Home Blog Page 418

ತಾಲ್ಲೂಕು ಕಸಾಪ ಅಧ್ಯಕ್ಷರ ಬದಲಾವಣೆಗೆ ಅಸಮಧಾನ, ಖಂಡನೆ

0

ಶಿಡ್ಲಘಟ್ಟ ತಾಲ್ಲೂಕು ಕಸಾಪ ಅಧ್ಯಕ್ಷರನ್ನು ಕಾರಣವಿಲ್ಲದೆ ಬದಲಾಯಿಸಿರುವ ಕಸಾಪ ಜಿಲ್ಲಾಧ್ಯಕ್ಷರ ಏಕಮುಖ ನಿರ್ಣಯವನ್ನು ಕಸಾಪ ಸದಸ್ಯರು ಮತ್ತು ಪದಾಧಿಕಾರಿಗಳು ಖಂಡಿಸಿದ್ದಾರೆ.
ಕಳೆದ ವರ್ಷ ಕಸಾಪ ಜಿಲ್ಲಾಧ್ಯಕ್ಷ ಕೈವಾರ ಶ್ರೀನಿವಾಸ್‌ ತಾಲ್ಲೂಕು ಸದಸ್ಯರ ಅಭಿಪ್ರಾಯದ ಮೇರೆಗೆ ಬಿ.ಆರ್‌.ಅನಂತಕೃಷ್ಣ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಆದರೆ ಜಿಲ್ಲೆಯಲ್ಲಿ ಬೇರೆ ಯಾವ ತಾಲ್ಲೂಕಿನಲ್ಲೂ ಅಧ್ಯಕ್ಷರನ್ನು ಬದಲಿಸದೆ ಕೇವಲ ಶಿಡ್ಲಘಟ್ಟ ತಾಲ್ಲೂಕಿನ ಅಧ್ಯಕ್ಷರನ್ನು ಮಾತ್ರ ಬದಲಾಯಿಸಿರುವುದಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ.
ತಾಲ್ಲೂಕು ಅಧ್ಯಕ್ಷರಾಗುವ ಮುನ್ನವೇ ಒಂಭತ್ತು ಅಂಶಗಳ ಕಾರ್ಯಯೋಜನೆಯನ್ನು ಹೊಂದಿದ್ದ ಬಿ.ಆರ್‌.ಅನಂತಕೃಷ್ಣ ಒಂದೇ ವರ್ಷದಲ್ಲಿ ಅವುಗಳನ್ನು ಪೂರೈಸಿದರು. ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಿ ಹರೀಶ್ ಆರ್.ಭಟ್ ಅವರನ್ನು ಕರೆಸಿ ವಿಜ್ಞಾನವನ್ನು ಕನ್ನಡದಲ್ಲಿ ಉಣಬಡಿಸುವ ಮೂಲಕ ಪದಗ್ರಹಣ ನಡೆಸಿದ ಅವರು, ಪರಿಸರ ದಿನಾಚರಣೆ, ದತ್ತಿ, ಪ್ರತಿಭಾ ಪುರಸ್ಕಾರ, ಕಸದಿಂದ ರಸ ಕಲಾ ಶಿಬಿರ, ಶಾಲೆಗೊಂದು ಕನ್ನಡ ಕಾರ್ಯಕ್ರಮ, ನನ್ನ ಮೆಚ್ಚಿನ ಪುಸ್ತಕ ಕಾರ್ಯಕ್ರಮ, ತಾಲ್ಲೂಕಿನ ೧೩೦ ಶಾಲೆಗಳ ಗ್ರಂಥಾಲಯಗಳಿಗೆ ‘ಪುಸ್ತಕ ಕೊಡುಗೆ’, ಸಾಧಕರ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆ ಎಂಬ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಇಸ್ರೋ ಜಿಯೋಸ್ಯಾಟ್‌ ವಿಜ್ಞಾನಿ ಹಿರಿಯಣ್ಣ, ವಿಜ್ಞಾನ ಲೇಖಕ ನಾಗೇಶ್‌ ಹೆಗಡೆ, ವಿಜ್ಆನಿ ಹರೀಶ್‌ ಆರ್‌.ಭಟ್‌ ಮೊದಲಾದ ಸಾಧಕರ ಪರಿಚಯ, ಕವಿಯ ನೆನೆದು ಕವಿತೆ ಕೇಳಿ ಕಾರ್ಯಕ್ರಮ, ಕವಿನಮನ, ಇನ್ಫೋಸಿಸ್ ನಾರಾಯಣಮೂರ್ತಿ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನಾಚರಣೆ ಮುಂತಾದ ವಿನೂತನ ಕಾರ್ಯಕ್ರಮಗಳನ್ನು ನಡೆಸಿದರು. ಈ ಮೂಲಕ ಶಿಡ್ಲಘಟ್ಟ ತಾಲ್ಲೂಕು ಕಸಾಪ ಸುಮಾರು ೮,೦೦೦ ಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ತಲುಪುವಲ್ಲಿ ಯಶಸ್ವಿಯಾಯಿತು. ತಾಲ್ಲೂಕಿನಾದ್ಯಂತ ಗ್ರಾಮಗಳಲ್ಲಿ, ನೆರೆಯ ರಾಜ್ಯ ಹಾಗೂ ವಿದೇಶದಲ್ಲೂ ಶಿಡ್ಲಘಟ್ಟ ಕಸಾಪ ಕಾರ್ಯಕ್ರಮಗಳನ್ನು ನಡೆಸಿತು.
ನಿಸ್ವಾರ್ಥವಾಗಿ ಸ್ವಂತ ಹಣವನ್ನು ಖರ್ಚು ಮಾಡಿ ಯಾರ ಅವಧಿಯಲ್ಲೂ, ಜಿಲ್ಲೆಯ ಯಾವ ತಾಲ್ಲೂಕಿನಲ್ಲೂ ಆಗದಷ್ಟು ಕಾರ್ಯಕ್ರಮಗಳನ್ನು ಬಿ.ಆರ್‌.ಅನಂತಕೃಷ್ಣ ಅವರು ತಮ್ಮ ಅವಧಿಯಲ್ಲಿ ನಡೆಸಿದ್ದರೂ, ಅವರನ್ನು ಬದಲಾವಣೆ ಮಾಡಿರುವುದು ಹಲವು ಅನುಮಾನ ಹಾಗೂ ಗೊಂದಲವನ್ನು ಸೃಷ್ಟಿಸಿದೆ. ಈ ಬಗ್ಗೆ ಜಿಲ್ಲೆಯ ಸಾಹಿತ್ಯವಲಯದಲ್ಲಿ, ಕಸಾಪ ಸದಸ್ಯರಲ್ಲಿ ಹಾಗೂ ಸಾಹಿತ್ಯ ಪ್ರಿಯರಲ್ಲಿ ಅಸಮಧಾನ ವ್ಯಕ್ತವಾಗಿದೆ.
‘ಕನ್ನಡ ಸಾಹಿತ್ಯ ಪರಿಷತ್ತಿನ ಸಿದ್ದಾಂತಕ್ಕೆ ಬದ್ದನಾಗಿ ನಾನು ಮತ್ತು ನಮ್ಮ ಪದಾಧಿಕಾರಿಗಳು ಕನ್ನಡ ಸೇವೆಯನ್ನು ಮಾಡಿದ್ದೇವೆ. ಒಂದು ವರ್ಷದ ಅವಧಿಯಲ್ಲಿ 200ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ತಾಲ್ಲೂಕಿನ ಮೂಲೆ ಮೂಲೆಯನ್ನು ಹಾಗೂ ಸಮಸ್ತ ಕನ್ನಡ ಮನಸ್ಸುಗಳಿಗೂ ಕಸಾಪವನ್ನು ಹತ್ತಿರವಾಗಿಸಿದ್ದೇವೆ. ನಮ್ಮ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಂಡು ಕಸಾಪ ರಾಜ್ಯಾಧ್ಯಕ್ಷ ಮನುಬಳಿಗಾರ್‌ ದೂರವಾಣಿ ಮೂಲಕ ಅಭಿನಂದಿಸಿದ್ದರು. ಉತ್ತಮ ಕಾರ್ಯ ನಿರ್ವಹಿಸಿದ್ದರೂ ಬದಲಾವಣೆ ಮಾಡಲಾಗಿದೆ. ಪ್ರಾಮಾಣಿಕವಾಗಿ ಕನ್ನಡದ ಸೇವೆ ಮಾಡುವವರಿಗೆ ಇಲ್ಲಿ ಬೆಲೆ ಇಲ್ಲವೆ’ ಎಂದು ಬಿ.ಆರ್‌.ಅನಂತಕೃಷ್ಣ ಪ್ರಶ್ನಿಸುತ್ತಾರೆ.
‘ಜಿಲ್ಲಾಧ್ಯಕ್ಷ ಕೈವಾರ ಶ್ರೀನಿವಾಸ್‌ ಅವರು ಒಂದು ವರ್ಷದ ಅವಧಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತಿದ್ದೇನೆ. ಉತ್ತಮವಾಗಿ ಸೇವೆ ಸಲ್ಲಿಸಿದರೆ ಮುಂದುವರೆಸುತ್ತೇನೆ, ಇಲ್ಲದಿದ್ದಲ್ಲಿ ಬೇರೆಯವರಿಗೆ ಅವಕಾಶ ನೀಡುತ್ತೇನೆ ಎಂದಿದ್ದರು. ಆದರೆ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ್ದರೂ ಬದಲಿಸಿದ್ದಾರೆ. ಇದರ ಹಿಂದಿನ ಮರ್ಮವೇನು. ಬೇರೆ ತಾಲ್ಲೂಕುಗಳನ್ನು ಬಿಟ್ಟು ಕೇವಲ ಶಿಡ್ಲಘಟ್ಟದಲ್ಲಿ ಮಾತ್ರ ಬದಲಾಯಿಸಲು ಕಾರಣವೇನು. ರಾಜ್ಯ ದೇಶದ ಗಡಿದಾಟಿ ಕಾರ್ಯಕ್ರಮಗಳನ್ನು ಮಾಡಿ ಹೆಸರು ಮಾಡಿರುವುದು ಇವರ ಅಪಥ್ಯಕ್ಕೆ ಕಾರಣವೆ ಅರ್ಥವಾಗುತ್ತಿಲ್ಲ. ಕನಿಷ್ಟ ಕಸಾಪ ಸದಸ್ಯರ ಗಮನಕ್ಕೂ ತರದೆ ಬದಲಾವಣೆಯನ್ನು ಏಕಮುಖ ನಿರ್ಣಯವಾಗಿ ಕೈಗೊಳ್ಳಲಾಗಿದೆ’ ಎಂದು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಗುರುರಾಜರಾವ್‌ ತಿಳಿಸಿದ್ದಾರೆ.
‘ಕನ್ನಡದ ಸೇವೆಗಿಂತ ಕಸಾಪ ಜಿಲ್ಲಾಧ್ಯಕ್ಷರ ಸೇವೆ ಮಾಡುವವರಿಗೆ ಅಧ್ಯಕ್ಷ ಗಾದಿ ಎಂದು ನಿರೂಪಿತವಾಗಿದೆ. ತಮ್ಮ ವಾಹನವನ್ನು ನೀಡಿ, ಚಾಲಕರಾಗಿ ಸೇವೆ ಮಾಡಿದವರಿಗೆ ಅಧ್ಯಕ್ಷ ಪದವಿಯನ್ನು ನೀಡುವ ಹೊಸ ಮಾನದಂಡವು ಈ ಬಾರಿ ಸೃಷ್ಟಿಯಾಗಿದೆ’ ಎಂದು ಮಾಜಿ ಕಸಾಪ ತಾಲ್ಲೂಕು ಅಧ್ಯಕ್ಷ ವಿ.ಕೃಷ್ಣ ತಿಳಿಸಿದ್ದಾರೆ.
’ಉತ್ತಮ ಕೆಲಸ ಮಾಡಿದರೆ ಗೇಟ್ ಪಾಸ್. ಕೆಲಸ ಮಾಡದೆ, ನಿದ್ರೆ ಮಾಡುತ್ತಿದ್ದರೆ ಇರಿ ಎನ್ನುತ್ತಾರೆ, ಅದುವೇ ಜಿಲ್ಲಾ ಕಸಾಪ ಅಧ್ಯಕ್ಷರ ವೈಖರಿ. ಶಿಡ್ಲಘಟ್ಟ ತಾಲ್ಲೂಕು ಕ.ಸಾ.ಪ ಅಧ್ಯಕ್ಷರಾದ ಬಿ.ಆರ್. ಅನಂತಕೃಷ್ಣ ರವರನ್ನ ಬದಲಾಯಿಸಲಾಗಿದೆ, ನಗರದಲ್ಲಿ ಅಲ್ಲದೆ ತಾಲ್ಲೂಕಿನಾದ್ಯಂತ ಹಳ್ಳಿ ಹಳ್ಳಿಗಳಿಗೆ ಹೋಗಿ ಕಾರ್ಯಕ್ರಮ ಮಾಡಿದ್ದಾರೆ. ಗ್ರಾಮದಲ್ಲಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ ಮಾಡಿರುವುದೇ ಅಲ್ಲದೆ ಅಲ್ಲಿ ಶಾಲಾ ಗ್ರಂಥಾಲಯಕ್ಕೆ ಪುಸ್ತಕ ನೀಡಿದ್ದಾರೆ, ಪ್ರಮುಖ ಸಾಧಕರನ್ನು ಕರೆಯಿಸಿ ಕವಿಗಳ, ಸಾಹಿತಿಗಳ ಪರಿಚಯ ಮಾಡಿಸಿದ್ದಾರೆ. ಸ್ಪರ್ಧೆ ಏರ್ಪಡಿಸಿ ತಮ್ಮ ಸ್ವಂತ ಹಣದಿಂದ ಬಹುಮಾನ ನೀಡಿದ್ದಾರೆ, ಇವರ ಜೊತೆಗೆ, ತಿರುಪತಿಯಲ್ಲಿ, ಭೂತಾನ್‌ ದೇಶದಲ್ಲಿ ಕಾರ್ಯಕ್ರಮ ಮಾಡಿದ್ದಾರೆ. ಯಾರ ಕಾಲದಲ್ಲೂ ಆಗದ ಕನ್ನಡ ಕಾರ್ಯಕ್ರಮಗಳನ್ನ ಮಾಡಿ ದಾಖಲೆ ಮಡಿದ್ದಾರೆ. ಇದು ತಪ್ಪೇ? ಇವರನ್ನ ತೆಗೆಯಲು ಕಾರಣವಾದರೂ ಏನು? ಇಂತಹ ಕನ್ನಡ ಭಕ್ತರು, ಕಾರ್ಯಕರ್ತರೂ, ಕನ್ನಡ ಸಾಹಿತ್ಯ ಪರಿಷತ್ತಿಗೆ ವರವಲ್ಲವೇ? ಇವರನ್ನ ತೆಗೆದದ್ದು ಖಂಡನೀಯ, ಜಿಲ್ಲಾಧ್ಯಕ್ಷರ ನಡೆ ಸಮ್ಮತವಲ್ಲ’ ಎನ್ನುತ್ತಾರೆ ಸಾಹಿತಿ ಶಿವರಾಂ.

