ತಾಲ್ಲೂಕಿನ ಸದ್ದಹಳ್ಳಿಯಲ್ಲಿ ಶುಕ್ರವಾರ ಮುನೇಶ್ವರಸ್ವಾಮಿ ದೇವಾಲಯದ ಮೂರನೇ ವರ್ಷದ ವಾರ್ಷಿಕೋತ್ಸವವನ್ನು ಜಾತ್ರೆಯ ರೀತಿಯಲ್ಲಿ ಆಚರಿಸಲಾಯಿತು.
ಕನ್ನಪ್ಪನಹಳ್ಳಿ ಮತ್ತು ಸದ್ದಹಳ್ಳಿ ಗ್ರಾಮಸ್ಥರು ಒಗ್ಗೂಡಿ ಆಚರಣೆಯಲ್ಲಿ ಪಾಲ್ಗೊಂಡರು. ಹೆಣ್ಣುಮಕ್ಕಳು ದೀಪಗಳನ್ನು ಹೊತ್ತು ಗ್ರಾಮದೇವತೆಗಳಾದ ಮುನೇಶ್ವರ, ಆಂಜನೇಯ, ಚೌಡೇಶ್ವರಿ, ಈಶ್ವರ, ಗಂಗಮ್ಮ ದೇವರುಗಳಿಗೆ ಪೂಜೆಯನ್ನು ನೆರವೇರಿಸಿದರು. ತಮಟೆಯ ವಾದನದೊಂದಿಗೆ ಮೆರವಣಿಗೆ ನಡೆಯಿತು.
ಹೋಮ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆಯನ್ನು ನಡೆಸಲಾಯಿತು.
ಸದ್ದಹಳ್ಳಿಯಲ್ಲಿ ಮುನೇಶ್ವರಸ್ವಾಮಿಗೆ ವಿಶೇಷ ಪೂಜೆ
ಬಯಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ವಿಶೇಷ ಪೂಜೆ
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗೇಟ್ ಬಳಿಯ ಬಯಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಭಾನುವಾರ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಹಾಗೂ ಭಜನೆಯನ್ನು ಆಯೋಜಿಸಲಾಗಿತ್ತು.
ಆಷಾಢ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನ ಆಚರಿಸುವ ಈ ಹಬ್ಬಕ್ಕೆ ಕುಟುಂಬ ಸಮೇತರಾಗಿ ತಾಲ್ಲೂಕಿನ ವಿವಿಧ ಭಾಗಗಳಿಂದ ಜನರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು.
ಪ್ರತಿ ಅಮಾವಾಸ್ಯೆಯಂದು ಬಯಲಾಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಭಜನೆ ಹಾಗೂ ತೀರ್ಥ ಪ್ರಸಾದ ವಿನಿಯೋಗಿಸಲಾಗುತ್ತದೆ. ಇದು 165ನೇ ಅಮಾವಾಸ್ಯೆ ವಿಶೇಷ ಪೂಜೆಯಾಗಿದ್ದು, ಭೀಮನ ಅಮಾವಾಸ್ಯೆಯ ಕಾರಣ ಹೆಚ್ಚು ಭಕ್ತರು ಅದರಲ್ಲೂ ಕುಟುಂಬ ಸಮೇತರಾಗಿ ಆಗಮಿಸಿದ್ದರು.
ಬೆಳಿಗ್ಗೆ ಪೂಜಾ ಸಮಯದಲ್ಲಿ ತಾಲ್ಲೂಕು ಸವಿತಾ ಕಲಾ ಸಂಘದಿಂದ ಮಂಗಳವಾದ್ಯಗೋಷ್ಠಿ ನಡೆಯಿತು. ಅಪ್ಪೇಗೌಡನಹಳ್ಳಿ ಶ್ರೀರಾಮ ಭಕ್ತ ಮಂಡಳಿ, ಮೇಲೂರು ಶ್ರೀರಾಮ ಭಕ್ತ ಮಂಡಳಿ, ಕೊಂಡೇನಹಳ್ಳಿ ಆಂಜನೇಯಸ್ವಾಮಿ ಭಜನಾ ಮಂಡಳಿ, ಕಡಿಶೀಗೇನಹಳ್ಳಿ ಮುತ್ತರಾಯಸ್ವಾಮಿ ಭಜನಾ ಮಂಡಳಿ, ಮಳ್ಳೂರು ಶ್ರೀರಾಮ ಭಕ್ತ ಮಂಡಳಿ ಮತ್ತು ಸಾಯಿನಾಥ ಭಜನೆ ಮಂಡಳಿಗಳಿಂದ ಸಂಗೀತ ಮತ್ತು ಭಜನೆ ದಿನ ಪೂರ್ತಿ ನಡೆಯಿತು.
ತಾಲ್ಲೂಕಿನ ಹಂಡಿಗನಾಳ, ಕೇಶವಪುರ, ನೆಲಮಾಕಲಹಳ್ಳಿ, ಆನೂರು, ಅಪ್ಪೇಗೌಡನಹಳ್ಳಿ, ಕೇಶವಾರ, ಚೌಡಸಂದ್ರ, ಮೇಲೂರು, ಮಳ್ಳೂರು, ಭಕ್ತರಹಳ್ಳಿ, ಮಳಮಾಚನಹಳ್ಳಿ, ಕಂಬದಹಳ್ಳಿ, ಕೊಂಡೇನಹಳ್ಳಿ, ಕಡಿಶೀಗೇನಹಳ್ಳಿ, ಮುತ್ತೂರು, ಗಂಗನಹಳ್ಳಿ ಮುಂತಾದ ಗ್ರಾಮಗಳಿಂದ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು.
ತೀರ್ಥ ಪ್ರಸಾದ ಹಾಗೂ ಅನ್ನಸಂತರ್ಪಣೆಯನ್ನು ಸಹ ದೇವಾಲಯದ ಆವರಣದಲ್ಲಿ ನಡೆಸಲಾಯಿತು. ಮಕ್ಕಳ ಆಟಿಕೆಗಳಾದ ತುತ್ತೂರಿ, ಬೆಲೂನು ಮಾರಾಟಗಾರರು ಆಗಮಿಸಿದ್ದು, ಅವು ಮಕ್ಕಳ ಆಕರ್ಷಣೆಯಾಗಿ ಪರಿಣಮಿಸಿತ್ತು.
ಬರ ಪರಿಹಾರ ನೀಡುವಲ್ಲಿ ವಿಳಂಬ, ರೈತ ಸಂಘದಿಂದ ಪ್ರತಿಭಟನೆ
ಸರ್ಕಾರ ರೈತರಿಗೆ ಬರ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು.ಸರ್ಕಾರ ರೈತರಿಗೆ ಬರ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು.
ನಗರದ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿಯವರೆಗೆ ಕಾಲ್ಗಡಿಗೆ ಜಾಥಾ ಮೂಲಕ ಆಗಮಿಸಿ ತಾಲ್ಲೂಕು ಕಚೇರಿಯನ್ನು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ‘ಚಿಕ್ಕಬಳ್ಳಾಪುರ ಜಿಲ್ಲೆ ಬರಪೀಡಿತ ಪ್ರದೇಶ ಎಂದು ಘೋಷಣೆಯಾಗಿದ್ದು, ಸರ್ಕಾರ ಮಳೆ ಬಾರದೆ ಒಣಗಿರುವ ಬೆಳೆಗಳಿಗೆ ಪರಿಹಾರ ನೀಡುವುದೆಂದು ಘೋಷಣೆ ಮಾಡಿ ಒಂದು ವರ್ಷ ಕಳೆದಿದೆ. ಆದರೂ ಸಹ ಈವರೆಗೆ ಬರ ಪರಿಹಾರ ರೈತರ ಖಾತೆಗಳಿಗೆ ಜಮೆ ಆಗಿಲ್ಲ. ಬಡವರು ಬಿ.ಪಿ.ಎಲ್ ಕಾರ್ಡುಗಳಿಗೆ ಅರ್ಜಿ ಸಲ್ಲಿಸಿ ಸುಮಾರು ದಿನಗಳು ಕಳೆದಿದ್ದು ಈವರೆಗೂ ಬಿ.ಪಿ.ಎಲ್ ಕಾರ್ಡ್ ನೀಡಿಲ್ಲ ಹಾಗೂ ಇರುವ ಕಾರ್ಡುಗಳಿಗೆ ಸರಿಯಾಗಿ ಪಡಿತರ ನೀಡುತ್ತಿಲ್ಲ. ಗ್ರಾಮೀಣ ಭಾಗದ ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮೀಣ ಬಾಗದ ಜನರಿಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಯಿಸಿದ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರು ಸರ್ಕಾರ ಬರ ಪರಿಹಾರ ನೀಡುವಲ್ಲಿನ ಲೋಪದೋಷಗಳನ್ನು ನಿವಾರಿಸಲು ತಂತ್ರಾಶ ಸಿದ್ದಪಡಿಸಿದ್ದು ತಂತ್ರಾಶದ ಲೋಪದೋಷದಿಂದ ಬರ ಪರಿಹಾರ ಬೇರೆಯವರ ಖಾತೆಗೆ ಜಮೆ ಆಗಿದೆ. ಲೋಪದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದು, ಶೀಘ್ರದಲ್ಲೆ ಅವರವರ ಖಾತೆಗಳಿಗೆ ಪರಿಹಾರ ಜಮಾ ಮಾಡಲಾಗುವುದು. ಪಡಿತರ ಚೀಟಿ ನೀಡುವಲ್ಲಿ ಅನೇಕ ಲೋಪದೋಷಗಳಿದ್ದು, ಕೆಲವೇ ತಿಂಗಳುಗಳಲ್ಲಿ ಅರ್ಜಿದಾರರಿಗೆ ಪಡಿತರ ಚೀಟಿಯನ್ನು ಸರ್ಕಾರವೇ ಪೋಸ್ಟ್ ಮೂಲಕ ಕಳುಹಿಸುತ್ತಿದ್ದು, ಅರ್ಜಿದಾರರ ಕೈ ಸೇರಲಿದೆ. ಅಧಿಕಾರಿಗಳನ್ನು ವಿಚಾರಣೆ ಮಾಡಿ ಗಾಮೀಣ ಬಾಗದ ಸಮಸ್ಯೆಗಳನ್ನು ಪರಿಹಾರ ಮಾಡಲಾಗುವುದೆಂದು ತಿಳಿಸಿದರು.
ತಹಸಿಲ್ದಾರ್ ಅಜಿತ್ ಕುಮಾರ್ ರೈ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸದಸ್ಯರು ಮನವಿ ಪತ್ರ ಸಲ್ಲಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಮಂಜುನಾಥ್, ರಾಮಯ್ಯ, ವೆಂಕಟೇಶ್, ಗೊವಿಂದಪ್ಪ, ನರಸಿಂಹಪ್ಪ, ಲಕ್ಷ್ಮೀನರಸಿಂಹಪ್ಪ, ಲಕ್ಷ್ಮೀನಾರಾಯಣ ಹಾಜರಿದ್ದರು.
ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ವೈದ್ಯಕೀಯ ತಪಾಸಣಾ ಶಿಬಿರ
ಯಾವುದೇ ಮಕ್ಕಳು ದೈಹಿಕವಾಗಿ, ಮಾನಸಿಕವಾಗಿ ಅಂಗವೈಕಲ್ಯವನ್ನು ಹೊಂದಿದ್ದಾರೆ ಎಂಬ ಒಂದೇ ಕಾರಣಕ್ಕೆ ಶಿಕ್ಷಣದಿಂದ ವಂಚಿತರನ್ನಾಗಿಸುವುದು ಸರಿಯಲ್ಲ. ಬದಲಿಗೆ ಪೋಷಕರ ಮನವೊಲಿಸಿ ಅಂತಹ ಮಕ್ಕಳಿಗೆ ವಿಶೇಷ ಪ್ರಾಧಾನ್ಯತೆ ನೀಡಿ ಶಿಕ್ಷಣ ನೀಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕರೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಹೇಳಿದರು.
ನಗರದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ತಾಲ್ಲೂಕು ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ ಮತ್ತು ಸರ್ವ ಶಿಕ್ಷಣ ಅಭಿಯಾನ ಇವರ ಸಂಯುಕ್ತಾಶ್ರಯದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಏರ್ಪಡಿಸಲಾಗಿದ್ದ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯಾವ ಮಕ್ಕಳು ಇತರೆ ಮಕ್ಕಳಂತೆ ಸಹಜವಾಗಿ ಕಲಿಯಲು ತೊಂದರೆ ಅನುಭವಿಸುತ್ತಾರೋ ಅಂತಹ ಮಕ್ಕಳನ್ನು ವಿಶೇಷ ಅಗತ್ಯವುಳ್ಳ ಮಕ್ಕಳು ಎಂದು ಗುರುತಿಸಲಾಗುತ್ತದೆ. ಇವರಿಗೆ ಇನ್ನೊಬ್ಬರ ಅಗತ್ಯತೆ ಇರುವುದರಿಂದ ಅವರೂ ಸಹ ಇತರೆ ಮಕ್ಕಳಂತೆ ಕಲಿಯಲು ಬೇಕಾದ ವಾತಾವರಣ ನಿರ್ಮಿಸುವಲ್ಲಿ ಪಾಲಕರೂ ಸೇರಿದಂತೆ ಶಿಕ್ಷಕರ ಪಾತ್ರ ಬಹಳಷ್ಟಿರುತ್ತದೆ.
ಈ ನಿಟ್ಟಿನಲ್ಲಿ ಇಂತಹ ಮಕ್ಕಳಿಗೂ ಸಾಮಾನ್ಯ ಮಕ್ಕಳಂತೆ ಶಿಕ್ಷಣ ನೀಡಬೇಕು ಎಂಬ ನಿಟ್ಟಿನಲ್ಲಿ ಇಲಾಖೆ ಸಮನ್ವಯ ಶಿಕ್ಷಣ ಜಾರಿಗೆ ತಂದಿದ್ದು ತಾಲ್ಲೂಕಿನಲ್ಲಿ ಇದೀಗ ನಾಲ್ವರು ಶಿಕ್ಷಕರನ್ನು ಇದಕ್ಕಾಗಿ ನೇಮಿಸಲಾಗಿದೆ. ಸಮನ್ವಯ ಶಿಕ್ಷಣದಿಂದ ವಿಶೇಷ ಅಗತ್ಯವುಳ್ಳ ಮಕ್ಕಳು ಸಾಮಾನ್ಯ ಮಕ್ಕಳೊಂದಿಗೆ ಆರೋಗ್ಯಕರ ಸಾಮಾಜಿಕ ಸಂಬಂಧಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ಇದರಿಂದ ಅವರಲ್ಲಿ ಧೈರ್ಯ ಹಾಗು ಆತ್ಮವಿಶ್ವಾಸ ಬೆಳೆಯುತ್ತದೆ ಎಂದರು.
ಅಂಗವಿಕಲತೆ ಮಾನವನನ್ನು ಅನಾದಿ ಕಾಲದಿಂದಲೂ ಕಾಡುತ್ತಿದ್ದರೂ ನಾಗರೀಕತೆ ಬೆಳೆದಂತೆ ಜನರ ಮನೋಭಾವ ಬದಲಾಗುವ ಮೂಲಕ ಇದೀಗ ಅಂಗವೈಪಲ್ಯ ಯಾವುದೇ ಶಾಪವಲ್ಲ. ಬದಲಿಗೆ ಅವರಿಗೆ ಅಗತ್ಯವಿರುವ ಶಿಕ್ಷಣ ನೀಡಿದಲ್ಲಿ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಹಾಗಾಗಿ ಪೋಷಕರೂ ಸೇರಿದಂತೆ ಶಿಕ್ಷಕರು ಇಂತಹ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವರಿಗೆ ಬೇಕಾದ ಆರೋಗ್ಯ ತಪಾಸಣೆ ಸೇರಿದಂತೆ ಇಲಾಖೆಯಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದರು.
ಶಿಬಿರದಲ್ಲಿ ಸುಮಾರು ೨೬೦ ವಿಶೇಷ ಅಗತ್ಯವುಳ್ಳ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಯಿತು.
ಜಂಗಮಕೋಟೆ ಸಿಆರ್‌ಸಿ ಸುಂದರಾಚಾರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ, ಕ್ಷೇತ್ರ ಸಮನ್ವಯಾಧಿಕಾರಿ ರಾಜು. ವಿಶೇಷ ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳಾದ ಜಗದೀಶ್, ಸತ್ಯನಾರಾಯಣ, ಸುಬ್ರಮಣಿ, ಪಿಡಿಓ ವಿ.ಮಂಜುನಾಥ್, ವೈದ್ಯರಾದ ಡಾ.ಪ್ರಮೋದ್, ಡಾ.ಅನುಷ, ಡಾ.ಹೇಮಂತ್ ಹಾಜರಿದ್ದರು.
ತಾಲ್ಲೂಕು ಬಿಜೆಪಿ ಪಕ್ಷದ ವತಿಯಿಂದ ಸಂಭ್ರಮಾಚರಣೆ
ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ರಾಮ್‌ನಾಥ್ ಕೋವಿಂದ್ ದೇಶದ ೧೪ ನೇ ರಾಷ್ಟ್ರಪತಿಯಾಗಿ ಭಾರಿ ಮತಗಳ ಅಂತರದಿಂದ ಆಯ್ಕೆಯಾಗಿರುವುದು ಸಂತಸದ ಸಂಗತಿ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ಹೇಳಿದರು.
ನಗರದ ಕೋಟೆ ವೃತ್ತದಲ್ಲಿ ಶುಕ್ರವಾರ ತಾಲ್ಲೂಕು ಬಿಜೆಪಿ ಪಕ್ಷದ ವತಿಯಿಂದ ನಗರದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ನೆರವೇರಿಸಿ ನಂತರ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನೆರವೇರಿಸಿ ಅವರು ಮಾತನಾಡಿದರು.
ಪಕ್ಷದ ಹಿರಿಯ ಮುಖಂಡರಾದ ರಾಮನಾಥ್‌ಕೋವಿಂದ್ ರಾಜ್ಯಸಭಾ ಸದಸ್ಯರಾಗಿ, ಬಿಹಾರದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು. ದೇಶದ ಅತ್ಯುನ್ನತ ಪದವಿಯಾದ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಬಿಜೆಪಿಯ ಪ್ರಪ್ರಥಮ ನಾಯಕರು ಇವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರಗೌಡ, ಮುಖಂಡರಾದ ಡಿ.ಆರ್.ಶಿವಕುಮಾರಗೌಡ, ಸುರೇಶ್, ದಾಮೋದರ್, ಮುನಿವೆಂಕಟಪ್ಪ, ಬೈರರೆಡ್ಡಿ, ಶ್ರೀರಾಮ, ಸುಜಾತಮ್ಮ, ರವಿ, ಮುನಿರಾಜು, ಚಲಪತಿ ಹಾಜರಿದ್ದರು.
ಕುತೂಹಲಿಗಳಾಗಿರಿ, ವಿಜ್ಞಾನವನ್ನು ಇಷ್ಟಪಟ್ಟು ಕಲಿಯಿರಿ
ಪ್ರಕೃತಿಯಿಂದ ಪ್ರೇರಣೆ ಹೊಂದುತ್ತಾ ವಿಜ್ಞಾನಿಗಳು ಹಲವಾರು ಸಂಶೋಧನೆಗಳನ್ನು ನಡೆಸಿದ್ದಾರೆ. ವಿಜ್ಞಾನವನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸದೆ ಕುತೂಹಲಿಗಳಾಗಿ ನಮ್ಮ ಸುತ್ತಲಿನ ಜೀವಿಗಳನ್ನು ಗಮನಿಸಬೇಕು. ಆಗ ವಿಜ್ಞಾನ ಇಷ್ಟವಾಗುತ್ತದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಿ ಹರೀಶ್ ಆರ್ ಭಟ್ ತಿಳಿಸಿದರು.
ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಕನ್ನಡ ಸಾರಸ್ವತ ಪರಿಚಾರಿಕೆ ಹಾಗೂ ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಡೆದ ‘ಸಾಧಕರ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆ’ ಕಾರ್ಯಕ್ರಮದಲ್ಲಿ ‘ವಿಜ್ಞಾನದ ಬೆಳವಣಿಗೆ’ ವಿಷಯವಾಗಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಚೀನಾದವರು ಭಾರತೀಯ ವಸ್ತುಗಳನ್ನು ಕೊಳ್ಳುವಂತಾಗಬೇಕಾದರೆ ನಮ್ಮ ಯುವ ವಿದ್ಯಾರ್ಥಿಗಳು ವಿಜ್ಞಾನದೆಡೆಗೆ ಆಕರ್ಷಿತರಾಗಬೇಕು. ಹೊಸ ಹೊಸ ಅನ್ವೇಷಣೆಗಳಾಗಬೇಕು. ವಿದ್ಯಾರ್ಥಿಗಳು ಮನಸ್ಸು ಮಾಡಿದಲ್ಲಿ ಉಜ್ವಲ ಭವ್ಯ ಭಾರತ ನಿರ್ಮಾಣ ಸಾಧ್ಯವಿದೆ ಎಂದು ಹೇಳಿದರು.
ಚಿತ್ರಗಳನ್ನು ಸ್ಲೈಡ್ ಶೋ ಮೂಲಕ ತೋರಿಸುತ್ತಾ, ಜೇಡನಿಂದ ತಯಾರಾದ ಬುಲೆಟ್ ಪ್ರೂಫ್ ಜಾಕೆಟ್, ಜೇನಿನ ಷಟ್ಕೋನದ ಆಕಾರದ ಗೂಡಿನಿಂದ ತಯಾರಾದ ವಿವಿಧ ಉಪಕರಣಗಳು, ಕೀಟಗಳನ್ನು ಆಹಾರವಾಗಿ ಸೇವಿಸುವ ಸಸ್ಯಗಳಿಂದ ರೈತರಿಗೆ ಉಪಯುಕ್ತ ಸಂಶೋಧನೆಗಳು, ಚಿಟ್ಟೆಗಳ ರೆಕ್ಕೆಗಳಿಂದ ಸೋಲಾರ್ ಪ್ಯಾನಲ್, ಫಾಲ್ಕನ್ ಹಕ್ಕಿಯಿಂದ ವೇಗದ ಏರೋಪ್ಲೇನ್, ಚಿರತೆಯಿಂದ ಬೈಕ್, ಏರೋಪ್ಲೇನ್ ಚಿಟ್ಟೆಯಿಂದ ಡ್ರೋನ್, ಹೊಳೆಯ ಹುಳುಗಳಿಂದ ಸೊಳ್ಳೆಗಳನ್ನು ಹಿಡಿಯುವ ಸಾಧನ, ಹಲವಾರು ಜೀವಿಗಳಿಂದ ವೈದ್ಯಕೀಯ ಸಂಶೋಧನೆಗಳು ಮುಂತಾದವುಗಳನ್ನು ತೋರಿಸಿ, ನಮ್ಮ ಸುತ್ತಮುತ್ತ ಇರುವ ಪ್ರಕೃತಿಯಿಂದಲೇ ನಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವತ್ತ ಕುತೂಹಲಿಗಳಾಗಿರಿ ಎಂದು ವಿದ್ಯಾರ್ಥಿಗಳಿಗೆ ವಿವರಿಸಿದರು.
ಕಾಲೇಜಿನ ವತಿಯಿಂದ ನಡೆಸಿದ್ದ ವಿಜ್ಞಾನದ ವಿಷಯದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ದ್ವಿತೀಯ ಪಿಯುಸಿಯ ಎನ್.ಜಿ.ಅಕ್ಷಯ್ ಕುಮಾರ್, ಜೆ.ಎಂ.ಮನೋಹರ, ಸಿ.ಎನ್.ಕಾವ್ಯಶ್ರೀ, ಪ್ರಥಮ ಪಿಯುಸಿಯ ವೈ.ಎನ್.ಗಂಗಾಧರ, ಎ.ಎಂ.ಅನೂಷ, ಎಂ.ಅನು ಅವರಿಗೆ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಪ್ರಮಾಣ ಪತ್ರ, ಪಾರಿತೋಷಕ ಮತ್ತು ವಿಕ್ರಂ ಸಾರಾಬಾಯ್, ಅಬ್ದುಲ್ ಕಲಾಂ ಅವರ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.
