Home Blog Page 411

ನಡಿಪಿನಾಯಕನಹಳ್ಳಿಯ ಕಪಿಲಮ್ಮ ಕಾಲೇಜಿನಲ್ಲಿ ‘ಯೋಧ ನಮನ’

0

ಕನ್ನಡ ಸಾರಸ್ವತ ಪರಿಚಾರಿಕೆ ಮತ್ತು ನಡಿಪಿನಾಯಕನಹಳ್ಳಿಯ ಕಪಿಲಮ್ಮ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ‘ಯೋಧ ನಮನ’ ಕಾರ್ಯಕ್ರಮವನ್ನು ನಡಿಪಿನಾಯಕನಹಳ್ಳಿಯ ಕಪಿಲಮ್ಮ ಕಾಲೇಜಿನ ಆವರಣದಲ್ಲಿ ಶನಿವಾರ ಬೆಳಿಗ್ಗೆ 10.30ಕ್ಕೆ ಹಮ್ಮಿಕೊಂಡಿದ್ದಾರೆ.
ರಾಷ್ಟ್ರಪತಿಗಳ ಗ್ಯಾಲಂಟರಿ ಸೇನಾ ಮೆಡಲ್‌ ಪುರಸ್ಕೃತ ಹಾಗೂ ಕಾರ್ಗಿಲ್‌ ವೀರ ಯೋಧ ಕ್ಯಾ.ನವೀನ್‌ ನಾಗಪ್ಪ ತಾವು ಭಾಗವಹಿಸಿದ್ದ ಕಾರ್ಗಿಲ್‌ ಯುದ್ಧದ ಕುರಿತಂತೆ ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ. ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಅವರ ತಂದೆ ಮತ್ತು ತಾಯಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ತಾಲ್ಲೂಕಿನ ಯಣ್ಣಂಗೂರಿನ ಯೋಧ ರವಿಕುಮಾರ್‌, ಸಾಹಿತಿ ವೇಣುಗೋಪಾಲ್‌, ಚಂದನ ವಾಹಿನಿ ನಿರೂಪಕ ಬಿ.ಎನ್‌.ಗಿರೀಶ್‌ ಭಾಗವಹಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಅಧ್ಯಕ್ಷತೆಯನ್ನು ಕಪಿಲಮ್ಮ ಕಾಲೇಜಿನ ಸಂಸ್ಥಾಪಕ ಎನ್‌.ಆರ್‌.ಕೃಷ್ಣಮೂರ್ತಿ ವಹಿಸುವರು. ಭಾರತೀಯ ಸೈನ್ಯ ಹಾಗೂ ಭಾರತೀಯತೆಯ ಈ ಕಾರ್ಯಕ್ರಮದಲ್ಲಿ ಎಲ್ಲಾ ದೇಶಪ್ರೇಮಿಗಳು ಭಾಗವಹಿಸಬೇಕೆಂದು ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ಕೋರಿದ್ದಾರೆ.

ಕಂದಾಯ ದಿನಾಚರಣೆ

0

ರಾಜ್ಯ ಸರ್ಕಾರಿ ಕಂದಾಯ ಇಲಾಖಾ ನೌಕರರ ಸಂಘದಿಂದ ಶನಿವಾರ ಬೆಳಿಗ್ಗೆ 11 ಗಂಟೆಗೆ ಕಂದಾಯ ದಿನಾಚರಣೆ 2017 ಹಾಗೂ ಶತಮಾನೋತ್ಸವ ಕಂಡ ಕಂದಾಯ ಭವನದ ನಾಮಫಲಕ ಅನಾವರಣ ಕಾರ್ಯಕ್ರಮವನ್ನು ತಾಲ್ಲೂಕು ಕಚೇರಿಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ರೆಡ್‌ಕ್ರಾಸ್‌ ವತಿಯಿಂದ ಆಯೋಜಿಸಲಾಗಿದೆ.ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಹಾಲಿಂಗಯ್ಯ ಮಠ್‌ ಅವರಿಂದ ನಡೆಸಿಕೊಡುವರು. ಶತಮಾನೋತ್ಸವ ಕಂಡ ಕಂದಾಯ ಭವನದ ನಾಮಫಲಕ ಅನಾವರಣವನ್ನು ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ನೆರವೇರಿಸುವರು.

ಸವಲತ್ತುಗಳನ್ನು ಸದ್ಭಳಕೆ ಮಾಡಿಕೊಳ್ಳಿ

0

ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಪರಿಶಿಷ್ಠ ಜಾತಿ ಹಾಗೂ ಪಂಗಡದ ಜನತೆ ಆರ್ಥಿಕವಾಗಿ ಮತ್ತಷ್ಟು ಸಬಲರಾಗಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಗುರುವಾರ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಸಹಾಯಧನದ ಚೆಕ್‌ಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ ಹಾಗು ಪಂಗಡದ ಜನತೆ ಆರ್ಥಿಕವಾಗಿ ಎಲ್ಲರಂತೆ ಸಮಾನವಾಗಬೇಕು ಎಂಬ ದೃಷ್ಟಿಯಿಂದ ಸರ್ಕಾರ ನಿಗಮದ ಮೂಲಕ ಆರ್ಥಿಕ ನೆರವು ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ಬಯಲುಸೀಮೆ ಭಾಗದ ಜನರು ಕುಡಿಯುವ ನೀರಿಗೂ ಪರತಪಿಸುವ ಸ್ಥಿತಿಗೆ ತಲುಪಿದ್ದು ಇರುವ ತುಂಡು ಭೂಮಿಯಲ್ಲಿ ಕೃಷಿ ಮಾಡಲಾಗದೇ ಸಂಕಷ್ಟಕ್ಕೀಡಾಗಿದ್ದಾರೆ. ಪರಿಶಿಷ್ಟ ಜಾತಿ ಹಾಗು ಪಂಗಡದ ಜನರು ಕೊಳವೆಬಾವಿ ಕೊರೆಸಲು ಸರ್ಕಾರ ಮೂರು ಲಕ್ಷ ರೂ ಗಂಗಾ ಕಲ್ಯಾಣ ಯೋಜನೆಯಡಿ ನೀಡುತ್ತಿದೆ. ಉಳಿದಂತೆ ಹಸು ಸಾಕಾಣಿಕೆ, ಕುರಿಸಾಕಾಣಿಕೆ, ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಹಾಗು ಸಹಾಯಧನ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಇದರ ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಎಚ್,ನರಸಿಂಹಯ್ಯ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾದ ತುಮ್ಮನಹಳ್ಳಿ ಸುರೇಂದ್ರ, ಕುಂದಲಗುರ್ಕಿ ಆಂಜಿನಪ್ಪ, ಮುಖಂಡರಾದ ಬೈರಾರೆಡ್ಡಿ, ಗಂಜಿಗುಂಟೆ ನರಸಿಂಹಮೂರ್ತಿ, ಡಿ.ಟಿ.ನಾರಾಯಣಸ್ವಾಮಿ ಹಾಜರಿದ್ದರು.

ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ನಗದು ಬಹುಮಾನ

0

ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಮಂಗಳವಾರ ಒಕ್ಕಲಿಗರ ಸಂಘದ ವತಿಯಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ಆರು ಮಂದಿ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಎಸ್‌.ವಿ.ನಟರಾಜ್‌, ಚಂದ್ರೇಗೌಡ, ಬಿ.ಎನ್‌.ರವಿಕುಮಾರ್‌, ಕೆ.ಮಂಜುನಾಥ್‌, ಎಂ.ಎಸ್‌.ಶ್ರೀನಿವಾಸ್‌, ವೆಂಕಟರೆಡ್ಡಿ, ಎಚ್‌.ಆರ್‌.ಸತೀಶ್‌, ಜಮುನಾ ಧರ್ಮೇಂದ್ರ ಹಾಜರಿದ್ದರು.

ಹೊಸಗನ್ನಡ ಕಾವ್ಯದ ಪ್ರಮುಖ ಕವಿ ಚನ್ನವೀರ ಕಣವಿ

0

ವಿಶ್ವಭಾರತಿಗೆ ಕನ್ನಡದಾರತಿ, ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ, ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ಮುಂತಾದ ಜನಪ್ರಿಯ ಗೀತೆಗಳ ಕತೃ, ಕನ್ನಡದ ಖ್ಯಾತ ವಿದ್ವಾಂಸ ಮತ್ತು ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾದ ಚನ್ನವೀರ ಕಣವಿಯವರು ಜನಮಾನಸದಲ್ಲಿ ಅವರ ಬರಹದಿಂದ ನೆಲೆಸಿದ್ದಾರೆ ಎಂದು ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಚನ್ನವೀರ ಕಣವಿಯವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಣವಿಯವರ ಜೀವಧ್ವನಿ ಎಂಬ ಕೃತಿಗೆ ೧೯೮೧ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ೧೯೯೬ರಲ್ಲಿ ಹಾಸನದಲ್ಲಿ ನಡೆದ ಅರವತ್ತೈದನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಣವಿಯವರು ಅಧ್ಯಕ್ಷರಾಗಿದ್ದರು. ಆಳ್ವಾಸ್ -ನುಡಿಸಿರಿ 2008 ರ ಸಮ್ಮೇಳನದ ಅಧ್ಯಕ್ಷರಾಗಿದ್ದರು. ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಬಸವ ಗುರು ಕಾರುಣ್ಯ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕರ್ನಾಟಕ ಕವಿರತ್ನ ಪ್ರಶಸ್ತಿ, ಅನಕೃ ನಿರ್ಮಾಣ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಕಣವಿಯವರ ಸಾಧನೆಗೆ ಸಿಕ್ಕ ಗೌರವಗಳು ಎಂದು ವಿವರಿಸಿದರು.
ಶಿಕ್ಷಕ ಚಾಂದ್‌ಪಾಷ ಚನ್ನವೀರ ಕಣವಿಯವರ ಜೀವನ, ಸಾಧನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.
ಗ್ರಾಮ ಪಂಚಾಯ್ತಿ ಸದಸ್ಯ ಎ.ಎಂ.ತ್ಯಾಗರಾಜ್‌, ಮುಖ್ಯ ಶಿಕ್ಷಕಿ ವೆಂಕಟರತ್ನಮ್ಮ, ಶಿಕ್ಷಕರಾದ ಅಶೋಕ್‌, ಅಂಗನವಾಡಿ ಶಿಕ್ಷಕಿ ನಳಿನಮ್ಮ, ಗ್ರಾಮಸ್ಥರಾದ ನರಸಿಂಹಮೂರ್ತಿ, ವೆಂಕಟಮ್ಮ, ಲೀಲಮ್ಮ ಹಾಜರಿದ್ದರು.

