Home Blog Page 404

ದಕ್ಷಿಣ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಪ್ರಶಸ್ತಿ

0

ಶಿಡ್ಲಘಟ್ಟದ ಕ್ರೆಸೆಂಟ್ ಶಾಲೆಯ ವಿದ್ಯಾರ್ಥಿಗಳು ಗೌರಿಬಿದನೂರಿನಲ್ಲಿ ವಡೋ ಇಂಟರ್ ನ್ಯಾಷನಲ್ ವತಿಯಿಂದ ನಡೆದ ಎರಡನೇ ದಕ್ಷಿಣ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ. ಟಿ.ಎನ್. ಹೇಮಂತ್ ಹಳದಿ ಬೇಲ್ಟ್ ನ ‘ಕತಾ’ ದಲ್ಲಿ ಪ್ರಥಮ. ಮತ್ತು ಕುಮಿತೆಯಲ್ಲಿ 3ನೇ ಸ್ಥಾನ. ಹರ್ಷಿತ್ ಎರಡನೇ ಸ್ಧಾನ ಪಡೆದಿದ್ದಾರೆ. ಆಕ್ಟೋಬರ್ ನಲ್ಲಿ ಮುಂಬೈನಲ್ಲಿ ಅಕ್ಷಯಕುಮಾರ್ ನಡೆಸುವ ಒಂಭತ್ತನೇ ಕೂಡೋ ನ್ಯಾಷನಲ್ ಚಾಂಪಿಯನ್ ಶಿಪ್ ಕ್ಕೆ ಆಯ್ಕೆಯಾದ ಟಿ.ಎನ್.ಹೇಮಂತ್ ಅವರನ್ನು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ತಮೀಮ್ ಅನ್ಸಾರಿ ಮತ್ತು ಸಿ.ಆರ್.ಪಿ ಶ್ರೀನಿವಾಸ್ ಅಭಿನಂದಿಸಿದರು.

ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳಬೇಕು

0

ಪಠ್ಯದ ಜೊತೆಗೆ ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳನ್ನು ತೊಡಗಿಸಿಕೊಳ್ಳಲು ಪ್ರೇರೇಪಿಸಬೇಕು. ಪ್ರತಿಯೊಂದು ಮಗುವಿಗೂ ತನ್ನದೇ ಆಯ್ಕೆಯ ಕ್ಷೇತ್ರದಲ್ಲಿ ಮುಂದುವರಿಯುವ ಅವಕಾಶ ಸಿಗಬೇಕು ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಬಿ.ವಿ.ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಬಶೆಟ್ಟಹಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಯಾವುದೇ ರೀತಿಯಲ್ಲೂ ಕಡಿಮೆಯಿಲ್ಲ. ಗುಣಮಟ್ಟದ ಶಿಕ್ಷಣ, ಬಿಸಿಯೂಟ, ಕ್ರೀಡಾ ತರಬೇತಿ, ಸಾಂಸ್ಕೃತಿಕ ಕಲಿಕೆ, ಸೈಕಲ್, ಸಮವಸ್ತ್ರ ಮುಂತಾದ ಎಲ್ಲಾ ಸೌಲಭ್ಯ ಹಾಗೂ ಕಲಿಕೆಗಳು ಸರ್ಕಾರಿ ಶಾಲೆಗಳಲ್ಲಿ ಸಿಗುತ್ತವೆ. ಆದರೆ ಪೋಷಕರು ಈ ಬಗ್ಗೆ ಆಸಕ್ತಿ ವಹಿಸಬೇಕು. ಸರ್ಕಾರಿ ಶಾಳೆಗಳನ್ನು ಉಳಿಸಲು ಸಮುದಾಯ ಜತೆಗೂಡಬೇಕು ಎಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಕೋಟ್ಯಾಂತರ ರೂಗಳನ್ನು ಖರ್ಚು ಮಾಡುತ್ತಿದೆ. ಪ್ರತಿಭಾ ಕಾರಂಜಿಗೆ ಸರ್ಕಾರದಿಂದ ಹಣ ಬರುತ್ತಿಲ್ಲ. ದಾನಿಗಳ ಸಹಕಾರದಿಂದ ಪ್ರತಿಭಾ ಕಾರಂಜಿಯನ್ನು ನಡೆಸುವಂತಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ 17 ಶಾಲೆಗಳ ವಿದ್ಯಾರ್ಥಿಗಳು ಕೋಲಾಟ, ಜನಪದ ನೃತ್ಯ, ಖವಾಲಿ, ದೇಶಭಕ್ತಿ ಗೀತೆ, ರಸಪ್ರಶ್ನೆ ಕಾರ್ಯಕ್ರಮ, ಕಂಠಪಾಠ, ಚಿತ್ರಕಲೆ, ಕ್ಲೇ ಮಾಡಲಿಂಗ್, ಭಕ್ತಿಗೀತೆ, ಅಭಿನಯ ಗೀತೆ,ಆಶುಭಾಷಣ, ಛದ್ಮವೇಷ ಇನ್ನೂ ಮುಂತಾದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಹಂಡಿಗನಾಳ ಗ್ರಾಮ ಪಂಚಾಯ್ತಿ ಸದಸ್ಯ ಎ.ಎಂ.ತ್ಯಾಗರಾಜ್, ಬಶೆಟ್ಟಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪುಷ್ಪ ಗಂಗಾಧರ್, ಉಪಾಧ್ಯಕ್ಷ ಚಿಕ್ಕನಾರಾಯಣಸ್ವಾಮಿ, ಸದಸ್ಯ ವೆಂಕಟರೆಡ್ಡಿ, ಸೊಣ್ಣೇಗೌಡ, ಎಸ್.ಡಿ.ಎಂ.ಸಿ ಅಧ್ಯಕ್ಷ ಲಕ್ಷ್ಮೀಪತಿ, ಸದಸ್ಯರಾದ ವೆಂಕಟರೆಡ್ಡಿ, ಬೈರಾರೆಡ್ಡಿ, ಉಮಾವತಿ, ಶಾರದ, ಸುಜಾತ, ನಳಿನ, ಸಮಾಜ ಸೇವಕ ಮಂಜುನಾಥ್, ಶಿಕ್ಷಕರಾದ ಬಿ.ಆರ್.ನಾರಾಯಣಸ್ವಾಮಿ, ಮಂಜುನಾಥ್, ನಳಿನಾಕ್ಷಿ, ಚಂದ್ರಶೇಖರ್ ಹಾಜರಿದ್ದರು.
 

ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳು ಹಾಗೂ ಲೇಖನ ಸಾಮಗ್ರಿಗಳನ್ನು ವಿತರಣೆ

0

ಶಿಡ್ಲಘಟ್ಟ ತಾಲ್ಲೂಕಿನ ವಲ್ಲಪ್ಪನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಈಚೆಗೆ ಮೆಗಾಸ್ಟಾರ್ ಫ್ಯಾಮಿಲಿ ಅಭಿಮಾನಿಗಳು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳು ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಿದರು. ಜೆ.ಎಂ.ಸುರೇಶ್, ಚಿಕ್ಕೀರಪ್ಪ, ದ್ಯಾವಪ್ಪ, ಚರಣ್, ಮುನಿರಾಜ್, ಮನುನರಸಿಂಹ, ಅಶೋಕ, ಸುಬ್ಬು ಹಾಜರಿದ್ದರು.

ಶಾಲೆಗೆ ತೋಟಗಾರಿಕೆ ಸಲಕರಣೆಗಳು ಮತ್ತು ಕ್ರೀಡಾ ಸಾಮಗ್ರಿಗಳು

0

ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡದಾಸೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಅವಿರತ ಮತ್ತು ಒರಾಕಲ್ ಸಂಸ್ಥೆಯವರು ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಟ್ಟು ಶಾಲೆಗೆ ತೋಟಗಾರಿಕೆ ಸಲಕರಣೆಗಳು ಮತ್ತು ಕ್ರೀಡಾ ಸಾಮಗ್ರಿಗಳನ್ನು ನೀಡಿದರು.

ಬೀಳ್ಕೊಡುಗೆ ಸಮಾರಂಭ

0

ಶಿಡ್ಲಘಟ್ಟದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಬುಧವಾರ ಪ್ರೌಢಶಾಲಾ ಮುಖ್ಯ ಶಿಕ್ಷಕ ಹಾಗೂ ಸಹ ಶಿಕ್ಷಕರ ಸಂಘದ ವತಿಯಿಂದ ವರ್ಗಾವಣೆಗೊಂಡ ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿದ್ದರು. ಶಿಕ್ಷಣ ಸಂಯೋಜಕ ಲಕ್ಷ್ಮೀನರಸಿಂಹಗೌಡ, ಶಿಕ್ಷಕರಾದ ಡಿ.ಸಿ.ಗೋಪಿನಾಥ್, ಎಲ್.ವಿ.ವೆಂಕಟರೆಡ್ಡಿ, ಬೈರಾರೆಡ್ಡಿ, ಟಿ.ವಿ.ಚಂದ್ರಶೇಖರ್, ಶ್ರೀಕಂಠಯ್ಯ, ಕೆಂಪಣ್ಣ, ಗೋಪಿನಾಥ್, ಕ್ರೆಸೆಂಟ್ ಶಾಲೆಯ ತಮೀಮ್ ಅನ್ಸಾರಿ, ಡಾಲ್ಫಿನ್ ಶಾಲೆಯ ನಾಗರಾಜ್ ಹಾಜರಿದ್ದರು.

