ತಹಶೀಲ್ದಾರ್ ಅಜಿತ್‌ರೈ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ನಗರದ ಶಾಲಾ ಕಾಲೇಜುಗಳ ಹತ್ತಿರದ ಅಂಗಡಿ, ಹೋಟೆಲುಗಳಿಗೆ ಧಿಡೀರ್ ಭೇಟಿ ನೀಡಿ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಮಾರಾಟಗಾರರಿಗೆ ತಂಬಾಕು ನಿಯಂತ್ರಣ ಕಾನೂನಿನನ್ವಯ ಮಂಗಳವಾರ ದಂಡ ವಿಧಿಸಿದರು.
ಸಬ್‌ಇನ್ಸ್‌ಪೆಕ್ಟರ್ ನವೀನ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್‌ಕುಮಾರ್, ನಗರಸಭೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ವಿವಿಧ ಶಾಲೆಗಳ ಹತ್ತಿರದ ಅಂಗಡಿಗಳು, ತಳ್ಳುವ ಗಾಡಿಗಳು, ಕಾಫಿ ಟೀ ಶಾಪ್‌ಗಳಿಗೆ ಹೋಗಿ ತಂಬಾಕು ಉ್ಪನ್ನಗಳ ಮಾರಾಟವನ್ನು ಕಂಡು ತಿಳುವಳಿಕೆ ನೀಡಿ ದಂಡ ವಿಧಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ ವ್ಯಕ್ತಿಗಳಿಗೂ ದಂಡ ವಿಧಿಸಿದರು.
ಪ್ರಾಂಶುಪಾಲರಿಗೂ ದಂಡ: ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಾನಾಯಕ್ ನಾಮಫಲಕವನ್ನು ಹಾಕಿಸದೆ ಇದ್ದುದಕ್ಕೆ ಅವರಿಗೂ ಒಂದು ನೂರು ರೂ ದಂಡ ವಿಧಿಸಿದರು. ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದುದು, ಮುಖ್ಯ ಶಿಕ್ಷಕರ ಗೈರು ಹಾಜರಿಯನ್ನು ಪ್ರಶ್ನಿಸಿದ ಅಧಿಕಾರಿಗಳು ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಪ್ರಥಮ ದರ್ಜೆ ಕಾಲೇಜಿನ ಮುಂಭಾದಲ್ಲಿದ್ದ ತ್ಯಾಜ್ಯವನ್ನು ಶುಚಿಗೊಳಿಸದ ನಗರಸಭೆಯ ಅಧಿಕಾರಿಗಳ ಕಾರ್ಯವೈಫಲ್ಯಕ್ಕೆ ತಹಶೀಲ್ದಾರ್ ಬೇಸರ ವ್ಯಕ್ತಪಡಿಸಿದರು.
ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ ಕಾಯ್ದೆಯ ರಾಜ್ಯ ಸಂಯೋಜಕ ಡಾ.ಹನುಮಂತರಾಜು ಈ ಸಂದರ್ಭದಲ್ಲಿ ಮಾತನಾಡಿ, ‘ಈ ದಿನ ತಹಶೀಲ್ದಾರ್ ನೇತೃತ್ವದಲ್ಲಿ ಶಾಲಾ ಕಾಲೇಜುಗಳ ಆಸುಪಾಸಿನ ವ್ಯಾಪಾರಸ್ಥರಿಗೆ ಸಣ್ಣ ಪ್ರಮಾಣದ ದಂಡ ವಿಧಿಸುವ ಮೂಲಕ ಕಾನೂನಿನ ಬಗ್ಗೆ ತಿಳುವಳಿಕೆ ನೀಡಿದೆವು. 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಹಾಗೂ ಶಾಲಾ ಕಾಲೇಜುಗಳ 100 ಯಾರ್ಡ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುವುದನ್ನು ನಿಷೇಧಿಸಿದೆ. ಈ ಬಗ್ಗೆ ನಾಮಫಲಕವನ್ನೂ ಕಡ್ಡಾಯವಾಗಿ ಶಾಲಾ ಕಾಲೇಜಿನ ಆವರಣ ಗೋಡೆಯ ಮುಂಭಾಗದಲ್ಲಿ ಪ್ರದರ್ಶಿಸಬೇಕಾಗುತ್ತದೆ’ ಎಂದು ತಿಳಿಸಿದರು.
ಅಧಿಕಾರಿಗಳಾದ ಶ್ರೀನಾಥ್‌ಗೌಡ, ಅನುಸೂಯಮ್ಮ, ದಿಲೀಪ್, ವಿಜಯಲಕ್ಷ್ಮಿ ಹಾಜರಿದ್ದರು.
ತಂಬಾಕು ನಿಯಂತ್ರಣ ಕಾನೂನು ಉಲ್ಲಂಘಿಸಿದವರಿಗೆ ದಂಡ ವಿಧಿಸಿದ ತಹಶೀಲ್ದಾರ್
ಎಲೆಗಳಿಂದ ಚಿತ್ತಾಕರ್ಷಕ ಚಿತ್ರಗಳು
ಪುಟ್ಟ ಪುಟಾಣಿಗಳು ಶಾಲೆಯ ಆವರಣದಲ್ಲಿರುವ ಗಿಡಗಳ ಎಲೆಗಳನ್ನು ಸಂಗ್ರಹಿಸುತ್ತಾರೆ. ವಿವಿಧ ಆಕಾರದ ಎಲೆಗಳನ್ನು ತಮ್ಮ ಪುಟ್ಟ ಕೈಯಲ್ಲಿ ಹಿಡಿಯುವಾಗಲೇ ಅವರ ಮನದಲ್ಲಿ ವಿವಿಧ ಪ್ರಾಣಿಗಳ, ಪಕ್ಷಿಗಳ ಆಕಾರ ಮೂಡುತ್ತಿರುತ್ತದೆ.
ಶಿಡ್ಲಘಟ್ಟದ ಹೊರವಲಯದ ಚಿಂತಾಮಣಿ ರಸ್ತೆಯಲ್ಲಿರುವ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದರಿಂದ ಮೂರನೇ ತರಗತಿಯ ಪುಟಾಣಿಗಳ ಚಟುವಟಿಕೆಯಿದು.
ಅವರ ಕಲ್ಪನೆ ಹರಿದಂತೆ ವಿವಿಧ ಆಕಾರದ ಎಲೆಗಳನ್ನು ಜೋಡಿಸುತ್ತಾರೆ. ಆಮೆ, ಗಿಣಿ, ಜಿಂಕೆ, ಇಲಿ, ಆನೆ, ಮೀನು ಮೊದಲಾದ ರೂಪಗಳನ್ನು ಎಲೆಗಳನ್ನು ಹಾಗೂ ಹೂವಿನ ಎಸಳುಗಳನ್ನು ಬಳಸಿ ರೂಪಿಸುವಲ್ಲಿ ಇವರು ಸಿದ್ಧಹಸ್ತರಾಗಿದ್ದಾರೆ.
‘ಮಕ್ಕಳಿಗೆ ಸ್ವತಂತ್ರ್ಯ ನೀಡಬೇಕು. ಆಟದ ರೀತಿ ಅವರಿಗೆ ವಿಷಯವನ್ನು ತಿಳಿಸಿದರೆ ಬಲು ಬೇಗ ಗ್ರಹಿಸುತ್ತಾರೆ. ಎಲೆಗಳನ್ನು ಬಳಸಿ ಒಂದು ಗ್ರೀಟಿಂಗ್ ಕಾರ್ಡ್ ತಯಾರಿಸಿ ತೋರಿಸಿದೆ. ಈಗ ನನಗೇ ಅಚ್ಚರಿಯಾಗುವ ರೀತಿಯಲ್ಲಿ ಈ ಮಕ್ಕಳು ತಯಾರಿಸುತ್ತಿದ್ದಾರೆ’ ಎಂದು ಶಿಕ್ಷಕಿ ಜಯಂತಿ ತಿಳಿಸಿದರು.
‘ನಮ್ಮ ಶಾಲೆಯಲ್ಲಿ ವಿಶಾಲವಾದ ಕಾಂಪೋಂಡ್ ಹಾಗೂ ಹಳೆಯದಾದ ಗಿಡಮರಗಳಿವೆ. ನಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಹೇಗೆ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮಕ್ಕಳಿಗೆ ಈ ಮೂಲಕ ತಿಳಿಸಿಕೊಡಲಾಗುತ್ತಿದೆ. ಮಕ್ಕಳಿಗೆ ಗಿಡಮರಗಳ ಹೆಸರುಗಳು, ಎಲೆಗಳ ವಿಧಗಳು, ಪ್ರಾಣಿ ಪಕ್ಷಿಗಳ ಆಕಾರ ರೂಪಗಳು ಹೀಗೆ ಹಲವು ವಿಷಯಗಳು ಏಕಕಾಲದಲ್ಲಿ ಪರೋಕ್ಷವಾಗಿ ತಿಳಿಯುತ್ತಿದೆ’ ಎನ್ನುತ್ತಾರೆ ಮುಖ್ಯಶಿಕ್ಷಕ ಎನ್.ಕೃಷ್ಣಮೂರ್ತಿ.
‘ನಲಿ- ಕಲಿ ವಿಧಾನದ ಶಿಕ್ಷಣವನ್ನು ಸರ್ಕಾರಿ ಶಾಲೆಯ ಒಂದರಿಂದ ಮೂರನೇ ತರಗತಿಗಳಿಗೆ ಅಳವಡಿಸಲಾಗಿದೆ. ಇದು ಮಕ್ಕಳಿಗೆ ಸಂತಸದಾಯಕ ಹಾಗೂ ಚಟುವಟುಕೆ ಆಧಾರಿತ ಕಲಿಕಾ ವಿಧಾನವಾಗಿದೆ. ಸ್ವ-ಕಲಿಕೆ ಹಾಗೂ ಸ್ವ-ವೇಗದ ಕಲಿಕೆಗೆ ಈ ಪದ್ಧತಿ ಸಹಾಯಕವಾಗಿರುತ್ತದೆ. ಕಲಿಕಾ ಚಪ್ಪರದಲ್ಲಿ ಸಂತಸದಾಯಕವಾಗಿ ಮಕ್ಕಳು ಕಲಿಯುತ್ತಾ ಸೃಜನಶೀಲತೆಯನ್ನು ಬೆಳೆಸಿಕೊಳ್ಳಲು ಇದು ಸಹಾಯಕ. ಎಲ್ಲಾ ಶಾಲೆಗಳಲ್ಲೂ ಈ ರೀತಿ ಸುತ್ತಮುತ್ತ ಇರುವ ಪರಿಸರದಿಂದಲೇ ಮಕ್ಕಳಿಗೆ ಚಟುವಟಿಕೆ ರೂಪಿಸುವುದು ಫಲಕಾರಿ’ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಬಿ.ವಿ.ಮಂಜುನಾಥ್ ಅಭಿಪ್ರಾಯಪಡುತ್ತಾರೆ.
ವ್ಯಾಪಾರ ವ್ಯವಹಾರ ಪಾರದರ್ಶಕವಾಗಿರಲಿ: ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಫಣಿರಾಜ್
ಸರಕು ಮತ್ತು ಸೇವೆಗಳ ತೆರಿಗೆ(ಜಿಎಸ್‌ಟಿ) ಕುರಿತು ವಿನಾಕಾರಣ ಆತಂಕ ಬೇಡ. ಹಂತ ಹಂತವಾಗಿ ನಿಮ್ಮ ಎಲ್ಲ ಅನುಮಾನ, ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಫಣಿರಾಜ್ ತಿಳಿಸಿದರು.
ಶ್ರೀನಿವಾಸ್ ಅಸೊಸಿಯೇಟ್ಸ್, ವಾಣಿಜ್ಯ ತೆರಿಗೆ ಇಲಾಖೆ ಸಹಯೋಗದಲ್ಲಿ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಎಸ್‌ಟಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಎಸ್‌ಟಿಯಿಂದ ಹೆಚ್ಚಿನ ವ್ಯತ್ಯಾಸವೇನು ಆಗದು, ಕೆಲವೊಂದು ಸರಕು, ಸೇವೆಗಳ ಮೇಲೆ ತೆರಿಗೆ ಪ್ರಮಾಣ ಹೆಚ್ಚಿದರೆ ಕೆಲವೊಂದು ಸರಕು ಸೇವೆಗಳ ಮೇಲಿನ ತೆರಿಗೆ ಕಡಿಮೆ ಆಗಲಿದೆ. ಅತಿ ಹೆಚ್ಚಿನ ವ್ಯತ್ಯಾಸವೇನು ಆಗದು, ವಿನಾಕಾರಣ ಆತಂಕಪಡುವ ಅಗತ್ಯ ಇಲ್ಲ ಎಂದರು.