ಮೂಲಸೌಲಭ್ಯ ವಂಚಿತ ಪೊಲೀಸ್‌ ಕ್ವಾಟರ್ಸ್‌

0

ಕೊಳವೆ ಬಾವಿಯಿದ್ದರೂ ನೀರಿನ ಸೌಲಭ್ಯವಿಲ್ಲ, ನಾಯಿಗಳ ಕಾಟ, ಮಳೆ ಬಂದರೆ ಓಡಾಡಲು ಅಸಾಧ್ಯ, ಕಳೆಗಿಡಗಳು ಎಲ್ಲೆಂದರಲ್ಲಿ ಬೆಳೆ­ದಿರುವುದ­ರಿಂದ ಹಾವುಗಳ ಕಾಟ… ಇದು ಪೊಲೀಸ್‌ ಕ್ವಾಟರ್ಸ್ ದುಃಸ್ಥಿತಿ. ಊರಿನ ಎಲ್ಲ ಸಮಸ್ಯೆಗಳಿಗೂ ಸ್ಪಂದಿಸುವ ಪೊಲೀಸರು ತಮ್ಮ ಮನೆಗಳಿರುವ ಪ್ರದೇಶವನ್ನೇ ಸ್ವಚ್ಛವಾಗಿ­ಟ್ಟು­ಕೊಳ್ಳದಷ್ಟು ಅಸಹಾಯಕ­ರಾಗಿ­ದ್ದಾರೆಯೇ ಎಂದು ನಾಗರಿಕ ಸಮು­ದಾಯ ಪ್ರಶ್ನಿಸುವಂತಾಗಿದೆ.
ತಾಲ್ಲೂಕಿನಲ್ಲಿ ಒಬ್ಬರು ಸರ್ಕಲ್ ಇನ್‌ಸ್ಪೆಕ್ಟರ್, ಮೂವರು ಸಬ್‌ ಇನ್‌ಸ್ಪೆಕ್ಟರ್, ಹತ್ತು್ತ ಮಂದಿ ಎಎಸ್‌ಐ, 25 ಮಂದಿ ಎಚ್‌ಸಿಗಳು, 42 ಮಂದಿ ಪಿಸಿಗಳಿದ್ದಾರೆ. ಇವರಿಗೆಂದೇ ನಿರ್ಮಿಸಲಾಗಿರುವ ನಾಲ್ಕು ಅಪಾರ್ಟ್‌ಮೆಂಟ್‌ಗಳಲ್ಲಿ 100 ಮನೆಗಳಿವೆ. ಈ ಪೈಕಿ 50 ಮನೆಗಳಲ್ಲಿ ಮಾತ್ರ ವಿವಿಧ ಪೊಲೀಸ್‌ ಕುಟುಂಬಗಳು ವಾಸವಿವೆ. ಮೂಲಭೂತ ಸೌಲಭ್ಯಗಳಿಲ್ಲದ ಕಾರಣ ಉಳಿದವರು ಬೇರೆಡೆ ವಾಸಿಸುತ್ತಿದ್ದಾರೆ.
ಕ್ವಾಟರ್ಸ್ ಆವರಣದಲ್ಲಿರುವ ನಲ್ಲಿಗೆ ನೀರು ಸರಬರಾಜಾಗುತ್ತಿಲ್ಲ. ಟ್ಯಾಂಕರ್‌ ನೀರನ್ನು ಖರೀದಿಸಿ ಕಾಲ ತಳ್ಳುತ್ತಿದ್ದಾರೆ. ಶಿಥಿಲವಾಗಿರುವ ಕಾಂಪೌಂಡ್ ಹಲವೆಡೆ ಬಿದ್ದು ಹೋಗಿದೆ. ಪಾರ್ಥೇನಿಯಂ ಹಾಗೂ ಕಳೆಗಿಡಗಳು ಸಾಕಷ್ಟು ಬೆಳೆದಿರುವು­ದರಿಂದ ಹಾವುಗಳೂ ಓಡಾಡುತ್ತಿವೆ. ಮಕ್ಕಳು ಆಡುವಾಗ ಬೀದಿನಾಯಿಗಳ ಕಾಟ ಇದೆ. ಈ ಪ್ರದೇಶದಲ್ಲಿರುವ ಟ್ರಾನ್ಸ್‌ಫರ್ಮರ್‌ ಕಂಬಕ್ಕೆ ಗಿಡಬಳ್ಳಿಗಳು ಹಬ್ಬಿಬಿಟ್ಟಿದೆ. ಇದರಿಂದಾಗಿ ಮಳೆ ಬಂದಾಗ ಶಾರ್ಟ್‌ ಸರ್ಕೀಟ್‌ ಆಗುವ ಅಪಾಯವೂ ಇದೆ.
ಮಣ್ಣಿನ ರಸ್ತೆಯು ಮಳೆ ಬಂದಾಗ ನಡೆದಾಡಲು ಅಸಾಧ್ಯವಾಗುತ್ತದೆ. ಸಂಜೆಯಾದರೆ ಸೊಳ್ಳೆಗಳ ಕಾಟ. ಮೂಲ ಸೌಕರ್ಯ ಕೊರತೆಯಿಂದ ನಾವು ಇಲ್ಲಿ ಕಷ್ಟಪಡುತ್ತಿದ್ದೇವೆ. ನೀರಿನ ಸೌಲಭ್ಯ ಒದಗಿಸಿ­ಕೊಡಬೇಕು. ಕಾಂಪೌಂಡ್‌ ಒಳಗಿನ ಕಳೆಗಿಡ ನಿರ್ಮೂಲನೆಗೆ ಮತ್ತು ಬೀದಿ ದೀಪಕ್ಕೆ ನಗರಸಭೆ ಗಮನ ಹರಿಸಬೇಕು ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಬೇಧಬಾವವಿಲ್ಲದೆ ಮಕ್ಕಳು ಒಂದಾಗಿ ನಲಿಯುತ್ತಾ ಕಲಿಯಲಿ

0

ಅಂಗನವಾಡಿಯಿಂದಲೇ ಬೇಧಬಾವವಿಲ್ಲದೆ ಮಕ್ಕಳು ಒಂದಾಗಿ ಬೆರೆತು ನಲಿಯುತ್ತಾ ಕಲಿಕೆಯನ್ನು ನಡೆಸಬೇಕು ಎಂದು ಮಾನವ ಹಕ್ಕುಗಳ ಜಾಗೃತಿ ಸಮಿತಿ ತಾಲ್ಲೂಕು ಅಧ್ಯಕ್ಷ ವಿಜಯ್‌ ತಿಳಿಸಿದರು.
ನಗರದ ಮೂರನೇ ವಾರ್ಡ್‌ನಲ್ಲಿರುವ ಖಾದ್ರಪ್ಪ ಬೀದಿಯಲ್ಲಿರುವ ಅಂಗನವಾಡಿ ಮಕ್ಕಳಿಗೆ ಮಾನವ ಹಕ್ಕುಗಳ ಜಾಗೃತಿ ಸಮಿತಿ ಮತ್ತು ಕಾರ್ಮಿಕ ಸಮಿತಿ ವತಿಯಿಂದ ಗುರುವಾರ ಉಚಿತವಾಗಿ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಂಗನವಾಡಿ ಕೇಂದ್ರದಲ್ಲಿರುವ 25 ಮಕ್ಕಳಿಗೆ ಸಮವಸ್ತ್ರವನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಮಕ್ಕಳಿಗೆ ಅಗತ್ಯವಿರುವ ಪರಿಕರಗಳನ್ನು ನೀಡುತ್ತೇವೆ. ಮನೆಗಳಲ್ಲಿ ಮಕ್ಕಳ ಹುಟ್ಟುಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುವುದರ ಬದಲಿಗೆ ಹತ್ತಿರವಿರುವ ಅಂಗನವಾಡಿ ಕೇಂದ್ರದಲ್ಲಿ ಕೆಲವು ಸವಲತ್ತುಗಳನ್ನು ನೀಡುವುದರೊಂದಿಗೆ ಆಚರಿಸಿದಲ್ಲಿ ಅರ್ಥಪೂರ್ಣವಾಗಿರುತ್ತದೆ. ಸರ್ಕಾರ ನೀಡುವ ಸೌಲಭ್ಯದೊಂದಿಗೆ ಸಮುದಾಯದ ನೆರವೂ ದೊರೆತಲ್ಲಿ ಪುಟ್ಟ ಮಕ್ಕಳಿರುವ ಅಂಗನವಾಡಿಗಳು ಸಶಕ್ತಗೊಳ್ಳುತ್ತವೆ ಎಂದು ಹೇಳಿದರು.
ಖಾದ್ರಪ್ಪ ಬೀದಿಯಲ್ಲಿರುವ ಅಂಗನವಾಡಿ ಕೇಂದ್ರದ ಮುಂದೆ ಅನೈರ್ಮಲ್ಯದಿಂದ ಕೂಡಿದೆ. ಪುಟ್ಟ ಮಕ್ಕಳಿಗೆ ಕಲುಷಿತ ವಾತಾವರನ ಮಾರಕವಾದದ್ದು. ಈ ಬಗ್ಗೆ ನಗರಸಭೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ತಕ್ಷಣ ಅಂಗನವಾಡಿ ಕೇಂದ್ರದ ಬಳಿ ಕಸ ಹಾಗೂ ತ್ಯಾಜ್ಯವನ್ನು ಶುಚಿಗೊಳಿಸಿ ಶುಭ್ರವಾದ ವಾತಾವರಣವನ್ನು ಕಲ್ಪಿಸಿಕೊಡಬೇಕೆಂದು ಈ ಸಂದರ್ಭದಲ್ಲಿ ಅವರು ಒತ್ತಾಯಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಗಿರಿಜಾಂಬಿಕೆ, ಅಂಗನವಾಡಿ ಕಾರ್ಯಕರ್ತೆ ಸೌಭಾಗ್ಯ, ಮಾನವ ಹಕ್ಕುಗಳ ಜಾಗೃತಿ ಸಮಿತಿ ಕಾರ್ಯದರ್ಶಿ ಸುರೇಶ್‌, ಕಾರ್ಮಿಕ ಸಮಿತಿ ಅಧ್ಯಕ್ಷ ಎನ್‌.ಪ್ರದೀಪ್‌, ಮುರಳಿ, ಮೂರ್ತಿ, ನರಸಿಂಹಮೂರ್ತಿ ಹಾಜರಿದ್ದರು.

ಮರೆಯಾಗುತ್ತಿದೆ ಗ್ರಾಮ ಸೊಗಡಿನ ಹಿಟ್ಕಲ್ಲು ಮತ್ತು ರಾಗ್ಕಲ್ಲು

0

ಬದುಕನ್ನು ಮತ್ತು ಬಳಸುವ ವಸ್ತುಗಳನ್ನು ಸೂಕ್ಷ್ಮ ಮಾಡಿಕೊಳ್ಳುತ್ತಿರುವುದರಿಂದ ಸ್ಥೂಲ ವಸ್ತುಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ. ಅಂಥಹ ವಸ್ತುಗಳಲ್ಲಿ ಪ್ರಮುಖವಾದದ್ದು ಹಿಟ್ಕಲ್ಲು ಮತ್ತು ರಾಗ್ಕಲ್ಲು.
ತಾಲ್ಲೂಕಿನ ಹನುಮಂತಪುರ ಗ್ರಾಮದಲ್ಲಿ ಹೊಸ ಮನೆಯ ಬಳಿ ಬಿದ್ದಿದ್ದ ಹಿಟ್ಕಲ್ಲು ಮತ್ತು ರಾಗ್ಕಲ್ಲು ಕಣ್ಮರೆಯಾಗುತ್ತಿರುವ ಗ್ರಾಮೀಣ ಬದುಕಿನ ಪ್ರತಿನಿಧಿಗಳಂತಿವೆ.
ಹಳ್ಳಿಗಳಲ್ಲಿ ಹಳೆ ಮನೆಗಳನ್ನು ಕೆಡವಿ ಹೊಸ ಮನೆಗಳನ್ನು ಕಟ್ಟುವಾಗ ಈ ಬದುಕಿನ ಅಂಗವಾಗಿದ್ದ ಪರಿಕರಗಳು ಮಣ್ಣಿಗೆ ಸೇರುತ್ತಿವೆ. ಈ ವಸ್ತುಗಳೊಂದಿಗೆ ಅವುಗಳೊಂದಿಗೆ ಹೆಣೆದುಕೊಂಡ ಪದಕೋಶ, ಗಾದೆ ಮಾತುಗಳೂ ಕಣ್ಮರೆಯಾಗುತ್ತಿವೆ.
ಮನೆ ಎಂದ ಮೇಲೆ ಅಡುಗೆ ಮನೆ, ಅಡುಗೆ ಮನೆಗೆ ತಕ್ಕ ಪರಿಕರಗಳು ಇರುತ್ತವೆ. ಎಲ್ಲಾ ಹಳ್ಳಿ ಮನೆಯಲ್ಲೂ ಅಡುಗೆ ಮನೆ ಇರುತ್ತಿರಲಿಲ್ಲ. ಬದಲಿಗೆ ಮೂಲೆಮನೆ ಇರುತ್ತಿತ್ತು. ಗ್ರಾಮೀಣರು ಅಡುಗೆ ಮನೆಗೆ ಕೊಟ್ಟಿರುವ ಪರ್ಯಾಯ ಪದ ಈ ‘ಮೂಲೆ ಮನೆ’ ಎಂಬುದಾಗಿದೆ.
ಹಳ್ಳಿ ಅಡುಗೆ ಮನೆಯನ್ನು ಸ್ಟೀಲ್‌ ಪಾತ್ರಗಳು ಪ್ರವೇಶಿಸಿ, ಹಿತ್ತಾಳೆ, ಕಂಚು, ಮಡಿಕೆಗಳನ್ನು ಹೊರಕ್ಕೆ ಕಳಿಸಿವೆ. ಆದರೆ ಇನ್ನೂ ಅಲ್ಲಲ್ಲಿ ಕಂಡುಬರುವ ಮೂಲೆ ಮನೆಯಲ್ಲಿ ಸಿಲ್ವರ್‌(ಅಲ್ಯೂಮಿನಿಯಂ), ಗಿನ್ನೆ(ಬಟ್ಟಲು), ತಪ್ಪಲೆ, ಡೇಕ್ಸಾ, ಗೆಂಟಿ(ಸೌಟು), ಕೆಲವು ಮಡಿಕೆಗಳು ಕಂಡುಬರುತ್ತವೆ.

