Home Blog Page 414

ನಗರದಲ್ಲಿ ಸ್ವಯಂಪ್ರೇರಿತರಾಗಿ ಬಂದ್ ಆಚರಣೆ

0

ಬಯಲುಸೀಮೆಯ ಭಾಗಕ್ಕೆ ನೀರಿಗಾಗಿ ಆಗ್ರಹಿಸಿ ಸೋಮವಾರ ನಡೆಸಿದ ಬಂದ್‌ ನಗರದಲ್ಲಿ ಯಶಸ್ವಿಯಾಯಿತು.
ರೇಷ್ಮೆ ಗೂಡಿನ ಮಾರುಕಟ್ಟೆ, ಪೆಟ್ರೋಲ್‌ ಬಂಕ್‌, ಚಿತ್ರಮಂದಿರಗಳು, ಶಾಲಾ ಕಾಲೇಜುಗಳು, ಅಂಗಡಿ ಮುಂಗಟ್ಟುಗಳು ಬಂದ್‌ ಆಗಿತ್ತು. ಸಾರಿಗೆ ವಾಹನ ಸಂಚಾರವಿಲ್ಲದೆ ಬಸ್‌ ನಿಲ್ದಾಣ ಬಿಕೋ ಎನ್ನುತ್ತಿತ್ತು.
ನೀರಾವರಿ ಹೋರಾಟ ಸಮಿತಿ ಸದಸ್ಯರು, ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ರೀಲರುಗಳು, ದಲಿತ ಪರ ಸಂಘಟನೆಗಳು, ಆಟೋ ಚಾಲಕರ ಸಂಘ, ಸರ್ಕಾರಿ ನೌಕರರು, ಲಾರಿ, ಬಸ್‌ ಮಾಲಿಕರು, ವಕೀಲರ ಸಂಘ ಬಂದ್‌ಗೆ ಬೆಂಬಲ ಸೂಚಿಸಿದ್ದರು.
ರೈತ ಮುಖಂಡರು, ನೀರಾವರಿ ಹೋರಾಟ ಸಮಿತಿ ಸದಸ್ಯರು, ವಿವಿಧ ಕನ್ನಡಪರ ಸಂಘಟನೆ ಸದಸ್ಯರು ಒಗ್ಗೂಡಿ ಬೈಕ್‌ ರ್ಯಾ‌ಲಿ ನಡೆಸಿದರು. ಬಸ್‌ ನಿಲ್ದಾಣದ ಬಳಿ ಮಾನವ ಸರಪಣಿ ರಚಿಸಿ ಪ್ರತಿಭಟಿಸಿದರು. ರೈಲ್ವೆ ನಿಲ್ದಾಣಕ್ಕೆ ತೆರಳಿ ರೈಲನ್ನು ನಿಲ್ಲಿಸಲು ಪ್ರಯತ್ನಿಸಿದರಾದರೂ ಪೊಲೀಸರು ರೈಲ್ವೆ ನಿಲ್ದಾಣವನ್ನು ಅಡ್ಡಗಟ್ಟಿದ್ದರಿಂದ ಹೊರಗಡೆ ನಿಂತು ಘೋಷಣೆಗಳನ್ನು ಕೂಗಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. ಸಾದಲಿ, ದಿಬ್ಬೂರಹಳ್ಳಿ, ಅಬ್ಲೂಡು ಮುಂತಾದೆಡೆ ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಆದರೆ ಶಾಲಾ ಕಾಲೇಜುಗಳು ಮಾತ್ರ ಇರಲಿಲ್ಲ.
‘ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಬಯಲು ಸೀಮೆಗೆ ಪ್ರತ್ಯೇಕ ನೀರಾವರಿ ನಿಗಮ, ಈ ಭಾಗಕ್ಕೆ ಯಾವ ಮೂಲಗಳಿಂದ ನೀರು ತರಲು ಸಾಧ್ಯವೆಂಬುದನ್ನು ತಿಳಿಸುವ ತಜ್ಞರ ಸಮಿತಿ ರಚನೆ ಮತ್ತು ಸಮನ್ವಯ ಸಮಿತಿ ರಚನೆ ಆಗಬೇಕು. ಅಧಿವೇಶನದಲ್ಲಿ ಬಯಲು ಸೀಮೆಯ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಹಾಗೂ ವಿರೋಧ ಪಕ್ಷದ ನಾಯಕರು ನಮ್ಮ ನೀರಿನ ಸಮಸ್ಯೆಯ ಬಗ್ಗೆ ದನಿ ಎತ್ತಬೇಕು. ಸರ್ಕಾರ ವೈಜ್ಞಾನಿಕ ರೀತಿಯಲ್ಲಿ ನೀರಾವರಿ ಯೋಜನೆಗೆ ಚಾಲನೆ ನೀಡಬೇಕಿದೆ’ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಮಳ್ಳೂರು ಹರೀಶ್‌ ಈ ಸಂದರ್ಭದಲ್ಲಿ ತಿಳಿಸಿದರು.

ಒಂದು ಲಕ್ಷ ಗಿಡಗಳನ್ನು ನೆಡುವ ಯೋಜನೆ

0

ಎಲ್ಲೆಡೆ ತಾಪಮಾನ ಏರುತ್ತಿದೆ. ಹಸಿರು ಪರಿಸರವನ್ನು ವೃದ್ಧಿಸುವುದೊಂದೇ ನಮಗುಳಿದ ಮಾರ್ಗ. ಹುಟ್ಟಿದ ತಾಲ್ಲೂಕಿಗೆ ಸೇವೆ ಮಾಡುವ ಉದ್ದೇಶದಿಂದ ಒಂದು ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದ್ದೇನೆ ಎಂದು ಚಲನಚಿತ್ರ ನಿರ್ದೇಶಕ ಆರ್‌.ಚಂದ್ರು ತಿಳಿಸಿದರು.
ನಗರದ ಬಸ್‌ ನಿಲ್ದಾಣದ ಬಳಿ ಭಾನುವಾರ ಆರ್‌.ಚಂದ್ರು ಅಭಿಮಾನಿಗಳ ಬಳಗದ ವತಿಯಿಂದ ಪ್ರಾರಂಭವಾದ ಒಂದು ಲಕ್ಷ ಗಿಡಗಳನ್ನು ನೆಡುವ ಯೋಜನೆಗೆ ಚಾಲನೆ ನೀಡಿ ಗಿಡವನ್ನು ನೆಟ್ಟು ಅವರು ಮಾತನಾಡಿದರು.
ಅಭಿವೃದ್ಧಿಯ ಹೆಸರಿನಲ್ಲಿ ಗಿಡಮರಗಳನ್ನು ನಾಶಪಡಿಸುತ್ತಿರುವುದರಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ತಡೆಗಟ್ಟದಿದ್ದರೆ, ಮುಂದಿನ ದಿನಗಳಲ್ಲಿ ಗಂಭೀರವಾದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನಗರೀಕರಣ ಹಾಗೂ ಅಭಿವೃದ್ಧಿಯ ನೆಪದಲ್ಲಿ ಮರಗಳನ್ನು ಕಡಿದು ಬೃಹದಾಕಾರದ ಕಟ್ಟಡಗಳನ್ನು ನಿರ್ಮಾಣ ಮಾಡಲು ಹೊರಟಿರುವುದರಿಂದ, ಸ್ವತಃ ವಿಪತ್ತುಗಳನ್ನು ನಾವೇ ನಮ್ಮಲ್ಲಿಗೆ ಬರಮಾಡಿಕೊಳ್ಳುವಂತಾಗಿದೆ. ಗಿಡಮರಗಳನ್ನು ಸಂರಕ್ಷಣೆ ಮಾಡುವ ಬದಲಿಗೆ ಅವುಗಳನ್ನು ನಾಶಪಡಿಸುತ್ತಾ ಹೋದಂತೆಲ್ಲಾ ಪರಿಸರದಲ್ಲಿ ಪ್ರಾಣಿ, ಪಕ್ಷಿ ಸಂಕುಲಗಳು ಕಣ್ಮರೆಯಾಗುವುದರ ಜೊತೆಗೆ, ವಾತಾವರಣದಲ್ಲಿ ತಾಪಮಾನ ಹೆಚ್ಚಾಗುವುದು. ಮಳೆಯ ಕೊರತೆಯಿಂದ ಕುಡಿಯುವ ನೀರಿಗೂ ತಾತ್ವಾರ ಉಂಟಾಗಲಿದೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕರು, ವಿವಿಧ ಸಂಘ ಸಂಸ್ಥೆಗಳು, ರೈತರು ಎಲ್ಲರೂ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮಾಡುವಂತಾಗಬೇಕು ಎಂದರು.
ಹೆಚ್ಚು ಗಿಡ ನೆಡುವ ಮೂಲಕ ಪರಿಸರ ಸಮತೋಲನ ಕಾಪಾಡಬೇಕು. ಪ್ಲಾಸ್ಟಿಕ್ ಬಳಕೆ ಬೇಡ, ತಾಂತ್ರಿಕ ಯುಗದಲ್ಲಿ ಪ್ರತಿದಿನ ಪರಿ ಸರ ನಾಶವಾಗುವುದನ್ನು ಕಂಡು ಬುದ್ಧಿ ಜೀವಿಗಳು, ಪರಿಸರ ವಾದಿಗಳು ಇಂದು ಪಟ್ಟಣ ಪ್ರದೇಶ ಬಿಟ್ಟು ಹಳ್ಳಿ ಗಾಡಿನಲ್ಲಿ ವಾಸಿಸುತ್ತಿದ್ದಾರೆ. ವಾಹನಗಳ ಓಡಾಟ ಹೆಚ್ಚಾಗಿದೆ. ವಾಹನಗಳು ಬಿಡುವ ಹೊಗೆಯಿಂದ ಜನರು ರೋಗ, ರುಜಿನ ಗಳಿಗೆ ತುತ್ತಾಗುತ್ತಿದ್ದಾರೆ. ಜೊತೆಗೆ ಪರಿಸರವೂ ನಾಶವಾಗುತ್ತಿದೆ. ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ. ಇದಕ್ಕೆ ಪರಿಹಾರ ಹೆಚ್ಚು ಸಸಿ ನೆಟ್ಟು ಪರಿಸರ ಉಳಿಸುವುದೆಂದು ಅಭಿಪ್ರಾಯಪಟ್ಟರು.
ತಮ್ಮ ಗ್ರಾಮಗಳಲ್ಲಿ ನೆಟ್ಟ ಗಿಡವನ್ನು ಕಾಪಾಡುವ ಉತ್ಸಾಹವಿರುವವರು ನಮ್ಮನ್ನು ಸಂಪರ್ಕಿಸಿದಲ್ಲಿ ನಾವೇ ಸ್ವತಃ ಆಯಾ ಗ್ರಾಮಗಳಿಗೆ ಹೋಗಿ ಗಿಡಗಳನ್ನು ನೆಟ್ಟು ಬರುತ್ತೇವೆ. ರಸ್ತೆ ಅಗಲೀಕರಣದಿಂದಾಗಿ ಚಿಂತಾಮಣಿ ಮತ್ತು ಚಿಕ್ಕಬಳ್ಳಾಪುರದ ನಡುವೆ ರಸ್ತೆ ಬದಿಯ ಹಳೆಯ ಮರಗಳನ್ನೆಲ್ಲಾ ಕಡಿಯಲಾಗಿದೆ. ರಸ್ತೆ ಕಾಮಗಾರಿ ಮುಗಿದ ನಂತರ ರಸ್ತೆ ಬದಿಯಲ್ಲೆಲ್ಲಾ ಗಿಡಗಳನ್ನು ನೆಡುವುದಾಗಿ ಅವರು ತಿಳಿಸಿದರು.
ತಾಲ್ಲೂಕಿನ ಆನೂರು ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲೂ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆರ್.ಚಂದ್ರು ಅಭಿಮಾನಿಗಳ ಬಳಗದ ತಾಲ್ಲೂಕು ಅಧ್ಯಕ್ಷ ವಿಜಯ್, ಪಿಎಸ್‌ಐ ಪ್ರದೀಪ್ ಪೂಜಾರಿ, ಉಪನ್ಯಾಸಕ ವೆಂಕಟೇಶ್, ಡಿ.ಟಿ.ಸತ್ಯನಾರಾಯಣರಾವ್, ಚಂದ್ರು, ಆಟೋ ಚಾಲಕ ಸಂಘದ ಅಧ್ಯಕ್ಷ ಅಪ್ಪು, ಸುರೇಶ್, ಮುರಳಿ, ಹನುಮಪ್ಪ, ರಂಜಿತ್, ಬಿ.ಆರ್‌.ಅನಂತಕೃಷ್ಣ ಹಾಜರಿದ್ದರು.

