Home Blog Page 407

ಕರ್ನಾಟಕ ಪ್ರದೇಶ ಜನತಾದಳ (ಜಾತ್ಯಾತೀತ) ಪಕ್ಷ ‘ವಕ್ತಾರ’ರ ನೇಮಕ

0

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಚಿಲಕಲನೇರ್ಪು ಹೋಬಳಿಯ ಸಾಲುಮಾಕನಹಳ್ಳಿಯ ವಕೀಲ ಎಸ್‌.ಬಿ.ಶ್ರೀನಿವಾಸ ಅವರನ್ನು ಕರ್ನಾಟಕ ಪ್ರದೇಶ ಜನತಾದಳ (ಜಾತ್ಯಾತೀತ) ಪಕ್ಷ ‘ವಕ್ತಾರ’ ರನ್ನಾಗಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ನೇಮಕ ಮಾಡಿದ್ದಾರೆ.

ಯೋಗ, ಧ್ಯಾನ, ಪ್ರಾಣಾಯಾಮಗಳಿಂದ ಆರೋಗ್ಯಕರ ಜೀವನ ನಡೆಸಲು ಸಾಧ್ಯ

0

ಆಧುನಿಕ ಒತ್ತಡದ ಬದುಕಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಒಂದು ಸವಾಲಾಗಿದೆ. ಯೋಗ, ಧ್ಯಾನ, ಪ್ರಾಣಾಯಾಮಗಳಿಂದ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸೌಪರ್ಣಿಕ ವಲಯ ಸಂಯೋಜಕ ಶ್ರೀಕಾಂತ್‌ ತಿಳಿಸಿದರು.
ತಾಲ್ಲೂಕಿನ ಮೇಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮುದಾಯ ಭವನದಲ್ಲಿ ಬುಧವಾರ ಸಂಜೆ ನಡೆದ ಗ್ರಾಮಾಂತರ ಮೂರನೇ ಉಚಿತ ಯೋಗ ಶಿಕ್ಷಣ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಿತ್ಯ ಯೋಗ ಮಾಡುವುದರಿಂದ ಮನುಷ್ಯನ ದೇಹ ಸ್ಥಿತಿ ಹತೋಟಿಯಲ್ಲಿರುತ್ತದೆ. ಶಿಸ್ತು, ಸಂಸ್ಕಾರ, ಸಂಯಮ, ಏಕಾಗ್ರತೆ ಮತ್ತು ಮನಸ್ಸಿನ ನಿಯಂತ್ರಣಗಳು ಯೋಗದ ಉಪಯೋಗಗಳಾಗಿವೆ. ನಿರಂತರ ಯೋಗ ಸಾಧನೆಯಿಂದ ಖಾಯಿಲೆಗಳಿಂದ ದೂರವುಳಿಯಬಹುದು.
ಸರಳ ಜೀವನ, ಉದಾತ್ತ ಚಿಂತನೆ ಇದು ಯೋಗದ ಒಂದು ವಿಧಾನ. ಈ ರೀತಿಯಲ್ಲಿ ಬದುಕಿ ಜಗತ್ತಿಗೆ ಬೆಳಕು ನೀಡಿದವರು ನಮ್ಮ ಋಷಿಮುನಿಗಳು. ಬೆಳಗ್ಗೆ ಬೇಗ ಎದ್ದರೆ ಶರೀರ ಮತ್ತು ನರಗಳು ಚೈತನ್ಯಗೊಳ್ಳುವುವು, ಮನಸ್ಸು ನಿರ್ಮಲವಾಗುವುದು, ಬುದ್ಧಿ ಚುರುಕಾಗುವುದು. ಇಷ್ಟು ಮಾತ್ರವಲ್ಲದೇ, ಉದಯ ಸೂರ್ಯನ ಎಳೆಯ ಕಿರಣಗಳಲ್ಲಿರುವ ವಿಟಮಿನ್ ‘ಡಿ’ಯು ನಮಗೆ ಯಥೇಚ್ಛವಾಗಿ ಸಿಗುತ್ತದೆ. ಇದರಿಂದ ಮಲಬದ್ಧತೆ, ಸಂಧಿವಾತ, ತಲೆನೋವು, ಕಣ್ಣಿನ ದೋಷ, ಮಾನಸಿಕ ಒತ್ತಡ ನಿವಾರಣೆಯಾಗುವುದು. ನಂತರ ನಮ್ಮ ನಿತ್ಯಕರ್ಮಾದಿಗಳನ್ನು ಮುಗಿಸಿ ಕನಿಷ್ಠ ಅರ್ಧಗಂಟೆಯಾದರೂ ವ್ಯಾಯಾಮ, ಸೂರ್ಯನಮಸ್ಕಾರ, ಆಸನ, ಪ್ರಾಣಾಯಾಮ ಮಾಡಬೇಕು. ಇದರಿಂದ ಶರೀರ ಸದೃಢಗೊಳ್ಳುವುದು. ನಾವು ಯಾವುದೇ ಕಾರ್ಯ ಮಾಡಬೇಕಾದಲ್ಲಿ ಸದೃಢವಾದ ಶರೀರ ಬಹಳ ಮುಖ್ಯ. ದುರ್ಬಲ ಶರೀರದಿಂದ ಯಾವ ಕಾರ್ಯ ಮಾಡಲೂ ಸಾಧ್ಯವಿಲ್ಲ ಎಂದು ವಿವರಿಸಿದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಮೇಲೂರು ಶಾಖೆಯ ಅಧ್ಯಕ್ಷ ಜಯದೇವ್‌, ಯೋಗಶಿಕ್ಷಕರಾದ ಸುಂದರಾಚಾರಿ, ಲಕ್ಷ್ಮಣ್‌, ಯೋಗ ಬಂಧುಗಳಾದ ಎನ್‌.ಶಿವಕುಮಾರ್‌, ಧರ್ಮೇಂದ್ರ, ಶ್ರೀನಿವಾಸ್‌, ಈಶ್ವರಮ್ಮ ಹಾಜರಿದ್ದರು.

ನಾಗರ ಪಂಚಮಿಯಂದು ಲಕ್ಷಾಂತರ ಲೀಟರ್ ಹಾಲು ವ್ಯಯವಾಗುತ್ತಿದೆ

0

ಹಾವು ಹಾಲನ್ನು ಕುಡಿಯುವುದಿಲ್ಲ. ನಾಗರ ಪಂಚಮಿಯಂದು ಲಕ್ಷಾಂತರ ಲೀಟರ್ ಹಾಲು ಹಾವಿಗೆ ಎರೆಯುವ ನೆಪದಲ್ಲಿ ವೃಥಾ ವ್ಯಯವಾಗುತ್ತಿದೆ. ಅದರ ಬದಲು ಅಗತ್ಯವಿರುವವರಿಗೆ ನೀಡಿ ಎಂದು ಮಾನವ ಬಂಧುತ್ವ ವೇದಿಕೆಯ ತಾಲ್ಲೂಕು ಸಂಚಾಲಕ ಕುಂದಲಗುರ್ಕಿ ಮುನೀಂದ್ರ ತಿಳಿಸಿದರು.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಮಾನವ ಬಂಧುತ್ವ ವೇದಿಕೆ ಹಾಗೂ ಇತರ ಪ್ರಗತಿಪರ ಸಂಘಟನೆಗಳ ಸದಸ್ಯರೊಂದಿಗೆ ರೋಗಿಗಳಿಗೆ ಹಾಲಿನ ಪ್ಯಾಕೆಟ್‌ ವಿತರಿಸಿ ಅವರು ಮಾತನಾಡಿದರು.
ನಾಗರ ಪಂಚಮಿ ನಿಮಿತ್ತ ಮಕ್ಕಳಿಗೆ, ರೋಗಿಗಳಿಗೆ, ವೃದ್ಧರಿಗೆ ಹಾಲು ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಬಹುದಾಗಿದೆ. ಹಾಲಿನಂತಹ ಮನಸ್ಸಿನಿಂದ ಪ್ರಯತ್ನಿಸಿದರೆ ವಿಷತುಂಬಿಕೊಂಡಿರುವ ವೈರಿಯ ಮನಸ್ಸನ್ನು ಗೆಲ್ಲಬಹುದು, ಆತನನ್ನು ಸರಿದಾರಿಗೆ ತರಬಹುದು ಎಂಬುದನ್ನು ನಾಗರಪಂಚಮಿ ಹಬ್ಬ ಸಂಕೇತಿಸುತ್ತದೆ. ಈ ತತ್ವವನ್ನು ಅಳವಡಿಸಿಕೊಳ್ಳಬಹುದು. ಕಲ್ಲು ನಾಗರಕ್ಕೆ ಹಾಲೆರೆಯುವುದರಿಂದ ಯಾವುದೇ ಪ್ರಯೋಜನವಿಲ್ಲ.
ಅಮೃತ ಸಮಾನವಾದ ಹಾಲನ್ನು ನಾವು ವ್ಯರ್ಥವಾಗಿ ವ್ಯಯಿಸಬಾರದು. ಪವಿತ್ರ ಗೋಮಾತೆಯಿಂದ ಬಂದ ಹಾಲು ಇನ್ನೊಂದು ಜೀವಕ್ಕೆ ಸೇರಬೇಕು ವಿನಾ ಕಲ್ಲುಗಳಿಗಲ್ಲ. ನಾಗರ ಪಂಚಮಿ ಹಬ್ಬದ ನಿಮಿತ್ಯ ನಿಜ ಹಾವುಗಳನ್ನು ಆದಷ್ಟು ರಕ್ಷಿಸಿ, ಪರಿಸರ ಸಮತೋಲನ ಕಾಪಾಡಬೇಕು. ವೈಜ್ಞಾನಿಕ ಹಿನ್ನೆಲೆಯ ಸಂಪ್ರದಾಯಗಳನ್ನು ಅರಿತು ಹಬ್ಬ ಆಚರಿಸೋಣ. ಮಳೆಗಾಲದ ಪ್ರಾರಂಭದ ಈ ಋತುಮಾನ ಹಾವುಗಳ ಸಂತಾನೋತ್ಪತ್ತಿಯ ಕಾಲ, ಮೊಟ್ಟೆಯೊಡೆದು ಮರಿ ಹಾವುಗಳು ಹೊರ ಬಂದು ತಮ್ಮ ಜೀವನ ಪ್ರಾರಂಭಿಸುತ್ತವೆ. ಹಾವುಗಳ ರೈತನ ಮಿತ್ರ. ಇಲಿಗಳನ್ನು ತಿಂದು ಬೆಳೆಗಳ ರಕ್ಷಣೆಯಲ್ಲಿ ಸಹಾಯಕವಾಗುವ ಪ್ರಾಣಿ ಎಂದು ಹೇಳಿದರು.
ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಬೊಮ್ಮೆಕಲ್ಲು ವೆಂಕಟೇಶ್‌, ಪ್ರಗತಿಪರ ಸಂಘಟನೆಗಳ ನಾಗನರಸಿಂಹ, ಎಸ್‌.ಎಂ.ಮಂಜುನಾಥ್‌, ದೇವರಮಳ್ಳೂರು ಕೃಷ್ಣಪ್ಪ, ಕೇಶವ, ನವೀನ, ಮಂಜುನಾಥ, ಅಕ್ರಂ ಹಾಜರಿದ್ದರು.

