‘ದಾಳಿಂಬೆ ನನ್ನ ಅದೃಷ್ಟದ ಬೆಳೆ. ಅದನ್ನು ಸರಿಯಾಗಿ ನೋಡಿಕೊಂಡಲ್ಲಿ ರೈತನನ್ನು ಕೈಬಿಡುವುದಿಲ್ಲ’ ಎಂದು ತಮ್ಮ ಅನುಭವದ ಮಾತನದನಾಡುತ್ತಾರೆ ರೈತ ಮೇಲೂರಿನ ಕೆ.ಎಸ್.ನಂಜೇಗೌಡ.
ಕಳೆದ ವರ್ಷ ಆನೆಕಲ್ಲು ಸಹಿತ ಮಳೆ ಬಿದ್ದ ಕಾರಣ ತಾಲ್ಲೂಕಿನ ಮೇಲೂರು, ಅಪ್ಪೇಗೌಡನಹಳ್ಳಿ, ಚೌಡಸಂದ್ರ, ಗಂಗನಹಳ್ಳಿ, ಕಂಬದಹಳ್ಳಿ, ಮುತ್ತೂರು, ಮಳ್ಳೂರು ಮುಂತಾದ ಗ್ರಾಮಗಳಲ್ಲಿದ್ದ ದ್ರಾಕ್ಷಿ ಬೆಳೆ ನೆಲಕಚ್ಚಿತ್ತು. ತಾಲ್ಲೂಕಿನ ಮೇಲೂರಿನ ರೈತ ಕೆ.ಎಸ್.ನಂಜೇಗೌಡರೂ ಕೂಡ ಈ ಸಂದರ್ಭದಲ್ಲಿ ದ್ರಾಕ್ಷಿ ಬೆಳೆಯ ನಷ್ಟ ಅನುಭವಿಸಿದರು. ಆದರೆ ತಮ್ಮ ದ್ರಾಕ್ಷಿ ತೋಟದ ಪಕ್ಕದಲ್ಲಿಯೇ ಒಂದೂವರೆ ಎಕರೆಯಲ್ಲಿ ನೆಟ್ಟಿದ್ದ ದಾಳಿಂಬೆ ಗಿಡಗಳು ಮುಳುಗುತ್ತಿದ್ದವರನ್ನು ದಡಕ್ಕೆ ಸೇರಿಸಿತ್ತು.
‘ಕಳೆದ ಮೂರು ವರ್ಷಗಳಿಂದ ಆಲೀಕಲ್ಲು ಸಹಿತ ಮಳೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ರೈತರನ್ನು ಕಂಗೆಡಿಸುತ್ತಿದೆ. ನಾವೂ ಅದಕ್ಕೆ ಹೊರತಾಗಿಲ್ಲ. ಈ ಬಾರಿಯೂ ಬರಬಹುದು. ಆದರೆ ನಮ್ಮ ದಾಳಿಂಬೆ ಗಿಡಗಳು ನಮ್ಮ ಕೈಬಿಡುವುದಿಲ್ಲ. ಕಳೆದ ಬಾರಿ ಆಲಿಕಲ್ಲು ಬಿದ್ದಾಗ ದಾಳಿಂಬೆ ಉದುರಿದ್ದರೂ ನಂತರ ಸೂಕ್ತ ಔಷಧಿ ಸಿಂಪಡಿಸಿದೊಡನೆ ಗಿಡ ಚಿಗುರಿ ಮೊಗ್ಗು ಬಿಟ್ಟು ಕಾಯಿಯಾದವು. ಎರಡು ತಿಂಗಳು ತಡವಾದರೂ 11 ಟನ್ ತೂಗಿ 10 ಲಕ್ಷ ಆದಾಯ ತಂದಿತು’ ಎಂದು ವಿವರಿಸುತ್ತಾರೆ ರೈತ ಕೆ.ಎಸ್.ನಂಜೇಗೌಡ.
ದ್ರಾಕ್ಷಿ ಬೆಳೆಯ ಏರುಪೇರು, ಮಾರುಕಟ್ಟೆಯ ಅವ್ಯವಸ್ಥೆಗಳನ್ನು ಕಂಡು ಒಂದೂವರೆ ಎಕರೆ ಜಮೀನಿನಲ್ಲಿ ದ್ರಾಕ್ಷಿ ಬೆಳೆ ತೆಗೆದು ದಾಳಿಂಬೆ ನಾಟಿ ಮಾಡಿದೆವು. ಹೈದರಾಬಾದಿನಿಂದ 600 ಸಸಿಗಳನ್ನು ತಂದು ನಾಟಿ ಮಾಡಿದೆವು. ಮೊದಲ ವರ್ಷ ಖರ್ಚು ಹೆಚ್ಚು. ಸುತ್ತ ಗಾಳಿ ಬೀಸಿ ವೈರಾಣು ತಡೆಯಲು ಪ್ಲಾಸ್ಟಿಕ್ ನೆಟ್ ಅಳವಡಿಸಬೇಕು. ಭೂಮಿಗೆ ಸಾಕಷ್ಟು ಕೊಟ್ಟಿಗೆ ಗೊಬ್ಬರ, ವಿವಿಧ ಹಿಂಡಿಗಳನ್ನು ಕೊಟ್ಟೆವು. ಮೊದಲ ವರ್ಷ 5 ಟನ್, ಎರಡನೇ ವರ್ಷ 8 ಟನ್, ಮೂರನೇ ವರ್ಷ ಆಲಿಕಲ್ಲಿನ ಮಳೆಯ ನಂತರವೂ 11 ಟನ್ ದಾಳಿಂಬೆ ಸಿಕ್ಕಿದೆ. ಈ ಬಾರಿ ಆಗಸ್ಟ್ ತಿಂಗಳಿಗೆ ಫಸಲು ಬರಲಿದ್ದು, 15 ಟನ್ ನಿರೀಕ್ಷೆಯಿದೆ ಮತ್ತು ಉತ್ತಮ ಬೆಲೆಯೂ ಇದೆ. ದಾಳಿಂಬೆ ಮಾರಾಟ ಸುಲಭ. ಬೇಡಿಕೆಯಿರುವುದರಿಂದ ಕೊಳ್ಳುವವರು ತೋಟಕ್ಕೇ ಬಂದು ಹಣ ನೀಡಿ ತೂಗಿಕೊಂಡು ಹೋಗುತ್ತಾರೆ. ಇದಕ್ಕೆ ಹೆಚ್ಚಿನ ತೇವಾಂಶ ಬೇಕಿಲ್ಲ. ನಮಗೆ ಒಂದು ಸಾವಿರ ಗ್ಯಾಲನ್ ನೀರಿದ್ದು, ಡ್ರಿಪ್ ಮೂಲಕ ಹರಿಸುವುದರಿಂದ 600 ದಾಳಿಂಬೆ ಗಿಡಗಳನ್ನು ಚೆನ್ನಾಗಿ ನೋಡಿಕೊಳ್ಳಬಹುದು’ ಎಂದು ಅವರು ವಿವರಿಸಿದರು.
‘ದಾಳಿಂಬೆ ಹಣ್ಣಿನ ಮೇಲೆ ಬೇಸಿಗೆ ನಂತರದ ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ಮೊದಲ ಮಳೆ ಹನಿಗಳು ಬಿದ್ದ ಕೂಡಲೇ ಕಪ್ಪು ಮಚ್ಚೆಗಳು ಕಾಣಲು ಶುರುವಾಗುತ್ತದೆ. ಇದೊಂದು ಶಿಲೀಂಧ್ರದಿಂದ ಬರುವ ರೋಗ. ಕಾಯಿ, ಎಲೆ, ಹಣ್ಣುಗಳ ಮೇಲೆ ಕೆಂಪು ಮತ್ತು ಕಪ್ಪು ಬಣ್ಣದ ಸಣ್ಣ ಮಚ್ಚೆಗಳು ಕಂಡು ಬರುತ್ತವೆ. ಈ ಮಚ್ಚೆಗಳು ಬರು ಬರುತ್ತಾ ದೊಡ್ಡದಾಗುತ್ತಾ ಇಡೀ ಹಣ್ಣು ಕೊಳೆಯಲು ಪ್ರಾರಂಭವಾಗುತ್ತದೆ. ಹಣ್ಣಿನ ಮೇಲೆ ಈ ಕಪ್ಪು ಮಚ್ಚೆಗಳಿದ್ದರೆ ಮಾರುಕಟ್ಟೆಯಲ್ಲಿ ಬೆಲೆ ಸಿಗದು. ಇದಕ್ಕೆ ಮುಂಜಾಗ್ರತಾ ಕ್ರಮವಾಗಿ ರೋಗ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದರಿಂದ ಅಂಥ್ರಾಕ್ನೋಸ್ ರೋಗ ತಡೆಗಟ್ಟಬಹುದಾಗಿದೆ. ಸಮಸ್ಯೆ ಎಂದರೆ ಗಿಡಗಳ ಹಿಮ್ಮುಖ ಒಣಗುವಿಕೆ (ಡೈಬ್ಯಾಕ್). ಎಷ್ಟೇ ಔಷಧ ಸಿಂಪಡಿಸಿದರೂ ಪ್ರತಿ ವರ್ಷ ನೂರಾರು ಗಿಡಗಳು ಡೈಬ್ಯಾಕ್ ರೋಗಕ್ಕೆ ತುತ್ತಾಗುತ್ತಿವೆ. ಇದಕ್ಕೆ ತಜ್ಞರು ಪರಿಹಾರ ಸೂಚಿಸಬೇಕಿದೆ. ದಾಳಿಂಬೆ ಬೆಳೆಯುವುದು ಎಂದರೆ ತಪಸ್ಸು ಮಾಡಿದಂತೆ, ರೈತ ಗಿಡಗಳ ಆರೋಗ್ಯವನ್ನು ನಿತ್ಯ ವಿಚಾರಿಸುತ್ತಿರಬೇಕು. ಹೆಸರಿಗೆ ಮಾತ್ರ ದಾಳಿಂಬೆ ಬೆಳೆಯಲು ಮುಂದಾದರೆ ಕೈಸುಟ್ಟುಕೊಳ್ಳುವುದು ಖಾತರಿ. ಇಷ್ಟು ಉತ್ತಮ ಬೆಳೆ ತೆಗೆಯುವುದಕ್ಕೆ ತಜ್ಞರಂತಿರುವ ಇತರೆ ದಾಳಿಂಬೆ ಬೆಳೆಗಾರರಲ್ಲಿನ ಅನುಭವ ಹಂಚಿಕೊಂಡಿದ್ದರಿಂದ ಸಾಧ್ಯವಾಗಿದೆ ಎನ್ನುತ್ತಾರೆ ರೈತ ಕೆ.ಎಸ್.ನಂಜೇಗೌಡ.
– ಡಿ.ಜಿ. ಮಲ್ಲಿಕಾರ್ಜುನ
ದ್ರಾಕ್ಷಿಯಲ್ಲಿ ಹೋದ ಹಣ ವಾಪಸ್ ತಂದು ಕೊಟ್ಟ ದಾಳಿಂಬೆ
ವಿದ್ಯುತ್ ಶಾಕ್‌ನಿಂದ ಯುವಕ ಸಾವು : ಬೆಸ್ಕಾಂ ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ
ನಗರದ ವಾಸಿ ಶಶಿಕುಮಾರ್(23) ವಿದ್ಯುತ್ ಶಾಕ್‌ನಿಂದ ಮೃತಪಟ್ಟಿದ್ದು ಬೆಸ್ಕಾಂನ ಅಧಿಕಾರಿಗಳ ನಿರ್ಲಕ್ಷ್ಯ ದಿಂದಲೆ ಸಾವು ಸಂಭವಿಸಿದ್ದು ಪರಿಹಾರ ನೀಡುವಂತೆ ಬೆಸ್ಕಾಂ ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದರು.
ನಗರದ ಕುರುಬರ ಪೇಟೆ ವಾಸಿ ಶಶಿಕುಮಾರ್ ಮಂಗಳವಾರ ಬೆಳಗ್ಗೆ ದಿಬ್ಬೂರಹಳ್ಳಿ ಬೈಪಾಸ್‌ನ ಕೆರೆ ಅಂಚಿನಲ್ಲಿ ಇರುವ ತನ್ನ ತೋಟಕ್ಕೆ ತೆರಳಿದ್ದು ಅಲ್ಲಿ ವಿದ್ಯುತ್ ಕಂಬದ ಗೈ ವೈರ್‌ನಲ್ಲಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾನೆ.
ಇದರಿಂದ ಕುಪಿತಗೊಂಡ ಮೃತನ ಕುಟುಂಬದವರು, ಅವರ ಬೆಂಬಲಿಗರು ಹಾಗೂ ಹಸಿರು ಸೇನೆ ರೈತ ಸಂಘದ ಕಾರ್ಯಕರ್ತರು ಶವವನ್ನು ಬೆಸ್ಕಾಂ ಕಚೇರಿ ಎದುರು ಇಟ್ಟು ಪ್ರತಿಭಟನೆ ನಡೆಸಿದರು.
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಇನ್ನೂ ಸಹ ಕಬ್ಬಿಣದ ವಿದ್ಯುತ್ ಕಂಬಗಳು ಇದ್ದು ಅವುಗಳಲ್ಲಿ ಮಳೆಗಾಲದಲ್ಲಿ ವಿದ್ಯುತ್ ಪ್ರವಹಿಸಿ ಹಲವರು ಪ್ರಾಣಕ್ಕೂ ಕಂಟಕವಾಗಿವೆ ಎಂದು ಪ್ರತಿಭಟನಾಕಾರರು ದೂರಿದರು.
