Home Blog Page 412

ಸಮಾಜಕ್ಕೆ ನಾವು ಸದಾ ಋಣಿಗಳಾಗಿರಬೇಕು

0

ನಮ್ಮನ್ನು ಪೊರೆಯುವ ಸಮಾಜಕ್ಕೆ ನಾವು ಸದಾ ಋಣಿಗಳಾಗಿರಬೇಕು. ನಮ್ಮ ಪರಿಸರಕ್ಕೆ ಹಸಿರಿನ ಕಾಣಿಕೆ, ಶುದ್ಧ, ಸ್ವಚ್ಛ, ನೈರ್ಮಲ್ಯದ ಪರಿಸರವನ್ನು ರೂಪಿಸುವ ಸಂಕಲ್ಪ ಮಾಡಬೇಕು ಎಂದು ಎಸ್‌.ಎನ್‌.ಕ್ರಿಯಾ ಟ್ರಸ್ಟ್‌ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್‌ನಲ್ಲಿರುವ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಎಸ್‌.ಎನ್‌.ಕ್ರಿಯಾ ಟ್ರಸ್ಟ್‌ ವತಿಯಿಂದ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ತಾಲ್ಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ತಾಲ್ಲೂಕಿನ ಹಲವು ಸಾಧಕರನ್ನು ಗೌರವಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವುದು ಹಾಗೂ ಎಲೆ ಮರೆಯ ಕಾಯಿಗಳಂತೆ ವಿವಿಧ ಕ್ಷೇತ್ರಗಳಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೆ ತೊಡಗಿಸಿಕೊಂಡಿರುವ ಸಾಧಕರನ್ನು ಸನ್ಮಾನಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.

ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್‌ನಲ್ಲಿರುವ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಎಸ್‌.ಎನ್‌.ಕ್ರಿಯಾ ಟ್ರಸ್ಟ್‌ ವತಿಯಿಂದ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವೀರಗಾಸೆ ಕಲಾವಿದ ಕೊತ್ತನೂರು ಗಂಗಾಧರ್‌ ನಾಲಿಗೆಯ ಮೇಲೆ ಕರ್ಪೂರವನ್ನು ಹಚ್ಚಿಕೊಂಡು ಜನರನ್ನು ಬೆರಗುಗೊಳಿಸಿದರು.

ಈಗಿನ ವಿದ್ಯಾರ್ಥಿಗಳೇ ಮುಂದಿನ ಭವಿಷ್ಯದ ರೂವಾರಿಗಳು. ಪ್ರತಿಯೊಬ್ಬರಲ್ಲೂ ಒಂದೊಂದು ಶಕ್ತಿಯಿರುತ್ತದೆ, ಆಸಕ್ತಿಯಿರುತ್ತದೆ. ತಮ್ಮ ಶಕ್ತಿಯನ್ನು ಗುರುತಿಸಿಕೊಂಡು ಸಾಧನೆ ಮಾಡಬೇಕು. ಸಮಾಜಕ್ಕೆ ಏನಾದರೂ ಹಿಂದಿರುಗಿಸುವ ಕೆಲಸವನ್ನೂ ಸಹ ಮಾಡಬೇಕು. ಪ್ರತಿಯೊಬ್ಬರ ಬೆಳವಣಿಗೆಯಲ್ಲೂ ಪೋಷಕರು, ಶಿಕ್ಷಕರು, ಸ್ನೇಹಿತರು ಮುಂತಾದವರ ಕಾಣಿಕೆಯಿರುತ್ತದೆ. ಬೆಳೆಯುವ ಹಾದಿಯನ್ನು ಮರೆಯಬಾರದು, ಇತರರಿಗೆ ಸಹಾಯ ಮಾಡುವ ಮನೋಭಾವವನ್ನು ಬಿಡಬಾರದು ಎಂದು ಹೇಳಿದರು.
ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್‌ನಲ್ಲಿರುವ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಎಸ್‌.ಎನ್‌.ಕ್ರಿಯಾ ಟ್ರಸ್ಟ್‌ ವತಿಯಿಂದ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕಲಾವಿದೆಯರಾದ ಸಿಂಧು ಆಚಾರ್‌ ಮತ್ತು ತೇಜಸ್ವಿನಿ ಮುರಳೀಧರನ್‌ ಭರತನಾಟ್ಯ ನೃತ್ಯವನ್ನು ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ತಾಲ್ಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಕಲಾವಿದೆಯರಾದ ಸಿಂಧು ಆಚಾರ್‌ ಮತ್ತು ತೇಜಸ್ವಿನಿ ಮುರಳೀಧರನ್‌ ಭರತನಾಟ್ಯ ನೃತ್ಯವನ್ನು, ನಗರದ ಲಿಟಲ್‌ ಸ್ಟಾರ್‌ ಜ್ಯೂನಿಯರ್‌ ಕಲಾವಿದರು ನೃತ್ಯವನ್ನು, ಯೋಗಪಟುಗಳು ಯೋಗಗುಚ್ಚವನ್ನು, ಕೊತ್ತನೂರು ಗಂಗಾಧರ್‌ ವೀರಗಾಸೆ ಕಲೆಯನ್ನು ಪ್ರದರ್ಶಿಸಿದರು.
ಶಾಶ್ವತ ನೀರಾವರಿ ಹೋರಾಟಗಾರ ಮಳ್ಳೂರು ಹರೀಶ್‌, ವೀರಗಾಸೆ ಕಲಾವಿದ ಕೊತ್ತನೂರು ಗಂಗಾಧರ್‌, ರಕ್ತದಾನಿ ಟಿ.ಟಿ.ನರಸಿಂಹಪ್ಪ, ಕ್ರೀಡಾಪಟು ನಾರಾಯಣಸ್ವಾಮಿ, ನಾಟಿ ಔಷಧಿ ತಜ್ಞ ತಲಕಾಯಲಬೆಟ್ಟ ನಾರಾಯಣಸ್ವಾಮಿ, ಮಾಜಿ ಸೈನಿಕ ಎಸ್‌.ವಿ.ಐಯ್ಯರ್‌, ಹರಿಕಥೆ ಕಲಾವಿದ ತಿಪ್ಪೇನಹಳ್ಳಿ ರಾಘವೇಂದ್ರ, ಕಲಾವಿದ ದೇವರಮಳ್ಳೂರು ಎ.ವೆಂಕೋಬರಾವ್‌, ವನ್ಯಜೀವಿ ಛಾಯಾಗ್ರಾಹಕ ಡಿ.ಜಿ.ಮಲ್ಲಿಕಾರ್ಜುನ, ಸಮಾಜ ಸೇವಕಿ ನಾಗಮ್ಮ, ಹಿತ್ತಲಹಳ್ಳಿ ನರಸಿಂಹಪ್ಪ, ಹಿತ್ತಲಹಳ್ಳಿ ಕೃಷ್ಣಪ್ಪ, ಮುನಿಕೃಷ್ಣಪ್ಪ, ಅಜೀಜ್‌ಸಾಬ್‌, ಕುಸ್ತಿಪಟು ಮಹಮ್ಮದ್‌, ಬೀದಿ ವ್ಯಾಪಾರಿ ಪಾರ್ವತಮ್ಮ, ಧನಂಜಯ ಅವರನ್ನು ಗೌರವಿಸಲಾಯಿತು.
ಆನೂರು ದೇವರಾಜ್‌, ತಾದೂರು ಮಂಜುನಾಥ್‌, ರವಿಪ್ರಕಾಶ್‌, ಹಿತ್ತಲಹಳ್ಳಿ ಸುರೇಶ್‌, ಮಳಮಾಚನಹಳ್ಳಿ ಬೈರೇಗೌಡ, ದಡಂಘಟ್ಟ ಅಶ್ವತ್ಥನಾರಾಯಣರೆಡ್ಡಿ, ದಾನೇಗೌಡ, ಮೌಲಾ, ಅಫ್ಸರ್‌, ಮಂಜುನಾಥ್‌, ನಟರಾಜ್‌, ವಿಶ್ವನಾಥ್‌ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಗಡಿ ಕಾಯುವ ಯೋಧರು ನಮ್ಮ ದೇಶದ ಅಮೂಲ್ಯ ಆಸ್ತಿ