ಶಿಡ್ಲಘಟ್ಟದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ನೂತನ ಬಸ್‌ ಸಂಚಾರ ಶುಭಾರಂಭ

0

ನಗರ ಹಾಗೂ ತಾಲ್ಲೂಕಿನ ಜನರ ಬಹು ದಿನಗಳ ಬೇಡಿಕೆಯ ಮೇರೆಗೆ ಶಿಡ್ಲಘಟ್ಟದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಕೆಎಸ್‌ಆರ್‌ಟಿಸಿ ಬಸ್ಸನ್ನು ಪ್ರತಿದಿನ ಮಧ್ಯಾಹ್ನ ಮೂರು ಗಂಟೆಗೆ ಹೊರಡುವಂತೆ ಶುಕ್ರವಾರ ಚಾಲನೆ ನೀಡಲಾಯಿತು.
ಶಿಡ್ಲಘಟ್ಟದಿಂದ ಹೊರಟು ವಿಜಯಪುರ, ದೇವನಹಳ್ಳಿ, ಬೆಂಗಳೂರು, ಮದ್ದೂರು, ಮಳವಳ್ಳಿ, ಕೊಳ್ಳೇಗಾಲ ಮಾರ್ಗವಾಗಿ ಸಾಗಿ ಮಲೆಮಹದೇಶ್ವರ ಬೆಟ್ಟವನ್ನು ಸಂಜೆ 9.30 ಗಂಟೆಗೆ ಬಸ್‌ ಮಲೆಮಹದೇಶ್ವರ ಬೆಟ್ಟ ತಲುಪುತ್ತದೆ.
‘ನಮ್ಮ ಭಾಗದಿಂದ ಬಹಳಷ್ಟು ಜನರು ಮಹದೇಶ್ವರ ಬೆಟ್ಟಕ್ಕೆ ಹೋಗುವುದು ವಾಡಿಕೆ. ಈ ನೂತನ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರದಿಂದ ಭಕ್ತರು, ರೈತರು ಹಾಗೂ ಪ್ರವಾಸಿಗರಿಗೆ ಅನುಕೂಲಕರವಾಗಿದೆ. ರಾತ್ರಿ ಬೆಟ್ಟವನ್ನು ತಲುಪಿ ದೇವರ ಪೂಜೆಯಲ್ಲಿ ಪಾಲ್ಗೊಳ್ಳಬಹುದು. ಅಲ್ಲಿಯೇ ತಂಗಿದ್ದು ಮುಂಜಾನೆಯ ಪೂಜೆಯಲ್ಲೂ ಪಾಲ್ಗೊಂಡು ಅಲ್ಲಿಂದ ಬೆಳಿಗ್ಗೆ 7.30ಕ್ಕೆ ಹೊರಡುವ ಅದೇ ಬಸ್‌ನ ಮೂಲಕ ಬರಬಹುದಾಗಿದೆ. ಚಿಕ್ಕಬಳ್ಳಾಪುರ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಅಂತೋಣಿ ಜಾರ್ಜ್‌, ವಿಭಾಗೀಯ ಸಂಚಾಲನಾಧಿಕಾರಿ ಶ್ರೀಧರ್‌ ಹಾಗೂ ಚಿಂತಾಮಣಿ ಘಟಕದ ವ್ಯವಸ್ಥಾಪಕ ಶಂಕರ್‌ ಅವರು ಜನರ ಅನುಕೂಲಕ್ಕಾಗಿ ಬಸ್‌ ಸೌಲಭ್ಯ ಒದಗಿಸಿದ್ದಾರೆ’ ಎಂದು ವಾಯು ಸೇನೆಯ ನಿವೃತ್ತ ಅಧಿಕಾರಿ ಎಸ್‌.ವಿ.ಅಯ್ಯರ್‌ ತಿಳಿಸಿದರು.
ಚಿಕ್ಕಬಳ್ಳಾಪುರ ವಿಭಾಗೀಯ ಸಂಚಾರ ಸಹಾಯಕ ಮಜೀದ್‌, ಬಸ್‌ ನಿಲ್ದಾಣದ ಅಧಿಕಾರಿ ಮುನಿಯಪ್ಪ, ನಿಲ್ದಾಣದ ನಿರ್ವಾಹಕ ದಸ್ತಗೀರ್‌, ಕನಕ ನಗರದ ನಾರಾಯಣಸ್ವಾಮಿ, ವೆಂಕಟರಮಣಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.

ಚನ್ನಕೇಶವ ಸ್ವಾಮಿಯವರ ತಿರುಕಲ್ಯಾಣೋತ್ಸವ

0

ತಾಲ್ಲೂಕಿನ ಕೊತ್ತನೂರು ಗ್ರಾಮದ ಚನ್ನಕೇಶ್ವರಸ್ವಾಮಿ ದೇವಾಲಯದಲ್ಲಿ ಭಾನುವಾರ ಶ್ರೀದೇವಿ ಭೂದೇವಿ ಸಹಿತ ಶ್ರೀಚನ್ನಕೇಶವ ಸ್ವಾಮಿಯವರ ತಿರುಕಲ್ಯಾಣೋತ್ಸವ ಹಾಗು ಶ್ರೀ ಮಹಾಸುದರ್ಶನ ನಾರಸಿಂಹ ಹೋಮವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ಎರಡು ದಿನಗಳ ಕಾಲ ಶನಿವಾರ ಮತ್ತು ಭಾನುವಾರ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ತಾಲ್ಲೂಕಿನ ವಿವಿದೆಡೆಗಳಿಂದ ಭಕ್ತರು ಆಗಮಿಸಿ ಪಾಲ್ಗೊಂಡರು.

ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದ ಚನ್ನಕೇಶ್ವರಸ್ವಾಮಿ ದೇವಾಲಯದಲ್ಲಿ ಭಾನುವಾರ ಶ್ರೀದೇವಿ ಭೂದೇವಿ ಸಹಿತ ಶ್ರೀಚನ್ನಕೇಶವ ಸ್ವಾಮಿಯವರ ತಿರುಕಲ್ಯಾಣೋತ್ಸವ ಹಾಗು ಶ್ರೀ ಮಹಾಸುದರ್ಶನ ನಾರಸಿಂಹ ಹೋಮವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು

ಭಾನುವಾರ ಬೆಳಗಿನಿಂದಲೇ ಪ್ರಾರಂಭವಾದ ಪೂಜಾ ಕಾರ್ಯಕ್ರಮದಲ್ಲಿ ಸುಪ್ರಭಾತ ಸೇವೆ, ವೇದ ಸ್ತೋತ್ರ ದಿವ್ಯಪ್ರಬಂಧ ಪಾರಾಯಣ, ಕಳಶಾರಾಧನೆ, ಪ್ರಧಾನಹೋಮ, ಪ್ರಾಣಪ್ರತಿಷ್ಠೆ ಹೋಮ, ವಿಶೇಷ ಸುದರ್ಶನ ನಾರಸಿಂಹ ಹೋಮ, ಪ್ರಾಯಶ್ಚಿತ್ತ ಹೋಮ, ಮಹಾಪೂರ್ಣಾಹುತಿ, ಕಳಶ ಗ್ರಾಮ ಪ್ರದಕ್ಷಿಣೆ, ಕುಂಭಾಭಿಷೇಕ, ತಿರುಕಲ್ಯಾಣ ಮಹೋತ್ಸವ, ಅಷ್ಟಾವಧಾನ ಸೇವೆ, ರಾಷ್ಟ್ರಾಶೀರ್ವಾದ, ಶಾತ್ತುಮೊರೈ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ, ಪ್ರಧಾನ ಅರ್ಚಕರಾದ ಚನ್ನಕೇಶವಾಚಾರ್, ರಾಜಘಟ್ಟದ ಉಮಾ ಮಹೇಶ್ವರಸ್ವಾಮಿ, ದೇವರಾಜ್, ಪಂಚಾಕ್ಷರಿರೆಡ್ಡಿ, ಮಾಜಿ ಡಿ,ವೈ.ಎಸ್.ಪಿ ಮುನಿರೆಡ್ಡಿ, ಜ್ಞಾನೇಶ್ವರ್‌ರಾವ್, ಕೇಶವರಾವ್ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
 

ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಕಲಿಸಿ

0

ಮಕ್ಕಳಿಗೆ ಪಾಠ ಪ್ರವಚನ, ಅಕ್ಷರ ಅಭ್ಯಾಸಕ್ಕಿಂತಲೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕೆಲಸ ಶಾಲೆಗಳಲ್ಲಿ ಆಗಬೇಕಿದೆ ಎಂದು ನಾಡೋಜ ಪ್ರಶಸ್ತಿ ಪುರಸ್ಕೃತ ಡಾ.ಮಹೇಶ್ ಜೋಷಿ ತಿಳಿಸಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ನಗರದ ಶ್ರೀಸರಸ್ವತಿ ಕಾನ್ವೆಂಟ್‌ನಲ್ಲಿ ಬುಧವಾರ ನಡೆದ ಶಾಲೆಗೊಂದು ಕನ್ನಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಡಾಕ್ಟರ್, ಇಂಜಿನಿಯರ್, ಸೈನಿಕ, ಐಎಎಸ್, ಐಪಿಎಸ್ ಅಧಿಕಾರಿ ಆಗಬೇಕೆಂಬ ಆಸೆಗಳನ್ನು ಬೆಳೆಸುವುದಕ್ಕೂ ಮೊದಲು ಉತ್ತಮ ನಾಗರೀಕ ಆಗಬೇಕೆಂಬ ಭಾವನೆ ಮಕ್ಕಳಲ್ಲಿ ಬೆಳೆಸಬೇಕಿದೆ ಎಂದು ಹೇಳಿದರು.
ವಿಜ್ಞಾನ ತಂತ್ರಜ್ಞಾನ ಮುಂದುವರೆದ ಈ ಜಗತ್ತಿನಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿದ್ದು ಅದನ್ನು ಬೆಳೆಸುವ ಕೆಲಸ ಎಲ್ಲರಿಂದಲೂ ಆಗಬೇಕಿದೆ ಎಂದು ನುಡಿದರು.
ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಶಾಲೆಗೊಂದು ಕನ್ನಡ ಕಾರ್ಯಕ್ರಮದ ಮೂಲಕ ಗಾಂಧಿ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಬಸವಣ್ಣ, ಕನಕದಾಸರು, ವಾಲ್ಮೀಕಿ ಮುಂತಾದ ಮಹಾನ್ ನಾಯಕರ ಆದರ್ಶ, ತತ್ವಗಳನ್ನು ತಿಳಿಸಿಕೊಡುವ ಯತ್ನ ಮಾಡಬೇಕು ಎಂದರು.
ತಹಸೀಲ್ದಾರ್ ಅಜಿತ್ ಕುಮಾರ್ ರೈ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ಕಸಾಪ ಜಿಲ್ಲಾಧ್ಯಕ್ಷ ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ಮಂಜುನಾಥ್, ರೈತ ಸಂಘದ ಅಧ್ಯಕ್ಷರಾದ ತಾದೂರು ಮಂಜುನಾಥ್‌, ರವಿಪ್ರಕಾಶ್‌, ವಿ.ಸೀತಾಲಕ್ಷ್ಮಿ, ಎನ್.ಶ್ರೀಕಾಂತ್, ಹಾಜರಿದ್ದರು.
 

