ಶಿಕ್ಷಕ ವೃತ್ತಿ ಪವಿತ್ರವಾದದ್ದು. ಅದನ್ನು ಉತ್ತಮವಾಗಿ ನಿರ್ವಹಿಸುವವರನ್ನು ಗುರುತಿಸಿ ಗೌರವಿಸುವ ಕೆಲಸ ಆಗಬೇಕು ಎಂದು ಕರ್ಣಶ್ರೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಶಿವಕುಮಾರ ಗೌಡ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಪಾತ್ರರಾದ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ ಅವರಿಗೆ ಸನ್ಮಾನ ಮಾಡಿ ಅವರು ಮಾತನಾಡಿದರು.
ನಿತ್ಯ ಮಕ್ಕಳಿಗೆ ಸಂಸ್ಕಾರ, ಜ್ಞಾನ, ಮಾನವೀಯ ಮೌಲ್ಯಗಳನ್ನು ಧಾರೆಯೆರೆಯುವ ಮಾರ್ಗದರ್ಶಕರಾಗಿ ಕೆಲಸ ಮಾಡುವ ಕಾಯಕ ಶಿಕ್ಷಕರದ್ದಾಗಿದೆ. ಒಳ್ಳೆಯ ವಿಚಾರವಂತಿಕೆ, ಹೃದಯವಂತಿಕೆ ಹಾಗೂ ಮಾನವೀಯ ಮೌಲ್ಯಗಳನ್ನು ಎಲ್ಲರೂ ಹೊಂದುವುದು ಅಗತ್ಯವಾಗಿ ಆಗಬೇಕಾಗಿದೆ. ಗುರುಹಿರಿಯರನ್ನು ಗೌರವಿಸುವ ಮೂಲಕ ಸಜ್ಜನರಾಗುವಂತೆ ಮಕ್ಕಳಿಗೆ ಹೇಳಿದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ಸುರೇಂದ್ರಗೌಡ, ಗ್ರಾಮ ಪಂಚಾಯ್ತಿ ಸದಸ್ಯ ಎ.ಎಂ.ತ್ಯಾಗರಾಜು, ರವಿಚಂದ್ರ, ಕೃಷ್ಣರೆಡ್ಡಿ, ಪ್ರಸ್ನನಕುಮಾರ್, ಸುಜಾತಮ್ಮ, ಮುರಳಿಮೋಹನ್ ಈ ಸಂದರ್ಭದಲ್ಲಿ ಹಾಜರಿದ್ದರು.
ಶಿಕ್ಷಕ ವೃತ್ತಿ ಪವಿತ್ರವಾದದ್ದು
ಮಕ್ಕಳಿಗೆ ಉಚಿತವಾಗಿ ಬೆಳಗಿನ ಉಪಹಾರ
ಸಂಘ ಸಂಸ್ಥೆಗಳು, ಶಿಕ್ಷಣ ಕ್ಷೇತ್ರದ ಕಡೆಗೆ ಹೆಚ್ಚಿನ ಆದ್ಯತೆ ನೀಡಿದರೆ, ಸಮಾಜದಲ್ಲಿ ಉತ್ತಮ ಪರಿವರ್ತನೆ ತರಲು ಸಾಧ್ಯವಾಗುತ್ತದೆ ಎಂದು ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ನ ಆನಂದ್ ಹೇಳಿದರು.
ತಾಲ್ಲೂಕಿನ ಮಳ್ಳೂರಿನ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಮಕ್ಕಳಿಗೆ ಟ್ರಸ್ಟ್ ನ ವತಿಯಿಂದ ಉಚಿತವಾಗಿ ಬೆಳಗಿನ ಉಪಹಾರ, ಹಾಲು, ಬಿಸ್ಕತ್ ವಿತರಣೆಯ ಕುರಿತು ಶನಿವಾರ ಅವರು ಮಾತನಾಡಿದರು.
ತೀವ್ರ ಬರಗಾಲಕ್ಕೆ ತುತ್ತಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ಬಹುತೇಕ ಕುಟುಂಬಗಳಲ್ಲಿ ಪೌಷ್ಟಿಕವಾದ ಆಹಾರ ಸಿಗುವುದು ಕಷ್ಟಕರವಾಗಿದೆ, ಸರ್ಕಾರ ಮಧ್ಯಾಹ್ನ ಬಿಸಿಯೂಟ ನೀಡಿದರೂ, ಎಷ್ಟೋ ಮಂದಿ ವಿದ್ಯಾರ್ಥಿಗಳು ಬೆಳಗಿನ ಸಮಯದಲ್ಲಿ ಉಪಹಾರವಿಲ್ಲದೆ ಶಾಲೆಗಳಿಗೆ ಬರುವವರಿದ್ದಾರೆ. ಖಾಲಿ ಹೊಟ್ಟೆಯಲ್ಲಿ ಕಲಿಯುವುದು ಕಷ್ಟಕರವಾಗಿದೆ. ಇದೇ ಕಾರಣಕ್ಕಾಗಿ ಮಕ್ಕಳು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಶಾಲೆಗಳಲ್ಲಿ ಕೊಡುವ ಶಿಕ್ಷಣ ಎಷ್ಟು ಪ್ರಾಮುಖ್ಯವೋ ಮಕ್ಕಳ ಆರೋಗ್ಯಗಳು ಸುಧಾರಣೆ ಮಾಡುವುದು ಅಷ್ಟೆ ಮುಖ್ಯವಾಗುತ್ತದೆ, ಇದರಿಂದ ಮುಂದಿನ ದಿನಗಳಲ್ಲಿ ಅಪೌಷ್ಟಿಕತೆಯನ್ನು ನಿವಾರಣೆ ಮಾಡಿ, ಆರೋಗ್ಯವಂತ ಪ್ರಜೆಗಳನ್ನು ನಾವು ಸಮಾಜಕ್ಕೆ ಕೊಡುಗೆಯಾಗಿ ನೀಡಿದಂತಾಗುತ್ತದೆ. ಆದ್ದರಿಂದ ಟ್ರಸ್ಟ್ ಗಳು, ಸಮಾಜಮುಖಿಯಾಗಿ ಕೆಲಸ ಮಾಡುವಂತಹ ಸಂಘ ಸಂಸ್ಥೆಗಳು ಇಂತಹ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದರು.
ಮುಖ್ಯಶಿಕ್ಷಕ ಎಂ.ಎನ್. ನರಸಿಂಹಮೂರ್ತಿ ಮಾತನಾಡಿ, ಮಕ್ಕಳು ಉತ್ತಮವಾಗಿ ಕಲಿಯಬೇಕಾದರೆ ಅವರ ಆರೋಗ್ಯ ಸುಧಾರಣೆ ಬಹಳ ಮುಖ್ಯವಾಗುತ್ತದೆ. ಅವರು ಆರೋಗ್ಯವಾಗಿದ್ದರೆ ಮಾತ್ರ ಶಿಸ್ತು, ಏಕಾಗ್ರತೆ, ಕಲಿಯುವಂತಹ ಮನಸ್ಸು, ಸ್ಥಿರವಾಗಿರಲು ಸಾಧ್ಯವಾಗುತ್ತದೆ, ಗ್ರಾಮೀಣ ಪ್ರದೇಶಗಳಿಂದ ಬರುವಂತಹ ಮಕ್ಕಳಿಗೆ ಇರುವ ಕೊರತೆಯನ್ನು ಅರಿತು, ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ನವರು ಮಕ್ಕಳಿಗೆ ವರ್ಷ ಪೂರ್ತಿ ಬೆಳಗಿನ ಉಪಹಾರ ನೀಡಲು ಮುಂದೆ ಬಂದಿರುವುದು ಶ್ಲಾಘನೀಯವಾದ ವಿಚಾರವಾಗಿದೆ, ಇಂತಹ ಸೌಕರ್ಯಗಳು ಎಲ್ಲಾ ಶಾಲೆಗಳ ಮಕ್ಕಳಿಗೆ ಲಭಿಸಬೇಕು ಎಂದರು.
ಟ್ರಸ್ಟ್ ನ ಪದಾಧಿಕಾರಿಗಳಾದ ಜಯಪ್ರಕಾಶ್, ಪ್ರಭಾಕರ್, ರಾಜಶೇಖರ್, ಶಿಕ್ಷಕರಾದ ವೀರಭದ್ರಪ್ಪ, ವಿ.ವೆಂಕಟೇಶ್, ರಮೇಶ್, ಯು.ಪಿ.ನರಸಿಂಹಮೂರ್ತಿರಾವ್, ರಾಮಾಂಜಿನಪ್ಪ, ಮುನಿಕೃಷ್ಣಪ್ಪ ಹಾಜರಿದ್ದರು.
ತಾಲ್ಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ
ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಿಬ್ಬೂರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಡಿ.ಎಸ್.ಭವ್ಯ, ನಿತ್ಯಶ್ರೀ, ವೆಂಕಟೇಶ, ಸಂದೀಪ ತಾಲ್ಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮರಾಗಿದ್ದು, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಾಲ್ಲೂಕನ್ನು ಮಾದರಿಯಾಗಿ ರೂಪಿಸಬೇಕು
ತಾಲ್ಲೂಕನ್ನು ಮಾದರಿಯಾಗಿ ರೂಪಿಸುವ ನಿಟ್ಟಿನಲ್ಲಿ ಎಲ್ಲರ ಸಾಂಘಿಕ ಸಹಕಾರ ಅಗತ್ಯವಿದೆ ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ತಿಳಿಸಿದರು.
