Home Blog Page 415

ಪರಿಸರದಲ್ಲಿ ಶ್ವಾಸಕೋಶದಂತೆ ವರ್ತಿಸುವ ವೃಕ್ಷಗಳು ಅಗತ್ಯ

0

ಅಭಿವೃದ್ಧಿ ಹೆಸರಲ್ಲಿ ಅವ್ಯಾಹತವಾಗಿ ಮರಗಳನ್ನು ಕಡಿಯಲಾಗುತ್ತಿದೆ. ಶುದ್ಧ ಗಾಳಿ, ನೆರಳು ನೀಡುವ ಪರಿಸರದಲ್ಲಿ ಶ್ವಾಸಕೋಶದಂತೆ ವರ್ತಿಸುವ ವೃಕ್ಷಗಳು ನಮಗೆ ಅಗತ್ಯ. ಆದ್ದರಿಂದ ನಾವು ವೃಕ್ಷ ರಕ್ಷಣೆಯ ತೀರ್ಮಾನಗಳನ್ನು ಕೈಗೊಳ್ಳಬೇಕು. ಸಾಧ್ಯವಾದಷ್ಟೂ ಮರಗಳನ್ನು ನೆಡುವುದು, ಸಾಧ್ಯವಾದರೆ ಸಸ್ಯಗಳ ಪೋಷಣೆ ಬಗ್ಗೆ ಗಮನ ಹರಿಸುವುದು ಎಲ್ಲರ ಧ್ಯೇಯವಾಗಲಿ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರಾದ ಮಂಜುನಾಥ್‌ ತಿಳಿಸಿದರು.
ನಗರದ ಹೊರವಲಯದ ದಿಬ್ಬೂರಹಳ್ಳಿ ರಸ್ತೆಯಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿ ಸೋಮವಾರ ಅರಣ್ಯ ಇಲಾಖೆ, ತಾಲ್ಲೂಕು ಕಾನೂನು ಸೇವಾ ಸಮಿತಿ, ಕಂದಾಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ನಡೆದ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜೀವ ಸಂಕುಲಕ್ಕೆ ಬದುಕಲು ಅತ್ಯಾವಶ್ಯಕವಾಗಿ ಬೇಕಾಗಿರುವ ಆಮ್ಲಜನಕ ಪರಿಸರದಲ್ಲಿ ವೃದ್ಧಿಯಾಗಲು ಪ್ರತಿಯೊಬ್ಬರು ಸಸಿ ನೆಟ್ಟು ನೀರೆರೆದು ಬೆಳೆಸಬೇಕು. ಸಸಿ ನೆಟ್ಟರೆ ಸಾಲದು. ನೆಟ್ಟಿರುವ ಸಸಿಯನ್ನು ಬೆಳೆಯುವಂತೆ ನೋಡಿಕೊಳ್ಳುವ ಮೂಲಕ ಮರವೊಂದನ್ನು ಪರಿಸರಕ್ಕೆ ಕೊಡುಗೆಯಾಗಿ ನೀಡಬೇಕು. ವಸತಿ ಪ್ರದೇಶದ ವಿಸ್ತಾರ ಹೆಚ್ಚುತ್ತಿರುವುದರಿಂದ ಮರಗಿಡಗಳಿದ್ದ ಜಾಗವನ್ನೆಲ್ಲ ಸಿಮೆಂಟ್‌ ಕಟ್ಟಡಗಳು ಆಕ್ರಮಿಸಿಕೊಳ್ಳುತ್ತಿವೆ. ಇದರ ಪರಿಣಾಮ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿ, ಬೀಳುವ ಮಳೆಯ ಪ್ರಮಾಣ ತಗ್ಗಿದೆ. ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವ ಮೊದಲು ಎಲ್ಲರೂ ಎತ್ತೆಚ್ಚುಕೊಂಡು ಅರಣ್ಯ ನಾಶಕ್ಕೆ ಕಡಿವಾಣ ಹಾಕಿ, ಮರಗಳನ್ನು ಬೆಳೆಸಿ ಎಂದು ಕರೆ ನೀಡಿದರು.
ಪ್ರಧಾನ ಸಿವಿಲ್‌ ನ್ಯಾಯಾಧೀಶರಾದ ಶ್ರೀಕಂಠ, ಸರ್ಕಾರಿ ವಕೀಲೆ ಕುಮುದಿನಿ, ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ, ವಲಯ ಅರಣ್ಯಾಧಿಕಾರಿ ತಿಮ್ಮರಾಯಪ್ಪ, ಅರಣ್ಯ ಇಲಾಖೆಯ ಅಧಿಕಾರಿಗಳಾದ ರಾಮಾಂಜಿನೇಯ, ಅಂಬರೀಷ್‌ ಹಾಜರಿದ್ದರು.

ಕನ್ನಡವೆಂದರೆ ಕೇವಲ ಭಾಷೆಯಲ್ಲ

0

ಕನ್ನಡವೆಂದರೆ ಕೇವಲ ಭಾಷೆಯಲ್ಲ, ನಮ್ಮ ಗಾಳಿ, ಭೂಮಿ, ಪರಿಸರ, ಪಶು ಪಕ್ಷಿ ಕ್ರಿಮಿ ಕೀಟ ಎಲ್ಲವೂ ಒಳಗೊಳ್ಳುತ್ತದೆ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಸೋಮವಾರ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲೆಯ ಆವರಣ ಹಾಗೂ ಗ್ರಾಮದ ರುದ್ರಭೂಮಿಯಲ್ಲಿ ನೂರು ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮಿಂದಾಗುವ ಅಳಿಲು ಸೇವೆಯ ಮೂಲಕ ನಾಡನ್ನು ಹಸಿರುಮಯವನ್ನಾಗಿಸುವ ಪ್ರಯತ್ನ ಮಾಡಬೇಕು. ಪ್ಲಾಸ್ಟಿಕ್‌ಗೆ ಬದಲಾಗಿ ಬಟ್ಟೆ ಚೀಲ ಬಳಸಿ, ಮನೆಯ ಮುಂದೊಂದು ಗಿಡ ನೆಡಿ, ನೀರನ್ನು ಹಿತಮಿತವಾಗಿ ಬಳಸಿ, ಪರಿಸರ ಸಂರಕ್ಷಣೆ ಮಾಡುವ ಮೂಲಕ ಭೂಮಿಯ ರಕ್ಷಣೆ ಮಾಡೋಣ ಎಂದು ಹೇಳಿದರು.
ಕನ್ನಡ ಸಾರಸ್ವತ ಪರಿಚಾರಿಕೆ(ಕಸಾಪ) ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ಮಾತನಾಡಿ, ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಹಸಿರಿನ ಸಂರಕ್ಷಣೆ ಇಂದಿನ ತುರ್ತು ಅಗತ್ಯ. ಪರಿಸರ ಸ್ನೇಹಿ ಜೀವನ ಕ್ರಮ ಅಳವಡಿಸಿಕೊಳ್ಳಿ. ಪ್ರತಿಯೊಬ್ಬ ವಿದ್ಯಾರ್ಥಿಯೂ ಶಾಲೆಯ ಆವರಣದಲ್ಲಿ ನೆಟ್ಟ ಒಂದೊಂದು ಗಿಡವನ್ನು ದತ್ತು ತೆಗೆದುಕೊಂಡು ಪೋಶಿಸಬೇಕು. ಮುಂದಿನವರಿಗೆ ಹಸಿರು ಪರಿಸರವನ್ನು ಬಿಟ್ಟು ಹೋಗಲು ಪಣ ತೊಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಸಾರಸ್ವತ ಪರಿಚಾರಿಕೆ(ಕಸಾಪ) ವತಿಯಿಂದ ಶಾಲೆಯ ಗ್ರಂಥಾಲಯಕ್ಕೆ ಪರಿಸರ ಸಂಬಂಧಿತ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲಾಯಿತು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಮುನಿಯಪ್ಪ, ಸದಸ್ಯರಾದ ಜಯರಾಮ್‌, ಎ.ಎಂ.ತ್ಯಾಗರಾಜ್‌, ಸಾದಲಿ ವೆಂಕಟಾಚಲಪತಿ, ಮುಖ್ಯ ಶಿಕ್ಷಕಿ ವೆಂಕಟರತ್ನಮ್ಮ, ಶಿಕ್ಷಕರಾದ ಚಾಂದ್‌ಪಾಷ, ಅಶೋಕ್‌, ಭಾರತಿ, ಪಿಡಿಓ ಅಂಜನ್‌ಕುಮಾರ್‌, ಕಾರ್ಯದರ್ಶಿ ಶ್ರೀನಿವಾಸ್‌, ಎಸ್‌ಡಿಎಂಸಿ ಅಧ್ಯಕ್ಷೆ ಪುಷ್ಪ, ಸದಸ್ಯ ಹನುಮಂತರೆಡ್ಡಿ, ಗ್ರಾಮಸ್ಥರಾದ ನರಸಿಂಹಮೂರ್ತಿ, ಸಂಪತ್ತು, ವೆಂಕಟೇಶ್‌, ತಿರುಮಳಪ್ಪ, ವೆಂಕಟಮ್ಮ, ಮಂಜುಳಮ್ಮ, ಮುನಿರತ್ನಮ್ಮ, ಅಂಗನವಾಡಿ ಶಿಕ್ಷಕಿ ನಳಿನಮ್ಮ, ಸಹಾಯಕಿ ಲೀಲಮ್ಮ ಹಾಜರಿದ್ದರು.