ಮರೆಯಾಗುತ್ತಿದೆ ಗ್ರಾಮ ಸೊಗಡಿನ ಹಿಟ್ಕಲ್ಲು ಮತ್ತು ರಾಗ್ಕಲ್ಲು

ಹಳ್ಳಿ ಅಡುಗೆ ಮನೆ ವಸ್ತು ಸಾಮಗ್ರಿಗಳಲ್ಲಿ ಮುದ್ದೆ ತಯಾರಿಕೆಗೆ ರಾಗ್ಕಲ್ಲು(ರಾಗಿ ಬೀಸುವ ಕಲ್ಲು), ಹಿಟ್ಮಡಿಕೆ(ಹಿಟ್ಟು ತೊಳಿಸುವ ಮಡಿಕೆ), ಹಿಟ್ಕೋಲು, ಮೆಟ್ಕೋಲು, ಸೊಟ್ಕೋಲು(ಸಿಪ್‌ಕಟ್ಟೆ), ಹಿಟ್ಕಲ್ಲು(ಮುದ್ದೆ ಮಾಡುವ ಕಲ್ಲು) ಪ್ರಮುಖವಾದದ್ದಾಗಿದ್ದವು.
ಮುದ್ದೆ ತೊಳೆಸಿದರೇನೆ ಅದು ಮುದ್ದೆ ಅನಿಸುವುದು. ಕಾರಣ ತೊಳಿಸಿದಾಗಲೇ ಇಟ್ಟು ಚೆನ್ನಾಗಿ ಎಸರಿನಲ್ಲಿ ಬೆರತು ಬೆಂದು ಮುದ್ದೆಯಾಗುವುದು. ಅದಕ್ಕೆ ಹಿಟ್ಕೋಲು ಇರಲೇ ಬೇಕು. ಕಡಿಮೆ ಜನಕ್ಕೆ ಮುದ್ದೆ ತೊಳಿಸುವಾಗ ಒಂಟಿಯಾಗಿ, ಹೆಚ್ಚು ಮಂದಿಗೆ ತೊಳಿಸಬೇಕಾದಾಗ ಜೋಡಿ ಹಿಟ್ಕೋಲುಗಳನ್ನು ಬಳಸುತ್ತಾರೆ.
ತೊಳೆಸುವುದು ಸರಿಯಾಗಿ ಆಗಬೇಕಾದರೆ ಮೆಟ್ಕೋಲು ಇರಲೇಬೇಕು. ಏಕೆಂದರೆ ತೊಳೆಸುವ ಒತ್ತಡಕ್ಕೆ ಪಾತ್ರೆ ಕದಲಬಾರದು. ಇದು ಮುದ್ದೆ ತೊಳೆಸುವವರಿಗೆ ಸುರಕ್ಷಿತ ಸಾಧನವೂ ಹೌದು. ಏಕೆಂದರೆ ಬಾನೆಯಲ್ಲಿ ಹಿಟ್ಟಿನ ಕುದಿಯಿರುತ್ತದೆ. ಅದು ಮೈಮೇಲೆ ಬೀಳದಂತಿರಲು ಮೆಟ್ಕೋಲು(ಕವೆಗೋಲು) ಆಧಾರವಾಗಿದೆ.
ಸೊಟ್ಕೋಲು ಅಥವಾ ಸಿಪ್‌ಕಟ್ಟೆಯು ತೆಂಗಿನ ಚಿಪ್ಪಿನ ಕಣ್ಣಿಗೆ ಚೂಪಾದ ಕೋಲನ್ನು ಸೇರಿಸಿ ಮಾಡಿದ ಸೌಟು. ಕಡಿಮೆ ಜನಕ್ಕೆ ಮುದ್ದೆ ತಯಾರಿಸಲು ಹಿಟ್ಮಡಿಕೆ ಬಳಕೆಯಾದರೆ, ದೊಡ್ಡ ಕುಟುಂಬಕ್ಕೆ ಹಿಟ್ಬಾನೆ ಬಳಸುವರು.
‘ಆಧುನಿಕತೆಯ ಪ್ರವೇಶದಿಂದ ಈ ಭಾರವಾದ ಕಲ್ಲಿನ ಪರಿಕರಗಳನ್ನು ಬಳಸುವುದು ಕಡಿಮೆಯಾಗುತ್ತಿದೆ. ಹಿಟ್ಕಲ್ಲಿನ ಮೇಲೆ ಮಾಡಿದ ಮುದ್ದೆಯ ಹದ, ರುಚಿ ಬಹಳ ಚೆನ್ನಾಗಿರುತ್ತದೆ. ಆದರೂ ಮನೆಗಳಲ್ಲಿ ಟೈಲ್ಸ್‌, ಮಾರ್ಬಲ್‌ ಮುಂತಾದವುಗಳನ್ನು ಹಾಕಿಸಿರುತ್ತಾರೆ. ಈ ಕಲ್ಲು ಬೇಡವಾಗುತ್ತಿದೆ. ಅದರೊಂದಿಗೆ ಹಲವಾರು ಪರಿಕರಗಳು ಮಾಯವಾಗುತ್ತಾ ಮುಂದಿನ ತಲೆಮಾರಿನವರಿಗೆ ಅವನ್ನೆಲ್ಲಾ ಜನಪದ ಸಂಗ್ರಹಾಲಯದಲ್ಲಿ ತೋರಿಸಬೇಕಾಗುತ್ತದೆ. ಆದರೆ ಅದರ ರುಚಿ, ಸ್ವಾದ, ಗಾದೆ ಮಾತುಗಳನ್ನು ಹೇಗೆ ವಿವರಲು ಸಾಧ್ಯ’ ಎನ್ನುತ್ತಾರೆ ಶಿಕ್ಷಕ ನಾಗಭೂಷಣ್‌.
– ಡಿ.ಜಿ.ಮಲ್ಲಿಕಾರ್ಜುನ

ಸಂಕಷ್ಟದಲ್ಲಿರುವ ದಲಿತ ಕುಟುಂಬಕ್ಕೆ ಆರ್ಥಿಕ ನೆರವು

0

ಒಂದೆಡೆ ಮಗನನ್ನು ಕಳೆದುಕೊಂಡ ನೋವು ಮತ್ತೊಂದೆಡೆ ಮಗಳ ಆಸ್ಪತ್ರೆಯ ಖರ್ಚು ಸೇರಿಕೊಂಡು ಸಂಕಷ್ಟದಲ್ಲಿರುವ ಕುಟುಂಬದ ಬಗ್ಗೆ ತಿಳಿದು ಟ್ರಸ್ಟ್‌ ಮೂಲಕ ನೆರವಾಗುತ್ತಿರುವುದಾಗಿ ಎಚ್‌.ಡಿ.ದೇವೇಗೌಡ ಮತ್ತು ಜಯಪ್ರಕಾಶ್‌ ನಾರಾಯಣ್‌ ಸೇವಾಭಿವೃದ್ಧಿ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಮೇಲೂರು ಬಿ.ಎನ್‌.ರವಿಕುಮಾರ್‌ ತಿಳಿಸಿದರು.
ಎಚ್‌.ಡಿ.ದೇವೇಗೌಡ ಮತ್ತು ಜಯಪ್ರಕಾಶ್‌ ನಾರಾಯಣ್‌ ಸೇವಾಭಿವೃದ್ಧಿ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಬುಧವಾರ ಸಂಕಷ್ಟದಲ್ಲಿರುವ ಯಣ್ಣಂಗೂರಿನ ಕುಟುಂಬಕ್ಕೆ ಸೀಮೆ ಹಸು ಹಾಗೂ ನೆರವಿನ ಚೆಕ್‌ ವಿತರಿಸಿ ಅವರು ಮಾತನಾಡಿದರು.
ಹದಿನೈದು ದಿನಗಳ ಹಿಂದೆ ತಾಲ್ಲೂಕಿನ ಬೈರಸಂದ್ರದ ಬಳಿ ನಡೆದ ಅಪಘಾತದಲ್ಲಿ ದಲಿತ ಕುಟುಂಬದ ಮಧುಕುಮಾರ್‌(27) ಮೃತಪಟ್ಟಿದ್ದು, ಅವರ ಸಹೋದರಿ ಸೌಮ್ಯ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಯಸ್ಸಾದ ತಂದೆ ತಾಯಿಯರಾದ ಕೃಷ್ಣಪ್ಪ ಮತ್ತು ನಾರಾಯಣಮ್ಮ ಕುಟುಂಬದ ಆಧಾರವಾಗಿದ್ದ ಇದ್ದೊಬ್ಬ ಗಂಡು ಮಗನನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದರು. ಗ್ರಾಮಸ್ಥರಿಂದ ಈ ವಿಷಯ ತಿಳಿದು ನಮ್ಮ ಟ್ರಸ್ಟ್‌ ಮೂಲಕ ಸುಮಾರು 60 ಸಾವಿರ ರೂಗಳಷ್ಟು ಬಾಳುವ ಸೀಮೆ ಹಸುವನ್ನು ಹಾಗೂ ಆಸ್ಪತ್ರೆಯ ಚಿಕಿತ್ಸೆ ವೆಚ್ಚವಾಗಿ 25 ಸಾವಿರ ರೂಗಳ ಚೆಕ್‌ ನೀಡುತ್ತಿರುವುದಾಗಿ ಅವರು ಹೇಳಿದರು.
ತಾಲ್ಲೂಕು ಪಂಚಾಯ್ತಿ ಸದಸ್ಯ ರಾಜಶೇಖರ್‌, ತಾದೂರು ರಘು, ನಂಜಪ್ಪ, ಗ್ರಾಮ ಪಂಚಾಯ್ತಿ ಸದಸ್ಯರಾದ ರಮೇಶ್‌, ಕೆಂಪರೆಡ್ಡಿ, ರಾಮಾಂಜಿ, ವೀರಪ್ಪ, ಮುಖಂಡರಾದ ಜೆ.ಎಂ.ವೆಂಕಟೇಶ್‌, ಡಿ.ಸಿ.ಚಂದ್ರೇಗೌಡ, ಎಚ್‌.ಕೆ.ಮಂಜುನಾಥ್‌, ನಾರಾಯಣಸ್ವಾಮಿ, ಸುಗಟೂರು ನಂಜೇಗೌಡ ಹಾಜರಿದ್ದರು.

ವೈಯಕ್ತಿಕ ಸ್ವಚ್ಛತೆಯ ಪ್ರಾಮುಖ್ಯ ಅರಿಯಬೇಕು

0

ವೈಯಕ್ತಿಕ ಸ್ವಚ್ಛತೆಯ ಪ್ರಾಮುಖ್ಯ ಅಂಶಗಳಾದ ಸ್ನಾನ, ಉಗುರು ಕಟಾವು, ಶುಭ್ರವಾದ ಬಟ್ಟೆಗಳ ಧಾರಣೆಗಳಂತಹ ದಿನ ನಿತ್ಯದ ಅಭ್ಯಾಸಗಳನ್ನು ಪ್ರತಿ ಮಕ್ಕಳು ರೂಢಿಸಿಕೊಳ್ಳಬೇಕು ಎಂದು ಬಿ.ಎಂ.ವಿ ಎಜುಕೇಷನ್‌ ಟ್ರಸ್ಟ್‌ ಕಾರ್ಯದರ್ಶಿ ಎಲ್‌.ಕಾಳಪ್ಪ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದ ಬಿ.ಎಂ.ವಿ ಪ್ರೌಢಶಾಲೆಯಲ್ಲಿ ಮಂಗಳವಾರ ರೋಟರಿ ಹೈಗ್ರೌಂಡ್ಸ್‌ ಸಹಯೋಗದಲ್ಲಿ ‘ಶಾಲೆಯಲ್ಲಿ ಕೈ ತೊಳೆಯುವಿಕೆ’ ಎಂಬ ಸ್ವಚ್ಛ ಹಾಗೂ ಶುದ್ಧತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು. ಕೆಲವೊಂದು ಉತ್ತಮ ಪದ್ಧತಿಗಳನ್ನು ನಾವು ಚಿಕ್ಕಂದಿನಿಂದಲೇ ರೂಢಿಸಿಕೊಳ್ಳಬೇಕು. ವೈಜ್ಞಾನಿಕವಾಗಿ ಆ ಪದ್ಧತಿಗಳ ಬಗ್ಗೆಯೂ ತಿಳಿದುಕೊಂಡಿರಬೇಕು. ನಮ್ಮ ಈ ಗುಣಗಳು ನಮ್ಮ ಸುತ್ತಲಿನ ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳಲೂ ಸಹ ನೆರವಾಗುತ್ತದೆ ಎಂದು ಹೇಳಿದರು.
ಊಟಕ್ಕೆ ಮುಂಚೆ ಮತ್ತು ನಂತರ ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳಬೇಕಾದ ಮಹತ್ವದ ಬಗ್ಗೆ ಅವರು ವಿದ್ಯಾರ್ಥಿಗಳಿಗೆ ವಿವರಿಸಿದರು.
ರೋಟರಿ ಹೈಗ್ರೌಂಡ್ಸ್‌ ಅಧ್ಯಕ್ಷ ವಿ.ರಾಮಚಂದ್ರ, ಕಾರ್ಯದರ್ಶಿ ಅರವಿಂದ ನಾಯ್ಡು ಮತ್ತು ಸುಭಾಷಿಣಿ ನಾಯ್ಡು ಭಾಗವಹಿಸಿ ಸದ್ವಚ್ಛತೆಯ ಬಗ್ಗೆ ಮಕ್ಕಳಿಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿ, ಇದಕ್ಕೆ ಸಂಬಂಧಿಸಿದಂತೆ ಪೋಸ್ಟರ್‌ಗಳು, ಪ್ಲೇಕಾರ್ಡ್‌ಗಳನ್ನು ಶಾಲೆಯ ಆವರಣದಲ್ಲಿ ಎಲ್ಲಾ ಕಡೆ ಲಗತ್ತಿಸಿ ಮಕ್ಕಳಲ್ಲಿ ಸ್ವಚ್ಛತೆಯ ಬಗ್ಗೆ ಅದರಲ್ಲೂ ಕೈಗಳನ್ನು ಶುದ್ಧವಾಗಿಟ್ಟುಕೊಂಡು ರೋಗರುಜಿನಗಳು ಬಾರದಂತೆ ಎಚ್ಚರ ವಹಿಸುವ ಬಗ್ಗೆ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಯಾವಾಗಲೂ ಕೈ ತೊಳೆದುಕೊಳ್ಳಿ, ಆಹಾರ ಪದಾರ್ಥಗಳನ್ನು ಮುಟ್ಟುವ ಮುಂಚೆ ಮತ್ತು ಶೌಚಾಲಯ ಉಪಯೋಗಿಸಿದ ಮೇಲೆ ಕೈ ತೊಳೆದುಕೊಳ್ಳಿ, ಸ್ವಚ್ಛವಾದ ಕೈಗಳು ಆರೋಗ್ಯದ ಉಳಿವು ಎಂಬ ಫಲಕಗಳನ್ನು ಶಾಲೆಯ ಆವರಣದಲ್ಲಿ ಅನಾವರಣಗೊಳಿಸಲಾಯಿತು. ಮುಖ್ಯ ಶಿಕ್ಷಕ ಎನ್‌.ವೆಂಕಟಮೂರ್ತಿ ಹಾಜರಿದ್ದರು.

