ಕಷ್ಟದಲ್ಲಿರುವವರಿಗೆ ನೆರವಾಗುವುದು ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಸಂಘಟನೆಯ ಮುಖ್ಯ ಉದ್ದೇಶವಾಗಬೇಕು ಎಂದು ಜಯಕರ್ನಾಟಕ ಜಿಲ್ಲಾಧ್ಯಕ್ಷ ಶ್ರೀನಿವಾಸ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅವರು ಮಾತನಾಡಿದರು.
ಸಾಮಾಜಿಕ ವ್ಯವಸ್ಥೆಯಲ್ಲಿ ಅಭಿವೃದ್ಧಿ ಸಾಧಿಸಬೇಕಾದರೆ ಸಂಘಟನೆ ಮುಖ್ಯ. ಸಂಘಟನೆಯ ಮುಖ್ಯ ಉದ್ದೇಶ ಸಾಮಾಜಿಕ ಜಾಗೃತಿಯಾಗಿದೆ. ರಾಜಕೀಯವನ್ನು ದೂರವಿಟ್ಟು ಸಾಮಾಜಿಕ ಬದ್ಧತೆ ನಿಮ್ಮ ಧ್ಯೇಯವಾಗಲಿ ಎಂದು ಸಲಹೆ ನೀಡಿದರು.
ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷರಾಗಿ ನಲ್ಲಿಮರದಹಳ್ಳಿಯ ಎಂ.ಮುರಳಿ, ನಗರ ಘಟಕದ ಅಧ್ಯಕ್ಷರಾಗಿ ಎಂ.ಮಹಬೂಬ್‌ಪಾಷ, ತಾಲ್ಲೂಕು ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿ ಅಕ್ರಂಪಾಷ, ಎಸ್‌ಸಿ ಘಟಕದ ಅಧ್ಯಕ್ಷರಾಗಿ ದೇವರಮಳ್ಳೂರು ಕೃಷ್ಣಪ್ಪರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗುಡಿಬಂಡೆ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್(ಬುಲೆಟ್), ಚಿಂತಾಮಣಿಯ ವೆಂಕಟರಾಮರೆಡ್ಡಿ ಹಾಜರಿದ್ದರು.
ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳ ಆಯ್ಕೆ
ಶಾಲಾ ಸಂಸತ್ ಚುನಾವಣೆ: ಅಪ್ಪೇಗೌಡನಹಳ್ಳಿ ಶಾಲೆಗೆ ಮಹಿಳಾ ‘ಮುಖ್ಯಮಂತ್ರಿ’ ಆಯ್ಕೆ
ಮಕ್ಕಳ ವಿವಿಧ ಚಟುವಟಿಕೆಗಳಿಂದ ಪಾಥ ಪ್ರವಚನಗಳಿಂದ ತುಂಬಿರುತ್ತಿದ್ದ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಶಾಲೆಯಲ್ಲಿ ಶುಕ್ರವಾರ ಎಂದಿನಂತಿರಲಿಲ್ಲ. ಆಟ ಪಾಠಗಳಲ್ಲಿ ತೊಡಗಿಸಿಕೊಳ್ಳಬೇಕಿದ್ದ ಮಕ್ಕಳೆಲ್ಲ ಮತದಾರರಾಗಿ ಬದಲಾಗಿ ಮತ ಚಲಾವಣೆಗೆ ಮತಗಟ್ಟೆ ಕೇಂದ್ರದ ಮುಂದೆ ಸಾಲುಗಟ್ಟಿ ನಿಂತಿದ್ದರು. ಶಾಲೆಯ ‘ರಾಜಕೀಯ’ದ ಅಖಾಡಕ್ಕೆ ಧುಮುಕ್ಕಿದ್ದ ವಿದ್ಯಾರ್ಥಿಗಳೆಲ್ಲ ಥೇಟ್ ರಾಜಕಾರಣಿಗಳಂತೆ ಸಹಪಾಠಿ ಮತದಾರರ ಮನ ಓಲೈಸುವ ಕಸರತ್ತು ನಡೆಸಿದ್ದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಸಂಸತ್ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಉತ್ಸುಕತೆಯಿಂದ ಭಾಗವಹಿಸಿದ್ದರು.
ಚುನಾವಣಾ ಕಣದಲ್ಲಿ ನಿಂತಿದ್ದ ಅಭ್ಯರ್ಥಿಗಳು ಮತಯಾಚಿಸುವ ಪ್ರಕ್ರಿಯೆ ಮುಗಿದ ನಂತರ ಮತದಾನಕ್ಕಾಗಿ ಮತಗಟ್ಟೆಗಳನ್ನು ಸ್ಥಾಪಿಸಿ, ಅಧಿಕಾರಿಗಳನ್ನು ನಿಯೋಜಿಸಲಾಯಿತು. ಮತದಾನ ಬಹು ಶಿಸ್ತಿನಿಂದಲೇ ಜರುಗಿತು. ಭಾವಿ ಮತದಾರರು ಸರದಿ ಸಾಲಿನಲ್ಲಿ ನಿಂತು ಕೈಗೆ ಮಸಿ ಹಾಕಿಸಿಕೊಂಡು ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತ ಚಲಾಯಿಸಿದರು.
ಮತದಾನ ಮುಗಿಯುತ್ತಿದ್ದಂತೆ ಪ್ರಕಟವಾಗಬೇಕಿದ್ದ ಫಲಿತಾಂಶ ವಿದ್ಯಾರ್ಥಿ ಮತ್ತು ಶಿಕ್ಷಕ ವೃಂದದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಅಂತಿಮವಾಗಿ ಮತ ಎಣಿಕೆ ಮುಗಿದು ಫಲಿತಾಂಶ ಪ್ರಕಟವಾದಾಗ ಡಿ.ಲಕ್ಷ್ಮೀ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಬಳಿಕ ವಿವಿಧ ಖಾತೆಗಳನ್ನು ಹಂಚಲಾಯಿತು.
ಆರೋಗ್ಯ ಮಂತ್ರಿಯಾಗಿ ಅಮೃತಾ, ವಾರ್ತಾ ಸಚಿವರಾಗಿ ರಂಜನ್, ಹಣಕಾಸು ಸಚಿವರಾಗಿ ಮೋಹಿತ್, ವಿದ್ಯಾಮಂತ್ರಿಯಾಗಿ ತಿಲಕ್, ಸ್ವಚ್ಛತಾ ಮಂತ್ರಿಯಾಗಿ ಡಿ.ವರ್ಷಾ, ತೋಟಗಾರಿಕಾ ಮಂತ್ರಿಯಾಗಿ ಪವನ್, ನೀರಾವರಿ ಮಂತ್ರಿಯಾಗಿ ಚೇತನ್, ಕ್ರೀಡಾ ಮಂತ್ರಿಯಾಗಿ ಪುನೀತ್‌ರಾಜ್, ಉಸ್ತುವಾರಿ ಮಂತ್ರಿಯಾಗಿ ಎಂ.ಶಶಿ ಪ್ರಮಾಣವಚನವನ್ನು ಸ್ವೀಕರಿಸಿದರು.
ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಶಾಲೆಯ ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ‘ಮಕ್ಕಳಲ್ಲಿ ಚುನಾವಣೆಯ ಪರಿಕಲ್ಪನೆ ಕುರಿತು ಸ್ಪಷ್ಟತೆ ಇರಬೇಕು. ಆಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜ ಹಾಗೂ ದೇಶ ಮುನ್ನಡೆ ಸಾಧಿಸಬಹುದು. ಜತೆಗೆ ಮೂಲಭೂತ ಹಕ್ಕುಗಳ ಬಗ್ಗೆ ಅರಿವು ಮೂಡಬೇಕು. ಆ ದಿಸೆಯಲ್ಲಿ ಇಂತಹದೊಂದು ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ’ ಎಂದು ತಿಳಿಸಿದರು.
ಶಿಕ್ಷಕರಾದ ಎಸ್.ಚಾಂದ್‌ಪಾಷ, ಎಂ.ಭಾರತಿ, ವೆಂಕಟಮ್ಮ, ಗ್ರಾಮ ಪಂಚಾಯ್ತಿ ಸದಸ್ಯ ಎ.ಎಂ.ತ್ಯಾಗರಾಜ್, ಎಸ್‌ಡಿಎಂಸಿ ಉಪಾಧ್ಯಕ್ಷ ಮುನಿವೆಂಕಟಸ್ವಾಮಿ, ಸದಸ್ಯರಾದ ಮಂಜುನಾಥ್, ದಾಸಪ್ಪ, ನರಸಿಂಹಮೂರ್ತಿ ಹಾಜರಿದ್ದರು.
ಕೊತ್ತನೂರು ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ತಿಳುವಳಿಕೆ ನೀಡಿದ ಆರೋಗ್ಯ ಸಿಬ್ಬಂದಿ
ಮನೆ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ರೋಗಗಳು ಬರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಎಂದು ವೈ.ಹುಣಸೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗಶಾಲೆಯ ತಂತ್ರಜ್ಞ ಟಿ.ಟಿ.ನರಸಿಂಹಪ್ಪ ತಿಳಿಸಿದರು.
ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಶನಿವಾರ ಡೆಂಗ್ಯೂ ಖಾಯಿಲೆಯ ಬಗ್ಗೆ ತಿಳಿವಳಿಕೆಯನ್ನು ಮನೆ ಮನೆಗೆ ಹೋಗಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಮನೆಯ ಬಳಿ ಚರಂಡಿಗಳಲ್ಲಿ ಅಪಾರವಾಗಿ ಸೊಳ್ಳೆಗಳ ಲಾರ್ವಾ ಉತ್ಪತ್ತಿಯಾಗಿವೆ. ಶಾಲೆಯ ಮುಂದಿನ ಚರಂಡಿಯಲ್ಲೂ ತ್ಯಾಜ್ಯದ ನೀರು ತುಂಬಿ ಲಾರ್ವಾಗಳು ಉತ್ಪತ್ತಿಯಾಗಿವೆ. ಗ್ರಾಮ ಪಂಚಾಯ್ತಿಗೆ ವಿಷಯ ಮುಟ್ಟಿಸಿ ಔಷಧಿ ಸಿಂಪಡಿಸಬೇಕು. ಇಲ್ಲದಿದ್ದಲ್ಲಿ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ವಾರಕ್ಕೆ ಒಂದು ದಿನ ವಾರದ ಒಣಗಳ ದಿನವನ್ನಾಗಿ ನೀರು ತುಂಬಿಸಿಟ್ಟ ಪಾತ್ರೆ ಡ್ರಮ್ಮುಗಳನ್ನು ಒಣಗಲು ಬಿಡಬೇಕು ಎಂದು ವಿವರಿಸಿದರು.
ವೈ.ಹುಣಸೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಪುರುಷ ಆರೋಗ್ಯ ಸಹಾಯಕ ಕೃಷ್ಣ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ನಳಿನಾ. ಆಶಾಕಾರ್ಯಕರ್ತೆಯರಾದ ಪುಷ್ಪ. ಮಂಜುಳ. ನಾರಾಯಣ್ಣಮ್ಮ ಹಾಜರಿದ್ದರು.
