ಭಾರತದ ಇತಿಹಾಸದಲ್ಲಿಯೇ ವಿಶ್ವೇಶ್ವರಯ್ಯ ಅವರಿಗೆ ಹೋಲಿಸುವ ಮತ್ತೊಬ್ಬ ವ್ಯಕ್ತಿ ಸಿಗಲಾರರು. ಸರ್ ಎಂ. ವಿ ಅವರ ಬದುಕು ಮತ್ತು ಸಾಧನೆಯನ್ನು ಜನ ಅರಿತಷ್ಟೂ ನಮ್ಮ ಎಳೆಯ ಪೀಳಿಗೆಯ ಎದುರು ಆದರ್ಶದ ಉದಾಹರಣೆಯೊಂದು ಪ್ರಜ್ವಲಿಸಿ ನಿಲ್ಲುತ್ತದೆ ಎಂದು ಮುಖ್ಯ ಶಿಕ್ಷಕ ಶಿವಶಂಕರ್ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲಂಚಕೋರತನ, ಲಾಭಕೋರತನದ ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಸಮಾಜದಲ್ಲಿ ವಿಶ್ವೇಶ್ವರಯ್ಯ ಅವರ ಪ್ರಾಮಾಣಿಕ ನಿಸ್ವಾರ್ಥ ದುಡಿಮೆ ನಮಗೆ ದಾರಿದೀಪವಾಗಬಲ್ಲದು ಎಂದು ತಿಳಿಸಿದರು.
ವಿಜ್ಞಾನ ಶಿಕ್ಷಕ ದೊಡ್ಡನಾಯ್ಕ ಮಾತನಾಡಿ, ಶಿಕ್ಷಣ, ಔದ್ಯಮಿಕ, ವ್ಯಾಪಾರ, ವಾಣಿಜ್ಯ, ತಾಂತ್ರಿಕ ಶಿಕ್ಷಣ, ನೀರಾವರಿ ಮುಂತಾದ ಕ್ಷೇತ್ರಗಳ ಅಭಿವೃದ್ಧಿಗೆ ಪರ್ಯಾಯ ಹೆಸರು ಸರ್.ಎಂ. ವಿಶ್ವೇಶ್ವರಯ್ಯನವರು. ಒಂದು ನಾಡಿನ ಏಳಿಗೆಗೆ ಏನೆಲ್ಲಾ ಬೇಕೊ ಆ ಎಲ್ಲಾ ದಿಕ್ಕಿನಲ್ಲೂ ಕೆಲಸ ಮಾಡಿ ಒಂದು ನಾಡಿನ ಏಳಿಗೆಗೆ ದಾರಿ ಹಾಕಿಕೊಟ್ಟ ಹರಿಕಾರ ಎಂದು ತಿಳಿಸಿದರು.
ಶಾಲೆಯ ಕನ್ನಡ ಮತ್ತು ವಿಜ್ಞಾನ ಸಂಘದ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಡೆಸಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿಗಳಾದ ಪುನಿತ್, ದೇವರಾಜ ಮತ್ತು ಮಾರುತಿ ಮಾತನಾಡಿದರು.
ವಿಶ್ವೇಶ್ವರಯ್ಯ ಅವರ ಪ್ರಾಮಾಣಿಕ ನಿಸ್ವಾರ್ಥ ದುಡಿಮೆ ನಮಗೆ ದಾರಿದೀಪ
ಕಾಲುವೆಯನ್ನು ತೆರವುಗೊಳಿಸಿದ ರೈತ ಸಂಘದ ಸದಸ್ಯರು
ಈಚೆಗೆ ಬಿದ್ದ ಮಳೆಗೆ ನೀರು ಕೆರೆ ಕಾಲುವೆಗಳಲ್ಲಿ ನೀರು ತುಂಬುತ್ತಿದೆ. ಆದರೆ ನಗರದ ಹೊರವಲಯದ ಅಮ್ಮನ ಕೆರೆ ಏರಿಯ ಮೇಲೆ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಯಿಂದಾಗಿ ಕಾಲುವೆಯು ಮುಚ್ಚಿಹೋಗಿದ್ದು ಅದನ್ನು ತೆರವುಗೊಳಿಸಬೇಕೆಂದು ಶುಕ್ರವಾರ ರೈತ ಸಂಘದ ಮುಖಂಡರು ಒತ್ತಾಯಿಸಿದರು.
ತಾಲ್ಲೂಕಿನ ಹಂಡಿಗನಾಳ ಕ್ರಾಸ್ ನ ಸೇತುವೆ ಬಳಿ ರಂಗದಾಮ ಕಾಲುವೆಯನ್ನು ಹೆದ್ದಾರಿ ಕಾಮಗಾರಿ ಮಾಡುವಾಗ ಮುಚ್ಚಿ ಹೋಗಿದ್ದು ತರವುಗೊಳಿಸಲು ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಒತ್ತಾಯಿಸಿ ತಹಶಿಲ್ದಾರ್ ಅಜಿತ್ ಕುಮಾರ್ ರೈ ಅವರಿಗೆ ಸ್ಥಳವನ್ನು ತೋರಿಸಿ ವಿವರಿಸಿದರು. ತಕ್ಷಣ ಹೆದ್ದಾರಿ ಕಾಮಗಾರಿಯ ಎಂಜಿನಿಯರ್ ಅವರಿಗೆ ತಿಳಿಸಿ ಸ್ಥಳಕ್ಕೆ ಕರೆಸಿ ಅವರೊಂದಿಗೆ ಮಾತನಾಡಿ ಮುಚ್ಚಿದ್ದ ಕಾಲುವೆಯನ್ನು ತೆರವುಗೊಳಿಸಲಾಯಿತು.
ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಮುನಿನಂಜಪ್ಪ, ನಾರಾಯಣಸ್ವಾಮಿ, ರಾಮಕೃಷ್ಣಪ್ಪ, ದೇವರಾಜ್, ಪುಟ್ಟಮೂರ್ತಿ, ನರಸಿಂಹಮೂರ್ತಿ, ಹರೀಶ್ ಹಾಜರಿದ್ದರು.
ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ಕರವೇ ಪ್ರತಿಭಟನೆ
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ಗುರುವಾರ ಕನ್ನಡ ರಕ್ಷಣಾ ವೇದಿಕೆ ಸಂಘಟನೆಯ ಸದಸ್ಯರು ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ಗ್ರೇಡ್ 2 ತಹಶೀಲ್ದಾರ್ ಅವರಿಗೆ ಮನವಿಯನ್ನು ಸಲ್ಲಿಸಿದರು.
ನಗರದ ಬಸ್ ನಿಲ್ದಾಣದಿಂದ ಮೆರವಣಿಗೆಯನ್ನು ನಡೆಸಿ ಕರವೇ ಸದಸ್ಯರು ತಾಲ್ಲೂಕು ಕಚೇರಿಯ ಮುಂದೆ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿರುವ ಹಂತಕರನ್ನು ಬಂಧಿಸುವಂತೆ ಒತ್ತಾಯಿಸಿದರು.
ಗೌರಿ ಲಂಕೇಶ್ ಅವರ ಹತ್ಯೆ ಖಂಡನೀಯವಾಗಿದ್ದು, ಇದು ವಿಚಾರ ಹಿಂದಿನ ಮತ್ತು ವಿಚಾರ ಹತ್ತಿಕ್ಕುವ ಪ್ರಯತ್ನವಾಗಿದೆ. ರಾಜ್ಯ, ಕೇಂದ್ರ ಸರ್ಕಾರಗಳು ಪರಸ್ಪರ ರಾಜಕೀಯ ಲಾಭಕ್ಕೆ ಈ ಹತ್ಯೆಯನ್ನು ಉಪಯೋಗಿಸಿಕೊಳ್ಳದೆ, ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸುವ ಮೂಲಕ ಸಂವಿಧಾನ ಪರವಾಗಿದ್ದೇವೆಂದು ತೋರಿಸಬೇಕೆಂದು ಆಗ್ರಹಿಸಿದರು.
ವಿಚಾರವಾದಿ ಗೌರಿ ಲಂಕೇಶ್ ಹತ್ಯೆಯ ಹಿಂದಿರುವ ದುಷ್ಕರ್ಮಿಗಳನ್ನು ರಾಜ್ಯ ಸರ್ಕಾರ ಕೂಡಲೇ ಬಂಧಿಸಬೇಕು ಎಂದು ಗ್ರೇಡ್ 2 ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ, ಗೌರವಾಧ್ಯಕ್ಷ ನಾಗರಾಜ್, ಧನುಶ್ ಗೌಡ, ಶಿವಕುಮಾರ್, ಸುರೇಶ್, ಕೇಶವಮೂರ್ತಿ, ಮಣಿ, ಶ್ರೀಧರ್, ಅಪ್ಪು, ರವಿ, ಮೂರ್ತಿ, ಮುನಿಯಪ್ಪ, ತಂಗರಾಜು ಈ ಸಂದರ್ಭದಲ್ಲಿ ಹಾಜರಿದ್ದರು.