ಪ್ರತಿಯೊಬ್ಬರೂ ಇಷ್ಟಪಡುವ ದೇವರು ಗಣಪತಿ

0

ಎಲ್ಲಾ ವರ್ಗಗಳ, ವಿವಿಧ ಜಾತಿ ಪಂಥಗಳ ವೈವಿಧ್ಯಮಯವಾದ ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ಇಷ್ಟಪಡುವ ದೇವರು ಗಣಪತಿ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ತಿಳಿಸಿದರು.
ನಗರದ ಚಿಂತಾಮಣಿ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯ ಆವರಣದಲ್ಲಿ ಕರ್ಣಶ್ರೀ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಗಣೇಶ ಮೂರ್ತಿಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪರಿಸರ ಪ್ರೇಮಿಯಾದಂತಹ ಮಣ್ಣಿನ ಅದರಲ್ಲೂ ಪೇಯಿಂಟ್ ಬಳಸದ ಗಣೇಶನ ಮೂರ್ತಿಗಳೊಂದಿಗೆ ಒಂದೊಂದು ಗಿಡವನ್ನು ಕರ್ಣಶ್ರೀ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನೀಡಲಾಗುತ್ತಿದೆ. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ 200 ಬೂತ್ ಗಳಿಗೂ ಒಂದೊಂದು ಗಣೇಶನ ಮೂರ್ತಿಯನ್ನು ಉಚಿತವಾಗಿ ನೀಡುತ್ತಾ ಪರಿಸರ ಕಾಪಾಡುವ ಸಂದೇಶವನ್ನು ನೀಡಲಾಗುತ್ತಿದೆ. ಎಲ್ಲರೂ ಒಗ್ಗೂಡಿ ಆಚರಿಸುವ ಗಣೇಶನ ಹಬ್ಬದ ಸಂದರ್ಭದಲ್ಲಿ ಎಲ್ಲರಲ್ಲೂ ಸನ್ನಡತೆ, ಸದ್ಭುದ್ದಿ, ದೇಶಪ್ರೇಮ, ಪರಿಸರ ಕಾಳಜಿ ಮೂಡಲಿ ಎಂದು ಹೇಳಿದರು.
ಕರ್ಣಶ್ರೀ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಡಿ.ಆರ್.ಶಿವಕುಮಾರಗೌಡ ಮಾತನಾಡಿ, ಹಲವು ವರ್ಷಗಳಿಂದ ಉಚಿತವಾಗಿ ಗಣೇಶನ ಮೂರ್ತಿಗಳನ್ನು ನೀಡುತ್ತಾ ಬಂದಿದ್ದು, ಈ ಬಾರಿ ಪರಿಸರ ಕಾಳಜಿಯಿಂದ ಮಣ್ಣಿನ ಗಣೇಶ ಹಾಗೂ ಗಿಡವನ್ನು ಪ್ರತಿಯೊಂದು ಬೂತ್ ನ ಸದಸ್ಯರಿಗೂ ನೀಡಲಾಗುತ್ತಿದೆ. ಗಣೇಶನ ಹಬ್ಬವನ್ನು ಒಗ್ಗೂಡಿ ಆಚರಿಸಿ. ಗಿಡವನ್ನು ಬೆಳೆಸಿ, ಪರಿಸರವನ್ನು ಉಳಿಸಿ ಎಂದು ಹೇಳಿದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ಮುಖಂಡರಾದ ಸುರೇಶ್, ಶ್ರೀರಾಮರೆಡ್ಡಿ, ಸುರೇಂದ್ರಗೌಡ, ಸುಜಾತಮ್ಮ, ಹನುಮಂತಪ್ಪ, ಮುನಿರಾಜು ಕುಟ್ಟಿ, ಬೈರೇಗೌಡ, ದಾಮೋದರ್, ಮಂಜುಳಮ್ಮ, ರಾಜೇಂದ್ರ, ಶ್ರೀಧರ್, ಪ್ರಕಾಶ್ ಹಾಜರಿದ್ದರು.
ಸಣ್ಣತನ ಮತ್ತು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಸಿದ್ಧರಾಮಯ್ಯ : ಸಿದ್ಧರಾಮಯ್ಯನವರ ಸರ್ಕಾರ ಆಡಳಿತಾತ್ಮಕವಾಗಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಆರೋಪಿಸಿದರು.
ಪ್ರಾಮಾಣಿಕ ಐಎಎಸ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸದಂತೆ ಮೂಲೆ ಗುಂಪು ಮಾಡುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ದನಿ ಎತ್ತುವ ಐಎಎಸ್ ಅಧಿಕಾರಿಯ ಮೇಲೆ ಹಲ್ಲೆ ನಡೆದಿದೆ. ಇವರಿಗೆ ಪ್ರಾಮಾಣಿಕ ಅಧಿಕಾರಿಗಳು ಬೇಕಿಲ್ಲ. ಇವರ ತಾಳಕ್ಕೆ ತಕ್ಕಂತೆ ಕುಣಿಯುವವರು, ಭ್ರಷ್ಟ ಅಧಿಕಾರಿಗಳು ಸಾಕು. ಎಲ್ಲಾ ಕಚೇರಿಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಾ ಕೊನೆಗೆ ನಮ್ಮ ರಾಜ್ಯವನ್ನು ದೇಶದಲ್ಲೇ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನದಲ್ಲಿ ತಂದಿರಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಬೇಕೆಂಬ ದುರುದ್ದೇಶದಿಂದ ಯಡಿಯೂರಪ್ಪನವರನ್ನು ಕಟ್ಟಿಹಾಕಲು ಸಣ್ಣತನದ, ದ್ವೇಷದ ರಾಜಕಾರಣವನ್ನು ಸಿದ್ಧರಾಮಯ್ಯ ಮಾಡುತ್ತಿದ್ದಾರೆ.
ಕಳೆದ ನಾಲ್ಕು ವರ್ಷ ಎರಡು ತಿಂಗಳಿನಲ್ಲಿ ರಾಜ್ಯದಲ್ಲಿ 6,521 ಕೊಲೆಗಳಾಗಿವೆ. ಇದು ರಾಜ್ಯ ಸರ್ಕಾರದ ಕಾನೂನು ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಸಿದ್ಧರಾಮಯ್ಯನವರ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಅವರ ಪದವಿ ಶಾಶ್ವತವಲ್ಲ. ಮುಂದೊಂದು ದಿನ ಅವರೂ ಮಾಜಿಯಾಗುತ್ತಾರೆ. ಅವರ ತಪ್ಪುಗಳು ಅವರಿಗೆ ತಿರುಗುಬಾಣವಾಗಲಿದೆ ಎಂದು ಹೇಳಿದರು.
 

ಪರ್ಜನ್ಯ ವರುಣ ಯಾಗ ಮುಕ್ತಾಯ

0

ಜಿಲ್ಲೆಯಲ್ಲಿ ಬರಸ್ಥಿತಿ ಮಾಯವಾಗಿ ಮಳೆ ಸುರಿಯಲೆಂದು ತಾಲ್ಲೂಕಿನ ಬಶೆಟ್ಟಹಳ್ಳಿ ಪಂಚಾಯ್ತಿಯ ನಲ್ಲರಾಳಹಳ್ಳಿಯ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಶ್ರೀ ಎಚ್ ಡಿ ದೇವೇಗೌಡರವರ ಮತ್ತು ಶ್ರೀ ಜಯಪ್ರಕಾಶ್ ನಾರಾಯಣ್ ರವರ ಸೇವಾಭಿವೃದ್ದಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಐದು ದಿನಗಳ ಕಾಲ ನಡೆದ ‘ಪರ್ಜನ್ಯ ವರುಣ ಯಾಗ’ವು ಸೋಮವಾರ ಪೂರ್ಣಾಹುತಿಯೊಂದಿಗೆ ಮುಕ್ತಾಯಗೊಂಡಿತು.
ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಯಾಗದ ಕಡೆಯ ದಿನವಾದ ಸೋಮವಾರ ಬೆಳಿಗ್ಗೆ 7.30ರಿಂದಲೇ ಯಜ್ಞ ಪ್ರಾರಂಭಿಸಿದ ಪುರೋಹಿತರು, ಹಸುವಿನ ಶುದ್ಧ ತುಪ್ಪ, ಹಲಸು, ಮಾವು, ಆಲದ ಮರದ ತುಂಡುಗಳು ಸೇರಿದಂತೆ ಹಲವಾರು ಔಷಧಿ ಸಸ್ಯಗಳನ್ನು ಹೋಮಕ್ಕೆ ಬಳಸಿ, ಮಂತ್ರ ಪಠಿಸಿದರು.
ಈಗಾಗಲೇ ದೇಶದ ಹಲವು ಭಾಗಗಳಲ್ಲಿ ಯಾಗ ಮಾಡಿರುವ ತಂಡ ಚಾಮುಂಡೇಶ್ವರಿ ದೇವಾಲಯದ ಬಳಿ ಈ ವಿಶೇಷ ಯಾಗ ನಡೆಸಿದರು.
‘ಇದಕ್ಕಾಗಿ ಮಹಾರಾಷ್ಟ್ರದಿಂದ ತಜ್ಞ ಅರ್ಚಕರನ್ನು ಕರೆಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಅಗತ್ಯ ವಸ್ತುಗಳನ್ನು ತರಿಸಲಾಗಿದೆ. ಈ ವಿಶೇಷ ಯಾಗಕ್ಕೆ 4 ಅಗ್ನಿಕುಂಡಗಳನ್ನು ನಿರ್ಮಿಸಲಾಗಿದೆ. ಯಾಗದ ಪ್ರಭಾವ, ಅದರಿಂದ ಸೃಷ್ಟಿಯಾಗುವ ಸಕಾರಾತ್ಮಕ ತರಂಗಗಳು ಹಾಗೂ ಅಗ್ನಿಗೆ ಆಹುತಿ ನೀಡುವ ವಿವಿಧ ವಸ್ತುಗಳಿಂದ ಹೊರಹೊಮ್ಮುವ ಹೊಗೆಯ ಕಾರಣದಿಂದ ಮೋಡಗಳು ಸೃಷ್ಟಿಯಾಗುವುದು ವೈಜ್ಞಾನಿಕವಾಗಿ ದೃಢಪಟ್ಟಿದೆ, ಒಟ್ಟಾರೆ ಯಾಗದ ಉದ್ದೇಶವು ನಮ್ಮ ಭಾಗದ ಜನರ ಅನುಕೂಲಕ್ಕಾಗಿ ಮಳೆ ಬರಲೆಂಬುದಾಗಿದೆ. ರೈತರು ಚೆನ್ನಾಗಿದ್ದರೆ ಸಮಾಜ ಸುಭಿಕ್ಷವಾಗಿರುತ್ತದೆ. ಪ್ರಕೃತಿ ಮಾತೆ ಅನುಗ್ರಹಿಸಲಿ ಎಂದು ಎಲ್ಲರೂ ಒಮ್ಮನಸ್ಸಿನಿಂದ ಪ್ರಾರ್ಥಿಸಿದ್ದೇವೆ’ ಎಂದು ಶ್ರೀ ಎಚ್ ಡಿ ದೇವೇಗೌಡರವರ ಮತ್ತು ಶ್ರೀ ಜಯಪ್ರಕಾಶ್ ನಾರಾಯಣ್ ರವರ ಸೇವಾಭಿವೃದ್ದಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎನ್.ರವಿಕುಮಾರ್ ತಿಳಿಸಿದರು.
ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಜಿಲ್ಲಾ ಪಂಚಾಯ್ತಿ ಸದಸ್ಯ ಬಂಕ್ ಮುನಿಯಪ್ಪ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಸದಸ್ಯ ರಾಜಶೇಖರ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ವಿ.ನಾಗರಾಜ್, ಶಿವಾರೆಡ್ಡಿ, ನಗರಸಭಾ ಸದಸ್ಯರಾದ ಲಕ್ಷ್ಮಣ, ಜಬೀವುಲ್ಲ, ಸಂಧ್ಯಾ ಮಂಜುನಾಥ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಗೋಪಾಲ್, ದೊಣ್ಣಹಳ್ಳಿ ರಾಮಣ್ಣ, ವೆಂಕಟೇಶ್, ತಿಮ್ಮನಾಯಕನಹಳ್ಳಿ ರಮೇಶ್, ಆದಿಲ್ಪಾಷ, ಚಾಂದ್ ಪಾಷ, ಸಿರಾಜ್, ಸಾದಲಿ ಚಲಪತಿ, ನಂಜಪ್ಪ, ಆಂಜನೇಯ, ಗೋಪಾಲಗೌಡ, ಕೆ.ಎಸ್. ಮಂಜುನಾಥ್, ಆರ್.ಎ.ಉಮೇಶ್, ತಾದೂರು ರಘು, ರಾಮಚಂದ್ರ, ಲಕ್ಷ್ಮಣ, ಲಕ್ಕಹಳ್ಳಿ ರಾಮಾಂಜನೇಯುಲು, ಶ್ರೀನಿವಾಸರೆಡ್ಡಿ, ಚಿಂತಾಮಣಿ ಡಿ.ವೈ. ಎಸ್.ಪಿ. ಕೃಷ್ಣಮೂರ್ತಿ, ಕೆ.ಜಿ.ಎಫ್. ಡಿ.ವೈ.ಎಸ್.ಪಿ ಶ್ರೀನಿವಾಸಮೂರ್ತಿ, ಪ್ರಧಾನ ಅರ್ಚಕ ಗಿರೀಶ್ ಹಾಜರಿದ್ದರು.