ಸರ್ಕಾರಿ ಶಾಲೆಗಳು ಗ್ರಾಮದಲ್ಲಿರುವ ದೇಗುಲದಂತೆ
ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭೌ್ಯಗಳನ್ನು ಹೆಚ್ಚಿಸಲು ಮತ್ತು ವಿದ್ಯಾರ್ಥಿಗಳ ಅಗತ್ಯತೆಯನ್ನು ಪೂರೈಸಲು ಸಾರ್ವಜನಿಕರು ಮುಂದಾಗಬೇಕು. ಸರ್ಕಾರಿ ಶಾಲೆಗಳು ಗ್ರಾಮದಲ್ಲಿರುವ ದೇಗುಲದಂತೆ ಎಂದು ರಾಷ್ಟ್ರೀಯ ಕ್ರೀಡಾಪಟು ಜಯಂತಿಗ್ರಾಮದ ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಮರಿಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ 50 ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕ, ಲೇಖನ ಸಾಮಗ್ರಿ ಹಾಗೂ ಸ್ವಾಮಿ ವಿವೇಕಾನಂದರ ಕುರಿತ ಪುಸ್ತಕವನ್ನು ವಿತರಿಸಿ ಅವರು ಮಾತನಾಡಿದರು.
ಮರಿಹಳ್ಳಿ ಗ್ರಾಮವು ನಗರ ಪ್ರದೇಶದಿಂದ ದೂರದಲ್ಲಿದೆ. ಹಿಂದುಳಿದ, ಪರಿಶಿಷ್ಟ ಜಾತಿ ಹಾಗೂ ಜನಾಂಗದ ಮಕ್ಕಳು ಹೆಚ್ಚಿದ್ದಾರೆ. ಎಲ್ಲಾ ಮಕ್ಕಳೂ ಪ್ರತಿಭಾವಂತರಾಗಿರುತ್ತಾರೆ. ಅವರಿಗೆ ಸೂಕ್ತ ಸೌಲಭ್ಯ, ಪ್ರೋತ್ಸಾಹ, ಭರವಸೆ, ಆಶೋತ್ತರಗಳನ್ನು ತುಂಬಬೇಕು. ವಿದ್ಯಾರ್ಥಿಗಳ ಅಗತ್ಯತೆಯನ್ನು ಮನಗಂಡು ಸೌಕರ್ಯಗಳನ್ನು ಒದಗಿಸಿದಲ್ಲಿ ಸಾಧಕರಾಗುತ್ತಾರೆ. ಅವರು ಗ್ರಾಮಕ್ಕೆ ಹಾಗೂ ತಾಲ್ಲೂಕಿಗೆ ಕೀರ್ತಿಯನ್ನು ತರುತ್ತಾರೆ ಎಂದು ಹೇಳಿದರು.
ಸರ್ಕಾರಿ ಶಾಲೆಯಲ್ಲಿ ಓದಿದವರಿಗೆ ಮಾತ್ರ ಸರ್ಕಾರಿ ಕೆಲಸ ಮತ್ತು ಸರ್ಕಾರಿ ಕೆಲಸದಲ್ಲಿರುವವರ ಮಕ್ಕಳು ಸರ್ಕಾರಿ ಶಾಲೆಯಲ್ಲಿಯೇ ಓದ ಬೇಕು ಎಂಬ ಕಾನೂನು ಜಾರಿ ಮಾಡಬೇಕು. ಭಾರತ ದೇಶಗಳಲ್ಲಿ ಏಕರೂಪ ಶಿಕ್ಷಣ ಪದ್ದತಿ ಜಾರಿ ಮಾಡಬೇಕು, ಇಲ್ಲವಾದಲ್ಲಿ ಸರ್ಕಾರಿ ಶಾಲೆಗಳಿಗೆ ಬೀಗ ಹಾಕುವ ಪರಿಸ್ಥಿತಿಯು ಎದುರಾಗುವುದು. ಮಕ್ಕಳು ವಿವೇಕಾನಂದರ ತತ್ವಗಳನ್ನು ಪಾಲಿಸಿದಲ್ಲಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗುವರು ಎಂದರು.
ಗ್ರಾಮ ಪಂಚಾಯ್ತಿ ಸದಸ್ಯೆ ಪದ್ಮಮ್ಮ, ಮುಖ್ಯ ಶಿಕ್ಷಕ ಬಾಬು, ಶಿಕ್ಷಕ ಗಣೇಶ್, ಗ್ರಾಮಸ್ಥರಾದ ಗೋವಿಂದಪ್ಪ, ವೆಂಕಟೇಶಪ್ಪ ಹಾಜರಿದ್ದರು.
ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾದ ಅಭ್ಯರ್ಥಿಗಳು ಪ್ರವರ್ಗ 1, 2ಎ, ಎಬಿ, 3ಎ, 3ಬಿ ಪರಿಶಿಷ್ಟ ಜಾತಿ ಅಥವಾ ವರ್ಗಗಳಿಗೆ ಸೇರಿದವರಾಗಿರಬೇಕು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 12. ತಾಲ್ಲೂಕುವಾರು ವಿದ್ಯಾರ್ಥಿನಿಲಯಗಳ ವಿವರ ಹಾಗೂ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರ ಮತ್ತು ಸರ್ಕಾರದ ಆದೇಶಕ್ಕಾಗಿ ಇಲಾಖೆಯ ವೆಬ್‌ಸೈಟ್ ನೋಡಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದರು.
ಫಲಾನುಭವಿಗಳಿಗೆ ಗ್ಯಾಸ್ ಸಂಪರ್ಕ
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ನೀಡಲಾಗುತ್ತಿದೆ ಎಂದು ಶ್ರೀ ವೆಂಕಟೇಶ್ವರ್ ಇಂಡೇನ್ ಗ್ಯಾಸ್ ಏಜೆನ್ಸಿಯ ಮಾಲೀಕ ನಾಗರಾಜ್ ತಿಳಿಸಿದರು.
ನಗರದ ಇಂಡೇನ್ ಗ್ಯಾಸ್ ಏಜೆನ್ಸಿಯ ಕಚೇರಿಯಲ್ಲಿ ಗುರುವಾರ ಫಲಾನುಭವಿಗಳಿಗೆ ಗ್ಯಾಸ್ ಸಂಪರ್ಕದ ದಾಖಲೆ, ಸ್ಟೌ ಹಾಗೂ ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು.
ಈ ಯೋಜನೆಯಡಿ ಕೇಂದ್ರ ಸರ್ಕಾರ ಬಿಪಿಎಲ್ ಕುಟುಂಬಗಳಿಗೆ 1.600 ರೂ ದರದಲ್ಲಿ ಹೊಸ ಅನಿಲ ಸಂಪರ್ಕ ಕಲ್ಪಿಸಲು ಮುಂದಾಗಿದೆ. ರಾಜ್ಯ ಸರ್ಕಾರ 1 ಸಾವಿರ ರೂ ಮೊತ್ತವನ್ನು ಅರ್ಹ ಫಲಾನುಭವಿಗೆ ನೀಡಲಿದೆ. ಒಟ್ಟು 2.600 ರೂ ಮೊತ್ತದಲ್ಲಿ ಸಂಪರ್ಕ ದೊರೆಯಲಿದೆ.
ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳು 18 ವರ್ಷ ತುಂಬಿದ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್‌ಗಳ ನಕಲು, ಬ್ಯಾಂಕಿನ ಪಾಸ್‌ಪುಸ್ತಕ, ವಿದ್ಯುತ್ ಬಿಲ್, ಪಾಸಪೋರ್ಟ್ ಫೋಟುಗಳೊಂದಿಗೆ ಅರ್ಜಿಗಳನ್ನು ಸ್ವೀಕರಿಸಿದ್ದು, ಅರ್ಹ ಫಲಾನುಭವಿಗಳಿಗೆ ಗ್ಯಾಸ್ ಸಂಪರ್ಕವನ್ನು ನೀಡಲಾಗುತ್ತಿದೆ.
ತಾಲ್ಲೂಕಿನ ಸೊಣ್ಣೇನಹಳ್ಳಿ, ಮರಿಹಳ್ಳಿ, ಗಡಿಮಿಂಚೇನಹಳ್ಳಿ ಮುಂತಾದ ಗ್ರಾಮದ ಫಲಾನುಭವಿಗಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಕಾಶ್, ರಮೇಶ್, ಅಣ್ಣಪ್ಪ ಹಾಜರಿದ್ದರು.
ಸುಸಜ್ಜಿತ ನಗರಸಭೆಯ ಕಟ್ಟಡ ನಿರ್ಮಾಣಕ್ಕಾಗಿ ಹಳೆಯ ಕಟ್ಟಡ ತೆರವು ಕಾರ್ಯಾಚರಣೆ
ನಗರದ ಹಳೆಯ ಪೊಲೀಸ್ ಠಾಣೆಯ ಬಳಿ ಇದ್ದ ನಗರಸಭೆಗೆ ಸೇರಿರುವ ಹಳೆಯ ಅಂಗಡಿ ಮಳಿಗೆಗಳನ್ನು ಗುರುವಾರ ಜೆಸಿಬಿಗಳನ್ನು ಬಳಸಿ ಕೆಡವಲಾಯಿತು.
ಕಳೆದ ಮೇ ತಿಂಗಳ 29ನೇ ತಾರೀಖಿನಂದು ಈ ಅಂಗಡಿ ಮಳಿಗೆಗಳನ್ನು ಕೆಡವಲು ಅಧಿಕಾರಿಗಳು ಮುಂದಾದಾಗ ತಡೆಯೊಡ್ಡಿದ ಮಳಿಗೆ ಬಾಡಿಗೆದಾರರು ನಮಗೆ ಒಂದು ತಿಂಗಳು ಕಾಲಾವಕಾಶ ಬೇಕು ತಿಂಗಳೊಳಗೆ ಅಂಗಡಿ ಖಾಲಿ ಮಾಡುತ್ತೇವೆ ಇಲ್ಲವಾದಲ್ಲಿ ಅಂಗಡಿಯಲ್ಲಿರುವ ಮಾಲು ಸಹಿತ ಕಟ್ಟಡ ಕೆಡವಲು ನಮ್ಮದೂ ಯಾವುದೇ ಅಭ್ಯಂತರವಿಲ್ಲ ಎಂದು ನಗರಸಭೆ ಆಯುಕ್ತರು ಹಾಗು ಪೊಲೀಸ್ ಇಲಾಖೆಗೆ ಮುಚ್ಚಳಿಕೆ ಬರೆದುಕೊಟ್ಟಿದ್ದರು.
ನಗರಸಭೆಗೆ ಸೇರಿದ 20 ಅಂಗಡಿಗಳ ಹಳೆ ಕಟ್ಟಡ ಕೆಡವಿ ಅದರ ಹಿಂದೆ ಇರುವ ಖಾಲಿ ನಿವೇಶನ ಸೇರಿಸಿ ಬೃಹತ್ ಸುಸಜ್ಜಿತ ನಗರಸಭಾ ಕಾರ್ಯಾಲಯದ ಕಟ್ಟಡ ನಿರ್ಮಾಣ ಮಾಡಲು ಈಗಾಗಲೇ ತಯಾರಿ ನಡೆದಿದೆ. ಅದಕ್ಕಾಗಿ ನಗರೋತ್ಥಾನದ ಮೂರನೇ ಹಂತದಲ್ಲಿ ನಾಲ್ಕು ಕೋಟಿ ರೂಗಳನ್ನು ಮೀಸಲಿಡಲಾಗಿದೆ. 90 ಅಡಿ ಉದ್ದ ಮತ್ತು 120 ಅಡಿ ಅಗಲದ ಸ್ಥಳದಲ್ಲಿ ಒಟ್ಟು ಆರೂವರೆ ಕೋಟಿ ರೂಗಳ ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಿಸಲಿದ್ದು, ಅದರಲ್ಲಿ ಎರಡು ಬ್ಯಾಂಕುಗಳಿಗೆ, ಆಯುಕ್ತರ ಮನೆಗೆ, ವಾಹನ ನಿಲುಗಡೆಗೆ ಹಾಗೂ ಅಂಗಡಿ ಮಳಿಗೆಗಳಿಗೆ ಕೆಳಹಂತದಲ್ಲಿ ಅವಕಾಶ ಕಲ್ಪಿಸಲಾಗಿದೆ. ಮೇಲಿನ ಅಂತಸ್ತಿನಲ್ಲಿ ಆಯುಕ್ತರ ಕಚೇರಿ, ಸಭಾಂಗಣ ಮುಂತಾದವುಗಳಿರುತ್ತವೆ.
