ಶಿಡ್ಲಘಟ್ಟ ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿ ಎರಡು ವರ್ಷಗಳು ಕಳೆದರು ನಗರದ ಚಿತ್ರಣ ಮಾತ್ರ ಬದಲಾಗಿಲ್ಲವೆಂದು ನಾಗರಿಕರು ಆರೋಪಿಸಿದ್ದಾರೆ.
ನಗರದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿಗಳು, ಚರಂಡಿಗಳಲ್ಲಿ ತುಂಬಿರುವ ಕೊಳಚೆ ನೀರು, ರಸ್ತೆಗಳಲ್ಲಿ ಬಿದ್ದಿರುವ ಹಳ್ಳಿಗಳಿಂದ ನಾಗರಿಕರು ನರಕಯಾತನೆ ಅನುಭವಿಸುವಂತಾಗಿದೆ.
ನಗರಸಭೆಗೆ ಪ್ರತಿ ವರ್ಷ ಕೋಟ್ಯಾಂತರ ರೂಪಾಯಿಗಳ ಅನುದಾನಗಳು ಬರುತ್ತಿದ್ದರು, ರಸ್ತೆಗಳನ್ನು ದುರಸ್ಥಿ ಮಾಡಿಲ್ಲ, ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳಂತೂ ರಸ್ತೆಗಳ ಬಗ್ಗೆ ಗಮನಹರಿಸುತ್ತಿಲ್ಲ, ಶಿಡ್ಲಘಟ್ಟದ ಬೈಪಾಸ್ ರಸ್ತೆಯ ಮೂಲಕ ಚಿಕ್ಕಬಳ್ಳಾಪುರ, ದಿಬ್ಬೂರಹಳ್ಳಿಯ ಕಡೆಗೆ ಸಂಚಾರ ಮಾಡುವ ರಸ್ತೆಯ ನಡುವೆ ಬಿದ್ದಿರುವ ಹಳ್ಳಗಳನ್ನು ಗುರ್ತಿಸಲಾಗದೆ, ವಾಹನ ಸವಾರರು ಬಿದ್ದು ಗಾಯಗೊಂಡು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಈ ಬಗ್ಗೆ ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದರೆ, ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳ ಕಡೆಗೆ ಕೈ ತೋರಿಸುತ್ತಾರೆ.
ನಗರದಲ್ಲಿ ಇತ್ತಿಚೆಗೆ ಮಳೆ ಬೀಳುತ್ತಿರುವುದರಿಂದ ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿಗಳು ಕೊಳೆಯುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಬೀತಿಯಲ್ಲಿ ಜನರು ಕಂಗಾಲಾಗುತ್ತಿದ್ದಾರೆ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಗಮನಹರಿಸಬೇಕು ಎಂದು ಸ್ಥಳೀಯ ನಾಗರಿಕರಾದ ಚಂದ್ರಮೋಹನ್, ಅಶೋಕ್ ಕುಮಾರ್, ನಾರಾಯಣಸ್ವಾಮಿ, ಮುನಿಯಪ್ಪ, ಮುಂತಾದವರು ಒತ್ತಾಯಿಸಿದ್ದಾರೆ.
ರಸ್ತೆಯ ನಡುವೆ ಬಿದ್ದಿರುವ ಹಳ್ಳ
ಸಸಿ ನೆಡುವ ಕಾರ್ಯಕ್ರಮ
ಪರಿಸರವನ್ನು ಉಳಿಸಿ ಬೆಳೆಸದಿದ್ದಲ್ಲಿ ಮುಂದಿನ ಪೀಳಿಗೆಗೆ ನಾವೇ ವಿಷ ಉಣಿಸದಂತೆ ಆಗುತ್ತದೆ ಎಂದು ಬಿಎಸ್ಎಫ್ ಯೋಧ ಅಶೋಕ್ ಆತಂಕ ವ್ಯಕ್ತಪಡಿಸಿದರು.
ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ಯರ್ರಹಳ್ಳಿಯಲ್ಲಿ ಯುವ ಶಕ್ತಿ ಸಂಘಟನೆಯಿಂದ ಸಸಿ ನೆಡುವ ಪರಿಸರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪರಿಸರ, ಅಂತರ್ಜಲವನ್ನು ನಾವು ಮುಂದಿನ ಪೀಳಿಗೆಗೆ ಉಳಿಸಬೇಕಿದೆ ಎಂದರು.
ಪರಿಸರವನ್ನು ಉಳಿಸುವ ಕಾರ್ಯ ಸರಕಾರದ್ದು ಎಂದು ಸರಕಾರದ ಮೇಲೆ ಭಾರ ಹಾಕಿ ಕೂರದೆ ನಮ್ಮ ನಮ್ಮ ಪಾತ್ರವನ್ನು ನಿಭಾಯಿಸಬೇಕು. ನಮ್ಮ ಮನೆ ನಿವೇಶನದ ಅಕ್ಕ ಪಕ್ಕದಲ್ಲಿನ ಖಾಲಿ ಸ್ಥಳ, ಸರಕಾರಿ ಜಮೀನಿನಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಮದುವೆ ಮುಂಜಿ ಹುಟ್ಟು ಹಬ್ಬ ಇನ್ನಿತರೆ ಶುಭ ಸಮಾರಂಭಗಳ ನೆನಪಿನಾರ್ಥ ಸಸಿಗಳನ್ನು ಕೊಡುಗೆಯಾಗಿ ನೀಡುವ, ನೆಡುವ ಹವ್ಯಾಸವನ್ನು ಬೆಳೆಸಿಕೊಳ್ಳಿ ಎಂದು ಮನವಿ ಮಾಡಿದರು.
ಸಸಿಗಳನ್ನು ನೆಡುವುದರಿಂದ ಒಂದಲ್ಲ ಹಲವು ರೀತಿಯ ಪ್ರಯೋಜನೆಗಳು ಉಂಟು. ಶುದ್ದ ಆಮ್ಲಜನಕ ಗಾಳಿ ಸಿಗಲಿದೆ. ಅಂತರ್ಜಲ ಮಟ್ಟ ಹೆಚ್ಚಲಿದೆ, ಪರಿಸರ ಉಳಿಯುವುದು ಸೇರಿದಂತೆ ಅನೇಕ ಪ್ರಯೋಜನಗಳುಂಟು ಎಂದು ವಿವರಿಸಿದರು.
ಈ ಬಗ್ಗೆ ಜನ ಸಾಮಾನ್ಯರು ಹಾಗೂ ಯುವ ಪೀಳಿಗೆ, ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟು ಸಸಿಗಳನ್ನು ನೆಟ್ಟು ಬೆಳೆಸುವುದನ್ನು ಹವ್ಯಾಸವನ್ನಾಗಿ ರೂಢಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗಬೇಕು, ಆಗಲೆ ನಾವು ನಮ್ಮ ಮುಂದಿನ ಪೀಳಿಗೆ ಆರೋಗ್ಯಯುತ ಜೀವನ ಸಾಗಿಸಬಹುದು ಎಂದು ತಿಳಿಸಿದರು.
ಆಲ, ಅರಳಿ, ಅತ್ತಿ ಹಣ್ಣು ಸೇರಿದಂತೆ ವಿವಿದ ತಳಿಯ ಸಸಿಗಳನ್ನು ಗ್ರಾಮದ ಸುತ್ತಲೂ ಇರುವ ಖಾಲಿ ಜಮೀನಿನಲ್ಲಿ ನೆಟ್ಟು ಅದಕ್ಕೆ ಮುಳ್ಳು ಬೇಲಿಯನ್ನು ನಿರ್ಮಿಸಲಾಯಿತು.
ಯುವ ಶಕ್ತಿ ಸಂಘಟನೆಯ ವಿಜಯ ಭಾವರೆಡ್ಡಿ, ಶಶಿ, ವೆಂಕಟ್, ನಾಗರಾಜ್ ಸೇರಿದಂತೆ ಯರ್ರಹಳ್ಳಿ ಗ್ರಾಮಸ್ಥರು ಹಾಜರಿದ್ದರು.
ಗ್ರಾಮೀಣ ಪ್ರತಿಭೆಗಳನ್ನು ಬೆಳಕಿಗೆ ತನ್ನಿ
ಗ್ರಾಮೀಣ ಪ್ರತಿಭೆಗಳನ್ನು ಬೆಳಕಿಗೆ ತರುವ ಕೆಲಸವನ್ನು ಮಾಡಬೇಕು ಎಂದು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ರಮಾ ತಿಳಿಸಿದರು.
ತಾಲ್ಲೂಕಿನ ಚಿಕ್ಕದಿಬ್ಬೂರಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಜಿಲ್ಲಾಮಟ್ಟದ ಯೋಗಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿ ನಿತ್ಯಶ್ರೀ ಯನ್ನು ಪುರಸ್ಕರಿಸಿ ಅವರು ಮಾತನಾಡಿದರು.
ರಾಜ್ಯ, ರಾಷ್ಟ್ರಮಟ್ಟದ ಪ್ರತಿಭೆಗಳನ್ನು ಬೆಳೆಸಬೇಕು. ಅಗತ್ಯ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಬೇಕು ಎಂದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಡಿ.ಆರ್.ಶ್ರೀನಿವಾಸ್ ಮಾತನಾಡಿ, ನಮ್ಮ ಶಾಲೆಯ ಮಕ್ಕಳು ಶಾಲೆ ಮತ್ತು ಗ್ರಾಮಕ್ಕೆ ಕೀರ್ತಿ ತರಬೇಕು ಎಂದರು.
ಗ್ರಾಮ ಪಂಚಾಯ್ತಿ ಸದಸ್ಯೆ ನಾರಾಯಣಮ್ಮ, ಮುಖ್ಯ ಶಿಕ್ಷಕ ಪ್ರಕಾಶ್, ಯೋಗಶಿಕ್ಷಕ ವೆಂಕಟರೆಡ್ಡಿ, ಗೋಪಾಲಕೃಷ್ಣ ಹಾಜರಿದ್ದರು.
ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ ಜನ್ಮಶತಾಬ್ದಿ ಅಂಗವಾಗಿ ರಕ್ತದಾನ ಶಿಬಿರ
ಜನರ ನಾಡಿ ಮಿಡಿತವನ್ನು ಅರ್ಥೈಸಿಕೊಳ್ಳುವ ಮೂಲಕ ಹೋರಾಟ ಮನೋಭಾವವನ್ನು ರೂಢಿಸಿಕೊಂಡಿದ್ದ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರು ಪ್ರತಿಯೊಬ್ಬರಿಗೂ ಆದರ್ಶವಾಗಿರಬೇಕು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ಹೇಳಿದರು.
ನಗರದ ಶ್ರೀ ನಗರೇಶ್ವರ ಕಲ್ಯಾಣಮಂಟಪದಲ್ಲಿ ಗುರುವಾರ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ ಜನ್ಮಶತಾಬ್ದಿ ಅಂಗವಾಗಿ ಭಾರತೀಯ ಜನತಾ ಪಕ್ಷ ಹಾಗೂ ರಾಷ್ಟ್ರೋತ್ಥಾನ ರಕ್ತನಿಧಿ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ಭಾರತೀಯ ಜನ ಸಂಘದ ಮುಖಂಡರಾಗಿದ್ದವರು. ಏಕಾತ್ಮ ಮಾನವತಾವಾದ ಎಂಬ ಪ್ರಬಂಧ ಮಂಡಿಸಿ ಸಾಮ್ಯವಾದ ಮತ್ತು ಬಂಡವಾಳಶಾಹಿ ತತ್ವಗಳನ್ನು, ವಿಮರ್ಶಿಸಿ, ಅದಕ್ಕೆ ಬದಲಾಗಿ ರಾಜಕೀಯ ಮತ್ತು ಆಡಳಿತ ಪದ್ಧತಿಗೆ ಪ್ರಕೃತಿ ಮತ್ತು ಸೃಷ್ಟಿಯ ನಿಯಮಗಳಿಗೆ ಪೂರಕವಾದ ಮಾರ್ಗಗಳನ್ನು ಸೂಚಿಸಿದ್ದರು. ಸರಳ ಜೀವಿಯಾಗಿದ್ದ ಅವರ ಸಮಾಜ ಸೇವೆ, ಜನಪರ ಕಾಳಜಿ, ಜನರಿಗಾಗಿ ದುಡಿಯುವ ಮೂಲಕ ಉತ್ತಮ ಸೇವೆ ಯನ್ನು ಸಲ್ಲಿಸಿದ್ದು ವಿದ್ಯಾರ್ಥಿಗಳು ಸೇರಿದಂತೆ ನಾಗರೀಕರು ಅವರ ಆದರ್ಶವನ್ನು ನೆನೆಪಿಸಿಕೊಳ್ಳಬೇಕು ಎಂದರು.