ಇಲಾಖೆಯಿಂದ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಜಿಎಸ್‌ಟಿ ಕುರಿತು ಅರಿವು ಮೂಡಿಸಲಾಗುವುದು, ಸಂಬಂಧಿಸಿದ ಅಧಿಕಾರಿಗಳಿಂದ ಸುತ್ತೋಲೆಗಳನ್ನು ತಲುಪಿಸಲಾಗುವುದು. ಮನಸಿನಲ್ಲಿ ಅನುಮಾನಗಳನ್ನು ಇಟ್ಟುಕೊಂಡು ವಿನಾಕಾರಣ ಸಮಸ್ಯೆಗೆ ಸಿಲುಕಬೇಡಿ ಎಂದರು.
ಯಾವುದೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸಿಕೊಂಡು ಪಾರದರ್ಶಕವಾದ ವ್ಯವಹಾರ, ವ್ಯಾಪಾರ ಮಾಡಿ, ಸರ್ಕಾರಕ್ಕೆ ಸೂಕ್ತವಾದ ತೆರಿಗೆ ಕಟ್ಟಿ, ದೇಶದ ಅಭಿವೃದ್ಧಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.
ಸಭೆಯಲ್ಲಿ ಭಾಗವಹಿಸಿದ್ದ ನಗರ ಸೇರಿದಂತೆ ತಾಲ್ಲೂಕಿನಿಂದ ಆಗಮಿಸಿದ್ದ ವರ್ತಕರು ಜಿಎಸ್‌ಟಿ ಕುರಿತು ತಮ್ಮಲ್ಲಿನ ಅನುಮಾನಗಳನ್ನು ಕೇಳಿ ಪರಿಹರಿಸಿಕೊಂಡರು.
ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಾದ ಮುನೀಂದ್ರಪ್ಪ, ಶ್ರೀಧರ್‌ರೆಡ್ಡಿ, ಆಡಿಟರ್ ಶ್ರೀನಿವಾಸ್, ಕೃಷ್ಣಯ್ಯಶೆಟ್ಟಿ, ಎಸ್‌ಎಲ್‌ವಿ ಪ್ರಸಾದ್, ಮಹೇಶ್ ಹಾಜರಿದ್ದರು.
ಮನೆಯಂಗಳದಲ್ಲಿ ಸಾಹಿತ್ಯ ಸಿಂಚನ ಕಾರ್ಯಕ್ರಮ
ಸಾಹಿತ್ಯ, ಸಂಸ್ಕೃತಿಯನ್ನೊಳಗೊಂಡ ಕಾರ್ಯಕ್ರಮಗಳಿಂದ ಸಂಸ್ಕಾರ, ಅಭಿರುಚಿ, ಪರಸ್ಪರ ಸಹೋದರತೆಯ ಭಾವನೆ ಮೂಡುತ್ತದೆ ಎಂದು ಆನೂರು ಎಸ್.ಎನ್.ಕ್ರಿಯಾ ಟ್ರಸ್ಟ್‌ನ ಅಧ್ಯಕ್ಷ ಆಂಜಿನಪ್ಪ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಆನೂರು ಗ್ರಾಮದ ಲತಾದೇವರಾಜ್ ಅವರ ಮನೆಯಲ್ಲಿ ಸೋಮವಾರ ಸಂಜೆ ತಾಲ್ಲೂಕು ವಚನ ಸಾಹಿತ್ಯ ಪರಿಷತ್‌ನಿಂದ ನಡೆದ ಮನೆ ಅಂಗಳದಲ್ಲಿ ವಚನ ಸಾಹಿತ್ಯ ಸಿಂಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಪರವಾದ ಯಾವುದೆ ಕಾರ್ಯಕ್ರಮಗಳು ನಗರಕ್ಕೆ ಸೀಮಿತ ಆಗದೆ ಗ್ರಾಮೀಣ ಭಾಗಕ್ಕೂ ವಿಸ್ತರಿಸಬೇಕಿದೆ. ಇದರಿಂದ ಎಲ್ಲ ಕಡೆ ಕನ್ನಡದ ವಾತಾವರಣ ಮೂಡಲು ಸಾಧ್ಯವಾಗಲಿದೆ ಎಂದರು.
ಅದರಲ್ಲೂ ಸಾಹಿತ್ಯ ಎಂದ ಮಾತ್ರಕ್ಕೆ ಕತೆ, ಕವನಗಳ ರಚನೆ, ಸಾಹಿತ್ಯ ರಚನೆ ಎಂದು ಭಾವಿಸಬೇಕಿಲ್ಲ. ಪುಸ್ತಕ ಓದುವುದು, ಬರೆಯುವುದು, ನಮ್ಮ ಮಾತೃ ಭಾಷೆಯನ್ನು ಮನೆಯಲ್ಲೂ, ವ್ಯವಹಾರದಲ್ಲೂ ಬಳಸುವುದು ಸಹ ಸಾಹಿತ್ಯವೇ ಆಗಿದೆ ಎಂದರು.
ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಸಿ.ಬಿ.ಹನುಮಂತಪ್ಪ ಮಾತನಾಡಿ, ಬಸವಣ್ಣ ಸೇರಿದಂತೆ ಅನೇಕ ವಚನಕಾರರು ತಮ್ಮ ಬದುಕು ಹೇಗಿರಬೇಕು, ನಮ್ಮ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕೆಂಬುದರ ಬಗ್ಗೆ ವಚನಗಳ ಮೂಲಕ ವಿವರಿಸಿದ್ದಾರೆ.
ಅವರ ವಚನಗಳನ್ನು ಅರ್ಥ ಮಾಡಿಕೊಂಡು ಅದರಂತೆ ನಾವು ಬದುಕಿದರೆ ನಾವೂ ಚೆಂದ, ನಮ್ಮ ಅಕ್ಕ ಪಕ್ಕದವರ ಬದುಕು ಚೆಂದವಾಗುತ್ತದೆ. ಇದರಿಂದ ಇಡೀ ಸಮಾಜವೇ ಸುಖ ಶಾಂತಿ ನೆಮ್ಮದಿಯ ಬದಕು ನಡೆಸುವಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಯುದ್ದ, ತಾಯಿಯ ಮಗುವಿನ ಪ್ರೀತಿ, ಕುಟುಂಬ ವ್ಯವಸ್ಥೆ, ಮರೆಯಾಗುತ್ತಿರುವ ಮಾನವೀಯತೆ, ಕಣ್ಣು ಮುಚ್ಚಿರುವ ನ್ಯಾಯ ವ್ಯವಸ್ಥೆ, ಇಲ್ಲವಾಗುತ್ತಿರುವ ಸಹೋದರತೆ, ಹಣ ದಾಹ, ಮುಂತಾದ ಸಾಮಾಜಿಕ ವಿಚಾರಗಳ ಬಗ್ಗೆ ಕವನಗಳನ್ನು ಕವಿಗಳು ವಾಚಿಸಿದರು.
ವಚನ ಸಾಹಿತ್ಯ ಸಿಂಚನ ಕಾರ್ಯಕ್ರಮ ನಡೆಸಲು ಸ್ಥಳಾವಕಾಶ ಮಾಡಿಕೊಟ್ಟ ದೇವರಾಜ್ ದಂಪತಿಗಳನ್ನು ವಚನ ಸಾಹಿತ್ಯ ಪರಿಷತ್‌ನಿಂದ ಗೌರವಿಸಲಾಯಿತು.
ವಚನ ಸಾಹಿತ್ಯ ಪರಿಷತ್‌ನ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಹಸಿರು ಸೇನೆ ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಎಸ್‌ಎಫ್‌ಸಿಎಸ್ ಬ್ಯಾಂಕ್ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಮಳ್ಳೂರು ಹರೀಶ್, ನಾರಾಯಣಸ್ವಾಮಿ, ಚುಟುಕು ಸಾಹಿತ್ಯ ಶಿಕ್ಷಕ ಕೆಂಪಣ್ಣ, ಯುವ ಸೇನೆಯ ಜೆ.ಎಸ್.ವೆಂಕಟಸ್ವಾಮಿ, ಬಿ.ನಾರಾಯಣಪ್ಪ ಹಾಜರಿದ್ದರು.
ಅರ್ಹ ಯುವಕ ಯುವತಿಯರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ವಿಶೇಷ ಆಂದೋಲನ
ವಿಶೇಷವಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದೆ ಹೊರಗುಳಿದಿರುವ 18–19 ವರ್ಷಗಳ ವಯಸ್ಸಿನವರೆಗಿನ ಅರ್ಹ ಯುವಕ ಯುವತಿಯರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ವಿಶೇಷ ಆಂದೋಲನವನ್ನು ಜುಲೈ 1 ರಿಂದ 31ರವರೆಗೂ ನಡೆಸುತ್ತಿದ್ದು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಹಶೀಲ್ದಾರ್ ಅಜಿತ್‌ಕುಮಾರ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಆಂದೋಲನದ ಅವಧಿಯಲ್ಲಿ ಯುವಕ ಯುವತಿಯರು ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲು ನಮೂನೆ 6 ನ್ನು ಭರ್ತಿ ಮಾಡಿ ದಾಖಲೆಗಳೊಂದಿಗೆ ಮತದಾರರ ನೋಂದಣಾಧಿಕಾರಿಗಳಿಗೆ ಅಥವಾ ಸಹಾಯಕ ನೋಂದಣಾಧಿಕಾರಿಗಳಿಗೆ ಮತಗಟ್ಟೆ ಅಧಿಕಾರಿಗಳ ಮುಖಾಂತರ ಸಲ್ಲಿಸಬಹುದಾಗಿರುತ್ತದೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಮತಗಟ್ಟೆ ಹಂತದ ಅಧಿಕಾರಿಗಲು ಅವರ ಮತಗಟ್ಟೆ ವ್ಯಾಪ್ತಿಯಲ್ಲಿ ಮನೆಮನೆಗೆ ಭೇಟಿ ನೀಡಿ ಅರ್ಹರಿಂದ ನಮೂನೆ 6 ನ್ನು ಸಂಗ್ರಹಿಸಲಿದ್ದಾರೆ. ಜುಲೈ 22 ರಂದು ವಿಶೇಷ ಕಾರ್ಯಾಚರಣೆಯ ದಿನವಾಗಿ ನಿಗಧಿಪಡಿಸಿದ್ದು, ಆಯಾ ಮತಗಟ್ಟೆ ಹಂತದ ಅಧಿಕಾರಿಗಳು ಅವರ ಮತಗಟ್ಟೆಯಲ್ಲಿ ಸಂಬಂಧಪಟ್ಟ ಮತದಾರರ ಪಟ್ಟಿಯೊಂದಿಗೆ ಉಪಸ್ಥಿತರಿದ್ದು ನೋಂದಾಯಿಸಿಕೊಳ್ಳದಿರುವ ಅರ್ಹ ಯುವ ನಾಗರಿಕರಿಂದ ನಮೂನೆ 6 ಮತ್ತು ದಾಖಲೆಗಳನ್ನು ಸಂಗ್ರಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಸಂಘಟನೆಯಲ್ಲಿರುವವರಿಗೆ ಸಾಮಾಜಿಕ ಬದ್ಧತೆಯಿರಬೇಕು
ಕನ್ನಡಪರ ಸಂಘಟನೆಗಳು ನಾಡು, ನುಡಿ, ಪ್ರಚಲಿತ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಜನಪರವಾಗಿರಬೇಕು. ಸಂಘಟನೆಯಲ್ಲಿರುವವರಿಗೆ ಸಾಮಾಜಿಕ ಬದ್ಧತೆಯಿರಬೇಕು ಎಂದು ಕರವೇ ಶಿವರಾಮೇಗೌಡರ ಬಣದ ಜಿಲ್ಲಾಧ್ಯಕ್ಷ ಕೆ.ಎ.ಮಂಜುನಾಥ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಕರವೇ ಶಿವರಾಮೇಗೌಡರ ಬಣದ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅವರು ಮಾತನಾಡಿದರು.
ಕನ್ನಡ ನಾಡು, ನುಡಿ, ಪರಂಪರೆ ಉಳಿಸಿ ಬೆಳೆಸುವುದು ಆದ್ಯ ಕರ್ತವ್ಯವಾಗಬೇಕು. ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಬೇಕು. ತಾಲ್ಲೂಕಿನಲ್ಲಿ ಕನ್ನಡಪರ ಕೆಲಸಗಳನ್ನು ಮಾಡುವ ಮೂಲಕ ಕನ್ನಡಾಭಿಮಾನವನ್ನು ಹೆಚ್ಚಿಸಬೇಕು ಎಂದು ಹೇಳಿದರು.
ಕರವೇ ಶಿವರಾಮೇಗೌಡರ ಬಣದ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ಕೆ.ಎಸ್.ಶ್ರೀಧರ್ ಶಿವು, ಉಪಾಧ್ಯಕ್ಷರನ್ನಾಗಿ ಎಂ.ಸಿ.ಚೇತನ್, ಸಮರಸೇನೆ ತಾಲ್ಲೂಕು ಅಧ್ಯಕ್ಷ ಅಪ್ಪು, ವಿದ್ಯಾರ್ಥಿ ಘಟಕದ ನಗರಾಧ್ಯಕ್ಷ ರವಿ, ಕಾರ್ಯಾಧ್ಯಕ್ಷ ಮೂರ್ತಿ, ಜಿಲ್ಲಾ ಸಂಚಾಲಕ ಸುರೇಶ್ ಅವರನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.