0

ಅತ್ಯಂತ ಪ್ರತಿಕೂಲ ಸನ್ನಿವೇಶದಲ್ಲೂ ತಮ್ಮ ಪ್ರಾಣದ ಹಂಗು ತೊರೆದು ದೇಶದ ಗಡಿ ಕಾಯುವ ಯೋಧರು ನಮ್ಮ ದೇಶದ ಅಮೂಲ್ಯ ಆಸ್ತಿ ಎಂದು ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹುತಾತ್ಮ ಯೋಧ ಯಣ್ಣಂಗೂರಿನ ಗಂಗಾಧರ್‌ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಊರು, ಮನೆ, ತಂದೆ-ತಾಯಿ, ಸಹೋದರ, ಸಹೋದರಿ­ಯರು, ಪತ್ನಿ, ಗೆಳೆಯರ ಸಂಬಂಧಗಳನ್ನು ಕಳಚಿ­ಕೊಂಡು ಮಳೆ, ಚಳಿ, ಗಾಳಿ, ಬಿಸಿಲು ಎನ್ನದೇ ದೇಶದ ಗಡಿ ಕಾಯುವ ಯೋಧರ ಸೇವೆ ಬಲು ದೊಡ್ಡದು. ಜೀವನ ನಿರ್ವಹಣೆಗಾಗಿ ಹಲವು ಹುದ್ದೆಗಳನ್ನು ನಿರ್ವಹಿಸುವವರು ನಮ್ಮ ನಡುವೆಯೇ ಇದ್ದಾರೆ. ಆದರೆ, ಯೋಧರ ಕರ್ತವ್ಯ ಮಾತ್ರ ಇದೆಲ್ಲವನ್ನೂ ಮೀರಿದ ಸಂಗತಿಯಾಗಿದೆ. ನಮ್ಮ ನೆಮ್ಮದಿಯ ಬದುಕಿಗೆ ಅವರು ತಮ್ಮ ಪ್ರಾಣವನ್ನು ಪಣವಾಗಿಟ್ಟಿರುತ್ತಾರೆ. ದೇಶಕ್ಕಾಗಿ ವೀರ ಮರಣವನ್ನಪ್ಪಿರುವ ಯಣ್ಣಂಗೂರಿನ ಗಂಗಾಧರ್‌ ಅವರು ಚಿರಸ್ಮರಣೀಯರು ಎಂದು ಹೇಳಿದರು.
ಗ್ರಾಮ ಪಂಚಾಯ್ತಿ ಸದಸ್ಯ ಎ.ಎಂ.ತ್ಯಾಗರಾಜ್‌ ಮಾತನಾಡಿ, ಯಣ್ಣಂಗೂರಿನ ಗಂಗಾಧರ್‌ ಅವರಿಂದ ಪ್ರೇರಣೆ ಪಡೆದು ಅವರ ತಮ್ಮ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಸೇನೆಗೆ ಸೇರುವ ಗುರಿಯನ್ನು ಹೊಂದಬೇಕು. ಯೋಧರು ಹಾಗೂ ಅವರ ಕುಟುಂಬದವರಿಗೆ ಆತ್ಮಸ್ಥೈರ್ಯ ದೊರಕಿಸುವ ಕೆಲಸ ಮಾಡಿದರೆ ಅವರಿಂದ ಮತ್ತಷ್ಟು ಉತ್ತಮ ಸೇವೆ ದೇಶಕ್ಕೆ ದೊರಕುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹುತಾತ್ಮ ಯೋಧ ಗಂಗಾಧರ್‌ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲೆಂದು ಆಗಮಿಸಿದ್ದ ಯಾದಗಿರಿ ಜಿಲ್ಲೆಯಿಂದ ಈಶ್ವರ್‌ ಅವರ ದೇಶಪ್ರೇಮವನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಶಾಲೆಯ ವತಿಯಿಂದ ಈಶ್ವರ್‌ ಅವರನ್ನು ಗೌರವಿಸಲಾಯಿತು.
ಶಾಲೆಯ ಮುಖ್ಯಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ಶಿಕ್ಷಕರಾದ ಎಸ್‌.ಚಾಂದ್‌ಪಾಷ, ಎಂ.ಅಶೋಕ್‌, ಎಂ.ಭಾರತಿ, ಮುಖಂಡರಾದ ಲಕ್ಷ್ಮೀನಾರಾಯಣ್‌, ಆನಂದಮೂರ್ತಿ, ನರಸಿಂಹಮೂರ್ತಿ, ದಾಸಪ್ಪ ಹಾಜರಿದ್ದರು.

ದೇಶದ ಏಕತೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ ಶ್ಯಾಂ ಪ್ರಸಾದ್ ಮುಖರ್ಜಿ

0

ದೇಶದ ಏಕತೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ ಶ್ಯಾಂ ಪ್ರಸಾದ್ ಮುಖರ್ಜಿರವರ ಆದರ್ಶಗಳನ್ನು ಪ್ರತಿಯೊಬ್ಬರೂ ರೂಡಿಸಿಕೊಳ್ಳಬೇಕು ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ಹೇಳಿದರು.
ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಶುಕ್ರವಾರ ನಗರದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶ್ಯಾಂ ಪ್ರಕಾಶ್ ಮುಖರ್ಜಿ ರವರ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
೧೯೫೨ ರಲ್ಲಿ ಪ್ರಥಮವಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಭಾರತೀಯ ಜನಸಂಘ ಪಕ್ಷವನ್ನು ಹುಟ್ಟುಹಾಕಿದವರು ಶ್ಯಾಂ ಪ್ರಸಾದ್ ಮುಖರ್ಜಿ. ಅವರ ಅಧ್ಯಕ್ಷತೆಯಲ್ಲಿ ೧೯೮೦ ರ ಏಪ್ರಿಲ್ ೬ ರಂದು ಅಟಲ್‌ಬಿಹಾರಿ ವಾಜಪೇಯಿ ಹಾಗು ಲಾಲ್ ಕೃಷ್ಣ ಅಡ್ವಾಣಿಯವರನ್ನೊಳಗೊಂಡ ಬಿಜೆಪಿ ಪಕ್ಷ ಉದಯವಾಯಿತು. ಆದರೆ ಬಿಜೆಪಿ ಪಕ್ಷವು ರಾಷ್ಟ್ರದಲ್ಲಿ ಅಧಿಕಾರಕ್ಕೆ ಬರಲು ೨೫ ವರ್ಷಗಳ ಕಾಲ ಸಮಯ ಬೇಕಾಯಿತು ಎಂದರು.
ರಾಷ್ಟ್ರದ ಅಭಿವೃದ್ಧಿಯಾಗಬೇಕಾದರೆ ಅದು ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ. ರಾಷ್ಟ್ರದಲ್ಲಿ ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲಿ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುತ್ತಿವೆ ಎಂದರು.
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಜನವಿರೋಧಿ ನೀತಿಯನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಮಾಡುವುದರೊಂದಿಗೆ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಹುತಾತ್ಮ ಯೋಧ ಗಂಗಾಧರ್‌ಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಬಿ.ಜೆ.ಪಿ ಜಿಲ್ಲಾ ಉಪಾಧ್ಯಕ್ಷ ಸುರೇಂದ್ರಗೌಡ, ಪ್ರಧಾನ ಕಾರ್ಯದರ್ಶಿ ಶ್ರೀರಾಮರೆಡ್ಡಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ತರಬಳ್ಳಿ ಬಾಸ್ಕರ್‌ರೆಡ್ಡಿ, ಮುಖಂಡರಾದ ಶಿವಕುಮಾರಗೌಡ, ಸುರೇಶ್, ದಾಮೋದರ್‌, ಸುಜಾತಮ್ಮ, ಮುನಿರತ್ನಮ್ಮ, ರತ್ನಮ್ಮ ಹಾಜರಿದ್ದರು.

ಸಮಾಜದಲ್ಲಿ ಶಾಂತಿ, ಸೌಹಾರ್ಧ, ಸಾಮರಸ್ಯ, ಸಹಬಾಳ್ವೆ ಮುಖ್ಯ

0

ಸಮಾಜದಲ್ಲಿ ಶಾಂತಿ, ಸೌಹಾರ್ಧ, ಸಾಮರಸ್ಯ, ಸಹಬಾಳ್ವೆ ಮತ್ತು ಸಾಮಾಜಿಕ ಕಳಕಳಿ ಮೂಡಿಸುವುದು ಇಫ್ತಿಯಾರ್ ಕೂಟದ ಮೂಲ ಉದ್ದೇಶವಾಗಿದೆ ಎಂದು ಎಸ್.ಎನ್ ಕ್ರಿಯಾ ಟ್ರಸ್ಟ್‌ನ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ನಗರದ ಬಿಎಸ್‌ಎಂ ಶಾದಿ ಮಹಲ್‌ನಲ್ಲಿ ಶುಕ್ರವಾರ ಎಸ್.ಎನ್ ಕ್ರಿಯಾ ಟ್ರಸ್ಟ್ ವತಿಯಿಂದ ಮುಸ್ಲಿಂ ಬಾಂಧವರಿಗೆ ಉಚಿತವಾಗಿ ಅಕ್ಕಿ, ಎಣ್ಣೆ, ಶಾವಿಗೆ, ಬೇಳೆ, ಸಕ್ಕರೆ ಮುಂತಾದ ಪಡಿತರಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಡವರ ಸಂತೋಷದಲ್ಲಿ ನಾವು ಸಂತೋಷವನ್ನು ಕಾಣಬೇಕು. ಮುಸ್ಲಿಂ ಬಾಂಧವರು ಒಂದು ತಿಂಗಳ ಕಾಲ ದ್ವೇಷ, ವ್ಯಾಮೋಹ, ಮತ್ಸರಗಳನ್ನು ಬಿಟ್ಟು ಉಪವಾಸವಿದ್ದು ದೇವರ ಪ್ರಾರ್ಥನೆಯಲ್ಲಿ ತಲ್ಲೀನವಾಗಿರುತ್ತಾರೆ, ಇಂತಹ ಪವಿತ್ರ ರಂಜಾನ್ ಹಬ್ಬದ ಸಂದರ್ಭದಲ್ಲಿ ಬಡವರಿಗೆ ಪಡಿತರ ವಿತರಣೆಯನ್ನು ಮಾಡುತ್ತಿರುವುದು ಸಂತೋಷಕರವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಿಕ ಸೇವೆಗಳನ್ನು ಕೈಗೊಳ್ಳುವುದರ ಮೂಲಕ ಬಡವರ ಸೇವೆ ಮಾಡಲಾಗುವುದು ಎನ್ನುತ್ತಾ ತಾಲ್ಲೂಕಿನ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಬಾಷಯಗಳನ್ನು ಕೋರಿದರು.
ಕಾರ್ಯಕ್ರಮದಲ್ಲಿ ಸುಮಾರು ೨,೦೦೦ ಹೆಚ್ಚು ಬಡ ಮುಸ್ಲಿಂ ಬಾಂಧವರಿಗೆ ಪಡಿತರ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಆನೂರು ದೇವರಾಜ್‌, ಅಬ್ದುಲ್ ಅಜೀಜ್, ಬಾಷಾ ಸಾಬ್‌, ರಿಯಾಜ್‌ಬಾಷ, ಪೀರಾನ್‌ಸಾಬ್‌, ಅಕ್ಬರ್‌ ಸಾಬ್‌, ಅತಾವುಲ್ಲಾ ಸಾಬ್‌, ಚಾಂದ್‌ಪಾಷ, ಬಷೀರ್‌ಸಾಬ್‌, ವಜೀರ್‌ಪಾಷ, ಫಕೀರ್‌ಖಾನ್‌ ಫರ್ವರಿ, ಸರ್ದಾರ್‌ಖಾನ್‌, ಸೈಯದ್, ಮುನಿರ್‌ಸಾಬ್, ಅಮ್ಜದ್, ಅಕ್ಬರ್‌ಸಾಬ್, ಮುಸ್ತಿರ ಮಹಮದ್ ಸಾಬ್, ಶಫಿವುಲ್ಲಾ ಸಾಬ್, ದಸ್ತಗಿರಿ ಸಾಬ್, ಅಯುಬ್, ಮದೀನ್ ಸಾಬ್ ಹಾಜರಿದ್ದರು.