ಬಹುತೇಕ ಮಂದಿ ಬಾಡಿಗೆದಾರರು ಖಾಲಿಮಾಡಿದ್ದರೂ, ನಗರಸಭೆಯವರು ಕಟ್ಟಡವನ್ನು ಕೆಡವುದರ ಬಗ್ಗೆ ಮಾಹಿತಿ ತಿಳಿದ ಐವರು ಬಾಡಿಗೆದಾರರು ತಡೆಯಾಜ್ಞೆ ತರಲು ಬುಧವಾರ ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯದಿಂದ ತಡೆಯಾಜ್ಞೆಯ ಪ್ರತಿಯನ್ನು ತರುವುದರೊಳಗೆ ನಗರಸಭೆಯಿಂದ ಗುರುವಾರ ಬೆಳಿಗ್ಗೆಯೇ ಕಟ್ಟಡವನ್ನು ಕೆಡವಲಾಯಿತು.
‘ಕಳೆದ ಮೇ ತಿಂಗಳಿನಲ್ಲಿಯೇ ಹಳೆಯ ಕಟ್ಟಡವನ್ನು ಕೆಡವಬೇಕಾಗಿತ್ತು. ಇಷ್ಟೊತ್ತಿಗೆ ಹೊಸ ಕಟ್ಟಡದ ಕಾಮಗಾರಿ ಪ್ರಾರಂಭವಾಗಬೇಕಾಗಿತ್ತು. ಬಾಡಿಗೆದಾರರು ಸರ್ಕಲ್ ಇನ್ಸ್‌ಪೆಕ್ಟರ್ ವೆಂಕಟೇಶ್ ಮತ್ತು ಆಯುಕ್ತ ಎಚ್.ಎ.ಹರೀಶ್ ಅವರಿಗೆ ಒಂದು ತಿಂಗಳ ಕಾಲಾವಕಾಶ ಕೋರಿದ್ದರು. ಆದರೂ ತಡ ಮಾಡಿ ಕೆಡವಿದ್ದೇವೆ. ಕಟ್ಟಡದ ನೀಲನಕ್ಷೆ ತಯಾರಿದೆ. ಜಿಲ್ಲಾಧಿಕಾರಿಗಳಿಂದ ಕಾಮಗಾರಿಯ ಅನುಮೋದನೆ ಪಡೆದು ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆ. ಅತ್ಯಂತ ಶೀಘ್ರವಾಗಿ ಜಿಲ್ಲೆಯಲ್ಲಿಯೇ ಅತ್ಯಂತ ಸುಸಜ್ಜಿತ ನಗರಸಭೆಯ ಕಾರ್ಯಾಲಯ ಶಿಡ್ಲಘಟ್ಟದಲ್ಲಿ ನಿರ್ಮಾಣ ಮಾಡುವುದು ನಮ್ಮ ಉದ್ದೇಶ’ ಎಂದು ನಗರಸಭೆಯ ಅಧ್ಯಕ್ಷ ಅಫ್ಸರ್‌ಪಾಷ ತಿಳಿಸಿದರು.
ದೇಶರಕ್ಷಣೆ ನಮ್ಮೆಲ್ಲರ ಹೊಣೆ
ದೇಶರಕ್ಷಣೆ ನಮ್ಮೆಲ್ಲರ ಹೊಣೆ. ದಿ ಇಂಡಿಯನ್ ನ್ಯಾಷನಲ್ ಆರ್ಮಿ ಅಥವಾ ಆಝಾದ್ ಹಿಂದ್ ಫೌಜ್ ಎರಡನೆಯ ಮಹಾಯುದ್ಧದಲ್ಲಿ ಇಂಪೀರಿಯಲ್ ಜಪಾನ್ ಆರ್ಮಿಯೊಂದಿಗೆ ಸೇರಿ ಭಾರತವನ್ನು ಆಳುತ್ತಿದ್ದ ಬ್ರಿಟಿಷರ ವಿರುದ್ಧ ಹೋರಾಡಿದ ಭಾರತೀಯ ಸಂಸ್ಥೆ. ದೇಶದ ಸ್ವಾತಂತ್ರ್ಯಕ್ಕಾಗಿ ಸ್ಥಾಪನೆಯಾದ ಸೇನೆಯಿದು ಎಂದು ಯಣ್ಣಂಗೂರಿನ ಯೋಧ ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾರಸ್ವತ ಪರಿಚಾರಿಕೆ ಹಾಗೂ ಶಾಲೆಯ ವತಿಯಿಂದ ನಡೆಸಿದ ಆಝಾದ್ ಹಿಂದ್ ಫೌಜ್ ಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎರಡನೆಯ ಮಹಾಯುದ್ಧದ ಸಮಯದಲ್ಲಿ ಜಪಾನಿಯರಿಂದ ಯುದ್ಧ ಕೈದಿಗಳಾದ ಬ್ರಿಟಿಷ್ ಸೈನ್ಯದ ಭಾರತೀಯರನ್ನು ಸಂಘಟಿಸಿ ಈ ಸೈನ್ಯವನ್ನು ರಚಿಸಲಾಯಿತು. ಈ ಸೈನ್ಯವನ್ನು ಸಂಘಟಿಸುವದರಲ್ಲಿ ರಾಸಬಿಹಾರಿ ಘೋಷ್ ತುಂಬಾ ಶ್ರಮಪಟ್ಟವರು. ಸುಭಾಷಚಂದ್ರ ಬೋಸ್ ಈ ಸೈನ್ಯದ ಮುಖಂಡತ್ವ ವಹಿಸಿಕೊಂಡರು. ಕ್ಯಾಪ್ಟನ್ ಶಹಾನವಾಜ್, ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ ಇವರು ಈ ಸೈನ್ಯದ ಪ್ರಮುಖರು. ಕರ್ನಾಟಕದವರೇ ಆದ ಐ.ಎನ್.ಎ. ರಾಮರಾವ್ ಈ ಸೈನ್ಯದಲ್ಲಿದ್ದರು.
ಯುದ್ಧಸಮಯದಲ್ಲಿ ಬರ್ಮಾ ದೇಶದಲ್ಲಿ ಮುನ್ನುಗ್ಗಿ, ಭಾರತದ ಗಡಿಯ ಹತ್ತಿರಕ್ಕೆ ಈ ಸೈನ್ಯ ತಲುಪಿತ್ತು. ಆದರೆ ಜಪಾನ್ ಮೇಲೆ ಅಣುಬಾಂಬ್ ದಾಳಿಯಿಂದಾಗಿ, ಜಪಾನ್ ಮಿತ್ರಸೈನ್ಯಕ್ಕೆ ಶರಣಾಗುವದರೊಂದಿಗೆ ಆಝಾದ್ ಹಿಂದ್ ಸೈನ್ಯಕ್ಕೆ ಹಿನ್ನಡೆಯಾಯಿತು. ಸುಭಾಷಚಂದ್ರ ಬೋಸ್ ಅವರ ವಿವಾದಾತ್ಮಕ ವಿಮಾನ ದುರಂತದೊಂದಿಗೆ ಈ ಸೈನ್ಯದ ಹೋರಾಟ ಸಂಪೂರ್ಣವಾಗಿ ಮುಕ್ತಾಯವಾಯಿತು ಎಂದು ವಿವರಿಸಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಭಾರತದ ಜನರ ಮನಸ್ಸಿನಲ್ಲಿ ಭಾರತ ರಾಷ್ಟ್ರೀಯ ಸೈನ್ಯ ಶಾಶ್ವತ ಸ್ಥಾನವನ್ನು ಪಡೆದಿದೆ. ಭಾರತದ ಸ್ವಾತಂತ್ರ್ಯ ಸಾಧನೆಗೆ ಭಾರತ ರಾಷ್ಟ್ರೀಯ ಸೇನೆಯ ಕೊಡುಗೆ ಗಮನಾರ್ಹವಾದದ್ದು ಎಂದು ಹೇಳಿದರು.
ಶಾಲೆಯ ಆವರಣದಲ್ಲಿ ಯಣ್ಣಂಗೂರಿನ ಯೋಧ ರವಿಕುಮಾರ್ ಅವರಿಂದ ಹಲಸು ಮತ್ತು ನೇರಳೆ ಗಿಡವನ್ನು ನೆಡಿಸಲಾಯಿತು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ , ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಎಸ್ಡಿಎಂಸಿ ಸದಸ್ಯರಾದ ಮಂಜುನಾಥ್, ಹನುಮಂತರೆಡ್ಡಿ, ರಾಮಚಂದ್ರ, ಮುಖ್ಯಶಿಕ್ಷಕಿ ವೆಂಕಟರತ್ನಮ್ಮ, ಶಿಕ್ಷಕ ಚಾಂದ್ಪಾಷ, ಗ್ರಾಮಸ್ಥರಾದ ನಡಿಪಿನಾಯಕನಹಳ್ಳಿ ರವಿ, ಆನಂದ್, ಅಶ್ವತ್ಥನಾರಾಯಣ್, ಎ.ಜಿ.ನರಸಿಂಹಮೂರ್ತಿ, ಮುನಿಯಪ್ಪ, ವೆಂಕಟಮ್ಮ, ನರಸಿಂಹಮೂರ್ತಿ, ರವಿಪ್ರಕಾಶ್ ಹಾಜರಿದ್ದರು.
ಜುಲೈ ೩೧ ರಂದು ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ
ಜುಲೈ ೩೧ ರಂದು ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಕಾರ್ಯಕ್ರಮವನ್ನು ರಾಜ್ಯ ಸರ್ಕಾರದ ನಿರ್ದೇಶನದಂತೆ ತಾಲ್ಲೂಕು ಆಡಳಿತದ ವತಿಯಿಂದ ಆಚರಣೆ ಮಾಡಲಾಗುವುದು ಎಂದು ತಹಶೀಲ್ದಾರ್ ಅಜಿತ್ ಕುಮಾರ್ ರೈ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಬುಧವಾರ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಒಕ್ಕಲಿಗ ಸಮುದಾಯದ ಮುಖಂಡರುಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು ಮಾತನಾಡಿದರು.
ಜೂನ್ ೨೭ ರಂದು ಒಕ್ಕಲಿಗ ಸಂಘದ ನಿದೇರ್ಶನದಂತೆ ರಾಜ್ಯಾದ್ಯಂತ ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಸರ್ಕಾರದ ಆದೇಶ ಬರುವುದು ತಡವಾಯಿತು. ಆಗಸ್ಟ್ ಅಂತ್ಯದೊಳಗೆ ತಾಲ್ಲೂಕು ಆಡಳಿತದ ವತಿಯಿಂದ ಆಚರಣೆ ಮಾಡಲು ನಿರ್ದೇಶನ ಬಂದಿರುವುದರಿಂದ ಜುಲೈ ೩೧ ರಂದು ಸರಳವಾಗಿ ಆಚರಣೆ ಮಾಡುವುದರ ಜತೆಗೆ, ಎಸ್.ಎಸ್.ಎಲ್.ಸಿಯ ೩೪ ಮಂದಿ ವಿದ್ಯಾರ್ಥಿಗಳು, ಪಿ.ಯು.ಸಿ ಯ ೧೫ ಮಂದಿ ವಿದ್ಯಾರ್ಥಿಗಳನ್ನು ಸನ್ಮಾನಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ಒಕ್ಕಲಿಗ ಸಂಘದ ಪದಾಧಿಕಾರಿಗಳಾದ ಕೆಂಪರೆಡ್ಡಿ, ನಾರಾಯಣಸ್ವಾಮಿ, ಜೆ.ವಿ.ವೆಂಕಟಸ್ವಾಮಿ, ಸುಬ್ಬಾರೆಡ್ಡಿ, ಸಿ.ಪಿ.ಈ ಕರಗಪ್ಪ, ದೇವರಾಜು, ಎ.ಎಂ.ತ್ಯಾಗರಾಜ್, ಕೃಷ್ಣಪ್ಪ ಹಾಜರಿದ್ದರು.