ನಗರದ ಬಸ್ ನಿಲ್ದಾಣದ ಬಳಿ ಇರುವ ಎಸ್.ಎನ್.ಕ್ರಿಯಾ ಟ್ರಸ್ಟ್ ಕಚೇರಿಯಲ್ಲಿ ಭಾನುವಾರ ನಡೆದ ಸಾಧಕರಿಗೆ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಶ್ರವಣ ದೋಷವುಳ್ಳವರಿಗೆ ಶ್ರವಣ ಯಂತ್ರಗಳನ್ನು ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು, ಪೋಷಕರು ಮಕ್ಕಳ ಮೇಲೆ ಅಪಾರ ನಂಬಿಕೆಯನ್ನಿಟ್ಟಿರುತ್ತಾರೆ. ಅವರ ಆಸೆಯನ್ನು ನಿರಾಸೆ ಮಾಡಬಾರದು. ಉನ್ನತ ಸಾಧನೆಗಳನ್ನು ಮಾಡುವ ಮೂಲಕ ತಾಲ್ಲೂಕಿಗೆ ಕೀರ್ತಿ ತರಬೇಕು. ಜಿಲ್ಲೆಯಲ್ಲಿಯೇ ನಮ್ಮ ತಾಲ್ಲೂಕು ಮಾದರಿಯೆನಿಸಿಕೊಳ್ಳಬೇಕು. ತಾಲ್ಲೂಕಿನಲ್ಲಿ ಬಡವರಿಗೆ ಆರೋಗ್ಯ, ವಿದ್ಯಾರ್ಥಿಗಳಿಗೆ ಅನುಕೂಲ, ಅಶಕ್ತರಿಗೆ ನೆರವು, ಸರ್ಕಾರದ ಯೋಜನೆಗಳನ್ನು ತಲುಪಿಸುವ ಕೆಲಸದಲ್ಲಿ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರ ಚಿಂತನೆ, ಗುರಿ, ಧ್ಯೇಯ ಅಭಿವೃದ್ಧಿಯೆಡೆಗೆ ಇರಲಿ. ಯುವಶಕ್ತಿ ಸಮಾಜಮುಖಿಯಾಗಿ ಚಿಂತನೆ ನಡೆಸಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಈಚೆಗೆ ಹತ್ಯೆಯಾದ ಪತ್ರಕರ್ತೆ ಗೌರಿ ಲಂಕೇಶ್ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು. ಹಿರಿಯ ಕನ್ನಡಪರ ಹೋರಾಟಗಾರ ಖಂಡೇರಾವ್ ಹಾಗೂ ಸಾವಯವ ಕೃಷಿಕ ಬೋದಗೂರು ವೆಂಕಟಸ್ವಾಮಿರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಶ್ರಮಣ ತೊಂದರೆಯಿರುವ ವೃದ್ಧರಿಗೆ ಶ್ರವಣಯಂತ್ರಗಳನ್ನು ಟ್ರಸ್ಟ್ ಮೂಲಕ ವಿತರಿಸಲಾಯಿತು.
ಎಸ್.ಎನ್.ಕ್ರಿಯಾ ಟ್ರಸ್ಟ್ ಗೌರವಾಧ್ಯಕ್ಷ ಆನೂರು ದೇವರಾಜ್, ಅಶ್ವತ್ಥನಾರಾಯಣರೆಡ್ಡಿ, ನಾರಾಯಣಸ್ವಾಮಿ, ಹಿತ್ತಲಹಳ್ಳಿ ಕೃಷ್ಣಪ್ಪ, ನರಸಿಂಹಪ್ಪ, ಮಳಮಾಚಹಳ್ಳಿ ಬೈರೇಗೌಡ, ವಿಶ್ವನಾಥ ಹಾಜರಿದ್ದರು.
ಶ್ರಮದಾನದ ಮೂಲಕ ರಸ್ತೆ ಸರಿಪಡಿಸಿಕೊಂಡ ಗ್ರಾಮಸ್ಥರು
ತಾಲ್ಲೂಕಿನ ಲಕ್ಕಹಳ್ಳಿ ಮತ್ತು ಕೆ.ಮುತ್ತುಗದಹಳ್ಳಿಗೆ ಹೋಗುವ ದಾರಿಯಲ್ಲಿ ಬರುವ ರೈಲ್ವೆ ಅಂಡರ್ ಪಾಸ್ ನಲ್ಲಿ ತುಂಬಿದ್ದ ಹೂಳನ್ನು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ನೇತೃತ್ವದಲ್ಲಿ ಗ್ರಾಮಸ್ಥರು ಶ್ರಮದಾನದ ಮೂಲಕ ಭಾನುವಾರ ತೆರವು ಮಾಡಿದರು.
ಮಳೆ ಬಿದ್ದಾಗಲೆಲ್ಲಾ ನೀರಿನಿಂದ ತುಂಬಿಕೊಳ್ಳುತ್ತಿದ್ದ ರೈಲ್ವೆ ಅಂಡರ್ ಪಾಸ್ ಈ ಭಾಗದ ಜನರ ಓಡಾಟಕ್ಕೆ ತೊಂದರೆಯನ್ನುಂಟು ಮಾಡುತ್ತಿತ್ತು. ಹಲವಾರು ದ್ವಿಚಕ್ರ ವಾಹನ ಸವಾರರು, ಸೊಪ್ಪು ಮೂಟೆ ಹೊತ್ತೊಯ್ಯುವವರು ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದರು. ಕಳೆದ ಎರಡು ದಿನಗಳಿಂದ ಬೀಳುತ್ತಿರುವ ಮಳೆಯು ಇಲ್ಲಿ ಇನ್ನಷ್ಟು ತೊಂದರೆಯನ್ನು ತಂದಿತ್ತು. ಸುಮಾರು ಎರಡೂವರೆ ಅಡಿಗಳಷ್ಟು ನೀರು ತುಂಬಿದ್ದರಿಂದ ಜನರ ಓಡಾಟ ದುಸ್ತರವಾಗಿತ್ತು.
ರೈಲ್ವೆ ಅಂಡರ್ ಪಾಸ್ ಆದಂದಿನಿಂದಲೂ ಅವೈಜ್ಞಾನಿಕವಾಗಿ ಇದನ್ನು ನಿರ್ಮಿಸಲಾಗಿದೆ. ನೀರು ಸರಿಯಾಗಿ ಹರಿದು ಹೋಗುತ್ತಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ದೂರು ನೀಡುತ್ತಿದ್ದರೂ ಮಳೆ ಬಂದಾಗ ಪುನಃ ಸಮಸ್ಯೆ ಎದುರಾಗುತ್ತಿತ್ತು.
ಇದರಿಂದ ಬೇಸತ್ತ ಜನರು ತಾವೇ ಟ್ರಾಕ್ಟರ್ ತಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ನೇತೃತ್ವದಲ್ಲಿ ಚನಿಕೆ ಹಿಡಿದು ಹೂಳನ್ನು ಎತ್ತಿದರು.
‘ರೈಲ್ವೆ ಅಂಡರ್ ಪಾಸ್ ನಿರ್ಮಿಸುವವರು ನೀರು ಸರಾಗವಾಗಿ ಹರಿಯುವ ರೀತಿಯಲ್ಲಿ ನಿರ್ಮಿಸಬೇಕು. ಇಲ್ಲಿನದ್ದು ಬಹು ಕಾಲದ ಸಮಸ್ಯೆಯಾಗಿದೆ. ಈಗೇನೋ ತಾತ್ಕಾಲಿಕವಾಗಿ ನಾವು ಶ್ರಮದಾನ ಮಾಡಿಕೊಳ್ಳುವ ಮೂಲಕ ಸರಿಪಡಿಸಿಕೊಂಡಿದ್ದೇವೆ. ಇದಕ್ಕೆ ಶಾಶ್ವತ ಪರಿಹಾರವನ್ನು ಅಧಿಕಾರಿಗಳು ಮಾಡಬೇಕು. ಶಾಸಕರ ಗಮನಕ್ಕೆ ಕೂಡ ತಂದಿದ್ದೇವೆ’ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.
ಬೈರೇಗೌಡ, ಮಂಜುನಾಥ್, ಶ್ರೀಧರ್, ದಿವಾಕರ್, ಅಂಬರೀಷ್, ಮಂಜು, ಕಾಮರೆಡ್ಡಿ, ಮುರಳಿ, ಮುನಿಕೃಷ್ಣಪ್ಪ ಹಾಜರಿದ್ದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಮನವಿ
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ತನಿಖೆಯನ್ನು ಸಿ ಬಿ ಐ ಗೆ ಒಪ್ಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಗುರುವಾರ ಗ್ರೇಡ್ 2 ತಹಶೀಲ್ದಾರ್ ಅವರಿಗೆ ಮನವಿಯನ್ನು ಸಲ್ಲಿಸಿದರು.