ದಾನಧರ್ಮ ಮಾಡುವುದರ ಮೂಲಕ ದಾನಗುಣವನ್ನು ಬೆಳೆಸಿಕೊಳ್ಳಬೇಕು

0

ಸಂಪತ್ತಿಗೆ ಸೊಕ್ಕಬೇಡಿ, ಸಿರಿ ಬಂದ ಕಾಲಕ್ಕೆ ಮೈಮರೆತು ಹಿಗ್ಗದೇ, ದಾನಧರ್ಮ ಮಾಡುವುದರ ಮೂಲಕ ದಾನಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಸಾರಿದ ದಾನಚಿಂತಾಮಣಿ ಹೇಮರೆಡ್ಡಿ ಮಲ್ಲಮ್ಮ ಬದುಕು ಆದರ್ಶವಾದುದು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸುಮಾರು ೫೦೦ ವರ್ಷಗಳ ಹಿಂದೆ ಶ್ರೀಶೈಲದ ಸಮೀಪ ಶರಣೆಯಾಗಿ ಜೀವಿಸಿದ್ದವಳು ಹೇಮರೆಡ್ಡಿ ಮಲ್ಲಮ್ಮ. ಶ್ರೀಶೈಲದ ದಕ್ಷಿಣಕ್ಕಿರುವ ವೆಲ್ಲಟೂರು ಜಿಲ್ಲೆಗೆ ಸೇರಿದ ರಾಮಪುರದ ರಾಮರೆಡ್ಡಿ- ಗೌರಮ್ಮ ದಂಪತಿಗಳಿಗೆ ಶ್ರೀಶೈಲ ಚನ್ನಮಲ್ಲಿಕಾರ್ಜುನನ ಕೃಪೆಯಿಂದ ಜನಿಸಿದ ಮಗಳು ಹೇಮರೆಡ್ಡಿ ಮಲ್ಲಮ್ಮ. ಈಕೆ ಬಾಲ್ಯದಿಂದಲೂ ಶ್ರೀಶೈಲ ಚನ್ನಮಲ್ಲಿಕಾರ್ಜುನನನ್ನೇ ಆರಾಧ್ಯ ದೈವವೆಂದು ಪರಿಭಾವಿಸಿ, ಕಡೆಯಲ್ಲಿ ದೇವರನ್ನೇ ಸಾಕ್ಷಾತ್ಕರಿಸಿಕೊಂಡವಳು. ಈಕೆಯ ಬಾಳು ಪವಿತ್ರ ಮೌಲ್ಯಗಳ, ಆದರ್ಶದ, ಅತ್ಯಮೂಲ್ಯ ಕಣಜವಾಗಿದೆ ಎಂದು ಹೇಳಿದರು.
ಬಸವೇಶ್ವರ ಸೇವಾ ಟ್ರಸ್ಟ್‌ ಅಧ್ಯಕ್ಷ ಬಿ.ಸಿ.ನಂದೀಶ್‌ ಮಾತನಾಡಿ, ಶಿವಶರಣರು ಹೇಗೆ ಬದುಕಬೇಕೆಂದು ತಿಳಿಸಿಕೊಟ್ಟಿದ್ದಾರೆ. ಅವರ ಬದುಕು, ಬರಹ ಶಾಶ್ವತವಾದುದು. ಅವರನ್ನು ಈಗಿನವರು ಮರೆಯಬಾರದು, ಅವರ ಆದರ್ಶಗಳನ್ನು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಅವರ ಜಯಂತ್ಯುತ್ಸವವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್‌.ನರಸಿಂಹಯ್ಯ, ಗ್ರೇಡ್‌ 2 ತಹಶೀಲ್ದಾರ್‌ ಮುನಿಕೃಷ್ಣಪ್ಪ ಹಾಜರಿದ್ದರು.

ನೆಹರೂ ಕ್ರೀಡಾಂಗಣದಲ್ಲಿ ಉಚಿತ ಬೇಸಿಗೆ ಶಿಬಿರ: ಕ್ರೀಡಾಂಗಣಕ್ಕೆ ಬರುವ ವಾಯು ವಿಹಾರಿಗಳಿಂದಲೆ ಎಲ್ಲ ನೆರವು

0

ನಗರದ ನೆಹರೂ ಕ್ರೀಡಾಂಗಣದಲ್ಲಿ ಕಳೆದ ಕೆಲವು ದಿನಗಳಿಂದ ಬೇಸಿಗೆ ಶಿಬಿರ ನಡೆಯುತ್ತಿದೆ. ಶಿಬಿರದಲ್ಲಿ ಭಾಗವಹಿಸುತ್ತಿರುವ ಮಕ್ಕಳಿಗೆ ಕ್ರಿಡಾಂಗಣಕ್ಕೆ ಬರುವ ವಾಯು ವಿಹಾರಿಗಳೆ ದಿನವೂ ಪೌಷ್ಠಿಕ ಆಹಾರ, ತಿಂಡಿ, ತಿನಿಸು ವಿತರಿಸುತ್ತಾ ಶಿಬಿರದ ಖರ್ಚು ವೆಚ್ಚಗಳನ್ನು ಅವರೆ ಭರಿಸುತ್ತಿದ್ದಾರೆ.
ಬೇಸಿಗೆ ಕಾಲ ಬಂತೆಂದರೆ ಸಾಕು ಅಲ್ಲಲ್ಲಿ ಬೇಸಿಗೆ ಶಿಬಿರಗಳು ನಡೆಯುತ್ತವೆ. ಸರ್ಕಾರದ್ದೋ, ಸಂಘ ಸಂಸ್ಥೆಗಳ ಇಲ್ಲವೇ ದಾನಿಗಳ ಸಹಕಾರದಿಂದ ನಡೆಯುವ ಬೇಸಿಗೆ ಶಿಬಿರಗಳೂ ಉಂಟು, ಇಲ್ಲವೇ ಶುಲ್ಕ ವಸೂಲಿ ಮಾಡಿಕೊಂಡು ನಡೆಸುವ ಶಿಬಿರಗಳೂ ಉಂಟು. ಆದರೆ ನಗರದಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶಿಬಿರಕ್ಕೆ ಆ ಕ್ರೀಡಾಂಗಣಕ್ಕೆ ಬರುವ ವಾಯು ವಿಹಾರಿಗಳೆ ದಾನಿಗಳು. ಬೆಳಗಿನ ವೇಳೆ ವಾಯು ವಿಹಾರಕ್ಕೆ ಬರುವವರೆ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಬೇಸಿಗೆ ಶಿಬಿರವನ್ನು ಮುನ್ನೆಡೆಸುತ್ತಿದ್ದಾರೆ.
ರಾಷ್ಟ್ರೀಯ ವಾಲೀಬಾಲ್ ಕ್ರೀಡಾಪಟು ಮುನಿರಾಜು, ಕರಾಟೆ ಪಟು ಅರುಣ್ ಕುಮಾರ್, ಕ್ರೀಡಾ ಪ್ರೋತ್ಸಾಹಕರಾದ ಲಕ್ಷ್ಮೀಪತಿ, ರಾಜಶೇಖರ್ ಮೊದಲಾದವರು ತಾವೇ ಒಂದಷ್ಟು ಹಣ ಹಾಕಿಕೊಂಡು ಕಳೆದ ಮೂರು ವರ್ಷಗಳ ಹಿಂದೆ ಶಿಬಿರ ನಡೆಸಿದರು. ಇವರ ಆಸಕ್ತಿ ಕಂಡ ಆ ಕ್ರೀಡಾಂಗಣಕ್ಕೆ ಬರುವ ವಾಯು ವಿಹಾರಿಗಳೆ ಇದೀಗ ಶಿಬಿರಕ್ಕೆ ಬೇಕಾಗುವಂತ ಎಲ್ಲ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಲು ಮುಂದಾಗಿದ್ದಾರೆ.
ಪ್ರತಿ ದಿನವೂ ಒಬ್ಬೊಬ್ಬರು ತಿಂಡಿ, ತಿನಿಸು, ಹಣ್ಣಿನ ಪಾನೀಯ ಮುಂತಾದ ಪೌಷ್ಠಿಕ ಆಹಾರ ಕೊಡುಗೆಯಾಗಿ ನೀಡುತ್ತಿದ್ಧಾರೆ. ಸಲಕರಣೆಗಳನ್ನು ಸಹ ಕೊಡುತ್ತಿದ್ದಾರೆ. ಜತೆಗೆ ಒಂದೊಂದು ದಿನ ಒಬ್ಬೊಬ್ಬರು ಬಂದು ಮಕ್ಕಳಿಗೆ ವಿಶೇಷ ಉಪನ್ಯಾಸ, ಸಲಹೆ ಸೂಚನೆಗಳನ್ನು ಕೊಟ್ಟು ಹೋಗುವ ಕೆಲಸ ಆಗುತ್ತಿದೆ.
ಕಳೆದ ಮೂರು ವರ್ಷಗಳ ಹಿಂದೆ ಈ ಶಿಬಿರದಲ್ಲಿ ಮೂವತ್ತು ಮಂದಿ ಇದ್ದು ಇದೀಗ ಆ ಸಂಖ್ಯೆ ೧೫೦ ದಾಟಿದೆ.
ಅಂತೂ ಹಣ ಕೊಟ್ಟು ಶಿಬಿರಕ್ಕೆ ಹೋಗದ ಎಷ್ಟೋ ಮಂದಿಗೆ ಈ ಶಿಬಿರ ಅನುಕೂಲ ಆಗಿದ್ದು ನಿತ್ಯವೂ ನೂರಾರು ಮಂದಿ ಚಿಣ್ಣರು ತಮಗೆ ಇಷ್ಟವಾದ ಕ್ರೀಡೆಯ ತರಬೇತಿ ಪಡೆದುಕೊಂಡು ಪೌಷ್ಠಿಕ ಆಹಾರವನ್ನು ತಿಂದು ಹೋಗುತ್ತಿದ್ದಾರೆ.