ಕೂಡಲೆ ಕಬ್ಬಿಣದ ವಿದ್ಯುತ್ ಕಂಬಗಳನ್ನು ತೆಗೆದು ಸಿಮೆಂಟ್ ಕಂಬಗಳನ್ನು ಅಳವಡಿಸಬೇಕು, ಮೃತಪಟ್ಟ ಶಶಿಕುಮಾರ್ ಕುಟುಂಬಕ್ಕೆ ಇಲಾಖೆಯಿಂದ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಬೆಸ್ಕಾಂನ ಎಇಇ ಅನ್ಸರ್‌ಪಾಷ ಮಾತನಾಡಿ, ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಇರುವ ಕಬ್ಬಿಣದ ಕಂಬಗಳನ್ನು ಕೂಡಲೆ ತೆಗೆಸಲು ಕ್ರಮ ತೆಗೆದುಕೊಳ್ಳುತ್ತೇನೆ ಹಾಗೂ ಮೃತರ ಕುಟುಂಬಕ್ಕೆ ಇಲಾಖೆಯಿಂದ ಸಿಗುವ ಪರಿಹಾರವನ್ನು ಕೊಡಿಸುವ ಭರವಸೆ ನೀಡಿದರು.
ಆಹಾರ ನಿಗದಮ ನಿರ್ದೆಶಕ ಎ.ನಾಗರಾಜ್, ರೈತ ಸಂಘದ ಜಿಲ್ಲಾಧ್ಯಕ್ಷ ಬೈರೇಗೌಡ, ಬಿಜೆಪಿ ರೈತ ಮೋರ್ಚದ ಮಂಜುಳಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ನಿರುಪಯುಕ್ತ ತೆರೆದ ಬಾವಿಯು ಅಪಾಯಕಾರಿಯಾಗಿದೆ
ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಹಳ್ಳಿ ಗ್ರಾಮದ ಕಡೆಯಿಂದ ಚಿಕ್ಕಬಳ್ಳಾಪುರ ತಾಲ್ಲೂಕು ಕೊಂಡೇನಹಳ್ಳಿಯ ಕಡೆಗೆ ಸಂಚಾರ ಮಾಡುವ ಮುಖ್ಯರಸ್ತೆಯ ಪಕ್ಕದಲ್ಲೆ ಇರುವ ನಿರುಪಯುಕ್ತವಾಗಿರುವ ತೆರೆದ ಬಾವಿಯಿಂದಾಗಿ ಅನೇಕ ಮಂದಿ ವಾಹನ ಸವಾರರು, ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿಗೆ ಒಳಗಾಗಿದ್ದಾರೆ.
ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಬಳ್ಳಾಪುರಕ್ಕೆ ಸಂಚಾರ ಮಾಡುವ ಮುಖ್ಯರಸ್ತೆಯಾಗಿರುವ ಈ ರಸ್ತೆಯ ತಿರುವಿನಲ್ಲೆ ಬಾವಿಯಿರುವುದರಿಂದ ವೇಗವಾಗಿ ಬರುವ ವಾಹನ ಸವಾರರು, ರಾತ್ರಿಯ ವೇಳೆಯಲ್ಲಿ ತಿರುವು ಗೊತ್ತಾಗದೆ ನೇರವಾಗಿ ಬಾವಿಯೊಳಗೆ ಬೀಳುವಂತಹ ಸಂಭವಗಳೇ ಹೆಚ್ಚಾಗಿದೆ. ಶಾಲಾ ಕಾಲೇಜುಗಳಿಗೆ ಹೋಗುವಂತಹ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಸಂಚಾರ ಮಾಡುತ್ತಾರೆ.
ಸರ್ಕಾರ, ವಿವಿಧ ಯೋಜನೆ ಅಡಿ ಹಾಗೂ ಖಾಸಗಿಯಾಗಿ ಕೊರೆದ ನಿರುಪಯುಕ್ತ ಹಾಗೂ ವಿಫಲ ಕೊಳವೆಬಾವಿ ಮುಚ್ಚಲು ಜಿಲ್ಲಾಡಳಿತ ಗ್ರಾಮ ಪಂಚಾಯಿತಿಗಳಿಗೆ ಆದೇಶ ನೀಡಿದೆ. ನೀರಿಲ್ಲದೆ ಬತ್ತಿಹೋಗಿರುವ ಅಪಾಯಕಾರಿಯಾಗಿ ಪರಿಣಮಿಸಿರುವ ತೆರೆದ ಬಾವಿಗಳನ್ನು ಸಂಪೂರ್ಣವಾಗಿ ಮುಚ್ಚಲು ಕ್ರಮಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಗಮನಹರಿಸಿ, ಇಂತಹ ತೆರೆದ ಬಾವಿಗಳನ್ನು ಮುಚ್ಚಿಸಲು ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ರೈತರಾದ ಜಿ.ಎಂ.ರವಿಚಂದ್ರ, ಮುನಿವೆಂಕಟಪ್ಪ, ಶ್ರೀನಿವಾಸ್, ರಾಮಚಂದ್ರ, ವೆಂಕಟೇಶ್, ಶಿವಕುಮಾರ್, ಜಿ.ಸಿ.ಮುನಿರಾಜು ಒತ್ತಾಯಿಸಿದ್ದಾರೆ.
ನಮ್ಮ ರೈತರನ್ನು ಕಾಪಾಡುತ್ತಿರುವುದು ಹೈನುಗಾರಿಕೆ
ನಮ್ಮ ತಾಲ್ಲೂಕಿನಲ್ಲಿ ಅಂತರ್ಜಲ ಕುಸಿದು ರೇಷ್ಮೆ ಕೃಷಿ ಕೆಲಸ ಕಷ್ಟಕರವಾಗಿದೆ. ಹೀಗಿದ್ದರೂ ನಮ್ಮ ರೈತರನ್ನು ಕಾಪಾಡುತ್ತಿರುವುದು ಕಾಮಧೇನು ಹಸುಗಳು. ಸಾಮೂಹಿಕ ವಿವಾಹದಲ್ಲಿ ಹೊಸ ಜೀವನಕ್ಕೆ ಕಾಲಿಡುತ್ತಿರುವ 91 ಜೋಡಿಗಳಿಗೆ ಹಸುಗಳನ್ನು ನೀಡುತ್ತಿದ್ದು ಅವರ ಜೀವನ ಹಸನಾಗಿರಲಿ ಎಂದು ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ಧಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎನ್.ರವಿಕುಮಾರ್ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಮಂಗಳವಾರ ತಮ್ಮ ತೋಟದಲ್ಲಿ ನೂತನ ವಧೂವರರಿಗೆ ಹಸುಗಳನ್ನು ಟ್ರಸ್ಟ್ ವತಿಯಿಂದ ವಿತರಿಸಿ ಅವರು ಮಾತನಾಡಿದರು.
ನಮ್ಮ ತಾಲ್ಲೂಕು ರೇಷ್ಮೆ ಮತ್ತು ಹೈನುಗಾರಿಕೆಗೆ ಪ್ರಸಿದ್ಧಿ. ಸತತ ಬರಗಾಲದಿಂದ ರೇಷ್ಮೆ ಕೃಷಿ ಕಷ್ಟಕರವಾಗಿದೆ. ಆದರೆ ನಮ್ಮಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಕಾರದಿಂದ ಹೈನುಗಾರಿಕೆಯನ್ನು ನಂಬಿದವರು ಮೋಸಹೋಗಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಬ್ಯಾಟರಾಯಸ್ವಾಮಿ ಸನ್ನಿಧಿಯಲ್ಲಿ ನಡೆಸಿದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಹೊಸಬಾಳಿಗೆ ಕಾಲಿಟ್ಟ ಹೊಸಜೋಡಿಗಳಿಗೆ ಜೀವನೋಪಾಯಕ್ಕಾಗಿ ಸೀಮೆ ಹಸುಗಳನ್ನು ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ಧಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಕೊಡಲಾಗುತ್ತಿದೆ.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ಮನೆಯಲ್ಲಿ ಹಸುವೊಂದಿದ್ದರೆ ಕುಟುಂಬಕ್ಕೆ ಜೀವನಾಧಾರದಂತೆ. ಈ ರೀತಿಯ ಸಾಮೂಹಿಕ ವಿವಾಹ ನಡೆಸಿ ವಧೂವರರಿಗೆ ಹಸುಗಳನ್ನು ನೀಡುತ್ತಿರುವುದು ಪರೋಕ್ಷವಾಗಿ ಹಾಲು ಒಕ್ಕೂಟವನ್ನು ಬಲಪಡಿಸಿದಂತೆ. ಒಂದು ಜೋಡಿ ಮುಂದೆ ಕುಟುಂಬವಾಗಿ ಬೆಳೆದಂತೆ ಒಂದು ಹಸು ಹಲವು ಹಸುಗಳಾಗಿ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿ.ನಾಗರಾಜ್, ಗೋಪಾಲಪ್ಪ, ಕೆ.ಎಸ್.ಮಂಜುನಾಥ್, ಆರ್.ಎ.ಉಮೇಶ್, ತಾದೂರು ರಘು, ರಾಜಶೇಖರ್, ಲಕ್ಷ್ಮಣ, ಯೂಸುಫ್, ಸಮೀವುಲ್ಲ, ಆದಿಲ್‌ಪಾಷ, ಲಕ್ಷ್ಮೀನಾರಾಯಣ್, ಬಶೆಟ್ಟಹಳ್ಳಿ ವೆಂಕಟೇಶ್, ಶ್ರೀನಿವಾಸಗೌಡ, ನಂಜಪ್ಪ, ರಘುರಾಜ್, ಚನ್ನೇಗೌಡ, ಮಾರಪ್ಪ, ಲಕ್ಷ್ಮೀಪತಿ ಹಾಜರಿದ್ದರು.
ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
2017–18ನೇ ಸಾಲಿನ ಶಿಡ್ಲಘಟ್ಟ ತಾಲ್ಲೂಕಿನ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ನಿರ್ವಹಿಸಲಾಗುತ್ತಿರುವ ಮೆಟ್ರಿಕ್ ಪೂರ್ವ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ 5ನೇ ತರಗತಿಯಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಪ್ರವರ್ಗ 1, 2ಎ, 2ಬಿ, 3ಎ, 3ಬಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ವಸತಿ, ಸಮವಸ್ತ್ರ, ಸೋಪು, ನೋಟ್ ಪುಸ್ತಕಗಳನ್ನು ಹಾಗೂ ಇತರೆ ವಸ್ತುಗಳನ್ನು ಒದಗಿಸಲಾಗುವುದು.
ಅರ್ಜಿಗಳನ್ನು ವಿದ್ಯಾರ್ಥಿನಿಲಯದ ಮೇಲ್ವಿಚಾರಕರಿಂದ ಅಥವಾ ತಾಲ್ಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿಯಿಂದ ಉಚಿತವಾಗಿ ಪಡೆದು ಜೂನ್10 ರೊಳಗೆ ಸಲ್ಲಿಸಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಡಿ.ಆರ್.ಶಂಕರ್ ತಿಳಿಸಿದ್ದಾರೆ.
ಜೀವನಪ್ರೀತಿ, ಸಮಾಜಮುಖಿ ಗುಣಗಳನ್ನು ಯುವಜನರು ರೂಢಿಸಿಕೊಳ್ಳಬೇಕು
ಯುವಕರಿಗೆ ಉತ್ತಮ ಮಾರ್ಗದರ್ಶನ ಸಿಗಬೇಕು. ಜೀವನಪ್ರೀತಿ, ಸಮಾಜಮುಖಿ ಗುಣಗಳನ್ನು ಯುವಜನರು ರೂಢಿಸಿಕೊಂಡಾಗ ಮಾತ್ರ ಸಮಾಜದಲ್ಲಿನ ಭ್ರಷ್ಟತೆಗೆ ಕಡಿವಾಣ ಬೀಳುತ್ತದೆ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.
ನಗರದ ನಗರೇಶ್ವರ ಕಲ್ಯಾಣಮಂಟಪದಲ್ಲಿ ಸೋಮವಾರ ಕನ್ನಡ ಸಾರಸ್ವತ ಪರಿಚಾರಿಕೆ(ಕಸಾಪ) ವತಿಯಿಂದ ತಾಲ್ಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಉದ್ದೇಶ ಇತರೇ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವುದಾಗಿದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಷ್ಟೇ ಅಲ್ಲದೆ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದ ವಿದ್ಯಾರ್ಥಿಗಳು, ಕನ್ನಡ ಶಿಕ್ಷಕರು, ಸರ್ಕಾರಿ ಶಾಲೆ ಮತ್ತು ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಲ್ಲಿದ್ದು ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನೂ ಸಹ ಪುರಸ್ಕರಿಸಲಾಗುತ್ತಿದೆ. ಗ್ರಾಮಾಂತರ ಪ್ರತಿಭೆಗಳಿಗೆ, ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಉತ್ತೇಜನ ನೀಡುವ ಉದ್ದೇಶ ಸಫಲವಾಗಲಿ. ಈ ಬಾರಿ ತಾಲ್ಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು 27 ವಿದ್ಯಾರ್ಥಿಗಳು ಪಡೆದಿರುವುದು ಅಭಿನಂದನೀಯ. ಈ ಸಂಖ್ಯೆ ಇನ್ನೂ ಹೆಚ್ಚಾಗಲಿ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಅಂತಾರಾಷ್ಟ್ರೀಯ ವಿದ್ಯಾರ್ಥಿ ಮಾರ್ಗದರ್ಶಿ ಸಂಜೀವ್ ಕುಮಾರ್ ಮಾತನಾಡಿ, ಅಂಕಗಳಷ್ಟೇ ಗಳಿಸಿದರೆ ಸಾಲದು, ವ್ಯಕ್ತಿತ್ವ, ಕೌಶಲ್ಯ ವೃದ್ಧಿಸಿಕೊಳ್ಳಬೇಕು. ಓದುವಾಗಲೇ ಅನಬುಭವಕ್ಕಾಗಿ ದುಡಿಯುವ ಪ್ರವೃತ್ತಿ ಬೆಳೆಯಬೇಕು. ಅಂಕಗಳು ಸಂದರ್ಶಕರ ಕೊಠಡಿಯವರೆಗೆ ಕರೆದೊಯ್ಯಬಲ್ಲದು. ಆದರೆ ನಿಮ್ಮಲ್ಲಿನ ಕೌಶಲ್ಯ, ಅನುಭವ ಉದ್ಯೋಗ ಸಿಗಲು ಸಹಾಯಕವಾಗುತ್ತದೆ. ಕೇವಲ ಪುಸ್ತಕ ಹುಳುಗಳಾಗದಿರಿ. ವಿವಿಧ ಹವ್ಯಾಸ ಅಭಿರುಚಿಗಳು ನಿಮ್ಮದಾಗಲಿ. ಸಂಪರ್ಕ ಕ್ರಾಂತಿಯ ಯುಗದಲ್ಲಿ ಸ್ಮಾರ್ಟ್ ಫೋನ್‌ಗಳು ಮನರಂಜನೆಗಷ್ಟೇ ಅಲ್ಲದೆ ಭವಿಷ್ಯ ರೂಪಿಸಿಕೊಳ್ಳಲು ಬಳಸಿಕೊಳ್ಳಿ ಎಂದು ನುಡಿದರು.
ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಹುಟ್ಟುವಾಗಲೇ ಯಾರೂ ಸಾಧಕರಾಗುವುದಿಲ್ಲ. ಉತ್ತಮ ಗುಣಗಳನ್ನು ಬೆಳೆಸಿಕೊಂಡು ಕಷ್ಟಪಟ್ಟು ಗುರಿಯನ್ನು ಮುಟ್ಟಿದಾಗ ಮಾತ್ರ ಸಾಧನೆ ಆಗುತ್ತದೆ. ತಾಲ್ಲೂಕಿನಲ್ಲಿ ಹೆಚ್ಚು ಮಂದಿ ಸಾಧಕರು ಸೃಷ್ಟಿಯಾಗಬೇಕು ಎಂಬ ಉದ್ದೇಶದಿಂದ ಸಾಧಕರನ್ನು ಕರೆಸಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತಿರುವುದಾಗಿ ಹೇಳಿದರು.
ತಾಲ್ಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸರ್ಕಾರಿ ಪ್ರೌಢಶಾಲೆ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದ 27 ವಿದ್ಯಾರ್ಥಿಗಳು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲ್ಲೂಕಿನಲ್ಲಿ ಹೆಚ್ಚು ಅಂಕ ಗಳಿಸಿರುವ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳು, ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಲ್ಲಿದ್ದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳು, ಕನ್ನಡ ಶಿಕ್ಷಕರು, ಶೇಕಡಾ 100 ರಷ್ಟು ಫಲಿತಾಂಶ ಪಡೆದಿರುವ ತಾಲ್ಲೂಕಿನ ಏಳು ಶಾಲೆಗಳ ಮುಖ್ಯಶಿಕ್ಷಕರನ್ನು ಸನ್ಮಾನಿಸಲಾಯಿತು.
ತಾಲ್ಲೂಕಿನ ತುಮ್ಮನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿ ನರಸಿಂಹಮೂರ್ತಿಗೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ ಪ್ರೋತ್ಸಾಹದಾಯಕವಾಗಿ ಲ್ಯಾಪ್‌ಟಾಪ್ ನೀಡಿದರು.
ತಾಲ್ಲೂಕು ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ಜಿಲ್ಲಾ ಕಸಾಪ ಮಾಜಿ ಕಾರ್ಯದರ್ಶಿ ಅಮೃತ್‌ಕುಮಾರ್, ಕನ್ನಡ ಸಾರಸ್ವತ ಪರಿಚಾರಿಕೆ(ಕಸಾಪ) ಸದಸ್ಯರಾದ ಎ.ಎಂ.ತ್ಯಾಗರಾಜ್, ಸತೀಶ್, ಚಾಂದ್‌ಪಾಷ, ದೇವರಾಜ್, ಕೊತ್ತನೂರು ನಾಗರಾಜ್, ಅಂಬರೀಷ್ ಹಾಜರಿದ್ದರು.
ಜಂಗಮಕೋಟೆಯಲ್ಲಿ ಮುಕ್ತಾಯಗೊಂಡ ಬೇಸಿಗೆ ಶಿಬಿರ
ಈಗಿನ ತಾಂತ್ರಿಕ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಕ್ರೀಡೆ, ಕಲೆ ಮುಂತಾದ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ತಮಗೆ ಆಸಕ್ತಿಯಿರುವ ಕ್ಷೇತ್ರವನ್ನು ಆಯ್ಕೆ ಮಾಡುವ ಸ್ವತಂತ್ರ್ಯ ಮಕ್ಕಳು ಬೆಳೆಸಿಕೊಳ್ಳಬೇಕು ಎಂದು ಜಂಗಮಕೋಟೆ ಗ್ರಾಮ ಪಂಚಾಯ್ತಿ ಸದಸ್ಯೆ ರಹಮತ್‌ಜಾನ್ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿನಿಲಯದಲ್ಲಿ ಬಾಲವಿಕಾಸ ಅಕಾಡೆಮಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿದ್ದ 10 ದಿನಗಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇವಲ ಪಠ್ಯವಷ್ಟೇ ಕಲಿತರೆ ಸಾಲದು. ಜೀವನದಲ್ಲಿ ಏಳಿಗೆ ಕಾಣಲು ಮಾನವೀಯ ಮೌಲ್ಯಗಳು ಬಹಳ ಮುಖ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.
ಗ್ರಾಮ ಪಂಚಾಯ್ತಿ ಸದಸ್ಯ ಮುನಸಿರ್‌ಪಾಷ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಲಕ್ಷ್ಮೀದೇವಮ್ಮ, ಕರಾಟೆ ಶಿಕ್ಷಕರಾದ ಎಸ್.ಮಹಮ್ಮದ್, ಎಸ್.ನೂರುಲ್ಲ, ಯೋಗ ಶಿಕ್ಷಕಿ ದ್ರಾಕ್ಷಾಯಿಣಿ, ಚಿತ್ರಕಲೆ ಶಿಕ್ಷಕ ಅಬ್ದುಲ್ ಸತ್ತಾರ್, ಸಂಗೀತ ಶಿಕ್ಷಕ ರಾಮಮೂರ್ತಿ, ನೃತ್ಯ ಶಿಕ್ಷಕಿ ಹರ್ಷಿಯಾ ಹಾಜರಿದ್ದರು.
ಮಾತು ತಪ್ಪಿದ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬೈಕ್ ರ್ಯಾಲಿ
ಬಯಲುಸೀಮೆ ಪ್ರದೇಶಕ್ಕೆ ಕೃಷಿ ಆಧಾರಿತ ನೀರಾವರಿ ಯೋಜನೆ ಜಾರಿಗೊಳಿಸಲು ಮಾತು ತಪ್ಪಿದ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬೈಕ್ ರ್ಯಾಪಲಿ ಮೂಲಕ ವಿಧಾನ ಸೌಧ ಮುತ್ತಿಗೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಹೇಳಿದರು.
ಈ ಕುರಿತು ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ರೈತರ ಹಾಗು ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮುಂಬರುವ ಜೂನ್ ೦೧ ರ ಗುರುವಾರ ಬೈಕ್ ರ್ಯಾಲಿ ಮೂಲಕ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮಕ್ಕೆ ತಾಲ್ಲೂಕಿನಾಧ್ಯಂತ ಇರುವ ರೈತರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಸರ್ಕಾರಕ್ಕೆ ಎಚ್ಚರ ನೀಡಬೇಕಿದೆ ಎಂದರು.
ಬಯಲುಸೀಮೆ ಭಾಗದಲ್ಲಿ ಇಂದು ಕುಡಿಯುವ ನೀರಿಗೂ ಆಹಾಕಾರ ಉಂಟಾಗಿದ್ದು ಕೃಷಿ ಆಧಾರಿತ ನೀರಾವರಿ ಯೋಜನೆ ರೂಪಿಸಬೇಕು ಎಂದು ಕಳೆದ ಎರಡು ದಶಕಗಳಿಂದ ಜಿಲ್ಲೆಯಲ್ಲಿ ವಿವಿಧ ಹೋರಾಟಗಳನ್ನು ಮಾಡಲಾಗುತ್ತಿದೆ. ಆದರೂ ಸರ್ಕಾರ ಹಾಗು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಯಾವುದೇ ನೀರಾವರಿ ಯೋಜನೆಗಳು ಅನುಷ್ಠಾನವಾಗಿಲ್ಲ. ಕೃಷಿಯನ್ನೇ ನಂಬಿ ಜೀವಿಸುತ್ತಿದ್ದ ರೈತ ಇದೀಗ ನಗರಗಳ ಕಡೆ ವಲಸೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ೨೦೧೫ ರಲ್ಲಿ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಸುಮಾರು ೧೬೯ ದಿನಗಳ ಕಾಲ ನಿರಂತರ ಧರಣಿ ಸತ್ಯಾಗ್ರಹ ಸೇರಿದಂತೆ ಕಳೆದ ೨೦೧೬ ರಲ್ಲಿ ಸಾವಿರಾರು ಟ್ರಾಕ್ಟರ್‌ಗಳ ಮೂಲಕ ವಿಧಾನಸೌಧ ಮುತ್ತಿಗೆ ನಂತರ ಎಚ್ಚೆತ್ತ ಸರ್ಕಾರ ನೀರಾವರಿ ಹೋರಾಟಗಾರರ ಸಭೆ ಕರೆದು ಈ ಭಾಗದ ಜನರ ಬೇಡಿಕೆಯಂತೆ ನೀರಿನ ಮೂಲಗಳ ಅಧ್ಯಯನಕ್ಕಾಗಿ ತಜ್ಞರ ಸಮಿತಿ, ಕಾಲ ಕಾಲಕ್ಕೆ ಪರಿಶೀಲನೆಗಾಗಿ ಮೇಲುಸ್ತುವಾರಿ ಸಮಿತಿ, ಕರ್ನಾಟಕ ನೀರಾವರಿ ಸಮಿತಿ ರಚಿಸುವುದಾಗಿ ಮಾತು ಕೊಟ್ಟು ವರ್ಷವಾದರೂ ಯಾವುದೇ ಪ್ರಗತಿ ಕಂಡಿಲ್ಲ.
ಇನ್ನು ರೈತರ ಮೇಲೆ ಹಾಕಿದ್ದ ಸುಳ್ಳು ಮೊಕದ್ದಮೆಗಳನ್ನು ವಾಪಸ್ ಪಡೆಯುವುದಾಗಿ ಹೇಳಿದ್ದ ಸರ್ಕಾರ ರೈತರಿಗೆ ಸಮನ್ಸ್ ನೀಡಿ ಹೋರಾಟಗಳನ್ನು ಹತ್ತಿಕ್ಕುವ ಹುನ್ನಾರ ನಡೆಸುತ್ತಿದ್ದು ರೈತ ವಿರೋಧಿ ನೀತಿ ಹಾಗು ಕೊಟ್ಟ ಮಾತಿನಂತೆ ನಡೆಯದೇ ಮಾತಿಗೆ ತಪ್ಪಿದ ಸರ್ಕಾರದ ವಿರುದ್ದ ಆಯೋಜಿಸಲಾಗಿರುವ ಬೃಹತ್ ಬೈಕ್ ರ್ಯಾಸಲಿಯಲ್ಲಿ ಹೆಚ್ಚಿನ ಸಂಖ್ಯೆಯ ರೈತರು, ವಿವಿಧ ಸಂಘಟನೆ ಪದಾಧಿಕಾರಿಗಳು ಹಾಗು ವಿದ್ಯಾರ್ಥಿಗಳು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ರೈತಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಎಸ್.ಎಂ.ನಾರಾಯಣಸ್ವಾಮಿ, ವೇಣುಗೋಪಾಲ್ ಹಾಜರಿದ್ದರು.
ಸಿಪಿಎಂ ಪಕ್ಷದ ಕಾಲ್ನಡಿಗೆ ಜಾಥಾ
ಪಕ್ಷಾತೀತವಾದ, ಜಾತ್ಯಾತೀತವಾದ ಜನರಿಗಾಗಿ ನಡೆಸುತ್ತಿರುವ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದೇವೆ. ಇಲ್ಲಿನ ಜನರ ಬದುಕು ಉಳಿಯಲು ಎಲ್ಲಾ ವರ್ಗದ ಜನರು ಬೆಂಬಲಿಸಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ ತಿಳಿಸಿದರು.
ಸಿಪಿಎಂ ಪಕ್ಷ ಜಿಲ್ಲಾಧ್ಯಂತ ಕಾಲ್ನಡಿಗೆ ಜಾಥಾ ನಡೆಸುತ್ತಿದ್ದು, ಚಿಂತಾಮಣಿ ತಾಲ್ಲೂಕನ್ನು ಮುಗಿಸಿಕೊಂಡು ತಾಲ್ಲೂಕಿನ ಗಂಜಿಗುಂಟೆ ಹೋಬಳಿಯಿಂದ ಶನಿವಾರ ಮಧ್ಯಾಹ್ನ ನಗರವನ್ನು ಪ್ರವೇಶಿಸಿ ಅವರು ಮಾತನಾಡಿದರು.