ರೈತಕೂಟಗಳು ರೈತರು ಮತ್ತು ಬ್ಯಾಂಕ್‌ ಸಂಬಂಧ ಗಟ್ಟಿಗೊಳಿಸುತ್ತವೆ

0

ರೈತರು ಮತ್ತು ಬ್ಯಾಂಕಿನ ನಡುವಿನ ಸಂಬಂಧ ಸ್ನೇಹಮಯವಾಗಿರಬೇಕು. ಈ ಸಂಬಂಧ ಚೆನ್ನಾಗಿ ಇರಲೆಂದು ರೈತಕೂಟಗಳನ್ನು ಮಾಡಿರುವುದು ಎಂದು ನಬಾರ್ಡ್‌ ಬ್ಯಾಂಕ್‌ ಸಹಾಯಕ ಮಹಾ ಪ್ರಬಂಧಕ ಗಣೇಶ್‌ಕುಮಾರ್‌ ತಿಳಿಸಿದರು.
ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಸೋಮವಾರ ಬೋದಗೂರು ಸಿರಿ ಸಮೃದ್ಧಿ ರೈತ ಕೂಟ, ನಬಾರ್ಡ್‌ ಬ್ಯಾಂಕ್‌ ಹಾಗೂ ಕೆನರಾ ಬ್ಯಾಂಕ್‌ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಕಾಲದಲ್ಲಿ ಸಾಲ ಮರುಪಾವತಿ, ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳುವುದು, ಸಾವಯವ ಕೃಷಿ ಪದ್ಧತಿ, ಸ್ವಸಹಾಯ ಗುಂಪುಗಳು ಲೆಕ್ಕದ ಪುಸ್ತಕ ನಿರ್ವಹಣೆ ಮುಂತಾದ ವಿಚಾರಗಳ ಬಗ್ಗೆ ವಿವರವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬೋದಗೂರು ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ವಿವಿಧ ರೈತ ಕೂಟಗಳ ಸದಸ್ಯರಿಗೆ ತಲಾ ಒಂದೊಂದು ಗಿಡಗಳಂತೆ ಒಂದು ಸಾವಿರ ಗಿಡಗಳನ್ನು ವಿತರಿಸಿದರು. ಬೋದಗೂರು ಶ್ರೀ ರಾಘವೇಂದ್ರ ಮಹಿಳಾ ಸ್ವಸಹಾಯ ಸಂಘದ ಸದಸ್ಯರ ಸಿರಿ ಧಾನ್ಯಗಳು ಹಾಗೂ ಸಾವಯವ ಪದ್ಧತಿಯಿಂದ ಬೆಳೆದ ತರಕಾರಿಗಳನ್ನು ಪ್ರದರ್ಶಿಸಲಾಗಿತ್ತು.
ಸಕಾಲದಲ್ಲಿ ಬ್ಯಾಂಕಿನಲ್ಲಿ ಸಾಲ ತೀರಿಸಿದ 25 ಮಂದಿ ರೈತರಿಗೆ ಬಹುಮಾನಗಳನ್ನು ನೀಡಲಾಯಿತು. ವಿವಿಧ ಸ್ತ್ರೀ ಶಕ್ತಿ ಸಂಘಗಳಿಗೆ ಒಟ್ಟು 50 ಲಕ್ಷ ರೂಗಳವರೆಗೆ ಸಾಲವನ್ನು ನೀಡಲಾಯಿತು.
ಅಪರ ಜಿಲ್ಲಾಧಿಕಾರಿ ಅನೂರಾಧ, ಸಹಾಯಕ ಮಹಾ ಪ್ರಬಂಧಕ ಬಸವರಾಜ್‌, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಸಿ.ದೇವೇಗೌಡ, ತೋಟಗಾರಿಕೆ ಸಹಾಯಕ ನಿರ್ದೇಶಕ ಎನ್‌.ಮುನೇಗೌಡ, ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್‌.ಜಿ.ಗೋಪಾಲಗೌಡ, ಸಿರಿ ಸಮೃದ್ಧಿ ರೈತ ಕೂಟದ ಅಧ್ಯಕ್ಷ ವೆಂಕಟಸ್ವಾಮಿರೆಡ್ಡಿ, ಕಾರ್ಯದರ್ಶಿ ಬಿ.ಎಂ.ಪ್ರಕಾಶ್‌, ಸ್ವಾಮಿ ವಿವೇಕಾನಂದ ರೈತ ಕೂಟದ ಅಧ್ಯಕ್ಷ ಬಿ.ರಾಮಾಂಜಿ, ಕೆನರಾ ಬ್ಯಾಂಕ್‌ ವ್ಯವಸ್ಥಾಪಕಿ ಸುಧಾಜ್ಯೋತಿ, ಅಧಿಕಾರಿ ಬಿ.ನೇತ್ರಾ, ಮಾಜಿ ಮಂಡಲ್‌ ಪ್ರಧಾನ್‌ ಕೆ.ಆಂಜಿನಪ್ಪ, ಬಿ.ಎನ್‌.ನಾರಾಯಣಸ್ವಾಮಿ, ದೊಡ್ಡ ಮಾರಣ್ಣ, ಬೆಳ್ಳೂಟಿ ಮಾರೇಗೌಡ, ಸುರೇಶ್‌, ಗೋಪಾಲಗೌಡ, ಮುನಿರಾಜು, ಕಾಚಹಳ್ಳಿ ರತ್ನಮ್ಮ, ರಾಮಮೂರ್ತಿ, ಮಾರೇಗೌಡ, ನಾಗರಾಜ್‌, ಆರ್‌ಐ ಮೋಹನ್‌ ಹಾಜರಿದ್ದರು.

ಡಾಲ್ಫಿನ್‌ ಪಬ್ಲಿಕ್‌ ಶಾಲೆಗೆ ಶೇ.100 ರಷ್ಟು ಫಲಿತಾಂಶ

0

ಸಿಬಿಎಸ್‌ಇ ಫಲಿತಾಂಶ ಪ್ರಕಟವಾಗಿದ್ದು ನಗರದ ಡಾಲ್ಫಿನ್‌ ಪಬ್ಲಿಕ್‌ ಶಾಲೆಯ ಐವರು ವಿದ್ಯಾರ್ಥಿಗಳು ಸಿಜಿಪಿಎ ಅಂಕ 10 ಫಲಿತಾಂಶ ದಾಖಲಿಸಿದ್ದಾರೆ. ಶಾಲೆಯು ಶೇ.100 ರಷ್ಟು ಫಲಿತಾಂಶ ದಾಖಲಿಸಿದೆ.
ಎಸ್‌.ವಿ.ಸುದರ್ಶನ್‌, ವಿ.ಎಂ.ಅಕ್ಷಿತಾ, ಕೆ.ಕೆ.ನಿಶಾಂತ್‌, ಕೆ.ಕೆ.ಸಂಜಯ್‌, ಆರ್‌.ಪೃಥ್ವಿರಾಜ್‌ ಸಿಜಿಪಿಎ ಅಂಕ 10 ಪಡೆದಿದ್ದಾರೆ. ಆರು ಮಂದಿ ಸಿಜಿಪಿಎ ಅಂಕ 9.8, ಇಬ್ಬರು ಸಿಜಿಪಿಎ ಅಂಕ 9.6 ಪಡೆದಿದ್ದಾರೆ. ಒಟ್ಟು ಇಪ್ಪತ್ತೆರಡು ವಿದ್ಯಾರ್ಥೀಗಳು ಸಿಜಿಪಿಎ ಅಂಕ 9 ಕ್ಕೂ ಮೇಲ್ಪಟ್ಟು ದಾಖಲಿಸಿದ್ದಾರೆ.
1. ಎಸ್‌.ವಿ.ಸುದರ್ಶನ್‌
2. ವಿ.ಎಂ.ಅಕ್ಷಿತಾ
3. ಕೆ.ಕೆ.ನಿಶಾಂತ್‌
4. ಕೆ.ಕೆ.ಸಂಜಯ್‌
5. ಆರ್‌.ಪೃಥ್ವಿರಾಜ್‌

ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯಿತಿಗೆ ರಾಷ್ಟ್ರೀಯ ಪ್ರಶಸ್ತಿ

0

ಭುವನ್ ತಂತ್ರಾಂಶದ ಮೂಲಕ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕಾಮಗಾರಿಗಳ ಮಾಹಿತಿಯನ್ನು ಜಿಯೋಟ್ಯಾಗ್ ಪೋಟೋ ಸಹಿತ ತಂತ್ರಾಂಶದಲ್ಲಿ ದಾಖಲಿಸುವ ಕಾರ್ಯದಲ್ಲಿ ತಾಲ್ಲೂಕಿನ ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯಿತಿಗೆ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.
ಜೂನ್‌ 19ರಂದು ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವೈ.ಹುಣಸೇನಹಳ್ಳಿ ಗ್ರಾಮಪಂಚಾಯಿತಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುವುದು.
೨೦೦೯-೧೦ನೇ ಸಾಲಿನ ನಂತರದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ಕೈಗೊಳ್ಳಲಾಗಿರುವ ಎಲ್ಲಾ ಕಾಮಗಾರಿಗಳನ್ನು ಭುವನ್ ತಂತ್ರಾಂಶದ ಮೂಲಕ ಜಿಯೋಟ್ಯಾಗ್ ಪೋಟೋಗಳನ್ನು ತೆಗೆದು ಕಾಮಗಾರಿಯ ವಿವರಗಳನ್ನು ಒಳಗೊಂಡ ಸಂಪೂರ್ಣ ಮಾಹಿತಿ ಹಾಗೂ ಕಾಮಗಾರಿ ಕೈಗೊಳ್ಳಲಾಗಿರುವ ನಿಖರ ಸ್ಥಳವನ್ನು ಗುರುತಿಸಿ ಆಕ್ಷಾಂಶ ರೇಖಾಂಶ ಸಹಿತ ತಂತ್ರಾಂಶದಲ್ಲಿ ದಾಖಲಿಸುವುದರಿಂದ ಒಂದೇ ಕಾಮಗಾರಿಗೆ ಎರಡು ಬಾರಿ ಪಾವತಿಗಳಾಗುವುದು ಒಳಗೊಂಡು ಇತರೆ ಯೋಜನೆಯಡಿ ಬೇರೆ ಅವಶ್ಯಕ ಸ್ಥಳದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. ಹಾಗೂ ಈ ರೀತಿಯಾಗಿ ಗ್ರಾಮಪಂಚಾಯಿತಿಗಳಿಂದ ತಂತ್ರಾಂಶದಲ್ಲಿ ದಾಖಲಿಸಲಾದ ಕಾಮಗಾರಿಗಳ ಸಂಪೂರ್ಣ ಮಾಹಿತಿಯನ್ನು http://bhuvan.nrsc.gov.in ರ ವೆಬ್ ಸೈಟ್ ನಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಈ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ವ್ಯಾಪ್ತಿಗೆ ಸೇರಿದ ಎಲ್ಲಾ ೨೮ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಂ.ವೆಂಕಟೇಶ್ ರವರ ಮಾರ್ಗದರ್ಶನದಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಸಿಬ್ಬಂದಿ ೨೦೦೯-೧೦ ನೇ ಸಾಲಿನಿಂದ ಕೈಗೊಂಡ ಎಲ್ಲಾ ಕಾಮಗಾರಿಗಳನ್ನು ಭುವನ್ ತಂತ್ರಾಂಶದಲ್ಲಿ ದಾಖಲಿಸುವ ಮತ್ತು ಕಾಮಗಾರಿಗಳ ವಾಸ್ತವತೆಯನ್ನು ಪಾರದರ್ಶಕವಾಗಿ ಸಾರ್ವಜನಿಕ ವೀಕ್ಷಣೆಗೆ ವೆಬ್‌ಸೈಟ್ ನಲ್ಲಿ ಅವಕಾಶ ಕಲ್ಪಿಸಿದ್ದು, ಈ ಸಾಧನೆಗಾಗಿ ಮಹಾತ್ಮ ಗಾಂಧಿ-ನರೇಗಾ ಯೋಜನೆಯ ಕಾಮಗಾರಿಗಳ ಜಿಯೋಟ್ಯಾಗ್ ವಿಭಾಗದಲ್ಲಿ ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯಿತಿಗೆ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.

