ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಮದ್ಯ ಮಾರಾಟದಿಂದ ಹಾಗೂ ಮದ್ಯ ಸೇವನೆಯಿಂದಾಗಿ ಯುವಕರು ಹಾಳಾಗುತ್ತಿದ್ದಾರೆ ಎಂದು ರೈತ ಸಂಘದ ಅಧ್ಯಕ್ಷ ರವಿಕುಮಾರ್ ಆರೋಪಿಸಿದರು.
ನಗರದ ಬಸ್ ನಿಲ್ದಾಣದ ಬಳಿ ಇರುವ ಅಬಕಾರಿ ಇಲಾಖೆ ಮುಂದೆ ಸೋಮವಾರ ಭಕ್ತರಹಳ್ಳಿ ಗ್ರಾಮದ ಮಹಿಳೆಯರು, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಮಾನವ ಹಕ್ಕುಗಳು ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ರೈತ ಸಂಘ ಜೊತೆಗೂಡಿ ಹಮ್ಮಿಕೊಂಡಿದ್ದ ಮುತ್ತಿಗೆ ಹಾಗೂ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಕ್ತರಹಳ್ಳಿ ಗ್ರಾಮದಲ್ಲಿ ಸುಮಾರು ಏಳರಿಂದ ಎಂಟು ಮನೆಗಳಲ್ಲಿ ಹಾಗೂ ಅಂಗಡಿಗಳಲ್ಲಿ ರಾಜಾರೋಷವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಭಕ್ತರಹಳ್ಳಿ ಗ್ರಾಮದಲ್ಲಿ ಸುಮಾರು 300 ರಿಂದ 400 ದಲಿತ ಕುಟುಂಬಗಳು ಜೀವನ ಸಾಗಿಸುತ್ತಿದ್ದು ಅಕ್ರಮ ಮದ್ಯ ಮಾರಾಟದಿಂದ ಮದ್ಯಪಾನ ಸೇವಿಸಿ ಗಂಡಸರು, ಮಕ್ಕಳು ಹಾಗೂ ಮಹಿಳೆಯರಿಗೆ ಮನೆಗಳಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಮ್ಮ ಕುಟುಂಬಗಳು ನೆಮ್ಮದಿಯಾಗಿ ಜೀವನ ನಡೆಸಲು ಸಾಧ್ಯವಾಗದಾಗಿದೆ. ನಾವೆಲ್ಲಾ ನರಕಯಾತನೆ ಅನುಭವಿಸುತ್ತಿದ್ದೇವೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ತಹಶೀಲ್ದಾರರಿಗೆ ಈ ಬಗ್ಗೆ ಮನವಿ ಪತ್ರ ಸಲ್ಲಿಸಿದರೂ ಕೂಡ ಯಾವುದೇ ಕ್ರಮ ತೆಗೆದುಕೊಳ್ಳಲ್ಲಿಲ್ಲ. ಅದಕ್ಕಾಗಿ ಈ ದಿನ ಅಬಕಾರಿ ಕಚೇರಿಗೆ ಮುತ್ತಿಗೆ ಹಾಕಿರುವುದಾಗಿ ಹೇಳಿದರು.
ತಾಲ್ಲೂಕು ಅಬಕಾರಿ ನಿರೀಕ್ಷಕ ಎಸ್.ಆರ್. ವಿಶ್ವನಾಥ ಬಾಬು ಮಾತನಾಡಿ ಶೀಘ್ರದಲ್ಲಿ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರೈತ ಸಂಘದ ಮುಖಂಡರಾದ ಭಕ್ತರಹಳ್ಳಿ ಪ್ರತೀಶ್, ವೆಂಕಟರೋಣಪ್ಪ, ಸುಲೋಚನಮ್ಮ, ಶಾರದಮ್ಮ, ಸಿಐಟಿಯು ಭಾಗ್ಯಲಕ್ಷ್ಮಿ, ಗ್ರಾಮದ ಮಹಿಳೆಯರಾದ ನಾಗರತ್ನಮ್ಮ, ಓಬಮ್ಮ, ಮಾನವ ಹಕ್ಕುಗಳು ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಾರಾಯಣಸ್ವಾಮಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಮಾಂಜಿನಪ್ಪ, ನರಸಿಂಹಪ್ಪ, ನರಸಿಂಹ, ಪ್ರಭಾಕರ, ವಿಶ್ವನಾಥ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟವನ್ನು ತಡೆಯುವಂತೆ ಮನವಿ
ಕೃಷ್ಣ ಜಯಂತಿಯ ಪೂರ್ವಭಾವಿ ಬಹಿಷ್ಕರಿಸಿದ ಯಾದವ ಸಂಘದ ಸದಸ್ಯರು
ಕೃಷ್ಣ ಜಯಂತಿಯನ್ನು ತಾಲ್ಲೂಕು ಕಚೇರಿಯ ಸಾಭಾಂಗಣದಲ್ಲಿ ಆಗಸ್ಟ್ 14 ರಂದು ಸರಳವಾಗಿ ಆಚರಿಸುವುದಾಗಿ ತಹಶೀಲ್ದಾರ್ ಅಜಿತ್‌ಕುಮಾರ್ ರೈ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಶನಿವಾರ ಕೃಷ್ಣಜಯಂತಿ ಆಚರಣಾ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವಿದ್ದು, ಸರ್ಕಾರದಿಂದ ಬರುವ ಅನುದಾನ 25 ಸಾವಿರ ರೂಗಳ ಮಿತಿಯಲ್ಲಿ ಸರಳವಾಗಿ ಕೃಷ್ಣ ಜಯಂತಿ ಆಚರಿಸಬಹುದಾಗಿದೆ. ಯಾದವ ಸಂಘದ ವತಿಯಿಂದ ಅದ್ದೂರಿಯಾಗಿ ಆಚರಿಸಿದರೂ ಸ್ವಾಗತಾರ್ಹ ಎಂದರು.
ಯಾದವ ಸಂಘದ ಅಧ್ಯಕ್ಷ ಕೇಶವಮೂರ್ತಿ ಮಾತನಾಡಿ, ಕಳೆದ ಬಾರಿಯಂತೆ ಕೃಷ್ಣಜಯಂತಿಯನ್ನು ಅದ್ದೂರಿಯಾಗಿ ಆಚರಿಸಬೇಕು. ಇಲ್ಲದಿದ್ದಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ನಮ್ಮ ಜನಾಂಗದವರು ಭಾಗವಹಿಸುವುದಿಲ್ಲ. ನಮ್ಮ ಕೃಷ್ಣ ದೇವಸ್ಥಾನದ ಬಳಿ ಕೃಷ್ಣ ಜಯಂತಿಯನ್ನು ಆಚರಿಸುತ್ತೇವೆ ಎಂದು ಹೇಳಿ ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.
ಸಭೆಯಲ್ಲಿ ಗೈರು ಹಾಜರಿದ್ದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವುದಾಗಿ ತಹಶೀಲ್ದಾರ್ ತಿಳಿಸಿದರು.
ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ಸಬ್ ಇನ್ಸ್‌ಪೆಕ್ಟರ್ ನವೀನ್, ಯಾದವ ಸಂಘದ ಕೇಶವಮೂರ್ತಿ, ಅಶ್ವತ್ಥಪ್ಪ, ಟಿ.ಕೆ.ನಟರಾಜ್, ನರಸಿಂಹಮೂರ್ತಿ, ಶ್ರೀನಿವಾಸ್ ಹಾಜರಿದ್ದರು.
ಜೈವಿಕ ಇಂಧನದ ಕುರಿತಂತೆ ಗ್ರಾಮೀಣ ಕೃಷಿ ಕಾರ್ಯಾಗಾರ
ಸಸ್ಯ ಬೀಜಗಳಿಂದ ಪಡೆದ ಇಂಧನವನ್ನು ಜೈವಿಕ ಇಂಧನ ಎಂದು ಕರೆಯುವರು. ನಾವು ಬಳಸುವ ಪೆಟ್ರೋಲ್ ಡೀಸಲ್ ಇಂಧನಕ್ಕೆ ಪರ್ಯಾಯವಾಗಿ ಇತ್ತೀಚಿನ ದಿನಗಳಲ್ಲಿ ಜೈವಿಕ ಇಂಧನದ ಪ್ರಾಮುಖ್ಯತೆ ಹೆಚ್ಚುತ್ತಿದೆ ಎಂದು ರೇಷ್ಮೆ ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಎಂ.ವಿಜಯೇಂದ್ರ ತಿಳಿಸಿದರು.
ತಾಲ್ಲೂಕಿನ ಶೀಗೆಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಚಿಂತಾಮಣಿಯ ರೇಷ್ಮೆ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜಿಕೆವಿವಿ ಕೃಷಿ ವಿವಿ ಸಹಯೋಗದೊಂದಿಗೆ ಜೈವಿಕ ಇಂಧನದ ಕುರಿತಂತೆ ನಡೆಸಿದ ಗ್ರಾಮೀಣ ಕೃಷಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹೊಂಗೆ, ಹಿಪ್ಪೆ ಮತ್ತು ಬೇವು ಬೀಜಗಳಿಂದ ಡೀಸಲ್ ತಯಾರಿಸಬಹುದಾಗಿದೆ. ಜೈವಿಕ ಇಂಧನವು ವ್ಯವಸಾಯಿಕ ಹಾಗೂ ಆಮ್ಲಜನಕದಂತ ಜೈವಿಕ ಪ್ರಕ್ರಿಯೆಯಿಂದಾಗಿ ಉತ್ಪಾದಿಸಲ್ಪಡುತ್ತದೆ. ಜೈವಿಕ ಇಂಧನವು ಪಳೆಯುಳಿಕೆ ಇಂಧನಗಳಾದ ಕಲ್ಲಿದ್ದಲು ಪೆಟ್ರೋಲಿಯಂ ಹಾಗೂ ಡೀಸೆಲ್ ಇವುಗಳ ಹಾಗೆಯೇ ವರ್ತಿಸುತ್ತದೆ. ಆದರೆ ಇವುಗಳ ಹಾಗೆ ಇಂಗಾಲದ ಡೈಆಕ್ಸೈಡನ್ನು ಉತ್ಪಾದಿಸುವುದಿಲ್ಲ. ಗ್ರಾಮಗಳಲ್ಲಿ ಖಾಲಿ ಸ್ಥಳಗಳಲ್ಲಿ ಹೊಂಗೆ, ಹಿಪ್ಪೆ ಮತ್ತು ಬೇವು ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಆದಾಯವನ್ನು ಸಹ ಹೊಂದಬಹುದಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ರೇಷ್ಮೆ ಕೃಷಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ 13 ಮಂದಿ ಅಂತಿಮ ವರ್ಷದ ರೇಷ್ಮೆ ಕೃಷಿ ವಿದ್ಯಾರ್ಥಿಗಳು ಜೈವಿಕ ಇಂಧನದ ಮಹತ್ವವನ್ನು ತಿಳಿಸಿ ಉಚಿತವಾಗಿ ಹೊಂಗೆ, ಹಿಪ್ಪೆ ಮತ್ತು ಬೇವು ಗಿಡಗಳನ್ನು ಗ್ರಾಮಸ್ಥರಿಗೆ ವಿತರಿಸಿದರು.