ನೋವು ಮಡುಗಟ್ಟಿದೆ ಯಣ್ಣಂಗೂರಿನಲ್ಲಿ

0

ಆ ತಂದೆಯ ಕಣ್ಣುಗಳಲ್ಲಿ ಮಡುಗಟ್ಟಿದ ನೋವು. ಹೇಳಿಕೊಳ್ಳಲಾಗದ ದುಃಖ ಕಾಣಿಸುತ್ತಿತ್ತು. ಕಿರಿಯ ಸಹೋದರ ಯೋಧನಾದರೂ ಸಹ ಒಡಹುಟ್ಟಿದವನ ಅಗಲಿಕೆ, ಒತ್ತರಿಸಿಕೊಂಡು ಬರುತ್ತಿರುವ ನೆನಪುಗಳ ಜೊತೆಗೆ ಅಂತ್ಯಸಂಸ್ಕಾರದ ಜವಾಬ್ದಾರಿ ಜರ್ಜರಿತಗೊಳಿಸಿತ್ತು.
ತಾಲ್ಲೂಕಿನ ಯಣ್ಣಂಗೂರಿನಲ್ಲಿ ಹುತಾತ್ಮ ಯೋಧ ಗಂಗಾಧರ್ ಮನೆಯಲ್ಲಿ ಶುಕ್ರವಾರ ಕಂಡು ಬಂದ ದೃಶ್ಯವಿದು.

ಹುತಾತ್ಮ ಯೋಧ ಗಂಗಾಧರ್ ತಂದೆ ಮುನಿಯಪ್ಪ

ಮಗನ ಸಾವಿನ ವಿಷಯ ತಿಳಿದು ರಕ್ತದೊತ್ತಡ ಏರಿ ಕುಸಿದ ತಾಯಿ ಲಕ್ಷ್ಮಮ್ಮ ಮತ್ತು ಗಂಗಾಧರ್ ಪತ್ನಿ ಹಾಗೂ ಮಗ ವಿಜಯಪುರದಲ್ಲಿದ್ದಾರೆ. ಸೇನೆಯಿಂದ ಮಗ ರಜೆಗಾಗಿ ಬರುತ್ತಾನೆ ಎಂದು ಕಾತುರದಿಂದ ನೋಡುತ್ತಿದ್ದ ಕಣ್ಣುಗಳು ಈಗ ಧ್ವಜವನ್ನು ಸುತ್ತಿಕೊಂಡು ಬರುತ್ತಿರುವ ಮಗನ ದೇಹಕ್ಕೆ ಎದುರು ನೋಡುವಂತಾಗಿದೆ.
ಅಂತಿಮ ಸಂಸ್ಕಾರಕ್ಕೆ ಸಿದ್ಧತೆ:

