ಶ್ರೀಕೃಷ್ಣ ಭರತಖಂಡದ ಐಕ್ಯತೆಗಾಗಿ ಶ್ರಮಿಸಿದ ಮಹಾನುಭಾವ. ಶ್ರೀಕೃಷ್ಣ ಯಾವುದೇ ರಾಜ್ಯದ ರಾಜನಾಗದಿದ್ದರೂ ದೇಶದಲ್ಲಿದ್ದ ಆಗಿನ ಎಲ್ಲಾ ರಾಜರಿಂದಲೂ ಪೂಜಿಸಿಕೊಂಡಥಹ ಶ್ರೇಷ್ಠ ವ್ಯಕ್ತಿ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಅಗ್ನಿಶಾಮಕ ಠಾಣೆ ಆವರಣದಲ್ಲಿ ನಾಡಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ಧರ್ಮದ ಸ್ಥಾಪನೆಗಾಗಿ ಅಧರ್ಮದ ಹಾದಿಯಲ್ಲಿದ್ದವರನ್ನೆಲ್ಲಾ ನಾಶ ಮಾಡಿ, ಜಗತ್ತಿಗೆ ಗೀತೆಯನ್ನು ನೀಡಿ ಬದುಕುವ ಮಾರ್ಗವನ್ನು ತಿಳಿಸಿಕೊಟ್ಟಿದ್ದಾರೆ. ಶ್ರೀಕೃಷ್ಣ ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಮನುಕುಲಕ್ಕೇ ಸೇರುವಂಥಹ ಶ್ರೇಷ್ಠ ವ್ಯಕ್ತಿತ್ವ. ಗೀತೆಯ ಸಾರವನ್ನು ಜನಸಾಮಾನ್ಯರಿಗೆ ತಲುಪಿಸುವುದು ಮತ್ತು ಅದನ್ನು ಅಳವಡಿಸಿಕೊಳ್ಳುವುದು ಸಮಾಜದ ಏಳಿಗೆಗೆ ಅತ್ಯಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ಯಾದವ ಕುಲದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಡಾ.ಡಿ.ಟಿ.ಸತ್ಯನಾರಾಯಣರಾವ್ ಶ್ರೀಕೃಷ್ಣನ ಕುರಿತು ಮಾತನಾಡಿದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲಾ ಪಲ್ಲಕ್ಕಿಗಳ ತಂಡದವರಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು.
ತಹಶೀಲ್ದಾರ್ ಅಜಿತ್‌ಕುಮಾರ್‌ರೈ, ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ಕೆ.ಕೇಶವಮೂರ್ತಿ, ಗೌರವಾಧ್ಯಕ್ಷ ಟಿ.ಕೆ.ನಟರಾಜ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬಂಕ್ ಮುನಿಯಪ್ಪ, ತನುಜಾ ರಘು, ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಎಪಿಎಂಸಿ ನಿರ್ದೇಶಕ ಡಿ.ವಿ.ವೆಂಕಟೇಶ್, ರಾಮಕೃಷ್ಣಪ್ಪ, ರಾಮಚಂದ್ರಪ್ಪ, ಎನ್.ಲಕ್ಷ್ಮಣ, ಎಸ್.ಎ.ನಾರಾಯಣಸ್ವಾಮಿ, ಎಂ.ನಾಗರಾಜ್, ಕೆ.ಕೃಷ್ಣಪ್ಪ, ದೊಡ್ಡಪಾಪಣ್ಣ, ಶ್ರೀನಿವಾಸ್, ಬ್ರಹ್ಮಾನಂದರೆಡ್ಡಿ, ಅಶ್ವತ್ಥಪ್ಪ ಹಾಜರಿದ್ದರು.
[highlight bgcolor=”#f7e9c3″]
ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ನಗರದ ಟಿ.ಬಿ. ರಸ್ತೆಯಲ್ಲಿರುವ ಕೃಷ್ಣಸ್ವಾಮಿ ದೇವಸ್ಥಾನ ಸೇರಿದಂತೆ ಉಲ್ಲೂರುಪೇಟೆಯ ಶ್ರೀರಾಮ ಭಜನೆ ಮಂದಿರದಲ್ಲಿ ವಿಶೇಷ ಹೂವಿನ ಅಲಂಕಾರ, ಹೋಮ, ಪೂಜೆ ನಡೆಸಲಾಯಿತು.
ಯಾದವ ಕುಲಸ್ಥರು ಕುಟುಂಬ ಸಮೇತರಾಗಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಮಹಿಳೆಯರು ತಂಬಿಟ್ಟು ದೀಪಗಳನ್ನು ಮೆರವಣಿಗೆಯಲ್ಲಿ ತಂದು ಪೂಜೆಯನ್ನು ನೆರವೇರಿಸಿದರು.
ತಾಲ್ಲೂಕಿನ ಯಾದವ ಕುಲಸ್ಥರಿಂದ ಕುದುರೆ ರಥ, ಹೂ ಪಲ್ಲಕ್ಕಿಗಳ ಮೆರವಣಿಗೆಯನ್ನು ಆಯೋಜಿಸಿದ್ದು, ಶ್ರೀಕೃಷ್ಣ ಮೂರ್ತಿಗಳಿರುವ ಮುತ್ತಿನ ಪಲ್ಲಕ್ಕಿಗಳು, ಸಪ್ತಾಶ್ವದ ರಥಗಳು, ಕೀಲುಕುದುರೆ, ಗಾರ್ಡಿಬೊಂಬೆ, ನವಿಲುಬೊಂಬೆ, ತಮಟೆ ವಾದನ, ನಾದಸ್ವರ, ಶ್ರೀಕೃಷ್ಣ ವೇಷಧಾರಿಗಳಾದ ಮಕ್ಕಳು, ದೀಪಗಳನ್ನು ಹೊತ್ತ ಮಹಿಳೆಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದ್ದು ಆಕರ್ಷಕವಾಗಿತ್ತು.
[/highlight]
ಶಿಡ್ಲಘಟ್ಟದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ
ಯುವಕರಲ್ಲಿ ಶಕ್ತಿ ತುಂಬುವ ಕೆಲಸ ಅತ್ಯಂತ ಅವಶ್ಯಕ
ವಿದ್ಯಾರ್ಥಿಗಳಿಗೆ ಮನೋಸ್ಥೈರ್ಯ ತುಂಬುವುದು, ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವುದು, ಯುವಕರಲ್ಲಿ ಶಕ್ತಿ ತುಂಬುವ ಕೆಲಸ ಅತ್ಯಂತ ಅವಶ್ಯಕವಾದುದು ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ತಿಳಿಸಿದರು.
ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಭಾನುವಾರ ಬಸ್ ನಿಲ್ದಾಣದ ಬಳಿಯ ಟ್ರಸ್ಟ್ ಕಚೇರಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ವಿತರಿಸಿ ಅವರು ಮಾತನಾಡಿದರು.
ದೇಶದ ಭವಿಷ್ಯ ಯುವಜನರ ಕೈಲಿದೆ. ಈಗ ಯುವ ಜನರ ಮನಸ್ಸು ಕೆಡಿಸಲು ಹಲವಾರು ಆಕರ್ಷಣೆಗಳಿವೆ. ಅವನ್ನೆಲ್ಲಾ ಮೀರಿ ಕ್ರೀಡೆ, ವಿದ್ಯಾಭ್ಯಾಸ, ಕೌಶಲ್ಯ ಹೊಂದಬೇಕು. ಆಗ ಮಾತ್ರ ಭವಿಷ್ಯ ರೂಪಿಸಿಕೊಳ್ಳಲು ಮತ್ತು ಸಾಧನೆ ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಸ್.ಎನ್.ಕ್ರಿಯಾ ಟ್ರಸ್ಟ್ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. 300 ಮಂದಿ ಬಡ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಬೆಂಗಳೂರಿಗೆ ಹತ್ತಿರವಿದ್ದರೂ ಶಿಡ್ಲಘಟ್ಟ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿಲ್ಲ. ಊರು ಗುರುತಿಸಬೇಕಾದರೆ ಸಾಧಕರು ಹೊರಹೊಮ್ಮಬೇಕು. ಈಗಿನ ಯುವಕರು ದ್ವೇಷ ಭಾವನೆಯನ್ನು ಬಿಟ್ಟು ಪ್ರತಿಭಾವಂತರಾಗಿ, ಪ್ರಕಾಶಮಾನವಾಗಿ ಪ್ರಜ್ವಲಿಸಬೇಕು. ಫೇಸ್ ಬುಕ್, ವ್ಯಾಟ್ಸಪ್ ಗಳ ಆಕರ್ಷಣೆಯಿಂದ ದೂರವಿರಿ. ಅಂತರ್ಜಾಲವು ಜ್ಞಾನದ ಬೆಳವಣಿಗೆಗೆ ಪೂರಕವಾಗಿ ಬಳಕೆಯಾಗಲಿ ಎಂದು ಹೇಳಿದರು.
ಎಸ್.ಎನ್.ಕ್ರಿಯಾ ಟ್ರಸ್ಟ್ ಗೌರವಾಧ್ಯಕ್ಷ ಆನೂರು ದೇವರಾಜ್, ಅಶ್ವತ್ಥನಾರಾಯಣ, ಈ.ತಿಮ್ಮಸಂದ್ರ ನರಸಿಂಹಪ್ಪ, ಆನೂರು ಆಂಜಿನಪ್ಪ, ಬೈರೇಗೌಡ, ನಟರಾಜ್, ಮುನಿರಾಜು, ಮೌಲ ಹಾಜರಿದ್ದರು.