ರೇಷ್ಮೆ ಕೃಷಿ ವಿಜ್ಞಾನಿಗಳಾದ ನಾರಾಯಣಸ್ವಾಮಿ, ಅಮರನಾಥ್, ಹರೀಶ್‌ಬಾಬು, ಜೈವಿಕ ಇಂಧನ ವಿಜ್ಞಾನಿ ವೆಂಕಟೇಶ್, ವಿಜ್ಞಾನಿಗಳಾದ ಸುಭಾಷ್ ರಘು, ಶರತ್, ಸಾಗರ್, ಸುಮ, ಸುಪ್ರಿಯ, ಸೋಮೇಶ್, ಸಂದೀಪ್, ಶ್ವೇತ, ಝಾಕಿಯಾ, ರವಿತೇಜ, ಮೋಹನ್‌ಕುಮಾರ್ ಹಾಜರಿದ್ದರು.
ಸದ್ದಹಳ್ಳಿಯಲ್ಲಿ 25 ವರ್ಷಗಳ ನಂತರ ಬದುಕಿಗೆ ತಂಪು ತುಂಬುವ ಸಲ್ಲಮುದ್ದ ಅಥವಾ ತಣಿಮುದ್ದೆ ಆಚರಣೆ
ಜಿಲ್ಲೆಯ ಬಹುಭಾಷಿಕ ಮತ್ತು ಬಹುಮುಖಿ ಸಂಸ್ಕೃತಿಗಳ ಪರಿಸರದಲ್ಲಿ ಹಲವಾರು ವೈಶಿಷ್ಟ್ಯಪೂರ್ಣ ಜಾನಪದ ಆಚರಣೆಗಳಿವೆ. ಕೃಷಿ, ಹಬ್ಬ, ಮದುವೆ, ಜನನ ಮುಂತಾದ ವೈವಿಧ್ಯಮಯ ಆಚರಣೆಗಳೊಂದಿಗೆ ಗ್ರಾಮಕ್ಕೆ ಶಾಂತಿ, ಗ್ರಾಮಸ್ಥರ ಒಳಿತು, ಒಗ್ಗಟ್ಟು, ಸುಖ, ನೆಮ್ಮದಿಗಾಗಿಯೇ ಕೆಲವು ನಿರ್ದಿಷ್ಟ ಆಚರಣೆಗಳಿವೆ. ಸಲ್ಲಮುದ್ದ ಅಥವಾ ತಣಿಮುದ್ದೆ ಆಚರಣೆಯೂ ಇದರಲ್ಲೊಂದು.
ಶಿಡ್ಲಘಟ್ಟ ತಾಲ್ಲೂಕಿನ ಸದ್ದಹಳ್ಳಿ ಗ್ರಾಮದಲ್ಲಿ ಸುಮಾರು 25 ವರ್ಷಗಳ ನಂತರ ಸಲ್ಲಮುದ್ದ ಅಥವಾ ತಣಿಮುದ್ದೆ ಆಚರಣೆಯನ್ನು ಗ್ರಾಮಸ್ಥರು ಒಗ್ಗೂಡಿ ಆಚರಿಸುತ್ತಿದ್ದಾರೆ. ಗ್ರಾಮಕ್ಕೆ ಶಾಂತಿ ಮಾಡಿಸುವುದು, ಕೆಡುಕಾಗದಂತೆ ಮತ್ತು ಗ್ರಾಮದ ಏಳಿಗೆಗಾಗಿ ಅಷ್ಟಬಂಧನ ಮಾಡಿಸುವುದು ಸೇರಿದಂತೆ ಐದು ದಿನಗಳ ಆಚರಣೆಯನ್ನು ಗ್ರಾಮಸ್ಥರೆಲ್ಲರೂ ಸೇರಿ ಶ್ರದ್ಧಾಭಕ್ತಿಯಿಂದ ಆಚರಿಸುವರು. ಗ್ರಾಮದ ಹೆಣ್ಣುಮಕ್ಕಳೆಂದೇ ನಂಬಿರುವ ನರಿಡಮ್ಮ ಮತ್ತು ಗಂಗಮ್ಮ ದೇವಿಯನ್ನು ಕರೆತಂದು ಐದು ದಿನಗಳ ಪೂಜೆ ಆಚರಣೆಯನ್ನು ನೆರವೇರಿಸಿ ಮಡಿಲು ತುಂಬಿ ವಾಪಸ್ ಕಳುಹಿಸುವುದು ಈ ಆಚರಣೆಯ ಭಾವನಾತ್ಮಕ ಅಂಶವಾಗಿದೆ.
ಈ ಆಚರಣೆಯು ಪ್ರಾರಂಭವಾಗಿದ್ದು ಶಿಡ್ಲಘಟ್ಟ ತಾಲ್ಲೂಕಿನ ವೈ.ಹುಣಸೇನಹಳ್ಳಿ ಪಂಚಾಯ್ತಿಯ ಮಾರಪ್ಪನಹಳ್ಳಿಯಿಂದ ನರಿಡಮ್ಮ ಮತ್ತು ಪಲ್ಲಿಚೇರ್ಲು ಪಂಚಾಯ್ತಿಯ ಬಿನ್ನಮಂಗಲ ಗ್ರಾಮದಿಂದ ಗಂಗಮ್ಮನ ಉತ್ಸವ ಮೂರ್ತಿಯನ್ನು ಗ್ರಾಮಕ್ಕೆ ತರುವುದರೊಂದಿಗೆ. ಸದ್ದಹಳ್ಳಿಯ ಗ್ರಾಮಸ್ಥರು ತವರಿಗೆ ಬರುವ ಹೆಣ್ಣುಮಕ್ಕಳನ್ನು ಸ್ವಾಗತಿಸುವ ರೀತಿಯಲ್ಲಿ ಕುಂಬಳ ಕಾಯಿ ಮತ್ತು ತೆಂಗಿನಕಾಯಿ ನೀವಳಿಸಿ ಒಡೆದು ಹಲಗೆಯ ನಾದದೊಂದಿಗೆ ಸಂಭ್ರಮದಿಂದ ಬರಮಾಡಿಕೊಂಡರು. ರಸ್ತೆಯೆಲ್ಲಾ ನೀರು ಸುರಿಯುತ್ತಾ ಕೆಲವರು ಸಾಗಿದರೆ, ಮನೆಗಳ ಮುಂದೆ ಸಗಣಿಯಿಂದ ಸಾರಿಸಿ ರಂಗೋಲಿಯಿಟ್ಟು, ಆರತಿ ಎತ್ತಿ ಮಹಿಳೆಯರು ಸ್ವಾಗತ ಕೋರಿದರು. ಗ್ರಾಮದಲ್ಲಿನ ಎಲ್ಲಾ ದೇವರುಗಳ ಸನ್ನಿಧಿಯಲ್ಲೂ ಪೂಜೆಯನ್ನು ನೆರವೇರಿಸಿಕೊಂಡು ಗ್ರಾಮದೇವತೆ ಗೊಡ್ಡಮ್ಮನ ಆವರಣದಲ್ಲಿ ನರಿಡಮ್ಮ ಮತ್ತು ಗಂಗಮ್ಮ ದೇವಿಯರ ಸ್ಥಾಪನೆಯಾಯಿತು.
ಪ್ರತಿದಿನವೂ ರಾತ್ರಿಗಳಲ್ಲಿ ಸಲ್ಲಮುದ್ದ ಅಥವಾ ತಣಿಮುದ್ದೆ ಆಚರಣೆಯನ್ನು ನಡೆಸಲಾಯಿತು. ಗ್ರಾಮದ ನಾಲ್ಕು ದಿಕ್ಕುಗಳಲ್ಲಿ ಸಾರಿಸಿ ಗುಡಿಸಿ ರಂಗೋಲಿಯಿಟ್ಟು ಪ್ರಥಮ ಪೂಜೆಯನ್ನು ನಡೆಸುವವರು ದೋಬಿ ಜನಾಂಗದವರು. ಕುಂಬಳಗೂಡು ಎಂದು ಕರೆಯುವ ಅನ್ನ ಹಾಲಿನ ಎಡೆಯನ್ನು ಬೇವಿನ ಸೊಪ್ಪಿನೊಂದಿಗೆ ಆಲದ ಎಲೆಯಲ್ಲಿ ಇಟ್ಟು ಅವರು ಪೂಜಿಸಿದ ನಂತರ, ಗ್ರಾಮದ ಪ್ರತಿಯೊಂದು ಮನೆಯವರೂ ತಮ್ಮ ಮನೆಗಳಲ್ಲಿ ಅನ್ನ, ಗೋದಿಹಿಟ್ಟು, ರಾಗಿಹಿಟ್ಟು ಮತ್ತು ಅಕ್ಕಿಹಿಟ್ಟುಗಳನ್ನು ಬಳಸಿ ತಯಾರಿಸಲಾದ ತಣಿಮುದ್ದೆಗಳನ್ನು ಬೇವಿನ ಸೊಪ್ಪಿನೊಂದಿಗೆ ಆಲದ ಎಲೆಯಲ್ಲಿ ಇಟ್ಟು ನಾಲ್ಕು ದಿಕ್ಕುಗಳಿಗೆ ತಂದು ಪೂಜಿಸಿಟ್ಟರು.
ಪ್ರತಿಯೊಂದು ಮನೆಯವರೂ ತಣಿಮುದ್ದೆಯನ್ನಿಟ್ಟು ಪೂಜಿಸಿದ ನಂತರ ನರಿಡಮ್ಮ ಮತ್ತು ಗಂಗಮ್ಮ ದೇವಿಯರ ಸವಾರಿ ಹೊರಡುತ್ತದೆ. ನಾಲ್ಕು ದಿಕ್ಕುಗಳಲ್ಲಿ ತಣಿಮುದ್ದೆಗಳಿರುವೆಡೆ ಬಂದು ಪೂಜೆಯನ್ನು ಅವರು ಸ್ವೀಕರಿಸುತ್ತಾರೆ. ನಂತರ ಎಲ್ಲಾ ಎಡೆಗಳನ್ನೂ ಮಕ್ಕರಿಯಲ್ಲಿಟ್ಟುಕೊಂಡು ದೇವಿಯ ಹಿಂದೆ ಸಾಗುತ್ತಾರೆ. ಈ ಸಮಯದಲ್ಲಿ ಹೆಂಗಸರು ಮನೆಗಳನ್ನು ಸೇರಿ ಬಾಗಿಲುಹಾಕಿಕೊಳ್ಳಬೇಕೆಂಬ ನಿಬಂಧನೆಯಿದೆ. ಕೇವಲ ಗಂಡಸರು ಮಾತ್ರ ದೇವಿಯೊಂದಿಗೆ ತೆರಳಿ ಗ್ರಾಮದ ಗಡಿಯಲ್ಲಿ ತಣಿಮುದ್ದೆಯನ್ನಿಟ್ಟು ಪೂಜಿಸಿ ಹಿಂದಿರುಗಿದರು. ಹೋಗುವಾಗ ತಮಟೆ ಸದ್ದಿನೊಂದಿಗೆ ಹೋಗುವ ಇವರು ಬರುವಾಗ ನಿಶ್ಶಬ್ದವಾಗಿ ಹಿಂದಿರುಗುತ್ತಾರೆ. ಈ ಆಚರಣೆ ಐದು ರಾತ್ರಿಗಳೂ ನಡೆಯುತ್ತವೆ.