ಅಂಕತಟ್ಟಿ ಗ್ರಾಮಠಾಣಾ ಜಮೀನಿನ ಸರ್ವೆ ಕಾರ್ಯ ನಡೆಸಿದ ಅಧಿಕಾರಿಗಳು
ಗ್ರಾಮ ಠಾಣೆ ಮತ್ತು ಸರ್ವೆ ನಂಬರುಗಳ ನಡುವೆ ನಡೆದ ಘರ್ಷಣೆಯ ಹಿನ್ನೆಲೆಯಲ್ಲಿ ಮಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಂಕತಟ್ಟಿ ಗ್ರಾಮಕ್ಕೆ ಮಂಗಳವಾರ ತಹಶೀಲ್ದಾರ್ ಅಜಿತ್‌ಕುಮಾರ್ ರೈ, ತಾಲ್ಲೂಕು ಪಂಚಾಯ್ತಿ ಇ ಓ ವೆಂಕಟೇಶ್ ಮತ್ತು ಸರ್ವೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸರ್ವೆ ಕಾರ್ಯವನ್ನು ನಡೆಸಿದರು.
ಕಳೆದ ಮಾರ್ಚ್ ತಿಂಗಳಿನಲ್ಲಿ ಗ್ರಾಮ ಪಂಚಾಯ್ತಿ ಕಚೇರಿಯ ಮುಂದೆ ಗ್ರಾಮಸ್ಥರು ಹಾಗೂ ರೈತ ಸಂಘದ ಮುಖಂಡರು ಗ್ರಾಮ ಠಾಣೆಯ ಜಮೀನನ್ನು ಅಕ್ರಮವಾಗಿ ಕೆಲ ಪ್ರಭಾವಿಗಳು ವಶಪಡಿಸಿಕೊಂಡಿದ್ದಾರೆ ಅವನ್ನು ತೆರವುಗೊಳಿಸಬೇಕೆಂದು ಪ್ರತಿಭಟಿಸಿದ್ದರು. ಇದೇ ವಿಷಯವಾಗಿ ಕಳೆದ ಹದಿನೈದು ದಿನಗಳ ಹಿಂದೆ ಘರ್ಷಣೆ ಕೂಡ ನಡೆದು ಕೆಲವರ ಬಂಧನವೂ ನಡೆದಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ತೆರಳಿದ ತಹಶೀಲ್ದಾರ್ ಅಜಿತ್‌ಕುಮಾರ್ ರೈ, ತಾಲ್ಲೂಕು ಪಂಚಾಯ್ತಿ ಇ ಓ ವೆಂಕಟೇಶ್ ಮತ್ತು ಸರ್ವೆ ಇಲಾಖೆಯ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯ್ತಿ ಇ ಓ ವೆಂಕಟೇಶ್, ‘ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಗ್ರಾಮ ಠಾಣೆಗೆ ಸೇರಿದ ಜಮೀನನ್ನು ಸರ್ವೆ ಕಾರ್ಯ ನಡೆಸಿದ್ದೇವೆ. ಅಕ್ರಮ ಖಾತೆದಾರರಿಗೆ ನೋಟಿಸ್ ನೀಡಲಾಗುವುದು. ಅವರು ತರುವ ದಾಖಲೆಗಳನ್ನು ಪರಿಶೀಲನೆ ಮಾಡಲಾಗುವುದು. ಸರ್ಕಾರಿ ಜಮೀನನ್ನು ಯಾವುದೇ ಕಾರಣಕ್ಕೂ ಬಿಡಲಾಗದು’ ಎಂದು ತಿಳಿಸಿದರು.
‘ಈ ಹಿಂದೆಯೂ ಎರಡು ಬಾರಿ ಅಕ್ರಮ ಖಾತೆದಾರರನ್ನು ತೆರವುಗೊಳಿಸಲಾಗುವುದು ಎಂದು ಹೇಳಿ ತಾಲ್ಲೂಕು ಪಂಚಾಯ್ತಿ ಇ ಓ ಬಂದಿದ್ದರು. ಈ ದಿನವೂ ಅದೇ ರೀತಿಯಾಗಿ ಪೊಲೀಸ್ ಬಂದೋಬಸ್ತಿನೊಂದಿಗೆ ಬಂದಿದ್ದು, ಕೇವಲ ಸರ್ವೆ ಮಾಡಿರುವ ಜಾಗಗಳನ್ನು ನೋಡಿ, ಅಕ್ರಮ ಖಾತೆದಾರರಿಗೆ ನೋಟಿಸ್ ನೀಡುವುದಾಗಿ ತಿಳಿಸಿ ತೆರಳಿದ್ದಾರೆ. ಅವರ ಕ್ರಮವು ಅನುಮಾನಾಸ್ಪದವಾಗಿದೆ. ಹದಿನೈದು ದಿನಗಳು ಕಾಯುತ್ತೇವೆ. ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ತಾಲ್ಲೂಕು ಪಂಚಾಯ್ತಿ ಕಚೇರಿಗೆ ಮಹಿಳೆಯರೂ ಸೇರಿದಂತೆ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಗ್ರಾಮಸ್ಥರು ತಿಳಿಸಿದರು.
ಸೀನಿಯರ್ ಗೈಡರ್ ಪುರಸ್ಕಾರ
ಶಿಡ್ಲಘಟ್ಟದ ಶ್ರೀ ಸರಸ್ವತಿ ಕಾನ್ವೆಂಟ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಬುಲ್ ಬುಲ್ಸ್ ಫ್ಲಾಕ್ ಲೀಡರ್ ಆಗಿ ಕಳೆದ ೧೭ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಟಿ. ಸಾವಿತ್ರಮ್ಮ ಅವರಿಗೆ ಬೆಂಗಳೂರಿನ ರಾಜಭವನದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಸೀನಿಯರ್ ಗೈಡರ್ ಎಂದು ಪುರಸ್ಕೃರಿಸಿದ್ದಾರೆ.
ಹುತಾತ್ಮ ಯೋಧ ಗಂಗಾಧರ್ ಅವರ ಮನೆಗೆ ಮಾಜಿ ಸಚಿವ ಬಚ್ಚೇಗೌಡ ಭೇಟಿ, ಸಾಂತ್ವನ
ದೇಶ ಕಾಯುವ ಸೈನಿಕ, ಅನ್ನ ಕೊಡುವ ರೈತನನ್ನು ಸರ್ಕಾರ ಮರೆಯಬಾರದು ಎಂದು ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಹೇಳಿದರು.
ತಾಲ್ಲೂಕಿನ ಯಣ್ಣಂಗೂರಿನ ಯೋಧ ಗಂಗಾಧರ್ ಅವರ ಮನೆಗೆ ಭಾನುವಾರ ಭೇಟಿ ನೀಡಿದ ಅವರು, ಗಂಗಾಧರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಅವರ ಪತ್ನಿ, ಮಗ, ಅಪ್ಪ ಅಮ್ಮ ಹಾಗೂ ಸೋದರ ಸೈನಿಕ ರವಿಕುಮಾರ್ ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಮಗನನ್ನು ಕಳೆದುಕೊಂಡು ಹೆತ್ತವರ ಕಣ್ಣೀರು ಒರೆಸಲು ನಮ್ಮಿಂದ ಸಾಧ್ಯವಿಲ್ಲ. ಆದರೆ ನಾವು ನಿಮ್ಮೊಂದಿಗೆ ಇದ್ದೇವೆ. ನಾವೆಲ್ಲರೂ ನಿಮ್ಮ ಮಕ್ಕಳೆ ಎಂದು ಭಾವಿಸಿ ಧೈರ್ಯವಾಗಿ ಇರಿ ಎಂದು ಗಂಗಾಧರ್ ಅವರ ಹೆತ್ತವರು, ಪತ್ನಿಗೆ ಧೈರ್ಯ ತುಂಬಿದರು.
ಸರ್ಕಾರದಿಂದ ಸಿಗಬೇಕಾದ ನ್ಯಾಯಯುತವಾದ ಎಲ್ಲ ರೀತಿಯ ಸವಲತ್ತುಗಳನ್ನು ಕುಟುಂಬಕ್ಕೆ ಒದಗಿಸಿಕೊಡುವುದಾಗಿ ತಿಳಿಸಿದರು.
ಗಂಗಾಧರ್ ಅವರ ಪತ್ನಿಯು ಆಯುಷ್ ವೈದ್ಯಕೀಯ ಪದವಿ ಪಡೆದಿದ್ದು ಈ ಬಗ್ಗೆ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರೊಂದಿಗೆ ಮಾತನಾಡಿ ಕಾನೂನು ಚೌಕಟ್ಟಿನಲ್ಲಿ ಸರ್ಕಾರಿ ನೌಕರಿ ಕೊಡಿಸುವ ಭರವಸೆ ನೀಡಿದರು.
ಇತರೆ ಸವಲತ್ತು ಹಾಗೂ ಸೌಲಭ್ಯಗಳಿಗೆ ಕೇಂದ್ರ ಸಚಿವ ಅನಂತ್ ಕುಮಾರ್ ಅವರೊಂದಿಗೆ ಚರ್ಚಿಸಿ ಅವರ ಮೂಲಕ ಕೇಂದ್ರದ ರಕ್ಷಣಾ ಸಚಿವರಿಗೂ ಮನವಿ ಸಲ್ಲಿಸಿ, ಕುಟುಂಬದ ಸಧ್ಯದ ಪರಿಸ್ಥಿತಿಗಳನ್ನು ಮನವರಿಕೆ ಮಾಡಿಕೊಟ್ಟು ನೆರವು ಕೊಡಿಸುವುದಾಗಿ ತಿಳಿಸಿದರು.
ಬಿಜೆಪಿ ಮುಖಂಡ ಡಿ.ಆರ್.ಶಿವಕುಮಾರ್ ಗೌಡ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಗಂಗಾಧರ್ ಅವರ ಕುಟುಂಬಕ್ಕೆ ೧ ಲಕ್ಷ ರೂ. ಚೆಕ್ ನೀಡಿದರಲ್ಲದೆ, ತಾಲ್ಲೂಕಿನ ವಿವಿಧ ಕಡೆಯಿಂದ ಆಗಮಿಸಿದ್ದ ೧೦೦ಕ್ಕೂ ಹೆಚ್ಚು ಅಂಧ ಮಕ್ಕಳಿಗೆ ಸ್ಟೆಟರ್, ಬ್ಯಾಗು, ಲೇಖನಿ ಸಾಮಗ್ರಿ ಮುಂತಾದ ಪರಿಕರಗಳನ್ನು ವಿತರಿಸಿದರು.
