ತಾಲ್ಲೂಕಿನಲ್ಲಿ ಇದುವರೆಗೂ ಹದಿನೈದು ಸಾವಿರ ಗಿಡಗಳನ್ನು ನೆಡಲಾಗಿದ್ದು, ಮುಂದೆ ಗ್ರಾಮಸ್ಥರ ಹಾಗೂ ಸರ್ಕಾರಿ ಶಾಲೆಯ ಅಭಿವೃದ್ಧಿ ಸಮಿತಿ ಸಹಕಾರ ಪಡೆದು ಒಟ್ಟು ಒಂದು ಲಕ್ಷ ಗಿಡಗಳನ್ನು ನೆಡುತ್ತೇವೆ ಎಂದು ಚಲನಚಿತ್ರ ನಿರ್ದೇಶಕ ಆರ್.ಚಂದ್ರು ತಿಳಿಸಿದರು.
ನಗರದ ಸಿದ್ಧಾರ್ಥನಗರದ ಸರ್ಕಾರಿ ಶಾಲೆಯ ಬಳಿ ಭಾನುವಾರ ಆರ್.ಚಂದ್ರು ಅಭಿಮಾನಿ ಬಳಗದಿಂದ ನಡೆದ ಗಿಡ ನೆಡುವ ಕಾರ್ಯಕ್ರಮದಲ್ಲಿ ಗಿಡಗಳನ್ನು ನೆಟ್ಟು ಅವರು ಮಾತನಾಡಿದರು. ಪ್ರತೀ ವಾರ 5 ರಿಂದ 10 ಸಾವಿರ ಉತ್ತಮ ಗುಣಮಟ್ಟದ ಗಿಡಗಳನ್ನು ನರ್ಸರಿಗಳಿಂದ ತರುತ್ತಿದ್ದೇನೆ. ಹಲವಾರು ಮಂದಿ ಆಸಕ್ತರು ಬಂದು ತೆಗೆದುಕೊಂಡು ಹೋಗುತ್ತಿದ್ದಾರೆ. ನನ್ನ ಉದ್ದೇಶ ತಾಲ್ಲೂಕಿನಲ್ಲಿ ಹಸಿರನ್ನು ಹೆಚ್ಚಿಸುವುದಾಗಿದೆ. ದಿಬ್ಬೂರಹಳ್ಳಿ ಹಾಗೂ ಅಪ್ಪೇಗೌಡನಹಳ್ಳಿಯ ಯುವಕರು ತಮ್ಮ ಗ್ರಾಮಗಳ ಸುತ್ತ ಮುತ್ತ ರಸ್ತೆ ಬದಿ ಗಿಡ ನೆಟ್ಟಿದ್ದನ್ನು ಕಾಪಾಡುವುದಾಗಿ ಸಂಕಲ್ಪ ತೊಟ್ಟಿರುವುದು ಆಶಾದಾಯಕ ಬೆಳವಣಿಗೆ. ಅಲ್ಲಿ ಹೋಗಿ ಗಿಡ ನೆಟ್ಟು ಬರುತ್ತೇವೆ. ಈ ಉತ್ಸಾಹ ಪ್ರತಿ ಗ್ರಾಮದ ಯುವಕರಲ್ಲೂ ಪ್ರಾರಂಭವಾಗಲಿ ಎಂದು ಹೇಳಿದರು.
ಬಿಗ್‌ಬಾಸ್ ವಿಜೇತ ಪ್ರಥಮ್ ಮಾತನಾಡಿ, ಹುಟ್ಟಿ ಬೆಳೆದ ತಾಲ್ಲೂಕಿನ ಬಗ್ಗೆ ಪ್ರೀತಿಯಿಂದ ಗಿಡಗಳನ್ನು ನೆಡುವ ಮೂಲಕ ಪರಿಸರ ಕಾಪಾಡಲು ಪ್ರರಂಭಿಸಿರುವ ಗಿಡ ನೆಡುವ ಕಾರ್ಯಕ್ರಮ ಯಶಸ್ವಿಯಾಗಲಿ, ಈಗಿನ ಯುವಕರು ಇಂಥಹ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ನುಡಿದರು, ಆರ್.ಚಂದ್ರು ಅಭಿಮಾನಿ ಬಳಗದ ಅಧ್ಯಕ್ಷ ವಿಜಯ್, ರಂಜಿತ್, ಸುರೇಶ್, ಪ್ರತಾಪ್, ಗಂಗಾಧರ್, ಚಂದ್ರು, ನಗರಸಭಾ ಸದಸ್ಯ ಚಿಕ್ಕಮುನಿಯಪ್ಪ, ನಾಗನರಸಿಂಹ, ಮಂಜುಳಮ್ಮ, ಮುನೀಂದ್ರ ಹಾಜರಿದ್ದರು.
ತಾಲ್ಲೂಕಿನಲ್ಲಿ ಹಸಿರನ್ನು ಹೆಚ್ಚಿಸಬೇಕಿದೆ
ಯುವತಿಯ ಆತ್ಮಹತ್ಯೆ
ಪ್ರೀತಿ ವಿಫಲವಾಯಿತೆಂಬ ಹತಾಶೆಯಿಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ನಡಿಪಿನಾಯಕನಹಳ್ಳಿ ಗ್ರಾಮದ ಎನ್.ಎ.ಆಶಾದೇವಿ(25) ಮೃತಪಟ್ಟ ದುರ್ಧೈವಿ. ಆಶಾದೇವಿ ಯಣ್ಣಂಗೂರು ಗ್ರಾಮದ ಪ್ರಸನ್ನಕುಮಾರ್ ಅವರನ್ನು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದು, ಇಬ್ಬರ ಮನೆಯಲ್ಲೂ ಮದುವೆಗೆ ಸಮ್ಮತಿಸಿದ್ದರೆನ್ನಲಾಗಿದೆ. ಕಳೆದ ಹದಿನೈದು ದಿನಗಳ ಹಿಂದೆ ಪ್ರಸನ್ನಕುಮಾರ್ ವಿವಾಹವಾಗುವುದಿಲ್ಲವೆಂದು ದೂರವಾಣಿ ಮೂಲಕ ತಿಳಿಸಿದ್ದರಿಂದ ಮನನೊಂದು ಯುವತಿ ಶನಿವಾರ ರಾತ್ರಿ ಧಾನ್ಯಗಳಲ್ಲಿರಿಸುವ ವಿಷಪೂರಿತ ಕಾಳುಗಳನ್ನು ಸೇವಿಸಿದ್ದಾಳೆ. ಇದನ್ನು ಗಮನಿಸಿದ ಮನೆಯವರು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಹಕರ ಸಂವಾದ ಸಭೆ
ಗ್ರಾಹಕರ ಕುಂದುಕೊರತೆಗಳನ್ನು ದಾಖಲಿಸಿಕೊಂಡು ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡು ಗ್ರಾಹಕ ಸ್ನೇಹಿಯಾಗಿ ಬೆಸ್ಕಾಂ ಕಾರ್ಯನಿರ್ವಹಿಸುವುದಾಗಿ ಚಿಂತಾಮಣಿ ವಿಭಾಗದ ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ದತ್ತಾತ್ರೇಯ ಪಾಟೀಲ್ ತಿಳಿಸಿದರು.
ನಗರದ ಬೆಸ್ಕಾಂ ಕಚೇರಿಯಲ್ಲಿ ಶನಿವಾರ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಗ್ರಾಹಕರ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ವಿವಿದೆಡೆ ವಿದ್ಯುತ್ ಕಂಬಗಳು ಶಿಥಿಲಗೊಂಡಿದ್ದು ಅವುಗಳನ್ನು ಬದಲಿಸಿ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಬೇಕು. ಕೆಲವರಿಗೆ ವಿದ್ಯುತ್ ಬಿಲ್ ಹೆಚ್ಚಳ ಬಂದಿದ್ದು ಅದನ್ನು ಸರಿಪಡಿಸಬೇಕು. ನಿರಂತರಜ್ಯೋತಿಗಾಗಿ ಹಲವೆಡೆ ತಂತಿಗಳನ್ನು ಎಳೆದಿದ್ದರೂ ವಿದ್ಯುತ್ ಸಂಪರ್ಕ ನೀಡಿಲ್ಲ. ಅದನ್ನು ಶೀಘ್ರವಾಗಿ ಮಾಡಬೇಕು. ಅಕ್ರಮ ಸಕ್ರಮ ಯೋಜನೆಯಲ್ಲಿ ಕೊಳವೆಬಾವಿ ಕೊರೆಸಿರುವವರು 24 ಸಾವಿರ ರೂಗಳನ್ನು ಕಟ್ಟಿ ವರ್ಷವಾಗುತ್ತಾ ಬಂದರೂ ಇನ್ನೂ ವಿದ್ಯುತ್ ಸಂಪರ್ಕ ಒದಗಿಸಿಲ್ಲ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಗ್ರಾಮಗಳಲ್ಲಿ ಬೀದಿ ದೀಪಗಳ ನಿರ್ವಹಣೆ ಸರಿಯಾಗಿ ಮಾಡದೇ ವಿದ್ಯುತ್ ಪೋಲಾಗುತ್ತಿದೆ, ಮುಂತಾದ ಸಮಸ್ಯೆಗಳನ್ನು ರೈತರು ಹಾಗೂ ಗ್ರಾಮಗಳಿಂದ ಬಂದ ಮುಖಂಡರು ವಿವರಿಸಿದರು.
ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಈ ಸಂದರ್ಭದಲ್ಲಿ ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಹೇಳಿದರು.
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಅನ್ಸರ್‌ಬಾಷ , ಸಹಾಯಕ ಲೆಕ್ಕಾಧಿಕಾರಿ ಶಿವಣ್ಣ, ರೈತ ಮುಖಂಡರಾದ ಟಿ.ಕೃಷ್ಣಪ್ಪ, ಶ್ರೀರಾಮಯ್ಯ, ಮುನಿನಂಜಪ್ಪ, ತಾದೂರು ಮಂಜುನಾಥ್, ಬೂದಾಳ ರಾಮಾಂಜಿ ಹಾಜರಿದ್ದರು.
ನಗರದ ಸ್ವಚ್ಚತೆ ಬಗ್ಗೆ ಅಧಿಕಾರಿಗಳು ಆಧ್ಯತೆ ನೀಡಿ
ನಗರದ ಸ್ವಚ್ಚತೆ ಬಗ್ಗೆ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ನಗರ ಸ್ವಚ್ಛವಿದ್ದರೆ ಮಾತ್ರ ನಗರಸಭೆ ಹಾಗು ನಗರಸಭೆ ಸದಸ್ಯರ ಗೌರವ ಉಳಿಯುತ್ತದೆ ಎಂದು ನಗರಸಭೆ ಅಧ್ಯಕ್ಷ ಅಫ್ಸರ್ಪಾಷ ತಿಳಿಸಿದರು.
ನಗರದ ಮುಖ್ಯರಸ್ತೆಗಳು ಸೇರಿದಂತೆ ಬಹುತೇಕ ವಾರ್ಡುಗಳಲ್ಲಿ ತುಂಬಿ ತುಳುಕುತ್ತಿರುವ ಕಸದ ರಾಶಿಗಳ ಬಗ್ಗೆ ಪ್ರತಿನಿತ್ಯ ದಿನಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗುತ್ತಿರುವ ಹಿನ್ನಲೆಯಲ್ಲಿ ಶನಿವಾರ ಅಧಿಕಾರಿಗಳ ತುರ್ತು ಸಭೆ ನಡೆಸಿ ಅವರು ಮಾತನಾಡಿದರು.
ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರಸಭೆಯ ಸದಸ್ಯರು ತಲೆ ತಗ್ಗಿಸುವ ವಾತಾವರಣ ನಿರ್ಮಾಣವಾಗಿದೆ. ಇದು ಹೀಗೆ ಮುಂದುವರೆದರೇ ನಗರಕ್ಕೂ ಹಾಗು ನಗರಸಭೆಗೆ ಕೆಟ್ಟ ಹೆಸರು ಬರುತ್ತದೆ. ನಗರಸಭೆಯಲ್ಲಿ ಹಾಲಿ ಇರುವ ೩೨ ಮಂದಿ ಖಾಯಂ ಪೌರ ಕಾರ್ಮಿಕರಿಂದ ನಗರಸಭೆ ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡಬೇಕು. ಬೆಳಗ್ಗೆ ಬಂದು ೧೦ ಗಂಟೆಗೆ ಹೊರಟು ಹೋಗುವ ಪೌರ ಕಾರ್ಮಿಕರಿಂದ ಮದ್ಯಾಹ್ನ ೨ ರಿಂದ ಸಂಜೆ ೫ ಗಂಟೆಯವರೆಗೂ ಕೆಲಸ ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತಷ್ಟು ಕಾಳಜಿ ವಹಿಸಬೇಕು ಎಂದರು.
