Home Blog Page 416

ವಿಧಾನಸಭೆಯ ಅಧಿವೇಶನದಲ್ಲಿ ನೀರಿನ ಬಗ್ಗೆ ದನಿ ಎತ್ತಲು ಮನವಿ

0

ಸರ್ಕಾರ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿ ಮಾಡುವಲ್ಲಿ ಮಲತಾಯಿ ದೋರಣೆ ಮಾಡುತ್ತಿದೆ. ವಿದಾನಸಭೆಯ ಅಧಿವೇಶನದಲ್ಲಿ ನಮ್ಮ ಬಯಲುಸೀಮೆಯ ನೀರಿನ ಸಮಸ್ಯೆಯ ವಿಷಯವನ್ನು ಚರ್ಚಿಸಬೇಕೆಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಆಂಜನೇಯರೆಡ್ಡಿ ಶಾಸಕ ಎಂ.ರಾಜಣ್ಣ ಅವರನ್ನು ಕೋರಿದರು.
ಶಾಸಕ ಎಂ.ರಾಜಣ್ಣ ಅವರ ಮನೆಯ ಆವರಣದಲ್ಲಿ ಗುರುವಾರ ಶಾಸಕರಿಗೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.
ಚುನಾವಣಾ ಸಮಯದಲ್ಲಿ ಸರ್ಕಾರ ಶಾಶ್ವತ ನೀರಾವರಿ ಯೋಜನೆ ಮಾಡುವುದಾಗಿ ಭರವಸೆ ನೀಡಿದ್ದು, ಇದುವರೆಗೆ ಶಾಶ್ವತ ನೀರಾವರಿ ಯೋಜನೆಯ ಬಗ್ಗೆ ಚಕಾರ ಎತ್ತದ ಸರ್ಕಾರದ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದರು. ಉತ್ತರ ಭಾಗದ ಜಿಲ್ಲೆಗಳಿಗೆ ನೀರಾವರಿ ಯೋಜನೆಗಳಿಗೆ ಅತ್ಯಧಿಕ ಹಣ ಬಿಡುಗಡೆ ಮಾಡಿದ್ದು, ದಕ್ಷಿಣಭಾಗದ ಜಿಲ್ಲೆಗಳಲ್ಲಿ ನೀರಾವರಿ ಯೋಜನೆಗಳನ್ನು ಜಾರಿ ಮಾಡುವಲ್ಲಿ ಮಲತಾಯಿ ದೋರಣೆ ತೋರಿಸುತ್ತದೆ. ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶಾಶ್ವತ ನೀರಾವರಿ ಯೋಜನೆಯಿಂದ ಸುಮಾರು ೩೦೦ ಕೆರೆಗಳಿಗೆ ನೀರು ತುಂಬಿಸುವುದಾಗಿ ಹೇಳಿದ ಸರ್ಕಾರ ಯಾವ ಯೋಜನೆಯಿಂದ ಎಷ್ಟು ನೀರು ಬರುತ್ತದೆ ಎಂದು ಅಂದಾಜು ಮಾಡದೆ, ಬಾಯಿ ಮಾತಿನಲ್ಲಿ ಮಾತ್ರ ಹೇಳುತ್ತಿದೆ. ರೈತರ ಬಾಯಿ ಮುಚ್ಚಿಸಲು ಬೆಂಗಳೂರಿನ ಕೊಳಚೆ ನೀರನ್ನು ಶುದ್ಧೀಕರಿಸಿ ಕೆರೆಗಳನ್ನು ತುಂಬಿಸುವ ಕೆ.ಸಿ ವ್ಯಾಲಿ ನೀರಾವರಿ ಯೋಜನೆಯನ್ನು ಜಾರಿ ಮಾಡುವುದಾಗಿ ಹೇಳಿದ್ದರು. ಈ ಯೋಜನೆ ಸಹ ನೆನೆಗುದಿಗೆ ಬಿದ್ದಿದ್ದು ಅದು ಸಹ ಜಾರಿಯಾಗಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಜೂನ್ ೫ ರಂದು ವಿಧಾನಸಭಾ ಅಧಿವೇಶನ ಪ್ರಾರಂಭವಾಗಲಿದ್ದು, ಬಯಲು ಸೀಮೆಯ ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಗಳ ಜಾರಿ ವಿಚಾರದಲ್ಲಿ ಸರ್ಕಾರದ ನಿಲುವು ಮತ್ತು ಸರ್ಕಾರದ ಮುಂದಿನ ಯೋಜನೆಗಳ ಕುರಿತು ವಿಶೇಷವಾದ ಚರ್ಚೆ ನಡೆಸಿ. ಸರ್ಕಾರದ ವತಿಯಿಂದ ನಿಖರವಾದ ಮಾಹಿತಿ ಪಡೆಯಿರಿ ಎಂದು ಶಾಸಕರಿಗೆ ಮನವಿ ಮಾಡಿದರು.
ಇನ್ನು ಕೆಲವೇ ತಿಂಗಳುಗಳಲ್ಲಿ ಅಧಿಕಾರಾವಧೀ ಮುಗಿದು ಮತ್ತೆ ಚುನಾವಣೆ ಬರುತ್ತಿದ್ದು, ಶಾಶ್ವತ ನೀರಾವರಿ ಯೋಜನೆಯನ್ನು ಆಸ್ತ್ರವನ್ನಾಗಿ ಮಾಡಿಕೊಂಡು ರಾಜಕೀಯ ಪಕ್ಷಗಳು ಕಣಕಿಳಿಯುತ್ತಿದ್ದಾವೆ. ಅಷ್ಟರೊಳಗೆ ನೀರಾವರಿ ಯೋಜನೆಗಳನ್ನು ಜಾರಿ ಮಾಡುವುದಾಗಿ ಸರ್ಕಾರ ಹೇಳುತ್ತಿದ್ದು, ಅದು ಸಾಧ್ಯವೇ ಎಂದು ಪ್ರಶ್ನಿಸಿದ ಅವರು ವಿಧಾನಸಭಾ ಅಧಿವೇಶನದಲ್ಲಿ ಚರ್ಚೆಯ ವಿಷಯವಾಗಬೇಕೆಂದು ತಿಳಿಸಿದರು.
ಶಾಸಕ ರಾಜಣ್ಣ ಮಾತನಾಡಿ ನೀರು ಎಲ್ಲರಿಗೂ ಬೇಕಾಗಿದ್ದು, ಶಾಶ್ವತ ನೀರಾವರಿ ಹೋರಾಟ ಸುಮಾರು ವರ್ಷಗಳಿಂದ ನಡೆಯುತ್ತಿದ್ದು, ವಿಧಾನಸಭಾ ಅದಿವೇಶನದಲ್ಲಿ ಅತ್ಯಂತ ಹೆಚ್ಚಿನ ಚರ್ಚೆಗೆ ಗ್ರಾಸವಾಗಲಿದೆ. ಈ ವಿಷಯವಾಗಿ ತಾವೂ ಚರ್ಚೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾ ಉಪಾಧ್ಯಕ್ಷ ಮಳ್ಳೂರು ಹರೀಶ್, ಆನೂರು ದೇವರಾಜು, ಹಿತ್ತಲಹಳ್ಳಿ ಸುರೇಶ್, ವೆಂಕಟಸ್ವಾಮಿ, ದೇವರಾಜು, ಶ್ರೀನಿವಾಸ್ ಹಾಜರಿದ್ದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರಿಗೆ ಚೆಕ್ ವಿತರಣೆ

0

ಸರ್ಕಾರದ ಅನುದಾನಗಳನ್ನು ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಿ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದಲ್ಲಿ ಶಾಸಕ ರಾಜಣ್ಣ ಅವರು ತಮ್ಮ ಮನೆಯ ಆವರಣದಲ್ಲಿ ಗುರುವಾರ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರಿಗೆ ಚೆಕ್ ವಿತರಣೆ ಮಾಡಿ ಮಾತನಾಡಿದರು.
ಸರ್ಕಾರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡವರಿಗೆ ಅನೇಕ ರೀತಿಯ ಯೋಜನೆಗಳನ್ನು ಜಾರಿ ಮಾಡಿದ್ದು ಅವರಿಗೆ ಕೊಡುವ ಅನುದಾನದಲ್ಲಿ ಶೇ.50 ರಷ್ಟು ಸಹಾಯಧನ ನೀಡುತ್ತಿದ್ದು, ಉಳಿದ ಹಣವನ್ನು ಬ್ಯಾಂಕ್ ವತಿಯಿಂದ ಸಾಲ ನೀಡಲಾಗುತ್ತಿದೆ. ಸಾಲವನ್ನು ಮರುಪಾವತಿ ಮಾಡಿ ಬೇರೆಯವರಿಗೆ ಸಾಲ ನೀಡಲು ಸಹಕರಿಸಿ ಎಂದು ತಿಳಿಸಿದರು.
ಅಮಲಾ ಎಂಬುವವರಿಗೆ ರೇಷ್ಮೆ ಬಿಚ್ಚಣಿಕೆ ಉದ್ಯಮಕ್ಕೆ ೫ ಲಕ್ಷ, ಮಧು ಎಂಬುವವರಿಗೆ ರೇಷ್ಮೆ ಬಿಚ್ಚಣಿಕೆ ಉದ್ಯಮಕ್ಕೆ ೫ ಲಕ್ಷ, ನಾರಾಯಣಸ್ವಾಮಿ ಎಂಬುವವರಿಗೆ ಸೀಮೆ ಹಸುವಿಗೆ ೧ ಲಕ್ಷ ಚೆಕ್ ವಿತರಣೆ ಈ ಸಂದರ್ಭದಲ್ಲಿ ಮಾಡಲಾಯಿತು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ರಾಜಶೇಖರ್, ಪಲಾನುಭವಿಗಳು ಹಾಜರಿದ್ದರು.

