Home Blog Page 403

ಮಕ್ಕಳ ಸರ್ವಾಂಗೀಣ ಬೆಳವಣಿಗೆ ಪ್ರಾರಂಭವಾಗುವುದು ಅಂಗನವಾಡಿಯಿಂದ

0

ಮಕ್ಕಳ ಆರೋಗ್ಯ ಮತ್ತು ಬುದ್ದಿಯ ವಿಕಸನಕ್ಕೆ ಅಂಗನವಾಡಿ ಕೇಂದ್ರಗಳ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಅಬ್ಲೂಡು ಗ್ರಾಮದಲ್ಲಿ ಗುರುವಾರ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯಿತಿ ಹಾಗು ಶಿಶು ಅಭಿವೃದ್ದಿ ಇಲಾಖೆ ಸಹಯೋಗದಲ್ಲಿ ನೂತನವಾಗಿ ನಿರ್ಮಿಸಲಾದ ಅಂಗನವಾಡಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಅಂಗನವಾಡಿ ಕೇಂದ್ರದಿಂದಲೇ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಆರಂಭವಾಗುತ್ತದೆ. ಪ್ರತಿಯೊಂದು ಮಗುವೂ ಆರೋಗ್ಯದಿಂದಿರಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರ ಅಂಗನವಾಡಿಗಳ ಮೂಲಕ ಪೌಷ್ಠಿಕ ಆಹಾರವನ್ನೂ ಪೂರೈಸುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರೂ ಸೇರಿದಂತೆ ಶಿಶು ಅಭಿವೃದ್ದಿ ಅಧಿಕಾರಿಗಳು ತಾಲ್ಲೂಕಿನಾಧ್ಯಂತ ಇರುವ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಸರಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಶಿಶು ಅಭಿವೃದ್ದಿ ಅಧಿಕಾರಿ ಲಕ್ಷೀದೇವಮ್ಮ ಮಾತನಾಡಿ, ಸರ್ಕಾರ ಮಾತೃಪೂರ್ಣ ಯೋಜನೆಯನ್ನು ಜಾರಿ ಮಾಡಿದ್ದು ಸರ್ಕಾರದ ಆದೇಶದಂತೆ ಪ್ರತಿನಿತ್ಯ ಮದ್ಯಾಹ್ನ ಗರ್ಭಿಣಿಯರಿಗೆ ಮೊಟ್ಟೆ, ಹಾಲು ಅನ್ನ ಸಾರು ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ. ಯೋಜನೆಯನ್ನು ಗ್ರಾಮೀಣ ಪ್ರದೇಶದ ಮಹಿಳೆಯರು ಸದುಪಯೋಗಪಡಿಸಿಕೊಳ್ಳಿ ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಬಂಕ್ ಮುನಿಯಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯ ಕೆ.ಎಂ.ಶ್ರೀನಿವಾಸ್, ಕೆ.ಎಸ್.ಕನಕಪ್ರಸಾದ್, ವೆಂಕಟರೆಡ್ಡಿ, ಚೆನ್ನಕೇಶವ, ಗೋಪಿ, ನಾಗಮಣಿ ದೇವರಾಜ್, ಮುನಿಶಾಮಿ, ಮಂಜುನಾಥ್ ಹಾಜರಿದ್ದರು.
 

ಹುಟ್ಟಿ ಬೆಳೆದ ಊರಿನ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಬೇಕು

0

ನಾವು ಹುಟ್ಟಿದ, ಬೆಳೆದ ಊರಿನ ಕುರಿತಂತೆ ಮೊದಲು ತಿಳಿದುಕೊಳ್ಳಬೇಕು. ನಮ್ಮ ನೆಲದ ಸಾಧಕರು, ಗುಡಿಗೋಪುರಗಳು, ಜಲಮೂಲಗಳು, ಜಾನಪದ, ಆಚರಣೆ ಮುಂತಾದ ಸಂಗತಿಗಳ ಬಗ್ಗೆ ತಿಳಿದಾಗ ನಮ್ಮ ನೆಲ ನಮಗೆ ಆಪ್ತವಾಗುತ್ತದೆ ಎಂದು ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್. ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ನಡೆದ ‘ನನ್ನ ಮೆಚ್ಚಿನ ಪುಸ್ತಕ’ ಸ್ಪರ್ಧಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಡ್ಲಘಟ್ಟ ತಾಲ್ಲೂಕಿಗೆ ಇತಿಹಾಸವಿದೆ. ಕರ್ನಾಟಕದ ಸಾಂಸ್ಕೃತಿಕ ಬದುಕಿನಲ್ಲಿ ಶಿಡ್ಲಘಟ್ಟ ತನ್ನದೇ ಆದ ಕೊಡುಗೆಗಳನ್ನು ನೀಡಿದೆ. ಇಲ್ಲಿ ಕಲೆಯಿದೆ, ಸಾಧಕರಿದ್ದಾರೆ, ಜಾನಪದವಿದೆ, ಸಂಸ್ಕೃತಿಯಿದೆ, ವಿಶಿಷ್ಟ ತಿಂಡಿ ತಿನಿಸುಗಳಿವೆ, ವಿಶೇಷ ದೇವಾಲಯಗಳಿವೆ, ಜೀವ ವೈವಿದ್ಯವೂ ಇವೆ. ಎಲ್ಲವನ್ನೂ ಅರಿಯುವ ಕೆಲಸ ಆದಾಗ ಮಾತ್ರ ನಮ್ಮ ತಾಲ್ಲೂಕಿನ ಬಗ್ಗೆ ಹೆಮ್ಮೆ ಮತ್ತು ಅಭಿಮಾನ ಮೂಡುತ್ತದೆ ಎಂದು ಹೇಳಿ ಅವರು ‘ನಮ್ಮ ಶಿಡ್ಲಘಟ್ಟ’ ಪುಸ್ತಕದ ಬಗ್ಗೆ ಮಾತನಾಡಿದರು.
ಶಿಡ್ಲಘಟ್ಟ ಹಾಗೂ ತಾಲ್ಲೂಕಿನ ಒಡಲೊಳಗೆ ಇಷ್ಟೊಂದು ಸಿರಿವಂತಿಕೆ ಉಂಟೆ ಎಂಬ ಬೆರಗು ಮೂಡಿಸುವ ‘ನಮ್ಮ ಶಿಡ್ಲಘಟ್ಟ’ ಪುಸ್ತಕ ಅನೇಕ ವಿಷಯಗಳ ದಾಖಲೆಯಿಂದಾಗಿ ಸಂಶೋಧನೆಗಳಿಗೆ ಕೈಪಿಡಿಯಾಗುವುದಲ್ಲದೆ ಪ್ರಾಥಮಿಕ ಮಾಹಿತಿಯನ್ನೂ ಒದಗಿಸುತ್ತದೆ. ವ್ಯಾಪಕ ಕ್ಷೇತ್ರ ಸಂಚಾರದ ಫಲ ಈ ಕೃತಿ. ಜನಜೀವನ, ಸಸ್ಯ-ಪ್ರಾಣಿ ಪರಿಸರ, ಗತ ಹಾಗು ವರ್ತಮಾನದ ಚಹರೆಗಳನ್ನು ಬಿಡಿಸಿರುವ ಈ ಕೃತಿ ಕಾಲ, ಕಾರ್ಯ, ಕಾರಣಗಳತ್ತಲೂ ಗಮನ ಸೆಳೆಯುತ್ತದೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಸುಂದರನ್ ಮಾತನಾಡಿ, ಪುಸ್ತಕ, ದಿನಪತ್ರಿಕೆಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ. ಅಣುಅಣುವಿನಂತೆ ಕ್ರೂಡೀಕರಣಗೊಳ್ಳುತ್ತಾ ಹಲವು ವರ್ಷಗಳ ನಂತರ ಜ್ಞಾನ ಭಂಡಾರ ನಿಮ್ಮದಾಗುತ್ತದೆ. ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡುವಂತೆ ಮಕ್ಕಳಿಗೆ ಕಿವಿಮಾತು ಹೇಳಿದರು.
‘ನನ್ನ ಮೆಚ್ಚಿನ ಪುಸ್ತಕ’ ಸ್ಪರ್ಧೆಯಲ್ಲಿ ಭಾಗವಹಿಸಿ ತಾವು ಓದಿದ ಪುಸ್ತಕದ ಬಗ್ಗೆ ಮಾತನಾಡಿದವರಲ್ಲಿ ವಿ.ಕೆ.ರಾಕೇಶ್, ಕಿರಣ್ ಕುಮಾರ್, ತೇಜಸ್ ಅವರಿಗೆ ಹಾಗೂ ‘ನಮ್ಮ ಶಿಡ್ಲಘಟ್ಟ’ ಪುಸ್ತಕದ ಬಗ್ಗೆ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಸಿ.ಎನ್.ನವೀನ್ ಕುಮಾರ್, ಸಂಪತ್ ಕುಮಾರ್, ಎಂ.ಎಸ್.ನಿತೀಶ್ ಕುಮಾರ್ ಅವರಿಗೆ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಪ್ರಮಾಣ ಪತ್ರ ಮತ್ತು ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.
ಮುಖಂಡ ಹುಜಗೂರು ಬಚ್ಚೇಗೌಡ, ಮುಖ್ಯ ಶಿಕ್ಷಕಿ ಹೇಮಾವತಿ, ಶಿಕ್ಷಕರಾದ ಎಸ್.ವಿ.ಮಾಲತಿ, ಎನ್.ಎಸ್.ಶ್ರೀಧರ್, ರವಿ ಹಾಜರಿದ್ದರು.
 

ಜಾನಪದ ತಜ್ಞ ಡಾ.ಶ್ರೀನಿವಾಸಯ್ಯನವರಿಗೆ ಸನ್ಮಾನ

0

ಶಿಡ್ಲಘಟ್ಟದಲ್ಲಿ ಬುಧವಾರ ಕರ್ನಾಟಕ ಛಲವಾದಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟೇಶ್, ಛಲವಾದಿ ಜನಾಂಗೀಯ ಅಧ್ಯಯನವನ್ನು ಮಾಡಿರುವ ಜಾನಪದ ತಜ್ಞ ಡಾ.ಶ್ರೀನಿವಾಸಯ್ಯ ಅವರನ್ನು ಸನ್ಮಾನಿಸಿದರು. ಕರ್ನಾಟಕ ಛಲವಾದಿ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಮುನಿರಾಜ, ಜಂಟಿ ಕಾರ್ಯದರ್ಶಿ ಕೆ.ಗೌತಮ್ ಗಣೇಶ್, ಲೋಕೇಶ್ ಹಾಜರಿದ್ದರು.