ಸರ್ಕಾರಿ ಕಚೇರಿಗಳಲ್ಲಿ ಮದ್ಯವರ್ತಿಗಳ ಹಾವಳಿ: ಹೋರಾಟದ ಎಚ್ಚರಿಕೆ

0

ತಾಲ್ಲೂಕು ಕಚೇರಿ, ಕಂದಾಯ, ಭೂಮಾಪನ, ಉಪನೋಂಧಣಾಕಾರಿ ಕಚೇರಿ ಸೇರಿದಂತೆ ವಿವಿಧ ಕಚೇರಿಗಳಲ್ಲಿ ಮದ್ಯವರ್ತಿಗಳ ಹಾವಳಿ ಹೆಚ್ಚುತ್ತಿದೆ ಎಂದು ಮಾನವ ಹಕ್ಕುಗಳ ಜಾಗೃತಿ ಸಮಿತಿಯ ತಾಲ್ಲೂಕು ಅಧ್ಯಕ್ಷ ಎನ್.ವಿಜಯ್ ಆರೋಪಿಸಿದರು.
ಜಾಗೃತಿ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆ ಆದ ನಂತರ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮದ್ಯವರ್ತಿಗಳ ಹಾವಳಿಯಿಂದ ಸರ್ಕಾರದ ಅನೇಕ ಯೋಜನೆಗಳು ಅನರ್ಹರ ಪಾಲಾಗುತ್ತಿದೆ. ಅಭಿವೃದ್ದಿಯೂ ಕುಂಠಿತಗೊಳ್ಳುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದರು.
ಕಳೆದ ನಾಲ್ಕು ವರ್ಷಗಳ ಹಿಂದೆ ನಗರದ ಎಸ್.ವಿ.ಎಂಟರ್‌ಪ್ರೈಸಸ್‌ನಲ್ಲಿ ನಡೆದ ನಕಲಿ ಇ-ಸ್ಟಾಂಪ್‌ಗಳ ಅವ್ಯವಹಾರದ ಪ್ರಕರಣಕ್ಕೆ ಸಂಬಂಸಿದಂತೆ ತನಿಖೆ ನಡೆಸಿದ ನಗರಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿ ಪ್ರಕರಣವನ್ನು ಕೈ ಬಿಟ್ಟಿದ್ದಾರೆ.
ನಕಲಿ ಇ-ಸ್ಟಾಂಪ್ ತಯಾರಿಸಿದ ಆರೋಪಿಗಳೊಂದಿಗೆ ಪೊಲೀಸರು, ಉಪ ನೋಂಧಣಾಕಾರಿ ಕಚೇರಿಯ ಅಧಿಕಾರಿಗಳು ಶಾಮೀಲಾಗಿ ಸರಿಯಾದ ರೀತಿಯಲ್ಲಿ ತನಿಖೆ ನಡೆಸಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ದಾಖಲೆಗಳ ಸಮೇತ ದೂರು ಸಲ್ಲಿಸಲಾಗುವುದು ಎಂದರು.
ಸರ್ಕಾರಿ ಕಚೇರಿ, ಇಲಾಖೆಗಳಲ್ಲಿ ಅವ್ಯವಹಾರ, ಮದ್ಯವರ್ತಿಗಳ ಹಾವಳಿ, ಅನರ್ಹರಿಗೆ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ನಮ್ಮ ಸಮಿತಿಗೆ ಸಾಕಷ್ಟು ದೂರುಗಳು ಬರುತ್ತಿವೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಮ್ಮ ಸಮಿತಿಯಿಂದ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.
ಜಾಗೃತಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ್, ಉಪಾಧ್ಯಕ್ಷ ಸವಿತಾ ಚಂದ್ರು, ಯುವ ಘಟಕದ ಅಧ್ಯಕ್ಷ ಪ್ರತಾಪ್, ಕಾರ್ಮಿಕ ಘಟಕದ ಅಧ್ಯಕ್ಷ ದೀಪು, ನಗರ ಘಟಕದ ಅಧ್ಯಕ್ಷ ರಂಜಿತ್, ಚಂದ್ರು, ವೇಣು, ಗಂಗಾಧರ್ ಹಾಜರಿದ್ದರು.

ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಸೈಕಲ್ ವಿತರಣೆ

0

ಸರ್ಕಾರಿ ಶಾಲೆಗಳ ಬಗ್ಗೆ ಇರುವ ಅಸಡ್ಡೆ ಭಾವನೆ ಮನಸ್ಸಿನಿಂದ ದೂರ ಮಾಡಿ. ವಿದ್ಯಾರ್ಹತೆಯನ್ನು ಹೊಂದಿರುವ ತರಬೇತಿ ಪಡೆದಿರುವ ಶಿಕ್ಷಕರು ಇದ್ದಾರೆ. ಸರ್ಕಾರವೂ ಅಗತ್ಯವಾದ ಎಲ್ಲ ರೀತಿಯ ಕ್ರಮಗಳಿಗೂ ಮುಂದಾಗಿದೆ ಎಂದು ನಗರಸಭೆ ಅಧ್ಯಕ್ಷ ಅಪ್ಸರ್‌ಪಾಷ ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರೋತ್ಸಾಹದಾಯಕ ಪಠ್ಯಪುಸ್ತಕ, ಸಮವಸ್ತ್ರ, ಸೈಕಲ್ ಹಾಗೂ ಶೂ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರು ತಾತ್ಸಾರ ಮನೋಭಾವವನ್ನು ಬಿಡಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ಅನುಭವಿ, ಅರ್ಹ ಶಿಕ್ಷಕರು ಇದ್ದು ಉತ್ತಮ ಪಾಠ ಪ್ರವಚನವನ್ನು ಮಾಡಲಿದ್ದಾರೆ. ಜತೆಗೆ ಸಮವಸ್ತ್ರ, ಸೈಕಲ್, ಪಠ್ಯ ಪುಸ್ತಕ ಇನ್ನಿತರೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಖಾಸಗಿ ಶಾಲೆಗಳ ತೀವ್ರತರವಾದ ಪೈಪೋಟಿಯ ನಡುವೆಯೂ ಸರ್ಕಾರಿ ಶಾಲೆಗಳು ಉತ್ತಮ ಫಲಿತಾಂಶವನ್ನು ಪಡೆದುಕೊಂಡಿದ್ದು ಇನ್ನೂ ಸುಧಾರಿಸುವ ಅಗತ್ಯ ಇದೆ. ಅದಕ್ಕೆ ಅಗತ್ಯವಾದ ಎಲ್ಲ ಚಟುವಟಿಕೆಗಳನ್ನು ರೂಪಿಸಲಾಗಿದೆ. ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಸ್ಪಂದಿಸಿ ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಇನ್ನಷ್ಟು ಹೆಚ್ಚಿಸಲು ಸಂಘಟಿತ ಪ್ರಯತ್ನ ಮಾಡಬೇಕಿದೆ ಎಂದು ಹೇಳಿದರು.
ಬಿಇಒ ಎಸ್.ರಘುನಾಥರೆಡ್ಡಿ ಮಾತನಾಡಿ, ಯಾವುದೆ ಖಾಸಗಿ ಶಾಲೆಯಲ್ಲೂ ಸಿಗದಂತ ಉತ್ತಮ ಶಿಕ್ಷಣ ಇನ್ನಿತರೆ ಸೌಲಭ್ಯಗಳನ್ನು ಸರ್ಕಾರಿ ಶಾಲೆಗಳಲ್ಲಿ ಒದಗಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಫಲಿತಾಂಶವೂ ಉತ್ತಮಗೊಳ್ಳುತ್ತಿದೆ ಎಂದರು.
ಕಳೆದ ಹಲವು ವರ್ಷಗಳ ನಂತರ ಶಾಲಾ ಚಟುವಟಿಕೆಗಳು ಆರಂಭವಾಗುವುದಕ್ಕೂ ಮುನ್ನ ಶಾಲಾ ಮಕ್ಕಳ ಕೈಗೆ ಪಠ್ಯಪುಸ್ತಕ, ಸಮವಸ್ತ್ರ, ಸೈಕಲ್ ಇನ್ನಿತರೆ ಸವಲತ್ತುಗಳು ಕೈಗೆ ಸೇರುತ್ತಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಆಗಲಿದೆ ಎಂದು ಹೇಳಿದರು.
೨೦೧೫-೧೬ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಜಂಗಮಕೋಟೆಯ ಸರ್ಕಾರಿ ಪ್ರೌಢಶಾಲೆಯ ಜೆ.ಎಂ.ವೇಣು(೫೭೪- ಶೇ.೯೧.೪೮), ಆನೆಮಡಗು ಸರಕಾರಿ ಪ್ರೌಢಶಾಲೆಯ ಪಿ.ಎನ್.ಚೈತ್ರ(೫೬೮ – ಶೇ. ೯೦.೮೮) ಹಾಗೂ ಅದೇ ಶಾಲೆಯ ಎ.ಎಂ.ಚೈತ್ರ(೫೬೭- ಶೇ. ೯೦.೭೨) ಅವರಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು.
೨೦೧೬-೧೭ನೇ ಸಾಲಿನಲ್ಲಿ ಕರ್ನಾಟಕ ದರ್ಶನ ಶಾಲಾ ಶೈಕ್ಷಣಿಕ ಪ್ರವಾಸದಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಾಲ್ಕು ವಿಭಾಗಗಳಲ್ಲಿ ಪ್ರಥಮ ಬಹುಮಾನವಾಗಿ ೧ ಸಾವಿರ, ೨ನೇ ಬಹುಮಾನವಾಗಿ ೭೫೦ ರೂ, ಹಾಗೂ ೩ನೇ ಬಹುಮಾನವಾಗಿ ೫೦೦ ರೂ ಮುಖಬೆಲೆಯ ಪುಸ್ತಕಗಳನ್ನು ವಿತರಿಸಲಾಯಿತು.
ಸಾಂಕೇತಿವಾಗಿ ಪಠ್ಯ ಪುಸ್ತಕ, ನೋಟ್ ಪುಸ್ತಕ, ಸಮವಸ್ತ್ರ, ಸೈಕಲ್, ಶೂ ಇನ್ನಿತರೆ ಎಲ್ಲ ಪರಿಕರಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಮುಖಂಡ ಲಕ್ಷ್ಮೀನಾರಾಯಣ್(ಲಚ್ಚಿ), ವಿಷಯ ನಿರೀಕ್ಷಕರಾದ ಹುಸೇನ್ ಸಾಬ್, ಮುಖ್ಯ ಶಿಕ್ಷಕ ರವೀಂದ್ರ, ಪ್ರಭಾರಿ ಮುಖ್ಯ ಶಿಕ್ಷಕಿ ಮಂಜುಳ, ಶಿಕ್ಷಕರ ಸಂಘದ ಎಲ್.ವಿ.ವೆಂಕಟರೆಡ್ಡಿ, ಬೈರಾರೆಡ್ಡಿ, ಮಧುಸೂಧನ್ ಹಾಜರಿದ್ದರು.