‘ಶುಕ್ರವಾರ ಮೊದಲ ಪೂಜೆಯು ಪ್ರಾರಂಭವಾಯಿತು. ಮಂಗಳವಾರಕ್ಕೆ ಈ ಆಚರಣೆ ಮುಗಿಯಲಿದೆ. ಐದನೆಯ ರಾತ್ರಿ ತಣಿಮುದ್ದೆಗಳನ್ನಿಟ್ಟು ಬರುವುದರೊಂದಿಗೆ ಗ್ರಾಮದ ನಾಲ್ಕು ದಿಕ್ಕುಗಳಲ್ಲಿ ಶಾಂತಿ ಪೂಜೆ ಹಾಗೂ ಅಷ್ಟಬಂಧನ ಪೂಜೆಯನ್ನು ನೆರವೇರಿಸುತ್ತಾರೆ.
ಐದೂ ರಾತ್ರಿಗಳ ಆಚರಣೆ ಮುಗಿದ ಮರುದಿನ ನರಿಡಮ್ಮ ಮತ್ತು ಗಂಗಮ್ಮ ದೇವಿಯರನ್ನು ಗ್ರಾಮದಲ್ಲಿ ಮೆರವಣಿಗೆ ಮಾಡುತ್ತಾರೆ. ಪ್ರತಿಯೊಂದು ಮನೆಯವರೂ ತವರಿಂದ ಹೊರಡುವ ಮಗಳಿಗೆ ಮಡಿಲು ತುಂಬಿಸುವಂತೆಯೇ ಕುಪ್ಪಸ, ಸೀರೆ, ಅಕ್ಕಿ, ಕೊಬ್ಬರಿ, ಬೆಲ್ಲ, ಕಡಲೆಪೊಪ್ಪು ಮುಂತಾದವನ್ನಿಟ್ಟು, ಆರತಿ ಬೆಳಗಿ, ಪೂಜಿಸಿ ಗ್ರಾಮದ ಗಡಿಯವರೆಗೂ ತೆರಳಿ ಬೀಳ್ಕೊಟ್ಟು ಬರುತ್ತಾರೆ’ ಎಂದು ಸದ್ದಹಳ್ಳಿಯ ಎಸ್.ಎಂ.ಗೋಪಾಲ್ ವಿವರಿಸಿದರು.
ಬುಸುಗುಡುವ ಮಿಡಿನಾಗರನ ರಕ್ಷಣೆ
ತಾಲ್ಲೂಕಿನ ಕದಿರಿನಾಯಕನಹಳ್ಳಿಯ ಕೆ.ವಿ.ಮಂಜುನಾಥ್ ಅವರ ತೋಟದ ಸಂಪಿನಲ್ಲಿ ಬಿದ್ದಿದ್ದ ಮಿಡಿನಾಗರವನ್ನು ಕೊತ್ತನೂರಿನ ಸ್ನೇಕ್ ನಾಗರಾಜ್ ಭಾನುವಾರ ರಕ್ಷಿಸಿದ್ದಾರೆ.
ನೀರಿನ ಸಂಪಿನಲ್ಲಿದ್ದ ವಿಪರೀತ ಚಟುವಟಿಕೆಯುಳ್ಳ ಮರಿ ನಾಗರವನ್ನು ರಕ್ಷಿಸಿ ಸ್ನೇಕ್ ನಾಗರಾಜ್ ಅದನ್ನು ಕೊತ್ತನೂರಿನ ಹೊರವಲಯದ ಕಾಡಿನಲ್ಲಿ ಬಿಟ್ಟರು.
ನಾಗರ ಹಾವಿನ ಮರಿಯನ್ನು ಮಿಡಿನಾಗರ, ಎನ್ನಾಗರ, ನಿನ್ನಾಗು ಎಂದು ಕರೆಯುವರು. ಮರಿನಾಗರಗಳಲ್ಲಿ ಚೆನ್ನಾಗಿ ರೂಪುಗೊಂಡ ಹೆಡೆಯುಂಟು. ಇವು ತಮ್ಮ ತಂದೆತಾಯಿಗಳಿಗಿಂತ ಹೆಚ್ಚು ಆಕ್ರಮಣ ಪ್ರವೃತ್ತಿಯುಳ್ಳವು. ವಿಷಪೂರಿತವಾದ ಈ ಹಾವು ಉದ್ರೇಕಗೊಂಡು ಕತ್ತಿನ ಭಾಗದ ಪಕ್ಕೆಲಬುಗಳನ್ನು ಮೇಲಕ್ಕೆ ಎತ್ತುವ ಮೂಲಕ ಕತ್ತಿನ ಸುತ್ತ ಸಡಿಲವಾಗಿ ಅಂಟಿಕೊಂಡಿರುವ ಚರ್ಮವನ್ನು ಅಗಲವಾದ ಹೆಡೆಯಾಗಿ ಹರಡುತ್ತಾ ಬುಸುಗುಡುತ್ತಿತ್ತು.
‘ನಾಗರಹಾವು ವಿಷಪೂರಿತವಾದರೂ ರೈತನಿಗೆ ಮಾರಕವಾದ ಇಲಿ, ಹೆಗ್ಗಣಗಳನ್ನು ಬೇಟೆಯಾಡಿ ಉಪಕಾರಿಯಾಗಿದೆ. ಇದು ನೀರಿನಲ್ಲಿ ಚೆನ್ನಾಗಿ ಈಜಬಲ್ಲದು. ಆದರೆ ಸಂಪಿನಿಂದ ಹೊರಬರಲಾಗುತ್ತಿರಲಿಲ್ಲ. ಆಹಾರವಿಲ್ಲದೆ ಸಾಯುತ್ತಿತ್ತು. ಅದಕ್ಕಾಗಿ ಅದನ್ನು ಅಲ್ಲಿಂದ ತೆಗೆದು ಸುರಕ್ಷಿತ ಸ್ಥಳದಲ್ಲಿ ಬಿಟ್ಟೆ’ ಎಂದು ಸ್ನೇಕ್ ನಾಗರಾಜ್ ತಿಳಿಸಿದರು.
ರೇಷ್ಮೆ ಗೂಡಿನ ಮಾರುಕಟ್ಟೆಗೆ ಜಿಲ್ಲಾಧಿಕಾರಿ ಭೇಟಿ
ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸಿಸಿ ಕ್ಯಾಮೆರಾ ಸದಾ ಕಾರ್ಯನಿರ್ವಹಿಸಬೇಕು, ಬ್ಯಾಂಕ್ ಬೇಕು, ಮಾರುಕಟ್ಟೆಯ ಹೊರಗಡೆ ತೂಕ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮುಂತಾದ ಬೇಡಿಕೆಗಳನ್ನು ರೈತ ಮುಖಂಡರು ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ಅವರಿಗೆ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಶುಕ್ರವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳಿಗೆ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿನ ಹಲವಾರು ಸಮಸ್ಯೆಗಳ ಬಗ್ಗೆ ರೈತರು ವಿವರಿಸಿದರು.
ನೆರೆ ರಾಜ್ಯ ಹಾಗೂ ದೂರದ ಊರುಗಳ ಹಲವು ರೈತರಿಗೆ ಚೆಕ್ ನೀಡಿ ಸುಮಾರು ಆರೂವರೆ ಲಕ್ಷ ರೂಗಳಷ್ಟು ಒಬ್ಬ ರೀಲರು ಬಾಕಿ ಉಳಿಸಿಕೊಂಡಿದ್ದಾರೆ. ಸರ್ಕಾರದ ಮಟ್ಟದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಬೇಕು. ಈಚೆಗೆ ವಿದ್ಯುತ್ ಇಲ್ಲದ ಕಾರಣ ಸಿಸಿ ಕ್ಯಾಮೆರಾ ಕೆಲಸ ಮಾಡದೆ ಸುಮಾರು 60 ಕೆಜಿಯಷ್ಟು ರೇಷ್ಮೆ ಗೂಡು ಕಳ್ಳತನವಾಗಿದೆ. ವಿದ್ಯುತ್ ಇಲ್ಲದಾಗ ಜನರೇಟರ್ ಬಳಸಲು ಅಳಿಗೆ ತಿಳಿಸಿ. ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಬ್ಯಾಂಕ್ ಇದ್ದಲ್ಲಿ ನಗದುರಹಿತ ವಹಿವಾಟಿಕೆ ಅನುಕೂಲಕರ ಹಾಗೂ ರೈತರು ಮತ್ತು ರೀಲರುಗಳಿಗೆ ಸಹಾಯಕ. ಮಾರುಕಟ್ಟೆಯ ಹೊರಗಡೆ ಸಾಲುಸಾಲಾಗಿ ಇಟ್ಟುಕೊಂಡಿರುವ ತೂಕದ ಯಂತ್ರಗಳಿಗೆ ಕಡಿವಾಣ ಹಾಕಿಸಿ ಎಂದು ಕೋರಿದರು.
ರೈತರು ಮತ್ತು ರೀಲರುಗಳ ಸಮಸ್ಯೆಗಳನ್ನು ಬಗೆಹರಿಸಲು ಶೀಘ್ರವೇ ಸಭೆಯೊಂದನ್ನು ಕರೆಯುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ರೇಷ್ಮೆ ನೂಲು ಬಿಚ್ಚಾಣಿಕಾ ಘಟಕ, ಬೋದಗೂರಿನ ಆಂಜನೇಯಸ್ವಾಮಿ ರೇಷ್ಮೆ ಬಿತ್ತನೆ ಕೇಂದ್ರ, ಹಿತ್ತಲಹಳ್ಳಿಯ ಹಿಪ್ಪುನೇರಳೆ ಸೊಪ್ಪಿನ ತೋಟ, ಹುಳು ಸಾಕಾಣಿಕಾ ಮನೆಗಳಿಗೆ ಭೇಟಿ ನೀಡಿ ರೇಷ್ಮೆ ಅವಲಂಬಿತರ ಕೆಲಸ ಕಾರ್ಯದ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದರು.
ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಜಿಲ್ಲಾ ಪಂಚಾಯ್ತಿ ರೇಷ್ಮೆ ಉಪನಿರ್ದೇಶಕ ನಾಗಭೂಷಣ್ ಹಾಜರಿದ್ದರು.
ರೇಷ್ಮೆ ಬೆಳೆಗಾರರು ಖಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಬೇಕು
ರೇಷ್ಮೆ ಬೆಳೆಗಾರರು ಖಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಬೇಕು. ಹಣ ಹಾಗೂ ಶ್ರಮದ ಉಳಿತಾಯ ಮಾಡಿಕೊಳ್ಳುವ ಮೂಲಕ ರೇಷ್ಮೆ ಕೃಷಿಯಲ್ಲಿ ಪ್ರಗತಿಯನ್ನು ಸಾಧಿಸಬಹುದಾಗಿದೆ ಎಂದು ರೇಷ್ಮೆ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಇ.ಮುನಿರಾಜು ತಿಳಿಸಿದರು.