ಬಾಲ್ಯದಲ್ಲಿ ಮಕ್ಕಳಿಗೆ ಸಂಸ್ಕಾರದ ಶಿಕ್ಷಣ ನೀಡಬೇಕು

0

ಬಾಲ್ಯದಲ್ಲಿ ಮಕ್ಕಳು ಓದು ಬರಹ ಕಲಿಯುವುದ ಜೊತೆಗೆ ಸಂಸ್ಕಾರದ ಶಿಕ್ಷಣವನ್ನೂ ಪಡೆಯುವುದು ಅತ್ಯಗತ್ಯ. ಜೀವನ ಮೌಲ್ಯಗಳು ಬಾಲ್ಯದಲ್ಲಿ ರೂಢಿಗತವಾದರೆ ಬದುಕಲ್ಲಿ ಎಂದೂ ಸೋಲುವುದಿಲ್ಲ ಎಂದು ಬಿಜಿಎಸ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಮಹದೇವಯ್ಯ ತಿಳಿಸಿದರು.
ನಗರದ ಹೊರವಲಯದ ಹನುಮಂತಪುರ ಗೇಟ್ ಬಳಿ ಇರುವ ಬಿಜಿಎಸ್ ವಿದ್ಯಾಸಂಸ್ಥೆಯ ಜ್ಞಾನಾಂಕುರ ಕ್ಯಾಂಪಸ್ ನಲ್ಲಿ ಬುಧವಾರ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಡ್ಲಘಟ್ಟದ ಹನುಮಂತಪುರ ಗೇಟ್ ಬಳಿ ಇರುವ ಬಿಜಿಎಸ್ ವಿದ್ಯಾಸಂಸ್ಥೆಯ ಜ್ಞಾನಾಂಕುರ ಕ್ಯಾಂಪಸ್ ನಲ್ಲಿ ಬುಧವಾರ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ವಿದ್ಯಾರ್ಥಿಗಳು ಶ್ರೀಕೃಷ್ಣ ರಾಧೆಯ ವೇಷ ಧರಿಸಿ ನೃತ್ಯ ಪ್ರದರ್ಶಿಸಿದರು.

ಮಕ್ಕಳು ಸಕಾರಾತ್ಮಕವಾಗಿ ಚಿಂತಿಸಬೇಕು. ಆ ರೀತಿ ಚಿಂತಿಸುವಂತೆ, ಪ್ರತಿಯೊಬ್ಬರಲ್ಲೂ ಒಳ್ಳೆಯ ಗುಣಗಳನ್ನು ಕಾಣುವಂತೆ ಶಿಕ್ಷಕರು ಪ್ರೇರೇಪಿಸಬೇಕು. ಜೀವನ ಪ್ರೀತಿ ಹೆಚ್ಚಾದಲ್ಲಿ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಮೂಡುತ್ತದೆ. ಎಷ್ಟೇ ಕಷ್ಟಗಳು ಎದುರಾದರೂ ಎದೆಗುಂದಬಾರದು, ಸತ್ಯ, ನಿಷ್ಠೆ, ಪ್ರಾಮಾಣಿಕತೆ, ನೈತಿಕತೆಯನ್ನು ಬಿಡಬಾರದು.
ಸತ್ಯಕ್ಕೆ ಹೆಸರಾದ ಹರಿಶ್ಚಂದ್ರ ಕಷ್ಟಗಳ ಸರಮಾಲೆಯನ್ನೇ ಎದುರಿಸಬೇಕಾಯಿತು. ಆದರೂ ಸತ್ಯವನ್ನು ಬಿಡಲಿಲ್ಲ. ಆತ ಕಷ್ಟ ಎದುರಿಸಿದ್ದು ಕೇವಲ ಎರಡು ವರ್ಷಗಳು ಮಾತ್ರ. ಅದೇ ರೀತಿ ಶ್ರೀರಾಮ ಕಷ್ಟಕಾರ್ಪಣ್ಯವನ್ನು ಎದುರಿಸಿದ್ದು ಹತ್ತು ತಿಂಗಳು ಮಾತ್ರ. ಆದರೆ ನಂತರ ಬಹು ಕಾಲ ರಾಜರಾಗಿ ಆಳಿದರು. ಚಿರಕಾಲ ಅವರ ಹೆಸರು ಉಳಿಯಿತು. ಕಷ್ಟದ ಕಾಲ ಅತ್ಯಲ್ಪ. ಆದರೆ ಆಗ ನಾವು ತಾಳ್ಮೆ, ಮೌಲ್ಯಗಳನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ ಎಂದು ನುಡಿದರು.
ಎಲ್.ಕೆ.ಜಿ ಮತ್ತು ಯು.ಕೆ.ಜಿ ವಿದ್ಯಾರ್ಥಿಗಳು ಶ್ರೀಕೃಷ್ಣ ರಾಧೆಯ ವೇಷ ಧರಿಸಿ ನೃತ್ಯ ಪ್ರದರ್ಶನ, ಮಡಿಕೆ ಹೊಡೆಯುವುದು ಹಾಗೂ ಶ್ಲೋಕ ಪಠನವನ್ನು ನಡೆಸಿಕೊಟ್ಟರು. ವನ್ಯಜೀವಿ ಛಾಯಾಗ್ರಾಹಕ ಡಿ.ಜಿ.ಮಲ್ಲಿಕಾರ್ಜುನ, ಸ್ಥಳ ದಾನಿ ಚಂದ್ರಶೇಖರ್ ಹಾಜರಿದ್ದರು
 

ಚೀಮಂಗಲ ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ

0

ಮಕ್ಕಳಿಗೆ ಬರಿ ಓದಿನ ಮಹತ್ವ ತಿಳಿಸಿದರೆ ಸಾಲದು, ಮಗುವಿನ ದೈಹಿಕ ಬೆಳವಣಿಗೆಗೆ ಪೂರಕವಾಗಿ ಕ್ರೀಡೆಯಲ್ಲೂ ಆಸಕ್ತಿ ತೋರುವಂತೆ ಹುರಿದುಂಬಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರ ಶೇಖರ್ ಬಾಬು ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಮಕ್ಕಳಲ್ಲಿ ಅಪಾರ ಪ್ರತಿಭಾವಂತರಿದ್ದಾರೆ. ಅನೇಕರು ಕ್ರೀಡೆಯ ಆಸಕ್ತಿ ಹೊಂದಿರುತ್ತಾರೆ. ಅವರಿಗೆ ಪ್ರೋತ್ಸಾಹ ಮತ್ತು ತರಬೇತಿ ನೀಡಿ ಎಂದರು.
ಮುಖ್ಯ ಶಿಕ್ಷಕ ಶಿವಶಂಕರ್ ಮಾತನಾಡಿ, ಕ್ರೀಡೆಯಿಂದ ಜೀವನದಲ್ಲಿ ಧೈರ್ಯ ದೊರೆಯುತ್ತದೆ, ಬದುಕಲು ಸ್ಫ್ಫೂರ್ತಿ ನೀಡುವ ಕ್ರೀಡೆಯ ಬಗ್ಗೆ ತಾತ್ಸಾರ ಬೇಡ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಸಹಜವಾಗಿರುವ ದೇಹದಾಢ್ಯ ಕ್ರೀಡೆಗೆ ಪೂರಕವಾಗಿದೆ. ಗ್ರಾಮೀಣ ಪ್ರದೇಶದವರು ಎಂಬ ಕೀಳರಿಮೆ ತೊರೆದು ಕ್ರೀಡೆಯಲ್ಲಿ ಸಾಧನೆ ಮಾಡಲು ಪಣ ತೊಡಿ ಎಂದು ಹೇಳಿದರು.
ದೈಹಿಕ ಶಿಕ್ಷಕ ವಿಠ್ಠಲ್ ಧ್ಯಾನ್ ಚಂದರ ಜೀವನ ಚರಿತ್ರೆಯನ್ನು ತಿಳಿಸಿದರು. ತುಮ್ಮನಹಳ್ಳಿ ಶಾಲೆಯ ದೈಹಿಕ ಶಿಕ್ಷಕ ಗಣೇಶ್ ಓಲಂಪಿಕ್ಸ್ ಕ್ರೀಡೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಇಸ್ರೋ ವಿಜ್ಞಾನಿಗಳಾದ ಅರವಿಂದ್, ನಾರಾಯಣಸ್ವಾಮಿ ಅವರು ಉಪಗ್ರಹ ಮತ್ತು ರಾಕಟ್ ಉಡಾವಣೆಯ ಮಾಹಿತಿಯನ್ನು ನೀಡಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಮೂರನೇ ಸ್ಥಾನವನ್ನು ಪಡೆದ ಅನುಷಾ ಅವರಿಗೆ ಲ್ಯಾಪ್ ಟಾಪ್ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಳೆದ ವರ್ಷ ರಾಜ್ಯಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಕೀರ್ತಿ, ವೈಷ್ಣವಿ, ಮೇಘನಾ, ಗಜೇಂದ್ರ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಕರಾದ ದೊಡ್ಡನಾಯ್ಕ, ಸವಿತ, ಶ್ರೀನಿವಾಸ, ವಿನೋದ, ಮೋಹನ್ ಹಾಜರಿದ್ದರು.
 

ಕೃಷಿ ಅಧ್ಯಯನಕ್ಕಾಗಿ ತೆರಳಿದ ರೈತರು

0

ತಾಲ್ಲೂಕಿನ ರೈತ ಕೂಟಗಳ ಒಕ್ಕೂಟದ ೭೨ ಮಂದಿ ರೈತರ ತಂಡ ಮಧ್ಯಪ್ರದೇಶಕ್ಕೆ ಆರು ದಿನಗಳ ಕೃಷಿ ಅಧ್ಯಯನಕ್ಕಾಗಿ ಸೋಮವಾರ ಸಂಜೆ ನಗರದ ರೇಷ್ಮೆ ಕೃಷಿ ಕಚೇರಿ ಆವರಣದಿಂದ ಪ್ರವಾಸ ಕೈಗೊಂಡರು.
ರೈತರ ತಂಡದ ನೇತೃತ್ವವಹಿಸಿರುವ ರೈತ ಕೂಟಗಳ ಒಕ್ಕೂಟದ ಅಧ್ಯಕ್ಷ ಹಿತ್ತಲಹಳ್ಳಿ ಗೋಪಾಲಗೌಡ ಅವರು, ಪ್ರವಾಸದ ಬಗ್ಗೆ ವಿವರ ನೀಡಿ, ಚಾಲುಕ್ಯ ಐಷರ್ ಟ್ರ್ಯಾಕ್ಟರ್ ಕಂಪನಿಯ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಈ ಪ್ರವಾಸದಲ್ಲಿ ರೈತರು ೬ ದಿನಗಳ ಕಾಲ ಮಧ್ಯಪ್ರದೇಶದ ವಿವಿದೆಡೆ ಕೃಷಿ ಅಧ್ಯಯನ ಪ್ರವಾಸ ನಡೆಸಲಿದ್ದೇವೆ ಎಂದರು.
ಮಧ್ಯಪ್ರದೇಶದ ಭೂಪಾಲ್ನಲ್ಲಿರುವ ಐಷರ್ ಟ್ರ್ಯಾಕ್ಟರ್ನ ತಯಾರಿಕೆ ಘಟಕ ವೀಕ್ಷಣೆ ಹಾಗೂ ಸುತ್ತ ಮುತ್ತಲ ಪ್ರದೇಶದಲ್ಲಿನ ಪ್ರಗತಿ ಪರ ರೈತರ ತೋಟಗಳಿಗೆ ಭೇಟಿ ನೀಡಿ ವೀಕ್ಷಿಸಲಿದ್ದೇವೆ. ಅಲ್ಲಿಯೆ ತಂತ್ರಜ್ಞರೊಂದಿಗೆ ಸಂವಾದ ನಡೆಯಲಿದ್ದು ಈಗಿನ ಟ್ರ್ಯಾಕ್ಟರ್ನ ಮಾದರಿಗಳಲ್ಲಿ ಬದಲಾವಣೆ ಇನ್ನಿತರೆ ವಿಷಯಗಳ ಬಗ್ಗೆ ಸಂವಾದ ನಡೆಸಲಿದ್ದೇವೆ ಎಂದರು.
ಪ್ರಗತಿಪರ ರೈತರಾದ ಎ.ರಾಮಚಂದ್ರಪ್ಪ, ಗಾಂಧಿನಗರ ರಾಮಕೃಷ್ಣಪ್ಪ, ಬೂದಾಳ ರಾಮಾಂಜಿ ಪ್ರವಾಸದ ತಂಡದಲ್ಲಿದ್ದರು.
 