ಅಕ್ರಮ ಮದ್ಯ ಮಾರಾಟ

0

ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯ ಕಾಲೋನಿಗಳಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು ತಕ್ಷಣ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಒತ್ತಾಯಿಸಿ ಚಾಮುಂಡೇಶ್ವರಿ, ವರಮಹಾಲಕ್ಷ್ಮಿ, ರಾಜೇಶ್ವರಿ ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಬುಧವಾರ ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ ಅವರಿಗೆ ಮನವಿಯನ್ನು ಸಲ್ಲಿಸಿದರು.

ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮ – ಸನ್ಮಾನ

0

ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆ ಬುಧವಾರ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಬಿ.ಎಸ್.ಎಫ್ ಯೋಧ ಉಮೇಶ್ ಅವರನ್ನು ಸನ್ಮಾನಿಸಿದರು. ಬಿಎಸ್‌ಎಫ್‌ ಯೋಧ ಜಯರಾಮ್, ಸಮಾಜ ಸೇವಕ ಸುನಿಲ್ ಕುಮಾರ್, ಮುಖ್ಯ ಶಿಕ್ಷಕ ಶಿವಶಂಕರ್, ಬಸಪ್ಪ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ನಾರಾಯಣಸ್ವಾಮಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮುನಿರಾಜ್, ಶಿಕ್ಷಕರಾದ ವಿಠ್ಠಲ್, ಶ್ರೀನಿವಾಸ್, ಶಿವಕುಮಾರ್, ನವೀನ್ ಕುಮಾರ್, ದೊಡ್ಡನಾಯ್ಕ, ಸವಿತ, ವಿನೋದಾ, ಶಿವಶಂಕರ್, ಶರ್ಫುದ್ಧಿನ್ ಹಾಜರಿದ್ದರು.

ದೇಶಕ್ಕಾಗಿ ಜೀವನ ತ್ಯಾಗ ಮಾಡಿದ ವೀರಯೋಧರ ಸೇವೆ ಅವಿಸ್ಮರಣೀಯ

0

ದೇಶಕ್ಕಾಗಿ ಜೀವನ ತ್ಯಾಗ ಮಾಡಿದ ವೀರಯೋಧರ ಸೇವೆ ಅವಿಸ್ಮರಣೀಯ. ನಿರ್ಭಯವಾಗಿ ಜೀವನ ಮಾಡಲು ಗಡಿಭಾಗದಲ್ಲಿ ಹಗಲು ರಾತ್ರಿ ಶತ್ರುಗಳ ಗುಂಡಿಗೆ ಎದೆಯೊಡ್ಡಿ ನಮ್ಮನ್ನು ರಕ್ಷಣೆ ಮಾಡುವ ಯೋಧರ ಸೇವೆ ಅನನ್ಯವಾಗಿದೆ. ಯುವಕರು ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು ಎಂದು ಗಡಿ ಭದ್ರತಾ ಪಡೆಯ ನಿವೃತ್ತ ಯೋಧ ಹಾಗೂ ಕಾರ್ಗಿಲ್‌ನ ಟೈಗರ್‌ ಹಿಲ್‌ ಕದನದಲ್ಲಿ ಪಾಲ್ಗೊಂಡಿದ್ದ ಜಯರಾಮ ಕೃಷ್ಣಪ್ಪ ತಿಳಿಸಿದರು.
ತಾಲ್ಲೂಕಿನ ಜೆ.ವೆಂಕಟಾಪುರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓಂ ಸಾಯಿ ಯುವ ಸೇವಾ ಸಂಘದ ಸದಸ್ಯರು ಹಾಗೂ ಜೆ.ವೆಂಕಟಾಪುರ ರಮೇಶ್‌ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಗಿಲ್‌ ವಿಜಯ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿಜಯಪುರ ಹೋಬಳಿ ನಲ್ಲೂರಿನವನಾದ ನಾನು ಕಷ್ಟದಲ್ಲಿ ಬೆಳೆದವನು. ಬಿಎಸ್‌ಎಫ್‌ ಸೇರಿದ ನಂತರ ನನ್ನ ಬದುಕು ಬದಲಾಯಿತು. ತ್ಯಾಗ ಬಲಿದಾನಕ್ಕೆ ಇನ್ನೊಂದು ಹೆಸರು ನಮ್ಮ ಸೈನಿಕರು. ಪ್ರಾಣದ ಹಂಗು ತೊರೆದು ಮಾತೃಭೂಮಿ ಸಾರ್ವಭೌಮತ್ವಕ್ಕೆ ಹೋರಾಡಿದ ಯೋಧರಿಗೆ ಋಣಿ ಆಗಿರಬೇಕು ಎಂದು ಹೇಳಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ಮಾತನಾಡಿ, ಪಾಕಿಸ್ಥಾನದ ಆಕ್ರಮಣದಿಂದ ಕಾರ್ಗಿಲ್‌ ಪ್ರದೇಶಗಳನ್ನು ಪುನರ್‌ ವಶಪಡಿಸಿಕೊಂಡು ಭಾರತದ ಸೇನಾ ಪರಾಕ್ರಮವನ್ನು ಜಗಜ್ಜಾಹೀರುಗೊಳಿಸಿದ ವೀರ ಸೈನಿಕರ ಸಾಹಸದ ಪ್ರತಿಕವಾದ ‘ಅಪರೇಷನ್‌ ವಿಜಯ್‌’ ಯಶಸ್ವೀ ಕಾರ್ಯಾಚರಣೆಯ ಹದಿನೇಳನೇ ವಾರ್ಷಿಕ ಸ್ಮರಣೆಯನ್ನು ಮಾಡಲಾಗುತ್ತಿದೆ.
ಹನ್ನೆರಡು ವರ್ಷಗಳ ಹಿಂದೆ, ಭಯೋತ್ಪಾದಕರ ನೆರವು ಪಡೆದು ಭಾರತವನ್ನೇ ಕಬಳಿಸಲು ಹೊರಟಿದ್ದ ಪಾಕಿಸ್ತಾನದ ಸಂಚನ್ನು ಪುಡಿಗಟ್ಟಿದ ನಮ್ಮ ಭಾರತದ ಹೆಮ್ಮೆಯ ವೀರಪುತ್ರರು, ತ್ಯಾಗ ಬಲಿದಾನ ಮಾಡಿ, ವೀರಾವೇಶದಿಂದ ಹೋರಾಡಿ, ನಮ್ಮನ್ನೆಲ್ಲಾ ರಕ್ಷಿಸಿದ್ದಾರೆ. ಅಂಥಾ ವೀರ ಯೋಧರಿಗೆ ನಮನ ಸಲ್ಲಿಸಲು ಜೂನ್ 26ನ್ನು ಪ್ರತಿವರ್ಷ ಕಾರ್ಗಿಲ್ ದಿವಸವನ್ನಾಗಿ ಆಚರಿಸುತ್ತೇವೆ. ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್‌ನೊಳಗೆ ನುಸುಳಿದವರು ನಮ್ಮ ಸೈನಿಕರಲ್ಲ ಎನ್ನುತ್ತಲೇ ಇದ್ದ ಪಾಕಿಸ್ತಾನವು, ಸದ್ದಿಲ್ಲದೆ ಭಾರತದ ಗಡಿಯೊಳಕ್ಕೆ ಉಗ್ರಗಾಮಿಗಳ ಸೋಗಿನಲ್ಲಿ ಒಳಗೆ ನುಗ್ಗಿತ್ತು ಎಂದು ವಿವರಿಸಿದರು.
ಯಣ್ಣಂಗೂರು ಗ್ರಾಮದ ಯೋಧ ರವಿಕುಮಾರ್‌ ಯೋಧರ ಬದುಕಿನ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು ಓಂ ಸಾಯಿ ಯುವ ಸೇವಾ ಸಂಘದ ಸದಸ್ಯರು ಹಾಗೂ ಜೆ.ವೆಂಕಟಾಪುರ ರಮೇಶ್‌ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ, ಲೇಖನ ಸಾಮಗ್ರಿ ಹಾಗೂ ಸಿಹಿಯನ್ನು ವಿತರಿಸಿದರು. ಯೋಧರಾದ ಜಯರಾಮ್‌ ಕೃಷ್ಣಪ್ಪ ಮತ್ತು ರವಿಕುಮಾರ್‌ ಅವರನ್ನು ಸನ್ಮಾನಿಸಲಾಯಿತು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ರಘುನಾಥ್‌, ಸದಸ್ಯ ಎನ್‌.ನಾಗೇಶ್‌, ಎಸ್‌ಡಿಎಂಸಿ ಅಧ್ಯಕ್ಷ ಎನ್‌.ವೆಂಕಟೇಶ್‌, ಮುಖ್ಯ ಶಿಕ್ಷಕಿ ಗೀತಾ, ಶಿಕ್ಷಕರಾದ ಆರ್‌.ವಿಕಾಸ್‌, ಜಿ.ಎಸ್‌.ಅಶ್ವತ್, ಎ.ಆನಂದಮ್ಮ, ವಿ.ದೇವಕಿ ಹಾಜರಿದ್ದರು.

ಸೈನಿಕರ ಹೋರಾಟದ ಫಲವೇ ಕಾರ್ಗಿಲ್ ವಿಜಯೋತ್ಸವ

0

ಪ್ರವಾಸಿಗರ ಸ್ವರ್ಗ ತಾಣವಾದ ಕಾಶ್ಮೀರದ ಕಾರ್ಗಿಲ್ ಪ್ರದೇಶದ ಮೇಲೆ 1999ರಲ್ಲಿ ನಡೆದ ಪಾಕಿಸ್ತಾನದ ಮೋಸದಿಂದ ದಾಳಿ ಮಾಡಿತು. ಈ ಕಾರ್ಗಿಲ್ ಕದನದಲ್ಲಿ ಕೆಚ್ಚೆದೆಯ ಹೋರಾಟ ನಡೆಸಿದ ಸೈನಿಕರ ಹೋರಾಟದ ಫಲವೇ ಕಾರ್ಗಿಲ್ ವಿಜಯೋತ್ಸವ. ನಿರಂತರ ದೇಶಸೇವೆಯಲ್ಲಿ ತೊಡಗಿರುವ ಸೈನಿಕರು ನಮ್ಮೆಲ್ಲರಿಗೂ ಪ್ರೇರಣಾದಾಯಿಗಳು ಎಂದು ಮುಖ್ಯ ಶಿಕ್ಷಕಿ ವೆಂಕಟರತ್ನಮ್ಮ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಕಾರ್ಗಿಲ್‌ ವಿಜಯ ದಿನವನ್ನು ಆಚರಿಸಿ ಅವರು ಮಾತನಾಡಿದರು.
ಸೇನೆಯ ಶೌರ್ಯವನ್ನು ಎಷ್ಟು ಹೊಗಳಿದರೂ ಸಾಕಾಗಲ್ಲ. ಅಂದು ಪಾಕಿಸ್ತಾನ ಕಾರಣವಿಲ್ಲದೇ ನಮ್ಮ ಮೇಲೆ ಬಂದಾಗ ಸೈನಿಕರು ತೋರಿದ ಕೆಚ್ಚೆದೆಯ ಹೋರಾಟ ಇತಿಹಾಸದಲ್ಲಿ ಅಜರಾಮರ ಎಂದು ಹೇಳಿದರು.
ಶಿಕ್ಷಕರ ಚಾಂದ್‌ ಪಾಷ ಕಾರ್ಗಿಲ್‌ ಯುದ್ಧ ನಡೆದ ರೀತಿಯ ಬಗ್ಗೆ ಮಕ್ಕಳಿಗೆ ವಿವರಿಸಿದರು.
ಶಿಕ್ಷಕರಾದ ಅಶೋಕ್‌, ಭಾರತಿ, ಸಿಬ್ಬಂದಿ ವೆಂಕಟಮ್ಮ, ಮಂಜುಳಮ್ಮ, ಮುನಿರತ್ನಮ್ಮ,ಗ್ರಾಮಸ್ಥರಾದ ಸಂಪತ್ತು, ಮುನಿರಾಜು, ಶ್ರೀಕಾಂತ್‌, ನಯನ್‌, ಶ್ರೀನಾಥ್‌, ವಸಂತ್‌, ಮಧು ಹಾಜರಿದ್ದರು.