ಇನ್ನು ನಗರಸಭೆಯ ಆದಾಯ ಹೆಚ್ಚಿಸಲು ನಗರದ ೫ ಕಿ.ಮೀ ವ್ಯಾಪ್ತಿಯಲ್ಲಿರುವ ಎಲ್ಲಾ ಖಾಸಗಿ ಶಾಲೆಗಳಿಗೂ ನೊಟೀಸ್ ಜಾರಿ ಮಾಡಿ ಅವರಿಂದ ಕಂದಾಯ ವಸೂಲು ಮಾಡುವಂತೆ ಸೂಚಿಸಿದರು. ನಗರಸಭೆಯಿಂದ ಯಾವುದೇ ಅನುಮತಿ ಪಡೆಯದೇ ಕಟ್ಟಡ ನಿರ್ಮಿಸಿಕೊಂಡು ಕೆಲವರು ಖಾಸಗಿ ಶಾಲೆಗಳನ್ನು ನಡೆಸುತ್ತಿದ್ದಾರೆ. ಏನಾದರೂ ಅವಘಡ ಸಂಭವಿಸಿದರೆ ಜವಾಬ್ದಾರಿ ಯಾರು ಎಂದ ಅವರು ಕೂಡಲೇ ಎಲ್ಲಾ ಖಾಸಗಿ ಶಾಲೆಗಳು ಸೇರಿದಂತೆ ಕಲ್ಯಾಣ ಮಂಟಪಗಳಿಗೆ ನೊಟೀಸ್ ಜಾರಿಗೊಳಿಸಿ ಎಂದರು.
ಇನ್ನು ನಗರಸಭೆಗೆ ಸೇರಿದ ಅಂಗಡಿ ಮಳಿಗೆಗಳ ಬಾಡಿಗೆಯನ್ನು ಸಕಾಲದಲ್ಲಿ ವಸೂಲಿ ಮಾಡುವಂತೆ ಸೂಚಿಸಿದರು.
ಸ್ವಚ್ಚ ಭಾರತ್, ಎಸ್ಎಫ್ಸಿ ಅನುದಾನ, ನಗರೋತ್ಥಾನ ಯೋಜನೆ ೨ನೇ ಹಂತ, ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿಯ ವರದಿಯನ್ನು ಕೂಡಲೇ ಸಲ್ಲಿಸುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಆಯುಕ್ತ ಹರೀಶ್, ವ್ಯವಸ್ಥಾಪಕ ಮಂಜುನಾಥ್ ಸೇರಿದಂತೆ ನಗರಸಭೆಯ ಎಲ್ಲ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.
ಪರಿಸರ ವ್ಯವಸ್ಥೆಯ ದ್ಯೋತಕವಾಗಿ ಕಂಡುಬಂದ ಸಹಸ್ರಪದಿ ಸಂತಾನ
ಮುಂಗಾರಿನ ಆರಂಭದೊಂದಿಗೆ ನಿಸರ್ಗದಲ್ಲಿ ಅದರಲ್ಲೂ ಜೀವ ಜಗತ್ತಿನಲ್ಲಿ ಕಂಡೂ ಕಾಣದಂತೆ ಹಲವಾರು ಪ್ರಕ್ರಿಯೆಗಳು ನಡೆಯುತ್ತಿರುತ್ತವೆ. ತಾಲ್ಲೂಕಿನ ಸಾದಲಿ, ದಿಬ್ಬೂರಹಳ್ಳಿ ಭಾಗದ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಮಳೆಯ ಆಗಮದೊಡನೆ ಸಹಸ್ರಪದಿಗಳ ಜನನವೂ ಆರಂಭವಾಗಿದೆ.
ಮಲೆನಾಡು ಪ್ರದೇಶದಲ್ಲಿ ಅದರಲ್ಲೂ ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುವ ಸಹಸ್ರಪದಿಗಳು ಬಯಲು ಸೀಮೆ, ಅಂತರ್ಜಲ ಕುಸಿದಿರುವ ತಾಲ್ಲೂಕಿನಲ್ಲೂ ಅಲ್ಲಲ್ಲಿ ಕಂಡುಬರುತ್ತಿವೆ. ಈ ರೀತಿಯ ಜೀವಿಗಳು ಕಂಡುಬಂದಾಗ ಇನ್ನೂ ತಾಲ್ಲೂಕಿನ
ಪರಿಸರ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿಲ್ಲವೆಂದು ಸಮಾಧಾನ ಪಟ್ಟುಕೊಳ್ಳಬಹುದಾಗಿದೆ ಎನ್ನುತ್ತಾರೆ ಪರಿಸರಪ್ರೇಮಿಗಳು.
ಮಣ್ಣು ಮಿದುವಾಗಿ ಬಿದ್ದ ಎಲೆಗಳು ಕೊಳೆಯುವ ವಾತಾವರಣದಲ್ಲಿ ನೂರಾರು ಕಾಲುಗಳಿರುವ ಹಲವಾರು ಮರಿಗಳು ಗುಂಪುಗುಂಪಾಗಿ ಕಂಡುಬರುತ್ತಿವೆ. ಮಿಲ್ಲಿಪೀಡ್ ಎಂದು ಇಂಗ್ಲಿಷ್ನಲ್ಲಿ ಕರೆಯುವ ಈ ಹುಳವನ್ನು ಕನ್ನಡದಲ್ಲಿ ಸಹಸ್ರಪದಿ ಎನ್ನುತ್ತಾರೆ. ಇದರ ಹೆಸರು ಸೂಚಿಸುವಂತೆ ಸಾವಿರ ಕಾಲುಗಳೇನೂ ಇರುವುದಿಲ್ಲ. ೩೬ ರಿಂದ ೪೦೦ ಕಾಲುಗಳಿರುತ್ತದೆ. ಕೊಳೆತ ಎಲೆಗಳು, ಮರದ ತೊಗಟೆಗಳನ್ನು ತಿಂದು ಬದುಕುತ್ತದೆ. ಅದಕ್ಕಾಗಿಯೇ ಮಳೆ ಬಿದ್ದು ಎಲೆಗಳು ಕೊಳೆಯುವ ಸಮಯದಲ್ಲಿಯೇ ಮರಿಗಳ ಜನನವಾಗುತ್ತವೆ.
ಸಹಸ್ರಪದಿಗಳು ಸಾಮಾನ್ಯವಾಗಿ ಕಪ್ಪು ಅಥವಾ ಕಂದು ಬಣ್ಣ ಹೊಂದಿರುತ್ತವೆ. ಇವುಗಳ ದೇಹದ ನೀರಿನ ಅಂಶ ಕಾಪಾಡಲು ತೇವಾಂಶಯುತ ವಾತಾವರಣ ಬೇಕು. ಆದ್ದರಿಂದ ಮಳೆಗಾಲದಲ್ಲಿ ಮಾತ್ರವೇ ಚಟುವಟಿಕೆಯಿಂದ ಇರುತ್ತವೆ. ಬೇರೆ ಕಾಲದಲ್ಲಿ ತೇವಾಂಶ ಹೆಚ್ಚಿರುವ ಕಡೆಯಲ್ಲಿ ಅಡಗುತ್ತವೆ. ಒಣಗಿದ, ಕೊಳೆಯುತ್ತಿರುವ ಸಸ್ಯಶೇಷ ಇವುಗಳ ಆಹಾರ.
ಹೆಣ್ಣು ಹುಳು ತೇವಾಂಶವಿರುವ ಮಣ್ಣಿನಲ್ಲಿ ಗೂಡು ನಿರ್ಮಿಸಿಕೊಳ್ಳುತ್ತವೆ. ಜಾತಿಗೆ ಅನುಗುಣವಾಗಿ 10ರಿಂದ ಮುನ್ನೂರು ಮೊಟ್ಟೆಗಳನ್ನಿಡುತ್ತವೆ. ಮರಿ ಹುಟ್ಟಿದಾಗ ದೇಹದ ಭಾಗ ಮತ್ತು ಕಾಲುಗಳ ಸಂಖ್ಯೆ ಕಡಿಮೆಯಿರುತ್ತದೆ. ನಂತರ ಎರಡು-ಮೂರು ಬಾರಿ ಹೊರಚರ್ಮ ಕಳಚಿ ದೊಡ್ಡದಾಗಿ ಬೆಳೆಯುತ್ತದೆ.
ಎಲ್ಲಕ್ಕಿಂತ ವಿಸ್ಮಯವೆಂದರೆ ಸಹಸ್ರಪದಿಗಳ ರಕ್ಷಣಾ ವ್ಯವಸ್ಥೆ. ವೇಗವಾಗಿ ಓಡಲಾರದ, ಕಚ್ಚಲು, ಚುಚ್ಚಲು ಯಾವುದೇ ಅಂಗಗಳಿಲ್ಲದ, ಸಹಸ್ರಪದಿಗಳು ಬೇರೆ ಜೀವಿಗಳಿಗೆ ಆಹಾರವಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ವೈರಿಗಳನ್ನು ಗಲಿಬಿಲಿಗೊಳಿಸಲು ಚಕ್ಕುಲಿಯಾಕಾರದಲ್ಲಿ, ಇನ್ನು ಕೆಲವು ಉಂಡೆಯಾಕಾರದಲ್ಲಿ ದೇಹವನ್ನು ಸುತ್ತಿಕೊಳ್ಳುತ್ತದೆ. ಹೀಗೆ ಸುತ್ತಿಕೊಳ್ಳುವಾಗ ತನ್ನ ನೂರಾರು ಕಾಲುಗಳಿಗೆ ಸ್ವಲ್ಪವೂ ಘಾಸಿಯಾಗದಂತೆ ಅದನ್ನು ಹೊರಗೆಳೆದುಕೊಳ್ಳುತ್ತದೆ.
ಇವು ತಮ್ಮ ರಕ್ಷಣೆಗೆ ರಾಸಾಯನಿಕ ಅಸ್ತ್ರವನ್ನು ಪ್ರಯೋಗಿಸುತ್ತವೆ. ಕೆಲ ಸಹಸ್ರಪದಿಗಳು ಕೀಟಗಳನ್ನು, ಇರುವೆಗಳನ್ನು ದೂರಮಾಡಲು ಕೆಟ್ಟವಾಸನೆ ಬೀರುವ, ವೈರಿಗಳ ದೇಹವನ್ನು ಸುಡಬಲ್ಲ ರಾಸಾಯನಿಕಗಳನ್ನು ಸ್ರವಿಸುತ್ತವೆ. ಕೆಲ ಜಾತಿಯ ಮಂಗಗಳು ಸೊಳ್ಳೆಗಳಿಂದ ತಮ್ಮನ್ನು ಕಾಪಾಡಿಕೊಳ್ಳಲು ಬೇಕೆಂದೇ ಈ ಹುಳವನ್ನು ಮುಟ್ಟಿ ಇದು ಹೊರಸೂಸುವ ದ್ರವವನ್ನು ಮೈಗೆಲ್ಲಾ ಹಚ್ಚಿಕೊಳ್ಳುತ್ತವೆ.
‘ಬಸವನ ಪಾದ ಅಥವಾ ಬಸವನ ಹುಳು ಎಂದೂ ಇದನ್ನು ಕರೆಯುವರು. ಬಸವನಂತೆ ಸಾಧು ಎಂದು ಈ ಹೆಸರು ಬಂದಿರಬಹುದು! ಈ ಹುಳು ದಾರಿಯಲ್ಲಿ ಅಡ್ಡಬಂದರೆ ಅಂದಿನ ಕೆಲಸ ಸುಗಮವಾಗುತ್ತದೆ ಎಂಬ ನಂಬಿಕೆ ಗ್ರಾಮೀಣರಲ್ಲಿದೆ. ಹಿಂದೆ ಮಳೆಬೆಳೆ ಚೆನ್ನಾಗಿದ್ದಾಗ ಹೊಲದೆಡೆಯಲ್ಲೆಲ್ಲಾ ಕಂಡುಬರುತ್ತಿದ್ದ ಈ ಜೀವಿಗಳಿಂದು ಕಡಿಮೆಯಾಗಿವೆ’ ಎನ್ನುತ್ತಾರೆ ಶಿಕ್ಷಕ ದೇವರಾಜ್.