ಕಳೆದ ಆರು ವರ್ಷಗಳಿಂದ ನಮ್ಮ ಜಿಲ್ಲೆ ಸತತವಾಗಿ ಬರಗಾಲಕ್ಕೆ ತುತ್ತಾಗಿದೆ. ಕುಡಿಯುವ ನೀರಿಗೂ ಸಹ ಕಷ್ಟವಾಗಿದೆ. ಜಾನುವಾರುಗಳ ಮೇವಿಗೂ ದುಸ್ತರವಾಗಿದೆ. ರೈತರು ಸಂಪೂರ್ಣವಾಗಿ ಸಾಲದ ಕೂಪದಲ್ಲಿ ಮುಳುಗಿದ್ದಾರೆ. ಕೃಷಿ ಕಾರ್ಮಿಕರಿಗೆ ಕೆಲಸವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಜ್ವಲಂತ ಸಮಸ್ಯೆಯ ಬಗ್ಗೆ ಇದುವರೆಗೂ ಜಿಲ್ಲಾಡಳಿತವಾಗಲಿ, ಸರ್ಕಾರವಾಗಲಿ ಮಾತನಾಡದಿರುವುದು ದೊಡ್ಡ ದುರಂತ.
ಕಾಲ್ನಡಿಗೆಯ ಮೂಲಕ ಜನರನ್ನು ಮುಟ್ಟಬೇಕು. ಅವರ ಸಮಸ್ಯೆಗಳು ಆಳುವ ಸರ್ಕಾರಕ್ಕೆ ಮುಟ್ಟಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ.
ರೈತರ ಸಾಲ ಮನ್ನಾ ಮಾಡಬೇಕು. ಬೆಳೆ ನಷ್ಟ ಹೊಂದಿದವರಿಗೆ ಎಕರೆಗೆ 25 ಸಾವಿರ ರೂಗಳು ಪರಿಹಾರವಾಗಿ ನೀಡಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು. 200 ದಿನಗಳ ಕೆಲಸವನ್ನು ನೀಡಬೇಕು. ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರನ್ನು ಸಮರ್ಪಕವಾಗಿ ವಿತರಿಸಬೇಕು. ಬಡವರಿಗೆ ನಿವೇಶನ ಮತ್ತು ಮನೆ ನೀಡಬೇಕು. ಹಲವೆಡೆ ಶೌಚಾಲಯ ನಿರ್ಮಿಸಿಕೊಂಡವರಿಗೆ ಸರ್ಕಾರದಿಂದ ಬರಬೇಕಾದ ಹಣ ಬಿಡುಗಡೆಯಾಗಿಲ್ಲ ಮುಂತಾದ ಜನರ ಸಮಸ್ಯೆಗಳನ್ನು ಬೇಡಿಕೆಗಳನ್ನು ಈಡೇಸಿಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ.
ನಾವು ಹೋದೆಡೆಯಲ್ಲೆಲ್ಲಾ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಜನರು ತಮ್ಮ ಸಮಸ್ಯೆಗಳನ್ನು ವಿವರಿಸುತ್ತಾ ಆಗಿರುವ ಅನ್ಯಾಯವನ್ನು ಹೇಳುತ್ತಿದ್ದಾರೆ. ಜೂನ್ 3ನೇ ತಾರೀಖು ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಕಚೇರಿಗೆ ಸುಮಾರು 15 ಸಾವಿರ ಜನ ರೈತ ಮುತ್ತಿಗೆ ಕಾರ್ಯಕ್ರಮವಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಒಟ್ಟು 564 ಕಿ.ಮೀ ಕಾಲ್ನಡಿಗೆ ಜಾಥಾ ನಡೆಸಲಿದ್ದೇವೆ. 448 ಹಳ್ಳಿಗಳನ್ನು ನಾವು ಭೇಟಿ ಮಾಡುತ್ತಿದ್ದೇವೆ ಎಂದು ವಿವರಿಸಿದರು.
ಸಿಪಿಎಂ ಮುಖಂಡರಾದ ಸಾವಿತ್ರಮ್ಮ, ಶ್ರೀನಿವಾಸ್, ಮುನಿಕೃಷ್ಣಪ್ಪ, ಶಿವಣ್ಣ, ಜೆ.ಶ್ರೀನಿವಾಸ್, ವಿಶ್ವನಾಥರೆಡ್ಡಿ, ರಾಮಲಿಂಗಪ್ಪ ಹಾಜರಿದ್ದರು.
ವನದೇವಿಯ ಮುಡಿಚೆಂಡು
ಮೊದಲ ಮಳೆಗಾಗಿ ರೈತರು ಎದುರು ನೋಡುತ್ತಾರೆ. ಬಿಸಿಲ ಬೇಗೆಗೆ ಬೆಂದವರೆಲ್ಲರಿಗೂ ಕೂಡ ಮೊದಲ ಮಳೆಯ ಸುವಾಸನೆ ಬಲು ಇಷ್ಟ. ಮೊದಲ ಮಳೆಗೆ ಕಾಯುತ್ತಿದ್ದಂತೆ ಭೂಮಿಯಾಳದಿಂದ ವನದೇವಿಯ ಮುಡಿಚೆಂಡು ಹೊರಹೊಮ್ಮುತ್ತದೆ. ಇದನ್ನು ಬ್ಲಡ್ಲಿಲ್ಲಿ ಎಂದು ಕರೆಯುತ್ತಾರೆ.
ಬಯಲುಸೀಮೆಯಲ್ಲಿ ಅಪರೂಪವಾದ ಈ ಹೂವು ತಾಲ್ಲೂಕಿನ ಬೋದಗೂರಿನ ಸಾವಯವ ಕೃಷಿಕ ವೆಂಟಕಸ್ವಾಮಿರೆಡ್ಡಿ ಅವರ ತೋಟದಲ್ಲಿ ಸುಂದರವಾಗಿ ಅರಳಿನಿಂತಿದೆ. ಫುಟ್ಬಾಲ್ ಗಾತ್ರದಷ್ಟು ದೊಡ್ಡದಾಗಿ ಅರಳಿರುವ ಎರಡು ಹೂಗಳು ಮತ್ತು ಇನ್ನೇನು ಅರಳಲು ಸಿದ್ಧತೆನಡೆಸಿರುವ ಮತ್ತೊಂದು ಹೂ ಆಕರ್ಷಕವಾಗಿದ್ದು ಹೂ ಪ್ರಿಯರನ್ನು ಆಹ್ವಾನಿಸುತ್ತಿದೆ.
ಆಕರ್ಷಕ ಹೂಗಳಲ್ಲಿ ಬ್ಲಡ್ಲಿಲ್ಲಿಯೂ ಒಂದು. ಈ ಹೂವಿನ ಸಸ್ಯ ಶಾಸ್ತ್ರೀಯ ಹೆಸರು ಹೆಕ್ಮಂಥಸ್ ಕೊಕ್ಸೀನಿಯಸ್. ಇದು ದಕ್ಷಿಣಾ ಆಫ್ರಿಕಾದಿಂದ ಬಂದ ಸಸ್ಯ.
ಮೊದಲ ಮಳೆಯ ಹೂವಿದು. ರಕ್ತಕೆಂಪು ಬಣ್ಣದ ಈ ಹೂ, ಬಲಿತಂತೆ ಗುಲಾಬಿ ಬಣ್ಣಕ್ಕೆ ತಿರುಗಿ, ಅನಂತರ ಹಸುರು ಬಣ್ಣಕ್ಕೆ ತಿರುಗುವ ಪ್ರಕ್ರಿಯೆ ನೋಡಲು ಆಹ್ಲಾದಕರ. ಕೊನೆಗೆ ಅದರ ದಂಟಿನಂತೆಯೇ ಹೂಗಳು ಉದುರಿ, ಅದರಲ್ಲಿ ಹಳದಿ ಬಣ್ಣದ ಹಣ್ಣುಗಳಾಗುತ್ತವೆ. ಬೀಜಗಳಿಂದ ಸಸ್ಯ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ನೆಲದಾಳದಲ್ಲಿ ಗಡ್ಡೆಗಳನ್ನು ನೆಟ್ಟು, ಬಹುದಿನ ಕಾಲ ಬಾಳುವ ಈ ಹೂವಿನ ಸಸ್ಯವನ್ನು ಅಭಿವೃದ್ಧಿಪಡಿಸಬಹುದು. ನಿಧಾನವಾಗಿ ನೆಲದಾಳದಲ್ಲಿ ಗಡ್ಡೆಗಳು ದ್ವಿಗುಣಗೊಂಡು, ವರ್ಷಗಳು ಕಳೆದಂತೆ ಹೂವಿನ ತೋರಣದ ಸಾಲು ಕಾಣಸಿಗುತ್ತದೆ.
ಗರುಡಲಿಲ್ಲಿ, ವಾಟರ್ಲಿಲ್ಲಿ, ಸಿಡಿಲಮರಿ, ಥಂಡರ್ಲಿಲ್ಲಿ, ತಿಂಗಳರಾಣಿ, ಮ್ಯಾಗ್ಮಿಲಿಯಾ, ಲ್ಯಾಟ್ರಿನ್ಬ್ರಶ್, ಗದಾ ಪುಷ್ಪ ಎಂದು ಇದಕ್ಕೆ ಹಲವಾರು ನಾಮಧೇಯಗಳು. ಹೂಗಳಿಂದ ತುಂಬಿದ ಗೋಲಾಕಾರದ ಬೆಡಗಿ, ಲಾವಣ್ಯವತಿಯಾಗಿ ರಸಿಕರ ಕಣ್ಮನಗಳಿಗೆ ಹರ್ಷೋಲ್ಲಾಸ ತುಂಬುತ್ತದೆ.
ಒಮ್ಮೆ ಮಾತ್ರ ಅರಳುವ ಅಪರೂಪ್ ಈ ಅತಿಥಿ ಚೆಲ್ಲುವ ಸೌಂದರ್ಯವನ್ನು ಕಂಡಾಗ ಅದರ ಅಸ್ತಿತ್ವ ಸಾರ್ಥಕ ಎನ್ನಿಸುತ್ತದೆ. ಇದೊಂದು ಸಂಯುಕ್ತ ಹೂ. ಪ್ರತಿ ಹೂವಿನಲ್ಲಿ ಸೂಜಿಯಾಕಾರದಲ್ಲಿ ಏಳು ದಳಗಳಿರುತ್ತವೆ. ಅದರ ತಳಭಾಗದಲ್ಲಿ ಆರು ತೆಳ್ಳಗಿನ ದಳಗಳಂತಿರುವ ಪುಷ್ಪಪಾತ್ರೆ ಇರುತ್ತದೆ. ಈ ರೀತಿಯ ಹೂಗಳು ಒಂದೇ ಮುಷ್ಟಿಯಲ್ಲಿ ಅದುಮಿ ಹಿಡಿದಂತೆ ಗೋಲಾಕಾರವಾಗಿ ಇರುತ್ತವೆ. ಬಯಲಿನಲ್ಲಿ ಭುಮಿಯನ್ನು ಸೀಳಿಬಂದಂತೆ ಬಾಣದಂತಿರುವ ಮೊಗ್ಗು ಹೊರಚಿಮ್ಮಿ ನಿಧಾನವಾಗಿ ಹೂವಾಗಿ ಅರಳುತ್ತದೆ.
‘ನಾನು ಯಾವುದೇ ಕೃಷಿ ಮೇಳಕ್ಕೆ ಹೋಗಲಿ ಅಥವಾ ಕೃಷ್ಇ ಅಧ್ಯಯನ ಪ್ರವಾಸಕ್ಕೆ ಹೋಗಲಿ ವಿಶೇಷವಾಗಿ ಕಂಡ ಸಸ್ಯಗಳನ್ನು ತಂದು ನಮ್ಮ ತೋಟದಲ್ಲಿ ನೆಡುತ್ತೇನೆ. ಅದೇ ರೀತಿಯಲ್ಲಿ ತಂದು ನೆಟ್ಟ ಗಡ್ಡೆಯಿಂದ ಬ್ಲಡ್ಲಿಲ್ಲಿ ಹೂಗಳು ಅರಳಿವೆ. ನಮ್ಮ ತೋಟಕ್ಕೆ ಭೇಟಿ ನೀಡುವವರೆಲ್ಲ ಈ ಹೂಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಭಾಗದಲ್ಲಿ ಅಪರೂಪವೆನಿಸುವ ಈ ಹೂ ಇಷ್ಟೊಂದು ದೊಡ್ಡ ಗಾತ್ರದಲ್ಲಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ನಮ್ಮ ತೋಟ ಸಾವಯವದ್ದಾಗಿರುವುದೂ ಇದಕ್ಕೆ ಕಾರಣವಿರಬಹುದು. ಅಲಂಕಾರಿಕವಾಗಿಯೂ ಈ ಹೂಗಳನ್ನು ಬಳಸಬಹುದು. ಅನೇಕ ದಿನಗಳವರೆಗೂ ಬಾಡದಂತೆ, ಆಗತಾನೆ ಗಿಡದಿಂದ ಕಿತ್ತಂತೆ, ಕೆಲವು ದಿನಗಳ ಕಾಲ ಇದನ್ನು ಕಾಯ್ದಿಡಲು ಸಾಧ್ಯ’ ಎನ್ನುತ್ತಾರೆ ಸಾವಯವ ಕೃಷಿಕ ಬೋದಗೂರು ವೆಂಕಟಸ್ವಾಮಿರೆಡ್ಡಿ.