ಜಿಲ್ಲಾ ಮಹಿಳಾ ಕಾಂಗ್ರೆಸ್ ವಿಭಾಗದ ಅಧ್ಯಕ್ಷೆ

0

ಶಿಡ್ಲಘಟ್ಟದ ಇಲಾಹಿ ನಗರದ ವಕೀಲೆ ಎಸ್.ಯಾಸ್ಮೀನ್ ತಾಜ್ ಹಫೀಜುಲ್ಲಾ ಅವರನ್ನು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಶಿಡ್ಲಘಟ್ಟ ಬ್ಲಾಕ್ ನ ಮಹಿಳಾ ಕಾಂಗ್ರೆಸ್ ವಿಭಾಗದ ಅಧ್ಯಕ್ಷರನ್ನಾಗಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವಿಭಾಗದ ಅಧ್ಯಕ್ಷೆ ಗೀತಾ ಜಯಂದರ್ ನೇಮಕ ಮಾಡಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸನ್ಮಾನ

0

ನಗರದ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ವರ್ಗಾವಣೆಗೊಂಡ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಬೀಳ್ಕೊಡುಗೆ ಹಾಗೂ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಚಿಕ್ಕಬಳ್ಳಾಪುರದಲ್ಲಿ ಡಿ ವೈ ಪಿ ಸಿ ಆಗಿ ತಾಲ್ಲೂಕಿನಿಂದ ವರ್ಗಾವಣೆಗೊಂಡ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಮಾತನಾಡಿ, ತಾಲ್ಲೂಕಿನಲ್ಲಿ ಕಾರ್ಯನಿರ್ವಣೆಯ ಸಂದರ್ಭದ ಅನುಭವವನ್ನು ಮೆಲುಕು ಹಾಕಿದರು.
ಈ ಸಂದರ್ಭದಲ್ಲಿ ವರ್ಗಾವಣೆಗೊಂಡ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಹಾಗೂ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು ಅವರನ್ನು ಸಿ ಆರ್ ಪಿ ಮತ್ತು ಬಿ ಆರ್ ಪಿ ಸಂಘದ ವತಿಯಿಂದ ಗೌರವಿಸಲಾಯಿತು.
ಸಿ ಆರ್ ಪಿ ಮತ್ತು ಬಿ ಆರ್ ಪಿ ಸಂಘದ ಅಧ್ಯಕ್ಷ ರಮೇಶ್ ಕುಮಾರ್, ಸಮನ್ವಯಾಧಿಕಾರಿ ರಾಜು, ಸಿ ಆರ್ ಪಿ ಗಳಾದ ಶ್ರೀನಿವಾಸರೆಡ್ಡಿ, ಪ್ರಸನ್ನಕುಮಾರ್, ಸುಂದರಾಚಾರಿ, ಮಂಜುನಾಥ, ವೆಂಕಟೇಶ್, ಚಂದ್ರಶೇಖರ್, ಶಾರದಮ್ಮ ಹಾಜರಿದ್ದರು.
 

ಮದ್ಯಪಾನ ಇಡೀ ಕುಟುಂಬದ ಸುಖ ನೆಮ್ಮದಿ ಹಾಳು ಮಾಡುತ್ತದೆ

0

ದುಡಿಮೆಯ ಬಹುಪಾಲು ಹಣವನ್ನು ಮದ್ಯಪಾನದಂತಹ ದುಶ್ಚಟಗಳಿಗೆ ವಿನಿಯೋಗಿಸಿ ಕುಟುಂಬಗಳು ಆರ್ಥಿಕ ಹಿನ್ನೆಡೆಯತ್ತ ಸಾಗುತ್ತಿವೆ. ಮದ್ಯಪಾನದ ಪಿಡುಗಿನಿಂದ ನಾಶವಾಗುತ್ತಿರುವ ಕುಟುಂಬಗಳನ್ನು ರಕ್ಷಿಸಿ ಆರ್ಥಿಕವಾಗಿ ಮುಂದೆ ತರಲು ಮದ್ಯವರ್ಜಿನ ಶಿಬಿರವನ್ನು ಜಿಲ್ಲೆಯಲ್ಲಿಯೇ ಪ್ರಥಮವಾಗಿ ಶಿಡ್ಲಘಟ್ಟದಲ್ಲಿ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿಯ ಶ್ರೀ ಪಟಾಲಮ್ಮ ಮತ್ತು ವೀರ ಸೊಣ್ಣಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿರುವ ೧೧೦೬ನೇ ಮದ್ಯವರ್ಜನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮದ್ಯಪಾನ ಎಂಬುವುದು ತನ್ನನ್ನು ಹಾಳು ಮಾಡುವುದಲ್ಲದೆ ಜೊತೆಗೆ ಇಡೀ ಕುಟುಂಬದ ಸುಖ ನೆಮ್ಮದಿ ಹಾಳು ಮಾಡುತ್ತದೆ. ಆದ್ದರಿಂದ ಎಲ್ಲಾ ದುಶ್ಚಟಗಳಿಂದ ದೂರ ಉಳಿದರೆ ಮಾತ್ರ ನೆಮ್ಮದಿ ಬದುಕು ಸಾಧ್ಯ. ದುಶ್ಚಟಗಳಿಂದ ಮನುಷ್ಯ ತನ್ನ ಭವಿಷ್ಯವನ್ನು ಕಳೆದುಕೊಳ್ಳುತ್ತಿದ್ದು, ಸಮಾಜದಲ್ಲಿ ತನ್ನ ವ್ಯಕ್ತಿತ್ವ ಕಳೆದುಕೊಳ್ಳುತ್ತಾನೆ. ಯುವಕರು ಇಂದು ದುಶ್ಚಟಗಳ ದಾಸರಾಗುತ್ತಿರುವುದು ವಿಪರ್ಯಾಸ ಎಂದರು.
ಹಾಪ್ ಕಾಮ್ಸ್ ಅಧ್ಯಕ್ಷ ಮುತ್ತೂರು ಚಂದ್ರೇಗೌಡ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ನಮ್ಮ ತಾಲ್ಲೂಕಿನಲ್ಲಿ ಮದ್ಯವರ್ಜನ ಶಿಬಿರ ಆಯೋಜಿಸಿರುವುದರಿಂದ ಈ ಭಾಗದ ಬಡ ಜನರಿಗೆ ಮದ್ಯಪಾನ ಬಿಡಿಸುವ ಮೂಲಕ ಅವರ ಬದುಕಿಗೆ ಆಶಾಕಿರಣವಾಗಿದೆ. ಶಿಬಿರದಲ್ಲಿರುವ ಎಲ್ಲ ಶಿಬಿರಾರ್ಥಿಗಳು ಇದರಿಂದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಮದ್ಯವರ್ಜನ ಶಿಬಿರ ಏಳು ದಿನಗಳ ಕಾಲ ನಡೆಯಲಿದ್ದು ಇದರಲ್ಲಿ ಶಿಬಿರಾರ್ಥಿಗಳಿಗೆ ಬೋಧನೆ ಜೊತೆಗೆ ಆಟ, ಪಾಠ, ಯೋಗ ಇತ್ಯಾದಿ ಇರುತ್ತದೆ. ಮಾನವನಾದ ಮೇಲೆ ತಪ್ಪು ಮಾಡುವುದು ಸಹಜ, ತಿದ್ದಿ ನಡೆಯುವವನೇ ಮನುಜ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನಾಧಿಕಾರಿ ಮೋಹನ್ ಮಾತನಾಡಿ, ಈ ಶಿಬಿರ ಒಂದು ವಾರ ನಡೆಯುತ್ತಿದ್ದು ಶಿಬಿರಾರ್ಥಿಗಳನ್ನು ಅವರ ಸ್ವಂತ ಇಚ್ಛೆಯ ಮೇಲೆ ಅಥವಾ ಅವರ ಕುಟುಂಬದವರ ಒಪ್ಪಿಗೆ ಪಡೆದು ಶಿಬಿರಕ್ಕೆ ಸೇರಿಸಿಕೊಂಡು ಪ್ರತಿ ದಿನ ಬೆಳಗ್ಗೆ 5 ರಿಂದ ರಾತ್ರಿ 10 ಗಂಟೆಯ ತನಕ ಯೋಗ, ಮಾರ್ಗದರ್ಶನ, ವೈದ್ಯರಿಂದ ತಪಾಸಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತದೆ.ಏಳು ದಿನಗಳ ಕಾಲ ನಡೆಯುವ ಮದ್ಯವರ್ಜನ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಊಟದ ವ್ಯವಸ್ಥೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಶಿಬಿರದಲ್ಲೇ ಮಾಡಲಾಗಿದೆ. ಶಿಬಿರದಲ್ಲಿ ಮದ್ಯಪಾನದಿಂದಾಗುವ ದುಷ್ಟಪರಿಣಾಮಗಳು ಹಾಗೂ ಮದ್ಯಪಾನ ಬಿಡಲು ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ವಿವರವಾಗಿ ತಿಳಿಸಿ ಮದ್ಯಪಾನ ಬಿಡುವಂತೆ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಮದ್ಯವ್ಯಸನಿಗಳು ಸಂಯಮದಿಂದ ಇದ್ದು, ಕಾರ್ಯಕ್ರಮ ಮುಗಿದ ನಂತರ ಮದ್ಯಪಾನ ಬಿಟ್ಟು ಸಂತೋಷವಾಗಿ ಬಾಳಿ ಎಂದು ಹೇಳಿದರು.
ಮದ್ಯವರ್ದನ ಶಿಬಿರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವರಾಜ್, ಉಪಾಧ್ಯಕ್ಷ ಎ.ಎಂ. ತ್ಯಾಗರಾಜ್, ಹಂಡಿಗನಾಳ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮುನಿಯಪ್ಪ, ಶ್ರೀನಿವಾಸಮೂರ್ತಿ, ಎಚ್.ಎಂ.ಮುನಿರಾಜು, ಪಟಾಲಮ್ಮ ವೀರಸೊಣ್ಣಮ್ಮ ದೇವಾಲಯ ಸಮಿತಿಯ ಕೋಶಾಧಿಕಾರಿ ನಾಗರಾಜಪ್ಪ, ಯೋಜನಾಧಿಕಾರಿ ದಿನೇಶ್, ಶಿಬಿರಾಧಿಕಾರಿ ರಾಘವೇಂದ್ರ, ಮಾಣಿಕ್ಯಮ್ಮ, ಮೇಲ್ವಿಚಾರಕರಾದ ಶಶಿಕುಮಾರ್, ಮಮತಾ ಕಾರ್ಯಕ್ರಮದಲ್ಲಿ ಹಾಜರಿದ್ದರು.
 