ಕರವೇ ಶಿವರಾಮೇಗೌಡರ ಬಣದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಗೌರವಾಧ್ಯಕ್ಷ ಸಿ.ವಿ.ನಾಗರಾಜು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಎಸ್.ಎಂ.ಸುರೇಶ್, ಎಸ್.ಕೇಶವಮೂರ್ತಿ, ಮಹೇಶ್ ಚತ್ರಪತಿ, ಜಿ.ಕೆ.ಧನುಷ್ ಹಾಜರಿದ್ದರು.
ಚೆಕ್ ಡ್ಯಾಮ್ ನಿರ್ಮಾಣಕ್ಕೆ ಗುದ್ದಲಿಪೂಜೆ
ಮಳೆ ನೀರನ್ನು ಹಾಗೂ ಹರಿದು ಹೋಗುವ ನೀರನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಅಂತರ್ಜಲ ವೃದ್ಧಿ ಹಾಗೂ ಬೆಳೆಗೆ ಅನುಕೂಲವಾಗಲಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯ್ತಿಯ ನಲ್ಲೋಜನಹಳ್ಳಿ ಗ್ರಾಮದ ಅಗ್ರಹಾರ ಕೆರೆ ಅಚ್ಚುಕಟ್ಟೆ ಪ್ರದೇಶಕ್ಕೆ ಹಾದುಹೋಗುವ ರಸ್ತೆಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಚೆಕ್ ಡ್ಯಾಮ್ ಹಾಗೂ ಸೇತುವೆಯ ಕಾಮಗಾರಿಗೆ ಗುರುವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಮ್ಮ ಭಾಗದಲ್ಲಿ ಈಗ ನೀರು ಅತ್ಯಮೂಲ್ಯ. ನೀರನ್ನು ಪೋಲು ಮಾಡದೆ ಹಿಡಿದಿಡುವ ಮೂಲಕ ಬಳಸಿಕೊಳ್ಳಬೇಕಿದೆ. ಕಾಮಗಾರಿಯ ಗುಣಮಟ್ಟವನ್ನು ಗ್ರಾಮಸ್ಥರು ಗಮನಿಸಿಕೊಳ್ಳಬೇಕು ಎಂದು ಹೇಳಿದರು.
ಮುಖಂಡರಾದ ಕೆ. ಬಾವರೆಡ್ಡಿ, ಬಿ.ಶಿವಕುಮಾರ್, ಧನಂಜಯರೆಡ್ಡಿ, ನಾಗರಾಜ್, ಮುನಿಯಪ್ಪ, ಬಚ್ಚರೆಡ್ಡಿ, ಶ್ರೀರಾಮ, ಶಿವಾರೆಡ್ಡಿ, ವೆಂಕಟರೆಡ್ಡಿ, ಶಿವಣ್ಣ, ನರಸಿಂಹ ಮೂರ್ತಿ, ಈರಪ್ಪ, ಮುನಿರೆಡ್ಡಿ ಈ ಸಂದರ್ಭದಲ್ಲಿ ಹಾಜರಿದ್ದರು.
ಮಾವು ಬೆಳೆಗಾರರಿಗೆ ತರಬೇತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ
ಮಾವಿನ ಗಿಡ ಸವರುವಿಕೆಯ ವಿಧಾನ, ಜುಲೈ ಆಗಸ್ಟ್ ತಿಂಗಳುಗಳಲ್ಲಿ ಕೈಗೊಳ್ಳಬೇಕಾದ ಬೇಸಾಯ ಕ್ರಮಗಳ ಬಗ್ಗೆ ತಿಳುವಳಿಕೆ ಹೊಂದಿದಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾಧ್ಯ ಎಂದು ಮಾವು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗೋಪಾಲಕೃಷ್ಣ ತಿಳಿಸಿದರು.
ತಾಲ್ಲೂಕಿನ ತಿಪ್ಪೇನಹಳ್ಳಿ ಗ್ರಾಮದ ಲಕ್ಷ್ಮೀನಾರಾಯಣಪ್ಪ ಅವರ ತೋಟದಲ್ಲಿ ಗುರುವಾರ ಮಾವು ಪುನಶ್ಚೇತನ ಮತ್ತು ಸವರುವಿಕೆ ಕಾರ್ಯಕ್ರಮದ ಬಗ್ಗೆ ತರಬೇತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತೋಟಗಾರಿಕಾ ಬೆಳೆಗಳಲ್ಲಿ ಮಾವು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಈ ಮಾವು ಸುಣ್ಣವನ್ನು ಬಯಸುವ ಬೆಳೆಯಾಗಿದೆ. ನಮ್ಮ ಈ ಭಾಗದಲ್ಲಿ ಮಣ್ಣಿನಲ್ಲಿ ಸುಣ್ಣದ ತೀವ್ರ ಕೊರತೆಯಿದೆ. ಸುಣ್ಣವು ಮಾವಿನ ಅಂಗಾಂಶಗಳ ಆರೋಗ್ಯಕ್ಕೆ ಅತಿ ಅವಶ್ಯಕ. ಜುಲೈ ತಿಂಗಳಿನಲ್ಲಿ ಅಂದರೆ ಮಳೆಗಾಲದ ಆರಂಭದಲ್ಲಿ ಸುಣ್ಣ ನೀಡುವುದು ಸೂಕ್ತ. ಸುಣ್ಣದ ಪುಡಿಯನ್ನು ಗಿಡದ ಪಾತಿಯಲ್ಲಿ ಸಮನಾಗಿ ಉದುರಿಸಿ ನಂತೆ ಹಗುರವಾಗಿ ನೆಲವನ್ನು ಅಗೆಯಬೇಕು. ಮಳೆ ಬಂದಾಗ ಸುಣ್ಣ ಕರಗಿ ಬೇರಿಗೆ ಅಭಿಸುತ್ತದೆ ಎಂದು ವಿವರಿಸಿದರು.
ಮಾವಿನ ಗಿಡಗಳಲ್ಲಿ ಒತ್ತಾಗಿ ಬೆಳೆದ ರೆಂಬೆಗಳನ್ನು ಕತ್ತರಿಸಿ ವಿರಳಗೊಳಿಸಿದರೆ ಸೂರ್ಯನ ಬೆಳಕು ಒಳಭಾಗದಲ್ಲಿ ಬೀಳುವಂತಾಗಿ ಒಳಭಾಗದಲ್ಲಿಯೂ ಕಾಯಿ ಕಚ್ಚುತ್ತವೆ. ಇದರಿಂದ ಇಳುವರಿ ಹಾಗೂ ಹಣ್ಣಿನ ಗುಣಮಟ್ಟ ಹೆಚ್ಚಾಗುತ್ತದೆ. ಹನಿ ನೀರಾವರಿ ಅಳವಡಿಸಿಕೊಳ್ಳುವುದು ಉತ್ತಮ, ಇದರಿಂದ ನೀರಿನ ಸದ್ಭಳಕೆಯಾಗುವುದು ಮತ್ತು ಕಾಯಿ ಉದುರುವುದು ಕಡಿಮೆಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸವರುವಿಕೆ ರೀತಿ, ಕೀಟಗಳ ನಿರ್ವಹಣೆ, ಜುಲೈ ಆಗಸ್ಟ್ ತಿಂಗಳಿನಲ್ಲಿ ಕೈಗೊಳ್ಳಬೇಕಾದ ಬೇಸಾಯ ಕ್ರಮಗಳು, ತೋಟಗಳ ಪುನಶ್ಚೇತನ, ವಿಮೆ ಮಾಡಿಸುವುದು, ಹೊಸ ತೋಟಗಳ ಸ್ಥಾಪನೆಗೆ ಸರ್ಕಾರದಿಂದ ಸಿಗುವ ಸಹಾಯಧನ, ಹನಿ ನೀರಾವರಿ ಮುಂತಾದ ವಿಷಯಗಳ ಬಗ್ಗೆ ವಿಜ್ಞಾನಿಗಳು ಮತ್ತು ಅಧಿಕಾರಿಗಳು ತಿಳಿಸಿದರು.
ಜಿಕೆವಿಕೆ ಹಣ್ಣು ವಿಭಾಗದ ವಿಜ್ಞಾನಿ ಡಾ.ಮುಕುಂದ್, ತೋಟಗಾರಿಕೆ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಎಸ್.ವಿ.ಹಿತ್ತಲಮುನಿ, ತೋಟಗಾರಿಕಾ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಕದಿರೇಗೌಡ, ಉಪನಿರ್ದೇಶಕಿ ಗಾಯತ್ರಿ, ಸಹಾಯಕ ನಿರ್ದೇಶಕ ಮುನೇಗೌಡ, ಹಾಪ್‌ಕಾಮ್ಸ್ ಉಪಾಧ್ಯಕ್ಷ ಚಂದ್ರೇಗೌಡ, ಆರ್.ಶ್ರೀನಿವಾಸ್, ರಾಮಯ್ಯ, ಸುರೇಶ್, ಚಿಕ್ಕಣ್ಣ ಹಾಜರಿದ್ದರು.
ಬಸವಾಪಟ್ಟಣ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ
ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಅಭಿವೃದ್ದಿ ಕಾಮಗಾರಿಗಳು ಉತ್ತಮವಾಗಿರಬೇಕಾದರೆ ಅದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಸವಾಪಟ್ಟಣ ಗ್ರಾಮದಲ್ಲಿ ಬುಧವಾರ ನಮ್ಮ ಗ್ರಾಮ, ನಮ್ಮ ರಸ್ತೆ ಯೋಜನೆಯಡಿ ಸುಮಾರು ೧ ಕೋಟಿ ೪೧ ಲಕ್ಷ ರೂ ವೆಚ್ಚದಲ್ಲಿ ಸುಮಾರು ೨ ಕಿ.ಮೀ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸವಲತ್ತು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಿದ್ದು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ತಾಲ್ಲೂಕಿನಾದ್ಯಂತ ಸುಮಾರು ೩೦ ಕಿ.ಮೀ ರಸ್ತೆ ಕಾಮಗಾರಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಈ ಪೈಕಿ ಇಂದು ತಾಲ್ಲೂಕಿನ ವಿವಿದೆಡೆ ಸುಮಾರು ೧೧ ಕೋಟಿ ರೂ ವೆಚ್ಚದಲ್ಲಿ ೯ ಕಿ.ಮೀ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದರು.
ಸಾರ್ವಜನಿಕರ ಸಹಭಾಗಿತ್ವ ಸಂಪೂರ್ಣವಾಗಿ ಇದ್ದಾಗ ಮಾತ್ರವೇ ಸರ್ಕಾರದ ಯಾವುದೇ ಯೋಜನೆ ಯಶಸ್ವಿಯಾಗಲು ಸಾಧ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಇಲ್ಲದೆ ಯಾವುದೆ ಯೋಜನೆಯಾಗಲಿ ಯಶಸ್ಸು ಸಾಧ್ಯವಿಲ್ಲ. ಗ್ರಾಮಗಳಲ್ಲಿ ಕಾಮಗಾರಿ ನಡೆಯುವಾಗ ಪಕ್ಷಾತೀತವಾಗಿ ಜನರು ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು. ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಬೆರಸದೇ ಗ್ರಾಮಗಳಲ್ಲಿ ನಡೆಯುವ ಕಾಮಗಾರಿಯ ಗುಣಮಟ್ಟದ ಬಗ್ಗೆ ಎಚ್ಚರವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಗಮ ಪಂಚಾಯ್ತಿ ಸದಸ್ಯೆ ಮಂಜುಳಮ್ಮ, ಕಾರ್ಯಪಾಲಕ ಎಂಜಿನಿಯರ್ ನರಸಿಂಹರೆಡ್ಡಿ, ಗಂಗರೆಡ್ಡಿ, ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯ ಪಿಳ್ಳೇಗೌಡ, ಆಂಜಿನಪ್ಪ, ಬಿ.ಮಂಜುನಾಥ, ರವಿಕುಮಾರ್, ಎ.ಎಂ.ವಿಶ್ವನಾಥ, ತಾದೂರು ರಮೇಶ್, ಸೀನಪ್ಪ ಹಾಜರಿದ್ದರು.