ಹಿರಿಯ ನಾಗರಿಕರ ರಕ್ಷಣೆ ಮತ್ತು ಹಕ್ಕುಗಳ ಜಾಗೃತಿ ಮೂಡಿಸಬೇಕಾಗಿದೆ

0

ಸಮಾಜದಲ್ಲಿ ಹಿರಿಯ ನಾಗರಿಕರ ರಕ್ಷಣೆ ಮತ್ತು ಹಕ್ಕುಗಳ ಜಾಗೃತಿ ಮೂಡಿಸಬೇಕಾಗಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಡಿ.ಆರ್‌.ಮಂಜುನಾಥ್‌ ತಿಳಿಸಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಪೊಲೀಸ್‌ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಹಿರಿಯ ನಾಗರಿಕರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಂದು ಮನೆಯಲ್ಲಿಯೂ ಹಿರಿಯ ನಾಗರಿಕರಿಗೆ ಪ್ರೀತಿ-ಸಹಾನುಭೂತಿ ಸಿಗುತ್ತಿಲ್ಲ. ವಯಸ್ಸಾದ ಹಿರಿಯ ನಾಗರಿಕರಿಗೆ ಸಹಾನುಭೂತಿ ಹಾಗೂ ಪ್ರೀತಿ ನೀಡಿದಲ್ಲಿ ನೆಮ್ಮದಿ ಜೀವನ ಮಾಡಲು ಸಾಧ್ಯವಾಗುತ್ತದೆ.
ಎಲ್ಲಾ ಮನೆಗಳಲ್ಲೂ ಹಲವಾರು ಒತ್ತಡಗಳಿಂದ ತಂದೆ, ತಾಯಿ, ಅಜ್ಜ, ಅಜ್ಜಿ ಹಾಗೂ ಇತರ ಹಿರಿಯರ ಕಡಗಣನೆ ಸಾಮಾನ್ಯವಾಗಿದೆ. ಇದರಿಂದ ಅವರು ಖಿನ್ನತೆಗೊಳಗಾಗಿ ಹಲವಾರು ಸಮಸ್ಯೆಗಳಿಗೀಡಾಗುತ್ತಾರೆ. ಇದನ್ನು ದೂರ ಮಾಡುವ ಕೆಲಸ ಕಿರಿಯರಿಂದ ನಡೆಯಬೇಕು ಎಂದು ಅವರು ತಿಳಿಸಿದರು.
ಕಾನೂನು ಅರಿವು ಪ್ರತಿಯೊಬ್ಬ ನಾಗರಿಕರಿಗೆ ಅಗತ್ಯ. ಪ್ರಸ್ತುತ ಸನ್ನಿವೇಶದಲ್ಲಿ ಸಾರ್ವಜನಿಕರು ಎದುರಿ ಸುತ್ತಿರುವ ಕಾನೂನಾತ್ಮಕ ತೊಡಕು ಸರಿಪಡಿಸಲು ಕಾನೂನಿನ ಸಹಕಾರ ಅವಶ್ಯ ಎಂದು ತಿಳಿಸಿದರು.
ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ ಮಾತನಾಡಿ, ಯಾರಿಗಾದರೂ ಜೀವನ ಸಾಗಿಸಲು ತುಂಬಾ ಕಷ್ಟದ ಪರಿಸ್ಥಿತಿ ಎದುರಾಗಿದ್ದರೆ ತಕ್ಷಣ ಕಾನೂನು ಪ್ರಕಾರ ಸಿಗಬೇಕಾದ ಹಕ್ಕು ಪಡೆದುಕೊಳ್ಳಲು ಸಿದ್ದರಾಗಬೇಕು. ಹಿರಿಯ ನಾಗರಿಕರ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಲು ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಿವಿಲ್‌ ನ್ಯಾಯಾಧೀಶರಾದ ಎನ್‌.ಎ.ಶ್ರೀಕಂಠ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಕಾರ್ಯದರ್ಶಿ ಎಂ.ಬಿ.ಲೋಕೇಶ್‌, ಸರ್ಕಾರಿ ವಕೀಲೆ ಎಸ್‌.ಕುಮುದಿನಿ, ವಕೀಲರಾದ ಬೈರಾರೆಡ್ಡಿ, ಎಸ್‌.ಎನ್‌.ಚಂದ್ರಶೇಖರ್‌, ವಿ.ಎನ್‌.ನಾಗೇಂದ್ರಬಾಬು, ಮಂಜುನಾಥ, ಕೆ.ಎಂ.ನಾಗಮಣಿ, ವೀಣಾ, ವೆಂಕಟರೆಡ್ಡಿ, ಮಂಜುನಾಥ ಹಾಜರಿದ್ದರು.

ಮದ್ಯವ್ಯಸನದಿಂದ ಮುಕ್ತರನ್ನಾಗಿಸುವ ಶಿಬಿರ

0

ಮದ್ಯಪಾನವು ಅಮಲು ತರಿಸುವ ರೋಗವಾಗಿದ್ದು, ಮನುಷ್ಯನ ದೈಹಿಕ, ಮಾನಸಿಕ ಆರೋಗ್ಯವನ್ನು ಕೆಡಿಸಿ ಕೌಟುಂಬಿಕ, ಸಾಮಾಜಿಕವಾಗಿ ಕೆಟ್ಟ ಪರಿಣಾಮವನ್ನು ಬೀರಿ ಘನತೆ ಗೌರವವನ್ನು ಬೀದಿ ಪಾಲು ಮಾಡುತ್ತದೆ. ಮದ್ಯವ್ಯಸನದಿಂದ ಮುಕ್ತರನ್ನಾಗಿಸುವ ಶಿಬಿರವನ್ನು ಜಿಲ್ಲೆಯಲ್ಲಿಯೇ ಮೊಟ್ಟ ಮೊದಲ ಬಾರಿಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹಮ್ಮಿಕೊಳ್ಳಲಾಗುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ರಾಧಾಕೃಷ್ಣರಾವ್‌ ತಿಳಿಸಿದರು.
ನಗರದ ಕಾಳಿಕಾಂಭ ಕಮಠೇಶ್ವರ ಸಮುದಾಯ ಭವನದಲ್ಲಿ ಬುಧವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮದ್ಯವರ್ಜನ ಶಿಬಿರದ ಸಮಿತಿ ರಚನೆಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಅಮಲು ರೋಗಿಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆಯನ್ನು ನೀಡಲು ಎಂಟು ದಿನಗಳ ಶಿಬಿರವನ್ನು ತಾಲ್ಲೂಕಿನ ವರದನಾಯಕನಹಳ್ಳಿಯ ಪಟಾಲಮ್ಮ ದೇವಾಲಯದ ಸಮುದಾಯ ಭವನದಲ್ಲಿ ಆಯೋಜಿಸಲಿದ್ದೇವೆ. ಅದಕ್ಕಾಗಿ ಸ್ಥಳೀಯ ಜನಪ್ರತಿನಿಧಿಗಳ ಸಮಿತಿಯನ್ನು ರಚಿಸುತ್ತಿದ್ದು, ಶಿಬಿರದಲ್ಲಿ ವಿವಿಧ ತಜ್ಞ ಸಂಪನ್ಮೂಲ ವ್ಯಕ್ತಿಗಳು, ಸಾಂಸ್ಕೃತಿಕ ಪರಿಣಿತರು ಭಾಗವಹಿಸುವರು ಎಂದು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಇದುವರೆಗೂ ರಾಜ್ಯದಲ್ಲಿ 60 ಸಾವಿರಕ್ಕೂ ಅಧಿಕ ಜನರನ್ನು ಮದ್ಯದಿಂದ ಮುಕ್ತರನ್ನಾಗಿಸಲಾಗಿದೆ. ಜಿಲ್ಲೆಯಲ್ಲಿ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಪ್ರಥಮ ಶಿಬಿರ ನಡೆಯಲಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ದೇವರಾಜ್‌, ಗೌರವಾಧ್ಯಕ್ಷರಾಗಿ ಶ್ರೀನಿವಾಸ್‌, ಉಪಾಧ್ಯಕ್ಷರಾಗಿ ಪ್ರಭಾವತಿ ಸುರೇಶ್‌, ಅಪ್ಪೇಗೌಡನಹಳ್ಳಿ ಎ.ಎಂ.ತ್ಯಾಗರಾಜ್‌, ಹಿತ್ತಲಹಳ್ಳಿ ಮುನಿರಾಜು, ಕಾರ್ಯದರ್ಶಿ ಮಾಣಿಕ್ಯಮ್ಮ, ಕೋಶಾಧಿಕಾರಿ ಬೆಳ್ಳೂಟಿ ರಮೇಶ್‌ ಅವರನ್ನು ಆಯ್ಕೆ ಮಾಡಲಾಯಿತು.
ನಗರಸಭಾ ಉಪಾಧ್ಯಕ್ಷೆ ಪ್ರಭಾವತಿ ಸುರೇಶ್‌, ಸದಸ್ಯ ಬಾಲಕೃಷ್ಣ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಮೋಹನ್‌, ಆಟೋ ನಾರಾಯಣಸ್ವಾಮಿ, ಮೇಲ್ವಿಚಾರಕರಾದ ಶಶಿಕುಮಾರ್‌, ಮಮತ, ಸೇವಾಪ್ರತಿನಿಧಿಗಳು ಹಾಗೂ ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದರು.

