Home Blog Page 399

ಕೆ.ಸಿ.ಸಿ ಬೆಳೆ ಸಾಲ ಮತ್ತು ಮಧ್ಯಮಾವಧಿ ಸಾಲ ವಿತರಣಾ ಸಮಾರಂಭ

0

ನಗರದ ಅಶೋಕ ರಸ್ತೆಯಲ್ಲಿರುವ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ನಿಯಮಿತ ವತಿಯಿಂದ ಬುಧವಾರ ಬೆಳಿಗ್ಗೆ ೧೧ ಗಂಟೆಗೆ ಮಹಿಳಾ ಸ್ವ ಸಹಾಯ ಸಂಘಗಳ ಮತ್ತು ಕೆ.ಸಿ.ಸಿ ಬೆಳೆ ಸಾಲ ಮತ್ತು ಮಧ್ಯಮಾವಧಿ ಸಾಲ ವಿತರಣಾ ಸಮಾರಂಭವನ್ನು ಆಯೋಜಿಸಲಾಗಿದೆ. ಈ ಸ್ಟಾಂಪಿಂಗ್, ಶುದ್ಧ ನೀರಿನ ಘಟಕ, ರಸಗೊಬ್ಬರ ಮಾರಾಟ ಮಳಿಗೆ ಉದ್ಘಾಟನೆ, ಡಿಸಿಸಿ ಬ್ಯಾಂಕ್ ಮತ್ತು ಸಹಕಾರ ಸಂಘದಲ್ಲಿ ಠೇವಣಿ ಸಂಗ್ರಹ ಅಭಿಯಾನವನ್ನು ಏರ್ಪಡಿಸಲಾಗಿದೆ.

ಕಲಾವಿದ ಗಂಗಾಧರ್ ಅವರಿಗೆ ಪ್ರಶಸ್ತಿ

0

ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರಿನ ವೀರಗಾಸೆ ಕಲಾವಿದ ಗಂಗಾಧರ್ ಅವರಿಗೆ ಈಚೆಗೆ ವಾರಣಾಸಿಯಲ್ಲಿ ಜ್ಞಾನ ಸಿಂಹಾಸನ ಕಾಶಿ ಮಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕಾಶಿ ವಿಶ್ವನಾಥ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದರು.

ಮಳೆಯಿಂದ ತಾಲ್ಲೂಕಿನಲ್ಲಿ ೧೪ ಮನೆಗಳು ಬಿದ್ದಿವೆ

0

ತಾಲ್ಲೂಕಿನಾದ್ಯಂತ ಸೋಮವಾರ ಸುರಿದ ಮಳೆಯಿಂದ ಸುಮಾರು ೧೪ ಮನೆಗಳು ಬಿದ್ದುಹೋಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ತಾಲ್ಲೂಕಿನ ನಾಲ್ಕು ಹೋಬಳಿಗಳ ಪೈಕಿ ಸುಮಾರು ೦೮ ಮನೆಗಳು ಜಂಗಮಕೋಟೆ ಹೋಬಳಿಯಲ್ಲಿ ಬಿದ್ದು ಹೋಗಿವೆ. ಉಳಿದಂತೆ ಕಸಬಾ ಹೋಬಳಿಯಲ್ಲಿ ೨ ಮನೆ, ಬಶೆಟ್ಟಹಳ್ಳಿ ಹೋಬಳಿಯಲ್ಲಿ ೩ ಮನೆ ಹಾಗು ಸಾದಲಿ ಹೋಬಳಿಯಲ್ಲಿ ಒಂದು ಮನೆ ಬಿದ್ದು ಹೋಗಿದೆ.
ತಾಲ್ಲೂಕಿನ ಚಿಕ್ಕದಾಸರಹಳ್ಳಿ, ಸೊರಕಾಯಲಹಳ್ಳಿ, ದೇವೇನಹಳ್ಳಿ, ನಾರಾಯಣದಾಸರಹಳ್ಳಿ, ಭಕ್ತರಹಳ್ಳಿ, ಮಳ್ಳೂರು, ಆನೇಮಡುಗು, ಚಿಕ್ಕತೇಕಹಳ್ಳಿ ಸೇರಿದಂತೆ ಪೂಲಕುಂಟ್ಲಹಳ್ಳಿಯಲ್ಲಿ ಮನೆಗಳು ಬಿದ್ದು ಹೋಗಿದ್ದು ಸ್ಥಳಕ್ಕೆ ಆಯಾ ವ್ಯಾಪ್ತಿಯ ರಾಜಸ್ವ ನಿರೀಕ್ಷಕರೂ ಸೇರಿದಂತೆ ಗ್ರಾಮ ಲೆಕ್ಕಿಗರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
 

ತಾಲ್ಲೂಕಿನ ವಿವಿದೆಡೆ ಅಪಘಾತ, ಮೂವರ ಸಾವು

0

ತಾಲ್ಲೂಕಿನ ವಿವಿದೆಡೆ ಭಾನುವಾರ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಮೃತಪಟ್ಟಿದ್ದಾರೆ. ಮೂರೂ ಪ್ರತ್ಯೇಕ ಪ್ರಕರಣಗಳೂ ಸಹ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿವೆ.
ಶಿಡ್ಲಘಟ್ಟ-ದಿಬ್ಬೂರಹಳ್ಳಿ ಮಾರ್ಗ ಕೋಟಹಳ್ಳಿ ಬಳಿ ನಡೆದ ಟ್ರ್ಯಾಕ್ಟರ್ ಪಲ್ಟಿಯಲ್ಲಿ ಭಕ್ತರಹಳ್ಳಿಯ ಶಿವಮೂರ್ತಿ ಮೃತಪಟ್ಟಿದ್ದಾನೆ. ವೈ.ಹುಣಸೇನಹಳ್ಳಿ ಬಳಿ ಬಾವಿಯೊಂದರಲ್ಲಿ ಬಿದ್ದ ಬೈಕ್ ಸವಾರ ನಾರಾಯಣಸ್ವಾಮಿ ಮೃತಪಟ್ಟಿದ್ದಾನೆ. ಹಾಗೆಯೆ ಜಂಗಮಕೋಟೆ ಬಳಿ ನಡೆದ ಬೈಕ್ ಅಪಘಾತದಲ್ಲಿ ಜಂಗಮಕೋಟೆಯ ಅಬ್ದುಲ್ ಬಾಸಿದ್ ಮೃತಪಟ್ಟಿದ್ದಾರೆ.
ಅಪಘಾತ ನಡೆದ ಮೂರು ಕಡೆಗೂ ಡಿವೈಎಸ್ಪಿ ಕೃಷ್ಣಮೂರ್ತಿ, ಸಿಪಿಐ ವೆಂಕಟೇಶ್, ಗ್ರಾಮಾಂತರ ಠಾಣೆಯ ಎಸ್ಐ ಪ್ರದೀಪ್ ಪೂಜಾರಿ ಭೇಟಿ ಕೊಟ್ಟು ಪರಿಶೀಲಿಸಿದರು.
ಮೂರೂ ಪ್ರಕರಣಗಳನ್ನು ಪ್ರತ್ಯೇಕವಾಗಿ ದಾಖಲಿಸಕೊಂಡು ತನಿಖೆ ಆರಂಭಿಸಿದ್ದು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆದಿದ್ದು, ಶವಗಳನ್ನು ಸಂಬಂಧಿಸಿದ ಕುಟುಂಬದವರಿಗೆ ಹಸ್ತಾಂತರಿಸಿದರು.
ಒಂದೆ ದಿನ ಮೂವರು ಮೃತಪಟ್ಟಿದ್ದರಿಂದ ಅವರ ಕುಟುಂಬದ ಸದಸ್ಯರು, ಬಂಧು ಬಳಗ, ಸ್ನೇಹಿತರು ಜಮಾಯಿಸಿದ್ದರಿಂದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜನಜಂಗುಳಿ ನೆರೆದಿತ್ತಲ್ಲದೆ ಕುಟುಂಬದವರ ರೋಧನ ಮುಗಿಲು ಮುಟ್ಟಿತ್ತು.
 