ಆಳ್ವಾಸ್ ಶಾಲೆಗೆ ಕ್ರೀಡಾ ಕೋಟಾದಡಿ ಪ್ರವೇಶಕ್ಕೆ ಅವಕಾಶ ಪಡೆದ ಚೈತನ್ಯ

0

ನಗರದ ಹೊರವಲಯದ ಹನುಮಂತಪುರ ಗೇಟ್‌ನ ಬಿಜಿಎಸ್ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿ ಆರ್.ಚೈತನ್ಯ ಕ್ರೀಡಾ ಕೋಟಾದಡಿ ಪ್ರತಿಷ್ಠಿತ ಮೂಡುಬಿದರೆಯ ಆಳ್ವಾಸ್ ಶಾಲೆಯಲ್ಲಿ ಪ್ರವೇಶ ಗಿಟ್ಟಿಸಿದ್ದಾಳೆ.
ನಗರದ ದೇಶದಪೇಟೆಯ ವಾಸಿ ರಾಜಶೇಖರ್‌ ಮತ್ತು ಲತಾ ಅವರ ಪುತ್ರಿಯಾದ ಆರ್.ಚೈತನ್ಯ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಲ್ಲಿ ಕ್ರೀಡಾ ವಿದ್ಯಾರ್ಥಿಯಾಗಿದ್ದು ೨೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಹಲವು ಪ್ರಶಸ್ತಿಗಳನ್ನು ಪಡೆದಿದ್ದಳು.
ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಮುನಿರಾಜು ಮಾರ್ಗದರ್ಶನದಲ್ಲಿ ಓಟದ ತರಬೇತಿ ಪಡೆಯುತ್ತಿರುವ ಆರ್.ಚೈತನ್ಯ ಕ್ರೀಡಾ ಕೋಟಾದಡಿ ಪ್ರತಿಷ್ಠಿತ ಆಳ್ವಾಸ್ ಶಾಲೆಗೆ ಪ್ರವೇಶಕ್ಕೆ ಅವಕಾಶ ಪಡೆಯುವ ಮೂಲಕ ಇಂತಹ ಅವಕಾಶ ಪಡೆದ ತಾಲ್ಲೂಕಿನ ಮೊದಲಿಗಳಾಗಿದ್ದಾಳೆ.
ಶಾಸಕ ಎಂ.ರಾಜಣ್ಣ ಕ್ರೀಡಾ ವಿದ್ಯಾರ್ಥಿ ಚೈತನ್ಯಗಳನ್ನು ಅಭಿನಂದಿಸಿದ್ದು ಶಾಲೆಯ ಪ್ರವೇಶ ಸೇರಿದಂತೆ ಇತರೆ ಕ್ರೀಡೆ, ವಿದ್ಯಾಭ್ಯಾಸಕ್ಕೆ ಅಗತ್ಯ ಇರುವ ತನ್ನಿಂದ ಆಗುವ ಎಲ್ಲ ರೀತಿಯ ನೆರವನ್ನು ನೀಡುವುದಾಗಿ ಭರವಸೆ ನೀಡಿದರು.
ಇಂತಹ ಸಾಧನೆಗೆ ಪ್ರೇರಣೆಯಾದ ಮಾರ್ಗದರ್ಶನ ನೀಡಿದ ತರಬೇತುದಾರ ಮುನಿರಾಜು, ಪೋಷಕರಾದ ರಾಜಶೇಖರ್ ಕಾರ್ಯಕ್ಕೆ ಶ್ಲಾಘಿಸಿದರು. ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಲ್ಲಿ ತರಬೇತಿ ಪಡೆಯುತ್ತಿರುವ ಇತರೆ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಕರಾಟೆ ಕಲಿಕೆಯಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿದೆ

0

ಬೇಸಿಗೆ ರಜೆಯಲ್ಲಿ ಗ್ರಾಮೀಣ ಮಕ್ಕಳಿಗೆ ಕರಾಟೆ ಕಲಿಕೆಯನ್ನು ಕಲಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಲಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಹಂಸ ಪ್ರಭಾಕರ್‌ ತಿಳಿಸಿದರು.
ತಾಲ್ಲೂಕಿನ ತಾದೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಈಚೆಗೆ ದಿವ್ಯ ಭಾರತ್‌ ಕರಾಟೆ ಡೋ ಅಸೋಸಿಯೇಷನ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹತ್ತು ದಿನಗಳ ಉಚಿತ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಅವರು ಮಾತನಾಡಿದರು.
ಆರೋಗ್ಯ ಪೂರ್ಣ ಜೀವನ ನಡೆಸಲು ಹಾಗೂ ಒತ್ತಡದಿಂದ ಹೊರಬರಲು ಯೋಗ, ಧ್ಯಾನ ಅಗತ್ಯವಾಗಿದೆ. ತಂದೆ, ತಾಯಿಗಳು ಮಕ್ಕಳಿಗೆ ತಪ್ಪದೇ ಕರಾಟೆ ಕಲೆಯನ್ನು ಕಲಿಯಲು ಅಗತ್ಯ ಪ್ರೋತ್ಸಾಹ, ಸಹಕಾರ ನೀಡಬೇಕು. ಮಕ್ಕಳ ಪ್ರತಿಭೆ ವಿಕಸನಕ್ಕೆ ಕರಾಟೆ ಕಲೆ ಹೆಚ್ಚು ಸಹಕಾರಿ. ವಿಶೇಷವಾಗಿ ಮಹಿಳೆಯರು ಕರಾಟೆ ಕಲಿತಿದ್ದರೆ ಎಂತಹ ಅಪಾಯ ಎದುರಾದರೂ ನಿಭಾಯಿಸಿಕೊಂಡು ರಕ್ಷಣೆ ಮಾಡಿಕೊಳ್ಳಬಹುದು. ನಾವು ಚಿಕ್ಕವರಿದ್ದಾಗ ಇಂತಹ ಅವಕಾಶಗಳು ನಮಗೆ ದೊರೆಯಲಿಲ್ಲ. ಪ್ರಸ್ತುತ ದಿವ್ಯ ಭಾರತ್‌ ಕರಾಟೆ ಡೋ ಅಸೋಸಿಯೇಷನ್‌ ಗ್ರಾಮೀಣ ಪ್ರದೇಶದಲ್ಲಿ ಇಂತಹ ಕೆಲಸ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಲಯನ್‌ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಮುನಿರಾಜು ಮಾತನಾಡಿ, ತಾಲ್ಲೂಕಿನಲ್ಲಿ ಕ್ರೀಡೆಯಲ್ಲಿ ಆಸಕ್ತ ಮಕ್ಕಳನ್ನು ಗುರುತಿಸಿ ತರಬೇತಿ ನೀಡಿ ಅವರನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸುವಂತೆ ಪ್ರೋತ್ಸಾಹಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಮುಂದಿನ ಹತ್ತು ವರ್ಷದಲ್ಲಿ ಶಿಡ್ಲಘಟ್ಟದ ಹೆಸರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಈ ಮೂಲಕ ಕೇಳಿಬರಬೇಕು ಎಂದು ಹೇಳಿದರು.
ದಿವ್ಯ ಭಾರತ್‌ ಕರಾಟೆ ಡೋ ಅಸೋಸಿಯೇಷನ್‌ ಕರಾಟೆ ಶಿಕ್ಷಕ ಅರುಣ್‌ಕುಮಾರ್‌, ಆರ್‌.ಬಾಬು, ಶಕುಂತಲಮ್ಮ ಹಾಜರಿದ್ದರು.

ಸರ್ಕಾರದ ಖಾತೆ ತೆರೆದು ಅದರ ಚೆಕ್‌ ರೈತರಿಗೆ ನೀಡುವಂಣತೆ ಒತ್ತಾಯ

0

ಮಾರುಕಟ್ಟೆಯಲ್ಲಿ ಕೆಲವು ರೀಲರುಗಳು ನೀಡಿರುವ ಚೆಕ್‌ ಬೌನ್ಸ್‌ ಆಗಿದ್ದು, ಅದಕ್ಕಾಗಿ ಆಂಧ್ರದಿಂದ ಬಂದ ರೈತರು ನ್ಯಾಯಾಲಯಕ್ಕೆ ತಿರುಗಲು ಸಾಧ್ಯವಿಲ್ಲ. ಮಾರುಕಟ್ಟೆಯ ಆಪತ್ತು ನಿಧಿಯಿಂದ ರೈತರಿಗೆ ಹಣವನ್ನು ನೀಡಬೇಕೆಂದು ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಯಲುವಳ್ಳಿ ಸೊಣ್ಣೇಗೌಡ ಒತ್ತಾಯಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಪ್ರಭಾಕರ್‌ ನೇತೃತ್ವದಲ್ಲಿ ನಡೆದ ರೈತರು ರೀಲರುಗಳ ಸಭೆಯಲ್ಲಿ ಹಲವು ಸಮಸ್ಯೆಗಳ ಪರಿಹಾರಕ್ಕೆ ರೈತರು ಮತ್ತು ರೀಲರುಗಳು ಒತ್ತಾಯಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ನೆರೆಯ ರಾಜ್ಯದಿಂದ ಹಲವಾರು ರೈತರು ಉತ್ತಮ ಬೆಲೆ ಸಿಗುವುದೆಂದು ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಬರುತ್ತಾರೆ. ಅವರಿಗೆ ಚೆಕ್‌ ನೀಡಿ ಮೋಸ ಮಾಡಲಾಗುತ್ತಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು. ಮುಂದೆ ಯಾರು ಯಾರಿಗೂ ಮಾರುಕಟ್ಟೆಯಲ್ಲಿ ಮೋಸಮಾಡದಂತೆ ಗುಣಪಾಠ ಕಲಿಸಬೇಕು. ರೈತರು ನ್ಯಾಯಾಲಯಕ್ಕೆ ಹೋಗಲು ಸಾಧ್ಯವಿಲ್ಲ. ಈಗಾಗಲೇ ಆಂಧ್ರದಲ್ಲಿ ಮಾಡಿರುವಂತೆ ಸರ್ಕಾರದ ಖಾತೆ ತೆರೆದು ಅದರ ಚೆಕ್‌ ರೈತರಿಗೆ ನೀಡುವಂತೆ ಅತಿ ಶೀಘ್ರವಾಗಿ ವ್ಯವಸ್ಥೆ ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಪ್ರಭಾಕರ್‌ ಈ ಬಗ್ಗೆ ಆಯುಕ್ತರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ರೇಷ್ಮೆ ಗೂಡಿನ ಮಾರುಕಟ್ಟೆಯ ಆವರಣದಲ್ಲಿ ಖಾಸಗಿ ಮಾರುಕಟ್ಟೆ ಜಾರಿಯಲ್ಲಿದೆ. ಅದಕ್ಕೆ ಕಡಿವಾಣ ಹಾಕುವಂತೆ ರೀಲರುಗಳು ಮತ್ತು ರೈತರು ಕೋರಿದರು. ತೂಕ ಹಾಗೂ ಮಾಪನ ಇಲಾಖೆಯ ಮೂಲಕ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ರೀಲರುಗಳಾದ ಅನ್ವರ್‌ಪಾಷ, ರೆಹಮಾನ್‌, ಅನಂತ್‌, ಮಂಜುನಾಥ್‌, ಮೂರ್ತಿ ಹಾಜರಿದ್ದರು.

ಹಾಲಿನ ಗುಣಮಟ್ಟ ಹೆಚ್ಚಿಸಿ

0

ಹಾಲಿನ ಗುಣಮಟ್ಟ ಕಾಪಾಡುವ ಮೂಲಕ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಂದಿನಿ ಹಾಲಿನ ಬೇಡಿಕೆಯನ್ನು ಹೆಚ್ಚಿಸಬೇಕು. ಇದರಿಂದ ರೈತರಿಗೆ ಲಾಭವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಕೋಚಿಮುಲ್‌ ನಿರ್ದೇಶಕ ಬಂಕ್ ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಗುಡ್ಲನರಸಿಂಹನಹಳ್ಳಿ ಗ್ರಾಮದಲ್ಲಿ ಸೋಮವಾರ ಗುಡ್ಲನರಸಿಂಹನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ೬.೫ ಲಕ್ಷರೂಗಳ ವೆಚ್ಚದ ನೂತನ ಕಟ್ಟಡವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳು ಬರಪೀಡಿತ ಪ್ರದೇಶವಾಗಿದ್ದು, ನೀರಿಗೆ ಕೊರತೆಯಿದ್ದರೂ ಹಾಲಿಗೆ ಕೊರತೆಯಿಲ್ಲ, ತಾಲ್ಲೂಕಿನ ಬಹುತೇಕ ಎಲ್ಲಾ ಗ್ರಾಮಗಳಲ್ಲೂ ಲಕ್ಷಾಂತರ ಕುಟುಂಬಗಳು ಹೈನುಗಾರಿಕೆಯನ್ನು ನಂಬಿ ಜೀವನ ಸಾಗಿಸುತ್ತಿದ್ದು, ಪೂರೈಸುತ್ತಿರುವ ಹಾಲಿನ ಗುಣಮಟ್ಟವು ಒಕ್ಕೂಟವು ನಿಗಧಿಪಡಿಸಿರುವ ಕನಿಷ್ಠ ಎಸ್.ಎನ್.ಎಫ್ ೮.೫ ಕ್ಕಿಂತ ಹೆಚ್ಚಿಗೆ ಎಲ್ಲಾ ಸರತಿಗಳಲ್ಲಿಯೂ ಇವೆ. ಗುಣಮಟ್ಟದ ಸಾಮರ್ಥ್ಯ ಕುಸಿಯದಂತೆ ಇನ್ನೂ ಉತ್ತಮ ಪಡಿಸಲು ಅವಶ್ಯಕ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದ್ದಕ್ಕೆ ಗ್ರಾಮಸ್ಥರ ಸಹಕಾರ ಮುಖ್ಯವಾಗಿದ್ದು, ಗುಣಮಟ್ಟದ ಕಡೆಗೆ ಗಮನ ಕೋಡಬೇಕೆಂದು ಕೋರಿದರು.
ಕೋಚಿಮುಲ್ ಉಪ ವ್ಯವಸ್ಥಾಪಕ ಬಿ.ಎಸ್.ಹುನುಂತರಾವ್ ಮಾತನಾಡುತ್ತಾ, ಜೂನ್ ತಿಂಗಳಿನಲ್ಲಿ ರಾಸುಗಳ ವಿಮೆ ಪ್ರಾರಂಭವಾಗುತ್ತಿದ್ದು, ಒಂದು ರಾಸುವಿನ ವಿಮೆ ಕಂತು ೨೨೫ರೂಗಳು ಇದ್ದು, ಎಲ್ಲಾ ರೈತರು ರಾಸುಗಳ ವಿಮೆ ತಪ್ಪದೆ ಮಾಡಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಕೋಚಿಮುಲ್‌ನ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ಶ್ರೀನಿವಾಸ್, ಕೋಚಿಮುಲ್‌ನ ವಿಸ್ತರಣಾಧಿಕಾರಿ ಮಂಜುನಾಥ್, ವಿ.ಶ್ರೀನಿವಾಸ್, ಸಂತೋಷ್, ಮುನೇಗೌಡ, ಆನಂದ್, ಎಂ.ಪಿ.ಸಿ.ಎಸ್ ಅಧ್ಯಕ್ಷ ಜಿ.ಕೆ.ದೇವರಾಜು, ನಿರ್ದೇಶಕರಾದ ಸುಶೀಲಮ್ಮ, ನಾರಾಯಣಪ್ಪ, ನರಸಿಂಹಪ್ಪ ಸಿಂಗಪ್ಪ, ತಮ್ಮಣ್ಣ ಹಾಜರಿದ್ದರು.