ಮಕ್ಕಳಿಗೆ ಪೌಷ್ಟಿಕವಾದ ಆಹಾರವನ್ನು ನೀಡಿ

0

ಮಕ್ಕಳಿಗೆ ಪೌಷ್ಟಿಕವಾದ ಆಹಾರವನ್ನು ನೀಡಬೇಕು. ಶಾಲೆಯು ತಮ್ಮ ಮನೆಗಳಿಗಿಂತ ಹೆಚ್ಚು ಎಂಬ ಭಾವನೆ ಮಕ್ಕಳಲ್ಲಿ ಮೂಡುವಂಥ ಪರಿಸರ ಶಾಲೆಯಲ್ಲಿ ಸದಾ ಇರಬೇಕು ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಶಾಲಾ ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟವನ್ನು ಸೇವಿಸಿ ಅವರು ಮಾತನಾಡಿದರು.
ನಾನು ಇದೇ ಶಾಲೆಯಲ್ಲಿಯೇ ಓದಿ ಬೆಳೆದವನು. ಆಗ ಈಗಿನಷ್ಟು ವಿದ್ಯಾರ್ಥಿಗಳಿಗೆ ಪೂರಕ ವ್ಯವಸ್ಥೆಯಿರಲಿಲ್ಲ. ನನ್ನ ಬೆಳವಣಿಗೆಗೆ ನನ್ನ ಶಿಕ್ಷಕರ ಮಾರ್ಗದರ್ಶನವೇ ಕಾರಣ. ಈಗಿನ ಮಕ್ಕಳಿಗೆ ಸರ್ಕಾರ ಹತ್ತು ಹಲವು ಯೋಜನೆಗಳನ್ನು ರೂಪಿಸಿದೆ. ಏನಾದರೂ ಕೊರತೆಯಿದ್ದಲ್ಲಿ ಶಿಕ್ಷಕರು ಪೋಷಕರು ಮತ್ತು ಗ್ರಾಮಸ್ಥರೊಂದಿಗೆ ಚರ್ಚಿಸಿ ಸಹಾಯ ಪಡೆದುಕೊಳ್ಳಬೇಕು. ಮಕ್ಕಳ ಉಜ್ವಲ ಭವಿಷ್ಯ ರೂಪಿತವಾಗುವ ಶಾಲಾ ವಾತಾವರಣ ಸುಂದರವಾಗಿರಲಿ, ಕಲ್ಮಷರಹಿತವಾಗಿರಲಿ, ಸರಸ್ವತಿಯ ತಾಣವಾಗಿರಲಿ ಎಂದು ಹೇಳಿದರು.
ಮಕ್ಕಳಿಗೆ ಉತ್ತಮ ತರಕಾರಿ, ಕಾಯಿ ಪಲ್ಯೆಗಳನ್ನು ನೀಡಬೇಕು. ಶಾಲಾ ಆವರಣದಲ್ಲಿ ಮಕ್ಕಳಿಂದ ಕೈತೋಟ ಮಾಡಿಸುವ ಮೂಲಕ ಮಕ್ಕಳಿಗೆ ಕೃಷಿ ಪಾಠ ಮತ್ತು ಆಹಾರಕ್ಕೆ ಒಳ್ಳೆಯ ತರಕಾರಿ ಬೆಳೆಯಬಹುದೆಂದು ಸಲಹೆ ನೀಡಿದರು.
ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ಗ್ರಾಮ ಪಂಚಾಯ್ತಿ ಸದಸ್ಯ ಎ.ಎಂ.ತ್ಯಾಗರಾಜ್‌, ಶಿಕ್ಷಕರಾದ ಎಸ್‌.ಚಾಂದ್‌ಪಾಷ, ಎಂ.ಅಶೋಕ್‌, ಎಂ.ಭಾರತಿ ಹಾಜರಿದ್ದರು.

ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನ

0

ತಾಲ್ಲೂಕಿನ ಮಡಿವಾಳ ಮಾಚಿದೇವ ಯುವಕರ ಸಂಘದಿಂದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರಕ್ಕಾಗಿ ತಾಲ್ಲೂಕಿನ ಮಡಿವಾಳ ಸಮುದಾಯದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ.
2016–17ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿರುವವರಿಗೆ ಪ್ರತಿಭಾ ಪುರಸ್ಕಾರವನ್ನು ನಡೆಸಲಾಗುವುದು. ಸಂಬಂಧಪಟ್ಟವರು ಜೂನ್‌ 30 ರೊಳಗೆ ಎರಡು ಭಾವಚಿತ್ರ, ಟಿ.ಸಿ ಹಾಗೂ ಅಂಕಪಟ್ಟಿ ಜೆರಾಕ್ಸ್‌ ಪ್ರತಿಯನ್ನು ವಿಜಿಟಿ ರಸ್ತೆಯಲ್ಲಿರುವ ರಾಜು ಕೊರಿಯರ್ಸ್‌ಗೆ ತಲುಪಿಸಲು ಸಂಘದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗಾಗಿ ಆರ್‌.ವಿ.ರಾಜಣ್ಣ (9343842756), ಡಿ.ವಿ.ಕೃಷ್ಣಪ್ಪ (9449678010), ಎಚ್‌.ಎಂ.ಮುನಿರಾಜು (9741166555), ರಾಜುಕೊರಿಯರ್‌ (9880947389)

ಕೆಂಪೇಗೌಡರ ಜಯಂತ್ಯುತ್ಸವ ಅದ್ಧೂರಿಯಾಗಿ ಆಚರಣೆ

0

ತಾಲ್ಲೂಕಿನಲ್ಲಿ ಕೆಂಪೇಗೌಡರ ಜಯಂತ್ಯುತ್ಸವವನ್ನು ಅದ್ಧೂರಿಯಾಗಿ ಆಚರಿಸಬೇಕೆಂದು ಒಕ್ಕಲಿಗ ಸಮುದಾಯದ ಮುಖಂಡರು ಒಕ್ಕೊರಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್‌ನ ಶ್ರೀ ಬಾಲಾಜಿ ಕಲ್ಯಾಣಮಂಟಪದಲ್ಲಿ ಕೆಂಪೇಗೌಡ ಆಚರಣಾ ಸಮಿತಿಯಿಂದ ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಪಕ್ಷಾತೀತವಾಗಿ ಒಕ್ಕಲಿಗ ಜನಾಂಗದ ಮುಖಂಡರು ಭಾಗವಹಿಸಿದ್ದರು.
ಶಾಸಕ ಎಂ.ರಾಜಣ್ಣ ಮತ್ತು ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಕಾರ್ಯಕ್ರಮ ಶಿಸ್ತುಬದ್ಧವಾಗಿ, ಅದ್ದೂರಿಯಾಗಿ ಹಾಗೂ ಚೆನ್ನಾಗಿ ಮೂಡಿಬರಲು ತಾವು ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.
ಮುಖಂಡ ಮೇಲೂರು ರವಿಕುಮಾರ್‌ ಮಾತನಾಡಿ, ತಾಲ್ಲೂಕಿನಾದ್ಯಂತ ಒಕ್ಕಲಿಗ ಜನರು ಒಗ್ಗೂಡಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಕೆಂಪೇಗೌಡರ ಜಯಂತಿಯಂದು ಆಗಮಿಸುವ ಸಮಸ್ತ ಜನರಿಗೆ ಊಟದ ವ್ಯವಸ್ಥೆಯನ್ನು ತಾವು ಮಾಡುವುದಾಗಿ ಘೋಷಿಸಿದರು.
ಕೆಂಪೇಗೌಡರ ಜಯಂತ್ಯುತ್ಸವವನ್ನು ದಿಬ್ಬೂರಹಳ್ಳಿ ರಸ್ತೆಯ ನ್ಯಾಯಾಲಯದ ಬಳಿ ಆಯೋಜನೆ ಮಾಡಬೇಕು. ಬೈಕ್‌ ರ್ಯಾ.ಲಿ, ಪ್ರತಿ ಹಳ್ಳಿಯಿಂದಲೂ ಪಲ್ಲಕ್ಕಿಗಳ ಮೆರವಣಿಗೆ, ಕಲಾತಂಡಗಳನ್ನೊಳಗೊಂಡ ಮೆರವಣಿಗೆ ನಡೆಯಬೇಕು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಜನಾಂಗದ ಹಿರಿಯ ಸಾಧಕರಿಗೆ ಸನ್ಮಾನ, ಗಿಡಗಳನ್ನು ನೆಡುವುದು, ಸಂಗೀತ, ನಾಟಕ ಮುಂತಾದ ಕಲಾವಿದರಿಗೆ ಸನ್ಮಾನ, ತಾಲ್ಲೂಕಿನಲ್ಲಿ ಹುಟ್ಟಿ ವಿವಿಧ ಕ್ಷೇತ್ರಗಳಲ್ಲಿ ಅದರಲ್ಲೂ ಐಎಎಸ್‌, ಕೆಎಎಸ್‌ ಪದವಿ ಪಡೆದವರನ್ನು ಕರೆಸಿ ಗೌರವಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮುನಿಕೃಷ್ಣಪ್ಪ, ಪಿ.ವಿ.ನಾಗರಾಜ್‌, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಗೋಪಾಲ್‌, ಭಕ್ತರಹಳ್ಳಿ ಮುನೇಗೌಡ, ಎಸ್‌.ಎಂ.ನಾರಾಯಣಸ್ವಾಮಿ, ಜೆ.ಎಸ್‌.ವೆಂಕಟಸ್ವಾಮಿ, ನಾರಾಯಣಸ್ವಾಮಿ, ಪುರುಷೋತ್ತಮ್‌, ಮೇಲೂರು ಆರ್‌.ಎ.ಉಮೇಶ್‌, ವೆಂಕಟರೆಡ್ಡಿ, ಎ.ಎಂ.ತ್ಯಾಗರಾಜ್‌, ತಾದೂರು ರಘು, ಶ್ರೀಧರ್‌, ಮುರಳಿ, ಕೆಂಪರೆಡ್ಡಿ, ಹಿರಿಯ ವಕೀಲ ಪಾಪಿರೆಡ್ಡಿ, ಎಚ್‌.ಜಿ.ಗೋಪಾಲಗೌಡ, ಅಶ್ವತ್ಥನಾರಾಯಣರೆಡ್ಡಿ, ವೆಂಕಟಸ್ವಾಮಿರೆಡ್ಡಿ, ರಾಜಶೇಖರ್‌, ದೇವರಾಜ್‌ ಹಾಜರಿದ್ದರು.

ಯುವ ಕಾಂಗ್ರೆಸ್‌ ಸಮಿತಿಯಿಂದ ಪ್ರತಿಭಟನೆ

0

ಇತ್ತೀಚೆಗೆ ಮದ್ಯಪ್ರದೇಶದಲ್ಲಿ ರೈತರ ಮೇಲೆ ಗೋಲಿಬಾರ್ ನಡೆಸಿದ ಬಿಜೆಪಿ ಸರ್ಕಾರದ ಕ್ರಮವನ್ನು ಖಂಡಿಸಿ ಯುವ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ನಗರದಲ್ಲಿ ಶನಿವಾರ ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು.
ರೈತರ ಮೇಲೆ ಗೋಲಿಬಾರ್ ನಡೆಸಿದ ಮದ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ನೇತೃತ್ವದ ಬಿಜೆಪಿ ಸರ್ಕಾರದ ಕ್ರಮವನ್ನು ಖಂಡಿಸಿ ರೈಲು ನಿಲ್ದಾಣದವರೆಗೆ ತೆರಳಿದ ಯುವ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ರೈಲು ನಿಲ್ದಾಣದಲ್ಲಿ ರೈಲು ತಡೆದು ಪ್ರತಿಭಟನೆ ನಡೆಸಲು ಪ್ರಯತ್ನಿಸಿದರು. ಆದರೆ ಪೊಲೀಸರು ತಡೆ ಕಾರಣ ರೈಲ್ವೆ ಗೇಟ್‌ ಬಳಿ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಂಜುನಾಥ್‌, ರೈತರ ಮೇಲಿನ ಗೋಲಿಬಾರ್ ಘಟನೆ ಖಂಡಿಸಿ, ಯುವ ಕಾಂಗ್ರೆಸ್ ರಾಜ್ಯ ಸಮಿತಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ಕರೆ ನೀಡಿದ ಹಿನ್ನಲೆಯಲ್ಲಿ ನಗರದಲ್ಲಿಂದು ರೈಲು ತಡೆಯಲು ಪ್ರಯತ್ನಿಸಲಾಯಿತು. ಅದೇ ರೀತಿ ರೈತ ವಿರೋಧಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ನಿರಂತರ ಹೋರಾಟ ಮಾಡಲಿದೆ ಎಂದರು.
ಪ್ರತಿಭಟನೆಯಲ್ಲಿ ತಾಲ್ಲೂಕು ಯುವ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ಹರೀಶ್‌, ಸುಧಾಕರ್‌, ಸಾಧಿಕ್‌ಪಾಷಮ ಪ್ರಕಾಶ್‌, ಮಧು, ಮುಜಾಮಿಲ್‌, ಹರೀಶ್‌, ಮುಸ್ತು, ಕೃಷ್ಣಮೂರ್ತಿ ಹಾಜರಿದ್ದರು.

ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್‌ ವಿತರಣೆ

0

ಶಿಡ್ಲಘಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ಕರವೇ ರಾಜ್ಯ ಘಟಕದ ಅಧ್ಯಕ್ಷ ಪಿ.ಎ.ನಾರಾಯಣಗೌಡರ ಹುಟ್ಟುಹಬ್ಬದ ಪ್ರಯುಕ್ತ ತಾಲ್ಲೂಕು ಕರವೇ ಸದಸ್ಯರು ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್‌ ವಿತರಿಸಿದರು. ಕರವೇ ಜಿಲ್ಲಾ ಉಪಾಧ್ಯಕ್ಷ ತಮೀಮ್‌ ಅನ್ಸಾರಿ, ಪ್ರಧಾನ ಕಾರ್ಯದರ್ಶಿ ದೇವರಾಜ್‌, ತಾಲ್ಲೂಕು ಅಧ್ಯಕ್ಷ ಎ.ನಾಗರಾಜ್‌, ಅಕ್ರಂಪಾಷ, ರಾಜ್‌ಕುಮಾರ್‌, ಗುರುರಾಜರಾವ್‌, ಬಿ.ಆರ್‌.ಅನಂತಕೃಷ್ಣ ಹಾಜರಿದ್ದರು.

ಹೆಣ್ಣುಮಕ್ಕಳ ಭವಿಷ್ಯ ರೂಪಿಸುವ ಭಾಗ್ಯಲಕ್ಷ್ಮಿ ಯೋಜನೆಗೆ ತಿಲಾಂಜಲಿಯನ್ನಿಟ್ಟ ಮುಖ್ಯಮಂತ್ರಿ

0

ಬಡ ಹೆಣ್ಣುಮಕ್ಕಳಿಗೆ ಅನುಕೂಲವಾಗಲೆಂದು ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದೆ. ದರ್ಧೈವವೆಂದರೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾದ ಮೇಲೆ ಈ ಯೋಜನೆಗೆ ತಿಲಾಂಜಲಿಯನ್ನಿಟ್ಟು ಹೆಣ್ಣುಮಕ್ಕಳ ಭವಿಷ್ಯ ರೂಪಿಸುವ ಕೆಲಸವನ್ನು ತಪ್ಪಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೊಪಿಸಿದರು.
ತಾಲ್ಲೂಕಿನ ಜಂಗಮಕೋಟೆಯಲ್ಲಿ ಶನಿವಾರ ದಲಿತರ ಕೇರಿಯಲ್ಲಿ ಮುನಿರಾಜು ಕುಟ್ಟಿ ಅವರ ಮನೆಯಲ್ಲಿ ಉಪಾಹಾರವನ್ನು ಸೇವಿಸಿದ ನಂತರ ಮಾತನಾಡಿದರು.
ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ ಶೋಷಿತ, ಪೀಡಿತ ದಲಿತ ಜನಾಂಗದ ಅಭಿವೃದ್ಧಿ ಎಷ್ಟು ಪ್ರಮಾಣದಲ್ಲಿ ಆಗಬೇಕಿತ್ತೋ ಅಷ್ಟು ಆಗಿಲ್ಲ ಎಂಬ ನೋವು ಕಾಡುತ್ತಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ದಲಿತ ಸಮೂಹಕ್ಕೆ, ಅಲ್ಪಸಂಖ್ಯಾತ ಮುಸ್ಲೀಂ ಜನಾಂಗಕ್ಕೆ ಹಾಗೂ ಎಲ್ಲಾ ವರ್ಗದ ಜನರಿಗೆ ಹಲವಾರು ಯೋಜನೆಗಳನ್ನು ರೂಪಿಸಿದ್ದೆ. ಹರಿಜನ ಕೇರಿಗಳ ಅಭಿವೃದ್ಧಿಗಾಗಿ ದೊಡ್ಡ ಪ್ರಮಾಣದ ಹಣ ಬಿಡುಗಡೆ ಮಾಡಿದ್ದೆ. ದುಡಿಯುವ ಕೈಗಳಿಗೆ ಕೆಲಸ ಕೊಡುವ ಕಾರ್ಯಕ್ರಮಗಳು, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ನೀಡುವ ಯೋಜನೆ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿದ್ದೆ.
ಈ ಭಾಗದಲ್ಲಿ ತರಕಾರಿ, ರೇಷ್ಮೆ, ದ್ರಾಕ್ಷಿ, ಹಣ್ಣು ಹಂಪಲು ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದರೂ ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಮುಂದಿನ ದಿನಗಳಲ್ಲಿ ತಮ್ಮ ಆಶೀರ್ವಾದವಿದ್ದಲ್ಲಿ ಈ ಭಾಗದ ಕೆರೆ ಕುಂಟೆಗಳಿಗೆ ನೀರು ಹರಿಸಿ ರೈತರಿಗೆ ಅನುಕೂಲವಾಗುವ ಕೆಲಸಗಳನ್ನು ಮಾಡಿಕೊಡುವುದಾಗಿ ಭರವಸೆ ನೀಡುತ್ತೇನೆ.
ಯಾವುದೇ ಸರ್ಕಾರವಿರಲಿ ನೀರಾವರಿಗೆ ಆಧ್ಯತೆ ಕೊಟ್ಟು ನಮ್ಮ ನೇಗಿಲ ಯೋಗಿ ರೈತರು ನೆಮ್ಮದಿಯಿಂದ ಬದುಕಲು ಬೇಕಾದ ವ್ಯವಸ್ಥೆ ಮಾಡಬೇಕಾದುದು ಆದ್ಯ ಕರ್ತವ್ಯ. ಆದರೆ ಅದು ನಮ್ಮಲ್ಲಿ ಆಗುತ್ತಿಲ್ಲ. ವಿದ್ಯಾವಂತರಿಗೆ ಉದ್ಯೋಗ ಸಿಗಲು ಬೇಕಾದ ಕಾರ್ಯಕ್ರಮಗಳು ಈಗಿನ ಸರ್ಕಾರದಿಂದ ಆಗುತ್ತಿಲ್ಲ.
ಪ್ರಧಾನಿ ನರೇಂದ್ರ ಮೋದಿಯವರು ದೇಶದ ಉತ್ಪನ್ನ ಎರಡು ಪಟ್ಟಾಗಬೇಕು, ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬೇಕು, ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ಸಿಗಬೇಕು ಎಂದು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮುದ್ರಾ ಬ್ಯಾಂಕ್‌ ಯೋಜನೆಯಿಂದ ಹಲವು ಕೋಟಿ ಜನರಿಗೆ ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಜನಾಂಗದ ಹೆಣ್ಣುಮಕ್ಕಳಿಗೆ ಬ್ಯಾಂಕ್‌ ಮೂಲಕ ಸಾಲ ಸಿಗುತ್ತದೆ. ರಾಜ್ಯದಲ್ಲಿ 33 ಲಕ್ಷ ಜನರಿಗೆ ಉಚಿತವಾಗಿ ಗ್ಯಾಸ್‌ ಸಂಪರ್ಕ ನೀಡುವ ಕಾರ್ಯಯೋಜನೆಯನ್ನು ಹುಬ್ಬಳ್ಳಿಯಿಂದ ನಾವು ಪ್ರಾರಂಭಿಸಿದ್ದೇವೆ.
ಅನ್ನಭಾಗ್ಯ ಯೋಜನೆಯ ಬಗ್ಗೆ ಜನರು ತಿಳಿಯಬೇಕಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಕ್ಕಿಯನ್ನು ಒಂದು ಕೇಜಿಗೆ 32 ರೂಗಳಂತೆ ಅಕ್ಕಿಯನ್ನು ಖರೀದಿಸಿ 3 ರೂಗಳಿಗೆ ನಮ್ಮ ರಾಜ್ಯಕ್ಕೆ ಕಳುಹಿಸುತ್ತಿದ್ದಾರೆ. ಗೋದಿಯನ್ನು ಸಹ 28 ರೂಗಳಿಗೆ ಖರೀದಿಸಿ 2 ರೂಗಳಿಗೆ ಕಳುಹಿಸುತ್ತಿದ್ದಾರೆ. ಕೇಂದ್ರದ ಅನುದಾನ ಪಡೆಯುತ್ತಾ ತಮ್ಮ ಫಲಕವನ್ನು ಸಿದ್ಧರಾಮಯ್ಯನವರು ಹಾಕಿಕೊಂಡಿದ್ದಾರೆ. ಈ ಅಕ್ಕಿಗಳ ವಿತರಣೆಯಲ್ಲೂ ಕಳಪೆ ಗುಣಮಟ್ಟ ಹಾಗೂ ಹಗರಣಗಳು ಮಾಡಿಕೊಂಡು ಸಿಕ್ಕಿಬಿದ್ದಿದ್ದಾರೆ. ಎಲ್‌ಇಡಿ ಬಲ್ಪ್‌ ಸಹ ಕೇಂದ್ರದ ಯೋಜನೆಯೇ. ಆದರೆ ಯೋಜನೆಗಳು ಬಡಜನರಿಗೆ ತಲುಪುತ್ತಿಲ್ಲ.

ಜಂಗಮಕೋಟೆಯಲ್ಲಿ ಜನರನ್ನುದ್ದೇಶಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಾತನಾಡಿದರು.

ಡಾ.ಬಿ.ಆರ್‌.ಅಂಬೇಡ್ಕರ್‌ ಅವರಂಥ ಮೇಧಾವಿಗೆ ಅವಮಾನ ಮಾಡಿದ್ದು ಕಾಂಗ್ರೆಸ್‌. ಅವರ ಶವಸಂಸ್ಥಾರಕ್ಕೆ ದೆಹಲಿಯಲ್ಲಿ ಸ್ಥಳ ಕೊಡದೆ ಮುಂಬೈನ ದಾದರ್‌ನ ಸಮುದ್ರ ತೀರದಲ್ಲಿ ಮಾಡುವಂಥ ಸ್ಥಿತಿಯನ್ನು ತಂದಿದ್ದು ಕಾಂಗ್ರೆಸ್‌ ಸರ್ಕಾರ. ಬಾಬು ಜಗಜೀವನ್‌ರಾಮ್ ಅವರನ್ನು ಪ್ರಧಾನಿ ಮಾಡಲೆಂದು ವಾಜಪೇಯಿ ಚಿಂತನೆ ನಡೆಸಿದ್ದಾಗ ಅದಕ್ಕೆ ಕಲ್ಲು ಹಾಕಿದ್ದು ಕಾಂಗ್ರೆಸ್‌ನವರು. ದಲಿತ ಸಮಾಜದ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕು ಕಾಂಗ್ರೆಸ್‌ನವರಿಗಿಲ್ಲ. ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ವಾಸಿಸಿದ ಮನೆ ಸೇರಿದಂತೆ ಐದು ಸ್ಥಳಗಳನ್ನು ಪಂಚ ಪವಿತ್ರ ಕ್ಷೇತ್ರಗಳೆಂದು ಗುರುತಿಸಿ ಒಂದು ಸಾವಿರ ಕೋಟಿ ರೂಗಳ ವೆಚ್ಚದಲ್ಲಿ ಪ್ರಧಾನಿಯವರು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು. ನಿಮ್ಮ ಈ ಯಡಿಯೂರಪ್ಪ ಮಾಡಿರುವ ಉತ್ತಮ ಕೆಲಸಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ. ಇಡೀ ರಾಜ್ಯದಲ್ಲಿ ಹೆಚ್ಚಿನ ಬೆಂಬಲದಿಂದ ಗೆದ್ದು ನಿಮ್ಮ ಸೇವೆ ಮಾಡುವ ಅವಕಾಶ ಕೊಡಿ. ಮುಂದಿನ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿ ಇರಲಿ ಬಿಜೆಪಿಗೆ ಮತ ನೀಡಿ. ನೀರಾವರಿ, ರೈತರ, ಬಡವರ ಶೋಷಿತರ ದಲಿತರ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುತ್ತೇನೆ ಎಂದರು.
ಶಿಡ್ಲಘಟ್ಟ ತಾಲ್ಲೂಕು ಸಿಲ್ಕ್‌ ರೀಲರ್ಸ್‌ ವೆಲ್‌ಫೇರ್‌ ಅಸೋಸಿಯೇಷನ್‌ ಸದಸ್ಯರು ವಿವಿಧ ಬೇಡಿಕೆಗಳ ಮನವಿಯನ್ನು ಯಡಿಯೂರಪ್ಪ ಅವರಿಗೆ ಸಲ್ಲಿಸಿದರು. ಕರ್ಣಶ್ರೀ ಚಾರಿಟೆಬಲ್‌ ಟ್ರಸ್‌ ವತಿಯಿಂದ ವಿದ್ಯಾರ್ಥಿಗಳಿಗೆ ಚೆಕ್‌ ವಿತರಿಸಲಾಯಿತು.
ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ಸಂಸದ ಪಿ.ಸಿ.ಮೋಹನ್, ಮಾಜಿ ಶಾಸಕರಾದ ಜ್ಯೋತಿರೆಡ್ಡಿ, ಚಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಜೆ.ಮಂಜುನಾಥ್, ನಿವೃತ್ತ ಐಎಎಸ್ ಅಧಿಕಾರಿ ಶಿವರಾಂ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್‌, ನಾರ್ಥ್‌ಈಸ್ಟ್‌ ಸುರೇಶ್‌, ಭಾಸ್ಕರರೆಡ್ಡಿ, ಅಬ್ದುಲ್ ಅಜೀಂ, ರವಿಕುಮಾರ್, ಜಯದೇವಣ್ಣ, ಸಚ್ಚಿದಾನಂದಮೂರ್ತಿ, ಡಿ.ಆರ್.ಶಿವಕುಮಾರಗೌಡ, ಸುರೇಂದ್ರಗೌಡ, ಸಿ.ವಿ.ಲೋಕೇಶ್ ಗೌಡ, ನಗರಸಭೆ ಸದಸ್ಯ ಎಸ್.ರಾಘವೇಂದ್ರ ಹಾಜರಿದ್ದರು.
ನಿಮ್ಮ ಮನೆಗೆ ನೀವೇ ಬರದಂತಾಯಿತೆ, ಛೆ! : ‘ನಮ್ಮಿಂದಾಗಿ ನಿಮ್ಮ ಮನೆಗೆ ನೀವೇ ಬರದಂತಾಯಿತೆ, ಛೆ! ಎಂಥ ಕೆಲಸವಾಯಿತು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪೇಚಾಡಿದರು. ತಾಲ್ಲೂಕಿನ ಜಂಗಮಕೋಟೆಯ ದಲಿತರ ಕೇರಿಯಲ್ಲಿ ಮುನಿರಾಜು ಕುಟ್ಟಿ ಅವರ ಮನೆಯಲ್ಲಿ ಉಪಾಹಾರ ಸೇವಿಸುವ ಸಂದರ್ಭದಲ್ಲಿ, ‘ನಿಮಗೆ ಎಷ್ಟು ಮಂದಿ ಮಕ್ಕಳು?’ ಎಂದು ವಿಚರಿಸಿದರು. ‘ಒಬ್ಬಳೇ ಮಗಳು ಸ್ಮೈಲಿ ಎಂದು ಹೆಸರು. ನಿಮ್ಮನ್ನು ಸ್ವಾಗತಿಸಲು ಪೂರ್ಣಕುಂಭದೊಡನೆ ಬಂದಿದ್ದಳು. ಒಳಗೆ ಬರಲಾಗದೆ ಮನೆಯ ಹೊರಗಡೆ ಇದ್ದಾಳೆ’ ಎಂದು ಮುನಿರಾಜು ಕುಟ್ಟಿ ಅವರ ಪತ್ನಿ ಅನೀತಾ ಹೇಳಿದರು. ‘ಮೊದಲು ಕರೆಸಿ ಮಗುವನ್ನು, ನಿಮ್ಮ ಮನೆಗೆ ನೀವೇ ಬರಲು ಆಗದಿದ್ದರೆ ಹೇಗೆ’ ಎಂದರು.
ಹೆಣ್ಣುಮಕ್ಕಳು ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು : ‘ನಾನು ಸಿಹಿ ತಿನ್ನುವಂತಿಲ್ಲಮ್ಮ, ಕೇವಲ ಇಡ್ಲಿ ಚಟ್ನಿ ಮತ್ತು ವಡೆ ಕೊಡಿ ಸಾಕು’ ಎಂದು ಕೇಳಿ ಪಡೆದ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮನೆಯೊಡತಿ ಅನೀತಾ, ‘ಅಡುಗೆ ಹೇಗಿದೆ ಸರ್?’ ಎಂದು ಕೇಳಿದರು. ‘ಫಸ್ಟ್‌ ಕ್ಲಾಸಾಗಿದೆ ಕಣಮ್ಮ, ಚಟ್ನಿ ಬಹಳ ರುಚಿಯಾಗಿದೆ’ ಎಂದು ಅವರು ಉತ್ತರಿಸಿದರು.
‘ಕೆಲಸಕ್ಕೆ ಹೋಗುತ್ತೀಯೇನಮ್ಮ?’ ಎಂದು ಅನೀತಾ ಅವರನ್ನು ಬಿ.ಎಸ್‌.ಯಡಿಯೂರಪ್ಪ ವಿಚಾರಿಸಿದರು. ‘ನಾನು 108 ಆಂಬುಲೆನ್ಸ್‌ನಲ್ಲಿ ನರ್ಸ್‌ ಆಗಿದ್ದೆ. ಮಗಳು ಹುಟ್ಟಿದ ನಂತರ ಕೆಲಸ ಬಿಟ್ಟೆ. ಈಗ ಮಗಳು ಬೆಳೆದಿದ್ದಾಳೆ ಹಾಗಾಗಿ ಖಾಸಗಿ ಕ್ಲಿನಿಕ್‌ನಲ್ಲಿ ನರ್ಸ್‌ ಕೆಲಸ ಮಾಡುತ್ತಿದ್ದೇನೆ‘ ಎಂದು ಅನೀತಾ ಉತ್ತರಿಸಿದಾಗ. ‘ಒಳ್ಳೇದಾಗಲಮ್ಮ, ಹೆಣ್ಣುಮಕ್ಕಳು ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು’ ಎಂದರು.

ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಯ ಮಕ್ಕಳಿಗೆ ಅನ್ನಸಂತರ್ಪಣೆ

0

ಶಿಡ್ಲಘಟ್ಟ ತಾಲ್ಲೂಕಿನ ಆನೂರು ಗ್ರಾಮದ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಯ ಮಕ್ಕಳಿಗೆ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಸದಸ್ಯರು ರಾಜ್ಯ ಘಟಕದ ಅಧ್ಯಕ್ಷ ಅಗಲಗುರ್ಕಿ ಚಲಪತಿ ಅವರ ಹುಟ್ಟುಹಬ್ಬದ ಪ್ರಯುಕ್ತ ಶುಕ್ರವಾರ ಅನ್ನಸಂತರ್ಪಣೆ ಮತ್ತು ಹಣ್ಣುಗಳನ್ನು ವಿತರಿಸಲಾಯಿತು. ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೇಲೂರು ಶ್ರೀಧರ್‌, ತಾಲ್ಲೂಕು ಅಧ್ಯಕ್ಷ ಮಳಮಾಚನಹಳ್ಳಿ ಹರೀಶ್‌, ರಮೇಶ್‌, ಶ್ರೀನಿವಾಸ್‌, ಸಂತೋಷ್‌, ಬಾಲರಾಜ್‌, ಕೆಂಪೇಗೌಡ, ಶಿವರಾಮ್‌ ಹಾಜರಿದ್ದರು.

ನಗರಸಭೆಯ ಆಶ್ರಯ ಸಮಿತಿ ಸಭೆ

0

ನಗರದ ೫ ಕಿ.ಮೀ ವ್ಯಾಪ್ತಿಯಲ್ಲಿ ನಗರಸಭೆಯಿಂದ ಖಾಸಗಿ ಜಮೀನು ಖರೀದಿಸಲು ಸಾರ್ವಜನಿಕ ಪ್ರಕಟಣೆ ಹೊರಡಿಸುವುದು ಹಾಗೂ ಈಗಾಗಲೇ ಅಬ್ಲೂಡು ಬಳಿ ಖರೀದಿ ಮಾಡಲಾಗಿರುವ ೨೨ ಎಕರೆ ೨೦ ಗುಂಟೆ ಜಮೀನಿನ ನಕ್ಷೆ ತಯಾರಿಸಿ ನಗರ ಯೋಜನಾ ಪ್ರಾಧಿಕಾರದಿಂದ ಶೀಘ್ರವಾಗಿ ಅನುಮೋದನೆ ಪಡೆಯುವಂತೆ ಅಧಿಕಾರಿಗಳಿಗೆ ಶಾಸಕ ಎಂ.ರಾಜಣ್ಣ ಸೂಚಿಸಿದರು.
ನಗರದ ನಗರಸಭೆ ಕಾರ್ಯಾಲಯದಲ್ಲಿ ಆಶ್ರಯ ಸಮಿತಿ ಅಧ್ಯಕ್ಷರೂ ಆದ ಶಾಸಕ ಎಂ.ರಾಜಣ್ಣ ಅಧ್ಯಕ್ಷತೆಯಲ್ಲಿ ಶುಕ್ರವಾರ ಕರೆಯಲಾಗಿದ್ದ ಆಶ್ರಯ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹೌಸ್ ಫಾರ್ ಆಲ್ ಯೋಜನೆಯಡಿ ನಿರ್ಮಿಸಲು ಉದ್ದೇಶಿಸಿದ್ದ ಜಿ ೧ ಮನೆಗಳ ನಿರ್ಮಾಣ ನಿಲ್ಲಿಸಿ ಫಲಾನುಭವಿಗಳಿಗೆ ೨೦*೩೦ ನಿವೇಶನ ಹಂಚಿಕೆ ಮಾಡಲು ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಯಿತು.
ಇನ್ನುಳಿದಂತೆ ನಗರದ ಕೊಳಚೇತರ ಪ್ರದೇಶದ ಅಭಿವೃದ್ದಿಗಾಗಿ ಕೊಳಚೆ ನಿರ್ಮೂಲನೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸುವುದರ ಬಗ್ಗೆ ಚರ್ಚಿಸಲಾಯಿತು.
ಸದಸ್ಯರಾದ ಎಸ್.ವಿ.ನಾಗರಾಜರಾವ್ ಮಾತನಾಡಿ ಹಿಂದಿನ ಸಭೆಗಳ ನಡಾವಳಿಗಳನ್ನು ಸಭೆಯ ಅಜೆಂಡಾದಲ್ಲಿ ಸೇರಿಸಿ ನೀಡಿದರೆ ಹಿಂದಿನ ಸಭೆಯಲ್ಲಿ ಏನು ಚರ್ಚೆ ನಡೆಯಿತು ಹಾಗು ಅದರ ಬಗ್ಗೆ ಅಧಿಕಾರಿಗಳು ಏನು ಕ್ರಮ ಜರುಗಿಸಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದರು. ಅದಕ್ಕೆ ಶಾಸಕರು ಮಾತನಾಡಿ ಮುಂದಿನ ಸಭೆಯಿಂದ ಸಭೆಯ ನಡಾವಳಿಗಳನ್ನು ಆಶ್ರಯ ಸಮಿತಿ ಸದಸ್ಯರಿಗೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷ ಅಫ್ಸರ್‌ಪಾಷ, ಪೌರಾಯುಕ್ತ ಎಚ್.ಎ.ಹರೀಶ್, ಸದಸ್ಯರಾದ ಸರ್ದಾರ್, ಎಸ್.ವಿ.ನಾಗರಾಜರಾವ್, ಎಂ.ನಾರಾಯಣಸ್ವಾಮಿ, ಅಪರ್ಣರಾಜ್‌ಕುಮಾರ್, ಎಇಇ ಸುಭಾನ್‌ಸಹೇಬ್, ವ್ಯವಸ್ಥಾಪಕ ಮಂಜುನಾಥ್, ಅಭಿಯಂತರ ಸುಧಾಕರ್ ಹಾಜರಿದ್ದರು.