ಕರ್ಣಶ್ರೀ ಚಾರಿಟಬಲ್ ಟ್ರಸ್ಟ್‌ನಿಂದ ‘ಯೋಧರ ಬಗ್ಗೆ ನಿಮಗೆಷ್ಟು ಗೊತ್ತು’ ವಿಷಯವಾಗಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದು ಉತ್ತಮವಾಗಿ ಪ್ರಬಂಧವನ್ನು ಬರೆದ ವಿದ್ಯಾರ್ಥಿಗಳಿಗೆ ಟ್ರಸ್ಟ್‌ನ ಅಧ್ಯಕ್ಷ ಡಿ.ಆರ್.ಶಿವಕುಮಾರ್‌ಗೌಡ ಬಹುಮಾನವನ್ನು ವಿತರಿಸಿದರು.
ಗಂಗಾಧರ್ ಅವರ ಸಹೋದರ ಯೋಧ ರವಿಕುಮಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರಗೌಡ, ಕೊತ್ತನೂರು ರವಿಕುಮಾರ್, ಕೃಷ್ಣೇಗೌಡ, ಹುತಾತ್ಮ ಯೋಧ ಗಂಗಾಧರ್ ಅವರ ಪತ್ನಿ, ತಂದೆ, ತಾಯಿ, ಮಗ ಹಾಗೂ ಕುಟುಂಬದ ಸದಸ್ಯರು ಹಾಜರಿದ್ದರು.
ಗೋಬರ್ ಗ್ಯಾಸ್‌ನ ಸ್ಲರ್ರಿಗೆ ಬಿದ್ದಿದ್ದ ಬಾಲಕನನ್ನು ರಕ್ಷಿಸಿರುವ ಇಬ್ಬರು ಬಾಲೆಯರು
ಗೋಬರ್ ಗ್ಯಾಸ್‌ನ ಸ್ಲರ್ರಿಗೆ ಬಿದ್ದು ಪ್ರಾಣಾಪಾಯದಲ್ಲಿದ್ದ ಮನೋಜ ಎಂಬ ಬಾಲಕನನ್ನು ದೀಕ್ಷಿತಾ ಮತ್ತು ಅಂಬಿಕಾ ಎಂಬ ಇಬ್ಬರು ಬಾಲಕಿಯರು ರಕ್ಷಿಸಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ವಾರ ರಂಜಾನ್ ಹಬ್ಬದ ರಜಾ ದಿನದಂದು ತಾಲ್ಲೂಕಿನ ಹನುಮಂತಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಶಾಲೆಗೆ ರಜೆ ಇದ್ದ ಕಾರಣ ಮನೋಜ ಎಂಬ ಬಾಲಕ ಆಟವಾಡುತ್ತಾ ಗೋಬರ್ ಗ್ಯಾಸ್ ಸ್ಲರ್ರಿಯ ಬಳಿ ಚಿಟ್ಟೆ ಹಿಡಿಯಲು ಹೋಗಿ ಕಾಲು ಜಾರಿ ಮುಗ್ಗರಿಸಿ ಬಿದ್ದಿದ್ದಾನೆ. ಅದೇ ಸಮಯದಲ್ಲಿ ಹತ್ತಿರದಲ್ಲೇ ಆಟವಾಡುತ್ತಿದ್ದ ದೀಕ್ಷಿತಾ ಮತ್ತು ಅಂಬಿಕಾ ಮನೋಜ ಬಿದ್ದದ್ದನ್ನು ಕಂಡಿದ್ದಾರೆ. ಅವರು ಹತ್ತಿರ ಹೋಗುವಷ್ಟರಲ್ಲಿ ಬೋರಲಾಗಿ ಬಿದ್ದು ಸಗಣಿಯ ಕೆಸರಿನಲ್ಲಿ ಮುಳುಗಿದ್ದ ಮನೋಜನ ಒಂದು ಕಾಲು ಮಾತ್ರ ಮೇಲೆ ಕಂಡಿದೆ. ಇಬ್ಬರು ಹುಡುಗಿಯರೂ ಬಲವಾಗಿ ಕಾಲನ್ನು ಹಿಡಿದು ಮನೋಜನನ್ನು ಹೊರಕ್ಕೆ ಎಳೆದು ಹಾಕಿದ್ದಾರೆ.
‘ಒಂದು ಕಾಲನ್ನು ಕಂಡು, ಅದನ್ನು ಹಿಡಿದು ಇಬ್ಬರೂ ಎಳೆದೆವು. ಮನೋಜನ ಮೈಯೆಲ್ಲಾ ಸಗಣಿಯಾಗಿತ್ತು. ಭಯಗೊಂಡಿದ್ದ ಅವನು ಮನೆಯಲ್ಲಿ ಬಚ್ಚಲಿಗೆ ಓಡಿದ. ಅವರಮ್ಮನಿಗೆ ಗೊತ್ತಾಗಿ ಚೆನ್ನಾಗಿ ಬೈದರು. ಅವರಪ್ಪನಿಗೆ ಗೊತ್ತಾದರೆ ಹೊಡೆಯುವರೆಂಬ ಭಯಕ್ಕೆ ಸ್ವಲ್ಪ ಹೊತ್ತು ಬಚ್ಚಿಟ್ಟುಕೊಂಡಿದ್ದ’ ಎಂದು ಅಂಬಿಕಾ ತಿಳಿಸಿದಳು.
ಈ ಮೂವರೂ ಮಕ್ಕಳು ಹನುಮಂತಪುರ ವಾಸಿಗಳಾದರೂ ಓದುತ್ತಿರುವುದು ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ.
ಮನೋಜ ಐದನೇ ತರಗತಿಯಲ್ಲಿ, ದೀಕ್ಷಿತಾ ಆರನೇ ತರಗತಿಯಲ್ಲಿ ಮತ್ತು ಅಂಬಿಕಾ ಏಳನೆಯ ತರಗತಿಯಲ್ಲಿ ಓದುತ್ತಿದ್ದಾರೆ.
ಭಯಗೊಂಡಿದ್ದ ಮಕ್ಕಳಿಂದ ತಡವಾಗಿ ತಿಳಿದು ಬಂದಾಗ ಶಿಕ್ಷಕರು ಮತ್ತು ಗ್ರಾಮಸ್ಥರು ಈ ಇಬ್ಬರು ಹೆಣ್ಣುಮಕ್ಕಳ ಸಮಸ್ಫೂರ್ತಿ ಮತ್ತು ಧೈರ್ಯ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಪಕ್ಷದಿಂದ ಸಂಭ್ರಮಾಚರಣೆ
ದೇಶಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆ (ಜಿಎಸ್‌ಟಿ) ಜಾರಿಗೆ ತಂದಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಕ್ರಮ ಶ್ಲಾಘನೀಯ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ಹೇಳಿದರು.
ತಾಲ್ಲೂಕು ಬಿಜೆಪಿ ಪಕ್ಷದ ವತಿಯಿಂದ ನಗರದ ಕೋಟೆ ವೃತ್ತದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ನೆರವೇರಿಸಿ ನಂತರ ಕೋಟೆ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನೆರವೇರಿಸಿ ಅವರು ಮಾತನಾಡಿದರು.
ಒಂದೇ ದೇಶ ಒಂದೇ ತೆರಿಗೆ ಎಂಬ ಘೋಷಣೆಯೊಂದಿಗೆ ಜುಲೈ ೦೧ ರಿಂದ ಜಾರಿಗೆ ತಂದಿರುವ ಜಿಎಸ್‌ಟಿ ಕಾಯಿದೆಯಿಂದ ದೇಶದ ಸಮಸ್ತ ಬಡವರಿಗೂ ಹಾಗು ರೈತರಿಗೆ ಬಹಳಷ್ಟು ಉಪಯೋಗವಾಗಲಿದೆ. ಇದರಿಂದ ದೇಶದ ಆರ್ತಿಕ ಪರಿಸ್ಥಿತಿ ಉತ್ತಮ ಗೊಳ್ಳುವುದು ಸೇರಿದಂತೆ ಕಪ್ಪುಹಣ ನಿಯಂತ್ರಿಸಲು ಸಹಕಾರಿಯಾಗುತ್ತದೆ ಎಂದರು.
ಬಿಜೆಪಿ ಪಕ್ಷದ ಶಿವಕುಮಾರಗೌಡ, ಬೈರರೆಡ್ಡಿ, ಭಾಸ್ಕರರೆಡ್ಡಿ, ಇಶ್ಫಾಕ್‌ಅಹಮ್ಮದ್, ಶ್ರೀರಾಮ, ಸುಜಾತಮ್ಮ, ಪಾರಿಜಾತ, ರವಿ, ಮುನಿರಾಜು ಹಾಜರಿದ್ದರು.
ಹುತಾತ್ಮ ಯೋಧ ಗಂಗಾಧರ್ ಪುಣ್ಯಸ್ಮರಣೆ
ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್‌ನಲ್ಲಿ ಶನಿವಾರ ಮಧ್ಯಾಹ್ನ ವರದನಾಯಕನಹಳ್ಳಿ ಗ್ರಾಮಸ್ಥರಿಂದ ಹುತಾತ್ಮ ಯೋಧ ಗಂಗಾಧರ್ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಹುತಾತ್ಮ ಯೋಧ ಗಂಗಾಧರ್ ಅವರ ತಮ್ಮ ಯೋಧ ರವಿಕುಮಾರ್ ಹಾಗೂ ಗಂಗಾಧರ್ ಮಗ ಪವನ್‌ಗೌಡ ರನ್ನು ಗೌರವಿಸಲಾಯಿತು.
ಸೈನಿಕರ ನೆನಪಿಗಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದ ನಂತರ ಗ್ರಾಮಸ್ಥರಿಗೆ ಯೋಧರ ನೆನಪಿನಲ್ಲಿ ಅನ್ನಸಂತರ್ಪಣೆಯನ್ನು ನಡೆಸಲಾಯಿತು.
ಗ್ರಾಮ ಪಂಚಾಯ್ತಿ ಸದಸ್ಯರಾದ ವಿ.ಎನ್.ಜಯರಾಮ್, ವಿ.ಜಿ.ಕೃಷ್ಣಮೂರ್ತಿ, ಶಿಕ್ಷಕ ವಿ.ಎನ್.ಗಜೇಂದ್ರ, ಗ್ರಾಮಸ್ಥರಾದ ವಿ.ದ್ಯಾವಪ್ಪ, ವಿ.ಎನ್.ವೇಣು, ನಾಗರಾಜ್, ಆಂಜನೇಯರೆಡ್ಡಿ, ವರದರಾಜ್, ವಿ.ಬಿ.ನಾರಾಯಣಸ್ವಾಮಿ, ವಿ.ಆರ್.ಶ್ರೀನಿವಾಸ್, ಎಂ.ಹನುಮಂತಯ್ಯ, ಟಿ.ವಿ.ಚಂದ್ರಶೇಖರ್, ಎಂ.ವೆಂಕಟರೆಡ್ಡಿ, ದೇವರಾಜ್ ಹಾಜರಿದ್ದರು.