ಸ್ವಯಂ ಪ್ರೇರಿತ ರಕ್ತದಾನ ಶಿಬಿರ

0

ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವುದರಿಂದ ಅಪಘಾತ ಸೇರಿದಂತೆ ಪ್ರಸವ ವೇದನೆಯ ಸಮಯದಲ್ಲಿರುವ ಗರ್ಭಿಣಿ ಮಹಿಳೆಯರ ಜೀವವುಳಿಸಲು ಸಹಕಾರಿಯಾಗುತ್ತದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಹಾಗೂ ಎಂ.ರಾಜಣ್ಣ ಅಭಿಮಾನಿಗಳ ಸಂಘದಿಂದ ಶಾಸಕ ಎಂ.ರಾಜಣ್ಣ ಅವರು 55 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗು ಹಣ್ಣು ಹಂಪಲು ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೆ ಮುಂದುವರೆದರೂ ಪ್ರಕೃತಿದತ್ತವಾಗಿ ಮಾನವನ ಶರೀರದಲ್ಲಿ ಉತ್ಪತ್ತಿಯಾಗುವಂತಹ ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಾಗುವುದಿಲ್ಲ. ಮಾನವನ ರಕ್ತವನ್ನು ಹೊರತುಪಡಿಸಿ ಬೇರೆ ಯಾವುದೇ ಜೀವಿಗಳ ರಕ್ತವನ್ನು ಬೇರೊಬ್ಬರಿಗೆ ನೀಡಲಾಗುವುದಿಲ್ಲ.
ಹಾಗಾಗಿ ಶ್ರೇಷ್ಟವಾಗಿರುವ ಮಾನವನ ರಕ್ತವನ್ನು ಒಬ್ಬರಿಂದ ಮತ್ತೊಬ್ಬರಿಗೆ ದಾನವಾಗಿ ನೀಡುವುದರಿಂದ ಇನ್ನೊಬ್ಬರ ಜೀವ ಉಳಿಸುವುದಷ್ಟೇ ಅಲ್ಲದೇ ರಕ್ತದಾನ ಮಾಡುವವರ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗುತ್ತದೆ ಎಂದರು.
ನಗರಸಭೆ ಅಧ್ಯಕ್ಷ ಅಪ್ಸರ್‍ಪಾಷ ಮಾತನಾಡಿ ರಕ್ತದಾನ ದಂತಹ ಮತ್ತೊಂದು ದಾನ ಪ್ರಪಂಚದಲ್ಲಿ ಬೇರೊಂದಿಲ್ಲ, ಆರೋಗ್ಯವಂತ ವ್ಯಕ್ತಿ ಸೇರಿದಂತೆ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಕ್ಕೆ ಮುಂದಾಗಬೇಕು. ರಾಜಕೀಯ ಮುಖಂಡರ ಹಾಗು ಸಮಾಜದಲ್ಲಿನ ಗಣ್ಯವ್ಯಕ್ತಿಗಳ ಜನ್ಮದಿನಾಚರಣೆ ಕಾರ್ಯಕ್ರಮಗಳಲ್ಲಿ ಈ ರೀತಿ ರಕ್ತದಾನ ಶಿಬಿರ ಹಮ್ಮಿಕೊಳ್ಳುವುದರಿಂದ ಹಲವರ ಜೀವ ಕಾಪಾಡಿದ ತೃಪ್ತಿ ಸಿಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಶಾಸಕ ಎಂ.ರಾಜಣ್ಣರಿಗೆ ತಹಸೀಲ್ದಾರ್ ಎಸ್.ಅಜಿತ್‍ಕುಮಾರ್ ರೈ, ಜಿ.ಪಂ ಸದಸ್ಯ ಬಂಕ್ ಮುನಿಯಪ್ಪ, ನಗರಸಭೆ ಅಧ್ಯಕ್ಷ ಅಪ್ಸರ್‍ಪಾಷ, ತಾ.ಪಂ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಸಾರ್ವಜನಿಕ ಆಸ್ಪತ್ರೆಯ ವೈದ್ಯೆ ಡಾ.ಸುನೀತಾ, ಸೇರಿದಂತೆ ಗಣ್ಯರು ಹೂಗುಚ್ಚ ನೀಡಿ ಅಭಿನಂದಿಸಿದರು.
ಶಾಸಕ ಎಂ.ರಾಜಣ್ಣ ಅಭಿಮಾನಿಗಳು ಹಾಗು ಜೆಡಿಎಸ್ ಕಾರ್ಯಕರ್ತರಿಂದ ಆಸ್ಪತ್ರೆಯಲ್ಲಿರುವ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಮಾಜಿ ಅಧ್ಯಕ್ಷ ಎನ್.ಕೆ. ಗುರುರಾಜರಾವ್, ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಅನಿಲ್‍ಕುಮಾರ್, ನಗರಸಭೆ ಸದಸ್ಯ ವೆಂಕಟಸ್ವಾಮಿ, ತಾ.ಪಂ ಸದಸ್ಯ ನಾರಾಯಣಸ್ವಾಮಿ, ಮುಖಂಡರಾದ ಬಶೆಟ್ಟಹಳ್ಳಿ ವೆಂಕಟೇಶ್, ಕೆ.ಎಸ್. ಕನಕಪ್ರಸಾದ್, ಮುನಿರೆಡ್ಡಿ, ಮಳ್ಳೂರಯ್ಯ, ಕೆ.ಬಿ.ಮಂಜುನಾಥ, ಮಸ್ತಾನ್, ಅಫ್ಜಲ್‍ಪಾಷ, ಮತ್ತಿತರರು ಹಾಜರಿದ್ದರು.

ಚಿಣ್ಣರ ಚಿಲಿಪಿಲಿ ಮೇಳ

0

ಮಕ್ಕಳು ಕೇವಲ ಪುಸ್ತಕ ಓದಿನಲ್ಲಿ ತಲ್ಲೀನರಾದರೆ ಸಾಲದು ಬದಲಿಗೆ ದೈಹಿಕವಾಗಿಯೂ ಸದೃಢರಾಗಬೇಕು. ಅದಕ್ಕೆ ಸೂಕ್ತ ಮಾರ್ಗದರ್ಶನ ಅಗತ್ಯ. ಹಾಗಾಗಿ ಉಚಿತವಾಗಿ 10 ದಿನಗಳ ಕಾಲ ನಡೆಸುವ ಬೇಸಿಗೆ ಶಿಬಿರದ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಉಲ್ಲೂರು ಪೇಟೆಯ ಮುಖ್ಯ ಶಿಕ್ಷಕ ಎನ್.ಕೃಷ್ಣಮೂರ್ತಿ ತಿಳಿಸಿದರು.
ನಗರದ ಚಿಂತಾಮಣೆ ರಸ್ತೆಯಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಉಲ್ಲೂರು ಪೇಟೆ ಶಾಲೆ ಆವರಣದಲ್ಲಿ ಗುರುವಾರ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತ್, ಶಿಶು ಅಭಿವೃದ್ದಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಡ್ಲಘಟ್ಟ, ರಾಜ್ಯ ಬಾಲ ಭವನ ಸೊಸೈಟಿ ಬೆಂಗಳೂರು, ತಾಲ್ಲೂಕು ಬಾಲ ಭವನ ಸಮಿತಿ, ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ:-04-05-2017 ರಿಂದ 15-05-2017ರ ವರಗೆ “ಚಿಣ್ಣರ ಚಿಲಿಪಿಲಿ ಮೇಳ” ತಾಲ್ಲೂಕು ಮಟ್ಟದ ಬೇಸಿಗೆ ಶಿಬಿರದ ಕಾರ್ಯಾಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲೆಗೆ ರಜೆ ಬಂದರೆ ಮಕ್ಕಳು ವಿವಿಧ ಆಟೋಟಗಳು ಸೇರಿದಂತೆ ಕೇವಲ ಟಿವಿ, ಮೊಬೈಲು, ಟ್ಯಾಬ್‍ಗಳ ಮುಂದೆ ಕುಳಿತುಕೊಂಡು ತಮ್ಮ ಕ್ರಿಯಾಶೀಲತೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಎಳೆಯ ವಯಸ್ಸಿನಲ್ಲಿಯೇ ಮಕ್ಕಳಿಗೆ ಕ್ರೀಡೆಯಲ್ಲಿ ಪ್ರೋತ್ಸಾಹಿಸುವ ಮೂಲಕ ಅವರ ಪ್ರತಿಭೆಯನ್ನು ಗುರುತಿಸಬೇಕು. ಮಕ್ಕಳನ್ನು ದೈಹಿಕವಾಗಿ ಸದೃಡಗೊಳಿಸುವ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗೆ ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವಂತೆ ಮನವರಿಕೆ ಮಾಡಿಕೊಡಬೇಕು ಎಂದರು.
ಈ ಶಿಬಿರದಲ್ಲಿ ಯೋಗ, ಕರಾಟೆ, ಕರಕುಶಲತೆ, ಚಿತ್ರ ಕಲೆ, ಎಂಬ್ರಾಮಿಡರಿ, ಹಾಗೂ ಸಂಸ್ಕøತಿ ಮತ್ತು ನೃತ್ಯ ತರಬೇತಿ ಶಿಬಿರಗಳು ಇದ್ದು, ಮಕ್ಕಳು ಈ ಶಿಬಿರದಲ್ಲಿ ಪಾಲ್ಗೊಂಡು ಸದುಪಯೋಗ ಪಡೆಯಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಮೇಲ್‍ವಿಚಾರಕಿ ಗಿರಿಜಾಂಭಿಕ, ಸಂಗೀತ ಶಿಕ್ಷಕರಾದ ಎಸ್.ವಿ.ರಾಮಮೂರ್ತಿ, ಲಕ್ಷ್ಮೀನಾರಾಯಣ ಹಾಗೂ ಮುಂತಾದವರು ಹಾಜರಿದ್ದರು.

ಹಿಪ್ಪುನೇರಳೆ ತೋಟಕ್ಕೆ ದುಷ್ಕರ್ಮಿಗಳಿಂದ ಔಷಧಿ ಸಿಂಪಡಣೆ

0

ಒಂದು ಕಡೆ ತೀವ್ರ ಬರಗಾಲ, ಮತ್ತೊಂದು ಕಡೆ 1500 ಅಡಿಗಳು ಕೊರೆದರೂ ಒಂದಿಂಚು ನೀರು ಸಿಗದಂತಹ ಸಂಧಿಗ್ದ ಪರಿಸ್ಥಿತಿ, ಲಕ್ಷಾಂತರ ರೂಪಾಯಿಗಳನ್ನು ಕೊಳವೆಬಾವಿಗಳಿಗೆ ಖರ್ಚು ಮಾಡುತ್ತಿರುವ ರೈತರು, ನೀರಿನ ಕೊರತೆಯಿಂದಾಗಿ ರೇಷ್ಮೆ ಉದ್ಯಮದಿಂದಲೇ ಬಹಳಷ್ಟು ರೈತರು ಉದ್ಯವiದಿಂದ ವಿಮುಖರಾಗುತ್ತಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಅಲ್ಪಸ್ವಲ್ಪ ನೀರಿನಲ್ಲೆ ಕಷ್ಟಪಟ್ಟು ಬೆಳೆದಿದ್ದ ಹಿಪ್ಪುನೇರಳೆ ತೋಟಕ್ಕೆ ದುಷ್ಕರ್ಮಿಗಳು ಔಷಧಿ ಸಿಂಪಡಣೆ ಮಾಡಿರುವುದರ ಪರಿಣಾಮವಾಗಿ ಸುಮಾರು 500 ಮೊಟ್ಟೆಯಷ್ಟು ರೇಷ್ಮೆಹುಳು ನಷ್ಟವಾಗಿದೆ ಎಂದು ರೇಷ್ಮೆ ಬೆಳೆಗಾರ ಕರಗಪ್ಪ ಆರೋಪಿಸಿದ್ದಾರೆ.
ತಾಲ್ಲೂಕಿನ ಗಂಗನಹಳ್ಳಿ ಗ್ರಾಮದ ರೈತ ದೊಡ್ಡಪಾಪಣ್ಣ ಎಂಬುವವರಿಗೆ ಸೇರಿದ ಹಿಪ್ಪುನೇರಳೆ ತೋಟಕ್ಕೆ ದುಷ್ಕರ್ಮಿಗಳು ಔಷಧಿಗಳನ್ನು ಸಿಂಪಡಣೆ ಮಾಡಿದ್ದಾರೆ. ತೋಟದಲ್ಲಿದ್ದ ಹಿಪ್ಪುನೇರಳೆ ಸೊಪ್ಪನ್ನೆ ಇದುವರೆಗೂ ಹುಳುಗಳಿಗೆ ನೀಡಿದ್ದೇವೆ. ಹುಳುಗಳು 3 ಜ್ವರವೆದ್ದು ಸೊಪ್ಪು ತಿನ್ನುತ್ತಿದ್ದವು. ಈಗ ಔಷಧಿ ಸಿಂಪಡಣೆ ಮಾಡಿರುವ ಸೊಪ್ಪನ್ನು ತಿಂದ ಮೇಲೆ ಹುಳುಗಳೆಲ್ಲಾ ಸೊಪ್ಪಿನ ಕೆಳಗೆ ಹೋಗಿ ಸಾಯುತ್ತಿವೆ. ಕೆಲ ಹುಳುಗಳು ಬಣ್ಣವೇ ಬದಲಾಗಿ ವಾಂತಿ ಮಾಡಿಕೊಂಡು ಸಾಯುತ್ತಿವೆ. ಇದರಿಂದ ಸುಮಾರು 4 ಲಕ್ಷದವರೆಗೂ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ 102 ನೇ ಸಂಸ್ಥಾಪನಾ ದಿನಾಚರಣೆ