ನಗರದ ದಿಬ್ಬೂರಹಳ್ಳಿ ಬೈಪಾಸ್ ರಸ್ತೆಯಲ್ಲಿ ಕೀರಣಗೆರೆ ಚಾಕಿ ಸಾಕಾಣಿಕಾ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ರೈತರಿಗೆ ರೋಗರಹಿತ ಹುಳುಗಳನ್ನು ನೀಡುವ ನಿಟ್ಟಿನಲ್ಲಿ ಹಲವಾರು ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಗುಣಾತ್ಮಕ ಬೆಳೆಗಳನ್ನು ರೈತರು ಬೆಳೆಯಬೇಕೆಂದು ಚಾಕಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ರೇಷ್ಮೆ ಬೆಳೆಗಾರರಿಗೆ ವೈಜ್ಞಾನಿಕ ಹುಳು ಸಾಕಾಣಿಕೆಯ ಕುರಿತಂತೆ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯ ಬಗ್ಗೆ ತರಬೇತಿಯನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೀರಣಗೆರೆ ಜಗದೀಶ್ ಮಾತನಾಡಿ, ರೇಷ್ಮೆ ಬೆಳೆಗಾರರು ಸರಳ ರೀತಿಯಲ್ಲಿ ಹುಳುಗಳನ್ನು ಮೇಯಿಸುವ ವ್ಯವಸ್ಥೆಯನ್ನು ರೂಢಿಸಿಕೊಳ್ಳಬೇಕು. 6, 7 ಮತ್ತು 8 ಹಂತಗಳ ಸ್ಟಾಂಡ್ ಬದಲು ಎರಡು ಸ್ಟಾಂಡ್ ಬಳಸಿ, ಯಂತ್ರೋಪಕರಣವನ್ನು ಬಳಸಿಕೊಳ್ಳಿ, ಎರಡನೇ ಹಂತದ ಹುಳು ಪಡೆಯುವ ಬದಲಾಗಿ ಮೂರನೇ ಹಂತದ ಹುಳುಗಳನ್ನು ಪಡೆದು ಬೆಳೆಸುವುದು ಲಾಭದಾಯಕವಾಗಲಿದೆ. ಹೆಚ್ಚು ಆದಾಯ ಗಳಿಕೆ, ಶ್ರಮ ಕಡಿಮೆ, ಖರ್ಚಿನಲ್ಲಿ ಉಳಿತಾಯ ಮತ್ತು ಯಂತ್ರಗಳ ಬಳಕೆಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯ್ತಿ ರೇಷ್ಮೆ ಉಪನಿರ್ದೇಶಕ ನಾಗಭೂಷಣ್ ಮಾತನಾಡಿ, ಸರ್ಕಾದಿಂದ ಸಿಗುವ ಸೌಲಭ್ಯಗಳ ಕುರಿತು ವಿವರ ನೀಡಿದರು. ಸೊಪ್ಪು ಕಟಾವು ಯಂತ್ರ, ದುಂಪೆ ಕಟಾವು ಯಂತ್ರ ಹಾಗೂ ಇತರ ವೈಜ್ಞಾನಿಕ ಸಲಕರಣೆಗಳನ್ನು ಸರ್ಕಾರದಿಂದ ಕಡಿಮೆ ದರಕ್ಕೆ ಕೊಡಿಸಬೇಕೆಂಬ ರೈತರ ಬೇಡಿಕೆಗೆ ಅವರು ಪ್ರಸ್ತಾವನೆಯನ್ನು ಸಲ್ಲಿಸುವುದಾಗಿ ಹೇಳಿದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಪ್ರಗತಿಪರ ರೈತ ಹಿತ್ತಲಹಳ್ಳಿ ಗೋಪಾಲಗೌಡ, ಸಹಾಯಕ ರೇಷ್ಮೆ ಕೃಷಿ ನಿರ್ದೇಶಕ ಬೋಜಣ್ಣ, ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ಬೋದಗೂರು ನಾರಾಯಣಸ್ವಾಮಿ, ಭಕ್ತರಹಳ್ಳಿ ಲಕ್ಷ್ಮೀನಾರಾಯಣ, ದೊಡ್ಡದಾಸರಹಳ್ಳಿ ಎಂ.ಶ್ರೀನಿವಾಸ್ ಹಾಜರಿದ್ದರು.
ವರಮಹಾಲಕ್ಷ್ಮಿ ಹಬ್ಬ
ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಹೊರವಲಯದ ಸಾಯಿಬಾಬಾ ಜ್ಞಾನಮಂದಿರದ ಸೇವಾಕರ್ತ ಗೋಕುಲ ಕೇಶವನಾರಾಯಣ್ ಅವರ ಮನೆಯಲ್ಲಿ ವಿಶಿಷ್ಠವಾಗಿ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದರು.
ವರಮಹಾಲಕ್ಷ್ಮಿ ಹಬ್ಬ
ಶಿಡ್ಲಘಟ್ಟದ ದೇಶದಪೇಟೆಯ ಬಿ.ಸಿ.ನಂದೀಶ್ ಅವರ ಮನೆಯಲ್ಲಿ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಮಕ್ಕಳು ಆಚರಿಸಿದರು.
ರೈತಮಿತ್ರ ಅಧಿಕಾರಿಗೆ ಬೀಳ್ಕೊಡುಗೆ
ರೈತಮಿತ್ರ ಅಧಿಕಾರಿಯಾಗಿ ರೇಷ್ಮೆ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸುವ ಜೊತೆಗೆ ಇಲಾಖೆಯ ಸೌಲಭ್ಯಗಳನ್ನು ಒದಗಿಸಿ ರೈತರ ಅಭಿವೃದ್ಧಿಗೆ ಕಾರಣರಾಗಿದ್ದ ಎಂ.ಸಿ.ಚಂದ್ರಪ್ಪ ಅವರ ಸೇವೆ ಈ ತಾಲ್ಲೂಕಿಗೆ ಮತ್ತಷ್ಟು ಬೇಕಾಗಿತ್ತು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.
ನಗರದ ರೇಷ್ಮೆ ಬಿತ್ತನೆ ಕೋಠಿಯಲ್ಲಿ ಬುಧವಾರ ತಾಲ್ಲೂಕಿನ ರೇಷ್ಮೆ ಇಲಾಖೆಯಲ್ಲಿ 17 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ರೇಷ್ಮೆ ಸಹಾಯಕ ನಿರ್ದೇಶಕ ಎಂ ಸಿ ಚಂದ್ರಪ್ಪ ಅವರಿಗೆ ರೇಷ್ಮೆ ಇಲಾಖೆ, ಮೈರಾಡ ಸಂಸ್ಥೆ, ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿ,ರೇಷ್ಮೆ ಬೆಳೆಗಾರರು ಹಾಗೂ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಹೆಚ್ಚಿನ ರೈತರು ರೇಷ್ಮೆಯನ್ನು ಅವಲಂಬಿತರು. ರೇಷ್ಮೆ ಬೆಳೆಗಾರರು ಆರ್ಥಿಕವಾಗಿ ರೈತರು ಮುಂದುವರಿಯಲು ಕಾರಣರಾದ ಚಂದ್ರಪ್ಪ ಅವರು ಅತ್ಯುತ್ತಮ ಮಾರ್ಗದರ್ಶಕರಾಗಿದ್ದರು. ನೂತನ ಅಧಿಕಾರಿಗಳು ಸಹ ಅವರಂತೆಯೇ ಕಾರ್ಯನಿರ್ವಹಿಸಿ ಉತ್ತಮ ಹೆಸರುಗಳಿಸಬೇಕೆಂದು ಕೋರಿದರು.
ಸರ್ಕಾರಿ ನೌಕರರಿಗೆ ವರ್ಗಾವಣೆ ಮತ್ತು ನಿವೃತ್ತಿ ಸರ್ವೇ ಸಾಮಾನ್ಯ. ಈ ಮಧ್ಯೆ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವ ಮೂಲಕ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗುವುದು ಬಹಳ ಮುಖ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ರೈತ ಕೂಟಗಳ ಸದಸ್ಯರು, ಮೈರಾಡ ಸಂಸ್ಥೆ, ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿ,ರೇಷ್ಮೆ ಬೆಳೆಗಾರರು ಮತ್ತಿತರರು ರೇಷ್ಮೆ ಸಹಾಯಕ ನಿರ್ದೇಶಕ ಎಂ ಸಿ ಚಂದ್ರಪ್ಪ ಅವರನ್ನು ಸನ್ಮಾನಿಸಿದರು.
ಚಂದ್ರಪ್ಪ ಅವರಿಂದ ತೆರವಾದ ಸ್ಥಾನಕ್ಕೆ ಜವಾಬ್ದಾರಿ ವಹಿಸಿದ ಭೋಜಣ್ಣ, ರೇಷ್ಮೆ ಸಹಾಯಕ ನಿರ್ದೇಶಕರಿಗೆ ರೇಷ್ಮೆ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಸ್ವಾಗತವನ್ನು ಕೋರಿದರು.
ರೇಷ್ಮೆ ಇಲಾಖೆಯ ಅಧಿಕಾರಿಗಳಾದ ನಾಗಭೂಷಣ್, ನಾರಾಯಣಸ್ವಾಮಿ, ರತ್ನಯ್ಯಶೆಟ್ಟಿ, ಗುರುರಾಜರಾವ್, ರೈತರಾದ ಎಚ್.ಜಿ.ಗೋಪಾಲಗೌಡ, ಎಸ್.ಎಂ.ನಾರಾಯಣಸ್ವಾಮಿ, ವೆಂಕಟಸ್ವಾಮಿರೆಡ್ಡಿ, ಸುರೇಶ್, ವೆಂಕಟರೆಡ್ಡಿ ಗಿರಣಿ, ರವಿಪ್ರಕಾಶ್ ಹಾಜರಿದ್ದರು.
ಹೆಣ್ಣುಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ
ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಪಾಲಕರ ನೈತಿಕ ಹೊಣೆಯಾಗಿದೆ ಎಂದು ಮೇಲೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಮುನಾ ಧರ್ಮೇಂದ್ರ ತಿಳಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ 8 ನೇ ತರಗತಿಯ ಐವತ್ತೇಳು ಮಕ್ಕಳಿಗೆ ಸೈಕಲ್ ವಿತರಿಸಿ ಅವರು ಮಾತನಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಈಗ ಮೊದಲಿನಂತಿಲ್ಲ. ಸಾಕಷ್ಟು ಸುಧಾರಣೆ ಆಗಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ಎಂಬುದು ಗಗನ ಕುಸುಮ ಎಂಬ ದಿನಗಳು ಮರೆಯಾಗುತ್ತಿವೆ. ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ. ಅವನ್ನು ಸದುಪಯೋಗ ಮಾಡಿಕೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡುವ ಸಮವಸ್ತ್ರ ಹೊಲಿಸಿಕೊಳ್ಳಲು ಬೇಕಾದ ಹಣವನ್ನು ನೀಡಿದರು.
ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಆಂಜನೇಯರೆಡ್ಡಿ, ಪಿಡಿಒ ಶಾರದಮ್ಮ, ಎಂ.ಪಿ.ಸಿ.ಅಧ್ಯಕ್ಷ ಶ್ರೀನಿವಾಸಮೂರ್ತಿ, ಮುಖ್ಯ ಶಿಕ್ಷಕಿ ಮಂಗಳಗೌರಮ್ಮ, ಎಸ್‌ಡಿಎಂಸಿ ಅಧ್ಯಕ್ಷ ಜನಾರ್ಧನ್, ಸದಸ್ಯರಾದ ಪ್ರಕಾಶ್, ರವಿಕುಮಾರ್, ಆರ್.ಎ.ಉಮೇಶ್, ರಾಮಾಂಜಿನಪ್ಪ, ಗಂಗಾಧರಪ್ಪ ಹಾಜರಿದ್ದರು.