ಎತ್ತಿನಹೊಳೆ ಯೋಜನೆಯಡಿ ಕಾಮಗಾರಿಗಳಿಗೆ ಗುದ್ದಲಿಪೂಜೆ

0

ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಯಾವುದೆ ಅಭಿವೃದ್ದಿ ಕಾಮಗಾರಿಗಳನ್ನು ಉಪೇಕ್ಷಿಸದೆ ಸಾರ್ವಜನಿಕ ಆಸ್ತಿ ಎನ್ನುವ ಮನೋಭಾವ ಎಲ್ಲಾ ಗ್ರಾಮಸ್ಥರು ಬೆಳೆಸಿಕೊಳ್ಳುವ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೆ ಸಹಕರಿಸಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲದುಮ್ಮನಹಳ್ಳಿ ಗ್ರಾಮದಲ್ಲಿ ಭಾನುವಾರ ಎತ್ತಿನಹೊಳೆ ಯೋಜನೆಯಡಿ ಸುಮಾರು ೭ ಲಕ್ಷ ರೂಗಳ ವೆಚ್ಚದಲ್ಲಿ ಚರಂಡಿ ಸೇರಿದಂತೆ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಸಾರ್ವಜನಿಕರ ಸಹಕಾರವಿದ್ದಾಗ ಮಾತ್ರವೇ ಸರ್ಕಾರದ ಯಾವುದೆ ಯೋಜನೆ ಯಶಸ್ಸಾಗಲು ಸಾಧ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಇಲ್ಲದೆ ಯಾವುದೆ ಯೋಜನೆಯಾಗಲಿ ಯಶಸ್ಸು ಸಾಧ್ಯವಿಲ್ಲ. ಹಾಗಾಗಿ ಗ್ರಾಮದಲ್ಲಿ ನಡೆಯುವ ಅಭಿವೃದ್ದಿ ಕಾರ್ಯಗಳ ಗುಣಮಟ್ಟದಲ್ಲಿ ನಾಗರೀಕರು ರಾಜಿಯಾಗದೇ ಉತ್ತಮ ಗುಣಮಟ್ಟದ ಕಾಮಗಾರಿಯಾಗುವಂತೆ ನೋಡಿಕೊಳ್ಳಬೇಕು ಎಂದರು.
ತಾಲ್ಲೂಕಿನಾದ್ಯಂತ ಈಗಾಗಲೇ ಎತ್ತಿನಹೊಳೆ ಯೋಜನೆಯಡಿ ಸುಮಾರು ೧.೫ ಕೋಟಿ ರೂ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ಚಾಲನೆಯಲ್ಲಿದ್ದು ಎತ್ತಿನಹೊಳೆ ಯೋಜನೆಯಿಂದ ಕ್ಷೇತ್ರದಾದ್ಯಂತ ಪರಿಶಿಷ್ಟ ಜಾತಿ ಪಂಗಡಗಳ ಕಾಲೋನಿಗಳ ಅಭಿವೃದ್ದಿ ಕೆಲಸವಾಗಿದೆ ಎಂದರು. ಇದೀಗ ಮತ್ತೆ ಎತ್ತಿನಹೊಳೆ ಯೋಜನೆಯಡಿ ೩ ಕೋಟಿ ಅನುದಾನ ಮಂಜೂರಾಗಿದ್ದು ಮುಂದಿನ ದಿನಗಳಲ್ಲಿ ಕ್ಷೇತ್ರದೆಲ್ಲೆಡೆ ಅಗತ್ಯಕ್ಕನುಗುಣವಾಗಿ ಕಾಮಗಾರಿ ನಡೆಸಲಾಗುವುದು ಎಂದರು.
ಇಂದು ಸುಮಾರು ೪೬ ಲಕ್ಷ ರೂಗಳ ವೆಚ್ಚದಲ್ಲಿ ತಾಲ್ಲೂಕಿನ ತಲದುಮ್ಮನಹಳ್ಳಿ, ಗೊರಮಡುಗು. ಕಲ್ಯಾಪುರ ಹಾಗು ಜೆ.ವೆಂಕಟಾಪುರ ಗ್ರಾಮಗಳಲ್ಲಿ ಸಿಸಿ ರಸ್ತೆ ಸೇರಿದಂತೆ ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ತಾಲ್ಲೂಕಿನಾದ್ಯಂತ ಇನ್ನೂ ಬಹಳಷ್ಟು ಅಭಿವೃಧ್ದಿಯ ಕೆಲಸಗಳು ಆಗಬೇಕಾಗಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ಜಿಲ್ಲಾ ಪಂಚಾಯತಿ ಸದಸ್ಯರಾದ ಬಂಕ್ ಮುನಿಯಪ್ಪ, ಗ್ರಾಮ ಪಂಚಾಯಿತಿ ಸದಸ್ಯ ವೀರಾಪುರ ಮುನಿರೆಡ್ಡಿ, ಮುಖಂಡರಾದ ವೆಂಕಟೇಶಪ್ಪ, ಆಂಜಿನಪ್ಪ, ವೆಂಕಟಪ್ಪ, ದೇವರಾಜ್, ಪ್ರಭಾಕರ್, ಆವಲಪ್ಪ, ಮುನಿಯಪ್ಪ, ಸೊಣ್ಣೇನಹಳ್ಳಿ ಮುನಿರಾಜು, ಗುತ್ತಿಗೆದಾರ ಕೆ.ಬಿ.ಮಂಜುನಾಥ್ ಈ ಸಂದರ್ಭದಲ್ಲಿ ಹಾಜರಿದ್ದರು.
 

ನಿಧನ ವಾರ್ತೆ

0

ತಾಲ್ಲೂಕಿನ ಪೂಸಗಾನದೊಡ್ಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಬೈರಪ್ಪ (೬೨) ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಪೂಸಗಾನದೊಡ್ಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಇವರು ಪತ್ನಿ, ಓರ್ವ ಪುತ್ರ ಹಾಗು ಓರ್ವ ಪುತ್ರಿ ಸೇರಿದಂತೆ ಅಪಾರ ಸಂಖ್ಯೆಯ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ಭಾನುವಾರ ಸ್ವಗ್ರಾಮ ಪೂಸಗಾನದೊಡ್ಡಿ ಗ್ರಾಮದ ತೋಟದಲ್ಲಿ ಭಾನುವಾರ ನೆರವೇರಿಸಲಾಯಿತು.

ರೈತ ಎಚ್.ಜಿ.ಗೋಪಾಲಗೌಡರ ಸದಸ್ಯತ್ವ

0

ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡರನ್ನು ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದ ಶೈಕ್ಷಣಿಕ ವಿಸ್ತರಣಾ ಕೌನ್ಸಿಲ್ನ ನಾಮ ನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಿ ಆದೇಶಿಸಲಾಗಿದೆ.