ತಾಲ್ಲೂಕು ಬಿಜೆಪಿ ಮುಖಂಡ ಡಿ.ಆರ್.ಶಿವಕುಮಾರಗೌಡ ಮಾತನಾಡಿ ಸಮಾಜದಲ್ಲಿ ರಕ್ತದಾನದ ಬಗ್ಗೆ ಇರುವಂತಹ ತಪ್ಪು ಕಲ್ಪನೆಗಳನ್ನು ತೊಲಗಿಸುವುದರೊಂದಿಗೆ ಆರೋಗ್ಯವಂತ ನಾಗರೀಕರೆಲ್ಲರೂ ರಕ್ತದಾನ ಮಾಡುವುದರಿಂದ ಅಪಘಾತವಾಗಿ ರಕ್ತದ ಕೊರತೆಯಿಂದ ಮೃತ ಹೊಂದುತ್ತಿರುವ ಜನರ ಪ್ರಾಣ ಉಳಿಸಲು ಸಹಕಾರಿಯಾಗುತ್ತದೆ ಎಂದರು.
ಸಮಾಜದಲ್ಲಿ ಕೇವಲ ಅವಿದ್ಯಾವಂತರಲ್ಲಷ್ಟೇ ಅಲ್ಲದೇ ವಿದ್ಯಾವಂತರಲ್ಲೂ ರಕ್ತದಾನದ ಬಗ್ಗೆ ತಪ್ಪುಕಲ್ಪನೆಗಳು ಬೇರೂರಿದ್ದು ರಕ್ತದಾನದಿಂದ ಯಾವುದೇ ಅನಾಹುತಗಳಾಗುವುದಿಲ್ಲ ಬದಲಿಗೆ ರಕ್ತದಾನ ಮಾಡಿದವರಲ್ಲಿ ನೂತನ ರಕ್ತ ಉತ್ಪತ್ತಿಯಾಗುತ್ತದೆ ಎಂದರು.
ಬಿಜೆಪಿ ಮುಖಂಡರಾದ ಕೆ.ಆರ್.ಸುರೇಂದ್ರಗೌಡ, ದಾಮೋದರ್, ಸುಜಾತಮ್ಮ, ಬೈರರೆಡ್ಡಿ, ಪುರುಷೋತ್ತಮ್, ನರೇಶ್ ಹಾಜರಿದ್ದರು.
ಮಕ್ಕಳಿಗೆ ಉಚಿತವಾಗಿ ಗೊಂಬೆ ತಯಾರಿಕೆಯ ಕಲಿಕೆ
ಶಿಡ್ಲಘಟ್ಟ ನಗರದ ಗೌಡರ ಬೀದಿಯ ಡಿ. ಪಾರ್ಥಸಾರಥಿ ಮತ್ತು ಮಂಜುನಾಥ ಅವರ ಮನೆಯಲ್ಲಿ ದಸರಾ ಸಂಭ್ರಮಾಚರಣೆಯ ಅಂಗವಾಗಿ ವೈವಿಧ್ಯಮಯ ಗೊಂಬೆಗಳನ್ನು ಜೋಡಿಸಿಡಲಾಗಿದೆ.
ಗೊಂಬೆಗಳ ಜೊತೆ ವಿವಿಧ ತಿಂಡಿಗಳನ್ನು ಮಾಡಿಟ್ಟು ನವರಾತ್ರಿಯ ಗೊಂಬೆ ಹಬ್ಬವನ್ನು ಆಚರಿಸಲಾಗುತ್ತಿದೆ. ಹಲವಾರು ವರ್ಷಗಳಿಂದ ಗೊಂಬೆ ಹಬ್ಬವನ್ನು ಆಚರಿಸಿಕೊಂಡು ಬರುತ್ತಿರುವ ಅವರ ಮನೆಯಲ್ಲಿ ಮಹಿಳೆಯರು ಮಕ್ಕಳಿಗೆ ಉಚಿತವಾಗಿ ಗೊಂಬೆ ತಯಾರಿಕೆಯನ್ನು ಹೇಳಿಕೊಡುವ ಮೂಲಕ ಗೊಂಬೆ ಹಬ್ಬಕ್ಕೆ ವಿಶೇಷ ಅರ್ಥವನ್ನು ಕಲ್ಪಿಸಿದ್ದಾರೆ. ಗೊಂಬೆ ವೀಕ್ಷಿಸಲು ಬರುವ ಮಕ್ಕಳಿಗೆ ಸಿಹಿ ಹಂಚಿ, ಕಲಿಯುವ ಆಸಕ್ತಿಯುಳ್ಳವರಿಗೆ ಕಲಿಸುತ್ತಾ, ಗೊಂಬೆಗಳ ಮೂಲಕ ಹಲವು ಕಥೆಗಳನ್ನು ತಿಳಿಸುತ್ತಿದ್ದಾರೆ.
ರಾಮಾಯಣ, ಮಹಾಭಾರತ ಸೇರಿದಂತೆ ಹಲವಾರು ದೇವರ ವಿಗ್ರಹಗಳ ಜೊತೆಗೆ ಹಲವಾರು ಬೊಂಬೆಗಳನ್ನು ಜೋಡಿಸಿ ಅಲಂಕರಿಸಿ ವಿಶೇಷವಾಗಿ ಪೂಜೆ ಸಲ್ಲಿಸುವ ವಿದಾನವನ್ನು ಕಳೆದ ೨೦ ವರ್ಷಗಳಿಂದಲೂ ಸಹ ಮಾಡುತ್ತಾ ಬಂದಿದ್ದು, ವರ್ಷಕ್ಕೊಮ್ಮೆ ಬರುವ ನವರಾತ್ರಿ ಹಬ್ಬಕ್ಕೆ ಬೊಂಬೆಗಳನ್ನು ಸಿಂಗರಿಸಲಾಗುತ್ತದೆ ಎಂದು ರೂಪಾ ಪಾರ್ಥಸಾರಥಿ ತಿಳಿಸಿದರು.
ಲತಾ ಮಂಜುನಾಥ್, ಪವನ್ ಪಾರ್ಥಸಾರಥಿ, ಮಂಜುನಾಥ್, ಅನಂತಕೃಷ್ಣ, ಗೊಂಬೆ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಕನ್ನಡ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ತಾಲೂಕು ಘಟಕದ ಉದ್ಘಾಟನೆ
ಸಂಘಟನೆಗಳು ನಾಡು, ನುಡಿ, ನೆಲ ಜಲ, ಭಾಷೆಯ ಉಳಿವಿಗಾಗಿ ಹೋರಾಟಗಳನ್ನು ಮಾಡುವ ಮೂಲಕ ನಾಡಿನ ರಕ್ಷಣೆಗೆ ಮುಂದಾಗಬೇಕು ಎಂದು ತಹಸೀಲ್ದಾರ್ ಎಸ್.ಅಜಿತ್‍ಕುಮಾರ್ ರೈ ಹೇಳಿದರು.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಗುರುವಾರ ಕನ್ನಡ ರಕ್ಷಣಾ ವೇಧಿಕೆ ಸ್ವಾಭಿಮಾನಿ ಬಣದ ತಾಲೂಕು ಘಟಕದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕನ್ನಡ ಭಾಷೆಯ ಉಳಿವಿಗಾಗಿ ಸದಾಕಾಲ ಸಂಘಟನೆಗಳು ಪ್ರಾಮಾಣಿಕವಾಗಿ ಹೋರಾಟಗಳನ್ನು ಮಾಡುವಂತಹ ಕೆಲಸವನ್ನು ಮಾಡಬೇಕು, ಯುವಜನತೆ ಮುಂದಿನ ಪೀಳಿಗೆಗೆ ಮಾದರಿಯಾಗಿ ಸಂಘಟಿತರಾಗಬೇಕು, ತಾಲೂಕಿನಾಧ್ಯಂತ ಈ ರೀತಿಯಾದ ಸಂಘಟನೆಗಳು ಬೆಳೆಯಬೇಕು ಎಂದರು.
ಗ್ರಾಮಾಂತರ ಠಾಣೆ ಪಿಎಸ್ಸೈ ಪ್ರದೀಪ್ ಪೂಜಾರಿ ಮಾತನಾಡಿ ಸಂಂಘಟನೆಗಳು ಸಮಾಜಮುಖಿಯಾಗಿ ಕೆಲಸ ಮಾಡಬೇಕು, ವೈಯಕ್ತಿಕವಾಗಿ ಯಾರಿಗೂ ನೋವು ಉಂಟಾಗುವ ಹಾಗೆ ನಡೆದುಕೊಳ್ಳದೆ, ಪ್ರಾಮಾಣಿಕವಾಗಿ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು, ಅನ್ಯ ಭಾಷೆಗಳ ಪ್ರಭಾವದಿಂದಾಗಿ ಕನ್ನಡ ಭಾಷೆಯು ಅಲ್ಪಸಂಖ್ಯಾತ ಭಾಷೆಯಾಗುತ್ತಿದ್ದು ಬಾಷೆಯ ಬೆಳವಣಿಗೆಯಲ್ಲಿ ಯುವಕರು ಹೆಚ್ಚಿನ ಆಸಕ್ತಿ ತೋರಿಸಬೇಕು ಎಂದರು.