ನೀರಿನ ಸದ್ಭಳಕೆ, ಕೃಷಿಯಲ್ಲಿನ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಬೇಕು
ಸರ್ಕಾರವು ಕೃಷಿ ಹಾಗೂ ಕೃಷಿಕರಿಗೆ ಎಲ್ಲ ರೀತಿಯಿಂದಲೂ ಬೆಂಬಲ ನೀಡುತ್ತಿದೆ. ನೀರಿನ ಸದ್ಭಳಕೆ, ಕೃಷಿಯಲ್ಲಿನ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವುದು ಹಾಗೂ ಸಮಗ್ರ ಕೃಷಿ ಪದ್ಧತಿಯನ್ನು ರೂಢಿಸಿಕೊಳ್ಳುವುದು ಮುಖ್ಯ ಎಂದು ತಹಶೀಲ್ದಾರ್ ಎಸ್.ಅಜಿತ್ ಕುಮಾರ್ ರೈ ತಿಳಿಸಿದರು.
ತಾಲ್ಲೂಕಿನ ಶೀಗೆಹಳ್ಳಿಯ ಸರ್ಕಾರಿ ಶಾಲಾ ಆವರಣದಲ್ಲಿ ಬುಧವಾರ ಚಿಂತಾಮಣಿ ಕುರುಬೂರಿನ ರೇಷ್ಮೆ ಕೃಷಿ ವಿಶ್ವವಿದ್ಯಾಲಯದ ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳು ಕ್ಷೇತ್ರ ಅನುಭವ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಐಸಿರಿ ಕೃಷಿ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಲೀಡ್ ಬ್ಯಾಂಕ್ನ ಅಧಿಕಾರಿಗಳ ನೇತೃತ್ವದಲ್ಲಿ ಎಲ್ಲ ಬ್ಯಾಂಕುಗಳ ಅಧಿಕಾರಿಗಳ ಸಭೆ ನಡೆಸಿ ಯಾವುದೆ ಕಾರಣಕ್ಕೂ ಬರಗಾಲದ ಅವಧಿಯಲ್ಲಿ ಸಾಲ ಮರುಪಾವತಿಸುವಂತೆ, ಬಡ್ಡಿ ಕಟ್ಟುವಂತೆ ಅಥವಾ ಇನ್ನಾವುದೆ ರೀತಿಯಲ್ಲಿ ನೊಟೀಸ್ ನೀಡುವಂತ ಕ್ರಮ ಜರುಗಿಸಬಾರದು ಎಂದು ಸೂಚಿಸಲಾಗಿದೆ ಎಂದರು.
ರೇಷ್ಮೆ ಇಲಾಖೆಯ ಉಪನಿರ್ದೆಶಕ ಬಿ.ಆರ್.ನಾಗಭೂಷಣ್ ಮಾತನಾಡಿ, ರೇಷ್ಮೆ ಕೃಷಿಯಲ್ಲಿ ಸಾಕಷ್ಟು ಆವಿಷ್ಕಾರಗಳು ಆಗಿದ್ದು ಅವುಗಳನ್ನು ಅಳವಡಿಸಿಕೊಂಡು ಕಡಿಮೆ ವೆಚ್ಚದಲ್ಲಿ ಅಧಿಕ ಉತ್ಪಾದನೆ, ಅಧಿಕ ಲಾಭಗಳಿಸುವಂತಾಗಬೇಕೆಂದರು.
ರೇಷ್ಮೆ, ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಸಮಗ್ರ ಕೃಷಿ ಕುರಿತು ನಡೆದ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳ ಹಲವು ಮಾದರಿಗಳು ಗಮನ ಸೆಳೆದವು.
ಶೀಗೆಹಳ್ಳಿ ಹಾಗೂ ಸುತ್ತ ಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ರೈತರಿಗೆ ಕರ ಪತ್ರಗಳನ್ನು ಹಂಚಲಾಯಿತಲ್ಲದೆ ವಿವಿದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ನೀಡಿದರು.
ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹರಿಪ್ರಸಾದ್, ಸದಸ್ಯರಾದ ಶ್ರೀನಿವಾಸರೆಡ್ಡಿ, ಕಲ್ಪನಜಯಣ್ಣ, ಮಂಜುನಾಥ್, ಪ್ರಗತಿಪರ ರೈತ ಮಳ್ಳೂರು ಶಿವಣ್ಣ, ರೇಷ್ಮೆ ಕೃಷಿ ಸಹಾಯಕ ನಿರ್ದೆಶಕ ಬೋಜಣ್ಣ, ವಿಸ್ತರಣಾಕಾರಿ ರಾಮಕೃಷ್ಣಪ್ಪ, ಮಾರುಕಟ್ಟೆ ಪ್ರಭಾರಿ ಉಪನಿರ್ದೆಶಕ ಬೈರಾರೆಡ್ಡಿ, ರೇಷ್ಮೆ ಕೃಷಿ ವಿಶ್ವವಿದ್ಯಾಲಯದ ಡೀನ್ ಡಾ.ವೆಂಕಟರೋಣಪ್ಪ, ಡಾ.ರಾಜಣ್ಣ, ಡಾ.ಆರ್.ಬಿ.ನಾಯಕ್, ಡಾ.ರಾಮಕೃಷ್ಣ ನಾಯಕ್, ಡಾ.ಶ್ರೀನಿವಾಸರೆಡ್ಡಿ, ಡಾ.ನಾರಾಯಣಸ್ವಾಮಿ, ಡಾ.ರಿಂಕು ವರ್ಮ, ಡಾ.ಅಮರನಾಥ್, ಭಾರತಿ, ಡಾ.ಸೀನಪ್ಪ, ವಿದ್ಯಾರ್ಥಿಗಳಾದ ಸುಪ್ರಿಯಾ, ಶ್ವೇತ, ಸುಮಾ, ಝಕಿಯಾ ಸುಲ್ತಾನ, ರಘು, ಸೋಮೇಶ್ ಹಿರೇಮಠ್, ಸಂಜಿತ್ ಕುಮಾರ್, ಮೋಹನ್, ರುದ್ರೇಶ್, ಸುಭಾಶ್, ರವಿತೇಜ, ಸಾಗರ್, ಶರತ್ ಹಾಜರಿದ್ದರು.
ದಕ್ಷಿಣ ಪಿನಾಕಿನಿ ನದಿ ಮತ್ತು ಕಟ್ಟು ಕಾಲುವೆ ಪುನಶ್ಚೇತನ
ದಕ್ಷಿಣ ಪೆನ್ನಾರ್ ಎಂದು ಕರೆಯುವ ದಕ್ಷಿಣ ಪಿನಾಕಿನಿ ನದಿ ಪುನಶ್ಚೇತನ ಮತ್ತು ಮೇಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಟ್ಟು ಕಾಲುವೆ ಪುನಶ್ಚೇತನ ಮಾಡುವುದರಿಂದ ಈ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಲಿದೆ ಎಂದು ವಿಜ್ಞಾನಿ ರಾಘವೇಂದ್ರ ಶೆಟ್ಟಿ ತಿಳಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಟ್ಟು ಕಾಲುವೆಗಳನ್ನು ಗ್ರಾಮ ಪಂಚಾಯ್ತಿಯ ಜನಪ್ರತಿನಿಧಿಗಳೊಂದಿಗೆ ವೀಕ್ಷಿಸಿ ಅವರು ಮಾತನಾಡಿದರು.
ಜಿಲ್ಲೆಯ ನಂದಿಬೆಟ್ಟದ ವಾಯುವ್ಯಕ್ಕೆ ಇರುವ ಚನ್ನರಾಯನಬೆಟ್ಟದಲ್ಲಿ ಹುಟ್ಟುವ ದಕ್ಷಿಣ ಪಿನಾಕಿನಿ ನದಿ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹರಿದು ದೇವನಹಳ್ಳಿ ತಾಲ್ಲೂಕನ್ನು ವಿಜಯಪುರದ ದಕ್ಷಿಣದಲ್ಲಿ ಪ್ರವೇಶಿಸುತ್ತದೆ. ಮುಂದೆ ಹೊಸಕೋಟೆ ತಾಲ್ಲೂಕು ದಾಟಿ ತಮಿಳುನಾಡನ್ನು ಪ್ರವೇಶಿಸುತ್ತದೆ. ಜಂಗಮಕೋಟೆ ಭದ್ರನಕೆರೆ ಮತ್ತು ಹೊಸಕೋಟೆ ಕೆರೆ ಈ ನದಿಗೆ ಅಡ್ಡಲಾಗಿ ಕಟ್ಟಿರುವ ಕೆರೆಗಳು. ಅಲ್ಲದೆ ಅಲ್ಲಲ್ಲಿ ಸಣ್ಣ ಕೆರೆಗಳು ಮತ್ತು ಒಡ್ಡುಗಳು ಸಹ ಇವೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹರಿಯುವ ದಕ್ಷಿಣ ಪಿನಾಕಿನಿ ನದಿಯನ್ನು ಮೇಲೂರು ತಾಲ್ಲೂಕಿನ ಕಟ್ಟು ಕಾಲುವೆಗಳಿಗೆ ಹರಿಸುವ ಮೂಲಕ ಅಂತರ್ಜಲ ವೃದ್ಧಿಯಾಗಲಿದೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ತಾಲ್ಲೂಕಿನ ಕೊಂಡೇನಹಳ್ಳಿ, ಕಡಿಶೀಗೇನಹಳ್ಳಿ, ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ, ಕಂಬದಹಳ್ಳಿ, ಮೇಲೂರು, ಭಕ್ತರಹಳ್ಳಿ, ಕಾಕಚೊಕ್ಕಂಡನಹಳ್ಳಿ ನಂತರ ಜಂಗಮಕೋಟೆಯ ಭದ್ರನಕೆರೆಗೆ ಕಾಲುವೆ ಸೇರುತ್ತದೆ. ಈ ಕಾಲುವೆಯ ಪುನಶ್ಚೇತನ ಅತ್ಯವಶ್ಯಕ ಎಂದು ತಿಳಿಸಿದರು.
