುಕೂಲವಾಗುತ್ತದೆ ಎಂದು ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಹೇಳಿದರು.
ತಾಲ್ಲೂಕಿನ ತುಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಬಿ.ಎಂ.ಸಿ ಘಟಕದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಉತ್ತರ ಭಾಗದಲ್ಲಿರುವ ಸಾದಲಿ ಹೋಬಳಿ ತೀರಾ ಹಿಂದುಳಿದ ಪ್ರದೇಶವಾಗಿದ್ದು ಈ ಭಾಗದಲ್ಲಿ ಯಾವುದೇ ಕಾರ್ಖಾನೆ ಅಥವ ಫ್ಯಾಕ್ಟರಿ ಇಲ್ಲದೇ ಇರುವುದರಿಂದ ಉದ್ಯೋಗವಿಲ್ಲದೇ ಇಲ್ಲಿನ ಜನತೆ ಆರ್ಥಿಕವಾಗಿ ತೀರಾ ಹಿಂದುಳಿದಿದ್ದಾರೆ. ಹಾಗಾಗಿ ಈ ಭಾಗದಲ್ಲಿ ಪಶು ಆಹಾರ ಘಟಕ ಸ್ಥಾಪಿಸಬೇಕು ಎಂಬ ಉದ್ದೇಶದಿಂದ ಶಾಸಕರು ಸೇರಿದಂತೆ ನಾವೆಲ್ಲಾ ಪ್ರಯತ್ನ ಮಾಡಿ ಸುಮಾರು ೨೬ ಎಕರೆ ಜಮೀನು ಮಾಡಿಸಲಾಗಿದೆ. ಕೋಚಿಮುಲ್ ಅಧ್ಯಕ್ಷರು ಸೇರಿದಂತೆ ಒಕ್ಕೂಟದ ನಿರ್ದೇಶಕರು ಹಾಗು ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ ತಾಲ್ಲೂಕಿನಲ್ಲಿಯೇ ಪಶು ಆಹಾರ ಘಟಕ ನಿರ್ಮಿಸಲು ಸಹಕಾರ ನೀಡಬೇಕು ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಜಿಲ್ಲೆಯಾದ್ಯಂತ ಅಂತರ್ಜಲ ಕುಸಿದು ಕುಡಿಯುವ ನೀರಿಗೂ ಪರಿತಪಿಸುವ ಸಮಯದಲ್ಲಿಯೂ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡಿದ ಕೀರ್ತಿ ಶಿಡ್ಲಘಟ್ಟಕ್ಕೆ ಸಲ್ಲುತ್ತದೆ. ಈ ಭಾಗದ ಹಾಲು ಉತ್ಪಾದಕರು ಹೈನುಗಾರಿಕೆಯನ್ನು ಮುಖ್ಯ ಕಸಬನ್ನಾಗಿ ಮಾಡಿಕೊಂಡು ಪ್ರತಿನಿತ್ಯ ಸುಮಾರು ೧ ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡಿ ಒಕ್ಕೂಟಕ್ಕೆ ನೀಡುತ್ತಿದ್ದಾರೆ. ಹಾಗಾಗಿ ತಾಲ್ಲೂಕಿನಲ್ಲಿ ಈಗಾಗಲೇ ಮಂಜೂರಾಗಿರುವ ಸ್ಥಳದಲ್ಲಿ ಪಶು ಆಹಾರ ಘಟಕ ಸ್ಥಾಪಿಸಲು ಒಕ್ಕೂಟದ ಅಧ್ಯಕ್ಷರೂ ಸೇರಿದಂತೆ ಸದಸ್ಯರು ಮುಂದಾಗಬೇಕು ಎಂದರು.
ಕೋಚಿಮುಲ್ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಕೆ.ವಿ.ನಾಗರಾಜ್ ಮಾತನಾಡಿ, ಒಕ್ಕೂಟಕ್ಕೆ ಪ್ರತಿನಿತ್ಯ ಸುಮಾರು ೧೦ ಲಕ್ಷ ಲೀ ಹಾಲು ಸರಬರಾಜು ಆಗುತ್ತಿದೆ. ಇದರಲ್ಲಿ ಸುಮಾರು ೫ ಲಕ್ಷ ಲೀ ನಷ್ಟು ಹಾಲು ಹಾಗು ಹಾಲಿನಿಂದ ತಯಾರಿಸಲಾಗುವ ಇತರೆ ಉತ್ಪನ್ನಗಳಿಗೆ ಬಳಸಲಾಗುತ್ತಿದೆ. ಉಳಿದ ಸುಮಾರು ೫ ಲಕ್ಷ ಲೀ ಹಾಲನ್ನು ಖಾಸಗಿಯವರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುವುದರಿಂದ ಒಕ್ಕೂಟಕ್ಕೆ ನಷ್ಟ ವಾಗುತ್ತಿದೆ. ಒಕ್ಕೂಟಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ ಚಿಕ್ಕಬಳ್ಳಾಪುರದಲ್ಲಿ ಮೆಗಾಡೈರಿ ನಿರ್ಮಾಣವಾಗುತ್ತಿದ್ದು ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು ಮುಂಬರುವ ಡಿಸೆಂಬರ್ ಒಳಗೆ ಕಾರ್ಯಾರಂಭ ಮಾಡಲಿದೆ. ಮೆಗಾಡೈರಿ ಪ್ರಾರಂಭವಾದರೆ ಇಲ್ಲಿ ಟೆಟ್ರಾ ಪ್ಯಾಕ್ ಮೂಲಕ ಸುಮಾರು ೧.೫ ಲಕ್ಷ ಲೀ ಹಾಲು ಸಂಸ್ಕರಿಸಿ ದೂರದ ಗಡಿ ಭಾಗಗಳಿಗೆ ರಫ್ತು ಮಾಡಲಾಗುತ್ತದೆ. ಉಳಿದ ಸುಮಾರು ೧.೫ ಲಕ್ಷ ಲೀ ಹಾಲನ್ನು ಮೂರು ಲೇಯರ್ ಗಳುಳ್ಳ ಫ್ಲೆಕ್ಸಿ ಪ್ಯಾಕ್ ಮೂಲಕ ದೂರದ ಊರುಗಳಿಗೆ ಸರಬರಾಜು ಮಾಡಲಾಗುತ್ತದೆ. ಹಾಲನ್ನು ಹಾಗೆ ಮಾರುವುದರಿಂದ ಲಾಭಾಂಶ ಕಡಿಮೆಯಾಗಿದ್ದು ಹಾಲಿನಿಂದ ವಿವಿಧ ರೀತಿಯ ಉತ್ಪನ್ನಗಳ ತಯಾರಿಕೆ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರಿಂದ ಒಕ್ಕೂಟಕ್ಕೆ ಆಗುವ ನಷ್ಟ ತಪ್ಪುವ ಜೊತೆಗೆ ಹಾಲು ಉತ್ಪಾದಕರಿಗೆ ಸಹಕಾರಿಯಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನ ಎ.ಹುಣಸೇನಹಳ್ಳಿ, ಎಲ್.ಮುತ್ತುಕದಹಳ್ಳಿ, ಗಂಭೀರನಹಳ್ಳಿ, ಹಿತ್ತಲಹಳ್ಳಿ, ವಾರಹುಣಸೇನಹಳ್ಳಿ, ದೊಗರನಾಯಕನಹಳ್ಳಿ, ಫಲಿಚೇರ್ಲು, ದೊಡ್ಡದಾಸೇನಹಳ್ಳಿ, ಕುಂದಲಗುರ್ಕಿ ಹಾಗು ಆನೆಮಡುಗು ಗ್ರಾಮದ ಹಾಳು ಉತ್ಪಾದಕರ ಸಹಕಾರ ಸಂಘಗಳಲ್ಲಿ ಬಿಎಂಸಿ ಘಟಕದ ಉದ್ಘಾಟನೆ ನೆರವೇರಿಸಿದ ನಾಮಫಲಕಗಳನ್ನು ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎನ್.ರವಿಕುಮಾರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಸದಸ್ಯ ರಾಜಶೇಖರ್, ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಮ್ಮ, ಉಪಾಧ್ಯಕ್ಷ ಸುರೇಂದ್ರ, ಮುಖಂಡರಾದ ರಾಮಕೃಷ್ಣಪ್ಪ, ಹುಜುಗೂರು ರಾಮಯ್ಯ, ಬಿಎಂಸಿ ಉಪವ್ಯವಸ್ಥಾಪಕ ಎ.ಗೋಪಾಲ್ರಾವ್, ಕೋಚಿಮುಲ್ ಶಿಬಿರ ಘಟಕದ ಬಿ.ಎಸ್.ಹನುಮಂತರಾವ್, ತಾದೂರು ರಘು, ಮುಗಿಲಡಿಪಿ ನಂಜಪ್ಪ, ಶ್ರೀನಿವಾಸಗೌಡ, ಜೆ.ಎಂ.ವೆಂಕಟೇಶ್, ಟಿ.ಆರ್.ವಿಶ್ವನಾಥ್, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರು ಹಾಜರಿದ್ದರು.
ಪೌಷ್ಟಿಕಾಂಶವುಳ್ಳ ಆಹಾರಗಳ ಸೇವನೆ ಅಗತ್ಯ
ಆರೋಗ್ಯವಂತ ಸಮಾಜದ ನಿರ್ಮಾಣವಾಗಬೇಕಾದರೆ ಉತ್ತಮ ಪೌಷ್ಟಿಕಾಂಶವುಳ್ಳ ಆಹಾರಗಳ ಸೇವನೆ ಅಗತ್ಯ ಎಂದು ಡಾ.ವಿಜಯ್ ಹೇಳಿದರು.
ನಗರದ ವಾಸವಿ ಶಾಲೆಯ ಆವರಣದಲ್ಲಿ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಆಯೋಡಿನ್ ಬಗ್ಗೆ ಚರ್ಚಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉತ್ತಮವಾದ ಪೌಷ್ಟಿಕಾಂಶಗಳಿಲ್ಲದ ಆಹಾರಗಳ ಸೇವನೆಯಿಂದಾಗಿ ಹುಟ್ಟುವಂತಹ ಮಕ್ಕಳ ದೈಹಿಕ ಬೆಳವಣಿಗೆಯಲ್ಲೂ ಬದಲಾವಣೆಗಳಾಗುವುದು. ಇದರಿಂದ ವಿದ್ಯಾರ್ಥಿಗಳ ಬುದ್ಧಿಶಕ್ತಿ ವೃದ್ಧಿಸಲು ತೊಡಕುಂಟಾಗಲಿದೆ. ಆದ್ದರಿಂದ ಮಕ್ಕಳು, ಹಾಗೂ ನಾಗರಿಕರು ಅಯೋಡೀನ್ ವುಳ್ಳ ಸಾಕಷ್ಟು ಆಹಾರಗಳನ್ನು ತಿನ್ನಬೇಕು. ಥೈರಾಡ್ ಹಾರ್ಮೋನ್ ಗಳ ರಚನೆಗಾಗಿ ಅಯೋಡಿನ್ ಬೇಕಾಗುತ್ತದೆ. ಅಯೋಡಿನ್ ಕೊರತೆಯಿಂದ ಗಾಯ್ಟರ್ (ಗಂಟಲುವಾಳು) ಬರುತ್ತದೆ (ಥೈರಾಡ್ ಗ್ರಂಥಿಯ ಊತ) ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ ಎಂದರು.
ವಾಸವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸತ್ಯನಾರಾಯಣಶೆಟ್ಟಿ ಮಾತನಾಡಿ, ನೀರು ಮತ್ತು ಆಹಾರದಲ್ಲಿನ ಅಯೋಡಿನ್ ಕೊರತೆ, ಖಾಯಿಲೆಗಳಿಗೆ ಮುಖ್ಯ ಕಾರಣ. ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ ಆಹಾರವೂ ಉತ್ತಮ ಆರೋಗ್ಯ ನಿರ್ವಹಣೆಗಾಗಿ ಅತ್ಯವಶ್ಯಕವಾಗುತ್ತದೆ ಎಂದರು.
ಶಾಲಾ ಮಕ್ಕಳಿಂದ ಅಯೋಡಿನ್ ಕುರಿತು ಚರ್ಚಾ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾಗಿದ್ದ ಮಕ್ಕಳಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು.
ಆರೋಗ್ಯ ಇಲಾಖೆ ಸಿಬ್ಬಂದಿಯಾದ ಕುಮಾರಸ್ವಾಮಿ, ನಂದಿನಿ, ಕವಿತ, ಮೀನಾ, ಶಾಲಾ ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು.
ಪಿಂಡಿಪಾಪನಹಳ್ಳಿಯ ಕಲಾವಿದರಿಂದ ಆಂಧ್ರದಲ್ಲಿ ಕನ್ನಡ ಭಕ್ತಿರಸ ಗಾಯನ
ತಿರುಪತಿ ತಿರುಮಲ ದೇವಾಲಯದಲ್ಲಿ ಭಜನೆ ಕಾರ್ಯಕ್ರಮ ನಡೆಸುವ ಅವಕಾಶ ಲಭಿಸಿದ್ದರಿಂದ ಕನ್ನಡ ಭಕ್ತಿರಸವನ್ನು ನೆರೆಯ ಆಂದ್ರಪ್ರದೇಶದಲ್ಲಿ ಉಣಬಡಿಸುವ ಭಾಗ್ಯ ನಮ್ಮದಾಯಿತು ಎಂದು ತಾಲ್ಲೂಕಿನ ಪಿಂಡಿಪಾಪನಹಳ್ಳಿಯ ಶ್ರೀ ಗಂಗಮ್ಮ ದೇವಿ ಕಲಾವಿದರ ಸಂಘದ ದೇವರಾಜ್ ತಿಳಿಸಿದರು.
ತಾಲ್ಲೂಕಿನ ಪಿಂಡಿಪಾಪನಹಳ್ಳಿಯ ಶ್ರೀ ಗಂಗಮ್ಮದೇವಿ ಕಲಾವಿದರ ಸಂಘ ಹಾಗು ಚಿಂತಾಮಣಿಯ ಕೋದಂಡರಾಮ ಭಜನೆ ಕಲಾಸಂಘ ಪದಾಧಿಕಾರಿಗಳ ಸಹಯೋಗದಲ್ಲಿ ತಿರುಪತಿ ತಿರುಮಲ ದೇವಾಲಯದಲ್ಲಿ ಭಜನೆ ಕಾರ್ಯಕ್ರಮವನ್ನು ನಡೆಸಿಕೊಟ್ಟು ಹಿಂದಿರುಗಿ ಅವರು ಮಾತನಾಡಿದರು.
ನಮ್ಮ ಸಂಘದ ಸದಸ್ಯರು ತಿರುಪತಿ ತಿರುಮಲ ದೇವಾಲಯದಲ್ಲಿ ಎರಡು ದಿನಗಳ ಕಾಲ ನಡೆದ ನಿರಂತರ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುರಂದರದಾಸರ, ಕನಕದಾಸರ, ತ್ಯಾಗರಾಜರ ಪದಗಳನ್ನು ಹಾಡಿ ಭಕ್ತಿ, ಜ್ಞಾನ, ಚಿಂತನೆಗಳನ್ನು ತಿಳಿಸಲಾಯಿತು.
ಮಾನವನ ಜೀವನದ ಏಳಿಗೆಗೆ ಅಗತ್ಯವಾದ ಧ್ಯಾನ, ಯೋಗ, ಭಕ್ತಿ, ಚಿಂತನೆಗಳನ್ನು ಒಳಗೊಂಡಂತೆ ಭಗವಂತನ ದಿವ್ಯದರ್ಶನ ಪಡೆಯುವ ಮಾರ್ಗೋಪಾಯ ವಿವರಿಸಲಾಯಿತು ಎಂದು ಹೇಳಿದರು.
ಕೋದಂಡರಾಮ ಭಜನೆ ಕಲಾಸಂಘದ ಜುಂಜನಹಳ್ಳಿ ನಾರಾಯಣಸ್ವಾಮಿ ಸೇರಿದಂತೆ ತಾಲ್ಲೂಕಿನ ವಿವಿಧ ಕಲಾವಿದರು ಭಜನೆಯಲ್ಲಿ ಪಾಲ್ಗೊಂಡಿದ್ದರು.
ದೇಶ ವಿದೇಶಗಳಿಗೆ ರಫ್ತಾಗುತ್ತಿದೆ ಶಿಡ್ಲಘಟ್ಟದ ಸ್ಪನ್ ರೇಷ್ಮೆ
ಮುಖ್ಯಾಂಶಗಳು…
–ಜಿಲ್ಲೆಯ ಏಕೈಕ ಸ್ಪನ್ ರೇಷ್ಮೆ ತಯಾರಿಕಾ ಘಟಕ ಶಿಡ್ಲಘಟ್ಟದಲ್ಲಿ
–ಯೂರೋಪ್, ಚೀನಾ, ಅಮೆರಿಕಾಕ್ಕೆ ರಫ್ತಾಗುತ್ತಿದೆ ರೇಷ್ಮೆ
–ಘಟಕದ ಶುದ್ಧೀಕರಿಸಿದ ನೀರಿನಿಂದ 6 ಎಕರೆ ಹಿಪ್ಪು ನೇರಳೆ ಬೆಳೆ
ಶಿಡ್ಲಘಟ್ಟದ ರೇಷ್ಮೆ ಬಹಳ ಪ್ರಸಿದ್ಧಿ. ಇಲ್ಲಿ ತಯಾರಾಗುವ ರೇಷ್ಮೆ ದೂರದೂರುಗಳಿಗೆ ಹೋಗುತ್ತದೆ ಮತ್ತು ನೀರೆಯರು ಇಷ್ಟಪಡುವ ಸೀರೆಗಳಾಗಿ ಅಂದ ಚಂದಗಳನ್ನು ಹೆಚ್ಚಿಸುತ್ತವೆ.
ಶಿಡ್ಲಘಟ್ಟದಲ್ಲಿ ತಯಾರಾಗುವ ಕಚ್ಛಾರೇಷ್ಮೆಗೆ ಬಣ್ಣ, ಹೊಳಪು ಮತ್ತು ಹಿಗ್ಗುವಿಕೆ(ಎಲಾಸ್ಟಿಸಿಟಿ) ಗುಣವಿರುತ್ತೆ. ಹಾಗಾಗಿ ಈ ರೇಷ್ಮೆಯು ಸೀರೆ ತಯಾರಿಸಲು ಕಂಚಿಗೆ, ಜರಿ ತಯಾರಿಸಲು ಸೂರತ್ಗೆ ಹೆಚ್ಚಾಗಿ ಹೋಗುತ್ತೆ.
ಕೇವಲ ದೇಶೀಯ ಮಾರುಕಟ್ಟೆಯನ್ನಷ್ಟೇ ಅಲ್ಲದೆ ಶಿಡ್ಲಘಟ್ಟದ ರೇಷ್ಮೆ ವಿದೇಶದ ಮಾರುಕಟ್ಟೆಯನ್ನೂ ಪ್ರವೇಶಿಸಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಸ್ಪನ್ ರೇಷ್ಮೆ ಎಂದು ಕರೆಯಲ್ಪಡುವ ಶಿಡ್ಲಘಟ್ಟದಲ್ಲಿ ತಯಾರಾಗುವ ರೇಷ್ಮೆಯು ಯೂರೋಪ್ ಹಾಗೂ ಅಮೇರಿಕಾ ದೇಶಗಳಿಗೆ ರಫ್ತಾಗುತ್ತಿದೆ.
ಜಿಲ್ಲೆಯಲ್ಲಿಯೇ ಏಕೈಕ ಸ್ಪನ್ ರೇಷ್ಮೆ ತಯಾರಿಕಾ ಘಟಕವನ್ನು ನಗರದ ಇದ್ಲೂಡು ರಸ್ತೆಯಲ್ಲಿ ಸ್ಥಾಪಿಸಿರುವ ಸಯ್ಯದ್ ಅನ್ಸರ್ ಪಾಷ ಚೀನಾ, ಇಂಗ್ಲೆಂಡ್, ಇಟಲಿ, ಅಮೇರಿಕಾ ದೇಶಗಳಿಗೆ ಶಿಡ್ಲಘಟ್ಟದ ರೇಷ್ಮೆಯನ್ನು ಪರಿಚಯಿಸಿದ್ದಾರೆ.
ಕಚ್ಛಾ ರೇಷ್ಮೆ ತಯಾರಿಕಾ ಘಟಕದಲ್ಲಿ ಉತ್ಪಾದನೆಯಾಗುವ ಜೋಟ್ ಎಂಬ ಒಣತ್ಯಾಜ್ಯವನ್ನು ವಿವಿಧ ಹಂತಗಳಲ್ಲಿ ಸಂಸ್ಕರಿಸಿದ ನಂತರ ತಯಾರಾಗುವುದೇ ಸ್ಪನ್ ಸಿಲ್ಕ್. ವಿಶ್ವದೆಲ್ಲೆಡೆ ತಯಾರಾಗುವ ಉತ್ಕೃಷ್ಟ ದರ್ಜೆಯ ಕಾರ್ಪೆಟ್, ವಿವಿಧ ವಸ್ತ್ರದ ತಯಾರಿಕೆಗಳಲ್ಲಿ ಸ್ಪನ್ ರೇಷ್ಮೆ ಬಳಕೆಯಾಗುತ್ತದೆ.