ಪ್ರಗತಿಪರ ಚಿಂತಕಿ, ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿರುವುದು ಪ್ರಜಾ ಪ್ರಭುತ್ವದ ಕಗ್ಗೊಲೆಯಾಗಿದೆ. ಇದನ್ನು ನಾವು ಖಂಡಿಸುತ್ತೇವೆ. ಈ ರೀತಿಯಲ್ಲೇ ಈ ಹಿಂದೆಯೂ ವಿಚಾರವಾದಿಗಳಾದ ಡಾ ಎಂ ಎಂ ಕಲಬುರ್ಗಿ, ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ ಅವರ ಹತ್ಯೆಗಳು ನಡೆದಿವೆ. ಇದುವರೆಗೂ ಈ ಬಗ್ಗೆ ಕ್ರಮ ಕೈಗೊಳ್ಳದಿರುವುದು ದುರಂತವಾಗಿದೆ. ಪದೇ ಪದೇ ವಿಚಾರವಾದಿಗಳ ಹತ್ಯೆ ನಡೆಯುತ್ತಿರುವುದು ಪ್ರಜಾಪ್ರಭುತ್ವದ ಮೌಲ್ಯಗಳ ಕಗ್ಗೊಲೆಯ ಸಂಕೇತವಾಗಿದೆ. ಸರ್ಕಾರದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ನಿದರ್ಶನವಾಗಿದ್ದು, ಇದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಖಂಡಿಸುತ್ತದೆ. ಈ ಹತ್ಯೆಯ ತನಿಖೆಯನ್ನು ಸಿ ಬಿ ಐ ಗೆ ಒಪ್ಪಿಸಬೇಕು, ಪ್ರಗತಿಪರ ಚಿಂತಕರಿಗೆ, ಪತ್ರಕರ್ತರಿಗೆ, ಹೋರಾಟಗಾರರಿಗೆ ಸೂಕ್ತ ರಕ್ಷಣೆ ನೀಡಬೇಕು, ಹಂತಕರನ್ನು ತಕ್ಷಣ ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್, ತಾಲ್ಲೂಕು ಸಂಚಾಲಕ ದಡಂಘಟ್ಟ ತಿರುಮಲೇಶ್, ಹಿತ್ತಲಹಳ್ಳಿ ದೇವರಾಜ್, ಚಿಕ್ಕನರಸಿಂಹಯ್ಯ, ಸೊಣ್ಣೇನಹಳ್ಳಿ ತಿರುಮಲೇಶ್, ಆಂಜಿನಪ್ಪ ಹಾಜರಿದ್ದರು.
ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಆದ್ಯತೆ ನೀಡಿ
ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳಷ್ಟೇ ಅಲ್ಲದೇ ಅಧಿಕಾರಿಗಳು ಹೆಚ್ಚು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ಸರ್ಕಾರದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ತಾಲ್ಲೂಕು ಪಂಚಾಯ್ತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಜನತೆಗೆ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ಅಧಿಕಾರಿಗಳು ಮೊದಲು ಮಾಡಬೇಕು. ಕೆಲವೇ ಕೆಲ ಪ್ರಭಾವಿಗಳು ಹಾಗು ಮಧ್ಯವರ್ತಿಗಳ ಮುಖಾಂತರ ಸರ್ಕಾರದ ವಿವಿಧ ಯೋಜನೆಗಳು ಅನರ್ಹರಿಗೆ ಸಿಗುತ್ತಿದೆ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು ಈ ಬಗ್ಗೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದರು.
ತಾಲ್ಲೂಕಿನಾಧ್ಯಂತ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳನ್ನು ಆಯಾ ಗ್ರಾಮಗಳಲ್ಲಿರುವ ಶಾಲೆಗಳ ಹೆಚ್ಚುವರಿ ಕೊಠಡಿಗಳಿಗೆ ವರ್ಗಾಯಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಹಕರಿಸಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆಯಿಂದ ತಾಲ್ಲೂಕಿನ ವಿವಿದೆಡೆ ಈಗಾಗಲೇ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಭವನಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳು ಹೆಚ್ಚಿನ ಒತ್ತು ನೀಡಬೇಕು ಎಂದರು.
ರೇಷ್ಮೆ ಇಲಾಖೆ ಸೇರಿದಂತೆ ಕೃಷಿ ಇಲಾಖೆಯಲ್ಲಿ ಈಚೆಗೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು ರೈತರಿಗೆ ಆಧ್ಯತೆಯ ಮೇಲೆ ಸವಲತ್ತುಗಳನ್ನು ಒದಗಿಸಿ ವಿನಾಕಾರಣ ರೈತರನ್ನು ಕಚೇರಿಗೆ ಅಲೆಸುವುದನ್ನು ಮೊದಲು ಬಿಡಬೇಕು ಎಂದರು.
ರೇಷ್ಮೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ನರೇಗಾ, ಬೆಸ್ಕಾಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗಳಿಂದ ಸಿಗುವ ವಿವಿಧ ಸವಲತ್ತುಗಳು ಹಾಗು ಕೈಗೊಂಡಿರುವ ಅಭಿವೃದ್ದಿ ಕಾಮಗಾರಿಗಳ ಮಾಹಿತಿಯನ್ನು ಸಭೆಗೆ ಸಲ್ಲಿಸಿದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಇಓ ವೆಂಕಟೇಶ್, ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಬೆಳಗಿನ ಉಪಾಹಾರ ಯೋಜನೆಗೆ ಚಾಲನೆ
ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಪೌಷ್ಟಿಕಾಂಶಪೂರಿತ ಆಹಾರ ಲಭ್ಯವಾಗಬೇಕಿದೆ. ಅನೇಕ ಕಾರಣಗಳಿಂದ ಬೆಳಿಗ್ಗೆ ಮಕ್ಕಳು ತಿಂಡಿ ತಿನ್ನದೇ ಶಾಲೆಗೆ ಬಂದರೆ ಕಲಿಕಾಸಕ್ತಿ ಕ್ಷೀಣಿಸಲಿದೆ. ತಿಂಡಿ ವಿತರಿಸುವುದರಿಂದ ಮಕ್ಕಳ ಹಾಜರಾತಿಯನ್ನು ಹೆಚ್ಚಿಸಬಹುದಾಗಿದೆ ಎಂದು ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ನ ಸುರೇಂದ್ರ ತಿಳಿಸಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಚಿಕ್ಕಬಳ್ಳಾಪುರ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ಉಚಿತವಾಗಿ ಬಿಸ್ಕೆಟ್ ಮತ್ತು ಉಪಾಹಾರ ನೀಡುವ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರೇರಕ ನವೀನ್ ಮಾತನಾಡಿ, ಈಗಾಗಲೇ ಚಿಕ್ಕಬಳ್ಳಾಪುರ ತಾಲ್ಲೂಕಿನ ಹಲವು ಶಾಲೆಗಳಲ್ಲಿ ಈ ಯೋಜನೆಯು ಯಶಸ್ವಿಯಾಗಿ ನಡೆಯುತ್ತಿದ್ದು ಶಿಡ್ಲಘಟ್ಟ ತಾಲ್ಲೂಕಿಗೂ ವಿಸ್ತರಿಸಲು ಚಿಂತಿಸಲಾಗಿದೆ ಎಂದರು.
ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ, ಎಸ್ ಡಿ ಎಂ ಸಿ ಅಧ್ಯಕ್ಷ ನಾಗರಾಜಪ್ಪ, ಸದಸ್ಯೆ ಮುನಿರತ್ನಮ್ಮ, ಗ್ರಾಮ ಪಂಚಾಯ್ತಿ ಸದಸ್ಯ ಎನ್.ಅಶ್ವತ್ಥಪ್ಪ, ಶಿವಶಂಕರಪ್ಪ, ದೇವರಾಜು, ಷಣ್ಮುಗಪ್ಪ, ಭಾಗ್ಯಮ್ಮ ಅರುಣ್ ಕುಮಾರ್, ಆರ್.ನಾಗೇಶ್, ಬಚ್ಚೇಗೌಡ, ದೊಡ್ಡಮುನಿವೆಂಕಟಶೆಟ್ಟಿ, ಶಿಕ್ಷಕರು ಹಾಜರಿದ್ದರು.
ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವ
ಜಾತಿ, ಮತ ಭೇದವಿಲ್ಲದೇ ಎಲ್ಲರೂ ಒಂದೇ ಎಂಬ ಸಂದೇಶವನ್ನು ಸಾರಿ, ಪರಿಸರ ರಕ್ಷಣೆ ಜಾಗೃತಿ ಮೂಡಿಸಿದವರು. ಹಾಗೂ ಮಾನವನಿಗೆ ಮರುಜನ್ಮವೆಂಬುದಿಲ್ಲ ಎಂದು ಸಾರಿದ ಧೀಮಂತ ವ್ಯಕ್ತಿ ಬ್ರಹ್ಮಶ್ರೀ ನಾರಾಯಣ ಗುರು ಎಂದು ತಹಶೀಲ್ದಾರ್ ಅಜಿತ್ ಕುಮಾರ್ ರೈ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳು ಮಹಾತ್ಮ ಗಾಂಧೀಜಿಯವರ ಒಡನಾಟದಲ್ಲಿ ಗುರುತಿಸಿಕೊಂಡು ದೇಶಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿ. ಕೇರಳದ ಮೂಲದವರಾದ ಇವರು ದೇಶದಾದ್ಯಂತ ಸಂಚರಿಸಿ ಮನುಕುಲದ ಏಳಿಗೆಗೆ ಸಲ್ಲಿಸಿದ ಸೇವೆ ಸ್ಮರಿಸಿ ಅವರ ಸ್ಮರಣೆಯಲ್ಲಿ ಅಂಚೆ ಚೀಟಿ ಹಾಗು 5 ರೂ ನಾಣ್ಯದಲ್ಲಿ ಇವರ ಭಾವಚಿತ್ರವನ್ನು ಮುದ್ರಿಸುವ ಮೂಲಕ ಗೌರವ ತೋರಲಾಗಿದೆ ಎಂದು ಹೇಳಿದರು.
ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ನಗರಸಭೆ ಆಯುಕ್ತ ಚಲಪತಿ, ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಎಸ್.ಐ. ಪ್ರದೀಪ್ ಪೂಜಾರಿ, ಆರ್ಯ ಈಡಿಗ ಸಂಘದ ತಾಲ್ಲೂಕು ಅಧ್ಯಕ್ಷ ಸಾದಲಿ ಎಸ್.ಎನ್.ವೆಂಕಟಾಚಲಪತಿ, ಕಾರ್ಯದರ್ಶಿ ಎಸ್.ಜೆ.ನಾಣಪ್ಪ, ವೆಂಕಟೇಶ, ನಾರಾಯಣಸ್ವಾಮಿ, ನಾಗಪ್ಪ, ರಾಮಪ್ಪ, ಅಶೋಕ ಹಾಜರಿದ್ದರು.