ಮಲೇರಿಯಾ ವಿರೋಧಿ ಮಾಸಾಚರಣೆ ಜಾಥಾ

0

ಸೊಳ್ಳೆಗಳ ನಿಯಂತ್ರಣದಿಂದ ಮಲೇರಿಯಾ ರೋಗವನ್ನು ಸಂಪೂರ್ಣವಾಗಿ ತಡೆಯಬಹುದು. ರೋಗ ಬಂದ ನಂತರ ಚಿಕಿತ್ಸೆ ಪಡೆದುಕೊಳ್ಳುವ ಬದಲು ರೋಗ ಬರದಂತೆ ತಡೆಯುವುದು ಒಳ್ಳೆಯದು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್‌ಕುಮಾರ್‌ ತಿಳಿಸಿದರು.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳೊಂದಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರ ಅರಿವು ಮೂಡಿಸುವ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸೊಳ್ಳೆಗಳಿಂದ ಮಲೇರಿಯಾ, ಡೆಂಗ್ಯೂ, ಚಿಕೂನ್‌ ಗುನ್ಯಾ, ಆನೆಕಾಲು ರೋಗಗಳು ಹರಡುತ್ತವೆ. ಆದ್ದರಿಂದ ನಿಮ್ಮ ಮನೆಗಳ ಸುತ್ತ ಎಲ್ಲೂ ನೀರು ನಿಲ್ಲದಂತೆ ನೋಡಿಕೊಂಡು ಸೊಳ್ಳೆಗಳನ್ನು ನಿಯಂತ್ರಿಸಿ. ತಾಲ್ಲೂಕಿನಾದ್ಯಂತ ಆರೋಗ್ಯ ಇಲಾಖೆಯು ಗ್ರಾಮಸ್ಥರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುತ್ತಿದೆ. ಸಾರ್ವಜನಿಕರು ಯಾವುದೇ ರೀತಿಯ ಜ್ವರ ಇದ್ದರೂ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಶ್ರೀ ಸರಸ್ವತಿ ಕಾನ್ವೆಂಟ್‌ ವಿದ್ಯಾರ್ಥಿಗಳು ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ಜನರಲ್ಲಿ ಸೊಳ್ಳೆ ನಿಯಂತ್ರಣದ ಬಗ್ಗೆ ಅರಿವು ಮೂಡಿಸಿದರು.
ಡಾ.ವಿಜಯ್‌, ದಾದಾಪೀರ್‌, ವಿಜಯಮ್ಮ, ಮುನಿರತ್ನಮ್ಮ, ಕುಮಾರಸ್ವಾಮಿ, ವಿ.ನಂದಿನಿ, ಮೀನಾ, ಮಂಗಳಾ, ಸಿ.ವಿಜಯಾ ಹಾಜರಿದ್ದರು.

ಜನಪ್ರತಿನಿಧಿಗಳು ಕೆಂಪೇಗೌಡರಿಂದ ರಾಜಕೀಯ ಮುತ್ಸದ್ಧಿತನವನ್ನು ಕಲಿಯಲಿ

0

ರೈತರು ಕಷ್ಟಪಟ್ಟು ಬೆಳೆಯುವ ಬೆಳೆಗಳಿಗೆ ಬೆಂಬಲ ಬೆಲೆ ಕೊಡಲು ಸಾಧ್ಯವಿಲ್ಲದ ಆಡಳಿತ ನಡೆಸುವವರು ಕೆಂಪೇಗೌಡರಿಂದ ಏನು ಕಲಿತಿದ್ದಾರೆ ಎಂದು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ವಿ.ಗೋಪಾಲಗೌಡ ಅವರು ಖಾರವಾಗಿ ಪ್ರಶ್ನಿಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿ ನ್ಯಾಯಾಲಯದ ಸಮೀಪ ಶ್ರೀ ಕೆಂಪೇಗೌಡರ ಜಯಂತೋತ್ಸವ ಆಚರಣಾ ಸಮಿತಿ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮನ್ನಾಳುವ ಜನಪ್ರತಿನಿಧಿಗಳು ಕೆಂಪೇಗೌಡರಿಂದ ರಾಜಕೀಯ ಮುತ್ಸದ್ಧಿತನವನ್ನು ಕಲಿಯಬೇಕಿದೆ. ರಾಜ್ಯದಲ್ಲಿ 826 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ಯಾಂಕ್‌ ರಾಷ್ಟ್ರೀಕರಣದ ಉದ್ದೇಶವೇನಾಯಿತು. ಮದ್ಯದ ವ್ಯವಹಾರ ಮಾಡುವವರಿಗೆ ವಿಮಾನ ಕಂಪೆನಿ ಮಾಡಲು ಕೋಟ್ಯಾಂತರ ಸಾಲ ಕೊಡಲಾಗುತ್ತದೆ. ಆದರೆ ಇದುವರೆಗೂ ಎಷ್ಟು ಮಂದಿ ರೈತರಿಗೆ ಸಾಲ ಕೊಟ್ಟಿದ್ದೀರಿ ಎಂದು ಆಕ್ರೋಶ
ವ್ಯಕ್ತಪಡಿಸಿದರು.

ನಾಡಪ್ರಭು ಕೆಂಪೇಗೌಡರ ಜಯಂತೋತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ ಮೆರವಣಿಗೆಯಲ್ಲಿ ವಿವಿದೆಡೆಯಿಂದ ಆಗಮಿಸಿದ್ದ ಕಲಾತಂಡಗಳು ವೇಷ ಭೂಷಣಗಳೊಂದಿಗೆ ಮೆರವಣಿಗೆಗೆ ಕಳೆ ತಂದಿದ್ದವು.

ಮೂರು ಎಕರೆ ಜಮೀನಿರುವವ ಒಂದು ಮನೆ ಕಟ್ಟಿಕೊಳ್ಳಲು ಆಗುತ್ತಿಲ್ಲ. ಆದರೆ ಏನೂ ಇಲ್ಲದ ಒಬ್ಬ ರಾಜಕಾರಣಿ ಸಂಪತ್ತಿನ ಅಧಿಪತಿಯಾಗುತ್ತಾನೆ. ರಾಜಕೀಯ ಪಟ್ಟಬದ್ಧ ಹಿತಾಸಕ್ತಿಗಳು ಒಂದೊಂದು ಊರಿನಲ್ಲೂ, ಗ್ರಾಮಗಳಲ್ಲೂ ಎರಡೆರಡು ಗುಂಪುಗಳನ್ನಾಗಿ ಮಾಡಿದ್ದಾರೆ. ಸಣ್ಣ ಗ್ರಾಮ ಪಂಚಾಯ್ತಿ ಚುನಾವಣೆಗೆ ಲಕ್ಷಗಟ್ಟಲೆ ಹಣ ಖರ್ಚು ಮಾಡಲಾಗುತ್ತದೆ, ವೈದ್ಯಕೀಯದಂತಹ ಉನ್ನತ ಶಿಕ್ಷಣಕ್ಕೆ ಕೋಟಿಗಟ್ಟಲೆ ಹಣ ಪಡೆಯುತ್ತಾರೆ ಎಂದರೆ ಕಪ್ಪು ಹಣಕ್ಕೆ ಕಡಿವಾಣ ಹಾಕಿಲ್ಲ ಎಂದರ್ಥ. ಶೋಷಣೆ ನಿಲ್ಲಬೇಕಾದರೆ ಯುವಜನರು ಒಗ್ಗೂಡಬೇಕು. ನೀವು ಹೇಳಿದಂತೆ ರಾಜಕಾರಣಿಗಳು ಕೇಳಬೇಕು. ಅವರು ಹೇಳಿದಂತೆ ನೀವು ಕೇಳಬೇಕಿಲ್ಲ. ಕೆಂಪೇಗೌಡರಿಂದ ಏನೂ ಕಲಿತಿಲ್ಲದ ಜನಪ್ರತಿನಿಧಿಗಳಿಗೆ ನೀವು ಪಾಠ ಕಲಿಸಿ ಎಂದು ಹೇಳಿದರು.
ಐದು ಸಾವಿರ ಕೆರೆಗಳ ನಿರ್ಮಾತೃ ಕೆಂಪೇಗೌಡರು. 70 ವರ್ಷಗಳ ರಾಜಕೀಯ ಆಡಳಿತದಲ್ಲಿ ಅವಿಭಾಜ್ಯ ಕೋಲಾರ ಜಿಲ್ಲೆಯ ನೀರಾವರಿಗೆ ಕೆಲಸ ನಡೆದಿಲ್ಲ. ಈಗಂತೂ ಸಣ್ಣ ಹಾಗೂ ದೊಟ್ಟ ನೀರಾವರಿ ಇಲಾಖೆ ಸತ್ತು ಹೋಗಿದೆ. ದೇಶದ ಜನರನ್ನು ಜಾತಿ ಆಧಾರದ ಮೇಲೆ ಒಡೆದು ಸರ್ಕಾರ ರಚನೆ ಮಾಡಲು ಬಿಡಬಾರದು. ಸ್ವಾತಂತ್ರ್ಯವನ್ನು ಮಾನವೀಯ ಹಕ್ಕುಗಳನ್ನು ರಕ್ಷಿಸಬೇಕಿದೆ. ನೀರಾವರಿ ಹೋರಾಟಕ್ಕೆ, ಮೌಲ್ಯಾಧಾರಿತ ರಾಜಕಾರಣಕ್ಕೆ ಬೆಂಬಲವಾಗಿ ನಾನಿದ್ದೇನೆ ಎಂದು ಆವೇಶದಿಂದ ನುಡಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಎಲ್ಲಾ ಸಮುದಾಯಗಳ ಎಲ್ಲಾ ಕಸುಬುಗಳಿಗೆ ಮನ್ನಣೆ ಸಿಕ್ಕಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂಬ ಸತ್ಯವನ್ನಿರಿತು ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಇಂದು ಬೃಹತ್ ಬೆಂಗಳೂರು ಆಗಿ ವಿಶ್ವ ಪ್ರಸಿದ್ದಿ ಪಡೆದಿದೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ನಾಡಪ್ರಭು ಕೆಂಪೇಗೌಡರ ಜಯಂತೋತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ ಮೆರವಣಿಗೆಯಲ್ಲಿ ವಿವಿದೆಡೆಯಿಂದ ಆಗಮಿಸಿದ್ದ ಕಲಾತಂಡಗಳು ವೇಷ ಭೂಷಣಗಳೊಂದಿಗೆ ಮೆರವಣಿಗೆಗೆ ಕಳೆ ತಂದಿದ್ದವು.

ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರು ಹಾಗು ವಕ್ಕಲಿಗರ ಸಂಘದ ನಿರ್ದೇಶಕ ಯಲುವಹಳ್ಳಿ ಎನ್.ರಮೇಶ್ ಮಾತನಾಡಿ, ನಾಡಪ್ರಭು ಕೆಂಪೇಗೌಡರನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸದೇ ಅವರನ್ನು ಇಡೀ ನಾಡಿನ ಆಸ್ತಿ ಎಂದು ಪ್ರತಿಯೊಬ್ಬರೂ ಗೌರವಿಸಬೇಕು ಎಂದರು.
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಆಶೀರ್ವಚನವನ್ನು ನೀಡಿದರು. ಹಾಸ್ಯ ಕಲಾವಿದ ಕೋಟೆ ನಾಗರಾಜ್‌ ಹಾಸ್ಯ ಭಾಷಣವನ್ನು ಮಾಡಿದರು.
ತಹಶೀಲ್ದಾರ್‌ ಅಜಿತ್‌ಕುಮಾರ್‌ರೈ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ತನುಜಾ ರಘು, ನಗರಸಭಾ ಉಪಾಧ್ಯಕ್ಷೆ ಪ್ರಭಾವತಿ ಸುರೇಶ್‌, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಗೋಪಾಲ್‌, ಎಚ್‌.ಡಿ.ದೇವೇಗೌಡ ಮತ್ತು ಜಯಪ್ರಕಾಶ್‌ ನಾರಾಯಣ್‌ ಸೇವಾಭಿವೃದ್ಧಿ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಮೇಲೂರು ಬಿ.ಎನ್‌.ರವಿಕುಮಾರ್‌, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸತೀಶ್‌, ಮೇಲೂರು ಕೆ.ಮಂಜುನಾಥ್‌, ಆರ್‌.ಎ.ಉಮೇಶ್‌, ಎಂಪಾಪಿರೆಡ್ಡಿ, ಎಸ್‌.ಎನ್‌.ಕ್ರಿಯಾ ಟ್ರಸ್ಟ್‌ ಅಧ್ಯಕ್ಷ ಆಂಜಿನಪ್ಪ, ಶಿವಕುಮಾರಗೌಡ, ಮುನಿಕೃಷ್ಣಪ್ಪ, ಆರ್‌.ಶ್ರೀನಿವಾಸ್‌, ಪಿ.ವಿ.ನಾಗರಾಜ್‌, ಶಿವಾರೆಡ್ಡಿ, ಗುಡಿಯಪ್ಪ, ಸದಾಶಿವ, ಬಿ.ವಿ.ಮುನೇಗೌಡ, ಡಾ.ಧನಂಜಯರೆಡ್ಡಿ, ಅಶ್ವತ್ಥನಾರಾಯಣರೆಡ್ಡಿ, ಕಂಬದಹಳ್ಳಿ ಜಗದೀಶ್‌, ಸುರೇಂದ್ರಗೌಡ, ಕೇಶವರೆಡ್ಡಿ, ಆರ್‌.ಮುರಳಿ, ಡಿಎಸ್‌ಎನ್‌ ರಾಜು, ರಾಮಣ್ಣ ಹಾಜರಿದ್ದರು.
ಹುತಾತ್ಮ ಯೋಧನ ಪತ್ನಿಗೆ ಎರಡು ಲಕ್ಷ ರೂ ಚೆಕ್‌: ಹುತಾತ್ಮ ಯೋಧ ಯಣ್ಣಂಗೂರಿನ ಗಂಗಾಧರ್‌ ಅವರ ಆತ್ಮಕ್ಕೆ ಶಾಂತಿ ಕೋರಿ ಕಾರ್ಯಕ್ರಮದಲ್ಲಿ ಒಂದು ನಿಮಿಷ ಮೌನಾಚರಣೆಯನ್ನು ಮಾಡಲಾಯಿತು. ಹುತಾತ್ಮ ಯೋಧನ ಪತ್ನಿ ಶಿಲ್ಪಾ ಅವರಿಗೆ ಎಚ್‌.ಡಿ.ದೇವೇಗೌಡ ಮತ್ತು ಜಯಪ್ರಕಾಶ್‌ ನಾರಾಯಣ್‌ ಸೇವಾಭಿವೃದ್ಧಿ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಟ್ರಸ್ಟ್‌ ಅಧ್ಯಕ್ಷ ಮೇಲೂರು ಬಿ.ಎನ್‌.ರವಿಕುಮಾರ್‌ ಎರಡು ಲಕ್ಷ ರೂಗಳ ಚೆಕ್‌ ನೀಡಿದರು.
ಕಾರ್ಯಕ್ರಮದಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿನಿ ದಿವ್ಯಶ್ರೀಗೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ಲಾಪ್‌ಟಾಪ್‌ ನೀಡಿದರು.
ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಒಕ್ಕಲಿಗ ಜನಾಂಗದ ಸಾಧಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಐಎಎಸ್‌ ಅಧಿಕಾರಿ ಪ್ರಿಯಾಂಕ, ಕ್ರೀಡಾಪಟು ಪ್ರೇಮ, 12 ಚಿನ್ನದ ಪದಕ ಪಡೆದಿರುವ ಬಿಂದುಜಾ, ರಂಗಭೂಮಿ ಕಲಾವಿದೆ ದೇವರಮಳ್ಳೂರು ಯಶೋದಮ್ಮ, ಯೋಧ ಯಣ್ಣಂಗೂರು ರವಿಕುಮಾರ್‌, ಕಲಾವಿದ ತಿಪ್ಪೇನಹಳ್ಳಿ ರಾಘವಣ್ಣ, ಕ್ರೀಡಾಪಟು ನಾರಾಯಣಸ್ವಾಮಿ, ಪತ್ರಕರ್ತ ಸಿ.ಪಿ.ಈ. ಕರಗಪ್ಪ, ಕೃಷಿ ಪಂಡಿತ ಘಟಮಾರನಹಳ್ಳಿ ಆಂಜಿನಪ್ಪ ಅವರನ್ನು ಸನ್ಮಾನಿಸಲಾಯಿತು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಕೆಂಪೇಗೌಡರ ವೇಷಧಾರಿಯೊಬ್ಬರ ಭಂಗಿ

ಅದ್ದೂರಿ ಮೆರವಣಿಗೆ: ನಗರ ಸೇರಿದಂತೆ ತಾಲ್ಲೂಕಿನ ವಿವಿದೆಡೆಯಿಂದ ಆಗಮಿಸಿದ್ದ ಸಾವಿರಾರು ಮಂದಿ ವಕ್ಕಲಿಗ ಸಮುದಾಯದವರು ನಗರದ ಪ್ರಮುಖ ಬೀದಿಗಳಲ್ಲಿ ಕೆಂಪೇಗೌಡರ ಬೃಹತ್ ಪಲ್ಲಕ್ಕಿ ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಶ್ರೀ ಕೆಂಪೇಗೌಡರ ಜಯಂತೋತ್ಸವ ಆಚರಣಾ ಸಮಿತಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿಯ ಅಂಗವಾಗಿ ನಗರದ ಬಸ್ ನಿಲ್ದಾಣದ ಬಳಿ ಶಾಸಕ ಎಂ.ರಾಜಣ್ಣ ಮೆರವಣಿಗೆಗೆ ಚಾಲನೆ ನೀಡಿದರು.
ಕುದುರೆ ಸಾರೋಟದ ಕೆಂಪೇಗೌಡರ ಪಲ್ಲಕ್ಕಿಯ ಉತ್ಸವ ಸೇರಿದಂತೆ ತಾಲ್ಲೂಕಿನ ನಾನಾ ಗ್ರಾಮಗಳಿಂದ ಆಗಮಿಸಿದ್ದ ಕೆಂಪೇಗೌಡರ ವೇಷ ಭೂಷಣಗಳೊಂದಿಗೆ ಅಲಂಕರಿಸಿದ್ದ ಟ್ರ್ಯಾಕ್ಟರ್‌ಗಳು ಮೆರವಣಿಗೆಗೆ ಡೊಳ್ಳು ಕುಣಿತ, ಗಾರುಡಿ ಗೊಂಬೆ, ಕೀಲು ಕುದುರೆ, ಪೂಜಾ ಕುಣಿತ, ಪಟ ಕುಣಿತ, ನಾಸಿಕ್ ಡೋಲ್, ತಮಟೆ, ವೀರಗಾಸೆ ಮುಂತಾದ ಕಲಾ ತಂಡಗಳು ಮೆರವಣಿಗೆಗೆ ಕಳೆ ನೀಡಿದ್ದವು.
ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಬಂದಾಗ ರಸ್ತೆಯ ಅಕ್ಕಪಕ್ಕದ ಅಂಗಡಿ, ಮನೆ, ಮಠಗಳಲ್ಲಿನ ಜನರು ಹೊರಗಡೆ ಬಂದು ಮೆರವಣಿಗೆಯ ಉದ್ದಕ್ಕೂ ಸಾಗಿ ಬಂದ ಪಲ್ಲಕ್ಕಿಯ ಉತ್ಸವ ವಾಹನಗಳು, ಕಲಾ ತಂಡಗಳನ್ನು ಕಣ್ತುಂಬಿಕೊಂಡರು.
ವಾದ್ಯ ಕಲಾವಿದರ ಉತ್ಸಾಹ

ಮೆರವಣಿಗೆ ಮದ್ಯೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಮೆರವಣಿಗೆಯ ಉದ್ದಕ್ಕೂ ಕೆಂಪೇಗೌಡರ ಭಾವಚಿತ್ರಗಳು, ಕೆಂಪೇಗೌಡರ ವೇಷಧಾರಿಗಳು ನೋಡುಗರ ಕಣ್ಮನ ಸೆಳೆಯುತ್ತಿದ್ದವು.

ಆಯೋಜಕರು ಪಿತೂರಿ ನಡೆಸಿದ್ದೀರಿ!: ಮುಖ್ಯ ಅತಿಥಿಯಾಗಿ ನನ್ನನ್ನು ಕರೆಸಿ ಜನರೆಲ್ಲ ಹೊರಟ ಮೇಲೆ ಕಡೆಯ ಭಾಷಣಕಾರರನ್ನಾಗಿ ನಿಲ್ಲಿಸಿದ್ದೀರಿ. ಪ್ರಾಸ್ತಾವಿಕ ಭಾಷಣದ ನಂತರ ನನ್ನ ಭಾಷಣ ಇರಬೇಕಿತ್ತು. ಕಾರ್ಯಕ್ರಮದ ಆಯೋಜಕರು ಏನಾದರೂ ಪಿತೂರಿ ನಡೆಸಿದ್ದೀರಾ ಎಂದು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ವಿ.ಗೋಪಾಲಗೌಡ ಅವರು ಅಸಮಧಾನ ವ್ಯಕ್ತಪಡಿಸಿದರು.
ಹೆಣ್ಣಿಗೆ ಸಮಾನತೆಯೆಂಬುದು ಕೇವಲ ಸಂವಿಧಾನದಲ್ಲಿ ಮಾತ್ರ ಇದೆಯೇ. ಈ ಕಾರ್ಯಕ್ರಮಕ್ಕೆ ಕೆಲವೇ ಮಂದಿ ಹೆಣ್ಣು ಮಕ್ಕಳು ಭಾಗವಹಿಸಿದ್ದಾರಲ್ಲ ಎಂದರು.

ಹಾರಾಟ ನಡೆಸಿವೆ ಚಿಟ್ಟೆಗಳು

0

ಮುಂಗಾರು ಪ್ರಾರಂಭವಾದ ನಂತರ ಈಚೆಗೆ ತಾಲ್ಲೂಕಿನೆಲ್ಲೆಡೆ ರಸ್ತೆಗಳ ಅಂಚಿನಲ್ಲಿ ಪೊದೆಗಳಿರುವೆಡೆ ಯಥೇಚ್ಛವಾಗಿ ಹಳದಿ ಬಣ್ಣದ ಚಿಟ್ಟೆಗಳು ಕಂಡು ಬರುತ್ತಿವೆ. ನಗರದಿಂದ ಹೊರವಲಯಕ್ಕೆ ವಾಹನಗಳಲ್ಲಿ ಹೋಗುವಾಗ ರಸ್ತೆಯ ಅಂಚಿನಲ್ಲಿ ಚಿಟ್ಟೆಗಳ ಹಾರಾಟ ನಡೆಸಿವೆ.
ಈ ಚಿಟ್ಟೆಗಳು ವರ್ಷಪೂರ್ತಿ ಇದ್ದರೂ ಈ ತಿಂಗಳಿನಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಇದಕ್ಕೆ ಕಾರಣ ಮಳೆ ಬಿದ್ದ ನಂತರ ಅದರ ಆಹಾರ ಸಸ್ಯಗಳು ಚಿಗುರುತ್ತವೆ ಮತ್ತು ಚಿಗುರುವ ಸಸ್ಯಗಳನ್ನು ತಿಂದ ಲಾರ್ವಾಗಳೆಲ್ಲ ಕೋಶಾವಸ್ಥೆಗೆ ಹೋಗಿ ಚಿಟ್ಟೆಗಳಾಗುತ್ತಿವೆ.

ಶಿಡ್ಲಘಟ್ಟದ ಹೊರವಲಯದಲ್ಲಿ ಕಂಡುಬರುತ್ತಿರುವ ಕಾಮನ್‌ ಎಮಿಗ್ರೆಂಟ್‌ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ತಿಳಿಹಳದಿಬಣ್ಣದ ಚಿಟ್ಟೆ

ಒಂದೆಡೆ ವಾಹನಗಳಿಗೆಲ್ಲಾ ಬಡಿಯುತ್ತಾ ಪಟಪಟಿಸುತ್ತಾ ಹಲವಾರು ಹಳದಿ ಬಣ್ಣದ ಚಿಟ್ಟೆಗಳು ದಾರಿಹೋಕರಿಗೆ ಆಹ್ಲಾದವನ್ನುಂಟು ಮಾಡುತ್ತಿದ್ದರೆ, ಮತ್ತೊಂದೆಡೆ ವೇಗದ ವಾಹನಕ್ಕೆ ಬಡಿದು ಹಲವಾರು ಚಿಟ್ಟೆಗಳು ಇಹಲೋಕವನ್ನು ತ್ಯಜಿಸುತ್ತಿವೆ.
ಹೆಚ್ಚಾಗುತ್ತಿರುವ ನಾನಾ ಬಗೆಯ ಮಾಲಿನ್ಯಗಳ ಪರಿಣಾಮದಿಂದ ನಮ್ಮ ಮನೆಯಂಗಳದಲ್ಲಿ, ಉದ್ಯಾನಗಳಲ್ಲಿ ಯಥೇಚ್ಛವಾಗಿ ಕಾಣಸಿಗುತ್ತಿದ್ದ ಚಿಟ್ಟೆಗಳ ಸಂಖ್ಯೆ ಕ್ರಮೇಣ ಇಳಿಮುಖವಾಗುತ್ತಿದೆ ಎಂದು ಎಲ್ಲರೂ ಹೇಳುತ್ತಿರುತ್ತಾರೆ. ಆದರೆ ಈ ಹಳದಿ ಬಣ್ಣದ ಪಾತರಗಿತ್ತಿಗಳು ನಮ್ಮದೇ ಕನಸಿನ ತುಣುಕುಗಳಂತೆ ಕಂಡುಬರುತ್ತಿವೆ.
ಆರೋಗ್ಯಕರ ಪರಿಸರವಿದ್ದರೆ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಪ್ರಭೇದಗಳ ಚಿಟ್ಟೆಗಳು ವಾಸಿಸಲು ಸಾಧ್ಯ. ಅಲ್ಪಾಯುಷಿಯದರೂ ಪ್ರಕೃತಿಯ ಪರಾಗ ಸ್ಪರ್ಶ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.
ಶಿಡ್ಲಘಟ್ಟದ ಹೊರವಲಯದಲ್ಲಿ ಕಂಡುಬರುತ್ತಿರುವ ಕಾಮನ್‌ ಎಮಿಗ್ರೆಂಟ್‌ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ತಿಳಿಹಳದಿಬಣ್ಣದ ಚಿಟ್ಟೆ

‘ಮಕ್ಕಳಿಗೆ ಮುಂದಿನ ಪೀಳಿಗೆಗೆ ‘ಚಿಟ್ಟೆ’ಗಳ ಮಹತ್ವವನ್ನು ಪರಿಚಯಿಸುವ ಕ್ರಮವಾಗಿ ಚಿಟ್ಟೆ ಉದ್ಯಾನವನ್ನು ಪಟ್ರಹಳ್ಳಿಯ ಸಸ್ಯೋದ್ಯಾನದಲ್ಲಿ ಸ್ಥಾಪಿಸಲಿದ್ದೇವೆ. ನಾವೆಲ್ಲರೂ ಹೂ ಬಿಡುವ ಗಿಡಗಳನ್ನು ಮನೆಯಂಗಳದಲ್ಲಿ ಬೆಳೆಸುವುದು, ಉದ್ಯಾನಗಳಲ್ಲಿ ಚಿಟ್ಟೆಗಳನ್ನು ಸೆಳೆಯಲು ಸೂಕ್ತ ಸಸ್ಯವರ್ಗ ಪೋಷಿಸುವುದು, ಎಲ್ಲರಿಗೂ ಚಿಟ್ಟೆ ಜೀವನ ಕ್ರಮ ಹಾಗೂ ಅದರಿಂದ ನಮಗಾಗುವ ಅನುಕೂಲ ತಿಳಿಸುವ ಪ್ರಾತ್ಯಕ್ಷಿಕೆ ನೀಡುವುದು ಇವೆಲ್ಲವೂ ಚಿಟ್ಟೆಗಳ ಸಂತತಿ ವೃದ್ಧಿಸಲು ಸಹಾಯ ಮಾಡಬಲ್ಲವು‘ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ತಿಮ್ಮರಾಯಪ್ಪ.