ಜೂನ್ 12 ರ ಸೋಮವಾರ ಸ್ವಯಂಪ್ರೇರಿತರಾಗಿ ಬಂದ್ ಆಚರಣೆ

0

ರೇಷ್ಮೆ ಗೂಡಿನ ಮಾರುಕಟ್ಟೆಯೂ ಸೇರಿದಂತೆ ತಾಲ್ಲೂಕಿನಾದ್ಯಂತ ನೀರಿಗಾಗಿ ಆಗ್ರಹಿಸಿ ಜೂನ್ 12 ರ ಸೋಮವಾರ ಸ್ವಯಂಪ್ರೇರಿತರಾಗಿ ಬಂದ್ ಆಚರಿಸುವುದಾಗಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಮಳ್ಳೂರು ಹರೀಶ್‌ ತಿಳಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಶುಕ್ರವಾರ ನೀರಾವರಿ ಹೋರಾಟ ಸಮಿತಿ ಸದಸ್ಯರು, ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ರೀಲರುಗಳು, ದಲಿತ ಪರ ಸಂಘಟನೆಗಳು ಮುಂತಾದವರುಗಳೊಂದಿಗೆ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ 20 ವರ್ಷಗಳಿಂದ ಸತತವಾಗಿ ಬಯಲು ಸೀಮೆಗೆ ಶಾಶ್ವತ ನೀರಾವರಿ ಕಲ್ಪಿಸಬೇಕೆಂದು ಸತತವಾಗಿ ಹೋರಾಟ ನಡೆಸುತ್ತಾ ಬಂದಿದ್ದೇವೆ. ಆದರೆ ನಮ್ಮನ್ನಾಳುವ ಸರ್ಕಾರಗಳು ಬಯಲುಸೀಮೆಯನ್ನು ಕಡೆಗಣಿಸಿವೆ. ಟ್ರಾಕ್ಟರ್‌ ರ್ಯಾಗಲಿ, ಬೈಕ್‌ ರ್ಯಾ ಲಿ, ಚದಲಪುರ ಕ್ರಾಸ್‌ ಬಳಿ 169 ದಿನಗಳ ಅನಿರ್ಧಿಷ್ಟ ಕಾಲಾವಧಿ ಧರಣಿ, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸಿ ಹೋರಾಟ, ರೈಲು ತಡೆ, ಹೆದ್ದಾರಿ ತಡೆ, ಜಿಲ್ಲಾ ಬಂದ್‌ಗಳು, ಜಿಲ್ಲಾ ಕಚೇರಿ ಮತ್ತು ತಾಲ್ಲೂಕು ಕಚೇರಿಗಳ ಮುತ್ತಿಗೆ ನಡೆಸುತ್ತಾ ಬಂದಿದ್ದೇವೆ. ಈ ತಿಂಗಳ 12 ಕ್ಕೆ ಕೋಲಾರದಲ್ಲಿ ನಡೆಯುತ್ತಿರುವ ನೀರಾವರಿ ಧರಣಿ ಒಂದು ವರ್ಷಕ್ಕೆ ಕಾಲಿಡಲಿದೆ. ಇಷ್ಟಾದರೂ ಸರ್ಕಾರ ನೀರಿನ ತೊಂದರೆ ಬಗೆ ಹರಿಸಲು ಶಾಶ್ವತ ಯೋಜನೆ ರೂಪಿಸಲಿಲ್ಲ.
ಕನ್ನಡ ಪರ ಸಂಘಟನೆಗಳು, ವಿವಿಧ ರೈತ ಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳೆಲ್ಲಾ ಒಗ್ಗೂಡಿ ಈಗ ಸರ್ಕಾರಕ್ಕೆ ನಮ್ಮ ನೋವನ್ನು ತಿಳಿಸಲು ನೀರಿನ ಜ್ವಲಂತ ಸಮಸ್ಯೆಗೆ ಪರಿಹಾರವನ್ನು ನೀಡಬೇಕೆಂದು ಬಂದ್‌ ಆಚರಿಸಲು ತೀರ್ಮಾನಿಸಿದ್ದೇವೆ. ನಮ್ಮ ಭಾಗದ ಎಲ್ಲಾ ಸಂಘಟನೆಗಳು ಕೂಡ ಬಂದ್‌ಗೆ ಬೆಂಬಲ ಸೂಚಿಸಿವೆ.
ಮಾರ್ಚ್‌ 6 ರಂದು ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳು, ಬಯಲು ಸೀಮೆಗೆ ಪ್ರತ್ಯೇಕ ನೀರಾವರಿ ನಿಗಮ, ಈ ಭಾಗಕ್ಕೆ ಯಾವ ಮೂಲಗಳಿಂದ ನೀರು ತರಲು ಸಾಧ್ಯವೆಂಬುದನ್ನು ತಿಳಿಸುವ ತಜ್ಞರ ಸಮಿತಿ ರಚನೆ ಮತ್ತು ಸಮನ್ವಯ ಸಮಿತಿ ರಚಿಸುವ ಬಗ್ಗೆ ತಿಳಿಸಿದ್ದು ಕೇವಲ ಪತ್ರಗಳಲ್ಲೇ ಉಳಿದಿವೆ. ಯಾವುದೂ ಕಾರ್ಯ ರೂಪಕ್ಕೆ ಬಂದಿಲ್ಲ.
ವಿಧಾನಸಭಾ ಅಧಿವೇಶನ ಜೂನ್‌ 5 ರಂದು ಪ್ರಾರಂಭವಾಗುವುದೆಂದು ನೀರಾವರಿ ಹೋರಾಟ ಸಮಿತಿ ಸದಸ್ಯರು ಬಯಲು ಸೀಮೆಯ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಹಾಗೂ ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಿ ಬಯಲುಸೀಮೆಯ ನೀರಿನ ಬವಣೆ ಹಾಗೂ ಪರಿಹಾರದ ಬಗ್ಗೆ ಸದನದಲ್ಲಿ ಪಕ್ಷಾತೀತವಾಗಿ ದನಿ ಎತ್ತಬೇಕೆಂದು ಮನವಿ ಸಲ್ಲಿಸಿದ್ದೆವು. ಈಗಾಗಲೇ ಅಧಿವೇಶನ ಪ್ರಾರಂಭವಾದರೂ ಇನ್ನೂ ನಮ್ಮ ಜನಪ್ರತಿನಿಧಿಗಳು ಈ ಬಗ್ಗೆ ಮಾತನಾಡಿಲ್ಲ.
ಒಂದೆಡೆ ಅಂತರ್ಜಲ ಕುಸಿದಿದೆಯೆಂದು ಸರ್ಕಾರ ಕೊಳವೆ ಬಾವಿಗಳನ್ನು ಕೊರೆಯಬಾರದೆಂದು ಆದೇಶಿಸಿದ್ದರೆ, ಮತ್ತೊಂದೆಡೆ ಕೊಳವೆ ಬಾವಿಗಳನ್ನು ಕೊರೆಯಲು ಅನುದಾನಗಳು ಬಿಡುಗಡೆಯಾಗುತ್ತಾ ನೀರು ಸಿಗದೆ ಹಣ ಪೋಲಾಗುತ್ತಿದೆ. ಈ ರೀತಿ ಹಣವನ್ನು ವ್ಯರ್ಥ ಮಾಡುವುದರ ಬದಲು ಹಣವನ್ನು ಕ್ರೂಡೀಕರಿಸಿ ಶಾಶ್ವತವಾದ ಯೋಜನೆಗೆ ತೊಡಗಿಸಬೇಕಿದೆ. ವಲಸೆ ತಪ್ಪಿಸಬೇಕಿದೆ.
ಕೃಷ್ಣಾ ಬಿ ಸ್ಕೀಮ್‌ ಮೂಲಕ ನೀರು ತರಬಹುದು, ಮೇಕೆದಾಟು ಯೊಜನೆಯಿಂದಲೂ ನೀರು ಹರಿಸಬಹುದು, ಪಶ್ಚಿಮ ವಾಹಿನಿ ನದಿಗಳ ನೀರನ್ನು ಕೂಡ ತರಬಹುದು. ಆದರೆ ಸರ್ಕಾರ ಅವೈಜ್ಞಾನಿಕವಾದ ಎತ್ತಿನಹೊಳೆ ಯೋಜನೆ ಮಾಡುತ್ತಿದೆ. ಎತ್ತಿನ ಹೊಳೆ ನೀರನ್ನು ಬೆಂಗಳೂರಿಗೆ ಹರಿಸುತ್ತೇವೆ, ಬೆಂಗಳೂರಿನ ಕೊಳಚೆ ನೀರು ಸಂಸ್ಕರಿಸಿ ನಮ್ಮ ಭಾಗಕ್ಕೆ ಹರಿಸುವುದಾಗಿ ಭರವಸೆ ನೀಡುತ್ತಿದ್ದಾರೆ. ತ್ಯಾಜ್ಯ ರಾಸಾಯನಿಕಗಳುಳ್ಳ ನೀರು ನಮ್ಮ ಭಾಗಕ್ಕೆ ಹರಿದು ಭವಿಷ್ಯದಲ್ಲಿ ದುಷ್ಪರಿಣಾಮ ಬೀರುವುದರ ಅಧ್ಯಯನವಾಗಬೇಕಿದೆ. ಇವುಗಳಿಂದ ನಮ್ಮ ಕೆರೆಗಳು ತುಂಬುವುದಿಲ್ಲ. ಎತ್ತಿನಹೊಳೆ ಯೋಜನೆ ನಡೆಯುತ್ತಿರುವ ಭಾಗದಲ್ಲಿ ಮಳೆ ಮಾಪನವನ್ನು ಇನ್ನೂ ಅಳವಡಿಸಿಲ್ಲ. ಸರ್ಕಾರ ವೈಜ್ಞಾನಿಕ ರೀತಿಯಲ್ಲಿ ನೀರಾವರಿ ಯೋಜನೆಗೆ ಚಾಲನೆ ನೀಡಬೇಕಿದೆ.
ಬಯಲುಸೀಮೆಗೆ ಬೇಕಾದ ಸೂಕ್ತ ಯೋಜನೆಯನ್ನು ಮಾಡದೆ ಸರ್ಕಾರ ಹೋರಾಟಗಾರರನ್ನು ಧಮನ ಮಾಡಲು ಪ್ರಯತ್ನಿಸುತ್ತಿದೆ. ಸಂಘಟನೆಗಳನ್ನು ಒಡೆಯುತ್ತಿದೆ. ಪೊಲೀಸನ್ನು ಬಳಸಿಕೊಂಡು ರೈತರನ್ನು, ನೀರಾವರಿ ಹೋರಾಟಗಾರರನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ರೀಲರುಗಳ ಸಂಘದವರು ಕೂಡ ಬಂದ್‌ಗೆ ಬೆಂಬಲಿಸುತ್ತಿರುವುದಾಗಿ ಜಿ.ರೆಹಮಾನ್‌, ಅನ್ಸರ್‌ಪಾಷ ತಿಳಿಸಿದರು. ಸರ್ಕಾರಿ ನೌಕರರು, ಲಾರಿ, ಬಸ್‌ ಮಾಲಿಕರು, ವಕೀಲರ ಸಂಘ ಬೆಂಬಲ ಸೂಚಿಸಿರುವುದಾಗಿ ಪ್ರಕಟಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆಯ ಹರೀಶ್‌, ರಮೇಶ್‌, ಸಂತೋಷ್‌, ಬಾಲರಾಜ್‌, ರೈತ ಸಂಘದ ರವಿಪ್ರಕಾಶ್‌, ಪ್ರತೀಶ್‌, ಮಾರಣ್ಣ, ಮಂಜುನಾಥ್‌, ಅಬ್ಲೂಡು ಆರ್‌.ದೇವರಾಜ್‌, ಆನೂರು ದೇವರಾಜ್‌, ಸಿ.ಎ.ದೇವರಾಜ್‌, ದಲಿತ ಸಂಘರ್ಷ ಸಮಿತಿಯ ತಿರುಮಳೇಶ್‌, ಎಚ್‌.ಜಿ.ಗೋಪಾಲಗೌಡ, ಎಚ್‌.ಕೆ.ಸುರೇಶ್‌ ಬಂದ್‌ಗೆ ಬೆಂಬಲ ಸೂಚಿಸಿದರು.