ಕನ್ನಡ ರಕ್ಷಣಾ ವೇಧಿಕೆ ಸ್ವಾಭಿಮಾನಿ ಬಣದ ಎಸ್.ಮೋಹನ್ ಮಾತನಾಡಿ ರಾಜ್ಯದ ಗಡಿಭಾಗಗಳಲ್ಲಿ ಕನ್ನಡಿಗರ ಮೇಲೆ ನಿರಂತರವಾಗಿ ದೌರ್ಜನ್ಯ ದಬ್ಬಾಳಿಕೆಗಳು ನಡೆಯುತ್ತಲೆ ಇವೆ, ಅನ್ಯ ಭಾಷೆಗಳ ಜನಾಂಗದಿಂದ ತುಂಬಿರುವ ನಾಡಿನಲ್ಲಿ ನಿರಂತರವಾಗಿ ದೌರ್ಜನ್ಯಗಳನ್ನು ಅನುಭವಿಸುತ್ತಿರುವ ನಾಡಿನ ಜನತೆಗೆ ರಕ್ಷಣೆ ನೀಡಬೇಕಾದಂತಹ ಅನಿವಾರ್ಯತೆ ಎದುರಾಗಿದೆ, ವಿಧ್ಯಾರ್ಥಿಗಳು, ಮಹಿಳೆಯರ ಮೇಲೆ ಹೆಚ್ಚಾಗುತ್ತಿರುವ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿಯೂ ಸಂಘಟನೆ ಹೋರಾಟ ಮಾಡಲಿದೆ, ಸದಾಕಾಲ ನಾಡಿನ ಭಾಷೆ, ನೆಲ, ಜಲ, ಸಂಸ್ಕøತಿ ಪರಂಪರೆಯನ್ನು ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಿ, ನಾಡಿನ ಯಾವುದೇ ಮೂಲೆಯಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ದಕ್ಕೆಯುಂಟಾದಾಗ ನಿರಂತರವಾಗಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಸ್.ಅಜಿತ್‍ಕುಮಾರ್ ರೈ ಹಾಗು ಗ್ರಾಮಾಂತರ ಠಾಣೆ ಪಿಎಸ್ಸೈ ಪ್ರದೀಪ್‍ಪೂಜಾರಿ ರನ್ನು ಕರವೇ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ತಾಲೂಕು ಅಧ್ಯಕ್ಷ ವಿ.ಎಂ.ಸತೀಶ್, ಗೌರವಾಧ್ಯಕ್ಷ ಕೆ.ಮುನಿಯಪ್ಪ, ಉಪಾಧ್ಯಕ್ಷರಾದ ಕೆ.ವಿ.ಮಂಜುನಾಥ್,ಮುರಳಿಮೋಹನ್, ನರಸಿಂಹಮೂರ್ತಿ, ಕಾರ್ಯದರ್ಶಿ ಎಸ್.ಎಂ.ಮಂಜುನಾಥ, ಸಹ ಕಾರ್ಯದರ್ಶಿ ಕೆ.ವಿ.ಮಂಜುನಾಥ, ಪದಾಧಿಕಾರಿಗಳಾದ ಕೆ.ಎಂ.ಮಂಜುನಾಥ, ಬಾಬು.ಬಿ. ಟಿ.ಆಂಜಿನಪ್ಪ ಮತ್ತಿತರರು ಹಾಜರಿದ್ದರು.
ತಹಸೀಲ್ದಾರ್ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ
ಶಿಡ್ಲಘಟ್ಟ ತಹಸೀಲ್ದಾರ್ ಎಸ್.ಅಜಿತ್‌ಕುಮಾರ್‌ರೈ ರವರ ವರ್ಗಾವಣೆಯನ್ನು ಕೂಡಲೇ ರದ್ದುಗೊಳಿಸುವಂತೆ ಒತ್ತಾಯಿಸಿ ಗುರುವಾರ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಕಳೆದ ಆರು ತಿಂಗಳ ಹಿಂದೆಯಷ್ಟೇ ಇಲ್ಲಿಗೆ ತಹಸೀಲ್ದಾರ್‌ರಾಗಿ ಬಂದಂತಹ ಅಜಿತ್‌ಕುಮಾರ್‌ರೈ ರನ್ನು ಏಕಾಏಕಿ ಬುಧವಾರ ಸಂಜೆ ಚಿಂತಾಮಣಿಗೆ ನಿಯೋಜಿಸಿರುವ ಜಿಲ್ಲಾಧಿಕಾರಿಗಳ ಕ್ರಮ ಸರಿಯಲ್ಲ. ಇದರ ಹಿಂದೆ ಪ್ರಭಾವಿಗಳ ಹಸ್ತಕ್ಷೇಪ ವಿರುವ ಅನುಮಾನವಿದ್ದು ಕೂಡಲೇ ಈ ಅಧಿಕಾರಿಯ ವರ್ಗಾವಣೆ ರದ್ದುಗೊಳಿಸಿ ಇಲ್ಲಿಯೇ ಮುಂದುವರೆಯಲು ಜಿಲ್ಲಾಧಿಕಾರಿಗಳು ಆದೇಶಿಸಿಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ತಾಲ್ಲೂಕಿನಲ್ಲಿ ಬಹು ದಿನಗಳಿಂದ ಇದ್ದ ಕೆರೆ ಒತ್ತುವರಿ ಸಮಸ್ಯೆ ಸೇರಿದಂತೆ ನಗರದ ರಾಜಕಾಲುವೆಗಳ ಮೇಲೆ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸುವ ಮೂಲಕ ಜನರಿಗೆ ಹತ್ತಿರವಾಗಿರುವ ಇಂತಹ ಅಧಿಕಾರಿಯನ್ನು ಯಾವುದೇ ಕಾರಣಕ್ಕೂ ಇಲ್ಲಿಂದ ವರ್ಗಾವಣೆ ಮಾಡಬಾರದು ಎಂದು ಒತ್ತಾಯಿಸಿ ಜಿಲ್ಲಾಡಳಿತ ಹಾಗು ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಮುಖಂಡ ಮುನೆಯ್ಯ, ತಾಲ್ಲೂಕು ಸಂಚಾಲಕರಾದ ಎ.ಎಂ.ವೆಂಕಟೇಶ್, ಚಲಪತಿ, ಮುಖಂಡರಾದ ದ್ಯಾವಕೃಷ್ಣಪ್ಪ, ರೈತ ಸಂಘದ ಮುಖಂಡರಾದ ಎಸ್.ಎಂ.ರವಿಪ್ರಕಾಶ್, ಜೆ.ವಿ.ವೆಂಕಟಸ್ವಾಮಿ, ತಾದೂರು ಮಂಜುನಾಥ್ ಪಾಲ್ಗೊಂಡಿದ್ದರು
ಸ್ವಚ್ಚತೆ ಇಲ್ಲದ ಜಾಗದಲ್ಲಿ ಬಡತನ ಮತ್ತು ಆರೋಗ್ಯ ಸಮಸ್ಯೆ ಕಾಡುತ್ತದೆ
ಸ್ವಚ್ಚತೆಯಿಂದ ರೋಗಮುಕ್ತ ಸಮಾಜ ನಿರ್ಮಾಣ ಸಾಧ್ಯ. ಟಿವಿ, ಪ್ರಿಜ್ಗಿಂತ ಮೊದಲು ಮನೆಗೆ ಶೌಚಾಲಯ ಬೇಕು. ಬಯಲು ಶೌಚ ಮಾಡುವುದರಿಂದ ಮರ್ಯಾದೆಗೆ ಧಕ್ಕೆ ಬರುವುದಲ್ಲದೆ ರೋಗ ರುಜಿನಗಳಿಗೆ ಬಗಲಿಯಾಗಬೇಕಾಗುತ್ತದೆ ಎಂದು ನಗರಸಭಾ ಆಯುಕ್ತ ಚಲಪತಿ ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ದಿನ(ಎನ್ಎಸ್ಎಸ್)ದ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಸ್ವಚ್ಚತೆ ಇಲ್ಲದ ಜಾಗದಲ್ಲಿ ಬಡತನ ಮತ್ತು ಆರೋಗ್ಯ ಸಮಸ್ಯೆ ಕಾಡುತ್ತದೆ ಎಂಬ ಗಾಂಧೀಜಿಯವರ ನುಡಿಯನ್ನು ಅರಿತು ಸ್ವಚ್ಚತೆಯೊಂದಿಗೆ ಆರೋಗ್ಯಯುತ ಜೀವನ ಸಾಗಿಸಲು ಪ್ರತಿಯೊಬ್ಬರು ಮುಂದಾಗಬೇಕು. ಸ್ವಚ್ಚತೆ, ನೈರ್ಮಲ್ಯವನ್ನು ಕಾಪಾಡುವ ಕೆಲಸ ನಮ್ಮಿಂದಲೇ ಆರಂಭವಾಗಬೇಕು. ರಾಷ್ಟ್ರೀಯ ಸೇವಾ ಯೋಜನೆಗೆ ಸೇರಿದ ಮೇಲೆ ಒಂದು ವರ್ಷವಾದರೂ ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗವಹಿಸಿ ಅನುಭವ ಪಡೆಯಬೇಕು. ಇಲ್ಲದಿದ್ದರೆ ಜೀವನದಲ್ಲಿ ಏನೋ ಮಹತ್ವದ್ದನ್ನು ಕಳೆದುಕೊಂಡಂತೆ. ಹಾಗಾಗಿ ಇಂತಹ ಉತ್ತಮ ಅವಕಾಶವನ್ನು ಬಿಡಬಾರದು. ಸ್ವಚ್ಚತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದರು.
ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ.ವಿಜಯ್ ಕುಮಾರ್ ಮಾತನಾಡಿ, ಶೌಚಾಲಯಗಳನ್ನು ನಿರ್ಮಿಸಿಕೊಂಡು ಕಡ್ಡಾಯವಾಗಿ ಶೌಚಾಲಯಗಳನ್ನು ಬಳಸುವಂತೆ ನೀವು ನಿಮ್ಮ ಪೋಷಕರಿಗೆ ಮನವರಿಕೆ ಮಾಡಿಕೊಡಿ, ಶೌಚಾಲಯ ಬಳಸಿದ ನಂತರ ನಿಮ್ಮ ಕೈಗಳ್ಳನ್ನು ಸ್ವಚ್ಚವಾಗಿ ತೊಳೆಯಬೇಕು, ಜತೆಗೆ ಊಟಕ್ಕೂ ಮುನ್ನ ಹಾಗೂ ನಂತರವೂ ಶುದ್ದವಾಗಿ ಕೈ ತೊಳೆಯುವ ಪರಿಪಾಠವನ್ನು ನೀವು ಬೆಳೆಸಿಕೊಳ್ಳಬೇಕು ಎಂದರು.
ಎನ್ಎಸ್ಎಸ್ ಘಟಕದ ಅಧಿಕಾರಿ ಎಚ್.ಸಿ.ಮುನಿರಾಜು ಮಾತನಾಡಿ, ಪ್ರತಿ ವರ್ಷದ ಸೆ. ೨೪ನೇ ದಿನವನ್ನು ಎನ್ಎಸ್ಎಸ್ ದಿನವನ್ನಾಗಿ ಇಡೀ ದೇಶಾದ್ಯಂತ ಆಚರಿಸಲಾಗುತ್ತಿದೆ. ಈ ವರ್ಷ ವಿಶೇಷವಾಗಿ ಸ್ವಚ್ಚತಾ ಹೈ ಸೇವಾ ದಿವಸ್ ಆಗಿ ಆಚರಿಸಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಸೇವಾ ಮನೋಭಾವವನ್ನು ಬೆಳೆಸುವ ಎನ್ಎಸ್ಎಸ್ ಯೋಜನೆಯಡಿಯಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವ ಅವಕಾಶಗಳುಂಟು. ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಅನ್ನ ಕೊಟ್ಟ ದೇಶಕ್ಕೆ, ಜನ್ಮ ಕೊಟ್ಟ ಹೆತ್ತವರಿಗೆ, ಅಕ್ಷರ ಕಲಿಸಿದ ಗುರುಗಳಿಗೆ ಒಳ್ಳೆಯ ಹೆಸರು ತರುವಂತೆ ಕೋರಿದರು.
ಪ್ರಾಂಶುಪಾಲ ಎಂ.ಆನಂದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಸ್ವಚ್ಚತಾ ಹೈ ಸೇವಾ ಪ್ರಮಾಣ ವಚನವನ್ನು ಬೋದಿಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಭಿತ್ತಿಪತ್ರಗಳ ಪ್ರದರ್ಶನ, ಘೋಷಣೆಗಳ ಮೂಲಕ ಸ್ವಚ್ಚತೆ ಕುರಿತು ಅರಿವು ಮೂಡಿಸಿದರು.
ಗ್ರಂಥಾಲಯ ಇಲಾಖೆಯ ಅಕಾರಿ ಶಂಕರ್, ಉಪನ್ಯಾಸಕರಾದ ಶಿವಶಂಕರ್, ಮಂಗಳಗೌರಿ ಹಾಜರಿದ್ದರು.