ಸಮುದಾಯದ ಜೊತೆ ಶಾಲೆಯನ್ನು ಬೆಸೆಯುತ್ತದೆ ಪ್ರತಿಭಾ ಕಾರಂಜಿ

0

ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವುದೊಂದಿಗೆ ಸಮುದಾಯವನ್ನು ಮತ್ತು ಶಾಲೆಯನ್ನು ಬೆಸೆಯುವ ಹಾಗೂ ಬಾಂಧವ್ಯ ಮೂಡಿಸುವ ಕೆಲಸವನ್ನು ಸಹ ಮಾಡುತ್ತಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ ತಿಳಿಸಿದರು.
ತಾಲ್ಲೂಕಿನ ತಾತಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಅಬ್ಲೂಡು ಕ್ಲಸ್ಟರ್ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಡ್ಲಘಟ್ಟ ತಾಲ್ಲೂಕಿನ ತಾತಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಅಬ್ಲೂಡು ಕ್ಲಸ್ಟರ್ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಛದ್ಮವೇಷ ಸ್ಪರ್ಧೆ ಹಾಗೂ ಜಾನಪದ ನೃತ್ಯದಲ್ಲಿ ಪಾಲ್ಗೊಂಡಿದ್ದ ಮಕ್ಕಳು.

ಸರ್ಕಾರ ಪ್ರತಿಭಾ ಕಾರಂಜಿಗೆಂದು ಹಣ ನೀಡುವುದಿಲ್ಲ. ಆದರೂ ಶಿಕ್ಷಕರು ಗ್ರಾಮಸ್ಥರ, ಮುಖಂಡರ ಸಹಕಾರವನ್ನು ಪಡೆಯುವ ಮೂಲಕ ತಾಲ್ಲೂಕಿನೆಲ್ಲೆಡೆ ಅತ್ಯುತ್ತಮವಾಗಿ ಪ್ರತಿಭಾ ಕಾರಂಜಿ ನಡೆಸುತ್ತಿದ್ದಾರೆ. ಪ್ರತಿಭಾ ಕಾರಂಜಿಯಿಂದ ಹಲವು ಉಪಯೋಗಗಳಿವೆ. ವಿದ್ಯಾರ್ಥಿಗಳ ವ್ಯಕ್ತಿತ್ವದ ಅಭಿವೃದ್ಧಿಗೆ ಸಹಾಯವಾಗುತ್ತದೆ. ಇದು ಶಿಕ್ಷಣ, ಮನರಂಜನೆ ಹಾಗೂ ಅಭಿವೃದ್ಧಿಗೆ ಉತ್ತೇಜಿಸುತ್ತದೆ. ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಹೊರತರುತ್ತದೆ. ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಹೊಸದಾದ ಜೀವನ ಕೌಶಲ್ಯವನ್ನು ಹೊಂದಲು ವೇದಿಕೆಯಾಗಿದೆ. ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ರೂಪಿಸಲು ಪೋಷಕರು ಹಾಗೂ ಶಿಕ್ಷಕರನ್ನು ಪ್ರೋತ್ಸಾಹಿಸುತ್ತದೆ. ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಅಬ್ಲೂಡು ಕ್ಲಸ್ಟರ್ ನ 12 ಶಾಲೆಗಳ ವಿದ್ಯಾರ್ಥಿಗಳು ಕೋಲಾಟ, ಜನಪದ ನೃತ್ಯ, ಖವಾಲಿ, ದೇಶಭಕ್ತಿ ಗೀತೆ, ರಸಪ್ರಶ್ನೆ ಕಾರ್ಯಕ್ರಮ, ಕಂಠಪಾಠ, ಚಿತ್ರಕಲೆ, ಕ್ಲೇ ಮಾಡಲಿಂಗ್, ಭಕ್ತಿಗೀತೆ, ಅಭಿನಯ ಗೀತೆ,ಆಶುಭಾಷಣ, ಛದ್ಮವೇಷ ಮುಂತಾದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ತಾತಹಳ್ಳಿಯ ಜೈಭಾರತ್ ಯುವಕ ಸಂಘದ ಸದಸ್ಯರು, ಸಮನ್ವಯಾಧಿಕಾರಿ ರಾಜು, ಗ್ರಾಮ ಪಂಚಾಯ್ತಿ ಸದಸ್ಯೆ ಲಕ್ಷ್ಮೀದೇವಮ್ಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಟಿ.ಸಿ.ಕೃಷ್ಣಪ್ಪ, ಮುಖ್ಯ ಶಿಕ್ಷಕಿ ಸರಸ್ವತಮ್ಮ, ಸಿಆರ್ಪಿಗಳಾದ ಸುರೇಶ್, ನಾಗರಾಜ್, ಶ್ರೀನಿವಾಸರೆಡ್ಡಿ, ಸಾದಿಕ್ಪಾಷ, ಸುಂದರಾಚಾರಿ, ಶಾರದಾಂಬ, ನೇತ್ರಾ, ವೆಂಕಟೇಶ್, ಚಂದ್ರಶೇಖರ್, ಮಂಜುನಾಥ್, ಗಂಗಾಧರ್, ನರಸಿಂಹರಾಜು ಹಾಜರಿದ್ದರು.
 

ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ತರಬೇತಿ ಅಗತ್ಯವಿದೆ

0

ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ಕ್ರೀಡಾಪಟುಗಳಿದ್ದಾರೆ. ಅವರಿಗೆ ಪ್ರೋತ್ಸಾಹ ಹಾಗೂ ತರಬೇತಿಯ ಅಗತ್ಯತೆಯಿದೆ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯೆ ಪಂಕಜಾ ನಿರಂಜನ್ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾ ಪಂಚಾಯ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಸಾಧನೆಗೆ ಪರಿಶ್ರಮ ಮುಖ್ಯ. ಸತತ ಪರಿಶ್ರಮದಿಂದ ತಮ್ಮ ಆಸಕ್ತಿ ಕ್ಷೇತ್ರ ಅಥವಾ ಕ್ರೀಡೆಯಲ್ಲಿ ಸಾಧನೆ ಮಾಡಬಹುದು. ಸರ್ಕಾರದ ಪ್ರೋತ್ಸಾಹದೊಂದಿಗೆ ಕ್ರೀಡಾಸಕ್ತರು ಆಗಾಗ್ಗೆ ತರಬೇತಿ ಶಿಬಿರಗಳನ್ನು ನಡೆಸುವ ಮೂಲಕ ಮಕ್ಕಳು ಜಿಲ್ಲಾ ಮತ್ತು ರಾಜ್ಯಮಟ್ಟಕ್ಕೆ ಪ್ರತಿನಿಧಿಸುವಂತೆ ಮಾಡಬೇಕು ಎಂದರು.

ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಉದ್ದ ಜಿಗಿತದ ದೃಶ್ಯಗಳು.

ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರುದ್ರಪ್ಪ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕ್ರೀಡಾಸಕ್ತರು ಒಗ್ಗೂಡಿ ಕ್ರೀಡಾಂಗಣದ ಅಭಿವೃದ್ಧಿ ಮತ್ತು ಮಕ್ಕಳಿಗೆ ತರಬೇತಿ, ಪ್ರೋತ್ಸಾಹ ನೀಡುತ್ತಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಅತ್ಯುತ್ತಮ ಕ್ರೀಡಾಪಟುಗಳು ತಾಲ್ಲೂಕಿನಿಂದ ಹೊರಹೊಮ್ಮಲಿದ್ದಾರೆ ಎಂದು ಹೇಳಿದರು.
ಅಥ್ಲೆಟಿಕ್ಸ್, ವಾಲಿಬಾಲ್, ಖೋಖೋ, ಕಬಡ್ಡಿ, ಫುಟ್ ಬಾಲ್, ಬ್ಯಾಸ್ಕೆಟ್ ಬಾಲ್, ಹಾಕಿ, ಥ್ರೋಬಾಲ್, ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್, ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳನ್ನು ನಡೆಸಲಾಯಿತು.
ರಾಜ್ಯಮಟ್ಟದ ಹಾಕಿ ತರಬೇತುದಾರ ಮುಸ್ಟಾಕ್, ದೈಹಿಕ ಶಿಕ್ಷಕರಾದ ಗಣೇಶ್, ಮಂಜುನಾಥ್, ಎನ್.ನೇತ್ರಾವತಿ, ವಿಠಲ್, ರಂಗನಾಥ್, ಅಗಜಾನನ ಮೂರ್ತಿ, ಅಶ್ವತ್, ನರಸಿಂಹನ್, ಶ್ರೀನಿವಾಸ್ ಹಾಜರಿದ್ದರು.
ಕ್ರೀಡಾಕೂಟದಲ್ಲಿ ಅವ್ಯವಸ್ಥೆ ಆರೋಪ: ಕ್ರೀಡಾಕೂಟಕ್ಕೆ ಸರ್ಕಾರದಿಮದ 50 ಸಾವಿರ ರೂ ಅನುದಾನವಿದ್ದರೂ ಸಮರ್ಪಕವಾಗಿ ಬಳಸಿಲ್ಲ. ಮೂಲಭೂತ ಸೌಕರ್ಯಗಳನ್ನು ಕ್ರೀಡಾಪಟುಗಳಿಗೆ ಒದಗಿಸಿಲ್ಲ ಎಂದು ಕ್ರೀಡಾಪಟು ಜಯಂತಿಗ್ರಾಮ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಈ ಬಾರಿ ಗುಂಪು ತಂಡಗಳಲ್ಲಿ ವಿಜೇತರಾದವರಿಗೆ ಶೀಲ್ಡ್ ನೀಡುತ್ತಿಲ್ಲ. ಟ್ರಾಕ್ ಗುರುತನ್ನು ಸಮರ್ಪಕವಾಗಿ ಮಾಡದೆ ಶಾಲಾ ಮಕ್ಕಳಿಂದ ಮಾಡಿಸಿದ್ದಾರೆ. ಲಾಂಗ್ ಜಂಪ್ ಪಿಟ್ ನಲ್ಲಿ ಸರಿಯಾಗಿ ಮರಳಿಲ್ಲ. ಖೇಲೋ ಇಂಡಿಯಾ 2016 ರಲ್ಲಿ ನಡೆದಿರುವ ಕ್ರೀಡಾಕೂಟದ ವಿಜೇತರಿಗೆ ಇನ್ನೂ ನಗದು ಬಹುಮಾನ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.
 