ವಿದ್ಯಾರ್ಥಿಗಳೊಂದಿಗೆ ಸಂವಾದ : ಭಾರತೀಯ ವಿಜ್ಞಾನ ಸಂಸ್ಥೆಯನ್ನು ಸೇರುವುದು ಹೇಗೆ, ಭೂಕಂಪದ ಬಗ್ಗೆ ಪ್ರಾಣಿಗಳಿಗೆ ಮೊದಲು ಹೇಗೆ ತಿಳಿಯುತ್ತದೆ, ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧನೆಗಳಿಂದ ಜನಸಾಮಾನ್ಯರಿಗೆ ಆಗುತ್ತಿರುವ ಉಪಯೋಗಗಳು, ಸೈನಿಕರಿಗೆ ಬದಲಾಗಿ ರೋಬೋಟ್ ಬಳಸಬಹುದೆ, ಹಕ್ಕಿಗಳಲ್ಲಿ ಗಂಡು ಹೆಣ್ಣುಗಳ ವ್ಯತ್ಯಾಸ, ಖಾಲಿಯಾಗುತ್ತಿರುವ ನೈಸರ್ಗಿಕ ಅನಿಲಗಳು, ಮೊಬೈಲ್ ತರಂಗಗಳಿಂದ ಹಕ್ಕಿಗಳಿಗೆ ಆಗುತ್ತಿರುವ ಅಪಾಯ, ಕಪ್ಪು ರಂಧ್ರ ಇತ್ಯಾದಿ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕೇಳಿ ವಿಜ್ಞಾನಿ ಹರೀಶ್ ಆರ್ ಭಟ್ ಅವರಿಂದ ಉತ್ತರ ಪಡೆದರು. ಪ್ರಶ್ನೆಗಳನ್ನು ಕೇಳಿದ ವಿದ್ಯಾರ್ಥಿಗಳಿಗೆ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಪುಸ್ತಕಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ನೃತ್ಯಪಟು ಸಿ.ಎನ್.ಮುನಿರಾಜು ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯ್ತಿ ಸದಸ್ಯೆ ತನುಜಾ ರಘು, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಎಸ್.ಸತೀಶ್, ಹುಜಗೂರು ಕೆಂಪೇಗೌಡ, ಯೋಧ ರವಿಕುಮಾರ್, ಲೋಕಮಾತಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎನ್.ಆರ್.ಕೃಷ್ಣಮೂರ್ತಿ, ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುದರ್ಶನ್, ಸಿದ್ದಾರ್ಥ್ ಪೈ ಹಾಜರಿದ್ದರು.
ಉನ್ನತ ಶಿಕ್ಷಣಕ್ಕಾಗಿ ಪ್ರೋತ್ಸಾಹ ಮಾಡಲು ಮುಂದಾಗಬೇಕು
ಬಡತನದಲ್ಲಿ ಜನಿಸಿ ಉತ್ತಮ ಶಿಕ್ಷಣ ಪಡೆಯಲು ಪರದಾಡುವ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕೆಲಸವನ್ನು ಆರ್ಥಿಕವಾಗಿ ಮುಂದುವರೆದ ಹಾಗು ಉನ್ನತ ಸ್ಥಾನಗಳಲ್ಲಿರುವ ಶ್ರೀಮಂತರು ಮಾಡಲು ಮುಂದಾಗಬೇಕು ಎಂದು ಕರ್ಣಶ್ರೀ ಚಾರಿಟೆಬಲ್ ಟ್ರಸ್ಟ್‍ನ ಅಧ್ಯಕ್ಷ ಡಿ.ಆರ್.ಶಿವಕುಮಾರ್‍ಗೌಡ ಹೇಳಿದರು.
ನಗರದ ಚಿಂತಾಮಣಿ ರಸ್ತೆಯಲ್ಲಿರುವ ಕರ್ಣಶ್ರೀ ಚಾರಿಟಬಲ್ ಟ್ರಸ್ಟ್‍ನ ಕಛೇರಿಯಲ್ಲಿ ಪಿಯುಸಿಯಲ್ಲಿ ಶೇ 94 ರಷ್ಟು ಅಂಕ ಪಡೆದ ನಗರದ 13 ನೇ ವಾರ್ಡಿನ ಸುಮ ಎಂಬ ವಿದ್ಯಾರ್ಥಿಗೆ ಉನ್ನತ ಶಿಕ್ಷಣಕ್ಕಾಗಿ 20 ಸಾವಿರ ರೂ ಚೆಕ್ ವಿತರಿಸಿ ಮಾತನಾಡಿದರು.
ಸಮಾಜದಲ್ಲಿ ಬಹುತೇಕ ಬಡ ವಿದ್ಯಾರ್ಥಿಗಳು ಕಷ್ಟಗಳನ್ನು ಎದಿರುಸುತ್ತಾ ಪ್ರಾಥಮಿಕ ಶಿಕ್ಷಣ ಮುಗಿಸುತ್ತಾರೆ. ಆದರೆ ಆರ್ಥಿಕ ತೊಂದರೆಯಿಂದ ಉನ್ನತ ಶಿಕ್ಷಣ ಪಡೆಯಲಾಗದೇ ಶಿಕ್ಷಣ ವನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ. ಹಾಗಾಗಿ ಶ್ರೀಮಂತರು ಸೇರಿದಂತೆ ಸಮಾಜದಲ್ಲಿ ಉನ್ನತ ಸ್ಥಾನ ಮಾನ ಅಲಂಕರಿಸಿರುವವರು ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಹಾಯಕ್ಕೆ ಬಂದರೆ ಅವರೂ ಸಹ ಸಮಾಜದ ಮುಖ್ಯ ವಾಹಿನಿಗೆ ಬರುತ್ತಾರೆ ಎಂದರು.
ಪ್ರತಿಯೊಬ್ಬರೂ ಸಾರ್ವಜನಿಕ ಜೀವನದಲ್ಲಿ ಸಹಾಯ ಮನೋಭಾವವನ್ನು ರೂಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಎಲ್ಲರೂ ಸುಖವಾಗಿರಲು ಸಾಧ್ಯ. ಟ್ರಸ್ಟ್ ಮೂಲಕ ಕಳೆದ ಐದು ವರ್ಷದಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಮುಂದಿನ ದಿನಗಳಲ್ಲಿಯೂ ಬಡವರ ಸೇವೆ ನಿರಂತರವಾಗಿ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸುಗಟೂರು ಸಂತೋಷರವರ ಮಗಳು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಆರ್ಥಿಕ ಸಹಾಯ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸುರೇಂದ್ರ ಗೌಡ, ಶ್ರೀರಾಮರೆಡ್ಡಿ, ಮುಖಂಡರಾದ ಮುನಿರಾಜು, ಕೊತ್ತನೂರು ರವಿ, ಶ್ರೀನಿವಾಸ್, ಬೈರಾರೆಡ್ಡಿ, ಮುನಿರಾಜು, ಚಲಪತಿ ಮತ್ತಿತರರು ಹಾಜರಿದ್ದರು.
ಸರ್ಕಾರಿ ಆಸ್ಪತ್ರೆಗಳಿಗೆ ಉಚಿತ ಆಂಬುಲೆನ್ಸ್ಗಳ ಹಸ್ತಾಂತರ ಕಾರ್ಯಕ್ರಮ
ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಾಗಿ ಬರುವವರು ಬಡವರು, ಬಡವರಿಗೆ ಪ್ರಥಮ ಆದ್ಯತೆ ನೀಡಿ, ಅವರನ್ನು ಪ್ರೀತಿಯಿಂದ ಕಾಣಿ, ಸರ್ಕಾರಿ ಆಸ್ಪತ್ರೆಯು ಜನರು ಬೆವರು ಸುರಿಸಿ ಕಟ್ಟಿದ ತೆರಿಗೆ ಹಣದಿಂದ ನಿರ್ಮಾಣವಾಗಿದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ತಿಳಿಸಿದರು.ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಾಗಿ ಬರುವವರು ಬಡವರು, ಬಡವರಿಗೆ ಪ್ರಥಮ ಆದ್ಯತೆ ನೀಡಿ, ಅವರನ್ನು ಪ್ರೀತಿಯಿಂದ ಕಾಣಿ, ಸರ್ಕಾರಿ ಆಸ್ಪತ್ರೆಯು ಜನರು ಬೆವರು ಸುರಿಸಿ ಕಟ್ಟಿದ ತೆರಿಗೆ ಹಣದಿಂದ ನಿರ್ಮಾಣವಾಗಿದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ತಿಳಿಸಿದರು.
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಎಚ್.ಡಿ.ದೇವೆಗೌಡ ಮತ್ತು ಜೈ ಪ್ರಕಾಶ್ ನಾರಾಯಣ್ ಸೇವಾಬಿವೃದ್ದಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಸರ್ಕಾರಿ ಆಸ್ಪತ್ರೆಗಳಿಗೆ ಉಚಿತ ಆಂಬುಲೆನ್ಸ್ಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಟ್ರಸ್ಟ್ ಎಂದರೆ ನಂಬಿಕೆ. ಟ್ರಸ್ಟ್ ವತಿಯಿಂದ ಯಾರೇ ಆಗಲಿ ಬಡವರಿಗೆ ಉಪಯೋಗವಾಗುವ ಕೆಲಸ ಮಾಡಿದ್ದರೆ ಅವರಿಗೆ ಬೆಂಬಲ ನೀಡುತ್ತೇನೆ. ಆಂಬುಲೆನ್ಸ್ಗಳ ಮೇಲೆ ಟ್ರಸ್ಟ್ನ ಹೆಸರನ್ನು ಬಿಟ್ಟು ಭಾವಚಿತ್ರಗಳನ್ನು ತೆಗೆದುಹಾಕಲಾಗುವುದು. ತಾಲ್ಲೂಕಿನಲ್ಲಿ ಪ್ರತಿ ೧೦- ರಿಂದ ೧೫ ಕಿ.ಮೀ ಅಂತರದಲ್ಲಿ ರೋಗಿಗಳಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಒಂದು ಆಂಬುಲೆನ್ಸ್ ನೀಡುವ ಯೋಜನೆ ಮಾಡಲಾಗಿದೆ. ಈ ಯೋಜನೆಯನ್ನು ತ್ವರಿತವಾಗಿ ಅನುಷ್ಟಾನಗೊಳಿಸಲು ಕ್ರಮ ತೆಗೆದುಕೊಂಡಿದೆ. ಆಂಬುಲೆನ್ಸ್ ಸಾರ್ವಜನಿಕರ ಪ್ರಾಣ ಕಾಪಾಡುವ ತುರ್ತುವಾಹನವಾಗಿರುವುದರಿಂದ ಆಂಬುಲೆನ್ಸ್ ಓಡಾಡುವಾಗ ದಾರಿ ಬಿಟ್ಟು ಸಹಕರಿಸಿ ಎಂದು ಮನವಿ ಮಾಡಿದರು.
ಇಡೀ ಕರ್ನಾಟಕದಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಡಿ.ಗ್ರೂಪ್ ನೌಕರರ ಕೊರತೆ ಇದ್ದು, ಗುತ್ತಿಗೆ ಆಧಾರದ ಮೇಲೆ ನೌಕರರನ್ನು ತೆಗೆದುಕೊಳ್ಳಲಾಗುವುದು. ಆಸ್ಪತ್ರೆಗಳಲ್ಲಿ ಕೊರತೆ ಇರುವ ಸಿಬ್ಬಂದಿಯನ್ನು ನೇಮಕ ಮಾಡುವ ನಿಟ್ಟಿನಲ್ಲಿ ವಿಶೇಷ ನೇಮಕಾತಿ ಪ್ರಕ್ರಿಯೆ ಪ್ರಾರಂಭಮಾಡಿದ್ದು, ತ್ವರಿತವಾಗಿ ೨-೩ ತಿಂಗಳ ಅವಧಿಯಲ್ಲಿ ಎಲ್ಲ ರೀತಿಯ ಸಿಬ್ಬಂದಿಯ ಕೊರತೆ ನೀಗಿಸಲಾಗುವುದೆಂದು ಭರವಸೆ ನೀಡಿದರು.
ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡಲು ಅಗತ್ಯವಾದ ಕಾಮಗಾರಿ ಜಾರಿಯಲ್ಲಿದ್ದು ಕಾಮಗಾರಿ ಶೇ ೮೦ ಭಾಗ ಕಾಮಗಾರಿ ಮುಗಿದಿದೆ. ಯೋಜನೆಗೆ ೨೦೦೦ ಹೆಕ್ಟೆರ್ ಭೂಮಿಯ ಅಗತ್ಯವಿದ್ದು, ಸುಮಾರು ೭ ಹಳ್ಳಿಗಳು ಜಲಾವೃತ್ತವಾಗಲಿದೆ. ೭ ಗ್ರಾಮದ ಜನರಿಗೆ ಬೇರೆ ಕಡೆ ಸ್ಥಳಾಂತರಿಸಿ, ಅವರಿಗೆ ಅಗತ್ಯವಿರುವ ಭೂಮಿ, ಮತ್ತಿತರರ ಸೌಲಭ್ಯ ಕಲ್ಪಿಸಲಾಗುವುದು. ಈ ಯೋಜನೆಗೆ ೮ ಅಣೆಕಟ್ಟುಗಳನ್ನು ಕಟ್ಟಿ ಶೇಖರಣೆಯಾದ ನೀರನ್ನು ಪಂಪ್ ಮೂಲಕ ಕೆರೆಗಳಿಗೆ ನೀಡಲಾಗುವುದು, ಅದಕ್ಕೂ ಮೊದಲು ಬೆಂಗಳೂರಿನ ಕೊಳಚೆ ನೀರನ್ನು ಶುದ್ಧೀಕರಿಸಿ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀಡುವ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಇದೇ ವರ್ಷದ ನವೆಂಬರ್ ಒಳಗೆ ಕೋಲಾರದ ಕೆರೆಗಳಿಗೆ ಹಾಯಿಸಲಾಗುವುದು. ಇದಕ್ಕೆ ಆಯಾ ತಾಲ್ಲೂಕಿನ ಜನ ಪ್ರತಿನಿಧಿಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.
ಬಡವರು ಖಾಸಗಿ ಆಸ್ಪತ್ರೆಗಳಿಗೆ ಹೋದಾಗ ಅನಗತ್ಯವಾದ ಪರೀಕ್ಷೆಗಳನ್ನು ಮಾಡಿ ಹಣ ದೋಚುತ್ತಿದ್ದು, ಆಪರೇಷನ್ಗಳಿಗೆ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ದ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ಕಾನೂನಿನಲ್ಲಿ ತಿದ್ದುಪಡಿ ಮಾಡಿದೆ. ಅಂತಹ ಪ್ರಕರಣಗಳು ಕಂಡುಬಂದಲ್ಲಿ ಅಂತಹ ಖಾಸಗಿ ಆಸ್ಪತ್ರೆಗಳ ಮೇಲೆ ಪ್ರಕರಣ ದಾಖಲು ಮಾಡಬಹುದಾಗಿದ್ದು, ಶೀಘ್ರದಲ್ಲೇ ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಡಯಾಲಿಸಿಸ್ ನಿಂದ ಹಿಡಿದು ಎಲ್ಲ ಆಧುನಿಕರ ಸೌಲಭ್ಯಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ನೀಡಲಾಗುವುದು, ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಆಚೆ ಔಷದಿಗಳಿಗೆ ಚೀಟಿ ಬರೆದುಕೊಡಬಾರದು ಎಂದು ಆದೇಶ ನೀಡಲಾಗುವುದು. ಔಷಧಿ ಕಂಪೆನಿಗಳು ಹೆಚ್ಚಿನ ಲಾಭ ಪಡೆದು ತಮ್ಮ ತಮ್ಮ ಔಷದಿಗಳನ್ನು ಮಾರಾಟ ಮಾಡುತ್ತಿದ್ದು, ಅದನ್ನು ತಡೆಗಟ್ಟುವ ಸಲುವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಜನರಿಕ್ ಔಷದಿ ಕೇಂದ್ರಗಳನ್ನು ತೆರೆಯುತ್ತಿದ್ದು, ಕಡಿಮೆ ದರದಲ್ಲಿ ಔಷದಿಗಳನ್ನು ಮಾರಾಟ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಚ್.ಡಿ.ದೇವೆಗೌಡ ಮತ್ತು ಜೈ ಪ್ರಕಾಶ್ ನಾರಾಯಣ್ ಸೇವಾಬಿವೃದ್ದಿ ಚಾರಿಟಬಲ್ ಟ್ರಸ್ಟ್ ವತಿಯಿಂದ ೩ ಆಂಬುಲೆನ್ಸ್ಗಳನ್ನು ಹಸ್ತಾಂತರ ಮಾಡಲಾಯಿತು.
ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಸರ್ಕಾರಿ ಆಸ್ಪತ್ರೆಯಲ್ಲಿರವ ರೋಗಿಗಳನ್ನು ಮಾತನಾಡಿಸಿ ಅವರ ಕುಂದು ಕೊರತೆಗಳನ್ನು ವಿಚಾರಿಸಿದರು.
ಎಚ್.ಡಿ.ದೇವೆಗೌಡ ಮತ್ತು ಜೈ ಪ್ರಕಾಶ್ ನಾರಾಯಣ್ ಸೇವಾಬಿವೃದ್ದಿ ಚಾರಿಟಬಲ್ ಟ್ರಸ್ಟ್ನ ಅದ್ಯಕ್ಷ ಮೇಲೂರು ರವಿ, ಜಿಲ್ಲಾ ಪಂಚಾಯ್ತಿ ಉಪಾದ್ಯಕ್ಷೆ ತನುಜಾ ರಘು, ಜಿಲ್ಲಾ ಪಂಚಾಯ್ತಿ ಸದಸ್ಯ ಬಂಕ್ ಮುನಿಯಪ್ಪ, ತಾಲ್ಲೂಕು ಪಂಚಾಯ್ತಿ ಅದ್ಯಕ್ಷ ಲಕ್ಷೀನಾರಾಯಣರೆಡ್ಡಿ, ಉಪಾದ್ಯಕ್ಷ ನರಸಿಂಹಯ್ಯ, ಡಿ.ಹೆಚ್.ಓ ಡಾ.ರವಿಶಂಕರ್, ವೈದ್ಯಾದಿಕಾರಿಗಳು, ನಗರಸಭಾ ಸದಸ್ಯರು, ಸಾರ್ವಜನಿಕರು ಕಾರ್ಯಕ್ರದಲ್ಲಿ ಹಾಜರಿದ್ದರು.
ಕಾನೂನು ಅರಿವು
ವಿದ್ಯಾರ್ಥಿ ದೆಸೆಯಲ್ಲಿಯೇ ನಮ್ಮ ಮುಂದಿನ ಜೀವನ ಹೇಗೆ ಕಟ್ಟಿಕೊಳ್ಳಬೇಕು ಎನ್ನುವುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಜೆಎಂಎಫ್‍ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ ಹಾಗು ಸರ್ಕಾರಿ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳು ಮತ್ತು ರ್ಯಾಗಿಂಗ್ ತಡೆ ಕುರಿತು ಏರ್ಪಡಿಸಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದಲ್ಲಿರುವ ಒಳ್ಳೆಯ ಹಾಗು ಕೆಟ್ಟ ವ್ಯಸನಗಳಾವುವು ಎಂಬುದನ್ನು ಗುರುತಿಸುವ ಶಕ್ತಿಯನ್ನು ವಿದ್ಯಾರ್ಥಿಗಳು ಮೊದಲು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಬರೀ ಓದುವುದಕ್ಕೆ ಸಮಯ ನೀಡಬೇಕಿಲ್ಲ ಬದಲಿಗೆ ಮುಂದಿನ ನಿಮ್ಮ ಜೀವನ ಉತ್ತಮವಾಗಿ ರೂಪಿಸಿಕೊಳ್ಳಲು ಬೇಕಾದ ಅಗತ್ಯ ಸಮಯವನ್ನು ನೀಡಬೇಕು ಎಂದರು.
ಕಾಲೇಜು ವಿದ್ಯಾರ್ಥಿಗಳು ಅದರಲ್ಲಿಯೂ ಹೆಣ್ಣು ಮಕ್ಕಳು ಅತಿ ಎಚ್ಚರಿಕೆಯಿಂದ ಇರಬೇಕು. ಸ್ನೇಹದಿಂದಿರುವುದು ಒಳ್ಳೆಯದು ಆದರೆ ಅದರ ಇತಿ ಮಿತಿ ಮೀರದ ಹಾಗೆ ನಡೆದುಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ ಎಂದರು.
ಹಣಕಾಸಿನ ವಿಚಾರದಲ್ಲಿ ಸ್ವಾತಂತ್ರ್ಯವಿಲ್ಲದಿದ್ದರೆ ಸಮಾಜದಲ್ಲಿ ಯಾವುದೇ ಪುರುಷ ಅಥವ ಮಹಿಳೆಯರಿಗೆ ಗೌರವವಿರುವುದಿಲ್ಲ. ಹಾಗಾಗಿ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಶಿಕ್ಷಣ ಪಡೆದು ನಾಳೆಯ ದೇಶದ ಉತ್ತಮ ಪ್ರಜೆಗಳಾಗಿ ರೂಪಗೊಳ್ಳಲು ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳಿ ಎಂದರು.
ವಕೀಲರಾದ ಎಂ.ಬಿ.ಲೋಕೇಶ್ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗು ರ್ಯಾಗಿಂಗ್ ತಡೆ ಕುರಿತು ಮಾತನಾಡಿ ಇತ್ತೀಚಗೆ ನಗರ ಪ್ರದೇಶಗಳಲ್ಲಿರುವ ಶಾಲಾ ಕಾಲೇಜುಗಳು ಮಾದಕ ವಸ್ತುಗಳ ಅಡ್ಡೆಗಳಾಗಿ ರೂಪಗೊಂಡಿದ್ದು ವಿದ್ಯಾರ್ಥಿಗಳು ಯಾವುದೇ ವ್ಯಸಕ್ಕೆ ಒಳಗಾಗಬಾರದು ಎಂದರು.
ಇನ್ನು ಕಾಲೇಜುಗಳಿಗೆ ನೂತನವಾಗಿ ಬರುವ ವಿದ್ಯಾರ್ಥಿಗಳನ್ನು ರ್ಯಾಗಿಂಗ್ ಮಾಡಿದರೆ ಕಾನೂನು ಅಡಿಯಲ್ಲಿ ಉಗ್ರ ಶಿಕ್ಷೆಗೆ ಒಳಪಡಬೇಕಾಗುತ್ತದೆ. ಕೇವಲ ಕೆಲ ಕ್ಷಣಗಳ ತಮ್ಮ ಮೋಜಿಗಾಗಿ ನೀವು ಮಾಡುವ ರ್ಯಾಗಿಂಗ್‍ನಿಂದ ದುರ್ಭಲ ಮನಸ್ಸಿನ ಹುಡುಗ ಹುಡುಗಿಯರು ತಮ್ಮ ಅಮೂಲ್ಯವಾದ ಜೀವನ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಕಾಲೆಜುಗಳಲ್ಲಿ ರ್ಯಾಗಿಂಗ್ ಸಂಸ್ಕøತಿಯನ್ನು ಕೈ ಬಿಟ್ಟು ಎಲ್ಲರೂ ಉತ್ತಮ ಸ್ನೇಹ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವಿಜಯ್‍ಕುಮಾರ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಮೋಜಿಗಾಗಿ ಕಲಿಯುವ ಕೆಲ ಚಟಗಳು ತಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದ್ದು ಪ್ರಾಣಕ್ಕೆ ಸಂಚಕಾರ ತರಲಿದೆ. ಮಾದಕ ವ್ಯಸನಗಳಿಂದ ವಿದ್ಯಾರ್ಥಿಗಳು ದೂರವಿರಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಎನ್.ಎ.ಶ್ರೀಕಂಠ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಸರಕಾರಿ ಸಹಾಯಕಿ ಅಭಿಯೋಜಕಿ ಎಸ್.ಕುಮುದಿನಿ, ವಕೀಲರಾದ ಬೈರಾರೆಡ್ಡಿ, ಯಣ್ಣಂಗೂರು ಮಂಜುನಾಥ್, ಗುಡಿಹಳ್ಳಿ ಚಂದ್ರಶೇಖರ್, ಕಾಲೇಜು ಪ್ರಭಾರ ಪ್ರಾಂಶುಪಾಲ ಶಿವಾರೆಡ್ಡಿ, ಪ್ರಾಧ್ಯಾಪಕರಾದ ಮುನಿರಾಜು, ಗೀತ ಇನ್ನಿತರರು ಹಾಜರಿದ್ದರು.