– ಡಿ.ಜಿ.ಮಲ್ಲಿಕಾರ್ಜುನ
ಪ್ರಾದೇಶಿಕ ಪಕ್ಷ ಅಧಿಕಾರದಲ್ಲಿದ್ದರೆ ಮಾತ್ರ ಜನರ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯ
ಪ್ರಾದೇಶಿಕ ಪಕ್ಷ ಅಧಿಕಾರದಲ್ಲಿದ್ದರೆ ಮಾತ್ರ ಜನರ ಸಮಸ್ಯೆಗಳನ್ನು ನಿವಾರಿಸಲು ಮತ್ತು ರೈತರಿಗೆ ಅನುಕೂಲವಾಗಲು ಸಾಧ್ಯ. ಎಂಬತ್ತೈದು ವರ್ಷಗಳ ನಾನು ರಾಜಕೀಯ ಮಾಡಬೇಕಾದ ಅಗತ್ಯವಿಲ್ಲ. ಸ್ವಾರ್ಥವೂ ಇಲ್ಲ. ಜನರ ಸಮಸ್ಯೆಗಳನ್ನು ಪರಿಹರಿಸಲು ಶಕ್ತಿ ಮೀರಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.
ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಬ್ಯಾಟರಾಯಸ್ವಾಮಿ ದೇವಾಲಯದ ಆವರಣದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ನಡೆದ 101 ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಭಾಗವಹಿಸಿ ವಧೂವರರನ್ನು ಆಶೀರ್ವದಿಸಿ ಅವರು ಮಾತನಾಡಿದರು.
ಅವಿಭಾಜಿತ ಕೋಲಾರ ಜಿಲ್ಲೆ ಹಿಂದಿನಿಂದಲೂ ಜೆಡಿಎಸ್ ಪಕ್ಷದ ಭದ್ರ ಬುನಾದಿಯಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನರು ಮೊದಲಿನಿಂದಲೂ ನಮಗೆ ಆಶೀರ್ವಾದ ಮಾಡುತ್ತಿದ್ದಾರೆ. ನನ್ನ ಹುಟ್ಟುಹಬ್ಬದ ಪ್ರಯುಕ್ತ ಜೆಡಿಎಸ್ ಪಕ್ಷದಿಂದ 101 ಸಾಮೂಹಿಕ ವಿವಾಹ ನಡೆಸಿ ಅವರ ಬಾಳಿಗೆ ಅನುಕೂಲ ಮಾಡಿಕೊಟ್ಟು, ಪಕ್ಷದ ಸಿದ್ದಾಂತದಂತೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರಿಗೆ ರುದ್ರಭೂಮಿಗಾಗಿ 4.08 ಎಕರೆ ಜಮೀನನ್ನು ನೀಡುವ ಮತ್ತು ವಾಲ್ಮೀಕಿ ಜನಾಂಗದವರಿಗೆ ಉಚಿತ ನಿವೇಶನ ನೀಡುತ್ತಿರುವ ಉದಾತ್ತ ಗುಣ ಅಭಿನಂದನೀಯ ಎಂದು ಹೇಳಿದರು.
ಶಿಡ್ಲಘಟ್ಟ ಕ್ಷೇತ್ರದ ಶಾಸಕ ಎಂ.ರಾಜಣ್ಣ ಹಾಗೂ ಮುಖಂಡ ಬಿ.ಎನ್.ರವಿಕುಮಾರ್ ಇವರಿಬ್ಬರೂ ನನಗೆ ಎರಡು ಕಣ್ಣುಗಳಿದ್ದಂತೆ. ನಾನು ಶ್ರೀರಾಮ ನಾದರೆ ನೀವು ಲವ-ಕುಶರಿದ್ದಂತೆ ಹಾಗಾಗಿ ಇಬ್ಬರೂ ಒಗ್ಗಟ್ಟಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ. ಇಬ್ಬರನ್ನು ವಿಧಾನಸಭೆಗೆ ಯಾವ ರೀತಿ ಕರೆದೊಯ್ಯಬೇಕು ಎನ್ನುವುದು ನನಗೆ ಗೊತ್ತಿದೆ. ಪಕ್ಷದಲ್ಲಿ ಇಬ್ಬರಿಗೂ ಉತ್ತಮ ಸ್ಥಾನ ಮಾನ ನೀಡುವ ಜವಾಬ್ದಾರಿ ನನಗೆ ಬಿಡಿ ಎಂದರು.
ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ಹಾಗು ರಾಜ್ಯದ ಕಾಂಗ್ರೆಸ್ ಸರ್ಕಾರದಿಂದ ರೈತರ ಸಾಲ ಮನ್ನಾ ಮಾಡಲು ಆಗಿಲ್ಲ. ಮುಂಬರುವ ಚುನಾವಣೆಯಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಅಧಿಕಾರ ಹಿಡಿಯಲಿದ್ದು ಅಧಿಕಾರಕ್ಕೆ ಬಂದ ಕೇವಲ ೨೪ ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವ ತೀರ್ಮಾನವನ್ನು ಪಕ್ಷ ಕೈಗೊಂಡಿದೆ. ಹಾಗಾಗಿ ಪಕ್ಷದ ಎಲ್ಲಾ ಕಾರ್ಯಕರ್ತರು ಒಗ್ಗಟ್ಟಾಗಿ ದುಡಿಯುವ ಮೂಲಕ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರ ಹಿಡಿಯುವಂತೆ ಮಾಡಬೇಕು ಎಂದು ಹೇಳಿದರು.
ಎಚ್.ಡಿ.ದೇವೇಗೌಡ ಹಾಗು ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ಧಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎನ್.ರವಿಕುಮಾರ್ ಮಾತನಾಡಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ೮೫ ನೇ ಹುಟ್ಟುಹಬ್ಬದ ಅಂಗವಾಗಿ ಅವರ ಮೇಲಿನ ಅಭಿಮಾನದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮುಂಬರುವ ದಿನಗಳಲ್ಲಿ ಟ್ರಸ್ಟ್ ವತಿಯಿಂದ ಸಾಮಾಜಿಕ ಕಾರ್ಯಕ್ರಮಗಳು ಸೇರಿದಂತೆ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಕುಮಾರಸ್ವಾಮಿ ಅವರ ಅಧಿಕಾರದ ಅವಧಿಯ ಜನಪ್ರಿಯ ಕಾರ್ಯಕ್ರಮಗಳು ಜೆಡಿಎಸ್ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಬಹುಮತದೊಂದಿಗೆ ಅಧಿಕಾರಕ್ಕೆ ತರಲಿವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಎಚ್.ಡಿ.ದೇವೇಗೌಡ ಹಾಗು ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ಧಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎನ್.ರವಿಕುಮಾರ್, ತಾಲ್ಲೂಕಿನ ಜನರ, ರೈತರ, ನಿರುದ್ಯೋಗಿಗಳ ಹಾಗೂ ನೀರಿನ ಸಮಸ್ಯೆಗಳನ್ನು ನಿವಾರಿಸಲು ಶಾಶ್ವತ ಯೋಜನೆ ಹಾಗೂ ವಿದ್ಯಾರ್ಥಿಗಳ ತಾಂತ್ರಿಕ ಶಿಕ್ಷಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಿದರು.
ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಕೆ.ವಿ.ನಾಗರಾಜ್, ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ವಿಧಾನಪರಿಷತ್ ಸದಸ್ಯರಾದ ಮನೋಹರ್, ಚೌಡರೆಡ್ಡಿ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬಂಕ್ ಮುನಿಯಪ್ಪ, ಜಯರಾಮರೆಡ್ಡಿ, ತನುಜಾ ರಘು, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶಿವಾರೆಡ್ಡಿ, ಪಿ.ವಿ.ನಾಗರಾಜ್, ಜೆಡಿಎಸ್.ತಾಲ್ಲೂಕು ಅಧ್ಯಕ್ಷ ಧನಂಜಯರೆಡ್ಡಿ, ನಗರಸಭಾ ಅಧ್ಯಕ್ಷ ಅಫ್ಸರ್ಪಾಷ, ಬಿ.ನಾರಾಯಣಸ್ವಾಮಿ, ಆರ್.ಎ.ಉಮೇಶ್, ಕೆ.ಎಸ್.ಮಂಜುನಾಥ್, ರಾಜಶೇಖರ್, ಸಯ್ಯದ್, ಸಲೀಂಪಾಷ, ಹೈದರಾಲಿ, ಅಮೀರ್ಜಾನ್, ಫಯಾಜ್ ಹಾಜರಿದ್ದರು.
ಅಂಧ ಮಕ್ಕಳ ಶಾಲೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ
ನಗರದ ಆಶಾಕಿರಣ ಅಂಧ ಮಕ್ಕಳ ಉಚಿತ ವಸತಿಯುತ ಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವುದರ ಮೂಲಕ ಅಂಧ ಮಕ್ಕಳ ಶಾಲೆಯು ಒಂಭತ್ತನೇ ವರ್ಷ ಸತತವಾಗಿ ಶೇ.100 ರಷ್ಟು ಫಲಿತಾಂಶವನ್ನು ದಾಖಲಿಸಿದೆ.
ಈ ಬಾರಿ ಆರು ಮಂದಿ ಅಂಧ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಡಿ.ಮನೋಹರ 539(86.2%), ಜಾಸ್ಮಿನ್‌ತಾಜ್ 516(82.6%), ಮುತ್ತುರಾಜು 498(79.7%), ಬಿ.ಡಿ.ಶಿವರಾಜ್ 498(79.7%), ಶಿವಕುಮಾರ್ 470(75.2%), ಸಿ.ಎನ್.ನಿರಂಜನ್ 470 (75.2%) ಅಂಕಗಳನ್ನು ಪಡೆದಿದ್ದಾರೆ.
1. ಡಿ.ಮನೋಹರ 539(86.2%)
2. ಜಾಸ್ಮಿನ್‌ತಾಜ್ 516(82.6%)
3. ಮುತ್ತುರಾಜು 498(79.7%)
4. ಬಿ.ಡಿ.ಶಿವರಾಜ್ 498(79.7%)
5. ಶಿವಕುಮಾರ್ 470(75.2%)
6. ಸಿ.ಎನ್.ನಿರಂಜನ್ 470 (75.2%)
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ – ಸಾಮಾನ್ಯರ ಮಕ್ಕಳ ಅಸಾಮಾನ್ಯ ಸಾಧನೆಗಳು
ಗ್ರಾಮವಾಸಿಗಳು, ರೈತರ ಮಕ್ಕಳು, ಶಿಕ್ಷಕರ ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಈ ಬಾರಿ ತಾಲ್ಲೂಕಿನಲ್ಲಿ ಗಳಿಸುವ ಮೂಲಕ ಸಾಮಾನ್ಯ ಕುಟುಂಬದಿಂದ ಬಂದರೂ ಅಸಾಮಾನ್ಯ ಸಾಧಕರಾಗಿ ಹೊರಹೊಮ್ಮಿದ್ದಾರೆ.
ಹನುಮಂತಪುರ ಗೇಟ್ ಬಳಿಯ ಬಿಜಿಎಸ್ ವಿದ್ಯಾಸಂಸ್ಥೆಯ ಎಚ್.ಎನ್.ಧನುಶ್ರೀ 617(98.7%) ಶಿಕ್ಷಕರ ಮಗಳು, ಕೆ.ಎನ್.ಅರ್ಚನಾ 616(98.6%) ಕೊತ್ತನೂರಿನ ನಂಜುಂಡಮೂರ್ತಿ ಎಂಬ ರೈತರ ಮಗಳು, ಜಿ.ಲಹರಿ 610(97.6%) ಮಿಲ್ಟ್ರಿ ಹೋಟೆಲ್‌ನಲ್ಲಿ ಕೆಲಸ ಮಾಡುವ ಗೋಪಾಲ್‌ರ ಮಗಳು, ಕ್ರೆಸೆಂಟ್ ಶಾಲೆಯ ಲಕ್ಷಯ್ ಇನಾಮ್ದಾರ್ 616(98.6%) ಹಿಂದಿ ಶಿಕ್ಷಕಿಯ ಮಗ. ಪರೀಕ್ಷೆಗೆ ಮುನ್ನ ತಂದೆಯನ್ನು ಕಳೆದುಕೊಂಡ ಎ.ಸಹನಾ 554(88.6%) ಗಳಿಸಿದ್ದಾರೆ.