ಮೂವರು ಬಾಲ ಕಾರ್ಮಿಕರನ್ನು ವಶಕ್ಕೆ ತೆಗೆದುಕೊಂಡ ಅಧಿಕಾರಿಗಳು
ಶಿಡ್ಲಘಟ್ಟ ಮತ್ತು ಚಿಂತಾಮಣಿ ಕಾರ್ಮಿಕ ನಿರೀಕ್ಷಕರು ಪೊಲೀಸ್ ಇಲಾಖೆಯ ನೆರವಿನೊಂದಿಗೆ ಗುರುವಾರ ನಗರದ ವಿವಿಧೆಡೆ ಧಾಳಿ ನಡೆಸಿ ಮೂವರು ಬಾಲ ಕಾರ್ಮಿಕರನ್ನು ವಶಕ್ಕೆ ತೆಗೆದುಕೊಂಡರು.
ನಗರದ ಶಾರದಾ ಕಾನ್ವೆಂಟ್ ಬಳಿ ಮತ್ತು ಬೈಪಾಸ್ ರಸ್ತೆಯಲ್ಲಿ ಗ್ಯಾರೇಜ್, ಮರಗೆಲಸದ ಅಂಗಡಿ ಮತ್ತು ಎಲೆಕ್ಟ್ರಿಕ್ ವೈರಿಂಗ್ ಅಂಗಡಿಗಳಲ್ಲಿ ಧಾಳಿ ನಡೆಸಿ ಮೂವರು ಬಾಲ ಕಾರ್ಮಿಕರನ್ನು ಪತ್ತೆಹಚ್ಚಿದರು.
‘ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಾವು ಈ ದಿನ ಈ ದಿಢೀರ್ ಧಾಳಿ ನಡೆಸಿದ್ದೇವೆ. 14 ವರ್ಷದ ಮೇಲಿನ ಹಾಗೂ 18 ವರ್ಷ ಒಳಗಿನ ಕಾರ್ಮಿಕರನ್ನು ಅಪಾಯಕಾರಿ ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ಹಾಗೂ 14 ವರ್ಷ ವಳಪಟ್ಟ ಬಾಲ ಕಾರ್ಮಿಕರನ್ನು ಯಾವುದೇ ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು 2016ರ ತಿದ್ದುಪಡಿ ಕಾಯ್ದೆ ನಿಷೇಧಿಸುತ್ತದೆ’ ಎಂದು ತಿಳಿಸಿದ ಕಾರ್ಮಿಕ ನಿರೀಕ್ಷಕ ವಿಶ್ವನಾಥ್, ‘ಈ ಮಕ್ಕಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಪುನರ್ವಸತಿ ಕಲ್ಪಿಸಲಾಗುತ್ತದೆ. ಶಾಲೆಗೆ ಸೇರಿಸಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಾಗುವುದು. ಬಾಲ ಕಾರ್ಮಿಕರನ್ನು ಹೋಟೆಲ್, ಗ್ಯಾರೇಜ್, ಚಹಾ ಅಂಗಡಿ, ಕಟ್ಟಡ ಕಾಮಗಾರಿ ಸೇರಿದಂತೆ ಅಪಾಯಕರ ಕೆಲಸಗಳಲ್ಲಿ ಮಕ್ಕಳನ್ನು ತೊಡಗಿಸಿದ್ದರೆ ಅದು ಶಿಕ್ಷಾರ್ಹ ಅಪರಾಧ ಆಗುತ್ತದೆ. ಅವರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.
ಮೂವರಲ್ಲಿ ಒಬ್ಬರ ವಯಸ್ಸಿನ ದೃಢೀಕರಣ ಪತ್ರವನ್ನು ನೀಡಿ 18 ವರ್ಷಕ್ಕೂ ಮೇಲ್ಪಟ್ಟಿದ್ದರಿಂದ ಪೋಷಕರು ಕರೆದುಕೊಂಡು ಹೋದರು.
ಚಿಂತಾಮಣಿ ಕಾರ್ಮಿಕ ನಿರೀಕ್ಷಕಿ ಕಲಾವಾಣಿ, ಅಧಿಕಾರಿಗಳಾದ ರಮೇಶ್, ಆಂಜಿನಪ್ಪ, ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನವೀನ್ ಹಾಜರಿದ್ದರು.
ಸುಗಟೂರು ಗ್ರಾಮದಲ್ಲಿ ಶಾಸಕ ಎಂ. ರಾಜಣ್ಣ ಅವರಿಗೆ ಸನ್ಮಾನ
ಶಿದ್ಲಘಟ್ಟ ತಲ್ಲೂಕಿನ ಸುಗಟೂರು ಗ್ರಾಮಕ್ಕೆ ಶಾಸಕ ಎಂ. ರಾಜಣ್ಣ ಸೋಮವಾರ ಭೇಟಿ ನೀಡಿ ಗ್ರಾಮದ ಹಿರಿಯರಾದ ಈರಣ್ಣ, ಪಿಳ್ಳಮುನಿಶಾಮಪ್ಪ ಅವರ ಯೋಗಕ್ಷೇಮ ವಿಚಾರಿಸಿದರು. ಇದೇ ಸಂದರ್ಭದಲ್ಲಿ ಗ್ರಾಮದ ಯುವಕರು ಶಾಸಕರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಮಂಜುನಾಥ, ನಂದನ್, ನಾಗರಾಜ, ನಂಜೇಗೌಡ ಹಾಗೂ ಮುಂತಾದವರು ಹಾಜರಿದ್ದರು.
ದಿಬ್ಬೂರಹಳ್ಳಿ ಠಾಣೆ ಪಿಎಸ್ಸೈ ಪರ ನಿಂತ ಕದಸಂಸ
ತಮ್ಮ ಸ್ವಾರ್ಥ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸರ್ಕಾರಿ ನೌಕರರೊಬ್ಬರ ಮೇಲೆ ದಲಿತ ವಿರೋಧಿ ಎಂದು ಹಣೆಪಟ್ಟಿ ಕಟ್ಟಿ ಅಮಾನತ್ತು ಮಾಡಬೇಕು ಎಂದು ಒತ್ತಾಯಿಸುತ್ತಿರುವ ದಸಂಸ ಪದಾಧಿಕಾರಿಗಳ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದವು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ದಡಂಘಟ್ಟ ತಿರುಮಲೇಶ್ ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ವತಿಯಿಂದ ನಗರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಹಳೇ ಗಂಜಿಗುಂಟೆ ಗ್ರಾಮದಲ್ಲಿ ಸುಮಾರು ೬೦ ಮನೆಗಳಿದ್ದು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಿಸಲು ಗ್ರಾಮದ ಮೂವತ್ತು ಮನೆಗಳಲ್ಲಿ ಮನೆಗೆ ಮೂರು ನಾಲ್ಕು ಷೇರುಗಳನ್ನು ಮಾಡಿಸುವ ಮೂಲಕ ರಾಜಕೀಯ ಮಾಡಿದ್ದ ಕ್ರಮವನ್ನು ಗ್ರಾಮಸ್ಥರ ಪರವಾಗಿ ಪ್ರಶ್ನಿಸಿದ ದಿಬ್ಬೂರಹಳ್ಳಿ ಠಾಣೆ ಪಿಎಸ್ಸೈ ವಿಜಯ್‌ರೆಡ್ಡಿ ರನ್ನು ವಿನಾಕಾರಣ ದಲಿತ ವಿರೋಧಿ ಎಂದು ಬಿಂಬಿಸುವದು ಸರಿಯಲ್ಲ.
ಇನ್ನು ತಾಲ್ಲೂಕಿನ ಕ್ಯಾಸಗೆರೆ ಗ್ರಾಮದಲ್ಲಿ ನಡೆದಿದ್ದ ಘರ್ಷಣೆಯಲ್ಲಿ ದಲಿತರ ಮೇಲೆ ಹಲ್ಲೆಯಾಗಿದ್ದರೂ ದಲಿತರ ಪ್ರಕರಣ ದಾಖಲಿಸದಂತೆ ಒತ್ತಡ ಹೇರಿದ್ದ ದಸಂಸ ಮುಖಂಡರು ಇದೀಗ ಘರ್ಷಣೆಯೇ ಆಗಿರದ ವೇಮಗಲ್ ಗ್ರಾಮದ ಪ್ರಕರಣವನ್ನು ಅಟ್ರಾಸಿಟಿ ಕೇಸು ದಾಖಲಿಸುವಂತೆ ಒತ್ತಾಯಿಸಿ ದಾಖಲಿಸಿರುವ ಪ್ರಕರಣ ಸುಳ್ಳು ಎಂದು ಗೊತ್ತಾದ ಮೇಲೆ ಅಧಿಕಾರಿಗಳು ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕಿದ್ದಾರೆ. ಈ ಬಗ್ಗೆ ತಮಗೇನಾದರೂ ಆಕ್ಷೇಪಣೆಯಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗಲಿ ಅದು ಬಿಟ್ಟು ಪ್ರಾಮಾಣಿಕ ಪೊಲೀಸ್ ಅಧಿಕಾರಯೊಬ್ಬರನ್ನು ವಿನಾಕಾರಣ ದಲಿತ ವಿರೋಧಿ ಎಂದು ಬಿಂಬಿಸಿ ತೊಂದರೆ ಕೊಡುವುದು ಸರಿಯಲ್ಲ ಎಂದರು.
ದಿಬ್ಬೂರಹಳ್ಳಿ ಠಾಣೆ ಪಿಎಸ್ಸೈ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಅವರು ಠಾಣೆಗೆ ಬಂದಾಗಿನಿಂದಲೂ ಜನತೆ ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ. ಒಂದು ವೇಳೆ ಶನಿವಾರ ದಸಂಸ ವತಿಯಿಂದ ಠಾಣೆಯ ಬಳಿ ಪ್ರತಿಭಟನೆ ನಡೆಸಿದರೆ ಪಿಎಸ್ಸೈ ಪರವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಾವು ಪ್ರತಿಭಟಿಸಬೇಕಾಗುತ್ತದೆ.
ಕೇವಲ ತಮ್ಮ ರಾಜಕೀಯ ದುರುದ್ದೇಶಕ್ಕಾಗಿ ಇಡೀ ಸಮುದಾಯದ ಹಾಗು ಸಂಘಟನೆಗಳನ್ನು ಬಳಸಿಕೊಳ್ಳುವುದನ್ನು ಕೆಲವರು ಬಿಡಬೇಕು. ಸಂಘಟನೆಗಳು ನಿಜವಾದ ಅರ್ಹ ದಲಿತನ ಏಳಿಗೆಗಾಗಿ ದುಡಿಯಲು ಮುಂದಾಗಬೇಕು ಎಂದರು.
ದಿಬ್ಬೂರಹಳ್ಳಿ ಚಿಕ್ಕನರಸಿಂಹಯ್ಯ, ಯಣ್ಣಂಗೂರು ಸುಬ್ರಮಣಿ, ಗೊರ್ಲಪ್ಪ, ಬೈರಸಂದ್ರ ದೇವರಾಜ್, ಮಲ್ಲಶೆಟ್ಟಿಹಳ್ಳಿ ನಾಗರಾಜ್, ಸೊಣ್ಣೇನಹಳ್ಳಿ ತಿರುಮಲೇಶ್ ಹಾಜರಿದ್ದರು.
ದಿಬ್ಬೂರಹಳ್ಳಿ ಠಾಣೆ ಪಿಎಸ್ಸೈ ವಿರುದ್ದ ದಸಂಸ ಜುಲೈ ೧೫ ರಂದು ಪ್ರತಿಭಟನೆ
ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಪಿಎಸ್ಸೈ ವಿಜಯ್‌ರೆಡ್ಡಿರನ್ನು ಕೂಡಲೇ ಅಮಾನತ್ತುಗೊಳಿಸಬೇಕು ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಜಿ.ನಾರಾಯಣಸ್ವಾಮಿ ಒತ್ತಾಯಿಸಿದರು.
ತಾಲ್ಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ದೀಪಾವಳಿ ಹಬ್ಬದಂದು ತಾಲ್ಲೂಕಿನ ವೇಮಗಲ್ ಗ್ರಾಮದಲ್ಲಿ ದಲಿತರು ಹಾಗು ಸವರ್ಣೀಯರ ನಡುವೆ ನಡೆದ ಘರ್ಷಣೆಯ ಹಿನ್ನಲೆಯಲ್ಲಿ ದಲಿತರು ನೀಡಿದ್ದ ದೂರು ದಾಖಲಿಸಲು ನಿರ್ಲಕ್ಷ್ಯ ತೋರಿದ್ದಷ್ಟೇ ಅಲ್ಲದೇ ತಡವಾಗಿ ದೂರು ದಾಖಲಿಸಿ ನಂತರ ಕೋರ್ಟ್‌ಗೆ ಸುಳ್ಳು ವರದಿ ನೀಡಿ ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕುವ ಮೂಲಕ ಡಿವೈಎಸ್‌ಪಿ ಸೇರಿದಂತೆ ಪಿಎಸ್ಸೈ ದಲಿತರಿಗೆ ಅನ್ಯಾಯ ಮಾಡಿದ್ದಾರೆ.