ಶ್ರೀ ರಾಮ, ಬಸವಣ್ಣ ಹಾಗು ಮಾರೆಮ್ಮ ದೇವಿಯ ಜಾತ್ರೆ
ನಗರದ ಗ್ರಾಮದೇವತೆ ಶ್ರೀ ಗಂಗಮ್ಮದೇವಿ ಮತ್ತು ಕರಗದಮ್ಮ ದೇವಿ ಸೇರಿದಂತೆ ಉಲ್ಲೂರುಪೇಟೆಯ ಶ್ರೀ ರಾಮ, ಬಸವಣ್ಣ ಹಾಗು ಮಾರೆಮ್ಮ ದೇವಿಯ ಜಾತ್ರಾ ಮಹೋತ್ಸವವನ್ನು ಎರಡು ದಿನಗಳ ಕಾಲ ಭಾರಿ ವಿಜೃಂಭಣೆಯಿಂದ ಆಚರಿಸಲಾಯಿತು.
ಸಕಾಲದಲ್ಲಿ ಮಳೆ ಬೆಳೆಯಾಗಲೆಂದು ಸೋಮವಾರ ಹಾಗು ಮಂಗಳವಾರ ಎರಡು ದಿನಗಳ ಕಾಲ ಗ್ರಾಮದೇವತೆಗಳಿಗೆ ತಂಬಿಟ್ಟು ದೀಪಗಳನ್ನು ಮಾಡಿ ನಗರದ ಪ್ರಮುಖ ರಸ್ತೆಗಳಲ್ಲಿ ಮಹಿಳೆಯರು ಕಾಲ್ನಿಡಿಗೆಯ ಮೂಲಕ ದೇವಾಲಯದ ವರೆಗೂ ಹೋಗಿ ತಂಬಿಟ್ಟು ದೀಪಗಳನ್ನು ಬೆಳಗುವ ಮೂಲಕ ಶ್ರದ್ಧಾಭಕ್ತಿಗಳಿಂದ ಪೂಜೆ ಸಲ್ಲಿಸಿ ಜಾತ್ರೆ ಆಚರಿಸಿದರು.
ನಗರದ ಬಹುತೇಕ ರಸ್ತೆಗಳು ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದು ಎಲ್ಲಾ ಮನೆಗಳಲ್ಲಿಯೂ ಕೂಡಾ ಹಬ್ಬದ ಸಂಭ್ರಮ ಸಡಗರಗಳಿಂದ ತುಂಬಿತ್ತು, ಜಾತ್ರೆಯ ಅಂಗವಾಗಿ ಬಂದಿದ್ದ ಸಂಬಂಧಿಕರಿಗೆ ಹಬ್ಬದೂಟ (ಬಾಡೂಟ) ಬಡಿಸಿ ಅದ್ದೂರಿಯಾಗಿ ಜಾತ್ರೆ ಆಚರಿಸಿದರು.
ಪ್ರತಿ ವರ್ಷದ ಆಷಾಢ ಮಾಸದಲ್ಲಿ ನಡೆಯುವ ಈ ಜಾತ್ರೆಯು ಬಹಳ ವಿಶೇಷತೆ ಹೊಂದಿದ್ದು ಪ್ರತಿ ಬಾರಿಯೂ ಕೂಡಾ ತಂಬಿಟ್ಟು ದೀಪಗಳನ್ನು ಮಾಡಿ ಜಾತ್ರೆ ಮಾಡುವುದರಿಂದ ಸಕಾಲದಲ್ಲಿ ಮಳೆಯಾಗುತ್ತದೆ ಎಂಬುದು ಇಲ್ಲಿನ ಜನರ ಬಲವಾದ ನಂಬಿಕೆಯಾಗಿದೆ.
ಮಕ್ಕಳು ಆರ್ಥಿಕ ಹಾಗೂ ಹಣಕಾಸಿನ ಬಗ್ಗೆ ತಿಳುವಳಿಕೆ ಹೊಂದಬೇಕು
ಶಾಲೆಯಲ್ಲಿಯೇ ಮಕ್ಕಳು ಆರ್ಥಿಕ ಹಾಗೂ ಹಣಕಾಸಿನ ಬಗ್ಗೆ ವಿವಿಧ ಚಟುವಟಿಕೆಗಳ ಮೂಲಕ ಕಲಿಯಬೇಕು. ಬ್ಯಾಂಕ್ ವ್ಯವಹಾರದ ಬಗ್ಗೆ ಅವಗಾಹನೆಯನ್ನು ಮಕ್ಕಳು ಪಡೆಯುವುದು ಅವಶ್ಯಕ ಎಂದು ತಾಲ್ಲೂಕು ಎಸ್‌ಬಿಐ ಆರ್ಥಿಕ ಸಲಹೆಗಾರ ಡಾ.ಸಿ.ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಸ್‌ಆರ್‌ಇಟಿ ಪ್ರೌಢಶಾಲೆಯಲ್ಲಿ ಶುಕ್ರವಾರ ಶಾಲಾ ವಿದ್ಯಾರ್ಥಿಗಳಿಗೆ ಹಣಕಾಸಿನ ಹಾಗೂ ಬ್ಯಾಂಕ್ ವಹಿವಾಟಿನ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರದಿಂದ ಸಿಗುವ ವಿದ್ಯಾರ್ಥಿ ವೇತನ ಈಗ ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ. ವಿದ್ಯಾರ್ಥಿಗಳು ತಮ್ಮ ಖಾತೆಯನ್ನು ತಾವೇ ನಿರ್ವಹಿಸಲು ಸಮರ್ಥರಾಗಬೇಕು. ಶಾಲೆಗಳಲ್ಲಿ ಕೂಡ ವಿವಿಧ ಚಟುವಟಿಕೆಗಳ ಮೂಲಕ ಶಾಲಾ ಬ್ಯಾಂಕ್ ನಡೆಸುವ ಮೂಲಕ ಮಕ್ಕಳಲ್ಲಿ ಹಣಕಾಸಿನ ಬಗ್ಗೆ ಅರಿವು ಬೆಳೆಸಬಹುದಾಗಿದೆ ಎಂದು ಹೇಳಿದರು.
ಶೈಕ್ಷಣಿಕ ಸಾಲ, ನಗದು ರಹಿತ ವ್ಯವಹಾರ, ಆನ್‌ಲೈನ್ ಬ್ಯಾಂಕಿಂಗ್ ಕುರಿತಂತೆ ಈ ಸಂದರ್ಭದಲ್ಲಿ ಅವರು ವಿವರಿಸಿದರು.
ಮುಖ್ಯ ಶಿಕ್ಷಕ ಗೌರಿಶಂಕರ್, ಶಿಕ್ಷಕರಾದ ಎಂ.ಕೃಷ್ಣಪ್ಪ, ಟಿ.ಬಿ.ಬೈರಪ್ಪ, ಹನುಮಂತಪ್ಪ, ವೆಂಕಟೇಶ್‌ನಾಯಕ್, ಪಂಕಜ, ನಾಗಚಂದ್ರ, ಕೃಷ್ಣಾರೆಡ್ಡಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕೃಷಿ ಅಭಿಯಾನ: ನಾನಾ ಇಲಾಖೆಗಳಿಂದ ವಸ್ತು ಪ್ರದರ್ಶನ
ಕೃಷಿ, ತೋಟಗಾರಿಕೆ, ರೇಷ್ಮೆ ಮುಂತಾದ ರೈತರು ಹಾಗೂ ಕೃಷಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ರೈತರಿಗೆ ಸಿಗುವ ಸವಲತ್ತು, ಯೋಜನೆಗಳ ಬಗ್ಗೆ ಇನ್ನಷ್ಟು ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಕ್ರಾಸ್ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಕೃಷಿ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೃಷಿ ಅಭಿಯಾನ ಹಾಗೂ ಕೃಷಿ, ರೇಷ್ಮೆ, ತೋಟಗಾರಿಕೆ, ಪಶು ಸಂಗೋಪನೆ ಮುಂತಾದ ಇಲಾಖೆಗಳ ವಸ್ತು ಪ್ರದರ್ಶನ, ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಹಳಷ್ಟು ಯೋಜನೆಗಳ ಬಗ್ಗೆ ಅರಿವು ಇಲ್ಲದ ಕಾರಣ ಅನೇಕ ಮಂದಿ ರೈತರು ಹಲವಾರು ಯೋಜನೆ, ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಅನುದಾನಗಳು ಮಧ್ಯವರ್ತಿಗಳ ಪಾಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯೋಜನೆಗಳ ಬಗ್ಗೆ ಅರಿವು ಇದ್ದಾಗ ರೈತರು ಕಚೇರಿಗಳಿಗೆ ಬಂದು ಕಾನೂನು ಚೌಕಟ್ಟಿನಲ್ಲಿ ಯೋಜನೆ, ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.
ಕೃಷಿ ವಿಜ್ಞಾನಿಗಳಾದ ಡಾ.ಆನಂದ್, ಪಂಕಜ ಕೃಷಿ ಸಂಬಂಧಿಸಿದಂತೆ ಹಲವು ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು. ಕೃಷಿ, ರೇಷ್ಮೆ, ತೋಟಗಾರಿಕೆ, ಹೈನುಗಾರಿಕೆ ಇಲಾಖೆಯ ವಸ್ತು ಪ್ರದರ್ಶನ, ಕೃಷಿಯ ಮಾಹಿತಿ ನೀಡುವ ರೈತ ರಥ ಗಮನ ಸೆಳೆಯಿತು.
ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ನಾನಾ ತರಕಾರಿ, ಹಣ್ಣು ಹಂಪಲು, ಸಿರಿ ದಾನ್ಯಗಳ ಪ್ರದರ್ಶನದ ಮಳಿಗೆಗಳಿಗೆ ಭೇಟಿ ನೀಡಿ ರೈತರು ಅವುಗಳ ಬಗ್ಗೆ ಮಾಹಿತಿ ತಿಳಿದುಕೊಂಡರು.
ಹೊಸಪೇಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಉಮಾ ರವಿಕುಮಾರ್, ಜಿಲ್ಲಾ ಪಂಚಾಯ್ತಿ ಸದಸ್ಯೆ ತನುಜಾರಘು, ತಾಲ್ಲೂಕು ಪಂಚಾಯಿತಿ ಸದಸ್ಯೆ ಶೋಭಾ ಶಶಿಕುಮಾರ್, ಕೃಷಿ ಅಧಿಕಾರಿ ಮುರಳಿ, ಗೋಪಾಲರಾವ್, ಎಚ್.ಜಿ.ಗೋಪಾಲಗೌಡ ಹಾಜರಿದ್ದರು.