ಶ್ರದ್ಧಾಭಕ್ತಿಯಿಂದ ರಂಜಾನ್ ಹಬ್ಬದಾಚರಣೆ

0

ಸಮುದಾಯದ ಹಿರಿಯರೆಲ್ಲ ಸೇರಿ ವಿಶಾಲವಾದ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಸಿದ್ಧತೆ ನಡೆಸಿದ್ದರೆ, ಕಿರಿಯರೆಲ್ಲರೂ ಹೊಸ ಉಡುಪುಗಳನ್ನು ತೊಟ್ಟು ಸಿಹಿ ತಿನ್ನುವ ಉಮೇದಿಯಲ್ಲಿದ್ದರು. ಒಂದು ತಿಂಗಳ ಕಾಲ ಕೈಗೊಂಡ ರೋಜಾ (ಉಪವಾಸ ಆಚರಣೆ) ಕೊನೆಗೊಳಿಸಿ ಸೋಮವಾರ ರಂಜಾನ್ ಹಬ್ಬ ಆಚರಿಸುವ ಸಂಭ್ರಮದಲ್ಲಿದ್ದರು. ಇದಕ್ಕೆಂದೇ ಮನೆಗಳಲ್ಲಿ, ಮಸೀದಿಗಳಲ್ಲಿ ಮತ್ತು ಹೊರಾವರಣದಲ್ಲಿ ಹೊಸ ಬಗೆಯ ಕಳೆ ಮೂಡಿತ್ತು.
ಶ್ರದ್ಧಾಭಕ್ತಿಯ ಸಂಕೇತವಾದ ರಂಜಾನ್ ಹಬ್ಬವನ್ನು ಸಹಸ್ರಾರು ಮುಸ್ಲಿಂ ಬಾಂಧವರು ಸೋಮವಾರ ಸಂಭ್ರಮದಿಂದ ತಾಲ್ಲೂಕಿನಾದ್ಯಂತ ಆಚರಿಸಿದರು.

ಮಕ್ಕಳು ಶುಭಾಶಯ ವಿನಿಮಯ ಮಾಡಿಕೊಂಡರು

ಸಂಪ್ರದಾಯದಂತೆ ಮೆರವಣಿಗೆಯಲ್ಲಿ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೀಲಾದ್ ಬಾಗ್ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ನಿಧನ ಹೊಂದಿರುವ ಪೂರ್ವಜರ ಸಮಾಧಿಗಳ ಬಳಿ ಪ್ರಾರ್ಥನೆ ಸಲ್ಲಿಸಿದರು.
ಬಡವರಿಗೆ ದಾನ: ರಂಜಾನ್ ಹಬ್ಬಕ್ಕೂ ಒಂದು ತಿಂಗಳು ಮುನ್ನ ಅವರು ಕೈಗೊಳ್ಳುವ ರೋಜಾ ಆಚರಣೆಯಲ್ಲಿ ಹಿರಿಯರು ಮತ್ತು ಕಿರಿಯರು ಬೇಧವಿಲ್ಲದೆ ಪಾಲ್ಗೊಂಡಿದ್ದರು. ಪವಿತ್ರ ರಂಜಾನ್ ಮಾಸವನ್ನು ಧಾರ್ಮಿಕ ತಿಂಗಳು. ಉಪವಾಸದ ತಿಂಗಳೆಂದೇ ಕರೆಯುತ್ತಾರೆ. ತಿಂಗಳು ಪೂರ್ತಿ ಕುರ್ಆನ್ ಪಠಿಸುತ್ತಾರೆ. ಎಲ್ಲರ ಸುಖ-ಸಂತೋಷ- ನೆಮ್ಮದಿಗಾಗಿ ಅಲ್ಲಾಹುವಿನಲ್ಲಿ ಬಿನ್ನವಿಸಿಕೊಳ್ಳುತ್ತಾರೆ. ಬಡವರಿಗೆ ಮತ್ತು ಸಂಕಷ್ಟದಲ್ಲಿದ್ದವರಿಗೆ ನೆರವು ನೀಡುತ್ತಾರೆ. ದಾನ ಮಾಡುತ್ತಾರೆ. ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ಪೂರ್ವಜರ ಸಮಾಧಿಗಳಿಗೆ ಪೂಜೆ ಸಲ್ಲಿಸಿದ ನಂತರ ಜಾತಿ ಬೇಧವಿಲ್ಲದೆ ಬಡವರಿಗೆ ದಾನ ನೀಡಿದರು.
ರಂಜಾನ್‌ ಹಬ್ಬದ ಸಂದರ್ಭದಲ್ಲಿ ಬೆಲೂನು ಹಿಡಿದು ಸಂಭ್ರಮದಿಂದ ಅಣ್ಣನೊಂದಿಗೆ ಹೋಗುತ್ತಿರುವ ಬಾಲಕ

‘ಪವಿತ್ರ ಗ್ರಂಥ ಕುರಾನ್ ರಚನೆ ಆರಂಭಗೊಂಡಿದ್ದು ರಂಜಾನ್ ತಿಂಗಳಿನಲ್ಲಿ. ರಂಜಾನ್ ತಿಂಗಳಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆಯಿದೆ. ತಾವು ದುಡಿದಿದ್ದರಲ್ಲಿ ಸ್ವಲ್ಪ ಭಾಗವನ್ನು ಸಮಾಜದ ಬಡವರಿಗೆ ದಾನ ಮಾಡುವ ಉದಾತ್ತ ಹಬ್ಬವಿದು. ಸಮಾಜದಲ್ಲಿ ಸೌಹಾರ್ಧತೆಗೆ ಪ್ರತೀಕವಾದ ಈ ಹಬ್ಬ ಐಕ್ಯತೆ ಹಾಗೂ ಅಭಿವೃದ್ಧಿಗೆ ಪೂರಕವಾಗಲಿ’ ಎಂದು ಶಾಸಕ ಎಂ.ರಾಜಣ್ಣ ಈದ್‌ಗಾ ಮೈದಾನದಲ್ಲಿ ಮುಸ್ಲೀಂ ಬಾಂಧವರಿಗೆ ಶುಭಾಶಯ ತಿಳಿಸಿದ ಸಂದರ್ಭದಲ್ಲಿ ತಿಳಿಸಿದರು.
ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಧರ್ಮಗುರುಗಳು ಬೋಧನೆ ಮಾಡಿದರು. ನಗರಸಭಾ ಸದಸ್ಯ ನಂದಕಿಶನ್‌, ಸುರೇಶ್‌, ಎಸ್‌.ಎನ್‌.ಕ್ರಿಯಾ ಟ್ರಸ್ಟ್‌ ಅಧ್ಯಕ್ಷ ಆಂಜಿನಪ್ಪ ಈದ್‌ಗಾ ಮೈದಾನದಲ್ಲಿ ಶುಭಾಶಯ ಕೋರಿದರು.