ರೈಲ್ವೆ ಇಲಾಖೆಯ ಸ್ವಾಧೀನದಲ್ಲಿದ್ದ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡಿದ ಅಧಿಕಾರಿಗಳು
ನಗರದ ವಿಜಯನಗರ ಹೆಬ್ಬಾಗಿಲಿನಿಂದ ಕದಿರಿಪಾಳ್ಯ ಹಾಗೂ ಇತರೆ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಕಾರ್ಯ ಅಧಿಕಾರಿಗಳ ಹಾಗೂ ಪೊಲೀಸರ ಸಮ್ಮುಖದಲ್ಲಿ ಬುಧವಾರ ನಡೆಯಿತು.
ನಗರದ ಉಲ್ಲೂರುಪೇಟೆಯ ವಿಜಯನಗರ ಹೆಬ್ಬಾಗಿಲ ಬಳಿ ನಿರ್ಮಿಸಿರುವ ರೈಲ್ವೆ ಅಂಡರ್‌ಪಾಸ್ ಸಮೀಪ ರೈಲ್ವೆ ಇಲಾಖೆಯು ೩ ಗುಂಟೆ ಜಮೀನನ್ನು ಸ್ವಾನ ಪಡಿಸಿಕೊಂಡಿತ್ತಾದರೂ ಅದರ ಮಾಲೀಕರು ಪರಿಹಾರ ಮೊತ್ತ ಸಾಲದು ಎಂಬ ಕಾರಣಕ್ಕೆ ಜಮೀನನ್ನು ಬಿಟ್ಟುಕೊಡಲು ನಿರಾಕರಿಸಿದ್ದರು.
ಇದರಿಂದ ವಿಜಯನಗರ ಹೆಬ್ಬಾಗಿಲ ಮೂಲಕ ಕದಿರಿಪಾಳ್ಯ, ಪಂಪ್‌ಹೌಸ್ ಏರಿಯಾ, ಚಿಂತಾಮಣಿ ಬೈಪಾಸ್ ಮಾರ್ಗಕ್ಕೆ ಹೋಗಲು ಅಧಿಕೃತ ದಾರಿಯೆ ಇಲ್ಲದೆ ಈ ಪ್ರದೇಶದ ವಾಸಿಗಳು ಸುತ್ತು ಬಳಸಿ ಸಂಚರಿಸುವಂತಾಗಿತ್ತು.
ಈ ಹಿನ್ನಲೆಯಲ್ಲಿ ಉಪ ವಿಭಾಗಾಧಿಕಾರಿಗಳ ಸೂಚನೆಯಂತೆ ತಹಸೀಲ್ದಾರ್ ಎಸ್.ಅಜಿತ್‌ಕುಮಾರ್ ರೈ ನೇತೃತ್ವದಲ್ಲಿ ನಗರಸಭೆ, ಕಂದಾಯ, ಭೂಮಾಪನ ಇಲಾಖೆ ಅಧಿಕಾರಿಗಳು ಬಿಗಿ ಪೊಲಿಸ್ ಬಂದೋಬಸ್ತ್‌ನೊಂದಿಗೆ ಸ್ಥಳವನ್ನು ವಶಕ್ಕೆ ಪಡೆದುಕೊಂಡರು.
ವಿಜಯನಗರ ಹೆಬ್ಬಾಗಿಲು ಬಳಿ ಇದ್ಲೂಡು ಗ್ರಾಮಕ್ಕೆ ಅಂಡರ್‌ಪಾಸ್ ನಿರ್ಮಿಸಿದಾಗ ಅಲ್ಲಿ ಕದಿರಿಪಾಳ್ಯ ಹಾಗೂ ಇತರೆ ಪ್ರದೇಶಗಳಿಗೆ ಸಂಚರಿಸಲು ರಸ್ತೆ ಇಲ್ಲದಾಗಿತ್ತು. ಹಾಗಾಗಿ ರೈಲ್ವೆ ಇಲಾಖೆಯು ಅಂಡರ್‌ಪಾಸ್ ಬಳಿ ೩ ಗುಂಟೆ ಜಮೀನನ್ನು ವಶಕ್ಕೆ ಪಡೆದಿತ್ತು.
ವಶಪಡಿಸಿಕೊಂಡ ಜಮೀನಿಗೆ ೩ ಲಕ್ಷ ರೂಪರಿಹಾರವನ್ನು ಸಹ ಘೋಷಿಸಲಾಗಿತ್ತು. ಆದರೆ ಈ ಜಾಗದ ಮಾಲೀಕರು ಪರಿಹಾರದ ಮೊತ್ತ ಸಾಲದು ಇನ್ನೂ ಹೆಚ್ಚು ಬೇಕು ಎಂಬ ಕಾರಣಕ್ಕೆ ಅವರು ಜಮೀನನ್ನು ಬಿಟ್ಟುಕೊಡದೆ ವಶದಲ್ಲೆ ಇಟ್ಟುಕೊಂಡಿದ್ದರು.
ಆದರೆ ಉಪ ವಿಭಾಗಾಕಾರಿಗಳ ಸೂಚನೆ ಮೇರೆಗೆ ಬುಧವಾರ ತಹಸೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಜಮೀನನ್ನು ಅಳತೆ ಮಾಡಿ ವಶಕ್ಕೆ ತೆಗೆದುಕೊಂಡು ಅದರ ದಾಖಲೆಗಳನ್ನು ನಗರಸಭೆಗೆ ಹಸ್ತಾಂತರಿಸಿದರು.
ಜೆಸಿಬಿ ಮೂಲಕ ಕಚ್ಚಾ ರಸ್ತೆಯನ್ನು ನಿರ್ಮಿಸಿ ಅಧಿಕೃತ ರಸ್ತೆಗೆ ಅನುಕೂಲ ಮಾಡಿಕೊಡಲಾಯಿತು. ಜಮೀನಿನ ಮಾಲೀಕರಿಗೆ ಹೆಚ್ಚಿನ ಪರಿಹಾರ ಬೇಕಿದ್ದರೆ ಹಿರಿಯ ಅಧಿಕಾರಿಗಳಿಗೆ ಇದನ್ನು ಮನವರಿಕೆ ಮಾಡಿಕೊಟ್ಟು ಹೆಚ್ಚಿನ ಪರಿಹಾರ ಕೊಡಿಸುವ ಭರವಸೆ ನೀಡಿ ಜಮೀನಿನ ಮಾಲೀಕರ ಮನವೊಲಿಸಿದರು.
ಸರ್ಕಲ್ ಇನ್ಸ್‌ಪೆಕ್ಟರ್ ಟಿ.ಸಿ.ವೆಂಕಟೇಶ್, ನಗರಠಾಣೆ ಎಸ್‌ಐ ನವೀನ್, ಎಸ್‌ಎಫ್‌ಸಿಎಸ್ ಬ್ಯಾಂಕ್ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ರೈತ ಮುಖಂಡರಾದ ನಾರಾಯಣಸ್ವಾಮಿ, ರಾಮಕೃಷ್ಣಪ್ಪ, ರಾಮಚಂದ್ರಪ್ಪ, ವೇಣು, ಶಿವಮೂರ್ತಿ, ಶ್ರೀನಿವಾಸ್ ಹಾಜರಿದ್ದರು.
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ
ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕೆಂಬ ಉದ್ದೇಶದಿಂದ ಸರ್ಕಾರದಿಂದ ನೀಡಲಾಗುವ ಸೈಕಲ್‌ಗಳನ್ನು ಸದುಪಯೋಗಪಡಿಸಿಕೊಂಡು ಗ್ರಾಮೀಣ ಪ್ರದೇಶದ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಜಯಂತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ೨೦೧೭–೧೮ ನೇ ಸಾಲಿನ ಸರ್ಕಾರದ ಉಚಿತ ಸೈಕಲ್ ವಿತರಣೆ, ಸಮವಸ್ತ್ರ ಮತ್ತು ಶೂ ವಿತರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಅವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸರ್ಕಾರದಿಂದ ನೀಡುವ ಉಚಿತ ಸೈಕಲ್‌ಗಳನ್ನು ವಿದ್ಯಾರ್ಥಿಗಳ ಪೋಷಕರು ದುರುಪಯೋಗ ಮಾಡಿಕೊಳ್ಳಬಾರದು. ಮಕ್ಕಳು ಶಿಸ್ತು, ಶ್ರಮ ಮತ್ತು ಗುರಿಯನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಬೆಳೆಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ೮ ನೇ ತರಗತಿಯ ಸುಮಾರು ೪೯ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ ಹಾಗೂ ೯ ಮತ್ತು ೧೦ ನೇ ತರಗತಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಶೂ ವಿತರಣೆ ಮಾಡಲಾಯಿತು.
ಜಿಲ್ಲಾ ಪಂಚಾಯ್ತಿ ಸದಸ್ಯ ಬಂಕ್ ಮುನಿಯಪ್ಪ, ನಗರಸಭೆ ಅಧ್ಯಕ್ಷ ಅಪ್ಸರ್‌ಪಾಷ, ಮುಖಂಡರಾದ ಕೆ.ಎಸ್.ಕನಕಪ್ರಸಾದ್, ರಮೇಶ್, ದೇವರಾಜ್, ಪ್ರಭು, ಲಕ್ಮಿನಾರಾಯಣ, ಕ್ರೀಡಾಪಟು ನಾರಾಯಣಸ್ವಾಮಿ, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ಹಾಜರಿದ್ದರು.
ಫಲಾನುಭವಿಗೆ ಅರಣ್ಯ ಇಲಾಖೆಯಿಂದ ಗ್ಯಾಸ್ ಸಂಪರ್ಕ
ಅರಣ್ಯದ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಲು, ಪರಿಸರ ಕಾಳಜಿಯಿಂದ ಅರಣ್ಯ ಇಲಾಖೆ ಅಡುಗೆ ಅನಿಲ ವಿತರಿಸುತ್ತಿದೆ. ಅರಣ್ಯ ಇಲಾಖೆಯ ಹಲವಾರು ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಕಾಡನ್ನು ಬೆಳೆಸುವ ಕೆಲಸ ಮಾಡಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ವರದನಾಯಕನಹಳ್ಳಿ ಗೇಟ್ ಬಳಿಯ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಬುಧವಾರ ತಾಲ್ಲೂಕಿನ ಗೊರ್ಲಗುಮ್ಮನಹಳ್ಳಿಯ ಗ್ರಾಮ ಅರಣ್ಯ ಸಮಿತಿ ಸದಸ್ಯರಾಗಿರುವ 19 ಮಂದಿ ಫಲಾನುಭವಿಗಳಿಗೆ ಅಡುಗೆ ಅನಿಲದ ಸಿಲಿಂಡರ್, ಸ್ಟೌ ಹಾಗೂ ರೆಗ್ಯೂಲೇಟರನ್ನು ವಿತರಿಸಿ ಅವರು ಮಾತನಾಡಿದರು.
ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಕುಟುಂಬಗಳು ಅಡುಗೆ ಮಾಡಲು ಅರಣ್ಯದೊಳಗಿನ ಉರುವಲುಗಳನ್ನು ಸಂಗ್ರಹಿಸುತ್ತಾರೆ. ಇದನ್ನು ತಡೆಗಟ್ಟಲು ಉಚಿತವಾಗಿ ಅನಿಲ ಸಿಲಿಂಡರ್ ಮತ್ತು ಸ್ಟೌ ವಿತರಿಸಲಾಗಿದೆ. ಅಡುಗೆ ಅನಿಲವನ್ನು ಬಳಸುವಾಗ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಿದರು.