ಟ್ರಾಕ್ಟರ್ ಚಕ್ರ ಹರಿದು ಮಹಿಳೆ ಸಾವು
ನಗರದ ಗಾಂಧಿನಗರದ ಸಮೀಪ ಇದ್ಲೂಡು ರಸ್ತೆಯಲ್ಲಿ ಶುಕ್ರವಾರ ಮಹಿಳೆ ತಲೆ ಮೇಲೆ ಟ್ರ್ಯಾಕ್ಟರ್ ಚಕ್ರ ಹರಿದು ಮಹಿಳೆ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ನಗರದ ಮಾರುತಿ ನಗರದ ನಿವಾಸಿಯಾದ ಪೈಂಟ್ ನಾಗರಾಜ್ ಅವರ ಪತ್ನಿ ಅನುಸೂಯಮ್ಮ(೪೫) ಮೃತಪಟ್ಟ ಮಹಿಳೆ. ಅನುಸೂಯಮ್ಮ ತನ್ನ ಎರಡೇ ಮಗ ಅನಿಲ್ ಕುಮಾರ್ ಜೊತೆ ದೇವಸ್ಥಾನಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು, ದ್ವಿಚಕ್ರ ವಾಹನದ ಹಿಂದೆ ಟ್ರ್ಯಾಕ್ಟರ್ ವೇಗವಾಗಿ ಬರುತ್ತಿತ್ತು, ಟ್ರ್ಯಾಕ್ಟರ್‌ಗೆ ಜಾಗ ಕೊಡಲೆಂದು ಪಕ್ಕಕ್ಕೆ ಹೋದಾಗ ದ್ವಿಚಕ್ರ ವಾಹನ ಮರಳಿನ ಮೇಲೆ ಜಾರಿ ವಾಹನದಲ್ಲಿ ಹೋಗುತ್ತಿದ್ದ ಅನುಸೂಯಮ್ಮ, ಅನಿಲ್ ಕುಮಾರ್ ಕೆಳಗೆ ಬಿದ್ದಿದ್ದಾರೆ. ಹಿಂದೆ ಬರುತ್ತಿದ್ದ ಪಿ.ಡಬ್ಯು,ಡಿ ಇಲಾಖೆಗೆ ಸಂಬಂದಪಟ್ಟ ವಸ್ತುಗಳನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ನ ಹಿಂಬದಿಯ ಚಕ್ರ ಅನುಸೂಯಮ್ಮ ಅವರ ತಲೆಯ ಮೇಲೆ ಹರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅನಿಲ್ ಕುಮಾರ್‌ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ರ್ಯಾಕ್ಟರ್‌ನ ಚಾಲಕ ಪರಾರಿಯಾಗಿದ್ದಾನೆ.
ಸರ್ಕಲ್ ಇನ್ಸ್‌ಪೆಕ್ಟರ್ ವೆಂಕಟೇಶ್, ಗ್ರಾಮಾಂತರ ಠಾಣೆ ಪಿ.ಎಸ್.ಐ ಪ್ರದೀಪ್ ಪೂಜಾರಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ಗುಣಮಟ್ಟದ ಕಾಮಗಾರಿ ನಡೆಸಿ
ಗ್ರಾಮಗಳಲ್ಲಿ ನಡೆಸುವ ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಕೂಡದು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚೌಡಸಂದ್ರ ಗ್ರಾಮದಲ್ಲಿ ಗುರುವಾರ ಎಸ್.ಸಿ.ಪಿ ಯೋಜನೆಯಡಿಯಲ್ಲಿ ಸುಮಾರು ೫ ಲಕ್ಷ ೬೫ ಸಾವಿರ ರೂಗಳ ವೆಚ್ಚದಲ್ಲಿ ೮೧ ಮೀಟರ್ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮಗಳಲ್ಲಿ ಕಾಮಗಾರಿ ನಡೆಯುವಾಗ ಪಕ್ಷಾತೀತವಾಗಿ ಜನರು ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿ ಗ್ರಾಮದ ಒಳಿತಿಗೆ ಸಹಕರಿಸಬೇಕು. ಗ್ರಾಮಗಳಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಇದರಿಂದ ಆರೋಗ್ಯವೂ ಸುಧಾರಿಸುತ್ತದೆ ಎಂದು ಹೇಳಿದರು.
ಮೇಲೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಆಂಜನೇಯರೆಡ್ಡಿ, ಸದಸ್ಯರಾದ ಮಮತಾ, ಶ್ರೀನಿವಾಸ್, ಎಂ.ಪಿ.ಸಿ.ಎಸ್.ಅಧ್ಯಕ್ಷ ಆನಂದ್, ಲೋಕೋಪಯೋಗಿ ಇಲಾಖೆಯ ಬೈರಾರೆಡ್ಡಿ, ಶಿವಕುಮಾರ್, ಗ್ರಾಮಸ್ಥರಾದ ಎಂ.ಜೆ.ಶ್ರೀನಿವಾಸ್, ರಾಮಚಂದ್ರ, ನಾರಾಯಣಸ್ವಾಮಿ, ಕೃಷ್ಣಪ್ಪ, ರವಿ, ರಾಮಾಂಜಿ, ಲಕ್ಷ್ಮಿನಾರಾಯಣ, ಗುತ್ತಿಗೆದಾರ ಚಂದ್ರಶೇಖರ್, ಮಾರೇಗೌಡ, ಮಹೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.
ಸಮಾಜಕ್ಕೆ ನಿಮ್ಮ ಬುದ್ಧಿ, ಜ್ಞಾನ ಸಮರ್ಪಿತವಾಗಲಿ
‘ಇಂದಿನ ಓದುಗ ಮುಂದಿನ ನಾಯಕ’ ಎಂಬ ಮಾತು ವಿದ್ಯಾರ್ಥಿಗಳನ್ನು ಪ್ರೇರೇಪಿಸುವಂತಾಗಲಿ. ಹೊಸತನವಾಗಿ ಯೋಚಿಸಿ, ಹೊಸತನ್ನು ಕಂಡು ಹಿಡಿಯುವ ಬಗ್ಗೆ ನಿಮ್ಮ ಆಲೋಚನೆಗಳು ಸಾಗಲಿ, ಸಮಾಜಕ್ಕೆ ನಿಮ್ಮ ಬುದ್ಧಿ, ಜ್ಞಾನ ಸಮರ್ಪಿತವಾಗಲಿ ಎಂದು ಇಸ್ರೋ ಹಿರಿಯ ವಿಜ್ಞಾನಿ ಹಾಗೂ ಜಿಯೋ ಸ್ಯಾಟ್ ವಿಭಾಗದ ಮುಖ್ಯಸ್ಥ ಹಿರಿಯಣ್ಣ ತಿಳಿಸಿದರು.
ನಗರದ ದಿ ಕ್ರೆಸೆಂಟ್ ಶಾಲೆಯಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ ಹಾಗೂ ದಿ ಕ್ರೆಸೆಂಟ್ ಶಾಲೆಯ ಸಹಯೋಗದಲ್ಲಿ ನಡೆದ ‘ಸಾಧಕರ ಸಾಧನೆ, ವಿದ್ಯಾರ್ಥಿಗಳಿಗೆ ಪ್ರೇರಣೆ’ ಎಂಬ ಕಾರ್ಯಕ್ರಮದಡಿಯಲ್ಲಿ ಏರ್ಪಡಿಸಿದ್ದ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಅವಲೋಕನ ಎಂಬ ವಿಜ್ಞಾನ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ಪಠ್ಯದೊಂದಿಗೆ ತಿಂಗಳಿಗೊಂದು ಹೊಸ ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಪ್ರತಿದಿನ ಒಂದು ಗಂಟೆ ತಡವಾಗಿ ಮಲಗಿ. ಆ ಸಮಯವನ್ನು ಓದಿಗೆ ಮೀಸಲಿಡಿ. ಬುದ್ಧಿವಂತರಲ್ಲಿ ಬುದ್ಧಿವಂತರನ್ನು ಹುಡುಕಬೇಕಾದ ಕಾಲವಿದು. ಜ್ಞಾನಾರ್ಜನೆ ಮಾಡುತ್ತಾ ಸಾಗಿದಂತೆ ಸ್ವತಂತ್ರ ಆಲೋಚನೆಗಳು ಹುಟ್ಟುತ್ತವೆ ಸೋಂಭೇರಿ ಎಂಬ ಶಬ್ಧ ನಿಘಂಟಿಗೆ ಸೀಮಿತವಾಗಿರಲಿ, ಹತ್ತಿರಕ್ಕೆ ಬಿಟ್ಟುಕೊಳ್ಳದಿರಿ ಎಂದು ಹೇಳಿದರು.
ಭಾರತೀಯ ಬಾಹ್ಯಾಹಾಶ ವಿಜ್ಞಾನ ನಡೆದು ಬಂದ ದಾರಿ, ಉಪಗ್ರಹ ಉಡ್ಡಯನ ಕಾರ್ಯದ ಬಗ್ಗೆ, ಇಸ್ರೋ ಸಂಸ್ಥೆ ಹಾಗೂ ಅದರ ಕಚೇರಿಗಳ ಕಾರ್ಯಗಳ ಕುರಿತು ಸ್ಲೈಡ್ ಷೋ ಮೂಲಕ ಚಿತ್ರಗಳನ್ನು ತೋರಿಸುತ್ತಾ ವಿವರಿಸಿದರು. ಪಿಯುಸಿ ವಿದ್ಯಾರ್ಥಿಗಳು ಇಸ್ರೋ ಸಂಸ್ಥೆ ಸೇರಲು ಪ್ರೇರೇಪಿಸಿ ಅವರು ತೆಗೆದುಕೊಳ್ಳಬೇಕಾದ ಪರೀಕ್ಷೆಗಳ ಬಗ್ಗೆ ತಿಳಿಸಿ, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಸೇರಲು ಈಗಿನಿಂದಲೇ ವಿಜ್ಞಾನವನ್ನು ಅರ್ಥಮಾಡಿಕೊಂಡು ಓದಿ ಎಂದು ಸಲಹೆ ನೀಡಿದರು.
ಬೀ ಬ್ರೈನಿ ಎಡುಕೇಷನಲ್ ಫೌಂಡೇಷನ್ ಸಂಸ್ಥೆಯ ಮೇಖಲಾ ಹಿಯಣ್ಣ ಗಣಿತ ಮತ್ತು ವಿಜ್ಞಾನದ ಆಕರ್ಷಕ ಸಂಗತಿಗಳು ಹಾಗೂ ವಿಜ್ಞಾನ ಮತ್ತು ಗಣಿತವನ್ನು ಇಷ್ಟಪಟ್ಟು ಓದುವ ಬಗ್ಗೆ ಅವರು ವೀಡಿಯೋ ತೋರಿಸಿವ ಮೂಲಕ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಹಾದಿಯ ಪರಿಚಯ ಮಾಡಿಕೊಟ್ಟರು.
ದಿ ಕ್ರೆಸೆಂಟ್ ಶಾಲೆಯಲ್ಲಿ ವಿಜ್ಞಾನ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ಒಂಭತ್ತನೇ ತರಗತಿಯ ಎಸ್.ಕೆ.ಅನನ್ಯ, ಎ.ನಿಮ್ರ ತರನಮ್, ರಜಾ ಅಲಿ, ಬಿ.ಆರ್.ಯಶ್ವಂತ್, ಹತ್ತನೇ ತರಗತಿಯ ಸಿ.ಆರ್.ಸುಮಾ, ಓಂ ದೇಶಮುದ್ರೆ, ತೂಬಾ ನುದ್ರತ್, ಡಿ.ವರುಣ್ ಸಿಂಗ್ ಅವರಿಗೆ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಪ್ರಮಾಣಪತ್ರ, ಪಾರಿತೋಷಕ ಮತ್ತು ವಿಕ್ರಂ ಸಾರಾಬಾಯ್, ಅಬ್ದುಲ್ ಕಲಾಂ ಅವರ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ವಿಜ್ಞಾನಿ ಹಿರಿಯಣ್ಣ, ರಾಕೆಟ್ ಇಂಧನ, ಅನ್ಯಗ್ರಹ ಜೀವಿಗಳು, ಭೂಮಿಯ ಸೃಷ್ಠಿ, ನಕ್ಷತ್ರಗಳು, ಉಪಗ್ರಹ ವಾಹನ ಮೊದಲಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಪ್ರಶ್ನೆಗಳನ್ನು ಕೇಳಿದ ವಿದ್ಯಾರ್ಥಿಗಳಿಗೆ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಪುಸ್ತಕವನ್ನು ನೀಡಲಾಯಿತು.