ಮಾರುಕಟ್ಟೆ ತಜ್ಞರಂತೆ ಯೋಚಿಸುವ ರೈತ

0

‘ರೈತನ್ನು ಅನ್ನದಾತರೆನ್ನುತ್ತಾರೆ. ಪರರಿಗೆ ನೀಡುವ ಶಕ್ತಿ ಇರುವವರನ್ನು ಬೇಡುವವರನ್ನಾಗಿ ಮಾಡಬಾರದು. ಸರ್ಕಾರ ನಮಗೆ ಸಹಾಯಧನ ನೀಡುವ ಅಗತ್ಯವಿಲ್ಲ. ಆದರೆ ಸರ್ಕಾರ ರೈತರಿಗೆ ಸಹಕಾರ ನೀಡಲಿ, ದಾರಿಯನ್ನು ತೋರಿಸಲಿ ಸಾಕು’ ಎನ್ನುತ್ತಾರೆ ರೈತ ಮೇಲೂರು ಬಿ.ಎನ್‌.ಧರ್ಮೇಂದ್ರ.
ರೈತರು ತಮ್ಮ ಅನುಭವದಿಂದ ವಿಜ್ಞಾನಿಗಳಂತೆ, ಮಾರುಕಟ್ಟೆ ತಜ್ಞರಂತೆ ಯೋಚಿಸುತ್ತಾರೆ. ತಮ್ಮ ಅಗತ್ಯಕ್ಕೆ ತಕ್ಕಂತೆ ಅವನ್ನು ಅಳವಡಿಸಿಕೊಳ್ಳುತ್ತಾ ಇತರರಿಗೂ ಮಾರ್ಗದರ್ಶನ ನೀಡುತ್ತಿರುತ್ತಾರೆ. ಅಂಥಹ ರೈತರಲ್ಲೊಬ್ಬರಾದ ಬಿ.ಎನ್‌.ಧರ್ಮೇಂದ್ರ, ಕೇವಲ ಎರಡೂವರೆ ಇಂಚು ಪೈಪಿನಲ್ಲಿ ಬರುವ ಅತ್ಯಲ್ಪ ನೀರಿನಲ್ಲಿಯೇ 25 ಎಕರೆ ವ್ಯವಸಾಯವನ್ನು ನಡೆಸುತ್ತಾ ಏಳು ಎಕರೆಯಲ್ಲಿ ಟೊಮೇಟೋ ಬೆಳೆಯನ್ನು ಉತ್ತಮ ಗುಣಮಟ್ಟದಲ್ಲಿ ಬೆಳೆದಿದ್ದಾರೆ. ನೀರಿನ ಸಮಸ್ಯೆ, ಬೆಲೆ ಕುಸಿತದ ನಡುವೆಯೂ ಹಚ್ಚ ಹಸುರಾಗಿರುವ ಬೆಳೆಯಲ್ಲಿ ಆರು ಟನ್‌ ಟೊಮೇಟೋ ಕಿತ್ತು ಮಾರಿದ್ದು, ಇನ್ನೂ 70 ಟನ್‌ ಬೆಳೆಯ ನಿರೀಕ್ಷೆಯಲ್ಲಿದ್ದಾರೆ.
‘ಎಂಬತ್ತು ದಿನಗಳಾದವು ನಾಟಿ ಮಾಡಿ. ಅಲ್ಪ ನೀರು, ಬಿದ್ದ ಮಳೆ ನೀರನ್ನು ಕುಡಿದು ಗಿಡಗಳು ಸೊಂಪಾಗಿ ಬೆಳೆದಿವೆ. ಫಸಲನ್ನೂ ಕೊಡುತ್ತಿದೆ. ನಾವು ಬೆಳೆದ ಟೊಮೇಟೋ ಐದು ರೀತಿಯ ಗುಣಮಟ್ಟದವುಗಳಾಗಿ ವಿಂಗಡಿಸುತ್ತೇವೆ. ಮೊದಲ ಗುಣಮಟ್ಟದ್ದು ಬಂಗಾಲ, ಬಾಂಗ್ಲಾದೇಶದವರೆಗೆ ಹೋಗುತ್ತದೆ. ಕಳೆದ ವರ್ಷ ಒಂದು ಕೆಜಿಗೆ 60 ರೂ ಇದ್ದದ್ದು, ಈ ವರ್ಷ 6 ರೂಗೆ ಇಳಿದಿದೆ. ನಮ್ಮ ಶ್ರಮಕ್ಕೆ ತಕ್ಕ ಹಣ ಸಿಗುತ್ತಿಲ್ಲ. ಪ್ರತಿ ಒಂದು ಕೆಜಿ ಟೊಮೆಟೋ ಬೆಳೆಯಲು 10 ರೂ ಖರ್ಚಾಗುತ್ತದೆ. ಅದರ ಮೇಲೆ ಎಷ್ಟು ಹಣ ಬಂದರೂ ಲಾಭವೇ. ಆದರೆ ಬೆಲೆ ಇದೆಯೆಂದು ಅನೇಕರು ಒಂದೇ ಬೆಳೆ ಬೆಳೆಯುವ ಕಾರಣ ಬೆಲೆ ಕುಸಿಯುತ್ತದೆ. ಭೂಮಿ ಫಲವತ್ತಾಗಿದ್ದಷ್ಟೂ ಬೆಳೆ ಉತ್ತಮ. ಅದಕ್ಕಾಗಿ ಭೂಮಿಗೆ ವಿಷವುಣಿಸಬಾರದು. ನಮ್ಮ ಕುರಿಗೊಬ್ಬರ, ಕೊಟ್ಟಿಗೆ ಗೊಬ್ಬರ, ಹಿಂಡಿಗಳು ನಮ್ಮ ಬೆಳೆಯ ಗುಣಮಟ್ಟಕ್ಕೆ ಕಾರಣ’ ಎಂದು ತಮ್ಮ ಅನುಭವವನ್ನು ಬಿ.ಎನ್‌.ಧರ್ಮೇಂದ್ರ ವಿವರಿಸಿದರು.
‘ಪ್ರತಿಯೊಂದು ಗ್ರಾಮ ಪಂಚಾಯ್ತಿಯಲ್ಲೂ ಆಯಾ ವ್ಯಾಪ್ತಿಯ ರೈತರು ತಾವು ಬೆಳೆಯುವ ಬೆಳೆಯನ್ನು ಧೃಡೀಕರಿಸಿ ಧೃಡೀಕರಣ ಪತ್ರವನ್ನು ಪಡೆಯುವಂತಾಗಬೇಕು. ಪ್ರತಿಯೊಂದು ಪಂಚಾಯ್ತಿಯ ಮಾಹಿತಿ ಪಡೆಯುವ ಮೂಲಕ ತಾಲ್ಲೂಕು ಮತ್ತು ಜಿಲ್ಲೆಗಳಲ್ಲಿ ಯಾವ ಯಾವ ಬೆಳೆ ಎಷ್ಟೆಷ್ಟು ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಇದರಿಂದ ಬಹಳಷ್ಟು ಜನ ಒಂದೇ ಬೆಳೆ ಬೆಳೆದು ಹಣ ಕಳೆದುಕೊಳ್ಳುವುದು ತಪ್ಪುತ್ತದೆ. ಹೊಸದಾಗಿ ಬೆಳೆ ಬೆಳೆಯುವವರಿಗೆ ಈ ಮಾಹಿತಿಯಿಂದ ಬೆಳೆಯ ಆಯ್ಕೆ ಸುಲಭವಾಗುತ್ತದೆ. ಈ ಕೆಲಸ ಸರ್ಕಾರದಿಂದ ಆದಾಗ ಬೆಳೆ ಕುಸಿಯುವುದು ತಪ್ಪುತ್ತದೆ. ತಂತ್ರಜ್ಞಾನ ಬಳಸಿ ಮೊಬೈಲ್‌ ಮೂಲಕವೂ ಮಾಹಿತಿ ನೀಡಬಹುದು. ಸರ್ಕಾರ ನಿಗದಿತ ಬೆಲೆಗೆ ರೈತರ ಉತ್ಪನ್ನ ಖರೀದಿಸಿ ಮಾರುವ ಮೂಲಕ ಆದಾಯ ಗಳಿಕೆ, ಉದ್ಯೋಗ ನೀಡುವುದು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದು’ ಎಂದು ಅವರು ಹೇಳಿದರು.
– ಡಿ.ಜಿ.ಮಲ್ಲಿಕಾರ್ಜುನ