ತುಂಬಿದ ರೆಡ್ಡಿಕೆರೆಗೆ ಬಾಗಿನ ಅರ್ಪಿಸಿದ ರೈತರು

0

ಕೆರೆ, ಕುಂಟೆ, ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸುವ ಮೂಲಕ ಜಿಲ್ಲಾ ಆಡಳಿತ ಕೆರೆಗಳನ್ನು ಉಳಿಸುವ ಕೆಲಸಕ್ಕೆ ಮುಂದಾಗಬೇಕಿದೆ ಎಂದು ಹಸಿರು ಸೇನೆ ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಒತ್ತಾಯಿಸಿದರು.
ಹಸಿರು ಸೇನೆ ರೈತ ಸಂಘದ ಕಾರ್ಯಕರ್ತರು, ಗಂಜಿಗುಂಟೆ ಗ್ರಾಮಸ್ಥರೊಂದಿಗೆ ತಾಲ್ಲೂಕಿನ ಗಂಜಿಗುಂಟೆಯ ರೆಡ್ಡಿಕೆರೆಗೆ ಶನಿವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಕಳೆದ ಹಲವು ದಿನಗಳಿಂದಲೂ ಬೀಳುತ್ತಿರುವ ಮಳೆಯಿಂದ ಜಿಲ್ಲೆಯ ಕೆರೆಗಳಿಗೆ ನೀರು ಹರಿದು ಬರುತ್ತಿದ್ದು ಕೆಲವು ಕೆರೆಗಳು ಕೋಡಿ ಹರಿದಿದೆ. ತಾಲ್ಲೂಕಿನ ಗಂಜಿಗುಂಟೆಯ ರೆಡ್ಡಿಕೆರೆಯು ಮೈದುಂಬಿ ಕೋಡಿ ಹರಿಯುತ್ತಿದ್ದು ಈ ವರ್ಷದಲ್ಲಿ ಕೋಡಿ ಹರಿದ ಮೊದಲ ಕೆರೆ ಇದಾಗಿದೆ ಎಂದರು.
ಆದರೆ ಬಹುತೇಕ ಕೆರೆ, ಕುಂಟೆ, ಕಾಲುವೆಗಳ ಒತ್ತುವರಿ ನಡೆದಿದ್ದು ಇದರಿಂದ ಬಿದ್ದ ಮಳೆ ನೀರು ಸಂಪೂರ್ಣವಾಗಿ ಕೆರೆ ಕುಂಟೆಗಳಿಗೆ ಹರಿಯುತ್ತಿಲ್ಲ. ವ್ಯರ್ಥವಾಗುತ್ತಿದೆ ಎಂದು ವಿಷಾಸಿದರು.
ಹಾಗಾಗಿ ತಾಲ್ಲೂಕು ಹಾಗೂ ಜಿಲ್ಲಾಡಳಿತವು ಕೆರೆ ಕುಂಟೆ ಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸಿ ಒತ್ತುವರಿದಾರರು ಯಾರೇ ಆಗಲಿ, ಎಷ್ಟೆ ಬಲಿಷ್ಠರಾಗಿರಲಿ ಒತ್ತುವರಿಯನ್ನು ತೆರವುಗೊಳಿಸಬೇಕು, ಅವರ ವಿರುದ್ದ ಕಠಿಣ ಕ್ರಮ ಜರುಗಿಸುವ ಮೂಲಕ ಒತ್ತುವರಿದಾರರಿಗೆ ಸ್ಪಷ್ಟವಾದ ಸಂದೇಶವನ್ನು ನೀಡಬೇಕಿದೆ ಎಂದರು.
ಕ್ರಮ ಇಲ್ಲವಾದಲ್ಲಿ ಒತ್ತುವರಿ ಮುಂದುವರೆಯುತ್ತದೆ. ಮುಂದಿನ ಪೀಳಿಗೆಗೆ ಕೆರೆ ಕುಂಟೆಗಳನ್ನು ಭಾವಚಿತ್ರಗಳ ಮೂಲಕ ವಿವರಿಸುವ ಪರಿಸ್ಥಿತಿ ನಿರ್ಮಾಣ ಆಗುತ್ತದೆಯಲ್ಲದೆ ಕುಡಿಯುವ ನೀರಿಗೂ ಪರದಾಡುವಂತ ದುಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತ ಸಂಘದ ಕಾರ್ಯಕರ್ತರು, ಗಂಜಿಗುಂಟೆಯ ಗ್ರಾಮಸ್ಥರು ರೆಡ್ಡಿಕೆರೆಗೆ ಬಾಗಿನ ಅರ್ಪಿಸಿದರು. ಬಾಗಿನ ಅರ್ಪಿಸುವ ವೇಳೆಗೆ ಮಳೆ ಸುರಿಯಲಾರಂಭಿಸಿತಾದರೂ ಮಳೆಯನ್ನೂ ಲೆಕ್ಕಿಸದೆ ರೈತರು ಬಾಗಿನ ಅರ್ಪಿಸಿ ಸಂತಸ ಪಟ್ಟರು.
ಪ್ರತಿ ವರ್ಷವೂ ಇದೆ ರೀತಿ ಕಾಲ ಕಾಲಕ್ಕೆ ಮಳೆ ಬಿದ್ದು ಕೆರೆಗಳು ಕೋಡಿ ಹರಿಯಲಿ, ಬೆಳೆಗಳು ಬೆಳೆದು ರೈತರು, ನಾಗರೀಕರ ಬದುಕು ಸಮೃದ್ದಿ ಆಗಲಿ ಎಂದು ಮಳೆರಾಯನನ್ನು ಪ್ರಾರ್ಥಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ವೀರಾಪುರ ಮಂಜುನಾಥ್, ನಗರಘಟಕದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ದೇವರಾಜ್, ಕೃಷ್ಣಪ್ಪ, ಗಂಜಿಗುಂಟೆಯ ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹಮೂರ್ತಿ, ನರಸಿಂಹರೆಡ್ಡಿ, ವೆಂಕಟರೆಡ್ಡಿ ಹಾಜರಿದ್ದರು.
 

ವಾಲ್ಮೀಕಿಯವರ ಆದರ್ಶಗಳನ್ನು ಜೀವನದಲ್ಲಿ ರೂಡಿಸಿಕೊಳ್ಳಬೇಕು

0

ಕೌಟುಂಬಿಕ ಜೀವನ ಮೌಲ್ಯಗಳನ್ನೊಳಗೊಂಡ ಮಹಾಕಾವ್ಯ ರಾಮಾಯಣ ಕೃತಿಯ ಮೂಲಕ ಸಮಾಜದಲ್ಲಿನ ಪ್ರತಿಯೊಬ್ಬ ಮಾನವನು ಸನ್ಮಾರ್ಗವನ್ನು ಕಾಣುವಂತಹ ಅವಕಾಶವನ್ನು ಮಹರ್ಷಿ ವಾಲ್ಮೀಕಿ ಅವರು ಒದಗಿಸಿಕೊಟ್ಟಿದ್ದಾರೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ಹೇಳಿದರು.
ನಗರದ ಚಿಂತಾಮಣಿ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಸಮಾಜದಲ್ಲಿನ ಮೌಡ್ಯತೆಯನ್ನು ತೊಲಗಿಸಿ, ಜನರ ಮನದಾಳದ ಅಂಧಕಾರವನ್ನು ತೊಲಗಿಸುವ ನಿಟ್ಟಿನಲ್ಲಿ ಜನಿಸಿದ ಅನೇಕ ಮಂದಿ ಸಾಧು, ಸಂತರು, ದಾರ್ಶನಿಕರು, ಕವಿಗಳು, ಸಾಹಿತಿಗಳಿಗೆಲ್ಲಾ ಮಾರ್ಗದರ್ಶನ ಮಾಡುವಂತಹ ರೀತಿಯಲ್ಲಿ ಸಂತರಾಗಿ, ದಾರ್ಶನಿಕ ಕವಿಗಳಾಗಿ ಕಠೋರವಾದ ಮನಸ್ಥಿತಿಗಳನ್ನು ಪರಿವರ್ತನೆ ಮಾಡುವಂತಹ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದ ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದರು.
ಮುಖಂಡ ಡಿ.ಆರ್.ಶಿವಕುಮಾರಗೌಡ ಮಾತನಾಡಿ ಒಂದು ಆದರ್ಶ ಕುಟುಂಬದಲ್ಲಿನ ಉತ್ತಮವಾದ ಸಂಬಂಧಗಳನ್ನು ಕುರಿತು, ಆದರ್ಶ ರಾಜನ ನಡುವಳಿಕೆ, ಹಾಗೂ ಆದರ್ಶ ಪತ್ನಿಯ ಕರ್ತವ್ಯಗಳನ್ನು ಸಮಾಜಕ್ಕೆ ಸಾರಿ ಹೇಳುವ ರೀತಿಯಲ್ಲಿ ರಾಮಾಯಣ ರಚನೆ ಮಾಡಿರುವ ಮಹರ್ಷಿವಾಲ್ಮೀಕಿಯವರ ತತ್ವ ಆದರ್ಶಗಳನ್ನು ಯುವಜನತೆ ಅಳವಡಿಸಿಕೊಳ್ಳಬೇಕು. ಯುವಜನತೆ ವ್ಯಸನಗಳಿಂದ ದೂರವಾಗಿ ಇಂತಹ ಮಹಾಕಾವ್ಯಗಳನ್ನು ಓದುವುದನ್ನು ರೂಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕಂಬದಹಳ್ಳಿ ಸುರೇಂದ್ರಗೌಡ, ಸುಜಾತಮ್ಮ, ಶ್ರೀಧರ್, ಮುನಿಕೃಷ್ಣಪ್ಪ, ಅಶ್ಫಕ್ ಅಹಮ್ಮದ್ ಮತ್ತಿತರರು ಹಾಜರಿದ್ದರು.
 