0

ಗಡಿನಾಡ ಪ್ರದೇಶದ ಜನರು ಹಾಗು ಯುವಕರಲ್ಲಿ ಭಾಷೆ ಹಾಗು ಸಾಹಿತ್ಯದ ಅಭಿರುಚಿಯನ್ನು ಬೆಳಸುವ ಕೆಲಸಕ್ಕೆ ಕನ್ನಡ ಸಾಹಿತ್ಯ ಪರಿಷತ್ ಮುಂದಾಗಬೇಕು ಎಂದು ಎನ್.ಆರ್. ಕೃಷ್ಣಮೂರ್ತಿ ಹೇಳಿದರು.
ತಾಲೂಕಿನ ನಡಿಪಿನಾಯಕನಹಳ್ಳಿ ಗ್ರಾಮದ ಕಪಿಲಮ್ಮ ಕಾಲೇಜು ಆವರಣದಲ್ಲಿ ಶುಕ್ರವಾರ ತಾಲೂಕು ಕಸಾಪ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 102 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ನೆರೆಯ ಆಂದ್ರಪ್ರದೇಶದ ಗಡಿಭಾಗದಲ್ಲಿರುವ ಈ ಪ್ರದೇಶದಲ್ಲಿ ತೆಲುಗು ಭಾಷೆಯ ಪ್ರಾಬಲ್ಯ ಹೆಚ್ಚಾಗಿದ್ದು ಕನ್ನಡ ಭಾಷೆಯ ಹಾಗು ಸಾಹಿತ್ಯದ ಬಗ್ಗೆ ಜನರಲ್ಲಿ ಅಭಿರುಚಿ ಮೂಡುವಂತೆ ಮಾಡಲು ಗಡಿಬಾಗದ ಅದರಲ್ಲಿಯೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಕನ್ನಡ ಕಾರ್ಯಕ್ರಮಗಳು ಆಯೋಜಿಸಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಯಾವುದೇ ಒಂದು ಜಾತಿ, ಮತ, ಧರ್ಮಕ್ಕೆ ಸೀಮಿತವಾಗದೇ ಎಲ್ಲಾ ಸಮುದಾಯಗಳ ಸಮ್ಮಿಲನದಲ್ಲಿ ಸಾಹಿತ್ಯಾಸಕ್ತರನ್ನು ಪ್ರೇರೇಪಿಸುವುದರೊಂದಿಗೆ ನಾಡಿನ ಭಾಷೆ ಸೇರಿದಂತೆ ಈ ಭಾಗದ ನೆಲ, ಜಲ ಸಮಸ್ಯೆಗಳ ಧ್ವನಿಯಾಗಬೇಕು ಎಂದರು.
ನಾಡಿನಲ್ಲಿ ವಿವಿಧ ಸಂಘಟನೆಗಳಿದ್ದರೂ ಕೂಡಾ ವಿಶಿಷ್ಟವಾದ ರೀತಿಯಲ್ಲಿ ತನ್ನ ಕಾರ್ಯ ಚಟುವಟಿಕೆಯನ್ನು ಮುಂದುವರೆಸಿರುವ ಕನ್ನಡ ಸಾಹಿತ್ಯ ಪರಿಷತ್ತು ಮತ್ತಷ್ಟು ಉತ್ತಮ ಕಾರ್ಯ ನಿರ್ವಹಿಸಲು ಸಜ್ಜಾಗಬೇಕು ಎಂದರು.

ತಾಲೂಕಿನ ನಡಿಪಿನಾಯಕನಹಳ್ಳಿ ಗ್ರಾಮದ ಕಪಿಲಮ್ಮ ಕಾಲೇಜು ಆವರಣದಲ್ಲಿ ಶುಕ್ರವಾರ ತಾಲೂಕು ಕಸಾಪ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 102 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಸಾಪ ಜಿಲ್ಲಾ ನಿಕಟಪೂರ್ವ ಕಾರ್ಯದರ್ಶಿ ಅಮೃತ್‍ಕುಮಾರ್ ಕನ್ನಡ ಸಾಹಿತ್ಯದಲ್ಲಿ ಜೀವನ ಮೌಲ್ಯಗಳ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿ ಸಾಹಿತ್ಯ ಪರಿಷತ್ತು ಕೇವಲ ಸಾಹಿತ್ಯಕ್ಕಷ್ಟೆ ಸೀಮಿತವಾಗದೆ, ರಾಜ್ಯದಲ್ಲಿನ ಮತ್ತಷ್ಟು ಸಮಸ್ಯೆಗಳ ನಿವಾರಣೆಗೆ ಶ್ರಮಿಸುವ ಶಕ್ತಿಯಾಗಿ ಕಸಾಪ ಬೆಳೆಯಬೇಕು ಎಂದರು.
ಸಾಹಿತ್ಯ ಬೆಳೆಸುವ ನಿಟ್ಟಿನಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಶಾಲಾ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕಸಾಪ ಹಮ್ಮಿಕೊಳ್ಳಬೇಕು ಎಂದರು.
ಭಾಷೆ, ಸಾಹಿತ್ಯ ಉಳಿಯಬೇಕಾದರೆ ಪ್ರತಿಯೊಬ್ಬರೂ ಓದುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರ ದೂರದೃಷ್ಠಿಯಿಂದ ಶುರುವಾದ ಕಸಾಪ ಇಂದು ಬೃಹತ್ ಮಟ್ಟದಲ್ಲಿ ಬೆಳೆದಿದ್ದು ತಾಲೂಕು ಕಸಾಪ ವತಿಯಿಂದ ತಾಲೂಕಿನ ಪ್ರತಿಯೊಂದು ಶಾಲೆಯಲ್ಲಿಯೂ ಶಾಲಾ ಕಾರ್ಯಕ್ರಮ ಆಯೋಜಿಸುವುದರೊಂದಿಗೆ ಈ ಭಾಗದ ಜನರಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಪ್ರಾಮಾಣಿಕವಾಗಿ ದುಡಿದ ತೃಪ್ತಿ ಇದೆ ಎಂದರು.
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬೆಳೆದು ಬಂದ ದಾರಿ ಎಂಬ ವಿಚಾರವಾಗಿ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಜೆ.ವಿ.ಚಿತ್ರ, (ಪ್ರಥಮ), ಜೆ.ಎನ್.ರಘುಪ್ರಸಾದ್ (ದ್ವಿತೀಯ), ಮೌನಿಕ.ಎ (ತೃತೀಯ) ರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಕಸಾಪ ಮಾಜಿ ಅಧ್ಯಕ್ಷ ವಿ.ಕೃಷ್ಣ, ಕಸಬಾ ಹೋಬಳಿ ಪಂಚಾಯಿತಿ ಪ್ರತಿನಿಧಿ ಕೆಂಪೇಗೌಡ, ಜಂಗಮಕೋಟೆ ಮುನಿರಾಜು(ಕುಟ್ಟಿ), ಸಮಾಜ ಸೇವಕ ಅರಕೆರೆ ಮುನಿರಾಜು, ಸ್ನೇಕ್ ನಾಗರಾಜ್, ಕಾಲೇಜಿನ ಪ್ರಾಂಶುಪಾಲ ಎನ್.ಕೆ. ಸುದರ್ಶನ್, ಉಪನ್ಯಾಸಕರಾದ ಮುನಿರಾಜು, ಸಿ.ಕೆ. ರಾಜೇಶ್. ಪ್ರಜ್ವಲ್, ಜಯಶ್ರಿ, ಹರೀಶ್‍ಕುಮಾರ್, ಪದ್ಮ, ಮತ್ತಿತರರು ಹಾಜರಿದ್ದರು.

ಸಾಂಪ್ರದಾಯಿಕ ಕಲೆ ಭರತನಾಟ್ಯ – ಪ್ರವೃತ್ತಿಯಷ್ಟೇ ಅಲ್ಲ ವೃತ್ತಿ ಕೂಡ

0

ನಮ್ಮ ಸಾಂಪ್ರದಾಯಿಕ ಕಲೆಯಾದ ಭರತನಾಟ್ಯವನ್ನು ಗ್ರಾಮೀಣ ಪ್ರದೇಶದ ಮಕ್ಕಳಿಗೂ ಶಾಸ್ತ್ರಬದ್ದ ಹಾಗು ಸಮಕಾಲೀನ ಪದ್ದತಿಯಲ್ಲಿ ಕಲಿಸುವ ಮೂಲಕ ಇದು ಪ್ರವೃತ್ತಿಯಷ್ಟೇ ಅಲ್ಲ ವೃತ್ತಿಯನ್ನಾಗಿಯೂ ಮಾಡಿಕೊಳ್ಳಬಹುದು ಎಂಬುದನ್ನು ಸಾಬೀತು ಮಾಡಿರುವ ಶ್ರೀ ಕೃಷ್ಣ ಕಲಾಕುಂಜ ನೃತ್ಯ ಸಂಸ್ಥೆಯ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ ಎಂದು ವಿದ್ವಾನ್ ಚೇತನ್ ಗಂಗಟ್ಕರ್ ಅಭಿಪ್ರಾಯಪಟ್ಟರು.
ನಗರದ ಶ್ರೀಕೃಷ್ಣ ಕಲಾಕುಂಜ ನೃತ್ಯ ಸಂಸ್ಥೆ ವತಿಯಿಂದ ಮೇ 02 ಮತ್ತು 03 ರಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸೇವಾಸದನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ನೃತ್ಯೋತ್ಸವ-12 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಗರದ ಶ್ರೀಕೃಷ್ಣ ಕಲಾಕುಂಜ ನೃತ್ಯ ಸಂಸ್ಥೆ ವತಿಯಿಂದ ಮೇ 02 ಮತ್ತು 03 ರಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸೇವಾಸದನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ನೃತ್ಯೋತ್ಸವ-12 ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು.

ಕಳೆದ ಐದು ವರ್ಷಗಳ ಹಿಂದೆ ಶಿಡ್ಲಘಟ್ಟದಲ್ಲಿ ಶುರುವಾದ ಶ್ರೀ ಕೃಷ್ಣ ಕಲಾಕುಂಜ ನೃತ್ಯ ಸಂಸ್ಥೆ ಇದೀಗ ಜಿಲ್ಲೆಯ ಚಿಕ್ಕಬಳ್ಳಾಪುರ ಸೇರಿದಂತೆ ಮುದ್ದೇನಹಳ್ಳಿ, ಗೌರಿಬಿದನೂರು, ಗುಡಿಬಂಡೆ ಹಾಗು ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮದವರೆಗೂ ಚಾಚಿ ಸುಮಾರು 400 ಕ್ಕೂ ಹೆಚ್ಚು ಮಕ್ಕಳಿಗೆ ಭರತನಾಟ್ಯ ನೃತ್ಯತರಬೇತಿ ನೀಡುತ್ತಿದೆ ಎಂದರು.
ನಿವೃತ್ತ ಜಿಲ್ಲಾ ಮತ್ತು ಅಧಿವೇಶನ ನ್ಯಾಯಾಧೀಶರಾದ ಮಲ್ಲಿಕಾರ್ಜುನ್ ಡಿ ಕಿಣಿಕೇರಿ ಮಾತನಾಡಿ ಭರತನಾಟ್ಯ ಹಾಗೂ ಕೊರಿಯೋಗ್ರಫಿ (ನೃತ್ಯ ಸಂಯೋಜನೆ) ಯಲ್ಲಿ ಸ್ನಾತಕೋತ್ತರ ಪದವೀಧರರಾದ ಪವನ್‍ಕುಮಾರ್ ನೃತ್ಯವನ್ನೇ ತಮ್ಮ ಉಸಿರಾಗಿಸಿಕೊಂಡು, ಅದನ್ನು ತನ್ನ ಹುಟ್ಟೂರು ಹಾಗು ಸುತ್ತ ಮುತ್ತಲಿನ ಗ್ರಾಮೀಣ ಭಾಗದ ಮಕ್ಕಳಿಗೆ ಕಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಕಲಾಕುಂಜದ 60 ಕ್ಕೂ ಹೆಚ್ಚು ಮಕ್ಕಳು ಭರತನಾಟ್ಯದ ವಿವಿಧ ನೃತ್ಯಗಳನ್ನು ಮಾಡುವುದರೊಂದಿಗೆ ಭಾಗವಹಿಸಿದ್ದ ಪೋಷಕರು ಹಾಗು ಗಣ್ಯರನ್ನು ಸಂತೃಪ್ತಗೊಳಿಸಿದರು.
ಕಾರ್ಯಕ್ರಮದಲ್ಲಿ ವಿದೂಷಿ ಚಂದ್ರಪ್ರಭಾ ಚೇತನ್, ವಿದ್ವಾನ್ ಶ್ರೀ ಸೋಮಶೇಖರ್ ಚೂಡಾನಾಥ್, ಸೌಮ್ಯ ಸೋಮಶೇಖರ್, ಟಿ.ಎಸ್.ಮುರಳೀಧರ್, ಶ್ರೀ ಕೃಷ್ಣ ಕಲಾಕುಂಜದ ನಿರ್ದೇಶಕ ಜಿ.ಪವನ್‍ಕುಮಾರ್ ಮತ್ತಿತರರು ಹಾಜರಿದ್ದರು.