ಗುಜರಾತ್ ರಾಜ್ಯದಲ್ಲಿ ಈಚೆಗೆ 100 ಕಿಮೀ ಕಾಲುವೆಯನ್ನು ತೋಡಿದ್ದಾರೆ. ಅದರ ಅಕ್ಕಪಕ್ಕದ ಐದು ಕಿಮೀ ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಯಾಗಿ ರೈತರು ಆರ್ಥಿಕವಾಗಿ ಸಬಲರಾಗಿದ್ದಾರೆ. ಆದರೆ ನಮ್ಮಲ್ಲಿ ಈಗಾಗಲೇ ಇರುವ ಕಾಲುವೆಗಳನ್ನು ಸಂರಕ್ಷಿಸಬೇಕು. ಅದರಲ್ಲಿ ನೀರು ಹರಿಯುವಂತಾಗಬೇಕು. ಚರಂಡಿ ತ್ಯಾಜ್ಯ, ಮನೆ ಬಳಕೆ ನೀರು, ಪ್ಲಾಸ್ಟಿಕ್, ಕಸ ಮುಂತಾದವುಗಳನ್ನು ಕಾಲುವೆಗೆ ಹರಿಸಬಾರದು ಎಂದು ವಿವರಿಸಿದರು.
ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಂದು ಸಾವಿರ ಮಂದಿ ರೈತರ ಗುಂಪನ್ನು ರಚಿಸಿ ಸ್ವಯಂಪ್ರೇರಿತರಾಗಿ ಕಾಲುವೆ ಪುನಶ್ಚೇತನವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಬೇಕು. ಇದರೊಂದಿಗೆ ಖಾಲಿ ಸ್ಥಳಗಳಲ್ಲಿ ಗಿಡಗಳನ್ನು ನೆಡುವುದು, ಜಮೀನಿನಲ್ಲಿ ಮಣ್ಣು ರಕ್ಷಣೆಯ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು.
ದಕ್ಷಿಣ ಪಿನಾಕಿನಿ ನದಿ ಪುನಶ್ಚೇತನ ಸಮಿತಿ ಸದಸ್ಯರಾದ ವೆಂಕಟರೆಡ್ಡಿ, ಲೋಕೇಶ್, ಗ್ರಾಮ ಪಂಚಾಯ್ತಿ ಸದಸ್ಯರಾದ ಆರ್.ಎ.ಉಮೇಶ್, ಕೆ.ಮಂಜುನಾಥ್, ರೂಪೇಶ್, ಕಾರ್ಯದರ್ಶಿ ಸಿದ್ದಪ್ಪ, ಧರ್ಮೇಂದ್ರ, ಕೆ.ಎಸ್.ನಂಜೇಗೌಡ, ಕೇಶವಮೂರ್ತಿ, ಲಕ್ಷ್ಮಣ್, ಕೆ.ಪಿ.ಚಂದ್ರೇಗೌಡ, ಗೋಪಾಲರೆಡ್ಡಿ, ಸಿ.ಆರ್.ಚಂದ್ರಶೇಖರ್, ನಟರಾಜ್, ಆಂಜಿನಪ್ಪ, ಸುಧೀರ್, ಸುದರ್ಶನ್ ಹಾಜರಿದ್ದರು.
ಪತ್ರ ಸಂಸ್ಕೃತಿಯ ಮೂಲಕ ಸ್ವಚ್ಛತೆ ಅಭಿಯಾನ
‘ನಮ್ಮ ಶಾಲೆಯ ಸುತ್ತಮುತ್ತ ಕಸ, ನೀರು ನಿಲ್ಲದಂತೆ ಮಾಡಬೇಕು. ರೋಗಮುಕ್ತ ಪರಿಸರವನ್ನು ಮಾಡಬೇಕು. ನಾವು ಶಾಲೆಯಲ್ಲಿ ಸ್ವಚ್ಛತೆಯ ಬಗ್ಗೆ ಕಲಿಯುತ್ತಿದ್ದೇವೆ. ನಮ್ಮ ಪೋಷಕರಾದ ನೀವು ಎಲೆ ಅಡಿಕೆ ತಂಬಾಕನ್ನು ತಿಂದು ಎಲ್ಲೆಂದರಲ್ಲಿ ಉಗಿಯಬಾರದು. ನಾವೆಲ್ಲರೂ ಸ್ವಚ್ಛ ಭಾರತ ನಿರ್ಮಾಣದಲ್ಲಿ ಶ್ರಮಿಸೋಣ…’ ಎಂಬ ಒಕ್ಕಣಿಕೆಯಿರುವ ಪತ್ರಗಳನ್ನು ಗುರುವಾರ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬರೆದರು.
ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯ್ತಿ ಸದಸ್ಯರಿಗೆ ಪತ್ರಗಳನ್ನು ಬರೆದರು. ಶೌಚಾಲಯ ನಿರ್ಮಿಸಿರದ ಮನೆಗಳ ಮಕ್ಕಳು ತಮ್ಮ ಪೋಷಕರಿಗೆ ಖಡ್ಡಾಯವಾಗಿ ಶೌಚಾಲಯ ನಿರ್ಮಿಸಬೇಕೆಂದು ಪತ್ರವನ್ನು ಸಹ ಬರೆದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ ಮಾತನಾಡಿ, ‘ಸ್ವಚ್ಛ ಪಖ್ವಾಡಾ’ ಎಂಬ ಕಾರ್ಯಕ್ರಮದಡಿ ನಾವು ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಕುರಿತಂತೆ ಅರಿವು ಮೂಡಿಸುತ್ತಾ, ಅವರಿಂದ ಜನಪ್ರತಿನಿಧಿಗಳಿಗೆ, ಪೋಷಕರಿಗೆ, ಶಾಲಾಭಿವೃದ್ಧಿ ಸಮಿತಿಯವರಿಗೂ ಸಹ ಸ್ವಚ್ಛತೆಯ ಕುರಿತಂತೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಪತ್ರ ಸಂಸ್ಕೃತಿಯನ್ನು ನಮ್ಮ ಗ್ರಾಮ, ಶಾಲೆ, ಪರಿಸರ ಸ್ವಚ್ಛತೆಗಾಗಿ ಬಳಸುತ್ತಿದ್ದೇವೆ’ ಎಂದು ಹೇಳಿದರು.
ಶಿಕ್ಷಕರಾದ ಎಸ್.ಚಾಂದ್ ಪಾಷ, ಅಶೋಕ್, ಭಾರತಿ ಹಾಜರಿದ್ದರು.
ಶ್ರೀಸಾಯಿನಾಥಜ್ಞಾನ ಮಂದಿರದ ವಾರ್ಷಿಕೋತ್ಸವ: ಸ್ವಾಮಿಯ ಕಲ್ಯಾಣೋತ್ಸವ ಕಾರ್ಯಕ್ರಮ
ತಾಲ್ಲೂಕಿನ ಮಳ್ಳೂರು ಸಮೀಪದ ಬಟ್ರೇನಹಳ್ಳಿಯ ಶ್ರೀಸಾಯಿನಾಥಜ್ಞಾನ ಮಂದಿರದ ೧೨ನೇ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ವಲ್ಲಿ ದೇವಸೇನೆ ಸಮೇತ ಸುಬ್ರಮಣ್ಯಸ್ವಾಮಿಯ ಕಲ್ಯಾಣೊತ್ಸವ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಶ್ರೀಸಾಯಿನಾಥ ಜ್ಞಾನ ಮಂದಿರದ ೧೨ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಶ್ರೀಬಾಬಾ ರವರ ಪಲ್ಲಕ್ಕಿಯ ಉತ್ಸವವನ್ನು ಗುರುವಾರ ನಡೆಸಲಾಯಿತು. ಜ್ಞಾನ ಮಂದಿರದ ಸಮೀಪ ಇರುವ ಭಟ್ರೇನಹಳ್ಳಿಯ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಹಾಗೂ ಗ್ರಾಮ ಪ್ರದಕ್ಷಿಣೆ ನೆರವೇರಿಸಲಾಯಿತು.
ಡೋಲು ಭಾಜ ಭಜಂತ್ರಿ ನಾದಸ್ವರ ಹಾಗೂ ಕಳಶಹೊತ್ತ ಹೆಂಗಳೆಯರು, ಮುತ್ತೈದೆಯರು ಉತ್ಸವಕ್ಕೆ ಮತ್ತಷ್ಟು ಮೆರಗು ನೀಡಿದರು. ಭಕ್ತರ ತಂಡವೇ ನಡೆಸಿಕೊಟ್ಟ ಕೋಲಾಟ ಭಕ್ತರನ್ನು ಭಕ್ತಿ ಸಾಗರದಲ್ಲಿ ತೇಲುವಂತೆ ಮಾಡಿತು.
ಬಾಬಾಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಮುಕ್ತಿನಾಗ ದೇವಾಲಯದ ಗುರು ಮಾತಾಜಿ ಭಕ್ತರನ್ನು ಉದ್ದೇಶಿಸಿ ಮಾತನಾಡಿ, ಶಾಂತಿ ನೆಮ್ಮದಿ ಎಲ್ಲೋ ಇಲ್ಲ ಅದು ನಮ್ಮಲ್ಲೆ ಇದೆ. ಆದರೆ ಅದನ್ನು ಭಕ್ತಿ ಮಾರ್ಗದಲ್ಲಿ ಹುಡುಕಿದಾಗಲೆ ಸಿಗಲಿದೆ ಎಂದರು.