ಮಹಾಗಣಪತಿ, ಛಾಯಾದೇವಿ ಮತ್ತು ಶನೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ
ತಾಲ್ಲೂಕಿನ ಚೌಡಸಂದ್ರ ಗ್ರಾಮದ ಮಹಾಗಣಪತಿ, ಛಾಯಾದೇವಿ ಮತ್ತು ಶನೇಶ್ವರಸ್ವಾಮಿ ದೇವಸ್ಥಾನದಲ್ಲಿ ಶನಿವಾರ 15ನೇ ವರ್ಷದ ವಾರ್ಷಿಕೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ವಿಶೇಷ ಪೂಜಾ ಕೈಂಕರ್ಯಗಳಿಗೆ ಗ್ರಾಮದ ಎಲ್ಲಾ ಮನೆಗಳಿಂದಲೂ ತಂಬಿಟ್ಟು ದೀಪಗಳನ್ನು ಹೊತ್ತು ಮಹಿಳೆಯರು ಮೆರವಣಿಗೆಯಲ್ಲಿ ಸಾಗಿ ಭಾಗವಹಿಸಿದರು. ದೇವರಿಗೆ ಬೆಣ್ಣೆ ಅಲಂಕಾರ ಮತ್ತು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು. ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಾಯಿತು.
ಮಳಮಾಚನಹಳ್ಳಿ, ಮೇಲೂರು, ವರದನಾಯಕನಹಳ್ಳಿ, ಅಪ್ಪೇಗೌಡನಹಳ್ಳಿ, ಚೌಡಸಂದ್ರ, ದೇವರಮಳ್ಳೂರು, ಬಳುವನಹಳ್ಳಿ, ಕೇಶವಾರ ಗ್ರಾಮಗಳ ಬಜನಾ ತಂಡಗಳು ಭಜನೆ ಹಾಗೂ ಭಕ್ತಿಗೀತೆಗಳ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಶಿಡ್ಲಘಟ್ಟದ ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ
ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ 28,405 ಪುಸ್ತಕಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಪುಸ್ತಕಗಳಿವೆ. ಓದುಗರು ಹೆಚ್ಚಾಗಬೇಕು. ಪುಸ್ತಕಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಗ್ರಂಥಾಲಯದ ಮೇಲ್ವಿಚಾರಕ ಶ್ರೀನಿವಾಸಯ್ಯ ತಿಳಿಸಿದರು.
ಗ್ರಂಥಪಾಲಕರ ದಿನಾಚರಣೆ ಪ್ರಯುಕ್ತ ಸಾರ್ವಜನಿಕ ಗ್ರಂಥಾಲಯದ ಆವರಣದಲ್ಲಿ ಶನಿವಾರ ಗ್ರಂಥಾಲಯ ವಿಜ್ಞಾನದ ಪಿತಾಮಹಾ ಡಾ.ಎಸ್.ಆರ್.ರಂಗನಾಥನ್ ಅವರ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಿ ಅವರು ಮಾತನಾಡಿದರು.
ಪುಸ್ತಕಗಳು ಓಡಾಡುವ ಗುಡಿಗಳಂತೆ. ನಮ್ಮ ಗ್ರಂಥಾಲಯದಲ್ಲಿ ಸಾವಿರಾರು ಅತ್ಯುತ್ತಮ ಪುಸ್ತಕಗಳು ಲಭ್ಯವಿವೆ. 28 ದಿನ ಪತ್ರಿಕೆಗಳು, 15ಕ್ಕೂ ಹೆಚ್ಚು ವಾರ ಮತ್ತು ಮಾಸಪತ್ರಿಕೆಗಳನ್ನು ತರಿಸುತ್ತೇವೆ. ಗ್ರಂಥಾಲಯದ ಸದಸ್ಯರ ಸಂಖ್ಯೆ ಮಾತ್ರ 1,480 ಇದೆ. ಈ ಸಂಖ್ಯೆ ಹೆಚ್ಚಬೇಕಿದೆ ಎಂದರು.
ಗ್ರಂಥಾಲಯದ ಸಿಬ್ಬಂದಿ ಬಾಂಧವ್ಯ ಮಾತನಾಡಿ, ಡಾ.ಎಸ್.ಆರ್.ರಂಗನಾಥನ್ ಅವರ ಜನ್ಮದಿನವನ್ನು ರಾಜ್ಯ ಸರ್ಕಾರವು ‘ಗ್ರಂಥಪಾಲಕರ ದಿನ’ ಎಂದು ಘೋಷಿಸಿದೆ. ಪದ್ಮಶ್ರೀ ಡಾ.ಎಸ್.ಆರ್.ರಂಗನಾಥನ್ ಅವರ 125ನೇ ಜನ್ಮ ವರ್ಷವಿದು. ಗ್ರಂಥಾಲಯದ ಪಂಚಸೂತ್ರಗಳಾದ ಆಡಳಿತ ಮತ್ತು ನಿರ್ವಹಣೆ, ವರ್ಗೀಕರಣ, ಸೂಚೀಕರಣ, ನಿರ್ದೇಶೀಕರಣ ಮತ್ತು ಪ್ರಲೇಖನ ಸೇವೆಗಳಲ್ಲಿ ರಂಗನಾಥನ್ ಅವರು ವಿಶಿಷ್ಟ ಕೊಡಗೆ ಸಲ್ಲಿಸಿದ್ದಾರೆ ಎಂದು ವಿವರಿಸಿದರು. ವೃಷಬೇಂದ್ರಪ್ಪ ಹಾಜರಿದ್ದರು.
ಮಳ್ಳೂರು ಗ್ರಾಮದಲ್ಲಿ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮ
ಸಿನಿಮಾ ಆಕರ್ಷಣೆಯಲ್ಲಿ ಜಿಲ್ಲೆಯ ಜಾನಪದವನ್ನು ಮರೆಯಬಾರದು. ನಿಜವಾದ ಪ್ರತಿಭೆಗೆ ಸ್ಥಾನ ನೀಡುವುದು ಜಾನಪದ ಮತ್ತು ರಂಗಕಲೆಯಲ್ಲಿ ಮಾತ್ರ.ಜಿಲ್ಲೆಯ ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ಅತ್ಯಗತ್ಯ ಎಂದು ಮಳ್ಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಾಧ ಶಿವಣ್ಣ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಈಚೆಗೆ ಮಳ್ಳೂರು ಡಾ.ಬಿ.ಆರ್.ಅಂಬೇಡ್ಕರ್ ಕೃಪಾ ಪೋಷಿತ ನಾಟಕ ಮಂಡಳಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ 2016–17ನೇ ಸಾಲಿನ ವಿಶೇಷ ಘಟಕ ಯೋಜನೆಯಡಿಯಲ್ಲಿ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಪದ ಕಲೆ, ಸಂಗೀತ, ನೃತ್ಯ, ನಾಟಕ, ರಂಗಕಲೆ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗಗಳು. ಜೀವನವಿಡೀ ಕಲೆಗಾಗಿ ಮುಡಿಪಿಟ್ಟ ಅಪರೂಪದ ಎಲೆಮರೆಯಂಥಹ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸ ಆಗಬೇಕು ಎಂದು ಹೇಳಿದರು.
ನಾಟಕ ನಿರ್ದೇಶಕ ಎಂ.ಶಿವಣ್ಣ ನಿರ್ದೇಶನದ ಶ್ರೀಕೃಷ್ಣ ರಾಯಭಾರ, ಕುರುಕ್ಷೇತ್ರ ಹಾಗೂ ಶ್ರೀಕೃಷ್ಣ ಸಂಧಾನ ಮತ್ತು ದಾನವೀರಶೂರ ಕರ್ಣ ಎಂಬ ಪೌರಾಣಿಕ ನಾಟಕಗಳು ನಡೆದವು. ಎನ್.ಮುನಿರಾಜು ಮತ್ತು ತಂಡದಿಂದ ಜಾನಪದ ಗಾಯನ, ಬೆಟ್ಟಕೋಟೆ ಶಿವಾನಂದ ಮತ್ತು ತಂಡದಿಂದ ಸಾಮಾಜಿಕ ನಾಟಕ, ರೋಹಿಣಿ ಕುಮಾರ್ ಮತ್ತು ತಂಡದಿಂದ ತತ್ವಪದಗಾಯನ, ಕೊತ್ತನೂರು ಗಂಗಾಧರ್ ಮತ್ತು ತಂಡದಿಂದ ವೀರಗಾಸೆ, ನಾಮದೇವ ಮತ್ತು ತಂಡದಿಂದ ಹರಿದಾಸರ ಪದಗಳ ಕಾರ್ಯಕ್ರಮ ನಡೆಯಿತು. ಕಲಾವಿದರನ್ನು ಡಾ.ಬಿ.ಆರ್.ಅಂಬೇಡ್ಕರ್ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಗೌರವಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಸ್.ವೆಂಕಟಾಚಲಪತಿ, ಗ್ರಾಮ ಪಂಚಾಯ್ತಿ ಸದಸ್ಯ ಸತೀಶ್, ಶ್ರೀನಿವಾಸರೆಡ್ಡಿ ಹಾಜರಿದ್ದರು.
ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಸವಿತಾ ಸಮಾಜದಿಂದ ವಿಶೇಷ ಪೂಜಾ ಕಾರ್ಯಕ್ರಮ
ತಾಲ್ಲೂಕು ಸವಿತಾ ಸಮಾಜ ಹಾಗೂ ತಾಲ್ಲೂಕು ಸವಿತಾ ಕಲಾವಿದರ ಸಂಘದ ವತಿಯಿಂದ ಮೂರನೇ ಶ್ರಾವಣ ಶನಿವಾರದ ಪ್ರಯುಕ್ತ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಶಾಸಕ ಎಂ.ರಾಜಣ್ಣ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಗರದ ಅಶೋಕ ರಸ್ತೆಯಲ್ಲಿ ಅನಾದಿಕಾಲದಿಂದಲೂ ನೆಲೆಸಿರುವ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆದಿದ್ದು ಸವಿತಾ ಸಮಾಜದ ಎಲ್ಲಾ ಮುಖಂಡರು ಯುವಕರು ಹಾಗು ನಗರದ ನಾಗರಿಕರು ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಊರಿನ ಪ್ರಮುಖ ಬೀದಿಗಳಲ್ಲಿ ಮುತ್ತಿನ ಪಲ್ಲಕಿಯಲ್ಲಿ ಮಂಗಳವಾದ್ಯಗಳೊಂದಿಗೆ ಸ್ವಾಮಿಯ ಮೆರವಣಿಗೆ ಮಾಡಲಾಯಿತು.
ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ, ಕಾರ್ಯದರ್ಶಿ ಬೆಳ್ಳೂಟಿ ರಮೇಶ್, ಗೌರವಾಧ್ಯಕ್ಷ ರಮೇಶ್, ದೇವರಾಜ್, ವೆಂಕಟೇಶ್, ಚಂದ್ರು, ರಾಜಣ್ಣ, ನಾಗಪ್ಪ, ಮುನಿಶಾಮಪ್ಪ, ನಂದೀಶ್ವರಪ್ಪ, ಕೃಷ್ಣ, ಬಾಲರಾಜು, ಬಸವರಾಜು ಹಾಜರಿದ್ದರು.
ಓದಿನ ನಡುವೆ ಕೃಷಿ ಪಾಠವನ್ನೂ ಮಕ್ಕಳಿಗೆ ಕಲಿಸಬೇಕು
ಶಾಲೆಯ ಪಠ್ಯ, ಮಕ್ಕಳ ಓದಿನ ನಡುವೆ ಕೃಷಿ ಪಾಠವನ್ನೂ ಮಕ್ಕಳಿಗೆ ಕಲಿಸಬೇಕು. ಮಕ್ಕಳಿಗೆ ಅನ್ನದ ಪಾಠ, ಕೃಷಿ ಬದುಕಿನ ಬಗ್ಗೆಯೂ ತಿಳಿಸಿಕೊಡಬೇಕು. ಊಟದ ತಟ್ಟೆಯ ಪ್ರಥಮ ಪಾಠವನ್ನು ಕಲಿಸಲು ಹೊಲಕ್ಕೆ ಕರೆದೊಯ್ದು ಕೃಷಿಯ ಜಾಗೃತಿ ಬಿತ್ತುವ ಕೆಲಸ ಎಲ್ಲಾ ಶಾಲೆಗಳಲ್ಲೂ ನಡೆಯಲಿ ಎಂದು ರಾಜ್ಯ ಛಲವಾದಿ ಮಹಾಸಭಾ ಮುಖಂಡ ಡಾ. ವೆಂಕಟೇಶಮೂರ್ತಿ ತಿಳಿಸಿದರು.
ತಾಲ್ಲೂಕಿನ ತೊಟ್ಲಗಾನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯ ಛಲವಾದಿ ಮಹಾಸಭಾ ತಾಲ್ಲೂಕು ಘಟಕದಿಂದ ನೋಟ್ ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ಗ್ರಾಮೀಣ ಮಕ್ಕಳು ಅಪಾರ ಪ್ರತಿಭಾವಂತರು. ಅವರಿಗೆ ಅವಕಾಶ ಮತ್ತು ಪ್ರೋತ್ಸಾಹದ ಕೊರತೆಯನ್ನು ಸಮಾಜ ಕಲ್ಪಿಸಬೇಕು. ಗುಣಮಟ್ಟದ ಶಿಕ್ಷಣ ಸಿಕ್ಕಲ್ಲಿ ಗ್ರಾಮೀಣ ಮಕ್ಕಳು ಕೂಡ ಉನ್ನತ ಸಾಧನೆಗಳನ್ನು ಮಾಡಬಹುದು. ಶಿಕ್ಷಣದೊಂದಿಗೆ ವಿವಿಧ ಹವ್ಯಾಸಗಳು, ಚಟುವಟಿಕೆಗಳು, ಗ್ರಾಮೀಣ ಸೊಗಡನ್ನು ಕಲಿಸಬೇಕು. ಓದು, ಪಾಠ, ಪರೀಕ್ಷೆಗಳಲ್ಲಿ ಮಕ್ಕಳು ಕಳೆದುಹೋಗಬಾರದು ಎಂದು ಹೇಳಿದರು.
ರಾಜ್ಯ ಛಲವಾದಿ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಆನಂದ್, ಕಾರ್ಯಾಧ್ಯಕ್ಷ ವೇಣು, ಟಿ.ಟಿ.ನರಸಿಂಹಪ್ಪ, ತ್ಯಾಗರಾಜ, ಗೋಪಾಲ, ಸುಬ್ರಮಣಿ, ಸಂತೋಷ, ನಾರಾಯಣಸ್ವಾಮಿ, ಅಂಬರೀಷ, ದೇವರಾಜ, ಕೃಷ್ಣಪ್ಪ, ಗೋವಿಂದರಾಜು, ಶಿಕ್ಷಕರಾದ ಕೃಷ್ಣಪ್ಪ, ರಮೇಶ್‌ಕುಮಾರ್ ಹಾಜರಿದ್ದರು.
ಯುವಶಕ್ತಿ ತಂಡದಿಂದ ಭೂದೇವಿಗೆ ಬೀಜದುಂಡೆಯನ್ನು ಅರ್ಪಿಸುವ ಅಭಿಯಾನ
ಮುಂಬರುವ ದಿನಗಳಲ್ಲಿ ಉತ್ತಮ ವಾತಾವರಣದ ಲಭ್ಯತೆಗಾಗಿ ಬೀಜದುಂಡೆಗಳನ್ನು ತಯಾರಿಸಿ, ಭೂದೇವಿಗೆ ಬೀಜದುಂಡೆಯನ್ನು ಅರ್ಪಿಸುವ ಅಭಿಯಾನವನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಳ್ಳುವುದು ಅವಶ್ಯಕವಾಗಿದೆ. ಮಳೆ ನೀರು ಸಂರಕ್ಷಿಸುವುದು ಮತ್ತು ಗಿಡ ಮರ ಬೆಳಸುವುದು ಎಲ್ಲರ ಜವಾಬ್ದಾರಿ ಎಂದು ಯುವ ಶಕ್ತಿ ಸಂಘಟನೆಯ ಅಧ್ಯಕ್ಷ ವಿಜಯ ಕುಮಾರ್ ಭಾವರೆಡ್ಡಿ ತಿಳಿಸಿದರು.
ತಾಲ್ಲೂಕಿನ ತಲಕಾಯಲಬೆಟ್ಟದ ಸಾಲಿನಲ್ಲಿ ಶನಿವಾರ ಶಿಡ್ಲಘಟ್ಟ ವಲಯ ಅರಣ್ಯ ಇಲಾಖೆ, ಯುವಶಕ್ತಿ ಸಂಘಟನೆ ಮತ್ತು ಶ್ರೀ ವೆಂಕಟೇಶ್ವರ ಪ್ರೌಢಶಾಲೆ ದಿಬ್ಬೂರಹಳ್ಳಿ ಇವರ ಸಹಯೋಗದಲ್ಲಿ 20 ಸಾವಿರ ಬೀಜದುಂಡೆಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹೊಂಗೆ, ಬೇವು, ಬಿದಿರು, ಹುಣಸೆ, ಅಶೋಕ, ನೇರಳೆ ಮುಂತಾದ ಬೇರೆ ಬೇರೆ ಜಾತಿ ಬೀಜಗಳನ್ನು ಮಣ್ಣು ಮತ್ತು ಗೊಬ್ಬರದ ಮಿಶ್ರಣಕ್ಕೆ ಸೇರಿಸಿ ಅದನ್ನು ಚೆಂಡಿನ ಆಕಾರ ಮಾಡಿ ಒಣಗಿಸಿ ಕಳೆದ ಜುಲೈ 15ರಂದು ಬೀಜದುಂಡೆಗಳನ್ನು ತಯಾರಿಸಲಾಗಿತ್ತು. ಶಾಲಾ ವಿದ್ಯಾರ್ಥಿಗಳ ಸಹಕಾರದೊಂದಿಗೆ ಸುಮಾರು 20 ಸಾವಿರ ಬೀಜದುಂಡೆಗಳನ್ನು ತಯಾರಿಸಿದ್ದೆವು.
ಈಚೆಗೆ ಮಳೆ ಬಿದ್ದು ನೆಲವು ಹದವಾಗಿದೆ. ಕೋಲಿನಲ್ಲಿ ಸ್ವಲ್ಪ ಗುಣಿ ತೆಗೆಯುತ್ತಾ ಬೀಜದುಂಡೆಗಳನ್ನು ಹಾಕುತ್ತಾ ಸಾಗುತ್ತೇವೆ. ತಲಕಾಯಲ ಬೆಟ್ಟಗಳ ಸಾಲಿನಲ್ಲಿ ಗಾಂಡ್ಲಚಿಂತೆ ರಸ್ತೆಯಲ್ಲಿ ಇವನ್ನು ಸಣ್ಣ ಗುಂಡಿ ತೆಗೆದು ನಾಟಿ ಮಾಡುತ್ತೇವೆ. ಅರಣ್ಯ ಇಲಾಖೆಯವರೂ ಸಾಕಷ್ಟು ಗುಂಡಿ ತೋಡಿಟ್ಟಿದ್ದಾರೆ. ಮಳೆ ಬೀಳುತ್ತಿದ್ದಂತೆಯೇ ಬೀಜ ಮೊಳಕೆಯೊಡೆದು ಜೊತೆಗಿರುವ ಗೊಬ್ಬರದ ಪೋಷಕಾಂಶ ಬಳಸಿಕೊಂಡು ಸದೃಢವಾಗಿ ಬೆಳೆಯುತ್ತದೆ ಎಂದು ವಿವರಿಸಿದರು.