ಮಧ್ಯಪ್ರದೇಶದ ಸರ್ಕಾರದ ರೈತ ವಿರೋಧಿ ನೀತಿ ಖಂಡನೆ

0

ರೈತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರದೊಂದಿಗೆ ರಾಜೀವ್‌ಗಾಂಧಿ ಪಂಚಾಯತ್‌ರಾಜ್‌ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ ಮೀನಾಕ್ಷಿ ನಟರಾಜನ್‌ ಮಾತುಕತೆಗೆ ಮುಂದಾದಾಗ ಅವರನ್ನು ಬಂಧಿಸಿ ಅವಮಾನಿಸಲಾಗಿದೆ. ಈ ಕೃತ್ಯವನ್ನು ಖಂಡಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿಗಳಿಗೆ ತಹಶೀಲ್ದಾರರ ಮೂಲಕ ಜಿಲ್ಲಾ ಕಾಂಗ್ರೆಸ್‌ ಸಮಿತಿ ಹಾಗೂ ರಾಜೀವ್‌ಗಾಂಧಿ ಪಂಚಾಯತ್‌ರಾಜ್‌ ಸಂಘಟನೆಯ ಮುಖಂಡರು ಗುರುವಾರ ಮನವಿ ಸಲ್ಲಿಸಿದರು.
ದೇಶದ ಬೆನ್ನೆಲುಬು ರೈತರು. ಬೆವರು ಸುರಿಸಿ ದುಡಿದು ಅನ್ನ ನೀಡುವ ರೈತರು ವಿವಿಧ ಅಗತ್ಯ ಬೇಡಿಕೆಗಾಗಿ ಒತ್ತಾಯಿಸಿ ಮಧ್ಯಪ್ರದೇಶದ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟಿಸುತ್ತಿದ್ದರು. ಸಂವಿಧಾನಾತ್ಮಕ, ಶಾಂತಿಯುತ ಹಕ್ಕುಗಳ ಹೋರಾಟವನ್ನು ಹತ್ತಿಕ್ಕಲು ಮಧ್ಯಪ್ರದೇಶ ಸರ್ಕಾರವು ಅಮಾನವೀಯವಾಗಿ ರೈತರ ಮೇಲೆ ದೌರ್ಜನ್ಯ ನಡೆಸಿ ಆರು ಮಂದಿ ರೈತರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಈ ಅಮಾನವೀಯ ಕೃತ್ಯವನ್ನು ಖಂಡಿಸಿ, ರೈತರಿಗೆ ದ್ರೋಹವೆಸಗಿದ ಮಧ್ಯಪ್ರದೇಶ ಸರ್ಕಾರದೊಂದಿಗೆ ಮಾತುಕತೆಗೆ ಮುಂದಾದ ರಾಜೀವ್‌ಗಾಂಧಿ ಪಂಚಾಯತ್‌ರಾಜ್‌ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ ಮೀನಾಕ್ಷಿ ನಟರಾಜನ್‌ ಅವರನ್ನು ಬಂಧಿಸಿ ಅವಮಾನಿಸಿರುವುದು ಖಂಡನೀಯ. ಮಧ್ಯಪ್ರದೇಶ ಸರ್ಕಾರದ ಮೇಲೆ ಕ್ರಮ ಕೈಗೊಳ್ಳಬೇಕು. ರೈತರ ಹಕ್ಕುಗಳಿಗೆ ಬೆಲೆ ಸಿಗಬೇಕು. ಸಂವಿಧಾನಾತ್ಮಕ ಹೋರಾಟವನ್ನು ದಮನ ಮಾಡುವವರನ್ನು ತಡೆಯಬೇಕು ಎಂದು ಮನವಿಯನ್ನು ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ ಅವರಿಗೆ ಸಲ್ಲಿಸಿದರು.
ರಾಜೀವ್‌ಗಾಂಧಿ ಪಂಚಾಯತ್‌ರಾಜ್‌ ಸಂಘಟನೆಯ ಜಿಲ್ಲಾ ಸಂಚಾಲಕ ಎನ್‌.ಆರ್‌.ನಿರಂಜನ್‌, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮುನಿಕೃಷ್ಣಪ್ಪ, ಕೆ.ಸುಬ್ರಮಣ್ಯ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಪಂಕಜಾ ನಿರಂಜನ್‌, ಶೋಭಾ, ನರಸಿಂಹಪ್ಪ, ವಹೀದಾ ಬೇಗಮ್‌, ಶ್ರೀನಿವಾಸ್‌, ನಾಗರಾಜ್‌, ನಗರಸಭೆ ಸದಸ್ಯ ಬಾಲಕೃಷ್ಣ, ರಾಮಚಂದ್ರಪ್ಪ, ಕ್ಯಾತಪ್ಪ, ಚಿಕ್ಕಮುನಿಯಪ್ಪ ಹಾಜರಿದ್ದರು.

ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿರಲಿ

0

ನೀರಿನ ಪೂರೈಕೆಯ ಬಗ್ಗೆ ಗಮನವಿರಲಿ. ಯಾವುದೇ ಕಾರಣಕ್ಕೂ ತಾಲ್ಲೂಕಿನಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಬಾರದು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಧ್ಯತೆ ಮೇರೆಗೆ ಕುಡಿಯುವ ನೀರು ಸರಬರಾಜು ಮಾಡಲು ಮುಂದಾಗುವ ಜೊತೆಗೆ ಕುಡಿಯುವ ನೀರಿನ ಅಗತ್ಯ ಎಲ್ಲಿದೆಯೋ ಅಂತಹ ಕಡೆಗೆ ಖಾಸಗಿ ಕೊಳವೆಬಾವಿಗಳ ರೈತರ ಮನವೊಲಿಸಿ ನೀರು ಪಡೆದು ಪೂರೈಸಬೇಕು. ಎಲ್ಲಿ ಖಾಸಗಿ ಕೊಳವೆ ಬಾವಿಗಳಿಲ್ಲವೋ ಅಂತಹ ಕಡೆ ಮಾತ್ರ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದರು.
ಇನ್ನು ಕಳೆದ ಮೂರ್ನಾಲ್ಕು ಸಭೆಗಳಿಂದ ಸಭೆಗೆ ಬಾರದೇ ಗೈರು ಹಾಜರಾಗುತ್ತಿರುವ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸುವಂತೆ ಸಿಇಓ ರಿಗೆ ಪತ್ರ ಬರೆಯುವಂತೆ ಇಓ ವೆಂಕಟೇಶ್ ಅವರಿಗೆ ಸೂಚಿಸಿದರು.
ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗಾಗಿ ಸ್ಥಳೀಯ ಜನಪ್ರತಿನಿಧಿಗಳಷ್ಟೇ ಅಲ್ಲದೇ ಅಧಿಕಾರಿಗಳು ಹೆಚ್ಚು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ತಾಲ್ಲೂಕು ಪಂಚಾಯ್ತಿಗೆ ಬರುವಂತಹ ಎಲ್ಲಾ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೆ ಎಲ್ಲರೂ ಶ್ರಮಿಸಬೇಕು ಎಂದರು.
ತಾಲ್ಲೂಕಿನಾಧ್ಯಂತ ನಡೆಯುತ್ತಿರುವ ಯಾವುದೇ ಕಾಮಗಾರಿಗಳ ಮಾಹಿತಿಯನ್ನು ತಾಲ್ಲೂಕು ಪಂಚಾಯ್ತಿ ಸದಸ್ಯರ ಗಮನಕ್ಕೆ ತಂದೇ ಮಾಡಬೇಕು. ಕಾಮಗಾರಿಯ ಗುಣಮಟ್ಟ ಹೇಗಿದೆ, ಯಾರು ಮಾಡುತ್ತಿದ್ದಾರೆ ಎಂಬುದರ ಮಾಹಿತಿ ಸಿಗುತ್ತಿಲ್ಲ, ಈ ವಿಚಾರಗಳಲ್ಲಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.
ಈ ಬಗ್ಗೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ ಮಾತನಾಡಿ ತಾಲ್ಲೂಕು ಪಂಚಾಯ್ತಿ ಸದಸ್ಯರ ಗಮನಕ್ಕೆ ತಂದು ಕೆಲಸ ಮಾಡಬೇಕಾಗಿರುವುದು ಅಧಿಕಾರಿಗಳ ಕರ್ತವ್ಯ. ಹಾಗಾಗಿ ಮುಂದಿನ ದಿನಗಳಲ್ಲಿ ಆಯಾ ಕ್ಷೇತ್ರದ ತಾಲ್ಲೂಕು ಪಂಚಾಯ್ತಿ ಸದಸ್ಯರ ಗಮನಕ್ಕೆ ತಂದು ಕಾಮಗಾರಿಗಳನ್ನು ಮಾಡುವಂತೆ ಹಾಜರಿದ್ದ ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಬಾಗವಹಿಸಿದ್ದ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಮುಂದಿನ ಯೋಜನೆಗಳು ಸೇರಿದಂತೆ ಈಗಾಗಲೇ ನಡೆದಿರುವ ಕಾಮಗಾರಿಗಳ ವಿವರಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಇಓ ವೆಂಕಟೇಶ್, ವ್ಯವಸ್ಥಾಪಕ ಪ್ರಸಾದ್, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯಿತಿ ಎಲ್ಲಾ ಸದಸ್ಯರು ಹಾಜರಿದ್ದರು