ಒತ್ತಡಗಳನ್ನು ಎದುರಿಸಲು ಕ್ರೀಡೆ ಸಹಕಾರಿ
ಕ್ರೀಡೆಯು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಬೇಕು. ಜೀವನದಲ್ಲಿ ಆರೋಗ್ಯವಂತ ದೇಹ ಮತ್ತು ಮನಸ್ಸು ಇದ್ದಾಗ ಮಾತ್ರ ಮನುಷ್ಯ ಕಷ್ಟ, ಒತ್ತಡಗಳನ್ನು ಎದುರಿಸಲು ಸಾಧ್ಯ ಎಂದು ತಹಶೀಲ್ದಾರ್ ಅಜಿತ್ ಕುಮಾರ್ ರೈ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಗೆ ಕೊಡುವ ಪ್ರಾಮುಖ್ಯತೆ ನಂತರದ ದಿನಗಳಲ್ಲಿ ಕಡಿಮೆಯಾಗುತ್ತದೆ. ಕ್ರೀಡೆ ಮನುಷ್ಯನ ಆರೋಗ್ಯ ವೃದ್ಧಿಗೆ ಸಹಕಾರಿ. ಕ್ರೀಡೆಗಳಲ್ಲಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿದಾಗ ಮಾತ್ರ ಸ್ಪರ್ಧೆಗೆ ಮಹತ್ವ ಬರುತ್ತದೆ. ಕ್ರೀಡಾಳು ಛಲದಿಂದ ಮುನ್ನುಗ್ಗಿದಾಗ ಮಾತ್ರ ಗುರಿಯ ಯಶಸ್ಸು ಮುಟ್ಟಲು ಸಾಧ್ಯ ಎಂದು ಹೇಳಿದರು.
ಕ್ರೀಡಾಕೂಟದ ಧ್ವಜವಂದನೆ ಮತ್ತು ಧ್ವಜಾರೋಹಣವನ್ನು ನಗರ ಸಭೆ ಅಧ್ಯಕ್ಷ ಅಫ್ಸರ್ ಪಾಷ ನೆರವೇರಿಸಿದರು. ಈ ಸಂದರ್ಭದಲ್ಲಿ ಕ್ರೀಡಾಜ್ಯೋತಿಯನ್ನು ಬೆಳಗುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಇ.ಓ ವೆಂಕಟೇಶ್, ನಗರ ಸಭೆಯ ಆಯುಕ್ತ ಚಲಪತಿ,ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ರಂಗನಾಥ್, ಶ್ರೀರಾಮಯ್ಯ, ವಿಜಯಕುಮಾರ್, ಹಾಜರಿದ್ದರು.
ಪತ್ರಕರ್ತರ ಸಂಘದಿಂದ ತಹಶೀಲ್ದಾರರಿಗೆ ಮನವಿ
ಹಿರಿಯ ಪತ್ರಕರ್ತೆ, ಸಾಹಿತಿ, ವಿಚಾರವಾದಿ ಗೌರಿಲಂಕೇಶ್ ಅವರನ್ನು ಹತ್ಯೆಗೈದಿರುವ ಹಂತಕರನ್ನು ಬಂಧಿಸಬೇಕೆಂದು ಒತ್ತಾಯಿಸಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತಹಶೀಲ್ದಾರರಿಗೆ ಬುಧವಾರ ಮನವಿಯನ್ನು ಸಲ್ಲಿಸಲಾಯಿತು.
ಪತ್ರಕರ್ತರ ಸಂಘದ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ ಪತ್ರಕರ್ತರು ವಿಚಾರಚಂತರು ಹಾಗೂ ಬುದ್ದಿಜೀವಿಗಳ ಹತ್ಯೆಯನ್ನು ಖಂಡಿಸಿ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟಿಸಿದರು.
ಈ ಹಿಂದೆಯೂ ಡಾ. ಎಮ್.ಎಮ್. ಕುಲಬುರ್ಗಿ ಅವರ ಕೊಲೆ ನಡೆದಿತ್ತು. ಮಂಗಳವಾರ ರಾತ್ರಿ ತಮ್ಮ ಮನೆಯ ಮುಂದೆಯೇ ಗೌರಿ ಲಂಕೇಶ್ ಅವರನ್ನು ಕೊಲೆ ಮಾಡಲಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಈ ಹತ್ಯೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕತ್ತಲಲ್ಲಿರಿಸುತ್ತದೆ. ಕುಲಬುರ್ಗಿ ಅವರ ಕೊಲೆ ಆರೋಪಿಗಳ ಪತ್ತೆ ಆಗಿಲ್ಲ. ಇದೇ ಮುಂದುವರಿದಲ್ಲಿ ಸರ್ಕಾರದ ಮೇಲೆ ನಂಬಿಕೆ ಹೋಗುತ್ತದೆ. ಈ ಕೊಲೆಯ ತನಿಖೆಯನ್ನು ಸಿಬಿಐ ಗೆ ಒಪ್ಪಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರಿಗೆ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರ ಮೂಲಕ ಮನವಿಯನ್ನು ಸಲ್ಲಿಸಲಾಯಿತು.
ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೌಡಸಂದ್ರ ಕರಗಪ್ಪ, ಕಾರ್ಯದರ್ಶಿ ಎ.ಶಶಿಕುಮಾರ್, ಡಿ.ಜಿ.ಮಲ್ಲಿಕಾರ್ಜುನ, ಜಗದೀಶ್ ಬಾಬು, ತಮೀಮ್ ಪಾಷ, ರಹಮತ್ತುಲ್ಲ, ಮುನೇಗೌಡ, ಎನ್.ಎಸ್.ವೆಂಕಟೇಶ್, ರಮೇಶ್, ಈಧರೆ ಪ್ರಕಾಶ್, ಮುನೀಂದ್ರ, ವಿಸ್ಡಂ ನಾಗರಾಜ್, ನಾಗಭೂಷಣ, ಮಿಥುನ್ ಹಾಜರಿದ್ದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ: ಹಿರಿಯ ಪತ್ರಕರ್ತೆ, ಚಿಂತಕಿ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಅವರನ್ನು ಕೊಂಡವರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ವಿಚಾರವಾದಿಗಳ ಮೇಲೆ ನಡೆಯುತ್ತಿರುವ ಹತ್ಯೆಗಳನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ದ.ಸಂ.ಸ ಜಿಲ್ಲಾ ಸಂಘಟನಾ ಸಂಚಾಲಕ ಸಿ.ಎಂ.ಮುನಿಯಪ್ಪ, ತಾಲ್ಲೂಕು ಸಂಘಟನಾ ಸಂಚಾಲಕ ಟಿ.ಎ.ಚಲಪತಿ, ಎನ್.ಎ.ವೆಂಕಟೇಶ್, ಮುನೀಂದ್ರ, ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಶಿಕ್ಷಕರು ಬದುಕಿನ ಮಾರ್ಗದರ್ಶಿಗಳು
ಮಕ್ಕಳ ಭವಿಷ್ಯಕ್ಕೆ ತಮ್ಮ ಜೀವನದ ಮುಕ್ಕಾಲು ಭಾಗವನ್ನು ಮುಡಿಪಾಗಿಡುವ ಶಿಕ್ಷಕರಿಗೆ, ಬದುಕಿನಲ್ಲಿ ಸರಿಯಾದ ದಿಕ್ಕಿನಲ್ಲಿ ಮುನ್ನುಗ್ಗಲು ಮಾರ್ಗದರ್ಶನ ಮಾಡುವ ಮಾರ್ಗದರ್ಶಕರಿಗೆ ನಮನವನ್ನು ಸಲ್ಲಿಸುವ ದಿನವೇ ಶಿಕ್ಷಕರ ದಿನಾಚರಣೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಚಂದ್ರಾನಾಯಕ್ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್ ಎಸ್ ಎಸ್ ವಿದ್ಯಾರ್ಥಿಗಳು ಮಂಗಳವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಭವಿಷ್ಯ ರೂಪಿಸುವ, ನಮ್ಮನ್ನು ಸತ್ಪಥದಲ್ಲಿ ಮುನ್ನಡೆಯುವಂತೆ ಮಾರ್ಗ ತೋರುವ ಗುರುವಿನ ಸ್ಮರಣೆ ಸದಾಕಾಲ ಇರಲಿ. ಸಮಾಜದ ಸುಧಾರಣೆಯಲ್ಲಿ ಸಾರ್ವಜನಿಕರು ಶಿಕ್ಷಕರಿಂದ ಹಲವಾರು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಉತ್ತಮ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದು ಎಂದು ಹೇಳಿದರು.
ಎನ್ ಎಸ್ ಎಸ್ ವಿಭಾಗದ ಶ್ರೀಹರಿ, ಪ್ರಾಧ್ಯಾಪಕರಾದ ಜಿ.ಕೆ.ರಮೇಶ್, ರೋಷನ್, ವೆಂಕಟರಮಣಪ್ಪ, ಉಮೇಶ್ ರೆಡ್ಡಿ, ವೆಂಕಟೇಶ್, ಸ್ಕೌಟ್ಸ್ ಮತ್ತು ಗೈಡ್ಸ್ ನ ಡಾ.ಮುರಳಿ ಆನಂದ್ ಹಾಜರಿದ್ದರು.