ವಲಯ ಅರಣ್ಯಾಧಿಕಾರಿ ತಿಮ್ಮರಾಯಪ್ಪ ಮಾತನಾಡಿ, ಒಟ್ಟು 19 ಮಂದಿ ಫಲಾನುಭವಿಗಳಿಗೆ ಅಡುಗೆ ಅನಿಲದ ಸಿಲಿಂಡರ್, ಸ್ಟೌ ಹಾಗೂ ರೆಗ್ಯೂಲೇಟರ್ ವಿತರಿಸಲಾಗುವುದು. ಅರಣ್ಯದಲ್ಲಿ ನಡೆಯುವ ಕಳ್ಳತನದ ಬಗ್ಗೆ ಇಲಾಖೆಗೆ ಮಾಹಿತಿ ನೀಡಬೇಕು ಮತ್ತು ಬೆಂಕಿ ಬಿದ್ದಂತಹ ಸಂದರ್ಭದಲ್ಲಿ ಗ್ರಾಮಸ್ಥರು ಅರಣ್ಯ ಸಿಬ್ಬಂದಿಯೊಂದಿಗೆ ಸಹಕಾರ ನೀಡಬೇಕು. ಅರಣ್ಯ ಇಲಾಖೆಯಿಂದ ನೀಡುವ ಗಿಡಗಳನ್ನು ಜನರು ಬೆಳೆಸುವ ಮೂಲಕ ಪರಿಸರವನ್ನು ಹಸಿರುಮಯಗೊಳಿಸಬೇಕು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಅಫ್ಸರ್‌ಪಾಷ, ಆಯುಕ್ತ ಛಲಪತಿ, ಗೊರ್ಲಗುಮ್ಮನಹಳ್ಳಿ ಅರಣ್ಯ ಸಮಿತಿ ಅಧ್ಯಕ್ಷ ವೇಣುಗೋಪಾಲರೆಡ್ಡಿ, ವೆಂಕಟರೆಡ್ಡಿ, ರಾಮಸ್ವಾಮಿ, ಲಕ್ಷ್ಮೀನಾರಾಯಣ್ ಈ ಸಂದರ್ಭದಲ್ಲಿ ಹಾಜರಿದ್ದರು.
ಶಿಡ್ಲಘಟ್ಟದ ಸಂತೆಮೈದಾನಕ್ಕೆ ಅಧಿಕಾರಿ, ಜನಪ್ರತಿನಿಧಿಗಳ ಭೇಟಿ: ಸಂತೆಯಲ್ಲಿನ ಮೂಲ ಸೌಕರ್ಯಗಳ ಪರಿಶೀಲನೆ
ನಗರದ ವಾರದ ಸಂತೆ ಮೈದಾನಕ್ಕೆ ಸೋಮವಾರ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ದೆಶಕ ಮೇಲೂರು ಮುರಳಿ, ನಗರಸಭೆ ಆಯುಕ್ತ ಜಿ.ಎನ್.ಚಲಪತಿ, ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಸಂತೆಯಲ್ಲಿನ ಮೂಲ ಸೌಕರ್ಯ, ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ರೈತರು ಹಾಗೂ ವ್ಯಾಪಾರಸ್ಥರು ಹಲವಾರು ಸಮಸ್ಯೆಗಳನ್ನು ಮುಂದಿಟ್ಟರು.
ಸಂತೆ ಮೈದಾನದಲ್ಲಿದ್ದ ಕೃಷಿ ಉತ್ಪನ್ನ ಮಾರುಕಟ್ಟೆಯ ಗೋದಾಮನ್ನು ಯಾರೋ ಅತಿಕ್ರಮಿಸಿದ್ದು ಕಂಡು ಗೋದಾಮಿನ ಬೀಗ ಹೊಡೆದು ನೋಡಿದರೆ ಅದರೊಳಗೆ ಅತಿಕ್ರಮದಾರರು ತಮ್ಮ ಸರಕು ಸರಂಜಾಮುಗಳನ್ನು ದಾಸ್ತಾನು ಮಾಡಿದ್ದರು.
ಮದ್ಯಾಹ್ನದೊಳಗೆ ಗೋದಾಮನ್ನು ಖಾಲಿ ಮಾಡುವಂತೆ ಸೂಚಿಸಿ ಇಲ್ಲವಾದಲ್ಲಿ ಅತಿಕ್ರಮ ಪ್ರವೇಶ ಮಾಡಿದ ಆರೋಪದಡಿ ಕಾನೂನು ಕ್ರಮ, ದಂಡ ಇನ್ನಿತರೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಎಚ್ಚರಿಸಿದರು.
ನಂತರ ಸಂತೆ ಮೈದಾನದಲ್ಲಿ ಸುತ್ತಾಡಿದ ತಂಡಕ್ಕೆ ಸಂತೆಯಲ್ಲಿ ಸ್ವಚ್ಚತೆ, ನೈರ್ಮಲ್ಯದ ಕೊರತೆ, ಶೌಚಾಲಯ ಇಲ್ಲದಿರುವುದು, ಹಂದಿಗಳ ಹಾವಳಿ ಮುಂತಾದ ಹತ್ತು ಹಲವು ಸಮಸ್ಯೆಗಳನ್ನು ರೈತರು ಹಾಗೂ ವ್ಯಾಪಾರಸ್ಥರು ಮುಂದಿಟ್ಟರು.
ನಗರಸಭೆ ನಿಗಧಿಪಡಿಸಿದಷ್ಟು ಶುಲ್ಕ ಕಟ್ಟುತ್ತೇವೆ. ಹಾಗೆಯೆ ನಾವು ಕೇಳಿದಂತೆ ಮೂಲ ಸೌಕರ್ಯವನ್ನು ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು.
೧೫ ದಿನಗಳ ಒಳಗೆ ಸಂತೆಯಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುತ್ತೇವೆ. ಕೃಷಿ ಉತ್ಪನ್ನ ಮಾರುಕಟ್ಟೆಯ ಗೋದಾಮನ್ನು ಸೂಕ್ತವಾಗಿ ಬಳಸಿಕೊಳ್ಳುವಂತೆಯೂ ಮಾಡುತ್ತೇವೆ ಎಂದು ಭರವಸೆ ನೀಡಿದರು.
ರಾಜ್ಯ ಆಹಾರ ನಿಗದಮ ನಿರ್ದೆಶಕ ನಾಗರಾಜ್, ರಾಜ್ ಕುಮಾರ್, ಶ್ರೀನಾಥ್, ಮಂಜುನಾಥ್ ಹಾಜರಿದ್ದರು.
ಪೊಲೀಸರ ಮತ್ತು ನಾಗರಿಕರ ನಡುವಿನ ಬಾಂಧವ್ಯ ಉತ್ತಮವಾಗಿರಲಿ
ಪೊಲೀಸರ ಮತ್ತು ನಾಗರಿಕರ ನಡುವಿನ ಬಾಂಧವ್ಯ ಉತ್ತಮವಾಗಿದ್ದರೆ ಕಾನೂನು ವ್ಯವಸ್ಥೆ ಸಹ ಉತ್ತಮವಾಗಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೋಮವಾರ ತಾಲ್ಲೂಕಿನ ವರದನಾಯಕನಹಳ್ಳಿಯ ಶ್ರೀ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಶಿಡ್ಲಘಟ್ಟ ವೃತ್ತ ಮಟ್ಟದ ನೂತನ ಬೀಟ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಅಕ್ರಮ ಹಾಗು ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಲು ಮುಂದಾಗಬೇಕು. ಅಕ್ರಮ ಮಧ್ಯ ಮಾರಾಟ ಸೇರಿದಂತೆ ಅಕ್ರಮ ಮರಳು ದಂಧೆ, ಜೂಜಾಟ, ಕಳ್ಳತನ ಇಂತಹವುಗಳ ಬಗ್ಗೆ ನಾಗರಿಕರು ಬೀಟ್ ಪೊಲೀಸರಿಗೆ ಮಾಹಿತಿ ನೀಡಿ. ಒಂದು ವೇಳೆ ತಾವು ನೀಡಿದ ಮಾಹಿತಿಯನ್ವಯ ಪೊಲೀಸ್ ಪೇದೆ ಕ್ರಮ ಜರುಗಿಸಲಿಲ್ಲ ಎಂದಾದರೆ ನಾವು ಅಂತಹವರ ಮೇಲೆ ಕ್ರಮ ಜರುಗಿಸುತ್ತೇವೆ ಎಂದರು.
ಇನ್ನು ತಾಲ್ಲೂಕಿನಾದ್ಯಂತ ಅಕ್ರಮ ಮಧ್ಯ ಮಾರಾಟ ಸೇರಿದಂತೆ ಅಕ್ರಮ ಮರಳು ದಂಧೆಯ ಬಗ್ಗೆ ಕ್ರಮ ತೆಗೆದುಕೊಂಡಿದ್ದು ಮರಳು ಸಾಗಣಿಕೆ ತಡೆಯಲಾಗಿದೆ. ಉಳಿದಂತೆ ಗ್ರಾಮಗಳಲ್ಲಿ ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವ ಬಗ್ಗೆ ಬೀಟ್ ಪೊಲೀಸರು ಮಾಹಿತಿ ಸಂಗ್ರಹಿಸಬೇಕು. ಇಂದಿನ ಸಭೆಯಲ್ಲಿ ಚರ್ಚಿಸಲಾಗಿರುವ ಸಮಸ್ಯೆಗಳೇ ಮುಂದಿನ ಸಭೆಯಲ್ಲಿ ಚರ್ಚೆಯಾದರೆ ಆಯಾ ವ್ಯಾಪ್ತಿ ಬೀಟ್ ಪೊಲೀಸರನ್ನು ಹೊಣೆ ಮಾಡಬೇಕಾಗುತ್ತದೆ. ಹಾಗಾಗಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ತಡೆಯಲು ಪೊಲೀಸರು ಮತ್ತಷ್ಟು ಜನಸ್ನೇಹಿಯಾಗಿ ಕರ್ತವ್ಯ ಮಾಡಬೇಕು ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಮುಖಂಡರು ಸೇರಿದಂತೆ ನಾಗರಿಕರು ತಾಲ್ಲೂಕಿನಾಧ್ಯಂತ ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನು ತಡೆಗಟ್ಟುವಂತೆ ಮನವಿ ಮಾಡಿದರು.
ನಗರದ ಮುಖ್ಯರಸ್ತೆಗಳಲ್ಲಿ ಅಡ್ಡಾ ದಿಡ್ಡಿ ವಾಹನ ನಿಲ್ಲಿಸುವುದನ್ನು ತಪ್ಪಿಸಲು ಪೊಲೀಸರು ಕ್ರಮ ಜರುಗಿಸಬೇಕು ಎಂದು ಸಭೆಗೆ ತಿಳಿಸಿದರು.