ಉಚಿತ ಆರೋಗ್ಯ ತಪಾಸಣಾ ಶಿಬಿರ

0

ನಗರ ಸೇರಿದಂತೆ ನಗರಕ್ಕೆ ಹೊಂದಿಕೊಂಡತಿರುವ ಗ್ರಾಮೀಣ ಭಾಗದ ಬಡ ಜನರು ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯಲಾಗದು ಎಂಬ ಕಾರಣಕ್ಕೆ ಬೃಹತ್ ಆರೋಗ್ಯ ಹಾಗು ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ಗಾಂಧಿ ಜಯಂತಿ ಹಾಗು ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆಯ ಸಹಯೋಗದೊಂದಿಗೆ ಎಸ್.ಎನ್.ಕ್ರಿಯಾ ಟ್ರಸ್ಟ್ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಬಹಳಷ್ಟು ವಯೋವೃದ್ಧರೂ ಸೇರಿದಂತೆ ಆರ್ಥಿಕವಾಘಿ ಹಿಂದುಳಿದವರು ದೂರದ ಒಳ್ಳೆಯ ಆಸ್ಪತ್ರೆಗೆ ಹೋಗಲು ಕಷ್ಟಪಡುತ್ತಿದ್ದಾರೆ. ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಅಧಿಕವಾಗಿರುವುದರಿಂದ ಬಹುತೇಕ ಬಡವರಿಗೆ ಉತ್ತಮ ಚಿಕಿತ್ಸೆ ಪಡೆಯಲಾಗುವುದಿಲ್ಲ. ಈ ಲೋಪವನ್ನು ಸರಿಪಡಿಸಲು ಎಂ.ವಿ.ಜೆ ಆಸ್ಪತ್ರೆಯ ತಜ್ಞ ವೈದ್ಯರು ಇಲ್ಲಿಗೇ ಬಂದಿದ್ದಾರೆ. ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು, ಮೂಳೆ ಸಾಂದ್ರತೆ ಮತ್ತು ಕೀಲು ರೋಗ ತಪಾಸಣೆ, ಮಕ್ಕಳ ತಪಾಸಣೆ, ಕಣ್ಣಿನ ತಪಾಸಣೆ, ಕಿವಿ ಮೂಗು ಮತ್ತು ಗಂಟಲು ತಜ್ಞರು, ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ನಡೆಸುವರು. ಶಿಭಿರದಲ್ಲಿ ಉಚಿತವಾಗಿ ಔಷಧಿ ಹಾಗೂ ಕನ್ನಡಕಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ರೆಡ್ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್ ಮಾತನಾಡಿ, ಸಮಾಜದಲ್ಲಿ ರಕ್ತದಾನದ ಬಗ್ಗೆ ಇರುವಂತಹ ತಪ್ಪು ಕಲ್ಪನೆಗಳನ್ನು ತೊಲಗಿಸುವುದರೊಂದಿಗೆ ಆರೋಗ್ಯವಂತ ನಾಗರೀಕರೆಲ್ಲರೂ ರಕ್ತದಾನ ಮಾಡುವುದರಿಂದ ಅಪಘಾತವಾಗಿ ರಕ್ತದ ಕೊರತೆಯಿಂದ ಮೃತ ಹೊಂದುತ್ತಿರುವ ಜನರ ಪ್ರಾಣ ಉಳಿಸಲು ಸಹಕಾರಿಯಾಗುತ್ತದೆ ಎಂದರು. ರಕ್ತದಾನದಿಂದ ಯಾವುದೇ ಅನಾಹುತಗಳಾಗುವುದಿಲ್ಲ ಬದಲಿಗೆ ರಕ್ತದಾನ ಮಾಡಿದವರಲ್ಲಿ ನೂತನ ರಕ್ತ ಉತ್ಪತ್ತಿಯಾಗುತ್ತದೆ ಹಾಗಾಗಿ ಯುವಜನತೆ ಕನಿಷ್ಟ ವರ್ಷಕ್ಕೆ ಎರಡು ಭಾರಿಯಾದರೂ ರಕ್ತದಾನ ಮಾಡಲು ಮುಂದಾಗಬೇಕು ಎಂದರು.
ಶಿಬಿರದಲ್ಲಿ ಚಿಕಿತ್ಸೆ ಪಡೆಯಲು ಆಗಮಿಸಿದ್ದ ರೋಗಿಗಳಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಶ್ರವಣ ತೊಂದರೆಯಿರುವ ವೃದ್ಧರಿಗೆ ಶ್ರವಣಯಂತ್ರಗಳನ್ನು ವಿತರಿಸಲಾಯಿತು.
ಎಸ್ ಎನ್ ಕ್ರಿಯಾ ಟ್ರಸ್ಟ್ನ ದೇವರಾಜ್, ವೈದ್ಯ ಡಾ.ಸತ್ಯನಾರಾಯಣರಾವ್, ಮುಖಂಡರಾದ ಅಶ್ವತ್ಥನಾರಾಯಣರೆಡ್ಡಿ, ನರಸಿಂಹಪ್ಪ, ವಿಶ್ವನಾಥ್, ಮಂಜುನಾಥ್, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
 

ವಾಲ್ಮೀಕಿಜಯಂತಿ ಕಾರ್ಯಕ್ರಮ

0

ಯಾವುದೇ ಕೆಲಸವನ್ನು ಸತತ ಪರಿಶ್ರಮದಿಂದ ಸಾಧಿಸಿದರೆ ಜಗತ್ತಿನಲ್ಲಿ ಎಲ್ಲವೂ ಸಾಧ್ಯ ಎಂಬುದನ್ನು ಇಡೀ ಜಗತ್ತಿಗೆ ತಮ್ಮ ಮೊಟ್ಟಮೊದಲ ರಾಮಾಯಣ ಕೃತಿಯಿಂದ ಸಾರಿ ಹೇಳಿದ ಮಹರ್ಷಿ ವಾಲ್ಮೀಕಿಯವರು ಜಗತ್ತಿನ ಎಲ್ಲರಿಗೂ ಮಾದರಿಯಾಗಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಮಹರ್ಷಿ ವಾಲ್ಮೀಕಿಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣ ಕೃತಿಯಲ್ಲಿ ಪ್ರತಿಯೊಬ್ಬ ಮನುಷ್ಯ ತನ್ನ ಜೀವನದ ಮೌಲ್ಯ ಅರಿಯುವುದರ ಜೊತೆಗೆ ಗುರುಭಕ್ತಿ, ದೇಶಪ್ರೇಮ, ಸಂಬಂಧಗಳ ಮಹತ್ವ, ತಮ್ಮ ಜವಾಬ್ದಾರಿಗಳನ್ನರಿತು ಜೀವನ ನಡೆಸಲು ಸೂಚಿಸುವಂತಿದೆ ಎಂದರು.
ಜೀವನದ ಮೌಲ್ಯಗಳನ್ನು ಅರಿತುಕೊಳ್ಳದೆ ಕೇವಲ ಲೋಕದ ಭೋಗಗಳಿಗಾಗಿಯೆ ಜೀವಿಸುತ್ತಿದ್ದ ವ್ಯಕ್ತಿ ತನಗಾದಂತಹ ಮನೋಬದಲಾವಣೆಯಿಂದಾಗಿ ನಡೆಸಿದ ಘೋರ ತಪಸ್ಸಿನಿಂದಾಗಿ ಮುಂದೆ ಮಹರ್ಷಿಗಳಾಗಿ ಜಗತ್ತಿಗೆ ಮೊಟ್ಟಮೊದಲ ಕಾವ್ಯ ರಾಮಾಯಣವನ್ನು ರಚಿಸುವುದರೊಂದಿಗೆ ಆದಿಕವಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದರು.
ತಹಶೀಲ್ದಾರ್ ಅಜಿತ್ಕುಮಾರ್ ರೈ ಮಾತನಾಡಿ, ಬದಲಾವಣೆ ಜಗದ ನಿಯಮ ಜಗದ ಉದ್ದಾರಕ್ಕಾಗಿ ಮಹರ್ಷಿ ವಾಲ್ಮೀಕಿಯವರು ರಚಿಸಿದ ರಾಮಾಯಣ ವನ್ನು ಪ್ರತಿಯೊಬ್ಬರೂ ಓದುವ ಮೂಲಕ ಗುರು ಹಿರಿಯರನ್ನು ಗೌರವಿಸುವುದನ್ನು ಕಲಿಯಬೇಕು ಎಂದರು.
ವಾಲ್ಮೀಕಿ ಸಮುದಾಯದ ಮುಖಂಡ ಬಂಕ್ ಮುನಿಯಪ್ಪ, ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಕೇಶವರೆಡ್ಡಿ, ನಗರಸಭೆ ಅಧ್ಯಕ್ಷ ಅಪ್ಸರ್ಪಾಷ, ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಮತ್ತಿತರರು ಹಾಜರಿದ್ದರು.
ನಗರ ಸೇರಿದಂತೆ ತಾಲ್ಲೂಕಿನಾಧ್ಯಂತ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಭಕ್ತಿ ಭಾವದಿಂದ ಆಚರಿಸಲಾಯಿತು.
ನಗರದ ತಾಲ್ಲೂಕು ಕಚೇರಿ ಸೇರಿದಂತೆ ತಾಲ್ಲೂಕು ಪಂಚಾಯಿತಿ, ವಿವಿಧ ಗ್ರಾಮ ಪಂಚಾಯಿತಿ ಕಾರ್ಯಾಲಯ, ಸರ್ಕಾರಿ ಕಚೇರಿ ಹಾಗು ಶಾಲಾ ಕಾಲೇಜು, ಆಸ್ಪತ್ರೆಗಳಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.

ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

0

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ತಾಲೂಕಿನ ಜಂಗಮಕೋಟೆ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ವಾಡು ಇಂಟರ್ನ್ಯಾಷನಲ್ ಕರಾಟೆ ಫೆಡರೇಷನ್ ತರಬೇತುದಾರ ಜಂಗಮಕೋಟೆಯ ಎಸ್.ಮಹಮ್ಮದ್ ತಿಳಿಸಿದ್ದಾರೆ.
ಈಚೆಗೆ ಚಿಕ್ಕಬಳ್ಳಾಪುರದಲ್ಲಿ ನಡೆದ ಶಾಲಾ ಕಾಲೇಜು ವಿಭಾಗದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರೌಡ ಸಾಲೆ ವಿಭಾಗದಲ್ಲಿ ಜಂಗಮಕೋಟೆ ಕ್ರಾಸ್ನ ಜ್ಞಾನಜ್ಯೋತಿ ಶಾಲೆಯ ವಿದ್ಯಾರ್ಥಿ ರಾಮ್ಕುಮಾರ್ ೩೫ ಕೆಜಿ ವಿಭಾಗದಲ್ಲಿ (ಕುಮಿತೆ) ಪ್ರಥಮ, ಮುನಿಷ್ ೫೦ ಕೆಜಿ ವಿಭಾಗದಲ್ಲಿ (ಕುಮಿತೆ) ಪ್ರಥಮ, ಪ್ರಜ್ವಲ್ ೫೪ ಕೆಜಿ ವಿಭಾಗದಲ್ಲಿ (ಕುಮಿತೆ) ಪ್ರಥಮ, ಕಾರ್ತಿಕ್.ಕೆ.ಎನ್. ೭೮ ಕೆಜಿ ವಿಭಾಗದಲ್ಲಿ ಪ್ರಥಮ, ಸಿಂಚನಾರಾಜ್ ೬೦ ಕೆಜಿ ಹೆಣ್ಣು ಮಕ್ಕಳ ವಿಭಾಗದಲ್ಲಿ ಪ್ರಥಮ, ನವೋದಯ ವಿದ್ಯಾಲಯದ ಮಹಿತ್ ೫೫ ಕೆಜಿ ವಿಭಾಗದಲ್ಲಿ ಪ್ರಥಮ, ನಗರದ ಶ್ರೀ ಶಾರದ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ನಯನಾ ೪೮ ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಕಾಲೇಜು ವಿಭಾಗದಲ್ಲಿ ಜ್ಞಾನಜ್ಯೋತಿ ಪಿಯು ಕಾಲೇಜು ವಿದ್ಯಾರ್ಥಿ ಮೇಘನಾ ೪೮ ಕೆಜಿ ವಿಭಾಗದಲ್ಲಿ ಪ್ರಥಮ, ಸಿಂಧು ೪೪ ಕೆಜಿ ವಿಭಾಗದಲ್ಲಿ ಪ್ರಥಮ, ಕಪಿಲಮ್ಮ ಕಾಲೇಜಿನ ರಾಗಿಣಿ ೩೫ ಕೆಜಿ ವಿಭಾಗದಲ್ಲಿ ಪ್ರಥಮ, ಅಕ್ಷಯ್ ೭೪ ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ವಾಡು ಇಂಟರ್ನ್ಯಾಷನಲ್ ಕರಾಟೆ ಫೆಡರೇಷನ್ ಅಧ್ಯಕ್ಷ ಬಿ.ಎಚ್.ಸಾಬುಲಾಲ್, ತರಬೇತುದಾರ ಎಸ್.ನೂರುಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
 

ಹಿಪ್ಪುನೇರಳೆಯ ವಿಚಾರ ಸಂಕೀರ್ಣ

0

ರೈತರು ಭೂಮಿಯಲ್ಲಿ ಮಣ್ಣು ಪರೀಕ್ಷೆ ಮಾಡಿದ ನಂತರವೇ ಭೂಮಿಗೆ ಅಗತ್ಯವಾಗಿರುವಷ್ಟು ರಸಗೊಬ್ಬರಗಳನ್ನು ನೀಡುವುದು ಸೂಕ್ತವೆಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮುರಳೀಧರ್ ಹೇಳಿದರು.
ನಗರದ ಕೆಂಪೇಗೌಡ ಸಭಾಂಗಣದಲ್ಲಿ ಆಯೋಜಿಸಿದ್ದ ಹಿಪ್ಪುನೇರಳೆಯ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರಿಗೆ ಈಗಾಗಲೇ ಮಣ್ಣು ಪರೀಕ್ಷೆಯ ಕಾರ್ಡುಗಳನ್ನು ವಿತರಣೆ ಮಾಡಲಾಗಿದೆ. ರೈತರು, ಭೂಮಿಯ ಫಲವತ್ತತೆ ಕಾಪಾಡಲು ಹೆಚ್ಚಿನ ಆಸಕ್ತಿ ವಹಿಸಬೇಕು. ಇಲಾಖೆಯಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎನ್.ಮುನೇಗೌಡ ಮಾತನಾಡಿ, ದೀರ್ಘಕಾಲದ ನೀರಾವರಿ ಇದ್ದರೆ, ರಸಗೊಬ್ಬರಗಳ ಬಳಕೆಯ ಪ್ರಮಾಣ ಕಡಿಮೆಯಾಗಿರುತ್ತದೆ. ಇದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದಾಗಿದೆ. ರೈತರು ಭೂಮಿಗೆ ಅಗತ್ಯವಾಗಿರುವ ಪೋಷಕಾಂಶಗಳನ್ನು ನೀಡಬೇಕು. ಹೆಚ್ಚು ಇಳುವರಿ ಪಡೆಯುವ ಉದ್ದೇಶದಿಂದ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಭೂಮಿಗೆ ನೀಡುವುದರಿಂದ ಉತ್ಪಾದನೆ ಕಡಿಮೆಯಾಗುವುದರ ಜೊತೆಗೆ ಭೂಮಿ ಫಲವತ್ತತೆ ಕಡಿಮೆಯಾಗುತ್ತದೆ. ರೈತರು ಸಾವಯವ ಗೊಬ್ಬರ, ಹಾಗೂ ಕೊಟ್ಟಿಗೆ ಗೊಬ್ಬರಗಳನ್ನು ಭೂಮಿಗೆ ನೀಡಬೇಕು ಎಂದರು.
ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಬೋಜಣ್ಣ ಮಾತನಾಡಿ, ರೈತರು ಹಿಪ್ಪುನೇರಳೆ ತೋಟಗಳಲ್ಲಿ ಹೆಚ್ಚಿನ ಪ್ರಮಾಣದ ಇಳುವರಿ ಪಡೆಯಲು ಆಧುನಿಕವಾದ ತಂತ್ರಜ್ಞಾನ ಉಪಯೋಗ ಮಾಡಿಕೊಳ್ಳಬೇಕು. ನರೇಗಾ ಯೋಜನೆಯಡಿಯಲ್ಲಿ ಸಹಾಯಧನ ಸಿಗುತ್ತದೆ. ಮರಗಡ್ಡಿ ಪದ್ಧತಿಯಲ್ಲಿ ಹಿಪ್ಪುನೇರಳೆ ಬೆಳೆಯುವುದರಿಂದ ಅಂತರ ಬೆಳೆಗಳನ್ನು ಬೆಳೆಯಬಹುದು ಎಂದರು.
ನೂರಾರು ಮಂದಿ ರೈತರು ಹಿಪ್ಪುನೇರಳೆಯ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸ್ಮಾರ್ಟ್ ಕೇಮ್ ಟೆಕ್ನಾಲಜಿಸ್ ಸಂಸ್ಥೆಯ ಪ್ರಭಾಕರ್ ರೆಡ್ಡಿ, ಎನ್.ಎಂ. ಬಸವರಾಜು, ವೆಂಕಟಸ್ವಾಮರೆಡ್ಡಿ, ನವೀನ್ ಕುಮಾರ್, ನಾಗರಾಜು.ಎಂ.ಸಿ., ಯೋಗಾನಂದಗೌಡ, ಮುಂತಾದವರು ಹಾಜರಿದ್ದರು.
 

ವಕೀಲರಿಂದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

0

ಕೇಂದ್ರ ಸರ್ಕಾರ, ಮತ್ತು ಕೊಲಿಜಿಯಂನಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ರಾಜ್ಯ ಹೈಕೋರ್ಟ್ನ ನ್ಯಾಯಮೂರ್ತಿ ಜಯಂತ್ ಪಟೇಲ್ ಅವರ ರಾಜೀನಾಮೆಯಿಂದ ಸಾಬೀತಾಗಿದೆ ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ. ಚಂದ್ರಶೇಖರಗೌಡ ಹೇಳಿದರು.
ನ್ಯಾಯಮೂರ್ತಿ ಜಯಂತ್ ಪಟೇಲ್ ಅವರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ನಗರದ ಸಿವಿಲ್ ನ್ಯಾಯಾಲಯದಲ್ಲಿ ವಕೀಲರು ಒಂದು ದಿನದ ಮಟ್ಟಿಗೆ ಕಲಾಪಗಳಿಗೆ ಗೈರುಹಾಜರಾಗುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಹೈಕೋರ್ಟ್ನ ನ್ಯಾಯಮೂರ್ತಿ ಜಯಂತ್ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಯಾವುದೇ ಕಾರಣವನ್ನು ಉಲ್ಲೇಖಿಸಿಲ್ಲ. ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಕೊಲಿಜಿಯಂನಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿದೆ. ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದ್ದು ಪ್ರಾಮಾಣಿಕ ನ್ಯಾಯಮೂರ್ತಿಗಳ ಮುಕ್ತ ಕಾರ್ಯ ನಿರ್ವಹಣೆಗೆ ಅಡ್ಡಿಯಾಗಿದೆ.
ವಕೀಲರ ಸಂಘದ ಮಾಜಿ ಅಧ್ಯಕ್ಷ ಪಾಪಿರೆಡ್ಡಿ ಮಾತನಾಡಿ, ರಾಜೀನಾಮೆ ಪತ್ರವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಕರ್ನಾಟಕ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಸೋಮವಾರ ರವಾನಿಸಿದ್ದರು. ಇತ್ತೀಚೆಗೆ ನ್ಯಾ. ಜಯಂತ್ ಪಟೇಲ್ ಅವರನ್ನು ಅಲಹಾಬಾದ್ ಹೈಕೋರ್ಟ್ಗೆ ವರ್ಗಾಯಿಸಿ ಆದೇಶಿಸಲಾಗಿತ್ತು.
ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಅವರ ನಂತರ ಎರಡನೇ ಸ್ಥಾನದಲ್ಲಿರುವ ಜಯಂತ್ ಪಟೇಲ್, ೨೦೧೮ರ ಆಗಸ್ಟ್ ೩ರಂದು ನಿವೃತ್ತಿ ಆಗಬೇಕಿತ್ತು. ೨೦೧೬ರ ಫೆಬ್ರುವರಿ ೧೩ರಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಕೊಲಿಜಿಯಂನಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಮ ಮಾಡುತ್ತದೆ. ನ್ಯಾಯಮೂರ್ತಿಗಳು ರಾಜೀನಾಮೆ ನೀಡಿದ್ದರು, ಕನಿಷ್ಠ ಸೌಜನ್ಯಕ್ಕಾದರು ಸಂಪರ್ಕ ಮಾಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನ ಕಾರ್ಯದರ್ಶಿ ಎಂ.ಬಿ.ಲೊಕೇಶ್, ಜಂಟಿ ಕಾರ್ಯದರ್ಶಿ ವಿ.ಎನ್.ನಾಗೇಂದ್ರಬಾಬು, ಖಜಾಂಚಿ ಜಿ.ಎನ್.ನಾಗರಾಜು, ಬೈರಾರೆಡ್ಡಿ, ಭಾಸ್ಕರ್, ಕೃಷ್ಣಮೂರ್ತಿ, ಕೆಂಪೇಗೌಡ, ಕೆ.ಎಂ.ನಾಗಮಣಿ ಮುಂತಾದವರು ಹಾಜರಿದ್ದರು.
 

ಗಾಂಧಿ ಜಯಂತಿ ಹಾಗು ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಹಾಗು ರಕ್ತದಾನ ಶಿಬಿರ

0

ಗಾಂಧಿ ಜಯಂತಿ ಹಾಗು ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಅ ೦೫ ರ ಗುರುವಾರ ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗು ರಕ್ತದಾನ ಶಿಬಿರ ಆಯೋಜಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳುವಂತೆ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆ ಹಾಗು ರೆಡ್ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಎಸ್.ಎನ್.ಕ್ರಿಯಾ ಟ್ರಸ್ಟ್ ಉಚಿತ ಆರೋಗ್ಯ ತಪಾಸಣಾ ಹಾಗು ರಕ್ತದಾನ ಶಿಬಿರವನ್ನು ನಡೆಸುತ್ತಿದೆ.
ಹಲವಾರು ಮಂದಿ ತಜ್ಞ ವೈದ್ಯರು ಆಗಮಿಸುತ್ತಿದ್ದಾರೆ. ಮಧುಮೇಹ, ರಕ್ತದೊತ್ತಡ, ಕಣ್ಣು, ಮೂಳೆ, ಮಕ್ಕಳ ತಜ್ಞರು ಹಾಗೂ ಸ್ತ್ರೀ ರೋಗ ತಜ್ಞರು ಹಾಜರಿರುತ್ತಾರೆ. ಈ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಔಷಧಿಗಳನ್ನು ಉಚಿತವಾಗಿ ನೀಡಲಿದ್ದೇವೆ. ಯಶಸ್ವಿನಿ ಮತ್ತು ಆರ್ ಎಸ್ ಬಿ ವೈ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆಯಲ್ಲಿ ನಡೆಸಲಾಗುತ್ತದೆ. ಯಶಸ್ವಿನಿ ಮತ್ತು ಆರ್ಎಸ್ಬಿವೈ ಕಾರ್ಡ್ ಹೊಂದಿಲ್ಲದ ಬಡವರಿಗೆ ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಶಸ್ತ್ರಚಿಕಿತ್ಸೆಗೆ ನೆರವು ನೀಡಲಾಗುವುದು ಎಂದು ಹೇಳಿದರು.
ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರಿಗೆ ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುವುದು. ತಜ್ಞ ವೈದ್ಯರ ಇಡೀ ತಂಡವೇ ಶಿಬಿರದಲ್ಲಿ ಪಾಲ್ಗೊಳ್ಳುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಆರೋಗ್ಯ ಪರೀಕ್ಷೆಯನ್ನು ಮಾಡಿಸಿಕೊಳ್ಳುವಂತೆ ಕೋರಿದರು.
ಎಸ್.ಎನ್.ಕ್ರಿಯಾ ಟ್ರಸ್ಟ್ನ ಆನೂರು ದೇವರಾಜ್, ಮುಖಂಡರಾದ ಹೆಚ್.ಎಂ.ಕೃಷ್ಣಪ್ಪ, ರೆಡ್ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್, ಅಪ್ಸರ್ಪಾಷ, ವಿಶ್ವನಾಥ ಈ ಸಂದರ್ಭದಲ್ಲಿ ಹಾಜರಿದ್ದರು.
 

ಆರ್ ಎಸ್ ಎಸ್ ಸ್ವಯಂಸೇವಕರಿಂದ ಪಥ ಸಂಚಲನ

0

ವಿಜಯ ದಶಮಿ ಅಂಗವಾಗಿ ಶಿಡ್ಲಘಟ್ಟದಲ್ಲಿ ಆರ್ಎಸ್ಎಸ್ ಸ್ವಯಂಸೇವಕರಿಂದ ಪಥ ಸಂಚಲನ ಏರ್ಪಡಿಸಲಾಗಿತ್ತು.
ನಗರದ ಅರಳೆಪೇಟೆಯ ಶ್ರೀ ಬಸವೇಶ್ವರ ದೇವಾಲಯದಿಂದ ಆರಂಭವಾದ ಪಥ ಸಂಚಲನ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಪಥ ಸಂಚಲನ ಸಾಗಿದ ಮಾರ್ಗದ ಉದ್ದಕ್ಕೂ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಾರ್ವಜನಿಕರು, ನಾಗರೀಕರು ದೇಶ ಪ್ರೇಮ ಮೆರೆದರು.
ಗಣವೇಷಧಾರಿಗಳು ಭಾರತ್ ಮಾತಾಕಿ ಜೈ ಘೋಷಣೆಗಳೊಂದಿಗೆ ನಗರದ ಅಶೋಕ ರಸ್ತೆ, ಹೂವಿನ ವೃತ್ತ, ಕೋಟೆ ವೃತ್ತ, ಕೆಂಪಣ್ಣ ವೃತ್ತ, ವಿಜಯ ಲಕ್ಷ್ಮೀ ಟಾಕೀಸ್ ವೃತ್ತ, ಉಲ್ಲೂರು ಪೇಟೆ ಮೂಲಕ ಪಥ ಸಂಚಲನ ನಡೆಸಿದರು.
 