ಶಿಕ್ಷಕರು ಸಮಾಜದ ಪರಿವರ್ತಕರು
ಸಮಾಜದ ಪರಿವರ್ತಕರಾದ ಶಿಕ್ಷಕರ ಪಾತ್ರ ಮಹತ್ತರವಾದದ್ದು, ಸ್ವಾಸ್ಥ್ಯ, ಸುಂದರ ಸಮಾಜ ನಿರ್ಮಾಣವಾಗಲು ತಳಪಾಯ ಬೀಳುವುದು ಶಾಲೆಗಳಲ್ಲಿ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಎಚ್.ಕ್ರಾಸ್ನಲ್ಲಿರುವ ಚನ್ನಮ್ಮ ದೇವೇಗೌಡರ ಕಲ್ಯಾಣಮಂಟಪದಲ್ಲಿ ಬುಧವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಕ ವೃತ್ತಿ ಪವಿತ್ರವಾದದ್ದು ಅಂತಹ ವೃತ್ತಿಯಲ್ಲಿ ತೊಡಗಿಸಿಕೊಂಡವರು ನಿಷ್ಟೆ, ಪ್ರಾಮಾಣಿಕತೆಯನ್ನು ಹೊಂದಿಕೊಳ್ಳುವುದರ ಜೊತೆಗೆ ದೂರದೃಷ್ಠಿ, ನಿರಂತರ ಅಧ್ಯಯನವನ್ನು ಹೊಂದಿಕೊಂಡು ಮಕ್ಕಳನ್ನು ಪ್ರಜ್ಞಾವಂತರನ್ನಾಗಿ ಮಾಡಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.
ಮುಖ್ಯಭಾಷಣಕಾರರಾಗಿ ಮಾತನಾಡಿದ ಚಿಂತಾಮಣಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮುನಿರೆಡ್ಡಿ, ಶಿಕ್ಷಕರು ಕೇವಲ ಪಾಠಪ್ರವಚನಗಳನ್ನು ಬೋಧನೆ ಮಾಡಲು ಸೀಮಿತವಾಗಬಾರದು. ನಮ್ಮ ಸಂಸ್ಕೃತಿ ಪರಂಪರೆ ಉಳಿಸುವಲ್ಲಿ ಕಾಳಜಿ ವಹಿಸಬೇಕು. ಅಸಾಧ್ಯವಾದದ್ದನ್ನು ಸಾಧಿಸಿ ತೋರಿಸುವ ಶಕ್ತಿ ಶಿಕ್ಷಕರಲ್ಲಿದೆ. ಆಗಾಧವಾದ ಪಾಂಡಿತ್ಯ ಹೊಂದಿಕೊಂಡು, ವಿದ್ಯಾರ್ಥಿಗಳಿಗೆ ಧಾರೆಯೆರೆಯಬೇಕು. ಅಧ್ಯಯನ, ಭೋದನೆ ಎರಡು ಕಣ್ಣುಗಳಾಗಬೇಕು. ವಿದ್ಯೆ ಯಾರೂ ಕದಿಯಲಾರದ ವೃತ್ತಿ ಶಿಕ್ಷಕ ವೃತ್ತಿಯಾಗಿದೆ. ಸಮಾಜದಲ್ಲಿನ ಗೌರವಸ್ಥಾನವನ್ನು ಕಾಪಾಡಿಕೊಳ್ಳಬೇಕು. ಜ್ಯಾತ್ಯಾತೀತ ಮನೋಭಾವನೆ ಹೊಂದಿಕೊಳ್ಳಬೇಕು. ಶಿಕ್ಷಕರು ರಾಜಕೀಯ ಪ್ರೇರಿತರಾಗಿರಬಾರದು. ಜಾತಿ ಭೇದ ಮರೆತು ಕೆಲಸ ಮಾಡಬೇಕು ಎಂದರು.
ಜಿಲ್ಲಾ ಪಂಚಾಯಿತಿ ಉಪಾದ್ಯಕ್ಷೆ ನಿರ್ಮಲಮುನಿರಾಜು ಮಾತನಾಡಿ, ಶಿಕ್ಷಕರು, ಮಕ್ಕಳನ್ನು ಸಮಾಜದಲ್ಲಿ ಪ್ರಜ್ಞಾವಂತರನ್ನಾಗಿ ನಿರ್ಮಾಣ ಮಾಡುವ ದೊಡ್ಡ ಹೊಣೆಗಾರಿಕೆಯನ್ನು ಹೊತ್ತಿದ್ದಾರೆ. ಯಾವುದೇ ವೃತ್ತಿಗೆ ಇಲ್ಲದೆ ಇರುವಷ್ಟು ಮಹತ್ವ ಶಿಕ್ಷಕ ವೃತ್ತಿಗಿದೆ, ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಮರೆಯಲಾರದ ಏಕೈಕ ವ್ಯಕ್ತಿ, ಗುರು, ಒಬ್ಬ ಶಿಕ್ಷಕ ಮೈ ಮರೆತರೆ ಇಡೀ ವ್ಯವಸ್ಥೆ ಹಾಳಾಗುತ್ತದೆ. ಶಿಕ್ಷಕರು ಮಕ್ಕಳಿಗೆ ಮಾರ್ಗದರ್ಶಕರಾಗಬೇಕು, ಆದರ್ಶಪ್ರಾಯರಾಗಬೇಕು ಎಂದರು.
ತಹಶೀಲ್ದಾರ್ ಅಜಿತ್ಕುಮಾರ್ ರೈ ಮಾತನಾಡಿ, ಶಿಕ್ಷಕರಿಗೆ ರಾಧಾಕೃಷ್ಣನ್ ಅವರು ಆದರ್ಶರಾಗಬೇಕು. ರಾಷ್ಟ್ರದ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ದೇಶದ ಸಂಪತ್ತನ್ನಾಗಿ ಮಕ್ಕಳನ್ನು ಸಿದ್ದಗೊಳಿಸಬೇಕು. ಮಕ್ಕಳಲ್ಲಿನ ಆಗಾಧವಾದ ಶಕ್ತಿಯನ್ನು ಹೊರಗೆಳೆಯುವಂತಹ ಪ್ರಾಮಾಣಿಕ ಪ್ರಯತ್ನವಾಗಬೇಕು ಎಂದರು.
ತಾಲ್ಲೂಕಿನಲ್ಲಿ ನಿವೃತ್ತಿ ಹೊಂದಿರುವ ಶಿಕ್ಷಕರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದ ಶಿಕ್ಷಕರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್. ನರಸಿಂಹಯ್ಯ, ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್, ನಗರಸಭಾ ಅಧ್ಯಕ್ಷ ಅಫ್ಸರ್ಪಾಷ, ಉಪಾಧ್ಯಕ್ಷೆ ಪ್ರಭಾವತಿಸುರೇಶ್, ಜಿಲ್ಲಾ ಪಂಚಾಯ್ತಿ ಸದಸ್ಯ ಬಂಕ್ ಮುನಿಯಪ್ಪ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಪಿ.ವಿ.ನಾಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ ಹಾಜರಿದ್ದರು.
ಪೌಷ್ಟಿಕ ಆಹಾರದ ಸೇವನೆ ನಮ್ಮ ಹಕ್ಕು
ಉತ್ತಮ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಪೌಷ್ಟಿಕ ಆಹಾರಗಳ ಸೇವನೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಸದಾ ಜಾರಿಯಲ್ಲಿರಲಿ ಎಂದು ಜಂಗಮಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಂಬಿಕಾ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆಯ ಸಮುದಾಯಭವನದಲ್ಲಿ ಮಂಗಳವಾರ ನಡೆದ ಹೋಬಳಿ ಮಟ್ಟದ ಪೌಷ್ಟಿಕ ಆಹಾರ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೆಪ್ಟೆಂಬರ್ ಮೊದಲ ವಾರವನ್ನು ‘ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ’ವನ್ನಾಗಿ ಆಚರಿಸಲಾಗುತ್ತದೆ. ನಮ್ಮ ಆರೋಗ್ಯ ನಾವು ತಿನ್ನುವ ಆಹಾರವನ್ನೇ ಅವಲಂಬಿಸಿದೆ. ಪೌಷ್ಟಿಕ ಆಹಾರದ ಸೇವನೆ ನಮ್ಮ ಆರೋಗ್ಯಜೀವನಕ್ಕೆ ಮುಖ್ಯ ಅಷ್ಟೇ ಅಲ್ಲ, ಅದು ನಮ್ಮ ಹಕ್ಕು ಕೂಡ. ಈ ಬಗ್ಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಜನರಿಗೆ ತಿಳಿಸಬೇಕಿದೆ ಎಂದು ಹೇಳಿದರು.
ಉತ್ತಮ ಆರೋಗ್ಯಕ್ಕಾಗಿ ಆಹಾರ ಸೇವನಾ ಕ್ರಮಗಳ ಬಗ್ಗೆ ಅವರು ಮಾಹಿತಿ ನೀಡಿದರು. ಪರಿಸರದಲ್ಲಿ ದೊರೆಯುವ ಹಸಿರು ತರಕಾರಿ, ಸೊಪ್ಪುಗಳಲ್ಲಿ ಆರೋಗ್ಯ ರಕ್ಷಣೆಗೆ ಅಗತ್ಯವಿರುವ ವಿಟಮಿನ್ ಗಳು ಅತೀ ಹೆಚ್ಚು ಪ್ರಮಾಣದಲ್ಲಿ ಸಿಗುವುದರಿಂದ ಇವುಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡುವಂತೆ ಅವರು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ವಿವಿಧ ತರಕಾರಿ, ಸೊಪ್ಪು, ಕಾಳು ಬೇಳೆಗಳನ್ನು ಪ್ರದರ್ಶಿಸಿ ಅವುಗಳಲ್ಲಿರುವ ದೇಹಕ್ಕೆ ಬೇಕಾದ ಅಗತ್ಯ ಅಂಶಗಳ ಬಗ್ಗೆಯೂ ತಿಳಿಸಲಾಯಿತು.