ಪಿಂಚಣಿ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲೆಂದು ಪಿಂಚಣಿ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಗುತ್ತಿದೆ. ಶಸ್ತ್ರಚಿಕಿತ್ಸೆಯನ್ನು ಸಹ ಉಚಿತವಾಗಿ ಮಾಡಿಸಲಾಗುವುದು ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ನ ಅದ್ಯಕ್ಷ ಆಂಜಿನಪ್ಪ ಪುಟ್ಟು ತಿಳಿಸಿದರು.
ತಾಲ್ಲೂಕಿನ ಕುಂದಲಗುರ್ಕಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಹೊಸಕೋಟೆಯ ಎಂ.ವಿ.ಜೆ ಹಾಸ್ಪಿಟಲ್ ಹಾಗೂ ಎಸ್.ಎನ್.ಕ್ರಿಯಾ ಟ್ರಸ್ಟ್ನ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಟ್ರಸ್ಟ್ ವತಿಯಿಂದ ಪಿಂಚಣಿ ಶಿಬಿರವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರಿಗೆ ಗುರುತಿನ ಚೀಟಿ, ಹಿರಿಯ ನಾಗರಿಕರಿಗೆ ಗುರುತಿನ ಚೀಟಿಯನ್ನು ಅಗತ್ಯವಿರುವ ದಾಖಲೆಗಳನ್ನು ಪಡೆದು ಮಾಡಿಸಿಕೊಡುತ್ತೇವೆ. ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ತಜ್ಞ ವೈದ್ಯರು ಬಂದಿದ್ದಾರೆ. ಸ್ತ್ರೀ ರೋಗ ಮತ್ತು ಪ್ರಸೂತಿ, ಮೂಳೆ, ಶಿಶು ವೈದ್ಯಕೀಯ, ಕಣ್ಣಿನ ತಪಾಸಣೆ, ಕಿವಿ. ಮೂಗು, ಗಂಟಲು, ರಕ್ತದೊತ್ತಡ ಮತ್ತು ಮಧುಮೇಹ, ಬಿ.ಎಂ.ಐ, ಇ.ಸಿ.ಜಿ ಪರೀಕ್ಷೆಯನ್ನು ಸಹ ತಜ್ಞರು ಮಾಡುತ್ತಿದ್ದಾರೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಹೊಸಕೋಟೆಯ ಎಂ.ವಿ.ಜೆ ಹಾಸ್ಪಿಟಲ್ ಹಾಗೂ ಎಸ್.ಎನ್.ಕ್ರಿಯಾ ಟ್ರಸ್ಟ್ನ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಗ್ರಾಮಸ್ಥರು ವೈದ್ಯರಿಂದ ಚಿಕಿತ್ಸೆ ಪಡೆದರು.

ಎಸ್.ಎನ್.ಕ್ರಿಯಾ ಟ್ರಸ್ಟ್ನ ವತಿಯಿಂದ ತಾಲ್ಲೂಕಿನ ಹಲವು ಭಾಗಗಳಲ್ಲಿ ಸುಮಾರು ೧೮ಕ್ಕೂ ಹೆಚ್ಚು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿದ್ದು, ಶಿಬಿರದಲ್ಲಿ ಶಸ್ತ್ರಚಿಕಿತ್ಸೆಗೆ ಅರ್ಹರಾದವರಿಗೆ ಉಚಿತವಾಗಿ ಎಂ.ವಿ.ಜೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿ ಉಚಿತವಾಗಿ ಔಷದಿಗಳನ್ನು ಸಹ ವಿತರಣೆ ಮಾಡಿದ್ದು, ಶಸ್ತ್ರಚಿಕಿತ್ಸೆಗೆ ಒಳಪಟ್ಟ ಎಲ್ಲರೂ ಆರೋಗ್ಯವಾಗಿರುವುದಾಗಿ ತಿಳಿಸಿದರು.
ಗ್ರಾಮಗಳು ಭಾರತ ದೇಶದ ಬೆನ್ನೆಲುಬಾಗಿದ್ದು, ಗ್ರಾಮೀಣ ಭಾಗದ ಜನರು ಆರೋಗ್ಯವಾಗಿದ್ದಾಗ ಮಾತ್ರ ದೇಶ ಆರೋಗ್ಯವಾಗಿರಲು ಸಾದ್ಯ. ಗ್ರಾಮೀಣ ಭಾಗದ ಜನರು ಮದ್ಯಮ ಹಾಗೂ ಕೆಳ ಮದ್ಯಮ ವರ್ಗಕ್ಕೆ ಸೇರಿದ್ದು, ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲು ಕಷ್ಟಕರವಾಗಿರುತ್ತದೆ. ಅವರ ಆರೋಗ್ಯ ಕಾಪಾಡಲು ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡಿದ್ದು, ತಪಾಸಣೆಯ ನಂತರ ಅವರಿಗೆ ಬೇಕಾದ ಔಷಧಿಗಳನ್ನು, ಕನ್ನಡಕಗಳನ್ನು ಸ್ಥಳದಲ್ಲಿಯೇ ನೀಡುವ ವ್ಯವಸ್ಥೆ ಮಾಡಲಾಗಿದೆ. ವೈದ್ಯರ ಸಲಹೆ ಪಾಲಿಸಿ ಆರೋಗ್ಯವಂತರಾಗಿ ಎಂದು ಹೇಳಿದರು.
ಕೆ.ಎಂ.ವೆಂಕಟೇಶ್, ಅಶ್ವತನಾರಾಯಣರೆಡ್ಡಿ, ಆನೂರು ದೇವರಾಜು, ಹಿತ್ತಲಹಳ್ಳಿ ಸುರೇಶ್, ಮುನಿರಾಜು, ಸಿ.ಪಿ.ಎಂ ವೆಂಕಟೇಶ್, ಶ್ರೀನಿವಾಸ್, ಮಂಜುನಾಥ್, ರಾಜೇಂದ್ರ, ಡಾ. ನಿತಿನ್, ಸೋಮಶೇಖರ್, ನಾಗರಾಜ್, ಸುಂದರೇಶ್, ಬಾಬು, ವಿಶ್ವನಾಥ್ ಈ ಸಂದರ್ಭದಲ್ಲಿ ಹಾಜರಿದ್ದರು.

ಕರಾಟೆ ಪಟುಗಳ ಸಾಧನೆ

0

ನಗರದ ದಿವ್ಯಭಾರತ್ ಕರಾಟೆ ಡೊ ಅಸೋಸಿಯೇಷನ್ ನ ಕರಾಟೆ ಪಟುಗಳು ಗೌರಿಬಿದನೂರಿನಲ್ಲಿ ನಡೆದ ಮೂರನೇ ವರ್ಷದ ರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದಿದ್ದಾರೆ.
ವೈಟ್ ಬೆಲ್ಟ್ ಕತಾ ಸ್ಪರ್ಧೆಯಲ್ಲಿ ಪಿ.ಎಂ.ಚೇತನ್ ಮೂರನೇ ಸ್ಥಾನ, ಆರೆಂಜ್ ಬೆಲ್ಟ್ ಕತಾ ಸ್ಪರ್ಧೆಯಲ್ಲಿ ನಂದೀಶ್ ಪ್ರಥಮ ಸ್ಥಾನ, ಬ್ಲೂ ಬೆಲ್ಟ್ ಕತಾ ಸ್ಪರ್ಧೆಯಲ್ಲಿ ಜಗದೀಶ್ ಮೂರನೇ ಸ್ಥಾನ ಪಡೆದಿದ್ದಾರೆ.
ಕುಮಿತೆ ಸ್ಪರ್ಧೆಯಲ್ಲಿ ಜಗದೀಶ್ ಪ್ರಥಮ, ಸಿ.ಚೇತನ್ ಎರಡನೇ ಸ್ಥಾನ, ಹರ್ಷಿತ್ ಮತ್ತು ಚಂದನ್ ಸಮಾಧಾನಕರ ಬಹುಮಾನ ಪಡೆದಿದ್ದಾರೆ ಎಂದು ಕರಾಟೆ ಶಿಕ್ಷಕ ವಿ.ಅರುಣ್ ಕುಮಾರ್ ತಿಳಿಸಿದ್ದಾರೆ.

ಕ್ರೀಡೆಯಲ್ಲಿ ಸೂಕ್ತ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಅಗತ್ಯವಿದೆ

0

ಕ್ರೀಡೆಯ ಬಗ್ಗೆ ಇರುವ ಆಸಕ್ತಿಯಿಂದ ಮಕ್ಕಳಿಗೆ ತರಬೇತಿಯನ್ನು ನೀಡುತ್ತಾ ತಾಲ್ಲೂಕು ಮಟ್ಟದಲ್ಲಿ ಸ್ಪರ್ಧೆಯನ್ನು ಆಯೋಜಿಸಿ ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸಲು ಮುಂದಾಗುತ್ತಿರುವುದು ಶ್ಲಾಘನೀಯ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯೆ ಪಂಕಜಾ ನಿರಂಜನ್ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಆಯೋಜಿಸಿದ್ದ ತಾಲ್ಲೂಕು ಮಟ್ಟದ 16 ವರ್ಷದ ಒಳಗಿನ ತಾಲ್ಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಗ್ರಾಮಾಂತರ ಪ್ರದೇಶದ ಮಕ್ಕಳು ಕ್ರೀಡೆಯಲ್ಲಿ ಅಪಾರ ಪ್ರತಿಭಾವಂತರು. ಅವರಿಗೆ ಸೂಕ್ತ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಅಗತ್ಯವಿದೆ. ಸರ್ಕಾರದ ಪ್ರೋತ್ಸಾಹದೊಂದಿಗೆ ಕ್ರೀಡಾಸಕ್ತರು ಆಗಾಗ್ಗೆ ತರಬೇತಿ ಶಿಬಿರಗಳನ್ನು ನಡೆಸುವ ಮೂಲಕ ಮಕ್ಕಳು ಜಿಲ್ಲಾ ಮತ್ತು ರಾಜ್ಯಮಟ್ಟಕ್ಕೆ ಪ್ರತಿನಿಧಿಸುವಂತೆ ಮಾಡಬೇಕು ಎಂದರು.

ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಉದ್ದ ಜಿಗಿತ ಮತ್ತು ಚಕ್ರ ಎಸೆತದ ದೃಶ್ಯಗಳು.

ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರುದ್ರಪ್ಪ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕ್ರೀಡಾಸಕ್ತರು ಒಗ್ಗೂಡಿ ಕ್ರೀಡಾಂಗಣದ ಅಭಿವೃದ್ಧಿ ಮತ್ತು ಮಕ್ಕಳಿಗೆ ತರಬೇತಿ, ಪ್ರೋತ್ಸಾಹ ನೀಡುತ್ತಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಅತ್ಯುತ್ತಮ ಕ್ರೀಡಾಪಟುಗಳು ತಾಲ್ಲೂಕಿನಿಂದ ಹೊರಹೊಮ್ಮಲಿದ್ದಾರೆ ಎಂದು ಹೇಳಿದರು.
100 ಮೀಟರ್, 200 ಮೀಟರ್, 400 ಮೀಟರ್ ಓಟ, ಗುಂಡು ಎಸೆತ, ಚಕ್ರ ಎಸೆತ, ಉದ್ದ ಜಿಗಿತ ಸ್ಪರ್ಧೆಗಳನ್ನು ಬಾಲಕ ಮತ್ತು ಬಾಲಕಿಯರಿಗೆ ನಡೆಸಲಾಯಿತು. ವಿಜೇತರಿಗೆ ಪ್ರಥಮ ಬಹುಮಾನ ೩೦೦ ರೂ ನಗದು, ದ್ವಿತೀಯ ಬಹುಮಾನ ೨೦೦ ರೂ, ತೃತೀಯ ಬಹುಮಾನ ೧೦೦ ರೂ ನಗದು ಹಾಗೂ ಎಲ್ಲರಿಗೂ ನಗದು ಹಣದೊಂದಿಗೆ ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರವನ್ನು ನೀಡಲಾಯಿತು.
ರಾಜ್ಯಮಟ್ಟದ ಹಾಕಿ ತರಬೇತುದಾರ ಮುಸ್ಟಾಕ್, ನಗರಸಭೆ ಆಯುಕ್ತ ಛಲಪತಿ, ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಿರಂಜನ್, ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಎಂ.ಮುನಿರಾಜು, ಅಧ್ಯಕ್ಷ ಎ.ಲಕ್ಷ್ಮೀಪತಿ, ಕಾರ್ಯದರ್ಶಿ ಕೆ.ಪುರುಷೋತ್ತಮ್, ಆರ್.ಸುರೇಶ್, ಶ್ರೀನಾಥ್, ನರೇಶ್, ಬಿಎಸ್.ರಘು, ದೈಹಿಕ ಶಿಕ್ಷಕರಾದ ಗಣೇಶ್, ಎನ್.ನೇತ್ರಾವತಿ, ವಿಠಲ್, ರಂಗನಾಥ್, ಅಗಜಾನನ ಮೂರ್ತಿ, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್. ಅನಂತಕೃಷ್ಣ ಹಾಜರಿದ್ದರು.
 