ಹಂಡಿಗನಾಳ ಗ್ರಾಮ ಪಂಚಾಯ್ತಿಯನ್ನು ಬಯಲು ಶೌಚಾಲಯ ಮುಕ್ತವಾಗಿಸಲು ಪಣ

0

ಆದಷ್ಟು ಶೀಘ್ರವಾಗಿ ಹಂಡಿಗನಾಳ ಗ್ರಾಮ ಪಂಚಾಯ್ತಿಯನ್ನು ಬಯಲು ಶೌಚಾಲಯ ಮುಕ್ತವನ್ನಾಗಿಸಲು ಪಣತೊಟ್ಟಿದ್ದು, ಅದಕ್ಕಾಗಿ ಶೌಚಾಲಯ ನಿರ್ಮಿಸಿಕೊಳ್ಳಲು ವಿವಿಧ ರೀತಿಯಲ್ಲಿ ಅನುಕೂಲಗಳನ್ನು ಕಲ್ಪಿಸಿಕೊಡುತ್ತಿದ್ದೇವೆ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಬುಧವಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇನ್ನೂ ಶೌಚಾಲಯವನ್ನು ನಿರ್ಮಿಸಿಕೊಳ್ಳದವರಿಗೆ ಸೂಚನಾ ಪತ್ರವನ್ನು ನೀಡಿ ಅವರ ಮನವೊಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಚ್ಚ ಭಾರತ್‌ ಮಿಷನ್‌ ಯೋಜನೆಯಡಿಯಲ್ಲಿ ಶೌಚಾಲಯವನ್ನು ನಿರ್ಮಿಸಿಕೊಳ್ಳಲು ಮಂಜೂರಾತಿಯನ್ನು ನೀಡಲಾಗಿದೆ. ಆದರೂ ಶೌಚಾಲಯವನ್ನು ನಿರ್ಮಿಸಿಕೊಂಡಿಲ್ಲದವರಿಗೆ ಶೌಚಾಲಯವನ್ನು ನಿರ್ಮಿಸಿಕೊಳ್ಳದಿದ್ದಲ್ಲಿ ಪಡಿತರ ಹಾಗೂ ಇನ್ನಿತರ ಸೌಲಭ್ಯಗಳು ಸಿಗದಂತಾಗುತ್ತವೆ. ಶೌಚಾಲಯವನ್ನು ನಿರ್ಮಿಸಿಕೊಳ್ಳಲು ಬೇರೇನಾದರೂ ಅಡಚಣೆಯಿದ್ದಲ್ಲಿ ಅದನ್ನು ಜನಪ್ರತಿನಿಧಿಗಳ ಸಹಕಾರದಿಂದ ಪರಿಹರಿಸಲಾಗುವುದು. ಅಪ್ಪೇಗೌಡನಹಳ್ಳಿ, ಲಕ್ಕಹಳ್ಳಿ, ಪೈಲಹಳ್ಳಿ, ಕುರಿಬಚ್ಚನಪಡೆ, ಎಲ್‌.ಮುತ್ತುಗದಹಳ್ಳಿ ಗ್ರಾಮಗಳಲ್ಲಿನ ಶೌಚಾಲಯವಿರದವರಿಗೆ ಅದರ ಅಗತ್ಯದ ಬಗ್ಗೆ ಮನವೊಲಿಸುತ್ತಿದ್ದೇವೆ ಎಂದು ಹೇಳಿದರು.
ಗ್ರಾಮ ಪಂಚಾಯ್ತಿ ಸದಸ್ಯ ಎ.ಎಂ.ತ್ಯಾಗರಾಜ್‌ ಮಾತನಾಡಿ, ಎರಡು ವರ್ಷಗಳ ಹಿಂದೆ ನಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಶೌಚಾಲಯವನ್ನು ಹೊಂದಿರದ ಮನೆಗಳು 1,300 ಇದ್ದವು. ಈಗ 187 ಇವೆ. ಈ ದಿನ ಆ ಮನೆಗಳ ಬಳಿ ತೆರಳಿ ಅವರ ಸಮಸ್ಯೆಗಳನ್ನು ತಿಳಿದು ಶೌಚಾಲಯ ನಿರ್ಮಿಸಿಕೊಳ್ಳಲು ಬೇಕಾದ ಸಹಾಯವನ್ನು ಒದಗಿಸುತ್ತಿದ್ದೇವೆ. ನಮ್ಮ ಗುರಿ ಬಯಲು ಶೌಚಾಲಯ ಮುಕ್ತ ಗ್ರಾಮ ಪಂಚಾಯ್ತಿಯನ್ನು ಮಾಡುವುದಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಮುನಿಯಪ್ಪ, ಪಿಡಿಒ ಅಂಜನ್‌ಕುಮಾರ್‌, ಕಾರ್ಯದರ್ಶಿ ಶ್ರೀನಿವಾಸ್‌, ಕರ ವಸೂಲಿಗಾರ ಶ್ರೀನಿವಾಸ್‌, ಚನ್ನೇಗೌಡ, ಸಂಪತ್‌, ಶ್ರೀರಾಮ್‌, ದಾಸಪ್ಪ, ಮುನಿರಾಜು, ಅಂಬರೀಷ್‌, ನರಸಿಂಹಮೂರ್ತಿ ಹಾಜರಿದ್ದರು.
 

ಯಾವುದೇ ಸಮಸ್ಯೆಗೂ ಪರಿಹಾರವಿರುತ್ತದೆ

0

ಸಮಾಜದಲ್ಲಿ ಎದುರಾಗುವ ಯಾವುದೇ ಸಮಸ್ಯೆಗೂ ಪರಿಹಾರವಿರುತ್ತದೆ. ಪರಿಹಾರವನ್ನು ಹುಡುಕುವ ನಿಟ್ಟಿನಲ್ಲಿ ಯೋಚಿಸುವ ಮನಸ್ಸುಗಳು ಒಂದುಗೂಡಬೇಕು. ಆಗ ಮಾತ್ರ ಸಮಾಜ ಸುಧಾರಣೆ ಸಾಧ್ಯ ಎಂದು ಭಾರತ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಭರತ್‌ ಶೆಟ್ಟಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಭಾರತ ರಕ್ಷಣಾ ವೇದಿಕೆ ಶಿಡ್ಲಘಟ್ಟ ಶಾಖೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅವರು ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ಸಂಘಟನೆಗಳು ಬಹಳಷ್ಟಿವೆ. ಎಲ್ಲಾ ಸಂಘಟನೆಗಳ ಧ್ಯೇಯೋದ್ಧೇಶ ಬಹುತೇಕ ಒಂದೇ ಆಗಿದ್ದರೂ ಹತ್ತು ಹಲವಾರು ಕವಲುಗಳಂತೆ ಬಿಡಿಬಿಡಿಯಾಗಿವೆ. ಆದರೆ ಸಾಮಾಜಿಕ ಕಳಕಳಿ, ಬದ್ಧತೆ, ಸೇವೆ, ಪರಿಸರ ಕಾಳಜಿ ಹಾಗೂ ಪರಿಶುದ್ಧತೆ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಈ ಎಲ್ಲಾ ಗುಣಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಂಘಟನೆ ಯಶಸ್ವಿಯಾಗುತ್ತದೆ ಮತ್ತು ಸಾಫಲ್ಯ ಹೊಂದುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾರತ ರಕ್ಷಣಾ ವೇದಿಕೆ ಶಿಡ್ಲಘಟ್ಟ ಶಾಖೆಯ ಅಧ್ಯಕ್ಷರನ್ನಾಗಿ ಮಾಣಿಕ್ಯ ಅವರನ್ನು ಆಯ್ಕೆ ಮಾಡಲಾಯಿತು. ಪದಾಧಿಕಾರಿಗಳಾಗಿ ಡಿ.ಎನ್‌.ನವೀನ್‌ಕುಮಾರ್‌, ಡಿ.ಸುನಿಲ್‌ ಕುಮಾರ್‌, ಡಿ.ವಿ.ಶ್ರೀನಿವಾಸ, ಡಿ.ಜಿ.ಮಧು, ಓ.ಸಿ.ಮೋಹನ್‌, ಮನೋಹರ ಅವರನ್ನು ಆಯ್ಕೆ ಮಾಡಲಾಯಿತು.
ಭಾರತ ರಕ್ಷಣಾ ವೇದಿಕೆಯ ಹರೀಶ್‌, ದೇವರಾಜು, ನವನೀತ್‌ಶೆಟ್ಟಿ, ರಘು, ಕುಮಾರಗೌಡ, ರಾಜೇಶ್‌, ಸಂಜೀವ ಮೂರ್ತಿ, ಮಂಜುನಾಥ ಹಾಜರಿದ್ದರು.
 

ಕುಸಿಯುವ ಭೀತಿಯಲ್ಲಿ ಅಪರೂಪದ ಶೈವ-ವೈಷ್ಣವ ಸಂಗಮ ತಾಣ

0

ಅಪರೂಪದ ಶೈವ-ವೈಷ್ಣವ ಸಂಗಮ ಸ್ಥಳ ಎಂದೇ ಪ್ರಸಿದ್ಧವಾದ ನಗರದ ಅಗ್ರಹಾರ ಬೀದಿಯಲ್ಲಿರುವ ಶ್ರೀಕಂಠೇಶ್ವರ ಮತ್ತು ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಬಿರುಕುಗಳು ಕಾಣಿಸಿಕೊಂಡು ಕುಸಿಯುವ ಹಂತದಲ್ಲಿದೆ.
ದೇವಾಲಯದ ಒಂದು ಭಾಗದ ತೊಲೆ ಮುರಿದಿದ್ದು, ಗೋಡೆ ಬಿರುಕುಬಿಟ್ಟಿದೆ. ಭಕ್ತರು ದೇವಾಲಯ ಕುಸಿಯದಂತೆ ಕಲ್ಲುಚಪ್ಪಡಿಯನ್ನು ಆನಿಸಿಟ್ಟಿದ್ದಾರೆ. ಜೋರು ಮಳೆ ಬಿದ್ದರೆ ದೇವಾಲಯದ ಮೇಲ್ಚಾವಣಿ ಕುಸಿಯುವುದನ್ನು ತಡೆಯಲು ಸಾಧ್ಯವಿಲ್ಲದ ಪರಿಸ್ಥಿತಿ ಮೂಡಿದೆ.
ನಗರದ ದೇವಾಲಯಗಳಲ್ಲಿಯೇ ಅತ್ಯಂತ ಪ್ರಾಚೀನವಾದದ್ದು ಹಾಗೂ ಶೈವ ವೈಷ್ಣವ ದೇವರುಗಳು ಒಂದೆಡೆ ಇರುವ ವಿಶೇಷತೆಯನ್ನು ಈ ದೇವಾಲಯ ಹೊಂದಿದೆ. ಈ ದೇವಾಲಯದ ಮುಂಭಾಗದಲ್ಲಿ ಸುಮಾರು ನಾನ್ನೂರು ವರ್ಷಗಳಷ್ಟು ಹಳೆಯದಾದ ಕಲ್ಲಿನ ಚಪ್ಪಡಿಗಳಿಂದ ಚತುಷ್ಕೋನಾಕಾರದಲ್ಲಿ ನಿರ್ಮಿಸಲಾಗಿರುವ ಶಾಮಣ್ಣಬಾವಿ ಎಂಬ ಕಲ್ಯಾಣಿಯಿದೆ. ಗೌಡನ ಕೆರೆಯಿಂದ ಹೆಚ್ಚಾದ ನೀರು ಕಲ್ಯಾಣಿಗೆ ಹರಿಯುವಂತೆ ತೂಬನ್ನು ಈ ಕಲ್ಯಾಣಿಯಲ್ಲಿ ನಿರ್ಮಿಸಲಾಗಿದೆ. ಹಿಂದೆ ಸದಾಕಾಲ ನೀರಿರುತ್ತಿದ್ದ ಈ ಶಾಮಣ್ಣಬಾವಿಯು ನಗರದ ಎಲ್ಲಾ ಯುವಕರಿಗೆ ಈಜು ಕೊಳವಾಗಿತ್ತು.