ಇದು ಸಾಲದು ಎಂಬಂತೆ ತಾಲ್ಲೂಕಿನ ಹಳೇ ಗಂಜಿಗುಂಟೆ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ಮಾಣ ಮಾಡುವ ಸಮಯದಲ್ಲಿ ಗ್ರಾಮದಲ್ಲಿ ಕೆಲವರನ್ನು ಎತ್ತಿಗಟ್ಟಿ ವಿನಾಕಾರಣ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಿಸಿದ್ದಾರೆ ಎಂದು ಆರೋಪಿಸಿದರು.
ದಸಂಸ ಮಾಜಿ ತಾಲ್ಲೂಕು ಸಂಚಾಲಕ ಜಿ.ನರಸಿಂಹಮೂರ್ತಿ ಮಾತನಾಡಿ, ಇವರ ದಲಿತ ವಿರೋಧಿ ಧೋರಣೆಯಿಂದ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಜನ ಭಯಬೀತರಾಗಿದ್ದು ಕೂಡಲೇ ಈತನನ್ನು ಅಮಾನತ್ತುಗೊಳಿಸಬೇಕು ಎಂದರು.
ಇವರ ಕರ್ತವ್ಯದ ಅವಧಿಯಲ್ಲಿ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಬೇರೆ ತನಿಖಾಧಿಕಾರಿಯಿಂದ ತನಿಖೆ ಮಾಡಿಸಬೇಕು ಹಾಗು ಇವರಿಗೆ ಬೆಂಬಲವಾಗಿ ನಿಂತಿರುವ ಚಿಂತಾಮಣಿ ಉಪ ವಿಭಾಗದ ಡಿವೈಎಸ್‌ಪಿ ಕೃಷ್ಣಮೂರ್ತಿ ಅವರ ವಿರುದ್ದ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಇದೇ ಜುಲೈ ೧೫ ರಂದು ತಾಲ್ಲೂಕಿನ ವೇಮಗಲ್ ಗ್ರಾಮದಿಂದ ದಿಬ್ಬೂರಹಳ್ಳಿ ಠಾಣೆಯವರೆಗೂ ಪಾದಯಾತ್ರೆ ಮೂಲಕ ಸಾಗಿ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ದಸಂಸ ತಾಲ್ಲೂಕು ಸಂಚಾಲಕ ಟಿ.ವಿ.ಚಲಪತಿ, ದ್ಯಾವಕೃಷ್ಣಪ್ಪ, ಎಲ್.ವೆಂಕಟೇಶ್, ಲಕ್ಷ್ಮಿನಾರಾಯಣ, ಹುಜಗೂರು ವೆಂಕಟೇಶ್ ಹಾಜರಿದ್ದರು.
ಕುಟುಂಬ ರಾಜಕಾರಣವಿಲ್ಲದ ಪಕ್ಷ ಬಿಜೆಪಿ
ಕುಟುಂಬ ರಾಜಕಾರಣವಿಲ್ಲದೆ ಸಾಮಾನ್ಯ ವ್ಯಕ್ತಿಕೂಡ ಈ ರಾಜ್ಯದ ಮುಖ್ಯಮಂತ್ರಿ, ದೇಶದ ಪ್ರಧಾನಿ ಆಗಲು ಸಾಧ್ಯ ಆಗುವುದಾದರೆ ಅದು ಬಿಜೆಪಿ ಪಕ್ಷದಲ್ಲಿ ಮಾತ್ರ ಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳಿಧರರಾವ್ ತಿಳಿಸಿದರು.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮಶತಾಬ್ಧಿ ಅಂಗವಾಗಿ ಬಿಜೆಪಿಯಿಂದ ನಡೆಯುತ್ತಿರುವ ವಿಸ್ತಾರಕ್ ಕಾರ್ಯಕ್ರಮದಡಿ ತಾಲ್ಲೂಕಿನ ಗಂಜಿಗುಂಟೆಯಲ್ಲಿ ಭಾನುವಾರ ಮನೆ ಮನೆಗೂ ಭೇಟಿ ನೀಡಿದ ನಂತರ ಭೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಸಾಮಾನ್ಯ ವ್ಯಕ್ತಿಯಾಗಿದ್ದ ಮೋದಿ ಪ್ರಧಾನಿ ಆಗಿ ಭ್ರಷ್ಟಾಚಾರ ರಹಿತ, ಯಾವುದೆ ರೀತಿಯ ಕಳಂಕ ಇಲ್ಲದೆ ನಾಲ್ಕು ವರ್ಷಗಳ ಅಧಿಕಾರವನ್ನು ಪೂರೈಸಿದ್ದಾರೆ. ಒಂದೆ ಒಂದು ಆರೋಪ, ಕಪ್ಪು ಚುಕ್ಕೆ ಇಲ್ಲದೆ ನಾಲ್ಕು ವರ್ಷ ಅಧಿಕಾರ ಪೂರೈಸಿದ ಕೀರ್ತಿ ಮೋದಿ ಹಾಗೂ ಅವರ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ಕಾಮನ್‌ವೆಲ್ತ್ ಕ್ರೀಡಾಕೂಟ, ಸ್ಟೀಲ್ ಬ್ರಿಡ್ಜ್ ಮುಂತಾದ ಹತ್ತಾರು ಯೋಜನೆಗಳಲ್ಲಿ ಕೋಟಿ ಕೋಟಿ ಲೆಕ್ಕದಲ್ಲಿ ಭ್ರಷ್ಟಾಚಾರವನ್ನು ಕಾಂಗ್ರೆಸ್ ಸರ್ಕಾರ ನಡೆಸಿದೆ. ಜನ ಸಾಮಾನ್ಯರು ಬಯಸಿದ್ದ ಭ್ರಷ್ಟಾಚಾರ, ಕಳಂಕರಹಿತ ಆಡಳಿತವನ್ನು ನೀಡಲು ರಾಜ್ಯದ ಕಾಂಗ್ರೆಸ್ ಸರ್ಕಾರ ಕೂಡ ವಿಫಲವಾಗಿದೆ ಎಂದು ದೂರಿದರು.
೧೨೫ ಕೋಟಿ ಜನ ಸಂಖ್ಯೆ ಇರುವ ದೇಶವನ್ನು ಇಡೀ ಜಗತ್ತೆ ನಮ್ಮತ್ತ ನೋಡುವಂತೆ ಆಡಳಿತ ನಡೆಸುವುದೆಂದರೆ ಸಾಮಾನ್ಯ ಮಾತಲ್ಲ. ಅದಕ್ಕೆ ಗಟ್ಟಿತನದ ನಾಯಕತ್ವ, ದೂರದೃಷ್ಟಿತನ ಎಲ್ಲವೂ ಬೇಕು. ಗ್ರಾಮ ಮಟ್ಟದಿಂದ ಸಂಸತ್‌ವರೆಗೂ ಬೆಂಬಲವೂ ಬೇಕು.
ಆ ನಿಟ್ಟಿನಲ್ಲಿ ಯಶಸ್ವಿಯಾಗಿರುವ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ಆಡಳಿತ ವೈಖರಿಯನ್ನು, ಜನಪರ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಿಳಿಸಿಕೊಡುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಅದಕ್ಕಾಗಿಯೆ ಇಡೀ ದೇಶಾದ್ಯಂತ ವಿಸ್ತಾರಕ್ ಕಾರ್ಯಕ್ರಮ ಹಮ್ಮಿಕೊಂಡಿದ್ದು ೧೫ ದಿನಗಳ ಈ ಅವಧಿಯಲ್ಲಿ ಪಕ್ಷದ ಎಲ್ಲ ಪದಾಧಿಕಾರಿಗಳು ತಮ್ಮ ಕ್ಷೇತ್ರದಲ್ಲಿ ಇಲ್ಲವೇ ಇನ್ನಾವುದೆ ಕ್ಷೇತ್ರದಲ್ಲಿ ಬೀಡು ಬಿಟ್ಟು ಕೇಂದ್ರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ಮುಟ್ಟಿಸುವ ಕೆಲಸ ಆಗುತ್ತಿದೆ.
ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಕರ್ನಾಟಕ ಸೇರಿದಂತೆ ಇಡೀ ದೇಶಾದ್ಯಂತ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸುವಂತೆ ಮಾಡುವುದೆ ನಮ್ಮ ಉದ್ದೇಶ ಆಗಿದೆ. ಅದರಲ್ಲಿ ಯಶಸ್ವಿಯೂ ಆಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಸ್ಥಳೀಯ ಮುಖಂಡರೊಂದಿಗೆ ಗಂಜಿಗುಂಟೆಯ ಹಲವು ಮನೆ ಮನೆಗಳಿಗೂ ಭೇಟಿ ನೀಡಿ ಕರ ಪತ್ರಗಳನ್ನು ಹಂಚಿ ಕೇಂದ್ರದಲ್ಲಿನ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ವಿಸ್ತಾರಕ್ ಯೋಜನೆಯ ಉಸ್ತುವಾರಿ ಮಧುಶ್ರೀ, ಮಾಜಿ ಶಾಸಕಿ ಜ್ಯೋತಿರೆಡ್ಡಿ, ಜಿಲ್ಲಾಧ್ಯಕ್ಷ ಡಾ.ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಕಂಬದಹಳ್ಳಿ ಸುರೇಂದ್ರಗೌಡ, ಶ್ರೀರಾಮರೆಡ್ಡಿ, ಡಿ.ಆರ್.ಶಿವಕುಮಾರ್‌ಗೌಡ, ಸುರೇಶ್, ಶ್ರೀಧರ್, ಕೆಂಪರೆಡ್ಡಿ, ದಾಮೋದರ್, ಬಾಸ್ಕರ್ ರೆಡ್ಡಿ ಈ ಸಂದರ್ಭದಲ್ಲಿ ಹಾಜರಿದ್ದರು.
ಯಾವುದೇ ಜನಪರ ಕೆಲಸಗಳಿಗೆ ನನ್ನ ವಿರೋಧವಿಲ್ಲ – ಶಾಸಕರ ಸ್ಪಷ್ಟನೆ
ಕ್ಷೇತ್ರದಾದ್ಯಂತ ಸಮಾಜಮುಖಿ ಕೆಲಸಗಳು ಮಾಡುವ ಸಮಾಜ ಸೇವಕರು ಅಥವ ಚಾರಿಟೆಬಲ್ ಟ್ರಸ್ಟ್ ಗಳು ಮಾಡುವ ಯಾವುದೇ ಜನಪರ ಕೆಲಸಗಳಿಗೆ ನನ್ನ ವಿರೋಧವಿಲ್ಲ. ಅವರು ಮಾಡುವ ಕೆಲಸಗಳು ಜನರಿಗೆ ತಲುಪಬೇಕಾದರೆ ಅದು ಸರ್ಕಾರದ ನೀತಿ, ನಿಯಮಾನುಸಾರ ಮಾಡಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಯಾವುದೇ ಒಂದು ರಾಜಕೀಯ ಪಕ್ಷ ಅಥವ ಟ್ರಸ್ಟ್ ಮತ್ತು ಖಾಸಗಿ ವ್ಯಕ್ತಿಗಳು ಸರ್ಕಾರಿ ಆಸ್ಪತ್ರೆಗೆ ಆಂಬ್ಯುಲೆನ್ಸ್ ಉಚಿತವಾಗಿ ನೀಡಬೇಕಾದರೆ ಆ ವಾಃನವನ್ನು ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತರ ಹೆಸರಿಗೆ ನೋಂದಣಿ ಮಾಡಿಸಬೇಕು. ಆ ರೀತಿ ನೀಡುವಾಗ ಸರ್ಕಾರಿ ನಿಯಮಾನುಸಾರ ಕ್ರಮ ಜರುಗಿಸಬೇಕುಎಂದಷ್ಟೇ ಹೇಳಿದ್ದೇನೆ ಹೊರತು ಸಮಾಜ ಸೇವಕರು ಅಥವ ಮತ್ಯಾವುದೋ ಟ್ರಸ್ಟ್ ನವರು ಮಾಡುವ ಸಾಮಾಜಿಕ ಸೇವೆಗಳ ಬಗ್ಗೆ ನನಗೆ ಯಾವುದೇ ವಿರೋಧವಿಲ್ಲ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ಎಚ್.ಡಿ.ದೇವೆಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಸೇವಾ ಟ್ರಸ್ಟ್ ವತಿಯಿಂದ ಉಚಿತವಾಗಿ ಆಂಬುಲೆನ್ಸ್ ಸೇವೆ ಆರಂಭಿಸಿದರೆ ನಮ್ಮದು ಯಾವುದೇ ತಕರಾರಿಲ್ಲ. ಒಂದು ವೇಳೆ ಅದನ್ನು ಸರ್ಕಾರಿ ಆಸ್ಪತ್ರೆಗೆ ನೀಡಬೇಕಾದಲ್ಲಿ ಸರ್ಕಾರಿ ನಿಯಮಾನುಸಾರ ವಾಹನ ನೀಡಬೇಕು. ವಾಹನದ ಮೇಲೆ ಯಾವುದೇ ವ್ಯಕ್ತಿಯ ಭಾವಚಿತ್ರ, ಟ್ರಸ್ಟ್ ನ ಹೆಸರು, ಪಕ್ಷದ ಚಿಹ್ನೆ ಇವ್ಯಾವು ಇರಬಾರದು ಎಂದರು.