ಉಪವಲಯ ಅರಣ್ಯಾಧಿಕಾರಿ ರಾಮಾಂಜಿನೇಯುಲು, ಯುವಶಕ್ತಿ ಸಂಘಟನೆಯ ಜಿ.ಜಯರಾಮ್, ಹಿತ್ತಲಹಳ್ಳಿ ಮುನಿರಾಜು, ನವೀನ್, ಮಧು, ಶಿಕ್ಷಕ ಸದಾಶಿವ, ಶ್ರೀ ವೆಂಕಟೇಶ್ವರ ಪ್ರಾಢಶಾಲೆ, ದಿಬ್ಬೂರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜಗದೀಶ್ವರ ಕಾನ್ವೆಂಟ್, ಎಸ್‌ಎಂಇ ಕಾನ್ವೆಂಟ್ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬೀಜದುಂಡೆಗಳನ್ನು ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜಾನಪದ ಸಂಸ್ಕೃತಿ ಉಳಿಸಲು ಪ್ರತಿಭಾ ಕಾರಂಜಿ ಸಹಕಾರಿ
ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳಿಂದ ಜಾನಪದ ಸಂಸ್ಕೃತಿ ಉಳಿಸಿಕೊಳ್ಳಬಹುದಾಗಿದೆ ಎಂದು ಬಿಜೆಪಿ ಮುಖಂಡ ಡಿ.ಆರ್.ಶಿವಕುಮಾರಗೌಡ ತಿಳಿಸಿದರು.
ತಾಲ್ಲೂಕಿನ ಎಚ್.ಕ್ರಾಸ್ ನಲ್ಲಿರುವ ಚನ್ನಮ್ಮದೇವೇಗೌಡ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಗಂಬೀರನಹಳ್ಳಿ ಕ್ಲಸ್ಟರ್ ಮಟ್ಟ’ದ ಪ್ರತಿಭಾ ಕಾರಂಜಿ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಪ್ರತಿಭಾ ಕಾರಂಜಿ ವೇದಿಕೆಯ ಮುಖ್ಯ ಉದ್ದೇಶ. ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ, ಪ್ರೊತ್ಸಾಹಿಸಿ, ಬೆಳೆಸುವಲ್ಲಿ ಶಿಕ್ಷಕರ ಶ್ರಮ ಮಹತ್ವದ್ದು. ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಿಗೆ ಸರ್ಕಾರ ನೀಡುತ್ತಿರುವ ಅನುದಾನ ಸ್ಥಗಿತಗೊಳಿಸಲು ಚಿಂತನೆ ನಡೆಸಿರುವುದು ಶೋಚನೀಯವಾದ ಸಂಗತಿಯಾಗಿದೆ. ಇಂತಹ ಕಾರ್ಯಕ್ರಮಗಳಿಗೆ ಹೆಚ್ವಿನ ಪ್ರೋತ್ಸಾಹ ನೀಡಬೇಕು. ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಕರು ದಿಕ್ಸೂಚಿಯಾಗಬೇಕು. ಮಕ್ಕಳ ಬೆಳವಣಿಗೆಯಲ್ಲಿ ಗುರಿ ಇರಲಿ ಆದರೆ ಒತ್ತಡದ ಶಿಕ್ಷಣ ಬೇಡ. ಮಕ್ಕಳ ಅಭಿರುಚಿಯನ್ನು ಪ್ರೋತ್ಸಾಹಿಸಿ ಎಂದರು, ಇಂತಹ ಕಾರ್ಯಕ್ರಮಗಳಿಗೆ ನೀಡುತ್ತಿರುವ ಅನುದಾನ ಏರಿಕೆ ಮಾಡಬೇಕು. ಜಾನಪದ, ಕಲೆ. ಸಾಹಿತ್ಯ, ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಕಾರ್ಯಗಳಿಗೆ ಸಾರ್ವಜನಿಕರು ಸಹ ಪ್ರೋತ್ಸಾಹ ನೀಡಬೇಕು. ಮಕ್ಕಳಲ್ಲಿರುವ ಪ್ರತಿಭೆಗಳು ಪ್ರಜ್ವಲಿಸಬೇಕು. ಕ್ಲಸ್ಟರ್ ಮಟ್ಟದಿಂದ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟಕ್ಕೆ ಹೋಗಬೇಕು. ಇದಕ್ಕೆ ಅಗತ್ಯವಾಗಿರುವ ಸಹಕಾರವನ್ನು ಕರ್ಣಶ್ರೀ ಚಾರಿಟೆಬಲ್ ಟ್ರಸ್ಟಿನ ಮೂಲಕ ಮಾಡುವುದಾಗಿ ಹೇಳಿದರು.
ಬಿಜೆಪಿ ಸ್ಲಂ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಚ್.ಸುರೇಶ್ ಮಾತನಾಡಿ, ಮಕ್ಕಳು ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಸರ್ವತೋಮುಖ ಬೆಳವಣಿಗೆಯಾಗಲು ಪ್ರತಿಭಾ ಕಾರಂಜಿಯಂತಹ ಸ್ಪರ್ಧೆ, ವೇದಿಕೆ ಸಹಕಾರಿಯಾಗಿದೆ. ಪಠ್ಯದ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಆತ್ಮಸ್ಥೈರ್ಯ ಹೆಚ್ಚಾಗುವ ಜತೆಗೆ ನಾಯಕತ್ವ ಗುಣ ಬೆಳೆಯಲು ಸಾಧ್ಯ. ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿದ್ದು ಇಂತಹ ವೇದಿಕೆಗಳನ್ನು ಮಕ್ಕಳು ಉಪಯೋಗ ಮಾಡಿಕೊಂಡು ಉತ್ತಮ ಪ್ರದರ್ಶನ ನೀಡಬೇಕು ಎಂದರು.
ಸ್ಥಳೀಯ ಮುಖಂಡ ರವಿಕುಮಾರ್ ಮಾತನಾಡಿ, ಪ್ರತಿಭೆ ಪ್ರತಿಯೊಂದು ಮಗುವಿನಲ್ಲಿಯೂ ಇರುತ್ತದೆ. ಅದನ್ನು ಗುರುತಿಸುವ ಶಿಕ್ಷಕರು, ಪಾಲಕರಿಂದ ಕಾರ್ಯ ಆಗಬೇಕು. ಕೆಲವೊಂದು ಮಕ್ಕಳು ಆರ್ಥಿಕವಾಗಿ ಹಾಗೂ ಸಾಮಾಜಿಕ ಹಿನ್ನಡೆಯಿಂದ ಅವಕಾಶ ವಂಚಿತರಾಗಿರುತ್ತಾರೆ. ಇಂತಹ ಮಕ್ಕಳನ್ನು ಶಿಕ್ಷಕರು ಗುರುತಿಸುವ ಜತೆಗೆ ಉತ್ತಮ ಮಾರ್ಗದರ್ಶನ ನೀಡಿದರೆ ಸಮಾಜದಲ್ಲಿ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯ. ಕ್ಲಸ್ಟರ್ ಮಟ್ಟದಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ವಾಲಿಬಾಲ್ ಕೊಡಿಸುವುದಾಗಿ ಅವರು ಭರವಸೆ ನೀಡಿದರು.
ಕ್ಲಸ್ಟರ್ ಮಟ್ಟದ ಶಾಲೆಗಳ ಮಕ್ಕಳು ವಿವಿಧ ಬಗೆಯ ವೇಷಭೂಷಣಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲಾ ಮಕ್ಕಳಿಂದ ಕೋಲಾಟ ಪ್ರದರ್ಶನ ನಡೆಯಿತು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಆಂಜಿನಪ್ಪ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ನಯನಾ, ಕಾರ್ಯದರ್ಶಿ ಶಂಕರಪ್ಪ, ಶಾರದಮ್ಮ, ಸಿಕಂದರ್ ಪಾಷ, ಸಿದ್ದಲಿಂಗಪ್ಪ, ರಮೇಶ್, ಮುನಿರಾಜ್ ಕುಟ್ಟಿ ಹಾಜರಿದ್ದರು.
ಹಾಪ್ಕಾಮ್ಸ್ ಅಧ್ಯಕ್ಷರಾಗಿ ಮುತ್ತೂರು ಚಂದ್ರೇಗೌಡ
ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘದ(ಹಾಪ್ಕಾಮ್ಸ್) ಅಧ್ಯಕ್ಷರಾಗಿ ಮುತ್ತೂರು ಗ್ರಾಮದ ಎ.ಎಸ್.ಚಂದ್ರೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಅಧ್ಯಕ್ಷ ಶ್ರೀನಿವಾಸ್ ಅವಧಿ ಮುಗಿದಿದ್ದು ಎ.ಎಸ್.ಚಂದ್ರೇಗೌಡ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹತ್ತು ವರ್ಷಗಳಿಂದ ಹಾಪ್ಕಾಮ್ಸ್ ನಿರ್ದೇಶಕರಾಗಿದ್ದ ಚಂದ್ರೇಗೌಡ ಅವರು ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕಾರ್ಯವ್ಯಾಪ್ತಿಯ ಹಾಪ್ಕಾಮ್ಸ್ಗೆ ಶಿಡ್ಲಘಟ್ಟ ತಾಲ್ಲೂಕಿನವರಾದ ಚಂದ್ರೇಗೌಡ ಅಧ್ಯಕ್ಷರಾದುದಕ್ಕೆ ಹಲವು ಮಂದಿ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಎ.ಎಸ್.ಚಂದ್ರೇಗೌಡ ಅವರು,‘ರೈತರಿಗೆ ಅನುಕೂಲಕರ ವಿವಿಧ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲಗುವುದು. ಸಂಸ್ಕರಣಾ ಘಟಕಗಳನ್ನು ಮಾಡುವ ಮೂಲಕ ರೈತ ಉತ್ಪನ್ನಗಳ ಬೆಲೆ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.
ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕಿದೆ
ಗ್ರಾಮದಲ್ಲಿನ ಶಾಲೆಯು ದೇಗುಲದಂತೆ. ಈ ಶಾಲೆಯ ಆವರಣದಲ್ಲಿ ವಿದ್ಯಾದೇವತೆ ಗಣೇಶನ ದೇಗುಲ, ಮಕ್ಕಳ ಸೃಜನಶೀಲತೆಯನ್ನು ಪ್ರದರ್ಶಿಸಲು ವೇದಿಕೆ ಮತ್ತು ಶಾಲೆಯ ಪ್ರವೇಶದ್ವಾರದಲ್ಲಿ ಕಮಾನನ್ನು ನಿರ್ಮಿಸಿರುವುದು ಸಮಂಜಸವಾಗಿದೆ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಹಾಗಣಪತಿ ಮೂರ್ತಿಯ ಪ್ರತಿಷ್ಠಾಪನೆಯ ಅಂಗವಾಗಿ ಶುಕ್ರವಾರ ನಡೆದ ಹೋಮ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಾಲೆಯ ಅಭಿವೃದ್ಧಿಗೆ ಬೇಕಾದ ಹಲವಾರು ಸೌಲಭ್ಯಗಳನ್ನು ಶಿಕ್ಷಕರು ಹೊಂದಿಸಿಕೊಳ್ಳಲು ಶ್ರಮಿಸುತ್ತಿರುವುದು ಅಭಿನಂದನೀಯ. ಗ್ರಾಮ ಪಂಚಾಯ್ತಿಯಿಂದಲೂ ಸೂಕ್ತ ಸಹಕಾರ ಮತ್ತು ಸ್ಪಂದನೆ ಸಿಗುತ್ತಿದೆ. ಶಾಲೆಯನ್ನು ಗಟ್ಟಿಗೊಳಿಸುವ ಕೆಲಸ ಎಲ್ಲರಿಂದಲೂ ಆಗಬೇಕು. ಗಿಡಕ್ಕೆ ನೀರೆರೆದು ಪೋಷಿಸಿದಂತೆ ನಮ್ಮೂರಿನ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸಹಕರಿಸಬೇಕಿದೆ ಎಂದು ಹೇಳಿದರು.
‘ಆಧುನಿಕ ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿ ಬಾಯಿ ಕುಟೀರ’ ಎಂಬ ಹೆಸರಿನಲ್ಲಿನ ವೇದಿಕೆಯನ್ನು ಉದ್ಘಾಟಿಸಲಾಯಿತು. ಮಹಾಗಣಪತಿ ದೇವಾಲಯದ ಮುಂದೆ ವಿವಿಧ ಹೋಮಗಳನ್ನು ನಡೆಸಿ ಮಹಾಮಂಗಳಾರತಿ, ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಗ್ರಾಮ ಪಂಚಾಯ್ತಿ ಸದಸ್ಯರಾದ ಜಯರಾಮ್, ಎ.ಎಂ.ತ್ಯಾಗರಾಜ್, ಉಮಾಚನ್ನೇಗೌಡ, ಸಂಪತ್ಕುಮಾರ್, ಪಿಡಿಒ ಅಂಜನ್ಕುಮಾರ್, ಶ್ರೀನಿವಾಸ್, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ, ಎಸ್ಡಿಎಂಸಿ ಅಧ್ಯಕ್ಷೆ ಪುಷ್ಪಾ ರಾಮಚಂದ್ರ, ಸದಸ್ಯರಾದ ನೀಲಮ್ಮ, ಮಂಜುನಾಥ್, ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ಶಿಕ್ಷಕರಾದ ಎಸ್.ಚಾಂದ್ಪಾಷ, ಅಶೋಕ್, ಭಾರತಿ, ಎಂ.ಸೀನಪ್ಪ, ಸಿಬ್ಬಂದಿ ವೆಂಕಟಮ್ಮ, ಮುನಿರತ್ನಮ್ಮ, ಮಂಜುಳ, ಗ್ರಾಮದ ಚನ್ನೇಗೌಡ, ವೆಂಕಟನಾರಾಯಣಪ್ಪ, ವೀರಪ್ಪ, ವೆಂಕಟರಾಮಪ್ಪ, ಬೈರೇಗೌಡ ಹಾಜರಿದ್ದರು.
ಆತ್ಮಹತ್ಯೆಗೆ ಶರಣಾದ ರೈತ
ಸಾಲದ ಹೊರೆ ಹೆಚ್ಚಿ ರೈತನೋರ್ವ ವಿಷ ಸೇವಿಸಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾಲ್ಲೂಕಿನ ಆನೂರು ಗ್ರಾಮದ ಪ್ರಕಾಶ್(೪೨) ಮೃತ ದುರ್ದೈವಿಯಾಗಿದ್ದಾನೆ.
ಮೃತ ಪ್ರಕಾಶ ಪತ್ನಿ ಪದ್ಮ ಹಾಗೂ ಇಬ್ಬರು ಮಕ್ಕಳಾದ ವಿಕಾಸ್ ಮತ್ತು ವಿಶಾಲ್ರನ್ನು ಅಗಲಿದ್ದು ಆತ್ಮಹತ್ಯೆಗೆ ಮಾಡಿದ್ದ ಸಾಲ ಕಾರಣ ಎನ್ನಲಾಗಿದೆ.
ಗ್ರಾಮದಲ್ಲಿ ಐದು ಎಕರೆ ಜಮೀನಿದ್ದು ಕೃಷಿ ಮಾಡಲು ನೀರಿಲ್ಲದೇ ಇದ್ದುದರಿಂದ ಈಗಾಗಲೇ ಎರಡು ಕೊಳವೆ ಬಾವಿ ಕೊರೆಸಿದ್ದನಾದರೂ ಎರಡೂ ವಿಫಲವಾಗಿವೆ. ಜಮೀನಿದ್ದರೂ ಕೃಷಿ ಮಾಡಲು ನೀರಿಲ್ಲದೇ ಇದ್ದುದರಿಂದ ಸುಮಾರು ೧೦ ಲಕ್ಷಕ್ಕೂ ಹೆಚ್ಚು ಕೈ ಸಾಲ ಮಾಡಿಕೊಂಡಿದ್ದ ಪ್ರಕಾಶ ಮತ್ತೊಂದು ಕೊಳವೆ ಬಾವಿ ಕೊರೆಸಬೇಕು ಎಂದು ಈ ಭಾರಿಯಾದರೂ ಕೊಳವೆಬಾವಿಯಲ್ಲಿ ನೀರು ಸಿಗಲಿ ಎಂದು ಪ್ರಾರ್ಥಿಸಲು ತನ್ನ ಪತ್ನಿ ಹಾಗು ಮಕ್ಕಳನ್ನು ಶಿರಡಿಗೆ ಕಳುಹಿಸಿ ಗ್ರಾಮದ ತಮ್ಮ ತೋಟದಲ್ಲಿರುವ ತಮ್ಮ ತಂದೆಯ ಸಮಾಧಿ ಬಳಿ ಹೋಗಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಅನಿರ್ಧಿಷ್ಟಾವಧಿ ಧರಣಿ
ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಗುರುವಾರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ತಾಲ್ಲೂಕು ಕಚೇರಿಯ ಮುಂದೆ ಅನಿರ್ಧಿಷ್ಟಾವಧಿ ಧರಣಿ ಪ್ರಾರಂಭಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕಾಗಿ ನಗರದ ರೇಷ್ಮೆ ಇಲಾಖೆಯ ಖಾಲಿ ಜಾಗವನ್ನು ತಾಲ್ಲೂಕು ಆಡಳಿತ ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿ ತೀರ್ಮಾನಿಸಿದ್ದು ಅದರಂತೆ ಜಾಗವನ್ನು ಅಂಬೇಡ್ಕರ್ ಭವನಕ್ಕೆ ಮೀಸಲಿರಿಸುವುದು. ಬಗರಹುಕ್ಕುಂ ಸಾಗುವಳಿ ಸಮಿತಿಯಲ್ಲಿ ತಾಲ್ಲೂಕಾದ್ಯಂತ ದಲಿತರು ನಮೂನೆ 50 ಹಾಗೂ 53 ರಲ್ಲಿ ಅರ್ಜಿ ಸಲ್ಲಿಸಿದ್ದು ಇದುವರೆಗೂ ಸಾಗುವಳಿದಾರರಿಗೆ ಯಾವುದೇ ರೀತಿಯ ಸಾಗುವಳಿ ಚೀಟಿ ನೀಡದೆ ದೋರಣೆಯನ್ನು ತೋರುತ್ತಿದ್ದು ಕೂಡಲೆ ಕ್ರಮ ಕೈಗೊಂಡು ಸಾಗುವಳಿ ಚೀಟಿ ನೀಡಬೇಕು. ತಾಲ್ಲೂಕಿನ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಎಸ್ಸಿಪಿ ಟಿಎಸ್ಪಿ ಯೋಜನೆಯಲ್ಲಿ ಅಕ್ರಮ ನಡೆದಿದ್ದು ಅನುದಾನಗಳನ್ನು ದುರುಪಯೋಗಪಡಿಸಿದ್ದು ದಲಿತರಿಗೆ ಅನ್ಯಾಯವಾಗುತ್ತಿದ್ದು ಕೂಡಲೇ ತನಿಖೆ ನಡೆಸಬೇಕು. ತಾಲ್ಲೂಕಿನ ಗ್ರಾಮ ಪಂಚಾಯ್ತಿಗಳಲ್ಲಿ ಶೇಕಡಾ 25 ರಷ್ಟು ಅನುದಾನ ದುರುಪಯೋಗಪಡಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುವುದು ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಕೆ.ಎಸ್.ಅರುಣ್ಕುಮಾರ್, ತಾಲ್ಲೂಕು ಸಂಚಾಲಕ ಅಶೋಕ್, ಸಂಘಟನಾ ಸಂಚಾಲಕ ಜಯಶೀಲಕುಮಾರ್, ವೇಣುಗೋಪಾಲ್, ನರಸಿಂಹಮೂರ್ತಿ, ಚಂದ್ರಶೇಖರ್, ನಾಗರಾಜು, ಮುನಿರಾಜು, ಉಮಾಶಂಕರ್, ವೇಣು, ಮುನಿವೆಂಕಟಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.