ಸ್ಪನ್ ರೇಷ್ಮೆ ತಯಾರಿಕಾ ಘಟಕದಲ್ಲಿ ವಿವಿಧ ಹಂತಗಳಲ್ಲಿ ರೇಷ್ಮೆ ಹಾದು ನೂಲಾಗಿ ತಯಾರಾಗುತ್ತದೆ. ಅದಕ್ಕಾಗಿ ಹಲವಾರು ಯಂತ್ರೋಪಕರಣಗಳು ಹಾಗೂ ನುರಿತ ಕೆಲಸಗಾರರು ಬೇಕು. ರೇಷ್ಮೆಯಲ್ಲಿ ಸ್ಥಿರವಿದ್ಯುತ್ ಪ್ರವಹಿಸುವುದರಿಂದ ಈ ಘಟಕದಲ್ಲಿ ಆರ್ಧ್ರತೆ(ಹುಮಿಡಿಟಿ) ಕಾಪಾಡಿಕೊಳ್ಳುವ ವ್ಯವಸ್ಥೆಯಿರಬೇಕು. ಹೆಚ್ಚು ರೇಷ್ಮೆ ಉತ್ಪಾದನೆಯಾಗುವ ತಾಲ್ಲೂಕಿನಲ್ಲಿ ಸ್ಪನ್ ರೇಷ್ಮೆಯ ಕಚ್ಛಾ ಪದಾರ್ಥ ಜೋಟ್ ಅನ್ನು ಸ್ಥಳೀಯವಾಗಿ ಖರೀದಿಸುವುದರಿಂದ ಉತ್ತಮ ಬೆಲೆ ಕೂಡ ಸಿಗುತ್ತಿದೆ. ರೀಲರುಗಳಿಗೆ ಅನುಕೂಲವಾಗಿದೆ.
ರೇಷ್ಮೆಗೆ ಮೂಲವಾದ ಹಿಪ್ಪುನೇರಳೆ ಸೊಪ್ಪಿನ ತೋಟವೂ ಸಹ ಈ ಎಸ್.ಪಿ.ಎಸ್.ಎ ಸಿಲ್ಕ್ಸ್ ಎಂಬ ಹೆಸರಿನ ಸ್ಪನ್ ರೇಷ್ಮೆ ತಯಾರಿಕಾ ಘಟಕಕ್ಕೆ ಹೊಂದಿಕೊಂಡಿದ್ದು, ಘಟಕದಲ್ಲಿ ಬಳಸುವ ನೀರನ್ನು ಶುದ್ಧೀಕರಿಸಿ ತೋಟಕ್ಕೆ ಬಳಸಲಾಗುತ್ತಿದೆ.
‘ಶಿಡ್ಲಘಟ್ಟದಲ್ಲಿಯೇ ಹುಟ್ಟಿ ಬೆಳೆದ ನಾನು ವಿದ್ಯಾಭ್ಯಾಸ ಮುಗಿಸಿ ರೇಷ್ಮೆ ವ್ಯಾಪಾರದಲ್ಲಿ ತೊಡಗಿಸಿಕೊಂಡೆ. ನಮ್ಮ ತಾತನ ಕಾಲದಿಂದಲೂ ಕಚ್ಛಾ ರೇಷ್ಮೆ ತಯಾರಿಸಿ ಮಾರುವುದು ಕಸುಬಾಗಿತ್ತು. ಇದರೊಂದಿಗೆ ಸ್ಪನ್ ರೇಷ್ಮೆ ತಯಾರಿಕಾ ಘಟಕಗಳಿಗೆ ಜೋಟ್ ಮಾರಾಟ ಮಾಡುತ್ತಿದ್ದೆ. ಆಗ ನಮ್ಮೂರಿನಲ್ಲಿ ಒಂದು ಸ್ಪನ್ ರೇಷ್ಮೆ ತಯಾರಿಕಾ ಘಟಕ ಪ್ರಾರಂಭಿಸುವ ಆಲೋಚನೆ ಬಂದು ಸ್ಥಳೀಯವಾಗಿ ಸಣ್ಣ ಮಟ್ಟದಲ್ಲಿ 2001ರಲ್ಲಿ ಘಟಕವನ್ನು ಪ್ರಾರಂಭಿಸಿದೆ. ಒಂದೊಂದೇ ಹಂತದ ಸಂಸ್ಕರಣೆಯನ್ನು ಮಾಡುತ್ತಾ ನಿಧಾನವಾಗಿ ಯಂತ್ರೋಪಕರಣವನ್ನು ಖರೀದಿಸುತ್ತಾ ಘಟಕವನ್ನು ವಿಸ್ತರಿಸಿದೆ. ಈಗ ಇಟಲಿಯ ಅತ್ಯುತ್ತಮ ಯಂತ್ರಗಳನ್ನು ಬಳಸಲಾಗುತ್ತಿದೆ. ವಿದೇಶಗಳಿಗೆ ಉತ್ಪನ್ನ ರಫ್ತಾಗುವುದರಿಂದ ನಮ್ಮ ಘಟಕದಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಿದ್ದೇವೆ’ ಎಂದು ಎಸ್.ಪಿ.ಎಸ್.ಎ ಸಿಲ್ಕ್ಸ್ನ ಸಯ್ಯದ್ ಅನ್ಸರ್ ಪಾಷ ವಿವರಿಸಿದರು.
‘ಕಚ್ಛಾ ಪದಾರ್ಥ ಜೋಟನ್ನು ನಮ್ಮ ಶಿಡ್ಲಘಟ್ಟ ತಾಲ್ಲೂಕು ಸೇರಿದಂತೆ, ಕೊಳ್ಳೇಗಾಲ, ರಾಮನಗರ, ತಮಿಳುನಾಡು, ಶ್ರೀನಗರ ಮುಂತಾದೆಡೆಯಿಂದ ಖರೀದಿಸುತ್ತೇವೆ. ಕಚ್ಛಾ ರೇಷ್ಮೆಯನ್ನು ಗುಣಮಟ್ಟದಲ್ಲಿ ತಯಾರಿಸುವಂತೆಯೇ ಅದರಿಂದ ಉತ್ಪಾದನೆಯಾಗುವ ಜೋಟ್ ಕೂಡ ಗುಣಮಟ್ಟವನ್ನು ಹೊಂದಿರಬೇಕು. ಚೀನಾ, ವಿಯೆಟ್ನಾಂ, ಬ್ರೆಜಿಲ್, ಉಜ್ಬೆಕಿಸ್ತಾನ ಮುಂತಾದ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದ ರೇಷ್ಮೆ ಒಣ ತ್ಯಾಜ್ಯದ ಬೆಲೆ ಕಡಿಮೆ. ಈ ಬಗ್ಗೆ ಕೇಂದ್ರ ರೇಷ್ಮೆ ಮಂಡಳಿ ರೈತರು ಮತ್ತು ರೀಲರುಗಳಿಗೆ ಕಾರ್ಯಾಗಾರವನ್ನು ನಡೆಸಿ ಉತ್ಪನ್ನಗಳಿಗೆ ಮೌಲ್ಯ ಹೆಚ್ಚಿಸಬೇಕು. ಹಲವು ಕಾರಣಗಳಿಂದ ಕೆಲಸಗಾರರ ಕೊರತೆಯಿದೆ. ಆದರೂ ನಮ್ಮೂರಿನ ರೇಷ್ಮೆಯನ್ನು ವಿಶ್ವಕ್ಕೇ ಪರಿಚಯಿಸುವ ಹೆಬ್ಬಯಕೆಯಿದೆ’ ಎಂದು ಅವರು ತಿಳಿಸಿದರು.
ಮೂರು ವರ್ಷಗಳ ನಂತರ ತುಂಬಿದ ಸಾದಲಿ ಹೊಸಕೆರೆ
ತಾಲ್ಲೂಕಿನಲ್ಲಿ ಬೀಳುತ್ತಿರುವ ಮಳೆಗೆ ಸಾದಲಿ ಮತ್ತು ಎಸ್.ದೇವಗಾನಹಳ್ಳಿಯ ಹಲವು ಕೆರೆಗಳು ತುಂಬಿ ಕೋಡಿ ಹರಿಯುತ್ತಿದ್ದು ಜನರು ಹರ್ಷಗೊಂಡಿದ್ದಾರೆ.
ಸಾದಲಿ ಹೊಸಕೆರೆಯು ಮೂರು ವರ್ಷದ ನಂತರ ತುಂಬಿ ಕೋಡಿ ಹರಿಯುತ್ತಿದೆ. ಸ್ಥಳೀಯರು ಕೆರೆಯ ದಂಡೆಯಲ್ಲಿರುವ ವೀರಗಲ್ಲಿಗೆ ಪೂಜೆಯನ್ನು ಸಲ್ಲಿಸಿದ್ದಾರೆ. ಇರಗಪ್ಪನಹಳ್ಳಿ ಬಳಿಯಿರುವ ಚಾಕಪ್ಪನಹಳ್ಳಿ ಕೆರೆ, ಇರಗಪ್ಪನಹಳ್ಳಿಯ ಬಸವನಕಟ್ಟೆಯ ಬಳಿಯ ಕೆರೆ, ಇರಗಪ್ಪನಹಳ್ಳಿ ಕ್ರಾಸ್ ಬಳಿಯಿರುವ ಕೆರೆ, ಇರಗಪ್ಪನಹಳ್ಳಿ ಗ್ರಾಮದಲ್ಲಿನ ಕೆರೆ, ಸೊಣ್ಣಗಾನಹಳ್ಳಿ ಕೆರೆ, ಗೊಲ್ಲಹಳ್ಳಿ ಕೆರೆ ತುಂಬಿ ಹರಿಯುತ್ತಿವೆ.
ತಾಲ್ಲೂಕಿನಲ್ಲಿಯೇ ಅತ್ಯಂತ ದೊಡ್ಡ ಕೆರೆಯೆಂದೇ ಪ್ರಸಿದ್ಧವಾದ ರಾಮಸಮುದ್ರ ಕೆರೆಯು ೧೨ ಅಡಿ ತುಂಬಿದ್ದು, ಇನ್ನೂ ೨೦ ಅಡಿ ತುಂಬಬೇಕಿದೆ. ಈ ಭಾಗದ ಕೆರೆಗಳೆಲ್ಲಾ ತುಂಬುತ್ತಿದ್ದಂತೆ ಕೋಡಿ ಹರಿದು ರಾಮಸಮುದ್ರ ಕೆರೆಯನ್ನು ನೀರು ಸೇರುತ್ತದೆ. ರಾಮಸಮುದ್ರ ಕೆರೆ ತುಂಬುವುದನ್ನು ಜನರು ಕಾಯುತ್ತಿದ್ದಾರೆ.