ಬೇಸಿಗೆ ಶಿಬಿರದ ಉದ್ಘಾಟನೆ

0

ಪಠ್ಯೇತರ ಚಟುವಟಿಕೆಗಳು ಮಕ್ಕಳ ವ್ಯಕ್ತಿತ್ವವನ್ನು ರೂಪಿಸಲು ತುಂಬಾ ಸಹಕಾರಿಯಾಗುತ್ತವೆ ಎಂದು ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎನ್.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬಾಲಭವನ ರಾಜ್ಯ ಸೊಸೈಟಿ ಸಹಯೋಗದಲ್ಲಿ ನಗರದ ಹೊರವಲಯದ ಚಿಂತಾಮಣಿ ಮಾರ್ಗದ ಉಲ್ಲೂರುಪೇಟೆ ಸರಕಾರಿ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಬೇಸಿಗೆ ಶಿಬಿರಗಳಲ್ಲಿ ನಡೆಯುವ ಕ್ರಿಯಾತ್ಮಕ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ಒಳ್ಳೆಯ ನಾಯಕತ್ವ ಗುಣಗಳ ಬೆಳೆವಣಿಗೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತವೆ ಎಂದರು.
ಪಾಠ ಪ್ರವಚನಗಳಿಗಿಂತಲೂ ಪಠ್ಯೇತರ ಚಟುವಟಿಕೆಗಳು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಕಾರಣವಾಗುತ್ತದೆ. ಪ್ರತಿಭೆಯ ಅನಾವರಣ ನಮ್ಮ ದೇಶದ ಅಭಿವೃದ್ದಿಗೆ ಪೂರಕವಾಗಲಿದೆ. ಹಾಗಾಗಿ ಇಂತಹ ಶಿಬಿರಗಳು ಹೆಚ್ಚು ಹೆಚ್ಚು ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬಾಲಭವನ ರಾಜ್ಯ ಸೊಸೈಟಿ ಸಹಯೋಗದಲ್ಲಿ ನಗರದ ಹೊರವಲಯದ ಚಿಂತಾಮಣಿ ಮಾರ್ಗದ ಉಲ್ಲೂರುಪೇಟೆ ಸರಕಾರಿ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರದ ಉದ್ಘಾಟನೆಯನ್ನು ಶಿಬಿರದ ಪುಟಾಣಿಗಳು ಸೇರಿದಂತೆ ಗಣ್ಯರು ನೆರವೇರಿಸಿದರು.

ಗ್ರಾಮೀಣ ಭಾಗದಲ್ಲಿ ಶಾಲೆಗೆ ಬೇಸಿಗೆ ರಜೆ ಬಂದರೆ ಮಕ್ಕಳು ಮನೆ, ಕೃಷಿ, ಹೈನುಗಾರಿಕೆಯ ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಯಾವುದೆ ರೀತಿಯ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ. ಗ್ರಾಮೀಣ ಭಾಗದ ಪರಿಸ್ಥಿತಿ ಹಾಗೂ ಪೋಷಕರ ಆರ್ಥಿಕ, ಸಾಮಾಜಿಕ ಇನ್ನಿತರೆ ಕಾರಣಗಳೂ ಸಹ ಅದಕ್ಕೆ ಕಾರಣವಾಗಿರಬಹುದು.
ಆದರೆ ನಗರ ಪ್ರದೇಶದಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿದೆ. ಸಾವಿರಾರು ಶುಲ್ಕ ನೀಡಿ ಶಿಬಿರಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಾರೆ. ಹಾಗಾಗಿ ಸರಕಾರ ಗ್ರಾಮೀಣ ಭಾಗದ ವಿದ್ಯಾರ್ಥಿಗಳೂ ಸಹ ಬೇಸಿಗೆ ಶಿಬಿರಗಳಲ್ಲಿ ತೊಡಗಿಸಿಕೊಳ್ಳಬೇಕು. ಅವರಲ್ಲಿ ಪ್ರತಿಭೆ ಅನಾವರಣಗೊಳ್ಳಬೇಕು. ಇದಕ್ಕಾಗಿ ನುರಿತ ತರಬೇತಿದಾರ ಸಂಪನ್ಮೂಲ ವ್ಯಕ್ತಿಗಳನ್ನು ನಿಯೋಜಿಸಲಾಗುವುದು. ಇಂತಹ ಶಿಬಿರಗಳನ್ನು ನಿರ್ಲಕ್ಷಿಸದೆ ತಮ್ಮ ಮಕ್ಕಳನ್ನು ಸೇರಿಸಿ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
10 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಯೋಗ, ಕರಾಟೆ, ಚಿತ್ರಕಲೆ, ಎಂಬ್ರಾಯಿಡರಿ, ಕ್ರಾಫ್ಟ್, ಪೇಪರ್‍ಕಟಿಂಗ್ ಮಾಡುವುದು. ಹಾಡು ಹಾಡುವುದು, ಹಾಗೆಯೆ ಕಥೆ, ಕವನ, ಲೇಖನಗಳ ಬರವಣಿಗೆ ಇತ್ಯಾದಿ ವಿಷಯಗಳ ಕುರಿತು ಪ್ರಾಯೋಗಿಕವಾಗಿ ಸಂಬಂದಿಸಿದ ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ತಿಳಿಸಿಕೊಡಲಾಗುವುದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮೇಲ್ವಿಚಾರಕಿ ಗಿರಿಜಾಂಭಿಕ, ಸಂಗೀತ ಶಿಕ್ಷಕರಾದ ಎಸ್.ವಿ. ರಾಮಮೂರ್ತಿ, ಲಕ್ಷ್ಮೀನಾರಾಯಣ ಮತ್ತಿತರರು ಹಾಜರಿದ್ದರು.

ಸಂಚಾರ ಸುರಕ್ಷತೆ – ವಾಹನ ತಪಾಸಣೆ

0

ನಗರದಲ್ಲಿ ವಾಹನ ಸಂಚಾರ ಸುರಕ್ಷತೆ ದೃಷ್ಠಿಯಿಂದ ಮಂಗಳವಾರ ಆರಕ್ಷಕ ವೃತ್ತ ನಿರೀಕ್ಷಕ ಎಂ.ವೆಂಕಟೇಶ್ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸಿ ಸುಮಾರು 100 ಕ್ಕೂ ಹೆಚ್ಚು ದ್ವಿಚಕ್ರ ವಾಹನ ಮಾಲೀಕರಿಗೆ ದಂಡ ವಿಧಿಸುವ ಜೊತೆಗೆ ಇನ್ಶೂರೆನ್ಸ್ ಇಲ್ಲದ ವಾಹನಗಳಿಗೆ ಸ್ಥಳದಲ್ಲೇ ಇನ್ಶೂರೆನ್ಸ್ ಮಾಡಿಸಲಾಯಿತು.
ನಗರದ ಹಳೆಯ ಪುರ ಠಾಣೆ ಮುಂಭಾಗದಲ್ಲಿ ಮಂಗಳವಾರ ಆರಕ್ಷಕ ವೃತ್ತ ನಿರೀಕ್ಷಕ ವೆಂಕಟೇಶ್ ಸೇರಿದಂತೆ ನಗರ ಠಾಣೆ ಪಿಎಸ್ಸೈ ನವೀನ್ ಹಾಗು ದಿಬ್ಬೂರಹಳ್ಳಿ ಪಿಎಸ್ಸೈ ವಿಜಯ್‍ರೆಡ್ಡಿ ಹಾಗು ಸಿಬ್ಬಂದಿ ತಪಾಸಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ರಸ್ತೆಯಲ್ಲಿ ಸಾಗುವ ಪ್ರತಿಯೊಂದು ವಾಹನವನ್ನು ತಡೆದು ವಾಹನದ ದಾಖಲೆ ಪರಿಶೀಲನೆ ನಡೆಸಿದರು. ವಾಹನದ ದಾಖಲೆ ಸರಿಯಿಲ್ಲದ ಸುಮಾರು 100 ಕ್ಕೂ ಹೆಚ್ಚು ದ್ವಿ ಚಕ್ರ ವಾಹನಗಳಿಗೆ ನಿಗಧಿತ ನಮೂನೆಯಲ್ಲಿ ದಂಡ ವಿಧಿಸಲಾಯಿತು.
ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾರೆ ಎಂಬ ವಿಷಯ ತಿಳಿದ ಕೆಲವರು ಬೇರೆ ದಾರಿಗಳಲ್ಲಿ ಸಂಚರಿಸಬೇಕಾಯಿತು.

ಅಂಬೇಡ್ಕರ್‍ರ 126 ನೇ ಜನ್ಮ ದಿನಾಚರಣೆ

0

ವಿದ್ಯೆಗೆ ಸರಿಸಮಾನವಾದದ್ದು ಪ್ರಪಂಚದಲ್ಲಿ ಬೇರಾವುದು ಇಲ್ಲ ಎಂದು ಸಮಾಜ ಸೇವಕ ಅರಕೆರೆ ಮುನಿರಾಜು ಅಭಿಪ್ರಾಯಪಟ್ಟರು.
ತಾಲೂಕಿನ ನಾರಾಯಣದಾಸರಹಳ್ಳಿ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರ 126 ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ವಿಶ್ವಸಂಸ್ಥೆಯಲ್ಲಿ ಅಂಬೇಡ್ಕರ್‍ರ ಹುಟ್ಟಿದ ದಿನವನ್ನು ವಿಶ್ವದ ಜ್ಞಾನ ದಿನವನ್ನಾಗಿ ಆಚರಿಸುತ್ತಿದ್ದರೂ ನಮ್ಮ ದೇಶದಲ್ಲಿ ಅಂಬೇಡ್ಕರ್‍ರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸಿರುವುದು ಸರಿಯಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು ಸುಮಾರು 70 ವರ್ಷಗಳಾದರೂ ಇಂದಿಗೂ ದೇಶದಲ್ಲಿ ತಾಂಡವವಾಡುತ್ತಿರುವ ಅಸ್ಪøಶ್ಯತೆ, ಅಸಮಾನತೆ ಹೋಗಲಾಡಿಸಬೇಕಾದರೆ ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆದು ವಿದ್ಯಾವಂತರಾದಾಗ ಮಾತ್ರ ಸಾಧ್ಯ ಎಂದರು.
ಬುದ್ದ, ಬಸವ, ಅಂಬೇಡ್ಕರ್‍ರ ಪ್ರಜೆಗಳೇ ಪಭುಗಳು ಎಂಬ ಸಂವಿಧಾನವನ್ನು ಗಾಳಿಗೆ ತೂರಿ ಅರಾಜಕತೆ ಸೃಷ್ಠಿಸಿರುವ ಇಂದಿನ ರಾಜಕೀಯ ವ್ಯವಸ್ಥೆ ನಾಶಪಡಿಸಿ ಉತ್ತಮ ರಾಜಕೀಯ ವ್ಯವಸ್ಥೆ ನಿರ್ಮಾಣ ಮಾಡಬೇಕಾದ ಅನಿವಾರ್ಯತೆ ಇಂದಿನ ಯುವಕರ ಮೇಲಿದ್ದು ಆ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್‍ರ ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರೂ ರೂಡಿಸಿಕೊಳ್ಳುವುದಷ್ಟೇ ಅಲ್ಲದೇ ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಡುವ ಕೆಲಸವನ್ನು ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ದಸಂಸ ರಾಜ್ಯ ಸಂಚಾಲಕ ಎನ್.ವೆಂಕಟೇಶಣ್ಣ, ಜಿಲ್ಲಾ ಸಂಚಾಲಕ ಬಿ.ವಿ.ಆನಂದ್, ಸಂಘಟನಾ ಸಂಚಾಲಕ ಜಿ.ನಾರಾಯಣಸ್ವಾಮಿ, ತಾ,ಸಂಚಾಲಕರಾದ ಲಕ್ಕೇನಹಳ್ಳಿ ವೆಂಕಟೇಶ್, ಹುಜಗೂರು ದೇವರಾಜ್, ಎನ್.ವೆಂಕಟೇಶ್, ತಾತಹಳ್ಳಿ ಚಲಪತಿ, ಮಾಜಿ ಸಂಚಾಲಕರಾದ ಜಿ.ನರಸಿಂಹಮೂರ್ತಿ, ದ್ಯಾವಕೃಷ್ಣಪ್ಪ, ಗ್ರಾಮಾಂತರ ಠಾಣೆ ಪಿಎಸ್ಸೈ ಪ್ರದೀಪ್‍ಪೂಜಾರಿ, ಸತೀಶ್, ಶ್ರೀನಿವಾಸ್, ಚೌಡಪ್ಪ, ಶಿವಪ್ಪ, ಓಬಳೇಶ್ ಮತ್ತಿತರರು ಹಾಜರಿದ್ದರು.