ಡಾ.ಮೇಘಶ್ರೀ, ಮೇಲ್ವಿಚಾರಕಿರಾದಮ್ಮ, ಮೇರಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.
ಬಿಜೆಪಿ ಸದಸ್ಯರ ಬಂಧನ
‘ಮಂಗಳೂರು ಚಲೋ’ ಜಾಥಾ ಹೊರಟಿದ್ದ ಬಿಜೆಪಿ ಮುಖಂಡರು, ಯುವಮೋರ್ಚಾ ಸದಸ್ಯರನ್ನು ಮಂಗಳವಾರ ನಗರದ ಬಿಜೆಪಿ ಕಚೇರಿಯ ಬಳಿ ಪೊಲೀಸರು ವಶಕ್ಕೆ ಪಡೆದರು.
ರಾಜ್ಯದ ವಿವಿದೆಡೆಗಳಿಂದ ಬೈಕ್ ಜಾಥಾ ಇಂದು ಹೊರಟು, ಸೆಪ್ಟೆಂಬರ್ 7 ರಂದು ಮಂಗಳೂರು ತಲುಪಬೇಕು. ಅಂದು ಅಲ್ಲಿ ಬೃಹತ್ ಸಮಾವೇಶ ನಡೆಸಲು ಯುವಮೋರ್ಚಾ ಯೋಜನೆ ರೂಪಿಸಿತ್ತು. ಆದರೆ, ಪೊಲೀಸರು ಅನುಮತಿ ನೀಡದ ಕಾರಣ ಚಿಂತಾಮಣಿ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯ ಬಳಿ ಬೈಕ್ ಜಾಥಾಗೆ ಚಾಲನೆ ನೀಡಲು ಬಂದಿದ್ದ ಮುಖಂಡರೂ ಸೇರಿದಂತೆ ಯುವಮೋರ್ಚಾ ಸದಸ್ಯರನ್ನು ಪೊಲೀಸರು ಬಂಧಿಸಿದರು.
ಬಿಜೆಪಿ ಕಾರ್ಯಕರ್ತರನ್ನು ತಲಕಾಯಲಬೆಟ್ಟದ ಕಲ್ಯಾಣಮಟಪದಲ್ಲಿ ಇರಿಸಲಾಗಿದ್ದು ಸಂಜೆಯ ವೇಳೆಗೆ ಬಿಡುಗಡೆ ಮಾಡಬಹುದೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸರು ತಡೆದು ಬಂಧಿಸುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರಗೌಡ, ತಾಲ್ಲೂಕು ಯುವಮೋರ್ಚಾ ಅಧ್ಯಕ್ಷ ಬೈರಾರೆಡ್ಡಿ, ಪ್ರತಾಪ್, ನರೇಶ್, ಶ್ರೀರಾಮ, ಕೊತ್ತನೂರು ರವಿ, ದಿಬ್ಬೂರಹಳ್ಳಿ ನರಸಿಂಹಪ್ಪ, ತಲಕಾಯಲಬೆಟ್ಟ ಸೀತಬೈರರೆಡ್ಡಿ ಹಾಜರಿದ್ದರು.
ಶಿಕ್ಷಕಿಯರು ಮಾತೃ ಸಮಾನರು
ಗ್ರಾಮೀಣ ಶಾಲೆಗಳಲ್ಲಿ ಶಿಕ್ಷಕಿಯರು ಮಾತೃ ಸಮಾನರು. ಶಾಲೆಯತ್ತ ಮಕ್ಕಳು ಆಕರ್ಷಿತರಾಗುವಂತೆ ಮಾಡಿ ಅವರನ್ನು ಕಲಿಯಲು ಪ್ರೇರೇಪಿಸುವುದು ನಿಜಕ್ಕೂ ಒಂದು ಕಲೆ ಎಂದು ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಜಿಲ್ಲಾಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಪಾತ್ರರಾದ ಶಾಲೆಯ ಮುಖ್ಯ ಶಿಕ್ಷಕಿ ಎಂ.ಎ.ವೆಂಕಟರತ್ನಮ್ಮ ಅವರನ್ನು ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಗೌರವಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡುವುದರೊಂದಿಗೆ ಶಾಲೆಯ ಆಸ್ತಿಯನ್ನು ಉಳಿಸುವ, ಗಿಡಗಳನ್ನು ಬೆಳೆಸುವ, ದಾನಿಗಳ ಸಹಕಾರದಿಂದ ಶಾಲೆಗೆ ಹಾಗೂ ಮಕ್ಕಳಿಗೆ ಅಗತ್ಯ ಪರಿಕರಗಳನ್ನು ಪಡೆಯುವ ಶಿಕ್ಷಕಿಯ ಸಾಧನೆ ಅನುಕರಣೀಯ. ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಸಿಗುವ ಶಿಕ್ಷಣ, ಪ್ರೇರಣೆ, ಸಂಸ್ಕಾರ, ಮೌಲ್ಯಗಳು ಅವರನ್ನು ಸಾಧನೆಯ ಹಾದಿಗೆ ಕೊಂಡೊಯ್ಯಬಲ್ಲದು. ಈ ನಿಟ್ಟಿನಲ್ಲಿ ಶಾಲೆ ಹಾಗೂ ಶಾಲೆಯ ಮಕ್ಕಳ ಬಗ್ಗೆಯೇ ಸದಾ ತುಡಿತವನ್ನು ಹೊಂದಿರುವ ಶಿಕ್ಷಕಿ ಎಂ.ಎ.ವೆಂಕಟರತ್ನಮ್ಮ ಅವರ ಸೇವೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಗುರುತಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಶಿಕ್ಷಕಿ ಎಂ.ಎ.ವೆಂಕಟರತ್ನಮ್ಮ ಮಾತನಾಡಿ, ತಮ್ಮ ಸೇವಾ ಅವಧಿಯಲ್ಲಿ ಸಹಕಾರವನ್ನು ನೀಡಿದವರನ್ನೆಲ್ಲಾ ನೆನೆದು, ಮಕ್ಕಳ ವಿಕಾಸಕ್ಕೆ ಶಾಲೆಯ ಬೆಳವಣಿಗೆಗೆ ನೆರವನ್ನು ನೀಡಿರುವವರಿಗೆ ಧನ್ಯವಾದ ಅರ್ಪಿಸಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಸತೀಶ್, ಸುಂದರನ್, ಗ್ರಾಮ ಪಂಚಾಯ್ತಿ ಸದಸ್ಯರಾದ ಉಮಾ ಚನ್ನೇಗೌಡ, ನೇತ್ರಾವತಿ ಸಂಪತ್ ಕುಮಾರ್, ಎಂ.ಪಿ.ಸಿ.ಎಸ್ ಅಧ್ಯಕ್ಷ ರವಿಪ್ರಕಾಶ್, ಎಸ್.ಡಿ.ಎಂ.ಸಿ ಅಧ್ಯಕ್ಷೆ ಪುಷ್ಪ ರಾಮಚಂದ್ರ, ಗ್ರಾಮಸ್ಥರಾದ ಜಯರಾಮ್, ಮನೋಜ್, ಪ್ರಭಾಕರ್, ಈಶ್ವರಾಚಾರಿ, ನರಸಿಂಹಮೂರ್ತಿ, ಜಗದೀಶ್, ಶಿಕ್ಷಕರಾದ ಚಾಂದ್ ಪಾಷ, ಭಾರತಿ, ವೆಂಕಟಮ್ಮ, ಸಿಬ್ಬಂದಿ ಮುನಿರತ್ನಮ್ಮ, ಮಂಜುಳ, ಚನ್ನರಾಯಪ್ಪ ಹಾಜರಿದ್ದರು.
ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿಯಾಗಬಾರದು
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಇಲ್ಲದೆ ಯಾವುದೆ ಯೋಜನೆಯು ಯಶಸ್ವಿಯಾಗಲು ಸಾಧ್ಯವಿಲ್ಲ. ಗ್ರಾಮೀಣ ಭಾಗದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳ ಗುಣಮಟ್ಟದಲ್ಲಿ ಸ್ಥಳೀಯ ಗ್ರಾಮಸ್ಥರು ರಾಜಿಯಾಗಬಾರದು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಪಲಿಚೇರ್ಲು ಹಾಗೂ ಕನ್ನಪ್ಪನಹಳ್ಳಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ಹಾಗು ಎತ್ತಿನಹೊಳೆ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಯಾವುದೆ ಅಭಿವೃದ್ಧಿ ಕಾಮಗಾರಿಗಳನ್ನು ಉಪೇಕ್ಷಿಸದೆ ಸಾರ್ವಜನಿಕ ಆಸ್ತಿ ಎನ್ನುವ ಮನೋಭಾವ ಎಲ್ಲಾ ಗ್ರಾಮಸ್ಥರು ಬೆಳೆಸಿಕೊಳ್ಳುವ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೆ ಸಹಕರಿಸಬೇಕು ಎಂದರು.