ಬಿಜೆಪಿ ಪಕ್ಷದ ವತಿಯಿಂದ ತುಂಬಿದ ಕೆರೆಗಳಿಗೆ ಬಾಗಿನ ಅರ್ಪಣೆ
ನಮ್ಮ ಪೂರ್ವಿಕರು ನಿರ್ಮಿಸಿರುವಂತಹ ಕೆರೆ ಕುಂಟೆಗಳನ್ನು ಉಳಿಸಬೇಕು. ಕೆರೆ ಕುಂಟೆ ಗಳಿಗೆ ನೀರು ಹರಿಸುವ ರಾಜಕಾಲುವೆಗಳನ್ನು ಸ್ವಚ್ಚಗೊಳಿಸುವ ಕೆಲಸ ನಿರಂತರವಾಗಿ ನಡೆಯಬೇಕಿದೆ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ಹೇಳಿದರು.
ತಾಲ್ಲೂಕು ಬಿಜೆಪಿ ಪಕ್ಷದ ವತಿಯಿಂದ ಭಾನುವಾರ ತಾಲ್ಲೂಕಿನ ದಿಬ್ಬೂರಹಳ್ಳಿಯ ಭೈರಸಾಗರ ಕೆರೆ, ತಲಕಾಯಲಬೆಟ್ಟದ ಶ್ರೀನಿವಾಸ ಸಾಗರ ಕೆರೆ ಹಾಗು ಗಂಜಿಗುಂಟೆಯ ರೆಡ್ಡಿಕೆರೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಪೂರ್ವಿಕರು ಹಿಂದೆ ಕೆರೆ ಕುಂಟೆಗಳನ್ನು ನಿರ್ಮಿಸಿದ ಪರಿಣಾಮ ಕಳೆದ ಮೂವತ್ತು ವರ್ಷಗಳ ಹಿಂದೆ ಈ ಭಾಗದಲ್ಲಿ ಯಥೇಚ್ಚವಾಗಿ ನೀರು ಲಭ್ಯವಿತ್ತು. ಆದರೆ ಇತ್ತೀಚೆಗೆ ಜನರ ದುರಾಸೆಯಿಂದ ಕೆರೆ ಕುಂಟೆಗಳಿಗೆ ನೀರು ಹರಿಯುವ ರಾಜಕಾಲುವೆಗಳನ್ನು ಒತ್ತುವರಿ ಮಾಡಿರುವುದರಿಂದ ಮಳೆಯಿಂದ ಬಂದಂತಹ ನೀರು ಸರಾಗವಾಗಿ ಕೆರೆ ಕುಂಟೆಗಳಿಗೆ ಹರಿಯುವುದಿಲ್ಲ. ಮಳೆಯಿಂದ ಬಂದ ನೀರು ಮನೆಗಳಿಗೆ ರಸ್ತೆಗಳ ಮೇಲೆ ಸೇರಿದಂತೆ ರೈತರ ತೋಟಗಳಿಗೆ ನುಗ್ಗಿ ರೈತ ಬೆಳೆದಂತಹ ಬೆಳೆ ಹಾಳಾಗುತ್ತಿದೆ. ಹಾಗಾಗಿ ಕೂಡಲೇ ಒತ್ತುವರಿಯಾಗಿರುವಂತಹ ರಾಜಕಾಲುವೆಗಳನ್ನು ಕೂಡಲೇ ತೆರವುಗೊಳಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು.
ಬಿಜೆಪಿ ಮುಖಂಡ ಡಿ.ಆರ್.ಶಿವಕುಮಾರಗೌಡ ಮಾತನಾಡಿ, ಕೋಲಾರ ಹಾಗು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸುಮಾರು ೩೦೦೦ ಕೆರೆಗಳಿದ್ದು ಮಳೆಯಿಂದ ಬಂದಂತಹ ನೀರು ಕೆರೆ ಕುಂಟೆಗಳಲ್ಲಿ ಸಂಗ್ರಹವಾದರೆ ಈ ಭಾಗದ ಅಂತರ್ಜಲ ವೃದ್ಧಿಯಾಗುವ ಜೊತೆಗೆ ಜನರ ಜೀವನ ಸುಗಮವಾಗುತ್ತದೆ ಎಂದರು.
ಬೆಂಗಳೂರಿನಲ್ಲಿರುವ ಹಲವಾರು ಕೆರೆಗಳು ಮುಚ್ಚಿರುವ ಪರಿಣಾಮ ಇದೀಗ ಬೀಳುತ್ತಿರುವ ಮಳೆ ನೀರು ಸಂಗ್ರಹವಾಗಲು ಸ್ಥಳವಿಲ್ಲದೇ ಮನೆಗಳ ನುಗ್ಗುವ ಸ್ಥಿತಿ ಬಂದಿದೆ. ಒತ್ತುವರಿಯಾಗಿರುವ ರಾಜಕಾಲುವೆಗಳ ತೆರವಿಗೆ ಪಕ್ಷಾತೀತವಾಗಿ ಎಲ್ಲರೂ ಬೆಂಬಲಿಸುವ ಮೂಲಕ ಕೆರೆ ಕುಂಟೆಗಳನ್ನು ಕಾಪಾಡಲು ಮುಂದಾಗಬೇಕು ಎಂದರು.
ಇನ್ನು ನಗರಕ್ಕೆ ಹೊಂದಿಕೊಂಡಂತಿರುವ ಅಮ್ಮನ ಕೆರೆ ಹಾಗು ಗೌಡನ ಕೆರೆಯಲ್ಲಿ ಅರಣ್ಯ ಇಲಾಖೆಯಿಂದ ನೆಟ್ಟಿರುವ ಜಾಲಿ ಗಿಡಗಳನ್ನು ತೆರವುಗೊಳಿಸಲು ತಾಲ್ಲೂಕು ಆಡಳಿತ ಸೇರಿದಂತೆ ಅರಣ್ಯ ಇಲಾಖೆ ಕೂಡಲೇ ಮುಂದಾಗಬೇಕು ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀರಾಮರೆಡ್ಡಿ, ಮುಖಂಡರಾದ ಬೈರರೆಡ್ಡಿ, ಮಧು, ಪುರುಷೋತ್ತಮ್, ಶ್ರೀರಾಮಪ್ಪ, ಸೀತಭೈರರೆಡ್ಡಿ, ನರಸಿಂಹಯ್ಯ, ಶ್ರಿರಾಮ್, ಮಹಿಳಾ ಮೋರ್ಚಾದ ಸುಶೀಲಮ್ಮ, ಶಿವಮ್ಮ ಹಾಜರಿದ್ದರು.
ಮಾನವ ಹಕ್ಕುಗಳ ಹಿತರಕ್ಷಣಾ ಸಮಿತಿ ಉದ್ಘಾಟನಾ ಕಾರ್ಯಕ್ರಮ
ಸಮಾಜದ ಎಲ್ಲಾ ವಿಭಾಗಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದರು ಪ್ರಶ್ನೆ ಮಾಡಿ ಅದನ್ನು ತಡೆಯುವಂತಹ ಸಾಮರ್ಥ್ಯ ಇದುವರೆಗೂ ಯಾರಲ್ಲೂ ಬಂದಿಲ್ಲ ಎಂದು ಕರ್ನಾಟಕ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಹೇಳಿದರು.
ತಾಲ್ಲೂಕಿನ ಜಂಗಮಕೋಟೆಯ ಸರ್ಕಾರಿ ಶಾಲೆಯ ಆವರಣದಲ್ಲಿ ಸೋಮವಾರ ಮಾನವ ಹಕ್ಕುಗಳ ಹಿತರಕ್ಷಣಾ ಸಮಿತಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜದ ಮೂಲೆ ಮೂಲೆಯಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ಮಾದ್ಯಮ ಲೋಕವನ್ನು ಬಿಟ್ಟಿಲ್ಲ, ಸಂವಿಧಾನದಲ್ಲಿ ಸೃಷ್ಟಿಯಾಗದೆ ಇದ್ದರು ಜನರ ಪ್ರೀತಿ ವಿಶ್ವಾಸಗಳಿಸಿಕೊಂಡು ಮುನ್ನಡೆಯುತ್ತಿದೆ. ನಿಷ್ಟಾವಂತ ಸಮಾಜದ ನಿರ್ಮಾಣವಾಗಬೇಕು. ಸಮಾಜವನ್ನು ಬದಲಾಯಿಸಿ, ಭ್ರಷ್ಟರಿಲ್ಲದಿದ್ದರೆ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾ ರಂಗಗಳು ಸರಿಹೋಗುತ್ತವೆ.
ಸಂಘಟನೆಗಳು ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಸಂಘಟನೆಗಳು ಹಾದಿ ತಪ್ಪಬಾರದು. ಜನರಿಗೆ ಮಾರ್ಗದರ್ಶನ ಮಾಡುವುದರ ಜೊತೆಗೆ, ಅವರ ಹಕ್ಕುಗಳಿಗೆ ಚ್ಯುತಿ ಬಂದಾಗ ಸಂರಕ್ಷಣೆ ಮಾಡುವ ಕಾರ್ಯವಾಗಬೇಕು. ಇಂತಹ ವ್ಯವಸ್ಥೆ ಸರಿಹೋಗಬೇಕಾದರೆ ಜನರಲ್ಲಿ ಸ್ವಯಂ ಪ್ರಜ್ಞೆ ಮೂಡಬೇಕು. ಕಾನೂನು ಬದ್ದವಾಗಿ ಸಿಗಬೇಕಾದ ಸೌಲಭ್ಯಗಳು ಸಿಗದೆ ಇದ್ದಾಗ ನೇರವಾಗಿ ಲೋಕಾಯುಕ್ತ ಸಂಸ್ಥೆಗೆ ದೂರು ಕೊಡಿ ಎಂದರು.
ವಕೀಲರ ಸಂಘದ ಅಧ್ಯಕ್ಷ ಟಿ.ವಿ. ಚಂದ್ರಶೇಖರ ಗೌಡ ಮಾತನಾಡಿ, ಸಂಘಟನೆಗಳು ತೋರಿಸುವ ಮಾರ್ಗದರ್ಶನ ಮುಂದಿನ ಪೀಳಿಗೆ ಮುಂದುವರೆಸಿಕೊಂಡು ಹೋಗುವಂತೆ ಮಾದರಿಯಾಗಬೇಕು. ಸಮಾಜದ ಪರಿವರ್ತನೆ ನಮ್ಮಿಂದಲೇ ಆಗಬೇಕು. ಕಾನೂನು ಪರಿದಿಯ ಒಳಗೆ ಧೈನಂದಿನ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ಚುನಾವಣೆಗಳಲ್ಲಿ ಭ್ರಷ್ಟಾಚಾರಕ್ಕೆ ಒಳಗಾಗುವುದಿಲ್ಲ ಎನ್ನುವ ಸಂಕಲ್ಪ ಮಾಡಬೇಕು. ಭ್ರಷ್ಟಾಚಾರದಲ್ಲಿ ತೊಡಗುವುದು ಎಷ್ಟು ಅಪರಾಧವೋ ಅದಕ್ಕೆ ಸಹಕರಿಸುವುದು ಅಷ್ಟೆ ತಪ್ಪು, ಆದ್ದರಿಂದ ಜನರು ಜಾಗೃತರಾಗಬೇಕು ಎಂದರು.