– ಡಿ.ಜಿ.ಮಲ್ಲಿಕಾರ್ಜುನ
ದೊಡ್ಡದಾಸೇನಹಳ್ಳಿಯ ಸರ್ಕಾರಿ ಶಾಲಾ ಮಕ್ಕಳಿಗೆ ವಿವಿಧ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ
ಗ್ರಾಮಗಳು ಗಟ್ಟಿಗೊಳ್ಳಬೇಕಾದರೆ ಗ್ರಾಮದ ಸರ್ಕಾರಿ ಶಾಲೆಗಳನ್ನು ಸಮುದಾಯದ ಸಹಭಾಗಿತ್ವದಲ್ಲಿ ಪೋಷಿಸಬೇಕು ಎಂದು ಅವಿರತ ಟ್ರಸ್ಟ್ ಅಧ್ಯಕ್ಷ ಶಿವಪ್ರಕಾಶ್ ತಿಳಿಸಿದರು.
ತಾಲ್ಲೂಕಿನ ದೊಡ್ಡದಾಸೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಾಗೂ ಶಾಲಾ ಮಕ್ಕಳಿಗೆ ದಾನಿಗಳ ನೆರವಿನಿಂದ ವಿವಿಧ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾವು 130 ಮಂದಿ ಸ್ನೇಹಿತರು ಸೇರಿಕೊಂಡು ಕಳೆದ ಒಂಭತ್ತು ವರ್ಷಗಳಿಂದ ರಾಜ್ಯದ ವಿವಿಧ ಸರ್ಕಾರಿ ಶಾಲೆಗಳಲ್ಲಿ ಪುಸ್ತಕಗಳನ್ನು ವಿತರಿಸುತ್ತಿದ್ದೇವೆ. ಈ ಬಾರಿ 220 ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿರುವ 15 ಸಾವಿರ ಮಕ್ಕಳಿಗೆ ಒಟ್ಟು ಎರಡು ಲಕ್ಷ 20 ಸಾವಿರ ಪುಸ್ತಕಗಳನ್ನು ನೀಡಲಿದ್ದೇವೆ. ಸಮುದಾಯದ ಸಹಯೋಗದೊಂದಿಗೆ ಸರ್ಕಾರಿ ಶಾಲೆಗಳು ಉತ್ತಮಗೊಂಡಲ್ಲಿ ಖಾಸಗಿ ಶಾಲೆಗಳಿಗೆ ಹೋಗುವುದು ತಪ್ಪುತ್ತದೆ ಎಂದು ಹೇಳಿದರು.
ದೊಡ್ಡದಾಸೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥೀಗಳಿಗೆ ಅವಿರತ ಟ್ರಸ್ಟ್ ವತಿಯಿಂದ ನೋಟ್ ಪುಸ್ತಕಗಳು, ಚಿಂತಾಮಣಿ ಅಶೋಕ್ ಮತ್ತು ಸ್ನೇಹಿತರಿಂದ ಶಾಲಾ ಬ್ಯಾಗ್ಗಳು, ದೊಡ್ಡದಾಸೇನಹಳ್ಳಿ ಡಿ.ವಿ.ಆಂಜನೇಯರೆಡ್ಡಿ ಅವರಿಂದ ಶಾಲೆಗೆ ನೀರಿನ ತೊಟ್ಟಿ, ಡಿ.ಎನ್.ಆಂಜನೇಯರೆಡ್ಡಿ ಅವರಿಂದ ಟೈ ಮತ್ತು ಬೆಲ್ಟ್ಗಳು, ಆನಂದಪ್ಪ ಅವರಿಂದ ಗುರುತಿನ ಚೀಟಿಗಳು, ಮುಸ್ತಾಫ ಅವರಿಂದ ಲೇಖನ ಸಾಮಗ್ರಿಗಳು, ಅಪ್ಪಣ್ಣ ಅವರಿಂದ ಶಾಲೆಗೆ ಕುರ್ಚಿಗಳು, ಹಿಂದೂಪುರ ಕೃಷ್ಣಮೂರ್ತಿ ಅವರಿಂದ ಜಮಖಾನ, ಉಮೇಶ್ ಹಾಗೂ ಮುತ್ತಣ್ಣ ಅವರಿಂದ ಚೇರ್ಗಳು, ರಾಜಣ್ಣ ಮತ್ತು ಅಂಬರೀಷ್ ಅವರಿಂದ ಆಸನದ ವ್ಯವಸ್ಥೆ ಶಾಲೆಗೆ ಕೊಡುಗೆಯಾಗಿ ನೀಡಲಾಯಿತು. ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ಮುಖ್ಯಶಿಕ್ಷಕ ಶ್ರೀಕಾಂತ್, ಶಿಕ್ಷಕರಾದ ಮಹೇಶ್, ದೇವರಾಜ್, ವೆಂಕಟರಮಣ, ಮಂಜುನಾಥ್, ಅವಿರತ ಟ್ರಸ್ಟ್ನ ರೂಪಾ, ಮಲ್ಲಿಕಾರ್ಜುನ ಪ್ರಸಾದ್, ಮಹೇಶ್ ಕುಮಾರ್, ಚಂದನ್, ಎಸ್ಡಿಎಂಸಿ ಅಧ್ಯಕ್ಷ ಶ್ರೀನಿವಾಸ್, ಗ್ರಾಮ ಪಂಚಾಯ್ತಿ ಸದಸ್ಯರಾದ ಡಿ.ವಿ.ಆಂಜನೇಯರೆಡ್ಡಿ, ಸುಮಿತ್ರ ಗುರುಮೂರ್ತಿ, ಗ್ರಾಮದ ಮೇಸ್ತ್ರಿ ವೆಂಕಟರೋಣಪ್ಪ, ಡಿ.ವಿ.ಶ್ರೀನಿವಾಸ್ ಹಾಜರಿದ್ದರು.
ಹೈನುಗಾರಿಕೆಯಿಂದಲೇ ಜಿಲ್ಲೆಯ ರೈತರ ಜೀವನಮಟ್ಟ ಸುಧಾರಿಸಿದೆ
ಹೈನುಗಾರಿಕೆಯಿಂದಲೇ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಜೀವನಮಟ್ಟ ಸುಧಾರಿಸಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಲಕ್ಕಹಳ್ಳಿ ಗ್ರಾಮದಲ್ಲಿ ಶುಕ್ರವಾರ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕಳೆದ ಮೂರು ದಶಕಗಳ ಹಿಂದೆ ಈ ಭಾಗದ ರೈತರ ಉಪಕಸುಬಾಗಿದ್ದ ಹೈನುಗಾರಿಕೆ ಇದೀಗ ಮುಖ್ಯ ಕಸುಬಾಗಿದೆ. ಕಾರಣ ಅವಿಭಾಜಿತ ಜಿಲ್ಲೆಯಲ್ಲಿ ಇಂದು ಕುಡಿಯುವ ನೀರಿಗೂ ಪರಿತಪಿಸುವ ವಾತಾವರಣ ನಿರ್ಮಾಣವಾಗಿದ್ದು ರೈತರು ಕೃಷಿ ಮಾಡಲಾಗುತ್ತಿಲ್ಲ. ಬಹುತೇಕ ರೈತರು ಮನೆಯಲ್ಲಿ ಒಂದೆರಡು ಹಸುಗಳನ್ನು ಸಾಕಿ ಹಾಲು ಉತ್ಪಾದಿಸಿ ಜೀವನ ನಡೆಸುವಂತಾಗಿದೆ ಎಂದರು.
ಕುಡಿಯುವ ನೀರಿಗೂ ಪರದಾಡುವ ಸ್ಥಿತಿಯಿದ್ದರೂ ಈ ಭಾಗದ ರೈತರು ಅದರಲ್ಲಿಯೂ ಮಾತೆಯರು ಹಾಲಿನ ಉತ್ಪಾದನೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದು ಹಾಲು ಉತ್ಪಾದನೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಕರೆ ನೀಡಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಹಾಗು ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ ಯಾವುದೇ ಒಂದು ಸಂಘ ಅಭಿವೃದ್ದಿಯಾಗಬೇಕಾದರೆ ಅದಕ್ಕೆ ಸಂಘದ ಎಲ್ಲಾ ಸದಸ್ಯರೂ ಸೇರಿದಂತೆ ಹಾಲು ಉತ್ಪಾದಕರ ಸಹಕಾರ ಅತ್ಯಗತ್ಯ ಎಂದರು. ಸಹಕಾರ ಸಂಘಗಳಲ್ಲಿ ಯಾವುದೇ ರೀತಿಯ ರಾಜಕೀಯ ಬೆರಸದೇ ಸಂಘದ ಏಳಿಗೆಗಾಗಿ ಎಲ್ಲರೂ ಶ್ರಮಿಸಬೇಕು ಎಂದರು.
ಒಕ್ಕೂಟದಿಂದ ಪ್ರತಿನಿತ್ಯ ೮.೫ ಲಕ್ಷ ಲೀನಷ್ಟು ಹಾಲು ಉತ್ಪಾದನೆಯಾಗುತ್ತಿದ್ದು ಹಾಲು ಉತ್ಪಾದಕರು ಗುಣಮಟ್ಟದ ಹಾಲು ಪೂರೈಸುವುದರೊಂದಿಗೆ ಒಕ್ಕೂಟದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಹಾಲಿನ ಗುಣಮಟ್ಟ ಹಾಗು ಉತ್ಪಾದನೆಯ ಕಡೆ ಹೆಚ್ಚಿನ ಗಮನಹರಿಸುವ ಜೊತೆಗೆ ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸುವಂತೆ ಹಾಲು ಉತ್ಪಾದಕರಲ್ಲಿ ಮನವಿ ಮಾಡಿದರು. ಕಾಲ ಕಾಲಕ್ಕೆ ರಾಸುಗಳಿಗೆ ಲಸಿಕೆ ಹಾಕಿಸುವುದು ಸೇರಿದಂತೆ ಒಕ್ಕೂಟದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿ.ನಾಗರಾಜ್, ಜೆಡಿಎಸ್ ತಾಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ ಮಾತನಾಡಿದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಶಿಡ್ಲಘಟ್ಟ ಶಿಬಿರ ಘಟಕದ ಉಪ ವ್ಯವಸ್ಥಾಪಕ ಬಿ.ಎಸ್.ಹನುಮಂತರಾವ್, ಮುಖಂಡರಾದ ರಮೇಶ್, ಮುನಿರೆಡ್ಡಿ, ಲಕ್ಕಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಲ್.ಎಸ್.ಮಂಜುನಾಥ್, ಕಾರ್ಯನಿರ್ವಹಣಾಧಿಕಾರಿ ಎಲ್.ಎನ್.ಶ್ರೀಧರ್, ದೇವರಾಜ್, ರಾಜಣ್ಣ ಹಾಜರಿದ್ದರು.
ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯ್ತಿ – ಜೆ.ವೆಂಕಟಾಪುರ
ತಾಲ್ಲೂಕಿನ ಜೆ,ವೆಂಕಟಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐದು ಗ್ರಾಮಗಳಲ್ಲಿಯೂ ಶೇ. ೧೦೦ ರಷ್ಟು ಶೌಚಾಲಯ ನಿರ್ಮಾಣ ಕಾರ್ಯ ಪೂರ್ಣಗೊಂಡಿರುವುದರಿಂದ ಜೆ.ವೆಂಕಟಾಪುರ ಗ್ರಾಮ ಪಂಚಾಯ್ತಿಯನ್ನು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯಿತಿ ಎಂದು ಘೋಷಿಸಲಾಗಿದೆ ಎಂದು ಸ್ವಚ್ಚ ಭಾರತ್ ಮಿಷನ್‌ನ ಜಿಲ್ಲಾ ಸಂಯೋಜಕ ಭಾಸ್ಕರ್ ಹೇಳಿದರು.
ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾಮ ಪಂಚಾಯ್ತಿ ಆವರಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಸ್ವಚ್ಚಭಾರತ್ ಯೋಜನೆಯಡಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯಿತಿ ಎಂದು ಘೋಷಿಸುವ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬಯಲು ಶೌಚದಿಂದ ಅನಾರೋಗ್ಯದ ಸಮಸ್ಯೆ ಸೇರಿದಂತೆ ಹೆಣ್ಣು ಮಕ್ಕಳ ಗೌರವಕ್ಕೆ ಕುಂದು ಬರಬಾರದು ಎಂಬ ಉದ್ದೇಶದಿಂದ ಸರ್ಕಾರ ಸ್ವಚ್ಚ ಭಾರತ್ ಯೋಜನೆಯಡಿ ಶೌಚಾಲಯ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಪ್ರತಿಯೊಬ್ಬರೂ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಅವರಿಗೆ ಮನವರಿಕೆ ಮಾಡಿಕೊಟ್ಟು ಇಡೀ ಗ್ರಾಮ ಪಂಚಾಯ್ತಿಯ ಎಲ್ಲಾ ಗ್ರಾಮಗಳಲ್ಲಿಯೂ ಶೇ. ೧೦೦ ರಷ್ಟು ಕುಟುಂಬಗಳು ಶೌಚಾಲಯ ನಿರ್ಮಿಸಿಕೊಳ್ಳಲು ಸಹಕರಿಸಿದ ಗ್ರಾಮ ಪಂಚಾಯ್ತಿಯ ಎಲ್ಲಾ ಜನಪ್ರತಿನಿಧಿಗಳು ಹಾಗು ಅಧಿಕಾರ ವರ್ಗದವರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.
ತಾಲ್ಲೂಕು ಪಂಚಾಯ್ತಿ ನರೇಗಾ ಸಹಾಯಕ ನಿರ್ದೇಶಕ ಶ್ರೀನಾಥಗೌಡ ಮಾತನಾಡಿ ಜಿಲ್ಲೆಯಲ್ಲಿಯೇ ಪ್ರಥಮ ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯ್ತಿಯಾಗಿ ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾಮ ಪಂಚಾಯ್ತಿ ಘೋಷಣೆಯಾಗಿರುವುದು ಸಂತಸದ ವಿಷಯ ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ರಘುನಾಥ್ ಮಾತನಾಡಿ, ತಮ್ಮ ಅಧಿಕಾರಾವಧಿಯಲ್ಲಿ ಗ್ರಾಮ ಪಂಚಾಯ್ತಿ ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯ್ತಿಯಾಗಿ ಘೋಷಣೆಯಾಗಿರುವುದು ಸಂತೋಷದ ವಿಷಯ ಹಾಗು ಇದಕ್ಕಾಗಿ ಶ್ರಮಿಸಿದ ಸರ್ವಸದಸ್ಯರೂ, ಅಧಿಕಾರಿಗಳು ಹಾಗು ನಾಗರೀಕರಿಗೆ ಧನ್ಯವಾದಗಳು ಎಂದರು.
ಸಭೆಯಲ್ಲಿ ಈಗಾಗಲೇ ನಿವೇಶನ ಹೊಂದಿರುವ ವಸತಿರಹಿತ ಫಲಾನುಭವಿಗಳಿಂದ ಅರ್ಜಿಗಳನ್ನು ಸ್ವೀಕರಿಸಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಹಾಗು ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯಡಿ ೨೦೧೭-೧೮ ನೇ ಸಾಲಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.
ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಚಂದ್ರೇಗೌಡ, ತಾಲ್ಲೂಕು ಪಂಚಾಯ್ತಿ ವ್ಯವಸ್ಥಾಪಕ ಪ್ರಸಾದ್, ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಅಂಜನ್‌ಕುಮಾರ್, ಸದಸ್ಯರು ಹಾಜರಿದ್ದರು.
ಗ್ರಾಹಕರ ಸಂವಾದ ಸಭೆ
ನಗರದ ಬೆಸ್ಕಾಂ ಕಚೇರಿಯಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಗ್ರಾಹಕರ ಸಂವಾದ ಸಭೆಯನ್ನು ಹಮ್ಮಿಕೊಂಡಿದ್ದು ತಾಲ್ಲೂಕಿನ ಗ್ರಾಹಕರು ಭಾಗವಹಿಸಿ ತಮ್ಮ ವಿದ್ಯುತ್ ಸಮಸ್ಯೆಗಳನ್ನು ತಿಳಿಸಬಹುದೆಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಅನ್ಸರ್‌ಬಾಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನಾವು ಬಿಟ್ಟುಹೋಗಬೇಕು
ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನಾವು ಬಿಟ್ಟುಹೋಗಬೇಕು. ಅದೇ ನಾವು ಅವರಿಗೆ ನೀಡಬಹುದಾದ ಅತ್ಯುತ್ತಮ ಕೊಡುಗೆ. ಪರಿಸರವನ್ನು ಉಳಿಸಿ ಬೆಳೆಸುವ ಕೆಲಸ ಎಲ್ಲರಿಂದಲೂ, ಎಲ್ಲಾ ಸಮಯದಲ್ಲೂ ಆಗಬೇಕಿದೆ ಎಂದು ಮಳ್ಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಾಧ ಶಿವಕುಮಾರ್ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮ ಪಂಚಾಯ್ತಿಯಿಂದ ಉದ್ಯೋಗಖಾತ್ರಿ ಯೋಜನೆಯಡಿ ಶುಕ್ರವಾರ ಮಳ್ಳೂರು ಗ್ರಾಮದಲ್ಲಿ ೧೫೦೦ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗಿಡಮರಗಳನ್ನು ಬೆಳೆಸುವುದರಿಂದ ಉತ್ತಮ ಮಳೆಯಾಗುವುದಷ್ಟೇ ಅಲ್ಲದೇ ಜನರ ಆರೋಗ್ಯವೂ ಸುಧಾರಿಸುತ್ತದೆ ಹಾಗು ಮುಂದಿನ ಪೀಳಿಗೆಗೆ ಕೊಡುಗೆ ನೀಡಿದಂತಾಗುತ್ತದೆ ಎಂದರು.
ಹಿಂದೆ ಪರಿಸರವೆಲ್ಲಾ ಹಸಿರಿನಿಂದ ಕೂಡಿದ್ದು ಸಕಾಲದಲ್ಲಿ ಮಳೆ ಬೆಳೆಗಳಾಗುವುದರೊಂದಿಗೆ ಆರೋಗ್ಯವೂ ಉತ್ತಮವಾಗಿತ್ತು. ಆದರೆ ಇದೀಗ ನಮ್ಮಲ್ಲಿದ್ದ ಗಿಡ ಮರಗಳನ್ನು ನಾವೇ ಕಡಿದುಹಾಕಿದ್ದರಿಂದ ತಾಪಮಾನ ಹೆಚ್ಚಾಗುವುದು ಸೇರಿದಂತೆ ಸಕಾಲದಲ್ಲಿ ಮಳೆ ಬೆಳೆಗಳಾಗದೇ ಕುಡಿಯುವ ನೀರಿಗೂ ಪರಿತಪಿಸುವಂತಾಗಿದೆ.
ಇನ್ನಾದರೂ ನಾವು ಎಚ್ಚೆತ್ತುಕೊಂಡು ಮನೆಗೊಂದು ಸಸಿ ನೆಟ್ಟು ಅದನ್ನು ತಮ್ಮ ಮಕ್ಕಳಂತೆ ಪೋಷಿಸದೇ ಹೋದಲ್ಲಿ ಮುಂದಿನ ಪೀಳಿಗೆಗೆ ಉಳಿಗಾಲವಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಸಸಿ ನೆಟ್ಟು ಪೋಷಿಸಲು ಮುಂದಾಗಬೇಕು ಎಂದರು.
ಗ್ರಾಮ ಪಂಚಾತ್ತಿ ಅಭಿವೃದ್ಧಿ ಅಧಿಕಾರಿ ಸುಧಾಮಣಿ ಮಾತನಾಡಿ ಯಾವುದೇ ವ್ಯಕ್ತಿ ತನ್ನ ಜೀವಮಾನವಿಡೀ ಏನು ಸಾಧನೆ ಮಾಡದಿದ್ದರೂ ಸರಿಯೆ. ಕನಿಷ್ಟ ಕೆಲವೊಂದು ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸಿದರೂ ಸಾಕು. ಅದು ಈ ಪ್ರಕೃತಿಗೆ ಆತ ನೀಡುವ ಬೆಲೆ ಕಟ್ಟಲಾಗದ ದೊಡ್ಡ ಕೊಡುಗೆಯಾಗಲಿದೆ ಎಂದರು.
ಮಳ್ಳೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಎಂ,ವಿ.ಗೋಪಾಲಪ್ಪ, ಸದಸ್ಯ ರವಿ, ಗ್ರಾಮದ ಮುಖಂಡರಾದ ಗಿರೀಶ್, ಅಶೋಕ್, ನರೇಗಾ ಜೆಇ ಹರೀಶ್ ಈ ಸಂದರ್ಭದಲ್ಲಿ ಹಾಜರಿದ್ದರು.
ಸುಧಾರಣೆಯಾಗದ ತಾಲ್ಲೂಕಿನ ಅರ್ಚಕರ ಮತ್ತು ದೇವಾಲಯಗಳ ಪರಿಸ್ಥಿತಿ
ಸರ್ಕಾರ ಅರ್ಚಕರು, ಆಗಮಿಕರು, ಉಪಾಧಿವಂತರು ಮತ್ತು ದೇವಾಲಯ ಸಿಬ್ಬಂದಿಗಳ ವೇತನವನ್ನು ಸ್ವಲ್ಪ ಹೆಚ್ಚಿಸಿದೆ. ಆದರೆ ತಾಲ್ಲೂಕಿನಲ್ಲಿನ ಅರ್ಚಕರ ಸ್ಥಿತಿಯಲ್ಲಿ ಸುಧಾರಣೆ ಆಗಿಲ್ಲ, ಅಲ್ಲದೆ ಮುಜರಾಯಿ ದೇವಾಲಯಗಳ ಅಭಿವೃದ್ಧಿಯೂ ನಡೆದಿಲ್ಲ ಎನ್ನುವುದು ಸಾರ್ವಜನಿಕರ ಮಾತು.
ತಾಲ್ಲೂಕಿನಲ್ಲಿ ಒಟ್ಟು 212 ಮುಜರಾಯಿ ದೇವಾಲಯಗಳಿವೆ, 158 ಮಂದಿ ಅರ್ಚಕರಿದ್ದಾರೆ. ತಾಲ್ಲೂಕಿನ ದೇವಾಲಯಗಳೆಲ್ಲವನ್ನೂ ಸಿ ವರ್ಗಕ್ಕೆ ಸೇರಿಸಲಾಗಿದೆ. ಅರ್ಚಕರಲ್ಲದೆ, ತಲಕಾಯಲಬೆಟ್ಟದ ವೆಂಕಟರಮಣಸ್ವಾಮಿಯಂಥಹ ಆದಾಯ ಹೆಚ್ಚಿರುವ ಕೆಲ ದೊಡ್ಡ ದೇವಾಲಯಗಳಲ್ಲಿ ಮಷಾಲ್ತಿ (ಪಂಜು ಹಿಡಿಯುವವರು), ವಾದ್ಯದವರು, ಒಳಾಂಗಣ ಹೊರಾಂಗಣ ನೌಕರರು, ಪಾರುಪತ್ತೆದಾರರು ಮುಂತಾದ ಅವಲಂಬಿತರಿರುತ್ತಾರೆ.
ಸರ್ಕಾರ ಹಿಂದೆ ಅರ್ಚಕರಿಗೆ ತಸ್ತಿಕ್ ಹಣವೆಂದು ವಾರ್ಷಿಕವಾಗಿ 36 ಸಾವಿರ ರೂಗಳನ್ನು ನೀಡುತ್ತಿತ್ತು. ಆ ಹಣವನ್ನು ಈಗ 48 ಸಾವಿರ ರೂಗಳಿಗೆ ಏರಿಸಿದೆ. ಈ ತಸ್ತಿಕ್ ಹಣವೆಂದರೆ ಅರ್ಚಕರಿಗೆ ಸಂಬಳವಲ್ಲ. ಪೂಜಾಕಾರ್ಯಗಳಿಗೆ ಬಳಸುವ ಪದಾರ್ಥಗಳ ವೆಚ್ಚಕ್ಕೆ ಹಣ. ತೆಂಗಿನಕಾಯಿ, ಹೂ, ಎಣ್ಣೆ ಬತ್ತಿ, ಕಡ್ಡಿ ಕರ್ಪೂರಗಳನ್ನು ಕೊಂಡು ಉಳಿಕೆ ಹಣ ಮಾತ್ರ ಅವರಿಗೆ ಸಲ್ಲುತ್ತದೆ.