ಐದು ಕೋಟಿ ನಷ್ಟದಲ್ಲಿ ಪಿ ಎಲ್ ಡಿ ಬ್ಯಾಂಕ್
ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸುಮಾರು ೫ ಕೋಟಿ ರೂ ನಷ್ಟದಲ್ಲಿ ನಡೆಯುತ್ತಿದೆ ಎಂದು ಬ್ಯಾಂಕ್ನ ಅಧ್ಯಕ್ಷ ಸಿ.ಎಂ.ಗೋಪಾಲ್ ತಿಳಿಸಿದರು.
ನಗರದ ರೇಷ್ಮೆ ಗೂಡು ಮಾರುಕಟ್ಟೆಯ ಬಳಿ ಇರುವ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನ ೨೦೧೬-೧೭ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬ್ಯಾಂಕ್ ಅಭಿವೃದ್ದಿಯಾಗಬೇಕಾದರೆ ರೈತರು ತೆಗೆದುಕೊಂಡ ಸಾಲವನ್ನು ಸಮಯಕ್ಕೆ ಸರಿಯಾಗಿ ಕಟ್ಟಿದಾಗ ಮಾತ್ರ ಸಾಧ್ಯ. ಬ್ಯಾಂಕ್ ನಷ್ಟದಲ್ಲಿ ನಡೆಯುತ್ತಿದ್ದು ಅದಕ್ಕೆ ಕಾರಣ ರೈತರು ತಾವು ಪಡೆದ ಸಾಲಗಳನ್ನು ಸರಿಯಾದ ಸಮಯಕ್ಕೆ ಕಟ್ಟದೆ ಇರುವುದು. ನರ್ಬಾಡ್ ೧೪% ಬಡ್ಡಿ ವಿಧಿಸುತ್ತಿದ್ದು, ಸರ್ಕಾರ ೧೧% ಬಡ್ಡಿ ಪಾವತಿ ಮಾಡುತ್ತಿದ್ದು, ರೈತರು ೩% ಬಡ್ಡಿ ಮಾತ್ರ ಕಟ್ಟಬೇಕಾಗಿದೆ. ಅದನ್ನು ಸಹ ರೈತರು ಸಕಾಲಕ್ಕೆ ಪಾವತಿ ಮಾಡದೆ ಇರುವುದು ವಿಷಾದನೀಯ ಎಂದು ತಿಳಿಸಿದರು.
೨೦೧೬-೧೭ನೇ ಸಾಲಿನಲ್ಲಿ ಶೇಕಡಾ ೫೧.೪೧% ರಷ್ಟು ಸಾಲ ವಸೂಲಾಗಿದ್ದು, ರೈತರಿಗೆ ಎಷ್ಷೇ ಮನವಿ ಮಾಡಿದರೂ ಸಾಲ ಮರುಪಾವತಿ ಮಾಡುತ್ತಿಲ್ಲ, ಇದಕ್ಕೆ ಕಾರಣ ಸರ್ಕಾರ ಅಲ್ಪಾವಧಿ ಸಾಲವನ್ನು ೫೦,೦೦೦ ರೂವರೆಗೆ ಮನ್ನಾ ಮಾಡಿದ್ದು, ಉಳಿದ ಎಲ್ಲಾ ಸಾಲಗಳನ್ನು ಮನ್ನಾ ಮಾಡಬಹುದೆಂಬ ಊಹಾಪೋಹದ ಹಿನ್ನೆಲೆಯಲ್ಲಿ ಸಾಲ ಮರುಪಾವತಿ ಆಗುತ್ತಿಲ್ಲ ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಹಾಗೂ ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಪ್ರಾರಂಭವಾಗಿ ೭೯ ವರ್ಷಗಳು ಕಳೆದಿದ್ದು ಸುದೀರ್ಘ ಇತಿಹಾಸ ಹೊಂದಿರುವ ಈ ಬ್ಯಾಂಕ್ ನಷ್ಟದಲ್ಲಿ ನಡೆಯುತ್ತಿದೆ. ಹೀಗೆ ನಡೆದರೆ ಮುಚ್ಚುವ ಪ್ರಮೇಯ ಸಹ ಬರಬಹುದು, ರೈತರು ಅದಕ್ಕೆ ಅವಕಾಶ ಕೊಡದೆ ತೆಗೆದುಕೊಂಡ ಸಾಲ ಮರುಪಾವತಿ ಮಾಡಿ ಬೇರೆಯವರಿಗೆ ಸಾಲ ನೀಡಲು ಸಹಾಯ ಮಾಡಿ. ಶೇ ೫೧% ಸಾಲ ವಸೂಲಾತಿಯಿಂದ ಬೇರೆಯವರಿಗೆ ಸಾಲ ನೀಡಲು ಸಾದ್ಯವಾಗದ ಪರಿಸ್ಥಿತಿಯಲ್ಲಿ ಬ್ಯಾಂಕ್ ಇದೆ. ಸರ್ಕಾರ ಸುಮಾರು ೧೧% ಬಡ್ಡಿಯನ್ನು ನೀಡುತ್ತಿದ್ದು, ಉಳಿದ ಸಾಲ ಮತ್ತು ಬಡ್ಡಿ ರೈತರೇ ಪಾವತಿ ಮಾಡಬೇಕು, ಸರ್ಕಾರ ಸಾಲ ಮನ್ನಾ ಮಾಡುತ್ತದೆ ಎನ್ನುವುದು ಊಹಾಪೋಹವಾಗಿದ್ದು, ಸಾಲ ಪಡೆದವರು ಸಾಲ ಮರುಪಾವತಿ ಮಾಡಿ ಎಂದು ತಿಳಿಸಿದರು.
ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ೨೦೧೬-೧೭ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯಲ್ಲಿ ಕೇವಲ ನಿರ್ದೆಶಕರು ಮಾತ್ರ ಭಾಗವಹಿಸಿದ್ದು, ಸದಸ್ಯರು ಇಲ್ಲದೆ ಖಾಲಿ ಖುರ್ಚಿಗಳು ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತಿತ್ತು.
ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನ ನಿರ್ದೇಶಕರಾದ ಎಂ.ಪಿ.ರವಿ, ಅಶ್ವತ್ತನಾರಾಯಣರೆಡ್ಡಿ, ಆರ್,ಬಿ ಜಯದೇವ್, ಶಂಕರ್, ಶಿವಾರೆಡ್ಡಿ, ಭೀಮೇಶ್, ಸಿದ್ದಪ್ಪ, ಶ್ರೀಮತಿ ಭಾಗ್ಯಮ್ಮ ಹಾಜರಿದ್ದರು.
ಆಸ್ಟ್ರೇಲಿಯಾದೊಂದಿಗೆ ನಂಟು ಬೆಸೆದ ಗೊಂಬೆ ಹಬ್ಬ
ದಸರಾ ಗೊಂಬೆ ಹಬ್ಬ ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮವನ್ನು ದೂರದ ಆಸ್ಟ್ರೇಲಿಯಾದೊಂದಿಗೆ ಬೆಸೆದಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಗೊಂಬೆ ಜೋಡಿಸಿ ಪೂಜಿಸುವ ಮೂಲಕ ಮೇಲೂರಿನ ಹೆಣ್ಣುಮಗಳು ತವರಿನ ಸಂಸ್ಕೃತಿಯನ್ನು ಹಬ್ಬದ ಆಚರಣೆಯನ್ನು ದೇಶ, ಖಂಡದ ಆಚೆಗೂ ಕೊಂಡೊಯ್ದಿದ್ದಾರೆ.
ತಾಲ್ಲೂಕಿನ ಮೇಲೂರಿನ ಬಿ.ಎಂ.ಕೃಷ್ಣಮೂರ್ತಿ ರವರ ಮಗಳು ಸೌಭಾಗ್ಯಲಕ್ಷ್ಮಿಆನಂದ್ ರವರು ತಮ್ಮ ವಿವಾಹದ ನಂತರ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನೆಲೆನಿಂತರೂ ಹದಿನೇಳು ವರ್ಷಗಳಿಂದ ಗೊಂಬೆ ಜೋಡಿಸಿ ಅಲ್ಲಿನ ಸ್ಥಳೀಯ ಅನಿವಾಸಿ ಭಾರತೀಯರಿಗೆ ಆಹ್ವಾನವಿತ್ತು ಅವರೊಂದಿಗೆ ಹಬ್ಬದ ಆಚರಣೆ ನಡೆಸುತ್ತಾರೆ.
ಎಲ್ಲಾ ಗೊಂಬೆಗಳನ್ನ ತವರಿನಿಂದಲೇ ಖರೀದಿಸಿ ಕೊಂಡು ಹೋಗಿ ಜೋಡಿಸಿದ್ದರೆ, ಕೆಲವು ಗೊಂಬೆಗಳನ್ನ ಸ್ವತಃ ತಾವೇ ಮಾಡಿದ್ದಾರೆ, ದಶಾವತಾರ, ದತ್ತಾತ್ರೇಯ, ಸಿಂಡ್ರೆಲಾ, ಮೀರಾ, ಮುಂತಾದ ದೇವರ ಗೊಂಬೆಗಳನ್ನ ಖರೀದಿಸಿ ಜೋಡಿಸಿದ್ದರೆ ಬಾಸ್ಕೆಟ್ ಬಾಲ್ ಮ್ಯಾಚ್,
ಗಜೇಂದ್ರ ಮೋಕ್ಷ, ಗಣೇಶನಿಗೆ ಆನೆ ತಲೆ ಜೋಡಿಸುವ ಸನ್ನಿವೇಶ ಗಳನ್ನ ತಾವೇ ಸ್ವತಃ ಮಾಡಿ ಜೋಡಿಸಿದ್ದಾರೆ.
“ನಾವು ಮೇಲೂರಿನ ನಮ್ಮ ಮನೆಯಲ್ಲಿ ಮೂರು ತಲೆಮಾರುಗಳಿಂದ ಆಚರಿಸಿಕೊಂಡು ಬಂದ ಗೊಂಬೆ ಹಬ್ಬವು ಈ ವರ್ಷವೂ ಮುಂದುವರೆದಿದೆ. ಪಟ್ಟದಗೊಂಬೆಗಳು, ಮೂವತ್ತು ಬಗೆ ಗಣೇಶನ ಬೊಂಬೆಗಳು, ದವಸವನ್ನ ಎತ್ತಿನ ಗಾಡಿಯಲ್ಲಿ ಮಾರುಕಟ್ಟೆಗೆ ಸಾಗಿಸುವ ರೈತ ದಂಪತಿ, ತರಕಾರಿಯನ್ನ ತಲೆಮೇಲೆ ಸಾಗಿಸುವ ರೈತರು, ದಿನಸಿಯನ್ನ ಮಾರುತ್ತಿರುವ ಶೆಟ್ಟಿ ಅಂಗಡಿ, ಶ್ರೀರಾಮರಿಗೆ ಹಣ್ಣು ನೀಡುತ್ತಿರುವ ಶಬರಿ, ದೇವರ ಬೊಂಬೆಗಳು, ಮುಂತಾದ ಹತ್ತು ಹಲವು ಬೊಂಬೆಗಳು ನಮ್ಮಲ್ಲಿವೆ. ಮನೆಗೆ ಬಂದವರಿಗೆ ಹಬ್ಬದ ಸಿಹಿ ತಿಂಡಿ ನೀಡಿ ತಾಂಬೂಲದೊಂದಿಗೆ ಸತ್ಕರಿಸುವುದು ಸಂಪ್ರದಾಯ. ನನ್ನ ತಂಗಿ ಅಲ್ಲಿ ದೂರದ ಮೆಲ್ಬರ್ನ್ ನಗರದಲ್ಲಿ ಇಲ್ಲಿನಂತೆಯೇ ಗೊಂಬೆ ಹಬ್ಬ ಆಚರಿಸುವುದು ನಮಗೆಲ್ಲ ಹೆಮ್ಮೆ’ ಎನ್ನುತ್ತಾರೆ ಮೇಲೂರಿನ ಎಂ.ಕೆ.ರವಿಪ್ರಸಾದ್.