ಕೋಚಿಮುಲ್‌ನಿಂದ ರೋಗಿಗಳಿಗೆ ಉಚಿತವಾಗಿ ಹಾಲು ವಿತರಣೆ

0

ನಂದಿನಿ ಹಾಲು ಹಾಗು ಹಾಲಿನ ಉತ್ಪನ್ನಗಳನ್ನು ಜನರು ಹೆಚ್ಚಾಗಿ ಬಳಸಿ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಹಾಲು ಉತ್ಪಾದಕರು ಹಾಗೂ ಸಹಕಾರ ಸಂಘಗಳ ಉಳಿವಿಗಾಗಿ ಸಹಕರಿಸಬೇಕು ಎಂದು ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ತಿಳಿಸಿದರು.
ವಿಶ್ವ ಹಾಲು ದಿನಾಚರಣೆಯ ಪ್ರಯುಕ್ತ ಗುರುವಾರ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತವಾಗಿ ನಂದಿನಿ ಗುಡ್‌ಲೈಫ್ ಹಾಲನ್ನು ವಿತರಣೆ ಮಾಡಿ ಅವರು ಮಾತನಾಡಿದರು.
ಹಾಲು ವಿಶ್ವದಾದ್ಯಂತ ಎಲ್ಲರಿಗೂ ಬೇಕಾಗಿರುವ ವಸ್ತುವಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಆಹಾರ ಪದ್ಧತಿಯಲ್ಲಿ ವ್ಯತ್ಯಾಸವಿದ್ದರೂ ಸಹ ಹಾಲು ಮಾತ್ರ ಒಂದೇ ಆಗಿರುತ್ತದೆ. ಪ್ರತಿಯೊಬ್ಬ ಮನುಷ್ಯ ದಿನವೊಂದಕ್ಕೆ ೫೦೦ ಮಿ.ಲೀ ಹಾಲು ಬಳಸಬೇಕು. ಆದರೆ ನಮ್ಮಲ್ಲಿ ಇಂದಿಗೂ ೬೦ ರಿಂದ -೭೦ ಮಿ.ಲೀ ಹಾಲು ಮಾತ್ರ ಬಳಕೆಯಾಗುತ್ತಿದೆ. ಉತ್ತಮ ಗುಣಮಟ್ಟದ ನಂದಿನಿ ಹಾಲನ್ನು ಎಲ್ಲರೂ ಬಳಸುವಂತಾಗಬೇಕು. ನಂದಿನಿ ಹಾಳಿನ ಖರೀದಿಯಿಂದ ಬರುವಂತಹ ಹಣವು ನೇರವಾಗಿ ಉತ್ಪಾದಕರಿಗೆ ತಲುಪುತ್ತದೆ ಹಾಗೂ ಸಹಕಾರ ಸಂಘಗಳೂ ಕೂಡಾ ಹೆಚ್ಚು ಬಲವರ್ಧನೆಯಾಗುತ್ತವೆ ಎಂದರು.
ನಂದಿನಿ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಹನುಮಂತರಾವ್, ಡಾ.ಉಮೇಶ್, ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು.

ರೈತ ಮುಖಂಡರ ಬಂಧನ

0

ಕೃಷಿ ಆದಾರಿತ ನೀರಾವರಿ ಯೋಜನೆ ಜಾರಿಗೊಳಿಸಲು ಮಾತು ತಪ್ಪಿದ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಜೂನ್ ೦೧ ರ ಗುರುವಾರ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ನೇತೃತ್ವದಲ್ಲಿ ಬೈಕ್ ರ್ಯಾಾಲಿ ಮೂಲಕ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮಕ್ಕೆ ತೆರಳಲು ಸಾವಿರಾರು ಮಂದಿ ರೈತರು ಮುಂದಾಗುತ್ತಿದ್ದ ವಿಷಯವನ್ನರಿತ ಪೊಲೀಸ್ ಇಲಾಖೆ ಬುಧವಾರ ತಾಲ್ಲೂಕಿನ ಸುಮಾರು ೧೩ ಕ್ಕೂ ಹೆಚ್ಚು ರೈತ ಮುಖಂಡರನ್ನು ಬಂಧಿಸಿ ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ.

ಶಿಡ್ಲಘಟ್ಟದ ರೈತ ಸಂಘದ ಕಚೇರಿಯ ಬಳಿ ಬುಧವಾರ ರೈತ ಮುಖಂಡರನ್ನು ಪೊಲೀಸರು ಬಂಧಿಸಿದರು.

ನಗರದ ರೈತ ಸಂಘದ ಕಚೇರಿಯಲ್ಲಿ ಬೈಕ್ ರ್ಯಾರಲಿಗಾಗಿ ರೈತ ಮುಖಂಡರು ಸಿದ್ದತೆ ನಡೆಸುತ್ತಿದ್ದ ವೇಳೆ ಕಚೇರಿಗೆ ಭೇಟಿ ನೀಡಿದ ಪೊಲೀಸರು ರೈತ ಮುಖಂಡರಾದ ಎಸ್‌.ಎಂ.ನಾರಾಯಣಸ್ವಾಮಿ, ನಗರ ಘಟಕದ ವೇಣುಗೋಪಾಲ್, ಉಪಾಧ್ಯಕ್ಷ ಮುನಿನಂಜಪ್ಪ, ದೇವರಾಜ್, ರಮೇಶ್, ಶಂಕರ್, ತಿಮ್ಮಣ್ಣ ಮತ್ತಿತರರನ್ನು ಬಂಧಿಸಿದ್ದಾರೆ.

ವಿಶೇಷ ದಾಖಲಾತಿ ಆಂದೋಲನ ಜಾಥಾ

0

ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಮಂಗಳವಾರ ವಿಶೇಷ ದಾಖಲಾತಿ ಆಂದೋಲನದ ಜಾಥಾ ನಡೆಸಿ ಗ್ರಾಮಸ್ಥರಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಮನವಿ ಮಾಡಿದರು. ಗ್ರಾಮ ಪಂಚಾಯ್ತಿ ಸದಸ್ಯ ಎ.ಎಂ.ತ್ಯಾಗರಾಜ್‌, ಮುಖ್ಯ ಶಿಕ್ಷಕಿ ಎಂ.ಎನ್‌.ವೆಂಕಟರತ್ನಮ್ಮ, ಶಿಕ್ಷಕ ಚಾಂದ್‌ಪಾಷ ಹಾಜರಿದ್ದರು.

ತೋಟಗಾರಿಕೆ ಇಲಾಖೆಯ ಯೋಜನೆಗಳ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ

0

2017–18ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಲ್ಲಿ ಅನುಷ್ಠಾನಗೊಳಿಸುವ ವಿವಿಧ ಯೋಜನೆಯಡಿ ಸ್ವೀಕರಿಸಿರುವ ಅರ್ಜಿಗಳು ಹೆಚ್ಚಾಗಿ ಬಂದಿರುವ ಕಾರಣ ಅರ್ಜಿಗಳನ್ನು ಜೂನ್‌ 1 ರ ಮಧ್ಯಾಹ್ನ 2.30 ಕ್ಕೆ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯ್ತಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ಹಾಗೂ ಇತರೆ ರೈತರು ಭಾಗವಹಿಸಬೇಕೆಂದು ಕೋರಿದ್ದಾರೆ.

ಪಿಂಡಿಪಾಪನಹಳ್ಳಿಯ ಶ್ರೀ ಸತ್ಯಮ್ಮದೇವಿ ಭಜನಾ ಸಂಘದಿಂದ ತಿರುಪತಿಯಲ್ಲಿ ಕಾರ್ಯಕ್ರಮ

0

ತಿರುಪತಿ ತಿರುಮಲ ದೇವಾಲಯದಲ್ಲಿ ಭಜನೆ ಕಾರ್ಯಕ್ರಮ ನಡೆಸುವ ಅವಕಾಶ ಲಭಿಸಿದ್ದರಿಂದ ಕನ್ನಡ ಭಕ್ತಿರಸವನ್ನು ಉಣಬಡಿಸುವ ಭಾಗ್ಯ ನಮ್ಮದಾಯಿತು ಎಂದು ತಾಲ್ಲೂಕಿನ ಪಿಂಡಿಪಾಪನಹಳ್ಳಿಯ ಶ್ರೀ ಸತ್ಯಮ್ಮದೇವಿ ಭಜನಾ ಸಂಘದ ಅಧ್ಯಕ್ಷ ಎಂ.ಪಿ.ರಾಮಚಂದ್ರಪ್ಪ ತಿಳಿಸಿದರು.
ತಿರುಪತಿ ತಿರುಮಲ ದೇವಾಲಯದಲ್ಲಿ ಭಜನೆ ಕಾರ್ಯಕ್ರಮವನ್ನು ತಾಲ್ಲೂಕಿನ ಪಿಂಡಿಪಾಪನಹಳ್ಳಿಯ ಶ್ರೀ ಸತ್ಯಮ್ಮದೇವಿ ಭಜನಾ ಸಂಘದ ವತಿಯಿಂದ ನಡೆಸಿಕೊಟ್ಟು ಹಿಂದಿರುಗಿ ಅವರು ಮಾತನಾಡಿದರು.
ನಮ್ಮ ಸಂಘದ ಸದಸ್ಯರು ತಿರುಪತಿ ತಿರುಮಲ ದೇವಾಲಯದಲ್ಲಿ ಎರಡು ದಿನಗಳ ಕಾಲ ನಡೆದ ನಿರಂತರ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೈವಾರ ತಾತಯ್ಯ, ಪುರಂದರದಾಸರ, ಕನಕದಾಸರ, ತ್ಯಾಗರಾಜರ ಪದಗಳನ್ನು ಹಾಡಿ ಭಕ್ತಿ, ಜ್ಞಾನ, ಚಿಂತನೆಗಳನ್ನು ತಿಳಿಸಲಾಯಿತು. ಮಾನವನ ಜೀವನದ ಏಳಿಗೆಗೆ ಅಗತ್ಯವಾದ ಧ್ಯಾನ, ಯೋಗ, ಭಕ್ತಿ, ಚಿಂತನೆಗಳನ್ನು ಒಳಗೊಂಡಂತೆ ಭಗವಂತನ ದಿವ್ಯದರ್ಶನ ಪಡೆಯುವ ಮಾರ್ಗೋಪಾಯ ವಿವರಿಸಲಾಯಿತು ಎಂದು ಹೇಳಿದರು.
ದಾಸ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ವೈ.ಎನ್‌.ನಾರಾಯಣಸ್ವಾಮಿ ಕನ್ನಡ ಭಾಷೆಯನ್ನು ಹಾಗೂ ಭಕ್ತಿ ಸಾಹಿತ್ಯವನ್ನು ನೆರೆ ರಾಜ್ಯದಲ್ಲೂ ಹರಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ ಎಂದರು.
ಭಜನಾ ತಂಡದಲ್ಲಿ ಕಲಾವಿದರಾದ ಎ.ಎಂ.ಈರಪ್ಪ, ಚಿಕ್ಕಟೇಕಹಳ್ಳಿ ಆಂಜಿನಪ್ಪ, ಕೆ.ಕೃಷ್ಣಪ್ಪ, ನರಸಪ್ಪ, ಬಿ.ವಿ.ಮುನಿಯಪ್ಪ, ಎಚ್‌.ಎಂ.ಕೆಂಪಣ್ಣ, ನರೇಂದ್ರ, ಪದ್ಮಮ್ಮ, ನಾರಾಯಣಮ್ಮ, ಕೆಂಪಮ್ಮ, ವೆಂಕಟಮ್ಮ, ಆಂಜಿನಮ್ಮ, ಮುನಿಯಮ್ಮ, ಸರಸ್ವತಮ್ಮ, ಕೆ.ನಾರಾಯಣಮ್ಮ, ನರಸಮ್ಮ, ಲಕ್ಷ್ಮಮ್ಮ, ಎಚ್‌.ಎಂ.ಲಕ್ಷ್ಮ್ಮಮ್ಮ, ಕೆ.ಬೈಯಣ್ಣ ಹಾಜರಿದ್ದರು.