ದಿ ಕ್ರೆಸೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ತಮೀಮ್ ಅನ್ಸಾರಿ, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಎಸ್.ಸತೀಶ್, ಅಜಿತ್ ಕೌಂಡಿನ್ಯ, ಭಾರತಿ ಹಿಯಣ್ಣ, ಆಪ್ಟಿಮಾ ಡೆವಲಪರ್ಸ್ ರವಿಕುಮಾರ್, ವಿ.ಕೃಷ್ಣ ಕಾರ್ಯಕ್ರಮದಲ್ಲಿ ಹಾಜರಿದ್ದರು.
ವಿದ್ಯಾರ್ಥಿಗಳಿಗೆ ಇಸ್ರೋ ಭೇಟಿ ಕಲ್ಪಿಸಿದ ಕನ್ನಡ ಸಾರಸ್ವತ ಪರಿಚಾರಿಕೆ: ಶಿಡ್ಲಘಟ್ಟದ ದಿ ಕ್ರೆಸೆಂಟ್ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳನ್ನು ಬೆಂಗಳೂರಿನ ಇಸ್ರೋ ಸಂಸ್ಥೆಗೆ ಕರೆದೊಯ್ಯಲು ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಇಸ್ರೋ ಹಿರಿಯ ವಿಜ್ಞಾನಿ ಹಾಗೂ ಜಿಯೋ ಸ್ಯಾಟ್ ವಿಭಾಗದ ಮುಖ್ಯಸ್ಥ ಹಿರಿಯಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು. ವಿದ್ಯಾರ್ಥಿಗಳಿಗೆ ಇಸ್ರೋ ಸಂಸ್ಥೆಯನ್ನು ತೋರಿಸಿ ಪರಿಚಯಿಸುವುದಾಗಿ ವಿಜ್ಞಾನಿ ಹಿರಿಯಣ್ಣ ಭರವಸೆ ನೀಡಿದರು.
ಸಂಘರ್ಷ ಸಮಿತಿ ಪದಾಧಿಕಾರಿಗಳ ಕಾಲ್ನಡಿಗೆ ಜಾಥಾ
ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಪಿಎಸ್ಸೈ ವಿಜಯ್‍ರೆಡ್ಡಿರನ್ನು ಕೂಡಲೇ ಅಮಾನತ್ತುಗೊಳಿಸಬೇಕು ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಸಿ.ಎಂ.ಮುನೆಯ್ಯ ಒತ್ತಾಯಿಸಿದರು.
ತಾಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೇಮಗಲ್ ಗ್ರಾಮದಿಂದ ದಿಬ್ಬೂರಹಳ್ಳಿ ಠಾಣೆಯವರೆಗೂ ಏರ್ಪಡಿಸಲಾಗಿದ್ದ ಕಾಲ್ನಡಿಗೆ ಜಾಥಾ ಮತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕಳೆದ ದೀಪಾವಳಿ ಹಬ್ಬದಂದು ತಾಲೂಕಿನ ವೇಮಗಲ್ ಗ್ರಾಮದಲ್ಲಿ ದಲಿತರು ಹಾಗು ಸವರ್ಣೀಯರ ನಡುವೆ ನಡೆದ ಘರ್ಷಣೆಯ ಹಿನ್ನಲೆಯಲ್ಲಿ ದಲಿತರು ನೀಡಿದ್ದ ದೂರು ದಾಖಲಿಸಲು ನಿರ್ಲಕ್ಷ್ಯ ತೋರಿದ್ದಷ್ಟೇ ಅಲ್ಲದೇ ತಡವಾಗಿ ದೂರು ದಾಖಲಿಸಿ ನಂತರ ಕೋರ್ಟ್‍ಗೆ ಸುಳ್ಳು ವರದಿ ನೀಡಿ ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕುವ ಮೂಲಕ ಡಿವೈಎಸ್‍ಪಿ ಸೇರಿದಂತೆ ಪಿಎಸ್ಸೈ ದಲಿತರಿಗೆ ಅನ್ಯಾಯ ಮಾಡಿದ್ದಾರೆ.
ಇದು ಸಾಲದು ಎಂಬಂತೆ ತಾಲೂಕಿನ ಹಳೇ ಗಂಜಿಗುಂಟೆ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ಮಾಣ ಮಾಡುವ ಸಮಯದಲ್ಲಿ ಗ್ರಾಮದಲ್ಲಿ ಕೆಲವರನ್ನು ಎತ್ತಿಗಟ್ಟಿ ವಿನಾಕಾರಣ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಿಸಿದ್ದಾರೆ.
ದಸಂಸ ಮಾಜಿ ತಾಲೂಕು ಸಂಚಾಲಕ ಜಿ.ನರಸಿಂಹಮೂರ್ತಿ ಮಾತನಾಡಿ ದಿಬ್ಬೂರಹಳ್ಳಿ ಠಾಣೆರ ಪಿಎಸ್ಸೈ ವಿಜಯ್‍ರೆಡ್ಡಿ ದಲಿತ ವಿರೋಧಿ ಧೋರಣೆ ಅನುಸರಿಸುವುದಷ್ಟೇ ಅಲ್ಲದೇ ಈ ಭಾಗದಲ್ಲಿ ನಡೆಯುವ ಅಕ್ರಮಗಳಿಗೆ ರಕ್ಷಣೆಯಾಗಿ ನಿಂತಿದ್ದಾರೆ.
ಇವರ ಕರ್ತವ್ಯದ ಅವಧಿಯಲ್ಲಿ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಬೇರೆ ತನಿಖಾಧಿಕಾರಿಯಿಂದ ತನಿಖೆ ಮಾಡಿಸಬೇಕು ಹಾಗು ಇವರಿಗೆ ಬೆಂಬಲವಾಗಿ ನಿಂತಿರುವ ಚಿಂತಾಮಣಿ ಉಪ ವಿಭಾಗದ ಡಿವೈಎಸ್‍ಪಿ ಕೃಷ್ಣಮೂರ್ತಿ ಯವರ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕೆಲ ಕಾಲ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿದರು.
ದಸಂಸ ಮಾಜಿ ರಾಜ್ಯ ಸಂಚಾಲಕ ರಾಜಾಕಾಂತ್, ಜಿಲ್ಲಾ ಸಂ,ಸಂಚಾಲಕರಾದ ಜಿ.ನಾರಾಯಣಸ್ವಾಮಿ, ವೆಂಕಟರವಣಪ್ಪ, ಗಂಗಪ್ಪ, ತಾಲೂಕು ಸಂಚಾಲಕ ಟಿ.ವಿ.ಚಲಪತಿ, ದ್ಯಾವಕೃಷ್ಣಪ್ಪ, ಎಲ್.ವೆಂಕಟೇಶ್, ಹುಜಗೂರು ವೆಂಕಟೇಶ್, ಮುನಿಯಪ್ಪ, ಮಟ್ಟಿನಾರಾಯಣಸ್ವಾಮಿ, ಮತ್ತಿತರರು ಹಾಜರಿದ್ದರು.
ಒಕ್ಕಲಿಗರ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆ
ಒಕ್ಕಲಿಗರ ಯುವಸೇನೆ ಸಂಘದ ಧ್ಯೇಯೋದ್ಧೇಶಗಳನ್ನು ಈಡೇರಿಸುವ ಸಲುವಾಗಿ ತಾಲ್ಲೂಕಿನಾದ್ಯಂತ ಇರುವ ಗ್ರಾಮ ಪಂಚಾಯಿತ ವ್ಯಾಪ್ತಿಯಲ್ಲಿ ಒಕ್ಕಲಿಗರ ಯುವಸೇನೆ ಸಂಘ ಸಮಿತಿಗಳನ್ನು ರಚಿಸಲಾಗುತ್ತಿದೆ ಎಂದು ತಾಲ್ಲೂಕು ಒಕ್ಕಲಿಗರ ಯುವಸೇನೆ ಸಂಘದ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ ತಿಳಿಸಿದರು.
ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಕ್ಕಲಿಗರ ಯುವಸೇನೆ ಸಂಘದ ಸಮಿತಿ ರಚಿಸಿ ಅವರು ಮಾತನಾಡಿದರು.
ಗ್ರಾಮೀಣ ಅಭಿವೃದ್ಧಿ, ಶಿಕ್ಷಣ, ನೈರ್ಮಲ್ಯ, ಸಾಂಸ್ಕೃತಿಕ ಪರಂಪರೆ ಉಳಿಸುವಿಕೆ, ಜಾನಪದ ರಕ್ಷಣೆ, ಆರೋಗ್ಯ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಒಕ್ಕಲಿಗರ ಯುವಸೇನೆ ಸಂಘ ಸದಾ ಚಟುವಟಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.
ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಕ್ಕಲಿಗರ ಯುವಸೇನೆ ಸಂಘದ ಕಾರ್ಯಕಾರಿ ಸಮಿತಿ:
ಗೌರವಾಧ್ಯಕ್ಷ ಶಿವರಾಮರೆಡ್ಡಿ, ಅಧ್ಯಕ್ಷ ಬಿ.ಎಸ್.ವೆಂಕಟರೆಡ್ಡಿ, ಉಪಾಧ್ಯಕ್ಷ ರಾಘವೇಂದ್ರ.ಕೆ.ಆರ್. ಕಾರ್ಯಾಧ್ಯಕ್ಷ ಶ್ರೀನಿವಾಸಮೂರ್ತಿ, ಪ್ರಧಾನ ಕಾರ್ಯದರ್ಶಿ ಮುನಿರಾಜು.ಡಿ.ಬಿ. ಖಜಾಂಚಿ ದೇವರಾಜ್.ಎ.ಎನ್. ಸಂಘಟನಾ ಕಾರ್ಯದರ್ಶಿ ನಾರಾಯಣರೆಡ್ಡಿ, ಕಾರ್ಯದರ್ಶಿ ಆವಲರೆಡ್ಡಿ, ಸಹಕಾರ್ಯದರ್ಶಿ ದೇವರಾಜ.ಬಿ, ಸಹ ಸಂಘಟನಾ ಕಾರ್ಯದರ್ಶಿ ಎಸ್.ವೆಂಕಟೇಶ್, ಸದಸ್ಯರಾಗಿ ಜಯರಾಂ.ಬಿ.ಎ, ಮುದ್ದುಕೃಷ್ಣ, ದ್ಯಾವಪ್ಪ.ಬಿ.ಸಿ, ಗಣೇಶ್, ಕೆ.ಗಂಗರೆಡ್ಡಿ, ಮಧುಸೂದನ್.ಡಿ. ಅನಿಲ್‍ಕುಮಾರ್, ಶಶಿಕುಮಾರ್,ಎಂ.ಬಿ, ರಮೇಶ್.ವಿ.ಪಿ. ರವಿಕುಮಾರ್.ಎ.ಜಿ. ಮಂಜುನಾಥ.ಎ.ಜೆ. ಬೈರೆಡ್ಡಿ.ಕೆ.ಎಸ್. ಮಂಜುನಾಥ.ಕೆ. ಶಿವಪ್ಪ, ರವಿಕುಮಾರ್.ಜಿ.ಎನ್. ದೇವೇಂದ್ರ.ಡಿ.ಆರ್, ಡಿ.ಬಿ.ಕೃಷ್ಣಪ್ಪ, ಆಂಜಿನಪ್ಪ ಆಯ್ಕೆಯಾಗಿದ್ದಾರೆ.