ನಿಧನ ವಾರ್ತೆ
ಶ್ರೀಸರಸ್ವತಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷೆ ವಿ.ಸೀತಾಲಕ್ಷ್ಮೀ(೬೩) ನಿಧನ ಹೊಂದಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಳೆದ ೧೫ ದಿನಗಳಿಂದಲೂ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿ ಆಗದೆ ಭಾನುವಾರ ಸಂಜೆ ಮೃತಪಟ್ಟಿದ್ದಾರೆ.
ನಗರದ ಶ್ರೀಸರಸ್ವತಿ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ಆಗಿ, ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದ ಅವರು, ಗೈಡ್ ಕ್ಯಾಪ್ಟನ್ ಆಗಿ ದೇಶದ ಹಲವು ರಾಜ್ಯಗಳಲ್ಲಿ ನಡೆದ ಶಿಬಿರಗಳಲ್ಲಿ ಭಾಗವಹಿಸಿದ್ದರು.
ಉತ್ತಮ ಶಿಕ್ಷಕಿ ಪ್ರಶಸ್ತಿ, ಎಸ್.ರಾಧಾಕೃಷ್ಣನ್ ಪ್ರಶಸ್ತಿ ಪುರಸ್ಕೃತರು ಆಗಿದ್ದ ಅವರು ಸೀನಿಯರ್ ಗೈಡ್ ಪ್ರಶಸ್ತಿಯನ್ನು ರಾಜ್ಯಪಾಲರಿಂದ ಪಡೆದಿದ್ದರು.
ಶ್ರೀಸರಸ್ವತಿ ಕಾನ್ವೆಂಟ್‌ನ ಕಾರ್ಯದರ್ಶಿ ಎನ್.ಶ್ರೀಕಾಂತ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ತಹಸೀಲ್ದಾರ್ ನೇತೃತ್ವದಲ್ಲಿ ಅಮ್ಮನಕೆರೆ ಒತ್ತುವರಿ ಕಾರ್ಯಾಚರಣೆಗೆ
ತಾಲೂಕಿನ ಹಂಡಿಗನಾಳ ಬಳಿಯ ಅಮ್ಮನಕೆರೆ ಒತ್ತುವರಿ ಕಾರ್ಯಾಚರಣೆಗೆ ತಾಲೂಕು ಆಡಳಿತ ಮುಂದಾಗಿದ್ದು ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಕೆರೆಯ ಒತ್ತುವರಿಯಾದ ಜಾಗ ಹಾಗೂ ಕೆರೆಯ ಅಚ್ಚುಕಟ್ಟಿಗೆ ಗುರುವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಶಿಡ್ಲಘಟ್ಟ ನಗರಕ್ಕೆ ಹೊಂದಿಕೊಂಡಿರುವ ನಗರದ ಉಗಮದೊಂದಿಗೆ ನಂಟು ಬೆಳೆಸಿಕೊಂಡ ಅಮ್ಮನಕೆರೆಯ ಸಾಕಷ್ಟು ಭಾಗ ಒತ್ತುವರಿ ಆಗಿದೆ.
ಕೆರೆಗೆ ನೀರು ಹರಿಯುವ ರಾಜಕಾಲುವೆಗಳನ್ನು ಸಹ ಒತ್ತುವರಿದಾರರು ಬಿಟ್ಟಿಲ್ಲ. ಇದರಿಂದಾಗಿ ಕೆರೆಗೆ ನೀರು ಹರಿಯದ ಸ್ಥಿತಿ ನಿರ್ಮಾಣ ಆಗಿದೆ. ಸಾಲದೆಂಬಂತೆ ಕೆರೆಯ ಉದ್ದಗಲಕ್ಕೂ ಜಾಲಿ ಮರಗಳು ಬೆಳೆದು ನಿಂತಿದ್ದು ಕೆರೆಯು ತನ್ನ ಅಸ್ತಿತ್ವವನ್ನೆ ಕಳೆದುಕೊಂಡಂತಿದೆ.
ಕೆರೆಯ ಒತ್ತುವರಿಯನ್ನು ತೆರೆವುಗೊಳಿಸಿ ಕೆರೆಯನ್ನು ಉಳಿಸಿ ಎನ್ನುವ ಕೂಗು ಸಾಕಷ್ಟು ದಿನಗಳಿಂದ ಕೇಳಿ ಬರುತ್ತಿದ್ದು ಇಂದು ತಹಸೀಲ್ದಾರ್ ಅಜಿತ್ ಕುಮಾರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಹಾಗೂ ಹಂಡಿಗನಾಳ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
ಮೊದಲಿಗೆ ಕೆರೆಗೆ ಸಂಬಂಧಿಸಿದ ನಕ್ಷೆ, ಎಲ್ಲೆಗಳನ್ನು ಪರಿಶೀಲಿಸಿ ನಂತರ ಕೆರೆಯ ಒತ್ತುವರಿ ಹಾಗೂ ಅಚ್ಚು ಕಟ್ಟು ಪ್ರದೇಶವನ್ನು ವೀಕ್ಷಿಸಿದರು.
ಈ ಹಿಂದೆಯೆ ಕೆರೆಯ ಅಚ್ಚುಕಟ್ಟನ್ನು ಗುರ್ತಿಸಿ ಟ್ರಂಚ್ ನಿರ್ಮಿಸಿದ್ದರೂ ಸುತ್ತ ಮುತ್ತಲಿನ ರೈತರು ಟ್ರಂಚ್‍ನ ಕಾಲುವೆಯನ್ನು ದಾಟಿ ಕೆರೆಯ ಭಾಗದ ಒತ್ತುವರಿಯನ್ನು ಮುಂದುವರೆಸಿದ್ದು ಕಣ್ಣಿಗೆ ಬಿತ್ತು.
ಕೆರೆಯ ಸುತ್ತ ಹಾಗೂ ಒತ್ತುವರಿ ಭಾಗವನ್ನು ಸುತ್ತಾಡಿದ ತಹಸೀಲ್ದಾರರು, ಕೆರೆಯ ಅಂಗಳದಲ್ಲಿನ ಜಾಲಿ ಮರಗಳನ್ನು ಹಂಡಿಗನಾಳ ಗ್ರಾಮ ಪಂಚಾಯಿತಿಯವರಿಗೆ ಹರಾಜು ಪ್ರಕ್ರಿಯೆ ಮೂಲಕ ಕಡಿದು ಮಾರಾಟ ಮಾಡಲು ಸೂಚಿಸಿದರು.
ನಂತರ ಕೆರೆಯ ಅಂಗಳದಲ್ಲಿ ಜಾಲಿ ಮರಗಳ ಬದಲಿಗೆ ಪರಿಸರ ಸ್ನೇಹಿ ಸಸಿಗಳನ್ನು ನೆಟ್ಟು ಬೆಳೆಸಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿ ಶೀಘ್ರದಲ್ಲೆ ಕೆರೆಯ ಒತ್ತುವರಿಯ ಕಾರ್ಯಾಚರಣೆ ಆರಂಭಿಸುವುದಾಗಿ ತಿಳಿಸಿದರು.
ಹಂಡಿಗನಾಳ ಗ್ರಾಮ ಪಂಚಾಯಿತಿ ಸದಸ್ಯರದ ಜಯರಾಂ, ಎ.ಎಂ.ತ್ಯಾಗರಾಜ್, ರೈತ ಸಂಘದ ಜೆ.ವಿ.ವೆಂಕಟಸ್ವಾಮಿ, ರವಿಪ್ರಕಾಶ್, ಪ್ರತೀಶ್, ಮುರಳಿ ಇನ್ನಿತರರು ಹಾಜರಿದ್ದರು.
ಭಕ್ತರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ
ತಾಲೂಕಿನ ರೈತರ ಜೀವನಮಟ್ಟ ಸುದಾರಿಸಿದೆ ಎಂದರೆ ಅದಕ್ಕೆ ಈ ಬಾಗದ ಹೈನುಗಾರಿಕೆ ಹಾಗು ಹಾಲು ಉತ್ಪಾದನೆಯೇ ಮುಖ್ಯ ಕಾರಣ ಎಂದು ಶ್ರೀ ಹೆಚ್.ಡಿ.ದೇವೇಗೌಡ ಮತ್ತು ಶ್ರೀ ಜಯಪ್ರಕಾಶ್ ನಾರಾಯಣ್ ರವರ ಸೇವಾಭಿವೃದ್ಧಿ ಚಾರಿಟೆಬಲ್ ಟ್ರಸ್ಟ್‍ನ ಅಧ್ಯಕ್ಷ ಬಿ.ಎನ್.ರವಿಕುಮಾರ್ ಹೇಳಿದರು.
ತಾಲೂಕಿನ ಭಕ್ತರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ನಿರ್ಮಿಸಲಾಗಿರುವ ನೂತನ ಕಟ್ಟಡದ ಉದ್ಘಾಟನೆಯನ್ನು ಗುರುವಾರ ನೆರವೇರಿಸಿ ಅವರು ಮಾತನಾಡಿದರು.
ಕಳೆದ ಮೂರು ದಶಕಗಳ ಹಿಂದೆ ಈ ಭಾಗದ ರೈತರ ಉಪಕಸುಬಾಗಿದ್ದ ಹೈನುಗಾರಿಕೆ ಇದೀಗ ಮುಖ್ಯ ಕಸುಬಾಗಿ ರೂಪುಗೊಂಡಿದೆ. ಈ ಭಾಗದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದ್ದು ಕೃಷಿ ಮಾಡಲಾಗದೇ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಪ್ರತಿನಿತ್ಯ ತಾಲೂಕಿನಿಂದ ಸುಮಾರು 1 ಲಕ್ಷ ಲೀ ಗೂ ಹೆಚ್ಚು ಹಾಲು ಡೈರಿಗಳ ಮುಖಂತರ ಒಕ್ಕೂಟಕ್ಕೆ ಪೂರೈಸಲಾಗುತ್ತಿದೆ ಎಂದರು.
ಈ ಭಾಗದ ರೈತರ ಅದರಲ್ಲಿಯೂ ಬಡ ಯುವಕರನ್ನು ಗುರುತಿಸಿ ಕೋಚಿಮುಲ್ ಹಾಲು ಒಕ್ಕೂಟದಲ್ಲಿ ಉದ್ಯೋಗಾವಕಾಶ ಕಲ್ಪಿಸಿಕೊಡುವಂತೆ ಕೋಚಿಮುಲ್ ನಿರ್ದೇಶಕರಿಗೆ ಮನವಿ ಮಾಡಿದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ ನಮ್ಮಲ್ಲಿ ನೀರಿಗೆ ಬರವಿದ್ದರೂ ಹಾಲಿಗೆ ಬರವಿಲ್ಲ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳಿಂದ ಪ್ರತಿ ದಿನ 10 ಲಕ್ಷ ಲೀಟರ್ ಹಾಲನ್ನು ಉತ್ಪಾದಿಸಲಾಗುತ್ತಿದೆ. ರೈತರಿಗೆ ಹೆಚ್ಚಿನ ಬೆಲೆ ಸಿಗಬೇಕಾದರೆ ಹಾಲನ್ನು ವಿವಿಧ ರೀತಿಯಲ್ಲಿ ಸಂಸ್ಕರಿಸಿ ದೇಶ ವಿದೇಶಗಳಿಗೆ ರಫ್ತು ಮಾಡಬೇಕು. ಅದಕ್ಕಾಗಿಯೇ ಅಪರೂಪದ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ವಿಶೇಷವಾದ ಮೆಗಾ ಡೈರಿಯನ್ನು ನಿರ್ಮಿಸಲಾಗುತ್ತಿದ್ದು ಮುಂದಿನ ನಾಲ್ಕೈದು ತಿಂಗಳಲ್ಲಿ ಉದ್ಘಾಟನೆಯ ಬಾಗ್ಯ ಕಾಣಲಿದೆ ಎಂದರು.