ತಮ್ಮ ನಿತ್ಯದ ಬದುಕಿನ ಜಂಜಾಟದ ನಡುವೆಯೂ ಭಗವಂತನ ಧ್ಯಾನದಿಂದ, ಭಕ್ತಿ ಮಾರ್ಗದಿಂದ ನಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಬಹುದೆ ಎಂದರು.
ಸಾವಿರಾರು ಭಕ್ತರು ಸ್ವಾಮಿಯ ದರ್ಶನ ಪಡೆದರು. ತೀರ್ಥ ಪ್ರಸಾದ ಹಾಗೂ ಸಾಮೂಹಿಕ ಅನ್ನ ಸಂತರ್ಪಣೆಯಲ್ಲಿ ನೈವೇದ್ಯದ ಪ್ರಸಾದವನ್ನು ಸ್ವೀಕರಿಸಿದರು.
ದೇವಾಲಯದ ಸಮಿತಿಯ ಮುಖ್ಯಸ್ಥರಾದ ನಾರಾಯಣಸ್ವಾಮಿ, ಸೀತಾರಾಮರೆಡ್ಡಿ, ಗೋಪಾಲಪ್ಪ, ದೇವರಾಜ್, ಸೊಣ್ಣಪ್ಪ ಹಾಜರಿದ್ದರು.
ರಾಜ್ಯ ಸರ್ಕಾರದ ಸಹಕಾರವಿಲ್ಲದಿದ್ದರೂ ಮೆಗಾ ಡೈರಿ ನಿರ್ಮಿಸಿ ಹೈನುಗಾರಿಕೆಯನ್ನು ಬಲಪಡಿಸುತ್ತೇವೆ
ಚಿಕ್ಕಬಳ್ಳಾಪುರದಲ್ಲಿ ನಿರ್ಮಾಣವಾಗುತ್ತಿರುವ ಅಲ್ಟ್ರಾ ಮೆಗಾ ಡೈರಿಯು ನಮ್ಮ ಭಾಗದ ಲಕ್ಷಾಂತರ ರೈತರ ಕಷ್ಟವನ್ನು ಕಡಿಮೆ ಮಾಡಲಿದೆ. ಈಗಿನ ರಾಜ್ಯ ಸರ್ಕಾರ 6 ಕೋಟಿ ರೂಗಳನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ. ಆದರೂ ಮೆಗಾ ಡೈರಿ ನಿರ್ಮಿಸಿ ನಮ್ಮ ರೈತರ ಶಕ್ತಿಯೇನೆಂದು ತೋರಿಸುತ್ತೇವೆ ಎಂದು ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳದ ಕೆ.ವಿ.ಭವನದಲ್ಲಿ ಬುಧವಾರ ನಡೆದ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಪ್ರಾದೇಶಿಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮಲ್ಲಿ ನೀರಿಗೆ ಬರವಿದ್ದರೂ ಹಾಲಿಗೆ ಬರವಿಲ್ಲ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳಿಂದ ಪ್ರತಿ ದಿನ 10 ಲಕ್ಷ ಲೀಟರ್ ಹಾಲನ್ನು ಉತ್ಪಾದಿಸಲಾಗುತ್ತಿದೆ. ರೈತರ ಹೆಚ್ಚಿನ ಬೆಲೆ ಸಿಗಬೇಕಾದರೆ ಹಾಲನ್ನು ವಿವಿಧ ರೀತಿಯಲ್ಲಿ ಸಂಸ್ಕರಿಸಿ ದೇಶ ವಿದೇಶಗಳಿಗೆ ರಫ್ತು ಮಾಡಬೇಕು. ಅದಕ್ಕಾಗಿಯೇ ನಮ್ಮ ರೈತರ ಆಶೀರ್ವಾದದಿಂದ ಅಪರೂಪದ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ನಾಲ್ಕೂ ಜಿಲ್ಲೆಗಳಲ್ಲಿಯೇ ವಿಶೇಷವಾದ ಮೆಗಾ ಡೈರಿಯನ್ನು ನಿರ್ಮಿಸಲಾಗುತ್ತಿದೆ. ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಯವರು ನಮ್ಮ ಶ್ರಮಕ್ಕೆ 12 ಕೋಟಿ ರೂ ನೀಡಿದ್ದಾರೆ. ಆದರೆ ರಾಜ್ಯ ಸರ್ಕಾರ ನಮ್ಮ ಭಾಗದಲ್ಲಿ ಹೈನುಗಾರಿಕೆಯನ್ನು ನಂಬಿದವರ ಬೆಂಬಲಕ್ಕೆ ಬರದಿರುವುದು ದುರಂತ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ವತಿಯಿಂದ ಈಚೆಗೆ ದೆಹಲಿಯ ಇಂಟರ್ ನ್ಯಾಷನಲ್ ಫ್ರೆಂಡ್ಶಿಪ್ ಸೊಸೈಟಿ ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್ಗೆ ಭಾರತ್ ಜ್ಯೋತಿ ಪ್ರಶಸ್ತಿ ನೀಡಿದ್ದರ ಹಿನ್ನೆಲೆಯಲ್ಲಿ ಅವರನ್ನು ಗೌರವಿಸಲಾಯಿತು.
ವರ್ಷ ಪೂರ್ತಿ ಹೆಚ್ಚಿನ ಹಾಲು ಸರಬರಾಜು ಮಾಡಿರುವ ರೈತರಾದ ಸುಮಾ ರಂಗನಾಥ್, ನಾಗಮಂಗಲ(102 ಲೀಟರ್ ಸರಾಸರಿ), ಅಶೋಕ್, ಮಳಮಾಚನಹಳ್ಳಿ(33 ಲೀಟರ್), ಶಾರದಮ್ಮ, ಸಾದಲಿ(36 ಲೀಟರ್), ರಮೇಶ, ಚಿಂತಡಪಿ(86 ಲೀಟರ್), ಮುನಿಕೃಷ್ಣ, ಬೆಳ್ಳೂಟಿ(70 ಲೀಟರ್), ಸರೋಜಮ್ಮ, ಕಾಳನಾಯಕನಹಳ್ಳಿ(65 ಲೀಟರ್) ಅವರನ್ನು ಸನ್ಮಾನಿಸಲಾಯಿತು. ರಾಸು ವಿಮೆ ಮಾಡಿಸಿದ್ದ 8 ಮಂದಿ ಫಲಾನುಭವಿಗಳಿಗೆ ತಲಾ 50 ಸಾವಿರ ರೂಗಳ ಚೆಕ್ ವಿತರಿಸಲಾಯಿತು. ಹಾಲು ಉತ್ಪಾದಕರ ಕುಟುಂಬದಲ್ಲಿ ಆದ ಅಕಾಲಿಕ ಮರಣಕ್ಕೆ ಪರಿಹಾರವಾಗಿ ಸೊಣಗಾನಹಳ್ಳಿ ಲಕ್ಷ್ಮೀದೇವಮ್ಮ ಅವರಿಗೆ ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ 10 ಸಾವಿರ ರೂಗಳನ್ನು ನೀಡಿದರು.
ಹಾಲು ಶೇಖರಣೆ, ಗುಣಮಟ್ಟ, ತಾಂತ್ರಿಕ ಸೌಲಭ್ಯ ಮುಂತಾದ ವಿಚಾರಗಳ ಬಗ್ಗೆ ಕಾರ್ಯದರ್ಶಿ ಗೋವಿಂದರಾಜು ಸಮಸ್ಯೆಗಳು ಹಾಗೂ ಸಲಹೆಗಳನ್ನು ನೀಡಿದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ವ್ಯವಸ್ಥಾಪಕ ಡಾ.ವಿ.ಎಂ.ರಾಜು, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ವಿ.ನಾಗರಾಜ್, ಶಿವಾರೆಡ್ಡಿ, ಉಪವ್ಯವಸ್ಥಾಪಕ ಹನುಮಂತರಾವ್, ಕೆಂಪರೆಡ್ಡಿ, ಅಶ್ವತ್ಥರೆಡ್ಡಿ, ಶ್ರೀನಿವಾಸ್ ಹಾಜರಿದ್ದರು.
ಉತ್ತಮ ಆರೋಗ್ಯಕ್ಕಾಗಿ ಪೌಷ್ಠಿಕ ಆಹಾರ ಸೇವಿಸಿ
ಉತ್ತಮ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಪೌಷ್ಠಿಕ ಆಹಾರಗಳ ಸೇವನೆ ಬಹು ಮುಖ್ಯವಾದದ್ದು ಎಂದು ಬಶೆಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಉಮೇಶ್ ತಿಳಿಸಿದರು.
ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಹೋಬಳಿ ಮಟ್ಟದ ಪೌಷ್ಟಿಕ ಆಹಾರ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೆಪ್ಟೆಂಬರ್ ಮೊದಲ ವಾರವನ್ನು ‘ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ’ವನ್ನಾಗಿ ಆಚರಿಸಲಾಗುತ್ತದೆ. ನಮ್ಮ ಆರೋಗ್ಯ ನಾವು ತಿನ್ನುವ ಆಹಾರವನ್ನೇ ಅವಲಂಬಿಸಿದೆ. ಪೌಷ್ಠಿಕ ಆಹಾರದ ಸೇವನೆ ನಮ್ಮ ಆರೋಗ್ಯ ಜೀವನಕ್ಕೆ ಮುಖ್ಯ ಅಷ್ಟೇ ಅಲ್ಲ, ಅದು ನಮ್ಮ ಹಕ್ಕು ಕೂಡ. ಈ ಬಗ್ಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಜನರಿಗೆ ತಿಳಿಸಬೇಕಿದೆ ಎಂದು ಹೇಳಿದರು.