ಸಿವಿಲ್ ಹಿರಿಯ ನ್ಯಾಯಾಧೀಶರಾದ ಮಂಜುನಾಥ್, ಶ್ರೀಕಂಠ.ಎನ್.ಎ, ಸಂದೀಶ್ ಟಿ.ಎಲ್, ವಕೀಲರ ಸಂಘದ ಕಾರ್ಯದರ್ಶಿ ಎಂ.ಬಿ.ಲೊಕೇಶ್, ಮಾನವ ಹಕ್ಕುಗಳ ಹಿತರಕ್ಷಣಾ ಸಮಿತಿಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜೆ.ಎಂ.ನಾಗರಾಜ್, ಖಜಾಂಚಿ ಎಂ.ಚನ್ನಕೃಷ್ಣಪ್ಪ, ಎಂ.ನಂಜಯ್ಯ, ನರಸಿಂಹಯ್ಯ, ಮುರಳಿ, ಆಸೀಪ್ ಬಾಷ, ಬಿ.ಎಂ.ಮೂರ್ತಿ, ಶಿಕ್ಷಕ ಎಚ್.ಎಸ್.ರುದ್ರೇಶ್ ಮೂರ್ತಿ ಮುಂತಾದವರು ಹಾಜರಿದ್ದರು.
ಬೇಸಿಗೆ ರಜೆಯ ಉಚಿತ ಕರಾಟೆ ಕಲಿಕಾ ಶಿಬಿರಕ್ಕೆ ಚಾಲನೆ
ಹೆಣ್ಣು ಮಕ್ಕಳು ಪ್ರತಿಕ್ಷಣ ಆತಂಕದಲ್ಲಿ ಬದುಕು ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು ಪ್ರತಿಯೊಬ್ಬ ಮಗುವೂ ಸ್ವಯಂ ರಕ್ಷಣೆ ಮಾಡಿಕೊಳ್ಳುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳಲು ಇಂತಹ ಉಚಿತ ಶಿಬಿರಗಳು ಸಹಕಾರಿಯಾಗಲಿವೆ ಎಂದು ಕರಾಟೆ ಶಿಕ್ಷಕ ಅರುಣ್ಕುಮಾರ ತಿಳಿಸಿದ್ದಾರೆ.
ದಿವ್ಯಭಾರತ್ ಕರಾಟೆ ಡೊ ಅಸೋಸಿಯೇಷನ್ ವತಿಯಿಂದ ನಗರದ ಅಶೋಕ ರಸ್ತೆಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ೬ ದಿನಗಳ ಉಚಿತ ಸ್ವಯಂ ರಕ್ಷಣೆ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳು ಸ್ವಯಂ ರಕ್ಷಣೆ ಹೇಗೆಲ್ಲ ಮಾಡಿಕೊಳ್ಳಬೇಕು, ಯಾವ ಸಂದರ್ಭದಲ್ಲಿ ಪ್ರತಿರೋಧ ತೋರಬೇಕು, ಅಪಾಯಕರ ಸಂದರ್ಭಗಳನ್ನು ಹೇಗೆಲ್ಲಾ ಎದುರಿಸಬೇಕು ಎಂಬುದನ್ನು ಶಿಬಿರದಲ್ಲಿ ತಿಳಿಸಿಕೊಡಲಾಗುವುದು ಎಂದರು.
ಆರ್ಥಿಕವಾಗಿ ಸುಧಾರಿಸಿರುವವರು ತಮ್ಮ ಮಕ್ಕಳಿಗೆ ವಿವಿಧ ತರಬೇತಿಗಳನ್ನು ಹಣ ಕಟ್ಟಿ ಕಲಿಸುತ್ತಾರೆ. ಆದರೆ ಗ್ರಾಮೀಣ ಭಾಗದ ಬಡವರ ಮಕ್ಕಳು ಇಂತಹ ತರಬೇತಿಗಳಿಂದ ದೂರ ಉಳಿಯಬಾರದು ಎನ್ನುವ ಉದ್ದೇಶದಿಂದ ೬ ದಿನಗಳ ಕಾಲ ಉಚಿತ ತರಬೇತಿ ಶಿಬಿರ ಆಯೋಜಿಸಲಾಗಿದ್ದು ಪ್ರತಿಯೊಬ್ಬ ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಾಲೀಬಾಲ್ ಕ್ರೀಡಾಪಟು ಮುನಿರಾಜು, ಕಲಾವಿದ ಮುನಿರಾಜು ಹಾಜರಿದ್ದರು.
ಹಂಡಿಗನಾಳ ಪಂಚಾಯಿತಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡಾ ಸಾಮಗ್ರಿ ವಿತರಣೆ
ತಾಲ್ಲೂಕಿನ ಹಂಡಿಗನಾಳ ಪಂಚಾಯಿತಿಯು ೨೦೧೬-೧೭ನೇ ಸಾಲಿನಲ್ಲಿ ಯುವ ಕ್ರೀಡಾಮಿತ್ರ ಹಾಗೂ ನರೇಗಾ ಯೋಜನೆ ಕಾರ್ಯಕ್ರಮದಡಿ ಕ್ರೀಡಾ ಸಾಮಗ್ರಿಗಳನ್ನು ಪಡೆದ ಮೊದಲ ಗ್ರಾಮ ಪಂಚಾಯಿತಿಯಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜು ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರುದ್ರಪ್ಪ ಅವರಿಂದ ಪಂಚಾಯಿತಿಗೆ ಕ್ರೀಡಾ ಸಾಮಗ್ರಿಗಳನ್ನು ಪಡೆದು ಅವರು ಮಾತನಾಡಿದರು.
ಜಿಲ್ಲೆಯ ಆರೂ ತಾಲ್ಲೂಕುಗಳ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಈ ಯೋಜನೆ ಅನ್ವಯಿಸಲಿದೆ. ಆದರೆ ನರೇಗಾ ಯೋಜನೆಯನ್ನು ಸದ್ಭಳಕೆ ಮಾಡಿಕೊಂಡು ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಿರಬೇಕು. ಈ ಬಗ್ಗೆ ದಾಖಲೆಯನ್ನು ಒದಗಿಸಿ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರ ಪತ್ರವನ್ನು ನೀಡಿದಲ್ಲಿ ಸಾವಿರಾರು ರೂಗಳ ಕ್ರೀಡಾ ಸಾಮಗ್ರಿಗಳನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯವರು ಕೊಡುವರು.
ಹಂಡಿಗನಾಳ ಪಂಚಾಯಿತಿಗೆ ೨೪ ಕ್ರಿಕೆಟ್ ಟೆನ್ನಿಸ್ ಬಾಲ್, ೧ ವಾಲಿಬಾಲ್ ನೆಟ್, ೪ ವಾಲಿಬಾಲ್, ೧ ಥ್ರೋಬಾಲ್ ನೆಟ್, ೪ ಥ್ರೋಬಾಲ್, ೪ ಫುಟ್ ಬಾಲ್, ೨ ಕ್ರಿಕೆಟ್ ಬ್ಯಾಟ್, ೬ ಸ್ಟಂಪ್ ಮತ್ತು ಬೇಲ್ಸ್, ೧ ಕಿಟ್ ಬ್ಯಾಗ್ ನೀಡಲಾಗಿದೆ.
ಹಂಡಿಗನಾಳ ಪಂಚಾಯಿತಿಯಿಂದ ನರೇಗಾ ಯೋಜನೆಯಡಿ ವಾಲಿಬಾಲ್, ಕಬಡ್ಡಿ, ಕೊಕೊ, ಷಟಲ್ ಕಾಕ್ ಕೋರ್ಟ್ ಗಳನ್ನು ಮಾಡಿಸಿ, ಸರ್ಕಾರಿ ಶಾಲಾ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಿದ್ದೇವೆ. ಈಗ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳು ದೊರಕಿರುವುದು ಸಂತಸ ತಂದಿದೆ ಎಂದು ಹೇಳಿದರು.
ಹಾಕಿ ತರಬೇತುದಾರ ಮುಷ್ಟಾಕ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಂಜನ್ ಕುಮಾರ್ ಈ ಸಂದರ್ಭದಲ್ಲಿ ಹಾಜರಿದ್ದರು.