ಗಂಗಮ್ಮದೇವಿಯ ಜಯಂತ್ಯುತ್ಸವ

0

ನಗರದ ಕಾಮಾಟಿಗರ ಪೇಟೆಯಲ್ಲಿರುವ ಗ್ರಾಮದೇವತೆಯೆಂದೇ ಹೆಸರಾದ ಗಂಗಮ್ಮದೇವಿಯ ಜಯಂತ್ಯುತ್ಸವವನ್ನು ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಜ್ಯೇಷ್ಠ ಶುಕ್ಲಪಕ್ಷ ದಶಮಿಯಂದು ಭಗೀರಥ ಮಹರ್ಷಿಯು ಜೀವದಾಯಿನಿಯಾದ ಗಂಗಾಮಾತೆಯನ್ನು ಭೂಮಿಗೆ ಕರೆತಂದ ದಿನವಾಗಿ ಆಚರಿಸುವ ವಾಡಿಕೆಯಿದ್ದು, ಈ ದಿನವನ್ನು ಗಂಗಮ್ಮದೇವಿಯ ಜಯಂತ್ಯುತ್ಸವವನ್ನಾಗಿ ಆಚರಿಸುವ ಸಂಪ್ರದಾಯವಿದೆ.
ಈ ದಿನದ ವಿಶೇಷವಾಗಿ ಸುಮಾರು 120 ವರ್ಷಗಳ ಹಿಂದೆ ಗಂಗಮ್ಮದೇವಿಯ ಗುಡಿಯ ಮುಖ್ಯದ್ವಾರಕ್ಕೆ ಹಾಕಿರುವ ಹಿತ್ತಾಳೆಯ ಕಲಾಕೃತಿಯನ್ನು ದೇವಿಯ ಆಲಯದಲ್ಲಿ ಅಳವಡಿಸಿದ್ದು, ಅದನ್ನು ಭಾನುವಾರ ವಿಶೇಷ ಪೂಜೆಯ ಸಂದರ್ಭದಲ್ಲಿ ಬೆಸ್ತ ಜನಾಂಗದ ಮುಖ್ಯಸ್ಥ ಬಿ.ಎನ್‌.ನ್ಯಾತಪ್ಪ ಉದ್ಘಾಟಿಸಿದರು.
ಬೆಳಿಗ್ಗೆಯಿಂದ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು. ದೇವಿಯನ್ನು ವಿವಿಧ ಹೂಗಳಿಂದ ಸಿಂಗರಿಸಲಾಗಿತ್ತು. ಮಹಾಮಂಗಳಾರತಿಯ ನಂತರ ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು. ಸಂಜೆ ಊರಿನ ಪ್ರಮುಖ ಬೀದಿಗಳಲ್ಲಿ ಶ್ರೀ ಗಂಗಾದೇವಿ ಉತ್ಸವವನ್ನು ಆಯೋಜಿಸಲಾಗಿತ್ತು.
ನಿವೃತ್ತ ರೈಲ್ವೆ ಇಲಾಖೆ ಅಧಿಕಾರಿ ಅಶ್ವತ್‌ನಾರಾಯಣ, ಎಸ್‌.ಸುರೇಂದ್ರ, ಶ್ರೀ ಗಂಗಾದೇವಿ ಸೇವಾಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಸದಸ್ಯರಾದ ಶ್ರೀರಾಮ, ಲಕ್ಷ್ಮೀನಾರಾಯಣ, ಸಂಜೀವಪ್ಪ, ಮೋಹನ್‌, ಜಗದೀಶ್‌, ಶ್ರೀದರ್‌, ವೆಂಕಟೇಶ್‌, ಅಪ್ಪಿ, ಗಣೇಶ್‌, ಜಯರಾಮ್‌, ಶಿವಣ್ಣ ಹಾಜರಿದ್ದರು.

ನೇರಳೆ ಹಣ್ಣಿಗೆ ಭಾರಿ ಬೇಡಿಕೆ

0

ನಗರದಲ್ಲಿ ಜಂಬುನೇರಳೆ ಹಣ್ಣಿನ ವ್ಯಾಪಾರ ಭಾರಿ ಜೋರಾಗಿದೆ. ಒಂದೆಡೆ ಮಾವಿನ ಹಣ್ಣಿನ ಸಿಹಿ ಇದ್ದರೆ ಮತ್ತೊಂದೆಡೆ ನೇರಳೆಯ ಒಗರೂ ಜನರಿಗೆ ಸವಿಯಾಗಿದೆ. ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಕೂಡ ಇದೆ.
ಕಾಲು ಕೆ.ಜಿ ಜಂಬು ನೇರಳೆಗೆ 45ರಿಂದ 50ರೂ ವರೆಗೂ ಮಾರಾಟವಾಗುತ್ತಿದೆ. ಆದರೂ ಇದರ ಬೇಡಿಕೆ ಕುಸಿದಿಲ್ಲ. ಈಗ ತಾಲ್ಲೂಕಿನಲ್ಲಿ ಮಾರಾಟವಾಗುತ್ತಿರುವುದು ಆಂಧ್ರಪ್ರದೇಶದ ಮಾರುಕಟ್ಟೆಯಲ್ಲಿ ಖರೀದಿಸಿ ತಂದಿರುವುದು.
ಈ ಒಗರು, ಸಿಹಿ ಮಿಶ್ರಿತ ಹಣ್ಣನ್ನು ತಾಲ್ಲೂಕಿನಲ್ಲಿ ಯತೇಚ್ಛವಾಗಿ ಸಿಗುವುದಿಲ್ಲ. `ಸಿಜಿಗಿಯಮ್ ಕುಮಿನಿ’ ಎಂಬ ಸಸ್ಯ ವರ್ಗಕ್ಕೆ ಸೇರಿದ ನೇರಳೆ ವಾರ್ಷಿಕ ಹಣ್ಣು. ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಹೂವು ಬಿಟ್ಟು, ಜೂನ್ ತಿಂಗಳಿನಲ್ಲಿ ಹಣ್ಣು ನೀಡುತ್ತದೆ.
ಮೊದಲೆಲ್ಲ ರೈತರು ಹೊಲಗಳ ಬೇಲಿ ಸಾಲಿನಲ್ಲಿ ಇವುಗಳನ್ನು ಬೆಳೆಯುತ್ತಿದ್ದರು. ರೈತರಿಗೆ ಇದು ಪರ್ಯಾಯ ಬೆಳೆಯೂ ಆಗಿತ್ತು. ವರ್ಷಕ್ಕೊಮ್ಮೆ ಮಾತ್ರ ಹಣ್ಣುಗಳನ್ನು ಕೊಡುವುದರಿಂದ ಹಿಂದೆ ಇದರ ಬೆಲೆಯೂ ಕಡಿಮೆಯಿದ್ದದರಿಂದ ಇದೀಗ ಇವುಗಳ ಸಂಖ್ಯೆ ಕಡಿಮೆಯಾಗಿರುವುದೇ ಬೆಲೆ ಹೆಚ್ಚಾಗಲು ಕಾರಣ ಎನ್ನಲಾಗುತ್ತದೆ.
ಜಂಬು ನೇರಳೆ ಹಣ್ಣನ್ನು ಇಷ್ಟಪಡದವರು ಅಪರೂಪ. ಹಣ್ಣನ್ನು ನೋಡುತ್ತಿದಂತೆ ಬಾಯಲ್ಲಿ ನೀರೂರುತ್ತದೆ. ನೇರಳೆ ಹಣ್ಣುಗಳ ತಿರುಳನ್ನು ವೈನ್, ವಿನೆಗರ್, ಜೆಲ್ಲಿ, ಜಾಮ್ ತಯಾರಿಕೆಗೆ ಬಳಸಲಾಗುತ್ತದೆ. ಇದರ ಬೀಜಗಳನ್ನು ಆಯುರ್ವೇದ, ಯುನಾನಿ ಔಷಧಿಯಾಗಿಯೂ ಬಳಸಲಾಗುತ್ತದೆ. ಬೀಜದಲ್ಲಿ ಪ್ರೊಟೀನ್, ಕಾರ್ಬೊ ಹೈಡ್ರೇಟ್, ಕ್ಯಾಲ್ಸಿಯಂ ಅಂಶಗಳಿರುತ್ತವೆ ಎನ್ನುತ್ತಾರೆ ವೈದ್ಯರು.
ವೈದ್ಯ ವಿಜ್ಞಾನ ಪ್ರಕಾರ ನೇರಳೆ ಹಣ್ಣಿನ ಪಾನೀಯ ಪಚನಕ್ರಿಯೆಗೆ ಉತ್ತಮ. ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಿದ್ದವರು ಪ್ರತಿದಿನ ನೇರಳೆ ಹಣ್ಣುಗಳನ್ನು ತಿಂದರೆ ಕಾಯಿಲೆ ನಿಯಂತ್ರಿಸಬಹುದು. ಸಿಹಿ, ಒಗರು ರುಚಿ ಹೊಂದಿರುವ ನೇರಳೆಯನ್ನು ಉಪ್ಪಿನೊಂದಿಗೆ ತಿಂದರೆ ಬಲುರುಚಿ. ಪಟ್ಟಣದ ಇಡೀ ಮಾರುಕಟ್ಟೆಯಲ್ಲಿ ನೇರಳೆ ಹಣ್ಣಿನ ಮಾರಾಟ ಬಲು ಜೋರಾಗಿದೆ.
‘ತಾಲ್ಲೂಕಿನಲ್ಲಿ ಕೆಲವು ರೈತರು ಮಾವು ಹಾಗೂ ಹುಣಸೆಗೆ ಪರ್ಯಾಯವಾಗಿ ಜಂಬು ನೇರಳೆ ಗಿಡ ನೆಟ್ಟು ಬೆಳೆಸುತ್ತಿದ್ದಾರೆ. ಆದರೂ ಹೆಚ್ಚಾಗಿ ಆಂದ್ರದ ಚೇಳೂರಿನ ಕಡೆಯಿಂದ ಬರುತ್ತದೆ. ನಮಗೂ ಒಳ್ಳೆಯ ವ್ಯಾಪಾರವಾಗುತ್ತಿದೆ. ಮಾವಿನ ಹಣ್ಣಿನ ಮಾರಾಟವಿರುವಾಗಲೇ ನೇರಳೆ ಹಣ್ಣು ಕೂಡ ಬಂದಿದ್ದರೂ ಬೇಡಿಕೆ ಕುಸಿದಿಲ್ಲ. ಜನ ಇಷ್ಟಪಟ್ಟು ಕೊಂಡು ತಿನ್ನುತ್ತಿದ್ದಾರೆ’ ಎನ್ನುತ್ತಾರೆ ಹಣ್ಣು ಮಾರಾಟಗಾರ ಅಸ್ಲಂ.

ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಖಜಾಂಚಿ

0

ಶಿಡ್ಲಘಟ್ಟ ತಾಲ್ಲೂಕಿನ ಗುಡಿಹಳ್ಳಿ ಚಂದ್ರು ಅವರನ್ನು ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಖಜಾಂಚಿಯನ್ನಾಗಿ ನೇಮಕ ಮಾಡಿರುವುದಾಗಿ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಮುನಿಕೃಷ್ಣಪ್ಪ ಆದೇಶ ಮಾಡಿದ್ದಾರೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ

0

ಪ್ರಸ್ತುತ ಸ್ಪರ್ಧಾತ್ಮಕ ಯುಗಕ್ಕೆ ಅನುಗುಣವಾಗಿ ಮಕ್ಕಳನ್ನು ಸನ್ನದ್ದುಗೊಳಿಸುವಲ್ಲಿ ವಿದ್ಯಾ ಸಂಸ್ಥೆಗಳ ಪಾತ್ರ ಮಹತ್ತರವಾಗಿದೆ ಎಂದು ತಾಪಂ ಸದಸ್ಯ ಬಿ.ವಿ. ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಬಶೆಟ್ಟಹಳ್ಳಿ ಬಳಿ ನಿರ್ಮಿಸಿರುವ ಶ್ರೀ ಸಾಯಿ ಇಂಟರ್ ನ್ಯಾಷನಲ್ ವಿದ್ಯಾ ಸಂಸ್ಥೆಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನಗರ ಪ್ರದೇಶಗಳ ಮಕ್ಕಳಿಗೆ ಸಿಗುವ ಉನ್ನತ ಸೌಲಭ್ಯಗಳುಳ್ಳ ಗುಣಮಟ್ಟದ ಶಿಕ್ಷಣ ಒದಗಿಸಲು ಮುಂದಾಗಿರುವ ವಿದ್ಯಾ ಸಂಸ್ಥೆಯ ಕಾರ್ಯವೈಖರಿ ಅಭಿನಂದನೀಯ. ಅಲ್ಲದೆ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಹಿತದೃಷ್ಟಿಯಲ್ಲಿಟ್ಟುಕೊಂಡು ಶುಲ್ಕವನ್ನು ಕಡಿಮೆ ಮಾಡುವ ಮನಸ್ಸು ಮಾಡಿರುವುದು ಕೂಡ ಇತರರಿಗೆ ಮಾದರಿಯಾಗಿದೆ ಎಂದರು.
ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಒದಗಿಸಬೇಕೆಂಬ ಮಹದಾಸೆಯೊಂದಿಗೆ ಪ್ರಾರಂಭಿಸಿರುವ ವಿದ್ಯಾ ಸಂಸ್ಥೆಯ ಧ್ಯೇಯೋದ್ದೇಶಗಳು ಸಫಲವಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಬಶೆಟ್ಟಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪುಷ್ಪಾಗಂಗಾಧರ್, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ವೆಂಕಟೇಶಪ್ಪ, ಪ್ರಗತಿ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಮಂಜುನಾಥ್, ಗ್ರಾಮದ ಮುಖಂಡರಾದ ದ್ಯಾವಪ್ಪ, ರಾಮಸ್ವಾಮಿ, ಶಿವರಾಮರೆಡ್ಡಿ, ಸಾಯಿ ಇಚಿಟರ್ ನ್ಯಾಷನಲ್ ವಿದ್ಯಾ ಸಂಸ್ಥೆಯ ಅಧ್ಯಕ್ಷೆ ದೀಪಾಮಂಜುನಾಥ್, ಕಾರ್ಯದರ್ಶಿ ಎಂ. ಮಂಜುನಾಥ್, ಗವಿಗಾನಹಳ್ಳಿ ಮುನಿಶಾಮೇಗೌಡ, ಶಿಕ್ಷಕ ಶಿವಕುಮಾರ್, ಪಿಡಿಒ ಅಶೋಕ್, ಆರ್‌ಐ ನರಸಿಂಹಮೂರ್ತಿ, ದೇವರಾಜ್, ಸೊಪ್ಪಹಳ್ಳಿ ಮೂರ್ತಿ ಹಾಜರಿದ್ದರು.

ಸರ್ಕಾರದ ಸರಳ ವಿವಾಹದ 50 ಸಾವಿರ ರೂಪಾಯಿಯ ಚೆಕ್‌ ವಿತರಣೆ

0

ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟದ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾದಲ್ಲಿ ಕಳೆದ ಮಾರ್ಚ್‌ 23 ರಂದು ಎಸ್.ಎನ್ ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ಅವರ ನೇತೃತ್ವದಲ್ಲಿ ನಡೆದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದ ಫಲಾನುಭವಿಗಳಿಗೆ ಸರ್ಕಾರದ ಸರಳ ವಿವಾಹದ 50 ಸಾವಿರ ರೂಪಾಯಿಯ ಚೆಕ್‌ಗಳನ್ನು ಗುರುವಾರ ಜಿಲ್ಲಾಡಳಿತ ಭವನದಲ್ಲಿ ವಿತರಣೆ ಮಾಡಲಾಯಿತು.

ತೋಟಗಾರಿಕೆ ಯೋಜನೆಗೆ ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ

0

ಯಾವುದೆ ಇಲಾಖೆಯ ವಿವಿಧ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕಾದರೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತಾಗಬೇಕೆಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ಅಭಿಪ್ರಾಯಪಟ್ಟರು.
ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆದ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆ(ಲಾಟರಿ ಮೂಲಕ) ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೃಷಿ, ರೇಷ್ಮೆ, ತೋಟಗಾರಿಕೆ ಇಲಾಖೆಗಳು ಕೃಷಿಕರಿಗೆ ಅಗತ್ಯ ಇರುವ, ನೇರ ಸಂಬಂಧ ಇರುವ ಇಲಾಖೆಗಳಾಗಿದ್ದು ಈ ಇಲಾಖೆಗಳ ಅಧಿಕಾರಿಗಳು ಇತರೆ ಇಲಾಖೆ ಅಧಿಕಾರಿಗಳಿಗಿಂತಲೂ ಹೆಚ್ಚು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು. ತೋಟಗಾರಿಕೆಯ ವಿವಿಧ ಯೋಜನೆಗಳಿಗೆ ನಿಗಧಿಗಿಂತಲೂ ಹೆಚ್ಚು ರೈತರು ಅರ್ಜಿಗಳನ್ನು ಸಲ್ಲಿಸಿದ್ದು ಲಾಟರಿ ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದರು.
ಯೋಜನೆಗಳಿಗೆ ಹೋಬಳಿವಾರು ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರೆ ವರ್ಗಗಳಿಗೆ ಪ್ರತ್ಯೇಕವಾಗಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪಾರರ್ದಕವಾಗಿ ನಡೆಯಲಿದೆ ಎಂದು ಹೇಳಿದರು.
ವಿವಿಧ ಯೋಜನೆಗಳಡಿ ಅರ್ಜಿ ಸಲ್ಲಿಸಿದ್ದ ಎಲ್ಲವನ್ನೂ ಹೋಬಳಿವಾರು ವರ್ಗವಾರು ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.
ಜಿಲ್ಲಾ ಪಂಚಾಯ್ತಿ ಸದಸ್ಯ ಸತೀಶ್, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಎಚ್‌.ನರಸಿಂಹಯ್ಯ, ತಾಲ್ಲೂಕು ಪಂಚಾಯಿತಿ ಇಒ ವೆಂಕಟೇಶ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೆಶಕ ಮುನೇಗೌಡ, ಕೃಷಿ ನಿರ್ದೇಶಕ ದೇವೇಗೌಡ, ನಿತಿನ್, ರವಿಕುಮಾರ್ ಹಾಜರಿದ್ದರು.

ದೇಶದ ರೇಷ್ಮೆ ಉತ್ಪಾದನೆ ಹೆಚ್ಚಿಸಲು ಕ್ರಮ

0

ಚೀನಾದಿಂದ ನಮ್ಮ ದೇಶಕ್ಕೆ ಆಮದು ಮಾಡಿಕೊಳ್ಳುತ್ತಿರುವ ರೇಷ್ಮೆಯನ್ನು ನಿಲ್ಲಿಸಿ ನಮಗೆ ಅಗತ್ಯವಿರುವಷ್ಟು ರೇಷ್ಮೆ ನೂಲನ್ನು ನಮ್ಮ ದೇಶದಲ್ಲಿಯೇ ತಯಾರಿಸಲು ಬೇಕಾಗುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಹೇಳಿದರು.
ನಗರದ ಸರ್ಕಾರಿ ರೇಷ್ಮೆ ಬಿತ್ತನೆ ಕೋಠಿ ಕಚೇರಿಯಲ್ಲಿ ಶುಕ್ರವಾರ ಕೇಂದ್ರ ರೇಷ್ಮೆ ಮಂಡಳಿ ಹಾಗು ರೇಷ್ಮೆ ಇಲಾಖೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ರೇಷ್ಮೆ ಗುಣಮಟ್ಟದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕರ್ನಾಟಕ ಹೊರತುಪಡಿಸಿದಂತೆ ದೇಶದ ಬಹುತೇಕ ಕಡೆ ಉತ್ತಮ ಗುಣಮಟ್ಟದ ರೇಷ್ಮೆ ನೂಲು ಉತ್ಪಾದನೆಯಾಗುತ್ತಿಲ್ಲ. ಹಾಗಾಗಿ ಚೀನಾದಿಂದ ರೇಷ್ಮೆ ನೂಲು ಆಮದು ಮಾಡಿಕೊಳ್ಳಲಾಗುತ್ತಿದೆ. ನಮಗೆ ಅಗತ್ಯವಿರುವಷ್ಟು ರೇಷ್ಮೆ ನೂಲು ಇಲ್ಲೇ ಉತ್ಪಾದನೆಯಾದರೆ ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ರೇಷ್ಮೆ ನೂಲನ್ನು ನಿಲ್ಲಿಸಬಹುದು. ಅದಕ್ಕಾಗಿ ರೈತರು ಹಾಗು ರೀಲರ್‌ಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೂತನ ತಂತ್ರಜ್ಞಾನವುಳ್ಳ ಯಂತ್ರೋಪಕರಣಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತಿದೆ ಎಂದರು.
ಬಯಲುಸೀಮೆ ಭಾಗದ ಜನತೆ ಕೃಷಿ ಹಾಗು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದು, ಈ ಭಾಗದ ರೈತರು ಹಿಪ್ಪುನೇರಳೆಯನ್ನು ಮರಗಡ್ಡಿಯಾಗಿ ಬೆಳೆಸಲು ಮುಂದಾಗುವುದರಿಂದ ನೀರಿನ ಕೊರತೆ ಸ್ವಲ್ಪಮಟ್ಟಿಗೆ ನೀಗುತ್ತದೆ. ಉತ್ತಮ ಗುಣಮಟ್ಟದ ಸೊಪ್ಪು ಇದರಿಂದ ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರೈತರು, ರೀಲರ್‌ಗಳು, ನೇಕಾರರು ಹಾಗು ಹುರಿಗಾರರು ತಮ್ಮ ತಮ್ಮ ಉದ್ದಿಮೆಯಲ್ಲಿರುವ ಸಮಸ್ಯೆ ಹೇಳಿಕೊಂಡರು.
ಎಲ್ಲರ ಸಮಸ್ಯೆ ಆಲಿಸಿದ ಅಧ್ಯಕ್ಷರು, ರೈತರು, ರೀಲರ್‌ಗಳು ಸೇರಿದಂತೆ ನೇಕಾರರು ಹಾಗು ಹುರಿಗಾರರು ಕೇಂದ್ರ ರೇಷ್ಮೆ ಮಂಡಳಿ ಕಚೇರಿಗೆ ಒಂದೊಂದು ತಂಡ ರಚಿಸಿಕೊಂಡು ಬಂದರೆ ಅಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸ ಮಾಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿ ಕೆ.ಎನ್.ಮಹೇಶ್, ಜಿಲ್ಲಾ ಪಂಚಾಯ್ತಿ ರೇಷ್ಮೆ ಉಪನಿರ್ದೇಶಕ ಬಿ.ಆರ್.ನಾಗಭೂಷಣ, ರೇಷ್ಮೆ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ಮಾರುಕಟ್ಟೆಯ ಪ್ರಭು, ರೈತ ಮುಖಂಡರಾದ ಭಕ್ತರಹಳ್ಳಿ ಬೈರೇಗೌಡ, ಎಸ್.ಎಂ.ನಾರಾಯಣಸ್ವಾಮಿ ಹಾಜರಿದ್ದರು.