ತಾಲ್ಲೂಕಿನ ಕನ್ನಪ್ಪನಹಳ್ಳಿ ಗ್ರಾಮದ ಬಳಿಯಿರುವ ಈಚಲುಕೆರೆ ಕೋಡಿ ಹಾಳಾಗಿದ್ದು ಇದನ್ನು ನೂತನವಾಗಿ ನಿರ್ಮಿಸಿಕೊಡಬೇಕು ಎಂಬ ಈ ಭಾಗದ ಜನರ ಬೇಡಿಕೆಯಂತೆ ಸಣ್ಣ ನೀರಾವರಿ ಇಲಾಖೆಯ ಸುಮಾರು ೫೦ ಲಕ್ಷ ರೂ ವೆಚ್ಚದಲ್ಲಿ ಕೋಡಿ ನಿರ್ಮಾಣ ಕಾರ್ಯ ಸೇರಿದಂತೆ ಪಲಿಚೇರ್ಲು ಗ್ರಾಮದಲ್ಲಿ ಎತ್ತಿನಹೊಳೆ ಯೋಜನೆಯಡಿ ಸುಮಾರು ೧೨ ಲಕ್ಷ ರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಇಂದು ಗುದ್ದಲಿಪೂಜೆ ನೆರವೇರಿಸಲಾಗಿದೆ ಎಂದರು.
ತಾಲ್ಲೂಕಿನಾದ್ಯಂತ ಇನ್ನೂ ಬಹಳಷ್ಟು ಅಭಿವೃದ್ಧಿಯ ಕೆಲಸಗಳು ಆಗಬೇಕಾಗಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅನುದಾನದ ಲಭ್ಯತೆಯ ಮೇರೆಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಲಕ್ಷ್ಮಿನಾರಾಯಣ, ಗುಮ್ಮರೆಡ್ಡಿ, ವೆಂಕಟೆಶಪ್ಪ, ಮುನಿರಾಜು, ಗಂಗಾಧರ್, ಶ್ರೀನಿವಾಸ್, ಜಯರಾಮರೆಡ್ಡಿ, ಸೀತಪ್ಪ, ಶಿವಾರೆಡ್ಡಿ, ಹೇಮಂತ್ಕುಮಾರ್ ಹಾಜರಿದ್ದರು.
ಹೈನುಗಾರಿಕೆ ಮತ್ತು ರೇಷ್ಮೆ ಕೃಷಿ ರೈತರನ್ನು ಕಾಪಾಡುತ್ತಿದೆ
ಬಯಲುಸೀಮೆ ಭಾಗದಲ್ಲಿ ರೈತರು ಇಂದಿಗೂ ಜೀವಂತವಾಗಿದ್ದಾರೆ ಎಂದರೆ ಅದು ಈ ಬಾಗದ ಹೈನುಗಾರಿಕೆ ಹಾಗು ರೇಷ್ಮೆ ಕೃಷಿಯಿಂದ ಮಾತ್ರ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ವಾಸವಿ ಕಲ್ಯಾಣಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಇವರ ಸಹಯೋಗದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಕೃಷಿ ಮತ್ತು ಸಹಕಾರ ಸಾಹಿತ್ಯ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೈತನಿಗೆ ತಾನು ಬೆಳೆದ ಬೇರೆ ಯಾವುದೇ ಬೆಳೆಗೆ ವೈಜ್ಞಾನಿಕ ಬೆಲೆ ಸಿಗದೇ ಇದ್ದರೂ ಹಾಲು ಉತ್ಪಾದನೆಯಿಂದ ರೈತರಿಗೆ ಒಂದಷ್ಟು ಅನುಕೂಲವಾಗುತ್ತಿದೆ ಎಂದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಡಾ.ಶೇಖರಗೌಡ ಮಾಲಿಪಾಟೀಲ ಮಾತನಾಡಿ, ವಿಶ್ವದಲ್ಲಿಯೇ ಶೇ. ೮೦ ರಷ್ಟು ಕೃಷಿ ಆಧಾರಿತವಾಗಿರುವ ನಮ್ಮ ದೇಶದಲ್ಲಿ ಜನಸಂಖ್ಯೆಗನುಗುಣವಾಗಿ ಆಹಾರ ಉತ್ಪಾದನೆಯಾಗುತ್ತಿದೆಯಾದರೂ ಅನ್ನದಾತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗದೇ ಪರದಾಡುವಂತಾಗಿದೆ. ಇನ್ನು ಬಯಲುಸೀಮೆ ಬಾಗದಲ್ಲಿ ಕುಡಿಯುವ ನೀರಿಗೂ ಪರಿತಪಿಸುತ್ತಿದ್ದು ಈ ಬಾಗದ ರೈತ ಇರುವ ನೀರಿನಲ್ಲಿಯೇ ದೇಶಕ್ಕೆ ಬೇಕಾದ ಹಣ್ಣು ತರಕಾರಿ ಸೇರಿದಂತೆ ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರು.
ಸಮಾವೇಶದಲ್ಲಿ ಸಮಗ್ರ ಕೃಷಿಯ ಬಗ್ಗೆ ಏರ್ಪಡಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ವಿಶ್ರಾಂತ ಉಪ ಕುಲಪತಿ ಡಾ.ಕೆ.ನಾರಾಯಣಗೌಡ ಹಾಗು ಕೃಷಿ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ವಿಜಯೇಂದ್ರ ವಿಷಯ ಮಂಡಿಸಿದರು.
ಕೃಷಿಯಲ್ಲಿ ಕೆರೆಗಳ ಪಾತ್ರ ಕುರಿತಂತೆ ಡಾ.ಎಂ.ಎನ್.ರಘು, ಸಮಗ್ರ ಸುಸ್ಥಿರ ಸಾವಯವ ಕೃಷಿ ಪದ್ದತಿಯ ಬಗ್ಗೆ ಡಾ.ಕೆ.ಆರ್.ಹುಲ್ಲುನಾಚೇಗೌಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಶೇ .೧೦೦ ರಷ್ಟು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ.ರಾಜಶೇಖರಹತಗುಂದಿ, ವ.ಚ.ಚನ್ನೇಗೌಡ, ಪಿ.ಮಲ್ಲಿಕಾರ್ಜುನಪ್ಪ, ಆರ್.ಶ್ರೀಧರ್, ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾದೂರು ಮಂಜುನಾಥ್, ಎಸ್.ಎಂ.ರವಿಪ್ರಕಾಶ್, ಎಸ್.ಎಂ.ನಾರಾಯಣಸ್ವಾಮಿ, ಹಿತ್ತಲಹಳ್ಳಿ ಗೋಪಾಲಗೌಡ, ಬಿಜೆಪಿ ಮುಖಂಡರಾದ ಡಿ.ಆರ್.ಶಿವಕುಮಾರಗೌಡ, ಸುಂದರಾಚಾರಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಮಂಜುನಾಥ್ ಹಾಜರಿದ್ದರು.
ಗಣ್ಯರ ಗೈರು ಹಾಜರಿ: ಕೃಷಿ ಮತ್ತು ಸಹಕಾರ ಸಾಹಿತ್ಯ ಸಮಾವೇಶದ ಉದ್ಘಾಟನೆಯನ್ನು ನೆರವೇರಿಸಬೇಕಿದ್ದ ಕಸಾಪ ರಾಜ್ಯಾಧ್ಯಕ್ಷ ಡಾ.ಮನುಬಳಿಗಾರ್ ಸೇರಿದಂತೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಮಾಜಿ ಶಾಸಕ ವಿ.ಮುನಿಯಪ್ಪ, ರಾಜ್ಯ ಸಹಕಾರ ಮಹಾಮಂಡಲದ ಉಪಾಧ್ಯಕ್ಷ ಎಚ್.ವಿ.ನಾಗರಾಜ್, ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ತಹಸೀಲ್ದಾರ್ ಎಸ್.ಅಜಿತ್ಕುಮಾರ್ ರೈ, ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆಂಜನೇಯರೆಡ್ಡಿ, ಸಮಾಜ ಸೇವಕ ಬಿ.ಎನ್.ರವಿಕುಮಾರ್, ಆಂಜಿನಪ್ಪ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ನಗರಸಭೆ ಅಧ್ಯಕ್ಷ ಅಫ್ಸರ್ಪಾಷ, ಗೈರು ಹಾಜರಾಗಿದ್ದರು.
ಹಿತ್ತಲಹಳ್ಳಿಯಲ್ಲಿ ಮಳೆರಾಯನ ಪೂಜೆ
ತಾಲ್ಲೂಕಿನ ಹಿತ್ತಲಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಮದುವೆಯೊಂದು ನಡೆಯಿತು. ವಧು ವರರ ವಯಸ್ಸು 8 ಮತ್ತು 10 ವರ್ಷ, ಅವರ ಹೆಸರು ನಿರ್ಮಲ ಮತ್ತು ಪ್ರೇಮ. ಹಾಗೆಂದು ಇದು ಬಾಲ್ಯ ವಿವಾಹವೂ ಅಲ್ಲ, ಸಲಿಂಗಿಗಳ ಮದುವೆಯೂ ಅಲ್ಲ. ಆದರೂ ಗ್ರಾಮಸ್ಥರು ಸೇರಿ ಇಬ್ಬರು ಪುಟ್ಟ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದರು.
ತಾಲ್ಲೂಕಿನ ಹಿತ್ತಲಹಳ್ಳಿ ಗ್ರಾಮದಲ್ಲಿ ನಡೆದ ಹೆಣ್ಣುಮಕ್ಕಳ ಮದುವೆ ಅಥವಾ ಚಿತ್ತಾರದ ಚಂದ್ರಮ ಎಂಬ ಮಳೆರಾಯನ ಪೂಜೆಯಾಗಿದೆ.