ಶೇಕಡಾ 100 ರಷ್ಟು ಅಂಕ: ಹಲವು ವಿದ್ಯಾರ್ಥಿಗಳು ಕೆಲವೊಂದು ವಿಷಯಗಳಲ್ಲಿ ಶೇಕಡಾ 100 ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಬಿಜಿಎಸ್ ವಿದ್ಯಾಸಂಸ್ಥೆಯ ಎಚ್.ಎನ್.ಧನುಶ್ರೀ (ಕನ್ನಡ, ಇಂಗ್ಲೀಷ್), ಕೆ.ಎನ್.ಅರ್ಚನಾ (ಹಿಂದಿ, ಗಣಿತ), ಜಿ.ಲಹರಿ (ಹಿಂದಿ, ಸಮಾಜ), ಆರ್. ರಷ್ಮಿ (ಕನ್ನಡ, ಇಂಗ್ಲಿಷ್, ಹಿಂದಿ), ಎನ್.ಪ್ರೀತಿ (ಕನ್ನಡ), ಕ್ರೆಸೆಂಟ್ ಶಾಲೆಯ ಲಕ್ಷಯ್ ಇನಾಮ್ದಾರ್ (ಕನ್ನಡ), ಜೆ.ರಕ್ಷಿತ್ (ಹಿಂದಿ, ಸಮಾಜ), ದರ್ಶಿನಿಪ್ರಿಯ (ಇಂಗ್ಲಿಷ್), ಎ.ಸಹನಾ (ಹಿಂದಿ), ಮುಸ್ಕಾನ್ ಸುಲ್ತಾನಾ (ಇಂಗ್ಲೀಷ್)
1. ಎಚ್.ಎನ್.ಧನುಶ್ರೀ 617(98.7%), ಬಿಜಿಎಸ್ ವಿದ್ಯಾಸಂಸ್ಥೆ
2. ಕೆ.ಎನ್.ಅರ್ಚನಾ 616(98.6%), ಬಿಜಿಎಸ್ ವಿದ್ಯಾಸಂಸ್ಥೆ
3. ಅಕ್ಷಯ್ ಇನಾಮ್ದಾರ್ 616(98.6%), ಕ್ರೆಸೆಂಟ್ ಶಾಲೆ
4. ಅರುಣ್‌ಕೊಠಾರಿ, 612(97.9%), ಕ್ರೆಸೆಂಟ್ ಶಾಲೆ
5. ಜಿ.ವಿ.ಭವಾನಿ, 612(97.9%), ಡಾಲ್ಫಿನ್ ಶಾಲೆ
6. ಜಿ.ಲಹರಿ, 610(97.6%), ಬಿಜಿಎಸ್ ವಿದ್ಯಾಸಂಸ್ಥೆ
7. ಎಸ್.ದಿವ್ಯಶ್ರೀ, 608(97.3%), ಡಾಲ್ಫಿನ್ ಶಾಲೆ
8. ಆರ್.ರಷ್ಮಿ, 607(97.1%), ಬಿಜಿಎಸ್ ವಿದ್ಯಾಸಂಸ್ಥೆ
9. ಎನ್.ಪ್ರೀತಿ, 604(96.6%), ಬಿಜಿಎಸ್ ವಿದ್ಯಾಸಂಸ್ಥೆ
10. ಎನ್.ಪ್ರಿಯಾಂಕ, 602(96.3%), ಡಾಲ್ಫಿನ್ ಶಾಲೆ
11. ಜೆ.ರಕ್ಷಿತ್, 607(97.1%), ಕ್ರೆಸೆಂಟ್ ಶಾಲೆ
12. ದರ್ಶಿನಿಪ್ರಿಯ, 596(95.4%), ಕ್ರೆಸೆಂಟ್ ಶಾಲೆ
ದ್ವಿತೀಯ ಪಿಯು – ರೈತರ ಮಗಳು ತಾಲ್ಲೂಕಿಗೆ ಪ್ರಥಮ
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ವಿಜ್ಞಾನ ವಿಭಾಗದಲ್ಲಿ ತಾಲ್ಲೂಕಿನ ಮುತ್ತೂರು ಗ್ರಾಮದ ರೈತ ಬೈರೇಗೌಡ ಅವರ ಮಗಳು ಅಂಕತಟ್ಟಿ ಗೇಟ್‌ನ ವಿದ್ಯಾದ್ರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎಂ.ಬಿ.ಜಾಹ್ನವಿ 581(96.8%) ಅಂಕ ಪಡೆದು ತಾಲ್ಲೂಕಿಗೆ ಪ್ರಥಮಳಾಗಿದ್ದಾಳೆ. ವಿದ್ಯಾದ್ರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಎಂ.ಸಂತೋಷ್‌ಕುಮಾರ್ 578(96.3%) ದ್ವಿತೀಯನಾಗಿದ್ದಾನೆ. ವಿದ್ಯಾದ್ರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಎ.ಸ್ವರೂಪ್ ಮತ್ತು ಎಂ.ಭಾವನಾ 577(96.16%) ಮೂರನೇ ಸ್ಥಾನವನ್ನು ಹಂಚಿಕೊಂಡಿದ್ದರೆ, ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯ ನೂರ್ ಉಲ್ ಮಿಸ್ಬಾ ಮತ್ತು ಮಳ್ಳೂರು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಬಿ.ಇಂದುಶ್ರೀ 576(96%) ನಾಲ್ಕನೇ ಸ್ಥಾನದಲ್ಲಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಮಳ್ಳೂರು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿ.ಎನ್.ಮಂಜುಳಾ 571(95.1%), ಹನುಮಂತಪುರ ಗೇಟ್ ಬಳಿಯ ಬಿಜಿಎಸ್ ಪದವಿ ಪೂರ್ವ ಕಾಲೇಜಿನ ಸಯೀದಾ 570(95%), ಕವಿತಾ 562(93.7%), ನಡಿಪಿನಾಯಕನಹಳ್ಳಿಯ ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಎನ್.ಆರ್.ಪ್ರದೀಪ್(92.5%), ಎಂ.ಕೆ.ನಂದನ್(90%) ಪಡೆದಿದ್ದರೆ, ಕಲಾ ವಿಭಾಗದಲ್ಲಿ ನಡಿಪಿನಾಯಕನಹಳ್ಳಿಯ ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಜೆ.ಎ.ಅರ್ಷಿಯಾ(94.67%) ಪಡೆದಿದ್ದಾರೆ.
1. ಎಂ.ಬಿ.ಜಾಹ್ನವಿ 581(96.8%), ವಿದ್ಯಾದ್ರಿ ಪದವಿ ಪೂರ್ವ ಕಾಲೇಜು
2. ಎಂ.ಸಂತೋಷ್‌ಕುಮಾರ್ 578(96.3%), ವಿದ್ಯಾದ್ರಿ ಪದವಿ ಪೂರ್ವ ಕಾಲೇಜು
3. ಎ.ಸ್ವರೂಪ್ 577(96.16%), ವಿದ್ಯಾದ್ರಿ ಪದವಿ ಪೂರ್ವ ಕಾಲೇಜು
4. ಎಂ.ಭಾವನಾ 577(96.16%), ವಿದ್ಯಾದ್ರಿ ಪದವಿ ಪೂರ್ವ ಕಾಲೇಜು
5. ನೂರ್ ಉಲ್ ಮಿಸ್ಬಾ 576(96%), ಡಾಲ್ಫಿನ್ ಪದವಿ ಪೂರ್ವ ಕಾಲೇಜು
6. ಎಂ.ರಂಜಿತಾ 575(95.8%), ವಿದ್ಯಾದ್ರಿ ಪದವಿ ಪೂರ್ವ ಕಾಲೇಜು
7. ಮೊಹಮ್ಮದ್ ಫಯಾದ್ 574(95.6%), ವಿದ್ಯಾದ್ರಿ ಪದವಿ ಪೂರ್ವ ಕಾಲೇಜು
8. ಎನ್.ನಾಗವೇಣಿ 571(95.1%), ವಿದ್ಯಾದ್ರಿ ಪದವಿ ಪೂರ್ವ ಕಾಲೇಜು
9. ಎಚ್.ಎ.ನವನೀತ್ 569(94.8%), ವಿದ್ಯಾದ್ರಿ ಪದವಿ ಪೂರ್ವ ಕಾಲೇಜು
10. ವಿ.ಎಸ್.ಹಿಮ 569(94.8%), ವಿದ್ಯಾದ್ರಿ ಪದವಿ ಪೂರ್ವ ಕಾಲೇಜು
11. ಎಚ್.ಎಂ.ನವೀನ್ ಸಾಗರ್ 568(94.6%), ವಿದ್ಯಾದ್ರಿ ಪದವಿ ಪೂರ್ವ ಕಾಲೇಜು
12. ಟಿ.ಚಿತ್ರಾ 568(94.6%), ವಿದ್ಯಾದ್ರಿ ಪದವಿ ಪೂರ್ವ ಕಾಲೇಜು
13. ಮಾಜ್ ಅಹ್ಮದ್ 567(94.5%), ವಿದ್ಯಾದ್ರಿ ಪದವಿ ಪೂರ್ವ ಕಾಲೇಜು
14. ಎಸ್.ಮೋನಿಕಾ 565(94.1%), ವಿದ್ಯಾದ್ರಿ ಪದವಿ ಪೂರ್ವ ಕಾಲೇಜು
15. ವಿ.ಸುಮಾ, 564(94%). ಬಿಜಿಎಸ್ ಪದವಿ ಪೂರ್ವ ಕಾಲೇಜು
16. ಮೋಹನ್‌ಕುಮಾರ್, 572(95.3%), ಡಾಲ್ಫಿನ್ ಪದವಿ ಪೂರ್ವ ಕಾಲೇಜು
17. ಅಮೃತಾ, 566(94.3%), ಡಾಲ್ಫಿನ್ ಪದವಿ ಪೂರ್ವ ಕಾಲೇಜು
18. ಹುಸ್ನ, 563(93.8%), ಡಾಲ್ಫಿನ್ ಪದವಿ ಪೂರ್ವ ಕಾಲೇಜು
19. ಶ್ರಾವಂತಿ, 561(93.5%), ಡಾಲ್ಫಿನ್ ಪದವಿ ಪೂರ್ವ ಕಾಲೇಜು
20. ಎನ್.ಎಸ್.ದೀಪಾಂಜಲಿ (92.83%), ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜು
21. ಬಿ.ಎಂ.ನಯನ (92.33%), ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜು
22. ಬಿ.ಪಿ.ಶ್ರೀಧರ (90.33%), ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜು
23. ಬಿ.ಇಂದುಶ್ರೀ, 576(96%), ಮಳ್ಳೂರು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು
ವಾಣಿಜ್ಯ ವಿಭಾಗ:
24. ಸಯೀದಾ, 570(95%), ಬಿಜಿಎಸ್ ಪದವಿ ಪೂರ್ವ ಕಾಲೇಜು
25. ವಿ.ಎನ್.ಮಂಜುಳಾ,571(95.1%), ಮಳ್ಳೂರು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು
26. ಎನ್.ಆರ್.ಪ್ರದೀಪ್ (92.5%), ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜು
27. ಎಂ.ಕೆ.ನಂದನ್ (90%), ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜು
28. ಕವಿತಾ, 562(93.6%), ಬಿಜಿಎಸ್ ಪದವಿ ಪೂರ್ವ ಕಾಲೇಜು
29. ಷಫಿಯಾ ಅಂಜುಮ್, 546(91%), ಬಿಜಿಎಸ್ ಪದವಿ ಪೂರ್ವ ಕಾಲೇಜು
30. ಬಿ.ಎ.ಹರ್ಷ, 542(90.33%), ಬಿಜಿಎಸ್ ಪದವಿ ಪೂರ್ವ ಕಾಲೇಜು
31. ಅರ್ಷದ್‌ಪಾಷ, 541(90.16%), ಬಿಜಿಎಸ್ ಪದವಿ ಪೂರ್ವ ಕಾಲೇಜು
32. ಕೆ.ಮಧುಸೂದನ್, 540(90%), ಬಿಜಿಎಸ್ ಪದವಿ ಪೂರ್ವ ಕಾಲೇಜು
ಕಲಾ ವಿಭಾಗ:
33. ಅರ್ಷಿಯಾ (94.67%), ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜು
34. ಎಸ್.ಮಂಜುಳಾ, 552(92%), ಮಳ್ಳೂರು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು
ಪೂಜಮ್ಮ ದೇವಿ ಕರಗ ಮಹೋತ್ಸವ
ತಾಲ್ಲೂಕಿನ ಜಂಗಮಕೋಟೆ ಗ್ರಾಮದಲ್ಲಿ ಬುಧವಾರ ರಾತ್ರಿ ಸಡಗರ ಮತ್ತು ಸಂಭ್ರಮದಿಂದ ಶ್ರೀಪೂಜಮ್ಮ ದೇವಿ ಕರಗ ಮಹೋತ್ಸವವನ್ನು ನಡೆಸಲಾಯಿತು.
ಜಂಗಮಕೋಟೆ ಗ್ರಾಮದಲ್ಲಿ ಪುರಾತನ ಕಾಲದಿಂದ ನೆಲೆಸಿರುವ ಪೂಜಮ್ಮ ದೇವಿಯನ್ನು ಕರಗದ ಅಂಗವಾಗಿ ವಿಶೇಷವಾಗಿ ಹೂವಿನಿಂದ ಅಲಂಕಾರ ಮಾಡಲಾಗಿತ್ತು. ವಿಶೇಷ ಪೂಜೆಯನ್ನು ಏರ್ಪಡಿಸಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳೆಲ್ಲ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಮನೆಗಳ ಮುಂದೆ ರಂಗೋಲಿ ಹಾಕಲಾಗಿತ್ತು. ಮಹಿಳೆಯರು ಕರಗವನ್ನು ತಮ್ಮ ಮನೆ ಬಾಗಿಲಿಗೆ ಬರಮಾಡಿಕೊಂಡು ಪೂಜೆ ಮಾಡಿ ಮಲ್ಲಿಗೆ ಹೂಗಳನ್ನು ಅರ್ಪಿಸಿ ದೇವಿಯ ಆಶೀರ್ವಾದ ಪಡೆದರು. ಆದಿಕಾಲದಿಂದಲೂ ಗ್ರಾಮವನ್ನು ಕಾಪಾಡುತ್ತಾ, ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಬಂದಿರುವ ತಾಯಿ ಶ್ರೀ ಪೂಜಮ್ಮ ದೇವಿಯ ಕರಗ ಮಹೋತ್ಸವ ನಮಗೆಲ್ಲ ಪವಿತ್ರವಾದುದು ಎಂದು ಗ್ರಾಮಸ್ಥರೊಬ್ಬರು ತಿಳಿಸಿದರು. ಸುತ್ತ ಮುತ್ತಲಿನ ಗ್ರಾಮಸ್ಥರು ದೇವಿಯ ದರ್ಶನ ಪಡೆದರು.