ಭಗೀರಥ ಜಯಂತ್ಯುತ್ಸವ

0

ಭಗೀರಥ ಜಯಂತ್ಯತ್ಸವವನ್ನು ಅದ್ದೂರಿಯಾಗಿ ವರ್ಷಕ್ಕೊಮ್ಮೆ ಆಚರಿಸಿದರೆ ಸಾಲದು ಬದಲಿಗೆ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ರೂಡಿಸಿಕೊಳ್ಳುವುದರೊಂದಿಗೆ ಸಮಾಜದಲ್ಲಿ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ಭಗೀರಥ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ಭಗೀರಥ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಸೇರಿದಂತೆ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಸಮುದಾಯದ ಸಂಘಟನೆ ಮಾಡುವುದರೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬರುವ ಪ್ರಯತ್ನ ಸಮುದಾಯದ ಮುಖಂಡರು ಮಾಡಬೇಕು ಎಂದರು.
ಶೈಕ್ಷಣಿಕವಾಗಿ ಹಾಗು ಸಾಮಾಜಿಕವಾಗಿ ಹಿಂದುಳಿದಿರುವ ಉಪ್ಪಾರ ಸಮುದಾಯದವರು ಭಗೀರಥರಂತೆ ಎಲ್ಲವನ್ನು ಸಾಧಿಸಿ ತೋರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಜನಾಂಗದ ಮುಖಂಡರೂ ಸೇರಿದಂತೆ ತಾಲೂಕು ಆಡಳಿತದ ವತಿಯಿಂದ ಪೂಜೆ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಸಮುದಾಯದ ಹಿರಿಯ ಮುಖಂಡರೂ ಸೇರಿದಂತೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ನಗರಸಭೆ ಅಧ್ಯಕ್ಷ ಅಪ್ಸರ್‍ಪಾಷ, ತಾ.ಪಂ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಉಪಾಧ್ಯಕ್ಷ ಹೆಚ್.ನರಸಿಂಹಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೇಶವರೆಡ್ಡಿ, ರಾಜಸ್ವ ನಿರೀಕ್ಷಕ ಮೋಹನ್, ಭಗೀರಥ ಉಪ್ಪಾರ ಮಹಾಸಭಾ ತಾಲ್ಲೂಕು ಅಧ್ಯಕ್ಷ ಟಿ.ಗಂಗಪ್ಪ, ನರಸಿಂಹಪ್ಪ, ವೆಖಟರೋಣಪ್ಪ, ಕೋಲಾರ ರಾಮಯ್ಯ, ಚಿಕ್ಕ ಚೋಳರಪ್ಪ, ವೆಂಕಟೇಶ್ ಕುಮಾರ, ಮತ್ತಿತರರು ಹಾಜರಿದ್ದರು.

ವಿಶ್ವ ಕಾರ್ಮಿಕರ ದಿನಾಚರಣೆ

0

ಕೇಂದ್ರ ಹಾಗು ರಾಜ್ಯ ಸರಕಾರದ ಕಾರ್ಮಿಕ ವಿರೋಧಿ ನೀತಿಗಳಿಂದ ಮುಂಬರುವ ದಿನಗಳಲ್ಲಿ ಅಸಂಘಟಿತ ಕಾರ್ಮಿಕರಿಗೆ ಗಂಡಾಂತರ ಕಾದಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷೆ ಲಕ್ಷ್ಮಿದೇವಮ್ಮ ಹೇಳಿದರು.
ನಗರದ ಬಸ್ ನಿಲ್ದಾಣದ ಬಳಿಯಿರುವ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಸಿಐಟಿಯು ತಾಲೂಕು ಘಟಕದಿಂದ ಏರ್ಪಡಿಸಲಾಗಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕೇಂದ್ರ ಸರಕಾರದ ನವ ಉದಾರೀಕರಣ ನೀತಿಯಿಂದ 1948 ರಲ್ಲಿ ಕಾರ್ಮಿಕರಿಗಾಗಿ ರಚಿಸಲಾಗಿದ್ದ 44 ಕಾನೂನುಗಳ ಸಡಿಲಗೊಳಿಸಿ ಕಾರ್ಮಿಕರ ಹಕ್ಕುಗಳನ್ನು ಇಲ್ಲದಾಗಿಸಲು ನಿರಂತರ ಯತ್ನ ನಡೆಯುತ್ತಿದೆ. ಇದರಿಂದ ಖಾಯಂ ಕೆಲಸ, ಕೆಲಸದ ಅವಧಿ, ಸಂಘ ಕಟ್ಟಿಕೊಳ್ಳುವ ಹಕ್ಕು, ಮುಷ್ಕರದ ಹಕ್ಕು ಹಾಗು ಕೆಲಸಕ್ಕೆ ತಕ್ಕ ವೇತನ ದಂತಹ ಹಕ್ಕುಗಳನ್ನು ಬಹಳಷ್ಟು ಕಾರ್ಮಿಕರು ಕಳೆದುಕೊಳ್ಳಲಿದ್ದಾರೆ ಎಂದರು.

ವಿಶ್ವ ಕಾರ್ಮಿಕರ ದಿನಾಚರಣೆ ಸಮಾರಂಭದ ಅಂಗವಾಗಿ ಸಿಐಟಿಯು ತಾಲೂಕು ಘಟಕದಿಂದ ನಗರದ ಪ್ರವಾಸಿ ಮಂದಿರದಿಂದ ಬಸ್ ನಿಲ್ದಾಣದವರೆಗೂ ಮೆರವಣಿಗೆ ಏರ್ಪಡಿಸಲಾಗಿತ್ತು.

ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಯೋಜನೆಯಡಿ ಬಜೆಟ್ ನಲ್ಲಿ ಹಣ ಕಡಿತಗೊಳಿಸಿರುವುದರಿಂದ ಯೋಜನೆ ಮರೀಚಿಕೆಯಾಗಲಿದೆ. ಅಸಂಘಟಿತ ವಲಯದಲ್ಲಿ ಗುರುತಿಸಿಕೊಂಡಿರುವ ಅಂಗನವಾಡಿ, ಪಂಚಾಯಿತಿ, ಕಟ್ಟಡ, ಬಿಸಿಯೂಟ, ಆಶಾ, ಹಮಾಲಿ, ಪೌರ ಕಾರ್ಮಿಕ, ಆಟೋ, ಗುತ್ತಿಗೆ ಕಾರ್ಮಿಕರು ನಿರಂತರವಾಗಿ ಜನತೆಯ ಸೇವೆ ಸಲ್ಲಿಸುತ್ತಿದ್ದರೂ ಸರ್ಕಾರದಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ ಎಂದರು.
ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಈವರೆಗೂ ರಾಜ್ಯ ಸರಕಾರ ಜಾರಿ ಮಾಡದೇ ಕಾರ್ಮಿಕರನ್ನು ನಿರ್ಲಕ್ಷಿಸುತ್ತಿದೆ ಎಂದರು. ಹಾಗಾಗಿ ಕಾರ್ಮಿಕ ವರ್ಗವೆಲ್ಲಾ ಒಗ್ಗಟ್ಟಾಗಿ ಹೋರಾಟದ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವುದು ಅನಿವಾರ್ಯವಾಗಿದ್ದು ಎಲ್ಲರೂ ಸಂಘಟಿತರಾಗಿ ಹೋರಾಟಕ್ಕೆ ಸಜ್ಜಾಗಬೇಕು ಎಂದರು.
ಡಿವೈಎಫ್‍ಐ ಅಧ್ಯಕ್ಷ ಫಯಾಜುಲ್ಲಾ ಮಾತನಾಡಿ ಕೇಂದ್ರ ಹಾಗು ರಾಜ್ಯ ಸರಕಾರ ಕಾರ್ಪೊರೇಟ್ ಹಾಗು ಬಂಡವಾಳ ಶಾಹಿಗಳ ಪರ ಕಾನೂನುಗಳನ್ನು ರೂಪಿಸುವ ಮೂಲಕ ಬ್ರಿಟೀಷ್ ಆಳ್ವಿಕೆಯಲ್ಲಿದ್ದ ಕಾರ್ಮಿಕ ಕಾನೂನುಗಳಂತೆ ರೂಪಿಸುತ್ತಿದ್ದು ಇದರಿಂದ ದೇಶದ ಸಂಘಟಿತ ಹಾಗು ಅಸಂಘಟಿತ ಕಾರ್ಮಿಕರಿಗೆ ಗಂಡಾಂತರ ಕಾದಿದೆ ಎಂದರು.
ನಗರದ ಪ್ರವಾಸಿ ಮಂದಿರದಿಂದ ಬಸ್ ನಿಲ್ದಾಣದವರೆಗೂ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಮೆರವಣಿಗೆ ನಡೆಸಿದರು.
ಸಿಐಟಿಯು ಮುಖಂಡರಾದ ಪಾಪಣ್ಣ, ಶಂಕರಪ್ಪ, ಬಿಸಿಯೂಟ ನೌಕರರ ಸಂಘದ ಮಂಜುಳಮ್ಮ, ಪೂಜ, ನಂಜಮ್ಮ, ಗೀತ, ಹಮಾಲಿ ಸಂಘದ ಅಧ್ಯಕ್ಷ ಬಾಬಾಜಾನ್, ಜನವಾದಿ ಸಂಘಟನೆಯ ಮಧುಲತಾ, ಸರಸ್ವತಮ್ಮ ಮತ್ತಿತರರು ಹಾಜರಿದ್ದರು.

ನಾಗಮಂಗಲ ಗ್ರಾಮದಲಿ ದಸ್ತು ಗ್ರಾಮ ಸಭೆ

0

ಗ್ರಾಮ ಜನತೆ ಭಯ ಭೀತಿ ಇಲ್ಲದೆ, ಮುಕ್ತವಾಗಿ ಜೀವಿಸುವಂತಹ ವಾತವರಣ ಮಾಡುವ ಉದ್ದೇಶದಿಂದ ಪೊಲೀಸ್ ಇಲಾಖೆಯಿಂದ ಗ್ರಾಮ ಸಭೆಯನ್ನು ಏರ್ಪಡಿಸುವ ಉದ್ದೇಶವಾಗಿ ಸಭೆಯನ್ನು ಏರ್ಪಡಿಸುವ ಉದ್ದೇಶವಾಗಿದೆ ಎಂದು ಗ್ರಾಮಾಂತರ ಠಾಣೆಯ ಆರಕ್ಷಕ ಉಪ ನಿರೀಕ್ಷಕರಾದ ಪ್ರದೀಪ್ ಪೂಜಾರಿ ತಿಳಿಸಿದರು.
ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ ಏರ್ಪಡಿಸಿದ್ದ ದಸ್ತು ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮಗಳಲ್ಲಿ ನಡೆಯುವಂತಹ ಅಕ್ರಮ ಚಟುವಟಿಕೆಗಳು ಸಾರಾಯಿ ಮಾರಾಟ, ಜುಜಾಟಾ, ಮುಂತಾದ ಕಾನೂನು ಬಾಯಿರ ಚುಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಪಂಚಾಯಿತಿ ವ್ಯಾಪ್ತಿಯ ನಾಲ್ಕು ಐದು ಗ್ರಾಮಗಳಿಂದ ಒಬ್ಬ ಪೊಲೀಸ್ ಪೇದೆಯನ್ನು ನೇಮಿಸಿದ್ದು, ಗ್ರಾಮದ ಸಾರ್ವಜನಿಕರ ಸಹಾಯ ಹಾಗೂ ಮೇಲ್ ಅಧಿಕಾರಿಗಳ ಮಾರ್ಗ ದರ್ಶನದಲ್ಲಿ ಗ್ರಾಮಗಳ ಕಾನೂನು ಬಾಯಿರ ಚಟುವಟಿಕೆಗಳಲ್ಲಿ ತೊಂಡಗುವುದನ್ನು ನಿಲ್ಲಿಸುವ ಉದ್ದೇಶದಿಂದ ಈ ಸಭೆ ನಡೆಸುವ ಉದ್ದೇಶವಾಗಿದೆ ಎಂದು ತಿಳಿಸಿದರು.

ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ ಏರ್ಪಡಿಸಿದ್ದ ದಸ್ತು ಗ್ರಾಮ ಸಭೆಯನ್ನು ಉದ್ದೇಶಿಸಿ ಗ್ರಾಮಾಂತರ ಠಾಣೆಯ ಆರಕ್ಷಕ ಉಪ ನಿರೀಕ್ಷಕರಾದ ಪ್ರದೀಪ್ ಪೂಜಾರಿ ಮಾತನಾಡಿದರು.