ಹಿಂದೆ ದೇವಾಲಯ ಹಾಗೂ ಅರ್ಚಕರ ಸೇವೆಗಾಗಿ ಆದಾಯ ಮೂಲಗಳನ್ನು ದೇವಾಲಯದ ಬಳಿಯಲ್ಲಿಯೇ ಕಲ್ಪಸಿಕೊಡಲಾಗುತ್ತಿತ್ತು. ಆದರೆ ಈಗ ಅರ್ಚಕರಿಗೆ ಭಕ್ತರು ನೀಡುವ ದಕ್ಷಿಣೆ ಹಣ ಮತ್ತು ಸರ್ಕಾರದಿಂದ ಸಿಗುವ ತಸ್ತಿಕ್‌ನ ಉಳಿಕೆ ಹಣ ಮಾತ್ರ ಆದಾಯದ ಮೂಲವಾಗಿದೆ. ಹಾಗಾಗಿ ದೇವರನ್ನು ಪೂಜಿಸುವವರು ಆರ್ಥಿಕವಾಗಿ ದುರ್ಬಲರಾಗಿದ್ದಾರೆ.
‘ಬಹುತೇಕ ಮುಜರಾಯಿ ದೇವಸ್ಥಾನಗಳಿಗೆ ಕಾಯಕಲ್ಪದ ಅಗತ್ಯವಿದೆ. ಹಲವೆಡೆಯಂತೂ ದೇವಾಲಯಗಳು ಶಿಥಿಲವಾಗಿ ಪೂಜೆ ಕೂಡ ಮಾಡದಂತಾಗಿವೆ. ದೇವಾಲಯಗಳಲ್ಲಿ ನೀರು, ರಸ್ತೆ ಮುಂತಾದ ಮೂಲ ಸೌಕರ್ಯಗಳ ಅಗತ್ಯವಿದೆ. ಶಿಥಿಲವಾದ ದೇವಾಲಯಗಳನ್ನು ಗುರುತಿಸಿ ಜೀರ್ಣೋದ್ಧಾರ ಮಾಡಬೇಕು. ಅರ್ಚಕರಿಗೆ ದೇವಾಲಯದ ಬಳಿ ವಸತಿ ಸೌಕರ್ಯವನ್ನು ಕಲ್ಪಿಸಬೇಕು. ಸರ್ಕಾರ ತಸ್ತಿಕ್ ಹಣವನ್ನು ಹೆಚ್ಚಿಸಿರುವುದು ಸ್ವಾಗತಾರ್ಹವಾದರೂ ಈಗಿನ ಧಾರಣೆಗೆ ಅದು ಸಾಲದು’ ಎನ್ನುತ್ತಾರೆ ತಾಲ್ಲೂಕು ಹಿಂದೂ ದೇವಾಲಯಗಳ ಅರ್ಚಕರ ಆಗಮೀಕರ ಮತ್ತು ಉಪಾಧಿವಂತರ ಒಕ್ಕೂಟದ ಸಹಕಾರ್ಯದರ್ಶಿ ಎಸ್.ಸತ್ಯನಾರಾಯಣರಾವ್.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ೫೦ ಸಾವಿರ ಬೀಜದ ಉಂಡೆ ತಯಾರಿ
ಹಿಂದೆಲ್ಲಾ ಬೀಜೋತ್ಪಾದನೆ ತನ್ನಿಂದ ತಾನೆ ನಡೆಯುತ್ತಿತ್ತು. ಆದರೆ ಈಗ ಪರಿಸ್ಥಿತಿ ಹಿಂದಿನಂತಿಲ್ಲ. ನೇರವಾಗಿ ಬೀಜ ಒಗೆದರೆ ಅದು ಮೊಳೆಕೆಯೊಡೆಯಲು ಭೂಮಿಯಲ್ಲಿ ಪೋಷ್ಟಿಕಾಂಶ ಸಿಗುವುದಿಲ್ಲ. ಆ ನಿಟ್ಟಿನಲ್ಲಿ ಬೀಜದುಂಡೆ ಮಾಡಲಾಗುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮೋಹನ್ ತಿಳಿಸಿದರು.
ತಾಲ್ಲೂಕಿನ ಸಾದಲಿ ಹೋಬಳಿಯಲ್ಲಿ ಬೀಜದುಂಡೆಗಳನ್ನು ತಯಾರಿಸಿದ ನಂತರ ಅವರು ಮಾತನಾಡಿದರು. ತಾಲ್ಲೂಕಿನಲ್ಲಿ ಕಳೆದ ಒಂದು ತಿಂಗಳಿನಿಂದ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಸದಸ್ಯರ ಮೂಲಕ ೫೦,೦೦೦ ಸಾವಿರ ಬೀಜದ ಉಂಡೆ ತಯಾರಿ ಕಾರ್ಯಕ್ರಮವನ್ನು ಪ್ರತಿಗ್ರಾಮ ಮಟ್ಟದಲ್ಲಿ ಮಾಡಲಾಗಿತ್ತು.
ಮಣ್ಣು, ಸಗಣಿ, ಗೋಮೂತ್ರವನ್ನು ಮಿಶ್ರಣ ಮಾಡಿ ಮಣ್ಣಿನ ಉಂಡೆಯನ್ನು ತಯಾರು ಮಾಡಿ ಅದರೊಳಗೆ ಬೀಜವಿಟ್ಟು ಮುಚ್ಚಲಾಗುತ್ತದೆ. ಬೀಜದುಂಡೆಯನ್ನು ಹದವಾದ ಬಿಸಿಲಿನಲ್ಲಿ ಒಂದೆರಡು ದಿನ ಒಣಗಿಸಿ ಮಳೆಗಾಲ ಆರಂಭದಲ್ಲಿ ಅಲ್ಲಲ್ಲಿ ಈ ಬೀಜದುಂಡೆಗಳನ್ನು ಎಸೆಯಲಾಗುತ್ತದೆ. ಮಳೆ ಬಿದ್ದೊಡನೆ ಮಣ್ಣು ತೇವಗೊಂಡು ಬೀಜ ಮೊಳಕೆಯೊಡೆಯುತ್ತದೆ. ಸಸಿಗೆ ಬೇಕಾದಷ್ಟು ಪೋಷ್ಟಿಕಾಂಶ ಸುತ್ತಲೂ ಮೊದಲೇ ತಯಾರಾಗಿರುತ್ತದೆ. ಗಿಡ ಮರವಾಗಿ ಬೆಳೆಯುತ್ತದೆ ಎಂಬುದು ಈ ಸೀಡ್ ಬಾಲ್‌ನ ಉದ್ದೇಶ.
ತಾಲೂಕಿನಲ್ಲಿ ಸಾದಲಿ ಹೋಬಳಿಯಲ್ಲಿ ೧೦ ಸಾವಿರ, ಬಶೆಟ್ಟಹಳ್ಳಿ ಹೋಬಳಿಯಲ್ಲಿ ೮ ಸಾವಿರ, ಶಿಡ್ಲಘಟ್ಟ ನಗರದಲ್ಲಿ ೫ಸಾವಿರ, ಮೇಲೂರು ಹೋಬಳಿ ೧೨ ಸಾವಿರ, ಜಂಗಮಕೋಟೆ ಹೋಬಳಿಯಲ್ಲಿ ೧೫ ಸಾವಿರ ಬೀಜದುಂಡೆ ಸಂಘದ ಸದಸ್ಯರ ಮೂಲಕ ತಯಾರಿಸಿದ್ದು, ಕೆರೆಯ ಸುತ್ತ-ಮುತ್ತ ಖಾಲಿ ಜಾಗದಲ್ಲಿ ಉಂಡೆಯನ್ನು ಬೀಸಾಡಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರು ಮತ್ತು ಸೇವಾಪ್ರತಿನಿಧಿಗಳು ಹಾಜರಿದ್ದರು.
ಹಸಿರು ವಾತಾವರಣ ಉಳಿಸಿಕೊಳ್ಳಬೇಕು
ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರು ಹಸಿರು ವಾತಾವರಣ ಉಳಿಸಿಕೊಳ್ಳಬೇಕು ಎಂದು ಹೇಳುತ್ತಿದ್ದರು. ಅವರ ಮಾತನ್ನು ನಾವು ಕೃತಿಯಾಗಿ ಆಚರಿಸಬೇಕು ಎಂದು ಡಾ. ಅಬ್ದುಲ್ ಕಲಾಂ ಪ್ರಜಾ ಸಮಿತಿ ರಾಜ್ಯಾಧ್ಯಕ್ಷ ವಿ.ಕೃಷ್ಣಪ್ಪ ತಿಳಿಸಿದರು.
ನಗರದಲ್ಲಿ ಮುನೇಶ್ವರಸ್ವಾಮಿ ದೇವಾಲಯದ ಸ್ಥಳದಲ್ಲಿ ಡಾ. ಅಬ್ದುಲ್ ಕಲಾಂ ಪ್ರಜಾ ಸಮಿತಿ ವತಿಯಿಂದ ಗುರುವಾರ 50 ಗಿಡಗಳನ್ನು ನೆಟ್ಟು ಅವರು ಮಾತನಾಡಿದರು.
ಭವಿಷ್ಯದ ಪೀಳಿಗೆಯನ್ನು ಸುಸ್ಥಿರವಾಗಿಡಲು ಪರಿಸರ ಕುರಿತು ಅರಿವು ಮೂಡಿಸುವುದು ಅಗತ್ಯವಾಗಿದೆ. ಸೋಲಾರ್ ಅಳವಡಿಸಿಕೊಳ್ಳುವುದು, ಮಳೆನೀರು ಸಂಗ್ರಹಿಸಿಕೊಳ್ಳುವುದು, ಖನಿಜ ತೈಲಗಳ ಅವಲಂಬನ ಕಡಿಮೆ ಮಾಡಿ, ಪರ್ಯಾಯ ಶಕ್ತಿಮೂಲಗಳಾದ ಸೂರ್ಯನ ಬಿಸಿಲಿನ ಶಾಖ ಹಿಡಿದಿಟ್ಟುಕೊಳ್ಳಬೇಕು. ಇಂಥ ಬದಲಾವಣೆಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಪರಿಸರ ಸಂರಕ್ಷಣೆ ಇಂದಿನ ತುರ್ತು ಅಗತ್ಯಗಳಲ್ಲಿ ಒಂದಾಗಿದೆ. ಕಲುಷಿತಗೊಳ್ಳುತ್ತಿರುವ ವಾತಾವರಣವನ್ನು ಶುದ್ಧಗೊಳಿಸದಿದ್ದರೆ ಜೀವ ಜಂತುಗಳ ಆರೋಗ್ಯಕರ ಬದುಕು ಹದಗೆಡಲಿದೆ. ಪ್ರತಿಯೊಬ್ಬರೂ ಹಸಿರನ್ನು ಹೆಚ್ಚಿಸಲು ತಮ್ಮ ಸಮಯ ನೀಡಬೇಕಾದ ತುರ್ತಿದೆ. ಹಸಿರು ಜೀವ ಜಂತುಗಳ ಉಸಿರು. ಇದನ್ನು ಮನಗಾಣದ ಮನಷ್ಯ ಹಸಿರಿಗೆ ನಿತ್ಯವೂ ಕೊಡಲಿ ಪೆಟ್ಟು ನೀಡುತ್ತಿದ್ದಾನೆ. ಮತ್ತೊಂದು ಕಡೆ ಆಧುನಿಕ ಸೌಲಭ್ಯ ಮತ್ತು ಅಭಿವೃದ್ಧಿಯೂ ಕೂಡ ಪರಿಸರ ನಾಶಕ್ಕೆ ಕಾರಣವಾಗಿದೆ. ಎಲ್ಲರೂ ತಮ್ಮ ಮನೆ ಸುತ್ತ ಮುತ್ತ ಗಿಡ ನೆಡುವ ಮೂಲಕ ಹಸಿರು ವಾತಾವರಣ ನಿರ್ಮಿಸಬೇಕು. ಆ ಮೂಲಕ ಸಮಾಜದಲ್ಲಿ ಪರಿಸರ ಜಾಗೃತಿ ಮೂಡಿಸಬೇಕು. ದೇಶದ ಅಭಿವೃದ್ಧಿಯಲ್ಲಿ ಆರೋಗ್ಯಕರ ಪರಿಸರ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.