ಈ ಬಗ್ಗೆ ಈಗಾಗಲೇ ಪಕ್ಷದ ವರಿಷ್ಠರಿಗೂ ಮಾಹಿತಿ ನೀಡಿದ್ದು ಮುಂದಿನ ದಿನಗಳಲ್ಲಿ ಪಕ್ಷದ ವರಿಷ್ಠರ ತೀರ್ಮಾನದಂತೆ ಮುಂದುವರೆಯುತ್ತೇವೆ ಎಂದರು.
ಕಳೆದ ಜುಲೈ ೦೨ ರ ಭಾನುವಾರ ತಾಲ್ಲೂಕಿನ ಸಾದಲಿಯ ಸಾದಲಮ್ಮ ದೇವಾಲಯದ ಬಳಿ ಎಚ್.ಡಿ.ದೇವೆಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಸೇವಾ ಟ್ರಸ್ಟ್ ವತಿಯಿಂದ ಸಾದಲಿ ಸರ್ಕಾರಿ ಆಸ್ಪತ್ರೆಗೆ ಉಚಿತವಾಗಿ ಆಂಬ್ಯುಲೆನ್ಸ್ ನೀಡಲಾಗಿತ್ತು. ತಾಲ್ಲೂಕು ಆರೋಗ್ಯಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಖಾಸಗಿ ವ್ಯಕ್ತಿಗಳು ಅಥವ ಯಾವುದೋ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನೀಡುವ ಆಂಬ್ಯುಲೆನ್ಸ್ ವಾಹನಗಳನ್ನು ಸರ್ಕಾರದ ಆದೇಶದಂತೆ ನಿಯಮಾನುಸಾರ ಕ್ರಮ ಜರುಗಿಸಲಾಗಿದೆಯೇ? ಇವ್ಯಾವುದು ಇಲ್ಲದೇ ತಾವು ಯಾವ ರೀತಿ ವಾಹನವನ್ನು ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದ್ದೆ. ಇದಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ ತಾಲ್ಲೂಕಿನ ವಿವಿಧ ಪ್ರಾಥಮಿಕ ಕೇಂದ್ರಗಳ ವೈದ್ಯರಿಗೆ ಪತ್ರ ಮುಖೇನ ನಿರ್ದೇಶನ ನೀಡಿದ್ದು ಅದರಲ್ಲಿ ಸರ್ಕಾರದ ಆದೇಶ ಎನ್ನುವುದರ ಬದಲಿಗೆ ಶಾಸಕರ ಆದೇಶ ಎಂದು ನಮೂದು ಮಾಡಿರುವುದು ಇಷ್ಟೆಲ್ಲಾ ಗೊಂದಲಗಳಿಗೆ ಕಾರಣವಾಗಿದೆಯೇ ಹೊರತು ಇದರಲ್ಲಿ ನನ್ನ ತಪ್ಪೇನೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನಗರಸಭಾ ಅಧ್ಯಕ್ಷ ಅಫ್ಸರ್‌ಪಾಷ, ಸ್ಥಾಯಿಸಮಿತಿ ಅದ್ಯಕ್ಷ ಪಿ.ಕೆ.ಕಿಷನ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಆಶ್ವತ್ಥನಾರಾಯಣ, ಕೆ.ಎಸ್.ಕನಕಪ್ರಸಾದ್, ರಹಮತ್ತುಲ್ಲಾ, ಎಚ್.ಕ್ರಾಸ್ ರವಿ, ಆಂಜಿನಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.
ಬಿ ಫಾರಂ ನನಗೆ ಖಚಿತ: ಈಗಾಗಲೇ ಪಕ್ಷದ ಹಿರಿಯರು ಸೇರಿದಂತೆ ಪಕ್ಷದ ಸಭೆಯಲ್ಲಿ ತೀರ್ಮಾನವಾಗಿದ್ದು ಮುಂದಿನ ಚುನಾವಣೆಗೆ ಹಾಲಿ ಶಾಸಕರಿಗೆ ಟಿಕೆಟ್ ನೀಡುವ ಭರವಸೆ ಪಕ್ಷದಿಂದ ಸಿಕ್ಕಿದೆ. ಆದ್ದರಿಂದ ಬಿಫಾರಂ ಕುರಿತಂತೆ ಗೊಂದಲವಿಲ್ಲ. ನನಗೆ ಖಚಿತ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು. ಬಿ.ಎನ್.ರವಿಕುಮಾರ್ ಹಾಗು ನಮ್ಮ ನಡುವೆ ಯಾವುದೇ ವೈಯಕ್ತಿಕ ಬಿನ್ನಾಬಿಪ್ರಾಯಗಳಿಲ್ಲ. ಕಳೆದ ನಾಲ್ಕೈದು ತಿಂಗಳುಗಳಿಂದ ಅವರ ಕಾರ್ಯ ವೈಖರಿ ಬದಲಾಗಿದೆ. ಈಚೆಗೆ ಶುರುಮಾಡಿದ ಟ್ರಸ್ಟ್ ನ ಯಾವುದೇ ಕಾರ್ಯಕ್ರಮಗಳಿಗೂ ನನ್ನನ್ನು ಆಹ್ವಾನಿಸದೇ ಇದ್ದುದರಿಂದ ನಾನು ಭಾಗವಹಿಸಿಲ್ಲ ಎಂದರು.
ಗುರುಪೂರ್ಣಿಮಾ ಕಾರ್ಯಕ್ರಮ
ತಾಲ್ಲೂಕಿನ ಮಳ್ಳೂರು ಗ್ರಾಮದ ಹೊರವಲಯದ ಸಾಯಿನಾಥ ಜ್ಞಾನಮಂದಿರದಲ್ಲಿ ಭಾನುವಾರ ಗುರುಪೂರ್ಣಿಮಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಗುರುಪೂರ್ಣಿಮಾ ಪ್ರಯುಕ್ತ ಮೂರು ದಿನಗಳಿಂದ ರಾಮಕೋಟಿ ಅಖಂಡ ಭಜನೆಯನ್ನು ಏರ್ಪಡಿಸಲಾಗಿತ್ತು. ಮಳ್ಳೂರು, ಅಪ್ಪೇಗೌಡನಹಳ್ಳಿ, ಯಲೆಯೂರು, ಚೌಡಸಂದ್ರ, ವಿಜಯಪುರ, ಬೆಳ್ಳೂಟಿ, ಬಳುವನಹಳ್ಳಿ, ಬೋದಗೂರು, ಮೇಲೂರು, ಕೊಮ್ಮಸಂದ್ರ, ತಿಪ್ಪೇನಹಳ್ಳಿ, ಭಕ್ತರಹಳ್ಳಿ ಗ್ರಾಮದ ಭಕ್ತರಿಂದ ಸರದಿಯಂತೆ ಹಗಲೂ ರಾತ್ರಿ ರಾಮಕೋಟಿ ಭಜನೆ ನಡೆಯಿತು. ಒಂಬತ್ತು ದಿನಗಳ ಕಾಲ ದಿನಕ್ಕೊಂದು ಗ್ರಾಮದಲ್ಲಿ ಭಜನೆ ಕಾರ್ಯಕ್ರಮವನ್ನು ನಡೆಸಲಾಗಿತ್ತು.
ಗುರುಪೂರ್ಣಿಮಾ ಅಂಗವಾಗಿ ಕಾಕಡಾರತಿ, ಪಂಚಾಮೃತಾಭಿಷೇಕ, ಸತ್ಯನಾರಾಯಣಸ್ವಾಮಿ ಪೂಜೆ, ಸಾಯಿ ಹೋಮ, ದತ್ತಾತ್ರೇಯ ಹೋಮ, ಶ್ರೀರಾಮ ತಾರಕ ಹೋಮ, ಮಹಾಮಂಗಳಾರತಿ, ಮಹಾಪ್ರಸಾದ ವಿನಿಯೋಗ ನಡೆಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ತಾಲ್ಲೂಕು ಹಾಗೂ ಸುತ್ತಮುತ್ತಲಿನ ತಾಲ್ಲೂಕುಗಳಿಂದ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು.
ಸಂಜೆ ದೇವಾಲಯದಲ್ಲಿ ಕಲಾವಿದರಾದ ಭೀರೇಶ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
‘ಸಾಯಿನಾಥ ಜ್ಞಾನ ಮಂದಿರದಲ್ಲಿ ಹಲವಾರು ವರ್ಷಗಳಿಂದ ಗುರುಪೂರ್ಣಿಮಾ ಪೂಜಾ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದೇವೆ. ಈ ವಿಶಿಷ್ಠ ದಿನ ಹೋಮ ಹವನಗಳನ್ನು ನಡೆಸಿ ವಿಶೇಷ ಪೂಜೆ ನಡೆಸುವುದರಿಂದ ಹೆಚ್ಚೆಚ್ಚು ಭಕ್ತರು ಆಗಮಿಸುತ್ತಾರೆ. ಎಲ್ಲರಿಗೂ ಪ್ರಸಾದವನ್ನು ವಿನಿಯೋಗಿಸುತ್ತಿದ್ದೇವೆ’ ಎಂದು ದೇವಾಲಯದ ಸಂಚಾಲಕ ನಾರಾಯಣಸ್ವಾಮಿ ತಿಳಿಸಿದರು.
ಉಚಿತ ಆಂಬ್ಯುಲೆನ್ಸ್ ಸೇವೆ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ
ಮುಂದಿನ ಚುನಾವಣೆಯಲ್ಲಿ ರಾಜ್ಯದ ಚುಕ್ಕಾಣಿಯನ್ನು ಜೆಡಿಎಸ್ ಪಕ್ಷ ಹಿಡಿಯಬೇಕು, ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎನ್ನುವ ನಿಟ್ಟಿನಲ್ಲಿ ಟ್ರಸ್ಟ್ ಮೂಲಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮೇಲೂರು ಬಿ.ಎನ್.ರವಿಕುಮಾರ್ ತಿಳಿಸಿದರು.
ಮಾಜಿ ಶಾಸಕ ದಿ.ಎಸ್.ಮುನಿಶಾಮಪ್ಪರ ೫ ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ತಾಲ್ಲೂಕಿನ ಜಂಗಮಕೋಟೆಯಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಹಾಗು ಗರ್ಭಿಣಿ ಮಹಿಳೆಯರಿಗೆ ಆರ್ಥಿಕ ಸಹಾಯಧನ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಜಿ ಶಾಸಕ ದಿ.ಎಸ್.ಮುನಿಶಾಮಪ್ಪ ರವರು ಹಾಕಿಕೊಟ್ಟ ರಾಜಕೀಯ ಹಾದಿಯಲ್ಲಿ ಕಳೆದ ಹತ್ತು ವರ್ಷಗಳಿಂದ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷದ ಅಭಿವೃದ್ಧಿಗಾಗಿ ತನು, ಮನ, ಧನ ಅರ್ಪಿಸಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಿದ್ದೇವೆ. ಮುಂಬರುವ ದಿನಗಳಲ್ಲಿ ಅದನ್ನು ಮತ್ತಷ್ಟು ಗಟ್ಟಿಗೊಳಿಸುವ ಕೆಲಸವನ್ನು ಟ್ರಸ್ಟ್ ಮೂಲಕ ಮಾಡಲಾಗುವುದು. ಜಂಗಮಕೋಟೆ ಹೋಬಳಿಯ ನಾಗರಿಕರ ತುರ್ತು ಆರೋಗ್ಯ ಸೇವೆಗಾಗಿ ಒಂದು ಆಂಬುಲೆನ್ಸ್ ಟ್ರಸ್ಟ್ ವತಿಯಿಂದ ನೀಡಿದ್ದು ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯ, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ಕ್ಷೇತ್ರದ ಸಮಸ್ತ ಜನತೆಯ ಕಷ್ಟ ಸುಖಗಳಿಗೆ ಸ್ಪಂದಿಸುವ ಮೂಲಕ ಕಳೆದ ಹತ್ತು ವರ್ಷಗಳಿಂದ ಜೆಡಿಎಸ್ ಪಕ್ಷದ ಏಳಿಗೆಗಾಗಿ ದುಡಿಯುತ್ತಿರುವ ಮೇಲೂರಿನ ರವಿಕುಮಾರ್‌ರ ಸಮಾಜಮುಖಿ ಕಾರ್ಯಗಳು ಕ್ಷೇತ್ರದಾದ್ಯಂತ ಮತ್ತಷ್ಟು ನಡೆಯಲಿ.