ಶಿಬಿರ ಘಟಕದ ಉಪವ್ಯವಸ್ಥಾಪಕ ಬಿ.ಎಸ್.ಹನುಮಂತರಾವ್ ಮಾತನಾಡಿ ಜಿಲ್ಲೆಯಲ್ಲಿಯೇ ಅತ್ಯಂತ ಹೆಚ್ಚಿನ ಹಾಲು ಉತ್ಪಾದನೆ ಮಾಡುವ ಡೈರಿಗಳಲ್ಲಿ ಎರಡನೇ ಸ್ಥಾನದಲ್ಲಿರುವ ತಾಲೂಕಿನ ಭಕ್ತರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಪ್ರಸಕ್ತ ವರ್ಷ 16 ಲಕ್ಷ ರೂ ಲಾಭದಲ್ಲಿ ನಡೆಯುತ್ತಿದೆ. ಜಿಲ್ಲೆಯ ಅತ್ಯುತ್ತಮ ಹಾಲು ಉತ್ಪಾದಕರ ಸಂಘಗಳಲ್ಲಿ ಇದೂ ಒಂದಾಗಿದ್ದು ಮುಂದಿನ ದಿನಗಳಲ್ಲಿ ಒಕ್ಕೂಟದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಅಳವಡಿಸಿಕೊಂಡು ಸಂಘ ಮತ್ತಷ್ಟು ಅಭಿವೃದ್ದಿಯಾಗಲಿ ಎಂದರು.
ಅತಿ ಹೆಚ್ಚಿನ ಹಾಲು ಸರಬರಾಜು ಮಾಡಿರುವ ರೈತರಾದ ಶಿವನಂಜುಂಡಸ್ವಾಮಿ, ರಾಮರೆಡ್ಡಿ ಮತ್ತು ನಾರಾಯಣಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಭಕ್ತರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಕೆ.ಚನ್ನೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾರಘು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ವಿ.ನಾಗರಾಜ್, ಶಿವಾರೆಡ್ಡಿ, ಉಪವ್ಯವಸ್ಥಾಪಕ ಹನುಮಂತರಾವ್, ವಿಸ್ತರಣಾಧಿಕಾರಿ ಅಮರೇಶ್, ಗ್ರಾ.ಪಂ ಅಧ್ಯಕ್ಷ ಬಿ.ಎಂ.ಗೋಪಾಲಗೌಡ, ಉಪಾಧ್ಯಕ್ಷೆ ಶಶಿಕಲಾ ನಟರಾಜ್, ತಾ.ಪಂ ಸದಸ್ಯರಾದ ರಾಜಶೇಖರ್, ಚಂದ್ರಕಲಾ ಬೈರೇಗೌಡ, ಮುಖ್ಯ ಕಾರ್ಯನಿರ್ವಾಹಕ ವಿ.ನಾರಾಯಣಸ್ವಾಮಿ, ಮುಖಂಡರಾದ ಮುಗಿಲಡಿಪಿ ನಂಜಪ್ಪ, ಜೆ.ಎಂ.ವೆಂಕಟೆಶ್, ಆರ್.ಎ.ಉಮೇಶ್, ತಾದೂರು ರಘು, ನಾಗಮಂಗಲ ಶ್ರೀನಿವಾಸಗೌಡ, ಚಂದ್ರೇಗೌಡ, ರಘು, ಕೆಂಪೇಗೌಡ, ಮುನೇಗೌಡ ಹಾಜರಿದ್ದರು.
ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ ಕಾರ್ಯಕ್ರಮ
ಗ್ರಂಥಾಲಯಗಳ ಮಹತ್ವ ಏನು ಎಂಬುದು ಬರೀ ಓದುಗ ವಲಯಕ್ಕಷ್ಟೇ ಗೊತ್ತಿರುತ್ತದೆ ಎಂದು ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಗು ಸಾಹಿತಿ ಚಂದ್ರಶೇಖರ ಹಡಪದ್ ಅಭಿಪ್ರಾಯಪಟ್ಟರು.
ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಕನ್ನಡ ಸಾರಸ್ವತ ಪರಿಚಾರಿಕೆ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ ಇವರ ಸಹಯೋಗದಲ್ಲಿ ನಡೆದ `ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ ಕಾರ್ಯಕ್ರಮದಲ್ಲಿ ಅವರು ತಮ್ಮ ಗೋಡೆಗಳಿಲ್ಲದ ಚಿತ್ರಗಳು ಮತ್ತು ಮಳೆ ನಿಂತ ಕ್ಷಣ ಎಂಬ ಪುಸ್ತಕಗಳ ಬಗ್ಗೆ ಓದುಗÀರಿಗೆ ಪರಿಚಯಿಸಿ ಮಾತನಾಡಿದರು.
ಮನುಷ್ಯ ಬೇರೆಲ್ಲಾ ಜೀವಿಗಳಿಗಿಂತ ವಿಭಿನ್ನ ಎಂದ ಅವರು ತಾವು ಓದಿ ತಿಳಿದುಕೊಂಡ ವಿಷಯಗಳನ್ನು ಅಕ್ಷರ ರೂಪದಲ್ಲಿ ದಾಖಲಿಸಿ ಪುಸ್ತಕ ರಚಿಸುವಂತಹ ಶಕ್ತಿ ಮಾನವನಿಗೆ ಹೊರತುಪಡಿಸಿ ಬೇರಾವ ಪ್ರಾಣಿಗೂ ಇಲ್ಲ ಎಂದರು. ಅಕ್ಷರ ಅಥವ ಅರಿವು ಎನ್ನುವುದು ಮಾನವನಿಗೆ ಬರದಿದ್ದರೆ ನಾವಥಿಂದು ಬೇರೇನೂ ಆಗುತ್ತಿದ್ದೆವು. ಹಾಗಾಗಿ ಪ್ರತಿಯೊಬ್ಬರೂ ಗ್ರಂಥಾಲಕ್ಕೆ ಹೋಗುವುದನ್ನು ಹಾಗು ಪುಸ್ತಕಗಳನ್ನು ಓದುವ ಹವ್ಯಾಸ ಹೆಚ್ಚಿಸಿಕೊಳ್ಳಬೇಕು ಎಂದರು.
ಕನ್ನಡ ಸಾರಸ್ವತ ಪರಿಚಾರಿಕೆಯ ಅಧ್ಯಕ್ಷ ಬಿ.ಆರ್. ಅನಂತಕೃಷ್ಣ ಮಾತನಾಡಿ ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಪುಸ್ತಕವನ್ನು ಪರಿಚಯಿಸುವ ಕಾರ್ಯಕ್ರಮದ ಮೂಲಕ ಓದುಗರನ್ನು ಹೆಚ್ಚಿಸುವ ಪ್ರಯತ್ನ ನಡೆದಿದೆ. ಗ್ರಂಥಾಲಯದಲ್ಲಿ ಸದಸ್ಯರಾಗಿ, ಮೂರು ಪುಸ್ತಕಗಳನ್ನು ತೆಗೆದುಕೊಂಡು ಹೋಗಿ ಓದಿ. ಒಳ್ಳೋಳ್ಳೆ ಪುಸ್ತಕಗಳು ಗ್ರಂಥಾಲಯದಲ್ಲಿವೆ. ಅವುಗಳನ್ನು ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳಿ ಎಂದು ಮನವಿ ಮಾಡಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಗ್ರಂಥಾಲಯ ಸಹಾಯಕ ಶ್ರೀನಿವಾಸಯ್ಯ, ಸಹಾಯಕಿ ಭಾಂಧವ್ಯ, ಗುರುನಂಜಪ್ಪ, ವಿ.ವೆಂಕಟರಮಣ, ಅನಿಲ್, ಚಾಂದ್‍ಪಾಷ, ಆನಂದ, ಸುಮದರನ್, ಶ್ರೀನಾಥ್, ನಯಾಜ್ ಮತ್ತಿತರರು ಹಾಜರಿದ್ದರು.
ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಕೇಂದ್ರದಲ್ಲಿ ನರೇಂದ್ರಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜನಸಾಮಾನ್ಯರಿಗೂ ಸರ್ಕಾರದ ಸೌಲಭ್ಯಗಳು ತಲುಪುವಂತೆ ಪಾರದರ್ಶಕ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಬಿ.ಸಿ.ನಂದೀಶ್ ಹೇಳಿದರು.
ಪ್ರಧಾನಿ ನರೇಂದ್ರಮೋದಿ ಅವರ 67 ನೇ ವರ್ಷದ ಜನ್ಮದಿನಾಚರಣೆಯ ಅಂಗವಾಗಿ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ನಗರದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದರು.
ನಾಯಕರ ಹುಟ್ಟುಹಬ್ಬಗಳ ಆಚರಣೆ ಮಾದರಿಯಾಗಿರಬೇಕು ಎನ್ನುವ ನಿಟ್ಟಿನಲ್ಲಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವುದು ಸೇರಿದಂತೆ ಆಸ್ಪತ್ರೆಯ ಆವರಣ ಸ್ವಚ್ಚಗೊಳಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಬಿಜೆಪಿ ಮುಖಂಡ ಡಿ.ಆರ್. ಶಿವಕುಮಾರಗೌಡ ಮಾತನಾಡಿ ಕೇಂದ್ರದಲ್ಲಿ ಎನ್.ಡಿ.ಎ ಸರ್ಕಾರ ಆಡಳಿತ ನಡೆಸುತ್ತಿದ್ದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 150 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲು ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರಗೌಡ, ಮುಖಂಡರಾದ ಶ್ರೀರಾಮರೆಡ್ಡಿ, ದಾಮೋದರ್, ಮುನಿಕೃಷ್ಣಪ್ಪ, ಮಂಜುನಾಥ್, ಶ್ರೀರಾಮ್, ಸುಜಾತಮ್ಮ, ರತ್ನಮ್ಮ, ಶಿವಮ್ಮ, ರಾಜಣ್ಣ, ಪ್ರತಾಪ್, ಮತ್ತಿತರರು ಹಾಜರಿದ್ದರು.
ಎರಡನೇ ವರ್ಷದ ವಿಶ್ವಕರ್ಮ ಜಯಂತಿ ಆಚರಣೆ
ಶೈಕ್ಷಣಿಕ ಮತ್ತು ಆರ್ಥಿಕವಾಗಿ ಜನಾಂಗದ ಅಭಿವೃದ್ಧಿಗೆ ಸಮುದಾಯದ ಮುಖಂಡರು ಶ್ರಮಿಸಬೇಕು ಎಂದು ತಹಸೀಲ್ದಾರ್ ಎಸ್.ಅಜಿತ್‍ಕುಮಾರ್‍ರೈ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ನಡೆದ ಎರಡನೇ ವರ್ಷದ ವಿಶ್ವಕರ್ಮ ಜಯಂತಿ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ವಿಶೇಷ ಕುಸುರಿ ಕೌಶಲ ಹೊಂದಿರುವ ವಿಶ್ವಕರ್ಮ ಜನಾಂಗವು ವಿಶ್ವ ಮಾನ್ಯತೆ ಪಡೆದಿದೆ. ವಿಶ್ವಕರ್ಮ ಸಮುದಾಯವು ಚಿನ್ನಬೆಳ್ಳಿ ಕೆಲಸ, ಮರಗೆಲಸ, ಕಬ್ಬಿಣದ ಕೆಲಸ, ಶಿಲ್ಪಕಲೆ ಸೇರಿದಂತೆ ಪಂಚ ಕಸುಬುಗಳನ್ನು ಮಾಡುವ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ ಎಂದರು.