ರೈತರು ಹಾಗೂ ರೀಲರ್‌ಗಳ ಸಮಸ್ಯೆಗಳ ಬಗ್ಗೆ ಕೇಂದ್ರಕ್ಕೆ ವರದಿ

0

ರೈತರು ಹಾಗೂ ರೀಲರ್‌ಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕೇಂದ್ರದ ರೇಷ್ಮೆ ಮಂಡಳಿಯ ಮಾಜಿ ಅಧ್ಯಕ್ಷ ಬಿಸ್ಸೇಗೌಡ ತಿಳಿಸಿದರು.
ನಗರದ ರೇಷ್ಮೆ ಗೂಡು ಮಾರುಕಟ್ಟೆಗೆ ಮಂಗಳವಾರ ಸಂಜೆ ಭೇಟಿ ನೀಡಿ ಅವರು ರೇಷ್ಮೆ ಗೂಡು ಮಾರುಕಟ್ಟೆಯ ಉಪನಿರ್ದೇಶಕರ ಕಚೇರಿಯಲ್ಲಿ ರೈತರ ಹಾಗೂ ರೀಲರ್‌ಗಳ ಸ್ಥಿತಿ ಗತಿಗಳ ಬಗ್ಗೆ ಚರ್ಚೆ ನಡೆಸಿ ಅವರು ಮಾತನಾಡಿದರು.
ರೇಷ್ಮೆ ಗೂಡು ಮಾರಾಟಕ್ಕೆ ಇರುವಂತೆ ರೇಷ್ಮೆ ನೂಲು ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡಿ ಹಾಗು ರೇಷ್ಮೆ ನೂಲು ಬಿಚ್ಚಾಣಿಕೆ ಮಾಡುವ ಯಂತ್ರಗಳ ಮೇಲೆ ನೀಡುತ್ತಿರುವ ಸಬ್ಸಿಡಿ ಹಣ ಸೇರಿದಂತೆ ಕೈ ಮಗ್ಗದಾರರಿಗೆ ಪ್ರತಿ ಕೆಜಿಯೊಂದಕ್ಕೆ ನೀಡುತ್ತಿರುವ ೧೦ ರೂ ಸಹಾಯಧನ ದುರುಪಯೋಗವಾಗುತ್ತಿದ್ದು ತಡೆಗಟ್ಟಲು ಕ್ರಮ ಕೈಗೊಳ್ಳಿ ಎಂದು ರೀಲರ್‌ಗಳು ಈ ಸಂದರ್ಭದಲ್ಲಿ ಬೇಡಿಕೆಯಿಟ್ಟರು.
ಈ ಭಾಗದ ರೈತರಿಗೆ ಅನುಕೂಲವಾಗುವಂತೆ ಉತ್ತಮ ತಳಿಯ ರೇಷ್ಮೆ ಹುಳುವಿನ ಆವಿಷ್ಕಾರ, ಗೂಡಿಗೆ ಪ್ರೋತ್ಸಾಹಧನ ಮುಂದುವರೆಸುವುದು. ಕನಿಷ್ಠ ಬೆಲೆ ನಿಗಧಿಪಡಿಸುವುದು ಹಾಗು ಮಾರುಕಟ್ಟೆಯಲ್ಲಿ ರೇಷ್ಮೆ ಗೂಡು ವಹಿವಾಟಿಗೆ ಸಂಬಂದಿಸಿದಂತೆ ಕಟ್ಟುವ ಶುಲ್ಕವನ್ನು ಶೇ. ೧ ರಿಂದ ಶೇ. ೦.೫ ಗೆ ಇಳಿಸಬೇಕು ಎಂದು ರೈತರು ಸೇರಿದಂತೆ ರೀಲರ್‌ಗಳು ಬೇಡಿಕೆಯನ್ನು ಇಟ್ಟರು.
ರೀಲರ್‌ಗಳು ಹಾಗು ರೇಷ್ಮೆ ಬೆಳೆಗಾರರಿಂದ ಮತ್ತು ಮಾರುಕಟ್ಟೆಯ ಅಧಿಕಾರಿಗಳಿಂದ ಸಾಕಷ್ಟು ಮಾಹಿತಿ ಪಡೆದುಕೊಂಡು ಅವರು ಶೀಘ್ರದಲ್ಲಿಯೇ ರೀಲರ್ ಹಾಗು ರೇಷ್ಮೆ ಬೆಳೆಗಾರರನ್ನು ಕೇಂದ್ರ ರೇಷ್ಮೆ ಮಂಡಳಿ ಆಯುಕ್ತರೊಂದಿಗೆ ಭೇಟಿ ಮಾಡಿಸಿ ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಹೇಳಿದರು.
ಬಿಜೆಪಿ ರೇಷ್ಮೆ ಪ್ರಕೋಷ್ಟದ ರಾಜ್ಯ ಸಹ ಸಂಚಾಲಕ ಸಿ.ವಿ.ಲೋಕೇಶ್‌ಗೌಡ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿ.ಸಿ.ನಂದೀಶ್, ರೇಷ್ಮೆ ಗೂಡು ಮಾರುಕಟ್ಟೆ ಉಪನಿರ್ದೆಶಕ ರತ್ನಯ್ಯ ಶೆಟ್ಟಿ, ರೀಲರ್‌ಗಳ ಸಂಘದ ಅಧ್ಯಕ್ಷ ಅನ್ಸರ್‌ಖಾನ್, ರೀಲರ್‌ಗಳಾದ ರೆಹಮಾನ್, ಸಾಧಿಕ್‌ಪಾಷ, ರಾಮಕೃಷ್ಣಪ್ಪ, ರೇಷ್ಮೆ ಬೆಳೆಗಾರರಾದ ಹಿತ್ತಲಹಳ್ಳಿ ಗೋಪಾಲಗೌಡ, ವೆಂಕಟಸ್ವಾಮಿರೆಡ್ಡಿ, ಸುರೇಶ್, ಶಿವಮೂರ್ತಿ ಹಾಜರಿದ್ದರು.

ಕಾಡು ಬೆಳೆಸಿ ನಾಡು ಉಳಿಸಿ

0

ಗಿಡ ಮರಗಳನ್ನು ಹೆಚ್ಚಾಗಿ ಬೆಳೆಸುವುದರಿಂದ ಕಾಲ ಕಾಲಕ್ಕೆ ಮಳೆಯಾಗುವುದಷ್ಟೇ ಅಲ್ಲದೇ ನಶಿಸಿಹೋಗುತ್ತಿರುವ ಕಾಡನ್ನು ಉಳಿಸಿ ಬೆಳೆಸಿದಂತಾಗುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಿಕಿ ಲಕ್ಷ್ಮಿ ಹೇಳಿದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಹೊಸಪೇಟೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘ, ಜ್ಞಾನ ವಿಕಾಸ ಮತ್ತು ಸ್ವಸಹಾಯ ಸಂಘಗಳ ಸಹಯೋಗದಲ್ಲಿ ಬೀಜದ ಉಂಡೆ ತಯಾರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬೀಜದ ಉಂಡೆ ತಯಾರಿಸಿ ಇಡುವುದರಿಂದ ಇದು ಯಾವುದೇ ಮಳೆಯಾಶ್ರಯವಿಲ್ಲದೇ ಸುಮಾರು ಮೂರ್ನಾಲ್ಕು ವರ್ಷ ತಮ್ಮ ಅಸ್ಥಿತ್ವ ಉಳಿಸಿಕೊಳ್ಳುತ್ತದೆ. ಮಳೆ ಬಂದ ನಂತರ ಮಣ್ಣಿನ ಉಂಡೆ ತೇವಾಂಶವನ್ನು ಹೀರಿಕೊಂಡು ಮೊಳಕೆಯೊಡೆಯುತ್ತದೆ. ಗುಡ್ಡಾಗಾಡು ಹಾಗು ಇಳಿಜಾರು ಪ್ರದೇಶಗಳಲ್ಲಿ ಮಳೆಗಾಲದ ಸಮಯದಲ್ಲಿ ಎಸೆದಿರುವ ಬೀಜದ ಉಂಡೆ ಮೊಳೆಕೆ ಹೊಡೆದು ಗಿಡ ಮರಗಳು ಉತ್ಪತ್ತಿಗೊಳುತ್ತದೆ. ಇದರಿಂದ ಸುತ್ತ ಮುತ್ತಲಿನ ಪರಿಸರ ಸಮೃದ್ದಿಗೊಳ್ಳುತ್ತದೆ. ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸುವ ಪ್ರಯತ್ನವನ್ನು ಎಲ್ಲರೂ ಸೇರಿ ಮಾಡಬೇಕು ಎಂದರು.
ಈ ಹಿಂದೆ ಯೋಜನೆಯಲ್ಲಿ ಗಿಡ ನೆಡುವ ಕಾಯಕ್ರಮ ಮಾಡಿದ್ದು, ಈ ವರ್ಷದಲ್ಲಿ ಬೀಜದ ಉಂಡೆ ತಯಾರಿಕೆಯನ್ನು ರೂಪಿಸಿದ್ದೇವೆ. ತಾಲೂಕಿನಾಧ್ಯಂತ ಪ್ರಸಕ್ತ ವರ್ಷ 50 ಸಾವಿರ ಬೀಜದ ಉಂಡೆಗಳನ್ನು ತಯಾರಿ ಮಾಡುವ ಗುರಿ ಹೊಂದಿದ್ದು ಈಗಾಗಲೇ 20 ಸಾವಿ ಬೀಜದ ಉಂಡೆ ತಯಾರಿಸಲಾಗಿದೆ.
ಈ ಸಂಧರ್ಭದಲ್ಲಿ ಮಹಿಳಾ ಜ್ಞಾನ ವಿಕಾಸ ಸಮನ್ವಯಾದಿಕಾರಿ ಜ್ಯೋತಿ, ಸೇವಾ ಪ್ರತಿನಿಧಿ ಸುಶೀಲಮ್ಮ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯರು ಹಾಜರಿದ್ದರು.