ಡಾ. ಅಬ್ದುಲ್ ಕಲಾಂ ಪ್ರಜಾ ಸಮಿತಿ ಸಂಸ್ಥಾಪಕ ಶಂಕರ್ ಧರ್ಮನ್, ರಾಮಚಂದ್ರಪ್ಪ, ಮುನಿರಾಜು, ಸುಂದರ್, ವಿ.ಆನಂದ್, ರಾಜಮ್ಮ, ಸುನಂದಮ್ಮ ಹಾಜರಿದ್ದರು.
ಉಚಿತ ಕಣ್ಣಿನ ತಪಾಸಣಾ ಶಿಬಿರ
ಕಣ್ಣಿನ ಬಗ್ಗೆ ಜನರಲ್ಲಿ ಮಾಹಿತಿ ಕೊರತೆಯಿದೆ. ಕಾಲಕಾಲಕ್ಕೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಬಹಳಷ್ಟು ಮಂದಿ ವೃದ್ಧರು ಕಣ್ಣಿನ ಪೊರೆಯಿಂದ ಬಳಲುತ್ತಿರುತ್ತಾರೆ. ಅವರಿಗೆ ಚಿಕಿತ್ಸೆ ಅತ್ಯಗತ್ಯ ಎಂದು ಕರ್ನಾಟಕ ರಾಜ್ಯ ಸರ್.ಎಂ.ವಿ.ಕಾರ್ಮಿಕರ ಸೇವಾ ಸಂಘದ ರಾಜ್ಯಾಧ್ಯಕ್ಷ ಜಿ.ಪ್ರಕಾಶ್ ತಿಳಿಸಿದರು.
ತಾಲ್ಲೂಕಿನ ಚೌಡಸಂದ್ರ ಗ್ರಾಮದಲ್ಲಿ ಈಚೆಗೆ ಅಭಿಷೇಕ್ ನೇತ್ರಧಾಮ ಕಣ್ಣಿನ ಆಸ್ಪತ್ರೆ ಮತ್ತು ಕರ್ನಾಟಕ ರಾಜ್ಯ ಸರ್.ಎಂ.ವಿ.ಕಾರ್ಮಿಕರ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯದ ವಿಚಾರದಲ್ಲಿ ಜನಜಾಗೃತಿ ಮೂಡಿಸಲು ನೇತ್ರ ಚಿಕಿತ್ಸಾ ಶಿಬಿರಗಳು ಸಹಕಾರಿ. ಸೇವಾ ಮನೋಭಾವದಿಂದ ವೈದ್ಯರು ಹಾಗೂ ಕಣ್ಣಿನ ಆಸ್ಪತ್ರೆಯವರ ಸಹಕಾರದಿಂದ ಗ್ರಾಮಗಳಲ್ಲಿ ಈ ರೀತಿಯ ಉಚಿತ ಶಿಬಿರಗಳು ನಡೆಸುವಂತಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಗತ್ಯವಿರುವವರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು. ಶಸ್ತ್ರಚಿಕಿತ್ಸೆ ಅಗತ್ಯವಿರುವವರನ್ನು ಗುರುತಿಸಿ ಅವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಆಸ್ಪತ್ರೆಯಲ್ಲಿ ನಡೆಸಲು ದಿನಾಂಕವನ್ನು ನಿಗದಿಪಡಿಸಲಾಯಿತು.
ಕಾರ್ಮಿಕ ಸೇವಾ ಸಂಘದ ರಾಜ್ಯ ಉಪಾಧ್ಯಕ್ಷ ಗೋಪಿ, ರಾಜ್ಯ ಗೌರವಾಧ್ಯಕ್ಷ ಬಿ.ಶ್ರೀನಿವಾಸ್, ಜಿಲ್ಲಾ ಅಧ್ಯಕ್ಷ ಕಾರ್ತಿಕ್, ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್, ಕಾಳಿಂಗಾಚಾರಿ, ಮೇಲೂರು ಶಾಖೆಯ ಅಧ್ಯಕ್ಷ ವೆಂಕಟೇಶ್, ನರಸಿಂಹಮೂರ್ತಿ, ರಾಮಕೃಷ್ಣ ಹಾಜರಿದ್ದರು.
ನಗರದಲ್ಲಿ ಕಸ ತುಂಬಿ ತುಳುಕುತ್ತಿದೆ
ಒಂದೆಡೆ ಸಂಬಳ ನೀಡಿಲ್ಲವೆಂದು ಕೆಲಸ ನಿಲ್ಲಿಸಿರುವ ಪೌರಕಾರ್ಮಿಕರು, ಮತ್ತೊಂದೆಡೆ ಕಸ ತುಂಬಿ ತುಳುಕುತ್ತಿರುವ ನಗರದ ವಿವಿಧ ವಾರ್ಡುಗಳು. ಒಟ್ಟಾರೆ ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎಂಬಂತಾಗಿದೆ ನಗರದಲ್ಲಿನ ನಾಗರಿಕರ ಪರಿಸ್ಥಿತಿ.
ನಗರಸಭೆಯ ವ್ಯಾಪ್ತಿಯ ೨೭ ವಾರ್ಡುಗಳಲ್ಲಿ ಸ್ವಚ್ಚತಾ ಕಾರ್ಯ ಕೈಗೊಳ್ಳಲು ನೀಡಲಾಗಿದ್ದ ಟೆಂಡರ್ ಜನವರಿ ೨೦೧೭ ಕ್ಕೆ ಮುಕ್ತಾಯವಾಗಿದೆ. ಇದುವರೆಗೂ ಪುನಃ ಟೆಂಡರ್ ಕರೆದಿಲ್ಲ, ನಗರಸಭೆಯಲ್ಲಿ ಅಧಿಕೃತವಾಗಿರುವ ಸುಮಾರು 40 ಮಂದಿ ಪೌರಕಾರ್ಮಿಕರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಉಳಿದ ಹೊರಗುತ್ತಿಗೆದಾರರಾಗಿರುವ 50 ಕ್ಕೂ ಹೆಚ್ಚು ಮಂದಿ ಪೌರಕಾರ್ಮಿಕರು ಕೆಲಸ ಮಾಡುತ್ತಿಲ್ಲ, ನಗರಾಭಿವೃದ್ಧಿ ಕೋಶದಿಂದ ಅನುಮತಿ ಪಡೆದುಕೊಂಡು ಇದುವರೆಗೂ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕರನ್ನೇ ಪುನಃ ಮುಂದುವರೆಸಿಕೊಂಡು ಕೆಲಸ ಮಾಡಿಸಲು ಪ್ರಯತ್ನಿಸಲಾಗುತ್ತಿದೆ. ನಗರಸಭೆಯಿಂದ ನೇರವಾಗಿ ಪೌರಕಾರ್ಮಿಕರ ಖಾತೆಗಳಿಗೆ ಸಂಬಳ ನೀಡುವಂತಿಲ್ಲ. ಗುತ್ತಿಗೆದಾರರೇ ನೀಡಬೇಕಿದೆ. ಈ ಕಾರಣದಿಂದಾಗಿ ಕೆಲಸ ನಿಲ್ಲಿಸಿರುವ ಪೌರಕಾರ್ಮಿಕರು ಒಂದೆಡೆ ಸಂಬಳವಿಲ್ಲದೆ ಕಷ್ಟಪಡುತ್ತಿದ್ದರೆ, ಮತ್ತೊಂದೆಡೆ ನಗರ ಕಸ ತ್ಯಾಜ್ಯಗಳಿಂದ ಹಾಳಾಗುತ್ತಿದೆ.
ನಗರದ ಮುಖ್ಯ ರಸ್ತೆಯಾದ ಟಿ.ಬಿ ರಸ್ತೆಯ ಹತ್ತಿರ ಹಾಗೂ ನಗರಸಭೆ ಕಚೇರಿ ಆಸುಪಾಸಿನಲ್ಲಿರುವ 5, 6, 7 ಮತ್ತು 8 ನೇ ವಾರ್ಡಿನಲ್ಲಿ ಕಸದ ರಾಶಿಯು ರಸ್ತೆ ಪಕ್ಕದಲ್ಲಿ ಬಿದ್ದಿವೆ. ಚರಂಡಿಗಳಲ್ಲಿ ಕಲುಷಿತ ನೀರು ತುಂಬಿಹೋಗಿದೆ. ಆರನೇ ವಾರ್ಡಿನಲ್ಲಿ ಒಳಚರಂಡಿಯ ಚೇಂಬರ್ ತುಂಬಿ ಹೊರಕ್ಕೆ ಹರಿಯುತ್ತಿದೆ. ತ್ಯಾಜ್ಯ ನೀರು ಹೊರ ಚೆಲ್ಲುತ್ತಿರುವುದರಿಂದ ದುರ್ವಾಸನೆ ಹರಡಿದ್ದು ಈ ಭಾಗದಲ್ಲಿ ವಾಸಿಸುವ ಜನರು ವಾಸನೆಗೆ ಮನೆಯಲ್ಲಿ ಊಟ ಮಾಡಲು ಆಗದಂತಾಗಿದೆ ಎಂದು ದೂರುತ್ತಿದ್ದಾರೆ.
ನಗರಸಭೆಯ ಮುಂಭಾಗದ ಎಸ್‌ಬಿಎಂ ಬ್ಯಾಂಕಿನ ಮುಂದೆ ಕಸದ ರಾಶಿಯು ಬಿದ್ದಿದ್ದರೂ ಇದನ್ನು ತೆಗೆಸುವ ಕಾರ್ಯ ಆಗಿಲ್ಲ. ನಗರಸಭೆಯ ಬಳಿಯೇ ಈ ಪರಿಸ್ಥಿತಿ ಇದ್ದರೆ ಇನ್ನು ನಗರದ ವಿವಿಧ ಭಾಗದಲ್ಲಿನ ತ್ಯಾಜ್ಯ ನಿರ್ವಹಣೆಯ ವ್ಯವಸ್ಥೆ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ತ್ಯಾಜ್ಯ ನಿರ್ವಹಣೆಗಾಗಿ ನಗರಸಭೆಯಿಂದ ಸಾಕಷ್ಟು ಹಣ ವ್ಯಯಿಸಲಾಗುತ್ತಿದೆ. ಸ್ವಚ್ಚ ಭಾರತ್ ಯೋಜನೆ, ಒಣ ತ್ಯಾಜ್ಯ, ಹಸಿ ತ್ಯಾಜ್ಯ ಬೇರ್ಪಡಿಸುವ ಯೋಜನೆ, ಮನೆಮನೆಗೆ ಬಂದು ಕಸ ಸಂಗ್ರಹಿಸಲು ವಾಹನಗಳು, ಕಸದ ಕಂಟೈನರ್‌ಗಳು, ತ್ಯಾಜ್ಯ ವಿಲೇವಾರಿ ಘಟಕ ಮುಂತಾದ ಯೋಜನೆಗಳಿಗೆ ಲಕ್ಷಾಂತರ ರೂಗಳನ್ನು ವ್ಯಯಿಸಲಾಗುತ್ತಿದ್ದರೂ ನಗರದಲ್ಲಿ ಸ್ವಚ್ಚತೆ ಮಾತ್ರ ಆಗುತ್ತಿಲ್ಲ.