ಜಿಲ್ಲೆಯ ಜನಪದ ಅವಜ್ಞೆಗೆ ಒಳಗಾಗಿದೆ

0

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಉತ್ಕೃಷ್ಟ ಜನಪದ ಸಾಹಿತ್ಯ ಹಾಗೂ ಕಲಾವಿದರಿದ್ದಾರೆ. ಆದರೆ ಬಹುತೇಕ ಜನಪದ ಸಾಹಿತ್ಯ ತೆಲುಗು ಭಾಷೆಯಲ್ಲಿರುವುದರಿಂದ ಇತ್ತ ಕನ್ನಡಿಗರಿಂದ, ಬೇರೆ ರಾಜ್ಯದವರೆಂದು ಅತ್ತ ಆಂಧ್ರದವರಿಂದ ಅವಜ್ಞೆಗೆ ಒಳಗಾಗಿರುವುದು ದುರಂತದ ಸಂಗತಿ ಎಂದು ಜನಪದ ತಜ್ಞ ಡಾ.ಜಿ.ಶ್ರೀನಿವಾಸಯ್ಯ ಅಭಿಪ್ರಾಯಪಟ್ಟರು.
ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ ಇವರ ಸಹಯೋಗದಲ್ಲಿ ನಡೆದ ‘ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ ಕಾರ್ಯಕ್ರಮದಲ್ಲಿ ಅವರು ತಮ್ಮ ಜನಪದ ಸಂಶೋಧನಾ ಲೇಖನಗಳ ಸಂಗ್ರಹ ಪುಸ್ತಕ ‘ತಣಿಗೆ’ಯನ್ನು ಓದುಗರರಿಗೆ ಪರಿಚಯಿಸಿ ಮಾತನಾಡಿದರು.
ನಮ್ಮದು ಪ್ರಮುಖವಾಗಿ ಕನ್ನಡ ತೆಲುಗು ಭಾಷೆಗಳನ್ನು ಆಡುವ ಜನರ ನೆಲ. ಹಾಗಾಗಿ ಈ ಎರಡು ಭಾಷೆಗಳ ಜನಪದ ಸಾಹಿತ್ಯ, ಕಲೆಗಳನ್ನು ಸಂಗ್ರಹಿದಾಗಲೆ ಇದಕ್ಕೆ ಸಮಗ್ರತೆ ಲಭಿಸುವುದು. ಈ ಕಾರಣದಿಂದ ಈ ಕೃತಿಯಲ್ಲಿನ ಲೇಖನಗಳಲ್ಲಿ ಕನ್ನಡ ತೆಲುಗು ನಂಬಿಕೆ ಆಚರಣೆಗಳು ಒಳಗೊಂಡಿವೆ.
ಜಿಲ್ಲೆಯಾದ್ಯಂತ ಕ್ಷೇತ್ರ ಕಾರ್ಯವನ್ನು ನಡೆಸಿ, ಜನಪದರನ್ನು ಸಂದರ್ಶಿಸಿ, ಮೌಖಿಕ ಹಾಡುಗಳನ್ನು ಸಂಗ್ರಹಿಸಿದ್ದ ಹತ್ತು ವರ್ಷಗಳ ಜನಪದ ಅಧ್ಯಯನವನ್ನು ಸರಳೀಕರಿಸಿ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ‘ತಣಿಗೆ’ ಕೃತಿಯನ್ನು ಬರೆದಿದ್ದೇನೆ. ಜಾನಪದ ಬಳಕೆಗೊಂಡಷ್ಟು ಹೊಳಪುಗೊಳ್ಳುತ್ತದೆ ಎಂದು ಹೇಳಿದರು.
ಜಾನಪದವನ್ನು ಕಟ್ಟಿದವರು ಬಹುಮುಖಿ ಪ್ರತಿಭಾವಂತರು. ಇವರ ಪರಿಸರ ಜ್ಞಾನ ಅಪಾರವಾದುದು. ಜನಪದರ ವೈದ್ಯ ಪ್ರಜ್ಞೆ ಗಾಢವಾದುದು. ಜಾನಪದ ವೈದ್ಯ ಪದ್ಧತಿಯೇ ಒಂದು ಶಾಸ್ತ್ರ. ಪರಿಸರದಲ್ಲೇ ಮದ್ದಿನ ಗಿಡಮೂಲಿಕೆಗಳನ್ನು ಕಂಡು ಬಳಸಿದರು. ಜನ ಜಾನುವಾರುಗಳನ್ನು ಉಳಿಸಿಕೊಂಡ ಅವರ ಜ್ಞಾನ ವಿಶೇಷವಾದದ್ದು.
ಛಲವಾದಿ ಸಂಸ್ಕೃತಿ, ವಿವಾಹ ಸಂಪ್ರದಾಯಗಳು, ಜನಪದ ವೈದ್ಯಕೀಯ ಹಾಗೂ ಆಚರಣೆಗಳು, ಸೊರಗುತ್ತಿರುವ ಜಾನಪದ ಕಲೆಗಳು, ಬಾಣಂತನದ ಆಚಾರ ವಿಚಾರಗಳು, ಬಂಗಾರ ನೆಲದ ಸಿಂಗಾರ ಸಂಸ್ಕೃತಿ, ಕೋನಂಗಿ ಕಲೆ, ಕೊಂಡಮಾಮರ ಸಾಂಸ್ಕೃತಿಕ ಬದುಕು, ಬಯಲು ಸೀಮೆಯ ಬೇಟೆ ಸಂಸ್ಕೃತಿ ಕುರಿತಂತೆ ಈ ಕೃತಿಯಲ್ಲಿ ಲೇಖನಗಳಿದ್ದು, ಜಿಲ್ಲೆಯ ಜನಪದ ಸಂಸ್ಕೃತಿಯ ಅಧ್ಯಯನ ನೋಟವಾಗಿದೆ ಎಂದು ವಿವರಿಸಿದರು.
ಗ್ರಂಥಾಲಯ ಸಹಾಯಕ ಶ್ರೀನಿವಾಸಯ್ಯ ಮಾತನಾಡಿ, ಗ್ರಂಥಾಲಯದಲ್ಲಿ ಪುಸ್ತಕವನ್ನು ಪರಿಚಯಿಸುವ ಕಾರ್ಯಕ್ರಮದ ಮೂಲಕ ಓದುಗರನ್ನು ಹೆಚ್ಚಿಸುವ ಪ್ರಯತ್ನ ನಡೆದಿದೆ. ಗ್ರಂಥಾಲಯದಲ್ಲಿ ಕೇವಲ ಒಂದು ನೂರು ರೂ ನೀಡಿ ಸದಸ್ಯರಾಗಿ, ಮೂರು ಪುಸ್ತಕಗಳನ್ನು ತೆಗೆದುಕೊಂಡು ಹೋಗಿ ಓದಿ. ಒಳ್ಳೋಳ್ಳೆ ಪುಸ್ತಕಗಳು ಗ್ರಂಥಾಲಯದಲ್ಲಿವೆ. ಅವುಗಳನ್ನು ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಲೇಖಕ ಡಾ.ಜಿ.ಶ್ರೀನಿವಾಸಯ್ಯ ಅವರ ಕೃತಿ ‘ತಣಿಗೆ’ಯನ್ನು ಕೆಲ ಓದುಗರು ಲೇಖಕರಿಂದ ಹಸ್ತಾಕ್ಷರ ಪಡೆದು ಕೊಂಡಿದ್ದು ವಿಶೇಷವಾಗಿತ್ತು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಸತೀಶ್, ಚೌಡಸಂದ್ರ ಪಿ.ಈ.ಕರಗಪ್ಪ, ಅಜಿತ್ ಕೌಂಡಿನ್ಯ, ಗ್ರಂಥಾಲಯ ಸಹಾಯಕಿ ಭಾಂಧವ್ಯ, ಮಕ್ಸೂದ್, ವಿ.ಕೃಷ್ಣ, ನಯಾಜ್, ವೃಷಬೇಂದ್ರಪ್ಪ, ವಿ.ವೆಂಕಟರಮಣ, ವೀರಭದ್ರ, ಹರೀಶ್, ಹರ್ಷಿತಾ, ಮುನಿರಾಜು ಹಾಜರಿದ್ದರು.
 

ಪ್ರತಿಯೊಂದು ಮಗುವೂ ವಿದ್ಯಾವಂತರಾಗಬೇಕು

0

ಉತ್ತಮ ವಿದ್ಯೆಗಿಂತ ಅಮೂಲ್ಯ ವಸ್ತುವು ಯಾವುದೂ ಇಲ್ಲ. ನಾವು ಜೀವಂತವಿರುವವರೆಗೂ ನಮ್ಮಲ್ಲಿನ ವಿದ್ಯೆಯನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಪ್ರತಿಯೊಂದು ಮಗುವೂ ವಿದ್ಯಾವಂತರಾಗಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಬಶೆಟ್ಟಹಳ್ಳಿಯ ದಿಬ್ಬೂರಹಳ್ಳಿ ಮುಖ್ಯ ರಸ್ತೆಯಲ್ಲಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿಯ ದಿಬ್ಬೂರಹಳ್ಳಿ ಮುಖ್ಯ ರಸ್ತೆಯಲ್ಲಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಉದ್ಘಾಟನೆಯನ್ನು ಶಾಸಕ ಎಂ.ರಾಜಣ್ಣ, ಜಿಲ್ಲಾ ಪಂಚಾಯ್ತಿ ಸದಸ್ಯ ಬಂಕ್ ಮುನಿಯಪ್ಪ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಬಶೆಟ್ಟಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಎನ್.ಪುಷ್ಪ ಗಂಗಾಧರ ಉದ್ಘಾಟಿಸಿದರು.