ಉತ್ತರ ವಿಶ್ವವಿದ್ಯಾಲಯದ ಕಟ್ಟಡ ನಿರ್ಮಾಣಕ್ಕೆ ಗ್ರಾಮಸ್ಥರಿಂದ ಅಡ್ಡಿ

0

ಯಾವುದೇ ಕಾರಣಕ್ಕೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕಟ್ಟಡ ನಿರ್ಮಾಣ ಮಾಡಲು ಬಿಡುವುದಿಲ್ಲ, ಒಂದು ವೇಳೆ ನಿರ್ಮಾಣ ಮಾಡಲು ಅಧಿಕಾರಿಗಳು ಮುಂದಾದರೆ ರೈತರ ಹೆಣಗಳ ಮೇಲೆ ನಿರ್ಮಾಣ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಬೆದರಿಕೆ ಹಾಕಿ ಅಧಿಕಾರಿಗಳನ್ನು ಹಿಮ್ಮೆಟ್ಟಿಸಿರುವ ಘಟನೆ ತಾಲೂಕಿನ ಅಮರಾವತಿಯಲ್ಲಿ ನಡೆದಿದೆ.
ತಾಲೂಕಿನ ಜಂಗಮಕೋಟೆ ಹೋಬಳಿಯ ಅಮರಾವತಿ ಗ್ರಾಮದ ಸರ್ವೇ ನಂ 47 ರಲ್ಲಿ ಸುಮಾರು 496.36 ಗುಂಟೆ ಜಮೀನಿದ್ದು ಈ ಪೈಕಿ ಸುಮಾರು 356.31 ಗುಂಟೆಯಷ್ಟು ಜಮೀನು ರೈತರಿಗೆ ಮಂಜೂರಾಗಿದ್ದು ಇದರಲ್ಲಿ 218.38 ಗುಂಟೆಯಷ್ಟು ಜಮೀನು ದುರಸ್ತಿಯೂ ಆಗಿದ್ದು ಉಳಿದ 136 ಎಕರೆ ದುರಸ್ತಿಯಾಗಬೇಕಿದೆ. ಉಳಿಕೆ 141.05 ಗುಂಟೆ ಸರ್ಕಾರಿ ಜಮೀನನ್ನು ಗುರುತಿಸಿ ಅಳತೆ ಮಾಡಲು ಮೇಲಾಧಿಕಾರಿಗಳ ಸೂಚನೆ ಮೇರೆಗೆ ಕಂದಾಯ ಇಲಾಖೆ ಅಧಿಕಾರಿಗಳು ಭೂಮಾಪಕರೊಂದಿಗೆ ಸ್ಥಳಕ್ಕೆ ಹೋದಾಗ ಗ್ರಾಮಸ್ಥರು ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ವಿಶ್ವವಿದ್ಯಾಲಯ ಕಟ್ಟಡ ಕಟ್ಟಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಒಂದು ವೇಳೆ ಸರಕಾರ ಇದನ್ನು ಕೈಬಿಡದಿದ್ದರೆ ಸ್ಥಳದಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿ ವಾಪಸ್ ಕಳುಹಿಸಿದ್ದಾರೆ.

ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿ ಅಮರಾವತಿಯಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕಟ್ಟಡವನ್ನು ನಿರ್ಮಿಸಬಾರದೆಂದು ಆಗ್ರಹಿಸಿ ಗ್ರಾಮದ ಕೃಷ್ಣಮೂರ್ತಿ ಎಂಬ ರೈತ ವಿಷದ ಬಾಟಲು ಹಿಡಿದು ಅಧಿಕಾರಿಗಳನ್ನು ಬೆದರಿಸುತ್ತಿರುವುದು.

ಬೆಂಗಳೂರು ವಿಶ್ವ ವಿದ್ಯಾಲಯ ಕಟ್ಟಡ ನಿರ್ಮಿಸಲು ಮೊದಲಿಗೆ ತಾಲೂಕಿನ ಸುಂಡ್ರಹಳ್ಳಿ ಬಳಿ ಸ್ಥಳ ಗುರುತಿಸಿ ಇದೀಗ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮಣಿದಿರುವ ಕಂದಾಯ ಇಲಾಖೆ ಅಧಿಕಾರಿಗಳು ಅಮರಾವತಿ ಗ್ರಾಮದ ಜಮೀನುಗಳ ಮೇಲೆ ಕಣ್ಣು ಹಾಕಿದ್ದಾರೆ. ನಮ್ಮ ಪೂರ್ವಜರ ಕಾಲದಿಂದಲೂ ಈ ಜಮೀನಿನಲ್ಲಿ ಬೆಲೆಯಿಟ್ಟು ಜೀವನ ನಡೆಸುತ್ತಿದ್ದೇವೆ. ಇದೀಗ ಏಕಾಏಕಿ ಅಧಿಕಾರಿಗಳು ಬಂದು ಜಮೀನನ್ನು ವಶಪಡಿಸಿಕೊಂಡರೆ ನಾವು ಬೀದಿ ಪಾಲಾಗುತ್ತೇವೆ. ಯಾವುದೇ ನೋಟೀಸ್ ನೀಡದೇ ಕಂದಾಯ ಅಧಿಕಾರಿಗಳು ಜಮೀನಿನ ಸರ್ವೇ ಕಾರ್ಯ ನಡೆಸಿ ಸ್ವಾಧೀನ ಪಡಿಸಿಕೊಳ್ಳಲು ಯತ್ನಿಸುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಗ್ರಾಮದ ರೈತರು ಸ್ಥಳದಲ್ಲಿದ್ದ ಕಂದಾಯ ಇಲಾಖೆ ಅಧಿಕಾರಿ ಹಾಗು ಭೂಮಾಪಕರನ್ನು ಅಲ್ಲಿಂದ ವಾಪಸ್ ಕಳುಹಿಸಿದ್ದಾರೆ.
ಈ ಸಂದರ್ಭದಲ್ಲಿ ಎ.ಸಿ.ಮುನಿಯಪ್ಪ, ರಾಜಕಾಂತ್, ಚಂದ್ರಪ್ಪ, ಕೃಷ್ಣಮೂರ್ತಿ, ಜಯರಾಮಪ್ಪ, ಮುದ್ದಣ್ಣ, ಮಂಜುನಾಥ್, ಸುಬ್ರಮಣಿ, ಮುನಿವೆಂಕಟಪ್ಪ, ಮುನೀಂದ್ರಪ್ಪ, ಯಲ್ಲಪ್ಪ, ನಾರಾಯಣಸ್ವಾಮಿ, ಮಂಜು, ರಾಮಣ್ಣ ಮತ್ತಿತರರು ಹಾಜರಿದ್ದರು.
ಮೋಹನ್‍ಕುಮಾರ್, ರಾಜಸ್ವ ನಿರೀಕ್ಷಕ: ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ಕಟ್ಟಡ ನಿರ್ಮಾಣಕ್ಕೆ 172 ಎಕರೆ ಜಾಗ ಬೇಕು ಎಂದು ಸರ್ಕಾರ ಈಗಾಗಲೇ ಬೇಡಿಕೆ ಸಲ್ಲಿಸಿದ್ದು ಈಗಾಗಲೇ ಖುಲ್ಲಾ ಇರುವ 57 ಜಮೀನನ್ನು ವಶಪಡಿಸಿಕೊಂಡಿದ್ದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಮೇಲಧಿಕಾರಿಗಳ ಸೂಚನೆ ಮೇರೆಗೆ ಸರ್ಕಾರಿ ಜಮೀನು ಸರ್ವೇ ಮಾಡಲು ಹೋದಾಗ ಗ್ರಾಮದ ಕೆಲವರು ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸುವ ಜೊತೆಗೆ ಹಲ್ಲೆ ಮಾಡಲು ಯತ್ನಿಸಿರುವ ಬಗ್ಗೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಅಂಗನವಾಡಿ ಕಟ್ಟಡ ಹಾಗು ಶುದ್ದ ಕುಡಿಯುವ ನೀರಿನ ಘಟಕದ ಉದ್ಘಾಟನೆ

0

ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಜಿ.ಪಂ, ತಾ.ಪಂ ಹಾಗು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಂಗನವಾಡಿ ಕಟ್ಟಡ ಹಾಗು ಶುದ್ದ ಕುಡಿಯುವ ನೀರಿನ ಘಟಕದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿಯೊಂದು ಮಗುವಿಗೂ ಉಚಿತ ಪುಸ್ತಕ, ಸಮವಸ್ತ್ರ, ಸೇರಿದಂತೆ ಬಿಸಿಯೂಟ ಹಾಗು ಉಚಿತ ಸೈಕಲ್ ವಿತರಣೆಯಂತಹ ಯೋಜನೆಗಳನ್ನು ಜಾರಿಗೆ ತಂದಿದ್ದು ಇವೆಲ್ಲದರ ಉದ್ದೇಶ ಒಂದೇ ಗ್ರಾಮೀಣ ಪ್ರದೇಶದ ಜನತೆ ಸೇರಿದಂತೆ ಆರ್ಥಿಕವಾಗಿ ತೀರಾ ಹಿಂದುಳಿದವರ ಮಕ್ಕಳಿಗೂ ಸರ್ಕಾರ ಉತ್ತಮ ಶಿಕ್ಷಣ ನೀಡಬೇಕು ಎನ್ನುವುದು.
ವಿಶೇಷವಾಗಿ ಗ್ರಾಮೀಣ ಪ್ರದೇಶದ ಪೋಷಕರು ತಮಗೆ ಎಷ್ಟೇ ಕಷ್ಟ ಇರಲಿ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸುವ ಮೂಲಕ ಉತ್ತಮ ಶಿಕ್ಷಣ ಕೊಡಿಸಿದಲ್ಲಿ ಅವರು ಸಮಾಜದ ಉತ್ತಮ ಪ್ರಜೆಗಳಾಗಿ ರೂಪಗೊಳ್ಳುತ್ತಾರೆ ಎಂದರು.
ಗ್ರಾಮೀಣ ಭಾಗದ ಜನರ ಆರೋಗ್ಯ ದೃಷ್ಟಿಯಿಂದ ತಾಲೂಕಿನಾಧ್ಯಂತ ಶುದ್ದ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಗಳಲ್ಲಿ ಈಗಾಗಲೇ ಶುದ್ದ ಕುಡಿಯುವ ನೀರಿನ ಘಟಕಗಳ ಉದ್ಘಾಟನೆಯಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿಯೂ ಶುದ್ದ ನೀರಿನ ಘಟಕಗಳನ್ನು ಸ್ಥಾಪಿಸಲಾಗುವುದು.
ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ ಶುದ್ದ ನೀರಿನ ಘಟಕ ಸಾರ್ವಜನಿಕರ ಸ್ವತ್ತಾಗಿದ್ದು ಇದರ ನಿರ್ವಹಣೆ ಸೇರಿದಂತೆ ಘಟಕದ ಸುತ್ತಲೂ ನೈರ್ಮಲ್ಯ ಕಾಪಾಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಸಹಕರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಶಾಲೆ ಶುರುವಾದ ಮೊದಲ ದಿನ ಶಾಲೆಗೆ ಬಂದ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗು ಪುಸ್ತಕ ವಿತರಣೆಯನ್ನು ಗಣ್ಯರಿಂದ ನೆರವೇರಿಸಲಾಯಿತು.
ಜಿ.ಪಂ ಸದಸ್ಯ ಬಂಕ್ ಮುನಿಯಪ್ಪ, ತಾ.ಪಂ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಸಿಡಿಪಿಓ ಲಕ್ಷ್ಮಿದೇವಮ್ಮ, ಗ್ರಾ.ಪಂ ಸದಸ್ಯರಾದ ಎ.ಎಂ.ತ್ಯಾಗರಾಜು, ನೇತ್ರಾವತಿ, ಮಾಜಿ ಸದಸ್ಯರಾದ ಎ.ಎನ್.ಮುನಿನಾರಾಯಣಪ್ಪ, ವೆಂಕಟನಾರಾಯಣಪ್ಪ, ಹನುಮಪ್ಪ, ಭಾಗ್ಯಮ್ಮ, ಮುಖಂಡರಾದ ಹನುಮಂತಪ್ಪ, ಗೋವಿಂದರಾಜು, ಗುತ್ತಿಗೆದಾರ ಎಸ್.ಮಂಜುನಾಥ್, ಆನಂದ್, ನರಸಿಂಹಮೂರ್ತಿ, ಜಗದೀಶ್ ಮತ್ತಿತರರು ಹಾಜರಿದ್ದರು.