ಕಾರ್ಮಿಕರು ಯೋಜನೆಗಳ ಸೌಲಭ್ಯ ಪಡೆದುಕೊಳ್ಳುತ್ತಿಲ್ಲ
ಸರ್ಕಾರದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಕಾರ್ಮಿಕರು ಸದ್ಭಳಕೆ ಮಾಡಿಕೊಳ್ಳಬೇಕು. ಈ ಬಗ್ಗೆ ಮಾಹಿತಿಯನ್ನು ತಿಳಿದಿರಬೇಕು ಎಂದು ಜಿಲ್ಲಾ ಕಾರ್ಮಿಕ ಇಲಾಖೆಯ ನಿರೀಕ್ಷಕ ಸಿದ್ದಪ್ಪ ಹೇಳಿದರು.
ನಗರದ ನಗರೇಶ್ವರ ಕಲ್ಯಾಣಮಂಟಪದಲ್ಲಿ ಮಾನವ ಹಕ್ಕುಗಳ ಜಾಗೃತಿ ಸಮಿತಿಯ ವತಿಯಿಂದ ಗುರುವಾರ ಆಯೋಜನೆ ಮಾಡಲಾಗಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರೂ ಬಹಳಷ್ಟು ಮಂದಿ ಕಾರ್ಮಿಕರು ಯೋಜನೆಗಳ ಸೌಲಭ್ಯ ಪಡೆದುಕೊಳ್ಳುತ್ತಿಲ್ಲ. ಸಮಾನ ಕೆಲಸಕ್ಕೆ ಸಮಾನ ಕೂಲಿ ಪಡೆಯುವಂತಹ ಹಕ್ಕು ಕಾರ್ಮಿಕರಿಗೆ ಇದೆ. ಕಾರ್ಮಿಕರ ಕಾಯಿದೆಯಡಿ ನೋಂದಾವಣಿ ಮಾಡಿಕೊಂಡರೆ, ಕಟ್ಟಡ ಕಾರ್ಮಿಕರಿಗೆ ಆಗುವಂತಹ ದುರಂತಗಳಿಗೆ ೨ ಲಕ್ಷದವರೆಗೂ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ.
ಮಹಿಳಾ ಕಾರ್ಮಿಕರ ರಕ್ಷಣೆ ಮಾಡುವುದು ಅವರ ಆರೋಗ್ಯ ರಕ್ಷಣೆ ಮಾಡುವುದು ಕಾರ್ಮಿಕರು ಕೆಲಸ ಮಾಡುವ ಕಂಪನಿಗಳ ಹೊಣೆಗಾರಿಕೆಯಾಗುತ್ತದೆ. ಮಹಿಳಾ ಕಾರ್ಮಿಕರು ಕೆಲಸ ಮಾಡುವ ಕಡೆಗಳಲ್ಲಿ ಅವರ ಮಕ್ಕಳ ಪೋಷಣೆಗೆ ಶಿಶುವಿಹಾರಗಳನ್ನು ತೆರೆಯಬೇಕು, ಯಾವುದೇ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ೫ ವರ್ಷಗಳು ಪೂರೈಸಿದ ನಂತರ ಕಂಪನಿಗೆ ರಾಜೀನಾಮೆ ನೀಡಿದರೆ, ಅಂತಹವರಿಗೆ ವಾರ್ಷಿಕ ೧೫ ದಿನಗಳಂತೆ ಲೆಕ್ಕ ಮಾಡಿ ಪರಿಹಾರಧನ ನೀಡಬೇಕಾಗುತ್ತದೆ. ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಮಕ್ಕಳಿಗೆ ವಿದ್ಯಾರ್ಥಿವೇತನಗಳನ್ನು ಪಡೆಯುವಂತಹ ಅವಕಾಶಗಳಿವೆ. ಕಾರ್ಮಿಕರು ಕೆಲಸ ಮಾಡಲು ಸಾಧ್ಯವಾಗದಿದ್ದರೆ ಅಂತಹವರಿಗೆ ಮಾಸಿಕವಾಗಿ ಐದು ಸಾವಿರ ರೂ ಮಾಶಾಸನ ಪಡೆಯಲು ಅರ್ಹರಾಗಿರುತ್ತಾರೆ.
ಖಾಸಗಿ ವಾಣಿಜ್ಯ ವಾಹನಗಳ ಚಾಲಕರಿಗೂ ಕೂಡಾ ಅನೇಕ ಸೌಲಭ್ಯಗಳಿದ್ದು, ಎಲ್ಲಾ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಿ ಎಂದರು.
ಮಾನವ ಹಕ್ಕುಗಳ ಜಾಗೃತಿ ಸಮಿತಿಯ ರಾಜ್ಯಾಧ್ಯಕ್ಷ ಸಮೇತನಹಳ್ಳಿ ಲಕ್ಷ್ಮಣ್‌ಸಿಂಗ್ ಮಾತನಾಡಿ, ಕಾರ್ಮಿಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರನ್ನು ಸ್ವಾಭಿಮಾನಿಗಳನ್ನಾಗಿ ಬೆಳೆಸುವುದರ ಜೊತೆಗೆ ಅವರಿಗೆ ಮೌಲ್ಯಾಧಾರಿತ ಶಿಕ್ಷಣ ಕೊಡಿಸಬೇಕು. ಕಾರ್ಮಿಕರ ಹಕ್ಕುಗಳಿಗೆ ದಕ್ಕೆಯಾದಂತಹ ಸಂದರ್ಭದಲ್ಲಿ ಸಂಘಟನೆ ನಿರಂತರವಾಗಿ ಹೋರಾಟ ಮಾಡಲಿದೆ. ಕಾರ್ಮಿಕರು ಸಂಘಟಕರಾದರೆ ಮಾತ್ರವೇ ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ವಕೀಲ ಮುನಿರಾಜು ಮಾತನಾಡಿ, ಕಾರ್ಮಿಕರು ಕೇವಲ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವುದಷ್ಟೆ ಅಲ್ಲದೆ, ಕಾನೂನಿನಲ್ಲಿ ಅವರಿಗೆ ರಕ್ಷಣೆ ಇದೆ. ಉಚಿತವಾಗಿ ಸಮಾಲೋಚನೆ ನಡೆಸುವಂತಹ ಅವಕಾಶಗಳಿವೆ. ಇಂತಹ ಎಲ್ಲಾ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಮಹಿಳಾ ಕಾರ್ಮಿಕರು ಸೇರಿದಂತೆ ಸಮಾಜದಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯಗಳನ್ನು ನಡೆಯುತ್ತಲೇ ಇವೆ. ಇಂತಹ ದೌರ್ಜನ್ಯ ದಬ್ಬಾಳಿಕೆಗಳನ್ನು ನಿಯಂತ್ರಣ ಮಾಡಬೇಕು. ಇಂತಹ ಜಾಗೃತಿ ಸಭೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಕಾನೂನಿನಲ್ಲಿ ಇರುವ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಮಾನವ ಹಕ್ಕುಗಳ ಜಾಗೃತಿ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಆನಂದಪ್ಪ, ಮುನಿಕೃಷ್ಣಪ್ಪ, ತಾಲ್ಲೂಕು ಕಾರ್ಮಿಕ ಇಲಾಖೆಯ ನಿರೀಕ್ಷಕ ವಿಶ್ವನಾಥ್, ಮಾನವ ಹಕ್ಕುಗಳ ಜಾಗೃತಿ ಸಮಿತಿಯ ಜಿಲ್ಲಾ ಅಧ್ಯಕ್ಷ ಜಾತವಾರ ಕೃಷ್ಣಪ್ಪ, ತಾಲ್ಲೂಕು ಅಧ್ಯಕ್ಷ ಎಂ.ಬಿ.ಬೈರಾರೆಡ್ಡಿ, ಪ್ರದೀಪ್, ಮಂಜುನಾಥ್, ಪ್ರಭಾಕರ್, ಮಹಿಳಾ ಸಂಚಾಲಕಿ ಉಷಾ, ಆನೇಕಲ್ ಮಂಜುನಾಥ್, ಸಿ.ಕೆ.ಪ್ರತಾಪ್ ಹಾಜರಿದ್ದರು.
ಶಿಡ್ಲಘಟ್ಟ ತೋಟಗಾರಿಕೆ ಸಹಾಯಕ ನಿರ್ದೇಶಕ ಆನಂದ್‌ಗೆ ಬೀಳ್ಕೊಡುಗೆ
ರೈತಮಿತ್ರ ಅಧಿಕಾರಿಯಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸುವ ಜೊತೆಗೆ ಇಲಾಖೆಯ ಸೌಲಭ್ಯಗಳನ್ನು ಒದಗಿಸಿ ರೈತರ ಅಭಿವೃದ್ಧಿಗೆ ಕಾರಣರಾಗಿದ್ದ ಆನಂದ್ ಅವರ ಸೇವೆ ಈ ತಾಲ್ಲೂಕಿಗೆ ಮತ್ತಷ್ಟು ಬೇಕಾಗಿತ್ತು ಎಂದು ಪ್ರಗತಿಪರ ರೈತ ಹಿತ್ತಲಹಳ್ಳಿ ಗೋಪಾಲಗೌಡ ತಿಳಿಸಿದರು.
ನಗರದ ತೋಟಗಾರಿಕೆ ಇಲಾಖೆಯಲ್ಲಿ ಬುಧವಾರ ಸಂಜೆ ನೂತನ ಸಹಾಯಕ ನಿರ್ದೇಶಕರಿಗೆ ಸ್ವಾಗತ ಮತ್ತು ವರ್ಗಾವಣೆಯಾದ ಅಧಿಕಾರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನಾದ್ಯಂತ 150ಕ್ಕೂ ಹೆಚ್ಚು ಪಾಲಿಹೌಸ್ ನಿರ್ಮಾಣವಾಗಿ ಆರ್ಥಿಕವಾಗಿ ಹಲವಾರು ಮಂದಿ ರೈತರು ಮುಂದುವರಿಯಲು ಕಾರಣರಾದ ಆನಂದ್ ಅತ್ಯುತ್ತಮ ಮಾರ್ಗದರ್ಶಕರಾಗಿದ್ದರು. ತೋಟಗಾರಿಕೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ಅವರು ಮಾಡಿದ್ದಾರೆ. ನೂತನ ಅಧಿಕಾರಿಗಳು ಸಹ ಅವರಂತೆಯೇ ಕಾರ್ಯನಿರ್ವಹಿಸಿ ಉತ್ತಮ ಹೆಸರುಗಳಿಸಬೇಕೆಂದು ಸಲಹೆ ನೀಡಿದರು.
ಕೃಷಿ ಸಹಾಯಕ ನಿರ್ದೇಶಕ ದೇವೇಗೌಡ ಮಾತನಾಡಿ, ತೋಟಗಾರಿಕೆ ಇಲಾಖೆಯ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಆನಂದ್ ಶ್ರಮವಹಿಸಿದ್ದಾರೆ. ಸರ್ಕಾರಿ ನೌಕರರಿಗೆ ವರ್ಗಾವಣೆ ಮತ್ತು ನಿವೃತ್ತಿ ಸರ್ವೇ ಸಾಮಾನ್ಯ. ಈ ಮಧ್ಯೆ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವ ಮೂಲಕ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗುವುದು ಬಹಳ ಮುಖ್ಯ ಎಂದು ಹೇಳಿದರು.
ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಪ್ಪ ಮಾತನಾಡಿ, ತೋಟಗಾರಿಕೆ ಇಲಾಖೆಯಲ್ಲಿ ಕಳೆದ ಮೂರು ವರ್ಷಗಳಿಂದ ಆನಂದ್ ಉತ್ತಮವಾಗಿ ಸೇವೆ ಸಲ್ಲಿಸಿದ್ದಾರೆ. ಕೃಷಿ,ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳಾದ ನಾವೆಲ್ಲರು ಸಮನ್ವಯದಿಂದ ಕಾರ್ಯನಿರ್ವಹಿಸಿ ರೈತರಿಗೆ ಮೂರು ಇಲಾಖೆಗಳಿಂದ ಸೌಲಭ್ಯಗಳನ್ನು ಒದಗಿಸಿದ್ದೇವೆ. ಇನ್ನೂ ಎರಡು ಮೂರು ತಿಂಗಳಿನಲ್ಲಿ ಆನಂದ್ ಬಡ್ತಿಯನ್ನು ಹೊಂದಲಿದ್ದು, ಅವರ ಸ್ವಂತ ತಾಲ್ಲೂಕು ಶ್ರೀನಿವಾಸಪುರದಲ್ಲಿ ಕಾರ್ಯನಿರ್ವಹಿಸಲು ಅವಕಾಶ ಲಭಿಸಿರುವುದು ಒಳ್ಳೆಯದು ಎಂದು ಹೇಳಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್ ಮಾತನಾಡಿ, ಸತತ ಬರಗಾಲದಿಂದ ತತ್ತರಿಸುತ್ತಿರುವ ತಾಲೂಕಿನ ರೈತರಿಗೆ ಇಲಾಖೆಯ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಪೂರ್ಣವಾಗಿ ಸಹಕಾರ ನೀಡಿದ್ದಾರೆ. ತಾವು ಸಹ ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿದ್ದು ಇಲಾಖೆಯ ಯೋಜನೆಗಳ ಅನುಷ್ಠಾನಗೊಳಿಸುವ ಭರದಲ್ಲಿ ಮನಸ್ಸಿಗೆ ನೋವುಂಟು ಮಾಡಿದ್ದಲ್ಲಿ ಕ್ಷಮಿಸಿ ಎಂದರು.