ಉತ್ತಮ ಆರೋಗ್ಯಕ್ಕಾಗಿ ಆಹಾರ ಸೇವನಾ ಕ್ರಮಗಳ ಬಗ್ಗೆ ಅವರು ಮಾಹಿತಿ ನೀಡಿದರು. ಪರಿಸರದಲ್ಲಿ ದೊರೆಯುವ ಹಸಿರು ತರಕಾರಿ, ಸೊಪ್ಪುಗಳಲ್ಲಿ ಆರೋಗ್ಯ ರಕ್ಷಣೆಗೆ ಅಗತ್ಯವಿರುವ ವಿಟಮಿನ್ ಗಳು ಅತೀ ಹೆಚ್ಚು ಪ್ರಮಾಣದಲ್ಲಿ ಸಿಗುವುದರಿಂದ ಇವುಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡುವಂತೆ ಅವರು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ವಿವಿಧ ತರಕಾರಿ, ಸೊಪ್ಪು, ಕಾಳು ಬೇಳೆಗಳನ್ನು ಪ್ರದರ್ಶಿಸಿ ಅವುಗಳಲ್ಲಿರುವ ದೇಹಕ್ಕೆ ಬೇಕಾದ ಅಗತ್ಯ ಅಂಶಗಳ ಬಗ್ಗೆಯೂ ತಿಳಿಸಲಾಯಿತು.
ಮೇಲ್ವಿಚಾರಕಿ ಶಾಂತಲಾ.ಬಿ, ತಾಲ್ಲೂಕು ಪಂಚಾಯ್ತಿ ಸದಸ್ಯ ನಾರಾಯಣಸ್ವಾಮಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪುಷ್ಪಗಂಗಾಧರ್, ಗ್ರಾಮ ಪಂಚಾಯ್ತಿ ಪಿ.ಡಿ.ಓ ಅಶೋಕ್, ಮುನಿಲಕ್ಷ್ಮಮ್ಮ, ಪ್ರತಿಭಾ, ಸಿ.ಆರ್.ಪಿ. ಚಂದ್ರಶೇಖರ್, ರಮೇಶ್, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.
ರಾಜ್ಯದಲ್ಲಿ ಹತ್ಯೆ ಸಂಸ್ಕೃತಿಯನ್ನು ತಡೆಯಬೇಕು
ಭಾರತೀಯ ಸಂವಿಧಾನಕ್ಕೆ ದೊಡ್ಡ ಅಪಾಯ ಸೃಷ್ಟಿಯಾಗಿದೆ. ಗೌರಿಯವರನ್ನು ಹತ್ಯೆ ಮಾಡುವ ಮೂಲಕ ರಾಜ್ಯದಲ್ಲಿ ಹತ್ಯೆ ಸಂಸ್ಕೃತಿಯನ್ನು ಮುಂದುವರೆಸಲಾಗುತ್ತಿದೆ. ಇದನ್ನು ತಡೆಗಟ್ಟಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ರವಿಪ್ರಕಾಶ್ ತಿಳಿಸಿದರು.
ನಗರದ ಕೋಟೆ ವೃತ್ತದಲ್ಲಿ ಮಂಗಳವಾರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ನಡೆಯುವ ಗೌರಿ ಹತ್ಯೆ ವಿರೋಧಿಸಿ ಪ್ರತಿರೋಧ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಅವರು ಮಾತನಾಡಿದರು.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿರೋಧ ಸಮಾವೇಶ ಆಯೋಜಿಸಲಾಗಿದೆ. ‘ಗೌರಿ ಲಂಕೇಶ್ ಸಾವಿಗೆ ಒಂದು ಹನಿ ಕಣ್ಣೀರು, ಒಂದು ನಿಮಿಷ ಮೌನ ಹಾಗೂ ಒಂದು ದೃಢ ನಿರ್ಧಾರ’ ಎಂಬ ಧ್ಯೇಯದೊಂದಿಗೆ ಸಮಾವೇಶ ನಡೆಯಲಿದೆ. ಹಂತಕರನ್ನು ಬಂಧಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿರುವುದನ್ನು ಈ ಸಂದರ್ಭದಲ್ಲಿ ಖಂಡಿಸುತ್ತೇವೆ ಎಂದು ಹೇಳಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಮುನಿಕೆಂಪಣ್ಣ, ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ, ಪ್ರತೀಶ್, ನಾರಾಯಣಸ್ವಾಮಿ, ವೆಂಕಟರೆಡ್ಡಿ, ದೇವರಾಜ್, ವೆಂಕಟರೋಣಪ್ಪ, ಜಯಂತಿಗ್ರಾಮ ನಾರಾಯಣಸ್ವಾಮಿ, ಗಜೇಂದ್ರ, ಗೋವಿಂದಪ್ಪ, ಶಾರದಮ್ಮ ಹಾಜರಿದ್ದರು.
ಖೋಖೋ ಪಂದ್ಯಾಟದಲ್ಲಿ ಪ್ರಥಮಸ್ಥಾನ
ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಗೌರಿಬಿದನೂರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಜಿಲ್ಲಾ ಮಟ್ಟದ ಬಾಲಕಿಯರ ಖೋಖೋ ಪಂದ್ಯಾಟದಲ್ಲಿ ಪ್ರಥಮಸ್ಥಾನ ಪಡೆದು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಮಗ್ರ ಕೃಷಿ ಸಾಧನೆಗೆ ಪ್ರಶಸ್ತಿ
ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡ ಅವರಿಗೆ ಸಮಗ್ರ ಕೃಷಿ ಸಾಧನೆಯನ್ನು ಗುರುತಿಸಿ ಕೃಷಿ ವಿಶ್ವವಿದ್ಯಾಲಯ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಪ್ರತಿಷ್ಠಾನ ಪ್ರಶಸ್ತಿಯನ್ನು ವಿಶ್ರಾಂತ ಕುಲಪತಿ ಡಾ.ಕೆ.ನಾರಾಯಣಗೌಡ ಈಚೆಗೆ ಪ್ರಧಾನ ಮಾಡಿದರು. ಕೃಷಿ ವಿಶ್ವವಿದ್ಯಾಲಯ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಬಿ.ಸಿ.ಶಿವಲಿಂಗೇಗೌಡ ಹಾಜರಿದ್ದರು.
ಯುವಶಕ್ತಿ ಮತ್ತು ನಲ್ಲೋಜನಹಳ್ಳಿ ಗ್ರಾಮಸ್ಥರಿಂದ ಗಿಡಗಳನ್ನು ನೆಡುವ ಕಾರ್ಯಕ್ರಮ
ತಾಲ್ಲೂಕಿನಾದ್ಯಂತ ಮಳೆ ಬಿದ್ದು ನೆಲ ಹದವಾಗಿದ್ದು ಆದಷ್ಟು ಗಿಡಗಳನ್ನು ನೆಡುವ ಮೂಲಕ ಮುಂದಿನ ದಿನಗಳಿಗೆ ನಾವು ಹಸಿರು ಕಾಣಿಕೆಯನ್ನು ನೀಡಬೇಕೆಂದು ಯುವಶಕ್ತಿ ಸಂಘಟನೆಯ ಅಧ್ಯಕ್ಷ ವಿಜಯಭಾವರೆಡ್ಡಿ ತಿಳಿಸಿದರು.
ತಾಲ್ಲೂಕಿನ ತಿಮ್ಮನಾಯಕಹಳ್ಳಿ ಪಂಚಾಯ್ತಿ ಅಗ್ರಹಾರ ಕೆರೆಯ ಗಡಿಯ ಆಸುಪಾಸಿನಲ್ಲಿ ಯುವಶಕ್ತಿ ಸಂಘಟನೆ ಮತ್ತು ನಲ್ಲೋಜನಹಳ್ಳಿ ಗ್ರಾಮಸ್ಥರು ಜೊತೆಗೂಡಿ ಶನಿವಾರ ಮತ್ತು ಭಾನುವಾರ ವಿವಿಧ ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೆರೆಗಳನ್ನು ಸಂರಕ್ಷಿಸುವುದರೊಂದಿಗೆ ಕೆರೆಗಳ ಆಸುಪಾಸಿನಲ್ಲಿ ವಿವಿಧ ಗಿಡಗಳನ್ನು ಬೆಳೆಸಬೇಕು. ನೀರನ್ನು ಹಿಡಿದಿಡುತ್ತಾ, ಹಕ್ಕಿಗಳಿಗೆ ಕ್ರಿಮಿಕೀಟಗಳಿಗೆ ಅವು ಆಸರೆಯಾಗುತ್ತವೆ. ಯುವಶಕ್ತಿ ಸಂಘಟನೆಯ ಸದಸ್ಯರೆಲ್ಲರೂ ಉದ್ಯೋಗದಲ್ಲಿರುವವರೆ. ಆದರೂ ಶನಿವಾರ ಮತ್ತು ಭಾನುವಾರ ತಾಲ್ಲೂಕಿನಲ್ಲಿ ಹಸಿರನ್ನು ಬೆಳೆಸುವ ನಿಟ್ಟಿನಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿದರು.