ಮಾನವ ಹಕ್ಕುಗಳ ಜಾಗೃತಿ ಸಮಿತಿಯ ಪದಾಧಿಕಾರಿಗಳ ಸಭೆ

0

ಮಾನವ ಹಕ್ಕುಗಳ ಉಲ್ಲಂಘನೆ ತಡೆಯುವುದರ ಜೊತೆ ಜೊತೆಗೆ ಸಂವಿಧಾನ ಬದ್ದವಾದ ಮೂಲಭೂತ ಹಕ್ಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಜಾಗೃತಿ ಸಮಿತಿ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಮಾಡಬೇಕು ಎಂದು ಮಾನವ ಹಕ್ಕುಗಳ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಸಮೇತನಹಳ್ಳಿ ಲಕ್ಷ್ಮಣ್‍ಸಿಂಗ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಾನವ ಹಕ್ಕುಗಳ ಜಾಗೃತಿ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಮಾಡಿ ಮಾತನಾಡಿದರು.
ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ದಬ್ಬಾಳಿಕೆ, ಬಾಲ್ಯವಿವಾಹದಂತಹ ಪಿಡುಗುಗಳನ್ನು ತೊಲಗಿಸಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕಾದಂತಹ ಹೊಣೆಗಾರಿಕೆ ಪ್ರತಿಯೊಬ್ಬ ನಾಗರೀಕರ ಮೇಲಿದೆ. ಮಾನವ ಹಕ್ಕುಗಳ ಬಗ್ಗೆ ನಾಗರೀಕರಿಗೆ ನಿಖರವಾದ ಮಾಹಿತಿಯಿಲ್ಲದ ಕಾರಣ ಮಕ್ಕಳು, ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದು ಈ ಬಗ್ಗೆ ಜಾಗೃತಿ ಸಮಿತಿಯ ಪದಾಧಿಕಾರಿಗಳು ನಾಗರೀಕರಲ್ಲಿ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು.
ಪ್ರತಿಯೊಂದು ಮಗುವಿಗೂ ಉತ್ತಮ ಶಿಕ್ಷಣ ಸಿಗಬೇಕು ಆಗ ಮಾತ್ರ ಸಮಾಜದಲ್ಲಿ ಪರಿವರ್ತನೆ ಕಾಣಲು ಸಾಧ್ಯ. ತಾಲೂಕು ಮಾನವ ಹಕ್ಕುಗಳ ಜಾಗೃತಿ ಸಮಿತಿಯ ಸಂಘಟನೆ ಜನಪರವಾಗಿ ಕೆಲಸ ಮಾಡಬೇಕು ಎಂದರು.
ಮಾನವ ಹಕ್ಕುಗಳ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ ಮಾನವ ಹಕ್ಕುಗಳ ಜಾಗೃತಿ ಸಮಿತಿ ಪದಾಧಿಕಾರಿಗಳು ಸ್ಥಳೀಯವಾಗಿ ಇರುವ ಮೂಲಭೂತ ಸಮಸ್ಯೆಗಳು ಸೇರಿದಂತೆ ಆಡಳಿತ ಯಂತ್ರವನ್ನು ಚುರುಕೊಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಯಾವುದೇ ಆಸೆ ಆಮಿಷಗಳಿಗೆ ಒಳಗಾಗಿ ಯಾರ ಮೇಲೂ ಒತ್ತಡಗಳನ್ನು ಹೇರದಂತೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
ತಾಲೂಕು ನೂತನ ಅಧ್ಯಕ್ಷ ವಿಜಯ್.ಎನ್. ಕಾರ್ಯದರ್ಶಿ ಸುರೇಶ್, ಯುವ ಘಟಕದ ಅಧ್ಯಕ್ಷ ರಂಜಿತ್, ಕಾರ್ಮಿಕ ವಿಭಾಗದ ಅಧ್ಯಕ್ಷ ಪ್ರದೀಪ್ (ದೀಪು) ಮತ್ತಿತರರು ಹಾಜರಿದ್ದರು.

ವಿದ್ಯಾರ್ಥಿಗಳು ಕೇವಲ ಪುಸ್ತಕ ಹುಳುಗಳಾಗದಿರಿ

0

ಸಮಾಜದಲ್ಲಿ ಬದಲಾವಣೆಯನ್ನು ಕಾಣಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ, ಹಾಗಾಗಿ ಶಿಕ್ಷಣ ಕ್ಷೇತ್ರಕ್ಕೆ ಶಿಕ್ಷಕರೂ ಸೇರಿದಂತೆ ಪೋಷಕರು ಹೆಚ್ಚಿನ ಪ್ರೋತ್ಸಾಹ ನೀಡಿದಾಗ ಮಾತ್ರ ಮಕ್ಕಳು ಎಲ್ಲಾ ರಂಗಗಳಲ್ಲೂ ಉತ್ತಮ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ತಾಲೂಕು ವಚನ ಸಾಹಿತ್ಯ ಪರಿಷತ್ ವತಿಯಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಕ್ಕಳಲ್ಲಿ ಅಪಾರವಾದ ಜ್ಞಾನವಿದ್ದರೂ ಕೂಡಾ ಆರ್ಥಿಕ ಬಿಕ್ಕಟ್ಟುಗಳಿಂದಾಗಿ ಬಹಳಷ್ಟು ಮಕ್ಕಳು ಶಿಕ್ಷಣವನ್ನು ಮೊಟಕುಗೊಳಿಸಿಕೊಳ್ಳುತ್ತಿದ್ದಾರೆ. ಇಂತಹ ಮಕ್ಕಳನ್ನು ಗುರ್ತಿಸಿ ಪ್ರೋತ್ಸಾಹ ಮಾಡುವಂತಹ ಕಾರ್ಯವನ್ನು ಸಂಘ ಸಂಸ್ಥೆಗಳು ಮಾಡಬೇಕು.
ಇನ್ನು ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪ್ರಮುಖ ಘಟ್ಟಗಳಾಗಿದ್ದು ತಾವು ಯಾವ ರೀತಿ ದುಡಿಯುತ್ತೀರಿ, ಶ್ರಮ ಪಡುತ್ತೀರಿ ಯಾವ ರೀತಿ ವಿದ್ಯಾಭ್ಯಾಸ ಮಾಡುತ್ತೀರಿ ಎನ್ನುವುದು ಮುಖ್ಯವಲ್ಲ ಬದಲಿಗೆ ಪರೀಕ್ಷೆಯನ್ನು ಯಾವ ರೀತಿ ಎದುರಿಸುತ್ತೀರಿ, ಪರೀಕ್ಷೆಯಲ್ಲಿ ಯಾವ ರೀತಿ ಉತ್ತರ ಬರೆದು ಪರಿಣಾಮಕಾರಿ ಅಂಕ ಪಡೆಯುತ್ತೀರಿ ಎನ್ನುವುದು ಮುಖ್ಯವಾಗಿರುತ್ತದೆ ಎಂದರು.
ತಹಸೀಲ್ದಾರ್ ಎಸ್. ಅಜಿತ್‍ಕುಮಾರ್ ರೈ ಮಾತನಾಡಿ ವಿದ್ಯಾರ್ಥಿಗಳು ಕೇವಲ ಪುಸ್ತಕ ಹುಳುಗಳಾಗದಿರಿ. ವಿವಿಧ ಹವ್ಯಾಸ ಅಭಿರುಚಿಗಳು ರೂಡಿಸಿಕೊಳ್ಳಿ, ಈಗಿನ ಸಂಪರ್ಕ ಕ್ರಾಂತಿಯ ಯುಗದಲ್ಲಿ ಸ್ಮಾರ್ಟ್ ಫೋನ್‍ಗಳು ಸೇರಿದಂತೆ ಕಂಪ್ಯೂಟರ್‍ಗಳನ್ನು ಮನರಂಜನೆಗಷ್ಟೇ ಅಲ್ಲದೆ ಭವಿಷ್ಯ ರೂಪಿಸಿಕೊಳ್ಳಲು ಬಳಸಿಕೊಳ್ಳಿ ಎಂದರು.
ತಾಲೂಕು ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ ಮಾತನಾಡಿ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಉದ್ದೇಶ ಇತರೇ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವುದಾಗಿದೆ. ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಷ್ಟೇ ಅಲ್ಲದೆ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದ ವಿದ್ಯಾರ್ಥಿಗಳು, ಸರ್ಕಾರಿ ಶಾಲೆ ಮತ್ತು ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಲ್ಲಿದ್ದು ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನೂ ಸಹ ಪುರಸ್ಕರಿಸಲಾಗುತ್ತಿದೆ. ಗ್ರಾಮಾಂತರ ಪ್ರತಿಭೆಗಳಿಗೆ, ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ತಾಲೂಕು ವಚನ ಸಾಹಿತ್ಯ ಪರಿಷತ್ ವತಿಯಿಂದ ಪ್ರತಿಭಾ ಪುರಸ್ಕಾರ ಆಯೋಜಿಸಿದ್ದು ಮುಂಬರುವ ದಿನಗಳಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಹೆಚ್ಚಾಗಲಿ ಎಂದರು.
ವಚನ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷ ಸಿ.ಬಿ.ಹನುಮಂತಪ್ಪ, ನಗರಸಭೆ ಅಧ್ಯಕ್ಷ ಅಪ್ಸರ್‍ಪಾಷ, ರೈತಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಎಸ್ ಎಫ್ ಸಿ ಎಸ್ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಗಜೇಂದ್ರ, ಶ್ರೀನಿವಾಸ್, ಕಸಾಪ ಅಧ್ಯಕ್ಷ ಕೆ.ಮಂಜುನಾಥ್, ಎಸ್.ವಿ.ನಾಗರಾಜ್‍ರಾವ್, ಆನೂರು ದೇವರಾಜ್, ಸುಂದರಾಚಾರಿ, ವೇಣು ಮತ್ತಿತರರು ಹಾಜರಿದ್ದರು.