ಬಾಗಿನ ಅರ್ಪಿಸುವುದಕ್ಕಿಂತ ಕೆರೆ ಒತ್ತುವರಿ ತೆರವುಗೊಳಿಸಲು ಮುಂದಾಗಿ
ತಾಲ್ಲೂಕಿನಲ್ಲಿ ಹಲವು ವರ್ಷಗಳ ನಂತರ ಅತ್ಯುತ್ತಮವಾಗಿ ಮಳೆ ಬೀಳುತ್ತಿದೆ, ಕೆರೆಗಳು ತುಂಬುತ್ತಿವೆ. ಕೆರೆಗಳಿಗೆ ನೀರು ಹರಿದು ಬರಲು ಬಹುಮುಖ್ಯವಾಗಿ ಕಾಲುವೆಗಳನ್ನು ದುರಸ್ತಿಗೊಳಿಸಿ, ಒತ್ತುವರಿ ತೆರವುಗೊಳಿಸಬೇಕಿದೆ. ಆದರೆ ರಾಜಕಾರಣಿಗಳು ಕೇವಲ ಪ್ರಚಾರಕ್ಕಾಗಿ ಹೇಳಿಕೆಗಳನ್ನು ನೀಡುತ್ತಾ ಬಾಗಿನ ಅರ್ಪಿಸುವುದರಲ್ಲಿ ನಿರತರಾಗಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ(ಪುಟ್ಟಣ್ಣಯ್ಯ ಬಣ) ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳದ ಬಳಿ ಲಕ್ಕಹಳ್ಳಿ ಗೇಟ್ ಹತ್ತಿರವಿರುವ ಮುಚ್ಚಿಹೋಗಿದ್ದ ರಾಜಕಾಲುವೆಯನ್ನು ಗುರುವಾರ ರೈತಸಂಘದ ಸದಸ್ಯರೇ ಜೆಸಿಬಿ ಬಳಸಿ ದುರಸ್ತಿಗೊಳಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಜಾತವಾರ ಮತ್ತು ಕೇಶವಪುರ ಕೆರೆಗಳು ತುಂಬಿವೆ. ಅವುಗಳಲ್ಲಿ ಹೆಚ್ಚಾದ ನೀರು ಹರಿದು ಬರಲು ಕಾಲುವೆಯು ಮುಚ್ಚಿಹೋಗಿದೆ. ಆದ್ದರಿಂದ ರೈತಸಂಘದ ಸದಸ್ಯರೇ ಒಗ್ಗೂಡಿ ಈ ಕೆಲಸಕ್ಕೆ ಮುಂದಾಗಿದ್ದೇವೆ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಜನಪ್ರತಿನಿಧಿಗಳು ಕೇವಲ ಕೆರೆ ಪೂಜೆ ಮಾಡಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಶೆಟ್ಟಹಳ್ಳಿ ಕೆರೆ ಸೇರಿದಂತೆ ಹಲ್ವು ಕೆರೆಗಳ ತೂಬುಗಳು ಹಾಳಾಗಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಮಳೆ ಬರುವಷ್ಟರಲ್ಲಿ ಕಾಲುವೆಗಳನ್ನು, ಕೆರೆಗಳನ್ನು ಒತ್ತುವರಿ ತೆರವು ಕಾರ್ಯಾಚರಣೆ ಮಾಡಬೇಕಿತ್ತು. ನೀರು ಹಿಡಿದಿಡಲು ಕೆರೆಯ ಸಾಮರ್ಥ್ಯ ಹೆಚ್ಚಿಸುವ ಕೆಲಸ ಮಾಡುವ, ನೀರು ಪೋಲಾಗದಂತೆ ವ್ಯವಸ್ಥೆ ರೂಪಿಸಬೇಕು. ಅದುವೇ ನಿಜವಾದ ಪೂಜೆ ಎಂದು ಹೇಳಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ(ಪುಟ್ಟಣ್ಣಯ್ಯ ಬಣ) ತಾಲ್ಲೂಕು ಘಟಕದ ಅಧ್ಯಕ್ಷ ರವಿಪ್ರಕಾಶ್ ಮಾತನಾಡಿ, ತಾಲ್ಲೂಕಿನ ದಿಬ್ಬೂರಹಳ್ಳಿ ಪಂಚಾಯಿತಿಯ ಬೈರಸಾಗರ ಕೆರೆಯಲ್ಲಿದ್ದ ಜಾಲಿಗಿಡಗಳನ್ನು ಪಂಚಾಯಿತಿಯವರು ತೆರವುಗೊಳಿಸಿದ್ದಾರೆ. ಇದರಿಂದ ಪಂಚಾಯಿತಿಗೆ ಆದಾಯವೂ ಬಂದಿದ್ದು, ಪರಿಸರ ಉಳಿಯುವಿಕೆಗೆ ಸಹಾಯವನ್ನೂ ಮಾಡಿದ್ದಾರೆ. ಇದೇ ಮಾದರಿಯಲ್ಲಿ ತಾಲ್ಲೂಕಿನ ಎಲ್ಲಾ ಕೆರೆಗಳಲ್ಲಿರುವ ಜಾಲಿ ಗಿಡಗಳನ್ನು ತೆರವು ಮಾಡಿ ನೀರು ಹಿಡಿದಿಡುವ ಸಾಮರ್ಥ್ಯ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ(ಪುಟ್ಟಣ್ಣಯ್ಯ ಬಣ)ಯ ಭಕ್ತರಹಳ್ಳಿ ಪ್ರತೀಶ್, ಎಸ್.ಎಂ.ಗೋವಿಂದಪ್ಪ, ನಾರಾಯಣಸ್ವಾಮಿ, ಆನಂದ್, ಮಂಜು ಹಾಜರಿದ್ದರು.
ಕಾನೂನು ಅರಿವು ನೆರವು ಕಾರ್ಯಕ್ರಮ
ಹೆಣ್ಣು ಮಕ್ಕಳು ತಮ್ಮ ಮೇಲೆ ನಡೆಯುವಂತಹ ಮಾನಸಿಕ, ದೈಹಿಕ ದೌರ್ಜನ್ಯಗಳನ್ನು ತಡೆಗಟ್ಟಲು ಪ್ರತಿರೋಧಿಸುವಂತಹ ಮನಭಾವನೆ ಮತ್ತು ಧೈರ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಸಿವಿಲ್ ನ್ಯಾಯಾದೀಶರಾದ ಮಂಜುನಾಥ್ ಹೇಳಿದರು.
ನಗರದ ಬಿಜಿಎಸ್ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಹೆಣ್ಣು ಮಗು ರಕ್ಷಣಾ ದಿನಾಚರಣೆಯ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳ ರಕ್ಷಣೆಗಾಗಿ ಕಾನೂನುಗಳು ರೂಪುಗೊಳ್ಳುತ್ತಿವೆ, ಆದರೆ ಅವುಗಳ ಉಪಯೋಗ ಮಾತ್ರ ಸರಿಯಾಗಿ ಆಗುತ್ತಿಲ್ಲದ ಕಾರಣ ಸಮಾಜದಲ್ಲಿ ಹೆಣ್ಣು ಮಕ್ಕಳ ಶೋಷಣೆ, ಭ್ರೂಣ ಹತ್ಯೆಗಳು, ದೌರ್ಜನ್ಯಗಳು ನಡೆಯುತ್ತಿವೆ. ಆದ್ದರಿಂದ ವಿದ್ಯಾವಂತ ಹೆಣ್ಣು ಮಕ್ಕಳು ಎಚ್ಚೆತ್ತುಕೊಳ್ಳಬೇಕು. ಶೋಷಣೆಯನ್ನು ವಿರೋಧಿಸುವಂತಹ ಧೈರ್ಯವನ್ನು ತಂದುಕೊಳ್ಳಬೇಕು. ಆಗ ಮಾತ್ರವೇ ಸಮಾಜದಲ್ಲಿ ಬದಲಾವಣೆಯನ್ನು ಕಾಣಲು ಸಾಧ್ಯವಾಗುವುದರ ಜೊತೆಗೆ ನಿರ್ಭಿತಿಯ ಆರೋಗ್ಯ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ಸಿವಿಲ್ ನ್ಯಾಯಾಧೀಶರಾದ ಶ್ರೀಕಂಠ ಮಾತನಾಡಿ, ಹೆಣ್ಣು ಮಕ್ಕಳ ರಕ್ಷಣೆಯ ವಿಷಯದಲ್ಲಿ ಕಾನೂನಿನಲ್ಲಿ ಬಹಳಷ್ಟು ಬಿಗಿಯಾದ ವಾತಾವರಣವಿದೆ ಆದರೆ ಕಾನೂನು ಅರಿವು ಪಡೆದುಕೊಂಡು ಇದರ ಸದುಪಯೋಗ ಪಡೆದುಕೊಳ್ಳುವವರ ಸಂಖ್ಯೆ ಕಡಿಮೆಯಾಗಿರುವುದರಿಂದ ಪರಿಣಾಮಕಾರಿಯಾಗಿ ಅನುಷ್ಟಾನಗೊಳ್ಳುತ್ತಿಲ್ಲ, ಹೆಣ್ಣು ಮಕ್ಕಳು ಸ್ವಯಂ ರಕ್ಷಣೆಗೆ ಮುಂದಾಗಬೇಕು ಎಂದರು.
ಸರ್ಕಾರಿ ಅಭಿಯೋಜಕಿ ಕುಮುದಿನಿ ಮಾತನಾಡಿ, ಸಮಾಜದ ಎಲ್ಲಾ ರಂಗಗಳಲ್ಲಿ ಮಹಿಳೆಯರು ಭಾಗವಹಿಸುತ್ತಿದ್ದಾರೆ. ಮಹಿಳೆಯರು ಭಾಗವಹಿಸುತ್ತಿರುವ ಎಲ್ಲಾ ರಂಗಗಳಲ್ಲೂ ದೌರ್ಜನ್ಯಗಳು ನಡೆಯುತ್ತಲೇ ಇವೆ. ಇವುಗಳನ್ನು ತಡೆಯಬೇಕಾದರೆ ಹೆಣ್ಣು ಮಕ್ಕಳು ಮಾನಸಿಕವಾಗಿ ಸಿದ್ಧರಾಗಬೇಕು. ಸಮಾಜದಲ್ಲಿ ತಮಗಾಗುವಂತಹ ಸಮಸ್ಯೆಗಳ ಕುರಿತು, ತಾವು ಎದುರಿಸುತ್ತಿರುವ ಮಾನಸಿಕ ಸಮಸ್ಯೆಗಳು ಕುರಿತು ತಂದೆ, ತಾಯಿ, ಪೊಷಕರ ಬಳಿಯಲ್ಲಿ ಮುಕ್ತವಾಗಿ ಹಂಚಿಕೊಳ್ಳಬೇಕು. ಶಾಲಾ ಶಿಕ್ಷಕರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರ್ ಗೌಡ ಮಾತನಾಡಿ, ಹೆಣ್ಣು ಮಕ್ಕಳನ್ನು ಗೌರವಿಸುವಂತಹ ಪ್ರವೃತ್ತಿಯನ್ನು ಯಾರು ಬೆಳೆಸಿಕೊಳ್ಳುತ್ತಾರೊ ಅಂತಹ ಸಮಾಜ ಆರೋಗ್ಯವಂತವಾಗಿರುತ್ತದೆ. ಪ್ರೌಢಾವಸ್ಥೆಯಲ್ಲಿ ಬಹಳಷ್ಟು ಜಾಗರೂಕತೆಯಿಂದ ಕಾಪಾಡಿಕೊಂಡು, ಜೀವನದಲ್ಲಿ ನಿರ್ದಿಷ್ಟವಾದ ಗುರಿ ಹೊಂದಿಕೊಂಡು ಸಾಧನೆಯ ಕಡೆಗೆ ಗಮನಹರಿಸಬೇಕು ಎಂದರು.
ಕಾರ್ಯದರ್ಶಿ ಎಂ.ಬಿ.ಲೊಕೇಶ್, ಪ್ರಾಂಶುಪಾಲ ಮಹದೇವ್, ವಕೀಲ ಮಂಜುನಾಥ್, ಹಾಜರಿದ್ದರು.
ಸಾಲ ವಿತರಣೆ ಚೆಕ್ ಗಳ ವಿತರಣೆ
ರೈತರು, ಸಹಕಾರಿ ಬ್ಯಾಂಕುಗಳಲ್ಲಿ ಪಡೆಯುವಂತಹ ಸಾಲಗಳನ್ನು ನಿಗದಿತ ಸಮಯದಲ್ಲಿ ಮರುಫಾವತಿ ಮಾಡುವ ಮೂಲಕ ಬ್ಯಾಂಕುಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಡಿ.ಸಿ.ಸಿ.ಬ್ಯಾಂಕ್ ಜಿಲ್ಲಾ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಹೇಳಿದರು.