ಮಾತೃಪೂರ್ಣ ಯೋಜನೆ ಮತ್ತು ಸೀಮಂತ ಕಾರ್ಯಕ್ರಮ

0

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲೊಂದಾದ “ಮಾತೃಪೂರ್ಣ” ಯೋಜನೆ ಯಶಸ್ಸಿಗೆ ಅಧಿಕಾರಿಗಳು ಮತ್ತು ಅಂಗನವಾಡಿ ಮೇಲ್ವಿಚಾರಕಿಯರು ಪ್ರಾಮಾಣಿಕತೆ, ಬದ್ಧತೆ ಮತ್ತು ಕಾಳಜಿಯಿಂದ ಶ್ರಮಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣರೆಡ್ಡಿ ಹೇಳಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವತಿಯಿಂದ ಆಯೋಜಿಸಿದ್ದ ಮಾತೃಪೂರ್ಣ ಯೋಜನೆ ಮತ್ತು ಸೀಮಂತ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಪೌಷ್ಠಿಕತೆಯಿಂದ ಆಗುತ್ತಿರುವ ಶಿಶುಗಳ ಮರಣ ಪ್ರಮಾಣ ತಡೆಗಟ್ಟಲು ಹಾಗೂ ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಠಿಕಾಂಶದ ಆಹಾರ ನೀಡುವ ಮೂಲಕ ಅವರ ಆರೋಗ್ಯವನ್ನು ಸುಧಾರಿಸುವುದಲ್ಲದೆ ಕಡಿಮೆ ತೂಕದ ಶಿಶುಗಳ ಜನನವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಈ ಮಹತ್ವಪೂರ್ಣ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೆ ತಂದಿದೆ.
ಗರ್ಭಿಣಿ ಹಾಗೂ ಬಾಣಂತಿಯರ ಆರೋಗ್ಯದಲ್ಲಿನ ಪೌಷ್ಠಿಕಾಂಶದ ಸುಧಾರಣೆಗೆ ಅಂಗನವಾಡಿ ಕೇಂದ್ರದಲ್ಲಿಯೇ ಅಡುಗೆ ತಯಾರಿಸಿ ಮಧ್ಯಾಹ್ನದ ಸಮಯದಲ್ಲಿ ಅವರಿಗೆ ಅಗತ್ಯವಿರುವ ಸಮತೋಲಿತ ಹಾಗೂ ಪೌಷ್ಠಿಕ ಆಹಾರ ಪೂರೈಸುವ ವೈಶಿಷ್ಟ್ಯಪೂರ್ಣವಾದ ಈ ಯೋಜನೆಯಾಗಿದ್ದು, ಇದಕ್ಕೆ ನೇಮಕಗೊಂಡಿರುವ ಸಿಬ್ಬಂದಿಯ ಪ್ರಾಮಾಣಿಕತೆಯಿಂದ ಮಾತ್ರವೇ ಉತ್ತಮ ಯೋಜನೆಯಾಗಲಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜು ಮಾತನಾಡಿ, ಕಡು ಬಡುವರು, ರೈತಾಪಿ ವರ್ಗದವರು ಮತ್ತು ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಾಗಿ ಅಪೌಷ್ಠಿಕತೆಯಿಂದ ಬಳಲುತ್ತಿದ್ದು, ಅಪೌಷ್ಠಿಕತೆಯನ್ನು ನಿಯಂತ್ರಣ ಮಾಡಲು ಮತ್ತು ನಿರ್ಮೂಲನೆ ಮಾಡುವಲ್ಲಿ ಈ ಯೋಜನೆ ಸಹಕಾರಿಯಾಗಲಿದೆ. ಮೇಲ್ವಿಚಾರಕಿಯರು ಗರ್ಭಿಣಿಯರು ಮತ್ತು ಬಾಣಂತಿಯರನ್ನು ಭೇಟಿಯಾಗಿ ಈ ಯೋಜನೆ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಬೇಕು. ಯೋಜನೆಯ ಸಂಪೂರ್ಣ ಫಲವನ್ನು ಅವರು ಪಡೆಯಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ರಾಧಮ್ಮ ಮಾತನಾಡಿ, ತಾಯಿ ಮತ್ತು ಶಿಶುಮರಣಕ್ಕೆ ರಕ್ತಹೀನತೆ ಕಾರಣ. ಅದನ್ನು ತಪ್ಪಿಸಲು ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಹಾಗೂ ಬಿಸಿಯೂಟ ನೀಡುವ ಈ ಯೋಜನೆ ಯನ್ನು ಬಜೆಟ್ನಲ್ಲಿ ಘೋಷಿಸಲಾಗಿತ್ತು. ಅದು ಎಲ್ಲಾ ಕಡೆ ಜಾರಿಗೆ ಬಂದಿದೆ.
ಗರ್ಭಿಣಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಪೌಷ್ಟಿಕ ಆಹಾರವನ್ನು ನೀಡುವುದರ ಮೂಲಕ ರಕ್ತ ಹೀನತೆಯನ್ನು ತಡಗಟ್ಟುವುದೇ ಈ ಯೋಜನೆಯ ಮೂಲ ಉದ್ದೇಶವಾಗಿದೆ. ಗರ್ಭಿಣಿ ಮಹಿಳೆಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕಾಂಶವುಳ್ಳ ತರಕಾರಿ, ಬೇಳೆ ಹಾಗೂ ಬಿಸಿಯೂಟವನ್ನು ನೀಡಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇದರ ಉಸ್ತುವಾರಿ ನೋಡಿಕೊಳ್ಳುತ್ತದೆ ಎಂದರು.
ಮುಖ್ಯಶಿಕ್ಷಕಿ ವೆಂಕಟರತ್ನಮ್ಮ ಮಾತನಾಡಿ, ಯೋಜನೆಯಡಿ ಸಿಗುವಂತಹ ಸೌಲಭ್ಯವನ್ನು ಮಹಿಳೆಯರು ಸದ್ಭಳಕೆ ಮಾಡಿಕೊಳ್ಳಬೇಕು. ಅಸಡ್ಡೆ ಮನೋಭಾವನೆ ತೋರಬಾರದು. ಈ ಯೋಜನೆಯ ಜವಾಬ್ದಾರಿ ಹೊತ್ತಿರುವವರು ಸೂಕ್ತವಾಗಿ ಮಾರ್ಗದರ್ಶನ ನೀಡುವ ಮೂಲಕ ಜನರಲ್ಲಿ ತಿಳುವಳಿಕೆ ಮೂಡಿಸಬೇಕು ಎಂದರು.
ಮಹಿಳಾ ಸಂಘಗಳಿಂದ ಜಿಲ್ಲಾ ಪ್ರಶಸ್ತಿ ಪಡೆದಿರುವ ಶಿಕ್ಷಕಿ ವೆಂಕಟರತ್ನಮ್ಮ ಅವರನ್ನು ಸನ್ಮಾನಿಸಿದರು. ಪರಿಶಿಷ್ಟ ಪಂಗಡದ ಮಹಿಳಾ ಸ್ವ ಸಹಾಯ ಸಂಘಗಳಿಗೆ ಕಿಟ್ ನೀಡಲಾಯಿತು.
ಅಂಗನವಾಡಿ ಕಾರ್ಯಕರ್ತೆ ಮಂಜುಳಮ್ಮ, ನಳಿನಮ್ಮ, ಲಲಿತಮ್ಮ, ನಾರಾಯಣಮ್ಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಪುಷ್ಪ ರಾಮಚಂದ್ರಪ್ಪ, ವೇಣುಗೋಪಾಲ್, ನರಸಿಂಹಮೂರ್ತಿ, ಶ್ರೀರಾಮ್, ಪಾರ್ವತಮ್ಮ, ಭವ್ಯ, ಮುನಿರತ್ನಮ್ಮ, ಸಹಶಿಕ್ಷಕರಾದ ಚಾಂದ್ ಪಾಷ, ಭಾರತಿ, ಮುಂತಾದವರು ಹಾಜರಿದ್ದರು.