ಬ್ರಿಟೀಷರಿಗೆ ಪರ್ಯಾಯವಾಗಿ ಬಿಜೆಪಿ ಆಡಳಿತ ನಡೆಸುತ್ತಿದೆ
ಕ್ವಿಟ್ ಇಂಡಿಯಾ ಚಳುವಳಿಯನ್ನು, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರನ್ನು ಭಾರತದಿಂದ ತೊಲಗಿಸಲು ಮಾಡಿದ್ದರು. ಈ ವೇಳೆ ಕಾಂಗ್ರೆಸ್ ನಾಯಕರು ದೇಶಕ್ಕಾಗಿ ಜೈಲು ಪಾಲಾಗಿದ್ದರು. ಈಗ ಬಜೆಪಿಯ ವಿರುದ್ಧ ಅದೇ ಮಾದರಿಯ ಜನಪರ ಚಳುವಳಿಯನ್ನು ಕಾಂಗ್ರೆಸ್ ಪಕ್ಷದಿಂದ ರೂಪಿಸಿರುವುದಾಗಿ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಆಯೋಜನೆ ಮಾಡಲಾಗಿದ್ದ ಕ್ವಿಟ್ ಇಂಡಿಯಾ ಚಳುವಳಿಯ 75 ನೇ ವರ್ಷದ ಆಚರಣೆಯಲ್ಲಿ ಅವರು ಮಾತನಾಡಿದರು.
ಬ್ರಿಟೀಷರಿಗೆ ಪರ್ಯಾಯವಾಗಿ ಬಿಜೆಪಿ ಆಡಳಿತ ನಡೆಸುತ್ತಿದೆ. ಸ್ವಾತಂತ್ರ್ಯದ ನಂತರ ಸಿಕ್ಕಿದ್ದ ಅಧಿಕಾರವನ್ನು ದುರುಪಯೋಗ ಮಾಡಿಕೊಂಡ ಬಿಜೆಪಿ ಸರ್ಕಾರದ ಪ್ರತಿನಿಧಿಗಳು ಇಲ್ಲಿನ ಸಂಪತ್ತು ಲೂಟಿ ಹೊಡೆಯುವ ಮೂಲಕ ಜೈಲಿಗೆ ಹೋಗುವ ಸಂಸ್ಕೃತಿಯನ್ನು ಬೆಳೆಸಿಕೊಂಡರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹಾತ್ಮಗಾಂಧಿಜೀ ಅವರ ಹೆಸರೇಳಿಕೊಂಡು, ಅವರನ್ನು ಕೊಲೆ ಮಾಡಿದವರಿಗೆ ಗುಡಿ ಕಟ್ಟುತ್ತಿದ್ದಾರೆ. ಜಾತಿ ಜಾತಿಗಳ ಮಧ್ಯೆ ವಿಷದ ಬೀಜಗಳನ್ನು ಬಿತ್ತಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿರುವ ಬಿಜೆಪಿ, ಹಾಗೂ ಜ್ಯಾತ್ಯಾತೀತ ಪಕ್ಷವೆಂದು ಕುಟುಂಬಕ್ಕೆ ರಾಜಕಾರಣ ಸೀಮಿತ ಮಾಡಿಕೊಂಡಿರುವ ಜೆಡಿಎಸ್ ಪಕ್ಷಗಳನ್ನು ಜನರು ತಿರಸ್ಕರಿಸಬೇಕು ಎಂದರು.
ಮಾಜಿ ಸಚಿವ ವಿ.ಮುನಿಯಪ್ಪ ಮಾತನಾಡಿ, ದೇಶದ ಜನರು ಕೊಟ್ಟಿರುವ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಾ, ದೇಶದ ಸ್ವಾಯತ್ತ ಸಂಸ್ಥೆಗಳನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ದುರಾಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷವನ್ನು ಕಿತ್ತೊಗೆಯದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದರು ಇದುವರೆಗೂ ಶಾಶ್ವತವಾದ ಒಂದೇ ಒಂದು ಯೋಜನೆಯನ್ನು ಜಾರಿಗೆ ತಂದಿಲ್ಲ. ಸ್ವಚ್ಚ ಭಾರತದ ಹೆಸರಿನಲ್ಲಿ ಪ್ರಚಾರಕ್ಕಾಗಿ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿಕೊಳ್ಳುತ್ತಿದೆ. ಜನರು ಖಾತೆಗಳಲ್ಲಿ ಜಮಾವಣೆ ಮಾಡಿದ ಕೋಟ್ಯಾಂತರ ರೂಪಾಯಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ನದಿ ಜೋಡಣೆಯಾಗಲಿಲ್ಲ. ಉದ್ಯೋಗಾವಕಾಶಗಳು ಸೃಷ್ಟಿಯಾಗಲಿಲ್ಲ, ಜ್ಯಾತ್ಯಾತೀತವೆಂದು ಹೇಳಿಕೊಂಡು ಜಾತಿವಾದ ಮಾಡುತ್ತಿರುವ ಬಿಜೆಪಿ ಈ ರಾಷ್ಟ್ರಕ್ಕೆ ಮಾರಕ ಎಂದರು.
ರೈತರ ಸಾಲ ಮನ್ನಾ ಮಾಡುವಂತೆ ರಾಜ್ಯ ಸರ್ಕಾರ ಪ್ರಸ್ತಾವನೆ ಕಳುಹಿಸಿದರೆ ಕೇಂದ್ರ ಉತ್ತರ ಕೊಡಲಿಲ್ಲ, ಸಿದ್ದರಾಮಯ್ಯ 50 ಸಾವಿರದಂತೆ ಮನ್ನಾ ಮಾಡಿದರು. ಬಿಜೆಪಿ ನಾಯಕರಿಗೆ ಬದ್ದತೆಯಿದ್ದರೆ ಕೇಂದ್ರದಿಂದ ಅನುದಾನ ತಂದು ಸಾಲ ಮನ್ನಾ ಮಾಡಿಸಲಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಆಮಿತ್ ಷಾ, ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ವೆಂಕಟೇಶ್ವರುಲು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಮುನಿಕೃಷ್ಣಪ್ಪ, ಕಾರ್ಯದರ್ಶಿ ಮಧು, ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್, ಸುಭ್ರಮಣಿ, ಆರ್. ಶ್ರೀನಿವಾಸ್, ಮೌಲಾ, ಗುಡಿಯಪ್ಪ, ವೆಂಕಟೇಶ್, ನಗರಸಭಾ ಸದಸ್ಯ ಬಾಲಕೃಷ್ಣ, ಚಿಕ್ಕಮುನಿಯಪ್ಪ, ಅಮ್ಜದ್, ರಾಮಚಂದ್ರಪ್ಪ, ಎಚ್.ಎಂ.ಮುನಿಯಪ್ಪ ಹಾಜರಿದ್ದರು.
ಶೌಚಾಲಯ ಸಮಸ್ಯೆಯನ್ನು ಬಗೆಹರಿಸಲು ಒತ್ತಾಯ
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹೆಣ್ಣು ಮಕ್ಕಳ ಶೌಚಾಲಯವನ್ನು ನಿರ್ಮಿಸಿಕೊಡುವಂತೆ ರಾಖಿ ಕಟ್ಟುವ ಮೂಲಕ ವಿದ್ಯಾರ್ಥಿನಿಯರು ಬುಧವಾರ ಶಿರಸ್ತೆದಾರ್ ನರೇಂದ್ರಬಾಬು ಅವರನ್ನು ಮನವಿ ಮಾಡಿದರು.