ತೆಲುಗು ಪ್ರಭಾವವಿರುವ ಜಿಲ್ಲೆಯಲ್ಲಿ ಈ ಆಚರಣೆ ರೂಢಿಯಲ್ಲಿದೆ. ಮಳೆ ಬರದೆ ಬೆಳೆ ಒಣಗಿದಾಗ ನಮ್ಮ ಜನಪದರು ಭಕ್ತಿಯಿಂದ ಮಳೆರಾಯನನ್ನು ಆರಾಧಿಸುತ್ತಾರೆ. ಒಂಬತ್ತು ದಿನಗಳ ಕಾಲ ನಡೆಯುವ ಈ ಪೂಜೆಯನ್ನು ಮಾಡಿದ ನಂತರ ಮಳೆ ಬಂದೇ ತೀರುತ್ತದೆಂಬ ಅಚಲವಾದ ನಂಬಿಕೆ ಗ್ರಾಮೀಣರದ್ದು. ಮಳೆರಾಯನನ್ನು ಸ್ತುತಿಸುವ ತೆಲುಗು ಪದಗಳನ್ನು ರಾಗ ಹಾಗೂ ಲಯಬದ್ಧವಾಗಿ ಹಾಡುತ್ತಾ ಗುಂಪುಗೂಡಿ ರೈತರು, ಮಕ್ಕಳು ಮನೆಮನೆಗೂ ಹೋಗುತ್ತಾರೆ. ಪ್ರತಿ ಮನೆಯವರೂ ಹಸಿಟ್ಟನ್ನು ನೀಡುತ್ತಾರೆ. ಗ್ರಾಮ ದೇಗುಲದ ಬಳಿ ತಿಂಗಳ ಮಾಮ ಅಥವಾ ಚಂದ್ರನನ್ನು ರಂಗೋಲಿಯಲ್ಲಿ ಬಿಡಿಸಿ, ಹೂಗಳಿಂದ ಅಲಂಕರಿಸಿ ರೊಟ್ಟಿ ಅನ್ನವನ್ನಿಟ್ಟು ಪೂಜಿಸುತ್ತಾರೆ.
ಕೋಲಾಟ, ಹಾಡು ಮುಂತಾದವುಗಳು ನಡೆಯುತ್ತವೆ. ಪ್ರಸಾದ ವಿತರಣೆಯೂ ಮಾಡಲಾಗುತ್ತದೆ. ಈ ರೀತಿ ಎಂಟು ದಿನ ಜರುಗುತ್ತದೆ. ಒಂಬತ್ತನೇ ದಿನ ಇಬ್ಬರು ಹೆಣ್ಣು ಮಕ್ಕಳಿಗೆ ಹಿರಿಯರಿಗೆ ಮಾಡುವ ರೀತಿಯಲ್ಲಿ ಶಾಸ್ತ್ರಬದ್ಧವಾಗಿ ಮದುವೆ ಮಾಡಲಾಗುತ್ತದೆ. ನಂತರ ಚಿತ್ತಾರದ ಚಂದ್ರನನ್ನು ವಿಸರ್ಜಿಸುತ್ತಾರೆ.
ಮಳೆರಾಯನ ಮೆರವಣಿಗೆ, ಪೂಜೆ ವಿಧಾನಗಳು ಬೇರೆ ಬೇರೆ ಪ್ರಾಂತ್ಯಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತವೆ. ಹಾಡುಗಳೂ ಅಷ್ಟೇ. ಇವು ಜಾನಪದ ’ಪದ’ಗಳು.
ರೈತರ ಬದುಕಿಗೆ ಜೀವಾಳವಾದ ಮಳೆಯನ್ನು ಜನಪದರು ದೈವವೆಂದೇ ಪರಿಗಣಿಸಿದ್ದಾರೆ. ಸಕಾಲದಲ್ಲಿ ಮಳೆಯಾದರೆ ಬೆಳೆ, ಬೆಳೆಯಾದರೆ ಬದುಕು. ಆದರೆ ಮಳೆಗಾಲ ಬಂದರೂ ಮಳೆಬಾರದೇ ಹೋದರೆ ಕಂಗಾಲಾದ ರೈತರು ಮಳೆರಾಯನಿಗೆ ಮೊರೆಹೋಗುತ್ತಾರೆ. ಕೃಷಿಯನ್ನೇ ನಂಬಿರುವ ಗ್ರಾಮೀಣರು ಅದಕ್ಕಾಗಿ ಕೆಲವು ಆಚರಣೆಗಳನ್ನು ಮಾಡುವುದುಂಟು. ಈ ಆಚರಣೆಗಳು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸಗಳಿದ್ದು ವೈವಿಧ್ಯಮಯವಾಗಿರುತ್ತದೆ.
ತಾಲ್ಲೂಕಿನಾದ್ಯಂತ ಬಕ್ರೀದ್ ಹಬ್ಬ ಆಚರಣೆ
ತ್ಯಾಗ ಬಲಿದಾನಗಳ ಸಂಕೇತವಾಗಿರುವಂತಹ ಬಕ್ರೀದ್ ಹಬ್ಬವನ್ನು ತಾಲ್ಲೂಕಿನಾದ್ಯಂತ ಮುಸ್ಲೀಮರು ಶನಿವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ನಗರದ ಪ್ರಮುಖ ರಸ್ತೆಯಲ್ಲಿ ಮುಸ್ಲೀಮರು ಮೆರವಣಿಗೆ ನಡೆಸಿ ಬೈಪಾಸ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸೇರಿ ಸಕಲ ಮಾನವ ಕುಲದ ಒಳಿತಿಗಾಗಿ ಅಲ್ಲಾಹುವಿನಲ್ಲಿ ಪ್ರಾರ್ಥಿಸಿದರು.
ಪರಸ್ಪರ ಅಪ್ಪಿಕೊಳ್ಳುವ ಮೂಲಕ ಹಬ್ಬದ ಶಭಾಶಯಗಳನ್ನು ಈ ಸಂದರ್ಭದಲ್ಲಿ ವಿನಿಮಯಿಸಿಕೊಂಡ ಅವರು ನಗರದ ಪ್ರಮುಖ ಬೀದಿಗಳ ಮೂಲಕ ಸಾಗಿ ಈದ್ಗಾ ಮೈದಾನದಲ್ಲಿ ದುವಾ ನೆರವೇರಿಸಿದರು.
ಬಕ್ರೀದ್ ಹಬ್ಬವನ್ನು ಈದ್ -ಅಲ್ -ಅದಾ ಎಂದೂ ಕರೆಯುತ್ತಾರೆ. ಈದ್- ಅಲ್- ಅದಾ ಹಬ್ಬವನ್ನು ಮುಸ್ಲೀಮರು, ಮುಸ್ಲಿಂ ಮಾಸಿಕವಾದ ಝುಲ್-ಹಿಜ್ಜಾದ ಹತ್ತನೆಯ ದಿನದಂದು ಆಚರಿಸುತ್ತಾರೆ. ಈ ಶುಭದಿನದಂದು ಕುರಿಯನ್ನು ಬಲಿ ನೀಡುತ್ತಾರೆ ಹಾಗೂ ಮಸೀದಿಗಳಲ್ಲಿ ಪ್ರಾರ್ಥಿಸುತ್ತಾರೆ. ಹಸ್ರತ್ ಇಬ್ರಾಹಿಮ್ ಅಲ್ಲಾಹನಿಗೆ ಶರಣಾಗುವ ಅಗ್ನಿಪರೀಕ್ಷೆಯ ಸ್ಮರಣಾರ್ಥವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಬಲಿಗೊಳ್ಳುವ ಪಶುವಿನ ಮಾಂಸವನ್ನು ಬಳಸಿಕೊಳ್ಳುವುದರ ಕುರಿತು ಇಸ್ಲಾಂ ನಲ್ಲಿ ಕೆಲವು ಮಾರ್ಗದರ್ಶೀ ಸೂತ್ರಗಳಿವೆ. ಬಲಿಪಶುವಿನ ಮಾಂಸವನ್ನು ಮೂರು ಭಾಗಗಳಾಗಿ ವಿಭಾಗಿಸಿ, ದೊಡ್ಡಭಾಗವನ್ನು, ಅಶಕ್ತರಾದ ಅಥವಾ ಆ ದಿನದ ಊಟವನ್ನು ಗಳಿಸಲಾಗದ ಬಡವರಲ್ಲಿ ಹಂಚಬೇಕು. ಮಿಕ್ಕುಳಿದ ಎರಡು ಚಿಕ್ಕ ತುಂಡುಗಳನ್ನು ಗೆಳೆಯರು, ಬಂಧುಗಳು ಮತ್ತು ಕುಟುಂಬದ ಸದಸ್ಯರ ನಡುವೆ ಹಂಚಬೇಕು. ಇದು ಸಂಭ್ರಮದ ಹಾಗೂ ಭೂರಿಭೋಜನದ ಸಂದರ್ಭವಾಗಿದೆ. ಇವೆಲ್ಲಕ್ಕಿಂತಲೂ ಮಿಗಿಲಾಗಿ, ಈ ಹಬ್ಬವು ಏಕತೆ ಹಾಗೂ ಭ್ರಾತೃತ್ವದ ಆಚರಣೆಯಾಗಿದೆ.
ರಾಜಕೀಯ ಮುಖಂಡರೂ ಸೇರಿದಂತೆ ವಿವಿಧ ಜನಾಂಗದವರೂ ಕೂಡಾ ಮುಸ್ಲಿಂ ಭಾಂಧವರಿಗೆ ಶುಭಾಶಯಗಳನ್ನು ಕೋರಿದರು. ಶಾಸಕ ಎಂ.ರಾಜಣ್ಣ, ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಮುಸ್ಲೀಮರಿಗೆ ಶುಭಕೋರಿದರು.