ಮುವ್ವತ್ತು ಸಾವಿರ ಬೀಜದುಂಡೆ ತಯಾರಿಸಿದ ಯುವಶಕ್ತಿ
ಹವಾಮಾನ ವೈಪರೀತ್ಯದಿಂದ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತಮ ಮಳೆಯಾದರೂ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಇದರಿಂದ ನೀರಿಗೆ ಹಾಹಾಕಾರ ಉಂಟಾಗಿದೆ. ಮಳೆ ನೀರು ಸಂರಕ್ಷಿಸುವುದು ಮತ್ತು ಗಿಡ ಮರ ಬೆಳಸುವುದು ಎಲ್ಲರ ಜವಾಬ್ದಾರಿ ಎಂದು ಯುವ ಶಕ್ತಿ ಸಂಘಟನೆಯ ಅಧ್ಯಕ್ಷ ವಿಜಯ ಕುಮಾರ್ ಭಾವರೆಡ್ಡಿ ತಿಳಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿಯ ಶ್ರೀ ವೆಂಕಟೇಶ್ವರ ಪ್ರಾಢಶಾಲೆ ಆವರಣದಲ್ಲಿ ಶನಿವಾರ ಶಿಡ್ಲಘಟ್ಟ ವಲಯ ಅರಣ್ಯ ಇಲಾಖೆ, ಯುವಶಕ್ತಿ ಮತ್ತು ಶ್ರೀ ವೆಂಕಟೇಶ್ವರ ಪ್ರೌಢಶಾಲೆ ದಿಬ್ಬೂರಹಳ್ಳಿ ಇವರ ಸಹಯೋಗದಲ್ಲಿ 30 ಸಾವಿರ ಬೀಜದುಂಡೆ ತಯಾರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹೊಂಗೆ, ಬೇವು, ಬಿದಿರು, ಹುಣಸೆ, ಅಶೋಕ, ನೇರಳೆ ಮುಂತಾದ ಬೇರೆ ಬೇರೆ ಜಾತಿ ಬೀಜಗಳನ್ನು ಮಣ್ಣು ಮತ್ತು ಗೊಬ್ಬರದ ಮಿಶ್ರಣಕ್ಕೆ ಸೇರಿಸಿ ಅದನ್ನು ಚೆಂಡಿನ ಆಕಾರ ಮಾಡಿ ಒಣಗಿಸಿಡುವುದು ಬೀಜದುಂಡೆ ಎನ್ನುವರು. ಕೆಂಪು ಮಣ್ಣು, ಕೆರೆಮಣ್ಣು ಅಥವಾ ಆಯಾ ಪ್ರದೇಶಕ್ಕೆ ಅನುಗುಣವಾದ ಮಣ್ಣನ್ನು ಬಳಸಲಾಗುತ್ತದೆ. ಮೂರು ಭಾಗದ ಮಣ್ಣಿಗೆ ಒಂದು ಭಾಗದಷ್ಟು ಸಗಣಿ ಗೊಬ್ಬರ ಮಿಶ್ರಣ ಮಾಡಿದ್ದೇವೆ. ಬರಡು ನೆಲದಲ್ಲೂ ಈ ಪದ್ಧತಿಯಲ್ಲಿ ಮೊಳಕೆ ಬರುತ್ತದೆ. ಶಾಲಾ ವಿದ್ಯಾರ್ಥಿಗಳ ಸಹಕಾರದೊಂದಿಗೆ ಬೀಜದುಂಡೆಗಳನ್ನು ತಯಾರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ತಲಕಾಯಲ ಬೆಟ್ಟಗಳ ಸಾಲಿನಲ್ಲಿ ಇವನ್ನು ಸಣ್ಣ ಗುಂಡಿ ತೆಗೆದು ನಾಟಿ ಮಾಡುತ್ತೇವೆ. ಮಳೆ ಬೀಳುತ್ತಿದ್ದಂತೆಯೇ ಬೀಜ ಮೊಳಕೆಯೊಡೆದು ಜೊತೆಗಿರುವ ಗೊಬ್ಬರದ ಪೋಷಕಾಂಶ ಬಳಸಿಕೊಂಡು ಸದೃಢವಾಗಿ ಬೆಳೆಯುತ್ತದೆ ಎಂದು ವಿವರಿಸಿದರು.
ವಲಯ ಅರಣ್ಯಾಧಿಕಾರಿ ತಿಮ್ಮರಾಯಪ್ಪ ಮಾತನಾಡಿ, ರೈತ ಕುಟುಂಬದಲ್ಲಿ ಹುಟ್ಟಿ, ತಾನು ಉನ್ನತ ಹುದ್ದೆಗೇರಿದರೂ ಬೇರಿನ ಸೆಳೆತದಿಂದ ಹುಟ್ಟಿಕೊಂಡ ಸಂಘಟನೆಯೇ ಯುವಶಕ್ತಿ. ತನ್ನ ಜಿಲ್ಲೆಗೆ, ತನ್ನ ಗ್ರಾಮಕ್ಕೆ ಏನಾದರೂ ಉತ್ತಮ ಕಾರ್ಯಗಳನ್ನು ಮಾಡುವ ನಿಟ್ಟಿನಲ್ಲಿ ಯುವಕರನ್ನು ಒಗ್ಗೂಡಿಸಿ ಯುವಶಕ್ತಿ ಎಂಬ ಸಂಘಟನೆಯೊಂದಿಗೆ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸುವ ವಿಜಯ್ ಅಭಿನಂದನೀಯ. ಉಪಅರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಬೀಜದುಂಡೆ ತಯಾರಿಕೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೇವೆ. ಯುವಶಕ್ತಿ ಮತ್ತು ಶಾಲೆಗಳ ಸಹಕಾರದಿಂದ 30 ಸಾವಿರ ಬೀಜದುಂಡೆಗಳ ತಯಾರಿ ನಡೆಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಉಪವಲಯ ಅರಣ್ಯಾಧಿಕಾರಿಗಳಾದ ರಾಮಾಂಜಿನೇಯುಲು, ಭಾಸ್ಕರ್‌ಬಾಬು, ಅರಣ್ಯ ರಕ್ಷಕರಾದ ಹುಸೇನಿ ನಿಂಬಾಳ್, ಶ್ರೀಕಲಾ, ಯುವಶಕ್ತಿ ಸಂಘಟನೆಯ ವಿಶ್ವನಾಥ್, ಹಿತ್ತಲಹಳ್ಳಿ ಮುನಿರಾಜು, ರಾಘವೇಂದ್ರ, ಮಧು, ಶಿವಪ್ರಸಾದ್, ನವೀನ್, ಶ್ರೀ ವೆಂಕಟೇಶ್ವರ ಪ್ರಾಢಶಾಲೆ ಮುಖ್ಯಶಿಕ್ಷಕ ಗೋಪಿನಾಥ್, ದಿಬ್ಬೂರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜಗದೀಶ್ವರ ಕಾನ್ವೆಂಟ್, ಎಸ್‌ಎಂಇ ಕಾನ್ವೆಂಟ್ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬೀಜದುಂಡೆಗಳ ತಯಾರಿಕೆಯಲ್ಲಿ ಪಾಲ್ಗೊಂಡಿದ್ದರು.
ಇಪ್ಪತ್ತೈದು ಕೋಟಿ ರೂ ವೆಚ್ಚದಲ್ಲಿ ನಗರಾಭಿವೃದ್ಧಿ ಕಾಮಗಾರಿಗಳು ನಡೆಯಲಿವೆ
ನಗರೋತ್ಥಾನ ಮೂರನೇ ಹಂತದ ಕಾಮಗಾರಿಗಾಗಿ ಇಪ್ಪತ್ತೈದು ಕೋಟಿ ರೂಗಳು ಮಂಜೂರಾಗಿದ್ದು ನಗರಸಭೆಯ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಶೀಘ್ರವಾಗಿ ನಡೆಯಲಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಸಲ್ಲಾಪುರಮ್ಮ ದೇವಾಲಯದ ಮುಂಭಾಗದಿಂದ ಮಂಗಳವಾರ ಪ್ರಾರಂಭವಾದ ನಗರೋತ್ಥಾನ ಮೂರನೇ ಹಂತದ ಅಂದಾಜು ಪಟ್ಟಿಗಳ ತಯಾರಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇವಲ ಒಂದು ತಿಂಗಳ ಅವಧಿಯಲ್ಲಿ ಪಿ.ಎಂ.ಸಿ ತಂಡದಿಂದ ಅಂದಾಜು ಪಟ್ಟಿಯನ್ನು ಪಡೆದು ಜಿಲ್ಲಾಧಿಕಾರಿಗಳಿಗೆ ನೀಡಿ ಅನುಮೋದನೆ ಪಡೆಯಲಾಗುತ್ತದೆ. ನಂತರ ಟೆಂಡರ್ ಕರೆದು ಎರಡು ತಿಂಗಳೋಳಗೆ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು. ನಗರದ ಸಮಗ್ರ ಅಭಿವೃದ್ಧಿಗೆ ಕಾಮಗಾರಿಗಳು ಗುಣಮಟ್ಟದಲ್ಲಿ, ವೇಗವಾಗಿ ನಡೆಯಬೇಕಿದೆ. ಇದೇ ಯೋಜನೆಯಡಿಯಲ್ಲಿ ಸುಸಜ್ಜಿತವಾದ ನಗರಸಭಾ ಕಚೇರಿ ಹಾಗೂ ಭವನವನ್ನು ಐದೂವರೆ ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಹೇಳಿದರು.
ನಗರಸಭಾ ಅಧ್ಯಕ್ಷ ಅಫ್ಸರ್‌ಪಾಷ, ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಆಯುಕ್ತ ಹರೀಶ್, ನಗರಸಭಾ ಸದಸ್ಯರು ಹಾಜರಿದ್ದರು.
ಅರಣ್ಯ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಗಿಡ ಮಾರಾಟ
ಮರಗಿಡಗಳನ್ನು ಬೆಳೆಸುವುದರಿಂದ ಸಮಾಜಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷ ಪ್ರಯೋಜನಗಳಿವೆ. ಅರಣ್ಯ ಬೆಳೆಸುವಲ್ಲಿ ಸಾರ್ವಜನಿಕರ ಪಾತ್ರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂತೆಯಲ್ಲಿ ಹತ್ತಾರು ಬಗೆಯ ಗಿಡಗಳನ್ನು ರಿಯಾಯ್ತಿ ದರದಲ್ಲಿ ಮಾರಾಟ ಮಾಡುತ್ತಿರುವುದಾಗಿ ವಲಯ ಅರಣ್ಯಾಧಿಕಾರಿ ತಿಮ್ಮರಾಯಪ್ಪ ತಿಳಿಸಿದರು.
ನಗರದಲ್ಲಿ ಸೋಮವಾರ ಸಂತೆಯಲ್ಲಿ ಅರಣ್ಯ ಇಲಾಖೆಯಿಂದ ಮಳಿಗೆಯನ್ನು ನಿರ್ಮಿಸಿ ಕೇವಲ ಮೂರು ರೂಗಳಿಗೆ ವಿವಿಧ ಗಿಡಗಳನ್ನು ಮಾರಾಟ ಮಾಡಿ ಅವರು ಮಾತನಾಡಿದರು.
ಹೆಬ್ಬೇವು, ಜಂಬುನೇರಳೆ, ಸಿಲ್ವರ್ ಓಕ್ ಸೇರಿದಂತೆ ಬಗೆಬಗೆಯ ಗಿಡಗಳನ್ನು ಮಾರಾಟ ಮಾಡುತ್ತಿದ್ದೇವೆ. ಈ ಯೋಜನೆಯಡಿ ಸಸಿ ಖರೀದಿಸಿ ಅದನ್ನು ಮೂರು ವರ್ಷಗಳ ಕಾಲ ಪೋಷಿಸಿ ಬೆಳೆಸುವ ಫಲಾನುಭವಿಗೆ ಒಂದು ಗಿಡಕ್ಕೆ ವಾರ್ಷಿಕವಾಗಿ 30 ರೂಗಳನ್ನು ಸರ್ಕಾರ ಮೂರು ವರ್ಷಗಳ ಕಾಲ ನೀಡಲಿದೆ. ಈ ಯೋಜನೆಯ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳುವ ಮೂಲಕ ಅರಣ್ಯ ಬೆಳೆಸಲು ನೆರವಾಗುವುದಲ್ಲದೆ, ವೈಯಕ್ತಿಕವಾಗಿ ಇಂಥ ಮರಗಳಿಂದ ಆರ್ಥಿಕ ಲಾಭವನ್ನೂ ಪಡೆಯಬಹುದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವೆಂಕಟರೆಡ್ಡಿ, ಉಪವಲಯ ಅರಣ್ಯಾಧಿಕಾರಿ ರಾಮಾಂಜನೇಯುಲು, ಅರಣ್ಯ ವೀಕ್ಷಕ ಯಲ್ಲಪ್ಪ ಹಾಗೂ ಸಿಬ್ಬಂದಿ ಹಾಜರಿದ್ದರು.