ಈ ಸಂದರ್ಭದಲ್ಲಿ ನಾಗಮಂಗಲ ಗ್ರಾಮದಲ್ಲಿ ಹೆಚ್ಚು ಸಾರಾಯಿ ಮಾರಾಟವಿದ್ದು, ಯುವಕರು ಕುಡಿತಕ್ಕೆ ದಾಸರಾಗಿದ್ದು, ಮಹಿಳೆಯರು ಕೂಲಿ ಮಾಡಿ ತಂದ ಹಣವನ್ನು ಕುಡಿತಕ್ಕೆ ಉಪಯೋಗಿಸಿ ಮಹಿಳೆಯರು ಬಹಳ ಕಸ್ಟಪಡುವ ಸ್ಥಿತಿಯಲ್ಲಿ ಇದ್ದಾರೆ, ಆದ್ದರಿಂದ ಅಕ್ರಮ ಸಾರಾಯಿ ಮಾರಾಟವನ್ನು ನಿಲ್ಲಿಸಬೇಕೆಂದು ಗ್ರಾಮದ ಮಹಿಳೆಯರು ಸಭೆಯಲ್ಲಿ ಮನವಿ ಮಾಡಿದರು.
ಈ ಬಗ್ಗೆ ಕೂಡಲ್ಲೆ ಕ್ರಮ ಜರುಗಿಸುವುದಾಗಿ ಗ್ರಾಮಾಂತರ ಠಾಣೆಯ ಆರಕ್ಷಕ ಉಪ ನಿರೀಕ್ಷಕರಾದ ಪ್ರದೀಪ ಪೂಜಾರಿ ತಿಳಿಸಿದರು.
ಈ ಸಂದರ್ಭದಲ್ಲಿ ಬೀಟ್ ಪೇದೆ ರಾಜಕುಮಾರ್, ನಾರಾಯಣಸ್ವಾಮಿ, ಶಿವಕುಮಾರ್, ವೆಂಕಟೇಶ್, ಶಿವರಾಜು, ಚಂದ್ರಶೇಖರ್, ಭಾರತಮ್ಮ, ವೆಂಕಟಲಕ್ಷಮ್ಮ, ಕನಕರತ್ನಮ್ಮ, ಮುನಿಯಮ್ಮ, ಲಕ್ಷ್ಮಿದೇವಮ್ಮ, ತಿಮ್ಮರಾಯಪ್ಪ, ಹಾಗೂ ಮುಂತಾದವರು ಹಾಜರಿದ್ದರು.

ನಗರದ ಬೈಪಾಸ್ ರಸ್ತೆಯಲ್ಲಿದ್ದ ಬೋರ್‍ವೆಲ್ ನಾಶ

0

ನಗರದ ಬೈಪಾಸ್ ರಸ್ತೆಯಲ್ಲಿ ನಿನ್ನೆ ಸಂಜೆ ಬೋರ್‍ವೆಲ್ ಮತ್ತು ಪೈಪ್‍ಲೈನ್ ನಾಶಪಡಿಸಿರುವ ಘಟನೆ ನಡೆದಿದೆ.
ನಗರದ ಬೈಪಾಸ್ ರಸ್ತೆಯಲ್ಲಿರುವ ಸರ್ವೆ ನಂ 541/1, ಹಾಗೂ 542 ರಲ್ಲಿ ಕೊರೆಸಿದ್ದ ಬೋರ್‍ವೆಲ್ ಹಾಗೂ ಹಿಪ್ಪುನೇರಳೆ ಗಿಡಕ್ಕೆ ಅಳವಡಿಸಿದ್ದ ಪೈಪ್‍ಲೈನ್‍ನ್ನು ನಾಶಪಡಿಸಿರುವ ಘಟನೆಗೆ ಸಂಬಂಧಿಸಿದಂತೆ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಬೈಪಾಸ್ ರಸ್ತೆಯಲ್ಲಿರುವ ಸರ್ವೆ ನಂ 541/1, ಹಾಗೂ 542 ರಲ್ಲಿ ಕೊರೆಸಿದ್ದ ಬೋರ್‍ವೆಲ್ ಹಾಗೂ ಹಿಪ್ಪುನೇರಳೆ ಗಿಡಕ್ಕೆ ಅಳವಡಿಸಿದ್ದ ಪೈಪ್‍ಲೈನ್‍ನ್ನು ನಾಶಪಡಿಸಿರುವುದು.

ಕಳೆದ ಒಂದು ವರ್ಷ ಆರು ತಿಂಗಳ ಹಿಂದೆ ಜಯರಾಮ ಬಿನ್ ದೊಡ್ಡಕೆಂಪಣ್ಣ 17 ಕುಂಟೆ ಜಮೀನನ್ನು ನಗರದ ವಾಸಿಗಳಾದ ಕುರುಬರಪೇಟೆಯ ಅನಿಲ್ ಕುಮಾರ್ ಎಂಬುವವರು ಖರೀದಿಸಿ, ಬೋರ್‍ವೆಲ್ ಕೊರೆಸಿದ್ದು, ಹಿಪ್ಪುನೇರಳೆ ಗಿಡ ಹಾಕಿ ಜೀವನ ಸಾಗಿಸುತ್ತಿದ್ದು, ಜಮೀನಿನ ಪಕ್ಕದಲ್ಲೇ ವಾಸವಾಗಿರುವ ರಾಜ್‍ಕುಮಾರ್ ಅವರು ನಮಗೆ ಎರಡು ಕುಂಟೆ ಜಮೀನು ಬೇಕೆಂದು ಕೇಳಿದ್ದು, ಕೊಡಲು ಒಪ್ಪದ ಕಾರಣ ರಾಜ್‍ಕುಮಾರ್ ಮಕ್ಕಳು ಬೋರ್‍ವೆಲ್ ಹಾಗೂ ಪೈಪ್‍ಲೈನ್‍ನ್ನು ಒಡೆದು ನಾಶಪಡಿಸಿದ್ದು, ಬೆಳೆ ಹಾಗೂ ಬೋರ್‍ವೆಲ್ ಹಾಗೂ ಪೈಪ್‍ಲೈನ್ ನಾಶಪಡಿಸಿರುವ ಬಗ್ಗೆ ನಗರ ಪೊಲಿಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಜಮೀನಿನ ಮಾಲಿಕ ಅನಿಲ್ ಕುಮಾರ್ ತಂದೆ ಕೆ.ಎಂ.ಶ್ರೀನಿವಾಸಪ್ಪ ತಿಳಿಸಿದ್ದಾರೆ.
ಈ ಸಂಬಂದ ನಗರದ ಪೋಲಿಸ್ ಠಾಣೆಯಲ್ಲಿ ರಾಜ್‍ಕುಮಾರ್, ಅಣೆಪ್ಪ, ಶಶಿಕುಮಾರ್, ಅನಂತ, ಮದನ, ನವೀನ್, ಸುಬ್ರ್ಯಮಣಿ, ಮಂಜುಳಮ್ಮ, ಭಾರತಿ, ಮಂಜುನಾಥ್ ಇವರ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪೋಲಿಸ್ ಮೂಲಗಳಿಂದ ತಿಳಿದುಬಂದಿದೆ.

ಶ್ರೀ ಬಸವೇಶ್ವರ ಜಯಂತಿ

0

ವಚನಗಳ ಮೂಲಕ ಅಸಮಾನತೆಯ ವಿರುದ್ಧ ಸಮರ ಸಾರಿದ ಜಗಜ್ಯೋತಿ ಬಸವೇಶ್ವರರು ಈ ನಾಡು ಕಂಡ ಮಹಾನ್ ಕ್ರಾಂತಿಕಾರಿ, ಮಾನವತಾವಾದಿ, ಸ್ತ್ರೀ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದವರು ಎಂದು ಬೆಳ್ಳಾವಿ ಸಂಸ್ಥಾನ ಮಠದ ಮಹಂತ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಬಸವೇಶ್ವರ ಸೇವಾ ಟ್ರಸ್ಟ್ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಸಹಯೋಗದಲ್ಲಿ ನಡೆದ ಬಸವೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನವನ್ನು ನೀಡಿ ಅವರು ಮಾತನಾಡಿದರು.
ನಾವಾಡುವ ಸರಳ ಕನ್ನಡ ಭಾಷೆಯಲ್ಲಿ ಎಲ್ಲರಿಗೂ ಸುಲಭವಾಗಿ ತಿಳಿಯುವಂತೆ, ನಿರ್ದಯಿ ಹೃದಯದವರೂ ತಮ್ಮನ್ನೊಮ್ಮೆ ಪರಿಶೀಲಿಸಿಕೊಳ್ಳುವಂತೆ, ತಮ್ಮ ವಚನಗಳ ಮೂಲಕ ಜನರ ಮನಃಪರಿವರ್ತನೆ ಮಾಡಿದ ಮಹಾನ್ ಮಾನವತಾವಾದಿ, ವಿಶ್ವಮಾನವ ಜಗಜ್ಯೋತಿ ಬಸವೇಶ್ವರರು ಪ್ರಪಂಚಕ್ಕೆ ಆದರ್ಶಪ್ರಾಯರಾಗಿದ್ದಾರೆ. ಕಾಯಕಕ್ಕೆ ದೈವಿಕತ್ವ ನೀಡಿದ ಬಸವೇಶ್ವರರು `ಕಾಯಕವೇ ಕೈಲಾಸ’ ಎಂದರು. ಬಸವಣ್ಣನವರ ಕಾಯಕ ತತ್ವವು ದಾಸೋಹ ಕಲ್ಪನೆಯನ್ನು ಹೊಂದಿದ್ದು ತ್ಯಾಗ, ದಾನ, ಸಮಾನ ಹಂಚಿಕೆ, ಅಹಂಕಾರ ತ್ಯಜಿಸುವುದು, ಶರಣಾಗತಿಯಂತಹ ಪ್ರಮುಖ ಲಕ್ಷಣಗಳನ್ನು ಹೊಂದಿದೆ.

ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಬಸವೇಶ್ವರ ಸೇವಾ ಟ್ರಸ್ಟ್ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಸಹಯೋಗದಲ್ಲಿ ನಡೆದ ಬಸವೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವಚನ ಸಿಂಚನ ನಡೆಸಿಕೊಟ್ಟ ತಾಲೂಕು ವಚನ ಸಾಹಿತ್ಯ ಪರಿಷತ್ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಸವಣ್ಣನವರ ಪ್ರಕಾರ ಕಾಯಕ ಮಾಡುವುದು ಒಂದು ನೈತಿಕ ಬದ್ಧತೆ, ಪ್ರತಿಯೊಬ್ಬರೂ ತನ್ನ ಅನ್ನವನ್ನು ದುಡಿದು ತಿನ್ನಬೇಕು. `ರಟ್ಟೆ ಮುರಿದು ದುಡಿದು ತಿನ್ನುವಂತಹ ರೊಟ್ಟಿಯು ಅಮೃತಕ್ಕಿಂತ ಶ್ರೇಷ್ಠವಾದದ್ದು’. ಕಾಯಕ ತತ್ವದ ಮೂಲಕ ಬಸವೇಶ್ವರರು ಪ್ರತಿಯೊಬ್ಬರಿಗೂ ಸ್ವಾಭಿಮಾನ ಹಾಗೂ ಸ್ವಾವಲಂಬನೆಯಿಂದ ಬದುಕಲು ಕರೆ ನೀಡಿದರು ಎಂದು ಹೇಳಿದರು.
ಶಾಸಕ ಎಂ. ರಾಜಣ್ಣ ಮಾತನಾಡಿ ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣವರು ಸಾರಿದ ತತ್ವ, ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಇಂದಿನ ಜನಾಂಗ ಬಸವಣ್ಣನವರ ತತ್ವ, ಆದರ್ಶಗಳನ್ನು ಅರಿತುಕೊಳ್ಳುವ ಮೂಲಕ ನಾಡಿನ ಏಳಿಗೆಗೆ ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ವಚನ ಸಾಹಿತ್ಯ ಪರಿಷತ್ ವತಿಯಿಂದ ವಚನ ಸಿಂಚನ ಕಾರ್ಯಕ್ರಮದಲ್ಲಿ ವಚನ ಗಾಯನ ಏರ್ಪಡಿಸಲಾಗಿತ್ತು. ಬಸವೇಶ್ವರ ಸೇವಾ ಟ್ರಸ್ಟ್ ವತಿಯಿಂದ ಕೃಷಿ ಪಂಡಿತ ಪ್ರಶಸ್ತಿ ವಿಜೇತ ಹಿತ್ತಲಹಳ್ಳಿ ಗೋಪಾಲಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದಕ್ಕೂ ಮುನ್ನ ನಗರದ ತಾಲೂಕು ಕಚೇರಿಯಲ್ಲಿ ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ಬಸವಣ್ಣನವರ ಭಾವಚಿತ್ರಕ್ಕೆ ಮುಖಂಡರು ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಸ್. ಅಜಿತ್‍ಕುಮಾರ್ ರೈ, ನಗರಸಭೆ ಅಧ್ಯಕ್ಷ ಅಪ್ಸರ್‍ಪಾಷ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಬಸವೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಸಿ. ನಂದೀಶ್, ವಚನ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಅನುಸೂಯಮ್ಮ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜರಾವ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ಮುಖಂಡರಾದ ಜಗದೀಶ್, ನಿರಂಜನ್‍ಬಾಬು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.