ಗ್ರಾಮೀಣ ಭಾಗದ ಮಕ್ಕಳು, ಕಡು ಬಡವರು, ಹಿಂದುಳಿದವರು ಬೇಧ ಭಾವವಿಲ್ಲದೆ ವಿದ್ಯೆಯನ್ನು ಪಡೆಯಬೇಕು. ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯಬೇಕು ಎಂಬ ಉದ್ದೇಶದಿಂದ ತಾಲ್ಲೂಕಿನ ಉತ್ತರ ಭಾಗದಲ್ಲಿ ಸುಸಜ್ಜಿತ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ಕಟ್ಟಿಸಲಾಗಿದೆ. ಶಿಕ್ಷಕರು ಹಾಗೂ ಅಧಿಕಾರಿಗಳು ಸೂಕ್ತವಾಗಿ ನಿರ್ವಹಣೆ ಮಾಡುವುದರೊಂದಿಗೆ ಮಕ್ಕಳಲ್ಲಿ ಶಿಸ್ತನ್ನು ರೂಢಿಸಬೇಕು ಎಂದು ಹೇಳಿದರು.
ಈ ಭಾಗದ ಜನಪ್ರತಿನಿಧಿಗಳು ಪಕ್ಷಬೇಧ ಮರೆತು ಮಕ್ಕಳ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಬೇಕು. ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಮಕ್ಕಳಿಗೆ ನೀಡುವ ಆಹಾರ, ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯುತ್ತಿರಬೇಕು. ಅದರೊಂದಿಗೆ ಮಕ್ಕಳ ಶೈಕ್ಷಣಿಕ ಪ್ರಗತಿಯತ್ತಲೂ ಕಾಳಜಿ ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸುವ ವಿದ್ಯಾರ್ಥಿನಿಲಯಗಳಲ್ಲಿ ನಿರ್ವಹಣೆಯು ಗುಣಮಟ್ಟದ್ದಾಗಿರಲಿ. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಹಾರದ ಗುಣಮಟ್ಟ ಕಳಪೆಯಾಗಿದೆ ಎಂಬ ದೂರು ಕೇಳಿ ಬರುತ್ತಿದೆ. ಈ ಬಗ್ಗೆ ದೂರು ಬರದಂತೆ ಮಕ್ಕಳಿಗೆ ಒಳ್ಳೆಯ ಆಹಾರವನ್ನು ನೀಡಿ ಎಂದು ಹೇಳಿದರು.
ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿಯ ದಿಬ್ಬೂರಹಳ್ಳಿ ಮುಖ್ಯ ರಸ್ತೆಯಲ್ಲಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಗ್ರಂಥಾಲಯವನ್ನು ಶಾಸಕ ಎಂ.ರಾಜಣ್ಣ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಶಾಸಕರು ಸೇರಿದಂತೆ ಗಣ್ಯರು ವಿದ್ಯಾರ್ಥಿ ನಿಲಯದ ಗ್ರಂಥಾಲಯ, ಮಲಗುವ ಕೋಣೆಗಳು, ಶೌಚಾಲಯ ಅಡುಗೆ ಕೋಣೆ ಮುಂತಾದವುಗಳನ್ನು ಪರಿವೀಕ್ಷಿಸಿದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಜಿಲ್ಲಾ ಪಂಚಾಯ್ತಿ ಸದಸ್ಯ ಡಾ.ಎ.ಎಂ. ಜಯರಾಮರೆಡ್ಡಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಬಿ.ವಿ. ನಾರಾಯಣಸ್ವಾಮಿ, ಬಶೆಟ್ಟಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಎನ್.ಪುಷ್ಪ ಗಂಗಾಧರ, ಉಪಾಧ್ಯಕ್ಷ ಚಿಕ್ಕನಾರಾಯಣಸ್ವಾಮಿ, ಸದಸ್ಯ ವೆಂಕಟರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಅನುಸೂಯಾದೇವಿ, ನಗರಸಭಾ ಅಧ್ಯಕ್ಷ ಅಫ್ಸರ್ಪಾಷ, ಆನೆಮಡುಗು ಮುರಳಿ, ತಿಮ್ಮಯ್ಯ, ಮುನಿಯಪ್ಪ, ತಾದೂರು ರಮೇಶ್, ಡಿ.ವಿ.ವೆಂಕಟೇಶ್, ಕುಂಬಿಗಾನಹಳ್ಳಿ ರವಿ, ರಾಮ್ಬಾಬು, ರಘುನಾಥರೆಡ್ಡಿ, ಹರಿಪ್ರಸಾದ್, ದೇವರಾಜ್, ಕನಕಪ್ರಸಾದ್, ದ್ಯಾವಪ್ಪ, ನಾರಾಯಣಸ್ವಾಮಿ ಹಾಜರಿದ್ದರು.

‘ನನ್ನ ಮೆಚ್ಚಿನ ಪುಸ್ತಕ’ ಕಾರ್ಯಕ್ರಮ – ಪುಸ್ತಕ ಓದುವಿಕೆ ಒಬ್ಬ ಸಾಮಾನ್ಯನನ್ನು ಶ್ರೇಷ್ಠನನ್ನಾಗಿಸುತ್ತದೆ

0

ಪುಸ್ತಕ ಓದುವಿಕೆ ಒಬ್ಬ ಸಾಮಾನ್ಯನನ್ನು ಶ್ರೇಷ್ಠ ಮನುಷ್ಯನನ್ನಾಗಿ ಮಾಡುತ್ತದೆ. ಪುಸ್ತಕ ಓದುವ ಹವ್ಯಾಸವು ಮನುಷ್ಯನಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸುತ್ತದೆ ಎಂದು ಜಿಲ್ಲಾ ಕಸಾಪ ನಿಕಟಪೂರ್ವ ಗೌರವ ಕಾರ್ಯದರ್ಶಿ ಅಮೃತಕುಮಾರ್ ತಿಳಿಸಿದರು.
ತಾಲ್ಲೂಕಿನ ಮೇಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ನಡೆದ ‘ನನ್ನ ಮೆಚ್ಚಿನ ಪುಸ್ತಕ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪುಸ್ತಕಗಳು ಜೀವನ ಕಟ್ಟುವ ಶಕ್ತಿಯನ್ನು ಹೊಂದಿದ್ದು ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಅಭಿರುಚಿಯನ್ನು ಬೆಳೆಸಿಕೊಂಡು ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸುವ ಜೊತೆಗೆ ಜ್ಞಾನರ್ಜನೆಯನ್ನು ಹೆಚ್ಚಿಸಿಕೊಳ್ಳಬೇಕು. ಬದುಕು ಕಲಿಸುವುದು ಅನೌಪಚಾರಿಕ ಶಿಕ್ಷಣವಾಗಿದೆ. ಓದುವ ಪ್ರಕ್ರಿಯೆಯಲ್ಲಿ ಪುಸ್ತಕದ ತಿರುಳನ್ನು ಅರಿಯಬೇಕು. ನಮ್ಮ ನಿಜ ಸಂಪತ್ತು ಹಳ್ಳಿಗಳಲ್ಲಿದೆ. ಅನೇಕ ಸಾಧಕರು ಹಳ್ಳಿಯ ಮೂಲದವರಾಗಿದ್ದಾರೆ. ಸಾಧನೆ ಮಾಡಿ ಹುಟ್ಟಿದ ಊರನ್ನು ಮರೆಯಬಾರದು. ಸಂಬಂಧಗಳನ್ನು ಉಳಿಸಿಕೊಳ್ಳಬೇಕು. ಮನಮನಗಳ ನಡುವೆ ಪ್ರೀತಿ ಪ್ರೇಮದ ಸೇತುವೆ ಬೆಸೆಯಲಿ ಎಂದು ಹೇಳಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಮುನಾ ಧರ್ಮೇಂದ್ರ ಮಾತನಾಡಿ, ಓದುವ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸುವ ಉದ್ದೇಶದಿಂದ ನಡೆಸುವ ಇಂಥ ಕಾರ್ಯಕ್ರಮಗಳು ಸ್ವಾಗತಾರ್ಹ. ಈ ಮೂಲಕ ಮಕ್ಕಳ ವ್ಯಕ್ತಿತ್ವದಲ್ಲಿ ಅಗಾಧ ಬದಲಾವಣೆ ಸಾಧ್ಯವಿದೆ ಎಂದು ಹೇಳಿದರು.
ಶಾಲೆಯ ಗ್ರಂಥಾಲಯದಿಂದ ತಾವು ಓದಿದ ಪುಸ್ತಕಗಳ ಬಗ್ಗೆ ಮಾತನಾಡಿದ ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನವನ್ನು ಸಹನಾ, ದ್ವಿತೀಯ ಸ್ಥಾನ ಗೀತಾ ಹಾಗೂ ತೃತೀಯ ಸ್ಥಾನ ಪಡೆದ ಅಮೂಲ್ಯ ಅವರಿಗೆ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಪುಸ್ತಕ ಮತ್ತು ಪ್ರಮಾಣಪತ್ರವನ್ನು ವಿತರಿಸಲಾಯಿತು. ಶಾಲೆಯ ಗ್ರಂಥಾಲಯಕ್ಕೂ ಪುಸ್ತಕಗಳನ್ನು ನೀಡಲಾಯಿತು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಎಲ್ಐಸಿ ಅಧಿಕಾರಿ ಪ್ರಶಾಂತ್, ಶಿಕ್ಷಕರಾದ ಶಿವಕುಮಾರ್ ಪಟ್ಟೇದ, ಸುಜಾತ, ವಿದ್ಯಾ, ಪ್ರಸಾದ್, ಗ್ರಾಮಸ್ಥರಾದ ಸುಧೀರ್, ಸುದರ್ಶನ್, ಶಿವಾನಂದ್, ಪ್ರಭಾಕರ್ ಹಾಜರಿದ್ದರು.

ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ಸಲಕರಣೆ ವಿತರಣೆ

0

ಗಂಗಾಕಲ್ಯಾಣ ಯೋಜನೆಯಡಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಪ್ರವಾಸಿಮಂದಿರದ ಆವರಣದಲ್ಲಿ ಬುಧವಾರ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಗಂಗಾ ಕಲ್ಯಾಣ ಯೋಜನೆಯಡಿ ಈಗಾಗಲೇ ಕೊಳವೆ ಬಾವಿ ಕೊರೆಸಿರುವ ೪೧ ಮಂದಿ ಫಲಾನುಭವಿಗಳಿಗೆ ಪಂಪು, ಮೋಟಾರ್, ಕೇಬಲ್ ಸೇರಿದಂತೆ ವಿವಿಧ ಸಲಕರಣೆಗಳನ್ನು ವಿತರಿಸಿ ಅವರು ಮಾತನಾಡಿದರು.
ತೀವ್ರ ಮಳೆಯ ಕೊರತೆಯನ್ನು ಅನುಭವಿಸುತ್ತಿರುವ ಬಯಲುಸೀಮೆ ಭಾಗದ ಜನರು ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿರುವ ಪರಿಸ್ಥಿತಿಯಲ್ಲಿ ಪರಿಶಿಷ್ಟ ಜಾತಿ ಹಾಗು ಪಂಗಡದ ರೈತರು ತಮಗಿರುವ ತುಂಡು ಭೂಮಿಗಳಲ್ಲಿ ಬೆಳೆ ಬೆಳೆಯಲು ಸರ್ಕಾರ ವಿವಿಧ ನಿಗಮಗಳ ಮುಖಾಂತರ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಲು ೩ ಲಕ್ಷ ನೀಡುತ್ತಿದೆ.
ಈ ಯೋಜನೆಯಿಂದ ಆರ್ಥಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ ಹಾಗು ಪಂಗಡದ ರೈತರೂ ಸಹ ಕೊಳವೆ ಬಾವಿ ಕೊರೆಸಿ ಉತ್ತಮ ಕೃಷಿ ಮಾಡಲು ಸಹಕಾರಿಯಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ಪ್ರಸ್ತುತ ವರ್ಷದಲ್ಲಿ ತಾಲೂಕಿನಲ್ಲಿ ಕೊಳವೆಬಾವಿಗಳನ್ನು ಕೊರೆಯಿಸಿರುವ ಬಹುತೇಕ ರೈತರಿಗೆ ಈಗಾಗಲೇ ಮೋಟರ್ ಪಂಪು ವಿತರಿಸಲಾಗಿದ್ದು ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಆನಂದಪ್ಪ, ಕ್ಷೇತ್ರಾಭಿವೃದ್ಧಿ ಅಧಿಕಾರಿ ರಾಜಶೇಖರ್, ವೆಂಕಟಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಘುನಾಥ್, ಮುನಿರಾಜು, ಬೈರೇಗೌಡ, ಕುಂದಲಗುರ್ಕಿ ಚಂದ್ರು, ಮುನಿಯಪ್ಪ ಹಾಜರಿದ್ದರು.
 