ಕಳೆದ ಎರಡು ಚುನಾವಣೆಗಳಲ್ಲಿ ಪಕ್ಷದ ಸಂಘಟನೆಯ ನೇತೃತ್ವ ವಹಿಸಿಕೊಂಡಿದ್ದ ಮೇಲೂರಿನ ರವಿಕುಮಾರ್ ಹಾಗು ತಂಡ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗು ಜಯಪ್ರಕಾಶ್ ನಾರಾಯಣ್ ಚಾರಿಟೆಬಲ್ ಟ್ರಸ್ಟ್ ಸ್ಥಾಪಿಸಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಹೋಬಳಿಗೊಂದರಂತೆ ಆಂಬ್ಯುಲೆನ್ಸ್ ಉಚಿತವಾಗಿ ನೀಡುವುದಷ್ಟೇ ಅಲ್ಲದೆ ಅದರ ನಿರ್ವಹಣೆಯನ್ನು ಟ್ರಸ್ಟ್ ಮೂಲಕ ಮಾಡುತ್ತಿದ್ದಾರೆ. ಇಂತಹ ಸಾಮಾಜಿಕ ಕಳಕಳಿಯುಳ್ಳ ಮುಖಂಡರ ಸೇವೆ ಮುಂದಿನ ದಿನಗಳಲ್ಲಿ ತಾಲ್ಲೂಕಿಗೆ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಪಿಯುಸಿ ಹಾಗು ಪದವಿ ಓದುತ್ತಿರುವ ಸುಮಾರು ೨೫೦ ಮಂದಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಗರ್ಭಿಣಿ ಸ್ತ್ರೀಯರಿಗೆ ತಲಾ ೧೦ ಸಾವಿರದಂತೆ ಸುಮಾರು ೧೧೭ ಮಂದಿ ಮಹಿಳೆಯರಿಗೆ ಆರ್ಥಿಕ ಸಹಾಯ ಟ್ರಸ್ಟ್ ಮೂಲಕ ನೀಡಲಾಯಿತು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮೃತಪಟ್ಟ ತಾಲ್ಲೂಕಿನ ಯಣ್ಣಂಗೂರಿನ ಹುತಾತ್ಮ ಯೋಧ ಗಂಗಾಧರ್‌ರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಶಿವಾರೆಡ್ಡಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಸದಸ್ಯ ರಾಜಶೇಖರ್, ಆದಿಲ್‌ಪಾಷ, ಬಶೆಟ್ಟಹಳ್ಳಿ ವೆಂಕಟೇಶ್, ಗೊರಮಡುಗು ರಾಮಾಂಜಿನಪ್ಪ, ದೊಣ್ಣಹಳ್ಳಿ ರಾಮಣ್ಣ, ಮುಗಲಡಿಪಿ ನಂಜಪ್ಪ, ಕೆ.ಎಸ್.ಮಂಜುನಾಥ್, ತಾದೂರು ರಘು, ರಮೇಶ್, ಸಾದಲಿ ವೆಂಕಟಾಚಲಪತಿ, ಜೆ.ಎಂ.ವೆಂಕಟೇಶ್, ನಾಗಮಂಗಲ ಶ್ರೀನಿವಾಸಗೌಡ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಓದುವ ಸಂಸ್ಕೃತಿ ಬೆಳೆಸುವ ‘ಓದಿನರಮನೆಯಲ್ಲಿ ಪುಸ್ತಕ ಪರಿಚಯ’
ಆಧುನಿಕತೆ, ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಪುಸ್ತಕದ ಸ್ಪರ್ಶ ನೀಡುವ ಆನಂದ ಬಣ್ಣಿಸಲಾಗದು. ಓದುವ ಸಂಸ್ಕೃತಿ ಬೆಳೆಸಲು ಸಹಕರಿಸುವ ಈ ಕಾರ್ಯಕ್ರಮ ವಿನೂತನವಾದದ್ದು ಹಾಗೂ ರಾಜ್ಯಕ್ಕೇ ಮಾದರಿಯಾದದ್ದು ಎಂದು ಬೆಂಗಳೂರು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್‌ಕುಮಾರ್ ಹೊಸಮನಿ ತಿಳಿಸಿದರು.
ನಗರದ ಸಾರ್ವಜನಿಕ ಗ್ರಾಂಥಾಲಯದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ ಹಾಗೂ ಜಿಲ್ಲಾ ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ ನಡೆದ ‘ಓದಿನರಮನೆಯಲ್ಲಿ ಪುಸ್ತಕ ಪರಿಚಯ’ ಕಾರ್ಯಕ್ರಮವನ್ನುಉದ್ಘಾಟಿಸಿ ಅವರು ಮಾತನಾಡಿದರು.
ಗ್ರಂಥಾಲಯವನ್ನು ಓದಿನರಮನೆ ಎಂದು ಹೆಸರಿಸಿರುವ ಮನಸ್ಸುಗಳ ಹಿಂದೆ ಇರುವ ಸದುದ್ದೇಶ ಮೆಚ್ಚತಕ್ಕದ್ದು. ಪ್ರತಿ ತಿಂಗಳೂ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಒಂದೊಂದು ಪುಸ್ತಕ ಪರಿಚಯ ಮಾಡಿಕೊಡುವ, ಸ್ಥಳೀಯ ಲೇಖಕರನ್ನು, ಸಾಧಕರನ್ನು ಕರೆಸಿ ಗೌರವಿಸುವ ಕೆಲಸ ನಿರಂತರವಾಗಿ ಸಾಗಲಿ. ಜಿಲ್ಲಾ ಕೇಂದ್ರದಲ್ಲಿ, ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಹಾಗೂ ಗ್ರಾಮ ಪಂಚಾಯ್ತಿಗಳಲ್ಲಿ ಕನ್ನಡ ಸಾರಸ್ವತ ಪರಿಚಾರಿಕೆ ಮೂಲಕ ಕಾರ್ಯಕ್ರಮಗಳು ನಡೆಯಲಿ. ಇದರಿಂದ ಗ್ರಂಥಾಲಯಕ್ಕೆ ಬರುವವರ ಸಂಖ್ಯೆ ಹೆಚ್ಚಳವಾಗುತ್ತದೆ. ಓದುಗರನ್ನು ಬೆಳೆಸುವ, ಆಕರ್ಷಿಸುವ, ಪ್ರೋತ್ಸಾಹಿಸುವ ಕೆಲಸಕ್ಕೆ ಇಲಾಖೆಯಿಂದ ಸದಾ ಬೆಂಬಲವಿದೆ ಎಂದು ನುಡಿದರು.
ಸಾಹಿತಿ ಶಿವರಾಮ್ ಮಾತನಾಡಿ, ಪುಸ್ತಕಗಳು ನೀಡುವ ಜ್ಞಾನ, ರಂಜನೆ, ಜೀವನದ ಆದರ್ಶ, ಶಿಕ್ಷಣ, ಜ್ಞಾನೋದಯ ಬೆಲೆ ಕಟ್ಟಲಾಗದ್ದು. ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರಿಗೆ ಗ್ರಂಥಾಲಯ ದೇವಾಲಯವಿದ್ದಂತೆ. ಗ್ರಾಮಾಂತರ ಪ್ರದೇಶ, ತಾಲ್ಲೂಕು ಕೇಂದ್ರಗಳಲ್ಲಿ ಓದುವ ಹವ್ಯಾಸವನ್ನು ವೃದ್ಧಿಸುವ ಕೆಲಸಗಳು ನಡೆಯಬೇಕು. ಗ್ರಂಥಾಲಯಕ್ಕೆ ಬನ್ನಿ, ಪುಸ್ತಕಗಳನ್ನು ಓದಿ, ಜ್ಞಾನವಂತರಾಗಿ, ಜ್ಞಾನವನ್ನು ಇತರರಿಗೂ ಹಂಚಿ ಎಂದು ಹೇಳಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ‘ನಮ್ಮ ಶಿಡ್ಲಘಟ್ಟ’ ಪುಸ್ತಕ ಪರಿಚಯ ಮಾಡಿಕೊಟ್ಟರು. ಹುಟ್ಟಿದ ಊರು, ತಾಲ್ಲೂಕು ಕುರಿತಂತೆ ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು. ಇದು ನಮ್ಮ ಊರು ಎಂಬ ಹೆಮ್ಮೆ, ಅಭಿಮಾನದಿಂದ ಇಷ್ಟು ವಿವರವಾದ ಪುಸ್ತಕ ರೂಪುಗೊಂಡಿದೆ. ಶಿಡ್ಲಘಟ್ಟ ಹಾಗೂ ತಾಲ್ಲೂಕಿನ ಒಡಲೊಳಗೆ ಇಷ್ಟೊಂದು ಸಿರಿವಂತಿಕೆ ಉಂಟೆ ಎಂಬ ಬೆರಗು ಮೂಡಿಸುವ ಈ ಕೃತಿ ಅನೇಕ ವಿಷಯಗಳ ದಾಖಲೆಯಿಂದಾಗಿ ಸಂಶೋಧನೆಗಳಿಗೆ ಕೈಪಿಡಿಯಾಗುತ್ತದೆ. ವ್ಯಾಪಕ ಕ್ಷೇತ್ರ ಸಂಚಾರದ ಫಲ ಈ ಕೃತಿ. ಇದು. ಜನಜೀವನ, ಸಸ್ಯ-ಪ್ರಾಣಿ ಪರಿಸರ, ಗತ ಹಾಗು ವರ್ತಮಾನದ ಚಹರೆಗಳನ್ನು ಬಿಡಿಸಿರುವ ಈ ಕೃತಿ ಕಾಲ, ಕಾರ್ಯ, ಕಾರಣಗಳತ್ತಲೂ ಗಮನ ಸೆಳೆಯುತ್ತದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಬೆಂಗಳೂರು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್‌ಕುಮಾರ್ ಹೊಸಮನಿ, ಸಾಹಿತಿ ಶಿವರಾಮ್ ಮತ್ತು ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ಶಂಕರಪ್ಪ ಅವರನ್ನು ಗೌರವಿಸಲಾಯಿತು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಖಜಾಂಚಿ ಸತೀಶ್, ಅಜಿತ್ ಕೌಂಡಿನ್ಯ, ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ಶಂಕರಪ್ಪ, ಸುಂದರನ್, ಗ್ರಂಥಾಲಯ ಸಹಾಯಕರಾದ ಶ್ರೀರಾಮ್, ಬಾಂಧವ್ಯ, ಗ್ರಾಮ ಪಂಚಾಯ್ತಿ ಗ್ರಂಥಾಲಯ ಮೇಲ್ವಿಚಾರಕರಾದ ಜಂಗಮಕೋಟೆ ಮುನಿಸ್ವಾಮಿ, ದೇವಣ್ಣ, ಮುನಿರಾಜು, ನಾಗರಾಜು, ವೆಂಕಟರೆಡ್ಡಿ, ನಯಾಜ್, ಲಕ್ಷ್ಮೀ, ಚನ್ನಕೇಶವ, ಶಿವಣ್ಣ, ಕೃಷ್ಣಪ್ಪ, ನಾಗರಾಜು, ಆದಿನಾರಾಯಣಪ್ಪ, ಗೋಪಾಲ್, ಅಂಬಿಕಾ, ಅಭಿಷೇಕ್, ಮಂಜುನಾಥ್, ಮುನಿಕೃಷ್ಣಪ್ಪ ಹಾಜರಿದ್ದರು.
ದಾನಿಗಳು ಕೊಟ್ಟ ಆಂಬ್ಯುಲೆನ್ಸ್ ಬಳಸಬಾರದೆಂದು ಶಾಸಕರ ನಿರ್ದೇಶನ
ದೇವರು ವರ ಕೊಟ್ಟರೂ ಪೂಜಾರಿ ಕೊಡುತ್ತಿಲ್ಲ ಎಂಬ ಗಾದೆಯಂತೆ ದಾನಿಗಳು ರೋಗಿಗಳ ಅನುಕೂಲಕ್ಕಾಗಿ ಕೊಟ್ಟಂತಹ ಆಂಬ್ಯುಲೆನ್ಸ್ ತೆಗೆದುಕೊಳ್ಳಬಾರದು ಎಂದು ಶಾಸಕರು ತಾಲ್ಲೂಕು ವೈದ್ಯಾಧಿಕಾರಿಗಳಿಗೆ ನಿರ್ದೇಶನ ಕೊಟ್ಟಿದ್ದಾರೆ.
ಒಂದೆಡೆ 15 ಕಿಮೀ ವ್ಯಾಪ್ತಿಗೊಂದು ಆಂಬ್ಯುಲೆನ್ಸ್ ಕಲ್ಪಿಸಲು ಸರ್ಕಾರ ಉದ್ದೇಶಿಸಿ ಅದಕ್ಕಾಗಿ ದಾನಿಗಳ ನೆರವನ್ನೂ ಪಡೆಯಲು ಚಿಂತನೆ ನಡೆಸಿದ್ದರೆ, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ರೋಗಿಗಳಿಗಿಂತ ರಾಜಕೀಯವೇ ಶಾಸಕರಿಗೆ ಮುಖ್ಯವಾಗಿದೆ ಎಂಬ ಮಾತು ಹರಿದಾಡುತ್ತಿದೆ.