ಕಾರ್ಯಕ್ರಮದ ಮುಖ್ಯಭಾಷಣಕಾರರಾಗಿ ಸಿ.ಆರ್.ಪಿ. ಮಂಜುನಾಥ್ ಮಾತನಾಡಿ ದೇಶದಲ್ಲಿ ಸಾಮಾಜಿಕ ನ್ಯಾಯವಿಲ್ಲದಿದ್ದರೆ ಭಾರತ ದೇಶ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ, ವಿಶ್ವಕರ್ಮ ಎನ್ನುವುದು ಜಾತಿಯಲ್ಲ. ಇದೊಂದು ಸಂಸ್ಕೃತಿ, ಪಾರಂಪರಿಕ ಸಂಸ್ಕೃತಿಯುಳ್ಳ ಪಂಚ ಕಸಬುಗಳು ದೇಶಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದೇವೆ. ಆದರೂ ಎಲ್ಲಾ ರಂಗದಲ್ಲೂ ಹಿಂದೆ ಉಳಿದಿದ್ದೇವೆ. ವಿಶ್ವಕರ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಅಜಿತ್ ಕುಮಾರ್ ರೈ ಹಾಗು ಶಾಸಕ ಎಂ.ರಾಜಣ್ಣರನ್ನು ಸಮುದಾಯದ ಮುಖಂಡರು ಸನ್ಮಾನಿಸಿ ಗೌರವಿಸಿದರು.
ಶಾಸಕ ಎಂ.ರಾಜಣ್ಣ, ನಗರಸಭಾ ಅಧ್ಯಕ್ಷ ಅಪ್ಸರ್‍ಪಾಷ, ಉಪಾಧ್ಯಕ್ಷೆ ಪ್ರಭಾವತಿಸುರೇಶ್, ತಾ.ಪಂ ಇಓ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್‍ಬಾಬು, ಶಿಶು ಕಲ್ಯಾಣಾಧಿಕಾರಿ ಲಕ್ಷ್ಮೀದೇವಮ್ಮ, ಸಮುದಾಯದ ಹಿರಿಯ ಮುಖಂಡರಾದ ಮುನಿರತ್ನಾಚಾರಿ, ಸುಂದರಾಚಾರಿ, ಜನಾರ್ಧನ್, ಈಶ್ವರಾಚಾರಿ, ಸಿ.ಆರ್.ಪಿ.ಸುಂದರಾಚಾರಿ ಮತ್ತಿತರರು ಹಾಜರಿದ್ದರು.
‘ಮನೆ ಬಾಗಿಲಿಗೆ ನಗರಸಭೆ’ ಮನೆಗಳ ಕಸ ಸಂಗ್ರಹಿಸಲು ಮುಂದಾದ ನಗರಸಭೆ
‘ಮನೆ ಬಾಗಿಲಿಗೆ ನಗರಸಭೆ’ ಎಂಬ ಕಾರ್ಯಕ್ರಮವನ್ನು ರೂಪಿಸಿದ್ದು, ತ್ಯಾಜ್ಯವನ್ನು ಸಂಗ್ರಹಿಸುವುದರೊಂದಿಗೆ ತ್ಯಾಜ್ಯಗಳನ್ನು ವಿಂಗಡಿಸಿಡುವುದರ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ ಎಂದು ನಗರಸಭೆ ಆಯುಕ್ತ ಚಲಪತಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ನಗರಸಭೆಯ ಗೋದಾಮುಗಳ ಬಳಿಯಿಂದ ತ್ಯಾಜ್ಯ ಸಂಗ್ರಹಣೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಒಣ ಕಸ, ಹಸಿ ಕಸ, ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯವನ್ನು ವಿಂಗಡಿಸಿ ನಾಲ್ಕು ಭಾಗಗಳಿರುವ ಕಸ ಸಂಗ್ರಹಣೆಯ ತಳ್ಳುಗಾಡಿಗಳಲ್ಲಿ ಸಂಗ್ರಹಿಸುವ ಕಾರ್ಯವನ್ನು ಪ್ರಾರಂಭಿಸುತ್ತಿದ್ದೇವೆ. ಕಸವನ್ನು ಸಂಗ್ರಹಿಸಲು ಬರುವ ಪೌರ ಕಾರ್ಮಿಕರಿಗೆ ಗ್ಲೌಸ್, ಮಾಸ್ಕ್ ಮೊದಲಾದ ಪರಿಕರಗಳನ್ನು ನೀಡಿದ್ದು, ಊರಿನ ಆರೋಗ್ಯ ಕಾಪಾಡುವ ಅವರ ಆರೋಗ್ಯದ ಕಡೆಗೂ ಗಮನಹರಿಸಲಾಗಿದೆ. ಸಾರ್ಮಜನಿಕರು ಮನೆಗಳಲ್ಲಿ ಕಸವನ್ನು ವಿಂಗಡಿಸಿಟ್ಟು ಕಸ ಸಂಗ್ರಹಿಸಲು ಮನೆ ಬಾಗಿಲಿಗೆ ಬರುವ ಪೌರ ಕಾರ್ಮಿಕರಿಗೆ ವಿಂಗಡಣೆಯಾದ ಕಸವನ್ನು ನೀಡಿದಲ್ಲಿ ಅನುಕೂಲವಾಗುತ್ತದೆ. ನಮ್ಮ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ, ನಮ್ಮ ಬಡಾವಣೆ ಹಾಗೂ ನಗರವನ್ನು ಸಹ ಸ್ವಚ್ಛವಾಗಿರಿಸಲು ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.
ಪ್ರತಿಯೊಂದು ವಾರ್ಡ್ ನಲ್ಲಿಯೂ ಈ ರೀತಿಯಾಗಿ ಕಸ ಸಂಸಗ್ರಹಿಸಲು ಪುಶ್ ಕಾರ್ಟ್ ಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅವುಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಸಾರ್ವಜನಿಕರು ರಸ್ತೆ ಕೊನೆಯಲ್ಲಿ ಅಥವಾ ಚರಂಡಿಗಳಲ್ಲಿ ಮನೆಗಳ ತ್ಯಾಜ್ಯವನ್ನು ಸುರಿಯಬಾರದು ಎಂದು ಹೇಳಿದರು.
ನಗರಸಭೆಯ ಅಧಿಕಾರಿಗಳಾದ ದಿಲೀಪ್, ಸಯಿದಾ, ಆಂಜಿನಪ್ಪ, ಮುರಳಿ, ನಗರಸಭಾ ಸದಸ್ಯರಾದ ಜೆ.ಎಂ.ಬಾಲಕೃಷ್ಣ, ರಾಘವೇಂದ್ರ, ವೆಂಕಟಸ್ವಾಮಿ, ಮಂಜುನಾಥ್ ಹಾಜರಿದ್ದರು.
ಮ್ಯಾನ್ಮಾರ್ ನ ರೋಹಿಂಗ್ಯ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಪ್ರತಿಭಟನೆ
ಮ್ಯಾನ್ಮಾರ್ ನ ರೋಹಿಂಗ್ಯ ಮುಸ್ಲಿಮರ ಮೇಲೆ ಅಲ್ಲಿನ ಭದ್ರತಾ ಪಡೆಗಳು ನಡೆಸುತ್ತಿರುವ ದೌರ್ಜನ್ಯ, ಸಾಮೂಹಿಕ ಹತ್ಯೆ ಹಾಗೂ ಅತ್ಯಾಚಾರವನ್ನು ಖಂಡಿಸಿ ನಗರದಲ್ಲಿ ಶುಕ್ರವಾರ ಮುಸ್ಲೀಮರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿಯನ್ನು ಸಲ್ಲಿಸಿದರು.
ಜಾಮಿಯಾ ಮಸೀದಿ ಮುಖಂಡರು, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮತ್ತು ಎ.ಪಿ.ಜೆ ಅಬ್ದುಲ್ ಕಲಾಂ ಚಾರಿಟಬಲ್ ಟ್ರಸ್ಟ್ ಸದಸ್ಯರು ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದವರು ಮ್ಯಾನ್ಮಾರ್ ನಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿದರು.
ಕಳೆದ ವರ್ಷ ದಿಂದ ಸುಮಾರು 70 ಸಾವಿರದಷ್ಟು ರೋಹಿಂಗ್ಯ ಮುಸ್ಲಿಮರು ತಮ್ಮ ದೇಶದಲ್ಲಿ ದಬ್ಬಾಳಿಕೆಗೆ ಹೆದರಿ ಬಾಂಗ್ಲಾದೇಶಕ್ಕೆ ಪಾಲಾಯನ ಮಾಡಿದ್ದಾರೆ. ಮಾನವತೆಯನ್ನು ಮರೆತಿರುವ ಮ್ಯಾನ್ಮಾರ್ ನ ಮಿಲಿಟರಿ ಕಾರ್ಯಾಚರಣೆಯಿಂದ ಲೆಕ್ಕವಿಲ್ಲದಷ್ಟು ಮುಸ್ಲೀಮರು ಹತರಾಗಿದ್ದಾರೆ. ಇದನ್ನು ಸಾರ್ವತ್ರಿಕವಾಗಿ ಖಂಡಿಸಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಅವರಿಗೆ ಮನವಿಯನ್ನು ಸಲ್ಲಿಸಿ ಪ್ರತಿಭಟನಾಕಾರರು ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಪ್ಯಾರೆಗಾನ್ ಮೈದಾನಕ್ಕೆ ತೆರಳಿ ಮ್ಯಾನ್ಮಾರ್ ನಲ್ಲಿ ಸತ್ತಿರುವವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಿದರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತಾಲ್ಲೂಕು ಅಧ್ಯಕ್ಷ ಮೊಹಮ್ಮದ್ ನಿಜಾಮುದ್ದೀನ್, ಎ.ಪಿ.ಜೆ ಅಬ್ದುಲ್ ಕಲಾಂ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಯ್ಯದ್ ಮುಕ್ತಿಯಾರ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತಾಲ್ಲೂಕು ಅಧ್ಯಕ್ಷ ಜಿಯಾವುಲ್ಲ, ನಿಸಾರ್, ಷರೀಫ್, ಜಾಮಿಯಾ ಮಸೀದಿ ಕಾರ್ಯದರ್ಶಿ ಹೈದರಾಲಿ, ಆರಿಫ್ ಪಾಷ, ಫಯಾಜ್ ಹಾಜರಿದ್ದರು.
ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಸಭೆ ಕರೆಯಲು ಒತ್ತಾಯ
ನಗರಸಭೆ ಅಧ್ಯಕ್ಷ ಅಫ್ಸರ್ಪಾಷ ಅವರ ವಿರುದ್ಧ ಅವಿಶ್ವಾಸ ಮಂಡಿಸುವ ಕಾರ್ಯಕ್ಕೆ ಶುಕ್ರವಾರ ಅಧಿಕೃತ ಚಾಲನೆ ದೊರೆತಿದೆ.
ಪ್ರಸ್ತುತ ೨೭ ಮಂದಿ ಸದಸ್ಯರನ್ನು ಹೊಂದಿರುವ ಶಿಡ್ಲಘಟ್ಟ ನಗರಸಭೆಯಲ್ಲಿ ಅಧ್ಯಕ್ಷರ ವಿರುದ್ದ ಅವಿಶ್ವಾಸ ವ್ಯಕ್ತ ಪಡಿಸಿ ೨೧ ಮಂದಿ ಸಹಿ ಮಾಡಿರುವ ಪತ್ರವನ್ನು ಪೌರಾಯುಕ್ತ ಚಲಪತಿ ಯವರಿಗೆ ನೀಡುವ ಮೂಲಕ ನಗರಸಭೆ ಅಧ್ಯಕ್ಷರ ಸ್ಥಾನಕ್ಕೆ ಬೇರೊಬ್ಬರನ್ನು ತರುವ ಕಾರ್ಯ ಶುರುವಾಗಿದೆ.