ಲಂಡನ್‌ ನಿವಾಸಿಗರಿಗೆ ನೆರವು ನೀಡಿ ಮಾನವೀಯತೆ ಮೆರೆದ ಶಿಡ್ಲಘಟ್ಟದ ಜನತೆ

0

ಪ್ರವಾಸಕ್ಕಾಗಿ ಆಗಮಿಸಿ ಅಪಘಾತಕ್ಕೀಡಾಗಿದ್ದ ಲಂಡನ್ ನಿವಾಸಿಗರಿಗೆ ಶಿಡ್ಲಘಟ್ಟದ ಮಾನವೀಯ ಸಹಾಯ ಲಭಿಸಿದೆ.
ಫ್ರೆಡ್, ಟಾಮ್‌ ಮತ್ತು ಫೀಬಿ ಲಂಡನ್‌ ನಿಂದ ಭಾರತದ ಕೇರಳ ರಾಜ್ಯದ ಪ್ರವಾಸ ಮುಗಿಸಿಕೊಂಡು ಆಟೋ ಬಾಡಿಗೆಗೆ ಪಡೆದು ರಾಜ್ಯದ ಮೈಸೂರು ಮತ್ತು ಬೆಂಗಳೂರನ್ನು ನೋಡಿಕೊಂಡು ಶಿಡ್ಲಘಟ್ಟದ ಮೂಲಕ ತಿರುಪತಿಯ ಕಡೆ ಹೊರಟಿದ್ದರು. ಗುರುವಾರ ಬೆಳಿಗ್ಗೆ ತಾಲ್ಲೂಕಿನ ವೈ.ಹುಣಸೇನಹಳ್ಳಿ ಬಳಿ ಇವರ ಆಟೋವನ್ನು ಅಪರಿಚಿತ ವಾಹನ ಗುದ್ದಿದ ಪರಿಣಾಮ ಆಟೋ ಉರುಳಿಬಿದ್ದಿದೆ.
ಕಂಗಾಲಾಗಿ ರಸ್ತೆಯ ಬದಿ ಕುಳಿತಿದ್ದ ಇವರನ್ನು ಅದೇ ದಾರಿಯಲ್ಲಿ ಬರುತ್ತಿದ್ದ ಎಬಿವಿಪಿ ಮಂಜುನಾಥ್‌ ಗಮನಿಸಿ ಕಾರಿನಲ್ಲಿ ಕರೆತಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುಳಮ್ಮ ಅವರ ಮನೆಯಲ್ಲಿ ಬಿಟ್ಟಿದ್ದಾರೆ. ಮಂಜುಳಮ್ಮ ಅವರು ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಟಾಮ್‌ ನ ತಲೆಗೆ ಆಗಿದ್ದ ಗಾಯಕ್ಕೆ ನಾಲ್ಕು ಹೊಲಿಗೆಗಳನ್ನು ಹಾಕಲಾಗಿದೆ. ಫ್ರೆಡ್‌ ಮತ್ತು ಫೀಬಿ ಅವರಿಗೆ ಆಗಿದ್ದ ಗಾಯಗಳಿಗೆ ಚಿಕಿತ್ಸೆಯನ್ನು ನೀಡಲಾಗಿದೆ. ನಂತರ ಅವರ ಆಟೋವನ್ನು ಗ್ಯಾರೇಜಿಗೆ ತಂದು ರಿಪೇರಿ ಮಾಡಿಸಿ ಸಹಕರಿಸಿದ್ದಾರೆ.
‘ಬೆಳಿಗ್ಗೆ ನಮ್ಮ ಮನೆಗೆ ಮಂಜು ಗಾಯಗೊಂಡ ಇವರನ್ನು ಕರೆತಂದಾಗ ಬಹಳ ಗಾಬರಿಗೊಂಡಿದ್ದರು. ತಕ್ಷಣ ಮಾನಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದೆ. ಆಸ್ಪತ್ರೆಯವರು ಹಣವನ್ನು ಪಡೆಯದೆ ಚಿಕಿತ್ಸೆ ನೀಡಿದರು. ನಮ್ಮ ಅಡುಗೆಯಾದ ಉಪ್ಪಿಟ್ಟು, ರೊಟ್ಟಿ, ಬೆಂಡೇಕಾಯಿ ಫ್ರೈ, ಅಪ್ಪಳ, ಪಾಯಸ, ಬಜ್ಜಿ, ನುಗ್ಗೇಕಾಯಿ ಸಾರು, ಅನ್ನ ಇಷ್ಟಪಟ್ಟು ತಿಂದರು. ವಿದೇಶಿ ಪ್ರವಾಸಿಗರು ನಮ್ಮ ದೇಶದ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ತಿಳಿಸಬೇಕು. ನಮ್ಮ ಭಾರತದ ಅನನ್ಯತೆಯನ್ನು ವೀಕ್ಷಿಸಿ ಸುಂದರ ನೆನಪುಗಳನ್ನು ಹೊತ್ತೊಯ್ಯಲು ಬರುವ ವಿದೇಶಿಯರಿಗೆ ನಮ್ಮ ಮಾನವೀಯ ಮುಖವೂ ಪರಿಚಯವಾಗಿ ಇನ್ನಷ್ಟು ಪ್ರವಾಸಿಗರು ಭಾರತಕ್ಕೆ ಬರುವಂತಾಗಲಿ’ ಎನ್ನುತ್ತಾರೆ ಮಂಜುಳಮ್ಮ.
‘ನಾವು ಭಾರತವನ್ನು ಆಟೋವನ್ನು ಚಾಲನೆ ಮಾಡಿಕೊಂಡು ನೋಡುತ್ತಾ ಹೋಗಬೇಕು ಎಂಬ ಆಸೆಯಿಂದ ಕೇರಳದಿಂದ ಹೊರಟೆವು. ದುರದೃಷ್ಟವಶಾತ್‌ ಅಪಘಾತವಾಯಿತು. ಆದರೆ ಶಿಡ್ಲಘಟ್ಟದವರು ನಮಗೆ ಎಲ್ಲ ರೀತಿಯಲ್ಲೂ ಸಹಕಾರ ನೀಡಿ ನಮ್ಮನ್ನು ಕಾಪಾಡಿದ್ದಾರೆ. ನಾವು ನಿಮಗೆ ಚಿರ ಋಣಿಗಳು’ ಎಂದು ಫ್ರೆಡ್‌ ಹೇಳಿದರು.

ಜನ ಜಾನುವಾರುಗಳ ರಕ್ಷಣೆ ಕೋರಿ ಪರ್ಜನ್ಯ ಯಾಗ

0

ಪ್ರಕೃತಿ ಮಾತೆಯನ್ನು ಸಂಪ್ರೀತಗೊಳಿಸಲು, ತಾಲ್ಲೂಕಿನಾದ್ಯಂತೆ ಮಳೆಗಾಗಿ ಪ್ರಾರ್ಥಿಸಿ ಜನ ಜಾನುವಾರುಗಳ ರಕ್ಷಣೆ ಕೋರಿ ಪರ್ಜನ್ಯ ಯಾಗವನ್ನು ಶ್ರೀ ಎಚ್.ಡಿ ದೇವೇಗೌಡಮತ್ತು ಶ್ರೀ ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ಧಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಬಶೆಟ್ಟಹಳ್ಳಿ ಪಂಚಾಯ್ತಿಯ ನಲ್ಲರಾಳಹಳ್ಳಿಯ ಚಾಮುಂಡೇಶ್ವರಿ ದೇವಾಲಯದಲ್ಲಿ ಬುಧವಾರ ಟ್ರಸ್ಟ್ ವತಿಯಿಂದ ನಡೆಸಿದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈಗಾಗಲೇ ಮುಂಗಾರು ಮಳೆ ಕ್ಷೀಣಿಸಿದೆ. ತಾಲ್ಲೂಕಿನಾದ್ಯಂತ ಜಾನುವಾರುಗಳಿಗೆ ಮೇವಿನ ಅಭಾವ ತಲೆದೋರಿದೆ. ನೀರಿನ ತೊಂದರೆ ಕೂಡ ಅಧಿಕವಾಗಿದೆ. ಹಿಂದೆ ಬರಗಾಲ ಬಂದಾಗ ಪ್ರಕೃತಿ ಮಾತೆಯನ್ನು ಒಲಿಸಿಕೊಳ್ಳಲು ಪೂಜೆ, ಹೋಮ, ಹವನಗಳನ್ನು ನಡೆಸುತ್ತಿದ್ದರು. ಹಿರಿಯ ಅದೇ ಮಾದರಿಯಲ್ಲಿ ಗುರುವಾರದಿಂದ ಐದು ದಿನಗಳ ಕಾಲ ಪರ್ಜನ್ಯ ಯಾಗವನ್ನು ನಡೆಸುತ್ತಿದ್ದೇವೆ. ಆಗಸ್ಟ್ 21ರ ಸೋಮವಾರದಂದು ಪೂರ್ಣಾಹುತಿಯನ್ನು ನೀಡಲಿದ್ದೇವೆ. ಪೂರ್ಣಾಹುತಿಯಂದು ನೀಡುವ ಹವಿಸ್ಸಿನಿಂದ ಮತ್ತು ಯಾಗದ ಹೊಗೆಯಿಂದ ಹೊರಡುವ ಸಕಾರಾತ್ಮಕ ಶಕ್ತಿ ತರಂಗಗಳು ಸರ್ವರಿಗೂ ಮಂಗಳ ತರುತ್ತದೆ. ಎಲ್ಲಾ ಜೀವ ಜಂತುಗಳ ಒಳಿತಿಗಾಗಿ ನಡೆಸುತ್ತಿರುವ ಈ ಯಾಗಕ್ಕೆ ಪಕ್ಷ ಬೇಧ ಮರೆತು ಎಲ್ಲಾ ಜನರೂ ಭಾಗವಹಿಸುವಂತೆ ಕೋರಿದರು.
ಈ ಭಾಗದಲ್ಲಿ ನೀರಿನ ಅಭಾವದಿಂದ ಜನರು ಬಹಳ ಕಷ್ಟದಲ್ಲಿದ್ದಾರೆ. ಸಕಾಲಕ್ಕೆ ಮಳೆ ಬೆಳೆಯಾದರೆ ಜನರು ಬೇರೇನನ್ನೂ ಕೇಳುವುದಿಲ್ಲ. ದೈವಾನುಗ್ರಹಕ್ಕಾಗಿ ಎಲ್ಲರೂ ಒಗ್ಗೂಡೋಣ ಎಂದರು.
ಪ್ರಧಾನ ಅರ್ಚಕ ಗಿರೀಶ್ ಮಾತನಾಡಿ, ಪರಶುರಾಮ ಪ್ರತಿಷ್ಠಾಪಿತ ತ್ರಿಶಕ್ತಿ ಸಂಗಮದ ಚಾಮುಂಡೇಶ್ವರಿ ದೇವಿಯ ಈ ಕ್ಷೇತ್ರ ಕ್ಷಿಪ್ರ ಪ್ರಸಾದಿನಿ ಕ್ಷೇತ್ರವೆಂದೇ ಹೆಸರಾಗಿದೆ. ಇಲ್ಲಿ ನಡೆಸುವ ಯಾಗದಿಂದ ತಾಲ್ಲೂಕಿನ ಜನರಿಗೆ ಒಳ್ಳೆಯದಾಗಲಿ ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಬಂಕ್ ಮುನಿಯಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿ.ನಾಗರಾಜ್, ದೊಣ್ಣಹಳ್ಳಿ ರಾಮಣ್ಣ, ವೆಂಕಟೇಶ್ ಮಾತನಾಡಿದರು.
ತಿಮ್ಮನಾಯಕನಹಳ್ಳಿ ರಮೇಶ್, ಆದಿಲ್ಪಾಷ, ಸಾದಲಿ ಚಲಪತಿ, ನಂಜಪ್ಪ, ರಾಮಾಂಜಿನಪ್ಪ, ರಾಜಶೇಖರ್, ಗೋಪಾಲಗೌಡ, ಕೆ.ಎಸ್.ಮಂಜುನಾಥ್,ರಾಮಚಂದ್ರ, ಲಕ್ಷ್ಮಣ, ಲಕ್ಕಹಳ್ಳಿ ರಾಮಾಂಜನೇಯುಲು, ಶ್ರೀನಿವಾಸರೆಡ್ಡಿ ಹಾಜರಿದ್ದರು.
 