ಸಂಪ್ರದಾಯ ಮತ್ತು ಪರಂಪರೆ ಉಳಿಸಿಕೊಂಡಿದೆ ಕಂದಾಯ ಇಲಾಖೆ
ಸಂಪ್ರದಾಯ ಮತ್ತು ಪರಂಪರೆ ಉಳಿಸಿಕೊಂಡಿರುವ ಯಾವುದಾದರೂ ಇಲಾಖೆ ಇದೆ ಎಂದಾದರೆ ಅದು ಕೇವಲ ಕಂದಾಯ ಹಾಗು ಪೊಲೀಸ್ ಇಲಾಖೆ ಮಾತ್ರ. ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧ ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖಾ ನೌಕರರ ಸಂಘ ಹಾಗು ತಾಲ್ಲೂಕು ಆಡಳಿತದ ಸಹಯೋಗದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಂದಾಯ ದಿನಾಚರಣೆ ೨೦೧೭ ಹಾಗೂ ಶತಮಾನೋತ್ಸವ ಕಂಡ ಕಂದಾಯ ಭವನದ ನಾಮಫಲಕ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಜಿಲ್ಲೆಯ ಬಹುತೇಕ ಜನತೆ ರೈತಾಪಿಯವರಾಗಿದ್ದು ಬಹಳಷ್ಟು ಜನರಿಗೆ ಮೊಬೈಲ್ ಬಳಕೆ ಮಾಡುವುದು ಗೊತ್ತಿಲ್ಲ. ಇಂತಹವರಿಗೆ ಯಾವುದೋ ಒಂದು ಜಾತಿ, ಆದಾಯ ಪ್ರಮಾಣ ಪತ್ರ ಬೇಕಾದಲ್ಲಿ ಕಚೇರಿಗೆ ಅರ್ಜಿ ಸಲ್ಲಿಸಿದಾಗ ಅವರ ಮೊಬೈಲ್‌ಗೆ ಸಂದೇಶ ರವಾನಿಸಲಾಗುತ್ತದೆಯಾದರೂ ಅವರಿಗೆ ಅದನ್ನು ನೋಡಲು ಬರುವುದಿಲ್ಲ. ಇಂತಹವರಿಗೆ ಸಹಾಯವಾಗಲಿ ಎನ್ನುವ ದೃಷ್ಟಿಯಿಂದಲೇ ಅದೇ ಗ್ರಾಮದವರನ್ನು ಗ್ರಾಮ ಸಹಾಯಕರಾಗಿ ಆಯ್ಕೆ ಮಾಡಲಾಗಿದೆ. ಗ್ರಾಮ ಸಹಾಯಕರಾದವರು ಜನರಿಗೆ ಮಾಹಿ ಕೊಡುವ ಕೆಲಸ ಮಾಡಬೇಕು. ರೈತರು ಮತ್ತು ನಾಗರಿಕರೊಂದಿಗೆ ಉತ್ತಮ ಬಾಂದವ್ಯ ಬೆಳೆಸಿಕೊಳ್ಳಬೇಕು ಎಂದರು.
ಬಹುತೇಕ ಗ್ರಾಮ ಲೆಕ್ಕಿಗರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಅವರಿಗೆ ಯಾವುದೇ ಕಂಪ್ಯೂಟರ್ ಜ್ಞಾನವಿಲ್ಲ ಎಂದು ಇಲಾಖೆ ಯಾವುದೇ ರಿಯಾಯಿತಿ ನೀಡುವುದಿಲ್ಲ. ಬದಲಿಗೆ ಪ್ರತಿಯೊಬ್ಬರೂ ಕಂಪ್ಯೂಟರ್ ಜ್ಞಾನ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ನೌಕರರ ಸಂಘ ಕಂಪ್ಯೂಟರ್ ತರಬೇತಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯ್ತಿ ಸಿಇಓ ಜೆ.ಮಂಜುನಾಥ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಿಂದಲೂ ಜನಪರವಾಗಿ ಕೆಲಸ ಮಾಡುತ್ತಿರುವ ಕಂದಾಯ ಇಲಾಖೆಯಡಿ ೩೨ ವಿವಿಧ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿದ್ದರೂ ಎಲ್ಲದಕ್ಕೂ ಮಾತೃ ಇಲಾಖೆ ಕಂದಾಯ ಇಲಾಖೆಯಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಹಾಗು ಸಿಬ್ಬಂದಿಯ ಸೇವೆಯೇ ಸಮಾಜದ ಎಲ್ಲಾ ಆಗು ಹೋಗುಗಳ ತಳಪಾಯವಾಗಿದ್ದು ಆ ನಿಟ್ಟಿನಲ್ಲಿ ಜನರಿಗೆ ಪಾರದರ್ಶಕವಾಗಿ ಸೇವೆ ಸಲ್ಲಿಸಬೇಕು ಎಂದರು.
ತಹಸೀಲ್ದಾರ್ ಅಜಿತ್‌ಕುಮಾರ್‌ರೈ ಮಾತನಾಡಿ, ನೂರಾರು ವರ್ಷ ಇತಿಹಾಸವಿರುವ ಕಂದಾಯ ಇಲಾಖೆ ಹಂತ ಹಂತವಾಗಿ ವಿಭಜನೆಗೊಂಡು ಇದೀಗ ೩೨ ಇಲಾಖೆಗಳು ಕಂದಾಯ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿವೆ. ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಗ್ಗಟ್ಟಾಗಿ ಕರ್ತವ್ಯ ನಿರ್ವಹಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಅನ್ಯ ಇಲಾಖೆಗಳ ಆಕ್ರಮಣದಿಂದ ಕಂದಾಯ ಇಲಾಖೆ ನೌಕರರಿಗೆ ಸಿಗಬೇಕಾದ ಬಡ್ತಿಯಲ್ಲಿ ಕುತ್ತು ಬರುವುದು ನಿಶ್ಚಿತ. ಒಗ್ಗಟ್ಟು ಪ್ರದರ್ಶಿಸಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಶತಮಾನ ಪೂರೈಸಿದ ನಗರದ ಹಳೆ ತಾಲ್ಲೂಕು ಕಚೇರಿ ಕಟ್ಟಡಕ್ಕೆ ಕಂದಾಯ ಭವನ ಎಂದು ನಾಮಕರಣ ಮಾಡುವ ಮೂಲಕ ನಾಮಫಲಕ ಅಳವಡಿಸಲಾಯಿತು.
ಕಂದಾಯ ದಿನಾಚರಣೆ ಅಂಗವಾಗಿ ರೆಡ್‌ಕ್ರಾಸ್ ಸೊಸೈಟಿಯಿಂದ ಆಯೋಜಿಸಲಾಗಿದ್ದ ಉಚಿತ ರಕ್ತದಾನ ಶಿಭಿರದಲ್ಲಿ ಸುಮಾರು ೪೦ ಯೂನಿಟ್ ರಕ್ತ ಸಂಗ್ರಹವಾಯಿತು.
ಸಮಾರಂಭದಲ್ಲಿ ಕಂದಾಯ ದಿನಾಚರಣೆ ಅಂಗವಾಗಿ ಈಚೆಗೆ ಏರ್ಪಡಿಸಲಾಗಿದ್ದ ಕ್ರೀಡಾಕೂಟದಲ್ಲಿ ವಿಜೇತರಾದ ಸಿಬ್ಬಂದಿಗೆ ಬಹುಮಾನ ವಿತರಿಸಲಾಯಿತು.
ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ನಿರ್ಮಲಮುನಿರಾಜು, ಉಪವಿಭಾಗಾಧಿಕಾರಿ ಬಿ.ಶಿವಸ್ವಾಮಿ, ಜಿಲ್ಲಾ ಭೂ ದಾಖಲೆ ಉಪನಿರೀಕ್ಷಕ ಅಜ್ಜಪ್ಪ, ರಾಜ್ಯ ಕಂದಾಯ ನೌಕರರ ಸಂಘದ ಜಿಲ್ಲಾಧ್ಯಕ್ಷ ವೈ.ಎಲ್.ಹನುಮಂತರಾವ್, ನಗರಸಭೆ ಅಧ್ಯಕ್ಷ ಅಫ್ಸರ್‌ಪಾಷ, ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ನಗರಸಭೆ ಸದಸ್ಯ ಚಿಕ್ಕಮುನಿಯಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಶ್ರೀನಿವಾಸ್, ಪಂಕಜಾನಿರಂಜನ್, ಶೋಭಾ ಶಶಿಕುಮಾರ್, ಚಿಂತಾಮಣಿ ತಹಸೀಲ್ದಾರ್ ಗಂಗಪ್ಪ, ಚಿಕ್ಕಬಳ್ಳಾಪುರ ತಹಸೀಲ್ದಾರ್ ನರಸಿಂಹಮೂರ್ತಿ, ಗೌರಿಬಿದನೂರು ತಹಸೀಲ್ದಾರ್ ಎಂ.ನಾಗರಾಜ್, ಇಓ ವೆಂಕಟೇಶ್, ನಿವೃತ್ತ ತಹಸೀಲ್ದಾರ್ ಅಟ್ಟೂರು ವೆಂಕಟೇಶ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೇಶವರೆಡ್ಡಿ ಹಾಜರಿದ್ದರು.
ಪ್ರತಿಯೊಬ್ಬ ಯೋಧನೂ ಗೌರವಾರ್ಹ ಹಾಗೂ ಅಭಿನಂದನೀಯ
ಪ್ರತಿಯೊಬ್ಬ ಯೋಧನೂ ಗೌರವಾರ್ಹ ಹಾಗೂ ಅಭಿನಂದನೀಯ. ಯಾವುದೇ ಸೈನಿಕನನ್ನು ಕೀಳಾಗಿ ನೋಡಬೇಡಿ. ಕನಿಷ್ಠ ಗೌರವವನ್ನು ಸಲ್ಲಿಸಿ. ಸಾಕಷ್ಟು ಪರಿಶ್ರಮ, ಬುದ್ಧಿಮತ್ತೆ ಇದ್ದವರು ಮಾತ್ರ ಭಾರತೀಯ ಸೈನ್ಯದಲ್ಲಿ ಒಬ್ಬ ಅಧಿಕಾರಿಯಾಗಬಲ್ಲರು ಎಂದು ರಾಷ್ಟ್ರಪತಿಗಳ ಗ್ಯಾಲಂಟರಿ ಸೇನಾ ಮೆಡಲ್ ಪುರಸ್ಕೃತ ಹಾಗೂ ಕಾರ್ಗಿಲ್ ವೀರ ಯೋಧ ಕ್ಯಾ.ನವೀನ್ ನಾಗಪ್ಪ ತಿಳಿಸಿದರು.
ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ಕಪಿಲಮ್ಮ ಕಾಲೇಜಿನ ಆವರಣದಲ್ಲಿ ಶನಿವಾರ ಕನ್ನಡ ಸಾರಸ್ವತ ಪರಿಚಾರಿಕೆ ಮತ್ತು ನಡಿಪಿನಾಯಕನಹಳ್ಳಿಯ ಕಪಿಲಮ್ಮ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ನಡೆದ ‘ಯೋಧ ನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅತ್ಯಂತ ಉತ್ಕೃಷ್ಟ ಜನರನ್ನು ಮಾತ್ರ ಸೇನೆಗೆ ಆಯ್ಕೆ ಮಾಡಿ ತರಬೇತಿ ನೀಡಲಾಗುತ್ತದೆ. ಅಂತಹ ಶ್ರೇಷ್ಠರು ನೀವಾಗಿ. ನಮ್ಮ ಕಾಲ ಚಕ್ರ ಮುಗಿದು ನಿಮಗೆ ನಾವು ಜವಾಬ್ದಾರಿಯನ್ನು ಹಸ್ತಾಂತರಿಸಿದ್ದೇವೆ. ಸೇನೆಗೆ ಸೇರಲಾಗದಿದ್ದರೆ ನಿರಾಶೆ ಪಡಬೇಕಿಲ್ಲ. ಇರುವ ಸ್ಥಳದಲ್ಲೇ ದೇಶಕ್ಕೆ ಉಪಯೋಗವಾಗುವ ಕೆಲಸಗಳನ್ನು ಮಾಡಿ. ಹೆತ್ತವರಿಗೆ, ನಾಡಿಗೆ ಕೀರ್ತಿಯನ್ನು ತನ್ನಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.