ಸೆಪ್ಟೆಂಬರ್ ೧೬ ರ ಶನಿವಾರಕ್ಕೆ ಒಂದು ವರ್ಷ ಪೂರೈಸಲಿರುವ ನಗರಸಭೆ ಅಧ್ಯಕ್ಷ ಅಪ್ಸರ್ಪಾಷ ಅವರು ನಮಗೆ ಬೇಡ ಎಂದಿರುವ ಸದಸ್ಯರು ಕೂಡಲೇ ಅವಿಶ್ವಾಸ ನಿರ್ಣಯ ಸಭೆ ಕರೆಯುವಂತೆ ಒತ್ತಾಯಿಸಿದ್ದಾರೆ.
ನಗರಸಭೆ ಪಕ್ಷಗಳ ಬಲಾಬಲ: ನಗರಸಭೆಯ ಒಟ್ಟು ೨೭ ವಾರ್ಡ್ಗಳ ಪೈಕಿ ಕಾಂಗ್ರೆಸ್ ೧೪ ಸ್ಥಾನಗಳಲ್ಲಿ ಜಯಗಳಿಸಿದ್ದರೆ ಜೆಡಿಎಸ್ ೧೧ ಸ್ಥಾನಗಳಲ್ಲಿ ಬಿಜೆಪಿ ಹಾಗು ಪಕ್ಷೇತರ ತಲಾ ಒಂದು ಸ್ಥಾನಗಳಲ್ಲಿ ಜಯಗಳಿಸಿತ್ತು.
ಮೊದಲನೆ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ನ ಮುಷ್ಠರಿತನ್ವೀರ್, ಉಪಾಧ್ಯಕ್ಷರಾಗಿ ಜೆಡಿಎಸ್ನ ಸುಮಿತ್ರರಮೇಶ್ ಆಯ್ಕೆಯಾಗಿದ್ದರು. ೩೦ ತಿಂಗಳ ನಂತರ ಎರಡನೇ ಅವಧಿಗೆ ೨೦1೬ ರ ಸೆಪ್ಟೆಂಬರ್ ೧೬ ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರ ಅಡ್ಡಮತದಾನದಿಂದ ಜೆಡಿಎಸ್ ನ ಅಫ್ಸರ್ಪಾಷ ಅಧ್ಯಕ್ಷರಾಗಿ ಜೆಡಿಎಸ್ ನ ಪ್ರಭಾವತಿ ಸುರೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಆದರೆ ನಂತರದ ದಿನಗಳಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಜೆಡಿಎಸ್ ಪರವಾಗಿ ಮತ ಚಲಾಯಿಸಿದ ನಾಲ್ವರು ನಗರಸಭೆ ಸದಸ್ಯರ ಸದಸ್ಯತ್ವ ರದ್ದುಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದರ ಹಿನ್ನಲೆಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ ೧೦ ಕ್ಕೆ ಇಳಿದಿತ್ತು. ಅದರಲ್ಲಿ ಓರ್ವ ಸದಸ್ಯರು ಇತ್ತೀಚೆಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ ಹಾಗಾಗಿ ಕಾಂಗ್ರೆಸ್ನ ಸದಸ್ಯರ ಸಂಖ್ಯೆ ೯ ಕ್ಕೆ ಇಳಿದಿದೆ.
ಇನ್ನು ಜೆಡಿಎಸ್ ಸದಸ್ಯರ ಪೈಕಿ ಅಧ್ಯಕ್ಷ ಅಫ್ಸರ್ಪಾಷ ಹೊರತುಪಡಿಸಿ ಉಳಿದೆಲ್ಲಾ ೧೦ ಸದಸ್ಯರೂ ಸೇರಿದಂತೆ ಕಾಂಗ್ರೆಸ್ನ ೯ ಸದಸ್ಯರು ಹಾಗು ಬಿಜೆಪಿ ಹಾಗು ಪಕ್ಷೇತರ ಅಭ್ಯರ್ಥಿಗಳು ಅವಿಶ್ವಾಸ ವ್ಕಕ್ತಪಡಿಸಿ ಮನವಿ ಪತ್ರದಲ್ಲಿ ಸಹಿ ಹಾಕಿದ್ದಾರೆ.
ಅಭಿವೃದ್ಧಿಗಿಂತ ಅಧಿಕಾರಕ್ಕಾಗಿ ಕಿತ್ತಾಟ: ನಗರಸಭೆಯ ಈ ಆಡಳಿತ ಮಂಡಳಿ ಅಧಿಕಾರಕ್ಕಾಗಿ ಬಂದಾಗಿನಿಂದಲೂ ನಗರದ ಅಭಿವೃದ್ಧಿಗಿಂತ ಹೆಚ್ಚು ಅಧಿಕಾರಕ್ಕಾಗಿ ನಡೆಸಿದ ಕಚ್ಚಾಟಗಳೇ ಹೆಚ್ಚು ಸುದ್ದಿಯಾಗಿವೆ. ಇಲ್ಲಿ ಶತ್ರುಗಳಾರು? ಸ್ನೇಹಿತರಾರು? ಯಾರು ಯಾರೊಂದಿಗಿದ್ದಾರೆ? ಎನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅವಿಶ್ವಾಸಕ್ಕೆ ಮುಖ್ಯ ಕಾರಣ: ಅಫ್ಸರ್ಪಾಷ ಅಧ್ಯಕ್ಷರಾದ ಒಂದು ವರ್ಷದ ಅವಧಿಯಲ್ಲಿ ಎಲ್ಲಾ ಸದಸ್ಯರನ್ನು ಒಗ್ಗೂಡಿಸಿಕೊಂಡು ಹೋಗುವಲ್ಲಿ ವಿಫಲವಾಗಿರುವುದೂ ಸೇರಿದಂತೆ ತಮ್ಮ ಏಕಪಕ್ಷೀಯ ನಿರ್ಧಾರದಿಂದ ಬಹುತೇಕ ಸದಸ್ಯರ ಸಿಟ್ಟಿಗೆ ಗುರಿಯಾಗಿದ್ದರು. ಸಾಮಾನ್ಯ ಸಭೆ ಸೇರಿದಂತೆ ತುರ್ತು ಸಭೆಯ ವೇಳೆ ಯಾವುದೇ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೇ ತಾವು ಹೇಳಿದ್ದೇ ನಡೆಯಬೇಕು ಎನ್ನುವ ನಿಟ್ಟಿನಲ್ಲಿ ನಡೆದುಕೊಂಡಿರುವುದಕ್ಕೆ ಕಳೆದ ಸಭೆಯಲ್ಲಿ ೨೫ ಅಂಶಗಳನ್ನು ಚರ್ಚಿಸುವವರೆಗೂ ಸಭೆಯಲ್ಲಿದ್ದ ಅಧ್ಯಕ್ಷ ಉಪಾಧ್ಯಕ್ಷರು ಕೊನೆಯ ಅಂಶವಾದ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ವಿಚಾರ ಬಂದಾಗ ಊಟದ ನೆಪವೊಡ್ಡಿ ಸಭೆಯಿಂದ ಹೊರ ಹೋದದ್ದು ಬಹುತೇಕ ಸದಸ್ಯರ ಕೆಂಗಣ್ಣಿಗೆ ಕಾರಣವಾಯಿತು.
ಏಕಾಂಗಿಯಾದ ನಗರಸಭೆ ಅಧ್ಯಕ್ಷ: ಕಳೆದ ೨೦೧೬ ರ ಸೆಪ್ಟೆಂಬರ್೧೬ ರಂದು ನಗರಸಭೆಯ ಅಧ್ಯಕ್ಷರಾಗಿ ಆಯ್ಕೆಯಾದ ಅಫ್ಸರ್ಪಾಷರ ಹಿಂದೆ ಸುಮಾರು ೧೭ ಮಂದಿ ಸದಸ್ಯರಿದ್ದರು. ಸತತವಾಗಿ ನಾಲ್ಕು ಭಾರಿ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದ ಅಫ್ಸರ್ಪಾಷ ಜೆಡಿಎಸ್ ಪಕ್ಷದ ಹಿರಿಯ ಕಾರ್ಯಕರ್ತರೂ ಆಗಿದ್ದರು. ಆದರೆ ಅಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರಕ್ಕೆ ಬಂದ ಮೇಲೆ ಬಹುತೇಕ ಆತ್ಮೀಯ ಸದಸ್ಯರನ್ನು ಸೇರಿದಂತೆ ತಮ್ಮನ್ನು ಅಧ್ಯಕ್ಷರನ್ನಾಗಿಸಲು ದುಡಿದ ಬಹುತೇಕರನ್ನು ದೂರವಿಟ್ಟು ಅಧಿಕಾರ ಚಲಾಯಿಸಿದ ಹಿನ್ನಲೆಯಲ್ಲಿ ಇಂದು ಅಪ್ಸರ್ಪಾಷ ಏಕಾಂಗಿಯಾಗಿದ್ದಾರೆ.
ಅಧ್ಯಕ್ಷರ ವಿರುದ್ದ ಅವಿಶ್ವಾಸ ಮಂಡಿಸಿ ಸಹಿ ಹಾಕಿರುವ ಸದಸ್ಯರು: ನಗರದ ೧ ನೇ ವಾರ್ಡಿನ ಲಕ್ಷ್ಮಯ್ಯ, ೨ ನೇ ವಾರ್ಡಿನ ಜಬೀವುಲ್ಲಾ, ೩ ನೇ ವಾರ್ಡಿನ ಎಸ್.ರಾಘವೇಂದ್ರ, ೫ ನೇ ವಾರ್ಡಿನ ಪಿ.ಕೆ.ಕಿಶನ್, ೬ ನೇ ವಾರ್ಡಿನ ಎಂ.ವಿ.ವೆಂಕಟಸ್ವಾಮಿ, ೮ ನೇ ವಾರ್ಡಿನ ಸುಮಿತ್ರರಮೇಶ್, ೯ ನೇ ವಾರ್ಡಿನ ಚಿಕ್ಕಮುನಿಯಪ್ಪ, ೧೦ ನೇ ವಾರ್ಡಿನ ಜೆ.ಎಂ.ಬಾಲಕೃಷ್ಣ, ೧೧ ನೇ ವಾರ್ಡಿನ ಸಂಧ್ಯಾ ಮಂಜುನಾಥ್, ೧೨ ನೇ ವಾರ್ಡಿನ ಶಭಾನ ಮುನಾವರ್, ೧೩ ನೇ ವಾರ್ಡಿನ ಸರಳಾ ಶ್ರೀಧರ್, ೧೪ ನೇ ವಾರ್ಡಿನ ಶಾಹೀದಾಭಾನು, ೧೫ ನೇ ವಾರ್ಡಿನ ಪ್ರಭಾವತಿ ಸುರೇಶ್, ೧೭ ನೇ ವಾರ್ಡಿನ ಮುಷ್ಠರಿ ತನ್ವೀರ್ಪಾಷ, ೧೮ ನೇ ವಾರ್ಡಿನ ಇಲಿಯಾಜ್ಬೇಗ್, ೨೦ ನೇ ವಾರ್ಡಿನ ಶಫಿ,ಎಸ್, ೨೨ ನೇ ವಾರ್ಡಿನ ಕೇಶವಮೂರ್ತಿ, ೨೩ ನೇ ವಾರ್ಡಿನ ಸುನೀತಶ್ರೀನಾಥ್, ೨೪ ನೇ ವಾರ್ಡಿನ ಎಸ್.ಬಿ.ಬಾಬು, ೨೫ ನೇ ವಾರ್ಡಿನ ನಸ್ರೀನ್ತಾಜ್ ಮಹ್ಮದ್ ಅಲಿ, ೨೭ ನೇ ವಾರ್ಡಿನ ಪರ್ವಿನ್ ಸೈಯ್ಯದ್ಪಾಷ.