ಅಂತಿಮ ಸಂಸ್ಕಾರಕ್ಕೆಂದು ಮನೆಯ ಮುಂದಿನ ಹಿಪ್ಪುನೇರಳೆ ಸೊಪ್ಪಿನ ತೋಟದಲ್ಲಿ ಸಿದ್ದಪಡಿಸಿರುವ ಸ್ಥಳ

‘‘ಮಗ ನಮ್ಮ ಮುಂದೆಯೇ ಇರಲಿ’ ಎಂಬ ತಂದೆತಾಯಿರ ಬಯಕೆಯಿಂದ ಮನೆಯ ಮುಂದಿನ ಹಿಪ್ಪುನೇರಳೆ ತೋಟದಲ್ಲಿ ಸೊಪ್ಪನ್ನು ಕತ್ತರಿಸಿ ಸ್ವಲ್ಪ ಭಾಗವನ್ನು ಸಮಗೊಳಿಸಿದ್ದೇವೆ. ಕಣ್ಣ ಮುಂದಿದ್ದರೆ ಸದಾ ನೋವು ಅನುಭವಿಸುತ್ತಿರುತ್ತೀರಾ ಎಂದರೂ ಕೇಳುತ್ತಿಲ್ಲ. ಹಾಗಾಗಿ ಮನೆಯ ಮುಂದಿನ ತೋಟದಲ್ಲಿಯೇ ಶನಿವಾರ ಅಂತಿಮ ಸಂಸ್ಕಾರ ಮಾಡುತ್ತೇವೆ’ ಎಂದು ಗಂಗಾಧರ್ ಅವರ ಸ್ನೇಹಿತ ಕೃಷ್ಣ ತಿಳಿಸಿದರು.
ಮನಸ್ಸು ಮೃದು:
‘ಗಂಗಾಧರ ನೋಡಲು ಗಟ್ಟಿಮುಟ್ಟಾದ ವ್ಯಕ್ತಿಯಾದರೂ ಮನಸ್ಸು ಬಹಳ ಮೃದು. ಅವನ ಸ್ನೇಹ ವಲಯ ಬಹು ದೊಡ್ಡದಾಗಿತ್ತು. ಎಷ್ಟೇ ಕೆಲಸವಿದ್ದರೂ ಸ್ನೇಹಿತರ, ಬಂಧುಗಳ ಮನೆಗಳಿಗೆ ಹೋಗಿ ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುತ್ತಿದ್ದ. ಬಹಳ ಜೀವನಪ್ರೀತಿಯಿತ್ತು. ಸೇನೆಯಲ್ಲಿದ್ದುಕೊಂಡೇ ಮದುವೆಯಾದ ನಂತರ ತನ್ನ ಪತ್ನಿಯನ್ನು ಓದಿಸಿದ್ದಲ್ಲದೆ ತಾನೂ ದೂರಶಿಕ್ಷಣದ ಮೂಲಕ ಪದವಿಯನ್ನು ಪಡೆದಿದ್ದ. ಇನ್ನೊಂದು ವರ್ಷದ ಸೇವೆ ಮುಗಿದ ಮೇಲೆ ಗ್ರಾಮಕ್ಕೆ ಹಿಂದಿರುಗಬೇಕು, ಏನೆಲ್ಲ ಮಾಡಬೇಕು ಎಂಬ ಕನಸುಗಳನ್ನು ಕಾಣುತ್ತಿದ್ದ’ ಎಂದು ಗಂಗಾಧರ್ ಸ್ನೇಹಿತರು ನೆನೆಸಿಕೊಂಡರು.
ಅಣ್ಣನೇ ಪ್ರೇರಣೆ:
‘ನಾನು ಕೂಡ ಸೇನೆಗೆ ಸೇರಲು ಅಣ್ಣನೇ ಪ್ರೇರಣೆ. ಅವನನ್ನು ಕಂಡು ನನಗೂ ದೇಶ ಸೇವೆ ಮಾಡುವ ಆಸೆ ಹುಟ್ಟಿತು’ ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಹೇಳುತ್ತಾರೆ ಗಂಗಾಧರ್ ಅವರ ಕಿರಿಯ ಸಹೋದರ ರವಿಕುಮಾರ್. ರವಿಕುಮಾರ್ ಪ್ರಸ್ತುತ ಬಿಎಸ್ಎಫ್ನಲ್ಲಿ ಯೋಧನಾಗಿದ್ದು ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಜೆಯಿದ್ದುದರಿಂದ ಅವರು ಗ್ರಾಮಕ್ಕೆ ಬಂದಿದ್ದಾರೆ.
ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಲು ಬಂದ ದೇಶಪ್ರೇಮಿ:
ಯೋಧನ ಅಂತಿಮ ದರ್ಶನಕ್ಕೆ ಬಂದ ಯಾದಗಿರಿ ಜಿಲ್ಲೆಯ ಕೂಲಿ ಕಾರ್ಮಿಕ ಈಶ್ವರ್
ಯಾದಗಿರಿ ಜಿಲ್ಲೆಯ ಶಹಪುರ ತಾಲ್ಲೂಕಿನ ತಡಿಬಿಡಿ ಗ್ರಾಮದ ಈಶ್ವರ್ ಟಿವಿಯಲ್ಲಿ ಹುತಾತ್ಮನಾದ ಯೋಧನ ಬಗ್ಗೆ ತಿಳಿಯುತ್ತಿದ್ದಂತೆಯೇ ರೈಲ್ ಹತ್ತಿ ಹೊರಟು ಬಂದಿದ್ದಾರೆ. ರಾಜ್ಯದಲ್ಲಿ ಎಲ್ಲಿಯೇ ಯೋಧ ಹುತಾತ್ಮನಾದನೆಂದು ತಿಳಿದು ಬಂದರೂ ಅಲ್ಲಿಗೆ ಹೋಗಿ ಗೌರವಿಸಿ ಬರುವ ಪರಿಪಾಠವನ್ನು ಇವರು ಹೊಂದಿದ್ದಾರೆ. ಕೂಲಿ ಮಾಡಿ ಜೀವನ ನಡೆಸುವ ಇವರು ದೇಶಕ್ಕಾಗಿ ವೀರಮರಣವನ್ನಪ್ಪಿದ ಯೋಧರಿಗೆ ಗೌರವ ಸೂಚಿಸಲು ಕೂಡಿಟ್ಟ ಹಣವನ್ನು ವೆಚ್ಚ ಮಾಡುತ್ತಾರೆ.
‘ಬಾಯಿ ಮಾತಿನಲ್ಲಿ, ವ್ಯಾಟ್ಸಪ್, ಫೇಸ್ಬುಕ್ ಮೂಲಕ ಎಲ್ಲರೂ ಹುತಾತ್ಮ ಯೋಧನಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾರೆ, ಗೌರವ ಸೂಚಿಸುತ್ತಾರೆ. ಆದರೆ ಯಾದಗಿರಿ ಜಿಲ್ಲೆಯ ಈಶ್ವರ್ ಗಂಗಾಧರ್ ಪಾರ್ಥಿವ ಶರೀರದ ದರ್ಶನಕ್ಕೆಂದು ಬಂದಿದ್ದಾರೆ. ಗಂಗಾಧರ್ ಅವರ ದೇಹವು ಬರುವುದು ಶನಿವಾರ ಎಂದು ಹೇಳಿದರೂ ಇಲ್ಲಿಯೇ ಇದ್ದು ಗೌರವಿಸಿ ಹೋಗುತ್ತೇನೆ ಎನ್ನುತ್ತಾರೆ. ಇವರ ದೇಶಭಕ್ತಿ ಅನುಕರಣೀಯ’ ಎಂದು ಯಣ್ಣಂಗೂರು ಗ್ರಾಮದ ನರಸಿಂಹರಾಜು ತಿಳಿಸಿದರು.
ಯೋಧನ ಸ್ಮರಣಾರ್ಥ ಅರ್ಧಕ್ಕೆ ಹಾರಿದ ರಾಷ್ಟ್ರಧ್ವಜ:
ಯಣ್ಣಂಗೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹುತಾತ್ಮ ಯೋಧ ಗಂಗಾಧರ್ ಭಾವಚಿತ್ರವನ್ನಿಟ್ಟು ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಮೌನಾಚರಣೆ ಮಾಡುವ ಮೂಲಕ ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಿದರು.
ಗಂಗಾಧರ್ ಕುರಿತ ಮಾಹಿತಿ:
ಎಂ.ಗಂಗಾಧರ್ (೩೯), ಬೆಟಾಲಿಯನ್-೬೬, ಬ್ಯಾಡ್ಜ್ ನಂ ೪೯೧.ರೋಲ್ ನಂ ೯೮೦೦೯೩೧೨, ಸಿ ಕಂಪೆನಿ.
ಜನ್ಮ ದಿನಾಂಕ : 1978ರ ಜೂನ್ 10, ಸೇವೆಗೆ ಸೆರಿದ ದಿನಾಂಕ : 1998ರ ಆಗಸ್ಟ್ 20
ರಾಜಾಸ್ಥಾನದ ಜೋಧ್ಪುರದ ಫ್ರಂಟ್ ಏರ್ನಲ್ಲಿ ತರಬೇತಿ ಮುಗಿಸಿ ಜಮ್ಮುವಿನ ಪಲೋಡ, ಅಕ್ಕನೂರು, ಪಂಥಾಚೌಕ್, ಗುಲ್, ಪಂಜಾಬ್, ಕಾಶ್ಮೀರದ ಲೇ, ಪಶ್ಚಿಮಬಂಗಾಲದ ಸಿಲ್ಲಿಗುರಿ ಸೇರಿದಂತೆ ಡಾರ್ಜಲಿಂಗ್ನ ಗಡಿಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಮುಂದಿನ ೨೦೧೮ ನೇ ಸಾಲಿನ ಆಗಸ್ಟ್ ೨೦ ಕ್ಕೆ ತಮ್ಮ ೨೦ ವರ್ಷದ ಸೇವೆ ಪೂರ್ಣಗೊಳಿಸಿ ಊರಿಗೆ ಬಂದು ವ್ಯವಸಾಯ ನೋಡಿಕೊಳ್ಳುತ್ತಾ ತಮ್ಮ ಪತ್ನಿ ನಡೆಸುತ್ತಿರುವ ಖಾಸಗಿ ಕ್ಲಿನಿಕ್ ಬಳಿ ಮೆಡಿಕಲ್ ಸ್ಟೋರ್ ತೆಗೆಯಬೇಕು ಎಂಬ ಆಸೆ ಹೊಂದಿದ್ದರು ಎನ್ನಲಾಗಿದೆ.
ಗಣ್ಯರಿಂದ ಸಾಂತ್ವನ:
ಶಾಸಕ ಎಂ.ರಾಜಣ್ಣ ಶುಕ್ರವಾರ ಹುತಾತ್ಮ ಯೋಧ ಗಂಗಾಧರ್ ಮನೆಗೆ ಭೇಟಿ ನೀಡಿ ಗಂಗಾಧರ್ ತಂದೆ ಮತ್ತು ಸಹೋದರನಿಗೆ ಸಾಂತ್ವನ ಹೇಳಿದರು. ‘ಗಂಗಾಧರ್ ದೇಹವನ್ನು ಜಂಗಮಕೋಟೆಗೆ ನೇರವಾಗಿ ತರುವ ಬದಲು ಮೇಲೂರಿನಿಂದ ಶಿಡ್ಲಘಟ್ಟಕ್ಕೆ ತಂದು ನಂತರ ಜಂಗಮಕೋಟೆಗೆ ತೆಗೆದುಕೊಂಡು ಬನ್ನಿ. ತಾಲ್ಲೂಕು ಆಡಳಿತವನ್ನೂ ಈ ಬಗ್ಗೆ ಸಹಕರಿಸಲು ಕೋರುತ್ತೇನೆ. ನಗರ ಭಾಗದ ಜನರು ಕೂಡ ಹುತಾತ್ಮ ಯೋಧನ ಅಂತಿಮ ದರ್ಶನ ಪಡೆಯಲಿ’ ಎಂದು ಶಾಸಕ ಎಂ.ರಾಜಣ್ಣ ಕೋರಿದರು. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ತಾಲ್ಲೂಕು ಪಂಚಾಯ್ತಿ ಸದಸ್ಯೆ ಶೋಭಾ ಶಶಿಕುಮಾರ್, ನಂದಿನಿ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಗುಡಿಯಪ್ಪ, ಗ್ರಾಮ ಪಂಚಾಯ್ತಿ ಸದಸ್ಯ ಎ.ಎಂ.ತ್ಯಾಗರಾಜ್, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಭೇಟಿ ನೀಡಿದ್ದರು.
–ಡಿ.ಜಿ.ಮಲ್ಲಿಕಾರ್ಜುನ

ಶುದ್ದ ಕುಡಿಯುವ ನೀರಿನ ಘಟಕ ಕಾಮಗಾರಿಗೆ ಗುದ್ದಲಿಪೂಜೆ

0

ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಶುದ್ದ ನೀರಿನ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಅಶೋಕ ರಸ್ತೆಯ ದ್ವಿಮುಖ ಗಣಪತಿ ದೇವಾಲಯದ ಪಕ್ಕದಲ್ಲಿ ಸುಮಾರು ೧೦ ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಶುದ್ದ ಕುಡಿಯುವ ನೀರಿನ ಘಟಕ ಕಾಮಗಾರಿಗೆ ಬುಧವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಕಲುಷಿತ ನೀರಿನ ಸೇವನೆಯಿಂದ ಸಾರ್ವಜನಿಕರು ವಿವಿಧ ಖಾಯಿಲೆಗಳಿಗೆ ತುತ್ತಾಗುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ಮಾಣಕ್ಕೆ ಮುಂದಾಗಿದ್ದು ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನಗಳಲ್ಲಿ ಈಗಾಗಲೇ ಶುದ್ದ ಕುಡಿಯುವ ನೀರಿನ ಘಟಕಗಳ ಉದ್ಘಾಟನೆಯಾಗಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿಯೂ ಶುದ್ದ ನೀರಿನ ಘಟಕಗಳನ್ನು ಸ್ಥಾಪಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಶುದ್ದ ನೀರಿನ ಘಟಕ ಸಾರ್ವಜನಿಕರ ಸ್ವತ್ತಾಗಿದ್ದು ಇದರ ನಿರ್ವಹಣೆ ಸೇರಿದಂತೆ ಘಟಕದ ಸುತ್ತಲೂ ನೈರ್ಮಲ್ಯ ಕಾಪಾಡಲು ನಗರಸಭೆ ಅಧಿಕಾರಿಗಳು ಸೇರಿದಂತೆ ನಾಗರಿಕರು ಸಹಕರಿಸಬೇಕು. ಪ್ರತಿಯೊಬ್ಬರೂ ಶುದ್ದ ನೀರಿನ ಸೇವನೆ ಮಾಡುವುದರಿಂದ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಮುಖಂಡರಾದ ಲಕ್ಷ್ಮಿನಾರಾಯಣ (ಲಚ್ಚಿ), ಸೀನಪ್ಪ, ಶ್ರೀನಿವಾಸ್ (ಚಿನ್ನಿ), ಕೇಶವಣ್ಣ, ಜೆ.ವೆಂಕಟಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಘುನಾಥ್, ತುಮ್ಮನಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುರೇಂದ್ರಗೌಡ, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಗುರುರಾಜ್‌ರಾವ್, ಮಂಜುನಾಥ್ ಹಾಜರಿದ್ದರು.

ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್‌ ನಿರ್ಮಿಸಿ

0

ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಂಪೌಂಡ್‌ ಇಲ್ಲದ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್‌ ನಿರ್ಮಿಸಲು ನರೇಗಾದಲ್ಲಿ ಅವಕಾಶವಿದೆ. ಆದಷ್ಟು ಬೇಗ ಯೋಜನೆಯ ಪ್ರಸ್ತಾವನೆಯನ್ನು ಸಲ್ಲಿಸಿ, ಅನುಮೋದನೆಯನ್ನು ಪಡೆದು ಕೆಲಸ ಪ್ರಾರಂಭಿಸಿ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯ್ತಿಗೆ ಬುಧವಾರ ಭೇಟಿ ನೀಡಿ ವಿವಿಧ ದಾಖಲೆಗಳನ್ನು ಪರಿಶೀಲಿಸಿದ ನಂತರ ಅವರು ಮಾತನಾಡಿದರು.
ನರೇಗಾ ಯೋಜನೆಯಲ್ಲಿ ಕಳೆದ ಸಾಲಿಗಿಂತ ಹತ್ತುಪಟ್ಟು ಕೆಲಸವನ್ನು ಮಾಡಿರುವುದು ಅಭಿನಂದನೀಯ. ಆದರೆ ಇನ್ನೂ ಹೆಚ್ಚು ಕೆಲಸ ಮಾಡಿಸಿ. ಇದರಿಂದ ಗ್ರಾಮಸ್ಥರಿಗೆ ಕೆಲಸ ಹಾಗೂ ಹಣ ಸಿಗುತ್ತದೆ. ಬಯಲು ಶೌಚಾಲಯ ಮುಕ್ತ ಗ್ರಾಮ ಪಂಚಾಯ್ತಿಯನ್ನಾಗಿಸಬೇಕು. ಅದಕ್ಕಾಗಿ ಎಲ್ಲಾ ಸದಸ್ಯರು ಮತ್ತು ಅಧಿಕಾರಿಗಳು ಶ್ರಮಿಸಬೇಕು. ಕುಡಿಯುವ ನೀರು ಯಾವುದೇ ಗ್ರಾಮದಲ್ಲೂ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿದರು.
ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನೀಲಗಿರಿ ಗಿಡಗಳಿರಬಾರದು. ಸರ್ಕಾರಿ ಜಾಗಗಳಲ್ಲಿ ನರೇಗಾ ಯೋಜನೆಯಡಿ ಗಿಡಗಳನ್ನು ನೆಡುವ ಅವಕಾಶವಿದ್ದು ಹಸಿರನ್ನು ಬೆಳೆಸುವ ಯೋಜನೆಯನ್ನು ಯಶಸ್ವಿಯಾಗಿ ಮಾಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ವಿಕಾಸ ಯೋಜನೆಯಡಿ ಎಲ್‌.ಮುತ್ತುಗದಹಳ್ಳಿಯಲ್ಲಿ ನಡೆದಿರುವ ಕಾಮಗಾರಿಗಳು, ನರೇಗಾ ಯೋಜನೆಯಡಿ ವಿವಿಧ ಗ್ರಾಮಗಳಲ್ಲಿ ನಡೆದಿರುವ ಕಾಮಗಾರಿಗಳು, ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಆಗಿರುವ ಶೌಚಾಲಯಗಳ ಪ್ರಗತಿ, ಕುಡಿಯುವ ನೀರಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಪುಟ್ಟಯ್ಯ, ಸಹಾಯಕ ಎಂಜಿನಿಯರ್‌ ವಾದಿರಾಜ್‌, ಗ್ರಾಮ ಪಂಚಾಯ್ತಿ ಸದಸ್ಯರಾದ ಬಿ.ಎಂ.ಜಯರಾಮ್‌, ಎ.ಎಂ.ತ್ಯಾಗರಾಜ್‌, ಅಭಿವೃದ್ಧಿ ಅಧಿಕಾರಿ ಅಂಜನ್‌ಕುಮಾರ್‌, ಕಾರ್ಯದರ್ಶಿ ಶ್ರೀನಿವಾಸ್‌, ಮೂರ್ತಿ ಹಾಜರಿದ್ದರು.

ವಿಶ್ವ ಯೋಗ ದಿನಾಚರಣೆ

0

ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮರಗಳ ಕೆಳಗೆ ವಿದ್ಯಾರ್ಥಿಗಳು ಬುಧವಾರ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಯೋಗಾಭ್ಯಾಸ ಮಾಡಿದರು.

ಬದಲಾಗುತ್ತಿರುವ ಜೀವನ ಶೈಲಿಗೆ ಯೋಗ ಅವಶ್ಯಕ

0

ಬದಲಾಗುತ್ತಿರುವ ಜೀವನ ಶೈಲಿ ಹಾಗೂ ಆಹಾರ ಪದ್ದತಿಯಿಂದಾಗಿ ಈಚೆಗೆ ವಿವಿಧ ರೀತಿಯ ಖಾಯಿಲೆಗಳು ಬರುತ್ತಿದ್ದು ಇವುಗಳನ್ನು ತಡೆಗಟ್ಟಲು ಯೋಗ ತುಂಬಾ ಸಹಕಾರಿಯಾಗಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತುಮಕೂರು ವಿಭಾಗದ ಗ್ರಾಮವಿಕಾಸ್ ಪ್ರಮುಖ್‌ ರಾಜಮೋಹನ್‌ಜಿ ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯೋಗ ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಹುಟ್ಟಿ ಬೆಳೆದದ್ದು ಇದೀಗ ಇಡೀ ವಿಶ್ವವೆಲ್ಲಾ ಅದನ್ನೊಪ್ಪಿಕೊಂಡು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುತ್ತಿದೆ. ಹಾಗಾಗಿ ಯುವಪೀಳಿಗೆ ಮುಂದಿನ ದಿನಗಳಲ್ಲಿ ಆರೋಗ್ಯವಂತ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಯೋಗವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲ್ಲೂಕು ಬೌದ್ದಿಕ್ ಪ್ರಮುಖ್ ನಾಗರಾಜ್‌ಜಿ ಮಾತನಾಡಿ, ಯೋಗವನ್ನು ಮಾಡುವುದರಿಂದ ದೈಹಿಕವಾಗಿ ಸಮತೋಲನ ಕಾಪಾಡಿಕೊಳ್ಳುವುದರ ಜೊತೆಗೆ, ಮಾನಸಿಕವಾಗಿ ನೆಮ್ಮದಿಯನ್ನು ಕಾಣಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಪ್ರಮುಖವಾಗಿ ಯುವಜನತೆ ತಮ್ಮ ಜೀವನದುದ್ದಕ್ಕೂ ಯೋಗವನ್ನು ಒಂದು ಹವ್ಯಾಸವನ್ನಾಗಿ ಮಾಡಿಕೊಳ್ಳುವ ಮೂಲಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಯೋಗ ಕಾರ್ಯಕ್ರಮದಲ್ಲಿ ಸುಮಾರು ೧೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಯೋಗ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ತಾಡಾಸನ, ಅರ್ಧಚಂದ್ರಾಸನ, ಪದ್ಮಾಸನ, ಅರ್ಧಕಟ್ಟಿ ಚಕ್ರಾಸನ, ವೃಕ್ಷಾಸನ, ಸೇರಿದಂತೆ ವಿವಿಧ ಆಸನಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಮಕ್ಕಳಿಗೆ ರಾಜಮೋಹನ್‌ಜಿ ಯೋಗಾಭ್ಯಾಸ ಮಾಡಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆನಂದ್, ಪ್ರಭಾರಿ ಪ್ರಾಂಶುಪಾಲ ಸಿ.ವೆಂಕಟಶಿವಾರೆಡ್ಡಿ, ಪ್ರಾಧ್ಯಾಪಕರಾದ ಎಚ್.ಸಿ.ಮುನಿರಾಜು, ಸಿಎಂಟಿ ಕಂಪ್ಯೂಟರ್ಸ್‌ನ ರಮೇಶ್, ಸರ್ವೋದಯ ಸ್ವಯಂ ಸೇವಾ ಸಂಸ್ಥೆಯ ಕೆ.ನರೇಶ್‌ಕುಮಾರ್, ಮಂಜುನಾಥ್, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಎಸ್.ವಿ.ನಾಗರಾಜ್‌ರಾವ್, ಎ.ಎಂ.ತ್ಯಾಗರಾಜ್, ಕೆ.ಅಶ್ವಥ್ ಹಾಜರಿದ್ದರು.