ನಗರಸಭೆಯ ಅಧಿಕಾರಿಗಳು ಸಮರ್ಪಕವಾದ ಮಾಹಿತಿ ನೀಡುತ್ತಿಲ್ಲ

0

ಚುನಾಯಿತ ಜನಪ್ರತಿನಿಧಿಗಳು ಕೇಳಿರುವ ಮಾಹಿತಿಯನ್ನು ಸಭೆಯಲ್ಲಿ ಅಧಿಕಾರಿಗಳು ನೀಡುತ್ತಿಲ್ಲ ಎಂದು ನಗರಸಭೆ ಸದಸ್ಯ ಜೆ.ಎಂ.ಬಾಲಕೃಷ್ಣ ಆರೋಪಿಸಿದರು.
ನಗರಸಭೆಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಅವರು ಸ್ಪಂದಿಸದ ಅಧಿಕಾರಿಗಳ ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ನಗರದ ೨೭ ವಾರ್ಡುಗಳ ಸದಸ್ಯರ ತಮ್ಮ ತಮ್ಮ ವಾರ್ಡಿಗೆ ಸಂಬಂಧಿಸಿದಂತೆ ವಿವಿಧ ಕಾಮಗಾರಿಗಳು ಹಾಗು ಮೂಲಭೂತ ಸವಲತ್ತುಗಳ ಬಗ್ಗೆ ನಗರಸಭೆಗೆ ಮನವಿ ಮಾಡಿದ್ದೇವೆ. ಆದರೆ ಅಧಿಕಾರಿಗಳು ಹಾಗು ಸಿಬ್ಬಂದಿ ಈ ಬಗ್ಗೆ ಕ್ರಮ ಜರುಗಿಸಿರುವ ಬಗ್ಗೆ ಜನ ಪ್ರತಿನಿಧಿಗಳಿಗೆ ಮಾಹಿತಿ ನೀಡುತ್ತಿಲ್ಲ. ಇನ್ನು ನಾಲ್ಕೈದು ತಿಂಗಳಿಗೊಮ್ಮೆ ಕರೆಯುವ ಸಭೆಯಲ್ಲಾದರೂ ಈ ಬಗ್ಗೆ ಮಾಹಿತಿ ನೀಡುತ್ತಾರೆ ಎಂದರೆ ಅದೂ ಇಲ್ಲದೇ ಸಭೆಯಲ್ಲಿ ಬೇಕಾ ಬಿಟ್ಟಿ ಉತ್ತರ ನೀಡುವುದು ಸರಿಯಲ್ಲ. ಹೀಗಾದರೆ ಸಭೆ ಮಾಡುವ ಜರೂರತ್ತಾದರೂ ಏನು ಎಂದು ಪ್ರಶ್ನಿಸಿದರು.
ನಗರದ ೧ ನೇ ವಾರ್ಡಿನ ಸದಸ್ಯ ಲಕ್ಷ್ಮಣ್ ಮಾತನಾಡಿ, ನಗರಸಭೆ ವ್ಯಾಪ್ತಿಗೆ ಒಳಪಡುವ ನಗರಸಭೆಗೆ ಸೇರಿದ ಖಾಲಿ ನಿವೇಶನಗಳು ಮತ್ತು ನಗರಸಭೆ ಆಸ್ತಿಯ ವಿವರ ನೀಡುವಂತೆ ಕಚೇರಿಗೆ ಮನವಿ ಮಾಡಿ ತಿಂಗಳಾದರೂ ಇದುವರೆಗೂ ನೀಡಿಲ್ಲ. ನಗರಸಭೆಯಲ್ಲಿರುವ ವಾಹನಗಳ ವಿವರ ಹಾಗು ಅದು ಎಲ್ಲಿ ಕೆಲಸ ಮಾಡುತ್ತಿವೆ ಎಂಬುದರ ಬಗ್ಗೆ ಕೇಳಿದರೂ ಕಚೇರಿಯಲ್ಲಿ ಮಾಹಿತಿಯಿಲ್ಲ. ವಿನಾಕಾರಣ ವಾಹನಗಳ ಹೆಸರಿನಲ್ಲಿ ಡೀಸೆಲ್ ಖರೀದಿಗೆ ಲಕ್ಷಾಂತರ ರೂ ಹಣ ವ್ಯಯವಾದಂತೆ ಪುಸ್ತಕಗಳಲ್ಲಿ ನಮೂದಿಸುತ್ತಿದ್ದಾರೆ. ಇನ್ನು ನಗರದ ವಿವಿದೆಡೆ ಎಷ್ಟು ಕೊಳವೆ ಬಾವಿ ಕೊರೆಸಲಾಗಿದೆ, ಎಷ್ಟು ಕೊಳವೆ ಬಾವಿಗೆ ಮೋಟರ್ ಪಂಪು ಅಳವಡಿಸಲಾಗಿದೆ, ಪಂಪು ಮೋಟರ್ ಅಳವಡಿಸದೇ ಇರುವ ಕೊಳವೆ ಬಾವಿಗಳೆಷ್ಟು ಎಂಬುದರ ಬಗ್ಗೆ ಮಾಹಿತಿ ಕೇಳಿದರೂ ಈವರೆಗೂ ಅಧಿಕಾರಿಗಳು ನೀಡುತ್ತಿಲ್ಲ. ಜನಪ್ರತಿನಿಧಿಗಳಿಗೆ ಈ ರೀತಿ ಮಾಹಿತಿ ನೀಡದೇ ಸತಾಯಿಸುವ ಸಿಬ್ಬಂದಿ ಜನ ಸಾಮಾನ್ಯರ ಕೆಲಸ ಎಷ್ಟು ಮಾತ್ರ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಶಿಡ್ಲಘಟ್ಟದ ನಗರಸಭೆಯಲ್ಲಿ ಸೋಮವಾರ ಸ್ಥಾಯಿ ಸಮಿತಿಯ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯನ್ನು ಅಧ್ಯಕ್ಷ ಹಾಗು ಉಪಾಧ್ಯಕ್ಷರ ಗೈರು ಹಾಜರಿಯಲ್ಲಿ ತಾವೇ ನಡೆಸುವಂತೆ ಆಯುಕ್ತ ಚಲಪತಿರನ್ನು ಸದಸ್ಯರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಚಲಪತಿ ನಗರಸಭೆ ಸದಸ್ಯರೂ ಮತ್ತು ಜನಸಾಮಾನ್ಯರು ಕೇಳಿದ ಮಾಹಿತಿಯನ್ನು ಸಕಾಲದಲ್ಲಿ ನೀಡುವಂತೆ ಸಿಬ್ಬಂದಿಗೆ ಸೂಚಿಸಿದರು.
ಸಭೆಯಲ್ಲಿ ನಗರದ ಎಲ್ಲಾ ವಾರ್ಡುಗಳಲ್ಲಿ ಮೂಲಭೂತ ಸವಲತ್ತುಗಳಾದ ಬೀದಿ ದ್ವೀಪ, ಕುಡಿಯುವ ನೀರು ಹಾಗು ಸ್ವಚ್ಚತೆ ಕಲ್ಪಿಸುವ ಬಗ್ಗೆ ಚರ್ಚಿಸಲಾಯಿತು.
ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಂದೂಡಿಕೆ: ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಅಪ್ಸರ್ಪಾಷ ಹಾಗು ಉಪಾಧ್ಯಕ್ಷೆ ಪ್ರಭಾವತಿ ಸುರೇಶ್ ಸಭೆಯಲ್ಲಿ ಚರ್ಚಿಸಬೇಕಿದ್ದ ೨೬ ಅಂಶಗಳ ಪೈಕಿ ೨೫ ಅಂಶಗಳನ್ನು ಚರ್ಚಿಸುವವರೆಗೂ ಸಭೆಯಲ್ಲಿದ್ದು ೨೬ ನೇ ಅಂಶವಾದ ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕ ವಿಚಾರ ಬಂದಾಗ ಸದಸ್ಯರೆಲ್ಲಾ ಮೊದಲು ಊಟ ಮಾಡಿ ನಂತರ ಸಭೆ ಸೇರಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಮಾಡೋಣ ಎಂದು ಹೇಳಿ ಸಭೆಯಿಂದ ಹೊರನಡೆದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಕೆಲ ಸದಸ್ಯರು ಸಭೆಯಲ್ಲಿ ಚರ್ಚಿಸಲು ಉಳಿದಿರುವ ಕೊನೆಯ ಅಂಶವಿದು. ಹಾಗಾಗಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿಸಿ ನಂತರ ಊಟಕ್ಕೆ ಹೋಗೋಣ ಎಂದರು. ಆದರೆ ಇದ್ಯಾವದಕ್ಕೂ ಮಣೆ ಹಾಕದ ಅಧ್ಯಕ್ಷರು ಹಾಗು ಅವರ ಬೆಂಬಲಿಗರು ಸಭೆಯಿಂದ ಹೊರ ಹೋದವರು ಮತ್ತೆ ಸಭೆಗೆ ಬರಲೇ ಇಲ್ಲ.
ಸಭೆಯಲ್ಲಿದ್ದ ಸುಮಾರು ೧೪ ಜನ ಸದಸ್ಯರು ಅಧ್ಯಕ್ಷ ಹಾಗು ಉಪಾಧ್ಯಕ್ಷರ ಗೈರು ಹಾಜರಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸವಂತೆ ಆಯುಕ್ತ ಚಲಪತಿರನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಆಯುಕ್ತ ಹಾಗು ನಗರಸಭೆ ಸದಸ್ಯರ ನಡುವೆ ಕೆಲಕಾಲ ಮಾತಿನ ಚಕಮಕಿಯೂ ನಡೆಯಿತು.
ನಗರಸಭೆ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಗೈರು ಹಾಜರಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಆಯ್ಕೆ ಮಾಡುವ ಅಧಿಕಾರ ನನಗಿಲ್ಲ. ಬದಲಿಗೆ ಸಭೆಯಲ್ಲಿ ಏನು ನಡೆದಿದೆ ಎನ್ನುವುದನ್ನು ಲಿಖಿತವಾಗಿ ಮೇಲಾಧಿಕಾರಿಗಳಿಗೆ ಕಳುಹಿಸಲಾಗುವುದು. ಮೇಲಾಧಿಕಾರಿಗಳ ಆಧೇಶದಂತೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.
ಸಭೆಯಲ್ಲಿ ನಗರಸಭೆ ಸದಸ್ಯರು ಮತ್ತು ನಾಮನಿರ್ದೇಶಿತ ಸದಸ್ಯರು ಹಾಗು ಸಿಬ್ಬಂದಿ ಹಾಜರಿದ್ದರು.
 