ಕಾರ್ಗಿಲ್ ಯುದ್ಧ ನಡೆದಾಗ ಇದ್ದ ಪರಿಸ್ಥಿತಿ, ಯುದ್ಧದಲ್ಲಿ ಪಾಯಿಂಟ್ 4875 ಕಾರ್ಯಾಚರಣೆಯಲ್ಲಿ ತಾವು 120 ಸೈನಿಕರನ್ನು ಮುನ್ನಡೆಸಿಕೊಂಡು ಪಾಲ್ಗೊಂಡಿದ್ದು, ಮೂರು ದಿನಗಳ ಕಾಲ ಊಟ ನಿದ್ರೆಯಿಲ್ಲದೆ ನಡೆದ ಹೋರಾಟ, ಒಂದೊಂದೇ ಬಂಕರ್‌ಗಳ ವಶ. ಗ್ರೇನೇಡ್ ಸಿಡಿದಾಗ ನುಜ್ಜುಗುಜ್ಜಾಗಿದ್ದ ತಮ್ಮ ಎರಡು ಕಾಲುಗಳನ್ನು ಎಳೆದುಕೊಂಡು ತೆವಳುತ್ತಾ ಬೆಟ್ಟವಿಳಿದದ್ದು, ಕ್ಯಾ.ವಿಕ್ರಂಬಾತ್ರಾರ ವೀರಮರಣ, 21 ತಿಂಗಳ ಆಸ್ಪತ್ರೆಯ ವಾಸ ಮುಂತಾದ ಸಂಗತಿಗಳನ್ನು ವಿವರಿಸಿದರು.
ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ತಂದೆ ಮತ್ತು ತಾಯಿ ಮಾತನಾಡಿ, ಅತ್ಯಂತ ಬುದ್ಧಿವಂತನಾಗಿದ್ದ ಮೇಜರ್ ಸಂದೀಪ್ ಅವರ ಬಾಲ್ಯ, ದೇಶದ ಬಗೆಗಿನ ಗೌರವ, ಭಕ್ತಿ, ಸೇನೆಗೆ ಸೇರಿ ಎನ್‌ಎಸ್‌ಜಿ ಗೆ ಆಯ್ಕೆಯಾಗಿ ತರಬೇತಿ ಪಡೆದದ್ದು, ನಂತರ ಮುಂಬೈನಲ್ಲಿ ತಾಜ್ ಹೋಟೆಲ್ ಒಳಗೆ ಅಡಗಿದ್ದ ಉಗ್ರರನ್ನು ಹತ್ಯೆ ಮಾಡುವ ಸಂದರ್ಭದಲ್ಲಿ ವೀರಮರಣವನ್ನಪ್ಪಿದ್ದ ವಿಷಯಗಳನ್ನು ವಿವರಿಸಿದರು.
ಯಣ್ಣಂಗೂರಿನ ಯೋಧ ರವಿಕುಮಾರ್ ಮಾತನಾಡಿ, ಸಾವು ಎಲ್ಲಿದ್ದರೂ ಬರುತ್ತದೆ. ಆದರೆ ಯೋಧನ ಸಾವು ಶ್ರೇಷ್ಠವಾದದ್ದು. ಉತ್ತಮ ನಾಗರಿಕರಾಗುವುದೂ ಸಹ ದೇಶ ಸೇವೆಯೇ ಎಂದರು.
ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯ ಅತಿಥಿಗಳನ್ನು ಶಾಲೆಯ ವಾದ್ಯವೃಂದದೊಂದಿಗೆ ವೇದಿಕೆಗೆ ಕರೆತರಲಾಯಿತು. ಹುತಾತ್ಮ ಯೋಧ ಯಣ್ಣಂಗೂರು ಗಂಗಾಧರ್ ಅವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಗಿಲ್ ವೀರ ಯೋಧ ಕ್ಯಾ.ನವೀನ್ ನಾಗಪ್ಪ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ತಂದೆ ಮತ್ತು ತಾಯಿ, ಯಣ್ಣಂಗೂರಿನ ಯೋಧ ರವಿಕುಮಾರ್ ಅವರನ್ನು ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಮತ್ತು ನಡಿಪಿನಾಯಕನಹಳ್ಳಿಯ ಕಪಿಲಮ್ಮ ಪದವಿ ಪೂರ್ವ ಕಾಲೇಜಿನ ವತಿಯಿಂದ ಗೌರವಿಸಲಾಯಿತು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ‘ಅಮರ ಮಧುರ ಪ್ರೇಮ’ ಕಾದಂಬರಿ ಕರ್ತೃ ವೇಣುಗೋಪಾಲ್, ಬೆಳ್ಳೂಟಿ ಸಂತೋಷ್, ಕಪಿಲಮ್ಮ ಕಾಲೇಜಿನ ಸಂಸ್ಥಾಪಕ ಎನ್.ಆರ್.ಕೃಷ್ಣಮೂರ್ತಿ, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಪ್ರಾಂಶುಪಾಲ ಸುದರ್ಶನ್, ಗ್ರಾಮ ಪಂಚಾಯ್ತಿ ಸದಸ್ಯ ಎ.ಎಂ.ತ್ಯಾಗರಾಜ್, ಅಮೃತಕುಮಾರ್, ಎಸ್.ಸತೀಶ್, ದೇವರಮಳ್ಳೂರು ಮಹೇಶ್, ನಾಗರಾಜ್, ನರಸಿಂಹಮೂರ್ತಿ, ಜಗದೀಶ್, ಮಂಜುನಾಥ್, ಶಿಕ್ಷಕಿಯರಾದ ಹೇಮಾವತಿ, ಮಾಲತಿ ಹಾಜರಿದ್ದರು.
ಯಣ್ಣಂಗೂರು ಹುತಾತ್ಮ ಯೋಧನ ಮನೆಗೆ ಭೇಟಿ, ಸಾಂತ್ವನ: ಕಾರ್ಗಿಲ್ ವೀರ ಯೋಧ ಕ್ಯಾ.ನವೀನ್ ನಾಗಪ್ಪ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ತಂದೆ ಮತ್ತು ತಾಯಿ, ಯಣ್ಣಂಗೂರಿನ ಹುತಾತ್ಮ ಯೋಧ ಗಂಗಾಧರ್ ಮನೆಗೆ ಭೇಟಿ ನೀಡಿ ಗಂಗಾಧರ್ ತಂದೆ ತಾಯಿ, ಪತ್ನಿ ಮತ್ತು ಮಗನಿಗೆ ಸಾಂತ್ವನ ಹೇಳಿದರು.
‘ಒಬ್ಬ ಮಗನನ್ನು ಕಳೆದುಕೊಂಡಿದ್ದೇವೆ, ಇನ್ನೊಬ್ಬನನ್ನು ಕಳೆದುಕೊಳ್ಳಲು ಇಷ್ಟವಿಲ್ಲ’ ಎಂದು ತಮ್ಮ ಎರಡನೆ ಮಗ ಯೋಧ ರವಿಕುಮಾರ್‌ನನ್ನು ಸೇನೆಗೆ ವಾಪಸ್ ಕಳಿಸುವುದಿಲ್ಲ ಎಂದ ಪೋಷಕರಿಗೆ ಸಮಾಧಾನ ಹೇಳಿದರು. ‘ನಾವು ಇದ್ದೊಬ್ಬ ಮಗನನ್ನೇ ಕಳೆದುಕೊಂಡೆವು, ಕಾರ್ಗಿಲ್ ಯುದ್ಧದಲ್ಲಿ ಕಾಲು ಕಳೆದುಕೊಂಡಿದ್ದಾರೆ ನೋಡಿ. ದೇಶ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ’ ಎಂದು ಉನ್ನಿಕೃಷ್ಣನ್ ಧೈರ್ಯ ತುಂಬಿದರು.
ಉಚಿತ ಆಂಬ್ಯುಲೆನ್ಸ್ ಸೇವೆ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿಸಲು ಪ್ರತಿಯೊಬ್ಬ ಕಾರ್ಯಕರ್ತರು ಹೆಚ್ಚಿನ ಪರಿಶ್ರಮ ಪಡಬೇಕು ಎಂದು ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎನ್.ರವಿಕುಮಾರ್ ತಿಳಿಸಿದರು.
ಮಾಜಿ ಶಾಸಕ ದಿ.ಎಸ್.ಮುನಿಶಾಮಪ್ಪರ ೫ ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಭಾನುವಾರ ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ತಾಲ್ಲೂಕಿನ ಸಾದಲಿಯ ಸಾದಲಮ್ಮ ದೇವಾಲಯದ ಆವರಣದಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಹಾಗೂ ಗರ್ಬಿಣಿ ಮಹಿಳೆಯರಿಗೆ ಆರ್ಥಿಕ ಸಹಾಯಧನ ನೀಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾಜಿ ಶಾಸಕ ದಿ.ಎಸ್.ಮುನಿಶಾಮಪ್ಪ ಅವರು ಹಾಕಿಕೊಟ್ಟ ರಾಜಕೀಯ ಹಾದಿಯಲ್ಲಿ ಕಳೆದ ಹತ್ತು ವರ್ಷಗಳಿಂದ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷದ ಅಭಿವೃದ್ದಿಗಾಗಿ ತನು, ಮನ, ಧನ ಅರ್ಪಿಸಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಿದ್ದೇವೆ. ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಕಾರ್ಯ ಪ್ರವೃತ್ತರಾಗಬೇಕು ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಹಾಗೂ ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ಕಳೆದ ಎರಡು ಚುನಾವಣೆಯಿಂದ ಪಕ್ಷದ ಸಂಘಟನೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿರುವ ಮೇಲೂರಿನ ರವಿಕುಮಾರ್ ಹಾಗೂ ತಂಡ ಇದೀಗ ಎಚ್.ಡಿ.ದೇವೇಗೌಡ ಹಾಗೂ ಜಯಪ್ರಕಾಶ್ ನಾರಾಯಣ್ ಚಾರಿಟೆಬಲ್ ಟ್ರಸ್ಟ್ ಮೂಲಕ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ, ಈ ಹಿಂದೆ ನೂರಾರು ಉಚಿತ ಬಸ್‌ಗಳ ಮೂಲಕ ತಾಲ್ಲೂಕಿನಾಧ್ಯಂತ ಮಹಿಳೆಯರನ್ನು ಮೇಲ್ ಮರವತ್ತೂರು ಪ್ರವಾಸಕ್ಕೆ ಕಳುಹಿಸಿದ್ದು, ನಗರದ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ನೀಡಿರುವುದು. ನಗರದ ಮುಸ್ಲಿಂ ಬಾಂದವರಿಗೆ ಸುಮಾರು ೪ ಎಕರೆ ಎಂಟು ಗುಂಟೆಯಷ್ಟು ಜಮೀನು ಖರೀದಿಸಿ ರುದ್ರಭೂಮಿಗಾಗಿ ಉಚಿತವಾಗಿ ನೀಡಿದ್ದಾರೆ. ಈಚೆಗೆ ದೇವೇಗೌಡರ ಹುಟ್ಟುಹಬ್ಬದ ಪ್ರಯುಕ್ತ ೧೦೧ ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸಿದ್ದು ಇದೀಗ ಹೋಬಳಿಗೊಂದರಂತೆ ಆಂಬುಲೆನ್ಸ್ ಉಚಿತವಾಗಿ ನೀಡುವುದಷ್ಟೇ ಅಲ್ಲದೇ ಅದರ ನಿರ್ವಹಣೆಯನ್ನು ಟ್ರಸ್ಟ್ ಮೂಲಕ ಮಾಡುತ್ತಿದ್ದಾರೆ. ಇಂತಹ ಸಾಮಾಜಿಕ ಕಳಕಳಿಯುಳ್ಳ ಮುಖಂಡರ ಸೇವೆ ಮುಂದಿನ ದಿನಗಳಲ್ಲಿ ತಾಲ್ಲೂಕಿಗೆ ಅಗತ್ಯವಿದೆ ಎಂದರು.