ಅರಳಿ, ಆಲ, ಹತ್ತಿ ಮತ್ತು ನೇರಳೆಯ 70 ಗಿಡಗಳನ್ನು ನೆಟ್ಟು ರಕ್ಷಣೆಗಾಗಿ ಮುಳ್ಳು ಬೇಲಿಯನ್ನು ಹಾಕಲಾಯಿತು.
ನಲ್ಲೋಜನಹಳ್ಳಿಯ ಬಾವರೆಡ್ಡಿ, ಎ.ನರಸಿಂಹಮೂರ್ತಿ, ಎಂ.ಲಕ್ಷ್ಮಣರೆಡ್ಡಿ, ಆರ್. ಮಂಜುನಾಥ, ಶಿವಪ್ಪ ಹಾಜರಿದ್ದರು.
ಆನೆಯ ಮೇಲೆ ಗಂಗಾಧರೇಶ್ವರಸ್ವಾಮಿ ಮೂರ್ತಿಯ ಮೆರವಣಿಗೆ
ತಾಲ್ಲೂಕಿನ ಜಂಗಮಕೋಟೆಯಲ್ಲಿ ಭಾನುವಾರ ಶ್ರೀ ಪ್ರಸನ್ನ ಗಂಗಾಧರೇಶ್ವರಸ್ವಾಮಿ ಗೆಳೆಯರ ಬಳಗದ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲಾಯಿತು.
ಆನೆಯ ಮೇಲೆ ಗಂಗಾಧರೇಶ್ವರಸ್ವಾಮಿ ಮೂರ್ತಿಯ ಮೆರವಣಿಗೆ ಮತ್ತು ಗ್ರಾಮದ ಹದಿನಾಲ್ಕು ದೇವರುಗಳ ಮೆರೆವಣಿಗೆಯನ್ನು ಗ್ರಾಮದಲ್ಲಿ ಆಯೋಜಿಸಲಾಗಿತ್ತು.
ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಎಂ.ರಾಜಣ್ಣ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಹಮತ್ ಜಾನ್, ಉಪಾಧ್ಯಕ್ಷ ನಾರಾಯಣಸ್ವಾಮಿ, ಮೇಲೂರು ರವಿಕುಮಾರ್, ಬಿಜೆಪಿ ಮುಖಂಡ ಸುರೇಶ್, ವಿಜಯಪುರ ಮಠದ ಶ್ರೀ ಮಹಾದೇವ ಸ್ವಾಮಿಗಳು, ಗ್ರಾಮ ಪಂಚಾಯ್ತಿ ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
ರೈತರ ಶ್ರೇಯೋಭಿವೃದ್ಧಿಗಾಗಿ ಸಾಲ ವಿತರಣೆ
ಖಾಸಗಿಯಾಗಿ ಸಾಲ ಪಡೆದು ರೈತರು ಹೈರಾಣಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಮತ್ತು ಮಹಿಳಾ ಸಬಲೀಕರಣಕ್ಕಾಗಿ ಸಾಲ ವಿತರಣೆ ಮಾಡಲಾಗುತ್ತಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ತಿಳಿಸಿದರು.
ತಾಲ್ಲೂಕಿನ ಮಳಮಾಚನಹಳ್ಳಿಯ ಶ್ರೀ ಬ್ಯಾಟರಾಯಸ್ವಾಮಿ ದೇವಾಲಯದ ಸಮುದಾಯ ಭವನದಲ್ಲಿ ಭಾನುವಾರ ಕೋಲಾರ ಜಿಲ್ಲಾ ಸಹಕಾರ ಬ್ಯಾಂಕ್ ವತಿಯಿಂದ ಮಳಮಾಚನಹಳ್ಳಿ ರೇಷ್ಮೆ ಬೆಳೆಗಾರರ ಹಾಗೂ ರೈತ ಸೇವಾ ಸಹಕಾರ ಸಂಘದ ಮುಖಾಂತರ ಕೆ.ಸಿ.ಸಿ ಸಾಲ ಮತ್ತು ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಣಾ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚಿಕ್ಕಬಳ್ಳಾಪುರ ಜಿಲ್ಲೆ ಬರಡು ಪ್ರದೇಶವಾಗಿದ್ದು, ಸಾವಿರಾರು ಅಡಿ ಕೊರೆದು ನೀರನ್ನು ತೆಗೆದು ರೈತ ವ್ಯವಸಾಯ ಮಾಡುತ್ತಿದ್ದು, ವ್ಯವಸಾಯ ಮಾಡಲು ಮೀಟರ್ ಬಡ್ಡಿ ದರದಲ್ಲಿ ಸಾಲ ಮಾಡುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಮಳೆ ಬಾರದೆ, ಅತಿವೃಷ್ಟಿ, ಪ್ರಕೃತಿ ವಿಕೋಪಗಳಿಂದ ಬೆಳೆದ ಬೆಳೆ ಕೈಗೆ ಬಾರದೆ, ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಹಾಗೂ ನಾನಾ ಕಾರಣಗಳಿಂದ ರೈತ ಕಂಗಾಲಾಗಿ ತೆಗೆದುಕೊಂಡ ಸಾಲಕ್ಕೆ ಬಡ್ಡಿ ಕಟ್ಟಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದು, ಅವರಿಗೆ ನೆರವಾಗುವ ನಿಟ್ಟಿನಲ್ಲಿ ಕೋಲಾರ ಜಿಲ್ಲಾ ಸಹಕಾರ ಬ್ಯಾಂಕ್ ವತಿಯಿಂದ ಸಾಲ ನೀಡುತ್ತಿದ್ದು, ಸಾಲ ತೆಗೆದುಕೊಂಡು ಸಮಯಕ್ಕೆ ಸರಿಯಾಗಿ ಬ್ಯಾಂಕಿಗೆ ಮರುಪಾವತಿ ಮಾಡಿ , ಆರ್ಥಿಕವಾಗಿ ಮೇಲೆ ಬನ್ನಿ ಎಂದು ತಿಳಿಸಿದರು.
ಮಹಿಳೆಯರು ಸಬಲರಾದರೆ ಅವರ ಕುಟುಂಬ ಸಬಲವಾದಂತೆ, ಅವರ ಕುಟುಂಬ ಸಬಲವಾದರೆ ದೇಶ ಸಬಲವಾದಂತೆ ಎಂದು ಮನಗಂಡ ಸರ್ಕಾರ ಮಹಿಳಾ ಸ್ವಸಹಾಯ ಸಂಘಗಳಿಗೆ ಬಡ್ಡಿ ರಹಿತ ಸಾಲ ನೀಡುತ್ತಿದೆ. ಮಹಿಳಾ ಸ್ವಸಹಾಯ ಸಂಘಗಳಿಗೆ ಇದುವರೆಗೆ ನೀಡಿದ ಸಾಲ ಶೇ. ೧೦೦ ರಷ್ಟು ಮರುಪಾವತಿ ಇದ್ದು, ಮಾದರಿಯಾಗಿವೆ. ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಮೇಲೆ ಬನ್ನಿ ಎಂದು ಕರೆನೀಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ಶಿವಾರೆಡ್ಡಿ ಮಾತನಾಡಿ, ರೈತ ದೇಶದ ಬೆನ್ನೆಲುಬು ರೈತ ಆರ್ಥಿಕವಾಗಿ ಮೇಲೆ ಬಂದರೆ ದೇಶ ಮುಂದುವರೆಯುವುದರಲ್ಲಿ ಸಂದೇಹವಿಲ್ಲ, ಪಡೆದ ಸಾಲವನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಂದು ಆರ್ಥಿಕವಾಗಿ ಮುಂದೆ ಬನ್ನಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ಸಿ.ಸಿ ಸಾಲ ಮತ್ತು ಮಹಿಳಾ ಸ್ವಸಹಾಯ ಸಂಘಗಳಿಗೆ ೩ಕೋಟಿ ಹಣ ಸಾಲ ವಿತರಣೆ ಮಾಡಲಾಯಿತು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ಶಿವಾರೆಡ್ಡಿ, ಪಿ.ವಿ.ನಾಗರಾಜ್, ಮಳಮಾಚನಹಳ್ಳಿ ಎಸ್ಎಫ್ಸಿಎಸ್ ಅಧ್ಯಕ್ಷ ಮುನೇಗೌಡ, ಲಕ್ಷ್ಮಯ್ಯ, ಮುನಿಯಪ್ಪ, ಬೈರೇಗೌಡ, ರಾಜಣ್ಣ, ಜಗದೀಶ್, ಹಿತ್ತಲಹಳ್ಳಿ ಗೋಪಾಲಗೌಡ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್ ಹಾಜರಿದ್ದರು.
ಸಂಘಟಿತರಾದಾಗ ಮಾತ್ರ ಸವಲತ್ತುಗಳನ್ನು ಪಡೆಯಬಹುದು
ವಿಶ್ವಕರ್ಮ ಸಮಾಜದ ಏಳಿಗೆ ಹಾಗು ಸಮಾಜಕ್ಕೆ ಅಗತ್ಯವಾದ ಸವಲತ್ತುಗಳನ್ನು ಸರ್ಕಾರಗಳಿಂದ ಪಡೆದುಕೊಳ್ಳಬೇಕಾದರೆ ಮೊದಲು ನಾವು ಸಂಘಟಿತರಾಗಬೇಕು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಹಾಗು ರಾಜ್ಯ ಬಿಜೆಪಿ ಉಪಾಧ್ಯಕ್ಷ ಕೆ.ಪಿ.ನಂಜುಂಡಿ ಅಭಿಪ್ರಾಯಪಟ್ಟರು.