ನಗರದ ತಾಲ್ಲೂಕು ಕಚೇರಿಗೆ ವಿದ್ಯಾರ್ಥಿನಿಯರು ತೆರಳಿ ಕಾಲೇಜಿನ ಸಮಸ್ಯೆಗಳನ್ನು ತಹಶೀಲ್ದಾರರಿಗೆ ವಿವರಿಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು 300 ಮಂದಿ ವಿದ್ಯಾರ್ಥಿನಿಯರು ವಿವಿಧ ಕೋರ್ಸ್ಗಳಲ್ಲಿ ವ್ಯಾಸಂಘ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ ಶೌಚಾಲಯವಿದ್ದರೂ ಬಾಗಿಲು, ಕಿಟಕಿಗಳಿಲ್ಲ, ನೀರಿನ ವ್ಯವಸ್ಥೆಯಿಲ್ಲ. ಈ ಸಮಸ್ಯೆಯಿಂದಾಗಿ ಹೆಣ್ಣುಮಕ್ಕಳಿಗೆ ತೊಂದರೆಯಾಗುತ್ತಿದೆ. ದೂರದ ಊರುಗಳಿಂದ ಬರುವ ನಮಗೆ ಮೂಲಭೂತ ಸೌಕರ್ಯಗಳಿಲ್ಲದೆ ಕಷ್ಟ ಪಡುವಂತಾಗಿದೆ. ಸೂಕ್ತ ಕಾವಲಿಲ್ಲದೆ ರಾತ್ರಿ ವೇಳೆ ಪುಂಡು ಪೋಕರಿಗಳು ಬಂದು ಕಿಟಕಿ, ಗಾಜು, ಬಾಗಿಲನ್ನು ಮುರಿದು ಹೋಗುತ್ತಾರೆ. ಗಲೀಜು ಮಾಡಿರುತ್ತಾರೆ. ಈ ಬಗ್ಗೆ ತಾವು ಕ್ರಮ ಕೈಗೊಳ್ಳಬೇಕೆಂದು ಮನವಿಯನ್ನು ಸಲ್ಲಿಸಿದರು.
ಎಬಿವಿಪಿಯ ಮಂಜುನಾಥರೆಡ್ಡಿ, ಶ್ರೀರಾಮ್, ನರೇಶ್ಕುಮಾರ್, ವಿದ್ಯಾರ್ಥಿನಿಯರಾದ ಅಂಬಿಕ, ಪಲ್ಲವಿ, ಗೌತಮಿ, ಸೌಜನ್ಯ, ಗಾಯಿತ್ರಿ, ಕಮಲ, ಪವಿತ್ರ, ಸುನಿತ, ಶಾನಾಜ್, ಆಯಿಷಾ ಸುಲ್ತಾನ, ಮೌನಿಕ, ಸುಪ್ರಿಯಾ, ಸಮ್ರೀನ್ ತಾಜ್ ಹಾಜರಿದ್ದರು.
ನಗರದಲ್ಲಿ ಸ್ವಚ್ಚತೆ ಕಾಪಾಡುವಂತೆ ರೈತಸಂಘದಿಂದ ಮನವಿ
ನಗರದಾದ್ಯಂತ ಸ್ವಚ್ಚತೆ ಹಾಗೂ ಅಗತ್ಯ ಮೂಲಭೂತ ಸವಲತ್ತುಗಳನ್ನು ಕಲ್ಪಿಸುವಲ್ಲಿ ನಗರಸಭೆ ಅಧಿಕಾರಿಗಳು ವಿಫಲವಾಗಿದ್ದು ಕೂಡಲೇ ಕ್ರಮ ಜರುಗಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ (ಪುಟ್ಟಣ್ಣಯ್ಯ ಬಣ) ಪದಾಧಿಕಾರಿಗಳು ಪೌರಾಯುಕ್ತ ಚಲಪತಿ ಅವರಿಗೆ ಮನವಿಪತ್ರ ಸಲ್ಲಿಸಿದರು.
ನಗರಸಭೆ ವ್ಯಾಪ್ತಿಯಲ್ಲಿರುವ ಕೆಲವು ವಾರ್ಡುಗಳಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳಾಗಿಲ್ಲ. ಸ್ವಚ್ಚತೆ ಮರೀಚಿಕೆಯಾಗಿದೆ. ಮೂಲಭೂತ ಸೌಕರ್ಯಗಳಿಲ್ಲದೆ ಜನರು ಪರದಾಡುತ್ತಿದ್ದಾರೆ. ನಗರದ ಮುಖ್ಯರಸ್ತೆಗಳಲ್ಲಿ ಅಕ್ರಮವಾಗಿ ತಲೆ ಎತ್ತಿರುವ ಮಾಂಸದ ಅಂಗಡಿಗಳ ತೆರವು ಹಾಗೂ ರೇಷ್ಮೆ ಹುಳು ಸಂಸ್ಕರಣೆಯಿಂದ ಬರುತ್ತಿರುವ ದುರ್ವಾಸನೆ ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಸರ್ಕಾರದಿಂದ ನಗರದ ಅಭಿವೃದ್ಧಿಗೆ ಬಿಡುಗಡೆಯಾಗಿರುವ ೨೫ ಕೋಟಿ ಅನುದಾನ ಸಮರ್ಪಕವಾಗಿ ಬಳಕೆಯಾಗದೇ ಅನುದಾನ ದುರುಪಯೋಗವಾಗುತ್ತಿದೆ. ಈ ಅನುದಾನಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಲ್ಲಿ ಅಧಿಕಾರಿಗಳು ಬದ್ದತೆ ತೋರುತ್ತಿಲ್ಲ. ನಗರಸಭೆಗೆ ಕಂದಾಯ ಕಟ್ಟದೆ ಇರುವ ವಾರ್ಡುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನಗಳನ್ನು ನೀಡಲಾಗುತ್ತಿದೆ. ನಗರಸಭೆಗೆ ಕಂದಾಯ ಪಾವತಿ ಮಾಡದಿರುವ ವಾರ್ಡುಗಳಿಗೆ ಯಾವುದೇ ಸೌಲಭ್ಯ ನೀಡದೆ ಸ್ಥಗಿತಗೊಳಿಸಬೇಕು. ನಗರದಲ್ಲಿ ವಾತಾವರಣ ಕಲುಷಿತವಾಗಿದ್ದು ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವಂತಾಗಿದೆ. ಹಾಗಾಗಿ ಕೂಡಲೇ ನಗರದಾದ್ಯಂತ ಸ್ವಚ್ಚತೆ ಕಾಪಾಡುವುದು ಮತ್ತು ಸರ್ಕಾರದಿಂದ ಬರುವ ಅನುದಾನ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿ ನಗರಸಭೆ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಿನಾರಾಯಣರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ, ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಪ್ರತೀಶ್, ಪುರುಶೋತ್ತಮ್ ಈ ಸಂದರ್ಭದಲ್ಲಿ ಹಾಜರಿದ್ದರು.
ರಾಯರ 346ನೇ ಆರಾಧನಾ ಮಹೋತ್ಸವ
ನಗರದ ಮುತ್ತೂರು ಬೀದಿಯ ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ 346ನೇ ಆರಾಧನಾ ಮಹೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಬುಧವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮೂರು ದಿನಗಳ ಕಾಲ ನಡೆಸುವ ಆರಾಧನಾ ಮಹೋತ್ಸವವು ಮಂಗಳವಾರ ಪ್ರಾರಂಭವಾಯಿತು. ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ, ಹಸ್ತೋದಕ, ಮಹಾಮಂಗಳಾರತಿ ನಡೆಯಿತು. ರಾಯರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಸಹಸ್ರ ನಾಮಾರ್ಚನೆ, ಉತ್ಸವವನ್ನು ನೆರವೇರಿಸಲಾಯಿತು. ಮಂಗಳವಾರ ಸಂಜೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಆಯೋಜಿಸಲಾಗಿತ್ತು.
ಬುಧವಾರ ತೀರ್ಥಪ್ರಸಾದ ವಿನಿಯೋಗಿಸಿದ ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ರಾಯರ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಉತ್ಸವ ಮೂರ್ತಿಗೆ ಭಕ್ತರು ಪೂಜೆ ಸಲ್ಲಿಸಿದರು. ಮೆರವಣಿಗೆ ಹಾದು ಹೋದ ರಸ್ತೆಗಳನ್ನು ಸಾರಿಸಿ ರಂಗವಲ್ಲಿ ಹಾಕಿ ಉತ್ಸವಕ್ಕೆ ಸ್ವಾಗತ ಕೋರಲಾಗಿತ್ತು.
ದೇವಾಲಯದ ಆವರಣದಲ್ಲಿ ರಾಘವೇಂದ್ರ ಸೇವಾ ಟ್ರಸ್ಟ್ ವತಿಯಿಂದ ಸಾಮೂಹಿಕ ಅನ್ನಸಂತರ್ಪಣೆಯನ್ನು ನಡೆಸಲಾಯಿತು.
‘ಸುಮಾರು 30 ವರ್ಷಗಳಿಂದಲೂ ನಗರದ ರಾಯರ ಮಠದಲ್ಲಿ ಮೂರು ದಿನಗಳ ಆರಾಧನೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ. ಪೂರ್ವಾರಾಧನೆ, ಮಧ್ಯಾರಾಧನೆ ಮತ್ತು ಉತ್ತರಾರಾಧನೆ ಎಂದು ಮೂರು ದಿನಗಳ ಕಾಲ ನಡೆಯುವ ಆರಾಧನೆಯಲ್ಲಿ ಹೋಮ ಹವನಗಳು, ರಾಯರ ಕಥೆಯನ್ನು ತಿಳಿಸುಕೊಡುವುದು, ವಿಶೇಷ ಪೂಜೆಗಳು, ಭಜನೆ, ಗೀತಗಾಯನಗಳನ್ನು ಆಯೋಜಿಸಲಾಗುತ್ತದೆ. ರಾಯರು ಭಕ್ತಿಯಿಂದ ಪೂಜಿಸುತ್ತಿದ್ದ ರಾಮ, ಕೃಷ್ಣ, ವೇದವ್ಯಾಸ, ಲಕ್ಷ್ಮೀನರಸಿಂಹ ಮತ್ತು ಹಯಗ್ರೀವ ದೇವರುಗಳನ್ನು ಪೂಜಿಸಲಾಗುತ್ತದೆ. ಸರ್ವರಿಗೂ ಸಲ್ಲುವ ರಾಯರ ಮಹಿಮೆಯನ್ನು ಎಲ್ಲರಿಗೂ ಸಾರುವ ಉದ್ದೇಶದಿಂದ ಸಂಜೆಗೆ ದೇವರನಾಮಗಳು ಹಾಗೂ ಶ್ರೀರಾಘವೇಂದ್ರ ವಿಜಯ ಹರಿಕಥೆಯನ್ನು ಆಯೋಜಿಸಿದ್ದೇವೆ’ ಎಂದು ರಾಘವೇಂದ್ರ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ವಾಸುದೇವರಾವ್ ತಿಳಿಸಿದರು.