ಅಂಧಮಕ್ಕಳ ಶಾಲೆಯಲ್ಲಿ ಗಾಂಧಿ ಜಯಂತಿ

0

ಪ್ರತಿ ವರ್ಷ ಮಹಾತ್ಮಗಾಂಧಿ ಅವರ ಜಯಂತಿ ಮಾಡ್ತಿವಿ, ಆದರೆ ಅವರ ತತ್ವ ಆದರ್ಶಗಳನ್ನು ಪಾಲನೆ ಮಾಡುವಲ್ಲಿ ನಾವು ಹಿಂದುಳಿದಿದ್ದೇವೆ ಎಂದು ಆಶಾಕಿರಣ ಅಂಧಮಕ್ಕಳ ಶಾಲೆಯ ವಿದ್ಯಾರ್ಥಿನಿ ಯಾಸ್ಮೀನ್ ಹೇಳಿದರು.
ನಗರದ ಆಶಾಕಿರಣ ಅಂಧಮಕ್ಕಳ ವಸತಿ ಶಾಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ವತಿಯಿಂದ ಆಯೋಜಿಸಿದ್ದ ಮಹಾತ್ಮಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವಾಗ ಮಹಿಳೆಯು ಮಧ್ಯರಾತ್ರಿಯಲ್ಲಿ ನಿರ್ಭಯವಾಗಿ ಸಂಚಾರ ಮಾಡುತ್ತಾಳೊ ಅಂದು ನಿಜವಾದ ಸ್ವಾತಂತ್ರ್ಯ ಬಂದಿದೆ ಎಂದು ಗಾಂಧಿಜೀ ಹೇಳಿದ್ದರು, ಆದರೆ ಇಂದು ಸಂಜೆ ೬ ಗಂಟೆಯ ನಂತರ ಮಹಿಳೆಯರು ಹೊರಗೆ ಓಡಾಡುವುದು ಕಷ್ಟವಾಗಿದೆ, ದೌರ್ಜನ್ಯ ದಬ್ಬಾಳಿಕೆಗಳು ಹೆಚ್ಚಾಗಿವೆ. ಸಣ್ಣ ಮಕ್ಕಳಿಗೆ ಹಿಂಸೆ ಕೊಡುತ್ತಿದ್ದಾರೆ. ಸ್ವಾತಂತ್ರ್ಯ ಬಂದು ೭೦ ವರ್ಷಗಳು ಕಳೆದರೂ ಗಾಂಧಿಜೀ ಅವರು ಕಂಡ ಕನಸು ನನಸಾಗಲಿಲ್ಲ. ಬಡತನ ತಾಂಡವಾಡುತ್ತಿದೆ. ಅನೇಕ ಮಂದಿ ಶಿಕ್ಷಣದಿಂದ ವಂಚಿತರಾಗುತ್ತಲೇ ಇದ್ದಾರೆ. ಜಾತಿ, ವ್ಯವಸ್ಥೆ ತಾಂಡವಾಡುತ್ತಿದೆ. ಇಂತಹ ಸಂಧರ್ಭದಲ್ಲಿ ಸ್ವಾತಂತ್ರ್ಯ ಬಂದಿರಲು ಹೇಗೆ ಸಾಧ್ಯ? ಇಂತಹ ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕಲು ನಾವೆಲ್ಲಾ ಮುಂದಾಗಬೇಕು ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಎಂ. ಸತೀಶ್ ಮಾತನಾಡಿ, ಮಕ್ಕಳ ಸಾಧನೆಗೆ ಅಂಧತ್ವ ಎಂದಿಗೂ ಅಡ್ಡಿಯಾಗುವುದಿಲ್ಲ. ಗಾಂಧಿಜಿ ಅವರು ಕಂಡಿರುವ ಕನಸನ್ನು ನನಸು ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮಕ್ಕಳು ಅವರ ಚಿಂತನೆಗಳನ್ನು ಅರ್ಥ ಮಾಡಿಕೊಂಡು ಸುಭದ್ರವಾದ ರಾಷ್ಟ್ರ ನಿರ್ಮಾಣ ಮಾಡಲು ಮುಂದಾಗಬೇಕು ಎಂದರು.
ಮಕ್ಕಳಿಗೆ ಗಾಂಧಿ ಜಯಂತಿ ಅಂಗವಾಗಿ ಹಣ್ಣು, ಹಾಲು ವಿತರಣೆ ಮಾಡಿದರು.
ತಾಲ್ಲೂಕು ಉಪಾಧ್ಯಕ್ಷ ಕೆ.ವಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಸ್.ಎಂ.ಮಂಜುನಾಥ್, ಕಾರ್ಯದರ್ಶಿ ಕೆ.ಎಂ.ಮಂಜುನಾಥ್, ಸಂಚಾಲಕರಾದ ಚಂದ್ರೇಗೌಡ, ಸಂತೋಷ್.ಕೆ. ಜಿ, ಪ್ರವೀಣ್.ಆರ್, ಮುಂತಾದವರು ಹಾಜರಿದ್ದರು.
 

ಗ್ರಾಮದಲ್ಲಿ ಸ್ವಚ್ಚ ಭಾರತ ಅಭಿಯಾನ ಕಾರ್ಯಕ್ರಮ

0

ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದರ ಜೊತೆಗೆ ಪ್ಲಾಸ್ಟಿಕ್ ನಿಷೇಧ ಮಾಡುವ ಮೂಲಕ ಉತ್ತಮ ಪರಿಸರ ನಿರ್ಮಾಣಕ್ಕೆ ಎಲ್ಲರೂ ಬದ್ಧರಾಗಬೇಕು ಎಂದು ಮೇಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಎ.ಉಮೇಶ್ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಸೋಮವಾರ ಗಾಂಧಿ ಜಯಂತಿ ಅಂಗವಾಗಿ ಆಯೋಜನೆ ಮಾಡಲಾಗಿದ್ದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಚ್ಚತೆಯಿಂದ ಮಾತ್ರವೇ ಉತ್ತಮ ಆರೋಗ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ರೋಗ ಮುಕ್ತವಾದ ಜೀವನ ನಡೆಸಬೇಕಾದರೆ, ನಮ್ಮ ಮನೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಚತೆ ಕಾಪಾಡಬೇಕು. ನಾಗರಿಕರು ಚರಂಡಿಗಳಿಗೆ ಕಸ ಎಸೆಯುವುದನ್ನು ಬಿಡಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದ್ದು, ನಾಗರಿಕರು ಈ ಕಾರ್ಯಕ್ಕೆ ಉತ್ತಮ ಸಹಕಾರ ನೀಡಬೇಕು ಎಂದರು.
ಬೆಂಗಳೂರಿನ ವಂದೇ ಮಾತರಂ ಸಂಸ್ಥೆಯ ಸಂಸ್ಥಾಪಕ ಬಿ.ಎಚ್.ಲೊಕೇಶ್ ಮಾತನಾಡಿ, ಪ್ರಜ್ಞಾವಂತರಾದ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಇತರರಿಗೂ ಜಾಗೃತಿ ಮೂಡಿಸಬೇಕಾಗಿದೆ. ಸ್ವಚ್ಚತೆ ಕಾಪಾಡಲು ಸರ್ಕಾರ ಕೋಟ್ಯಾಂತರ ರೂಪಾಯಿಗಳ ಹಣವನ್ನು ವ್ಯಯ ಮಾಡುತ್ತಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.
ಗ್ರಾಮದ ಗಂಗಾತಾಯಿ ದೇವಾಲಯದ ಸುತ್ತಮುತ್ತಲಿನ ಪ್ರದೇಶವು ಸೇರಿದಂತೆ ಪ್ರಮುಖ ಬೀದಿಗಳನ್ನು ಸ್ವಚ್ಚಗೊಳಿಸಿದರು.
ಮೇಲೂರಿನ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸ್ವಚ್ಚ ಭಾರತ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದರು.
ಕಾವೇರಿ ನ್ಯಾಯ ಮಂಡಳಿ ವಿವಾದ ನಿವೃತ್ತ ನಿರ್ದೇಶಕ ಪ್ರಭಾಕರಶೆಟ್ಟಿ, ಜೈ ಕೀರ್ತಿ ಸಂಸ್ಥೆಯ ಸಂಸ್ಥಾಪಕ ಸುಧಾರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯ ಎಚ್.ಎನ್.ರೂಪೇಶ್, ಎಂ.ಎನ್.ಧರ್ಮೇಂದ್ರ, ಕಾರ್ಯದರ್ಶಿ ಪಿ.ವಿ.ಸಿದ್ದಣ್ಣ, ಕರವಸೂಲಿಗಾರ ಜಿ.ಎಂ.ಜನಾರ್ಧನ್, ಶ್ರೀನಿವಾಸಮೂರ್ತಿ(ಪುಲಿ), ಜಯಮ್ಮ, ಶಿವಕುಮಾರ್, ನರಸಿಂಹಪ್ಪ, ಮುಂತಾದವರು ಹಾಜರಿದ್ದರು.
 

ಗಾಂಧಿ ಜಯಂತಿ ಹಾಗೂ ಲಾಲ್ ಬಹೂದ್ಧೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮ

0

ಮಹಾತ್ಮಗಾಂಧಿಜಿ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡಾಗ ಮಾತ್ರವೇ ಭ್ರಷ್ಟಾಚಾರ ರಹಿತ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ತಹಶೀಲ್ದಾರ್ ಎಸ್.ಅಜಿತ್ ಕುಮಾರ್ ರೈ ಹೇಳಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಆಯೋಜಿಸಿದ್ದ ೧೪೮ ಗಾಂಧಿ ಜಯಂತಿ ಹಾಗೂ ಲಾಲ್ ಬಹೂದ್ಧೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಾಂಧಿ ಅವರು ಕಂಡ ಕನಸಿನಂತೆ ಭ್ರಷ್ಟಾಚಾರ ಮುಕ್ತ, ಹಸಿವು ಮುಕ್ತ, ಆರೋಗ್ಯವಂತ ಸಮಾಜದ ಪರಿಕಲ್ಪನೆ ನಮ್ಮದಾಗಬೇಕು. ಆರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ಯುವಜನರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಹಳ್ಳಿಗಳು ಅಭಿವೃದ್ಧಿಯಾಗಬೇಕು. ಜನರು ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ತಾಲ್ಲೂಕು ಕಚೇರಿಯ ಅಧಿಕಾರಿಗಳು ಗಾಂಧಿಜೀ, ಲಾಲ್ ಬಹೂದ್ಧೂರ್ ಶಾಸ್ತ್ರೀ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು.
ಶಿರಸ್ತೆದಾರ್ ಲಕ್ಷ್ಮೀಕಾಂತಮ್ಮ, ರಾಜಸ್ವ ನಿರೀಕ್ಷಕರಾದ ಕೃಷ್ಣಾರೆಡ್ಡಿ, ಮೋಹನ್, ಸಿಬ್ಬಂದಿ ನಾಗರಾಜು, ನಾರಾಯಣಸ್ವಾಮಿ, ಮನೋಹರ್, ಮಾರಪ್ಪ, ಮುಂತಾದವರು ಹಾಜರಿದ್ದರು.