ನಗರದ ಕಾಳಿಕಾಂಬ ಕಮಠೇಶ್ವರ ಸಮುದಾಯ ಭವನದಲ್ಲಿ ಶನಿವಾರ ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ೯ ನೇ ವಿಶ್ವಕರ್ಮ ಜಯಂತ್ಯುತ್ಸವದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮುಂದಿನ ಅಕ್ಟೋಬರ್ ೮ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ ರಾಜ್ಯಮಟ್ಟದ ೯ ನೇ ವಿಶ್ವಕರ್ಮ ಜಯಂತಿ ಸಮಾರಂಭಕ್ಕೆ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಭಾಗವಹಿಸಬೇಕು ಎಂದರು.
ವಿಶ್ವಕರ್ಮ ಸಮುದಾಯಕ್ಕೆ ಶಕ್ತಿ ಬರಬೇಕಾದರೆ ಪ್ರತಿಯೊಬ್ಬರೂ ಸಂಘಟಿತರಾಗಿ ಹೋರಾಟಕ್ಕೆ ಮುಂದಾಗಬೇಕು. ನಮ್ಮ ಸಮುದಾಯದವರೂ ಬೇರೆ ಸಮುದಾಯದವರಂತೆ ಬದುಕಬೇಕು ಹಾಗು ಸಮುದಾಯಕ್ಕೆ ಅಗತ್ಯವಿರುವ ಸವಲತ್ತುಗಳನ್ನು ಪಡೆದುಕೊಳ್ಳಬೇಕಾದರೆ ಪ್ರತಿಯೊಬ್ಬರೂ ನನ್ನ ಹಿಂದೆ ಹೋರಾಟಕ್ಕೆ ಮುಂದಾಗಬೇಕು ಎಂದರು.
ವಿಶ್ವಕರ್ಮ ಜಯಂತಿಯನ್ನು ಕಳೆದ ೯ ವರ್ಷಗಳಿಂದ ಆಚರಿಸುತ್ತಿದ್ದು ಈ ಭಾರಿಯ ರಾಜ್ಯ ಸಮ್ಮೇಳನ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಸಮ್ಮುಖದಲ್ಲಿ ನಡೆಯಲಿದ್ದು ಜನಾಂಗದ ಪ್ರತಿಯೊಬ್ಬರೂ ಜಯಂತಿಯಲ್ಲಿ ಭಾಗವಹಿಸಿ ವಿಶ್ವಕರ್ಮರ ಶಕ್ತಿ ಪ್ರದರ್ಶಿಸಬೇಕು ಎಂದರು.
ರಾಜಕೀಯದಲ್ಲಿ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ನನಗೆ ಆಧಾರ ಸ್ಥಂಭವಾಗಿ ನಿಂತು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡ ಕೇವಲೇ ಐದೇ ದಿನಗಳಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿಸಲು ವಿಶ್ವಕರ್ಮ ಸಮುದಾಯ ಪಣ ತೊಡಬೇಕು ಎಂದರು.
ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮರನಾರಾಯಣಾಚಾರಿ, ಗೌರವಾಧ್ಯಕ್ಷ ಜನಾರ್ಧನಮೂರ್ತಿ, ಸುಂದರಾಚಾರಿ, ಯುವಕರ ಸಂಘದ ಅಧ್ಯಕ್ಷ ರಾಘವೇಂದ್ರ, ಈಶ್ವರಾಚಾರಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ಬಿಜೆಪಿ ಮುಖಂಡ ಡಿ.ಆರ್.ಶಿವಕುಮಾರಗೌಡ, ಶ್ರೀಧರ್ ಈ ಸಂದರ್ಭದಲ್ಲಿ ಹಾಜರಿದ್ದರು.
ಸರ್ಕಾರಿ ಶಾಲೆಗಳಲ್ಲಿ ಕರಾಟೆ ಕಲಿಸಿ
ಸರ್ಕಾರಿ ಶಾಲೆಗಳಲ್ಲಿ ಕರಾಟೆಯನ್ನು ಕಲಿಸಲು ಪ್ರಾಮುಖ್ಯತೆಯನ್ನು ನೀಡಬೇಕು ಎಂದು ಕರಾಟೆ ಶಿಕ್ಷಕ ಸಲೀಂ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಕರಾಟೆ ವಿಭಾಗಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕರಾಟೆ ಸ್ಪರ್ಧೆಗೆ 60 ಮಂದಿ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಅವರಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಕೇವಲ 16 ಮಾತ್ರ. ಈ ಸಂಖ್ಯೆ ಹೆಚ್ಚಬೇಕು. ಸರ್ಕಾರಿ ಶಾಲೆಯ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆಯ ಈ ಕರಾಟೆ ಶಿಕ್ಷಣ ಕಲಿಸುವುದು ಅಗತ್ಯ ಎಂದು ಹೇಳಿದರು.
ಕರಾಟೆಯು ಕೇವಲ ಹೊಡೆದಾಟವಲ್ಲ. ದೇಹ ಮತ್ತು ಮನಸ್ಸನ್ನು ಸ್ಥಿಮಿತದಲ್ಲಿರಿಸಿಕೊಳ್ಳುವುದು, ಆತ್ಮ ರಕ್ಷಣೆ ಮಾಡಿಕೊಳ್ಳುವುದು ಇದರ ಮೂಲ ಉದ್ದೇಶ ಎಂದು ತಿಳಿಸಿದರು.
ಕರಾಟೆ ಶಿಕ್ಷಕರಾದ ಶ್ರೀನಿವಾಸ್, ನೂರುಲ್ಲ, ಇನಾಯತ್ತುಲ್ಲ, ಅರುಣ್, ಮಹಮ್ಮದ್ ಹಾಜರಿದ್ದರು.
ದಾವಣಗೆರೆ ರೇಷ್ಮೆ ಕೃಷಿಕರಿಗೆ ಸಮಗ್ರ ಕೃಷಿ ಪಾಠ
ಕೃಷಿಕರು ಸಮಗ್ರ ಕೃಷಿ ನೀತಿಯನ್ನು ಅಳವಡಿಸಿಕೊಂಡರೆ ಮಾತ್ರ ಪ್ರಧಾನಿಯವರ ಆಶಯದಂತೆ ಮುಂದಿನ ಐದು ವರ್ಷಗಳಲ್ಲಿ ಕೃಷಿಕರ ಆದಾಯವನ್ನು ದ್ವಿಗುಣಗೊಳಿಸಲು ಸಾಧ್ಯ ಎಂದು ಸಹಾಯಕ ರೇಷ್ಮೆ ನಿರ್ದೇಶಕ ಎಸ್.ಜೆ.ಶ್ರೀಹರ್ಷ ತಿಳಿಸಿದರು.
ತಾಲ್ಲೂಕಿನ ಹಿತ್ತಲಹಳ್ಳಿಯ ಎಚ್.ಜಿ.ಗೋಪಾಲಗೌಡರ ಸಮಗ್ರ ಕೃಷಿ ತೋಟಕ್ಕೆ ದಾವಣಗೆರೆ ರೇಷ್ಮೆ ಕೃಷಿ ಪಾಠಶಾಲೆಯಿಂದ 54 ಮಂದಿ ರೈತರೊಂದಿಗೆ ಭೇಟಿ ನೀಡಿ ಅವರು ಮಾತನಾಡಿದರು.
ರೈತರು ಭೂಮಿ, ನೀರು, ಸಮಯ, ಕೂಲಿ ಕಾರ್ಮಿಕರ ಸದ್ಬಳಕೆ ಮಾಡಿಕೊಳ್ಳಬೇಕು. ಆಗ ಮಾತ್ರ ಕೃಷಿಯಲ್ಲಿ ಆದಾಯ ಹೆಚ್ಚಳ ಸಾಧ್ಯವಿದೆ. ಪ್ರತಿ ಹನಿ ನೀರು ಕೂಡ ಅಮೂಲ್ಯವಾದದ್ದು. ಪ್ರಗತಿಪರ ರೈತರಾದ ಎಚ್.ಜಿ.ಗೋಪಾಲಗೌಡರ ಮಾದರಿಯನ್ನು ಅನುಸರಿಸುವುದು ಈ ಕಾಲಕ್ಕೆ ಅವಶ್ಯಕ ಎಂದು ಹೇಳಿದರು.
ಹಿತ್ತಲಹಳ್ಳಿಯ ಎಚ್.ಜಿ.ಗೋಪಾಲಗೌಡ ಮಾತನಾಡಿ, ಹಿಪ್ಪುನೇರಳೆ ಸೊಪ್ಪಿನೊಂದಿಗೆ 30ಕ್ಕೂ ಹೆಚ್ಚು ಬೆಳೆಗಳಲ್ಲು ಬೆಳೆದಿದ್ದೇನೆ. ಚೆಂಡು ಹೂಗಳನ್ನು ಬೆಳೆಯುವುದು ಕೀಟಗಳು ಇತರ ಗಿಡಗಳಿಂದ ಆಕರ್ಷಿಸಲು. ಇದರಿಂದ ಔಷಧಿ ಸಿಂಪಡಣೆ ತಪ್ಪುತ್ತದೆ. ಟೊಮೆಟೊ, ಬದನೆ, ಬೆಂಡೆ, ಮೆಣಸಿನಕಾಯಿ, ಗೋರಿಕಾಯಿ, ಕಡಲೆಕಾಯಿ, ಸೊಪ್ಪುಗಳು, ವಿವಿಧ ಹಣ್ಣುಗಳು ಬೆಳೆದಿರುವುದಾಗಿ ತೋರಿಸಿ ವಿವರಿಸಿದರು.