ಕಳೆದ ವಾರ ಜುಲೈ ೨ ರ ಭಾನುವಾರದಂದು ತಾಲ್ಲೂಕಿನ ಸಾದಲಿಯ ಸಾದಲಮ್ಮ ದೇವಾಲಯದ ಆವರಣದಲ್ಲಿ ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎನ್.ರವಿಕುಮಾರ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಉಚಿತ ಆಂಬುಲೆನ್ಸ್ ವಿತರಣೆ ಮಾಡಲಾಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಶಾಸಕ ಎಂ.ರಾಜಣ್ಣ ಸಾದಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ತಾಲ್ಲೂಕು ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಹಿನ್ನಲೆಯಲ್ಲಿ ತಾಲ್ಲೂಕು ಆಡಳಿತಾಧಿಕಾರಿ ಸಾದಲಿ ವೈದ್ಯರಿಗೆ ಪತ್ರ ರವಾನಿಸಿದ್ದಾರೆ. ‘ಆರೋಗ್ಯ ಕೇಂದ್ರಕ್ಕೆ ಅನ್ಯ ವ್ಯಕ್ತಿಗಳು ನೀಡಿರುವ ಆಂಬ್ಯುಲೆನ್ಸ್ ಪಡೆದಿರುವುದಕ್ಕೆ ಮಾನ್ಯ ಶಾಸಕರು ದೂರವಾಣಿ ಕರೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿರುತ್ತಾರೆ. ಆರೋಗ್ಯ ಕೇಂದ್ರಕ್ಕೆ ಸರ್ಕಾರದಿಂದ ನೀಡಿರುವ ಆಂಬುಲೆನ್ಸ್ ಮಾತ್ರ ಬಳಸಬೇಕು. ಖಾಸಗಿ ವ್ಯಕ್ತಿಗಳು, ಟ್ರಸ್ಟ್ ಹಾಗೂ ರಾಜಕೀಯ ವ್ಯಕ್ತಿಗಳು ನೀಡುವ ಆಂಬುಲೆನ್ಸ್ ಬಳಸುವುದು ಕಾನೂನು ಬಾಹಿರವಾಗಿರುತ್ತದೆ. ಖಾಸಗಿ ವ್ಯಕ್ತಿಗಳು ಈ ರೀತಿ ಉಚಿತವಾಗಿ ನೀಡಿ ಪ್ರಚಾರ ಪಡೆದುಕೊಂಡು ರಾಜಕೀಯವಾಗಿ ಬಲವರ್ದನೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಹಾಗಾಗಿ ಯಾವುದೇ ಟ್ರಸ್ಟ್ ಹಾಗು ಖಾಸಗಿ ವ್ಯಕ್ತಿಗಳಿಂದ ಸಹಕಾರ ಪಡೆದುಕೊಳ್ಳಬಾರದು. ಅವರು ನೀಡಿರುವ ಆಂಬುಲೆನ್ಸ್‌ನ್ನು ಕೂಡಲೇ ವಾಪಸ್ ನೀಡಬೇಕು’ ಎಂದು ಮುದ್ರಿಸಿರುವ ತಾಲ್ಲೂಕು ಆರೋಗ್ಯಾಧಿಕಾರಿಗಳ ಸಹಿ ಇರುವ ಅಧಿಕೃತ ಜ್ಞಾಪನಾ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಪ್ರತಿರೋಧ ವ್ಯಕ್ತವಾಗುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಎಂ.ರಾಜಣ್ಣ ವಿರುದ್ಧ ಹಲವಾರು ಕಾಮೆಂಟ್‌ಗಳು ಬರುತ್ತಿವೆ. ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಅಂದಹಾಗೆ ತಾನು ಏನು ಮಾಡುವುದಿಲ್ಲ, ಮಾಡುವವರಿಗೆ ಶಾಸಕರು ಅಡ್ಡ ಹಾಕುವುದು ಏಕೆ? ಕಳೆದ ೨೦೦೮ ರ ಚುನಾವಣೆ ಹಾಗೂ ೨೦೧೩ ರ ಚುನಾವಣೆಯಲ್ಲಿ ತಮಗಾಗಿ ದುಡಿದವರೇ ಇಂದು ಇವರಿಗೆ ಬೇಡವಾಗಿದ್ದಾರೆ. ಮಾಜಿ ಶಾಸಕ ದಿ.ಎಸ್.ಮುನಿಶಾಮಪ್ಪ ಅವರು ಹಾಕಿಕೊಟ್ಟ ರಾಜಕೀಯ ಹಾದಿಯಲ್ಲಿ ಕಳೆದ ಹತ್ತು ವರ್ಷಗಳಿಂದ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷದ ಅಭಿವೃದ್ದಿಗಾಗಿ ತನು, ಮನ, ಧನ ಅರ್ಪಿಸಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟನೆ ಮಾಡುವ ನಿಟ್ಟಿನಲ್ಲಿ ದುಡಿದ ನಿಷ್ಠಾವಂತ ಕಾರ್ಯಕರ್ತರು ಮತ್ತು ಹಿರಿಯ ಮುಖಂಡರು ಇಂದು ಜೆಡಿಎಸ್ ಪಕ್ಷಕ್ಕಾಗಿ ದುಡಿಯುತ್ತಿದ್ದರೆ ಶಾಸಕರು ಅದಕ್ಕೆ ಅಡ್ಡಿಪಡಿಸುತ್ತಿರುವುದು ಶಿಡ್ಲಘಟ್ಟ ಜೆಡಿಎಸ್ ಪಕ್ಷದಲ್ಲಿ ಬಿನ್ನಮತವಿದೆ ಎಂಬುದನ್ನು ಸಾಭೀತುಪಡಿಸುವಂತಿದೆ.
ಜುಲೈ ೨ ಭಾನುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮ ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗು ಜಯಪ್ರಕಾಶ್ ನಾರಾಯಣ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿತ್ತು. ಮತ್ತೊಂದು ವಿಶೇಷವೆಂದರೆ ಸ್ವತಃ ಶಾಸಕರ ಮಾವ ಕ್ಷೇತ್ರದ ಮಾಜಿ ಶಾಸಕ ದಿವಂಗತ ಎಸ್.ಮುನಿಸಾಮಪ್ಪರ ೫ ನೇ ಪುಣ್ಯಸ್ಮರಣೆಯ ಅಂಗವಾಗಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರೇ ಆಯೋಜಿಸಿ ಆಂಬ್ಯುಲೆನ್ಸ್ ನೀಡಿದ್ದರು.
‘ಕಳೆದ ಏಪ್ರಿಲ್ ೨೩ ರಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ತಾಲ್ಲೂಕು ಜೆಡಿಎಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಕ್ಷೇತ್ರದ ಮಾಜಿ ಶಾಸಕ ದಿವಂಗತ ಎಸ್.ಮುನಿಶಾಮಪ್ಪ ಅವರ ೫ ನೇ ವರ್ಷದ ಪುಣ್ಯಸ್ಮರಣೆ ಸಮಾರಂಭಕ್ಕೆ ಜನರನ್ನು ಸಂಘಟಿಸಲು ಹೋಗಿದ್ದಾಗ ಸಾದಲಿ ಭಾಗದ ಜೆಡಿಎಸ್ ಮುಖಂಡರು ಆಂಬ್ಯುಲೆನ್ಸ್ ಕೊರತೆಯಿರುವ ಬಗ್ಗೆ ನಮ್ಮ ಗಮನಕ್ಕೆ ತಂದಿದ್ದರು. ಹಾಗಾಗಿ ಟ್ರಸ್ಟ್ ವತಿಯಿಂದ ಮೂರು ಹೋಬಳಿಗಳಿಗೆ ತಲಾ ಒಂದರಂತೆ ಮೂರು ಆಂಬುಲೆನ್ಸ್ ಟ್ರಸ್ಟ್ ಮೂಲಕ ಖರೀದಿಸಲಾಗಿದೆ. ಅದರ ಸಂಪೂರ್ಣ ನಿರ್ವಹಣೆಯನ್ನು ಟ್ರಸ್ಟ್ ಮೂಲಕವೇ ಭರಿಸಲಾಗುತ್ತದೆ. ನಾವು ಸರ್ಕಾರಕ್ಕೆ ನೀಡಬೇಕಾದರೆ ಸರ್ಕಾರದಿಂದ ಆದೇಶವಾಗಬೇಕು. ಆ ನಂತರ ನಾವು ಜಿಲ್ಲಾ ಆರೋಗ್ಯಾಧಿಕಾರಿಯ ಮೂಲಕ ನೀಡಬಹುದು. ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ನಾವು ವೈದ್ಯರಿಗೆ ಆಂಬುಲೆನ್ಸ್ ವಾಹನ ನೀಡಿಲ್ಲ. ಬದಲಿಗೆ ಸಾದಲಿ ವ್ಯಾಪ್ತಿಯಲ್ಲಿ ನಮ್ಮ ಆಂಬುಲೆನ್ಸ್ ಇರುತ್ತದೆ ರೋಗಿಗಳಿಗೆ ಅಗತ್ಯ ಬಿದ್ದಲ್ಲಿ ಬಳಸಿಕೊಳ್ಳಿ ಎಂದಷ್ಟೇ ಹೇಳಿದ್ದೇವೆ. ಸ್ಥಳೀಯ ಮುಖಂಡರ ಆಹ್ವಾನದ ಮೇರೆಗೆ ವೈದ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದನ್ನೇ ನೆಪ ಮಾಡಿಕೊಂಡು ಶಾಸಕರು ವೈದ್ಯರ ಹಾಗು ಪಕ್ಷದ ಕಾರ್ಯಕರ್ತರ ವಿರುದ್ದ ಆಕ್ಷೇಪ ವ್ಯಕ್ತ ಪಡಿಸಿರುವುದು ಸರಿಯಲ್ಲ’ ಎಂದು ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎನ್.ರವಿಕುಮಾರ್ ತಿಳಿಸಿದರು.
ಕನಕಪುರದ ಐವತ್ತು ಮಂದಿ ರೈತರಿಂದ ಮಾಹಿತಿ ಸಂಗ್ರಹ
ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಸಂಸ್ಥೆಯ ಬಗ್ಗೆ ತಿಳಿದುಕೊಂಡು ತಮ್ಮ ಭಾಗದಲ್ಲೂ ಸ್ಥಾಪಿಸಬೇಕೆಂಬ ಉದ್ದೇಶದಿಂದ ಕನಕಪುರದ ಐವತ್ತು ಮಂದಿ ರೈತರೊಂದಿಗೆ ಆಗಮಿಸಿರುವುದಾಗಿ ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ತಲಘಟ್ಟಪುರದ ಹಿರಿಯ ವಿಜ್ಞಾನಿ ಪ್ರಭಾಕರ್ ರಾವ್ ತಿಳಿಸಿದರು.
ತಾಲ್ಲೂಕಿನ ಹಿತ್ತಲಹಳ್ಳಿಗೆ ಶುಕ್ರವಾರ ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕ ಹಾಗೂ ಪ್ರಗತಿಪರ ರೈತ ಎಚ್.ಕೆ. ಸುರೇಶ್ ಅವರ ತೋಟಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ಪ್ರಗತಿಪರ ರೇಷ್ಮೆ ಬೆಳೆಗಾರರಿಂದ ಮಾಹಿತಿ ಪಡೆಯುವುದು ಹಾಗೂ ರೇಷ್ಮೆ ರೈತ ಉತ್ಪಾದಕ ಸಂಸ್ಥೆಯನ್ನು ಕನಕಪುರದಲ್ಲೂ ಸ್ಥಾಪಿಸುವ ಉದ್ದೇಶವಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪ್ರಗತಿಪರ ರೈತ ಹಿತ್ತಲಹಳ್ಳಿಗೋಪಾಲಗೌಡ ಅವರು ತಮ್ಮ ರೇಷ್ಮೆ ಅಭಿವೃದ್ಧಿಯ ಅನುಭವಗಳನ್ನು ಹಂಚಿಕೊಂಡರು. ರೇಷ್ಮೆ ರೈತ ಉತ್ಪಾದಕ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜನಾರ್ಧನಮೂರ್ತಿ ಮತ್ತು ಸಂಯೋಜಕರಾದ ವೆಂಕಟರೆಡ್ಡಿ ಗಿರಣಿ ರವರು ರೈತ ಉತ್ಪಾದಕ ಸಂಸ್ಥೆಯ ಪರಿಕಲ್ಪನೆ, ಕಾರ್ಯಗಳು, ಪ್ರಯೋಜನಗಳನ್ನು ತಿಳಿಸಿಕೊಟ್ಟರು. ಆಗಮಿಸಿದ್ದ ರೈತರು ತಮ್ಮ ಜಿಲ್ಲೆಯಲ್ಲಿಯೂ ಸಹ ಕಂಪನಿ ಪ್ರಾರಂಭಿಸುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