ತಾಲ್ಲೂಕಿನ ಸಾದಲಿ ಹೋಬಳಿಯ ಸುತ್ತಮುತ್ತಲ ಗ್ರಾಮಗಳು ಕೇಂದ್ರ ಸ್ಥಾನದಿಂದ ಸುಮಾರು ೩೫ ರಿಂದ ೪೦ ಕಿ.ಮೀ ದೂರದಲ್ಲಿದ್ದು ಈ ಭಾಗದ ಜನರು ಸೇರಿದಂತೆ ವಿದ್ಯಾರ್ಥಿಗಳು ಕೇಂದ್ರ ಸ್ಥಾನಕ್ಕೆ ಬರಲು ಪರದಾಡುವ ಸ್ಥಿತಿಯಿದೆ. ಹಾಗಾಗಿ ಟ್ರಸ್ಟ್ ವತಿಯಿಂದ ಈ ಭಾಗದ ಜನರ ತುರ್ತು ಆರೋಗ್ಯ ಸೇವೆಗಾಗಿ ಒಂದು ಆಂಬುಲೆನ್ಸ್ ನೀಡಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪಿಯುಸಿ ಹಾಗೂ ಪದವಿ ಓದುತ್ತಿರುವ ಸುಮಾರು ೮೮ ಮಂದಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೇರಿದಂತೆ ಗರ್ಭಿಣಿ ಸ್ತ್ರೀಯರಿಗೆ ತಲಾ ೧೦ ಸಾವಿರದಂತೆ ಸುಮಾರು ೩೫ ಮಂದಿ ಮಹಿಳೆಯರಿಗೆ ಆರ್ಥಿಕ ಸಹಾಯ ಟ್ರಸ್ಟ್ ಮೂಲಕ ನೆರವೇರಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಸಾದಲಮ್ಮ ದೇವಾಲದಲ್ಲಿ ಪೂಜೆ ಸಲ್ಲಿಸಿದ ಮುಖಂಡರು ನಂತರ ದೇವಾಲಯದ ಆವರಣದಲ್ಲಿ ಸಸಿ ನೆಟ್ಟರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮೃತಪಟ್ಟ ತಾಲ್ಲೂಕಿನ ಯಣ್ಣಂಗೂರಿನ ಹುತಾತ್ಮ ಯೋಧ ಗಂಗಾಧರ್‌ರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ವಿ.ನಾಗರಾಜ್, ಪಿ.ಶಿವಾರೆಡ್ಡಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಮಾಜಿ ಅಧ್ಯಕ್ಷ ಯರ್ರಬಚ್ಚಪ್ಪ, ಸದಸ್ಯ ರಾಜಶೇಖರ್, ಪುರಸಭೆ ಮಾಜಿ ಸದಸ್ಯ ಆದಿಲ್‌ಪಾಷ, ಮುಖಂಡರಾದ ಗೊರಮಡುಗು ರಾಮಾಂಜಿ, ದೊಣ್ಣಹಳ್ಳಿ ರಾಮಣ್ಣ, ಮುಗಲಡಿಪಿ ನಂಜಪ್ಪ, ಕೆ.ಎಸ್.ಮಂಜುನಾಥ್, ತಾದೂರು ರಘು, ರಮೇಶ್, ಸಾದಲಿಯ ವೆಂಕಟಾಚಲಪತಿ, ಆವಲರೆಡ್ಡಿ, ತ್ಯಾಗರಾಜ್, ತಿಪ್ಪಣ್ಣ, ವೇಣು, ಪಾಪಣ್ಣ, ಮುಕುಂದರೆಡ್ಡಿ, ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮನೆ ಮನೆಗಳಲ್ಲಿ ಕನ್ನಡ ಕಾರ್ಯಕ್ರಮ ನಡೆಯಬೇಕು
ಮನೆ ಮನೆಗಳಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡ ಮನಸ್ಸುಗಳನ್ನು ಒಂದುಗೂಡಿಸುತ್ತಾ ಅರಳುತ್ತಿರುವ ಕೆಲಸ ಶ್ಲಾಘನೀಯ. ಜಿ.ಪಿ.ರಾಜರತ್ನಂ ತಮ್ಮನ್ನು ಕನ್ನಡ ಪರಿಚಾರಕ ಎಂದು ಕರೆದುಕೊಳ್ಳತ್ತಾ ಕನ್ನಡದ ಪುಸ್ತಕಗಳನ್ನು ಕನ್ನಡದ ಮನಸ್ಸುಗಳಿಗೆ ತಲುಪಿಸುವ ಕೆಲಸ ಮಾಡಿ ಪ್ರೇರಕರಾಗಿದ್ದಾರೆ ಎಂದು ಹಾಸ್ಯಸಾಹಿತಿ ವೈ.ವಿ.ಗುಂಡೂರಾವ್ ತಿಳಿಸಿದರು.
ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಭಾನುವಾರ ಕೆ.ಎಚ್.ಬಿ.ಕಾಲೋನಿಯ ಸುಂದರನ್ ಅವರ ಶ್ರೀನಿಲಯದಲ್ಲಿ ಆಯೋಜಿಸಿದ್ದ ‘ಚಾವಡಿಯಲ್ಲಿ ಚಿಂತನ ಮಂಥನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ ಮತ್ತು ಇತರ ಭಾಷೆಗಳನ್ನು ಹಾಸ್ಯಮಿಶ್ರಿತವಾಗಿ, ಕ್ರಿಯಾಶೀಲತೆಯಿಂದ ಅವಲೋಕಿಸಿದಾಗ ಹೊಸ ಪದಗಳು ಹುಟ್ಟುತ್ತವೆ. ಮೊಬೈಲ್‌ಗೆ ‘ಸನಿಹ ವಾಣಿ’, ಸಾಕ್ಸ್‌ಗೆ ‘ಕೆರವಸ್ತ್ರ’, ವೈರಸ್‌ಗೆ ‘ಕುತಂತ್ರಾಂಶ’ ಹೀಗೆ ಕನ್ನಡವನ್ನು ಕ್ರಿಯಾತ್ಮಕವಾಗಿ ಬಳಸಬಹುದು. ನ.ಕಸ್ತೂರಿ, ದ.ರಾ.ಬೇಂದ್ರೆ ಮುಂತಾದವರು ಕನ್ನಡದ ಹೊಸ ಪದಗಳ ಹುಟ್ಟಿಗೆ ಕಾರಣರಾದರು. ಚಿ.ಶ್ರೀನಿವಾಸರಾಜು ಅವರು ಕನ್ನಡದ ಪರಿಚಾರಕರಾಗಿ ಕೆಲಸ ಮಾಡಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಇತರೆ ಭಾಷೆಗಳಿಗೆ ಹಾಸ್ಯ ಮಿಶ್ರಿತವಾಗಿ ಹೋಲಿಕೆ ಮಾಡುತ್ತಾ ಜನರನ್ನು ನಗೆಗಡಲಲ್ಲಿ ತೇಲಿಸಿದರು.
ಶಾಸನತಜ್ಞ ಡಾ.ಆರ್.ಶೇಷಶಾಸ್ತ್ರಿ ಮಾತನಾಡಿ, ಕನ್ನಡ ಬೆಳೆಯಬೇಕಿದ್ದರೆ ನಾವು ಬೆಳೆಯಬೇಕು. ಬದುಕನ್ನು ಎದುರಿಸಲು ಜೀವನದಲ್ಲಿ ಹಾಸ್ಯವು ಉತ್ಸಾಹವನ್ನು ತುಂಬುತ್ತದೆ. ಜೀವನವನ್ನು ಅರ್ಥೈಸಿಕೊಳ್ಳಿ, ಅಕ್ಕಪಕ್ಕದವರನ್ನು ಹಾಗೂ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುತ್ತಾ ಜೀವನ ಮೌಲ್ಯವನ್ನು ಬೆಳೆಸಿಕೊಳ್ಳುವಂತೆ ಹೇಳಿದರು.
ಜನರು ನಡೆದು ಹೋಗಲು ಅನುಕೂಲವಾಗುವಂತೆ ರಸ್ತೆ ನಿರ್ಮಿಸುವ ರೀತಿಯಲ್ಲಿ ಕನ್ನಡ ಸಾರಸ್ವತ ಪರಿಚಾರಿಕೆ, ಕನ್ನಡ ಸಾಂಸ್ಕೃತಿಕ ಕಾಲುದಾರಿಗಳನ್ನ ಹೆದ್ದಾರಿಗಳನ್ನ ತೋರಿಸುವಂಥಹ ಕೈಮರವಾಗಲಿ ಎಂದು ನುಡಿದರು.
ಟೋಟಲ್ ಕನ್ನಡ ಸಂಸ್ಥೆಯ ವತಿಯಿಂದ ತಾತ್ಕಾಲಿಕ ಕನ್ನಡ ಪುಸ್ತಕ ಮಳಿಗೆಯನ್ನು ತೆರೆಯಲಾಗಿತ್ತು. ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಹಾಸ್ಯಸಾಹಿತಿ ವೈ.ವಿ.ಗುಂಡೂರಾವ್, ಶಾಸನತಜ್ಞ ಡಾ.ಆರ್.ಶೇಷಶಾಸ್ತ್ರಿ, ಟೋಟಲ್ ಕನ್ನಡ ಸಂಸ್ಥೆಯ ಲಕ್ಷ್ಮೀಕಾಂತ್ ಹಾಗೂ ಅಜಿತ್ ಕೌಂಡಿನ್ಯ ದಂಪತಿಗಳನ್ನು ಗೌರವಿಸಲಾಯಿತು.
ಟೋಟಲ್ ಕನ್ನಡ ಸಂಸ್ಥೆಯ ಲಕ್ಷ್ಮೀಕಾಂತ್, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಚಂದ್ರಶೇಖರ್, ಚೂಡಾಮಣಿ, ಸುಂದರನ್, ಕೆ.ಎಲ್.ರಮಾ, ಅಜಿತ್ ಕೌಂಡಿನ್ಯ, ನವ್ಯಾ, ಪಿ.ವಿ.ಶ್ರೀನಿವಾಸಶಾಸ್ತ್ರಿ, ನೆಲಮಂಗಲ ಕೃಷ್ಣಮೂರ್ತಿ, ಬಿ.ಆರ್.ಪ್ರಭಾಕರ್, ನಾರಾಯಣ್, ಚಂದ್ರಶೇಖರ ಹಡಪದ್ ಹಾಜರಿದ್ದರು.
ಹುತಾತ್ಮ ಯೋಧ ಗಂಗಾಧರ್ ಪುಣ್ಯಸ್ಮರಣೆ
ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್‌ನಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆಗೆ ವರದನಾಯಕನಹಳ್ಳಿ ಗ್ರಾಮಸ್ಥರಿಂದ ಹುತಾತ್ಮ ಯೋಧ ಗಂಗಾಧರ್ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಹುತಾತ್ಮ ಯೋಧ ಗಂಗಾಧರ್ ತಮ್ಮ ಯೋಧ ರವಿಕುಮಾರ್, ತಹಶೀಲ್ದಾರ್ ಅಜಿತ್‌ಕುಮಾರ್ ರೈ ಮತ್ತು ದಿಬ್ಬೂರಹಳ್ಳಿ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ವಿಜಯ್‌ರೆಡ್ಡಿ ಭಾಗವಹಿಸುವರು.