ರೇಷ್ಮೆ ಉಪನಿರ್ದೇಶಕ ಎಂ.ಜಿ.ದೇವೇಂದ್ರಪ್ಪ ಮಾತನಾಡಿ, ಐದು ದಿನಗಳ ತರಬೇತಿ ಶಿಬಿರದಲ್ಲಿ ಭಾಗವಹಿಸಿ ರೈತರು ಪ್ರಾತ್ಯಕ್ಷಿಕೆಯಾಗಿ ಸಮಗ್ರ ಕೃಷಿಯ ಬಗ್ಗೆ ತಿಳಿಯಲು ಬಂದಿದ್ದು, ರೈತರಿಂದ ಅನುಮಾನಗಳನ್ನು ಪರಿಹರಿಸಿಕೊಂಡರು ಎಂದರು.
ಗಂಜಿಗುಂಟೆ ಗ್ರಾಮ ಪಂಚಾಯ್ತಿಯ ಉಪಾಧ್ಯಕ್ಷರಾಗಿ ಎಲ್.ವಿ.ಚೌಡರೆಡ್ಡಿ ಆಯ್ಕೆ
ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯ್ತಿಯ ಉಪಾಧ್ಯಕ್ಷರಾಗಿ ಲಕ್ಕೇನಹಳ್ಳಿಯ ಎಲ್.ವಿ.ಚೌಡರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯ್ತಿಯ ಈ ಹಿಂದಿನ ಉಪಾಧ್ಯಕ್ಷ ಪಿ.ಆನಂದರೆಡ್ಡಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಲಕ್ಕೇನಹಳ್ಳಿಯ ಎಲ್.ವಿ.ಚೌಡರೆಡ್ಡಿಯವರ ಒಂದೇ ಒಂದು ನಾಮಪತ್ರ ಮಾತ್ರ ಸಲ್ಲಿಕೆಯಾಗಿದ್ದು ಬೇರಾರು ನಾಮಪತ್ರ ಸಲ್ಲಿಸದೇ ಇದ್ದುದರಿಂದ ಅವರನ್ನು ಮುಂದಿನ ಉಳಿಕೆ ಅವಧಿಗೆ ಉಪಾಧ್ಯಕ್ಷರಾಗಿ ತಾಲ್ಲೂಕು ಪಂಚಾಯ್ತಿ ಇಓ ಹಾಗು ಚುನಾವಣಾಧಿಕಾರಿ ಎಂ.ವೆಂಕಟೇಶ್ ಘೋಷಿಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಮ್ಮ, ತಾಲ್ಲೂಕು ಪಂಚಾಯ್ತಿ ನರೇಗಾ ಸಹಾಯಕ ನಿರ್ದೇಶಕ ಶ್ರೀನಾಥಗೌಡ, ಗ್ರಾಮ ಪಂಚಾಯ್ತಿ ಎಲ್ಲಾ ಸದಸ್ಯರೂ ಈ ಸಂದರ್ಭದಲ್ಲಿ ಹಾಜರಿದ್ದರು.
ಕಾಲುವೆಗಳನ್ನು ಸರಿಪಡಿಸಲು ಒತ್ತುವರಿ ತೆರವು ಕಾರ್ಯಾಚರಣೆ
ಹಲವು ವರ್ಷಗಳಿಂದ ಕಾಲುವೆಗಳ ಮೇಲೆ ನಿರ್ಮಿಸಿಕೊಂಡಿರುವ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ತಹಶೀಲ್ದಾರ್ ಅಜಿತ್ ಕುಮಾರ್ ರೈ ತಿಳಿಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ರಸ್ತೆಯ ಎರಡೂ ಬದಿ ಅಂಗಡಿಗಳ ಮುಂದೆ ಹಾಕಿಕೊಂಡಿದ್ದ ಶೀಟ್ ಗಳನ್ನು ತೆರವುಗೊಳಿಸುವ ಕಾಮಗಾರಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಗರದಲ್ಲಿ ಶುಕ್ರವಾರ ಸಂಜೆ ಬಿದ್ದ ಧಾರಾಕಾರ ಮಳೆಯಿಂದಾಗಿ ನೀರು ತಗ್ಗಿನಲ್ಲಿರುವ ಅಂಗಡಿ ಹಾಗೂ ಮನೆಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಇದಕ್ಕೆಲ್ಲಾ ಕಾರಣ ಕಾಲುವೆಗಳು ಮುಚ್ಚಿಹೋಗಿರುವುದೇ ಆಗಿದೆ. ನೀರು ಹರಿಯಬೇಕಾದ ಕಾಲುವೆಗಳ ಮೇಲೆ ಅನಧಿಕೃತ ನಿರ್ಮಾಣಗಳು, ಶೀಟ್ ಹೊದಿಕೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಕೈಗೊಂಡಿದ್ದೇವೆ. ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಜೆಸಿಬಿ ಬಳಸಿ ಕಾಲುವೆಗಳಲ್ಲಿ ತುಂಬಿದ್ದ ಕಸ, ತ್ಯಾಜ್ಯವನ್ನು ತೆಗೆದು ಹಾಕಲಾಗುತ್ತಿದೆ ಎಂದು ಹೇಳಿದರು.
ನಗರಸಭೆ ಆಯುಕ್ತ ಚಲಪತಿ ಮಾತನಾಡಿ, ಈ ಹಿಂದೆಯೇ ತಹಶೀಲ್ದಾರ್ ಅವರು ರಾಜಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸಲು ಸೂಚನೆ ನೀಡಿದ್ದರು. ಅದರಂತೆಯೇ ತೆರವು ಕಾರ್ಯಾಚರಣೆ ನಡೆಸಿದ್ದೇವೆ. ಸಾರ್ವಜನಿಕರು ಸ್ಪಂದಿಸುತ್ತಿದ್ದಾರೆ. ಈ ಕೆಲಸವನ್ನು ನಗರಸಭೆಯ ವತಿಯಿಂದ ಮಾಡಬೇಕಿತ್ತು. ಆದರೆ ತಹಶೀಲ್ದಾರ್ ಅವರೇ ಖುದ್ದಾಗಿ ಸ್ಥಳದಲ್ಲಿದ್ದು ಕಾಲವುಗಳನ್ನು ತೆರವು ಮಾಡಿಸುತ್ತಿದ್ದಾರೆ. ಅವರಿಗೆ ನಗರಸಭೆಯಿಂದ ಸಂಪೂರ್ಣ ಸಹಕಾರವನ್ನು ಕೊಡುತ್ತಿದ್ದೇವೆ. ನಗರದಲ್ಲಿರುವ ಎಲ್ಲಾ ಪೋಷಕ ಕಾಲುವೆಗಳನ್ನು ಸಹ ನೀರು ಹರಿದು ಹೋಗುವಂತೆ ಸರಿಪಡಿಸಲಾಗುವುದು ಎಂದು ಹೇಳಿದರು.
ಸರ್ಕಲ್ ಇನ್ಸ್ ಪೆಕ್ಟರ್ ವೆಂಕಟೇಶ್, ಎಸ್ ಐ ಗಳಾದ ನವೀನ್, ಪ್ರದೀಪ್ ಪೂಜಾರಿ, ವಿಜಯ್ ರೆಡ್ಡಿ, ನಗರಸಭೆ ಅಧಿಕಾರಿಗಳಾದ ದಿಲೀಪ್, ಸವಿತಾ, ಸಹಿದಾ, ಮುರಳಿ, ಗಂಗಾಧರ್ ಹಾಜರಿದ್ದರು.
ಅಂಗಡಿ ಮಾಲೀಕರ ಆಕ್ರೋಶ: ಏಕಾಏಕಿ ತಾಲ್ಲೂಕು ಆಡಳಿತ ಹಾಗೂ ನಗರಸಭೆಯವರು ತೆರವು ಕಾರ್ಯಾಚರಣೆ ಕೈಗೊಂಡಿದ್ದರಿಂದ ವಿಚಲಿತರಾದ ಅಂಗಡಿಗಳ ಮಾಲೀಕರು, ವ್ಯಾಪಾರಸ್ಥರು ಕೆಲ ಕಾಲ ವಿರೋಧ ವ್ಯಕ್ತಪಡಿಸಿದರು. ಯಾವುದೇ ನೋಟಿಸ್ ನೀಡದೆ ಜೆಸಿಬಿ ತಂದು ಅಂಗಡಿಗಳ ಮುಂಭಾಗದಲ್ಲಿದ್ದ ಶೀಟ್ ಗಳನ್ನು ತೆರವು ಮಾಡಿರುವುದು ಖಂಡನೀಯ. ಕನಿಷ್ಠ ಸೌಜನ್ಯಕ್ಕಾದರೂ ಕಾಲಾವಕಾಶ ನೀಡಬೇಕಿತ್ತು. ಈಗಾಗಲೇ ನಿನ್ನೆ ಬಿದ್ದ ಮಳೆಗೆ ನಷ್ಟವನ್ನು ಅನುಭವಿಸಿದ್ದೇವೆ. ಈಗ ವ್ಯಾಪಾರಕ್ಕೂ ತೊಂದರೆ ಮಾಡಿದ್ದಾರೆ ಎಂದು ವ್ಯಾಪಾರಸ್ಥ ಅಕ್ರಂಪಾಷ ಆಕ್ರೋಶ ವ್ಯಕ್ತಪಡಿಸಿದರು.