ಸರ್ಕಲ್ ಇನ್ಸ್‌ಪೆಕ್ಟರ್ ವೆಂಕಟೇಶ್, ನಗರಠಾಣೆ ಪಿಎಸ್ಸೈ ನವೀನ್, ಸಿಬ್ಬಂದಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ತಾಲ್ಲೂಕಿನ ವಿವಿಧ ಗ್ರಾಮಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಜನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳ
ಜನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳ. ನಮ್ಮ ನಾಡಿನ ಸಂಸ್ಕೃತಿಯನ್ನು ಪರಿಚಯಿಸುವ ಗ್ರಾಮೀಣ ಭಾಗದ ಕಲೆಗಳನ್ನು ಬಳಸಿದಷ್ಟು ಅದರ ಹೊಳಪು ಹೆಚ್ಚಾಗುತ್ತದೆ. ನಮ್ಮ ಬದುಕಿಗೆ ಹತ್ತಿರವಾಗಿರುವ ಜಾನಪದ ಕಲೆಗಳು ನಿತ್ಯ ನೂತನವಾಗಿವೆ ಎಂದು ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಸ್.ವೆಂಕಟಾಚಲಪತಿ ತಿಳಿಸಿದರು.
ತಾಲ್ಲೂಕಿನ ಕೊತ್ತನೂರು ಗ್ರಾಮದ ಈಶ್ವರ ದೇವಾಲಯದ ಆವರಣದಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕಲಾಜ್ಯೋತಿ ಜಾನಪದ ಕಲಾ ಸಂಸ್ಥೆ ಸಹಯೋಗದಲ್ಲಿ ನಡೆದ ಕಲಾಜ್ಯೋತಿ ಜಾನಪದ ಕಲಾಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶೀಯ ಕಲೆ, ಸಂಸ್ಕೃತಿಗಳನ್ನು ಮರೆತರೆ ಬದುಕಿನ ಸತ್ವವನ್ನು ಕಳೆದುಕೊಂಡಂತೆ. ಜನಪದ ನಮ್ಮ ಸಂಸ್ಕೃತಿಯ ತಾಯಿಬೇರು. ಜಾಗತೀಕರಣ, ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ ಮತ್ತಿತರ ಕಾರಣಗಳಿಂದ ಜನಪದ ಕಲೆಗಳು ಮರೆಯಾಗುತ್ತಿವೆ.
ನಮ್ಮ ಜನಪದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅದರ ಮೂಲಕವೇ ನಮ್ಮ ಹಿರಿಯರು ಬದುಕು ಕಟ್ಟಿಕೊಂಡು ಬೆಳೆದವರು. ಬದಲಾದ ಜೀವನ ಶೈಲಿ, ಮಾಧ್ಯಮಗಳ ಪ್ರಭಾವದಿಂದ ನಮ್ಮ ಕಲೆ ಸಂಸ್ಕೃತಿ ಉಳಿಸುವಲ್ಲಿ ನಾವು ಹಿಂದೆ ಬಿದ್ದಿದ್ದೆೀವೆ. ಮುಂದೊಂದು ದಿನ ಜಗತ್ತಿನ ಸಂಪನ್ಮೂಲಗಳೆಲ್ಲ ಮುಗಿದಾಗ ಮತ್ತೆ ನಾವು ಹಳೆಯ ಜೀವನ ಶೈಲಿಗೆ ಮರುಳಬೇಕಾಗಿ ಬರಬಹುದು ಎಂದರು.
ಕಲಾಜ್ಯೋತಿ ಜನಪದ ಕಲಾಮೇಳದಲ್ಲಿ ವೀರಗಾಸೆ, ನಾಸಿಕ್ ಡೋಲ್, ತಮಟೆ, ಕೀಲುಕುದುರೆ, ಜನಪದ ಗೊಂಬೆ ಕುಣಿತ, ಡೊಳ್ಳು ಕುಣಿತ, ಜನಪದ ಗಾಯನ, ಭಕ್ತಿ ಗೀತೆಗಳ ಕಾರ್ಯಕ್ರಮ, ತತ್ವಪದ ಗಾಯನ, ಪರಿಸರ ಗೀತೆಗಳ ಕಾರ್ಯಕ್ರಮ ನಡೆಯಿತು.
ಕಲಾವಿದರನ್ನು ಕಲಾಜ್ಯೋತಿ ಜಾನಪದ ಕಲಾ ಸಂಸ್ಥೆ ವತಿಯಿಂದ ಗೌರವಿಸಲಾಯಿತು.
ಕಲಾಜ್ಯೋತಿ ಜನಪದ ಕಲಾ ಸಂಸ್ಥೆಯ ಕೊತ್ತನೂರು ಗಂಗಾಧರ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪಿ.ಎನ್.ರಾಧಾ ರವಿಚಂದ್ರ, ಉಪಾಧ್ಯಕ್ಷೆ ಶಿವಮ್ಮ, ಸದಸ್ಯ ಜ್ಞಾನೇಶ್, ಕಾರ್ಯದರ್ಶಿ ಅಶ್ವತ್ಥಪ್ಪ, ಸಮಾಜ ಸೇವಕ ಕೊತ್ತನೂರು ಪಂಚಾಕ್ಷರಿ ರೆಡ್ಡಿ, ನವೀನ್‌ಕುಮಾರ್, ಕೊತ್ತನೂರು ರವಿಚಂದ್ರ, ಮುನಿರಾಜು, ರಾಜಗೋಪಾಲ್, ಶಾಲೆಯ ಮುಖ್ಯ ಶಿಕ್ಷಕಿ ಕುಮುದಾ ಹಾಜರಿದ್ದರು.
ಕೆಂಪೇಗೌಡರು ಎಲ್ಲಾ ಸಮುದಾಯದ ಅಭಿವೃದ್ಧಿಗೂ ಶ್ರಮಿಸಿದ್ದಾರೆ
ಕೆಂಪೇಗೌಡರು ಕೇವಲ ಒಂದು ಸಮುದಾಯ ಹಾಗೂ ಜಾತಿಗೆ ಸೀಮಿತವಾಗಿಲ್ಲ. ಎಲ್ಲಾ ಸಮುದಾಯದ ಅಭಿವೃದ್ಧಿಗೂ ಶ್ರಮಿಸಿದ್ಧಾರೆ. ಈ ದಿಸೆಯಲ್ಲಿ ಎಲ್ಲಾ ಸಮುದಾಯವರು ಅವರ ಕೆಲಸವನ್ನು ಸ್ಮರಿಸುವ ಕೆಲಸ ಆಗಬೇಕಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಸೋಮವಾರ ಆಚರಿಸಿದ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಧೈರ್ಯ, ಸಾಹಸ, ರಾಷ್ಟ್ರಪ್ರೇಮ, ನಿಸ್ವಾರ್ಥ ಗುಣಗಳಿಂದಲೇ ಪ್ರಜೆಗಳ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ನಾಡಪ್ರಭು ಕೆಂಪೇಗೌಡ ಅವರನ್ನು ಆಗಿನ ಜನರು ಜೀವಂತ ದೇವರಂತೆ ಕಾಣುತ್ತಿದ್ದರು. ಕನ್ನಡ ನಾಡಿನಲ್ಲಿ ಅತಿ ಶ್ರೇಷ್ಠ ಪ್ರಜಾ ಪರಿಪಾಲಕರ ಪೈಕಿ ಕೆಂಪೇಗೌಡರು ವಿಶೇಷ ಸ್ಥಾನ ಗಳಿಸಿದ್ದಾರೆ. ಯಲಹಂಕದಲ್ಲಿ ಕ್ರಿ.ಶ 1510ರಲ್ಲಿ ಜನಿಸಿದ ಕೆಂಪೇಗೌಡರು, ವಿಜಯನಗರ ಚಕ್ರೇಶ್ವರ ಶ್ರೀಕೃಷ್ಣದೇವರಾಯರ ಪರಮಾಪ್ತ ಮಾಂಡಲೀಕರಾಗಿದ್ದರು. ಕ್ರಿ.ಶ 1537ರಲ್ಲಿ ಈ ಅತ್ಯದ್ಭುತ ಬೆಂಗಳೂರು ನಗರ ಹಾಗೂ ಆಗಿನ ಬೆಂದಕಾಳೂರನ್ನು ಕಟ್ಟಿದರು ಎಂದು ಹೇಳಿದರು.
ಮನುಷ್ಯ ತನ್ನ ಆಸೆಗೆ ಅರಣ್ಯಗಳನ್ನು, ಮರ ಗಿಡಗಳನ್ನು ಕಡಿದು ಹಾಕಿರುವ ಪರಿಣಾಮ ಮಳೆ ಇಲ್ಲದೆ ಕೆರೆಗಳು ಬತ್ತಿ ಹೋಗಿದ್ದು, ಅಂತರ್ಜಲ ಮಟ್ಟ ಕುಸಿದಿದೆ. ಇಂದಿನವರು ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಪಾಲನೆ ಮಾಡಿದಲ್ಲಿ ದೇಶ ಸುಭೀಕ್ಷವಾಗುವುದರಲ್ಲಿ ಸಂದೇಹವಿಲ್ಲ ಎಂದು ತಿಳಿಸಿದರು.
ತಹಸಿಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿ, ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ನಾಮಕರಣ ಮಾಡಿ ಅವರಿಗೆ ಗೌರವ ಸೂಚಿಸಲಾಗಿದೆ. ಅವರ ದೇಶ ಪ್ರೇಮವನ್ನು, ಅವರ ಆದರ್ಶಗಳನ್ನು ಇಂದಿನ ಯುವಜನತೆ ಪಾಲಿಸಿ ಎಂದು ಕರೆನೀಡಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ,ಯು,ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಎಲ್ಲಾ ಸಮುದಾಯದ ಐವತ್ತು ಮಂದಿ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ತಾಲ್ಲೂಕು ಪಂಚಾಯ್ತಿ ಸದಸ್ಯೆ ಶೋಭಾ ಶಶಿಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸಿಡಿಪಿಒ ಲಕ್ಷ್ಮೀದೇವಮ್ಮ, ನಗರಸಭಾ ಆಯುಕ್ತ ಛಲಪತಿ, ನಗರಸಭಾ ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಒಕ್ಕಲಿಗ ಯುವಸೇನೆ ಸಂಘದ ಅಧ್ಯ್ಯಕ್ಷ ವೆಂಕಟಸ್ವಾಮಿ, ಎ.ಎಂ.ತ್ಯಾಗರಾಜ್, ಕೆಂಪರೆಡ್ಡಿ, ದೇವರಾಜ್, ಸುಬ್ಬಾರೆಡ್ಡಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸರ್ಕಾರಿ ಆಸ್ಪತ್ರೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ
ಬಡತನ, ಅಜ್ಞಾನ, ಅನಕ್ಷರತೆ, ಮೂಢನಂಬಿಕೆ ಹಾಗೂ ಬಾಲ್ಯವಿವಾಹ ಇತ್ಯಾದಿ ಕಾರಣಗಳಿಂದ ಜನಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಬಾಲ್ಯವಿವಾಹದ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಶಾಸಕ ರಾಜಣ್ಣ ತಿಳಿಸಿದರು.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜನಸಂಖ್ಯೆ ಹೆಚ್ಚಳದ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆ ಯರು ಹೆಚ್ಚು ಜವಾಬ್ದಾರಿ ನಿರ್ವಹಿಸ ಬೇಕು. ಜನಸಂಖ್ಯೆ ಹೆಚ್ಚಾದಂತೆಲ್ಲಾ ದೇಶದಲ್ಲಿ ಅನೇಕ ಸಮಸ್ಯೆಗಳು ಉದ್ವವಿಸುತ್ತಿವೆ. ಮೂಲಭೂತ ಸೌಕರ್ಯಗಳಾದ ಮನೆ, ನೀರು , ನಿರುದ್ಯೋಗ ಸಮಸ್ಯೆ, ಮುಂತಾದ ಸಮಸ್ಯೆಗಳಿಗೆಲ್ಲ ವಿದ್ಯೆ ಒಂದೇ ಪರಿಹಾರವಾಗಿದೆ ಎಂದು ತಿಳಿಸಿದರು.
ತಹಸಿಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿ, ಜನಸಂಖ್ಯೆ ಹೆಚ್ಚಾದಂತೆಲ್ಲಾ ನಿರುದ್ಯೋಗ ಸಮಸ್ಯೆ ಸಹ ಹೆಚ್ಚಾಗುತ್ತಿದ್ದು, ಎಲ್ಲರಿಗೂ ಉದ್ಯೋಗ ಸೃಷ್ಟಿ ಮಾಡಲು ಸಾದ್ಯವಿಲ್ಲ, ಯುವಕರು ಸರ್ಕಾರ ಕೊಡುವ ಸವಲತ್ತುಗಳನ್ನು ಉಪಯೋಗಿಸಿಕೊಂಡು ಸ್ವಯಂ ಉದ್ಯೋಗ ಪ್ರಾರಂಬಿಸಿ, ಬೇರೆಯವರಿಗೂ ಉದ್ಯೋಗ ನೀಡಿ ಎಂದು ತಿಳಿಸಿದರು.
ನಗರದ ಸರ್ಕಾರಿ ಆಸ್ಪತ್ರೆಯ ಆವರಣದಿಂದ ಡಾಲ್ಪಿನ್ ಶಾಲಾ ಮಕ್ಕಳಿಂದ ವಿಶ್ವ ಜನಸಂಖ್ಯಾ ದಿನಾಚರಣೆ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗುವ ಮೂಲಕ ಜನಜಾಗೃತಿ ಮೂಡಿಸಿದರು.
ಕ್ಷೇತ್ರ ಶಿಕ್ಷಣಾದಿಕಾರಿ ರಘುನಾಥರೆಡ್ಡಿ, ನಗರಸಭಾ ಆಯುಕ್ತ ಛಲಪತಿ, ಸಿ.ಡಿ.ಪಿ.ಓ ಲಕ್ಷೀದೇವಮ್ಮ, ನಗರಸಭಾ ಉಪಾದ್ಯಕ್ಷೆ ಪ್ರಭಾವತಿ ಸುರೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಅನಿಲ್ ಕುಮಾರ್, ಆಶಾ ಕಾರ್ಯಕರ್ತೆರು, ವಿದ್ಯಾರ್ಥಿಗಳು ಹಾಜರಿದ್ದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ವತಿಯಿಂದ ಸಹಿ ಸಂಗ್ರಹ ಅಭಿಯಾನ
ಕೆರೆಗಳ ಡಿನೋಟಿಫೈ ಮಾಡಲು ಸರ್ಕಾರ ‘ಕರ್ನಾಟಕ ಭೂ ಕಂದಾಯ ಕಾಯ್ದೆ–1964’ರ ಕಲಂ 68ಕ್ಕೆ ತಿದ್ದುಪಡಿ ತರುವ ತಯಾರಿ ನಡೆಸಿದೆ. ದಿನೇ ದಿನೇ ಪಾತಾಳಕ್ಕೆ ಕುಸಿಯುತ್ತಿರುವ ಅಂತರ್ಜಲ ಪುನಶ್ಚೇತನಗೊಳಿಸುವ ಕೆಲಸ ಬಿಟ್ಟು, ಜನಹಿತಕ್ಕೆ ಗಂಭೀರ ಪೆಟ್ಟು ನೀಡುವಂತಹ ಕೆಲಸಕ್ಕೆ ಮುಂದಾಗಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಆಂಜನೇಯರೆಡ್ಡಿ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸೋಮವಾರ ರಾಜ್ಯದಲ್ಲಿ ಬತ್ತಿಹೋದ ಕೆರೆ, ಕಟ್ಟೆ ಹಾಗೂ ಹಳ್ಳಗಳನ್ನು ಡಿನೋಟಿಫೈ ಮಾಡುವ ಕಂದಾಯ ಇಲಾಖೆಯ ಪ್ರಸ್ತಾವ ವಿರೋಧಿಸಿ, ಕೆರೆಗಳ ಪುನಶ್ಚೇತನಕ್ಕೆ ಆಗ್ರಹಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡ ಬಯಲುಸೀಮೆಯ ಸಾರ್ವಜನಿಕರ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಅಭಿಯಾನ ಯಶಸ್ವಿಗೊಳಿಸಿ ಜನಹಿತ ಮರೆತ ಸರ್ಕಾರಕ್ಕೆ ಸರಿಯಾಗಿ ಪಾಠ ಕಲಿಸಬೇಕಿದೆ. ತಪ್ಪು ನಿರ್ಧಾರದಿಂದ ಹಿಂದೆ ಸರಿದು ಕ್ಷಮೆ ಕೇಳುವಂತೆ ಮಾಡಬೇಕು. ಮನುಷ್ಯನ ಜೀವನ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅವಲಂಬಿತವಾಗಿದೆ. ಅವುಗಳನ್ನು ರಕ್ಷಿಸಬೇಕಾದ ಸಿದ್ದರಾಮಯ್ಯ ಅವರ ಸರ್ಕಾರವೇ ಭೂಮಾಫಿಯಾದವರ ಕೈಗೆ ಕೊಡುವ ಹುನ್ನಾರ ನಡೆಸಿದೆ. ಇದನ್ನು ಪ್ರತಿಭಟಿಸುವುದು ನಮ್ಮ ಆದ್ಯ ಕರ್ತವ್ಯ. ಜನ ಮತ್ತು ಸಂವಿಧಾನ ವಿರೋಧಿ ಈ ಕ್ರಮದ ವಿರುದ್ಧ ನಾವೆಲ್ಲ ಪ್ರಬಲ ಪ್ರತಿಭಟನೆ ಮಾಡಿ, ರಾಜ್ಯದಾದ್ಯಂತ ಪರಿಣಾಮಕಾರಿ ಜನಾಭಿಪ್ರಾಯ ರೂಪಿಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಕೃಷಿ ಪ್ರಧಾನವಾದ ದೇಶದಲ್ಲಿ ಸರ್ಕಾರ ಕೃಷಿಗೆ ಪೂರಕವಾದ ಜಲಮೂಲಗಳ ಸಂರಕ್ಷಿಸಬೇಕು. ಅದನ್ನು ಬಿಟ್ಟು ಅವೈಜ್ಞಾನಿಕ ನಿರ್ಧಾರಗಳ ಮೂಲಕ ವ್ಯತಿರಿಕ್ತ ನಿರ್ಧಾರ ತೆಗೆದುಕೊಳ್ಳುವುದು ಮುಂದಿನ ಪೀಳಿಗೆಗಳ ದೃಷ್ಟಿಯಿಂದ ಅಪಾಯಕಾರಿ. ಸರ್ಕಾರ ಕೂಡಲೇ ಈ ಆಘಾತಕಾರಿ ನಿರ್ಧಾರದಿಂದ ಹಿಂದೆ ಸರಿಯಬೇಕು’ ಎಂದು ಅವರು ಒತ್ತಾಯಿಸಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾ ಉಪಾಧ್ಯಕ್ಷ ಮಳ್ಳೂರು ಹರೀಶ್ ಮಾತನಾಡಿ, ಜನ ಜಾನುವಾರು, ಪಶು–ಪಕ್ಷಿಗಳ ಜೀವನ ಕೆರೆಗಳ ನೀರಿನ ಮೇಲೆ ಅವಲಂಬಿತವಾಗಿದೆ. ಅಂತೆಯೇ ನೆಲ, ಜಲ, ಅರಣ್ಯ ಮತ್ತು ದೇಶಿ ಬೀಜಗಳನ್ನು ಸಂರಕ್ಷಣೆ ಮಾಡಬೇಕಿದೆ. ಜನಹಿತ ಮರೆತು ಸಂವಿಧಾನ ಬದ್ಧ ಚೌಕಟ್ಟನ್ನು ಮೀರಿ ಕೆಲಸ ಮಾಡುತ್ತಿರುವ ಸರ್ಕಾರವನ್ನು ಎಚ್ಚರಿಸುವ ಕೆಲಸಕ್ಕೆ ನಾವೆಲ್ಲ ಮುಂದಾಗಬೇಕಿದೆ ಎಂದು ಹೇಳಿದರು.
ಒಂದೆಡೆ ರಾಜ್ಯ ಸರ್ಕಾರ ಕೆರೆಗಳ ಹೂಳೆತ್ತಿ ನೀರು ತುಂಬಿಸಲು ಸಾವಿರಾರು ಕೋಟಿ ಹಣ ವ್ಯಯ ಮಾಡಿ ಯೋಜನೆಯನ್ನು ರೂಪಿಸುತ್ತಿದ್ದರೆ, ಇನ್ನೊಂದೆಡೆ ಕೆರೆಗಳನ್ನು ಡಿನೋಟಿಫೈ ಮಾಡುವ ಮೂಲಕ ದ್ವಂದ್ವ ನೀತಿಯನ್ನು ಅನುಸರಿಸುತ್ತಿರುವುದು ಸಮಂಜಸವಲ್ಲ ಎಂದರು.
‘ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಬಯಲುಸೀಮೆಯ ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಈ ಅಭಿಯಾನ ನಡೆಸಲಾಗುತ್ತದೆ. ಸರ್ಕಾರದ ತೀರ್ಮಾನದ ವಿರುದ್ಧ ಸಾರ್ವಜನಿಕರಿಂದ ಸಹಿ ಸಂಗ್ರಹಿಸಿ, ರಾಜ್ಯಪಾಲರಿಗೆ ದೂರು ಸಲ್ಲಿಸಲಾಗುತ್ತದೆ’ ಎಂದು ಹೇಳಿದರು.
ಆನೂರು ದೇವರಾಜ್, ನಾಗದೇನಹಳ್ಳಿ ನಾರಾಯಣಸ್ವಾಮಿ, ವೆಂಕಟಸ್ವಾಮಿ, ಹಿತ್ತಲಹಳ್ಳಿ ಗೋಪಾಲಗೌಡ, ವಿ.ಸಿ.ಮಂಜುನಾಥ್, ಕುಚ್ಚಣ್ಣ ಅನಂತು, ಅಬ್ಲೂಡು ಆರ್.ದೇವರಾಜ್, ಹಿತ್ತಲಹಳ್ಳಿ ಸುರೇಶ್, ರಾಮಚಂದ್ರಪ್ಪ, ಮಂಜುನಾಥ್, ರೈತಸಂಘದ ರವಿಪ್ರಕಾಶ್, ಮಂಜುನಾಥ್, ಪ್ರತೀಶ್, ಮದನ್, ದರ್ಶನ್, ಎ.ಎಂ.ತ್ಯಾಗರಾಜ್, ಮುನಿರಾಜು, ಮುರಳಿ, ಲಕ್ಷ್ಮಣ, ಶ್ರೀನಿವಾಸ್, ನವೀನ್ ಅಭಿಯಾನದಲ್ಲಿ ಭಾಗವಹಿಸಿದ್ದರು.