ಮಳೆಗಾಲ ಪ್ರಾರಂಭವಾಗುತ್ತಿದೆ. ಚರಂಡಿಗಳಲ್ಲಿ ತ್ಯಾಜ್ಯ ತುಂಬಿರುವುದು ಮಳೆ ಬಂದಾಗ ರಸ್ತೆ ಹಾಗೂ ಮನೆಗಳಿಗೆ ನುಗ್ಗುತ್ತದೆ. ಇದರಿಂದ ಸಾಂಕ್ರಾಮಿಕ ರೋಗಗಳೂ ಹರಡಲು ಪ್ರಾರಂಭವಾಗುತ್ತದೆ. ಈ ಬಗ್ಗೆ ತಕ್ಷಣ ನಗರಸಭೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೋಟ್ಯಾಂತರ ರೂಪಾಯಿಗಳ ಅನುದಾನ ಬಿಡುಗಡೆ ಮಾಡುತ್ತಿದೆ. ರಾಜ್ಯ ಸರ್ಕಾರವು, ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಸ್ವಚ್ಚತೆ ಕಾಪಾಡಲು ನಗರೋತ್ಥಾನ ಯೋಜನೆಯು ಸೇರಿದಂತೆ ಅನೇಕ ಯೋಜನೆಗಳ ಮೂಲಕ ಅನುದಾನಗಳು ಬಿಡುಗಡೆ ಮಾಡುತ್ತಿದ್ದರೂ ನಗರದಲ್ಲಿ ಸ್ವಚ್ಚತೆ ಮರೀಚಿಕೆಯಾಗಿದೆ. ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿದರೂ ಸ್ವಚ್ಚತೆಯ ವಿಚಾರದಲ್ಲಿ ಇಲ್ಲಿನ ವ್ಯವಸ್ಥೆ ಮಾತ್ರ ಮೇಲ್ದರ್ಜೆಗೇರದೆ ಇರುವುದು ಇಲ್ಲಿನ ಜನರ ಬೇಸರಕ್ಕೆ ಕಾರಣವಾಗಿದೆ.
ಪೌರಕಾರ್ಮಿಕರಿಗೆ ೩ ತಿಂಗಳ ವೇತನ ಬಾಕಿ ;ಕೆಲಸ ಕಾರ್ಯ ಸ್ಥಗಿತಗೊಳಿಸಿ ನಗರಸಭೆಗೆ ಮುತ್ತಿಗೆ ಹಾಕಿದ ಪೌರಕಾರ್ಮಿಕರು
ನಗರಸಭೆಯ ಗುತ್ತಿಗೆ ಪೌರಕಾರ್ಮಿಕರು ತಮಗೆ ಬರಬೇಕಾದ ಮೂರು ತಿಂಗಳ ಬಾಕಿ ವೇತನ ನೀಡುವಂತೆ ಆಗ್ರಹಿಸಿ ಮಂಗಳವಾರ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಗರದಲ್ಲಿ ಕಸ ವಿಲೇವಾರಿಯ ಕೆಲಸವನ್ನು ಸ್ಥಗಿತಗೊಳಿಸಿದ ಪೌರಕಾರ್ಮಿಕರು, ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ತಮಗೆ ಬರಬೇಕಾದ ೩ ತಿಂಗಳ ವೇತನವನ್ನು ಕೂಡಲೆ ನೀಡುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.
ಮೂರು ತಿಂಗಳಿಂದಲೂ ನಮಗೆ ಸಂಬಳ ಇಲ್ಲ. ನಮ್ಮ ಮಕ್ಕಳಿಗೆ ಫೀಸು ಕಟ್ಟಿಲ್ಲ. ರೇಷನ್ ಅಂಗಡಿಯಲ್ಲಿ ಬಾಕಿ ಕೊಡದ ಕಾರಣ ಅವರು ನಮಗೆ ರೇಷನ್ ಕೊಡ್ತಿಲ್ಲ. ಹಬ್ಬ ಹರಿದಿನಗಳಂದು ನೆಮ್ಮದಿಯಾಗಿ ಊಟ ಕೂಡ ಮಾಡುವಂತಿಲ್ಲ ಎಂದು ಅವಲತ್ತುಕೊಂಡರು.
ಕಳೆದ ಒಂದೂವರೆ ಎರಡು ವರ್ಷಗಳಿಂದಲೂ ಇದೆ ಗೋಳಾಗಿದೆ. ಸರಿಯಾಗಿ ಸಂಬಳ ಕೊಡುತ್ತಿಲ್ಲ. ನಾವು ಬಂದು ಗಲಾಟೆ ಮಾಡೋದು, ಅವರು ಏನೋ ಒಂದು ಹೇಳಿ ಕಳಿಸೋದು ಆಗಿದೆಯೆ ಹೊರತು ಕಾಲ ಕಾಲಕ್ಕೆ ಸಂಬಳ ಸಿಗುತ್ತಿಲ್ಲ. ನಮ್ಮ ಗುತ್ತಿಗೆದಾರರು ನಮಗೆ ಸಂಬಳ ಕೊಟ್ಟಿಲ್ಲ. ಅವರ ಮೇಲೆ ಇವರು ಏನೂ ಕ್ರಮವನ್ನೂ ತೆಗೆದುಕೊಂಡಿಲ್ಲ. ಇವರೂ ಸಂಬಳ ಕೊಡಲ್ಲ. ಎಲ್ಲರೂ ಕೆಲಸ ಮಾತ್ರ ಮಾಡಿ ಎಂದು ಹೇಳ್ತಾರೆ. ನಮಗೇನು ಹೊಟ್ಟೆ ಇಲ್ಲವೇ ಎಂದು ಪ್ರಶ್ನಿಸಿದರು.
ನಗರಸಭೆ ಸದಸ್ಯ ಲಕ್ಷ್ಮಣ್ ಇನ್ನಿತರರು ಪ್ರತಿಭಟನಾಕಾರರೊಂದಿಗೆ ಜತೆಗೂಡಿ ನಾವು ಕೂಡ ನಿಮ್ಮೊಂದಿಗೆ ಇರುತ್ತೇವೆ. ನಿಮಗೆ ಸಂಬಳ ಕೊಡುವವರೆಗೂ ನಾವು ನಿಮ್ಮ ಜತೆ ಕೈ ಜೋಡಿಸುತ್ತೇವೆ. ಆದರೆ ಕೆಲಸ ಸ್ಥಗಿತ ಮಾಡಬೇಡಿ.ಇದರಿಂದ ನಾಗರೀಕರಿಗೆ ಕಷ್ಟ ಆಗುತ್ತದೆ. ಕೆಲಸ ಮಾಡಿ. ನಿಮ್ಮ ಸಂಬಳ ಕೇಳಿ ಎಂದು ಮನವಿ ಮಾಡಿದರಾದರೂ ಪ್ರತಿಭಟನಾಕಾರರು ಅದಕ್ಕೆ ಒಪ್ಪಲಿಲ್ಲ.
ನಂತರ ನಗರಸಭೆ ಆಯುಕ್ತ ಹರೀಶ್ ಮಾತನಾಡಿ, ಸರ್ಕಾರದಿಂದ ಅನುದಾನ ಬಿಡುಗಡೆ ಆಗಿದ್ದು ಅದು ಖಜಾನೆಗೆ ಜಮೆ ಆಗಬೇಕಿದೆ. ಜಮೆ ಆದ ಕೂಡಲೆ ನಿಮಗೆ ಬಾಕಿ ಸಂಬಳ ಕೊಡುವುದಾಗಿ ಭರವಸೆ ನೀಡಿದರು.
ಈ ತಿಂಗಳ ೨೪ ರೊಳಗೆ ಬಾಕಿ ವೇತನ ಇತ್ಯರ್ಥ ಮಾಡುವ ಭರವಸೆ ನೀಡಿದ ಮೇಲಷ್ಟೆ ಪ್ರತಿಭಟನಾಕಾರರು ಪ್ರತಿಭಟನೆಯಿಂದ ಹಿಂದೆ ಸರಿದರು.
ರೈತರ ಸಾಲ ಮನ್ನಾ ಮಾಡಬೇಕೆಂದು ಒತ್ತಾಯ
ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳು ಬುಧವಾರ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟಿಸಿದರು.
ರಾಜ್ಯದಲ್ಲಿ ದಿನೇ ದಿನೇ ರೈತರ ಆತ್ಮಹತ್ಯೆಗಳ ಬಗ್ಗೆ ವರದಿಯಾಗುತ್ತಿವೆ. ರೈತರು ವಿವಿಧ ಬ್ಯಾಂಕುಗಳಿಂದ ಮಾಡಿರುವ ಸಾಲಗಳನ್ನು ತೀರಿಸಲಾಗದೇ ಆತ್ಮಹತ್ಯೆಯ ದಾರಿ ತುಳಿಯಬೇಕಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ರೈತರೇ ಇಲ್ಲವಾಗುತ್ತಾರೆ. ಬೆಳೆಯನ್ನು ಬೆಳೆಯುವವರೇ ಇಲ್ಲದ ಸ್ಥಿತಿ ಯಾವುದೇ ರಾಜ್ಯ ಹಾಗೂ ದೇಶಕ್ಕೆ ಮಾರಕವಾಗುತ್ತದೆ. ಈ ಕೂಡಲೇ ಇಲ್ಲಿ ರೈತರ ಕಷ್ಟಗಳನ್ನು ರಾಜ್ಯ ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳಬೇಕಿದೆ. ಮಾನ್ಯ ಮುಖ್ಯಮಂತ್ರಿಗಳು ರೈತರ ಸಾಲ ಮನ್ನಾ ಮಾಡುವ ಮೂಲಕ ರೈತರ ಆತ್ಮಹತ್ಯೆಗಳನ್ನು ಕೊನೆಗಾಣಿಸಬೇಕೆಂದು ಮನವಿ ಸಲ್ಲಿಸಿದರು.
ತಹಶೀಲ್ದಾರ್ ಪರವಾಗಿ ರಾಜಸ್ವ ನಿರೀಕ್ಷಕ ಮೋಹನ್ ಅವರಿಗೆ ರೈತರು ಮನವಿ ಪತ್ರವನ್ನು ಸಲ್ಲಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಎಸ್.ಎಂ.ನಾರಾಯಣಸ್ವಾಮಿ, ಬೀರಪ್ಪ, ಪ್ರಭಾಕರ್, ಮಂಜುನಾಥ್, ಗಂಗುಲಪ್ಪ, ವಿಶ್ವನಾಥ, ದೇವರಾಜ್ ಈ ಸಂದರ್ಭದಲ್ಲಿ ಹಾಜರಿದ್ದರು.
ಮಹಿಳೆಯರ ಆರ್ಥಿಕ ಬಲವರ್ಧನೆಗಾಗಿ ಚೆಕ್ ವಿತರಣೆ
ಸರ್ಕಾರದಿಂದ ಮಹಿಳಾ ಬಲವರ್ಧನೆಗೆ ಉತ್ತಮ ಯೋಜನೆಗಳು ರೂಪಿಸಲಾಗಿದ್ದು, ಗ್ರಾಮೀಣ ಪ್ರದೇಶದ ಮಹಿಳೆಯರು ಈ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಪಶು ವೈದ್ಯಾಧಿಕಾರಿ ಡಾ.ನಟರಾಜ್ ತಿಳಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ ಪಶುವೈದ್ಯ ಆಸ್ಪತ್ರೆಯ ಬಳಿ ಈಚೆಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಮಹಿಳೆಯರ ಆರ್ಥಿಕ ಬಲವರ್ಧನೆಗಾಗಿ ೭.೫೦೦ ರೂ ಗಳ ಚೆಕ್‌ಗಳನ್ನು ವಿತರಿಸಿ ಅವರು ಮಾತನಾಡಿದರು.
ಈ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯನ್ನು (ಆರ್.ಕೆ.ವಿ.ವೈ) ಅನುಷ್ಟಾನಗೊಳಿಸಲಾಗಿದ್ದು, ಇದರ ಮೂಲಕ ದೇವದಾಸಿಯರು, ವಿಧವೆಯರು, ಜೀವನಾಧಾರವಿಲ್ಲದ ನಿರ್ಗತಿಕ, ಸಂಕಷ್ಟಕ್ಕೊಳಗಾದ, ಕೂಲಿ ಕಾರ್ಮಿಕ ಮಹಿಳೆಯರು ಫಲಾನುಭವಿಗಳಾಗಿದ್ದಾರೆ. ಇವರಿಗೆ ೫೦,೦೦೦ ರೂಗಳಲ್ಲಿ ತಲಾ ಒಂದು ಹಾಲು ಕರೆಯುವ ಹಸು ಅಥವಾ ಎಮ್ಮೆಯನ್ನು, ಸಾಮಾನ್ಯ ಮಹಿಳೆಯರಿಗೆ ೨೫,೦೦೦ ರೂ ಸಹಾಯಧನ ಹಾಗೂ ೨೫,೦೦೦ ರೂ ಬ್ಯಾಂಕಿನ ಸಾಲದ ಮೂಲಕ ಉತ್ತಮ ಜೀವನ ನಡೆಸಲು ಅನುಕೂಲ ಮಾಡಿಕೊಡಲು ಯೋಜಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗೆ ಶೇ. ೭೫ ರಷ್ಟು ಸಹಾಯಧನ ನೀಡಲಾಗುವುದು ಎಂದು ವಿವರಿಸಿದರು.