ಗಣೇಶ ವಿಸರ್ಜನೆ

0

ಗಣೇಶ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಬೇಕು ಹಾಗೂ ರಾತ್ರಿಯಿಡೀ ಕುಣಿದು ಕುಪ್ಪಳಿಸಿ ಗಣೇಶ ವಿಸರ್ಜನೆ ಮೆರವಣಿಗೆ ನಡೆಸುವ ಕಾರ್ಯಕ್ಕೆ ಕಡಿವಾಣ ಹಾಕಿ ಹಗಲು ಹೊತ್ತಿನಲ್ಲಿ ವಿಸರ್ಜನೆ ಮೆರವಣಿಗೆ ನಡೆಸಬೇಕೆಂದು ಪೊಲೀಸರು ತಾಕೀತು ಮಾಡಿದ ಕಾರಣ ಭಾನುವಾರ ಸಂಜೆಯ ವೇಳೆಗೆ ಬಹುತೇಕ ಗಣೇಶ ವಿಸರ್ಜನೆಯನ್ನು ನಡೆಸಲಾಯಿತು.
ಸಾರ್ವಜನಿಕವಾಗಿ ಇಟ್ಟಿರುವ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ವೀರಾಪುರದಲ್ಲಿ ಕುಂಟೆಯನ್ನು ಪೊಲೀಸರು ನಿಗದಿಪಡಿಸಿದ್ದು, ಸುತ್ತ ಕಟಕಟೆಯನ್ನು ನಿರ್ಮಿಸಿದ್ದಾರೆ. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮೂರನೇ ದಿನ ಅಂದರೆ ಭಾನುವಾರ ಬಹುತೇಕರು ವಿಸರ್ಜಿಸಿದರು. ಸುಮಾರು 37 ಗಣೇಶ ಮೂರ್ತಿಗಳನ್ನು ಭಾನುವಾರ ಸಂಜೆ ವಿಸರ್ಜಿಸುವರೆಂದು ಪೊಲೀಸರು ತಿಳಿಸಿದ್ದಾರೆ.
ಮೆರವಣಿಗೆಯಲ್ಲಿ ಡೋಲು, ತಮ್ಮಟೆ ಸದ್ದಿನೊಂದಿಗೆ ಯುವಕರು ಕುಣಿದು ಕುಪ್ಪಳಿಸುತ್ತಾ ಸಾಗಿದರು. ಬಣ್ಣಗಳನ್ನು ಪರಸ್ಪರ ಹಾಕಿಕೊಂಡು ಹೋಳಿ ಹಬ್ಬವನ್ನು ನೆನಪಿಸಿದರು. ಕೆಲವರದ್ದು ವಾಲಗದೊಂದಿಗಿನ ಮಂಗಳಸ್ವರವಾದರೆ, ಕೆಲವರದ್ದು ಅಬ್ಬರದ ವಾದ್ಯಗಳು. ಅಲ್ಲಲ್ಲಿ ಪಟಾಕಿ ಸಿಡಿಸುತ್ತಾ, ಚಂದಾ ಎತ್ತುತ್ತಾ, ಚಲನಚಿತ್ರ ಗೀತೆಗಳಿಗೆ ನೃತ್ಯ ಮಾಡುತ್ತಾ, ಟ್ರಾಕ್ಟರ್ ಗಳಲ್ಲಿ ಗಣೇಶನ ಮೂರ್ತಿಗಳನ್ನಿಟ್ಟುಕೊಂಡು ಮೆರವಣಿಗೆಯಲ್ಲಿ ಸಾಗಿದರು.
ಇನ್ನೂ ನಗರದಲ್ಲಿ ಸುಮಾರು 20 ಗಣೇಶ ಮೂರ್ತಿಗಳನ್ನು ಇಟ್ಟಿದ್ದು ಶುಕ್ರವಾರ ಸಂಜೆ ಐದನೇ ದಿನ ವಿಸರ್ಜಿಸುವರೆಂದು ಪೊಲೀಸರು ತಿಳಿಸಿದ್ದಾರೆ.
 

ಮಾರುತಿನಗರದಲ್ಲಿ ರಂಗೋಲಿ ಸ್ಪರ್ಧೆ

0

ನಗರದ ಹೊರವಲಯದ ಮಾರುತಿನಗರದಲ್ಲಿ ಗಣೇಶೋತ್ಸವದ ಅಂಗವಾಗಿ ಭಾನುವಾರ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ನಗರದ ಹೊರವಲಯದ ಇದ್ಲೂಡು ರಸ್ತೆಯ ಮಾರುತಿನಗರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸ್ಥಳೀಯ ಯುವಕರು ಗಣೇಶೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ರಂಗೋಲೆ ಸ್ಫರ್ಧೆಯಲ್ಲಿ ಮಹಿಳೆಯರು, ಯುವತಿಯರು ಭಾಗವಹಿಸಿ ವಿವಿಧ ರೀತಿಯ ರಂಗೋಲೆಗಳನ್ನು ಬಿಡಿಸಿ ಎಲ್ಲರ ಗಮನ ಸೆಳೆದರು.

ರಾಜ್ಯದಲ್ಲಿ ಆಗುತ್ತಿರುವ ಕೊಲೆಗಳ ವಿರುದ್ಧ ಯುವಕರು ಸಿಡಿದೇಳಬೇಕು

0

ಭಯೋತ್ಪಾದಕರ ಮನಸ್ಥಿತಿಯಿರುವವರು ದೇಶ ಕಟ್ಟಲು ಹೊರಟಿರುವ ಸಂಘಟಕರನ್ನು ಕೊಲೆ ಮಾಡುತ್ತಿದ್ದಾರೆ. ಅಂತಹವರನ್ನು ತಡೆಯಬೇಕು. ರಾಜ್ಯದಲ್ಲಿ ಆಗುತ್ತಿರುವ ಕೊಲೆಗಳ ವಿರುದ್ಧದ ಹೋರಾಟಕ್ಕೆ ಯುವಕರು ಸಿದ್ದರಾಗಬೇಕು ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾ ಉಸ್ತುವಾರಿ ಶರತ್ ಬಚ್ಚೇಗೌಡ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ತಾಲ್ಲೂಕು ಯುವಮೋರ್ಚಾ ವತಿಯಿಂದ ಆಯೋಜಿಸಿದ್ದ ಮಂಗಳೂರು ಚಲೋ ಬೈಕ್ ರ್ಯಾಲಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ದೇಶಕಟ್ಟುವಂತಹ ಕೆಲಸದಲ್ಲಿ ತೊಡಗಿಸಿಕೊಂಡು ಯುವಜನರನ್ನು ಹಾಗೂ ಸಂಘಟನೆ ಮಾಡುತ್ತಿರುವ ಯುವಕರನ್ನು ಗುರಿಯಾಗಿಸಿಕೊಂಡು ಕೊಲೆಗಳು ಮಾಡಲಾಗುತ್ತಿದೆ. ಪಿ.ಎಫ್.ಐ, ಕೆ.ಎಫ್.ಡಿ, ಎಸ್.ಡಿ.ಪಿ.ಐ ಸಂಘಟನೆಗಳ ಮುಖಾಂತರ ಕೊಲೆಗಳು ನಡೆಯುತ್ತಿವೆ. ಇಂತಹ ಸಂಧರ್ಭಗಳಲ್ಲಿ ಯುವಜನರು ಸಂಘಟಿತರಾಗದಿದ್ದರೆ ಮುಂದೊಂದು ಮತ್ತಷ್ಟು ಕೊಲೆಗಳಾಗಲಿವೆ. ಆದ್ದರಿಂದ ಐದು ಭಾಗಗಳಿಂದ 15 ಸಾವಿರಕ್ಕೂ ಹೆಚ್ಚು ಯುವಕರನ್ನು ಒಟ್ಟುಗೂಡಿಸಿಕೊಂಡು ಬೈಕ್ ರ್ಯಾಲಿಯ ಮೂಲಕ ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಸೆಪ್ಟೆಂಬರ್ 7 ರಂದು ಬೃಹತ್ ಮಟ್ಟದ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ಬಿಜೆಪಿ ಮುಖಂಡ ಡಿ.ಆರ್.ಶಿವಕುಮಾರಗೌಡ ಮಾತನಾಡಿ, ಈ ದೇಶದ ದೊಡ್ಡ ಸಂಪನ್ಮೂಲ ಯುವಜನರಾಗಿದ್ದಾರೆ. ಯುವಜನರು ಮೈ ಮರೆತರೆ ಆರೋಗ್ಯವಂತ ಸಮಾಜದ ನಿರ್ಮಾಣ ಕಷ್ಟವಾಗಲಿದೆ. ಆದ್ದರಿಂದ ಸೆಪ್ಟೆಂಬರ್ 5 ರಂದು ಶಿಡ್ಲಘಟ್ಟದಿಂದ 100 ಬೈಕ್ ಗಳ ಮೂಲಕ ಹೊರಟು ಹೋರಾಟದಲ್ಲಿ ಭಾಗವಹಿಸಲು ಯುವಜನರಿಗೆ ಅಗತ್ಯವಾಗಿರುವ ಎಲ್ಲಾ ಸಹಕಾರ ನೀಡುವುದಾಗಿ ಅವರು ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಆರ್.ಸುರೇಂದ್ರಗೌಡ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಜನವಿರೋಧಿ ನಿಲುವು ತಾಳಿದೆ. ಹೋರಾಟದ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ತೊಡಗುವವರನ್ನು ಕೊಲೆ ಮಾಡುತ್ತಿರುವವರ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವಂತೆ ಕೊಟ್ಟಿರುವ ದೂರುಗಳನ್ನು ಸ್ಥಳೀಯವಾಗಿ ವಿಚಾರಣೆಗೆ ಒಳಪಡಿಸುವ ಮೂಲಕ ಪ್ರಕರಣಗಳನ್ನು ಮುಚ್ಚಿ ಹಾಕುತ್ತಿದ್ದಾರೆ. ಕೊಲೆಗಳ ತನಿಖೆಯನ್ನು ಸಿಬಿಐ ಗೆ ಒಪ್ಪಿಸಬೇಕು ಎಂದರು.
ಬಿಜೆಪಿ ಮುಖಂಡರಾದ ಪ್ರಪುಲ್ ಚಂದ್ರ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಭರತ್ ರೆಡ್ಡಿ, ಜಿಲ್ಲಾ ಕಾರ್ಯದರ್ಶಿ ನರೇಶ್, ಬಳುವನಹಳ್ಳಿ ಶ್ರೀಧರ್, ತಾಲ್ಲೂಕು ಯುವಮೋರ್ಚಾ ಅಧ್ಯಕ್ಷ ಬೈರೇಗೌಡ, ಕಾರ್ಯದರ್ಶಿ ಪ್ರತಾಪ್, ಹಂಡಿಗನಾಳ ಪ್ರಕಾಶ್, ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್ ಹಾಜರಿದ್ದರು.
 