ನಗರದ ರೇಷ್ಮೆ ಬೆಳೆಗಾರರು ಸೇವಾ ಸಹಕಾರಿ ಬ್ಯಾಂಕಿನ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕೆ.ಸಿ.ಸಿ.ಸಾಲ ವಿತರಣೆ, ಹಾಗೂ ಮಹಿಳಾ ಸಂಘಗಳಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಿವಾಳಿಯಾಗಿದ್ದ ಸಂಘಗಳಿಗೆ ಮರುಜೀವ ನೀಡಿ, ರೈತರು ಹಾಗೂ ಮಹಿಳಾ ಸಂಘಗಳಿಗೆ ಅನುಕೂಲ ಕಲ್ಪಿಸಲು ಕೋಟ್ಯಾಂತರ ರೂಪಾಯಿಗಳ ಸಾಲವನ್ನು ವಿತರಣೆ ಮಾಡಲಾಗುತ್ತಿದೆ. ಈ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ರೈತರಿಗೆ 4.5 ಕೋಟಿ ಕೆ.ಸಿ.ಸಿ.ಸಾಲ ವಿತರಣೆ ಮಾಡಲಾಗುತ್ತಿದೆ. ಮಹಿಳಾ ಸಂಘಗಳು ಸೇರಿದಂತೆ ಎಲ್ಲರೂ ನಿಗದಿತ ಸಮಯದಲ್ಲಿ ಸಾಲದ ಹಣವನ್ನು ಮರುಪಾವತಿ ಮಾಡಬೇಕು. ಬ್ಯಾಂಕಿನ ಸಿಬ್ಬಂದಿಯು ಸಾಲಕ್ಕಾಗಿ ಅರ್ಜಿ ಸಲ್ಲಿಸಿರುವ ಎಲ್ಲಾ ರೈತರಿಗೂ ರಾಜಕೀಯ ರಹಿತವಾಗಿ ಸಾಲ ವಿತರಣೆ ಮಾಡಬೇಕು ಎಂದರು.
ಕಾಂಗ್ರೆಸ್ ನಾಯಕ ವಿ.ಮುನಿಯಪ್ಪ ಮಾತನಾಡಿ, ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಸಾಲಗಳನ್ನು ಈಗಿನ ಸಿದ್ದರಾಮಯ್ಯ ಸರ್ಕಾರ ₨ 50 ಸಾವಿರದ ವರೆಗೂ ಮನ್ನಾ ಮಾಡಿದೆ. ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ರಾಷ್ಟ್ರೀಕೃತ ಬ್ಯಾಂಕುಗಳು ಸೇರಿ ಸುಮಾರು 70 ಸಾವಿರ ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡಿದ್ದರ ಪರಿಣಾಮ ದಿವಾಳಿಯಾಗಿದ್ದ ಸಹಕಾರಿ ಬ್ಯಾಂಕುಗಳು ಚೇತರಿಸಿಕೊಂಡು ಕೋಟ್ಯಾಂತರ ರೂಪಾಯಿಗಳ ವಹಿವಾಟು ನಡೆಸುವಂತಾಗಿದ್ದು, ಇಂತಹ ಬ್ಯಾಂಕುಗಳನ್ನು ಉಳಿಸುವಂತಹ ಪ್ರಯತ್ನ ರೈತರು ಮಾಡಬೇಕು ಎಂದರು.
ಡಿ.ಸಿ.ಸಿ.ಬ್ಯಾಂಕ್ ಜಿಲ್ಲಾ ಉಪಾಧ್ಯಕ್ಷ ನಾಗರಾಜು ಮಾತನಾಡಿ, ರೈತರು, ಮಹಿಳೆಯರು ತಾವು ಪಡೆದುಕೊಂಡ ಸಾಲಗಳನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಿ, ಇತರರಿಗೂ ಅನುಕೂಲ ಮಾಡಿಕೊಡಬೇಕು. ರಾಷ್ಟ್ರೀಕೃತ ಬ್ಯಾಂಕುಗಳ ಬದಲಾಗಿ, ಸಹಕಾರಿ ಬ್ಯಾಂಕುಗಳಲ್ಲೆ ಖಾತೆಗಳನ್ನು ತೆರದು ಠೇವಣಿ ಇಟ್ಟು ವ್ಯವಹರಿಸಿ, ಇಲ್ಲಿನ ಸಿಬ್ಬಂದಿ ರಾಷ್ಟ್ರೀಕೃತ ಬ್ಯಾಂಕುಗಳ ಮಾದರಿಯಲ್ಲಿ ಮಾಹಿತಿಗಳನ್ನು ಒದಗಿಸಬೇಕು ಎಂದರು.
ಕೆ.ಸಿ.ಸಿ.ಸಾಲ ವಿತರಣಾ ಕಾರ್ಯಕ್ರಮಕ್ಕೆ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಪಿ.ವಿ.ನಾಗರಾಜ್ ಅವರನ್ನು ಆಹ್ವಾನಿಸದೆ, ಕೇವಲ ಒಂದು ರಾಜಕೀಯ ಪಕ್ಷದ ಕಾರ್ಯಕ್ರಮದಂತೆ ಬಿಂಬಿಸಲಾಗಿದೆ. ಇಲ್ಲಿನ ಸಿಬ್ಬಂದಿಯು ಹಾಗೇ ನಡೆದುಕೊಳ್ಳುತ್ತಿದ್ದೀರಿ, ಜಿಲ್ಲಾ ಬ್ಯಾಂಕಿನಲ್ಲಿ ಎಲ್ಲಾ ಪಕ್ಷಗಳ ಸದಸ್ಯರುಗಳಿದ್ದರು ರಾಜಕೀಯಕ್ಕೆ ಅವಕಾಶವಿಲ್ಲದೆ ಎಲ್ಲಾ ತಾಲ್ಲೂಕುಗಳಿಗೆ ಸಮಾನವಾಗಿ ಸಾಲಸೌಲಭ್ಯಗಳನ್ನು ವಿತರಣೆ ಮಾಡಲಾಗುತ್ತಿದೆ. 4.5 ಕೋಟಿ ರೂಪಾಯಿಗಳ ಕೆ.ಸಿ.ಸಿ.ಸಾಲ ವಿತರಣೆ ಮಾಡುತ್ತಿದೆ ಬೆರಳೆಣಿಕೆಯಷ್ಟು ರೈತರು ಮಾತ್ರವೇ ಇಲ್ಲಿಗೆ ಬಂದಿದ್ದಾರೆ ಎಂದು ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಪಿ.ಶಿವಾರೆಡ್ಡಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಂತೆ, ಉತ್ತರ ನೀಡಲು ಮುಂದಾದ ಮಾಜಿ ಅಧ್ಯಕ್ಷ ರಾಮಚಂದ್ರ ಅವರ ಬೆನ್ನಲ್ಲೆ ವೇದಿಕೆಯ ಮೇಲಿದ್ದ ಕೆಲವು ಮಂದಿ ಕಾಂಗ್ರೆಸ್ ಮುಖಂಡರು, ಹಾಗೂ ವೇದಿಕೆಯ ಮುಂಭಾಗದಲ್ಲಿ ಕೆಲ ಮುಖಂಡರು ನಿರ್ದೇಶಕರ ವಿರುದ್ಧ ತಿರುಗಿ ಬಿದ್ದರು. ನಾವೇನು ಬ್ಯಾಂಕಿನ ಹಣ ಲೂಟಿ ಹೊಡೆಯುತ್ತಿಲ್ಲ, ರಾಜಕೀಯ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲವೆಂದು ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಈ ವೇಳೆ ನಿರ್ದೇಶಕ ಶಿವಾರೆಡ್ಡಿ ವೇದಿಕೆಯಿಂದ ನಿರ್ಗಮಿಸಲು ಮುಂದಾದರು, ಪಕ್ಕದಲ್ಲಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ ಅವರು, ಶಿವಾರೆಡ್ಡಿ ಅವರನ್ನು ಬಲವಂತಾಗಿ ಕುಳ್ಳಿರಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಚೀಮನಹಳ್ಳಿ ಗೋಪಾಲ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಪಂಕಜ ನಿರಂಜನ್, ಕಾಂಗ್ರೆಸ್ ಮುಖಂಡ ಸೊಣ್ಣೇನಹಳ್ಳಿ ನಾರಾಯಣಸ್ವಾಮಿ, ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ರಾಮಚಂದ್ರಪ್ಪ, ನಿರ್ದೇಶಕ ವೇಣು, ವ್ಯವಸ್ಥಾಪಕ ಆನಂದ್, ಮುಂತಾದವರು ಹಾಜರಿದ್ದರು.
ಒಂದೂವರೆ ಶತಮಾನದಿಂದಲೂ ಸೇವೆ ಸಲ್ಲಿಸುತ್ತಿದೆ ಅಂಚೆ ಇಲಾಖೆ : ಅಪ್ಪೇಗೌಡನಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿಶ್ವ ಅಂಚೆ ದಿನಾಚರಣೆ
ಕಳೆದ ಒಂದೂವರೆ ಶತಮಾನದಿಂದಲೂ ಸೇವೆಯನ್ನು ಸಲ್ಲಿಸುತ್ತಿರುವ ಭಾರತೀಯ ಅಂಚೆ ಇಲಾಖೆ ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿರುವ ಕೀರ್ತಿ ಪಡೆದಿದೆ. ಅಂಚೆ ಸೇವೆ ಸಲ್ಲಿಸುವ ಪೋಸ್ಟ್ ಮ್ಯಾನ್ ನನ್ನು ಹಳ್ಳಿಗಳಲ್ಲಿ ಅಂಚೆಯಣ್ಣ ಎಂದು ಕರೆಯುತ್ತಾ ಕುಟುಂಬದ ಸದಸ್ಯನಂತೆ ಕಾಣುತ್ತಾರೆ ಎಂದು ಕೊಂಡೇನಹಳ್ಳಿ ವಿಭಾಗದ ಅಂಚೆ ಪೇದೆ ಆನಂದಮೂರ್ತಿ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ವಿಶ್ವ ಅಂಚೆ ದಿನಾಚರಣೆ ಹಾಗೂ ಸಮುದಾಯದತ್ತ ಶಾಲೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದು ವಿಶ್ವ ಅಂಚೆ ದಿನ. ಅಕ್ಟೋಬರ್ ೯ ರಂದು ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತಿದೆ. ೧೮೭೪ ರಲ್ಲಿ ಸ್ವಿಡ್ಚರ್ಲ್ಯಾಂಡ್ನ ‘ವಿಶ್ವ ಅಂಚೆ ಒಕ್ಕೂಟ’ ವಿಶ್ವ ಅಂಚೆ ದಿನವನ್ನು ಹುಟ್ಟುಹಾಕಿತ್ತು. ಈಗ ವಿಶ್ವದ ಸುಮಾರು ೧೫೦ ರಾಷ್ಟ್ರಗಳಲ್ಲಿ ಪ್ರತಿ ವರ್ಷವೂ ವಿಶ್ವ ಅಂಚೆ ದಿನ ಆಚರಿಸಲಾಗುತ್ತಿದೆ. ಕಾಲ ಮತ್ತು ತಾಂತ್ರಿಕ ಬದಲಾವಣೆಯಾದಂತೆ ಅಂಚೆ ಇಲಾಖೆಯೂ ಜನಸ್ನೇಹಿಯಾಗಿ ಮುಂದುವರೆದಿದೆ ಎಂದರು.