ಕಟ್ಟಡ ಕೆಡವಲು ಮುಂದಾದ ಅಧಿಕಾರಿಗಳು

0

ನಗರಸಭೆಗೆ ಸೇರಿದ ಅಂಗಡಿ ಮಳಿಗೆಗಳನ್ನು ಕೆಡವಲು ಅಧಿಕಾರಿಗಳು ಮುಂದಾದಾಗ ತಡೆಯೊಡ್ಡಿದ ಮಳಿಗೆ ಬಾಡಿಗೆದಾರರು ನಮಗೆ ಒಂದು ತಿಂಗಳು ಕಾಲಾವಕಾಶ ಬೇಕು ತಿಂಗಳೊಳಗೆ ಅಂಗಡಿ ಖಾಲಿ ಮಾಡುತ್ತೇವೆ ಇಲ್ಲವಾದಲ್ಲಿ ಅಂಗಡಿಯಲ್ಲಿರುವ ಮಾಲು ಸಹಿತ ಕಟ್ಟಡ ಕೆಡವಲು ನಮ್ಮದೂ ಯಾವುದೇ ಅಭ್ಯಂತರವಿಲ್ಲ ಎಂದು ನಗರಸಭೆ ಆಯುಕ್ತರು ಹಾಗು ಪೊಲೀಸ್ ಇಲಾಖೆಗೆ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.
ನಗರದ ಪ್ರವಾಸಿ ಮಂದಿರ ರಸ್ತೆಯಲ್ಲಿರುವ ನಗರಸಭೆಗೆ ಸೇರಿದ 20 ಅಂಗಡಿಗಳ ಹಳೆ ಕಟ್ಟಡ ಕೆಡವಿ ಅದರ ಹಿಂದೆ ಇರುವ ಖಾಲಿ ನಿವೇಶನ ಸೇರಿಸಿ ಬೃಹತ್ ಕಟ್ಟಡ ನಿರ್ಮಾಣ ಮಾಡಲು ಈಗಾಗಲೇ ತಯಾರಿ ನಡೆದಿದ್ದು ಅದರಂತೆ ಕಟ್ಟಡ ಕೆಡವಲು ಮುಂದಾದ ಅಧಿಕಾರಿಗಳೊಂದಿಗೆ ಅಂಗಡಿಯಲ್ಲಿರುವ ಬಾಡಿಗೆದಾರರು ಕೆಲ ಕಾಲ ಮಾತಿನ ಚಕಮಕಿ ನಡೆಸಿದರು.
ನಗರಸಭೆಯ ನೂತನ ಕಾರ್ಯಾಲಯ ನಿರ್ಮಿಸಲು ನಗರೋತ್ಥಾನ ಯೋಜನೆಯಡಿ ಈಗಾಗಲೇ ಅನುಧಾನ ಬಿಡುಗಡೆಯಾಗಿದ್ದು ಸುಮಾರು 6 ಕೋ ರೂ ವೆಚ್ಚದಲ್ಲಿ ನಗರಸಭೆ ಕಾರ್ಯಾಲಯ ನಿರ್ಮಾಣಕ್ಕೆ ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರಂತೆ ಅಂಗಡಿ ಮಾಲೀಕರಿಗೆ ಈಗಾಗಲೇ ನೋಟೀಸ್ ಸಹ ನೀಡಿದ್ದಿ ಇಂದು ಬೆಳಗ್ಗೆ ಜೆಸಿಬಿಗಳ ಮೂಲಕ ಕಟ್ಟಡ ಕೆಡವಲು ಅಧಿಕಾರಿಗಳು ಮುಂದಾಗಿ ಕಟ್ಟಡದ ಒಂದು ಭಾಗವನ್ನು ಒಡೆದುಹಾಕಿದ್ದಾರೆ.
ಇದನ್ನು ಕಂಡ ಉಳಿದ ಅಂಗಡಿ ಮಾಲೀಕರು ನಮಗೆ ಯಾವುದೇ ಮಾಹಿತಿ ನೀಡದೇ ಹೀಗೆ ಏಕಾಏಕಿ ಅಂಗಡಿ ಕೆಡವುವುದು ಸರಿಯಲ್ಲ. ನಮಗೆ ಇನ್ನೊಂದು ತಿಂಗಳ ಕಾಲ ಅವಕಾಶ ಕೊಡಿ ನಾವೇ ಅಂಗಡಿ ಖಾಲಿ ಮಾಡುತ್ತೇವೆ. ಒಂದು ವೇಳೆ ಅಂಗಡಿ ಖಾಲಿ ಮಾಡದೇ ಇದ್ದಲ್ಲಿ ಅಂಗಡಿಯಲ್ಲಿರುವ ಮಾಲು ಸಮೇತ ಕೆಡವಿ ಹಾಕಿ ಎಂದು ಅಂಗಡಿದಾರರು ಆರಕ್ಷಕ ವೃತ್ತ ನಿರೀಕ್ಷಕ ವೆಂಕಟೇಶ್ ಹಾಗು ನಗರಸಭೆ ಪೌರಾಯುಕ್ತ ಎಚ್.ಎ.ಹರೀಶ್ ರಿಗೆ ಮನವಿ ಸಲ್ಲಿಸಿದ್ದಾರೆ.

ಬಿಜೆಪಿ ಕೇಂದ್ರ ಸರ್ಕಾರ ಮೂರು ವರ್ಷಗಳು ಪೂರೈಸಿರುವ ಸಂಭ್ರಮ

0

ದೇಶದ ಬಡತನ ನಿರ್ಮೂಲನೆ ಸೇರಿದಂತೆ ವಿರೋಧಿಗಳ ಠೀಕೆಗಳನ್ನು ಅಭಿವೃದ್ದಿಯ ಮಂತ್ರವನ್ನಾಗಿಸಿಕೊಂಡು ದೇಶವನ್ನು ಅಭಿವೃದ್ದಿಯತ್ತ ಕೊಂಡೊಯ್ಯುತ್ತಿರುವ ನರೇಂದ್ರಮೋದಿ ದೇಶದ ಆಸ್ತಿ ಎಂದು ಕರ್ಣಶ್ರೀ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಹಾಗು ಬಿಜೆಪಿ ಮುಖಂಡ ಡಿ.ಆರ್. ಶಿವಕುಮಾರಗೌಡ ಹೇಳಿದರು.
ತಾಲೂಕು ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರ ಮೂರು ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ತಾಲೂಕಿನ ಸಾದಲಿ ಗ್ರಾಮದ ಸಾದಲಮ್ಮ ದೇವಾಲಯದ ಆವರಣದಲ್ಲಿ ಸಾಲುಮರದ ತಿಮ್ಮಕ್ಕನಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗು ಸ್ಥಳೀಯ ರೈತನೊಬ್ಬನಿಗೆ ಜೀವನೋಪಾಯಕ್ಕಾಗಿ ಸೀಮೆ ಹಸು ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸ್ವಚ್ಚತೆಯನ್ನೇ ದೇವರು ಎಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸು ನನಸು ಮಾಡಬೇಕು ಎನ್ನುವ ಉದ್ದೇಶದಿಂದ ಸ್ವಚ್ಚಭಾರತ ಅಭಿಯಾನ ದೇಶವನ್ನು ಕಪ್ಪುಹಣದಿಂದ ಮುಕ್ತಗೊಳಿಸಲು ನೋಟ್‍ಬ್ಯಾನ್, ಸೇರಿದಂತೆ ಕ್ಯಾಷ್‍ಲೆಸ್ ವ್ಯವಹಾರಕ್ಕೆ ಹೆಚ್ಚಿನ ಆಧ್ಯತೆ ನೀಡುವ ಮೂಲಕ ದೇಶದಲ್ಲಿ ಉಗ್ರವಾದ, ಬಯೋತ್ಪಾದನೆ ವಿರುದ್ದ ಕೈಗೊಂಡ ಕಠಿಣ ಕ್ರಮಗಳು ನಿಜಕ್ಕೂ ಶ್ಲಾಘನೀಯ ಎಂದರು.

ತಾಲೂಕು ಬಿಜೆಪಿ ವತಿಯಿಂದ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರ ಮೂರು ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ತಾಲೂಕಿನ ಸಾದಲಿ ಗ್ರಾಮದ ಸಾದಲಮ್ಮ ದೇವಾಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ ಕಾಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ದೇಶದ ಸಮಸ್ತ ಜನತೆಯೂ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ದೇಶದ ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಬೇಕು ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಬಿ.ಸಿ. ನಂದೀಶ್ ಮಾತನಾಡಿ ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಯೋಜನೆಗಳ ಮೂಲಕ ಯುವಜನತೆಯನ್ನು ಒಟ್ಟುಗೂಡಿಸಿದರೆ ಸ್ತ್ರೀ ಶಕ್ತಿ ಸಂಘಗಳಿಗೆ ಹೆಚ್ಚು ಆಧ್ಯತೆ ನೀಡುವ ಮೂಲಕ ಮಹಿಳೆಯರನ್ನು ಬೆಂಬಲಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನುಳಿದಂತೆ ಜನಧನ್ ಯೋಜನೆಯಡಿ ದೇಶದ ಸಮಸ್ತ ಪ್ರಜೆಗೂ ಬ್ಯಾಂಕ್ ಖಾತೆ ಒದಗಿಸಿದ ಹಾಗು ವರ್ಷಕ್ಕೆ 12 ರೂ ಕಟ್ಟಿದರೆ ವಿಮೆ. ದೇಶದ ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಮೂಲಕ ಸೈನಿಕರೊಂದಿಗೆ ನಾವಿದ್ದೇವೆ ಎನ್ನುವ ಸಂದೇಶ ಮತ್ತಿತರ ಜನಪರ ಯೋಜನೆಗಳಿಂದ ಮೋದಿ ದೇಶದ ಜನತೆಯ ಮನ ಗೆದ್ದಿದ್ದಾರೆ. ಮೋದಿಯವರ ಸಾಧನೆಗಳ ಬಗ್ಗೆ ಮನೆ ಮನೆಗೂ ತೆರಳಿ ಕಾರ್ಯಕರ್ತರು ಮಾಹಿತಿ ನೀಡುವ ಮೂಲಕ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಸಮಾರಂಭದಲ್ಲಿ ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ಸಾಲು ಮರದ ತಿಮ್ಮಕ್ಕನಿಗೆ ಸನ್ಮಾನ ನೆರವೇರಿಸಲಾಯಿತು. ಸ್ಥಳೀಯ ಬಡರೈತ ವೆಂಕಟೇಶ್É ಎಂಬುವವರಿಗೆ ಜೀವನೋಪಾಯಕ್ಕಾಗಿ ಕರ್ಣಶ್ರೀ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸೀಮೆ ಹಸುವೊಂದನ್ನು ಉಚಿತವಾಗಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಳ್ಳಾವಿ ಮಠದ ಶ್ರೀ ಶಿವಾಚಾರ್ಯ ಸ್ವಾಮೀಜಿ, ಬಿಜೆಪಿ ಮುಖಂಡರಾದ ಸುರೇಂದ್ರಗೌಡ, ಶ್ರೀರಾಮರೆಡ್ಡಿ, ಧಾಮೋದರ್, ಮಂಜುಳಮ್ಮ, ಸುಜಾತಮ್ಮ, ಅಶ್ವಕ್ ಅಹಮ್ಮದ್, ಬೈರಾರೆಡ್ಡಿ, ಪ್ರತಾಪ್, ಪುರುಷೋತ್ತಮ್, ರವಿ ಮತ್ತಿತರರು ಹಾಜರಿದ್ದರು.