ಶಿಡ್ಲಘಟ್ಟ ತಾಲ್ಲೂಕಿಗೆ ಮೂರನೇ ‘ಕೃಷಿ ಪಂಡಿತ’ ಪ್ರಶಸ್ತಿ

0

ಕೃಷಿ ರಂಗದಲ್ಲಿ ಶ್ರೇಷ್ಠ ಸಾಧನೆ ಮಾಡಿದವರಿಗೆ ನೀಡುವ ‘ಕೃಷಿ ಪಂಡಿತ’ ಪ್ರಶಸ್ತಿಯು ತಾಲ್ಲೂಕಿನ ಘಟಮಾರನಹಳ್ಳಿಯ ಪ್ರಗತಿಪರ ರೈತ ಜಿ.ಬಿ.ಆಂಜಿನಪ್ಪ ಅವರಿಗೆ ಲಭಿಸಿದೆ. ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಬುಧವಾರ ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಮತ್ತು 25 ಸಾವಿರ ರೂಗಳ ಚೆಕ್‌ಅನ್ನು ಅವರು ಸ್ವೀಕರಿಸಿದ್ದಾರೆ.
2013–14ನೇ ಸಾಲಿನ ‘ಕೃಷಿ ಪಂಡಿತ’ ಪ್ರಶಸ್ತಿಯನ್ನು ಸಮಗ್ರ ಕೃಷಿ ಪದ್ಧತಿ ಹಾಗೂ ಬೆಳೆ ವೈವಿದ್ಧೀಕರಣ ವಿಭಾಗದಲ್ಲಿ ಆಂಜಿನಪ್ಪ ಅವರಿಗೆ ನೀಡಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಐವರು ರೈತರಿಗೆ ಈವರೆಗೆ ‘ಕೃಷಿ ಪಂಡಿತ’ ಪ್ರಶಸ್ತಿಯು ಲಭಿಸಿದ್ದು, ಅವರಲ್ಲಿ ಶಿಡ್ಲಘಟ್ಟ ತಾಲ್ಲೂಕನವರು ಮೂವರು ರೈತರಿದ್ದಾರೆ. ತಾಲ್ಲೂಕಿನ ಆನೂರಿನ ವೀರಕೆಂಪಣ್ಣ ಮತ್ತು ಹಿತ್ತಲಹಳ್ಳಿಯ ಎಚ್‌.ಜಿ.ಗೋಪಾಲಗೌಡ ಈವರೆಗೆ ಕೃಷಿ ಪಂಡಿತರಾಗಿದ್ದು, ಈಗ ಅವರೊಂದಿಗೆ ಘಟಮಾರನಹಳ್ಳಿಯ ರೈತ ಜಿ.ಬಿ.ಆಂಜಿನಪ್ಪ ಸೇರಿದ್ದಾರೆ.
ರೇಷ್ಮೆ, ರಾಗಿ, ತೊಗರಿ, ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವ, ಹೈನುಗಾರಿಕೆಯನ್ನೂ ಸಹ ಹೊಂದಿರುವ 62 ವರ್ಷ ವಯಸ್ಸಿನ ಘಟಮಾರನಹಳ್ಳಿಯ ಪ್ರಗತಿಪರ ರೈತ ಜಿ.ಬಿ.ಆಂಜಿನಪ್ಪ ಅವರು ಓದಿರುವುದು ದ್ವಿತೀಯ ಪಿಯುಸಿ. ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ, ವಿಜಯಪುರದ ಜ್ಯೂಮಿಯರ್‌ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದಿ ನಂತರ ಕೃಷಿಯಲ್ಲಿ ತೊಡಗಿಸಿಕೊಂಡರು. ಇವರು ತಮ್ಮ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ಸಮಗ್ರ ಕೃಷಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿಗೆ ಮೂರನೇ ‘ಕೃಷಿ ಪಂಡಿತ’ ಪ್ರಶಸ್ತಿಯು ಲಭಿಸಿರುವುದು ರೈತವಲಯದಲ್ಲಿ ಉತ್ತೇಜಕರ ಸಂಗತಿಯಾಗಿದೆ.

ಯೋಗವು ಭಾರತದ ಕೊಡುಗೆ

0

ಪ್ರತಿ ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಉನ್ನತಿಗೆ ಯೋಗ ಸಹಕಾರಿಯಾಗಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಕೋಟೆ ವೃತ್ತದಲ್ಲಿ ಬುಧವಾರ ಮುಂಜಾನೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಆಯೋಜಿಸಿದ್ದ ಮೂರನೇ ವಿಶ್ವ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕ್ರಿ.ಪೂ 3ನೇ ಶತಮಾನದಲ್ಲಿದ್ದ ಪತಂಜಲಿ ಋಷಿಯ ಚಿಂತನೆಯ ಫಲವಾದ ಯೋಗ ಬರೀ ಶಾಸ್ತ್ರವಾಗದೆ, ಆಚರಣೆ, ಅಭ್ಯಾಸವಾಗಿ ಇಲ್ಲಿ ತನಕ ಬೆಳೆದು ಬಂದಿದೆ. ಯೋಗವು ಭಾರತದ ಕೊಡುಗೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಒತ್ತಡದ ಬದುಕಿನಿಂದ ಮತ್ತು ಆಧುನಿಕ ಆಹಾರ ಪದ್ಧತಿಯಿಂದಾಗಿ ನಾನಾ ಖಾಯಿಲೆಗಳಿಂದ ಜನರು ಬಳಲುತ್ತಿದ್ದು, ಇದಕ್ಕೆ ಯೋಗ ಪರಿಹಾರವಾಗಲಿದೆ ಎಂದು ಹೇಳಿದರು.

ಯೋಗಬಂಧುಗಳಿಂದ ಸಾಮೂಹಿಯ ಯೋಗ ಪ್ರದರ್ಶನ

ಪತಂಜಲಿ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷ ಶಂಕರ್ ಮಾತನಾಡಿ, ಜೂ.21 ದೀರ್ಘಕಾಲ ಹಗಲು ಹೊಂದಿರುವ ದಿನ. ಆದಿ ಕಾಲದಲ್ಲಿ ಸೂರ್ಯಾಭಿಮುಖವಾಗಿ ದೃಷ್ಟಿ ನೆಟ್ಟು ಧೀ ಶಕ್ತಿ ಉದ್ದೀಪನಗೊಳಿಸುತ್ತಿದ್ದ ದಿನ ಇದಾಗಿದೆ ಎಂದು ನಂಬಲಾಗಿದೆ. ಹೀಗೆ ಪಡೆದ ಯೋಗಶಕ್ತಿಯನ್ನು ಭಾರತದ ಋಷಿಗಳು ವಿಶ್ವದೆಲ್ಲೆಡೆ ಹರಡಿದರು. ಹೀಗಾಗಿ, ಇದೇ ದಿನ ಸೂಕ್ತ ಎಂದು ಆಯ್ಕೆ ಮಾಡಲಾಗಿದೆ. ವಿಶ್ವದ ನೂರಾರು ರಾಷ್ಟ್ರಗಳಲ್ಲಿ ಇಂದು ‘ವಿಶ್ವ ಯೋಗ ದಿನಾಚರಣೆ’ ನಡೆಸಲಾಗುತ್ತಿರುವುದು ಯೋಗದ ಹಿರಿಮೆಯನ್ನು ತಿಳಿಸುತ್ತದೆ. ಭಾರತೀಯ ಯೋಗ ಪದ್ಧತಿಗೆ ವಿಶ್ವಮಾನ್ಯತೆ ದೊರಕಿರುವುದು ಹೆಮ್ಮೆಯ ಸಂಗತಿ ಎಂದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಯೋಗಾಸನಗಳ ಪ್ರದರ್ಶನ, ಪ್ರಾಣಾಯಾಮ, ಭಜನೆ ಮತ್ತು ಶೋಭಾಯಾತ್ರೆಯನ್ನು ಆಯೋಜಿಸಲಾಗಿತ್ತು. ಪ್ರತಿಯೊಂದು ಆಸನಗಳನ್ನು ಪ್ರದರ್ಶಿಸುವಾಗ ಅವುಗಳಿಂದಾಗುವ ಉಪಯೋಗಗಳ ಬಗ್ಗೆ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ವಿವರಿಸಿದರು.

ಕುಡಿಯುವ ನೀರಿನಲ್ಲಿ ಮಿಶ್ರಣವಾದ ಚರಂಡಿ ನೀರು

0

ನಗರದ ಎರಡನೇ ವಾರ್ಡಿನಲ್ಲಿ ಚರಂಡಿಗಳನ್ನು ಸರಿಯಾಗಿ ಸ್ವಚ್ಛ ಮಾಡದೆ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್‌ ಸರಿಪಡಿಸದ ಕಾರಣ ಕುಡಿಯುವ ನೀರಿನೊಂದಿಗೆ ತ್ಯಾಜ್ಯದ ನೀರು ಮಿಶ್ರಿತವಾಗಿ ಬರುತ್ತಿದೆ.
ಈ ಭಾಗದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಸಂತೆ ಬೀದಿಯ ಬಳಿಯಲ್ಲೇ ಇರುವುವ ಇಲ್ಲಿ ರಸ್ತೆ ಬದಿಯಲ್ಲಿ ಬಿದ್ದ ಕಸವನ್ನು ಸ್ವಚ್ಚ ಮಾಡದೆ ಕಸ ಕೊಳೆತು ದುರ್ನಾತ ಬೀರುತ್ತಿದೆ. ಕಸದಿಂದ ಸೊಳ್ಳೆಗಳ ಉತ್ಪಾದನೆ ಹೆಚ್ಚಾಗಿ ಸುತ್ತಮುತ್ತಲಿನ ಜಾಗಗಳಲ್ಲಿ ಸೊಳ್ಳೆ ನೊಣಗಳ ಕಾಟ ಜಾಸ್ತಿಯಾಗಿದೆ. ಡೆಂಗ್ಯೂ, ಚಿಕನ್ ಗುನ್ಯಾ ಮತ್ತಿತತರ ಕಾಯಿಲೆಗಳು ಬರುವ ಬೀತಿಯಿಂದ ಆತಂಕ ಪಡುವಂತಾಗಿದೆ ಎಂದು ಇಲ್ಲಿನ ನಿವಾಸಿ ವಿಜಯ್‌ ತಿಳಿಸಿದ್ದಾರೆ.
ಈಗಾಗಲೇ ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಈಗಲಾದರೂ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಚರಂಡಿಗಳನ್ನು, ಕಸದ ರಾಶಿಗಳನ್ನು ಸ್ವಚ್ಚಮಾಡಬೇಕೆಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