ಪಶು ಸಂಗೋಪನಾ ಇಲಾಖೆಯ ನರಸಿಂಹಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಬ್ಬಣ್ಣ, ಮಾಜಿ ಸದಸ್ಯ ಡಿ.ಎನ್.ರಾಜು, ಸದಸ್ಯರಾದ ಪ್ರಸನ್ನಕುಮಾರ್, ಡಿ. ವಿ ಶ್ರೀರಂಗಪ್ಪ, ಅಂಗನವಾಡಿ ಕಾರ್ಯಕರ್ತೆ ಅಶ್ವತ್ತಮ್ಮ ಹಾಜರಿದ್ದರು.
ಅಂತರಾಷ್ಟ್ರೀಯ ಟೆಕ್ವಾಂಡೋ ಚಾಂಪಿಯನ್ ಶಿಫ್ ; ಶಿಡ್ಲಘಟ್ಟದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿ ಧನಂಜಯ್‌ಗೆ ಚಿನ್ನದ ಪದಕ
ಭೂತಾನ್ ದೇಶದ ಪುಂಟ್‌ಶೋಲಿಂಗ್ ನಗರದಲ್ಲಿ ಭೂತಾನ್ ಒಲಂಪಿಕ್ ಕಮಿಟಿ ಹಾಗೂ ಭೂತಾನ್ ಟೆಕ್ವಾಂಡೋ ಫೆಡರೇಷನ್‌ನ ಆಶ್ರಯದಲ್ಲಿ ನಡೆದ ಎರಡನೇ ಅಂತಾರಾಷ್ಟ್ರೀಯ ಇಂಡೋ ಭೂತಾನ್ ಟೆಕ್ವಾಂಡೋ ಚಾಂಪಿಯನ್ ಶಿಫ್ ಕರಾಟೆಯಲ್ಲಿ ನಗರದ ಕರಾಟೆ ಪಟು ವಿ.ಧನಂಜಯ್ ೬೦ ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾನೆ.
ಕುಂಬಾರ ಪೇಟೆಯ ವೆಂಕಟೇಶ್‌ರ ಪುತ್ರನಾದ ಧನಂಜಯ್ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಆಗಿದ್ದಾನೆ.
ಅಂತಾರಾಷ್ಟ್ರೀಯ ಚಾಂಪಿಯನ್ ಶಿಫ್ ಕರಾಟೆಯಲ್ಲಿ ಚಿನ್ನದ ಪದಕ ಗಳಿಸಿ ತಾಲ್ಲೂಕಿಗೆ ಕೀರ್ತಿ ತಂದಿರುವ ಧನಂಜಯ್‌ರನ್ನು ಲಯನ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಮುನಿರಾಜು, ಪುರುಷೋತ್ತಮ್, ಲಕ್ಷ್ಮೀಪತಿ, ಶೇಖರ್, ಹರೀಶ್, ಜಗನ್, ಚಲಪತಿ, ಮಂಜು ಅಭಿನಂದಿಸಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸಜ್ಜು: ಕೆ.ಎಚ್.ಮುನಿಯಪ್ಪ
ರಾಜ್ಯದಲ್ಲಿ ಕೆಪಿಸಿಸಿ ಪುನರ್ ರಚನೆ ಆಗಿದ್ದು ತಕ್ಷಣದಿಂದಲೆ ಪಕ್ಷದ ಕಾರ್ಯಕರ್ತರು ಸಂಘಟನೆಯೊಂದಿಗೆ ಚುನಾವಣೆಗೂ ಸಿದ್ದತೆ ಆಗಬೇಕಿದೆ ಎಂದು ಸಂಸದ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಕಾಂಗ್ರೆಸ್‌ನ ಕೇಂದ್ರ ಕಾರ್ಯಕಾರಣಿಯ ವಿಶೇಷ ಆಹ್ವಾನಿತರಾಗಿ ಆಯ್ಕೆ ಆದ ನಂತರ ನಗರಕ್ಕೆ ಭಾನುವಾರ ಆಗಮಿಸಿದ ಅವರು ತಾಲ್ಲೂಕು ಕಾಂಗ್ರೆಸ್ ಸಮಿತಿಯಿಂದ ಕಾಂಗ್ರೆಸ್ ಭವನದಲ್ಲಿ ಭಾನುವಾರ ನಡೆದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.
ಪರಿಶಿಷ್ಟ ಜಾತಿಯ ಸತೀಶ್ ಜಾರಕಿ ಹೊಳೆಯವರನ್ನು ಎಐಸಿಸಿಯ ಕಾರ್ಯದರ್ಶಿಯನ್ನಾಗಿ, ನನ್ನನ್ನು ಕೇಂದ್ರ ಕಾರ್ಯಕಾರಿಣಿಯ ವಿಶೇಷ ಆಹ್ವಾನಿತರನ್ನಾಗಿ ನೇಮಿಸುವ ಮೂಲಕ ಎಲ್ಲ ಸಮುದಾಯಕ್ಕೂ ಪ್ರಾತಿನಿಧ್ಯ ನೀಡಲಾಗಿದೆ. ದಲಿತರ, ಹಿಂದುಳಿದ ವರ್ಗಗಳ ನಂತರ ಪಕ್ಷದ ಬೆನ್ನಿಗೆ ನಿಂತ ಅಲ್ಪಸಂಖ್ಯಾತ ಸಮುದಾಯಕ್ಕೆ ಆಧ್ಯತೆ ನೀಡಬೇಕೆಂದು ಹೈ ಕಮಾಂಡ್‌ನ ಗಮನ ಸೆಳೆದಿದ್ದು ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರಿಗೂ ಆಧ್ಯತೆ ನೀಡುವ ಕೆಲಸ ಆಗಲಿದೆ ಎಂದರು.
ಅನ್ನಭಾಗ್ಯ, ಕ್ಷೀರಭಾಗ್ಯ, ರೈತರಿಗೆ ಬಡ್ಡಿ ರಹಿತ ಸಾಲ ಸೇರಿದಂತೆ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಯೋಜನೆ ಹಾಗೂ ಸಾಧನೆಗಳೆ ನಮಗೆ ಶ್ರೀರಕ್ಷೆ ಆಗಲಿದ್ದು ಮುಂದಿನ ಚುನಾವಣೆಯಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದರು.
ಚುನಾವಣೆ ಸಮಯದಲ್ಲಿ ನಮ್ಮ ಕಾಂಗ್ರೆಸ್ ಪಕ್ಷವು ಮತದಾರರಿಗೆ ನೀಡಿದ ಪ್ರಣಾಳಿಕೆಯಲ್ಲಿನ ಎಲ್ಲ ಅಂಶಗಳನ್ನು ಈಡೇರಿಸಿದ ಏಕೈಕ ಸರ್ಕಾರ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ದಲಿತರು, ಹಿಂದುಳಿದ, ಅಲ್ಪಸಂಖ್ಯಾತ, ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಈ ಅಂಶಗಳನ್ನೆ ಮತದಾರರ ಮುಂದೆ ಇಡುತ್ತೇವೆ.
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ನಡೆಸುತ್ತೇವೆ ಎಂದು ಹೇಳಿದರು.
ಸಾಮಾನ್ಯವಾಗಿ ಯಾವುದೆ ಪಕ್ಷ ಅಧಿಕಾರದಲ್ಲಿದ್ದಾಗ ಅಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ೨-೩ ಸಾವಿರ ಅಂತರದಲ್ಲಿ ಆಡಳಿತ ಪಕ್ಷದ ಅಭ್ಯರ್ಥಿ ಗೆಲ್ಲುವುದು ಸಹಜ. ಆದರೆ ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ೧೦-೨೫ ಸಾವಿರ ಅಂತರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ವಿಜಯ ಸಾಸಿದ್ದಾರೆ.
ಅಂದರೆ ನಮ್ಮ ರಾಜ್ಯದಲ್ಲಿನ ಮತದಾರರು ಆಡಳಿತ ಪಕ್ಷದ ಪರ ಇದ್ದಾರೆ ಎಂದೇ ಅರ್ಥ, ಹಾಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಅಧಿಕಾರ ಹಿಡಿಯುವುದು ಶತಸಿದ್ದ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್‌ನ ಕೇಂದ್ರ ಕಾರ್ಯಕಾರಣಿಯ ವಿಶೇಷ ಆಹ್ವಾನಿತರಾಗಿ ಆಯ್ಕೆ ಆದ ನಂತರ ನಗರಕ್ಕೆ ಆಗಮಿಸಿದ ಕೆ.ಎಚ್.ಮುನಿಯಪ್ಪ ಅವರನ್ನು ತಾಲ್ಲೂಕು ಕಾಂಗ್ರೆಸ್ ಸಮಿತಿಯಿಂದ ಸನ್ಮಾನಿಸಲಾಯಿತು.
ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಕೋಚಿಮುಲ್‌ನ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಜಿಲ್ಲಾ ಕಾಂಗ್ರೆಸ್‌ನ ಕಾರ್ಯದರ್ಶಿ ಎಲ್.ಮಧು, ಆಹಾರ ನಿಗಮದ ನಿರ್ದೇಶಕ ಎ. ನಾಗರಾಜ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶಂಕರ್, ಪಂಪ್ ನಾಗರಾಜ್, ಮಳಮಾಚನಹಳ್ಳಿ ರಾಮಾಂಜಿ, ರಾಜ್ ಕುಮಾರ್, ಶ್ರೀನಾಥ್, ಪ್ರಸನ್ನ ಹಾಜರಿದ್ದರು.
ಕೆರೆಗಳಿಗೆ ನೀರು ಹರಿದು ಬರಲಿದೆ: ಕೋಲಾರ ಭಾಗದ ಕೆರೆಗಳಿಗೆ ನೀರು ಹರಿಸುವ ಕೆ.ಸಿ.ವ್ಯಾಲಿಯ ಮೊದಲ ಹಂತದಲ್ಲಿ ನೀರು ಹರಿಸಲು ಆಗಸ್ಟ್ ೧೫ಕ್ಕೆ ಗಡುವು ನೀಡಿದ್ದು ಕನಿಷ್ಠ ಆಗಸ್ಟ್ ಅಂತ್ಯಕ್ಕಾದರೂ ಆ ಭಾಗದ ಕೆರೆಗಳಿಗೆ ನೀರು ಹರಿಯುವುದು ಖಚಿತ ಎಂದು ಸಂಸದ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಕೆಸಿ ವ್ಯಾಲಿ ಯೋಜನೆಯ ಕಾಮಗಾರಿಯನ್ನು ನಡೆಸುತ್ತಿರುವ ಕಂಪೆನಿಯವರಿಗೆ ನಾಗವಾರ- ಹೆಬ್ಬಾಳ ಯೋಜನೆಯ ಗುತ್ತಿಗೆಯನ್ನು ನೀಡಿದ್ದು ಮುಂದಿನ ತಿಂಗಳಲ್ಲಿ ಈ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದೇನೆ ಎಂದರು.
ನಾಗವಾರ -ಹೆಬ್ಬಾಳ ಯೋಜನೆಗೆ ಚಾಲನೆ ನೀಡಿದ ಮರು ದಿನದಿಂದ ೧ ವರ್ಷದೊಳಗೆ ಚಿಕ್ಕಬಳ್ಳಾಪುರದ ಗೋಪಾಲಕಷ್ಣ ಕೆರೆ, ಅಮಾನಿ ಕೆರೆ, ಅಮ್ಮನಕೆರೆ, ಬೆಳ್ಳೂಟಿ ಕೆರೆ, ಬದನಕೆರೆಗೆ ನೀರು ಹರಿಯಲಿದೆ ಎಂದು ವಿವರಿಸಿದರು.