ಒಂದು ಲಕ್ಷ ಸಸಿಗಳನ್ನು ನೆಡುವ ಯೋಜನೆ

0

ತಾಲ್ಲೂಕಿನಲ್ಲಿ ಹಸಿರು ಪರಿಸರವನ್ನು ಸೃಷ್ಟಿಸುವ ಕಾರ್ಯ ಯೋಜನೆಯನ್ನು ಹಮ್ಮಿಕೊಂಡಿದ್ದು, ಈ ನಿಟ್ಟಿನಲ್ಲಿ ಪ್ರಾರಂಭಿಕವಾಗಿ ಒಂದು ಲಕ್ಷ ಸಸಿಗಳನ್ನು ನೆಡುವ ಕೆಲಸಕ್ಕೆ ಜೂನ್‌ 11 ರಂದು ಚಾಲನೆ ನೀಡುವುದಾಗಿ ಆರ್‌.ಚಂದ್ರು ಅಭಿಮಾನಿ ಬಳಗದ ಅಧ್ಯಕ್ಷ ವಿಜಯ್‌ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಳೆ ಬಿದ್ದು ನೆಲ ಹದವಾಗಿರುವುದರಿಂದ ಗಿಡ ನೆಡಲು ಇದು ಸಕಾಲ. ಅಂತರ್ಜಲ ಕುಸಿದಿರುವ ತಾಲ್ಲೂಕಿನಲ್ಲಿ ಗಿಡಮರಗಳು ಇಲ್ಲದಿದ್ದಲ್ಲಿ ಮುಂದೆ ಜೀವನ ಕಷ್ಟಕರವಾಗಲಿದೆ. ಅದಕ್ಕಾಗಿ ಸಸಿ ನೆಡುವ ಕೆಲಸ ಈಗ ಅತ್ಯಗತ್ಯವಾಗಿದೆ. ಶಿಡ್ಲಘಟ್ಟದಲ್ಲಿಯೇ ವಿದ್ಯಾಭ್ಯಾಸವನ್ನು ಮಾಡಿ ಈಗ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಚಲನಚಿತ್ರ ನಿರ್ದೇಶಕ ಆರ್‌.ಚಂದ್ರು ಅವರ ಅಭಿಮಾನಿಗಳು ಜೂನ್‌ 11ರ ಭಾನುವಾರದಂದು ಒಂದು ಲಕ್ಷ ಸಸಿಗಳನ್ನು ನೆಡಲು ಪ್ರಾರಂಭಿಸುತ್ತಿದ್ದೇವೆ. ನಗರದ ಬಸ್‌ ನಿಲ್ದಾಣದ ಬಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದ್ದು, ನಿರ್ದೇಶಕ ಆರ್‌.ಚಂದ್ರ, ನಟ ದುನಿಯಾ ವಿಜಿ ಹಾಗೂ ಇತರ ಚಿತ್ರನಟರು, ತಾಲ್ಲೂಕಿನ ರೈತ ಮುಖಂಡರು ಭಾಗವಹಿಸಲಿದ್ದಾರೆ. ಮೊದಲಿಗೆ ಆನೂರು ಗ್ರಾಮ ಪಂಚಾಯ್ತಿಯಿಂದ ಗಿಡ ನೆಡಲು ಪ್ರಾರಂಭಿಸುತ್ತೇವೆ. ಅದಕ್ಕಾಗಿ ಜೆಸಿಬಿಯನ್ನೂ ತರಿಸಿದ್ದೇವೆ ಎಂದು ಹೇಳಿದರು.
ಮುಂದಿನ ಜನಾಂಗಕ್ಕೆ ಹಸಿರು ಪರಿಸರವನ್ನು ನೀಡಬೇಕಾದ ಅಗತ್ಯವಿದೆ. ಅದಕ್ಕಾಗಿ ಗ್ರಾಮಗಳಲ್ಲಿ ಯುವಕರು ಮುಂದಾಗಬೇಕು. ತಮ್ಮ ಗ್ರಾಮಗಳಲ್ಲಿ ನೆಟ್ಟ ಗಿಡವನ್ನು ಕಾಪಾಡುವ ಉತ್ಸಾಹವಿರುವವರು ನಮ್ಮನ್ನು ಸಂಪರ್ಕಿಸಿದಲ್ಲಿ ನಾವೇ ಸ್ವತಃ ಆಯಾ ಗ್ರಾಮಗಳಿಗೆ ಹೋಗಿ ಗಿಡಗಳನ್ನು ನೆಟ್ಟು ಬರುತ್ತೇವೆ. ರಸ್ತೆ ಅಗಲೀಕರಣದಿಂದಾಗಿ ಚಿಂತಾಮಣಿ ಮತ್ತು ಚಿಕ್ಕಬಳ್ಳಾಪುರದ ನಡುವೆ ರಸ್ತೆ ಬದಿಯ ಹಳೆಯ ಮರಗಳನ್ನೆಲ್ಲಾ ಕಡಿಯಲಾಗಿದೆ. ರಸ್ತೆ ಕಾಮಗಾರಿ ಮುಗಿದ ನಂತರ ರಸ್ತೆ ಬದಿಯಲ್ಲೆಲ್ಲಾ ಗಿಡಗಳನ್ನು ನೆಡುವುದಾಗಿ ಅವರು ತಿಳಿಸಿದರು.
ಆರ್‌.ಚಂದ್ರು ಅಭಿಮಾನಿ ಬಳಗದ ರಂಜಿತ್‌, ಸುರೇಶ್‌, ಪ್ರತಾಪ್‌, ಗಂಗಾಧರ್‌ ಈ ಸಂದರ್ಭದಲ್ಲಿ ಹಾಜರಿದ್ದರು.

ಶುಲ್ಕ ಪಾವತಿ ಮಾಡದ ವಿದ್ಯಾರ್ಥಿ ಶಾಲೆಯಿಂದ ಹೊರಗೆ: ಪೋಷಕರಿಂದ ಶಿಕ್ಷಕನ ಮೇಲೆ ಹಲ್ಲೆ

0

ಶುಲ್ಕ ಕಟ್ಟಿಲ್ಲ ಎಂದು ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಗೆ ನಿಲ್ಲಿಸಿದ್ದರಿಂದ ಕುಪಿತಗೊಂಡ ವಿದ್ಯಾರ್ಥಿಯ ಪೋಷಕರು ಶಾಲಾ ಶಿಕ್ಷಕನನ್ನು ಮಂಗಳವಾರ ಥಳಿಸಿದ್ದಾರೆ.
ನಗರದ ಕ್ರೆಸೆಂಟ್ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬನನ್ನು ಶುಲ್ಕ ಕಟ್ಟಿಲ್ಲ ಎನ್ನುವ ಕಾರಣಕ್ಕೆ ಶಾಲೆಯಿಂದ ಹೊರಗೆ ನಿಲ್ಲಿಸಿದ್ದರಿಂದ ಕುಪಿತಗೊಂಡ ವಿದ್ಯಾರ್ಥಿಯ ಪೋಷಕ ಚಾಂದ್ ಪಾಷ ಶಾಲೆಗೆ ತೆರಳಿ ಮಗುವನ್ನು ಹೊರಗೆ ನಿಲ್ಲಿಸಿದ ವಿಚಾರವಾಗಿ ತಗಾದೆ ತೆಗೆದು ಶಿಕ್ಷಕನ ಮೇಲೆ ಹಲ್ಲೆ ನಡೆಸಿರುವುದಾಗಿ ಕ್ರೆಸೆಂಟ್ ಶಾಲೆಯ ಮುಖ್ಯಸ್ಥ ತಮೀಮ್ ಅನ್ಸಾರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರತಿಯಾಗಿ ದೂರು ನೀಡಿರುವ ಚಾಂದ್ ಪಾಷ ತನ್ನ ಮಗುವನ್ನು ಶುಲ್ಕ, ಡೊನೇಷನ್ ಕಟ್ಟಿಲ್ಲ, ತಡ ಆಗಿದೆ ಎನ್ನುವ ಕಾರಣಕ್ಕೆ ಶಾಲೆಯಿಂದ ಹೊರಗೆ ನಿಲ್ಲಿಸಿ ಅಪಮಾನ ಮಾಡಿದ್ದಾನೆ ಎಂದು ದೂರಿದ್ದಾರೆ.
ಚಾಂದ್ ಪಾಷ ಹಾಗೂ ಇತರೆ ಪೋಷಕರು, ಬಿಇಒ ಎಸ್.ರಘುನಾಥರೆಡ್ಡಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ನಗರಸಭೆಯಲ್ಲಿ ಬಳಕೆ ಆಗದ ಅನುದಾನ: ಸಕಾಲಕ್ಕೆ ಸಲ್ಲಿಕೆ ಆಗದ ವರದಿ: ಅನುದಾನ ಸ್ಥಗಿತಗೊಳಿಸುವ ಎಚ್ಚರಿಕೆ

0

ನಗರಸಭೆಗೆ ಬಿಡುಗಡೆ ಆದ ವಿವಿಧ ಬಾಬ್ತಿನ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಂಡಿಲ್ಲ. ಜತೆಗೆ ಸಕಾಲಕ್ಕೆ ಪ್ರಗತಿಯ ವರದಿಯನ್ನು ಸಲ್ಲಿಸಿಲ್ಲ. ಹಾಗಾಗಿ ಶಿಡ್ಲಘಟ್ಟ ನಗರಸಭೆಗೆ ಅನುದಾನ ನಿಲ್ಲಿಸುವುದಾಗಿ ಯೋಜನಾ ನಿರ್ದೆಶಕರು ಎಚ್ಚರಿಸಿದ್ದ ಹಿನ್ನೆಲೆಯಲ್ಲಿ ಬುಧವಾರ ತುರ್ತು ಸಭೆಯನ್ನು ಕರೆಯಲಾಗಿತ್ತು.
ನಗರಸಭೆ ಅಧ್ಯಕ್ಷ ಬಿ.ಅಪ್ಸರ್‌ಪಾಷ, ಉಪಾಧ್ಯಕ್ಷೆ ಪ್ರಭಾವತಿ ಸುರೇಶ್ ಉಪಸ್ಥಿತಿಯಲ್ಲಿ ಅಧಿಕಾರಿಗಳ ತುರ್ತು ಸಭೆಯನ್ನು ನಡೆಸಿ ಪ್ರಗತಿಯ ವರದಿಯನ್ನು ನೀಡಲು ಗಡುವು ನೀಡಿ ಎಲ್ಲ ಅಧಿಕಾರಿಗಳಿಗೂ ನೊಟೀಸ್ ನೀಡಲಾಯಿತು.
ಸ್ವಚ್ಚ ಭಾರತ್, ಎಸ್‌ಎಫ್‌ಸಿ ಅನುದಾನ, ನಗರೋತ್ಥಾನ ಯೋಜನೆ ೨ನೇ ಹಂತ, ಶೇ ೨೪.೧೦ ಸೇರಿದಂತೆ ವಿವಿದ ಯೋಜನೆಗಳ ಅನುದಾನವನ್ನು ಬಳಸಿಕೊಳ್ಳದ ಹಾಗೂ ಪ್ರಗತಿಯ ವರದಿಯನ್ನು ಸಲ್ಲಿಸದ ಬಗ್ಗೆ ಅಧಿಕಾರಿಗಳ ವಿರುದ್ದ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
‘ನಿಮ್ಮಿಂದಾಗಿ ನಾವು ತಲೆ ತಗ್ಗಿಸಬೇಕಾಗಿದೆ. ನಿಮ್ಮಿಂದ ಕೆಲಸ ಮಾಡಲು ಆಗದಿದ್ದರೆ ದಯ ಮಾಡಿ ವರ್ಗಾವಣೆ ಮಾಡಿಸಿಕೊಂಡು ಬೇರೆ ಎಲ್ಲಾದರೂ ಹೋಗಿ, ನಾವು ಬೇರೆ ಅಧಿಕಾರಿಗಳಿಂದ ಕೆಲಸ ತೆಗೆಸಿಕೊಳ್ಳುತ್ತೇವೆ’ ಎಂದು ಅಧ್ಯಕ್ಷ ಬಿ.ಅಪ್ಸರ್ ಪಾಷ ಅಧಿಕಾರಿಗಳ ವಿರುದ್ದ ಕಿಡಿ ಕಾರಿದರು.
ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಆಯುಕ್ತ ಹರೀಶ್, ವ್ಯವಸ್ಥಾಪಕ ಮಂಜುನಾಥ್ ಸೇರಿದಂತೆ ನಗರಸಭೆಯ ಎಲ್ಲ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.

ಕ್ರೀಡಾ ವಸತಿ ಶಾಲೆಗೆ ಆಯ್ಕೆ

0

ಶಿಡ್ಲಘಟ್ಟ ಲಯನ್‌ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ತರಬೇತಿ ಪಡೆಯುತ್ತಿದ್ದ ಭಗತ್‌ಕುಮಾರ್‌ ಕಂಠೀರವ ಕ್ರೀಡಾಂಗಣದಲ್ಲಿನ ಕ್ರೀಡಾ ವಸತಿ ಶಾಲೆಗೆ ಪ್ರಥಮ ಪಿಯುಸಿಗೆ ಆಯ್ಕೆಯಾಗಿದ್ದಾನೆ.

ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕಸದ ಗಲಾಟೆ: ಪೌರ ಕಾರ್ಮಿಕರ ವೇತನ ಬಾಕಿ ಪಾವತಿಗೆ ಪಟ್ಟು: ಅಧಿಕಾರಿಗಳ ವಿರುದ್ದ ತಿರುಗಿ ಬಿದ್ದ ಸದಸ್ಯರು

0

ನಗರಸಭೆಯಲ್ಲಿ ಸೋಮವಾರ ನಗರಸಭೆ ಅಧ್ಯಕ್ಷ ಅಪ್ಸರ್‌ಪಾಷ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪೌರ ಕಾರ್ಮಿಕರ ಬಾಕಿ ವೇತನ ಹಾಗೂ ಕಸ ವಿಲೇವಾರಿ ವಿಚಾರವು ತೀವ್ರ ಚರ್ಚೆ, ವಾಗ್ವಾದಕ್ಕೆ ಕಾರಣವಾಯಿತು. ಮೂರ್ನಾಲ್ಕು ತಿಂಗಳಿಂದಲೂ ವೇತನ ಬಾಕಿ ಇದ್ದು ಪೌರ ಕಾರ್ಮಿಕರು ಕಸ ತೆಗೆಯುತ್ತಿಲ್ಲ. ವಾರ್ಡುಗಳಲ್ಲಿ ಕಸದ ರಾಶಿ ಬಿದ್ದಿದೆ. ನೀವು ಕಸ ತೆಗೆಯಿರಿ ಎಂದು ಅಧಿಕಾರಿಗಳ ವಿರುದ್ದ ಸದಸ್ಯರು ತಿರುಗಿ ಬಿದ್ದರು.
‘ಪೌರಕಾರ್ಮಿಕರಿಗೆ ಕಳೆದ ಮೂರ್ನಾಲ್ಕು ತಿಂಗಳುಗಳಿಂದಲೂ ಸಂಬಳ ನೀಡಿಲ್ಲ. ಇದರಿಂದ ಅವರು ಕಸ ಕಡ್ಡಿ ವಿಲೇವಾರಿ ಮಾಡುತ್ತಿಲ್ಲ. ಇದರಿಂದ ನಗರದ ಹಾದಿ ಬೀದಿಗಳಲ್ಲಿ ಕಸ ಕಡ್ಡಿಗಳ ರಾಶಿ ಬಿದ್ದಿದೆ. ನಾಗರಿಕರಿಂದ ನಾವು ನಿಂದನೆ ಕೇಳಬೇಕಾಗಿದೆ. ನೀವು ಪೌರ ಕಾರ್ಮಿಕರಿಗೆ ಸಂಬಳ ಕೊಟ್ಟು ಕೆಲಸ ಮಾಡಿಸುವುದಾದರೆ ಮಾಡಿಸಿ ಇಲ್ಲಾ ಅಂದ್ರೆ ನೀವೇ ಬಂದು ನಮ್ಮ ವಾರ್ಡುಗಳಲ್ಲಿ ಕಸ ಕಡ್ಡಿ ತೆಗೆಯಿರಿ’ ಎಂದು ಆಯುಕ್ತ ಹರೀಶ್‌ ಅವರನ್ನು ತರಾಟೆಗೆ ತೆಗೆದುಕೊಂಡು ನಮ್ಮ ವಾರ್ಡುಗಳಲ್ಲಿ ಕ್ಲೀನ್ ಆದರೆ ಸಾಕು ಎಂದರು.
ಪ್ರತಿ ಸಭೆಯಲ್ಲೂ ಕಸ ಕಡ್ಡಿ ವಿಲೇವಾರಿಯದ್ದು ಚರ್ಚಿಸಲಾಗುತ್ತಿದ್ದರೂ ಪರಿಹಾರ ಮಾತ್ರ ಸಿಗುತ್ತಿಲ್ಲ. ಬರೀ ಭರವಸೆಗಳಷ್ಟೆ ಸಿಗುತ್ತಿವೆ. ನಾವು ನಮ್ಮ ವಾರ್ಡಿನ ಜನರಿಗೆ ಹೇಳಿ ಹೇಳಿ ಸಾಕಾಗಿದೆ. ಹಾಗಾಗಿ ಇದಕ್ಕೆ ಈ ಸಭೆಯಲ್ಲೆ ಪರಿಹಾರ ಸಿಗಬೇಕೆಂದು ಪಟ್ಟು ಹಿಡಿದರು.
ಪೌರಕಾರ್ಮಿಕರ ಬಾಕಿ ವೇತನಕ್ಕೆ ನೀಡುವ ಬಗ್ಗೆ ಇದೆ ಸಭೆಯಲ್ಲಿ ಇತ್ಯರ್ಥ ಆಗಬೇಕು. ಇಲ್ಲವಾದಲ್ಲಿ ಮುಂದಿನ ಸಭೆಯಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ಹಠಕ್ಕೆ ಬಿದ್ದರು.
ನಂತರ ಅಧ್ಯಕ್ಷರು ಈ ಸಭೆ ಮುಗಿದಾದ ಮೇಲೆ ಪೌರಕಾರ್ಮಿಕರ ಗುತ್ತಿಗೆದಾರರನ್ನು ಕರೆಸಿ ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿ ಚರ್ಚೆಗೆ ಅಂತ್ಯ ಹಾಡಿದರು.

ಸಹಕಾರ ಸಂಘಗಳು ಗಟ್ಟಿಗೊಳ್ಳಬೇಕು

0

ಸಹಕಾರ ಸಂಘಗಳು ಗ್ರಾಮೀಣ ಪ್ರದೇಶಗಳ ಜನರ ಆರ್ಥಿಕ ಅಭಿವೃದ್ದಿಗೆ ಹೆಚ್ಚು ಸಹಕಾರಿಯಾಗಿದ್ದು ಅವುಗಳ ಅಭಿವೃದ್ದಿಗಾಗಿ ಸಂಘದ ನಿರ್ದೇಶಕರೂ ಸೇರಿದಂತೆ ಗ್ರಾಮಸ್ಥರು ಶ್ರಮಿಸಬೇಕು ಎಂದು ಕೋಚಿಮುಲ್ ನಿರ್ದೇಶಕ ಬಂಕ್‌ಮುನಿಯಪ್ಪ ಹೇಳಿದರು.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೊರಕಾಯಲಹಳ್ಳಿ ಗ್ರಾಮದಲ್ಲಿ ಸೋಮವಾರ ನೂತನವಾಗಿ ನಿರ್ಮಿಸಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಈಗಾಗಲೇ ತೀವ್ರ ಬರಗಾಲಕ್ಕೆ ತುತ್ತಾಗಿರುವ ಬಯಲುಸೀಮೆಯ ಜಿಲ್ಲೆಗಳಲ್ಲಿನ ಜನರ ಜೀವನ ಮಟ್ಟ ಸುಧಾರಣೆಗಾಗಿ ಹೈನುಗಾರಿಕೆಯನ್ನು ಅವಲಂಬಿಸಿದ್ದು ಉತ್ಪಾದಕರು ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವ ಮೂಲಕ ಸಹಕಾರಿ ಸಂಘಗಳನ್ನು ಮತ್ತಷ್ಟು ಅಭಿವೃದ್ದಿ ಪಡಿಸಲು ಶ್ರಮಿಸಬೇಕು ಎಂದರು.
ಹಾಲು ಒಕ್ಕೂಟವು ಕೂಡಾ ಉತ್ಪಾದಕರಿಗೆ ಅನುಕೂಲವಾಗುವಂತೆ ಈಗಾಗಲೇ ಅನೇಕ ನೂತನ ಯೋಜನೆಗಳನ್ನು ಜಾರಿಗೆ ತಂದಿದ್ದು ಎಷ್ಟೇ ಹಾಲು ಉತ್ಪಾದನೆಯಾದರೂ ಕೂಡಾ ಮಾರುಕಟ್ಟೆಯ ಕೊರತೆಯಿಲ್ಲದಂತೆ ಹಾಲು ಉತ್ಪಾದಕರಿಗೆ ಅನುಕೂಲ ಕಲ್ಪಿಸಿದೆ. ಇದೇ ಜೂನ್ ೧೬ ರಿಂದ ಸಾಮೂಹಿಕ ರಾಸು ವಿಮೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಪ್ರತಿಯೊಬ್ಬರೂ ತಮ್ಮ ತಮ್ಮ ರಾಸುಗಳಿಗೆ ವಿಮೆ ಮಾಡಿಸಿ ಎಂದರು.
ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ಮಾತನಾಡಿ, ಸಹಕಾರಿ ಸಂಘಗಳು ಅಭಿವೃದ್ಧಿಗೆ ಸೀಮಿತವಾಗಬೇಕು. ಯಾವುದೇ ಕಾರಣಕ್ಕೂ ಸಹಕಾರ ಸಂಘಗಳಲ್ಲಿ ರಾಜಕೀಯ ಬೆರೆಸದೇ ಒಗ್ಗಟ್ಟಾಗಿ ಸಹಕಾರಿ ಸಂಘದ ಏಳಿಗೆಗಾಗಿ ಶ್ರಮಿಸಬೇಕು. ಬೇಸಿಗೆಯಲ್ಲಿ ರಾಸುಗಳನ್ನು ನಿರ್ವಹಣೆ ಮಾಡುವುದು ಕಷ್ಟಕರವಾಗಿದ್ದರೂ ಕೂಡಾ ಉತ್ತಮ ಗುಣಮಟ್ಟದ ಹಾಲಿನ ಉತ್ಪಾದನೆಗೆ ಬಯಲುಸೀಮೆ ಭಾಗದ ಮಹಿಳೆಯರು ಪಡುತ್ತಿರುವ ಶ್ರಮ ನಿಜಕ್ಕೂ ಪ್ರಶಂಸನೀಯ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮದ ೧೨ ಮಂದಿ ಫಲಾನುಭವಿಗಳಿಗೆ ಹಸು ಖರೀದಿಸಲು ಡಿಸಿಸಿ ಬ್ಯಾಂಕ್ ವತಿಯಿಂದ ೫೦ ಸಾವಿರ ರೂಗಳ ಚೆಕ್‌ಗಳನ್ನು ಗಣ್ಯರಿಂದ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸೊರಕಾಯಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ.ನರಸಿಂಹಯ್ಯ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ತುಮ್ಮನಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುರೇಂದ್ರ, ಮುಖಂಡರಾದ ತಾದೂರು ರಘು, ಕೋಚಿಮುಲ್ ಶಿಡ್ಲಘಟ್ಟ ಶಿಭಿರ ಘಟಕದ ಉಪವ್ಯವಸ್ಥಾಪಕ ಬಿ.ಎಸ್.ಹನುಮಂತರಾವ್, ವಿಸ್ತರಣಾಧಿಕಾರಿಗಳಾದ ಮಂಜುನಾಥ್, ಶ್ರೀನಿವಾಸ್, ಸಂಘದ ಕಾರ್ಯನಿರ್ವಾಹಕ ಹರೀಶ್, ಹಾಲು ಪರೀಕ್ಷಕ ಮುನಿರಾಜು, ಗ್ರಾಮದ ಮುಖಂಡರಾದ ಸುರೇಶ್ ಹಾಜರಿದ್ದರು.

ಪರಿಸರ ಮನುಷ್ಯನ ಅವಿಭಾಜ್ಯ ಅಂಗ

0

ಪರಿಸರ ಮನುಷ್ಯನ ಅವಿಭಾಜ್ಯ ಅಂಗ. ಪರಿಸರವಿಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಹೀಗಾಗಿ ಪರಿಸರ ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್‌ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್‌ ಬಳಿಯ ಯೂನಿವರ್ಸಲ್‌ ಪಬ್ಲಿಕ್‌ ಸ್ಕೂಲ್‌ ಆವರಣದಲ್ಲಿ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಡೆದ ನೂರು ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಒದಗಿಸುವ ನಿಟ್ಟಿನಲ್ಲಿ ಗಿಡ ಮರಗಳನ್ನು ಬೆಳೆಸುವುದು ಅನಿವಾರ್ಯವಾಗಿದೆ. ಹೀಗಾಗಿ ಹೆಚ್ಚೆಚ್ಚು ಗಿಡಮರಗಳನ್ನು ನೆಟ್ಟು ಪೋಷಿಸಬೇಕಾಗಿದೆ. ಮನುಷ್ಯ ಪರಿಸರ ನಾಶ ಮಾಡುತ್ತಿದ್ದಾನೆ. ಮನುಷ್ಯನ ದುರಾಸೆಗೆ ಪರಿಸರ ನಾಶವಾಗಿ ಮನುಕುಲ ವಿನಾಶದ ಅಂಚಿಗೆ ಬಂದು ನಿಂತಿದೆ. ಹೀಗಾಗಿ ಬರುವ ದಿನಗಳಲ್ಲಿ ಪರಿಸರದ ರಕ್ಷಣೆ ಮತ್ತು ಪರಿಸರದ ಬೆಳವಣಿಗೆಗೆ ನಾವೆಲ್ಲ ಮುಂದಾಗಬೇಕು ಎಂದು ಹೇಳಿದರು.
ಬಿಜೆಪಿ ಪಕ್ಷದ ಸುರೇಂದ್ರಗೌಡ, ಶ್ರೀರಾಮರೆಡ್ಡಿ, ಲೋಕೇಶ್‌ಗೌಡ, ದಾಮೋದರ್‌, ಬೈರಾರೆಡ್ಡಿ, ಕೃಷ್ಣಾರೆಡ್ಡಿ, ಪುರುಷೋತ್ತಮ್‌,ಶಿವಕುಮಾರಗೌಡ, ಮಂಜುಳಮ್ಮ ಹಾಜರಿದ್ದರು.