ಕೃಷಿಯಲ್ಲೂ ತಂತ್ರಜ್ಞಾನದ ಬಳಕೆಯಾಗಲಿ

0

ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು, ತಾಂತ್ರಿಕ ಸಲಹೆಗಳನ್ನು ಪಡೆದುಕೊಂಡು ಉತ್ತಮ ಗುಣಮಟ್ಟದ ಬೆಳೆ ಬೆಳೆಯುವ ಕಡೆಗೆ ರೈತರು ಹೆಚ್ಚು ಆಸಕ್ತಿ ತೋರಿಸಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ರೇಷ್ಮೆ ವಿಸ್ತರಣಾಧಿಕಾರಿಗಳ ಕಚೇರಿ ಆವರಣದಲ್ಲಿ ಶುಕ್ರವಾರ ೨೦೧೭-–೧೮ ನೇ ಸಾಲಿನ ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ರೈತರು ಕೃಷಿ, ತೋಟಗಾರಿಕೆ ಕ್ಷೇತ್ರಗಳಲ್ಲಿ ನೂತನ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಉತ್ತಮ ಗುಣಮಟ್ಟದ ಬೆಳೆಗಳನ್ನು ಬೆಳೆಯುವುದರ ಕಡೆಗೆ ಗಮನಹರಿಸಬೇಕು, ಪ್ರತಿ ಮೂರು ವರ್ಷಕ್ಕೊಮ್ಮೆ ಮಣ್ಣು ಹಾಗೂ ನೀರಿನ ಪರೀಕ್ಷೆ ಮಾಡಿಸಬೇಕು. ಕೃಷಿ ಇಲಾಖೆಯ ಅಧಿಕಾರಿಗಳು ನೇರವಾಗಿ ರೈತರ ಭೂಮಿಗೆ ಬೇಟಿ ನೀಡಿ ರೈತರಿಗೆ ಅಗತ್ಯವಾಗಿರುವ ಮಾಹಿತಿಗಳನ್ನು ತಲುಪಿಸುವಂತಹ ಪ್ರಾಮಾಣಿಕ ಸೇವೆ ಮಾಡಬೇಕು. ನೀರಿನ ಅಗತ್ಯಕ್ಕೆ ತಕ್ಕಂತಹ ಬೆಳೆಗಳನ್ನು ಬೆಳೆಯುವುದರ ಕಡೆಗೆ ರೈತರು ಗಮನ ಹರಿಸಬೇಕು, ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವಂತಹ ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳನ್ನು ಬೆಳೆಯುವುದು ರೂಢಿಸಿಕೊಳ್ಳುವುದರಿಂದ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ, ಪ್ರತಿಯೊಬ್ಬ ರೈತರು ರೈತ ಸಂಪರ್ಕ ಕೇಂದ್ರಗಳಿಗೆ ಬೇಟಿ ನೀಡಿ ಕಾಲ ಕಾಲಕ್ಕೆ ಮಾಹಿತಿಯನ್ನು ಪಡೆಯಬೇಕು, ಇಲಾಖಾಧಿಕಾರಿಗಳು, ಅರ್ಹ ಫಲಾನುಭವಿಗಳಿಗೆ ಸೌಲತ್ತುಗಳನ್ನು ಕಲ್ಪಿಸಿಕೊಡುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ ಕಚೇರಿಗೆ ಬರುವ ರೈತರನ್ನು ಗೌರವದಿಂದ ಕಾಣುವ ಮನೋಭಾವವನ್ನು ಅಧಿಕಾರಿಗಳು ಬೆಳೆಸಿಕೊಳ್ಳಬೇಕು. ಅಧಿಕಾರಿಗಳು ರೈತರ ಭೂಮಿಗಳಿಗೆ ಖುದ್ದು ಹೋಗಬೇಕು ಅವರಿಗೆ ಅಗತ್ಯವಾಗಿ ಬೇಕಾಗಿರುವ ಮಾಹಿತಿ ಹಾಗೂ ಸಲಹೆಗಳನ್ನು ನೀಡುವುದರ ಜೊತೆಗೆ ಮಣ್ಣಿನ ಪರೀಕ್ಷೆ, ಹಾಗೂ ನೀರಿನ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿ, ಭೂಮಿಯಲ್ಲಿ ಕಡಿಮೆಯಾಗಿರುವ ಲವಣಾಂಶಗಳು, ಹಾಗೂ ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಅಭಿಯಾನ ಕಾರ್ಯಕ್ರಮದಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ತೋಟಗಾರಿಕೆ, ಇಲಾಖೆಗಳಿಂದ ಸ್ತಬ್ದ ಚಿತ್ರಗಳ ಸಮೇತ ರೈತರಿಗೆ ಮಾಹಿತಿಗಳನ್ನು ನೀಡಲಾಯಿತು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಸಿ.ದೇವೆಗೌಡ, ಡಾ.ಕೆ.ಆರ್.ಹುಲ್ಲುನಾಚೇಗೌಡ, ಪ್ರಗತಿಪರ ರೈತ ಹಿತ್ತಲಹಳ್ಳಿ ಗೋಪಾಲಗೌಡ, ಗೋಪಾಲರಾವ್ ಹಾಜರಿದ್ದರು.
ಅಧಿಕಾರಿಗಳು ಸ್ಪಂದಿಸುವುದಿಲ್ಲ: ಸಭೆ ಸಮಾರಂಭಗಳಲ್ಲಿ ಮಾತ್ರ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಗಂಟೆಗಟ್ಟಲೇ ಮಾಹಿತಿ ನೀಡುವ ಅಧಿಕಾರಿಗಳು ಕಚೇರಿಗೆ ಹೋದಾಗ ರೈತರನ್ನು ಕನಿಷ್ಠ ಸೌಜನ್ಯದಿಂದಲೂ ಮಾತನಾಡುವುದಿಲ್ಲ. ಇಲಾಖೆಯಿಂದ ಏನೇನು ಯೋಜನೆಗಳಿವೆ ಎಂದು ಕೇಳಿದರೆ ಅದಕ್ಕೂ ಮಾಹಿತಿ ನೀಡದೇ ಸದಾ ಕಚೇರಿಯಲ್ಲಿ ನಾಲ್ಕೈದು ಮಂದಿಯನ್ನು ಹಾಕಿಕೊಂಡು ಕಾಲ ಕಳೆಯುತ್ತಾರೆ. ಇವರಿಗೆ ಹಸಿರು ಶಾಲು ಹಾಕಿರುವವರು ಮಾತ್ರ ರೈತರ ಹಾಗೆ ಕಾಣಿಸುತ್ತಾರೆ. ಉಳಿದ ಅನಕ್ಷರಸ್ಥರೂ ಸೇರಿದಂತೆ ಬಡ ರೈತರು ಇವರ ಕಣ್ಣಿಗೆ ಕಾಣುವುದಿಲ್ಲ ಎಂದು ಶಾಸಕರ ಸಮ್ಮುಖದಲ್ಲಿಯೇ ಸಾರ್ವಜನಿಕರು ಸಭೆಯಲ್ಲಿ ಕೃಷಿ ಅಧಿಕಾರಿ ಬಿ.ಸಿ.ದೇವೇಗೌಡರ ವಿರುದ್ದ ಹರಿಹಾಯ್ದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರ ಪ್ರತಿಭಟನೆ