ಉದ್ಯೋಗಖಾತ್ರಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ವೀಕ್ಷಣೆ

0

ತಾಲೂಕಿನಾಧ್ಯಂತ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿ 13 ರಾಜೀವ್‍ಗಾಂಧಿ ಸೇವಾಕೇಂದ್ರಗಳು ಸೇರಿದಂತೆ ಅಂಗನವಾಡಿ ಕೇಂದ್ರ, ಸ್ಮಶಾನ ಅಭಿವೃದ್ದಿ, ಶುದ್ದ ಕುಡಿಯುವ ನೀರಿನ ಘಟಕಗಳು ಹಾಗು ಗ್ರಾಮೀಣ ಸಿಸಿ ರಸ್ತೆ ಕಾಮಗಾರಿಗಳು ನಿರ್ಮಸುವಲ್ಲಿ ಸಹಕಾರ ನೀಡಿರುವ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳ ಕ್ರಮ ಶ್ಲಾಘನೀಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಜೆ.ಮಂಜುನಾಥ್ ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ವೀಕ್ಷಣೆಗಾಗಿ ತಾಲೂಕಿನ ಜೆ,ವೆಂಕಟಾಪುರ, ಹೊಸಪೇಟೆ, ಆನೂರು, ದಿಬ್ಬೂರಹಳ್ಳಿ ಹಾಗು ಅಬ್ಲೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ವೀಕ್ಷಣೆ ನಡೆಸಿ ಮಾತನಾಡಿದರು.
ಜಿಲ್ಲೆಯಾಧ್ಯಂತ 16 ರಾಜೀವ್ ಗಾಂಧಿ ಸೇವಾಕೇಂದ್ರಗಳು ನಿರ್ಮಿಸಿದ್ದು ಅದರಲ್ಲಿ 13 ಸೇವಾಕೇಂದ್ರಗಳು ಶಿಡ್ಲಘಟ್ಟ ತಾಲೂಕಿನಲ್ಲಿ ನಿರ್ಮಾಣವಾಗಿದೆ. ಇನ್ನು ಅಂಗನವಾಡಿ ಕೇಂದ್ರಗಳು ಸೇರಿದಂತೆ ತಾಲೂಕಿನ ಆನೂರು ಗ್ರಾ.ಪಂ ವ್ಯಾಪ್ತಿಯ ಬೆಳ್ಳೂಟಿ ಗ್ರಾಮದಲ್ಲಿ ನೀರನ್ನು ರಾಜಕಾಲುವೆ ಮೂಲಕ ಹರಿಯುವಂತೆ ಮಾಡಿ ಕೆರೆ ಅಭಿವೃದ್ದಿಗಾಗಿ ಮಾಡಿರುವ ಕಾಮಗಾರಿ ಸೇರಿದಂತೆ ಹಿತ್ತಲಹಳ್ಳಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಸಾರ್ವಜನಿಕರ ಚಿರ ಶಾಂತಿಧಾಮ ಕಾಮಗಾರಿ ಹಾಗು ಸ್ಮಶಾನದ ಸುತ್ತ ಬೆಳೆಸಿರುವ ಸಸಿಗಳು ಸೇರಿದಂತೆ ಮಳೆ ನೀರು ಸಂಸ್ಕರಿಸಲು ತೊಟ್ಟಿ ನಿರ್ಮಿಸಿ ಸಹಕರಿಸಿದ ಸ್ಥಳೀಯರಿಗೆ ವೈಯಕ್ತಿಕ ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ನಾಗೇಶ್, ಉಪಕಾರ್ಯದರ್ಶಿ ಡಾ.ಸಿದ್ದರಾಮಯ್ಯ, ರೇಷ್ಮೆ ಉಪನಿರ್ದೇಶಕ ನಾಗಭೂಷಣ್, ಜಿ.ಪಂ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಮುನಿರಾಜು, ತಾ.ಪಂ ಇಓ ವೆಂಕಟೇಶ್, ನರೇಗ ಸಹಾಯಕ ನಿರ್ದೇಶಕ ಶ್ರೀನಾಥಗೌಡ ಮತ್ತಿತರರು ಹಾಜರಿದ್ದರು.

ರಾಷ್ಟ್ರೀಯ ಡೆಂಗ್ಯೂ ವಿರೋಧಿ ದಿನಾಚರಣೆ

0

ರೋಗವನ್ನು ಆರಂಭದಲ್ಲೇ ಪತ್ತೆಹಚ್ಚಿ, ಸೂಕ್ತ ಚಿಕಿತ್ಸೆ ನೀಡದಿದ್ದರೆ ಡೆಂಗ್ಯೂ ಜ್ವರ ಮಾರಣಾಂತಿಕ ರೋಗವಾಗಿ ಪರಿಣಮಿಸಲಿದೆ ಹಾಗಾಗಿ ರೋಗ ಹರಡದಂತೆ ತಮ್ಮ ಸುತ್ತಲಿನ ವಾತಾವರಣ ಶುಚಿಯಾಗಿಟ್ಟುಕೊಳ್ಳಬೇಕು ಎಂದು ಸಾರ್ವಜನಿಕ ಆಸ್ಪತ್ರೆಯ ಡಾ.ವಿಜಯ್ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ಶುಕ್ರವಾರ ರಾಷ್ಟ್ರೀಯ ಡೆಂಗ್ಯೂ ವಿರೋಧಿ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ಡೆಂಗ್ಯೂ ಜ್ವರ ಈಡೀಸ್ ಜಾತಿಯ ಸೊಳ್ಳೆ ಕಚ್ಚುವಿಕೆಯಿಂದ ಬರುತ್ತದೆ. ಸಾಮಾನ್ಯವಾಗಿ ಈ ಸೊಳ್ಳೆಗಳು ಸ್ವಚ್ಚ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುವುದರಿಂದ ಹಗಲು ಹೊತ್ತಿನಲ್ಲಿ ಮಾತ್ರ ಕಚ್ಚುತ್ತದೆ. ಈ ಜಾತಿಯ ಸೊಳ್ಳೆ ಕಚ್ಚಿದ ವಾರದಲ್ಲಿ ರೋಗಕ್ಕೆ ತುತ್ತಾದವರಲ್ಲಿ ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ತೀವ್ರ ನೋವು, ಮಾಂಸಖಂಡಗಳಲ್ಲಿ ಮತ್ತು ಕೀಲುಗಳಲ್ಲಿ ವಿಪರೀತ ನೋವು, ಮೂಗು ಮತ್ತು ವಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸುತ್ತವೆ ಎಂದರು.
ಇದೊಂದು ಮಾರಣಾಂತಿಕ ರೋಗವಾಗಿದ್ದು ಈ ಜ್ವರಕ್ಕೆ ಯಾವುದೇ ನಿರ್ದಿಷ್ಟ ಔಷದಿ ಅಥವಾ ಲಸಿಕೆ ಇರುವುದಿಲ್ಲ, ರೋಗದ ಲಕ್ಷಣಗಳಿಗೆ ಅನುಗುಣವಾಗಿ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು. ಮುಖ್ಯವಾಗಿ ರೋಗ ಹರಡದಂತೆ ಮುನ್ನೆಚ್ಚರಿಕೆಯಾಗಿ ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರಿನ ತೊಟ್ಟಿಗಳು, ಡ್ರಂ, ಬ್ಯಾರಲ್‍ಗಳು, ಏರ್ ಕೂಲರ್ ಇತ್ಯಾಧಿಗಳನ್ನು ವಾರಕೊಮ್ಮೆ ತಪ್ಪದೇ ಖಾಲಿ ಮಾಡಿ, ಒಣಗಿಸಿ ಪುನ: ನೀರು ಭರ್ತಿಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ರೋಗ ಬಂದವರು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದರೆ ಖಾಯಿಲೆ ಖಂಡಿತ ಗುಣಮುಖವಾಗುತ್ತದೆ, ರೋಗ ಬರುವುದಕ್ಕಿಂತ ಮೊದಲು ಜಾಗೃತರಾಗಿ ರೋಗ ಬರದಂತೆ ತಡೆಗಟ್ಟಿ ಎಂದು ಕರೆನೀಡಿದರು.
ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಕಿರಿಯ ಮಹಿಳಾ ಸಹಾಯಕಿಯರು, ರಾಷ್ಟ್ರೀಯ ಡೆಂಗ್ಯೂ ವಿರೋಧಿ ದಿನಾಚರಣೆ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ಜಾಗೃತಿ ಮೂಡಿಸುವ ಜಾಥಾ ನಡೆಸಿದರು.
ಈ ಸಂದರ್ಭದಲ್ಲಿ ಡಾ.ಸುನೀತ, ಹಿರಿಯ ಆರೋಗ್ಯ ಸಹಯಕರಾದ ದಾದಾಪೀರ್, ಸಿ.ವಿಜಯಾ, ಮುನಿರತ್ನಮ್ಮ ಮತ್ತಿತರರು ಹಾಜರಿದ್ದರು.