ರೈತರಿಗೆ ಕೆ.ಸಿ.ಸಿ.ಸಾಲದ ಚೆಕ್ಕುಗಳ ವಿತರಣೆ

0

ಡಿ.ಸಿ.ಸಿ.ಬ್ಯಾಂಕಿನಲ್ಲಿ ಪಡೆದುಕೊಳ್ಳುವ ಸಾಲ ಸೌಲಭ್ಯಗಳನ್ನು ರೈತರು ನಿಗದಿತ ಸಮಯದಲ್ಲಿ ಮರು ಪಾವತಿ ಮಾಡುವ ಮೂಲಕ ಸಹಕಾರಿ ಬ್ಯಾಂಕುಗಳ ಉಳಿವು, ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಡಿ.ಸಿ.ಸಿ.ಬ್ಯಾಂಕ್ ಜಿಲ್ಲಾ ಅಧ್ಯಕ್ಷ ಬ್ಯಾಲಹಳ್ಳಿ ಗೊವಿಂದೇಗೌಡ ತಿಳಿಸಿದರು.
ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಡಿ.ಸಿ.ಸಿ.ಬ್ಯಾಂಕ್ ಶಿಡ್ಲಘಟ್ಟ ಶಾಖೆ, ಮಳ್ಳೂರು ರೇಷ್ಮೆ ಬೆಳೆಗಾರರ ಹಾಗೂ ರೈತ ಸೇವಾ ಸಹಕಾರ ಸಂಘದಿಂದ ಕೆ.ಸಿ.ಸಿ.ಸಾಲ ಮತ್ತು ಮಹಿಳಾ ಸಂಘಗಳಿಗೆ ಸಾಲ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಡಿ.ಸಿ.ಸಿ.ಬ್ಯಾಂಕ್ ಕೇವಲ ಮಹಿಳೆಯರಿಗಷ್ಟೆ ಅಲ್ಲದೆ ರೈತರ ಕೃಷಿ ಉದ್ದೇಶಗಳಿಗೂ ಸಾಲ ನೀಡುತ್ತಿದೆ. ಪಡೆದುಕೊಂಡ ಸಾಲವನ್ನು ನಿಗದಿತ ಸಮಯದಲ್ಲಿ ಮರು ಪಾವತಿ ಮಾಡುವ ಕಡೆಗೆ ರೈತರಿಗೆ ಬದ್ದತೆ ಬೇಕು. ಜಿಲ್ಲಾ ಸಹಕಾರಿ ಬ್ಯಾಂಕಿನಿಂದ ರೈತರಿಗೆ 2.3 ಕೋಟಿ ಮಹಿಳಾ ಸಂಘಗಳಿಗೆ 70 ಲಕ್ಷ ಸಾಲ ವಿತರಣೆ ಮಾಡಲಾಗುತ್ತಿದೆ. ರೈತರು ಹಾಗೂ ಮಹಿಳಾ ಸಂಘಗಳ ಪದಾಧಿಕಾರಿಗಳು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ವ್ಯವಹರಿಸುವುದರ ಬದಲಿಗೆ ಸಹಕಾರಿ ಬ್ಯಾಂಕುಗಳಲ್ಲೆ ಖಾತೆ ತೆರೆದು ವ್ಯವಹರಿಸಬೇಕು.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಹಿಳಾ ಸಂಘಗಳು ಉತ್ತಮವಾಗಿ ಮರುಪಾವತಿ ಮಾಡುವ ಮೂಲಕ ಸಹಕಾರಿ ಸಂಘಗಳ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಸರ್ಕಾರ ಹಣಕೊಡಲ್ಲ, ಸ್ವಂತ ಹಣದಲ್ಲಿ ಸಾಲ ವಿತರಣೆ ಮಾಡಲಾಗುತ್ತಿದೆ. ವಾರದ ಸಭೆಗಳನ್ನು ಮಾಡುವ ಮೂಲಕ ಸಂಘಟಿತರಾಗಬೇಕು ಎಂದರು.
ಜಿಲ್ಲಾ ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಎಚ್.ವಿ.ನಾಗರಾಜ್ ಮಾತನಾಡಿ, ಸಹಕಾರಿ ಬ್ಯಾಂಕುಗಳಿಂದ ಪಡೆದುಕೊಂಡ ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಿದರೆ, ಬಡ್ಡಿಯಿಲ್ಲದೆ ಸಾಲವಾಗಲಿದೆ, ಅವಧಿ ಮೀರಿದರೆ ಬಡ್ಡಿ ಸಮೇತ ಪಾವತಿ ಮಾಡಬೇಕಾಗುತ್ತದೆ. ಉದ್ದೇಶಿತ ಯೋಜನೆಗೆ ಸಾಲ ಉಪಯೋಗವಾಗಬೇಕು. ಮಹಿಳೆಯರು ಹಾಗೂ ರೈತರು ಸಾಲ ಪಡೆದುಕೊಂಡು ಅದರಿಂದ ಆರ್ಥಿಕ ಅಭಿವೃದ್ಧಿ ಹೊಂದುವ ಕಡೆಗೆ ಗಮನಹರಿಸಬೇಕು. ಡಿ.ಸಿ.ಸಿ.ಬ್ಯಾಂಕಿನಿಂದ ೪೫೦. ಕೋಟಿ, ಕೆ.ಸಿ.ಸಿ ಸಾಲ ೩೫೦ ಕೋಟಿ ಮಹಿಳಾ ಸಂಘಗಳಿಗೆ ಸಾಲ ವಿತರಣೆ ಮಾಡಿದೆ. ಜನರು ರಾಷ್ಟ್ರೀಕೃತ ಬ್ಯಾಂಕುಗಳ ಕಡೆಗೆ ಹೆಚ್ಚು ಉತ್ಸಾಹ ತೋರುತ್ತಿದ್ದಾರೆ. ಡಿ.ಸಿ.ಸಿ.ಬ್ಯಾಂಕಿನಲ್ಲಿ ವ್ಯವಹರಿಸಬೇಕು ಎಂದರು.
ರೈತರಿಗೆ ಕೆ.ಸಿ.ಸಿ.ಸಾಲ, ಮಹಿಳಾ ಸಂಘಗಳಿಗೆ ಸಾಲದ ಚೆಕ್ಕುಗಳನ್ನು ವಿತರಣೆ ಮಾಡಲಾಯಿತು.
ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಪಿ. ಶಿವಾರೆಡ್ಡಿ, ಹನುಮೇಗೌಡ, ಶ್ರೀರಾಮರೆಡ್ಡಿ, ಮಳ್ಳೂರು ಸಹಕಾರಿ ಬ್ಯಾಂಕಿನ ಅಧ್ಯಕ್ಷ ಬಿ.ಎಂ.ವೆಂಕಟರೆಡ್ಡಿ, ಉಪಾಧ್ಯಕ್ಷ ಸಿ.ನಾರಾಯಣಸ್ವಾಮಿ, ನಿರ್ದೇಶಕರಾದ ಎಂ.ಆರ್.ಮುನಿಕೃಷ್ಣಪ್ಪ, ಮುನಿರಾಜು, ವಿ.ಶಾಂತಮ್ಮ, ಕೆ.ಪದ್ಮ, ಸಂಜೀವಮ್ಮ, ಎಚ್.ವಿ.ರಾಮಕೃಷ್ಣಪ್ಪ, ಕೃಷ್ಣಪ್ಪ, ವ್ಯವಸ್ಥಾಪಕರಾದ ಜಗನ್ನಾಥ್, ಆನಂದ್ ಹಾಜರಿದ್ದರು.

ಶೌಚಾಲಯ ಕಟ್ಟಿಸಿಕೊಂಡಿಲ್ಲದಿದ್ದರೆ ಪಡಿತರ, ವಿದ್ಯುತ್ ನಿಲ್ಲಿಸಲಾಗುತ್ತದೆ

0

‘ಶೌಚಾಲಯ ಇಲ್ಲ’ ಎಂದು ಮನೆಗಳ ಮೇಲೆ ಬರೆಸುವುದಲ್ಲದೆ, ಶೌಚಾಲಯವನ್ನು ಕಟ್ಟಿಸಿಕೊಳ್ಳದವರ ಮನೆಗಳಿಗೆ ಪಡಿತರ, ವಿದ್ಯುತ್ ನಿಲ್ಲಿಸಲಾಗುತ್ತದೆ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಣಾಧಿಕಾರಿ ವೆಂಕಟೇಶ್ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯ್ತಿಯ ಶಿಲೇಮಾಕನಹಳ್ಳಿ ಮತ್ತು ಹಂಡಿಗನಾಳ ಗ್ರಾಮಗಳಲ್ಲಿ ಶೌಚಾಲಯ ಕಟ್ಟಿಸಿಕೊಂಡಿಲ್ಲದವರ ಮನೆಗಳ ಮೇಲೆ ‘ಶೌಚಾಲಯ ಇಲ್ಲ’ ಎಂದು ಬರೆಸಿ ಅವರು ಮಾತನಾಡಿದರು.
ಬಯಲು ಶೌಚಾಲಯ ಮುಕ್ತ ತಾಲ್ಲೂಕನ್ನಾಗಿಸುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆದಿವೆ. ಶೌಚಾಲಯ ಕಟ್ಟಿಸಿಕೊಂಡಿಲ್ಲದವರಿಗೆ ಸರ್ಕಾರದಿಂದ ಸಹಾಯಧನ ನೀಡುವುದಲ್ಲದೆ, ಬಯಲು ನಾಟಕದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಾಗೂ ನೋಟಿಸ್ ನೀಡುವುದು ಸಹ ಮಾಡಿದ್ದೇವೆ. ಆದರೂ ಶೌಚಾಲಯ ನಿರ್ಮಿಸಿಕೊಂಡಿಲ್ಲದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೇ ವಿಧಿಯಿಲ್ಲವಾಗಿದೆ.
‘ನೀವು ಶೌಚಾಲಯವನ್ನು ನಿರ್ಮಿಸಿಕೊಳ್ಳಿ. ಅದರಿಂದ ಆಗುವ ಅನುಕೂಲಗಳೇನು’ ಎಂಬುದನ್ನೆಲ್ಲಾ ವಿವರಿಸಿ, ಅಂಚೆ ಮೂಲಕ ಪತ್ರವನ್ನು ಸಹ ಶೌಚಾಲಯವಿಲ್ಲದವರ ಮನೆಗಳಿಗೆ ಕಳಿಸುತ್ತೇವೆ. ತಮಟೆ ಹೊಡೆಸುವುದರ ಮೂಲಕ ಎಚ್ಚರಿಕೆಯನ್ನು ಕೂಡ ನೀಡುತ್ತೇವೆ. ಗ್ರಾಮದ ಶಾಲಾ ಶಿಕ್ಷಕರು, ಅಂಗನವಾಡಿ, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ನೆರವಿನಿಂದ ಜಾಥಾ ನಡೆಸುತ್ತೇವೆ. ಆಟೋದಲ್ಲಿ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸುತ್ತೇವೆ. ಕರಪತ್ರಗಳನ್ನು ಹಂಚುತ್ತೇವೆ.
ಶೌಚಾಲಯವನ್ನು ಕಟ್ಟಿಸಿಕೊಳ್ಳದವರ ಮನೆಗಳ ಮೇಲೆ ‘ಶೌಚಾಲಯ ಇಲ್ಲ’ ಎಂದು ಬರೆಸುತ್ತಿದ್ದೇವೆ. ಆ ಮನೆಗಳ ಬಗ್ಗೆ ಬೆಸ್ಕಾಮ್ ಅಧಿಕಾರಿಗಳಿಗೆ ಮಾಹಿತಿ ನೀಡಿ ವಿದ್ಯುತ್ ಕಡಿತಗೊಳಿಸಲಾಗುತ್ತದೆ. ಜೊತೆಗೆ ಪಡಿತರವನ್ನು ಸಹ ನಿಲ್ಲಿಸುತ್ತೇವೆ. ಒಟ್ಟಾರೆ ಪ್ರತಿಯೊಂದು ಮನೆಗಳವರೂ ಶೌಚಾಲಯವನ್ನು ಹೊಂದಬೇಕು ಎಂಬುದು ನಮ್ಮ ಗುರಿ ಎಂದು ವಿವರಿಸಿದರು.
ಗ್ರಾಮ ಪಂಚಾಯ್ತಿ ಸದಸ್ಯರಾದ ಜಯರಾಮ್, ಎ.ಎಂ.ತ್ಯಾಗರಾಜ್, ಪಿಡಿಒ ಅಂಜನ್ ಕುಮಾರ್, ಕಾರ್ಯದರ್ಶಿ ಶ್ರೀನಿವಾಸ್, ಕರ ವಸೂಲಿಗಾರ ಶ್ರೀನಿವಾಸ್, ಅಧಿಕಾರಿ ಮೋಹನ್, ನಾರಾಯಣಸ್ವಾಮಿ, ಕೃಷ್ಣಪ್ಪ ಹಾಜರಿದ್ದರು.
 