ದೇವಸ್ಥಾನದಲ್ಲಿ ಕಾಣಿಸಿಕೊಂಡ ಬಿರುಕು

ಶಾಮಣ್ಣಬಾವಿಯ ಒಂದೆಡೆ ವಿಶಾಲ ಅರಳಿಕಟ್ಟೆಯಿದ್ದರೆ ಮತ್ತೊಂದೆಡೆ ಶಿವ ವಿಷ್ಣು ಸಂಗಮದ ದೇವಾಲಯವಿದೆ. ವಿಷ್ಣು ಮತ್ತು ಶಿವ ಒಂದೆಡೆ ಎಲ್ಲೂ ಕಣಸಿಗರು. ಆದರೆ ಇಲ್ಲಿ ಶ್ರೀಕಂಠೇಶ್ವರ ಮತ್ತು ಲಕ್ಷ್ಮೀನರಸಿಂಹಸ್ವಾಮಿ ಒಂದೆಡೆಯಿದ್ದಾರೆ. ಈ ದೇವಸ್ಥಾನದಲ್ಲಿ ಗಣಪತಿ, ಸೂರ್ಯನಾರಾಯಣಸ್ವಾಮಿ, ಸುಬ್ರಮಣ್ಯಸ್ವಾಮಿ, ಗಿರಿಜಾಂಭ, ಚನ್ನಕೇಶವಸ್ವಾಮಿ, ವೀರಾಂಜನೇಯ ದೇವರುಗಳಿವೆ. ಅಪರೂಪದ ಕೆತ್ತನೆಗಳುಳ್ಳ ಕಂಬಗಳಿವೆ.
‘ನಮ್ಮ ತಾಲ್ಲೂಕಿನಲ್ಲಿಯೇ ವಿಶೇಷವಾದ ಈ ದೇವಸ್ಥಾನವನ್ನು ಶೈವ, ವೈಷ್ಣವ ದೈವ ಸಂಗಮ ಕ್ಷೇತ್ರವೆನ್ನಬಹುದು. ಈ ದೇವಾಲಯ ಕುಸಿಯದಂತೆ ತಾತ್ಕಾಲಿಕವಾಗಿ ಕಲ್ಲಿನ ಚಪ್ಪಡಿಯೊಂದನ್ನು ನಿಲ್ಲಿಸಿದೆ. ಮಳೆ ಬೀಳುತ್ತಿದ್ದಂತೆಯೇ ಚಾವಣಿ ಕುಸಿಯುವ ಸಾಧ್ಯತೆಯಿದೆ. ತಕ್ಷಣ ತಾಲ್ಲೂಕು ಆಡಳಿತ, ಮುಜರಾಯಿ ಇಲಾಖೆ ಅಧಿಕಾರಿಗಳು ಈ ದೇವಸ್ಥಾನದ ದುರಸ್ಥಿ ಕಾರ್ಯ ನಡೆಸಬೇಕು. ಅತ್ಯಂತ ಪುರಾತನವಾದ್ದರಿಂದ ದೇವಾಲಯದ ಪುನರ್‌ ನಿರ್ಮಾಣವೇ ಆಗಬೇಕಾಗಿದೆ. ಕುಸಿಯುವ ಮುನ್ನವೇ ಕಾಮಗಾರಿಯನ್ನು ಪ್ರಾರಂಭಿಸಬೇಕಿದೆ’ ಎಂದು ಹಿರಿಯರಾದ ಎಸ್‌.ವಿ.ನಾಗರಾಜರಾವ್‌ ತಿಳಿಸಿದರು.

ಮನಸ್ಸನ್ನು ಪ್ರಶಾಂತಗೊಳಿಸುವ ಸಾಧನ ಯೋಗ

0

ದೈಹಿಕ, ಮಾನಸಿಕ ಮತ್ತು ಭಕ್ತಿಯ ಅನುಸಂಧಾನಗೊಂಡ ಒಂದು ಆಚರಣೆಯೇ ಯೋಗ. ಮನಸ್ಸನ್ನು ಪ್ರಶಾಂತಗೊಳಿಸುವ ಕ್ರಮಬದ್ಧವಾದ ಸಾಧನವೆಂದರೆ ಯೋಗ ಎಂದು ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ತಿಳಿಸಿದರು.
ನಗರದ ಶ್ರೀಕಾಳಿಕಾಂಬ ಕಮಠೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯವರು ಸೋಮವಾರ ಸಂಜೆ ಆಯೋಜಿಸಿದ್ದ ೩೯ ನೇ ಉಚಿತ ಯೋಗ ಶಿಕ್ಷಣ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತಂಜಲಿ ಮಹರ್ಷಿಗಳು ೧೯೫ ಸೂತ್ರಗಳ ಮೂಲಕ ಅಷ್ಟಾಂಗ ಯೋಗಸೂತ್ರದ ವಿಧಾನಗಳನ್ನು ತಿಳಿಸಿಕೊಟ್ಟಿದ್ದಾರೆ. ಅಷ್ಟಾಂಗ ಯೋಗವು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಎಂಬ ಅಂಗಗಳನ್ನು ಒಳಗೊಂಡಿದೆ. ಯೋಗವು ಕ್ರಮಬದ್ಧವಾದ ಉಸಿರಾಟ ಮತ್ತು ಏಕಾಗ್ರಚಿತ್ತ ಮನಸ್ಸಿನ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದರು.
ಸದೃಢವಾದ ಶರೀರದಿಂದ ಉತ್ತಮವಾದ ಚಿಂತನೆ ಹೊರಹೊಮ್ಮುತ್ತದೆ. ನಮ್ಮನ್ನು ನಾವು ಶುದ್ಧಿಕರಿಸಿಕೊಳ್ಳುವುದೇ ಯೋಗ. ಒತ್ತಡದ ಬದುಕಿಗೆ ಯೋಗ ಸಹಕಾರಿಯಾಗಿದೆ. ಯಾವುದೇ ಕೆಲಸವನ್ನು ಹೆಚ್ಚು ಕ್ರಿಯಾಶೀಲವಾಗಿ ಮತ್ತು ಸೃಜನಾತ್ಮಕವಾಗಿ ಮಾಡಲು ಮಾನಸಿಕವಾದ ಸಿದ್ದತೆ ಬಹಳ ಮುಖ್ಯವಾದುದು. ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯಲ್ಲಿ ಯೋಗ ಮಹತ್ತರ ಪಾತ್ರ ವಹಿಸುತ್ತದೆ. ಯಾಂತ್ರಿಕ ಬದುಕಿಗೆ ಯೋಗ ಅನಿವಾರ್ಯ ಎಂದರು.
ಯೋಗ ವಿದ್ಯೆಯು ಮನುಷ್ಯನನ್ನು ಮಾನವನನ್ನಾಗಿ ಮಾಡಿಸಿ, ಶಾರೀರಿಕ, ಮಾನಸಿಕ ನೈತಿಕ, ಬೌದ್ದಿಕ ಮತ್ತು ಮಾನವೀಯ ಮೌಲ್ಯಗಳನ್ನು ವಿಕಸನಗೊಳಿಸುತ್ತದೆ. ಯಾವುದೇ ರೋಗಗಳಿಂದ ದೂರವಿರಲು ಪ್ರತಿದಿನ ಯೋಗಾಭ್ಯಾಸವನ್ನು ಮಾಡಬೇಕು ಎಂದರು.
ಕಾಳಿಕಾಂಬ ಕಮಠೇಶ್ವರಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಮುನಿರತ್ನಾಚಾರಿ ಮಾತನಾಡಿ, ನಾವು ತಿನ್ನುವ ಆಹಾರದ ವಿಚಾರದಲ್ಲಿ ಹೆಚ್ಚು ಗಮನಹರಿಸಬೇಕು. ಈ ಯೋಗ ಶಿಬಿರದ ಉಪಯೋಗವನ್ನು ಪಡೆದು, ಯೋಗ ಶಿಕ್ಷಣದ ಮಹತ್ವವನ್ನು ಇತರರಿಗೂ ತಿಳಿಸಬೇಕು ಎಂದರು.
ಶಿಕ್ಷಕ ಮಂಜುನಾಥ್, ಯೋಗ ಶಿಕ್ಷಕರಾದ ಪಿ.ಶ್ರೀಕಾಂತ್, ಶುಭ, ಮಂಜುಳ, ಶಿಬಿರಾರ್ಥಿಗಳು ಹಾಜರಿದ್ದರು.

ಬಾಹ್ಯಾಕಾಶ ವಿಜ್ಞಾನಿ ಡಾ ಯು. ಆರ್. ರಾವ್ ಅವರ ಕೊಡುಗೆ ಅಪಾರ

0

ಬಾಹ್ಯಾಕಾಶ ವಿಜ್ಞಾನಿ ಡಾ ಯು. ಆರ್. ರಾವ್ ಅವರ ಕೊಡುಗೆ ಅಪಾರ
ಕನ್ನಡನಾಡು ಬಾಹ್ಯಾಕಾಶ ಜಗತ್ತಿಗೆ ನೀಡಿದ ಅತ್ಯುತ್ತಮ ಕೊಡುಗೆಗಳಲ್ಲಿ ಯು.ಆರ್.ರಾವ್ ಸಹ ಒಬ್ಬರು ಎಂದು ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಲೋಕಮಾನ್ಯ ಬಾಲಗಂಗಾಧರ ತಿಲಕ್‌ ಮತ್ತು ಚಂದ್ರಶೇಖರ್‌ ಆಜಾದ್‌ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸೋಮವಾರ ಬೆಳಗ್ಗಿನ ಜಾವ 2.55 ರ ಸುಮಾರಿಗೆ ಬೆಂಗಳೂರಿನ ಇಂದಿರಾ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಬಾಹ್ಯಾಕಾಶ ವಿಜ್ಞಾನಿ, ಇಸ್ರೋ ಮಾಜಿ ಅಧ್ಯಕ್ಷ ಯುಆರ್ ರಾವ್ ವಿಧಿವಶರಾದರು. ಇಸ್ರೋದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ, 1985 ರಲ್ಲಿ ಇಸ್ರೋ ಅಧ್ಯಕ್ಷರಾಗಿ ಆಯ್ಕೆಯಾದರು. ಪಿಎಸ್ ಎಲ್ ವಿ, ಎಎಸ್ ಎಲ್ ವಿ, ಜಿಎಸ್ ಎಲ್ ವಿಗಳ ಯಶಸ್ವೀ ಉಡ್ಡಯನದ ಹಿಂದೆ ರಾವ್ ಅವರ ಅವಿರತ ಶ್ರಮವಿದೆ. ಭಾಸ್ಕರ, ರೋಹಿಣಿ, ಇನ್ಸಾಟ್‌-1, ಇನ್ಸಾಟ್‌-2, ಐಆರ್ ಎಸ್‌-1 ಮುಂತಾದ 18 ಉಪಗ್ರಹಗಳ ನಿರ್ಮಾಣದಲ್ಲಿ ರಾವ್ ಮುಖ್ಯ ಮಾರ್ಗದರ್ಶಕರಾಗಿದ್ದರು. ಇತ್ತೀಚೆಗಷ್ಟೆ ಭಾರತದ ಉನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ ನೀಡಿ ಅವರನ್ನು ಗೌರವಿಸಲಾಗಿತ್ತು ಎಂದು ವಿವರಿಸಿದರು.
ಶಿಕ್ಷಕ ಚಾಂದ್‌ಪಾಷ ಮಾತನಾಡಿ, ಲೋಕಮಾನ್ಯ ಬಾಲಗಂಗಾಧರ ತಿಲಕ್‌ ಮತ್ತು ಚಂದ್ರಶೇಖರ್‌ ಆಜಾದ್‌ ಅವರ ಜೀವನ, ಸಾಧನೆ, ಆದರ್ಶ, ತ್ಯಾಗ ಬಲಿದಾನಗಳ ಬಗ್ಗೆ ಮಕ್ಕಳಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಪ್ರೊ.ಯು.ಆರ್‌. ರಾವ್‌ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆಯನ್ನು ಮಾಡಲಾಯಿತು.
ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌, ಮುಖ್ಯಶಿಕ್ಷಕಿ ವೆಂಕಟರತ್ನಮ್ಮ, ಶಿಕ್ಷಕರಾದ ಅಶೋಕ್‌, ಭಾರತಿ ಹಾಜರಿದ್ದರು.