ಅಂಚೆ ಇಲಾಖೆಯ ಸೌಲಭ್ಯಗಳಾದ ಪಿ.ಎಲ್.ಐ, ಆರ್.ಡಿ, ಎಸ್.ಬಿ ಖಾತೆಗಳು, ಅಂಚೆ ಕಾರ್ಡ್, ಅಂತರದೇಶೀಯ ಪತ್ರಗಳು, ರಿಜಿಸ್ಟರ್ಡ್ ಪೋಸ್ಟ್, ಮನಿ ಆರ್ಡರ್, ಸ್ಪೀಡ್ ಪೋಸ್ಟ್ ಹಾಗೂ ಇತರೆ ಅಂಚೆ ಇಲಾಖೆಯ ಸೌಲಭ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕವಾಗಿ ವಿವರಿಸಿದರು. ಹೆಣ್ಣುಮಕ್ಕಳ ವಿಶೇಷ ಖಾತೆಯ ಕುರಿತೂ ತಿಳಿಸಿದರು. ಅಂಚೆ ಇಲಾಖೆಯು ಕಾರ್ಯನಿರ್ವಹಿಸುವ ರೀತಿಯನ್ನು, ಒಂದು ಕಡೆಯಿಂದ ಮತ್ತೊಂದು ಕಡೆಗೆ ಬರೆದ ಪತ್ರವು ಹೋಗಿ ತಲುಪುವ ಬಗೆಯನ್ನು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗೆ ಹಿಂದೆ ಅಂಚೆ ಪೇದೆಯು ಗ್ರಾಮಗಳನ್ನು ಕಾಲ್ನಡಿಗೆಯಲ್ಲಿ ತಿರುಗಿ ಅಂಚೆಯನ್ನು ವಿತರಿಸುತ್ತಿದ್ದಾಗಿನ ಪೋಷಾಕನ್ನು ಹಾಕಿ, ಪಾರ್ಸಲ್ ಚೀಲ ಕೈಚೀಲ ಗೆಜ್ಜೆಯಿರುವ ದೊಣ್ಣೆ ಹಿಡಿಸಿ ಪ್ರದರ್ಶಿಸಲಾಯಿತು. ಅಂಚೆ ಪೆಟ್ಟಿಗೆಯನ್ನಿಟ್ಟು ವಿದ್ಯಾರ್ಥಿಗಳಿಂದ ಪತ್ರ ಬರೆಸಿ ಹಾಕಿಸಿ ಅಂಚೆ ಇಲಾಖೆಯ ಸೇವೆಯ ಬಗ್ಗೆ ತಿಳಿಸಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ಅಂಚೆ ಇಲಾಖೆಯ ಹುಟ್ಟು ಬೆಳವಣಿಗೆ ಹಾಗೂ ಅಂಚೆ ಚೀಟಿ ಸಂಗ್ರಹಣೆಯ ಹವ್ಯಾಸದ ಕುರಿತಂತೆ ಮಕ್ಕಳಿಗೆ ತಿಳಿಸಿದರು.
ಕಳೆದ ೩೬ ವರ್ಷಗಳಿಂದ ತಾಲ್ಲೂಕಿನ ಕೊಂಡೇನಹಳ್ಳಿ, ಕಡಿಶೀಗೇನಹಳ್ಳಿ, ಅಪ್ಪೇಗೌಡನಹಳ್ಳಿ, ಗಂಗನಹಳ್ಳಿ, ಕಂತಹಳ್ಳಿ, ಹನುಮಂತಪುರ, ತಿಮ್ಮನಹಳ್ಳಿ ಗ್ರಾಮಗಳಿಗೆ ಪ್ರತಿದಿನ ಭೇಟಿ ನೀಡಿ ಅಂಚೆ ವಿತರಿಸುವ ಅಂಚೆ ಪೇದೆ ಆನಂದಮೂರ್ತಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮುಖ್ಯಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ಶಿಕ್ಷಕರಾದ ಎಸ್.ಚಾಂದ್ ಪಾಷ, ಎಂ.ಎಂ.ಅಶೋಕ್, ಎಸ್.ಡಿ.ಎಂ.ಸಿ ಸದಸ್ಯ ಹನುಮಂತರೆಡ್ಡಿ, ವೆಂಕಟಮ್ಮ ಹಾಜರಿದ್ದರು.
ಶಾಸಕರಿಂದ ಕೆರೆಗೆ ಬಾಗಿನ ಅರ್ಪಣೆ
ತಾಲ್ಲೂಕಿನಾಧ್ಯಂತ ಈಚೆಗೆ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಮೊದಲ ಕೆರೆಯೊಂದು ತುಂಬಿರುವುದು ಸಂತಸದ ವಿಷಯವಾಗಿದೆ. ಹೀಗೆಯೇ ಮಳೆಯಾದಲ್ಲಿ, ಬೇಸಿಗೆಯಲ್ಲಿ ನೀರಿನ ಕೊರತೆಯಾಗುವುದಿಲ್ಲ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಗಂಜಿಗುಂಟೆಯ ರೆಡ್ಡಿಕೆರೆ ತುಂಬಿ ಕೋಡಿ ಹೋಗಿದ್ದರಿಂದ ಸೋಮವಾರ ಕೆರೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ನಮ್ಮ ಪೂರ್ವಜರು ಕೆರೆಗಳನ್ನು ಅತ್ಯಂತ ವೈಜ್ಞಾನಿಕವಾಗಿ ನಿರ್ಮಿಸಿದ್ದರು. ಒಂದು ಕೆರೆಯ ನೀರು ಮತ್ತೊಂದಕ್ಕೆ ಹೋಗುವಂತೆ ರೀತಿಯಲ್ಲಿ ಕೆರೆಗಳ ಸಾಲೇ ನಮ್ಮಲ್ಲಿದೆ. ಆದರೆ ಹಲವಾರು ಕರೆಗಳನ್ನು ಒತ್ತುವರಿ ಮಾಡಿರುವ ಕಾರಣ ಹಾಗೂ ರಾಜಕಾಲುವೆಗಳನ್ನು ಮುಚ್ಚಿದ್ದರಿಂದ ನೀರು ಶೇಖರಣೆಯ ಸಾಮರ್ಥ್ಯ ಕಡಿಮೆಯಾಗಿದೆ. ಹಾಗಾಗಿ ಜನರಲ್ಲಿ ಕೆರೆಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.
ವರುಣನ ಕೃಪೆಯಿಂದ ತಾಲ್ಲೂಕಿನಾದ್ಯಂತ ಮಳೆ ಹೀಗೇ ಮುಂದುವರೆದು ಎಲ್ಲಾ ಕೆರೆಗಳು ತುಂಬಲಿ. ಇದರಿಂದ ಅಂತರ್ಜಲವೂ ಹೆಚ್ಚಾಗಲಿದೆ ಎಂದು ಹೇಳಿದರು.
ಗಂಜಿಗುಂಟೆ ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹಮೂರ್ತಿ, ಮುಖಂಡರಾದ ನರಸಿಂಹರೆಡ್ಡಿ, ನಾರಾಯಣಸ್ವಾಮಿ, ಉಸ್ಮಾನ್ಸಾಬಿ, ರಾಂಬಾಬು ಈ ಸಂದರ್ಭದಲ್ಲಿ ಹಾಜರಿದ್ದರು.
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕರಾಟೆ ಪಟುಗಳು
ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ತಾಲ್ಲೂಕಿನ ಜಂಗಮಕೋಟೆ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ವಾಡು ಇಂಟರ್ನ್ಯಾಷನಲ್ ಕರಾಟೆ ಫೆಡರೇಷನ್ ತರಬೇತುದಾರ ಜಂಗಮಕೋಟೆಯ ಎಸ್.ಮಹಮ್ಮದ್ ತಿಳಿಸಿದ್ದಾರೆ.
ಈಚಗೆ ಚಿಕ್ಕಬಳ್ಳಾಪುರದಲ್ಲಿ ನಡೆದ ಶಾಲಾ ಕಾಲೇಜು ವಿಭಾಗದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರೌಡ ಸಾಲೆ ವಿಭಾಗದಲ್ಲಿ ಜಂಗಮಕೋಟೆ ಕ್ರಾಸ್ನ ಜ್ಞಾನಜ್ಯೋತಿ ಶಾಲೆಯ ವಿದ್ಯಾರ್ಥಿ ರಾಮ್ಕುಮಾರ್ ೩೫ ಕೆಜಿ ವಿಭಾಗದಲ್ಲಿ (ಕುಮಿತೆ) ಪ್ರಥಮ, ಮುನಿಷ್ ೫೦ ಕೆಜಿ ವಿಭಾಗದಲ್ಲಿ (ಕುಮಿತೆ) ಪ್ರಥಮ, ಪ್ರಜ್ವಲ್ ೫೪ ಕೆಜಿ ವಿಭಾಗದಲ್ಲಿ (ಕುಮಿತೆ) ಪ್ರಥಮ, ಕಾರ್ತಿಕ್.ಕೆ.ಎನ್. ೭೮ ಕೆಜಿ ವಿಭಾಗದಲ್ಲಿ ಪ್ರಥಮ, ಸಿಂಚನಾರಾಜ್ ೬೦ ಕೆಜಿ ಹೆಣ್ಣು ಮಕ್ಕಳ ವಿಭಾಗದಲ್ಲಿ ಪ್ರಥಮ, ನವೋದಯ ವಿದ್ಯಾಲಯದ ಮಹಿತ್ ೫೫ ಕೆಜಿ ವಿಭಾಗದಲ್ಲಿ ಪ್ರಥಮ, ನಗರದ ಶ್ರೀ ಶಾರದ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ನಯನಾ ೪೮ ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಕಾಲೇಜು ವಿಭಾಗದಲ್ಲಿ ಜ್ಞಾನಜ್ಯೋತಿ ಪಿಯು ಕಾಲೇಜು ವಿದ್ಯಾರ್ಥಿ ಮೇಘನಾ ೪೮ ಕೆಜಿ ವಿಭಾಗದಲ್ಲಿ ಪ್ರಥಮ, ಸಿಂಧು ೪೪ ಕೆಜಿ ವಿಭಾಗದಲ್ಲಿ ಪ್ರಥಮ, ಕಪಿಲಮ್ಮ ಕಾಲೇಜಿನ ರಾಗಿಣಿ ೩೫ ಕೆಜಿ ವಿಭಾಗದಲ್ಲಿ ಪ್ರಥಮ, ಅಕ್ಷಯ್ ೭೪ ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ವಾಡು ಇಂಟರ್ನ್ಯಾಷನಲ್ ಕರಾಟೆ ಫೆಡರೇಷನ್ ಅಧ್ಯಕ್ಷ ಬಿ.ಎಚ್.ಸಾಬುಲಾಲ್, ತರಬೇತುದಾರ ಎಸ್.ನೂರುಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