ಬ್ರಾಹ್ಮಣ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎಸ್.ರವಿ, ವಿಪ್ರ ಪ್ರತಿಭಾ ಪುರಸ್ಕಾರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್. ಅನಂತಕೃಷ್ಣ, ಎಸ್.ವಿ.ನಾಗರಾಜರಾವ್, ವಿ.ಕೃಷ್ಣ, ಬಿ.ಕೃಷ್ಣಮೂರ್ತಿ, ಉದಯ್, ಸತೀಶ್, ಹರೀಶ್, ನಟರಾಜ್, ವೈಶಾಖ್, ಪ್ರಕಾಶ್ ಈ ಸಂದರ್ಭದಲ್ಲಿ ಹಾಜರಿದ್ದರು.
ರೈತ ಸಂಘದಿಂದ ಪ್ರತಿಭಟನೆ
ರೈತರ ಸಮಸ್ಯೆ ನಿವಾರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸದಸ್ಯರು ಮಂಗಳವಾರ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟಿಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಬೈಕ್ ರ್ಯಾಲಿ ನಡೆಸಿದ ರೈತ ಸಂಘದ ಸದಸ್ಯರು ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟಿಸಿ ತಮ್ಮ ಬೇಡಿಕೆಗಳ ಮನವಿಯನ್ನು ಗ್ರೇಡ್ 2 ತಹಶೀಲ್ದಾರ್ ಕೃಷ್ಣಪ್ಪ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ನಮ್ಮ ಬಯಲುಸೀಮೆಯಲ್ಲಿ 6–7 ವರ್ಷಗಳಿಂದ ಸತತ ಬರಗಾಲದಿಂದ ರೈತರು ಜೀವನವನ್ನು ನಡೆಸುವುದು ಕಷ್ಟವಾಗಿದೆ. ಕಷ್ಟದ ಪರಿಸ್ಥಿತಿಯಲ್ಲಿಯೂ 1500 ಅಡಿಗಳವರೆಗೆ ಕೊಳವೆ ಬಾವಿಯನ್ನು ಕೊರೆಸಿ ಬೆಳೆ ಬೆಳೆದರೂ ಸೂಕ್ತ ಬೆಲೆ ಸಿಗದೆ ನಷ್ಟವನ್ನು ಅನುಭವಿಸುವಂತಾಗಿದೆ. ಜಾನುವಾರುಗಳಿಗೆ ಮೇವು ಸಿಗದಂತಾಗಿದೆ. ಬರಗಾಲಕ್ಕೆ ಪರಿಹಾರೋಪಾಯದ ನಿಟ್ಟಿನಲ್ಲಿ ಯಾವುದೇ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸುತ್ತಿಲ್ಲ. ಬರಪರಿಹಾರದ ಹಣ ಇನ್ನೂ ರೈತರಿಗೆ ತಲುಪಿಲ್ಲ. ರೈತರ ಆತ್ಮಹತ್ಯೆ ನಿಲ್ಲಬೇಕಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗಳ ಕಡೆ ಗಮನ ಹರಿಸಬೇಕು ಎಂದರು.
ಡಾ.ಸ್ವಾಮಿನಾಥನ್ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಬೇಕು. ನೀರಾವರಿ ತಜ್ಞ ಎ.ಕೆ.ಬಜಾಜ್ ಅವರ ನೀರಾವರಿ ವರದಿಯನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಬೇಕು. ರೈತರು ಕೃಷಿಗೆ ಬಳಸುವ ಎಲ್ಲ ವಸ್ತುಗಳನ್ನು ಜಿಎಸ್ಟಿಯಿಂದ ಮುಕ್ತಗೊಳಿಸಬೇಕು, ನರೇಗಾ ಯೋಜನೆಯನ್ನು ಪಟ್ಟಣದಲ್ಲಿನ ಎಲ್ಲ ರೈತರಿಗೂ ಸಿಗುವಂತಾಗಬೇಕು. 2016–17ನೇ ಸಾಲಿನ ಬೆಳೆ ವಿಮೆಯನ್ನು ರೈತರಿಗೆ ಸಿಗಬೇಕು. ಪಹಣಿಯಲ್ಲಿನ ಪಿ2 ನಂಬರಿನಿಂದ ತೊಂದರೆಯಾಗಿದ್ದು ಕೂಡಲೇ ಜಿಲ್ಲಾಡಳಿತ ದುರಸ್ಥಿಗೊಳಿಸಿ ರೈತರಿಗೆ ಅನುಕೂಲಮಾಡಿಕೊಡಬೇಕು. ದನಕರುಗಳಿಗೆ ಉಚಿತವಾಗಿ ಮೇವಿನ ಬೀಜಗಳನ್ನು ವಿತರಿಸಬೇಕು ಮುಂತಾದ ಬೇಡಿಕೆಗಳ ಮನವಿಯನ್ನು ರೈತರು ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಕೆ.ವಿ.ವೇಣುಗೋಪಾಲ್, ಆಂಜಿನಪ್ಪ, ಮುನಿನಂಜಪ್ಪ, ಮೋಹನ್, ಸಂಜೀವಪ್ಪ, ಕೃಷ್ಣಪ್ಪ, ಎಂ.ದೇವರಾಜ್, ನರಸಿಂಹರೆಡ್ಡಿ, ಅಶ್ವತ್, ಗೋವಿಂದಪ್ಪ, ಪ್ರಭಾಕರ್ ಹಾಜರಿದ್ದರು.
ಬಿಜೆಪಿ ಕಾರ್ಯಕರ್ತರಿಂದ ರಕ್ಷಾಬಂಧನ ಆಚರಣೆ
ರಕ್ಷಾಬಂಧನ ಸೋದರ ಸಂಬಂಧ, ಪ್ರೀತಿ ಮಮತೆಯ ಪ್ರತೀಕದ ಹಬ್ಬವಾಗಿದ್ದು ಹೆಣ್ಣನ್ನು ಗೌರವ ಭಾವನೆಯಿಂದ ನೋಡುವ ಮನೋಭಾವ ಎಲ್ಲರಲ್ಲೂ ಮೂಡಬೇಕು ಎಂದು ಬಿಜೆಪಿ ಮುಖಂಡ ಡಿ.ಆರ್.ಶಿವಕುಮಾರಗೌಡ ತಿಳಿಸಿದರು.
ನಗರದ ಚಿಂತಾಮಣಿ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಬಿಜೆಪಿ ತಾಲ್ಲೂಕು ಘಟಕದಿಂದ ಆಚರಿಸಿದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಹೋದರತ್ವದ ಮಹತ್ವ ಸಾರುವ ರಕ್ಷಾಬಂಧನವು ವಿಶ್ವ ಭ್ರಾತೃತ್ವ ಸಾರುವ ಮಹತ್ವದ ಹಬ್ಬವಾಗಿದೆ. ರಕ್ಷಾಬಂಧನದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ತಮ್ಮಲ್ಲಿನ ದುರ್ಗುಣ, ದುಶ್ಚಟ, ದುರ್ಬಲತೆಗಳನ್ನು ದೂರ ಮಾಡುವ ಮೂಲಕ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ಮಾತನಾಡಿ, ರಾಖಿ ಹಬ್ಬವು ಕೇವಲ ಸಹೋದರ ಮತ್ತು ಸಹೋದರಿಯರಿಗೆ ಸೀಮಿತವಾದುದಲ್ಲ. ಭಾರತ ಮಾತೆಯನ್ನು ರಕ್ಷಿಸಲು ಸಂಕಲ್ಪ ತೊಡುವ ಹಬ್ಬವೂ ಹೌದು. ವಿಭಿನ್ನತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ದೇಶದಲ್ಲಿರುವ ಎಲ್ಲರೂ ದೇಶೋದ್ಧಾರದ ಕುರಿತಂತೆ ಆಲೋಚಿಸುವ ಹಾಗೂ ಒಗ್ಗೂಡುವ ಹಬ್ಬವೂ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ರಕ್ಷಾಬಂಧನವನ್ನು ಪರಸ್ಪರ ಕಟ್ಟಿಕೊಂಡು ಇತರರಿಗೂ ಕಟ್ಟಿದರು.
ಮುಖಂಡರಾದ ಬೈರರೆಡ್ಡಿ, ಸೋಮಣ್ಣ, ಮಂಜುನಾಥ, ಮಂಜುಳಮ್ಮ, ಸುಜಾತಮ್ಮ, ಸುಶೀಲಮ್ಮ, ಗಾಯಿತ್ರಮ್ಮ ಹಾಜರಿದ್ದರು.
ನಾಗಲಮುದ್ದಮ್ಮದೇವಿ ದೇವಾಲಯದಲ್ಲಿ ದೇವಿಗೆ ವಿಶೇಷ ಅಲಂಕಾರ
ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದ ಪುರಾತನ ಕಾಲದ ನಾಗಲಮುದ್ದಮ್ಮದೇವಿ ದೇವಾಲಯದಲ್ಲಿ ಸೋಮವಾರ ಪೌರ್ಣಮಿ ಪ್ರಯುಕ್ತ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು ಹಾಗು ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.