ಡಾ. ಅಂಬೇಡ್ಕರ್ ಅವರ ಆಶಯಗಳನ್ನು ನೆರವೇರಿಸಿ

0

ಶೋಷಿತರಿಗೆ ನ್ಯಾಯ ಸಿಗಬೇಕು. ಸಮಾಜದಲ್ಲಿ ಸಮಾನತೆಯಿರಬೇಕೆಂಬ ಉದ್ದೇಶವನ್ನು ಹೊಂದಿದ್ದ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಆಶಯಗಳನ್ನು ನೆರವೇರಿಸಲು ಶ್ರಮಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಗಂಗಾಧರಪ್ಪ ತಿಳಿಸಿದರು.
ನಗರದ ಸ್ತ್ರೀ ಶಕ್ತಿ ಭವನದಲ್ಲಿ ಮಂಗಳವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ೪೨ನೇ ಜಯಂತ್ಯುತ್ಸವ ಹಾಗೂ ತಾಲ್ಲೂಕು ಸಮಿತಿಯ ಸರ್ವಸದಸ್ಯರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸುಮಾರು ೫೦ವರ್ಷಗಳ ಹಿಂದೆ ದಲಿತರ ಸ್ಥಿತಿ ದಯನೀಯವಾಗಿದ್ದು, ಅವರ ಉದ್ದಾರಕ್ಕಾಗಿ ಪ್ರೊ.ಕೃಷ್ಣಪ್ಪ ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ಥಾಪಿಸಿದ್ದರು. ಅದರ ಶಾಖೆಗಳನ್ನು ರಾಜ್ಯಾದ್ಯಂತ ಸ್ಥಾಪಿಸಲು ಬಹಳ ಕಷ್ಟ ಪಟ್ಟಿದ್ದರು. ಅವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಗಳು ಮೂಲ ಧ್ಯೇಯೋದ್ದೇಶಗಳನ್ನು ಮರೆಯಬಾರದು. ಸಂಘಟನೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಎಲ್ಲರಿಗೆ ಸೇರಿದ್ದು, ತಾಲ್ಲೂಕಿನಲ್ಲಿ ಸಂಘಟನೆಯ ವಿಚಾರದಲ್ಲಿ ನಿರುತ್ಸಾಹ ತೋರುತ್ತಿದ್ದು, ದೀನದಲಿತರ ಶ್ರೇಯೋಭಿವೃದ್ಧಿಗಾಗಿ ಸಂಘಟನೆಯನ್ನು ಉಳಿಸಿ ಬೆಳೆಸಿ ಎಂದು ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಅರುಣ್ ಕುಮಾರ್, ಮುಖಂಡರಾದ ನರಸಿಂಹಯ್ಯ, ಕಡೇನಹಳ್ಳಿ ಕದಿರಪ್ಪ, ವಿಜಯನರಸಿಂಹಪ್ಪ, ವೆಂಕಟೇಶ್, ಚಂದ್ರಣ್ಣ ಕಾರ್ಯಕ್ರಮದಲ್ಲಿ ಹಾಜರಿದ್ದರು.
 

ಕನ್ನಪ್ಪನಹಳ್ಳಿಯಲ್ಲಿ ಊರಜಾತ್ರೆ

0

ಶಿಡ್ಲಘಟ್ಟ ತಾಲ್ಲೂಕಿನ ಪಲಿಚೇರ್ಲು ಗ್ರಾಮ ಪಂಚಾಯ್ತಿಯ ಕನ್ನಪ್ಪನಹಳ್ಳಿ ಗ್ರಾಮದಲ್ಲಿ ಇಪ್ಪತ್ತೆರಡು ವರ್ಷಗಳ ನಂತರ ಮಂಗಳವಾರ ಊರಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಿದ್ದು, ಹೆಣ್ಣುಮಕ್ಕಳು ದೀಪಗಳನ್ನು ತಲೆಯ ಮೆಲಿಟ್ಟುಕೊಂಡು ಮೆರವಣಿಗೆಯಲ್ಲಿ ದೇವಾಲಯಕ್ಕೆ ಸಾಗಿದರು.

ತಾಲ್ಲೂಕಿನ ಪ್ರಗತಿಪರ ರೈತರಿಂದ ಸಿನಿಮಾ ಸಿಡಿ ಬಿಡುಗಡೆ

0

ತಾಲ್ಲೂಕಿನ ಪ್ರಗತಿಪರ ರೈತರೊಬ್ಬರಿಗೆ ಕನ್ನಡ ಚಲನಚಿತ್ರವೊಂದರ ಸಿಡಿ ಬಿಡುಗಡೆಗೊಳಿಸುವ ಅವಕಾಶ ಈಚೆಗೆ ಲಭಿಸಿದೆ.
ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಎಚ್‌.ಜಿ.ಗೋಪಾಲಗೌಡ ಅವರು ಈಚೆಗೆ ವಿಧಾನಸೌಧದ ಮುಂದೆ ‘ಧೈರ್ಯ‘ ಚಿತ್ರದ ಹಾಡುಗಳ ಸಿಡಿ ಬಿಡುಗಡೆ ಮಾಡಿದರು.
‘ಒಬ್ಬ ರೈತ, ಯೋಧ ಮತ್ತು ವಿದ್ಯಾರ್ಥೀಯನ್ನು ಕರೆಸಿ ಗೌರವಿಸಿ ಸಿಡಿ ಬಿಡುಗಡೆ ಮಾಡಿದರು. ಅದರಲ್ಲೂ ವಿಧಾನಸೌಧದ ಮುಂಭಾಗದಲ್ಲಿಯೇ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಸಿನಿಮಾ ರಂಗದವರು ನನ್ನಂಥ ಹಳ್ಳಿಯಲ್ಲಿರುವ ರೈತನನ್ನು ಕರೆಸಿದ್ದು ಗೌರವಿಸಿದ್ದು ಸಂತಸ ತಂದಿದೆ’ ಎನ್ನುತ್ತಾರೆ ಎಚ್‌.ಜಿ.ಗೋಪಾಲಗೌಡ.
ನಿರ್ಮಾಪಕ ಡಾ.ಕೆ.ರಾಜು, ನಿರ್ದೇಶಕ ಶಿವತೇಜಸ್‌, ನಾಯಕ ನಟ ಅಜಯ್‌ರಾವ್‌, ನಾಯಕಿ ಅದಿತಿ ಪ್ರಭುದೇವ, ಸಂಗೀತ ನಿರ್ದೇಶಕ ಎಮಿಲ್‌, ಯೋಧ ಗುರುಪ್ರಸಾದ್‌, ವಿದ್ಯಾರ್ಥಿ ಲಿಖಿತ್‌ರಾಜ್‌ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕೆಂಪೇಗೌಡರ ಜಯಂತ್ಯುತ್ಸವ ಪ್ರಚಾರಕ್ಕೆ ಚಾಲನೆ

0

ನಾಡಪ್ರಭು ಕೆಂಪೇಗೌಡರ 507ನೇ ಜಯಂತ್ಯುತ್ಸವವನ್ನು ಜೂನ್‌ 27 ರಂದು ಆಚರಿಸಲಿದ್ದು, ಕಾರ್ಯಕ್ರಮವನ್ನು ಜನಾಂಗದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಮಾಡಬೇಕಿರುವುದರಿಂದ ಪ್ರತಿಯೊಂದು ಗ್ರಾಮಕ್ಕೂ ತೆರಳಿ ಪ್ರಚಾರ ಕಾರ್ಯವನ್ನು ಕೈಗೊಳ್ಳುತ್ತಿರುವುದಾಗಿ ತಾಲ್ಲೂಕು ಒಕ್ಕಲಿಗರ ಯುವಸೇನೆ ಸಂಘದ ಅಧ್ಯಕ್ಷ ಜೆ.ಎಸ್‌.ವೆಂಕಟಸ್ವಾಮಿ ತಿಳಿಸಿದರು.
ನಗರದ ಒಕ್ಕಲಿಗರ ಭವನದಿಂದ ಮಂಗಳವಾರ ಕೆಂಪೇಗೌಡರ ಜಯಂತ್ಯುತ್ಸವ ಕಾರ್ಯಕ್ರಮದ ಕುರಿತಂತೆ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲ್ಲೂಕಿನಾದ್ಯಂತ ಪ್ರತಿಯೊಂದು ಗ್ರಾಮಕ್ಕೂ ತೆರಳಿ ಜನಾಂಗದವರೂ ಸೇರಿದಂತೆ ಗ್ರಾಮದ ಮುಖಂಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದೇವೆ. ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಲು ಮುಂದಾಗಿ ಪಲ್ಲಕ್ಕಿಯನ್ನು ತರಯವ ಗ್ರಾಮಸ್ಥರಿಗೆ ಸಹಕಾರವನ್ನು ಕೂಡ ನೀಡುತ್ತಿದ್ದೇವೆ. ಪಕ್ಷಾತೀತವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಮನವಿ ಮಾಡುತ್ತಿದ್ದೇವೆ. ಕೆಂಪೇಗೌಡರ ಗೌರವವನ್ನು ಹೆಚ್ಚಿಸಲು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜನಾಂಗದ ಎಲ್ಲರೂ ಕೈಜೋಡಿಸಬೇಕು ಎಂದು ಕೋರಿದರು.
ನಗರ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಸಿ.ಮುನಿರಾಜು, ಚೀಮನಹಳ್ಳಿ ಗೋಪಾಲ್‌, ರಮೇಶ್‌, ಮೇಲೂರು ಚಂದ್ರೇಗೌಡ, ವೆಂಕಟರೆಡ್ಡಿ, ಎಸ್‌.ಎಂ.ನಾರಾಯಣಸ್ವಾಮಿ, ಕೃಷ್ಣಪ್ಪ, ಮೇಲೂರು ಆರ್‌.ಎ.ಉಮೇಶ್‌, ಶ್ರೀನಿವಾಸ್‌, ಎ.ಎಂ.ತ್ಯಾಗರಾಜ್‌, ಶಶಿಕುಮಾರ್‌, ಜೆ.ವಿ.ಸುರೇಶ್‌, ಕೆಂಪರೆಡ್ಡಿ, ದೇವರಾಜ, ಪಿಳ್ಳಪ್ಪ, ಮುರಳಿ, ಪುರುಷೋತ್ತಮ ಹಾಜರಿದ್ದರು.