ರೈತ ಮುಖಂಡರಿಂದ ಹಣ ದುರ್ಬಳಕೆ : ಆರೋಪ

0

‘ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೋಡಿಹಳ್ಳಿ ಚಂದ್ರಶೇಖರ್ ಬಣದ ಸದಸ್ಯರು ಸರ್ಜಿ ಸಲ್ಲಿಕೆ ನೆಪದಲ್ಲಿ ರೈತರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮೀನಾರಾಯಣ ರೆಡ್ಡಿ ಆರೋಪಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ‘ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿ ಹೋರಾಟಕ್ಕೆ ಇಳಿದಿರುವುದು ಸ್ವಾಗತಾರ್ಹ. ಆದರೆ ಸಾಲಗಾರ ರೈತರಿಗೆ ಅರ್ಜಿ ನೀಡಿ ಅದನ್ನು ಭರ್ತಿ ಮಾಡಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಲು ಪ್ರತಿ ಅರ್ಜಿಗೆ 50 ರೂ ಶುಲ್ಕ ಪಡೆಯಲಾಗಿದೆ. ಹಲವು ಲಕ್ಷ ರೂಗಳ ಹಣ ಸಂಘದಿಂದ ಸಂಗ್ರಹಿಸಲಾಗಿದ್ದು, ರೈತ ಸಂಘದಿಂದ ಯಾರಿಗೂ ರಸೀದಿ ನೀಡಿಲ್ಲ’ ಎಂದು ದೂರಿದ್ದಾರೆ.
ಜಿಲ್ಲೆಯಾದ್ಯಂತ ಹೀಗೆ ಐವತ್ತು ಸಾವಿರ ಅರ್ಜಿಗಳನ್ನು ವಿತರಿಸಿ ಹಣ ಗಳಿಕೆಯ ದಂಧೆ ಮಾಡಿಕೊಳ್ಳಲಾಗಿದೆ. ವಿತರಿಸಿರುವ ಅರ್ಜಿಯಲ್ಲಿ ಸಂಘದ ಹೆಸರಿಲ್ಲ. ಈ ರೀತಿ ಹಣ ವಸೂಲಿ ಮಾಡುವುದು ಮೋಸದ ಕೆಲಸವಾಗಿದೆ. ರೈತ ಸಂಘದ ಹೆಸರಿನಲ್ಲಿ ರೈತರಿಗೆ ಮಾಡಿದ ದ್ರೋಹ ಮಹಾ ಮೋಸವಾಗಿದೆ.
ಈ ಬಗ್ಗೆ ಗೊಂದಲ ಹೊಂದಿರುವ ಕೆಲ ರೈತರು ನಮಗೆ ಕರೆ ಮಾಡುತ್ತಿದ್ದಾರೆ. ನಿಜವಾಗಿಯೂ ರೈತ ಪರ ಕಾಳಜಿ ಇದ್ದರೆ ಯಾವುದೇ ಹಣ ವಸೂಲಿ ನಡೆಸದೆ ಹೋರಾಟ ನಡೆಸಲಿ ಎಂದು ಒತ್ತಾಯಿಸಿದ್ದಾರೆ. ಈಗಾಗಲೇ ಆಗಸ್ಟ್ 22 ರಂದು ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತ ಸಂಘದ ಜಿಲ್ಲಾ ಘಟಕದ ವತಿಯಿಂದ ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಕಚೇರಿಯವರೆಗೂ ಪಾದಯಾತ್ರೆ ಮಾಡಿ ರೈತರ ಸಾಲವನ್ನು ರಾಷ್ಟ್ರೀಕೃತ ಹಾಗೂ ಸಹಕಾರ ಸಂಘ ಬ್ಯಾಂಕ್ ಗಳಲ್ಲಿ ಸಂಪೂರ್ಣವಾಗಿ ಸಾಲ ಮನ್ನಾ ಮಾಡಬೇಕೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿಯನ್ನು ನೀಡಿರುತ್ತೇವೆ ಎಂದು ತಿಳಿಸಿದ್ದಾರೆ.
ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತ ಸಂಘದ ತಾಲ್ಲೂಕು ಘಟಕದ ಅಧರ್ಯಕ್ಷ ರವಿಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ, ಕಾರ್ಯದರ್ಶಿ ಪ್ರತೀಶ್ ಹಾಗೂ ಇತರ ಸದಸ್ಯರು ಪ್ರಕಟಣೆಯಲ್ಲಿ ಸಹಿ ಹಾಕಿದ್ದಾರೆ.

ಹಸಿರುಸೇನೆಯಿಂದ ಅರ್ಜಿ ಸಂಗ್ರಹಣೆ ಅಭಿಯಾನ

0

‘ರೈತ ಸಾಲಗಾರನಲ್ಲ, ಸರ್ಕಾರವೇ ಬಾಕಿದಾರ’, ‘ರೈತರ ಬೆಳೆಗಳಿಗೆ ನ್ಯಾಯವಾದ ಬೆಲೆ ಕೊಡುವವರೆಗೆ ರೈತರ ಸಾಲಕ್ಕೆ ಸರ್ಕಾರವೇ ಹೊಣೆ’ ಎಂಬ ಘೋಷಣೆಯೊಂದಿಗೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ(ಕೋಡಿಹಳ್ಳಿ ಚಂದ್ರಶೇಖರ್ ಬಣ) ಸಾಲ ಪಡೆದಿರುವ ರೈತರಿಂದ ಅರ್ಜಿ ಸಂಗ್ರಹಣೆ ಮಾಡುತ್ತಿದೆ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಗುರುವಾರ ಕಲಾವಿದರ ಮೂಲಕ ರೈತರ ಬವಣೆಯ ಬಗ್ಗೆ ಹಾಡನ್ನು ಹಾಡಿಸಿ, ಸಾಲ ಪಡೆದಿರುವ ರೈತರಿಂದ ಸರ್ಕಾರಕ್ಕೆ ಸಲ್ಲಿಸಲು ಅರ್ಜಿಯನ್ನು ಸಂಗ್ರಹಿಸುವ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈವರೆಗೆ ಸರ್ಕಾರಗಳಿಂದ ಕೃಷಿ ನೀರಾವರಿಯಂತದ ಮೂಲಭೂತ ಸೌಕರ್ಯ ಇಲ್ಲದೆ, ಕೃಷಿ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಹಾಗೂ ಬೆಲೆ ಭದ್ರತೆ ಇಲ್ಲದೆ, ಸತತ ಬರಗಾಲದಿಂದಾಗಿ ರೈತರು ಬ್ಯಾಂಕು, ಫೈನಾನ್ಸ್ ಮತ್ತು ಖಾಸಗಿ ಕೈ ಸಾಲಗಳಿಂದ ತತ್ತರಿಸಿ ಹೋಗಿದ್ದಾರೆ. ಗ್ರಾಮೀಣ ಮಹಿಳೆಯರು, ಕೃಷಿ ಸಂಬಂಧಿ ಎಲ್ಲಾ ಸಾಲಗಳ ತೀರುವಳಿಯನ್ನು ಸರ್ಕಾರವೇ ಮಾಡಿಕೊಳ್ಳಬೇಕೆಂದು ಮನವಿಯನ್ನು ಸಲ್ಲಿಸುತ್ತಿದ್ದೇವೆ.
ಸಾಲದ ಶೂಲಕ್ಕೆ ಸಿಕ್ಕು ಜಿಲ್ಲೆಯಲ್ಲಿ ಎಂಟು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸತತ ಬರಗಾಲದಿಂದ ಕಂಗೆಟ್ಟಿರುವ ರೈತರಿಂದ ಸ್ವಯಂಪ್ರೇರಿತವಾಗಿ ಅರ್ಜಿಗಳನ್ನು ಪಡೆದು ಆಗಸ್ಟ್ 28 ರ ಸೋಮವಾರದಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಕಾರ್ಯಾಂಗ ಮತ್ತು ಶಾಸಕಾಂಗ ರೈತರ ಕಷ್ಟಕ್ಕೆ ಸ್ಪದಿಸದಿರುವುದರಿಂದ ಸುಪ್ರೀಂ ಕೋರ್ಟಿನಲ್ಲಿ ದಾವೆಯನ್ನು ಹೂಡುವ ಮೂಲಕ ರೈತರನ್ನು ಉಳಿಸುವ ಪ್ರಯತ್ನದಲ್ಲಿದ್ದೇವೆ ಎಂದು ಹೇಳಿದರು.
ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ, ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ರೈತರಿಂದ ಅರ್ಜಿಯನ್ನು ಸಂಗ್ರಹಿಸಿದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ತಾದೂರು ಮಂಜುನಾಥ್, ರಾಮಕೃಷ್ಣಪ್ಪ, ವೇಣುಗೋಪಾಲ್, ಬಿ.ನಾರಾಯಣಸ್ವಾಮಿ, ಮುನಿನಂಜಪ್ಪ, ಕೃಷ್ಣಪ್ಪ ಹಾಜರಿದ್ದರು.
 

ಬಿಜೆಪಿಯಿಂದ ಪಂಜಿನ ಮೆರವಣಿಗೆ

0

ರಾಜ್ಯ ಸರ್ಕಾರದ ದುರಾಡಳಿತ ಹಾಗೂ ದ್ವೇಷ ರಾಜಕಾರಣದ ವಿರುದ್ಧ ಪ್ರತಿಭಟನಾ ಮೆರವಣಿಗೆಯನ್ನು ನಡೆಸುತ್ತಿರುವುದಾಗಿ ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ನಗರದ ದೇಶದಪೇಟೆಯ ಶ್ರೀ ಬಸವೇಶ್ವರ ದೇವಾಲಯದಿಂದ ಬುಧವಾರ ರಾತ್ರಿ ತಾಲ್ಲೂಕಿನ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಬೃಹತ್ ಪಂಜಿನ ಪ್ರತಿಭಟನಾ ಮೆರವಣೆಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಎಸಿಬಿಯನ್ನು ದುರ್ಬಳಕೆ ಮಾಡಿಕೊಂಡು, ವಿರೋಧ ಪಕ್ಷದವರನ್ನು ದಮನ ಮಾಡಲು ಹೊರಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರ ಆರೋಪ ಹೊತ್ತಿರುವ ಐಟಿ ಧಾಳಿಗೊಳಗಾದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ರಮೇಶ್ ಜಾರಕಿಹೊಳಿ, ರಮಾನಾಥ್ ರೈ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಅವರು ನ್ಯಾಯಾಲಯಗಳಲ್ಲಿ ವಜಾಗೊಂಡಿದ್ದು, ಯಡಿಯೂರಪ್ಪ ಅವರ ಮೇಲಿನ ಕೇಸುಗಳನ್ನು ಎಸಿಬಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಮರುಜೀವ ನೀಡುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಮುಖಂಡ ಡಿ.ಆರ್.ಶಿವಕುಮಾರ್ ಗೌಡ ಮಾತನಾಡಿ, ರಾಜ್ಯದಲ್ಲಿ ಕಾನೂನು ಹದಗೆಟ್ಟು ದಕ್ಷ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸುರೇಶ್, ಶ್ರೀರಾಮರೆಡ್ಡಿ, ದಾಮೋದರ್, ಬೈರಾರೆಡ್ಡಿ, ಸುಜಾತಮ್ಮ, ಮುನಿರಾಜು ಕುಟ್ಟಿ, ಶ್ರೀರಾಮ್ ಹಾಜರಿದ್ದರು.