ಶನೈಶ್ಚರ ಜಯಂತಿ

0

ನಗರದ ಗಾಯತ್ರಿನಗರದ ಕೆ.ಎಚ್.ಬಿ.ಕಾಲೋನಿಯ ಮಹಾಗಣಪತಿ, ಗಾಯತ್ರಿದೇವಿ ಮತ್ತು ಶನೈಶ್ಚರಸ್ವಾಮಿ ದೇವಾಲಯದಲ್ಲಿ ಸೋಮವಾರ 19 ನೇ ವರ್ಷದ ಶನೈಶ್ಚರ ಜಯಂತಿ, 108 ಲೀಟರ್ ಕ್ಷೀರಾಭಿಷೇಕ ಮತ್ತು ಕಲ್ಯಾಣ ಬ್ರಹ್ಮರಥೋತ್ಸವವನ್ನು ಆಯೋಜಿಸಲಾಗಿತ್ತು.
ಗುರುವಾರ ಪ್ರಾರಂಭಗೊಂಡ ಪೂಜಾ ಮಹೋತ್ಸವವು ಎರಡು ದಿನಗಳ ಕಾಲ ನಡೆಯಲಿದ್ದು ಸಾಮೂಹಿಕ ಎಳ್ಳು ದೀಪೋತ್ಸವ, ತೈಲಾಭಿಷೇಕ, 108 ಲೀಟರ್ ಕ್ಷೀರಾಭಿಷೇಕ,ಅಂಕುರಾರ್ಪಣೆ, ಧ್ವಜಾರೋಹಣ, ಬಲಿಹರಣ, ಶನೈಶ್ಚರಸ್ವಾಮಿಯ ತಿಲಹೋಮ, ಶಾಲ್ಯನ್ನ ಅಭಿಷೇಕ, ಮಹಾಸ್ನಪನೆ, ಕಲ್ಯಾಣೋತ್ಸವ ಮತ್ತು ಬ್ರಹ್ಮರಥೋತ್ಸವವನ್ನು, ಉಯ್ಯಾಲೋತ್ಸವ, ಶಯನೋತ್ಸವ ನಡೆಸಲಾಯಿತು. ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಗಾಯತ್ರಿ ದೇವಿ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ ಸದಸ್ಯರು, ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದರು.

ದೇಶದ ಪ್ರತಿಯೊಬ್ಬ ಪ್ರಜೆಗೂ ಆಹಾರ ಮತ್ತು ಉತ್ತಮ ಆರೋಗ್ಯ ಸಿಗಬೇಕು

0

ದೇಶದ ಹೆಮ್ಮೆಯ ತತ್ವಜ್ಞಾನಿ, ಸಾಮಾಜಿಕ ತಜ್ಞ ಪಂಡಿತ್ ದೀನದಯಾಳ ಉಪಾಧ್ಯಾಯರ ತತ್ವ ಆದರ್ಶಗಳನ್ನು ಇಂದಿನ ಯುವಜನತೆ ಮೈಗೂಡಿಸಿಕೊಳ್ಳಬೇಕು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ಹೇಳಿದರು.
ನಗರದ ಅಶೋಕ ರಸ್ತೆಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ಬಿ.ಜೆ.ಪಿ ಯುವಮೋರ್ಚಾ ವತಿಯಿಂದ ಪಂಡಿತ್ ದೀನದಯಾಳ್ ಉಪಾದ್ಯಾಯರ ಜನ್ಮಶತಾಬ್ದಿ ಅಂಗವಾಗಿ ಏರ್ಪಡಿಸಲಾಗಿದ್ದ ಗ್ರಾಮೀಣ ಕ್ರೀಡಾ ಉತ್ಸವ ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದ ಪ್ರತಿಯೊಬ್ಬ ಪ್ರಜೆಗೂ ಆಹಾರ ಮತ್ತು ಉತ್ತಮ ಆರೋಗ್ಯ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಹೋರಾಟ ಮಾಡುವ ಮೂಲಕ ವಿದೇಶಿ ವ್ಯಾಮೋಹಕ್ಕೆ ಒಳಗಾಗದೇ ಪ್ರತಿಯೊಬ್ಬರೂ ದೇಶದ ಪರಂಪರೆ ಹಾಗು ಸಂಸ್ಕøತಿಯನ್ನು ಗೌರವಿಸಿ ದೇಶಭಕ್ತಿ ರೂಡಿಸಿಕೊಳ್ಳುವಂತೆ ಮಾಡಿದ ಮಾಹನ್ ವ್ಯಕ್ತಿಗಳು ಎಂದರು.
ಬಿ.ಜೆ.ಪಿ ಸಂಸ್ಥಾಪಕ ಪಂಡಿತ್ ದೀನ ದಯಾಳ್ ಉಪಾದ್ಯಾಯ್ ಅವರ ನೆನಪಿಗಾಗಿ ಗ್ರಾಮೀಣ ಜನರಲ್ಲಿ ಅಡಗಿರುವ ಪ್ರತಿಭೆಯನ್ನು ಉತ್ತೇಜಿಸುವ ಸಲುವಾಗಿ ಕಬ್ಬಡಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಭಾಗದ ಪ್ರತಿಭಾವಂತರು ಕ್ರೀಡೆಗಳಲ್ಲಿ ಭಾಗವಹಿಸಿ ಹುಟ್ಟಿದ ಊರು ಸೇರಿದಂತೆ ದೇಶಕ್ಕೆ ಖ್ಯಾತಿ ತರುವಂತಹ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದರು.
ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ವಿಜೇತರಾದ ತಂಡಗಳಿಗೆ ಪ್ರಥಮ ಬಹುಮಾನವಾಗಿ 5,000 ಹಾಗೂ ದ್ವಿತೀಯ ಬಹುಮಾನ 2,000 ರೂಗಳನ್ನು ನೀಡಲಾಯಿತು.
ಬಿ.ಜೆ.ಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಶ್ರೀರಾಮರೆಡ್ಡಿ, ಯುವಮೋರ್ಚಾ ಅದ್ಯಕ್ಷ ಬೈರಾರೆಡ್ಡಿ, ಮುಖಂಡರಾದ ದಾಮೋದರ್, ಮಂಜುಳಮ್ಮ, ಗೋಕುಲ್, ವಿಜಯಕುಮಾರ್, ಮತ್ತಿತರರು ಹಾಜರಿದ್ದರು.

ರಾಜ್ಯ ರೈತ ಸಂಘದ ಪದಾಧಿಕಾರಿಗಳ ಸಭೆ

0

ಬಯಲುಸೀಮೆ ಭಾಗಕ್ಕೆ ಕುಡಿಯುವ ಹಾಗು ಕೃಷಿಗೆ ನೀರು ನೀಡುವ ವಿಚಾರದಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರ ಸೋತಿರುವುದಷ್ಟೇ ಅಲ್ಲದೇ ಕೊಟ್ಟ ಮಾತಿಗೆ ತಪ್ಪಿದೆ ಎಂದು ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ನಗರದ ಬಸ್ ನಿಲ್ದಾಣದ ಬಳಿಯಿರುವ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ತಾಲೂಕು ಘಟಕದ ಕಚೇರಿಯ ಆವರಣದಲ್ಲಿ ಬುದವಾರ ಏರ್ಪಡಿಸಲಾಗಿದ್ದ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಜಲ ಸಂಪನ್ಮೂಲಗಳ ಕೊರತೆಯಿಲ್ಲ ಆದರೆ ಅದನ್ನು ಸಮರ್ಪಕವಾಗಿ ಬಳಸಲು ರಾಜ್ಯ ಸರ್ಕಾರ ಹಾಗು ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ ಎಂದ ಅವರು ಕೇಂದ್ರ ಹಾಗು ರಾಜ್ಯ ಸರ್ಕಾರಗಳೆರಡೂ ರೈತರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಸರ್ಕಾರದ ತಪ್ಪು ಆರ್ಥಿಕ ನೀತಿಗಳನ್ನು ಸರಿಪಡಿಸಿಕೊಳ್ಳಬೇಕು ಎಂದರು.
ಇನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ಒಕ್ಕಲುತನ ಮುಗಿಸಲು ಮುಂದಾಗಿದೆ. ಕೇಂದ್ರ ಸರ್ಕಾರ ಕೇವಲ ಅಂಬಾನಿ, ಅದಾನಿಯನ್ನು ಮಾತ್ರ ಆರ್ಥಿಕವಾಗಿ ಬೆಳೆಸಲು ಅಧಿಕಾರ ಬಳಸುತ್ತಿದ್ದ ದೇಶದ ಅನ್ನದಾತನ ಬಗ್ಗೆ ಇವರಿಗೆ ಯಾವುದೇ ಚಿಂತನೆಯಿಲ್ಲ ಎಂದರು.
ಬಯಲುಸೀಮೆ ಪ್ರದೇಶಕ್ಕೆ ಕೃಷಿ ಆಧಾರಿತ ನೀರಾವರಿ ಯೋಜನೆ ಜಾರಿಗೊಳಿಸಲು ಮಾತು ತಪ್ಪಿದ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಜೂನ್ 01 ರಂದು ಬೈಕ್ ರ್ಯಾಲಿ ಮೂಲಕ ವಿಧಾನ ಸೌಧ ಮುತ್ತಿಗೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ ಮುಂಬರುವ ಜೂನ್ 01 ರ ಗುರುವಾರ ಬೈಕ್ ರ್ಯಾಲಿ ಮೂಲಕ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಬೈಕ್‍ಗಳ ಮೂಲಕ ರ್ಯಾಲಿಯಲ್ಲಿ ಭಾಗವಹಿಸಲಿದ್ದೇವೆ ಎಂದರು.
ರೈತ ವಿರೋಧಿ ನೀತಿ ಹಾಗು ಕೊಟ್ಟ ಮಾತಿನಂತೆ ನಡೆಯದೇ ಮಾತಿಗೆ ತಪ್ಪಿದ ಸರ್ಕಾರದ ವಿರುದ್ದ ಆಯೋಜಿಸಲಾಗಿರುವ ಬೃಹತ್ ಬೈಕ್ ರ್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯ ರೈತರು, ವಿವಿಧ ಸಂಘಟನೆ ಪದಾಧಿಕಾರಿಗಳು ಹಾಗು ವಿದ್ಯಾರ್ಥಿಗಳು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಕಾರ್ಯದರ್ಶಿ ಶಿವಪ್ಪ, ಕೋಲಾರ ಜಿಲ್ಲಾಧ್ಯಕ್ಷ ವೀರಭದ್ರಸ್ವಾಮಿ, ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ಬಿ.ವಿ.ಮುನೇಗೌಡ, ಎಸ್.ಎಂ.ನಾರಾಯಣಸ್ವಾಮಿ, ಡಿ.ವಿ.ವೆಂಕಟೇಶ್, ಕೊಂಡಪ್ಪನವರ ವೇಣು, ದೇವರಾಜ್ ಮತ್ತಿತರರು ಹಾಜರಿದ್ದರು.