ಗಾಂಧಿ ಜಯಂತಿ ಒಳಗೆ ಶಿಡ್ಲಘಟ್ಟ ತಾಲ್ಲೂಕು ಬಯಲು ಬಹಿರ್ದಿಸೆ ಮುಕ್ತವಾಗಬೇಕು

0

ಮುಂಬರುವ ಅಕ್ಟೋಬರ್ ೨ರ ಗಾಂಧಿ ಜಯಂತಿ ಒಳಗೆ ಜಿಲ್ಲೆಯ ಎರಡು ತಾಲ್ಲೂಕುಗಳಾದ ಶಿಡ್ಲಘಟ್ಟ ಹಾಗು ಗುಡಿಬಂಡೆಯನ್ನು ಬಯಲು ಬಹಿರ್ದಿಸೆ ಮುಕ್ತ ತಾಲ್ಲೂಕುಗಳನ್ನಾಗಿ ಮಾಡಲು ಧೃಡ ಸಂಕಲ್ಪ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಸಿದ್ದರಾಮಯ್ಯ ಹೇಳಿದರು.
ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯ್ತಿಯ ಮಲ್ಲೇನಹಳ್ಳಿ ಗ್ರಾಮದಲ್ಲಿ ಸಾಮೂಹಿಕವಾಗಿ ನಿರ್ಮಿಸುತ್ತಿರುವ ಶೌಚಾಲಯ ಕಾಮಗಾರಿಯನ್ನು ಗುರುವಾರ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಖಾತೆ ರಾಜ್ಯ ಸಚಿವ ಎಚ್.ಕೆ.ಪಾಟೀಲ್ ಅವರ ಸೂಚನೆಯಂತೆ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಬಯಲು ಬಹಿರ್ದಿಸೆ ಮುಕ್ತ ಮಾಡಲು ಯೋಜನೆಯನ್ನು ರೂಪಿಸಲಾಗಿದೆ. ಆದರಂತೆ ಜಿಲ್ಲೆಯ ಶಿಡ್ಲಘಟ್ಟ ಮತ್ತು ಗುಡಿಬಂಡೆ ತಾಲ್ಲೂಕುಗಳನ್ನು ಅಕ್ಟೋಬರ್ ೨ ರ ಗಾಂಧಿ ಜಯಂತಿ ಒಳಗೆ ಬಹಿಲು ಬಹಿರ್ದೆಸೆ ತಾಲ್ಲೂಕುಗಳಾಗಿ ಘೋಷಿಸುವ ನಿಟ್ಟಿನಲ್ಲಿ ಎಲ್ಲಾ ಗ್ರಾಮ ಪಂಚಾಯ್ತಿ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಜನಪ್ರತಿನಿಧಿಗಳ ಸಹಕಾರ ಪಡೆದು ಪ್ರಗತಿ ಸಾಧಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಏಪ್ರಿಲ್, ಮೇ ಮತ್ತು ಜೂನ್ ತಿಂಗಳಿನಲ್ಲಿ ೧೯೦೦ ಕಾರ್ಯಾದೇಶ ಹೊರಡಿಸಿದ್ದು. ಜುಲೈ ಮೊದಲ ವಾರದಲ್ಲಿ ಉಳಿದ ೮೫೦೦ ಫಲಾನುಭವಿಗಳಿಗೆ ದಾಖಲೆಯ ಕಾರ್ಯಾದೇಶ ವಿತರಿಸಲಾಗಿದೆ. ಕಾರ್ಯಾದೇಶ ಪಡೆದ ಎಲ್ಲಾ ಫಲಾನುಭವಿಗಳು ಶೌಚಾಲಯ ನಿರ್ಮಿಸಿಕೊಳ್ಳಲು ಪ್ರೇರೇಪಿಸುವ ಕಾರ್ಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಂದ ಆಗಬೇಕೆಂದರು.
ಪರಿಶಿಷ್ಠ ಜಾತಿ ಹಾಗೂ ಪಂಗಡದ ಫಲಾನುಭವಿಗಳು ಶೌಚಾಲಯ ನಿರ್ಮಿಸಿಕೊಂಡರೆ ೧೫,೦೦೦ ರೂಗಳು ಮತ್ತು ಇತರೆ ಸಾಮಾನ್ಯ ವರ್ಗದ ಫಲಾನುಭವಿಗಳು ಶೌಚಾಲಯ ನಿರ್ಮಿಸಿಕೊಂಡರೆ ೧೨,೦೦೦ ರೂಗಳು ಪ್ರೋತ್ಸಾಹಧನ ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕ ಸಿ,ಎಸ್.ಶ್ರೀನಾಥಗೌಡ, ಪಿ.ಡಿ.ಓ ಇ.ಪವಿತ್ರ, ಲೆಕ್ಕಸಹಾಯಕ ಮಹಾಲಿಂಗಪ್ಪ. ಮಲ್ಲೇನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಕೃಷ್ಣ ಹಾಜರಿದ್ದರು.
 

ನಗರವನ್ನು ಪ್ಲಾಸ್ಟಿಕ್ ಮತ್ತು ತಂಬಾಕು ಮುಕ್ತ ಮಾಡಲು ವರ್ತಕರು ಮತ್ತು ನಾಗರಿಕರು ಸಹಕರಿಸಿ

0

ರೇಷ್ಮೆ ನಗರ ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ನಗರವನ್ನು ಪ್ಲಾಸ್ಟಿಕ್ ಮತ್ತು ತಂಬಾಕು ಮುಕ್ತ ಹಾಗು ಸ್ವಚ್ಚ ನಗರವನ್ನಾಗಿಸಲು ಅಧಿಕಾರಿಗಳೊಂದಿಗೆ ವರ್ತಕರು ಮತ್ತು ನಾಗರಿಕರು ಸಹಕಾರ ನೀಡುವಂತೆ ತಹಸೀಲ್ದಾರ್ ಎಸ್.ಅಜಿತ್‌ಕುಮಾರ್‌ರೈ ಮನವಿ ಮಾಡಿದರು.
ನಗರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿ ಪಿಡಿಓಗಳು ಮತ್ತು ತಾಲ್ಲೂಕು ವರ್ತಕರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯಾದ್ಯಂತ ಪ್ಲಾಸ್ಟಿಕ್ ಹಾಗು ತಂಬಾಕು ನಿಷೇಧ ಮಾಡಲಾಗಿದ್ದರೂ ನಗರದಲ್ಲಿ ಅಧಿಕಾರಿಗಳ ಕಣ್ಣು ತಪ್ಪಿಸಿ ಪ್ಲಾಸ್ಟಿಕ್ ಮಾರಾಟ ಮತ್ತು ತಂಬಾಕು ಮಾರಾಟ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ. ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ತಾಲ್ಲೂಕನ್ನು ಪ್ಲಾಸ್ಟಿಕ್ ಹಾಗು ತಂಬಾಕು ಮುಕ್ತ ನಗರವನ್ನಾಗಿಸಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು.
ತಾಲ್ಲೂಕಿನಾಧ್ಯಂತ ಬರಗಾಲ ಆವರಿಸಿದ್ದು ಇರುವ ಮರಗಿಡಗಳ ಸಂರಕ್ಷಣೆ ಮಾಡುವ ಜೊತೆಗೆ ಮನೆಗೊಂದು ಸಸಿ ನೆಡಲು ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಗ್ರಾಮ ಪಂಚಾಯ್ತಿ ಪಿಡಿಓಗಳು ಮಾಡಬೇಕು.
ನಗರದ ಸೌಂದರ್ಯ ಕಾಪಾಡಲು ಈಗಾಗಲೇ ತಾಲ್ಲೂಕು ಆಡಳಿತ ಬಿಗಿ ಕ್ರಮಗಳನ್ನು ಕೈಗೊಂಡಿದ್ದು ನಗರದ ಶಾಲಾ ಕಾಲೇಜುಗಳಿಂದ ನೂರು ಯಾರ್ಡ್ ಒಳಗೆ ತಂಬಾಕು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಉಳಿದಂತೆ ನಗರದ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡುವವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದು ತಂಬಾಕು ವಸ್ತುಗಳ ಚಿಲ್ಲರೆ ಮಾರಾಟಗಾರರು ತಮ್ಮ ಅಂಗಡಿ ಮುಂಗಟ್ಟುಗಳ ಮುಂದೆ ಧೂಮಪಾನ ಮಾಡದಂತೆ ಸಾರ್ವಜನಿಕ ಪ್ರಕಟಣೆ ಪ್ರದರ್ಶಿಸಬೇಕು.
ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ವರ್ತಕರು ಹೆಚ್ಚಿನ ಸಹಕಾರ ನೀಡಬೇಕು. ಕಡ್ಡಾಯವಾಗಿ ನಮ್ಮ ಅಂಗಡಿಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ ಎಂಬ ಪ್ರತಿಜ್ಞೆ ನೀವೇ ಮಾಡಿಕೊಳ್ಳಬೇಕು. ಹಾಗಾದಾಗ ಮಾತ್ರ ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಸಾಧ್ಯವಾಗುತ್ತದೆ. ಒಂದು ವೇಳೆ ಅಧಿಕಾರಿಗಳು ಭೇಟಿ ನೀಡಿದಾಗ ಯಾವುದೇ ನಾಮಫಲಕ ಅಳವಡಿಸದೇ ಇರುವುದು ಹಾಗೂ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು. ಹಾಗಾಗಿ ವ್ಯಾಪಾರಸ್ಥರು ಸೇರಿದಂತೆ ನಾಗರಿಕರು ಅಧಿಕಾರಿಗಳಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ನಗರದ ಸ್ವಚ್ಚತೆ ಕಾಪಾಡಲು ನಾಗರಿಕರ ಮನವೊಲಿಸುವ ಕೆಲಸ ಹಾಗು ಅದಕ್ಕೆ ಅಗತ್ಯವಾಗಿರುವ ಕ್ರಮಗಳನ್ನು ಜರುಗಿಸಲು ನಗರಸಭೆ ಸಿಬ್ಬಂದಿ ಹಾಗು ಅಧಿಕಾರಿಗಳು ಮುಂದಾಗಬೇಕು ಎಂದರು.
ತಾಲ್ಲೂಕಿನಾಧ್ಯಂತ ಇರುವ ಕೆರೆಗಳಲ್ಲಿ ಜಾಲಿ ಮರಗಳು ಬೆಳೆದಿದ್ದು ಗ್ರಾಮ ಪಂಚಾಯ್ತಿ ಸಹಕಾರದಿಂದ ಕೆರೆಗಳಲ್ಲಿರುವ ಜಾಲಿ ಮರಗಳನ್ನು ತೆರವುಗೊಳಿಸಿ ಬರುವ ಹಣವನ್ನು ಸರ್ಕಾರದ ಖಾತೆಗೆ ತುಂಬುವಂತೆ ಪಿಡಿಓಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಇಓ ವೆಂಕಟೇಶ್, ನಗರಸಭೆ ಆಯುಕ್ತ ಎಚ್.ಎ.ಹರೀಶ್, ವರ್ತಕರ ಸಂಘದ ಪ್ರಸಾದ್, ನಾಗರಾಜ್, ಮಲ್ಲಿಕಾರ್ಜುನ್, ನಗರಸಭೆಯ ಆಂಜಿನಪ್ಪ, ದಿಲೀಪ್, ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿ ಪಿಡಿಓ ಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಜಿಎಸ್‌ಟಿ ಯಿಂದಾಗಿ ಅಳಿವು ಉಳಿವಿನ ಹಂತದಲ್ಲಿರುವ ರೇಷ್ಮೆ ಬೆಳೆಗಾರ