ಪ್ರಧಾನಿಯ ಪ್ರತಿಕೃತಿ ದಹಿಸಿದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಬಿಜೆಪಿ ಖಂಡನೆ

0

ಕ್ವಿಟ್ ಇಂಡಿಯಾ ಚಳುವಳಿಯ ೭೫ ನೇ ವರ್ಷದ ಆಚರಣೆಯನ್ನು ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ದ್ವೇಷ ಹಾಗೂ ಅಸೂಯೆಯನ್ನು ಪ್ರದರ್ಶಿಸಿದ್ದನ್ನು ಬಿಜೆಪಿ ತಾಲ್ಲೂಕು ಮಂಡಲ ಅತ್ಯುಗ್ರವಾಗಿ ಖಂಡಿಸುತ್ತದೆ ಎಂದು ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ವಿಟ್ ಇಂಡಿಯಾ ಚಳುವಳಿಯ ಸಂಭ್ರಮಾಚರಣೆ ಮಾಡುವ ನೆಪದಲ್ಲಿ ಮಾಜಿ ಸಚಿವ ವಿ.ಮುನಿಯಪ್ಪ ಅವರ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಮತ್ತು ಪ್ರಧಾನಿ ನರೇಂದ್ರಮೋದಿ ಅವರ ಪ್ರತಿಕೃತಿಗಳನ್ನು ದಹಿಸುವ ಮೂಲಕ ದ್ವೇಷದ ರಾಜಕಾರಣ ಪ್ರದರ್ಶಿಸಿರುವುದು ಕಾಂಗ್ರೆಸ್ ಪಕ್ಷದ ಹತಾಶೆಯನ್ನು ತೋರಿಸಿದೆ. ಮೆರವಣಿಗೆಯಲ್ಲಿ ಅವಾಚ್ಯ ಶಬ್ಧಗಳಿಂದ ಪ್ರಧಾನಿ ನರೇಂದ್ರಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ನಿಂದಿಸಿ ಚಪ್ಪಲಿನ್ನು ಅವರ ಚಿತ್ರಕ್ಕೆ ಕಟ್ಟಿದ್ದು ದುರಂತದ ಸಂಗತಿ.
ಕೇಂದ್ರ ಸರ್ಕಾರದ ಜನಪರವಾದ ಕಾರ್ಯಕ್ರಮಗಳಿಂದಾಗಿ ರಾಷ್ಟ್ರದಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷ, ಹತಾಶೆಯಿಂದ ಇಂತಹ ಕೃತ್ಯಗಳಿಗೆ ಕೈಹಾಕಿದೆ. ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದಿರುವಷ್ಟರ ಮಟ್ಟಿಗೆ ಕಾಂಗ್ರೆಸ್ ಪಕ್ಷ ಅಳಿವಿನಂಚಿಗೆ ಹೋಗುತ್ತಿದೆ.
ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ ರಾಜಕೀಯ ಪಕ್ಷವಾಗಿರಲಿಲ್ಲ. ದೇಶಭಕ್ತರ ಸ್ವಾತಂತ್ರ್ಯ ಹೋರಾಟಗಾರರ ಸಂಘಟನೆಯಾಗಿತ್ತು. ಆ ಹೆಸರನ್ನು ಬಳಸಿಕೊಂಡು ಕೆಲವರು ರಾಜಕೀಯ ಪಕ್ಷ ಮಾಡಿಕೊಂಡು ಸತತವಾಗಿ ಜನರಿಗೆ ಮಂಕುಬೂದಿ ಎರಚಿ ಆಳಿದರು. ಆದರೆ ಈಗ ಆ ಪಕ್ಷವು ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿದೆ. ಕ್ವಿಟ್ ಇಂಡಿಯಾ ಚಳುವಳಿ ಆಚರಣೆಯನ್ನು ಎಲ್ಲಾ ದೇಶ ಭಕ್ತರೂ ಆಚರಿಸಬೇಕು. ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ಕನಿಷ್ಠ ಆ ಸಂಭ್ರಮಾಚರಣೆಯನ್ನೂ ಸಮರ್ಪಕವಾಗಿ ಆಚರಿಸದೆ ಸ್ಥಳೀಯ ಕಾಂಗ್ರೆಸ್ ಪಕ್ಷದವರು ದ್ವೇಷ ಅಸೂಯೆ ಪ್ರದರ್ಶಿಸಿದ್ದು ವಿಪರ್ಯಾಸವಾಗಿದೆ ಎಂದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನಧನ ಯೋಜನೆ, ಉಜ್ವಲ ಯೋಜನೆ, ಜಿ.ಎಸ್.ಟಿ, ಮುದ್ರಾ ಯೋಜನೆ, ಫಸಲ್ ಭೀಮಾಯೋಜನೆ, ಆರೋಗ್ಯ ಕವಚ ಯೋಜನೆ, ಸ್ವಚ್ಚ ಭಾರತ ಯೋಜನೆ, ಮೇಕ್ ಇನ್ ಇಂಡಿಯಾ ಸೇರಿದಂತೆ ಅನೇಕ ಯೋಜನೆಗಳ ಬಗ್ಗೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆಗೆ ಒಳಗಾಗುತ್ತಿದ್ದಾರೆ. ಕಾಂಗ್ರೆಸ್ನವರು ಈ ರೀತಿಯಾಗಿ ಅಪಪ್ರಚಾರ ಮಾಡುವುದು ಹಾಸ್ಯಸ್ಪದವಾಗಿದೆ. ಸ್ಥಳೀಯ ಶಾಸಕರು, ತಮ್ಮ ಪಕ್ಷದಲ್ಲಿನ ಆಂತರಿಕ ಭಿನ್ನಮತ ಸರಿಪಡಿಸಿಕೊಳ್ಳಲು ಹೆಣಗಾಡುತ್ತಿದ್ದು, ಅಭಿವೃದ್ಧಿಯನ್ನು ಮರೆತಿದ್ದಾರೆ ಎಂದರು.
ನಗರಸಭಾ ಸದಸ್ಯ ರಾಘವೇಂದ್ರ ಮಾತನಾಡಿ, ಮಾಜಿ ಶಾಸಕರು, ಕ್ಷೇತ್ರದ ಬಗ್ಗೆ ಕಾಳಜಿವಹಿಸುವುದರ ಬದಲಿಗೆ ಕೇವಲ ಚುನಾವಣೆಯಲ್ಲಿ ಗೆಲ್ಲುವುದನ್ನೆ ಅಜೆಂಡಾ ಮಾಡಿಕೊಂಡಿದ್ದಾರೆ. ಇವರು ಬಿಜೆಪಿ ನಾಯಕರುಗಳ ಬಗ್ಗೆ ಅಪಪ್ರಚಾರ ಮಾಡುವ ಮೆರವಣಿಗೆಗೆ ನೇತೃತ್ವ ವಹಿಸಿದ್ದು ಸರಿಯಲ್ಲ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ಸುರೇಂದ್ರಗೌಡ, ಶ್ರೀರಾಮರೆಡ್ಡಿ, ತಾಲ್ಲೂಕು ಪ್ರಧಾನಕಾರ್ಯದರ್ಶಿ ಬಾಸ್ಕರ್ರೆಡ್ಡಿ, ರಾಜ್ಯ ಸಮಿತಿ ಸದಸ್ಯ ದಾಮೋದರ್, ಜಿಲ್ಲಾ ಕಾರ್ಯದರ್ಶಿ ಸುಜಾತಮ್ಮ, ರಾಮಕೃಷ್ಣಪ್ಪ, ಎಸ್.ಸಿ.ಮೋರ್ಚಾ ಅಧ್ಯಕ್ಷ ಮುನಿರಾಜು, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಹಾಜರಿದ್ದರು.
ಸಚಿವ ಡಿ.ಕೆ.ಶಿವಕುಮಾರ್, ರಮೇಶ್ ಜಾರಕಿಹೋಳಿ, ಲಕ್ಷ್ಮೀಹೆಬ್ಬಾಳ್ಕರ್ ಅವರ ಮನೆಗಳ ಮೇಲೆ ಆದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಬಿಜೆಪಿ ಮುಖಂಡರು ಒತ್ತಾಯಿಸಿದರು.
 

ಇಂದಿನ ಯುವಕರೇ ನಾಳೆಯ ನಾಯಕರು

0

ದೇಶದ ನಿರ್ಮಾಣದಲ್ಲಿ ಯುವ ಜನಾಂಗದ ಪಾತ್ರ ಮಹತ್ತರವಾಗಿದೆ. ಇಂದಿನ ಯುವಕರೇ ನಾಳೆಯ ನಾಯಕರು ಎಂದ ಅವರು, ಸಮಯ ಅಮೂಲ್ಯವಾದುದು. ವ್ಯರ್ಥ ಸಮಯ ಕಳೆಯುವುದು ಬಹುದೊಡ್ಡ ನಷ್ಟ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ 71ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು.
ನಾಡನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಪ್ರತಿಯೊಬ್ಬ ನಾಗರಿಕರೂ ಕಂಕಣಬದ್ಧರಾಗಬೇಕು. ನಮ್ಮ ಕುಟುಂಬ, ನಮ್ಮ ಮನೆ ಎಂದು ಸಂಕುಚಿತಗೊಳ್ಳದೆ ನಮ್ಮ ನಾಡು ಎಂಬ ವಿಶಾಲ ಮನೋಭಾವವನ್ನು ಬೆಳೆಸಿಕೊಳ್ಳಬೇಕು.
ನಾಡಿನ ಜ್ವಲಂತ ಸಮಸ್ಯೆಗಳನ್ನು ನಿವಾರಿಸಲು ಹಾಗೂ ಅದನ್ನು ಪರಿಹರಿಸಲು ಆತ್ಮಾವಲೋಕನ ಮಾಡಿಕೊಳ್ಳುವ ವಿಶೇಷ ದಿನವಿದು. ಹಲವಾರು ಬಲಿದಾನಗಳಿಂದ ಸಿಕ್ಕ ಸ್ವಾತಂತ್ರ್ಯವನ್ನು ದೇಶದ ಅಭ್ಯುದಯಕ್ಕಾಗಿ ಶ್ರಮಿಸುವ ಮೂಲಕ ಆಚರಿಸಬೇಕು. ಸ್ವತಂತ್ರ್ಯ ಚಳುವಳಿಯಲ್ಲಿ ಆತ್ಮಾರ್ಪಣೆ ಮಾಡಿಕೊಂಡ ಸರ್ವ ಮಹಾನುಭಾವರನ್ನು ನಾವು ದಿನ ನಿತ್ಯ ನೆನಯಬೇಕು ಎಂದರು.
ತಹಶೀಲ್ದಾರ್ ಅಜಿತ್ಕುಮಾರ್ ರೈ ಮಾತನಾಡಿ, ಬ್ರಿಟೀಷರನ್ನು ನಮ್ಮ ದೇಶದಿಂದ ಹೊರಗಟ್ಟಲು ಲಕ್ಷಾಂತರ ಜನ ಪ್ರಾಣಾರ್ಪಣೆ ಮಾಡಬೇಕಾಯಿತು. ನಾವೆಲ್ಲರೂ ರಾಜಕೀಯ ಸ್ವಾತಂತ್ರ್ಯವನ್ನು ಮಾತ್ರ ಪಡೆದುಕೊಂಡಿದ್ದೇವೆ. ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಇನ್ನೂ ಪಡೆಯಬೇಕಾಗಿದೆ ಎಂದು ನುಡಿದರು.
ಪೊಲೀಸ್ ಹಾಗೂ ವಿವಿಧ ಶಾಲೆಗಳ ವಾದ್ಯವೃಂದದ ಪಥ ಸಂಚಲನ ನಡೆಯಿತು. ನಗರಸಭೆಯಿಂದ ತಂದಿದ್ದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರದ ತೇರಿಗೆ ಪೂಜೆ ಸಲ್ಲಿಸಲಾಯಿತು.

ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ 71ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿರುವ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು.

ವಿವಿಧ ಶಾಲೆಗಳ ವಿದ್ಯಾರ್ಥಿಗಳು ದೇಶಭಕ್ತಿಯನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಯೂನಿಟಿ ಸಿಲ್ಸಿಲಾ ಫೌಂಡೇಶನ್ ಸದಸ್ಯರು ಪಥಸಂಚಲನದಲ್ಲಿ ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ನೀರು, ಬಿಸ್ಕತ್ತನ್ನು ವಿತರಿಸಿ, ನೆಹರೂ ಕ್ರೀಡಾಂಗಣದಲ್ಲಿ ಸ್ವಚ್ಛತೆ ಕಾರ್ಯವನ್ನು ಕೈಗೊಂಡರು. ಬಿಲಾಲ್ ಯೂತ್ ಕಮಿಟಿ ಮತ್ತು ಎಂ ಸಿ ಸಿ ಸ್ಪೋರ್ಟ್ಸ್ ಕ್ಲಬ್ ಸದಸ್ಯರು ಪೆರೇಡ್ಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ನೀರು ಮತ್ತು ಸಿಹಿ ವಿತರಿಸಿದರು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿರುವ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಆನೆಮಡುಗು ಭವಾನಿ, ಚೀಮಂಗಲ ಅನೂಷಾ, ತುಮ್ಮನಹಳ್ಳಿ ನರಸಿಂಹಮೂರ್ತಿ, ತುಮ್ಮನಹಳ್ಳಿ ಚಂದ್ರಶೇಖರ್, ಸಾದಲಿ ಆನಂದ್ ಅವರಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು.
ಗಂಜಿಗುಂಟೆ ಗ್ರಾಮ ಪಂಚಾಯ್ತಿ ಲಕ್ಕೇನಹಳ್ಳಿಯ ಅಂಗನವಾಡಿ ಕಾರ್ಯಕರ್ತೆಗೆ ರಾಜ್ಯಮಟ್ಟದ ಉತ್ತಮ ಅಂಗನವಾಡಿ ಕಾರ್ಯಕರ್ತೆಯ ಪ್ರಶಸ್ತಿ ಮತ್ತು ಐದು ಸಾವಿರ ರೂ ಚೆಕ್ ನೀಡಲಾಯಿತು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಜಿಲ್ಲಾ ಪಂಚಾಯತಿ ಸದಸ್ಯರಾದ ಬಂಕ್ ಮುನಿಯಪ್ಪ, ತನುಜಾ ರಘು, ನಗರಸಭೆ ಆಯುಕ್ತ ಚಲಪತಿ, ಅಧ್ಯಕ್ಷ ಅಫ್ಸರ್ಪಾಷ, ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ಜೆ.ಎಸ್.ವೆಂಕಟಸ್ವಾಮಿ, ರವಿಪ್ರಕಾಶ್ ದಲ್ಲಿ ಹಾಜರಿದ್ದರು.
 

ಪತ್ರಕರ್ತರ ಭವನದ ಮುಂದೆ ಸ್ವಾತಂತ್ರ್ಯ ದಿನಾಚರಣೆ

0

ನಗರದಲ್ಲಿ ಮಂಗಳವಾರ ತಾಲ್ಲೂಕು ಕಾರ್ಯನಿರತ ಪರ್ತಕರ್ತರ ಸಂಘದ ವತಿಯಿಂದ ಟಿ.ಬಿ.ರಸ್ತೆಯ ಪತ್ರಕರ್ತರ ಭವನದ ಮುಂದೆ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರಾಷ್ಟ್ರಧ್ವಜಾರೋಹಣ ಮತ್ತು ಪತ್ರಿಕಾ ದಿನಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಡಿ.ವಿ.ಜಿ ಮತ್ತು ಭಾರತಮಾತೆಯ ಚಿತ್ರಪಟಕ್ಕೆ ಪೂಜೆಯನ್ನು ಸಲ್ಲಿಸಿ, ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಪಿ.ಈ.ಕರಗಪ್ಪ, ‘ಸ್ವಾತಂತ್ರ್ಯ ಸಂಭ್ರಮವು ನಮಗೆ ಸಂತಸದೊಂದಿಗೆ ಜವಾಬ್ದಾರಿಯನ್ನೂ ಹೊತ್ತು ತರುತ್ತದೆ. ಪತ್ರಕರ್ತರ ನಿಸ್ವಾರ್ಥ ಸೇವೆಗೆ ಸಮಾಜದಲ್ಲಿ ಬೆಲೆಯಿರುತ್ತದೆ. ಡಿವಿಜಿ ಅವರ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡು ಪತ್ರಿಕೆ ಮತ್ತು ಮಾಧ್ಯಮದ ಘನತೆಯನ್ನು ಹೆಚ್ಚಿಸುವ ಕೆಲಸವನ್ನು ಮಾಡಬೇಕು’ ಎಂದು ಹೇಳಿದರು.

ಪತ್ರಕರ್ತರ ಭವನದ ಮುಂದೆ ಸ್ವಾತಂತ್ರ್ಯ ದಿನಾಚರಣೆ

ಆಶಾಕಿರಣ ಅಂಧ ಮಕ್ಕಳ ಶಾಲೆಯ ಮಕ್ಕಳು ಬ್ಯಾಂಡ್ ಸೆಟ್ ನುಡಿಸಿ, ವಂದೇ ಮಾತರಂ ಗೀತೆಯನ್ನು ಹಾಡಿದರು.
ಪತ್ರಕರ್ತರಾದ ಶಶಿಕುಮಾರ್, ಡಿ.ಜಿ.ಮಲ್ಲಿಕಾರ್ಜುನ, ಜಗದೀಶ್ ಬಾಬು, ಮುನಿನಾರಾಯಣ, ನಾಗರಾಜ್, ವಿಸ್ಡಂ ನಾಗರಾಜ್, ರಮೇಶ್, ರಾಜೇಶ್, ಲೋಕೇಶ್, ನರಸಿಂಹಗೌಡ, ಮುನೀಂದ್ರ, ಪ್ರಕಾಶ್, ನಾರಾಯಣಸ್ವಾಮಿ, ಮಹೇಶ್, ನಾಗಭೂಷಣ್, ವೆಂಕಟೇಶ್ ಹಾಜರಿದ್ದರು.
 

ಕೃಷ್ಣ ಜನ್ಮಾಷ್ಠಮಿಯಂದು ಬೆಣ್ಣೆ ಕೃಷ್ಣನ ಅಲಂಕಾರ

0

ವಿವಿಧ ಹಣ್ಣುಗಳು ತುಂಬಿರುವ ಮರದ ಕಾಂಡಕ್ಕೆ ಜೋತುಬಿದ್ದ ಉಯ್ಯಾಲೆ. ಉಯ್ಯಾಲೆಯಲ್ಲಿ ರಾಜಠೀವಿಯಲ್ಲಿ ಕುಳಿತು ಬೆಣ್ಣೆಯ ಮಡಿಕೆಯನ್ನು ಹಿಡಿದ ಶ್ರೀಕೃಷ್ಣ. ಕೃಷ್ಣನ ಸುತ್ತ ವೈವಿಧ್ಯಮಯ ತಿಂಡಿ ತಿನಿಸುಗಳು, ಹೂಗಳ ಅಲಂಕಾರ ಕಣ್ಮನ ತಣಿಸುವಂತಿತ್ತು.
ನಗರದ ಗೌಡರಬೀದಿಯ ಪಾರ್ಥಸಾರಥಿ ಮಂಜುನಾಥ್ ಅವರ ಮನೆಯಲ್ಲಿ ಹಲವಾರು ವರ್ಷಗಳಿಂದ ಕೃಷ್ಣ ಜನ್ಮಾಷ್ಠಮಿಯನ್ನು ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ, ಒಂದೊಂದು ವರ್ಷ ಒಂದೊಂದು ಕೃಷ್ಣ ಮಹಿಮೆಯನ್ನು ವ್ಯಕ್ತವಾಗುವಂತೆ ಅಲಂಕಾರ ಮಾಡುತ್ತಾರೆ. ಈ ವರ್ಷ ಬೆಣ್ಣೆಯ ಪ್ರಿಯ ಕೃಷ್ಣ ಉಯ್ಯಾಲೆಯ ಸೇವೆಯನ್ನು ಭಕ್ತರಿಂದ ಹೊಂದುತ್ತಿದ್ದಾನೆ.
ಜೊತೆಯಲ್ಲಿ ನೂರೆಂಟು ವಿಧದ ತಿಂಡಿ ತಿನಿಸುಗಳೊಂದಿಗೆ ನಾನಾ ರೀತಿಯ ಹಣ್ಣಗಳು ಮತ್ತು ಹೂಗಳಿಂದ ಶ್ರೀಕೃಷ್ಣನ ವಿಗ್ರಹವನ್ನು ಅಲಂಕರಿಸಲಾಗಿದೆ.
ಸುತ್ತಮುತ್ತಲಿನ ಮನೆಗಳವರು, ಮಕ್ಕಳು ಬಂದು ಭಾಗವತದ ಪ್ರಮುಖ ಘಟ್ಟ ಹಾಗೂ ಬಾಲಕೃಷ್ಣನ ಲೀಲೆಗಳನ್ನು ಕಂಡು ಪ್ರಸಾದವನ್ನು ಪಡೆದರು. ಮಹಿಳೆಯರು ಭಜನೆ ಹಾಗೂ ಭಕ್ತಿಗೀತೆಗಳ ಗಾಯನವನ್ನು ನಡೆಸಿದರು.
‘ಸುಮಾರು ಹದಿನೆಂಟು ವರ್ಷಗಳಿಂದ ಕೃಷ್ಣ ಜನ್ಮಾಷ್ಠಮಿಯನ್ನು ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದು, ಒಂದೊಂದು ವರ್ಷ ಒಂದೊಂದು ಕೃಷ್ಣ ಮಹಿಮೆಯನ್ನು ವ್ಯಕ್ತವಾಗುವಂತೆ ಅಲಂಕಾರ ಮಾಡುತ್ತೇವೆ. ಈ ಬಾರಿ ಎಲ್ಲರ ಪ್ರೀತಿಪಾತ್ರನಾದ ಬೆಣ್ಣೆ ಕೃಷ್ಣನನ್ನು ಪೂಜಿಸುತ್ತಿದ್ದೇವೆ. ಮಕ್ಕಳಿಗೆ ಈ ರೀತಿಯ ಪ್ರತಿಕೃತಿಗಳ ಮೂಲಕ ಶ್ರೀಕೃಷ್ಣನ ಲೀಲೆಗಳು ಹಾಗೂ ಭಾಗವತದ ಕಥೆಯನ್ನು ತಿಳಿಸುವ ಪ್ರಯತ್ನವನ್ನು ಮಾಡಿದ್ದೇವೆ’ ಎಂದು ಗೌಡರಬೀದಿಯ ಮಂಜುನಾಥ್ ತಿಳಿಸಿದರು.