0

ತಾಲ್ಲೂಕಿನ ಜಂಗಮಕೋಟೆ ಹೋಬಳಿ ಅಮರಾವತಿಯಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕಟ್ಟಡವನ್ನು ನಿರ್ಮಿಸಬಾರದೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಶುಕ್ರವಾರ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟಿಸಿದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿ ಸುಂಡರಹಳ್ಳಿ ಗ್ರಾಮದ ಸರ್ವೆ ನಂ 1 ರಲ್ಲಿ 102 ಎಕರೆ 27 ಗುಂಟೆ ಜಮೀನಿನ ಪ್ರದೇಶದಲ್ಲಿ ಮಂಜೂರಾಗಿದ್ದ ಜಾಗವನ್ನು ಅಲ್ಲಿನ ಭೂಮಾಫಿಯಾ ವ್ಯಕ್ತಿಗಳಿಗೆ ತೊಂದರೆಯಾಗುತ್ತದೆಂದು ದಿಡೀರನೆ ಏಕಾಏಕಿ ಸ್ಥಳವನ್ನು ಬದಲಿಸಿ ಅಮರಾವತಿ ಗ್ರಾಮದ ಸರ್ವೆ ನಂ 47 ರಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಸ್ಥಳ ನೀಡಿದ್ದಾರೆ. ಈ ಜಮೀನಿನಲ್ಲಿ 25 ಕೃಷಿ ಬಳಕೆಯ ಚೆಕ್‌ ಡ್ಯಾಮ್‌ಗಳು, 30 ಕೊಳವೆ ಬಾವಿಗಳು, ಗೋಡಂಬಿ, ಮಾವು, ನೀಲಗಿರಿ ಹಾಗೂ ಇತರೆ ಬೆಳೆಗಳಿವೆ.
ಹಲವು ರೈತರು ಫಾರಂ ನಂ 53ರ ಅಡಿಯಲ್ಲಿ ಅನುಭವದ ಆಧಾರದ ಮೇಲೆ ಭೂಮಿಯ ಮಂಜೂರಾತಿಗಾಗಿ ಅರ್ಜಿಗಳನ್ನು ಸಲ್ಲಿಸಿಕೊಂಡಿರುತ್ತಾರೆ. ಸುಮಾರು 50 ವರ್ಷಗಳಿಂದ ಕೆಲವರು ಸಾಗುವಳಿ ಮಾಡಿಕೊಂಡಿದ್ದು, ಅದರಲ್ಲಿ ಕೆಲವರಿಗೆ ಫಹಣಿಯಲ್ಲಿ ಹೆಸರು ಕೂಡ ಬಂದಿರುತ್ತದೆ. ತಕ್ಷಣ ಅಮರಾವರಿ ಗ್ರಾಮದ ಈ ಸ್ಥಳವನ್ನು ಕೈಬಿಟ್ಟು ಸಾಗುವಳಿ ಮಾಡಿಕೊಂಡು ಬಂದಿರುವ ರೈತರಿಗೆ ಸಾಗುವಳಿ ಚೀಟಿಗಳನ್ನು ನೀಡಬೇಕು. ಹಿಂದೆ ಮಂಜೂರಾಗಿದ್ದ ಕಡೆಯಲ್ಲೇ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕಟ್ಟಡಕ್ಕೆ ಸ್ಥಳ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ತಾಲ್ಲೂಕು ಅಧ್ಯಕ್ಷ ಎಸ್‌.ಎಂ.ರವಿಪ್ರಕಾಶ್‌, ಜಿಲ್ಲಾ ಸಂಚಾಲಕ ಜೆ.ಎಸ್‌.ವೆಂಕಟಸ್ವಾಮಿ, ಪ್ರತೀಶ್‌, ರಾಮಾಂಜಿನಪ್ಪ, ಮಾರಪ್ಪ, ರಮೇಶ್‌, ಅನುಸೂಯಮ್ಮ, ನಾಗರಾಜ, ಮಂಜುನಾಥ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಜಿಲ್ಲಾ ಸಂಚಾಲಕರ ನಿಯುಕ್ತಿ

0

ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಎ.ಎಂ.ತ್ಯಾಗರಾಜ್‌ ಅವರನ್ನು ಭಾರತೀಯ ಜನತಾ ಪಕ್ಷದ ರೇಷ್ಮೆ ಬೆಳೆಗಾರರ ಪ್ರಕೋಷ್ಟದ ಜಿಲ್ಲಾ ಸಂಚಾಲಕರನ್ನಾಗಿ ನಿಯುಕ್ತಿ ಮಾಡಲಾಗಿದೆ.

ಬೀಳ್ಕೂಡುಗೆ ಸಮಾರಂಭ

0

ತಾಲ್ಲೂಕಿನ ಜಂಗಮಕೋಟೆಯ ಬೆಸ್ಕಾಂ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪಾರ್ವತಮ್ಮ ಅವರಿಗೆ ಬೀಳ್ಕೂಡುಗೆ ಸಮಾರಂಭವನ್ನು ಗುರುವಾರ ಏರ್ಪಡಿಸಲಾಗಿತ್ತು.
‘ಪಾರ್ವತಮ್ಮ ಅವರು ಬೆಸ್ಮಾಂ ಇಲಾಖೆಯಲ್ಲಿ ಸುಮಾರು ೩೦ ವರ್ಷಗಳ ಸೇವೆ ಸಲ್ಲಿಸಿದ್ದು ಅವರ ಸೇವೆಯನ್ನು ಗೌರವಿಸಿ ಸನ್ಮಾನ ಸಮಾರಂಭವನ್ನು ಏರ್ಪಡಿಸಿದ್ದೇವೆ. ಕಳೆದ ೩೦ ವರ್ಷಗಳಿಂದ ಪಾರ್ವತಮ್ಮ ಅವರು ನಿಷ್ಟಾವಂತರಾಗಿ ಸೇವೆ ಸಲ್ಲಿಸುತ್ತಿದ್ದು, ಇವರಿಂದು ನಿವೃತ್ತಿಯಾಗಿರುವುದು ಇಲಾಖೆಗೆ ನಷ್ಟವಾದಂತಾಗಿದೆ’ ಎಂದು ಜೆ.ಇ ನಾಗರಾಜ್ ಅವರು ಕಳೆದ ತಿಳಿಸಿದರು.
ಈ ಸಂದರ್ಭದಲ್ಲಿ ಬೆಸ್ಕಾಂ ಇಲಾಖೆಯ ಅಧಿಕಾರಿಗಳಾದ ಅಶ್ವತ್, ಗೋಪಿನಾಥ್, ನಾರಾಯಣಮ್ಮ, ನಾಸೀರ್ ಖಾನ್, ವೆಂಕಟಪತಿ ಹಾಜರಿದ್ದರು.

ಬೈಕ್ ರ್ಯಾಲಿಗೆ ಚಾಲನೆ

0

ಶಾಶ್ವತ ನೀರಾವರಿ ಯೋಜನೆ ಜಾರಿಯಾಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್ ತಿಳಿಸಿದರು.
ನಗರದ ಬಸ್ ನಿಲ್ದಾಣದಿಂದ ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡುವಂತೆ ಒತ್ತಾಯಿಸಿ ಗುರುವಾರ ಬೆಂಗಳೂರಿಗೆ ತೆರಳಿದ ಬೈಕ್ ರ್ಯಾತಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತಿರುವ ಸರ್ಕಾರ ರೈತರಿಗೆ ಮೋಸ ಮಾಡಲು ಹೊರಟಿದೆ ಎಂದು ಆರೋಪಿಸಿದ ಅವರು ಕೆಲವೇ ವರ್ಷಗಳ ಹಿಂದ ತುಂಬಿ ತುಳುಕುವ ಸಾವಿರಾರು ಕೆರೆಗಳನ್ನು ಹೊಂದಿದ್ದ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳು ಇಂದು ಅಂತರ್ಜಲ ಮಟ್ಟ ಕುಸಿದಿದೆ. ಕೆರೆ, ಕುಂಟೆ, ಬಾವಿಗಳು ಬತ್ತಿಹೋಗಿವೆ, ರಾಜಕಾಲುವೆಗಳು ಮಾಯವಾಗಿ, ಕೃಷಿ, ತೋಟಗಾರಿಕೆ ಮತ್ತು ಹೈನೊದ್ಯಮವು ಕ್ರಮೇಣ ಸಂಕಷ್ಟಕ್ಕೆ ಸಿಲುಕುತ್ತಿದೆ. ಶುದ್ದ ಕುಡಿಯುವ ನೀರಿಲ್ಲದೆ ಸಾವಿರಾರು ಅಡಿಯಿಂದ ಮೇಲಕ್ಕೆತ್ತಿದ ನೀರು ಫ್ಲೋರೈಡ್‌ ಯುಕ್ತವಾಗಿದ್ದು, ಅದರಿಂದ ಮಾರಣಾಂತಿಕ ಖಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಜನ ಸಾಮಾನ್ಯರು, ದುಡಿಯುವ ಕೈಗಳಿಗೆ ಉದ್ಯೋಗವಿಲ್ಲವಾಗಿದೆ. ವಲಸೆ ಹೋಗುತ್ತಿರುವ ಕೃಷಿ ಕಾರ್ಮಿಕರು, ಕೊಳವೆ ಬಾವಿಗಳ ವೈಫಲ್ಯವದಿಂದ ಸಾಲದ ಶೂಲಕ್ಕೆ ಸಿಲುಕುತ್ತಿರುವ ರೈತರು ಆತ್ಯಹತ್ಯೆ ಹಾದಿ ತುಳಿಯುತ್ತಿದ್ದಾರೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಮುಂದಿನ ಪೀಳಿಗೆಯ ಉಳಿವಿಗಾಗಿ ಶಾಶ್ವತ ನೀರಾವರಿ ಯೋಜನೆ ಮಾಡಲೇಬೇಕಾದ ಪರಿಸ್ಥಿತಿ ಉಂಟಾಗಿದೆ. ನೀರಿನ ಬವಣೆ ನೀಗಿಸಲು ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡಬೇಕೆಂದು ಒತ್ತಾಯಿಸಿದ ಅವರು ಅಂತರ್ಜಲ ಅಬಿವೃದ್ದಿಗಾಗಿ ರಾಜಕಾಲುವೆ, ಕೆರೆ, ಕುಂಟೆಗಳ ಪುನಃಶ್ಚೇತನಕ್ಕೆ ಒತ್ತು ನೀಡಿ ಜಲ ಮರುಪೂರಣ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ತಿಳಿಸಿದರು.
ತಾಲ್ಲೂಕಿನಿಂದ ಹೊರಟ ಬೈಕ್ ರ್ಯಾಕಲಿಯಲ್ಲಿ ನೂರಾರು ರೈತರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಂಖಡರಾದ ಎಸ್.ಎಂ.ನಾರಾಯಣಸ್ವಾಮಿ, ವೇಣುಗೋಪಾಲ್, ರಾಮಕೃಷ್ಣಪ್ಪ, ಮುನಿನಂಜಪ್ಪ, ನಾರಾಯಣಸ್ವಾಮಿ, ಅನಂತು ಹಾಜರಿದ್ದರು.