0

ಈಗಾಗಲೇ ರೇಷ್ಮೆ ಗೂಡಿನ ಬೆಲೆ ಸಾಲದು, ನಷ್ಟ ಹೊಂದುತ್ತಿದ್ದೇವೆ ಎಂದು ಬೆಂಬಲ ಬೆಲೆಗಾಗಿ ರೇಷ್ಮೆ ಬೆಳೆಗಾರರು ಒಂದೆಡೆ ಹೋರಾಡುತ್ತಿದ್ದರೆ ಗಾಯದ ಮೇಲೆ ಬರೆ ಎಳೆದಂತೆ ಜಿಎಸ್‌ಟಿ ಮೂಲಕ ಇನ್ನಷ್ಟು ರೇಷ್ಮೆ ಗೂಡಿನ ಬೆಲೆ ಕುಸಿಯುವ ಆತಂಕದಲ್ಲಿ ರೇಷ್ಮೆ ಬೆಳೆಗಾರರು ಇರುವುದಾಗಿ ಅಖಿಲ ಭಾರತ ಸುಂಕ ರಹಿತ ರೇಷ್ಮೆ ಆಮದು ವಿರೋಧಿ ಹೋರಾಟ ಸಮಿತಿ ಸಂಚಾಲಕ, ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಳ್ಳೂರು ಶಿವಣ್ಣ ತಿಳಿಸಿದರು.
ಐದು ರಾಜ್ಯಗಳ ರೇಷ್ಮೆ ಬೆಳೆಗಾರರ ನಿಯೋಗದೊಂದಿಗೆ ದೆಹಲಿಯಲ್ಲಿ ವಿವಿಧ ಸಚಿವರನ್ನು ಭೇಟಿಯಾಗಿ ಜಿಎಸ್‌ಟಿಯ ಅಡ್ಡಪರಿಣಾಮದಿಂದ ರೇಷ್ಮೆ ಬೆಳೆಗಾರರಿಗೆ ಆಗುತ್ತಿರುವ ನಷ್ಟವನ್ನು ವಿವರಿಸಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಹಿಂದಿರುಗಿದ ಅವರು ಮಾತನಾಡಿದರು.
ದೇಶಾದ್ಯಂತ ಪ್ರತಿ ದಿನ ರೈತರು ಸುಮಾರು 12 ಕೋಟಿ ರೂಗಳಷ್ಟು ರೇಷ್ಮೆ ಗೂಡನ್ನು ಬೆಳೆದು ತಂದು ಮಾರಾಟ ಮಾಡುತ್ತಿದ್ದಾರೆ. ರೇಷ್ಮೆ ಗೂಡಿನ ಮಾರುಕಟ್ಟೆಗಳಲ್ಲಿ ರೈತರು ರೇಷ್ಮೆ ಗೂಡನ್ನು ಮಾರುವಾಗ ತಮ್ಮ ಅಭಿವೃದ್ಧಿಗಾಗಿ ಪಿಎಸ್‌ಎಫ್‌ಎ ಫಂಡ್‌ ಎಂದು ಶೇ.1 ರಷ್ಟು ಹಣವನ್ನು ಕಟ್ಟುತ್ತಿದ್ದಾರೆ. ಅದೇ ರೀತಿ ಕೊಳ್ಳುವ ರೀಲರುಗಳೂ ಸಹ ಶೇ.1 ರಷ್ಟು ಹಣವನ್ನು ಕಟ್ಟುತ್ತಾರೆ. ಆದರೆ ರೇಷ್ಮೆ ಉದ್ದಿಮೆಯಲ್ಲಿ ಸುಂಕವನ್ನು ಮೊದಲಿನಿಂದಲೂ ಕಟ್ಟಿಲ್ಲ. ರೇಷ್ಮೆ ವಾಣಿಜ್ಯ ಬೆಳೆಯಾದರೂ ಇದನ್ನು ಗುಡಿ ಕೈಗಾರಿಕೆಯೆಂದು ಪರಿಗಣಿಸಲಾಗಿತ್ತು.
ದೇಶದ ರೇಷ್ಮೆ ಉತ್ಪಾದನೆಯಲ್ಲಿ ನಮ್ಮ ರಾಜ್ಯದ ಪಾಲು ಶೇ.60 ರಷ್ಟಿದೆ. ರಾಜ್ಯದ ರೈತರು ಒಂದು ಲಕ್ಷ ಇಪ್ಪತ್ತೈದು ಸಾವಿರ ಕೋಟಿ ರೂಗಳ ಬಂಡವಾಳವನ್ನು ಹೂಡಿದ್ದಾರೆ. ಲಾಭ ನಷ್ಟಗಳೊಂದಿಗೆ ರೈತರು ರೇಷ್ಮೆಯನ್ನು ನಂಬಿದ್ದರು.
ಈಗ ಹೊಸದಾಗಿ ಬಂದಿರುವ ಸರಕು ಮತ್ತು ಸೇವಾ ತೆರಿಗೆಯ ಅನ್ವಯ ರೈತರ ಗೂಡಿನ ನಂತರದ ಚಟುವಟಿಕೆಗಳಾದ ನೂಲು ಬಿಚ್ಚಾಣಿಕೆ, ಹುರಿ ಮಾಡುವುದು, ಬಣ್ಣ ಹಚ್ಚುವುದು, ಬಟ್ಟೆ ಮಾಡುವುದು, ಪಾಲಿಷ್‌ ಮಾಡುವುದು ಮುಂತಾದ ಪ್ರತಿಯೊಂದು ಹಂತದಲ್ಲೂ ಶೇ.5 ರಷ್ಟು ಸರಕು ಮತ್ತು ಸೇವಾ ತೆರಿಗೆ ಬೀಳಲಿದೆ. ಪ್ರತಿ ಹಂತದಲ್ಲೂ ತೆರಿಗೆ ಬೀಳುವುದರಿಂದ ಪ್ರತಿಯೊಂದು ಹಂತದವರೂ ತಾವು ಕೊಳ್ಳುವಾಗ ಅಷ್ಟರ ಮಟ್ಟಿಗೆ ಕಡಿಮೆ ಹಣಕ್ಕೆ ಕೊಳ್ಳುತ್ತಾರೆ. ಈ ಒಟ್ಟಾರೆ ಪ್ರಕ್ರಿಯೆಯಲ್ಲಿ ಕೊನೆಗೆ ತೊಂದರೆಗೊಳಗಾಗುವವನು ರೇಷ್ಮೆ ಗೂಡು ಬೆಳೆಯುವ ರೈತ. ಏಕೆಂದರೆ ಈ ಎಲ್ಲಾ ತೆರಿಗೆಗಳ ಕಾರಣದಿಂದ ಕಡಿಮೆ ಬೆಲೆಗೆ ಗೂಡನ್ನು ಕೊಳ್ಳುತ್ತಾರೆ. ಒಟ್ಟಾರೆ ಸಾರಾಂಶದಂತೆ ಎಲ್ಲರ ತೆರಿಗೆಗಳನ್ನು ರೇಷ್ಮೆ ಬೆಳೆಗಾರ ಭರಿಸಬೇಕಾಗುತ್ತದೆ.
550ರೂ ರಿಂದ 600 ರೂಗಳವರೆಗೆ ಒಂದು ಕೆಜಿ ಬೈವೋಲ್ಟೀನ್‌ ರೇಷ್ಮೆ ಗೂಡಿನ ಬೆಲೆ ಇತ್ತು. ಸಿಬಿ ಗೂಡು ಒಂದು ಕೆಜಿಗೆ 350 ರೂಗಳಿಂದ 500 ರೂವರೆಗಿತ್ತು. ಜಿಎಸ್‌ಟಿ ಯ ಕಾರಣ ಒಂದು ಕೆಜಿ ಗೂಡಿಗೆ 200 ರೂ ಸಿಗುವುದು ಕಷ್ಟವಾಗಲಿದೆ.
ಕೇಂದ್ರದ ಸಚಿವೆ ಸ್ಮೃತಿ ಇರಾನಿ ಅವರು ನಮ್ಮ ಜಿಲ್ಲೆಗೆ ಭೇಟಿ ನೀಡಿದ್ದಾಗ ರೇಷ್ಮೆಯನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗುಳಿಸಬೇಕೆಂದು ಮನವಿ ಸಲ್ಲಿಸಿದ್ದೆವು. ಅದಕ್ಕೂ ಹಿಂದೆ ಸಚಿವೆ ನಿರ್ಮಲಾ ಸೀತಾರಾಮ್‌ ಅವರ ಗಮನಕ್ಕೂ ಈ ವಿಷಯವನ್ನು ತಂದಿದ್ದೆವು. ಆದರೆ ಈಗಾಗಲೇ ರೇಷ್ಮೆ ಬೆಳೆಗಾರರನ್ನು ಹೊರತುಪಡಿಸಿ ಉಳಿದ ಹಂತದವರಿಗೆ ಜಿಎಸ್‌ಟಿ ವಿಧಿಸಿದ್ದು, ಅದು ರೇಷ್ಮೆ ಬೆಳೆಗಾರರಿಗೆ ತೊಂದರೆಯಾಗಿದೆ.
ಆಂಧ್ರ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಪರವಾಗಿ ನಾನು ಒಟ್ಟು ಐದು ಮಂದಿ ರೇಷ್ಮೆ ಬೆಳೆಗಾರ ಮುಖಂಡರು ದೆಹಲಿಗೆ ತೆರಳಿ ಪ್ರಧಾನ ಮಂತ್ರಿ, ಹಣಕಾಸು, ಕೃಷಿ, ವಾಣಿಜ್ಯ, ವಿದೇಶಾಂಗ ಸಚಿವ ಮುಂತಾದವರನ್ನು ಭೇಟಿ ಮಾಡಿ ಜಿಎಸ್‌ಟಿಯು ರೇಷ್ಮೆ ಬೆಳೆಗಾರರಿಗೆ ತಿರುಗು ಬಾಣವಾಗಿರುವುದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ರೇಷ್ಮೆ ಬೆಳೆಗಾರರಿಗೆ ಪ್ರತಿ ಒಂದು ಕೆಜಿ ಗೂಡಿಗೆ ಸುಮಾರು 150 ರೂಗಳಷ್ಟು ನಷ್ಟವಾಗುತ್ತಿದೆ. ರೇಷ್ಮೆ ಬೆಳೆಗಾರರನ್ನು ಉಳಿಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಾವು ನಮ್ಮ ನಿಯೋಗದಿಂದ ಮನವಿಯನ್ನು ಸಲ್ಲಿಸಿದ್ದೇವೆ.
ಕೇಂದ್ರ ಸರ್ಕಾರ ರೇಷ್ಮೆ ಬೆಳೆಗಾರರಿಗೆ ಅನುಕೂಲ ಮಾಡಿಕೊಡದಿದ್ದಲ್ಲಿ ನಮಗೆ ಅಳಿವು ಉಳಿವಿನ ಪ್ರಶ್ನೆ ಎದುರಾಗಿ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.