ಈ ಸಂದರ್ಭದಲ್ಲಿ ವರ್ಗಾವಣೆಯಾದ ಸಹಾಯಕ ನಿರ್ದೇಶಕ ಆನಂದ್ ಅವರನ್ನು ಮಾಲಾರ್ಪಣೆ ಮಾಡಿ ಶಾಲುಹೊದಿಸಿ ಸನ್ಮಾನಿಸುವ ಮೂಲಕ ಬೀಳ್ಕೊಡೆಗೆ ನೀಡಲಾಯಿತು. ಹಾಗೆಯೇ ನೂತನ ಸಹಾಯಕ ನಿರ್ದೇಶಕ ಮುನೇಗೌಡ ಅವರನ್ನು ಹೂಗುಚ್ಚ ನೀಡಿ ಸ್ವಾಗತಿಸಲಾಯಿತು.
ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ರವಿಕುಮಾರ್, ನಿತಿನ್ ಮಾತನಾಡಿ ಸಹಾಯಕ ನಿರ್ದೇಶಕ ಆನಂದ್ ಅವರ ಸೇವಾ ಮತ್ತು ಸಹಕಾರ ಮನೋಭಾವವನ್ನು ಪ್ರಶಂಸಿದರು.
ಜಿಲ್ಲಾ ರೈತ ಸಂಘ ಹಾಗೂ ಹಸಿರುಸೇನೆಯ ಖಜಾಂಚಿ ಅಬ್ಲೂಡು ಆರ್.ದೇವರಾಜ್, ಬಚ್ಚರೆಡ್ಡಿ, ಕೆ.ಮುತ್ತಕದಹಳ್ಳಿ ಸುಬ್ಬರೆಡ್ಡಿ, ಬೋದಗೂರು ವೆಂಕಟಸ್ವಾಮಿರೆಡ್ಡಿ, ಕನ್ನಪ್ಪನಹಳ್ಳಿ ನಾರಾಯಣಸ್ವಾಮಿ, ವೆಂಕಟರೆಡ್ಡಿ, ತೋಟಗಾರಿಕೆ ಇಲಾಖೆ ಅಧಿಕಾರಿ ಕೀರ್ತಿ, ಪ್ರಿಯಾಂಕ, ಲಲಿತೇಶ್, ವೀಣಾ, ನಾಗರಾಜ್, ಶಾಂತ ಹಾಜರಿದ್ದರು.
ಮನುಕುಲವೆಲ್ಲಾ ಒಂದೇ
ದೇಶದಲ್ಲಿ ತಾಂಡವವಾಡುತ್ತಿರುವ ಜಾತಿ ಪದ್ದತಿ, ಅಸಮಾನತೆ ತೊಲಗಿ ಮನುಕುಲವೆಲ್ಲಾ ಒಂದೇ ಎಂಬ ಭಾವನೆ ಮೂಡಿದಾಗ ಮಾತ್ರ ಡಾ.ಬಿ.ಆರ್.ಅಂಬೇಡ್ಕರ್ ಹಾಗು ಅವರು ರಚಿಸಿದ ಸಂವಿಧಾನಕ್ಕೆ ಅರ್ಥ ಸಿಗುತ್ತದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕೇನಹಳ್ಳಿ ಗ್ರಾಮದಲ್ಲಿ ಬುಧವಾರ ತಾಲ್ಲೂಕು ದಸಂಸ ವತಿಯಿಂದ ಏರ್ಪಡಿಸಲಾಗಿದ್ದ ಬುದ್ದ ಪೌರ್ಣಿಮೆ ಹಾಗು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಿಂದಲೂ ಈ ದೇಶದ ಶೋಷಿತ ವರ್ಗದ ಮೇಲೆ ನಡೆಯುತ್ತಿದ್ದ ದೌರ್ಜನ್ಯ ದಬ್ಬಾಳಿಕೆ, ಶೋಷಣೆಯಿಂದಾಗಿ ನಿರಂತರವಾದ ಚಿಂತನೆ ನಡೆಸಿದ ಡಾ.ಅಂಬೇಡ್ಕರ್ ಅವರು ದೇಶದ ಸಮಸ್ತ ಜನರಿಗೂ ನಿಜವಾದ ಸ್ವಾತಂತ್ರ್ಯ ಮತ್ತು ಉತ್ತಮ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಸಂವಿಧಾನ ರಚಿಸಿದರು. ಎಲ್ಲಾ ವರ್ಗದವರಿಗೂ ಸಮಾನ ಹಕ್ಕು ನೀಡಬೇಕೆಂಬ ಉದ್ದೇಶದಿಂದ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿ, ಸಮಾಜದ ಏಳಿಗೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಪ್ರತಿಪಾದಿಸಿದರು ಎಂದರು.
ಕಾರ್ಯಕ್ರಮದಲ್ಲಿ ದಸಂಸ ರಾಜ್ಯಾಧ್ಯಕ್ಷ ಎನ್.ವೆಂಕಟೇಶ್ ಮಾತನಾಡಿ, ಅಂಬೇಡ್ಕರ್ ಅವರ ಜನ್ಮ, ಬಾಲ್ಯ, ಸಂಕಷ್ಟದ ಬದುಕು, ಓದಬೇಕೆಂಬ ಅಭಿಲಾಷೆ, ಛಲ, ಗುರಿಯೆಡೆಗೆ ಸಾಧನೆ, ಬರೋಡಾದ ಮಹಾರಾಜರು ನೀಡಿದ ವಿದ್ಯಾರ್ಥಿವೇತನದ ಸಹಾಯದಿಂದ ವಿದೇಶದಲ್ಲಿ ಪದವಿಯನ್ನು ಪಡೆದು ಭಾರತಕ್ಕೆ ಹಿಂದಿರುಗಿ ಹಿಂದುಳಿದ ಜನಾಂಗಗಳಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸಲ್ಲಿ ನಿರತರಾದುದು ಹಾಗು ಜಗತ್ತಿನ ಎಲ್ಲಾ ಧರ್ಮಗಳ ಬಗ್ಗೆ ಅಧ್ಯಯನ ನಡೆಸಿ ಕೊನೆಗೆ ಭಾರತದಲ್ಲಿ ಬೌದ್ದ ಧರ್ಮವನ್ನು ಪುನರ್ ಪ್ರತಿಷ್ಠಪಿಸುವ ಮೂಲಕ ತಾವು ಹಾಗು ತಮ್ಮೊಂದಿಗೆ ಲಕ್ಷಾಂತರ ಜನರನ್ನು ಬೌದ್ದ ಧರ್ಮಕ್ಕೆ ಮತಾಂತರಗೊಳಿಸುವ ಮೂಲಕ ದೇಶದಲ್ಲಿದ್ದ ಜಾತಿಪದ್ದತಿಯನ್ನು ಹೋಗಲಾಡಿಸಲು ಬುನಾದಿ ಹಾಕಿದರು ಎಂದರು.
ದಲಿತ ಮುಖಂಡ ಗಂಜಿಗುಂಟೆ ನರಸಿಂಹಮೂರ್ತಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಇಂದು ಪ್ರತಿಯೊಬ್ಬರೂ ಆರ್ಥಿಕ ಹಾಗು ಶೈಕ್ಷಣಿಕವಾಗಿ ಮುಂದುವರೆದಿದ್ದರೂ ಸಾಮಾಜಿಕವಾಗಿ ಹಿಂದುಳಿದಿದ್ದೇವೆ. ಸಂವಿದಾನ ನಮಗೆ ನೀಡಿರುವ ಎಲ್ಲಾ ಸವಲತ್ತುಗಳನ್ನು ಪಡೆಯುತ್ತಿದ್ದೇವಾದರೂ ಅಂಬೇಡ್ಕರ್‌ರ ತತ್ವ ಸಿದ್ದಾಂತಗಳನ್ನು ನಾವು ಯಾರು ಅಳವಡಿಸಿಕೊಳ್ಳುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ದಸಂಸ ಜಿಲ್ಲಾ ಸಂಚಾಲಕ ಸಿ.ಎಂ.ಮುನಿಯಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆನಂದರೆಡ್ಡಿ, ದಸಂಸ ತಾಲ್ಲೂಕು ಸಂಚಾಲಕರಾದ ಎನ್.ವೆಂಕಟೇಶ್, ಟಿ.ವಿ.ಚಲಪತಿ, ಮುಖಂಡರಾದ ದ್ಯಾವಕೃಷ್ಣಪ್ಪ, ನಾಗ ನರಸಿಂಹ, ರವಿಶಂಕರ್, ಲಕ್ಷ್ಮಿನಾರಾಯಣ, ಎಲ್.ವಿ.ವೆಂಕಟೇಶ್, ರಾಂಬಾಬು ಸೇರಿದಂತೆ ದಸಂಸ ಪದಾಧಿಕಾರಿಗಳು ಹಾಜರಿದ್ದರು.
ವ್ಯಕ್ತಿತ್ವ ವಿಕಸನಕ್ಕೆ ಬೇಸಿಗೆ ಶಿಬಿರವು ವೇದಿಕೆಯಾಗಲಿದೆ
ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೇಸಿಗೆ ಶಿಬಿರವು ವೇದಿಕೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶಾಂತಾ ಬಿ ಜಿಂದ್ರಾಲೆ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆಯ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿನಿಲಯದಲ್ಲಿ ಬುಧವಾರ ಬಾಲವಿಕಾಸ ಅಕಾಡೆಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಯುಕ್ತಾಶ್ರಯದಲ್ಲಿ ಉಚಿತ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹತ್ತು ದಿನಗಳ ಕಾಲ ಜೇಡಿ ಮಣ್ಣಿನ ಕಲೆ, ಡ್ರಾಯಿಂಗ್, ಪೈಂಟಿಂಗ್, ಪೇಪರ್ ಕಟ್ಟಿಂಗ್, ಸಂಗೀತ, ನೃತ್ಯ, ನಾಟಕ, ಯೋಗ, ಕರಾಟೆ ಮುಂತಾದ ತರಬೇತಿಯನ್ನು ನೂರು ಮಕ್ಕಳಿಗೆ ನೀಡಲಾಗುವುದು. ಇದು ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಗೆ ಸಹಾಯವಾಗಲಿದೆ. ಅವರ ಕಲಿಕೆಯು ಹೆಚ್ಚಲಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಎಂ.ರಾಧ, ನೃತ್ಯ ಶಿಕ್ಷಕಿ ಹರ್ಷಿಯಾ, ಕರಾಟೆ ಶಿಕ್ಷಕರಾದ ಎಸ್.ಮಹಮ್ಮದ್, ನೂರುಲ್ಲ, ಯೋಗ ಶಿಕ್ಷಕಿ ದ್ರಾಕ್ಷಾಯಿಣಿ, ಚಿತ್ರಕಲೆ ಶಿಕ್ಷಕ ಅಬ್ದುಲ್ ಸತ್ತಾರ್, ಸಂಗೀತ ಶಿಕ್ಷಕ ರಾಮಮೂರ್ತಿ ಹಾಜರಿದ್ದರು.
ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ಕಳ್ಳತನ
ತಾಲ್ಲೂಕಿನ ಒಂಬೈನೂರು ವರ್ಷಗಳಷ್ಟು ಹಳೆಯದಾದ ಚಿಕ್ಕದಾಸರಹಳ್ಳಿ ಬಳಿಯಿರುವ ಗುಟ್ಟದ ಮೇಲಿನ ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ಮಂಗಳವಾರ ರಾತ್ರಿ ಹುಂಡಿಯನ್ನು ಒಡೆದು ಹಣವನ್ನು ದೋಚಲಾಗಿದೆ.
ದಕ್ಷಿಣ ದಿಕ್ಕಿನ ಮುಖ್ಯ ಬಾಗಿಲನ್ನು ಮುರಿದಿರುವ ಕಳ್ಳರು ಹುಂಡಿಯನ್ನು ಒಡೆದು ಅದರಲ್ಲಿರುವ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ. ಮುಜರಾಯಿ ಇಲಾಖೆಗೆ ಸೇರಿರುವ ಈ ದೇವಾಲಯಕ್ಕೆ ಉಪ ತಹಶೀಲ್ದಾರ್ ಮುನಿಕೃಷ್ಣಪ್ಪ, ರಾಜಸ್ವ ನಿರೀಕ್ಷಕ ಮೋಹನ್, ಮುಜರಾಯಿ ಇಲಾಖೆಯ ಅಧಿಕಾರಿ ಭಾಗ್ಯಮ್ಮ, ಗ್ರಾಮ ಲೆಕ್ಕಿಗ ನಾಗರಾಜು ಭೇಟಿ ನೀಡಿ ಅರ್ಚಕರಿಂದ ದೂರನ್ನು ಪಡೆದರು.
‘ಕಳೆದ ಡಿಸೆಂಬರ್ ತಿಂಗಳಿನಲ್ಲಿ ನೋಟು ಅಮಾನ್ಯೀಕರಣದ ಕಾರಣ ಹುಂಡಿಯನ್ನು ತೆರೆಯಲಾಗಿತ್ತು. ಆ ನಂತರ ಬ್ರಹ್ಮರಥೋತ್ಸವ ನಡೆದಿತ್ತು. ಸುಮಾರು 50 ಸಾವಿರ ರೂಗಳಷ್ಟು ಹಣವಿದ್ದಿರಬಹುದು ಎಂದು ಅಂದಾಜಿಸಲಾಗಿದೆ’ ಎಂದು ಗ್ರಾಮದ ಹಿರಿಯರಾದ ಬ್ಯಾಟರಾಯಶಟ್ಟಿ ತಿಳಿಸಿದರು.