ಕೃಷಿ ಪದ್ಧತಿಗಳ ಪುನರುಜ್ಜೀವನ ಕಾರ್ಯಕ್ರಮ

0

ಜೀವಾಮೃತವು ಸಸ್ಯಗಳ ಬೆಳವಣಿಗೆಯ ಪ್ರಚೋದಕಗಳಲ್ಲೊಂದಾಗಿದೆ. ಇದರಲ್ಲಿ ಅನೇಕ ರೀತಿಯ ಉಪಯುಕ್ತ ಸೂಕ್ಷ್ಮಜೀವಿಗಳಿದ್ದು ಸಸ್ಯಗಳಿಗೆ ಬೇಕಾಗಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಶ್ರೀನಿವಾಸ ಶರ್ಮ ತಿಳಿಸಿದರು.
ತಾಲ್ಲೂಕಿನ ಎಸ್‌.ದೇವಗಾನಹಳ್ಳಿ ಪಂಚಾಯ್ತಿಯ ಇರುಗಪ್ಪನಹಳ್ಳಿ ಗ್ರಾಮದಲ್ಲಿ ಈಚೆಗೆ ಎಫ್‌ಇಎಸ್‌ ಸಂಸ್ಥೆ ರೈತರಿಗೆ ಆಯೋಜಿಸಿದ್ದ ಹಿಂದಿನ ಕೃಷಿ ಪದ್ಧತಿಗಳ ಪುನರುಜ್ಜೀವನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಗಣಿ,ಗಂಜಲ, ಉದುರಿದ ಎಲೆಗಳಿಂದ ‘ಜೀವಾಮೃತ’ ತಯಾರಿಸಿ ಬೆಳೆಗಳಿಗೆ ಅಮೃತ ಉಣಿಸಬಹುದು. ದನಕರುಗಳ ಗಂಜಲವನ್ನು ಶೇಖರಣೆ ಮಾಡಿ ನೀರು ಸೇರಿಸಿ ಗಿಡಗಳಿಗೆ ಬಳಸಬಹುದು. ಜೀವ ಸರಪಳಿಯನ್ನು ಉಳಿಸಿಕೊಂಡಲ್ಲಿ ಎಲ್ಲರೂ ಬದುಕಬಹುದು. ಪಂಚಗವ್ಯ ಎಂಬ ಪದವು ಸಾವಯವ ಕೃಷಿಯಲ್ಲಿ ಬಹುವಾಗಿ ಬಳಕೆಯಾಗುವ ಪದ. ಆಕಳಿಂದ ಬರುವ ಐದು ಉತ್ಪನ್ನಗಳ (ಆಕಳ ಸಗಣಿ, ಗಂಜಳ, ಹಾಲು,ಮೊಸರು ಮತ್ತು ತುಪ್ಪವನ್ನು 5:3:2:2:1 ರ ಅನುಪಾತದಲ್ಲಿ) ಮಿಶ್ರಣವಿದು. ಪಂಚಗವ್ಯದಲ್ಲಿ ಮುಖ್ಯ ಪೋಷಕಾಂಶಗಳು ಮತ್ತು ಬೆಳವಣಿಗೆ ಚೋದಕಗಳಿದ್ದು ಬೆಳೆಯ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸಾಲು ಪದ್ಧತಿ ಹಾಗೂ ಕಡಿಮೆ ಬಂಡವಾಳದಿಂದ ಹೆಚ್ಚು ಇಳುವರಿ ಪಡೆಯುವ ಬಗ್ಗೆ ರೈತರಿಗೆ ಮಾಹಿತಿಯನ್ನು ನೀಡಿದರು.
ಎಫ್‌ಇಎಸ್‌ ಸಂಸ್ಥೆಯ ಗೋಪಿ ಹಾಜರಿದ್ದರು.

ಕೆ.ಎನ್‌.ಅರ್ಚನಾ ತಾಲ್ಲೂಕಿಗೆ ಪ್ರಥಮ

0

ತಾಲ್ಲೂಕಿನ ಹನುಮಂತಪುರ ಗೇಟ್‌ ಬಳಿಯ ಬಿಜಿಎಸ್‌ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಕೆ.ಎನ್‌.ಅರ್ಚನಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ಮೂರು ಅಂಕಗಳನ್ನು ಹೆಚ್ಚಿಗೆ ಪಡೆಯುವ ಮೂಲಕ ತಾಲ್ಲೂಕಿಗೆ ಪ್ರಥಮಳಾಗಿ ಹೊರಹೊಮ್ಮಿದ್ದಾಳೆ.
ಕೊತ್ತನೂರಿನ ನಂಜುಂಡಮೂರ್ತಿ ಎಂಬ ರೈತರ ಮಗಳಾದ ಕೆ.ಎನ್‌.ಅರ್ಚನಾ 616(98.6%) ಪಡೆದಿದ್ದಳು. ಮರುಮೌಲ್ಯಮಾಪನದ ನಂತರ ಈಗ 619(99.04%) ಪಡೆದಿದ್ದಾಳೆ. ಗಣಿತ ಮತ್ತು ಹಿಂದಿ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾಳೆ.
ಬಿಜಿಎಸ್‌ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಎಚ್‌.ಎನ್‌.ಧನುಶ್ರೀ 617(98.7%) ಪಡೆದಿದ್ದು ಮರುಮೌಲ್ಯಮಾಪನದ ನಂತರ 618(98.88%) ಪಡೆದು ತಾಲ್ಲೂಕಿಗೆ ದ್ವಿತೀಯಳಾಗಿದ್ದಾಳೆ.

ಕೋಚಿಮುಲ್ ತಾಲ್ಲೂಕು ಉಪಕಚೇರಿ ಕಟ್ಟಡಕ್ಕೆ ಗುದ್ದಲಿಪೂಜೆ

0

ಕೋಚಿಮುಲ್ ತಾಲ್ಲೂಕು ಉಪಕಚೇರಿ ನಿರ್ಮಿಸಲು ಸರ್ಕಾರದಿಂದ ನಾಲ್ಕು ಗುಂಟೆ ಜಮೀನು ಮಂಜೂರಾಗಿದ್ದು ಒಕ್ಕೂಟದಿಂದ ಬಿಡುಗಡೆಯಾಗಿರುವ ಸುಮಾರು ೬೦ ಲಕ್ಷ ರೂ ವೆಚ್ಚದಲ್ಲಿ ಎರಡಂತಸ್ತಿನ ನೂತನ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ತಿಳಿಸಿದರು.
ನಗರದ ಬೈಪಾಸ್ ರಸ್ತೆಯಲ್ಲಿ ಕೋಚಿಮುಲ್ ತಾಲ್ಲೂಕು ಉಪಕಚೇರಿ ನಿರ್ಮಿಸಲು ಸರ್ಕಾರದಿಂದ ಮಂಜೂರಾಗಿರುವ ಜಮೀನಿನಲ್ಲಿ ಸೋಮವಾರ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಕಳೆದ ೨೫ ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೋಚಿಮುಲ್ ಶಿಬಿರ ಘಟಕಕ್ಕೆ ಸರ್ಕಾರದಿಂದ ಜಮೀನು ಮಂಜೂರು ಮಾಡಿಸಿ ಒಕ್ಕೂಟದಿಂದ ನೀಡುವ ಅನುಧಾನದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು.
ಈಗಾಗಲೇ ಒಕ್ಕೂಟದಿಂದ ೬೦ ಲಕ್ಷ ಅನುದಾನ ಬಿಡುಗಡೆಯಾಗಿದ್ದು ಕೂಡಲೇ ಕಟ್ಟಡ ನಿರ್ಮಾಣ ಕಾರ್ಯ ಶುರು ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೋಚಿಮುಲ್ ಶಿಡ್ಲಘಟ್ಟ ಶಿಬಿರ ಘಟಕದ ಉಪವ್ಯವಸ್ಥಾಪಕ ಬಿ.ಎಸ್.ಹನುಮಂತರಾವ್, ವಿಸ್ತರಣಾಧಿಕಾರಿ ಉಮೇಶ್‌ರೆಡ್ಡಿ, ಶ್ರೀನಿವಾಸ್, ಸಿಬ್ಬಂದಿ ಕುಮ್ಮಣ್ಣ, ಬೋದಗೂರು ಚಂದ್ರೇಗೌಡ ಹಾಜರಿದ್ದರು.

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

0

ಕರ್ನಾಟಕ ಪ್ರದೇಶ ಕುರುಬರ ಸಂಘದಿಂದ 2016–17ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.90 ಹಾಗೂ ಅದಕ್ಕಿಂತ ಹೆಚ್ಚು ಅಂಗ ಗಳಿಸಿರುವ ಕುರುಬ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು 2 ಭಾವಚಿತ್ರಗಳು, ಮುಖ್ಯ ಶಿಕ್ಷಕರು ಅಥವಾ ಪ್ರಾಂಶುಪಾಲರಿಂದ ದೃಢೀಕರಿಸಿದ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರದ ಜೆರಾಕ್ಸ್‌ ಪ್ರತಿಗಳೊಂದಿಗೆ ಸ್ವವಿರದ ಅರ್ಜಿಯನ್ನು ಜೂನ್‌ 25 ರೊಳಗೆ ಖುದ್ದು ಅಥವಾ ಅಂಚೆ ಮೂಲಕ ಕರ್ನಾಟಕ ಪ್ರದೇಶ ಕುರುಬರ ಸಂಘ, 9, ಕನಕದಾಸ ವೃತ್ತ, ಕಾಳಿದಾಸ ಮಾರ್ಗ, ಗಾಂಧಿನಗರ, ಬೆಂಗಳೂರು – 560009, ಅಥವಾ ಶಿಡ್ಲಘಟ್ಟ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಕೆ. ಮಂಜುನಾಥ (9448310784), ಕಾರ್ಯದರ್ಶಿ ಎಂ. ರಾಮಾಂಜಿ (9880857814) ಸಂಪರ್ಕಿಸತಕ್ಕದ್ದು ಎಂದು ನೀಡತಕ್ಕದ್ದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.