ಸಾರ್ವಜನಿಕರಿಗೆ ಅತ್ಯುತ್ತಮ ತಾಣವಾಗಲಿದೆ ಪಟ್ರಹಳ್ಳಿ ಸಸ್ಯೋದ್ಯಾನ

0

ಮೂರು ಕೋಟಿ ರೂ ವೆಚ್ಚದಲ್ಲಿ ಹಂತಹಂತವಾಗಿ ಮೂರು ವರ್ಷಗಳಲ್ಲಿ ಅತ್ಯುತ್ತಮ ಸಸ್ಯೋದ್ಯಾನವನ್ನು ಅರಣ್ಯ ಇಲಾಖೆ ನಿರ್ಮಿಸಲಾಗುತ್ತಿದ್ದು, ಸಾರ್ವಜನಿಕರಿಗೆ ಅತ್ಯುತ್ತಮ ತಾಣವಾಗಲಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿ ಪಟ್ರಹಳ್ಳಿ ಅರಣ್ಯ ಪ್ರದೇಶದಲ್ಲಿ ಶನಿವಾರ ಸಸ್ಯೋದ್ಯಾನದ ಶಂಕುಸ್ಥಾಪನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ವಾಕಿಂಗ್‌, ಜಾಗಿಂಗ್‌, ಸೈಕ್ಲಿಂಗ್‌, ಮಕ್ಕಳ ಆಟದ ಮೈದಾನ, ಗ್ರೀನ್‌ ಕ್ಯಾಂಟೀನ್‌, ಪರಿಸರ ಅಧ್ಯಯನ ಕೇಂದ್ರ, ವಾಚ್‌ಟವರ್‌, ಪಕ್ಷಿವೀಕ್ಷಣೆ, ಚಿಟ್ಟೆ ವೀಕ್ಷಣೆಗೆ ಅವಕಾಶ, ಸ್ಥಳೀಯ ವಸ್ತುಗಳ ಮಾರಾಟ ಕೇಂದ್ರ ಮುಂತಾದ ಹಲವು ಉದ್ದೇಶಗಳಿಂದ ಈ ಸಸ್ಯೋದ್ಯಾನ ನಿರ್ಮಾಣ ಮಾಡಲಾಗುತ್ತಿದೆ. ಜಲ ಮೂಲವನ್ನು ಕಾಪಾಡಿಕೊಂಡು ಬಂದಿರುವ ಅರಣ್ಯಗಳೆಂಬ ವೃಕ್ಷ ಸಮೂಹಗಳನ್ನು ರಕ್ಷಿಸಿಸದಿದ್ದಲ್ಲಿ ಮತ್ತು ಹೆಚ್ಚಿಸದಿದ್ದಲ್ಲಿ ಮನುಕುಲಕ್ಕೆ ಉಳಿಗಾವಿಲ್ಲ ಎಂಬ ಆಶಯವನ್ನು ಜನರಿಗೆ ತಲುಪಿಸಲು ಸಸ್ಯೋದ್ಯಾನವನ್ನು ಅರಣ್ಯ ಇಲಾಖೆ ಮಾಡಲಾಗುತ್ತಿದೆ ಎಂದು ಹೇಳಿದರು.
ಮೊದಲ ಹಂತವಾಗಿ 40 ಲಕ್ಷ ರೂಗಳು ಬಿಡುಗಡೆಯಾಗಿದ್ದು, ವಾಯುವಿಹಾರಕ್ಕೆ, ಕುಡಿಯುವ ನೀರಿಗೆ, ಕೂರಲು ಬೆಂಚುಗಳಿಗೆ, ಶೌಚಾಲಯ, ಫಲಕಗಳು ಮುಂತಾದವುಗಳಿಗೆ ಬಳಸಲಾಗುತ್ತದೆ. ಜನರಿಗೆ ಮನೋಲ್ಲಾಸ, ಮಕ್ಕಳಿಗೆ ಜ್ಞಾನ ನೀಡುವ ಸ್ಥಳವಾಗಲಿದೆ ಎಂದರು.
ಬೆಂಗಳೂರು ಪ್ರಾದೇಶಿಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಾಶ್ವತಿ ಮಿಶ್ರ ಮಾತನಾಡಿ, ಸಸ್ಯೋದ್ಯಾನವನ್ನು ಕಳೆದ ಐದು ವರ್ಷಗಳಿಂದ ರಾಜ್ಯದ ವಿವಿದೆಡೆ ಅರಣ್ಯ ಇಲಾಖೆಯಿಂದ ಮಾಡುತ್ತಿದ್ದು, ಈ ವರ್ಷದಿಂದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಒಂದೊಂದು ಸಸ್ಯೋದ್ಯಾನವನ್ನು ಸಾಲುಮರದ ತಿಮ್ಮಕ್ಕ ಅವರ ಹೆಸರಿಟ್ಟು ನಿರ್ಮಿಸುತ್ತಿದ್ದೇವೆ.
ಸಸ್ಯೋದ್ಯಾನದ ಮುಖ್ಯ ಉದ್ದೇಶ ನಗರದ ಆಸುಪಾಸಿನಲ್ಲಿರುವ ಚಿಕ್ಕಚಿಕ್ಕ ಅರಣ್ಯ ಪ್ರದೇಶಗಳನ್ನು ಅಭಿವೃದ್ಧಿಗೊಳಿಸುವುದಾಗಿದೆ. ಆ ಮೂಲಕ ಸಾರ್ವಜನಿಕರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುವುದು. ಜನರು ಅಲ್ಲಿಗೆ ಬಂದು ಜೀವ ವೈವಿಧ್ಯ, ಹಕ್ಕಿ, ಚಿಟ್ಟೆ, ಸಸ್ಯಗಳ ಪರಿಚಯ ಮಾಡಿಕೊಳ್ಳುವುದರಿಂದ ಒಂದೆಡೆ ಅವರಲ್ಲಿ ಪರಿಸರ ಕಾಳಜಿ ಮೂಡುತ್ತದೆ, ಮತ್ತೊಂದೆಡೆ ಹಸಿರನ್ನು ಉಳಿಸಿ ಬೆಳೆಸುವ ಬಗ್ಗೆ ಅವರಲ್ಲಿ ಪ್ರೇರಣೆ ಮೂಡುತ್ತದೆ ಹಾಗೂ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ಹೇಳಿದರು.
ಅರಣ್ಯ ಇಲಾಖೆಯು ‘ನೀರಿಗಾಗಿ ಅರಣ್ಯ’ ಎನ್ನುವ ಘೋಷವಾಕ್ಯದಡಿ ಪ್ರಸಕ್ತ ಸಾಲಿನಲ್ಲಿ ಆರು ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮದ ಜೊತೆಗೆ ಕೋಟಿ ಕೋಟಿ ಬೀಜವನ್ನು ಹೊತ್ತ ಮಣ್ಣಿನ ಉಂಡೆಗಳನ್ನು ಬಿತ್ತುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಂಡಿದೆ. ಕಾಡಿನ ರಕ್ಷಣೆಯನ್ನು ಕೇವಲ ಅರಣ್ಯ ಇಲಾಖೆಯಿಂದ ಮಾತ್ರ ಮಾಡಲು ಸಾಧ್ಯವಿಲ್ಲ. ಸ್ಥಳೀಯ ಜನರ ಸಹಕಾರ ಇದ್ದಾಗ ಮಾತ್ರ ಕಾಡಿನ ರಕ್ಷಣೆ ಮತ್ತು ನಿರ್ವಹಣೆ ಸಾಧ್ಯ ಎಂದು ನುಡಿದರು.
ಈ ಸಂದರ್ಭದಲ್ಲಿ ಗಣ್ಯರು ಸಸ್ಯೋದ್ಯಾನದಲ್ಲಿ ಗಿಡಗಳನ್ನು ನೆಟ್ಟರು.
ಜಿಲ್ಲಾ ಪಂಚಾಯ್ತಿ ಸದಸ್ಯ ಬಂಕ್‌ ಮುನಿಯಪ್ಪ, ನಗರಸಭಾ ಅಧ್ಯಕ್ಷ ಅಫ್ಸರ್‌ಪಾಷ, ಉಪಾಧ್ಯಕ್ಷೆ ಪ್ರಭಾವತಿ ಸುರೇಶ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಡಿ.ಮಂಜುನಾಥ್‌, ಸಹಾಯಕ ಅರಣ್ಯ ಅಂರಕ್ಷಣಾಧಿಕಾರಿ ಆರ್‌.ವೆಂಕಟರೆಡ್ಡಿ, ವಲಯ ಅರಣ್ಯಾಧಿಕಾರಿಗಳಾದ ತಿಮ್ಮರಾಯಪ್ಪ, ಮಂಜುನಾಥ್‌, ಅಶ್ವತ್ಥಪ್ಪ, ಚಿನ್ನಪ್ಪಯ್ಯ, ಸಿ.ಟಿ.ಗೌಡ, ನಿಜಾಮುದ್ದೀನ್‌, ಉಪವಲಯ ಅರಣ್ಯಾಧಿಕಾರಿ ರಾಮಾಂಜಿನೇಯುಲು, ಮುಖಂಡರಾದ ರಾಂಬಾಬು, ವೆಂಕಟೇಶ್‌, ಮುನಿವೆಂಕಟಸ್ವಾಮಿ, ಲಕ್ಷ್ಮೀನಾರಾಯಣ, ಮುಷ್ಟಾಕ್‌, ಕನಕಪ್ರಸಾದ್‌, ಕೃಷ್ಣಪ್ಪ ಹಾಜರಿದ್ದರು.

ಹುತಾತ್ಮ ಯೋಧನಿಗೆ ಅಶ್ರುತರ್ಪಣೆಯ ಬೀಳ್ಕೊಡುಗೆ

0

ತಾಲ್ಲೂಕಿನ ಜಂಗಮಕೋಟೆ ಕ್ರಾಸ್‌ನ ಜ್ಞಾನಜ್ಯೋತಿ ಶಾಲೆಯ ಆವರಣಕ್ಕೆ ಶನಿವಾರ ಹುತಾತ್ಮ ಯೋಧ ಗಂಗಾಧರ್‌ ಅವರ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆಯೇ ಬಂಧು ಮಿತ್ರರ ಆಕ್ರಂದನ ಮುಗಿಲುಮುಟ್ಟಿತ್ತು.
ಬುಧವಾರ ರಾತ್ರಿ ಮೃತಪಟ್ಟ ಗಂಗಾಧರ್‌ ಅವರ ಶರೀರ ಸ್ವಗ್ರಾಮಕ್ಕೆ ಬಂದದ್ದು ಶನಿವಾರ. ಸಾವಿನ ಸುದ್ಧಿ ತಿಳಿದ ನಂತರ ದುಃಖದಲ್ಲಿ ಮುಳುಗಿದ್ದ ಕುಟುಂಬದವರು ಹುತಾತ್ಮ ಯೋಧನನ್ನು ಕಂಡೊಡನೆಯೇ ಸಂತೈಸಲಾಗದ ಸ್ಥಿತಿಗೆ ತಲುಪಿದರು. ಕುಸಿದು ಬೀಳುತ್ತಿದ್ದ ಯೋಧ ಗಂಗಾಧರ್‌ ಪತ್ನಿ ಶಿಲ್ಪಾ ಹಾಗೂ ತಾಯಿ ಲಕ್ಷ್ಮಮ್ಮ ಅವರನ್ನು ಬಂಧುಗಳು ಸಂತೈಸುತ್ತಿದ್ದುದನ್ನು ಕಂಡವರೆಲ್ಲಾ ಕಣ್ಣೀರಿಟ್ಟರು.
ಸಾರ್ವಜನಿಕರ ದರ್ಶನಕ್ಕೆ ಹುತಾತ್ಮ ಯೋಧನ ಪಾರ್ಥಿವ ಶರೀರವನ್ನು ಇಟ್ಟು ಸಾಲಿನಲ್ಲಿ ಹೋಗಿ ದರ್ಶನ ಪಡೆಯುವ ವ್ಯವಸ್ಥೆಯನ್ನು ಪೊಲೀಸರು ಮಾಡಿದ್ದರು.

ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ವೀರಪ್ಪ ಮೊಯ್ಲಿ ಅವರೊಂದಿಗೆ ನೋವು ತೋಡಿಕೊಳ್ಳುತ್ತಿರುವ ಯೋಧನ ತಾಯಿ ಲಕ್ಷ್ಮಮ್ಮ.

ಜ್ಞಾನಜ್ಯೋತಿ ಶಾಲೆಯ ಆವರಣದಲ್ಲಿ ಪೊಲೀಸರು ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಶಾಲೆಯಿಂದ ಯೋಧನ ಪಾರ್ಥಿವ ಶರೀರವನ್ನು ಮೆರವಣಿಗೆಯಲ್ಲಿ ಸ್ವಗ್ರಾಮ ಯಣ್ಣಂಗೂರಿಗೆ ಕರೆದೊಯ್ಯಲಾಯಿತು. ಹುತಾತ್ಮ ಯೋಧನ ಕುಟುಂಬದವರು ಶಾಸ್ತ್ರ ರೀತಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಎಸ್‌ಎಫ್‌ ಸಿಬ್ಬಂದಿ ಸಕಲ ಸರ್ಕಾರಿ ಗೌರವ ಅರ್ಪಿಸಿದರು. ಮೂರು ಸುತ್ತು ಗುಂಡು ಹಾರಿಸಿ ಬಂದೂಕು ತಲೆಕೆಳಗೆ ಮಾಡಿ ಮೌನ ಆಚರಿಸಿದರು. ಅವರ ಮನೆಯ ಮುಂದೆ ಇರುವ ಅವರ ತೋಟದಲ್ಲಿ ಅಂತ್ಯಕ್ರಿಯೆಯನ್ನು ನಡೆಸಲಾಯಿತು.
ವಿದ್ಯಾರ್ಥಿಗಳಿಂದ ಯೋಧನಿಗೆ ನಮನ: ಜಂಗಮಕೋಟೆ ಕ್ರಾಸ್‌ ಹಾಗೂ ಸುತ್ತಮುತ್ತಲಿನ ವಿವಿಧ ಶಾಲೆಗಳಿಂದ ಶಾಲಾ ವಾಹನದಲ್ಲಿ ವಿದ್ಯಾರ್ಥಿಗಳು ಆಗಮಿಸಿ ಯೋಧ ಗಂಗಾಧರ್‌ ಅವರ ಪಾರ್ಥಿವ ಶರೀರಕ್ಕೆ ನಮಿಸಿದರು. ನಡಿಪಿನಾಯಕನಹಳ್ಳಿ ನವೋದಯ ಶಾಲೆ, ಚಿಕ್ಕಜಾಲ ವೆಂಕಟೇಶ್ವರ ಎಂಜಿನಿಯರಿಂಗ್‌ ಕಾಲೇಜು, ನಂದಿನಿ, ಜ್ಯೋತಿ ಶಾಲೆ, ವಿವಿಧ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಯೋಧನ ಅಂತಿಮ ದರ್ಶನ ಪಡೆದರು.
ಗಣ್ಯರಿಂದ ಪುಷ್ಪನಮನ:ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ವೀರಪ್ಪ ಮೊಯ್ಲಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಪಿ.ಎನ್‌.ಕೇಶವರೆಡ್ಡಿ, ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜೆ.ಮಂಜುನಾಥ್‌, ಶಾಸಕ ಎಂ.ರಾಜಣ್ಣ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮುನಿಕೃಷ್ಣಪ್ಪ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಮೇಲೂರು ಬಿ.ಎನ್‌.ರವಿಕುಮಾರ್‌, ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ, ಪೊಲೀಸ್‌ ಎಸ್‌ಪಿ ಕಾರ್ತಿಕ್‌ ರೆಡ್ಡಿ, ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ರೈತ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹುತಾತ್ಮ ಯೋಧನಿಗೆ ಹೂವನ್ನು ಅರ್ಪಿಸಿ ನಮಿಸಿದರು.
ಹುತಾತ್ಮ ಯೋಧನ ಪತ್ನಿ ಮತ್ತು ಮಗನನ್ನು ಸಂತೈಸುತ್ತಿರುವ ಸಂಸದ ವೀರಪ್ಪ ಮೊಯ್ಲಿ

ಯೋಧನ ಕುಟುಂಬದವರ ಆಕ್ರೋಷ: ಹುತಾತ್ಮ ಯೋಧನ ಅಂತಿಮ ದರ್ಶನಕ್ಕೆ ಆಗಮಿಸಿದ್ದ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ವೀರಪ್ಪ ಮೊಯ್ಲಿ ಅವರನ್ನು ಪ್ರಶ್ನಿಸಿದ ಯೋಧನ ಪತ್ನಿ ಮತ್ತು ಸಂಬಂಧಿಗಳು ಮೃತ ದೇಹ ಬರಲು ಮೂರು ದಿನಗಳಾಗಿದ್ದಕ್ಕೆ ಆಕ್ರೋಷ ವ್ಯಕ್ತಪಡಿಸಿದರು.
ಹುತಾತ್ಮ ಯೋಧನ ಪಾರ್ಥಿವ ಶರೀರಕ್ಕೆ ನಮಿಸುತ್ತಿರುವ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ

‘ಸ್ವಾಮಿ ಉಸ್ತುವಾರಿ ಸಚಿವರೆ ಕನಿಷ್ಠ ಮಾತಾಡಿ, ಸಮಾಧಾನ ಹೇಳಿ ಹೋಗಿ. ಗಡಿ ಕಾಯುವ ಸೈನಿಕ ಸತ್ತರೆ ಒಂದು ದಿನಕ್ಕೆ ದೇಹವನ್ನು ಕಳಿಸುವ ವ್ಯವಸ್ಥೆ ಮಾಡಿ. ಉದ್ಯಮಿಗಳೊ ಅಥವಾ ರಾಜಕಾರಣಿಗಳಿಗೆ ಈ ರೀತಿ ಆದರೆ ಆದರೆ ನಮ್ಮ ವ್ಯವಸ್ಥೆ ಚುರುಕಾಗಿ ಕೆಲಸ ಮಾಡುತ್ತದೆ. ಆದರೆ ಯೋಧರಿಗೆ ಏಕೆ ನಿರ್ಲಕ್ಷ್ಯ? ಯೋಧ ಮೃತಪಟ್ಟು ಮೂರು್ಕು ದಿನದ ನಂತರ ಪಾರ್ಥಿವ ಶರೀರ ಕಳಿಸಲಾಗಿದೆ. ಇಬ್ಬರು ಗಂಡು ಮಕ್ಕಳನ್ನು ದೇಶ ಸೇವೆಗೆ ಕಳುಹಿಸಿದ್ದಾರೆ. ನಮ್ಮ ನೋವು ಯಾರಿಗೂ ಅರ್ಥವಾಗುವುದಿಲ್ಲ’ ಎಂದು ನೋವಿನಿಂದ ನುಡಿದರು.
ಹುತಾತ್ಮ ಯೋಧನ ಅಂತಿಮ ದರ್ಶನ ಪಡೆಯುತ್ತಿರುವ ಜನತೆ

‘ಇಬ್ಬರು ಮಕ್ಕಳು ಸೈನ್ಯದಲ್ಲಿದ್ದಾರೆ. ಒಬ್ಬ ಹೋಗಿಬಿಟ್ಟ. ಅವನ ಪುಟ್ಟ ಮಗ ಹಾಗೂ ಅವನ ಹೆಂಡತಿಯ ಕಷ್ಟಕ್ಕೆ ಆಗುವವರು ಯಾರು. ಅವರಿಗೆ ಸರ್ಕಾರದಿಂದ ಅನುಕೂಲ ಮಾಡಿಕೊಡಬೇಕು’ ಎಂದು ಯೋಧನ ತಾಯಿ ಲಕ್ಷ್ಮಮ್ಮ ಕೋರಿದರು.
ಲೋಕಸಭೆ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಶ್ನೆ ಮಾಡುವುದಾಗಿ ವೀರಪ್ಪ ಮೊಯ್ಲಿ ಹೇಳಿದರೆ, ಮುಖ್ಯ ಮಂತ್ರಿಗಳಿಗೆ ವಿಷಯವನ್ನು ತಿಳಿಸಿ ಕೇಂದ್ರಕ್ಕೆ ಪತ್ರ ಬರೆಸುವುದಾಗಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಅನುದಾನಿತ ಪ್ರೌಢಶಾಲೆಗಳಿಗೆ ಶಿಕ್ಷಕರನ್ನು ಭರ್ತಿ ಮಾಡಿ

0

ಅನುದಾನಿತ ಪ್ರೌಢಶಾಲೆಗಳಿಗೆ ಶಿಕ್ಷಕರನ್ನು ತುಂಬಿ ವಿದ್ಯಾರ್ಥಿಗಳ ಗುಣಾತ್ಮಕ ಶಿಕ್ಷಣ ಹಾಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶದ ಪ್ರಗತಿಗೆ ಸಹಕರಿಸಬೇಕೆಂದು ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಉಪಾಧ್ಯಕ್ಷ ಎಂ.ಕೆಂಪಣ್ಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ. ಆದರೆ ಅನುದಾನಿತ ಪ್ರೌಢಶಾಲೆಗಳಲ್ಲಿ 2012 ರಿಂದ ವಯೋನಿವೃತ್ತಿಯಿಂದ ತೆರವಾಗಿರುವ ಹಲವಾರು ಶಿಕ್ಷಕ ಹುದ್ದೆಗಳಿ ಖಾಲಿಯಿವೆ. ಇದರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಎದುರಿಸಲಿರುವ ಹಾಗೂ 8.9 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.
ಸರ್ಕಾರವು ಮಕ್ಕಳ ಹಿತದೃಷ್ಟಿಯಿಂದ ಕೂಡಲೇ ಶಿಕ್ಷಕರನ್ನು ನಿಯೋಜಿಸಬೇಕು. ಅಥವಾ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಗಳಿಗೆ ಹೊಸ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಉತ್ತಮ ಪಡಿಸಲು ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸದಸ್ಯರ ಪರವಾಗಿ ಕೋರಿದ್ದಾರೆ.

ಅದ್ದೂರಿ ಕೆಂಪೇಗೌಡ ಜಯಂತ್ಯುತ್ಸವ

0

ಶ್ರೀ ಕೆಂಪೇಗೌಡ ಜಯಂತ್ಯುತ್ಸವ ಆಚರಣಾ ಸಮಿತಿಯಿಂದ ಜೂನ್‌ 27 ರ ಮಂಗಳವಾರ ದಿಬ್ಬೂರಹಳ್ಳಿ ರಸ್ತೆಯ ನ್ಯಾಯಾಲಯದ ಬಳಿ ಅದ್ದೂರಿ ಕೆಂಪೇಗೌಡ ಜಯಂತ್ಯುತ್ಸವವನ್ನು ಆಚರಿಸಲಾಗುತ್ತಿದೆ.
ತಾಲ್ಲೂಕಿನ ಪ್ರತಿಯೊಂದು ಗ್ರಾಮದಿಂದಲೂ ಪಲ್ಲಕ್ಕಿಗಳು ಆಗಮಿಸಿ ಬೆಳಿಗ್ಗೆ 10 ಗಂಟೆಗೆ ನಗರದ ಬಸ್‌ ನಿಲ್ದಾಣದಿಂದ ಮೆರವಣಿಗೆ ಹೊರಡಲಿದೆ. ನಗರದ ಪ್ರಮುಖ ಬೀದಿಗಳಲ್ಲಿ ಕಲಾತಂಡಗಳೊಂದಿಗೆ ಒಕ್ಕಲಿಗ ಕುಲಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 1ಗಂಟೆಗೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಚಂದ್ರಶೇಖರನಾಥ ಸ್ವಾಮೀಜಿ ಪಾಲ್ಗೊಳ್ಳುವರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಹಾಗೂ ಒಕ್ಕಲಿಗ ಜನಾಂಗದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು. ಹಾಸ್ಯ ಕಲಾವಿದ ಕೋಟೆ ನಾಗರಾಜ್‌ ಅವರಿಂದ ಮನರಂಜನಾ ಕಾರ್ಯಕ್ರಮವಿರುತ್ತದೆ. ತಾಲ್ಲೂಕಿನ ಸಮಸ್ತ ಒಕ್ಕಲಿಗ ಕುಲಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಆಚರಣಾ ಸಮಿತಿಯಿಂದ ಕೋರಲಾಗಿದೆ.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ೩೫೦೦ ಗೋಡಂಬಿ ಗಿಡಗಳ ವಿತರಣೆ

0

ಗೋಡಂಬಿಯಿಂದ ರೈತರಿಗೆ ಉತ್ತಮ ಆದಾಯ ಬರುತ್ತದೆ. ರೈತರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರೈತರಿಗೆ 3,500 ಗೋಡಂಬಿ ಗಿಡಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ತಿಳಿಸಿದರು.
ತಾಲ್ಲೂಕಿನ ಕೊತ್ತನೂರು ಗ್ರಾಮದ ರೈತ ರಘುರೆಡ್ಡಿ ಅವರ ತೋಟದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುಮಾರು 62 ಎಕರೆ ಪ್ರದೇಶದಲ್ಲಿ ಗೋಡಂಬಿ ಬೆಳೆಯನ್ನು ಬೆಳೆಯುವಷ್ಟು ಗಿಡಗಳನ್ನು ನೀಡುವ ಉದ್ದೇಶವಿದೆ. ಗಿಡಗಳನ್ನು ಸಮರ್ಪಕವಾಗಿ ನೆಟ್ಟು ಪೋಷಿಸಿದಲ್ಲಿ ಮುಂದಿನ ದಿನಗಳಲ್ಲಿ ಅವು ಆರ್ಥಿಕ ಮೂಲಗಳಾಗುತ್ತವೆ ಎಂದು ಹೇಳಿದರು.
ಬಿಜೆಪಿ ಮುಖಂಡ ಶಿವಕುಮಾರಗೌಡ ಮಾತನಾಡಿ, ಧರ್ಮಸ್ಥಳ ಗ್ರಾಮೀಣ ಯೋಜನೆಯಿಂದ ರೈತರಿಗೆ, ರೈತ ಮಹಿಳೆಯರಿಗೆ ಹೆಚ್ಚಿನ ಪ್ರಯೋಜನವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ರಾಧಾಕೃಷ್ಣರಾವ್‌ ಗೋಡಂಬಿ ನಾಟಿ ವಿಧಾನ, ನಿರ್ವಹಣೆ, ಗೊಬ್ಬರ ಬಳಕೆ ಬಗ್ಗೆ ವಿವರಿಸಿದರು.
ತಾಲ್ಲೂಕು ಯೋಜನಾಧಿಕಾರಿ ಮೋಹನ್‌, ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ ರಾಘವೇಂದ್ರ, ಕೃಷಿ ಮೇಲ್ವಿಚಾರಕ ಜನಾರ್ಧನ್‌, ವಲಯದ ಮೇಲ್ವಿಚಾರಕ ಶಶಿಕುಮಾರ್‌, ಗ್ರಾಮ ಪಂಚಾಯ್ತಿ ಸದಸ್ಯೆ ಗೌರಮ್ಮ, ಒಕ್ಕೂಟ ಪದಾಧಿಕಾರಿ ಶಶಿಕಲಾ ಹಾಗೂ ಪ್ರಗತಿಪರ ರೈತರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಯೋಧ ಮತ್ತು ರೈತ ಸಮಾಜದ ಎರಡು ಕಣ್ಣುಗಳಿದ್ದಂತೆ

0

ದೇಶದ ಗಡಿ ಕಾಯುವ ಯೋಧ ಮತ್ತು ಅನ್ನ ಕೊಡುವ ರೈತ ಸಮಾಜದ ಎರಡು ಕಣ್ಣುಗಳಿದ್ದಂತೆ. ಇವೆರಡರಲ್ಲಿ ಯಾವೊಂದಕ್ಕೂ ಹಾನಿಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗು ರಾಜ್ಯ ವಕ್ಕಲಿಗರ ಸಂಘದ ನಿರ್ದೇಶಕ ಯಲುವಹಳ್ಳಿ ಎನ್.ರಮೇಶ್ ತಿಳಿಸಿದರು.
ತಾಲ್ಲೂಕಿನ ಯಣ್ಣಂಗೂರು ಗ್ರಾಮದ ಹುತಾತ್ಮ ಯೋಧ ಗಂಗಾಧರ್ ಮನೆಗೆ ಭಾನುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿ ಯೋಧನ ಪತ್ನಿ ಶಿಲ್ಪಾ ಅವರಿಗೆ ೨೫ ಸಾವಿರ ರೂ ಆರ್ಥಿಕ ಸಹಾಯ ಮಾಡಿ ಅವರು ಮಾತನಾಡಿದರು.
ದೇಶಕ್ಕಾಗಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಗಡಿ ಕಾಯುವ ಯೋಧನ ಬಗ್ಗೆ ಪ್ರತಿಯೊಬ್ಬರೂ ಗೌರವ ಬೆಳೆಸಿಕೊಳ್ಳಬೇಕು. ಅವರು ಗಡಿ ಕಾಯುವುದರಿಂದಲೇ ಇಂದು ನಾವೆಲ್ಲಾ ನಿಶ್ಚಿಂತೆಯಿಂದ ರಾತ್ರಿ ನಿದ್ದೆ ಮಾಡುತ್ತಿದ್ದೇವೆ. ತಂದೆ, ತಾಯಿ, ಹೆಂಡತಿ, ಮಕ್ಕಳು ಎಲ್ಲರಿಂದ ದೂರವುಳಿದು ಸೇನೆಯಲ್ಲಿ ಹಗಲಿರುಳು ದುಡಿದು ಸುಮಾರು ೧೯ ವರ್ಷಗಳ ಕಾಲ ಸೇವೆ ಸಲ್ಲಿಸಿದ ತಾಲ್ಲೂಕಿನ ಯಣ್ಣಂಗೂರು ಗ್ರಾಮದ ಯೋಧ ಗಂಗಾಧರ್‌ರ ಸಾವಿನಿಂದ ತುಂಬಾ ನೋವಾಗಿದೆ ಎಂದರು.
ಮುಂಬರುವ ದಿನಗಳಲ್ಲಿ ಅವರ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ತಲುಪಿಸಲು ಪ್ರಾಮಾಣಿವಾಗಿ ಪ್ರಯತ್ನ ನಡೆಸುತ್ತೇನೆ. ಯೋಧನ ಪತ್ನಿಗೆ ಕೆಲಸ ಹಾಗು ಮಗನಿಗೆ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ತಮ್ಮ ಕೈಲಾದ ಸಹಾಯ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕರವೇ ರಾಜ್ಯಾಧ್ಯಕ್ಷ ಅಗಲಗುರ್ಕಿ ಚಲಪತಿ, ಯೋಧನ ತಂದೆ ಮುನಿಯಪ್ಪ, ತಾಯಿ ಲಕ್ಷ್ಮಮ್ಮ, ಪತ್ನಿ ಶಿಲ್ಪಾ, ಸಹೋದರ ರವಿಕುಮಾರ್, ಕೊತ್ತನೂರಿನ ಜಯಚಂದ್ರರೆಡ್ಡಿ, ರವಿ, ಪಾಪಿರೆಡ್ಡಿ, ವೆಂಕಟರೆಡ್ಡಿ ಹಾಜರಿದ್ದರು.